Home Blog Page 428

ಬಣ್ಣದ ಕುಂಡ ಮಾಡುವವರ ಬಣ್ಣರಹಿತ ಬದುಕು

0

ಶ್ರಮ ಜೀವಿಗಳು ರಾಜ್ಯ, ಭಾಷೆ, ಪ್ರಾಂತ್ಯಗಳ ಗಡಿ ದಾಟಿ ಮುನ್ನಡೆಯುತ್ತಾರೆ. ಜೀವನವು ಕಷ್ಟಕರವಾದಾಗ ತಮ್ಮ ಶ್ರಮ ಜೀವನ ಮತ್ತು ಕೌಶಲ್ಯವನ್ನು ನಂಬಿ ಭಾಷೆ ಬರದಿದ್ದರೂ ವಲಸೆ ಹೋಗುತ್ತಾರೆ. ಈ ರೀತಿಯಲ್ಲಿ ತಮ್ಮ ಜೀವನ ನಡೆಸಲು, ಹೊಟ್ಟೆ ತುಂಬಿಸಿಕೊಳ್ಳಲು, ಕುಟುಂಬದ ನಿರ್ವಹಣೆಗಾಗಿ ಉತ್ತರಪ್ರದೇಶದಿಂದ ಒಂದು ಕುಟುಂಬ ನಗರಕ್ಕೆ ವಲಸೆ ಬಂದಿದೆ.

ಶಿಡ್ಲಘಟ್ಟದ ಬಸ್‌ನಿಲ್ದಾಣದ ಬಳಿಯ ಹಳೆಯ ಪೆಟ್ರೋಲ್‌ ಬಂಕ್‌ ಮುಂಭಾಗದ ಖಾಲಿ ಸ್ಥಳದಲ್ಲಿ ಬೀಡುಬಿಟ್ಟಿರುವ ಉತ್ತರಪ್ರದೇಶದ ವಲಸಿಗರು ಬಣ್ಣದ ಸಿಮೆಂಟ್‌ ಕುಂಡ ಮಾಡಿ ಮಾರಾಟಕ್ಕಿಟ್ಟಿದ್ದಾರೆ.

ವಿವಿಧ ಆಕಾರದ ಸಿಮೆಂಟಿನ ಕುಂಡ, ಸಿಮೆಂಟಿನ ತೊಟ್ಟಿಗಳನ್ನು ರೂಪಿಸುವುದರಲ್ಲಿ ಇವರು ಸಿದ್ಧಹಸ್ತರು. ನಗರದ ಬಸ್‌ನಿಲ್ದಾಣದ ಬಳಿಯ ಹಳೆಯ ಪೆಟ್ರೋಲ್‌ ಬಂಕ್‌ ಮುಂಭಾಗದ ಖಾಲಿ ಸ್ಥಳದಲ್ಲಿ ಬೀಡುಬಿಟ್ಟಿರುವ ಇವರು ಪುಟ್ಟ ಜೋಪಡಿಯನ್ನು ನಿರ್ಮಿಸಿಕೊಂಡಿದ್ದಾರೆ. ಸಿಮೆಂಟ್‌, ಮರಳು, ನೀರು ಕಲಸಿ ಕುಂಡದ ಆಕಾರದ ಪ್ಲಾಸ್ಟಿಕ್‌ ಎರಕದ ಅಚ್ಚಿಗೆ ಹಾಕಿ ಕುಂಡವನ್ನು ತಯಾರಿಸುತ್ತಾರೆ. ಅವಕ್ಕೆ ಬಣ್ಣ ಬಳಿದು ಅಂದವಾಗಿ ಕಾಣಿಸುವಂತೆ ಜೋಡಿಸಿದ್ದಾರೆ. ನೀರನ್ನು ತುಂಬಿಸಿಡಲು ಗೋಲಾಕಾರದ ಸಿಮೆಂಟ್‌ ತೊಟ್ಟಿಗಳನ್ನೂ ಇವರು ತಯಾರಿಸಿಟ್ಟಿದ್ದಾರೆ. ಒಂದು ತಿಂಗಳಿನಿಂದ ನಗರದಲ್ಲಿ ಬೀಡುಬಿಟ್ಟಿರುವ ಇವರು ಶ್ರಮಕ್ಕೆ ತಕ್ಕಂತಹ ಪ್ರತಿಫಲ ಸಿಗುತ್ತಿಲ್ಲವೆಂದು ನೋವನ್ನು ತೋಡಿಕೊಳ್ಳುತ್ತಾರೆ.
‘ನಮ್ಮೂರು ಉತ್ತರಪ್ರದೇಶದ ಉನಾವ್‌ಜಿಲ್ಲೆಯ ಸಬೀಪುರ್‌. ನಾವು ನಾಲ್ವರು ಸಹೋದರರು ಕುಟುಂಬ ನಿರ್ವಹಣೆ ಮತ್ತು ಹೊಟ್ಟೆ ಬಟ್ಟೆಗೆ ಸಂಪಾದಿಸಲೆಂದು ಕುಟುಂಬವನ್ನು ನಮ್ಮೂರಿನಲ್ಲಿ ಬಿಟ್ಟು ಇಲ್ಲಿಗೆ ಬಂದಿದ್ದೇವೆ. ನಾನಾ ಆಕಾರದ ಸಿಮೆಂಟ್‌ ಕುಂಡಗಳು ಮತ್ತು ನೀರಿನ ತೊಟ್ಟಿಗಳನ್ನು ತಯಾರಿಸಿಟ್ಟು ಗಿರಾಕಿಗಳಿಗೆ ಎದುರು ನೋಡುತ್ತಿದ್ದೇವೆ. ಒಂದು ತಿಂಗಳಾಯಿತು ಇಲ್ಲಿಗೆ ಬಂದು. ನಮ್ಮ ತಯಾರಿಕೆಯ ಕುಂಡಗಳನ್ನು ಎಲ್ಲರಿಗೂ ಕಾಣುವಂತೆ ಜೋಡಿಸಿಟ್ಟಿದ್ದೇವೆ. ವ್ಯಾಪಾರವಿಲ್ಲದೆ ಕಷ್ಟವಾಗಿದೆ. ಪ್ಲಾಸ್ಟಿಕ್‌ ಹೊದಿಕೆಯ ಜೋಪಡಿಯಲ್ಲಿ ಅಡುಗೆ ಮತ್ತು ವಾಸಕ್ಕೆ ವ್ಯವಸ್ಥೆ ಮಾಡಿಕೊಂಡು ಬದುಕುತ್ತಿದ್ದೇವೆ. ನಮ್ಮ ಶ್ರಮಕ್ಕೆ ತಕ್ಕ ಹಣ ಸಿಗುತ್ತಿಲ್ಲ’ ಎನ್ನುತ್ತಾರೆ ಉತ್ತರಪ್ರದೇಶದ ಆಲಂ.

ಹೈನುಗಾರಿಕೆಯಿಂದ ಜೀವನಮಟ್ಟ ಸುಧಾರಣೆ

0

ಜಿಲ್ಲೆಯ ರೈತರ ಜೀವನಮಟ್ಟ ಸುಧಾರಣೆಗೆ ಈ ಭಾಗದ ಹೈನುಗಾರಿಕೆ ಬಹುತೇಕ ಕಾರಣವಾಗಿದೆ ಎಂದು ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಹೇಳಿದರು.
ತಾಲ್ಲೂಕಿನ ತಲಕಾಯಲಬೆಟ್ಟ ಗ್ರಾಮದಲ್ಲಿ ಗುರುವಾರ ನೂತನ ಹಾಲು ಉತ್ಪಾದಕರ ಸಹಕಾರ ಸಂಘದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕಳೆದ ಮೂರು ದಶಕಗಳ ಹಿಂದೆ ಈ ಭಾಗದ ರೈತರ ಉಪಕಸುಬಾಗಿದ್ದ ಹೈನುಗಾರಿಕೆ ಇದೀಗ ಮುಖ್ಯ ಕಸುಬಾಗಿದೆ. ಇದಕ್ಕೆ ಕಾರಣ ಅವಿಭಾಜಿತ ಜಿಲ್ಲಯಲ್ಲಿ ಇಂದು ಕುಡಿಯುವ ನೀರಿಗೂ ಪರಿತಪಿಸುವ ವಾತಾವರಣ ನಿರ್ಮಾಣವಾಗಿದ್ದು ರೈತರು ಕೃಷಿ ಮಾಡಲಾಗುತ್ತಿಲ್ಲ. ಬಹುತೇಕ ರೈತರು ಮನೆಯಲ್ಲಿ ಒಂದೆರಡು ಹಸುಗಳನ್ನು ಸಾಕಿ ಹಾಲು ಉತ್ಪಾದಿಸಿ ಜೀವನ ನಡೆಸುವಂತಾಗಿದೆ ಎಂದರು.
ಕುಡಿಯುವ ನೀರಿಗೂ ಪರದಾಡುವ ಸ್ಥಿತಿಯಿದ್ದರೂ ಈ ಭಾಗದ ರೈತರು ಅದರಲ್ಲಿಯೂ ಮಾತೆಯರು ಹಾಲಿನ ಉತ್ಪಾದನೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದು, ಹಾಲು ಉತ್ಪಾದಕರು ಗುಣಮಟ್ಟದ ಹಾಲು ಪೂರೈಸುವುದರೊಂದಿಗೆ ಒಕ್ಕೂಟದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸುವುದು ಸೇರಿದಂತೆ ಕಾಲ ಕಾಲಕ್ಕೆ ರಾಸುಗಳಿಗೆ ಲಸಿಕೆ ಹಾಕಿಸುವುದು ಹಾಗು ಒಕ್ಕೂಟದಿಂದ ಸಿಗುವ ವಿವಿಧ ಸವಲತ್ತುಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಈ ಸಂದರ್ಭದಲ್ಲಿ ಕೋಚಿಮುಲ್ ಶಿಬಿರ ಘಟಕದ ಉಪ ವ್ಯವಸ್ಥಾಪಕ ಹನುಮಂತರಾವ್, ವಿಸ್ತರಣಾಧಿಕಾರಿ ಶ್ರೀನಿವಾಸ್, ಅಧ್ಯಕ್ಷ ದೇವರಾಜ್ ಮತ್ತಿತರರು ಹಾಜರಿದ್ದರು.

ಕಲಿಕೆಯ ಖಾತರಿಯನ್ನು ಹಬ್ಬದ ರೀತಿಯಲ್ಲಿ ಆಚರಿಸಿ

0

ಶಿಕ್ಷಣ ಇಲಾಖೆ ವಿದ್ಯಾರ್ಥಿಗಳನ್ನು ಸರ್ವತೋಮುಖ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಲು ಕಲಿಕೋತ್ಸವ ಕಾರ್ಯಕ್ರಮ ನಡೆಸುತ್ತಿದೆ. ಮಕ್ಕಳಲ್ಲಿನ ಕಲಿಕೆ ಮತ್ತು ಕಲಿಕೆಯ ಖಾತರಿಯನ್ನು ಹಬ್ಬದ ರೀತಿಯಲ್ಲಿ ಆಚರಿಸುವುದೆ ಕಲಿಕೋತ್ಸವವಾಗಿದೆ. ಶಿಕ್ಷಕರು ಮಕ್ಕಳಿಗೆ ಕಲಿಕೆಯ ಜತೆಗೆ ಉತ್ತಮ ಮೌಲ್ಯಗಳನ್ನು ಬಿತ್ತಬೇಕು ಎಂದು ನಿವೃತ್ತ ಅಕ್ಷರ ದಾಸೋಹ ನಿರ್ದೇಶಕ ರಂಗಪ್ಪ ತಿಳಿಸಿದರು.
ತಾಲ್ಲೂಕಿನ ಹಳೇಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ಈ.ತಿಮ್ಮಸಂದ್ರ ಕ್ಲಸ್ಟರ್‌ ಮಟ್ಟದ ಕಲಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕಲಿಕೆ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಬೇಕು. ಮಕ್ಕಳಲ್ಲಿ ಅಡಗಿರುವ ವಿವಿಧ ಪ್ರತಿಭೆ ಗುರುತಿಸಲು ಈ ರೀತಿಯ ಕಾರ್ಯಕ್ರಮಗಳು ಅವಶ್ಯಕ. ಶಿಕ್ಷಕರು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು ಎಂದು ಹೇಳಿದರು.
ಪಠ್ಯಪುಸ್ತಕ ಆಧಾರಿತ ಕ್ರಮದಲ್ಲಿ ಈ ಕಲಿಕೋತ್ಸವ ನಡೆಸಲಾಗುತ್ತಿದ್ದು ಗುಣಾತ್ಮಕ ಉತ್ಕೃಷ್ಟ ಕಲಿಕೆಯಿಂದ ಸರ್ಕಾರಿ ಶಾಲೆಗಳನ್ನು ಆಕರ್ಷಿಸುವ ಇಲಾಖೆಯ ವಿನೂತನ ಕಾರ್ಯಕ್ರಮವಾಗಿದೆ. ಮಕ್ಕಳ ಕಲಿಕೆಗೆ ಇದು ಪೂರಕವಾಗಿದ್ದು ಶಾಲೆಗಳ ಕಲಿಕಾ ಸಾಧನೆಗಳಿಗೆ ಪಾರದರ್ಶಕತೆ ತರಲು ಮಕ್ಕಳ ಸಾಧನೆ ಸ್ಪಷ್ಟಪಡಿಸಲು ಇದು ಸಹಾಯಕವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಅಕ್ಷರ ದಾಸೋಹ ನಿರ್ದೇಶಕ ರಂಗಪ್ಪ ಅವರನ್ನು ಶಿಕ್ಷಕ ವೃಂದದವರು ಸನ್ಮಾನಿಸಿದರು.
ಸಿಆರ್‌ಪಿ ಶಿವಪ್ಪ, ಶಿಕ್ಷಕರಾದ ಬಿ.ಆರ್‌.ನಾರಾಯಣಸ್ವಾಮಿ, ಸುಬ್ಬಣ್ಣ, ಎಂ.ಕೆ.ರೆಡ್ಡಿ, ರಾಮಚಂದ್ರ, ಎಂ.ವಿ.ಮಂಜುನಾಥ್‌, ಮುಜಾಫರ್‌ ಮತ್ತಿತರರು ಹಾಜರಿದ್ದರು.

ಮಾರ್ಚ್‌ 10 ರಂದು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ

0

ಕನ್ನಡ ಸಾಹಿತ್ಯ ಪರಿಷತ್ತು ಶಿಡ್ಲಘಟ್ಟ ತಾಲ್ಲೂಕು ಘಟಕದಿಂದ ಆರನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾರ್ಚ್‌ 10 ರ ಶುಕ್ರವಾರ ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ನಡೆಸಲು ಕಸಾಪ ತಾಲ್ಲೂಕು ಕಾರ್ಯಕಾರಿ ಸಮಿತಿ ಸರ್ವಾನುಮತದಿಂದ ತೀರ್ಮಾನಿಸಿರುವುದಾಗಿ ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆರನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಯಲು ತಾಲ್ಲೂಕಿನ ಎಲ್ಲ ನಾಗರಿಕರು ಮತ್ತು ಕನ್ನಡಾಭಿಮಾನಿಗಳು ಸಹಕರಿಸಬೇಕೆಂದು ಕೋರಿದ್ದಾರೆ.

‘ಮುಷ್ಠಿ ತುಂಬ ರಾಗಿ’ – ವಿದ್ಯಾರ್ಥಿಗಳಿಂದ 600 ಕೆಜಿ ರಾಗಿ ಸಂಗ್ರಹ

0

ಸ್ವಂತಕ್ಕಿಂತ ಸೇವೆ ಅಮೂಲ್ಯವಾದದ್ದು ಎಂಬ ಧ್ಯೇಯವನ್ನು ಮಕ್ಕಳ ಮನದಲ್ಲಿ ತುಂಬುವ ಉದ್ದೇಶದಿಂದ ‘ಮುಷ್ಠಿ ತುಂಬ ರಾಗಿ’ ಯೋಜನೆಯನ್ನು ಶಾಲೆಯಲ್ಲಿ ಹಮ್ಮಿಕೊಂಡಿದ್ದಾಗಿ ಬಿ.ಎಂ.ವಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಲ್‌.ಕಾಳಪ್ಪ ತಿಳಿಸಿದರು.
ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮದ ಬಿ.ಎಂ.ವಿ ವಿದ್ಯಾ ಸಂಸ್ಥೆಯಲ್ಲಿ ಗುರುವಾರ ‘ಮುಷ್ಠಿ ತುಂಬ ರಾಗಿ’ ಯೋಜನೆಯಲ್ಲಿ ಮಕ್ಕಳು ಸಂಗ್ರಹಿಸಿದ್ದ 600 ಕೆಜಿ ರಾಗಿಯನ್ನು ಚಿಂತಾಮಣಿಯ ವಾಸವಿ ವೃದ್ಧಾಶ್ರಮ ಮತ್ತು ಅನಾಥ ಮಕ್ಕಳ ಚಾರಿಟಬಲ್‌ ಟ್ರಸ್ಟ್‌ ಅವರಿಗೆ ದಾನವಾಗಿ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಸಣ್ಣ ವಯಸ್ಸಿನಲ್ಲಿಯೇ ಸೇವಾ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ರೋಟರಿ ಇಂಟರಾಕ್ಟ್‌ ಕ್ಲಬ್‌ ಅನ್ನು ಶಾಲೆಯಲ್ಲಿ ಎರಡು ವರ್ಷಗಳ ಹಿಂದೆ ಸ್ಥಾಪಿಸಲಾಯಿತು. ರೋಟರಿ ಬೆಂಗಳೂರು ಹೈಗ್ರೌಂಡ್ಸ್‌ ಅವರ ಕರೆಯ ಮೇರೆಗೆ ಪ್ರತಿ ದಿನ ಒಂದು ಮುಷ್ಠಿ ರಾಗಿಯನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ನೀಡುವ ಮೂಲಕ 600 ಕೆಜಿ ರಾಗಿಯನ್ನು ಸಂಗ್ರಹಿಸಿರುವುದು ಶ್ಲಾಘನೀಯ. ಇದನ್ನು ಅನಾಥ ಮಕ್ಕಳಿಗೆ, ದಿಕ್ಕಿಲ್ಲದ ವೃದ್ಧರಿಗೆ ನೀಡುವ ಮೂಲಕ ಮಕ್ಕಳು ಧನ್ಯತಾ ಭಾವವನ್ನು ಅನುಭವಿಸುವಂತಾಗಿದೆ. ಇದರಿಂದ ಮಕ್ಕಳಲ್ಲಿ ಸಾಮಾಜಿಕ ಕಳಕಳಿ, ಇತರರ ನೋವು ಅರಿಯುವ ಗುಣ, ಸೇವಾ ಮನೋಭಾವ ವೃದ್ಧಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೋಟರಿ ಬೆಂಗಳೂರು ಹೈಗ್ರೌಂಡ್ಸ್‌ ಅಧ್ಯಕ್ಷ ವಿ.ರಾಮಚಂದ್ರ, ಕಾರ್ಯದರ್ಶಿ ಅರವಿಂದ ನಾಯ್ಡು ಮಕ್ಕಳನ್ನುದ್ದೇಶಿಸಿ ಮಾತನಾಡಿದರು.
ಬಿ.ಎಂ.ವಿ ವಿದ್ಯಾ ಸಂಸ್ಥೆ ಅಧ್ಯಕ್ಷ ಬಿ.ವಿ.ಮುನೇಗೌಡ, ರೋಟರಿ ಸದಸ್ಯರಾದ ಸಂದೀಪ್‌, ರವಿಕುಮಾರ್‌, ಪ್ರೊ.ಎಚ್‌.ಬಿ.ಬಾಲಕೃಷ್ಣ, ನವೀನ್‌ಕುಮಾರ್‌, ಬಿ.ಎಂ.ವಿ ವಿದ್ಯಾ ಸಂಸ್ಥೆಯ ಟ್ರಸ್ಟಿಗಳಾದ ಎಂ.ವೆಂಕಟಮೂರ್ತಿ, ಸಂತೆ ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.

ನಗರಸಭೆಯ ತುರ್ತು ಸಭೆಯಲ್ಲಿ ಆರೋಪಗಳ ಸರಮಾಲೆ

0

ಶಿಡ್ಲಘಟ್ಟದ ನಗರಸಭೆಯ ಸಭಾಂಗಣದಲ್ಲಿ ಅಧ್ಯಕ್ಷ ಅಪ್ಸರ್‌ಪಾಷ ಅಧ್ಯಕ್ಷತೆಯಲ್ಲಿ ತುರ್ತು ಸಭೆ ಶನಿವಾರ ನಡೆಯಿತು. ಶಾಸಕ ಎಂ.ರಾಜಣ್ಣನವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ನಗರದ ವಾರ್ಡುಗಳ ಮರು ವಿಂಗಡಣೆ, ಕುಡಿಯುವ ನೀರು, ನಗರೋತ್ಥಾನ ನಿಧಿಯ ಹಣ ಬಳಕೆ ಕುರಿತು ಚರ್ಚೆಗಳು ನಡೆದವು.
ಸಭೆ ಆರಂಭವಾಗುತ್ತಿದ್ದಂತೆ ಯಾವ ಅಧಿಕಾರಿಯೂ ಸ್ಥಳೀಯವಾಗಿ ವಾಸ ಇಲ್ಲ. ೧೦ ಗಂಟೆಯಾದರೂ ಕಚೇರಿಗೆ ಅಧಿಕಾರಿಗಳು ಬರೊಲ್ಲ. ಅವರ ಕೈಕೆಳಗಿನ ಸಿಬ್ಬಂದಿಯೂ ಅಷ್ಟೆ ಎಂದು ಸದಸ್ಯ ಸಿಕಂಧರ್ ಆರೋಪಿಸಿದರು.
‘ನನ್ನ ವಾರ್ಡಿನಲ್ಲಿ ಕಳೆದ ಎರಡು ತಿಂಗಳಿಂದಲೂ ಕುಡಿಯುವ ನೀರಿಲ್ಲ. ಕಂದಾಯ ಮಾತ್ರ ಟೈಂ ಸರಿಯಾಗಿ ವಸೂಲಿ ಮಾಡ್ತೀರಿ, ಆದರೆ ಕುಡಿಯೋ ನೀರು ಕೊಡಬೇಕು ಅನ್ನೋ ಜವಾಬ್ದಾರಿ ಇಲ್ಲವಾ’ ಎಂದು ಸದಸ್ಯ ಲಕ್ಷ್ಮಣ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇದರ ಮದ್ಯ ವಾರ್ಡುಗಳ ಮರು ವಿಂಗಡಣೆ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಬಹುತೇಕ ಸದಸ್ಯರು ಆಯುಕ್ತರ ವಿರುದ್ದ ಹರಿಹಾಯ್ದರು. ಯಾರನ್ನು ಕೇಳಿ ನೀವು ಮರು ವಿಂಗಡಣೆ ಮಾಡಿ ಡಿಸಿರವರಿಗೆ ವರದಿ ಸಲ್ಲಿಸಿದಿರಿ ಎಂದು ಕಿಡಿಕಾರಿದರು.
ವಾರ್ಡುಗಳ ಮರುವಿಂಗಡಣೆಗೂ ಸದಸ್ಯರಿಗೂ ಸಂಬಂಧ ಇಲ್ಲ ಎಂದವರು ಇದೀಗ ಏಕೆ ಸಭೆಯಲ್ಲಿ ಆ ವಿಷಯವನ್ನು ಇಟ್ಟಿದ್ದೀರಿ, ಎಲ್ಲಾ ಆಟ ಆಡ್ತೀರಾ, ನಿಮಗೆ ಸದಸ್ಯರು ಅಂದ್ರೆ ಅಷ್ಟು ಕೇವಲವಾ ಎಂದು ಆಯುಕ್ತ ಹರೀಶ್‌ರನ್ನು ತರಾಟೆಗೆ ತೆಗೆದುಕೊಂಡರು.
ಕೊನೆಗೆ ಆ ವರದಿಯನ್ನು ವಾಪಸ್ ತರಿಸಿಕೊಂಡು ಹೊಸದಾಗಿ ಮರುವಿಂಗಡಣೆಯ ವರದಿ ತಯಾರಿಸಿ ಕಳುಹಿಸಿಕೊಡುವ ಭರವಸೆ ನೀಡಿದ ಮೇಲಷ್ಟೆ ಸದಸ್ಯರು ಸಮಾಧಾನವಾದರು.
ಬೀದಿ ದೀಪಗಳ ವಿಷಯ ಚರ್ಚೆ ನಡೆಯುವಾಗ ಸದಸ್ಯ ಶಫೀವುಲ್ಲಾ ಕುಡಿಯುವ ನೀರಿನ ವಿಷಯ ಪ್ರಸ್ತಾಪಿಸಿದರು. ಆಗ ಮದ್ಯ ಪ್ರವೇಶಿಸಿದ ಸದಸ್ಯ ರಾಘವೇಂದ್ರ ಒಬ್ಬರು ಮಾತನಾಡಿದ ನಂತರ ಇನ್ನೊಬ್ಬರು ಮಾತನಾಡಿ ಎಂದಾಗ ಇಬ್ಬರೂ ಸದಸ್ಯರ ಮದ್ಯೆ ಮಾತಿನ ಚಕಮುಕಿ ನಡೆಯಿತು.
ಆಗ ಶಾಸಕ ಎಂ.ರಾಜಣ್ಣ ಎದ್ದುನಿಂತು ಕೈ ಮುಗಿದು ದಯಮಾಡಿ ಸಭೆಯಲ್ಲಿ ಶಿಸ್ತು, ಶಾಂತಿಯನ್ನು ಕಾಪಾಡಿ ಎಂದು ಸಭೆಯನ್ನು ತಹಬಂದಿಗೆ ತಂದು ಉಳಿದ ವಿಷಯಗಳ ಬಗ್ಗೆ ಚರ್ಚಿಸಿದರು.

ಕನ್ನಮಂಗಲ ಗ್ರಾಮದ ವೆಂಕಟಲಕ್ಷ್ಮೀ ರಾಮಕೃಷ್ಣ ಅವರಿಗೆ ರಾಜ್ಯ ಮಟ್ಟದ ‘ಸಮಾಜ ಸೇವಾ ರತ್ನ’ ಪ್ರಶಸ್ತಿ

0

ತಾಲ್ಲೂಕಿನ ಕೆ.ಮುತ್ತುಕದಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಶಾ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿರುವ ಕನ್ನಮಂಗಲ ಗ್ರಾಮದ ವೆಂಕಟಲಕ್ಷ್ಮೀ ರಾಮಕೃಷ್ಣ ಅವರಿಗೆ ರಾಜ್ಯ ಮಟ್ಟದ ‘ಸಮಾಜ ಸೇವಾ ರತ್ನ’ ಪ್ರಶಸ್ತಿ ಲಭಿಸಿದೆ.
ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಬೆಂಗಳೂರು ರವೀಂದ್ರ ಕಲಾಕ್ಷೇತ್ರ ಆವರಣದ ನಯನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯಮಟ್ಟದಲ್ಲಿ 21 ಜನರನ್ನು ಗುತಿ೯ಸಿ ಆಯ್ಕೆ ಮಾಡಿದ್ದು, ಅದರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ವೆಂಕಟಲಕ್ಷ್ಮೀ ರಾಮಕೃಷ್ಣ ಅವರು ಸಮಾಜದ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಗೆ ಗುರುತಿಸಿ ರಾಜ್ಯ ಮಟ್ಟದ ಸಮಾಜ ಸೇವಾ ರತ್ನ ಪ್ರಶಸ್ತಿಯನ್ನು ನೀಡಲಾಯಿತು. ಗ್ರಾಮೀಣ ಭಾಗದಲ್ಲಿ ಒಬ್ಬ ಸಾಮಾನ್ಯ ಮಹಿಳೆಯಾಗಿ ಆರೋಗ್ಯ ಇಲಾಖೆಯಲ್ಲಿ ಸೇವೆಸಲ್ಲಿಸುತ್ತಾ ಸಮಾಜದ ಬಗ್ಗೆ ಅದರಲ್ಲೂ ಮಹಿಳೆಯರ , ಬಾಣಂತಿಗಳಿಗೆ ಉತ್ತಮ ಸೇವೆ ಸಲ್ಲಿಸುವುದರೊಂದಿಗೆ ಉತ್ತಮ ಸೇವೆ ಸಲ್ಲಿಸುತ್ತಿರುವರೆಂದು ಅಭಿನಂದಿಸಲಾಯಿತು.

ಸ.ರಘುನಾಥ ಅವರಿಗೆ ರಾಜ್ಯ ಜಾನಪದ ಪ್ರಪಂಚ ಪ್ರಶಸ್ತಿ

0

ರಾಜ್ಯ ಕನ್ನಡ ಜಾಪದ ಪರಿಷತ್ತು ೨೦೧೬-೨೦೧೭ನೇ ಸಾಲಿನ ರಾಜ್ಯ ಜಾನಪದ ಪ್ರಪಂಚ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಜಾನಪದ ಕ್ಷೇತ್ರದಲ್ಲಿ ೩೦ ವರ್ಷಗಳಿಂದ ಗಣನೀಯ ಕಾರ್ಯ ನಿರ್ವಹಿಸಿರುವ ಹಿರಿಯ ಸಾಹಿತಿ ಸ,ರಘುನಾಥ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಪ್ರಶಸ್ತಿ ೨೦೦೦ ರೂಪಾಯಿ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ.
ರಘುನಾಥ ಅವರು ಜಾನಪದ ಶಿಶು ಪ್ರಾಸಗಳ ಉಳಿಕೆಗಾಗಿ ನಡೆಸಿದ ಕಾರ್ಯವನ್ನು ಪುರಸ್ಕರಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಗಾಗಿ ರಾಜ್ಯದ ೨೩ ಮಂದಿ ಜಾನಪದ ಕಲಾವಿದ, ವಿದ್ವಾಂಸರನ್ನು ಆಯ್ಕೆ ಮಾಡಲಾಗಿದೆ. ಫೆಬ್ರುವರಿ ೨೬ರಂದು ವಿಜಯಪುರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರಾಜ್ಯ ಸಮಿತಿ ಪರವಾಗಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಎನ್.ಮುನಿವೆಂಕಟೇಗೌಡ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸ.ರಘುನಾಥ ಅವರು ತೊಗಲುಗೊಂಬೆ ಕಲೆ, ಕಲಾವಿದರ ಕಲ್ಯಾಣ ಕಾರ್ಯದಲ್ಲಿ ೨೫ ವರ್ಷಗಳಿಂದ ತಮ್ಮನ್ನು ತೊಡಗಿಸಿಕೊಂಡಿರುವುದಲ್ಲದೆ, ಜೋಂಕಿಣಿ, ಕೋನಂಗಿ ಕಲೆ, ಚೆಕ್ಕ ಭಜನ ಮುಂತಾದ ಪ್ರಕಾರಗಳ ಕಲಾವಿದವಿದರ ಸಂಕ್ಷೇಮಕ್ಕಾಗಿ ದುಡಿಯುತ್ತಿರುವರು. ಚಿಂತಾಮಣಿ ತಾಲ್ಲೂಕಿನ ಬೊಮ್ಮಲಾಟಪುರದಲ್ಲಿ ಶಿಳ್ಳೇಕ್ಯತ-ಬಂಗಾರಕ್ಕ ತೊಗಲುಗೊಂಬೆ ಕಲಾವಿದರ ಸಂಘದ ಸ್ಥಾಪಕ ಕಾರ್ಯಾಧ್ಯಕ್ಷರಾಗಿರುವರು.
ಜಾನಪದ ಶಿಶುಪ್ರಾಸಗಳ ’ಗಿಲಿಕಿ, ಜಾನಪದಗೀತೆಗಳ ’ಯರ್ರರ್ಯಾಪಗಿಡಿ, ಮೊರಸುನಾಡು ಪಾಟಲು’ ಇವರ ಸಂಗ್ರಹ ಸಂಕಲನಗಳು. ಇದಲ್ಲದೆ ಜಾನಪದ ಸಾಹಿತ್ಯ, ತತ್ವಪದ, ಕಲೆ ಕುರಿತಾಗಿ ಸುಮಾರು ೩೦ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. ಹಾಗೆಯೇ ಉಪನ್ಯಾಸಗಳನ್ನು ನೀಡಿದ್ದಾರೆ. ಈವರೆಗೆ ನಾಡಿನ ಹತ್ತುಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಕಥೆಗಳನ್ನು ಹೇಳಿದ್ದಾರೆ. ಕೋಲಾರ-ಚಿಕ್ಕಬಳ್ಳಾಪುರ ಜಾನಪದ ನಿಘಂಟಿನ ರಚನೆಯಲ್ಲಿ ನಿರತರಾಗಿದ್ದಾರೆ.

ದೇಶ ಸುತ್ತುವ ಮೂಲಕ ಜ್ಞಾನ ಸಂಪಾದಿಸಿ

0

ದೇಶ ಸುತ್ತು ಕೋಶ ಓದು ಎನ್ನುವುದು ನಮ್ಮ ನಾಡಿನ ಹಿರಿಯರು ರೂಪಿಸಿದ ನಾಣ್ಣುಡಿ. ಈ ಮಾತು ನಮ್ಮ ದೇಶದ ಭವ್ಯ ಪರಂಪರೆಯನ್ನು ಸೂಚಿಸುತ್ತದೆ. ದೇಶ ಸುತ್ತುವುದು ಎಂದರೆ ಪ್ರವಾಸ ಮಾಡುವುದು. ಆ ಮೂಲಕ ಜ್ಞಾನ ಸಂಪಾದಿಸುವುದಾಗಿದೆ ಎಂದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ತಿಳಿಸಿದರು.
ನಗರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ ತಾಲ್ಲೂಕಿನ ಒಟ್ಟು ೨೦೦ ಪ್ರೌಢಶಾಲೆ ವಿದ್ಯಾರ್ಥಿಗಳ ಕರ್ನಾಟಕ ದರ್ಶನ ಪ್ರವಾಸಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರವಾಸವನ್ನು ಒಂದು ಅಧ್ಯಯನವನ್ನಾಗಿ ಪರಿಗಣಿಸಿ ತಾವು ನೋಡುವ ಐತಿಹಾಸಿಕ ಹಾಗು ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ತಮ್ಮ ವಿದ್ಯಾರ್ಥಿ ಜೀವನವನ್ನು ಇನ್ನಷ್ಟು ಸಾರ್ಥಕ ಪಡಿಸಿಕೊಳ್ಳಬೇಕು. ಸರ್ಕಾರಿ ಶಾಲೆಯಲ್ಲಿ ಓದುವಂತಹ ವಿದ್ಯಾರ್ಥಿಗಳಿಗೆ ಕರ್ನಾಟಕದ ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವ ಅವಕಾಶವನ್ನು ಸರ್ಕಾರ ಕಲ್ಪಿಸಿದ್ದು ವಿದ್ಯಾರ್ಥಿಗಳು ಪ್ರವಾಸದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಉತ್ತರಕರ್ನಾಟಕದ ಹಂಪಿ, ಆಲಮಟ್ಟಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಕೂಡಲಸಂಗಮ, ಚಿತ್ರದುರ್ಗ, ವಿಜಯಪುರ ಸೇರಿದಂತೆ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ತಾಲ್ಲೂಕಿನಿಂದ ಕರ್ನಾಟಕ ದರ್ಶನ ಪ್ರವಾಸಕ್ಕೆ ಈ ಬಾರಿ ೨೦೦ ಮಂದಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು ೧೦೦ ಬಾಲಕರು ಸೇರಿದಂತೆ ೧೦೦ ಬಾಲಕಿಯರು ಪ್ರವಾಸ ಹೊರಟರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಲಕ್ಷ್ಮಿನರಸೇಗೌಡ, ವೆಂಕಟರೆಡ್ಡಿ, ವಿಠ್ಠಲ್, ಗಣೇಶ್, ಮೂರ್ತಿ, ಪೊನ್ನಮ್ಮ, ವಿದ್ಯಾ, ಬೃಂದ, ಸುಮಾ ಮತ್ತಿತರರು ಹಾಜರಿದ್ದರು.

ದೇಶವೆಂದರೆ ಮಣ್ಣು, ಕಲ್ಲಲ್ಲ. ದೇಶವೆಂದರೆ ಪ್ರಜೆಗಳು

0

ದೇಶವೆಂದರೆ ಮಣ್ಣು, ಕಲ್ಲಲ್ಲ. ದೇಶವೆಂದರೆ ಪ್ರಜೆಗಳು. ನಿಜ ಅರ್ಥದಲ್ಲಿ ಪ್ರಜೆಗಳೇ ರಾಷ್ಟ್ರ. ಕೆಲವರು ರಾಷ್ಟ್ರವೆಂದರೆ ಭೌಗೋಳಿಕ ಪ್ರದೇಶ, ಭೂಪಟ ಮತ್ತು ಬಾವುಟಕ್ಕೆ ಸೀಮಿತಗೊಳಿಸುತ್ತಾ ಶಾಲಾ ಕಾಲೇಜುಗಳಲ್ಲಿ ವ್ಯವಸ್ಥಿತವಾಗಿ ತುಂಬಲಾಗುತ್ತಿದೆ. ಪ್ರಜೆಗಳಿಗೆಲ್ಲಾ ಸಮಾನ ಹಕ್ಕು ಅಧಿಕಾರವನ್ನು ನೀಡುವುದು ದೇಶಪ್ರೇಮ ಎಂಬುದನ್ನು ತಿಳಿಸಿಕೊಡುವ ಅಗತ್ಯತೆ ಇದೆ ಎಂದು ಖ್ಯಾತ ಅಂಬೇಡ್ಕರ್‌ ವಾದಿ ಎನ್‌.ಮಹೇಶ್‌ ತಿಳಿಸಿದರು.
ನಗರದ ಬಸ್ ನಿಲ್ದಾಣದ ಬಳಿ ಇರುವ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಬಹುಜನ ವಿದ್ಯಾರ್ಥಿ ಸಂಘದಿಂದ ಶನಿವಾರ ನಡೆದ ‘ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಪ್ರಜಾಪ್ರಭುತ್ವ ಉಳಿಸೋಣ’ ಎಂಬ ತಾಲ್ಲೂಕು ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ದೇಶದಲ್ಲಿ ನಿರ್ಜೀವ ಸಂಕೇತಗಳಿಗೆ ನೀಡುತ್ತಿರುವ ಗೌರವ ಪ್ರೀತಿಯನ್ನು ಜೀವಂತ ಪ್ರಜೆಗಳಿಗೆ ನೀಡುತ್ತಿಲ್ಲ. ಸಂವಿಧಾನ ಬದ್ಧವಾಗಿ ನಾವು ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದರೂ ಇಂದು ನಮ್ಮನ್ನು ಆಳುತ್ತಿರುವವರು ಮಾತ್ರ ಮನುವಾದಿ, ಜಾತಿವಾದಿ, ಸಾಮ್ರಾಜ್ಯಶಾಹಿ ಧೋರಣೆಯ ಮನಸ್ಥಿತಿ ಉಳ್ಳವರು. ಪ್ರಜೆಗಳು ತಮ್ಮ ಭವಿಷ್ಯದ ಬಗ್ಗೆ ಆಲೋಚಿಸದಂತೆ ಮಾಡಿ ಅವರ ಭಾವನೆಗಳನ್ನು ದೇಶದ ನಿರ್ಜೀವ ಸಂಕೇತಗಳಿಗೆ ಅಣಿಗೊಳಿಸಿ ಅವರನ್ನು ನಿರಂತರವಾಗಿ ಆಳ್ವಿಕೆ ಮಾಡುವುದೇ ಮನುವಾದಿ ಸಾಮ್ರಾಜ್ಯಶಾಹಿ ಧೋರಣೆಯಾಗಿದೆ ಎಂದು ಹೇಳಿದರು.

ಶಿಡ್ಲಘಟ್ಟದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ‘ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಪ್ರಜಾಪ್ರಭುತ್ವ ಉಳಿಸೋಣ’ ಎಂಬ ತಾಲ್ಲೂಕು ಮಟ್ಟದ ವಿಚಾರ ಸಂಕಿರಣವನ್ನು ಗಣ್ಯರು ಉದ್ಘಾಟಿಸಿದರು.

ಬಹುಜನ ವಿದ್ಯಾರ್ಥಿ ಸಂಘ(ಬಿ.ವಿ.ಎಸ್)ದ ಜಿಲ್ಲಾ ಸಂಯೋಜಕ ಜರ್ನಾರ್ಧನ್ ಮಾತನಾಡಿ, ಪ್ರಬುದ್ದ ಭಾರತ ನಿರ್ಮಾಣಕ್ಕಾಗಿ ಪ್ರಜಾಪ್ರಭುತ್ವ ಉಳಿಸೋಣ ಜನಾಂದೋಲನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ನಿಟ್ಟಿನಲ್ಲಿ ಮಾರ್ಚ್‌ 4ರ ಶನಿವಾರದಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಮಟ್ಟದ ವಿದ್ಯಾರ್ಥಿ ಸಮ್ಮೇಳನ ಆಯೋಜಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ಕರೆನೀಡಿದರು.
ನಗರದ ಪ್ರವಾಸಿಮಂದಿರದಿಂದ ಬಸ್ ನಿಲ್ದಾಣದವರೆಗೂ ವಿದ್ಯಾರ್ಥಿಗಳು, ಬಿ.ವಿ.ಎಸ್‌ನ ಪದಾಧಿಕಾರಿಗಳು ಘೋಷಣೆಗಳನ್ನ ಕೂಗುತ್ತಾ ಮೆರವಣಿಗೆ ಮೂಲಕ ಸಾಗಿದರು.
ಬೆಂಗಳೂರು ವಿಶ್ವ ವಿದ್ಯಾನಿಲಯದ ಸ್ನಾತಕೋತರ ವಿದ್ಯಾರ್ಥಿ ಶ್ರೀನಾಥ್ ಪ್ರಬಂಧವನ್ನು ಮಂಡನೆ ಮಾಡಿದರು.
ಬಿ.ವಿ.ಎಸ್‌ನ ಸಂಯೋಜಕರಾದ ಪ್ರೊ.ಹರಿರಾಮ್, ಶ್ರೀನಿವಾಸ್, ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಟಿಪ್ಪು ಸೆಕ್ಯುಲರ್ ಸೇನೆ ತಾಲ್ಲೂಕು ಅಧ್ಯಕ್ಷ ಮೌಲಾ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

’ದಡಾರ ಮತ್ತು ರುಬೆಲ್ಲಾ’ ಲಸಿಕೆ

0

ಶಿಡ್ಲಘಟ್ಟದ ಶ್ರೀ ಸರಸ್ವತಿ ವಿದ್ಯಾ ಸಂಸ್ಥೆಯಲ್ಲಿ ಸರ್ಕಾರದ ಆರೋಗ್ಯ ಇಲಾಖೆ ವತಿಯಿಂದ ನಡೆಯುತ್ತಿರುವ ’ದಡಾರ ಮತ್ತು ರುಬೆಲ್ಲಾ’ ಲಸಿಕೆಯ ಮೊದಲ ಹಂತದ ಕಾರ್ಯಕ್ರಮವು ಶನಿವಾರ ನೆರವೇರಿತು. ಮೊದಲ ಹಂತದಲ್ಲಿ ಆರನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ಆಂಗ್ಲ ಮತ್ತು ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯ ಸುಮಾರು ೭೫೦ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲಾಯಿತು.

ಬೀದಿ ನಾಟಕದ ಮೂಲಕ ಅರಿವು

0

ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳ ಪಂಚಾಯಿತಿಯ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ಈಚೆಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಬೀದಿ ನಾಟಕದ ಮೂಲಕ ಶೌಚಾಲಯ ನಿರ್ಮಾಣದ ಅಗತ್ಯತೆ ಹಾಗೂ ಸರ್ಕಾರದ ಸೌಲಭ್ಯಗಳ ಕುರಿತು ಅರಿವು ಮೂಡಿಸಲಾಯಿತು.

ಕಲಾತ್ಮಕತೆಯಿಂದ ಕಾವ್ಯಶಿಲ್ಪಗಳನ್ನು ಸೃಷ್ಟಿಸಿದ ಧೀಮಂತ ಕವಿ ಅಡಿಗರು

0

ಸುಮಾರು ಅರವತ್ತು ವರ್ಷಗಳು ಸೃಜನಶೀಲ ಬರವಣಿಗೆಯಲ್ಲಿ ತೊಡಗಿದ್ದವರು ಅಡಿಗರು. ನವ್ಯ ಸಂವೇದನೆಯ ಹರಿಕಾರರಾಗಿ ನೂತನ ರೀತಿಯ ಕಲಾತ್ಮಕತೆಯಿಂದ ಕಾವ್ಯಶಿಲ್ಪಗಳನ್ನು ಸೃಷ್ಟಿಸಿದ ಧೀಮಂತ ಕವಿ ಅಡಿಗರು ಎಂದು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ತಿಳಿಸಿದರು.
ನಗರದ ದಿ ಕ್ರೆಸೆಂಟ್‌ ಶಾಲೆಯ ಆವರಣದಲ್ಲಿ ಭಾನುವಾರ ಸಂಜೆ ಕಸಾಪ ತಾಲ್ಲೂಕು ಘಟಕ ಮತ್ತು ಕನ್ನಡ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣದ ತಾಲ್ಲೂಕು ಘಟಕದ ಸಹಯೋಗದೊಂದಿಗೆ ನಡೆದ ಕವಿ ಗೋಪಾಲಕೃಷ್ಣ ಅಡಿಗರ ಜನ್ಮಶತಮಾನೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಐವತ್ತೊಂದನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೌರವಿಸಲ್ಪಟ್ಟ ಅಡಿಗರು ರಾಜ್ಯ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕೇರಳದ ಕುಮಾರ್ ಆಸಾನ್ ಪ್ರಶಸ್ತಿ, ಕಬೀರ್ ಸಮ್ಮಾನ್ ಪ್ರಶಸ್ತಿಗಳನ್ನು ಪಡೆದರು. ‘ಸಾಕ್ಷಿ’ ಪತ್ರಿಕೆಯ ಸಂಪಾದಕರಾಗಿ ಹೊಸ ಸಂವೇದನೆ ಹಾಗೂ ಹೊಸ ಅಭಿವ್ಯಕ್ತಿ ವಿಧಾನಗಳಿಗೆ ಮಾರ್ಗದರ್ಶಕರಾದ ಅಡಿಗರು ತಮ್ಮ ಕಿರಿಯ ತಲೆಮಾರಿನವರ ಮೇಲೆ ಬೀರಿದ ಪ್ರಭಾವ, ಅವರ ಓರಗೆಯ ಮತ್ತು ಹಿರಿಯ ತಲೆಮಾರಿನವರಿಗೆ ಒಡ್ಡಿದ ಸವಾಲುಗಳು ಕನ್ನಡ ಆಧುನಿಕ ಸಾಹಿತ್ಯ ಚರಿತ್ರೆಯಲ್ಲಿ ಮಹತ್ವದ ಸಂಗತಿಯಾಗಿದೆ ಎಂದರು.
ಅರವತ್ತರ ದಶಕದ ಕೊನೆಯಲ್ಲಿ ಆರಂಭವಾಗಿ ಎಂಭತ್ತರ ದಶಕದ ತನಕ ಸುಮಾರು ಎರಡು ದಶಕಗಳ ಕಾಲ ಅಡಿಗರು ಸಂಪಾದಿಸಿದ ‘ಸಾಕ್ಷಿ’ ತ್ರೈಮಾಸಿಕ ಕನ್ನಡಿಗರ ಮನಸ್ಸನ್ನು ಆಳವಾಗಿ, ವಿಸ್ತಾರವಾಗಿ, ಮುಕ್ತ, ಪ್ರಾಮಾಣಿಕ, ಚಿಂತನಶೀಲತೆಯಲ್ಲಿ ಬೆಳೆಸಿದೆ. ಕನ್ನಡದ ಶ್ರೇಷ್ಠ ಕತೆಗಾರರ ಮಹತ್ವದ ಕತೆಗಳೆಲ್ಲ ಮೊದಲ ಬಾರಿಗೆ ‘ಸಾಕ್ಷಿ’ಯಲ್ಲಿ ಪ್ರಕಟವಾಗಿದ್ದವು. ಯಶವಂತ ಚಿತ್ತಾಲ, ದೇವನೂರು ಮಹಾದೇವ, ಕೆ.ಸದಾಶಿವ, ಎ.ಎನ್‌.ಪ್ರಸನ್ನ, ವೈದೇಹಿ, ರಾಜಶೇಖರ ನೀರಮಾನ್ವಿ, ಟಿ.ಜಿ.ರಾಘವ, ಪೂರ್ಣ ಚಂದ್ರ ತೇಜಸ್ವಿ ಮುಂತಾದವರ ಕಥೆಗಳು ‘ಸಾಕ್ಷಿ’ಯಲ್ಲಿ ಪ್ರಕಟವಾಗಿವೆ.
ಅಡಿಗರನ್ನು ನವ್ಯ ಕಾಲದ ಪ್ರವರ್ತಕರನ್ನಾಗಿ ಗುರುತಿಸುತ್ತ ‘ಒಂದು ಜನಾಂಗದ ಕಣ್ಣು ತೆರೆಸಿದ ಕವಿ’ ಎಂದು ಲಂಕೇಶ್‌ ಕರೆದಿದ್ದರು. ಹೊಸತು ಹಳೆಯದರ ಜೊತೆಗೂ, ಹಳೆಯದು ಹೊಸದರ ಜೊತೆಗೂ ಹೊಂದಿಕೊಳ್ಳದೆ ಬದುಕು ಸುಸಂಸ್ಕೃತವಾಗುವುದಿಲ್ಲ, ಕಾವ್ಯವು ಶ್ರೇಷ್ಠವಾಗುವುದಿಲ್ಲ ಎಂದು ಅಡಿಗರು ನಂಬಿದ್ದರು. ‘ತನ್ನತನದ ಅರಿವು ಮನುಷ್ಯತ್ವದ ವಿಶೇಷ ಲಕ್ಷಣ. ಆತ್ಮಸಾಕ್ಷಿಯಿಂದ ಮನುಷ್ಯನಿಗೆ ಬಿಡುಗಡೆಯಿಲ್ಲ. ಮನುಷ್ಯತ್ವದ ವಿಶೇಷ ಲಕ್ಷಣವಾದ ಈ ಸಾಕ್ಷಿ ಪ್ರಜ್ಞೆಯ ಬೆಳವಣಿಗೆಯೇ ಮನುಷ್ಯನ ನಿಜವಾದ ಬೆಳವಣಿಗೆ. ಕೇವಲ ಸಾಹಿತ್ಯೋಪಾಸನೆಯಿಂದ ಯಾವ ಭಾಷೆಯೂ ಬೆಳೆಯುವುದಿಲ್ಲ ಮಾತ್ರವಲ್ಲ, ಸಾಹಿತ್ಯವೂ ಬೆಳೆಯಲಾರದು. ಆಗಬೇಕಾದ್ದು ಒಟ್ಟು ಮನಸ್ಸಿನ ಕೆಲಸ. ಅಂತರಂಗ ವಿಕಸನವಾಗಬೇಕು’ ಎಂದು ಅಡಿಗರು ಹೇಳುತ್ತಿದ್ದರು ಎಂದು ವಿವರಿಸಿದರು.
ಕರವೇ ಜಿಲ್ಲಾಧ್ಯಕ್ಷ ಲೋಕೇಶ್, ತಾಲ್ಲೂಕು ಅಧ್ಯಕ್ಷ ನಾಗರಾಜ್, ಜಿಲ್ಲಾ ಉಪಾಧ್ಯಕ್ಷ ಸಯ್ಯದ್ ತಮೀಮ್ ಅನ್ಸಾರಿ, ಜಿಲ್ಲಾ ಕಾರ್ಯದರ್ಶಿ ದೇವರಾಜ್, ಶಬೀರ್ ಅಹಮದ್, ಎನ್‌.ಕೆ.ಗುರುರಾಜರಾವ್‌, ಕಸಾಪ ತಾಲ್ಲೂಕು ಕಾರ್ಯದರ್ಶಿ ಎ.ಎಂ.ತ್ಯಾಗರಾಜ್‌, ಸದಸ್ಯ ಗುರುನಂಜಪ್ಪ ಹಾಜರಿದ್ದರು.

ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ವೃದ್ಧಿಯಾಗಬೇಕು

0

ಮಕ್ಕಳಲ್ಲಿ ವಿಜ್ಞಾನ ವಿಷಯದಲ್ಲಿ ಕಲಿಕಾಸಕ್ತಿಯನ್ನು ವೃದ್ಧಿಸಿಕೊಳ್ಳಬೇಕು. ಮೌಢ್ಯಗಳ ಆಚರಣೆಯು ಇನ್ನೂ ಜೀವಂತವಾಗಿರುವುದರಿಂದ ಅವುಗಳನ್ನು ಹೋಗಲಾಡಿಸಲು ಮಕ್ಕಳದಿಸೆಯಿಂದಲೇ ವೈಜ್ಞಾನಿಕ ಮನೋಭಾವನೆಯನ್ನು ವೃದ್ಧಿಸಬೇಕು ಎಂದು ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.
ತಾಲ್ಲೂಕಿನ ಸುಗಟೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಲಿಕೆಗೆ ಕಠಿಣ ವಿಷಯಗಳೆಂದು ಭಾವಿಸಿ ಗಣಿತ, ವಿಜ್ಞಾನ, ಇಂಗ್ಲೀಷ್ ವಿಷಯಗಳತ್ತ ಮಕ್ಕಳು ಆಸಕ್ತಿ ತೋರದೇ ನಿರ್ಲಕ್ಷ್ಯ ತೋರುವುದರಿಂದ ಭವಿಷ್ಯದಲ್ಲಿ ಕಷ್ಟಕ್ಕೊಳಗಾಗುತ್ತಾರೆ. ಕಠಿಣ ವಿಷಯಗಳ ಕಲಿಕೆಗೆ ಪೂರಕ ವಾತಾವರಣವನ್ನು ಸೃಜಿಸುವ ಕಾರ್ಯವಾಗಬೇಕಿದೆ ಎಂದು ಅವರು ತಿಳಿಸಿದರು.

ಸುಗಟೂರು ಶಾಲೆಗೆ ರಾಜ್ಯ ಪ್ರಥಮ ರ್ಯಾಂ ಕ್

ಚಿತ್ರದುರ್ಗದ ಚಿಂತನ ಪ್ರಕಾಶನದ ವತಿಯಿಂದ ನಡೆದ ವಿಜ್ಞಾನ ಚಿಂತನ ಪರೀಕ್ಷೆಯಲ್ಲಿ ರ್ಯಾಂ ಕ್ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ಪದಕಗಳನ್ನು ಪ್ರಧಾನ ಮಾಡಲಾಯಿತು. ಕಲಿಕೋತ್ಸವದ ಅಂಗವಾಗಿ ನಡೆದ ಓದು, ಬರಹ, ಅಭಿವ್ಯಕ್ತಿ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿಪತ್ರ ಮತ್ತು ಬಹುಮಾನಗಳನ್ನು ವಿತರಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಎಸ್.ಆರ್.ನಾಗೇಶ್, ಎಸ್‌ಡಿಎಂಸಿ ಸದಸ್ಯ ಶಂಕರಪ್ಪ, ಎನ್.ಪಿ.ನಾಗರಾಜಪ್ಪ, ಉದ್ಯಮಿ ಸತೀಶ್, ಎಸ್.ವಿ.ನಾರಾಯಣಸ್ವಾಮಿ, ಎಸ್.ಟಿ.ಬಚ್ಚೇಗೌಡ, ಮುನಿಕೃಷ್ಣಪ್ಪ ಮತ್ತಿತರರು ಹಾಜರಿದ್ದರು.
ಪ್ರಥಮ ರ್ಯಾಂರಕ್: ಚಿತ್ರದುರ್ಗ ಚಿಂತನ ಪ್ರಕಾಶನವು ನಡೆಸಿದ ವಿಜ್ಞಾನ ಚಿಂತನ ಪರೀಕ್ಷೆಯಲ್ಲಿ ಸುಗಟೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ೮ ನೇ ತರಗತಿ ವಿದ್ಯಾರ್ಥಿನಿ ಎಸ್.ಎನ್.ರಕ್ಷಿತಾ ರಾಜ್ಯ ಮಟ್ಟದ ಪ್ರಥಮ ರ್ಯಾಂ್ಕ್ ಪಡೆದಿದ್ದಾರೆ. ೭ ನೇ ತರಗತಿಯ ಎಸ್.ಎಂ.ಅಜಯ್ ಜಿಲ್ಲಾ ಮಟ್ಟದ ಪ್ರಥಮ ರ್ಯಾಂಾಕ್, ೬ ನೇ ತರಗತಿಯ ಎಸ್.ಎ.ಮಧುಮತಿ ತಾಲ್ಲೂಕು ಮಟ್ಟದ ಪ್ರಥಮ ರ್ಯಾಂೇಕ್ ಗಳಿಸಿದ್ದಾರೆ. ಇನ್ನುಳಿದಂತೆ ೨೩ ಮಂದಿ ವಿದ್ಯಾರ್ಥಿಗಳು ಶಾಲಾ ಮಟ್ಟದ ರ್ಯಾಂನಕ್‌ಗಳನ್ನು ಗಳಿಸಿದ್ದಾರೆ.

ಸಾಂಘಿಕವಾಗಿ ಪರಸ್ಪರ ಕಷ್ಟಕ್ಕೆ ನೆರವಾಗಿ

0

ದ್ವಿಚಕ್ರ ವಾಹನ ರಿಪೇರಿ ಮಾಡುವವರನ್ನು ಕೀಳುಮಟ್ಟದಿಂದ ಜನರು ನೋಡುತ್ತಿದ್ದು, ಅವರಿಗೂ ಸ್ಥಾನ ಮಾನ ಕಲ್ಪಿಸುವ ಸಲುವಾಗಿ ಸಂಘಗಳನ್ನು ರಚನೆ ಮಾಡಿದೆ. ಎಲ್ಲರೂ ಒಗ್ಗಟ್ಟಾಗಿ ಪರಸ್ಪರ ಸಹಕಾರ ನೀಡುತ್ತಾ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾ ಆರ್ಥಿಕವಾಗಿ ಬೆಳೆಯಬೇಕು ಎಂದು ದ್ವಿಚಕ್ರವಾಹನಗಳ ರಿಪೇರಿಗಾರರ ಸಂಘದ ರಾಜ್ಯಾಧ್ಯಕ್ಷ ಪ್ರಸನ್ನಕುಮಾರ್ ತಿಳಿಸಿದರು.
ನಗರದ ವಿಜಯಲಕ್ಷೀ ಸರ್ಕಲ್ ಬಳಿಯಿರುವ ಕೆ.ಜಿ.ಎನ್ ಫಂಕ್ಷನ್ ಹಾಲ್‌ನಲ್ಲಿ ಸಿಲ್ಕ್ ಸಿಟಿ ದ್ವಿಚಕ್ರ ವಾಹನಗಳ ರಿಪೇರಿಗಾರರ ಸಂಘದ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದ್ವಿಚಕ್ರ ವಾಹನ ರಿಪೇರಿ ಮಾಡುವವರಿಗೆ ಯಾವುದೇ ರೀತಿಯ ಸಮಸ್ಯೆ ಬಂದರೂ ಸಹ ಸಂಘದ ಅಧ್ಯಕ್ಷ, ಉಪಾಧ್ಯಕ್ಷರನ್ನು ಸಂಪರ್ಕಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಹಾಗೂ ಇತರರ ಸಮಸ್ಯೆಗಳಿಗೆ ಸ್ವಂದನೆ ನೀಡಿ. ತಂತ್ರಜ್ಞಾನ ಬದಲಾದಂತೆಲ್ಲಾ ವಿವಿಧ ರೀತಿಯ ದ್ವಿಚಕ್ರವಾಹನಗಳು ಬರುತ್ತಿದ್ದು, ಮೆಕಾನಿಕ್‌ಗಳಿಗೆ ಅಗತ್ಯವಾದ ತರಬೇತಿಯನ್ನು ಪ್ರತಿ ೧೫ ದಿನಕ್ಕೊಮ್ಮೆ ಬೆಂಗಳೂರಿನಲ್ಲಿ ನೀಡಲಾಗುತ್ತಿದ್ದು ಆಸಕ್ತಿಯಿರುವವರು ಹೆಸರು ನೊಂದಣಿ ಮಾಡಿಕೊಳ್ಳಬಹುದೆಂದು, ತರಬೇತಿಯಲ್ಲಿ ಭಾಗವಹಿಸಿದವರಿಗೆ ಅರ್ಹತಾ ಪತ್ರವನ್ನು ನೀಡಲಾಗುವುದೆಂದು, ಸಂಘ ನೊಂದಣೆ ಮಾಡಿಕೊಂಡ ಮೇಲೆ ಸರ್ಕಾರದಿಂದ ಸಿಗುವ ಎಲ್ಲ ರೀತಿಯ ಸವಲತ್ತುಗಳನ್ನು ಸಿಗುವಂತೆ ನೋಡಿಕೊಳ್ಳಲಾಗುವುದೆಂದು ತಿಳಿಸಿದರು.

ಶಿಡ್ಲಘಟ್ಟದ ವಿಜಯಲಕ್ಷೀ ಸರ್ಕಲ್ ಬಳಿಯಿರುವ ಕೆ.ಜಿ.ಎನ್ ಫಂಕ್ಷನ್ ಹಾಲ್‌ನಲ್ಲಿ ಸಿಲ್ಕ್ ಸಿಟಿ ದ್ವಿಚಕ್ರ ವಾಹನಗಳ ರಿಪೇರಿಗಾರರ ಸಂಘದ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ದ್ವಿಚಕ್ರವಾಹನಗಳ ರಿಪೇರಿಗಾರರ ಸಂಘದ ರಾಜ್ಯಾಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿದರು. ಸಿಲ್ಕ್ ಸಿಟಿ ದ್ವಿಚಕ್ರ ವಾಹನಗಳ ರಿಪೇರಿಗಾರರ ಸಂಘದ ತಾಲ್ಲೂಕು ಅಧ್ಯಕ್ಷ ಖಾದರ್ ಪಾಷಾ, ಉಪಾಧ್ಯಕ್ಷ ಮಹದ್ ಸಿಗ್ಬತ್ ಉಲ್ಲಾ, ಗೌರವಾಧ್ಯಕ್ಷ ಅಲ್‌ಹಜ್ ಹಿರ್ಷಾದ್ ಪಾಷ, ಕಾರ್ಯದರ್ಶಿ ಎಚ್‌.ಎಸ್‌.ಬಾಬಾಜಾನ್ ಹಾಜರಿದ್ದರು.

ಸಂಘದ ಸದಸ್ಯರೆಲ್ಲಾ ಒಟ್ಟಾಗಿ ರಿಪೇರಿ ದರಗಳನ್ನು ನಿಗದಿಪಡಿಸಿಕೊಳ್ಳಿ. ಗ್ರಾಹಕರಿಗೆ ಹೊರೆಯಾಗದಂತೆ, ನೀವೂ ಶ್ರಮಕ್ಕೆ ತಕ್ಕ ಹಣವನ್ನು ಪಡೆಯಿರಿ. ಸಂಘದ ಒಗ್ಗಟ್ಟಿದ್ದರೆ ವಿವಿಧ ಅನುಕೂಲಗಳನ್ನು ಪಡೆಯಬಹುದು. ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಕೂಡ ಪಡೆಯಲು ಪ್ರಯತ್ನಿಸಬಹುದು. ಇದರ ಮೂಲಕ ಕೌಟುಂಬಿಕ ಭದ್ರತೆಯೂ ಸಿಗುತ್ತದೆ ಎಂದು ಹೇಳಿದರು.
ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ನ್ಯಾಯಾಲಯದ ಬಳಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಯಲಿಯನ್ನು ಸಿಲ್ಕ್ ಸಿಟಿ ದ್ವಿಚಕ್ರ ವಾಹನಗಳ ರಿಪೇರಿಗಾರರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದು, ನಗರ ಪೊಲೀಸ್ ಠಾಣೆ ಸಬ್‌ ಇನ್ಸ್‌ಪೆಕ್ಟರ್‌ ನವೀನ್ ಚಾಲನೆ ನೀಡಿದರು.
ಸಿಲ್ಕ್ ಸಿಟಿ ದ್ವಿಚಕ್ರ ವಾಹನಗಳ ರಿಪೇರಿಗಾರರ ಸಂಘದ ತಾಲ್ಲೂಕು ಅಧ್ಯಕ್ಷ ಖಾದರ್ ಪಾಷಾ, ಉಪಾಧ್ಯಕ್ಷ ಮಹದ್ ಸಿಗ್ಬತ್ ಉಲ್ಲಾ, ಗೌರವಾಧ್ಯಕ್ಷ ಅಲ್‌ಹಜ್ ಹಿರ್ಷಾದ್ ಪಾಷ, ಕಾರ್ಯದರ್ಶಿ ಎಚ್‌.ಎಸ್‌.ಬಾಬಾಜಾನ್, ಖಜಾಂಚಿ ನವಾಜ್‌ಪಾಷ, ಕಾರ್ಮಿಕ ನಿರೀಕ್ಷರ ವಿಶ್ವನಾಥ್, ಮುನ್ನಾ, ಸುಬ್ರಮಣಿ, ನಯಾಜ್‌ಪಾಷ, ಎಸ್‌.ಎನ್‌.ನಯಾಜ್‌ಪಾಷ, ಬಾಬು, ಶಮೀವುಲ್ಲಾ, ಏಜಾಜ್‌ ಅಹಮದ್‌, ಅಮರನಾಥ್‌, ರಹಮತ್ತುಲ್ಲ, ಮುನೇಗೌಡ, ಅನ್ಸರ್‌ಪಾಷ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಕಂಚಿನ ಪುತ್ಥಳಿ ಅನಾವರಣ ಸಮಾರಂಭ

0

ಶಿಡ್ಲಘಟ್ಟದಿಂದ ರಾಜ್ಯ ರೈತ ಸಂಘ ಹಾಗು ಹಸಿರುಸೇನೆಯ ನೂರಕ್ಕೂ ಹೆಚ್ಚು ಪದಾಧಿಕಾರಿಗಳು ಸೋಮವಾರ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಆಯೋಜಿಸಲಾಗಿರುವ ರೈತ ನಾಯಕ ದಿವಂಗತ ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರ ಕಂಚಿನ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳಿದರು.

ಶ್ರೀರಾಮಸೇನೆ ಹಾಗು ಹಿಂದೂ ಜಾಗರಣ ವೇದಿಕೆ ಪದಾಧಿಕಾರಿಗಳಿಂದ ಮನವಿ

0

ಸಾಮಾಜಿಕ ಜಾಲ ತಾಣಗಳಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸುವಂತಹ ವಿಡಿಯೋ ಸಂಭಾಷಣೆಗಳನ್ನು ಹಾಕುವ ಮೂಲಕ ರಾಜ್ಯದಲ್ಲಿ ಕೋಮು ಸೌಹಾರ್ಧ ಕೆಡಿಸುತ್ತಿರುವ ದೇಶದ್ರೋಹಿಗಳನ್ನು ಉಗ್ರವಾಗಿ ಶಿಕ್ಷಿಸಲು ಸರ್ಕಾರ ಮುಂದಾಗಬೇಕು ಎಂದು ಹಿಂದೂ ಜಾಗರಣ ವೇದಿಕೆ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್ ಒತ್ತಾಯಿಸಿದರು.
ಸಾಮಾಜಿಕ ಜಾಲತಾಣಗಳಾದ ವಾಟ್ಸಪ್ ಹಾಗು ಫೇಸ್‌ಬುಕ್‌ನಲ್ಲಿ ಹಿಂದೂ ಸಮುದಾಯದ ವಿರುದ್ಧ ಅವಹೇಳನಕಾರಿ ಸಂಭಾಷಣೆಯನ್ನು ದೃಶ್ಯೀಕರಿಸಿ ಹರಿ ಬಿಟ್ಟಿರುವ ತುಮಕೂರು ಜಿಲ್ಲೆಯ ಶಿರಾ ನಗರದ ಸಲ್ಮಾನ್ ಎಂಬ ದೇಶದ್ರೋಹಿಯ ವಿರುದ್ದ ಶ್ರೀರಾಮಸೇನೆ ಹಾಗು ಹಿಂದೂ ಜಾಗರಣ ವೇದಿಕೆ ಸಹಯೋಗದಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿ ತಹಸೀಲ್ದಾರ್ ಗೈರುಹಾಜರಿಯಲ್ಲಿ ಶಿರಸ್ತೇದಾರರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
ಸಾಮಾಜಿಕ ಜಾಲತಾಣಗಳಾದ ವಾಟ್ಸಪ್ ಹಾಗು ಫೇಸ್‌ಬುಕ್ ಗಳಲ್ಲಿ ತುಮಕೂರು ಜಿಲ್ಲೆಯ ಶಿರಾ ನಗರದ ಮುಸ್ಲಿಂ ಯುವಕನಾದ ಸಲ್ಮಾನ್ ಎಂಬುವವನು ಹಿಂದೂಗಳ ವಿರುದ್ಧ ಅದರಲ್ಲಿಯೂ ಮುಖ್ಯವಾಗಿ ಮಹಿಳೆಯರ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿರುವುದಷ್ಟೇ ಅಲ್ಲದೇ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು ಅದು ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದೆ.
ಕೂಡಲೇ ಸರ್ಕಾರ ಇಂತಹ ದೇಶದ್ರೋಹಿಗಳನ್ನು ಬಂದಿಸಿ ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಗೈರುಹಾಜರಿಯಲ್ಲಿ ಶಿರಸ್ತೇದಾರ್ ಮುನಿಕೃಷ್ಣಪ್ಪರಿಗೆ ಮನವಿ ಪತ್ರ ಸಲ್ಲಿಸಿದರು.
ಹಿಂದೂ ಜಾಗರಣ ವೇದಿಕೆಯ ಜಿಲ್ಲಾಧ್ಯಕ್ಷ ಮಂಜುನಾಥ್, ತಾಲ್ಲೂಕು ಸಂಚಾಲಕ ಯೋಗಾನಂದ್, ನಗರಾಧ್ಯಕ್ಷ ಮಹೇಶ್, ಶ್ರೀರಾಮಸೇನೆಯ ಮಂಜುನಾಥ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್, ನಗರಸಭೆ ಸದಸ್ಯ ಎಸ್.ರಾಘವೇಂದ್ರ, ಅಶ್ವತ್ ಮತ್ತಿತರರು ಹಾಜರಿದ್ದರು.

ತಾಲ್ಲೂಕಿಗೆ ವಲಸೆ ಬಂದಿರುವ ಆಂಧ್ರದ ಕುರಿಕಾರರು, ಮೇವು ತಿನ್ನುತ್ತಾ ಜಮೀನನ್ನು ಫಲವತ್ತುಗೊಳಿಸುತ್ತಿವೆ ಕುರಿಗಳು

0

ನೆರೆಯ ಆಂಧ್ರಪ್ರದೇಶದ ಕುರಿಕಾರರು ತಮ್ಮ ಕುರಿಗಳೊಂದಿಗೆ ತಾಲ್ಲೂಕಿಗೆ ವಲಸೆ ಬಂದಿದ್ದಾರೆ. ಕುರಿಗಳು ಉಚಿತವಾಗಿ ಮೇವು ತಿನ್ನುತ್ತಿಲ್ಲ. ಅವು ಇಲ್ಲಿನ ಜಮೀನನ್ನು ಫಲವತ್ತುಗೊಳಿಸುವ ಕಾಯಕದಲ್ಲಿ ತೊಡಗಿವೆ.
ಅನಂತಪುರ ಜಿಲ್ಲೆಯ ಶಿವಣ್ಣ ಮತ್ತು 20 ಮಂದಿ ತಮ್ಮ ಎರಡು ಸಾವಿರ ಕುದುರೆಗಳು, 8 ಕಾವಲು ನಾಯಿಗಳು, ಸಾಮಾನು ಸರಂಜಾಮು ಸಾಗಿಸಲು 20 ಕತ್ತೆಗಳೊಂದಿಗೆ ಹಂಡಿಗನಾಳದ ಬಳಿ ಜಮೀನೊಂದರಲ್ಲಿ ಬೀಡುಬಿಟ್ಟಿದ್ದಾರೆ.
ಅಲ್ಲಿ ಆಂಧ್ರದಲ್ಲಿ ಕುರಿಗಳಿಗೆ ನೀರು, ಮೇವಿನ ಸಮಸ್ಯೆ ಉಂಟಾದಾಗ ಗಡಿ ದಾಟಿ ಬರುತ್ತಾರೆ. ಗಡಿ ಸಮೀಪದ ಗ್ರಾಮಗಳಲ್ಲಿ ಮಾತ್ರವಲ್ಲ, ಸುಮಾರು ಆರು ತಿಂಗಳ ಕಾಲ ಮಳೆ ಬರುವವರೆಗೂ ಕರ್ನಾಟಕದ ಮೂರ್ನಾಕು ಜಿಲ್ಲೆಗಳನ್ನು ಸುತ್ತುತ್ತಾ ಬಂದು ಕುರಿ ಮೇಯಿಸುತ್ತಾರೆ. ಕುರಿಗಳು ಎರಡು ಸಾವಿರ ಸಂಖ್ಯೆಯಲ್ಲಿರುವುದರಿಂದ ಯಾವುದಾದರೂ ಒಂದು ಹಳ್ಳಿಯನ್ನು ಆರಿಸಿಕೊಂಡು, ಜಮೀನಿನ ಒಡೆಯನೊಂದಿಗೆ ಮಾತನಾಡಿ ರಾತ್ರಿ ಹೊತ್ತು ನೆಲೆಸುತ್ತಾರೆ.
ಕುರಿಹಿಂಡುಗಳೊಂದಿಗೆ ಸಾಕು ನಾಯಿಯನ್ನೂ ಕರೆದುಕೊಂಡು ಬಂದಿದ್ದಾರೆ. ಕುರಿಗಳನ್ನು ನಾಯಿಗಳೇ ನಿಯಂತ್ರಿಸುತ್ತಿವೆ. ಬೆಳಿಗ್ಗೆಯಿಂದ ಸಂಜೆವರೆಗೆ ಕುರಿಗಾರರು ಒಟ್ಟಾಗಿ ತಮ್ಮ ಕುರಿಗಳನ್ನು ಒಂದೆಡೆ ಮೇಯಿಸಿಕೊಂಡಿರುತ್ತಾರೆ. ಮರಿಗಳಿಗಾಗಿಯೇ ಬಲೆಯ ರೀತಿಯಲ್ಲಿ ಕೂಡಿಡಲು ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಈ ಕುರಿಕಾರರು ರೈತನ ಜಮೀನಲ್ಲಿ ರಾತ್ರಿ ಹೊತ್ತು ಕುರಿಗಳನ್ನು ಮಂದೆ ಹಾಕುತ್ತಾರೆ. ನೂರಾರು ಕುರಿಗಳು ಹಾಕುವ ಹಿಕ್ಕೆಯಿಂದ ಜಮೀನು ಫಲವತ್ತಾಗುತ್ತದೆ. ಅದಕ್ಕೆ ಬದಲಾಗಿ ರೈತ ಕುರಿಕಾರರಿಗೆ ಅಂದು ರಾತ್ರಿ ಹಾಗೂ ಮರುದಿನ ಬೆಳಿಗ್ಗೆ ಊಟಕ್ಕೆ ಅಕ್ಕಿಯನ್ನು ನೀಡುತ್ತಾರೆ. ಊಟದ ಜೊತೆಗೆ ಒಂದಿಷ್ಟು ಹಣ ನೀಡಿ ಮಂದೆ ಹಾಕಿಸುವುದುಂಟು.
‘ನಾವು ನಾಲ್ಕು ತಂಡಗಳಾಗಿ ಒಟ್ಟು 20 ಮಂದಿ ಬಂದಿದ್ದೇವೆ. ಆಂಧ್ರದ ಅನಂತಪುರ ಜಿಲ್ಲೆಯಿಂದ ಹೊರಟು ಎರಡು ತಿಂಗಳುಗಳಾದವು. ಅನುಪಮ್‌ಪಲ್ಲಿ, ಪಾಳ್ಯ, ಒಡೇರಹಳ್ಳಿ, ಮಧುಗಿರಿ, ಶೆಟ್ಟಹಳ್ಳಿ, ಯಾದಗಿರಿ, ಕೋಡ್ಲಳ್ಳಿ, ಲಂಕೇನಹಳ್ಳಿ, ಆರೂಡಿ, ಉರಗುಂಟೆ, ಘಾಟಿ, ಚಿಕ್ಕಬಳ್ಳಾಪುರ, ಜಾತವಾರಗಳಲ್ಲಿ ತಂಗಿದ್ದು ಈಗ ಹಂಡಿಗನಾಳದಲ್ಲಿ ಮಂದೆ ಹಾಕಿದ್ದೇವೆ. ಜಮೀನಿನವರು ನಮಗೆ 5 ಕೆ.ಜಿ ಅಕ್ಕಿ ಮತ್ತು 500 ರೂಗಳನ್ನು ಕೊಡುತ್ತಾರೆ. ಇಲ್ಲಿಂದ ಮುಂದೆ ವಿಜಯಪುರ, ದೇವನಹಳ್ಳಿ, ದೊಡ್ಡಬಳ್ಳಾಪುರ ಹೀಗೆ ಸಾಗುತ್ತೇವೆ. ಮಕ್ಕಳನ್ನು ಊರಲ್ಲೇ ಬಿಟ್ಟು ಬರುತ್ತೇವೆ. ಆರು ತಿಂಗಳು ನಮ್ಮೂರಲ್ಲಿದ್ದರೆ, ಆರು ತಿಂಗಳು ಅಲೆಮಾರಿಗಳಾಗಿರುತ್ತೇವೆ’ ಎಂದು ಕುರಿ ಮಂದೆಯೊಂದಿಗೆ ಬಂದಿರುವ ಶಿವಣ್ಣ.
‘ಆಂಧ್ರಪ್ರದೇಶದ ಕುರಿಗಳು ಬಂದರೆ ಇಲ್ಲಿನ ರೈತರು ಮುಗಿಬಿದ್ದು ತಮ್ಮ ಜಮೀನಲ್ಲಿ ಮಂದೆ ಹಾಕಿಸುತ್ತಾರೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಬರುವ ಕುರಿಗಳು ಈ ಬಾರಿ ಬೇಗ ಬಂದಿವೆ, ತಮ್ಮ ರಾಜ್ಯದಲ್ಲಿ ಕುಡಿಯುವ ನೀರು ಹಾಗೂ ಮೇವಿನ ಪರಿಸ್ಥಿತಿ ಸುಧಾರಿಸುವವರೆಗೆ ಉಳಿದುಕೊಳ್ಳುತ್ತವೆ. ಸಾಕಷ್ಟು ಕುರಿಗಳು ಮರಿ ಹಾಕುತ್ತವೆ. ಸಿಕ್ಕಿದ್ದನ್ನು ತಿಂದು ಕೊಬ್ಬುತ್ತವೆ. ಕುರಿಕಾರರಿಗೆ ಒಳ್ಳೆ ಲಾಭ ತರುತ್ತವೆ. ನಮ್ಮ ತೋಟಗಳನ್ನು ಫಲವತ್ತುಗೊಳಿಸಿ ಹೋಗುತ್ತವೆ’ ಎನ್ನುತ್ತಾರೆ ರೈತ ಜಯರಾಮ್‌.
‘ಇವರು ಪ್ರತಿ ವರ್ಷ ಬರುವುದರಿಂದ ಇಲ್ಲಿನ ಗ್ರಾಮೀಣ ಜನರಿಗೆ ಪರಿಚಿತರಾಗಿರುತ್ತಾರೆ. ಭಾಷೆಯ ತೊಡಕು ಇಲ್ಲದ ಕಾರಣ ಇಲ್ಲಿನ ಜನರೊಂದಿಗೆ ಬೆರೆಯುತ್ತಾರೆ. 500 ಕುರಿಗಳ ಹಿಂಡು ಒಂದು ರಾತ್ರಿ ಒಂದು ತೋಟದಲ್ಲಿ ಬೀಡು ಬಿಟ್ಟರೆ ಕನಿಷ್ಠ ಒಂದು ಎತ್ತಿನ ಗಾಡಿಯಷ್ಟು ಕುರಿ ಹಿಕ್ಕೆ ತೋಟಕ್ಕೆ ಬೀಳಲಿದೆ’ ಎಂದು ಅವರು ಹೇಳಿದರು.

ಮಹಿಳೆಯರು ವಿದ್ಯೆ ಕಲಿತು, ಕಲಿಸುವ ಕೆಲಸ ಮಾಡಬೇಕು

0

ದೇಶದಲ್ಲಿ ಗಂಡಸರಿಗಿಂತ ಹೆಂಗಸರು ಶೇ.೧೪ ರಷ್ಟು ಸಾಕ್ಷರತೆ ಪ್ರಮಾಣದಲ್ಲಿ ಹಿಂದುಳಿದಿದ್ದಾರೆ. ಗ್ರಾಮದಲ್ಲಿ ಮಹಿಳೆಯರು ವಿದ್ಯೆ ಕಲಿತು ಕಲಿಸುವ ಕೆಲಸವಾಗಬೇಕಿದೆ. ಮಹಿಳೆಯರು ಧಾರವಾಹಿಗಳನ್ನು ನೋಡುವುದು ಬಿಟ್ಟು ಅಕ್ಷರಸ್ಥರಾಗಬೇಕೆಂದು ತುಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಹೇಮಲತ ತಿಳಿಸಿದರು.
ತಾಲ್ಲೂಕಿನ ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಲೋಕ ಶಿಕ್ಷಣ ನಿರ್ದೇಶನಾಲಯ, ರಾಜ್ಯ ಸಾಕ್ಷರತ್ ಮಿಷನ್ ಪ್ರಾಧಿಕಾರ, ಜಿಲ್ಲಾ ಲೋಕ ಶಿಕ್ಷಣ ಸಮಿತಿ, ತಾಲ್ಲೂಕು ಲೋಕ ಶಿಕ್ಷಣ ಸಮಿತಿ ಹಾಗೂ ತುಮ್ಮನಹಳ್ಳಿ ಗ್ರಾಮ ಲೋಕ ಶಿಕ್ಷಣ ಸಮಿತಿ ಇವರ ಸಹಯೋಗದೊಂದಿಗೆ ಮೂರು ದಿನಗಳ ಸ್ವಯಂ ಸೇವಕರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಅನಕ್ಷರತೆ ಮುಕ್ತ ಗ್ರಾಮ ಪಂಚಾಯಿತಿಯನ್ನಾಗಿ ಮಾಡಲು ಸಾಕ್ಷರ ಸ್ವಯಂಸೇವಕರು ಪಣತೊಡಬೇಕು. ಅಕ್ಷರ ಜ್ಞಾನ ಮಹತ್ವದ್ದಾಗಿದೆ ಗ್ರಾಮದಲ್ಲಿ ಪ್ರತಿಯೊಬ್ಬರು ಅಕ್ಷರ ಜ್ಞಾನ ಹೊಂದಿ ಮಕ್ಕಳಿಗೂ ಅಕ್ಷರ ಜ್ಞಾನ ನೀಡುವ ಮೂಲಕ ಪೂರ್ಣ ಸಾಕ್ಷರತೆ ಹೊಂದಿದಾಗ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ. ಕಲಿಸುವರು ಹಾಗೂ ಕಲಿಯುವವರು ಆಸಕ್ತಿ ವಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಆಟಗಳನ್ನು ಆಡಿಸಲಾಯಿತು. ಸ್ವಯಂ ಸೇವಕರಿಗೆ ‘ಬಾಳಿಗೆ ಬೆಳಕು’ ಎಂಬ ಪುಸ್ತಕವನ್ನು ನೀಡಲಾಯಿತು.
ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಮುಂಜುನಾಥ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಕೃಷ್ಣಪ್ಪ, ಕದಿರಪ್ಪ, ಶಿಕ್ಷಕರಾದ ಗಣೇಶ್, ಚಂದ್ರು, ಮಾಲತಿ, ಅನಿತಾ, ರವಿಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಭೂನೀಳಾ ಸಮೇತ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ

0

ತಾಲ್ಲೂಕಿನ ಪುರಾಣ ಪ್ರಸಿದ್ಧ ತಲಕಾಯಲಬೆಟ್ಟದಲ್ಲಿ ಶುಕ್ರವಾರ ಮಾಘ ಮಾಸದ ಹುಣ್ಣಿಮೆಯ ದಿನ ಭೂನೀಳಾ ಸಮೇತ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ವಿಜೃಂಬಣೆಯಿಂದ ನಡೆಯಿತು.
ತಹಶೀಲ್ದಾರ್ ಅಜಿತ್‌ಕುಮಾರ್‌ ರೈ ರಥೋತ್ಸವಕ್ಕೆ ಚಾಲನೆ ನೀಡಿದರು. ಶಾಸಕ ಎಂ.ರಾಜಣ್ಣ, ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.
ಶಿಡ್ಲಘಟ್ಟ ನಗರದ ಉತ್ತರ ದಿಕ್ಕಿನಲ್ಲಿ ನೆಲೆಸಿರುವ ತಲಕಾಯಲಬೆಟ್ಟದ ವೆಂಕಟರಮಣಸ್ವಾಮಿಗೆ ಬ್ರಹ್ಮರಥೋತ್ಸವ ಅಂಗವಾಗಿ ವಿಶೇಷ ಹೂವಿನ ಅಲಂಕಾರ ಮಾಡಿ ಪೂಜೆ ನೆರವೇರಿಸಿ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು.
ಸಪ್ತ ಬೆಟ್ಟಗಳ ಸಾಲಿನಲ್ಲಿ, ಸಸ್ಯ ಸಂಪತ್ತಿನ ರಾಶಿ ನಡುವೆ ನೆಲೆನಿಂತ, ಇತಿಹಾಸದ ಪುಟಗಳಲ್ಲಿ ಅಚ್ಚಳಿಯದಂತ ಛಾಪು ಮೂಡಿಸಿದ ವೆಂಕಟರಮಣಸ್ವಾಮಿಯ ದೇವಾಲಯದಲ್ಲಿ ರಥೋತ್ಸವದ ಅಂಗವಾಗಿ ಕಳೆದ ಒಂದು ವಾರದಿಂದಲೂ ನಾನಾ ಹೋಮ, ಹವನ, ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಒಂದೊಂದು ದಿನವೂ ಒಂದೊಂದು ರೀತಿಯಲ್ಲಿ ದೇವರನ್ನು ಅಲಂಕರಿಸಿ ಪೂಜಿಸಲಾಗಿತ್ತು.
ಬ್ರಹ್ಮರಥೋತ್ಸವದ ಅಂಗವಾಗಿ ಹೂವುಗಳಿಂದ ಅಲಂಕರಿಸಿದ್ದ ರಥದಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ವಿವಿಧ ಕಲಾ ತಂಡಗಳು ಮತ್ತು ವಿವಿಧ ಅಂಗಡಿಗಳ ಸಾಲು ಎಲ್ಲರ ಆಕರ್ಷಣೆಯಾಗಿತ್ತು. ವಿಶೇಷ ಹೂವಿನ ಅಲಂಕಾರ ಮಾಡಿದ್ದ ಬ್ರಹ್ಮರಥೋತ್ಸವದ ತೇರನ್ನು ದೇವಸ್ಥಾನದ ಸುತ್ತಲೂ ಎಳೆದ ಭಕ್ತರು ಬಾಳೆಹಣ್ಣು, ದವನವನ್ನು ತೇರಿನ ಕಳಶಕ್ಕೆ ಎಸೆದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಭಗವಂತನನ್ನು ಕೋರಿಕೊಂಡರು.
ದನಗಳಿಗೆ ಹಬ್ಬುತ್ತಿರುವ ಸಾಂಕ್ರಾಮಿಕ ಖಾಯಿಲೆಗಳಿಂದಾಗಿ ಈ ಬಾರಿ ಜಾನುವಾರುಗಳ ಜಾತ್ರೆ ನಡೆಯಲಿಲ್ಲ. ದೇವಾಲಯದ ಸಮಿತಿ ವತಿಯಿಂದ ಭಕ್ತರಿಗೆಲ್ಲ ಭೋಜನ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು. ಮಹರ್ಷಿ ವಾಲ್ಮೀಕಿಯು ತನ್ನ ಪೂರ್ವಾಶ್ರಮದಲ್ಲಿ ವಾಸಿಸುತ್ತಿದ್ದ ಸ್ಥಳಪುರಾಣವಿದ್ದು, ಅದಕ್ಕೆ ತಳುಕು ಹಾಕಿಕೊಂಡಂತೆ ದೇವಾಲಯದ ಮುಂದೆ ತೆಂಗಿನಕಾಯಿಗಳನ್ನು ಬೆಂಕಿಗೆ ಆಹುತಿ ನೀಡುವ ಸಂಪ್ರದಾಯವಿದೆ. ಆ ಹೊಗೆಯು ದೇವಾಲಯದ ಎತ್ತರಕ್ಕೂ ಆವರಿಸಿತ್ತು.
ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ರಥೋತ್ಸವ ಕಾರ್ಯಕ್ರಮದಲ್ಲಿ ದೇವಾಲಯದ ವ್ಯವಸ್ಥಾಪನ ಸಮಿತಿ, ದೇವಾಲಯದ ಅಭಿವೃದ್ಧಿ ಸಮಿತಿ ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳ ಗ್ರಾಮಸ್ಥರು ದೇವರ ಕಾರ್ಯಗಳಲ್ಲಿ ಕೈ ಜೋಡಿಸಿದ್ದರು.