ಛಾಯಾಗ್ರಾಹಕರ ಸ್ವರ್ಗ ನಂದಿಬೆಟ್ಟ

ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟ ಛಾಯಾಗ್ರಾಹಕರ ನೆಚ್ಚಿನ ತಾಣ. ಕೆಲವರು ಇಲ್ಲಿನ ಹಕ್ಕಿಗಳ ಫೋಟೋ ತೆಗೆಯಲು ಬಂದರೆ, ಇನ್ನು ಕೆಲವರು ಮಂಜು ಮುಸುಕಿರುವ ಮನೋಹರ ದೃಶ್ಯಾವಳಿಗಳನ್ನು ಸೆರೆಹಿಡಿಯಲು ಬರುತ್ತಾರೆ. ಪ್ರಿ ವೆಡ್ಡಿಂಗ್ ಫೋಟೋಗ್ರಫಿಗಾಗಿಯೂ ಹಲವಾರು ಮಂದಿ ಆಗಮಿಸುತ್ತಾರೆ. ಈಗ ಎಲ್ಲರ ಅಂಗೈನಲ್ಲಿ ಮೊಬೈಲ್ ಇರುವುದರಿಂದ ಎಲ್ಲರೂ ಫೋಟೋ ತೆಗೆಯುವವರೇ…
“ನಂದಿಬೆಟ್ಟದ ಮೇಲೆ ಹಗಲಿನ ಹವಾಮಾನ ಥೇಟ್ ಯೂರೋಪ್ ನಂತೆ ಇರುತ್ತದೆ. ರಾತ್ರಿ ವೇಳೆಯಲ್ಲಿ ಮಂಜಿನಿಂದ ಕೂಡಿದ ಮೋಡವನ್ನು ಗಾಳಿಯು ಹೊತ್ತು ತರುತ್ತದೆ. ಶ್ರೀರಂಗಪಟ್ಟಣದಲ್ಲಿ ಒಂದು ತಿಂಗಳ ಕಾಲ ಅನಾರೋಗ್ಯದಿಂದ ನರಳಿದ ನಾನು ಆರೋಗ್ಯ ಸುಧಾರಣೆಗಾಗಿ ರಜೆ ಪಡೆದು ನಂದಿದುರ್ಗಕ್ಕೆ ಬಂದೆ. ಇಲ್ಲಿನ ಒಳ್ಳೆಯ ಹವೆ ನನ್ನ ಆರೋಗ್ಯವನ್ನು ಸರಿಮಾಡುತ್ತದೆ. ಇಲ್ಲಿ ಗಾಳಿ ಬೀಸುವ ಸದ್ದು ಕೇಳಿದಾಗ ನಾವು ನಮ್ಮ ಸ್ಕಾಟ್ ಲೆಂಡ್ ನಲ್ಲಿರುವಂತೆ ಭಾಸವಾಗುತ್ತದೆ”.
ಈ ಮೇಲಿನ ಮಾತುಗಳನ್ನು ಬರೆದವರು ಜೇಮ್ಸ್ ವೆಲ್ಷ್ ಎಂಬ ಬ್ರಿಟಿಷ್ ಜನರಲ್. ಈತ ಈಸ್ಟ್ ಇಂಡಿಯಾ ಕಂಪೆನಿಯ ಮದ್ರಾಸ್ ಆರ್ಮಿಯಲ್ಲಿ 1790 ರಿಂದ 1848 ವರೆಗೂ ಸೇವೆ ಸಲ್ಲಿಸಿದ್ದರು. ಅವರು ತಮ್ಮ 40 ವರ್ಷಗಳ ಮಿಲಿಟರಿ ಸೇವೆಯ ಕುರಿತು ಬರೆದಿರುವ “ಮಿಲಿಟರಿ ರೆಮಿನಸೆನ್ಸಸ್” ಪುಸ್ತಕದಲ್ಲಿ ನಂದಿಬೆಟ್ಟದಲ್ಲಿ ಅವರು ತಂಗಿದ್ದು ಆರೋಗ್ಯ ಸುಧಾರಿಸಿಕೊಂಡಿದ್ದರ ಕುರಿತು ಹಾಗೂ ನಂದಿ ಬೆಟ್ಟದ ಸೌಂದರ್ಯದ ಬಗ್ಗೆ ಬರೆದಿದ್ದಾರೆ.
ಬೆಳಗಿನ ಕೆಲ ಗಂಟೆಗಳು ಸೂರ್ಯನ ಶಾಖ ತಟ್ಟಬಾರದು, ವಾಹನ ಮಾಲಿನ್ಯದಿಂದ ದೂರವಿರಬೇಕು, ಮನಸ್ಸಿಗೆ ಮುದನೀಡುವ ತಂಪಾದ ವಾತಾವರಣ ಬೇಕು, ಉಲ್ಲಾಸ ಮತ್ತು ಜೀವನೋತ್ಸಾಹವನ್ನು ತುಂಬಿಕೊಳ್ಳಬೇಕು, ಎಲ್ಲ ಜಂಜಡಗಳಿಂದ ದೂರವುಳಿಯಬೇಕು ಎಂದಿರುವವರು ನಂದಿಬೆಟ್ಟಕ್ಕೆ ಭೇಟಿ ನೀಡಬಹುದು. ಮಂಜು ಮುಸುಕಿದ ಬೆಟ್ಟದಲ್ಲಿ ಗಿಡಮರಗಳ ನಡುವೆ ಹೆಜ್ಜೆಯಿಡುತ್ತಾ ಸಾಗುತ್ತಿದ್ದರೆ ಮನಸ್ಸಿಗೆ ಆನಂದ, ಸಂಭ್ರಮ, ಹಿತವಾದ ಅನುಭವ ಉಂಟಾಗುತ್ತದೆ.
ನಂದಿಬೆಟ್ಟದಲ್ಲಿ ಬೆಳಗಿನ ಸಮಯದಲ್ಲಿ ಒಂದೊಂದೇ ಹೆಜ್ಜೆ ಇಡುತ್ತಾ ಸಾಗುವುದು ಪುಟ್ಟಪುಟ್ಟ ಸಂಭ್ರಮಕ್ಕೆ ಕಾರಣವಾಗುತ್ತದೆ. ಜೇಮ್ಸ್ ವೆಲ್ಷ್ ಬರೆದಂತೆ ನಂದಿಬೆಟ್ಟ ಅಕ್ಷರಶಃ ಸ್ಕಾಟ್ ಲೆಂಡ್ ರೀತಿಯೇ ಈಗಲೂ ಇದೆ. ಮುಂಜಾವಿನಲ್ಲಿ ಆವರಿಸಿಕೊಂಡ ದಟ್ಟ ಮಂಜಿನ ನಡುವೆ ಅಸ್ಪಷ್ಟ ದಾರಿಯಲ್ಲಿ ಸಾಗಿದಂತೆ ನಿಗೂಢ ಸ್ಥಳದಲ್ಲಿ ಸಂಚರಿಸುವಂತೆ ಭಾಸವಾಗುತ್ತದೆ. ಮಂಜು ಕರಗಿ ಗಿಡಮರಗಳ ಎಲೆಗಳಿಂದ ಉದುರುವ ನೀರಹನಿಗಳು ನಮ್ಮನ್ನು ತೋಯಿಸುತ್ತಾ ನಿಸರ್ಗದೊಳಗೆ ಸೆಳೆದುಕೊಳ್ಳುತ್ತವೆ. ಹಕ್ಕಿಗಳ ಚಿಲಿಪಿಲಿ ನಾದ ಸಮ್ಮೋಹನಗೊಳಿಸುತ್ತವೆ.
ಕುವೆಂಪು ಅವರು ತಮ್ಮ ಆತ್ಮಕಥೆ “ನೆನಪಿನ ದೋಣಿಯಲ್ಲಿ” ನಂದಿಬೆಟ್ಟದ ಬಗ್ಗೆ – “ನಂದಿಬೆಟ್ಟವು ರಮಣೀಯವೂ ಶಾಂತವೂ ಆದ ಸ್ಥಳ. ಅಮೃತಸರೋವರವು ಆದರ್ಶವಾಗಿದೆ. ಕಿನ್ನರ ಪ್ರಪಂಚದಲ್ಲಿ ಇದ್ದಂತೆ! ಸುತ್ತಲೂ ಅನೇಕ ನೂರು ಮೈಲಿಗಳ ವಿಸ್ತಾರವಾದ ಬಯಲುಸೀಮೆಯ ದೃಶ್ಯ. ಇದೊಂದು ಮಾತ್ರ ಮಲೆನಾಡಿನ ಒಂದು “ದ್ವೀಪದಂತೆ!” ಅಲ್ಲಲ್ಲಿ ಗುಡ್ಡಗಳು ಬೆಳ್ಳಗೆ ಕೆಂಪಗೆ ಹೊಳೆಯುವ ಕೆರೆಗಳು. ಮಂಜು ಕವಿದು ಸುತ್ತಲೂ ಲೋಕವೂ ನಾಕವೂ ಭೂಮಿಯೂ ಆಕಾಶವೂ ಒಂದು ಹಾಲ್ಗಡಲಂತೆ ತೋರಿತು” ಎಂದು ಬರೆದಿದ್ದಾರೆ.
ಬ್ರಿಟಿಷ್ ಜನರಲ್ ಜೇಮ್ಸ್ ವೆಲ್ಷ್ ರೀತಿಯಲ್ಲೇ ತಮ್ಮ ಆರೋಗ್ಯವನ್ನು ಸುಧಾರಣೆಗಾಗಿ ಗಾಂಧೀಜಿ 1927 ರಲ್ಲಿ ಮತ್ತು 1936 ರಲ್ಲಿ ಎರಡು ಬಾರಿ ನಂದಿಬೆಟ್ಟದಲ್ಲಿ ತಂಗಿದ್ದರು.
1834ರಿಂದ 1860ರವರೆಗೆ ಮೈಸೂರು ರಾಜ್ಯದ ಬ್ರಿಟಿಷ್ ಕಮೀಷನರ್ ಆಗಿದ್ದ ಮಾರ್ಕ್ ಕಬ್ಬನ್ ನಂದಿಬೆಟ್ಟದ ಮೇಲೆ ಬಂಗಲೆಯನ್ನು ನಿರ್ಮಿಸಿ ವರ್ಷದಲ್ಲಿ ಬೇಸಿಗೆಯ ಮೂರು ತಿಂಗಳ ಕಾಲ ಇಲ್ಲಿಂದಲೇ ಆಡಳಿತ ನಡೆಸುತ್ತಿದ್ದರು. ಈಗ ಆ ಬಂಗಲೆಯನ್ನು ನೆಹರೂ ಭವನವೆನ್ನುತ್ತಾರೆ. ಪ್ರವಾಸಿಗರು ಅದರಲ್ಲಿನ ಕೋಣೆಗಳನ್ನು ಆನ್ ಲೈನ್ ಮೂಲಕ ಕಾದಿರಿಸಿ ತಂಗಬಹುದಾಗಿದೆ.
ನಂದಿಬೆಟ್ಟದ ಸಮಗ್ರ ಅಭಿವೃದ್ಧಿಗಾಗಿ ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಪ್ರವಾಸೋದ್ಯಮ ಇಲಾಖೆಯು ವಿವಿಧ ಅಬಿವೃದ್ಧಿ ಕಾರ್ಯಗಳನ್ನು ನಡೆಸಿದೆ.
-ಡಿ.ಜಿ.ಮಲ್ಲಿಕಾರ್ಜುನ

Tags: ,

Leave a Reply

Your email address will not be published. Required fields are marked *

error: Content is protected !!