Home Blog Page 424

ಶ್ರೀರಾಮನವಮಿಯ ಕಾರಣದಿಂದ ತಿರುಗುತ್ತಿರುವ ಕುಂಬಾರಿಕೆ ಚಕ್ರ

0

ಶ್ರೀರಾಮನವಮಿಯಂದು ತಾಲ್ಲೂಕಿನ ವಿವಿಧ ಶ್ರೀರಾಮ ಹಾಗೂ ಆಂಜನೇಯ ದೇವಾಲಯಗಳ ಬಳಿ ಉಟ್ಲು ನಡೆಯುತ್ತದೆ. ಕ್ಷೀರ ಉಟ್ಲು ಮತ್ತು ಮನರಂಜನಾ ಉಟ್ಲು ಆಚರಿಸಲಾಗುತ್ತದೆ. ಹಾಲನ್ನು ಪುಟ್ಟ ಪುಟ್ಟ ಮಡಿಕೆಗಳಲ್ಲಿ ಕಟ್ಟಿ ಪೂಜಿಸಿ ಒಡೆಯುವುದು ಕ್ಷೀರ ಉಟ್ಲು. ಎತ್ತರದ ಕಂಬದ ಮೇಲೆ ಕಬ್ಬಿಣದಲ್ಲಿ ಮಾಡಿರುವ ತಿರುಗುಮಣೆಯನ್ನು ತಿರುಗಿಸುತ್ತಾ ಅವಕ್ಕೆ ಕಟ್ಟಿರುವ ತೆಂಗಿನ ಕಾಯಿಗಳನ್ನು ಉದ್ದುದ್ದದ ಕೋಲು ಹಿಡಿದು ಒಡೆಯುವುದು ಮನರಂಜನಾ ಉಟ್ಲು. ಈ ತಿರುಗುವ ಉಟ್ಲುವಿನ ಕಾರಣ ಕುಂಬಾರಿಕೆಯ ಚಕ್ರವೂ ತಿರುಗತೊಡಗಿದೆ.
ಉಟ್ಲು ಪರಿಷೆಯ ಒಂದು ಭಾಗವಾದ ಕ್ಷೀರ ಉಟ್ಲುವಿಗೆ ಬೇಕಾದ ಪುಟ್ಟ ಪುಟ್ಟ ಮಣ್ಣಿನ ಮಡಿಕೆಗಳಿಂದಾಗಿ ತಾಲ್ಲೂಕಿನಲ್ಲಿ ಕುಂಬಾರಿಕೆ ಮಾಡುವವರಿಗೆ ಬೇಡಿಕೆ ಕುದುರಿದೆ. ತಾಲ್ಲೂಕಿನ ಗೊಲ್ಲಹಳ್ಳಿಯ ವೃದ್ಧ ಮುನಿಬಾಲಪ್ಪ ಹಾಲುಟ್ಲುವಿಗೆ ಬಳಸುವ ಪುಟ್ಟ ಪುಟ್ಟ ಮಡಿಕೆಗಳ ತಯಾರಿಸುವುದರಲ್ಲಿ ನಿರತರಾಗಿದ್ದಾರೆ.

ಶಿಡ್ಲಘಟ್ಟ ತಾಲ್ಲೂಕಿನ ಗೊಲ್ಲಹಳ್ಳಿಯ ವೃದ್ಧ ಮುನಿಬಾಲಪ್ಪ ಹಾಲುಟ್ಲುವಿಗೆ ಬಳಸುವ ಪುಟ್ಟ ಪುಟ್ಟ ಮಡಿಕೆಗಳ ತಯಾರಿಸುವುದರಲ್ಲಿ ನಿರತರಾಗಿದ್ದಾರೆ.

ಕುಂಬಾರಿಕೆ ತಾಲ್ಲೂಕಿನಲ್ಲಿ ವಿರಳವಾಗುತ್ತಿದೆ. ಉತ್ತಮ ಗುಣಮಟ್ಟದ ಮಣ್ಣು, ಮಾರುಕಟ್ಟೆಯಲ್ಲಿ ಕುಸಿದ ಬೇಡಿಕೆ, ಹೊಸ ತಲೆಮಾರಿಗೆ ಬೇಡವಾದ ವೃತ್ತಿ ಮುಂತಾದ ಕಾರಣಗಳಿಂದ ಕೆಲವೇ ಕೆಲವು ಗ್ರಾಮಗಳಲ್ಲಿ ಕುಂಬಾರಿಕೆಯನ್ನು ನಂಬಿದವರು ಕೆಲವರು ಮಾತ್ರ ತಾಲ್ಲೂಕಿನಲ್ಲಿ ಉಳಿದಿದ್ದಾರೆ.
‘ಬೇಡಿಕೆ ಬಂದಾಗ ಕೆಲಸ ಇಲ್ಲದಿದ್ದರೆ ಕೆಲಸವಿಲ್ಲ. ಇರುವ ಒಬ್ಬ ಮಗ ಕೆಲಸವನ್ನು ಅರಸಿ ಬೆಂಗಳೂರು ಸೇರಿದ್ದಾನೆ. ಚಿಕ್ಕವನಾಗಿದ್ದಾಗ ಪ್ರಾರಂಭಿಸಿದ ಮಣ್ಣಿನೊಂದಿಗಿನ ಬದುಕು ಹಾಗೇಯೇ ಸಾಗಿದೆ. ಈಗ ವಯಸ್ಸಾಗಿದೆ ಬೇರೇನೂ ಮಾಡುವಂತಿಲ್ಲ. ಗುಣಮಟ್ಟದ ಮಣ್ಣು ಸಿಗುವುದು ಕಷ್ಟ. ನಮ್ಮ ಶ್ರಮಕ್ಕೆ ತಕ್ಕ ಹಣ ಸಿಗುತ್ತಿಲ್ಲ. ಆದರೂ ಚಕ್ರ ತಿರುಗಿಸದಿದ್ದರೆ ನಮ್ಮ ಬದುಕಿನ ಚಕ್ರ ಮುಂದುವರೆಯದು’ ಎಂದು ಮಾರ್ಮಿಕವಾಗಿ ನುಡಿಯುತ್ತಾರೆ ಮುನಿಬಾಲಪ್ಪ.
ಕ್ಷೀರ ಉಟ್ಲು (ಸಂಗ್ರಹ ಚಿತ್ರ)

‘ಹೊಲ್ಲಹಳ್ಳಿ ಕೆರೆ, ಕುಂದಲಗುರ್ಕಿ ಕೆರೆ ಮುಂತಾದೆಡೆಯಿಂದ ಮಣ್ಣನ್ನು ತರಬೇಕು. ಒಂದೊಂದು ರೀತಿಯ ಮಡಿಕೆಗೆ ಒಂದೊಂದು ರೀತಿಯ ಮಣ್ಣಿರಬೇಕು. ಮೊದಲಾದರೆ ಅಡುಗೆಯನ್ನು ಮಡಿಕೆಯಲ್ಲೇ ಮಾಡುತ್ತಿದ್ದರು. ವಿಶೇಷವಾಗಿ ಮಾಂಸದ ಅಡುಗೆಯನ್ನು ಮಡಿಕೆಯಲ್ಲಿ ಮಾಡಿದರೆ ಅದರ ರುಚಿ ಹೆಚ್ಚು ಎಂಬುದು ಹಳಬರ ಅನುಭವದ ನುಡಿ. ಈಗ ಮಡಿಕೆಯಲ್ಲಿ ಅಡುಗೆ ಮಾಡುವವರು ವಿರಳ. ಕೇವಲ ಬೇಸಿಗೆಯಲ್ಲಿ ಕುಡಿಯುವ ನೀರನ್ನು ಇಡಲು ಬಳಸುತ್ತಾರೆ. ತಂಪುಪೆಟ್ಟಿಗೆಯಿಂದಾಗಿ ನೀರನ್ನು ಇಡುವವರೂ ಕಡಿಮೆಯಾಗುತ್ತಿದ್ದಾರೆ. ರಾಮನವಮಿಯ ಸಂದರ್ಭದಲ್ಲಿ ತಾಲ್ಲೂಕಿನ ವಿವಿಧೆಡೆ ಆಚರಿಸುವ ಉಟ್ಲು ಪರಿಷೆಯ ನಿಮಿತ್ತ ಪುಟ್ಟ ಮಡಿಕೆಗಳನ್ನು ಮಾಡುವ ಮೂಲಕ ಕುಂಬಾರಿಕೆಯ ಚಕ್ರ ತಿರುತ್ತಿದೆ’ ಎಂದು ಅವರು ತಿಳಿಸಿದರು.

ಸಹಾಯ ಎಂಬುದು ಸರಪಣಿಯಂತೆ ಸಾಗಬೇಕು

0

ಸಹಾಯ ಎಂಬುದು ಸರಪಣಿಯಂತೆ ಸಾಗಬೇಕು. ನಾವು ಈ ದಿನ ನಿಮಗೆ ಮಾಡುತ್ತಿರುವ ಅಲ್ಪ ಸಹಾಯಕ್ಕೆ ಪ್ರತಿಯಾಗಿ ನೀವು ಮುಂದೆ ಉನ್ನತ ಸ್ಥಾನಗಳನ್ನು ಅಲಂಕರಿಸಿದಾಗ ಆಗಿನ ಮಕ್ಕಳಿಗೆ ನೆರವಾಗಿ ಎಂದು ‘ವಿ ಆರ್‌ ಟು ಹೆಲ್ಪ್‌’ ಸಂಸ್ಥೆಯ ಅಮಿತ್‌ ತಿಳಿಸಿದರು.
ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ‘ವಿ ಆರ್‌ ಟು ಹೆಲ್ಪ್‌’ ಸಂಸ್ಥೆಯ ವತಿಯಿಂದ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್‌ಪುಸ್ತಕ, ಪ್ಯಾಡ್‌, ಲೇಖನ ಸಾಮಗ್ರಿ, ಬಣ್ಣದ ಕ್ರೆಯಾನ್ಸ್‌, ಸಿಹಿ ತಿನಿಸನ್ನು ವಿತರಿಸಿ ಅವರು ಮಾತನಾಡಿದರು.
ಗ್ರಾಮಾಂತರ ಪ್ರದೇಶದಲ್ಲಿ ಓದಿ ಈಗ ಬೆಂಗಳೂರಿನಲ್ಲಿ ಎಂಜಿನಿಯರುಗಳಾಗಿರುವ ಸಮಾನ ಮನಸ್ಕ ತಂಡವನ್ನು ರಚಿಸಿಕೊಂಡು ಪ್ರತಿವರ್ಷ ಆಯ್ದ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ನೀಡುತ್ತಿದ್ದೇವೆ. ಸಮಾಜಕ್ಕೆ ನಾವು ತೀರಿಸಬೇಕಾದ ಋಣ ಬಲು ದೊಡ್ಡದಿದೆ. ಆದಷ್ಟೂ ಸಮಾಜಮುಖಿಗಳಾಗೋಣ ಎಂದು ಹೇಳಿದರು.
ತಾಲ್ಲೂಕಿನ ವೀರಾಪುರ, ಹನುಮಂತಪುರ, ವರದನಾಯಕನಹಳ್ಳಿ ಸರ್ಕಾರಿ ಶಾಲೆಗಳು ಹಾಗೂ ಆಶಾಕಿರಣ ಅಂಧಮಕ್ಕಳ ಶಾಲೆಗೆ ಈ ದಿನ ಸಗತ್ಯ ವಸ್ತುಗಳನ್ನು ವಿತರಿಸಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ‘ವಿ ಆರ್‌ ಟು ಹೆಲ್ಪ್‌’ ಸಂಸ್ಥೆಯ ಸದಸ್ಯರು ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಟ್ಟರು.
‘ವಿ ಆರ್‌ ಟು ಹೆಲ್ಪ್‌’ ಸಂಸ್ಥೆಯ ಸುಶ್ಮಿತ, ಪ್ರೀತಿಕಾ, ವಾಗೇಶ್‌, ವನಿತಾ, ಸ್ವಾತಿ, ಸರಬ್ಜಿತ, ರೂಪ, ಅಕಿನಿ, ಶಾಲಾ ಶಿಕ್ಷಕರು ಈ ಸಂದರ್ಭದಲ್ಲಿ ಹಾಜರಿದ್ದರು.

ರೈತರ ಕುಂದುಕೊರತೆ ಸಭೆಯಲ್ಲಿ ತಾಲ್ಲೂಕಿನ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ ರೈತರು

0

ತಾಲ್ಲೂಕಿನ ಬಹುತೇಕ ರೈತರು ಬೆಳೆಯುವ ಹಣ್ಣು ಹಾಗು ತರಕಾರಿಯನ್ನು ಮಾರಾಟ ಮಾಡಬೇಕಾದರೆ ನೆರೆಯ ಚಿಕ್ಕಬಳ್ಳಾಪುರಕ್ಕೆ ಹೋಗಬೇಕು. ಹಾಗಾಗಿ ತಾಲ್ಲೂಕು ಕೇಂದ್ರ ಸ್ಥಾನದ ಸಮೀಪ ಎಪಿಎಂಸಿ ಮಾರುಕಟ್ಟೆ ನಿರ್ಮಾಣ ಮಾಡಲು ಸ್ಥಳ ಗುರುತಿಸಿ ಕೊಡಬೇಕು ಎಂದು ರೈತರು ಒತ್ತಾಯಿಸಿದರು.
ತಾಲ್ಲೂಕಿನ ಬೆಳ್ಳೂಟಿಯ ಶ್ರೀ ಗುಟ್ಟಾಂಜನೇಯ ಕಲ್ಯಾಣ ಮಂಟಪದಲ್ಲಿ ಜಿಲ್ಲಾಧಿಕಾರಿ ದೀಪ್ತಿ ಆದಿತ್ಯಾ ಕಾನಡೆ ಅಧ್ಯಕ್ಷತೆಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ರೈತರ ಕುಂದುಕೊರತೆ ಸಭೆಯಲ್ಲಿ ವಿವಿಧ ರೈತ ಮುಖಂಡರು ಮಾತನಾಡಿ ತಾಲ್ಲೂಕಿನ ರೈತರ ಸಮಸ್ಯೆಗಳನ್ನು ವಿವರಿಸಿದರು.
ತಾಲ್ಲೂಕಿನಾಧ್ಯಂತ ಇರುವ ಕೆರೆ ಒತ್ತುವರಿ ತೆರವುಗೊಳಿಸಬೇಕು. ರಾಜಕಾಲುವೆ ತೆರವು ಹಾಗು ಕೆರೆಗಳಲ್ಲಿ ಹಾಕಿರುವ ಜಾಲಿ ಮರಗಳನ್ನು ಕೂಡಲೇ ತೆರವುಗೊಳಿಸಲು ಜಿಲ್ಲಾಡಳಿತ ಹಾಗು ತಾಲ್ಲೂಕು ಆಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದರು.
ಅಕ್ರಮ ಸಕ್ರಮ ಯೋಜನೆಯಡಿ ಬೆಸ್ಕಾಂ ಇಲಾಖೆಗೆ ೧೮ ಸಾವಿರ ಹಣ ಕಟ್ಟಿ ಎರಡು ವರ್ಷವಾದರೂ ಈವರೆಗೂ ವಿದ್ಯುತ್ ಪರಿವರ್ತಕಗಳನ್ನು ನೀಡಿಲ್ಲ. ಬೇರೆ ತಾಲ್ಲೂಕುಗಳಲ್ಲಿ ದಿನಕ್ಕೆ ೬-೭ ತಾಸು ವಿದ್ಯುತ್ ನೀಡುತ್ತಾರೆ ಆದರೆ ನಮ್ಮ ತಾಲ್ಲೂಕಿನಲ್ಲಿ ಕನಿಷ್ಟ ನಾಲ್ಕು ತಾಸು ಸಹ ನೀಡುವುದಿಲ್ಲ. ಅಧಿಕಾರಿಗಳನ್ನು ಈ ಬಗ್ಗೆ ಸಂಪರ್ಕಿಸಿದರೆ ಸೌಜನ್ಯವಾಗಿ ವರ್ತಿಸುವುದಿಲ್ಲ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ತಾಲ್ಲೂಕಿನ ದ್ರಾಕ್ಷಿ ಬೆಳೆಗಾರರ ನೋವು ವಿವರಿಸಲಾಗದು. ವರ್ಷವೆಲ್ಲಾ ಕಷ್ಟಪಟ್ಟು ದುಡಿದು ಬೆಳೆದ ದ್ರಾಕ್ಷಿಯನ್ನು ಮಾರಾಟ ಮಾಡಬೇಕಾದರೆ ಖಾಸಗಿಯವರ ಮೊರೆಹೋಗಬೇಕು. ಅವರು ನೀಡಿದ ಬಿಳಿ ಹಾಳೆಯನ್ನು ಇಟ್ಟುಕೊಂಡು ತಿಂಗಳುಗಟ್ಟಲೇ ಅಲೆಯಬೇಕು. ಈ ವ್ಯವಸ್ಥೆಯ ಬಗ್ಗೆ ಅಧಿಕಾರಿಗಳಿಗೆ ಗೊತ್ತಿದ್ದರೂ ಮೌನವಾಗಿರುವುದು ರೈತರಿಗೆ ಮಾಡುತ್ತಿರುವ ಅನ್ಯಾಯ ಎಂದರು.
ರೈತರು ಬೆಳೆದ ದ್ರಾಕ್ಷಿ ಖರೀದಿಸಲು ಸರ್ಕಾರದಿಂದಲೇ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು.
ಪ್ರತಿನಿತ್ಯ ಲಕ್ಷಾಂತರ ರೂ ತೆರಿಗೆ ವಸೂಲಾಗುವ ನಗರದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿರುವ ಸಣ್ಣ ಪುಟ್ಟ ನ್ಯೂನತೆಗಳನ್ನು ಸರಿಪಡಿಸಿ ಮಾರುಕಟ್ಟೆ ಆವರಣದೊಳಗೆ ಬ್ಯಾಂಕ್ ಶಾಖೆಯೊಂದನ್ನು ನಿರ್ಮಿಸದಲ್ಲಿ ರೇಷ್ಮೆ ಬೆಳೆಗಾರರು ಸೇರಿದಂತೆ ರೀಲರ್‌ಗಳಿಗೆ ಅನುಕೂಲವಾಗುತ್ತದೆ.
ತಾಲ್ಲೂಕಿನ ಪಲಿಚೇರ್ಲು ಗ್ರಾಮದಲ್ಲಿ ನಿರ್ಮಿಸಲಾಗಿರುವ ಸಾರ್ವಜನಿಕ ಆಸ್ಪತ್ರೆ ಈವರೆಗೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಇನ್ನು ತಾಲ್ಲೂಕಿನ ಬಹುತೇಕ ಕಡೆ ಶುದ್ಧ ನೀರಿನ ಘಟಕಗಳನ್ನು ನಿರ್ಮಿಸಿದ್ದು ಈವರೆಗೂ ಉದ್ಘಾಟನೆಯಾಗಿಲ್ಲ.
ನಗರದ ಕೇಂದ್ರ ಸ್ಥಾನದಲ್ಲಿರುವ ತಾಲ್ಲೂಕು ಕಚೇರಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕು. ಬಡ ರೈತನೋರ್ವ ತಮ್ಮ ಸಣ್ಣ ಕೆಲಸವೊಂದನ್ನು ಮಾಡಿಸಿಕೊಳ್ಳಬೇಕಾದರೆ ವರ್ಷಗಟ್ಟಲೇ ಕಚೇರಿಗೆ ಅಲೆಯಬೇಕಿದೆ. ಆದರೆ ರಿಯಲ್ ಎಸ್ಟೇಟ್ ಉದ್ಯಮಿಗಳು ತಮ್ಮ ಕೆಲಸಗಳನ್ನು ಕೆಲವೇ ಕ್ಷಣಗಳಲ್ಲಿ ಮುಗಿಸಿಕೊಂಡು ಹೋಗುತ್ತಾರೆ. ದಯವಿಟ್ಟು ತಾಲೂಕು ಕಚೇರಿಯ ರೆಕಾರ್ಡ್ ರೂಂ ಸೇರಿದಂತೆ ಕಂಪ್ಯೂಟರ್ ರೂಂ ಗೆ ಸಿಸಿ ಕೆಮೆರಾ ಅಳವಡಿಸಿದಲ್ಲಿ ಅಕ್ರಮಗಳು ಕಡಿಮೆಯಾಗಬಹುದು ಎಂದರು.
ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಯನ್ನು ತಡೆಗಟ್ಟುವಲ್ಲಿ ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದಾರೆ ಎಂಬ ರೈತರ ಮಾತಿಗೆ ಉತ್ತರಿಸಿದ ಜಿಲ್ಲಾಧಿಕಾರಿ ಜಿಲ್ಲಾದ್ಯಂತ ಅಕ್ರಮ ಮರಳು ಸಾಗಾಣಿಕೆ ತಡೆಯಲು ಈಗಾಗಲೇ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಎಲ್ಲಾ ತಾಲ್ಲೂಕುಗಳಲ್ಲಿಯೂ ಸಭೆ ಕರೆದು ಎಲ್ಲಾ ಅಧಿಕಾರಿಗಳಿಗೂ ಸೂಚಿಸಲಾಗಿದೆ. ಜಿಲ್ಲಾದ್ಯಂತ ಅಕ್ರಮ ಮರಳು ಗಣಿಗಾರಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟಲಾಗುವುದು. ಜನರು ಮನೆ ಕಟ್ಟಿಕೊಳ್ಳಲು ಎಂ ಸ್ಯಾಂಡ್ ಬಳಸಲು ಮುಂದಾಗಬೇಕು ಎಂದರು.
ಈಗಾಗಲೇ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿರುವ ಹಿನ್ನಲೆಯಲ್ಲಿ ಜಿಲ್ಲೆಯ ಯಾವುದೇ ರೈತರ ಕೃಷಿ ಹಾಗು ಕೃಷಿಯೇತರ ಸಾಲವನ್ನು ಬಲವಂತವಾಗಿ ವಸೂಲಿ ಮಾಡುವುದನ್ನು ಬ್ಯಾಂಕ್ ಅಧಿಕಾರಿಗಳು ಕೈ ಬಿಡಬೇಕು. ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ನಿಗಧಿ ಪಡಿಸುವುದು ಸೇರಿದಂತೆ ಬೆಳೆ ಹಾನಿಯಾದ ರೈತರಿಗೆ ಎಕರೆಗೆ ೨೦ ಸಾವಿರದಂತೆ ಪರಿಹಾರ ಧನ ನೀಡಲು ಸರ್ಕಾರಕ್ಕೆ ಜಿಲ್ಲಾಡಳಿತ ಮನವರಿಕೆ ಮಾಡಿಕೊಡಬೇಕು. ತಾಲ್ಲೂಕಿನಲ್ಲಿ ರೈತ ಭವನ ನಿರ್ಮಿಸಲು ಸ್ಥಳ ಗುರುತಿಸಿಕೊಡಬೇಕು. ಒಟ್ಟಾರೆಯಾಗಿ ಅಧಿಕಾರಿಗಳು ರೈತರನ್ನು ಗೌರವಯುತವಾಗಿ ಕಾಣುವ ಮನೋಭಾವ ಬೆಳೆಸಿಕೊಂಡಲ್ಲಿ ರೈತ ದೇಶದ ಬೆನ್ನೆಲುಬು ಎಂಬ ಮಾತಿಗೆ ಅರ್ಥ ಸಿಗುತ್ತದೆ ಎಂಬುದಾಗಿ ರೈತರು ತಿಳಿಸಿದರು.
ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ ಮಾತನಾಡಿ, ‘ಸರ್ಕಾರದ ಆಧೇಶದ ಪ್ರಕಾರ ಹೋಬಳಿಗೊಂದರಂತೆ ಮೇವು ಬ್ಯಾಂಕ್ ನಿರ್ಮಿಸಿ ರೈತರಿಗೆ ಒಣ ಮೇವು ಪೂರೈಸಲಾಗುತ್ತಿದೆ. ಆದರೆ ಈ ಭಾಗದಲ್ಲಿ ಬಹುತೇಕ ಸೀಮೆಹಸುಗಳಿರುವುದರಿಂದ ಒಣ ಮೇವು ಅಷ್ಟಾಗಿ ಬಳಕೆಯಾಗುತ್ತಿಲ್ಲ. ಹಾಗಾಗಿ ಕೆಎಂಎಫ್ ಮತ್ತು ಪಶು ವೈದ್ಯ ಇಲಾಖೆಯ ಸಹಯೋಗದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ಇನ್ನು ತಾಲ್ಲೂಕಿನಲ್ಲಿ ಎಪಿಎಂಸಿ ಮಾರುಕಟ್ಟೆ ನಿರ್ಮಾಣ ಮಾಡಲು ಸ್ಥಳ ಗುರುತಿಸಲು ತಹಸೀಲ್ದಾರರಿಗೆ ಸೂಚಿಸಲಾಗಿದೆ. ಇನ್ನುಳಿದಂತೆ ರೈತರು ಸೂಚಿಸಿರುವ ಎಲ್ಲಾ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಲು ಸಂಬಂದಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ಜೆ.ಮಂಜುನಾಥ್, ಉಪವಿಭಾಗಾಧಿಕಾರಿ ಶಿವಸ್ವಾಮಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕೆ.ಎಸ್.ಎನ್.ಭಟ್, ತಹಸೀಲ್ದಾರ್ ಎಸ್.ಅಜಿತ್‌ಕುಮಾರ್ ರೈ, ತಾಲ್ಲೂಕು ಪಂಚಾಯಿತಿ ಇಓ ವೆಂಕಟೇಶ್, ತೋಟಗಾರಿಕೆ ಉಪನಿರ್ದೇಶಕ ರಘು, ಆಹಾರ ಇಲಾಖೆಯ ಉಪನಿರ್ದೇಶಕ ನಾಗೇಂದ್ರಪ್ಪ, ರೇಷ್ಮೆ ಗೂಡು ಮಾರುಕಟ್ಟೆ ಉಪನಿರ್ದೇಶಕ ರತ್ನಯ್ಯಶೆಟ್ಟಿ, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುಷ್ಮಾ ಶ್ರೀನಿವಾಸ್, ತಾಲ್ಲೂಕು ಅಧ್ಯಕ್ಷರಾದ ತಾದೂರು ಮಂಜುನಾಥ್, ಎಸ್.ಎಂ.ರವಿಪ್ರಕಾಶ್, ಜೆ.ವಿ.ವೆಂಕಟಸ್ವಾಮಿ, ರೈತ ಮುಖಂಡರಾದ ಎಚ್.ಜಿ.ಗೋಪಾಲಗೌಡ, ವೀರಕೆಂಪಣ್ಣ, ಎಸ್.ಎಂ.ನಾರಾಯಣಸ್ವಾಮಿ, ಭಾಸ್ಕರರೆಡ್ಡಿ, ಎಸ್.ವೆಂಕಟೇಶ್, ಸಂತೋಷ್, ರಾಜಶೇಖರ್, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ದೇವರಮಳ್ಳೂರಿನಲ್ಲಿ ಗಮಕ ಹಾಡುವ ಆಂಜನೇಯನ ಅಪರೂಪದ ವಿಗ್ರಹ

0

ರಾಮಾಯಣದ ಪಾತ್ರಗಳಲ್ಲಿ ಜನಮನಸ್ಸಿನ ಮೇಲೆ ರಾಮನಷ್ಟೇ ಪರಿಣಾಮವನ್ನು ಬೀರಿದ ಇನ್ನೊಂದು ಪಾತ್ರವೆಂದರೆ ಆಂಜನೇಯ. ರಾಮನ ಪರಮಭಕ್ತ ಮತ್ತು ಶಕ್ತಿಯ ದೇವತೆಯೆಂದು ಹನುಮಂತನನ್ನು ಪೂಜಿಸಲಾಗುತ್ತದೆ.
ಸಾಮಾನ್ಯವಾಗಿ ನಿಂತಿರುವ ಹನುಮನ ವಿಗ್ರಹ ಅಥವಾ ಚಿತ್ರವನ್ನೇ ಹನುಮಂತನ ಗುಡಿಗಳಲ್ಲಿ ಕಾಣುತ್ತೇವೆ. ಜಿಲ್ಲೆಯಲ್ಲೇ ಅತ್ಯಂತ ಅಪರೂಪವೆಂಬಂತೆ ಒಂದು ಕೈಲಿ ಚಿಟಿಕೆಯನ್ನು ಹಿಡಿದು ಮತ್ತೊಂದು ಕೈಲಿ ಏಕತಾರಿಯನ್ನು ನುಡಿಸುತ್ತಾ ಕುಳಿತುಕೊಂಡು ಗಮಕವನ್ನು ಹಾಡುವ ಆಂಜನೇಯನ ಮೂರ್ತಿಯು ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿದೆ.
ರಾಮಾಯಣದಲ್ಲಿ ಮಂಗಳ ಶ್ಲೋಕಗಳಿವೆ ಅದರಲ್ಲಿ ಒಂದಾದ –

ಚಿನ್ಮುದ್ರೆಯಲ್ಲಿರುವ ರಾಮ

‘ವೈದೇಹೀಸಹಿತಂ ಸುರದ್ರುಮತಲೇ ಹೈಮೇ ಮಹಾಮಂಡಪೇ ; ಮಧ್ಯೇಪುಷ್ಪಕಮಾಸನೇ ಮಣಿಮಯೇ ವಿರಾಸನೇ ಸುಸ್ಥಿತಮ್‌; ಅಗ್ರೇ ವಾಚಯತಿ ಪ್ರಭಂಜನಸುತೇ ತತ್ವಂ ಮುನಿಭ್ಯಃ ಪರಮ್‌; ವ್ಯಾಖ್ಯಾಂತಂ ಭರತಾದಿಭಿಃ ಷರಿವೃತಂ ರಾಮಂ ಭಜೇ ಶ್ಯಾಮಲಮ್‌‘.
ಇದರ ಅರ್ಥ: ‘ಕಲ್ಪವೃಕ್ಷದ ಕೆಳಗೆ ಚಿನ್ನದ ಮಹಾಮಂಟಪವಿದೆ, ಅದರಲ್ಲಿ ಪುಷ್ಪಕ ವಿಮಾನದ ಮಧ್ಯದಲ್ಲಿರುವ ಮಣಿಮಯವಾದ ಸಿಂಹಾಸನದಲ್ಲಿ ವೈದೇಹಿಯೊಂದಿಗೆ ವೀರಾಸನದಲ್ಲಿ ಶ್ರೀರಾಮನು ಕುಳಿತಿದ್ದಾನೆ. ತನ್ನ ಮುಂದೆ ಕುಳಿತು ಆಂಜನೇಯನು ಓದುತ್ತಿರುವ ಪರಾತತ್ವದ ಸಂಗತಿಗಳನ್ನು ರಾಮನು ವ್ಯಾಖ್ಯಾನ ಮಾಡುತ್ತಿರುವನು. ಈ ಸಂದರ್ಭದಲ್ಲಿ ಭರತಾದಿಗಳ ಜೊತೆಗೆ ಇರುವ ರಾಮನನ್ನು ಭಜಿಸುತ್ತೇನೆ’.
ರಾಮಾಯಣ ಮಹಾಕಾವ್ಯದ ಈ ಶ್ಲೋಕದಲ್ಲಿ ಆಧ್ಯಾತ್ಮಿಕ ವಿಚಾರಗಳನ್ನು ರಾಮ ಮುನಿಗಳಿಗೆ ವ್ಯಾಖ್ಯಾನ ಮಾಡುವುದನ್ನು ತಿಳಿಸಲಾಗಿದೆ. ರಾಮನು ವ್ಯಾಖ್ಯಾನ ನೀಡುವ ಮುನ್ನ ಶ್ಲೋಕಗಳನ್ನು ಗಮಕಿ ಆಂಜನೇಯ ರಾಗವಾಗಿ ವಾಚಿಸುತ್ತಾನೆ.
ಗರ್ಭಗುಡಿಯಲ್ಲಿರುವ ರಾಮ, ಸೀತೆ, ಲಕ್ಷ್ಮಣ ಮತ್ತು ಆಂಜನೇಯರ ಮೂರ್ತಿಗಳು

‘ಈ ಶ್ಲೋಕವನ್ನು ಪ್ರತಿನಿಧಿಸುವ ಅಪರೂಪದ ಶಿಲ್ಪಗಳು ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮದ ಆತ್ಮಾರಾಮ ದೇವಾಲಯದಲ್ಲಿದೆ. ಚೋಳರ ಮತ್ತು ಪಲ್ಲವರ ಕಾಲದ ಈ ಪುರಾತನ ದೇವಾಲಯದ ಗರ್ಭಗುಡಿಯಲ್ಲಿರುವ ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮರ ವಿಗ್ರಹಗಳು ಆಧ್ಯಾತ್ಮ ರಾಮಾಯಣದ ಸ್ವರೂಪದಲ್ಲಿದೆ. ವಿಶೇಷವೆಂದರೆ ಈ ರೀತಿಯ ವಿಗ್ರಹಗಳು ಜಿಲ್ಲೆಯಲ್ಲೇ ಎಲ್ಲೂ ಇಲ್ಲ. ಜೀವಾತ್ಮ – ಪರಮಾತ್ಮರ ಬೆಸುಗೆ ಸೂಚಿಸುವ ಚಿನ್ಮುದ್ರೆಯಲ್ಲಿರುವ ರಾಮನ ಅಪರೂಪದ ವಿಗ್ರಹದ ಮುಂದೆ ಒಂದು ಕೈಲಿ ಏಕತಾರಿ ಮತ್ತೊಂದು ಕೈಲಿ ಚಿಟಿಕೆಯನ್ನು ಹಿಡಿದು ಆಂಜನೇಯ ಗಮಕ ಹಾಡುವ ಅಪರೂಪದ ಶಿಲ್ಪಗಳು ಇಲ್ಲಿವೆ. ಈ ರೀತಿಯ ಆತ್ಮಾರಾಮ ಶಿಲ್ಪ ಅನಂತಪುರ ಜಿಲ್ಲೆ ಸಿಂಗಲನಮಲದಲ್ಲಿದ್ದರೂ ತನ್ಮಯನಾಗಿ ಕುಳಿತು ಏಕತಾರಿ ನುಡಿಸುತ್ತಾ ಗಮಕ ಹಾಡುವ ಆಂಜನೇಯನ ಶಿಲ್ಪ ಅಲ್ಲಿಲ್ಲ’ ಎನ್ನುತ್ತಾರೆ ವಿದ್ವಾಂಸ ಬಿ.ಎನ್‌.ಶ್ರೀನಿವಾಸನ್‌.
‘ರಾಮಾಯಣವೆಂದರೆ ಕೇವಲ ರಾಮನ ಕಥೆಯಲ್ಲ. ಅಲ್ಲಿ ಮೌಲ್ಯವಿದೆ, ಆಧ್ಯಾತ್ಮವಿದೆ, ಪ್ರಕೃತಿಯಿದೆ, ಪರಿಸರಪ್ರೇಮ, ಜೀವನ ಪ್ರೀತಿ, ಆತ್ಮ ಪರಮಾತ್ಮನ ಅನುಸಂಧಾನ ಮುಂತಾದ ಅತ್ಯಗತ್ಯವಾದ ಸೂಕ್ಷ್ಮ ವಿಚಾರಗಳಿವೆ. ರಾಮನನ್ನು ಪೂಜಿಸುವ ನಾವೆಲ್ಲ ಈ ಬಗ್ಗೆಯೂ ತಿಳಿಯಬೇಕು. ನಮ್ಮಲ್ಲಿರುವ ಅಪರೂಪದ ಶಿಲ್ಪಗಳ ಬಗ್ಗೆಯೂ ಗೌರವಾದರ ಹೊಂದಿರಬೇಕು’ ಎಂದು ಅವರು ಹೇಳಿದರು.

ನಿಷ್ಠಾವಂತ ಅಧಿಕಾರಿಗಳನ್ನು ವರ್ಗಾವಣೆ ಮಾಡಬಾರದು

0

ಪೊಲೀಸ್ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಡಿ.ವೈ.ಎಸ್.ಪಿ.ಕೃಷ್ಣಮೂರ್ತಿ ಅವರನ್ನು ವರ್ಗಾವಣೆ ಮಾಡುತ್ತಿರುವ ಬಗ್ಗೆ ವದಂತಿ ಕೇಳಿಬರುತ್ತಿದ್ದು ಯಾವುದೇ ಕಾರಣಕ್ಕೂ ನಿಷ್ಠಾವಂತ ಅಧಿಕಾರಿಗಳನ್ನು ವರ್ಗಾವಣೆ ಮಾಡಬಾರದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್ ಒತ್ತಾಯಿಸಿದರು.
ಶಿಡ್ಲಘಟ್ಟದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೆಲವು ರಾಜಕೀಯ ಮುಖಂಡರುಗಳು ತಮ್ಮ ಅನುಕೂಲಕ್ಕೆ ತಕ್ಕಂತಹ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ಜಿಲ್ಲೆಯಿಂದ ನಿಷ್ಠಾವಂತ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಲು ಪ್ರಯತ್ನ ಮಾಡುತ್ತಿರುವುದಾಗಿ ಕೇಳಿಬರುತ್ತಿವೆ.
ಚಿಂತಾಮಣಿ ವಿಭಾಗದಲ್ಲಿ ಬಡವರ ಹಾಗೂ ದಲಿತರ ಪರ ಡಿ.ವೈ.ಎಸ್.ಪಿ.ಕೃಷ್ಣಮೂರ್ತಿ ಅವರು ನ್ಯಾಯಯುತವಾಗಿ ಕೆಲಸ ಮಾಡುತ್ತಿದ್ದು, ಅವರನ್ನು ವರ್ಗಾವಣೆ ಮಾಡಿಸಲು ರಾಜಕೀಯ ಷಡ್ಯಂತ್ರ ನಡೆಯುತ್ತಿದೆ. ಯಾವುದೇ ಕಾರಣಕ್ಕೆ ಅವರನ್ನು ವರ್ಗಾವಣೆ ಮಾಡಬಾರದು ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಗೃಹಸಚಿವರಿಗೂ ಮನವಿ ಸಲ್ಲಿಸುತ್ತೇವೆ ಎಂದರು.
ಡಿ.ವೈ.ಎಸ್.ಪಿ.ಕೃಷ್ಣಮೂರ್ತಿ ಅವರು ನೇಮಕವಾದ ನಂತರ ಜಿಲ್ಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯ ಕಡಿಮೆಯಾಗಿದೆ. ಎಲ್ಲಾ ತಾಲ್ಲೂಕುಗಳಲ್ಲಿ ಕುಂದು ಕೊರತೆ ಸಭೆಗಳನ್ನು ನಡೆಸಿ ಬಡವರು, ತೊಂದರೆಗೊಳಗಾದವರಿಗೆ ನ್ಯಾಯ ಒದಗಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ನಿಷ್ಠಾವಂತ ಅಧಿಕಾರಿಗಳಿಗೆ ಪ್ರೋತ್ಸಾಹ ನೀಡಬೇಕು. ಜನಪ್ರತಿನಿಧಿಗಳಿಗೆ ಏನಾದರೂ ತೊಂದರೆಯಿದ್ದರೆ ಮಾತಾಡುವ ಮೂಲಕ ಪರಿಹರಿಸಿಕೊಳ್ಳಬೇಕು. ಅನಗತ್ಯವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುವ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಜನರಿಗೆ ತೊಂದರೆ ಕೊಟ್ಟಲ್ಲಿ ಮುಂದಿನ ದಿನಗಳಲ್ಲಿ ದಲಿತ ಸಂಘರ್ಷ ಸಮಿತಿಯ ವತಿಯಿಂದ ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ದಡಂಘಟ್ಟ ತಿರುಮಲೇಶ್, ರಾಜ್ಯ ವಿಭಾಗ ಸಂಚಾಲಕ ಲಕ್ಷೀನಾರಾಯಣ, ದಿಬ್ಬೂರಹಳ್ಳಿ ನರಸಿಂಹಪ್ಪ, ಬೈರಸಂದ್ರ ದೇವರಾಜ್, ಜನಾರ್ಧನ್‌ಬಾಬು, ಗೊರ್ಲಪ್ಪ, ಸುಬ್ರಮಣಿ, ಮುನಾಂಜಿ ಹಾಜರಿದ್ದರು.

ಅಧಿಕಾರಿಗಳು ಸಮನ್ವಯದಿಂದ ಅಕ್ರಮ ಮರಳು, ಕಲ್ಲು ಗಣಿಗಾರಿಕೆ ನಿಲ್ಲಿಸಿ

0

ಟಾಸ್ಕ್ ಫೋರ್ಸ್ ಸಭೆಯಲ್ಲಿ ಉಪ ವಿಭಾಗಾಧಿಕಾರಿ ಪರಶಿವಮೂರ್ತಿ ಅಧಿಕಾರಿಗಳಿಗೆ ಸೂಚನೆ
ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಅಕ್ರಮ ಮರಳು, ಕಲ್ಲು ಗಣಿಗಾರಿಕೆಯನ್ನು ನಿಯಂತ್ರಿಸಬೇಕೆಂದು ಉಪ ವಿಭಾಗಾಕಾರಿ ಪರಶಿವಮೂರ್ತಿ ಸೂಚಿಸಿದರು.
ನಗರದ ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರ ನಡೆದ ಚಿಂತಾಮಣಿ ಉಪ ವಿಭಾಗದ ಟಾಸ್ಕ್ ಪೋರ್ಸ್ ಸಮಿತಿಯ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಅಕ್ರಮವಾಗಿ ಮರಳು ಹಾಗೂ ಕಲ್ಲು ಸಾಗಾಣಿಕೆ ನಡೆಯುತ್ತಿದೆ ಎಂದು ವ್ಯಾಪಕ ದೂರುಗಳು ಕೇಳಿ ಬರುತ್ತಿವೆ. ಪೊಲೀಸ್, ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯಾಚರಣೆ ನಡೆಸಿ ಅಕ್ರಮ ಚಟುವಟಿಕೆಗಳನ್ನು ನಡೆಸಬೇಕು ಎಂದು ತಾಕೀತು ಮಾಡಿದರು.
ಆಂಧ್ರದಿಂದ ದಿನವೂ ೨೫ಕ್ಕೂ ಹೆಚ್ಚು ಲಾರಿಗಳಲ್ಲಿ ಸಿಲ್ಕ್ ಸ್ಯಾಂಡ್ ರವಾನೆಯಾಗುತ್ತಿದ್ದು ಆ ಲಾರಿಗಳಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಸ್ಥಳೀಯವಾಗಿ ೨೫-೩೦ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸಂಚರಿಸಲು ಅನುಮತಿ ನೀಡಲಾಗಿದೆ. ಆದರೆ ಆ ಅನುಮತಿ ಪತ್ರದ ಹಿಂಭಾಗದಲ್ಲಿ ಮತ್ತೊಂದು ಅನುಮತಿ ಪಡೆದಂತ ಬರವಣಿಗೆ, ಮೊಹರು ಇದ್ದು ಈ ಬಗ್ಗೆ ಸ್ಪಷ್ಟನೆ ಕೋರಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರಿಗೆ ಪತ್ರ ಬರೆದರೂ ಇದುವರೆಗೂ ಅಲ್ಲಿಂದ ನಮಗೆ ಸ್ಪಷ್ಟನೆ ಸಿಗಲಿಲ್ಲ ಎಂದು ಚೇಳೂರು ಪೊಲೀಸ್ ಠಾಣೆಯ ಎಸ್‌ಐ ಆನಂದ್ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು.
ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಎಸ್ಪಿ ಚೈತ್ರರವರು, ಅಕ್ರಮ ಮರಳು ಕಲ್ಲು ಗಣಿಗಾರಿಕೆ ತಡೆಯೋದು ನಮ್ಮ ಕೆಲಸಾ ಮಾತ್ರಾನಾ. ನಿಮಗೂ ಜವಾಬ್ದಾರಿ ಇಲ್ಲವಾ ಎಂದು ಪ್ರಶ್ನಿಸಿದರು.
ಮರಳು, ಕಲ್ಲು ಗಣುಗಾರಿಕೆ ತಡೆಯೋದು ಬರೀ ಪೊಲೀಸರ ಕೆಲಸ ಅಂತ ಇತರೆ ಇಲಾಖೆ ಅಧಿಕಾರಿಗಳು ಸುಮ್ಮನಾದರೆ ಅಕ್ರಮವನ್ನು ತಡೆಯೋದು ಸಾಧ್ಯವಿಲ್ಲ. ಸಿಲ್ಕ್‌ಸ್ಯಾಂಡ್ ಹೊತ್ತು ಬರುವ ಎಲ್ಲ ಲಾರಿಗಳನ್ನು ನಾಳೆಯಿಂದಲೆ ತಡೆಯಿರಿ ಎಂದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಅಧಿಕೃತವಾಗಿ ಮಾಹಿತಿ ನೀಡಿ ಅವರು ಆ ಲಾರಿಗಳಿಗೆ ನೀಡಿರುವ ಪರವಾನಗಿಯನ್ನು ಪರಿಶೀಲಿಸಿ ಆಂದ್ರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಸ್ಪಷ್ಟನೆ ಪಡೆದುಕೊಳ್ಳಲಿ. ಆ ನಂತರ ಮುಂದಿನ ಕ್ರಮ ಜರುಗಿಸಿ ಎಂದು ಅವರು ಸೂಚಿಸಿದರು.
ಎಂ ಸ್ಯಾಂಡ್ ಘಟಕಗಳನ್ನು ಗುರ್ತಿಸುತ್ತಿದ್ದು ಕಟ್ಟಡಗಳನ್ನು ಕಟ್ಟಿಕೊಳ್ಳಲು ಎಂ ಸ್ಯಾಂಡ್‌ನ್ನು ಬಳುಸವಂತೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿ ಎಂದು ಸೂಚಿಸಿದರು.
ಡಿವೈಎಸ್ಪಿ ಕೃಷ್ಣಮೂರ್ತಿ, ತಹಸೀಲ್ದಾರ್ ಎಸ್.ಅಜಿತ್ ಕುಮಾರ್ ರೈ, ಚಿಂತಾಮಣಿ ತಹಶೀಲ್ದಾರ್ ಗಂಗುಲಪ್ಪ, ಶಿಡ್ಲಘಟ್ಟ ಹಾಗೂ ಚಿಂತಾಮಣಿ ತಾಲ್ಲೂಕಿನ ಕಂದಾಯ, ಪೊಲೀಸ್ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಗ್ರಾಮೀಣ ಜೀವನಾಧಾರಗಳ ಅಭಿವೃದ್ಧಿ ಕುರಿತು- ಜಾಗೃತಿ ಕಾರ್ಯಕ್ರಮ

0

ಹಿಂದಿನ ಕಾಲಕ್ಕೂ ಈಗಿನ ಕಾಲಕ್ಕೂ ಮಹಿಳೆಯರ ಸ್ಥಿತಿಗತಿ ತುಂಬಾ ಬದಲಾಗಿದೆ. ಈಗಿನ ಮಹಿಳೆಯರು ವಿದ್ಯಾವಂತರು ಮತ್ತು ಪುರುಷರಿಗೆ ಸಮನಾಗಿ ಹಲವು ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವರು. ಗ್ರಾಮಗಳಲ್ಲೂ ಹೆಣ್ಣುಮಕ್ಕಳು ಆರ್ಥಿಕವಾಗಿ ಸಬಲರಾಗುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಗಂಜಿಗುಂಟೆ ಗ್ರಾಮ ಪಂಚಾಯಿತಿ ಸದಸ್ಯ ನರಸಿಂಹಮೂರ್ತಿ ತಿಳಿಸಿದರು.
ತಾಲ್ಲೂಕಿನ ಗಂಜಿಗುಂಟೆಯ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದ ಛತ್ರದಲ್ಲಿ ಎಫ್‌.ಇ.ಎಸ್‌ ಸಂಸ್ಥೆ ಈಚೆಗೆ ಆಯೋಜಿಸಿದ್ದ ಅಂತರಾಷ್ಟ್ರಿಯ ಮಹಿಳಾ ದಿನಾಚರಣೆಯಡಿಯಲ್ಲಿ ನೈಸರ್ಗಿಕ ಸಂಪನ್ಮೂಲಗಳ ಅಭಿವೃದ್ಧಿ ಮತ್ತು ನಿರ್ವಹಣೆ ಮೂಲಕ ಗ್ರಾಮೀಣ ಜೀವನಾಧಾರಗಳ ಅಭಿವೃದ್ಧಿ ಕುರಿತು- ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಿಡ್ಲಘಟ್ಟ ಮತ್ತು ಚಿಂತಾಮಣಿ ತಾಲ್ಲೂಕಿನ ಗಂಜಿಗುಂಟೆ, ಕುಂದಲಗುರ್ಕಿ, ಶೆಟ್ಟಿಹಳ್ಳಿ ಮತ್ತು ಕೋಟಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವಂತಹ ೨೧ ಹಳ್ಳಿಯಲ್ಲಿರುವ ೩೩ ಸ್ವ-ಸಹಾಯ ಸಂಘಗಳಿಂದ ಪ್ರತಿನಿಧಿಗಳು, ಗ್ರಾಮ ಅಭಿವೃದ್ಧಿ ಸಮಿತಿ ಪ್ರತಿನಿಧಿಗಳು, ತಾಲ್ಲೂಕು ಪಂಚಾಯಿತಿ ಸದಸ್ಯರು, ಮಹಿಳಾ ಒಕ್ಕೂಟದ ಸದಸ್ಯರು ಮತ್ತು ಸಮೂದಾಯ ಸಂಪನ್ಮೂಲ ವ್ಯಕ್ತಿಗಳು ಸೇರಿದಂತೆ ಒಟ್ಟು ೩೦೦ ಜನರು ಈ ಒಂದು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಹಿಳಾ ಒಕ್ಕೂಟದ ಸದಸ್ಯೆ ಲಕ್ಷ್ಮಿದೇವಮ್ಮ ಮಾತನಾಡಿ ಮಹಿಳೆಯರ ಹಕ್ಕುಗಳ ಬಗ್ಗೆ ವಿಶ್ಲೇಶಿಸಿದರು.
ಗ್ರಾಮೀಣ ಕೂಲಿ ಕಾರ್ಮಿಕರ ಸಂಚಾಲಕ ಶಶಿರಾಜ ಕೃಷಿಯಲ್ಲಿ ಮಹಿಳೆಯರ ಪಾತ್ರ ಮತ್ತು ಮಣ್ಣಿನ ಮಹತ್ವದ ಬಗ್ಗೆ ಹಾಗೂ ಮಣ್ಣಿನ ಅಭಿವೃದ್ಧಿ ರೈತರ ಜೀವನದಲ್ಲಿ ಸಂತಸ ತರುತ್ತದೆಯೆಂದು ಕುಲಂಕುಶವಾಗಿ ತಿಳಿಸಿದರು. ಸಂಸ್ಥೆಯ ತರಬೇತಿದಾರ ಪಾರ್ಥ ಮಹಿಳೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಮಧ್ಯೆ ಇರುವ ಸಂಬಂಧದ ಬಗ್ಗೆ ತಿಳಿಸಿದರು. ಗಂಜಿಗುಂಟೆ ಕೆನರಾ ಬ್ಯಾಂಕಿನ ವ್ಯವಸ್ಥಾಪಕ ರವಿಂದ್ರನಾಥ ನಾಯ್ಕ ಬ್ಯಾಂಕಿನಿಂದ ಸಿಗುವಂತಹ ಸೌಲಭ್ಯಗಳು ಮತ್ತು ವಿಮೆ ಬಗ್ಗೆ ವಿವರವಾಗಿ ತಿಳಿಸಿ, ಸ್ವ-ಸಹಾಯ ಸಂಘಗಳು ಮುಂದೆ ಬರಲು ಪ್ರೇರೇಪಿಸಿದರು.
ಎಫ್‌.ಇ.ಎಸ್‌ ಸಂಸ್ಥೆಯ ಹಿರಿಯ ಯೋಜನಾಧಿಕಾರಿ ಧನಶೇಕರನ್‌, ಹಿರಿಯ ಯೋಜನಾಧಿಕಾರಿ ನಿಖತ್ ಪರ್ವಿನ್, ಸಿಬ್ಬಂದಿಗಳಾದ ಸೌಭಾಗ್ಯ, ಗೋಪಿ, ಲೀಲಾವತಿ ಹಾಜರಿದ್ದರು.

ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲ್ಲೂಕು ಸದಸ್ಯರಿಂದ ಮನವಿ ಸಲ್ಲಿಕೆ

0

ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಟಿ.ಜಿ.ಟಿ ಶಿಕ್ಷಕರಿಗೆ ವಿಶೇಷ ಭಡ್ತಿ ನೀಡಬೇಕೆಂದು ಶುಕ್ರವಾರ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲ್ಲೂಕು ಸದಸ್ಯರು ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ತಾಲ್ಲೂಕಿನ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಟಿ.ಜಿ.ಟಿ ಶಿಕ್ಷಕರಿಗೆ ಬಡ್ತಿಯನ್ನು ಅರ್ಹವಿರುವವರಿಗೆ ಮತ್ತು ಒಂಭತ್ತು ತಿಂಗಳ ಬಾಕಿವೇತನವನ್ನು ಮಾರ್ಚಿ 30 ರೊಳಗೆ ಮಾಡಿಸಿಕೊಡಬೇಕು. ನೇಮಕಾತಿ ಸಂದರ್ಭದಲ್ಲಿ ಪ್ರೌಢಶಾಲಾ ಸಹಶಿಕ್ಷಕ ವೃಂದ 2 ಎಂದೇ ನೇಮಕವಾಗಿದ್ದರೂ ಎಚ್‌ಆರ್‌ಎಂಎಸ್‌ನಲ್ಲಿ ಟಿಜಿಟಿ ಎಂದು ನಮೂದಾಗಿದ್ದು, ಪದನಾಮ ಬದಲಾವಣೆ ಮಾಡಿಕೊಡಬೇಕೆಂದು ಕೋರಿದರು.
ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಬೈರಾರೆಡ್ಡಿ, ಕಾರ್ಯದರ್ಶಿ ಎಲ್‌.ವಿ.ವೆಂಕಟರೆಡ್ಡಿ, ಖಜಾಂಚಿ ಎಂ.ಇಂದಿರಾ, ಎಚ್‌.ಎಸ್‌.ರುದ್ರೇಶ್‌ಮೂರ್ತಿ, ನವೀನ್‌ಕುಮಾರ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸರ್ಕಾರಿ ಎನ್.ಪಿ.ಎಸ್ ನೌಕರರ ಸಂಘದ ಸದಸ್ಯರಿಂದ ಮನವಿ ಸಲ್ಲಿಕೆ

0

ಎನ್.ಪಿ.ಎಸ್ ನೌಕರರ ಸರ್ಕಾರಿ ಬ್ಯಾಕ್‌ಲಾಗ್ ವಂತಿಗೆಗೆ ಸಂಬಂಧಿಸಿದಂತೆ ಎನ್.ಪಿ.ಎಸ್ ಘಟಕಕ್ಕೆ ಮಾಹಿತಿ ಸಲ್ಲಿಸಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಗೊಳಿಸಬೇಕೆಂದು ಕೋರಿ ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್ ನೌಕರರ ಸಂಘದ ಸದಸ್ಯರು ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ನಗರದ ಚಿಂತಾಮಣಿ ರಸ್ತೆಯಲ್ಲಿರುವ ಉಲ್ಲೂರು ಪೇಟೆ ಶಾಲೆಯಲ್ಲಿ ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿದ ಅವರು, 2006 ರ ಏಪ್ರಿಲ್‌ 1 ರಂದು ಅಥವಾ ನಂತರ ಸರ್ಕಾರಿ ಸೇವೆಗೆ ಸೇರಿದ ಸರ್ಕಾರಿ ನೌಕರರಿಗೆ ಎನ್.ಪಿ.ಎಸ್ ಯೋಜನೆಯನ್ನು ಕಡ್ಡಾಯ ಮಾಡಲಾಗಿದೆ. ಆದರೆ ವೇತನ ಬಟವಾಡೆ ಹಂತದಲ್ಲಿ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಟಾನಗೊಳಿಸಿಲ್ಲ. ಬ್ಯಾಕ್‌ಲಾಗ್ ಪಾವತಿಗೆ ಬಾಕಿ ಇರುವ ನೌಕರರ ಪಟ್ಟಿ ಹಾಗೂ ಇನ್ನಿತರೆ ಎನ್.ಪಿ.ಎಸ್.ಗೆ ಸಂಭಂದಿಸಿದಂತೆ ಇರುವ ಅಡಚಣೆಗಳನ್ನು ನಿವಾರಿಸಬೇಕೆಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಅವರು ನೌಕರರ ಭವಿಷ್ಯದ ವಿಷಯವಾಗಿ ಸರ್ಕಾರ ಎನ್.ಪಿ.ಎಸ್ ಯೋಜನೆ ಜಾರಿ ಮಾಡಿದ್ದು, ಯಾವುದೇ ರೀತಿಯ ಸಹಾಯ ಮಾಡಲು ಬೇಕಾದರೂ ಸಿದ್ದ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್ ನೌಕರರ ಸಂಘದ ಅಧ್ಯಕ್ಷ ಗಜೇಂದ್ರ, ಸಿ.ಎಂ,ಮುನಿರಾಜು, ಬಿ.ವಿ.ಶ್ರೀರಾಮಯ್ಯ, ತನ್ವೀರ್ ಅಹಮದ್‌, ವೀಣಾ, ಪಿಳ್ಳಣ್ಣ, ಎಸ್,ಎ.ನರಸರಾಜು, ಸುದರ್ಶನ್, ಅರುಣ್, ಜಗದೀಶ್, ಜಿ.ಕೆ.ಸುಧಾ, ಜನಾರ್ದನ್, ಸುರೇಶ್ ಚಂದ್ರಿಕಾ, ಚಂದ್ರಕಲಾ ಮತ್ತಿತರರು ಹಾಜರಿದ್ದರು.

ಉಚಿತ ಆರೋಗ್ಯ ತಪಾಸಣಾ ಶಿಬಿರ

0

ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ತಪಾಸಣೆ ಮಾಡಿಸಲು ಹಲವಾರು ಕಾರಣಗಳಿಂದ ಜನರು ಹಿಂಜರಿಯುವುದರಿಂದ ಉಚಿತವಾಗಿ ವಿವಿಧ ತಪಾಸಣೆಯನ್ನು ನಡೆಸುತ್ತಿರುವುದಾಗಿ ವಿ ಕೇರ್ಸ್ ಯು ಫೌಂಡೇಷನ್‌ ಸಂಸ್ಥೆಯ ಮುಜಾಮಿಲ್‌ ಅಹಮದ್‌ ತಿಳಿಸಿದರು.
ತಾಲ್ಲೂಕಿನ ಈ ತಿಮ್ಮಸಂದ್ರ ಗ್ರಾಮದ ಜಾಮಿಯ ಮಸೀದಿ ಶಾದಿಮಹಲ್‌ನಲ್ಲಿ ಗುರುವಾರ ವಿ ಕೇರ್ಸ್ ಯು ಫೌಂಡೇಷನ್‌ ವತಿಯಿಂದ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹೃದಯರೋಗ, ನರರೋಗ, ಮೂತ್ರಪಿಂಡದ ಕಲ್ಲಿನ ಸಮಸ್ಯೆಯಿರುವವರಿಗಾಗಿ ಉಚಿತವಾಗಿ ಚಿಕಿತ್ಸೆ ನೀಡಲು ತಜ್ಞ ವೈದ್ಯರು ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಿಂದ ಆಗಮಿಸಿದ್ದಾರೆ. ಬಿ.ಪಿ. ಇಸಿಜಿ, ಎಕೋ ಸ್ಕಾನಿಂಗ್‌ ಉಚಿತವಾಗಿ ಮಾಡುತ್ತಿದ್ದು ಅದರ ಸದುಪಯೋಗವನ್ನು ಗ್ರಾಮಸ್ಥರು ಮಾಡಿಕೊಳ್ಳಲು ಮನವಿ ಮಾಡಿದರು.
ವಿ ಕೇರ್ಸ್ ಯು ಫೌಂಡೇಷನ್‌ ಸಂಸ್ಥೆಯ ಜಾವೀದ್‌, ಆನಂದ್‌, ನಿಖಿಲ್‌, ಫಣೀಂದ್ರ ಮತ್ತಿತರರು ಹಾಜರಿದ್ದರು.

ದೇಶಪ್ರೇಮ ಸಾರುವ ದೊಡ್ಡದಾಸೇನಹಳ್ಳಿಯ ಹಸಿರು ಶಾಲೆ

0

‘ದೇಶದ ಹಿರಿಮೆಯನ್ನು ಪ್ರತಿಬಿಂಬಿಸುವಂತೆ ಮತ್ತು ದೇಶಪ್ರೇಮ ಮೂಡಿಸಲು ಇಲ್ಲಿ ಮಕ್ಕಳು ಭಾರತ ಮಾತೆಯ ಮಡಿಲಲ್ಲಿ ವಿದ್ಯಾಭ್ಯಾಸ ಮಾಡುವಂತೆ ಪರಿಸರವನ್ನು ನಿರ್ಮಿಸಲಾಗಿದೆ. ಮಕ್ಕಳ ಪರಿಸರ ಪ್ರಜ್ಞೆ, ಶಿಕ್ಷಕರ ಮತ್ತು ಗ್ರಾಮಸ್ಥರ ಸಹಕಾರ ಇಲ್ಲಿ ಕಂಡು ಬಂದಿದೆ. ರೈತರ ಬಂಧು ಎಂದು ಕರೆಯಲ್ಪಡುವ ಎರೆಹುಳುಗಳಿಂದ ಗೊಬ್ಬರ ತಯಾರಿಸಿ ಗಿಡಗಳಿಗೆ ಉಪಯೋಗಿಸುತ್ತಿದ್ದಾರೆ. ಮಕ್ಕಳಲ್ಲಿ ಪರಿಸರದ ಬಗ್ಗೆ ಕಾಳಜಿ, ಶಿಸ್ತು ಎದ್ದು ಕಾಣುತ್ತದೆ. ವಿಶಾಲವಾದ ಶಾಲಾ ಆವರಣದಲ್ಲಿ ಪ್ರತಿಯೊಂದು ಮಗುವೂ ಗಿಡಗಳ ಪೋಷಣೆಯನ್ನು ಮಾಡುತ್ತಿದ್ದಾರೆ’ ಎಂದು ದೊಡ್ಡದಾಸೇನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬಗ್ಗೆ ಪರಿಸರ ಮಿತ್ರ ‘ಹಳದಿ ಶಾಲೆ ಪ್ರಶಸ್ತಿ’ ನೀಡಿರುವ ಸಂದರ್ಭದಲ್ಲಿ ಹೊರತಂದ ಕಿರುಹೊತ್ತಿಗೆಯಲ್ಲಿ ವಿವರಿಸಿದ್ದಾರೆ.
1958ರಲ್ಲಿ ಪ್ರಾರಂಭವಾದ ದೊಡ್ಡದಾಸೇನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈಗ ಒಂದರಿಂದ ಐದರವರೆಗೆ ವ್ಯಾಸಂಗ ಮಾಡುತ್ತಿರುವ 20 ವಿದ್ಯಾರ್ಥಿಗಳಿದ್ದಾರೆ. ಮುಖ್ಯ ಶಿಕ್ಷಕ ಕೆ.ಎನ್‌.ಶ್ರೀಕಾಂತ್‌ ಹನ್ನೊಂದು ವರ್ಷಗಳಿಂದ ಇಲ್ಲಿದ್ದರೆ, ಶಿಕ್ಷಕ ಎ.ಆರ್‌.ಮಹೇಶ್‌ ಎರಡು ವರ್ಷಗಳಿಂದ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶಿಡ್ಲಘಟ್ಟ ತಾಲ್ಲೂಕಿನ ದೊಡ್ಡದಾಸೇನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎರೆಹುಳು ಗೊಬ್ಬರ ತಯಾರಿಕೆಯಲ್ಲಿ ತೊಡಗಿರವ ಮಕ್ಕಳು ಮತ್ತು ಶಿಕ್ಷಕರು

ಶಿಕ್ಷಕರ ಮತ್ತು ಗ್ರಾಮಸ್ಥರ ಪರಿಸರ ಕಾಳಜಿಯಿಂದ ಈ ಶಾಲೆಯ ಒಂದು ಎಕರೆ ಆವರಣದಲ್ಲಿ ನೇರಳೆ, ವಿವಿಧ ರೀತಿಯ ಮಾವು, ಗಸಗಸೆ, ಹಲಸು, ಹೊಂಗೆ, ಅಶೋಕ, ಸಿಲ್ವರ್‌, ಬೇವು, ಸಂಪಿಗೆ, ನೆಲ್ಲಿ, ನಾನಾ ರೀತಿಯ ಹೂಗಿಡಗಳು ನಳನಳಿಸುತ್ತಿವೆ. ಬೇಸಿಗೆಯ ನೀರಿನ ಅಭಾವವಿದ್ದರೂ ಹಣ ತೆತ್ತು ತಿಂಗಳಿಗೆ ಮೂರು ಟ್ಯಾಂಕರ್‌ ನೀರನ್ನು ತಂದು ಗಿಡಗಳಿಗೆ ಉಣಿಸುತ್ತಿದ್ದಾರೆ. ಮಣ್ಣು ಪರೀಕ್ಷೆಯನ್ನು ಮಾಡಿಸಿ ಅಗತ್ಯ ಪೌಷ್ಠಿಕಾಂಶಗಳನ್ನು ನೀಡುವ ಇವರು ಬಿಸಿಯೂಟಕ್ಕೆ ಬೇಕಾದ ತರಕಾರಿಯನ್ನು ಬೆಳೆದುಕೊಳ್ಳುತ್ತಾರೆ.
ಎರೆಹುಳುಗಳನ್ನು ತಂದು ಗಿಡಗಳ ಉದುರಿದ ಎಲೆಗಳು, ಸಗಣಿ ಮುಂತಾದವುಗಳನ್ನು ಹಾಕಿ ಉತ್ತಮ ಎರೆಹುಳು ಗೊಬ್ಬರವನ್ನು ತಯಾರಿಸುವ ಇವರು ಶಾಲಾ ಆವರಣದ ಗಿಡಗಳಿಗೆ ಈ ಗೊಬ್ಬರವನ್ನೇ ಬಳಸುತ್ತಿದ್ದಾರೆ. ಈಗ ನಮ್ಮಲ್ಲಿ ಹುಡುಕಿದರೆ ಸುಮಾರು ಐದು ಮಕ್ಕರಿಯಷ್ಟು ಎರೆಹುಳುಗಳೇ ಸಿಗುತ್ತವೆ ಎನ್ನುವ ಶಿಕ್ಷಕ ಶ್ರೀಕಾಂತ್‌, ರೈತ ಮಕ್ಕಳು ಇವನ್ನೆಲ್ಲಾ ಬಹು ಬೇಗ ಕಲಿಯುತ್ತಾರೆ. ಅವರಿಗೆ ಒಳ್ಳೆಯದು ಮತ್ತು ಕೆಟ್ಟದ್ದರ ನಡುವೆ ವ್ಯತ್ಯಾಸ ತಿಳಿಸಿಕೊಡಬೇಕಷ್ಟೆ ಎನ್ನುತ್ತಾರೆ.
‘ನಮ್ಮ ಶಾಲೆಯ ಮಕ್ಕಳಿಗೆ ಅವಿರತ ಟ್ರಸ್ಟ್‌ನವರು ಪ್ರತಿ ವರ್ಷ ನೋಟ್‌ ಪುಸ್ತಕಗಳನ್ನು ಕೊಡುತ್ತಾರೆ. ಈ ಬಾರಿ ಒಂದು ಕಂಪ್ಯೂಟರ್‌ ಕೊಟ್ಟಿದ್ದಾರೆ. ನನ್ನ ಪ್ರೌಢಶಾಲೆಯ ಗೆಳೆಯರು ಉನ್ನತ ಹುದ್ದೆಗಳಲ್ಲಿದ್ದು, ಅವರು ನಮ್ಮ ಶಾಲೆಗೆ ಒಂದು ಕಂಪ್ಯೂಟರ್‌ ಮತ್ತು ನೀರು ಶುದ್ಧೀಕರಣ ಯಂತ್ರವನ್ನು ಕೊಟ್ಟಿದ್ದಾರೆ. ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ಹಳೆ ವಿದ್ಯಾರ್ಥಿಗಳು ರಾಷ್ಟ್ರೀಯ ಹಬ್ಬಗಳನ್ನು ಆಚರಿಸಲು ಸಾಕಷ್ಟು ಆರ್ಥಕವಾಗಿ ನೆರವಾಗುತ್ತಾರೆ. ಶಾಲಾಭಿವೃದ್ಧಿ ಅಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ಎಲ್ಲರಿಗೂ ಶಾಲೆಯ ಬಗ್ಗೆ ತುಂಬಾ ಕಾಳಜಿಯಿದೆ. ಮಕ್ಕಳ ಸಂಖ್ಯೆ ಹೆಚ್ಚು ಮಾಡಲು ನಾವೂ ಶ್ರಮಿಸುತ್ತಿದ್ದೇವೆ. ಪರಿಸರ ಮಿತ್ರ ‘ಹಳದಿ ಶಾಲೆ ಪ್ರಶಸ್ತಿ’ ನಮ್ಮ ಶಾಲೆಗೆ ನೀಡಿರುವುದು ನಮಗೆ ಬೆನ್ನುತಟ್ಟಿ ಪ್ರೋತ್ಸಾಹಿಸಿದಂತಿದೆ’ ಎಂದು ಅವರು ಹೇಳಿದರು.

ತಾಲ್ಲೂಕಿನ ನಾಲ್ಕು ಶಾಲೆಗಳಿಗೆ ಪರಿಸರ ಪ್ರಶಸ್ತಿ

0

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ವಿಜ್ಞಾನ ಪರಿಷತ್ತಿನ ಸಹಯೋಗದಲ್ಲಿ ಪ್ರತಿವರ್ಷ ನೀಡುವ ಪರಿಸರ ಮಿತ್ರ ಪ್ರಶಸ್ತಿಗೆ ತಾಲ್ಲೂಕಿನ ಒಂದು ಸರ್ಕಾರಿ ಪ್ರೌಢಶಾಲೆ ಮತ್ತು ಮೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಆಯ್ಕೆಯಾಗಿವೆ.
ತಾಲ್ಲೂಕಿನ ಮಳಮಾಚನಹಳ್ಳಿಯ ಸರ್ಕಾರಿ ಪ್ರೌಢಶಾಲೆ ‘ಹಸಿರು ಶಾಲೆ ಪ್ರಶಸ್ತಿ’ಗೆ ಆಯ್ಕೆಯಾಗಿದ್ದರೆ, ತಾಲ್ಲೂಕಿನ ದೊಡ್ಡದಾಸೇನಹಳ್ಳಿ, ಹುಜಗೂರು ಮತ್ತು ಸದ್ದಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ‘ಹಳದಿ ಶಾಲೆ ಪ್ರಶಸ್ತಿ’ಗೆ ಆಯ್ಕೆಯಾಗಿವೆ.
ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು, ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವ ಪರಿಸರ ಶಿಕ್ಷಣದ ಪ್ರಯತ್ನಕ್ಕೆ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಇದರ ಮೂಲ ಉದ್ದೇಶ ಪರಿಸರ ಪೂರಕ ಚಟುವಟಿಕೆಗಳನ್ನು ಪ್ರೇರೇಪಿಸಿ ಶಾಲೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದಾಗಿದೆ. ‘ಹಸಿರು ಶಾಲೆ ಪ್ರಶಸ್ತಿ’ ಪಡೆದ ಶಾಲೆಗೆ ಐದು ಸಾವಿರ ರೂ ನಗದು, ಪ್ರಮಾಣ ಪತ್ರ ಮತ್ತು ಪಾರಿತೋಷಕ ನೀಡಿದರೆ, ‘ಹಳದಿ ಶಾಲೆ ಪ್ರಶಸ್ತಿ’ ಪಡೆದ ಶಾಲೆಗೆ ನಾಲ್ಕು ಸಾವಿರ ರೂ ನಗದು, ಪ್ರಮಾಣ ಪತ್ರ ಮತ್ತು ಪಾರಿತೋಷಕವನ್ನು ನೀಡಲಾಗಿದೆ.

ರೈತ ಸಂಘದ ಸದಸ್ಯರ ಪ್ರತಿಭಟನೆ

0

ರೈತರ ಸಾಲ ಮನ್ನಾ ಮಾಡದೆ ರೈತ ವಿರೋಧಿ ಧೋರಣೆ ತೋರುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಧೋರಣೆಯನ್ನು ಬದಲಿಸಿಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ರೈತ ಸಂಘದಿಂದ ರಾಜ್ಯಾದ್ಯಂತ ಬೃಹತ್‌ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಎಚ್ಚರಿಕೆ ನೀಡಿದರು.
ನಗರದಲ್ಲಿ ರೈತ ಸಂಘದ ವತಿಯಿಂದ ಗುರುವಾರ ಬೈಕ್‌ ರ್ಯಾಿಲಿ ನಡೆಸಿ, ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟನಾ ಧರಣಿ ನಡೆಸಿ ಅವರು ಮಾತನಾಡಿದರು.
ಕಳೆದ ಆರೇಳು ವರ್ಷಗಳಿಂದ ಸತತ ಬರಗಾಲದಿಂದ ರೈತರು ತತ್ತರಿಸಿ ಹೋಗಿದ್ದಾರೆ. ಅಂತರ್ಜಲ 1500 ರಿಂದ 2000 ಅಡಿಗಳ ಆಳಕ್ಕೆ ಇಳಿದಿದೆ. ನಮ್ಮ ಬಯಲು ಸೀಮೆಯಲ್ಲಿ ಹೈನುಗಾರಿಕೆ, ಹಣ್ಣಿನ ಬೆಳೆಗಳು, ತರಕಾರಿಗಳು ಮತ್ತು ರೇಷ್ಮೆ ಬೆಳೆಯನ್ನು ನಂಬಿದ್ದು, ಕೊಳವೆ ಬಾವಿಗೆ ಹಾಗೂ ಬೆಳೆ ನಿರ್ವಹಣೆಗೆ ರೈತರು ಸಾಕಷ್ಟು ಸಾಲವನ್ನು ಬ್ಯಾಂಕುಗಳಲ್ಲಿ ಮಾಡಿದ್ದಾರೆ. ನೀರಿನ ಅಭಾವದಿಂದ ಈ ಸಾಲಗಳನ್ನು ತೀರಿಸಲಾಗದೆ, ರೈತರು ಕಂಗಾಲಾಗಿದ್ದಾರೆ. ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ತಹಶೀಲ್ದಾರ್‌ ಅಜಿತ್‌ಕುಮಾರ್‌ ರೈ ಅವರಿಗೆ ರೈತರು ಮನವಿಯನ್ನು ಸಲ್ಲಿಸಿದರು.
ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್‌, ಉಪಾಧ್ಯಕ್ಷ ಮುನಿನಂಜಪ್ಪ, ಮಳಮಾಚನಹಳ್ಳಿ ದೇವರಾಜ್‌, ಕೆ.ವಿ.ವೇಣುಗೋಪಾಲ್‌, ರಾಮಕೃಷ್ಣಪ್ಪ ಮತ್ತಿತರರು ಹಾಜರಿದ್ದರು.

ಯುವಕರು ಉದಾರ ಮನಸ್ಸಿನಿಂದ ರಕ್ತದಾನ ಮಾಡಿ

0

ಮಾನವನ ರಕ್ತ ಅಮೂಲ್ಯವಾದುದು. ಇದು ಮನುಷ್ಯನ ಜೀವ ಉಳಿಸುತ್ತದೆ, ರಕ್ತದಾನಕ್ಕೆ ಪರ್ಯಾಯ ವಸ್ತುವೆಂದರೆ ರಕ್ತ ಒಂದೇ ಎಂದು ತಹಶೀಲ್ದಾರ್‌ ಅಜಿತ್‌ ಕುಮಾರ್‌ ರೈ ತಿಳಿಸಿದರು.
ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಯುವ ರೆಡ್‌ಕ್ರಾಸ್‌ ಘಟಕದ ವತಿಯಿಂದ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನಲ್ಲಿ ವಿಜ್ಞಾನದ ಪ್ರಗತಿ ಸಾಕಷ್ಟು ನಡೆದರೂ ರಕ್ತವನ್ನು ಉತ್ಪಾದಿಸಲು ಸಾಧ್ಯವಾಗಿಲ್ಲ. ಹೆಣ್ಣುಮಕ್ಕಳ ಪ್ರಸವ ಸಂದರ್ಭದಲ್ಲಿ ರಕ್ತದ ಅಗತ್ಯವಿರುತ್ತದೆ. ಆದ ಕಾರಣ ಯುವಕರು ಉದಾರ ಮನಸ್ಸಿನಿಂದ ರಕ್ತದಾನ ಮಾಡಿ ಜೀವ ಉಳಿಸುವ ಪುಣ್ಯದ ಕೆಲಸದಲ್ಲಿ ಮುಂದೆ ಬರಬೇಕು ಎಂದು ಹೇಳಿದರು.

ಶಿಡ್ಲಘಟ್ಟದ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಯುವ ರೆಡ್‌ಕ್ರಾಸ್‌ ಘಟಕದ ವತಿಯಿಂದ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ರಕ್ತದಾನಿಗಳಿಗೆ ತಹಶೀಲ್ದಾರ್‌ ಅಜಿತ್‌ ಕುಮಾರ್‌ ರೈ ಪ್ರಮಾಣ ಪತ್ರವನ್ನು ನೀಡಿದರು. ಭಾರತೀಯ ರೆಡ್‌ಕ್ರಾಸ್‌ ಸೊಸೈಟಿ ತಾಲ್ಲೂಕು ಕಾರ್ಯದರ್ಶಿ ಎನ್‌.ಕೆ.ಗುರುರಾಜರಾವ್‌, ಪ್ರಾಂಶುಪಾಲ ಚಂದ್ರಾನಾಯಕ್‌ ಹಾಜರಿದ್ದರು.

ಭಾರತೀಯ ರೆಡ್‌ಕ್ರಾಸ್‌ ಸೊಸೈಟಿ ತಾಲ್ಲೂಕು ಕಾರ್ಯದರ್ಶಿ ಎನ್‌.ಕೆ.ಗುರುರಾಜರಾವ್‌ ಮಾತನಾಡಿ, ಶಿಡ್ಲಘಟ್ಟ ತಾಲ್ಲೂಕು ರಕ್ತದಾನದಲ್ಲಿ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ರಕ್ತದಾನದ ಶಿಬಿರಗಳಿಂದಾಗಿ ಜಿಲ್ಲೆಯಲ್ಲಿ ಮಹಿಳಾ ರೋಗಿಗಳಿಗೆ ಅದರಲ್ಲೂ ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಅನುಕೂಲವಾಗಿದೆ. ಯುವಕರು ರಕ್ತದಾನ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಸರ್ಕಾರಿ ಆಸ್ಪತ್ರೆಯ ಏಡ್ಸ್‌ ಚಿಕಿತ್ಸಾ ವಿಭಾಗದ ಗಂಗಾಧರಯ್ಯ ಮಾತನಾಡಿ, ತಾಲ್ಲೂಕಿನಲ್ಲಿ 400 ಏಡ್ಸ್‌ ರೋಗಿಗಳಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ 175 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಏಡ್ಸ್‌ ರೋಗದ ಬಗ್ಗೆ ತಿಳುವಳಿಕೆ ಮತ್ತು ರೋಗಿಗಳಿಗೆ ಮಾರ್ಗದರ್ಶನ ಅಗತ್ಯವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಏಡ್ಸ್‌ ತಡೆಗಟ್ಟುವುದು, ಜಾಗೃತಿ ಮತ್ತು ಸೋಂಕಿತರಿಗೆ ಆರೈಕೆ ಬೆಂಬಲ ನೀಡುವುದರ ಬಗ್ಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಏಡ್ಸ್‌ ತಡೆಗಟ್ಟುವಲ್ಲಿ ಯುವಜನರ ಪಾತ್ರ ಎಂಬ ವಿಷಯವಾಗಿ ನಡೆದ ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದ ದೇವರಾಜ್‌, ಸೌಭಾಗ್ಯ ಮತ್ತು ರಷ್ಮಿ ಅವರಿಗೆ ಬಹುಮಾನಗಳನ್ನು ನೀಡಲಾಯಿತು.
ವೈದ್ಯಾಧಿಕಾರಿಗಳಾದ ಡಾ.ನಿರಂಜನ್‌, ಡಾ.ವಿಜಯಕುಮಾರ್‌, ಪ್ರಾಂಶುಪಾಲ ಚಂದ್ರಾನಾಯಕ್‌, ಪ್ರಾಧ್ಯಾಪಕರಾದ ರಾಮಚಂದ್ರಪ್ಪ, ಛಾಯಣ್ಣ, ಉಮೇಶ್‌ರೆಡ್ಡಿ, ಶ್ರೀಹರಿ ಹಾಜರಿದ್ದರು.

ಗ್ರಾಹಕರಲ್ಲಿ ಜಾಗೃತಿಯನ್ನು ಮೂಡಿಸಬೇಕಿದೆ

0

ಗ್ರಾಹಕನನ್ನು ಮಾರುಕಟ್ಟೆಯ ‘ರಾಜ’ನೆಂದು ಪರಿಗಣಿಸಿದ್ದರೂ ವ್ಯಾಪಾರಿ ಸಂಸ್ಥೆಗಳು ನಿರಂತರವಾಗಿ ಅನುಚಿತ ವ್ಯಾಪಾರಿ ಪದ್ಧತಿಗಳಿಂದ ಅವನನ್ನು ಶೋಷಿಸುತ್ತಿವೆ. ಗ್ರಾಹಕನಲ್ಲಿ ಜಾಗೃತಿಯನ್ನು ಮೂಡಿಸಲು ಪ್ರತಿ ವರ್ಷ ಮಾರ್ಚ್ ೧೫ ರಂದು ಗ್ರಾಹಕನ ಹಕ್ಕುಗಳ ದಿನ ವೆಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಡಿ.ಆರ್‌.ಮಂಜುನಾಥ್‌ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಂಕೀರ್ಣದಲ್ಲಿ ಬುಧವಾರ ‘ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ’ ಅಂಗವಾಗಿ ತಾಲ್ಲೂಕು ಕಾನೂನು ಸೇವಾ ಸಮಿತಿಯಿಂದ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಹಕರು ಅನೇಕ ಸಂದರ್ಭಗಳಲ್ಲಿ ಅವಶ್ಯಕ ಜ್ಞಾನವನ್ನು ಹೊಂದಿಲ್ಲದಿರುವುದರಿಂದ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳುವಲ್ಲಿ ಅಥವಾ ವ್ಯಾಪಾರ ಸಂಸ್ಥೆಗಳ ಶೋಷಣೆಯ ವಿರುದ್ಧ ಧ್ವನಿ ಎತ್ತಲಾಗುತ್ತಿಲ್ಲ. ಆದುದರಿಂದ ಗ್ರಾಹಕರಿಗೆ ಸೂಕ್ತ ಶಿಕ್ಷಣ ಹಾಗೂ ಹಕ್ಕುಗಳ ಬಗ್ಗೆ ಮಾಹಿತಿಯನ್ನು ನೀಡುವುದರ ಮೂಲಕ ರಕ್ಷಿಸಬೇಕಾಗಿದೆ. ವ್ಯಾಪಾರ ಸಂಸ್ಥೆಗಳು ಅನುಚಿತ ವ್ಯಾಪಾರಿ ಪದ್ಧತಿಗಳಾದ ಕಲಬೆರಕೆ, ಕಾಳಸಂತೆ ವ್ಯಾಪಾರ, ತೂಕ ಮತ್ತು ಅಳತೆಯಲ್ಲಿ ಕೊರತೆ, ವಂಚನೆಯ ಜಾಹೀರಾತು, ಮುಂತಾದವುಗಳಿಂದ ಗ್ರಾಹಕನನ್ನು ಶೋಷಿಸುತ್ತಿರುವುದರಿಂದ ಗ್ರಾಹಕನ ಹಿತರಕ್ಷಣೆ ಅಗತ್ಯವಾಗಿದೆ ಎಂದು ಹೇಳಿದರು.
ಗ್ರಾಹಕರ ಹಿತರಕ್ಷಣಾ ಕಾಯ್ದೆಯನ್ನು ಗ್ರಾಹಕರ ಹಿತಾಸಕ್ತಿಯನ್ನು ಸಂರಕ್ಷಿಸುವ ಉದ್ದೇಶದಿಂದ ೧೯೮೬ ರಲ್ಲಿ ಜಾರಿಗೆ ತರಲಾಯಿತು. ಇದು ದೋಷಪೂರಿತ ವಸ್ತುಗಳು, ಅತೃಪ್ತಿದಾಯಕ ಸೇವೆಗಳು, ಅನುಚಿತ ವ್ಯಾಪಾರಿ ಪದ್ಧತಿಗಳು ಹಾಗೂ ಇತರೆ ಶೋಷಣೆಯ ವಿರುದ್ಧ ಪರಿಣಾಮಕಾರಿ ರಕ್ಷಣೆಯನ್ನು ಗ್ರಾಹಕರಿಗೆ ನೀಡುವ ಉದ್ದೇಶವನ್ನು ಹೊಂದಿದೆ. ಈ ಕಾಯ್ದೆ ಸರಕು ಮತ್ತು ಸೇವೆಗಳ ವಿರುದ್ಧ ದೂರುಗಳಿದ್ದಲ್ಲಿ ಇತ್ಯರ್ಥಪಡಿಸಲು ಕಾಲಮಿತಿಯ ಷರತ್ತನ್ನು ವಿಧಿಸಿದೆ. ಈ ಕಾನೂನಿನನ್ವಯ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗ್ರಾಹಕರ ದೂರುಗಳ ಪರಿಹಾರ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಹಾಗೂ ರಾಜ್ಯಮಟ್ಟದಲ್ಲಿ ಗ್ರಾಹಕ ಹಿತರಕ್ಷಣಾ ಮಂಡಳಿಗಳನ್ನು ಸ್ಥಾಪಿಸಲಾಗಿದೆ. ಈ ಮಂಡಳಿಗಳು ಗ್ರಾಹಕರಿಗೆ ಸೂಕ್ತ ಶಿಕ್ಷಣವನ್ನು ನೀಡುವುದರ ಮೂಲಕ ಅವರ ಹಿತರಕ್ಷಣೆಯನ್ನು ಕಾಪಾಡುತ್ತಿದೆ ಎಂದು ವಿವರಿಸಿದರು.
ತಹಶೀಲ್ದಾರ್‌ ಅಜಿತ್‌ ಕುಮಾರ್‌ ರೈ ಮಾತನಾಡಿ, ಗ್ರಾಹಕರ ಹಿತರಕ್ಷಣಾ ಕಾಯ್ದೆಯ, ೧೯೮೬ ಅನ್ವಯ ಹಲವು ಹಕ್ಕುಗಳು ಗ್ರಾಹಕರಿಗೆ ದೊರೆಯುತ್ತಿವೆ. ಸುರಕ್ಷತೆಯ ಹಕ್ಕು, ಮಾಹಿತಿ ಪಡೆಯುವ ಹಕ್ಕು, ಆಯ್ಕೆಯ ಹಕ್ಕು, ಆಲಿಸುವ ಹಕ್ಕು, ಕುಂದುಕೊರತೆಗಳನ್ನು ನಿವಾರಿಸಿಕೊಳ್ಳುವ ಹಕ್ಕು, ಗ್ರಾಹಕರ ಶಿಕ್ಷಣದ ಹಕ್ಕು ಮುಂತಾದವುಗಳಿದ್ದು ಅವುಗಳ ಬಗ್ಗೆ ಮಾಹಿತಿಯನ್ನು ಹೊಂದಿದಾಗ ಮಾತ್ರ ಅನ್ಯಾಯವಾಗುವುದಿಲ್ಲ ಎಂದು ಹೇಳಿದರು.
ಸಂಪನ್ಮೂಲ ಭಾಷಣಕಾರರಾದ ವಕೀಲ ಸಿ.ಜಿ.ಭಾಸ್ಕರ್‌ ಗ್ರಾಹಕರ ಕಾಯ್ದೆಯ ಬಗ್ಗೆ ಮಾತನಾಡಿದರು.
ಪ್ರಧಾನ ಸಿವಿಲ್‌ ನ್ಯಾಯಾಧೀಶರು ಎನ್‌.ಎ.ಶ್ರೀಕಂಠ, ಸಿವಿಲ್‌ ನ್ಯಾಯಾಧೀಶರು ಟಿ.ಎಲ್‌.ಸಂದೀಶ್‌, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ಕಾರ್ಯದರ್ಶಿ ವಿ.ಎಂ.ಬೈರಾರೆಡ್ಡಿ, ವಕೀಲರಾದ ವೀಣಾ, ಮುನಿರಾಜು ಹಾಜರಿದ್ದರು.

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಮೇಲೆ ಹಲ್ಲೆ, ಆರೋಪಿಗಳ ವಿರುದ್ದ ಕ್ರಮಕ್ಕೆ ಅಂಗನವಾಡಿ ನೌಕರರ ಸಂಘದ ಆಗ್ರಹ

0

ಹಳೆ ದ್ವೇಷದ ಹಿನ್ನಲೆಯಲ್ಲಿ ಅಂಗನವಾಡಿ ಕೇಂದ್ರಕ್ಕೆ ನುಗ್ಗಿದ ಗುಂಪೊಂದು ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಮೇಲೆ ಮಂಗಳವಾರ ಹಲ್ಲೆ ನಡೆಸಿದ್ದಾರೆ.
ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ವಲಸೇನಹಳ್ಳಿಯ ಅಂಗನವಾಡಿ ಕಾರ್ಯಕರ್ತೆ ಮಂಜುಳ ಹಾಗೂ ಸಹಾಯಕಿ ರಾಮಲಕ್ಷ್ಮಮ್ಮ ಗಾಯಗೊಂಡು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದಾರೆ.
ವಲಸೇನಹಳ್ಳಿಯ ತಮ್ಮರೆಡ್ಡಿ, ಮದುಸೂಧನ್, ವೆಂಕಟೇಶ್, ಯಾಮಕ್ಕ, ರತ್ನಮ್ಮ, ಶೋಭ, ಪ್ರೀತಿ ಇನ್ನಿತರೆ ಹತ್ತು ಮಂದಿಗೂ ಹೆಚ್ಚು ಅಂಗನವಾಡಿ ಕೇಂದ್ರಕ್ಕೆ ಏಕಾ ಏಕಿ ನುಗ್ಗಿ ಮಕ್ಕಳನ್ನು ಹೊರಗೆ ಕಳುಹಿಸಿದ್ದಾರೆ. ಇದನ್ನು ಪ್ರಶ್ನಿಸಿದ ಅಂಗನವಾಡಿ ಕಾರ್ಯಕರ್ತೆ ಮಂಜುಳ ಹಾಗೂ ಸಹಾಯಕಿ ರಾಮಲಕ್ಷ್ಮಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ.
‘ನನ್ನನ್ನು ವಲಸೇನಹಳ್ಳಿ ಅಂಗನವಾಡಿ ಕೆಂದ್ರದಿಂದ ವರ್ಗಾವಣೆ ಮಾಡಲು ಈ ಗುಂಪು ಕಳೆದ ಹಲವು ದಿನಗಳಿಂದಲೂ ಪ್ರಯತ್ನ ಮಾಡುತ್ತಿದ್ದಾರೆ. ಅದು ಫಲ ನೀಡದಿದ್ದಾಗ ಹತಾಶೆಗೊಂಡ ಆವರು ಹೀಗೆ ಕೇಂದ್ರಕ್ಕೆ ನುಗ್ಗಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಅಂಗನವಾಡಿ ಕಾರ್ಯಕರ್ತೆ ಮಂಜುಳ ಪೊಲೀಸರಿಗೆ ದೂರು ನೀಡಿದ್ದಾಳೆ.
ಶಿಶು ಅಭಿವೃದ್ದಿ ಯೋಜನಾಕಾರಿಗಳಿಗೂ ಈ ಬಗ್ಗೆ ದೂರನ್ನು ನೀಡಿ ನನ್ನ ಹಾಗೂ ಸಹಾಯಕಿ ಮೇಲೆ ಹಲ್ಲೆ ನಡೆಸಿದವರ ಮೇಲೆ ಕಾನೂನು ಕ್ರಮ ಜರಿಗಿಸಬೇಕು ಮತ್ತು ನನಗೆ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಕ್ರಮಕ್ಕಾಗಿ ಆಗ್ರಹ: ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯ ಮೇಲೆ ಹಲ್ಲೆ ನಡೆದು ಗಾಯಗೊಂಡ ಅವರು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ಪದಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಘಟನೆಯನ್ನು ಖಂಡಿಸಿದರು.
ಸಂಘದ ಮುಖ್ಯಸ್ಥರಾದ ಸುನಂದಮ್ಮ, ಸೌಭಾಗ್ಯಮ್ಮ ಇನ್ನಿತರರು ಆಸ್ಪತ್ರೆಗೆ ಭೇಟಿ ನೀಡಿ, ಘಟನೆ ಬಗ್ಗೆ ದಿಬ್ಬೂರಹಳ್ಳಿ ಪೊಲೀಸ್ ಠಾಣೆಗೂ ಹಾಗೂ ಶಿಶು ಅಭಿವೃದ್ದಿ ಯೋಜನಾಕಾರಿಗಳಿಗೆ ದೂರು ನೀಡಲಾಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.ಜತೆಗೆ ಕಾರ್ಯಕರ್ತೆ ಹಾಗೂ ಸಾಹಯಕಿಗೆ ಸೂಕ್ತ ಬಂದೋಬಸ್ತ್ ನೀಡಿ ಮುಕ್ತವಾಗಿ ಕಾರ್ಯನಿರ್ವಹಿಸುವ ವಾತಾವರಣ ನಿರ್ಮಿಸಬೇಕೆಂದು ಆಗ್ರಹಿಸಿದ್ದು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಅಂಗನವಾಡಿ ಕಾರ್ಯಕರ್ತೆ ಮಂಜುಳ ಹಾಗೂ ಅವರ ಮೇಲೆ ಹಲ್ಲೆ ನಡೆಸಿದವರು ದಾಯಾದಿಗಳೆ ಆಗಿದ್ದಾರೆ. ಇವರ ನಡುವೆ ಜಮೀನಿಗೆ ಸಂಬಂದಿಸಿದಂತೆ ವಿವಾದಗಳು ಇದ್ದು, ಈ ಘಟನೆಗೆ ಜಮೀನಿನ ವಿವಾದವೂ ಕಾರಣವಾಗಿದೆ. ಇದೆ ಕಾರಣಕ್ಕೆ ಮಂಜುಳರವರನ್ನು ವರ್ಗಾವಣೆ ಮಾಡಬೇಕೆಂದು ಈ ಗುಂಪು ಹಲವು ಬಾರಿ ಮಂಜುಳ ಮೇಲೆ ದೂರುಗಳನ್ನು ನೀಡಿದ್ದು ನಾನು ಸಹ ಹಲವು ಭಾರಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಆದರೆ ಆಕೆಯನ್ನು ವರ್ಗಾವಣೆ ಮಾಡುವಂತ ಪ್ರಬಲ ಅಂಶ ದೊರೆತಿಲ್ಲ. ಮಂಜುಳ ವರ್ಗಾವಣೆ ಆಗದ ಕಾರಣ, ಜಮೀನಿನ ವಿವಾದವೂ ಸೇರಿ ಈ ಘಟನೆಗೆ ಕಾರಣವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಬಗ್ಗೆ ನಾನು ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಎಸ್‌ಐ ವಿಜಯ್‌ರವರಿಗೆ ಪತ್ರ ಬರೆದಿದ್ದು ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಗೆ ಸೂಕ್ತ ಬಂದೋಬಸ್ತ್ ನೀಡುವಂತೆ ಕೋರಲಾಗಿದೆ ಎಂದು ಸಿಡಿಪಿಒ ಜಿ.ಕೆ.ಲಕ್ಷ್ಮಿದೇವಮ್ಮ ತಿಳಿಸಿದ್ದಾರೆ.

ಗಾಂಡ್ಲಚಿಂತೆ ಸರ್ಕಾರಿ ಶಾಲೆಗೆ ಡೆಸ್ಕ್‌ ಮತ್ತು ಬೆಂಚುಗಳ ವಿತರಣೆ

0

ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ವಿವಿಧ ರೀತಿಯ ಸಹಕಾರ ಪಡೆಯುವುದರ ಮೂಲಕ ಒಟ್ಟುಗೂಡಿಸಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣವನ್ನು ಸೃಷ್ಟಿಸುವಲ್ಲಿ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿ ಶ್ರಮಿಸಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ರಾಧಾಕೃಷ್ಣ ತಿಳಿಸಿದರು.
ತಾಲ್ಲೂಕಿನ ಗಾಂಡ್ಲಚಿಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಎಂಟು ಜೋಡಿ ಡೆಸ್ಕ್‌ ಮತ್ತು ಬೆಂಚುಗಳನ್ನು ವಿತರಿಸಿ ಅವರು ಮಾತನಾಡಿದರು.

ಶಿಡ್ಲಘಟ್ಟ ತಾಲ್ಲೂಕಿನ ಗಾಂಡ್ಲಚಿಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಎಂಟು ಜೋಡಿ ಡೆಸ್ಕ್‌ ಮತ್ತು ಬೆಂಚುಗಳನ್ನು ವಿತರಿಸಲಾಯಿತು

ಶಾಲಾ ವತಿಯಿಂದ ಶೇ. 20 ರಷ್ಟು ಹಣ ನೀಡಿದ್ದಾರೆ. ಉಳಿಕೆ ಶೇ.80 ರಷ್ಟು ಹಣವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನೀಡಿದ್ದು, ಒಟ್ಟು 40 ಸಾವಿರ ರೂಗಳ ಮೌಲ್ಯದ ಡೆಸ್ಕ್‌ ಮತ್ತು ಬೆಂಚುಗಳನ್ನು ಶಾಲೆಗೆ ಕೊಡಲಾಗಿದೆ. ವಿದ್ಯಾರ್ಥಿಗಳು ತಮಗೆ ನೀಡಿರುವ ಆಸನಗಳನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು. ಮುಂದಿನ ವರ್ಷ ಶುದ್ಧ ಕುಡಿಯುವ ನೀರಿನ ಯಂತ್ರವನ್ನು ಕೊಡಲಾಗುವುದು ಎಂದು ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಮೋಹನ್‌ ಮಾತನಾಡಿ, ನಮ್ಮಲ್ಲಿ ಹಲವಾರು ಸೌಲಭ್ಯಗಳಿವೆ. ವಿಧವಾ ವೇತನ, ಆರೋಗ್ಯ, ಸಾವಯವ ಕೃಷಿ, ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನ ಮುಂತಾದವುಗಳಿದ್ದು ಅವುಗಳನ್ನು ಬಳಸಿಕೊಳ್ಳಿ ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಯೋಜಕ ರಮೇಶ್‌, ಗ್ರಾಮ ಪಂಚಾಯಿತಿ ಸದಸ್ಯ ಗಂಗುಲಪ್ಪ, ಎಸ್‌ಡಿಎಂಸಿ ಸದಸ್ಯರಾದ ಬೈರಾರೆಡ್ಡಿ, ರವಿ, ರಾಜಣ್ಣ, ಮುಖ್ಯ ಶಿಕ್ಷಕ ಎಸ್‌.ಎಂ.ಆದಿನಾರಾಯಣ, ಶಿಕ್ಷಕರಾದ ನಾಗೇಶ್‌, ಶ್ವೇತ, ವನಜಾಕ್ಷಿ, ಸುಮ, ಬಾಬು, ರಾಮರೆಡ್ಡಿ, ಸೇವಾದಳ ವೆಂಕಟರೆಡ್ಡಿ, ಶ್ರೀನಿವಾಸ್‌ ಹಾಜರಿದ್ದರು.

ತಾಲ್ಲೂಕು ಕಸಾಪ ವತಿಯಿಂದ ಸನ್ಮಾನ

0

ತೋಟಗಾರಿಕಾ ಕ್ಷೇತ್ರದಲ್ಲಿ ಹಾಗೂ ಹವಾಮಾನದ ಕುರಿತಂತೆ ಶಿಡ್ಲಘಟ್ಟ ತಾಲ್ಲೂಕಿನ ರೈತರು ಹಾಗೂ ವಿದ್ಯಾರ್ಥಿಗಳಿಗಾಗಿ ವಿಚಾರ ಸಂಕಿರಣವನ್ನು ನಡೆಸಿಕೊಡುವುದಾಗಿ ವಿಜ್ಞಾನಿ ಶ್ರೀನಿವಾಸರಾವ್‌ ತಿಳಿಸಿದರು.
ತಾಲ್ಲೂಕಿನ ಚಿಕ್ಕದಾಸರಹಳ್ಳಿಯ ಬ್ಯಾಟರಾಯಸ್ವಾಮಿ ದೇವಾಲಯದಲ್ಲಿ ತಾಲ್ಲೂಕು ಕಸಾಪ ವತಿಯಿಂದ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಗೌರವವನ್ನು ಸ್ವೀಕರಿಸಿ ಅವರು ಮಾತನಾಡಿದರು.
ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನಲ್ಲಿ ಪ್ರಾಥಮಿಕ ಮತ್ತು ವಿರೂಪಾಕ್ಷಪ್ಪ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಬಾಲ್ಯದಲ್ಲಿ ನನ್ನ ಅರಿವನ್ನು ವಿಸ್ತರಿಸಿದ ಈ ತಾಲ್ಲೂಕಿನ ಜನರಿಗೆ ಉಪಯುಕ್ತವಾಗುವಂತೆ ಮುಂದಿನ ದಿನಗಳಲ್ಲಿ ಕಾರ್ಯಕ್ರಮವನ್ನು ನಡೆಸಿಕೊಡುತ್ತೇನೆ. ಜ್ಞಾನವಂತರನ್ನು ಕರೆತಂದು ನಮ್ಮ ತಾಲ್ಲೂಕಿನ ವಿದ್ಯಾರ್ಥಿಗಳ ಜ್ಞಾನದ ಹಸಿವನ್ನು ಇನ್ನಷ್ಟು ಹೆಚ್ಚಿಸುವ ಕೆಲಸವನ್ನು ತಾಲ್ಲೂಕು ಕಸಾಪ ಮಾಡುತ್ತಿದ್ದು, ಅವರ ಕೆಲಸದಲ್ಲಿ ಕೈಜೋಡಿಸುವುದಾಗಿ ಹೇಳಿದರು.
ನಡಿಪಿನಾಯಕನಹಳ್ಳಿಯ ನವೋದಯ ವಿದ್ಯಾಸಂಸ್ಥೆಯ ಸಂಸ್ಥಾಪಕ ಎನ್‌.ಕೃಷ್ಣಮೂರ್ತಿ ಅವರು ತಾಲ್ಲೂಕು ಕಸಾಪ ವತಿಯಿಂದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ವಿದ್ಯಾಸಂಸ್ಥೆಯನ್ನು ನಡೆಸುವುದು ಬಹಳ ಕಷ್ಟ ಆದರೂ ಹಳ್ಳಿ ಮಕ್ಕಳು ಪ್ರತಿಭಾವಂತರಿದ್ದು ಅವರನ್ನು ಸಾಧಕರನ್ನಾಗಿಸುವ ಉದ್ದೇಶದಿಂದ ವಿದ್ಯಾಸಂಸ್ಥೆಯನ್ನು ನಡೆಸುತ್ತಿರುವುದಾಗಿ ಹೇಳಿದರು.
ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ಮಾತನಾಡಿ, ತಾಲ್ಲೂಕು ಕಸಾಪ ವತಿಯಿಂದ ಮಹಿಳೆಯರಿಗೆ, ರೈತರಿಗೆ ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಯೋಧರು ಹಾಗೂ ವಿಜ್ಞಾನಿಗಳನ್ನು ಕರೆಸಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗಾಗಿ ಪ್ರೇರಣಾದಾಯಕ ವಿಶೇಷ ಕಾರ್ಯಕ್ರಮಗಳನ್ನು ನಡೆಸುವುದಾಗಿ ನುಡಿದರು.
ಈ ಸಂದರ್ಭದಲ್ಲಿ ವಿಜ್ಞಾನಿ ಶ್ರೀನಿವಾಸರಾವ್‌ ಮತ್ತು ನಡಿಪಿನಾಯಕನಹಳ್ಳಿಯ ನವೋದಯ ವಿದ್ಯಾಸಂಸ್ಥೆಯ ಸಂಸ್ಥಾಪಕ ಎನ್‌.ಕೃಷ್ಣಮೂರ್ತಿ ಅವರನ್ನು ತಾಲ್ಲೂಕು ಕಸಾಪ ವತಿಯಿಂದ ಸನ್ಮಾನಿಸಲಾಯಿತು.
ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಸ್‌.ವಿ.ನಾಗರಾಜರಾವ್‌, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್‌, ಸಂಚಾಲಕ ಲಕ್ಷ್ಮೀನಾರಾಯಣ್‌, ಗುರುರಾಜರಾವ್‌, ಬ್ಯಾಟರಾಯಸ್ವಾಮಿ ದೇವಾಲಯದ ಮುಖ್ಯಸ್ಥ ಬ್ಯಾಟರಾಯಶೆಟ್ಟಿ ಹಾಜರಿದ್ದರು.

ಕರಾಟೆ ಬೆಲ್ಟ್‌ ಪರೀಕ್ಷೆ

0

ಶಿಡ್ಲಘಟ್ಟದ ದಿವ್ಯ ಭಾರತ್‌ ಕರಾಟೆ ಡೋ ಅಸೋಸಿಯೇಷನ್‌ ವತಿಯಿಂದ ಭಾನುವಾರ ಬೆಲ್ಟ್‌ ಪರೀಕ್ಷೆಯನ್ನು ಮತ್ತು ಇಂಟರ್‌ ಕ್ಲಬ್‌ ಪಂದ್ಯವನ್ನು ಶಿಕ್ಷಕ ಅರುಣ್‌ ಕುಮಾರ್‌ ನಡೆಸಿದರು. 20 ರಿಂದ 25 ಕೆಜಿ ತೂಕದ ವಿಭಾಗದಲ್ಲಿ ಜಗದೀಶ್‌(ಪ್ರಥಮ), ಚೇತನ(ದ್ವಿತೀಯ), ರಕ್ಷಿತ್‌(ತೃತೀಯ) ಮತ್ತು 30 ರಿಂದ 45 ಕೆಜಿ ತೂಕದ ವಿಭಾಗದಲ್ಲಿ ಚನ್ನಕೇಶವ(ಪ್ರಥಮ), ಸೋಹನ್‌ರಾಜ್‌(ದ್ವಿತೀಯ), ನಂದೀಶ್‌(ತೃತೀಯ) ಸ್ಥಾನ ಪಡೆದಿದ್ದಾರೆ. ಲಯನ್‌ ಕ್ರೀಡಾ ಸಂಸ್ಥೆಯ ಮುನಿರಾಜು, ಶಿವಣ್ಣ, ರಮೇಶ್‌, ಚಂದ್ರಶೇಖರ್ ಹಾಜರಿದ್ದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಉಪಾಧ್ಯಕ್ಷರ ಆಯ್ಕೆ

0

ಶಿಡ್ಲಘಟ್ಟದ ಕೆ.ಸುಬ್ರಮಣಿ ಅವರನ್ನು ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದಾಗಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಮುನಿಕೃಷ್ಣಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.