Home Blog Page 423

ಗಂಗಾಕಲ್ಯಾಣ ಯೋಜನೆಯ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳಿ

0

ಗಂಗಾಕಲ್ಯಾಣ ಯೋಜನೆಯಡಿ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಪ್ರವಾಸಿಮಂದಿರದ ಆವರಣದಲ್ಲಿ ಶನಿವಾರ ತಾಲ್ಲೂಕಿನ ೧೧ ಮಂದಿ ಫಲಾನುಭವಿಗಳಿಗೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ ಗಂಗಾಕಲ್ಯಾಣ ಯೋಜನೆಯಡಿಯಲ್ಲಿ ಕೊರೆಯಲಾಗಿದ್ದ ಕೊಳವೆಬಾವಿಗಳಿಗೆ ಪಂಪು ಮೋಟಾರ್, ಕೇಬಲ್ ಸೇರಿದಂತೆ ಸಲಕರಣೆಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.
ತೀವ್ರ ಮಳೆಯ ಕೊರತೆಯಿಂದಾಗಿ ಕುಡಿಯುವ ನೀರಿಗೂ ಪರದಾಡುವಂತಹ ಪರಿಸ್ಥಿತಿಯಲ್ಲಿ ಜೀವಿಸುತ್ತಿರುವ ಈ ದಿನಗಳಲ್ಲಿ ರೈತರು ತಮಗಿರುವ ತುಂಡು ಭೂಮಿಗಳಲ್ಲಿ ಬೆಳೆ ಬೆಳೆಯಲು ನೀರಿನ ಅಭಾವದಿಂದಾಗಿ ಸಂಕಷ್ಟ ಎದುರಿಸುವಂತಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರು ಲಕ್ಷಾಂತರ ರೂಪಾಯಿಗಳನ್ನು ಬಂಡವಾಳ ಹೂಡಿಕೆ ಮಾಡಿ ಕೊಳವೆಬಾವಿಗಳನ್ನು ಕೊರೆಸಲು ಸಾಧ್ಯವಿಲ್ಲದ ಕಾರಣ ಸರ್ಕಾರ ಒಂದೊಂದು ಕೊಳವೆಬಾವಿಗೆ ೩ ಲಕ್ಷ ರೂಪಾಯಿಗಳಿಗೆ ಅನುದಾನ ಏರಿಕೆ ಮಾಡಿದೆ. ಪ್ರಸ್ತುತ ವರ್ಷದಲ್ಲಿ ೯೮ ಕೊಳವೆಬಾವಿಗಳನ್ನು ಕೊರೆಯಿಸಲು ಟೆಂಡರ್ ನೀಡಲಾಗಿದೆ.
ಫಲಾನುಭವಿಗಳು ಮಧ್ಯವರ್ತಿಗಳ ಬಳಿಗೆ ಹೋಗಿ ವಿನಾಕಾರಣ ಹಣವನ್ನು ವ್ಯಯ ಮಾಡಬಾರದು. ಶಾಸಕರು ಒಮ್ಮೆ ಫಲಾನುಭವಿಗಳ ಪಟ್ಟಿಯನ್ನು ಆಯ್ಕೆ ಮಾಡಿಕಳುಹಿಸಿದ ನಂತರ ಶಿಪಾರಸ್ಸುಗಳನ್ನು ತೆಗೆದುಕೊಂಡು ಹೋಗಿ ಹೆಸರುಗಳನ್ನು ಬದಲಾವಣೆ ಮಾಡುವಂತಹ ಯಾವುದೇ ಪ್ರಯತ್ನಗಳನ್ನು ಮಾಡಬಾರದು ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕಾಮಾಕ್ಷಮ್ಮ, ಕ್ಷೇತ್ರಾಭಿವೃದ್ಧಿ ಅಧಿಕಾರಿ ಶೇಖರ್, ತಾಲ್ಲೂಕು ಪಂಚಾಯಿತಿ ಸದಸ್ಯ ರಾಜಶೇಖರ್. ಮಾಜಿ ಸದಸ್ಯ ಗಂಜಿಗುಂಟೆ ನರಸಿಂಹಮೂರ್ತಿ, ರಾಮಬಾಬು, ಬಿ.ಕೆ.ದ್ಯಾವಪ್ಪ, ಕೆ.ಎಸ್.ಕನಕಪ್ರಸಾದ್ ಹಾಜರಿದ್ದರು.

ಸರ್ಕಾರಿ ಶಾಲೆಯಲ್ಲಿ ಒಬ್ಬಟ್ಟಿನ ಸಮಾರಾಧನೆ

0

ಹಬ್ಬ-ಹರಿದಿನಗಳಲ್ಲಿ, ನೆಂಟರು ಬಂದಾಗ, ವಿಶೇಷ ದಿನಗಳಲ್ಲಿ, ಔತಣಕೂಟ ಏರ್ಪಡಿಸಿದಾಗ ಬಹುತೇಕ ಮಂದಿ ಇಷ್ಟಪಡುವ ಸಿಹಿ ಖಾದ್ಯ ಒಬ್ಬಟ್ಟು ಅಥವಾ ಹೋಳಿಗೆ. ಒಬ್ಬಟ್ಟನ್ನು ಪ್ರಮುಖವಾಗಿ ದೀಪಾವಳಿ, ಯುಗಾದಿ ಹಬ್ಬಗಳಲ್ಲಿ ಮತ್ತು ಮದುವೆ ಮುಂತಾದ ಸಮಾರಂಭಗಳಲ್ಲಿ ಮಾಡುತ್ತಾರೆ.
ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ವಿಶೇಷವಾದ ಒಬ್ಬಟ್ಟಿನ ಸಮಾರಾಧನೆ ನಡೆಯಿತು. ಒಬ್ಬಟ್ಟನ್ನು ತಯಾರಿಸಿದ್ದು ಶಾಲಾಭಿವೃದ್ಧಿಯ ಮಹಿಳಾ ಸದಸ್ಯರು, ಗ್ರಾಮದ ಮಹಿಳೆಯರು, ಅಂಗನವಾಡಿ, ಅಡುಗೆ ಸಿಬ್ಬಂದಿ ಮತ್ತು ಶಿಕ್ಷಕಿಯರು. ಸುಮಾರು 600 ಒಬ್ಬಟ್ಟುಗಳನ್ನು ಮಹಿಳೆಯರು ಒಗ್ಗೂಡಿ ಸಿದ್ಧಪಡಿಸಿದ್ದು ವಿಶೇಷವಾಗಿತ್ತು.

ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಗ್ರಾಮದ ಮಹಿಳೆಯರು ಒಬ್ಬಟ್ಟಿನ ತಯಾರಿಯಲ್ಲಿ ತೊಡಗಿರುವುದು.

ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಶಾರದಾ ಪೂಜೆಯನ್ನು ಆಯೋಜಿಸಲಾಗಿತ್ತು. ಒಂದರಿಂದ ಏಳನೆಯ ತರಗತಿಯವರೆಗಿನ ಶಾಲೆಯಲ್ಲಿ ಈ ಬಾರಿ ನಿರ್ಗಮಿಸುವ ಮಕ್ಕಳಿಗೆ ಶುಭ ಕೋರುವ ಕಾರ್ಯಕ್ರಮವೂ ಇತ್ತು. ಈ ವಿಶೇಷ ಸಂದರ್ಭಕ್ಕೆ ಸಿಹಿ ತಯಾರಿಸಲು ಮಹಿಳೆಯರು ಒಗ್ಗೂಡಿದರು. ಬೆಳಿಗ್ಗೆ 6 ಗಂಟೆಗೆ ಶಾಲೆಗೆ ಆಗಮಿಸಿದ ಮಹಿಳೆಯರು ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ರುಚಿರುಚಿಯಾಗಿ 600 ಒಬ್ಬಟ್ಟು, ಚಿತ್ರಾನ್ನ, ಹಪ್ಪಳ, ಎರಡು ರೀತಿಯ ಪಲ್ಯ, ಕೋಸಂಬರಿ, ಅನ್ನ, ಸಾರು ಸಿದ್ಧಪಡಿಸಿಬಿಟ್ಟಿದ್ದರು.
ಶಾಲಾಭಿವೃದ್ಧಿಯ ಮಹಿಳಾ ಸದಸ್ಯೆಯರಾದ ನೇತ್ರ, ಕಲಾವತಿ, ಆನಂದಮ್ಮ, ಪೋಷಕರಾದ ಚಂದ್ರಕಲಾ, ಲಕ್ಷ್ಮೀದೇವಮ್ಮ, ದೀಪಿಕಾ, ಮಮತಾ, ವಜ್ರಮ್ಮ, ಶೋಭಾ, ಅಡುಗೆಯವರಾದ ಭಾರತಮ್ಮ, ರಾಧಮ್ಮ, ಅಂಗನವಾಡಿಯ ಶಶಿಕಲಾ, ಅನುಸೂಯಮ್ಮ, ಶಿಕ್ಷಕಿಯರಾದ ವನಜಾಕ್ಷಿ, ವರಲಕ್ಷ್ಮಿ ಒಗ್ಗೂಡಿ ಕೆಲಸಗಳನ್ನು ಹಂಚಿಕೊಂಡು ಅಡುಗೆ ತಯಾರಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಗ್ರಾಮದ ಮಹಿಳೆಯರು ಒಬ್ಬಟ್ಟಿನ ತಯಾರಿಯಲ್ಲಿ ತೊಡಗಿರುವುದು.

ಶಾರದಾ ಪೂಜೆಯನ್ನು ಮಾಡಿ, ಏಳನೆಯ ತರಗತಿಯ ವಿದ್ಯಾರ್ಥಿಗಳಿಗೆ ಸಿಆರ್‌ಪಿ ಶ್ರೀನಿವಾಸರೆಡ್ಡಿ, ಬಿಆರ್‌ಪಿ ರಾಜು, ಶಾರದಮ್ಮ ಹಿತವಚನಗಳನ್ನು ಹೇಳಿದರು. ಪೋಷಕರಿಗೆ ನಡೆಸಿದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ನಂತರ ನೂರು ಮಂದಿ ಮಕ್ಕಳೊಂದಿಗೆ ಗ್ರಾಮದ ಮಹಿಳೆಯರು, ಪೋಷಕರು, ಶಾಲೆಯ ಶಿಕ್ಷಕರು, ಸಿಬ್ಬಂದಿ, ಸುತ್ತಮುತ್ತಲಿನ ಶಾಲಾ ಶಿಕ್ಷಕರು ಶಾಲೆಯ ಆವರಣದಲ್ಲಿ ಸಾಲಾಗಿ ಕುಳಿತು ಭೋಜನ ಮಾಡಿದರು.
‘ನೂರು ಮಂದಿ ಮಕ್ಕಳಿರುವ ವರದನಾಯಕನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟದಲ್ಲೂ ತಿನ್ನುವ ಬಗ್ಗೆ ನಿರ್ಬಂಧವಿಲ್ಲ. ಈ ದಿನ ಇನ್ನೂ ಸಡಿಲಗೊಳಿಸಿ ಒಬ್ಬಟ್ಟನ್ನು ಹೆಚ್ಚು ತಿನ್ನುವವರಿಗೆ ಬಹುಮಾನ ಎಂದು ಪ್ರೋತ್ಸಾಹಿಸಿದೆವು. ನಮ್ಮ ಮನೆಗಳಲ್ಲಿ ನಮ್ಮ ಮಟ್ಟಿಗೆ ಮಾತ್ರ ಅಡುಗೆ ಮಾಡಿಕೊಳ್ಳುತ್ತೇವೆ. ಆದರೆ ನಮ್ಮೂರ ಶಾಲೆಯಲ್ಲಿ ಶಿಕ್ಷಕರು ಒದಗಿಸುವ ಅವಕಾಶದಿಂದ ಎಲ್ಲಾ ಮಕ್ಕಳಿಗೂ ನಾವೆಲ್ಲಾ ಮಹಿಳೆಯರು ಒಗ್ಗಟ್ಟಿನಿಂದ ಒಬ್ಬಟ್ಟು ತಯಾರಿಸಿದ್ದೇವೆ. ವಿವಿಧ ಖಾದ್ಯಗಳನ್ನು ತಯಾರಿಸಿ ಮಕ್ಕಳಿಗೆ ಹೊಟ್ಟೆ ತುಂಬಾ ತಿನ್ನಿಸುವ ಖುಷಿಗೆ ಬೆಲೆ ಕಟ್ಟಲಾಗದು. ಮಕ್ಕಳ ಸಂತೋಷ ಮತ್ತು ಸಂಭ್ರಮ ಕಂಡಾಗ ನಮ್ಮ ಶ್ರಮ ಸಾರ್ಥಕವೆನಿಸುತ್ತದೆ’ ಎಂದು ಕಲಾವತಿ ತಿಳಿಸಿದರು.

ಸ್ವಾತಂತ್ರ್ಯದ ಮಹತ್ವವನ್ನು ತಿಳಿಯಬೇಕಾದರೆ ದೇಶಭಕ್ತರ ಬಲಿದಾನಗಳ ಬಗ್ಗೆ ಅರಿಯಬೇಕು

0

ದೇಶಕ್ಕಾಗಿ ತಮ್ಮ ಬದುಕನ್ನು ಅರ್ಪಣೆ ಮಾಡಿದ ಮಹಾನುಭಾವರ ಬಗ್ಗೆ ಮಕ್ಕಳು ತಿಳಿಯಬೇಕು. ನಮಗೆ ಬಂದ ಸ್ವಾತಂತ್ರ್ಯದ ಮಹತ್ವವನ್ನು ತಿಳಿಯಬೇಕಾದರೆ ದೇಶಭಕ್ತರ ಬಲಿದಾನಗಳ ಬಗ್ಗೆ ಅರಿಯಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್‌ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ಗುರುವಾರ ದೇಶಭಕ್ತರ ಬಲಿದಾನ ದಿನಾಚರಣೆ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘದಿಂದ ಶಾಲೆಗೆ ಡೆಸ್ಕ್‌ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಗತ್‌ಸಿಂಗ್‌, ರಾಜಗುರು ಮತ್ತು ಸುಖದೇವ್‌ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ದಿನವಿದು. ಚಿಕ್ಕ ವಯಸ್ಸಿನಲ್ಲಿಯೇ ಉದಾತ್ತ ಕಾರ್ಯಕ್ಕಾಗಿ ತಮ್ಮ ಜೀವವನ್ನು ಬಲಿದಾನವನ್ನಾಗಿ ಅವರು ಅರ್ಪಿಸಿದ್ದಾರೆ. ಅಥಹವರ ಜೀವನ ಚರಿತ್ರೆಯನ್ನು ಮಕ್ಕಳು ತಿಳಿಯಬೇಕು. ಆಗ ಮಾತ್ರ ನಮ್ಮ ಈಗಿನ ಬದುಕಿಗೆ, ಸಿಕ್ಕಿರುವ ಸ್ವಾತ್ಂತ್ರ್ಯದ ಬೆಲೆ ತಿಳಿಯುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘದಿಂದ ಶಾಲೆಗೆ ಐದು ಡೆಸ್ಕ್‌ಗಳನ್ನು ನೀಡಲಾಯಿತು. ಶಾಲೆಯ ವತಿಯಿಂದ ಶೇ.20 ರಷ್ಟು ಹಣ ಡೆಸ್ಕ್‌ಗಳಿಗಾಗಿ ನೀಡಿದ್ದಾರೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘದ ಯೋಜನಾಧಿಕಾರಿ ಮೋಹನ್‌ಕುಮಾರ್‌ ತಿಳಿಸಿದರು.
ಶಿಕ್ಷಕ ಎಸ್‌.ಚಾಂದ್‌ಪಾಷ ಭಗತ್‌ಸಿಂಗ್‌, ರಾಜಗುರು ಮತ್ತು ಸುಖದೇವ್‌ ಕುರಿತಂತೆ ಸುಧೀರ್ಘವಾಗಿ ಶಾಲಾ ವಿದ್ಯಾರ್ಥಿಗಳಿಗೆ ವಿವರಿಸಿದರು. ಗ್ರಾಮದ ವೃದ್ಧರಿಗೆ ಹಿರಿಯ ನಾಗರಿಕರ ಗುರುತಿನ ಚೀಟಿಯನ್ನು ವಿತರಿಸಲಾಯಿತು.
ಮುಖ್ಯ ಶಿಕ್ಷಕಿ ಎಂ.ವಿ.ವೆಂಕಟರತ್ನ, ಎಸ್‌ಡಿಎಂಸಿ ಅಧ್ಯಕ್ಷೆ ಪುಷ್ಪ ರಾಮಚಂದ್ರ, ಸದಸ್ಯರಾದ ಈಶ್ವರಾಚಾರಿ, ವೆಂಕಟಮ್ಮ, ಶಿಕ್ಷಕರಾದ ಅಶೋಕ್‌, ಭಾರತಿ ಹಾಜರಿದ್ದರು.

ಡಾ.ಬಿ.ಅರ್.ಅಂಬೇಡ್ಕರ್ ಅವರ ಜಯಂತ್ಯುತ್ಸವ ವಿಜೃಂಭಣೆಯಿಂದ ಆಚರಿಸಬೇಕು

0

ಸಂವಿಧಾನ ಶಿಲ್ಪಿ ಡಾ.ಬಿ.ಅರ್.ಅಂಬೇಡ್ಕರ್ ಅವರ ೧೨೬ ನೇ ಜಯತ್ಯುತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಣೆ ಮಾಡಲು ದಲಿತಪರ ಸಂಘಟನೆಗಳು ಮತ್ತು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ವಿವಿಧ ಜಯಂತಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಏಪ್ರಿಲ್‌ ೧ ರಂದು ದೇವರ ದಾಸಿಮಯ್ಯ ಜಯಂತಿ, ಏಪ್ರಿಲ್‌ ೫ ರಂದು ಡಾ.ಬಾಬು ಜಗಜೀವನರಾಂ ಜಯಂತಿ, ಏಪ್ರಿಲ್‌ ೯ ರಂದು ಭಗವಾನ್ ಮಹಾವೀರ ಜಯಂತಿ, ಏಪ್ರಿಲ್‌ ೧೪ ರಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಮತ್ತು ಏಪ್ರಿಲ್‌ ೨೯ ರಂದು ಬಸವ ಜಯಂತಿಯನ್ನು ಆಚರಿಸಲು ವಿವಿಧ ಮುಖಂಡರ ಸಭೆ ಕರೆಯಲಾಗಿತ್ತಾದರೂ ಸಭೆಯಲ್ಲಿ ಬಹುತೇಕ ದಲಿತ ಮುಖಂಡರು ಅಂಬೇಡ್ಕರ್ ಜಯಂತಿ ಆಚರಿಸಬೇಕಾದರೆ ಮೊದಲು ನಗರದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಸ್ಥಳ ಗುರುತಿಸಿ ಭವನ ನಿರ್ಮಾಣ ಮಾಡಬೇಕು. ಇಲ್ಲವಾದಲ್ಲಿ ಜಯಂತಿ ಆಚರಿಸುವುದು ಬೇಡ ಎಂದು ಪಟ್ಟು ಹಿಡಿದರು.
ಈ ಮದ್ಯೆ ಶಾಸಕ ಎಂ.ರಾಜಣ್ಣ ಮಾತನಾಡಿ ಅಂಬೇಡ್ಕರ್ ಭವನ ನಿರ್ಮಿಸಲು ಈಗಾಗಲೇ ಹನುಮಂತಪುರದ ಬಳಿ ೧ ಎಕರೆ ೩೭ ಗುಂಟೆ ಜಮೀನನ್ನು ಗುರುತಿಸಲಾಗಿದೆ ಎನ್ನುತ್ತಿದ್ದಂತೆ ಕೆಲ ಮುಖಂಡರು ದಲಿತರನ್ನು ಊರಿನಿಂದ ಹೊರಗಡೆ ಹಾಕುವ ಯೋಚನೆಯನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬಿಡಬೇಕು. ಒಂದು ವೇಳೆ ಅಂಬೇಡ್ಕರ್ ಭವನ ನಿರ್ಮಿಸುವುದಾದರೆ ಅದು ನಗರದಲ್ಲಿಯೇ ಆಗಬೇಕು ಎಂದು ಪಟ್ಟುಹಿಡಿದರು.
ಮುಖಂಡರ ಸಲಹೆ ಸೂಚನೆ ಪಡೆದ ಶಾಸಕರು ಮುಖಂಡರ ಬೇಡಿಕೆಯಂತೆ ನಗರದ ಪ್ರವಾಸಿ ಮಂದಿರದ ಆವರಣ ಅಥವ ತೋಟಗಾರಿಕೆ ಇಲಾಖೆಯ ಆವರಣದೊಳಗೆ ನಿರ್ಮಿಸಲು ಸರ್ಕಾರದೊಂದಿಗೆ ಚರ್ಚಿಸಿ ಆದಷ್ಟು ಬೇಗ ಸುಸಜ್ಜಿತವಾದ ಅಂಬೇಡ್ಕರ್ ಭವನ ನಿರ್ಮಿಸಲು ಬೇಕಾದ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ಬಹುತೇಕ ಜಯಂತಿಗಳನ್ನು ನಗರದ ತಾಲ್ಲೂಕು ಕಚೇರಿ ಸಭಾಂಗಣದೊಳಗೆ ನೆರವೇರಿಸುವುದು. ಏಪ್ರಿಲ್‌ ೧೪ ರ ಅಂಬೇಡ್ಕರ್ ಜಯಂತಿಯನ್ನು ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಯಿತು.
ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ತಾಲ್ಲೂಕಿನ ವಿವಿಧ ದಲಿತ ಸಂಘಟನೆಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ತಹಸೀಲ್ದಾರ್ ಎಸ್.ಅಜಿತ್ ಕುಮಾರ್ ರೈ, ತಾಲ್ಲೂಕು ಪಂಚಾಯಿತಿ ಇ.ಓ ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್.ನರಸಿಂಹಯ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಕೇಶವರೆಡ್ಡಿ, ವಿವಿಧ ದಲಿತ ಸಂಘಟನೆಗಳ ಮುಖಂಡರು ಹಾಗು ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಬಿಜೆಪಿ ಪಕ್ಷವನ್ನು ಸಂಘಟಿಸಿ

0

ಮುಂಬರುವ ವಿಧಾನಸಭೆ ಚುನಾವಣೆ ವೇಳೆಗೆ ತಾಲ್ಲೂಕಿನಲ್ಲಿ ಬಿಜೆಪಿ ಪಕ್ಷವನ್ನು ಸಂಘಟಿಸುವ ಮೂಲಕ ಕಾರ್ಯಕರ್ತರು ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಬೇಕಾದ ಎಲ್ಲಾ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಮಂಜುನಾಥ್ ಹೇಳಿದರು.
ನಗರದ ನಗರೇಶ್ವರ ಕಲ್ಯಾಣಮಂಟಪದಲ್ಲಿ ಗುರುವಾರ ತಾಲ್ಲೂಕು ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ದೇಶದ ಪ್ರಧಾನಿ ನರೇಂದ್ರಮೋದಿಯವರ ಉತ್ತಮ ಆಡಳಿತ ವೈಖರಿ ಸೇರಿದಂತೆ ದೇಶಾದ್ಯಂತ ಬಿಜೆಪಿ ಸರ್ಕಾರಗಳಿರುವ ರಾಜ್ಯಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನರು ಅರಿತಿದ್ದು ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿಯೂ ಬಿಜೆಪಿ ಅಧಿಕಾರ ಹಿಡಿಯಲಿದೆ. ಆದ್ದರಿಂದ ಪ್ರತಿಯೊಬ್ಬರೂ ಪಕ್ಷ ಸಂಘಟನೆಗಾಗಿ ಹೆಚ್ಚು ಆಧ್ಯತೆ ನೀಡಬೇಕು ಎಂದರು.
ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್ ಮಾತನಾಡಿ ಕಾಂಗ್ರೆಸ್ ಹಾಗು ಜೆಡಿಎಸ್‌ನ ಬಗ್ಗೆ ಬೇಸತ್ತಿರುವ ಜನ ಈ ಭಾರಿ ಬಿಜೆಪಿ ಪಕ್ಷದ ಕಡೆ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಹಾಗಾಗಿ ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು ಕಾರ್ಯಕರ್ತರು ಪಕ್ಷದ ಸಂಘಟನೆಗಾಗಿ ಹೆಚ್ಚು ಒತ್ತು ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖಂಡರಾದ ತರಬಹಳ್ಳಿ ಭಾಸ್ಕರ್‌ರೆಡ್ಡಿ, ದಾಮೋದರ್, ಸುರೇಶ್, ದೊಣ್ಣಹಳ್ಳಿ ರಾಮಣ್ಣ ಮತ್ತಿತರರು ಹಾಜರಿದ್ದರು.

ಶನಿವಾರ ಆಗಮಿಸಲಿದೆ ಶೋಭಾಯಾತ್ರೆಯ ರಥ

0

ಸಿದ್ದಗಂಗಾ ಮಠದ ಶಿವಕುಮಾರಸ್ವಾಮಿಗಳು 110ನೇ ಜನ್ಮದಿನೋತ್ಸವವನ್ನು ಆಚರಿಸಿಕೊಳ್ಳಲಿದ್ದು, ಭಕ್ತಸಮೂಹ ಈ ಸಂತೋಷಕ್ಕೆ ಸಾಕ್ಷಿಯಾಗಿ ಏಪ್ರಿಲ್‌ 1 ರಂದು ತುಮಕೂರಿನ ಸರ್ಕಾರಿ ಜೂನಿಯರ್‌ ಕಾಲೇಜು ಮೈದಾನದಲ್ಲಿ ಬೃಹತ್‌ ಗುರುವಂದನಾ ಸಮಾರಂಭವನ್ನು ಹಮ್ಮಿಕೊಂಡಿದ್ದಾರೆ. ಈ ಸಂದರ್ಭಕ್ಕೆ ರಾಜ್ಯದ 12 ಜಿಲ್ಲೆಗಳಲ್ಲಿ ಶ್ರೀಗಳವರ ವಿವಿಧ ಭಾವಚಿತ್ರಗಳನ್ನೊಳಗೊಂಡು ಸಿಂಗರಿಸಿದ ಶೋಭಾಯಾತ್ರೆಯನ್ನು ಕಳುಹಿಸಲಾಗುತ್ತಿದೆ.
ಈ ಶೋಭಾಯಾತ್ರೆಯ ರಥವು ಶಿಡ್ಲಘಟ್ಟ ತಾಲ್ಲೂಕಿನ ಕುಂಬಿಗಾನಹಳ್ಳಿ ಗ್ರಾಮಕ್ಕೆ ಶುಕ್ರವಾರ ರಾತ್ರಿ ಬರಲಿದೆ. ಶನಿವಾರ ಬೆಳಿಗ್ಗೆ ಕುಂಬಿಗಾನಹಳ್ಳಿ ಗ್ರಾಮದಲ್ಲಿ ಶಿವಪೂಜೆ ಮತ್ತು ಪ್ರಸಾದವನ್ನು ಮಾಡಿಕೊಂಡು ತಾಲ್ಲೂಕಿನ ಚೀಮಂಗಲ ಗ್ರಾಮಕ್ಕೆ ಶನಿವಾರ 11 ಗಂಟೆಗೆ ಆಗಮಿಸಲಿದೆ. ಅಲ್ಲಿ ಪ್ರಸಾದದ ವ್ಯವಸ್ಥೆಯ ನಂತೆ ಶಿಡ್ಲಘಟ್ಟಕ್ಕೆ ಮಧ್ಯಾಹ್ನ 3 ಗಂಟೆಗೆ ನಗರದ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಬರುತ್ತದೆ. ದೇವಾಲಯದಲ್ಲಿ ಪೂಜೆ, ಪಾನಕ, ಸಿಹಿ ಮತ್ತು ಪ್ರಸಾದವನ್ನು ವಿತರಿಸಲಾಗುವುದು. ಸಂಜೆ ನಗರದ ಪ್ರಮುಖ ಬೀದಿಗಳಲ್ಲಿ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಿ ಪೂಜ್ಯರ ರಥಕ್ಕೆ ಶ್ರದ್ಧಾಪೂರ್ವಕವಾಗಿ ಗೌರವ ಸಲ್ಲಿಸಲಾಗುವುದು.

ಬಾಹ್ಯ ಸೌಂದರ್ಯಕ್ಕಿಂತ ಆತ್ಮ ಸೌಂದರ್ಯ ಹೆಚ್ಚು

0

ಜನಸಾಮಾನ್ಯನಿಗೆ ಅರ್ಥವಾಗುವಂತೆ ಸರಳ ಕನ್ನಡದಲ್ಲಿ ತಿಳಿಸುವ ಕೃತಿಯೆ ವಚನ ಸಾಹಿತ್ಯ. ವಚನ ಸಾಹಿತ್ಯ ಕನ್ನಡವನ್ನು ಉಳಿಸುವಲ್ಲಿ ಮತ್ತು ಬೆಳೆಸುವಲ್ಲಿ ಕ್ರಾಂತಿಯನ್ನು ಮಾಡಿದೆ. ಕಾರ್ಯಕ್ಕೆ ಮಹತ್ವ ಹೊರತು ಅವರ ಜಾತಿ ಮಹತ್ವದಲ್ಲ ಎಂಬ ಬಸವಣ್ಣನವರ ತತ್ವಗಳನ್ನು ವಿವರಿಸಿದರು. ಬಾಹ್ಯ ಸೌಂದರ್ಯಕ್ಕಿಂತ ಆತ್ಮ ಸೌಂದರ್ಯ ಹೆಚ್ಚು, ಮಹಿಳಾ ಸ್ವಾತಂತ್ರ್ಯ, ಅಂತರ್ಜಾತಿ ವಿವಾಹಕ್ಕೆ ಈ ಮೂಲಕ ಪ್ರೋತ್ಸಾಹಿಸಿದ್ದಾರೆ ಎಂದು ತಹಶೀಲ್ದಾರ್‌ ಅಜಿತ್‌ಕುಮಾರ್‌ ರೈ ತಿಳಿಸಿದರು.
ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ವತಿಯಿಂದ ‘ವಚನ ಸಾಹಿತ್ಯ ಸಿಂಚನ’ ಕಾರ್ಯಕ್ರಮದ ಅಡಿಯಲ್ಲಿ ಗುರುವಾರ ರಾತ್ರಿ ಷರಾಫ್‌ ರಸ್ತೆಯಲ್ಲಿರುವ ರೂಪಸಿ ರಮೇಶ್‌ ಅವರ ಮನೆಯಲ್ಲಿ ನಡೆದ ಯುಗಾದಿಯ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉಚ್ಛ ಕುಲದವರ ಸ್ವತ್ತೆಂದು ಪರಿಗಣಿಸಿದ್ದ ಸಂಸ್ಕೃತದ ಸೋಂಕಿಲ್ಲದೆ, ಪ್ರಾಸ, ಛಂದಸ್ಸುಗಳ ಸೋಂಕಿಲ್ಲದೆ ನಾಡಿನ ಜನರ ಆಡುಭಾಷೆಯಾದ ಕನ್ನಡದಲ್ಲಿಯೇ ಸೀದಾ ಸಾದಾ ನೇರ ನುಡಿಗಳಲ್ಲಿ ರಚಿತವಾದವುಗಳು ಶಿವ ಶರಣರ ವಚನಗಳು. ಈ ವಚನಗಳು ಕೇವಲ ದೇವರು, ದಿಂಡಿರುಗಳ ಬಗ್ಗೆ ಮಾತ್ರ ಸೀಮಿತವಾಗದೆ, ಜನಸಾಮಾನ್ಯರ ಜೀವನದಲ್ಲಿ ಹಾಸು ಹೊಕ್ಕಾಗಿರುವ ಸೂಕ್ಷ್ಮ ಸಮಸ್ಯೆಗಳ ಎಳೆಗಳನ್ನು ವಚನಕಾರರ ವಚನಗಳುಮಾರ್ಮಿಕವಾಗಿ ತಿಳಿಸಿವೆ. ಇವನ್ನು ಮನೆಯಂಗಳಕ್ಕೆ ಸೀಮಿತಗೊಳಿಸದೆ ಶಾಲಾ ಕಾಲೇಜುಗಳಿಗೆ ಕೊಂಡೊಯ್ಯಿರಿ. ಮುಂದಿನ ಜನಾಂಗಕ್ಕೆ ವಚನಗಳನ್ನು ಪರಿಚಯಿಸಿ ಎಂದು ಹೇಳಿದರು.
ಕವಿಗಳಾದ ಪ್ರಕಾಶ್‌, ಗಜೇಂದ್ರ, ವೇಣುಗೋಪಾಲ್‌, ವೆಂಕಟೇಶಪ್ಪ, ನರಸಿಂಹರಾಜು, ಎಸ್‌.ವಿ.ನಾಗರಾಜರಾವ್‌, ವಿ.ಕೃಷ್ಣ, ಚನ್ನಕೃಷ್ಣ, ಅನಂತಲಕ್ಷ್ಮಿ, ಸ್ವರ್ಣಲತಗುಪ್ತ, ಗಂಗರಾಜು, ಪುರುಷೋತ್ತಮ, ರೂಪ, ಅನುರಾಧ, ಸುಂದರಾಚಾರಿ ಕವನ ವಾಚಿಸಿದರು.
ವಚನ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸಿ.ಬಿ.ಹನುಮಂತಪ್ಪ, ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ಮಹಮ್ಮದ್‌ಖಾಸಿಂ, ಶ್ರೀಕಾಂತ್‌, ಶ್ರೀರಾಮಯ್ಯ, ವೆಂಕಟಸ್ವಾಮಿ, ಕೆಂಪರೆಡ್ಡಿ, ನಂದಕಿಶನ್‌, ನಂದೀಶ್‌, ಪುರುಷೋತ್ತಮ್‌, ಶಹನಾಜ್‌ಬೇಗ್‌, ರಾಮಮೂರ್ತಿ ಹಾಜರಿದ್ದರು.

ಭಾಷೆ ಮತ್ತು ಸಂಸ್ಕೃತಿಯ ಬಗೆಗಿನ ಪ್ರೀತಿ ಮತ್ತು ಗೌರವದಿಂದ ಕನ್ನಡಿಗರು ಒಗ್ಗೂಡುತ್ತಾರೆ

0

ಒಂದಾಗಿ ಕೂಡಿ ಕೊಳ್ಳುವ ಕನ್ನಡಿಗರ ಸ್ವಭಾವ ಇತಿಹಾಸಕ್ಕೆ ಹೊಸದಲ್ಲ. ಒಗ್ಗೂಡುವ ಮನೋಭಾವಕ್ಕೆ ಯಾವಾಗಲೂ ಪ್ರೇರಣೆಯಾಗಿರುವುದು ಮತ್ತು ಕಾರಣವಾಗಿರುವುದು ಭಾಷೆ ಮತ್ತು ಸಂಸ್ಕೃತಿಯ ಬಗೆಗಿನ ಪ್ರೀತಿ ಮತ್ತು ಗೌರವ ಎಂದು ಚಿಂತಾಮಣಿಯ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಂ.ಎನ್‌.ರಘು ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ನಡೆದ ‘ಕರ್ನಾಟಕ ಏಕೀಕರಣದ 60ರ ಸಂಭ್ರಮ’ ಕಾರ್ಯಕ್ರಮದಲ್ಲಿ ಕರ್ನಾಟಕ ಏಕೀಕರಣದ ಬಗ್ಗೆ ಉಪನ್ಯಾಸ ನೀಡಿ ಅವರು ಮಾತನಾಡಿದರು.
ರಾಷ್ಟ್ರೀಯ ನಾಯಕರು ಕರ್ನಾಟಕ ಏಕೀಕರಣದ ವಿಷಯದಲ್ಲಿ ಆಸಕ್ತಿ ವಹಿಸಿದಾಗ ಈ ನಿಟ್ಟಿನಲ್ಲಿ ಯಾಜಮಾನ್ಯ ವಹಿಸಿದವರು ಆಲೂರು ವೆಂಕಟರಾಯರು. ೧೯೦೫ ರಿಂದಲೂ ಕರ್ನಾಟಕ ಏಕೀಕರಣಕ್ಕೆ ದುಡಿದು, ಏಕೀಕರಣ ಆದದ್ದನ್ನು ನೋಡಿ ಸಂತೋಷಪಟ್ಟ ಹಿರಿಯರಾದ ಆಲೂರು ವೆಂಕಟರಾಯರನ್ನು ‘ಕನ್ನಡ ಕುಲಪುರೋಹಿತ’ ಎಂದೇ ಕರೆಯಲಾಗಿದೆ. ಕನ್ನಡ ಮತ್ತು ಕರ್ನಾಟಕದ ಬಗ್ಗೆ ಆಲೂರರಿಗೆ ಇದ್ದ ಗೌರವ, ಅಭಿಮಾನ ಮತ್ತು ಕಳಕಳಿಗಳನ್ನು ಅವರ ‘ಕರ್ನಾಟಕ ಗತ ವೈಭವ’ ಕೃತಿಯಲ್ಲಿ ಗುರುತಿಸಬಹುದು. ೧೯೫೬ರ ನವೆಂಬರ್ ಒಂದನೆಯ ತಾರೀಕು ಬೆಳಗ್ಗೆ ನಡೆದ ಸಮಾರಂಭದಲ್ಲಿ ‘ವಿಶಾಲ ಮೈಸೂರು’ ರಾಜ್ಯವನ್ನು ರಾಷ್ಟ್ರಪತಿ ಬಾಬೂ ರಾಜೇಂದ್ರ ಪ್ರಸಾದ್ ಉದ್ಘಾಟಿಸಿದರು. ಅಂದೇ ಹೊಸ ರಾಜ್ಯದ ರಾಜ್ಯಪಾಲರಾಗಿ ಜಯಚಾಮರಾಜ ಒಡೆಯರ್ ಮತ್ತು ಮುಖ್ಯಮಂತ್ರಿಯಾಗಿ ಎಸ್.ನಿಜಲಿಂಗಪ್ಪ ಅವರು ಅಧಿಕಾರ ಸ್ವೀಕರಿಸಿದರು. ಅದೇ ದಿನ ಹಂಪೆಯಲ್ಲಿ ವಿರೂಪಾಕ್ಷನ ಸನ್ನಿಧಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಕರ್ನಾಟಕ ಕುಲ ಪುರೋಹಿತರೆನಿಸಿ ಖ್ಯಾತರಾದ ಆಲೂರು ವೆಂಕಟರಾಯರ ನೇತೃತ್ವದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ‘ಕರ್ನಾಟಕ’ ವಾದ ‘ವಿಶಾಲ ಮೈಸೂರು’ ೧೯೭೩ರ ನವೆಂಬರ್ ಒಂದನೆಯ ತಾರೀಕು ರಾಜ್ಯದ ಹೆಸರು ‘ಕರ್ನಾಟಕ’ ಎಂದು ಬದಲಾಯಿತು ಎಂದು ವಿವರಿಸಿದರು.
ಪ್ರತಿಯೊಬ್ಬರಿಗೂ ತಮ್ಮ ಹುಟ್ಟಿದ ನೆಲದ ಬಗ್ಗೆ ಗೌರವಾಧರ ಇರಬೇಕು. ಕೋಲಾರದ ಚಿನ್ನವಷ್ಟೇ ಅಲ್ಲದೆ ಶಿಡ್ಲಘಟ್ಟದಲ್ಲಿ ತಯಾರಾಗುತ್ತಿದ್ದ ಕಂಬಳಿಗಳು ಸಿಂಧೂ ನಾಗರಿಕತೆಯ ಜನರ ಮೂಲಕ ಗ್ರೀಕ್‌ ರೋಮನ್‌ ಸಾಮ್ರಾಜ್ಯದ ಕಡೆಗೆ ಹೋಗುತ್ತಿತ್ತು ಎಂಬ ವಿಷಯವು ನಮ್ಮ ಹಿರಿಯರ ಬಗ್ಗೆ ಹೆಮ್ಮೆ ಮೂಡಿಸುತ್ತದೆ. ನಮ್ಮ ಕನ್ನಡ ಭಾಷೆ, ಬದುಕು, ಆಚಾರ, ಸಂಸ್ಕೃತಿ, ಮಣ್ಣು, ನೀರು ಎಲ್ಲದರ ಬಗ್ಗೆಯೂ ಆಸ್ತೆಯನ್ನು ಬೆಳೆಸಿಕೊಳ್ಳಬೇಕೆಂದು ನುಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಚಂದ್ರಾನಾಯ್ಕ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿ.ವಿ.ಲಕ್ಷ್ಮಣರಾಜು ಮಾತನಾಡಿದರು. ಜಾನಪದ ಗಾಯಕರಾದ ಮಹೇಶ್‌ ಮತ್ತು ನಟರಾಜ್‌ ಕನ್ನಡ ಗೀತೆಗಳನ್ನು ಹಾಡಿದರು.
ಕರ್ನಾಟಕ ಏಕೀಕರಣದ 60ರ ಸಂಭ್ರಮದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಕೆ.ಶಾಲಿನಿ(ಪ್ರಥಮ), ಬಿ.ಎನ್‌.ವರಲಕ್ಷ್ಮಿ(ದ್ವಿತೀಯ), ಎಸ್‌.ದಿವ್ಯಾ(ತೃತೀಯ) ಅವರಿಗೆ ಪಾರಿತೋಷಕ ಮತ್ತು ಪ್ರಮಾಣಪತ್ರಗಳನ್ನು ನೀಡಲಾಯಿತು.
ಕನ್ನಡಪರ ಹಿರಿಯ ಹೋರಾಟಗಾರ ಹಾಗೂ ಮಾಜಿ ಕಸಾಪ ಅಧ್ಯಕ್ಷ ರೂಪಸಿ ರಮೇಶ್‌ ಅವರನ್ನು ತಾಲ್ಲೂಕು ಕಸಾಪ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ತಾಲ್ಲೂಕು ಕಸಾಪ ವತಿಯಿಂದ ಸಿಹಿಯನ್ನು ನೀಡಲಾಯಿತು.
ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ, ಪ್ರಧಾನ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್‌, ಮಾಜಿ ಜಿಲ್ಲಾಧ್ಯಕ್ಷ ಎಸ್‌.ವಿ.ನಾಗರಾಜರಾವ್‌, ಮಾಜಿ ತಾಲ್ಲೂಕು ಅಧ್ಯಕ್ಷ ವಿ.ಕೃಷ್ಣ, ಕಸಬಾ ಹೋಬಳಿ ಉಪಾಧ್ಯಕ್ಷ ಬೆಳ್ಳೂಟಿ ರಮೇಶ್‌, ನಿವೃತ್ತ ಶಿಕ್ಷಣ ಸಂಯೋಜಕ ಆರ್‌.ಕೃಷ್ಣಪ್ಪ, ಎನ್‌.ಆರ್‌.ಕೃಷ್ಣಮೂರ್ತಿ, ಪ್ರಾಧ್ಯಾಪಕರಾದ ರಾಮಚಂದ್ರಪ್ಪ, ಶ್ರೀಹರಿ, ವೆಂಕಟರೋಣಪ್ಪ, ಸಾದತ್ತುಲ್ಲ, ಕಮಲ ಹಾಜರಿದ್ದರು.

ಸಾಮೂಹಿಕ ವಿವಾಹಗಳು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪೂರಕ

0

ಸಾಮೂಹಿಕವಾಗಿ ನಡೆಯುವ ವಿವಾಹಗಳಲ್ಲಿ ಸಮಾನತೆ ಇದ್ದು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪೂರಕವಾಗಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.
ತಾಲ್ಲೂಕಿನ ತಲಕಾಯಲಬೆಟ್ಟದ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ಸನ್ನಿಧಿಯಲ್ಲಿ ಗುರುವಾರ ಎಸ್‌ಎನ್‌ಕ್ರಿಯಾ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟ 73 ವಧೂವರರನ್ನು ಆಶೀರ್ವದಿಸಿ ಅವರು ಮಾತನಾಡಿದರು.
ವಿವಾಹವು ಸರಳವಾಗಿರಬೇಕು. ದುಂದು ವೆಚ್ಚಕ್ಕೆ ಕಡಿವಾಣವಿರಲಿ. ಆಧುನಿಕ ಯುಗದಲ್ಲಿ ವರದಕ್ಷಿಣೆ ಭೂತದಿಂದ ತಪ್ಪಿಸಲು ಈ ರೀತಿಯ ಉಚಿತ ಸಾಮೂಹಿಕ ಮದುವೆ ಕಾರ್ಯ ಅತ್ಯಂತ ಮಹತ್ವ ಪಡೆಯುತ್ತದೆ. ಇದರಿಂದ ದುಂದು ವೆಚ್ಚ ತಡೆಯಲು ಅನುಕೂಲವಾಗಿದೆ. ಪರಸ್ಪರ ಭಿನ್ನಾಭಿಪ್ರಾಯ ಮರೆತು, ವಿಶ್ವಾಸದಿಂದ ನಡೆದು ಆತ್ಮಸಾಕ್ಷಿಗೆ ಅನುಗುಣವಾಗಿ ಹೊಂದಾಣಿಕೆಯ ಜೀವರ ರೂಪಿಸಿಕೊಳ್ಳುವಂತೆ ನವದಂಪತಿಗಳಿಗೆ ಅವರು ಕಿವಿ ಮಾತು ಹೇಳಿದರು.

ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಬೆಟ್ಟದ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ಸನ್ನಿಧಿಯಲ್ಲಿ ಗುರುವಾರ ಎಸ್‌ಎನ್‌ಕ್ರಿಯಾ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿ ಅಂಗವಿಕಲ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ನೀಡಿದರು. ತಹಶೀಲ್ದಾರ್‌ ಅಜಿತ್‌ಕುಮಾರ್‌ ರೈ, ಶಾಶ್ವತ ನೀರಾವರಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಆಂಜನೇಯರೆಡ್ಡಿ, ಆನೂರು ದೇವರಾಜ್‌, ಭಕ್ತರಹಳ್ಳಿ ಬೈರೇಗೌಡ ಹಾಜರಿದ್ದರು.

ಎಸ್‌ಎನ್‌ಕ್ರಿಯಾ ಟ್ರಸ್ಟ್‌ ಅಧ್ಯಕ್ಷ ಆಂಜಿನಪ್ಪ ಮಾತನಾಡಿ, ಸ್ವಾಮೀಜಿಗಳ ಸಮ್ಮುಖದಲ್ಲಿ ಮತ್ತು ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ಸನ್ನಿಧಿಯಲ್ಲಿ ನವಜೀವನಕ್ಕೆ ಅಡಿ ಇಡುವವರ ಭವಿಷ್ಯದ ದಾಂಪತ್ಯ ಬದುಕಿನಲ್ಲಿ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದರು.
ತಹಶೀಲ್ದಾರ್‌ ಅಜಿತ್‌ಕುಮಾರ್‌ ರೈ ಮಾತನಾಡಿ ಈ ದಿನ ವಿವಾಹವಾದ ನವದಂಪತಿಗಳಿಗೆ ತಾಲ್ಲೂಕು ಕಚೇರಿಯಿಂದ ವಿವಾಹ ನೋಂದಣಿ ಪತ್ರವನ್ನು ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್‌ಎನ್‌ಕ್ರಿಯಾ ಟ್ರಸ್ಟ್‌ ವತಿಯಿಂದ ಅಂಗವಿಕಲ ಹೆಣ್ಣು ಮಕ್ಕಳಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ನೀಡಲಾಯಿತು. ಎಸ್‌ಎನ್‌ಕ್ರಿಯಾ ಟ್ರಸ್ಟ್‌ ಅಧ್ಯಕ್ಷ ಆಂಜಿನಪ್ಪ ಮತ್ತು ಅವರ ಪತ್ನಿ ನೂತನ ವಧೂವರರರಿಗೆ ಮಾಂಗಲ್ಯವನ್ನು ನೀಡಿದರು. ಸಾಮೂಹಿಕ ವಿವಾಹ ಸಮಾರಂಭಕ್ಕೆ ಆಗಮಿಸಿದ್ದ ಎಲ್ಲಾ ವಧೂವರರ ಸಂಬಂದಿಕರಿಗೂ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.
ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದ ಸ್ವಾಮೀಜಿ, ತಹಶೀಲ್ದಾರ್‌ ಅಜಿತ್‌ಕುಮಾರ್‌ ರೈ, ಶಾಶ್ವತ ನೀರಾವರಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಆಂಜನೇಯರೆಡ್ಡಿ, ಆನೂರು ದೇವರಾಜ್‌, ಭಕ್ತರಹಳ್ಳಿ ಬೈರೇಗೌಡ, ಕೆಂಪರೆಡ್ಡಿ, ಪತಂಜಲಿ ಯೋಗ ಸಮಿತಿಯ ಶ್ರೀಕಾಂತ್‌, ಯರ್ರಬಚ್ಚಪ್ಪ, ನಂದನವನ ಶ್ರೀರಾಮರೆಡ್ಡಿ, ಕೋಟಹಳ್ಳಿ ಶ್ರೀನಿವಾಸ್‌, ಅಶ್ವತ್ಥನಾರಾಯಣರೆಡ್ಡಿ, ಶಾಂತಮ್ಮ, ಡಾ.ಪ್ರಮೋದ್‌, ದಾನೇಗೌಡ, ಸುಧಾ ನರಸಿಂಹಮೂರ್ತಿ, ರಾಜ್‌ಕುಮಾರ್‌ ಹಾಜರಿದ್ದರು.

ಕರ್ನಾಟಕ ಏಕೀಕರಣದ 60ರ ಸಂಭ್ರಮ

0

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದೊಂದಿಗೆ ಮಾರ್ಚ್‌ 24 ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ‘ಕರ್ನಾಟಕ ಏಕೀಕರಣದ 60ರ ಸಂಭ್ರಮ’ ಕಾರ್ಯಕ್ರಮವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಚಂದ್ರಾನಾಯ್ಕ ಮಾಡಲಿದ್ದು, ಪ್ರಾಸ್ತಾವಿಕ ನುಡಿಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಕೈವಾರ ಎನ್‌.ಶ್ರೀನಿವಾಸ್‌ ಹೇಳಲಿದ್ದಾರೆ. ಕರ್ನಾಟಕ ಏಕೀಕರಣದ ಬಗ್ಗೆ ಉಪನ್ಯಾಸವನ್ನು ಚಿಂತಾಮಣಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಂ.ಎನ್‌.ರಘು ನೀಡಲಿದ್ದಾರೆ. ಕನ್ನಡಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ಕೋರಿದ್ದಾರೆ.

ನಮ್ಮ ತಾಲ್ಲೂಕಿನ ಜನತೆ ನೀರಿನ ಬವಣೆಯನ್ನು ಬಲ್ಲವರು

0

ನಮ್ಮ ತಾಲ್ಲೂಕಿನ ಜನತೆ ನೀರಿನ ಬವಣೆಯನ್ನು ಬಲ್ಲವರು. ಹನಿ ನೀರನ್ನೂ ಪೋಲು ಮಾಡಬಾರದು. ಹಸಿರು ಬೆಳೆಸಬೇಕು. ಮನೆಯಲ್ಲಿ ಬಳಸಿದ ನೀರಿನಿಂದ ಗಿಡಗಳನ್ನು ಬೆಳೆಸಿ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜು ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಪ್ಪೇಗೌಡನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬುಧವಾರ ವಿಶ್ವ ಜಲ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನೀರು ನಮ್ಮ ಅಮೂಲ್ಯ ಸಂಪತ್ತು, ಅದನ್ನು ಮಿತವಾಗಿ ಬಳಸಿ. ನೀರು ನಾವು ಸೃಷ್ಟಿ ಮಾಡುವ ವಸ್ತುವಲ್ಲ, ಆದ್ದರಿಂದ ಅಂತಹ ಜೀವಜಲವನ್ನು ಹಿತಮಿತವಾಗಿ ಬಳಸುವುದು ಒಳಿತು. ನೀರಿನ ಅಭಾವದ ಅನುಭವವಿದ್ದೂ ಅದರ ಬಗ್ಗೆ ಎಚ್ಚರ ವಹಿಸದಿರುವುದು ತಪ್ಪಾಗುತ್ತದೆ. ನಮ್ಮ ದಿನನಿತ್ಯದ ಬಳಕೆಯಲ್ಲಿ ಅರಿವಿಲ್ಲದೇ ನೀರು ಪೋಲು ಮಾಡುತ್ತಿರುವುದು ಇನ್ನಾದರೂ ನಾವು ಗಮನಿಸಬೇಕಿದೆ. ಒಂದು ಕಡೆ ನೀರು ಸಿಗದೆ ಬರಗಾಲವೆಂದು ಒದ್ದಾಡುತ್ತಿದ್ದರೆ, ಮತ್ತೊಂದೆಡೆ ಬೇಕಾದಷ್ಟು ನೀರಿದೆಯೆಂದು ಬೇಕಾಬಿಟ್ಟಿ ಉಪಯೋಗಿಸುತ್ತಿದ್ದಾರೆ. ಈ ಅಂತರವನ್ನು ಆದಷ್ಟು ಬೇಗ ಹೋಗಲಾಡಿಸಬೇಕಾಗಿದೆ. ನಮ್ಮನ್ನು ನಾವು ತಿದ್ದಿಕೊಳ್ಳುವ ಅವಶ್ಯಕತೆ ಬಹಳಷ್ಟಿದೆ ಎಂದರು.
ಈ ಸಂದರ್ಭದಲ್ಲಿ ಬಯಲುಸೀಮೆ ಭಾಗದ ನೀರಿನ ಆಹಾಕಾರ ಹಾಗು ನೀರಿನ ಸದ್ಭಳಕೆಯ ಬಗ್ಗೆ ಶಾಲೆಯ ಮುಖ್ಯಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ, ಶಿಕ್ಷಕ ಚಾಂದ್ ಪಾಷ ಮಾತನಾಡಿದರು.
ವಿಶ್ವ ಜಲ ದಿನಾಚರಣೆ ಅಂಗವಾಗಿ ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿಗಳು ಜಾಥಾ ನಡೆಸುವ ಮೂಲಕ ಜನರಲ್ಲಿ ನೀರಿನ ಸಂರಕ್ಷಣೆ ಹಾಗು ಮಿತಬಳಕೆಯ ಬಗ್ಗೆ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಗಮ ಪಂಚಾಯಿತಿ ಸದಸ್ಯೆ ಉಮಾಚನ್ನೇಗೌಡ, ಶಿಕ್ಷಕರಾದ ಅಶೋಕ್, ಭಾರತಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಪುಷ್ಪಾ ರಾಮಚಂದ್ರ, ಗ್ರಾಮಸ್ಥರಾದ ಬಾಬು. ಶ್ರೀರಾಮ, ನರಸಿಂಹಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಗ್ರಾಮಸ್ಥರು ಮತ್ತು ಶಾಲಾ ಮಕ್ಕಳ ಪೋಷಕರಿಗಾಗಿ ವಿಶಿಷ್ಠ ಮನರಂಜನಾ ಸ್ಪರ್ಧೆ

0

ತಾಲ್ಲೂಕಿನ ವರದನಾಯಕನಹಳ್ಳಿ ಗ್ರಾಮದಲ್ಲಿ ಬುಧವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಗ್ರಾಮಸ್ಥರು ಮತ್ತು ಶಾಲಾ ಮಕ್ಕಳ ಪೋಷಕರಿಗಾಗಿ ವಿಶಿಷ್ಠ ಮನರಂಜನಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ಸರಸ್ವತಿ ಪೂಜೆಯನ್ನು ಏರ್ಪಡಿಸಿದ್ದು, ಆ ಪ್ರಯುಕ್ತ ಗ್ರಾಮದ ಹಿರಿಯರಿಗೆ ಮನರಂಜನಾ ಆಟಗಳನ್ನು ನಡೆಸುತ್ತಿರುವುದಾಗಿ ಶಿಕ್ಷಕರು ತಿಳಿಸಿದರು.

ಕಣ್ಣಿಗೆ ಬಟ್ಟೆ ಕಟ್ಟಿ ಬಕೆಟ್‌ ಒಡೆಯುವ ಸ್ಪರ್ಧೆ

ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಕಣ್ಣಿಗೆ ಬಟ್ಟೆ ಕಟ್ಟಿ ಬಕೆಟ್‌ ಒಡೆಯುವ ಸ್ಪರ್ಧೆ ಮತ್ತು ನೀರಿರುವ ಬಿಂದಿಗೆ ಹೊತ್ತು ಓಡುವ ಸ್ಪರ್ಧೆ ನಡೆಸಲಾಯಿತು. ಪುರುಷರಿಗೆ ಹಗ್ಗ ಜಗ್ಗಾಟ, ಗೋಣಿ ಚೀಲ ಓಟ, ಕಣ್ಣಿಗೆ ಬಟ್ಟೆ ಕಟ್ಟಿ ಬಕೆಟ್‌ ಒಡೆಯುವ ಸ್ಪರ್ಧೆಯನ್ನು ನಡೆಸಲಾಯಿತು.
ಗ್ರಾಮಸ್ಥರೆಲ್ಲ ಹಿರಿಯರು ಕಿರಿಯರು ಬೇಧವಿಲ್ಲದೆ ಸ್ಪರ್ಧೆಯನ್ನು ನೋಡಲು ಆಗಮಿಸಿದ್ದು, ಸ್ಪರ್ಧಾಳುಗಳಿಗೆ ಹುರಿದುಂಬಿಸುತ್ತಿದ್ದರು. ಬಿಸಿಲಿನ ಝಳವನ್ನು ಲೆಕ್ಕಿಸದೆ ಜನರು ಸ್ಪರ್ಧೆಯನ್ನು ನೋಡಲು ನಿಂತಿದ್ದರು.
ಮಹಿಳೆಯರಿಗೆ ನಡೆದ ರಂಗೋಲಿ ಸ್ಪರ್ಧೆಯಲ್ಲಿ ನಾಗಮಣಿ(ಪ್ರಥಮ), ಕಲ್ಪನಾ(ದ್ವಿತೀಯ) ಮತ್ತು ಶೋಭಾ ಶ್ರೀನಿವಾಸ್‌(ತೃತೀಯ), ಕಣ್ಣಿಗೆ ಬಟ್ಟೆ ಕಟ್ಟಿ ಬಕೆಟ್‌ ಒಡೆಯುವ ಸ್ಪರ್ಧೆಯಲ್ಲಿ ಅನೀತಾ(ಪ್ರಥಮ), ಕಲಾವತಿ(ದ್ವಿತೀಯ), ಶಿಲ್ಪ(ತೃತೀಯ) ಹಾಗೂ ಬಿಂದಿಗೆ ಹೊತ್ತು ಓಡುವ ಸ್ಪರ್ಧೆಯಲ್ಲಿ ನಾಗರತ್ನಮ್ಮ(ಪ್ರಥಮ), ಅಶ್ವತ್ಥಮ್ಮ(ದ್ವಿತೀಯ), ಆಂಜಿನಮ್ಮ(ತೃತೀಯ)ರಾದರು.

ಗಂಧೋತ್ಸವ ಕಾರ್ಯಕ್ರಮ

0

ನಗರದ ಗಾರ್ಡನ್‌ ರಸ್ತೆಯಲ್ಲಿರುವ ಹಜರತ್ ಸಯ್ಯದ್‌ ಸರ್ಮಸ್ತ್‌ ಹುಸೇನಿ ಷಾವಲಿ ದರ್ಗಾದಲ್ಲಿ 777ನೇ ವರ್ಷದ ಗಂಧೋತ್ಸವವನ್ನು ಮಂಗಳವಾರ ರಾತ್ರಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಹಜರತ್ ಸಯ್ಯದ್‌ ಸರ್ಮಸ್ತ್‌ ಹುಸೇನಿ ಷಾವಲಿ ಅವರ ಸಂಸ್ಥಾನದಿಂದ ಬ್ಯಾಂಡ್‌ಸೆಟ್ ಮತ್ತು ಖವ್ವಾಲಿಯೊಂದಿಗೆ ಗಂಧೋತ್ಸವದ ಮೆರವಣಿಗೆ ನಡೆಸಲಾಯಿತು. ಬಸ್‌ ನಿಲ್ದಾಣದ ಬಳಿಯಿಂದ ಮೆರವಣಿಗೆಯನ್ನು ಪ್ರಾರಂಭಿಸಿ ಖಾಲೆ ಮಸ್ತಾನ್‌ ಷಾವಲಿ ದರ್ಗಾದಲ್ಲಿ ಗಂಧದ ಅಭಿಷೇಕ ನೆರವೇರಿಸಿ ಮಲ್ಲಿಗೆ ಹೂಗಳ ಚಾದರ್ ಸಮರ್ಪಿಸಿದರು.
ಭಕ್ತಾದಿಗಳು ಗಂಧೋತ್ಸವ ನಡೆಸಿ ಗಂಧ ಮತ್ತು ಸಿಹಿಯನ್ನು ಭಕ್ತರಿಗೆ ಹಂಚಿ ಸಂಭ್ರಮ ವ್ಯಕ್ತಪಡಿಸಿದರು. ಭಕ್ತರಿಗೆ ಅನ್ನಸಂತರ್ಪಣೆಯನ್ನು ದರ್ಗಾ ಸಮಿತಿಯಿಂದ ಆಯೋಜಿಸಲಾಗಿತ್ತು.
ರಾತ್ರಿ ಜಾಮಿಯಾ ಮಸೀದಿಯ ಇಮಾಮ್‌ ಅವರಿಂದ ಬಯಾನ್‌ ಎಂಬ ನೀತಿ ಬೋಧಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಹಾಜಿ ಹಫೀಜುಲ್ಲಾ, ಷಫೀವುಲ್ಲಾ, ಹಾಜಿ ಅನ್ವರ್‌ಸಾಬ್‌, ಆಜಮ್‌ಖಾನ್‌, ಸರ್ದಾರ್‌ಖಾನ್‌, ಇಮಾಮ್‌ ಆದಮ್‌ಅಲಿ ರಜ್ವಿ, ನೂರ್‌ಷಾಸಾಬ್‌ ಹಾಗೂ ದರ್ಗಾ ಸಮಿತಿ ಸದಸ್ಯರು ಹಾಜರಿದ್ದರು.

ಬಿಸಿಲಿನ ಜಳಕ್ಕೆ ಆಶ್ರಯ

0

ಶಿಡ್ಲಘಟ್ಟ ತಾಲ್ಲೂಕಿನ ಬೋದಗೂರು ಗ್ರಾಮದ ಸಾವಯವ ಕೃಷಿಕ ವೆಂಕಟಸ್ವಾಮಿರೆಡ್ಡಿ ಅವರ ಮನೆ ಮೇಲೆ ಬಿಸಿಲಿನ ಜಳಕ್ಕೆ ಸೋಲಾರ್ ಫಲಕದ ನೆರಳಿನ ಆಶ್ರಯ ಪಡೆದಿರುವ ಕೋತಿ.

ಔಷಧಿ ಮಾರಾಟದ ಕುರಿತಂತೆ ನಿರಂತರ ಕಲಿಕೆಯ ಅಗತ್ಯವಿದೆ

0

ಔಷಧಿ ವ್ಯಾಪಾರವು ಸಮಾಜದಲ್ಲಿ ಉನ್ನತವಾದ ಸೇವಾ ಉದ್ಯಮವಾಗಿದೆ. ಔಷಧಿ ಮಾರಾಟದ ಕುರಿತಂತೆ ಹಲವಾರು ಹೊಸ ನಿಯಮ ನಿಬಂಧನೆಗಳು ಜಾರಿಯಾಗುತ್ತಿದ್ದು ಅವುಗಳ ಬಗ್ಗೆ ನಿರಂತರ ಕಲಿಕೆಯ ಅಗತ್ಯತೆಯಿದೆ. ಇದರಿಂದ ಔಷಧಿ ವ್ಯಾಪಾರಿಗಳಿಗೆ ಮತ್ತು ಅವರಿಂದ ಔಷಧಿ ಪಡೆಯುವ ರೋಗಿಗಳಿಗೆ ಅನುಕೂಲವಾಗುತ್ತದೆ ಎಂದು ಸಹಾಯಕ ಔಷಧ ನಿಯಂತ್ರಕ ಗಣೇಶ್‌ ಬಾಬು ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಜಿಲ್ಲಾ ಔಷಧ ನಿಯಂತ್ರಣ ಇಲಾಖೆ ಮತ್ತು ಶಿಡ್ಲಘಟ್ಟ ತಾಲ್ಲೂಕು ಔಷಧಿ ವ್ಯಾಪಾರಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ನಿರಂತರ ಕಲಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಹದಲ್ಲಿ ಪ್ರತಿಜೀವಕಗಳನ್ನು ಸೃಜಿಸುವ ಆಂಟಿಬಯಾಟಿಕ್‌ ಔಷಧಿಗಳನ್ನು ಮಾರುವಾಗ ನಿಯಮವನ್ನು ಪಾಲಿಸಿ. ಜೀವ ಉಳಿಸುವ ಔಷಧಗಳಿಗೆ ದೇಹ ಸ್ಪಂದಿಸದೆ ಆಗುವ ಕಾಲ ಬರದಂತೆ ಗಮನವಿಟ್ಟು ಔಷಧಿಗಳನ್ನು ನೀಡಿ. ರೋಗಿಗಳಿಗೆ ತಿಳುವಳಿಕೆ ನೀಡಿ. ಮತ್ತು ಬರುವ ಔಷಧಿಗಳನ್ನು ಮಾರಬೇಡಿ. ಗರ್ಭಪಾತದ ಔಷಧಿಗಳನ್ನು ಔಷಧಿ ಮಳಿಗೆಗಳಲ್ಲಿ ಮಾರುವುದು ಅಪರಾಧ. ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಕ್ರಾಸ್‌ ಮತ್ತು ಚಿಂತಾಮಣಿಯಲ್ಲಿ ಈ ಮಾತ್ರೆಯ ಮಾರಾಟದ ಪರಿಣಾಮ ಒಂದೊಂದು ಜೀವ ಹೋಗಿದ್ದು, ಪೊಲೀಸ್‌ ತನಿಖೆ ಜಾರಿಯಲ್ಲಿದೆ. ಔಷಧಿ ವ್ಯಾಪಾರಸ್ಥರು ಇರುವುದು ಜೀವ ಉಳಿಸಲು, ಸಣ್ಣ ಲಾಬಕ್ಕಾಗಿ ಜೀವ ಕಳೆಯುವಕ್ಕೆ ಕಾರಣರಾಗಬಾರದು ಎಂದು ಹೇಳಿದರು.
ನೂರು ಮೀಟರ್‌ ಅಂತರದಲ್ಲಿ ಎರಡು ಔಷಧಿ ಅಂಗಡಿಗಳಿರಬಾರದು. ಜನಸಂಖ್ಯೆ ಆಧಾರಿತವಾಗಿ ಔಷಧಿ ಅಂಗಡಿಗಳಿಗೆ ಪರವಾನಗಿ ನೀಡಬೇಕು ಮುಂತಾದ ಸಲಹೆಗಳನ್ನು ಮಷಾಲ್ಕರ್‌ ಕಮಿಟಿಯು ಸರ್ಕಾರಕ್ಕೆ ನೀಡಿದೆ. ಮಷಾಲ್ಕರ್‌ ಕಮಿಟಿಯ ಸಲಹೆಗಳನ್ನು ಜಾರಿಗೆ ತರುವಂತೆ ಔಷಧಿ ವ್ಯಾಪಾರಿಗಳ ಸಂಘದಿಂದ ಸರ್ಕಾರಕ್ಕೆ ಒತ್ತಾಯಿಸಿದಲ್ಲಿ ನಿಮಗೆ ಉಜ್ವಲ ಭವಿಷ್ಯವಿದೆ ಎಂದು ನುಡಿದರು.
ಔಷಧ ನಿಯಂತ್ರಕ ಸುರೇಶ್‌ ಮಾತನಾಡಿ, ಹಿಂದೆ ನಾವು ಸಣ್ಣವರಿದ್ದಾಗ ಕೆರೆ ಕುಂಟೆ ನೀರನ್ನು ಕುಡಿದರೂ ಏನೂ ಆಗುತ್ತಿರಲಿಲ್ಲ. ಆದರೆ ಈಗ ಶುದ್ಧೀಕರಿಸಿದ ನೀರು ಕುಡಿದರೂ ಖಾಯಿಲೆಗಳು ಬರುತ್ತವೆ. ಇದಕ್ಕೆ ಕಾರಣ ನಾವು ಸೇವಿಸುವ ಪ್ರತಿಜೀವಕ ಔಷಧಿಗಳು. ಅವುಗಳ ಮಾರಾಟದ ಬಗ್ಗೆ ಎಚ್ಚರಿಕೆಯಿರಲಿ. ಔಷಧಿಗಳ ಗಡುವು ದಿನಾಂಕವನ್ನು ನೋಡಿಕೊಡು ಮಾರಾಟ ಮಾಡಿ ಎಂದು ಹೇಳಿದರು.
ಹಲವು ವೈದ್ಯರು ಆಂಟಿಬಯಾಟಿಕ್‌ ಔಷಧಿಗಳನ್ನು ನಿಯಮಿತ ಅವಧಿಗೆ ತಕ್ಕಂತೆ ಬರೆಯುವುದಿಲ್ಲ. ವೈದ್ಯರೇ ಔಷಧಿಗಳನ್ನು ಮಾರಾಟ ಮಾಡುತ್ತಾರೆ. ವೈದ್ಯರು ಬರೆದುಕೊಡುವ ಚೀಟಿಗಳಲ್ಲಿ ಕೆಎಂಸಿ ಸಂಖ್ಯೆಯೇ ಇರುವುದಿಲ್ಲ. ವೈದ್ಯರಿಗೂ ತಿಳುವಳಿಕೆಯ ಕಾರ್ಯಕ್ರಮದ ಅಗತ್ಯವಿದೆ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಈ ಸಂದರ್ಭದಲ್ಲಿ ಔಷಧಿ ವ್ಯಾಪಾರಿಗಳು ಕೋರಿದರು. ಅದಕ್ಕೆ ಉತ್ತರಿಸಿದ ಸಹಾಯಕ ಔಷಧ ನಿಯಂತ್ರಕ ಗಣೇಶ್‌ ಬಾಬು, ಈ ಬಾರಿ ಐಎಂಎ ಸಭೆಯಲ್ಲಿ ಈ ಸಂಗತಿಗಳನ್ನು ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ತಾಲ್ಲೂಕು ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಕೆ.ವೆಂಕಟರತ್ನಂಗುಪ್ತ, ಪ್ರಧಾನ ಕಾರ್ಯದರ್ಶಿ ಕೆ.ಎನ್‌.ರಮೇಶ್‌ಬಾಬು, ಉಪಾಧ್ಯಕ್ಷ ಸತೀಶ್‌ಕುಮಾರ್‌, ಖಜಾಂಚಿ ಪಿ.ಎಸ್‌.ಮಂಜುನಾಥ್‌, ಸಹ ಕಾರ್ಯದರ್ಶಿ ಎಲ್‌.ಸುರೇಶ್‌, ಅಂಜನಿ ಮನಮೋಹನ್‌, ಎಸ್‌ಎಲ್‌ಎನ್‌ ಚಂದ್ರಶೇಖರ್‌, ಸಿ.ಆರ್‌.ಜಗದೀಶ್‌, ಲಕ್ಷ್ಮೀನಾರಾಯಣಬಾಬು, ಶಂಕರ್‌ನಾರಾಯಣ್‌, ಬಾಬು, ಮೋಹನ್‌, ಆನಂದ್‌, ಮಂಜುನಾಥ್‌, ಅಲೀಂ. ಬಾಬಾಜಾನ್‌, ಚಂದ್ರಶೇಖರ್‌, ಶಂಕರ್ ಹಾಜರಿದ್ದರು.

‘ಕೊಳವೆ ಬಾವಿಯ ಅವಶ್ಯಕತೆಯೇ ಇಲ್ಲ’ ಎನ್ನುವ ರೈತ

0

‘ನಮ್ಮ ಜಮೀನು ಮತ್ತು ಮನೆಯಿರುವ ಸ್ಥಳದಲ್ಲಿ ಬೀಳುವ ಒಂದು ಹನಿ ನೀರನ್ನೂ ಹೊರಗೆ ವ್ಯರ್ಥವಾಗಿ ಹೋಗಲು ಬಿಡುವುದಿಲ್ಲ. ನನಗೆ ಕೊಳವೆ ಬಾವಿಯ ಅವಶ್ಯಕತೆಯೇ ಇಲ್ಲ’ ಎಂದು ಧೈರ್ಯವಾಗಿ ಹೇಳುತ್ತಾರೆ ಕುಂದಲಗುರ್ಕಿಯ ಅರುಣ್‌ಕುಮಾರ್‌.
ಕೊಳವೆ ಬಾವಿಯ ಸಹವಾಸವೇ ಬೇಡ ಎನ್ನುವ ಸಾಹಸಿಗಳು ನಮ್ಮ ಜಿಲ್ಲೆಯಲ್ಲಿ ಸಿಗುವವರು ವಿರಳ, ಅದರಲ್ಲೂ ಹಿಪ್ಪುನೇರಳೆ ಬೇಸಾಯ, ರೇಷ್ಮೆ ಗೂಡಿನ ಉತ್ಪಾದನೆ, ಕೋಳಿ ಸಾಕಾಣಿಕೆ, ಎಮ್ಮೆ, ಕುರಿ ಸಾಕಾಣಿಕೆ, ಮಾವಿನ ಬೆಳೆಯನ್ನು ಹೊಂದಿರುವ ಈ ರೈತ ಕೊಳವೆ ಬಾವಿಯನ್ನೇ ಧಿಕ್ಕರಿಸಿದ್ದಾರೆ ಎಂದರೆ ನಿಜಕ್ಕೂ ಅಚ್ಚರಿ.
ವಿಶೇಷವೆಂದರೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಪಿ1 ಬಿತ್ತನೆಗೂಡನ್ನು ಬೆಳೆಯಲು ಕೇಂದ್ರ ರೇಷ್ಮೆ ಮಂಡಳಿಯಿಂದ ಪರವಾನಗಿ ಪಡೆದಿರುವ ಏಕೈಕ ವ್ಯಕ್ತಿ ಇವರು. ಸಾಮಾನ್ಯವಾಗಿ ಎಲ್ಲರೂ ಬೆಳೆಯುವ ಮಿಶ್ರತಳಿ ಮತ್ತು ದ್ವಿತಳಿ ರೇಷ್ಮೆ ಗೂಡಿಗಿಂತ ಅತಿ ಸೂಕ್ಷ್ಮತೆಯಿಂದ ಪಿ1 ಬಿತ್ತನೆಗೂಡನ್ನು ಬೆಳೆಯಬೇಕು. ಹಾಗಾಗಿ ಕೇಂದ್ರ ರೇಷ್ಮೆ ಮಂಡಳಿಯು ಇವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಇವರಿಗೆ ಮೊಟ್ಟೆಯನ್ನು ನೀಡಿ ಬಿತ್ತನೆ ಗೂಡನ್ನು ಬೆಳೆದ ನಂತರ ಖರೀದಿಸುತ್ತದೆ.

ಗುಣಿ ಕಡ್ಡಿ ಪದ್ಧತಿ ಅಥವಾ ಮರಗಡ್ಡಿ ಪದ್ಧತಿಯಲ್ಲಿ ಹಿಪ್ಪುನೇರಳೆ ಸೊಪ್ಪಿನ ಎಲೆಯು ಒಂದು ಅಡಿ ಉದ್ದ ಅರ್ಧ ಅಡಿಯಷ್ಟು ಅಗಲವಿದೆ.

ಮನೆ, ದನದ ಶೆಡ್‌, ಹುಳು ಮನೆಯಿಂದ ಹರಿದು ಬರುವ ನೀರೆಲ್ಲ ಶುದ್ಧೀಕರಣಗೊಂಡು 78 ಸಾವಿರ ಲೀಟರ್‌ ಸಾಮರ್ಥ್ಯದ ಟ್ಯಾಂಕ್‌ ಸೇರುತ್ತದೆ. ಮನೆಯಲ್ಲಿ ಬಚ್ಚಲು, ಅಡುಗೆ ಮನೆ, ಕೈತೊಳೆಯುವ ನೀರು ಒಂದು ಹನಿಯೂ ವ್ಯರ್ಥವಾಗದಂತೆ ಟ್ಯಾಂಕ್‌ ಸೇರುವಂತೆ ವ್ಯವಸ್ಥೆ ರೂಪಿಸಿದ್ದಾರೆ. ಮಳೆನೀರು ಮಾಡಿನ ಮೇಲೆ ಬೀಳಲಿ, ನೆಲದ ಮೇಲೆ ಬೀಳಲಿ ಕಡೆಗೆ ಸೇರುವುದು ಟ್ಯಾಂಕ್‌.
ಗುಣಿ ಕಡ್ಡಿ ಪದ್ಧತಿ ಅಥವಾ ಮರಗಡ್ಡಿ ಪದ್ಧತಿಯಲ್ಲಿ ಹಿಪ್ಪುನೇರಳೆ ಬೆಳೆಯುವುದರಿಂದ ಗುಣಮಟ್ಟದ ಹಿಪ್ಪುನೇರಳೆ ಸೊಪ್ಪು ಅತ್ಯಲ್ಪ ನೀರಿನಿಂದ ಬೆಳೆಯಬಹುದಾಗಿದೆ. ಈ ಪದ್ಧತಿಯನ್ನು ಅಳವಡಿಸಿಕೊಂಡು 10 ಅಡಿ ಉದ್ದ ಮತ್ತು 10 ಅಡಿ ಅಗಲದ ಅನುಪಾತದಲ್ಲಿ ಒಂದು ಎಕರೆಗೆ 436 ಹಿಪ್ಪುನೇರಳೆ ಸಸಿಗಳನ್ನು ಈ ಪದ್ಧತಿಯಲ್ಲಿ ನಾಟಿ ಮಾಡಿರುವ ಅರುಣ್‌ಕುಮಾರ್‌ ಒಂದೊಂದು ಎಲೆಯೂ ಒಂದು ಅಡಿ ಉದ್ದ ಅರ್ಧ ಅಡಿಯಷ್ಟು ಅಗಲವಿರುವುದನ್ನು ತೋರಿಸುತ್ತಾರೆ.
ಮರಗಡ್ಡಿ ಪದ್ಧತಿಯಲ್ಲಿ ಮೂರರಿಂದ ನಾಲ್ಕು ಅಡಿ ಆಳವಾಗಿ ಗುಣಿ ತೆಗೆದು ಹಿಪ್ಪುನೇರಳೆ ನಾರನ್ನು ನಾಟಿ ಮಾಡಿ ಅದು ಬೆಳೆದಂತೆಲ್ಲಾ ಕೊಟ್ಟಿಗೆ ಗೊಬ್ಬರ, ಮಣ್ಣು, ಹಸಿರೆಲೆ ಸೊಪ್ಪು ಮೊದಲಾದವುಗಳನ್ನು ತುಂಬಿಸುತ್ತಾ ಕವಲುಗಳನ್ನು ಕತ್ತರಿಸುತ್ತಾ ಮರದಂತೆ ಎತ್ತರಗೊಳಿಸಬೇಕು. ಮೊದಲ ವರ್ಷ ಬೆಳೆ ಸಿಗುವುದಿಲ್ಲ, ನಂತರ ಸೊಪ್ಪು ಸಿಗಲು ಪ್ರಾರಂಭವಾಗುತ್ತದೆ. ತಾಳ್ಮೆಯಿದ್ದವರಿಗೆ ಅಧಿಕ ಫಲ ಎಂಬಂತಹುದು ಈ ವಿಧಾನ ಎನ್ನುತ್ತಾರೆ ಅರುಣ್‌ಕುಮಾರ್‌.
ಅಂತರ ಬೆಳೆಯಾಗಿ ಮೊದಲು ರಾಗಿಯನ್ನು ಹಾಕಿದ್ದೆ, ಮನೆಗೆ ಆಗಿ ಉಳಿಯುವಷ್ಟು ರಾಗಿ ಬೆಳೆಯುವೆ. ಮಳೆ ಹಾಗೂ ಮನೆಯಿಂದ ಹರಿದು ತುಂಬುವ ಟ್ಯಾಂಕ್‌ನಿಂದ ಹನಿ ನೀರಾವರಿಯ ಮೂಲಕ ನೀರನ್ನು ಹರಿಸುತ್ತೇನೆ. ದಿನಕ್ಕೆ ಗಿಡವೊಂದಕ್ಕೆ ಮುಕ್ಕಾಲು ಲೀಟರ್‌ ನೀರು ಉಣಿಸಿದರೆ ಸಾಕು. ಇಲ್ಲವಾದಲ್ಲಿ ಮೂರು ದಿನಗಳಿಗೊಮ್ಮೆ ಎರಡೂವರೆ ಲೀಟರ್‌ ನೀರು ಬುಡಕ್ಕೆ ಸೇರಿಸಿದರೆ ಸಾಕು.
ಮಾವಿನ ತೋಪಿನ ಬಳಿ ದೊಡ್ಡ ಕೃಷಿಹೊಂಡವನ್ನು ನಿರ್ಮಿಸಿದ್ದು, ಮಳೆ ನೀರು ಹರಿದು ಬರುವ ಕಾಲುವೆಯನ್ನು ಅದಕ್ಕೆ ತಿರುವಿದ್ದಾರೆ.

ಇದರೊಂದಿಗೆ 2,500 ಕೋಳಿಗಳಿರುವ ಕೋಳಿಯ ಶೆಡ್‌ ಸಹ ಇವರು ಹೊಂದಿದ್ದಾರೆ. ಕೋಳಿ ದೊಡ್ಡದಾಗುತ್ತಿದ್ದಂತೆಯೇ ಅವುಗಳಿಗೂ ಮಳೆ ನೀರನ್ನೇ ಕೊಡುತ್ತಾರೆ. ಈ ನೀರು ಸೇವಿಸಿದಷ್ಟು ಅವುಗಳ ಆರೋಗ್ಯ ಬಹಳ ಚೆನ್ನಾಗಿರುತ್ತದೆ ಎಂಬುದು ಇವರ ಅನುಭವ.
ಗ್ರಾಮದ ಇನ್ನೊಂದು ಭಾಗದಲ್ಲಿರುವ ಇವರ ನಾಲ್ಕು ಎಕರೆ ಮಾವಿನ ತೋಪಿನ ಬಳಿ ದೊಡ್ಡ ಕೃಷಿಹೊಂಡವನ್ನು ನಿರ್ಮಿಸಿದ್ದಾರೆ. ಮಳೆ ನೀರು ಹರಿದು ಬರುವ ಕಾಲುವೆಯನ್ನು ಅದಕ್ಕೆ ತಿರುವಿದ್ದಾರೆ. 10 ಲಕ್ಷ ಲೀಟರ್‌ ನೀರು ಹಿಡಿದಿಡುವ ಈ ಕೃಷಿ ಹೊಂಡದಲ್ಲಿ ಕಳೆದ ತಿಂಗಳು ಬಂದ ಸಣ್ಣ ಮಳೆಗೇ ಸಾಕಷ್ಟು ನೀರು ಹೊಂಡದಲ್ಲಿ ತುಂಬಿದೆ. ಮಾವಿನ ಫಸಲಿಗೆ ಬೇಸಿಗೆ ಪೂರಾ ಇನ್ನು ನೀರಿನ ಸಮಸ್ಯೆಯಿಲ್ಲ.
‘ಎಂಟು ವರ್ಷಗಳ ಹಿಂದೆ ಕೊಳವೆ ಬಾವಿಯಿದ್ದದ್ದು ನೀರು ಕಡಿಮೆಯಾಗುತ್ತಾ ಕಡೆಗೆ ನಿಂತು ಹೋಯಿತು. ರೇಷ್ಮೆ ಕೃಷಿಯಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಸ್ಪಂದಿಸುತ್ತಾ ಪಿ1 ಬಿತ್ತನೆಗೂಡನ್ನು ಬೆಳೆಯಲು ಕೇಂದ್ರ ರೇಷ್ಮೆ ಮಂಡಳಿಯಿಂದ ಪರವಾನಗಿ ಪಡೆದೆ. ಕೊಳವೆ ಬಾವಿಗಾಗಿ ಸಾಲ ಸೋಲ ಮಾಡಿ ಹಣ ಕಳೆಯುವುದರ ಬದಲಿಗೆ ಇರುವ ನೀರು ಮತ್ತು ಮಳೆ ನೀರನ್ನು ಹನಿಹನಿಯೂ ಉಳಿಸಿಕೊಳ್ಳುವ ಪ್ರಯತ್ನ ಮಾಡಿದೆ. ಅದರಲ್ಲಿ ಸಫಲತೆಯೂ ಕಂಡೆ. ಈಗ ಕೊಳವೆ ಬಾವಿಯ ಸಹವಾಸವೇ ಬೇಡ ಎಂದು ಧೈರ್ಯವಾಗಿ ಹೇಳಬಲ್ಲೆ’ ಎಂದು ಅರುಣ್‌ಕುಮಾರ್‌ ತಿಳಿಸಿದರು.

ಮಕ್ಕಳು ಕೇವಲ ಅಂಕ ಗಳಿಕೆಗಷ್ಟೇ ಸೀಮಿತರಾಗಬಾರದು

0

ಮಕ್ಕಳ ಪ್ರತಿಭೆಗಳನ್ನು ಪ್ರದರ್ಶಿಸುವ ಸಂದರ್ಭವೇ ಶಾಲಾ ವಾರ್ಷಿಕೋತ್ಸವ. ಮಕ್ಕಳು ಕೇವಲ ಅಂಕ ಗಳಿಕೆಗಷ್ಟೇ ಸೀಮಿತರಾಗದೆ ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಅವರನ್ನು ಪ್ರೇರೇಪಿಸಬೇಕು ಎಂದು ನಿವೃತ್ತ ಶಿಕ್ಷಕ ಬಿ.ನಾರಾಯಣ್‌ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಚೀಮಂಗಲ ಗ್ರಾಮದ ಕುವೆಂಪು ಶತಮಾನೋತ್ಸವ ಶಾಲೆಯಲ್ಲಿ ಸೋಮವಾರ ಸಂಜೆ ನಡೆದ ಶಾರದಾ ಪೂಜೆ ಮತ್ತು ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಾಮಾಂತರ ಪ್ರದೇಶದ ಶಾಲೆಗಳಲ್ಲಿ ಓದಿದ ಮಕ್ಕಳು ಪ್ರತಿಭಾ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತಶ್ರೇಣಿ ಪಡೆಯುತ್ತಿದ್ದು, ಇದಕ್ಕೆ ಶಿಕ್ಷಕರ ಪರಿಶ್ರಮ ಮತ್ತು ಪೋಷಕರ ಅಗತ್ಯ ಸಹಕಾರವೆ ಕಾರಣವಾಗಿದೆ. ವಿದ್ಯಾರ್ಥಿಗಳ ಶಿಕ್ಷಣದ ಜೀವನದಲ್ಲಿ ಪರಿಶ್ರಮ ಬಹಳ ಮುಖ್ಯವಾಗಿದ್ದು, ಪರಿಶ್ರಮದಿಂದ ಬಹಳಷ್ಟನ್ನು ಸಾಧಿಸಬಹುದು ಎಂದು ಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ವಿ.ಶ್ರೀರಾಮಯ್ಯ ಮಾತನಾಡಿ, ಸರ್ಕಾರಿ ಶಾಲೆಗಳು ಅಭಿವೃದ್ದಿ ಹೊಂದಬೇಕಾದರೆ ಪೋಷಕರು ಮತ್ತು ಸಮಾಜದ ಪಾತ್ರ ಬಹಳ ಮುಖ್ಯ. ಮಕ್ಕಳಲ್ಲಿನ ಪ್ರತಿಭೆಗಳಿಗೆ ನೀರೆರೆಯುವ ಕೆಲಸವಾಗಬೇಕು. ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಕ್ಕಳು ತಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸಿಕೊಳ್ಳಬಹುದು ಎಂದು ಹೇಳಿದರು.
ಚೀಮಂಗಲ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶಿವಶಂಕರ್‌, ಗ್ರಾಮದ ಹಿರಿಯ ಪಾರ್ಥಸಾರಥಿ ಮಾತನಾಡಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕುವೆಂಪು ಶತಮಾನೋತ್ಸವ ಶಾಲೆಯ ಮುಖ್ಯ ಶಿಕ್ಷಕ ಸಿ.ಎಂ.ಮುನಿರಾಜು, ಎಸ್‌ಡಿಎಂಸಿ ಅಧ್ಯಕ್ಷ ಎಂ.ಮಂಜುನಾಥ್‌, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಳಿನ ಮಂಜುನಾಥ್‌, ಉಪಾಧ್ಯಕ್ಷ ಸಿ.ಎಂ.ನಾರಾಯಣಸ್ವಾಮಿ, ಸದಸ್ಯರಾದ ಸೌಮ್ಯ ಮಂಜುನಾಥ್‌, ಲಕ್ಷ್ಮೀನಾರಾಯಣ್‌, ಶ್ರೀನಿವಾಸ್‌, ಮುನಿರತ್ನಮ್ಮ, ವೆಂಕಟಲಕ್ಷ್ಮಮ್ಮ, ಶಾಮಲಮ್ಮ, ರಾಜಣ್ಣ, ಲಕ್ಷ್ಮಮ್ಮ, ಲೋಕೇಶ್‌, ದೇವರಾಜ್‌, ಮುನಿಕೃಷ್ಣಪ್ಪ, ಸುರೇಶ್‌, ಚೌಡಮ್ಮ, ಸಿಕಂದರ್‌ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಮಳ್ಳೂರು ಗ್ರಾಮ ಪಂಚಾಯಿತಿಗೆ ಪಿ.ಡಿ.ಓ ಇಲ್ಲ

0

ತಾಲ್ಲೂಕಿನ ಮಳ್ಳೂರು ಗ್ರಾಮ ಪಂಚಾಯಿತಿಗೆ ಕಳೆದ ಹದಿನೆಂಟು ತಿಂಗಳಿನಿಂದ ನಾಲ್ಕು ಜನ ಪಿ.ಡಿ.ಓ ಗಳು ಬಂದಿದ್ದು, ಮೂರ್ನಾಕು ತಿಂಗಳಿಗೊಮ್ಮೆ ವರ್ಗಾವಣೆಯಾಗುತ್ತಿದ್ದು, ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ ಎಂದು ಮಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧ ಶಿವಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ವರ್ಷದ ಜನವರಿಯಿಂದ ಇದುವರೆಗೂ ಯಾವುದೇ ಪಿ.ಡಿ.ಓಗಳು ಇಲ್ಲದ ಕಾರಣ ಪಂಚಾಯಿತಿಯ ಕಾರ್ಯಗಳು ಸ್ಥಗಿತಗೊಂಡಿವೆ. ಬರಗಾಲವಿರುವುದರಿಂದ ಜನ ಸಾಮಾನ್ಯರಿಗೆ ಸರಿಯಾಗಿ ನೀರಿನ ವ್ಯವಸ್ಥೆ ಮಾಡಲು ಸಾಧ್ಯವಾಗುತ್ತಿಲ್ಲ. ನೈರ್ಮಲ್ಯದ ಕಡೆಗೆ ಗಮನ ಹರಿಸಲು ಆಗುತ್ತಿಲ್ಲ. ಯಾವುದೇ ಅಭಿವೃದ್ಧಿ ಕಾರ್ಯಗಳು ಕೈಗೊಳ್ಳಲಾಗುತ್ತಿಲ್ಲ. ಯಾವುದೇ ಸಭೆಗಳನ್ನು ಕರೆಯಲು ಆಗುತ್ತಿಲ್ಲ. ವಸತಿ ಯೋಜನೆಯಡಿ ಮಂಜೂರಾದ ಮನೆಗಳಿಗೆ ಬಿಲ್ಲುಗಳನ್ನು ಪಾವತಿ ಮಾಡಲು ಆಗುತ್ತಿಲ್ಲ. ಪಂಚಾಯಿತಿಯ ನೌಕರರಿಗೆ ಎರಡು ತಿಂಗಳಿಂದ ಸಂಬಳ ಕೊಡಲು ಸಾಧ್ಯವಾಗಿಲ್ಲ. ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.

೧೪೪ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡಲಿದೆ; ಸರ್ಕಾರ ಬಿಡುಗಡೆ ಮಾಡಿರುವ ಅನುದಾನ ೧೨ ಕೋಟಿ ರೂ ಮಾತ್ರ

0

ಈ ವರ್ಷ ಎಂದಿಗಿಂತಲೂ ಕಡಿಮೆ ಪ್ರಮಾಣದ ಮಳೆ ಬಿದ್ದ ಕಾರಣ ತಾಲ್ಲೂಕಿನ ಯಾವುದೆ ಕರೆಯಲ್ಲೂ ನೀರಿಲ್ಲದಾಗಿದೆ. ಕೊಳವೆ ಬಾವಿಗಳಲ್ಲೂ ನೀರು ಬತ್ತಿದೆ. ಈ ಎಲ್ಲ ಪ್ರಾಕೃತಿಕ ಸಮಸ್ಯೆಯಿಂದ ಬೇಸಿಗೆ ದಿನಗಳು ಭಯಾನಕವಾಗಲಿವೆ.
ಕುಡಿಯುವ ನೀರಿನ ಯೋಜನೆಗಳಿಗೆ ಸರ್ಕಾರ ಬಿಡುಗಡೆ ಮಾಡುವ ಅನುದಾನವೂ ಕಡಿಮೆ ಆಗಿದೆ. ೨೦೧೫-೧೬ನೇ ಸಾಲಿನಲ್ಲಿ ತಾಲ್ಲೂಕಿನಲ್ಲಿ ಕೈಗೊಂಡ ಕುಡಿಯುವ ನೀರಿನ ಯಾವುದೆ ಯೋಜನೆಗೂ ಮಂಜೂರಾತಿಯೂ ಸಿಗಲಿಲ್ಲ ಅನುದಾನವೂ ಬಿಡುಗಡೆಯಾಗಲಿಲ್ಲ. ಇದರಿಂದಾಗಿ ಆ ವರ್ಷದಲ್ಲಿ ಕೊರೆದ ಕೊಳವೆ ಬಾವಿಗಳ ಬಾಬ್ತು ಸುಮಾರು ೨.೫ ಕೋಟಿ ರೂ ಬಾಕಿ ಉಳಿಸಿಕೊಳ್ಳಲಾಗಿದೆ.
ಇದಲ್ಲದೆ ಕುಡಿಯುವ ನೀರಿನ ಸಮಸ್ಯೆ ತಲೆ ದೋರಿದ ಗ್ರಾಮಗಳಲ್ಲಿ ಟ್ಯಾಂಕರ್‌ಗಳಲ್ಲಿ ನೀರು ಪೂರೈಸಿದ ಬಾಬ್ತು ಕಳೆದ ಎರಡು ವರ್ಷಗಳಿಂದಲೂ ಲಕ್ಷಗಟ್ಟಲೆ ಬಾಕಿ ಉಳಿಸಿಕೊಳ್ಳಲಾಗಿದೆ. ಇದರಿಂದಾಗಿ ಸರ್ಕಾರಿ ಕೊಳವೆ ಬಾವಿಗಳನ್ನು ಕೊರೆಸಲು ಬೋರ್‌ವೆಲ್‌ನವರು ಹಿಂದೇಟು ಹಾಕಿದರೆ, ಕುಡಿಯುವ ನೀರು ಪೂರೈಸಲು ಟ್ಯಾಂಕರ್‌ದಾರರು ಮುಂದೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ.
ಇವೆಲ್ಲ ಕಾರಣಗಳಿಂದ ಈಗಿನ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟು ಬಿಗಡಾಯಿಸಿದೆ, ಬೇಸಿಗೆಗೂ ಮುನ್ನವೇ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದ್ದು ಕೆಲವು ಗ್ರಾಮಗಳಲ್ಲಿ ಟ್ಯಾಂಕರ್ ನೀರನ್ನು ಪೂರೈಸಲಾಗುತ್ತಿದೆ.
ಈಗಿನ್ನೂ ಬೇಸಿಗೆ ಪ್ರಾರಂಭವಾಗಿದೆ. ತಾಲ್ಲೂಕಿನ ೧೪೪ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಲಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಭವಿಷ್ಯದ ಸಮಸ್ಯಾತ್ಮಕ ಗ್ರಾಮಗಳ ಪಟ್ಟಿಯನ್ನು ಈಗಾಗಲೇ ಸಿದ್ದ ಮಾಡಿಟ್ಟುಕೊಂಡಿದೆ.
೧೪೪ ಗ್ರಾಮಗಳು ಅಂದರೆ ತಾಲ್ಲೂಕಿನ ಸರಿಸುಮಾರು ಅರ್ಧದಷ್ಟು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಲಿರುವುದು ಕಳೆದ ಎರಡು ಮೂರು ದಶಕಗಳಲ್ಲಿ ಇದೆ ಮೊದಲು. ಯಾವುದೆ ನದಿ ನಾಲೆಯಿಲ್ಲದ ಬಯಲು ಸೀಮೆಯ ಈ ಭಾಗದಲ್ಲಿ ಕೊಳವೆ ಬಾವಿಯೊಂದೆ ನೀರಿನ ಮೂಲಾಧಾರವಾಗಿದ್ದು ಕೊಳವೆ ಬಾವಿಗಳ ವಿಫಲತೆಯ ಪ್ರಮಾಣವು ದಿನ ದಿನಕ್ಕೂ ಹೆಚ್ಚುತ್ತಿದೆ. ಸರ್ಕಾರಿ ಅಥವಾ ಖಾಸಗಿ ಕೊಳವೆ ಬಾವಿಗಳ ವಿಫಲತೆಯ ಪ್ರಮಾಣ ಶೇ. ೫೦ಕ್ಕೆ ಮುಟ್ಟುತ್ತಿದೆ.
ಆತಂಕ ತರುವಷ್ಟರ ಮಟ್ಟಿಗೆ ಅಂತರ್ಜಲ ಮಟ್ಟ ಕುಸಿದ ತಾಲ್ಲೂಕಿಗೆ ಸರ್ಕಾರ ಎಲ್ಲಿಂದ ಯಾವ ಮೂಲದಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರನ್ನು ಒದಗಿಸಲಿದೆ ಎಂಬ ಪ್ರಶ್ನೆ ಜನ ಸಾಮಾನ್ಯರನ್ನು ಕಾಡತೊಡಗಿದೆ.
ನಗರ ವ್ಯಾಪ್ತಿಯಲ್ಲಿ ನಗರಸಭೆ ಹಾಗೂ ಗ್ರಾಮೀಣ ಭಾಗದಲ್ಲಿ ಸಂಬಂಧಿಸಿದ ಇಲಾಖೆಯಿಂದ ಕೊಳವೆ ಬಾವಿಗಳನ್ನು ಕೊರೆಸಿ ಜನ ಜಾನುವಾರುಗಳಿಗೆ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆಯಾದರೂ ಸಾಕಷ್ಟು ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ತೀರಾ ಕುಸಿದಿದೆ. ಬಹುತೇಕ ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋಗಿವೆ. ಜತೆಗೆ ಹೊಸದಾಗಿ ಕೊರೆಯುತ್ತಿರುವ ಕೊಳವೆ ಬಾವಿಗಳಲ್ಲಿ ಶೇ. ೩೦ಕ್ಕೂ ಹೆಚ್ಚು ಕೊಳವೆ ಬಾವಿಗಳು ನೀರು ಸಿಗದೆ ವಿಫಲವಾಗುತ್ತಿದೆ. ಈ ಪ್ರಮಾಣ ದಿನ ಕಳೆದಂತೆ ಹೆಚ್ಚುತ್ತಿದ್ದು ಹತ್ತಿರ ಹತ್ತಿರ ಶೇ. ೫೦ಕ್ಕೆ ಮುಟ್ಟುತ್ತಿರುವುದು ಇಷ್ಟೆಲ್ಲಾ ಆತಂಕಕ್ಕೆ ಕಾರಣವಾಗುತ್ತಿದೆ.
ತಾಲ್ಲೂಕಿನ ವೈ.ಹುಣಸೇನಹಳ್ಳಿ, ಬಸವನಪರ್ತಿ, ಸೊಣ್ಣೇನಹಳ್ಳಿ ಸೇರಿದಂತೆ ಐದು ಗ್ರಾಮಗಳಲ್ಲಿ ಈಗಾಗಲೆ ಟ್ಯಾಂಕರ್ ನೀರು ಪೂರೈಸುತ್ತಿದ್ದು ನಾರಾಯಣದಾಸರಹಳ್ಳಿಯಲ್ಲಿ ಖಾಸಗಿ ಕೊಳವೆ ಬಾವಿಯಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ.
ತಾಲ್ಲೂಕಿನ ವೀರಾಪುರ, ಅರಿಕೆರೆ, ಯಲಗಹಳ್ಳಿ, ಹನುಮಂತಪುರ, ಕೇಶವಪುರ, ಕಾಚಹಳ್ಳಿ, ಜಂಗಮಕೋಟೆ, ಯಣ್ಣಂಗೂರು, ದೇವಗಾನಹಳ್ಳಿ, ಕೊತ್ತನೂರು, ಎಚ್.ಕ್ರಾಸ್, ಮಳ್ಳೂರು, ಮುತ್ತೂರು, ಚೌಡಸಂದ್ರ, ನಾಗಮಂಗಲ, ಹುಜಗೂರು, ಚಿಂತಡಪಿ, ದೊಡ್ಡತೇಕಹಳ್ಳಿ, ದೊಡ್ಡದಾಸೇನಹಳ್ಳಿ, ರಾಗಿಮಾಕಲಹಳ್ಳಿ, ಹಕ್ಕಿ ಪಿಕ್ಕಿ ಕಾಲೋನಿ ಸೇರಿದಂತೆ ಒಟ್ಟು ೧೪೪ ಗ್ರಾಮಗಳಲ್ಲಿ ಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಲಿದೆ.
೨೦೧೫-–೧೬ನೇ ಸಾಲಿನಲ್ಲಿ ಕುಡಿಯುವ ನೀರಿನ ಯಾವುದೆ ಒಂದು ಯೋಜನೆಗೂ ಅನುಮತಿ ಸಿಗದ ಕಾರಣ ಆ ಹಣಕಾಸಿನ ವರ್ಷದಲ್ಲಿ ತಾಲ್ಲೂಕಿನಲ್ಲಿ ಕೊರೆದ ೨೨೩ ಕೊಳವೆ ಬಾವಿಗಳು ಸೇರಿದಂತೆ ಯಾವುದೆ ಕುಡಿಯುವ ನೀರಿನ ಯೋಜನೆಗಳಿಗೂ ಹಣ ಬಿಡುಗಡೆ ಆಗಲಿಲ್ಲ.
ಇದರಿಂದಾಗಿ ಆ ವರ್ಷದಲ್ಲಿ ಕೊರೆಸಿದ ಕೊಳವೆ ಬಾವಿ ಸೇರಿದಂತೆ ಕೈಗೊಂಡ ಎಲ್ಲ ಕುಡಿಯುವ ನೀರಿನ ಕಾಮಗಾರಿಗಳಿಗೂ ಹಣ ನೀಡಿಲ್ಲ.
ಈ ಪೈಕಿ ೨೦೧೬-–೧೭ನೇ ಸಾಲಿನಲ್ಲಿ ಬಿಡುಗಡೆಯಾದ ಹಣವನ್ನು ಕಳೆದ ಸಾಲಿನಲ್ಲಿ ಬಾಕಿ ಉಳಿಸಿಕೊಂಡ ಕೊಳವೆ ಬಾವಿಗಳು, ನೀರಿನ ಯೋಜನೆಗಳಿಗೆ ಹಣವನ್ನು ನೀಡಲಾಗಿದೆ. ೨೦೧೫-–೧೬ನೇ ಸಾಲಿನ ೨೨೩ ಕೊಳವೆ ಬಾವಿಗಳ ಪೈಕಿ ೧೩೦ಕ್ಕೆ ಮಾತ್ರ ಹಣ ನೀಡಿದ್ದು ಇನ್ನುಳಿದ ಕೊಳವೆ ಬಾವಿಗಳ ಹಣವನ್ನು ಗುತ್ತಿಗೆದಾರರಿಗೆ ಬಾಕಿ ಉಳಿಸಿಕೊಂಡಿದೆ.
ಈ ವರ್ಷ ಕೇವಲ ೧೨ ಕೋಟಿ ರೂಪಾಯಿಗಳಷ್ಟೆ ಕುಡಿಯುವ ನೀರಿಗಾಗಿ ಬಿಡುಗಡೆಯಾಗಿದ್ದು ಅದರಲ್ಲಿ ೧೨೭ ಶುದ್ದ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ೬ ತಳಮಟ್ಟದ ನೀರಿನ ಟ್ಯಾಂಕ್ ನಿರ್ಮಾಣ ಸೇರಿದಂತೆ ಕೊಳವೆ ಬಾವಿ ಕೊರೆಸುವುದು, ಅದಕ್ಕೆ ಪಂಪು ಮೋಟಾರ್ ಅಳವಡಿಕೆ, ವಿದ್ಯುತ್ ಸಂಪರ್ಕ, ಪೈಪ್ ಲೈನ್ ನಿರ್ಮಾಣ ಮೊದಲಾದ ಕಾಮಗಾರಿಗಳನ್ನು ಕೈಗೊಳ್ಳಬೇಕಿದೆ.
ಈಗಾಗಲೆ ಸಮಸ್ಯೆ ತಲೆ ದೋರಿರುವ ಗ್ರಾಮಗಳ ಜತೆಗೆ ೧೪೪ ಗ್ರಾಮಗಳಲ್ಲಿ ಸಮಸ್ಯೆ ಎದುರಾಗಲಿದ್ದು ಅಷ್ಟೂ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿಭಾಯಿಸಲು ಈ ೧೨ ಕೋಟಿಯು ಸಾಲದಾಗಿದೆ.

ವಿಶ್ವ ಗುಬ್ಬಚ್ಚಿಗಳ ದಿನದಂದು ಕಂಡ ಗುಬ್ಬಿ ಜೀವನ

0

ರೈಲ್ವೆ ಅಂಡರ್‌ಪಾಸ್‌ನ ರಂಧ್ರಗಳಲ್ಲಿ ಗುಬ್ಬಿ ಗೂಡು. ಮೊದಲು ಎಥೇಚ್ಚವಾಗಿ ಕಂಡುಬರುತ್ತಿದ್ದ ಗುಬ್ಬಿಗಳು ಈಗ ಕಡಿಮೆಯಾಗಿವೆ. ಗುಬ್ಬಿಗಳ ಚಿಂ ಚಿಂ ನಾದ ಮೊಬೈಲ್‌ ರಿಂಗಣ ಹಾಗೂ ವಿವಿಧ ಶಬ್ಧಗಳ ನಡುವೆ ಪ್ರಾಮುಖ್ಯತೆ ಕಳೆದುಕೊಳ್ಳುತ್ತಿದೆ. ಆದರೂ ಗುಬ್ಬಿಗಳು ಛಲ ಬಿಡದ ತ್ರಿವಿಕ್ರಮರಂತೆ ತಮ್ಮ ಅಸ್ಥಿತ್ವಕ್ಕಾಗಿ ಹೋರಾಟ ನಡೆಸಿವೆ. ವಿಶ್ವ ಗುಬ್ಬಚ್ಚಿಗಳ ದಿನದಂದು ಕಂಡ ಅವುಗಳ ಜೀವನವು ಕಾಂಕ್ರೀಟ್‌ ನಾಡಿನಲ್ಲಿ ಸಂತತಿ ಮುಂದುವರಿಕೆಗಾಗಿ ನಡೆಸುವ ಸಂಘರ್ಷ ಪ್ರೇರಣದಾಯಕವಾಗಿದೆ.
ನಗರದಲ್ಲಿ ನಿರ್ಮಿಸಿರುವ ರೈಲ್ವೆ ಅಂಡರ್‌ಪಾಸ್‌ಗಳಲ್ಲಿ ನೀರು ಬಸಿದು ಹೋಗಲೆಂದು ರೂಪಿಸಿರುವ ಹಲವಾರು ರಂಧ್ರಗಳಲ್ಲಿ ಗೂಡು ಮಾಡಿಕೊಂಡು ಗುಬ್ಬಚ್ಚಿಗಳು ತಮ್ಮ ಸಂತತಿಯ ಮುಂದುವರಿಕೆಗಾಗಿ ಸಾಹಸ ನಡೆಸಿವೆ. ಮಳೆ ಬಂದಾಗ ಮಾತ್ರ ನೀರು ಹರಿಯುವ ಈ ರಂಧ್ರಗಳು ಈಗ ಗುಬ್ಬಿ ಮನೆಗಳಾಗಿವೆ. ಎಷ್ಟೇ ವಾಹನ ಸಂಚಾರವಿದ್ದರೂ, ಅಕ್ಕ ಪಕ್ಕ ಜನ ಓಡಾಡಿದರೂ ತಿಳಿಯದಂತೆ ಪುರ್ರನೆ ರಂಧ್ರದೊಳಗೆ ಹೋಗಿ ಮರಿಗಳಿಗೆ ತಿನ್ನಿಸಿ ಬರುತ್ತವೆ. ತಮ್ಮದೇ ಧಾವಂತದಲ್ಲಿ ಸಂಚರಿಸುವ ಜನರ ಗಮನಕ್ಕೆ ಬಾರದಂತೆ ಗುಬ್ಬಿಗಳ ಬದುಕು ಸಾಗಿವೆ.
ಹಿಂದೆ ಗುಬ್ಬಿಗಳು ಮನೆ ಪ್ರವೇಶಿಸಿದರೆ ಮತ್ತೆ ಮತ್ತೆ ಓಡಿಸಿದರೂ ಮತ್ತೆ ನುಗ್ಗಿ ಮನೆಯೊಳಗೇ ಸಂಸಾರ ಮಾಡಿಕೊಂಡಿರುತ್ತಿದ್ದವು. ದಿನಬೆಳಗಾದರೆ ಮನೆಯೊಳಗೆ ಬಂದು ಲೂಟಿಮಾಡುತ್ತಾ, ಸಂಜೆಯಾದೊಡನೆ ಬೀದಿ ಬದಿಯ ವಿದ್ಯುತ್ ತಂತಿಯ ಮೇಲೆ ತೋರಣದಂತೆ ಸಾಲಾಗಿ ಕುಳಿತುಕೊಳ್ಳುತ್ತಿದ್ದ ಗುಬ್ಬಿಗಳು ಹೊಸ ಆವಾಸ ಸ್ಥಾನಗಳನ್ನು ಹುಡುಕಬೇಕಾದ ಅನಿವಾರ್ಯತೆಯನ್ನು ಎದುರಿಸಿವೆ.

ಪುರ್‌ ಎಂದು ಹಾರಿದ ಗುಬ್ಬಿ

ಗುಬ್ಬಿ ಮನುಷ್ಯರ ಸಹವಾಸ ಅಪೇಕ್ಷಿಸಿ ಬರುವ ಹಕ್ಕಿ. ನಾವು ಉಪಯೋಗಿಸುವ ದವಸ ಧಾನ್ಯಗಳೇ ಸಾಮಾನ್ಯವಾಗಿ ಗುಬ್ಬಿಗಳ ಆಹಾರ. ನಾವು ತಿಂದು ಬಿಟ್ಟ ಅಹಾರ ಪದಾರ್ಥಗಳೂ ಅವುಗಳಿಗೆ ಪ್ರಿಯವೇ. ಆಗಾಗ ಮನೆಯಂಗಳದಲ್ಲೇ ಸಿಕ್ಕುವ ಹುಳು ಹುಪ್ಪಡಿಗಳೂ, ಜೇಡಗಳೂ ಬಾಯಿ ರುಚಿಗೆ ಆಗಬಹುದು. ಗೂಡು ಕಟ್ಟಿ ಮರಿಮಾಡಲು ಮನೆಯ ಮಾಡು, ಹಂಚಿನ ಸಂದು ಅಥವಾ ಮನೆಯ ಗೋಡೆಗಳಲ್ಲಿರಬಹುದಾದ ಬಿರುಕು ಬೇಕು. ಹಿಂದೆ ಮನೆಗಳಲ್ಲಿ ಗೋಡೆಯ ಮೇಲೆ ಕಟ್ಟು ಹಾಕಿಸಿರುವ ದೇವರಪಟಗಳನ್ನು ನೇತುಹಾಕಿರುತ್ತಿದ್ದರು. ಅವುಗಳ ಹಿಂದೆ ಸ್ಥಳವಂತೂ ಗುಬ್ಬಿಗಳ ಗೂಡಿಗೆ ಮೀಸಲಾಗಿರುತ್ತಿತ್ತು. ಗುಬ್ಬಿ ಸ್ನೇಹ ಜೀವಿ.
‘ಹಿಂದೆಲ್ಲಾ ಗ್ರಾಮೀಣ ಪರಿಸರದ ಮನೆಗಳಲ್ಲಿ ಗುಬ್ಬಿಗಳಿಗೆ ಬೇಕಾದ ಆಹಾರ ಪದಾರ್ಥಗಳು, ಹುಳುಗಳೂ, ಮನೆಯೊಳಗೆ ಬಲೆ ಹೆಣೆಯುವ ಜೇಡಗಳು ಸಾಕಷ್ಟು ಸಿಗುತ್ತಿದ್ದವು. ವಾಸಕ್ಕೆ ಬೇಕಾದ ಪೊದೆಗಳು, ಗೂಡು ಕಟ್ಟಲು ಬೇಕಾದ ಮನೆಯ ಹೆಂಚಿನ ಮಾಡುಗಳೂ ಯಥೇಚ್ಚವಾಗಿದ್ದವು. ಈಗ ಜನ ವಸತಿ ಕಾಂಕ್ರೀಟ್‌ಮಯವಾಗಿದೆ. ಬದಲಾದ ಪರಿಸರ, ಬದಲಾದ ವಾತಾವರಣ, ಅವುಗಳ ಸಹಜ ವಾಸಸ್ಥಳದ ನಾಶ. ಕೀಟನಾಶಕಗಳ ಅತಿಯಾದ ಬಳಕೆ. ವಾತಾವರಣವನ್ನೆಲ್ಲಾ ತುಂಬಿಕೊಳ್ಳುತ್ತಿರುವ ಹಲವಾರು ರೀತಿಯ ವಿದ್ಯುತ್‌ಕಾಂತೀಯ ಅಲೆಗಳ ಪರಿಣಾಮದಿಂದ ಗುಬ್ಬಿಗಳು ಸಂಪೂರ್ಣವಾಗಿ ಕಣ್ಮರೆಯಾಗುವ ಹಾದಿಯಲ್ಲಿವೆ. ಪುಟ್ಟ ಗುಬ್ಬಿ ಕಣ್ಮರೆಯಾಗುತ್ತಿರುವ ಜೊತೆಯಲ್ಲಿ ಅದು ನೀಡುವ ಎಚ್ಚರಿಕೆ ಇಲ್ಲಿ ಮುಖ್ಯವಾಗುತ್ತದೆ’ ಎನ್ನುತ್ತಾರೆ ಶಿಕ್ಷಕ ಶ್ರೀಕಾಂತ್‌.
೨೦೧೦ರಿಂದ ಪ್ರತೀವರ್ಷ ಮಾರ್ಚ್ ೨೦ರಂದು ‘ವರ್ಲ್ಡ್ ಸ್ಪಾರೋ ಡೆ’ ಹೆಸರಿನಲ್ಲಿ ಗುಬ್ಬಿಗಳಿಗಾಗಿ ಪ್ರಪಂಚದಾದ್ಯಂತ ಒಂದು ದಿನದ ಆಚರಣೆ ನಡೆಸಲಾಗತ್ತಿದೆ. ಇದು ಗುಬ್ಬಚ್ಚಿಯನ್ನು ಮಾತ್ರ ಉಳಿಸುವ ಆಂದೋಲನವಾಗಿರದೆ ಆ ಮೂಲಕ ನಶಿಸುತ್ತಿರುವ ಎಲ್ಲ ಜೀವವೈವಿಧ್ಯಗಳ ಬಗ್ಗೆ ಮತ್ತು ಅವುಗಳ ಸಹಜ ಪರಿಸರವನ್ನು ಕಾಪಾಡುವ ಅಗತ್ಯದ ಬಗ್ಗೆ ಸಾರ್ವಜನಿಕರಲ್ಲಿ ಅರಿವನ್ನು ಮೂದಿಸುವುದು ಈ ‘ಗುಬ್ಬಿ ದಿನಾಚರಣೆ’ಯ ಉದ್ದೇಶವಾಗಿದೆ.