ಗಾಢವಾದ ಗುಲಾಬಿ ಬಣ್ಣದ ಹೂಗಳನ್ನು ಅರಳಿಸಿ ನಿಂತ ಟಬೂಬಿಯಾ ಅವಲಾನಿಡೇ ಮರಗಳು

ಒಂದು ಶತಮಾನಕ್ಕೂ ಮುಂಚೆ ಭಾರತಕ್ಕೆ ಬಂದ ದಕ್ಷಿಣ ಅಮೆರಿಕಾ ಮೂಲದ ಟಬೂಬಿಯಾ ಜಾತಿಯ ಮರಗಳು ಈಗ ಭಾರತದ್ದೇ ಆಗಿಹೋಗಿವೆ. ಸರಣಿ ಹೂ ಬಿಡುವ ಮರಗಳೆಂದೇ ಇವನ್ನು ಬಣ್ಣಿಸಲಾಗಿದೆ. ಟಬೂಬಿಯಾ ಮರಗಳು ಹಲವು ಬಗೆಗಳಲ್ಲಿದ್ದು, ಕೆಲವು ಕೆಲವು ತಿಂಗಳಿನಲ್ಲಿ ಸುಂದರ ಬಣ್ಣ ಬಣ್ಣದ ಹೂವನ್ನು ಅರಳಿಸಿ ಪ್ರಕೃತಿಗೆ ಮೆರುಗನ್ನು ತರುತ್ತವೆ. ಈ ಹೂಗಳು ಮರಗಳ ಕೆಳಗೆ ಉದುರಿದಾಗ ಸುಂದರ ಕಾರ್ಪೆಟ್ ಹಾಸಿದಂತೆ ಕಾಣುತ್ತವೆ.

 ಟಬೂಬಿಯಾ ಅವಲಾನಿಡೇ ಮರಗಳು ನವೆಂಬರ್ ತಿಂಗಳಿನಲ್ಲಿ ಮೊಟ್ಟಮೊದಲು ಗಾಢವಾದ ಗುಲಾಬಿ ಬಣ್ಣದ ಹೂಗಳನ್ನು ಅರಳಿಸಿ ಹೂಗಳ ಋತುವಿನ ಪ್ರಾರಂಭವನ್ನು ಸಾರುತ್ತವೆ. ಶಿಡ್ಲಘಟ್ಟ ತಾಲ್ಲೂಕಿನ ವಿವಿದೆಡೆ ಈ ಹೂಗಳ ಮರಗಳಿವೆ. ತಾಲ್ಲೂಕಿನ ಭಕ್ತರಹಳ್ಳಿಯಲ್ಲಿ ಈ ಹೂಗಳ ಮೆರುಗನ್ನು ಇದೀಗ ನಾವು ಕಾಣಬಹುದಾಗಿದೆ.

  “1908ರಲ್ಲಿ ಲಾಲ್‌ಬಾಗ್‌ ಕ್ಯುರೇಟರ್‌ ಆಗಿ ಬಂದವರು ಕ್ರುಂಬಿಗಲ್‌. ಅವರು ಲಾಲ್‌ಬಾಗ್‌ಗೆ ಸೀಮಿತವಾಗಿದ್ದ ಉದ್ಯಾನವನ್ನು ನಗರದ ವಿವಿಧ ಬಡಾವಣೆಗಳಿಗೆ, ಮನೆಗಳಿಗೆ ಕೊಂಡೊಯ್ದರು. ಅವರು ಸರಣಿ ಹೂ ಬಿಡುವ ಮರಗಳನ್ನು ನೆಡುವುದನ್ನು ಪ್ರಾರಂಭಿಸಿದರು. ಅಂದರೆ ಒಂದು ಜಾತಿಯ ಮರಗಳು ಹೂವರಳಿಸಿ ಬಾಡುವಷ್ಟರಲ್ಲಿ ಮತ್ತೊಂದು ಜಾತಿಯ ಮರಗಳು ಹೂವರಳಿಸಿರಬೇಕು. ಅವರು ಈ ಟಬೂಬಿಯಾ ಜಾತಿಯ ಮರಗಳನ್ನು ಸಾಕಷ್ಟು ನೆಡಲು ಪ್ರೋತ್ಸಾಹಿಸಿದರು. ನನ್ನ ಹುಟ್ಟೂರು ಭಕ್ತರಹಳ್ಳಿಯಲ್ಲಿ ಎರಡು ದಶಕಗಳ ಹಿಂದೆ ಟಬೂಬಿಯಾ ಅವಲಾನಿಡೇ ಗಿಡಗಳನ್ನು ನಾನೇ ನೆಟ್ಟಿದ್ದೆ. ಸಾಧ್ಯವಾದ ಕಡೆಗಳಲ್ಲೆಲ್ಲಾ ಟಬೂಬಿಯಾ ಜಾತಿಯ ಮರಗಳ ಬೀಜಗಳನ್ನು ಹಾಕುತ್ತಿರುತ್ತೇನೆ” ಎಂದು ತೋಟಗಾರಿಕೆ ಸಮಾಲೋಚಕ ಮತ್ತು ತಜ್ಞ ಭಕ್ತರಹಳ್ಳಿಯ ಸಂತೆ ನಾರಾಯಣಸ್ವಾಮಿ ತಿಳಿಸಿದರು.

 “ಟಬೂಬಿಯಾ ಅವಲಾನಿಡೇ ಜಾತಿಯ ಮರ ನವೆಂಬರ್, ಡಿಸೆಂಬರ್, ಜನವರಿ ತಿಂಗಳಿನಲ್ಲಿ ಗಾಢವಾದ ಗುಲಾಬಿ ಬಣ್ಣದ ಹೂಬಿಡುತ್ತದೆ. ಅದು ಮುಗಿಯುವಷ್ಟರಲ್ಲಿ ಟಬೂಬಿಯಾ ಅರ್ಜೆನ್ಷಿಯಾ ಗಾಢ ಹಳದಿ ಬಣ್ಣದ ಹೂವರಳಿಸಿಕೊಂಡು ಗಮನಸೆಳೆದರೆ, ಟಬೂಬಿಯಾ ಸ್ಪೆಕ್ಟಾಬಿಲಿಸ್ ತಿಳಿ ಹಳದಿ ಹೂವರಳಿಸುತ್ತವೆ. ಇವು ಫೆಬ್ರುವರಿ ಮಾರ್ಚ್ ತಿಂಗಳಿನಲ್ಲಿ ಇರುತ್ತವೆ. ಹಳದಿ ಹೂಗಳು ಉದುರುವ ಸಮಯಕ್ಕೆ ಸರಿಯಾಗಿ ಅಂದರೆ, ಯುಗಾದಿಗೆ ಸ್ವಾಗತ ಕೋರುವುದೇ ಟಬೂಬಿಯಾ ರೋಸಿಯಾ. ಇದರ ಸೊಬಗು ಮತ್ತು ಬೆಡಗನ್ನು “ತಿಳಿಗುಲಾಬಿ ಸೀರೆಯನ್ನು ಧರಿಸಿರುವ ಸುಂದರ ಸ್ತ್ರೀ” ಎಂದು ಕರೆದಿದ್ದೇನೆ. ಸುಮಾರು ಏಪ್ರಿಲ್ ತಿಂಗಳವರೆಗೂ ಇರುವ ಈ ಹೂವಿನ ನಂತರ ಕತ್ತಿಕಾಯಿ ಮರ ಅಂದರೆ ಮೇ ಫ್ಲವರ್ ಹೂ ಬಿಡುತ್ತದೆ. ಹೀಗೇ ಟ್ಯುಲಿಪ್ ಮರ ಅಥವಾ ನೀರುಗಾಯಿಮರ ಚಂದದ ಹೂ ಬಿಡುತ್ತದೆ ಹೀಗೇ ಸಾಗಿ ದಸರಾ ಮರಗಳೆಂದು ಕರೆಯುವ ಕಲ್ವಿಲೇ ರೆಸಿಮೋಸಾ ಕೇಸರಿ ಬಣ್ಣದ ಹೂಬಿಡುವವರೆಗೂ ಸಾಗುತ್ತದೆ. ಈ ದಸರಾ ಮರಗಳನ್ನು ಕ್ರುಂಬಿಗಲ್ ಅವರು ಮೈಸೂರಿನಲ್ಲಿ ನೆಟ್ಟಿದ್ದಾರೆ. ಲಿಲ್ಲಿ ಹೂವರಳಿದಾಗ ಲಂಡನ್ನಿಗೆ ಭೇಟಿ ಕೊಡು ; ಟಬೂಬಿಯಾ ಹೂಬಿಟ್ಟಾಗ ಬೆಂಗಳೂರಿಗೆ ಭೇಟಿ ನೀಡು ಎಂಬ ಮಾತು ಚಾಲ್ತಿಯಲ್ಲಿದೆ” ಎಂದು ಅವರು ವಿವರಿಸಿದರು.

– ಡಿ.ಜಿ.ಮಲ್ಲಿಕಾರ್ಜುನ

Leave a Reply

Your email address will not be published. Required fields are marked *

error: Content is protected !!