ವಾಣಿಜ್ಯ ಬೆಳೆಗಳ ಕಾರಣಕರ್ತ ಕೃಂಬಿಗಲ್

Gustav Hermann Krumbiegel

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ನೀಲಿ ದ್ರಾಕ್ಷಿ, ಸೀಮೆ ಬದನೆ, ಸೀಬೆ ಮೊದಲಾದ ವಾಣಿಜ್ಯ ಬೆಳೆಗಳನ್ನು ರೈತರು ಉತೃಷ್ಟ ಗುಣಮಟ್ಟದಲ್ಲಿ ಬೆಳೆಯುತ್ತಾರೆ. ವಾಣಿಜ್ಯ ಬೆಳೆಗಳನ್ನು ಜಿಲ್ಲೆಯಲ್ಲಿ ರೈತರು ಬೆಳೆಯಲು ಮುಖ್ಯ ಕಾರಣಕರ್ತರು ಜರ್ಮನಿಯ ಮೂಲದ ಗುಸ್ಟಾವ್ ಹರ್ಮನ್ ಕೃಂಬಿಗಲ್.

 “ಡಿಸೆಂಬರ್ 18 ಗುಸ್ಟಾವ್ ಹರ್ಮನ್ ಕೃಂಬಿಗಲ್ ಅವರ ಜನ್ಮದಿನ. ತೋಟಗಾರಿಕಾ ನಿರ್ದೇಶಕ, ಸಸ್ಯಶಾಸ್ತ್ರಜ್ಞ, ಭೂದೃಶ್ಯ ಹಾಗೂ ನಗರದ ವಿನ್ಯಾಸಕಾರ, ವಾಸ್ತುಶಿಲ್ಪಿ, ಫಲೋದ್ಯಾನ ರೂಪಿಸುವವ ಮತ್ತು ಸಸ್ಯ ಸಂರಕ್ಷಕರಾಗಿ ಕೃಂಬಿಗಲ್ ನಮ್ಮ ನಾಡಿಗೆ ಸಲ್ಲಿಸಿರುವ ಸೇವೆ ಅನುಪಮವಾದದ್ದು. ಅವರ ಜನ್ಮದಿನದ ಸಂದರ್ಭದಲ್ಲಿ ಅವರನ್ನು ನಮ್ಮ ರೈತರು ಹಾಗೂ ಪರಿಸರ ಪ್ರೇಮಿಗಳು ನೆನೆಯಬೇಕು. ಅವರ ಕೊಡುಗೆಗಳನ್ನು ಸ್ಮರಿಸಬೇಕು” ಎನ್ನುತ್ತಾರೆ ತೋಟಗಾರಿಕಾ ತಜ್ಞ ಭಕ್ತರಹಳ್ಳಿಯ ಸಂತೆ ನಾರಾಯಣಸ್ವಾಮಿ.

ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪಟ್ಟಾಭಿಷೇಕ ಬೆಳ್ಳಿ ವರ್ಷಾಚರಣೆಯ ಸಂದರ್ಭದಲ್ಲಿ ನಿರ್ಮಿಸಿದ್ದ ಸ್ತಂಭ

 ಜರ್ಮನಿಯವರಾದ ಗುಸ್ಟಾವ್ ಹರ್ಮನ್ ಕೃಂಬಿಗಲ್ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ, ಲಂಡನ್ನಿನ ಕ್ಯೂಗಾರ್ಡನ್ನಿನಲ್ಲಿ ತರಬೇತಿ ಪಡೆದು ಬರೋಡ ಸಂಸ್ಥಾನದಲ್ಲಿ ಉದ್ಯಾನಗಳನ್ನು ಅಭಿವೃದ್ಧಿಪಡಿಸಿದ್ದರು. ಮೈಸೂರು ಮಹಾರಾಜರಾದ ಕೃಷ್ಣರಾಜ ಒಡೆಯರ್ ಕೃಂಬಿಗಲ್ ರ ಕೆಲಸವನ್ನು ಮೆಚ್ಚಿ ಮೈಸೂರಿಗೆ ಆಹ್ವಾನಿಸಿದರು. ಲಾಲ್ ಬಾಗ್, ಸರ್ಕಾರಿ ತೋಟಗಳು, ರಾಜರ ಅರಮನೆ ತೋಟಗಳ ಅಧೀಕ್ಷಕರಾಗಿ 1908 ರಲ್ಲಿ ಸೇವೆಯನ್ನು ಪ್ರಾರಂಭಿಸಿ 1932 ರಲ್ಲಿ ತೋಟಗಾರಿಕೆ ನಿರ್ದೇಶಕರಾಗಿ ನಿವೃತ್ತರಾದರು. 67 ವರ್ಷ ವಯಸ್ಸಾದ ಅವರನ್ನು ಮಹಾರಾಜರು ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡರು. ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಆಮಂತ್ರಣದ ಮೇರೆಗೆ ಸಲಹೆಗಾರರಾಗಿ ಸೇವೆ ಸಲ್ಲಿಸಿದರು. ಕನ್ನಂಬಾಡಿ ಕಟ್ಟೆಯ ಕೆಳಗಿನ “ಬೃಂದಾವನ ಉದ್ಯಾನವನ” ಕೂಡ ಇವರ ಕೊಡುಗೆಯೇ. ನಮ್ಮಲ್ಲಿದ್ದು ನಮ್ಮವಾರೇ ಆಗಿ ಹೋದ ಕೃಂಬಿಗಲ್ ಬೆಂಗಳೂರಿನಲ್ಲಿಯೇ ನಿಧನರಾದರು. ಬೆಂಗಳೂರಿನಲ್ಲಿ “ಕೃಂಬಿಗಲ್ ರಸ್ತೆ” ಅವರ ಹೆಸರನ್ನು ಅಜರಾಮರಗೊಳಿಸಿದೆ.  

 “ಸಸ್ಯ ವಿಜ್ಞಾನಿ ಹಾಗೂ ತೋಟ ವಿನ್ಯಾಸ ತಜ್ಞರಾಗಿದ್ದ ಕೃಂಬಿಗಲ್, ಮೈಸೂರು ಸಂಸ್ಥಾನದ ಮುಖ್ಯ ವಾಸ್ತುಶಿಲ್ಪಿಯೂ ಆಗಿದ್ದರು. 1927 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 25 ವರ್ಷದ ಆಡಳಿತದ ಬೆಳ್ಳಿ ವರ್ಷಾಚರಣೆ ಸಂದರ್ಭದಲ್ಲಿ ದಿವಾನ್ ಮಿರ್ಜಾ ಇಸ್ಮಾಯಿಲ್ ಅವರು ಆಯ್ದ ನೂರು ಹಳ್ಳಿಗಳಲ್ಲಿ ಎಂಟು ಸ್ತಂಭಗಳಿಂದ ಕೂಡಿದ ವೃತ್ತ ಮತ್ತು ಭಜನೆ ಮನೆಗಳನ್ನು ನಿರ್ಮಾಣ ಮಾಡಿಸಿದ್ದರು. ಇದನ್ನು ವಿನ್ಯಾಸ ಮಾಡಿದ್ದು ಕೃಂಬಿಗಲ್. ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯಲ್ಲಿ ಈಗಲೂ ಆ ಸ್ತಂಭಗಳನ್ನು ನೋಡಬಹುದಾಗಿದೆ” ಎಂದು ನಾರಾಯಣಸ್ವಾಮಿ ತಿಳಿಸಿದರು.

2017 ರಲ್ಲಿ ಕೃಂಬಿಗಲ್ ಅವರ ಮೊಮ್ಮಗಳು ಆಲಿಯಾ ಭಕ್ತರಹಳ್ಳಿ ಬಿಎಂವಿ ಶಾಲೆಗೆ ಭೇಟಿ ನೀಡಿದ್ದಾಗಿನ ಚಿತ್ರ

   “2016 ರಲ್ಲಿ, ಭಾರತ ಮತ್ತು ಜರ್ಮನಿಯ ಜಂಟಿ ಸಹಭಾಗಿತ್ವದಲ್ಲಿ, ಕೃಂಬಿಗಲ್ ಅವರ ಜನ್ಮಸ್ಥಳ ಜರ್ಮನಿಯ ಡ್ರೆಸ್ಡೆನ್ ನಗರದಲ್ಲಿ ಕೃಂಬಿಗಲ್ ಅವರ 150 ವರ್ಷದ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಾನು ತೋಟಗಾರಿಕಾ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತನಾಗಿದ್ದರೂ ಅಂದಿನ ತೋಟಗಾರಿಕಾ ನಿರ್ದೇಶಕ ಡಾ.ಮಹೇಶ್ವರ್ ಅವರು ಆ ಕಾರ್ಯಕ್ರಮಕ್ಕೆ ನನ್ನನ್ನು ಆಯ್ಕೆ ಮಾಡಿದರು. ನನ್ನ ಸ್ನೇಹಿತ ಹಾಸನದ ಮೋಹನ್ ಜೊತೆಗೆ ಜರ್ಮನಿಗೆ ಹೋದ ನಾನು ಕೃಂಬಿಗಲ್ ಅವರು ನಮ್ಮ ರಾಜ್ಯ ಮತ್ತು ಬೆಂಗಳೂರಿಗೆ ನೀಡಿರುವ ಅನುಪಮ ಸೇವೆಯ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿದೆ. 2017 ರಲ್ಲಿ ಕೃಂಬಿಗಲ್ ಅವರ ಮೊಮ್ಮಗಳು ಆಲಿಯಾ ಸಹ ಭಕ್ತರಹಳ್ಳಿಗೆ ಭೇಟಿ ನೀಡಿದ್ದರು. ಈಗಲೂ ಅವರೊಂದಿಗೆ ನಮ್ಮ ಹಳ್ಳಿಯ ಬಾಂಧವ್ಯ ಮುಂದುವರೆದಿದೆ” ಎಂದು ಅವರು ವಿವರಿಸಿದರು.

 “1952ರಲ್ಲಿ ನಮ್ಮ ಜಿಲ್ಲೆಯ, ನಾಡಿನ ಮೊದಲ ಮುಖ್ಯಮಂತ್ರಿ ಕೆ.ಚಂಗಲರಾಯರೆಡ್ಡಿ ಅವರ ಸಮ್ಮುಖದಲ್ಲಿ ಲಾಲ್ ಬಾಗ್ ನ ಫಲಪುಷ್ಪ ಪ್ರದರ್ಶನದಲ್ಲಿ ನಲ್ಲಿ ಕೃಂಬಿಗಲ್ ಭಾಗಿಯಾಗಿದ್ದರು. ಸೀತಿಬೆಟ್ಟದ ಕಾಲಬೈರವೇಶ್ವರ ದೇವಸ್ಥಾನವನ್ನು ಸಂರಕ್ಷಣೆ ಮಾಡಲು ನಿಯಮಗಳನ್ನು ರೂಪಿಸಿ ಸರ್ಕಾರದ ಮುಕಾಂತರ ಅನುಷ್ಠಾನಕ್ಕೆ ಕೂಡ ಅವರು ತಂದಿದ್ದರು. ಈಗಲೂ ಅವರು ಸಹಿ ಮಾಡಿರುವ ಫಲಕ ಅಲ್ಲಿದೆ” ಎಂದು ಮಾಹಿತಿ ನೀಡಿದರು.

– ಡಿ.ಜಿ.ಮಲ್ಲಿಕಾರ್ಜುನ

Leave a Reply

Your email address will not be published. Required fields are marked *

error: Content is protected !!