
Sidlaghatta: ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಸುಮಾರು 13 ಹಳ್ಳಿಗಳ ರೈತರ ಸಂಪೂರ್ಣ ವಿರೋಧದ ನಡುವೆಯೂ ಬಲವಂತವಾಗಿ ರೈತರ ಭೂಮಿಯನ್ನು ಭೂಸ್ವಾದೀನ ಪಡಿಸಿಕೊಳ್ಳಲು ಮುಂದಾಗಿರುವ ಸರ್ಕಾರದ ಕ್ರಮ ಖಂಡನೀಯ ಎಂದು ಜೀವಿಕ ತಾಲ್ಲೂಕು ಸಂಚಾಲಕ ಶ್ರೀನಿವಾಸ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ನೆರೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಭೂ ಸ್ವಾದೀನ ಅಧಿಸೂಚನೆ ವಿರೋಧಿಸಿ ಇದೇ ಜು 04 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಂಡಿರುವ ಅನಿರ್ಧಿಷ್ಟಾವದಿ ಧರಣಿಗೆ ಜೀವಿಕ ಹಾಗು ಕರ್ನಾಟಕ ಜೀತದಾಳುಗಳ ಕೃಷಿ ಕಾರ್ಮಿಕ ಒಕ್ಕೂಟ ಬೆಂಬಲ ವ್ಯಕ್ತಪಡಿಸುವ ಮೂಲಕ ಹೋರಾಟದಲ್ಲಿ ಪಾಲ್ಗೊಳ್ಳಲಿದೆ ಎಂದರು.
ಕೆಐಎಡಿಬಿ ಯಿಂದ ನಿರ್ಮಾಣವಾಗುವ ಕೈಗಾರಿಕೆಗಳಿಂದ ಈ ಭಾಗದ ಯಾವುದೇ ರೈತನಿಗೆ ಉಪಯೋಗವಿಲ್ಲ. ಬದಲಿಗೆ ವಿದೇಶಿ ಹಾಗು ಕಾರ್ಪೊರೇಟ್ ಸಂಸ್ಥೆಗಳಿಗೆ ಲಾಭವಾಗಲಿದೆ. ಸರ್ಕಾರಗಳು ರೈತರ ಪರ ನಿಲ್ಲುವ ಬದಲಿಗೆ ಕಾರ್ಪೊರೇಟ್ ಸಂಸ್ಥೆಗಳ ಪರ ನಿಂತಿರುವುದು ದುರದೃಷ್ಟಕರ. ಇಡೀ ದೇಶಕ್ಕೆ ಅನ್ನ ನೀಡುವ ರೈತ ತಮ್ಮ ಜಮೀನನ್ನು ಉಳಿಸಿಕೊಳ್ಳಲು ದಿನವಿಡೀ ಉಪವಾಸ ಕುಳಿತು ಹೋರಾಟ ಮಾಡುವ ಸ್ಥಿತಿ ಬಂದಿದೆ. ಒಂದು ವೇಳೆ ನೀವು ಕೈಗಾರಿಕೆಗಳನ್ನೆ ಮಾಡಬೇಕು ಎಂದಾದರೆ ಭೂ ಒಡೆತನ ರೈತರ ಹೆಸರಲ್ಲೇ ಉಳಿಸಿ ಕೈಗಾರಿಕೆಗಳನ್ನು ಸ್ಥಾಪಿಸಿಕೊಳ್ಳಿ, ಅದು ಬಿಟ್ಟು ರೈತರಿಂದ ಬಲವಂತವಾಗಿ ಭೂಮಿಯನ್ನು ಕಸಿದುಕೊಳ್ಳುವ ಯತ್ನ ಬಿಡಬೇಕು ಎಂದರು.
ಕಳೆದ ಮೂರೂವರೆ ವರ್ಷದಿಂದ ನಿರಂತರ ಹೋರಾಟ ನಡೆಸುತ್ತಿರುವ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ ಪರವಾಗಿ ಶುಕ್ರವಾರ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯುವ ಹೋರಾಟದಲ್ಲಿ ಪಾಲ್ಗೊಳ್ಳಲು ರಾಜ್ಯದ ಮೂಲೆ ಮೂಲೆಯಿಂದ ಜನ ಸೇರುತ್ತಿದ್ದು ಭೂ ಸ್ವಾದೀನ ಪ್ರಕ್ರಿಯೆ ಕೈ ಬಿಡುವವರೆಗೂ ಹೋರಾಟ ನಡೆಯಲಿದೆ. ಈ ಹೋರಾಟಕ್ಕೆ ತಾಲ್ಲೂಕಿನಿಂದ ಜೀವಿಕ ಪದಾಧಿಕಾರಿಗಳೂ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಿ ರೈತರಿಗೆ ಬೆಂಬಲ ವ್ಯಕ್ತಪಡಿಸಲಿದ್ದೇವೆ ಎಂದರು.
ಈ ಸಂದರ್ಬದಲ್ಲಿ ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟದ ರಾಜ್ಯ ಗೌರವಾಧ್ಯಕ್ಷ ನರಸಿಂಹಪ್ಪ, ತಾಲ್ಲೂಕು ಅಧ್ಯಕ್ಷ ಜಿ.ಮುನಿಯಪ್ಪ, ಹೋಬಳಿ ಅಧ್ಯಕ್ಷರುಗಳಾದ ಗುರುಮೂರ್ತಿ, ವಿನೋದ್, ನರಸಿಂಹಮೂರ್ತಿ, ರವಿ, ತಾಲ್ಲೂಕು ಗೌರವಾಧ್ಯಕ್ಷ ಮುನಿಕೃಷ್ಣಪ್ಪ ಮತ್ತಿತರರು ಹಾಜರಿದ್ದರು.