Home Blog Page 514

ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಮೀಸಲಾತಿ ವಿವರ

0

ನಗರದ ಮಯೂರ ಚಿತ್ರಮಂದಿರದಲ್ಲಿ ಗುರುವಾರ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ನೇತೃತ್ವದಲ್ಲಿ ತಾಲ್ಲೂಕಿನ 28 ಗ್ರಾಮ ಪಂಚಾಯತಿವಾರು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಮೀಸಲಾತಿ ವಿವರ ಪ್ರಕಟಿಸಲಾಯಿತು.
28 ಗ್ರಾಮ ಪಂಚಾಯತಿಗಳಲ್ಲಿ ಮಹಿಳೆಯರಿಗೆ 14 ಅಧ್ಯಕ್ಷ ಮತ್ತು 14 ಉಪಾಧ್ಯಕ್ಷರ ಸ್ಥಾನಗಳು ದೊರೆತಿವೆ. ಈ ಮೀಸಲಾತಿ ಪ್ರಕ್ರಿಯೆಯನ್ನು ವೀಕ್ಷಿಸಲು ಹಾಗೂ ತಮ್ಮ ಗ್ರಾಮ ಪಂಚಾಯತಿಗೆ ಯಾರು ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಬಹುದೆಂಬ ಕುತೂಹಲದಿಂದ ನೂರಾರು ಮಂದಿ ತಾಲ್ಲೂಕಿನಾದ್ಯಂತ ವಿವಿದೆಡೆಯಿಂದ ನಗರದ ಮಯೂರ ಚಿತ್ರಮಂದಿರದ ಬಳಿ ಜಮಾಯಿಸಿದ್ದರು. ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರಿಂದ ಕೇವಲ ಗ್ರಾಮ ಪಂಚಾಯತಿ ಸದಸ್ಯರು ಮಾತ್ರ ಮೀಸಲಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ‘ಚುನವಣಾ ಆಯೋಗ ನಿಗಧಿಪಡಿಸಿರುವ ಮಾಟ್ರಿಕ್ಸ್ ವ್ಯವಸ್ಥೆಯಂತೆ ಮೀಸಲಾತಿಯನ್ನು ನಿಗದಿಪಡಿಸಲಾಗಿದೆ. 1993 ರಿಂದ ಇಲ್ಲಿಯವರೆಗೆ ಪುರನಾವರ್ತನೆಯನ್ನು ಕೂಡ ಪರಿಗಣನೆಗೆ ತೆಗೆದುಕೊಂಡಿದ್ದೇವೆ. ಗ್ರಾಮ ಪಂಚಾಯತಿ ಸದಸ್ಯರಾದವರು ತಮ್ಮ ವಾರ್ಡುಗಳಲ್ಲಿ ಕಡ್ಡಾಯವಾಗಿ ಎಲ್ಲರೂ ಶೌಚಾಲಯ ನಿರ್ಮಿಸಿಕೊಳ್ಳಲು ಮನವರಿಕೆ ಮಾಡಿಕೊಡಬೇಕು. ಈ ಮೂಲಕ ಜಿಲ್ಲೆಯನ್ನು ಐದು ವರ್ಷದೊಳಗೆ ಬಯಲು ಶೌಚ ಮುಕ್ತ ಜಿಲ್ಲೆಯನ್ನಾಗಿಸಬೇಕು. ಜಿಲ್ಲೆಯು ಸತತವಾಗಿ ಬರಗಾಲವನ್ನು ಎದುರಿಸುತ್ತಿರುವುದರಿಂದ ದೀರ್ಘಕಾಲ ಬಾಳಿಕೆ ಬರುವ ಗಿಡಗಳನ್ನು ನೆಡುವ ಮೂಲಕ ಪರಿಸರವನ್ನು ಸಮೃದ್ಧಿಗೊಳಿಸಿ. ಪಕ್ಷಾತೀತವಾಗಿ ಅನುದಾನವನ್ನು ಸದ್ಭಳಕೆ ಮಾಡಿಕೊಂಡು ಗ್ರಾಮದ ಅಭಿವೃದ್ಧಿಗೆ ಸದಸ್ಯರು ಶ್ರಮಿಸಬೇಕು’ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ನವೀನ್ ರಾಜ್, ಡಿಡಿಎಲ್ಆರ್ ಅಜ್ಜಪ್ಪ, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ನಿವೃತ್ತ ಅಧಿಕಾರಿ ಗೋಪಿನಾಥ್, ಚುನಾವಣಾ ತಹಶೀಲ್ದಾರ್ ಕುಮಾರಸ್ವಾಮಿ ಈ ಸಂದರ್ಭದಲ್ಲಿ ಹಾಜರಿದ್ದರು.
ತಾಲ್ಲೂಕಿನ ಗ್ರಾಮ ಪಂಚಾಯತಿವಾರು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಮೀಸಲಾತಿ ವಿವರ:
ಅಬ್ಲೂಡು: ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ ‘ಅ’(ಮ), ವೈ.ಹುಣಸೇನಹಳ್ಳಿ: ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ ‘ಬ’, ದೇವರಮಳ್ಳೂರು: ಪರಿಶಿಷ್ಟ ಜಾತಿ(ಮ), ಹಿಂದುಳಿದ ವರ್ಗ ‘ಅ’(ಮ), ಕೊತ್ತನೂರು: ಸಾಮಾನ್ಯ(ಮ), ಪರಿಶಿಷ್ಟ ಜಾತಿ(ಮ), ತುಮ್ಮನಹಳ್ಳಿ: ಪರಿಶಿಷ್ಟ ಪಂಗಡ(ಮ), ಸಾಮಾನ್ಯ, ಆನೂರು: ಪರಿಶಿಷ್ಟ ಪಂಗಡ(ಮ), ಸಾಮಾನ್ಯ, ಹಂಡಿಗನಾಳ: ಪರಿಶಿಷ್ಟ ಪಂಗಡ, ಸಾಮಾನ್ಯ(ಮ), ಮೇಲೂರು: ಸಾಮಾನ್ಯ(ಮ), ಸಾಮಾನ್ಯ, ಮಳ್ಳೂರು: ಸಾಮಾನ್ಯ(ಮ), ಸಾಮಾನ್ಯ, ಜೆ.ವೆಂಕಟಾಪುರ: ಸಾಮಾನ್ಯ, ಹಿಂದುಳಿದ ವರ್ಗ ‘ಅ’, ಜಂಗಮಕೋಟೆ: ಹಿಂದುಳಿದ ವರ್ಗ ‘ಅ’(ಮ), ಪರಿಶಿಷ್ಟ ಜಾತಿ, ಕುಂಭಿಗಾನಹಳ್ಳಿ: ಹಿಂದುಳಿದ ವರ್ಗ ‘ಅ’, ಸಾಮಾನ್ಯ(ಮ), ಚೀಮಂಗಲ: ಸಾಮಾನ್ಯ(ಮ), ಸಾಮಾನ್ಯ, ದೊಡ್ಡತೇಕನಹಳ್ಳಿ: ಸಾಮಾನ್ಯ(ಮ), ಪರಿಶಿಷ್ಟ ಜಾತಿ, ಬಶೆಟ್ಟಹಳ್ಳಿ: ಹಿಂದುಳಿದ ವರ್ಗ ‘ಅ’(ಮ), ಪರಿಶಿಷ್ಟ ಜಾತಿ, ದಿಬ್ಬೂರಹಳ್ಳಿ: ಸಾಮಾನ್ಯ, ಸಾಮಾನ್ಯ(ಮ), ತಿಮ್ಮನಾಯ್ಕನಹಳ್ಳಿ: ಸಾಮಾನ್ಯ(ಮ), ಪರಿಶಿಷ್ಟ ಪಂಗಡ, ಗಂಜಿಗುಂಟೆ: ಪರಿಶಿಷ್ಟ ಜಾತಿ(ಮ), ಸಾಮಾನ್ಯ, ಈ.ತಿಮ್ಮಸಂದ್ರ: ಸಾಮಾನ್ಯ, ಪರಿಶಿಷ್ಟ ಜಾತಿ(ಮ), ಸಾದಲಿ: ಸಾಮಾನ್ಯ, ಪರಿಶಿಷ್ಟ ಪಂಗಡ(ಮ), ಎಸ್.ದೇವಗಾನಹಳ್ಳಿ: ಸಾಮಾನ್ಯ, ಸಾಮಾನ್ಯ(ಮ), ಪಲಿಚೆರ್ಲು: ಸಾಮಾನ್ಯ, ಪರಿಶಿಷ್ಟ ಪಂಗಡ(ಮ), ಕುಂದಲಗುರ್ಕಿ: ಪರಿಶಿಷ್ಟ ಜಾತಿ(ಮ), ಸಾಮಾನ್ಯ, ಭಕ್ತರಹಳ್ಳಿ: ಪರಿಶಿಷ್ಟ ಜಾತಿ, ಸಾಮಾನ್ಯ(ಮ), ಮಳಮಾಚನಹಳ್ಳಿ: ಪರಿಶಿಷ್ಟ ಜಾತಿ(ಮ), ಸಾಮಾನ್ಯ, ಹೊಸಪೇಟೆ: ಹಿಂದುಳಿದ ವರ್ಗ ‘ಬ’, ಪರಿಶಿಷ್ಟ ಜಾತಿ(ಮ), ನಾಗಮಂಗಲ: ಸಾಮಾನ್ಯ, ಸಾಮಾನ್ಯ(ಮ), ತಲಕಾಯಲಬೆಟ್ಟ: ಸಾಮಾನ್ಯ, ಪರಿಶಿಷ್ಟ ಜಾತಿ(ಮ)

ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಜೂನ್ 12ರಂದು ಸ್ವಯಂ ಪ್ರೇರಿತ ರಕ್ತ ದಾನ ಶಿಬಿರ

0

ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಜೂನ್ ೧೨ರ ಶುಕ್ರವಾರ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಚರಣೆ ಮಾಡಲಿದ್ದು ಅಂದು ಕನಿಷ್ಠ ೨೦೦ ಯೂನಿಟ್ಗಳಷ್ಟು ರಕ್ತ ಸಂಗ್ರಹ ಮಾಡಲು ಉದ್ದೇಶಿಸಿಸಲಾಗಿದೆ ಎಂದು ರೆಡ್ಕ್ರಾಸ್ ಸೊಸೈಟಿಯ ತಾಲೂಕು ಅಧ್ಯಕ್ಷ ಹಾಗೂ ತಹಸೀಲ್ದಾರರೂ ಆದ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು.
ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರೆಡ್ಕ್ರಾಸ್ ಸಮಿತಿ, ವಿವಿಧ ಇಲಾಖೆಗಳ ಅಧಿಕಾರಿ, ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲಾ ಮಟ್ಟದ ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಇದೆ ಮೊದಲ ಬಾರಿಗೆ ತಾಲ್ಲೂಕಿನಲ್ಲಿ ಆಚರಿಸಲಾಗುತ್ತಿದೆ. ಪ್ರತಿ ವರ್ಷವೂ ಜಿಲ್ಲೆಯ ಒಂದೊಂದು ತಾಲ್ಲೂಕಿನಲ್ಲಿ ಹಮ್ಮಿಕೊಳ್ಳಲು ಜಿಲ್ಲಾಧಿಕಾರಿಗಳು ಸೂಚಿಸಿದ್ದು ಅದರಂತೆ ಈ ಬಾರಿ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಜಿಲ್ಲಾ ರೆಡ್ ಕ್ರಾಸ್ ಸೊಸೈಟಿ, ಶಿಡ್ಲಘಟ್ಟದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾ ಘಟಕ ಸೇರಿದಂತೆ ವಿವಿದ ಸಂಘ ಸಂಸ್ಥೆಗಳ ಆಶ್ರಯದಲ್ಲಿ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಗ್ಗೆ ೯.೩೦ಕ್ಕೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಕನಿಷ್ಠ ೨೦೦ ಯೂನಿಟ್ನಷ್ಟು ರಕ್ತ ಸಂಗ್ರಹ ಮಾಡಲು ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸಲಾಗಿದೆ. ಇಲಾಖೆಯ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಯುವಜನರು, ವಿದ್ಯಾರ್ಥಿ ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದರು.
ರಕ್ತದಾನ ಮಾಡುವ ಸರ್ಕಾರಿ ನೌಕರರಿಗೆ ವಿಶೇಷ ಕೋಟಾದಡಿ ಒಒಡಿಯ ಸೌಲಭ್ಯವನ್ನು ನೀಡಲಿದ್ದು ಅದರ ಸದುಪಯೋಗಪಡೆದುಕೊಳ್ಳುವಂತೆ ಸರ್ಕಾರಿ ನೌಕರರಲ್ಲಿ ಮನವಿ ಮಾಡಿದರು. ಹಾಗೆಯೆ ರಕ್ತದಾನ ಮಾಡುವ ಇತರರಿಗೆ ಅಭಿನಂದನಾ ಪತ್ರವನ್ನು ನೀಡಲಾಗುವುದು ಎಂದು ವಿವರಿಸಿದರು.
ಇಡೀ ರಾಜ್ಯದಲ್ಲಿಯೆ ರಕ್ತ ಸಂಗ್ರಹದಲ್ಲಿ ನಮ್ಮ ಜಿಲ್ಲೆಯ ರೆಡ್ಕ್ರಾಸ್ ಘಟಕ ಮೊದಲ ಸ್ಥಾನದಲ್ಲಿದ್ದು ಇತ್ತೀಚೆಗೆ ರಾಜ್ಯಪಾಲರು ನಮ್ಮ ಜಿಲ್ಲಾಧಿಕಾರಿಗಳಿಗೆ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಿದ್ದು ಅದು ಇಡೀ ಜಿಲ್ಲೆಯ ಜನತೆಗೆ, ಅಧಿಕಾರಿ ವರ್ಗಕ್ಕೆ, ಸಂಘ ಸಂಸ್ಥೆಗಳಿಗೆ, ರಕ್ತದಾನಿಗಳಿಗೆ ಸಲ್ಲುತ್ತದೆ ಎಂದರು.
ರೆಡ್ಕ್ರಾಸ್ ಸೊಸೈಟಿಯ ಕಾರ್ಯದರ್ಶಿ ಎನ್.ಕೆ.ಗುರುರಾಜ್, ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಬಿ.ವಿ.ಶ್ರೀರಾಮಯ್ಯ, ಸಿಡಿಪಿಒ ಲಕ್ಷ್ಮಿದೇವಮ್ಮ, ಆರೋಗ್ಯ ಇಲಾಖೆಯ ಶಮೀವುಲ್ಲಾ, ಗಂಗಾಧರ್, ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ನೀಲಮ್ಮ, ಮಮತ, ಸಿಆರ್ಪಿ ಲಕ್ಷ್ಮಿನರಸಿಂಹಗೌಡ, ಸಿಲ್ಸಿಲಾ ಇನ್ನಿತರೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.

ದಿ ಪ್ರೆಸಿಡೆನ್ಸಿ ಶಾಲೆ ಉದ್ಘಾಟನಾ ಸಮಾರಂಭ

0

ಸಮಾಜದ ಎಲ್ಲಾ ವರ್ಗದ ಜನರಿಗೂ ಗುಣಮಟ್ಟದ ಶಿಕ್ಷಣ ದೊರೆತಾಗ ಮಾತ್ರ ಸದೃಢ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರಮುಖ ಪಾತ್ರವಹಿಸಬೇಕೆಂದು ವಿಧಾನಪರಿಷತ್ ಸದಸ್ಯ ನಸೀರ್ ಅಹಮದ್ ತಿಳಿಸಿದರು.
ನಗರದ ೨ನೇ ಟಿ.ಎಂ.ಸಿ ಬಡಾವಣೆಯಲ್ಲಿ ದಿ ಪ್ರೆಸಿಡೆನ್ಸಿ ಶಾಲೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿರುವ ಎಲ್ಲಾ ವರ್ಗಗಳ ಮಕ್ಕಳು ಸಹ ವಿದ್ಯಾವಂತರಾಗಬೇಕೆಂದು ಸರ್ಕಾರ ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ, ಪಠ್ಯಪುಸ್ತಕ ವಿತರಣೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು ಖಾಸಗಿ ಶಿಕ್ಷಣ ಸಂಸ್ಥೆಗಳು ಸಹ ಬಡಜನರಿಗೆ ಹೊರೆಯಾಗದಂತೆ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ತರಬೇಕೆಂದು ಹೇಳಿದರು.
ಕೇಂದ್ರದಲ್ಲಿ ಅಧಿಕಾರ ನಡೆಸಿದ ಯು.ಪಿ.ಎ. ಸರ್ಕಾರ ಶಿಕ್ಷಣದ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಿದ ಪರಿಣಾಮವಾಗಿ ಆರ್.ಟಿ.ಇ ಯೋಜನೆಯಡಿ ಬಡ ಮಕ್ಕಳಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾವಕಾಶ ಕಲ್ಪಿಸಲಾಗಿದ್ದು ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಮನೋಭಾವ ಬೆಳೆಸಿಕೊಂಡಾಗ ಬದಲಾವಣೆ ತರಲು ಸಾಧ್ಯವೆಂದರು.
ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಮಾತನಾಡಿ ಮಾಹಿತಿ ಮತ್ತು ತಂತ್ರಜ್ಞಾನ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚು ಮಹತ್ವ ಬಂದಿದ್ದು ಬಡವ ಶ್ರೀಮಂತ ಎಂದು ಭೇದಭಾವವಿಲ್ಲದೇ ಪೋಷಕರು ತಮ್ಮ ಮಕ್ಕಳನ್ನು ಶಿಕ್ಷಣ ನೀಡಲು ಉತ್ಸಾಹ ತೋರಿಸುತ್ತಿದ್ದು ಖಾಸಗಿ ಶಿಕ್ಷಣ ಸಂಸ್ಥೆಗಳು ಸೇವಾ ಮನೋಭಾವ ರೂಡಿಸಿಕೊಂಡು ಪ್ರತಿಯೊಂದು ಮಗು ಸಹ ಶಿಕ್ಷಣ ಪಡೆಯಲು ಆಸಕ್ತಿವಹಿಸಬೇಕೆಂದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನ್ಯಾಮತ್, ಉಪಾದ್ಯಕ್ಷ ಖದೀರ್ಪಾಷ, ಕಾರ್ಯದರ್ಶಿ ಇಮ್ರಾನ್, ಮುಖ್ಯೋಪಾಧ್ಯಾಯ ರಿಯಾಜ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮುನಿಕೃಷ್ಣಪ್ಪ, ನಟರಾಜ್, ನಗರಸಭೆಯ ಸದಸ್ಯರಾದ ಇಲಿಯಾಜ್ ಬೇಗ್, ಬಾಬು, ಬಾಲಕೃಷ್ಣ, ಸುಹೇಲ್ ಪಾಷ, ನಯಾಜ್, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಚೀಮನಹಳ್ಳಿ ಗೋಪಾಲ್, ಸನಾವುಲ್ಲಾ, ನವಾಜ್ ಪಾಷ, ಅಮ್ಜದ್ ಷರೀಫ್, ತನ್ವೀರ್ ಪಾಷ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಮೂಲಭೂತ ಸೌಕರ್ಯವಿಲ್ಲದೆ, ರೇಷ್ಮೆ ಮಾರುಕಟ್ಟೆಯಲ್ಲಿ ಗೂಡು ನಾಶ

0

ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯವಿಲ್ಲದೆ, ಮಂಗಳವಾರ ರಾತ್ರಿ ಬಿದ್ದ ಮಳೆ ನೀರು ಒಡೆದ ಶೀಟಿನ ಮೂಲಕ ಗೂಡಿನ ಮೇಲೆ ಬಿದ್ದು ಸುಮಾರು ಒಂದು ಲಕ್ಷ ರೂಗಳಿಗೂ ಅಧಿಕ ನಷ್ಟವುಂಟಾಗಿದೆ.
ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ರೈತರು ರಾತ್ರಿ ತಮಗೆ ನಿಗದಿಪಡಿಸಿರುವ ಜಾಲರಾದಲ್ಲಿ ಗೂಡನ್ನು ಹರಡಿಕೊಂಡಿದ್ದರು. ಏಕಾಏಕಿ ಮಳೆ ಪ್ರಾರಂಭವಾದಾಗ ಮೇಲೆ ಸೂರಿನ ಶೀಟ್ಗಳ ಒಡೆದಿದ್ದರಿಂದ ನೇರವಾಗಿ ರೇಷ್ಮೆ ಗೂಡಿನ ಮೇಲೆ ಬೀಳತೊಡಗಿದೆ. ತಕ್ಷಣವೇ ರೈತರು ನ್ಯೂಸ್ ಪೇಪರ್, ಪ್ಲಾಸ್ಟಿಕ್ ಪೇಪರ್, ಗೋಣಿ ಚೀಲ ತಂದು ಮುಚ್ಚಲು ಪ್ರಯತ್ನಿಸಿದರೂ ಸುಮಾರು 300 ಕೆಜಿಗೂ ಅಧಿಕ ರೇಷ್ಮೆ ಗೂಡು ನಾಶವಾಗಿದೆ.
ಮಾರುಕಟ್ಟೆಯಲ್ಲಿ ಕೋಟ್ಯಾಂತರ ವ್ಯವಹಾರ ನಡೆಯುತ್ತಿದ್ದರೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ರಾತ್ರಿ ಹೊತ್ತಿನಲ್ಲಿ ಸೂಕ್ತ ದೀಪದ ವ್ಯವಸ್ಥೆಯಿಲ್ಲ, ಕುಡಿಯುವ ನೀರು, ಶೌಚಾಲಯವೂ ಇಲ್ಲ. ಮಳೆ ಬಂದಾಗ ಕನಿಷ್ಠ ಆಸರೆಯೂ ಇಲ್ಲದಂತಾಗಿ ಕಷ್ಟಪಟ್ಟು ಬೆಳೆದ ಗೂಡು ನಾಶವಾಗಿದೆ. ಈಗಾಗಲೇ ಗೂಡಿನ ಬೆಲೆ ಕನಿಷ್ಠ ಮಟ್ಟಕ್ಕೆ ಕುಸಿದು ರೈತ ಸಂಕಷ್ಟದಲ್ಲಿರುವಾಗ ಈ ರೀತಿ ಸೌಲಭ್ಯಗಳ ಕೊರತೆಯಿಂದ ನಷ್ಟವಾದರೆ ಯಾರು ಹೊಣೆ. ಅಧಿಕಾರಿಗಳ ನಿರ್ಲಕ್ಷದಿಂದ ರೈತರಿಗೆ ನಷ್ಟವಾಗುತ್ತಿದೆ ಎಂದು ಈ ಸಂದರ್ಭದಲ್ಲಿ ನಷ್ಟ ಹೊಂದಿದ ರೈತರು ದೂರಿದರು.
ನಷ್ಟ ಪರಿಹಾರವನ್ನು ಕೊಡಿಸುವಂತೆ ಹಾಗೂ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ರೈತರು ರೇಷ್ಮೆ ಗೂಡು ಮಾರುಕಟ್ಟೆಯ ಅಧಿಕಾರಿ ರತ್ನಯ್ಯಶೆಟ್ಟಿಗೆ ಮನವಿ ಸಲ್ಲಿಸಿದರು.

ಬಾಲಕಿಯನ್ನು ಅಪಹರಿಸಿದ್ದ ಆರೋಪಿಯ ಬಂಧನ

0

ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೇಗೌಡನಹಳ್ಳಿಯ ಹದಿನೈದು ವರ್ಷದ ಬಾಲಕಿಯನ್ನು ಅಪಹರಿಸಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ಬಾಳೇಗೌಡನಹಳ್ಳಿಯ ಹದಿನೈದು ವರ್ಷದ ಬಾಲಕಿಯನ್ನು ಅದೇ ಗ್ರಾಮದ ಅಂಜನಪ್ಪ(23) ಬಲವಂತವಾಗಿ ಕರೆದೊಯ್ದಿದ್ದಾನೆಂದು ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೇಸು ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ ಪೊಲೀಸರು ಮಂಗಳವಾರ ತಿರುಪತಿಯಲ್ಲಿದ್ದ ಇಬ್ಬರನ್ನು ಕರೆತಂದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಶಿಡ್ಲಘಟ್ಟ ತಾಲ್ಲೂಕು ಪಂಚಾಯತಿ ಫಲಿತಾಂಶ

0

ಶಿಡ್ಲಘಟ್ಟ ತಾಲ್ಲೂಕಿನ ಗ್ರಾಮ ಪಂಚಾಯತಿ ಸದಸ್ಯರು
ಶಿಡ್ಲಘಟ್ಟ ತಾಲ್ಲೂಕಿನ 22 ಗ್ರಾಮ ಪಂಚಾಯತಿಗಳ ಚುನಾವಣೆಯಲ್ಲಿ ವಿಜೇತರಾದವರ ಫಲಿತಾಂಶ
1)ವೈ.ಹುಣಸೇನಹಳ್ಳಿ ಗ್ರಾಮ ಪಂಚಾಯತಿ: ವೈ. ಹುಣಸೇನಹಳ್ಳಿ ಸುಜಾತಮ್ಮ, ವೈ. ಹುಣಸೇನಹಳ್ಳಿ ಎಚ್.ವಿ ದೇವರಾಜ್, ಗೆಜ್ಜಿಗಾನಹಳ್ಳಿ ವಿ. ಲಕ್ಷ್ಮಮ್ಮ, ಗೆಜ್ಜಿಗಾನಹಳ್ಳಿ ಮುನಿನಾರಾಯಣಪ್ಪ, ಶೀಗೆಹಳ್ಳಿ ಎಸ್.ಹರಿಪ್ರಸಾದ್, ಶೀಗೆಹಳ್ಳಿ ಮಂಜುನಾಥ, ಶೀಗೆಹಳ್ಳಿ ಕಲ್ಪನಮ್ಮ, ಶೀಗೆಹಳ್ಳಿ ಎಂ. ಎಸ್ ಶ್ರೀನಿವಾಸರೆಡ್ಡಿ, ವಾರಹುಣಸೇನಹಳ್ಳಿ ರತ್ನಮ್ಮ, ವಾರಹುಣಸೆನಹಳ್ಳಿ ದೇವೀರಮ್ಮ, ಜಯಮ್ಮ ಚಿಕ್ಕದಾಸೇನಹಳ್ಳಿ,
ಚಿಕ್ಕದಾಸೇನಹಳ್ಳಿ ಎಸ್. ಮಂಜುನಾಥ, ದೊಡ್ಡದಾಸೇನಹಳ್ಳಿ ಸುಮಿತ್ರ, ದೊಡ್ಡದಾಸೇನಹಳ್ಳಿ ಆಂಜನೇಯರೆಡ್ಡಿ,
ಮಾರಪ್ಪನಹಳ್ಳಿ ಅಂಜುಶ್ರೀ, ಕದಿರಿನಾಯಕನಹಳ್ಳಿ ಕೆ.ಎಂ ರವಿಕುಮಾರ್, ಕದಿರಿನಾಯಕನಹಳ್ಳಿ ಗಾಯಿತ್ರಿ.
2)ದೇವರಮಳ್ಳೂರು ಗ್ರಾಮ ಪಂಚಾಯತಿ: ದೇವರಮಳ್ಳೂರು ಮಳ್ಳೂರಯ್ಯ, ದೇವರಮಳ್ಳೂರು ನಾರಾಯಣಮ್ಮ, ದೇವರಮಳ್ಳೂರು ಚಲಪತಿ, ದೇವರಮಳ್ಳೂರು ದೇವಮ್ಮ, ಸೊಣ್ಣೇನಹಳ್ಳಿ ವೆಂಕಟಲಕ್ಷ್ಮಮ್ಮ,
ಸೊಣ್ಣೇನಹಳ್ಳಿ ಕೆ.ಚಂದ್ರಶೇಖರ್, ಇದ್ಲೂಡು ಪಿ. ವೆಂಕಟಪ್ಪ, ಇದ್ಲೂಡು ಭಾಗ್ಯಮ್ಮ, ಇದ್ಲೂಡು ರತ್ನಮ್ಮ, ಬೂದಾಳ ಪುಷ್ಪಮ್ಮ, ಬೂದಾಳ ಬಿ. ಮುನಿರೆಡ್ಡಿ, ಬೂದಾಳ ಸಂಗೀತ, ತಲದುಮ್ಮನಹಳ್ಳಿ ಅಂಬಿಕಾ, ತಲದುಮ್ಮನಹಳ್ಳಿ ಚೆನ್ನಗೌಡ, ಕುತ್ತಾಂಡಹಳ್ಳಿ ರಾಮಚಂದ್ರಪ್ಪ.
3)ಕೊತ್ತನೂರು ಗ್ರಾಮ ಪಂಚಾಯತಿ: ಕೊತ್ತನೂರು ಗೌರಮ್ಮ, ಕೊತ್ತನೂರು ನಾರಾಯಣಮ್ಮ, ಕೊತ್ತನೂರು ಕೆ.ಸಿ ಜ್ಞಾನೇಶ, ಬಚ್ಚಹಳ್ಳಿ ಶಿವಮ್ಮ, ಪಿಂಡಿಪಾಪನಹಳ್ಳಿ ಸರಳ, ಪಿಂಡಿಪಾನಹಳ್ಳಿ ಎಂ.ಆಂಜಿನಪ್ಪ, ಗೊರಮಡಗು ಪಿ.ಎನ್ ರಾಧ, ಗೊರಮಡಗು ಜಿ. ಎಂ, ಕೃಷ್ಣಪ್ಪ, ಗೊರಮಡಗು ಜಿ.ಎನ್ ಮಂಜುನಾಥ, ಗೊರಮಡಗು ಪಾರ್ವತಮ್ಮ, ಬೀರಪ್ಪನಹಳ್ಳಿ ಎಂ, ವೆಂಕಟೇಶ.
4)ತುಮ್ಮನಹಳ್ಳಿ ಗ್ರಾಮ ಪಂಚಾಯತಿ: ತುಮ್ಮನಹಳ್ಳಿ ಎಂ. ಸುರೇಂದ್ರ, ತುಮ್ಮನಹಳ್ಳಿ ತಿಮ್ಮಕ್ಕ, ತುಮ್ಮನಹಳ್ಳಿ
ಗುಣಮ್ಮ, ಮಲ್ಲಿಶೆಟ್ಟಿಪುರ ಎನ್ ಮುನಿಯಪ್ಪ, ಗುಡ್ಲನರಸಿಂಹನಹಳ್ಳಿ ದೇವರಾಜಮ್ಮ, ಕೆ.ಮುತ್ತುಕದಹಳ್ಳಿ ಎಂ. ಶಿಲ್ಪ, ಅಲಸೂರು ದಿನ್ನೆ ಟಿ.ಎಂ. ಗಂಗಮ್ಮ, ಚಿಂತುಡಪಿ ಸಿ.ಎಂ. ರಮೇಶ, ದೊಡ್ಡದಾಸರಹಳ್ಳಿ ಪದ್ಮಾವತಿ, ದೊಡ್ಡದಾಸರಹಳ್ಳಿ ಡಿ.ಎಸ್. ಅಂಬರೀಷ್, ಸೊರಕಾಯಲಹಳ್ಳಿ ಎಸ್.ಎಂ, ದಾಸ್, ಕನ್ನಮಂಗಲ ವಿಜಯಮ್ಮ,
ಕನ್ನಮಂಗಲ ಎನ್. ದೇವರಾಜ್, ಕನ್ನಮಂಗಲ ಸರೋಜಮ್ಮ, ತಿಪ್ಪೇನಹಳ್ಳಿ ನಾಗರಾಜ, ಹುಜಗೂರು ಎಚ್.ಎಂ ರಾಮಚಂದ್ರ, ಹುಜಗೂರು ನಾಗರತ್ನಮ್ಮ.
5)ಆನೂರು ಗ್ರಾಮ ಪಂಚಾಯತಿ: ಆನೂರು ಎಸ್. ಮೂರ್ತಿ, ಆನೂರು ಮುನಿರತ್ನಮ್ಮ, ಆನೂರು ರತ್ನಮ್ಮ, ಆನೂರು ಎನ್.ಉಮಾ, ಆನೂರು ಹುಣಸೇನಹಳ್ಳಿ ಎಚ್. ಅನುಸೂಯ, ಆನೂರು ಹುಣಸೇನಹಳ್ಳಿ ಎಚ್.ಸಿ. ಆನಂದ್. ಬೆಳ್ಳೂಟಿ ವರಲಕ್ಷ್ಮೀ, ಬೆಳ್ಳೂಟಿ ಗಂಗರೆಡ್ಡಿ, ಬೆಳ್ಳೂಟಿ ಎಸ್. ವೆಂಕಟೇಶ್, ಹಿತ್ತಲಹಳ್ಳಿ ನಾಗಮಣಿ, ಹಿತ್ತಲಹಳ್ಳಿ ಎಚ್.ಕೆ. ದೇವರಾಜು, ಬೋದಗೂರು ಮಾಣಿಕ್ಯಮ್ಮ, ಬೋದಗೂರು ಬಿ.ಎನ್.ಸುರೇಶ್, ಜಪ್ತಿಹೊಸಹಳ್ಳಿ ಮುನಿಕೃಷ್ಣಪ್ಪ, ಜಪ್ತಿಹೊಸಹಳ್ಳಿ ಪ್ರೇಮ, ಬೈರನಾಯ್ಕನಹಳ್ಳಿ ಎಂ. ವೆಂಕಟೇಶಪ್ಪ.
6)ಹಂಡಿಗನಾಳ ಗ್ರಾಮ ಪಂಚಾಯತಿ: ಹಂಡಿಗನಾಳ ಮುನಿಯಪ್ಪ, ಹಂಡಿಗನಾಳ ಶಾರದಮ್ಮ, ಹಂಡಿಗನಾಳ ಪ್ರೇಮಮ್ಮ, ಹಂಡಿಗನಾಳ ಜಯರಾಮ್, ಎಲ್.ಮುತ್ತುಕದಹಳ್ಳಿ ಬೈರಾರೆಡ್ಡಿ, ಎಲ್.ಮುತ್ತುಕದಹಳ್ಳಿ
ಚಿಕ್ಕರಂಗಪ್ಪ, ಅಪ್ಪೇಗೌಡನಹಳ್ಳಿ ಅಶ್ವಥಮ್ಮ, ವರದನಾಯಕನಹಳ್ಳಿ ಎಂ.ಆರ್.ಆಶಾ, ವರದನಾಯಕನಹಳ್ಳಿ ಆಂಜಿನಮ್ಮ, ಅಪ್ಪೇಗೌಡನಹಳ್ಳಿ ಸುಮಿತ್ರಮ್ಮ, ಹನುಮಂತಪುರ ರಾಜು, ಹನುಮಂತಪುರ ಮಹದೇವಯ್ಯ, ಅಪ್ಪೇಗೌಡನಹಳ್ಳಿ ಸಿ.ಎ.ಉಮಾ. ಅಪ್ಪೇಗೌಡನಹಳ್ಳಿ ಎ.ಎಂ.ತ್ಯಾಗರಾಜು, ಅಪ್ಪೇಗೌಡನಹಳ್ಳಿ ನೇತ್ರಾವತಿ.
7)ಮೇಲೂರು ಗ್ರಾಮ ಪಂಚಾಯತಿ: ಮೇಲೂರು ಜಿ. ಸಿ. ಶ್ರೀನಿವಾಸಮೂರ್ತಿ, ಮೇಲೂರು ಸರೋಜಮ್ಮ, ಮೇಲೂರು ಕೆ.ಮಂಜುನಾಥ್, ಮೇಲೂರು ಎಚ್.ಎನ್.ರೂಪೇಶ್, ಮೇಲೂರು ಎಲ್.ಜಮುನ, ಮೇಲೂರು
ಆರ್.ಎ. ಉಮೇಶ್, ಮೇಲೂರು ಮಾಲಾಶ್ರೀ, ಮೇಲೂರು ಸಚಿದ್ಯಾ, ಮೇಲೂರು ವಿಮಲಮ್ಮ, ಚೌಡಸಂದ್ರ ಆಂಜನೇಯರೆಡ್ಡಿ, ಚೌಡಸಂದ್ರ ಸಿ.ಎಚ್.ಮಮತ, ಚೌಡಸಂದ್ರ ಸಿ.ಎಂ.ಶ್ರೀನಿವಾಸ, ಕಂಬದಹಳ್ಳಿ ಪಾರ್ವತಮ್ಮ, ಕಂಬದಹಳ್ಳಿ ಕೆ.ಜಯರಾಮರೆಡ್ಡಿ, ಗಂಗನಹಳ್ಳಿ ವೆಂಕಟಲಕ್ಷ್ಮಮ್ಮ.
8)ಮಳ್ಳೂರು ಗ್ರಾಮ ಪಂಚಾಯತಿ: ಮಳ್ಳೂರು ಬಿ.ಆರ್.ಕವಿತ, ಮಳ್ಳೂರು ರವಿಕುಮಾರ್, ಮಳ್ಳೂರು
ಮುನಿಲಕ್ಷ್ಮಮ್ಮ, ಮಳ್ಳೂರು ರತ್ನನ್ನ, ಮಳ್ಳೂರು ಎ.ಸತೀಶ್, ಮಳ್ಳೂರು ರಾಧ, ಮಳ್ಳೂರು ಅರುಣ, ಮಳ್ಳೂರು ಆರ್.ನಿಶಾಂತ್, ಮುತ್ತೂರು ಸಾಕಮ್ಮ, ಮುತ್ತೂರು ಶಾಮಲ, ಮುತ್ತೂರು ಬಿ.ಎಂ.ಬೈರೇಗೌಡ, ಮುತ್ತೂರು ಕೆಂಪಮ್ಮ, ಮುತ್ತೂರು ಎಂ.ವಿ. ಗೋಪಾಲಪ್ಪ, ಕಾಚಹಳ್ಳಿ ಮುನಿಯಮ್ಮ, ಅಂಕತಟ್ಟಿ ಎನ್.ಚಂದ್ರಶೇಖರ್.
9)ಜೆ.ವೆಂಕಾಪುರ ಗ್ರಾಮ ಪಂಚಾಯತಿ: ಸಿ. ವೀಣಾ. ಗಂಗಮ್ಮ, ಎಂ.ವಿಜಯ್ಕುಮಾರ್. ಎನ್.ಜೆ.ನಾಗೇಶ್, ಆರ್್.ಜೆ. ಭಾಗ್ಯಲಕ್ಷ್ಮೀ, ಬಿ.ಎಂ. ರಘುನಾಥ್, ನರಸಿಂಹಮೂರ್ತಿ, ಮೀನಾಕ್ಷಮ್ಮ, ಜೆ. ಮಮತಾ,ಕೆ.ಹರೀಶ್, ಭಾಗ್ಯಮ್ಮ, ಶಾಂತಮ್ಮ, ಕೆ. ಹರೀಶ್, ಭಾಗ್ಯಮ್ಮ, ಶಾಂತಮ್ಮ, ವಿ ಶಿವಶಂಕರಪ್ಪ, ಷಣ್ಮುಗ, ಪದ್ಮಮ್ಮ, ಕರಗಮ್ಮ,
ಬಿ.ಸಿ ಚಂದ್ರೇಗೌಡ.
10)ಜಂಗಮಕೋಟೆ ಗ್ರಾಮ ಪಂಚಾಯತಿ: ಹಸೀನಾಬಾನ್, ಬಾಬಾಸಾಬ್, ರಹಮತ್ ಜಾನ್, ಸುಮಿತ್ರ ಎನ್, ನಾರಾಯಣಸ್ವಾಮಿ, ಆಯಿಷ್, ಮಂಜುನಾಥ ವಿ., ಸೈಯದ್ ಅನ್ವರ್ ಪಾಷ, ಶಭೀನ, ಶ್ರೀನಿವಾಸ, ಸುಮಾಯ್ಯ, ಪುಷ್ಪಾವತಿ, ನಾರಾಯಣಮ್ಮ, ವೆಂಕಟೇಶ್ ಜೆ.ಎಂ, ಮಂಜಮ್ಮ, ನಾಗರಾಜು, ಗಣೇಶ್.
11)ಕುಂಭಿಗಾನಹಳ್ಳಿ ಗ್ರಾಮ ಪಂಚಾಯತಿ: ಮುನಿತಿಮ್ಮಪ್ಪ, ರೂಪ. ಇ, ರವಿ. ಎಸ್, ಶಶಿಕಲಾ, ಶೋಭಾ, ನಾಗಭೂಷಣ್ , ಬಿ.ವೆಂಕಟೇಶಪ್ಪ, ಸಿದ್ದಮ್ಮ, ನರಸಮ್ಮ, ಬಿ. ವೆಂಕಟೇಶಪ್ಪ, ರಾಮಸ್ವಾಮಿ, ಎಂ. ಭಾಗ್ಯಮ್ಮ, ಆನಂದಮ್ಮ, ವಿನಯನಂದಬಾಬು, ಗೌರಮ್ಮ, ಗಣೇಶ್, ಕೆ.ಎಸ್, ರಾಜಣ್ಣ, ಡಿ.ಎಸ್. ಮುನಿಶಾಮಿಗೌಡ, ಪಾರ್ವತಮ್ಮ, ಆಂಜಿನಪ್ಪ.
12)ಚೀಮಂಗಲ ಗ್ರಾಮ ಪಂಚಾಯತಿ: ನಾರಾಯಣಸ್ವಾಮಿ, ಸೌಮ್ಯ ಹೆಚ್, ಸುಮಿತ್ರಾ, ಹೆಚ್, ದೇವರಾಜ, ವೆಂಕಟಲಕ್ಷ್ಮಮ್ಮ, ನಳಿನ. ಎನ್, ಶ್ರೀನಿವಾಸ, ಎನ್. ಲೋಕೇಶ್, ಮುನಿರತ್ನಮ್ಮ, ಲಕ್ಷ್ಮೀನಾರಾಯಣ, ಲಕ್ಷ್ಮಮ್ಮ, ಸುರೇಶ್. ಟಿ.ಎನ್, ಚೌಡಮ್ಮ, ಟಿ.ಎಂ ರಾಜಪ್ಪ, ಮುನಿಕೃಷ್ಣಪ್ಪ. ಎಂ, ಶ್ಯಾಮಲಮ್ಮ.
13)ದೊಡ್ಡತೇಕಹಳ್ಳಿ ಗ್ರಾಮ ಪಂಚಾಯತಿ: ಗಂಗಾಧರ, ಗಂಗಲಕ್ಷ್ಮಮ್ಮ, ಆಂಜನೇಯರೆಡ್ಡಿ, ಮುದ್ದುಲಕ್ಷ್ಮಮ್ಮ, ಆಂಜನಪ್ಪ, ಲಕ್ಷ್ಮಮ್ಮ, ಮಮತ ಕೆ.ಎಸ್, ಕೆ. ಬೈರಾರೆಡ್ಡಿ, ನಾಗಮ್ಮ, ಅನ್ನಪೂರ್ಣಮ್ಮ, ಮುರಳಿ. ಎ, ಪಾಪಮ್ಮ, ದೇವರಾಜ್, ಸಿ.ಹೆಚ್, ಪದ್ಮಮ್ಮ, ಮಂಜುಳ, ವೆಂಕಟೇಶಪ್ಪ, ವೆಂಕಟೇಶಪ್ಪ.
14)ಬಶೆಟ್ಟಿಹಳ್ಳಿ ಗ್ರಾಮ ಪಂಚಾಯತಿ: ಎನ್. ಪುಷ, ಸಾವಿತ್ರಮ್ಮ, ಶಿವಮ್ಮ, ವೆಂಕಟರೆಡ್ಡಿ, ಎ. ಜಿ. ಆಂಜಿನಪ್ಪ, ಚೆನ್ನಮ್ಮ, ದ್ಯಾವಪ್ಪ, ವಿಆರ್. ಲಕ್ಷ್ಮೀದೇವಮ್ಮ, ಶಾರದಮ್ಮ, ಡಿ.ಎಂ, ಚಂದ್ರಪ್ಪ, ಚಿಕ್ಕನಾರಾಯಣಸ್ವಾಮಿ, ವೆಂಕಟರೆಡ್ಡಿ, ಜೆ.ಕೃಷ್ಣಪ್ಪ, ರತ್ನಮ್ಮ, ಲಲಿತಮ್ಮ, ಸುಧ, ಕೆ.ವಿ. ದೇವರಾಜು.
15)ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿ: ಸುನೀಲ್ ಕುಮಾರ್, ಮಮತ ಟಿ ಎಸ್, ರಂಗಪ್ಪ, ಮೂರ್ತಿಯಮ್ಮ, ನಾರಾಯಣಮ್ಮ, ಪ್ರಸನ್ನ, ಸುಬ್ಬಣ್ಣ, ರತ್ನಮ್ಮ, ಸುವರ್ಣ, ಪಾರ್ವತಮ್ಮ, ಶ್ರೀನಿವಾಸ, ಮುನಿಲಕ್ಷ್ಮಮ್ಮ, ಸಿ ಎನ್ ವೆಂಕಟಲಕ್ಷ್ಮಮ್ಮ, ನರಸಿಂಹಪ್ಪ, ಧನಂಜಯರೆಡ್ಡಿ.
16)ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯತಿ: ಭವ್ಯ, ದ್ಯಾವಮ್ಮ, ಟಿ ಕೆ ಅರುಣ್ ಕುಮಾರ್, ಕಮಲಮ್ಮ, ಚನ್ನಮ್ಮ, ಮುನಿವೆಂಕಟಪ್ಪ, ದ್ಯಾವಪ್ಪ, ರತ್ನಮ್ಮ, ಎ ವಿ ನರಸಿಂಹರೆಡ್ಡಿ, ಎ ಎಲ್ ನಾರಾಯಣಸ್ವಾಮಿ, ಸರಸ್ವತಮ್ಮ, ಪ್ರಸನ್ನಕುಮಾರ್, ಡಿ.ಶ್ರೀನಿವಾಸರೆಡ್ಡಿ, ವೆಂಕಟಲಕ್ಷ್ಮಮ್ಮ.
17)ಗಂಜಿಗುಂಟೆ ಗ್ರಾಮ ಪಂಚಾಯತಿ: ಲಕ್ಷ್ಮೀದೇವಮ್ಮ, ಜಿ. ನರಸಿಂಹಮೂರ್ತಿ, ವೆಂಕಟಮ್ಮ, ಎನ್ ನರಸಿಂಹಮೂರ್ತಿ, ರುಕ್ಷ್ಮೀಣಮ್ಮ, ಆಶಾ, ಆನಂದರೆಡ್ಡಿ, ಜಯಮ್ಮ.ಜಿ, ಎನ್ ನಾರಾಯಣಸ್ವಾಮಿ, ರಾಮಲಕ್ಷ್ಮಮ್ಮ, ಎಲ್.ವಿ.ಚೌಡರೆಡ್ಡಿ, ನರಸಿಂಹಮೂರ್ತಿ, ಮಂಜುಳ, ರಾಮ್ಬಾಬು, ಬಿ ಎನ್ ನರಸಿಂಹರೆಡ್ಡಿ, ಚೌಡಮ್ಮ.
18)ಸಾದಲಿ ಗ್ರಾಮ ಪಂಚಾಯತಿ: ವೆಂಕಟಲಕ್ಷ್ಮಮ್ಮ, ನರಸಿಂಹಪ್ಪ, ಈ ಮುನಿರಾಜು, ಕೆ ಗೋವಿಂದರಾಜು, ನಾರಾಯಣಸ್ವಾಮಿ ಎಸ್ ಆರ್, ರತ್ನಮ್ಮ, ಮಂಜುಳಮ್ಮ, ಎಸ್ ಕೆ ಸುರೇಶ್, ಲಕ್ಷ್ಮೀಕಾಂತಮ್ಮ, ನರಸಿಂಹಪ್ಪ, ಪಾರ್ವತಮ್ಮ, ಲಕ್ಷ್ಮೀದೇವಮ್ಮ, ನಂಜಮ್ಮ, ರತ್ನಮ್ಮ, ರಂಗಪ್ಪ, ಶ್ರೀನಿವಾಸ, ಗಂಗರತ್ನ.
19)ಎಸ್.ದೇವಗಾನಹಳ್ಳಿ ಗ್ರಾಮ ಪಂಚಾಯತಿ: ಅಶ್ವತಮ್ಮ, ರತ್ನಮ್ಮ, ಗಂಗಾಶರ.ಡಿ ಎಂ, ಶೋಭ ವಿ, ಕೆ ಎಂ ಮದ್ದಿರೆಡ್ಡಿ, ನಾಗಮಣಿ ಎಂ ಕೆ, ಅಶ್ವಥಪ್ಪ, ನರಸಿಂಹಪ್ಪ, ಅಶೋಕ ಜಿ ಎನ್, ಗಾಯಿತ್ರಿ, ಮುನಿರತ್ನಮ್ಮ, ಕೃಷ್ಣಪ್ಪ, ವರಲಕ್ಷ್ಮಮ್ಮ, ಲಕ್ಷ್ಮೇದೇವಮ್ಮ, ಪಾರಿಜಾತಮ್ಮ.
20)ಪಲಿಚೆರ್ಲು ಗ್ರಾಮ ಪಂಚಾಯತಿ: ಶೈಲಾ.ಎಂ, ಮಮತ, ವೆಂಕಟಶಿವಾರೆಡ್ಡಿ, ಪ್ರೇಮಾ, ಗಂಗಪ್ಪ, ಅರುಣ ಎಂ, ರತ್ನಮ್ಮ, ಮುನಿಯಪ್ಪ, ಗೋಪಿ ಬಿ, ಶಾಂತಮ್ಮ, ರಾಮಚಂದ್ರಪ್ಪ, ಪಾರ್ವತಮ್ಮ, ಮಂಜುನಾಥ ಎಂ.
21)ಕುಂದಲಗುರ್ಕಿ ಗ್ರಾಮ ಪಂಚಾಯತಿ: ಕಲ್ಪನಾ, ಅಂಬರೀಶ್ ಕೆ ಎಂ, ಅಂಬಿಕ, ರಾಜಣ್ಣ, ವಿ ಮನೋಹರ, ಪ್ರಮೀಳಮ್ಮ, ವೆಂಕಟೇಶಪ್ಪ, ಸಾವಿತ್ರಮ್ಮ, ವೆಂಕಟೇಶಪ್ಪ, ಶಾಂತಮ್ಮ, ನಾರಾಯಣಮ್ಮ, ಎನ್ ಆಂಜಿನಪ್ಪ.
22)ತಲಕಾಯಲಬೆಟ್ಟ ಗ್ರಾಮ ಪಂಚಾಯತಿ: ಪಾರಿಜಾತ, ಗಾಯಿತ್ರಿ, ಶೇಷಗಿರಿರಾವ್ ಎಮ್ ಹೆಚ್, ಗಂಗಪ್ಪ, ಮುರಳಿಧರ್, ರಮಣಪ್ಪ, ನಾರಾಯಣಪ್ಪ, ಶಮೀನಾ ಬಾನು, ಎ ಎಸ್ ಕೊಂಡಪ್ಪರೆಡ್ಡಿ, ಈಶ್ವರಮ್ಮ, ಟಿ ಇ ಭಾರತಿ, ಶ್ರೀನಿವಾಸ ಡಿ, ದ್ಯಾವಮ್ಮ, ಮುತ್ತು ರತ್ನಮ್ಮ.

ಹಗಲುಹೊತ್ತಿನಲ್ಲೇ ದರೋಡೆ

0

ತಾಲ್ಲೂಕಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತೊಟ್ಲಗಾನಹಳ್ಳಿ, ಹಿತ್ತಲಹಳ್ಳಿ, ಆನೂರು ಮತ್ತು ಜಪ್ತಿಹೊಸಹಳ್ಳಿ ಗ್ರಾಮಗಳಲ್ಲಿ ಸೋಮವಾರ ಹಗಲುಹೊತ್ತಿನಲ್ಲೇ ದರೋಡೆ ನಡೆದಿದೆ.
ತಾಲ್ಲೂಕಿನ ತೊಟ್ಲಗಾನಹಳ್ಳಿ ಗ್ರಾಮದ ಅಶ್ವತ್ಥಪ್ಪ ಎಂಬುವರ ಮನೆಯಲ್ಲಿ ಯಾರೂ ಇರದ ಸಮಯದಲ್ಲಿ ಮನೆ ಬೀಗ ಮುರಿದು ಬೀರುವಿನಲ್ಲಿದ್ದ ಚಿನ್ನಾಭರಣ ಹಾಗೂ ಹಣವನ್ನು ದೋಚಲಾಗಿದೆ.
ತಾಲ್ಲೂಕಿನ ಜಪ್ತಿಹೊಸಹಳ್ಳಿ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಪಕ್ಕದಲ್ಲಿರುವ ಸುನಂದಮ್ಮ ಎಂಬುವರ ಮನೆಯಲ್ಲಿ ಬಾಗಿಲು ಮುರಿದು ಬೀರುವಿನಲ್ಲಿದ್ದ 3 ಎಳೆ ಚಿನ್ನದ ಸರ, ಎರಡು ಜೊತೆ ಜುಮುಕಿ, 25 ಸಾವಿರ ರೂಪಾಯಿ ಹಣವನ್ನುದೋಚಲಾಗಿದೆ.
ತಾಲ್ಲೂಕಿನ ಹಿತ್ತಲಹಳ್ಳಿ ಗ್ರಾಮದ ಎಚ್.ನಾರಾಯಣಸ್ವಾಮಿ ಅವರ ಮನೆ ಬೀಗ ಮುರಿದು 200 ಗ್ರಾಮ್ ಬಂಗಾರ ದೋಚಿದ್ದರೆ, ಬಂಡಿಗೆಪ್ಪ ಅವರ ಮನೆಯ ಬೀಗ ಮುರಿದು ಎರಡು ಜೊತೆ ಓಲೆ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಕಳ್ಳತನ ಮಾಡಲಾಗಿದೆ.
ಹಾಡಹಗಲೇ ಬಾಗಿಲು ಹಾಕಿರುವ ಮನೆಗಳನ್ನು ಗುರುತಿಸಿ ದರೋಡೆ ಮಾಡಿರುವುದು ತಾಲ್ಲೂಕಿನ ಜನರನ್ನು ಬೆಚ್ಚಿ ಬೀಳಿಸಿದೆ.

ಪ್ಲೂಟೋದ ರಹಸ್ಯ ಲೋಕಕ್ಕೆ ಲಗ್ಗೆ

0

ಪ್ಲೂಟೋ, ಸೌರವ್ಯೂಹದ ಒಂಭತ್ತನೆಯ, ಸೂರ್ಯನಿಂದ ಅತಿ ಹೆಚ್ಚು ದೂರದಲ್ಲಿರುವ ಹಾಗೂ ಅತಿ ಪುಟ್ಟದಾದ ಗ್ರಹ. ಉಳಿದ ಗ್ರಹಗಳಿಗೆ ಹೋಲಿಸಿದರೆ ಪ್ಲೂಟೋ ಬಗ್ಗೆ ನಮಗೆ ಗೊತ್ತಿರುವುದು ತುಂಬ ಕಡಿಮೆ ಎಂದೇ ಹೇಳಬೇಕು. ಅತಿ ಶಕ್ತಿಶಾಲಿಯಾದ ದೂರದರ್ಶಕದಿಂದ ಕೂಡ ಇದರ ಬಗ್ಗೆ ದೊರೆತ ವಿವರಗಳು ಕಡಿಮೆ. ೧೯೩೦ರಲ್ಲಿ ಕ್ಲೈಡ್ ಟಾಂಬಾಗ್ ಎಂಬ ವಿಜ್ಞಾನಿ ಈ ಗ್ರಹವು ಸೂರ್ಯನನ್ನು ಸುತ್ತುತ್ತಿರುವುದನ್ನು ಕಂಡುಹಿಡಿದಾಗಿನಿಂದ ಪಠ್ಯಪುಸ್ತಕಗಳಲ್ಲಿ ನಾವು ಸೂರ್ಯನಿಗೆ ಒಂಭತ್ತು ಗ್ರಹಗಳು ಎಂದು ಓದುತ್ತಿದ್ದೇವೆ. ಕಳೆದ ವರ್ಷ ಹಬ್ಬಲ್ ದೂರದರ್ಶಕ ಪ್ಲೂಟೋಕ್ಕೆ ಸೇರಿದ ಎರಡು ಚಂದ್ರರನ್ನು ಗುರುತಿಸಿದ್ದು ವಿಜ್ಞಾನಕ್ಕೊಂದು ಕೊಡುಗೆಯೇ. ಈಗ ವಿಜ್ಞಾನಿಗಳು ಪ್ಲೂಟೊದ ರಹಸ್ಯವನ್ನು ಭೇದಿಸ ಹೊರಟಿದ್ದಾರೆ. ನಾಸಾದಿಂದ ಹಾರಲಿರುವ ರಾಕೆಟ್ ಒಂದರಲ್ಲಿ ಕುಳಿತ ಪುಟ್ಟ ರೊಬೋಟ್ ಒಂದು ಪ್ಲೂಟೋ ಬಳಿ ಹೋಗಿ ಅದನ್ನು ಮಾತನಾಡಿಸಿಕೊಂಡು, ಅದರ ಆಸುಪಾಸಿನ ವಿವರಗಳನ್ನೆಲ್ಲ ಸೆರೆಹಿಡಿದು ತರಲಿದೆ.

‘ಟೆಂಪೆಲ್-ವನ್’
‘ಟೆಂಪೆಲ್-ವನ್’

ವಿಜ್ಞಾನಿಗಳ ಇಂಥ ಸಾಹಸ ಹೊಸದೇನೂ ಅಲ್ಲ. ಸೌರವ್ಯೂಹ ಹಾಗೂ ಇತರ ಆಕಾಶ ಕಾಯಗಳ ಉಗಮದ ಕುರಿತಾದ ಕುತೂಹಲಗಳು ಈವರೆಗೆ ಸೃಷ್ಟಿಯ ಅನೇಕಾನೇಕ ರಹಸ್ಯಗಳನ್ನು ಭೇದಿಸಿವೆ (ಅಥವಾ ಭೇದಿಸಿದೆ ಎಂದುಕೊಳ್ಳುತ್ತಿದ್ದೇವೆ). ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಅಂತೂ ಒಂದಿಲ್ಲೊಂದು ದುಸ್ಸಾಹಸವನ್ನು ನಡೆಸುತ್ತಲೇ ಇರುತ್ತದೆ. ಸೌರವ್ಯೂಹದ ಆಚೆಯಿಂದ ಹಾರಿ ಬರುವ ಧೂಮಕೇತುಗಳು ಇನ್ನೂ ಹೆಚ್ಚು ಬದಲಾಗಿಲ್ಲ, ಅವುಗಳಲ್ಲಿ ಉಗಮಕಾಲದ ಲಕ್ಷಣಗಳಿನ್ನೂ ಇವೆ, ಆದ್ದರಿಂದ ಧೂಮಕೇತುವಿನ ಅಂತರಾಳವನ್ನು ಶೋಧಿಸಿದರೆ ಆ ಕಾಲದ ಸುಳಿಹು ಸಿಗಬಹುದು ಎಂಬ ಹೆದ್ದಾಸೆ ವಿಜ್ಞಾನಿಗಳದ್ದು. ಏಳು ವರ್ಷಗಳ ಹಿಂದೆ ಧೂಮಕೇತು ವೈಲ್ಡ್-೨ ರ ಬೆನ್ನಟ್ಟಿ ಕಳುಹಿದ ಅಂತರಿಕ್ಷ ನೌಕೆ ಸ್ಟಾರ್ ಡಸ್ಟ್ ತನ್ನ ಪುಟ್ಟ ಡಬ್ಬಿಯಲ್ಲಿ ಧೂಮಕೇತುವಿನ ಧೂಳಿನ ಸಂಗ್ರಹಣೆಯ ಮಾದರಿಯನ್ನು ಭದ್ರವಾಗಿ ಸೆರೆಹಿಡಿದು ಮರಳಿ ಈಗ ಕೆಲವು ದಿನಗಳ ಹಿಂದೆ ತಾನೇ ಭೂಮಿಗೆ ಕಳುಹಿದೆ. ಅದು ಸಂಗ್ರಹಿಸಿ ತಂದ ವೈಜ್ಞಾನಿಕ ವಿವರಗಳನ್ನು ವಿಶ್ಲೇಷಣೆ ನಡೆಸಲು ವಿಜ್ಞಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಶಕ್ತಿಯುತ ಸೂಕ್ಷ್ಮದರ್ಶಕದಡಿ ಈ ಧೂಳಿನ ಕಣಗಳನ್ನಿಟ್ಟು ದೊರಕುವ ಚಿತ್ರಗಳನ್ನು ಮೂವತ್ತು ಸಾವಿರ ವಿಜ್ಞಾನ ವಿದ್ಯಾರ್ಥಿಗಳಿಗೆ ದೊರೆಯುವಂತೆ ಮಾಡಲಾಗುವುದು. ಅವರೆಲ್ಲರೂ ಆ ಚಿತ್ರಗಳನ್ನು ವಿಶ್ಲೇಷಿಸಿ ವಿಶ್ವದ ಆದಿಯ ಮೂಲದ ಕುರಿತು ಒಂದಿಷ್ಟು ಸುಳಿಹನ್ನು ಕಂಡು ಹಿಡಿಯಬೇಕೆಂಬುದೇ ಇದರ ಉದ್ದೇಶ. ಇದಕ್ಕಿಂತ ಮೊದಲು ಬಾಹ್ಯಾಕಾಶ ನೌಕೆಯೊಂದು ‘ಜೆನೆಸಿಸ್’ಎಂಬ ಹೆಸರಿನ ಡಬ್ಬಿಯೊಂದರಲ್ಲಿ ಸೂರ್ಯನ ಕಣಗಳನ್ನು ಸಂಗ್ರಹಿಸಿ ತಂದರೂ ಆ ಡಬ್ಬಿ ನೆಲಕ್ಕೆ ಬಿದ್ದು ಒಳಗಿನ ಪುಡಿಗಳೆಲ್ಲ ಮಣ್ಣಿಗೆ ಸೇರಿ ವಿಜ್ಞಾನಿಗಳಿಗೆಲ್ಲ ಅತೀವ ನಿರಾಶೆಯನ್ನುಂಟುಮಾಡಿತ್ತು. ಕಳೆದ ವರ್ಷ ವ್ಯೋಮ ನೌಕೆಯೊಂದು ‘ಟೆಂಪೆಲ್-ವನ್’ಧೂಮಕೇತುವಿನ ನೆತ್ತಿಗೇ ಪೆಟ್ಟು ಕೊಟ್ಟು ಅಲ್ಲಿನ ವಿದ್ಯಮಾನಗಳನ್ನು ಕ್ಯಾಮೆರಾ ಕಣ್ಣಿನಲ್ಲಿ ಹಿಡಿದು ತಂದಿದೆ.
ಈ ಬಾರಿ ಅಮೆರಿಕದ ‘ನಾಸಾ’ನಡೆಸುತ್ತಿರುವ ಚಟುವಟಿಕೆ ಇವೆಲ್ಲಕ್ಕಿಂತ ಭಿನ್ನವಾದದ್ದು. ಈ ಕಾರ್ಯ ಕಳೆದ ಅನೇಕ ವರ್ಷಗಳ ಹಿಂದಿನಿಂದಲೇ ರೂಪುಗೊಳ್ಳುತ್ತಾ ಇತ್ತು. ೭೦೦ ಬಿಲಿಯನ್ ಡಾಲರ್ (ಅಂದರೆ ಸುಮಾರು ೩೫ ಲಕ್ಷ ಕೋಟಿ ರೂಪಾಯಿಗಳು!) ವೆಚ್ಚದ ಅದರ ಕಾರ್ಯಯೋಜನೆ, ನಮ್ಮಿಂದ ಬಹಳೇ ದೂರದ ಶೈತ್ಯ ಲೋಕದಲ್ಲಿ ಅಡ್ಡಾಡುತ್ತಿರುವ ಪ್ಲೂಟೋದ ರಹಸ್ಯವನ್ನು ಮಾನವ ಜಗತ್ತಿಗೆ ಸಾರಹೊರಟಿರುವ ಅದರ ಸಾಹಸ ತಂತ್ರಜ್ಞಾನ ಉತ್ತುಂಗಕ್ಕೇರಿರುವ ಈ ಕಾಲದಲ್ಲಿ ಕೂಡ ಸಾಮಾನ್ಯ ಜನರಿಗೆ ಕೇಳಲು ಕೌತುಕಮಯವಾಗಿದೆ.
ನ್ಯೂ ಹಾರಿಝಾನ್ಸ್
ನ್ಯೂ ಹಾರಿಝಾನ್ಸ್

೧೦೫೪ ಪೌಂಡ್ ತೂಕದ ದೊಡ್ಡ ಪಿಯಾನೋ ಒಂದನ್ನು ಹೋಲುವ (ಚಿತ್ರ ನೋಡಿ) ‘ನ್ಯೂ ಹಾರಿಝಾನ್ಸ್’ನೌಕೆ ಕಳೆದ ಜನವರಿ ೧೮ ರಂದು ಭೂಮಿಯಿಂದ ಲಾಖೀಡ್ ಮಾರ್ಟಿನ್ ರಾಕೆಟ್ಟಿನಿಂದ ಉಡ್ಡಯನಗೊಂಡು ಘಂಟೆಗೆ ೩೬ ಸಾವಿರ ಮೈಲುಗಳ ವೇಗದಲ್ಲಿ ಹಾರಿತು. (ಈ ವೇಗದಲ್ಲಿ ಚಂದ್ರನನ್ನು ಬರೀ ಒಂಭತ್ತು ತಾಸಿನಲ್ಲಿ ತಲುಪಬಹುದು.) ಬುಧ ಗ್ರಹದ ಬಳಿಯಲ್ಲಿ ಸಾಗುವ ಈ ನೌಕೆ ಬುಧನ ಗುರುತ್ವದ ಶಕ್ತಿಯನ್ನು ಬಳಸಿಕೊಂಡು ತನ್ನ ವೇಗವನ್ನು ಹೆಚ್ಚಿಸಿಕೊಳ್ಳಲಿದೆ. ನಂತರ ಗಂಟೆಗೆ ೫೬ ಸಾವಿರ ಮೈಲಿ ವೇಗದಲ್ಲಿ ಒಂದೇ ಸಮನೆ ಹಾರುವುದೊಂದೇ ಅದರ ಕೆಲಸ. ಬಹಳ ದೂರವನ್ನು ಕ್ರಮಿಸಬೇಕಾದುದರಿಂದ ಅದರ ಶಕ್ತಿ ಮಾರ್ಗಮಧ್ಯದಲ್ಲಿ ಸೋರಿಹೋಗದಂತೆ ಅದನ್ನು ರೂಪಿಸಲಾಗಿದೆ. ಅಂದರೆ ತನ್ನ ಪಯಣದಲ್ಲಿ ವಾರಕ್ಕೆ ಒಂದು ಬಾರಿ ಮಾತ್ರ ಅದು ಭೂಮಿಗೆ ಸಂದೇಶವನ್ನು ಕಳಿಸಲಿದೆ. ವರ್ಷದಲ್ಲಿ ಒಂದು ಬಾರಿ ಉಪಕರಣಗಳ ಪರೀಕ್ಷೆಗೆಂದು ಭೂಮಿಯ ಕಂಟ್ರೋಲ್ ರೂಮಿನಿಂದ ಸಂದೇಶ ಪಡೆಯಲಿದೆ.
‘ನ್ಯೂ ಹಾರಿಝಾನ್ಸ್’ಇತರ ಅಂತರಿಕ್ಷ ವಾಹನಗಳಂತೆ ಸೂರ್ಯನ ಬೆಳಕಿನಿಂದ ಶಕ್ತಿಯನ್ನು ಹಾಗೂ ವಿದ್ಯುತ್ತನ್ನು ಪಡೆಯುವುದಿಲ್ಲ. ಏಕೆಂದರೆ ಸೌರಮಂಡಲದ ಅಂಚಿನತ್ತ ಸಾಗುತ್ತಿದ್ದಂತೆ ಅದಕ್ಕೆ ದೊರೆಯುವ ಸೂರ್ಯರಶ್ಮಿಯ ಪ್ರಮಾಣ ಕಡಿಮೆಯಾಗುತ್ತ ಹೋಗುತ್ತದೆ. ಅದು ಶೀತಲಲೋಕಕ್ಕೆ ತೆರಳುತ್ತದೆ. ಬೇಕಾಗುವ ಶಕ್ತಿಗೆಂದು ೩೩ ಕೆಜಿಯಷ್ಟು ಪ್ಲುಟೋನಿಯಂ ಗುಂಡುಗಳನ್ನು ಅದರ ಒಡಲಲ್ಲಿ ಇಡಲಾಗಿದೆ. ಆ ಹರಳುಗಳು ಹೊರ ಸೂಸುವ ವಿಕಿರಣವನ್ನು ಬಳಸಿಕೊಂಡು ಥರ್ಮೋಎಲೆಕ್ಟ್ರಿಕ್ ಜನರೇಟರ್ ದಿನಕ್ಕೆ ೨೦೦ ವ್ಯಾಟ್ ವಿದ್ಯುತ್ ತಯಾರಾಗುವ ವ್ಯವಸ್ಥೆ ಅದರಲ್ಲಿದೆ.*
ಮೂರು ಬಿಲಿಯನ್ ಅಥವಾ ಮೂವತ್ತು ಸಾವಿರ ಕೋಟಿ ಮೈಲುಗಳಷ್ಟನ್ನು ಕ್ರಮಿಸಲು ‘ನ್ಯೂ ಹಾರಿಝಾನ್ಸ್’ಒಂಭತ್ತು ವರ್ಷಗಳಷ್ಟು ಕಾಲ ತೆಗೆದುಕೊಳ್ಳುವುದೆಂದು ವಿಜ್ಞಾನಿಗಳು ಲೆಕ್ಕ ಹಾಕಿದ್ದಾರೆ. ‘ನ್ಯೂ ಹಾರಿಝಾನ್ಸ್’ನೇರವಾಗಿ ಪ್ಲೂಟೋದ ಮೇಲೆ ಹೋಗಿ ಇಳಿಯುವುದಿಲ್ಲ. ಅಷ್ಟಕ್ಕೂ ಪ್ಲೂಟೋದ ಮೇಲ್ಮೈನಲ್ಲಿ ಏನಿದೆಯೆಂದು ಇದುವರೆಗೂ ಸ್ಪಷ್ಟವಾಗಿ ತಿಳಿದಿಲ್ಲ. ಅದರ ಕಕ್ಷೆಯೊಳಕ್ಕೆ ಸೇರಿಕೊಂಡು ಅದರ ಸುತ್ತು ತಿರುಗುವುದೂ ಇಲ್ಲ, ಬದಲಾಗಿ ಬಾಹ್ಯಾಕಾಶದಲ್ಲಿ ಪ್ಲೂಟೋದಿಂದ ೬೨೦೦ ಮೈಲು ದೂರದಲ್ಲಿ ನಿಂತು ಅಲ್ಲಿನ ಪರಿಸರದಲ್ಲಿ ನಡೆಯುವ ಚಟುವಟಿಕೆಗಳನ್ನು ಕ್ಲಿಕ್ಕಿಸಲಿದೆ. ನಂತರ ಅದರ ಅತಿ ದೊಡ್ಡದಾದ ಚಂದ್ರನಾದ ಶರಾನ್ ಬಳಿ ಅಂದರೆ ಅದರಿಂದ ೧೬,೮೦೦ ಮೈಲು ದೂರದಲ್ಲಿ ನಿಂತು ಅದನ್ನು ನಿಟ್ಟಿಸಿ ತನ್ನ ಕ್ಯಾಮರಾದಲ್ಲಿ ದಾಖಲಿಸಲಿದೆ. ಪ್ಲೂಟೋ ಮತ್ತು ಶೆರಾನರ ಸೂರ್ಯನಿಗೆದುರಾಗದ ಕಪ್ಪು ಬದಿಯನ್ನೂ, ಅಲ್ಲಿರಬಹುದಾದ ಮಂಜಿನ ಮುಸುಕನ್ನೂ ಅದು ಪರೀಕ್ಷಿಸಲಿದೆ. ನಂತರ ವೈಪರ್** ಬೆಲ್ಟಿನೊಳಕ್ಕೆ ನುಗ್ಗಿ ತನ್ನ ಅನ್ವೇಷಣೆಯನ್ನು ಮುಂದುವರೆಸಲಿದೆ. ಅಲ್ಲಿಂದ ಅದು ಕಳಿಸುವ ರೇಡೀಯೋ ತರಂಗದ ಸಿಗ್ನಲ್ಲುಗಳು ಬೆಳಕಿನ ವೇಗದಲ್ಲಿ ಪ್ರಸಾರವಾದರೂ ಭೂಮಿ ತಲುಪಲು ೪ ಘಂಟೆಗಳನ್ನು ತೆಗೆದುಕೊಳ್ಳುತ್ತವೆ. ಪ್ಲೂಟೋದ ಬಳಿ ನಿಶ್ಚಿತ ಸ್ಥಳದಲ್ಲಿ ನಿಲ್ಲುವ ಮೂರು ತಿಂಗಳು ಮೊದಲಿನಿಂದಲೇ ತನ್ನ ಸುತ್ತಲಿನ ಪರಿಸರದ ಚಿತ್ರಗಳನ್ನು ಭೂಮಿಗೆ ರವಾನಿಸುವಂತೆ ‘ನ್ಯೂ ಹಾರಿಝಾನ್ಸ್’ನ ಕ್ಯಾಮೆರಾವನ್ನು ಸಜ್ಜುಗೊಳಿಸಲಾಗಿದೆ.
‘ನ್ಯೂ ಹಾರಿಝಾನ್ಸ್’ನಲ್ಲಿ ಇರುವ ಉಪಕರಣಗಳೆಲ್ಲವೂ ಒತ್ತಾಗಿ ಜೋಡಿಸಲಾದ, ಅತ್ಯಂತ ಚಿಕ್ಕ ಸ್ವರೂಪದ ಹಾಗೂ ಅತಿ ಕಡಿಮೆ ಶಕ್ತಿಯನ್ನು ಬಳಸುವಂತೆ ರೂಪಿತವಾದ ದಕ್ಷ ಉಪಕರಣಗಳು. ಇವುಗಳಲ್ಲಿ ಮುಖ್ಯವಾಗಿದ್ದು ಅತಿಗೆಂಪು, ಅತಿನೇರಳೆ ಮತ್ತು ಬಾಹ್ಯಾಕಾಶದ ಚಿತ್ರಗಳನ್ನು ಸೆರೆಹಿಡಿಯುವ ಮೂರು ಕ್ಯಾಮೆರಾಗಳು. ಪ್ಲೂಟೋದ ಮೇಲ್ಮೈ ಉಷ್ಣತೆಯನ್ನು ಹಾಗೂ ಅಲ್ಲಿನ ವಾತಾವರಣದಿಂದ ಬಿಡುಗಡೆಯಾಗುವ ವಸ್ತುಗಳನ್ನು ಪರೀಕ್ಷಿಸಲೆಂದು ಮೂರು ಸ್ಪೆಕ್ಟ್ರೋಮೀಟರುಗಳಿವೆ.
ಇಷ್ಟೇ ಅಲ್ಲ, ಅಮೆರಿಕದ ಬಾವುಟ, ಖಾಸಗಿ ಕ್ಷೇತ್ರದಲ್ಲಿ ಮೊದಲು ಹಾರಿಬಿಡಲಾದ ‘ಸ್ಪೇಸ್ಶಿಪ್ ವನ್’ನೌಕೆಯ ಒಂದು ಚಿಕ್ಕ ಚೂರು ಹಾಗೂ ಅಂತರ್ಜಾಲದ ಮೂಲಕ ‘ನ್ಯೂ ಹಾರಿಝಾನ್ಸ್’ಗೆ ತಮ್ಮ ಬೆಂಬಲ ಸೂಚಿಸಿದ ೪೩೫,೦೦೦ ಜನರ ಸಹಿ ಇರುವ ಸಿಡಿ, ಪ್ಲೂಟೋದ ಸುತ್ತಮುತ್ತಲ ಪರಿಸರದಲ್ಲಿನ ಧೂಳಿನ ಕಣಗಳನ್ನು ಸೆರೆಹಿಡಿಯಲೆಂದು ಕೊಲರಾಡೋ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತಯಾರಿಸಿದ ‘ಡಸ್ಟ್ ಕೌಂಟರ್’ಇವುಗಳನ್ನೂ ನೌಕೆಯೊಳಗೆ ನೀಟಾಗಿ ಜೋಡಿಸಿಡಲಾಗಿದೆ.
ಪ್ಲೂಟೋದ ವ್ಯಾಸ ೧೪೬೬ ಮೈಲುಗಳು, ಪ್ಲೂಟೋ ಸೂರ್ಯನಿಗಿಂತ ೩.೭ ಬಿಲಿಯನ್ ಮೈಲು ದೂರದಲ್ಲಿ ಅಂದರೆ ಭೂಮಿ ಮತ್ತು ಸೂರ್ಯರ ನಡುವಣ ದೂರಕ್ಕಿಂತ ಮೂವತ್ತೊಂಭತ್ತು ಪಟ್ಟು ಅಧಿಕ ದೂರದಲ್ಲಿದೆ. ತನ್ನ ಸುತ್ತಲೂ ತಿರುಗಲು ೬.೪ ದಿನಗಳು ಹಾಗೂ ಸೂರ್ಯನ ಸುತ್ತ ಸುತ್ತಲು ೨೪೮ ವರ್ಷಗಳು ಬೇಕಾಗುತ್ತವೆ. ಸರಾಸರಿ ಮೇಲ್ಮೈ ಉಷ್ಣತೆ -೨೪೩ ಡಿಗ್ರಿ ಸೆಂಟಿಗ್ರೇಡುಗಳು. ಸೂರ್ಯನಿಗೆ ಸಮೀಪವಾಗಿರುವ ಶಿಲೆ, ಬಂಡೆಗಳಿಂದ ಕೂಡಿದ ನಾಲ್ಕು ಗ್ರಹಗಳು, ನಂತರದ ನಾಲ್ಕು ಅನಿಲಭರಿತ ಗ್ರಹಗಳಿಗೆ ಹೋಲಿಸಿದರೆ ಪ್ಲೂಟೊದಲ್ಲಿ ಏನಿದೆಯೆಂಬುದು ಖಚಿತವಾಗಿ ತಿಳಿದಿಲ್ಲ. ಆದರೂ ಮುಖ್ಯವಾಗಿ ಘನೀಕೃತಗೊಂಡ ಸಾರಜನಕ, ಇಂಗಾಲದ ಮಾನಾಕ್ಸೈಡ್, ಮಿಥೇನ್ ಅನಿಲಗಳು ಇವೆ. ಇವೆಲ್ಲವೂ ಸೂರ್ಯನ ಸುತ್ತು ಗಸ್ತು ಹೊಡೆಯುವಾಗ ಸೂರ್ಯನಿಗೆದುರಾದ ಭಾಗದಲ್ಲಿ ನೀರಾಗುತ್ತ, ವಿರುದ್ಧ ದಿಕ್ಕಿನಲ್ಲಿ ಗಟ್ಟಿಯಾಗುತ್ತ ಚಲಿಸುತ್ತಿವೆ. ಇವೆಲ್ಲವೂ ಭೂಮಿಯಲ್ಲೇ ಕೂತು ವೈಜ್ಞಾನಿಕ ಉಪಕರಣಗಳನ್ನು, ಭೌತ ಮತ್ತು ಗಣಿತದ ಸಮೀಕರಣಗಳನ್ನು ಬಳಸಿ ವಿಜ್ಞಾನಿಗಳು ಕಂಡುಕೊಂಡ ಮಾಹಿತಿಗಳು. ಶೆರಾನ್ ಪ್ಲೂಟೋದ ಅರ್ಧದಷ್ಟಿರುವುದರಿಂದ ಅವೆರಡೂ ಸೇರಿ ಅವಳಿ ಗ್ರಹಸಮುಚ್ಚಯಗಳೇ ಎಂಬ ಊಹೆಯನ್ನೂ ಕೆಲವು ವಿಜ್ಞಾನಿಗಳು ವ್ಯಕ್ತಪಡಿಸುತ್ತಿದ್ದಾರೆ.
‘ಪ್ಲೂಟೋದ ಬಗ್ಗೆ ಈಗ ನಮಗೆ ಗೊತ್ತಿರುವ ವಿಷಯಗಳು ಬರೇ ಒಂದು ಸ್ಟಾಂಪಿನ ಹಿಂದೆ ಬರೆಯುವಷ್ಟಿದೆ. ‘ನ್ಯೂ ಹಾರಿಝಾನ್ಸ್’ಯಶಸ್ಸಿನ ನಂತರ ಒಂದು ಪುಸ್ತಕ ಬರೆಯುವಷ್ಟು ವಿವರಗಳು ಸಿಗಬಹುದು’ಎಂಬ ಆಶಾವಾದವನ್ನು ವ್ಯಕ್ತಪಡಿಸುತ್ತಾರೆ ಕೊಲೆನ್ ಹಾರ್ಟ್ಮನ್, ಈ ಯೋಜನೆಯ ಮುಖ್ಯಸ್ಥ. ಆದರೆ ಅದಕ್ಕಿನ್ನೂ ಕಾಯಬೇಕು.
* ವಿಕಿರಣ ಸೂಸುವ ಅಣುಹರಳುಗಳನ್ನು ಬಳಸುವುದಕ್ಕೆ ಪರಿಸರವಾದಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇದೇ ಮೊದಲಲ್ಲ, ಈ ಹಿಂದೆಯೂ ಅನೇಕ ಬಾಹ್ಯಾಕಾಶ ನೌಕೆಗಳಲ್ಲಿ ಅಣುವಿದ್ಯುತ್ ಶಕ್ತಿಯನ್ನು ಬಳಸಲಾಗಿದೆ. ಅಕಸ್ಮಾತ್ತಾಗಿ ಅವಘಡವೇನಾದರೂ ಘಟಿಸಿದರೆ ಆ ಅಣುಹರಳುಗಳು ಬಾಹ್ಯಾಕಾಶದಲ್ಲಿ ಅಥವಾ ಭೂಮಿಯ ಪರಿಸರದಲ್ಲಿ ಹೊರಬಿದ್ದು ಉಂಟುಮಾಡಬಹುದಾದ ಅಪಾಯಗಳ ಕುರಿತು ಹಲಬಾರಿ ಧ್ವನಿ ಎತ್ತಲಾಗಿದೆ. ಅಂಥದ್ದೇನೂ ಆಗುವುದಿಲ್ಲ ಎಂದು ವಿಜ್ಞಾನಿಗಳು ಪರಿಸರವಾದಿಗಳ ಬಾಯಿ ಮುಚ್ಚಿಸಿದ್ದಾರೆ. ಒಂದು ವೇಳೆ ಅಪಘಾತ ಸಂಭವಿಸಿದರೂ ಪ್ಲುಟೋನಿಯಮ್ ಹರಳುಗಳುಳ್ಳ ಡಬ್ಬಿ ಒಡೆಯುವುದಿಲ್ಲ ಆಷ್ಟು ಬಲಿಷ್ಠವಾಗಿದೆ ಎಂದು ಆಶ್ವಾಸನೆ ನೀಡಿದ್ದಾರೆ.
** ವೈಪರ್ ಪಟ್ಟಿ:
೪೫೦ ಕೋಟಿ ವರ್ಷಗಳ ಹಿಂದೆ ಅಂತರಿಕ್ಷದಲ್ಲಿ ಸೌರವ್ಯೂಹದ ಜನನವಾಗಿ ಸೂರ್ಯ ಮತ್ತು ಅದರ ಸುತ್ತ ತಿರುಗುವ ಗ್ರಹಗಳು ತಯಾರಾದವು. ಆ ಪ್ರಕ್ರಿಯೆಯಲ್ಲಿ ಉಳಿದ ಚೂರುಗಳು ಚೆಲ್ಲಾಪಿಲ್ಲಿಯಾಗಿ ಹೆಚ್ಚಿನವು ಪ್ಲೂಟೋದ ಆಚೆ ಸೌರವ್ಯೂಹದ ಅತಿ ಹೊರಗಿನ ಊರ್ತ್ ಕವಚದಲ್ಲಿ ಇಂದಿಗೂ ಸುತ್ತುತ್ತಿವೆ. ಅಸಂಖ್ಯಾತ ಚಿಕ್ಕ, ಪುಟ್ಟ ಚೂರುಗಳು ನೆಪ್ಚೂನ್ ಗ್ರಹದ ಆಚೆ ಪ್ಲೂಟೋಗಿಂತ ಮೊದಲು ಒಂದು ಗೋಲದಲ್ಲಿ ಸುತ್ತುತ್ತಿವೆ. ಈ ಕವಚವನ್ನು ವೈಪರ್ ಪಟ್ಟಿ ಎನ್ನಲಾಗುತ್ತಿದೆ. ಸೂರ್ಯನಿಂದ ಅತಿ ದೂರದಲ್ಲಿರುವುದರಿಂದ ಆ ಪ್ರದೇಶದಲ್ಲಿ ಮಂಜಿನ ಗೋಲಗಳನ್ನು ಆವರಿಸಿರುವ ಚಿಕ್ಕ, ಅತಿ ಚಿಕ್ಕ ಆಕಾಶಕಾಯಗಳಿವೆ.
ಹೊಸ, ಸೂರ್ಯನನ್ನು ಸುತ್ತುತ್ತಿದೆ ಎನ್ನಲಾದ, ಇನ್ನೂವರೆಗೆ ಹೆಸರಿಡದ ಗ್ರಹವೊಂದನ್ನು ವಿಜ್ಞಾನಿಗಳು ಕಳೆದ ಜುಲೈ ತಿಂಗಳಲ್ಲಿ ಖಚಿತಪಡಿಸಿದ್ದಾರೆ. ಸುಮಾರು ೩೦೦೦ ಕಿಮೀ ವ್ಯಾಸವಿರುವ ಅದನ್ನು ಸೌರವ್ಯೂಹದ ಹತ್ತನೆಯ ಗ್ರಹವೆನ್ನುವುದೋ ಅಥವಾ ಒಂಭತ್ತನೆಯದೋ ಎಂಬ ಬಗ್ಗೆ ಇನ್ನೂ ಒಮ್ಮತ ಮೂಡಿಲ್ಲ. ಪ್ಲೂಟೋ ವೈಪರ್ ಪಟ್ಟಿಯ ಇತರ ಸಾವಿರಗಟ್ಟಲೆ ಆಕಾಶಕಾಯಗಳಂತೆಯೇ ಸೂರ್ಯನನ್ನು ಸುತ್ತುತ್ತಿರುವ ವಸ್ತು ಎಂದು ಹೇಳಲಾಗುತ್ತಿದೆ. ಏಕೆಂದರೆ ಪ್ಲೂಟೋ ಮಾತ್ರ ಇತರ ಗ್ರಹಗಳಿಗಿಂತ ಭಿನ್ನವಾಗಿದೆ. ಅದರ ಕಕ್ಷೆ ಉಳಿದವುಗಳಂತಿರದೆ ತೀರಾ ಅಂಡಾಕಾರವಾಗಿದೆ. ಕಕ್ಷೆಯ ಈ ಆಕಾರದಿಂದಾಗಿ ಸೂರ್ಯನಿಂದ ಪ್ಲೂಟೋದ ಅಂತರ ಆಗಾಗ ಹೆಚ್ಚುಕಡಿಮೆಯಾಗುತ್ತಿರುತ್ತದೆ. ಒಮ್ಮೊಮ್ಮೆ ಅದು ಸೂರ್ಯನಿಗೆ ಸಮೀಪವಿದ್ದರೆ ಮತ್ತೊಮ್ಮೆ ಅತಿ ದೂರದಲ್ಲಿರುತ್ತದೆ. ಪ್ಲೂಟೋ ಮತ್ತು ನೆಪ್ಚೂನಿನ ಕಕ್ಷೆಗಳು ಒಮ್ಮೊಮ್ಮೆ ಮೇಳೈಸುವುದೂ ಉಂಟು. ಇಷ್ಟೇ ಅಲ್ಲ, ಉಳಿದ ಗ್ರಹಗಳ ಕಕ್ಷೆಗಿಂತ ಪ್ಲೂಟೋ ೧೭ ಡಿಗ್ರಿ ಓರೆಯಾಗಿದ್ದುಕೊಂಡು ಚಲಿಸುತ್ತಿದೆ.
ಸರೋಜಾ ಪ್ರಕಾಶ

ದುಬಾರಿ ಶುಲ್ಕವನ್ನು ಪಡೆಯುತ್ತಿರುವ ಖಾಸಗಿ ಶಾಲೆಗಳ ವಿರುದ್ಧ ರೈತ ಸಂಘದ ಮನವಿ

0

ತಾಲ್ಲೂಕಿನಲ್ಲಿ ಶಾಲೆಗಳ ದಾಖಲಾತಿ ಆರಂಭವಾಗಿದ್ದು, ದುಬಾರಿ ಶುಲ್ಕವನ್ನು ಪಡೆಯುತ್ತಿರುವ ಖಾಸಗಿ ಶಾಲೆಗಳನ್ನು ಗುರುತಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ರೈತ ಸಂಘದ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಖಾಸಗಿ ಅನುದಾನಿತ, ಅನುದಾನ ರಹಿತ ಶಾಲೆಗಳು ತಾವು ಪಡೆಯುವ ಶುಲ್ಕದ ವಿವರವನ್ನು ಕಡ್ಡಾಯವಾಗಿ ನಾಮಫಲಕದಲ್ಲಿ ಪ್ರಕಟಿಸಬೇಕು. ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಹೆಚ್ಚೆಚ್ಚು ಹಣವನ್ನು ಪಡೆಯುವ ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳುವಂತೆ ರೈತರು ಒತ್ತಾಯಿಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಜಿಲ್ಲಾ ಉಪಾಧ್ಯಕ್ಷ ಮುನಿಕೆಂಪಣ್ಣ, ಬಾಲಮುರಳಿಕೃಷ್ಣ, ಪ್ರತೀಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಖಾಸಗಿ ಶಾಲೆಗಳಲ್ಲಿ ಹೆಚ್ಚಿನ ಹಣ ವಸೂಲಿ; ಕ್ಷೇತ್ರ ಶಿಕ್ಷಣಧಿಕಾರಿಗೆ ಮನವಿ ಪತ್ರ ಸಲ್ಲಿಕೆ

0

ನಗರದ ಕೋಟೆ ವೃತ್ತದಲ್ಲಿರುವ ಶಿಕ್ಷಣಾಧಿಕಾರಿಗಳ ಕಚೇರಿಯ ಮುಂದೆ ಅಲೆಮಾರಿ ಜನಾಂಗದ ಮುಖಂಡರುಗಳು ಪ್ರತಿಭಟನೆ ನಡೆಸಿ, ತಾಲ್ಲೂಕು ಅಲೆಮಾರಿ ಸಂಘದ ಪದಾಧಿಕಾರಿಗಳು ಅಲೆಮಾರಿ ಜನಾಂಗದ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿ ಅತಿ ಹೆಚ್ಚು ಶುಲ್ಕವನ್ನು ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರವರ್ಗ-1 ರಲ್ಲಿರುವ 46 ಜಾತಿಗಳನ್ನು ಸರ್ಕಾರ 1966 ರಲ್ಲಿಯೇ ಅಲೆಮಾರಿ/ಅರೆಅಲೆಮಾರಿ ಜನಾಂಗವೆಂದು ಗುರ್ತಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಅಲೆಮಾರಿ/ಅರೆ ಅಲಮಾರಿ ಸಮುದಾಯದ ಮಕ್ಕಳಿಂದ ಯಾವುದೇ ಡೊನೇಷನ್ ಪಡೆಯದೆ ಉಚಿತ ಗುಣಮಟ್ಟದ ಶಿಕ್ಷಣವನ್ನು ನೀಡುವಂತೆ ರಾಜ್ಯದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಆದೇಶ ಹೊರಡಿಸಿದ್ದರೂ ಸಹ ಇಲಾಖೆಯ ಹಾಗು ಹಿರಿಯ ಅಧಿಕಾರಿಗಳ ಆಧೇಶಕ್ಕೆ ಯಾವುದೇ ಬೆಲೆ ನೀಡದೇ ನಗರದ ಡಾಲ್ಪಿನ್ ಶಾಲೆಯಲ್ಲಿ ಹೆಚ್ಚಿನ ಶುಲ್ಕ ಫಾವತಿಸಿಕೊಂಡಿದ್ದಾರೆ.
8 ನೇ ತರಗತಿ ವಿಧ್ಯಾರ್ಥಿನಿ ಯಶಸ್ವಿನಿ ಕೋಂ ನರಸಿಂಹಮೂರ್ತಿ, 6 ನೇ ತರಗತಿಯ ತೇಜಸ್ವಿನಿ ಕೋಂ ನರಸಿಂಹಮೂರ್ತಿ ಮತ್ತು 2 ನೇ ತರಗತಿಯ ಪ್ರಿಯದರ್ಶಿನಿ ಕೋಂ ನರಸಿಂಹಮೂರ್ತಿ ಅವರಿಂದ ಒಟ್ಟು 44 ಸಾವಿರ ರೂಪಾಯಿ ಹಣ ವಸೂಲಿ ಮಾಡಿರುತ್ತಾರೆ.
ಹಾಗಾಗಿ ಶಾಲಾ ಆಡಳಿತ ಮಂಡಳಿಯಿಂದ ಸದರಿ ವಿದ್ಯಾರ್ಥಿಗಳು ಕಟ್ಟಿರುವ ಹಣ ವಾಪಸ್ ಕೊಡಿಸುವುದು ಸೇರಿದಂತೆ ಸರ್ಕಾರದ ಆದೇಶದಂತೆ ಅಲೆಮಾರಿ/ಅರೆ ಅಲೆಮಾರಿ ಜನಾಂಗದ ಮಕ್ಕಳಿಗೆ ಉಚಿತ ಗುಣಮಟ್ಟದ ಶಿಕ್ಷಣವನ್ನು ಕೊಡಿಸಿಕೊಡಬೇಕು ಎಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.
ಅಲೆಮಾರಿ ಜನಾಂಗದ ಮುಖಂಡರಾದ ಆರ್. ಸುಭ್ರಮಣಿ, ನರಸಿಂಹಮೂರ್ತಿ, ನಾರಾಯಣಸ್ವಾಮಿ, ಶ್ರೀನಿವಾಸ್, ಮತ್ತಿತರರು ಹಾಜರಿದ್ದರು.

ಕುಂಟೆಯಲ್ಲಿ ಮಕ್ಕಳ ಈಜು ಮೋಜು

0

ನಗರಗಳಲ್ಲಿ ಮಕ್ಕಳಿಗೆ ಈಜಲು ಈಜು ಕಲಿಯಲು ಈಜುಕೊಳಗಳಿರುತ್ತವೆ. ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲೂ ಜಿಲ್ಲಾಡಳಿತದಿಂದ ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ಈಜುಕೊಳವನ್ನು ನಿರ್ಮಾಣ ಮಾಡಲಾಗಿದೆ. ಆದರೆ ನೀರಿಗೆ ಪರಿತಪಿಸುತ್ತಿರುವ, ಅಂತರ್ಜಲ ಕುಸಿದಿರುವ ಗ್ರಾಮಗಳಲ್ಲಿನ ಮಕ್ಕಳಿಗೆ ಈಜು ಕನಸಿನ ಮಾತಾಗಿದೆ.
ಇಂಥಹುದರಲ್ಲಿ ಅಲ್ಪ ಸ್ವಲ್ಪ ನೀರಿರುವ ತಾಲ್ಲೂಕಿನ ಎಲ್.ಮುತ್ತುಗದಹಳ್ಳಿ ಬಳಿಯಿರುವ ಕುಂಟೆಯು ಮಕ್ಕಳಿಗೆ ಈಜಿನ ಮತ್ತು ಮೋಜಿನ ತಾಣವಾಗಿದೆ. ಬೇಸಿಗೆಯ ಬಿಸಿಗೆ ತಂಪು, ಈಜಾಡುವ ಆನಂದ ಎರಡನ್ನೂ ಮಕ್ಕಳು ಅನುಭವಿಸುತ್ತಿದ್ದಾರೆ.
ಹಿಂದೆಲ್ಲ ವಿದ್ಯಾರ್ಥಿಗಳು, ಮಕ್ಕಳು ಬೇಸಿಗೆಯ ಕಾಲಕ್ಕಾಗಿ ಕಾಯುತ್ತಿದ್ದರು. ಸುಡುವ ಬಿಸಿಲು ಆಕಾಶದಿಂದ ಸುರಿ ಯುತ್ತಿದ್ದರೂ ಅದು ಅವರ ಪಾಲಿಗೆ ತಂಪಾಗಿ ಕಾಣುತ್ತಿತ್ತು. ಇದಕ್ಕಿರುವ ಕಾರಣ ಒಂದೇ. ಬೇಸಿಗೆಯಲ್ಲಿ ಶಾಲೆಗಳಿಗೆ ರಜೆ ಮತ್ತು ಬಾವಿಗಳಲ್ಲಿ ನೀರಿರುತ್ತಿದ್ದುದು. ಗ್ರಾಮದ ಬಳಿಯ ಕುಂಟೆ ಕೆರೆಗಳಿಗೆಲ್ಲ ಮಕ್ಕಳೇ ರಾಜರು. ತಮಗೆ ತಾವೇ ಈಜು ಕಲಿತು, ನೀರಿನ ಆಳ, ಅಗಲಗಳನ್ನು ಅಳೆಯುತ್ತಿದ್ದರು. ಅವರೊಳಗಿನ ಸಾಹಸ, ಸೃಜನಶೀಲತೆ ಈ ಪ್ರಕೃತಿಯ ಮಡಿಲಲ್ಲಿ ಚಿಗುರೊಡೆಯುತ್ತಿತ್ತು. ಆದರೆ ನೀರಿಗಾಗಿ ಹೋರಾಟ ನಡೆಸುತ್ತಾ ಹನಿ ಹನಿ ನೀರನ್ನು ಬೆಳೆಗಳಿಗೆ ಉಣಿಸುತ್ತಾ, ಕೂಡಿಟ್ಟ ನೀರನ್ನು ಜಾನುವಾರುಗಳಿಗೆ ನೀಡಬೇಕಾದ ಪರಿಸ್ಥಿತಿ ಜಿಲ್ಲೆಯ ಗ್ರಾಮಗಳಲ್ಲಿ ನಿರ್ಮಾಣವಾಗಿದೆ.
ಜಿಲ್ಲೆಯ ಬಹುತೇಕ ಎಲ್ಲಾ ಕೆರೆ ಕುಂಟೆಗಳು ಬತ್ತಿಹೋಗಿವೆ. ಅಂತರ್ಜಲದ ಮಟ್ಟ ತೀವ್ರವಾಗಿ ಕುಸಿದಿದೆ, ಜನ ಹಾಗೂ ಜಾನುವಾರುಗಳು ಒಂದೊಂದು ಹನಿ ಕುಡಿಯುವ ನೀರಿಗಾಗಿ ಪರಿತಪಿಸುವಂತಹ ಪರಿಸ್ಥಿತಿ ಉಂಟಾಗಿದೆ.
ಕಳೆದ ಹದಿನೈದು ದಿನಗಳ ಹಿಂದೆ ಬಿದ್ದ ಅಕಾಲಿಕ ಮಳೆಯಿಂದಾಗಿ ಕುಂಟೆಗಳಲ್ಲಿ ಅಲ್ಪಸ್ವಲ್ಪ ನೀರು ಬಂದಿರುವುದು ಮಕ್ಕಳು ಈಜಾಡುವಂತಾಗಿದೆ. ಮಕ್ಕಳು ಬಿಸಿಲಿನ ತಾಪವನ್ನು ತಣಿಸಿಕೊಳ್ಳುತ್ತಿದ್ದರೆ, ದಾರಿಯಲ್ಲಿ ಹೋಗುತ್ತಿದ್ದ ನಾಗರೀಕರು ತಮ್ಮ ಬಾಲ್ಯದ ದಿನಗಳಲ್ಲಿ ಬಾವಿಗಳಲ್ಲಿ, ಕೆರೆಗಳಲ್ಲಿ ಈಜು ಹೊಡೆಯುತ್ತಿದ್ದ ಬಗ್ಗೆ ನೆನಪಿಸಿಕೊಂಡು ಹೋಗುತ್ತಿದ್ದರು.

ಉಚಿತ ಕಣ್ಣಿನ ಚಿಕಿತ್ಸಾ ಶಿಬಿರ

0

ತಾಲ್ಲೂಕಿನ ಜಂಗಮಕೋಟೆಯ ಕಿರಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ಉಚಿತ ಕಣ್ಣಿನ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿತ್ತು.
ಹೊಸಕೋಟೆಯ ಗ್ಲೋಬಲ್ ಫೌಂಡೇಷನ್ ಆಸ್ಪತ್ರೆ ವತಿಯಿಂದ ಆಯೋಜಿಸಿದ್ದ ಕಣ್ಣಿನ ಚಿಕಿತ್ಸಾ ಶಿಬಿರದಲ್ಲಿ ಕಣ್ಣಿನ ಪೊರೆ ಬಂದವರನ್ನು ಗುರುತಿಸಿ ಉಚಿತವಾಗಿ ಶತ್ರಚಿಕಿತ್ಸೆಯನ್ನು ನಡೆಸಲಾಗುವುದು. ಗ್ರಾಮಾಂತರ ಪ್ರದೇಶದಲ್ಲಿ ವಯಸ್ಕರು ಹಲವಾರು ಮಂದಿ ಈ ಕಣ್ಣಿನ ಪೊರೆಯಿದ್ದರೂ ಹಣ ವ್ಯಯಿಸಲು ಆಗದೇ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿಲ್ಲ. ಅವರಿಗೆ ಈ ರೀತಿಯ ಶಿಬಿರಗಳು ವರದಾನವಾಗುತ್ತದೆ ಎಂದು ವೈದ್ಯಾಧಿಕಾರಿ ಡಾ.ಅಂಬಿಕಾ ತಿಳಿಸಿದರು. ಸುಮಾರು 28 ಮಂದಿಯನ್ನು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಾಗಿ ಹೊಸಕೋಟೆಯ ಗ್ಲೋಬಲ್ ಫೌಂಡೇಷನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಡಾ.ಸುಪ್ರಿಯಾ ಹಾಜರಿದ್ದರು.

ಮತ ಹಾಕಿಸಲು ಕರೆತರುತ್ತಿದ್ದ ಕಾರು ಬಾವಿಗೆ ಬಿತ್ತು

0

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮತ ಚಲಾಯಿಸಲೆಂದು ಬರುತ್ತಿದ್ದವರ ಕಾರು ಬಾವಿಯಲ್ಲಿ ಬಿದ್ದ ಪ್ರಕರಣ ತಾಲ್ಲೂಕಿನ ಕಂಬದಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಪ್ರಯಾಣಿಸುತ್ತಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
3jun5ಕಂಬದಹಳ್ಳಿಯ ಡೈರಿ ಬಳಿ ರಸ್ತೆ ಬದಿಯಲ್ಲಿರುವ 50 ಅಡಿ ಆಳದ ನೀರಿಲ್ಲದ ಬಾವಿಗೆ ಸ್ಯಾಂಟ್ರೋ ಕಾರು ಬಿದ್ದಿದ್ದು, ಕಾರಿನಲ್ಲಿದ್ದ ಮುರಳಿ, ನರೇಶ್ಬಾಬು, ಶರ್ಮಿಳಾ ಮತ್ತು ಸಿದ್ದರಾಜು ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಪ್ರತಿಯೊಂದು ಮತವೂ ಅಮೂಲ್ಯವಿರುವ ಕಾರಣ ಕಂಬದಹಳ್ಳಿಯಲ್ಲಿ ಮತ ಹಾಕಿಸಲು ಮತದಾರರನ್ನು ಸಂಜೆ 5 ಗಂಟೆಯೊಳಗೆ ತಲುಪಬೇಕೆಂದು ದೇವನಹಳ್ಳಿಯಿಂದ ಕರೆತರುತ್ತಿದ್ದಾಗ ಕಾರಿನ ಚಕ್ರ ಪಂಚರ್ರಾದ ಕಾರಣ ಚಾಲಕನ ಹತೋಟಿ ತಪ್ಪಿ ರಸ್ತೆ ಬದಿಯಲ್ಲಿದ್ದ ಬಾವಿಗೆ ಕಾರು ಬಿದ್ದಿದೆ. ತಕ್ಷಣ ಗ್ರಾಮಸ್ಥರು ಹಗ್ಗ ಮತ್ತು ಗೋಣಿಚೀಲಗಳನ್ನು ಬಳಸಿ ಸಹಾಯದಿಂದ ಕಾರಿನಲ್ಲಿದ್ದವರನ್ನು ಮೇಲೆತ್ತಿದ್ದಾರೆ.

ಹದಿಹರೆಯದ ಸಮಸ್ಯೆಗಳು ಮತ್ತು ಪರಿಹಾರ – ಭಾಗ 1

0

“ಎಂಥಾ ಹದವಿತ್ತೆ ಗೆಳತಿ ಹರೆಯಕೆ ಏನೋ ಮುದವಿತ್ತೆ….” ಎನ್ನುವ ಕವಿವಾಣಿ ಪ್ರಾಯಶ: ಸಾಹಿತ್ಯೋಪಾಸಕರು, ಸಂಗೀತ ಆರಾಧಕರು ಕೇಳಿರುತ್ತಾರೆ. ಹದಿ ಹರೆಯದ ಮಾನಸಿಕ ತುಮುಲಗಳು ಇಲ್ಲಿ ಅಭಿವ್ಯಕ್ತಗೊಂಡಿವೆ.
ಹೆಣ್ಣು ತನ್ನ ಜೀವನದ ಪಯಣದಲ್ಲಿ ಮಗಳಾಗಿ, ಹೆಂಡತಿಯಾಗಿ, ತಾಯಿಯಾಗಿ, ಸೊಸೆಯಾಗಿ ತುಂಬಾ ಜವಾಬ್ದಾರಿಯುತ ಘಟ್ಟಗಳನ್ನು ಕ್ರಮಿಸುತ್ತಾಳೆ. ಈ ಎಲ್ಲ ಘಟ್ಟಗಳಲ್ಲಿ ನೋವು, ನಲಿವು, ಬೇಸರ, ಆತಂಕ ಎಲ್ಲವೂ ಸಹಜ. ಬಾಲ್ಯದ ಮುಗ್ಧತೆ ಕಳೆದು ಯೌವನದ ಪ್ರೌಢಿಮೆಯು ಆವರಿಸುವ ಸಮಯ ಚೆಲ್ಲು ಚೆಲ್ಲಾಗಿ ಕುಂಟೆಬಿಲ್ಲೆ, ಕಣ್ಣಾಮುಚ್ಚಾಲೆ, ಅಡುಗೆ ಆಟಗಳನ್ನು ಸಂಗಡಿಗರೊಂದಿಗೆ ಆಡಿಕೊಂಡಿದ್ದ ಹುಡುಗಿ ಒಮ್ಮೆಲೇ ಯೌವನಕ್ಕೆ ಕಾಲಿಡುತ್ತಿದ್ದಂತೆಯೇ ಗಂಭೀರಳಾಗಿ ಬಿಡುತ್ತಾಳೆ. ಹದಿ ವಯಸ್ಸಿನ ಮಹಿಮೆಯೇ ಅಂಥಹುದು. ಹಿಂದೆಲ್ಲ 13 ವರ್ಷದ ನಂತರವೇ ಹೆಣ್ಣು ಮಕ್ಕಳು ಋತುಮತಿಯಾಗುತ್ತಿದ್ದರು. ಇತ್ತೀಚಿನ ದಿನಗಲ್ಲಿ ವಾತಾವರಣ, ತಿನ್ನುವ ಆಹಾರ ಒತ್ತಡದ ಜೀವನ, ದೈಹಿಕ ಶ್ರಮ ಇಲ್ಲದಿರುವುದು, ಬೇರೆ ಬೇರೆ ರೂಪದಲ್ಲಿ ರಾಸಾಯನಿಕಗಳ ಸೇವನೆ ಇವೆಲ್ಲವುಗಳ ಪರಿಣಾಮ 9 ವರ್ಷಕ್ಕೆಲ್ಲ ಹೆಣ್ಣು ಮಕ್ಕಳು ಋತುಮತಿಯಾಗುತ್ತಿದ್ದಾರೆ. ಈ ಕಾರಣಕ್ಕೆ ಹೆತ್ತವರ ಜವಾಬ್ದಾರಿ ಇನ್ನಷ್ಟು ಹೆಚ್ಚು. ತಾಯ್ತನ ಎನ್ನುವುದು ಹೆಣ್ಣಿಗೆ ವರದಾನ ಹೆಣ್ಣು ಋತುಮತಿಯಾಗುವುದು ಗರ್ಭಧಾರಣೆಗೆ ಹೆಣ್ಣಿನ ದೇಹ ಸಜ್ಜಾಗುತ್ತಿರುವುದರ ಸಂಕೇತ ಹದಿ ವಯಸ್ಸಿನವರಲ್ಲಿ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳು ಕಂಡು ಬರುತ್ತವೆ. ಮೆದುಳಿನಲ್ಲಿರುವ ತೈರೋಥ್ಯಾಲವಸ್ ಎಂಬ ಗ್ರಂಥಿಯು ಸ್ರವಿಸುವ ಹಾರ್ಮೋನುಗಳೇ ಈ ಬದಲಾವಣೆಗಳಿಗೆ ಕಾರಣ ಕರ್ತೃ. ಈ ಹಾರ್ಮೋನುಗಳ ಕ್ರಿಯೆಯಿಂದಲೇ ಹೆಣ್ಣು ಋತುವತಿಯಾಗುವುದು. ಈ ಎಲ್ಲ ಪ್ರಕ್ರಿಯೆಗಳು 11 ರಿಂದ 12 ವರ್ಷದ ಅವಧಿಯಲ್ಲಿ ನಡೆಯುವುದು. “ನಾವು ಏನನ್ನು ಬಿತ್ತುತ್ತೇವೆಯೋ ಅದನ್ನೇ ಬೇಳೆಯುತ್ತೇವೆ” ಎನ್ನುವ ನಾನ್ನುಡಿಯಂತೆ ಬೇವಿನ ಬೀಜವನ್ನು ಬಿತ್ತಿದರೆ ಬೇವಿನ ಮರವನ್ನು ಬೆಳೆಯುತ್ತೇವೆ. ಅದರಂತೆ ಮಾವಿನ ಬೀಜವನ್ನು ಬಿತ್ತಿದರೆ ಮಾವಿನ ಮರವನನ್ನು ಪಡೆಯುತ್ತೇವೆ. ಈ ತರದಲ್ಲಿಯೇ ಮಕ್ಕಳಿಗೆ ಲೈಂಗಿಕ ಶಿಕ್ಷಣದ ಜೊತೆಗೆ ಸ್ವಚ್ಛತೆ, ಪೌಷ್ಠಿಕ ಆಹಾರದ ಸೇವನೆಯ ಬಗ್ಗೆ ಅರಿವು ಮೂಡಿಸುವುದು ಅಗತ್ಯ. ಇದರಿಂದ ಸ್ವಸ್ಥ, ಸದೃಢ ಸಮಾಜದ ನಿರ್ಮಾಣವೂ ಸಾಧ್ಯ.
ಮಾಸಿಕ ಋತುಸ್ರಾವ: ಹಾರ್ಮೋನುಗಳ ಕ್ರಿಯೆಯಿಂದ ಬಿಡುಗಡೆಯಾದ ಅಂಡಾಣು (ಸ್ತ್ರೀ ಬೀಜ) ತನ್ನ ಮಾರ್ಗದ ಮೂಲಕ ಗರ್ಭಾಶಕ್ಕೆ ಬಂದು ಪುರುಷರೊಂದಿಗೆ ಸಂಭೋಗಕ್ಕೋಸ್ಕರ ಕಾದಿರುತ್ತದೆ. ಸಂಭೋಗ ನಡೆಯದ ಪಕ್ಷದಲ್ಲಿ ಬೀಜವು ಗರ್ಭಾಶಯದ ಹೊರಪದರದೊಂದಿಗೆ ಯೋನಿ ಮಾರ್ಗದ ಮೂಲಕ ರಕ್ತಸ್ರಾವದೊಂದಿಗೆ ಹೊರ ಬರುತ್ತದೆ. ಈ ಪ್ರಕ್ರಿಯೆಯು 30 ದಿನಗಳಿಗೊಮ್ಮೆ ಪುನರಾವರ್ತನೆಯಾಗುವುದು. 2 ರಿಂದ 4 ದಿನಗಳವರೆಗೆ ಸ್ರಾವವು ಕಾಣಿಸಿಕೊಳ್ಳುವುದು.
ಋಯುಸ್ರಾವವು ಮೊಲದ ರಕ್ತದಂತೆ, ಲಾಕ್ಷಾ ರಸದಂತೆ (ಅರಗಿನಂತೆ) ಇರಬೇಕು. ಅಲ್ಲದೆ ಬಟ್ಟೆಯನ್ನು ಸ್ವಚ್ಛವಾಗಿ ತೊಳೆದರೆ ಕಲೆಗಳು ಉಳಿಯುವಂತಿರಬಾರದು ಎನ್ನುವುದು ಆಯುರ್ವೇದಾಚಾರ್ಯರ ಅಭಿಮತ. ಅಲ್ಲದೆ ವಾತ ದೋಷದಿಂದ ಕೂಡಿದ (ಚುಚ್ಚುವಂತೆ ನೋವಿನಿಂದ ಕೂಡಿದ್ದು, ಕಪ್ಪು ಬಣ್ಣವನ್ನು ಹೊಂದಿರುವಂಥದ್ದು), ಪಿತ್ತ ದೋಷದಿಂದ ಕೂಡಿದ (ಉರಿಯನ್ನು ಹೊಂದಿದ್ದು, ಹಳದಿ, ನೀಲಿ ಬಣ್ಣದಿಂದ ಕೂಡಿದ), ಕಫ ದೋಷದಿಂದ ಕೂಡಿದ (ತುರಿಕೆಯನ್ನು ಹೊಂದಿದ್ದು, ಬಿಳಿ ಬಣ್ಣದಿಂದ ಕೂಡಿದ), ಕುಣಪ (ದುರ್ಗಂಧಯುಕ್ತ, ಗ್ರಂಥಿ (ಗಂಟುಗಳಿಂದ ಕೂಡಿದ), ಪೂಲೆ ಪೂಯ (ಕೀವು, ಸ್ರಾವದಿಂದ ಕೂಡಿದ) ಮೂತ್ರ, ಮಲಯುಕ್ತ ರಕ್ತ ಸ್ರಾವವು ಪ್ರಜೋತ್ಪಾದನೆಗೆ ಅಂದರೆ ಗರ್ಭಧಾರಣೆಗೆ ಸೂಕ್ತವಲ್ಲ ಎಂದು ಹೇಳಿದ್ದಾರೆ.
ಆರಂಭದಲ್ಲಿ ಋತುಸ್ರಾವವು ಪ್ರತಿ ತಿಂಗಳು ಬಾರದಿರಬಹುದು. ಸಾಮಾನ್ಯವಾಗಿ ಋತುಚಕ್ರದ ಅವಧಿ 21 ರಿಂದ 25 ದಿನಗಳು ಋತುಚಕ್ರ ಆರಂಭವಾದ ಒಂದು ವರ್ಷದೊಳಗೆ ನಿಯಮಿತ ಋತುಚಕ್ರ ಆರಂಭವಾಗುತ್ತದೆ. ಅಲ್ಲದೆ ಸ್ರಾವವು ಎಲ್ಲರಲ್ಲಿಯೂ ಒಂದೇ ರೀತಿ ಇರುವುದಿಲ್ಲ. ಕೆಲವರಲ್ಲಿ ಮೂರು ದಿನಗಳಿದ್ದರೆ ಮತ್ತೆ ಕೆಲವರಲ್ಲಿ ಏಳರಿಂದ ಎಂಟು ದಿನಗಳಿರಬಹುದು.
ಋತುಮತಿ (ಹದಿಹರಯದ ಹೆಣ್ಣು) ಯಲ್ಲಿ ದೈಹಿಕ ಹಾಗು ಮಾನಸಿಕ ಬದಲಾವಣೆಗಳು
ಮುಖದಲ್ಲಿ ಪ್ರಸನ್ನತೆ, ವಿರುದ್ಧ ಲಿಂಗದವರೊಡನೆ ಆಕರ್ಷಣೆ, ಪ್ರಸನ್ನ ಮನಸ್ಸು ಪ್ರಿಯವಾದ ಕಥೆಗಳನ್ನು ಕೇಳುವುದರಲ್ಲಿ ಆಸಕ್ತಿ, ಕೆಳಮುಖವಾಗಿರುವ ಹೊಟ್ಟೆಯ ಭಾಗ, ನೆಲವನ್ನೇ ನೋಡುತ್ತಿರುವಂತಹ ಕಣ್ಣುಗಳು ಹಾಗೂ ತಲೆ, ಭುಜ, ಎದೆ, ಸೊಂಟ ತೊಡೆ, ನಾಭಿ (ಹೊಕ್ಕಳು) ಪ್ರದೇಶಗಳಲ್ಲಿ ಕೊಬ್ಬಿನ ಶೇಖರಣೆ – ಇವೆಲ್ಲವುಗಳು “ಋತುಮತಿ” ಯಾದ ಹೆಣ್ಣಿನ ಲಕ್ಷಣಗಳು ಎನ್ನುವುದು ಸುಶ್ರುತಾಚಾರ್ಯರ ಅಭಿಪ್ರಾಯ. ಇವಲ್ಲದೆ ಕಂಕುಳು ಹಾಗೂ ಯೋನಿ ಮಾರ್ಗದ ಸುತ್ತಲೂ ದಪ್ಪನೆಯ ಒರಟಾದ ಕೂದಲುಗಳು ಬೆಳೆಯುತ್ತವೆ.
ಹದಿಯರೆಯದವರು ತಮ್ಮನ್ನು ತಾವು ಸಮಾಜದೊಂದಿಗೆ ಗುರುತಿಸಿಕೊಳ್ಳಲು ಹೆಣಗುತ್ತಾರೆ, ಮಕ್ಕಳೊಟ್ಟಿಗೂ ಬೆರೆಯಲಾಗದೆ, ದೊಡ್ಡವರೊಂದಿಗೂ ಗುರುತಿಸಿಕೊಳ್ಳಲಾಗದ ಈ ಅವಸ್ಥೆಯನ್ನು ಮಾನಸಿಕ ತಜ್ಞರು “Identity Crisis” ಎನ್ನುತ್ತಾರೆ. ಸಿನಿಮಾಗಳಲ್ಲಿ ದೂರದರ್ಶನಗಳಲ್ಲಿ ನಟ, ನಟಿಯರ ಸ್ಥಾನಗಳಲ್ಲಿ ತಮ್ಮನ್ನೇ ಕಲ್ಪಸಿಕೊಳ್ಳುತ್ತಾರೆ, ಬಾಲ್ಯದ ತುಂಟತನ ಕಳೆದು ನಿಧಾನವಾಗಿ ಜವಾಬ್ದಾರಿ ಅಡಿಯಿಡುತ್ತದೆ. ಮಾನಸಿಕ ತುಮುಲ, ಗಾಬರಿ ಹಾಗೂ ಗೊಂದಲಗಳು ಕಾಣಿಸಿಕೊಳ್ಳುತ್ತವೆ. ನಾಚಿಕೆ ಸಂತೋಷ, ಕುತೂಹಲ, ಕಲ್ಪನೆಗಳು ಏಕಕಾಲದಲ್ಲಿ ಮೂಡುವುದು. ಹದಿಹರೆಯದ ಹೆಣ್ಣು ಮಕ್ಕಳು ತಮ್ಮದೇ ವಯಸ್ಸಿನವರೊಂದಿಗೆ ಕಾಣಿಸಿಕೊಳ್ಳುತ್ತಾರೆ. ಇದರೊಂದಿಗೆ ಮಾಸಿಕ ಋತುಸ್ರಾವವೂ ಕಾಣಿಸಿಕೊಳ್ಳುತ್ತದೆ. ಈ ಎಲ್ಲ ದೈಹಿಕ ಬದಲಾವಣೆಗಳಿಗೆ ಹೆಣ್ಣು ತನ್ನನ್ನು ತಾನು ಮಾನಸಿಕವಾಗಿ ತಯಾರಿ ನಡೆಸಿಕೊಳ್ಳಬೇಕಾಗುವುದು. ಇದರಲ್ಲಿ ತಾಯಿಯ ಪಾತ್ರವೂ ಮುಖ್ಯವಾಗಿರುತ್ತದೆ.
ಪೌಷ್ಠಿಕ ಆಹಾರ: ಹದಿ ವಯಸ್ಸಿನಲ್ಲಿ ದೈಹಿಕ ಬೆಳವಣಿಗೆ ತೀವ್ರವಾಗಿರುವುದಲ್ಲದೆ, ಪ್ರತಿ ತಿಂಗಳೂ ಋತುಸ್ರಾವದಿಂದ ನಷ್ಟವಾಗುವ ರಕ್ತದಿಂದ ರಕ್ತಹೀನತೆ ಉಂಟಾಗದಂತೆ ತಡೆಯಲು ಹಾಗೂ ದೇಹಕ್ಕೆ ಶಕಿಯನ್ನು ತುಂಬಲು ಪೌಷ್ಠಿಕವಾದ ಆಹಾರ ಸೇವನೆ ಅತ್ಯಗತ್ಯ.
ಬೇಳೆ ಕಾಳುಗಳು ಸೊಪ್ಪು ತರಕಾರಿ, ಹಣ್ಣುಗಳು, ಹಾಲು ಮೊಸರು, ತುಪ್ಪ ಎಲ್ಲವನ್ನು ಒಳಗೊಂಡಿರುವ ಪೌಷ್ಠಿಕ ಆಹಾರ ಸೇವನೆ ಅತ್ಯಗತ್ಯ. ತುಪ್ಪದ ಸೇವನೆಯಿಂದ ಜೀರ್ಣಶಕ್ತಿ ಹೆಚ್ಚುವುದಲ್ಲದೆ, ಇದು ಬುದ್ಧಿ ಶಕ್ತಿ ಹಾಗೂ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಚರ್ಮಕ್ಕೆ ಕಾಂತಿಯನ್ನು ನೀಡುತ್ತದೆ. ಎಳ್ಳನ್ನು ಹುರಿದು, ಬೆಲ್ಲದ ಪಾಕವನ್ನು ತಯಾರಿಸಿ ಅದಕ್ಕೆ ಎಳ್ಳು ಹಾಕಿ ತಯಾರಿಸಿದ ಮಾಡಿದ ಎಳ್ಳುಂಡೆಯೂ ಕೂಡ ರಕ್ತಸ್ರಾವವನ್ನು ನಿಯಮಿತವಾಗಿ ಮಾಡುವುದಲ್ಲದೆ, ವಾತ ಶಮನವನ್ನು ಮಾಡುವುದು.
ವ್ಯಾಯಾಮ: ಕ್ರಮಬದ್ಧವಾದ ವ್ಯಾಯಾಮದಿಂದ ದೇಹ ಸದೃಢಗೊಳ್ಳುವುದು. ಯೋಗ ಹಾಗೂ ಪ್ರಾಣಾಯಾಮಗಳೂ ಕೂಡ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ತಜ್ಞರಿಂದ ಕಲಿತು ಅಭ್ಯಾಸ ಮಾಡುವುದು ಉತ್ತಮ.
ರಕ್ತಹೀನತೆ: ಅನೇಕ ಹುಡುಗಿಯರಲ್ಲಿ ರಕ್ತಹೀನತೆ ಅತ್ಯಂತ ಸಾಮಾನ್ಯವಾದ ಸಮಸ್ಯೆ. ಕೆಲವರಲ್ಲಿ ಋತುಚಕ್ರದ ಸಮಯದಲ್ಲಿ ಅಧಿಕ ರಕ್ತಸ್ರಾವವಾಗುವುದರಿಂದ ರಕ್ತಹೀನತೆ ಉಂಟಾಗುತ್ತದೆ. ಆಹಾರದಲ್ಲಿ ಪ್ರತಿದಿನ ಸೊಪ್ಪು, ಹಣ್ಣು ಹಾಗೂ ತರಕಾರಿಯನ್ನು ಸೇವಿಸಬೇಕು.
1. ದಿನಕ್ಕೊಮ್ಮೆ ಒಂದು ಲೋಟ ಹಾಲಿಗೆ ಎರಡು ಚಮಚ ಜೇನುತುಪ್ಪವನ್ನು ಬೆರೆಸಿ ಸೇವಿಸುವುದು ಉತ್ತಮ.
2. ಆಹಾರದಲ್ಲಿ ಬಸಳೆ ಸೊಪ್ಪು, ಪಾಲಕ್ ಸೊಪ್ಪು, ಮೆಂತ್ಯ, ಸಬ್ಬಸ್ಸಿಗೆ ಸೊಪ್ಪು, ಇತ್ಯಾದಿಗಳ ಬಳಕೆ ಮಾಡುವುದರಿಂದಲೂ ರಕ್ತವು ವೃದ್ಧಿಯಾಗುವುದು.
3. ಖರ್ಜೂರ, ಒಣದ್ರಾಕ್ಷಿಗಳು ಕೂಡ ರಕ್ತವರ್ಧನೆಗೆ ಸಹಾಯಕಾರಿ.
ಮುಂದುವರೆಯುವುದು….
ನಾಗಶ್ರಿ. ಕೆ.ಎಸ್.

ಗ್ರಾಮ ಪಂಚಾಯತಿಗಳ ಚುನಾವಣೆ: ಹಲವೆಡೆ ಕಲ್ಲು ತೂರಾಟ, ಲಾಠಿ ಚಾರ್ಜ್

0

ತಾಲ್ಲೂಕಿನ 22 ಗ್ರಾಮ ಪಂಚಾಯತಿಗಳ ಚುನಾವಣೆಯು ಮಂಗಳವಾರ ನಡೆಯಿತು. ಕೆಲವು ಗ್ರಾಮಗಳಲ್ಲಿ ಗುಂಪು ಘರ್ಷಣೆ, ಕಲ್ಲು ತೂರಾಟ, 144 ಸೆಕ್ಷನ್ ಜಾರಿ, ಲಾಠಿ ಪ್ರಹಾರ ನಡೆದಿದ್ದು, ಉಳಿದೆಡೆ ಚುನಾವಣೆಯು ಶಾಂತವಾಗಿ ನಡೆದಿದೆ. ಮತಪಟ್ಟಿ ಪರಿಷ್ಕರಣೆಯಲ್ಲಿನ ಗೊಂದಲಗಳು ಹಲವೆಡೆ ಘರ್ಷಣೆಗೆ ಕಾರಣವೆನ್ನಲಾಗಿದೆ.

ಶಿಡ್ಲಘಟ್ಟದ ಶಾಸಕ ಎಂ.ರಾಜಣ್ಣ ತಮ್ಮ ಸ್ವಗ್ರಾಮ ಎಲ್.ಮುತ್ತುಗದಹಳ್ಳಿಯಲ್ಲಿ ಮಂಗಳವಾರ ಸರದಿಯಲ್ಲಿ ನಿಂತು ಮತ ಚಲಾಯಿಸಿದರು.
ಶಿಡ್ಲಘಟ್ಟದ ಶಾಸಕ ಎಂ.ರಾಜಣ್ಣ ತಮ್ಮ ಸ್ವಗ್ರಾಮ ಎಲ್.ಮುತ್ತುಗದಹಳ್ಳಿಯಲ್ಲಿ ಮಂಗಳವಾರ ಸರದಿಯಲ್ಲಿ ನಿಂತು ಮತ ಚಲಾಯಿಸಿದರು.
ತಾಲ್ಲೂಕಿನ ಲಕ್ಕಹಳ್ಳಿಯಲ್ಲಿ ಇಬ್ಬಿಬ್ಬರು ಹೋಗಿ ಮತ ಚಲಾಯಿಸಲು ಹೋದಾಗ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕಲ್ಲು ತೂರಾಟ ನಡೆಯಿತು. ಕೆ.ಮುತ್ತುಗದಹಳ್ಳಿಯಲ್ಲೂ ಗುಂಪು ಘರ್ಷಣೆ ನಡೆದಿದೆ. ಬೆಳ್ಳೂಟಿಯಲ್ಲಿ ಸೋಮವಾರ ರಾತ್ರಿ ಬೇರೆ ಊರಿನವರು ಒಂದು ಪಕ್ಷದ ಪರವಾಗಿ ಬಂದರೆಂದು ಕಲ್ಲುತೂರಾಟ ನಡೆದಿದ್ದು, ಗಾಯಗೊಂಡ ಕೆಂಚಪ್ಪ ಎಂಬುವರನ್ನು ಬೆಂಗಳೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಶಿಡ್ಲಘಟ್ಟ ತಾಲ್ಲೂಕು ಮಳ್ಳೂರು ಗ್ರಾಮದಲ್ಲಿ ಗುಂಪು ಘರ್ಷಣೆಯನ್ನು ಚದುರಿಸಲು ಪೊಲೀಸರು ನಡೆಸಿದ ಲಾಠಿ ಚಾರ್ಜ್ನಲ್ಲಿ ಗಾಯಗೊಂಡವನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಶಿಡ್ಲಘಟ್ಟ ತಾಲ್ಲೂಕು ಮಳ್ಳೂರು ಗ್ರಾಮದಲ್ಲಿ ಗುಂಪು ಘರ್ಷಣೆಯನ್ನು ಚದುರಿಸಲು ಪೊಲೀಸರು ನಡೆಸಿದ ಲಾಠಿ ಚಾರ್ಜ್ನಲ್ಲಿ ಗಾಯಗೊಂಡವನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ತಾಲ್ಲೂಕಿನ ಮಳ್ಳೂರಿನಲ್ಲಿ ಮತಗಟ್ಟೆಯ ವೀಕ್ಷಣೆಗೆ ತೆರಳಿದ್ದ ಶಾಸಕ ಎಂ.ರಾಜಣ್ಣ ಅವರ ಹಿಂದೆ ಹೆಚ್ಚು ಮಂದಿ ಕಾರ್ಯಕರ್ತರಿದ್ದುದರಿಂದ ಅವರನ್ನು ತಡೆದದ್ದರಿಂದ ಗುಂಪು ಘರ್ಷಣೆ ನಡೆದು, ಪೊಲೀಸರು ಲಾಠಿ ಚಾರ್ಜ್ ನಡೆಸಿ 144 ಸೆಕ್ಷನ್ ಜಾರಿ ಮಾಡಿದ್ದರು. ನಂತರ ಪೊಲೀಸರು ಹಾಗೂ ಗ್ರಾಮಸ್ಥರೊಂದಿಗೆ ಚರ್ಚಿಸಿದ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ 144 ಸೆಕ್ಷನ್ ಹಿಂಪಡೆದು ಸೂಕ್ತ ಬಂದೋಬಸ್ತಿನಲ್ಲಿ ಮತದಾನ ನಡೆಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಏಜೆಂಟರ ಮೊಬೈಲ್ ಫೋನ್ಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಪೊಲೀಸರಿಂದ ಏಟು ತಿಂದಿದ್ದ ಶಿವಪ್ಪ ಎಂಬುವರನ್ನು ಪೊಲೀಸರೇ ತಮ್ಮ ಜೀಪಿನಲ್ಲಿ ಆಸ್ಪತ್ರೆಗೆ ಕರೆದೊಯ್ದರು.
ತಾಲ್ಲೂಕಿನ ಸದ್ದಹಳ್ಳಿಯಲ್ಲಿ ಗುಂಪು ಘರ್ಷಣೆ ನಡೆದು ನರಸಿಂಹಪ್ಪ(45) ಎಂಬುವರು ಗಾಯಗೊಂಡಿದ್ದಾರೆ. ಚೀಮಂಗಲದಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ಪೊಲೀಸ್ ಜೀಪು ಜಖಂಗೊಂಡಿದೆ.
ಉಳಿದಂತೆ ತಾಲ್ಲೂಕಿನೆಲ್ಲೆಡೆ ಶಾಂತಿಯುತವಾಗಿ ಮತದಾನ ನಡೆಯಿತು. ವೀಳೆದೆಲೆ ಸುಣ್ಣ ಅಡಿಕೆ ಬಾಳೆಹಣ್ಣು ಕೊಟ್ಟು ವಿವಿಧ ಪಕ್ಷಗಳ ಬೆಂಬಲಿತರು ಮತದಾರರನ್ನು ಓಲೈಸುತ್ತಿದ್ದುದು ಕಂಡುಬಂದಿತು. ಶಾಸಕ ಎಂ.ರಾಜಣ್ಣ ತಮ್ಮ ಸ್ವಗ್ರಾಮ ಎಲ್.ಮುತ್ತುಗದಹಳ್ಳಿಯಲ್ಲಿ ಸರದಿಯಲ್ಲಿ ಬಂದು ಮತ ಚಲಾಯಿಸಿದರು.

ವಿಶ್ವ ಹಾಲು ದಿನಾಚರಣೆ ಅಂಗವಾಗಿ ರೋಗಿಗಳಿಗೆ ಹಾಲು ವಿತರಣೆ

0

ವಿಶ್ವ ಹಾಲು ದಿನಾಚರಣೆ ಅಂಗವಾಗಿ ಸೋಮವಾರ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆ.ಎಂ.ಎಫ್ ವತಿಯಿಂದ ಒಳರೋಗಿಗಳಿಗೆ ಹಾಲು ವಿತರಿಸಲಾಯಿತು.
‘ಹಾಲು ಪೌಷ್ಟಿಕ ಆಹಾರವಾಗಿದ್ದು, ಸಾರ್ವಜನಿಕರಲ್ಲಿ ಹಾಗೂ ಮಕ್ಕಳಲ್ಲಿ ಹಾಲು ಸರ್ವೋತ್ತಮ ಆಹಾರ ಎನ್ನುವ ಬಗ್ಗೆ ಜನಜಾಗೃತಿ ಮೂಡಿಸಲು ಈ ಕಾರ್ಯ ನಡೆಸಲಾಗುತ್ತಿದೆ. ಹಾಲಿನಲ್ಲಿ ಮನುಷ್ಯನ ದೇಹಕ್ಕೆ ಅತ್ಯಗತ್ಯವಾಗಿ ಬೇಕಾದ ಜೀವಸತ್ವಗಳು ಮಿಟಮಿನ್, ಪ್ರೋಟೀನ್ಗಳಿವೆ. ಹಾಲು ವಿಟಮಿನ್ ‘ಡಿ’ಯಿಂದ ಶ್ರೀಮಂತವಾಗಿರುತ್ತದೆ. ಕ್ಯಾನ್ಸರ್ ಹತ್ತಿಕ್ಕುವ ಸಾಮರ್ಥ್ಯ ಹೊಂದಿರುವ ಸಂಗತಿಗಳಲ್ಲಿ ವಿಟಮಿನ್ ಡಿ ಸಹ ಒಂದು. ಹಾಲು ಒಕ್ಕೂಟದಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು ವಿತರಿಸಿ ಜನಜಾಗೃತಿ ಮೂಡಿಸುವ ಮೂಲಕ ಈ ದಿನ ವಿಶ್ವ ಹಾಲು ದಿನವನ್ನು ಆಚರಿಸುತ್ತಿದ್ದೇವೆ’ ಎಂದು ಉಪವ್ಯವಸ್ಥಾಪಕ ಹನುಮಂತಪ್ಪ ತಿಳಿಸಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ರಾಜ್ಯ ಮಡಿವಾಳ ಸಂಘಕ್ಕೆ ಆಯ್ಕೆ

0

ತಾಲ್ಲೂಕಿನ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ರಾಜ್ಯ ಮಡಿವಾಳ ಸಂಘಕ್ಕೆ ಸದಸ್ಯರೊಬ್ಬರು ಶಿಡ್ಲಘಟ್ಟದಿಂದ ಆಯ್ಕೆಯಾಗಿರುವುದು ಒಂದು ಸಾಧನೆ ಎಂದು ಮಡಿವಾಳ ಸಂಘದ ತಾಲ್ಲೂಕು ಅಧ್ಯಕ್ಷ ಆರ್.ವಿ.ರಾಜಣ್ಣ ತಿಳಿಸಿದರು.
ತಾಲ್ಲೂಕು ಮಡಿವಾಳ ಮಾಚಿದೇವ ಯುವಕರ ಸಂಘದ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಅಭಿನಂದನಾ ಸಭೆಯಲ್ಲಿ ಅವರು ಮಾತನಾಡಿದರು. ಜನಾಂಗದವರ ಏಳಿಗೆಗಾಗಿ ಶ್ರಮಿಸಿ, ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸಿಕೊಡಲು ನೆರವಾಗುತ್ತೇನೆ. ಸಮಾಜದಲ್ಲಿ ನಮ್ಮ ಜನಾಂಗ ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ನೆಲೆ ನಿಲ್ಲಲು ಪ್ರಯತ್ನಿಸುತ್ತೇನೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ನೀಡಲಾಗುವುದು ಎಂದು ಹೇಳಿದರು.
ಮಡಿವಾಳ ಸಂಘದ ಸದಸ್ಯರು ರಾಜ್ಯ ಮಡಿವಾಳ ಸಂಘಕ್ಕೆ ಆಯ್ಕೆಯಾದ ಆರ್.ವಿ.ರಾಜಣ್ಣ ಅವರನ್ನು ಗೌರವಿಸಿದರು.
ಮಡಿವಾಳ ಸಂಘದ ಎಚ್.ಕೆ.ಶ್ರೀನಿವಾಸ್, ಎನ್.ರಾಜು, ಎಂ.ದೇವರಾಜ್, ಚಿಕ್ಕನಂಜಪ್ಪ, ವೆಂಕಟರಾಯಪ್ಪ, ಡಿ.ವಿ.ಕೃಷ್ಣಪ್ಪ, ಜಿ.ಎನ್.ಹನುಮಂತರಾಯಪ್ಪ, ಎಚ್.ಎಂ.ಮುನಿರಾಜು, ಎಚ್.ಸಿ.ರಮೇಶ್, ವಿ.ರವೀಂದ್ರನಾಥ್, ಸುರೇಶ್, ದೊಡ್ಡ ಹೇಮಣ್ಣ, ದೇವರಾಜ್, ರಾಮಚಂದ್ರಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಚುನಾವಣಾ ಕಾರ್ಯಕ್ಕೆ ನಿಯೋಜಿತರಾದ ಶಿಕ್ಷಕರ ಪ್ರತಿಭಟನೆ

0

‘ಕುಡಿಯಲು ನೀರಿಲ್ಲ, ತಿಂಡಿ, ಊಟದ ವ್ಯವಸ್ಥೆ ಇಲ್ಲ. ಶೌಚಾಲಯದ ಸಮಸ್ಯೆಯಿದೆ. ದೂರದೂರುಗಳಿಂದ ಬಂದವರಿಗೆ ಮೂಲಭೂತ ಸೌಕರ್ಯಗಳಿಲ್ಲ. ದಿನಗೂಲಿ ನೌಕರರಿಗಿಂತ ಹೀನಾಯವಾಗಿ ಶಿಕ್ಷಕರನ್ನು ನಡೆಸಿಕೊಳ್ಳುತ್ತಿದ್ದಾರೆ’ ಎಂದು ಚುನಾವಣಾ ಕಾರ್ಯಕ್ಕೆ ನಿಯೋಜಿತರಾದ ಶಿಕ್ಷಕರು ಚುನಾವಣಾ ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದ ಘಟನೆ ಸೋಮವಾರ ನಡೆಯಿತು.
ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸೋಮವಾರ ಚುನಾವಣಾ ಪರಿಕರಗಳ ವಿತರಣೆ ಮತ್ತು ನಿಯೋಜಿತ ಮತಗಟ್ಟೆಗಳಿಗೆ ಕಳುಹಿಸುವ ಸಂದರ್ಭದಲ್ಲಿ ಶಿಕ್ಷಕರು ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಷ ವ್ಯಕ್ತಪಡಿಸಿದರು.
‘ಇತರ ತಾಲ್ಲೂಕಿಗಳಲ್ಲಿ 1800 ರೂಪಾಯಿಗಳನ್ನು ಚುನಾವಣೆಗೆ ನಿಯೋಜಿಸಿದವರಿಗೆ ನೀಡಿದರೆ, ನಮ್ಮ ತಾಲ್ಲೂಕಿನಲ್ಲಿ ಕೇವಲ 1100 ರೂಪಾಯಿಗಳನ್ನು ನೀಡುತ್ತಿದ್ದಾರೆ. ತಿಂಡಿ ಮತ್ತು ಊಟದ ವ್ಯವಸ್ಥೆಯನ್ನು ಮಾಡಿಲ್ಲದ ಕಾರಣ ಹೋಟೆಲ್ಗಳಲ್ಲಿ ತಿನ್ನಬೇಕಾಗಿದೆ’ ಎಂದು ಆರೋಪಿಸಿ ಪ್ರತಿಭಟಿಸಿದರು.
ಚುನಾವಣಾ ವೀಕ್ಷಕಿ ಲಕ್ಷ್ಮಮ್ಮ ಮತ್ತು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿ, 150 ರೂಪಾಯಿಗಳು ಊಟದ ಭತ್ಯೆಯನ್ನು ನೀಡುವುದಾಗಿ ತಿಳಿಸಿದರು.
ನಂತರ ಚುನಾವಣಾ ಕಾರ್ಯಕ್ಕೆ ನಿಯೋಜಿತರಾದ ಶಿಕ್ಷಕರು ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿದರು.

ಕಂದಮ್ಮಗಳು ಕರೆಯುತ್ತಿವೆ ರಕ್ಷಣೆಗಾಗಿ – ಭಾಗ 2

0

ಯಾರು ಬಲಿಪಶುಗಳಾಗಬಹುದು?
ಹಿಂಸೆಗೆ ಒಳಪಡುವವರು ಸಾಮಾಜಿಕವಾಗಿ ಕೆಳಮಟ್ಟದವರೇ ಆಗಬೇಕೆಂದಿಲ್ಲ. ಎಲ್ಲಾ ಜಾತಿ, ಧರ್ಮ, ವರ್ಗ, ಜನಾಂಗದ ಮಕ್ಕಳ ಮೇಲೆ ಲೈಂಗಿಕ ಹಿಂಸಾಚಾರ ಆಗಬಹುದಾದ ಸಮಾನ ಸಾಧ್ಯತೆಗಳಿರುತ್ತದೆ. ಇದಕ್ಕೆ ಹಳ್ಳಿ ಪಟ್ಟಣಗಳ ವ್ಯತ್ಯಾಸ ಕೂಡ ಇರುವುದಿಲ್ಲ. ವಿದ್ಯಾವಂತರೂ ಕೂಡ ಅನಕ್ಷಸ್ಥರಷ್ಟೇ ಇದಕ್ಕೆ ಬಲಿಪಶುಗಳಾಗಬಹುದು. ಸುಂದರವಾಗಿರುವ ಮಕ್ಕಳ ಮೇಲೆ ಹಿಂಸಾಚಾರವಾಗುವ ಸಾಧ್ಯತೆ ಹೆಚ್ಚು ಎನ್ನುವುದೂ ಕೂಡ ತಪ್ಪು ಕಲ್ಪನೆ. ಮಾನಸಿಕ ರೋಗ ಅಥವಾ ಬುದ್ಧಿಮಾಂದ್ಯತೆ ಇರುವ ಮಕ್ಕಳು ಮತ್ತು ಅಂಗವಿಕಲರು ಹೆಚ್ಚಿನ ಅಪಾಯವನ್ನು ಎದುರಿಸುವ ಸಾಧ್ಯತೆಗಳಿರುತ್ತದೆ.
ಇಷ್ಟೇ ಅಲ್ಲ ಲೈಂಗಿಕ ಹಿಂಸೆ ಹೆಣ್ಣು ಮಕ್ಕಳ ಮೇಲೆ ಮಾತ್ರ ನಡೆಯುತ್ತದೆ, ಗಂಡು ಮಕ್ಕಳು ಸುರಕ್ಷಿತರು ಎನ್ನುವುದೂ ಕೂಡ ನಿಜವಲ್ಲ. ಕೆಲವೇ ತಿಂಗಳ ಹಸುಳೆಗಳಿಂದ ಹಿಡಿದು, ತೊಂಬತ್ತು ವರ್ಷದ ವೃದ್ಧರ ಮೇಲೆ ಹಿಂಸಾಚಾರ ನಡೆದ ಸಾಕಷ್ಟು ಮೊಕದ್ದಮೆಗಳು ಪೋಲೀಸ್ ದಾಖಲೆಗಳಲ್ಲಿವೆ. ಒಂದು ಅಂದಾಜಿನ ಪ್ರಕಾರ ಸುಮಾರು ಶೇಕಡಾ 90ರಷ್ಟು ಹಿಂಸಾಚಾರಗಳು ನಾಲ್ಕನೇ ವಯಸ್ಸಿಗಿಂತ ದೊಡ್ಡ ಮಕ್ಕಳ ಮೇಲೆ ಆಗುತ್ತದೆ.
ಆದ್ದರಿಂದ ಯಾವ ಪೋಷಕರೂ ಕೂಡ ನಮ್ಮ ಮಕ್ಕಳು ಸುರಕ್ಷಿತರು, ನಾವೇನೂ ಮಾಡಬೇಕಾಗಿಲ್ಲ ಎಂದು ಮೈಮರೆಯುವಂತಿಲ್ಲ.
ನಾವು ಮಾಡಲೇಬೇಕಾದುದೇನು?
ಮಕ್ಕಳನ್ನು ಲೈಂಗಿಕ ಶೋಷಕರಿಂದ ರಕ್ಷಿಸುವುದು ಪೋಷಕರ ಕಟ್ಟುನಿಟ್ಟಿನ ಶಿಸ್ತಿನಿಂದ ಮಾತ್ರ ಸಾಧ್ಯವಾಗಲಾರದು. ಇದಕ್ಕಾಗಿ ನಿರಂತರ ಎಚ್ಚರದ ಅಗತ್ಯವಿದೆ.
1. ಮಾತು ಬಾರದ ಅಥವಾ ವಿಷಯವನ್ನು ಸ್ಪಷ್ಟವಾಗಿ ಹೇಳಲಾಗದ ಐದು ವರ್ಷಕ್ಕಿಂತ ಚಿಕ್ಕ ಮಗುವನ್ನು ಅಪರಿಚಿತರ ಹತ್ತಿರ ಬಿಡಬಾರದು.
2. ಬೇಬಿ ಸಿಟ್ಟಿಂಗ್‍ಗಳಲ್ಲಿ ಮಗುವನ್ನು ಬಿಟ್ಟಾಗ ಮಾಮೂಲಿನ ಸಮಯದ ಹೊರತಾಗಿ ಕೆಲವೊಮ್ಮೆ ಧೀಡೀರ್ ಭೇಟಿ ನೀಡಿದರೆ ಅಲ್ಲಿನ ವಾಸ್ತವ ಸ್ಥಿತಿಗತಿಗಳ ಅರಿವಾಗುತ್ತದೆ.
3. ಮಕ್ಕಳು ಯಾರನ್ನಾದರೂ ಮುದ್ದಿಸಲು ಅಥವಾ ಹತ್ತಿರ ಸೇರಿಸಿಕೊಳ್ಳಲು ಇಷ್ಟಪಡದಿದ್ದರೆ ಬಲವಂತವಾಗಿ ಅವರನ್ನು ಅಂತಹ ಕೃತ್ಯಗಳಿಗೆ ತಳ್ಳಬಾರದು. ಮಗು ಎಷ್ಟೇ ಚಿಕ್ಕದಾಗಿದ್ದರೂ ಅದರ ಸ್ವಂತಿಕೆಯನ್ನು ಗೌರವಿಸಬೇಕು. ಪ್ರೀತಿಯನ್ನ ವ್ಯಕ್ತಪಡಿಸಲು ಮಗು ತನ್ನದೇ ಮಾರ್ಗಗಳನ್ನು ಉಪಯೋಗಿಸಲಿ. ಮನೆಯ ಹಿರಿಯರು ಮಗುವಿಗೆ ಇಷ್ಟವಿರದ ಇಂತಹ ಕೆಲಸವನ್ನು ಒತ್ತಾಯದಿಂದ ಹೇರುವುದನ್ನು ಪೋಷಕರು ತಡೆಯಬೇಕು.
4 ಗುರುಹಿರಿಯರನ್ನು ಗೌರವಿಸುವುದನ್ನು ಮಕ್ಕಳಿಗೆ ಕಲಿಸಬೇಕು. ಆದರೆ ಅವರ ಯಾವುದೇ ಅನುಚಿತ ವರ್ತನೆಯನ್ನು ಪ್ರತಿಭಟಿಸಲು ಹೇಳಬೇಕು. ವಯಸ್ಸು, ಸ್ಥಾನ ಮುಂತಾದ ಯಾವ ಅಂಶಗಳನ್ನೂ ಗಮನಿಸದೆ ಮಕ್ಕಳು ತಮ್ಮ ಖಾಸಗೀತನವನ್ನು ಉಳಿಸಿಕೊಳ್ಳುವ ಶಿಕ್ಷಣ ನೀಡಬೇಕು.
5 ಮಗುವಿನ ಜನನಾಂಗ ಮತ್ತು ಪೃಷ್ಟಭಾಗನ್ನು ಬಟ್ಟೆಯ ಮೇಲೆ ಕೂಡ ಯಾರಾದರೂ ಅತಿಯಾಗಿ ಅಥವಾ ಮತ್ತೆಮತ್ತೆ ಸ್ಪರ್ಷಿಸಿದರೆ ಅದನ್ನು ಪ್ರತಿಭಟಿಸಬೇಕೆಂದು ತಿಳಿಸಬೇಕು. ಇಂತಹ ವರ್ತನೆಗಳನ್ನು ಮನೆಯವರೇ ಮಾಡಿದ್ದರೂ ಅದನ್ನು ನಮಗೆ ತಕ್ಷಣ ತಿಳಿಸಬೇಕೆಂದು ಪೋಷಕರು ಹೇಳಬೇಕು. ಹಾಗಂತ ಮಾಮೂಲಿನ ಪ್ರೀತಿಯ ಅಭಿವ್ಯಕ್ತಿಗಳಾದ ಎತ್ತಿಕೊಳ್ಳುವುದು, ಮುದ್ದಾಡುವುದು, ಆಟವಾಡುವುದು ಇವುಗಳನ್ನೇ ತಪ್ಪಿಸಬಾರದು. ಇದರಿಂದ ಮಗುವಿನ ಭಾವನಾತ್ಮಕ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಮಗುವಿಗೆ ದೈಹಿಕವಾಗಿ ನೋವುಂಟುಮಾಡಿದರೆ ಮತ್ತು ಪದೇ ಪದೇ ಸ್ಪರ್ಷ, ಹಿಸುಕುವುದು, ಜಿಗುಟುವುದು ಮುಂತಾದವು ಆಗುತ್ತಿದ್ದರೆ ಪೋಷಕರಿಗೆ ತಿಳಿಸಬೇಕೆಂದು ಹೇಳಿಕೊಡಬೇಕು.
6. ಮಕ್ಕಳು ಆಟವಾಗಲು ಹೋಗುವ ಮನೆಗಳ ಪೂರ್ಣ ಹಿನ್ನೆಲೆ ತಿಳಿದಿರಬೇಕು. ಯಾವುದೇ ವ್ಯಕ್ತಿ ನಮ್ಮ ಮಕ್ಕಳ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದರೆ ಅವನ ಬಗೆಗೆ ಮಕ್ಕಳಿಂದ ಮಾಹಿತಿ ಪಡೆಯಬೇಕು. “ನಿನಗೆ ಅವರು ಏಕೆ ಇಷ್ಟವಾಗುತ್ತಾರೆ? ನೀವಿಬ್ಬರೂ ಪ್ರೀತಿಯನ್ನು ಹೇಗೆ ವ್ಯಕ್ತಪಡಿಸುತ್ತೀರಾ? ಇಬ್ಬರೇ ಇರುವಾಗ ಯಾವ ರೀತಿಯ ಆಟಗಳನ್ನು ಆಡುತ್ತೀರಾ?” ಮುಂತಾದ ಪ್ರಶ್ನೆಗಳನ್ನು ಮಗುವಿಗೆ ಕೇಳುತ್ತಾ ಹೋದರೆ ಅಗತ್ಯ ಮಾಹಿತಿಗಳು ನಿಧಾನವಾಗಿ ದೊರೆಯುತ್ತವೆ.
7. ನಮ್ಮ ಮಕ್ಕಳು ಕೂಡ ಇತರ ಮಕ್ಕಳ ಬಟ್ಟೆ ಎಳೆಯುವುದು, ದೇಹದ ಖಾಸಗೀ ಅಂಗಗಳಿಗೆ ಕೈಹಾಕುವುದು ಮುಂತಾದವನ್ನು ಮಾಡದಂತೆ ಎಚ್ಚರವಹಿಸಬೇಕು. ಕುತೂಹಲಕ್ಕಾಗಿ ಚಿಕ್ಕ ಮಕ್ಕಳು ಹಾಗೆ ಮಾಡುವ ಸಾದ್ಯತೆಗಳಿವೆ. ಆಗ ತಕ್ಷಣ ಬೈದು, ಹೊಡೆದು ಅಥವಾ ಇತರ ಮಕ್ಕಳ ಜೊತೆ ಸೇರದಂತೆ ಮಾಡಿ ಮಗುವಿಗೆ ಬುದ್ಧಿ ಕಲಿಸುವ ಪ್ರಯತ್ನಮಾಡಬಾರದು. ಇದರ ಬಗೆಗೆ ಸರಳವಾಗಿ ತಿಳುವಳಿಕೆ ಹೇಳುವುದರ ಮೂಲಕ ಮಗುವಿನ ಅರಿವನ್ನು ಬೆಳೆಸಬೇಕು. ಪೋಷಕರ ಎಲ್ಲಾ ಪ್ರಯತ್ನವನ್ನು ಮೀರಿ ಪದೇ ಪದೇ ಮಕ್ಕಳು ಇಂತಹ ಕೆಲಸವನ್ನು ಮಾಡುತ್ತಿದ್ದರೆ ತಜ್ಞರ ಸಹಾಯ ಪಡೆಯಬಹುದು.
8 ವಸತಿ ಶಾಲೆ, ಶಾಲಾಪ್ರವಾಸ ಅಥವಾ ಮತ್ತಿತರ ಕಾರಣಗಳಿಗಾಗಿ ಪೋಷಕರಿಂದ ದೂರವಿರುವ ಮಕ್ಕಳ ಬಗೆಗೆ ಹೆಚ್ಚು ಎಚ್ಚರ ವಹಿಸಬೇಕು. ಅವರಿಗೆ ಸಮಯೋಚಿವಾದ ಶಿಕ್ಷಣ ನೀಡುವುದಲ್ಲದೆ ಮನೆಗೆ ಬಂದಾಗ ಅವರ ವರ್ತನೆಗಳತ್ತ ಗಮನಹರಿಸಬೇಕು.
9. ಇಂತಹ ಕೃತ್ಯಗಳನ್ನು ಯಾರಾದರೂ ಮಾಡುವುದನ್ನು ನೋಡಿದರೆ ತಕ್ಷಣ ನಮಗೆ ತಿಳಿಸಲು ಮಕ್ಕಳಿಗೆ ಹೇಳಬೇಕು. ಅಂತಹ ಮಕ್ಕಳು (ಹಿಂಸೆ ಮಾಡುವವರು ಮತ್ತು ಹಿಂಸಾಚಾರಕ್ಕೊಳಪಡುವವರು) ಅಥವಾ ಅವರ ಪೋಷಕರು ನಮಗೆ ಪರಿಚಿತರಾಗಿದ್ದರೆ ಅವರನ್ನು ತಕ್ಷಣ ಎಚ್ಚರಿಸಲು ಇದರಿಂದ ಸಹಾಯವಾಗುತ್ತದೆ. ನಮಗೇಕೆ ‘ಊರ ಉಸಾಪರಿ’ ಎಂದು ಸುಮ್ಮನೆ ಕೂರುವಂತಿಲ್ಲ. ಏಕೆಂದರೆ ಸಮಾಜದಲ್ಲಿ ಇಂತಹ ಘಟನೆಗಳು ಪದೇಪದೇ ನಡೆಯುತ್ತಿದ್ದರೆ ಅದರ ಪರಿಣಾಮ ನಮ್ಮ ಮಕ್ಕಳ ಮೇಲೂ ಆಗಬಹುದು. ಹಾಗಾಗಿ ನಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಒಟ್ಟಾರೆ ಸಮಾಜದ ಆರೋಗ್ಯವನ್ನು ಕಾಪಾಡುವ ಹೊಣೆಯೂ ನಮ್ಮದೇ ಎನ್ನುವುದನ್ನು ಮರೆಯಬಾರದು.
10 ಮಕ್ಕಳು ಬೆಳೆಯುತ್ತಾ ಬಂದಂತೆ ಸ್ನೇಹಿತರೊಡನೆ, ಶಾಲಾ ಕಾಲೇಜುಗಳಲ್ಲಿ ತಮ್ಮತನವನ್ನು ಕಳೆದುಕೊಳ್ಳದೆ ಎಲ್ಲರೊಡನೆ ಬೆರೆಯಲು ಸಾಧ್ಯವಾಗುವ ತರಬೇತಿ ನೀಡಬೇಕು. ಇದಕ್ಕಾಗಿ ವೈಯುಕ್ತಿಕ ಬದುಕು ಮತ್ತು ಸಾರ್ವಜನಿಕ ಬದುಕಿನ ನಡುವಿನ ತೆಳುವಾದ ಗೆರೆಯನ್ನು ಸರಿಯಾಗಿ ಗುರುತಿಸಿಕೊಳ್ಳುವ ಬಗೆಗೆ ಅವರನ್ನು ಎಚ್ಚರಿಸಬೇಕು.
11. ಯಾರಾದರೂ ಮಕ್ಕಳಿಗೆ ಪದೇಪದೇ ಚಾಕೋಲೇಟ್‍ಗಳು, ಉಡುಗೊರೆಗಳನ್ನು ಕೊಡುತ್ತಿದ್ದರೆ ಅದರ ಬಗೆಗೆ ಕಣ್ಣಿಡಬೇಕು. ಅಪರಿಚಿತರೊಡನೆ ವ್ಯವಹರಿಸಬೇಕಾದ ರೀತಿಯ ಬಗೆಗೆ ಮಕ್ಕಳಿಗೆ ಶಿಕ್ಷಣ ನೀಡಬೇಕು.
12 ಕೆಟ್ಟ ಘಟನೆಗಳನ್ನು ಮಕ್ಕಳಿಂದ ಮರೆಮಾಚಿ ಅವರನ್ನು ರಕ್ಷಿಸಲು ಆಗುವುದಿಲ್ಲ. ಅವರವರ ವಯಸ್ಸಿಗನುಗುಣವಾಗಿ ಅಂತಹ ಘಟನೆಗಳ ವಿವರಣೆ ನೀಡಿ ಅವುಗಳನ್ನು ನಿಭಾಯಿಸುವ ತಯಾರಿ ಕೊಡಬೇಕು.
13 ಎಲ್ಲಾ ವಯಸ್ಸಿನ ಮಕ್ಕಳಿಗೆ ತಮ್ಮ ಭಾವನೆಗಳನ್ನು ಪೋಷಕರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗುವಂತಹ ಮುಕ್ತ ವಾತಾವರಣ ಮನೆಯಲ್ಲಿರಬೇಕು. ಇದರಿಂದ ಹೆಚ್ಚಿನ ಸಂದರ್ಭಗಳಲ್ಲಿ ಪೋಷಕರಿಗೆ ಮುನ್ಸೂಚನೆಗಳು ಸಿಗುತ್ತವೆ.
ಹಿಂಸಾಚಾರ ನಡೆದೇ ಹೋದರೆ…..?
ಪೋಷಕರ ಎಲ್ಲಾ ಎಚ್ಚರಿಕೆಯನ್ನೂ ಮೀರಿ ಕೆಲವೊಮ್ಮೆ ಮಕ್ಕಳ ಮೇಲೆ ಹಿಂಸಾಚರದ ಘಟನೆ ನಡೆಯಬಹುದು. ಅಂತಹ ಸಂದರ್ಭಗಳನ್ನು ಮೂರು ಹಂತಗಳಲ್ಲಿ ಪೋಷಕರು ನಿಭಾಯಿಸಬೇಕು.
ಸೂಚನೆಗಳನ್ನು ಗುರುತಿಸುವುದು ಹೇಗೆ?
ಸಾಕಷ್ಟು ಸಂದರ್ಭಗಳಲ್ಲಿ ಮಕ್ಕಳು ತಮ್ಮ ಮೇಲಿನ ಹಿಂಸೆಯನ್ನು ಅಜ್ಞಾನ, ಭಯ, ಅವಮಾನ ಮುಂತಾದ ಕಾರಣಗಳಿಂದಾಗಿ ಪೋಷಕರಿಗೆ ತಿಳಿಸದೇ ಹೋಗಬಹುದು. ಈ ಕೆಳಕಂಡ ಸಂದರ್ಭಗಳಲ್ಲಿ ಪೋಷಕರು ಹೆಚ್ಚಿನ ತನಿಖೆ ಮಾಡಬೇಕು.
1. ಪರಿಚಿತರ ಬಳಿ, ಬೇಬಿ ಸಿಟ್ಟಿಂಗ್ ಮುಂತಾದ ಕಡೆ ಬಿಟ್ಟಾಗ ಹಿಂತಿರುಗಿ ಬಂದ ಮೇಲೆ ಮಗುವಿನ ವರ್ತನೆಯಲ್ಲಿ ಆಗುವ ಬದಲಾವಣೆಗಳು. ಜನನಾಂಗ ಅಥವಾ ದೇಹದ ಇತರ ಕಡೆ ಆಗಿರುವ ಗಾಯಗಳು, ಅಥವಾ ಕಾರಣವೇ ಇಲ್ಲದೆ ಮಗು ಭಯಪಡುವುದು, ಅಳುವುದು.
2. ಊಟ ನಿದ್ದೆಗಳನ್ನು ಸರಿಯಾಗಿ ಮಾಡದೇ ಇರುವುದು, ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುವುದು, ಬೆರಳು ಚೀಪುವುದು, ಪದೇಪದೇ ಬಟ್ಟೆ ಅಥವಾ ದೇಹದ ಭಾಗಗಳನ್ನು ತೊಳೆಯುವುದು ಮುಂತಾದ ಅಸಹಜ ವರ್ತನೆಗಳು.
3. ದೇಹವನ್ನು ಹೆಚ್ಚುಹೆಚ್ಚಾಗಿ ಮುಚ್ಚಿಕೊಳ್ಳಲು ಯತ್ನಿಸುವುದು, ದಿನನಿತ್ಯದ ಶುಚಿತ್ವವನ್ನು ಕಡೆಗಣಿಸುವುದು, ಕುರೂಪಿಯಾಗಿ ಕಾಣಲು ಇಚ್ಛಿಸುವುದು.
4. ಮಾತು, ಓದು ಮತ್ತಿತರ ದೈನಂದಿನ ವ್ಯವಹಾರಗಳಲ್ಲಿ ಗಮನಾರ್ಹ ಬದಲಾವಣೆ.
5. ಏಕಾಂಗಿಯಾಗಿರಲು ಭಯಪಡುವುದು, ಹೊರಗಡೆ ಹೋಗಲು ಅಥವಾ ಜನರೊಡನೆ ಬೆರೆಯಲು ಹಿಂಜರಿಯುವುದು.
6. ಆತ್ಮಹತ್ಯೆ ಅಥವಾ ಆತ್ಮಘಾತುಕ ಕೃತ್ಯಗಳಿಗೆ ಪ್ರಯತ್ನಿಸುವುದು.
7. ಅಸಹಜ ಅಥವಾ ಅಕಾಲಿಕ ಲೈಂಗಿಕ ವರ್ತನೆಗಳು, ಲೈಂಗಿಕ ರೋಗಗಳ ಸಂಪರ್ಕ, ಗರ್ಭಧರಿಸುವುದು ಇತ್ಯಾದಿ.
ಹೀಗೆ ಯಾವುದೇ ಅಸಹಜ ವರ್ತನೆಗಳು ಕಂಡುಬಂದಲ್ಲಿ ಪೋಷಕರು ಎಚ್ಚರಗೊಳ್ಳಬೇಕು. ಇಂತಹ ವರ್ತನೆಗಳು ಬರಿಯ ಲೈಂಗಿಕ ಹಿಂಸಾಚಾರದ ಲಕ್ಷಣಗಳಲ್ಲದಿದ್ದರೂ, ಮಕ್ಕಳ ಬಗೆಗೆ ತಕ್ಷಣ ಗಮನಹರಿಸಬೇಕೆನ್ನುವುದಕ್ಕೆ ಸೂಚನೆಗಳಾಗಿರುತ್ತವೆ.
ಮುಂದುವರೆಯುವುದು…
ವಸಂತ್ ನಡಹಳ್ಳಿ

ಬೀಳ್ಕೊಡುಗೆ ಸಮಾರಂಭ

0

ನಗರದ ಶ್ರೀ ಸರಸ್ವತಿ ಕಾನ್ವೆಂಟ್ ಪ್ರೌಢಶಾಲೆಯ ಉಪಾದ್ಯಾಯರಾಗಿ ೩೪ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಮೇ ೩೧ ರಂದು ನಿವೃತ್ತಿ ಹೊಂದಿದ ಪ್ರಭಾರ ಮುಖ್ಯಶಿಕ್ಷಕ ಎನ್.ಸುಂದರನ್ ಹಾಗೂ ಪ್ರಯೋಗಾಲಯ ಸಹಾಯಕರಾದ ಕೆ.ವಿ.ಶ್ರೀನಿವಾಸಯ್ಯ ಅವರಿಗೆ ಶಾಲೆಯ ಆಡಳಿತ ಮಂಡಳಿ, ಪ್ರೌಢಶಾಲಾ ಸಿಬ್ಬಂದಿ ವರ್ಗ ಹಾಗೂ ಪೂರ್ವ ಪ್ರಾಥಮಿಕ ಶಾಲೆಯ ವತಿಯಿಂದ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಪ್ರಭಾರ ಮುಖ್ಯಶಿಕ್ಷಕ ಎನ್ ಸುಂದರನ್ ತಮ್ಮ ಬಾಲ್ಯದಿಂದ ಇಲ್ಲಿಯವರೆಗಿನ ತಮ್ಮ ಜೀವನದ ಪ್ರಮುಖ ಘಟ್ಟಗಳನ್ನು ಮೆಲುಕುಹಾಕಿ ತಮ್ಮ ಉನ್ನತಿಗೆ ಕಾರಣಕರ್ತರಾದ ಪೋಷಕರು, ಕುಟುಂಬದವರು ಹಾಗೂ ತಮ್ಮ ಕರ್ತವ್ಯವನ್ನು ಸರಾಗವಾಗಿ ಮಾಡಲು ಸಹಕರಿಸಿದ ಎಲ್ಲಾ ಸಿಬ್ಬಂದಿವರ್ಗದವರಿಗೆ ಧನ್ಯವಾದ ಸಮರ್ಪಿಸಿದರು.
ಸಂಸ್ಥೆಯ ಹಿರಿಯ ಮಾರ್ಗದರ್ಶಕರಾದ ಎನ್.ವೆಂಕಟಸುಬ್ಬರಾವ್, ಅಧ್ಯಕ್ಷೆ ವಿ.ಸೀತಾಲಕ್ಷ್ಮಿ, ಕಾರ್ಯದರ್ಶಿ ಎನ್. ಶ್ರೀಕಾಂತ್, ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಎಸ್. ಕೆ. ಗೋಪಿನಾಥ್ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಹಾಜರಿದ್ದರು.