ಶಾಶ್ವತ ನೀರಾವರಿ ಜಾರಿಗೊಳಿಸಲು ನಡೆಸುತ್ತಿರುವ ಹೋರಾಟಕ್ಕೆ ಅವಿಭಾಜ್ಯ ಜಿಲ್ಲೆಗಳ ಸಾಧಕರಾದ ಇಸ್ಫೋಸಿಸ್ ನಾರಾಯಣಮೂರ್ತಿ, ಭಾರತರತ್ನ ಸಿ.ಎನ್.ಆರ್.ರಾವ್, ನಿವೃತ್ತ ನ್ಯಾಯಾಧೀಶರಾದ ನಾಗಮೋಹನದಾಸ್, ನಿವೃತ್ತ ಲೋಕಾಯುಕ್ತ ಅಧಿಕಾರಿ ವೆಂಕಟಾಚಲಯ್ಯ ಮುಂತಾದವರನ್ನು ಕರೆತರಲು ಪ್ರಯತ್ನಿಸಿದ್ದೇವೆ. ಆದರೆ ಪಟ್ಟಬದ್ಧ ಹಿತಾಸಕ್ತಿಗಳ ಒತ್ತಡದಿಂದಾಗಿ ನೀರಾವರಿ ವಿಚಾರವಾಗಿ ಈ ಮಹನೀಯರು ಎಲ್ಲೂ ಪ್ರಸ್ತಾಪ ಮಾಡಿಲ್ಲ ಎಂದು ಮಾನವ ಹಕ್ಕುಗಳ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಡಾ.ಸಮೇತನಹಳ್ಳಿ ಲಕ್ಷ್ಮಣಸಿಂಗ್ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಮೂಲಭೂತ ಸಮಸ್ಯೆಗಳ ಬಗ್ಗೆ ಅದರಲ್ಲೂ ನೀರಿನ ವಿಚಾರವಾಗಿ ನಮ್ಮ ಹೋರಾಟ ನಿರಂತರವಾಗಿದೆ. ಮಾನವ ಹಕ್ಕುಗಳ ಜಾಗೃತಿ ಸಮಿತಿ ಶಿಡ್ಲಘಟ್ಟ ತಾಲ್ಲೂಕು ಸಮಿತಿಯನ್ನು ನೂತನವಾಗಿ ರಚಿಸಲಾಗಿದೆ. ತಾಲ್ಲೂಕು ಸಮಿತಿಯ ಪ್ರಥಮ ತಾಲ್ಲೂಕು ಸಮಾವೇಶದ ಅಂಗವಾಗಿ ಕಾನೂನು ಅರಿವು ವಿಚಾರ ಸಕಿರಣ, ಧರ್ಮ ಮತ್ತು ವೈಚಾರಿಕತೆ ಹಾಗೂ ಇತ್ತೀಚಿನ ವಿದ್ಯಮಾನಗಳ ಒಂದು ನೋಟ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಾನವ ಹಕ್ಕುಗಳ ಜಾಗೃತಿ ಸಮಿತಿಯು ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ಅದನ್ನು ತಡೆಯುವ ಕ್ರಮಗಳ ಬಗ್ಗೆ ಜನಜಾಗೃತಿ ಕಾರ್ಯಕ್ರಮ ಇದಾಗಿದೆ. ಸ್ವಾತಂತ್ರ್ಯ, ಸಮಾನತೆ, ಶೋಷಣೆ ವಿರುದ್ಧ ದನಿ, ಧಾರ್ಮಿಕ ಸ್ವಾತಂತ್ರ್ಯ, ಸಮಾಜ ಸೇವೆ ಮುಂತಾದ ವಿಷಯಗಳ ಬಗ್ಗೆ ನಮ್ಮ ಹಕ್ಕುಗಳು ಮತ್ತು ಸೇವೆಗಳ ಕುರಿತಂತೆ ಜನರಿಗೆ ವಿಚಾರ ಮುಟ್ಟಿಸಲಾಗುವುದು ಎಂದು ವಿವರಿಸಿದರು.
ಮಾನವ ಹಕ್ಕುಗಳ ಜಾಗೃತಿ ಸಮಿತಿ ಜಿಲ್ಲಾಧ್ಯಕ್ಷ ಜಾತವಾರ ರಾಮಕೃಷ್ಣಪ್ಪ ಮಾತನಾಡಿ, ಮಹಿಳಾ, ರೈತ, ಕಾರ್ಮಿಕ, ಯುವ ಘಟಕಗಳು ನಮ್ಮ ಸಮಿತಿಯಲ್ಲಿದ್ದು, ಜಿಲ್ಲೆಯಾದ್ಯಂತ ಮಾನವ ಹಕ್ಕುಗಳ ಉಲ್ಲಂಘನೆಯಾದಲ್ಲಿ ಕೂಡಲೇ ಸ್ಪಂದಿಸುತ್ತಿದ್ದೇವೆ. ನಶಿಸುತ್ತಿರುವ ಜಿಲ್ಲೆಯ ವಿಶಿಷ್ಠ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಹೇಳಿದರು.
ಮಾನವ ಹಕ್ಕುಗಳ ಜಾಗೃತಿ ಸಮಿತಿ ಸಾಂಸ್ಕೃತಿಕ ಘಟಕದ ಅಧ್ಯಕ್ಷ ಜನಘಟ್ಟ ಕೃಷ್ಣಮೂರ್ತಿ, ಮಹಿಳಾ ರಾಜ್ಯ ಉಪಾಧ್ಯಕ್ಷೆ ಬಿ.ಸುನೀತಾ, ತಾಲ್ಲೂಕು ಅಧ್ಯಕ್ಷ ಎಂ.ಬಿ.ಬೈರಾರೆಡ್ಡಿ, ಉಪಾಧ್ಯಕ್ಷ ಚಂದ್ರು, ಪ್ರಧಾನ ಕಾರ್ಯದರ್ಶಿ ಸುರೇಶ್, ರಾಜಶೇಖರಗೌಡ, ಆಶಾಗೌಡ, ಮಲ್ಲೇಶ್, ಜಿಲ್ಲಾ ಗೌರವಾಧ್ಯಕ್ಷ ಆರ್.ಎಚ್.ನಾರಾಯಣಸ್ವಾಮಿ, ದೇವರಾಜ್, ತಾಲ್ಲೂಕು ಮಹಿಳಾ ಅಧ್ಯಕ್ಷೆ ಡಿ.ಎಂ.ಸೌಭಾಗ್ಯಮ್ಮ ಹಾಜರಿದ್ದರು.
ಪಟ್ಟಬದ್ಧ ಹಿತಾಸಕ್ತಿಗಳ ಒತ್ತಡದಿಂದ ನೀರಾವರಿ ಹೋರಾಟಕ್ಕೆ ಬಾರದ ಜಿಲ್ಲೆಯ ಸಾಧಕರು
ಶಿಡ್ಲಘಟ್ಟದಲ್ಲಿ ರೇಷ್ಮೆಗೂಡು ಗುಣಮಟ್ಟ ಪರೀಕ್ಷಾ ಕೇಂದ್ರಕ್ಕೆ ಸಿದ್ದತೆ;ರೇಷ್ಮೆಗೂಡಿನ ಗುಣಮಟ್ಟದ ಗ್ರೇಡ್ ನಿರ್ಧಾರ
ನಗರದ ರೇಷ್ಮೆಗೂಡು ಮಾರುಕಟ್ಟೆಯ ಆವರಣದಲ್ಲಿ ರೇಷ್ಮೆಗೂಡಿನ ಗುಣಮಟ್ಟ(ಸಾಂಧ್ರತೆ) ಪರೀಕ್ಷಾ ಕೇಂದ್ರ ಸ್ಥಾಪನೆಗೆ ಸಕಲ ಸಿದ್ದತೆಗಳು ನಡೆದಿದ್ದು ಶೀಘ್ರದಲ್ಲಿಯೆ ಕೇಂದ್ರ ಕಾರ್ಯಾರಂಭ ಮಾಡಲಿದೆ.
ರೇಷ್ಮೆಗೂಡಿನ ಗುಣಮಟ್ಟ ಪರೀಕ್ಷಾ ಕೇಂದ್ರದಲ್ಲಿ ರೇಷ್ಮೆಗೂಡಿನ ಗುಣಮಟ್ಟವನ್ನು ವೈಜ್ಞಾನಿಕವಾಗಿ, ನಿಖರವಾಗಿ ನಿರ್ಧರಿಸಿ ಗ್ರೇಡ್(ಅಂಕಗಳು)ಗಳನ್ನು ನೀಡಲಾಗುವುದು. ಇದರಿಂದ ರೀಲರುಗಳು ಗುಣಮಟ್ಟದ ಗ್ರೇಡ್‌ನ ಆಧಾರದಲ್ಲಿ ರೇಷ್ಮೆಗೂಡಿಗೆ ಬೆಲೆ ನಿಗಪಡಿಸಿ ಖರೀಸಬಹುದಾಗಿದೆ.
ಮುಂದಿನ ದಿನಗಳಲ್ಲಿ ಆನ್‌ಲೈನ್ ಮೂಲಕ ರೇಷ್ಮೆಗೂಡನ್ನು ಖರೀದಿಸುವ ವ್ಯವಸ್ಥೆ ಅಳವಡಿಸಿಕೊಳ್ಳಲು ಇದು ಸಹಕಾರಿಯಾಗಲಿದೆ.
ಮುಂದಿನ ದಿನಗಳಲ್ಲಿ ರೇಷ್ಮೆಗೂಡಿನ ಆನ್‌ಲೈನ್ ಖರೀದಿ ಹಾಗೂ ರೇಷ್ಮೆ ಬೆಳೆಗಾರರಿಗೆ ಆನ್‌ಲೈನ್‌ನಲ್ಲಿಯೆ ಹಣ ಪಾವತಿ ಮಾಡುವ ಉದ್ದೇಶದಿಂದಲೆ ಈ ರೇಷ್ಮೆಗೂಡಿನ ಗುಣಮಟ್ಟ ಪರೀಕ್ಷಾ ಕೇಂದ್ರವನ್ನು ಆರಂಭಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೇಷ್ಮೆಗೂಡಿಗೆ ಗುಣಮಟ್ಟದ ಆಧಾರದ ಮೇಲೆ ವೈಜ್ಞಾನಿಕ ಬೆಲೆ ನಿಗಪಡಿಸುವಂತೆ ರೇಷ್ಮೆ ಬೆಳೆಗಾರರು ನಡೆಸಿದ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ರಚಿಸಿದ್ದ ಬಸವರಾಜು ನೇತೃತ್ವದ ತಜ್ಞರ ಸಮಿತಿಯ ಶಿಪಾರಸ್ಸಿನಂತೆ ರೇಷ್ಮೆಗೂಡಿನ ಗುಣಮಟ್ಟ ಪರೀಕ್ಷಾ ಕೇಂದ್ರ ತಲೆ ಎತ್ತುತ್ತಿದೆ.
ಬೆಂಗಳೂರು ಕೇಂದ್ರ ಕಚೇರಿ ವ್ಯಾಪ್ತಿಯ ತಲಘಟ್ಟಪುರದ ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ನಗರದಲ್ಲಿ ಆರಂಭವಾಗುವ ರೇಷ್ಮೆಗೂಡು ಗುಣಮಟ್ಟ ಪರೀಕ್ಷಾ ಕೇಂದ್ರದ ನಿರ್ವಹಣೆ ನೋಡಿಕೊಳ್ಳಲಿದೆ.
ಗುಣಮಟ್ಟ ನಿರ್ಧಾರ ಹೇಗೆ ?
ಮಾರುಕಟ್ಟೆಗೆ ಬರುವ ಪ್ರತಿ ಲಾಟಿನಿಂದಲೂ ಒಂದು ಕೆಜಿಯಷ್ಟು ರೇಷ್ಮೆಗೂಡನ್ನು ತೆಗೆದುಕೊಂಡು ಅದರಲ್ಲಿ ಮೊದಲಿಗೆ ಕಳಪೆ ಗುಣಮಟ್ಟದ ಗೂಡಿನ ಶೇಕಡಾವಾರು ಪ್ರಮಾಣವನ್ನು ನಿರ್ಧರಿಸಲಾಗುತ್ತದೆ. ನಂತರ ಕಳಪೆ ಗೂಡನ್ನು ಪ್ರತ್ಯೇಕಿಸಲಾಗುತ್ತದೆ.
ಉಳಿದ ಗುಣಮಟ್ಟದ ಗೂಡನ್ನು ತೂಕ ಹಾಕಿ ಒಂದು ಕೆಜಿಗೆ ಎಷ್ಟು ರೇಷ್ಮೆಗೂಡು ಬರುತ್ತದೆ ಎಂಬುದನ್ನು ಲೆಕ್ಕ ಹಾಕಲಾಗುತ್ತದೆ. ಆ ನಂತರ ಅದರಲ್ಲಿ ಕೇವಲ ೨೦ ಗೂಡನ್ನು ಮಾತ್ರ ತೆಗೆದುಕೊಂಡು ಅವುಗಳನ್ನು ತೂಕ ಹಾಕಲಾಗುತ್ತದೆ.
ಆ ನಂತರ ಆ ಇಪ್ಪತ್ತು ರೇಷ್ಮೆಗೂಡುಗಳನ್ನು ಕತ್ತರಿಸಿ ಕೋಶ(ಪ್ಯೂಪಾ ಹುಳ)ವನ್ನು ಹೊರ ಹಾಕಿ ಬರೀ ರೇಷ್ಮೆಗೂಡನ್ನು ಮಾತ್ರ ತೂಕ ಹಾಕಲಾಗುತ್ತದೆ. ಅದುವೆ ರೇಷ್ಮೆಗೂಡಿನ ಸಾಂಧ್ರತೆ(ಗುಣಮಟ್ಟ)ಯಾಗಿದ್ದು ಅದರ ಮೇಲೆ ಗುಣಮಟ್ಟದ ಗ್ರೇಡ್‌ಗಳನ್ನು ನೀಡಲಾಗುತ್ತದೆ.
ಪ್ರತಿ ಲಾಟಿಗೂ ಗ್ರೇಡ್: ಮಾರುಕಟ್ಟೆಗೆ ಬರುವ ಪ್ರತಿ ಲಾಟಿನ ರೇಷ್ಮೆಗೂಡನ್ನು ಈ ರೀತಿಯಾಗಿ ಪರೀಕ್ಷೆಗೆ ಒಳಪಡಿಸಿ ಆ ಗೂಡಿನ ಗುಣಮಟ್ಟದ ಆಧಾರದ ಮೇಲೆ ಎ, ಬಿ, ಸಿ ಎಂದು ಗ್ರೇಡ್‌ಗಳನ್ನು ನೀಡಲಾಗುತ್ತದೆ. ಗ್ರೇಡ್ ನಮೂದಿಸಿದ ಸ್ಲಿಪ್(ಟೋಕನ್) ರೈತರಿಗೆ ನೀಡಲಾಗುತ್ತದೆ.
ಆಯಾ ಗೂಡಿನ ಜಾಲರಿಯಲ್ಲಿ ರೇಷ್ಮೆಗೂಡು ಲಾಟಿನ ಸಂಖ್ಯೆ, ಜಾಲರಿ ಸಂಖ್ಯೆ, ರೇಷ್ಮೆ ಬೆಳೆಗಾರರ ಊರು, ಹೆಸರು ಇತ್ಯಾದಿ ವಿವರಗಳೊಂದಿಗೆ ಆ ರೇಷ್ಮೆಗೂಡಿನ ಗುಣಮಟ್ಟದ ಗ್ರೇಡ್‌ನ ಮಾಹಿತಿ ಸಹ ರೀಲರುಗಳಿಗೆ ಲಭ್ಯವಾಗಲಿದೆ.
ಈ ಎಲ್ಲ ವಿವರಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲಿದ್ದು ರೇಷ್ಮೆ ಗೂಡು ಮಾರುಕಟ್ಟೆಗೆ ಬರುವ ಪ್ರತಿ ಲಾಟಿನ ಗೂಡಿನ ಗುಣಮಟ್ಟದ ಗ್ರೇಡ್ ಸೇರಿದಂತೆ ಎಲ್ಲ ವಿವರಗಳು ಆನ್‌ಲೈನ್‌ನಲ್ಲಿಯೆ ಲಭ್ಯವಾಗಲಿದೆ.
ರೀಲರುಗಳು ಎಲ್ಲಿಯೋ ಕುಳಿತು ಆನ್‌ಲೈನ್‌ನಲ್ಲಿಯೆ ಗ್ರೇಡ್‌ನ ಆಧಾರದಲ್ಲಿ ಗೂಡಿನ ಬೆಲೆ ನಿಗಪಡಿಸಿ ಹರಾಜು ಬಿಡ್ ನಮೂದಿಸಬಹುದಾಗಿದೆ. ಹಣವನ್ನು ಸಹ ಆನ್‌ಲೈನ್‌ನಲ್ಲಿಯೆ ಪಾವತಿಸಲೂಬಹುದು.
ಆನ್‌ಲೈನ್ ಖರೀದಿ, ಪಾವತಿ: ಈಗಾಗಲೆ ತಾಲ್ಲೂಕಿನ ಎಲ್ಲ ರೇಷ್ಮೆ ಬೆಳೆಗಾರರ ಹೆಸರು, ವಿಳಾಸ, ಬ್ಯಾಂಕ್ ಖಾತೆ ಸಂಖ್ಯೆ, ಪಾಸ್ ಪುಸ್ತಕದ ವಿವರ, ಆಧಾರ್ ಕಾರ್ಡಿನ ಸಂಖ್ಯೆ, ರೇಷ್ಮೆಗೂಡು ಬೆಳೆಯುವ ಎಲ್ಲ ವಿವರಗಳನ್ನು ಸಂಗ್ರಹಿಸಲಾಗಿದೆ. ಹಾಗೆಯೆ ರೀಲರುಗಳ ಮಾಹಿತಿಯನ್ನು ಸಹ ಸಂಗ್ರಹಿಸಿ ದಾಖಲಿಸಿಕೊಳ್ಳಲಾಗಿದೆ.
ಈಗಾಗಲೆ ಇ – ವ್ಯವಸ್ಥೆಯ ಮೂಲಕ ಜಾಲರಿಗಳ ಮೀಸಲು, ಗೂಡಿನ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು ಇದೀಗ ಗುಣಮಟ್ಟದ ಪರೀಕ್ಷಾ ಕೇಂದ್ರವನ್ನು ಆರಂಭಿಸಿ ಗೂಡಿನ ಗುಣಮಟ್ಟವನ್ನು ವೈಜ್ಞಾನಿಕವಾಗಿ ನಿರ್ಧರಿಸಲಾಗುವುದು.ಅದರ ಆಧಾರದಲ್ಲಿ ಆನ್ ಲೈನ್ ಖರೀ ಹಾಗೂ ಆನ್‌ಲೈನ್ ಪಾವತಿಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು.
ರಾಜ್ಯದಲ್ಲಿ ೫೮ ರೇಷ್ಮೆಗೂಡು ಮಾರುಕಟ್ಟೆಗಳಿವೆ. ರೇಷ್ಮೆಗೂಡಿನ ಗುಣಮಟ್ಟ ಪರೀಕ್ಷಾ ಕೇಂದ್ರವನ್ನು ಮೊದಲಿಗೆ ದೇಶದಲ್ಲಿ ಅತಿ ಹೆಚ್ಚು ರೇಷ್ಮೆಗೂಡು ವಹಿವಾಟು ನಡೆಯುವ ಶಿಡ್ಲಘಟ್ಟದಲ್ಲಿ ಆರಂಭಿಸಲಾಗುವುದು, ಜತೆಗೆ ಅತಿ ಹೆಚ್ಚು ವಹಿವಾಟು ನಡೆಯುವ ಎರಡನೇ ಸ್ಥಾನದಲ್ಲಿರುವ ರಾಮನಗರ ಹಾಗೂ ೩ನೇ ಸ್ಥಾನದಲ್ಲಿರುವ ಕೊಳ್ಳೆಗಾಲದಲ್ಲೂ ಆರಂಭಿಸಲಾಗುವುದು.
ನಂತರದ ಹಂತದಲ್ಲಿ ಹಂತ ಹಂತವಾಗಿ ರಾಜ್ಯದ ಇತರೆ ಪ್ರಮುಖ ಮಾರುಕಟ್ಟೆಗಳಾದ ಕೋಲಾರ, ದೇವನಹಳ್ಳಿ ತಾಲೂಕಿನ ವಿಜಯಪುರ, ಕನಕಪುರ, ಚನ್ನಪಟ್ಟಣ, ಹಾಸನ, ಜೇವರ್ಗಿ, ತುಮಕೂರು ರೇಷ್ಮೆಗೂಡು ಮಾರುಕಟ್ಟೆಗಳಲ್ಲಿ ರೇಷ್ಮೆಗೂಡು ಗುಣಮಟ್ಟ ಪರೀಕ್ಷಾ ಕೇಂದ್ರಗಳನ್ನು ಆರಂಭಿಸಲಾಗುವುದು.
ರೈತ ಸಂಘದ ಸದಸ್ಯರು ಮದ್ದೂರು ಕಾರ್ಯಕ್ರಮಕ್ಕೆ
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಫೆಬ್ರುವರಿ 13 ರ ಸೋಮವಾರದಂದು ರೈತ ನಾಯಕ ದಿವಂಗತ ಫ್ರೊ.ಎಂ.ಡಿ.ನಂಜುಂಡಸ್ವಾಮಿಯವರ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸುತ್ತಿದ್ದು, ಅದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತಾಲ್ಲೂಕಿನ ರೈತರು ಹೋಗಲು ತಾಲ್ಲೂಕು ರೈತ ಸಂಘ(ಪುಟ್ಟಣ್ಣಯ್ಯ ಬಣ)ದ ಸದಸ್ಯರು ಗುರುವಾರ ತೀರ್ಮಾನಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿದ ತಾಲ್ಲೂಕು ರೈತ ಸಂಘದ ಸದಸ್ಯರು, ಫ್ರೊ.ಎಂ.ಡಿ.ಎನ್ ರೈತ ಚೈತನ್ಯ ಕೇಂದ್ರ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಹಸಿರು ಶಾಲಿನ ಹರಿಕಾರ ಫ್ರೊ.ಎಂ.ಡಿ.ನಂಜುಂಡಸ್ವಾಮಿಯವರ 81ನೇ ಹುಟ್ಟು ಹಬ್ಬದ ಪ್ರಯುಕ್ತ ಅವರ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಲಿದೆ. ರೈತರ ಹೋರಾಟಕ್ಕೆ ಶಕ್ತಿ ತುಂಬಲು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ತಾಲ್ಲೂಕು ಮತ್ತು ಜಿಲ್ಲೆಯಿಂದ ತೆರಳಬೇಕು ಎಂದು ಸಭೆಯಲ್ಲಿ ತೀರ್ಮಾನಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ, ಯಾಕೂಬ್‌ಷರೀಫ್, ರವಿಪ್ರಕಾಶ್, ಪ್ರತೀಶ್, ನಾರಾಯಣಸ್ವಾಮಿ, ಪಾರ್ವತಮ್ಮ, ಸುಶೀಲಮ್ಮ, ಗೋವಿಂದಪ್ಪ ಮತ್ತಿತರರು ಹಾಜರಿದ್ದರು.
ರೇಷ್ಮೆ ಗೂಡಿನ ಮಾರುಕಟ್ಟೆಯ ಸಮಿತಿಯ ಸದಸ್ಯರು
ಶಿಡ್ಲಘಟ್ಟದ ಮಸ್ಜಿದ್ ಆಮೀರಿ ಕಲೀಮಿಯ ಕಾರ್ಯದರ್ಶಿ ಅಲ್ತಾಫ್ ಹುಸೇನ್ ಅವರನ್ನು ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಿರುವುದಾಗಿ ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತರು ಹಾಗೂ ರೇಷ್ಮೆ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಉತ್ತಮ ಗುಣಮಟ್ಟದ ಹಾಲು ಉತ್ಪಾದನೆಗೆ ಆದ್ಯತೆ ನೀಡಿ
ಹಾಲು ಉತ್ಪಾದಕರು ಹೈನುಗಾರಿಕೆಯಲ್ಲಿ ವೈಜ್ಞಾನಿಕ ಕ್ರಮಗಳನ್ನು ಅನುಸರಿಸುವ ಮೂಲಕ ಉತ್ತಮ ಗುಣಮಟ್ಟದ ಹಾಲು ಉತ್ಪಾದನೆಗೆ ಗಮನ ಹರಿಸಬೇಕು. ನಿಗದಿಪಡಿಸಿರುವ ಫ್ಯಾಟ್ ಅಂಶವಿದ್ದಲ್ಲಿ ಮಾತ್ರ ಸರ್ಕಾರದ ಪ್ರೋತ್ಸಾಹ ಧನ ಸಿಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಸೀತಹಳ್ಳಿ ಗ್ರಾಮದಲ್ಲಿ ಬುಧವಾರ ಸೀತಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ಭಾಗದಲ್ಲಿ ತರಕಾರಿ, ಹೈನುಗಾರಿಕೆಯನ್ನು ಜನರು ಹೆಚ್ಚಾಗಿ ಅವಲಂಬಿತರು. ಮಹಿಳೆಯರು ಸಹ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪುಟ್ಟ ಗ್ರಾಮವಾದರೂ ದಿನಕ್ಕೆ 500 ಲೀಟರ್ ಹಾಲಿನ ಉತ್ಪಾದನೆ ಸಣ್ಣ ಮಾತಲ್ಲ. ಸರ್ಕಾರದ ಹಾಗೂ ಸಹಕಾರ ಸಂಘದ ಅನುಕೂಲಗಳನ್ನು ಪಡೆದು ಹೈನುಗಾರಿಕೆಯಿಂದ ಆರ್ಥಿಕವಾಗಿ ಸಬಲರಾಗಬೇಕು. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಉತ್ಪಾದನೆಯಾದ ಹಾಲು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸರಬರಾಜಾಗುತ್ತಿದೆ. ನಮ್ಮ ಸೇನೆಗೂ ಸಹ ಕಳುಹಿಸಲಾಗುತ್ತಿದೆ. ನಮ್ಮ ರೈತರ ಕಷ್ಟಕ್ಕೆ ತಕ್ಕ ಪ್ರತಿಫಲವಿದೆ ಎಂದು ಹೇಳಿದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ, ಹಾಲು ಒಕ್ಕೂಟದಿಂದ ಸಿಗುವಂತಹ ಎಲ್ಲಾ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡು ಹಾಲು ಉತ್ಪಾದಕರು ಗುಣಮಟ್ಟದ ಹಾಲು ಉತ್ಪಾದನೆಗೆ ಇನ್ನೂ ಹೆಚ್ಚು ಒತ್ತು ನೀಡಬೇಕು. ಉತ್ಪಾದಕರ ಶ್ರೇಯೋಭಿವೃದ್ಧಿ, ಹಾಲು ಉತ್ಪಾದಕರ ಮಕ್ಕಳ ಶಿಕ್ಷಣ, ಬೆಂಬಲ ಬೆಲೆಗಳ ಮುಖಾಂತರ ಹಾಲು ಉತ್ಪಾದಕರಿಗೆ ಒಕ್ಕೂಟ ಉತ್ತೇಜಿಸುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸೀತಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ನಿರ್ದೇಶಕರು ಹಾಗೂ ಹಿರಿಯರನ್ನು ಗೌರವಿಸಲಾಯಿತು.
ಸೀತಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಮಲಿಂಗಾರೆಡ್ಡಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ, ಮುಖಂಡ ಮೇಲೂರು ಬಿ.ಎನ್.ರವಿಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ಡಾ.ಜಯರಾಮರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಕೋಚಿಮುಲ್ ವಿಸ್ತರಣಾಧಿಕಾರಿ ಉಮೇಶ್‌ರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಶಿವಾರೆಡ್ಡಿ, ಬೋವಿ ಸಂಘದ ಅಧ್ಯಕ್ಷ ಚಿಕ್ಕನರಸಿಂಹಪ್ಪ, ಅಶ್ವತ್ಥರೆಡ್ಡಿ, ಚಿಕ್ಕನರಸಿಂಹಪ್ಪ, ಮುನಿರಾಮಪ್ಪ, ಬೈರಪ್ಪ, ವೆಂಕಟೇಶಪ್ಪ, ಅಶ್ವತ್ಥರೆಡ್ಡಿ, ಚಂದ್ರೇಗೌಡ ಮತ್ತಿತರರು ಹಾಜರಿದ್ದರು.
ಫುಟ್‌ಬಾಲ್ ಕ್ರೀಡೆಯತ್ತ ಆಕರ್ಷಿತರಾದ ಹೊಸ ತಲೆಮಾರಿನ ಮಕ್ಕಳು
ಐಪಿಎಲ್ ಪ್ರಾರಂಭವಾಗುತ್ತಿದ್ದಂತೆ ಕ್ರಿಕೆಟ್ ಆಡುವವರು, ಪ್ರೊ ಕಬಡ್ಡಿ ನೋಡಿ ಕಬಡ್ಡಿ ಆಡುವಂತೆ ವಿಶ್ವಕಪ್ ಫುಟ್‌ಬಾಲ್ ಪ್ರಾರಂಭವಾಗುತ್ತಿದ್ದಂತೆ ಫುಟ್‌ಬಾಲ್ ಆಡುವವರು ಗಲ್ಲಿಗಲ್ಲಿಗಳಲ್ಲಿ ಕಾಣಿಸುತ್ತಾರೆ. ಆದರೆ ಕ್ರೀಡೆಯತ್ತ ನಿಜವಾಗಿ ಆಸಕ್ತರಾಗುವವರು, ಅದಕ್ಕೆ ತಕ್ಕಂತೆ ಪ್ರೋತ್ಸಾಹ, ತರಬೇತಿ ನೀಡುವವರು ಎಲ್ಲಾ ಕೂಡಿಬರುವುದು ವಿರಳ.
ಆದರೆ ನಗರದಲ್ಲಿ ಈ ವಿರಳವೆನ್ನುವ ಸಂಗತಿ ನಿಜವಾಗಿದೆ. ನಗರದ ನೆಹರೂ ಕ್ರೀಡಾಂಗಣದಲ್ಲಿ ಹೊಸ ತಲೆಮಾರಿನ ಮಕ್ಕಳು ಫುಟ್‌ಬಾಲ್ ಕ್ರೀಡೆಯತ್ತ ಆಕರ್ಷಿತರಾಗಿದ್ದಾರೆ. ನಗರದ ವಿವಿಧ ಶಾಲೆಗಳ ಪ್ರೌಢಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಬೆಳಿಗ್ಗೆ ಕ್ರೀಡಾಂಗಣದಲ್ಲಿ ಆಸಕ್ತಿಯಿಂದ ಫುಟ್‌ಬಾಲ್ ಆಡುವುದನ್ನು ಕಂಡು ಹಿರಿಯ ಕ್ರೀಡಾಪಟು ಹಫೀಜುಲ್ಲಾ ಅವರನ್ನು ಒಗ್ಗೂಡಿಸಿ ತರಬೇತಿ ಕೊಡಿಸಲು ಮುಂದಾಗಿದ್ದಾರೆ. ಮಕ್ಕಳ ಆಸಕ್ತಿಗೆ ನೀರೆರೆಯುತ್ತ ಅವರು ಮಕ್ಕಳಿಗೆ ಶೂ, ಜರ್ಸಿ, ಫುಟ್‌ಬಾಲ್ ಕೊಡಿಸಿದ್ದಾರೆ.
ಒಂದು ಕಾಲದಲ್ಲಿ ರಾಷ್ಟ್ರೀಯ ತಂಡ ಮತ್ತು ಪ್ರಸಿದ್ಧ ಮೋಹನ್‌ಬಗಾನ್ ತಂಡದಲ್ಲಿ ಆಡಿದ್ದ ಚಿಂತಾಮಣಿ ಮೂಲದ ಮುಷೀರ್ ಅಹಮದ್ ರೇಷ್ಮೆ ವ್ಯಾಪಾರವನ್ನು ಮಾಡಿಕೊಂಡು ನಗರದಲ್ಲಿ ನೆಲೆಸಿದ್ದಾರೆ. ಅವರನ್ನು ಮಕ್ಕಳಿಗೆ ತರಬೇತಿ ನೀಡಲು ಕ್ರೀಡಾಸಕ್ತರು ಮನವೊಲಿಸಿದ್ದಾರೆ. ಕಲಿಯುವ ಮಕ್ಕಳನ್ನು ಕಂಡು ಕಲಿಸುವ ಹುಮ್ಮಸ್ಸಿನಿಂದ ದೇಹಕ್ಕೆ ವಯಸ್ಸಾದರೂ ಮನಸ್ಸಿಗಲ್ಲ ಎಂಬಂತೆ ಹಿರಿಯ ಮುಷೀರ್ ಭಾಯ್ ಕ್ರೀಡಾಂಗಣದಲ್ಲಿ ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ.
ಕಚ್ಛಾವಸ್ತುವನ್ನು ಉಪಯುಕ್ತ ವಸ್ತುವನ್ನಾಗಿಸುವಂತೆ ಕ್ರೀಡಾಸಕ್ತರ ಆಸಕ್ತಿಯ ನಡೆಯಿಂದಾಗಿ ಸುಮಾರು 16 ಮಂದಿ ಮಕ್ಕಳು ಫುಟ್‌ಬಾಲ್ ತರಬೇತಿ ಪಡೆಯುತ್ತಿದ್ದಾರೆ. ಪ್ರತಿ ದಿನ ನೆಹರೂ ಕ್ರೀಡಾಂಗಣದಲ್ಲಿ ಬೆಳಿಗ್ಗೆ 7 ರಿಂದ 8.15ರವರೆಗೆ ಪುಟ್ಟ ಬಾಲಕರು ಆಸಕ್ತಿಯಿಂದ ಫುಟ್‌ಬಾಲ್ ಕಲಿಯುತ್ತಿದ್ದು, ಈಚೆಗೆ ನೆಹರೂ ಕ್ರೀಡಾಂಗಣದಲ್ಲಿ ಚಿಕ್ಕಬಳ್ಳಾಪುರದ ಕ್ರೀಡಾ ವಸತಿ ಶಾಲೆಯ ತಂಡ, ಚಿಂತಾಮಣಿ ತಂಡದೊಂದಿಗೆ ಆಡಿ ಗೋಲುಗಳನ್ನು ಹೊಡೆಯುವ ಮೂಲಕ ತಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸಿಕೊಂಡಿದ್ದಾರೆ.
ಬಲು ಹಿಂದೆ ನಗರಕ್ಕೆ ಟಿ.ವಿ ಕಾಲಿಡುವ ಮುನ್ನ ಈಗಿನ ಸಾರ್ವಜನಿಕ ಆಸ್ಪತ್ರೆಯಿರುವ ಸ್ಥಳದಲ್ಲಿ ಆಗಿನ ಯುವಕರು ಫುಟ್‌ಬಾಲ್ ಆಡುತ್ತಿದ್ದರಂತೆ. ಇತರ ಊರುಗಳ ಜೊತೆ ನಡೆಯುವ ಪಂದ್ಯವನ್ನು ವೀಕ್ಷಿಸಲು ನಗರ ಹಾಗೂ ಗ್ರಾಮಗಳ ಜನರು ಜಮಾಯಿಸುತ್ತಿದ್ದರೆಂದು ಹಿರಿಯಲು ಈಗಲೂ ನೆನಪಿಸಿಕೊಳ್ಳುತ್ತಾರೆ.
‘ಈಗಿನ ತಲೆಮಾರಿನ ಮಕ್ಕಳಲ್ಲಿ ಆಟಕ್ಕಿಂತ ಓದಿನ ಬಗ್ಗೆಯೇ ಕಾಳಜಿ ಹೆಚ್ಚು. ಆದರೆ ವಿವಿಧ ಶಾಲೆಗಳ ಪ್ರೌಢಶಾಲೆಯ ವಿದ್ಯಾರ್ಥಿಗಳು ಫುಟ್‌ಬಾಲ್ ಕ್ರೀಡೆಯತ್ತ ಆಕರ್ಷಿತರಾಗಿದ್ದಾರೆ. ಹಿರಿಯ ಫುಟ್‌ಬಾಲ್ ಕ್ರೀಡಾಪಟು ಮುಷೀರ್ ಅಹಮದ್ ಅವರು ಉಚಿತವಾಗಿ ಮಕ್ಕಳಿಗೆ ಫುಟ್‌ಬಾಲ್ ಕಲಿಸಲು ಒಪ್ಪಿದರು. ಅವರೊಂದಿಗೆ ಹಿರಿಯ ಫುಟ್‌ಬಾಲ್ ಆಟಗಾರರಾದ ಆರೀಫ್ ಮತ್ತು ಮುಜಾಹಿದ್‌ಪಾಷ ಸಹ ಹೇಳಿಕೊಡುತ್ತಿದ್ದಾರೆ. ಈಗ 16 ಮಕ್ಕಳಿದ್ದಾರೆ. ಅವರಿಗೆ ಶೂ, ಜರ್ಸಿ, ಫುಟ್‌ಬಾಲ್, ನೆಟ್ ಇತ್ಯಾದಿ ಕೊಡಿಸಿರುವೆ. ನೆಹರೂ ಕ್ರೀಡಾಂಗಣದಲ್ಲಿ ಅವುಗಳನ್ನು ಇಡಲು ಕೋಣೆ ಸಹ ನೀಡಿದ್ದಾರೆ. ಮಕ್ಕಳ ಕಲಿಕೆ, ಉತ್ಸಾಹ, ಜಿಂಕೆಯಂತೆ ಓಡುವ ವೇಗ ಕಂಡು ಖುಷಿಯಾಗುತ್ತದೆ. ನಮಗೆ ಸಿಗದ ಅವಕಾಶ ಈಗಿನ ಮಕ್ಕಳಿಗೆ ಸಿಗಲಿ ಎಂಬುದು ನನ್ನ ಆಸೆ’ ಎನ್ನುತ್ತಾರೆ ಹಫೀಜುಲ್ಲಾ.
‘ಕ್ರೀಡಾ ಇಲಾಖೆಯಿಂದ ಒಂದಷ್ಟು ಪ್ರೋತ್ಸಾಹ, ಸ್ಥಳೀಯ ಕ್ರೀಡಾಸಕ್ತರಿಂದ ನೆರವು ಸಿಕ್ಕಲ್ಲಿ ಕಲಿಯುವ ಮಕ್ಕಳಿಗೆ ಅನುಕೂಲಕರ. ನಮ್ಮ ಉದ್ದೇಶ ನಮ್ಮ ತಾಲ್ಲೂಕಿನಿಂದ ರಾಷ್ಟ್ರಮಟ್ಟದಲ್ಲಿ ಆಡುವ ಫುಟ್‌ಬಾಲ್ ಕ್ರೀಡಾಪಟುಗಳನ್ನು ರೂಪಿಸುವುದಾಗಿದೆ. ಫುಟ್‌ಬಾಲ್ ಕಲಿಯಬಯಸುವ ಮಕ್ಕಳಿಗೆ ಸ್ವಾಗತವಿದೆ. ಉಚಿತವಾಗಿ ಕಲಿಸಲು ಹಿರಿಯ ಕ್ರೀಡಾಪಟುಗಳು ಸಿದ್ಧವಿದ್ದಾರೆ. ಒಟ್ಟಾರೆ ಕ್ರೀಡೆಯ ಮೂಲಕ ತಾಲ್ಲೂಕಿನ ಕೀರ್ತಿಯನ್ನು ಹೆಚ್ಚಿಸುವುದು ನಮ್ಮ ಆಶಯ’ ಎಂದು ಅವರು ಹೇಳಿದರು.
ಕ್ರೆಸೆಂಟ್ ಶಾಲೆಯಲ್ಲಿ ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನ
ದಡಾರ ಮತ್ತು ರುಬೆಲ್ಲಾ ರೋಗಗಳು ವೈರಾಣುವಿನಿಂದ ಹರಡುವ ಸೋಂಕು. ಮುಂದುವರಿದ ರಾಷ್ಟ್ರಗಳಲ್ಲಿ ಈ ರೋಗಗಳು ನಿರ್ಮೂಲವಾಗಿದ್ದು, ಮುಂದುವರಿಯುತ್ತಿರುವ ನಮ್ಮಂಥಹ ರಾಷ್ಟ್ರಗಳಲ್ಲಿ ಇನ್ನೂ ಈ ರೋಗ ಮಾರಣಾಂತಿಕವಾಗಿದೆ. ದಡಾರ ಮತ್ತು ರುಬೆಲ್ಲಾ ರೋಗಗಳ ನಿರ್ಮೂಲನೆಗೆ ಎಲ್ಲರೂ ಸಹಕರಿಸಬೇಕು ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಅನಿಲ್‌ಕುಮಾರ್ ತಿಳಿಸಿದರು.
ನಗರದ ಕ್ರೆಸೆಂಟ್ ಶಾಲೆಯಲ್ಲಿ ಮಂಗಳವಾರ ಸಾರ್ವಜನಿಕ ಆಸ್ಪತ್ರೆ ಮತ್ತು ಕ್ರೆಸೆಂಟ್ ಶಾಲೆಯ ವತಿಯಿಂದ ಆಯೋಜಿಸಿದ್ದ ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಕ್ಕಳಿಗೆ ತೀವ್ರವಾಗಿ ಕಾಡುವ ದಡಾರ ಮತ್ತು ರುಬೆಲ್ಲಾ ರೋಗಗಳ ತಡೆಗಾಗಿ ರಾಷ್ಟ್ರೀಯ ಆರೋಗ್ಯ ಮಿಷನ್‌ನಿಂದ ಜಿಲ್ಲೆಯಲ್ಲಿ ಫೆಬ್ರುವರಿ7 ರಿಂದ ಮಾರ್ಚ್ 1 ರವರೆಗೆ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. 9 ತಿಂಗಳಿಂದ 15 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಲಸಿಕೆ ಹಾಕುವ ವ್ಯವಸ್ಥೆ ಮಾಡಿಕೊಳ್ಳಬೇಕು. ಪೋಲಿಯೋ ನಿರ್ಮೂಲನೆ ಮಾಡಿದಂತೆ ದಡಾರ ಮತ್ತು ರುಬೆಲ್ಲಾ ರೋಗಗಳನ್ನೂ ನಿರ್ಮೂಲನೆ ಮಾಡಬೇಕಿದೆ. ದಡಾರ ಲಸಿಕೆ ಮುಖಾಂತರ ತಡೆಗಟ್ಟಬಹುದಾದ ರೋಗವಾಗಿರುವುದರಿಂದ, ಮಕ್ಕಳಲ್ಲಿ ಲಸಿಕೆ ಹಾಕಿ ರೋಗ ತಡೆಗಟ್ಟುವುದರಲ್ಲಿಯೇ ಜಾಣತನವಿದೆ. ಈ ಹಿಂದೆ ಲಸಿಕೆ ಪಡೆದಿದ್ದರೂ ಅಥವಾ ದಡಾರ ಮತ್ತು ರುಬೆಲ್ಲಾ ರೋಗದಿಂದ ಬಳಲಿದ್ದರೂ ಮಕ್ಕಳಿಗೆ ಈ ಲಸಿಕೆಯ ಅಭಿಯಾನದಲ್ಲಿ ಲಸಿಕೆ ಹಾಕತಕ್ಕದ್ದು ಎಂದು ಹೇಳಿದರು.
ಕ್ರೆಸೆಂಟ್ ಶಾಲೆಯ ಕಾರ್ಯದರ್ಶಿ ತಮೀಮ್ ಅನ್ಸಾರಿ ಮಾತನಾಡಿ, ದಡಾರ, ಕೆಮ್ಮು ಮತ್ತು ಸೀನುವುದರ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡಿದರೆ, ರುಬೆಲ್ಲಾದ ಸೋಂಕು ಗಾಳಿ ಮೂಲಕ ದೇಹದ ಒಳಗೆ ಸೇರಿಕೊಳ್ಳುತ್ತದೆ. ಕಡಿಮೆ ರೋಗ ನಿರೋಧಕ ಶಕ್ತಿ ಇರುವವರು, ಅಪೌಷ್ಟಿಕ ಮತ್ತು ಕಡಿಮೆ ವಿಟಮಿನ್ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳು ಈ ರೋಗಕ್ಕೆ ಹೆಚ್ಚಾಗಿ ತುತ್ತಾಗುತ್ತಿದ್ದಾರೆ. ದಡಾರ ಮತ್ತು ರುಬೆಲ್ಲಾ ರೋಗ ತಡೆಗಟ್ಟುವ ಉದ್ದೇಶದಿಂದ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ನಮ್ಮ ಶಾಲೆಯ 1,350 ಮಕ್ಕಳಲ್ಲದೆ ಈ ಬಡಾವಣೆ ಹಾಗೂ ಸುತ್ತಮುತ್ತಲಿನ ಶಾಲೆಗೆ ಹೋಗದ ಪುಟ್ಟ ಮಕ್ಕಳ ಪೋಷಕರಿಗೆ ಮಾಹಿತಿ ಲಸಿಕೆ ಹಾಕಿಸಿದ್ದೇವೆ. ಒಟ್ಟಾರೆ 1,500 ಮಕ್ಕಳಿಗೆ ಈ ದಿನ ಲಸಿಕೆ ಹಾಕಿಸುವಲ್ಲಿ ಸಫಲರಾಗಿದ್ದೇವೆ ಎಂದು ನುಡಿದರು.
ಸರ್ಕಾರಿ ಆಸ್ಪತ್ರೆಯ ಡಾ.ವಿಜಯಕುಮಾರ್, ಡಾ.ನಿರಂಜನ್, ಆರೋಗ್ಯ ಇಲಾಖೆಯ ದಾದಾಪೀರ್, ಶಾಲೆಯ ಸಿಬ್ಬಂದಿ ಹಾಜರಿದ್ದರು.
ಶಿಡ್ಲಘಟ್ಟದ ವೇಣುಗೋಪಾಲಸ್ವಾಮಿಯ ಬ್ರಹ್ಮರಥೋತ್ಸವ: ಹಿಂದು ಮುಂದು ದೇವರ ರಥೋತ್ಸವಕೆ ಭಕ್ತಿಯ ಮೆರಗು
ನಗರದ ಹಿಂದು ಮುಂದು ದೇವರೆಂದೆ ಪ್ರಸಿದ್ದಿಯಾದ ವೇಣುಗೋಪಾಲಸ್ವಾಮಿಯ ಬ್ರಹ್ಮರಥೋತ್ಸವವು ಸೋಮವಾರ ವಿಜೃಂಭಣೆಯಿಂದ ನೆರವೇರಿತು.
ನಗರದಲ್ಲಿ ಬ್ರಹ್ಮರಥೋತ್ಸವ ನಡೆಯುವ ಏಕೈಕ ದೇವಾಲಯ ಇದಾಗಿದ್ದು ತಾಲ್ಲೂಕು ಆಡಳಿತ, ಶ್ರೀವೇಣುಗೋಪಾಲಸ್ವಾಮಿ ಸೇವಾ ಮತ್ತು ಅಭಿವೃದ್ದಿ ಟ್ರಸ್ಟ್‌ನ ಆಶ್ರಯದಲ್ಲಿ ಬ್ರಹ್ಮರಥೋತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ತಹಸೀಲ್ದಾರ್ ಅಜಿತ್ ಕುಮಾರ್ ರೈ ರಥೋತ್ಸವಕ್ಕೆ ಚಾಲನೆ ನೀಡಿದರು. ರಥೋತ್ಸವದಲ್ಲಿ ಭಾಗವಹಿಸುವ ಎಲ್ಲ ಭಕ್ತರಿಗೂ ಆ ಭಗವಂತನ ಅನುಗ್ರಹ ದಯಪಾಲಿಸಲಿ ಎಂದು ಆಶಿಸಿದರು.
ಮಾಜಿ ಸಚಿವ ವಿ.ಮುನಿಯಪ್ಪ ಸೇರಿದಂತೆ ಅನೇಕ ಗಣ್ಯರು ರಥೋತ್ಸವದಲ್ಲಿ ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾದರು.
ರಥವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮಾರ್ಗದ ಉದ್ದಕ್ಕೂ ಸಾರಿಸಿ ರಂಗೋಲೆ ಹಾಕಿ ಸಿಂಗರಿಸಿ ಭಕ್ತ ಭಾವದಿಂದ ಭಗವಂತನನ್ನು ಬರಮಾಡಿಕೊಂಡು ಇಷ್ಟಾರ್ಥಗಳು ಈಡೇರಲೆಂದು ಭಗವಂತನಲ್ಲಿ ಪ್ರಾರ್ಥಿಸಿದರು. ನಗರದ ವಿವಿದೆಡೆ ಭಕ್ತರಿಗೆ ಕೆಲ ದಾನಿಗಳು ಸೌತೆಕಾಯಿ ಬೆರೆಸಿದ ಹೆಸರುಬೇಳೆ ಮತ್ತು ಪಾನಕವನ್ನು ವಿತರಿಸಿದರು.
ಶ್ರೀವೇಣುಗೋಪಾಲಸೇವಾ ಟ್ರಸ್ಟ್‌ನ ಅಧ್ಯಕ್ಷ ಬಳೆರಘು, ಎಲ್.ಮಧು, ಬಾಲಕೃಷ್ಣ, ಮಂಜುನಾಥ್, ರೂಪಸಿ ರಮೇಶ್, ರಾಮಚಂದ್ರಾಚಾರ್, ಮುನಿಕೃಷ್ಣಪ್ಪ, ಡಿ.ಎಂ.ಜಗದೀಶ್ವರ್, ಬಿ.ಸಿ.ನಂದೀಶ್, ಕೆಂಪರೆಡ್ಡಿ ಮತ್ತಿತರರು ಹಾಜರಿದ್ದರು.
‘ಶಿಡ್ಲಘಟ್ಟ ದೇವರು ಹಿಂದು ಮುಂದು’ ಎಂಬ ಪ್ರಸಿದ್ಧ ನಾಣ್ಣುಡಿಗೆ ಕಾರಣ ಶ್ರೀ ವೇಣುಗೋಪಾಲಸ್ವಾಮಿ ರಥೋತ್ಸವ. ಹಿಂದೆ ನಗರದ ಅಶೋಕರಸ್ತೆಯು ಕಿರಿದಾಗಿತ್ತು. ಆ ಕಾರಣಕ್ಕೆ ದೊಡ್ಡದಾದ ದೇವರ ರಥವನ್ನು ರಸ್ತೆ ಕೊನೆಯಲ್ಲಿ ತಿರುಗಿಸಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ದೇವರನ್ನೇ ಹಿಂದು ಮುಂದಾಗಿ ತಿರುಗಿಸಿ ರಥವನ್ನು ಹಿಂಬದಿಯಿಂದ ಎಳೆದು ತರಲಾಗುತ್ತಿತ್ತು. ಹೀಗಾಗಿ ‘ಶಿಡ್ಲಘಟ್ಟದ ದೇವರು ಹಿಂದು ಮುಂದು’ ಎಂಬ ಮಾತು ಚಾಲ್ತಿಗೆ ಬಂತು.
ಶ್ರೀಕೃಷ್ಣದೇವರಾಯ ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ತೆರಳುವಾಗ ಮಾರ್ಗ ಮಧ್ಯೆ ತಂಗಿದ್ದು, ತನ್ನ ಆರಾಧ್ಯ ದೈವ ಶ್ರೀ ವೇಣುಗೋಪಾಲಸ್ವಾಮಿಯನ್ನು ಪ್ರತಿಷ್ಠಾಪಿಸಿದನೆಂಬ ಪ್ರತೀತಿಯಿದೆ. ಛತ್ರಪತಿ ಶಿವಾಜಿ ಕಾಲದಲ್ಲಿ ದೇವಾಲಯದ ಜೀರ್ಣೋದ್ಧಾರವಾಯಿತೆಂದು ಹೇಳಲಾಗುತ್ತದೆ. ಶಿಡ್ಲಘಟ್ಟ ಸ್ಥಾಪಿಸಿದ ಅಲಸೂರಮ್ಮ ಕೂಡ ಈ ದೇವಾಲಯವನ್ನು ಅಭಿವೃದ್ಧಿಗೊಳಿಸಿರುವುದಾಗಿ ಇತಿಹಾಸ ಹೇಳುತ್ತದೆ.
ಶಾಲಾ ವಾರ್ಷಿಕೋತ್ಸವ
ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಭಾನುವಾರ ನಡೆದ ಪ್ರಥಮ ಶಾಲಾ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳು ಮಹಾಭಾರತದ ನಾಟಕದ ಪಾತ್ರಧಾರಿಗಳಾಗಿ ಕುಳಿತಿದ್ದರು.
ಕೇಬಲ್ ಕಳ್ಳತನ
ತಾಲ್ಲೂಕಿನ ಕನ್ನಮಂಗಲ ಗ್ರಾಮದ ಚಿಕ್ಕಾಂಜಿನಪ್ಪ ಅವರ ತೋಟದಲ್ಲಿ ಕೊಳವೆಬಾವಿಗೆ ಅಳವಡಿಸಿದ್ದ ಸುಮಾರು 30 ಸಾವರ ರೂಗಳಷ್ಟು ಬೆಲೆ ಬಾಳುವ 600 ಅಡಿ ಕೇಬಲನ್ನು ಕಳ್ಳರು ಶನಿವಾರ ರಾತ್ರಿ ಕಳ್ಳತನ ಮಾಡಿದ್ದಾರೆ.
ಕನ್ನಮಂಗಲದ ಸರ್ವೆ ನಂ 166 ರಲ್ಲಿರುವ ತಮ್ಮ ಜಮೀನಿನಲ್ಲಿರುವ ಕೊಳವೆಬಾವಿಯ ಪಂಪ್ ಮತ್ತು ಮೋಟರ್‌ಗೆ ಪಿವಿಸಿ ಪೈಪ್ ಅನ್ನು ನೆಲದೊಳಗೆ ಹಾಕಿ 600 ಅಡಿಗಳಷ್ಟು ಕೇಬಲನ್ನು ಅಳವಡಿಸಿದ್ದು, ಕಳ್ಳರು ಪಿವಿಸಿ ಪೈಪನ್ನು ಒಡೆದುಹಾಕಿ ಕೇಬಲನ್ನು ಸಂಪೂರ್ಣವಾಗಿ ಎಳೆದುಕೊಂಡು ಹೋಗಿದ್ದಾರೆ ಎಂದು ಚಿಕ್ಕಾಂಜಿನಪ್ಪ ತಿಳಿಸಿದ್ದಾರೆ. ಸ್ಟಾರ್ಟರ್ ಇರುವ ಕಬ್ಬಣಿದ ಬಾಕ್ಸನ್ನು ಜಖಂಗೊಳಿಸಿದ್ದಾರೆ ಎಂದು ಕೂಡ ಅವರು ಹೇಳಿದರು.
ಚಿಕಿತ್ಸೆ ದುಬಾರಿಯಾಗಿದೆ, ಉಚಿತ ಶಿಬಿರವನ್ನು ಸದ್ಭಳಕೆ ಮಾಡಿಕೊಳ್ಳಿ
ಆರೋಗ್ಯ ಸಂಬಂಧಿಸಿದ ತಪಾಸಣೆ ಮತ್ತು ಚಿಕಿತ್ಸೆ ದುಬಾರಿಯಾಗಿರುವಾಗ ನುರಿತ ತಜ್ಞರು ಉಚಿತವಾಗಿ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸುತ್ತಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಸಿ.ನಂದೀಶ್ ತಿಳಿಸಿದರು.
ನಗರದ ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಭಾನುವಾರ ತಾಲ್ಲೂಕು ಬಿಜೆಪಿ ಘಟಕ ಹಾಗೂ ಬೆಂಗಳೂರು ಸ್ಪೆಷಲಿಸ್ಟ್ ಆಸ್ಪತ್ರೆಯ ಸಹಯೋಗದಲ್ಲಿ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಅವರ 100ನೇ ಜನ್ಮದಿನಾಚರಣೆ, ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣೆ ಮತ್ತು ಅಟಲ್ ಬಿಹಾರಿ ವಾಜಪೇಯಿರವರ ಜನ್ಮ ದಿನದ ಪ್ರಯುಕ್ತ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಬೆಂಗಳೂರಿನ ಸ್ಪೆಷಲಿಸ್ಟ್ ಆಸ್ಪತ್ರೆಯ ನುರಿತ ಫಿಸಿಷಿಯನ್, ಹೃದ್ರೋಗ ತಜ್ಞರು, ಮೂಳೆ ಮತ್ತು ಕೀಲು ತಜ್ಞರು, ನರರೋಗ ತಜ್ಞರು, ಸ್ತ್ರೀ ಮತ್ತು ಪ್ರಸೂತಿ ತಜ್ಞರು ಸೇರಿದಂತೆ ನುರಿತ ತಜ್ಞ ವೈದ್ಯರು ಆಗಮಿಸಿದ್ದಾರೆ. ಈ ಅವಕಾಶವನ್ನು ಬಳಸಿಕೊಳ್ಳುವಂತೆ ಹೇಳಿದರು.
ಬೆಂಗಳೂರಿನ ಸ್ಪೆಷಲಿಸ್ಟ್ ಆಸ್ಪತ್ರೆಯ ಮುಖ್ಯಸ್ಥ ಪ್ರಶಾಂತ್, ತಜ್ಞ ವೈದ್ಯರು, ರವಿನಾರಾಯಣರೆಡ್ಡಿ, ಸುರೇಂದ್ರ ಗೌಡ, ಶ್ರೀರಾಮರೆಡ್ಡಿ, ಮುರಳಿ, ದಾಮೋದರ್, ಲೋಕೇಶ್‌ಗೌಡ ಮತ್ತಿತರರು ಹಾಜರಿದ್ದರು.
ವಾಗ್ಗೇಯಕಾರರ ಆರಾಧನಾ ಮಹೋತ್ಸವ
ನಗರದ ಕಾಳಿಕಾಂಬ ಕಮಠೇಶ್ವರಸ್ವಾಮಿ ದೇವಾಲಯದ ಸಮುದಾಯ ಭವನದಲ್ಲಿ ಭಾನುವಾರ ಮಾರುತಿ ಸಂಗೀತ ಅಕಾಡೆಮಿಯಿಂದ ಪುರಂದರದಾಸರು, ತ್ಯಾಗರಾಜಸ್ವಾಮಿ, ಕನಕದಾಸರು, ಯೋಗಿ ನಾರೇಯಣ ಯತೀಂದ್ರರು ಹಾಗೂ ವಾಗ್ಗೇಯಕಾರರ ಆರಾಧನಾ ಮಹೋತ್ಸವವನ್ನು ದಿನಪೂರ್ತಿ ಆಚರಿಸಲಾಯಿತು.
ಬೆಳಿಗ್ಗೆ ದೇವರ ಪೂಜೆಯೊಂದಿಗೆ ಪ್ರಾರಂಭಗೊಂಡು, ನಾದಸ್ವರ ಕಚೇರಿ, ಮಾರುತಿ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳಿಂದ ಪಕ್ಕವಾದ್ಯಗಳೊಂದಿಗೆ ಗಾಯನ, ಪಂಚರತ್ನ ಕೀರ್ತನೆಗಳ ಗೋಷ್ಠಿ ಗಾಯನ ಹಾಗೂ ವಿಶೇಷ ಸಂಗೀತ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಕಲಾವಿದರಾದ ಶಾಂತ ಕೃಷ್ಣಮೂರ್ತಿ, ಸವಿತಾ ಸುಬ್ರಹ್ಮಣ್ಯಂ, ಆರ್.ಜಗದೀಶ್‌ಕುಮಾರ್, ಮಂಜುಳಾ ಜಗದೀಶ್, ಪಾರ್ವತಮ್ಮ ಬಸವರಾಜ್, ಭಾಗ್ಯಲಕ್ಷ್ಮಿ ಅಯ್ಯರ್, ಭಾರತಿ, ಡಾ.ಡಿ.ಟಿ.ಸತ್ಯನಾರಾಯಣರಾವ್, ಬಸಪ್ಪ, ರಾಮಚಂದ್ರಪ್ಪ, ಗಂಗಾಧರಪ್ಪ, ಮರಿಯಪ್ಪ, ನಾಮದೇವ್, ಜಿ.ಎನ್.ಶ್ಯಾಮಸುಂದರ್ ಮತ್ತಿತರರು ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹುಟ್ಟಿದ ಮಣ್ಣಿಗೆ, ಸಮಾಜಕ್ಕೆ ಬೆಳಕಾಗಬೇಕು
ಹುಟ್ಟಿದ ಮಣ್ಣಿಗೆ, ಸಮಾಜಕ್ಕೆ ಬೆಳಕಾಗಬೇಕು. ಮತ್ತೊಬ್ಬ ಮದರ್ ತೆರೇಸಾ ಹುಟ್ಟಿಬರಲು ಏಕೆ ನಾವು ಕಾಯಬೇಕು. ಅವರಿಂದ ಪ್ರೇರಣೆ ಪಡೆದು ಸಮಾಜಕ್ಕೆ ಉಪಯೋಗಿಗಳಾಗೋಣ ಎಂದು ಅನಾಥರನ್ನು ಸಾಕುವ ಆಶ್ರಮ ನಡೆಸುವ ಆಟೋ ರಾಜ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಭಾನುವಾರ ಸರ್.ಎಂ.ವಿಶ್ವೇಶ್ವರಯ್ಯ ವೇದಿಕೆಯಲ್ಲಿ ನಡೆದ ಪ್ರಥಮ ಶಾಲಾ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅವರು ಮಾತನಾಡಿದರು.
ನನ್ನ ಬಾಲ್ಯ ಬಹಳ ಕೆಟ್ಟದ್ದಾಗಿತ್ತು. 3ನೇ ಕ್ಲಾಸಿನವರೆಗೆ ಮಾತ್ರ ಶಾಲೆ ಕಂಡಿದ್ದು. ಕೆಟ್ಟ ಸಹವಾಸಕ್ಕೆ ಬಿದ್ದು ಪುಂಡ ಪೋಕರಿಯಾಗಿದ್ದೆ. ಜೈಲಿಗೂ ಹೋದೆ. ಅಲ್ಲಿನ ನರಕ ನನ್ನ ಮನಃ ಪರಿವರ್ತನೆ ಮಾಡಿತು. ಡ್ರೆೃವಿಂಗ್ ಕಲಿತೆ. ಆಮೇಲೆ ಆಟೋ ಓಡಿಸತೊಡಗಿದೆ. ನಿರ್ಗತಿಕರನ್ನು ಹೊತ್ತು ತಂದು ಸಾಕಲು ಶುರುಮಾಡಿದೆ. ಮೊದಲು ಬಹಳ ಕಷ್ಟವಾಗುತ್ತಿತ್ತು. ನಂತರ ದಾನಿಗಳ ಸಹಕಾರ ಸಿಕ್ಕಿತು. ಈಗ ನಮ್ಮ ಆಶ್ರಮದಲ್ಲಿ 750 ಮಂದಿ ಅನಾಥರು, ವೃದ್ಧರು, ನಿರ್ಗತಿಕರು, ಖಾಯಿಲೆಪೀಡಿತರು ಇದ್ದಾರೆ. ಪ್ರತಿ ದಿನ ನಾಲ್ಕೈದು ಮಂದಿ ಸಾಯುತ್ತಿರುತ್ತಾರೆ. ಅವರು ಮನಶ್ಶಾಂತಿಯಿಂದ ಸಾಯುವಂತಾಗಬೇಕು. ಮನುಷ್ಯರಲ್ಲೇ ದೇವರನ್ನು ಕಾಣಬಹುದು ಎಂಬುದು ನನ್ನ ಅನುಭವ ಎಂದು ವಿವರಿಸಿದರು.
ವಿದ್ಯಾರ್ಥಿಗಳು ತಮಗೆ ಉತ್ತಮ ಬದುಕನ್ನು ನೀಡಿದ ಪೋಷಕರು, ಮಾರ್ಗದರ್ಶನ ಮಾಡುವ ಗುರುಗಳು ಮತ್ತು ಪೊರೆಯುವ ಸಮಾಜಕ್ಕೆ ಋಣಿಗಳಾಗಿರಬೇಕು. ಮನುಷ್ಯತ್ವ, ಪ್ರೀತಿ, ವಿಶ್ವಾಸ ಇವು ನಮ್ಮೊಳಗೆ ಬೆಳೆಸಿಕೊಂಡಷ್ಟೂ ದ್ವಿಗುಣವಾಗುತ್ತವೆ ಎಂದು ಹೇಳಿದರು.
ಶಾಲೆಯ ಸಿಬ್ಬಂದಿ, ಗ್ರಾಮದ ಮುಖಂಡರು ಹಾಗೂ ಕಸಾಪ ತಾಲ್ಲೂಕು ಘಟಕದ ವತಿಉಯಿಂದ ಅನಾಥರಕ್ಷಕ ಆಟೋರಾಜ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಯಲ್ಲಿ ಮಕ್ಕಳು ಆಡಲು ಉಯ್ಯಾಲೆ, ಸೀಸಾ ಮೊದಲಾದ ಆಟೋಪಕರಣಗಳನ್ನು ಕೊಡಿಸುವುದಾಗಿ ಆಟೋರಾಜ ವಾಗ್ದಾನ ಮಾಡಿದರು.
ಶಾಲಾ ವಿದ್ಯಾರ್ಥಿಗಳು, ನಾಟಕ, ನೃತ್ಯ, ಹಾಸ್ಯ ವಾರ್ತೆ ಮುಂತಾದವುಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಶಿಕ್ಷಣ ಇಲಾಖೆಯ ಯೋಜನಾಧಿಕಾರಿ ಪಿ.ವೆಂಕಟೇಶ್, ಇಸಿಓ ಬೈರಾರೆಡ್ಡಿ, ಸಿಆರ್‌ಪಿ ನಾಗರಾಜ್, ಸೀನಪ್ಪ, ನಿವೃತ್ತ ಶಿಕ್ಷಕಿ ಫೈಜೂನ್, ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಎ.ಎಂ.ತ್ಯಾಗರಾಜ್, ಉಮಾಚನ್ನೇಗೌಡ, ಸಂಪತ್‌ಕುಮಾರ್, ಎಂಪಿಸಿಎಸ್ ಅಧ್ಯಕ್ಷ ರವಿಪ್ರಕಾಶ್, ಎಸ್‌ಡಿಎಂಸಿ ಅಧ್ಯಕ್ಷೆ ಪುಷ್ಪ ರಾಮಚಂದ್ರ, ಉಪಾಧ್ಯಕ್ಷ ಮುನಿವೆಂಕಟಸ್ವಾಮಿ, ಮುಖ್ಯಶಿಕ್ಷಕಿ ಎಂ.ವಿ.ವೆಂಕಟರತ್ನ, ಶಿಕ್ಷಕರಾದ ಎಸ್.ಚಾಂದ್‌ಪಾಷ, ಅಶೋಕ್, ಭಾರತಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ನಿಧನ ವಾರ್ತೆ
ಭೂ ಮಂಜೂರಾತಿ ಸಮಿತಿ ಸದಸ್ಯ, ಕಾಂಗ್ರೆಸ್ ಪಕ್ಷದ ಮುಖಂಡರೂ ಆದ ಸಾದಲಿ ಜೈ ಪ್ರಕಾಶ್(೬೭) ಶುಕ್ರವಾರ ನಿಧನರಾಗಿದ್ದಾರೆ.
ತಾಲ್ಲೂಕಿನ ಸಾದಲಿವಾಸಿಯಾದ ಸಾದಲಿ ಜೈ ಪ್ರಕಾಶ್‌ರವರು ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಇತ್ತೀಚಿಗೆ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶುಕ್ರವಾರ ರಾತ್ರಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗಲೆ ಇಹಲೋಕ ತ್ಯಜಿಸಿದ್ದಾರೆ.
ಮೃತರ ಅಂತಿಮ ಸಂಸ್ಕಾರ ಶನಿವಾರ ಸಂಜೆ ಅವರ ಸಾದಲಿಯ ಹೊಲದಲ್ಲಿ ನಡೆದಿದ್ದು ಶಾಸಕ ಎಂ.ರಾಜಣ್ಣ, ಮಾಜಿ ಸಚಿವ ವಿ.ಮುನಿಯಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ, ಸಾದಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋವಿಂದರಾಜು ಸೇರಿದಂತೆ ಹಲವು ಪ್ರಮುಖರು ಅಂತಿಮ ದರ್ಶನದಲ್ಲಿ ಭಾಗವಹಿಸಿದ್ದರು.
ಹಿತ್ತಲಹಳ್ಳಿ ಸರಕಾರಿ ಗೋಮಾಳದಲ್ಲಿ ಬಸ್ ಡಿಪೋಗೆ ಜಮೀನು ಮಂಜೂರು
ತಾಲ್ಲೂಕಿನ ಹಿತ್ತಲಹಳ್ಳಿ ಗ್ರಾಮದ ಸಾರ್ವಜನಿಕ ಸ್ಮಶಾನವಿರುವ ಸ್ಥಳವನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಡಿಪೋ ನಿರ್ಮಿಸಲು ಬಳಸಿಕೊಳ್ಳುತ್ತಿದ್ದಾರೆ. ಸ್ಮಶಾನದ ಸ್ಥಳವನ್ನು ಬಿಟ್ಟು ಬೇರೆ ಸ್ಥಳ ಬಳಸಿಕೊಳ್ಳುವಂತೆ ಗ್ರಾಮಸ್ಥರು ಎಲ್ಲಾ ಅಧಿಕಾರಿಗಳಿಗೂ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಹಿತ್ತಲಹಳ್ಳಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಡಿಪೋ ನಿರ್ಮಿಸಲು ತಾಲ್ಲೂಕಿನ ಹಿತ್ತಲಹಳ್ಳಿಯ ಬಳಿ 4 ಎಕರೆ ಜಮೀನನ್ನು ನಿಗದಿಪಡಿಸಲಾಗಿದೆ. ಅಲ್ಲಿರುವ ಹಿಂದುಳಿದ ಹಾಗೂ ಸಾಮಾನ್ಯ ವರ್ಗದವರ ಸ್ಮಶಾನದ ಸ್ಥಳವನ್ನು ಒಳಗೊಂಡಂತೆ ಡಿಪೋಗಾಗಿ ನಕ್ಷೆಯನ್ನು ತಯಾರಿಸಲಾಗಿದೆ. ಈ ರೀತಿ ಮಾಡಿರುವುದರಿಂದ ಮುಂದೆ ಸ್ಮಶಾನದ ಗತಿಯೇನು ಮತ್ತು ಹಿರಿಯ ಪೂಜಾವಿಧಿಯನ್ನು ಹೇಗೆ ನಡೆಸುವುದು ಎಂಬುದು ಗ್ರಾಮಸ್ಥರ ಆತಂಕವಾಗಿದೆ.
ತಾಲ್ಲೂಕಿನ ಆನೂರು ಗ್ರಾಮ ಪಂಚಾಯಿತಿಯ ಹಿತ್ತಲಹಳ್ಳಿಯ ಸರ್ಕಾರಿ ಗೋಮಾಳ ಸರ್ವೆ ನಂ. 117ರಲ್ಲಿ 32.31 ಎಕರೆ ಜಮೀನು ಇದೆ. ಈ ಪೈಕಿ 10 ಗುಂಟೆಯನ್ನು ಪರಿಶಿಷ್ಟ ಜಾತಿ ಪಂಗಡ ಹಾಗೂ 15 ಗುಂಟೆ ಜಮೀನನ್ನು ಸಾಮಾನ್ಯ ವರ್ಗದವರ ಸ್ಮಶಾನಕ್ಕೆ ಮೀಸಲಿಡಲಾಗಿದೆ.
ಈ ಸ್ಮಶಾನದಲ್ಲಿ ಗ್ರಾಮಸ್ಥರು ತಮ್ಮ ಹಿರಿಯರ ಅಂತಿಮ ಸಂಸ್ಕಾರ ಮಾಡಿ ಸಮಾಧಿ ನಿರ್ಮಿಸಿದ್ದು, ತಿಥಿ ದಿನಗಳಲ್ಲಿ ಪೂಜೆಯನ್ನು ನಡೆಸುವರು. ಈ ಸ್ಥಳದೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿರುವುದರಿಂದ ಬಸ್ ಡಿಪೋಗೆ ಸ್ಥಳ ಮಂಜೂರಾಗುತ್ತಿದ್ದಂತೆ ಎಚ್ಚೆತ್ತ ಗ್ರಾಮಸ್ಥರು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ತಹಸೀಲ್ದಾರ್ ಹಾಗೂ ಆನೂರು ಗ್ರಾಮ ಪಂಚಾಯಿತಿ ಸೇರಿದಂತೆ ಸಂಬಂಧಿಸಿದವರಿಗೆ ಅರ್ಜಿ ಸಲ್ಲಿಸಿ ಸ್ಮಶಾನದ ಗಡಿಯನ್ನು ಗುರ್ತಿಸಿಕೊಡುವಂತೆ ಕೋರಿದ್ದಾರೆ.
ಕಳೆದ ಒಂದು ವರ್ಷದಿಂದಲೂ ಹತ್ತು ಹಲವು ಬಾರಿ ಅರ್ಜಿ ಹಿಡಿದು ಎಲ್ಲ ಇಲಾಖೆಗಳ ಅಧಿಕಾರಿಗಳನ್ನು ಭೇಟಿ ಮಾಡಿದ್ದರೂ, ತಮ್ಮ ಅರ್ಜಿ ಬಗ್ಗೆ ವಿಚಾರಿಸಿದರೂ ಯಾರಿಂದಲೂ ಸ್ಪಷ್ಟವಾದ ಉತ್ತರ ದೊರೆತಿಲ್ಲ. ಜತೆಗೆ ಸ್ಮಶಾನದ ಗಡಿಯನ್ನು ಗುರ್ತಿಸುವ ಕೆಲಸವೂ ಆಗಲಿಲ್ಲ. ಆದರೆ ಈ ಮದ್ಯೆ ಕಳೆದ ಸೋಮವಾರ ಭೂ ಮಾಪಕರ ತಂಡ ಸ್ಥಳಕ್ಕೆ ತೆರಳಿ ಅಳತೆ ಕಾರ್ಯ ನಡೆಸಿದ್ದು ಸ್ಮಶಾನಕ್ಕೆ ಮೀಸಲಿಟ್ಟ ಸ್ಥಳವನ್ನು ಗುರ್ತಿಸದೆ ಸ್ಮಶಾನ ಜಾಗ ಸೇರಿಸಿಕೊಂಡಂತೆ ಡಿಫೋಗೆ ಬೇಕಾದ ೪ ಎಕರೆಯನ್ನು ಗುರ್ತಿಸಿ ಗಡಿಯನ್ನು ಗುರ್ತಿಸಿದ್ದಾರೆ. ಇದು ನಮಗೆಲ್ಲಾ ಆತಂಕಕ್ಕೆ ಕಾರಣವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
‘ಸ್ಮಶಾನದ ಜಾಗವನ್ನು ಸೇರಿಸಿಕೊಂಡಂತೆ ಡಿಫೋ ನಿರ್ಮಿಸಿದರೆ ನಮ್ಮ ಹಿರಿಯರ ಸಮಾಧಿಗಳ ಗತಿ ಏನು ಎಂಬ ಚಿಂತೆ ಮನೆ ಮಾಡಿದೆ. ಬೇರೆ ಯಾವುದೆ ಸ್ಥಳವಾದರು ಸ್ಥಳಾಂತರಿಸಬಹುದು. ಆದರೆ ಸಮಾಧಿಗಳನ್ನು ಸ್ಥಳಾಂತರಿಸಲು ಸಾಧ್ಯವಿಲ್ಲ. ಅಧಿಕಾರಿಗಳು ನಿಮಗೆ ಬೇರೆ ಜಾಗವನ್ನು ಕೊಡುತ್ತೇವೆ. ಕಲ್ಲುಗಳನ್ನು ಬೇರೆ ಕಡೆ ವರ್ಗಾಯಿಸಿ ಪೂಜೆ ಮಾಡಿಕೊಳ್ಳಿ ಎನ್ನುತ್ತಿದ್ದಾರೆ. ಅದು ಹೇಗೆ ಸಾಧ್ಯ. ಹಿತ್ತಲಹಳ್ಳಿ ಬಳಿ ಇರುವ ಸರ್ಕಾರಿ ಗೋಮಾಳದಲ್ಲಿ ೨೫ ಗುಂಟೆ ಜಮೀನನ್ನು ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರೆ ಜಾತಿಯವರಿಗೆ ಮೀಸಲಿಟ್ಟು ೨೦೧೨ರಲ್ಲಿಯೆ ಮಂಜೂರು ಮಾಡಲಾಗಿದೆ. ಡಿಪೋ ಸೇರಿದಂತೆ ಅಭಿವೃದ್ದಿ ಕಾರ್ಯಕ್ಕೆ ನಮ್ಮದೇನು ಅಡ್ಡಿಯಿಲ್ಲ. ಆದರೆ ಬಸ್ ಡಿಫೋಗೆ ಗುರ್ತಿಸಿರುವ ಜಾಗದಲ್ಲಿ ಇರುವ ನಮ್ಮ ಸ್ಮಶಾನದೊಂದಿಗೆ ನಾವು ಭಾವನಾತ್ಮಕ ಸಂಬಂಧ ಹೊಂದಿದ್ದೇವೆ. ಇದು ಕೇವಲ ಸ್ಮಶಾನದ ಜಾಗದ ಪ್ರಶ್ನೆ ಮಾತ್ರವಲ್ಲ, ಮೃತಪಟ್ಟ ಹಿರಿಯರೊಂದಿಗೆ ಹೊಂದಿದ ಭಾವನಾತ್ಮಕ, ಸಾಮಾಜಿಕ ಸಂಬಂಧದ ಪ್ರಶ್ನೆಯಾಗಿದ್ದು ಸಂಬಂಧಿಸಿದವರು ಸಮಸ್ಯೆಯನ್ನು ಸೂಕ್ಷ್ಮವಾಗಿ ಪರಿಹರಿಸಬೇಕಿದೆ’ ಎನ್ನುತ್ತಾರೆ ಹಿತ್ತಲಹಳ್ಳಿ ಗ್ರಾಮಸ್ಥ ಎಚ್.ಎಂ.ಮುನಿರಾಜು.
‘ಈ ಬಗ್ಗೆ ಈಗಾಗಲೆ ಗ್ರಾಮಸ್ಥರು ನನ್ನನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಅಲ್ಲಿ ಸ್ಮಶಾನಕ್ಕೆ ಜಾಗವನ್ನು ಮೀಸಲಿಟ್ಟು ಆದೇಶಿಸಿರುವುದು ನಿಜ. ಇದೀಗ ಅದೇ ಜಾಗದಲ್ಲಿ ಬಸ್ ಡಿಫೋಗೆ ಜಮೀನು ಮಂಜೂರು ಆಗಿದೆ.
ಸ್ಮಶಾನಕ್ಕೆ ಮೀಸಲಿಟ್ಟ ಸ್ಥಳದ ನಕ್ಷೆಯನ್ನು ಮಾರ್ಪಡಿಸಲು ಅವಕಾಶ ಇದೆ. ಈ ಬಗ್ಗೆ ಜಿಲ್ಲಾಕಾರಿಗಳೊಂದಿಗೆ ಮಾತನಾಡುತ್ತೇನೆ, ಇದು ಸ್ಮಶಾನದಂತ ಸೂಕ್ಷ್ಮ ಹಾಗೂ ಭಾವನಾತ್ಮಕ ಸಂಬಂಧದ ವಿಷಯವಾಗಿರುವುದರಿಂದ ಯಾವುದೆ ರೀತಿಯ ಆತುರದ ತೀರ್ಮಾನಕ್ಕೆ ಮುಂದಾಗುವುದಿಲ್ಲ’ ಎಂದು ತಹಶೀಲ್ದಾರ್ ಅಜಿತ್ ಕುಮಾರ್‌ರೈ ತಿಳಿಸಿದ್ದಾರೆ.
ಯುವಜನರು ಸಾಹಿತ್ಯ ಮತ್ತು ಸಾಂಸ್ಕೃತಿಯ ಬಗ್ಗೆ ಆಳವಾದ ಅರಿವು ಹೊಂದಬೇಕು
ಸದೃಢ ದೇಶ ಕಟ್ಟಲು ಯವಜನರ ಪಾತ್ರ ಹೆಚ್ಚಾಗಿದೆ. ಯುವಜನರು ಸಾಹಿತ್ಯ ಮತ್ತು ಸಾಂಸ್ಕೃತಿಯ ಬಗ್ಗೆ ಆಳವಾದ ಅರಿವು ಹೊಂದಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಾಹಿತ್ಯ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಂಸ್ಕೃತಿಯ ಕಡೆಗಣನೆಯಿದ ಸಮಾಜದ ಏಳಿಗೆ ಸಾಧ್ಯವಿಲ್ಲ. ಸ್ಮಾರ್ಟ್‌ಫೋನ್‌ಗಳು ಜನಪ್ರಿಯವಾದ ಮೇಲೆ ನಮ್ಮ ಯುವಜನರು ಮೊಬೈಲ್ ಲೋಕದಲ್ಲಿ ಕಳೆದುಹೋಗಿದ್ದಾರೆ. ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಜೀವನೋತ್ಸಾಹ ಹೆಚ್ಚಿಸುವಂತಹ ಹವ್ಯಾಸಗಳಲ್ಲೂ ಯುವಕರಿಗೆ ಆಸಕ್ತಿ ಕಡಿಮೆಯಾಗುತ್ತಿದೆ. ಓದು, ಉತ್ತಮ ಹವ್ಯಾಸ, ಕಲೆಯ ಬಗ್ಗೆ ಅಭಿರುಚಿ, ಕಲೆಯನ್ನು ಅನುಭವಿಸಿ ಆಸ್ವಾದಿಸುವ ಗುಣ, ಒಳ್ಳೆಯ ಪುಸ್ತಕಗಳನ್ನು ಓದುವುದನ್ನು ರೂಢಿಸಿಕೊಳ್ಳಬೇಕು. ಯುವಜನರಲ್ಲಿನ ಉತ್ಸಾಹ, ಶಕ್ತಿ, ತಾಕತ್ತು ವ್ಯರ್ಥವಾಗಬಾರದು ಎಂದು ಹೇಳಿದರು.
ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಮತ್ತು ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿಪತ್ರವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ವಚನ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದಿಂದ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಗೆ ಪುಸ್ತಕವನ್ನು ನೀಡಿದರು.
ವೈದ್ಯ ಹಾಗೂ ಪ್ರವಚನಕಾರ ಡಾ.ಡಿ.ಟಿ.ಸತ್ಯನಾರಾಯಣರಾವ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಜನಾರ್ಧನ್, ಪ್ರಾಂಶುಪಾಲ ಎನ್.ಆನಂದ್, ಸರ್ಕಾರಿ ನೌಕರರ ಸಂಘದ ರಾಜ್ಯಪರಿಷತ್ ಸದಸ್ಯ ಸುಬ್ಬಾರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯ ಮಳ್ಳೂರಯ್ಯ, ವಸಾಪ ತಾಲ್ಲೂಕು ಅಧ್ಯಕ್ಷ ಟಿ.ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.
ಅಪರೂಪದ ಶಿಲ್ಪಕಲೆಯಿರುವ ದೇವರಿಲ್ಲದ ದೇವಾಲಯ – ಸಾದಲಿಯ ಪೆದ್ದಗುಡಿ
ಸರ್, ನಮ್ಮೂರು ನಮ್ಮ ಜಿಲ್ಲೆಗಾಗಿ… ದಯವಿಟ್ಟು ಪರಿಶೀಲಿಸಿ….
ದೇವಾಲಯವೆಂದರೆ ಕೇವಲ ದೇವರ ಪೂಜೆಯಲ್ಲ, ಅದೊಂದು ಸಾಂಸ್ಕೃತಿಕ ತಾಣ. ನಮ್ಮ ಆಚಾರ, ವಿಚಾರ, ಸಂಸ್ಕಾರವನ್ನು ರೂಪಿಸುವ ಧಾರ್ಮಿಕ ಕೇಂದ್ರವಾಗಿ ಹಿಂದಿನವರು ದೇವಸ್ಥಾನವನ್ನು ನಿರ್ಮಿಸುತ್ತಿದ್ದರು. ವಿಜಯನಗರ ಕಾಲದಲ್ಲಿ ದೇಗುಲಗಳು ನೃತ್ಯ, ಸಂಗೀತ, ಕಲಾ ಕೇಂದ್ರಗಳಾಗಿದ್ದವು. ಹಾಗಾಗಿ ವಿಶಿಷ್ಠ ಕೆತ್ತನೆಗಳು, ಕಂಬಗಳು, ಮಂಟಪಗಳು ಶಿಲ್ಪಿಗಳ ಚಾತುರ್ಯತೆಯನ್ನು ಹೊಂದಿರುತ್ತಿದ್ದವು.
ವಿಜಯನಗರ ಕಾಲದ ಅಪರೂಪದ ಕೆತ್ತನೆಗಳಿಂದ ಕೂಡಿರುವ ಪುರಾತನ ಗುಡಿಯೊಂದು ತಾಲ್ಲೂಕಿನ ಸಾದಲಿ ಗ್ರಾಮದ ಹೊರವಲಯದಲ್ಲಿದೆ. ಅದನ್ನು ಗ್ರಾಮಸ್ಥರು ಪೆದ್ದಗುಡಿ ಅಥವಾ ದೊಡ್ಡಗುಡಿ ಎಂದು ಕರೆಯುತ್ತಾರೆ. ಮೂಲತಃ ಚನ್ನಕೇಶವ ದೇವಾಲಯವಾದ ಇದರಲ್ಲಿ ದೇವರ ಮೂರ್ತಿಯಿಲ್ಲ. ಹಿಂದೆ ಗ್ರಾಮದ ನಡುವೆಯಿದ್ದ ಈ ದೇವಾಲಯ ಈ ಭಾಗದ ಪ್ರಮುಖ ಶ್ರದ್ಧಾ ಕೇಂದ್ರವಾಗಿತ್ತು. ದೊಡ್ಡದಾಗಿದ್ದ ಈ ದೇವಸ್ಥಾನವನ್ನು ತೆಲುಗು ಭಾಷೆಯ ಪ್ರಭಾವದಿಂದ ಪೆದ್ದ(ದೊಡ್ಡ)ಗುಡಿ ಎಂದು ಜನರು ಪ್ರೀತಿಯಿಂದ ಕರೆಯುತ್ತಿದ್ದರು.
ಸಾದಲಿಯನ್ನು ನಿರ್ಮಿಸಿದ್ದು ಕಿರಿಯ ಪಾಂಡವ ಸಹದೇವ ಎನ್ನುತ್ತಾರೆ ಹಿರಿಯರು. ಅದರಿಂದಾಗಿ ಇದನ್ನು ಹಿಂದೆ ಸಹದೇವಪಟ್ಟಣ ಅಥವಾ ಸಹದೇವಪುರ ಎನ್ನುತ್ತಿದ್ದರಂತೆ. ಮುಂದೆ ಅದು ಸಹದೇವಪಲ್ಲಿ, ಸಾದಹಳ್ಳಿ ಎಂದಾಗಿ ಈಗ ಸಾದಲಿಯಾಗಿದೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಸಾದಲಿ ಪ್ರಮುಖ ಪಾಳೆಯಪಟ್ಟಾಗಿದ್ದು, ನಾಗಣ್ಣ ಒಡೆಯರ್ ಹಾಗೂ ಆತನ ಮಗ ದೇಪಣ್ಣ ಒಡೆಯರ್ ೧೩೭೦ ರಿಂದ ೧೩೮೫ ಆಳ್ವಿಕೆ ನಡೆಸಿದ್ದಾಗಿ ತಿಳಿದುಬರುತ್ತದೆ. ಆ ಕಾಲದಲ್ಲಿಯೇ ದೇವಾಲಯ ನಿರ್ಮಾಣವಾಗಿದೆ.
ಹಲವು ಕಾರಣಗಳಿಂದ ಗ್ರಾಮವು ಪೂರ್ವಭಾಗಕ್ಕೆ ಸ್ಥಳಾಂತರವಾಯಿತು. ಹೊಸ ಸ್ಥಳಕ್ಕೆ ಹೋದ ಗ್ರಾಮಸ್ಥರು ಹಳೆಯ ಗ್ರಾಮದಲ್ಲಿದ್ದ ಚನ್ನಕೇಶವಸ್ವಾಮಿ, ಆಂಜನೇಯಸ್ವಾಮಿ ಮತ್ತು ಈಶ್ವರನ ದೇವಸ್ಥಾನದ ಮೂರ್ತಿಗಳನ್ನು ತೆಗೆದುಕೊಂಡು ಬಂದು ಹೊಸ ಸ್ಥಳದಲ್ಲಿ ಸ್ಥಾಪಿಸಿಕೊಂಡರು. ಆದರೆ ಹಳೆಯ ಕಾಲದ ಕಲಾವಂತಿಕೆಯ ದೇಗುಲ ಮಾತ್ರ ಹಾಗೆಯೇ ಉಳಿದುಹೋಯಿತು. ಕಾಲಚಕ್ರ ಉರುಳಿದಂತೆ ಹಳೆಯ ದೇವಸ್ಥಾನದ ಬಗ್ಗೆ ಅಕ್ಕರೆ ಮೂಡಿ ಆಂಜನೇಯಸ್ವಾಮಿ ದೇವಾಲಯವನ್ನು ಮಾತ್ರ ಪುನರುಜ್ಜೀವನಗೊಳಿಸಿದ್ದಾರೆ. ಆದರೆ ವಿಶಿಷ್ಠ ಕೆತ್ತನೆಗಳಿರುವ ಚನ್ನಕೇಶವಸ್ವಾಮಿ ಮತ್ತು ಹತ್ತಿರದಲ್ಲೇ ಇರುವ ಈಶ್ವರನ ದೇವಾಲಯ, ಶನಿಮಹಾತ್ಮನ ದೇವಾಲಯ ಗಿಡಗಂಟಿಗಳಿಂದ ಆವೃತವಾಗಿವೆ.
ದೊಡ್ಡಗುಡಿಯ ಪ್ರತಿ ಕಂಬದ ಮೇಲೂ ದೇವತೆಗಳ, ದೇವಲೀಲೆಗಳ ಕೆತ್ತನೆಗಳಿವೆ. ದೇವಸ್ಥಾನದ ಹೊರ ಗೋಡೆಯ ಮೇಲೆ ಮತ್ಸ್ಯ, ಆಮೆ, ಜಿಂಕೆ, ಬೇಟೆ, ನೃತ್ಯ ಮೊದಲಾದ ವಿಶಿಷ್ಠ ಕೆತ್ತನೆಗಳನ್ನು ಕಾಣಬಹುದಾಗಿದೆ. ಕಾಲನ ಹೊಡೆತಕ್ಕೆ ಸಾಕಷ್ಟು ಸವೆದಿದ್ದರೆ, ನಾನಾ ಕಾರಣಗಳಿಂದ ಹಲವು ಶಿಲ್ಪಗಳು ಭಿನ್ನವಾಗಿವೆ. ಗಂಡು ಹೆಣ್ಣಿನ ನೃತ್ಯದ ಭಂಗಿಯು ಶೃಂಗಾರ ಪ್ರಧಾನವಾಗಿದ್ದರೆ, ಕಂಬಕ್ಕೆ ಒರಗಿ ನಿದ್ರಿಸುತ್ತಿರುವ ದನಕಾಯುವವ ಸಾಮಾನ್ಯರ ಬದುಕನ್ನು ಪ್ರತಿನಿಧಿಸುತ್ತದೆ. ವೃದ್ಧ ಬ್ರಾಹ್ಮಣ ಕೊಡೆ ಹಿಡಿದು ನಡೆದುಹೋಗುತ್ತಿರುವ ಚಿತ್ರ ನಾನಾ ಅರ್ಥಗಳನ್ನು ಸೂಚಿಸುತ್ತದೆ. ಯಾಳಿ ಎಂದು ಕರೆಯಲ್ಪಡುವ ಸಿಂಹದೇಹಿ ಆನೆ ಮುಖದ ಶಿಲ್ಪ, ವಾಲಿ ಸುಗ್ರೀವರ ಹೋರಾಟ, ತಾಯಿ ಮತ್ತು ಮರಿ ಜಿಂಕೆಗಳ ವಾತ್ಸಲ್ಯ ಅಪರೂಪದ್ದು. ವಿಷ್ಣು ಪತ್ನಿ ಸಮೇತನಾಗಿ ಆಗಮಿಸಿ ಬಲಿಚಕ್ರವರ್ತಿಯನ್ನು ಕಾಲೆತ್ತಿ ತುಳಿಯುವ ಶಿಲ್ಪ ವಿಶಿಷ್ಟವಾಗಿದೆ. ವಿಷ್ಣುವು ವಾಮನ ರೂಪದಲ್ಲಿರದೆ ವಿಷ್ಣು ರೂಪಿಯಾಗಿಯೇ ಇರುವಂತೆ ಶಿಲ್ಪಿ ಕೆತ್ತಿದ್ದಾನೆ. ಮೀನನ್ನು ಬಲೆಕಾಹಿ ಹಿಡಿಯುವುದು ರೂಢಿ. ಆದರೆ ಅತಿ ದೊಡ್ಡದಾದ ಮೀನನ್ನು ಕತ್ತಿಯಲ್ಲಿ ಕೊಲ್ಲಲು ಹೊರಡುತ್ತಿರುವ ಯೋಧನನ್ನು ಶಿಲ್ಪಿ ಕೆತ್ತಿರುವುದು ಸುಂದರವಾಗಿದೆ.
‘ಜನಪದ ಕಥೆಯೊಂದರ ಪ್ರಕಾರ ಬಡ ವೃದ್ಧೆಯ ಶಾಪದಿಂದ ಈ ಗ್ರಾಮ ಹಿಂದಿನ ಸಾದಲಿ ಗ್ರಾಮ ಸುಟ್ಟುಹೋಗಿದ್ದು, ಅದರ ಪೂರ್ವಕ್ಕೆ ಸ್ಥಳಾಂತರಗೊಂಡಿತೆಂದು ಹಿರಿಯರು ಹೇಳುತ್ತಾರೆ.
ಪೆದ್ದಗುಡಿ ಅಥವಾ ದೊಡ್ಡಗುಡಿ ಎಂದು ಕರೆಯಲ್ಪಡುವ ಚನ್ನಕೇಶವ ದೇವಾಲಯ ಅಪರೂಪದ ಕೆತ್ತನೆಗಳಿಂದ ಕೂಡಿದೆ. ಈಗ ಅದರ ಸುತ್ತ ಲಾಂಟಾನಾ ಗಿಡಗಳು ಆವೃತಗೊಂಡಿವೆ. ದೇವರಿರದಿದ್ದರೂ ನಮ್ಮ ಹಿಂದಿನವರ ಕಲಾವಂತಿಕೆಗೆ ಸಾಕ್ಷಿಯಾಗಿರುವ ಈ ದೇವಾಲಯವನ್ನು ಸಂರಕ್ಷಿಸಿ ಉಳಿಸುವ ಕೆಲಸ ಆಗಬೇಕು’ ಎನ್ನುತ್ತಾರೆ ಗ್ರಾಮದ ಜಗದೀಶ್‌ಬಾಬು.
ಶೇ.೮೫.೦೬ ರಷ್ಟು ಮತದಾನ
ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಶೇ.೮೫.೦೬ ರಷ್ಟು ಮತದಾನವಾಗಿದೆ.
ನಗರದ ತಾಲ್ಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಮತಗಟ್ಟೆಯಲ್ಲಿ ಬೆಳಗಿನಿಂದ ನೀರಸವಾಗಿ ಸಾಗಿದ್ದ ಮತದಾನ ಪ್ರಕ್ರಿಯೆ ಬೆಳಗ್ಗೆ ೧೦ ಗಂಟೆಗೆ ಶೇ. ೬.೬೧, ೧೨ ಗಂಟೆಗೆ ಶೇ. ೨೪.೧೨ ಮತ್ತು ಮದ್ಯಾಹ್ನ ೨ ಗಂಟೆಗೆ ಶೇ. ೩೦.೭೪ ರಷ್ಟಾಗಿತ್ತು. ಮದ್ಯಾಹ್ನ ೨ ಗಂಟೆಯ ನಂತರ ಚುರುಕಾದ ಮತದಾನ ಪ್ರಕ್ರಿಯೆಯಿಂದ ಸಂಜೆ ೪ ಗಂಟೆಗೆ ಶೇ ೮೫.೦೬ ರಷ್ಟಾಯಿತು.
ಒಟ್ಟು ೨೫೭ ಮತದಾರರಿದ್ದು ೨೨೦ ಶಿಕ್ಷಕರು ಮಾತ್ರ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು ಉಳಿದ ೩೭ ಶಿಕ್ಷಕರು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿಲ್ಲ.
ರಥಸಪ್ತಮಿ ಪ್ರಯುಕ್ತ ಸಾಮೂಹಿಕ ೧೦೮ ಸೂರ್ಯ ನಮಸ್ಕಾರ
ರಥಸಪ್ತಮಿ ಅಂಗವಾಗಿ ನಗರದ ವಾಸವಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಶುಕ್ರವಾರ ಸಾಮೂಹಿಕ ೧೦೮ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀ ಪತಂಜಲಿ ಯೋಗ ಶೀಕ್ಷಣ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸುಮಾರು ೧೮೦ ಕ್ಕೂ ಹೆಚ್ಚು ಮಂದಿ ಸಾಮೂಹಿಕವಾಗಿ ಸೂರ್ಯ ನಮಸ್ಕಾರ ಮಾಡಿದರು.
ಬೆಳಗ್ಗೆ ೬.೩೦ ರಿಂದ ೭.೩೦ ರ ವರೆಗೂ ಯೋಗಾಸನ ಅಭ್ಯಾಸದ ಜೊತೆಗೆ ಸೂರ್ಯ ನಮಸ್ಕಾರ ಮಾಡಲಾಯಿತು.
ಸ್ಥಳೀಯ ಶಾಖೆಯ ಸಂಘಟನಾ ಪ್ರಮುಖರಾದ ಪಿ.ಶ್ರೀಕಾಂತ್ ಮಾತನಾಡಿ, ಪ್ರತಿ ವರ್ಷದಂತೆ ಈ ಭಾರಿಯೂ ಲೋಕ ಕಲ್ಯಾಣಾರ್ಥವಾಗಿ ರಥಸಪ್ತಮಿಯಂದು ಸೂರ್ಯ ನಮಸ್ಕಾರ ಹಮ್ಮಿಕೊಳ್ಳಲಾಗಿದೆ. ಯೋಗದಿಂದ ಉತ್ತಮ ಆರೋಗ್ಯದ ಜೊತೆಗೆ ಮಾನಸಿಕ ಹಾಗು ದೈಹಿಕ ಸದೃಡತೆ ಕಾಪಾಡಿಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ, ಪತಂಜಲಿ ಯೋಗ ಶಿಕ್ಷಣ ಸಮಿತಿಯ ಅಧ್ಯಕ್ಷ ಶಂಕರ್, ಸಂಘಟನಾ ಕಾರ್ಯದರ್ಶಿ ಕೇಶವಮೂರ್ತಿ, ಬೌದ್ದಿಕ್ ಪ್ರಮುಖ್ ಮಂಜುನಾಥ್, ಡಿ.ವಿ.ವೆಂಕಟೇಶ್, ಲಕ್ಷ್ಮಣ್, ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.
ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇದೇ ಮೊದಲ ಬಾರಿಗೆ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಸುಮಾರು ೨೧೫ ಮಂದಿ ಸಾಮೂಹಿಕ ೧೦೮ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಶುಕ್ರವಾರ ಪಾಲ್ಗೊಂಡಿದ್ದರು.
ಪಾದಚಾರಿ ಸಾವು
ರಸ್ತೆಯಲ್ಲಿ ಹೋಗುತ್ತಿದ್ದ ಪಾದಚಾರಿಯೊಬ್ಬರಿಗೆ ಮಾರುತಿ ೮೦೦ ಕಾರು ಡಿಕ್ಕಿ ಹೊಡೆದಿರುವ ಪರಿಣಾಮ ಕೆಂಪನಹಳ್ಳಿ ಗ್ರಾಮದ ಹನುಮಂತರಾಯಪ್ಪ (೬೫) ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.
ನಗರದ ಚಿಂತಾಮಣಿ ಬೈಪಾಸ್ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಬಳಿಯಲ್ಲಿ ಘಟನೆ ನಡೆದಿದ್ದು, ಕಾರು ಚಾಲಕ ಪರಾರಿಯಾಗಿದ್ದಾನೆ. ನಗರಠಾಣೆಯ ಪಿಎಎಸೈ ನವೀನ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಕಾರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

