ದೇಶದ ಪ್ರತಿಯೊಂದು ಮಗುವಿಗೂ ಉತ್ತಮವಾದ ಶಿಕ್ಷಣ ಸಿಕ್ಕಿದಾಗ ಮಾತ್ರ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನದ ಹೋರಾಟಕ್ಕೆ ಅರ್ಥ ಬರುತ್ತದೆ ಎಂದು ಶಾಸಕ ರಾಜಣ್ಣ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಮುಂಭಾಗ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಆಡಳಿತದ ವತಿಯಿಂದ ಶುಕ್ರವಾರ ನಡೆದ ಡಾ. ಬಿ.ಆರ್.ಅಂಬೇಡ್ಕರ್ ಅವರ ೧೨೬ನೇ ಜನ್ಮ ದಿನಾಚರಣೆ ಹಾಗೂ ಬಾಬು ಜಗಜೀವನ ರಾಂ ರವರ ೧೧೦ ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಿಂದಲೂ ಈ ದೇಶದ ಶೋಷಿತ ವರ್ಗದ ಮೇಲೆ ನಡೆಯುತ್ತಿದ್ದ ದೌರ್ಜನ್ಯ ದಬ್ಬಾಳಿಕೆಗಳು, ಶೋಷಣೆಯಿಂದಾಗಿ ನಿರಂತರವಾದ ಚಿಂತನೆಗಳನ್ನು ನಡೆಸಿದ ಡಾ.ಅಂಬೇಡ್ಕರ್ ಅವರು ದೇಶದ ಸಮಸ್ತ ಜನರಿಗೂ ನಿಜವಾದ ಸ್ವಾತಂತ್ರ್ಯ ಮತ್ತು ಉತ್ತಮ ಶಿಕ್ಷಣವನ್ನು ಕೊಡಿಸುವುದನ್ನು ಗುರಿಯನ್ನಾಗಿಸಿಕೊಂಡು ಸಂವಿಧಾನ ರಚಿಸಿದರು. ಎಲ್ಲಾ ವರ್ಗದವರಿಗೂ ಸಮಾನ ಹಕ್ಕು ನೀಡಬೇಕೆಂಬ ಉದ್ದೇಶದಿಂದ ಸಂವಿಧಾನದಲ್ಲಿ ಅವಕಾಶ ಕಲ್ಪಿಸಿ, ಸಮಾಜದ ಏಳಿಗೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಪ್ರತಿಪಾದಿಸಿದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕ ಎನ್.ಎ. ವೆಂಕಟೇಶ್ ಮಾತನಾಡಿ, ಅಂಬೇಡ್ಕರ್ ಅವರ ಜನ್ಮ, ಬಾಲ್ಯ, ಸಂಕಷ್ಟದ ಬದುಕು, ಓದಬೇಕೆಂಬ ಅಭಿಲಾಷೆ, ಛಲ, ಗುರಿಯೆಡೆಗೆ ಸಾಧನೆ, ಬರೋಡಾದ ಮಹಾರಜರು ನೀಡಿದ ವಿದ್ಯಾರ್ಥಿವೇತನದ ಸಹಾಯದಿಂದ ವಿದೇಶದಲ್ಲಿ ಪದವಿಯನ್ನು ಪಡೆದು ಭಾರತಕ್ಕೆ ಹಿಂದಿರುಗಿ ಹಿಂದುಳಿದ ಜನಾಂಗಗಳಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸಲ್ಲಿ ನಿರತರಾದುದು ಮುಂತಾದ ವಿಷಯಗಳೊಂದಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಸವಿಸ್ತಾರವಾಗಿ ತಿಳಿಸಿದರು.
ನಗರದ ಪ್ರಮುಖ ಬೀದಿಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ರಾಂ ಅವರ ಭಾವ ಚಿತ್ರಗಳನ್ನು ಹೊತ್ತ ಮುತ್ತಿನ ಪಲಕ್ಕಿಗಳ ಮೆರವಣಿಗೆ ನಡೆಸಲಾಯಿತು. ವೀರಗಾಸೆ, ತಮಟೆ ವಾದನ ಜನರನ್ನು ಆಕರಷಿಸಿದವು.
ಈ ಸಂದರ್ಭದಲ್ಲಿ ಸೇನೆಯಲ್ಲಿ ಕಾರ್ಯನಿರ್ವಹಿಸಿರುವ ಆಂಜಿನಪ್ಪ, ಮುನಿಶಾಮಪ್ಪ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪರಿಶಿಷ್ಟ ಪಂಗಡ, ಪರಿಶಿಷ್ಟ ವರ್ಗದ ೪ ಜನರಿಗೆ ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯೆ ತನುಜಾ ರಘು, ತಹಶೀಲ್ದಾರ್ ಅಜಿತ್ ಕುಮಾರ್ ರೈ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಲಕ್ಷೀನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಸಮಾಜ ಕಲ್ಯಾಣ್ಯಾಧಿಕಾರಿ ಅನುಸೂಯಾದೇವಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೇಶವರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ, ದಲಿತ ಮುಖಂಡರು, ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಶಿಕ್ಷಣ ಪ್ರತಿಯೊಬ್ಬರಿಗೂ ಸಿಗಬೇಕೆಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು
ಬೆಂಕಿಗೆ ಆಹುತಿಯಾದ ಅರಣ್ಯ
ವೃಕ್ಷ ಬೆಳೆಗಾರರ ಸಂಘದ ವತಿಯಿಂದ ಸಂರಕ್ಷಿಸಲಾಗಿದ್ದ ಸುಮಾರು ೧೦೦ ಎಕರೆ ಪ್ರದೇಶದ ಅರಣ್ಯವು ಬೆಂಕಿಗಾಹುತಿಯಾಗಿರುವ ಘಟನೆ ತಾಲ್ಲೂಕಿನ ಕೆ.ಮುತ್ತುಕದಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಮುತ್ತುಕದಹಳ್ಳಿ ಗ್ರಾಮದಲ್ಲಿ ವೃಕ್ಷಬೆಳೆಗಾರರ ಸಂಘ (ಗುಜರಾತ್) ವತಿಯಿಂದ ಸಂರಕ್ಷಣೆ ಮಾಡಲಾಗಿದ್ದ ಅರಣ್ಯಕ್ಕೆ ಕಿಡಿಗೇಡಿಗಳು ಗುರುವಾರ ಮದ್ಯಾಹ್ನ ಬೆಂಕಿ ಹಚ್ಚಿರುವ ಹಿನ್ನಲೆಯಲ್ಲಿ ನೂರಾರು ಮರಗಳು ಬೆಂಕಿಗಾಹುತಿಯಾಗಿದೆ.
ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಭೇಟಿ ನೀಡಿ ನಾಗರಿಕರ ಸಹಕಾರದೊಂದಿಗೆ ಬೆಂಕಿ ನಂದಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಉತ್ತಮ ಆಡಳಿತ ಜನಮೆಚ್ಚುಗೆಯಾಗಿದೆ
ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಉತ್ತಮ ಆಡಳಿತವನ್ನು ಮೆಚ್ಚಿ ಉಪ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಜನರು ಆಶೀರ್ವದಿಸಿದ್ದಾರೆ ಎಂದು ಸಂಸದ ಕೆ.ಎಚ್.ಮುನಿಯಪ್ಪ ಹೇಳಿದರು.
ರಾಜ್ಯದ ನಂಜನಗೂಡು ಹಾಗು ಗುಂಡ್ಲುಪೇಟೆಯಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿರುವ ಹಿನ್ನಲೆಯಲ್ಲಿ ನಗರದ ಕೋಟೆ ವೃತ್ತದಲ್ಲಿ ಗುರುವಾರ ಮಧ್ಯಾಹ್ನ ಪಕ್ಷದ ಕಾರ್ಯಕರ್ತರೊಂದಿಗೆ ಸಂಭ್ರಮಾಚರಣೆ ನಡೆಸಿ ಅವರು ಮಾತನಾಡಿದರು.
ರೈತರು ಬಡವರು ಹಾಗು ಅಲ್ಪಸಂಖ್ಯಾತರಿಗಾಗಿ ರಾಜ್ಯ ಸರ್ಕಾರ ಕೈಗೊಂಡಿರುವ ವಿವಿಧ ಕಾರ್ಯಕ್ರಮಗಳನ್ನು ಜನರು ಮೆಚ್ಚಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಆಶೀರ್ವದಿಸಿದ್ದಾರೆ. ಈ ಫಲಿತಾಂಶ ಮುಂದಿನ ವಿಧಾನಸಭೆ ಚುನಾವಣೆಯ ಮುನ್ಸೂಚನೆಯಾಗಿದೆ ಎಂದರು.
ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಮಾತನಾಡಿ ದೇಶವನ್ನು ಕಾಂಗ್ರೆಸ್ ಮುಕ್ತವನ್ನಾಗಿ ಮಾಡುತ್ತೇವೆ ಎಂಬ ಭ್ರಮೆಯಲ್ಲಿದ್ದ ಬಿಜೆಪಿಯವರಿಗೆ ರಾಜ್ಯದ ಎರಡೂ ಕ್ಷೇತ್ರದ ಮತದಾರ ತಕ್ಕ ಪಾಠ ಕಲಿಸಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಕಾಪಾಡಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ, ಕಳೆದ ಮೂರು ವರ್ಷಗಳಿಂದ ಯಾವುದೇ ಜನಪರ ಕಾರ್ಯಕ್ರಮ ನೀಡುವಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರ ಜನರಿಗೆ ಕಣ್ಣೊರೆಸುವ ಕೆಲಸ ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ಸದಸ್ಯ ಸತೀಶ್, ಎಲ್.ಮಧುಸೂದನ್, ಶ್ರೀನಾಥ್, ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಶಿಕ್ಷಣದಿಂದ ಮಾತ್ರ ಸಮಾಜದ ಉದ್ದಾರ ಸಾಧ್ಯ
ಶಿಕ್ಷಣದಿಂದ ಮಾತ್ರ ಸಮಾಜದ ಉದ್ದಾರ ಸಾಧ್ಯ. ಯಾವುದೇ ಸಮುದಾಯ ಸಮಾಜದಲ್ಲಿ ಏಳಿಗೆ ಕಾಣಬೇಕಾದರೆ ಸರ್ಕಾರದಿಂದ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳುವುದರ ಜೊತೆಗೆ ಶೈಕ್ಷಣಿಕವಾಗಿ ಮುಂದುವರೆದಾಗ ಮಾತ್ರ ಸಾಧ್ಯವಾಗುತ್ತದೆ ಎಂದು ದಾವಣಗೆರೆ ರಾಜನಹಳ್ಳಿ ಗುರುಪೀಠದ ಪ್ರಸನ್ನಾನಂದ ಸ್ವಾಮಿಜೀ ಹೇಳಿದರು.
ನಗರದ ಚಿಂತಾಮಣಿ ರಸ್ತೆಯಲ್ಲಿರುವ ವಾಲ್ಮೀಕಿ ದೇವಾಲಯದ ಹಿಂಭಾಗದಲ್ಲಿ ಒಂದು ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ಗುರುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಇತಿಹಾಸದ ಪುಟಗಳಲ್ಲಿ ಸಾಧಕರಾಗಿರುವವರೆಲ್ಲರೂ ತಮ್ಮ ಜೀವನದಲ್ಲಿ ಅನುಭವಿಸಿದ ನೈಜ ಘಟನೆಗಳಿಂದ ಪ್ರಭಾವಿತರಾಗಿರುವವರೇ ಆಗಿದ್ದಾರೆ. ಇಂತಹ ಸಾಧಕರ ಜೀವನದ ಕುರಿತು ಅಧ್ಯಯನ ನಡೆಸಬೇಕಾದಂತಹ ಅನಿವಾರ್ಯತೆ ಇದೆ. ಸ್ವಾತಂತ್ರ್ಯ ಪೂರ್ವದಿಂದಲೂ ಶೋಷಣೆಗೆ ಒಳಗಾಗಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯಗಳನ್ನು ಇಂದಿಗೂ ಪಟ್ಟಭದ್ರಹಿತಾಸಕ್ತಿಗಳು ತನ್ನ ಕಪಿಮುಷ್ಟಿಯಲ್ಲಿಟ್ಟುಕೊಳ್ಳಲು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಹಿಂದುಳಿಯುವಂತೆ ಮಾಡುತ್ತಿವೆ. ಆದ್ದರಿಂದ ಈ ಸಮುದಾಯಗಳನ್ನು ಎಲ್ಲಾ ರಂಗಗಳಲ್ಲೂ ಅಭಿವೃದ್ಧಿಯತ್ತ ಕೊಂಡೊಯ್ಯುವ ಸಲುವಾಗಿ ಸರ್ಕಾರ ಬಿಡುಗಡೆ ಮಾಡುತ್ತಿರುವ ಅನುದಾನಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಗುಣಮಟ್ಟದ ಶಿಕ್ಷಣ ಪಡೆಯಬೇಕು. ವಾಲ್ಮೀಕಿ ಜಯಂತಿ, ಅಂಬೇಡ್ಕರ್ ಜಯಂತಿಯಂತಹ ಆಚರಣೆಗಳು ಕೇವಲ ಮೆರವಣಿಗೆಗಳಿಗೆ ಸೀಮಿತವಾಗಬಾರದು. ವಿಚಾರಗಳ ವಿನಿಮಯವಾಗಬೇಕು. ಸೌಲಭ್ಯಗಳ ಬಗ್ಗೆ ಜನರಿಗೆ ಮಾಹಿತಿ ಸಿಗಬೇಕು ಎಂದರು.
ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿ, ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡದ ಸಮುದಾಯಗಳ ಅಭಿವೃದ್ಧಿ ಸೇರಿದಂತೆ ಎಲ್ಲಾ ಸಮುದಾಯಗಳ ಹಿಂದುಳಿದ ಜನರನ್ನು ಸಮಾಜದಲ್ಲಿ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಸರ್ಕಾರ ಕೈಗೊಳ್ಳುತ್ತಿರುವ ಜನಪರ ಕಾರ್ಯಕ್ರಮಗಳು ಸದ್ಭಳಕೆಯಾಗಬೇಕು. ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ ತಾಲ್ಲೂಕಿನಲ್ಲಿ ನಿರ್ಮಾಣ ಮಾಡುತ್ತಿರುವ ಮೊರಾರ್ಜಿದೇಸಾಯಿ ವಸತಿ ಶಾಲೆಗಳು, ವಾಲ್ಮೀಕಿ ಭವನಗಳ ಮೂಲಕ ಆರ್ಥಿಕವಾಗಿ ದುರ್ಬಲರಾಗಿರುವ ಜನಾಂಗಗಳ ಕಲ್ಯಾಣವಾಗಬೇಕು. ಯಾವುದೇ ಸೌಲಭ್ಯಗಳಿಂದ ಬದುಕು ಸುಧಾರಣೆಯಾಗದಿದ್ದರೂ ಶಿಕ್ಷಣದಿಂದ ಮಾತ್ರ ಸುಧಾರಣೆಯಾಗಬಲ್ಲದು ಎಂದರು.
ಪರಿಶಿಷ್ಟ ಜಾತಿ, ಪರಿಶಿಷ್ಟವರ್ಗದ ಜನಾಂಗಗಳಿಗೆ ಮೀಸಲಾತಿಯ ಪ್ರಮಾಣ ಹೆಚ್ಚಾಗಬೇಕು. ಮಾದಿಗ ಸಮುದಾಯದವರು, ನ್ಯಾಯಮೂರ್ತಿ ಸದಾಶಿವ ಆಯೋಗದ ಅನುಷ್ಟಾನಕ್ಕಾಗಿ ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಸಮುದಾಯದ ಸಂಪೂರ್ಣ ಸಹಕಾರವಿದೆ ಎಂದು ದಾವಣಗೆರೆ ರಾಜನಹಳ್ಳಿ ಗುರುಪೀಠದ ಪ್ರಸನ್ನಾನಂದ ಸ್ವಾಮಿಜೀ ಹೇಳಿದರು.
ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಜನಪರವಾದ ಕಾರ್ಯಕ್ರಮಗಳಿಗೆ ಜನರು ಕೊಟ್ಟಿರುವ ತೀರ್ಪಾಗಿದೆ ಎಂದು ಕೆ.ಎಚ್ ಮುನಿಯಪ್ಪ ತಿಳಿಸಿದರು. ಕೆ.ಪಿ.ಸಿ.ಸಿ. ಅಧ್ಯಕ್ಷಸ್ಥಾನಕ್ಕೆ ನಾನೂ ಕೂಡಾ ಆಕಾಂಕ್ಷಿಯಾಗಿದ್ದೇನೆ. ಎಲ್ಲಾ ಸಮುದಾಯಗಳನ್ನು ಒಗ್ಗಟ್ಟಿನಿಂದ ಸಂಘಟನೆ ಮಾಡಿ ಪಕ್ಷವನ್ನು ಸಂಘಟಿಸುವ ಸಾಮರ್ಥ್ಯವಿದ್ದು ಹೈಕಮಾಂಡ್ ಜವಾಬ್ದಾರಿ ನೀಡಿದರೆ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ ಎಂದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಎಸ್.ಸಿ.ಪಿ, ಟಿ.ಎಸ್.ಪಿ ಯೋಜನೆಯಡಿಯಲ್ಲಿ ಕೋಟ್ಯಾಂತರ ರೂಪಾಯಿಗಳ ಅನುದಾನಗಳನ್ನು ತಂದು ಅಭಿವೃದ್ಧಿ ಪಡಿಸಲಾಗಿದೆ. ಸರ್ಕಾರದಿಂದ ಮಂಜೂರಾಗಿರುವ ಯೋಜನೆಗಳಿಗೆ ತ್ವರಿತಗತಿಯಲ್ಲಿ ಹಣ ಬಿಡುಗಡೆಯಾಗುತ್ತಿಲ್ಲ ಆದ್ದರಿಂದ ಕಾಮಗಾರಿಗಳು ಕುಂಠಿತವಾಗುತ್ತಿವೆ ಎಂದರು.
ಕಾರ್ಯಕ್ರಮದ ಅಂಗವಾಗಿ ನಗರದ ಬಸ್ನಿಲ್ದಾಣದಿಂದ ಸಾಂಸ್ಕೃತಿಕ ಕಲಾತಂಡಗಳ ಮೂಲಕ ಮೆರವಣಿಗೆ ನಡೆಸಲಾಯಿತು. ಮುತೈದೆಯರು ಕಲಶಗಳನ್ನು ಹೊತ್ತುಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಉಪಾಧ್ಯಕ್ಷೆ ನಿರ್ಮಲಮುನಿರಾಜು, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಂಕ್ಮುನಿಯಪ್ಪ, ಸತೀಶ್, ತನುಜಾರಘು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ನಾಯಕ ಸಮುದಾಯದ ಮುಖಂಡರುಗಳು, ಅಧಿಕಾರಿಗಳು ಹಾಜರಿದ್ದರು.
ಟಿವಿ ಮುಂದೆ ಕುಳಿತುಕೊಂಡು ಮಕ್ಕಳು ಕ್ರಿಯಾಶೀಲತೆಯನ್ನು ಕಳೆದುಕೊಳ್ಳುತ್ತಿದ್ದಾರೆ
ರಜೆ ಬಂದರೆ ಹಿಂದೆ ಮಕ್ಕಳು ವಿವಿಧ ಆಟೋಟಗಳು, ಬಾವಿಗಳಲ್ಲಿ ಈಜು ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಆದರೆ ಈಗ ಕೇವಲ ಟಿವಿ ಮುಂದೆ ಕುಳಿತುಕೊಂಡು ತಮ್ಮ ಕ್ರಿಯಾಶೀಲತೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಮುಖ್ಯ ಶಿಕ್ಷಕ ಎನ್.ಕೃಷ್ಣಮೂರ್ತಿ ತಿಳಿಸಿದರು.
ನಗರದ ಚಿಂತಾಮಣಿ ರಸ್ತೆಯಲ್ಲಿರುವ ಉಲ್ಲೂರುಪೇಟೆ ಸರ್ಕಾರಿ ಶಾಲೆಯ ಆವರಣದಲ್ಲಿ ಗುರುವಾರ ದಿವ್ಯ ಭಾರತ್ ಕರಾಟೆ ಡೋ ಅಸೋಸಿಯೇಷನ್ ವತಿಯಿಂದ ನಡೆದ ಉಚಿತ ಕರಾಟೆ, ಜಿಮ್ನಾಸ್ಟಿಕ್, ಯೋಗ, ನೃತ್ಯ ಮುಂತಾದವುಗಳನ್ನು ಕಲಿಸುವ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇವಲ ಪುಸ್ತಕ ಓದಿನಲ್ಲಿ ತಲ್ಲೀನರಾದರೆ ಸಾಲದು ಮಕ್ಕಳು ದೈಹಿಕವಾಗಿಯೂ ಸದೃಢರಾಗಬೇಕು. ಅದಕ್ಕೆ ಸೂಕ್ತ ಮಾರ್ಗದರ್ಶನ ಅಗತ್ಯ. ಉಚಿತವಾಗಿ ನಡೆಸುವ ಬೇಸಿಗೆ ಶಿಬಿರವನ್ನು ಮಕ್ಕಳು ಸದುಪಯೋಗ ಮಾಡಿಕೊಳ್ಳಬೇಕು. ಪೋಷಕರು ಮಕ್ಕಳಿಗೆ ಪ್ರೋತ್ಸಾಹಿಸುವಂತೆ ಅವರು ಕೋರಿದರು.
ಲಯನ್ ಕ್ರೀಡಾ ಸಂಸ್ಥೆಯ ಗೌರವಾಧ್ಯಕ್ಷ ಮುನಿರಾಜು ಮಾತನಾಡಿ, ಎಳೆಯ ವಯಸ್ಸಿನಲ್ಲಿಯೇ ಮಕ್ಕಳಿಗೆ ಕ್ರೀಡೆಯಲ್ಲಿ ಪ್ರೋತ್ಸಾಹಿಸುವ ಮೂಲಕ ಅವರ ಪ್ರತಿಭೆಯನ್ನು ಗುರುತಿಸಬೇಕು. ರಾಜ್ಯಮಟ್ಟ, ರಾಷ್ಟ್ರಮಟ್ಟದಲ್ಲಿ ಅವರು ಪ್ರತಿನಿಧಿಸುವಂತಾದಾಗ ತಾಲ್ಲೂಕಿಗೇ ಕೀರ್ತಿ ಬರುತ್ತದೆ ಎಂದು ಹೇಳಿದರು.
ದಿವ್ಯ ಭಾರತ್ ಕರಾಟೆ ಡೋ ಅಸೋಸಿಯೇಷನ್ ಶಿಕ್ಷಕ ವಿ.ಅರುಣ್ಕುಮಾರ್ ಮಾತನಾಡಿ, ಪ್ರತಿ ದಿನ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಉಚಿತ ಶಿಬಿರವನ್ನು ನಡೆಸಲಾಗುತ್ತದೆ. ಹತ್ತು ದಿನಗಳ ಕಾಲ ನಡೆಯುವ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಕಲಿತದ್ದನ್ನು ಪ್ರದರ್ಶಿಸುವರು ಎಂದರು.
ರಂಗಕರ್ಮಿ ಮುನಿರಾಜು, ಶಿಕ್ಷಕರಾದ ದಾಕ್ಷಾಯಿಣಿ, ಚಂದ್ರಕಲಾ ಹಾಜರಿದ್ದರು.
ಭಕ್ತರಹಳ್ಳಿಯ ಬಿ.ಎಂ.ವಿ ಪ್ರೌಢಶಾಲೆಯಲ್ಲಿ ರಾಷ್ಟ್ರ ಸೇವಾದಳದ ವಸತಿ ಶಿಬಿರ
ತಾಲ್ಲೂಕಿನ ಭಕ್ತರಹಳ್ಳಿಯ ಬಿ.ಎಂ.ವಿ ಪ್ರೌಢಶಾಲೆ ಆವರಣದಲ್ಲಿ ಬಿ.ಎಂ.ವಿ ಎಜುಕೇಷನ್ ಟ್ರಸ್ಟ್, ಬೆಂಗಳೂರಿನ ಸಮಾಜವಾದಿ ಅಧ್ಯಯನ ಕೇಂದ್ರ ಮತ್ತು ರೋಟರಿ ಬೆಂಗಳೂರು ಹೈಗ್ರೌಂಡ್ಸ್ ಅವರ ಜಂಟಿ ಆಶ್ರಯದಲ್ಲಿ ರಾಷ್ಟ್ರ ಸೇವಾದಳದ 7 ದಿನಗಳ ವಸತಿ ಶಿಬಿರವನ್ನು ಆಯೋಜಿಸಲಾಗಿದೆ. ಏಪ್ರಿಲ್ 16 ರಿಂದ 22 ರವರೆಗೂ ನಡೆಯಲಿರುವ ಈ ತರಬೇತಿ ಶಿಬಿರದಲ್ಲಿ ಬಿ.ಎಂ.ವಿ ಪ್ರೌಢಶಾಲೆಯ 100 ಮಂದಿ ವಿದ್ಯಾರ್ಥಿಗಳು ಭಾಗವಹಿಸುವರು ಎಂದು ಬಿ.ಎಂ.ವಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಎಲ್.ಕಾಳಪ್ಪ ತಿಳಿಸಿದರು.
ನಗರದಲ್ಲಿ ಮಂಗಳವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮಹಾನ್ ಸಮಾಜವಾದಿ ಮುಖಂಡರಾಗಿದ್ದ ಸಾಣೆ ಗುರೂಜಿ, ಎಸ್.ಎಂ.ಜೋಷಿ ಮತ್ತು ಎನ್.ಜಿ.ಗೋರೆ ಅವರಿಂದ ಪ್ರಾರಂಭಿಸಲ್ಪಟ್ಟ ರಾಷ್ಟ್ರ ಸೇವಾದಳವು ರಾಷ್ಟ್ರೀಯತೆ, ಪ್ರಜಾಪ್ರಭುತ್ವ, ಸಮಾಜವಾದ, ಸಮಾನತೆ, ಜಾತ್ಯಾತೀತ ಹಾಗೂ ಸೋದರಭಾವ ತತ್ವಗಳನ್ನು ಹೊಂದಿದೆ.
ಪ್ರೌಢಶಾಲಾ ಮಕ್ಕಳಿಗೆ ಕಿರಿಯ ವಯಸ್ಸಿನಲ್ಲೇ ಸಮಾಜವಾದದ ಮೂಲ ಪರಿಕಲ್ಪನೆಗಳಾದ ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರಭಾವಗಳ ಜೊತೆಗೆ ರಾಷ್ಟ್ರೀಯತೆ ಮತ್ತು ವೈಜ್ಞಾನಿಕ ಮನೋಭಾವಗಳನ್ನು ಬೆಳೆಸಿಕೊಳ್ಳಬೇಕೆನ್ನುವ ಅರಿವು ಮೂಡಿಸುವ ಪ್ರಮುಖ ಉದ್ದೇಶವನ್ನು ಈ ತರಬೇತಿ ಶಿಬಿರ ಹೊಂದಿದೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಯೋಗ, ವ್ಯಾಯಾಮ, ಕವಾಯತು, ಹಾಡು, ನೃತ್ಯ, ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ವಿಶ್ವಸಂಸ್ಥೆ ಪ್ರಶಸ್ತಿ ಪುರಸ್ಕೃತೆ ಹಾಗೂ ‘ಬೆಳಕು’ ಸಂಸ್ಥೆಯ ಸಂಸ್ಥಾಪಕ ಟ್ರಸ್ಟಿ ಅಶ್ವಿನಿ ಅಂಗಡಿ ಈ ತರಬೇತಿ ಶಿಬಿರವನ್ನು ಉದ್ಘಾಟಿಸುವರು. ಹಂಪಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಎ.ಮುರಿಗೆಪ್ಪ, ಗಾಂಧೀಸ್ಮಾರಕ ಕೇಂದ್ರದ ಉಪಾಧ್ಯಕ್ಷ ಡಾ.ಜಿ.ಬಿ.ಶಿವರಾಜು, ಸಮಾಜವಾದಿ ಅಧ್ಯಯನ ಕೇಂದ್ರದ ಬಾಪು ಹೆದ್ದೂರಶೆಟ್ಟಿ, ಪ್ರೊ.ಹನುಮಂತ, ಜಿ.ವಿ.ಸುಂದರ್, ನಿವೃತ್ತ ಅಪರ ತೋಟಗಾರಿಕಾ ನಿರ್ದೇಶಕ ಡಾ.ಎಸ್.ವಿ.ಹಿತ್ತಲಮನಿ, ಪ್ರಗತಿ ಕಾಲೇಜಿನ ಪ್ರಾಂಶುಪಾಲ ಎನ್.ನಾಗರಾಜ್, ಸ್ಮೈಲ್ ಫೌಂಡೇಷನ್ನ ಪ್ರದೀಪ್ ರಾಧಾಕೃಷ್ಣ, ಎಸ್.ನಾರಾಯಣಸ್ವಾಮಿ, ರೊಟೇರಿಯನ್ ವಿ.ರಾಮಚಂದ್ರ ಮುಂತಾದವರು ಶಿಬಿರದಲ್ಲಿ ಭಾಗವಹಿಸುವರು.
ಸಮಾರೋಪ ಭಾಷಣಕ್ಕಾಗಿ ರಾಷ್ಟ್ರ ಸೇವಾದಳದ ರಾಷ್ಟ್ರೀಯ ಅಧ್ಯಕ್ಷ ಸುರೇಶ್ ಖೈರ್ನಾರ್ ಮತ್ತು ರಾಷ್ಟ್ರ ಸೇವಾದಳದ ಮಾಜಿ ಅಧ್ಯಕ್ಷ ಭರತ ಲಾಟಕರ ಆಗಮಿಸಲಿದ್ದಾರೆ. ಪುಣೆಯ ರಾಷ್ಟ್ರ ಸೇವಾದಳದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾಬಾಸಾಹೇಬ್ ನದಾಫ್ ನೇತೃತ್ವದಲ್ಲಿ ನುರಿತ 4 ಜನರ ತಂಡ ಏಳು ದಿನಗಳ ತರಬೇತಿ ಶಿಬಿರವನ್ನು ನಡೆಸಿಕೊಡಲಿದ್ದಾರೆ ಎಂದು ಹೇಳಿದರು.
ಭಕ್ತರಹಳ್ಳಿ ಮೂಲದ ಹೆಸರಾಂತ ಅಡುಗೆ ಗುತ್ತಿಗೆದಾರರು ಶಿಬಿರಾರ್ಥಿಗಳಿಗೆ ಊಟ, ತಿಂಡಿಯ ಪ್ರಾಜೋಜನೆ ನೀಡಿ ಗ್ರಾಮದ ಮಕ್ಕಳಿಗೆ ನೆರವಾಗುತ್ತಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಂದ ಪ್ರತಿಭಾ ಪ್ರದರ್ಶನವಿರುತ್ತದೆ ಎಂದು ವಿವರಿಸಿದರು.
ಬಿ.ಎಂ.ವಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಬಿ.ವಿ.ಮುನೇಗೌಡ, ತೋಟಗಾರಿಕಾ ಇಲಾಖೆಯ ನಿವೃತ್ತ ಅಧಿಕಾರಿ ಎಸ್.ನಾರಾಯಣಸ್ವಾಮಿ ಹಾಜರಿದ್ದರು.
ನಲ್ಲೋಜನಹಳ್ಳಿ ಎಂ.ಪಿ.ಸಿ.ಎಸ್ ಅಧ್ಯಕ್ಷರಾಗಿ ಕೆ.ಭಾವಾರೆಡ್ಡಿ ಆಯ್ಕೆ
ತಾಲ್ಲೂಕಿನ ನಲ್ಲೋಜನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಭಾವಾರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ವಿ.ವೆಂಕಟೇಶಮೂರ್ತಿ ತಿಳಿಸಿದ್ದಾರೆ.
ಹನ್ನೆರಡು ಮಂದಿ ನಿರ್ದೇಶಕರಿರುವ ನಲ್ಲೋಜನಹಳ್ಳಿ ಎಂ.ಪಿ.ಸಿ.ಎಸ್ ಆಡಳಿತ ಮಂಡಳಿಯ ಸಭೆಯನ್ನು ಈಚೆಗೆ ಕರೆದಿದ್ದು, ಸಣಘದ ಅಧ್ಯಕ್ಷ ಸ್ಥಾನಕ್ಕೆ ವಿರೋಧವಿಲ್ಲದ ಕಾರಣ ಏಕೈಕ ಅಭ್ಯರ್ಥಿಯಾದ ಕೆ.ಭಾವಾರೆಡ್ಡಿ ಅವರು ಐದು ವರ್ಷದ ಅವಧಿಗೆ ಅಧ್ಯಕ್ಷರನ್ನಾಗಿ ಘೋಷಿಸಲಾಯಿತು.
ನಿರ್ದೇಶಕರಾದ ಮುನಿಶಾಮಿರೆಡ್ಡಿ, ದ್ಯಾವಪ್ಪ, ಶ್ರೀನಿವಾಸ, ಎಸ್.ಮುನಿಕೃಷ್ಣಪ್ಪ, ಮುನಿಕೃಷ್ಣಪ್ಪ, ವೇಣು, ಎನ್.ನಾಗರಾಜ, ಆವುಲಪ್ಪ, ದ್ಯಾವಮ್ಮ, ರಾಧಮ್ಮ, ಗಂಗುಲಪ್ಪ ಹಾಜರಿದ್ದರು.
ಪ್ರಸನ್ನ ಗಂಗಾಧರೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ
ತಾಲ್ಲೂಕಿನ ಪುರಾಣ ಪ್ರಸಿದ್ಧ ಜಂಗಮಕೋಟೆಯ ಪ್ರಸನ್ನ ಗಂಗಾಧರೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವವನ್ನು ಮಂಗಳವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಉತ್ತರಾಯಣ ವಸಂತ ಋತು ಚೈತ್ರ ಶುದ್ಧ ಪೌರ್ಣಮಿ ಮಂಗಳವಾರದಂದು ಪ್ರಸನ್ನ ಗಂಗಾಧರೇಶ್ವರ ಸ್ವಾಮಿಯ ತೇರಿನಲ್ಲಿ ಉತ್ಸವ ಮೂರ್ತಿಗಳನ್ನಿರಿಸಿ, ವಿವಿಧ ಹೂಗಳಿಂದ ಅಲಂಕರಿಸಿ ಬ್ರಹ್ಮರಥೋತ್ಸವವನ್ನು ನಡೆಸಲಾಯಿತು.
ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಆಗಮಿಸಿದ್ದು, ಗ್ರಾಮದಲ್ಲಿ ದೇವರ ರಥ ಸಾಗಿದಾಗ ಬಿಸಿಲಲ್ಲೂ ಸಾಕಷ್ಟು ಜನಜಂಗುಳಿ ಏರ್ಪಟ್ಟಿತ್ತು. ಪುರಾತನ ಪ್ರಸನ್ನ ಗಂಗಾಧರೇಶ್ವರ ಸ್ವಾಮಿಯ ದೇವಾಲಯದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಿದ್ದು, ಪೂಜೆಯ ನಂತರ ಪ್ರಸಾದವನ್ನು ವಿತರಿಸಲಾಯಿತು.
ಗ್ರಾಮದಲ್ಲಿ ಆಗಮಿಸಿದ್ದ ಭಕ್ತರಿಗೆ ಮಜ್ಜಿಗೆ, ಪಾನಕ ಹಾಗೂ ಹೆಸರುಬೇಳೆ ಕೋಸಂಬರಿಯನ್ನು ವಿತರಿಸಿದರು. ಮೆರವಣಿಗೆಯಲ್ಲಿ ವೀರಗಾಸೆ, ಕರಡಿ ಸಮ್ಮೇಳ ಹಾಗೂ ನಾಸಿಕ್ ಡೋಲ್ ವಿಶೇಷ ಆಕರ್ಷಣೆಯಾಗಿತ್ತು. ಗಾರ್ಡಿ ಗೊಂಬೆ, ಕೀಲು ಕುದುರೆ ಮುಂತಾದ ಆಕರ್ಷಕ ಸ್ಥಳೀಯ ಕಲೆಯು ಕೂಡ ಮೆರವಣಿಗೆಯಲ್ಲಿದ್ದವು. ರಥೋತ್ಸವದಲ್ಲಿ ವಿವಿಧ ಜಾನಪದ ಕಲಾತಂಡಗಳು, ಹಾಗೂ ತಮಟೆಗಳ ವಾದನಕ್ಕೆ ಭಕ್ತಾದಿಗಳು ಜಾನಪದ ತಂಡಗಳೊಂದಿಗೆ ಹೆಜ್ಜೆಹಾಕುತ್ತಾ ಕಾರ್ಯಕ್ರಮಕ್ಕೆ ಮತ್ತಷ್ಟು ಸೊಬಗು ತಂದಿದ್ದರು.
ದೇವಾಲಯದ ಆವರಣದಲ್ಲಿ ಹೋಮಕುಂಡವನ್ನು ಮಾಡಿ, ಲೋಕ ಕಲ್ಯಾಣಾರ್ಥವಾಗಿ ವಿವಿಧ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಪ್ರಸನ್ನ ಗಂಗಾಧರೇಶ್ವರಸ್ವಾಮಿಗೆ ವಿಶೇಷ ಹೂವಿನ ಅಲಂಕಾರಗಳೊಂದಿಗೆ ಪೂಜೆಗಳನ್ನು ಸಮರ್ಪಣೆ ಮಾಡಲಾಯಿತು, ನೆರೆದಿದ್ದ ಭಕ್ತಾದಿಗಳು ರಥಕ್ಕೆ ಬಾಳೇಹಣ್ಣಿಗೆ ದವನವನ್ನಿ ಸಿಕ್ಕಿಸಿ ರಥಕ್ಕೆ ಎಸೆಯುವುದರ ಮೂಲಕ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು, ಸುತ್ತಮುತ್ತಲಿನ ಹಳ್ಳಿಗಳಿಂದ ಬಂದಿದ್ದ ಭಕ್ತಾದಿಗಳು ಕೋಸಂಬರಿ ಪಾನಕಗಳನ್ನು ಭಕ್ತರಿಗೆ ಹಂಚಿಕೆ ಮಾಡಿದರು. ದೇವಾಲಯದಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
ಮೇಲೂರು ಗ್ರಾಮದ ಗಂಗಾದೇವಿಯ ಬ್ರಹ್ಮರಥೋತ್ಸವ
ಪುರಾಣ ಪ್ರಸಿದ್ದ ಶ್ರೀ ಗಂಗಾದೇವಿಯ ಬ್ರಹ್ಮರಥೋತ್ಸವ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಮಂಗಳವಾರ ಅದ್ದೂರಿಯಾಗಿ ನೆರವೇರಿತು. ಗ್ರೇಡ್2 ತಹಶೀಲ್ದಾರ್ ಮುನಿಕೃಷ್ಣಪ್ಪ, ರಾಜಸ್ವ ನಿರೀಕ್ಷಕ ಮೋಹನ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಮುನಾ ಧರ್ಮೇಂದ್ರ, ಗ್ರಾಮದ ಮುಖಂಡರುಗಳು ಹಾಗೂ ಯುವಕರು ರಥೋತ್ಸವಕ್ಕೆ ಚಾಲನೆ ನೀಡಿದರು.
ತಾಲ್ಲೂಕಿನ ಪುರಾಣ ಪ್ರಸಿದ್ದ ದೇವಾಲಯಗಳಲ್ಲಿ ಒಂದಾದ ಮೇಲೂರಿನ ಶ್ರೀ ಗಂಗಾದೇವಿಯ ಬ್ರಹ್ಮರಥೋತ್ಸವದ ಅಂಗವಾಗಿ ದೇವಾಲಯವನ್ನು ಹೂವಿನ ಅಲಂಕಾರದಿಂದ ಶೃಂಗಾರ ಮಾಡಲಾಗಿತ್ತು, ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ವಿಜೃಂಭಣೆಯಿಂದ ಬ್ರಹ್ಮರಥೋತ್ಸವ ಕಾರ್ಯಕ್ರಮವನ್ನು ನೆರವೇರಿಸಲಾಯಿತು, ಮಂಗಳವಾದ್ಯಗಳು, ತಮಟೆಗಳ ವಾದನ ರಥೋತ್ಸವಕ್ಕೆ ಮೆರುಗನ್ನು ತಂದಿತ್ತು.
ಬ್ರಹ್ಮರಥೋತ್ಸವದ ಅಂಗವಾಗಿ ಹೋಮಕುಂಡವನ್ನು ಸ್ಥಾಪನೆ ಮಾಡಿ, ಲೋಕ ಕಲ್ಯಾಣಾರ್ಥವಾಗಿ ವಿವಿಧ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು, ಗಂಗಾದೇವಿಗೆ ವಿಶೇಷ ಹೂವಿನ ಅಲಂಕಾರಗಳೊಂದಿಗೆ ಪೂಜೆಗಳನ್ನು ಸಮರ್ಪಣೆ ಮಾಡಲಾಯಿತು, ನೆರೆದಿದ್ದ ಭಕ್ತಾದಿಗಳು ರಥಕ್ಕೆ ದವನದೊಂದಿಗಿನ ಬಾಳೇ ಹಣ್ಣು ಎಸೆಯುವುದರ ಮೂಲಕ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು, ಸುತ್ತಮುತ್ತಲಿನ ಹಳ್ಳಿಗಳಿಂದ ಬಂದಿದ್ದ ಭಕ್ತಾದಿಗಳಿಗೆ ಹೆಸರುಬೇಳೆ ಕೋಸಂಬರಿ ಪಾನಕ, ಮಜ್ಜಿಗೆಯನ್ನು ವಿತರಿಸಲಾಯಿತು. ದೇವಾಲಯದಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಬತ್ತಾಸು, ಬುರುಗು, ಖಾರ, ವಿವಿಧ ಸಿಹಿ ಖಾದ್ಯಗಳು, ಹಣ್ಣುಗಳು, ತಂಪು ಪಾನೀಯಗಳು ಮೊದಲಾದ ಆಕರ್ಷಕ ಅಂಗಡಿಗಳು ಜನರನ್ನು ಆಕರ್ಷಿಸುತ್ತಿದ್ದವು.
ಗ್ರಾಮದ ಮುಖಂಡರಾದ ಬಿ.ಎನ್.ರವಿಕುಮಾರ್, ಆರ್.ಎ.ಉಮೇಶ್, ಕೆ.ಮಂಜುನಾಥ್, ಕೆ.ಎಸ್.ಮಂಜುನಾಥ್, ಸುದರ್ಶನ್, ಧಮೇಂದ್ರ, ಸುದೀರ್, ಶ್ರೀನಿವಾಸಮೂರ್ತಿ(ಪುಲಿ), ಬಿ.ಎನ್.ಶ್ರೀನಿವಾಸ್, ರಾಮಕೃಷ್ಣಪ್ಪ, ಶಿವಕುಮಾರ್, ಜೇಜೇಗೌಡ, ಅಶ್ವಥ್ಥಪ್ಪ, ವೀರಣ್ಣಗೌಡ, ಕೆ.ಎಸ್.ನಂಜೇಗೌಡ, ನಾರಾಯಣಪ್ಪ, ಮುನಿಶಾಮಪ್ಪ, ಎಂ.ಜೆ.ಶ್ರೀನಿವಾಸ್ ಮತ್ತು ದೇವಾಲಯದ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮದ ಯುವಕರು ಹಾಜರಿದ್ದರು.
ಸದ್ದಹಳ್ಳಿ ಎಂಪಿಸಿಎಸ್ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ
ತಾಲ್ಲೂಕಿನ ಸದ್ದಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಎಸ್.ಕೃಷ್ಣಪ್ಪ ಮತ್ತು ಉಪಾಧ್ಯಕ್ಷರಾಗಿ ಎಸ್.ಎನ್.ನರಸಿಂಹಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು ಹತ್ತು ಸ್ಥಾನಗಳಿದ್ದು, ನಿರ್ದೇಶಕರಾಗಿ ಎಸ್.ದ್ಯಾವಪ್ಪ, ಮುನಿವೆಂಕಟಮ್ಮ, ನರಸಿಂಹಪ್ಪ, ನಾರಾಯಣಪ್ಪ, ಮದ್ದಕ್ಕ ಗ್ರಾಮದ ಮುಖಂಡ ಬಂಡೆಪ್ಪ, ಎಸ್.ವಿ.ವೆಂಕಟೇಶ್, ಎಸ್.ಎಂ.ನಾರಾಯಣಸ್ವಾಮಿ, ಬೈರಾರೆಡ್ಡಿ, ಗಂಗಾಧರ ಹಾಜರಿದ್ದರು
ಒಕ್ಕಲಿಗರ ಯುವಸೇನೆ ಸಂಘ ರಚನೆ
ತಾಲ್ಲೂಕಿನ ಕುಂದಲಗುರ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಕ್ಕಲಿಗರ ಯುವಸೇನೆ ಸಂಘವನ್ನು ಶನಿವಾರ ತಾಲ್ಲೂಕು ಒಕ್ಕಲಿಗರ ಯುವಸೇನೆ ಸಂಘದ ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ ಅವರ ನೇತೃತ್ವದಲ್ಲಿ ರಚಿಸಲಾಯಿತು.
ಕುಂದಲಗುರ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಯಕಾರಿ ಸಮಿತಿ ಸದಸ್ಯರು: ಗೌರವಾಧ್ಯಕ್ಷ ಕೆ.ಸಿ.ರಮೇಶರೆಡ್ಡಿ, ಅಧ್ಯಕ್ಷ ಡಿ.ಎನ್.ನಟರಾಜ್, ಉಪಾಧ್ಯಕ್ಷ ವಿ.ಆರ್.ನಾಗರಾಜ, ಕಾರ್ಯಾಧ್ಯಕ್ಷ ವೆಂಕಟರೆಡ್ಡಿ, ಪ್ರಧಾನ ಕಾರ್ಯದರ್ಶಿ ಡಿ.ಸಿ.ರಮೇಶ್, ಖಜಾಂಚಿ ಡಿ.ವಿ.ದಿಲೀಪ್‌ಕುಮಾರ್, ಕಾರ್ಯದರ್ಶಿ ಆರ್.ಎಸ್.ರವಿಕುಮಾರ್, ಸಂಘಟನಾ ಕಾರ್ಯದರ್ಶಿ ಡಿ.ಕೆ.ನಾರಾಯಣಸ್ವಾಮಿ, ಜಂಟಿ ಕಾರ್ಯದರ್ಶಿ ಆರ್.ಕೆ.ಮುರಳಿ, ಸಹ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್, ಸದಸ್ಯರಾಗಿ ಡಿ.ಎನ್.ಸುರೇಶ್, ಡಿ.ಎ.ಶ್ರೀನಿವಾಸ, ಮಂಜುನಾಥ, ಮುನಿರೆಡ್ಡಿ, ಡಿ.ಎ.ಕೃಷ್ಣಮೂರ್ತಿ, ಡಿ.ಅಂಬರೀಷ್, ಡಿ.ಸಿ.ಧನಂಜಯ, ಸಿ.ಕೆ.ವೆಂಕಟೇಶ್, ಶ್ರೀನಾಥ, ಸಿ.ಎಂ.ನಾಗೇಶ, ಸಿ.ಕೆ.ಶ್ರೀನಿವಾಸ, ಕೇಶವ, ವೆಂಕಟರೆಡ್ಡಿ, ಕೆ.ಎಲ್.ನವೀನ್‌ಕುಮಾರ್, ಕೆ.ಸಿ.ಶಾಂತಕುಮಾರ್, ಕೆ.ವಿ.ಕೇಶವಮೂರ್ತಿ, ಕೆ.ಎ.ಶಾಂತಮೂರ್ತಿ, ನಾಗೇಶ್, ಆರ್.ಎಂ.ಚಂದ್ರಶೇಖರ್, ಆರ್.ಎಂ.ಸುಧಾಕರ್, ಚಲಪತಿ, ವಿ.ನವೀನ್‌ಕುಮಾರ್, ವಿ.ವೆಂಕಟರೆಡ್ಡಿ, ಎಂ.ಶಶಿಕುಮಾರ್, ಎನ್.ಶಿವರಾಜ್‌ಕುಮಾರ್, ಕೆ.ಸಿ.ಚನ್ನಕೇಶವರೆಡ್ಡಿ, ಬಿ.ನಾರಾಯಣಸ್ವಾಮಿ, ಜಿ.ಕೆ.ವೆಂಕಟೇಶ್, ಸುರೇಶ್‌ಬಾಬು, ಲಕ್ಷ್ಮೀನಾರಾಯಣಪ್ಪ, ಶಿವಣ್ಣ, ವೆಂಕಟರೆಡ್ಡಿ, ಸಿ.ವೆಂಕಟರೆಡ್ಡಿ, ಆರ್.ಆನಂದ, ರವಿಶಂಕರ್‌ರೆಡ್ಡಿ, ವೆಂಕಟರೆಡ್ಡಿ, ಆರ್.ಸಿ.ಮುನಿರಾಜು ಆಯ್ಕೆಯಾಗಿದ್ದಾರೆ.
ಕೃಷಿ ಉತ್ಪನ್ನಗಳನ್ನು ತರುವವರ ಬಳಿ ಸುಂಕ ವಸೂಲಿ ಮಾಡಬಾರದು
ಕೃಷಿ ಉತ್ಪನ್ನಗಳನ್ನು ತರುವವರ ಬಳಿ ಸುಂಕ ವಸೂಲಿ ಮಾಡಬಾರದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಒತ್ತಾಯಿಸಿದರು.
ನಗರದಲ್ಲಿ ಸೋಮವಾರ ನಡೆದ ಸಂತೆಗೆ ಆಗಮಿಸಿದ ರೈತ ಮುಖಂಡರು ನಗರಸಭೆಯಿಂದ ಕೃಷಿ ಉತ್ಪನ್ನಗಳನ್ನು ತರುವವರ ಬಳಿ ಸುಂಕ ವಸೂಲಿ ಮಾಡುವುದನ್ನು ವಿರೋಧಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆಯ ಅನ್ವಯ ರೈತನ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಬೆಂಗಳೂರು ಮಹಾನಗರಪಾಲಿಕೆಯವರೂ ಈ ನಿಯಮ ಪಾಲಿಸುತ್ತಿದ್ದಾರೆ. ಅದರಲ್ಲೂ ಪಿಡಬ್ಲೂಡಿಗೆ ಸೇರಿದ ಹಾಗೂ ಕೆರೆಯಂಗಳದ ಜಾಗದಲ್ಲಿ ನಡೆಯುವ ಸಂತೆಯಲ್ಲಿ ನಗರಸಭೆಯಿಂದ ಸುಂಕ ವಸೂಲಿ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಜಿಲ್ಲೆಯಲ್ಲಿ ನೀರಿಲ್ಲದೆ ಬರಪೀಡಿತ ಪ್ರದೇಶವೆಂದು ಘೋಷಣೆಯಾಗಿದೆ. ಸಾವಿರಾರು ಅಡಿಗಳಿಂದ ನೀರನ್ನು ತೆಗೆದು ವ್ಯವಸಾಯ ಮಾಡುತ್ತಿದ್ದು, ಬಿಸಿಲುಗಾಲ ಪ್ರಾರಂಭವಾದ ಮೇಲೆ ವಿದ್ಯುತ್ ಸಹ ಕಣ್ಣು ಮುಚ್ಚಾಲೆ ಆಡುತ್ತಿದೆ. ರಾತ್ರಿ ವೇಳೆ ಬೆಳೆಗಳಿಗೆ ಟ್ಯಾಂಕರ್‌ಗಳಿಂದಲೂ ಸಹ ನೀರು ಖರೀದಿ ಮಾಡಿ ನಮ್ಮ ರೈತರು ತರಕಾರಿ ಬೆಳೆಯುತ್ತಿದ್ದಾರೆ. ಸುಂಕ ವಸೂಲು ಮಾಡಬಾರದೆಂದು ನಗರಸಭಾ ಅಧ್ಯಕ್ಷರಿಗೆ, ಕಮೀಷನರ್‌ಗೆ ಸಹ ಮನವಿ ಪತ್ರ ನೀಡಿದ್ದರೂ ಸಹ ಸುಂಕ ವಸೂಲಾತಿ ಮಾಡುತ್ತಿದ್ದು, ರೈತರು ಯಾರೂ ಸುಂಕ ನೀಡಬಾರದೆಂದು ರೈತರಿಗೆ ಮನವಿ ಮಾಡಿದರು.
ರೈತ ಸಂಘ ಮುಖಂಡರ ಒತ್ತಾಯದ ಮೇರೆಗೆ ನಗರಸಭೆಯಲ್ಲಿ ಸಭೆ ಕರೆದು ಚರ್ಚಿಸಿದ್ದು, ಇನ್ನು ಮುಂದೆ ರೈತರು ತರುವ ಯಾವುದೇ ವಸ್ತುಗಳ ಮೇಲೆ ಸುಂಕ ವಸೂಲಾತಿ ಮಾಡಬಾರದೆಂದು ನಗರಸಭೆ ವತಿಯಿಂದ ತೀರ್ಮಾನಿಸಿರುವುದಾಗಿ ಹಸಿರು ಸೇನೆ ರೈತ ಸಂಘದ ಜಿಲ್ಲಾದ್ಯಕ್ಷ ಭಕ್ತರ ಹಳ್ಳಿ ಬೈರೇಗೌಡ ತಿಳಿಸಿದ್ದಾರೆ.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಉಪಾಧ್ಯಕ್ಷ ಮುನಿನಂಜಪ್ಪ, ಮಾಜಿ ಎ.ಪಿ.ಎಂ,ಸಿ ಅಧ್ಯ್ಯಕ್ಷ ಹುಜಗೂರು ರಾಮಣ್ಣ , ರೈತ ಮುಖಂಡರಾದ ವೇಣುಗೋಪಾಲ್, ರಾಮಚಂದ್ರಪ್ಪ, ಟಿ.ಕೃಷ್ಣಪ್ಪ, ನಾಗರಾಜ್, ದೇವರಾಜ್, ಏಜಾಜ್, ತಮ್ಮಣ್ಣ, ಪುಟ್ಟಮೂರ್ತಿ, ಆನೂರು ನಾಗರಾಜ್, ಆನೂರು ದೇವರಾಜ್ ಮತ್ತಿತರರು ಹಾಜರಿದ್ದರು.
ತಿರುಮಲ ತಿರುಪತಿ ದೇವಸ್ಥಾನದಲ್ಲಿ ಶಿಡ್ಲಘಟ್ಟ ತಾಲ್ಲೂಕು ಕಸಾಪದ ಕಾರ್ಯಕ್ರಮ
ತಿರುಮಲ ತಿರುಪತಿ ದೇವಸ್ಥಾನದಲ್ಲಿ ಕಾರ್ಯಕ್ರಮ ನೀಡುವ ಅಪರೂಪದ ಅವಕಾಶವನ್ನು ಶಿಡ್ಲಘಟ್ಟ ತಾಲ್ಲೂಕು ಕಸಾಪ ಪಡೆದಿದೆ ಎಂದು ತಿರುಪತಿ ತಿರುಮಲ ದೇವಸ್ಥಾನಮ್ ದಾಸ ಸಾಹಿತ್ಯ ಯೋಜನೆಯ ವಿಶೇಷ ಅಧಿಕಾರಿ ಆನಂದತೀರ್ಥಾಚಾರ್ಯ ತಿಳಿಸಿದರು.
ತಿರುಮಲ ತಿರುಪತಿ ದೇವಸ್ಥಾನದ ಆವರಣದಲ್ಲಿ ಹಿಂದೂ ಧರ್ಮ ಪ್ರಚಾರ ಪರಿಷತ್‌ನ ಧಾರ್ಮಿಕ ಆಧ್ಯಾತ್ಮಿಕ ಕಾರ್ಯಕ್ರಮದಡಿಯಲ್ಲಿ ಶಿಡ್ಲಘಟ್ಟ ತಾಲ್ಲೂಕು ಕಸಾಪ ವತಿಯಿಂದ ಭಕ್ತಿಗೀತೆಗಳ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕದ ನೂರಾರು ಭಜನಾ ಕಲಾವಿದರ ತಂಡಗಳು ಇಲ್ಲಿ ಭಾಗವಹಿಸಿ ಕಾರ್ಯಕ್ರಮ ನೀಡುತ್ತಾರೆ. ನೂರೊಂದು ವರ್ಷಗಳು ತುಂಬಿದ ಕನ್ನಡ ಸಾಹಿತ್ಯ ಪರಿಷತ್ತಿನ ಬಗ್ಗೆ ಪರಿಚಯ ಮಾಡಿಕೊಟ್ಟು, ಪುರಂದರ ದಾಸರ, ಶರೀಫರ ಹಾಗೂ ಭಕ್ತಿ ಗೀತೆಗಳನ್ನು ಹಾಡುವ ಮೂಲಕ ಕನ್ನಡದ ಸೊಗಡಿನ ಮೂಲಕ ತಿಮ್ಮಪ್ಪನ ಸೇವೆಯನ್ನು ಮಾಡಿದ್ದೀರಿ. ನಾದನೀರಾಂಜನ ಎಂಬ ಕಾರ್ಯಕ್ರಮವನ್ನು ತಿರುಪತಿ ತಿರುಮಲ ದೇವಸ್ಥಾನಮ್ ಆಯೋಜಿಸುತ್ತಿದ್ದು ಅದರಲ್ಲೂ ಶಿಡ್ಲಘಟ್ಟ ತಾಲ್ಲೂಕು ಕಸಾಪ ವತಿಯಿಂದ ಭಕ್ತಿ ಸುಧೆಯನ್ನು ಹರಿಸುವಂತೆ ಕೋರಿದರು.
ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸ, ಧ್ಯೇಯೋದ್ದೇಶ, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ವಿವರಿಸಿದರು.
ಕಲಾವಿದ ರವಿಕುಮಾರ್ ದಾಸರ, ಶರೀಫರ ಹಾಗೂ ಭಕ್ತಿ ಗೀತೆಗಳನ್ನು ಹಾಡಿದರು. ತಾಲ್ಲೂಕು ಕಸಾಪ ವತಿಯಿಂದ ತಿರುಪತಿ ತಿರುಮಲ ದೇವಸ್ಥಾನಮ್ ದಾಸ ಸಾಹಿತ್ಯ ಯೋಜನೆಯ ವಿಶೇಷ ಅಧಿಕಾರಿ ಆನಂದತೀರ್ಥಾಚಾರ್ಯ ಅವರನ್ನು ಗೌರವಿಸಲಾಯಿತು.
ತಿರುಪತಿ ತಿರುಮಲ ದೇವಸ್ಥಾನಮ್ ವತಿಯಿಂದ ಶಿಡ್ಲಘಟ್ಟ ತಾಲ್ಲೂಕು ಕಸಾಪ ಸದಸ್ಯರಿಗೆ ಪ್ರಶಂಸನಾ ಪತ್ರವನ್ನು ನೀಡಲಾಯಿತು.
ತಾಲ್ಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಖಜಾಂಚಿ ಎಸ್.ಸತೀಶ್, ರಾಜ್ಯ ದಾಸ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ವೈ.ನಾರಾಯಣಸ್ವಾಮಿ, ಕಲಾವಿದರಾದ ನಾರಾಯಣರೆಡ್ಡಿ, ರಾಮಚಂದ್ರಪ್ಪ, ಗೋಪಾಲಕೃಷ್ಣಪ್ಪ, ವೆಂಕಟರಮಣಪ್ಪ ಹಾಜರಿದ್ದರು.
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನ
ಆಟವಾಡುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಕಾಮುಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ನಗರದಲ್ಲಿ ಭಾನುವಾರ ನಡೆದಿದೆ.
ನಗರದ ಗಾರ್ಡನ್ ರಸ್ತೆಯ ಭೋವಿ ಕಾಲೋನಿಯ ಸುರೇಶ (೨೦) ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪಿ ಎನ್ನಲಾಗಿದೆ.
ಅತ್ಯಾಚಾರಕ್ಕೆ ಒಳಗಾದ ಬಾಲಕಿಯನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.
ನಗರ ಠಾಣೆ ಪಿಎಸ್ಸೈ ನವೀನ್ ಹಾಗು ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ ಆರೋಪಿ ಸುರೇಶನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಒಂದು ಕೋಟಿ ರೂ ವೆಚ್ಚದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನ
ಸರ್ಕಾರದಿಂದ ಒಂದು ಕೋಟಿ ರೂಪಾಯಿಗಳ ಅನುದಾನ ಸಿಕ್ಕಿದ್ದು, ಸರ್ವ ಜನಾಂಗದ ಕಾರ್ಯಕ್ರಮಗಳಿಗೂ ಅನುಕೂಲವಾಗುವ ರೀತಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನವನ್ನು ನಿರ್ಮಿಸುವುದಾಗಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಮುಖಂಡ ಮುಗಿಲಡಿಪಿ ನಂಜಪ್ಪ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ನಗರದ ಮಯೂರ ಸರ್ಕಲ್ ಬಳಿಯಿರುವ ವಾಲ್ಮೀಕಿ ದೇವಸ್ಥಾನದ ಪಕ್ಕ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನದ ಭೂಮಿ ಪೂಜೆಯನ್ನು ಏಪ್ರಿಲ್ 13 ರ ಗುರುವಾರ ಹಮ್ಮಿಕೊಳ್ಳಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಮತ್ತು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಸಹಯೋಗದಲ್ಲಿ ಕಾರ್ಯಕ್ರಮ ನಡೆಸುತ್ತಿದ್ದು ಶ್ರೀ ಪ್ರಸನ್ನಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸ್ವಾಮೀಜಿಯವರನ್ನು ನಗರದ ಬಸ್ ನಿಲ್ದಾಣದಿಂದ ಪಲ್ಲಕ್ಕಿಯೊಡನೆ ಪೂರ್ಣ ಕುಂಭದೊಂದಿಗೆ ವಿವಿಧ ಕಲಾ ತಂಡಗಳೊಡನೆ ಮೆರವಣಿಗೆ ಮೂಲಕ ಕರೆತರಲಾಗುತ್ತದೆ ಎಂದು ಹೇಳಿದರು.
ಶಾಸಕ ಎಂ.ರಾಜಣ್ಣ ಮತ್ತು ಸಂಸದ ಕೆ.ಎಚ್.ಮುನಿಯಪ್ಪ ಸರ್ಕಾರದಿಂದ ಅನುದಾನ ಕೊಡಿಸುವ ಮೂಲಕ ಸಮುದಾಯ ಭವನ ನಿರ್ಮಾಣಕ್ಕೆ ನೆರವು ನೀಡಿದ್ದಲ್ಲದೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕೊರತೆಯಿದ್ದ ನಿವೇಶನಕ್ಕೆ ಜೆಡಿಎಸ್ ಮುಖಂಡ ಮೇಲೂರು ಬಿ.ಎನ್.ರವಿಕುಮಾರ್ ನಿವೇಶನ ಖರೀದಿಸಿ ಕೊಟ್ಟು ಸಮುದಾಯ ಭವನ ನಿರ್ಮಾಣಕ್ಕೆ ನೆರವಾಗಿದ್ದಾರೆ. ಸಮುದಾಯ ಭವನವು ಎಲ್ಲಾ ಸಮುದಾಯಗಳ ಕಾರ್ಯಕ್ರಮ, ಮದುವೆ ಮೊದಲಾದ ಶುಭ ಕಾರ್ಯಗಳು ನಡೆಯಲು ಸಹಾಯವಾಗಲಿದೆ ಎಂದು ಹೇಳಿದರು.
ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲ್ಲೂಕು ಅಧ್ಯಕ್ಷ ರಾಮಚಂದ್ರಪ್ಪ, ರಾಜೇಂದ್ರ, ಕೆ.ಪಿ.ನಟರಾಜ್, ಕೆ.ಬಿ.ಮಂಜುನಾಥ್ ಹಾಜರಿದ್ದರು.
ಜೈನಧರ್ಮ ತ್ಯಾಗ, ವೈರಾಗ್ಯ, ತಪಸ್ಸಿಗೆ ಮಹತ್ವ ನೀಡಿದೆ
‘ಅಹಿಂಸಾ ಪರಮೋ ಧರ್ಮಃ’ – ಅಹಿಂಸೆಯೇ ಮೂಲಮಂತ್ರವಾದ ಜೈನಧರ್ಮ ತ್ಯಾಗಪ್ರಧಾನವಾದ ಧರ್ಮ. ಪ್ರಥಮ ತೀರ್ಥಂಕರರಾದ ಭಗವಾನ್ ಋಷಭದೇವರಿಂದ ಪ್ರಾರಂಭವಾಗಿ ಭಗವಾನ್ ಮಹಾವೀರರವರೆಗೆ, ಭಗವಾನ್ ಮಹಾವೀರರಿಂದ ಹಿಡಿದು ಇಂದಿನ ದಿಗಂಬರ- ಶ್ವೇತಾಂಬರರವರೆಗೆ ಈ ಅತಿ ಪ್ರಾಚೀನಧರ್ಮವು ಸರ್ವದಾ ತ್ಯಾಗ, ವೈರಾಗ್ಯ, ತಪಸ್ಸಿಗೆ ಮಹತ್ವ ನೀಡಿದೆ. ಇಂದಿನ ಆಧುನಿಕ ಯುಗದಲ್ಲಿಯೂ ನಿಷ್ಠೆಯಿಂದ ತಪಸ್ಸಿನಲ್ಲಿ ನಿರತರಾದ ಜೈನಮುನಿಗಳನ್ನು, ಶ್ವೇತಾಂಬರರನ್ನು ಕಾಣಬಹುದು ಎಂದು ತಹಶೀಲ್ದಾರ್ ಅಜಿತ್ ಕುಮಾರ್ ರೈ ತಿಳಿಸಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತೀರ್ಥಂಕರರ ಜನ್ಮ-ಕರ್ಮಗಳು ದಿವ್ಯ, ಅಭೂತಪೂರ್ವ. ಅವರ ಸಾಧನೆಗಳು ಸಾಧಾರಣ ಮಾನವನ ಕಲ್ಪನೆಯನ್ನೂ ಮೀರಿದವು. ಮಹಾವೀರರು ತಮ್ಮ ಜೀವನದ ಪ್ರಥಮಭಾಗವನ್ನು ಅತ್ಯಂತ ಕಠೋರ ತಪಸ್ಸಿನಲ್ಲಿ ಕಳೆದು, ಕಡೆಯ ಮೂವತ್ತು ವರ್ಷಗಳನ್ನು ಜೀವಿಗಳ ಉದ್ಧಾರಕ್ಕಾಗಿ ಮುಡಿಪಿಟ್ಟರು. ಶ್ರದ್ಧಾಸಂಪನ್ನರೂ ಸಾಧನಾಪ್ರಿಯರೂ ಆದ ಅನೇಕ ಶಿಷ್ಯರ ಜೀವನಗಳನ್ನು ಕಮಲದ ಹೂವಿನಂತೆ ಅರಳಿಸಿದರು ಎಂದು ವಿವರಿಸಿದರು.
ಪುರಠಾಣೆ ಸಬ್‌ಇನ್ಸ್‌ಪೆಕ್ಟರ್ ನವೀನ್ ರೆಡ್ಡಿ ಮಾತನಾಡಿ, ಸಮಾಜವನ್ನು ಶಾಂತಿಯೆಡೆಗೆ ಕರೆದೊಯ್ದವರು ಜೈನ ಮುನಿಗಳು. ಇವರಲ್ಲಿ 23 ತೀರ್ಥಂಕರರು. ಇವರಲ್ಲಿ ಮಹಾವೀರರು ಒಬ್ಬ ಮಹಾನ್ ವ್ಯಕ್ತಿಯಾಗಿದ್ದು, ಸಮಾಜಕ್ಕೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಜೈನ ಧರ್ಮ ಭಾರತದಲ್ಲಿ ಉಗಮಿಸಿದ ಒಂದು ಧರ್ಮ. ಜೈನ ಎಂದರೆ ‘ಜಿನ’ಎಂಬ ಶಬ್ಧದಿಂದ ಉತ್ಪತ್ತಿಯಾದ ಶಬ್ದವಾಗಿದ್ದು ಜಿನ ಎಂದರೆ’ ಗೆದ್ದವನು’ ಎಂದು ಹೇಳಬಹುದು. ಕರ್ಮದ ಕಟ್ಟನ್ನು ಮುರಿದು ಸಂಸಾರವನ್ನು ದಾಟಿ ಮುಕ್ತಿಯನ್ನು ಪಡೆದವ ಜೀವರಿಗೆ ‘ಜಿನರು’ ಎಂದು ಹೆಸರು. ಜಿನರಿಂದ ಉಪದೇಶಿಸಲ್ಪಟ್ಟ ಧರ್ಮವೇ ಜೈನಧರ್ಮ. ಜೈನ ಧರ್ಮದಲ್ಲಿ ಸತ್ಯ, ನೀತಿ, ಉತ್ತಮ ನಡವಳಿಕೆಗಳಿಗೆ ಹೆಚ್ಚಿನ ಪ್ರಧಾನ್ಯತೆ ಇದೆ. ಅಹಿಂಸೆ ಮತ್ತು ದಯೆ ಇವುಗಳು ಮೂಲಸೂತ್ರಗಳು ಎಂದು ಹೇಳಿದರು.
ಮಾಜಿ ಸರ್ಕಾರಿ ನೌಕರರ ಸಂಘದ ಅದ್ಯಕ್ಷ ಗುರುರಾಜರಾವ್, ಸರ್ಕಾರಿ ಅಧಿಕಾರಿಗಳು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜದ್ದರು.
ಪೊಲೀಸರಿಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ
ತಾಲ್ಲೂಕಿನಾದ್ಯಂತ ಇರುವ ಗ್ರಾಮೀಣ ಪ್ರದೇಶ ಮತ್ತು ನಗರದಲ್ಲಿ ಶಾಂತಿಯುತ ವಾತಾವರಣ ನಿರ್ಮಾಣ ಮಾಡಲು ಪೊಲೀಸರಿಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಚಿಂತಾಮಣಿ ಉಪವಿಭಾಗದ ಡಿವೈಎಸ್ಪಿ ಕೃಷ್ಣಮೂರ್ತಿ ಹೇಳಿದರು.
ನಗರದ ಗ್ರಾಮಾಂತರ ಪೋಲೀಸ್ ಠಾಣೆ ಆವರಣದಲ್ಲಿ ಪೋಲೀಸ್ ಇಲಾಖೆಯಿಂದ ಶನಿವಾರ ಆಯೋಜಿಸಲಾಗಿದ್ದ ದಲಿತರ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮರಳು ಮಾಫಿಯಾ ಬಗ್ಗೆ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಯಾವುದೇ ಮರಳು ದಂಧೆ ನಡೆಯದಂತೆ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಜರುಗಿಸಲಾಗುವುದು. ದಲಿತರ ವ್ಯಾಜ್ಯಗಳನ್ನು ಬಗೆಹರಿಸಿ ಮತ್ತು ಅವರಿಗೆ ಸೂಕ್ತ ರಕ್ಷಣೆ ನೀಡುವ ಕೆಲಸವನ್ನು ಇಲಾಖೆಯ ಅಧಿಕಾರಿಗಳು ಪ್ರಾಮಾಣಿಕವಾಗಿ ಮಾಡಲಿದ್ದಾರೆ ಎಂದರು.
ಯಾರದೋ ಒತ್ತಡಗಳಿಗೆ ಮಣಿದು ಸುಳ್ಳು ದೂರು ನೀಡುವವರ ಮೇಲೆ ನಿಗಾವಹಿಸಲಾಗುವುದು ಹಾಗು ಅಕ್ರಮ ಮಧ್ಯಮಾರಾಟದ ಬಗ್ಗೆ ನಾವು ತೆಗೆದುಕೊಳ್ಳುವ ಕಠಿಣವಾದ ತೀರ್ಮಾನಗಳಿಗೆ ನಾಗರಿಕರೂ ಸೇರಿದಂತೆ ಜನಪ್ರತಿನಿಧಿಗಳು ಸಹಕರಿಸಬೇಕು ಎಂದರು.
ಸರ್ಕಲ್ ಇನ್ಸ್ಪೆಕ್ಟರ್ ವೆಂಕಟೇಶ್, ನಗರ ಠಾಣೆ ಪಿಎಸ್ಸೈ ನವೀನ್, ದಿಬ್ಬೂರಹಳ್ಳಿ ಠಾಣೆ ಪಿಎಸ್ಸೈ ವಿಜಯ್ರೆಡ್ಡಿ, ಗ್ರಾಮಾಂತರ ಠಾಣೆ ಪಿಎಸ್ಸೈ ಪ್ರದೀಪ್ ಪೂಜಾರಿ, ವಿವಿಧ ದಲಿತ ಮುಖಂಡರು ಸಭೆಯಲ್ಲಿ ಹಾಜರಿದ್ದರು.
ಪೊಲೀಸ್ ಪೇದೆಯ ಮೇಲೆ ಹಲ್ಲೆ
ಗ್ರಾಮದಲ್ಲಿ ಜೂಜಾಟ ನಡೆಯುತ್ತಿದೆ ಎಂಬ ಮಾಹಿತಿಯ ಮೇರೆಗೆ ತೆರಳಿದ ಪೊಲೀಸ್ ಪೇದೆಯೊಬ್ಬರ ಮೇಲೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಲ್ಲೆ ಮಾಡಿರುವ ಘಟನೆ ಶನಿವಾರ ನಡೆದಿದೆ.
ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯ ಪೇದೆ ಗೋವಿಂದ ಹಲ್ಲೆಗೊಳಗಾದವರು. ಹಲ್ಲೆ ನಡೆಸಿದ ಅಬ್ಲೂಡು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿಯನ್ನು ಪೊಲೀಸರು ಬಂದಿಸಿದ್ದಾರೆ.
ಘಟನೆಯ ವಿವರ :
ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾತಹಳ್ಳಿ ಗ್ರಾಮದ ಅಶ್ವತ್ಥಕಟ್ಟೆ ಬಳಿ ಗ್ರಾಮದ ಕೆಲವರು ಹುಣಸೇಬೀಜ (ಚೌಕಭಾರ) ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ತಾತಹಳ್ಳಿ ಗ್ರಾಮಕ್ಕೆ ಮಫ್ತಿಯಲ್ಲಿ ಹೊರಟ ಪೊಲೀಸರ ತಂಡ ಏಕಾ ಏಕಿ ದಾಳಿ ನಡೆಸಿದಾಗ ಆಟ ಆಡುತ್ತಿದ್ದವರು ಅಲ್ಲಿಂದ ಓಡಿ ಹೋಗಿದ್ದಾರೆ ಎನ್ನಲಾಗಿದೆ.
ಇನ್ನು ಕೆಲವರು ಸಮೀಪದಲ್ಲಿ ಇದ್ದ ಅಂಗಡಿಯ ಬಳಿ ಇದ್ದುದನ್ನು ಕಂಡ ಪೊಲೀಸರು ಗದರಿಸಿದಾಗ ಸ್ಥಳದಲ್ಲಿದ್ದ ಸ್ಥಳೀಯ ಯುವಕರು ಹಾಗು ಪೊಲೀಸರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆದಿದೆ. ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ನಾರಾಯಣಸ್ವಾಮಿ ಹಾಗು ಪೇದೆ ಗೋವಿಂದರ ನಡುವೆ ಮಾತುಗಳು ಬೆಳೆದು ನಾರಾಯಣಸ್ವಾಮಿ ಪೇದೆ ಗೋವಿಂದನ ಕಪಾಳಕ್ಕೆ ಹೊಡೆದು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಹಲ್ಲೆಗೊಳಗಾದ ಪೇದೆ ಗೋವಿಂದ ಠಾಣೆಗೆ ಬಂದು ನಡೆದ ಘಟನೆಯ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಿದಾಗ ಗ್ರಾಮಾಂತರ ಠಾಣೆ ಪಿಎಸ್ಸೈ ಪ್ರದೀಪ್ ಪೂಜಾರಿ ಹಾಗು ತಂಡ ಗ್ರಾಮಕ್ಕೆ ಭೇಟಿ ನೀಡಿ ಹಲ್ಲೆ ನಡೆಸಿದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿಯನ್ನು ಬಂದಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿ ನಾರಾಯಣಸ್ವಾಮಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
ಜನರ ಆರೋಗ್ಯ ದೃಷ್ಟಿಯಿಂದ ತಾಲ್ಲೂಕಿನಾದ್ಯಂತ ಶುದ್ಧ ನೀರಿನ ಘಟಕ ಸ್ಥಾಪನೆ
ಗ್ರಾಮೀಣ ಭಾಗದ ಜನರ ಆರೋಗ್ಯ ದೃಷ್ಟಿಯಿಂದ ತಾಲ್ಲೂಕಿನಾದ್ಯಂತ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಚೀಮಂಗಲ ಗ್ರಾಮ ಪಂಚಾಯಿತಿ ಕೇಂದ್ರಸ್ಥಾನದಲ್ಲಿ ಶನಿವಾರ ಸುಮಾರು ೭ ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶುದ್ದ ಕುಡಿಯುವ ನೀರಿನ ಘಟಕದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಕಲುಷಿತ ನೀರಿನ ಸೇವನೆಯಿಂದ ಗ್ರಾಮೀಣ ಭಾಗದ ಬಹುತೇಕ ಜನ ವಿವಿಧ ಖಾಯಿಲೆಗಳಿಗೆ ತುತ್ತಾಗುವುದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರ ಶುದ್ದ ಕುಡಿಯುವ ನೀರಿನ ಘಟಕಗಳ ನಿರ್ಮಾಣಕ್ಕೆ ಮುಂದಾಗಿದ್ದು ತಾಲ್ಲೂಕಿನ ಬಹುತೇಕ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನಗಳಲ್ಲಿ ಈಗಾಗಲೇ ಶುದ್ದ ಕುಡಿಯುವ ನೀರಿನ ಘಟಕಗಳ ಉದ್ಘಾಟನೆಯಾಗಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿಯೂ ಶುದ್ದ ನೀರಿನ ಘಟಕಗಳನ್ನು ಸ್ಥಾಪಿಸಲು ಪ್ರಯತ್ನಿಸುವುದಾಗಿ ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿ ಸ್ಥಾಪಿಸಲಾಗಿರುವ ಶುದ್ದ ನೀರಿನ ಘಟಕ ಸಾರ್ವಜನಿಕರ ಸ್ವತ್ತಾಗಿದ್ದು ಇದರ ನಿರ್ವಹಣೆ ಸೇರಿದಂತೆ ಘಟಕದ ಸುತ್ತಲೂ ನೈರ್ಮಲ್ಯ ಕಾಪಾಡಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಗ್ರಾಮಸ್ಥರು ಸಹಕರಿಸಬೇಕು. ಪ್ರತಿಯೊಬ್ಬರೂ ಶುದ್ದ ನೀರಿನ ಸೇವನೆ ಮಾಡುವುದರಿಂದ ತಮ್ಮ ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಚೀಮಂಗಲ ಗ್ರಾಮದ ಗ್ರಾಮಸ್ಥರಿಗಾಗಿ ಉಚಿತವಾಗಿ ಸುಮಾರು ೪೦೦ ಕುಡಿಯುವ ನೀರಿನ ಕ್ಯಾನ್ಗಳನ್ನು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಾರಾಯಣಸ್ವಾಮಿ ವಿತರಿಸಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾಮುನಿರಾಜು, ಸದಸ್ಯೆ ತನುಜಾರಘು, ತಾಲ್ಲೂಕು ಪಂಚಾಯಿತಿ ಸದಸ್ಯ ರಾಜಶೇಖರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಳಿನಾ ಮಂಜುನಾಥ್, ಉಪಾಧ್ಯಕ್ಷ ನಾರಾಯಣಸ್ವಾಮಿ, ಸದಸ್ಯರಾದ ಸುಮಾ ಮಂಜುನಾಥ್, ಸೌಮ್ಯ ಮಂಜುನಾಥ್, ಕುಡಿಯುವ ನೀರು ಸರಬರಾಜು ಇಲಾಖೆಯ ವಾದಿರಾಜ್, ಅಶೋಕ್, ಪಿಡಿಓ ಡಿ.ಹರೀಶ್ಗೌಡ, ಸಿ.ಎಂ.ಮುನಿರಾಜು, ಮೋಹನ್, ಬಸವರಾಜ್, ಅಯ್ಯಣ್ಣ, ಎಚ್ ಕ್ರಾಸ್ ರವಿ ಮತ್ತಿತರರು ಹಾಜರಿದ್ದರು.
ಶಾಲಾ ವಾರ್ಷಿಕೋತ್ಸವ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ
ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತೆಗೆಯಲು ಶಾಲಾ ವಾರ್ಷಿಕೋತ್ಸವ ಉತ್ತಮ ವೇದಿಕೆ ಎಂದು ಗ್ರಾಮದ ಹಿರಿಯ ಸೀತಾರಾಮಪ್ಪ ತಿಳಿಸಿದರು.
ತಾಲ್ಲೂಕಿನ ಗಾಂಡ್ಲಚಿಂತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸಂಜೆ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಕ್ಕಳಲ್ಲಿ ಅಪಾರ ಪ್ರತಿಭೆಯಿದೆ. ಅವರು ಪ್ರದರ್ಶಿಸುವ ಕಲೆಯನ್ನು ನೋಡಿದರೆ ಬೆರಗಾಗುತ್ತದೆ. ಅವರಿಗೆ ಹಿರಿಯರ ಪ್ರೋತ್ಸಾಹ ಅತ್ಯಗತ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯಲ್ಲಿ 13 ವರ್ಷಗಳ ಕಾಲ ಸೇವೆ ಸಲ್ಲಿಸಿದ ಶಿಕ್ಷಕ ವಿ.ಎಂ.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳು ಕೊಂಕಣದ ಜಾಲಿಗರು, ಕೊಡವ, ಮರಾಠಿ ಭಾಷಾ ನೃತ್ಯ, ಕೋಲಾಟ ಮುಂತಾದವುಗಳನ್ನು ಪ್ರದರ್ಶಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಗಂಗಪ್ಪ, ಎಸ್ಡಿಎಂಸಿ ಅಧ್ಯಕ್ಷ ದೇವರಾಜು, ಬೈರಾರೆಡ್ಡಿ, ಮುಖ್ಯ ಶಿಕ್ಷಕ ಎಸ್.ಎಂ.ಆದಿನಾರಾಯಣ, ಸೇವಾದಳ ವೆಂಕಟರೆಡ್ಡಿ, ಶಿಕ್ಷಕರಾದ ಶ್ರೀನಿವಾಸ್, ನಾಗೇಶ್, ರಾಮರೆಡ್ಡಿ, ಶ್ವೇತ ಹಾಜರಿದ್ದರು.

