ಅಲೆಮಾರಿಗಳ ಸಾರಿಗೆ ವಾಹಕ ಕತ್ತೆಗಳು

Sidlaghatta Donkeys Rural Life Transport Carrier Article Write up Mallikarjuna DG

ಬಯಲು ಸೀಮೆಯಲ್ಲಿ ಅಲೆಮಾರಿಗಳು ತಮ್ಮ ಗುಡಾರದ ವಸ್ತುಗಳು, ಅಡುಗೆ ಸಾಮಗ್ರಿಗಳನ್ನು ಸಾಗಿಸುವುದಕ್ಕೆ ಕತ್ತೆಗಳನ್ನು ಬಳಸುತ್ತಾರೆ. ಶಿಡ್ಲಘಟ್ಟದ ಹೊರವಲಯದಲ್ಲಿ ಇಂತಹ ತಂಡವೊಂದು ಬೀಡುಬಿಟ್ಟಿದ್ದು, ಅಲೆಮಾರಿ ಜನರು ತಮ್ಮ ಟೆಂಕಿ ಹುಡುಕುವ ಮುಂಚೆ ತಮ್ಮ ಗುಡಾರದ ವಸ್ತುಗಳು, ಅಡುಗೆ ಸಲಕರಣೆಗಳು, ವಿಶೇಷವಾಗಿ ನೀರಿನ ಬಿಂದಿಗೆಗಳು ಎಲ್ಲವನ್ನೂ ಕತ್ತೆಗಳ ಬೆನ್ನ ಮೇಲೆ ಕಟ್ಟಿ ಅವುಗಳನ್ನು ಮೇಯಲು ಬಿಟ್ಟಿದ್ದರು. ಅವು ಈ ಹೊರೆಯನ್ನು ಹೊತ್ತುಕೊಂಡೇ ಮೇಯಬೇಕು.

 ಕತ್ತೆಗಳ ಮುಂದಿನ ಕಾಲುಗಳ ಗೊರಸುಗಳ ಮಧ್ಯದಲ್ಲಿ ಹಾಕಿ ಕಟ್ಟಿದ್ದರು. ಅವುಗಳು ಕುಂಟುತ್ತಾ ಅಲ್ಲಲ್ಲೇ ನಿಂತು ಮೇಯುತ್ತಿದ್ದವು. ದಿನಗಳೆದಂತೆ ಕುದುರೆ, ದನಗಳ ಬಳಕೆ ಕಡಿಮೆಯಾದಂತೆ, ಕತ್ತೆಗಳು ಕೂಡ ಕಡಿಮೆ ಬಳಕೆಯಾಗುತ್ತಾ ಬಂದಿವೆ. ಆದರೆ ಅವು ಅವಶೇಷಗೊಂಡಿಲ್ಲ. ಕೆಲವು ಅಲೆಮಾರಿ ಪಂಗಡಗಳು ಇವತ್ತಿಗೂ ಈ ಕತ್ತೆಗಳ ಸಾರಿಗೆ ಪರಂಪರೆಯನ್ನು ಉಳಿಸಿಕೊಂಡೇ ಬಂದಿವೆ.

ಈ ದೃಶ್ಯವನ್ನು ಕಂಡಾಗ “ನೀ ನನಗಿದ್ದರೆ ನಾ ನಿನಗೆ” ಎಂಬ ನೀತಿ ಸಾರುವ ಕಯ್ಯಾರ ಕಿಞ್ಞಣ್ಣ ರೈ ಅವರ ಜನಪ್ರಿಯ ಶಿಶು ಪದ್ಯ “ಸಂತೆಗೆ ಹೋದನು ಭೀಮಣ್ಣ
ಹಿಂಡಿಯ ಕೊಂಡನು ಹತ್ತು ಮಣ;
ಕತ್ತೆಯ ಬೆನ್ನಿಗೆ ಹೇರಿಸಿದ
ಕುದುರೆಯ ಜೊತೆಯಲಿ ಸಾಗಿಸಿದ…” ನೆನಪಾಗುತ್ತದೆ.

 “ನೀನು ನನ್ನನ್ನು ಚೆನ್ನಾಗಿ ಸಾಕಿಕೊಂಡರೆ, ನಾನು ನಿನ್ನ ಹೊರೆಯನ್ನು ಹೊರುತ್ತೇನೆ” ಅನ್ನುವ ನೀತಿ ಕೂಡ ನಾವು ಈ ರೂಪದಲ್ಲಿ ಕಾಣಲು ಸಾಧ್ಯವಿದೆ. ಅಲೆಮಾರಿಗಳು ಸಾಮಗ್ರಿಗಳನ್ನಷ್ಟೇ ಅಲ್ಲ, ನಡೆಯಲಿಕ್ಕಾಗದ ಮಕ್ಕಳನ್ನು ಕೂಡ ಕತ್ತೆಗಳ ಬೆನ್ನಿನ ಮೇಲೆ ಕೂರಿಸಿ ಕರೆದೊಯ್ಯುತ್ತಾರೆ.

 “ವಸ್ತು ಸಾಗಾಣಿಕೆಯಲ್ಲಿ ಜಾನಪದೀಯವಾಗಿಯೂ ಕತ್ತೆಗಳು ಬಳಕೆಗೊಂಡಿದ್ದಾವೆ. ಕತ್ತೆಯ ಬಳಕೆ ವಿಶೇಷವಾಗಿ ಮಡಿವಾಳರ ಮೂಲಕವೇ ಬೆಳಕಿಗೆ ಬಂದದ್ದು. ಕತ್ತೆಯು ಹಿಂದಿನಿಂದಲೂ ಸಾರಿಗೆಯ ವ್ಯವಸ್ಥೆಯಾಗಿ ರೂಪುಗೊಂಡಿವೆ. ಪ್ರಮುಖವಾಗಿ ವಸ್ತು ವಾಹಕವಾಗಿ ಕತ್ತೆಯ ಬಳಕೆಯನ್ನು ಅಗಸರು ಬಟ್ಟೆಯ ಮೂಟೆಗಳನ್ನು ಸಾಗಿಸಲು ಬಳಸಿದರೆ, ಉಪ್ಪು ಮಾರುವವರು ಕತ್ತೆಗಳ ಮೇಲೆ ಉಪ್ಪು ಮೂಟೆಗಳನ್ನು ಹೇರಿ ಊರೂರು ತಿರುಗಿ ಮಾರಲು ಬಳಸುತ್ತಿದ್ದರು. ಇದರ ಇನ್ನೊಂದು ರೂಪವಾಗಿ ಅಲೆಮಾರಿ ಜನಾಂಗ ಇಂತಹ ಕೆಲಸಗಳಿಗೆ ಕತ್ತೆಯನ್ನು ಬಳಸಿಕೊಳ್ಳುತ್ತಾರೆ.

 ಸಿನಿಮಾಗಳಲ್ಲಿ ಹಾಸ್ಯದ ದೃಶ್ಯಗಳಲ್ಲಿ ಸಹ ಕತ್ತೆಗಳನ್ನು ಬಳಸಿಕೊಳ್ಳಲಾಗಿದೆ. ಹೀಗಾಗಿ ಕತ್ತೆಗಳು ಮನರಂಜನೆಗೆ, ಸಾಮಾನು ಸರಂಜಾಮುಗಳನ್ನು ಹೊರುವ ಬಿಟ್ಟಿ ಚಾಕರಿಯ ಉಪಕಾರಿ ಜೀವಿಯೂ ಹೌದು. ಕತ್ತೆ ವಿರಳವಾದರೂ ಕೂಡ ಇಂದಿಗೂ ಅನೇಕ ರೂಪದಲ್ಲಿ ಬಳಕೆಯಾಗುತ್ತಿದೆ” ಎನ್ನುತ್ತಾರೆ ಸಾಹಿತಿ ಸ.ರಘುನಾಥ.

 “ಕತ್ತೆಯ ಮುಖ ದರ್ಶನ ಶುಭ ಎಂಬ ಪರಿಕಲ್ಪನೆ ಕೊಟ್ಟು ಬೀದಿಬದಿಯಲ್ಲಿ ಕತ್ತೆಗಳ ಫೋಟೋ ಮಾರಿ ಹೊಟ್ಟೆಹೊರೆಯುವವರನ್ನು ಹಲವೆಡೆ ಕಾಣಬಹುದಾಗಿದೆ. ಅವಲಕ್ಷಣವೆನಿಸಿಕೊಂಡಿದ್ದ ಪ್ರಾಣಿ ಈಗ ಸಲ್ಲಕ್ಷಣದ ಪ್ರಾಣಿಯಾಗಿ ಮಾನವನ ಜೀವನದಲ್ಲಿ ಪ್ರವೇಶ ಪಡೆದಿರುವುದು ನಿಜಕ್ಕೂ ಪ್ರಾಣಿಪ್ರಿಯರು ಸಂತೋಷಿಸಬೇಕಾದ ವಿಚಾರ.

 ಕತ್ತೆಯ ಹಾಲು ಆಯುರ್ವೇದದಲ್ಲಿ ಔಷಧ ರೂಪದಲ್ಲಿ ಬಳಕೆಯಾಗುತ್ತಿದೆ. ಮುಖ್ಯವಾಗಿ ಮಕ್ಕಳ ಆರೋಗ್ಯ ರಕ್ಷಣೆಗಾಗಿ ಕತ್ತೆಯ ಹಾಲನ್ನು ಹಿಂದಿನಿಂದಲೂ ಬಳಸುತ್ತಿದ್ದಾರೆ. ಈಗ ಕೆಲವರು ಹಾಲು ಕೊಡುವ ಕತ್ತೆಗಳನ್ನು ಹಳ್ಳಿಹಳ್ಳಿಗೂ ಕರೆದುಕೊಂಡು ಹೋಗಿ ಹಾಲನ್ನು ಮಾರುವುದನ್ನು ಉಪಕಸುಬಾಗಿ ಮಾಡಿಕೊಂಡಿರುತ್ತಾರೆ” ಎಂದು ಅವರು ವಿವರಿಸಿದರು.

 ಅಲೆಮಾರಿ ಜನಾಂಗದವರನ್ನು ಈ ಬಗ್ಗೆ ಕೇಳಿದಾಗ, “ಕುದುರೆಗಳ ಬದಲು ಕತ್ತೆಗಳನ್ನ ಬಳಸಿಕೊಳ್ಳುವುದರಿಂದ ಆಗುವ ಅನುಕೂಲವೇನೆಂದರೆ ನಿರ್ವಹಣೆ ವೆಚ್ಚ. ಕುದುರೆಗಾದರೆ ಹಸಿ ಹುಲ್ಲು, ಹುರುಳಿ ಬೇಕಾಗುತ್ತದೆ. ಕತ್ತೆಗಳು ಹಾಗಲ್ಲ, ತಮ್ಮ ಟೆಂಕಿಗಳಿಗೆ ಕರೆದೊಯ್ಯುವ ದಾರಿ ಮಧ್ಯದಲ್ಲಿ ಹುಲ್ಲು ಕಂಡಲ್ಲಿ ಮೇಯುತ್ತಾ ಸಾಗುತ್ತವೆ” ಎಂದು ಹೇಳಿದರು.

-ಡಿ.ಜಿ.ಮಲ್ಲಿಕಾರ್ಜುನ

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
https://www.sidlaghatta.com

📱 Join WhatsApp
https://wa.me/917406303366?text=Hi

Leave a Reply

Your email address will not be published. Required fields are marked *

error: Content is protected !!