Sidlaghatta : ಜಂಗಮಕೋಟೆ ಹೋಬಳಿಯ ಕೆಲವು ಹಳ್ಳಿಗಳನ್ನು ಕೈಗಾರಿಕಾ ಪ್ರದೇಶಕ್ಕೆ ಭೂಸ್ವಾಧೀನವನ್ನು ಕೈಗೊಂಡಿರುವ ಸರ್ಕಾರದ ನಿಲುವನ್ನು ಖಂಡಿಸಿ ರೈತ ಸಂಘದ ಸದಸ್ಯರು ತಾಲ್ಲೂಕಿನ ರೈತರೊಂದಿಗೆ ಬೆಂಗಳೂರಿನ ಫ್ರೀಡಂ ಪಾರ್ಕಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಲು ಗುರುವಾರ ಹೊರಟರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಜಂಗಮಕೋಟೆ ಹೋಬಳಿ ಕೇಂದ್ರದ ಸುತ್ತಲಿನ 13 ಗ್ರಾಮಗಳ ವ್ಯಾಪ್ತಿಗೆ ಬರುವ ಸರ್ಕಾರಿ ಗೋಮಾಳ, ಕೃಷಿ ಭೂಮಿ ಸೇರಿದಂತೆ ಒಟ್ಟು 1823 ಎಕರೆಯಷ್ಟು ಜಮೀನನ್ನು ಕೈಗಾರಿಕೆಗಳ ಸ್ಥಾಪನೆಗಾಗಿ ಸ್ವಾನಪಡಿಸಿಕೊಳ್ಳಲು ಕೆ.ಐ.ಎ.ಡಿ.ಬಿ ಅಧಿಸೂಚನೆ ಹೊರಡಿಸಿದೆ.
ನೋಟಿಫಿಕೇಶನ್ ಮಾಡಿರುವ ಬಹುಪಾಲು ಭೂಮಿಯು ಫಲವತ್ತಾದ ಕೃಷಿ ಭೂಮಿಯಾಗಿದ್ದು, ಇದರಲ್ಲಿ ಪ್ರಮುಖ ವಾಣಿಜ್ಯ ಬೆಳೆಗಳಾದ ರೇಷ್ಮೆ, ದ್ರಾಕ್ಷಿ ಮಾವು, ಸೇರಿದಂತೆ ಸುಮಾರು ತೋಟಗಾರಿಕಾ ಬೆಳೆಗಳೂ ದಿನನಿತ್ಯದ ಆಹಾರ ಧಾನ್ಯಗಳಾದ ರಾಗಿ, ಅವರೆ, ಅಲಸಂದೆ, ತೊಗರಿ ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದು ಇದು ಇಲ್ಲಿನ ಹಳ್ಳಿಗರ ಜೀವನೋಪಾಯವಾಗಿದೆ.
ಹಳ್ಳಿಗಳು ಬೆಳೆದಂತೆ ಗ್ರಾಮಠಾಣಾ ವ್ಯಾಪ್ತಿಯಲ್ಲಿ ಜಾಗವಿಲ್ಲದೆ, ಊರುಗಳ ಹತ್ತಿರದಲ್ಲೇ ಇರುವ ಕೃಷಿಭೂಮಿಯಲ್ಲಿ ಕಟ್ಟಿಕೊಂಡಿರುವ ವಾಸದ ಮನೆಗಳು, ಕೃಷಿ ಪೂರಕ ಆದಾಯದ ಮೂಲಕ್ಕಾಗಿ ಕಟ್ಟಿಕೊಂಡ, ರೇಷ್ಮೆ ಹುಳು ಸಾಕಾಣೆ ಮನೆಗಳು, ಕೋಳಿಫಾರಂ ಮುಂತಾದವು ಇವೆ. ಜೊತೆಗೆ, ಹಸುಗಳು, ಎಮ್ಮೆ ಮತ್ತು ಕುರಿ ಮೇಕೆ ಮುಂತಾದವುಗಳನ್ನು ಒಳಗೊಂಡ ಪಶುಪಾಲನೆ ಕೂಡ ಇಲ್ಲಿನ ಅದಾಯದ ಮೂಲವಾಗಿದೆ. ಈ ಪಶುಪಾಲನೆಯ ಮೇವಿನ ಮೂಲ ಇದೇ ಕೃಷಿ ಜಮೀನುಗಳಾಗಿವೆ. ಇವುಗಳನ್ನೆಲ್ಲ ಒಳಗೊಂಡ 13 ಗ್ರಾಮಗಳ ಕೃಷಿ ಭೂಮಿ ಸ್ವಾಧೀನ ಪ್ರಕ್ರಿಯೆಯಲ್ಲಿ ಸೇರಿದೆ. ಇದೇ ಕೃಷಿ ಭೂಮಿಗಳನ್ನು ನಂಬಿಕೊಂಡ 13 ಹಳ್ಳಿಗಳಲ್ಲಿ ಸರಿಸುಮಾರು 1300 ಕುಟುಂಬಗಳು ವಾಸಿಸುತ್ತಿದ್ದು ಅದರಲ್ಲಿಯ 5000 ಕ್ಕೂ ಹೆಚ್ಚು ಜನರ ಮೂಲ ಕಸುಬು ಕೃಷಿ ಮತ್ತು ಕೃಷಿ ಪೂರಕ ಚಟುವಟಿಕೆಗಳಾಗಿವೆ. ಇದೇ ಇಲ್ಲಿನ ಜನರ ಆಹಾರ ಮತ್ತು ಆದಾಯದ ಮೂಲ ಕೂಡ ಆಗಿವೆ.
ಜೊತೆಗೆ, ಕೃಷಿ ಮಾತ್ರ ಗೊತ್ತಿರುವ ನಮಲ್ಲಿನ ನೂರಾರು ರೈತ ಕುಟುಂಬಗಳು ಅವರ ಪೂರ್ತಿ ಭೂಮಿ ಕಳೆದುಕೊಂಡು ಬೀದಿಗೆ ಬೀಳುತ್ತವೆ. ಇದೇ ಊರುಗಳ ಕೂಲಿ ಕಾರ್ಮಿಕರು, ಪಶುಪಾಲನೆ ನಂಬಿ ಬದುಕುತ್ತಿರುವರು, ಹಳ್ಳಿಗಳಲ್ಲಿ ಕೃಷಿ ಪೂರಕ ಇತರೆ ಕೆಲಸ ಮಾಡುತ್ತಿರುವರಿಗೂ ಇದರಿಂದ ನೇರ ಪರಿಣಾಮಕ್ಕೆ ಒಳಗಾಗುತ್ತಾರೆ.
ಈ ಎಲ್ಲಾ ಕಾರಣಗಳಿಂದ, ರೈತರ ಉಳಿವಿಗಾಗಿ ಹೋರಾಟ ಮಾಡಿಯಾದರೂ ಇರುವ ಭೂಮಿ ಮತ್ತು ಬದುಕುವ ಅವಕಾಶವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುವುದು ಸ್ಥಳೀಯರಿಗೆ ಅನಿವಾರ್ಯವಾಗಿದೆ ಎಂದು ಹೇಳಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ಮುನಿನಂಜಪ್ಪ, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಗುಡಿಹಳ್ಳಿ ಕೆಂಪಣ್ಣ, ನಾರಾಯಣದಾಸರಹಳ್ಳಿ ಕೃಷ್ಣಪ್ಪ, ಮಳಮಾಚನಹಳ್ಳಿ ರಮೇಶ್, ಸುಂಡ್ರಹಳ್ಳಿ ಬೀರಪ್ಪ, ನಗರ ಘಟಕದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಪಿ.ವಿ.ದೇವರಾಜ್, ಎ.ಜಿ.ನಾರಾಯಣಸ್ವಾಮಿ ಹಾಜರಿದ್ದರು.