Home Blog Page 419

ಉಚಿತ ಆರೋಗ್ಯ ತಪಾಸಣಾ ಶಿಬಿರ

0

ಇತ್ತೀಚೆಗೆ ವೈದ್ಯಕೀಯ ಚಿಕಿತ್ಸೆ ಅತ್ಯಂತ ದುಬಾರಿಯಾಗಿದ್ದು ಗ್ರಾಮೀಣ ಜನರಿಗೆ ಉಪಯುಕ್ತವಾಗಲಿ ಮತ್ತು ಅವರ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲೆಂದು ತಜ್ಞ ವೈದ್ಯರ ಸಹಕಾರದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿರುವುದಾಗಿ ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ (ಪುಟ್ಟು) ತಿಳಿಸಿದರು.
ತಾಲ್ಲೂಕಿನ ಚೀಮಂಗಲ ಗ್ರಾಮದ ಕುವೆಂಪು ಶತಮಾನೋತ್ಸವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಶನಿವಾರ ಎಸ್.ಎನ್ ಕ್ರಿಯಾ ಟ್ರಸ್ಟ್ ವತಿಯಿಂದ ಹೊಸಕೋಟೆಯ ಎಂ.ವಿ.ಜೆ ಆಸ್ವತ್ರೆಯವರ ಸಹಯೋಗದಲ್ಲಿ ನಡೆಸಿದ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಜನರು ಉತ್ತಮ ಚಿಕಿತ್ಸೆಗಾಗಿ ಬಹುದೂರ ಹೋಗಬೇಕು. ಅದರಲ್ಲೂ ವಯಸ್ಕರಿಗೆ ಹಲವಾರು ಸಮಸ್ಯೆಗಳಿರುತ್ತವೆ. ಹಾಗಾಗಿ ಎಂ.ವಿ.ಜೆ ಆಸ್ವತ್ರೆಯ ಆಡಳಿತ ಮಂಡಳಿಯೊಂದಿಗೆ ಈಗಾಗಲೇ ಮಾತನಾಡಿ ಆರೋಗ್ಯ ಕಾರ್ಡ್ ಕೊಡಿಸಲಾಗಿದೆ. ಈ ಕಾರ್ಡ್ ಬಡವರಿಗೆ ನೀಡುತ್ತಿದ್ದು, ಹೊಸಕೋಟೆಯ ಎಂ.ವಿ.ಜೆ ಆಸ್ವತ್ರೆಯಲ್ಲಿ ರಿಯಾಯಿತಿ ದರದಲ್ಲಿ ಮುಂದಿನ ದಿನಗಳಲ್ಲಿ ಚಿಕಿತ್ಸೆಯನ್ನು ಪಡೆಯಬಹುದಾಗಿದೆ ಎಂದು ಹೇಳಿದರು.
ಹಲವಾರು ಮಂದಿ ತಜ್ಞ ವೈದ್ಯರು ಆಗಮಿಸಿದ್ದಾರೆ. ಮಧುಮೇಹ, ರಕ್ತದೊತ್ತಡ, ಕಣ್ಣು, ಮೂಳೆ, ಮಕ್ಕಳ ತಜ್ಞರು ಹಾಗೂ ಸ್ತ್ರೀ ರೋಗ ತಜ್ಞರು ಬಂದಿರುವರು. ಔಷಧಿಗಳನ್ನು ಉಚಿತವಾಗಿ ನೀಡುತ್ತಿದ್ದೇವೆ. ಯಶಸ್ವಿನಿ ಮತ್ತು ಆರ್‍ಎಸ್ಬಿವೈ ಕಾರ್ಡ್ ಹೊಂದಿರುವವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ಹೊಸಕೋಟೆಯ ಎಂ.ವಿ.ಜೆ ಆಸ್ಪತ್ರೆಯಲ್ಲಿ ನಡೆಸಲಾಗುತ್ತದೆ. ಯಶಸ್ವಿನಿ ಮತ್ತು ಆರ್‍ಎಸ್ಬಿವೈ ಕಾರ್ಡ್ ಹೊಂದಿಲ್ಲದ ಬಡವರಿಗೆ ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ಶಸ್ತ್ರಚಿಕಿತ್ಸೆಗೆ ನೆರವು ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಶ್ರವಣ ದೋಷವುಳ್ಳರಿಗೆ ಟ್ರಸ್ಟ್ ವತಿಯಿಂದ ಶ್ರವಣ ಸಾಧನಗಳು ಮತ್ತು ಕಣ್ಣಿನ ಸಮಸ್ಯೆ ಇರುವವರಿಗೆ ಕನ್ನಡಕಗಳನ್ನು ಉಚಿತವಾಗಿ ವಿತರಿಸಲಾಯಿತು.
ಈ ಶಿಬಿರದಲ್ಲಿ ಹೊಸಕೋಟೆಯ ಎಂ.ವಿ.ಜೆ ಆಸ್ವತ್ರೆಯ ನುರಿತ ತಜ್ಞರಿಂದ ಸ್ತ್ರೀಯರ ಸಮಸ್ಯೆಗಳು, ಮೂಳೆ ಸಾಂದ್ರತೆ ಮತ್ತು ಕೀಲುರೋಗ ತಪಾಸಣೆ, ನೇತ್ರ ತಪಾಸಣೆ, ಕಿವಿ ಮೂಗು ಮತ್ತು ಗಂಟಲು ತಪಾಸಣೆ, ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆ ಮತ್ತು ಇನ್ನೂ ಹಲವಾರು ಕಾಯಿಲೆಗಳಿಗೆ ಸಂಬಂಧಿಸಿದಂತೆ ಉಚಿತ ತಪಾಸಣೆ ಮಾಡಲಾಯಿತು. ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಮಂದಿ ಶಿಬಿರದಲ್ಲಿ ಚಿಕಿತ್ಸೆ ಪಡೆದರು.
ಎಂ.ವಿ.ಜೆ ಆಸ್ವತ್ರೆಯ ವ್ಯವಸ್ಥಾಪಕ ಡಾ. ಪ್ರಮೋದ್, ಶಾಲೆಯ ಮುಖ್ಯ ಶಿಕ್ಷಕ ಸಿ.ಎಂ.ಮುನಿರಾಜು, ಶಿಕ್ಷಕ ಮಂಜುನಾಥ, ಪಿಡಿಓ ಹರೀಶ್‍ಗೌಡ, ಮುನಿವೆಂಕಟಪ್ಪ, ಮಂಜುನಾಥ್, ಅನಿಲ್, ಬೈರೇಗೌಡ, ಆಂಜಿನಪ್ಪ, ಆನೂರು ದೇವರಾಜ್, ವಿಶ್ವನಾಥ, ಅಂಬರೀಶ್, ಏನಿಗದೆಲೆ ಅಶ್ವತ್ಥರೆಡ್ಡಿ, ಊಲಿಬೆಲೆ ಗೋವಿಂದಪ್ಪ, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸಾಮಾಜಿಕ ಜಾಲ ತಾಣದಲ್ಲಿ ಅವಹೇಳನಕಾರಿ ಪೋಸ್ಟ್

0

ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಹಾಗು ಪರಿಶಿಷ್ಟ ಜಾತಿ ಹಾಗು ಪಂಗಡದ ಜನಾಂಗದ ಬಗ್ಗೆ ಅವಹೇಳನಕಾರಿ ಪೋಸ್ಟ್‍ಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕಿರುವ ಸುಮಿತ್‍ಗೌಡನನ್ನು ಬಂಧಿಸಿ ಗಡೀಪಾರು ಮಾಡಬೇಕು ಎಂದು ಒತ್ತಾಯಿಸಿ ದಲಿತಸೇನೆ ತಾಲೂಕು ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ತಹಸೀಲ್ದಾರ್‍ರಿಗೆ ಮನವಿ ಪತ್ರ ಸಲ್ಲಿಸಿದರು.
ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ ಶನಿವಾರ ಜಮಾಯಿಸಿದ ದಲಿತ ಸೇನೆ ಪದಾಧಿಕಾರಿಗಳು ನಗರದ ಮುಖ್ಯರಸ್ತೆಗಳಲ್ಲಿ ಮೆರವಣಿಗೆ ಮೂಲಕ ಕಿಡಿಗೇಡಿ ಸುಮಿತ್‍ಗೌಡ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಸಾಗಿದರು.
ಈ ದೇಶದ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ರವರ ಬಗ್ಗೆ ಹಗುರವಾಗಿ ಮಾತಾಡಿರುವುದಷ್ಟೇ ಅಲ್ಲದೇ ಈ ದೇಶದ ಮಹಿಳೆಯ ಬಗ್ಗೆ ಕೀಳಾಗಿ ಮಾತನಾಡುವ ಇಂತಹ ದೇಶದ್ರೋಹಿಯನ್ನು ಕೂಡಲೇ ಬಂಧಿಸಿ ಗಡೀಪಾರು ಮಾಡಬೇಕು ಎಂದು ಒತ್ತಾಯಿಸಿ ತಾಲೂಕು ಕಚೇರಿ ಮುಂಭಾಗದಲ್ಲಿ ಕಿಡಿಗೇಡಿ ಸುಮಿತ್‍ಗೌಡನ ಪ್ರತಿಕೃತಿ ದಹಿಸಿ ತಹಸೀಲ್ದಾರ್ ಎಸ್.ಅಜಿತ್‍ಕುಮಾರ್ ರೈ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಅಜಿತ್‍ಕುಮಾರ್ ರೈ ಕೂಡಲೇ ಮನವಿ ಪತ್ರವನ್ನು ಸರ್ಕಾರಕ್ಕೆ ಕಳುಹಿಸುವುದಾಗಿ ತಿಳಿಸಿದರು.
ದಲಿತಸೇನೆಯ ಈಧರೆಪ್ರಕಾಶ್, ಮುನಿಕೃಷ್ಣಪ್ಪ, ನರಸಿಂಹ, ಕೃಷ್ಣಪ್ಪ, ಕೃಷ್ಣಮೂರ್ತಿ, ಗಂಗಾಧರ್ ಮತ್ತಿತರರು ಹಾಜರಿದ್ದರು.

ಬಿಜೆಪಿ ಪಕ್ಷದ ಸುದ್ದಿಘೋಷ್ಠಿ

0

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರ ಪುತ್ರ ವ್ಯಾಮೋಹದಿಂದ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನಿರ್ನಾಮವಾಗಲಿದೆ ಎಂದು ಬಿಜೆಪಿ ನಿಕಟಪೂರ್ವ ರಾಜ್ಯಾಧ್ಯಕ್ಷ, ಸಂಸದ ಪ್ರಹ್ಲಾದ್‍ಜೋಷಿ ಹೇಳಿದರು.
ನಗರದ ಶ್ರೀ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಬುದವಾರ ತಾಲೂಕು ಬಿಜೆಪಿ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಸುದ್ದಿಘೋಷ್ಠಿಯಲ್ಲಿ ಮಾತನಾಡಿದರು.
ಅಹಿಂದ ಹೆಸರೇಳಿಕೊಂಡು ರಾಜಕೀಯ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಪುತ್ರವ್ಯಾಮೋಹದಿಂದ ಅನಧಿಕೃತ ಅಧಿಕಾರಿಗಳ ಸಭೆ ನಡೆಸಲು ತಮ್ಮ ಪುತ್ರನನ್ನು ಬಿಟ್ಟಿರುವ ಮುಖ್ಯಮಂತ್ರಿ ಮುಂದಿನ ದಿನಗಳಲ್ಲಿ ಪುತ್ರನನ್ನು ರಾಜಕೀಯಕ್ಕೆ ತರಲು ಸಿದ್ದತೆ ನಡೆಸುತ್ತಿದ್ದಾರೆ. ಈ ಹಿಂದೆ ಜೆಡಿಎಸ್ ಪಕ್ಷವನ್ನು ಅಪ್ಪ ಮಕ್ಕಳ ಪಕ್ಷ ಎಂದು ಕರೆಯುತ್ತಿದ್ದ ಇದೇ ಸಿದ್ದರಾಮಯ್ಯನವರು ಇದೀಗ ಮಾಡುತ್ತಿರುವುದೇನು. ಈ ಬಗ್ಗೆ ಧ್ವನಿಯೆತ್ತಬೇಕಾಗಿದ್ದ ಕಾಂಗ್ರೆಸ್ ಪಕ್ಷದವರೂ ಮೌನವಾಗಿರುವುದು ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ನಶಿಸುವ ಹಂತ ತಲುಪಿದೆ ಎಂದರು.
ಕೇವಲ ಕೇಂದ್ರ ಸರಕಾರ ಹಾಗು ನರೇಂದ್ರಮೋದಿಯವರ ಬಗ್ಗೆ ಕೆಟ್ಟದಾಗಿ ಮಾತಾಡುವುದೇ ವೃತ್ತಿಯನ್ನಾಗಿಸಿಕೊಂಡಿರುವ ಸಿದ್ದರಾಮಯ್ಯ ರಾಜ್ಯದ ಬರ ಪರಿಹಾರಕ್ಕಾಗಿ ತಮ್ಮ ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಕೂಡಲೇ ಶ್ವೇತಪತ್ರ ಹೊರಡಿಸಲಿ ಎಂದರು.
ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ ಯಾವುದೇ ಅನುಧಾನ ನೀಡುತ್ತಿಲ್ಲ ಎಂದು ಹೇಳುವ ಇವರು ಕೇಂದ್ರದಲ್ಲಿ ತಮ್ಮದೇ ಯುಪಿಎ ಸರಕಾರವಿದ್ದಾಗ ರಾಜ್ಯ ಸರಕಾರಕ್ಕೆ ನೀಡಿದ ಅನುಧಾನ ಹಾಗು ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ರಾಜ್ಯ ಸರಕಾರಕ್ಕೆ ಬಂದಿರುವ ಅನುಧಾನಗಳ ಬಗ್ಗೆ ಪರಿಶೀಲನೆ ನಡೆಸಲಿ, ಹಿಂದೆ ಯುಪಿಎ ಸರಕಾರದ ವೇಳೆಯಲ್ಲಿ ರಾಜ್ಯ ಸರಕಾರ ಬೇಡಿಕೆಯಿಟ್ಟಿದ್ದ ಸುಮಾರು 17445 ಕೋಟಿ ಅನುದಾನಕ್ಕೆ ಕೇವಲ 691 ಕೋಟಿ ಮಾತ್ರ ನೀಡಿತ್ತು, ಆದರೆ ಮೋದಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯ ಸರಕಾರ ಬೇಡಿಕೆಯಿಟ್ಟ ಅನುದಾನದಲ್ಲಿ ಶೇ 60 ರಷ್ಟು ಅನುದಾನ ಕೇಂದ್ರ ಸರಕಾರ ಬಿಡುಗಡೆ ಮಾಡಿದೆ ಎಂದರು.
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಅಧಿಕಾರಕ್ಕೆ ಬಂದ ಹೊಸದರಲ್ಲಿ ರಾಜ್ಯಾದ್ಯಂತ ಇರುವ ನೀರು ಸಿಗದ ತೆರೆದ ಕೊಳವೆಬಾವಿಗಳನ್ನು ಮುಚ್ಚುವ ಆದೇಶ ಹೊರಡಿಸಿದ್ದರಾದರೂ ಈವರೆಗೂ ಯಾವುದೇ ಪ್ರಯೋಜನವಾಗದೇ ತೆರೆದ ಕೊಳವೆಬಾವಿಗಳಲ್ಲಿ ಪುಠಾಣಿ ಮಕ್ಕಳು ಬಿದ್ದು ಮೃತಪಡುತ್ತಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳೇ ದಯವಿಟ್ಟು ತಮ್ಮ ತಲೆಗೆ ಹತ್ತಿಸಿಕೊಂಡಿರುವ ಭ್ರಮೆ ಹಾಗು ದುರಹಂಕಾರವನ್ನು ಕೂಡಲೇ ಬಿಡಿ ಎಂದರು.
ಇನ್ನು ಇದೇ ಮೇ 24 ರಿಂದ ಜೂನ್ 24 ರವರೆಗೂ ಪಕ್ಷದ ಸಂಸದರೂ ಸೇರಿದಂತೆ ಹಿರಿಯ ಮುಖಂಡರು ತಮ್ಮ ಸ್ವಕ್ಷೇತ್ರಗಳನ್ನು ಬಿಟ್ಟು ರಾಜ್ಯದ ವಿವಿದೆಡೆ ಪ್ರವಾಸ ಮಾಡಿ ನರೇಂದ್ರ ಮೋದಿ ಸರಕಾರದ ಸಾಧನೆಗಳು ವೈಯಕ್ತಿಕವಾಗಿ ಎಷ್ಟರ ಮಟ್ಟಿಗೆ ಮುಟ್ಟಿದೆ. ಹಾಗು ಮುಂಬರುವ ಚುನಾವಣೆಗೆ ಪಕ್ಷದ ಸಂಘಟನೆ ಯಾವ ರೀತಿಯಲ್ಲಾಗಬೇಕು ಎಂಬುದರ ಬಗ್ಗೆ ಬೂತ್ ಮಟ್ಟದ ಸಭೆಗಳನ್ನು ನಡೆಸಲು ಪಕ್ಷ ಸೂಚಿಸಿದ್ದ ಆ ಹಿನ್ನಲೆಯಲ್ಲಿ ಇಂದು ನಗರಕ್ಕೆ ಭೇಟಿ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಡಾ. ಮಂಜುನಾಥ್, ತಾಲೂಕು ಅಧ್ಯಕ್ಷ ಬಿ.ಸಿ. ನಂದೀಶ್, ಮುಖಂಡರಾದ ಜ್ಯೋತಿರೆಡ್ಡಿ, ನಿಕಟಪೂರ್ವ ತಾಲೂಕು ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರಗೌಡ, ನಗರಸಭೆ ಸದಸಯ ಎಸ್.ರಾಘವೇಂದ್ರ, ಭಾಸ್ಕರರೆಡ್ಡಿ ಮತ್ತಿತರರು ಹಾಜರಿದ್ದರು.

ಉಚಿತ ಕರಾಟೆ, ಜಿಮ್ನಾಸ್ಟಿಕ್, ಯೋಗ, ನೃತ್ಯ ಶಿಬಿರ

0

ಮಕ್ಕಳು ಕೇವಲ ಪುಸ್ತಕ ಓದಿನಲ್ಲಿ ತಲ್ಲೀನರಾದರೆ ಸಾಲದು ಬದಲಿಗೆ ದೈಹಿಕವಾಗಿಯೂ ಸದೃಢರಾಗಬೇಕು. ಅದಕ್ಕೆ ಸೂಕ್ತ ಮಾರ್ಗದರ್ಶನ ಅಗತ್ಯ. ಹಾಗಾಗಿ ಗ್ರಾಮದಲ್ಲಿ ಉಚಿತವಾಗಿ 10 ದಿನಗಳ ಕಾಲ ನಡೆಸುವ ಬೇಸಿಗೆ ಶಿಬಿರದ ಸದುಪಯೋಗವನ್ನು ಮಕ್ಕಳು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ತನುಜಾರಘು ಅಭಿಪ್ರಾಯಪಟ್ಟರು.
ತಾಲೂಕಿನ ತಾದೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗುರುವಾರ ದಿವ್ಯ ಭಾರತ್ ಕರಾಟೆ ಡೋ ಅಸೋಸಿಯೇಷನ್ ವತಿಯಿಂದ ಏರ್ಪಡಿಸಲಾಗಿದ್ದ ಉಚಿತ ಕರಾಟೆ, ಜಿಮ್ನಾಸ್ಟಿಕ್, ಯೋಗ, ನೃತ್ಯ ಮುಂತಾದವುಗಳನ್ನು ಕಲಿಸುವ ಬೇಸಿಗೆ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ತಾಲೂಕಿನ ತಾದೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗುರುವಾರ ದಿವ್ಯ ಭಾರತ್ ಕರಾಟೆ ಡೋ ಅಸೋಸಿಯೇಷನ್ ವತಿಯಿಂದ ಏರ್ಪಡಿಸಲಾಗಿದ್ದ ಬೇಸಿಗೆ ಶಿಭಿರದಲ್ಲಿ ಮಕ್ಕಳಿಗೆ ಕರಾಟೆ ಕಲಿಸುತ್ತಿರುವುದು.

ಶಾಲೆಗೆ ರಜೆ ಬಂದರೆ ಮಕ್ಕಳು ವಿವಿಧ ಆಟೋಟಗಳು ಸೇರಿದಂತೆ ಬಾವಿಗಳಲ್ಲಿ ಈಜುವುದು, ಮರ ಹತ್ತುವುದು ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರಿಂದ ದೈಹಿಕವಾಗಿ ಗಟ್ಟಿಯಾಗಿದ್ದರು. ಆದರೆ ಇದೀಗ ಕೇವಲ ಟಿವಿ, ಮೊಬೈಲು, ಟ್ಯಾಬ್‍ಗಳ ಮುಂದೆ ಕುಳಿತುಕೊಂಡು ತಮ್ಮ ಕ್ರಿಯಾಶೀಲತೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಎಳೆಯ ವಯಸ್ಸಿನಲ್ಲಿಯೇ ಮಕ್ಕಳಿಗೆ ಕ್ರೀಡೆಯಲ್ಲಿ ಪ್ರೋತ್ಸಾಹಿಸುವ ಮೂಲಕ ಅವರ ಪ್ರತಿಭೆಯನ್ನು ಗುರುತಿಸಬೇಕು. ಮಕ್ಕಳನ್ನು ದೈಹಿಕವಾಗಿ ಸದೃಡಗೊಳಿಸುವ ನಿಟ್ಟಿನಲ್ಲಿ ಪೋಷಕರು ಮಕ್ಕಳಿಗೆ ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳುವಂತೆ ಮನವರಿಕೆ ಮಾಡಿಕೊಡಬೇಕು ಎಂದರು.
ದಿವ್ಯ ಭಾರತ್ ಕರಾಟೆ ಡೋ ಅಸೋಸಿಯೇಷನ್ ಶಿಕ್ಷಕ ವಿ.ಅರುಣ್‍ಕುಮಾರ್ ಮಾತನಾಡಿ, ಪ್ರತಿ ದಿನ ಬೆಳಿಗ್ಗೆ 09 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಉಚಿತ ಶಿಬಿರವನ್ನು ನಡೆಸಲಾಗುತ್ತದೆ. ಹತ್ತು ದಿನಗಳ ಕಾಲ ನಡೆಯುವ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಕ್ಕಳು ಕಲಿತದ್ದನ್ನು ಪ್ರದರ್ಶಿಸುವರು ಎಂದರು.
ಗ್ರಾಮ ಪಂಚಾಯಿತಿ ಸದಸ್ಯೆ ಹಂಸಪ್ರಭಾಕರ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ, ಆಶಾ ಕಾರ್ಯಕರ್ತೆ ಚಂದ್ರಕಲಾ, ಗ್ರಾಮಸ್ಥರಾದ ಅಂಬಿಕಾ, ಲತಾ ಮತ್ತಿತರರು ಹಾಜರಿದ್ದರು.

ಸ್ವಸಹಾಯ ಸಂಘದ ಸದಸ್ಯರಿಗೆ ಸಾಲದ ಚೆಕ್ ವಿತರಣೆ

0

ಬ್ಯಾಂಕುಗಳಿಂದ ಪಡೆದ ಸಾಲವನ್ನು ನಿಗಧಿತ ಸಮಯದಲ್ಲಿ ಮರುಫಾವತಿ ಮಾಡುವುದರೊಂದಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮೊತ್ತದ ಸಾಲ ಪಡೆಯುವ ಅವಕಾಶ ಪಡೆದುಕೊಂಡು ಎಲ್ಲರೂ ಆರ್ಥಿಕವಾಗಿ ಮುಂದುವರೆಯಬೇಕು ಎಂದು ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.
ತಾಲೂಕಿನ ತಲಕಾಯಲಬೆಟ್ಟದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣಮಂಟಪದಲ್ಲಿ ಗುರುವಾರ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಹಾಗು ತಾಲೂಕಿನ ಈ ತಿಮ್ಮಸಂದ್ರ ವ್ಯವಸಾಯ ಸೇವಾ ಸಹಕಾರ ಸಂಘದ ಮೂಲಕ ಏರ್ಪಡಿಸಲಾಗಿದ್ದ ಸ್ವ ಸಹಾಯ ಗುಂಪುಗಳಿಗೆ ಸಾಲ ವಿತರಣೆ ಮಾಡುವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಮಹಿಳೆಯರಿಗೆ ಅವರ ಮನೆ ಬಾಗಿಲಿಗೆ ಬಂದು ಸಾಲ ಸೌಲಭ್ಯ ವಿತರಿಸುವ ವಿಶೇಷ ಯೋಜನೆಯನ್ನು ರಾಜ್ಯದಲ್ಲಿಯೇ ಮೊಟ್ಟ ಮೊದಲ ಭಾರಿಗೆ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅನುಷ್ಠಾನಗೊಳಿಸಿದ್ದು ಗ್ರಾಮೀಣ ಭಾಗದಲ್ಲಿನ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ಡಿ.ಸಿ.ಸಿ ಬ್ಯಾಂಕ್ ತಮ್ಮ ಮನೆ ಬಾಗಿಲಿಗೆ ಬಂದು ಸಾಲ ಸೌಲಭ್ಯ ನೀಡುತ್ತಿದ್ದು ಯಾವ ಉದ್ದೇಶಕ್ಕೆ ಸಾಲ ಪಡೆಯುತ್ತೀರೋ ಅದಕ್ಕಾಗಿಯೇ ಹಣ ಬಳಸಿ ಸಕಾಲದಲ್ಲಿ ಸಾಲ ಮರು ಫಾವತಿಸುವುದರಿಂದ ಬ್ಯಾಂಕುಗಳು ಅಭಿವೃದ್ದಿಯಾಗುತ್ತದೆ ಹಾಗು ಮತ್ತೊಬ್ಬರಿಗೆ ಸಾಲ ಸೌಲಭ್ಯ ಕಲ್ಪಿಸಲು ಸಹಕಾರಿಯಾಗುತ್ತದೆ ಹಾಗಾಗಿ ಎಲ್ಲರೂ ಸಕಾಲದಲ್ಲಿ ಸಾಲ ಮರು ಫಾವತಿಸಿ ಸಹಕಾರಿ ಕ್ಷೇತ್ರದ ಅಭಿವೃದ್ದಿಯಲ್ಲಿ ಸಹಕರಿಸುವಂತೆ ಮನವಿ ಮಾಡಿದರು.

ತಾಲೂಕಿನ ತಲಕಾಯಲಬೆಟ್ಟದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣಮಂಟಪದಲ್ಲಿ ಗುರುವಾರ ಡಿಸಿಸಿ ಬ್ಯಾಂಕ್ ಹಾಗು ತಾಲೂಕಿನ ಈ ತಿಮ್ಮಸಂದ್ರ ವ್ಯವಸಾಯ ಸೇವಾ ಸಹಕಾರ ಸಂಘದ ಮೂಲಕ ಏರ್ಪಡಿಸಲಾಗಿದ್ದ ಸ್ವ ಸಹಾಯ ಗುಂಪುಗಳಿಗೆ ಸಾಲ ವಿತರಣೆ ಮಾಡುವ ಸಮಾರಂಭದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸ್ವಸಹಾಯ ಸಂಘದ ಸದಸ್ಯರಿಗೆ ಸಾಲದ ಚೆಕ್ ವಿತರಿಸಿದರು.

ಜಿ.ಪಂ ಸದಸ್ಯ, ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ ಸಕಾಲದಲ್ಲಿ ಮಳೆಯಾಗದೇ ಬರಪೀಡಿತ ಪ್ರದೇಶವಾಗಿರುವ ಈ ಭಾಗದ ಜನರಿಗೆ ಹೈನುಗಾರಿಕೆಯೊಂದೇ ಜೀವಾಳವಾಗಿದೆ. ಮಹಿಳೆಯರು ಮನೆಯಲ್ಲಿ ಒಂದು ಹಸು ಮೇಯಿಸಿಕೊಂಡು ಹಾಲು ಕರೆಯುವುದರಿಂದ ಕುಟುಂಬಗಳ ನಿರ್ವಹಣೆ ಅಲ್ಪ ಮಟ್ಟಿಗೆ ಸುಧಾರಿಸಿದೆ. ಡಿಸಿಸಿ ಬ್ಯಾಂಕಿನಿಂದ ಶೂನ್ಯ ಬಡ್ಡಿ ಧರದಲ್ಲಿ ನೀಡುತ್ತಿರುವ ಸಾಲದ ಹಣವನ್ನು ಯಾವ ಉದ್ದೇಶಕ್ಕೆ ತೆಗೆದುಕೊಳ್ಳುತ್ತೀರೋ ಅದಕ್ಕಾಗಿಯೇ ಬಳಸಿ ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಲ ಸೌಲಭ್ಯ ಪಡೆಯಬಹುದು ಎಂದರು.
ಇದೇ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಿ.ವಿ.ನಾಗರಾಜ್, ಪಿ.ಶಿವಾರೆಡ್ಡಿ ಮಾತನಾಡಿದರು.
ಈ ತಿಮ್ಮಸಂದ್ರ ವ್ಯವಸಾಯ ಸೇವಾ ಸಹಕಾರ ಸಂಘದ ನಾಮಪತ್ರ ಸದಸ್ಯತ್ವ ಪಡೆದಿರುವ ಸುಮಾರು 31 ಸ್ವ ಸಹಾಯ ಸಂಘಗಳಿಗೆ 1 ಕೋಟಿ 18 ಲಕ್ಷ ರೂ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ವಿತರಿಸಲಾಯಿತು.
ಶಿಡ್ಲಘಟ್ಟ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಆನಂದ್, ಜಂಗಮಕೋಟೆ ಎಸ್‍ಎಫ್‍ಸಿಎಸ್‍ನ ಸಿಇಓ ನಾಗರಾಜ್, ಈ ತಿಮ್ಮಸಂದ್ರ ವ್ಯವಸಾಯ ಸೇವಾ ಸಹಕಾರ ಸಂಘದ ಉಪಾಧ್ಯಕ್ಷೆ ಚನ್ನಮ್ಮ, ನಿರ್ದೇಶಕರಾದ ಲಗುಮಕ್ಕ, ವೆಂಕಟಾಚಲಪತಿ, ದಸ್ತುಸಾಬಿ, ನರಸಿಂಹಪ್ಪ, ಬೈರಾರೆಡ್ಡಿ, ಸಿಇಓ ಅಕ್ಕಲಪ್ಪ ಆನೇಮಡುಗು ಸದಾಶಿವರೆಡ್ಡಿ, ಮಳ್ಳೂರು ಮಂಜುನಾಥ್, ಮತ್ತಿತರರು ಹಾಜರಿದ್ದರು.

ಉಚಿತ ರೇಷನ್ ಕಾರ್ಡ್ ನೋಂದಣಿ

0

ಶಿಡ್ಲಘಟ್ಟ ತಾಲೂಕು ಬಿಜೆಪಿ ವತಿಯಿಂದ ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ಬುಧÀವಾರ ಆಯೋಜಿಸಲಾಗಿದ್ದ ಉಚಿತ ರೇಷನ್ ಕಾರ್ಡ್ ನೋಂದಣಿ ಕಾರ್ಯಾಗಾರದಲ್ಲಿ ನಾಗರೀಕರು ಪಡಿತರ ಚೀಟಿಗಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದರು.
ತಾಲೂಕಿನ ಬಹುತೇಕ ಜನತೆಗೆ ಈಗಾಗಲೇ ಪಡಿತರ ಚೀಟಿಗಳಿದ್ದು ಇಲ್ಲದವರಿಗೆ ಹಾಗು ಈ ಹಿಂದೆ ಆದಾರ್ ಸಂಖ್ಯೆ ಲಿಂಕ್ ಮಾಡದ ಪಡಿತರ ಚೀಟಿಗಳು ರದ್ದಾಗಿರುವ ಹಿನ್ನಲೆಯಲ್ಲಿ ನೂತನವಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲಾಖೆ ಅವಕಾಶ ಮಾಡಿಕೊಟ್ಟಿದೆ. ನಾಗರೀಕರು ರೇಷನ್ ಕಾರ್ಡ್‍ಗಾಗಿ ಅರ್ಜಿ ಸಲ್ಲಿಸಲು ಸ್ಥಳೀಯ ಸೈಬರ್ ಕೇಂದ್ರಗಳಿಗೆ ಹೋಗುವುದು ಹಾಗು ಅಲ್ಲಿ ಪಾವತಿಸಬೇಕಾದ ಸೇವಾ ಶುಲ್ಕವನ್ನು ತಪ್ಪಿಸುವ ಉದ್ದೇಶದಿಂದ ತಾಲೂಕು ಬಿಜೆಪಿ ಪಕ್ಷದ ವತಿಯಿಂದ ಉಚಿತ ರೇಷನ್ ಕಾರ್ಡ್ ನೋಂದಣಿ ಕೇಂದ್ರ ನಿರ್ಮಿಸಿದ್ದು ನಾಗರೀಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಾಲೂಕು ಬಿಜೆಪಿ ಕಾರ್ಯದರ್ಶಿ ಭಾಸ್ಕರರೆಡ್ಡಿ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಬಿ.ಸಿ.ನಂದೀಶ್, ಮುಖಂಡರಾದ ದಾಮೋಧರ್, ಮುನಿರಾಜು, ಶ್ರೀನಿವಾಸ್, ಸುಜಾತಮ್ಮ, ಅಶ್ಫಕ್ ಅಹಮ್ಮದ್, ಮತ್ತಿತರರು ಹಾಜರಿದ್ದರು.

ಭಗೀರಥ ಜಯಂತಿಯ ಪೂರ್ವಭಾವಿ ಸಭೆ

0

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮೇ 05 ರಂದು ಭಗೀರಥ ಜಯಂತಿಯನ್ನು ತಾಲೂಕು ಕಚೇರಿ ಸಭಾಂಗಣದಲ್ಲಿ ಆಚರಿಸಲು ತೀರ್ಮಾನಿಸಲಾಯಿತು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬುದವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಭಗೀರಥ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಎಸ್. ಅಜಿತ್‍ಕುಮಾರ್ ರೈ ಮಾತನಾಡಿ ಪ್ರತಿವರ್ಷದಂತೆ ಈ ವರ್ಷವೂ ಭಗೀರಥ ಜಯಂತಿಯನ್ನು ಕಚೇರಿಯ ಸಬಾಂಗಣದಲ್ಲಿ ಆಚರಿಸಲಾಗುವುದು. ಸಮಾರಂಭದ ಆಹ್ವಾನ ಪತ್ರಿಕೆ ಸೇರಿದಂತೆ ಕಾರ್ಯಕ್ರಮಕ್ಕೆ ಸಮಾಜದ ಎಲ್ಲರನ್ನು ಆಹ್ವಾನಿಸುವ ಕೆಲಸವನ್ನು ಸಿಬ್ಬಂದಿ ಮಾಡುವರು. ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವುದನ್ನು ಸಮಾಜದ ಮುಖಂಡರು ಸೂಚಿಸಿದಲ್ಲಿ ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರು ಹಾಕಿಸಲಾಗುವುದು. ಇನ್ನುಳಿದಂತೆ ಕಾರ್ಯಕ್ರಮದಲ್ಲಿ ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸರಳ ಹಾಗು ಸುಂದರವಾಗಿ ಕಾರ್ಯಕ್ರಮ ನೆರವೇರಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥ ರೆಡ್ಡಿ, ಕೃಷಿ ಸಹಾಯಕ ನಿರ್ದೇಶಕ ದೇವೇಗೌಡ, ಭಗೀರಥ ಉಪ್ಪಾರ ಮಹಾಸಭಾ ತಾಲ್ಲೂಕು ಅಧ್ಯಕ್ಷ ಟಿ. ಗಂಗಪ್ಪ ಮತ್ತಿತರರು ಹಾಜರಿದ್ದರು.

ಉಚಿತ ಬೇಸಿಗೆ ಶಿಬಿರ

0

ನಗರದ ಭಗತ್‍ಸಿಂಗ್ ತಾಲೂಕು ಅಥ್ಲೆಟಿಕ್ ಅಸೋಸಿಯೇಷನ್ ಹಾಗು ನೆಹರೂ ಕ್ರೀಡಾಂಗಣ ಅಭಿವೃದ್ದಿ ಸಮಿತಿ ವತಿಯಿಂದ 20 ದಿನಗಳ ಕಾಲ ಉಚಿತ ಬೇಸಿಗೆ ಶಿಬಿರವನ್ನು ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಿರುವುದಾಗಿ ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಪಟು ನಾರಾಯಣಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 26 ರಿಂದ 20 ದಿನಗಳ ಕಾಲ ಶಿಭಿರದಲ್ಲಿ ವಿವಿಧ ಕ್ರೀಡಾ ತರಬೇತಿ ಉಚಿತವಾಗಿ ಆಯೋಜಿಸಿದ್ದು, ಮಕ್ಕಳಿಗೆ ಓಟ, ಉದ್ದಜಿಗಿತ, ಚಕ್ರ ಎಸೆತ, ಕರಾಟೆ, ಮುಂತಾದ ಕ್ರೀಡೆಗಳ ತರಬೇತಿ ನೀಡಲಾಗುವುದು. ಪ್ರತಿ ದಿನ ಬೆಳಿಗ್ಗೆ 6 ಗಂಟೆಗೆ ಶಿಬಿರ ಪ್ರಾರಂಭವಾಗುತ್ತದೆ. ಆಸಕ್ತ ಮಕ್ಕಳು ಹೆಚ್ಚಿನ ವಿವರಗಳಿಗೆ 8971823974 ಸಂಪರ್ಕಿಸಲು ಕೋರಿದ್ದಾರೆ.

ಕೃಷಿ ಮತ್ತು ಪಶುಸಂಗೋಪನಾ ಕ್ಷೇತ್ರದಲ್ಲಿನ ಸಾಧನೆ

0

ತಾಲ್ಲೂಕಿನ ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್.ಜಿ.ಗೋಪಾಲಗೌಡ ಅವರಿಗೆ ಬೆಂಗಳೂರಿನ ಜನಸೇವಾ ಸಂಸ್ಥೆ ವತಿಯಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಕೃಷಿ ಮತ್ತು ಪಶುಸಂಗೋಪನಾ ಕ್ಷೇತ್ರದಲ್ಲಿನ ಸಾಧನೆಗಾಗಿ 2017 ನೇ ಸಾಲಿನ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
ಬೆಂಗಳೂರಿನ ನಯನ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡರ 507 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿಶ್ವ ವಕ್ಕಲಿಗರ ಮಹಾ ಸಂಸ್ಥಾನ ಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ, ಉಪ ಮಹಾಪೌರರಾದ ಆನಂದ, ಕೃಷ್ಣಮೂರ್ತಿ, ಜನಸೇವಾ ಸಂಸ್ಥೆಯ ಅಧ್ಯಕ್ಷ ಡಾ.ಹೆಚ್.ಬಿ. ರಾಜೇಗೌಡ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ರಾಜ್ಯ ಸರ್ಕಾರದ ಕೃಷಿ ಪಂಡಿತ ಪ್ರಶಸ್ತಿ, ಕೃಷಿ ರತ್ನ, ಸೇರಿದಂತೆ ಈಗಾಗಲೇ 15 ಪ್ರಶಸ್ತಿಗಳನ್ನು ಪಡೆದಿರುವ ಎಚ್.ಜಿ. ಗೋಪಾಲಗೌಡ ಅವರ ಕೃಷಿ ಬದುಕಿನ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಕಡಿಮೆ ನೀರು ಬಳಕೆ ಹಾಗೂ ಸಾವಯವ ಪದ್ಧತಿಯಲ್ಲಿ ಉತ್ತಮ ಹಿಪ್ಪುನೇರಳೆ ಸೊಪ್ಪಿನ ಬೇಸಾಯ, ಗುಣಮಟ್ಟದ ರೇಷ್ಮೆ ಗೂಡಿನ ಬೆಳೆ, ಮಳೆಯಾಶ್ರಿತವಾಗಿ ಮಿಶ್ರ ಬೆಳೆ, ರಾಂಬುಲೆಟ್ ಕುರಿ ಸಾಕಣೆ, ನೂತನ ಮಾದರಿಯ ಚಂದ್ರಂಕಿ, ಹೂಜಿ ನೊಣ ತಡೆಯಲು ಮಾಡಿರುವ ಆವಿಷ್ಕಾರ, ಕೃಷಿ ಅಧ್ಯಯನಕ್ಕಾಗಿ ರಾಷ್ಟ್ರದ ನಾನಾ ರಾಷ್ಟ್ರಗಳ ಭೇಟಿ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮುಂತಾದ ಕೃಷಿ ಸಾಧನೆಯನ್ನು ಗುರುತಿಸಲಾಗಿದೆ.

7ನೇ ವೇತನ ಆಯೋಗದ ಶಿಫಾರಸ್ಸು

0

7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಎಲ್ಲಾ ರಾಜ್ಯಗಳಲ್ಲಿಯೂ ಕೂಡಲೇ ಜಾರಿಗೊಳಿಸಬೇಕು ಹಾಗು ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನೇ ಜಾರಿಯಲ್ಲಿಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ನಗರದ ಕೋಟೆ ವೃತ್ತದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಬಿಇಓ ಎಸ್. ರಘುನಾಥರೆಡ್ಡಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದ ಸದಸ್ಯರು 7 ನೇ ವೇತನ ಆಯೋಗದ ಶಿಫಾರಸ್ಸನ್ನು ಕೂಡಲೇ ಎಲ್ಲಾ ರಾಜ್ಯಗಳಲ್ಲಿಯೂ ಜಾರಿಗೊಳಿಸಬೇಕು. ಹಾಗು ನೂತನ ಪಿಂಚಣಿ ಯೋಜನೆಯಿಂದ ಶಿಕ್ಷಕರ ಮತ್ತು ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ಜೀವನ ಅಂಧಕಾರದಲ್ಲಿ ಮುಳುಗುತ್ತದೆ. ಹಾಗಾಗಿ ನೂತನ ಪಿಂಚಣಿ ಯೋಜನೆಯನ್ನು ಕೈಬಿಟ್ಟು ಹಳೆ ಪಿಂಚಣಿ ಯೋಜನೆಯನ್ನೇ ಮುಂದುವರೆಸುವುದು. ಪ್ರಾಥಮಿಕ ಶಿಕ್ಷಣದ ಅಭಿವೃದ್ದಿಗಾಗಿ ಪ್ರಾಥಮಿಕ ಶಿಕ್ಷಣ ಮಂಡಳಿ ಸ್ಥಾಪಿಸಬೇಕು, ರಾಜ್ಯದ ಎಲ್ಲ ಸರ್ಕಾರಿ ಸಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸಬೇಕು. ಮತ್ತು ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಕನಿಷ್ಟ 30 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ/ಶಿಕ್ಷಕಿ ಹಾಗು ಶಾಲೆಗೆ ಒಬ್ಬ ಮುಖ್ಯಶಿಕ್ಷಕರನ್ನು ನಿಯುಕ್ತಿಗೊಳಿಸಬೇಕು ಎಂದು ಒತ್ತಾಯಿಸಿ ಮನವಿ ಪತ್ರವನ್ನು ಬಿಇಓ ಎಸ್ ರಘುನಾಥರೆಡ್ಡಿರ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಿ.ವಿ.ಶ್ರೀರಾಮಯ್ಯ, ಕಾರ್ಯದರ್ಶಿ ಬಿ.ಆರ್.ನಾರಾಯಣಸ್ವಾಮಿ, ಜಿಲ್ಲಾ ಗೌರವಾಧ್ಯಕ್ಷ ಸಿ.ಎಂ.ಮುನಿರಾಜು, ಎನ್.ಪಿ.ಎಸ್. ನೌಕರರ ಸಂಘದ ಅಧ್ಯಕ್ಷ ಗಜೇಂದ್ರ, ಪಿಳ್ಳಣ್ಣ, ಮಂಜುನಾಥ, ಮುನಿಯಪ್ಪ, ನರಸಿಂಹರಾಜು, ಸುದರ್ಶನ್, ಸಾಧಿಕ್‍ಪಾಷ, ದ್ರಾಕ್ಷಾಯಿಣಿ, ಲತಾ, ಸರಸ್ವತಮ್ಮ ಮತ್ತಿತರರು ಹಾಜರಿದ್ದರು.

ಗ್ರಾಮಸ್ವರಾಜ್ ಜಾಗೃತಿ ಅಭಿಯಾನ ಕಾರ್ಯಕ್ರಮ

0

ಕೇವಲ ಕೆಲವೇ ಕೆಲ ಪ್ರಭಾವಿಗಳ ಹಿಡಿತದಲ್ಲಿದ್ದ ಅಧಿಕಾರವನ್ನು ಗ್ರಾಮೀಣ ಮಟ್ಟದ ಕಟ್ಟ ಕಡೆಯ ವ್ಯಕ್ತಿಗೂ ಸಿಗವಂತೆ ಮಾಡಿದ ಪಂಚಾಯತ್ ರಾಜ್ ಮಸೂದೆಯ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಹೇಳಿದರು.
ಪಂಚಾಯತ್ ರಾಜ್ ಮಸೂದೆ ಜಾರಿಯಾಗಿ 25 ವರ್ಷಗಳು ಕಳೆದಿರುವ ಹಿನ್ನಲೆಯಲ್ಲಿ ನಗರದ ಕಾಂಗ್ರೆಸ್ ಭವನದಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ವತಿಯಿಂದ ಆಯೋಜಿಸಲಾಗಿದ್ದ ಗ್ರಾಮಸ್ವರಾಜ್ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಜಿ ಪ್ರಧಾನಿ ದಿವಂಗತ ರಾಜೀವ್‍ಗಾಂಧಿಯವರ ದೂರದೃಷ್ಟಿಯ ಫಲವಾಗಿ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಯಾಗಿದ್ದು ಅಧಿಕಾರ ವಿಕೇಂದ್ರಿಕರಣದಿಂದ ಗ್ರಾಮೀಣ ಭಾಗದ ಕಟ್ಟಕಡೆಯ ವ್ಯಕ್ತಿಗೂ ಅಧಿಕಾರ ಸಿಗುವಂತಾಗಿದೆ. ದೇಶದ ಬಹುತೇಕ ಗ್ರಾಮಗಳು ಗುಡಿಸಲು ಮುಕ್ತವಾಗಿದ್ದು, ಹಳ್ಳಿಗಳಲ್ಲಿ ಉತ್ತಮ ರಸ್ತೆ, ಬೀದಿದ್ವೀಪ, ಚರಂಡಿಗಳ ನಿರ್ಮಾಣವಾಗಿದೆ.
ಪಂಚಾಯತ್ ರಾಜ್ ಮಸೂದೆಯ ಬೆಳ್ಳಿ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ನೇರವಾಗಿ ಜನರೆಡೆಗೆ ಹೋಗಿ ಪಕ್ಷದ ಚಿಂತನೆ ಮತ್ತು ಕಲ್ಪನೆಯನ್ನು ತಲುಪಿಸಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸುವ ಕೆಲಸ ಮಾಡಬೇಕು. ಗ್ರಾಮ ಮಟ್ಟದಲ್ಲಿ ಪಕ್ಷದ ಬೇರನ್ನು ಗಟ್ಟಿಗೊಳಿಸುವ ಕೆಲಸವನ್ನು ಮಾಡಲು ಕಾರ್ಯಕರ್ತರು ಮುಂದಾಗಬೇಕು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಮೂಲ ಉದ್ದೇಶವಾದ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸುವುದು. ಜನಪ್ರತಿನಿಧಿಗಳನ್ನು ಸಂಘಟಿಸಿ ಚುನಾಯಿತ ಪ್ರತಿನಿಧಿಗಳಲ್ಲಿ ಹೊಸ ಹುರುಪು, ಜಾಗೃತಿ ಮತ್ತು ರಾಷ್ಟ್ರಪ್ರಜ್ಞೆಯನ್ನು ಬಲಪಡಿಸಿ, ನಮ್ಮ ಪ್ರಜಾಪ್ರಭುತ್ವದ ತಳಹದಿಯಾದ ಗ್ರಾಮ ಸ್ವರಾಜ್ಯ, ಜನರ ಸಬಲೀಕರಣ, ಅಧಿಕಾರ ವಿಕೇಂದ್ರಿಕರಣಗಳತ್ತ ಹೆಚ್ಚು ಒತ್ತು ನೀಡಿ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಬೇಕೆಂದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಪದಾಧಿಕಾರಿಗಳ ಜವಾಬ್ದಾರಿ ಹೆಚ್ಚಾಗಿದೆ. ಗ್ರಾಮ ಮಟ್ಟದಲ್ಲಿ ಕಾಂಗ್ರೆಸ್ ಮನೋಭಾವದ ನಾಗರಿಕರನ್ನು ಒಗ್ಗೂಡಿಸಿ, ಪಂಚಾಯತ್‍ರಾಜ್‍ನ ಜನಪ್ರತಿನಿಧಿಗಳಿಗೆ ಜಾಗೃತಿ ಮೂಡಿಸಬೇಕಿದೆ. ಗ್ರಾಮದ ಸಮಸ್ಯೆಗಳ ಬಗ್ಗೆ ದನಿ ಎತ್ತುವ ಪ್ರಯತ್ನ ನಡೆಯಬೇಕು. ಗ್ರಾಮ ಮಟ್ಟದಲ್ಲಿ ಹೊಸ ನಾಯಕರನ್ನು ಗುರುತಿಸಿ, ಬೆಳೆಸಿ, ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚು ಮಹತ್ವಪೂರ್ಣ ಪಾತ್ರ ನಿರ್ವಹಿಸಲು ಪ್ರೋತ್ಸಾಹಿಸಬೇಕು. ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಜನರಿಗೆ ವಿವರಿಸುವ ಕೆಲಸ ಕಾರ್ಯಕರ್ತರಿಂದಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಪಂಚಾಯತ್ ರಾಜ್ ಮಸೂದೆಯಿಂದ ಮೀಸಲಾತಿಯಡಿ ವಿವಿಧ ಗ್ರಾ.ಪಂ ಗಳ ಅಧ್ಯಕ್ಷರಾಗಿ, ಸದಸ್ಯರಾಗಿ ಅಧಿಕಾರ ನಡೆಸಿದ ಹಾಲಿ ಹಾಗು ಮಾಜಿ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮುನಿಕೃಷ್ಣಪ್ಪ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಎನ್.ಮುನಿಯಪ್ಪ, ಆರ್.ಶ್ರೀನಿವಾಸ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಚಾಲಕ ಎನ್.ಆರ್. ನಿರಂಜನ್, ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಎಲ್.ಮಧುಸೂದನ್, ನಗರಸಭೆ ಸದಸ್ಯ ಬಾಲಕೃಷ್ಣ, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಶಂಕರ್, ನಾಗರಾಜ್, ಕ್ಯಾತಪ್ಪ, ಶ್ರೀನಾಥ್, ಬೆಳ್ಳೂಟಿ ವೆಂಕಟೇಶ್, ಮತ್ತಿತರರು ಹಾಜರಿದ್ದರು.

ಇದ್ಲೂಡು ರಸ್ತೆಯ ಮಾರುತಿ ನಗರದ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಉಟ್ಲು ಮಹೋತ್ಸವ

0

ನಗರದ ಹೊರವಲಯದ ಇದ್ಲೂಡು ರಸ್ತೆಯ ಮಾರುತಿ ನಗರದ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಶನಿವಾರ 22ನೇ ವರ್ಷದ ಉಟ್ಲು ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ದೇವಸ್ಥಾನದಲ್ಲಿ ವಿಶೇಷ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಸಲಾಯಿತು. ಹಾಲು ಉಟ್ಲು ಹಾಗೂ ಮನರಂಜನಾ ಉಟ್ಲು ಮಹೋತ್ಸವಕ್ಕೆ ನೂರಾರು ಜನರು ಸಾಕ್ಷಿಯಾದರು. ಉಟ್ಲು ಕಾಯನ್ನು ಹೊಡೆಯುವುದನ್ನು ಜನರು ವೀಕ್ಷಿಸಿ ಹುರಿದುಂಬಿಸಿದರು.
ಇದ್ಲೂಡಿನಲ್ಲಿ ಜಾತ್ರೆಯಂತೆ ಜನರು ಸೇರಿದ್ದು, ಸಾಕಷ್ಟು ಸಿಹಿ ತಿಂಡಿಗಳ, ಬತ್ತಾರು, ಖಾರ ಸೇರಿದಂತೆ ವಿವಿಧ ಆಟಿಕೆಗಳ ಅಂಗಡಿಗಳು ರಸ್ತೆ ಬದಿಯಲ್ಲಿ ಹಾಕಲಾಗಿತ್ತು. ಆಗಮಿಸಿದ್ದ ಜನರಿಗೆ ಹೆಸರುಬೇಳೆ ಹಾಗೂ ಪಾನಕವನ್ನೂ ವಿತರಿಸಲಾಯಿತು. ಅನ್ನದಾನವನ್ನು ಸಹ ದೇವಾಲಯದ ವತಿಯಿಂದ ಆಯೋಜಿಸಲಾಗಿತ್ತು. ಮಾರುತಿ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ದೇವಾಲಯಕ್ಕೆ ಆಗಮಿಸಿದ್ದರು.

ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಬೇಕಾದರೆ ಅದು ಕೇವಲ ಜೆಡಿಎಸ್ ಪಕ್ಷದಿಂದ ಮಾತ್ರ ಸಾಧ್ಯ – ಹೆಚ್.ಡಿ.ಕುಮಾರಸ್ವಾಮಿ

0

ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದ ಕೇವಲ 24 ಗಂಟೆಯೊಳಗೆ ರಾಜ್ಯದ ರೈತರ 58 ಸಾವಿರ ಕೋಟಿ ಸಾಲ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ತಾಲೂಕು ಜೆಡಿಎಸ್ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಕ್ಷೇತ್ರದ ಮಾಜಿ ಶಾಸಕ ದಿವಂಗತ ಎಸ್.ಮುನಿಶಾಮಪ್ಪ ಅವರ 5 ನೇ ವರ್ಷದ ಪುಣ್ಯಸ್ಮರಣೆ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿರಿಗೆ ನಾಗರಿಕ ಪೌರಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಶತಸಿದ್ದ ಎಂದ ಅವರು ಬಯಲು ಸೀಮೆ ಪ್ರದೇಶದ ಈ ಭಾಗದ ಜನರಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಬೇಕಾದರೆ ಅದು ಕೇವಲ ಜೆಡಿಎಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದರು.
ರಾಜ್ಯದಲ್ಲಿ ಪ್ರತಿನಿತ್ಯ ರೈತರ ಆತ್ಮಹತ್ಯೆ ನಡೆಯುತ್ತಿದ್ದರೂ ಸೌಜನ್ಯಕ್ಕಾದರೂ ನಾವು ನಿಮ್ಮೊಂದಿಗಿದ್ದೇವೆ ದಯವಿಟ್ಟು ಆತ್ಮಹತ್ಯೆಯಂತಹ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಹೇಳುವ ನೈತಿಕತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕಿಲ್ಲ ಎಂದರು.
ಉತ್ತರ ಭಾರತದಲ್ಲಿ ಈ ಹಿಂದೆ ಕಾಂಗ್ರೆಸ್ ಪಕ್ಷ ನಡೆದುಕೊಂಡ ರೀತಿ ನೀತಿಗಳಿಂದ ಕಾಂಗ್ರೆಸ್ ಧೂಳಿಪಟವಾಗಿದೆಯೇ ಹೊರತು ಅದು ನರೇಂದ್ರ ಮೋದಿ ಹಾಗು ಅಮಿತ್‍ಷಾ ತಂತ್ರಗಾರಿಕೆಯ ಫಲವಾಗಿ ಅಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಹಾಗು ಅಮಿತ್ ಷಾ ತಂತ್ರಗಾರಿಕೆ ಕರ್ನಾಟಕದ ಚುನಾವಣೆಯಲ್ಲಿ ನಡೆಯುವುದಿಲ್ಲ ಎಂದರು.
ನಮಗೆ ದೆಹಲಿಯಲ್ಲಿ ಕುಳಿತು ಹಿಡಿತದಲ್ಲಿಟ್ಟುಕೊಳ್ಳುವ ರಾಷ್ಟ್ರೀಯ ಪಕ್ಷಗಳ ಸರ್ಕಾರದ ಅಗತ್ಯವಿಲ್ಲ ಬದಲಿಗೆ ನಮ್ಮದೇ ಹಿಡಿತದಲ್ಲಿರುವ ಯಾವುದೇ ಹೈಕಮಾಂಡ್ ಸಂಸ್ಕøತಿಯಿಲ್ಲದ ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೆ ಬಂದರೆ ರಾಜ್ಯದ ಅಭಿವೃದ್ದಿ ಇನ್ನಷ್ಟು ತ್ವರಿತವಾಗಿ ಆಗಲಿದೆ ಎಂದರು
ರಾಜ್ಯದ ಎಲ್ಲಾ ಸಮುದಾಯಗಳಗೆ ಸಾಮಾಜಿಕ ನ್ಯಾಯ ಕಲ್ಪಿಸಬೇಕಾದರೆ ಅದು ಕೇವಲ ಜೆಡಿಎಸ್ ನಿಂದ ಮಾತ್ರ ಸಾಧ್ಯ. ರಾಜ್ಯದಲ್ಲಿ ಇದೀಗ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದಿಂದ ಅಲ್ಪಸಂಖ್ಯಾತರಿಗೆ ಯಾವುದೇ ರಕ್ಷಣೆಯಿಲ್ಲ ಎಂದರು.
ಶಾಸಕ ಎಂ.ರಾಜಣ್ಣ ಮಾತನಾಡಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಬಲಿಷ್ಠವಾಗಿದ್ದು ಮುಂಬರುವ ಚುನಾವಣೆಯಲ್ಲಿಯೂ ಜೆಡಿಎಸ್ ಅಭ್ಯರ್ಥಿ ಜಯಗಳಿಸುವಷ್ಟು ಸಮರ್ಥವಾಗಿದೆ. ಪಕ್ಷವನ್ನು ಮುನ್ನಡೆಸುವಂತಹ ನಾಯಕರೂ ಪಕ್ಷದಲ್ಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯನ್ನಾಗಿಸುವ ನಿಟ್ಟಿನಲ್ಲಿ ಎಲ್ಲಾ ಮುಖಂಡರು ಸೇರಿದಂತೆ ಕಾರ್ಯಕರ್ತರು ಒಗ್ಗಟ್ಟಿನಿಂದ ಪಕ್ಷವನ್ನು ಮತ್ತಷ್ಟು ಸದೃಡಗೊಳಿಸಬೇಕು ಎಂದರು.
ಜೆಡಿಎಸ್ ಮುಖಂಡ ಮೇಲೂರಿನ ಬಿ.ಎನ್.ರವಿಕುಮಾರ್ ಮಾತನಾಡಿ ಕಳೆದ 2008 ರಿಂದ ತಾಲೂಕಿನಲ್ಲಿ ಜೆಡಿಎಸ್ ಪಕ್ಷದ ಅಭಿವೃದ್ದಿಗಾಗಿ ತನು, ಮನ, ಧನ ಅರ್ಪಿಸಿ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಿದ್ದೇವೆ. ಮಾಜಿ ಶಾಸಕ ದಿ.ಎಸ್.ಮುನಿಶಾಮಪ್ಪ ರವರು ಹಾಕಿಕೊಟ್ಟ ರಾಜಕೀಯ ಹಾದಿಯಲ್ಲಿ ಪಕ್ಷವನ್ನು ಎಲ್ಲರ ಸಹಕಾರದಿಂದ ಸಂಘಟಿಸಿದ್ದೇವೆ. ಮುಂದಿನ ದಿನಗಳಲ್ಲಿ ಹೆಚ್.ಡಿ.ಕುಮಾರಸ್ವಾಮಿ ಯವರು ರಾಜ್ಯದ ಮುಖ್ಯಮಂತ್ರಿಯನ್ನಾಗಿಸಲು ಪ್ರತಿಯೊಬ್ಬ ಕಾರ್ಯಕರ್ತರು ಹೆಚ್ಚಿನ ಪರಿಶ್ರಮ ಪಡಬೇಕೆಂದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್‍ನ ಕೆಲ ನಗರಸಭೆ ಸದಸ್ಯರೂ ಸೇರಿದಂತೆ ಸುಮಾರು 20 ಕ್ಕೂ ಹೆಚ್ಚು ಮುಖಂಡರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡರು.
ಸಮಾರಂಭದಲ್ಲಿ ಮಾಲೂರಿನ ಕೆ.ಎಸ್.ಮಂಜುನಾಥಗೌಡ, ದೇವನಹಳ್ಳಿ ಪಿಳ್ಳ ಮುನಿಶಾಮಪ್ಪ, ವಿಧಾನ ಪರಿಷತ್ ಸದಸ್ಯ ತೂಪಲ್ಲಿ ಚೌಡರೆಡ್ಡಿ, ಜಿಲ್ಲಾಧ್ಯಕ್ಷ ಕೆ.ವಿ.ನಾಗರಾಜ್, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ತಾಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ, ಜಿ.ಪಂ ಸದಸ್ಯರಾದ ಬಂಕ್ ಮುನಿಯಪ್ಪ, ತನುಜಾರಘು, ಜಯರಾಮರೆಡ್ಡಿ, ಮಾಜಿ ಸದಸ್ಯೆ ಶಿವಲೀಲಾ ರಾಜಣ್ಣ, ತಾ.ಪಂ ಅಧ್ಯಕ್ಷ ಲಕ್ಮಿನಾರಾಯಣರೆಡ್ಡಿ, ಉಪಾಧ್ಯಕ್ಷ ಹೆಚ್ ನರಸಿಂಹಯ್ಯ, ನಗರಸಭೆ ಅಧ್ಯಕ್ಷ ಅಪ್ಸರ್‍ಪಾಷ, ಉಪಾಧ್ಯಕ್ಷೆ ಪ್ರಭಾವತಿ ಸುರೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಿ.ವಿ.ನಾಗರಾಜ್, ಪಿ.ಶಿವಾರೆಡ್ಡಿ, ಮತ್ತಿತರರು ಹಾಜರಿದ್ದರು.

ಮೇಲೂರಿನ ಬಿ.ಎನ್.ರವಿಕುಮಾರ್ ಅಧ್ಯಕ್ಷತೆಯಲ್ಲಿ ಹೆಚ್.ಡಿ.ದೇವೇಗೌಡ ಹಾಗು ಜಯಪ್ರಕಾಶ್ ನಾರಾಯಣ್ ಸೇವಾಭಿವೃದ್ದಿ ಚಾರಿಟೆಬಲ್ ಟ್ರಸ್ಟ್ (ರಿ) ಸ್ಥಾಪಿಸಿದ್ದು ಟ್ರಸ್ಟ್ ವತಿಯಿಂದ ತಾಲೂಕಿನ ಚಿಲಕಲನೇರ್ಪು, ಸಾದಲಿ ಹಾಗು ಜಂಗಮಕೋಟೆ ಹೋಬಳಿಗೆ ತಲಾ ಒಂದರಂತೆ ಮೂರು ಆಂಬುಲೆನ್ಸ್ ಸೇವೆ ಲೋಕಾರ್ಪಣೆ ಮಾಡಲಾಯಿತು. ತಾಲೂಕಿನಾಧ್ಯಂತ ಇರುವ ಬಡ ವಿದ್ಯಾರ್ಥಿಗಳಿಗೆ ಪಿಯುಸಿ, ಪದವಿ ಶಿಕ್ಷಣ ಪಡೆಯಲು ಶುಲ್ಕ ಹಾಗು ಉಚಿತ ಬಸ್ ಪಾಸ್ ವ್ಯವಸ್ಥೆಗೆ ತಗಲುವ ಶುಲ್ಕವನ್ನು ಟ್ರಸ್ಟ್ ಭರಿಸಲಿದೆ.

ಚಿರತೆಯೊಂದು ಕಾಣಿಸಿಕೊಂಡಿದೆ ಎಂಬ ವದಂತಿಯಿಂದ ನಾಗರೀಕರಲ್ಲಿ ಆತಂಕ

0

ನಗರದಲ್ಲಿ ಬಾನುವಾರ ಬೆಳಗ್ಗೆ ಚಿರತೆಯೊಂದು ಕಾಣಿಸಿಕೊಂಡಿದೆ ಎಂಬ ವದಂತಿ ನಾಗರೀಕರಲ್ಲಿ ಆತಂಕವನ್ನುಂಟು ಮಾಡಿದೆ.
ನಗರದ ಶಂಕರಮಠ ರಸ್ತೆಯ ಶಾಮಣ್ಣ ಬಾವಿ (ಕಲ್ಯಾಣಿ) ಯೊಳಗೆ ಭಾನುವಾರ ಬೆಳಗ್ಗೆ ಚಿರತೆಯೊಂದು ಕಂಡುಬಂದಿದೆ ಎಂಬ ದಾರಿಹೋಕರ ವದಂತಿಯಿಂದ ನಗರದ ನೂರಾರು ಸಾರ್ವಜನಿಕರು ಸೇರಿದಂತೆ ಮಕ್ಕಳು, ಮಹಿಳೆಯರು ಬಾವಿಯ ಸುತ್ತ ಸೇರಿದ್ದರು.
ನಗರದ ಮಧ್ಯಭಾಗದಲ್ಲಿರುವ ಶಂಕರಮಠ ರಸ್ತೆಯ ಶಾಮಣ್ಣ ಬಾವಿಯಲ್ಲಿ ನೀರು ಭತ್ತಿಹೋಗಿದೆಯಾದರೂ ಹಿಂದೆ ಗೌಡನಕೆರೆಯಿಂದ ಬಾವಿಗೆ ನೀರು ಬರಲು ಹಿರಿಯರು ನಿರ್ಮಿಸಿದ್ದ ಸುರಂಗ ಮಾರ್ಗದೊಳಕ್ಕೆ ನಾಯಿ ಮರಿಯೊಂದನ್ನು ಕಚ್ಚಕೊಂಡು ಚಿರತೆ ಹೋಯಿತು ಎಂದು ದಾರಿಯಲ್ಲಿ ಹೋಗುತ್ತಿದ್ದವರಾರೋ ಹೇಳಿದ್ದರ ಹಿನ್ನಲೆಯಲ್ಲಿ ಬಾಯಿಂದ ಬಾಯಿಗೆ ಈ ಸುದ್ದಿ ಹಬ್ಬಿ ನೂರಾರು ಮಂದಿ ಸಾರ್ವಜನಿಕರು ಬಾವಿಯ ಬಳಿ ನೆರೆದಿದ್ದಾರೆ.
ವಿಷಯ ತಿಳಿದ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರಾದರೂ ಯಾವುದೇ ಫಲಕಾರಿಯಾಗಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿಯ ಪ್ರಕಾರ ತಾಲೂಕಿನಲ್ಲಿ ಈವರೆಗೂ ಯಾವುದೇ ಚಿರತೆ ಕಂಡು ಬಂದ ನಿದರ್ಶನಗಳಿಲ್ಲ. ಆದರೂ ಇದನ್ನು ನಿರ್ಲಕ್ಷಿಸುವಂತಿಲ್ಲ. ಈಗಾಗಲೆ ಟಾರ್ಚ್ ಮೂಲಕ ಸುರಂಗದೊಳಕ್ಕೆ ಬೆಳಕು ಬಿಟ್ಟು ನೋಡಿದ್ದೇವೆ. ಏನೂ ಗೋಚರಿಸುತ್ತಿಲ್ಲ. ಸಂಜೆಯೊಳಗೆ ಬೋನು ಹಾಗು ಬಲೆ ತರಿಸಿ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎನ್ನುತ್ತಾರೆ.
ಒಟ್ಟಾರೆ ಚಿರತೆ ಕಾಣಿಸಿಕೊಂಡಿದೆ ಎಂಬ ವದಂತಿಯಿಂದ ನಗರದ ನಾಗರೀಕರು ಭಾನುವಾರದ ರಜೆಯನ್ನು ಆತಂಕದಿಂದಲೇ ಕಳೆಯುವಂತಾಯಿತು.

ರಾಜ್ಯ ಹೆದ್ದಾರಿ 234 ರ ರಸ್ತೆ ಕಾಮಗಾರಿಯ ವೀಕ್ಷಣೆ

0

ಶಿಡ್ಲಘಟ್ಟ-ಚಿಂತಾಮಣಿ ಮಾರ್ಗದ ರಸ್ತೆ ಮುಂಬರುವ ದಿನಗಳಲ್ಲಿ ಚತುಷ್ಪಥ ರಸ್ತೆಯಾಗಲಿರುವುದರಿಂದ ಈಗಲೇ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ನಿರ್ಮಾಣ ಸೇರಿದಂತೆ ರಸ್ತೆಯ ಮೇಲೆ ಯಾವುದೇ ನೀರು ನಿಲ್ಲದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಂಸದ ಕೆ.ಹೆಚ್.ಮುನಿಯಪ್ಪ ಹೇಳಿದರು.
ಶಿಡ್ಲಘಟ್ಟ ತಾಲೂಕಿನ ಮೂಲಕ ಚಿಂತಾಮಣಿಗೆ ಹಾದು ಹೋಗುವ ರಾಜ್ಯ ಹೆದ್ದಾರಿ 234 ರ ರಸ್ತೆ ಕಾಮಗಾರಿಯ ವೀಕ್ಷಣೆಗಾಗಿ ಶನಿವಾರ ಸಂಜೆ ನಗರದ ಹೊರವಲಯದ ಪಂಪ್ ಹೌಸ್ ಮುಂಭಾಗ ಹಾಗು ತಾಲೂಕಿನ ವೈ ಹುಣಸೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿ ಮಾತನಾಡಿದರು.
ಮುಂಬರುವ ದಿನಗಳಲ್ಲಿ ಈ ರಸ್ತೆ (ಚತುಷ್ಪತ) ನಾಲ್ಕು ಲೇನ್ ಗಳ ರಸ್ತೆಯಾಗಲಿದ್ದು ರಸ್ತೆಯ ಎರಡೂ ಕಡೆ ಗುಣಮಟ್ಟದ ಚರಂಡಿ ಸೇರಿದಂತೆ ಹಳ್ಳಿ ಹಳ್ಳಿಗೂ
ಬಸ್ ನಿಲ್ದಾಣದ ವ್ಯವಸ್ಥೆಯಾಗಲಿದೆ.
ಮುಂದಿನ ದಿನಗಳಲ್ಲಿ ಈ ರಸ್ತೆ ದೊಡ್ಡ ರಸ್ತೆಯಾಗಲಿದ್ದು ಮುಂಬಯಿ, ಹೈದರಾಬಾದ್, ಚೆನ್ನೈ ಹಾಗು ಉತ್ತರದ ಕೊಲ್ಕತ ಸೇರಿದಂತೆ ಮಹಾನಗರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿ ರೂಪಗೊಳ್ಳಲಿದ್ದು ಆ ನಿಟ್ಟಿನಲ್ಲಿ ಈಗಾಗಲೇ ರಸ್ತೆ ಹಾದುಹೋಗುವ ಎಲ್ಲಾ ನಗರಗಳಲ್ಲಿಯೂ ಬೈಪಾಸ್ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದರು.
ಒಟ್ಟಾರೆ ಮುಂಬರುವ ದಿನಗಳಲ್ಲಿ ಅತ್ಯುತ್ತಮ ರಸ್ತೆಯಾಗಿ ರೂಪಗೊಳ್ಳಲಿರುವ ರಾಜ್ಯ ಹೆದ್ದಾರಿ 234 ರ ರಸ್ತೆ ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿಯಾಗದೇ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಎಲ್.ಮಧುಸೂದನ್, ಮುಖಂಡರಾದ ಟಿ.ಕೆ.ನಟರಾಜ್, ಆಶ್ರಯ ಸಮಿತಿ ಸದಸ್ಯ ನಾರಾಯಣಸ್ವಾಮಿ, ಡಿ.ಪಿ.ನಾಗರಾಜ್, ಕ್ಯಾತಪ್ಪ, ಆಂಜನೇಯರೆಡ್ಡಿ, ಬಾಲಕೃಷ್ಣ, ಮತ್ತಿತರರು ಹಾಜರಿದ್ದರು.

ತಾದೂರು ಗ್ರಾಮದಲ್ಲಿ ಕೃಷ್ಣಮೃಗದ ರಕ್ಷಣೆ

0

ತಾಲ್ಲೂಕಿನ ತಾದೂರು ಗ್ರಾಮದಲ್ಲಿ ಕೃಷ್ಣಮೃಗವನ್ನು ಗ್ರಾಮಸ್ಥರು ರಕ್ಷಿಸಿ ಅರಣ್ಯ ಇಲಾಖೆಯವರಿಗೆ ಒಪ್ಪಿಸಿದ್ದಾರೆ.
ಶುಕ್ರವಾರ ರಾತ್ರಿ ನೀರಿಗಾಗಿ ಬಂದು ತಾದೂರು ಗ್ರಾಮದ ಮುರಳಿ ಎಂಬುವರ ತೋಟದಲ್ಲಿ ನೀರಿರುವ ಕೃಷಿಹೊಂಡಕ್ಕೆ ಬಿದ್ದಿದ್ದ ಕೃಷ್ಣಮೃಗವನ್ನು ಗ್ರಾಮಸ್ಥರ ಸಹಾಯದಿಂದ ಹುಷಾರಾಗಿ ಹೊರಕ್ಕೆ ತೆಗೆದಿದ್ದಾರೆ. ನಂತರ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ತಿಳಿಸಿ ಕೃಷ್ಣಮೃಗಕ್ಕೆ ನೀರು ಕೊಟ್ಟು ಆರೈಕೆ ಮಾಡಿದ್ದಾರೆ.
‘ಗ್ರಾಮಸ್ಥರಾದ ರಘು, ಪ್ರಭಾಕರ, ವೇಣುಗೋಪಾಲ, ವೆಂಕಟೇಶ್, ನಾಗರಾಜ, ಮುನಿಕೃಷ್ಣ, ಅನಿಲ್ಕುಮಾರ್, ನಟರಾಜ, ಸುರೇಶ್ ಸಹಕರಿಸಿದ್ದರಿಂದ ಕೃಷಿಹೊಂಡದಿಂದ ಕೃಷ್ಣಮೃಗವನ್ನು ಹೊರಕ್ಕೆ ತೆಗೆದೆವು. ಕೃಷಿಹೊಂಡವನ್ನು ಮೆಶ್ನಿಂದ ಮುಚ್ಚಿದ್ದರೂ ಅದು ಹೇಗೆ ನುಸುಳಿತೋ ತಿಳಿಯದು. ನಮ್ಮ ಗ್ರಾಮದ ಸುತ್ತ ಕಾಡಿದೆ. ಅಲ್ಲಿ ಕೃಷ್ಣಮೃಗಗಳು, ಜಿಂಕೆಗಳು, ನವಿಲುಗಳಿವೆ. ನಾವೂ ಬಹಳಷ್ಟು ನೋಡಿದ್ದೇವೆ. ಬೇಸಿಗೆಯ ಬೇಗೆ ಅವಕ್ಕೂ ತಟ್ಟಿದೆ. ನೀರನ್ನರಸಿ ಅವು ಗ್ರಾಮಕ್ಕೆ ಬರುವುದಲ್ಲಿದೆ ಈ ರೀತಿ ನೀರಿನ ಹೊಂಡಕ್ಕೆ ಬಿದ್ದು, ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತವೆ. ಅರಣ್ಯದಲ್ಲಿ ತಾತ್ಕಾಲಿಕ ನೀರಿನ ಹೊಂಡಗಳನ್ನು ರಚಿಸಿ ಟ್ಯಾಂಕರಿನಿಂದ ನೀರು ಹಾಕಿ ಪ್ರಾಣಿ ಪಕ್ಷಿಗಳಿಗೆ ಸಹಾಯ ಮಾಡಬೇಕು’ ಎಂದು ಮುರಳಿ ತಿಳಿಸಿದರು.

ಭವಿಷ್ಯದ ಬಗ್ಗೆ ನಿರ್ದಿಷ್ಠ ಕಲ್ಪನೆ, ಗುರಿ, ಯೋಜನೆ ಹೊಂದಿರಬೇಕು

0

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆ ಜೊತೆಯಲ್ಲಿಯೇ ಮುಂದಿನ ಭವಿಷ್ಯದ ಬಗ್ಗೆ ನಿರ್ದಿಷ್ಠ ಕಲ್ಪನೆ, ಗುರಿ, ಯೋಜನೆಯನ್ನು ಹೊಂದಿರಬೇಕು. ಅದರ ಬಗ್ಗೆ ಅವರು ನಿರಂತರವಾಗಿ ಪರಿಶ್ರಮ ಹಾಕುತ್ತಿರಬೇಕು ಎಂದು ವೈಟ್ ಫೀಲ್ಡ್ನ ಡಿ.ಸಿ.ಪಿ ಎಂ.ನಾರಾಯಣ್ ಹೇಳಿದರು.
ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜನೆ ಮಾಡಲಾಗಿದ್ದ ೨೦೧೬-–೧೭ ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ತಮ ಶಿಕ್ಷಣ ಪಡೆದು ಪದವೀಧರನಾಗುವುದರೊಂದಿಗೆ ಪೋಷಕರಿಗೆ ಗೌರವ ತರುವ ರೀತಿಯಲ್ಲಿ ನಡೆದುಕೊಳ್ಳಬೇಕು. ದೇಶದ ಉತ್ತಮ ಪ್ರಜೆಯಾಗಿ ರೂಪಗೊಳ್ಳಬೇಕು. ಶಿಕ್ಷಣದ ಜೊತೆಗೆ ಸಮಾಜದ ಹಾಗು ತಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಚಿಂತನೆ ನಡೆಸುವಂತವರಾಗಬೇಕು ಎಂದರು.
ಶಿಕ್ಷಣ ಎಂಬುವುದು ಮನುಷ್ಯನಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತದೆಯಾದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಮಾಜದ ಮಾದರಿ ವ್ಯಕ್ತಿಯಾಗಿ ರೂಪುಗೊಂಡು ದೇಶದ ಬೆನ್ನೆಲುಬಾಗಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ, ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ, ವಿದ್ಯಾರ್ಥಿಗಳು ಜ್ಞಾನದ ಜೊತೆಗೆ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು. ನಾಗರಿಕತೆ ಹಾಗು ಮನರಂಜನೆಯ ಹೆಸರಿನಲ್ಲಿ ತಪ್ಪು ದಾರಿ ಹಿಡಿಯಬಾರದು. ಸಭ್ಯ ನಾಗರೀಕ ಸಮಾಜವನ್ನು ನಿರ್ಮಿಸುವುದೇ ಶಿಕ್ಷಣದ ಗುರಿಯಾಗಿದ್ದು ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವ ಜವಾಬ್ದಾರಿ ಹಾಗು ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ಕ್ರೀಡಾ ಹಾಗು ಸಾಂಸ್ಕೃತಿಕ ಸ್ಪರ್ದೆಗಳಲ್ಲಿ ವಿಜೇತರಾದ ವಿದ್ಯಾಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಚಂದ್ರಾನಾಯಕ್, ಖ್ಯಾತ ಗಾಯಕ ಅಕ್ಬರ್, ಉಪನ್ಯಾಸಕರಾದ ರಾಮಚಂದ್ರಪ್ಪ, ಡಾ.ವೆಂಕಟೇಶ್, ಉಮೇಶ್ರೆಡ್ಡಿ, ರಮೇಶ್, ರೋಶನ್, ವೆಂಕಟರೋಣಪ್ಪ, ವನಜಾ, ಸಂತೋಷ್ ಹಾಜರಿದ್ದರು.

ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿಯ ವತಿಯಿಂದ ಚಾರಣ

0

ಶನಿವಾರ ಮುಂಜಾನೆ ನಗರದ ನೆಹರೂ ಕ್ರೀಡಾಂಗಣವು ಜನರೇ ಇಲ್ಲದೆ ಬಿಕೋ ಎನ್ನುತ್ತಿತ್ತು. ಸದಾ ಮುಂಜಾನೆ ಕ್ರೀಡಾಪಟುಗಳಿಂದ, ವ್ಯಾಯಾಮ ಮಾಡುವವರು, ವಾಕಿಂಗ್ ಮಾಡುವವರಿಂದ ತುಂಬಿರುತ್ತಿದ್ದ ನೆಹರೂ ಕ್ರೀಡಾಂಗಣದಲ್ಲಿ ಇವರುಗಳು ಯಾರೂ ಕಂಡುಬರಲಿಲ್ಲ.
ಇದಕ್ಕೆ ಕಾರಣ ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿಯ ವತಿಯಿಂದ ಶನಿವಾರ ಮುಂಜಾನೆ ನಂದಿಬೆಟ್ಟಕ್ಕೆ ಚಾರಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿಯ ಸದಸ್ಯರು ರಜೆಯಲ್ಲಿ ಚಾರಣ ಹೋಗಬೇಕೆಂದು ಆಲೋಚಿಸಿ ಕ್ರೀಡಾಂಗಣಕ್ಕೆ ಬರುವವರಿಗೆಲ್ಲಾ ವಿಷಯವನ್ನು ಮುಟ್ಟಿಸಿದ್ದಾರೆ. ಮಕ್ಕಳು, ಹಿರಿಯರು, ಮುದುಕರು ಎಂಬ ಬೇಧವಿಲ್ಲದೆ 80 ಮಂದಿ ತಯಾರಾಗಿದ್ದಾರೆ.
‘ಮುಂಜಾನೆ ಐದು ಗಂಟೆಗೆ ಶಿಡ್ಲಘಟ್ಟವನ್ನು ಬಿಟ್ಟೆವು. ವಾಹನಗಳಿದ್ದವರು ಇಲ್ಲದಿರುವವರನ್ನು ಕರೆತಂದರೆ, ತಿಂಡಿ ಹಾಗೂ ಕೆಲವರನ್ನು ಕರೆದೊಯ್ಯಲು ಟಾಟಾ ಏಸ್ ಬಾಡಿಗೆಗೆ ತಂದಿದ್ದೆವು. ಎಲ್ಲರೂ ನಂದಿ ಬೆಟ್ಟದ ಬುಡವನ್ನು ತಲುಪಿದೆವು. ಸುಲ್ತಾನ್ಪೇಟೆಯಿಂದ ಬೆಟ್ಟವನ್ನು ಮೆಟ್ಟಿಲುಗಳ ಮೂಲಕ ಹತ್ತಿದೆವು. ಮಕ್ಕಳಿಗೆ ಗಾಂಧೀಜಿ ನಂದಿ ಬೆಟ್ಟಕ್ಕೆ ಬಂದಿದ್ದಾಗ ಹತ್ತಿದ ಮೆಟ್ಟಿಲುಗಳಿವು. ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಇದೇ ಮೆಟ್ಟಿಲುಗಳ ಮೂಲಕ ಬೆಟ್ಟವನ್ನು ಹತ್ತುತ್ತಿದ್ದರು ಎಂದು ಸಾಧಕರ ಬಗ್ಗೆ ತಿಳಿಸುತ್ತಾ ಸ್ಫೂರ್ತಿ ತುಂಬುತ್ತಾ ಬೆಟ್ಟವನ್ನು ಹತ್ತಿದೆವು. ಮಕ್ಕಳು 7.30ಕ್ಕೆಲ್ಲಾ ಬೆಟ್ಟವನ್ನು ಹತ್ತಿಬಿಟ್ಟರು. ವಯಸ್ಕರು ನಿಧಾನವಾಗಿ ಹತ್ತಿದರು’ ಎಂದು ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಟಿ.ಟಿ.ನರಸಿಂಹಪ್ಪ ತಿಳಿಸಿದರು.
’ಬೆಟ್ಟ ಹತ್ತಿದವರೆಲ್ಲಾ ಬೆಟ್ಟವನ್ನು ಸುತ್ತಾಡಿ, ದೇವಾಲಯಕ್ಕೆ ಭೇಟಿ ನೀಡಿದೆವು. ಕನಿಂಗ್ಹ್ಯಾಂನ ‘ಓಕ್ಲ್ಯಾಂಡ್ಸ್’ನಲ್ಲಿ ಗಾಂಧೀಜಿಯವರು ವಿಶ್ರಾಂತಿ ಪಡೆದುದರ ಸವಿನೆನಪಿಗಾಗಿ ಅದನ್ನೀಗ ’ಗಾಂಧಿನಿಲಯ’ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಮಕ್ಕಳಿಗೆ ವಿವರಿಸಿ ಅಲ್ಲಿರುವ ಗಾಂಧೀಜಿಯವರ ಪ್ರತಿಮೆಯನ್ನು ತೋರಿಸಿದೆವು. ಲಾರ್ಡ್ ಕಬ್ಬನ್ ನಿರ್ಮಿಸಿದ್ದ ಕಬ್ಬನ್ ಹೌಸ್ ಅನ್ನು ಈಗ ನೆಹರೂ ನಿಲಯವೆನ್ನುತ್ತಾರೆ ಎಂದು ವಿವರಿಸಿ ನೆಹರೂ ಪ್ರತಿಮೆಯನ್ನು ತೋರಿಸಿ ಅಲ್ಲಿ ನಡೆದಿದ್ದ ಸಾರ್ಕ್ ಸಮ್ಮೇಳನದ ಬಗ್ಗೆಯೂ ತಿಳಿಸಿದೆವು. ಮಕ್ಕಳಿಗೆ ಕೆಲ ಆಟಗಳನ್ನು ಆಡಿಸಿ, ಹಾಡು, ನೃತ್ಯ ಬಲ್ಲವರಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನೂ ನಡೆಸಿದೆವು. ಕಟ್ಟಿಸಿಕೊಂಡು ಹೋಗಿದ್ದ ತಿಂಡಿಯನ್ನು ಎಲ್ಲರೂ ತಿಂದೆವು’ ಎಂದು ಅವರು ವಿವರಿಸಿದರು.
‘ನೆಹರೂ ಕ್ರೀಡಾಂಗಣದಲ್ಲಿ ಅಭಿವೃದ್ಧಿ ಕೆಲಸಗಳ ಬಗ್ಗೆ ಕಾಳಜಿ ವಹಿಸುವವರು ಹೆಚ್ಚಾದಂತೆ ಕ್ರೀಡಾಂಗಣಕ್ಕೆ ಬರುವವರ ಸಂಖ್ಯೆ ಹೆಚ್ಚಾಯಿತು. ಅದರಲ್ಲೂ ರಜೆಯಲ್ಲಿ ಮಕ್ಕಳಿಗೆ ಚಾರಣ ಮೊದಲಾದ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಅವರಲ್ಲಿ ಜ್ಞಾನ ತುಂಬಿಸುವ ಆಲೋಚನೆ ಬಂದಿತು. ಇಷ್ಟೊಂದು ಸಂಖ್ಯೆಯಲ್ಲಿ ಮಕ್ಕಳು, ಹಿರಿಯರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ನಮಗೆ ಉತ್ಸಾಹ ತಂದಿದೆ. ಮುಂದೆ ಇನ್ನೂ ಚಾರಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶವಿದೆ’ ಎಂದು ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನಿರಂಜನ್ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಸದಸ್ಯೆ ಪಂಕಜಾ, ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿಯ ಜೆ.ವಿ.ಸುರೇಶ್, ಜಯಂತಿಗ್ರಾಮ ನಾರಾಯಣಸ್ವಾಮಿ, ಉದ್ದಣ್ಣ ಸುರೇಶ್, ಲಯನ್ ಕ್ರೀಡಾ ಸಂಸ್ಥೆಯ ಗೌರವಾಧ್ಯಕ್ಷ ಮುನಿರಾಜು, ಬದ್ರಿನಾಥ್, ವೀಣಾ, ಶಿವಪ್ಪ, ದಾಕ್ಷಾಯಿಣಿ, ಸುಂದರಾಚಾರಿ, ಜಗದೀಶ್, ಜಬೀವುಲ್ಲ ಚಾರಣದಲ್ಲಿ ಭಾಗವಹಿಸಿದ್ದರು.

ಶಿಡ್ಲಘಟ್ಟದ ಬ್ಲಾಕ್ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿ ಕೆ.ಶ್ರೀನಾಥ್ ನೇಮಕ

0

ಶಿಡ್ಲಘಟ್ಟದ ಬ್ಲಾಕ್ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರನ್ನಾಗಿ ಕೆ.ಶ್ರೀನಾಥ್ ಅವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ ನೇಮಕ ಮಾಡಿದ್ದಾರೆ.

ಆರ್ಥಿಕ ಸಮಾನತೆ ಸಾಧಿಸುವವರೆಗೂ ಸಮಾಜಿಕ ಸುಧಾರಣೆಯನ್ನು ಕಾಣಲು ಸಾಧ್ಯವಿಲ್ಲ

0

ಆರ್ಥಿಕ ಸಮಾನತೆ ಸಾಧಿಸುವವರೆಗೂ ಸಮಾಜಿಕ ಸುಧಾರಣೆಯನ್ನು ಕಾಣಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರದ ಸಹಕಾರ ಚುನಾವಣಾ ಆಯುಕ್ತ ಎನ್.ಸಿ.ಮುನಿಯಪ್ಪ ಅಭಿಪ್ರಾಯಪಟ್ಟರು.
ತಾಲ್ಲೂಕಿನ ನಾಗಮಂಗಲ ಗ್ರಾಮದಲ್ಲಿ ಬಾಬು ಜಗಜೀವನ್ರಾಂ ನೇಕಾರರ ಸಹಕಾರ ಸಂಘ ಹಾಗೂ ತಾಲ್ಲೂಕು ಕಸಾಪ ವತಿಯಿಂದ ಡಾ.ಅಂಬೇಡ್ಕರ್ ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಲಾವಿದರಿಗೆ ಹಾಗೂ ಟೈಲರಿಂಗ್ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ಮನೆಯು ಬೆಳಗಲು ಮತ್ತು ಮುನ್ನಡೆಯಲು ಮಹಿಳೆಯ ಪಾತ್ರ ಬಹಳ ಮುಖ್ಯ. ಸ್ವಾಭಿಮಾನದ ಹಾಗೂ ಆತ್ಮಾಭಿಮಾನದ ದುಡಿಮೆಯ ಮೂಲಕ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಸಾಧ್ಯ. ಅಂಬೇಡ್ಕರ್ ಅವರ ಆಶಯವೂ ಅದೇ ಆಗಿತ್ತು. ಸಮಾಜದಲ್ಲಿ ಮಹಿಳೆಯ ಧ್ವನಿಗೆ ಬಲ ಬರುವಂತೆ ಅವರು ಕೆಲಸ ಮಾಡಿದ್ದು ಸ್ಮರಣಾರ್ಹ. ಶ್ರಮ ಪಡದೆ, ಸಾಮಾಜಿಕ ಬದ್ಧತೆಯಿಲ್ಲದೆ ಸಹಕಾರ ಸಂಘಗಳು ಅಭಿವೃದ್ಧಿ ಆಗುವುದಿಲ್ಲ. ಕಷ್ಟಪಟ್ಟು ಸಾಧನೆ ಮಾಡುವವರು ಮಾತ್ರ ಸಾಧಕರಾಗುತ್ತಾರೆ. ನಾಗಮಂಗಲ ಗ್ರಾಮದಲ್ಲಿ ಹುಟ್ಟಿ ವಿದ್ಯಾಭ್ಯಾಸ ಮಾಡಿ, ಐಎಫ್ಎಸ್ ಹಾಗೂ ಐಎಎಸ್ ಮಾಡಲು ನನಗೆ ಪ್ರೇರಣೆಯಾದದ್ದು ಅಂಬೇಡ್ಕರ್ ಅವರಂಥಹ ಸಾಧಕರು ಎಂದು ಹೇಳಿದರು.
ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ, ಸಾಧನೆ, ಓದಿನ ಹಸಿವು, ಸಂವಿಧಾನ ರಚನೆ, ಶ್ರಮದ ಬದುಕು ಮುಂತಾದವುಗಳನ್ನು ವಿವರಿಸಿದರು. ದೇವರು ತನ್ನ ಪ್ರತಿನಿಧಿಯಂತೆ ಈ ರೀತಿಯ ಮಹಾಪುರುಷರನ್ನು ಭೂಮಿಯಲ್ಲಿ ಅವತರಿಸುವಂತೆ ಮಾಡುತ್ತಾನೆ. ಅವರ ಜೀವನ ಪ್ರತಿಯೊಬ್ಬರಿಗೂ ಆದರ್ಶ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಕಸಾಪ ನಡೆಸುತ್ತಿರುವ ವಿಭಿನ್ನ, ವಿಶಿಷ್ಟ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ತಾಲ್ಲೂಕು ಕಸಾಪ ವತಿಯಿಂದ ನಾಗಮಂಗಲ ಗ್ರಾಮದ ಹಾಡುಗಾರಿಕೆ, ತಬಲ, ನಾಟಕ ಮೊದಲಾದ ಕಲಾವಿದರಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು.
ರಾಜ್ಯ ಸರ್ಕಾರದ ಸಹಕಾರ ಚುನಾವಣಾ ಆಯುಕ್ತ ಎನ್.ಸಿ.ಮುನಿಯಪ್ಪ ಅವರನ್ನು ತಾಲ್ಲೂಕು ಕಸಾಪ ವತಿಯಿಂದ ಗೌರವಿಸಲಾಯಿತು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎನ್.ಡಿ.ನಾರಾಯಣಪ್ಪ, ಎನ್.ಆರ್.ವೆಂಕಟೇಶ, ಶ್ರೀನಿವಾಸ, ರತ್ನಪ್ಪ, ವೆಂಕಟಕೃಷ್ಣಯ್ಯಶೆಟ್ಟಿ, ತಾಲ್ಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಜಂಗಮಕೋಟೆ ಹೋಬಳಿ ಉಪಾಧ್ಯಕ್ಷ ಜಗದೀಶ್ಬಾಬು, ಸದಸ್ಯರಾದ ಗುರುನಂಜಪ್ಪ, ಮುನಿರಾಜು(ಕುಟ್ಟಿ) ಹಾಜರಿದ್ದರು.