Home Blog Page 427

ತಲಕಾಯಲಬೆಟ್ಟದಲ್ಲಿ ಉಚಿತ ಸಾಮೂಹಿಕ ವಿವಾಹ

0

ದುಂದು ವೆಚ್ಚವನ್ನು ಕಡಿತಗೊಳಿಸುವ ಉದ್ದೇಶದಿಂದ ಶಿಡ್ಲಘಟ್ಟ ತಾಲ್ಲೂಕು ವ್ಯಾಪ್ತಿಯಲ್ಲಿನ ಅವಿವಾಹಿತರಿಗೆ ಉಚಿತ ಸಾಮೂಹಿಕ ವಿವಾಹಗಳನ್ನು ಮಾರ್ಚ್‌ ೨೩ ರ ಗುರುವಾರ ಬೆಳಿಗ್ಗೆ ೧೧ ಗಂಟೆಗೆ ತಾಲ್ಲೂಕಿನ ತಲಕಾಯಲಬೆಟ್ಟದಲ್ಲಿ ಆಯೋಜನೆ ಮಾಡಲಾಗಿದೆ ಎಂದು ಎಸ್.ಎನ್.ಕ್ರಿಯಾ ಟ್ರಸ್ಟ್ ನ ಅಧ್ಯಕ್ಷ ಆಂಜಿನಪ್ಪ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನೋಂದಾವಣೆ ಮಾಡಿಕೊಳ್ಳುವವರು ವರನಿಗೆ ೨೧ ವರ್ಷ, ವಧುವಿಗೆ ೧೮ ವರ್ಷ ವಯಸ್ಸಾಗಿರಬೇಕು. ಈ ಬಗ್ಗೆ ಸೂಕ್ತ ದಾಖಲೆಗಳನ್ನು ಸಲ್ಲಿಸಬೇಕು. ಪರಿಶಿಷ್ಠ ಜಾತಿ ಮತ್ತು ಜನಾಂಗದವರು ಕಡ್ಡಾಯವಾಗಿ ತಹಶೀಲ್ದಾರರಿಂದ ಪಡೆದುಕೊಂಡಿರುವ ಜಾತಿ ಪ್ರಮಾಣ ಪತ್ರವನ್ನು ನೀಡಬೇಕು. ಇದರಿಂದ ಸಮಾಜ ಕಲ್ಯಾಣ ಇಲಾಖೆಯಿಂದ ಸಿಗುವ ಅನುದಾನವನ್ನು ಅವರಿಗೆ ಸಿಗಲು ಅನುಕೂಲಕರ.
ಟ್ರಸ್ಟ್‌ನಿಂದ ವಧು, ವರರಿಗೆ ಬಟ್ಟೆಗಳು, ತಾಳಿ, ಮತ್ತು ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತದೆ.
ಸಮಾರಂಭಕ್ಕೆ ಜಿಲ್ಲಾಧಿಕಾರಿಗಳು, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿಯವರು, ತಹಶೀಲ್ದಾರರು, ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷರು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಈಗಾಗಲೇ ಸುಮಾರು 47 ಜೋಡಿಗಳು ದಾಖಲಿಸಿಕೊಂಡಿದ್ದು, ಆದಷ್ಟು ಬೇಗ ನೋಂದಣಿ ಮಾಡಿಕೊಳ್ಳಿ. ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ದೇಣಿಗೆ ನೀಡುವವರು ಸಹ ನೀಡಬಹುದಾಗಿದೆ ಎಂದು ಅವರು ಮನವಿ ಮಾಡಿದರು.
ಹೆಚ್ಚಿನ ಮಾಹಿತಿಗಾಗಿ ೯೮೪೫೩೬೬೪೦೭ ಗೆ ಸಂಪರ್ಕಿಸಬಹುದಾಗಿದೆ.
ಕೃಷಿಕ ಸಮಾಜದ ಆನೂರು ದೇವರಾಜ್, ಆನೂರು ಶಿವಣ್ಣ, ಮಳಮಾಚನಹಳ್ಳಿ ಬೈರೇಗೌಡ, ಅಫ್ಸ್‌ರ್ ಪಾಷ, ಟಿಪ್ಪುಸುಲ್ತಾನ್‌ ಅಂಘದ ತಾಲ್ಲೂಕು ಅಧ್ಯಕ್ಷ ಮೌಲಾ, ಮುಂತಾದವರು ಹಾಜರಿದ್ದರು.

ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ರಾಗಿಣಿಯವರಿಗೆ ಸನ್ಮಾನ

0

ತಮ್ಮ ಎರಡೂವರೆ ದಶಕಗಳ ಸೇವಾವಧಿಯಲ್ಲಿ ನ್ಯಾಯಾಂಗ ಇಲಾಖೆಯ ಗೌರವ ಹಾಗು ಘನತೆಗೆ ಧಕ್ಕೆ ಬಾರದಂತೆ ಸೇವೆ ಸಲ್ಲಿಸಿ ಇದೀಗ ಸ್ವಯಂ ನಿವೃತ್ತಿ ಪಡೆದಿರುವ ರಾಗಿಣಿಯವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಮಂಜುನಾಥ್ ಹಾರೈಸಿದರು.
ನಗರದ ನ್ಯಾಯಾಂಗ ಇಲಾಖೆಯಲ್ಲಿ ಸುಮಾರು ೨೫ ವರ್ಷಗಳ ಕಾಲ ಸಹಾಯಕಿಯಾಗಿ ಸೇವೆ ಸಲ್ಲಿಸಿ ಅನಾರೋಗ್ಯದ ಕಾರಣ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದ ರಾಗಿಣಿಯವರನ್ನು ಈಚೆಗೆ ಸನ್ಮಾನಿಸಿ ಅವರು ಮಾತನಾಡಿದರು.
ಕಳೆದ ಎರಡೂವರೆ ದಶಕಗಳ ಕಾಲ ನ್ಯಾಯಾಂಗ ಇಲಾಖೆಯಲ್ಲಿ ಸಹಾಯಕಿಯಾಗಿ ಸೇವೆ ಸಲ್ಲಿಸಿ ನ್ಯಾಯಾಲಯದ ಸಿಬ್ಬಂದಿ ಸೇರಿದಂತೆ ನಾಗರಿಕರೊಂದಿಗೆ ಉತ್ತಮ ಬಾಂದವ್ಯ ಹೊಂದಿದ್ದ ರಾಗಿಣಿಯವರು ಅನಾರೋಗ್ಯದ ಕಾರಣ ಸ್ವಯಂ ನಿವೃತ್ತಿಗಾಗಿ ಜಿಲ್ಲಾ ನ್ಯಾಯಾಧೀಶರಿಗೆ ಅರ್ಜಿ ಸಲ್ಲಿಸಿದ್ದರು.
ಜಿಲ್ಲಾ ನ್ಯಾಯಾಧೀಶರ ಆಧೇಶದ ಮೇರೆಗೆ ಸೇವೆಯಿಂದ ಫೆಬ್ರುವರಿ ೨೮ ರಂದು ನಿವೃತ್ತಿ ಹೊಂದಿರುವ ಅವರ ನಿವೃತ್ತಿ ಜೀವನವನ್ನು ಸುಖಕರವಾಗಿರಲು ಮಕ್ಕಳು ಉತ್ತಮ ವಾತಾವರಣ ಕಲ್ಪಿಸಿಕೊಡಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎನ್.ಎ.ಶ್ರೀಕಂಠ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಟಿ.ಎಲ್.ಸಂದೀಶ್, ಶಿರಸ್ತೇದಾರ್ ದೇವರಾಜ್, ಅಂಬುಜಮ್ಮ, ಸಿಬ್ಬಂದಿ ಮುರಳೀಧರ, ಉಮಾಶಂಕರ್ ಮತ್ತಿತರರು ಹಾಜರಿದ್ದರು.

ಕನ್ನಡ ಝೇಂಕಾರದ ನಿನಾದ

0

ಕನ್ನಡ ಸಾಹಿತ್ಯ ಪರಿಷತ್‍ನ 6 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇನ್ನು ಎಂಟು ದಿನವಷ್ಟೆ ಬಾಕಿ ಇದೆ. ತಾಲೂಕಿನ ಕನ್ನಡ ಬಂಧುಗಳಿಗೆ ಕನ್ನಡ ಝೇಂಕಾರದ ನಿನಾದ ಕೇಳಿಸಲು ಸಕಲ ಸಿದ್ದತೆಗಳು ಭರದಿಂದ ಸಾಗಿವೆ.
ನಗರದ ವಾಸವಿ ರಸ್ತೆಯ ವಾಸವಿ ಕಲ್ಯಾಣ ಮಂಟಪದಲ್ಲಿ ಮಾ 10 ರ ಶುಕ್ರವಾರ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು ದಿನಪೂರ್ತಿ ಕನ್ನಡ ನಾಡು, ನುಡಿ, ಭಾಷೆ, ನೆಲ ಜಲ, ಸಾಹಿತ್ಯ ಕುರಿತಾದ ನಾನಾ ಕಾರ್ಯಕ್ರಮಗಳು ನಡೆಯಲಿವೆ.
ಕಳೆದ ಐದು ಸಮ್ಮೇಳನಗಳನ್ನು ತುಂಬು ಹೃದಯದಿಂದ ನೆರವೇರಿಸಿ ಯಶಸ್ವಿಯಾಗಿಸಿದ ತಾಲೂಕಿನ ಕನ್ನಡದ ಬಂಧುಗಳು 6ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನೂ ಸಹ ಯಶಸ್ವಿಯಾಗಿಸುವ ಭಾರವನ್ನು ಹೆಗಲ ಮೇಲೆ ಹೊತ್ತೊಯ್ಯಲು ಸನ್ನದ್ಧರಾಗಿದ್ದಾರೆ.
6 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ನಗರದ ಖ್ಯಾತ ಅಂತರರಾಷ್ಟ್ರೀಯ ಛಾಯಾಗ್ರಾಹಕರಾಗಿರುವ ಡಿ.ಜಿ.ಮಲ್ಲಿಕಾರ್ಜುನ ಅವರನ್ನು ಆಯ್ಕೆ ಮಾಡಲಾಗಿದೆ.
ಸಮ್ಮೇಳನಾಧ್ಯಕ್ಷರಾಗಿ ಡಿ.ಜಿ. ಮಲ್ಲಿಕಾರ್ಜುನ: ಲಂಡನ್ನಿನ ರಾಯಲ್ ಫೋಟೋಗ್ರಫಿಕ್ ಸೊಸೈಟಿಯವರು ಪ್ರಕೃತಿ ವಿಭಾಗದ ಛಾಯಾಗ್ರಹಣ ಕಲೆಗೆ ನೀಡಿರುವ ಮನ್ನಣೆ ಅಸೋಸಿಯೇಟ್‍ಷಿಪ್ ಫಾರ್ ರಾಯಲ್ ಫೋಟೋಗ್ರಫಿಕ್ ಸೊಸೈಟಿ ಮತ್ತು ಪ್ಯಾರಿಸ್‍ನ ಅಸೋಸಿಯೇಟ್‍ಷಿಪ್ ಆಫ್ ಫೆಡರೇಷನ್ ಇಂಟರ್‍ನ್ಯಾಷನಲ್ ಡಿ ಲ ಆರ್ಟ್ ಫೋಟೋಗ್ರಫಿಕ್ ಎಂಬ ಮನ್ನಣೆಗೆ ಪಾತ್ರರಾಗಿರುವವರು ಶಿಡ್ಲಘಟ್ಟದ ಡಿ.ಜಿ.ಮಲ್ಲಿಕಾರ್ಜುನ.
ಪ್ರಸ್ತುತ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳ ತಾಲೂಕು ವರದಿಗಾರರಾಗಿರುವ ಇವರು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರವ ವನ್ಯಜೀವಿ ಪರಿಪಾಲಕರು, ರೆಡ್ ಕ್ರಾಸ್ ಸೊಸೈಟಿ ಆಜೀವ ಸದಸ್ಯ ಹಾಗೂ ಶಿಡ್ಲಘಟ್ಟ ತಾಲೂಕು ಪಂಚಾಯಿತಿ ಜೀವ ವೈವಿದ್ಯ ನಿರ್ವಹಣಾ ಸಮಿತಿ ಸದಸ್ಯ.
ಡಿ.ಜಿ.ಮಲ್ಲಿಕಾರ್ಜುನ ಅವರು ಬರೆದಿರುವ ಪುಸ್ತಕಗಳು ಅರೆಕ್ಷಣದ ಅದೃಷ್ಟ, ಕ್ಲಿಕ್, ಚಿಟ್ಟೆಗಳು, ಬಟರ್‍ಫ್ಲೈಸ್ ಮತ್ತು ಭೂತಾನ್ ಆನ್ ದಿ ವಿಂಗ್ಸ್ ಆಫ್ ಪೀಸ್‍ಫುಲ್ ಡ್ರಾಗನ್, ಎವೆರಿಮ್ಯಾನ್ ಡಾಟ್ ಕಾಮ್ ಅಂತಾರಾಷ್ಟ್ರೀಯ ಪ್ರಶಸ್ತಿ, ಅಂತಾರಾಷ್ಟ್ರೀಯ ಛಾಯಾಗ್ರಾಹಣ ಸ್ಪರ್ಧೆಗಳಲ್ಲಿ 100ಕ್ಕೂ ಹೆಚ್ಚು ಸ್ವೀಕೃತಿಗಳು, ಬಾಂಬೆ, ಕೊಲ್ಕೊತ್ತ, ಕೇರಳದ ರಾಷ್ಟ್ರೀಯ ಛಾಯಾಗ್ರಾಹಣ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳು, ಕೆ.ಪಿ.ಎ ರಾಜ್ಯ ಪ್ರಶಸ್ತಿ, ಡಾ. ಕೃಷ್ಣಾನಂದ ಕಾಮತ್ ಪ್ರತಿಷ್ಠನದ `ಉದಯೋನ್ಮುಖ ಪತ್ರಿಕಾ ಛಾಯಾಗ್ರಾಹಕ’ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಉತ್ತಮ ವರದಿಗಾಗಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿರುವ ಇವರ ಮುಕುಟಕ್ಕೆ ಇದೀಗ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಹೆಮ್ಮೆಯ ಗರಿ ಸಹ ಮೂಡಿದೆ.
ಎಂದಿಗೂ ತೆರೆಯ ಮುಂದೆ ಬರದೆ ತೆರೆಯ ಹಿಂದೆಯೆ ಕುಳಿತು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದ ಸೇವೆಯನ್ನು, ಕೊಡುಗೆಯನ್ನು ನೀಡಿದ 6ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಪೀಠ ಅಲಂಕರಿಸಲಿರುವ ಡಿ.ಜಿ. ಮಲ್ಲಿಕಾರ್ಜುನ ಅವರ ಕುರಿತು ಪರಿಚಯ.
ಶಿಡ್ಲಘಟ್ಟಕ್ಕೆ ಹೈಸ್ಕೂಲ್ ಕಟ್ಟಡ ಮತ್ತು ಸ್ಥಳದ ದಾನಿಗಳಾದ ಬಿ.ವಿರೂಪಾಕ್ಷಪ್ಪನವರ ಮುಮ್ಮಗನಾದ ಇವರು ಹುಟ್ಟಿದ್ದು ಶಿಡ್ಲಘಟ್ಟ ಪಟ್ಟಣದಲ್ಲಿ, ಎಂ.ಎಸ್. ಜ್ಞಾನೇಶ್ವರ್ ಹಾಗೂ ಭಾರತಿಯವರ ಪುತ್ರನಾಗಿ 1975 ರ ಮಾರ್ಚ್ 4 ರಂದು ಜನನ.
ನಗರದ ಶ್ರೀ ಸರಸ್ವತಿ ಕಾನ್ವೆಂಟ್ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಆರಂಭಿಸಿದ ಅವರು, ಏಳನೆಯ ತರಗತಿಯನ್ನು ಚಿಕ್ಕಬಳ್ಳಾಪುರದ ಸೆಂಟ್ ಜೋಸೆಫ್ ಶಾಲೆಯಲ್ಲಿ, ಪ್ರೌಢಶಾಲೆಯನ್ನು ಎಂ.ಪಿ.ಎಚ್.ಎಸ್ ಶಾಲೆಯಲ್ಲಿ, ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಯನ್ನು ಚಿಕ್ಕಮಗಳೂರಿನ ಎ.ಐ.ಟಿ ವಿದ್ಯಾಸಂಸ್ಥೆಯಲ್ಲಿ ಪೂರೈಸಿದ್ದಾರೆ.
ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (ಬಿ.ಎನ್.ಎಚ್.ಎಸ್) ನಡೆಸುವ ಪಕ್ಷಿಶಾಸ್ತ್ರದ ಕೋರ್ಸ್‍ನ ಪ್ರಮಾಣಪತ್ರ ಪಡೆದಿರುವ ಇವರು ಬಿ.ಎನ್.ಎಚ್.ಎಸ್ ವತಿಯಿಂದ ಒರಿಸ್ಸಾದ ಚಿಲ್ಕಾ ಸರೋವರದಲ್ಲಿ ಆಯೋಜಿಸಿದ್ದ ಪಕ್ಷಿಗಳಿಗೆ ಉಂಗುರ ತೊಡಿಸುವ ಶಿಬಿರದಲ್ಲಿ ಭಾಗವಹಿಸಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ಸುತ್ತಮುತ್ತ ಸುಮಾರು 32 ಕ್ಕೂ ಹೆಚ್ಚು ವಿಧದ ಜೇಡಗಳನ್ನು ಗುರುತಿಸಿ ಛಾಯಾಗ್ರಹಣ ಮಾಡಿರುವುದಲ್ಲದೆ, ವಿವಿಧ ಜಾತಿಯ ಚಿಟ್ಟೆಗಳು, ಕೀಟಗಳು, ಹಕ್ಕಿಗಳು, ಹಾವುಗಳು ಹಾಗೂ ಪ್ರಾಣಿಗಳನ್ನು ಗುರುತಿಸಿ ಛಾಯಾಗ್ರಹಣ ಮಾಡಿದ್ದಾರೆ. ಛಾಯಾಚಿತ್ರಗಳ ಪ್ರದರ್ಶನದ ಮೂಲಕ ಕಿರಿಯರಲ್ಲಿ ಜೀವವೈವಿದ್ಯದ ಬಗ್ಗೆ ಅರಿವು ಮೂಡಿಸುತ್ತಾ ಪರಿಸರ ಸಂರಕ್ಷಣೆಯ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯವನ್ನೂ ಮಾಡುತ್ತಿರುತ್ತಾರೆ.
ಈಜಿಪ್ಟ್, ಜೋರ್ಡಾನ್, ಸಿಂಗಾಪುರ, ಮಲೇಶಿಯಾ, ಟರ್ಕಿ, ಭೂತಾನ್, ಥಾಯ್ಲೆಂಡ್ ಮತ್ತು ಯು.ಎ.ಇ ದೇಶಗಳಿಗೆ ಪ್ರವಾಸ ಮಾಡಿ ಪ್ರವಾಸ ಲೇಖನಗಳನ್ನು ಪತ್ರಿಕೆಗಳಲ್ಲಿ ಬರೆದಿದ್ದಾರೆ. ಭೂತಾನ್ ದೇಶದ ರಾಜಧಾನಿ ಥಿಂಪು ನಗರದ `ನೆಹರೂ ವ್ಯಾಂಗ್ಚುಕ್ ಕಲ್ಚರಲ್ ಸೆಂಟರ್’ನ ಕಲಾ ಗ್ಯಾಲರಿಯಲ್ಲಿ 2015ರ ಮಾರ್ಚ್ 4 ರಿಂದ 6 ರವರೆಗೂ ಮೂರು ದಿನಗಳ ಕಾಲ ಇವರ ಛಾಯಾಚಿತ್ರಗಳ ಪ್ರದರ್ಶನ ನಡೆದಿತ್ತು.
ಅಂಚೆ ಚೀಟಿಗಳನ್ನು ಸಂಗ್ರಹಿಸುವ ಇವರಿಗೆ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ `ಕರ್ನಾಪೆಕ್ಸ್ – 2015′ ವಿವಿಧ ರಾಜ್ಯಗಳ ವಲಯ ಮಟ್ಟದ ಅಂಚೆ ಚೀಟಿಗಳ ಸ್ಪರ್ಧೆಯಲ್ಲಿ ಇವರ ಸಂಗ್ರಹಕ್ಕೆ ಕಂಚಿನ ಪದಕ ಲಭಿಸಿತ್ತು.

ನೀರಿನ ಸಮಸ್ಯೆ ಪರಿಹರಿಸಲು ಅಧಿಕಾರಿಗಳು ಸನ್ನದ್ಧರಾಗಿ

0

ಈ ಬಾರಿಯ ಬೇಸಿಗೆಯಲ್ಲಿ ನೀರಿನ ಅಭಾವ ತೀವ್ರವಾಗಲಿದೆ. ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳ ಜವಾಬ್ದಾರಿಯಿಂದ ತಮ್ಮ ಮೇಲಿರುವ ಹೊಣೆಗಾರಿಕೆಯನ್ನು ನಿಭಾಯಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸತೀಶ್ ತಿಳಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಕುಡಿಯುವ ನೀರು ವಿಭಾಗದ ಎಂಜಿನಿಯರ್ ಕೇಶವಮೂರ್ತಿ, ಹಳ್ಳಿಗಳಲ್ಲಿ ಬೇಸಿಗೆಯ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣಿಸಲಿದೆ. ತಾಲ್ಲೂಕಿನಲ್ಲಿ ೧೮೪ ಹಳ್ಳಿಗಳಲ್ಲಿ ಸಮಸ್ಯೆ ತಲೆದೋರಿರುವ ಬಗ್ಗೆ ಈಗಾಗಲೇ ಗುರ್ತಿಸಲಾಗಿದ್ದು ೯ ಕೋಟಿ ರೂಪಾಯಿಗಳನ್ನು ಅಂದಾಜು ಮಾಡಿ ಪ್ರಸ್ತಾವನೆ ಕಳುಹಿಸಿಕೊಟ್ಟಿದ್ದೇವೆ. ಹಳ್ಳಿಗಳಲ್ಲಿನ ಸಮಸ್ಯೆಯನ್ನು ನೀಗಿಸಲು ಕೊಳವೆಬಾವಿಗಳು ಬತ್ತಿಹೋಗಿರುವ ಕಡೆಗಳಲ್ಲಿ ರೈತರ ಮನವೊಲಿಸಿ ನೀರು ಪಡೆದುಕೊಂಡು ಪೂರೈಕೆ ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಒಂದು ವೇಳೆ ರೈತರು ಕೊಳವೆಬಾವಿಗಳನ್ನು ಬಿಟ್ಟುಕೊಡಲು ನಿರಾಕರಿಸಿದಲ್ಲಿ ಟ್ಯಾಂಕರುಗಳ ಮೂಲಕ ಪೂರೈಕೆ ಮಾಡುವಂತೆ ತಿಳಿಸಿದ್ದು, ಅವರ ಆದೇಶದಂತೆ ಮಾಡುತ್ತಿದ್ದೇವೆ ಎಂದು ಉತ್ತರಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್ ಮಾತನಾಡಿ, ಸರ್ಕಾರದಿಂದ ಬರುವಂತಹ ಅನುದಾನಗಳನ್ನು ಸಮರ್ಪಕವಾಗಿ ಸದ್ಭಳಕೆ ಮಾಡಿಕೊಂಡು ನಿಗದಿತ ಸಮಯದಲ್ಲಿ ಕಾಮಗಾರಿಗಳನ್ನು ಮುಕ್ತಾಯಗೊಳಿಸಬೇಕು. ಎಲ್ಲಾ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಸತೀಶ್, ತನುಜಾರಘು, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಇ.ಓ.ವೆಂಕಟೇಶ್, ನರೇಗಾ ಯೋಜನಾಧಿಕಾರಿ ಶ್ರೀನಾಥ್, ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರು, ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಲೊಕೋಪಯೋಗಿ ಇಲಾಖೆಯ ಸಿ.ಸಿ.ರಸ್ತೆ ಕಾಮಗಾರಿಗೆ ಚಾಲನೆ

0

ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುವಾಗ ಸರ್ಕಾರಿ ಯೋಜನೆಯ ಸದ್ಬಳಕೆಯ ಬಗ್ಗೆ ಜನರು ಕಾಳಜಿ ವಹಿಸಬೇಕು ಹಾಗೂ ಗುಣಮಟ್ಟದ ಬಗ್ಗೆ ಗಮನಿಸುತ್ತಿರಬೇಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಬೂದಾಳ ಮತ್ತು ವೀರಾಪುರ ಗ್ರಾಮಗಳು ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿನ ಎಸ್.ಸಿ.ಪಿ.ಮತ್ತು ಎಸ್.ಟಿ.ಪಿ ಯೋಜನೆಯಡಿ ಲೊಕೋಪಯೋಗಿ ಇಲಾಖೆಯ ಸಿ.ಸಿ.ರಸ್ತೆ ಕಾಮಗಾರಿಗಳಿಗೆ ಬುಧವಾರ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಲೊಕೋಪಯೋಗಿ ಇಲಾಖೆಯ ಮೂಲಕ ಎಸ್.ಸಿ.ಪಿ.ಮತ್ತು ಎಸ್.ಟಿ.ಪಿ ಯೋಜನೆಗಳಡಿಯಲ್ಲಿ ತಲಾ ೫ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ೧೦ ಗ್ರಾಮಗಳಲ್ಲಿ ಸಿ.ಸಿ.ರಸ್ತೆಗಳನ್ನು ನಿರ್ಮಾಣ ಮಾಡಲು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕೆಲವು ಹಳ್ಳಿಗಳಲ್ಲಿ ಈಗಾಗಲೇ ಕಾಮಗಾರಿಗಳು ಮುಕ್ತಾಯವಾಗಿವೆ. ಒಟ್ಟು ೫೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ನಾಗರಿಕರು ಹಳ್ಳಿಗಳ ಅಭಿವೃದ್ಧಿ ಹಾಗೂ ಕುಡಿಯುವ ನೀರಿನ ವಿಚಾರಗಳಲ್ಲಿ ರಾಜಕೀಯವನ್ನು ಬೆರೆಸದೆ ಪಕ್ಷ ಬೇಧ ಮರೆತು ಸಹಕಾರ ನೀಡಬೇಕು. ಲಭ್ಯವಾಗುತ್ತಿರುವ ನೀರನ್ನು ಮಿತವಾಗಿ ಬಳಕೆ ಮಾಡುವುದರ ಜೊತೆಗೆ ಹಳ್ಳಿಗಳಲ್ಲಿ ಸ್ವಚ್ಚತೆಯನ್ನು ಕಾಪಾಡುವ ಕಡೆಗೂ ಹೆಚ್ಚಿನ ಆಸಕ್ತಿವಹಿಸಿದಾಗ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ, ಮುಖಂಡರಾದ ಮುನಿರೆಡ್ಡಿ, ಮಂಜುನಾಥ್, ಮಳ್ಳೂರಯ್ಯ ಮುಂತಾದವರು ಹಾಜರಿದ್ದರು.

ಗಾಂಡ್ಲಚಿಂತೆ ಸರ್ಕಾರಿ ಶಾಲೆಯಲ್ಲಿ ಭಾರತೀಯ ಸೇವಾದಳ ಶಾಖೆ ಉದ್ಘಾಟನೆ

0

ಎಳೆಯ ಮಕ್ಕಳಲ್ಲಿ ರಾಷ್ಟ್ರೀಯ ಭಾವೈ­ಕ್ಯತೆಯ ಸಂದೇಶವನ್ನು ತುಂಬಿ ಅವರನ್ನು ಭಾರತದ ಆದರ್ಶ ನಾಗರಿಕರನ್ನಾಗಿ ಪರಿವರ್ತಿಸುವಲ್ಲಿ ಭಾರತ ಸೇವಾ­ದಳದ ಕಾರ್ಯ ಅಭಿನಂದನೀಯ ಎಂದು ಬಿಜೆಪಿ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಎಸ್‌.ಭಾಸ್ಕರರೆಡ್ಡಿ ತಿಳಿಸಿದರು.
ತಾಲ್ಲೂಕಿನ ಗಾಂಡ್ಲಚಿಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಭಾರತೀಯ ಸೇವಾದಳ ಶಾಖೆಯನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ತರಬೇತಿ, ಶಿಕ್ಷಣ, ಸೇವೆ, ರಾಷ್ಟ್ರೀ­ಯತೆ, ಸಾರ್ವಜನಿಕ ರಕ್ಷಣೆ ಮತ್ತು ಮಾನವ ಸಂಪ­ನ್ಮೂಲ ಅಭಿವೃದ್ಧಿಗೆ ಪೂರಕವಾಗುವ ಕಾರ್ಯಕ್ರಮ­ಗಳು ಸೇವಾದಳದ ಮೂಲಕ ನಡೆಯುತ್ತಿವೆ. ಅವುಗಳನ್ನು ಸಮರ್ಪಕ­ವಾಗಿ ಅನುಷ್ಠಾನಗೊಳಿಸಲು ಪ್ರತಿಯೊಬ್ಬರು ಶ್ರಮಿಸಬೇಕು. ಮಕ್ಕಳಲ್ಲಿ ಪ್ರಾಥಮಿಕ ಹಂತದಿಂದಲೇ ಶಿಸ್ತುಬದ್ಧ ಜೀವನರೂಢಿಸುವ ಅಗತ್ಯವಿದೆ. ನಾಲ್ಕು ಗೋಡೆಗಳ ನಡುವಿನ ಶಿಕ್ಷಣ ಪರಿಪೂರ್ಣವಲ್ಲ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಾಗಿ ಸೇವಾದಳದಂತಹ ಸಂಘಟನೆಗಳಲ್ಲಿ ತೊಡಗಿಕೊಳ್ಳುವುದರಿಂದ ಉತ್ತಮ ನಾಗರಿಕರಾಗಲು ಸಾಧ್ಯವಿದೆ ಎಂದರು ಹೇಳಿದರು.

ಶಿಡ್ಲಘಟ್ಟ ತಾಲ್ಲೂಕಿನ ಗಾಂಡ್ಲಚಿಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಭಾರತೀಯ ಸೇವಾದಳ ಶಾಖೆಯನ್ನು ಉದ್ಘಾಟನೆ ಮಾಡಲಾಯಿತು

ಭಾರತೀಯ ಸೇವಾದಳ ಜಿಲ್ಲಾ ಸಂಘಟಕ ಎಚ್‌.ಮಹೇಶ್‌ಗೌಡ ಮಾತನಾಡಿ, ಸಮವಸ್ತ್ರವು ಎಲ್ಲರೂ ಸಮಾನರು ಎಂಬುದರ ಪ್ರತೀಕವಾಗಿದೆ. ಸ್ವಚ್ಛತೆ, ಸಾಮಾಜಿಕ ಕಳಕಳಿ, ಮಾನವತ್ವ, ದೈಹಿಕ ಆರೋಗ್ಯ, ಶಿಸ್ತು, ದೇಶಭಕ್ತಿ ಮುಂತಾದವುಗಳು ಎಳೆಯ ವಯಸ್ಸಿನಲ್ಲಿ ಮನದಲ್ಲಿ ಅಂಕುರವಾದಲ್ಲಿ ಜೀವನ ಪರ್ಯಂತ ಜೊತೆಯಾಗಿರುತ್ತದೆ. ಇದುವೇ ಭಾರತೀಯ ಸೇವಾದಳ ಶಾಖೆಯ ಸ್ಥಾಪನೆಯ ಹಿಂದಿನ ಉದ್ದೇಶ ಎಂದು ನುಡಿದರು.
ಸೇವಾದಳ ವೆಂಕಟರೆಡ್ಡಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಸಿಆರ್‌ಪಿ ಶಿವಪ್ಪ, ಎನ್‌.ಬಾಲಪ್ಪ, ಮುಖ್ಯ ಶಿಕ್ಷಕ ಎಸ್‌.ಎಂ.ಆದಿನಾರಾಯಣ, ಎಸ್‌ಡಿಎಂಸಿ ಅಧ್ಯಕ್ಷ ದೇವರಾಜ್‌, ಶಿಕ್ಷಕರಾದ ಜಿ.ಎನ್‌.ಶ್ರೀನಿವಾಸ, ರವಿ, ಬೈರಾರೆಡ್ಡಿ, ಈಶ್ವರಪ್ಪ, ವನಜಾಕ್ಷಿ, ಶ್ವೇತ, ನಾಗೇಶ್‌ಕುಮಾರ್‌, ರಾಮರೆಡ್ಡಿ, ಸೇವಾದಳ ವೆಂಕಟರೆಡ್ಡಿ ಮತ್ತಿತರರು ಹಾಜರಿದ್ದರು.

ಕರ್ನಾಟಕ ಬ್ಯಾಂಕಿನ ೭೪೪ ನೇ ಶಾಖೆಯ ನೂತನ ಕಟ್ಟಡದ ಉದ್ಘಾಟನೆ

0

ಸಾಲವನ್ನು ಪಡೆದ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು. ಸಾಲದ ಹಣದಿಂದ ಆರ್ಥಿಕವಾಗಿ ಮುಂದುವರೆಯುವುದರೊಂದಿಗೆ ಸಕಾಲದಲ್ಲಿ ಸಾಲ ಮರುಪಾವತಿಸುವ ಮೂಲಕ ಬ್ಯಾಂಕಿನ ಆಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು ಎಂದು ಕರ್ನಾಟಕ ಬ್ಯಾಂಕಿನ ಮಹಾ ಪ್ರಬಂಧಕ ರಾಘವೇಂದ್ರಭಟ್ ತಿಳಿಸಿದರು.
ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದಲ್ಲಿ ಸೋಮವಾರ ಕರ್ನಾಟಕ ಬ್ಯಾಂಕಿನ ೭೪೪ ನೇ ಶಾಖೆಯ ನೂತನ ಕಟ್ಟಡದ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳ ನಾಗರಿಕರ ಉಳಿತಾಯದ ಹಣವನ್ನು ಕ್ರೋಡೀಕರಿಸಿ ಅದನ್ನು ಅಗತ್ಯ ಇರುವವರಿಗೆ ಸಾಲದ ರೂಪದಲ್ಲಿ ನೀಡುವ ಮೂಲಕ ಮಹತ್ತರ ಜವಾಬ್ದಾರಿ ಹೊತ್ತಿರುವ ಕರ್ಣಾಟಕ ಬ್ಯಾಂಕ್ ನಿಧಾನವೇ ಪ್ರಧಾನ ಎಂಬ ಹಿರಿಯರ ಧ್ಯೇಯದೊಂದಿಗೆ ದೇಶಾಧ್ಯಂತ ವಿಸ್ತರಿಸಲಾಗುತ್ತಿದೆ ಎಂದರು.
ಗ್ರಾಹಕರ ಸೇವೆಯನ್ನೆ ಪ್ರಮುಖ ಉದ್ದೇಶವಾಗಿ ಇಟ್ಟುಕೊಂಡಿರುವ ಕರ್ನಾಟಕ ಬ್ಯಾಂಕ್ ಇದೀಗ ಕೋರ್ ಬ್ಯಾಂಕಿಂಗ್, ಅನ್ ಲೈನ್ ಬ್ಯಾಂಕಿಂಗ್ ನಂತಹ ಸೇವೆಗಳನ್ನು ಗ್ರಾಹಕರಿಗಾಗಿ ನೀಡುತ್ತಿದ್ದು ಸರ್ಕಾರಿ ಬ್ಯಾಂಕುಗಳಿಗಿಂತ ಹೆಚ್ಚಿನ ಸೇವೆಯನ್ನು ಒದಗಿಸಲು ಬದ್ದವಾಗಿದೆ. ಹಾಗಾಗಿ ತಾಲ್ಲೂಕಿನ ರೇಷ್ಮೆಬೆಳೆಗಾರರು ಸೇರಿದಂತೆ ಹೈನುಗಾರಿಕೆ ಮಾಡುವಂತಹ ರೈತರು ತಮ್ಮ ಬ್ಯಾಂಕಿನಲ್ಲಿ ಖಾತೆಯನ್ನು ತೆರೆದು ವ್ಯವಹಾರ ನಡೆಸಿ ಆರ್ಥಿಕವಾಗಿ ಮುಂದುವರೆಯಬೇಕು ಎಂದರು.
ತಹಸೀಲ್ದಾರ್ ಎಸ್.ಅಜಿತ್‌ಕುಮಾರ್‌ರೈ ಮಾತನಾಡಿ ಈಚೆಗೆ ಪ್ರದಾನಿ ನರೇಂದ್ರಮೋದಿ ಅವರು ೫೦೦ ಹಾಗೂ ೧೦೦೦ ರೂ ಮುಖಬೆಲೆಯ ನೋಟು ನಿಷೇದಿಸಿದ ಪರಿಣಾಮ ಇದೀಗ ಬಹುತೇಕ ಜನರು ಆನ್ ಲೈನ್ ಬ್ಯಾಂಕಿಂಗ್ ನತ್ತ ಒಲವು ತೋರುತ್ತಿದ್ದಾರೆ.
ಆನ್ ಲೈನ್ ಬ್ಯಾಂಕಿಂಗ್ ಬಳಸುವುದರಿಂದ ತಮ್ಮ ಸಮಯ ಉಳಿಸುವುದು ಸೇರಿದಂತೆ ದೇಶವನ್ನು ಕಪ್ಪು ಹಣ ದಿಂದ ಮುಕ್ತಿಗೊಳಿಸಬಹುದು. ಬ್ಯಾಂಕ್ ಶಾಖೆಗೆ ಹೋಗದೆ ನಾವು ಇರುವ ಸ್ಥಳದಿಂದಲೇ ಹಣ ಪಾವತಿ ಮಾಡಬಹುದು.
ಬಸ್ ಟಿಕೆಟ್, ರೈಲ್ವೆ ಟಿಕೆಟ್ ಮುಂತಾದುವುಗಳನ್ನು ಆನ್‌ಲೈನ್‌ನಲ್ಲೆ ಖರೀದಿಸುವ ಅವಕಾಶ ಇದ್ದು ವಿದ್ಯುಚ್ಚಕ್ತಿ, ದೂರವಾಣಿ, ನೀರಿನ ಬಿಲ್ ಸೇರಿದಂತೆ ಮತ್ತಿತರ ಬಿಲ್ಲುಗಳನ್ನು ಕುಳಿತ ಸ್ಥಳದಿಂದಲೇ ಪಾವತಿಸಬಹುದು. ಹಾಗಾಗಿ ಪ್ರತಿಯೊಬ್ಬರೂ ಬ್ಯಾಂಕಿನ ಖಾತೆ ತೆರೆದು ನೂತನ ತಂತ್ರಜ್ಞಾನದೊಂದಿಗೆ ಜೀವನ ನಡೆಸುವುದನ್ನು ರೂಡಿಸಿಕೊಳ್ಳಬೇಕು ಎಂದರು.
ಕರ್ನಾಟಕ ಬ್ಯಾಂಕ್‌ನ ಉಪ ಮಹಾ ಪ್ರಬಂಧಕ ರಾಜಕುಮಾರ್, ಮಳಮಾಚನಹಳ್ಳಿ ಎಂಪಿಸಿಎಸ್ ಅಧ್ಯಕ್ಷ ಕೃಷ್ಣಪ್ಪ, ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಡಾ.ನಾಗರಾಜ್, ಶಾಖೆಯ ವ್ಯವಸ್ಥಾಪಕ ಎಚ್.ಎಸ್.ವೆಂಕಟೇಶ್, ಎಂಪಿಸಿಎಸ್ ಕಾರ್ಯದರ್ಶಿ ಚಂದ್ರಾಚಾರಿ ಸೇರಿದಂತೆ ಗ್ರಾಮದ ಮುಖಂಡರು ಹಾಜರಿದ್ದರು.

ಶಿಡ್ಲಘಟ್ಟದಲ್ಲಿ ಶಿವರಾತ್ರಿಯ ಪ್ರಯುಕ್ತ ಪಂಚಲಿಂಗ ದರ್ಶನ

0

ತಾಲ್ಲೂಕಿನಾದ್ಯಂತ ಮಹಾ ಶಿವರಾತ್ರಿಯನ್ನು ಜನರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಶುಕ್ರವಾರ ಬೆಳಿಗ್ಗೆಯಿಂದಲೇ ಶಿವನ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಭಕ್ತರು ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಮಹಾಶಿವರ್ರಾತಿಯಂದು ನಗರದಲ್ಲಿರುವ ಕೋಟೆ ಸೋಮೇಶ್ವರ, ಪೇಟೆ ನಗರೇಶ್ವರ, ಅಶೋಕ ರಸ್ತೆಯ ಕಾಶಿ ವಿಶ್ವನಾಥೇಶ್ವರ, ಅಗ್ರಹಾರದ ಶಂಕರ ಮಠದಲ್ಲಿನ ಏಕಾಂಭರೇಶ್ವರ ಮತ್ತು ಶಾಮಣ್ಣಬಾವಿ ಬಳಿಯ ಜಲಕಂಠೇಶ್ವರ ದರ್ಶನ ಪಡೆದಲ್ಲಿ ಕೈಲಾಸ ಪ್ರಾಪ್ತಿ ಎಂಬ ಪ್ರತೀತಿ ಇದ್ದು ನೂರಾರು ಜನ ಭಕ್ತರು ನಗರದಲ್ಲಿನ ಪಂಚಲಿಂಗ ದರ್ಶನ ಪಡೆದರು.
ಇದಲ್ಲದೆ, ಮಯೂರ ವೃತ್ತದ ಬಳಿಯ ಚಂದ್ರಶೇಖರ, ಬೂದಾಳದ ಮಲೆಮಲ್ಲೇಶ್ವರ, ವೀರಾಪುರದ ಗವಿಗಂಗಾಧರೇಶ್ವರ, ಬಟ್ರೇನಹಳ್ಳಿಯ ಸಾಯಿಬಾಬ ಮಂದಿರದಲ್ಲಿರುವ ಜಲಕಂಠೇಶ್ವರ ಮುಂತಾದ ಪ್ರಮುಖ ದೇವಾಲಯಗಳಲ್ಲಿ ಶಿವರಾತ್ರಿಯ ಪ್ರಯುಕ್ತ ವಿಶೇಷ ಪೂಜೆ ಆಯೋಜಿಸಲಾಗಿತ್ತು.
ನಗರದ ಅಶೋಕ ರಸ್ತೆಯಲ್ಲಿರುವ ದ್ವಿಮುಖ ಗಣಪತಿ ದೇವಾಲಯದಲ್ಲಿ ಕೈಲಾಸ ಅಲಂಕಾರದೊಂದಿಗೆ ಗಣಪತಿಯನ್ನು ಅಲಂಕರಿಸಿದ್ದುದು ನೋಡುಗರ ಕಣ್ಮನ ಸೆಳೆಯುವಂತಿತ್ತು.

ಶಿಡ್ಲಘಟ್ಟ ತಾಲ್ಲೂಕು ಯುವಶಕ್ತಿ ಸಂಘಟನೆಯ ಪದಾಧಿಕಾರಿಗಳ ಆಯ್ಕೆ

0

ಬಯಲುಸೀಮೆಯ ನೀರಾವರಿ ಹೋರಾಟಕ್ಕೆ ಶಕ್ತಿ ತುಂಬಲು ಮತ್ತು ಪರಿಸರ, ಶಿಕ್ಷಣ, ಆರೋಗ್ಯ ಹಾಗು ಉದ್ಯೋಗ ಕ್ಷೇತ್ರದಲ್ಲಿ ಯುವಜನತೆಯನ್ನು ಹೆಚ್ಚಿನ ರೀತಿಯಲ್ಲಿ ತೊಡಗಿಸುವ ಉದ್ದೇಶದಿಂದ ಸ್ಥಾಪಿತವಾದ ಯುವಶಕ್ತಿ ಸಂಘಟನೆಯನ್ನು ವಿಸ್ತರಿಸುವ ಸಲುವಾಗಿ ಶನಿವಾರ ಶಿಡ್ಲಘಟ್ಟದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಪಟ್ಟಿ ಬಿಡುಗಡೆಗೊಳಿಸಲಾಯಿತು.
ಶಿಡ್ಲಘಟ್ಟ ತಾಲ್ಲೂಕು ಅಧ್ಯಕ್ಷರಾಗಿ ಟಿ.ಇ.ವಿಶ್ವನಾಥ, ಉಪಾಧ್ಯಕ್ಷರಾಗಿ ಎಂ.ಮಧು, ಪ್ರಧಾನ ಕಾರ್ಯದರ್ಶಿಯಾಗಿ ವಿ.ಎ.ಗಿರೀಶ್, ಜಂಟಿ ಕಾರ್ಯದರ್ಶಿಯಾಗಿ ಎ.ಶ್ರೀನಿವಾಸ್, ಸಂಘಟನಾ ಕಾರ್ಯದರ್ಶಿಯಾಗಿ ಕೆ.ಸುಧಾಕರ್, ಜಂಟಿ ಸಂಘಟನಾ ಕಾರ್ಯದರ್ಶಿಯಾಗಿ ಎಚ್.ಎನ್.ಮುನಿರಾಜು ರನ್ನು ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳನ್ನುದ್ದೇಶಿಸಿ ಯುವಶಕ್ತಿಯ ರಾಜ್ಯಾಧ್ಯಕ್ಷ ಶಿವಪ್ರಕಾಶ್‌ರೆಡ್ಡಿ ಮಾತನಾಡಿ ಬಯಲುಸೀಮೆ ಜಿಲ್ಲೆಗಳ ಜ್ವಲಂತ ಸಮಸ್ಯೆಗಳಾದ ಶಾಶ್ವತ ನೀರಾವರಿ ಸೇರಿದಂತೆ ಪರಿಸರ ಸಂರಕ್ಷಣೆಗಾಗಿ ಹೋರಾಡುವುದೇ ಯುವಶಕ್ತಿ ಸಂಘಟನೆಯ ಪದಾಧಿಕಾರಿಗಳ ಧ್ಯೇಯವಾಗಬೇಕೆಂದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ವಿಜಯಬಾವರೆಡ್ಡಿ, ರಾಜ್ಯ ಜಂಟಿ ಕಾರ್ಯದರ್ಶಿ ಬಿ.ವಿ.ರಾಘವೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಪಿ.ನಾಗಭೂಷಣ, ಎಂ.ಕೆ.ಸುನಿಲ್‌ಕುಮಾರ್, ಆರ್.ನವೀನ್, ಎನ್.ಎ.ನರಸಿಂಹಮೂರ್ತಿ ಮತ್ತಿತರರು ಹಾಜರಿದ್ದರು.

ಶ್ರೀಸೋಮೇಶ್ವರಸ್ವಾಮಿಯ ಬ್ರಹ್ಮರಥೋತ್ಸವ

0

ತಾಲ್ಲೂಕಿನ ಗುಡಿಹಳ್ಳಿಯ ಶ್ರೀಪಾರ್ವತಾಂಬ ಸಮೇತ ಶ್ರೀಸೋಮೇಶ್ವರಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಶನಿವಾರ ನೆರವೇರಿಸಲಾಯಿತು. ಸುತ್ತ ಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಬ್ರಹ್ಮರಥೋತ್ಸವಕ್ಕೆ ಸಾಕ್ಷಿಯಾದರು.
ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡಿಹಳ್ಳಿ ಗ್ರಾಮದ ಶ್ರೀಪಾರ್ವತಾಂಬ ಸಮೇತ ಶ್ರೀಸೋಮೇಶ್ವರಸ್ವಾಮಿ ದೇವಾಲಯದ ೯ ನೇ ವರ್ಷದ ಬ್ರಹ್ಮ ರಥೋತ್ಸವದ ಅಂಗವಾಗಿ ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಸಿಂಗರಿಸಿ ವಿಶೇಷ ಪೂಜೆ, ಹೋಮ, ಹವನ, ಕಳಶ ಪೂಜೆ, ಗಣಪತಿ ಪೂಜೆ ನಡೆಸಿ ಮಹಾ ಮಂಗಳಾರತಿ ನೆರವೇರಿಸಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.

ಶಿಡ್ಲಘಟ್ಟ ತಾಲ್ಲೂಕು ಗುಡಿಹಳ್ಳಿಯಲ್ಲಿ ಶ್ರೀಪಾರ್ವತಾಂಬ ಸಮೇತ ಶ್ರೀಸೋಮೇಶ್ವರಸ್ವಾಮಿಯ ಬ್ರಹ್ಮರಥೋತ್ಸವ ಶನಿವಾರ ಅದ್ದೂರಿಯಾಗಿ ನೆರವೇರಿತು.

ಉತ್ಸವ ಮೂರ್ತಿಯನ್ನು ಅಲಂಕೃತ ಹೂವಿನ ತೇರಿನಲ್ಲಿ ಪ್ರತಿಷ್ಠಾಪಿಸಿ ಊರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ಮಾಡಲಾಯಿತು. ಕರಡಿ ವೇಷ, ಗಾರುಡಿ ಗೊಂಬೆ, ತಮಟೆ, ನಾದಸ್ವರ, ವೀರಗಾಸೆ ಇನ್ನಿತರೆ ಜನಪದ ಕಲಾತಂಡಗಳು ರಥೋತ್ಸವಕ್ಕೆ ಕಳೆ ತಂದಿದ್ದವು.
ಬುರಗು ಬತಾಸಿನ ಅಂಗಡಿ, ಮಕ್ಕಳ ಆಟದ ಸಾಮಾನು, ಐಸ್‌ಕ್ರೀಂ, ಕೈ ಮೇಲೆ ಹಚ್ಚೆ ಹಾಕುವ, ಬಣ್ಣ ಬಣ್ಣದ ವಿವಿದ ಆಕಾರದ ಊಸರ ಬುಡ್ಡೆ (ಬಲೂನ್), ಜಡೆಕುಚ್ಚೆ, ಜಡೆ ಬಿಲ್ಲೆಯ ಅಂಗಡಿ, ಕಬ್ಬಿನ ರಸ, ಜಿಲೇಬಿ ಬಿಸಿ ಬಿಸಿ ಬೋಂಡ ಇನ್ನಿತರೆ ಹತ್ತಾರು ಅಂಗಡಿಗಳು ದೇವಾಲಯದ ಆಸು ಪಾಸಿನಲ್ಲಿ ತಲೆ ಎತ್ತಿದ್ದವು.
ರಥೋತ್ಸವಕ್ಕೆ ಶಾಸಕ ಎಂ.ರಾಜಣ್ಣ ಚಾಲನೆ ನೀಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ, ಮಾಜಿ ಸದಸ್ಯೆ ಶಿವಲೀಲಾ ರಾಜಣ್ಣ, ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಮುಖಂಡರಾದ ಚನ್ನಕೃಷ್ಣಪ್ಪ, ಮುನಿವೆಂಕಟಸ್ವಾಮಿ, ಶ್ರೀರಾಮಪ್ಪ, ಬಚ್ಚರಾಯಪ್ಪ, ಜಿ.ಆರ್.ವೆಂಕಟರೆಡ್ಡಿ, ಚಂದ್ರನಾಥ್, ದೇವರಾಜ್, ಕೆಂಪಣ್ಣ ಮತ್ತಿತರರು ಹಾಜರಿದ್ದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜನ್ಮದಿನದ ಅಂಗವಾಗಿ ಉಚಿತ ಸಾಮೂಹಿಕ ವಿವಾಹ

0

ದೇಶದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜನ್ಮದಿನದ ಅಂಗವಾಗಿ ಮೇ ೨೧ ರಂದು ತಾಲೂಕು ಜೆಡಿಎಸ್ ವತಿಯಿಂದ ೧೦೧ ಉಚಿತ ಸಾಮೂಹಿಕ ವಿವಾಹಗಳನ್ನು ನೆರವೇರಿಸಲು ತೀರ್ಮಾನಿಸಲಾಗಿದೆ ಎಂದು ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ ತಿಳಿಸಿದರು.
ತಾಲ್ಲೂಕಿನ ಚಿಕ್ಕದಾಸರಹಳ್ಳಿ ಶ್ರೀ ಬ್ಯಾಟರಾಯಸ್ವಾಮಿ ದೇವಾಲಯದಲ್ಲಿ ಗುರುವಾರ ಪೂಜೆ ನೆರವೇರಿಸಿದ ನಂತರ ಪತ್ರಿಕಾಘೋಷ್ಠಿಯಲ್ಲಿ ಅವರು ಮಾತನಾಡಿದರು.
ಇದೇ ಮೊದಲ ಬಾರಿಗೆ ಜೆಡಿಎಸ್ ಪಕ್ಷದ ವತಿಯಿಂದ ಸಾಮೂಹಿಕ ವಿವಾಹಗಳನ್ನು ಆಯೋಜಿಸಲಾಗಿದ್ದು ತಾಲ್ಲೂಕಿನ ಸಮಸ್ತ ಜೆಡಿಎಸ್ ಕಾರ್ಯಕರ್ತರು ಇದರಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಮೇಲೂರು ಬಿ.ಎನ್.ರವಿಕುಮಾರ್ ಮಾತನಾಡಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಲಾಗುತ್ತಿರುವ ಸಾಮೂಹಿಕ ವಿವಾಹ ಸಮಾರಂಭದಲ್ಲಿ ತಾಲ್ಲೂಕಿನಾದ್ಯಂತ ಇರುವ ಎಲ್ಲಾ ಪಂಚಾಯಿತಿಗಳಲ್ಲಿರುವ ಪಕ್ಷದ ಮುಖಂಡರು ಆಯಾ ಪಂಚಾಯಿತಿ ವ್ಯಾಪ್ತಿಯ ಅವಿವಾಹಿತ ವಧು ವರರನ್ನು ಗುರುತಿಸಿ ನೋಂದಾಯಿಸಲು ಸಹಕರಿಸಬೇಕು. ಕ್ಷೇತ್ರದ ವಧು ವರರಿಗೆ ಪ್ರಥಮ ಪ್ರಾಶಸ್ತ್ಯ ನೀಡುವುದರೊಂದಿಗೆ ವಿವಾಹವಾಗುವ ವಧು ವರರಿಗೆ ಜೀವನೋಪಾಯಕ್ಕಾಗಿ ಹಸುವೊಂದನ್ನು ವಿತರಿಸಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ, ಉಪಾಧ್ಯಕ್ಷ ನರಸಿಂಹಯ್ಯ, ಸದಸ್ಯ ರಾಜಶೇಖರ್, ಪಿಎಲ್‌ಡಿ ಬ್ಯಾಂಕಿನ ನಿರ್ದೇಶಕರಾದ ಶಿವಾರೆಡ್ಡಿ, ಪಿ.ವಿ.ನಾಗರಾಜು, ಮುಖಂಡರಾದ ಶ್ರೀನಿವಾಸ್‌ಗೌಡ, ನಂಜಪ್ಪ, ಗೋಪಾಲಗೌಡ, ಮೇಲೂರು ಉಮೇಶ್, ಮಂಜುನಾಥ್, ತಾದೂರು ರಘು ಹಾಗು ಮತ್ತಿತರರು ಹಾಜರಿದ್ದರು.

ಮಹಿಳೆಯರ ಪ್ರತಿಭೆಯನ್ನು ಪ್ರದರ್ಶಿಸಲು ಸೂಕ್ತ ಅವಕಾಶ ಸಿಗಬೇಕು

0

ಮಹಿಳೆಯರು ಕೌಟುಂಬಿಕ ನಿರ್ವಹಣೆಯ ಜವಾಬ್ದಾರಿಯಿಂದ ಸದಾ ಒತ್ತಡದಲ್ಲಿರುತ್ತಾರೆ. ಅವರಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಸೂಕ್ತ ಅವಕಾಶ ಸಿಗಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ತನುಜಾ ರಘು ಹೇಳಿದರು.
ನಗರದ ನೆಹರು ಕ್ರೀಡಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆ ಹಾಗು ಯುವ ಸಂಬಲೀಕರಣ ಇಲಾಖೆ ಚಿಕ್ಕಬಳ್ಳಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಗುರುವಾರ ಮಹಿಳೆಯರಿಗಾಗಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಶಿಡ್ಲಘಟ್ಟದ ನೆಹರು ಕ್ರೀಡಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆ ಹಾಗು ಯುವ ಸಂಬಲೀಕರಣ ಇಲಾಖೆ ಚಿಕ್ಕಬಳ್ಳಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಗುರುವಾರ ಮಹಿಳೆಯರಿಗಾಗಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರೂ ಸೇರಿದಂತೆ ನಗರಸಭೆ ಸದಸ್ಯರು ಪಾಲ್ಗೊಂಡಿದ್ದರು.

ನಮ್ಮ ದೇಶದಲ್ಲಿ ಅನಾದಿ ಕಾಲದಿಂದಲೂ ಮಹಿಳೆಯರಿಗೆ ವಿಶೇಷ ಸ್ಥಾನ ಮಾನ ನೀಡಿದ್ದು ಮಹಿಳೆಯರನ್ನು ಅಧಿಪರಾಶಕ್ತಿ ಎಂದು ಕರೆಯುತ್ತಾರೆ, ತಾಳ್ಮೆಯಿಂದ ತನ್ನ ಕುಟುಂಬದ ಜವಾಬ್ದಾರಿಯನ್ನು ಹೊತ್ತು ಮಹಿಳೆ ದಿನನಿತ್ಯದ ಕಾರ್ಯಗಳ ಒತ್ತಡದಿಂದಾಗಿ ಹೊರ ಬಂದು ತಮ್ಮಲಿ ಆಡಗಿರುವ ಪ್ರತಿಭೆಯನ್ನು ಎಲ್ಲೂ ಬಿಂಬಿಸಲಾಗದು ಎಂದರು.
ಶ್ರಮ ಜೀವಿಯಂತೆ ದುಡಿಯುವ ಮಹಿಳೆಯರು ವಿರಾಮದ ವೇಳೆಯಲ್ಲಿ ವ್ಯಾಯಾಮ, ಯೋಗ ಹಾಗು ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ತಮ್ಮಲ್ಲಿ ಆಡಗಿರುವ ಪ್ರತಿಭೆಯನ್ನು ಗುರುತಿಸಿಕೊಳ್ಳಬೇಕು. ನಗರದ ನೆಹರು ಕ್ರೀಡಾಂಗಣ ಮೂಲಭೂತ ಸೌಕರ್ಯಿಗಳಿಂದ ವಂಚಿತವಾಗಿದ್ದು, ನೀರಿನ ಸಮಸ್ಯೆ ಹಾಗೂ ಮಹಿಳೆಯರಿಗೆ ಶೌಚಾಲಯದ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದೆಂದರು.
ಈ ಸಂದರ್ಭದಲ್ಲಿ ಸಿಡಿಪಿಓ ಲಕ್ಷ್ಮೀದೇವಮ್ಮ, ತಾಲ್ಲೂಕು ಪಂಚಾಯಿತಿ ಸದಸ್ಯೆ ಪಂಕಜ ನಿರಂಜನ್, ನಗರಸಭೆ ಉಪಾಧ್ಯಕ್ಷೆ ಪ್ರಭಾವತಿ ಸುರೇಶ್, ಡಾ, ವಿಜಯ, ಗಿರಿಜಾಬಿಂಕ, ಸಿಡಿಪಿಓ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು.

ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕು

0

ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವಂತಹ ಮುಖ್ಯ ಜವಾಬ್ದಾರಿ ಶಿಕ್ಷರು ಹಾಗೂ ಪೋಷಕರ ಮೇಲೆ ಇದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಘನಾಥರೆಡ್ಡಿ ತಿಳಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಬುಧವಾರ ನಡೆದ ತಾಲ್ಲೂಕು ಮಟ್ಟದ ೨೦೧೬-೧೭ನೇ ಸಾಲಿನ ೧ನೇ ತರಗತಿಯಿಂದ ೭ನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ಪಷ್ಟ ಓದು, ಶುದ್ಧ ಬರಹ, ಅಭಿವ್ಯಕ್ತಿ ಸ್ಪರ್ಧಾ ಮಾಸಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಕರಿದ್ದಾರೆ. ಇನ್ನು ಹೆಚ್ಚಿನ ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ನೀಡಿ, ಸರ್ಕಾರದಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡುತ್ತಿರುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಮಕ್ಕಳ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ಶಿಕ್ಷಕರು ಹಾಗೂ ಪೋಷಕರು ಗಮನಿಸುತ್ತಿರಬೇಕು. ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗಿರುವ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳೆಸಿ ಸರ್ಕಾರದಿಂದ ನೀಡುತ್ತಿರುವ ಸೌಲಭ್ಯಗಳನ್ನು ಪಡೆದು ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸಹಕರಿಸುವ ಜೋತೆಗೆ ವಿದ್ಯಾರ್ಥಿಗಳ ಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸಬಹುದು ಎಂದು ಹೇಳಿದರು.
೧ನೇ ತರಗತಿಯಿಂದ ೭ನೇ ತರಗತಿಯ ತಾಲ್ಲೂಕಿನ ಎಲ್ಲಾ ಶಾಲಾ ಮಕ್ಕಳು ಶಿಕ್ಷಕರು ಹಾಗೂ ಸಿಆರ್‌ಪಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಿಕ್ಷಕರಾದ ಸುಮ, ಮಂಜುಳಾ, ವೆಂಕಟೇಶ್, ರಂಗನಾಥ್, ಶ್ರೀರಾಮಯ್ಯ, ಬಿ.ವಿ.ನಾರಾಯಣಸ್ವಾಮಿ, ಮುನಿಯಪ್ಪ, ಸುದರ್ಶನ್, ಮುನಿರಾಜು, ಚಂದ್ರಶೇಖರ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ರಾಷ್ಟ್ರೀಯ ಓಪನ್‌ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ ಸ್ಥಾನ

0

ಶಿಡ್ಲಘಟ್ಟದ ದಿವ್ಯ ಭಾರತ್‌ ಕರಾಟೆ ಡೊ ಅಸೋಸಿಯೇಷನ್‌ನ ಕರಾಟೆ ಪಟುಗಳಾದ ಸಿ.ಚೇತನ ಮತ್ತು ಎಲ್‌.ಪ್ರದೀಪ್‌ ಗೌರಿಬಿದನೂರಿನಲ್ಲಿ ನಡೆದ ನಾಲ್ಕನೇ ರಾಷ್ಟ್ರೀಯ ಓಪನ್‌ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ ಮತ್ತು ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಕರಾಟೆ ಶಿಕ್ಷಕ ಅರುಣ್‌ ಕುಮಾರ್‌ ಇದ್ದಾರೆ.

ಅಚ್ಚುಕಟ್ಟಾಗಿ, ಅರ್ಥಪೂರ್ಣವಾಗಿ ತಾಲ್ಲೂಕು ಸಮ್ಮೇಳನವನ್ನು ಆಚರಿಸಬೇಕು

0

ಅದ್ದೂರಿತನಕ್ಕಿಂತ ಜನಮೆಚ್ಚುವ ರೀತಿಯಲ್ಲಿ ಅಚ್ಚುಕಟ್ಟಾಗಿ, ಅರ್ಥಪೂರ್ಣವಾಗಿ ತಾಲ್ಲೂಕು ಸಮ್ಮೇಳನವನ್ನು ನಡೆಸಲು ಉದ್ದೇಶಿಸಿದ್ದು, ಎಲ್ಲಾ ಹೋಬಳಿ ಪದಾಧಿಕಾರಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ಕಸಾಪ ಜಂಗಮಕೋಟೆ ಹೋಬಳಿ ಅಧ್ಯಕ್ಷ ಆರ್‌.ಎ.ಉಮೇಶ್‌ ಮನವಿ ಮಾಡಿದರು.
ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಈಚೆಗೆ ಜಂಗಮಕೋಟೆ ಹೋಬಳಿ ಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಸ್ಥಳೀಯ ಸಮಸ್ಯೆಗಳು, ಶಾಲಾ ವಿದ್ಯಾರ್ಥಿಗಳಿಗೋಸ್ಕರ ವಿದ್ಯಾರ್ಥಿಗಳಿಂದ ಕಾರ್ಯಕ್ರಮ, ವಿವಿಧ ಕ್ಷೇತ್ರಗಳಲ್ಲಿ ಎಂದೂ ಗುರುತಿಸದಂಥಹವರನ್ನು ಹುಡುಕಿ ಗುರುತಿಸುವುದು, ಹೊಸ ಮುಖಗಳಿಗೆ ಅವಕಾಶ ನೀಡಬೇಕು. ಮಹಿಳೆಯರನ್ನು ಒಳಗೊಂಡ ಸಾಹಿತ್ಯ ಸಮ್ಮೇಳನ ನಡೆಯಲಿ ಎಂದು ಸಲಹೆ ನೀಡಿದರು.
ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ಮಾತನಾಡಿ, ಕಸಾಪ ತಾಲ್ಲೂಕು ಸಮ್ಮೇಳನದ ದಿನಾಂಕವು ಮಾರ್ಚ್‌ 10ರ ಶುಕ್ರವಾರ ನಿಗದಿಯಾಗಲಿದ್ದು, ಶಿಡ್ಲಘಟ್ಟದ ವಾಸವಿ ಕಲ್ಯಾಣಮಂಟಪದಲ್ಲಿ ಆಯೋಜಿಸಲಾಗಿದೆ. ಬೆಳಿಗ್ಗೆ ಧ್ವಜಾರೋಹಣ, ತಾಯಿ ಭುವನೇಶ್ವರಿ ಮತ್ತು ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಉದ್ಘಾಟನಾ ಸಮಾರಂಭ, ವಿದ್ಯಾರ್ಥಿ ಕವಿಗೋಷ್ಠಿ, ನನ್ನ ಮೆಚ್ಚಿನ ಪುಸ್ತಕ, ವಿಚಾರ ಗೋಷ್ಠಿ, ಸಾಧಕರಿಗೆ ಸನ್ಮಾನ ಸಮಾರಂಭ, ಸಮಾರೋಪ ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ತಾಲ್ಲೂಕಿನ ಎಲ್ಲಾ ಕನ್ನಡಾಭಿಮಾನಿಗಳು ಸಮ್ಮೇಳನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕೋರಿದರು.
ಸಮ್ಮೇಳನ ನಡೆಯುವ ಬಗ್ಗೆ, ಕಾರ್ಯಕ್ರಮ ಯಶಸ್ವಿ ಮಾಡಲು ಎಲ್ಲರ ಸಲಹೆ ಪಡೆಯಲಾಯಿತು, ಸಮಿತಿಗಳ ರಚನೆ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸಲು ಸಭೆಯಲ್ಲಿ ಎಲ್ಲರ ಸಹಕಾರ ಕೋರಲಾಯಿತು.
ಕಸಾಪ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್‌, ಉಪಾಧ್ಯಕ್ಷ ಚೌಡಸಂದ್ರ ಪಿ.ಈ. ಕರಗಪ್ಪ, ಸತೀಶ್‌, ಡಾ.ರಾಜ್‌ಕುಮಾರ್‌ ಸಂಘದ ಅಧ್ಯಕ್ಷ ಎಸ್,ಧರ್ಮೇಂದ್ರ, ಸುದರ್ಶನ್‌, ರಾಘವೇಂದ್ರ, ಸುದೀರ್, ಮುನಿಶಾಮಗೌಡ, ಲಕ್ಷ್ಮೀ ನಾರಾಯಣ (ಲಚ್ಚಿ ), ಮುಖ್ಯ ಶಿಕ್ಷಕಿ ಮಂಗಳ ಗೌರಮ್ಮ ಮತ್ತಿತರರು ಹಾಜರಿದ್ದರು.

ನಡೆ, ನುಡಿ, ಲಿಪಿ ಮಾಲಿನ್ಯಗಳಿಂದ ವಿದ್ಯಾರ್ಥಿಗಳು ದೂರವಾಗಬೇಕು

0

ಪ್ರಕೃತಿಯಲ್ಲಿ ವಿವಿಧ ಮಾಲಿನ್ಯಗಳಿರುವಂತೆ ಭಾಷೆಯ ಬೆಳವಣಿಗೆಗೆ ಕುಂಠಿತಪ್ರಾಯವಾಗುವ ನಡೆ, ನುಡಿ, ಲಿಪಿ ಮಾಲಿನ್ಯಗಳಿಂದ ವಿದ್ಯಾರ್ಥಿಗಳು ದೂರವಾಗಬೇಕು. ವಿದ್ಯಾರ್ಥಿ ದಿಸೆಯಲ್ಲಿಯೇ ಭಾಷೆಯನ್ನು ಬೆಳೆಸುವ ಹಾಗೂ ಸ್ಪಷ್ಟ ಉಚ್ಛಾರಣೆಯ ಬಗ್ಗೆ ತಿಳಿದುಕೊಳ್ಳಬೇಕು ಎಂದು ಕನ್ನಡ ಸಂಸ್ಕೃತಿ ಸೇವಾ ಭಾರತಿ ಸಂಸ್ಥಾಪಕ ಅಧ್ಯಕ್ಷ ಓಂಕಾರಪ್ರಿಯ ತಿಳಿಸಿದರು.
ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ವಿಶ್ವ ಮಾತೃ ಭಾಷಾ ದಿನದ ಅಂಗವಾಗಿ ‘ಕನ್ನಡ ಪದ ಸಂಪತ್ತು’ ಎಂಬ ವಿಷಯವಾಗಿ ನಡೆದ ಉಪನ್ಯಾಸ ಕಮ್ಮಟದಲ್ಲಿ ಉಪನ್ಯಾಸಕರಾಗಿ ಆಗಮಿಸಿ ಅವರು ಮಾತನಾಡಿದರು.
ಸಮಯದ ಉಪಯುಕ್ತತೆ, ಭಾಷೆಯ ಹಾಗೂ ಬರವಣಿಗೆಯ ಶ್ರೇಷ್ಠತೆ, ಕನ್ನಡ ಸರಳ ಪದಗಳಲ್ಲಿನ ವಿಶೇಷ ಅರ್ಥ ಶ್ರೀಮಂತಿಕೆ, ನಡೆ ನುಡಿ ಲಿಪಿ ಮಾಲಿನ್ಯಗಳಿಂದುಂಟಾಗುವ ಅನರ್ಥಗಳನ್ನು, ಕನ್ನಡ ಪದ ಸಂಪತ್ತಿನ ಹಿರಿಮೆಯನ್ನು ಮತ್ತು ನಿಜ ಸಂಸ್ಕೃತಿಯನ್ನು ವಿದ್ಯಾರ್ಥಿಗಳು ತಿಳಿಯಬೇಕು.
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕೆಂದಿರುವ ಗೀತೆಯ ಮೋಡಿಗಿಂತ, ಕನ್ನಡ ನಾಡಿನಲ್ಲಿ ಹುಟ್ಟಿದರೆ ಸರ್ವಮಾನ್ಯ ಕನ್ನಡಿಗರಾಗುವ ದಿಸೆಯಲ್ಲಿ ಪಟ್ಟಭದ್ರರು, ಸ್ವಯಂಘೋಷ ಚಕ್ರವರ್ತಿಗಳು ನಮ್ಮನ್ನು ಬಿಟ್ಟರೆ ಕನ್ನಡವಿಲ್ಲವೆಂದು ಅನ್ಯಭಾಷೆಯನ್ನು ಅನ್ಯ ಭಾಷಿಕರನ್ನೂ ಅನವಶ್ಯಕ ದೂಷಿಸುವುದು ಬಿಟ್ಟು ಈ ನಾಡಿನಲ್ಲಿ ಹುಟ್ಟಿ ನಾವೇನು ನಿಜವಾಗಿ ತೊಟ್ಟಿದ್ದೇವೆ. ಈಗಿನ – ಮುಂದಿನ ಯುವ ಪೀಳಿಗೆಗೆ ಏನು ಕೊಟ್ಟಿದ್ದೇವೆ ಮುಖ್ಯವಾಗಿ ಏನು ಮರೆತುಬಿಟ್ಟಿದ್ದೇವೆ ಎಂಬುದನ್ನು ಯೋಚಿಸಬೇಕಾಗಿದೆ ಎಂದರು.
ಕನ್ನಡ ಭಾಷೆ ಕೇವಲ ಭಾಷೆಯಾಗಿ ಮಾತ್ರ ಉಳಿಯುವುದಲ್ಲ ಅದು ನೀತಿಯಾಗಿ, ರೀತಿಯಾಗಿ, ಪದ್ಧತಿಯಾಗಿ, ಸಿದ್ಧತೆಯಾಗಿ ಹಾಗೂ ಬದ್ಧತೆಯಾಗಿ ಇಡೀ ಸಂಸ್ಕೃತಿಯನ್ನುಳಿಸಿ ಬೆಳೆಸುವ, ಹಿರಿಮೆ-ಗರಿಮೆಗಳ ಪರಿಚಯಿಸುವ ಸತ್ಯ ಸಾಕ್ಷಾತ್ಕಾರವಾಗಿಸುವ ಅದ್ಭುತ ಸೆಲೆ ಕಲೆ ನೆಲೆ ಸದಾ ಜೀವನ್ಮುಖಿ ಅಲೆಯಾಗಿಯೂ ಪ್ರವಾಹಿಸಬೇಕಾಗಿದೆ.
ಭಾಷೆ ನಡೆ ಮಾಲಿನ್ಯ, ನುಡಿ ಮಾಲಿನ್ಯದಿಂದ ಕಲಸುಮೇಲೊಗರ ಪ್ರಯೋಗವಾಗದೇ, ಮಡಿವಂತಿಕೆಯಿಂದ ಮುಳುಗದೇ, ಹೃದಯ ಶ್ರೀಮಂತಿಕೆಯಿಂದ ಮೊಳಗಬೇಕಾಗಿದೆ ಬೆಳಗಬೇಕಾಗಿದೆ. ಭಾಷೆಯು ಸಾಂಪ್ರದಾಯ, ಸಂಸ್ಕೃತಿಯಾಗಿ ಮತ್ತಷ್ಟು ಶ್ರೀಮಂತವಾಗಬೇಕೇ ವಿನಃ, ವಿಕೃತಿಯಿಂದ ನಿಜ ಆಕೃತಿಗೆ ಧಕ್ಕೆಯಾಗದಂತಿರಬೇಕು. ಆಚರಿಸುವ ಆಚರಣೆಗಳೂ ವಿವೇಚನೆಯೊಂದಿಗೆ ಅನುಕರಣೀಯ ಕ್ರಿಯೆಯಾಗಬೇಕು. ಭಾಷೆ ಎಂಬುದು ಆಷಾಢಭೂತಿ ಭಾಷಣವಾಗದೇ, ಸರ್ವಾಲಂಕೃತ ಭೂಷಣವಾಗಬೇಕು. ನುಡಿದರೆ ಮುತ್ತಿನ ಹಾರ, ನಡೆದರೆ ಸಂಸ್ಕೃತಿ ಸಾರ, ಮುಡಿದರೆ ಧನ್ಯತೆಯ ಭಾವ, ಹರಡಿದರೆ ಶ್ರೀಗಂಧದ ಸೌರಭವಾಗಿ ಈ ನೆಲದ ವಾಸಿಗರೆಲ್ಲರೂ ವ್ಯಕ್ತಿಗತ ಭೇದ ಬದಿಗಿಟ್ಟು ಅಹುದಹುದೆನ್ನಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ದುಶ್ಚಟಗಳಿಂದ ದೂರವಿರುವುದಾಗಿ ವಿದ್ಯಾರ್ಥಿಗಳಿಂದ ಪ್ರತಿಜ್ಞೆಯನ್ನು ಮಾಡಿಸಿದರು.
ಪ್ರಾಂಶುಪಾಲ ಪ್ರೊ.ಚಂದ್ರಾನಾಯಕ್‌, ಉಪನ್ಯಾಸಕರಾದ ಉಮೇಶ್‌ರೆಡ್ಡಿ, ಬಿ.ಕೆ.ರವಿ, ಕೆ.ಎನ್‌.ವೆಂಕಟಾಚಾರಿ, ರಾಮಚಂದ್ರಪ್ಪ, ಯತಿರಾಜುಲು ನಾಯ್ಡು, ಚಾಯಣ್ಣ ಮತ್ತಿತರರು ಹಾಜರಿದ್ದರು.

ಕೇವಲ ಹಸ್ತಾಕ್ಷರ ಮಾಡುವುದರಿಂದ ಸಾಕ್ಷರರಾಗುವುದಿಲ್ಲ

0

ಕೇವಲ ಹಸ್ತಾಕ್ಷರ ಮಾಡುವುದಕ್ಕೆ ಸೀಮಿತಗೊಂಡಲ್ಲಿ ಸಾಕ್ಷರರಾದಂತಲ್ಲ. ಪತ್ರಿಕೆಗಳನ್ನು ಓದುವುದು, ವ್ಯವಹಾರ ಜ್ಞಾನ ರೂಢಿಸಿಕೊಳ್ಳುವಂತಾಗಬೇಕು. ಆಗ ಮಾತ್ರ ಸಾಕ್ಷರ ಭಾರತ್‌ ಕಾರ್ಯಕ್ರಮ ಅರ್ಥಪೂರ್ಣವಾಗುತ್ತದೆ ಎಂದು ಸಾಕ್ಷರ ಭಾರತ್‌ ತಾಲ್ಲೂಕು ಸಂಯೋಜಕ ರಾಮಚಂದ್ರ ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ಸಾಕ್ಷರ ಭಾರತ್‌ ಸ್ವಯಂ ಸೇವಕರ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸ್ವಾವಲಂಬನೆಗೆ ಅಕ್ಷರ ಜ್ಞಾನ ಪೂರಕ. ಅಕ್ಷರ ಜ್ಞಾನವಿಲ್ಲದಿದ್ದರೆ ಬ್ಯಾಂಕಿಂಗ್‌ ವ್ಯವಹಾರಗಳನ್ನು ಮಾಡಲು ಸಾಧ್ಯವಾಗದು. ಸಾಕ್ಷರ ಭಾರತ್‌ ಕಾರ್ಯಕ್ರಮ ಯಶಸ್ವಿಯಾಗಲು ಸ್ವಯಂ ಸೇವಕರ ಪಾತ್ರ ಹಿರಿದಾಗಿದೆ. ಸ್ವಯಂಸೇವಕರು ಈಗಾಗಲೇ ಕಲಿತಿರುವುದಕ್ಕಿಂತ ಅನಕ್ಷರಸ್ಥರಿಗೆ ಕಲಿಸುವಾಗ ಕಲಿಯುವುದು ಬಹಳಷ್ಟಿದೆ. ಜ್ಞಾನವು ಬಳಸುವುದರಿಂದ ವೃದ್ಧಿಸುತ್ತದೆ. ಐಪಿಸಿಎಲ್ ವಿಧಾನ ಮತ್ತು ಹಂತಗಳನ್ನು ಬಳಸಿ ಕ್ರಿಯಾಶೀಲತೆಯಿಂದ ವೈಜ್ಞಾನಿಕ ಮತ್ತು ಕಲಾತ್ಮಕವಾಗಿ ಕಲಿಸುವ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು. ಮಧ್ಯದಲ್ಲಿ ಕಲಿಕಾಕೇಂದ್ರ ತೊರೆಯುವ ನವಸಾಕ್ಷರರ ಸಮಸ್ಯೆಗಳನ್ನು ಹೋಗಲಾಡಿಸಲು ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು ಎಂದು ವಿವರಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಜಯರಾಮ್‌ ಮಾತನಾಡಿ, ಅನಕ್ಷರಸ್ಥರಿಗೆ ಕ್ರಿಯಾತ್ಮಕ ಸಾಕ್ಷರತೆಯೊಂದಿಗೆ ಸಮಾನಶಿಕ್ಷಣ, ವೃತ್ತಿಕೌಶಲ ಒದಗಿಸುವುದು ಸಾಕ್ಷರಭಾರತ್ ಯೋಜನೆಯ ಉದ್ದೇಶವಾಗಿದ್ದು, ಇದು ಬುದ್ಧಿವಂತರಿಗಿಂತ ಹೃದಯವಂತರ ಕಾರ್ಯಕ್ರಮವಾಗಿದೆ. ಶಿಕ್ಷಣವು ಅಭಿವೃದ್ಧಿಯ ಮೂಲ ಮಂತ್ರ ಹಾಗೂ ಸಾಮಾಜಿಕ ಪರಿವರ್ತನೆಯ ಮೂಲ ಸಾಧನ. ಶಿಕ್ಷಣವನ್ನು ಅಲಕ್ಷಿಸಿ ಯಾವುದೇ ದೇಶ ಮುಂದುವರಿಯುವುದು ಸಾಧ್ಯವಿಲ್ಲ. ಶಿಕ್ಷಣವೆಂದರೆ ಪ್ರಾಣಿ ರೂಪದಲ್ಲಿರುವ ಮಾನವನನ್ನು ಮಾನವತ್ವದೆಡೆಗೆ ಒಯ್ಯುವ ಸಾಧನವಾಗಿದೆ. ಗ್ರಾಮೀಣ ಭಾರತವನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಅನಕ್ಷರತೆಯು ಕೂಡ ಒಂದಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಉಮಾ ಶಾರದಮ್ಮ, ಸದಸ್ಯರಾದ ಎ.ಎಂ.ತ್ಯಾಗರಾಜ್‌, ಪ್ರೇಮ, ಕಾರ್ಯದರ್ಶಿ ಶ್ರೀನಿವಾಸ್‌, ಮೇಲೂರು ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್‌, ತರಬೇತುದರ ಮಂಜುನಾಥ್‌, ಪ್ರೇರಕ ಮೋಹನ್‌, ಬಿಲ್‌ಕಲೆಕ್ಟರ್‌ ಶ್ರೀನಿವಾಸ್‌, ಮುಖ್ಯ ಶಿಕ್ಷಕಿ ಶೋಭಾ, ಅಂಬರೀಷ್‌ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

೧೦ ರೂ ನಾಣ್ಯ ಚಲಾವಣೆ ರದ್ದು ಎಂಬ ವದಂತಿ ಸೃಷ್ಟಿಸಿದ ಆತಂಕ

0

ಹುಂಡಿಯಲ್ಲಿ, ಮನೆಯಲ್ಲಿ ೧೦ ರೂ ನಾಣ್ಯಗಳನ್ನು ಶೇಖರಿಸಿದ್ದವರ ಮೊಗದಲ್ಲಿ ಆತಂಕ
ಹತ್ತು ರೂಪಾಯಿಯ ನಾಣ್ಯ ಚಲಾವಣೆ ರದ್ದಾಗಿದೆಯಂತೆ ಎಂಬ ಅಂತೆ ಕಂತೆಗಳಿಂದ ಅಂಗಡಿ ಮುಂಗಟ್ಟು ಹೋಟೆಲ್, ಮುಂತಾದ ವ್ಯಾಪಾರ ವಹಿವಾಟುಗಳಲ್ಲಿ ನಾಣ್ಯ ಚಲಾವಣೆ ಸ್ಥಗಿತಗೊಂಡಿದೆ. ೧೦ ರೂಪಾಯಿಯ ನಾಣ್ಯದ ಚಲಾವಣೆ ರದ್ದಾಗಿದೆ ಎಂಬ ವದಂತಿಗಳು ಜನರಲ್ಲಿ ಇನ್ನಿಲ್ಲದ ಆತಂಕಕ್ಕೆ ಕಾರಣವಾಗಿದೆ.
೨೦೦೦ನೇ ಇಸವಿಯಿಂದಲೂ ಈ ವರ್ಷದಲ್ಲೂ ಮುದ್ರಣವಾದ ೧೦ ರೂಪಾಯಿಯ ನಾಣ್ಯಗಳು ಇತರೆ ನಾಣ್ಯಗಳ ಜತೆ ಜತೆಗೆ ಚಲಾವಣೆಯಲ್ಲಿ ಇದ್ದು ಚಿಲ್ಲರೆ ಸಮಸ್ಯೆಯನ್ನು ನೀಗಿಸುವಲ್ಲಿ ತನ್ನದೇ ಆದ ಪಾತ್ರವಹಿಸಿತ್ತು. ಜತೆಗೆ ನಾಣ್ಯ ಸಂಗ್ರಹದ ಹವ್ಯಾಸ ಇರುವವರ ಬಳಿಯಲ್ಲದೆ, ಮಹಿಳೆಯರು ಕೂಡಿಟ್ಟ, ಹುಂಡಿಯಲ್ಲಿ ಹಾಕಿದ ನಾಣ್ಯಗಳೆ ಹೆಚ್ಚಿನ ಸಂಖ್ಯೆಯಲ್ಲಿವೆ.
ಅದರಲ್ಲೂ ವರಮಹಾಲಕ್ಷ್ಮಿ ಹಬ್ಬದಲ್ಲಿ ನಗ ನಗದು ಇಡುವ ಸಂಪ್ರದಾಯ ಇದ್ದು ವರಮಹಾಲಕ್ಷ್ಮಿ ಹಬ್ಬಕ್ಕಾಗಿಯೆ ಬಹುತೇಕ ಮಂದಿ ೧೦, ೫, ೨ ಹಾಗೂ ೧ ರೂಪಾಯಿಯ ನಾಣ್ಯಗಳನ್ನು ಶೇಖರಿಸಿಕೊಂಡಿದ್ದು ಅವರೆಲ್ಲರೂ ಇದೀಗ ಆತಂಕಕ್ಕೆ ಒಳಗಾಗಿದ್ದಾರೆ.
೧೦ ರೂಪಾಯಿಗಳ ನಾಣ್ಯ ಚಲಾವಣೆ ರದ್ದಾಗಿದೆಯಂತೆ, ೧೦ ರೂಪಾಯಿಯ ನಕಲಿ ನಾಣ್ಯಗಳು ಚಲಾವಣೆಗೆ ಬಂದಿರುವುದರಿಂದ ನಾಣ್ಯಗಳ ಚಲಾವಣೆಯಲ್ಲಿ ರದ್ದುಪಡಿಸಲಾಗಿದೆಯಂತೆ, ಐದುನೂರು ಸಾವಿರ ರೂಪಾಯಿ ನೋಟು ರದ್ದುಪಡಿಸಿದಂತೆ ಇದೀಗ ೧೦ ರೂ ನಾಣ್ಯವನ್ನು ರದ್ದುಪಡಿಸಿದೆಯಂತೆ. ಹೀಗೆ ಹತ್ತು ಹಲವು ರೀತಿಯ ವದಂತಿಗಳು ಜನರ ಮದ್ಯೆ ಹರಿದಾಡತೊಡಗಿವೆ.
ಯಾವ ನಾಣ್ಯದಲ್ಲಿ ರೂ ಚಿನ್ಹೆ ಇಲ್ಲವೋ ಆ ನಾಣ್ಯ ಚಲಾವಣೆ ಇಲ್ಲ ಎಂದು ಕೆಲವರ ವಾದವಾದರೆ, ನಾಣ್ಯದಲ್ಲಿ ೧೦ ಗೆರೆಗಳು ಇರುವ ನಾಣ್ಯವಷ್ಟೆ ಚಲಾವಣೆಯಾಗಲಿದೆ ಎನ್ನುವುದು ಇನ್ನು ಕೆಲವರ ವಾದವಾಗಿದೆ.
ಇಷ್ಟೆ ಅಲ್ಲದೆ ನಾಣ್ಯದಲ್ಲಿ ಇರುವ ಚಿನ್ನದ ಹಾಗೂ ಬೆಳ್ಳಿ ಬಣ್ಣಗಳ ನಡುವಿನ ತೆಳುವಾದ ಗೆರೆಯ ಮೇಲೆ ೧೦ ರೂಪಾಯಿಯ ಸಂಖ್ಯೆ ಮುದ್ರಿತವಾಗಿರುವ ನಾಣ್ಯವಷ್ಟೆ ಅಸಲಿ, ೧೦ ರೂ ಸಂಖ್ಯೆ ನಾಣ್ಯದ ಮದ್ಯೆ ಇದ್ದರೆ ಅದು ನಕಲಿಯಂತೆ, ಹೀಗೆ ನಾಣ್ಯದ ಅಸಲಿ ನಕಲಿಯ ಮಾತುಗಳ ಚರ್ಚೆ ಜೋರಾಗಿ ಸಾಗಿದೆ.
ಈ ಅಂತೆ ಕಂತೆಗಳ ನಡುವೆ ಎಲ್ಲರೂ ತಮ್ಮ ಬಳಿ ಇರುವ ೧೦ ರೂ ನಾಣ್ಯಗಳನ್ನು ಯಾರಿಗಾದರೂ ಕೊಟ್ಟು ಕೈ ತೊಳೆದುಕೊಂಡು ಬಿಡುವ ದಾವಂತದಲ್ಲಿ ಇದ್ದರೆ, ಯಾರೇ ಕೊಟ್ಟರೂ ೧೦ ರೂ ನಾಣ್ಯ ಸ್ವೀಕರಿಸಲು ಉಳಿದವರು ಸಿದ್ದರಿಲ್ಲ.
ಹಾಗಾಗಿ ಯಾವುದೆ ಅಂಗಡಿ ಮುಂಗಟ್ಟು ಹೋಟೆಲ್ ಮುಂತಾದೆಡೆ ಎಲ್ಲೂ ೧೦ ರೂಪಾಯಿಯ ನಾಣ್ಯದ ಚಲಾವಣೆ ಸಂಪೂರ್ಣವಾಗಿ ಸ್ಥಗಿತಗೊಂಡು ಈಗಾಗಲೆ ಇದ್ದ ಚಿಲ್ಲರೆ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ.
ಐದುನೂರು, ಸಾವಿರ ರೂ ನೋಟಿನ ಚಲಾವಣೆ ಅಮಾನ್ಯತೆ ಆದಾಗ, ಆ ನಂತರ ಜನ ಸಾಮಾನ್ಯರಲ್ಲಿ ಮನೆ ಮಾಡಿದ್ದ ಆತಂಕ ದಿನ ಕಳೆದಂತೆ ದೂರವಾಗುತ್ತಿರುವ ಈ ಸಮಯದಲ್ಲಿ ೧೦ ರೂ ನಾಣ್ಯದ ಚಲಾವಣೆ ರದ್ದು ಎಂಬ ವದಂತಿ ಮತ್ತೆ ಸಮಸ್ಯೆ, ಆತಂಕವನ್ನು ತಂದೊಡ್ಡಿದೆ.
ಈ ವದಂತಿಗಳಿಂದ ಕಂಗಾಲಾದ ಮಹಿಳೆಯರು ತಮ್ಮ ಬಳಿ ಇರುವ ೧೦ ರೂ ನಾಣ್ಯ, ಹುಂಡಿಯಲ್ಲಿನ ನಾಣ್ಯಗಳನ್ನು ಮಹಿಳಾ ಸ್ವ ಸಹಾಯ ಸಂಘಗಳ ಉಳಿತಾಯದ ಹಣಕ್ಕೆ ಹೊಂದಿಸಿ ಬ್ಯಾಂಕ್‌ಗೆ ಪಾವತಿಸಲು ಮುಂದಾಗುತ್ತಿದ್ದಾರೆ. ಇದರಿಂದಾಗಿ ಕಳೆದ ಐದಾರು ದಿನಗಳಿಂದಲೂ ಬ್ಯಾಂಕ್‌ಗೆ ಹಣ ಕಟ್ಟಲು ಬರುತ್ತಿರುವ ಮಹಿಳಾ ಸ್ವ ಸಹಾಯ ಸಂಘಗಳ ಪ್ರತಿನಿಗಳ ಬಹುತೇಕ ಮಂದಿ ೧೦ ರೂ ನಾಣ್ಯಗಳನ್ನೆ ತರುತ್ತಿರುವುದು ಬ್ಯಾಂಕ್‌ನವರಿಗೂ ತಲೆ ನೋವಾಗಿದೆ.
‘೧೦ ರೂ ಅಥವಾ ಯಾವುದೆ ನಾಣ್ಯದ ಚಲಾವಣೆಯನ್ನು ಆರ್‌ಬಿಐ ರದ್ದುಪಡಿಸಿಲ್ಲ. ಚಲಾವಣೆಯಲ್ಲಿ ಇರುವ ಎಲ್ಲ ನಾಣ್ಯಗಳು ಎಂದಿನಂತೆ ಚಲಾವಣೆಯಲ್ಲಿವೆ. ಯಾರೋ ಇಂತಹ ವದಂತಿಯನ್ನು ಹರಿದು ಬಿಟ್ಟಿದ್ದು ನಮ್ಮ ಬ್ಯಾಂಕ್‌ಗೂ ಕಳೆದ ಐದಾರು ದಿನಗಳಿಂದಲೂ ೧೦ ರೂ ನಾಣ್ಯಗಳನ್ನು ತಂದು ಕಟ್ಟುವವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ನಮಗೆ ಬ್ಯಾಂಕ್‌ನ ಇತರೆ ಹಣಕಾಸುವ ವಹಿವಾಟಿಗೆ ಅಡಚಣೆಯಾಗುವಷ್ಟರ ಮಟ್ಟಿಗೆ ೧೦ ರೂ ನಾಣ್ಯಗಳನ್ನು ತಂದು ಕಟ್ಟುವವರ ಸಂಖ್ಯೆ ಹೆಚ್ಚುತ್ತಲೆ ಇದೆ, ನಾವು ನಾಣ್ಯಗಳನ್ನು ಎಂದಿನಂತೆ ಕಟ್ಟಿಸಿಕೊಳ್ಳುತ್ತೇವೆ. ಜತೆಗೆ ಜನ ಸಾಮಾನ್ಯರೂ ಸಹ ಯಾವುದೆ ಅಂಜಿಕೆ ಅಳುಕಿಲ್ಲದೆ ೧೦ ರೂ ನಾಣ್ಯವನ್ನು ಚಲಾವಣೆ ಮಾಡಬಹುದು’ ಎಂದು ಎಸ್‌ಬಿಎಂ ವ್ಯವಸ್ಥಾಪಕಿ ಎನ್.ಹೇಮಲತಾ ತಿಳಿಸಿದರು.

ಚುರುಕಾದ ಬಿಸಿಲು, ಪ್ರಾರಂಭವಾದ ಮಡಿಕೆಗಳ ಮಾರಾಟ

0

ಇನ್ನೂ ಮಹಾಶಿವರಾತ್ರಿ ಹಬ್ಬಕ್ಕೆ ಒಂದು ವಾರವಿದೆ. ಆಗಲೇ ಬಿಸಿಲು ಚುರುಗುಟ್ಟುತ್ತಿದೆ. ಹಗಲಿನಲ್ಲಿ ತಾಪಮಾನ 31 ಡಿಗ್ರಿ ದಾಟಲಾರಂಬಿಸಿದೆ. ಇದರ ಬೆನ್ನಲ್ಲೇ ನಗರದ ಕುಂಬಾರ ಬೀದಿಯಲ್ಲಿ ಬಡವರ ಫ್ರಿಜ್ ಎಂದೇ ಕರೆಯುವ ಮಡಿಕೆಗಳ ಮಾರಾಟ ಶುರುವಾಗಿದೆ. ಎರಡಿದ್ದ ಅಂಗಡಿಗಳು ಈಗ ನಾಲ್ಕೈದು ಆಗಿವೆ.
ಆಧುನಿಕತೆಗೆ ತಕ್ಕಂತೆ ಮಡಿಕೆಗಳಿಗೆ ಹೊಸ ರೂಪ ನೀಡಿ ಜನರನ್ನು ಆಕರ್ಷಿಸಲಾಗುತ್ತಿದೆ. ಮಡಿಕೆಗೆ ಪ್ಲಾಸ್ಟಿಕ್‌ ನಲ್ಲಿ ಜೋಡಿಸಿ ಫಿಲ್ಟರ್‌ನಿಂದ ನೀರು ಪಡೆಯುವ ಹಾಗೆಯೇ ಸಿದ್ಧಪಡಿಸಿದ್ದಾರೆ. ಈಗಾಗಲೇ ವಿದ್ಯುತ್‌ ಕೈಕೊಡಲು ಪ್ರಾರಂಭವಾಗಿದೆ. ಫ್ರಿಜ್ ಬದಲು ಮಡಿಕೆಯ ನೀರು ಒಳ್ಳೆಯದು ಎಂಬ ಭಾವನೆ ಇರುವುದರಿಂದ ಈಗಾಗಲೇ ಮಡಿಕೆಗಳ ಮಾರಾಟ ಪ್ರಾರಂಭವಾಗಿದೆ. ಮಣ್ಣಿನ ಮಡಿಕೆಯ ಕೆಳಭಾಗದಲ್ಲಿ ಮರಳು ಹಾಕಿ ರಾಗಿ ಪೈರು ಬೆಳೆಸಿ ಸದಾ ತಂಪಾದ ನೀರನ್ನು ಕುಡಿಯಲು ಜನ ಇಷ್ಟಪಡುತ್ತಾರೆ.

ಶಿಡ್ಲಘಟ್ಟದ ಕುಂಬಾರಪೇಟೆಯಲ್ಲಿ ಮಡಿಕೆಗೆ ಪ್ಲಾಸ್ಟಿಕ್‌ ನಲ್ಲಿ ಜೋಡಿಸಿ ಮಾರಾಟ ಮಾಡಲಾಗುತ್ತಿದೆ

ನಗರದ ಕುಂಬಾರಪೇಟೆ ಬೀದಿಯು ಮೊದಲು ಮಡಿಕೆ ಮಾಡುವವರಿಗೆ ಹೆಸರಾಗಿತ್ತು. ಈಗ ಕೇವಲ ಇಬ್ಬರು ಮಾತ್ರ ಅಂಗಡಿಗಳನ್ನು ಹೊಂದಿದ್ದಾರೆ. ಅವರೂ ಅಷ್ಟೆ ಕುಂದಲಗುರ್ಕಿ, ಪಲ್ಲಿಚೇರ್ಲುಗಳಿಂದ ತಂದು ಇಲ್ಲಿ ಮಾರುತ್ತಾರೆ. ಬೇಸಿಗೆ ಕಾರಣದಿಂದ ಅಂಗಡಿಗಳು ದುಪ್ಪಟ್ಟಾಗಿವೆ. ಸೋಮವಾರ ಸಂತೆಯ ದಿನ ಹಳ್ಳಿಗಳಿಂದ ತಂದು ಮಾರಾಟ ಮಾಡುತ್ತಾರೆ.
ವರ್ಷದ ಬೇಸಿಗೆ ತಿಂಗಳಿನಲ್ಲಿ ಮಾತ್ರವೇ ಮಡಿಕೆಗಳ ಮಾರಾಟ ನಡೆಯುತ್ತದೆ. ಬೇಸಿಗೆ ಬಂತೆಂದರೆ ಎಲ್ಲರ ಚಿತ್ತ ಮಣ್ಣಿನ ಮಡಿಕೆ ಕೊಳ್ಳುವುದರತ್ತ ಇರುತ್ತದೆ. ಕುಂಬಾರರು ಮತ್ತು ವ್ಯಾಪಾರಿಗಳು ಸ್ವಲ್ಪ ಮಟ್ಟಿಗೆ ಹಣ ಮಾಡಿಕೊಳ್ಳಲು ಇದು ಸಕಾಲ. ಮಡಿಕೆ ಕೊಂಡೊಯ್ದು ಅದರ ನೀರನ್ನು ಕುಡಿದು ಬಾಯಾರಿಕೆ ತಣಿಸಿಕೊಳ್ಳಲು ಜನರು ಕಾತರರಾಗಿದ್ದಾರೆ.
‘ಈಗಲೂ ಗ್ರಾಮೀಣ ಪ್ರದೇಶದಲ್ಲಿ ಅಡುಗೆ ಮಾಡಲು ಮಡಿಕೆಗಳನ್ನು ಬಳಸಲಾಗುತ್ತದೆ. ಮಡಿಕೆಯಲ್ಲಿಟ್ಟ ನೀರು ಫ್ರಿಜ್ ನೀರಿನಷ್ಟೇ ತಂಪಾಗಿರುತ್ತದೆ. ಜನರು ಸಹ ಸಾಮಾನ್ಯ ಮಡಿಕೆ ಕೊಳ್ಳುವುದಕ್ಕಿಂತ ಆಕರ್ಷಕವಾಗಿರುವ ಮತ್ತು ನಲ್ಲಿ ಸೌಲಭ್ಯವಿರುವ ಮಡಿಕೆ ಕೊಳ್ಳಲು ಇಷ್ಟ ಪಡುತ್ತಿದ್ದಾರೆ. ಮಕ್ಕಳು ನೀರಿನಲ್ಲಿ ಕೈಯಿಟ್ಟು ಕೊಳೆ ಮಾಡುವುದು ಇದರಿಂದ ತಪ್ಪುತ್ತದೆ. ನಮಗೆ ವರ್ಷದಲ್ಲಿ ಬೇಸಿಗೆಯಲ್ಲಷ್ಟೇ ಮಡಿಕೆಗೆ ಬೇಡಿಕೆ ಬರುತ್ತದೆ. ನಲ್ಲಿ ಹಾಕಿದ ಮಡಿಕೆಯನ್ನು 250 ರೂಗಳಿಗೆ ಮಾರುತ್ತೇವೆ. ಈಗ ಬಿಸಿಲು ಏರುತ್ತಿರುವುದರಿಂದ ಇದರ ವ್ಯಾಪಾರ ಶುರುವಾಗಿದೆ. ನಮ್ಮ ತಂದೆಯ ಕಾಲದಲ್ಲಿ ಇಲ್ಲಿ ತಯಾರಿಸುತ್ತಿದ್ದರು. ಆದರೆ ನಮ್ಮ ಕಾಲಕ್ಕೆ ಇದನ್ನು ನಂಬಿ ಬದುಕಲು ಕಷ್ಟವೆಂದು ಕೇವಲ ಕೊಂಡು ತಂದು ಮಾರುತ್ತಿದ್ದೇವೆ’ ಎನ್ನುತ್ತಾರೆ ಕುಂಬಾರಪೇಟೆಯ ಪ್ರದೀಪ್‌.

ದೇಶಭಕ್ತಿ, ಮಾನವೀಯ ಮೌಲ್ಯಗಳು ಹಾಗೂ ನಿಸ್ವಾರ್ಥ ಬದುಕು ನಮಗೆ ಪ್ರೇರಣೆಯಾಗಲಿ

0

ಛತ್ರಪತಿ ಶಿವಾಜಿ ಮತ್ತು ಸಂತ ಕವಿ ಸರ್ವಜ್ಞ ಇಬ್ಬರಲ್ಲೂ ಇರುವ ಸಾಮ್ಯತೆ ದೇಶಭಕ್ತಿ, ಮಾನವೀಯ ಮೌಲ್ಯಗಳು ಹಾಗೂ ನಿಸ್ವಾರ್ಥ ಬದುಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಸೋಮವಾರ ತಾಲ್ಲೂಕು ಆಡಳಿತದ ವತಿಯಿಂದ ನಡೆದ ಛತ್ರಪತಿ ಶಿವಾಜಿ ಹಾಗೂ ಸಂತಕವಿ ಸರ್ವಜ್ಞ ಅವರುಗಳ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಿವಾಜಿಯು ಅಪ್ರತಿಮ ದೇಶಭಕ್ತರಾಗಿದ್ದು ಅವರ ಧೈರ್ಯ, ಸಾಹಸಕ್ಕೆ ಪ್ರತೀಕವಾದ ಜೀವನ ನಮ್ಮೆಲ್ಲರಿಗೂ ಮಾದರಿಯಾಗಬೇಕಿದೆ. ಸಹನೆ, ಸಹಿಷ್ಣುತೆ ಮತ್ತು ಜಾತ್ಯಾತೀತೆಯ ಅವರ ಮನೋಭಾವದಿಂದ ಆಗಿನ ಕಾಲದ ಭರತ ಖಂಡದಲ್ಲಿ ಶಿವಾಜಿ ಪ್ರಸಿದ್ದರಾಗಿದ್ದು, ಅದೆಷ್ಟೊ ಮಂದಿ ರಾಜರು ಇವರ ಆಡಳಿತ ಕಾರ್ಯವೈಖರಿಯನ್ನು ಅನುಸರಿಸಿದ್ದರು. ಅಷ್ಟರ ಮಟ್ಟಿಗೆ ಶಿವಾಜಿಯವರು ರಾಜತಾಂತ್ರಿಕರಾಗಿದ್ದರು ಎಂದರು.
ತನ್ನ ಸಾಮ್ರಾಜ್ಯ ವಿಸ್ತರಣೆ, ಪರಿಣಾಮಕಾರಿ ದೂರದೃಷ್ಟಿಯ ನಾಯಕತ್ವ ಗುಣಗಳಿಂದಾಗಿ ಶಿವಾಜಿ ಮಹರಾಜರು ಮರಾಠ ಸಾಮ್ರಾಜ್ಯದ ಸಂಸ್ಥಾಪಕ ಸಾಮ್ರಾಟರೆಂದು ಪ್ರಸಿದ್ದಿ ಪಡೆದು ಕೀರ್ತಿಗೆ ಪಾತ್ರರಾಗಿದ್ದರು ಎಂದು ಶಿವಾಜಿಯ ಗುಣಗಾನ ಮಾಡಿದರು.
ತಹಶೀಲ್ದಾರ್‌ ಅಜಿತ್‌ ಕುಮಾರ್‌ ರೈ ಮಾತನಾಡಿ, ‘ಜಾತಿಹೀನನ ಮನೆಯ ಜ್ಯೋತಿ ತಾ ಹೀನವೆ ಜಾತಿ ವಿಜಾತಿ ಎನಬೇಡ ಶಿವನೊಲಿದಾತನೆ ಜಾತ ಸರ್ವಜ್ಞ’, ಜನರ ಆಡುಭಾಷೆಯಲ್ಲಿ ತ್ರಿಪದಿಗಳನ್ನು ರಚಿಸಿ ಸಮಾಜದ ಅಂಕುಡೊಂಕುಗಳನ್ನು ಚಿಕಿತ್ಸಕ ನೋಟದೊಂದಿಗೆ ತಿದ್ದಿದ ಸಮಾಜ ಸುಧಾರಕ.
ಸರ್ವಜ್ಞನ ತ್ರಿಪದಿಗಳು ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯ ಕೊಡುಗೆಯಾಗಿದೆ. ತ್ರಿಪದಿಗಳು ಸಾರುವ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ. ಇವುಗಳು ಹಲವು ಭಾಷೆಗಳಿಗೆ ಭಾಷಾಂತರಗೊಂಡಿದ್ದು, ಭಾಷೆ ಮತ್ತು ಗಡಿಗಳ ಎಲ್ಲೆ ಮೀರಿ ಕರ್ನಾಟಕದ ಕೀರ್ತಿಯನ್ನು ಬೆಳಗಿಸಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಛತ್ರಪತಿ ಶಿವಾಜಿ ಮತ್ತು ಸಂತ ಕವಿ ಸರ್ವಜ್ಞರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಲಾಯಿತು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥ ರೆಡ್ಡಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್‌.ಅನಂತ ಕೃಷ್ಣ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಕೇಶವರೆಡ್ಡಿ, ಮಾಜಿ ಅಧ್ಯಕ್ಷ ಗುರುರಾಜ್‌ರಾವ್, ಮರಾಠಿ ಜನಾಂಗದ ಪ್ರಸಾದ್, ವೆಂಕಟೇಶ್, ಶೇಖರ್, ಕೃಷ್ಣ, ಪಂಡುರಾಂಗರಾವ್ ಮತ್ತಿತರರು ಹಾಜರಿದ್ದರು.