26.1 C
Sidlaghatta
Tuesday, March 19, 2024

ಬೆಟ್ಟಿಂಗು – ಬ್ರ್ಯಾಂಡು – ಬದುಕು

- Advertisement -
- Advertisement -

ಶಿಡ್ಲಘಟ್ಟದಲ್ಲಿ ಅದೊಂದು ಸಮಯವಿತ್ತು. ನೆತ್ತಿಗೆ ದ್ವನಿವರ್ಧಕಗಳನ್ನು ಕಟ್ಟಿಕೊಂಡು ರಸ್ತೆಗಳಲ್ಲಿ “30ನೇ ತಾರೀಖು ಡ್ರಾ .. ಪ್ರಥಮ ಬಹುಮಾನ 10 ಲಕ್ಷ ರೂಪಾಯಿ. ಇಂದೇ ಕೊಳ್ಳಿರಿ” ಎಂದು ಕೂಗಿಕೊಂಡು ನಿಧಾನವಾಗಿ ಚಲಿಸುತ್ತಿದ್ದ ಆಟೋ ರಿಕ್ಷಾದ ಬದಿಗಳಲ್ಲಿ ನಿಂತು ತಾವು ಗಳಿಸಿ ಉಳಿಸಿದ್ದ 5-10 ರೂಪಾಯಿಗಳಲ್ಲಿ ಒಂದು ಟಿಕೆಟ್ ಪಡೆದು ವಿಜೇತರನ್ನು ಯಾವ ಪತ್ರಿಕೆಯಲ್ಲಿ ಪ್ರಕಟಿಸುತ್ತಾರೆಂದು ತಿಳಿದು ಆ ದಿನ ದಿನಪತ್ರಿಕೆಯ ಕಡೆಯಿಂದೆರಡನೆಯ ಪುಟದಲ್ಲಿ ಪ್ರಕಟವಾಗಿರುತ್ತಿದ್ದ ವಿಜೇತ ಸಂಖ್ಯೆಗಳಲ್ಲಿ ತಮ್ಮ ಲಾಟರಿ ಟಿಕೇಟಿನ ಸಂಖ್ಯೆಯನ್ನು ಕಡೆಯಿಂದ ಮೊದಲಿನ ಸಂಖ್ಯೆಯವರೆಗೂ ತುಲನೆ ಮಾಡಿಕೊಳ್ಳುತ್ತ, ಎಲ್ಲಾ ಸಂಖ್ಯೆಗಳು ಹೋಲಿಕೆಯಾದರೆ ಸಿಗುವ 10 ಲಕ್ಷದಿಂದ ಕಡೆಯ ಸಂಖ್ಯೆ ಹೋಲಿಕೆಯಾದರೆ ಸಿಗುವ 10 ರೂಪಾಯಿವರೆಗೂ ಏನೂ ಬಾರದ್ದನ್ನು ದೃಢೀಕರಿಸಿಕೊಳ್ಳುತ್ತಾ ಟಿಕೆಟ್ಗಾಗಿ ವ್ಯರ್ಥವಾದ ಉಳಿತಾಯದ 10 ರೂಪಾಯಿಯ ಬಗ್ಗೆ ಜಗಲಿಯ ಮೇಲೆ ಕುಳಿತು ಹಲುಬುತ್ತಿದ್ದುದು ಗೋಚರಿಸುತ್ತಿತ್ತು.
ದಿನಕಳೆದಂತೆ ಲಾಟರಿ ಟಿಕೇಟಿನ ವ್ಯಾಪಾರ update ಆಗಿ “ಸಿಂಗಲ್ ನಂಬರ್” ಲಾಟರಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟವು. ಪ್ರತಿ ಊರಿನ ಲಾಟರಿ ಅಂಗಡಿಗಳಲ್ಲಿ ಬೆಳಿಗ್ಗೆ , ಮಧ್ಯಾಹ್ನ, ಸಂಜೆಯ ಸಿನಿಮಾ ಶೋ ಗಳಂತೆ ಸಮಯದ ಅಂತರಗಳಲ್ಲಿ ಡ್ರಾ ನಡೆಯುತ್ತಿರಲು, ಜನರು ತಮ್ಮ ವೃತ್ತಿಗಳನ್ನು ಮರೆತು ಟಿಕೆಟ್ ಪಟ್ಟಿಯನ್ನು ಕೈಲಿ ಹಿಡಿದು ಅಂಗಡಿಯ ಮುಂದೆ ನಿಂತಿರುತ್ತಿದ್ದುದು ಸಾಮಾನ್ಯವಾಗತೊಡಗಿತು. ಜನರು ದಿನಕಳೆದಂತೆ ತಮ್ಮ ಶ್ರಮಾಧಾರಿತ ವೃತ್ತಿ, ವ್ಯವಹಾರಗಳನ್ನು ಬಿಟ್ಟು, ಗಂಟೆಗಳಲ್ಲಿ ಸುಲಭವಾಗಿ ಕುಳಿತಲ್ಲಿ ಸಂಪಾದಿಸಬಹುದಾದ ಹಣದ ಮಾರುಹೋಗತೊಡಗಿದ್ದರು. ಒಂದು ವಾರ ಲಾಟರಿಗಳಿಗೆ ದುಡ್ಡು ಸುರಿದು ಒಂದು ದಿನ ಲಾಟರಿ ಹೊಡೆದರೆ ಅದರಲ್ಲಿ ಅರ್ಧ ಹಣದಲ್ಲಿ ಸಂಭ್ರಮ ಆಚರಿಸಿ ಇನ್ನರ್ಧ ಹಣವನ್ನು ದುಪ್ಪಟ್ಟು ಮಾಡುವ ಹಂಬಲದಲ್ಲಿ ಮುಂದಿನ ದಿನ ಲಾಟರಿ ಕೊಳ್ಳುವಲ್ಲಿ ತೊಡಗಿಸುತ್ತಿದ್ದರು. ಇನ್ನು ಕೆಲವರು ಕಳೆದುಕೊಂಡ ಹಣವನ್ನು ಕಳೆದುಕೊಂಡಲ್ಲೇ ಮತ್ತೆ ಗಳಿಸುವ ದೃಢ ಸಂಕಲ್ಪದಿಂದ ಮನೆಯವರ, ಸ್ನೇಹಿತರ ಬಳಿ ಸಿಗದಿದ್ದರೆ ಅನ್ಯರಿಂದ ಸಾಲ ಪಡೆದಾದರೂ ಹಣವನ್ನು ಲಾಟರಿಗಾಗಿ ಹೂಡುವಲ್ಲಿ ಯಶಸ್ವಿಯಾಗುತ್ತಿದ್ದರು. ಮೂರು ಹೊತ್ತು ಮೂರು ದಿನ ಮೂರು ವಾರ ಕಳೆಯುವಷ್ಟರಲ್ಲಿ ಕಾಸು ಕರಗಿ ಸಾಲ ಎರಗಿ ದೈನಂದಿನ ಜೀವನಕ್ಕೆ ಕಷ್ಟವಾಗುತ್ತಿದ್ದ ಉದಾಹರಣೆಗಳು ಬಹಳಷ್ಟು ಸಿಗುತ್ತಿದ್ದವು.
ಬಣ್ಣದ ಕಾಗದಗಳ ಲಾಟರಿ ಟಿಕೆಟ್ ದಿನಕಳೆದಂತೆ ತಂತ್ರಜ್ಞಾನದ ಗಾಳಿಗೆ ಸಿಲುಕಿ ಕಾಲದೊಂದಿಗೆ ತಾನೂ ನವೀಕರಣಗೊಂಡಿತು. ಆಗ ಉದಯಿಸಿದ್ದು ಲೊಟ್ಟೊ , ಪ್ಲೇವಿನ್ ನಂತಹ ಹೆಸರುಗಳು. ಊರಿನಲ್ಲಿ ಅಲ್ಲಲ್ಲಿ ಅಂಗಡಿಗಳಲ್ಲಿ ಅಥವಾ ಪೆಂಡಾಲುಗಳ ಕೆಳಗೆ ಇರಿಸಿರುತ್ತಿದ್ದ ಬೆಳ್ಳನೆಯ ಪೆಟ್ಟಿಗೆಯೊಳಗಿಂದ ಬುಕ್ ಮಾಡಿದೊಡನೆ ಬರುತ್ತಿದ್ದ ಚೀಟಿಗಳನ್ನು ಅರಿದು ತಂದು, ರಾತ್ರಿ ಟಿವಿಯಲ್ಲಿ ಗೋಲಾಕಾರದ ಪಂಜರವನ್ನು ತಿರುಗಿಸಿ ಒಳಗಿನಿಂದ ಸಂಖ್ಯೆಗಳು ಬರೆದಿರುತ್ತಿದ್ದ ಚೆಂಡುಗಳನ್ನು ಒಂದೊಂದಾಗಿ ತೆಗೆದು ಹೇಳುವುದನ್ನು ನೋಡುವುದಕ್ಕಾಗಿ ಜನರು ಟಿವಿಯ ಮುಂದೆ ಜಮಾಯಿಸುತ್ತಿದ್ದರು. ತಂತ್ರಜ್ಞಾನದಿಂದ ಟಿಕೆಟ್ ನ ರೂಪ ಡ್ರಾ ಹೇಳುವ ಶೈಲಿ ಬದಲಾಯಿತೇ ಹೊರತು ಜನರ ಜೀವನವಲ್ಲ. ಅದೇ ಒಂದು ವಾರ ತೊಡಗಿಸು ಒಂದು ದಿನ ಗೆಲ್ಲು, ಅರ್ಧ ಖಾಲಿ ಮಾಡು ಇನ್ನರ್ಧ ತೊಡಗಿಸು ಪೂರ್ತಿ ಖಾಲಿ ಆಗುವ ಸಂಪ್ರದಾಯ ಮುಂದುವರೆದಿತ್ತು.
ತದನಂತ ಲಾಟರಿ ನಿಷೇಧಗೊಂಡಿದ್ದರಿಂದ ಬಹಳಷ್ಟು ಜನರು ಕಷ್ಟವಾದರೂ ಈ ವ್ಯಸನದಿಂದ ದೂರ ಉಳಿಯಬೇಕಾಯಿತು.
ಈಗ ಕಾಲ ಬದಲಾಗಿದೆ, ಜನರ ಕೈಗೆ ಮೊಬೈಲ್ ಫೋನುಗಳು ಬಂದಿವೆ. ಇಂದಿನ ಜನರೇಶನ್ ಗೆ ತಕ್ಕಂತೆ ಈ ಖಾಯಿಲೆ ಅನ್ಯ ಸ್ವರೂಪವೇ ಪಡೆದುಕೊಂಡಿದೆ, ಬೆಟ್ಟಿಂಗ್ ಅರಿವಿಲ್ಲದೆ ಬಹಳಷ್ಟು ಮಂದಿಯ ದಿನಶೈಲಿಯಾಗಿದೆ. ವಿಪರ್ಯಾಸವೆಂದರೆ ಹಿಂದೆ ಸಂಕ್ರಾಂತಿಯ ಸಮಯದಲ್ಲಿ ಕೆಲವು ಹಳ್ಳಿಗಳಲ್ಲಿ ಹಿರಿಯರು ಆಡಿಸುತ್ತಿದ್ದ ಕೋಳಿ ಪಂದ್ಯಗಳ ಜೊತೆಗೆ ಮಾತ್ರ ಅಂಟಿರುತ್ತಿದ್ದ ಈ ಬೆಟ್ಟಿಂಗ್ ಹೆಸರು ಈಗ ದೇಶವೇ ಕಾತುರದಿಂದ ನೋಡುವ ಕ್ರಿಕೆಟ್ ಪಂದ್ಯಾವಳಿಗಳಿಗೆ ಹರಡಿದೆ. ಆಘಾತಕಾರಿ ವಿಷಯವೆಂದರೆ ಈ ಚಟುವಟಿಕೆಯಲ್ಲಿ ತೊಡಗಿರುವವರು ಬಹುತೇಕ ಮಂದಿ ಯುವಕರು. ಕೈಯಲ್ಲೊಂದು ಮೊಬೈಲು, ಅದರಲ್ಲೊಂದೆರಡು App, ಇಂಟರ್ನೆಟ್ ಇದ್ದರೆ ಸಾಕು ತಮ್ಮ ಎದುರಾಗಿ ಹಣ ತೊಡಗಿಸುವವರನ್ನು ಹುಡುಕಿಕೊಂಡು ತಮ್ಮ ಆಯ್ಕೆಯ ಟೀಮು, ಆಟಗಾರ, ಅವನು ಹೊಡೆಯುವ 4, 6, ಅಥವಾ ಬೀಳಬಹುದಾದ ವಿಕೆಟ್ ಹೀಗೆ ಪ್ರತಿಯೊಂದು ಬಾಲುಗಳ ಮೇಲೆ ತಮ್ಮ ದುಡ್ಡನ್ನು ತೊಡಗಿಸಿಕೊಳ್ಳುತ್ತಾರೆ. ಈ ಪ್ರಕ್ರಿಯೆಯನ್ನು ನೋಡಿಕೊಳ್ಳುವುದಕ್ಕೆ ಕೆಲವೊಮ್ಮೆ ಮಧ್ಯವರ್ತಿಗಳು, ಅವರಿಗಿಷ್ಟು ಕಮಿಷನ್ ಕೂಡ ನಿಗದಿಯಾಗುತ್ತದೆ. ಫೋನ್ ಕರೆಗಳ ಮೂಲಕವೇ ಇಡೀ ಪ್ರಕ್ರಿಯೆಯನ್ನೇ ನಡೆಸಿಬಿಡುತ್ತಾರೆ.
ಕಾಲ ಬದಲಾದರೂ ಅದರ ಫಲಿತಾಂಶಗಳು ಹಾಗೂ ಅದರಿಂದಾಗುವ ಪರಿಣಾಮಗಳೇನು ಬದಲಾಗಿಲ್ಲ. ಆದರೆ ಈಗಿನ ಬೆಟ್ಟಿಂಗ್ ಸಂಸ್ಕೃತಿಯನ್ನು ನಾವು ಗಂಭೀರವಾಗಿ ಪರಿಗಣಿಸಬೇಕೆನ್ನುವುದು ಏಕೆಂದರೆ ಈ ಜಾಲದಲ್ಲಿ ಇರುವವರು ಬಹುತೇಕ ಮಂದಿ ಯುವಕರು, ಹಲವರು ಇನ್ನೂ ಓದುತ್ತಿರುವವರು. ಅಪ್ಪ ಅಮ್ಮಂದಿರು ತಮ್ಮ ಜೀವನವನ್ನು ತೇಯ್ದು ಗಳಿಸಿದ ಹಣದಲ್ಲಿ ಕಾಲೇಜಿನ ಶುಲ್ಕವನ್ನು ತುಂಬಿ, ಖರ್ಚಿಗೆಂದು ಮತ್ತೊಂದಷ್ಟನ್ನು ಪ್ರತಿ ವಾರ ಜೇಬಿಗೆ ತುರುಕಿ, ಎರಡು ವರ್ಷ ಮುಗಿಯುವುದರೊಳಗೆ ಸಾಲದಲ್ಲೊಂದು ಬೈಕನ್ನು ಕೊಡಿಸಿ ಇಂಜಿನಿಯರ್, ಡಿಗ್ರಿ ಮುಗಿಸಿ ಬರುವ ಮಕ್ಕಳನ್ನು ನೋಡಲು ಕಾಯುತ್ತಿದ್ದರೆ, ಮಕ್ಕಳು ತಮ್ಮ show off lifestyleಗೆ ಜಾರಿ ಎಲ್ಲರಿಗಿನ್ನು ತಾನು ಹೆಚ್ಚು ಎಂದು ತೋರಿಸುವ ಭರದಲ್ಲಿ, ಸುಲಭವಾಗಿ ಹಣ ಗಳಿಸಬಹುದೆಂಬ ಭ್ರಮೆಗೆ ಬಿದ್ದು ಬೆಟ್ಟಿಂಗ್ ನಲ್ಲಿ ಹಣ ತಡಗಿಸುವುದು ಸಾಮಾನ್ಯವಾಗತೊಡಗಿದೆ. ಹಣ ಬೇಗ ಗಳಿಸಬಹುದೋ ಇಲ್ಲವೋ ಆದರೆ 3-4 ವರ್ಷದ ಡಿಗ್ರಿ 5-6 ವರ್ಷಗಳಾಗುವುದಂತೂ ಖಚಿತ.
ಇದು ವಿದ್ಯಾರ್ಥಿಗಳ ಉದಾಹರಣೆಯಾದರೆ ಇನ್ನು ಕಾಲೇಜು ಮುಗಿಸಿ ಹೊರಬರುವವರ ಕಥೆ ಇನ್ನೂ ವಿಷಾದಕರವಾಗಿದೆ. ಈಗಾಗಲೇ 5-6 ವರ್ಷಗಳಲ್ಲಿ ಡಿಗ್ರಿ ಮುಗಿಸಿ ಅಥವಾ ವಿದ್ಯೆಯನ್ನು ಪೂರ್ತಿಗೊಳಿಸದೆ ಉಳಿಯುವ ಯುವಕರು ಕೆಲಸ ಸಿಗದೇ ಉಳಿಯುವುದು ಸಾಮಾನ್ಯವಾಗುತ್ತದೆ. ಆಗ ಮತೊಮ್ಮೆ ತಂದೆ ತಾಯಿಯರನ್ನು ಕಾಡಿ ಬೇಡಿ ತಮ್ಮಲ್ಲಿರುವ ಅಥವಾ ಸಾಲ ಮಾಡಿಯಾದರೂ ಹಣವನ್ನು ತೊಡಗಿಸಿ ಯಾವುದೊ ವ್ಯಾಪಾರದ ಕಾರ್ಯಕ್ಕೆ ಮುಂದಾಗುತ್ತಾರೆ. ಅದರಲ್ಲಿ ನಿಧಾನವಾಗಿ ಹಲವು ದಿನಗಳಲ್ಲಿ ಬರುವ ದುಡ್ಡನ್ನು ಮತ್ತೆ ಶ್ರೀಘ್ರವಾಗಿ ಬೆಟ್ಟಿಂಗ್ನಲ್ಲಿ ಹೆಚ್ಚಿನ ಹಣ ಸಂಪಾದಿಸಲು ತೊಡಗಿಸುತ್ತಾರೆ. ಹಣ ಕಡಿಮೆಯಾದಲ್ಲಿ ಸ್ನೇಹಿತರ ಬಳಿ ವ್ಯಾಪಾರದ ಕಥೆಗಳನ್ನು ಹೇಳಿ ಎರವಲು ಪಡೆಯುತ್ತಾರೆ. ಅದೂ ಕಳೆದು ಹೋದರೆ ಸ್ನೇಹಿತನ ಸ್ನೇಹ ಕಡಿದು ಹೋಗುತ್ತದೆ ಮತ್ತೊಬ್ಬ ವ್ಯಥೆಯ ಕಥೆ ಕೇಳಿ ಹಣ ಕೊಡುವ ಸ್ನೇಹಿತನ ಹುಡುಕಾಟ ಶುರುವಾಗುತ್ತದೆ.
ಈ ಜಾಲದಲ್ಲಿ ಹಲವರು ತಮ್ಮನ್ನು ತಾವು expertಗಳಂತೆ ಬಿಂಬಿಸಿಕೊಳ್ಳತೊಡಗುತ್ತಾರೆ. ಬ್ರಾಂಡೆಡ್ ಬಟ್ಟೆಗಳು, costly ಮೊಬೈಲು, ಬಣ್ಣ ಬಣ್ಣದ ಮಾತುಗಳು ಯುವಕರನ್ನು ಆಕರ್ಷಿಸಲು ಅವರ ಬಂಡವಾಳವಾಗಿಬಿಡುತ್ತದೆ. ಹೊಸದಾಗಿ ಹಣ ತೊಡಗಿಸಲು ಬರುವ ಕುರಿಯನ್ನು ಹುಡುಕಿ ಅವರಿಗೆ ಗೊತ್ತಿರದ ಸಾಮಾನ್ಯ ವಿಷಯಗಳನ್ನು googleನಲ್ಲಿ ಹುಡುಕಿ ಹೇಳಿ ತಾನೇನೋ ಬೆಟ್ಟಿಂಗ್ ತಜ್ಞ ಎಂಬಂತೆ ತೋರಿಸಿಕೊಳ್ಳುತ್ತಾರೆ. ಒಂದೆರಡು ಬಾರಿ ಈ ಮ್ಯಾಚು ಯಾರು ಗೆಲ್ಲುತ್ತಾರೆ, ಮುಂದಿನ ಮ್ಯಾಚು ಯಾರು ಸೋಲುತ್ತಾರೆ, ಈ ದಿನ ಇವರು ಗೆಲ್ಲೋದು fix, cup ಅವರಿಗೆ fix ಎಂದು ಗಾಳಿಯಲ್ಲಿ ಗುಂಡನ್ನು ಹಾರಿಸಿದಂತೆ ಸಲಹೆಗಳನ್ನು ಕೊಟ್ಟು ಅದು ನಡೆದರೆ “ನೋಡ್ದಾ ನಾನು ಹೇಳ್ದೆ ” ಎಂದು , ಉಲ್ಟಾ ಆದರೆ “ಇವರು ಕಡೆಯ ಸಮಯದಲ್ಲಿ ಅವರೊಂದಿಗೆ deal ಮಾಡಿಕೊಂಡುಬಿಟ್ಟಿದಾರೆ, ನಮಗೆ last ಸೆಕೆಂಡ್ ಅಲ್ಲಿ ಗೊತ್ತಾಯ್ತು” ಎಂದು ದಾರಿ ತಪ್ಪಿಸುತ್ತಾರೆ, ಇತರರ ದುಡ್ಡಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಹೀಗೆ ಕುರಿಗಳ ಸಂತೆ ಮುಂದುವರೆಯುತ್ತದೆ.
ಹಳೆ ಕುರಿ ಹೊಸ ಕುರಿಗಳನ್ನು ಕರೆತರುತ್ತದೆ, ಎಷ್ಟು ಕುರಿಗಳು ಬಂದರೂ ನರಿಗೆ ಲಾಭವೇ…
ಶಿಡ್ಲಘಟ್ಟದ ಗಲ್ಲಿಗಳಲ್ಲಿ ಬೆಟ್ಟಿಂಗ್ ನ ಕಥೆ ಸಾಮಾನ್ಯವಾಗಿದೆ, ಈಗ ಬಹಳಷ್ಟು ಯುವಕರ ಜೀವನ ಶೈಲಿಯಾಗಿ ಬೆಟ್ಟಿಂಗ್ ಮುಂದುವರೆಯುತ್ತಿದೆ. ಇಂದಿನ ಯುವಕರನ್ನು ಮುಂದಿನ ಜವಾಬ್ದಾರಿಯುತ ಪ್ರಜೆಗಳಾಗಿ, ನಾಡಿನ ಭವಿಷ್ಯವನ್ನಾಗಿ ಕಾಣುವ ಈ ಸಮಯದಲ್ಲಿ ಮತ್ತೊಮ್ಮ ಎಲ್ಲರೂ ಗಂಭೀರವಾಗಿ ತಮ್ಮನ್ನು ತಾವು ಒಂದು ಪ್ರಶ್ನೆ ಕೇಳಿಕೊಳ್ಳುವ ಅವಶ್ಯಕತೆ ಖಂಡಿತ ಇದೆ.
ನಾವೆಲ್ಲರೂ ಎತ್ತ ಸಾಗುತ್ತಿದ್ದೇವೆ?
– ಸಂದೀಪ್ ಜಗದೀಶ್ವರ

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!