ಶಿಡ್ಲಘಟ್ಟದ ದೇಶದಪೇಟೆಯಲ್ಲಿ ಸೋಮವಾರ ಹೋಳಿ ಹಬ್ಬದ ಪ್ರಯುಕ್ತ ಮಕ್ಕಳು ಪರಸ್ಪರ ಬಣ್ಣಗಳನ್ನು ಹಚ್ಚಿಕೊಂಡು ನಲಿದರು.
ಶ್ರೀ ಪೂಜಮ್ಮದೇವಿ ಹೂವಿನ ಕರಗ ಮಹೋತ್ಸವ
ಶಿಡ್ಲಘಟ್ಟದಲ್ಲಿ ಭಾನುವಾರ ರಾತ್ರಿ ಬೈಪಾಸ್ ರಸ್ತೆಯಲ್ಲಿರುವ ಶ್ರೀ ಪೂಜಮ್ಮದೇವಿ ಹೂವಿನ ಕರಗ ಮಹೋತ್ಸವದ ಪ್ರಯುಕ್ತ ಉತ್ಸವ ಮೂರ್ತಿಯಲ್ಲಿ ಪಲ್ಲಕ್ಕಿಯಲ್ಲಿಟ್ಟುಕೊಂಡು ಊರಿನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.
ಪೂಜಮ್ಮದೇವಿ ಹೂವಿನ ಕರಗ
ನಗರದ ಬೈಪಾಸ್ ರಸ್ತೆಯಲ್ಲಿರುವ ಶ್ರೀ ಪೂಜಮ್ಮದೇವಿ ಹೂವಿನ ಕರಗ ಮಹೋತ್ಸವ ಭಾನುವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು.
ಕರಗದ ಪ್ರಯುಕ್ತ ಎರಡು ಕಡೆ ವಿಶೇಷ ವಾದ್ಯಗೋಷ್ಠಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ದೀಪಾಲಂಕಾರಗಳ ಪೂಜಮ್ಮ ದೇವಿಯ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಿತು.
ಕದಿರಿಹುಣ್ಣಿಯಂದು ಪ್ರತಿವರ್ಷವೂ ನಗರದ ಪೂಜಮ್ಮ ದೇವಿಯ ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು ಕರಗವನ್ನು ನಡೆಸಲಾಗುತ್ತದೆ.
ಕರಗದ ನೃತ್ಯ ಮತ್ತು ಆಕರ್ಷಕ ತಮಟೆ ವಾದ್ಯ ಗಮನ ಸೆಳೆಯಿತು. ನಗರದ ಪ್ರಮುಖ ಬೀದಿಗಳಲ್ಲಿ ಕರಗಹೊತ್ತವರು ವಾದ್ಯವೃಂದದೊಂದಿಗೆ ಮೆರವಣಿಗೆಯಲ್ಲಿ ಸಾಗಿದರು. ಮನೆಗಳ ಮುಂದೆ ರಂಗೋಲಿ ಹಾಕಿ, ಕರಗ ಬಂದಾಗ ಪೂಜೆ ಸಲ್ಲಿಸಿ, ಮಲ್ಲಿಗೆ ಹೂಗಳನ್ನು ಅರ್ಪಿಸಿದರು. ಕೋಟೆ ವೃತ್ತ ಹಾಗೂ ಓ.ಟಿ ವೃತ್ತದ ಬಳಿ ವಾದ್ಯಗೋಷ್ಠಿಗಳನ್ನು ಏರ್ಪಡಿಸಲಾಗಿತ್ತು.
ಶಾಸಕ ಎಂ.ರಾಜಣ್ಣ, ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ, ನಗರಸಭಾ ಸದಸ್ಯರಾದ ಲಕ್ಷ್ಮಯ್ಯ, ಎಸ್.ರಾಘವೇಂದ್ರ, ರಮೇಶ್, ಶ್ರೀನಾಥ, ಶ್ರೀಧರ್, ಡಾ.ಸತ್ಯನಾರಾಯಣರಾವ್, ಮುನಿನರಸಿಂಹ, ನಾಗನರಸಿಂಹ, ಕೃಷ್ಣಮೂರ್ತಿ ಮತ್ತಿತರರು ಹಾಜರಿದ್ದರು.
ಶಿಡ್ಲಘಟ್ಟ ತಾಲ್ಲೂಕು ಹಿಂದೆ ಪೈಲ್ವಾನರಿಗೆ ಹೆಸರಾಗಿತ್ತು
ನಮ್ಮ ಶಿಡ್ಲಘಟ್ಟ ತಾಲ್ಲೂಕು ಹಿಂದೆ ಪೈಲ್ವಾನರಿಗೆ ಹೆಸರಾಗಿತ್ತು. ಹಲವಾರು ಹೆಸರುವಾಸಿ ಗರಡಿ ಮನೆಗಳಿದ್ದವು. ಹಲವಾರು ಕುಸ್ತಿ ಪಂದ್ಯಾವಳಿಗಳು ನಡೆಯುತ್ತಿದ್ದವು. ಹಿರಿಯ ಪೈಲ್ವಾನರ ಮಾರ್ಗದರ್ಶನದಲ್ಲಿ ಯುವಕರು ತರಬೇತಿ ಪಡೆಯುತ್ತಿದ್ದ ಕಾಲವೊಂದಿತ್ತು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಗರದ ಗಾರ್ಡನ್ ರಸ್ತೆಯಲ್ಲಿರುವ ಹೈದರಾಲಿ ಗರಡಿ ಮನೆಯ ಮಹಮದ್ ಖಾನ್ ಬೆಂಗಳೂರಿನ ಅಗ್ರಹಾರದಲ್ಲಿ ನಡೆದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕವನ್ನು ಪಡೆದಿರುವುದಕ್ಕೆ ಸನ್ಮಾನಿಸಿ ಅವರು ಮಾತನಾಡಿದರು.
ಇಂದು ಜಿಮ್ ತಲೆ ಎತ್ತಿ ನಿಂತಿವೆ. ಸಿಕ್ಸ್ಪ್ಯಾಕ್ ಮೋಹಕ್ಕೆ ಒಳಗಾಗಿರುವ ಯುವಕರು ಆಧುನಿಕ ಉಪಕರಣಗಳನ್ನು ಬಳಸಿ ಕಸರತ್ತಿಗೆ ಜೋತುಬಿದ್ದಿದ್ದಾರೆ. ಹೀಗಾಗಿ ಆರೋಗ್ಯದ ಜತೆಗೆ ಯುವಕರಿಗೆ ಶ್ರದ್ಧೆ, ಶಿಸ್ತು, ಭಕ್ತಿಯನ್ನು ಕಲಿಸುತ್ತಿದ್ದ ಶಕ್ತಿಯ ಪ್ರತೀಕವಾಗಿದ್ದ ದೇಸಿ ಪರಂಪರೆಯ ಕುಸ್ತಿ ಕಲೆ ಮತ್ತು ಗರಡಿ ಮನೆಗಳು ನಿಧಾನವಾಗಿ ನೇಪಥ್ಯಕ್ಕೆ ಸರಿಯುತ್ತಿವೆ. ಹಲವು ಸಂಕಷ್ಟದ ನಡುವೆಯೂ ಆಧುನಿಕತೆಯೊಂದಿಗೆ ರಾಜಿ ಮಾಡಿಕೊಳ್ಳದೇ ತಮ್ಮ ಹಳೆಯ ಪರಂಪರೆಯನ್ನು ಉಳಿಸಿಕೊಂಡು ಬರುತ್ತಿರುವ ಗರಡಿ ಮನೆಗಳು ಇನ್ನೂ ಜೀವಂತವಾಗಿರುವುದು ಆಶಾದಾಯಕ ಬೆಳವಣಿಗೆ ಎಂದು ಹೇಳಿದರು.
ಹೈದರಾಲಿ ಗರಡಿ ಮನೆಯ ಮಹಮದ್ ಖಾನ್, ಹಿರಿಯ ಪೈಲ್ವಾನರಾದ ಉಸ್ತಾದ್ ಅಮ್ಜದ್‌ಪಾಷ, ಖಾದರ್‌ಪಾಷ, ಎಂ.ಡಿ.ಮೌಲಾ ಅವರಿಂದ ತರಬೇತಿ ಪಡೆದಿದ್ದು, ರಾಜ್ಯ ಮಟ್ಟದ ಕುಸ್ತಿ ಪಂದ್ಯದಲ್ಲಿ ಬೆಳ್ಳಿ ಪದಕ ಪಡೆಯುವ ಮೂಲಕ ತಾಲ್ಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ. ಅವರ ಸಾಧನೆ ಯುವ ಕುಸ್ತಿ ಪಟುಗಳಿಗೆ ಪ್ರೇರಣೆಯಾಗಲಿ ಎಂದು ಹೇಳಿದರು.
ಸಿ.ಎಂ.ಬಾಬು, ಪೈಲ್ವಾನ್ ಆದಿಲ್‌ಪಾಷ, ಮಹಮ್ಮದ್, ಎ.ಆರ್.ರಫೀಕ್, ಖಾದರ್‌ಪಾಷ, ಅಕ್ರಂಪಾಷ, ಬಾಬು, ಬಾಬಾಜಾನ್, ಮುಕ್ತಿಯಾರ್ ಮತ್ತಿತರರು ಹಾಜರಿದ್ದರು.
ಬ್ಯಾಟರಾಯಸ್ವಾಮಿ ಬ್ರಹ್ಮ ರಥೋತ್ಸವ
ತಾಲ್ಲೂಕಿನ ಚಿಕ್ಕದಾಸರಹಳ್ಳಿಯ ಸಮೀಪದ ಬ್ಯಾಟರಾಯಸ್ವಾಮಿ ಬ್ರಹ್ಮ ರಥೋತ್ಸವ ಭಾನುವಾರ ಭಕ್ತರ ಸಮ್ಮುಖದಲ್ಲಿ ಸಾಂಗೋಪವಾಗಿ ನಡೆಯಿತು. ಸುತ್ತಮುತ್ತಲ ಗ್ರಾಮಗಳಿಂದ ಹಾಗೂ ನಗರದಿಂದ ಆಗಮಿಸಿದ್ದ ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಭಕ್ತಿಭಾವ ಮೆರೆದರು.
ರಥೋತ್ಸವಕ್ಕೆ ಶಾಸಕ ಎಂ.ರಾಜಣ್ಣ ಚಾಲನೆ ನೀಡಿದರು.
‘ಪ್ರತಿ ವರ್ಷ ಕಾಮನ ಹುಣ್ಣಿಮೆಯಂದು ಇಲ್ಲಿ ರಥೋತ್ಸವ ನಡೆಯುತ್ತದೆ. ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ಭಕ್ತರು ಈ ದೇವಾಲಯದಲ್ಲಿ ಪ್ರಸಾದ ಕೇಳುವುದು ರೂಢಿ. ಮನೆಗೆ ಹೆಣ್ಣು ತರಲು, ಹೆಣ್ಣು ಕೊಡಲು, ಬಾವಿ ತೋಡಲು, ಕೊಳವೆ ಬಾವಿ ಕೊರೆಸಲು, ಭೂಮಿ ಕೊಳ್ಳಲು, ಮನೆ ಕಟ್ಟಲು ಮುಂತಾದ ಶುಭ ಕಾರ್ಯಗಳಿಗೆ ಬ್ಯಾಟರಾಯಸ್ವಾಮಿಯ ಪ್ರಸಾದ ಕೇಳುತ್ತಾರೆ’ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ರಥೋತ್ಸವ ಅಂಗವಾಗಿ ದೇಗುಲದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು. ಬತ್ತಾಸು, ಸಿಹಿ ಖಾರದ ತಿಂಡಿಗಳು, ವಿವಿಧ ಹಣ್ಣುಗಳು, ತಂಪು ಪಾನೀಯ, ಕರಿದ ತಿಂಡಿ ತಿನಿಸು, ಮಕ್ಕಳಿಗೆ ಆಟಿಕೆ, ಅಚ್ಚೆ ಹಾಕುವವರು, ಬಳೆಗಾರರು ಉತ್ಸವಕ್ಕೆ ರಂಗು ತುಂಬಿದರು. ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಕ್ತರಿಗೆ ಪಾನಕ, ಮಜ್ಜಿಗೆ ಹಾಗೂ ಹೆಸರು ಬೇಳೆ ವಿತರಿಸಲಾಯಿತು.
ಚಿಕ್ಕದಾಸರಹಳ್ಳಿ, ಮಳಮಾಚನಹಳ್ಳಿ, ದೊಡ್ಡದಾಸರಹಳ್ಳಿ, ಮುಗಿಲಡಪಿ, ಜಪ್ತಿಹೊಸಹಳ್ಳಿ, ನಾರಾಯಣದಾಸರಹಳ್ಳಿ, ಬೋದಗೂರು ಮೊದಲಾದ ಗ್ರಾಮಸ್ಥರು ಪಾನಕ ವಿತರಿಸಿದರು. ಮಳಮಾಚನಹಳ್ಳಿ ಗ್ರಾಮಸ್ಥರು ಆಗಮಿಸಿರುವ ಮುತ್ತೈದೆಯರಿಗೆ ಬಳೆ ವಿತರಿಸಿದರು.
ವಿಜಯನಗರ ಕಾಲದ ಬ್ಯಾಟರಾಯಸ್ವಾಮಿ ದೇವಾಲಯವು ಎತ್ತರವಾದ ಗುಡ್ಡದ ಮೇಲಿರುವುದರಿಂದ ಕಂಗೊಳಿಸುತ್ತಿತ್ತು. ಸುತ್ತಮುತ್ತಲಿನ ಗ್ರಾಮಗಳು ಹಾಗೂ ತಾಲ್ಲೂಕಿನ ವಿವಿಧ ಭಾಗಗಳಿಂದ ನೂರಾರು ಭಕ್ತರು ಆಗಮಿಸಿ ದೇವರ ಪೂಜೆಯಲ್ಲಿ ಪಾಲ್ಗೊಂಡರು.
ಮುಖಪುಟ ವಿನ್ಯಾಸಕ ಅಜಿತ್ ಕೌಂಡಿನ್ಯ
ಶಿಡ್ಲಘಟ್ಟದ ಮುಖಪುಟ ವಿನ್ಯಾಸಕ ಅಜಿತ್ ಕೌಂಡಿನ್ಯ ಅವರನ್ನು ಬೆಂಗಳೂರಿನ ಹಂಪಿನಗರದ ರಂಗಮಂದಿರದಲ್ಲಿ ನಡೆದ ಕೃಷ್ಣಾನಂದ ಕಾಮತ್ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಗೌರವಿಸಿದರು. ಡಾ.ಜ್ಯೋತ್ಸಾ ಕಾಮತ್ ಹಾಜರಿದ್ದರು.
ಹಿಂದುಳಿದ ಪ್ರದೇಶದಲ್ಲಿ ಶಿಕ್ಷಣ ನೀಡಬೇಲು
ಅತಿ ಹಿಂದುಳಿದ ಕೂಲಿ ಕಾರ್ಮಿಕರೆ ವಾಸಿಸುವ ನಗರದ ಹಿಂದುಳಿದ ಪ್ರದೇಶದಲ್ಲಿ ಶಾಲೆಯನ್ನು ನಡೆಸುತ್ತಾ ಮಕ್ಕಳಿಗೆ ಉತ್ತಮ ಶೀಕ್ಷಣ ನೀಡುತ್ತಿರುವುದು ಅಭಿನಂದನೀಯ ಎಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ತಿಳಿಸಿದರು.
ನಗರದ ಗಾಂಧಿನಗರದಲ್ಲಿ ಶನಿವಾರ ವಿಸ್ಡಮ್ ಕಿರಿಯ ಪ್ರಾಥಮಿಕ ಶಾಲೆಯ ಒಂಭತ್ತನೇ ಶಾಲಾ ವಾರ್ಪಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಕ್ರೀಡೆಯಲ್ಲಿ ಭಾಗವಹಿಸಬೇಕು. ವಿದ್ಯಾರ್ಥಿಗಳಿಗೆ ಮನೋಸ್ಥೈರ್ಯವನ್ನು ನೀಡಿ, ಪ್ರೋತ್ಸಾಹಿಸಲು ಪ್ರಶಸ್ತಿ ಪತ್ರಗಳನ್ನು ನೀಡುವ ಮೂಲಕ ಅವರಲ್ಲಿ ಅಡಗೀರುವ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರರ್ದಶಿಸುವ ವೇದಿಕೆ ಶಾಲಾ ವಾರ್ಷಿಕೋತ್ಸವ ಆಗಿರುತ್ತದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಗಮನ ಹರಿಸಿ ಶಿಕ್ಷಕರು ನೀಡಿದ ಪಾಠ ಪ್ರವಚನಗಳನ್ನು ಕಲಿತು ಉನ್ನತ ವಿದ್ಯಾಭ್ಯಾಸವನ್ನು ಮಾಡಿ ಪೋಷಕರಿಗೆ ಹಾಗೂ ದೇಶಕ್ಕೆ ಕೀರ್ತಿ ತರುವಂತಹ ಪ್ರಜೆಗಳಾಗಬೇಕೆಂದು ಕೋರಿದರು.
ವಿಸ್ಡಮ್ ಶಾಲೆಯ ಅಧ್ಯಕ್ಷ ನಾಗರಾಜ್, ಕಾರ್ಯನಿರ್ವಾಹಕ ಅಧಿಕಾರಿ ಎಂ.ವೆಂಕಟೇಶ್, ಬಿ.ಆರ್.ರಾಮಚಂದ್ರ, ತನ್ವೀರ್ ಪಾಷ, ಮುನಿಯಪ್ಪ, ಮುಖ್ಯ ಶಿಕ್ಷಕಿ ಟಿ.ಎ.ಮಾಲಾ ಮತ್ತು ಶಾಲಾ ಶಿಕ್ಷಕರು, ಪೋಷಕರು ಹಾಜರಿದ್ದರು.
ಬಿಜೆಪಿ ಮುಖಂಡರಿಂದ ಸಂಭ್ರಮಾಚಣೆ
ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅತಿ ಹೆಚ್ಚು ಸ್ಥಾನಗಳನ್ನು ಪಡೆದಿರುವುದು ಮುಂದಿನ ಚುನಾವಣೆಗಳ ದಿಕ್ಸೂಚಿಯಾಗಿದೆ ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್ ತಿಳಿಸಿದರು.
ನಗರದ ಕೋಟೆ ವೃತ್ತದಲ್ಲಿ ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅತಿ ಹೆಚ್ಚು ಸ್ಥಾನಗಳು ಬಂದಿದ್ದು, ತಾಲ್ಲೂಕಿನ ಬಿಜೆಪಿ ಮುಖಂಡರು ಶನಿವಾರ ವಿಜಯೋತ್ಸವ ನಡೆಸಿ ನಂತರ ಸಿಹಿ ಹಂಚಿ ಮಾತನಾಡಿದರು.
ನೋಟ್ ಬ್ಯಾನ್ ಆಗಿರುವುದು ಯಾವುದೇ ರೀತಿ ತೊಂದರೆ ಇಲ್ಲ, ನೋಟ್ ಬ್ಯಾನ್ ಆದ ಕಾರಣ ಕಪ್ಪುಹಣಕ್ಕೆ ಮತ್ತು ನಕಲಿ ನೋಟಿಗೆ ಕಡಿವಾಣ ಬಿದ್ದು, ಬಿಜೆಪಿ ಪಕ್ಷ ಅತಿ ಹೆಚ್ಚು ಸ್ಥಾನಗಳು ಬರುವುದಕ್ಕೆ ಕಾರಣವಾಗಿದೆ. ಪಂಚ ರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ನಡೆಸುವುದು ಖಚಿತವಾಗಿದ್ದು, ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ನಮ್ಮ ರಾಜ್ಯದಲ್ಲೂ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಗೌಡ, ಜಿಲ್ಲಾ ಉಪಾಧ್ಯಕ್ಷ ರಮೇಶ್ ಬಾಯರಿ, ಡಾ.ಸತ್ಯನಾರಾಯಣರಾವ್, ಮಂಜುಳಮ್ಮ, ಶ್ರೀರಾಮರೆಡ್ಡಿ, ಸುರೇಶ್, ಕೃಷ್ಣಾರೆಡ್ಡಿ, ದೊಣ್ಣಹಳ್ಳಿ ರಾಮಣ್ಣ, ಮಧುಸುಧನ್, ರತ್ನಮ್ಮ, ಅಶ್ವಕ್ ಅಲಿ, ಸುಜಾತಮ್ಮ, ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.
ಸೋಮವಾರ ವಿದ್ಯುತ್ ವ್ಯತ್ಯಯ
ಮಾರ್ಚ್ 13 ರ ಸೋಮವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ತಾಲ್ಲೂಕಿನಾದ್ಯಂತ ವಿದ್ಯುತ್ ಇಲ್ಲದಿರುವುದರಿಂದ ಗ್ರಾಹಕರು ಸಹಕರಿಸಬೇಕೆಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅನ್ಸರ್‌ಪಾಷ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೇದಗಣಿತ ಹಾಗು ವಿಜ್ಞಾನದ ಡಿಜಿಟಲ್ ಸಾಮಾಗ್ರಿಯಿಂದ ಮಕ್ಕಳಿಗೆ ಅನುಕೂಲಕರ
ವೇದಗಣಿತ ಹಾಗು ವಿಜ್ಞಾನದ ಡಿಜಿಟಲ್ ಸಾಮಾಗ್ರಿಯಿಂದ ಮಕ್ಕಳಲ್ಲಿ ಗಣಿತ ಹಾಗು ವಿಜ್ಞಾನದ ವಿಷಯಗಳು ತುಂಬಾ ಸರಳವಾಗಿ ಅರ್ಥವಾಗುವುದು ಎಂದು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಮಂಜುಳ ತಿಳಿಸಿದರು.
ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ಸಾಧ್ಯ ಲೈಫ್ ಸಂಸ್ಥೆಯ ‘ಅರ್ಮಿ’ ಯೋಜನೆಯ ಅಂಗವಾಗಿ ಶಾಲೆಗೆ ಉಚಿತವಾಗಿ ಡಿಜಿಟಲ್ ಶಿಕ್ಷಣ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮ ಹಾಗೂ ‘ಯುವಪ್ರೇರಣ’ ವ್ಯಕ್ತಿತ್ವ ವಿಕಾಸ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈಗಿನ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಾಸ ತರಬೇತಿ ಅತಿ ಅವಶ್ಯಕವಾಗಿದ್ದು, ಅದರಿಂದಾಗಿ ಅವರು ವಾರ್ಷಿಕ ಪರೀಕ್ಷೆಗಳನ್ನು ಎದುರಿಸುವುದು ತುಂಬಾ ಸುಲಭವಾಗುವುದು ಹಾಗು ಭವಿಷ್ಯದ ಗುರಿಯನ್ನು ಮುಟ್ಟಲು ಖಂಡಿತವಾಗಿ ಸಹಕಾರಿಯಾಗುವುದು. ಇಂತಹ ಕಾರ್ಯಾಗಾರಗಳು ಮಕ್ಕಳಲ್ಲಿ ವ್ಯಕ್ತಿತ್ವವನ್ನು ವಿಕಾಸಗೊಳಿಸಿ ಉತ್ತಮ ಪ್ರಜೆಗಳನ್ನಾಗಿ ಪರಿವರ್ತನೆಗೊಳಿಸುವುದು ಎಂದರು.
ಸಾಧ್ಯ ಲೈಫ್ ಸಂಸ್ಥೆಯ ಮುಖ್ಯಸ್ಥ ಶಲ್ಪತಿ.ಕೆ ಹುಲ್ಲೂರ ಮಾತನಾಡಿ,‘ಯುವ ವಿದ್ಯಾರ್ಥಿಗಳಲ್ಲಿ ಅಡಗಿರುವ 10 ಸಾವಿರ ಕೋಟಿ ಕಂಪ್ಯೂಟರ್‌ಗಳಿಗೆ ಸಮನಾದ ಮನೋಶಕ್ತಿಯನ್ನು ಮಕ್ಕಳು ಗುರ್ತಿಸಿ, ಅದನ್ನು ಸರಿಯಾದ ರೀತಿಯಲ್ಲಿ ವ್ಯವಸ್ಥಿತವಾಗಿ ಬಳಸಿಕೊಂಡರೆ ಅನೇಕ ಅದ್ಬುತಗಳನ್ನು ಸಾಧಿಸಬಹುದು. ಹೆತ್ತವರ,ಗುರುಗಳ ಹಾಗು ದೇಶದ ಋಣವನ್ನು ಹೇಗೆ ತೀರಿಸಬಹುದು. ಯಶಸ್ವೀ ವ್ಯಕ್ತಿಗಳ ಹವ್ಯಾಸಗಳು ಮತ್ತು ಸೂತ್ರಗಳೇನು ಎಂದು ಮಕ್ಕಳಲ್ಲಿ ಪರಿವರ್ತನೆಗಾಗಿ ವೀಡಿಯೋ, ಕತೆ, ಯಶೋಗಾಥೆ ಹಾಗು ಗುಂಪು ಚಟುವಟಿಕೆಗಳ ಮೂಲಕ ವಿವರಿಸಿದರು.
ಗ್ರಾಮೀಣ ವಿದ್ಯಾರ್ಥಿಗಳಿಗೂ ಸಹ ವೇದಿಕ್ ಮ್ಯಾಥ್ಸ್ ಜ್ಞಾನ ತಲುಪಿಸುವ ಉದ್ದೇಶದಿಂದ 10 ದಿನಗಳ ತರಬೇತಿಯನ್ನು ಹಾಗು ಫವರ್ ಆಫ಼್ ಯೂಥ್ ಎನ್ನುವ ೪ ದಿನಗಳ ವ್ಯಕ್ತಿತ್ವ ವಿಕಾಸ ತರಬೇತಿಯನ್ನು ಹಮ್ಮಿಕೊಂಡಿದ್ದು ಅದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು. ಶಿಕ್ಷಕಿ ಸೈಯಿದಾ ಇಷ್ರತ್ ಹಾಜರಿದ್ದರು.
ಗ್ರಾಮೀಣ ಜೀವನಾಧಾರಗಳ ಅಭಿವೃದ್ಧಿ ಕುರಿತು ಜಾಗೃತಿ ಕಾರ್ಯಕ್ರಮ
ತಾಲ್ಲೂಕಿನ ತಲಕಾಯಲಬೆಟ್ಟದಲ್ಲಿ ಈಚೆಗೆ ಅಂತರಾಷ್ಟ್ರಿಯ ಮಹಿಳಾ ದಿನಾಚರಣೆಯಡಿಯಲ್ಲಿ ನೈಸರ್ಗಿಕ ಸಂಪನ್ಮೂಲಗಳ ಅಭಿವೃದ್ಧಿ ಮತ್ತು ನಿರ್ವಹಣೆ ಮೂಲಕ ಗ್ರಾಮೀಣ ಜೀವನಾಧಾರಗಳ ಅಭಿವೃದ್ಧಿ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ಶಿಡ್ಲಘಟ್ಟ ಮತ್ತು ಚಿಂತಾಮಣಿ ತಾಲ್ಲೂಕಿನ ಬಶೆಟ್ಟಳ್ಳಿ, ಎಸ್. ದೇವಗಾನಹಳ್ಳಿ, ದಿಬ್ಬೂರಹಳ್ಳಿ, ತಿಮ್ಮನಾಯಕನಹಳ್ಳಿ, ಈ. ತಿಮ್ಮಸಂದ್ರ, ಕೊರ್ಲಪರ್ತಿ ಮತ್ತು ತಲಕಾಯಲಬೆಟ್ಟದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವಂತಹ ೩೫ ಹಳ್ಳಿಯಲ್ಲಿರುವ ೭೦ ಸ್ವ-ಸಹಾಯ ಸಂಘಗಳಿಂದ ಪ್ರತಿನಿಧಿಗಳು, ಗ್ರಾಮ ಅಭಿವೃದ್ಧಿ ಸಮಿತಿ ಪ್ರತಿನಿಧಿಗಳು ಮತ್ತು ಸಮೂದಾಯ ಸಂಪನ್ಮೂಲ ವ್ಯಕ್ತಿಗಳು, ಒಟ್ಟು ೫೦೦ ಮಂದಿ ಈ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕುಟುಂಬದ ಅಭಿವೃದ್ಧಿಯಲ್ಲಿ ಮಹಿಳೆಯರು ಅತಿ ಮುಖ್ಯವಾದ ಪಾತ್ರವನ್ನು ನಿರ್ವಸುತ್ತಾ ಜೊತೆಗೆ ತನ್ನ ಗ್ರಾಮದ ಅಭಿವೃದ್ಧಿಯಲ್ಲಿಯೂ ಸಹಕಾರ ನಿಡುತ್ತಾರೆ. ಇಂದಿನ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಪುರುಷರಿಗೆ ಸಮಾನವಾಗಿ ಕಾರ್ಯನಿರ್ವಹಿಸುತ್ತಿರುವುದರ ಬಗ್ಗೆ ಹಾಗೂ ಸಾಮೂಹಿಕ ಭೂಮಿ, ಜಲಮೂಲಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯ ಬಗ್ಗೆ ಸಹ ಕಾರ್ಯಕ್ರಮದಲ್ಲಿ ವಿವರಣೆ ಮತ್ತು ಚರ್ಚೆ ನಡೆಸಲಾಯಿತು.
ದಿಬ್ಬೂರಹಳ್ಳಿ ಕೆನರಾ ಬ್ಯಾಂಕಿನ ವ್ಯವಸ್ಥಾಪಕ ಜಯಂತ್ ಕಲಾಸ್ಕರ ಬ್ಯಾಂಕಿನಿಂದ ಸಿಗುವಂತಹ ಸೌಲಭ್ಯಗಳು ಮತ್ತು ವಿಮೆ ಬಗ್ಗೆ ವಿವರವಾಗಿ ತಿಳಿಸಿದರು ಮತ್ತು ಸ್ವ-ಸಹಾಯ ಸಂಘಗಳು ಮುಂದೆ ಬರಲು ಪ್ರೇರೇಪಿಸಿದರು.
ಸಂಸ್ಥೆಯ ತರಬೇತಿದಾರ ಪಾರ್ಥ, ಹಿರಿಯ ಯೋಜನಾಧಿಕಾರಿ ನಿಖತ್ ಪರ್ವಿನ್, ಸಿಬ್ಬಂದಿಗಳಾದ ಸೌಭಾಗ್ಯ, ಗೋಪಿ, ಲೀಲಾವತಿ ಮತ್ತು ಕಲಾತಂಡದವರು ಹಾಜರಿದ್ದರು.
ಪುಸ್ತಕದಿಂದ ಸಮಾಜ ಪರಿವರ್ತನೆ
ಕಲಿಯುವ ಕೈಗೆ ಓದುವ ಪುಸ್ತಕ ನನ್ನ ಮೆಚ್ಚಿನ ಪುಸ್ತಕ ಎಂಬ ಶೀರ್ಷಿಕೆಯಡಿ ವಿಷಯ ಮಂಡಿಸಿದ ವಿದ್ಯಾರ್ಥಿಗಳು ಪುಸ್ತಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಓದುವುದರಿಂದ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯವಾಗುತ್ತದೆ. ದೇಶದಲ್ಲಿ ಕಲಿತ ವಿದ್ಯೆ ದೇಶದ ಅಭಿವೃದ್ಧಿಗೆ ಸಹಕಾರಿಯಾಗಬೇಕು ಎಂದು ಮಂಡಿಸಿದರು. ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು
6ನೇ ಕನ್ನಡ ಸಾಹಿತ್ಯ ಸಮ್ಮೇಳನ
ತೆಲುಗು ಭಾಷೆಯ ಪ್ರಭಾವವೇ ಹೆಚ್ಚಾಗಿರುವ ರೇಷ್ಮೆನಗರಿಯೆಂದೇ ಖ್ಯಾತಿಯನ್ನು ಗಳಿಸಿಕೊಂಡಿರುವ ಶಿಡ್ಲಘಟ್ಟದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿಕೊಂಡಿರುವ ಛಾಯಾಗ್ರಾಹಕ, ಲೇಖಕ ಡಿ.ಜಿ. ಮಲ್ಲಿಕಾರ್ಜುನ ಅವರ ಅಧ್ಯಕ್ಷತೆಯಲ್ಲಿ 6 ನೇ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ನೆರವೇರಿತು.
ನಗರದ ವಾಸವಿ ಕಲ್ಯಾಣಮಂಟಪದಲ್ಲಿ ಬೆಳಿಗ್ಗೆ 8 ಗಂಟೆಗೆ ರಾಷ್ಟ್ರದ್ವಜವನ್ನು ತಹಶೀಲ್ದಾರರ ಬದಲಿಗೆ ಶಿರಸ್ತೆದಾರ್ ನರೇಂದ್ರಬಾಬು ನೆರವೇರಿಸಿದರು. ನಾಡಧ್ವಜಾರೋಹಣವನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ವೆಂಕಟೇಶ್ ನೆರವೇರಿಸಿದರು. ಸಾಹಿತ್ಯ ಪರಿಷತ್ತಿನ ಧ್ವಜಾರೋಹಣವನ್ನು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ನೆರವೇರಿಸಿದರು. ನಾಡಗೀತೆಯನ್ನು ನಗರದ ಆಶಾಕಿರಣ ಅಂಧಮಕ್ಕಳ ಶಾಲೆಯ ವಿದ್ಯಾರ್ಥಿಗಳು ನೆರವೇರಿಸಿಕೊಟ್ಟರು. ರೈತ ಗೀತೆಯನ್ನು ಎಂ.ಕೆಂಪಣ್ಣ ಮತ್ತು ಟಿ.ನಾರಾಯಣಸ್ವಾಮಿ ತಂಡದವರು ನೆರವೇರಿಸಿಕೊಟ್ಟರು.
ಬೆಳಿಗ್ಗೆ 10.30 ಗಂಟೆಗೆ ನಗರದ ಬಸ್ ನಿಲ್ದಾಣದ ಬಳಿ ತಾಯಿ ಭುವನೇಶ್ವರಿ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಪೊಲೀಸ್ ಸಿಪಿಐ ಟಿ.ಸಿ.ವೆಂಕಟೇಶ್ ಚಾಲನೆ ನೀಡಿದರು. ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾವಿದರ ತಂಡಗಳ ಸಂಗೀತ ವಾದ್ಯಗಳೊಂದಿಗೆ, ನಗರದ ಸವಿತಾ ಸಮಾಜದ ಕಲಾವಿದರ ತಂಡಗಳ ಮಂಗಳವಾದ್ಯಗಳೊಂದಿಗೆ ಮೆರಣಿಗೆ ನಡೆಯಿತು. ನಗರದ ಕೋಟೆ ವೃತ್ತದ ಮುಖಾಂತರ ವಾಸವಿ ಕಲ್ಯಾಣಮಂಟಪಕ್ಕೆ ತಲುಪಿತು. ಈ ಮಧ್ಯೆ ಮೆರವಣಿಗೆ ಹೊರಟಿದ್ದ ರಸ್ತೆಯುದ್ದಕ್ಕೂ ವಿವಿಧ ಶಿಕ್ಷಣ ಸಂಸ್ಥೆಗಳ ಮಕ್ಕಳು, ಸಾರ್ವಜನಿಕರು ಪುಷ್ಪ ನಮನಗಳ ಮೂಲಕ ಗೌರವ ಸಲ್ಲಿಸಿದರು.
ಮೆರವಣಿಗೆ ಪೂರ್ಣಕುಂಭ ಸ್ವಾಗತ ಕೋರಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಂಗನವಾಡಿ ಕೆಂದ್ರಗಳ ಕಾರ್ಯಕರ್ತೆಯರಿಂದ ಕಲಶಗಳೊಂದಿಗೆ ಸ್ವಾಗತ ಕೋರುವುದರ ಜೊತೆಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ವಾಸವಿ ಕಲ್ಯಾಣ ಮಂಟಪದಲ್ಲಿ ನೇಗಿಲ ಯೋಗಿ ಅನ್ನದಾತ ವೇದಿಕೆಯಲ್ಲಿ ಆಯೋಜನೆಗೊಂಡಿದ್ದ 6 ನೇ ಸಾಹಿತ್ಯ ಸಮ್ಮೇಳನದಲ್ಲಿ ನಾಡಗೀತೆ, ರೈತಗೀತೆಗಳ ಗಾಯನ ಕಾರ್ಯಕ್ರಮವನ್ನು ಮಹೇಶ್ ಮತ್ತು ರವಿಕೋಲಾರ್ ಅವರ ತಂಡ ನಡೆಸಿಕೊಟ್ಟಿತು. ಈ ನಡುವೆ ನಾಡು, ನುಡಿಯ ಹಿರಿಮೆಯ ಬಗ್ಗೆ ಹಲವಾರು ಸಾಹಿತಿಗಳು ಬರೆದಿರುವ ಸಾಹಿತ್ಯ ಹಾಡುಗಳನ್ನು ಹಾಡುವ ಮೂಲಕ ನೆರೆದಿದ್ದ ಸಭೀಕರಲ್ಲಿ ಕನ್ನಡಾಭಿಮಾನ ಮೂಡಿಸಿದರು.
ಸಾಹಿತ್ಯ ಸಮ್ಮೇಳನದ ಅಂಗವಾಗಿ ವಿವಿಧ ಲೇಖಕರು ಬರೆದಿದ್ದ ಕನ್ನಡ ಪುಸ್ತಕಗಳ ಮಳಿಗೆಗಳನ್ನು ತೆರೆಯಲಾಗಿತ್ತು. ಪುಸ್ತಕ ಮಳಿಗೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೈವಾರ ಎನ್.ಶ್ರೀನಿವಾಸ್ ಉದ್ಘಾಟನೆ ಮಾಡಿದರು. ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಆಗಮಿಕರು ಹಾಗೂ ಅರ್ಚಕರ ವೇದಘೋಷಗಳೊಂದಿಗೆ ಆರಂಭ ಮಾಡಲಾಯಿತು. ಎಸ್.ವಿ.ಮಾಲತಿ, ಟಿ.ಸಾವಿತ್ರಮ್ಮ ಅವರು ಪ್ರಾರ್ಥನೆ ನೆರವೇರಿಸಿಕೊಟ್ಟರು. ಭುವನೇಶ್ವರಿ ಭಾವಚಿತ್ರವನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ ಅನಾವರಣಗೊಳಿಸಿದರು. ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಿ.ಜಿ.ಮಲ್ಲಿಕಾರ್ಜುನ ಅವರು ರಚಿಸಿರುವ ‘ನಮ್ಮ ಶಿಡ್ಲಘಟ್ಟ’ ಪುಸ್ತಕ ಬಿಡುಗಡೆ ಮಾಡಲಾಯಿತು. ಪರಿಷತ್ತಿನ ದ್ವಜವನ್ನು ನಿಕಟ ಪೂರ್ವ ಅಧ್ಯಕ್ಷ ಎನ್.ಶಿವಣ್ಣ ಹಸ್ತಾಂತರಿಸಿದರು.
ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ವೇದಿಕೆಯ ಅಧ್ಯಕ್ಷತೆ ವಹಿಸಿ ಶಾಸಕ ಎಂ.ರಾಜಣ್ಣ ಮಾತನಾಡಿ, ಸಾಹಿತ್ಯ ಸಮ್ಮೇಳನಗಳು ಗ್ರಾಮಾಂತರ ಪ್ರದೇಶಗಳಲ್ಲಿ ನೆರವೇರಬೇಕು. ಗ್ರಾಮೀಣ ಭಾಗದಲ್ಲಿನ ಜನರಿಗೆ ಭಾಷೆ, ಕಲೆ, ಸಾಹಿತ್ಯ,ಜಾನಪದ ಕಲೆಗಳಿಗಿರುವ ಹಿರಿಮೆಯ ಬಗ್ಗೆ ಅರಿವು ಮೂಡಿಸಬೇಕು. ಯುವಜನರು ಸಾಹಿತ್ಯಾಸಕ್ತರಾಗಬೇಕು ಎಂದರು.
ನಿಕಟ ಪೂರ್ವ ಅಧ್ಯಕ್ಷ ಎನ್.ಶಿವಣ್ಣ ಮಾತನಾಡಿ, ಸಾಹಿತ್ಯ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಬೇಕಾದರೆ ಯುವಜನರು ಹೆಚ್ಚು ಆಸಕ್ತಿ ವಹಿಸಬೇಕು. ಮುಂದಾಳತ್ವ ವಹಿಸಬೇಕು. ಹಿರಿಯರು ಮಾರ್ಗದರ್ಶನ ನೀಡಬೇಕು. ಯಾವುದೇ ಸಂಸ್ಕೃತಿಯಲ್ಲಿನ ಹಿರಿಮೆ ಅನಾವರಣಗೊಳ್ಳಬೇಕಾದರೆ ಇದಕ್ಕೆ ಮೂಲ ಕಾರಣ ಭಾಷೆ, ಅಂತಹ ಭಾಷಾಭಿಮಾನ ಬೆಳೆಸಿಕೊಳ್ಳಬೇಕು. ಪ್ರಾಂತೀಯ ಭಾಷೆಗಳು ಸಕ್ರಿಯವಾದಾಗ ಮಾತ್ರ ಭಾಷೆಗಳು ಉಳಿಯುತ್ತವೆ. ಪ್ರಾಂತೀಯ ಭಾಷೆಗಳಿಗೆ ಉತ್ತಮ ಸ್ಥಾನಮಾನ ಸಿಗದಿದ್ದರೆ ಗಂಡಾಂತರ ಕಾದಿದೆ. ಯುವಜನರು ಕನ್ನಡ ಸೇನೆ ಕಟ್ಟುವ ಮೂಲಕ ಯುವಜನತೆಯಲ್ಲಿ ಜಾಗೃತಿ ಮೂಡಿಸಬೇಕು. ಕನ್ನಡಿಗರಿಂದಲೇ ಕನ್ನಡ ಭಾಷೆಗೆ ಧಕ್ಕೆಯಾಗುತ್ತಿದ್ದು ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಧರ್ಮ ಜಾತಿ ರಹಿತವಾದ ಚಿಂತನೆಗಳು ನಡೆಯಬೇಕು. ಶಾಲೆಗಳಲ್ಲಿರುವ ಗ್ರಂಥ ಭಂಡಾರಗಳು ಧೂಳು ತಿನ್ನುತ್ತಿದ್ದು ಮಕ್ಕಳಿಗೆ ಕನ್ನಡ ಪುಸ್ತಕಗಳನ್ನು ಓದುವಂತಹ ಹವ್ಯಾಸ ಬೆಳೆಸಬೇಕು ಎಂದರು.
ತಹಶೀಲ್ದಾರ್ ಅಜಿತ್ ಕುಮಾರ್ ರೈ ಮಾತನಾಡಿ, ತಾಲ್ಲೂಕಿನ ಗಡಿಭಾಗಗಳಲ್ಲಿನ ಜನರಿಗೆ ಕನ್ನಡದ ಭಾಷೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಕನ್ನಡದಲ್ಲಿ ವ್ಯವಹರಿಸುವುದನ್ನು ಕಲಿಸಿಕೊಡಬೇಕು ಎಂದರು.
ಹಿರಿಯ ಸಾಹಿತಿ ಸ.ರಘುನಾಥ್ ಮಾತನಾಡಿ, ಸಾಹಿತ್ಯವೆಂಬುದಕ್ಕೆ ಹಲವಾರು ಆಯಾಮಗಳಿಗೆ,ವಿಭಿನ್ನವಾದ ಮುಖಗಳನ್ನು ಹೊಂದಿಕೊಂಡಿದ್ದು ಛಾಯಾಗ್ರಹಣ ಒಂದು ಕಲೆಯಾಗಿದ್ದು ಛಾಯಾಗ್ರಹಣ ಮೂಲಕ ತೆಗೆದಂತಹ ಅದೆಷ್ಟೋ ಚಿತ್ರಗಳು ಅಕ್ಷರ ರೂಪದ ಭಾಷೆಗೆ ತರ್ಜುಮೆಗೊಂಡು ಇತಿಹಾಸವನ್ನು ಮುಂದಿನ ಪೀಳಿಗೆಗೆ ಸಾರಲು ಸಹಕಾರಿಯಾಗುತ್ತವೆ. ಇಂತಹ ಸಾಹಿತ್ಯವನ್ನು ಉಳಿಸಬೇಕಾದಂತಹ ಹೊಣೆಗಾರಿಕೆ ಪ್ರತಿಯೊಬ್ಬ ನಾಗರಿಕರ ಮೇಲಿದೆ. ಶಿಡ್ಲಘಟ್ಟ ಕನ್ನಡ ಸಾಹಿತ್ಯ ಪರಿಷತ್ತು ಅಪಾರ ಪ್ರಮಾಣದ ಪುಸ್ತಕಗಳನ್ನು ಖರೀದಿ ಮಾಡುವ ಮೂಲಕ ಒಬ್ಬ ಲೇಖಕನ ಸಾಲ ತೋರಿಸಲು ಸಹಕಾರಿಯಾಗಿದೆ ಎಂದರು.
ಸಮ್ಮೇಳನಾಧ್ಯಕ್ಷರಾಗಿ ಡಿ.ಜಿ.ಮಲ್ಲಿಕಾರ್ಜುನ ಮಾತನಾಡಿ, ಸಹಕಾರಿ ತತ್ವದಡಿಯಲ್ಲಿ ಬದುಕುವುದನ್ನು ರೂಢಿಸಿಕೊಳ್ಳಬೇಕು. ಪ್ರಸ್ತುತ ಜನರ ಗಂಭೀರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ನಿರಂತರವಾಗಿ ಜಲಪಹರಣಗಳು ನಡೆಯುತ್ತಿವೆ. ಬಯಲು ಸೀಮೆ ಭಾಗಕ್ಕೆ ನ್ಯಾಯಬದ್ಧವಾಗಿ ಸಿಗಬೇಕಾದ ನ್ಯಾಯ ಸಿಗುತ್ತಿಲ್ಲ. ಆಡಳಿತ ವ್ಯವಸ್ಥೆ ಬದಲಾಗಬೇಕು. ಭ್ರಷ್ಟಾಚಾರ ಮುಕ್ತವಾದ ಆಡಳಿತ ಸಿಗಬೇಕು. ಗ್ರಾಮೀಣ ಭಾಗದಲ್ಲಿನ ಜನರ ಬದುಕು ಸುಧಾರಣೆಯಾಗಬೇಕು. ಪ್ರತಿಯೊಂದು ಸರ್ಕಾರಿ ಶಾಲೆಗಳು ಸೇರಿದಂತೆ ರಾಜ್ಯದಲ್ಲಿನ ಎಲ್ಲಾ ಶಾಲೆಗಳಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಪ್ರಾತಿನಿದ್ಯ ಸಿಗಬೇಕು. ತಾಲ್ಲೂಕಿನ ಸಾಂಸ್ಕೃತಿಕ ಪರಂಪರೆಯನ್ನುಉಳಿಸಬೇಕು. ತಾಲ್ಲೂಕಿನಲ್ಲಿರುವ ಪ್ರಸಿದ್ಧ ಸ್ಥಳಗಳಾದ ತಲಕಾಯಲಬೆಟ್ಟ, ರಾಮಲಿಂಗೇಶ್ವರ ಬೆಟ್ಟ, ಒಡೆಯನಕೆರೆ, ವೆಂಕಟಾಪುರದ ಪಾರಂಪರಿಕ ಬೇವಿನ ಮರಗಳು ಸೇರಿದಂತೆ ಎಲ್ಲವನ್ನು ಪ್ರವಾಸಿ ತಾಣಗಳನ್ನಾಗಿ ಮಾಡಲು ಪ್ರವಾಸೋದ್ಯಮ ಇಲಾಖೆ ಮುಂದಾಗಬೇಕು. ದೇಶೀ ತಳಿಯ ಹಸುಗಳ ಪೋಷಣೆಗೆ ಜನರು ಮುಂದಾಗಬೇಕು. ರೈತರು ಬೆಳೆಯುತ್ತಿರುವ ಬೆಳೆಗಳಿಗೆ ವೈಜ್ಞಾನಿಕ ಬೆಲೆಗಳನ್ನು ನಿಗದಿಪಡಿಸಬೇಕು. ಮಕ್ಕಳಿಗೆ ಸಾಹಿತ್ಯಾಭಿರುಚಿ ಬೆಳೆಸಲು ಅಗತ್ಯವಾಗಿರುವ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದರು.
ವಿದ್ಯಾರ್ಥಿಗಳಿಂದ ಕವಿಗೋಷ್ಠಿ ಏರ್ಪಡಿಸಲಾಗಿತ್ತು. ಶಾಲಾ ಮಕ್ಕಳು ತಾಯಿ, ನೀರಿನ ಅಭಾವ,ಭಾಷೆಯ ಮುಂತಾದ ವಿಚಾರಗಳ ಬಗ್ಗೆ ಕವನಗಳನ್ನು ವಾಚಿಸಿದರು. ಕಲಿಯುವ ಕೈಗೆ ಓದುವ ಪುಸ್ತಕ ಎಂಬ ಕಾರ್ಯಕ್ರಮದಡಿಯಲ್ಲಿ ನನ್ನ ಮೆಚ್ಚಿನ ಪುಸ್ತಕ ಕಾರ್ಯಕ್ರಮ ಆಯೋಜನೆ ಮಾಡಿದ್ದು, ವಿದ್ಯಾರ್ಥಿಗಳು ತಾವು ಮೆಚ್ಚಿ ಓದಿದ ಪುಸ್ತಕದ ಕುರಿತು ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ, ತಹಶೀಲ್ದಾರ್ ಅಜೀತ್ ಕುಮಾರ್ ರೈ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ, ಕಸಾಪ ಜಿಲ್ಲಾಧ್ಯಕ್ಷ ಕೈವಾರ ಎನ್.ಶ್ರೀನಿವಾಸ್, ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತ ಕೃಷ್ಣ, ಮಾಜಿ ಅಧ್ಯಕ್ಷ ಎಸ್.ವಿ.ನಾಗರಾಜ್ ರಾವ್, ಸಾಹಿತಿಗಳಾದ ಸ.ರಘುನಾಥ್, ನಿಕಟ ಪೂರ್ವ ಅಧ್ಯಕ್ಷರಾದ ಡಾ.ಸತ್ಯನಾರಾಯಣರಾವ್, ಶಿವಣ್ಣ, ರೈತ ಸಂಘದ ಭಕ್ತರಹಳ್ಳಿ ಬೈರೇಗೌಡ, ತಾದೂರು ಮಂಜುನಾಥ್, ರವಿಪ್ರಕಾಶ್, ಪ್ರತೀಶ್, ಬಿ.ವಿರೂಪಾಕ್ಷಪ್ಪ ಸೇವಾ ಟ್ರಸ್ಟ್ ಅಧ್ಯಕ್ಷ ಜೆ.ಸಂದೀಪ್ ಮತ್ತಿತರರು ಹಾಜರಿದ್ದರು.
ಸಮಾನತೆಯನ್ನು ನಾವೇ ಪಡೆದುಕೊಳ್ಳಬೇಕು
ಸಂವಿಧಾನದಲ್ಲಿ ಮಹಿಳೆಯರಿಗೆ ಸಮಾನತೆಯನ್ನು ಕೊಟ್ಟಿದ್ದು ಅವುಗಳನ್ನು ಪಡೆಯಲು ಮುಂದಾಗಬೇಕಿದೆ ಎಂದು ಸರ್ಕಾರಿ ವಕೀಲೆ ಕುಮುದಿನಿ ತಿಳಿಸಿದರು.
ನಗರದ ವೇಣುಗೋಪಾಲಸ್ವಾಮಿ ದೇವಾಲಯದ ಸಭಾಂಗಣದಲ್ಲಿ ಬುಧವಾರ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್ನಿಂದ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ಜಗತ್ತಿನಲ್ಲಿ ಮೊದಲಿನಿಂದಲೂ ಮಹಿಳೆಯರ ಮೇಲೆ ದೈಹಿಕ, ಮಾನಸಿಕ ದೌರ್ಜನ್ಯ ನಡೆಯುತ್ತಲೆ ಬಂದಿದೆ. ಈಗಲೂ ಮುಂದುವರೆದಿದೆ. ಮಹಿಳೆಯರ ಮೇಲಿನ ಎಲ್ಲ ರೀತಿಯ ದೌರ್ಜನ್ಯಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಜತೆಗೆ ಕಾನೂನುಗಳಿಂದಲೆ ಎಲ್ಲವನ್ನೂ ನಿಯಂತ್ರಿಸಲು ಸಾಧ್ಯವಿಲ್ಲ. ಮಹಿಳೆಯರು ತಮ್ಮಲ್ಲಿನ ಸಾಮರ್ಥ್ಯವನ್ನು ಗುರ್ತಿಸಿಕೊಂಡು ಸ್ವಯಂ ರಕ್ಷಣೆಗೂ ಮುಂದಾಗಬೇಕಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಮಾಕ್ಷಿ ಶಶಿಧರ್ ಮಾತನಾಡಿ, ಸಂವಿಧಾನದಲ್ಲಿ ಮಹಿಳೆಯರಿಗೆ ಶೇ.೫೦ರಷ್ಟು ಮೀಸಲಾತಿಯನ್ನು ನೀಡಿದ್ದರೂ ಪ್ರಾಯೋಗಿಕವಾಗಿ ಅದು ಸಮರ್ಪಕವಾಗಿ ಜಾರಿ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜಾನಪದ ಕಲಾವಿದ ದೇವರಮಳ್ಳೂರು ಮಹೇಶ್ ಮತ್ತು ತಂಡದವರಿಂದ ಮಹಿಳೆಯ ಸಬಲೀಕರಣ, ಪರಿಸರ ಕುರಿತು ಗಾಯನ ನಡೆಯಿತು.
ವಿವೇಕಾನಂದ ಸೇವಾ ಟ್ರಸ್ಟ್ನ ಅಧ್ಯಕ್ಷ ಮುನೀಂದ್ರ, ನಗರಸಭೆಯ ಸಮುದಾಯ ಸಂಘಟಕರಾದ ಸುಧಾ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೆಶಕಿ ಅನಸೂಯಮ್ಮ ಮತ್ತಿತರರು ಹಾಜರಿದ್ದರು.
ದಲಿತಪರ ಸಂಘಟನೆಗಳ ಮುಖಂಡರ ಪ್ರತಿಭಟನೆ
ತಾಲೂಕಿನ ವಿವಿಧ ದಲಿತ ಸಂಘಟನೆಗಳ ಮುಖಂಡರನ್ನು ಸಭೆಗೆ ಆಹ್ವಾನಿಸಿ ಮುಖಂಡರೆಲ್ಲಾ ಸಭೆಯಲ್ಲಿ ಪಾಲ್ಗೊಳ್ಳಲು ಬಂದಾಗ ಸಭೆ ಕರೆದಿರುವ ತಹಸೀಲ್ದಾರ್ ಕಚೇರಿಯಲ್ಲಿಲ್ಲದೇ ಮುಖಂಡರನ್ನು ಕಾಯಿಸುವ ಮೂಲಕ ದಲಿತ ಮುಖಂಡರಿಗೆ ಅವಮಾನವೆಸಗಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್ ಆರೋಪಿಸಿದರು.
ಇದೇ ಮಾರ್ಚ್ ೧೦ ರಂದು ದಲಿತ ವಚನಕಾರರ ಜಯಂತಿಯನ್ನು ಆಚರಿಸುವ ಸಲುವಾಗಿ ಬುಧವಾರ ಸಂಜೆ ೪.೩೦ ಕ್ಕೆ ಪೂರ್ವಭಾವಿ ಸಭೆಯನ್ನು ಕರೆದಿದ್ದ ತಹಶೀಲ್ದಾರ್ ಎಸ್.ಅಜಿತ್‌ಕುಮಾರ್‌ರೈ ಸಭೆಯ ಸಮಯಕ್ಕೆ ಕಚೇರಿಯಲ್ಲಿಲ್ಲದೇ ಸಭೆಗೆ ಬಂದಿದ್ದ ದಲಿತ ಮುಖಂಡರನ್ನು ಸುಮಾರು ಹೊತ್ತು ಕಾಯಿಸಿದ್ದರಿಂದ ಬೇಸತ್ತ ಮುಖಂಡರು ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ರ ವಿರುದ್ದ ಘೋಷಣೆಗಳನ್ನು ಕೂಗಿದರು.
ತಾಲ್ಲೂಕಿನ ವಿವಿಧ ದಲಿತಪರ ಸಂಘಟನೆಗಳ ಮುಖಂಡರಿಗೆ ಸಭೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದ್ದ ತಹಶೀಲ್ದಾರರು ಕಚೇರಿಯಲ್ಲಿಲ್ಲ. ಇಲ್ಲಿರುವ ಅಧಿಕಾರಿಗಳನ್ನು ಈ ಬಗ್ಗೆ ವಿಚಾರಿಸಿದರೆ ಸಾಹೇಬರು ಬೇರೆ ಸಭೆಯಲ್ಲಿದ್ದಾರೆ ಬರುವವರೆಗೂ ಕಾಯುವಂತೆ ತಿಳಿಸುತ್ತಾರೆ. ಪೂರ್ವಭಾವಿ ಸಭೆ ಕರೆಯುವಂತೆ ನಾವೇನಾದರೂ ಒತ್ತಾಯ ಮಾಡಿದ್ದೆವಾ. ಅವರೇ ಕರೆದಿರುವ ಸಭೆಯಲ್ಲಿ ಪಾಲ್ಗೊಳ್ಳಲು ಬಂದಿರುವ ನಮ್ಮನ್ನು ವಿನಾ ಕಾರಣ ಕಾಯಿಸುವ ಮೂಲಕ ದಲಿತರ ಪರ ಅವರಿಗೆ ಎಷ್ಟು ಕಾಳಜಿಯಿದೆ ಎನ್ನುವುದನ್ನು ಪ್ರದರ್ಶಿಸಿದ್ದಾರೆ ಎಂದರು.
ದಲಿತ ವಚನಕಾರರ ಜಯಂತಿಯ ಪೂರ್ವಭಾವಿ ಸಭೆಯನ್ನೇ ಸುಸೂತ್ರವಾಗಿ ನಡೆಸಲಾರದ ತಹಶೀಲ್ದಾರರು ಜಯಂತಿಯನ್ನು ಎಷ್ಟು ಮಾತ್ರ ಆಚರಿಸುತ್ತಾರೆ. ದಲಿತರ ಬಗ್ಗೆ ಇವರಿಗೆ ಎಷ್ಟು ಮಾತ್ರ ಕಾಳಜಿಯಿದೆ ಎಂದ ಪ್ರತಿಭಟನಾಕಾರರು ತಹಶೀಲ್ದಾರರಿಗೆ ದಿಕ್ಕಾರ ಎಂಬ ಘೋಷಣೆಗಳನ್ನು ಕೂಗುತ್ತಾ ಕೆಲ ಕಾಲ ತಾಲ್ಲೂಕು ಕಚೇರಿಗೆ ಅಡ್ಡಲಾಗಿ ಕುಳಿತು ಪ್ರತಿಭಟಿಸಿದರು.
ದಸಂಸ ತಾಲೂಕು ಸಂಚಾಲಕ ಎನ್.ವೆಂಕಟೇಶ್, ಕದಸಂಸ ಸಂಚಾಲಕ ದಡಂಘಟ್ಟ ತಿರುಮಲೇಶ್, ಅರುಣ್‌ಕುಮಾರ್, ಚಲಪತಿ, ನಾಗನರಸಿಂಹ, ರವಿ, ಕೃಷ್ಣಪ್ಪ, ಮಾದಿಗ ದಂಡೋರ ಅಧ್ಯಕ್ಷ ಗುರುಮೂರ್ತಿ, ಪ್ರಕಾಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ನಿವೇಶನ ರಹಿತ ಫಲಾನುಭವಿಗಳ ಪಟ್ಟಿಗಳ ಸಿದ್ಧಪಡಿಸಿ
ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ನಿವೇಶನ ರಹಿತ ಫಲಾನುಭವಿಗಳ ಪಟ್ಟಿಗಳ ಸಿದ್ಧಪಡಿಸಿ ಗ್ರಾಮಸಭೆಗಳಲ್ಲಿ ಫಲಾನುಭವಿಗಳನ್ನು ಅನುಮೋದನೆ ನೀಡಿ ತಾಲ್ಲೂಕು ಪಂಚಾಯಿತಿಗೆ ಸಲ್ಲಿಸುವಂತೆ ಗ್ರಾಮ ಪಂಚಾಯಿತಿಗಳ ಪಿ.ಡಿ.ಓ.ಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೆ.ಮಂಜುನಾಥ್ ತಿಳಿಸಿದರು.
ನಗರದ ಸ್ತ್ರೀಶಕ್ತಿ ಭವನದಲ್ಲಿ ಬುಧವಾರ ಆಯೋಜನೆ ಮಾಡಲಾಗಿದ್ದ ತಾಲ್ಲೂಕಿನ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳ ಸಭೆಯಲ್ಲಿ ಅವರು ಅಧಿಕಾರಿಗಳೊಂದಿಗೆ ಮಾತನಾಡಿದರು.
ತಾಲ್ಲೂಕಿನಾದ್ಯಂತ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ಸರ್ಕಾರಿ ಭೂಮಿಗಳನ್ನು ಸರ್ವೆ ಮಾಡಿ ನಿವೇಶನಗಳಿಗೆ ಅಗತ್ಯವಾಗಿರುವ ಭೂಮಿಗಳನ್ನು ಗುರ್ತಿಸಬೇಕು. ಒಂದು ವೇಳೆ ಸರ್ಕಾರಿ ಭೂಮಿ ಲಭ್ಯವಾಗದಿದ್ದಲ್ಲಿ ಹಳ್ಳಿಗಳ ಸಮೀಪದಲ್ಲಿರುವ ಭೂಮಿಯನ್ನು ಸರ್ಕಾರ ನಿಗದಿಪಡಿಸಿರುವ ಧರಗಳಿಗೆ ಅನುಸಾರವಾಗಿ ನಿಯಮಾನುಸಾರವಾಗಿ ಖರೀದಿ ಮಾಡಿಕೊಂಡು ವಸತಿಗಳ ಉದ್ದೇಶಕ್ಕಾಗಿ ಭೂ ಮಂಜೂರಾತಿಗೆ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಬೇಕು ಎಂದು ಭೂ ಮಾಪನ ಇಲಾಖೆಗೆ ಸೂಚಿಸಿದರು.
ಈಗಾಗಲೇ ಫಲಾನುಭವಿಗಳ ಪಟ್ಟಿಗಳು ಸಿದ್ಧವಾಗಿದ್ದರೆ ಮತ್ತೊಂದು ಬಾರಿ ಮನೆ ಮನೆಗೆ ಹೋಗಿ ಗಣತಿ ಮಾಡಿಕೊಂಡು ನಿಜವಾದ ಫಲಾನುಭವಿಗಳನ್ನು ಗುರ್ತಿಸಿ ಪಟ್ಟಿ ಸಲ್ಲಿಸಬೇಕು ಎಂದರು.
ವಸತಿ ರಹಿತರಿಗೆ ವಸತಿ ಸೌಕರ್ಯವನ್ನು ಕಲ್ಪಿಸುವುದು ಹಾಗೂ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡುವ ಕಡೆಗೆ ಎಲ್ಲಾ ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಶಾಸಕ ಎಂ.ರಾಜಣ್ಣ ಈ ಸಂದರ್ಭದಲ್ಲಿ ಹೇಳಿದರು.
ಅಪರ ಜಿಲ್ಲಾಧಿಕಾರಿ ಅನುರಾಧ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲ ಮುನಿರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ತಹಶೀಲ್ದಾರ್ ಅಜಿತ್ ಕುಮಾರ್ ರೈ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸತೀಶ್, ತನುಜಾರಘು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು ಹಾಜರಿದ್ದರು.
ಆರನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ
ನಗರದ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಮಾರ್ಚ್ 10ರಂದು ಆರನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ.
ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮವಿದ್ದು, ರಾಷ್ಟ್ರಧ್ವಜವನ್ನು ತಹಶೀಲ್ದಾರ್ ಎಸ್.ಅಜಿತ್‌ಕುಮಾರ್ ರೈ, ನಾಡಧ್ವಜವನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಎಂ.ವೆಂಕಟೇಶ್, ಪರಿಷತ್ತಿನ ಧ್ವಜವನ್ನು ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಆರೋಹಣ ಮಾಡಲಿದ್ದಾರೆ. ನಾಡಗೀತೆಯನ್ನು ಆಶಾಕಿರಣ ಅಂಧ ಮಕ್ಕಳ ಶಾಲೆ ವಿದ್ಯಾರ್ಥಿಗಳು ನಡೆಸಿಕೊಡುವರು.
ತಾಯಿ ಭುವನೇಶ್ವರಿ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಬೆಳಿಗ್ಗೆ 9.30 ಗಂಟೆಗೆ ನಗರದ ಬಸ್ ನಿಲ್ದಾಣದಿಂದ ಆಯೋಜಿಸಲಾಗಿದೆ. ಮೆರವಣಿಗೆಯ ಚಾಲನೆಯನ್ನು ಸರ್ಕಲ್ ಇನ್ಸ್‌ಪೆಕ್ಟರ್ ಟಿ.ಸಿ.ವೆಂಕಟೇಶ್ ನೀಡಲಿದ್ದಾರೆ.
ಉದ್ಘಾಟನಾ ಸಮಾರಂಭವನ್ನು ಬೆಳಿಗ್ಗೆ 11 ಗಂಟೆಗೆ ವಾಸವಿ ಕಲ್ಯಾಣ ಮಂಟಪದಲ್ಲಿ ‘ನೇಗಿಲ ಯೋಗಿ ಅನ್ನದಾತ ವೇದಿಕೆ’ಯಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಂ.ರಾಜಣ್ಣ ವಹಿಸಲಿದ್ದಾರೆ. ಸಮ್ಮೇಳನಕ್ಕೆ ಚಾಲನೆಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ನೀಡಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲ ಮುನಿರಾಜು ಮಾಡುವರು. ಭುವನೇಶ್ವರಿ ಭಾವಚಿತ್ರ ಅನಾವರಣವನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣ, ಪುಸ್ತಕ ಮಳಿಗೆಯ ಉದ್ಘಾಟನೆಯನ್ನು ಕಸಾಪ ಜಿಲ್ಲಾಧ್ಯಕ್ಷ ಕೈವಾರ ಎನ್.ಶ್ರೀನಿವಾಸ್ ನೆರವೇರಿಸುವರು.
ಡಿ.ಜಿ.ಮಲ್ಲಿಕಾರ್ಜುನ ಅವರ ‘ನಮ್ಮ ಶಿಡ್ಲಘಟ್ಟ’ ಪುಸ್ತಕ ಬಿಡುಗಡೆಯಾಗಲಿದ್ದು, ಪುಸ್ತಕ ಕಿರು ಪರಿಚಯ ಮತ್ತು ಸಮ್ಮೇಳನಾಧ್ಯಕ್ಷರ ಪರಿಚಯವನ್ನು ಸಾಹಿತಿ ಸ.ರಘುನಾಥ ಮಾಡುವರು.
ನಿಕಟಪೂರ್ವ ಅಧ್ಯಕ್ಷ ಎನ್.ಶಿವಣ್ಣ ಅವರಿಂದ ಪರಿಷತ್ತಿನ ಧ್ವಜ ಹಸ್ತಾಂತರಿಸಲಾಗುವುದು. ನಂತರ ಸಮ್ಮೇಳನಾಧ್ಯಕ್ಷರ ಭಾಷಣ ಇರುತ್ತದೆ.
ಮಧ್ಯಾಹ್ನ 2 ಗಂಟೆಗೆ ವಿದ್ಯಾರ್ಥಿ ಕವಿಗೋಷ್ಠಿ ನಡೆಯಲಿದೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಶಿಕ್ಷಕಿ ಎಂ.ಎಸ್.ವಿದ್ಯಾ ವಹಿಸಲಿದ್ದಾರೆ. ತಾಲ್ಲೂಕಿನ ವಿವಿಧ ಶಾಲೆಗಳ 13 ಮಂದಿ ವಿದ್ಯಾರ್ಥಿ ಕವಿಗಳು ಕವನ ವಾಚಿಸುವರು.
ಮಧ್ಯಾಹ್ನ 3 ಗಂಟೆಗೆ ಕಲಿಯುವ ಕೈಗೆ ಓದುವ ಪುಸ್ತಕ ‘ನನ್ನ ಮೆಚ್ಚಿನ ಪುಸ್ತಕ’ ಕಾರ್ಯಕ್ರಮವಿದ್ದು, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಸ್.ವಿ.ನಾಗರಾಜರಾವ್ ಅಧ್ಯಕ್ಷತೆಯನ್ನು ವಹಿಸುವರು. ಆರು ಮಂದಿ ವಿದ್ಯಾರ್ಥಿಗಳು ತಾವು ಮೆಚ್ಚಿ ಓದಿದ ಪುಸ್ತಕದ ಬಗ್ಗೆ ಮಾತನಾಡುವರು.
ಮಧ್ಯಾಹ್ನ 3.30 ಗಂಟೆಗೆ ಗೋಷ್ಠಿ ನಡೆಯಲಿದ್ದು, ‘ಮಹಿಳಾ ಸಬಲೀಕರಣ’ದ ಬಗ್ಗೆ ರಾಜ್ಯ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಸಹಾಯಕ ಆಯುಕ್ತೆ ಪಿ.ವಿ.ಪೂರ್ಣಿಮಾ ವಿಷಯ ಮಂಡಿಸುವರು. ಗೋಷ್ಠಿಯ ಅಧ್ಯಕ್ಷತೆಯನ್ನು ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಲಕ್ಷ್ಮೀದೇವಮ್ಮ ವಹಿಸುವರು.
ಮಧ್ಯಾಹ್ನ 4 ಗಂಟೆಗೆ ಗೋಷ್ಠಿ ನಡೆಯಲಿದ್ದು, ‘ನೀರಿಗಾಗಿ ಪರಿತಪಿಸುತ್ತಿರುವ ಬಯಲು ಸೀಮೆಯ ಜನ’ ಎಂಬ ವಿಷಯವಾಗಿ ನೀರಾವರಿ ಹೋರಾಟಗಾರ ಮಳ್ಳೂರು ಹರೀಶ್ ವಿಷಯ ಮಂಡಿಸುವರು. ಗೋಷ್ಠಿಯ ಅಧ್ಯಕ್ಷತೆಯನ್ನು ಬಿ.ಜಿ.ಎಸ್ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಕೆ.ಮಹದೇವ್ ವಹಿಸುವರು.
ಸಂಜೆ 4.45 ಗಂಟೆಗೆ ಸನ್ಮಾನ ಕಾರ್ಯಕ್ರಮವಿದ್ದು, ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ವಹಿಸುವರು. ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷರಾದ ರೂಪಸಿ ರಮೇಶ್ ಮತ್ತು ಕೆ.ಎಂ.ವಿನಾಯಕ ಅವರೊಂದಿಗೆ ಶ್ರೀನಿವಾಸರಾವ್(ವಿಜ್ಞಾನಿ), ಡಾ.ರಮೇಶ್(ವೈದ್ಯಕೀಯ), ಎನ್.ಕೃಷ್ಣಮೂರ್ತಿ(ಶಿಕ್ಷಣ ಸಂಸ್ಥೆ), ಎನ್.ಮುನಿನಾರಾಯಣಪ್ಪ(ನಾದಸ್ವರ), ಮೇಲೂರು ಎಂ.ಆರ್.ಪ್ರಭಾಕರ್(ಅಂಚೆಚೀಟಿ ಸಂಗ್ರಹಣೆ), ದೇವರಮಳ್ಳೂರು ಯಶೋದಮ್ಮ(ರಂಗಭೂಮಿ), ಲತಾ ಮಂಜುನಾಥ್(ಕುಶಲಕಲೆ), ಎಂ.ದೇವರಾಜ್(ಶಿಕ್ಷಣ), ಅಶ್ವತ್ಥಗೌಡ(ಪೊಲೀಸ್‌ಇಲಾಖೆ), ಜಗನ್ನಾಥ್(ಶಿಕ್ಷಣ), ಚಾಂದಿನಿ(ವಕೀಲೆ), ಡಿ.ಎಂ.ಮಹೇಶ್‌ಕುಮಾರ್(ಜಾನಪದ), ಬೋದಗೂರು ವೆಂಕಟಸ್ವಾಮಿರೆಡ್ಡಿ(ಸಾವಯವ ಕೃಷಿ), ಕನ್ನಮಂಗಲ ವಸಂತವಲ್ಲಭಕುಮಾರ್(ಸಮಾಜಸೇವೆ), ಎಂ.ಮುನಿಕೃಷ್ಣ(ಕ್ರೀಡೆ), ಟಿ.ಎನ್.ಹೇಮಂತ್(ಕ್ರೀಡೆ), ಅಜಿತ್ ಕೌಂಡಿನ್ಯ(ಪುಟ ವಿನ್ಯಾಸಕರು), ಸಿ.ವಿಜಯ(ವೈದ್ಯಕೀಯ ಸೇವೆ), ಎಸ್.ಕೆ.ಡಿ.ಆರ್.ಡಿ.ಪಿ ಮಹಿಳಾ ಒಕ್ಕೂಟ, ಅಪ್ಪು(ಆಟೋ), ಎಲ್ಲಮ್ಮ(ಸ್ವಚ್ಛತೆ) ಅವರುಗಳನ್ನು ಸನ್ಮಾನಿಸಲಾಗುವುದು.
ಕಸಾಪ ತಾಲ್ಲೂಕು ಘಟಕದ ವತಿಯಿಂದ ನಡೆದ ಶಾಲಾ ಕಾಲೇಜು ಕಾರ್ಯಕ್ರಮಗಳಲ್ಲಿ ಸಹಕಾರ ನೀಡಿರುವ ಆಂಜಿನಪ್ಪ, ಭಾಸ್ಕರರೆಡ್ಡಿ, ಕೆ.ಉದಯರವಿ, ಅನಿಲ್ ಪದ್ಮಶಾಲಿ, ಕಾಗತಿ ವೆಂಕಟರತ್ನಂ, ಬಿ.ಸಿ.ನಂದೀಶ್, ಬುಡ್ಡೂಸಾಬಿ, ಚಂದ್ರಶೇಖರ ಹಡಪದ್ ಅವರಿಗೆ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಕಸಾಪ ಅಧ್ಯಕ್ಷರುಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮವಿದೆ.
ಸಂಜೆ 5.30 ಗಂಟೆಗೆ ಆರನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ನಿರ್ಣಯಗಳ ಮಂಡನೆಯಿದೆ.
ಸಮಾರೋಪ ಸಮಾರಂಭವನ್ನು ಸಂಜೆ 5.45 ಗಂಟೆಗೆ ‘ಹುತಾತ್ಮ ವೀರ ಯೋಧರ ವೇದಿಕೆ’ಯಲ್ಲಿ ಹಮ್ಮಿಕೊಳ್ಳಲಾಗಿದೆ. ಮುಖ್ಯ ಅತಿಥಿಗಳಾಗಿ ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಭಾಗವಹಿಸಲಿದ್ದಾರೆ.
ರಾತ್ರಿ 6.45 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ‘ಬಿಲ್ವ ವಿದ್ಯೆ ಪರೀಕ್ಷೆ’ ಪೌರಾಣಿಕ ಕಿರು ನಾಟಕವಿದೆ. ಕನ್ನಡ ಗೀತೆಗಳನ್ನು ರವಿ ಕುಮಾರ್, ಡಿ.ಎಂ.ಮಹೇಶ್‌ಕುಮಾರ್ ಮತ್ತು ತಂಡದವರು ನಡೆಸಿಕೊಡುವರು.
ಮಹಿಳೆಯರಿಗೆ ರಕ್ಷಣೆ ಸಿಗುವಂತಹ ಸಮಾಜ ನಮ್ಮದಾಗಬೇಕು
ಮಹಿಳೆಯರು ವಿವಿಧ ರಂಗಗಳಲ್ಲಿ ಸಾಧನೆ ಮೆರೆಯುತ್ತಿದ್ದಾರೆ. ಎಲ್ಲಾ ರಂಗಗಳಲ್ಲಿ ಸ್ವಾವಲಂಬನೆ ಸಾಧಿಸಿಕೊಂಡು ಅಭಿವೃದ್ಧಿಯ ದಾರಿಯಲ್ಲಿ ಮುನ್ನಡೆದಿದ್ದಾರೆ. ಮಹಿಳೆಯರಿಗೆ ರಕ್ಷಣೆ ಸಿಗುವಂತಹ ಸಮಾಜ ನಮ್ಮದಾಗಬೇಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಸ್ತ್ರೀ ಶಕ್ತಿ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆಯೋಜ ಮಾಡಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ವಿದ್ಯೆ, ಕ್ರೀಡೆ, ರಾಜಕೀಯ, ಕಲೆ ಹೀಗೆ ಬಹುತೇಕ ಕ್ಷೇತ್ರಗಳಲ್ಲಿ ಪುರುಷರಿಗೆ ಸರಿಸಮಾನವಾಗಿ ನಿಂತು ಸ್ವತಂತ್ರರಾಗಿ, ಸ್ವಾವಲಂಬಿಗಳಾಗಿ ಮಹಿಳೆಯರು ಬದುಕುತ್ತಿದ್ದಾರೆ. ಆದರೆ ನಿತ್ಯ ಹೆಣ್ಣಿನ ಮೇಲೆ ನಡೆಯುತ್ತಿರುವ ಆತ್ಯಾಚಾರ, ದೌರ್ಜನ್ಯ, ಭ್ರೂಣಹತ್ಯೆ, ವೇಶ್ಯಾವಾಟಿಕೆ, ಆಸಿಡ್ ದಾಳಿ, ವರದಕ್ಷಿಣೆ ಕಿರುಕುಳ, ಹಿಂಸೆಗಳು ಕಣ್ಮುಂದೆ ನಡೆಯುತ್ತಿರುವಂತಹ ಸಂದರ್ಭದಲ್ಲಿ ಕೇವಲ ಒಂದು ದಿನ ಮಾತ್ರ ಮಹಿಳಾ ದಿನಾಚರಣೆ ಆಚರಣೆ ಮಾಡಿದರೆ ಅರ್ಥವಿರುವುದಿಲ್ಲ. ಪುರುಷರು ಕೂಡಾ ಸಮಾಜದಲ್ಲಿ ಮಹಿಳೆಯ ಪಾತ್ರವೇನು ಅವರ ಮಹತ್ವವೇನು ಎಂಬುದರ ಬಗ್ಗೆ ಅರ್ಥಮಾಡಿಕೊಂಡರೆ ಮಾತ್ರ ಸಮಾಜದಲ್ಲಿನ ಎಲ್ಲಾ ರಂಗಗಳಲ್ಲೂ ಉತ್ತಮ ಅಭಿವೃದ್ಧಿಯ ಜೊತೆಯಲ್ಲಿ ಬದಲಾವಣೆ ಕಾಣಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲ ಮುನಿರಾಜು ಮಾತನಾಡಿ, ಹೆಣ್ಣು ಎಂದರೆ ಕೆಲವರು ದೃಷ್ಟಿಯಲ್ಲಿ ಆಸ್ತಿ, ಸರಕು, ಮತ್ತೆ ಕೆಲವರ ದೃಷ್ಟಿಯಲ್ಲಿ ಹೆಣ್ಣೆಂದರೆ ಹಿಂಸೆ, ಅನ್ಯಾಯ ಅನುಭವಿಸಲೆಂದೇ ಹುಟ್ಟಿರುವ ಜೀವ. ಸತ್ಯ ಇವೆರಡರ ನಡುವೆ ಎಲ್ಲೋ ಇದೆ. ಹೆಣ್ಣು ಮಕ್ಕಳು ಇವೆರಡನ್ನೂ ಅನುಭವಿಸುವ ಕಹಿ ವಾಸ್ತವಗಳಾಗಿದ್ದಾರೆ. ಲಿಂಗ ತಾರತಮ್ಯ ರೂಢಿಸಿಕೊಂಡ ಸಮಾಜವು ಹೆಣ್ಣು-ಗಂಡು ಎಂಬ ಕಲ್ಪಿತ ಚೌಕಟ್ಟಿನೊಳಗೆ ಮನುಷ್ಯರನ್ನು ಬಂಧಿಸಿಟ್ಟು ಅವಾಂತರಗಳನ್ನು ಸೃಷ್ಠಿಮಾಡಲಾಗುತ್ತಿದ್ದು ವ್ಯವಸ್ಥೆ ಬದಲಾಗಬೇಕು.
ಪ್ರತಿಯೊಂದು ಕುಟುಂಬಕ್ಕೂ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಳ್ಳುವತ್ತ ಜನರಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಪದಾಧಿಕಾರಿಗಳು ಜಾಗೃತಿ ಮೂಡಿಸುವುದರಿಂದ ಮಹಿಳೆಯರ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟಬಹುದಾಗಿದೆ. ಹೆಣ್ಣು ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆದುಕೊಳ್ಳುವ ಮೂಲಕ ಸಮಾಜದಲ್ಲಿ ಉನ್ನತಸ್ಥಾನ ಅಲಂಕರಿಸಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ತನುಜಾರಘು ಮಾತನಾಡಿ, ೨೧ ನೇಯ ಶತಮಾನದಲ್ಲಿ ಮಹಿಳೆಯ ಪಾತ್ರ ಬದಲಾಗಿದೆ. ವೃತ್ತಿ, ಸಂಸಾರ, ಎರಡನ್ನೂ ನಿಭಾಯಿಸಬೇಕಾಗಿದೆ. ಮಹಿಳೆಯರು ಇದೀಗ ಕಷ್ಟವಿದ್ದರೂ ಅಸಹಾಯಕರಾಗಿ ಅಂಜುಬುರಕರಾಗಿರದೆ ದಿಟ್ಟತನದಿಂದ ಜೀವನದ ಪ್ರತಿಯೊಂದು ಸಮಸ್ಯೆಯನ್ನೂ ಬಗೆಹರಿಸಿಕೊಳ್ಳುವ ಶಕ್ತಿಯನ್ನು ಹೊಂದಿಕೊಂಡಿದ್ದೇವೆ.
ಸಮಾಜದಲ್ಲಿನ ಬಹುತೇಕ ಹುದ್ದೆಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ರಾರಾಜಿಸುತ್ತಿದ್ದಾರೆ. ಇಂದು ಮಹಿಳೆಯರು ಉತ್ತಮ ಶಿಕ್ಷಣ ಪಡೆಯುತ್ತಿರುವುದು ಕೂಡಾ ಮುಂದುವರೆಯುತ್ತಿರುವುದರ ಸಂಕೇತವಾಗಿದ್ದು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಮತ್ತು ರಾಜಕೀಯವಾಗಿ ಮುಂದುವರೆದು ಸಮಾಜವನ್ನು ಪರಿವರ್ತನೆಯ ಕಡೆಗೆ ಕೊಂಡೊಯ್ಯಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಲಕ್ಷ್ಮೀದೇವಮ್ಮ, ಸೌಂಧರ್ಯ ಗ್ರಾಮೀಣ ಮತ್ತು ಪಟ್ಟಣ ಅಭಿವೃದ್ದಿ ಸಂಸ್ಥೆಯ ಡಾ.ವಿಜಯ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ನಾರಾಯಣಸ್ವಾಮಿ, ರಾಜಶೇಖರ್, ಶೋಭಾ ಶಶಿಕುಮಾರ್, ಚಂದ್ರಕಲಾ ಬೈರೇಗೌಡ, ದೀಪಾ ರಾಂಬಾಬು ಮತ್ತಿತರರು ಹಾಜರಿದ್ದರು.
ರೇಷ್ಮೆ ನಂಬಿದವರು ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಬೇಕು
ರೇಷ್ಮೆ ಉತ್ಪಾದನೆಯಲ್ಲಿ ಹೊಸ ಹೊಸ ತಾಂತ್ರಿಕತೆಗಳನ್ನು ಬಳಕೆ ಮಾಡಿಕೊಂಡರೆ ಉದ್ಯಮದಲ್ಲಿ ಆರ್ಥಿಕ ಸ್ವಾವಲಂಬನೆ ಕಾಣಬಹುದಾಗಿದೆ ಎಂದು ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ಎಚ್.ಆರ್.ಪ್ರಭಾಕರ್ ಹೇಳಿದರು.
ನಗರದ ರೇಷ್ಮೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಬುಧವಾರ ಮೈರಾಡ ಸಂಸ್ಥೆ ಮತ್ತು ರೇಷ್ಮೆ ಇಲಾಖೆಯ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದ್ದ ರೇಷ್ಮೆ ರೈತ ಉತ್ಪಾದಕ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರ ಆಯ್ಕೆ ಕಾರ್ಯಕ್ರಮ ಮತ್ತು ಒಣಬೇಸಾಯದಲ್ಲಿ ಹಿಪ್ಪುನೇರಳೆ ಮರಗಳ ಅಭಿವೃದ್ಧಿ ಹಾಗೂ ಬೇಸಿಗೆ ಕಾಲದಲ್ಲಿ ರೇಷ್ಮೆಬೆಳೆ ನಿರ್ವಹಣೆಯ ತಾಂತ್ರಿಕತೆಯ ಕುರಿತು ತರಬೇತಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ತೀವ್ರ ನೀರಿನ ಕೊರತೆಯನ್ನು ಅನುಭವಿಸುತ್ತಿರುವ ಬಯಲುಸೀಮೆ ಭಾಗದಲ್ಲಿನ ರೈತರು ರೇಷ್ಮೆಯನ್ನು ನಂಬಿಕೊಂಡು ಜೀವನ ಮಾಡುತ್ತಿದ್ದು ಇತ್ತಿಚೆಗೆ ನೀರಿನ ಅಭಾವದಿಂದಾಗಿ ಬಹಳಷ್ಟು ರೈತರು ರೇಷ್ಮೆ ಉದ್ಯಮದಿಂದ ವಿಮುಖರಾಗುತ್ತಿದ್ದಾರೆ. ಇದರಿಂದ ಜೀವನೋಪಾಯವು ಕಷ್ಟಕರವಾಗುತ್ತಿದೆ. ಆದ್ದರಿಂದ ರೈತರು ಹಿಪ್ಪುನೇರಳೆಗೆ ಹನಿ ನೀರಾವರಿಯನ್ನೆ ಅವಲಂಬಿಸದೆ ಮರಕಡ್ಡಿ ಪದ್ಧತಿಯಲ್ಲಿಯೂ ಹಿಪ್ಪುನೇರಳೆ ಬೆಳೆಸುವುದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭವನ್ನು ಪಡೆದುಕೊಳ್ಳಬಹುದಾಗಿದೆ ಎಂದರು.
ಮೈರಾಡ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ್ ರಿಷ್‌ಬುದ್ ಮಾತನಾಡಿ, ಮರಕಡ್ಡಿ ಪದ್ಧತಿಯನ್ನು ಅನುಸರಿಸುವುದರಿಂದ ರೈತರಿಗೆ ಹೆಚ್ಚಿನ ಹೊರೆಯಾಗುವುದಿಲ್ಲ. ಹಿಪ್ಪುನೇರಳೆಯ ಜೊತೆಯಲ್ಲೆ ಮಿಶ್ರಬೆಳೆಗಳನ್ನು ಬೆಳೆಯಬಹುದಾಗಿರುವುದರಿಂದ ಉತ್ತಮ ಇಳುವರಿ ಪಡೆಯಬಹುದಾಗಿದ್ದು ರೈತರಿಗೆ ಹೆಚ್ಚಿನ ಹೊರೆಯಾಗುವುದಿಲ್ಲ. ಹೊಸ ಹೊಸ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರಿಂದ ಕಾರ್ಮಿಕರ ಕೊರತೆಯನ್ನು ನೀಗಿಸಿಕೊಳ್ಳುವುದರ ಜೊತೆಗೆ ರೇಷ್ಮೆ ಉದ್ಯಮವನ್ನು ಉಳಿಸಿಕೊಳ್ಳಲು ಅನುಕೂಲವಾಗಲಿದೆ ಎಂದರು.
ತಾಲ್ಲೂಕಿನ ವಿವಿಧ ಗ್ರಾಮಗಳಿಂದ ನೂರಾರು ಮಂದಿ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಲಘಟ್ಟಪುರದ ಕೆ.ಎಸ್.ಎಸ್.ಆರ್.ಡಿ.ಐನ ವಿಜ್ಞಾನಿ ಡಾ.ಚಲುವಾಚಾರಿ ಅವರು ಒಣಬೇಸಾಯದಲ್ಲಿ ಹಿಪ್ಪುನೇರಳೆ ಮರಗಳ ಅಭಿವೃದ್ಧಿಯ ಬಗ್ಗೆ ರೈತರಿಗೆ ತರಬೇತಿ ನೀಡಿದರು. ಬೇಸಿಗೆ ಕಾಲದಲ್ಲಿ ರೇಷ್ಮೆ ನಿರ್ವಹಣೆಯ ಬಗ್ಗೆ ಡಾ.ಮರಿಬಾಶೆಟ್ಟಿ ತರಬೇತಿ ನೀಡಿದರು.
ರೈತ ಗುಂಪುಗಳಿಂದ ಆಯ್ಕೆಮಾಡಲಾದ ಪದಾಧಿಕಾರಿಗಳಿಂದ ರೇಷ್ಮೆ ರೈತ ಉತ್ಪಾದಕ ಸಂಸ್ಥೆಯ ಆಡಳಿತ ಮಂಡಳಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾ ಪಂಚಾಯಿತಿ ರೇಷ್ಮೆ ಉಪನಿರ್ದೇಶಕ ಬಿ.ಆರ್.ನಾಗಭೂಷಣ್, ರೇಷ್ಮೆ ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ವಿಸ್ತರಣಾಧಿಕಾರಿ ಎಂ.ನಾರಾಯಣಸ್ವಾಮಿ, ಪ್ರವೀಣ್, ಮೈರಾಡ ಸಂಸ್ಥೆಯ ಗಾಯಿತ್ರಿ ಲಾಲ್, ನಿರ್ದೇಶಕ ವೆಂಕಟರೆಡ್ಡಿ ಗಿರಣಿ ಮುಂತಾದವರು ಹಾಜರಿದ್ದರು.
ಬೆಳ್ಳಕ್ಕಿಯ ಆಲೋಚನೆ
ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಬೆಳ್ಳಕ್ಕಿಯು ಆಹಾರ ಸಿಗುವುದೋ ಇಲ್ಲವೋ, ಹಾರುವುದೋ ಬೇಡವೋ ಎಂದು ಆಲೋಚಿಸುತ್ತಿರುವಂತೆ ಕಂಡು ಬಂದ ಒಂದು ವಿಶಿಷ್ಟ ಭಂಗಿ.

