ಇಂದು ನಾವು ಸುಖಮಯ ಜೀವನ ನಡೆಸುತ್ತಿರುವ ಹಿಂದೆ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಅವರ ಹಗಲಿರುಳ ಅಪಾರವಾದ ಶ್ರಮ ಅಡಗಿದೆ, ಈ ಪುಣ್ಯ ಭೂಮಿ ಭಾರತಾಂಬೆಯ ಭವ್ಯ ನೆಲವನ್ನು ಬ್ರಿಟಿಷರಿಂದ ರಕ್ಷಿಸಿಕೊಳ್ಳಲು ಅಂದು ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣವನ್ನು ಅರ್ಪಿಸಿದ್ದರು ಎಂದು ಮುಖ್ಯಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ಶನಿವಾರ ಸ್ವಾತಂತ್ರ್ಯ ಹೋರಾಟಗಾರರಾದ ಬಂಕಿಮ ಚಂದ್ರ ಚಟರ್ಜಿ ಮತ್ತು ಮಂಗಲ್ಪಾಂಡೆ ಅವರ ಸ್ಮರಣ ದಿನದ ಆಚರಣೆಯಲ್ಲಿ ಅವರು ಮಾತನಾಡಿದರು.
ಸಾವಿರಾರು ಮಂದಿ ತಮ್ಮ ಇಡೀ ಜೀವನವನ್ನು ದೇಶ ಸೇವೆಗಾಗಿ ಮುಡಿಪಾಗಿಟ್ಟು ಬ್ರಿಟಿಷರ ವಿರುದ್ದ ರಣರಂಗಕ್ಕೆ ಧುಮಿಕಿ ಹೋರಾಟ ನಡೆಸಿದ ಪರಿಣಾಮ ಭಾರತ ದೇಶಕ್ಕೆ ಬ್ರಿಟಿಷರಿಂದ ಮುಕ್ತಿ ಸಿಕ್ಕಿ ಸ್ವತಂತ್ರ ರಾಷ್ಟ್ರವಾಗಿ ರೂಪಾಂತರಗೊಂಡಿತು ಹಾಗೂ ನಾವೆಲ್ಲರು ಸ್ವತಂತ್ರ್ಯವಾಗಿ ಜೀವಿಸಲು ಸಾಧ್ಯವಾಯಿತು ಎಂದು ಹೇಳಿದರು.
ಶಿಕ್ಷಕ ಚಾಂದ್ಪಾಷ ಮಾತನಾಡಿ, ಬಂಕಿಮ ಚಂದ್ರ ಚಟರ್ಜಿ ಅವರು ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು ಪ್ರೇರೇಪಿಸಿದ ವಂದೇ ಮಾತರಮ್ ಗೀತೆಯ ಕವಿಯಾಗಿ ಅತ್ಯಂತ ಪ್ರಸಿದ್ಧರು. ಇದೇ ಗೀತೆಯು ನಂತರದಲ್ಲಿ ಭಾರತದ ರಾಷ್ಟ್ರೀಯ ಗೀತೆಯಾಗಿ ಘೋಷಿಸಲ್ಪಟ್ಟಿತು. ಮಂಗಲ್ ಪಾಂಡೆ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮ ಎಂದೇ ಪ್ರಖ್ಯಾತರು. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಪ್ರಥಮ ಕಿಚ್ಚನ್ನು ನೀಡಿದ ಮಂಗಲ್ ಪಾಂಡೆ ಚಿರಸ್ಮರಣೀಯರಾಗಿದ್ದಾರೆ ಎಂದು ವಿವರಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್ ಮಾತನಾಡಿ, ಇತಿಹಾಸವನ್ನು ಮರೆತರೆ ನಮ್ಮನ್ನೇ ಮರೆತಂತೆ, ನಮ್ಮತನವನ್ನೇ ಕಳೆದುಕೊಂಡಂತೆ. ಪ್ರತಿಯೊಬ್ಬ ಶಾಲಾ ವಿದ್ಯಾರ್ಥಿಗಳಿಗೂ ನಮ್ಮ ಇತಿಹಾಸದಲ್ಲಿ ಸಾಧನೆ ಮಾಡಿದವರ, ಸ್ವಾತಂತ್ರ್ಯ ಹೋರಾಟಗಾರರ ಪರಿಚಯವನ್ನು ಮಾಡಿಕೊಡಬೇಕು. ಇಂದಿನ ಮಕ್ಕಳಿಗೆ ಹಿರಿಯರ ಸಾಧನೆಗಳು ಪ್ರೇರಣೆಯಾಗಲಿ ಎಂದು ಹೇಳಿದರು.
ಶಿಕ್ಷಕರಾದ ಎ.ಎಂ.ಅಶೋಕ್, ಎಂ.ಭಾರತಿ, ಎಸ್ಡಿಎಂಸಿ ಉಪಾಧ್ಯಕ್ಷ ಮುನಿವೆಂಕಟಸ್ವಾಮಿ, ಸದಸ್ಯರಾದ ಆರ್.ಮಂಜುನಾಥ್, ಈಶ್ವರಾಚಾರಿ, ಗ್ರಾಮಸ್ಥರಾದ ಮುನಿರಾಜು, ನರಸಿಂಹಮೂರ್ತಿ, ವೆಂಕಟಮ್ಮ ಹಾಜರಿದ್ದರು.
ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದ ಬಗ್ಗೆ ತಿಳಿದಿರಬೇಕು
ಕೇಶವಪುರದಲ್ಲಿ ೧೪ ಕುರಿಗಳ ಸಾವು: ವಿಷಪ್ರಾಶನದಿಂದಾಗಿ ಸತ್ತ ಕುರಿಗಳು
ತಾಲ್ಲೂಕಿನ ಕೇಶವಪುರದಲ್ಲಿ ಬಯಲಿನಲ್ಲಿ ಮೇಯಲು ಹೋಗಿದ್ದ ಕುರಿಗಳು ಶುಕ್ರವಾರ ಸಾವನ್ನಪ್ಪಿವೆ. ವಿಷಕಾರಿ ಮೇವು ತಿಂದು ಕುರಿಗಳು ಸತ್ತಿರುವುದಾಗಿ ಮೇಲ್ನೊಟಕ್ಕೆ ಕಂಡುಬರುತ್ತಿರುವುದಾಗಿ ಪಶುವೈದ್ಯರು ದೃಢಪಡಿಸಿದ್ದಾರೆ.
ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿಯ ಕೇಶವಪುರದ ರೈತ ಚಿನ್ನಪ್ಪ ಎನ್ನುವವರಿಗೆ ಸೇರಿದ ೧೪ ಕುರಿಗಳು ವಿಷಕಾರಿ ಮೇವು ತಿಂದು ಸಾವನ್ನಪ್ಪಿವೆ.
ರೈತ ಚಿನ್ನಪ್ಪ ಎಂದಿನಂತೆ ತನ್ನ ೧೮ ಕುರಿಗಳನ್ನು ಗ್ರಾಮದ ಸಮೀಪವೇ ಇರುವ ಬಯಲಿಗೆ ಮೇಯಲು ಹೊಡೆದುಕೊಂಡು ಹೋಗಿದ್ದಾನೆ. ಬಯಲಿನಲ್ಲಿ ಅಡ್ಡಾಡಿಕೊಂಡು ಹುಲ್ಲು ಮೇವು ಸೊಪ್ಪೊ ಸದೆ ತಿಂದಿವೆ.
ಬೆಳಗ್ಗೆ ೮ ಗಂಟೆ ಸುಮಾರಿಗೆ ಮನೆಯಿಂದ ಕುರಿಗಳನ್ನು ಹೊಡೆದುಕೊಂಡು ಹೋಗಿದ್ದು ಮದ್ಯಾಹ್ನದವರೆಗೂ ಕೇಶವಪುರದ ಆಸುಪಾಸಿನ ಬಯಲಿನಲ್ಲಿ ಮೇವು ತಿನ್ನಲು ಬಿಟ್ಟಿದ್ದಾನೆ.
ಮದ್ಯಾಹ್ನ ನೀರು ಕುಡಿಸಲೆಂದು ಮನೆಗೆ ಕರೆದುಕೊಂಡು ಬರುವಾಗ ಕುರಿಗಳು ಇದ್ದಕ್ಕಿದ್ದಂತೆ ಇಡೀ ದೇಹ ಸೆಟೆದುಕೊಂಡು ನಿತ್ರಾಣಗೊಂಡು ಎಲ್ಲ ಕುರಿಗಳು ಬಿದ್ದಿವೆ.
ಕೂಡಲೆ ರೈತ ಚಿನ್ನಪ್ಪ ಗಾಬರಿಗೊಂಡು ಪಶು ವೈದ್ಯರಿಗೆ ಮೊಬೈಲ್ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಆದರೆ ಸ್ಥಳಕ್ಕೆ ವೈಧ್ಯರು ತೆರಳುವಷ್ಟರಲ್ಲಿ ೧೪ ಕುರಿಗಳು ಸಾವನ್ನಪ್ಪಿವೆ. ಉಳಿದ ನಾಲ್ಕು ಕುರಿಗಳು ಅಪಾಯದಿಂದ ಪಾರಾಗಿವೆ.
ಸ್ಥಳಕ್ಕೆ ಕುರಿ ಉಣ್ಣೆ ಮತ್ತು ಅಭಿವೃದ್ದಿ ನಿಗಮದ ಅನುಷ್ಠಾನಾಧಿಕಾರಿ ಮಧುರನಾಥರೆಡ್ಡಿ, ಪಶು ವೈದ್ಯರಾದ ಡಾ.ಮುನಿನಾರಾಯಣರೆಡ್ಡಿ, ಪ್ರಗತಿ ಪರ ಕುರಿ ಸಾಕಾಣಿಕೆದಾರರ ಸಂಘದ ಅಧ್ಯಕ್ಷ ಬಳುವನಹಳ್ಳಿ ಲೊಕೇಶ್, ರವಿಚಂದ್ರ ಮುಂತಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕುರಿಗಳ ಅಂಶಗಳನ್ನು ಕತ್ತರಿಸಿಕೊಂಡು ಪ್ರಯೋಗಾಲಯಕ್ಕೆ ಕಳುಹಿಸಿ ಕುರಿಗಳ ಸಾವಿಗೆ ನಿಖರ ಕಾರಣ ತಿಳಿದುಕೊಂಡು ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಅವರು ಭರವಸೆ ನೀಡಿದರು.
ತಾಲ್ಲೂಕಿನ ಬೆಳ್ಳೂಟಿ ಗ್ರಾಮದ ಬಿಂದುಜಾಗೆ 12 ಚಿನ್ನದ ಪದಕ
ತಾಲ್ಲೂಕಿನ ಬೆಳ್ಳೂಟಿ ಗ್ರಾಮದ ಬಿಂದುಜಾ ಬೀದರ್‌ನ ಪಶು ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ವಿಶ್ವವಿದ್ಯಾಲಯದ 12 ಚಿನ್ನದ ಪದಕಗಳನ್ನು ಗಳಿಸಿದ್ದಾರೆ.
ತಾಲ್ಲೂಕಿನ ಬೆಳ್ಳೂಟಿ ಗ್ರಾಮದ ರೇಷ್ಮೆ ಕೃಷಿಕ ವೆಂಕಟೇಶಪ್ಪ ಅವರ ಪುತ್ರಿ ಬಿಂದುಜಾ ವ್ಯಾಸಂಗ ಮಾಡಿದ್ದು ಬೆಳ್ಳೂಟಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ. ಶಿಡ್ಲಘಟ್ಟದ ವಾಸವಿ ವಿದ್ಯಾಸಂಸ್ಥೆಯಲ್ಲಿ 5ರಿಂದ 10ನೇ ತರಗತಿವರೆಗೆ ಅಧ್ಯಯನ, ನಂತರ ಬಿ.ಜಿ.ಎಸ್. ಪಿ.ಯು ಕಾಲೇಜಿನಲ್ಲಿ ಪಿಯುಸಿ ಓದಿ ಶೇ.93 ಅಂಕ ಪಡೆದಿದ್ದರು. ಪಶು ವೈದ್ಯಕೀಯ ಕೋರ್ಸ್ ಆಯ್ಕೆ ಮಾಡಿಕೊಂಡ ಬಿಂದುಜಾ ಅದರಲ್ಲಿ 12 ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ಪ್ರಸ್ತುತ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಇಜ್ಜತ್‌ನಗರದ ಇಂಡಿಯನ್ ವೆಟರ್‌ನರಿ ರಿಸರ್ಚ್ ಇನ್‌ಸ್ಟಿಟ್ಯೂಟ್ (ಐವಿಆರ್ಎಸ್‌್)ನಲ್ಲಿ ವೆಟರ್‌ನರಿ ಸರ್ಜರಿಯಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದಾರೆ.
ಬ್ಯಾಸೆಟ್‌ಹೌಂಡ್ ನಾಯಿ ಮರಿಯನ್ನು ರಕ್ಷಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ
ತನ್ನ ಪಾಲಕರಿಂದ ತಪ್ಪಿಹೋಗಿ ದಾರಿಕಾಣದೆ ಕಂಗಾಲಾಗಿದ್ದ ಅಪರೂಪದ ಬ್ಯಾಸೆಟ್‌ಹೌಂಡ್ ನಾಯಿ ಮರಿಯನ್ನು ಅಗ್ನಿಶಾಮಕ ಅಧಿಕಾರಿ ಸಂತೋಷ್ ಮತ್ತು ಸಿಬ್ಬಂದಿ ರಕ್ಷಿಸಿರುವ ಘಟನೆ ಶುಕ್ರವಾರ ನಡೆದಿದೆ.
ತಮ್ಮ ಕಚೇರಿಯ ಬಳಿ ಶುಕ್ರವಾರ ಮುಂಜಾನೆ ಬ್ಯಾಸೆಟ್‌ಹೌಂಡ್ ನಾಯಿ ಮರಿಯನ್ನು ಕಂಡ ಅಗ್ನಿಶಾಮಕ ಸಂತೋಷ್ ಅದಕ್ಕೆ ಆಶ್ರಯ ನೀಡಿ ಹಾಲು ನೀಡಿದ್ದಾರೆ. ನಂತರ ಶಿಡ್ಲಘಟ್ಟ ಡಾಟ್ ಕಾಮ್ ವ್ಯಾಟ್ಸ್ ಅಪ್ ಗ್ರೂಪಿಗೆ ಮಾಹಿತಿ ಮುಟ್ಟಿಸಿದ್ದಾರೆ. ಅದರ ಮೂಲಕ ನಾಯಿಯ ಮಾಲಿಕ ಇಬ್ರಾಹಿಂ ಬಂದು ತಮ್ಮ ನಾಯಿ ಮರಿಯನ್ನು ಪಡೆದಿದ್ದಾರೆ.
‘ಬೆಳಿಗ್ಗೆ ಈ ನಾಯಿ ಮರಿಯನ್ನು ನೋಡಿದೊಡನೆ ಅಪರೂಪದ್ದು ಅನ್ನಿಸಿತು. ತಕ್ಷಣ ಅದನ್ನು ಕರೆತಂದು ಹಾಲು ನೀಡಿದೆ. ನಮ್ಮ ಸಹೋದ್ಯೋಗಿಗಳು ಕೂಡ ಸಹಕರಿಸಿದರು. ಶಿಡ್ಲಘಟ್ಟ ಡಾಟ್ ಕಾಮ್ ಮೂಲಕ ಅದರ ಮಾಲೀಕರನ್ನು ಪತ್ತೆ ಹಚ್ಚಲು ಸಾಧ್ಯವಾಯಿತು’ ಎಂದು ಅಗ್ನಿಶಾಮಕ ಸಂತೋಷ್ ತಿಳಿಸಿದರು.
‘ಬ್ಯಾಸೆಟ್‌ಹೌಂಡ್ ನಾಯಿ ಮರಿಗೆ ಒಂಭತ್ತು ತಿಂಗಳು ಒಂದು ತಿಂಗಳ ಮರಿಯಿಂದ ಅದನ್ನು ಸಾಕುತ್ತಿದ್ದೇನೆ. ಸಂಜೆ ವೇಳೆ ಅದನ್ನು ತಿರುಗಾಡಲು ಬಿಡುವುದು ರೂಢಿ. ನಿನ್ನೆ ಸಂಜೆ ತಪ್ಪಿಸಿಕೊಂಡಿತು. ಎಲ್ಲೆಡೆ ಸುತ್ತಾಡಿದರೂ ಸಿಗಲಿಲ್ಲ. ಬೆಳಿಗ್ಗೆ ನನ್ನ ತಂಗಿ ವ್ಯಾಟ್ಸ್ ಅಪ್ನಲ್ಲಿ ತೋರಿಸಿದಾಗ ತುಂಬ ಆನಂದವಾಯಿತು. ಅಗ್ನಿಶಾಮಕ ಅಧಿಕಾರಿಗಳಿಗೆ ಮತ್ತು ಶಿಡ್ಲಘಟ್ಟ ಡಾಟ್ ಕಾಮ್‌ಗೆ ಕೃತಜ್ಞತೆಗಳು’ ಎನ್ನುತ್ತಾರೆ ಪೊಲೀಸ್‌ಕ್ವಾಟರ್ಸ್ ಬಳಿಯ ವಾಸಿ ಇಬ್ರಾಹಿಂ.
ಶ್ರೀ ಪಟಾಲಮ್ಮದೇವಿ ಮತ್ತು ಶ್ರೀ ವೀರಸೊಣ್ಣಮ್ಮದೇವಿಯವರ ರಥೋತ್ಸವ
ತಾಲ್ಲೂಕಿನ ವರದನಾಯಕನಹಳ್ಳಿ ಗ್ರಾಮದಲ್ಲಿ ಶ್ರೀ ಪಟಾಲಮ್ಮದೇವಿ ಮತ್ತು ಶ್ರೀ ವೀರಸೊಣ್ಣಮ್ಮದೇವಿಯವರ 21ನೇ ವರ್ಷದ ರಥೋತ್ಸವ ಮತ್ತು ಉಟ್ಲು ಮಹೋತ್ಸವ ಶುಕ್ರವಾರ ನಡೆಯಿತು.
ಮಂಗಳ ವಾದ್ಯಗಳು, ವಿವಿಧ ವೇಷಧಾರಿಗಳು, ವೀರಗಾಸೆ ನೃತ್ಯದೊಂದಿಗೆ ರಥವನ್ನು ಗ್ರಾಮಸ್ಥರು ಹೆಂಗಸರು, ಮಕ್ಕಳು, ಹಿರಿಯರು, ಕಿರಿಯರು ಎಂಬ ಬೇಧವಿಲ್ಲದೆ ಎಳೆದರು. ಗ್ರಾಮದ ಮುಖ್ಯ ರಸ್ತೆಯಲ್ಲಿ ಸಾಗಿ ರಥವು ದೇವಾಲಯದ ಬಳಿಗೆ ಸಾಗಿತು. ದೇವಾಲಯದ ಬಳಿ ಬತ್ತಾಸು, ಬುರುಗು, ಖಾರ, ಬಳೆ, ಪಾತ್ರೆ, ಆಟದ ಸಾಮಾನುಗಳು, ತಿಂಡಿ ತಿನಿಸುಗಳು, ಎಳೆನೀರು, ಹಣ್ಣಿನ ಅಂಗಡಿಗಳು, ಪಾನೀಯಗಳು ಇತ್ಯಾದಿ ಮಾರುವ ವಿವಿಧ ಅಂಗಡಿಗಳು ಜನರನ್ನು ಆಕರ್ಷಿಸುತ್ತಿದ್ದವು. ದೇವಾಲಯದಲ್ಲಿ ಪ್ರಸಾದ ವಿನಿಯೋಗ ಹಾಗೂ ದೇವಾಲಯದ ಆವರಣದಲ್ಲಿ ಉಚಿತ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿದ್ದರು. ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಜನರು ಆಗಮಿಸಿದ್ದರು. ಸುತ್ತಲಿನ ಗ್ರಾಮಸ್ಥರು ಪಾನಕ ಬಂಡಿಗಳನ್ನು ತಂದು ಬಿಸಿಲಲ್ಲಿ ಸುಸ್ತಾದವರಿಗೆಲ್ಲ ಪಾನಕ ಮತ್ತು ಹೆಸರುಬೇಳೆ ಉಚಿತವಾಗಿ ವಿತರಿಸುತ್ತಿದ್ದರು.
ಸಂಜೆ ಅಮ್ಮನವರ ಕ್ಷೀರ ಉಟ್ಲು ಮತ್ತು ಕಾಯಿ ಉಟ್ಲು ಮಹೋತ್ಸವ ನಡೆಯಿತು. ವಿವಿಧ ನೃತ್ಯ ಮತ್ತು ಇತರೆ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ನೋಡಲು ಸುತ್ತ ಮುತ್ತಲಿನ ಗ್ರಾಮಗಳಿಂದ ಜನರು ಆಗಮಿಸಿದ್ದರು.
ಶ್ರೀ ಪಟಾಲಮ್ಮದೇವಿ ಮತ್ತು ಶ್ರೀ ವೀರಸೊಣ್ಣಮ್ಮದೇವಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಸದಸ್ಯರು, ವಿವಿಧ ಗ್ರಾಮಗಳ ಮುಖಂಡರು ಹಾಜರಿದ್ದರು.
ಶ್ರೀ ಕೋದಂಡರಾಮಸ್ವಾಮಿ 8ನೇ ವಾರ್ಷಿಕೋತ್ಸವ
ತಾಲ್ಲೂಕಿನ ಚೀಮಂಗಲ ಗ್ರಾಮದಲ್ಲಿ ಈಚೆಗೆ ಶ್ರೀಕೋದಂಡರಾಮಸ್ವಾಮಿ, ಭಕ್ತಾಂಜನೇಯಸ್ವಾಮಿ, ಆದಿತ್ಯಾದಿ ನವಗ್ರಹಗಳ ದೇವಾಲಯದಲ್ಲಿ ಶ್ರೀ ಸೀತಾ ಲಕ್ಷ್ಮಣ ಹನುಮತ್ ಸಮೇತ ಶ್ರೀ ಕೋದಂಡರಾಮಸ್ವಾಮಿ 8ನೇ ವಾರ್ಷಿಕೋತ್ಸವ ಮತ್ತು ಕಲ್ಯಾಣ ಮಹೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಬಸವಕಲ್ಯಾಣ ಮಠದ ಶ್ರೀ ಮಹದೇವಸ್ವಾಮಿಗಳು ಹಾಗೂ ದುರ್ಗಾ ಪರಮೇಶ್ವರಿ ದೇವಸ್ಥಾನದ ನಾಗರಾಜಪ್ಪ ಸ್ವಾಮಿಗಳು ಆಶೀರ್ವಚನವನ್ನು ನೀಡಿ ಪೂಜಾ ಕೈಂಕರ್ಯಗಳನ್ನು ನಡೆಸಿಕೊಟ್ಟರು.
ಶ್ರೀರಾಮನವಮಿಯ ಸಂದರ್ಭದಲ್ಲಿ ಮೂರು ದಿನಗಳ ಕಾಲ ವಿವಿಧ ಪೂಜೆ, ವಿಶೇಷ ಅಲಂಕಾರ, ಹೋಮ, ಪ್ರಸಾದ ವಿತರಣೆ ನಡೆಯಿತು.
ಗ್ರಾಮಸ್ಥರಲ್ಲದೆ ತಾಲ್ಲೂಕಿನ ವಿವಿದೆಡೆಗಳಿಂದ ಆಗಮಿಸಿದ್ದ ಭಕ್ತರು ದೇವರ ಪೂಜೆಯಲ್ಲಿ ಪಾಲ್ಗೊಂಡರು.
ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ 90ನೇ ವರ್ಷದ ಉಟ್ಲು ಪರಿಷೆ
ಶ್ರೀ ರಾಮನವಮಿಯ ಪ್ರಯುಕ್ತ ನಗರದ ಚಿಂತಾಮಣಿ ರಸ್ತೆಯಲ್ಲಿರುವ ಶ್ರೀವೀರಾಂಜನೇಯ ದೇವಾಲಯದಲ್ಲಿ 90ನೇ ವರ್ಷದ ಉಟ್ಲು ಪರಿಷೆ ನಡೆಯಿತು. ಕ್ಷೀರ ಉಟ್ಲು ಮತ್ತು ಮನರಂಜನಾ ಉಟ್ಲುಗಳನ್ನು ವೀರಾಂಜನೇಯಸ್ವಾಮಿ ಬಲಿಜ ಸೇವಾ ಟ್ರಸ್ಟ್ ಮತ್ತು ಮಹಿಳಾ ಮಂಡಳಿಯವರು ಆಯೋಜಿಸಿದ್ದರು. ಮಕ್ಕಳು, ಮಹಿಳೆಯರು ಸೇರಿದಂತೆ ನೂರಾರು ಜನರು ಮನರಂಜನಾ ಉಟ್ಲು ವೀಕ್ಷಿಸಿ ಆನಂದಿಸಿದರು.
ಮೊದಲು ಕ್ಷೀರ ಉಟ್ಲು ಕಾರ್ಯಕ್ರಮದಲ್ಲಿ ಹಾಲನ್ನು ಮಡಿಕೆಯಲ್ಲಿ ಕಟ್ಟಿ ಪೂಜಿಸಿ ಒಡೆದರು. ನಂತರ ನಡೆಯುವ ಮನರಂಜನಾ ಉಟ್ಲು ಜನಾಕರ್ಷಣೆಯ ಕೇಂದ್ರ ಬಿಂದು. ಎತ್ತರದ ಕಂಬದ ಮೇಲೆ ಕಬ್ಬಿಣದಲ್ಲಿ ಮಾಡಿರುವ ತಿರುಗುಮಣೆ ಇರುತ್ತದೆ. ಅದಕ್ಕೆ ನಾಲ್ಕು ಹಗ್ಗಗಳನ್ನು ಕಟ್ಟಿರುತ್ತಾರೆ. ಹಗ್ಗದ ತುದಿಯಲ್ಲಿ ತೆಂಗಿನಕಾಯಿ ಕಟ್ಟಿರುತ್ತಾರೆ. ತಿರುಗುಮಣೆಯಲ್ಲಿ ಇಬ್ಬರು ಕುಳಿತು ತಿರುಗಿಸುತ್ತಿದ್ದಂತೆಯೇ ತೆಂಗಿನಕಾಯಿ ಕಟ್ಟಿರುವ ಹಗ್ಗವೂ ಸುತ್ತತೊಡಗುತ್ತವೆ. ಉದ್ದುದ್ದದ ಕೋಲು ಹಿಡಿದು ಈ ತೆಂಗಿನಕಾಯಿಯನ್ನು ಹೊಡೆಯಲು ಇಬ್ಬರು ನಿಂತಿರುತ್ತಾರೆ. ಅವರು ತೆಂಗಿನಕಾಯಿಗೆ ಹೊಡೆಯದಂತೆ ಅವರೆಡೆಗೆ ಸುತ್ತಲಿಂದ ನೀರನ್ನು ಎರಚುತ್ತಿರುತ್ತಾರೆ. ಈ ಆಟ ನೋಡುವ ಜನ ಹೊಡೆಯಲು ಕೂಗುತ್ತಾ ಹುರಿದುಂಬಿಸುತ್ತಾರೆ. ತೆಂಗಿನ ಕಾಯಿ ಹೊಡೆದ ವೀರನಿಗೆ ಹಾರಹಾಕಿ ದೇವಾಲಯದಲ್ಲಿ ಗೌರವಿಸಿದರು.
ಶ್ರೀರಾಮನವಮಿ ವಿಶೇಷ
ತಾಲ್ಲೂಕಿನಾದ್ಯಂತ ಶ್ರೀರಾಮನವಮಿಯನ್ನು ವಿವಿಧ ರಾಮ ದೇವಾಲಯಗಳಲ್ಲಿ ವಿಶೇಷ ಪೂಜೆಸಲ್ಲಿಸಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಜಂಗಮಕೋಟೆ, ನಾಗಮಂಗಲ, ಚೌಡಸಂದ್ರ, ಅಪ್ಪೇಗೌಡನಹಳ್ಳಿ ಗೇಟ್, ಸಾದಲಿ, ದಿಬ್ಬೂರಹಳ್ಳಿ,ಮೇಲೂರು, ಹುಣಸೇನಹಳ್ಳಿ ಸ್ಟೇಷನ್, ಎಚ್.ಕ್ರಾಸ್, ಮಳಮಾಚನಹಳ್ಳಿ ಮುಂತಾದೆಡೆ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ನಡೆಸಿ ಭಕ್ತರಿಗೆ ಸೌತೆಕಾಯಿ ಹೆಸರುಬೇಳೆ ಮತ್ತು ಪಾನಕವನ್ನು ವಿತರಿಸಿದರು.
ನಗರದ ಕೋಟೆ ವೃತ್ತದ ಶ್ರೀರಾಮ ದೇವಾಲಯ, ಉಲ್ಲೂರುಪೇಟೆಯ ಭಜನೆ ಮಂದಿರ ಹಾಗೂಚಿಂತಾಮಣಿ ರಸ್ತೆಯಲ್ಲಿರುವ ವೀರಾಂಜನೇಯಸ್ವಾಮಿ ದೇವಾಲಯಗಳಲ್ಲಿ ರಾಮನವಮಿಯ ಪ್ರಯುಕ್ತ ಪೂಜಾಕಾರ್ಯಕ್ರಮಗಳು ನಡೆದವು.
ಚಿಂತಾಮಣಿ ರಸ್ತೆಯಲ್ಲಿರುವ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಸೀತಾ ರಾಮ ಲಕ್ಷ್ಮಣಆಂಜನೇಯಸ್ವಾಮಿ ಮತ್ತು ವೀರಾಂಜನೇಯಸ್ವಾಮಿ ಉತ್ಸವ ವಿಗ್ರಹಗಳಿಗೆ ಅಭಿಷೇಕವನ್ನು ನಡೆಸಲಾಯಿತು. ವೀರಾಂಜನೇಯಸ್ವಾಮಿಗೆ ಅಭಿಷೇಕ, ಪೂಜೆ, ವಿಶೇಷ ಅಲಂಕಾರ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು. ಸೀತಾರಾಮ ಕಲ್ಯಾಣೋತ್ಸವಕ್ಕೆ ನೂರಾರು ಜನರು ಸಾಕ್ಷಿಯಾದರು. ಉಟ್ಲು ಕಂಬದ ಪೂಜೆ, ಕ್ಷೀರ ಉಟ್ಲು ಮಹೋತ್ಸವ ಹಾಗೂ ಮನರಂಜನಾ ಉಟ್ಲೋತ್ಸವವನ್ನು ನಡೆಸಿದರು.
ಹಸಿರು ಕ್ರಾಂತಿಯ ನೇತಾರ ಡಾ. ಬಾಬುಜಗಜೀವನರಾಂ
ಹಸಿರು ಕ್ರಾಂತಿಯ ನೇತಾರ ಮಾಜಿ ಉಪಪ್ರಧಾನಿ ಡಾ.ಬಾಬುಜಗಜೀವನರಾಂ ಅವರ ದೂರದೃಷ್ಟಿಯಿಂದ ದೇಶದ ಎಲ್ಲಾ ವರ್ಗದ ಜನರು ಇಂದು ನೆಮ್ಮದಿಯಿಂದ ಜೀವನ ನಡೆಸುವಂತಾಗಿದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ಡಾ.ಬಾಬು ಜಗಜೀವನರಾಂ ಜಯಂತಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಾಬು ಜಗಜೀವನ್‌ರಾಂ ಅವರು ದೇಶದ ಉಪಪ್ರಧಾನಿಯಾಗಿ ಹಾಗು ವಿವಿಧ ಪ್ರಮುಖ ಹುದ್ದೆ ಅಲಂಕರಿಸಿ ಶೋಷಿತರ ಪರ ಹಾಗು ಸಮಾಜದಲ್ಲಿ ಜಾತಿ ಪದ್ದತಿಯನ್ನು ಹೋಗಲಾಡಿಸಲು ಹೋರಾಟ ನಡೆಸಿ ಸಮಾನತೆ ತರುವಲ್ಲಿ ಯಶಸ್ವಿಯಾದ ಮಹಾನ್ ಚೇತನವಾಗಿದ್ದರು ಎಂದರು.
ತಾಲ್ಲೂಕು ಪಂಚಾಯಿತಿ ಇಓ ವೆಂಕಟೇಶ್ ಮಾತನಾಡಿ, ಭಾರತ- ಚೀನಾ ಯುದ್ಧದ ಸಂದರ್ಭದಲ್ಲಿ ಕೇಂದ್ರದಲ್ಲಿ ರಕ್ಷಣಾ ಸಚಿವರಾಗಿ ಅವರು ತಾಳಿದ ದಿಟ್ಟ ನಿಲುವು ಭಾರತಕ್ಕೆ ಸಹಕಾರಿಯಾಯಿತು. ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡ ಅವರು ದೇಶದ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಅನೇಕ ಕ್ರಾಂತಿಕಾರಿ ಕಾರ್ಯಕ್ರಮಗಳನ್ನು ದೇಶಕ್ಕೆ ಕೊಟ್ಟರು. ಅವರು ಕೊಟ್ಟ ಯೋಜನೆಗಳೇ ಇಂದಿಗೂ ಸರ್ಕಾರಗಳಿಗೆ ಮಾದರಿ ಆಗಿವೆ. ಭಾರತದ ಸಂವಿಧಾನ ರಚನೆಯಲ್ಲಿ ಹಾಗು ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಈಗಿರುವ ಮೀಸಲಾತಿ ವಿಚಾರದಲ್ಲಿ ಬಾಬು ಜಗಜೀವನ್‌ರಾಂ ರ ಪಾತ್ರ ಮಹತ್ವದ್ದಾಗಿದೆ ಎಂದರು.
ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರ ಏಳಿಗೆಯಾಗಬೇಕಾದರೆ ಪ್ರತಿಯೊಬ್ಬರೂ ಮೊದಲು ಇತಿಹಾಸ ಓದಬೇಕು ಮತ್ತು ಬಾಬು ಜಗಜೀವನ್‌ರಾಂ ರನ್ನು ಕೇವಲ ದಲಿತರಿಗಷ್ಟೇ ಸೀಮಿತಗೊಳಿಸದೇ ಅವರನ್ನು ದೇಶದ ಪ್ರತಿಯೊಬ್ಬರೂ ಗೌರವಿಸಬೇಕು ಎಂದರು.
ತಹಸೀಲ್ದಾರ್ ಎಸ್.ಅಜಿತ್‌ಕುಮಾರ್ ರೈ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಸಮಾಜ ಕಲ್ಯಾಣ ಇಲಾಖಾಧಿಕಾರಿ ಅನುಸೂಯಮ್ಮ, ಸರ್ಕಾರಿ ನೌಕರರ ಸಂಘದ ಅದ್ಯಕ್ಷ ಕೇಶವರೆಡ್ಡಿ, ಮಾಜಿ ಅಧ್ಯಕ್ಷ ಗುರುರಾಜ್‌ರಾವ್, ವಿವಿಧ ದಲಿತ ಸಂಘಟನೆಗಳ ಮುಖಂಡರು ಹಾಜರಿದ್ದರು.
ಶ್ರಮ ಜೀವಿಗಳ ಧಾರ್ಮಿಕ ಪರಂಪರೆಯನ್ನು ಉಳಿಸಿಕೊಳ್ಳಬೇಕಿದೆ
ಆಧುನಿಕತೆಯ ಧಾಪುಗಾಲಿನಲ್ಲಿ ಗ್ರಾಮೀಣ ಭಾಗದ ಜನಪದ ಕಲೆ ಮತ್ತು ಕಲಾವಿದರು ಮೂಲೆಗುಂಪಾಗುತ್ತಿದ್ದಾರೆ. ಗ್ರಾಮೀಣ ಭಾಗದ ಶ್ರಮ ಜೀವಿಗಳ ಧಾರ್ಮಿಕ ಪರಂಪರೆಯಾದ ಭಜನೆ, ಸಂಗೀತ, ಹಾಡುಗಾರಿಕೆ, ವಾದ್ಯ ಮುಂತಾದವುಗಳನ್ನು ಪ್ರೋತ್ಸಾಹಿಸುವ ಮೂಲಕ ಈ ಜಾನಪದ ಕೊಂಡಿಯನ್ನು ಕಳಚದಂತೆ ಕಾಪಾಡಿಕೊಳ್ಳಬೇಕಿದೆ ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ತೊಟ್ಲಗಾನಹಳ್ಳಿ ಗೇಟ್ ಬಳಿ ಮಂಗಳವಾರ ಸಂಜೆ ಶ್ರೀ ಆಂಜನೇಯಸ್ವಾಮಿ ಹಾಗೂ ಶ್ರೀ ಕೈವಾರ ತಾತಯ್ಯನವರ ದೇವಾಲಯದ 2ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ತಾಲ್ಲೂಕು ಕಸಾಪ ಘಟಕದಿಂದ ಕಲಾವಿದರಿಗೆ ಪುಸ್ತಕ ಮತ್ತು ಪ್ರಮಾಣಪತ್ರವನ್ನು ವಿತರಿಸಿ ಅವರು ಮಾತನಾಡಿದರು.
ನಮ್ಮ ಕನ್ನಡದ ಮೌಖಿಕ ಪರಂಪರೆ ಬಲು ದೊಡ್ಡದು. ಗ್ರಾಮದಲ್ಲಿ ಹಿರಿಯರು ಅನೇಕ ದೇವರ ಪದಗಳನ್ನು ತಮ್ಮ ನೆನಪಿನಿಂದಲೇ ಹಾಡುವಷ್ಟು ಶಕ್ತರು. ಅವರಿಗೇ ಈ ಪರಂಪರೆ ಕೊನೆಯಾಗಬಾರದು. ತಾಲ್ಲೂಕಿನ ಕಲಾವಿದರನ್ನು ಗುರುತಿಸಿ ಗೌರವಿಸುವುದು ಕೂಡ ಒಂದು ಕನ್ನಡದ ಮುಖ್ಯ ಕೆಲಸವಾಗಿದೆ. ಈ ನಿಟ್ಟಿನಲ್ಲಿ ತಾಲ್ಲೂಕು ಕಸಾಪ ಗ್ರಾಮೀಣ ಭಾಗದಲ್ಲಿರುವ ಕಲಾವಿದರನ್ನು ಗೌರವಿಸುವ ಮೂಲಕ ಕನ್ನಡದ ಜಾನಪದ ಸಂಸ್ಕೃತಿಯನ್ನು ಗೌರವಿಸುವಂತಾಗಿದೆ ಎಂದು ಹೇಳಿದರು.
ತಾಲ್ಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್ ಮಾತನಾಡಿ, ನಮ್ಮಲ್ಲಿ ಹಿಂದೆ ಒಂದೊಂದು ಗ್ರಾಮದಲ್ಲೂ ಹಲವಾರ ಕಲಾವಿದರು ಇರುತ್ತಿದ್ದರು. ಅವರು ಕೇವಲ ಭಕ್ತಿ, ಶ್ರದ್ಧೆ ಮತ್ತು ಆಸಕ್ತಿಯಿಂದ ಕಲೆಯನ್ನು ಕಲಿಯುತ್ತಿದ್ದರು. ಹಣವಾಗಲಿ, ಹೆಸರಾಗಲಿ ಅವರು ಬಯಸುವವರಲ್ಲ. ಈ ರೀತಿಯ ಕಲಾವಿದರನ್ನು ಕಸಾಪ ಗೌರವಿಸುವ ಮೂಲಕ ಮುಂದಿನ ಪೀಳಿಗೆಗೆ ಕಲೆಯ ಬಗ್ಗೆ ಆಸಕ್ತಿ ಹುಟ್ಟಿಸಲು ಪ್ರಯತ್ನಿಸುತ್ತಿದೆ ಎಂದು ನುಡಿದರು.
ತೊಟ್ಲಗಾನಹಳ್ಳಿ ಎಂ.ದ್ಯಾವಪ್ಪ(ಹಾರ್ಮೋನಿಯಂ), ಭಕ್ತರಹಳ್ಳಿ ಬಿ.ಎಂ.ಮುನಿವೆಂಕಟಶಾಮಿ(ತಬಲ), ಮಳಮಾಚನಹಳ್ಳಿ ಪಾರ್ವತಮ್ಮ(ಹಾಡುಗಾರಿಕೆ), ದೇವರಮಳ್ಳೂರು ಆಂಜಿನಪ್ಪ(ಹಾಡುಗಾರಿಕೆ), ಮೇಲೂರು ಎಂ.ಎಂ.ಸ್ವಾಮಿ(ಹಾಡುಗಾರಿಕೆ), ಸುಗಟೂರು ದೇವರಾಜು(ಹಾಡುಗಾರಿಕೆ), ನಾಗಮಂಗಲ ಮುನಿರಾಜಪ್ಪ(ಹಾಡುಗಾರಿಕೆ), ಭಕ್ತರಹಳ್ಳಿ ಎಂ.ಆಂಜಿನಪ್ಪ(ಹಾಡುಗಾರಿಕೆ), ನಾಗಮಂಗಲ ಭಾರತಮ್ಮ(ಹಾಡುಗಾರಿಕೆ), ತೊಟ್ಲಗಾನಹಳ್ಳಿ ಬೈಯಮ್ಮ(ಹಾಡುಗಾರಿಕೆ), ಮೇಲೂರು ಆಂಜಿನಪ್ಪ(ತಬಲ), ದೇವರಮಳ್ಳೂರು ನಾರಾಯಣಸ್ವಾಮಿ(ತಬಲ), ದೇವರಮಳ್ಳೂರು ನಾಗರಾಜ್(ಹಾರ್ಮೋನಿಯಂ), ಮಂಡಿಬೆಲೆ ಕೇಶವಪ್ಪ(ಹಾರ್ಮೋನಿಯಂ), ಬೆಟ್ಟಹಳ್ಳಿ ಶಿವಾನಂದ್(ಸೋಲೆಕ್ಸ್), ಮೇಲೂರು ರಾಮಾಂಜಿನಪ್ಪ(ಸೋಲೆಕ್ಸ್), ಚೌಡಸಂದ್ರ ಸಿ.ಇ.ಹನುಮಂತಪ್ಪ(ತಬಲ), ಬೆಳ್ಳೂಟಿ ಮುನಿಯಪ್ಪ(ಹಾರ್ಮೋನಿಯಂ), ಮೇಲೂರು ಗೋಪಾಲ್(ಹಾಡುಗಾರಿಕೆ), ಮಳ್ಳೂರು ಸದಾನಂದ(ತಬಲಾ), ಮಳ್ಳೂರು ಸೀನಪ್ಪ(ಆರ್ಗನ್), ಚೌಡಸಂದ್ರ ರಾಮಕೃಷ್ಣಪ್ಪ(ಹಾಡುಗಾರಿಕೆ) ಕಲಾವಿದರಿಗೆ ತಾಲ್ಲೂಕು ಕಸಾಪ ವತಿಯಿಂದ ಪುಸ್ತಕ ಮತ್ತು ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಯಿತು.
ತಾಲ್ಲೂಕು ಕಸಾಪ ಉಪಾಧ್ಯಕ್ಷ ಸಿ.ಪಿ.ಇ.ಕರಗಪ್ಪ, ಹೋಬಳಿ ಪ್ರತಿನಿಧಿ ಜಗದೀಶ್‌ಬಾಬು ಹಾಜರಿದ್ದರು.
ಕಾಮಗಾರಿ ವಿಚಾರದಲ್ಲಿ ಸದ್ಯರಿಗೆ ಮಾಹಿತಿ ಕೊರತೆ
ಎಲ್ಲಿ ಕಾಮಗಾರಿಯಾಗುತ್ತಿದೆ, ಕಾಮಗಾರಿಯ ಗುಣಮಟ್ಟ ಹೇಗಿದೆ, ಯಾರು ಮಾಡುತ್ತಿದ್ದಾರೆ ಎಂಬುದರ ಮಾಹಿತಿಯೆ ಸಿಗುತ್ತಿಲ್ಲ, ಈ ವಿಚಾರಗಳಲ್ಲಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿಲ್ಲ. ಏಕಪಕ್ಷೀಯವಾದ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯರು ಆಕ್ಷೇಪ ವ್ಯಕಪಡಿಸಿದ ಘಟನೆ ಮಂಗಳವಾರ ನಡೆಯಿತು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲ್ಲೂಕು ಮಟ್ಟದ ಸಾಮಾನ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಸದಸ್ಯರು, ತಾಲ್ಲೂಕು ಪಂಚಾಯಿತಿಗೆ ಬರುತ್ತಿರುವ ಅನುದಾನಗಳನ್ನು ಕ್ಷೇತ್ರವಾರು ಹಂಚಿಕೆ ಮಾಡಬೇಕು. ನಮ್ಮ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ಅತಿ ಜರೂರಾಗಿ ಆಗಬೇಕಾಗಿರುವ ಕಾಮಗಾರಿಗಳನ್ನು ಗುಣಮಟ್ಟದಿಂದ ಮಾಡಿಸಿಕೊಳ್ಳಲು ನಮಗೂ ಹಕ್ಕಿದೆ. ಅದನ್ನು ಬಿಟ್ಟು ಏಕಪಕ್ಷೀಯವಾಗಿ ಕಾಮಗಾರಿಗಳನ್ನು ಮಾಡುವುದು ಸರಿಯಲ್ಲವೆಂದು ಕಾಂಗ್ರೆಸ್‌ನ ಸದಸ್ಯರಾದ ನಾಗರಾಜು, ನರಸಿಂಹಪ್ಪ, ಪಂಕಜ ನಿರಂಜನ್, ಶೋಭ ಆಕ್ರೋಶ ವ್ಯಕ್ತಪಡಿಸಿದರು.
ಸದಸ್ಯರ ಪ್ರಶ್ನೆಗೆ ಉತ್ತರಿಸಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ಅವರು, ಎಲ್ಲೆಲ್ಲಿ ಕಾಮಗಾರಿಗಳ ಅಗತ್ಯವಿದೆಯೋ ಅಂತಹ ಕಡೆಗಳಲ್ಲೆ ಕಾಮಗಾರಿ ಮಾಡುತ್ತಿದ್ದೇವೆ. ಈ ಬಗ್ಗೆ ಯಾರಿಗೂ ಮಾಹಿತಿ ಕೊಡುವ ಅಗತ್ಯವಿಲ್ಲವೆಂದಾಗ ಕೆಲಕಾಲ ಸಭೆಯಲ್ಲಿ ಮಾತಿನ ಚಕಮಕಿ ನಡೆಯಿತು, ಈ ಮಧ್ಯೆ ಸದಸ್ಯರ ಪ್ರಶ್ನೆಗೆ ಉತ್ತರ ಕೊಡಲು ಎದ್ದು ನಿಂತ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಎಇಇ ಶಿವಾನಂದ ಅವರು, ಸದಸ್ಯರುಗಳ ಆಪ್ತರೇ ಎಲ್ಲಾ ಕಾಮಗಾರಿಗಳನ್ನು ಮಾಡುತ್ತಿದ್ದಾರೆ. ಅವರಿಗೆ ವಿಚಾರ ಗೊತ್ತಿರಲ್ಲವಾ? ಎಂದು ಪ್ರಶ್ನಿಸುತ್ತಿದ್ದಂತೆ ನಿಮಗೆ ಮಾತನಾಡಲು ಬರುವುದಿಲ್ಲ ಕುಳಿತುಕೊಳ್ಳಿ, ಸಭೆಗೆ ಹೇಗೆ ಉತ್ತರ ಕೊಡಬೇಕು ಅನ್ನೋದೆ ಗೊತ್ತಿಲ್ಲವೆಂದು ಅಧಿಕಾರಿಯ ವಿರುದ್ಧ ಸದಸ್ಯರು ತಿರುಗಿಬಿದ್ದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ಕೇಶವಮೂರ್ತಿ ಮಾತನಾಡಿ, ತಾಲ್ಲೂಕಿನ ಎಲ್ಲಾ ಹಳ್ಳಿಗಳಿಗೆ ಸಮಗ್ರವಾಗಿ ಕುಡಿಯುವ ನೀರು ಪೂರೈಕೆ ಮಾಡಲು ಅಗತ್ಯವಾಗಿರುವ ಕ್ರಮ ಕೈಗೊಳ್ಳಲಾಗಿದೆ. ಕೊಳವೆಬಾವಿಗಳಲ್ಲಿ ನೀರಿನ ಕೊರತೆಯಿರುವ ಪಂಚಾಯಿತಿಗಳ ವ್ಯಾಪ್ತಿಯ ಹಳ್ಳಿಗಳಿಗೆ ಟ್ಯಾಂಕರುಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಕೆಲವಡೆ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು.
ಬತ್ತಿಹೋಗಿರುವ ಕೊಳವೆಬಾವಿಗಳಲ್ಲಿನ ಪಂಪು ಮೋಟಾರುಗಳನ್ನು ತೆಗೆದು ನೂತನವಾಗಿ ಕೊರೆಯುವ ಕೊಳವೆಬಾವಿಗಳಿಗೆ ಅಳವಡಿಸಿದರೆ ಜನರಿಗೆ ನೀರು ಕೊಡಲು ಸಾಧ್ಯವಾಗುತ್ತದೆ. ಯಾವ ಗ್ರಾಮ ಪಂಚಾಯಿತಿಗಳಲ್ಲಿಯೂ ಸ್ಟಾಕ್ ರಿಜಿಸ್ಟರ್ ಇಟ್ಟಿಲ್ಲ, ಪಂಪು ಮೋಟಾರುಗಳು, ಕೇಬಲ್, ಪೈಪುಗಳು ಏನಾಗುತ್ತಿವೆ ಎಂಬುದರ ಬಗ್ಗೆ ಮಾಹಿತಿ ಬಂದಿಲ್ಲವೆಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನ ನಾಗರಿಕರು ಪಡಿತರ ಚೀಟಿಗಳಿಗಾಗಿ ತಮ್ಮ ಮೊಬೈಲ್‌ಗಳ ಮೂಲಕವೇ ಅರ್ಜಿ ಸಲ್ಲಿಸಬಹುದು, ಗ್ರಾಮ ಪಂಚಾಯಿತಿ, ಆಹಾರ ಇಲಾಖೆಯಲ್ಲಿ ಪರಿಶೀಲನೆ ನಡೆಸಿದ ನಂತರ ಆಯುಕ್ತರ ಲಾಗಿನ್‌ಗೆ ಕಳುಹಿಸಿಕೊಡುತ್ತೇವೆ. ೭ ದಿನಗಳಲ್ಲಿ ಪೋಸ್ಟ್ ಮೂಲಕ ಪಡಿತರ ಚೀಟಿ ಆಧಾರ್ ಕಾರ್ಡ್ ಮಾದರಿಯಲ್ಲಿ ಮನೆ ಬಾಗಿಲಿಗೆ ಬರಲಿದೆ ಎಂದು ಆಹಾರ ನಿರೀಕ್ಷಕ ಪ್ರಕಾಶ್ ಉತ್ತರಿಸಿದರು.
ತಾಲ್ಲೂಕಿನಲ್ಲಿ ಕಾಲುಬಾಯಿ ಜ್ವರ ಹರಡದಂತೆ ಅಗತ್ಯವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಸಂತೆಗಳಿಂದ ತರುತ್ತಿರುವ ರಾಸುಗಳಲ್ಲಿ ಕಾಯಿಲೆ ಕಾಣಿಸಿಕೊಳ್ಳುತ್ತಿದ್ದು ನಿಗಾವಹಿಸಲಾಗುತ್ತಿದೆ. ತಾಲ್ಲೂಕಿನಲ್ಲಿ ೧೦ ರಾಸುಗಳು ೨ ಕರುಗಳು ಮೃತಪಟ್ಟಿವೆ. ೭ ರಿಂದ ೧೨ ನೇ ಸುತ್ತಿನ ಲಸಿಕಾ ಕಾರ್ಯಕ್ರಮ ಮಾಡುತ್ತೇವೆ ಎಂದು ಪಶುವೈದ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
ನರೇಗಾ ಯೋಜನೆಯಡಿಯಲ್ಲಿ ಮಾನವ ದಿನಗಳ ಸಂಖ್ಯೆಯನ್ನು ಬರಗಾಲದಿಂದಾಗಿ ೧೦೦ ರಿಂದ ೧೫೦ ದಿನಗಳಿಗೆ ಏರಿಕೆ ಮಾಡಲಾಗಿದೆ. ಏಪ್ರಿಲ್ ೧ ರಿಂದ ನರೇಗಾ ಯೋಜನೆಯಡಿ ಒಬ್ಬ ಫಲಾನುಭವಿಗೆ ದಿನಕ್ಕೆ ೨೩೬ ರೂ ಸಿಗಲಿದೆ. ಎಂ.ಎ.ವೈ. ಯೋಜನೆಯಡಿಯಲ್ಲಿ ೨೦೭ ಹೆಚ್ಚುವರಿ ಮನೆಗಳು ಮಂಜೂರಾಗಿದ್ದು ಬಹುತೇಕ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಫಲಾನುಭವಿಗಳನ್ನು ಆಯ್ಕೆ ಮಾಡಬೇಕಾಗಿದೆ ಎಂದು ನರೇಗಾ ಯೋಜನಾ ನಿರ್ದೇಶಕ ಶ್ರೀನಾಥ್‌ಗೌಡ ಮಾಹಿತಿ ನೀಡಿದರು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್, ನರೇಗಾ ಯೋಜನಾಧಿಕಾರಿ ಶ್ರೀನಾಥ್‌ಗೌಡ, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರು ಸಭೆಯಲ್ಲಿ ಹಾಜರಿದ್ದರು
ಉಚಿತ ಸಾಮೂಹಿಕ ಉಪನಯನ
ನಗರದ ಶ್ರೀ ಶಂಕರ ಸೇವಾ ಟ್ರಸ್ಟ್ ವತಿಯಿಂದ ಶಂಕರ ಜಯಂತಿ ಪ್ರಯುಕ್ತ ತ್ರಿ ಮತಸ್ಥ ವಿಪ್ರ ವಟುಗಳಿಗೆ ಸಾಮೂಹಿಕ ಉಪನಯನಗಳನ್ನು ಉಚಿತವಾಗಿ ಹಮ್ಮಿಕೊಳ್ಳಲಾಗಿದೆ. ಮೊದಲು ಬಂದವರಿಗೆ ಆಧ್ಯತೆಯನ್ನು ನೀಡಲಾಗುವುದು. ಏಪ್ರಿಲ್ 20 ರ ಒಳಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಕೋರಿದ್ದಾರೆ.
ಸಂಪರ್ಕಿಸಬೇಕಾದವರು: ಎ.ಎಸ್. ರವಿ (9448713681),
ಬಿ.ಆರ್. ಅನಂತಕೃಷ್ಣ (9964182305),
ಬಿ. ಕೃಷ್ಣಮೂರ್ತಿ (9902139017),
ವಿ. ಕೃಷ್ಣ (9632025422).
ಸಿಬ್ಬಂದಿ ಹಾಗೂ ನೀರಿನ ಕೊರತೆಯಿಂದ ಕಂಗಾಲಾದ ಅಗ್ನಿಶಾಮಕ ದಳ
ಬೆಂಕಿಯನ್ನು ನಂದಿಸಬೇಕಾದ ಅಗ್ನಿಶಾಮಕ ದಳದವರಿಗೆ ನೀರಿನ ತೊಂದರೆ ಕಾಡುತ್ತಿದ್ದು, ತಾಲ್ಲೂಕಿನಲ್ಲಿ ಅಗ್ನಿ ಶಾಮಕ ದಳದ ಸೇವೆ ಸಂಪೂರ್ಣವಾಗಿ ಸಿಗದ ಪರಿಸ್ಥಿತಿ ಮೂಡಿದೆ.
ತಾಲ್ಲೂಕಿನಲ್ಲಿ ಬೇಸಿಗೆಯಲ್ಲಿ ಬೆಂಕಿ ಅನಾಹುತಗಳು ಹೆಚ್ಚಾಗುತ್ತಿದ್ದು, ಸ್ಥಳೀಯವಾಗಿ ಅಗ್ನಿಶಾಮಕ ದಳ ಇರಬೇಕೆಂಬ ಒತ್ತಾಯದಿಂದ ತಾಲ್ಲೂಕಿನ ಮಿನಿ ವಿಧಾನಸೌಧ ಬಳಿಯಿರುವ ಹಳೇ ನ್ಯಾಯಾಲಯದ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಅಗ್ನಿಶಾಮಕ ದಳ ಕಚೇರಿಯನ್ನು ನೀಡಿ ವಾಹನ ನಿಲ್ಲಿಸಿಕೊಳ್ಳಲು ಶೆಡ್ ನಿರ್ಮಿಸಿಕೊಡಲಾಯಿತು. ಈ ಕಚೇರಿಯ ಉದ್ಘಾಟನೆ ನಡೆದದ್ದು 2016ರ ಜುಲೈ 1 ರಂದು. ನಾಲ್ಕು ಕೋಟಿ ಐವತ್ತಮೂರು ಲಕ್ಷ ರೂಗಳ ವೆಚ್ಚದಲ್ಲಿ ಅಗ್ನಿಶಾಮಕ ಠಾಣೆ, ಸಿಬ್ಬಂದಿಗೆ ವಸತಿ ಗೃಹಗಳನ್ನು ಅತಿ ಶೀಘ್ರದಲ್ಲಿ ನಿರ್ಮಿಸಿ ಸಮರ್ಪಿಸಲಾಗುವುದು ಎಂದು 2016ರ ಅಕ್ಟೋಬರ್ 5 ರಂದು ಗುದ್ದಲಿ ಪೂಜೆಯನ್ನು ಆನೂರು ಗ್ರಾಮದ ಬಳಿ ನಡೆಸಲಾಗಿತ್ತು.
ಆದರೆ ತಾತ್ಕಾಲಿಕ ವ್ಯವಸ್ಥೆಯಿಂದ ಅಗ್ನಿ ಶಾಮಕ ದಳದವರಿಗೆ ನೀರು ಕೊಳ್ಳಲು ಪರವಾನಗಿ ಇಲ್ಲವಾಗಿದೆ. ಒಂದು ಅಗ್ನಿಶಾಮಕ ದಳದ ವಾಹನಕ್ಕೆ 5000 ಲೀಟರ್ ನೀರು ಬೇಕಾಗುತ್ತದೆ. ನೀರನ್ನು ಹಂಡಿಗನಾಳದ ಹಳೆಯ ಪೆಟ್ರೋಲ್ ಬಂಕ್‌ನ ಮಾಲೀಕರು ಉಚಿತವಾಗಿ ನೀಡುತ್ತಿದ್ದಾರೆ. ಆದರೆ ಅಗ್ನಿ ಶಾಮಕ ದಳದವರ ಪ್ರಕಾರ ಈಗ ಬೇಸಿಗೆ ಪ್ರಾರಂಭವಾದ್ದರಿಂದ ಪ್ರತಿನಿತ್ಯ ಒಂದಾದರೂ ಕರೆ ಅವರಿಗೆ ಬರುತ್ತದೆ. ಬಹುತೇಕ ಗ್ರಾಮಗಳಲ್ಲಿ ನೀರನ್ನು ಕೊಡಲು ಹಿಂಜರಿಯುತ್ತಾರೆ. ಒಂದೆಡೆ ಹೋಗಿ ಬೆಂಕಿ ನಂದಿಸಿ ಬರುವಷ್ಟರಲ್ಲಿ ಇನ್ನೊಂದು ಕರೆ ಬಂದರೆ ಕೆಲಸ ಮಾಡಲು ಕಷ್ಟವಾಗುತ್ತದೆ. ಪ್ರತಿ ಬಾರಿಯೂ ಹಂಡಿಗನಾಳಕ್ಕೆ ನೀರಿಗಾಗಿ ಹೋಗಬೇಕು. ಬೆಂಕಿ ನಂದಿಸಲು ಹೋದಾಗ ಗ್ರಾಮಸ್ಥರು ನೀರನ್ನು ಕೊಟ್ಟು ಸಹಕರಿಸಬೇಕು ಎನ್ನುತ್ತಾರೆ ಅಗ್ನಿ ಶಾಮಕ ದಳದ ಸಿಬ್ಬಂದಿ.
ಅಗ್ನಿ ಶಾಮಕ ದಳದ ಒಟ್ಟು ಹುದ್ದೆಗಳಿರುವುದು 24. ಆದರೆ ಭರ್ತಿಯಾಗಿರುವ ಹುದ್ದೆಗಳು ಕೇವಲ ನಾಲ್ಕು. ಹಗಲು ಮತ್ತು ರಾತ್ರಿ ಪಾಳಿಯನ್ನು ಇಬ್ಬಿಬ್ಬರು ಹಂಚಿಕೊಳ್ಳುತ್ತಾರೆ. ಇವರಿಗೆ ಸಹಾಯಕರಾಗಿ ಗೃಹರಕ್ಷಕದಳದ 8 ಮಂದಿಯನ್ನು ನೀಡಿದರೂ ಅವರಿಗೆ ತರಬೇತಿ ಆಗದಿರುವುದರಿಂದ ಅವರನ್ನು ಬೆಂಕಿ ನಂದಿಸುವ ಸಮಯದಲ್ಲಿ ಅವರು ಕಾರ್ಯ ನಿರ್ವಹಿಸುವಂತಿಲ್ಲ. ಕೇವಲ ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಸಹಾಯಕರಾಗಿರಬೇಕಷ್ಟೆ. ಇನ್ನು ಅಗ್ನಿ ಶಾಮಕ ಠಾಣಾಧಿಕಾರಿ ಠಾಣೆಯಲ್ಲಿ ಇರಲೇ ಬೇಕು. ಹೀಗಿರುವಾಗ ಒಬ್ಬೊಬ್ಬರೇ ಅಥವಾ ಇಬ್ಬರೇ ಹೋಗಿ ಹೊತ್ತಲ್ಲದ ಹೊತ್ತಿನಲ್ಲಿ ಕಾಡುಗಳಲ್ಲಿ ಹೊತ್ತಿಕೊಳ್ಳುವ ಬೆಂಕಿಯನ್ನು ನಂದಿಸುವುದು ಬಹಳ ಕಷ್ಟ. ನಮಗೆ ಸಿಬ್ಬಂದಿ ಹಾಗೂ ಸರಿಯಾಗಿ ನೀರು ವ್ಯವಸ್ಥೆ ಮಾಡಿಕೊಟ್ಟಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸಾಧ್ಯ ಎಂದು ಹೆಸರನ್ನು ಹೇಳಲಿಚ್ಚಿಸದ ಅಗ್ನಿ ಶಾಮಕ ದಳದ ಸಿಬ್ಬಂದಿ ತಿಳಿಸಿದರು.
ಬಿಜೆಪಿ ಸರ್ಕಾರದ್ದು ಜನವಿರೋಧಿ ಧೋರಣೆ
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ಜನವಿರೋಧಿ ಧೋರಣೆಯಿಂದಾಗಿ ಜನರು ಬದುಕುವ ಹಕ್ಕನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ರಾಜೀವ್‌ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷೆ ಮೀನಾಕ್ಷಿ ನಟರಾಜ್ ಆರೋಪಿಸಿದರು.
ತಾಲ್ಲೂಕಿನ ಬೆಳ್ಳೂಟಿ ಗೇಟ್‌ನಲ್ಲಿರುವ ಕಲ್ಯಾಣಮಂಟಪದಲ್ಲಿ ಸೋಮವಾರ ಆಯೋಜನೆ ಮಾಡಲಾಗಿದ್ದ ’ಗ್ರಾಮ ಸ್ವರಾಜ್ ಜಾಗೃತಿ ಅಭಿಯಾನ’ ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಬಿಜೆಪಿ ಪಕ್ಷಕ್ಕೆ ದೇಶದಲ್ಲಿ ಎಲ್ಲಾ ಸಮುದಾಯಗಳ ಜನರ ಅಭಿವೃದ್ಧಿಗಿಂತ ಹೆಚ್ಚಾಗಿ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡುವ ಗುರಿಯನ್ನಿಟ್ಟುಕೊಂಡು ಜನರನ್ನು ಮರಳುಗೊಳಿಸುತ್ತಾ ತನಗೆ ಸಿಕ್ಕಿರುವ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಬಿಜೆಪಿಯ ಕನಸು ಎಂದಿಗೂ ಸಾಧ್ಯವಾಗುವುದಿಲ್ಲ. ದೇಶಕ್ಕಾಗಿ ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಿಕೊಂಡಿದ್ದ ಇಂದಿರಾಗಾಂಧಿ, ರಾಜೀವ್ ಗಾಂಧಿ, ಅವರು ತಮ್ಮ ಪ್ರಾಣವನ್ನೆ ಮುಡುಪಾಗಿಟ್ಟದ್ದಾರೆ. ದೇಶದ ಪ್ರಧಾನಿಯಾಗುವ ಅವಕಾಶಗಳು ಒದಗಿ ಬಂದರೂ ಅಧಿಕಾರವನ್ನು ತಿರಸ್ಕಾರ ಮಾಡುವ ಮೂಲಕ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರು ದೇಶದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ.
ಇಂತಹ ಪಕ್ಷವನ್ನು ದೇಶದಲ್ಲಿ ನಿರ್ನಾಮ ಮಾಡಲು ಸಾಧ್ಯವಿಲ್ಲ. ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಅವರ ಕನಸಾಗಿದ್ದ ಗ್ರಾಮ ಸ್ವರಾಜ್ ಯೋಜನೆಯು ಸಮರ್ಪಕವಾಗಿ ಅನುಷ್ಠಾನವಾಗಬೇಕಾದರೆ ಗ್ರಾಮ ಮಟ್ಟದಿಂದಲೇ ಜನರಿಗೆ ಕಾಂಗ್ರೆಸ್ ಪಕ್ಷ ದೇಶಕ್ಕೆ ಕೊಟ್ಟಿರುವ ಕೊಡುಗೆಯೇನು ಎಂಬುದು ತಿಳಿಸಬೇಕು. ಗ್ರಾಮ ಸಭೆಗಳಲ್ಲಿ ಚರ್ಚೆಯಾಗುವಂತಹ ವಿಚಾರಗಳು ಅನುಷ್ಟಾನಗೊಳಿಸಬೇಕು. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾಧ್ಯಮಗಳು ತಾರತಮ್ಯ ಮಾಡುತ್ತಿವೆ. ಆದ್ದರಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಮಾಧ್ಯಮಗಳ ಕೆಲಸವನ್ನು ಮಾಡಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ ಮಾತನಾಡಿ, ಗ್ರಾಮ ಮಟ್ಟದಲ್ಲಿ ಪಕ್ಷದ ಬೇರನ್ನು ಗಟ್ಟಿಗೊಳಿಸುವ ಕೆಲಸವನ್ನು ಮಾಡಲು ಕಾರ್ಯಕರ್ತರು ಮುಂದಾಗಬೇಕು. ನಮ್ಮ ಹಾದಿ ಆರೋಗ್ಯಕರವಾದುದು. ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಮೂಲ ಉದ್ದೇಶ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸುವುದು. ಜನಪ್ರತಿನಿಧಿಗಳನ್ನು ಸಂಘಟಿಸಿ ಚುನಾಯಿತ ಪ್ರತಿನಿಧಿಗಳಲ್ಲಿ ಹೊಸ ಹುರುಪು, ಜಾಗೃತಿ ಮತ್ತು ರಾಷ್ಟ್ರಪ್ರಜ್ಞೆಯನ್ನು ಬಲಪಡಿಸಿ, ನಮ್ಮ ಪ್ರಜಾಪ್ರಭುತ್ವದ ತಳಹದಿಯಾದ ಗ್ರಾಮ ಸ್ವರಾಜ್ಯ, ಜನರ ಸಬಲೀಕರಣ, ಅಧಿಕಾರ ವಿಕೇಂದ್ರಿಕರಣಗಳತ್ತ ಹೆಚ್ಚು ಒತ್ತು ನೀಡಿ ತಳಮಟ್ಟದಿಂದ ಸಂಘಟಿಸುವುದಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಮುನಿರಾಜು ಮಾತನಾಡಿ, ಪಂಚಾಯಿತಿ ಜನಪ್ರತಿನಿಧಿಗಳು ಹಾಗೂ ಮುಖಂಡರು ಕೇವಲ ಸರ್ಕಾರದ ಅನುದಾನಗಳನ್ನು ತಲುಪಿಸಿದರೆ ಸಾಲದು. ಶೋಷಣೆ, ಅಸ್ಪೃಶ್ಯತೆ ಹೋಗಲಾಡಿಸಬೇಕು. ಶೌಚಾಲಯ, ಸ್ವಚ್ಚತೆಗೆ ಆದ್ಯತೆ ನೀಡಬೇಕು. ಪ್ರತಿಯೊಬ್ಬ ಜನಪ್ರತಿನಿಧಿಯ ಮನೆಯಲ್ಲೂ ಸಂವಿಧಾನದ ಬಗ್ಗೆ, ಗಾಂಧಿ, ಅಂಬೇಡ್ಕರ್, ನೆಹರು ಅವರ ಚಿಂತನೆಗಳ ಬಗ್ಗೆ ಪುಸ್ತಕಗಳು ಇರಬೇಕು. ತಾವು ಓದಿ ಅರ್ಥಮಾಡಿಕೊಂಡಾಗ ಇತರರ ಕಷ್ಟ ಸುಖಕ್ಕೆ ಸ್ಪಂದಿರಬಹುದು ಎಂದು ಹೇಳಿದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಚಾಲಕ ಎನ್.ಆರ್.ನಿರಂಜನ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಪಂಕಜ ನಿರಂಜನ್, ಭಕ್ತರಹಳ್ಳಿ ಮುನೇಗೌಡ, ಎಚ್.ಎಂ.ಮುನಿಯಪ್ಪ, ಡಿ.ಬಿ.ವೆಂಕಟೇಶ್, ಆರ್.ಶ್ರೀನಿವಾಸ್, ವೆಂಕಟೇಶ್, ಎ.ರಾಮಚಂದ್ರಪ್ಪ, ವಿನೋಧ ಮುಂತಾದವರು ಹಾಜರಿದ್ದರು.
ರೈತರಿಂದ ಸಾಲವಸೂಲಿ ಮಾಡಲು ಒತ್ತಡ ಹೇರಬಾರದು
ರಾಜ್ಯಾದ್ಯಂತ ಬರಗಾಲದ ಹಿನ್ನೆಲೆಯಲ್ಲಿ ರೈತರಿಂದ ಸಾಲವಸೂಲಿ ಮಾಡಲು ಒತ್ತಡ ಹೇರದಂತೆ ರಾಜ್ಯ ಸರ್ಕಾರ ನಿರ್ದೇಶನ ನೀಡಿದ್ದರೂ ಪಿ.ಎಲ್.ಡಿ. ಬ್ಯಾಂಕ್‌ನಿಂದ ರೈತರಿಗೆ ಸಾಲ ಮರಪಾವತಿ ಮಾಡುವಂತೆ ನೊಟೀಸ್‌ಗಳನ್ನು ಜಾರಿ ಮಾಡಿದ್ದಾರೆ ಎಂದು ರೈತ ಮುಖಂಡರುಗಳು ಆರೋಪಿಸಿದ್ದಾರೆ.
ನಗರದ ಪಿ.ಎಲ್.ಡಿ. ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್‌ನಿಂದ ರೈತರಿಗೆ ನೀಡಿರುವ ನೊಟೀಸ್‌ಗಳಲ್ಲಿ ನಮ್ಮ ಬ್ಯಾಂಕಿನಿಂದ ಸಾಲಗಳನ್ನು ಶೇ. ೬.೪ ಮತ್ತು ೩ ರ ಬಡ್ಡಿದರದಲ್ಲಿ ಪಡೆದಿದ್ದು ಸದರಿ ಸಾಲದ ಕಂತಗಳನ್ನು ಕ್ರಮಬದ್ಧವಾಗಿ ಪಾವತಿಸಿದರೆ ಮಾತ್ರ ಸರ್ಕಾರದಿಂದ ಶೇ. ೬.೪ ಮತ್ತು ೩ ರ ಮೇಲ್ಪಟ್ಟ ಬಡ್ಡಿ ರಿಯಾಯಿತಿಯು ಸರ್ಕಾರ ಭರಿಸುತ್ತಿದೆ. ಮಾರ್ಷ್ ೩೧ ಕ್ಕೆ ಸುಸ್ತಿಯಾಗಿರುವ ಸುಸ್ತಿ ಕಂತುಗಳಿಗೆ ಸರ್ಕಾರ ಪೂರ್ಣ ಬಡ್ಡಿ ಮನ್ನಾ ಮಾಡಿದೆ. ಆದ್ದರಿಂದ ನೀವು ಮಾರ್ಚ್ ೩೧ ರ ಒಳಗೆ ಬ್ಯಾಂಕಿಗೆ ಮರು ಪಾವತಿ ಮಾಡಬೇಕು ಎಂದು ಸೂಚಿಸಿದ್ದಾರೆ.
ತೀವ್ರ ಬರಗಾಲಕ್ಕೆ ಒಳಗಾಗಿರುವ ಈ ಭಾಗದಲ್ಲಿನ ರೈತರು ಮಳೆ, ಬೆಳೆಗಳಿಲ್ಲದೆ ಕಂಗಾಲಾಗಿದ್ದೇವೆ. ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಬ್ಯಾಂಕುಗಳಿಂದ ಸಾಲ ಪಡೆದುಕೊಂಡು ಇಟ್ಟಿರುವ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ಇದರಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇವೆ. ಮನೆಗಳಲ್ಲಿದ್ದ ದನಕರುಗಳನ್ನೂ ಮಾರಾಟ ಮಾಡಿದ್ದೇವೆ. ಇನ್ನೆಲ್ಲಿಂದ ಸಾಲ ತೀರಿಸೋದು ಸಾಧ್ಯವಾಗುತ್ತದೆ. ನಮಗೆ ರಿನಿವಲ್ ಮಾಡಿಕೊಡಿ ಎಂದು ಮನವಿ ಮಾಡಿಕೊಂಡರೂ ಬ್ಯಾಂಕಿನ ಅಧಿಕಾರಿಗಳು ಸ್ಪಂದಿಸುತ್ತಿಲ್ಲವೆಂದು ರೈತರು ಆರೋಪಿಸಿದ್ದಾರೆ.
ನಮಗೆ ರಾಜ್ಯ ಬ್ಯಾಂಕಿನಿಂದ ಬಂದಿರುವ ನಿರ್ದೇಶನದಂತೆ ನಾವು ರೈತರಿಗೆ ನೊಟೀಸ್ ನೀಡಿದ್ದೇವೆ. ಆದರೆ ಸಾಲ ಕಟ್ಟುವಂತೆ ಒತ್ತಡ ಹೇರಿಲ್ಲ. ಅವರ ಮನೆ ಬಾಗಿಲಿಗೂ ಹೋಗಿಲ್ಲ. ರೈತರು ಪಡೆದುಕೊಂಡಿರುವ ಸಾಲಕ್ಕೆ ಶೇ.೧೦ ರಷ್ಟು ಬಡ್ಡಿಯನ್ನು ಸರ್ಕಾರ ನೀಡುತ್ತದೆ. ಶೇ. ೩ ರಷ್ಟು ಬಡ್ಡಿಯನ್ನು ರೈತರು ಪಾವತಿ ಮಾಡಬೇಕು. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ನಾವು ನೊಟೀಸ್ ಮೂಲಕ ತಿಳಿಸಿದ್ದೇವೆ. ನಮಗೆ ರಾಜ್ಯ ಬ್ಯಾಂಕಿನಿಂದ ಯಾವುದೇ ನಿರ್ದೇಶನ ಬಂದಿಲ್ಲವೆಂದು ಪಿ.ಎಲ್.ಡಿ. ಬ್ಯಾಂಕ್ ವ್ಯವಸ್ಥಾಪಕ ಮುನಿಯಪ್ಪ ತಿಳಿಸಿದ್ದಾರೆ.
ರೈತ ಸಂಘದ ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್ ಮಾತನಾಡಿ, ಸರ್ಕಾರ ಆದೇಶ ಮಾಡಿದರೂ ಕೂಡಾ ಬ್ಯಾಂಕುಗಳ ಅಧಿಕಾರಿಗಳು ಸರ್ಕಾರದ ಆದೇಶಗಳನ್ನು ಕಸದ ಬುಟ್ಟಿಗಳಿಗೆ ಎಸೆದು ರೈತರಿಂದ ಬಲವಂತವಾಗಿ ಸಾಲ ವಸೂಲಿ ಮಾಡಲು ಮುಂದಾಗುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಎಚ್ಚರಿಕೆ ನೀಡಬೇಕು. ರೈತರ ಕೃಷಿ ಸಾಲಕ್ಕೆ ಬಡ್ಡಿ ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ರೈತ ಸಂಘದ ಸದಸ್ಯರು ರೈತರ ಹಿತ ಕಾಪಾಡುವಂತೆ ಕೋರಿ ಮನವಿ ಪತ್ರವನ್ನು ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರಿಗೆ ಸಲ್ಲಿಸಿದರು.
ರೈತ ಸಂಘದ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ರೈತರಾದ ಮಾರಪ್ಪ, ಎನ್.ನಾಗರಾಜ, ಗೋವಿಂದಪ್ಪ, ನಾಗೇಶ್, ನಾರಾಯಣಸ್ವಾಮಿ, ರಾಜಶೇಖರ್ ಮುಂತಾದವರು ಈ ಸಂದರ್ಭಲ್ಲಿ ಹಾಜರಿದ್ದರು.
‘ಗಾನಾಂಜಲಿ ಕಾರ್ಯಕ್ರಮ’ ಹಾಗೂ ‘ನಾಟ್ಯಾಂಜಲಿ ಕಾರ್ಯಕ್ರಮ’
ಸಂಗೀತ ನಾಟ್ಯ ಸಂಸ್ಕೃತಿಗಳ ಅನುಭಾವ ಇಡೀ ವಿಶ್ವ ಜನಾಂಗವನ್ನು ಅನಾದಿಕಾಲದಿಂದಲೂ ಆವರಿಸುತ್ತ ಬಂದಿದೆ. ಈ ಸಂಗೀತವನ್ನು ಸಮಾಜಕ್ಕೆ ದಯಪಾಲಿಸಿದ ನಮ್ಮ ಅನಾದಿ ಪರಂಪರೆಗೆ, ಇಂದಿಗೂ ಸಂಗೀತವನ್ನು ಭಕ್ತಿ ಶ್ರದ್ಧೆಗಳಿಂದ ಕಲಿತು ಎಲ್ಲೆಲ್ಲೂ ಗಾನ ಗಂಗೆಯನ್ನು ಹರಿಸುತ್ತಿರುವ ಆಚಾರ್ಯ ಪರಂಪರೆಗೆ, ಕಲಾವಿದ ಪರಂಪರೆ ಮತ್ತು ಕಲಾರಸಿಕ ಪರಂಪರೆಗಳಿಗೆ ನಾವು ಕೃತಜ್ಞರಾಗಿರೋಣ ಎಂದು ಮದ್ರಾಸಿನ ಆಕಾಶವಾಣಿ ನಿರೂಪಕರು ಹಾಗೂ ಶ್ರೀ ತ್ಯಾಗರಾಜ ಬ್ರಹ್ಮ ಮಹೋತ್ಸವ ಸೇವಾ ಸಭಾ ಆರಾಧನ ಸಂಗೀತೋತ್ಸವ ಸಮಿತಿ ಸಲಹಾ ಸಮಿತಿ ಸದಸ್ಯ ಟಿ.ಎಂ.ಎಸ್.ಮಣಿ ತಿಳಿಸಿದರು.
ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಶ್ರೀ ಮಯೂರಿ ನಾಟ್ಯಕಲಾ ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ‘ಗಾನಾಂಜಲಿ ಕಾರ್ಯಕ್ರಮ’ ಹಾಗೂ ‘ನಾಟ್ಯಾಂಜಲಿ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಕಾಲದಲ್ಲಿ ದೇಗುಲಗಳೇ ಸಂಗೀತ ಸಂಸ್ಕೃತಿಗಳನ್ನು ಪಸರಿಸುವ ಕೇಂದ್ರಗಳಾಗಿದ್ದವು. ಇಂದಿನ ಒತ್ತಡದ ಪ್ರಾಪಂಚಿಕ ಬದುಕಿನಲ್ಲಿ ಸಂಗೀತವೆಂಬುದೊಂದೇ ನಮಗೆ ಸುಲಭವಾಗಿ ದಕ್ಕುವ ವಿಶ್ರಾಂತ ತಾಣ. ಇವೆಲ್ಲದರ ಜೊತೆಗೆ ನಮ್ಮ ಪ್ರಕೃತಿಯಲ್ಲಿ ಹಾಸುಹೊಕ್ಕಾಗಿರುವ ಸಂಗೀತ ನಮ್ಮ ಬದುಕಿನಿಂದ ಕಳೆದುಹೋಗದಂತೆ ಎಚ್ಚರವಹಿಸಿ ನಮ್ಮ ಮತ್ತು ಮುಂದಿನ ತಲೆಮಾರುಗಳ ಬದುಕು ಸಂಗೀತವೆಂಬ ಶ್ರೇಷ್ಠತೆಯನ್ನು ಎಂದೆಂದೂ ಅನುಭಾವಿಸುವ ಅವಕಾಶವನ್ನು ಜೀವಂತವಾಗಿರಿಸಲು ಪ್ರಯತ್ನವನ್ನು ಸಹಾ ಈ ಆಚರಣೆ ಪ್ರೇರೇಪಿಸುವಂತದ್ದಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ತನುಜಾ ರಘು ಮಾತನಾಡಿ, ನೃತ್ಯ ಹಾಗೂ ಸಂಗೀತದಂತಹ ಕಲಾ ಕ್ಷೇತ್ರಗಳಿಂದ ಗುರು ಶಿಷ್ಯ ಪರಂಪರೆಯ ಪಾವಿತ್ರ್ಯತೆ ಇನ್ನೂ ಉಳಿದಿದೆ. ಮಕ್ಕಳಿಗೆ ಎಳೆಯ ವಯಸ್ಸಿನಿಂದಲೇ ವಿವಿಧ ಕಲೆಗಳನ್ನು ಕಲಿಯಲು ಪ್ರೋತ್ಸಾಹಿಸಬೇಕು. ಇದರಿಂದ ಕನಿಷ್ಠ ಕಲೆಯನ್ನು ಆಸ್ವಾದಿಸುವ ಮನಸ್ಥಿತಿ ಅವರಲ್ಲಿ ರೂಢಿಸಿದಂತಾಗುತ್ತದೆ ಎಂದು ನುಡಿದರು.
ಬೆಳಿಗ್ಗೆಯಿಂದ ನಡೆದ ಗಾನಾಂಜಲಿ ಸಂಗೀತ ಕಾರ್ಯಕ್ರಮದಲ್ಲಿ ಸಿಂಧು, ಶ್ವೇತ, ಹರಿಣಿ, ನಿಸರ್ಗ, ಪಲ್ಲವಿ, ಮಾನಸ, ಪ್ರಿಯ, ಮಿಲನ, ನಿತ್ಯ, ಯಶಿತ, ಝಾನ್ಸಿ, ಕುಸುಮ, ಶ್ರಾವಣಿ, ಲಕ್ಷ್ಮೀಪ್ರಿಯ, ಅಮೃತ, ಗುಣ, ಮಹಾಲಕ್ಷ್ಮಿ, ಮಾಲತಿ, ನಾಗಮಣಿ, ಬಾಲಕೃಷ್ಣ ಭಾಗವತರ್, ವಿದುಷಿ ಎಸ್.ವಿ.ಭಾಗ್ಯಲಕ್ಷ್ಮಿ ಅಯ್ಯರ್, ವಿದುಷಿ ಮಂಜುಳಾ ಜಗದೀಶ್, ರೇಖ, ಟಿ.ಎಂ.ಎಸ್.ಮಣಿ, ಸುನಂದಮ್ಮ, ಪಂಕಜಮ್ಮ, ಸರೋಜಮ್ಮ, ಪದ್ಮ, ದೇವೀರಮ್ಮ, ಶಶಿಕಲಾ, ವಿದ್ವಾನ್ ಚಿಂತಲಪಲ್ಲಿ ಸೋಮಶೇಖರ್ ಸಂಗೀತವನ್ನು ನಡೆಸಿಕೊಟ್ಟರೆ, ಸಂಜೆ ನಾಟ್ಯಾಂಜಲಿ ಭರತನಾಟ್ಯ ಕಾರ್ಯಕ್ರಮದಲ್ಲಿ ಪರಿಣಿತ, ಲಹರಿ, ಸಿಂಧು, ನಿಸರ್ಗ, ನಿಹಾರಿಕ, ಹರಿಣಿ, ಶ್ವೇತ, ಭುವನ, ಶೋಭಿತ ಮುಂತಾದವರಿಂದ ನೃತ್ಯ ಪ್ರದರ್ಶನ ನಡೆಯಿತು.
ಶ್ರೀ ಮಯೂರಿ ನಾಟ್ಯಕಲಾ ಕೇಂದ್ರದ ಅಧ್ಯಕ್ಷ ಎಸ್.ವಿ.ಅಯ್ಯರ್, ಕಾರ್ಯದರ್ಶಿ ಎಸ್.ವಿ.ಭಾಗ್ಯಲಕ್ಷ್ಮಿ ಅಯ್ಯರ್,
ಒಂದನೇ ಸುತ್ತಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ
ನಮ್ಮ ದೇಶವು ಪೋಲಿಯೋ ಕಾಯಿಲೆಯಿಂದ ಮುಕ್ತವಾದರೂ ನೆರೆಯ ಕೆಲವು ರಾಷ್ಟ್ರಗಳಲ್ಲಿ ಇನ್ನೂ ಈ ಕಾಯಿಲೆ ಇದೆ. ಹಾಗಾಗಿ ಪೋಲಿಯೋ ಲಸಿಕೆ ಕಾರ್ಯಕ್ರಮ ಮುಂದುವರೆದಿದ್ದು, ಎಲ್ಲಾ ಪೋಷಕರೂ ಮಕ್ಕಳನ್ನು ಕರೆತಂದು ಕಡ್ಡಾಯವಾಗಿ ಪೋಲಿಯೋ ಲಸಿಕೆಯನ್ನು ಮಕ್ಕಳಿಗೆ ಹಾಕಿಸಬೇಕು ಎಂದು ಶಾಸಕ ಎಂ.ರಾಜಣ್ಣ ಮನವಿ ಮಾಡಿದರು.
ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ 2017ನೇ ಸಾಲಿನ ಒಂದನೇ ಸುತ್ತಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಉದ್ಘಾಟಿಸಿ ಸಾಂಕೇತಿಕವಾಗಿ ಕೆಲವು ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿ ಅವರು ಮಾತನಾಡಿದರು.
5 ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಈ ಹಿಂದೆ ಎಷ್ಟು ಬಾರಿ ಲಸಿಕೆ ಹಾಕಿಸಿದ್ದರೂ, ಈ ಬಾರಿಯೂ ಮತ್ತೆ ಪೋಲಿಯೋ ಹನಿ ಹಾಕಿಸಿ. ವಿಶ್ವಸಂಸ್ಥೆ ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರವೆಂದು ಘೋಷಿಸಿದೆ. ದಕ್ಷಿಣ ರಾಜ್ಯಗಳ ಶೃಂಗಸಭೆಯಲ್ಲಿ ರಾಜ್ಯ ಸರ್ಕಾರ ಸಾಧನೆಗೆ ಪ್ರಶಂಸನಾ ಪತ್ರವೂ ಸಿಕ್ಕಿದೆ. ಆದರೆ, ನೆರೆಯ ರಾಷ್ಟ್ರಗಳಲ್ಲಿ ಪೋಲಿಯೋ ಪ್ರಕರಣ ಕಂಡುಬಂದಿರುವುದರಿಂದ ಮುಂಜಾಗೃತ ಕ್ರಮವಾಗಿ ಲಸಿಕೆ ಹಾಕಲಾಗುತ್ತಿದೆ ಎಂದು ಹೇಳಿದರು.
ತಹಶೀಲ್ದಾರ್ ಅಜಿತ್ ಕುಮಾರ್ ರೈ ಮಾತನಾಡಿ, ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆಸ್ಪತ್ರೆಗಳು ಮುಂತಾದೆಡೆ ತಾಲ್ಲೂಕಿನಾದ್ಯಂತ ಲಸಿಕೆ ಕೇಂದ್ರಗಳು ಇರಲಿವೆ. ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವುದನ್ನು ತಪ್ಪಿಸಬಾರದು ಎಂದು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್‌ಕುಮಾರ್, ಡಾ.ಸುನೀತಾ, ಡಾ.ತಿಮ್ಮೇಗೌಡ, ಆಸ್ಪತ್ರೆಯ ಅಭಿವೃದ್ಧಿ ಮತ್ತು ಸಲಹಾ ಸಮಿತಿಯ ಸದಸ್ಯ ಶ್ರೀನಿವಾಸ್, ವಿಜಯಾ ಮತ್ತಿತರರು ಹಾಜರಿದ್ದರು.
ಪಲ್ಸ್ ಪೋಲಿಯೋ ಕಾರ್ಯಕ್ರಮ
ಶಿಡ್ಲಘಟ್ಟದಲ್ಲಿ ಶನಿವಾರ ಡಾಲ್ಫಿನ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕ ಸರ್ಕಾರಿ ಆಸ್ಪತ್ರಯ ಸಿಬ್ಬಂದಿ 2017 ನೇ ಸಾಲಿನ ಒಂದನೇ ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಭಾನುವಾರ ಬೆಳಿಗ್ಗೆ 9 ಗಂಟೆಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಾಲನೆ ನೀಡುತ್ತಿರುವ ಪ್ರಯುಕ್ತ ಜನರಲ್ಲಿ ಜಾಗೃತಿ ಮೂಡಿಸಲು ಜಾಥಾ ನಡೆಸಿದರು.
ಜಂಗಮಕೋಟೆಯ ಎಸ್‌ಎಫ್‌ಸಿಎಸ್ ಬ್ಯಾಂಕ್‌ನ ಗಂಭೀರನಹಳ್ಳಿ ಶಾಖೆಯ ಕಟ್ಟಡ ಲೋಕಾರ್ಪಣೆ: ಮಹಿಳಾ ಸ್ವ ಸಹಾಯ ಸಂಘ, ರೈತರಿಗೆ ೧.೫೫ ಕೋಟಿ ರೂಗಳ ಸಾಲ ವಿತರಣೆ
ಈ ಆರ್ಥಿಕ ಸಾಲಿನಲ್ಲಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಯಾವೊಬ್ಬ ರೈತನೂ ಡಿಸಿಸಿ ಬ್ಯಾಂಕ್‌ನಿಂದ ಪಡೆದ ಸಾಲದ ಸುಸ್ತಿದಾರನಾಗಿಲ್ಲ ಎಂದು ಡಿಸಿಸಿ ಬ್ಯಾಂಕ್‌ನ ಜಿಲ್ಲಾಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಗಂಭೀರನಹಳ್ಳಿಯಲ್ಲಿ ನಿರ್ಮಿಸಿರುವ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಬ್ಯಾಂಕ್‌ನ ನತನ ಕಟ್ಟಡ, ಶುದ್ದ ಕುಡಿಯುವ ನೀರಿನ ಘಟಕ, ರಸಗೊಬ್ಬರಗಳ ಮಾರಾಟ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಉಭಯ ಜಿಲ್ಲೆಗಳಲ್ಲಿ ಬರಗಾಲ ಮನೆ ಮಾಡಿದ್ದು ನಮ್ಮಲ್ಲೂ ಸಹ ಆತಂಕ ಇತ್ತು. ರೈತರು ಆರ್ಥಿಕವಾಗಿ ಸಂಕಷ್ಟದಲ್ಲಿ ಇದ್ದು ಸಾಲ ಮರುಪಾವತಿ ಪ್ರಮಾಣ ಕಡಿಮೆ ಆಗಬಹುದು ಎಂದು ನಿರೀಕ್ಷಿಸಿದ್ದೆವು. ಆದರೆ ನಮ್ಮ ಲೆಕ್ಕಾಚಾರಗಳು ತಲೆ ಕೆಳಗಾಗಿದ್ದು ರೈತರು ಸಾಲ ಮರುಪಾವತಿ ಮಾಡಿ ಮಾದರಿಯಾಗಿದ್ದಾರೆ ಎಂದರು.
ರೈತರಷ್ಟೆ ಅಲ್ಲ ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರೂ ಸಹ ಎಂದಿನಂತೆ ಪೂರ್ತಿ ಸಾಲ ಮರುಪಾವತಿ ಮಾಡುತ್ತಿದ್ದು ಶೇ. ೧೦೦ರಷ್ಟು ಸಾಲ ಮರುಪಾವತಿ ಪ್ರಮಾಣ ಇದೆ ಎಂದು ಹರ್ಷ ವ್ಯಕ್ತಪಡಿಸಿದರು.
ತಾಲ್ಲೂಕಿನ ಎಲ್ಲ ಎಸ್‌ಎಫ್‌ಸಿಎಸ್ ಬ್ಯಾಂಕ್‌ಗಳಲ್ಲೂ ಸಾಲ ಮರುಪಾವತಿ ಉತ್ತಮವಾಗಿದ್ದು ಮುಂದಿನ ದಿನಗಳಲ್ಲಿ ಈ ಎರಡೂ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಮಹಿಳೆಯರು, ರೈತರು, ಕೂಲಿ ಕಾರ್ಮಿಕರು ಹಾಗೂ ಸಣ್ಣ ವ್ಯಾಪಾರಿಗಳ ಮನೆ ಮನೆಗೆ ಹೋಗಿ ಸಾಲ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ವಿವರಿಸಿದರು.
ಯಾರಿಗೆ ಹಣಕಾಸಿನ ಅವಶ್ಯಕತೆ ಇದೆಯೋ ಅವರಿಗೆ ನಿಷ್ಪಕ್ಷಪಾತವಾಗಿ ಸಮಯಕ್ಕೆ ಸರಿಯಾಗಿ ಸಾಲ ನೀಡಿದರೆ ಅದನ್ನು ಸದುಪಯೋಗಪಡಿಸಿಕೊಂಡು ಮತ್ತೆ ಸಾಲ ಮರುಪಾವತಿ ಮಾಡುತ್ತಾರೆ ಎಂಬುದಕ್ಕೆ ಡಿಸಿಸಿ ಬ್ಯಾಂಕಿನಿಂದ ಸಾಲ ಪಡೆದವರೆ ಸಾಕ್ಷಿಯಾಗಿದ್ದಾರೆ ಎಂದರು.
ಜಂಗಮಕೋಟೆಯ ಎಸ್‌ಎಫ್‌ಸಿಎಸ್ ಸಹಕಾರಿ ಬ್ಯಾಂಕ್ ಮೂಲಕ ಇದುವರೆಗೂ ೫೮೪ ಮಂದಿ ರೈತರಿಗೆ ೭.೫೬ ಕೋಟಿ ರೂಗಳ ಕೆಸಿಸಿ ಸಾಲ, ೧೪೪ ಮಂದಿಗೆ ಸೀಮೆ ಹಸುಗಳನ್ನು ಖರೀಸಲು ೫೩ ಲಕ್ಷ, ೪೬ ಸ್ವ ಸಹಾಯ ಸಂಘಗಳಿಗೆ ೧.೩೬ ಕೋಟಿ ರೂಗಳ ಸಾಲ ನೀಡಲಾಗಿದೆ.
ಒಟ್ಟು ೭೭೪ ಮಂದಿಗೆ ೯.೪೫ ಕೋಟಿ ರೂಗಳನ್ನು ಕೃಷಿ, ಹೈನುಗಾರಿಕೆ, ಗುಡಿ ಕೈಗಾರಿಕೆ, ಸ್ವಯಂ ಉದ್ಯೋಗ ಇನ್ನಿತರೆ ಚಟುವಟಿಕೆಗಳಿಗೆ ಸಾಲ ವಿತರಿಸಲಾಗಿದೆ ಎಂದು ಬ್ಯಾಂಕ್‌ನ ವಹಿವಾಟನ್ನು ವಿವರಿಸಿದರು.
ಸುಂಡ್ರಹಳ್ಳಿಯ ಶ್ರೀನಂದಿನಿ ನಲ್ಲೂರು ಬೀರೇಶ್ವರ ಸ್ವ ಸಹಾಯ ಸಂಘಕ್ಕೆ ೧.೨೫,೦೦೦ ರೂ, ಚೊಕ್ಕಂಡಹಳ್ಳಿಯ ಶ್ರೀಮುತ್ತ್ಯಾಲಮ್ಮ ಮಹಿಳಾ ಸಂಘಕ್ಕೆ ೧೦,೦೦,೦೦೦ರೂ, ಜೆ.ವೆಂಕಟಾಪುರದ ಶ್ರೀವಿನಾಯಕ ಮಹಿಳಾ ಸ್ವ ಸಹಾಯ ಸಂಘಕ್ಕೆ ೬,೫೦,೦೦೦ ರೂ ಹಾಗೂ ಧನಲಕ್ಷ್ಮೀ ಸ್ತ್ರಿ ಶಕ್ತಿ ಸಂಘಕ್ಕೆ ೫೦,೦೦೦ ರೂಗಳ ಸಾಲದ ಚೆಕ್ ವಿತರಿಸಲಾಯಿತು.
ಜತೆಗೆ ಆ ಭಾಗದ ರೈತರಿಗೆ ಕೃಷಿ ಸಾಲ ೨೫ ಲಕ್ಷ ಸೇರಿದಂತೆ ಒಟ್ಟು ೧.೫೫ ಕೋಟಿ ರೂಪಾಯಿಗಳ ವಿವಿದ ಬಾಬತ್ತಿನ ಸಾಲದ ಚೆಕ್‌ಗಳನ್ನು ವಿತರಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೆಶಕ ಪಿ.ಶಿವಾರೆಡ್ಡಿ, ಎಸ್‌ಎಫ್‌ಸಿಎಸ್ ಬ್ಯಾಂಕ್ ಅಧ್ಯಕ್ಷ ಯಣ್ಣಂಗೂರು ವೈ.ಬಿ.ಗಣೇಶ್, ಉಪಾಧ್ಯಕ್ಷೆ ಎಂ.ಮಂಜುಳಗುಂಡಪ್ಪ, ನಿರ್ದೆಶಕರಾದ ಜೆ.ಎಂ.ವೆಂಕಟೇಶ್, ಜೆ.ವೆಂಕಟಾಪುರ ರಘುನಾಥ್, ಜೆ.ಎಂ.ಹನುಮಂತಪ್ಪ, ಜೆ.ಎನ್.ಶ್ರೀನಿವಾಸ್, ಕುಂಭಿಗಾನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಪಿ.ಆಂಜಿನಪ್ಪ, ಜಿಲ್ಲಾ ಸಹಕಾರ ಸಂಘಗಳ ಸಹಾಯಕ ನಿಬಂಧಕ ಆರೀಫುಲ್ಲಾ ಆಸೀಪ್, ಜಂಗಮಕೋಟೆ ಎಸ್‌ಎಫ್‌ಸಿಎಸ್ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಕಾರಿ ಎಸ್.ನಾಗರಾಜ್, ಡಿಸಿಸಿ ಬ್ಯಾಂಕ್‌ನ ಶಿಡ್ಲಘಟ್ಟ ಶಾಖೆಯ ವ್ಯವಸ್ಥಾಪಕ ಆನಂದ್, ಹರೀಶ್, ಬ್ಯಾಂಕ್‌ನ ಸಿಬ್ಬಂದಿ ಹಾಜರಿದ್ದರು.
ಮುಂದಿನ ಏಪ್ರಿಲ್ ೧ರಿಂದ ಮಹಿಳಾ ಸ್ವ ಸಹಾಯ ಸಂಘಗಳಿಗೆ ೩ ಲಕ್ಷ ರೂವರೆಗಿನ ಸಾಲಕ್ಕೆ ಬಡ್ಡಿ ಇಲ್ಲದೆ ಸಾಲ ನೀಡಲಾಗುವುದು. ಇದುವರೆಗೂ ಸಾಲ ಪಡೆದುಕೊಂಡವರಿಗೆ ೩೩ ಪೈಸೆಯಷ್ಟು ಬಡ್ಡಿ ವಿಸಲಾಗುತ್ತಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ಬಜೆಟ್‌ನಲ್ಲಿ ಘೋಷಿಸಿದಂತೆ ಸ್ತ್ರಿ ಶಕ್ತಿ ಸೇರಿದಂತೆ ಇತರೆ ಮಹಿಳಾ ಸ್ವ ಸಹಾಯ ಸಂಘಗಳಿಗೆ ೩ ಲಕ್ಷದವರೆಗಿನ ಸಾಲಕ್ಕೆ ಬಡ್ಡಿ ಇಲ್ಲದೆ ಸಾಲ ನೀಡಲಾಗುವುದು.
ಬಡ್ಡಿ ರಹಿತ ಸಾಲದ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ಎಲ್ಲ ಮಹಿಳೆಯರು ಆರ್ಥಿಕವಾಗಿ ಸದೃಡರಾಗಿ ತಮ್ಮ ಕುಟುಂಬದ ಪೋಷಣೆಗೆ ಸಹಕರಿಸಿ ಸ್ವಾಭಿಮಾನದ ಬದುಕನ್ನು ರೂಪಿಸಿಕೊಳ್ಳಬೇಕು. ಆ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಸಾಗಬೇಕು ಎಂದು ಗೋವಿಂದೇಗೌಡ, ಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ನುಡಿದರು.
ದೇವರ ದಾಸಿಮಯ್ಯನವರ ಸಾಮಾಜಿಕ ಚಿಂತನೆ ಇಂದಿಗೂ ಪ್ರಸ್ತುತವಾದದ್ದು
ವಚನಕಾರರ ಯುಗದಲ್ಲಿ ಸಮಾನತೆ ಕಂಡುಕೊಳ್ಳುವ ನಿಟ್ಟಿನಲ್ಲಿ ಹಲವು ಸಾಹಿತ್ಯಗಳನ್ನು ರಚಿಸಿ ಜಾತಿ ಪದ್ಧತಿ ನಿವಾರಣೆಗೆ ಯತ್ನಿಸಿದ್ದ ದೇವರ ದಾಸಿಮಯ್ಯನವರ ಸಾಮಾಜಿಕ ಚಿಂತನೆ ಇಂದಿಗೂ ಪ್ರಸ್ತುತವಾದದ್ದು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಮಿನಿವಿಧಾನಸೌಧ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ಆದ್ಯ ವಚನಕಾರ, ನೇಕಾರ ಸಂತ ವಿಶ್ವಮಾನ್ಯ ಶರಣಶ್ರೀ ದೇವರದಾಸಿಮಯ್ಯ ಅವರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇವರ ದಾಸಿಮಯ್ಯನವರು ತಮ್ಮ ನೇಕಾರಿಕೆ ಕಾಯಕ ಜೊತೆಗೆ ವಚನ ಸಾಹಿತ್ಯ ರಚಿಸುವ ಮೂಲಕ ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಶ್ರಮಿಸಿದ್ದರು. ಅಂಥವರ ಸಾಮಾಜಿಕ ಕಳಕಳಿ ಜನರಿಗೆ ಮುಟ್ಟಿಸುವ ಕೆಲಸ ಆಗಬೇಕಿದೆ. ನೇಕಾರರ ಸಂಘದವರು ಸಭಾಂಗಣಕ್ಕೆ ಸ್ಥಳವನ್ನು ಕೋರಿದ್ದು, ಈ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ತಹಶೀಲ್ದಾರ್ ಅಜಿತ್‌ಕುಮಾರ್ ರೈ ಮಾತನಾಡಿ, ಮಹಾನ್ ವ್ಯಕ್ತಿಗಳ ಆಚರಣೆಗಳು ಕೇವಲ ಸಾಂಪ್ರದಾಯಿಕವಾಗಿರದೇ ಅವರ ತತ್ವ ಆದರ್ಶ ಮತ್ತು ಜೀವನ ಶೈಲಿಗಳನ್ನು ಅಳವಡಿಸಿಕೊಂಡು ಪಾಲಿಸುವ ಜೊತೆಗೆ ಇತರರಿಗೂ ಅಳವಡಿಸಿಕೊಳ್ಳುವಲ್ಲಿ ನೆರವಾದರೆ ಮಾತ್ರ ಆಚರಣೆಗಳಿಗೊಂದು ಅರ್ಥ ಬರುತ್ತದೆ ಎಂದು ಹೇಳಿದರು.
ನೇಕಾರ ವೃತ್ತಿ ಹೊಂದಿರುವ ದೇವಾಂಗ ಸಮಾಜ ಬಾಂಧವರಲ್ಲಿ ದಾಸಿಮಯ್ಯನವರ ಕುರಿತಂತೆ ಜಾಗೃತಿ ಮೂಡಿಸಬೇಕು. ಬಸವಣ್ಣನವರಿಗಿಂತಲೂ ಹಿಂದೆಯೇ ನೇಕಾರ ವೃತ್ತಿಯ ಜೊತೆಯಲ್ಲಿ ವಚನಗಳನ್ನು ಬರೆಯುವ ಮೂಲಕ ವೃತ್ತಿಯಲ್ಲಿ ಭಕ್ತಿಯ ಪ್ರಾಮುಖ್ಯತೆ ತೋರಿಸಿಕೊಟ್ಟ ಮಹಾನ್ ಚೈತನ್ಯವನ್ನು ರಾಜ್ಯಾದ್ಯಂತ ನೆನಪು ಮಾಡಿಕೊಳ್ಳಲು ಸಿಕ್ಕ ಅವಕಾಶದಲ್ಲಿ ಅವರ ವಚನಗಳನ್ನು ಎಲ್ಲರಿಗೂ ತಿಳಿಸಬೇಕು ಎಂದು ನುಡಿದರು.
ನಿವೃತ್ತ ಪ್ರಾಂಶುಪಾಲ ಮೊಹಮ್ಮದ್ ಖಾಸಿಂ ವಚನ ಬ್ರಹ್ಮ ದೇವರ ದಾಸಿಮಯ್ಯನವರ ಕುರಿತು ಮಾತನಾಡಿದರು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್.ನರಸಿಂಹಯ್ಯ, ವಸಾಪ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಕಾರ್ಯಾಧ್ಯಕ್ಷ ಬಿ.ಜೆ.ಗಣೇಶ್, ಸುಬ್ರಮಣಿ ಮತ್ತಿತರರು ಹಾಜರಿದ್ದರು.

