ನಮ್ಮ ರಾಜ್ಯದಲ್ಲಿ ಸಂಗೀತದ ಏಳಿಗೆಗೆ ಹೆಚ್ಚು ಪ್ರೋತ್ಸಾಹದಾಯಕವಾಗಿದ್ದದ್ದು ಭಜನೆ ಮನೆಗಳು. ಅನೇಕ ವಿದ್ವಾಂಸರುಗಳು ಇಂತಹ ಭಜನೆ ಮನೆಗಳಲ್ಲಿ ಹಾಡಿಯೇ ಆನಂತರ ಪ್ರಸಿದ್ಧಿಗೆ ಬಂದವರು. ಬಹುತೇಕ ಊರುಗಳಲ್ಲಿ ಒಂದೊಂದು ಭಜನೆ ಮನೆ ಇರುತ್ತದೆ. ಭಜನೆ ಮನೆಗಳು ಸಂಗೀತಗಾರರಿಗೆ ಗಾನಸುಧೆ ಹರಿಸಲು ಕೇಂದ್ರಗಳಾಗಿದ್ದವು. ಒಂದು ರೀತಿಯಲ್ಲಿ ಶ್ರಮಿಕ ವರ್ಗದ ಧಾರ್ಮಿಕ ಕೇಂದ್ರ ಭಜನೆ ಮನೆಗಳು. ಸಾಮಾನ್ಯವಾಗಿ ಭಜನೆ ಮನೆಯಿರುವ ರಸ್ತೆಯನ್ನು ಭಜನೆ ಮನೆ ರಸ್ತೆ ಎನ್ನುವ ರೂಢಿಯಿದೆ.
ಭಜನೆ ಮನೆಗೂ ಶ್ರೀರಾಮನವಮಿಗೂ ಅವಿನಾಭಾವ ಸಂಬಂಧ. ಭಜನೆ ಮನೆಗಳಲ್ಲಿ ಶ್ರೀರಾಮನ ಮೂರ್ತಿ ಮತ್ತು ಪಟಗಳಿರುತ್ತವೆ. ಇಲ್ಲಿ ಅಖಂಡ ರಾಮ ಭಜನೆ, ರಾಮಾಯಣ ಪಾರಾಯಣ ನಡೆಯುತ್ತವೆ. ಶಿಡ್ಲಘಟ್ಟದ ಉಲ್ಲೂರುಪೇಟೆಯಲ್ಲಿ ಭಜನೆ ಮನೆಯಿದ್ದು, ಅದು ಒಂದು ಶತಮಾನದ ಇತಿಹಾಸವನ್ನು ಹೊಂದಿದೆ. ವಿಶೇಷವೆಂದರೆ ಈ ಭಜನೆ ಮನೆಯಲ್ಲಿ ಬೆಲೆಯೇ ಕಟ್ಟಲಾಗದ ಅಪರೂಪದ ಚಿನ್ನದ ರೇಖುಗಳಿರುವ ದೇವರ ಚಿತ್ರಪಟಗಳಿವೆ.
ಒಂದು ಶತಮಾನದ ಇತಿಹಾಸವನ್ನು ತನ್ನೊಡಲಲ್ಲಿ ಇಟ್ಟುಕೊಂಡಿರುವ ಶಿಡ್ಲಘಟ್ಟದ ಭಜನೆ ಮನೆಯ ಇತಿಹಾಸವನ್ನು ಕೆದಕಿದಾಗ ಇದನ್ನು ಪ್ರಾರಂಭಿಸಿದವರ ಮನಸ್ಸುಗಳು, ಧಾರ್ಮಿಕ ಆಸಕ್ತಿ, ಸಂಗೀತದ ಪ್ರೇಮ, ರಾಮಾಯಣ ಭಾಗವತವನ್ನು ಜನರಿಗೆ ಮುಟ್ಟಿಸುವ ತವಕ, ಸಾಂಸ್ಕೃತಿಕ ಸಂಸ್ಕಾರ ಮುಂತಾದವುಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ನೂರು ವರ್ಷಗಳ ಇತಿಹಾಸ, ಶ್ರೀರಾಮ ದೇವರೊಂದಿಗಿನ ಎರಡು ಮೂರು ತಲೆಮಾರುಗಳ ನಂಟು, ಒಂದು ಶತಮಾನಗಳ ಕಾಲ ಆಚರಿಸಿಕೊಂಡು ಬಂದ ಶ್ರೀರಾಮ ಪಾರಾಯಣ, ಶ್ರೀರಾಮನ ನವಮಿ, ಅಖಂಡ ರಾಮ ಭಜನೆ, ಸಂಗೀತೋತ್ಸವಗಳ ಮೆಲುಕು ಹಾಕುವುದರಿಂದ ಹಿಂದಿನವರ ಆದರ್ಶ, ಧಾರ್ಮಿಕ ಪ್ರಜ್ಞೆ ದರ್ಶನವಾಗುತ್ತದೆ.
‘ಮಾರಮ್ಮ ಗುಡಿಯ ಪಕ್ಕದಲ್ಲಿದ್ದ ಖಾಲಿ ಸ್ಥಳವನ್ನು ಬೆಸ್ತರ ಶೀನಪ್ಪ 36 ರೂಪಾಯಿಗೆ ಕೊಂಡು ಅಲ್ಲಿ ಭಜನೆ ಮನೆಯನ್ನು ಕಟ್ಟಬೇಕೆಂದು ಮಾಚಿರೆಡ್ಡಪ್ಪ, ಮಲೆಪ್ಪನವರ ವೆಂಟರಾಯಪ್ಪ, ಚಿಕ್ಕವೆಂಕಟಪ್ಪ, ದೊಡ್ಡ ಬ್ಯಾಟಪ್ಪ, ದೊಳೆಬಜ್ಜನ್ನ, ಅರವ ಪಾಪಣ್ಣ ಅವರ ಜತೆಗೂಡಿ ತಾವೂ ಚಂದಾ ಹಾಕಿ 34 ರೂಪಾಯಿಗೆ ಭಜನೆ ಮನೆ ಕಟ್ಟಲು ಬಿಟ್ಟುಕೊಟ್ಟರು. ಈ ಕೆಲಸ ಪ್ರಾರಂಭಿಸಿದ್ದು 1917ರ ಜೂನ್1ರಂದು. ವಿವಿಧ ಭಕ್ತರಿಂದ ಸುಮಾರು 537 ರೂಪಾಯಿಯಷ್ಟು ಹಣವನ್ನು ಸಂಗ್ರಹಿಸಿ, ಭಜನೆ ಮನೆಗೋಸ್ಕರ ಸಾಗುವಳಿ ಜಮೀನನ್ನು ಕೊಂಡು, ಭಜನೆ ಮನೆಯ ಕಟ್ಟಡದ ಕೆಲಸವನ್ನು ಪ್ರಾರಂಭಿಸಿದರು.
ಶೀನಪ್ಪನವರಿಗೆ ಅಪರೂಪದ ಹಾಗೂ ಅತ್ಯುತ್ತಮ ದೇವರ ಪಟಗಳನ್ನು ತರಬೇಕೆಂಬ ಆಸೆಯಿತ್ತು. ಅದಕ್ಕಾಗಿ ಮದ್ರಾಸಿನಲ್ಲಿ ‘ಶ್ರೀ ರಾಮಾಂಜನೇಯ ಕೂಟ’ದಲ್ಲಿದ್ದ ಪಟಗಳನ್ನು ನೋಡಿ ಅದಕ್ಕಿಂತಲೂ ದೊಡ್ಡದಾದ ಪಟಗಳನ್ನು ಮಾಡಿಸಲು ಮದ್ರಾಸಿನಲ್ಲಿ ಒಪ್ಪಂದ ಕೊಟ್ಟರು. 5 ಅಡಿ ಉದ್ದ ನಾಲ್ಕೂವರೆ ಅಡಿ ಅಗಲವಿರುವ ಬಂಗಾರದ ರೇಖಿನಲ್ಲಿ ಬಿಡಿಸಿರುವಂಥಹ ಮೂರು ಪಠಗಳನ್ನು ಮಾಡಿಸಿದರು. ಸಮಸ್ತ ಋಷಿ ದೇವತೆಗಳಿರುವ ಶ್ರೀರಾಮ ಪಟ್ಟಾಭಿಷೇಕದ ಪಟ(211 ರೂ 3 ಆಣೆ 6 ಕಾಸು)ಕ್ಕೆ ಮಾಚಿರೆಡ್ಡಪ್ಪ ಹಣ ನೀಡಿದರೆ, ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮೆಯರ ಪಟ(176 ರೂ 3 ಆಣೆ 6 ಕಾಸು)ಕ್ಕೆ ಸಾರ್ವಜನಿಕರಿಂದ ಸಂಗ್ರಹಿತ ಹಣವನ್ನು, ಶ್ರೀವೆಂಕಟೇಶ್ವರಸ್ವಾಮಿ ಶ್ರೀದೇವಿ ಭೂದೇವಿಯರ ಪಟಕ್ಕೆ ವೆಂಕಟರಾಯಪ್ಪ ಹಣ ನೀಡಿದರು. ಗೋಡೆಯಲ್ಲಿನ ಕನ್ನಡಿ ಬಿಂಬ ಸೇರಿದಂತೆ ಮದ್ರಾಸಿನಿಂದ ತರಲು 528 ರೂ 10 ಆಣೆ 6 ಕಾಸು ಆಗಿತ್ತು. ರೈಲಿನಲ್ಲಿ ಬಂದಿಳಿದಾಗ ಇಡೀ ಉಲ್ಲೂರುಪೇಟೆಯ ಜನರೆಲ್ಲ ಸಡಗರದಿಂದ ಸ್ವಾಗತಿಸಿದ್ದರು. ಇವುಗಳ ಪ್ರಾಣ ಪ್ರತಿಷ್ಟೆ ಕಾರ್ಯಕ್ರಮವನ್ನು 1928 ರ ಡಿಸೆಂಬರ್ 2 ರಿಂದ 15 ರವರೆಗೂ ಶಾಸ್ತ್ರೋಕ್ತವಾಗಿ ನಡೆಸಲಾಯಿತು. ನಂತರದ ಕಾಲದಲ್ಲಿ ಅಂದರೆ 1968 ರ ಸುಮಾರಿಗೆ ಭಕ್ತರ ಸಹಕಾರದಿಂದ ಲಕ್ಷ್ಮೀ ಮತ್ತು ಸರಸ್ವತಿಯ ಪಟಗಳೂ ಸೇರಿಕೊಂಡವು.
ಪ್ರತಿದಿನ ರಾಮಾಯಣ ಹರಿಕಥೆ ಏರ್ಪಾಟಾಯಿತು. ವಸಂತೋತ್ಸವವನ್ನು ಆಚರಿಸಲಾಯಿತು. ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವ, ಗೋಕುಲಾಷ್ಟಮಿ, ಭಜನೆ ಪೂಜೆಗಳು ನಿರಂತರವಾಗಿ ನಡೆಯುತ್ತಾ ಸಾಗಿತು.
1966ರಲ್ಲಿ ಶೀನಪ್ಪ ತಮ್ಮ ಪತ್ನಿ ನಿಧನರಾದ ಮೇಲೆ ತಮ್ಮ ಒಂದು ಅಂಗಡಿಯನ್ನು ಭಜನೆ ಮನೆಗೆ ದಾನ ಬರೆದರು. ಭಜನೆ ಮನೆಯ ಹಿಂದಿನ ಖಾಲಿ ಜಾಗವನ್ನು ಒಳಪಡಿಸಿ ರಾಮ ಸೀತೆ ಲಕ್ಷ್ಮಣ ಮತ್ತು ಹನುಮಂತ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ದೇವಸ್ಥಾನವಾಗಿಸಬೇಕು ಎಂದು ಭಕ್ತರ ಸಮ್ಮುಖದಲ್ಲಿ ತಿಳಿಸಿ ವಿಗ್ರಹಗಳನ್ನು ಮಾಡಿಸಲು ಒಪ್ಪಂದ ಕೊಟ್ಟರು. ಆದರೆ ಅವರು ನಿಧನರಾದ ಕಾರಣ ಅವರ ಮಗ ವೆಂಕಟರಮಣಯ್ಯ 1969 ರ ಫೆಬ್ರುವರಿ 2 ರಲ್ಲಿ ವಿಗ್ರಹಗಳ ಪ್ರತಿಷ್ಠಾಪನೆ ಮಾಡಿಸಿದರು. ಈ ಕಾರಣದಿಂದ ಉಲ್ಲೂರುಪೇಟೆಯಲ್ಲಿ ಮಾರಮ್ಮನಗುಡಿ, ಬಸವಣ್ಣನ ಗುಡಿಯೊಂದಿಗೆ ಭಜನೆ ಮನೆಯು ಶ್ರೀರಾಮ ಮಂದಿರವಾಗಿ ನೆಲೆಸುವಂತಾಯಿತು’ ಎಂದು ಈ ಬಗ್ಗೆ ಬಿ.ಸೀನಪ್ಪ ಅವರ ಮಗ ಎಸ್.ವೆಂಕಟರಮಣಯ್ಯ ದಾಖಲಿಸಿರುವ ಮಾಹಿತಿಯಿಂದ ತಿಳಿಯುತ್ತದೆ.
‘1970 ರ ಸುಮಾರಿಗೆ ಈಗಿನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ ಮತ್ತು ದಿವಂಗತ ಮೇಸ್ಟ್ರು ಕೃಷ್ಣಪ್ಪ ಅವರ ನೇತೃತ್ವದಲ್ಲಿ ಪ್ರಾರಂಭಗೊಂಡ ವಿನಾಯಕ ಯುವಕರ ಸಂಘ ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಿಲ್ಲೆಗೇ ಹೆಸರಾಯಿತು. ಸುಮಾರು 25 ವರ್ಷಗಳ ಕಾಲ ತುಮಕೂರು ಬಳಿಯ ಗೂಳೂರಿನಿಂದ ಶಿಲ್ಪಿಗಳು ಬಂದು ಸ್ಥಳೀಯ ಕೆರೆಗಳಿಂದ ಮಣ್ಣನ್ನು ಆರಿಸಿ ತಂದು ಗಣೇಶನ ಮೂರ್ತಿಗಳನ್ನು ತಯಾರಿಸುತ್ತಿದ್ದುದು ಈಗ ಇತಿಹಾಸ. ಗಣೇಶನ ಹಬ್ಬದ ಸಂದರ್ಭದಲ್ಲಿ ಒಂದು ತಿಂಗಳ ಕಾಲ ವಿವಿಧ ನಾಟಕಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. 40 ವರ್ಷಗಳ ಹಿಂದೆ ವಿನಾಯಕ ಯುವಕರ ಸಂಘದ ನೇತೃತ್ವದಲ್ಲಿ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಡಾ.ವೀರೇಂದ್ರ ಹೆಗಡೆಯವನ್ನು ಕರೆಸಲಾಗಿತ್ತು’ ಎಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ.
‘ಕಳೆದ ಕೃಷ್ಣಾಷ್ಟಮಿ ಸಂದರ್ಭದಲ್ಲಿ ಮಾರಮ್ಮನಗುಡಿ ಮತ್ತು ಶ್ರೀರಾಮ ಮಂದಿರದ ಮುಂದೆ ರಸ್ತೆಯಲ್ಲಿ ಭಕ್ತರ ಸಹಕಾರದಿಂದ ಕಬ್ಬಣದ ಕಂಬಗಳು ಮತ್ತು ಶೀಟುಗಳಿಂದ ಬಿಸಿಲು ಬೀಳದಂತೆ ನೆರಳಿಗಾಗಿ ಶಾಶ್ವತ ನಿರ್ಮಾಣ ಕಾರ್ಯ ನಡೆಯಿತು. ಪ್ರತಿ ಯುಗಾದಿಯಂದು ಪಂಚಾಂಗ ಶ್ರವಣ, ಸಂಕ್ರಾಂತಿಯಲ್ಲಿ ಎತ್ತುಗಳ ಮೆರವಣಿಗೆ, ಶ್ರೀರಾಮನವಮಿಯಂದು ಕಲ್ಯಾಣೋತ್ಸವ, ತ್ಯಾಗರಾಜರ ಆರಾಧನೆಗೆ ಸಂಗೀತೋತ್ಸವ, 15ದಿನಗಳ ಕಾಲ ಗಣೇಶೋತ್ಸವ, ಧನುರ್ಮಾಸ ಪೂಜೆ, ಮೂರು ವರ್ಷಕ್ಕೊಮ್ಮೆ ಆಷಾಡದಲ್ಲಿ ಜಾತ್ರೆ, ನಿತ್ಯಪೂಜೆ ನಡೆಯುತ್ತಿದೆ. ಕೃಷ್ಣಾಷ್ಟಮಿ ಮತ್ತು ಸಂಕ್ರಾಂತಿ ಹಬ್ಬದಂದು ನಡೆಯುವ ಎತ್ತುಗಳ ಪೂಜೆಯ ಸಂದರ್ಭದಲ್ಲಿ ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮೆಯರ ಪಟವನ್ನು ಕೆಳಗೆ ಇಳಿಸಿ ಪೂಜಿಸಲಾಗುತ್ತದೆ’ ಎಂದು ಒಂಭತ್ತು ವರ್ಷಗಳಿಂದ ಅರ್ಚಕರಾಗಿರುವ ಸತ್ಯಪ್ರಕಾಶ್ ತಿಳಿಸಿದರು.
ಒಂದು ನೂರು ವರ್ಷದ ಐತಿಹಾಸಿಕ ಉಲ್ಲೂರುಪೇಟೆಯ ಶ್ರೀರಾಮ ಮಂದಿರ
ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅಡ್ಡಮತ ಹಾಕಿದ ನಾಲ್ವರು ಕಾಂಗ್ರೆಸ್ ಸದಸ್ಯರನ್ನು ವಜಾಗೊಳಿಸಿ ಜಿಲ್ಲಾಧಿಕಾರಿ ಆದೇಶ
ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡ ಮತ ಹಾಕಿದ ನಗರಸಭೆಯ ನಾಲ್ವರು ಕಾಂಗ್ರೆಸ್ ಸದಸ್ಯರನ್ನು ನಗರಸಭೆ ಸದಸ್ಯತ್ವ ಸ್ಥಾನದಿಂದ ವಜಾಗೊಳಿಸಿ ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ ಆದೇಶ ಹೊರಡಿಸಿದ್ದಾರೆ.
ಶಿಡ್ಲಘಟ್ಟ ನಗರಸಭೆಯ ೪ನೇ ವಾರ್ಡಿನ ಸುಹೇಲ್ ಅಹ್ಮದ್, ೭ನೇ ವಾರ್ಡಿನ ಎಚ್.ಎಸ್.ನಯಾಜ್, ೧೬ನೇ ವಾರ್ಡಿನ ಸಿಕಂಧರ್ ಹಾಗೂ ೨೬ನೇ ವಾರ್ಡಿನ ವಹಿದಾ ಕೌಸರ್‌ರನ್ನು ನಗರಸಭಾ ಸದಸ್ಯ ಸ್ಥಾನದಿಂದ ವಜಾಗೊಳಿಸಿ ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಕಳೆದ ೨೦೧೬ರ ಸೆಪ್ಟೆಂಬರ್ ೧೬ರಂದು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಮತದಾನದಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಅಡ್ಡ ಮತ ಚಲಾಯಿಸಿದ ಈ ನಾಲ್ವರ ವಿರುದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ ಹಾಗೂ ಅಧ್ಯಕ್ಷ ಸ್ಥಾನದ ಪರಾಜಿತ ಅಭ್ಯರ್ಥಿ ಕಾಂಗ್ರೆಸ್ ಸದಸ್ಯ ಎಸ್.ಬಿ.ಬಾಬು(ಯಮಹಾ ಬಾಬು) ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.
ನಾಲ್ವರು ಕಾಂಗ್ರೆಸ್ ಸದಸ್ಯರು ವಜಾ ಆಗುವ ಮೂಲಕ ನಗರಸಭೆಯಲ್ಲಿನ ಕಾಂಗ್ರೆಸ್ ಸದಸ್ಯರ ಸಂಖ್ಯೆ ೧೦ಕ್ಕೆ ಇಳಿದಿದೆ. ಜೆಡಿಎಸ್‌ನ ೧೧ ಹಾಗೂ ಬಿಜೆಪಿ, ಪಕ್ಷೇತರ ತಲಾ ಒಬ್ಬರು ಸದಸ್ಯರಿದ್ದಾರೆ.
೨೦೧೬ರ ಸೆಪ್ಟೆಂಬರ್ ೧೬ರಂದು ನಡೆದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಕ್ರಮವಾಗಿ ಕಾಂಗ್ರೆಸ್‌ನಿಂದ ಎಸ್.ಬಿ.ಬಾಬು, ಸುಗುಣ ಲಕ್ಷ್ಮೀನಾರಾಯಣ್ ಹಾಗೂ ಜೆಡಿಎಸ್‌ನಿಂದ ಅಪ್ಸರ್ ಪಾಷ, ಪ್ರಭಾವತಿ ಸುರೇಶ್ ಸ್ಪರ್ಧಿಸಿದ್ದರು. ಒಟ್ಟು ೨೭ ಸದಸ್ಯ ಸಂಖ್ಯೆಯ ನಗರಸಭೆಯಲ್ಲಿ ಕಾಂಗ್ರೆಸ್‌ನ ೧೪ ಸದಸ್ಯರಿದ್ದು ಎಲ್ಲರಿಗೂ ಜಿಲ್ಲಾ ಕಾಂಗ್ರೆಸ್‌ನಿಂದ ವಿಪ್ ಜಾರಿ ಮಾಡಿತ್ತು. ಆದರೆ ಇದೀಗ ವಜಾ ಆಗಿರುವ ನಾಲ್ವರು ಸದಸ್ಯರು ಪಕ್ಷದ ವಿಪ್ ಉಲ್ಲಂಘಿಸಿ ಜೆಡಿಎಸ್ ಪಕ್ಷದ ಅಫ್ಸರ್ ಪಾಷ, ಪ್ರಭಾವತಿ ಸುರೇಶ್‌ಗೆ ಅಡ್ಡ ಮತ ಹಾಕಿದ್ದರು.
ತೀವ್ರ ಜಿದ್ದಾ ಜಿದ್ದಿಯಿಂದ ನಡೆದ ಈ ಚುನಾವಣೆಯಲ್ಲಿ ಸಂಸದ ಕೆ.ಎಚ್.ಮುನಿಯಪ್ಪ ಹಾಗೂ ಶಾಸಕ ಎಂ.ರಾಜಣ್ಣ ಸಹ ಮತಚಲಾಯಿಸಿದ್ದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಚ್.ಎಸ್.ಬಾಬು ಹಾಗೂ ಸುಗುಣಲಕ್ಷ್ಮೀನಾರಾಯಣ್ ಸಂಸದರ ಮತವೂ ಸೇರಿದಂತೆ ಒಟ್ಟು ೧೧ ಮತಗಳಿಸಿ ಪರಾಭವಗೊಂಡರೆ ಶಾಸಕರ ಮತ ಸೇರಿದಂತೆ ೧೮ ಮತಗಳನ್ನು ಗಳಿಸುವ ಮೂಲಕ ಜೆಡಿಎಸ್‌ನ ಅಫ್ಸರ್‌ಪಾಷ ಹಾಗು ಪ್ರಭಾವತಿ ಸುರೇಶ್ ಜಯಗಳಿಸಿದ್ದರು.
ನಗರಸಭೆಯಲ್ಲಿ ೧೪ ಸ್ಥಾನಗಳೊಂದಿಗೆ ಕಾಂಗ್ರೆಸ್‌ಗೆ ಬಹುಮತ ಇದ್ದರೂ ಸಹ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಕಳೆದುಕೊಂಡಿತ್ತು. ಇದರಿಂದ ತಾಲ್ಲೂಕು ಕಾಂಗ್ರೆಸ್ ತೀವ್ರ ತಮಗಾದ ಮುಖಭಂಗದಿಂದ ಅಡ್ಡ ಮತದಾನದ ವಿರುದ್ದ ದೂರು ನೀಡಲಾಗಿತ್ತು.
ತನಿಖೆ ನಡೆಸಿದ ಜಿಲ್ಲಾಧಿಕಾರಿಗಳು ಕರ್ನಾಟಕ ನಗರ ಸ್ಥಳೀಯ ಸಂಸ್ಥೆಗಳ ಪಕ್ಷಾಂತರ ನಿಷೇಧ ಕಾಯಿದೆ ೧೯೮೭ರ ನಿಯಮದಡಿ ಅಡ್ಡ ಮತದಾನ ಮಾಡಿದ ನಾಲ್ವರು ಕಾಂಗ್ರೆಸ್ ಸದಸ್ಯರನ್ನು ನಗರಸಭಾ ಸದಸ್ಯ ಸ್ಥಾನದಿಂದ ವಜಾ ಗೊಳಿಸಿ ಆದೇಶಿಸಿದ್ದಾರೆ.
ಕೋಚಿಮುಲ್‌ನಿಂದ ಹೈನುಗಾರರಿಗೆ ವಿವಿಧ ಸವಲತ್ತುಗಳ ವಿತರಣೆ
ಕೋಲಾರ- ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ(ಕೋಚಿಮುಲ್)ದ ಉಪ ವ್ಯವಸ್ಥಾಪಕರ ಕಚೇರಿಗೆ ಸ್ವಂತ ಕಟ್ಟಡಕ್ಕೆ ನಿವೇಶನ ಗುರ್ತಿಸಿದ್ದು ೬೦ ಲಕ್ಷ ರೂ.ವೆಚ್ಚದಲ್ಲಿ ಭವ್ಯವಾದ ಕಟ್ಟಡವನ್ನು ನಿರ್ಮಿಲಾಗುವುದು ಎಂದು ಕೋಚಿಮುಲ್ ನಿರ್ದೆಶಕ ಬಂಕ್ ಮುನಿಯಪ್ಪ ತಿಳಿಸಿದರು.
ನಗರದ ಕೋಚಿಮುಲ್ ಉಪ ವ್ಯವಸ್ಥಾಪಕರ ಕಚೇರಿಯಲ್ಲಿ ಈಚೆಗೆ ಹೈನುಗಾರರಿಗೆ ವಿವಿಧ ಸವಲತ್ತುಗಳನ್ನು ವಿತರಿಸಿ ಮಾತನಾಡಿ, ಉಪ ವ್ಯವಸ್ಥಾಪಕರ ಕಚೇರಿಯು ಇದೀಗ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಶೀಘ್ರದಲ್ಲೆ ಸ್ವಂತ ಕಟ್ಟಡ ನಿರ್ಮಿಸಲಾಗುವುದು.
ನಗರದ ದಿಬ್ಬೂರಹಳ್ಳಿ ಬೈಪಾಸ್‌ನಲ್ಲಿ ೪ ಗುಂಟೆಯಷ್ಟು ನಿವೇಶನದಲ್ಲಿ ೬೦ ಲಕ್ಷ ರೂಗಳ ವೆಚ್ಚದಲ್ಲಿ ಭವ್ಯವಾದ ಕಟ್ಟಡವನ್ನು ನಿರ್ಮಿಸಲಾಗುವುದು, ಅಲ್ಲಿ ಶಿಬಿರ ಕಚೇರಿಯ ಎಲ್ಲ ಕಾರ್ಯ ಚಟುವಟಿಕೆಗಳಿಗೂ ಅನುಕೂಲಗಳನ್ನು ಕಲ್ಪಿಸಲಾಗುವುದು ಎಂದರು.
ತಾಲ್ಲೂಕಿನ ಜಂಗಮಕೋಟೆ ಹೋಬಳಿ ಗಂಬೀರನಹಳ್ಳಿ ಬಳಿ ಜಮೀನನ್ನು ಗುರ್ತಿಸಿದ್ದು ಅಲ್ಲಿ ಪಶು ಆಹಾರ ಘಟಕ ಸೇರಿದಂತೆ ಹಾಲಿನ ಉಪ ಉತ್ಪನ್ನಗಳ ತಯಾರಿಕೆ ಘಟಕವನ್ನು ಆರಂಭಿಸಲು ಉದ್ದೇಶಿಸಿದ್ದು ಜಮೀನು ಮಂಜೂರು ಮಾಡಲು ಜಿಲ್ಲಾಧಿಕಾರಿಗಳ ಹಂತದಲ್ಲಿ ಪ್ರಸ್ತಾಪ ಇದೆ.
ಡಿಸಿಯವರು ಅನುಮತಿ ನೀಡಿದರೆ ಈ ಭಾಗದ ಹೈನುಗಾರರಿಗೆ ಹೆಚ್ಚಿನ ಅನುಕೂಲ ಆಗಲಿದೆ ಎಂದು ವಿವರಿಸಿದರು.
ಇದೀಗ ಬರಗಾಲ ಇದ್ದರೂ ತಾಲ್ಲೂಕಿನಲ್ಲಿ ಪ್ರತಿ ದಿನ ೧ ಲಕ್ಷ ೧೪ ಸಾವಿರ ಲೀಟರ್ ಹಾಲು ಉತ್ಪಾದನೆ ಆಗುತ್ತಿದ್ದು ಉತ್ಪಾದನೆ ಹಾಗೂ ಗುಣಮಟ್ಟದಲ್ಲಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಮ್ಮ ತಾಲ್ಲೂಕು ಎರಡನೇ ಸ್ಥಾನದಲ್ಲಿ ಇದೆ ಎಂದು ಹರ್ಷ ವ್ಯಕ್ತಪಡಿಸಿದರು.
ಗುಣಮಟ್ಟದ ಹಾಲು ಉತ್ಪಾಸಿ ಇಲಾಖೆಯಿಂದ ಸಿಗುವ ಎಲ್ಲ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಅವರು ಹೈನುಗಾರರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮೃತ ರಾಸುಗಳ ವಾರಸುದಾರ ರೈತರಿಗೆ ವಿಮೆ ಹಣದ ಚೆಕ್ ಸೇರಿದಂತೆ ಹೈನುಗಾರರಿಗೆ ವಿವಿಧ ಸವಲತ್ತುಗಳನ್ನು ವಿತರಿಸಿದರು.
ಉಪ ವ್ಯವಸ್ಥಾಪಕ ಹನುಮಂತರಾವ್, ಡೇರಿ ನೌಕರರ ಸಂಘದ ಕಾರ್ಯದರ್ಶಿ ಚಂದ್ರೇಗೌಡ, ಕುಮ್ಮಣ್ಣ ಮತ್ತಿತರರು ಹಾಜರಿದ್ದರು.
ಡಾ.ಬಿ.ಆರ್.ಅಂಬೇಡ್ಕರ್ ಜ್ಞಾನದರ್ಶನ ಅಭಿಯಾನ ಕಾರ್ಯಕ್ರಮ
ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ. ಅಂಬೇಡ್ಕರ್ ಕಲ್ಪನೆಯ ಸಾಮಾಜಿಕ ಬದಲಾವಣೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಆಗಬೇಕಾಗಿದೆ ಎಂದು ಬೆಂಗಳೂರು ನ್ಯಾಷನಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ನಗರಗೆರೆ ರಮೇಶ್ ಅಭಿಪ್ರಾಯಪಟ್ಟರು.
ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಶುಕ್ರವಾರ ಆಯೋಜನೆ ಮಾಡಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜ್ಞಾನದರ್ಶನ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರ ಕೃತಿಗಳ ಕುರಿತು ಸಮಾಜದ ಎಲ್ಲಾ ವರ್ಗಗಳ ಜನತೆ, ಶೋಷಿತ ಸಮುದಾಯ, ಮಾಧ್ಯಮಗಳು ಸೇರಿ ಎಲ್ಲರ ಜೊತೆ ವಿವರವಾದ ಚರ್ಚೆ ಸಂವಾದ ನಡೆಸಬೇಕು. ಅಂಬೇಡ್ಕರ್ ತಿಳಿಸಿದಂತೆ ನಮ್ಮ ಚಿಂತನೆಗಳು ಮತ್ತು ಬರವಣಿಗೆ ದೃಢವಾಗಿದ್ದರೆ ರಾಷ್ಟ್ರ ಸದೃಢವಾಗಿರುತ್ತದೆ. ಸಮಾಜದಲ್ಲಿನ ಎಲ್ಲಾ ಜಾತಿ ವರ್ಗದ ಜನರನ್ನು ಒಗ್ಗಟ್ಟಿನಿಂದ ಕಾಣಬೇಕೆಂಬ ಹಂಬಲ ಹೊಂದಿದ್ದ ಅಂಬೇಡ್ಕರ್ ಅವರನ್ನು ದಲಿತರ ನಾಯಕ ಎಂಬ ಪಟ್ಟಕಟ್ಟಿ ಒಂದು ಜನಾಂಗ(ಸಮುದಾಯ) ಕ್ಕೆ ಸೀಮಿತಗೊಳಿಸುತ್ತಿರುವುದು ಶೋಚನೀಯ ಸಂಗತಿಯಾಗಿದೆ. ವಿದ್ಯಾರ್ಥಿಗಳು ಇತಿಹಾಸವನ್ನು ಓದಬೇಕು. ಕೇವಲ ಕಾಲ್ಪನಿಕ ಕಟ್ಟುಕಥೆಗಳಿಂದ ಇತಿಹಾಸ ತಿಳಿಯಲು ಸಾಧ್ಯವಾಗುವುದಿಲ್ಲ. ಅಂಬೇಡ್ಕರ್ ಅವರೇ ಹೇಳುವಂತೆ ಇತಿಹಾಸ ತಿಳಿಯದವರು ಇತಿಹಾಸವನ್ನು ಸೃಷ್ಠಿಸಲಾರರು ಎಂಬ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ನಡಿಪಿನಾಯಕನಹಳ್ಳಿ ವೆಂಕಟೇಶ್ ಮಾತನಾಡಿ, ಸಮಾಜದಲ್ಲಿನ ಜಾತಿವ್ಯವಸ್ಥೆ, ಅಸ್ಪೃಶ್ಯತೆ, ಭ್ರಷ್ಟಾಚಾರ, ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಯುವಸಮುದಾಯ ಸಂಘಟಿತರಾಗಬೇಕು. ದೇವಾಲಯಗಳ ಮುಂದೆ ಸಾಲಿನಲ್ಲಿ ನಿಂತರೆ ನಮ್ಮ ಜೀವನ ಬದಲಾಗುವುದಿಲ್ಲ. ಗ್ರಂಥಾಲಯಗಳಿಗೆ ಹೋಗಿ ಪುಸ್ತಕಗಳನ್ನು ಓದುವಂತಹ ಪ್ರವೃತ್ತಿ ಬೆಳೆಸಿಕೊಂಡಾಗ ನಮ್ಮ ಬದುಕು ಹಸನಾಗುತ್ತದೆ. ಮಹಿಳಾ ಸಬಲೀಕರಣವಾಗಬೇಕು. ಈ ದೇಶದಲ್ಲಿನ ಪ್ರತಿಯೊಂದು ಮಗುವಿಗೂ ಶಿಕ್ಷಣ ಸಿಗಬೇಕು. ಶಿಕ್ಷಣ ರಾಷ್ಟ್ರೀಕರಣವಾದಾಗ, ಅಸ್ಪೃಶ್ಯತೆ, ಜಾತಿಯ ಸಂಕೋಲೆಗಳಿಂದ ದೇಶ ಮುಕ್ತವಾದಾಗ ಮಾತ್ರ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುತ್ತದೆ ಎಂದರು.
ಪ್ರಾಂಶುಪಾಲ ಚಂದ್ರಾನಾಯಕ್ ಮಾತನಾಡಿ, ದೇಶದ ಪ್ರತಿಯೊಬ್ಬ ನಾಗರಿಕರು ಸಹಕಾರಿ ತತ್ವದಡಿಯಲ್ಲಿ ಜೀವನ ರೂಪಿಸಿಕೊಳ್ಳುತ್ತಿರುವುದಕ್ಕೆ ಕಾರಣ ಸಂವಿಧಾನ, ಇದನ್ನು ರಚನೆ ಮಾಡುವಲ್ಲಿ ಬಹಳಷ್ಟು ಶ್ರಮಪಟ್ಟಿರುವ ಅಂಬೇಡ್ಕರ್ ಅವರು ಎಲ್ಲರಿಗೂ ಮಾದರಿಯಾಗಬೇಕು. ವಿದ್ಯಾರ್ಥಿಗಳು ಇತಿಹಾಸವನ್ನು ಸೃಷ್ಠಿ ಮಾಡುವಂತಹ ನಾಯಕರುಗಳಾಗಿ ರೂಪುಗೊಳ್ಳಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಅನಸೂಯದೇವಿ, ಅಂಬೇಡ್ಕರ್ ಜ್ಞಾನ ದರ್ಶನ ಕೋಲಾರದ ವಲಯ ಸಂಯೋಜಕಿ ಪದ್ಮ, ಸಹಾಯಕ ಪ್ರಾಧ್ಯಾಪಕ ಎಂ.ಮುನಿರಾಜು, ಜಿಲ್ಲಾ ಸಂಚಾಲಕ ಸಿ.ಜಿ.ಗಂಗಪ್ಪ, ಮಾದಿಗ ದಂಡೋರ ತಾಲ್ಲೂಕು ಅಧ್ಯಕ್ಷ ಗುರುಮೂರ್ತಿ ಮುಂತಾದವರು ಹಾಜರಿದ್ದರು.
ವಕೀಲರ ಸಂಘದ ಸದಸ್ಯರಿಂದ ಕಾನೂನು ತಿದ್ದುಪಡಿಗೆ ವಿರೋಧ
ವಕೀಲರ ವೃತ್ತಿಗೆ ಹಾಗು ವಕೀಲರ ಹಕ್ಕುಗಳಿಗೆ ಚ್ಯುತಿ ತರುವಂತಹ ಅಸಂವಿಧಾನಿಕ ಅಂಶಗಳನ್ನು ಒಳಗೊಂಡ ಕಾನೂನು ತಿದ್ದುಪಡಿಗೆ ಕಾನೂನು ಆಯೋಗ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಸಲ್ಲಿಸಿರುವ ಕ್ರಮವನ್ನು ವಿರೋಧಿಸಿ ಶುಕ್ರವಾರ ವಕೀಲರ ಸಂಘದ ಸದಸ್ಯರು ಕಲಾಪದಿಂದ ಹೊರಗುಳಿದು ಕಾನೂನು ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದರು.
ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ನ್ಯಾಯಾಲಯದ ಆವರಣದಲ್ಲಿ ಕಾನೂನು ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿ ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ ಮಾತನಾಡಿ, ಕಕ್ಷಿದಾರರು ವಕೀಲರ ವಿರುದ್ಧ ದಾಖಲಿಸುವ ದೂರುಗಳ ವಿಚಾರಣೆಗೆ ಸಂಬಂಧಿಸಿದಂತೆ ವಕೀಲರ ಕಾಯ್ದೆ ೧೯೬೧ ಕ್ಕೆ ತರಲು ಉದ್ದೇಶಿಸಿರುವ ತಿದ್ದುಪಡಿ ಮಸೂದೆ ವಕೀಲರ ವೃತ್ತಿ ಹಾಗೂ ಹಕ್ಕುಗಳಿಗೆ ಚ್ಯುತಿ ಉಂಟು ಮಾಡುವಂತಿದೆ. ಆದ್ದರಿಂದ ಇದನ್ನು ವಿರೋಧಿಸುತ್ತಿದ್ದೇವೆ.
ಕಕ್ಷಿದಾರರು ತಮ್ಮ ವಕೀಲರ ವಿರುದ್ಧ ನೀಡಿದ ದೂರು ಸಾಬೀತಾದರೆ ೩ ಲಕ್ಷ ದಂಡ ಹಾಗೂ ೫ ಲಕ್ಷ ಪರಿಹಾರ ನೀಡಲು ಉದ್ದೇಶಿತ ಮಸೂದೆಯಡಿ ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಈ ಮಸೂದೆ ವಕೀಲರಿಗೆ ಮಾರಕವಾಗಿದೆ. ವಿಚಾರಣೆ ಸಮಿತಿಗೆ ಸಾರ್ವಜನಿಕ ವಲಯದಿಂದ ಲೆಕ್ಕ ಪರಿಶೋಧಕರು, ವೈದ್ಯರನ್ನು ನೇಮಿಸಲು ಮುಖ್ಯ ನ್ಯಾಯಮೂರ್ತಿಗಳಿಗೆ ಅಧಿಕಾರ ಕೊಡುವ ಶಿಫಾರಸ್ಸು ಒಪ್ಪಲು ಸಾಧ್ಯವಿಲ್ಲವೆಂದರು.
ವಕೀಲರ ಸಂಘದ ಕಾರ್ಯದರ್ಶಿ ಬೈರಾರೆಡ್ಡಿ, ಚಂದ್ರಶೇಖರ್, ಮಂಜುನಾಥ್, ವೀರಕುಮಾರ್, ಮುರಳಿ, ಕೃಷ್ಣ, ರಘು, ಮಂಜುಕಿರಣ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ರೇಣುಕಾ ಯಲ್ಲಮ್ಮದೇವಿಯ ಹಸಿ ಕರಗ
ನಗರದ ಟಿ.ಬಿ.ರಸ್ತೆಯಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮದೇವಿಯ ಹಸಿ ಕರಗ ಮಹೋತ್ಸವವು ಬುಧವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು.
ಬುಧವಾರ ಯುಗಾದಿಯ ದಿನ ರಾತ್ರಿ ನಡೆಯುವ ಹಸಿಕರಗದ ರಚನೆ ಬಹು ಕಟ್ಟುನಿಟ್ಟಾದ ಹಾಗೂ ಸಂಪ್ರದಾಯಬದ್ಧವಾದ ಕಾರ್ಯ. ಶಾಸ್ತ್ರಬದ್ಧವಾಗಿ ಹಸಿ ಮಣ್ಣಿನಿಂದ ಕರಗವನ್ನು ರೂಪಿಸುವ ಹಕ್ಕು ನಿರ್ದಿಷ್ಟವಾದ ಮನೆತನದವರಿಗೆ ಮಾತ್ರ ಮೀಸಲು. ಗರ್ಭಗುಡಿಯಲ್ಲಿ ನಡೆಯುವ ಈ ಕಾರ್ಯದ ರಹಸ್ಯವನ್ನು ಯಾರೂ ಹೊರಗೆಡಹಲು ಇಚ್ಛಿಸುವುದಿಲ್ಲ. ಸಂಜೆಯ ಸುಮಾರಿಗೆ ಕರಗ ಹೊತ್ತು ನಡೆಯುವ ವ್ಯಕ್ತಿಗೆ ವಪನ ಸಂಸ್ಕಾರ ಮಾಡಿ, ಕಂಕಣ ಕಟ್ಟಿ, ಕೈತುಂಬ ಕರಿ ಬಳೆ ತೊಡಿಸಿ, ಅಚ್ಚ ಮಲ್ಲಿಗೆಯ ಜಡೆಕುಚ್ಚುಗಳಿಂದ ಸಿಂಗರಿಸಿ, ಅರಿಶಿನದ ಸೀರೆ, ಕುಪ್ಪುಸ ಉಡಿಸಿ, ಆಭರಣಗಳಿಂದ ಅಲಂಕರಿಸಲಾಗಿತ್ತು. ಕರಗ ಹೊರುವ ವ್ಯಕ್ತಿ ನವವಧುವಿನಂತೆ ಶೋಭಿಸುತ್ತಿದ್ದರು.
ಅನಂತರ ಶಕ್ತಿಸ್ವರೂಪನಾದ ಆ ವ್ಯಕ್ತಿಗೆ ಧೂಪ ದೀಪಗಳಿಂದ ಮಂಗಳವಾದ್ಯಗಳೊಂದಿಗೆ ಶಾಸ್ತ್ರೋಕ್ತವಾದ ಪೂಜೆ ನಡೆಯಿತು. ಅನಂತರ ಹಣೆಗೆ ನಾಮ, ನಡುಪಟ್ಟಿ ಧರಿಸಿ ಕೈಯಲ್ಲಿ ಕತ್ತಿ ಹಿಡಿದ ಅಂಗರಕ್ಷಕರ ತಂಡದ ವೀರಕುಮಾರರ ಕಾವಲಿನಲ್ಲಿ ಕರಗ ಹೊರುವ ವ್ಯಕ್ತಿಯನ್ನು ನಡೆಮಡಿಯೊಂದಿಗೆ ದೇವಸ್ಥಾನಕ್ಕೆ ಕರೆತಂದರು. ಅಷ್ಟರಲ್ಲಿ ಅರಿಶಿನ, ಕುಂಕುಮ ಅಚ್ಚಮಲ್ಲಿಗೆ ಹೂವಿನಿಂದ ಅಲಂಕೃತವಾದ ಹಸಿಕರಗ ಸಿದ್ಧವಾಗಿತ್ತು. ಕರಗದ ಮೇಲೆ ಗೋಪುರದಂತೆ ಮಲ್ಲಿಗೆ ಹೂವಿನ ಅಲಂಕಾರವಿದ್ದು ತುದಿಯಿಂದ ಇಳಿಬಿಟ್ಟ ಹೂ ಸರಗಳನ್ನು ಹೊರುವವರ ಭುಜದಿಂದ ಕೆಳಕ್ಕೆ ಮಾಲೆಯಂತೆ ಹರಡಿಕೊಳ್ಳುವ ರೀತಿಯಲ್ಲಿ ಕಟ್ಟಿದ್ದರು.
ಕರಗವನ್ನು ಹೊತ್ತಮೇಲೆ ಮತ್ತೊಮ್ಮೆ ವಿಶೇಷ ಮಂಗಳಾರತಿಯಾದ ನಂತರ ಸ್ತುತಿಪದ್ಯಗಳನ್ನು ಹೇಳುವ ಪೂಜಾರಿ ಹಾಗೂ ವೀರಕುಮಾರರ ರಕ್ಷಣೆಯಲ್ಲಿ ಗುಡಿಯ ಅಂಗಳ ಬಿಟ್ಟ ಕರಗ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬೆಳಗಿನ ಜಾವಕ್ಕೆ ಮತ್ತೆ ಗರ್ಭಗುಡಿ ಪ್ರವೇಶಿಸಿತು.
ಕರಗದ ಸ್ವಾಗತಕ್ಕಾಗಿ ಪ್ರತಿ ಮನೆಯವರೂ ಮನೆ ಮುಂದೆ ಸಾರಿಸಿ ರಂಗೋಲಿಯನ್ನು ಹಾಕಿದ್ದರು. ಕರಗ ಬಂದಾಗ ಆರತಿ ಬೆಳಗಿ ಮಲ್ಲಿಗೆ ಹೂವನ್ನು ಅರ್ಪಿಸಿದರು. ಕರಗ ಮಹೋತ್ಸವವನ್ನು ನೋಡಲು ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದವರು ಕರಗದ ನರ್ತನಕ್ಕೆ ಚಪ್ಪಾಳೆ, ಶಿಳ್ಳೆಗಳ ಮುಖಾಂತರ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.
ರೇಣುಕಾ ಎಲ್ಲಮ್ಮ ದೇವಾಲಯದಿಂದ ಹೊರಟ ಕರಗ ನಗರದ ಓ.ಟಿ.ವೃತ್ತ, ಕೋಟೆ ವೃತ್ತಗಳು ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಪೂಜೆಗಳನ್ನು ಸ್ವೀಕರಿಸಿತು.
ಬೆಂಗಳೂರಿಗೆ ಹೊರಟ ಪಡಿತರ ವಿತರಕರ ಸಂಘದ ಸದಸ್ಯರು ಹಾಗೂ ಜಾಗೃತಿ ಸಮಿತಿ ಸದಸ್ಯರು
ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಆಸರೆಯಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಮತ್ತು ಪಡಿತರ ವಿತರಕರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ಸರ್ಕಾರದ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಆಯೋಜಿಸಲಾಗಿರುವ ಉಚಿತ ಹೆಚ್ಚುವರಿ ಅಕ್ಕಿ ವಿತರಣೆ ಹಾಗು ಜಾಗೃತಿ ಸಮಿತಿ ಸದಸ್ಯರ ಕಾರ್ಯಾಗಾರ ಉದ್ಘಾಟನೆ ಸಮಾರಂಭಕ್ಕೆ ಗುರುವಾರ ನಗರದ ಪ್ರವಾಸಿ ಮಂದಿರದಿಂದ ಹೊರಟ ಪಡಿತರ ವಿತರಕರ ಸಂಘದ ಸದಸ್ಯರೂ ಮತ್ತು ಜಾಗೃತಿ ಸಮಿತಿ ಸದಸ್ಯರಿಗೆ ಶುಭ ಕೋರಿ ಅವರು ಮಾತನಾಡಿದರು.
ಈ ಹಿಂದೆ ರಾಜ್ಯಾದ್ಯಂತ ಪಡಿತರ ಚೀಟಿ ವಿತರಣೆಯಲ್ಲಿ ಸಾಕಷ್ಟು ಲೋಪ ದೋಷಗಳಾಗಿದ್ದು ಇದೀಗ ಸರ್ಕಾರದ ಮಹತ್ತರ ಯೋಜನೆಯಿಂದ ಅರ್ಹರಿಗೆ ಬಿಪಿಎಲ್ ಪಡಿತರ ಚೀಟಿ ಸಿಗುವಂತಾಗಿದೆ. ಪ್ರತಿ ಪಡಿತರ ಚೀಟಿಗೂ ಆಧಾರ್ ಚೀಟಿ ಲಿಂಕ್ ಮಾಡುವುದರಿಂದ ನಕಲಿ ಪಡಿತರ ಚೀಟಿಗಳು ಈಗಾಗಲೇ ರದ್ದಾಗಿದ್ದು ಇದೀಗ ನೂತನ ಪಡಿತರ ಚೀಟಿಗಾಗಿ ಅರ್ಜಿ ಹಾಕಲು ಸಹ ಇಲಾಖೆ ಅವಕಾಶ ಮಾಡಿಕೊಟ್ಟಿದ್ದು ಪಡಿತರ ಚೀಟಿಗಾಗಿ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು ಎಂದರು.
ಕಳೆದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯೂನಿಟ್ ಒಂದಕ್ಕೆ ೫ ಕೆಜಿಯಿದ್ದ ಅಕ್ಕಿಯನ್ನು ಇದೀಗ ೭ ಕೆಜಿಗೆ ಏರಿಸಿದ್ದು ಅದರ ಉದ್ಘಾಟನೆ ಸಮಾರಂಭಕ್ಕಾಗಿ ತಾಲ್ಲೂಕಿನಿಂದ ಪಡಿತರ ವಿತರಕರೂ ಸೇರಿದಂತೆ ಜಾಗೃತಿ ಸಮಿತಿ ಸದಸ್ಯರು ಹೊರಟಿದ್ದು ಎಲ್ಲರಿಗೂ ಶುಭವಾಗಲಿ, ಸರ್ಕಾರದ ವಿವಿಧ ಯೋಜನೆಗಳನ್ನು ಜನ ಸಮಾನ್ಯರಿಗೆ ತಲುಪಿಸುವಲ್ಲಿ ಅಧಿಕಾರಗಳು ಮತ್ತಷ್ಟು ಕಾಳಜಿ ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಆಹಾರ ನಿರೀಕ್ಷಕ ಪ್ರಕಾಶ್, ಪಡಿತರ ಚೀಟಿ ವಿತರಕರ ಸಂಘದ ಅಧ್ಯಕ್ಷ ಐ.ನಾರಾಯಣಸ್ವಾಮಿ, ಉಪಾಧ್ಯಕ್ಷ ವೇಣು, ನಿರ್ದೇಶಕರಾದ ಮುನಿರಾಜು, ಆಂಜನೇಯರೆಡ್ಡಿ, ಬಾಲಾಜಿ, ವಿಜಯ್‌ಪ್ರಕಾಶ್ ಮತ್ತಿತರರು ಹಾಜರಿದ್ದರು.
ರೈತ ಸಂಘದಿಂದ ರೈತರಿಗೆ ಉಚಿತವಾಗಿ ಮೇವು ವಿತರಣೆ
ರೈತರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ತುರ್ತಾಗಿ ಆಗಬೇಕಿದೆ. ಹಬ್ಬದ ಸಂಭ್ರಮವನ್ನು ಆಚರಿಸುವ ಮನಸ್ಥಿತಿಯಲ್ಲಿ ರೈತರಿಲ್ಲ. ಒಂದೆಡೆ ವರುಣನ ಮುನಿಸು, ಮತ್ತೊಂದೆಡೆ ಕುಸಿದ ಅಂತರ್ಜಲ. ಆದರೂ ಬೇವು ಬೆಲ್ಲ ಸವಿಯುವಂತೆ ಕಷ್ಟ ಸುಖವನ್ನು ಸಮನಾಗಿ ಸ್ವೀಕರಿಸಬೇಕಿದೆ. ರೈತರು ಎದೆಗುಂದಬಾರದು ಎಂದು ತಹಶೀಲ್ದಾರ್ ಅಜಿತ್‌ಕುಮಾರ್ ರೈ ತಿಳಿಸಿದರು.
ನಗರದ ವಿಜಯನಗರ ಹೆಬ್ಬಾಗಿಲ ಹತ್ತಿರದ ಅರಳೀಕಟ್ಟೆಯ ಬಳಿ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಬುಧವಾರ ಯುಗಾದಿ ಹಬ್ಬದ ಪ್ರಯುಕ್ತ ದಾನಿಗಳಿಂದ ಸಂಗ್ರಹಿಸಿದ ಎಂಟು ಟನ್ ಹಸಿ ಮೇವನ್ನು ರೈತರಿಗೆ ಉಚಿತವಾಗಿ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರೈತರು ಎಲ್ಲೇ ಇದ್ದರೂ ರೈತರೇ. ನಮಗೆ ನಗರ ಪ್ರದೇಶದ ರೈತರು ಹಾಗೂ ಗ್ರಾಮೀಣ ಭಾಗದ ರೈತರು ಎಂಬ ಬೇಧವಿಲ್ಲ. ಮೊದಲ ಹಂತದಲ್ಲಿ ನಾವು ಮೇವನ್ನು ನಗರ ಪ್ರದೇಶಕ್ಕೆ ಶೇಖರಿಸಿಟ್ಟಿರಲಿಲ್ಲ. ಆದರೆ ಎರಡನೇ ಹಂತದ ಮೇವಿನಲ್ಲಿ 10 ಟನ್ ಶನಿವಾರ ಸರಬರಾಜು ಆಗಲಿದೆ. ಹಸಿ ಮೇವನ್ನು ಸರಬರಾಜು ಮಾಡುವುದಿಲ್ಲ, ಕೇವಲ ಒಣ ಮೇವನ್ನು ಸರಬರಾಜು ಮಾಡಲಾಗುತ್ತಿದೆ. ನಗರದಲ್ಲಿರುವ ರೈತರಿಗೂ ಗ್ರಾಮೀಣ ಭಾಗದಂತೆಯೇ ಸಮನಾಗಿ ಕಾಣುವುದಾಗಿ, ಸೌಲಭ್ಯ ನೀಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ದಾನಿಗಳಾದ ಗುಡಿಸೋರು ನಾರಾಯಣಸ್ವಾಮಿ, ಎಲ್.ಹರೀಶ್, ವೈ.ರಾಮಕೃಷ್ಣಪ್ಪ, ಕೆ.ವಿ.ವೇಣುಗೋಪಾಲ್, ಎಸ್.ರಾಘವೇಂದ್ರ, ಪೊನ್ನು ನಾಗರಾಜು, ಬಿ.ನಾರಾಯಣಸ್ವಾಮಿ, ಅಶ್ವತ್ಥನಾರಾಯಣಗೌಡ, ಎ.ಡಿ.ಶ್ರೀಧರ್, ವಿಶ್ವನಾಥ್, ಪಿ.ವಿ.ದೇವರಾಜ್, ಬಚ್ಚೇಗೌಡ, ಆಂಜಿನಪ್ಪ ಮತ್ತು ರೈತ ಸಂಘದ ಸದಸ್ಯರು ಸಂಗ್ರಹಿಸಿ ಕೊಟ್ಟಿದ್ದ ಸುಮಾರು ಎಂಟು ಟನ್ ಹಸಿ ಮೇವನ್ನು ಉಚಿತವಾಗಿ ಅಗತ್ಯವಿರುವ ರೈತರಿಗೆ ವಿತರಿಸಲಾಯಿತು.
ಹಾಲು ಉತ್ಪಾದಕರ ಸಹಕಾರ ಸಂಘ ಈ ಸ್ಥಳದಲ್ಲಿ ಅಗತ್ಯವಿದೆ, ಅದನ್ನು ಮಾಡಲು ಅನುಮತಿ ನೀಡಿ ಸಹಕರಿಸಬೇಕೆಂದು ಮಹಿಳೆಯರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಯುಗಾದಿ ಹಬ್ಬದ ಪ್ರಯುಕ್ತ ಅರಳಿ ಕಟ್ಟೆಯಲ್ಲಿ ಹಬ್ಬದ ಸಂಪ್ರದಾಯದಂತೆ ಹೊಸ ನೇಗಿಲು, ಹಸಿ ಮೇವು, ಪಂಚ ಧಾನ್ಯಗಳ ಪೈರನ್ನು ಇಟ್ಟು ಪೂಜಿಸಲಾಯಿತು. ಹೆಸರು ಬೇಳೆ ಕೋಸಂಬರಿ ಹಾಗೂ ಪಾನಕವನ್ನು ವಿತರಿಸಲಾಯಿತು. ಬೇವು ಬೆಲ್ಲವನ್ನು ಹಂಚಲಾಯಿತು.
ಪಶುಸಂಗೋಪನಾ ಇಲಾಖೆಯ ಡಾ.ಮುನಿನಾರಾಯಣರೆಡ್ಡಿ, ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಗೌರವಾಧ್ಯಕ್ಷ ಎಸ್.ಎಂ.ನಾರಾಯಣಸ್ವಾಮಿ, ನಗರ ಘಟಕದ ಅಧ್ಯಕ್ಷ ಬಿ. ನಾರಾಯಣಸ್ವಾಮಿ, ವೇಣುಗೋಪಾಲ್, ರಾಮಕೃಷ್ಣಪ್ಪ, ರಾಮಚಂದ್ರಪ್ಪ, ಏಜಾಜ್, ಪಿ.ವಿ.ದೇವರಾಜ್, ಹರೀಶ್, ನಾರಾಯಣಪ್ಪ, ಗಂಗಾಧರ್, ವಿಶ್ವನಾಥ್, ದೇವರಾಜ್, ಆರ್.ಮಂಜುನಾಥ್, ವೆಂಕಟೇಶ್, ಸೊಣ್ಣಪ್ಪರೆಡ್ಡಿ, ನಂಜಪ್ಪ ಮತ್ತಿತರರು ಹಾಜರಿದ್ದರು.
ವಿಸ್ಡಂ ಶಾಲೆಯ ಮಕ್ಕಳಿಗೆ ತಹಶೀಲ್ದಾರ್‌ರವರಿಂದ ವ್ಯವಸ್ಥೆ ವಾಹನ
ಶಿಡ್ಲಘಟ್ಟದ ವಿಸ್ಡಂ ಶಾಲೆಯ ಹತ್ತು ಮಕ್ಕಳು ಗುರುವಾರ ಸಂಜೆ ತಾಲ್ಲೂಕಿನ ಪಲಿಚೇರ್ಲು ಮತ್ತು ತರಬಳ್ಳಿ ಗ್ರಾಮಕ್ಕೆ ತೆರಳಲು ಕೆಎಸ್‌ಆರ್‌ಟಿಸಿ ಬಸ್ ಬರದೆ ತಾಲ್ಲೂಕು ಕಚೇರಿಯ ಮುಂದೆ ಕುಳಿತಿದ್ದುದನ್ನು ಕಂಡ ತಹಶೀಲ್ದಾರ್ ಅಜಿತ್‌ಕುಮಾರ್ ರೈ ಶಾಲಾ ವ್ಯವಸ್ಥಾಪಕರನ್ನು ಕರೆಸಿ ಅವರ ಸಮ್ಮುಖದಲ್ಲಿ ತಮ್ಮ ವಾಹನದಲ್ಲಿ ಮಕ್ಕಳನ್ನು ಅವರ ಗ್ರಾಮಗಳಿಗೆ ಕಳುಹಿಸಿಕೊಟ್ಟರು.
ಖಾಸಗಿ ಬಸ್ ಡಿಕ್ಕಿ: ರಸ್ತೆ ದಾಟುತ್ತಿದ್ದ ಶಾಲಾ ಬಾಲಕ ಸ್ಥಳದಲ್ಲೆ ಸಾವು
ರಸ್ತೆ ದಾಟುತ್ತಿದ್ದ ಶಾಲಾ ಬಾಲಕನಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದಿದ್ದು ಬಾಲಕ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ.
ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ೧೧ನೇ ಮೈಲಿಗಲ್ಲು ಬಳಿ ಮಂಗಳವಾರ ನಡೆದ ಅಪಘಾತದಲ್ಲಿ ಗಂಜಿಗುಂಟೆಯ ವಿನಾಯಕ ಟ್ರಸ್ಟ್ ಶಾಲೆಯ ಹರೀಶ್(೭) ಸ್ಥಳದಲ್ಲೆ ಮೃತಪಟ್ಟ ದುರ್ದೈವಿ.
ಚಿಂತಾಮಣಿ ತಾಲ್ಲೂಕು ನಾಯನಹಳ್ಳಿಯ ಶಾಲೆಯ ೨ನೇ ತರಗತಿಯ ಈ ಬಾಲಕ ಶಾಲೆ ಮುಗಿಸಿಕೊಂಡು ಶಾಲಾ ವಾಹನದಲ್ಲಿ ೧೧ನೇ ಮೈಲಿಗಲ್ಲು ಕ್ರಾಸ್‌ನಲ್ಲಿ ಇಳಿದು ರಸ್ತೆ ದಾಟುವಾಗ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ.
ದಿಬ್ಬೂರಹಳ್ಳಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಖಾಸಗಿ ಬಸ್‌ನ್ನು ವಶಕ್ಕೆ ಪಡೆದಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸರ್ಕಾರಿ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವುದನ್ನು ವಜಾಗೊಳಿಸಬೇಕೆಂದು ಪ್ರತಿಭಟನೆ
ಗ್ರಾಮ ಪಂಚಾಯಿತಿಯಿಂದ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ನಿವೇಶನಗಳ ಖಾತೆಗಳನ್ನು ರದ್ದುಗೊಳಿಸಿ, ಗ್ರಾಮದಲ್ಲಿನ ನಿವೇಶನ ರಹಿತ ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿ ಅಂಕತಟ್ಟಿ ಗ್ರಾಮಸ್ಥರು ಹಾಗೂ ರೈತ ಸಂಘಟದ ಮುಖಂಡರು ಮಂಗಳವಾರ ಮಳ್ಳೂರು ಗ್ರಾಮ ಪಂಚಾಯಿತಿಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಮಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಕತಟ್ಟಿ ಗ್ರಾಮದ ಸರ್ವೆ ನಂಬರ್ 7/2 ರಲ್ಲಿ 12 ಎಕರೆ 20 ಗುಂಟೆ ಜಮೀನು ಸರ್ಕಾರಿ ಸ್ವಾಮ್ಯದಲ್ಲಿತ್ತು. ಇದರಲ್ಲಿ ಬಿ.ಚೌಡಪ್ಪ ಬಿನ್ ಬಚ್ಚಪ್ಪ ಎಂಬುವವರಿಗೆ ಸರ್ವೆ ನಂಬರ್ 7/2 ರಲ್ಲಿ 2.30 ಎಕರೆ ಆದೇಶವಾಗಿದ್ದು, 10 ಎಕರೆ ಉಳಿಕೆ ಜಮೀನಿದೆ. ಈ ಜಮೀನನ್ನು ಗ್ರಾಮದಲ್ಲಿನ ನಿವೇಶನ ರಹಿತರಿಗೆ ನಿವೇಶನಗಳನ್ನಾಗಿ ಹಂಚಿಕೆ ಮಾಡುವುದನ್ನು ಬಿಟ್ಟು ಪ್ರಭಾವಿ ವ್ಯಕ್ತಿಗಳಿಗೆ ಒಂದು ಎಕರೆ ಗ್ರಾಮ ಠಾಣೆಯ ಭೂಮಿಯನ್ನು ಗ್ರಾಮ ಪಂಚಾಯಿತಿಯಲ್ಲಿ ಯಾರ ಗಮನಕ್ಕೂ ಬಾರದಂತೆ ಹಿಂದೆ ಇದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಬಿಲ್ ಕಲೆಕ್ಟರ್ ಇಬ್ಬರೂ ಖಾತೆ ಮಾಡಿಕೊಟ್ಟಿದ್ದಾರೆ.
ಗ್ರಾಮದಲ್ಲಿನ ಬಡವರು, ನಿರ್ಗತಿಕರು, ಸರ್ಕಾರಿ ಶಾಲೆ, ದೇವಸ್ಥಾನ ಸೇರಿದಂತೆ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಕಾರ್ಯಗಳಿಗೆ ಭೂಮಿ ಮಂಜೂರು ಮಾಡಿಕೊಟ್ಟಿಲ್ಲ. ಈ ಬಗ್ಗೆ ತನಿಖೆಯಾಗಬೇಕು. ಅಕ್ರಮ ಖಾತೆಗಳನ್ನು ವಜಾಗೊಳಿಸಿರುವ ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕು. ಅಕ್ರಮವಾಗಿ ಖಾತೆ ಮಾಡಿಸಿಕೊಳ್ಳಲು ವಾಮಮಾರ್ಗವನ್ನು ಅನುಸರಿಸಿರುವವರ ಮೇಲೆ ಕ್ರಿಮಿನಲ್ ಕೇಸು ದಾಖಲು ಮಾಡಬೇಕು ಎಂದು ಒತ್ತಾಯಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಧಾಮಣಿ ಮಾತನಾಡಿ, ನಮ್ಮ ಅವಧಿಯಲ್ಲಿ ನಿವೇಶನಗಳನ್ನು ಮಂಜೂರು ಮಾಡಿಕೊಟ್ಟಿಲ್ಲ, ಹಿಂದೆ ಮಂಜೂರು ಮಾಡಿದ್ದಾರೆ. ಈ ನಿವೇಶನಗಳು ಕಂದಾಯ ಇಲಾಖೆಯ ಅಡಿಯಲ್ಲಿವೆಯೆ ಅಥವಾ ಗ್ರಾಮಠಾಣೆಗೆ ಸೇರಿವೆಯೆ ಎಂಬುದು ಭೂಮಿಯನ್ನು ಅಳತೆ ಮಾಡಿದ ನಂತರವೇ ಗೊತ್ತಾಗುತ್ತದೆ. ಅಳತೆಗೆ ಬರೆದಿದ್ದೇವೆ. ಸರ್ವೆ ಆದ ನಂತರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಅಧ್ಯಕ್ಷೆ ರಾಧಶಿವಕುಮಾರ್ ಮಾತನಾಡಿ, ಈ ಹಿಂದೆ ಖಾತೆ ಮಾಡಿರುವ ಬಗ್ಗೆ ನಮ್ಮ ಗಮನಕ್ಕೂ ಬಂದಿಲ್ಲ, ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಒತ್ತುವರಿಯಾಗಿರುವ ಭೂಮಿಯು ಗ್ರಾಮಕ್ಕೆ ಹೊಂದಿಕೊಂಡಿದ್ದು ನಿವೇಶನಗಳನ್ನು ಮಾಡಲು ಅನುಕೂಲಕರವಾಗಿರುವುದರಿಂದ ನಿಯಮಾವಳಿಯ ಪ್ರಕಾರ ಎಲ್ಲರಿಗೂ ನಿವೇಶನಗಳನ್ನು ಕೊಡಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ರೈತರು ಮತ್ತು ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದರು.
ಸ್ಥಳಕ್ಕೆ ಆಗಮಿಸಿ ಮನವಿ ಪತ್ರ ಸ್ವೀಕಾರ ಮಾಡಿಕೊಂಡ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ಮಾತನಾಡಿ, ಗ್ರಾಮ ಪಂಚಾಯಿತಿಯಿಂದ ನಿವೇಶನಗಳನ್ನು ಮಾಡಿಕೊಡಬೇಕಾದರೆ ಕೆಲವು ಮಾನದಂಡಗಳಿವೆ. ಈ ಬಗ್ಗೆ ಪರಿಶೀಲನೆ ನಡೆಸಿ, ಅಧಿಕಾರಿಗಳು ತಪ್ಪು ಮಾಡಿರುವುದು ಕಂಡು ಬಂದರೆ ಅವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಂಡು ತಾಲ್ಲೂಕು ಪಂಚಾಯಿತಿಯಿಂದಲೇ ಖಾತೆಗಳನ್ನು ವಜಾಗೊಳಿಸಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ತಾಲ್ಲೂಕು ರೈತ ಸಂಘದ ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಕಾರ್ಯದರ್ಶಿ ಪ್ರತೀಶ್, ಗ್ರಾಮಸ್ಥರಾದ ಎಸ್.ವೆಂಕಟರೆಡ್ಡಿ, ಜಗನ್ನಾಥ್, ದೇವರಾಜ್, ಮುನಿರಾಜು, ಬಾಬು, ವಿನಯ್, ಸುಪ್ರೀತ್, ಶ್ರೀನಿವಾಸ, ವೆಂಕಟೇಶ್, ದೀಪಕ್ ಈ ಸಂದರ್ಭದಲ್ಲಿ ಹಾಜರಿದ್ದರು.
ಹುಚ್ಚು ಸೋರೆ – ನಿಸರ್ಗದ ವಿಷಕಾರಿ
ತಾಲ್ಲೂಕಿನ ಗೊಲ್ಲಹಳ್ಳಿಯ ಹೊರವಲಯದಲ್ಲಿ ಹುಚ್ಚು ಸೋರೆ ಕಂಡು ಬಂದಿದೆ. ಸಾಮಾನ್ಯವಾಗಿ ಹುಚ್ಚು ಸೋರೆ ಗಿಡವನ್ನು ಕಂಡರೆ ಕುರಿ ಮೇಕೆ ಮೇಯಿಸುವವರು ಬುಡ ಸಮೇತ ಕಿತ್ತು ಬಿಸಾಡುತ್ತಾರೆ. ಅಪರೂಪಕ್ಕೆಂಬಂತೆ ಎಲ್ಲರ ಕಣ್ತಪ್ಪಿ ಸಾಕಷ್ಟು ಹುಚ್ಚು ಸೋರೆಕಾಯಿಗಳು ಬಿಟ್ಟಿದ್ದು, ಕೆಲವು ಅಲ್ಲೇ ಒಣಗಿ ಬಿದ್ದು ಕೊಳೆತಿವೆ.
ಹುಚ್ಚು ಸೋರೆಕಾಯಿಯಲ್ಲಿ ಶೇ.45 ರಷ್ಟು ವಿಷವಿರುತ್ತದೆ. ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಕಂಡು ಬರುವ ಇವು ಕ್ಯೂಬಾದ ಕಾಫಿ ತೋಟಗಳಲ್ಲಿ ಕಳೆಗಿಡಗಳಾಗಿ ಬೆಳೆಯುತ್ತವೆ. ಹೆಚ್ಚು ವಿಷವಿರುವುದರಿಂದ ಕುರಿ ಮತ್ತು ಮೇಕೆಗಳು ತಿಂದರೆ ಸಾಯುತ್ತವೆಂದು ಕುರಿ ಮೇಕೆ ಮೇಯಿಸುವವರು ಅವುಗಳನ್ನು ಹುಚ್ಚು ಸೋರೆ ಬಳಿ ಸುಳಿಯದಂತೆ ಎಚ್ಚರಿಕೆ ವಹಿಸುತ್ತಾರೆ.
ಇದರ ಕಾಯಿ ಮತ್ತು ಎಲೆ ಎರಡೂ ವಿಷಕಾರಿ. ಆದರೆ ಬೀಜದಲ್ಲಿ ವಿಷ ಕಡಿಮೆ. ಹಾಗಾಗಿ ಚರ್ಮರೋಗಗಳಿಗೆ ಬೇರೆ ಬೇರೆ ವಸ್ತುಗಳೊಂದಿಗೆ ಇದರ ಬೀಜವನ್ನೂ ಅಲ್ಪ ಪ್ರಮಾಣದಲ್ಲಿ ಬಳಸುತ್ತಾರೆ. ಆದರೆ ಅನುಭವಿಗಳಿಗೆ ಮಾತ್ರ ಈ ಪ್ರಮಾಣದ ವಿಷಯ ತಿಳಿದಿರುತ್ತದೆ. ಹಿಂದೆ ಹುಚ್ಚು ಸೋರೆಕಾಯಿಯನ್ನು ಕುದುರೆಗಳಿಗೆ ವಿರೇಚನ(ಬೇಧಿ) ಮಾಡಿಸಲು ಬಳಸುತ್ತಿದ್ದರಂತೆ.
ಹುಚ್ಚು ಸೋರೆಕಾಯಿಯನ್ನೇ ಹೋಲುವ ಕಹಿತೊಂಡೆ(ಕಾಡುತೊಂಡೆ), ಕಹಿಹೀರೆ(ಕಾಡು ಹೀರೆ), ಕಹಿ ಸೌತೆ(ಕಾಡು ಸೌತೆ) ಪ್ರಕೃತಿಯಲ್ಲಿ ಕಾಣಬಹುದು, ಕಹಿ ಎಂಬ ಪದಕ್ಕೆ ಪರ್ಯಾಯವಾಗಿ ಕಾಡು ಎಂಬ ಪದವನ್ನೂ ಬಳಸುವುದು ವಾಡಿಕೆಯಲ್ಲಿದೆ. ಆದರೆ ಇವುಗಳ ವಿಷ ಪ್ರಮಾಣ ಬಲು ಕಡಿಮೆ. ಕಾಡು ತೊಂಡೆ ಹಣ್ಣಾದಾಗ ಮಾಮೂಲಿ ಸಿಹಿ ತೊಂಡೆಯಂತೆಯೇ ರುಚಿ ಮತ್ತು ಬಣ್ಣವನ್ನು ಪಡೆಯುತ್ತದೆ. ಆಗ ಹಕ್ಕಿಗಳು ಅವನ್ನು ತಿನ್ನುತ್ತವೆ.
‘ಪ್ರಕೃತಿಯಲ್ಲಿನ ಹಲವಾರು ವಿಷಯುಕ್ತ ಗಿಡಗಳಲ್ಲಿ ಹುಚ್ಚು ಸೋರೆಯೂ ಒಂದು. ಗ್ರಾಮೀಣ ಭಾಗದ ಅನುಭವಿಗಳಿಗೆ ಈ ವ್ಯತ್ಯಾಸ ತಿಳಿದಿರುತ್ತದೆ. ಆದರೆ ಆಧುನಿಕರಿಗೆ ಇದರ ಬಗ್ಗೆ ಅರಿವಿರುವುದಿಲ್ಲ. ನಮ್ಮ ಸುತ್ತಲಿನಲ್ಲಿಯೇ ಒಳಿತು ಕೆಡುಕು, ಒಳ್ಳೆಯದು ಕೆಟ್ಟದ್ದು ಇರುವಂತೆ, ತಿನ್ನುವಂತದ್ದು, ತಿನ್ನಬಾರದ್ದು, ದೇಹಕ್ಕೆ ಸಹಕಾರಿಯಾದದ್ದು, ವಿಷಕಾರಿಯಾದ್ದು ಕೂಡ ಇರುತ್ತದೆ. ಇವುಗಳ ಜ್ಞಾನ ಬದುಕಿಗೆ ಸಗತ್ಯ’ ಎನ್ನುತ್ತಾರೆ ಸಾವಯವ ಕೃಷಿಕ ಪರಿವಾರದ ಸಂಚಾಲಕ ಬೂದಾಳ ರಾಮಾಂಜಿನಪ್ಪ.
ಸೈಕಲ್ ವಿತರಣೆ
ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಸರ್ಕಾರಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಸೋಮವಾರ ಜಿಲ್ಲಾ ಪಂಚಾಯಿತಿ ಸದಸ್ಯ ಸತೀಶ್ ಎಂಟನೆಯ ತರಗತಿಯ 18 ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿದರು. ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಅನಸೂಯದೇವಿ, ನಿಲಯದ ಮೇಲ್ವಿಚಾರಕ ಮುನಿವೆಂಕಟಪ್ಪ ಹಾಜರಿದ್ದರು.
ಬರಗಾಲವಾದ್ದರಿಂದ ನಗರಸಭೆಯಿಂದ ಸುಂಕ ವಸೂಲಿ ಕೈ ಬಿಡುವಂತೆ ಹಸಿರು ಸೇನೆ ರೈತರ ಆಗ್ರಹ
ವಾರದ ಸಂತೆಯಲ್ಲಿ ರೈತರಿಂದ ಯಾವುದೆ ರೀತಿಯ ಸುಂಕವನ್ನು ವಸೂಲಿ ಮಾಡಬಾರದು ಎಂದು ಆಗ್ರಹಿಸಿ ಹಸಿರು ಸೇನೆ ರೈತ ಸಂಘದ ಕಾರ್ಯಕರ್ತರು ನಗರಸಭೆಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನಗರಸಭೆ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿದ ಹಸಿರು ಸೇನೆ ರೈತ ಸಂಘದ ಕಾರ್ಯಕರ್ತರು, ಇದೀಗ ಬರಗಾಲ ಎದುರಾಗಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ವಾರದ ಸಂತೆಯಲ್ಲಿ ರೈತರಿಂದ ಸುಂಕವನ್ನು ವಸೂಲು ಮಾಡುವುದುನ್ನು ಕೈ ಬಿಡಬೇಕೆಂದು ಆಗ್ರಹಿಸಿ ಮನವಿಯನ್ನು ಸಲ್ಲಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್ ಮಾತನಾಡಿ, ಕಳೆದ ಐದಾರು ವರ್ಷಗಳಿಂದಲೂ ಬರಗಾಲ ಬೀಡು ಬಿಟ್ಟಿದೆ. ಅಂತರ್ಜಲ ಮಟ್ಟ ತೀವ್ರ ಕುಸಿದ ಇಲ್ಲಿ ರೈತರು ಬಿತ್ತಿದ ಬೆಳೆ ಕೈಗೆ ಸಿಗುತ್ತಿಲ್ಲ. ಅಪ್ಪಿ ತಪ್ಪಿ ಬೆಳೆ ಬೆಳೆದರೂ ಸೂಕ್ತ ಬೆಲೆ ಇಲ್ಲದೆ ಬೆಳೆದ ಫಸಲನ್ನು ಜಮೀನಿನಲ್ಲೆ ಬಿಡುವಂತ ಪರಿಸ್ಥಿತಿ ಎದುರಾಗಿದ್ದು ಬದುಕನ್ನು ನಡೆಸಲು ಹೆಣಗಾಡುವಂತಾಗಿದೆ. ಒಪ್ಪೊತ್ತಿನ ಊಟಕ್ಕು ಪರದಾಡುವ ಪರಿಸ್ಥಿತಿ ರೈತನದ್ದಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇಂತಹ ಪರಿಸ್ಥಿತಿಯಲ್ಲಿ ಎಪಿಎಂಸಿ ಕಾಯಿದೆಯಂತೆ ರೈತರ ಯಾವುದೆ ಉತ್ಪನ್ನಗಳಿಗೂ ಮಾರುಕಟ್ಟೆಯಲ್ಲಿ ಯಾವುದೆ ರೀತಿಯ ಶುಲ್ಕವನ್ನು ವಿಧಿಸಬಾರದು. ಆದರೂ ನೀವು ವಾರದ ಸಂತೆಯಲ್ಲಿ ರೈತರಿಂದ ಸುಂಕ ವಸೂಲಿ ಮಾಡುತ್ತಿದ್ದೀರಿ ಎಂದು ಆರೋಪಿಸಿದರು.
ಇಲ್ಲಿ ನಡೆಯುವ ವಾರದ ಸಂತೆಗೆ ನೂರಾರು ರೈತರು ಬರಲಿದ್ದು ಸೊಪ್ಪು ತರಕಾರಿ ಹಣ್ಣು ಹಂಪಲು ಎಲೆ ಅಡಿಕೆ ಕುರಿ ಕೋಳಿ ಮೇಕೆ ದವಸ ದಾನ್ಯ ಇನ್ನಿತರೆ ಎಲ್ಲ ವ್ಯಾಪಾರ ವಹಿವಾಟಿಗೂ ನಿಗಪಡಿಸಿದ ಶುಲ್ಕವನ್ನು ನೀವು ವಸೂಲಿ ಮಾಡುತ್ತಿದ್ದೀರಿ. ಸ್ವಂತ ಬೆಳೆಯುವ ರೈತರು ಹಲವರಾದರೆ ಖರೀದಿಸಿ ತಂದು ಮಾರಾಟ ಮಾಡುವ ರೈತರೂ ಸಾಕಷ್ಟು ಮಂದಿ ಇದ್ದಾರೆ. ಹಾಕಿದ ಬಂಡವಾಳವು ಕೈಗೆ ಬರದಂತ ಪರಿಸ್ಥಿತಿಯಲ್ಲಿ ಶುಲ್ಕ ಕಟ್ಟುವುದು ಸಹ ಕಷ್ಟಕರವಾಗಿದೆ ಎಂದು ರೈತರ ಸಂಕಷ್ಟವನ್ನು ಬಿಡಿಸಿಟ್ಟರು.
ಕೂಡಲೆ ಸುಂಕ ವಸೂಲಿಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಆಯುಕ್ತ ಎಚ್.ವಿ.ಹರೀಶ್‌ಗೆ ಮನವಿಯನ್ನು ಸಲ್ಲಿಸಿ ಈ ಬಗ್ಗೆ ನಿಮ್ಮ ನಿರ್ಧಾರವನ್ನು ಇಲ್ಲೇ ಪ್ರಕಟಿಸಬೇಕೆಂದು ತಾಕೀತು ಮಾಡಿದರು.
ಮನವಿ ಸ್ವೀಕರಿಸಿದ ಆಯುಕ್ತರು, ಸುಂಕ ವಸೂಲಿಯನ್ನು ನಿಲ್ಲಿಸುವ ಅಧಿಕಾರ ನನ್ನ ವ್ಯಾಪ್ತಿಯಲ್ಲಿ ಬರುವುದಿಲ್ಲ. ಈ ಬಗ್ಗೆ ಮುಂದಿನ ಕೌನ್ಸಿಲ್ ಸಭೆಯಲ್ಲಿ ವಿಷಯವನ್ನು ಮಂಡಿಸಿ ಚರ್ಚಿಸಿ ಕೌನ್ಸಿಲ್ ಸಭೆ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೂ ತಂದು ಅವರ ಸಲಹೆ ಸೂಚನೆಯಂತೆ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ಆದರೆ ಆಯುಕ್ತರ ಭರವಸೆಯನ್ನು ಒಪ್ಪದ ಪ್ರತಿಭಟನಾಕಾರರು, ನಾವು ನಿಮ್ಮ ಕೌನ್ಸಿಲ್‌ನ ಸಭೆಯಲ್ಲಿ ಇಟ್ಟು ಮಂಡನೆ ಮಾಡಿ ಸಭೆಯ ತೀರ್ಮಾನದಂತೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದರೆ ಅದನ್ನು ಒಪ್ಪುವುದಿಲ್ಲ.
ನಾವು ಮನವಿ ನೀಡುತ್ತಿರುವುದು ಸುಂಕ ವಸೂಲಿಯನ್ನು ನಿಲ್ಲಿಸುವ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕೇಳುತ್ತಿಲ್ಲ. ಬರಗಾಲದ ಪರಿಸ್ಥಿತಿಯಲ್ಲಿ ಸಾಲ ಆಗಲಿ ಸುಂಕ ಆಗಲಿ ಕಟ್ಟುವ ಪರಿಸ್ಥಿತಿಯಲ್ಲಿ ರೈತ ಇಲ್ಲ. ಹಾಗಾಗಿ ಸುಂಕ ವಸೂಲಿಯನ್ನು ನಿಲ್ಲಿಸಬೇಕಷ್ಟೆ ಎಂದು ತಾಕೀತು ಮಾಡಿದರು.
ಅದು ಬಿಟ್ಟು ಸಭೆಯಲ್ಲಿ ಚರ್ಚೆ ನಡೆಸುತ್ತೇವೆ, ಅಲ್ಲಿ ಒಪ್ಪಿದರೆ ಮಾತ್ರ ಸುಂಕ ವಸೂಲಿಯನ್ನು ಕೈ ಬಿಡುತ್ತೇವೆ ಎಲ್ಲವಾದರೆ ಅದು ನನ್ನ ಕೈಯ್ಯಲ್ಲಿ ಇಲ್ಲ ಎಂದು ನೀವು ಹೇಳುವುದನ್ನು ನಾವು ಕೇಳಲು ಬಂದಿಲ್ಲ. ನಾವು ಸುಂಕವನ್ನು ಕಟ್ಟುವುದಿಲ್ಲ ಅಷ್ಟೆ ಎಂದು ಸ್ಪಷ್ಟಪಡಿಸಿದರು.
ರೈತ ಸಂಘದ ಉಪಾಧ್ಯಕ್ಷ ವೀರಾಪುರ ಮುನಿನಂಜಪ್ಪ, ಮುಖಂಡರಾದ ಕೊಂಡಪ್ಪನವರ ವೇಣುಗೋಪಾಲ್, ಪಾಪರೆಡ್ಡಿ, ಏಜಾಜ್, ಕೆಂಪರೆಡ್ಡಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ದ್ರಾಕ್ಷಿ ಬೆಲೆ ಕುಸಿತದಿಂದ ರೈತರು ಕಂಗಾಲು
ಸರಿಸುಮಾರು ಒಂದು ತಿಂಗಳ ಹಿಂದೆ ಕೆಜಿಗೆ ₨ 35 ರಿಂದ 40 ರವರೆಗೆ ಮಾರಾಟವಾಗುತ್ತಿದ್ದ ಬೆಂಗಳೂರು ಬ್ಲೂ ದ್ರಾಕ್ಷಿ ಬೆಲೆ ದಿಢೀರನೇ ಕೆಜಿಗೆ ₨ 10 ರಿಂದ 12ಕ್ಕೆ ಕುಸಿದಿದ್ದು, ತಾಲ್ಲೂಕಿನ ದ್ರಾಕ್ಷಿ ಬೆಳೆಗಾರರು ಕಂಗಾಲಾಗಿದ್ದಾರೆ. ಹೆಚ್ಚಿನ ಬೆಲೆಯ ನಿರೀಕ್ಷೆಯಲ್ಲಿ ಕಟಾವು ಮಾಡದೇ ದ್ರಾಕ್ಷಿಯನ್ನು ಯಥಾರೀತಿ ತೋಟದಲ್ಲಿ ಉಳಿಸಿಕೊಂಡಿದ್ದ ದ್ರಾಕ್ಷಿ ಬೆಳೆಗಾರರು ಈಗ ಕಟಾವು ಮಾಡಲಾಗದೇ ಮತ್ತು ಹೆಚ್ಚಿನ ಬೆಲೆಗೆ ಮಾರಲಾಗದೇ ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ.
ಶರತ್ ದ್ರಾಕ್ಷಿ ₨ 60 ರಿಂದ ₨ 40 ಕ್ಕೆ ಕುಸಿದಿದೆ. ಕೃಷ್ಣ ದ್ರಾಕ್ಷಿ ₨ 70 ರಿಂದ ₨ 55 ಕ್ಕೆ ಕುಸಿದಿದ್ದರೆ, ದಿಲ್‌ಖುಷ್ ದ್ರಾಕ್ಷಿ ₨ 35 ರಿಂದ ₨ 20 ಕ್ಕೆ ಕುಸಿದಿದೆ. ಅನಾಬಿಷ ದ್ರಾಕ್ಷಿ ₨ 25 ರಿಂದ ₨ 15 ಕ್ಕೆ ಕುಸಿದಿದೆ.
ರೇಷ್ಮೆಕೃಷಿ ಮತ್ತು ಹೈನುಗಾರಿಕೆ ಹೊರತುಪಡಿಸಿದರೆ ತೋಟಗಾರಿಕೆ ಬೆಳೆಗಳಲ್ಲಿ ದ್ರಾಕ್ಷಿಯೇ ಪ್ರಮುಖ ಬೆಳೆಯಾಗಿದ್ದು, ಬೆಲೆ ಕುಸಿತದಿಂದ ಭಾರಿ ಆರ್ಥಿಕ ನಷ್ಟಕ್ಕೆ ಒಳಗಾಗುವ ಆತಂಕದಲ್ಲಿ ರೈತರಿದ್ದಾರೆ.
‘ತಿಂಗಳ ಹಿಂದೆ ಕೆಜಿಗೆ ₨ 60 ಬೆಲೆಯಿದ್ದಾಗ, ದ್ರಾಕ್ಷಿಗೆ ಬೇಡಿಕೆ ಹೆಚ್ಚುವುದು ಮತ್ತು ಬೆಲೆ ಏರಿಕೆಯಾಗುವುದೆಂದು ಭಾವಿಸಿದ್ದೆವು. ಆದರೆ ಈಗ ಕಣ್ಣೆದುರಿಗೆ ದ್ರಾಕ್ಷಿ ಗೊಂಚಲು ಇಟ್ಟುಕೊಂಡು ಕಡಿಮೆ ಬೆಲೆಗೆ ಮಾರಾಟ ಮಾಬೇಕಿದೆ’ ಎಂದು ಗೋಳು ತೋಡಿಕೊಳ್ಳುತ್ತಿದ್ದಾರೆ.
ದ್ರಾಕ್ಷಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಮೇಲೂರು, ಮುತ್ತೂರು, ಅಪ್ಪೇಗೌಡನಹಳ್ಳಿ, ಮಳ್ಳೂರು, ಮಳಮಾಚನಹಳ್ಳಿ, ತಾದೂರು, ಬಸವಾಪಟ್ಟಣ, ಯಣ್ಣಂಗೂರು, ತಿಪ್ಪೇನಹಳ್ಳಿ, ಹುಜಗೂರು, ಗೊರಮಡುಗು ಮುಂತಾದ ಗ್ರಾಮಗಳಲ್ಲಿ ದ್ರಾಕ್ಷಿ ಬೆಳೆಗಾರರು ದ್ರಾಕ್ಷಿ ಬೆಳೆಯನ್ನು ಮಾರಾಟ ಮಾಡಲು ಪಡಿಪಟಾಲು ಪಡುತ್ತಿದ್ದಾರೆ. ಕೊಳ್ಳಲು ಮತ್ತು ವಹಿವಾಟು ನಡೆಸಲು ಯಾರೂ ಸಹ ಮುಂದೆ ಬರುತ್ತಿಲ್ಲ ಎಂಬ ಆತಂಕ ಅವರಲ್ಲಿ ಆವರಿಸಿದೆ.
‘ಒಂದು ತಿಂಗಳ ಹಿಂದೆ ಅನಾಬಿಷ್ ಮತ್ತು ದಿಲ್‌ಕುಶ್ ದ್ರಾಕ್ಷಿಗಳಿಗೆ ಭಾರಿ ಬೇಡಿಕೆಯಿತ್ತು. ಹೆಚ್ಚಿನ ಹೆಚ್ಚಿನ ಬೆಲೆಗೂ ಖರೀದಿಸಲು ವ್ಯಾಪಾರಸ್ಥರು ಸಿದ್ಧರಿದ್ದರು. ನಮ್ಮ ತಾಲ್ಲೂಕಿನ ದ್ರಾಕ್ಷಿ ಜಾರ್ಖಂಡ್, ದೆಹಲಿ, ಉತ್ತರಪ್ರದೇಶ, ತಮಿಳುನಾಡು, ಕೇರಳ, ಆಂದ್ರ, ಒರಿಸ್ಸಾಗೆ ರಫ್ತಾಗುತ್ತದೆ. ಕಳೆದ ತಿಂಗಳು ಬೆಲೆ ಏರಿಕೆಯಾಗಿದ್ದು ಕಂಡು ಔಷಧಿ ತಯಾರಕರು ಸಹ ಔಷಧಿ ಮತ್ತು ರಾಸಾಯನಿಕ ವಸ್ತುಗಳ ಬೆಲೆ ಏರಿಕೆ ಮಾಡಿದರು. ಆದರೆ ಈಗ ನೋಡಿದರೆ ಬೆಲೆ ಆಕಾಶದಿಂದ ಪಾತಾಳಕ್ಕೆ ಬಿದ್ದಿದೆ. ನಮಗೆ ದಿಕ್ಕೇ ತೋಚದಂತಾಗಿದೆ’ ಎಂದು ಅಪ್ಪೇಗೌಡನಹಳ್ಳಿ ರೈತ ಎ.ಎಂ.ತ್ಯಾಗರಾಜ್ ತಿಳಿಸಿದರು.
“ಕೆಜಿಗೆ ₨ 60ರಂತೆ ಲೆಕ್ಕವಾದರೂ 20 ಟನ್ ದ್ರಾಕ್ಷಿ ಬೆಳೆಗೆ ₨ 12 ಲಕ್ಷವಾದರೂ ಆದಾಯ ಬರುತಿತ್ತು. ಆದರೆ ಈಗ ಬೆಲೆಯು ₨ 15 ರಿಂದ 20ಕ್ಕೆ ಕುಸಿದಿದ್ದು, 20 ಟನ್‌ಗೆ ₨ 4 ಲಕ್ಷದಷ್ಟು ಸಹ ಆದಾಯ ಬರುವುದಿಲ್ಲ. ಇನ್ನೂ ಕೂಲಿಕಾರ್ಮಿಕರ ಕೂಲಿ, ಔಷಧಿ, ಗೊಬ್ಬರ, ಕೊಳವೆಬಾವಿ ನೀರು, ಟ್ಯಾಂಕರ್ ನೀರು ಮುಂತಾದವುಗಳಿಗೆ ಖರ್ಚು–ವೆಚ್ಚ ಮಾಡಿದಷ್ಟು ಕೂಡ ಆದಾಯ ಬರುವುದಿಲ್ಲ. ಈ ಬಾರಿ ಮಾತ್ರ ನಮಗೆ ತುಂಬಾ ನಷ್ಟವಾಗಿದೆ’ ಎಂದು ಅವರು ತಿಳಿಸಿದರು.
‘ಆಲಿಕಲ್ಲಿನ ಮಳೆಯಿಂದ ಸಾಕಷ್ಟು ನಷ್ಟವನ್ನು ಕಳೆದ ಬಾರಿ ಹೊಂದಿದ್ದೆವು. ವಿಷಗಾಳಿ ಸೋಕದಂತೆ ತೋಟದ ಸುತ್ತಲೂ ಬಲೆ ಹಾಕಬೇಕು. ದ್ರಾಕ್ಷಿಯು ಕೋತಿ ಮತ್ತು ಪಕ್ಷಿಗಳ ಪಾಲಾಗದಂತೆ ಎಚ್ಚರವಹಿಸಬೇಕು. ಅಗತ್ಯ ಬಿದ್ದರೆ, ಗೊಬ್ಬರ ಕೂಡ ತಂದು ಸುರಿಯಬೇಕು. ಇದಕ್ಕೆಲ್ಲಾ ಲಕ್ಷಾಂತರ ರೂಪಾಯಿ ಖರ್ಚು ಆಗುವಾಗ, ಕೆಜಿಗೆ ಬರೀ ₨ 15 ರಿಂದ 20ರಂತೆ ಬೆಳೆ ಮಾರಿದರೆ ನಮ್ಮ ಕೈಗೇನು ದಕ್ಕುತ್ತೆ’ ಎಂದು ನಾಗೇಂದ್ರಪ್ರಸಾದ್ ತಿಳಿಸಿದರು.
‘ವೆಂಕಟಗಿರಿಕೋಟೆ ಮತ್ತು ವಿಜಯಪುರಕ್ಕೆ ನಾವೇ ಖುದ್ದಾಗಿ ಹೋಗಿ ವ್ಯಾಪಾರಸ್ಥರನ್ನು ಕರೆದರೂ ದ್ರಾಕ್ಷಿ ಖರೀದಿ ಮಾಡಲು ಸಿದ್ಧರಿಲ್ಲ. ಬೆಲೆ ಇನ್ನಷ್ಟು ಕಡಿಮೆಯಾಗಲಿ ಅಂತ ಕಾಯುತ್ತಿದ್ದಾರೆ. ಬೆಂಗಳೂರು ಬ್ಲೂ ದ್ರಾಕ್ಷಿಯನ್ನು ಜ್ಯೂಸ್ ಮತ್ತು ವೈನ್ ತಯಾರಿಸುವವರು ಕೊಳ್ಳುತ್ತಾರೆ. ಉಳಿದ ದ್ರಾಕ್ಷಿಗಳ ಕಥೆ ಕೇಳುವವರಿಲ್ಲ. ಇಂತಿಷ್ಟು ಬೆಲೆಯಿಂದ ನಮಗೆ ಸ್ವಲ್ಪವಾದರೂ ಆದಾಯ ಬರಲಿ ಎಂದು ನಾವು ನಿರೀಕ್ಷಿಸುತ್ತಿದ್ದರೆ, ಎಲ್ಲಾ ನಿರೀಕ್ಷೆಗಳು ಹುಸಿಯಾಗುತ್ತಿವೆ. ದ್ರಾಕ್ಷಿ ಗೊಂಚಲು ಕಣ್ಣೆದುರಿಗಿದ್ದು ಮಾರಾಟವಾಗದೇ ಕಣ್ಣಿಗೆ ಕುಕ್ಕುವಂತೆ ಭಾಸವಾಗುತ್ತದೆ’ ಎಂದು ಅವರು ತಿಳಿಸಿದರು.
ಈಡೇರದ ಶೀತಲೀಕರಣ ಘಟಕದ ಬೇಡಿಕೆ: ‘ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆಗೆಂದೇ ಪ್ರತ್ಯೇಕ ಶೀತಲೀಕರಣ ಘಟಕ ಸ್ಥಾಪಿಸುವಂತೆ ಸರ್ಕಾರಕ್ಕೆ ಮತ್ತು ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಮಾಡಿಕೊಂಡರೂ ಯಾವುದೇ ರೀತಿಯಲ್ಲೂ ಪ್ರಯೋಜನವಾಗಿಲ್ಲ. ಒಂದು ವೇಳೆ ಶೀತಲೀಕರಣ ಘಟಕ ಇದ್ದಿದ್ದರೆ, ನಾವು ಬೆಳೆ ಕಟಾವು ಮಾಡಿ ಅದರಲ್ಲಿ ಶೇಖರಿಸಿ ಇಡಬಹುದಿತ್ತು. ಉತ್ತಮ ಬೆಲೆ ಬಂದಾಗ, ಅದನ್ನು ಮಾರಾಟ ಮಾಡಬಹುದಿತ್ತು’ ಎಂದು ಗಂಗಾದೇವಿ ದ್ರಾಕ್ಷಿ ಬೆಳೆಗಾರ ಒಕ್ಕೂಟದ ಸದಸ್ಯರು ಹೇಳುತ್ತಾರೆ.
‘ತಾಲ್ಲೂಕಿನಲ್ಲಿ ಅತಿ ಹೆಚ್ಚು ದ್ರಾಕ್ಷಿ ಬೆಳೆಯಲಾಗುತ್ತಿದೆ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡಾದರೂ ಸರ್ಕಾರವು ಶೀತಲೀಕರಣ ಘಟಕದ ಸ್ಥಾಪನೆಗೆ ಮುಂದಾಗಬೇಕು. ಆ ಸೌಲಭ್ಯ ಇರದಿದ್ದರೆ, ಖಂಡಿತವಾಗಿಯೂ ನಾವು ಅಪಾರ ನಷ್ಟಕ್ಕೆ ಒಳಗಾಗುತ್ತೇವೆ. ಅಧಿಕಾರಿಗಳು ತಾಲ್ಲೂಕಿನಲ್ಲಿ ಬೆಳೆಯುವ ದ್ರಾಕ್ಷಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ನೀಡಿಲ್ಲ. ನಮ್ಮಲ್ಲಿನ ಉತ್ಪಾದನೆಗೆ ಸೂಕ್ತ ಮಾರುಕಟ್ಟೆಯ ವ್ಯವಸ್ಥೆ ಆಗಬೇಕಿದೆ’ ಎಂದು ಅವರು ಹೇಳುತ್ತಾರೆ.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ 2,708 ವಿದ್ಯಾರ್ಥಿಗಳು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಬರೆಯಲಿದ್ದಾರೆ
ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್ 30 ರಂದು ಪ್ರಾರಂಭವಾಗಿ ಏಪ್ರಿಲ್ 12 ರವರೆಗೂ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳಿಗೆ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ಹಾಗೂ ಜಿಲ್ಲಾ ಮಟ್ಟದ ಒಬ್ಬ ಅಧಿಕಾರಿಯನ್ನು ತಾಲ್ಲೂಕು ವೀಕ್ಷಕರನ್ನಾಗಿ ಜಿಲ್ಲಾಧಿಕಾರಿಗಳು ನಿಯೋಜಿಸಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಹಂತದ ಎರಡು ಜಾಗೃತ ತಂಡಗಳು ಕಾರ್ಯನಿರ್ವಹಿಸುತ್ತವೆ. ತಹಶೀಲ್ದಾರ್, ಕಾರ್ಯನಿರ್ವಾಹಣಾಧಿಕಾರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದ ತಾಲ್ಲೂಕು ಮಟ್ಟದ ಜಾಗೃತಿ ದಳ ಸಹ ಇರುತ್ತದೆ.
ತಾಲ್ಲೂಕಿನಲ್ಲಿ ಒಟ್ಟು 11 ಪರೀಕ್ಷಾ ಕೇಂದ್ರಗಳಿರುತ್ತವೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬರಂತೆ ಪ್ರಶ್ನೆ ಪತ್ರಿಕೆಗಳ ಅಭಿರಕ್ಷಕರನ್ನು ಮಂಡಳಿಯಿಂದ ನಿಯೋಜಿಸಲಾಗಿದೆ.
ಪರೀಕ್ಷಾ ಕೇಂದ್ರಗಳು: ಸರ್ಕಾರಿ ಪ್ರೌಢಶಾಲೆ ಜಂಗಮಕೋಟೆ (252 ವಿದ್ಯಾರ್ಥಿಗಳು), ಸರ್ಕಾರಿ ಪ್ರೌಢಶಾಲೆ ಶಿಡ್ಲಘಟ್ಟ (335 ವಿದ್ಯಾರ್ಥಿಗಳು), ಸರ್ಕಾರಿ ಪ್ರೌಢಶಾಲೆ ಬಶೆಟ್ಟಹಳ್ಳಿ (212 ವಿದ್ಯಾರ್ಥಿಗಳು), ಸರ್ಕಾರಿ ಪ್ರೌಢಶಾಲೆ ಮೇಲೂರು (153 ವಿದ್ಯಾರ್ಥಿಗಳು), ಮೊರಾರ್ಜಿದೇಸಾಯಿ ವಸತಿ ಶಾಲೆ 11ನೇ ಮೈಲಿ (207 ವಿದ್ಯಾರ್ಥಿಗಳು), ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಪುರಬೈರನಹಳ್ಳಿ (210 ವಿದ್ಯಾರ್ಥಿಗಳು), ಶ್ರೀಸ್ವಾಮಿ ವಿವೇಕಾನಂದ ಪ್ರೌಢಶಾಲೆ ಮಳ್ಳೂರು (224 ವಿದ್ಯಾರ್ಥಿಗಳು), ಶ್ರೀ ವಾಸವಿ ಪ್ರೌಢಶಾಲೆ (229), ಬಿಜಿಎಸ್ ಪ್ರೌಢಶಾಲೆ ಹನುಮಂತಪುರ(340), ಡಾಲ್ಫಿನ್ಸ್ ಪ್ರೌಢಶಾಲೆ ನೆಲ್ಲೀಮರದಹಳ್ಳಿ (175), ಶ್ರೀ ಜ್ಯೋತಿ ಪ್ರೌಢಶಾಲೆ ಜಂಗಮಕೋಟೆ (171).
ತಾಲ್ಲೂಕಿನಲ್ಲಿ 1,381 ಗಂಡು ಮಕ್ಕಳು, 1,327 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 2,708 ವಿದ್ಯಾರ್ಥಿಗಳು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಬರೆಯುತ್ತಿದ್ದಾರೆ.
ಮಾರ್ಚ್ 30 ರಂದು ಪ್ರಥಮ ಭಾಷೆ, ಏಪ್ರಿಲ್ 1 ರಂದು ಅರ್ಥಶಾಸ್ತ್ರ (ಸರ್ಕಾರಿ ಪ್ರೌಢಶಾಲೆ ಶಿಡ್ಲಘಟ್ಟ ಕೇಂದ್ರದಲ್ಲಿ ಮಾತ್ರ), ಏಪ್ರಿಲ್ 3 ರಂದು ಗಣಿತ, ಏಪ್ರಿಲ್ 5 ರಂದು ದ್ವಿತೀಯ ಭಾಷೆ, ಏಪ್ರಿಲ್ 7 ರಂದು ವಿಜ್ಞಾನ, ಏಪ್ರಿಲ್ 10 ರಂದು ತೃತೀಯ ಭಾಷೆ, ಏಪ್ರಿಲ್ 12 ರಂದು ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿದ್ದು, ವಿದ್ಯಾರ್ಥಿಗಳು ಪರೀಕ್ಷೆಗೆ ಬೆಳಿಗ್ಗೆ 9.30 ಗಂಟೆಯ ಒಳಗೆ ಹಾಜರಿರಬೇಕು. ತಡವಾಗಿ ಬರುವ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಬರಲು ಅವಕಾಶ ಇರುವುದಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ತಿಳಿಸಿದ್ದಾರೆ.
ಬಶೆಟ್ಟಹಳ್ಳಿಯ ಕೆರೆ ಹೂಳನ್ನು ತೆಗೆಯುವ ಕಾರ್ಯಕ್ರಮ
ಹೂಳು ತುಂಬಿರುವ ಹಾಗು ನಿರ್ವಹಣೆಯಿಲ್ಲದ ಕೆರೆಗಳ ಪುನಃಶ್ಚೇತನಕ್ಕೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಂದಾಗಿದ್ದು ತಾಲ್ಲೂಕಿನಲ್ಲಿ ಬಶೆಟ್ಟಹಳ್ಳಿ ಕೆರೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಧರ್ಮಸ್ಥಳ ಗ್ರಾಮೀಣಾಬಿವೃದ್ಧಿ ಜಿಲ್ಲಾ ನಿರ್ದೆಶಕ ರಾಧಾಕೃಷ್ಣರಾವ್ ತಿಳಿಸಿದರು.
ತಾಲ್ಲೂಕಿನ ಬಶೆಟ್ಟಹಳ್ಳಿಯ ಕೆರೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಕೆರೆಯಲ್ಲಿರುವ ಹೂಳನ್ನು ತೆಗೆಯುವ ಕಾರ್ಯಕ್ರಮವನ್ನು ಪರಿವೀಕ್ಷಿಸಿ ಅವರು ಮಾತನಾಡಿದರು.
ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಗಳು ಒಂದು ಕಾಲದಲ್ಲಿ ಕೆರೆ ಕುಂಟೆಗಳ ಸಾಲನ್ನೇ ಹೊಂದಿದ್ದು, ಅವುಗಳಲ್ಲಿ ಸದಾ ನೀರಿರುತ್ತಿತ್ತು. ಆದರೆ ಈಗ ಬರಪೀಡಿತ ಜಿಲ್ಲೆಗಳಗಳಾಗಿದ್ದು ಕೆರೆಗಳ ಜೀರ್ಣೋದ್ದಾರದಿಂದ ಮಾತ್ರ ಅಬಿವೃದ್ಧಿ ಹೊಂದಲು ಸಾಧ್ಯ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಬಾಗೆಪಲ್ಲಿ ಹಾಗೂ ಚಿಂತಾಮಣಿ ತಾಲ್ಲೂಕುಗಳಲ್ಲಿ ಕೆರೆ ಅಭಿವೃದ್ಧಿ ಸಮಿತಿ ರಚನೆ ಮಾಡಿ ಕೆರೆಗಳಲ್ಲಿ ಹೂಳೆತ್ತುವ ಕಾರ್ಯ ಆರಂಭಿಸಲಾಗಿದೆ. ಈಗಾಗಲೇ ಕೆರೆ ಹೂಳೆತ್ತುವ ಕಾರ್ಯಕ್ಕೆ ಸುಮಾರು ೩೫ ಲಕ್ಷ ರೂ ಬಿಡುಗಡೆ ಮಾಡಿದ್ದು, ಜನರ ಸಹಕಾರದೊಂದಿಗೆ ಈ ಕಾರ್ಯವನ್ನು ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಬಶೆಟ್ಟಹಳ್ಳಿಯ ಸುಮಾರು ಎರಡು ಸಾವಿರ ಕುಟುಂಬಗಳಿಗೆ ಕುಡಿಯುವ ನೀರಿನ ಪೂರೈಕೆ ಮಾಡಲು ಈಗಾಗಲೇ ನಾಲ್ಕು ಕೊಳವೆಬಾವಿಗಳನ್ನು ಕೊರೆಸಿ ಗಮ ಪಂಚಾಯಿತಿಯಿಂದ ನೀರು ಪೂರೈಸಲಾಗುತ್ತಿದೆ. ಬಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ಮತ್ತು ಪುನಃಶ್ಚೇತನ ಸಮಿತಿ ಬಶೆಟ್ಟಹಳ್ಳಿ ಸಹಯೋಗದಲ್ಲಿ ಕೆರೆ ಹೂಳೆತ್ತುವ ಕೆಲಸ ಮಾಡಲಾಗುವುದು ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಮೋಹನ್ ಮಾತನಾಡಿ, ಪ್ರಕೃತಿ ಮನುಷ್ಯನಿಗೆ ಅನೇಕ ವರಗಳನ್ನು ನೀಡಿದೆ. ಅದರಲ್ಲಿ ಕಾಡು, ಬೆಟ್ಟ, ನೀರು ಮುಂತಾದುವುಗಳನ್ನು ಮನುಷ್ಯ ತನ್ನ ದುರಾಸೆಯಿಂದ ಹಾಳು ಮಾಡುತ್ತಿದ್ದಾನೆ. ಪ್ರಕೃತಿ ಮುನಿದರೆ ಮನುಷ್ಯ ಉಳಿಯುವುದು ಕಷ್ಟ, ಪ್ರಕೃತಿ ಉಳಿಸಿ ಮನುಜ ಕುಲವನ್ನು ಉಳಿಸಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಬಶೆಟ್ಟಹಳ್ಳಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಗಾಯಿತ್ರಿ, ಜರ್ನಾಧನ್, ಶಶಿಕುಮಾರ್ ಹಾಜರಿದ್ದರು.
ಅಧಿಕಾರಿಗಳು ನಮ್ಮೂರಲ್ಲಿಯೇ ವಾಸಿಸಿದರೆ ನಮ್ಮೂರು ಇನ್ನಷ್ಟು ಅಭಿವೃದ್ಧಿ ಆಗುತ್ತದೆ
ರೇಷ್ಮೆ ಮತ್ತು ಹೈನುಗಾರಿಕೆಯನ್ನು ನಂಬಿರುವ ತಾಲ್ಲೂಕಿನಲ್ಲಿ ರೈತರು ಸಂಪಾದಿಸುವಷ್ಟೇ ಹಣವನ್ನು ಅಧಿಕಾರಿ ವರ್ಗದವರು ಸಂಪಾದಿಸುತ್ತಾರೆ. ಆದರೆ ಅಧಿಕಾರಿಗಳಲ್ಲಿ ಬಹುತೇಕರು ಶಿಡ್ಲಘಟ್ಟದಲ್ಲಿ ವಾಸಿಸುವುದಿಲ್ಲ. ಇಲ್ಲಿ ದುಡಿದು ನೆರೆಯ ತಾಲ್ಲೂಕಿನಲ್ಲಿ ಖರ್ಚು ಮಾಡುತ್ತಾರೆ. ಅಧಿಕಾರಿಗಳು ನಮ್ಮೂರಲ್ಲಿಯೇ ವಾಸಿಸಿದರೆ ನಮ್ಮೂರು ಇನ್ನಷ್ಟು ಅಭಿವೃದ್ಧಿ ಆಗುತ್ತದೆ ಎಂದು ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ಎ.ನಾಗರಾಜ್ ತಿಳಿಸಿದರು.
ನಗರದ ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣದಲ್ಲಿ ಭಾನುವಾರ ಶ್ರೀ ಮಲ್ಲೇ ಮಲ್ಲೇಶ್ವರ ಶಾಲಾ ವಾಹನ ಚಾಲಕರ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ವಾಹನ ಚಾಲಕರ ಸಂಘದೊಳಕ್ಕೆ ಕ್ಲೀನರುಗಳನ್ನೂ ಸೇರಿಸಿಕೊಳ್ಳಿ. ಪ್ರತಿಯೊಬ್ಬರೂ ವಿಮೆಯನ್ನು ಮಾಡಿಸಿ. ಕೌಟುಂಬಿಕ ಭದ್ರತೆಗಾಗಿ ಸರ್ಕಾರದಿಂದ ಸಿಗುವ ಯೋಜನೆಗಳನ್ನು ಬಳಸಿಕೊಳ್ಳಿ. ಖಾಸಗಿ ಶಾಲೆಗಳ ಸಂಘವೂ ಸಹ ನಿಮ್ಮ ಬೆನ್ನೆಲುಬಾಗಿ ಸದಾ ಇರುತ್ತದೆ ಎಂಬುದನ್ನು ಮರೆಯದಿರಿ ಎಂದು ಹೇಳಿದರು.
ಖಾಸಗಿ ಶಾಲೆಗಳ ಸಂಘದ ಉಪಾಧ್ಯಕ್ಷ ಮಹಮದ್ ತಮೀಮ್ ಅನ್ಸಾರಿ ಮಾತನಾಡಿ, ಶಾಲಾ ವಾಹನ ಚಾಲಕರದ್ದು ಅತ್ಯಂತ ಜವಾಬ್ದಾರಿಯುತ ಸೇವಾ ಕಾರ್ಯವಾಗಿದೆ. ತಾಲ್ಲೂಕಿನಾದ್ಯಂತ 80 ಮಂದಿ ಶಾಲಾ ವಾಹನ ಚಾಲಕರಿದ್ದು, ಅವರಿಗೆ ಕನಿಷ್ಠ ವೇತನ ನಿಗದಿಪಡಿಸಲು ಖಾಸಗಿ ಶಾಲೆಗಳ ಸಂಘದಲ್ಲಿ ಚರ್ಚೆ ಮಾಡಿ ಸಹಾಯ ಮಾಡಲಾಗುವುದು. ಚಾಲಕರ ಕುಟುಂಬದ ಭದ್ರತೆಯೆಡೆಗೂ ಶಾಲೆಗಳ ಆಡಳಿತ ಮಂಡಳಿ ಬದ್ಧವಾಗಿದೆ ಎಂದರು.

ಕಾರ್ಮಿಕ ನಿರೀಕ್ಷಕ ಎಸ್.ವಿಶ್ವನಾಥ್ ಮಾತನಾಡಿ, ಅಸಂಘಟಿತ ವಲಯದ ಕಾರ್ಮಿಕರಾದ ಶಾಲಾ ವಾಹನ ಚಾಲಕರು ಮುಗ್ಧ ಶಾಲಾ ಮಕ್ಕಳ ಜವಾಬ್ದಾರಿಯನ್ನು ಹೊತ್ತಿದ್ದು, ತಮ್ಮ ಹಾಗೂ ತಮ್ಮ ಕುಟುಂಬದ ಕುರಿತಂತೆಯೂ ಚಿಂತಿಸಬೇಕು ಸರ್ಕಾರವು ಜಾರಿಗೆ ತಂದಿರುವ ಖಾಸಗಿ ವಾಣಿಜ್ಯ ವಾಹನ ಚಾಲಕರ ಉಚಿತ ವಿಮಾ ಸೌಲಭ್ಯದ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಜಿಲ್ಲೆಯಲ್ಲಿ ಸುಮಾರು 3,050 ಮಂದಿ ಖಾಸಗಿ ವಾಣಿಜ್ಯ ವಾಹನ ಚಾಲಕರು ನೋಂದಣಿ ಮಾಡಿಕೊಂಡಿದ್ದು, ತಾಲ್ಲೂಕಿನಲ್ಲಿ 450 ಮಂದಿ ಮಾತ್ರ ನೋಂದಣಿ ಮಾಡಿಸಿದ್ದಾರೆ. ಈ ಯೋಜನೆಯಡಿ ನೋಂದಣಿ ಮಾಡಿಸಿಕೊಂಡಿರುವವರಲ್ಲಿ ನಾಲ್ಕು ಮಂದಿ ಕರ್ತವ್ಯದಲ್ಲಿದ್ದಾಗ ಮರಣ ಹೊಂದಿದಾಗ ತಲಾ 2 ಲಕ್ಷ ರೂಗಳನ್ನು ಸರ್ಕಾರ ನೀಡಿದೆ. ಚಾಲಕರು ಒಂದು ಬಾರಿ ಮಾತ್ರ 25 ರೂ ನೋಂದಣಿ ಶುಲ್ಕವನ್ನು ಪಾವತಿಸಬೇಕು. ಸಂಪೂರ್ಣ ಪ್ರೀಮಿಯಂ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸುತ್ತದೆ. ಈ ಬಗ್ಗೆ ಸಂಘವು ಸದಸ್ಯರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.
ಬೃಂದಾ ಪಬ್ಲಿಕ್ ಶಾಲೆಯ ಅಧ್ಯಕ್ಷ ಬಿ.ಎನ್.ನಾಗರಾಜ್, ಖಾಸಗಿ ಶಾಲೆಗಳ ಸಂಘದ ಕಾರ್ಯದರ್ಶಿ ರಾಮಚಂದ್ರರೆಡ್ಡಿ, ಸಿಲ್ಕ್‌ಸಿಟಿ ದ್ವಿಚಕ್ರ ವಾಹನ ರಿಪೇರಿಗಾರರ ಸಂಘದ ಅಧ್ಯಕ್ಷ ಖಾದರ್‌ಪಾಷ, ಉಪಾಧ್ಯಕ್ಷ ಸಿಬತ್‌ಉಲ್ಲಬಾಬು, ತಾಲ್ಲೂಕು ಬಣ್ಣ ಪೇಂಟಿಂಗ್ ಕಾರ್ಮಿಕರ ಸಂಘದ ಅಧ್ಯಕ್ಷ ಸಲೀಂಪಾಷ, ಕಾರ್ಮಿಕ ಇಲಾಖೆಯ ಅಧಿಕಾರಿ ಶ್ರೀನಿವಾಸ್, ಶ್ರೀ ಮಲ್ಲೇ ಮಲ್ಲೇಶ್ವರ ಶಾಲಾ ವಾಹನ ಚಾಲಕರ ಸಂಘದ ಅಧ್ಯಕ್ಷ ಮೋಹನ್, ಉಪಾಧ್ಯಕ್ಷ ಸುಬ್ರಮಣಿ, ಕಾರ್ಯದರ್ಶಿ ಎಚ್.ಎನ್.ನಾಗರಾಜ, ಖಜಾಂಚಿ ಎಂ.ಮುನಿರಾಜು, ಸದಸ್ಯರಾದ ಎನ್.ಮಂಜುನಾಥ, ಎಂ.ದೇವರಾಜ್, ಕೃಷ್ಣಾರೆಡ್ಡಿ ಹಾಜರಿದ್ದರು.
ಶೋಭಾಯಾತ್ರೆಯ ರಥಕ್ಕೆ ಸ್ವಾಗತ
ಧರ್ಮದ ಹಾದಿಯಲ್ಲಿ ಸಮಾಜದಲ್ಲಿ ಬದಲಾವಣೆ ತರಲು ಸಿದ್ಧಗಂಗಾ ಶ್ರೀಗಳು ಶಿಕ್ಷಣ ದಾಸೋಹ ನಡೆಸಿದರು. ಅವರ ಸೇವೆಗೆ ಭಕ್ತರು ನಡೆದಾಡುವ ದೇವರೆಂದೇ ಹೇಳಿದ್ದಾರೆ. ಅವರ ಸಂದೇಶ ಇಂದಿನ ಸಮಾಜಕ್ಕೆ ಅಗತ್ಯವಾಗಿದೆ ಎಂದು ತಹಶೀಲ್ದಾರ್ ಅಜಿತ್‌ಕುಮಾರ್ ರೈ ತಿಳಿಸಿದರು.
ನಗರದ ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯದ ಆವರಣಕ್ಕೆ ಶನಿವಾರ ಸಂಜೆ ಆಗಮಿಸಿದ ಸಿದ್ದಗಂಗಾ ಮಠದ ಶಿವಕುಮಾರಸ್ವಾಮಿಗಳ ವಿವಿಧ ಭಾವಚಿತ್ರಗಳನ್ನೊಳಗೊಂಡು ಸಿಂಗರಿಸಿದ ಶೋಭಾಯಾತ್ರೆಯನ್ನು ಸ್ವಾಗತಿಸಿ ಅವರು ಮಾತನಾಡಿದರು.
ಸಿದ್ದಗಂಗಾ ಮಠದ ಶಿವಕುಮಾರಸ್ವಾಮಿಗಳು 110ನೇ ಜನ್ಮದಿನೋತ್ಸವವನ್ನು ಆಚರಿಸಿಕೊಳ್ಳಲಿದ್ದು, ಭಕ್ತಸಮೂಹ ಈ ಸಂತೋಷಕ್ಕೆ ಸಾಕ್ಷಿಯಾಗಿ ಏಪ್ರಿಲ್ 1 ರಂದು ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಬೃಹತ್ ಗುರುವಂದನಾ ಸಮಾರಂಭವನ್ನು ಹಮ್ಮಿಕೊಂಡಿದ್ದಾರೆ. ಈ ಸಂದರ್ಭಕ್ಕೆ ರಾಜ್ಯದ 12 ಜಿಲ್ಲೆಗಳಲ್ಲಿ ಶ್ರೀಗಳವರ ವಿವಿಧ ಭಾವಚಿತ್ರಗಳನ್ನೊಳಗೊಂಡು ಸಿಂಗರಿಸಿದ ಶೋಭಾಯಾತ್ರೆಯನ್ನು ಕಳುಹಿಸಲಾಗುತ್ತಿದೆ ಎಂದು ಹೇಳಿದರು.
ಈ ಶೋಭಾಯಾತ್ರೆಯ ರಥವು ತಾಲ್ಲೂಕಿನ ಕುಂಬಿಗಾನಹಳ್ಳಿ ಗ್ರಾಮಕ್ಕೆ ಶುಕ್ರವಾರ ರಾತ್ರಿ ಬಂದಿದ್ದು, ಶನಿವಾರ ಬೆಳಿಗ್ಗೆ ಕುಂಬಿಗಾನಹಳ್ಳಿ ಗ್ರಾಮದಲ್ಲಿ ಶಿವಪೂಜೆ ಮತ್ತು ಪ್ರಸಾದವನ್ನು ಮಾಡಿಕೊಂಡು ತಾಲ್ಲೂಕಿನ ಚೀಮಂಗಲ ಗ್ರಾಮಕ್ಕೆ ಶನಿವಾರ ಬೆಳಿಗ್ಗೆ ಬಂದಿತ್ತು.
ಬಸವೇಶ್ವರ ದೇವಾಲಯದಲ್ಲಿ ಪೂಜೆ, ಪಾನಕ, ಸಿಹಿ ಮತ್ತು ಪ್ರಸಾದವನ್ನು ವಿತರಿಸಲಾಯಿತು. ಸಂಜೆ ನಗರದ ಪ್ರಮುಖ ಬೀದಿಗಳಲ್ಲಿ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಿ ಪೂಜ್ಯರ ರಥಕ್ಕೆ ಶ್ರದ್ಧಾಪೂರ್ವಕವಾಗಿ ಗೌರವ ಸಲ್ಲಿಸಲಾಯಿತು.
ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಬಿ.ಸಿ.ನಂದೀಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ವಿ.ನಾಗರಾಜ್, ಚಂದ್ರಶೇಖರ್, ದಾಮೋದರ್, ವೃಷಭೇಂದ್ರಪ್ಪ ಹಾಜರಿದ್ದರು.
ಹಾಲು ಉತ್ಪಾಧಕರ ಸಹಕಾರ ಸಂಘದ ಅಧ್ಯಕ್ಷರುಗಳ ಅಧ್ಯಯನ ಪ್ರವಾಸಕ್ಕೆ ಚಾಲನೆ
ಗುಣಮಟ್ಟದ ಹಾಲು ಉತ್ಪಾದನೆ ಮಾಡದಿದ್ದಲ್ಲಿ ಹಾಲು ಉತ್ಪಾದಕರು, ಹಾಲು ಉತ್ಪಾದಕರ ಸಹಕಾರ ಸಂಘಗಳಿಗೂ ಭವಿಷ್ಯದಲ್ಲಿ ಸಂಕಷ್ಟದ ದಿನಗಳು ಎದುರಾಗಲಿವೆ ಎಂದು ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೆಶಕ ಬಂಕ್‌ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಿಗೆ ಹಮ್ಮಿಕೊಂಡಿದ್ದ ಅಧ್ಯಯನ ಪ್ರವಾಸಕ್ಕೆ ನಗರದ ಬಸವೇಶ್ವರ ದೇವಾಲಯದ ಆವರಣದಲ್ಲಿ ಗುರುವಾರ ರಾತ್ರಿ ಚಾಲನೆ ನೀಡಿ ಮಾತನಾಡಿ, ಹಾಲು ಮತ್ತು ಹಾಲು ಉತ್ಪನ್ನಗಳನ್ನು ಆಹಾರ ಕಲಬೆರೆಕೆ ನಿಯಂತ್ರಣ ಕಾಯಿದೆಯಡಿ ತರಲಾಗಿದೆ. ಆದ್ದರಿಂದ ಕಳಪೆ ಹಾಲು ಉತ್ಪನ್ನಗಳನ್ನು ತಯಾರಿಸುವುದು, ಸಂಗ್ರಹಿಸುವುದು ಹಾಗೂ ದಾಸ್ತಾನು ಮಾಡುವುದು, ಮಾರಾಟ ಮಾಡುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಆದ್ದರಿಂದ ಗುಣಮಟ್ಟದ ಹಾಲು ಉತ್ಪಾದನೆ ಮಾಡದೆ ವಿಧಿಯಿಲ್ಲ ಎಂದರು.
ಇದಕ್ಕೂ ಮಿಗಿಲಾಗಿ ಗುಣಮಟ್ಟದ ಹಾಲಿಗೆ ಮಾತ್ರವೇ ಸರ್ಕಾರವು ಪ್ರೋತ್ಸಾಹ ಧನವನ್ನು ವಿತರಿಸಲಿದ್ದು ಕಳಪೆ ಗುಣಮಟ್ಟದ ಹಾಲಿಗೆ ಸಿಗುವುದಿಲ್ಲ. ಆದ್ದರಿಂದ ಎಲ್ಲ ಹೈನುಗಾರರು ಗುಣಮಟ್ಟದ ಹಾಲು ಉತ್ಪಾದನೆಗೆ ಹೆಚ್ಚಿನ ಆಧ್ಯತೆ ನೀಡಬೇಕಿದೆ ಎಂದು ತಿಳಿಸಿದರು.
ಹಾಗಾಗಿಯೆ ಕಾಲ ಕಾಲಕ್ಕೆ ಹೈನುಗಾರರನ್ನು ಬೇರೆ ಬೇರೆ ರಾಜ್ಯದ ಹಾಗೂ ನಮ್ಮದೇ ರಾಜ್ಯದ ಇತರೆ ಅಭಿವೃದ್ದಿ ಶೀಲ ಡೇರಿಗಳಿಗೆ ಅಧ್ಯಯನ ಪ್ರವಾಸಕ್ಕೆ ಕಳುಹಿಸಲಾಗುವುದು. ಅಲ್ಲಿ ಅಧ್ಯಯನ ನಡೆಸಿ ಅಲ್ಲಿನ ಒಳ್ಳೆಯ ಅಂಶಗಳನ್ನು ಇಲ್ಲಿ ಅನುಷ್ಟಾನಗೊಳಿಸಿಕೊಳ್ಳಬೇಕು. ಆದ್ದರಿಂದ ಎಲ್ಲ ರೈತರು ಪ್ರವಾಸ ಕಾಲದಲ್ಲಿ ಎಲ್ಲವನ್ನು ತಿಳಿದುಕೊಂಡು ಬರಬೇಕೆಂದು ಮನವಿ ಮಾಡಿದರು.
ಕೋಚಿಮುಲ್‌ನ ಶಿಡ್ಲಘಟ್ಟ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಹನುಮಂತರಾವ್ ಮಾತನಾಡಿ, ೫೦ ಮಂದಿ ಹೈನುಗಾರರನ್ನು ೮ ದಿನಗಳ ಕಾಲ ಮಹಾರಾಷ್ಟ್ರದ ಕೊಲ್ಲಾಪುರದ ಗೋಕುಲ್ ಡೇರಿಗೆ ಅಧ್ಯಯನ ಪ್ರವಾಸಕ್ಕೆ ಕಳುಹಿಸಲಾಗುತ್ತಿದೆ ಎಂದು ವಿವರಿಸಿದರು.
ಅಲ್ಲಿ ಹೈನುಗಾರಿಕೆಯನ್ನು ಯಾವ ರೀತಿ ಮಾಡಲಾಗುತ್ತಿದೆ. ಉತ್ತಮ ಗುಣಮಟ್ಟದ ಹಾಲು ಉತ್ಪಾದನೆ ಹೇಗೆ ಮಾಡಬೇಕು, ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭಗಳಿಸುವ ಹೈನುಗಾರಿಕೆ ಮಾಡುವುದು ಹೇಗೆಂಬುದು ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ತಿಳಿಸಿಕೊಡಲಾಗುವುದು. ನಿಮ್ಮ ಜತೆ ನಮ್ಮ ಇಲಾಖೆಯ ಅಧಿಕಾರಿಗಳು ಆಗಮಿಸಲಿದ್ದು ಅವರೊಂದಿಗೆ ಅಲ್ಲಿನ ಡೇರಿಯ ಅಧಿಕಾರಿ, ಸಿಬ್ಬಂದಿಯೂ ನಿಮಗೆ ಅಗತ್ಯ ಮಾಹಿತಿ ಮಾರ್ಗದರ್ಶನ ನೀಡಲಿದ್ದಾರೆ. ಎಲ್ಲರೂ ಅಣ್ಣ ತಮ್ಮಂದಿರಂತೆ ಒಂದಾಗಿ ಅಧ್ಯಯನ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿಕೊಂಡು ಬನ್ನಿ, ಪ್ರವಾಸ ಕಾಲದಲ್ಲಿ ನಮ್ಮ ಸಂಸ್ಥೆಯಿಂದಲೆ ಉಟ, ವಸತಿ ಇನ್ನಿತರೆ ಎಲ್ಲ ಅನುಕೂಲಗಳನ್ನು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಕೋಚಿಮುಲ್‌ನ ಸ್ಥಳೀಯ ಶಿಬಿರ ಕಚೇರಿಯ ಮೇಲ್ವಿಚಾರಕರಾದ ಮುನೇಗೌಡ, ಕುಮ್ಮಣ್ಣ, ಶ್ರೀನಿವಾಸ್, ಮಂಜುನಾಥ್, ಹಾಲು ಉತ್ಪಾಧಕರ ಸಹಕಾರ ಸಂಘಗಳ ನೌಕರರ ಕಾರ್ಯದರ್ಶಿ ಬೋದಗೂರು ಚಂದ್ರೇಗೌಡ ಮತ್ತಿತರರು ಹಾಜರಿದ್ದರು.

