Home Blog Page 426

ರೀಲರುಗಳಿಗೆ ಅರಿವು ಕಾರ್ಯಾಗಾರ, ರೀಲಿಂಗ್ ಘಟಕಗಳಲ್ಲಿ ಪರ್ಯಾಯ ಇಂಧನ, ಶಕ್ತಿ ಬಳಕೆ ಬಗ್ಗೆ ಚರ್ಚೆ

0

ರೇಷ್ಮೆ ನೂಲು ಬಿಚ್ಚಾಣಿಕೆ ಘಟಕಗಳಲ್ಲಿ ಸೌದೆಯನ್ನು ಉರುವಲನ್ನಾಗಿ ಬಳಸುತ್ತಿದ್ದು ಅದು ಮುಂದೊಂದು ದಿನ ಪರಿಸರದ ಮೇಲೆ ಇನ್ನಿಲ್ಲದ ಪರಿಣಾಮ ಬೀರುತ್ತದೆ ಎಂದು ಅತಿ ಸೂಕ್ಷ್ಮ, ಅತಿಸೂಕ್ಷ್ಮ, ಸಣ್ಣ ಕೈಗಾರಿಕೆಗಳ ಸಹಾಯಕ ನಿರ್ದೆಶಕ ಬಲದೇವ್ ಸಿಂಗ್ ಆತಂಕ ವ್ಯಕ್ತಪಡಿಸಿದರು.
ನಗರದ ಸಾರಿಗೆ ಬಸ್ ನಿಲ್ದಾಣ ಬಳಿ ಇರುವ ಸರ್ಕಾರಿ ರೇಷ್ಮೆ ಮೊಟ್ಟೆ ಬಿತ್ತನೆ ಕೋಠಿ ಸಭಾಂಗಣದಲ್ಲಿ ಸೋಮವಾರ ರೀಲರುಗಳಿಗೆ ಹಮ್ಮಿಕೊಂಡಿದ್ದ ಪರ್ಯಾಯ ಇಂಧನ, ಶಕ್ತಿ ಬಳಕೆ ಕುರಿತು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ದಿನವೂ ಉರುವಲಿಗಾಗಿ ಮರಗಿಡಗಳನ್ನು ಕಟಾವು ಮಾಡಿದಂತೆಲ್ಲಾ ಅದು ಮುಂದೊಂದು ದಿನ ಮನುಕುಲಕ್ಕೆ ಮಾರಕವಾಗುವಷ್ಟು ಪರಿಸರದ ಮೇಲೆ ವ್ಯತರಿಕ್ತ ಪರಿಣಾಮ ಬೀರಲಿದೆ. ಅದನ್ನು ತಡೆಯುವುದು ಬಿಡುವುದು ನಮ್ಮ ಕೈಯಲ್ಲಿ ಇದೆ ಎಂದರು.
ಆದರು ನಾವು ಆ ಬಗ್ಗೆ ಆಲೋಚನೆ ಮಾಡದೆ ಈ ದಿನದ ಮಟ್ಟಿಗೆ ಮಾತ್ರವೇ ಆಲೋಚಿಸುತ್ತಿದ್ದೇವೆ, ನಾಳಿನ ದಿನಗಳ ಬಗ್ಗೆ ಚಿಂತನೆ ಮಾಡದ ನಾವೇ ಮುಂದಿನ ಅನಾಹುತಗಳಿಗೆ ಕಾರಣವಾಗುತ್ತಿದ್ದೇವೆ ಎಂದು ವಿವರಿಸಿದರು.
ರೀಲಿಂಗ್ ಘಟಕಗಳಲ್ಲಿ ಸೌದೆ ಬದಲಿಗೆ ಪರ್ಯಾಯವಾಗಿ ಏನನ್ನು ಬಳಸಬಹದು, ಯಾವ ಶಕ್ತಿಯನ್ನು ಉಪಯೋಗಿಸಬಹುದು, ಅದು ಪರಿಸರ ಪ್ರೇಮಿಯೂ, ಮಿತ ಆರ್ಥಿಕ ವ್ಯಯಕ್ಕೆ ಕಾರಣವಾಗಿರಬೇಕು. ಆ ನಿಟ್ಟಿನಲ್ಲಿ ಪ್ರಯೋಗಗಳು ಬಳಕೆಯೂ ಆಗಬೇಕಿದೆ ಎಂದರು.
ಈ ನಿಟ್ಟಿನಲ್ಲಿ ಕೇಂದ್ರದ ಸಣ್ಣ ಅತಿ ಸಣ್ಣ ಕೈಗಾರಿಕೆ ಇಲಾಖೆಯು ರೀಲರುಗಳಲ್ಲಿ ಅರಿವು ಮೂಡಿಸಿ ಈ ಬಗ್ಗೆ ಸಲಹೆ ಸೂಚನೆ ಆಕ್ಷೇಪಣೆಗಳನ್ನು ಆಹ್ವಾನಿಸುತ್ತಿದೆ. ಎಲ್ಲರ ಸಲಹೆ ಸೂಚನೆ ಮೇರೆಗೆ ಪರ್ಯಾಯ ಇಂಧನ ಬಳಕೆ ಕುರಿತು ಪ್ರಯೋಗಗಳನ್ನು ನಡೆಸಲಿದೆ. ಅಂತಿಮವಾಗಿ ಪರಿಸರಕ್ಕೆ ಮಾರಕವಾಗದ, ಆರ್ಥಿಕ ಮಿತವ್ಯಯವೂ ಆಗಿರುವ ಶಕ್ತಿಯನ್ನು ಬಳಸಿಕೊಳ್ಳಲು ಮುಂದಾಗಲಿದೆ, ಇದಕ್ಕೆ ಎಲ್ಲ ರೀಲರುಗಳು ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ರೇಷ್ಮೆ ನೂಲು ಬಿಚ್ಚಾಣಿಕೆದಾರರು ಮಾತನಾಡಿ, ಶಿಡ್ಲಘಟ್ಟ ನಗರದಲ್ಲಿ ಪ್ರತಿ ದಿನವೂ ೫ ಸಾವಿರ ಕೆಜಿಯಷ್ಟು ರೇಷ್ಮೆ ನೂಲನ್ನು ಬಿಚ್ಚಾಣಿಕೆ ಮಾಡಲಾಗುತ್ತಿದೆ. ಪ್ರತಿ ಕೆಜಿ ರೇಷ್ಮೆ ನೂಲು ಬಿಚ್ಚಾಣಿಕೆಗೆ ಸುಮಾರು ೨೦ ಟನ್‌ನಷ್ಟು ಸೌದೆಯನ್ನು ಉರುವಲನ್ನಾಗಿ ಮಾಡಲಾಗುತ್ತಿದ್ದು ಅದರಂತೆ ಪ್ರತಿ ದಿನವೂ ೧೦೦ ಟನ್‌ನಷ್ಟು ಮರಗಳಿಗೆ ಕೊಡಲಿ ಬೀಳುತ್ತಿದೆ ಎಂದು ಅಂಕಿ ಸಂಖ್ಯೆಗಳನ್ನು ಮುಂದಿಟ್ಟರು.
ಪ್ರತಿ ದಿನಕ್ಕೆ ೧೦೦ ಟನ್, ತಿಂಗಳಿಗೆ ೩ ಸಾವಿರ ಟನ್ ಹೀಗೆ ವರ್ಷಕ್ಕೆ ಮರಗಳನ್ನು ಕಡಿಯತ್ತಾ ಸಾಗಿದರೆ ಮುಂದೊಂದು ದಿನ ಉಸಿರಾಡಲು ಆಮ್ಲ ಜನಕ ಇಲ್ಲದೆ ನಾವು ಸಾಯಬೇಕಾಗುತ್ತದೆ. ಆದ್ದರಿಂದ ನೀವು ನಮ್ಮಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳಿಗೆ ಸೀಮಿತವಾಗಬೇಡಿ. ಬದಲಿಗೆ ಪರ್ಯಾಯ ಇಂಧನ, ಶಕ್ತಿ ಬಳಕೆಗೆ ಪ್ರಯೋಗಗಳನ್ನು ಮಾಡಿ ಪ್ರಾತ್ಯಕ್ಷಿತೆ ಮೂಲಕ ಹೊಸ ಆವಿಷ್ಕಾರಗಳನ್ನು ಮಾಡಿ ಬಳಕೆಗೆ ಬಿಡಿ ಎಂದು ಒತ್ತಾಯಿಸಿದರು.
ವಿಶ್ವೇಶ್ವರಯ್ಯ ಸಣ್ಣ ಕೈಗಾರಿಕೆಗಳ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೇಲೂರು ಶ್ರೀನಿವಾಸ್ ಮೂರ್ತಿ, ಶಕ್ತಿ ಮತ್ತು ಸಂಪನ್ಮೂಲ ತರಬೇತಿ ಕೇಂದ್ರದ ಸತೀಶ್ ಕುಮಾರ್, ಕೆನರಾ ಬ್ಯಾಂಕ್‌ನ ರಾಘವೇಂದ್ರ, ಕೈ ಮಗ್ಗ ಮತ್ತು ಜವಳಿ ಇಲಾಖೆಯ ಜಗದೀಶ್, ಮಹಿಳಾ ಮತ್ತು ಮಕ್ಕಳ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷೆ ಪದ್ಮಪ್ರಕಾಶ್, ಕೇಂದ್ರ ರೇಷ್ಮೆ ಮಂಡಳಿಯ ವಿಜ್ಞಾನಿ ಮಹೇಶ್, ರಾಂ ಕುಮಾರ್, ರೇಷ್ಮೆ ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ ಮತ್ತಿತರರು ಹಾಜರಿದ್ದರು.
ರೀಲರ್ಸ್‌್ಸ್ ಅಸೋಸಿಯೇಷನ್ ಅಧ್ಯಕ್ಷ ಅನ್ಸರ್ ಖಾನ್, ರೀಲರುಗಳಾದ ಮಂಜುನಾಥ್, ಸಾಕ್, ಮಹಬೂಬ್ ಪಾಷ, ಅಜೀಜ್ ಖಾನ್, ನರಸಿಂಹಮೂರ್ತಿ ಮತ್ತಿತರರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಈ ತಿಮ್ಮಸಂದ್ರ ಪಂಚಾಯಿತಿ ವ್ಯಾಪ್ತಿಯ ಒಕ್ಕಲಿಗರ ಯುವಸೇನೆ ಸಂಘದ ಸಮಿತಿ ರಚನೆ

0

ಶಿಡ್ಲಘಟ್ಟ ತಾಲ್ಲೂಕು ಒಕ್ಕಲಿಗರ ಯುವಸೇನೆ ಸಂಘದ ದ್ಯೇಯೋದ್ಧೇಶಗಳನ್ನು ಈಡೇರಿಸುವ ಸಲುವಾಗಿ ತಾಲ್ಲೂಕಿನ ಕ್ಷೇತ್ರ ವ್ಯಾಪ್ತಿಯಲ್ಲಿ ನಗರ, ಪಂಚಾಯಿತಿ ಹಾಗೂ ಗ್ರಾಮ ವ್ಯಾಪ್ತಿಯ ಮಟ್ಟದಲ್ಲಿ ಒಕ್ಕಲಿಗರ ಯುವಸೇನೆ ಸಂಘ ಸಮಿತಿಗಳನ್ನು ರಚಿಸಲು ಉದ್ದೇಶಿಸಿದೆ ಎಂದು ತಾಲ್ಲೂಕು ಒಕ್ಕಲಿಗರ ಯುವಸೇನೆ ಸಂಘದ ಅಧ್ಯಕ್ಷ ಜೆ.ಎಸ್‌.ವೆಂಕಟಸ್ವಾಮಿ ತಿಳಿಸಿದರು.
ತಾಲ್ಲೂಕಿನ ಈ ತಿಮ್ಮಸಂದ್ರ ಗ್ರಾಮದಲ್ಲಿ ಸೋಮವಾರ ಈ ತಿಮ್ಮಸಂದ್ರ ಪಂಚಾಯಿತಿ ವ್ಯಾಪ್ತಿಯ ಒಕ್ಕಲಿಗರ ಯುವಸೇನೆ ಸಂಘದ ಸಮಿತಿ ರಚಿಸಿ ಅವರು ಮಾತನಾಡಿದರು.
ಗ್ರಾಮೀಣ ಅಭಿವೃದ್ಧಿ, ಶಿಕ್ಷಣ, ನೈರ್ಮಲ್ಯ, ಸಾಂಸ್ಕೃತಿಕ ಪರಂಪರೆ ಉಳಿಸುವಿಕೆ, ಜಾನಪದ ರಕ್ಷಣೆ, ಆರೋಗ್ಯ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಒಕ್ಕಲಿಗರ ಯುವಸೇನೆ ಸಂಘ ಸದಾ ಚಟುವಟಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.
ಈ ತಿಮ್ಮಸಂದ್ರ ಪಂಚಾಯಿತಿ ವ್ಯಾಪ್ತಿಯ ಒಕ್ಕಲಿಗರ ಯುವಸೇನೆ ಸಂಘದ ಕಾರ್ಯಕಾರಿ ಸಮಿತಿ ಗೌರವಾಧ್ಯಕ್ಷ ಪಿ.ಶಿವಾರೆಡ್ಡಿ, ಅಧ್ಯಕ್ಷ ಮಂಜುನಾಥ, ಉಪಾಧ್ಯಕ್ಷ ಎಲ್‌.ಬಾಬು, ಕಾರ್ಯಾಧ್ಯಕ್ಷ ಎಸ್‌.ಆರ್‌.ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಅಶ್ವತ್ಥರೆಡ್ಡಿ, ಖಜಾಂಚಿ ಟಿ.ಎನ್‌.ವೆಂಕಟೇಶ್‌, ಸಂಘಟನಾ ಕಾರ್ಯದರ್ಶಿ ಎಂ.ಆರ್‌.ಶ್ರೀನಿವಾಸರೆಡ್ಡಿ, ಕಾರ್ಯದರ್ಶಿ ಟಿ.ವಿ.ಮೋಹನ್‌, ಸದಸ್ಯರಾಗಿ ಎಲ್‌.ಆನಂದ್‌, ಎಸ್‌.ವಿ.ರಘುನಾಥ್‌ಕುಮಾರ್‌, ಜಯರಾಮರೆಡ್ಡಿ, ನಾರಾಯಣರೆಡ್ಡಿ, ಕೆ.ಸಿ.ವೆಂಕಟರಾಮರೆಡ್ಡಿ, ಚೌಡರೆಡ್ಡಿ, ಟಿ.ಸಿ.ಚೌಡರೆಡ್ಡಿ, ಎಂ.ಬೈರರೆಡ್ಡಿ, ಎಸ್‌.ವಿ. ಸಿದ್ದಿರೆಡ್ಡಿ, ಎಸ್‌.ಇ.ದೇವರಾಜು, ನಾರಾಯಣರೆಡ್ಡಿ, ಎನ್‌.ಕೇಶವರೆಡ್ಡಿ, ಎಚ್‌.ಎಲ್‌.ಭಾಸ್ಕರ್‌, ಆಂಜನೇಯರೆಡ್ಡಿ, ಎಂ.ಬಿ.ಬೈರಾರೆಡ್ಡಿ, ಮುನಿಶಾಮಿರೆಡ್ಡಿ, ಎಸ್‌.ಕೆ.ಸೋಮಶೇಖರ್‌ ಆಯ್ಕೆಯಾಗಿದ್ದಾರೆ.

ನೆಹರೂ ಕ್ರೀಡಾಂಗಣ ಅಭಿವೃದ್ಧಿಗೆ ಸಂಸದರ ಅನುದಾನದಿಂದ 10 ಲಕ್ಷ ರೂ

0

ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿಯ ಬೇಡಿಕೆಯ ಮೇರೆಗೆ ತಾಲ್ಲೂಕಿನಲ್ಲಿ ಕ್ರೀಡಾಭಿವೃದ್ಧಿ ಆಗಲೆಂದು ತಮ್ಮ ಅನುದಾನದಲ್ಲಿ ಹತ್ತು ಲಕ್ಷ ರೂಗಳನ್ನು ನೀಡುವುದಾಗಿ ಸಂಸದ ಕೆ.ಎಚ್.ಮುನಿಯಪ್ಪ ತಿಳಿಸಿದರು.
ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿಯ ಸದಸ್ಯರಿಗೆ ಅನುದಾನ ನೀಡುವ ಪತ್ರವನ್ನು ಮಂಗಳವಾರ ಅವರು ನೀಡಿ ಮಾತನಾಡಿದರು.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕ್ರೀಡಾಕ್ಷೇತ್ರ ಅಭಿವೃದ್ಧಿಯಾಗಬೇಕು. ಕ್ರೀಡಾಪಟುಗಳ ಹಾಗೂ ಸಾರ್ವಜನಿಕರ ಉಪಯೋಗಕ್ಕಾಗಿ ನಗರದ ನೆಹರೂ ಕ್ರೀಡಾಂಗಣಕ್ಕೆ ಬೇಕಾದ ಮೂಲಭೂತ ಸೌಕರ್ಯಗಳು ಕುಂಠಿತವಾಗಿರುವುದು ಗಮನಕ್ಕೆ ಬಂದಿದೆ. ನನ್ನ ಎಂ.ಪಿ.ಎಲ್‌.ಎ.ಡಿ ಅನುದಾನದಲ್ಲಿ ಮಲ್ಟಿ ಜಿಮ್‌ ಅಳವಡಿಸಿ ಹಾಗೂ ನಡೆದಾಡುವ ವಾಕರ್ಸ್‌ ಪಾಥ್‌ ಅಳವಡಿಸಿ. ಹಣವನ್ನು ಸದುಪಯೋಗಪಡಿಸಿಕೊಳ್ಳಬೇಕು. ಗುಣಮಟ್ಟದ ಕಾಮಗಾರಿ ನಡೆಯುವಂತೆ ಗಮನಿಸಿಕೊಳ್ಳಬೇಕು ಎಂದು ಹೇಳಿದರು.
ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಎಸ್‌.ವಿ.ನಾಗರಾಜರಾವ್‌, ಅಧ್ಯಕ್ಷ ಎನ್‌.ಆರ್‌.ನಿರಂಜನ್‌, ಪ್ರಧಾನ ಕಾರ್ಯದರ್ಶಿ ಜೆ.ವಿ.ಸುರೇಶ್‌, ನಗರಸಭಾ ಸದಸ್ಯ ಬಾಲಕೃಷ್ಣ, ಹಫೀಜುಲ್ಲಾ, ಜಗದೀಶ್‌, ಮುನಿಕೃಷ್ಣಪ್ಪ, ಮುರಳಿ ಮತ್ತಿತರರು ಹಾಜರಿದ್ದರು.

ಸಂಸದ ಕೆ.ಎಚ್‌.ಮುನಿಯಪ್ಪ ಅವರ 69ನೇ ಹುಟ್ಟುಹಬ್ಬ ಆಚರಣೆ

0

ಏಳು ಬಾರಿ ಸಂಸದರಾಗುವ ಮೂಲಕ ಜನಾರುರಾಗಿಗಳಾಗಿ ಕೆ.ಎಚ್.ಮುನಿಯಪ್ಪ ಅವರು ಜಿಲ್ಲೆಯ ಜನರ ಸೇವೆಗೆ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಅವರ ಸಾಧನೆ, ಸೇವೆ ಇನ್ನಷ್ಟು ನಡೆಯಲಿ ಎಂದು ಹಾರೈಸುತ್ತಾ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿರುವುದಾಗಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲ ಮುನಿರಾಜು ತಿಳಿಸಿದರು.
ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ಸಂಸದ ಕೆ.ಎಚ್‌.ಮುನಿಯಪ್ಪ ಅವರ 69ನೇ ಹುಟ್ಟುಹಬ್ಬದ ಪ್ರಯುಕ್ತ ಎನ್‌.ಎಸ್‌.ಯು.ಐ ವತಿಯಿಂದ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್‌ ವಿತರಿಸಿ ಅವರು ಮಾತನಾಡಿದರು.
ದೀನ ದಲಿತರ, ಹಿಂದುಳಿದವರ ಆಶಾಜ್ಯೋತಿಯಾಗಿ ಅವರು ಸಾಮಾಜಿಕ ಜೀವನವನ್ನು ನಡೆಸುತ್ತಿದ್ದಾರೆ. ಅವರ ಸೇವೆ ನಮ್ಮ ಜನರಿಗೆ ಇನ್ನಷ್ಟು ಸಿಗಲಿ. ಅವರ ಅವಧಿಯಲ್ಲಿ ನೀರಿನ ಬವಣೆ ನೀಗುವಂತಾಗಲಿ ಎಂದು ಅವರು ಹಾರೈಸಿದರು.
ಈ ಸಂದರ್ಭದಲ್ಲಿ ಐಟಿಐ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗೆ ಸಿಹಿ ವಿತರಿಸಲಾಯಿತು.
ಭಾರತೀಯ ವಿದ್ಯಾರ್ಥಿ ಒಕ್ಕೂಟ(ಎನ್‌.ಎಸ್‌.ಯು.ಐ) ಜಿಲ್ಲಾಧ್ಯಕ್ಷ ವಿಶ್ವನಾಥ್‌, ತಾಲ್ಲೂಕು ಅಧ್ಯಕ್ಷ ದೇವರಾಜ್‌(ದೇವಿ), ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನೀಂದ್ರ, ನಗರ ಘಟಕದ ಅಧ್ಯಕ್ಷ ಅನುಶ್‌, ಗುಡಿಹಳ್ಳಿ ನಾರಾಯಣಸ್ವಾಮಿ, ದಿಬ್ಬೂರಹಳ್ಳಿ ಡಿ.ಬಿ.ನಾಗರಾಜ್‌, ದೇವರಾಜ್‌, ಮಂಜುನಾಥ್‌, ಚರಣ್‌, ವೆಂಕಟೇಶ್‌ ಮತ್ತಿತರರು ಹಾಜರಿದ್ದರು.

ರೈತರ ಉತ್ಪನ್ನಗಳಿಗೆ ರೈತರೇ ಬೆಲೆ ನಿಗದಿ ಪಡಿಸಲು ಸಾಧ್ಯ

0

ರೈತರ ಉತ್ಪನ್ನಗಳಿಗೆ ರೈತರೇ ತಮ್ಮ ಶ್ರಮಕ್ಕೆ ತಕ್ಕಂತೆ ಬೆಲೆ ನಿಗದಿ ಪಡಿಸಲು ಮುಂದಿನ ದಿನಗಳಲ್ಲಿ ಯೋಜನೆಗಳನ್ನು ರೂಪಿಸಲು ಸಾಧ್ಯವಿದೆ ಎಂದು ರೇಷ್ಮೆ ಇಲಾಖೆಯ ಉಪನಿರ್ದೇಶಕ ಬಿ.ಆರ್.ನಾಗಭೂಷಣ್‌ ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಪ್ಪೇಗೌಡನಹಳ್ಳಿಯಲ್ಲಿ ಸೋಮವಾರ ರೇಷ್ಮೆ ಇಲಾಖೆ ಮತ್ತು ಮೈರಾಡ ಸಂಸ್ಥೆಯ ಸಹಯೋಗದಲ್ಲಿ ರೇಷ್ಮೆ ರೈತ ಉತ್ಪಾದಕ ಸಂಸ್ಥೆ (ಎಫ್.ಪಿ.ಓ) ಯೋಜನೆಯಡಿ ೫೦ ನೇ ರೈತ ಆಸಕ್ತ ಗುಂಪಿನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಒಂದು ಲಕ್ಷ 34 ಸಾವಿರ ರೇಷ್ಮೆ ಬೆಳೆಗಾರರಿದ್ದು, 7 ಸಾವಿರ ರೀಲರುಗಳು ಇದ್ದು, ಕೆಲ ಸಂದರ್ಭಗಳಲ್ಲಿ ಅವರುಗಳು ಬೆಲೆ ನಿಗದಿ ಪಡಿಸುವಂತಾಗಿದೆ. ರೈತರು ಬೆಂಬಲ ಬೆಲೆಗೆ ಆಗ್ರಹಿಸುವುದರ ಬದಲಿಗೆ ತಮ್ಮ ಶ್ರಮದ ದುಡಿಮೆಗೆ ತಕ್ಕ ಫಲವನ್ನು ಪಡೆಯಬೇಕೆಂಬ ಉದ್ದೇಶದಿಂದ ರೈತ ಆಸಕ್ತ ಗುಂಪುಗಳನ್ನು ರಚಿಸಲಾಗುತ್ತಿದೆ. ರೈತರಿಗೆ ನೂತನ ತಾಂತ್ರಿಕತೆ ಹಾಗೂ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುವುದು, ರೇಷ್ಮೆ ಬೆಳೆಗಾರರಲ್ಲಿ ಜಾಗೃತಿ ಮೂಡಿಸುವುದು ಸೇರಿದಂತೆ ಮಧ್ಯವರ್ತಿಗಳ ಹಾವಳಿ ತಡೆಯುವ ಉದ್ದೇಶವಿದೆ ಎಂದರು.
ಸಮಾನ ಮನಸ್ಕ ರೇಷ್ಮೆ ಬೆಳೆಗಾರರನ್ನು ಒಂದುಗೂಡಿಸಿ ೨೦ ಮಂದಿಯಿರುವ ಸುಮಾರು ೫೦ ಗುಂಪುಗಳನ್ನು ರಚಿಸಲು ತಾಲ್ಲೂಕಿನಲ್ಲಿ ಹೆಚ್ಚಾಗಿ ರೇಷ್ಮೆ ಬೆಳೆಗಾರರಿರುವ ನಾಲ್ಕೈದು ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ ತಾಲ್ಲೂಕಿನಾಧ್ಯಂತ ೪೯ ರೈತ ಆಸಕ್ತ ಗುಂಪುಗಳನ್ನು ರಚಿಸಿದ್ದು ಇದೀಗ ೫೦ ನೇ ಗುಂಪಿನ ಉದ್ಘಾಟನೆ ನೆರವೇರಿಸಲಾಗಿದೆ. ಇದರ ಮಾರ್ಗದರ್ಶನವನ್ನು ಮೈರಾಡ ಸಂಸ್ಥೆ ಮಾಡುತ್ತದೆ. ಹಣಕಾಸಿನ ನೆರವನ್ನು ರೇಷ್ಮೆ ಇಲಾಖೆ ನಿರ್ವಹಿಸುತ್ತದೆ ಎಂದರು.
ಮೈರಾಡ ಸಂಸ್ಥೆಯ ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಯ ಕಾರ್ಯಕ್ರಮ ಅಧಿಕಾರಿ ಶಿವಶಂಕರ್ ಮಾತನಾಡಿ, ರೈತ ಆಸಕ್ತ ಗುಂಪು ರಚಿಸುವುದರಿಂದ ರೈತರ ಉತ್ಪಾದನೆ ಹೆಚ್ಚಾಗುವುದರ ಜೊತೆಗೆ ತಾವು ಬೆಳೆದ ರೇಷ್ಮೆ ಗೂಡಿಗೆ ಉತ್ತಮ ಬೆಲೆ ನಿಗಧಿ ಪಡಿಸುವ ಅವಕಾಶವೂ ಇರುತ್ತದೆ. ಉತ್ಪಾದನೆಗೆ ತಕ್ಕಂತೆ ಮಾರುಕಟ್ಟೆಯ ವ್ಯವಸ್ಥೆ ಮಾಡಿಕೊಳ್ಳುವ ಮೂಲಕ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಸಹಾಕರಿಯಾಗುತ್ತದೆ ಎಂದರು.
ರೈತ ಆಸಕ್ತ ಗುಂಪುಗಳನ್ನು ರಚಿಸಿಕೊಂಡರೆ ತಮ್ಮದೇ ಷೇರು ಮೊತ್ತದ ಜೊತೆಗೆ ಇಲಾಖೆಯಿಂದ ಸಿಗುವ ಸಹಾಯಧನವನ್ನು ಬಳಸಿಕೊಂಡು ಚಾಕಿ ಸಾಕಾಣಿಕೆ ಕೇಂದ್ರ, ರಸಗೊಬ್ಬರ ಮಳಿಗೆ ಮತ್ತು ರೇಷ್ಮೆ ಬಟ್ಟೆ ತಯಾರಿಕಾ ಘಟಕ ನಿರ್ಮಿಸಿಕೊಂಡರೆ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಜೊತೆಗೆ ತಮ್ಮ ಆದಾಯವೂ ಹೆಚ್ಚಾಗುತ್ತದೆ. ಹಾಗಾಗಿ ರೇಷ್ಮೆ ಬೆಳೆಗಾರರು ೨೦ ಮಂದಿಯನ್ನೊಳಗೊಂಡ ಒಂದೊಂದು ಗುಂಪು ರಚಿಸಿಕೊಂಡು ಆರ್ಥಿಕವಾಗಿ ಮುಂದುವರೆಯಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಶ್ರೀರಾಮ ಮತ್ತು ಶ್ರೀಮಾರುತಿ ರೈತ ಆಸಕ್ತ ಗುಂಪಿನ ಸದಸ್ಯರಿಗೆ ಪುಸ್ತಕ ಹಾಗು ಲೇಖನಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ರೇಷ್ಮೆ ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಎ.ಎಂ.ತ್ಯಾಗರಾಜು, ಉಮಾ ಚನ್ನೇಗೌಡ, ರೇಷ್ಮೆ ರೈತ ಉತ್ಪಾದಕ ಸಂಸ್ಥೆಯ ಜಿಲ್ಲಾ ಸಂಯೋಜಕ ವೆಂಕಟರೆಡ್ಡಿ ಎಸ್ ಗಿರಣಿ, ಮೇಲೂರು ತಾಂತ್ರಿಕ ಸೇವಾ ಕೇಂದ್ರದ ಪ್ರವೀಣ್‌, ಸಂಪತ್‌, ಮಹೇಶ್‌ ಮತ್ತಿತರರು ಹಾಜರಿದ್ದರು.

ಪುಟಾಣಿ ಮಕ್ಕಳಿಗೆ ಜಿಲ್ಲೆಯ ಹುತಾತ್ಮರ ಪರಿಚಯ

0

ಮಕ್ಕಳ ಮನಸ್ಸು ನಿರ್ಮಲವಾದ್ದು. ಬಾಲ್ಯದಲ್ಲಿ ಅವರು ಕಲಿತದ್ದು ಮರೆಯುವುದಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ತರಲು ಹೋರಾಡಿದ ಮಹನೀಯರು ಹೇಗೆಲ್ಲಾ ಶ್ರಮಿಸಿದರು ಎಂದು ಛಾಯಾಚಿತ್ರಗಳು ಮತ್ತು ಸಾಕ್ಷಚಿತ್ರದ ಮೂಲಕ ಪುಟಾಣಿ ಮಕ್ಕಳಿಗೆ ತಿಳಿಸುವಾಗ ಆಸಕ್ತಿಯಿಂದ ಅವರು ಆಲಿಸುತ್ತಿದ್ದರು ಎಂದು ಶಿಕ್ಷಕಿ ಮಂಜುಳಾ ತಿಳಿಸಿದರು.
ನಗರದ ಶ್ರೀಸರಸ್ವತಿ ಕಾನ್ವೆಂಟ್‌ ಎಜುಚಾಂಪ್‌ನ ನಾಲ್ಕೈದು ವರ್ಷದ ಸುಮಾರು 14 ವಿದ್ಯಾರ್ಥಿಗಳನ್ನು ಶನಿವಾರ ಜಿಲ್ಲೆಯ ಜಲಿಯನ್‌ವಾಲಾಬಾಗ್‌ ಎಂದೇ ಖ್ಯಾತಿ ಪಡೆದಿರುವ ವಿದುರಾಶ್ವತ್ಥಕ್ಕೆ ಕರೆದುಕೊಂಡು ಹೋಗಿ ಬಂದುದರ ಅನುಭವವನ್ನು ಅವರು ವಿವರಿಸಿದರು.

ಶಿಡ್ಲಘಟ್ಟದ ಶ್ರೀಸರಸ್ವತಿ ಕಾನ್ವೆಂಟ್‌ ಎಜುಚಾಂಪ್‌ನ ನಾಲ್ಕೈದು ವರ್ಷದ ಸುಮಾರು 14 ವಿದ್ಯಾರ್ಥಿಗಳನ್ನು ಶನಿವಾರ ಜಿಲ್ಲೆಯ ಜಲಿಯನ್‌ವಾಲಾಬಾಗ್‌ ಎಂದೇ ಖ್ಯಾತಿ ಪಡೆದಿರುವ ವಿದುರಾಶ್ವತ್ಥಕ್ಕೆ ಕರೆದುಕೊಂಡು ಹೋಗಿ ವೀರಸೌಧ, ಹುತಾತ್ಮರ ಸ್ಮಾರಕವನ್ನು ತೋರಿಸಲಾಯಿತು

ಮಹಾಭಾರತದ ವಿಧುರ ನೆಟ್ಟಿರುವ ಅರಳೀ ವೃಕ್ಷದ ಅಡಿಯಲ್ಲಿ ಕುಳಿತು ಮಕ್ಕಳಿಗೆ ಮಹಾಭಾರತದ ಕಥೆ, ಕರ್ನಾಟಕದ ಜಲಿಯನ್ ವಾಲಾಭಾಗ್ ಎಂದೇ ಪ್ರಸಿದ್ಧೀ ಪಡೆದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ಗುಂಡಿಗೆ ಪ್ರಾಣತೆತ್ತ ಸ್ಥಳ, ಸ್ಮಾರಕ, ಬೃಹತ್ ವೀರಸೌಧದಲ್ಲಿ ಸ್ವಾತಂತ್ರ್ಯ ಸೇನಾನಿಗಳನ್ನು ಪರಿಚಯಿಸುವ ಗ್ರಂಥಾಲಯ, ಸ್ವಾತಂತ್ರ್ಯ ಜ್ಯೋತಿ ತೋರಿಸಿದೆವು. ಮಕ್ಕಳು ಉದ್ಯಾನವನದಲ್ಲಿ ಆಡಿ ನಲಿದರು. ಇಲ್ಲಿನ ಹವಾನಿಯಂತ್ರಿತ ಸಭಾಂಗಣದಲ್ಲಿ ದೇಶದ ಸ್ವಾತಂತ್ರ್ಯ ಸಂಗ್ರಾಮದ ಕುರಿತು ಸಮಗ್ರ ಮಾಹಿತಿ ಸಿಗುತ್ತದೆ. ಅದರ ಮೇಲ್ವಿಚಾರಕರಾದ ರಾಮಕೃಷ್ಣಪ್ಪ ಮಕ್ಕಳಿಗೆ ಸಾಕ್ಷ್ಯಚಿತ್ರ ತೋರಿಸಿ, ಪ್ರತಿಯೊಂದು ಚಿತ್ರಪಟಗಳ ಬಳಿಯೂ ಕರೆದೊಯ್ದು ಸ್ವಾತಂತ್ರ್ಯ ಹೋರಾಟಗಾರರನ್ನು ಪರಿಚಯಿಸಿದರು. ಎಳೆಯ ಮಕ್ಕಳ ಮನದಲ್ಲಿ ದೇಶಭಕ್ತಿಯ ಬೀಜವನ್ನು ಈ ರೀತಿ ಬಿತ್ತಿದೆವು ಡಂದು ಹೇಳಿದರು.
ವಿದುರಾಶ್ವತ್ಥದ ದೇವಸ್ಥಾನ, ಮುದ್ದುಗಾನಕುಂಟೆ, ಮಿಣಕಲಗುರ್ಕಿ, ರಂಗಸ್ಥಳವನ್ನು ತೋರಿಸುವ ಮೂಲಕ ಜಿಲ್ಲೆಯ ಚಾರಿತ್ರಿಕ, ಧಾರ್ಮಿಕ, ಸಾಂಸ್ಕೃತಿಕ ಸ್ಥಳಗಳ ಪರಿಚಯವನ್ನು ಮಕ್ಕಳಿಗೆ ಮಾಡಿಸಿದೆವು. ದಾರಿಯಲ್ಲಿ ರೈಲನ್ನು ಕಂಡಾಗ, ಮಿಣಕಲಗುರ್ಕಿಯಲ್ಲಿ ಜಿಂಕೆಯನ್ನು ಕಂಡಾಗ ಮಕ್ಕಳು ಉತ್ಸಾಯ ಎಲ್ಲೆ ಮೀರಿತ್ತು ಎಂದು ವಿವರಿಸಿದರು.

ಬಂಗಾರದ ಗಂಟೆಯ ಮರಗಳಲ್ಲಿ ಹಳದಿ ಬಣ್ಣದ ಹೂಗಳು

0

ವಸಂತ ಮಾಸದ ಆಗಮನಕ್ಕೆ ಸ್ವಾಗತ ಕೋರುವ ರೀತಿಯಲ್ಲಿ ನಗರದ ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ರೇಷ್ಮೆ ವಿಸ್ತರಣಾಧಿಕಾರಿಗಳ ಕಚೇರಿಯ ಪಕ್ಕದಲ್ಲಿ ಹಳದಿ ಬಣ್ಣದ ಹೂಗಳನ್ನು ಅರಳಿಸಿಕೊಂಡು ಎರಡು ಬಂಗಾರದ ಗಂಟೆಯ ಮರಗಳು ಸಿದ್ಧತೆ ನಡೆಸಿದೆ.
ನೀಲಿ ಆಕಾಶದ ಹಿಂತೆರೆಯಲ್ಲಿ ಕಾಂತಿಯುತವಾದ ಅರಿಶಿನ ಬಣ್ಣದ ಹೂಗಳು ನೋಡುಗರನ್ನು ಸೆಳೆಯುತ್ತಿದೆ. ಒಂದೇ ಒಂದು ಹಸಿರೆಲೆಯಿಲ್ಲದೆ ಪ್ರತಿಯೊಂದು ಟೊಂಗೆಯೂ ಹಳದಿ ಬಣ್ಣದ ಗಂಟೆಯಾಕಾರದ ಹೂಗಳನ್ನು ಮುಡಿದು ಸಿಂಗಾರಗೊಂಡಿದೆ. ಆಗಾಗ ಬೀಸುವ ತಂಗಾಳಿಗೆ ಉದುರುವ ಹೂಗಳು ನೆಲವನ್ನೇ ಹೊಂಬಣ್ಣದ ಹಾಸಿಗೆಯನ್ನಾಗಿ ಮಾಡಿರುವುದು ಸೊಗಸಾಗಿದೆ.
ಬೆಗ್ನೋಸಿಯೇಸಿ ಕುಟುಂಬಕ್ಕೆ ಸೇರಿರುವ ಈ ಮರವನ್ನು ಟೆಕೋಮಾ ಅರ್ಜೆಂಟಿಯಾ ಅಥವಾ ಟಿಬೆಬುಯಾ ಅರ್ಜೆಂಟಿಯಾ ಎಂದು ಕರೆಯುತ್ತಾರೆ. ಅಮೆರಿಕಾದ ಅರೆ ಉಷ್ಣವಲಯದ ಪರಾಗ್ವೆ ಇದರ ತವರು. ಸುಮಾರು ಎಂಟು ಮೀಟರ್ ಎತ್ತರದವರೆಗೆ ಬೆಳೆಯುವ ಇದರ ಕಾಂಡಗಳು ವಕ್ರ ಹಾಗೂ ಬಲು ಮೆದು. ಐದರಿಂದ ಎಂಟು ಸೆಂಟಿಮೀಟರಿನಷ್ಟಿರುವ ಇದರ ಹೂಗಳು ಐದರಿಂದ ಏಳು ಉಪಪತ್ರಗಳಿಂದ ಕೂಡಿರುತ್ತವೆ. ಇವುಗಳ ಸಂಯುಕ್ತ ಪತ್ರಗಳು ಬಿಸಿಲ್ಲಲಿ ಬೆಳ್ಳಿಯಂತೆ ಹೊಳೆಯುತ್ತವೆ. ಬೀಜಗಳಿಗೆ ರೆಕ್ಕೆಯಿರುವುದರಿಂದ ಗಾಳಿಯ ಮೂಲಕ ಪ್ರಸಾರಗೊಳ್ಳುತ್ತವೆ.

ಬಂಗಾರದ ಗಂಟೆಯ ಮರದ ಹೂಗಳು.

ಸಾಮಾನ್ಯವಾಗಿ ಶಿಶಿರದಲ್ಲಿ ಪ್ರತಿ ವರ್ಷ ಹೂಬಿಡುವ ಇವು ಹೊನ್ನಿನ ತೇರಿನ ಉತ್ಸವದ ಮೆರುಗನ್ನು ನೀಡುತ್ತವೆ. ಕೇವಲ ಒಂದು ತಿಂಗಳು ಮಾತ್ರ ಈ ರೀತಿ ಹೋಗಳನ್ನು ಅರಳಿಸಿ ನೋಡುಗರ ಕಣ್ಮನ ತಣಿಸುವ ಇವು ಹೂಗಳೆಲ್ಲ ಉದುರಿದ ಮೇಲೆ ಮತ್ತೆ ಹೊಸ ಹಸಿರಿನ ಉಡುಗೆಯನ್ನು ತೊಟ್ಟು ಮುಂದಿನ ಶಿಶಿರಕ್ಕೆ ಸಿದ್ಧತೆ ನಡೆಸುತ್ತವೆ.
‘ವರ್ಷ ಪೂರ್ತಿ ಮಬ್ಬಾದ ಹಸಿರೆಲೆ, ವಕ್ರವಾದ ಕೊಂಬೆಗಳಿಂದ ಅನಾಕರ್ಷಕವಾಗಿದ್ದರೂ ಫೆಬ್ರುವರಿ ಮಾರ್ಚ್ ತಿಂಗಳಿನಲ್ಲಿ ಮರದ ತುಂಬಾ ಹಳದಿ ಹೂವನ್ನು ಅರಳಿಸಿಕೊಂಡು ನಮ್ಮ ಕಚೇರಿಗೆ ಕಿರೀಟಪ್ರಾಯದಂತೆ ಕಂಗೊಳಿಸುತ್ತದೆ. ಈ ಹೂವಿನ ಮಕರಂದ ಹೀರಲು ಸೂರಕ್ಕಿಗಳು, ಜೇನ್ನೊಣಗಳು, ಚಿಟ್ಟೆಗಳು ಬರುತ್ತವೆ. ಈ ಮರದ ನೆರಳಿನಲ್ಲಿ ಕುಳಿತು ಇವನ್ನೆಲ್ಲಾ ನೋಡುವಾಗ ಮನಸ್ಸಿಗೆ ಆನಂದವುಂಟಾಗುತ್ತದೆ’ ಎನ್ನುತ್ತಾರೆ ರೇಷ್ಮೆ ಸಹಾಯಕ ವಿಸ್ತರಣಾಧಿಕಾರಿ ನಾರಾಯಣಸ್ವಾಮಿ.

ಮಕ್ಕಳಿಗೆ ಕಂಪ್ಯೂಟರ್ ಹಾಗೂ ಪರಿಸರ ಕಾಳಜಿಯ ಬಗ್ಗೆ ಅರಿವು

0

ಬೆಂಗಳೂರಿನ ಶ್ರೀ ವೆಂಕಟೇಶ್ವರ ತಾಂತ್ರಿಕ ಕಾಲೇಜಿನ ತಂಡ ತಾಲ್ಲೂಕಿನ ರಾಮೇಶ್ವರ ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕಂಪ್ಯೂಟರ್ ಹಾಗೂ ಪರಿಸರದ ಕಾಳಜಿಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕಾಲೇಜಿನ ಪ್ರಾಧ್ಯಾಪಕರಾದ ಭರತ್, ಪುನೀತ್ ಕುಮಾರ್ ಹಾಗೂ ವಿದ್ಯಾರ್ಥಿಗಳಾದ ಸಚಿನ್ ಗೌಡ, ಸಾಯಿ ರಾಕೇಶ್, ನವೀನ್ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಟ್ಟು ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿದರು

ವಚನ ಸಾಹಿತ್ಯ ಸಿಂಚನ ಕಾರ್ಯಕ್ರಮ

0

ವಚನ ಸಾಹಿತ್ಯವನ್ನು ರಾಗ, ತಾಳ ಮತ್ತು ಸಂಗೀತದ ಮೂಲಕ ಕೇಳಿದಲ್ಲಿ ಹೆಚ್ಚು ಆಪ್ತವಾಗುತ್ತದೆ ಹಾಗೂ ಮನದಲ್ಲಿ ಉಳಿಯುತ್ತದೆ. ಅದರೊಂದಿಗೆ ಸ್ಥಳೀಯ ಕಲಾವಿದರ ಪರಿಚಯವೂ ಆಗುತ್ತದೆ ಎಂಬ ಉದ್ದೇಶದಿಂದ ವಚನ ಸಾಹಿತ್ಯ ಸಿಂಚನ ಕಾರ್ಯಕ್ರಮ ಪ್ರಾರಂಭ ಮಾಡುತ್ತಿದ್ದೇವೆ ಎಂದು ವಚನ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಟಿ. ನಾರಾಯಣಸ್ವಾಮಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸಂಜೆ ಬೈಪಾಸ್‌ ರಸ್ತೆಯಲ್ಲಿರುವ ಶಿಕ್ಷಕ ಚಿಕ್ಕವೆಂಕಟರಾಯಪ್ಪ ಮನೆಯಲ್ಲಿ ತಾಲ್ಲೂಕು ವಚನ ಸಾಹಿತ್ಯ ಪರಿಷತ್ ವತಿಯಿಂದ ಮನೆಅಂಗಳದಲ್ಲಿ ವಚನ ಸಾಹಿತ್ಯ ಸಿಂಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮನೆಗಳಲ್ಲಿ ಟಿವಿ ಸಂಸ್ಕೃತಿ ಹೆಚ್ಚಾಗಿ ಸಂಗೀತ, ಸಾಹಿತ್ಯ ಮೊದಲಾದ ಕಲೆಗಳ ಬಗ್ಗೆ ವಿಮುಖರಾಗುತ್ತಿದ್ದೇವೆ. ಅದನ್ನು ಹೋಗಲಾಡಿಸಲು ಆಸಕ್ತ ಕಲಾಭಿಮಾನಿಗಳ ಮನೆಯಲ್ಲಿ ವಚನ ಸಾಹಿತ್ಯ ಸಿಂಚನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ಕವನ ವಾಚನ, ವಚನಗಳ ಗಾಯನ, ವಾದ್ಯಗೋಷ್ಠಿ, ಸಾಹಿತ್ಯಿಕ ಚರ್ಚೆಗಳನ್ನು ನಡೆಸಲು ಉದ್ದೇಶಿಸಿದ್ದೇವೆ ಎಂದು ಹೇಳಿದರು.
ಕಲಾವಿದರಾದ ವಿದ್ವಾನ್‌ ಎಸ್‌.ವಿ. ರಾಮಮೂರ್ತಿ, ಲಕ್ಷ್ಮೀನಾರಾಯಣ, ಪಿಟೀಲು ವಿದ್ವಾನ್‌ ಜಿ.ಎನ್‌.ಶ್ಯಾಮಸುಂದರ್‌, ಕೆ.ಮಂಜುನಾಥ್‌ ಸಂಗೀತ ಗೋಷ್ಠಿಯನ್ನು ನಡೆಸಿಕೊಟ್ಟರು.
ವಚನ ಸಾಹಿತ್ಯ ಪರಿಷತ್ ಸದಸ್ಯರಾದ ಎಂ. ದೇವರಾಜ್‌, ಗಜೇಂದ್ರ, ಕೆಂಪಣ್ಣ, ಬೈರಾರೆಡ್ಡಿ, ವೆಂಕಟೇಶಪ್ಪ, ಸಿ.ಎ.ದೇವರಾಜ್‌, ವೇಣುಗೋಪಾಲ್‌, ರೂಪಸಿ ರಮೇಶ್‌, ರಾಜೇಶ್ವರಿ. ಮೀನಾ, ಮಾಲಾಶ್ರೀ, ಮಂಜುಶ್ರೀ. ಸಿ.ಸಂಧ್ಯಾ. ಕೀರ್ತಿಕ್ ರಾವ್. ಸಿ.ಚಿಕ್ಕ ವೆಂಕಟರಾಯಪ್ಪ. ಮುನಿರತ್ನಮ್ಮ ಮತ್ತಿತರರು ಹಾಜರಿದ್ದರು.

ಡ್ರಾಯಿಂಗ್‌ ಪರೀಕ್ಷೆ – ಸುಗಟೂರು ಶಾಲೆಗೆ ಶೇ.೧೦೦ ಫಲಿತಾಂಶ

0

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾಮಂಡಳಿಯು ಜನವರಿಯಲ್ಲಿ ನಡೆಸಿದ ಡ್ರಾಯಿಂಗ್ ಲೋಯರ್ ಪರೀಕ್ಷೆಯಲ್ಲಿ ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶೇ.೧೦೦ ಫಲಿತಾಂಶ ಲಭಿಸಿದೆ.
ಪರೀಕ್ಷೆಗೆ ಹಾಜರಾಗಿದ್ದ ಒಟ್ಟು ೧೪ ಮಂದಿ ವಿದ್ಯಾರ್ಥಿಗಳ ಪೈಕಿ ಎಲ್ಲರೂ ಉತ್ತೀರ್ಣರಾಗಿದ್ದಾರೆ. ೫ ಮಂದಿ ಪ್ರಥಮದರ್ಜೆ, ೮ ಮಂದಿ ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಮತ್ತು ಒಬ್ಬ ವಿದ್ಯಾರ್ಥಿಯು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆಂದು ಶಾಲಾ ಪ್ರಕಟಣೆ ತಿಳಿಸಿದೆ.
ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ, ಎಸ್‌ಡಿಎಂಸಿ ಅಧ್ಯಕ್ಷ ಆರ್.ನಾಗೇಶ್, ಗ್ರಾಮಪಂಚಾಯಿತಿ ಸದಸ್ಯರು ಮತ್ತು ಎಸ್‌ಡಿಎಂಸಿ ಸದಸ್ಯರು, ಬೋಧಕವರ್ಗದವರು ಅಭಿನಂದಿಸಿದ್ದಾರೆ.

ಕನ್ನಡಿಗರ ಸಾರಥ್ಯದ ಕರವೇ ನಗರ ಮತ್ತು ತಾಲ್ಲೂಕು ಘಟಕಗಳ ಪದಾಧಿಕಾರಿಗಳ ಆಯ್ಕೆ

0

ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡಿಗರ ಸಾರಥ್ಯದ ಕರ್ನಾಟಕ ರಕ್ಷಣಾ ವೇದಿಕೆಯ ನಗರ ಮತ್ತು ತಾಲ್ಲೂಕು ಘಟಕಗಳ ಪದಾಧಿಕಾರಿಗಳ ಆಯ್ಕೆಯನ್ನು ಶುಕ್ರವಾರ ನಡೆಸಲಾಯಿತು.
ತಾಲ್ಲೂಕು ಅಧ್ಯಕ್ಷರಾಗಿ ಹರೀಶ್‌, ಉಪಾಧ್ಯಕ್ಷ ರಮೇಶ್‌, ನಗರ ಘಟಕದ ಅಧ್ಯಕ್ಷರಾಗಿ ಮನೋಹರ್‌, ಉಪಾಧ್ಯಕ್ಷರಾಗಿ ರತ್ನಯ್ಯ, ಪುಟ್ಟಣ್ಣ, ಗೌರವಾಧ್ಯಕ್ಷರಾಗಿ ಕೇಶವಮೂರ್ತಿ, ಕಸಬಾ ಹೋಬಳಿ ಅಧ್ಯಕ್ಷರಾಗಿ ನಾರಾಯಣಪ್ಪ, ಜಂಗಮಕೋಟೆ ಹೋಬಳಿ ಅಧ್ಯಕ್ಷರಾಗಿ ಸಂತೋಷ್‌ ಆಯ್ಕೆಯಾದರು.
ರಾಜ್ಯಾಧ್ಯಕ್ಷ ಅಗಲಗುರ್ಕಿ ಛಲಪತಿ, ರಾಜ್ಯ ಗೌರವಾಧ್ಯಕ್ಷ ಚಂದ್ರಶೇಖರ್‌, ಬೆಂಗಳೂರು ನಗರಾಧ್ಯಕ್ಷ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮರನಾಥ್‌ವರ್ಮ, ಜಿಲ್ಲಾಧ್ಯಕ್ಷ ಎನ್‌.ಅಂಬರೀಶ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಧರ್‌ ಹಾಜರಿದ್ದರು.

ಮಹಿಳಾ ಸ್ವಸಹಾಯ ಸಂಘಗಳಿಗೆ 2 ಕೋಟಿ 20 ಲಕ್ಷ ರೂಗಳ ಸಾಲ

0

ಮಹಿಳಾ ಸ್ವಸಹಾಯ ಸಂಘಗಳು ಉತ್ತಮ ರೀತಿಯಲ್ಲಿ ಹಣಕಾಸಿನ ವ್ಯವಹಾರ ನಡೆಸುತ್ತಾ ಹಣ ಮರುಪಾವತಿಯನ್ನು ಮಾಡುತ್ತಿದ್ದಾರೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ತಿಳಿಸಿದರು.
ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಡಿಸಿಸಿ ಬ್ಯಾಂಕ್‌ ಶಿಡ್ಲಘಟ್ಟ ಶಾಖೆ ಮತ್ತು ತಾಲ್ಲೂಕು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘಗಳ ಮುಖಾಂತರ ಶೇ.4 ರಷ್ಟು ಬಡ್ಡಿ ದರದಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಗೆ 2 ಕೋಟಿ 20 ಲಕ್ಷ ರೂಗಳ ಸಾಲ ಮತ್ತು ರೂಪೇ ಕಾರ್ಡ್‌ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಆರ್ಥಿಕವಾಗಿ ಸಬಲರಾದರೆ ಕುಟುಂಬ ಸುಸ್ಥಿತಿಯಲ್ಲಿರುತ್ತದೆ. ಈ ಮೂಲಕ ಗ್ರಾಮೀಣ ಬದುಕನ್ನು ಹಸನಾಗಿಸುವುದು ಈ ಸಾಲ ಸೌಲಭ್ಯದ ಹಿಂದಿನ ಉದ್ದೇಶವಾಗಿದೆ. ಸರಿಯಾಗಿ ಲೆಕ್ಕಪತ್ರವನ್ನು ಬರೆಯುತ್ತಾ, ಸಮರ್ಪಕವಾಗಿ ಸಾಲದ ಹಣವನ್ನು ಸದ್ವಿನಿಯೋಗ ಮಾಡಿಕೊಂಡಲ್ಲಿ ಸ್ವಸಹಾಯ ಸಂಘಗಳು ಸಾಕಷ್ಟು ಗ್ರಾಮ್ಯ ಬದುಕನ್ನು ಬದಲಿಸಬಹುದು ಎಂದು ಹೇಳಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಹೈನುಗಾರಿಕೆಯನ್ನು ನಂಬಿದಲ್ಲಿ ಮೋಸವಿಲ್ಲ. ಸ್ವಸಹಾಯ ಸಂಘಗಳು ಗ್ರಾಮಗಳಲ್ಲಿ ಹೈನುಗಾರಿಕೆಗೆ ಸಾಲದ ಹಣವನ್ನು ವಿನಿಯೋಗಿಸಿ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಬಹುದು. ಮರುಪಾವತಿ ಸಕಾಲದಲ್ಲಿ ಮಾಡುತ್ತಾ ಪುನಃ ಸಾಲವನ್ನು ಪಡೆಯುತ್ತ ಸಂಘದ ಪ್ರಗತಿ ಕಾಣುವಂತಾಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ 16 ಮಂದಿಗೆ ತಲಾ ಒಂದು ಲಕ್ಷ ರೂಗಳ ರೂಪೇ ಕಾರ್ಡುಗಳನ್ನು ವಿತರಿಸಿ ನಗದು ರಹಿತ ವ್ಯವಹಾರವನ್ನು ರೂಢಿಸಿಕೊಳ್ಳುವಂತೆ ತಿಳಿಸಲಾಯಿತು.
ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಿ.ಶಿವಾರೆಡ್ಡಿ, ಪಿ.ವಿ.ನಾಗರಾಜ್‌, ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್‌ ಮುನಿಯಪ್ಪ, ನಗರದ ಎಸ್‌ಎಫ್‌ಸಿಎಸ್‌ ಅಧ್ಯಕ್ಷ ನಾರಾಯಣಸ್ವಾಮಿ, ಮಳ್ಳೂರು ಎಸ್‌ಎಫ್‌ಸಿಎಸ್‌ ಅಧ್ಯಕ್ಷ ವೆಂಕಟರೆಡ್ಡಿ, ಮಳಮಾಚನಹಳ್ಳಿ ಎಸ್‌ಎಫ್‌ಸಿಎಸ್‌ ಅಧ್ಯಕ್ಷ ಮುನೇಗೌಡ, ಕುಂದಲಗುರ್ಕಿ ಎಸ್‌ಎಫ್‌ಸಿಎಸ್‌ ಅಧ್ಯಕ್ಷ ಮುನಿರಾಜು, ಸಂಘದ ಸಿಇಓಗಳಾದ ಮಳ್ಳೂರು ಮಂಜುನಾಥ್‌, ಜಂಗಮಕೋಟೆ ನಾಗರಾಜ್‌, ಮಳಮಾಚನಹಳ್ಳಿ ಉಷಾ, ದೇವಿಕಾರಾಣಿ, ಸಾದಲಿ ಭೀಮಪ್ಪ, ಕುಂದಲಗುರ್ಕಿ ಮುನೇಗೌಡ, ಆನೇಮಡುಗು ಸದಾಶಿವರೆಡ್ಡಿ, ಡಿಸಿಸಿ ಬ್ಯಾಂಕ್‌ ವ್ಯವಸ್ಥಾಪಕ ಆನಂದ್‌, ಮೇಲ್ವಿಚಾರಕ ಲಿಂಗರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಪೊರಕೆ ತಯಾರಾಗುವ ಕಾಲ

0

‘ನೀರಿಲ್ಲ, ಮೇವಿಲ್ಲ, ಬೆಳೆಯಿಲ್ಲ, ಮಳೆಯಿಲ್ಲ… ಬರಗಾಲ ಸ್ವಾಮಿ, ಏನ್ಮಾಡೋದು, ಪೊರಕೆ ಮಾಡುತ್ತಾ, ಮಾರುತ್ತಾ ಜೀವನ ಮಾಡಬೇಕಾಗಿದೆ’ ಎಂದು ಒಂದೇ ಮಾತಿನಲ್ಲಿ ಹಿತ್ತಲಹಳ್ಳಿಯ ವೃದ್ಧೆ ವೆಂಕಟಲಕ್ಷ್ಮಮ್ಮ ಜನಜೀವನದ ವಾಸ್ತವತೆಯನ್ನು ತೆರೆದಿಟ್ಟರು. ಉರಿ ಬಿಸಿಲಿನಲ್ಲಿ ಹಿತ್ತಲಹಳ್ಳಿಯ ಗೇಟ್‌ ಬಳಿ ಪೊರಕೆ ಕಟ್ಟಿಗಳ ಊಗು ಉದುರಿಸುತ್ತಿದ್ದ ವೃದ್ಧೆ ವೆಂಕಟಲಕ್ಷ್ಮಮ್ಮ ಈಗ ಪೊರಕೆ ಕಡ್ಡಿಗಳು ಸಿಗುವುದು ಕೂಡ ಕಷ್ಟವಾಗಿದೆ ಎಂದು ತಿಳಿಸಿದರು.
ಹಿಂದೆ ಹೊಲಗಳ ಬದುಗಳು, ಕರಾಬು ಕಾಲುವೆ, ಕಲ್ಲುಗುಟ್ಟಗಳು ಪೊರಕೆ ಹುಲ್ಲಿಗೆ ನೆಲೆಯಾಗಿದ್ದವು. ಕಣಗಳಿದ್ದ ಕಾಲದಲ್ಲಿ ಕಣ ಆರಂಭದಿಂದ ಅಂತ್ಯದವರೆಗೆ ಪೊರಕೆಗೆ ನಿರಂತರ ಕೆಲಸ ಇರುತ್ತಿತ್ತು. ಇದರಿಂದಾಗಿ ಉಪಕಸುಬಾಗಿ ಕೂಲಿ ನಾಲಿಯ ನಡುವೆ ಕಡ್ಡಿ ಸಂಗ್ರಹಿಸಿ ಊಗು (ಹೂ) ಉದುರಿಸಿ ಒಂದಷ್ಟು ಕೈಕಾಸು ಸಂಪಾದಿಸುತ್ತಿದ್ದವರಿದ್ದರು. ಹಿಂದೆ ಒಂದೆರಡು ಗಂಟೆಗಳಲ್ಲಿ ಸಂಗ್ರಹಿಸಬಹುದಾಗಿದ್ದ ಕಡ್ಡಿ ಇಂದು ಹಿಡೀ ಹಗಲನ್ನೇ ತೆಗೆದುಕೊಳ್ಳುವಷ್ಟು ವಿರಳವಾಗಿ ಲಭ್ಯವಾಗುತ್ತಿದೆ. ಹಳ್ಳಿ ಪೊರಕೆಗಳ ಜೊತೆ ನಗರಗಳಲ್ಲಿ ತಯಾರಾಗುವ ಪೊರಕೆಗಳಿಗೆ ಸ್ಪರ್ಧಿಸಲಾಗದೆ ನಶಿಸುತ್ತಿವೆ.
ಬಲಿತ ಕಡ್ಡಿಯನ್ನು ಕೊಯ್ದು ಕಟ್ಟುಕಟ್ಟಿ ತಂದಿದ್ದ ವೆಂಕಟಲಕ್ಷ್ಮಮ್ಮ ಅದನ್ನು ಗ್ರಾಮದ ಹೊರಗೆ ಹಿತ್ತಲಹಳ್ಳಿ ಗೇಟ್‌ನ ರಸ್ತೆಯ ಬದಿ ಊಗನ್ನು ಉದುರಿಸುತ್ತಿದ್ದಾರೆ. ಇದು ಗಾಳಿಯಲ್ಲಿ ಪ್ರಸಾರಗೊಂಡು ತನ್ನ ಬಾಣದಂತಹ ಚೂಪುತುದಿಯಿಂದ ತೆಳುಚರ್ಮದ ಪ್ರಾಣಿಗಳಿಗೆ ಚುಚ್ಚಿ ನೋವನ್ನುಂಟುಮಾಡುತ್ತದೆ ಎಂದು ಮುಳ್ಳು, ಕಳ್ಳಿ, ಪೊದೆಗಳ ಮೇಲೆ ಇದನ್ನು ಉದುರಿಸುತ್ತಿದ್ದಾರೆ. ನಂತರ ಅದಕ್ಕೆ ಬೆಂಕಿ ಹಚ್ಚಿ ಸುಡುವುದಾಗಿ ಹೇಳಿದರು.
ಊಗು ಉದುರಿಸುವವರು ತಮ್ಮ ಮೈಕೈಗೆ ಬಟ್ಟೆಗಳಿಗೆ ಅದು ಮೆತ್ತಿಕೊಳ್ಳದಂತೆ ಎಚ್ಚರವಹಿಸುತ್ತಾರೆ. ಕಡ್ಡಿಗಳನ್ನು ಎಡಗೈಯಲ್ಲಿ ಹಿಡಿಯಾಗಿ ಹಿಡಿದು ಬಲಗೈಯಲ್ಲಿ ಬೆತ್ತದಂತಹ ಕೋಲು ಹಿಡಿದು ಬಡಿದು ಉದುರಿಸುತ್ತಾರೆ. ಇಲ್ಲವೇ ಎರಡೂ ಕೈಗಳಲ್ಲಿ ಕಡ್ಡಿಗಳ ಹಿಡಿ ಹಿಡಿದು ಒಂದಕ್ಕೊಂದು ಬಡಿದು ಉದುರಿಸುತ್ತಾರೆ. ಊಗು ಉದುರಿಸುವವರು ನಡು ಬಗ್ಗಿಸಿಯೇ ಉದುರಿಸಬೇಕಾಗುತ್ತದೆ. ಇಲ್ಲವೆಂದರೆ ಅದು ಅವರ ಮೈಗೆ ತಾಕಿ ಚುಚ್ಚುವುಂದುಂಟು. ಊಗು ಮುಳ್ಳಿನ ಚುಚ್ಚು ಇಂಜಕ್ಷನ್‌ಗಿಂತಲೂ ಕೊಂಚ ಹೆಚ್ಚಿನ ನೋವನ್ನು ಉಂಟುಮಾಡುತ್ತದೆ. ಹಾಗಾಗಿ ಮಕ್ಕಳು ಊಗು ಮುಳ್ಳಿಗೆ ಅಂಜುತ್ತಾರೆ. ದನಗಳು ಇದನ್ನು ಮೇಯುವುದು ಕಡಿಮೆ. ಆದರೂ ಎಳೆಯದಾಗಿದ್ದಾಗ ಬಾಯಿ ಹಾಕುವುದುಂಟು.
ಮೊದಲಾದರೆ ಸಂಕ್ರಾಂತಿ ಕಳೆಯುತ್ತಿದ್ದಂತೆ ಒಳ್ಳೆಯ ಕಡ್ಡಿಗಳು ತಾಲ್ಲೂಕಿನ ಬಯಲುಗಳಲ್ಲೇ ಸಿಗುತ್ತಿದ್ದವು. ಈಗ ಅವು ಸಿಗುತ್ತಿಲ್ಲ. ಇರುವ ಅಲ್ಪ ಸ್ವಲ್ಪ ಕಡ್ಡಿಗಳು ಬೆಳೆದಿದ್ದರೆ, ಬೆಂಕಿ ಕೊಟ್ಟುಬಿಡುತ್ತಾರೆ. ನಾನು ದೇವನಹಳ್ಳಿ ಬಳಿಯ ಬಾಗಲೂರು ಸುತ್ತ ಮುತ್ತ ಹಳ್ಳಿಗಳಿಗೆ ಹೋಗಿ ಅಲ್ಲಿ ಕಾಂಪೋಂಡ್‌ ಹಾಕಿ ಲೇಔಟ್‌ ಮಾಡಿರುವಲ್ಲಿ ಕಾಡಿಬೇಡಿ ಕಡ್ಡಿಗಳನ್ನು ಕತ್ತರಿಸಿ ಹೊರೆ ಕಟ್ಟಿ ತರುತ್ತೇನೆ. ಹೋಗಿ ಬರಲು 150 ರೂ ಖರ್ಚಾಗುತ್ತದೆ. 15 ರಿಂದ 20 ಪೊರಕೆ ಮಾಡುತ್ತೇನೆ. 13 ರೂಗಳಿಂದ 15 ರೂಗೆ ಮಾರುತ್ತೇನೆ. ಇನ್ನು ಕೇವಲ ಹತ್ತು ಹದಿನೈದು ದಿನವಷ್ಟೇ ಕಡ್ಡಿಗಳು ಸಿಗಬಹುದು. ಈ ಬಿಸಿಲಿನಲ್ಲಿ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ. ಆದರೂ ಬದುಕಲು ಹೆಣಗುವುದು ತಪ್ಪದು’ ಎನ್ನುತ್ತಾರೆ ವೃದ್ಧೆ ವೆಂಕಟಲಕ್ಷ್ಮಮ್ಮ.

ಹಿರಿಯ ಕಾಂಗ್ರೆಸ್‌ ಮುಖಂಡ ಬಿ.ಕೆ.ನಾರಾಯಣಸ್ವಾಮಿ ನಿಧನ

0

ತಾಲ್ಲೂಕಿನ ಹಿರಿಯ ಕಾಂಗ್ರೆಸ್‌ ಮುಖಂಡರಲ್ಲೊಬ್ಬರಾದ ಹಂಡಿಗನಾಳದ ಬಿ.ಕೆ.ನಾರಾಯಣಸ್ವಾಮಿ(94) ತಮ್ಮ ಸ್ವಗೃಹದಲ್ಲಿ ಶನಿವಾರ ನಿಧನರಾಗಿದ್ದಾರೆ. ವಯೋಸಹಜ ಕಾರಣದಿಂದ ಅವರು ಅಸ್ವಸ್ಥರಾಗಿದ್ದರು. ರಾವ್‌ ಬಹಾದ್ದೂರ್‌ ಬಿ.ಕೆ.ನಾರಾಯಣಸ್ವಾಮಿ ಅವರು ಮಾಜಿ ತಾಲ್ಲೂಕು ಸಮಿತಿ ಸದಸ್ಯರು, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರೂ ಆಗಿದ್ದು, ತಾಲ್ಲೂಕಿನಲ್ಲಿ ಕಾಂಗ್ರೆಸ್‌ ಪಕ್ಷದ ಬೆಳವಣಿಗೆಗೆ ಅಪಾರವಾಗಿ ಶ್ರಮಿಸಿದ್ದರು.
ಅವರು ನಾಲ್ವರು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು, 26 ಮಂದಿ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಸೇರಿದಂತೆ ತಾಲ್ಲೂಕಿನ ಕಾಂಗ್ರೆಸ್‌ ಮುಖಂಡರು ಭೇಟಿ ನೀಡಿ ಮೃತ ಆತ್ಮಕ್ಕೆ ಶಾಂತಿಯನ್ನು ಕೋರಿದರು.
ಮೃತರ ಅಂತ್ಯಕ್ರಿಯೆಯನ್ನು ಅವರ ತೋಟದಲ್ಲಿರುವ ಸಂಪಿಗೆ ವನದಲ್ಲಿ ಭಾನುವಾರ ನೆರವೇರಿಸಲಾಗುವುದೆಂದು ಅವರ ಸಂಬಂಧಿಕರು ತಿಳಿಸಿದ್ದಾರೆ.

ಶಿಕ್ಷಕರು ಮನೋವೈಜ್ಞಾನಿಕ ವಿಶ್ಲೇಷಕರಾಗಬೇಕು

0

ಶಿಕ್ಷಕರು ಮನೋವೈಜ್ಞಾನಿಕ ವಿಶ್ಲೇಷಕರಾಗಬೇಕು. ಆಗ ಮಾತ್ರ ಒಂದು ಕೊಠಡಿಯಲ್ಲಿನ ವಿವಿಧ ಗ್ರಹಿಕೆಯ ಹಂತಗಳನ್ನು ಹೊಂದಿರುವ ಮಕ್ಕಳಿಗೆ ಕಲಿಸಲು, ಉತ್ತೇಜಿಸಲು, ಆತ್ಮವಿಶ್ವಾಸ ತುಂಬಲು ಮತ್ತು ಪ್ರೋತ್ಸಾಹಿಸಲು ಸಾಧ್ಯ. ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರ ಮತ್ತು ಪೋಷಕರ ಪಾತ್ರ ಸಮಪ್ರಮಾಣದ್ದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ತಿಳಿಸಿದರು.
ನಗರದ ಹೊರವಲಯದ ಹನುಮಂತಪುರ ಗೇಟ್‌ ಬಳಿಯಿರುವ ಬಿಜಿಎಸ್‌ ಪಬ್ಲಿಕ್‌ ಶಾಲೆಯಲ್ಲಿ ಶನಿವಾರ ನಡೆದ ಯುಕೆಜಿ ಮಕ್ಕಳ ಗ್ರಾಜುಯೇಷನ್‌ ಡೇ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಾಲೆಯಲ್ಲಿ ಶಿಕ್ಷಕರು ಮತ್ತು ಮನೆಯಲ್ಲಿ ಪೋಷಕರು ಮಕ್ಕಳಿಗೆ ಪೂರಕ ವಾತಾವರಣವನ್ನು ಕಲ್ಪಿಸಬೇಕು. ತಮಗೆ ಸಾಧ್ಯವಾಗದ್ದು ಮಕ್ಕಳು ಸಾಧಿಸಬೇಕು ಎಂಬ ಹಂಬಲದಲ್ಲಿ ಪೋಷಕರು ಹೆಚ್ಚಿನ ಒತ್ತಡವನ್ನು ಮಕ್ಕಳ ಮೇಲೆ ಹೇರಬಾರದು. ಹಾಗೆಯೇ ಹೋಲಿಕೆ ಮಾಡಿ ಹೀಯಾಳಿಸಿ ಅವರ ಆತ್ಮವಿಶ್ವಾಸವನ್ನು ಕೊಲ್ಲಬಾರದು ಎಂದು ಹೇಳಿದರು.

ಶಿಡ್ಲಘಟ್ಟದ ಹನುಮಂತಪುರ ಗೇಟ್‌ ಬಳಿಯಿರುವ ಬಿಜಿಎಸ್‌ ಪಬ್ಲಿಕ್‌ ಶಾಲೆಯಲ್ಲಿ ಶನಿವಾರ ನಡೆದ ಯುಕೆಜಿ ಮಕ್ಕಳ ಗ್ರಾಜುಯೇಷನ್‌ ಡೇ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರಮಾಣಪತ್ರವನ್ನು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಾಥನಂದ ಸ್ವಾಮೀಜಿ ವಿತರಿಸಿದರು.

ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಾಥನಂದ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದರೊಂದಿಗೆ ಓದಲು ಒಳ್ಳೆಯ ವಾತಾವರಣವನ್ನು ಮನೆಯಲ್ಲಿ ಸೃಷ್ಠಿಸಿಕೊಡಬೇಕು. ಶಾಲೆಯಲ್ಲಿ ಮಕ್ಕಳು ಕಲಿಯುವುದಕ್ಕಿಂತ ಹೆಚ್ಚು ಮನೆ ಹಾಗೂ ಸಮಾಜದಿಂದ ಕಲಿಯುತ್ತವೆ. ಹಾಗಾಗಿ ಉತ್ತಮ ನಡತೆ, ಆಚಾರ, ವಿಚಾರ ಮುಂತಾದ ಸಂಗತಿಗಳು ಸಿಗುವ ಹಾಗೆ ನೋಡಿಕೊಳ್ಳಬೇಕು. ಬಾಲ್ಯದಲ್ಲಿ ಕಲಿತದ್ದು ಕಟ್ಟಡಕ್ಕೆ ಅಡಿಪಾಯದಂತೆ ಜೀವನದಲ್ಲಿ ಭವಿಷ್ಯಕ್ಕೆ ನೆರವಾಗುತ್ತದೆ. ಮನೆಯಲ್ಲಿ ದೂರದರ್ಶನ ಮಕ್ಕಳಿಗೆ ಜ್ಞಾನಾರ್ಜನೆಗೆ ಪೂರಕವಾಗಿರಲಿ. ಅವರು ದಾರಿತಪ್ಪುವಷ್ಟು ಅದನ್ನು ನೋಡದಿರಲಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪುಟ್ಟ ಮಕ್ಕಳು ತಮ್ಮ ಮುದ್ದು ಮಾತಿನಲ್ಲಿ ನಿರೂಪಣೆ, ವಿವರಣೆ, ಪರಿಚಯ ಮತ್ತು ವಂದನೆ ನುಡಿಗಳನ್ನು ಹೇಳಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಯುಕೆಜಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ಸ್ವಾಮೀಜಿ ವಿತರಿಸಿದರು.
ಎಸ್‌ಬಿಎಂ ವ್ಯವಸ್ಥಾಪಕಿ ಹೇಮಲತಾ, ಬಿಜಿಎಸ್‌ ಪಬ್ಲಿಕ್‌ ಶಾಲೆಯ ಪ್ರಾಂಶುಪಾಲ ಮಹದೇವ್‌, ಸ್ಥಳದಾನಿ ಕೆಂಪರೆಡ್ಡಿ, ಮುರಳಿ, ನಾಗರಾಜು, ಮುನಿರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಮದುವೆ ಸರಳವಾಗಿರಲಿ, ಬದುಕು ಆಡಂಭರವಾಗಲಿ

0

ಮದುವೆ ಸರಳವಾಗಿರಲಿ, ಬದುಕು ಆಡಂಭರವಾಗಲಿ. ಮದುವೆಯಲ್ಲಿ ಪ್ರೇಮ, ನಂಬಿಕೆ, ವಿಶ್ವಾಸ, ಹೊಂದಾಣಿಕೆ ಇರಲಿ. ಕಷ್ಟ ಸುಖಗಳಲ್ಲಿ ಸಮಪಾಲನ್ನು ದಂಪತಿಗಳು ಹೊಂದಬೇಕು ಎಂದು ಎಸ್‌.ಎನ್‌.ಕ್ರಿಯಾ ಟ್ರಸ್ಟ್‌ ಅಧ್ಯಕ್ಷ ಆಂಜಿನಪ್ಪ ತಿಳಿಸಿದರು.
ನಗರದ ಬಸ್‌ ನಿಲ್ದಾಣದ ಬಳಿಯಿರುವ ಎಸ್‌.ಎನ್‌.ಕ್ರಿಯಾ ಟ್ರಸ್ಟ್‌ ಕಚೇರಿಯಲ್ಲಿ ಶನಿವಾರ ಟ್ರಸ್ಟ್‌ ವತಿಯಿಂದ ಮಾರ್ಚ್‌ 23 ರಂದು ಆಯೋಜಿಸಿರುವ ಉಚಿತ ಸಾಮೂಹಿಕ ವಿವಾಹಕ್ಕೆ ನೋಂದಾಯಿಸಿಕೊಂಡ ಜೋಡಿಗಳಿಗೆ ಮದುವೆಗಾಗಿ ವಸ್ತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ದುಂದು ವೆಚ್ಚವನ್ನು ಕಡಿತಗೊಳಿಸುವ ಉದ್ದೇಶದಿಂದ ತಾಲ್ಲೂಕು ವ್ಯಾಪ್ತಿಯಲ್ಲಿನ ಅವಿವಾಹಿತರಿಗೆ ಉಚಿತ ಸಾಮೂಹಿಕ ವಿವಾಹಗಳನ್ನು ಮಾರ್ಚ್‌ ೨೩ ರಂದು ತಾಲ್ಲೂಕಿನ ತಲಕಾಯಲಬೆಟ್ಟದಲ್ಲಿ ಆಯೋಜನೆ ಮಾಡಲಾಗಿದೆ. ಪರಿಶಿಷ್ಠ ಜಾತಿ ಮತ್ತು ಜನಾಂಗದವರು ಕಡ್ಡಾಯವಾಗಿ ತಹಶೀಲ್ದಾರರಿಂದ ಪಡೆದುಕೊಂಡಿರುವ ಜಾತಿ ಪ್ರಮಾಣ ಪತ್ರವನ್ನು ನೀಡಬೇಕು. ಇದರಿಂದ ಸಮಾಜ ಕಲ್ಯಾಣ ಇಲಾಖೆಯಿಂದ ಸಿಗುವ ಅನುದಾನವನ್ನು ಅವರಿಗೆ ಸಿಗಲು ಅನುಕೂಲಕರ. ಟ್ರಸ್ಟ್‌ನಿಂದ ವಧು, ವರರಿಗೆ ಈ ದಿನ ಬಟ್ಟೆಗಳು ನೀಡುತ್ತಿದ್ದು, ಮದುವೆಯ ದಿನದಂದು ತಾಳಿ, ಮತ್ತು ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ಹೇಳಿದರು.
ಸಮಾರಂಭಕ್ಕೆ ಜಿಲ್ಲಾಧಿಕಾರಿಗಳು, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿಯವರು, ತಹಶೀಲ್ದಾರರು, ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷರು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಇನ್ನೂ ಮದುವೆಯಾಗಲಿಚ್ಛಿಸುವ ಜೋಡಿಗಳು ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಕೃಷಿಕ ಸಮಾಜದ ಆನೂರು ದೇವರಾಜ್, ಗೋವಿಂದಪ್ಪ, ಅಶ್ವತ್ಥರೆಡ್ಡಿ, ಆನೂರು ಶಿವಣ್ಣ, ಮಳಮಾಚನಹಳ್ಳಿ ಬೈರೇಗೌಡ, ಹಿತ್ತಲಹಳ್ಳಿ ಕೃಷ್ಣಪ್ಪ, ಬಾಬು, ಮುನಿರಾಜು, ಅಂಬರೀಷ್‌, ವೆಂಕಟೇಶ್‌ ಮುಂತಾದವರು ಹಾಜರಿದ್ದರು.

ಬೋದಗೂರು ಗ್ರಾಮದಲ್ಲಿ ತಯಾರಾಗುತ್ತಿದೆ ಸಿರಿಧಾನ್ಯಗಳ ಪೇಯದ ಪುಡಿ

0

ಬೆಳೆದ ಬೆಳೆಯ ಮೌಲ್ಯವರ್ಧನೆಯಾಗುವುದು ಅದನ್ನು ಸಂಸ್ಕರಿಸಿದಾಗಲೇ. ತಮ್ಮ ಹೊಲದಲ್ಲಿ ಬೆಳೆಯುವ ಕಿರುಧಾನ್ಯಗಳನ್ನು ಸಂಸ್ಕರಿಸಿ ಪುಡಿ ಮಾಡಿ ಹಾಲು ಅಥವಾ ನೀರಿನೊಂದಿಗೆ ಬೆರೆಸಿ ಕುಡಿಯಬಹುದಾದ ಪೌಷ್ಟಿಕಾಂಶದ ಪುಡಿಯನ್ನಾಗಿಸುತ್ತಿದ್ದಾರೆ ಶಿಡ್ಲಘಟ್ಟ ತಾಲ್ಲೂಕಿನ ಬೋದಗೂರು ಮಾಣಿಕ್ಯಮ್ಮ.
ತಾಲ್ಲೂಕಿನ ಬೋದಗೂರು ಗ್ರಾಮದ ಸಾವಯವ ಕೃಷಿಕರಾದ ವೆಂಕಟಸ್ವಾಮಿರೆಡ್ಡಿ ಅವರು ಸಜ್ಜೆ, ಸಾಮೆ, ಊದಲು, ಬರಗು, ನವಣೆ, ಬಿಳಿ ಜೋಳ, ಹಾರಕ, ರಾಗಿ, ಉಚ್ಚೆಳ್ಳು ಮುಂತಾದ ತೃಣ ಧಾನ್ಯಗಳೊಂದಿಗೆ ಮಳೆಯಾಶ್ರಿತ ನಾಟಿ ತಳಿ ದೊಡ್ಡಬೈರನೆಲ್ಲು ಭತ್ತವನ್ನು ಬೆಳೆಯುತ್ತಾರೆ. ತಮ್ಮ ಕುಟುಂಬಕ್ಕೆ ಬಳಸಿ ಉಳಿದಿದ್ದನ್ನು ಆಸಕ್ತ ರೈತರಿಗೆ ಬೀಜದ ರೂಪದಲ್ಲಿ ನೀಡುತ್ತಾರೆ. ಆರ್ಥಿಕ ಉದ್ದೇಶವಿಲ್ಲದೇ ಕೇವಲ ಆಹಾರ, ಆರೋಗ್ಯ ಮತ್ತು ಧಾನ್ಯ ಪಸರಣದ ಉದ್ದೇಶದಿಂದ ಅರ್ಧ ಎಕರೆಯಲ್ಲಿ ಸಜ್ಜೆ, ಸಾಮೆ, ನವಣೆ, ಬಿಳಿ ಜೋಳ, ಉಚ್ಚೆಳ್ಳು, ಊದಲು, ಸಾಮೆ, ಬರಗು, ನಾಟಿ ತಳಿ ಭತ್ತವನ್ನು ಬೆಳೆಯುತ್ತಾರೆ. ಯಾವುದೇ ರೀತಿಯ ರಾಸಾಯನಿಕಗಳನ್ನು ತಮ್ಮ ನೆಲಕ್ಕೆ ಸೋಕಿಸದಿರುವುದು ಅವರ ವಿಶೇಷತೆ.
ಕಿರುಧಾನ್ಯಗಳು ಸಾಮಾನ್ಯವಾಗಿ ಗುಂಡಗಿನ ಆಕಾರದಲ್ಲಿ ಮತ್ತು ಸಣ್ಣ ಗಾತ್ರದಲ್ಲಿ ಇರುತ್ತವೆ. ನವಣೆ, ಸಾಮೆ, ಸಜ್ಜೆ, ಹಾರಕ, ಕೊರಲೆ, ಬರಗು, ರಾಗಿ, ಜೋಳದಂತಹ ಬೆಳೆಗಳು ಕಿರು ಧಾನ್ಯಗಳು. ಎಲ್ಲ ಹವಾಮಾನಕ್ಕೂ ಹೊಂದಿಕೊಂಡು ಬೆಳೆಯುವ, ಹೆಚ್ಚು ಪೌಷ್ಟಿಕಾಂಶಗಳನ್ನು, ನಾರಿನಂಶವನ್ನು ಹೊಂದಿರುವ ನಿಸರ್ಗಕ್ಕೆ ಹಾನಿ ಮಾಡದಂತೆ ಬೆಳೆಯುವ ಈ ಧಾನ್ಯಗಳನ್ನು ಸಿರಿಧಾನ್ಯಗಳೆಂದು ಕೂಡ ಕರೆಯುತ್ತಾರೆ. ಇವನ್ನು ತೃಣಧಾನ್ಯಗಳು ಎಂದೂ ಕೂಡ ಕರೆಯುತ್ತಾರೆ.

ಕಿರಿಧಾನ್ಯಗಳು ಮತ್ತು ಅದರಿಂದ ತಯಾರಾದ ಪೇಯದ ಪುಡಿ ಪೊಟ್ಟಣಗಳು

ಬೋದಗೂರು ಮಾಣಿಕ್ಯಮ್ಮ ಅವರು ತಮ್ಮ ಹೊಲದಲ್ಲಿ ಬೆಳೆಯುವ ಸಿರಿಧಾನ್ಯಗಳು, ಬೇಳೆಗಳು, ಏಲಕ್ಕಿ ಗೋಡಂಬಿ, ಬಾದಾಮಿ ಎಲ್ಲವುಗಳ ಪುಡಿಗಳ ಮಿಶ್ರಣವನ್ನು ಪ್ಯಾಕೆಟ್‌ಗಳಾಗಿ ಮಾಡುತ್ತಾರೆ. ನಗರದಲ್ಲಿರುವ ಮಕ್ಕಳಿಗೆ, ಮೊಮ್ಮಕ್ಕಳಿಗೆ, ವಿದೇಶದಲ್ಲಿರುವ ಅವರ ಬಂಧುಗಳಿಂದ ಅಪಾರ ಬೇಡಿಕೆ. ತಮ್ಮ ಆರೋಗ್ಯದೊಂದಿಗೆ ತಮ್ಮ ಬಂಧುಗಳ ಆರೋಗ್ಯ ಉತ್ತಮಗೊಳ್ಳಲು ಅವರು ಈ ರೀತಿಯಾಗಿ ನೆರವಾಗುತ್ತಿದ್ದಾರೆ. ನಗರಗಳಲ್ಲಿ ಸಾವಯವ ಉತ್ಪನ್ನಗಳು ಹಾಗೂ ಸಿರಿಧಾನ್ಯಗಳ ಉತ್ಪನ್ನಗಳು ಬೇಡಿಕೆಯಿರುವ ಮಾರಾಟದ ವಸ್ತುಗಳಾಗಿರುವಾಗ ಇವರು ಹಣದ ಆಸೆಯಿಲ್ಲದೇ ಉತ್ತಮ ಆರೋಗ್ಯ ಹಾಗೂ ಪೌಷ್ಟಿಕಾಂಶಗಳ ಹಂಚಿಕೆಯ ಉದ್ದೇಶವನ್ನು ಹೊಂದಿರುವುದು ವಿಶೇಷವಾಗಿದೆ. ಬೋದಗೂರಿನ ರಾಘವೇಂದ್ರ ಮಹಿಳಾ ಸ್ವಸಹಾಯ ಗುಂಪಿನ ಪ್ರತಿನಿಧಿಯಾಗಿರುವ ಇವರು ಉಳಿದ ಮಹಿಳೆಯರಿಗೂ ಸಿರಿ ಧಾನ್ಯಗಳ ರುಚಿ ಹತ್ತಿಸಿದ್ದಾರೆ.
‘ನಮ್ಮ ಹೊಲದಲ್ಲಿ ಬೆಳೆಯುವ ಕಿರುಧಾನ್ಯಗಳಾದ ಹಾರಕ, ಸಾಮೆ, ಊದಲು, ಬರುಗು, ನವಣೆ, ಸಜ್ಜೆ, ಬಿಳಿ ಜೋಳ, ರಾಗಿ, ಕೆಂಪಕ್ಕಿಗಳನ್ನು ತಲಾ ಐದು ಕೆಜಿ, ತೊಗರಿ ಬೇಳೆ, ಕಡಲೇಬೇಳೆ, ಕಡಲೆಕಾಯಿ ಬೀಜಗಳನ್ನು ತಲಾ ಎರಡು ಕೆಜಿ, ಗೋದಿ ಐದು ಕೆಜಿ, ಏಲಕ್ಕಿ ಕಾಲು ಕೆಜಿ, ಗೋಡಂಬಿ ಮತ್ತು ಬಾದಾಮಿ ಅರ್ಧರ್ಧ ಕೆಜಿ ಪುಡಿ ಮಾಡಿಸುತ್ತೇನೆ. ರಾಗಿ ಮತ್ತು ಹೆಸರುಕಾಳುಗಳನ್ನು ಮೊಳಕೆ ಕಟ್ಟಿಸಿ ಒಣಗಿಸಿದರೆ, ಸಿರಿಧಾನ್ಯಗಳು ಮತ್ತು ಬೇಳೆಗಳನ್ನು ಹುರಿಯುತ್ತೇವೆ. ಮೊದಲು ಮನೆ ಮಟ್ಟಿಗೆ ಮಾಡಿದ್ದು, ಈಗ ಬಂಧು, ಮಿತ್ರರಿಂದೆಲ್ಲ ಬೇಡಿಕೆ ಬರುತ್ತಿದೆ. ನಮಗಂತೂ ಕೊಡಲು ಖುಷಿಯಿದೆ’ ಎನ್ನುತ್ತಾರೆ ಬೋದಗೂರು ಮಾಣಿಕ್ಯಮ್ಮ.
‘ಕಿರುಧಾನ್ಯಗಳಲ್ಲಿ ಎಲ್ಲ ಪೋಷಕಾಂಶಗಳನ್ನು ಒಟ್ಟಿಗೆ ನೀಡುವ ತಾಕತ್ತಿದೆ. ಹಿಂದೆ ಈ ಧಾನ್ಯಗಳಿಂದ ಭೀಮ ಬಲ ಬರುತ್ತದೆಂದು ನಂಬಿಕೆಯಿಂದ ದೇಹಧಾರ್ಡ್ಯ ಪಟುಗಳು ಕಿರುಧಾನ್ಯಗಳನ್ನು ಹೆಚ್ಚಾಗಿ ಬಳಸುತ್ತಿದ್ದರು ಮತ್ತು ಎಳೆ ಮಕ್ಕಳಿಗೆ ಇವುಗಳ ಮಿಶ್ರಣದ ಪುಡಿಯ ಪೇಯವನ್ನು ನೀಡುತ್ತಿದ್ದರು. ಅದೇ ಆಧಾರದ ಮೇಲೆ ಪುಡಿಯನ್ನು ತಯಾರಿಸುತ್ತೇನೆ. ಮಕ್ಕಳಿಗೆ, ಮಧುಮೇಹಿಗಳಿಗೆ, ವೃದ್ಧರಿಗೆ ಸೇರಿದಂತೆ ಎಲ್ಲರಿಗೂ ಇದು ಉತೃಷ್ಟ ಪೇಯವಾಗುತ್ತದೆ’ ಎಂದು ಅವರು ವಿವರಿಸಿದರು.

ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಖ್ಯಾತ ಛಾಯಾಗ್ರಾಹಕ ಡಿ.ಜಿ.ಮಲ್ಲಿಕಾರ್ಜುನ

0

ಶಿಡ್ಲಘಟ್ಟ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮಾರ್ಚ್ ೧೦ ರಂದು ಆಯೋಜನೆ ಮಾಡಲಾಗಿರುವ ೬ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಖ್ಯಾತ ಛಾಯಾಗ್ರಾಹಕ ಡಿ.ಜಿ.ಮಲ್ಲಿಕಾರ್ಜುನ ಅವರನ್ನು ಆಯ್ಕೆ ಮಾಡಲಾಗಿದ್ದು ಶಾಸಕ ಎಂ.ರಾಜಣ್ಣ ಅವರು ಅಧಿಕೃತವಾಗಿ ಆಹ್ವಾನ ನೀಡಿದರು.
ನಗರದ ೧೧ ನೇ ವಾರ್ಡಿನಲ್ಲಿರುವ ಮಲ್ಲಿಕಾರ್ಜುನ ಅವರ ಸೃಗೃಹಕ್ಕೆ ಬೇಟಿ ನೀಡಿದ್ದ ಅವರು, ೬ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕು ಎಂದು ಮನವಿ ಮಾಡಿದರು.
ಶಾಲುಹೊದಿಸಿ ಸನ್ಮಾನ ಮಾಡುವ ಮೂಲಕ ಆಹ್ವಾನ ನೀಡಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಎಸ್.ವಿ.ನಾಗರಾಜರಾವ್, ಮಾಜಿ ತಾಲ್ಲೂಕು ಅಧ್ಯಕ್ಷ ಕೃಷ್ಣ, ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಬಿ.ಸಿ.ನಂದೀಶ್, ಡಿ.ಎಂ.ಜಗದೀಶ್ವರ್, ಉರಗತಜ್ಞ ಕೊತ್ತನೂರು ನಾಗರಾಜ್, ಎ.ಎಂ.ತ್ಯಾಗರಾಜ್, ದೇವರಾಜ್ ಮುಂತಾದವರು ಹಾಜರಿದ್ದರು.

ಜಾಗೃತಿ ಕಾರ್ಯಾಗಾರ

0

೨೦೧೭-೧೮ ನೇ ಸಾಲಿನ ಆರ್.ಟಿ.ಇ.ಅಡಿಯಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಅಲ್ಪಸಂಖ್ಯಾತವಲ್ಲದ ಅನುದಾನ ರಹಿತ ಶಾಲೆಗಳ ಸೀಟುಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಪೋಷಕರಿಗೆ ಮಾರ್ಚ್‌ ೪ ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಜಾಗೃತಿ ಕಾರ್ಯಾಗಾರವನ್ನು ಆಯೋಜನೆ ಮಾಡಲಾಗಿದ್ದು ಇದರ ಸದುಪಯೋಗವನ್ನು ಪೊಷಕರು ಪಡೆದುಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‌ಅರ್ಜಿ ಸಲ್ಲಿಸಲು ಮಗುವಿನ ಭಾವಚಿತ್ರ, ಮಗುವಿನ ಜನನ ಪ್ರಮಾಣಪತ್ರ, ಮಗುವಿನ ಆಧಾರ್ ಕಾರ್ಡ್, ಪೋಷಕರ ಆಧಾರ್ ಕಾರ್ಡ್, ಆಧಾರ್ ಕಾರ್ಡ್ ಇಲ್ಲದಿದ್ದಲ್ಲಿ ಅರ್ಜಿ ಸಲ್ಲಿಸಿರುವ ಸ್ವೀಕೃತಿ ಪತ್ರ, ಹಿಂದುಳಿದ ವರ್ಗಗಳಾಗಿದ್ದಲ್ಲಿ ಜಾತಿ, ಆದಾಯ ಪ್ರಮಾಣಪತ್ರಗಳನ್ನು ಸಲ್ಲಿಸಬೇಕು. ಪರಿಶಿಷ್ಟ ಜಾತಿ ಪ್ರವರ್ಗ-೧ ಆಗಿದ್ದಲ್ಲಿ ಜಾತಿ ದೃಢೀಕರಣ ಪತ್ರವನ್ನು ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.
ವಯೋಮಿತಿ : ಎಲ್.ಕೆ.ಜಿಗೆ ೩ ವರ್ಷ ೧೦ ತಿಂಗಳಿಂದ ೪ ವರ್ಷ ೧೦ ತಿಂಗಳು, ೧ ನೇ ತರಗತಿಗೆ ೫ ವರ್ಷ ೧೦ ತಿಂಗಳಿಂದ ೬ ವರ್ಷ ೧೦ ತಿಂಗಳಾಗಿದೆ.

ಬಡತನ ರೇಖೆಯ ಎಲ್ಲರಿಗೂ ನಿವೇಶನ, ಮನೆ ಮಂಜೂರು

0

ತಾಲ್ಲೂಕಿನಲ್ಲಿ ಸ್ವಂತ ಮನೆ ಹಾಗೂ ನಿವೇಶನ ಇಲ್ಲದವರ ಸಮೀಕ್ಷೆ ನಡೆಸಿ ಕೂಡಲೆ ಮನೆ, ನಿವೇಶನ ಇಲ್ಲದವರ ಪಟ್ಟಿಯನ್ನು ನೀಡುವಂತೆ ಸಂಸದ ಕೆ.ಎಚ್.ಮುನಿಯಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಈಚೆಗೆ ಕಂದಾಯ, ತಾಲ್ಲೂಕು ಪಂಚಾಯಿತಿ, ಪಶು ಸಂಗೋಪನೆ, ಕುಡಿಯುವ ನೀರು ಪೂರೈಕೆ ಇಲಾಖೆಯ ಅಧಿಕಾರಿಗಳ ತುರ್ತು ಸಭೆ ನಡೆಸಿ, ಗ್ರಾಮ ಪಂಚಾಯಿತಿವಾರು ಮನೆ ಹಾಗೂ ನಿವೇಶನ ಇಲ್ಲದವರ ಪಟ್ಟಿಯನ್ನು ಮಾರ್ಚ್ ೪ರಂದು ನಡೆಯುವ ಸಭೆಗೆ ನೀಡುವಂತೆ ತಾಕೀತು ಮಾಡಿದರು.
ರಾಜ್ಯ ಸರ್ಕಾರ ಎಲ್ಲರಿಗೂ ನಿವೇಶನ ಹಾಗೂ ಮನೆ ನೀಡಲು ನಿರ್ಧರಿಸಿದ್ದು ೧೦ ಲಕ್ಷ ಮನೆಗಳನ್ನು ಮಂಜೂರು ಮಾಡಲು ನಿರ್ಧರಿಸಿದೆ. ಆದರೆ ಬಹುತೇಕ ಮಂದಿ ನಿವೇಶನಗಳು ಇಲ್ಲದೆ ಮನೆ ಮಂಜೂರು ಆದರೂ ಮನೆ ಕಟ್ಟಿಕೊಳ್ಳದೆ ಇದ್ದಾರೆ. ಇದನ್ನರಿತ ರಾಜ್ಯ ಸರ್ಕಾರ ಮೊದಲು ನಿವೇಶನ ಇಲ್ಲದವರಿಗೆ ನಿವೇಶನ ನೀಡುವ ಹಾಗೂ ನಂತರ ಮನೆ ಮಂಜೂರು ಮಾಡಲು ನಿರ್ಧರಿಸಿದ್ದು ಇದಕ್ಕಾಗಿ ಮೊದಲ ಹಂತದಲ್ಲಿ ೫ ಲಕ್ಷ ಹಾಗೂ ನಂತರದಲ್ಲಿ ೫ ಲಕ್ಷ ಮನೆಗಳನ್ನು ಮಂಜೂರು ಮಾಡಲು ಮುಂದಾಗಿದೆ ಎಂದರು.
ಈ ೧೦ ಲಕ್ಷ ಮನೆ ಹಾಗೂ ನೀಡಲು ಉದ್ದೇಶಿಸಿರುವ ನಿವೇಶನಗಳಲ್ಲಿ ಶೇ. ೫೦ರಷ್ಟು ಪರಿಶಿಷ್ಟ ಜಾತಿ, ಪಂಗಡಕ್ಕೆ ಇನ್ನುಳಿದ ಶೇ. ೫೦ರಷ್ಟು ಇತರೆ ಸಮುದಾಯಕ್ಕೆ ನೀಡಲು ಉದ್ದೇಶಿಸಿದೆ ಎಂದು ಹೇಳಿದರು.
ಇದುವರೆಗೂ ಮಂಜೂರು ಆಗಿರುವ ಮನೆಗಳಲ್ಲಿ ಗ್ರಾಮ ಪಂಚಾಯಿತಿಗೆ ನಾಲ್ಕೈದು ಮನೆಗಳು ಇತರೆ ಸಮುದಾಯಕ್ಕೆ ಬಂದರೆ ಯಾರಿಗೆ ಹಂಚುವುದು ಯಾರಿಗೆ ಬಿಡುವುದು ಎಂಬ ಲೆಕ್ಕಾಚಾರದಲ್ಲಿ ಸಾಕಷ್ಟು ಮಂದಿ ಇತರೆ ವರ್ಗದವರು ವಸತಿ ಯೋಜನೆಗಳಿಂದ ವಂಚಿತರಾಗಿರುವ ವಿಚಾರ ಸರ್ಕಾರದ ಗಮನದಲ್ಲಿದೆ. ಎಲ್ಲಿ ಸರ್ಕಾರದ ಜಾಗ ಲಭ್ಯತೆ ಇಲ್ಲವೋ ಅಲ್ಲಿ ಖಾಸಗಿ ಜಮೀನನ್ನು ಖರೀದಿಸಿ ನಿವೇಶನಗಳನ್ನು ವಿತರಿಸಬೇಕಿದೆ. ಅದಕ್ಕಾಗಿ ಖಾಸಗಿ ಜಮೀನನ್ನು ಎಲ್ಲಿ ಎಷ್ಟು ಖರೀದಿಸಬೇಕೆಂದು ಅಂಕಿ ಅಂಶ ನೀಡಿದರೆ ಮುಖ್ಯಮಂತ್ರಿಯೊಂದಿಗೆ ಮಾತನಾಡಿ ಅಗತ್ಯ ಹಣಕಾಸನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದರು.
ತಾಲೂಕಿನಲ್ಲಿ ಈಗಾಗಲೆ ಮನೆ ಹಾಗೂ ನಿವೇಶನ ಇಲ್ಲದವರ ಪಟ್ಟಿಯನ್ನು ಬಹುತೇಕ ಪೂರ್ಣಗೊಳಿಸಿದ್ದು ಇನ್ನುಳಿದ ಪಟ್ಟಿಯನ್ನು ಮುಂದಿನ ಸಭೆಯೊಳಗೆ ನೀಡುವುದಾಗಿ ಹೇಳಿದ ತಾಲ್ಲೂಕು ಪಂಚಾಯಿತಿ ಇಒ ವೆಂಕಟೇಶ್, ಈಗಾಗಲೆ ನಿವೇಶನಗಳಿಗೆ ನೀಡಲು ೩೨ ಎಕರೆ ಜಮೀನನ್ನು ಗುರ್ತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸರ್ಕಾರಿ ಜಮೀನು ಇಲ್ಲ ಎಂದು ಸುಮ್ಮನಿದ್ದರೆ ಆಗದು, ಯಾವ ಊರಲ್ಲಿ ಖಾಸಗಿ ಜಮೀನನ್ನು ಖರೀದಿಸಬೇಕು, ಆ ಭಾಗದಲ್ಲಿ ಮಾರುಕಟ್ಟೆ ಮೌಲ್ಯ ಎಷ್ಟಿದೆ ಎಂಬ ಎಲ್ಲ ಮಾಹಿತಿಯನ್ನು ಒದಗಿಸಿದರೆ ಮುಂದಿನ ಬಜೆಟ್‌ನಲ್ಲಿ ಇದಕ್ಕೆ ಹಣವನ್ನು ಮೀಸಲು ಇರಿಸುವುದಾಗಿ ತಿಳಿಸಿದರು.
ತಾಲ್ಲೂಕಿನಲ್ಲಿ ಈಗಾಗಲೆ ೬ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುತ್ತಿದ್ದು, ೧೪೪ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆ ದೋರಲಿದೆ ಎಂದು ಪಟ್ಟಿ ಮಾಡಿದ್ದು ಯಾವುದೆ ಕಾರಣಕ್ಕೂ ಪರಿಸ್ಥಿತಿ ಕೈ ಮೀರದಂತೆ ಅಗತ್ಯವಾದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಗ್ರಾಮೀಣ ಕುಡಿಯುವ ನೀರು ಪೂರೈಕೆಯ ಪ್ರಭಾರಿ ಎಇಇ ಕೇಶವಮೂರ್ತಿಗೆ ಸಂಸದ ಕೆ.ಎಚ್.ಮುನಿಯಪ್ಪ ಸೂಚಿಸಿದರು.
ತಹಸೀಲ್ದಾರ್ ಅಜಿತ್ ಕುಮಾರ್ ರೈ, ತಾಲ್ಲೂಕು ಪಂಚಾಯಿತಿ ಇಒ ವೆಂಕಟೇಶ್, ಗ್ರಾಮೀಣ ಕುಡಿಯುವ ನೀರು ಪೂರೈಕೆ ಹಾಗೂ ನೈರ್ಮಲ್ಯ ಇಲಾಖೆಯ ಎಇಇ ಎಂ.ಕೇಶವಮೂರ್ತಿ, ಜೆಇ ರಮೇಶ್‌ಕುಮಾರ್, ಪಶು ಸಂಗೋಪನೆ ಇಲಾಖೆಯ ಡಾ.ಮುನಿನಾರಾಯಣರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಂ.ಸತೀಶ್, ಕೆಪಿಟಿಸಿಎಲ್ ನಿರ್ದೆಶಕ ಭಕ್ತರಹಳ್ಳಿ ಬಿ.ವಿ.ಮುನೇಗೌಡ, ರೈಲ್ವೆ ಇಲಾಖೆಯ ಸಲಹಾ ಸಮಿತಿ ಸದಸ್ಯ ಕಂಬದಹಳ್ಳಿ ಜಗದೀಶ್ ಮತ್ತಿತರರು ಹಾಜರಿದ್ದರು.