ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಕಮ್ಮಿಯೇನಿಲ್ಲ. ಉತ್ತಮ ಶೈಕ್ಷಣಿಕ ಪರಿಸರವನ್ನು ಹೊಂದಿರುವ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ ಎಂದು ಕ್ಷೇತ್ರ ಶಿಕ್ಷಣಾದಿಕಾರಿ ರಘುನಾಥರಡ್ಡಿ ಹೇಳಿದರು.
ತಾಲ್ಲೂಕಿನ ಚೀಮನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಬುಧವಾರ ದಾನಿಗಳು ನೀಡಿದ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರ್ಕಾರ ಪ್ರತಿಯೊಬ್ಬರಿಗೂ ಶಿಕ್ಷಣ ನೀಡುವ ಉದ್ದೇಶದಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಪಠ್ಯಪುಸ್ತಕ, ನೋಟ್ ಪುಸ್ತಕ, ಲೇಖನಿ ಸಾಮಾಗ್ರಿಗಳನ್ನು, ಸಮವಸ್ತ್ರ, ಮದ್ಯಾಹ್ನದ ಬಿಸಿಊಟ ಉಚಿತವಾಗಿ ನೀಡುತ್ತಿರುವುದಲ್ಲದೆ, ಕಾಲಕಾಲಕ್ಕೆ ಶಿಕ್ಷಕರಿಗೆ ತರಬೇತಿಯನ್ನೂ ಕೊಡಲಾಗುತ್ತಿದೆ.
ಸರ್ಕಾರಿ ಶಾಲೆಗಳ ಮೇಲೆ ಇರುವ ಅಸಡ್ಡೆಯನ್ನು ಹೋಗಲಾಡಿಸಿ ಸರ್ಕಾರಿ ಶಾಲೆಗಳ ಮೇಲೆ ವಿಶ್ವಾಸ ಮೂಡಿಸುವ ಮೂಲಕ ಗ್ರಾಮಗಳಲ್ಲಿನ ಜನಪ್ರತಿನಿಧಿಗಳೂ ಗ್ರಾಮಗಳಲ್ಲಿನ ಸರ್ಕಾರಿ ಶಾಲೆಯ ಬೆಳವಣಿಗೆಗೆ ಕಾರಣರಾಗಬೇಕು ಎಂದರು.
ನೋಟ್ ಪುಸ್ತಕಗಳ ದಾನಿ ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಚೀಮನಹಳ್ಳಿ ಗೋಪಾಲ್,ಶಿಕ್ಷಕ ಕೆಂಪಣ್ಣ, ನಾರಾಯಣಸ್ವಾಮಿ, ಎಸ್ಡಿಎಂಸಿ ಉಪಾಧ್ಯಕ್ಷೆ ಮಂಜುಳಮ್ಮ, ಸದಸ್ಯರಾದ ಸಿ.ವಿ.ವೆಂಕಟರಾಯಪ್ಪ, ಚಿಕ್ಕವೆಂಕಟರಾಯಪ್ಪ, ಎಸ್.ಮಂಜುನಾಥ, ವೆಂಕಟಲಕ್ಷ್ಮಮ್ಮ, ಮುನಿರಾಜು, ಮುಖ್ಯಶಿಕ್ಷಕಿ ಎಂ.ಎಸ್.ಪ್ರಭಾವತಿ, ಸಹಶಿಕ್ಷಕಿ ಮುನಿರತ್ನಮ್ಮ, ಭಾರತಮ್ಮ ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಚೀಮನಹಳ್ಳಿ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳ ವಿತರಣೆ
ರೈತರ ಬವಣೆಗಳನ್ನು ಆಲಿಸದ ಸರ್ಕಾರ
ರೈತರ ಬವಣೆಗಳನ್ನು ಆಲಿಸದ ರಾಜ್ಯ ಮತ್ತು ಕೇಂದ್ರ ಸರ್ಕಾರ ಹಾಗೂ ಜಿಲ್ಲಾಡಳಿತದ ಕಾರ್ಯ ವೈಖರಿಯನ್ನು ಖಂಡಿಸಿ ಜೂನ್ 26 ರ ಶುಕ್ರವಾರ ಚಿಕ್ಕಬಳ್ಳಾಪುರದ ಸಿಟಿಜನ್ ಕ್ಲಬ್ನಿಂದ ಪಾದಯಾತ್ರೆ ಹೊರಟು ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ರೈತ ಸಂಘದ ಸದಸ್ಯರು ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸಭೆ ಸೇರಿದ್ದ ರೈತ ಸಂಘ ಹಾಗೂ ವಿವಿಧ ಕನ್ನಡಪರ ಸಂಘಟನೆಯ ಸದಸ್ಯರು ರೈತರ ಸಮಸ್ಯೆಗಳನ್ನು ಬಗೆ ಹರಿಸದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಯಲು ಸೀಮೆ ಜಿಲ್ಲೆಗಳಲ್ಲಿ ಶೇ. 80 ರಷ್ಟು ರೈತರು ರೇಷ್ಮೆ ಕೃಷಿಯನ್ನು ಅವಲಂಭಿಸಿದ್ದಾರೆ. ಆದರೆ 350 ರಿಂದ 400 ರೂ ಇದ್ದ ರೇಷ್ಮೆ ಗೂಡಿನ ಬೆಲೆ 150 ರಿಂದ 200 ರೂಗಳಿಗೆ ಕುಸಿದಿದೆ. ಕೇಂದ್ರ ಸರ್ಕಾರ ರೇಷ್ಮೆ ಆಮದು ಸುಂಕ ಕಡಿತಗೊಳಿಸಿರುವುದರಿಂದ ರೇಷ್ಮೆ ನಂಬಿ ಬದುಕುವವರು ಬೀದಿ ಪಾಲಾಗುವಂತಾಗಿದೆ. ಕೃಷಿ ತ್ಯಜಿಸಿ ನಗರಗಳಿಗೆ ವಲಸೆ ಹೋಗುವಂತಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ರೇಷ್ಮೆ ಆಮದು ಸುಂಕವನ್ನು ಶೇ. 30 ರಷ್ಟು ಮಾಡಬೇಕು. ರೇಷ್ಮೆ ಗೂಡಿಗೆ ಬೆಂಬಲ ಬಲ ನೀಡಬೇಕು ಮತ್ತು ರೇಷ್ಮೆ ಕೃಷಿಗೆ ಸಂಬಂಧಿಸಿದ ಸಹಾಯಧನ ಬಿಡುಗಡೆ ಮಾಡಬೇಕು ಎಂಬ ಬೇಡಿಕೆಗಳನ್ನಿಟ್ಟಿರುವುದಾಗಿ ತಿಳಿಸಿದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ಮುನಿಕೆಂಪಣ್ಣ, ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಕುಮಾರ್, ನಾಗರಾಜ್, ಬಾಲಮುರಳಿಕೃಷ್ಣ, ಭಕ್ತರಹಳ್ಳಿ ಪ್ರತೀಶ್, ನಾಗೇಶ್, ಮುನಿರಾಜು, ಕರ್ನಾಟಕ ರಕ್ಷಣಾ ವೇದಿಕೆ(ಶಿವಕುಮಾರ ಗೌಡ ಬಣ) ಹಾಗೂ ಕರ್ನಾಟಕ ಜನಪರ ವೇದಿಕೆ ಸದಸ್ಯರು ಭಾಗವಹಿಸಿದ್ದರು.
ಮಲೇರಿಯಾ ಮಾಸಾಚರಣೆ ಜಾಥಾ
ಮಲೇರಿಯಾ ಮಾಸಾಚರಣೆಯ ಅಂಗವಾಗಿ ಬುಧವಾರ ತಾಲ್ಲೂಕು ಆರೋಗ್ಯ ಇಲಾಖೆ, ನಗರಸಭೆ ಹಾಗೂ ಸರಸ್ವತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ನಗರದಲ್ಲಿ ಜಾಥಾ ನಡೆಸಿದರು.
ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್ ಕುಮಾರ್ ಮಾತನಾಡಿ ‘ಯಾವುದೇ ಜ್ವರವಿರಲಿ ಉದಾಸೀನ ಮಾಡದೇ ತಕ್ಷಣ ರಕ್ತಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆಯಬೇಕು. ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ನಿಂತ ನೀರಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವುದರಿಂದ ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರು ಶೇಖರಿಸುವ ಡ್ರಮ್ ಅಥವಾ ತೊಟ್ಟಿಗಳನ್ನು ಭದ್ರವಾದ ಮುಚ್ಚಳ ಹಾಕಿ ಮುಚ್ಚಬೇಕು. ವಾರಕ್ಕೊಮ್ಮೆ ನೀರು ಶೇಖರಣಾ ಡ್ರಮ್ ಖಾಲಿ ಮಾಡಿ, ಒಣಗಿಸಿ ಭರ್ತಿ ಮಾಡಬೇಕು. ಸೊಳ್ಳೆ ಪರದೆಯನ್ನು ಉಪಯೋಗಿಸಬೇಕು’ ಎಂದು ತಿಳಿಸಿದರು.
ನಗರದಲ್ಲಿ ಜಾಥಾ ನಡೆಸಿದ ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗುತ್ತಾ ಕರಪತ್ರಗಳನ್ನು ಹಂಚಿದರು.
ಡಾ.ಶೀಲಾ, ಡಾ.ವಿಜಯಕುಮಾರ್, ಸಮೀವುಲ್ಲಾ, ಕಿರಣ್ಕುಮಾರ್, ವಿಂದ್ಯಾ, ಎ.ಎನ್.ಎಂ ವಿಜಯಾ, ಆದಮ್ಮ, ದಾದಾಪೀರ್, ನಗರಸಭೆ ಅಧಿಕಾರಿ ಬಾಲಚಂದ್ರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಡಿಸಿಸಿ ಬ್ಯಾಂಕ್ ಶಾಖಾ ಕಚೇರಿಗೆ ರೈತರ ಮುತ್ತಿಗೆ
ಸಾಲಕ್ಕಾಗಿ ದಾಖಲೆಗಳನ್ನು ಕೊಡಿಸಿಕೊಂಡು ವರ್ಷ ಕಳೆದರೂ ಇದುವರೆಗೂ ಸಾಲ ನೀಡಿಲ್ಲ ಎಂದು ಆರೋಪಿಸಿ ಆನೆಮಡಗು ವ್ಯವಸಾಯ ಸೇವಾ ಸಹಕಾರ ಸಂಘದ ರೈತರು ಡಿಸಿಸಿ ಬ್ಯಾಂಕ್ ಶಾಖಾ ಕಚೇರಿಗೆ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟಿಸಿದರು.
ನಗರದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್(ಡಿಸಿಸಿ)ನ ಶಾಖಾ ಕಚೇರಿಗೆ ಹಸಿರು ಸೇನೆ ರೈತ ಸಂಘದ ಮುಖಂಡರೊಂದಿಗೆ ಆಗಮಿಸಿದ ಆನೆಮಡಗು ವ್ಯವಸಾಯ ಸೇವಾ ಸಹಕಾರ ಸಂಘದ ಸದಸ್ಯ ರೈತರು, ಕೂಡಲೆ ನಮಗೆ ಸಾಲ ನೀಡುವಂತೆ ಒತ್ತಾಯಿಸಿದರು.
ಕಳೆದ ವರ್ಷ ಕೃಷಿ ಸಾಲಕ್ಕಾಗಿ ಅರ್ಜಿಗಳನ್ನು ಹಾಕಿಕೊಂಡ ನಾವು ಪಹಣಿ, ಮುಟೇಷನ್, ಭಾವಚಿತ್ರಗಳು, ಬ್ಯಾಂಕ್ಗಳ ಎನ್ಒಸಿ ಇನ್ನಿತರೆ ಎಲ್ಲ ಅಗತ್ಯ ದಾಖಲೆಗಳನ್ನು ಒದಗಿಸಿದ್ದೇವೆ. ಪಹಣಿಯನ್ನು ಅಡವಿಟ್ಟಿದ್ದು ನಮ್ಮ ಎಲ್ಲ ಪಹಣಿಗಳಲ್ಲೂ ಬ್ಯಾಂಕ್ಗೆ ಆಧಾರ ಇಡಲಾಗಿದೆ ಎಂದು ನಮೂದಿಸಿಯೂ ಆಗಿದೆ. ಆದರೆ ಸಾಲ ಮಾತ್ರ ನೀಡಿಲ್ಲ, ಕಳೆದ ಏಳೆಂಟು ತಿಂಗಳುಗಳಿಂದಲೂ ಸಾಲ ನೀಡದೆ ಸತಾಯಿಸುತ್ತಿದ್ದಾರೆ. ಈ ಪಹಣಿಯನ್ನು ಇಟ್ಟುಕೊಂಡು ಬೇರೆ ಕಡೆ ಸಾಲವನ್ನೂ ಪಡೆಯುವಂತಿಲ್ಲ. ಈ ಬ್ಯಾಂಕಿನವರೂ ಸಾಲ ನೀಡುತ್ತಿಲ್ಲ.
ಇದೀಗ ಮುಂಗಾರು ಮಳೆ ಆರಂಭವಾಗಿದ್ದು ಹೊಲ ಗದ್ದೆಗಳನ್ನು ಉತ್ತಿ ಬಿತ್ತುವ ಸಮಯ. ಇದೀಗ ಜಮೀನನ್ನು ಉಳುಮೆ ಮಾಡಲು ಆರಂಭಿಸಿದಾಗಿನಿಂದಲೂ ಬೆಳೆ ಬಿತ್ತುವ ತನಕ ಗೊಬ್ಬರ, ರಾಸಾಯನಿಕ, ಬಿತ್ತನೆ ಬೀಜ ಇನ್ನಿತರೆ ಎಲ್ಲ ಹಂತಗಳಲ್ಲೂ ಬಂಡವಾಳ ಹಾಕಬೇಕಾಗುತ್ತದೆ. ಆದರೆ ಈ ಬ್ಯಾಂಕಿನವರು ಸಾಲ ನೀಡದೆ ಸತಾಯಿಸುತ್ತಿದ್ದಾರೆ. ಒಂದು ಒಂದೂವರೆ ತಿಂಗಳು ಕಳೆದರೆ ಬಿತ್ತನೆ ಅವಧಿಯೆ ಮುಗಿಯಲಿದೆ. ಇವರು ಇನ್ನು ಸಾಲ ಕೊಡುವುದು ಯಾವಾಗ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಕೃಷಿಕರು ಬಡ್ಡಿಗೆ ಸಿಲುಕಬಾರದು ಎಂಬ ಉದ್ದೇಶದಿಂದ ಸಹಕಾರಿ ಬ್ಯಾಂಕ್ಗಳ ಮೂಲಕ ಸಾಲ ನೀಡುವ ಯೋಜನೆಯನ್ನು ಸರ್ಕಾರ ರೂಪಿಸಿದ್ದು ಈ ಬ್ಯಾಂಕಿನವರು ಮಾಡುವ ಕೆಲಸದಿಂದ ನಾವು ಇನ್ನಷ್ಟು ಸಾಲ, ಬಡ್ಡಿಗೆ ಸಿಲುಕಿ ಸಾಯುವಂತಾಗಿದೆ ಎಂದು ಆರೋಪಿಸಿದರು.
ನಾವು ಕಳೆದ ಸಾಲಿನಲ್ಲಿಯೆ ಬ್ಯಾಂಕಿನಿಂದ ಸಾಲ ಸಿಗುತ್ತದೆ ಎಂಬ ನಂಬಿಕೆಯಿಂದ ಹಲವರ ಬಳಿ ಬಡ್ಡಿಗೆ ಹಾಗೂ ಕೈ ಸಾಲ ಪಡೆದಿದ್ದೇವೆ. ಅದು ಇದೀಗ ಬೆಟ್ಟದಂತೆ ಬೆಳೆದು ನಿಂತಿದೆ. ಈಗಲಾದರೂ ನೀವು ಸಾಲ ನೀಡದಿದ್ದರೆ ನಮಗೆ ಆತ್ಮಹತ್ಯೆಯೊಂದೆ ದಾರಿ ಎಂದು ತಮ್ಮ ಅಳಲು ತೋಡಿಕೊಂಡರು.
ಬ್ಯಾಂಕ್ನ ವ್ಯವಸ್ಥಾಪಕ ಲಿಂಗರಾಜು ಹಾಗೂ ಬ್ಯಾಂಕ್ನ ನಿರ್ದೆಶಕ ಪಿ.ಶಿವಾರೆಡ್ಡಿಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಪಿ.ಶಿವಾರೆಡ್ಡಿ ಈ ತಿಂಗಳ ಅಂತ್ಯದೊಳಗೆ ಆನೆಮಡಗು ರೈತರ ಸೇವಾ ಕೇಂದ್ರದ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ ಎಲ್ಲ ಸದಸ್ಯರಿಗೂ ಸಾಲ ನೀಡುವ ಭರವಸೆ ನೀಡಿದರು.
ರೈತ ಸಂಘದ ಅಧ್ಯಕ್ಷ ರವಿಪ್ರಕಾಶ್, ಭಕ್ತರಹಳ್ಳಿ ಪ್ರತೀಶ್, ಬಾಲಮುರಳಿ, ಆನೆಮಡಗು ಶಿವಣ್ಣ ಮತ್ತಿತರರು ಪ್ರತಿಭಟನೆಯ ನೇತೃತ್ವವಹಿಸಿದ್ದರು.
ಡಿ.ಕೆ.ರವಿ ಸ್ಮರಣಾರ್ಥ ‘ದೊಡ್ಡಕೊಪ್ಪಲುವಿನಿಂದ ಕೋಲಾರದವರೆಗೆ’ ಶಿಕ್ಷಣದ ಪಾದಯಾತ್ರೆ
ದಿವಂಗತ ಡಿ.ಕೆ.ರವಿ ಅವರ ಸ್ಮರಣಾರ್ಥ ‘ದೊಡ್ಡಕೊಪ್ಪಲುವಿನಿಂದ ಕೋಲಾರದವರೆಗೆ’ ಶಿಕ್ಷಣದ ಪಾದಯಾತ್ರೆ ಕೈಗೊಂಡಿರುವ ಎಚ್.ಸಿ.ಲಾವಣ್ಯ ತಾಲ್ಲೂಕಿಗೆ ಸೋಮವಾರ ಆಗಮಿಸಿದ್ದಳು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹೇಮದಳದ ಸರ್ಕಾರಿ ಶಾಲೆಯ ಏಳನೆಯ ತರಗತಿಯ ವಿದ್ಯಾರ್ಥಿನಿ ಎಚ್.ಸಿ.ಲಾವಣ್ಯ ಎಲ್ಲಾ ಮಕ್ಕಳಿಗೂ ಶಿಕ್ಷಣ ಸಿಗಬೇಕು, ಶಿಕ್ಷಣ ವಂಚಿತರನ್ನು ಶಾಲೆಗೆ ಕರೆತರಬೇಕು ಎಂಬ ವಿಷಯವಾಗಿ ಅರಿವು ಮೂಡಿಸುತ್ತಾ ಪಾದಯಾತ್ರೆಯನ್ನು ನಡೆಸಿದ್ದಾಳೆ. ಪಾದಯಾತ್ರೆಯ ಹನ್ನೆರಡನೆಯ ದಿನ ತಾಲ್ಲೂಕಿನ ಜಂಗಮಕೋಟೆ ಸರ್ಕಾರಿ ಶಾಲೆ ಹಾಗೂ ನಡಿಪಿನಾಯಕನಹಳ್ಳಿ ನವೋದಯ ಶಾಲೆಗಳಿಗೆ ಭೇಟಿ ನೀಡಿದಳು.
‘ದಿವಂಗತ ಡಿ.ಕೆ.ರವಿ ಅವರ ಜನ್ಮಸ್ಥಳ ದೊಡ್ಡಕೊಪ್ಪಲು ಗ್ರಾಮದಿಂದ ಪ್ರಾರಂಭಿಸಿ ಇದುವರೆಗೂ ಸುಮಾರು 50 ಸಾವಿರ ಕರಪತ್ರಗಳನ್ನು ಹಂಚಿಕೊಂಡು ಮಾರ್ಗಮಧ್ಯೆ ಸಿಗುವ ಪ್ರತಿಯೊಂದು ಗ್ರಾಮ, ಶಾಲೆಗೂ ಭೇಟಿ ನೀಡುತ್ತಾ ಶಿಕ್ಷಣದ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ. ಬಡ ಮಕ್ಕಳು ಕೂಡ ಪ್ರತಿಭಾವಂತರು, ಉನ್ನತ ಶಿಕ್ಷಣ ಹೊಂದಲು ಸಾಧ್ಯ ಎಂಬುದಕ್ಕೆ ದಿವಂಗತ ಡಿ.ಕೆ.ರವಿ ಅವರೇ ಉದಾಹರಣೆ. ಅವರ ಪ್ರೇರಣೆಯಿಂದ ಈ ಪಾದಯಾತ್ರೆ ನಡೆಸುತ್ತಿರುವ ನನ್ನ ಮಗಳು ಈಗ ಸಮಾಜದ ಮಗಳಾಗಿದ್ದಾಳೆ’ ಎಂದು ಎಚ್.ಸಿ.ಲಾವಣ್ಯ ತಂದೆ ಈರಯ್ಯ ತಿಳಿಸಿದರು.
‘ನಾವು ಶಿಕ್ಷಣದಿಂದ ಎಂದೂ ಹಿಂದೆ ಸರಿಯುವುದಿಲ್ಲ. ನಮ್ಮ ಶಾಲೆಯ ಗುರು ಹಿರಿಯರನ್ನು ಪೂಜ್ಯ ಭಾವನೆಯಿಂದ ಪ್ರೀತಿಸುತ್ತೇವೆ. ಶಿಕ್ಷಣದಿಂದ ವಂಚಿತರಾಗಿ ಶಿಕ್ಷಣದಿಂದ ದೂರವಿರುವ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುತ್ತೇವೆ. ನಾವು ಉತ್ತಮ ಉನ್ನತ ಶಿಕ್ಷಣ ಪಡೆದು ಪರಿಶುದ್ಧ ಸಮಾಜ ನಿರ್ಮಿಸುತ್ತೇವೆ. ಪರಿಶುದ್ಧ ಪರಿಸರ ನಿರ್ಮಿಸುತ್ತೇವೆ. ಈ ಪಂಚತತ್ವಗಳನ್ನು ಅನುಸರಿಸುತ್ತೇವೆಂದು ವಾಗ್ದಾನ ಮಾಡುತ್ತೇವೆ’ ಎಂಬ ಪ್ರಮಾಣವಚನವನ್ನು ಶಾಲಾ ವಿದ್ಯಾರ್ಥಿಗಳಿಗೆ ಎಚ್.ಸಿ.ಲಾವಣ್ಯ ಬೋಧಿಸಿದಳು.
ವಕೀಲ ಸುರೇಶ್ಗೌಡ, ವೆಂಕಟೇಶಪ್ಪ, ಚಂದ್ರಶೇಖರ್, ರಂಜಿತ್, ನಡಿಪಿನಾಯಕನಹಳ್ಳಿ ಶಾಲೆಯ ಸಂಸ್ಥಾಪಕ ಕೃಷ್ಣಮೂರ್ತಿ, ಸತ್ಯನಾರಾಯಣ, ಸುದರ್ಶನ್, ಜಂಗಮಕೋಟೆ ಸರ್ಕಾರಿ ಶಾಲೆಯ ಎಂ.ನಾರಾಯಣಸ್ವಾಮಿ, ಪದ್ಮ, ಮಂಜುನಾಥ್, ವಾಣಿಶ್ರೀ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಹೊಸಪೇಟೆ ಶಾಲೆಯ ಸಂಪಿನಲ್ಲಿ ಅಪರಿಚಿತ ಶವ ಪತ್ತೆ
ತಾಲ್ಲೂಕಿನ ಹೊಸಪೇಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಳೆಕೊಯ್ಲಿನ ನೀರಿನ ಶೇಖರಣಾ ಸಂಪಿನಲ್ಲಿ ಸೋಮವಾರ ಅಪರಿಚಿತ ಶವವೊಂದು ಪತ್ತೆಯಾಗಿದೆ.
ಸೋಮವಾರ ಶಾಲೆಯು ಪ್ರಾರಂಭವಾಗುವಾಗ ಶಾಲಾ ಆವರಣದಲ್ಲಿ ಕೆಟ್ಟ ವಾಸನೆ ಬೀರುತ್ತಿದ್ದರಿಂದ ಯಾವುದಾದರೂ ಪ್ರಾಣಿ ಸತ್ತಿರಬಹುದೆಂಬ ಶಂಕೆಯಿಂದ ಹುಡುಕಾಡಿದ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಮಳೆಕೊಯ್ಲಿನ ನೀರಿನ ಶೇಖರಣಾ ಸಂಪಿನ ಬಳಿ ನೊಣಗಳು ಕಂಡಿವೆ. ಸಂಪನ್ನು ಮುಚ್ಚಿದ್ದ ಕಲ್ಲು ಚಪ್ಪಡಿಯನ್ನು ಸರಿಸಿದಾಗ ಕೊಳೆತ ಸ್ಥಿತಿಯಲ್ಲಿದ್ದ ಶವ ಪತ್ತೆಯಾಗಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸಮೂರ್ತಿ ಪರಿಶೀಲಿಸಿ, ನಂತರ ಜೆಸಿಬಿ ಬಳಸಿ ಸಂಪಿನ ಮೇಲ್ಮುಚ್ಚಳವನ್ನು ತೆಗೆಸಿ ಶವವನ್ನು ಹೊರತೆಗೆಸಿದರು. ಸುಮಾರು 45 ವರ್ಷ ವಯಸ್ಸಿನ ಗಂಡಿಸಿನ ಶವವಾಗಿದ್ದು, ಶವದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಸಬ್‌ಇನ್ಸ್‌ಪೆಕ್ಟರ್ ಹೊನ್ನೇಗೌಡ, ಎ.ಎಸ್.ಐ ನಾರಾಯಣಸ್ವಾಮಿ ಹಾಗೂ ಸಿಬ್ಬಂದಿ ಹಾಜರಿದ್ದರು.
ಊರಿನ ಮಧ್ಯೆ ಇರುವ ಶಾಲೆಯ ಆವರಣದಲ್ಲಿ ಶವ ದೊರೆತಿರುವುದರಿಂದ ಶಾಲಾ ಮಕ್ಕಳು ಸೇರಿದಂತೆ ಇಡೀ ಗ್ರಾಮವೇ ಗಾಬರಿಗೊಂಡಿದ್ದರು. ಶಾಲೆಯ ಆವರಣದಲ್ಲಿ ಸಾಕಷ್ಟು ಜನರು ಸೇರಿದ್ದರು.
ಅಕ್ಷರ ದಾಸೋಹ ನೌಕರರ ಪ್ರತಿಭಟನೆ
ನಗರದ ಇಂಡೇನ್ ಗ್ಯಾಸ್ ಮಳಿಗೆಗೆ ಭಾನುವಾರ ಅಕ್ಷರ ದಾಸೋಹ ನೌಕರರು ಮುತ್ತಿಗೆ ಹಾಕಿ ಶಾಲೆಗಳಿಗೆ ಸಮರ್ಪಕವಾಗಿ ಗ್ಯಾಸ್ ವಿತರಿಸುತ್ತಿಲ್ಲವೆಂದು ಪ್ರತಿಭಟಿಸಿದರು.
ತಾಲ್ಲೂಕಿನ ಚೌಡರೆಡ್ಡಿ ಹಳ್ಳಿ ಹಾಗೂ ವೆಂಕಟಾಪುರ ಪಂಚಾಯತಿಯ ಹಳ್ಳಿಗಳ ಶಾಲೆಗಳಿಗೆ ಸರಿಯಾಗಿ ಗ್ಯಾಸ್ ಸಿಲಿಂಡರ್ ವಿತರಿಸದೆ ಬಿಸಿ ಊಟದ ಅಡುಗೆ ಮಾಡಲು ಆಗುತ್ತಿಲ್ಲ. ಸೌದೆ ಬಳಸಿ ಅಡುಗೆ ಮಾಡಬೇಕಾಗಿದೆ. ಗ್ಯಾಸ್ ವಿತರಕರನ್ನು ಕೇಳಿದರೆ ಪ್ರತಿ ತಿಂಗಳೂ 10 ನೇ ತಾರೀಖಿನೊಳಗೆ ವಿತರಿಸುತ್ತೇವೆನ್ನುತ್ತಾರೆ. ಆದರೆ ಕೆಲವೆಡೆ 3 ತಿಂಗಳಾದರೂ ಗ್ಯಾಸ್ ಸಿಲಿಂಡರ್ ವಿತರಿಸಿಲ್ಲ. ಶಾಲೆಗಳಲ್ಲಿ ನಾವು ಅಡುಗೆ ಮಾಡುವುದು ಹೇಗೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಇನ್ನು ಮುಂದೆ ಸರ್ಪಕವಾಗಿ ವಿತರಿಸುತ್ತೇವೆ ಎಂದು ವಿತರಕರು ಹೇಳಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ಅಕ್ಷರ ದಾಸೋಹ ನೌಕರ ಸಂಘದ ತಾಲ್ಲೂಕು ಅಧ್ಯಕ್ಷೆ ಮುನಿಲಕ್ಷ್ಮಮ್ಮ, ಡಿ.ವೈ.ಎಫ್.ಐ ರಾಜ್ಯ ಸಂಚಾಲಕ ಮುನೀಂದ್ರ, ಗೀತಾ, ಶಾಂತಾ, ಮಂಜುಳ, ವೆಂಕಟಲಕ್ಷ್ಮಮ್ಮ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಶಿಡ್ಲಘಟ್ಟದಲ್ಲಿ ವಿಶ್ವ ಯೋಗ ದಿನಾಚರಣೆ
ಇಡೀ ವಿಶ್ವವೇ ಇಂದು ಒಂದು ಕುಟುಂಬದಂತೆ ಒಮ್ಮತದಿಂದ ದೇಹ, ಮನಸ್ಸು, ಬುದ್ಧಿಯನ್ನು ಶುದ್ಧಗೊಳಿಸಲು, ಶಾಂತಿಯುತ ಮತ್ತು ಆರೋಗ್ಯಕರ ಜೀವನಕ್ಕೆ ಯೋಗದ ದಿನಾಚರಣೆ ನಡೆಸುತ್ತಿರುವುದಾಗಿ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು.
ನಗರದ ರೈಲ್ವೆ ನಿಲ್ದಾಣದ ಮುಂದೆ ಪತಂಜಲಿ ಯೋಗ ಶಿಕ್ಷಣ ಸಮಿತಿ ಶಿಡ್ಲಘಟ್ಟ ಶಾಖೆಯ ವತಿಯಿಂದ ‘ವಿಶ್ವ ಯೋಗ ದಿನಾಚರಣೆ’ ಅಂಗವಾಗಿ ಆಯೋಜಿಸಿದ್ದ ಶೋಭಾಯಾತ್ರೆ ಹಾಗೂ ಯೋಗಾಸನ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಶ್ವದ 193 ರಾಷ್ಟ್ರಗಳಲ್ಲಿ ಇಂದು ‘ವಿಶ್ವ ಯೋಗ ದಿನಾಚರಣೆ’ ನಡೆಸಲಾಗುತ್ತಿರುವುದು ಯೋಗದ ಹಿರಿಮೆಯನ್ನು ತಿಳಿಸುತ್ತದೆ. ಭಾರತೀಯ ಯೋಗ ಪದ್ಧತಿಗೆ ವಿಶ್ವಮಾನ್ಯತೆ ದೊರಕಿರುವುದು ಹೆಮ್ಮೆಯ ಸಂಗತಿ. ಒತ್ತಡ ಬದುಕಿನಿಂದ ಮತ್ತು ಆಧುನಿಕ ಆಹಾರ ಪದ್ಧತಿಯಿಂದಾಗಿ ನಾನಾ ಖಾಯಿಲೆಗಳಿಂದ ಜನರು ಬಳಲುತ್ತಿದ್ದು, ಇದಕ್ಕೆ ಯೋಗ ಪರಿಹಾರವಾಗಲಿದೆ ಎಂದು ಹೇಳಿದರು.
ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸಮೂರ್ತಿ ಮಾತನಾಡಿ,‘ಉತ್ತಮ ಆರೋಗ್ಯವಂತ ಜೀವನಕ್ಕಾಗಿ ಪ್ರತಿಯೊಬ್ಬರೂ ಯೋಗ, ಪ್ರಾಣಾಯಾಮ ಮತ್ತು ಧ್ಯಾನವನ್ನು ರೂಢಿಸಿಕೊಳ್ಳಬೇಕು’ ಎಂದು ತಿಳಿಸಿದರು.
ನಗರದ ರೈಲ್ವೆ ನಿಲ್ದಾಣ, ಮಾರಮ್ಮ ವೃತ್ತ, ಕೋಟೆ ವೃತ್ತ, ಬಸ್ ನಿಲ್ದಾಣ, ಹೂ ವೃತ್ತಗಳ ಬಳಿ ಶಾಲಾ ವಿದ್ಯಾರ್ಥಿಗಳು ಮತ್ತು ಪತಂಜಲಿ ಯೋಗ ಶಿಕ್ಷಣ ಸಮಿತಿ ಸದಸ್ಯರು ನಿಂತು ಮಾಡುವ ಆಸನಗಳಾದ ತಾಡಾಸನ, ಪಾದ ಹಸ್ತಾಸನ, ಚಕ್ರಾಸನ, ವೀರಭದ್ರಾಸನ, ವೃಕ್ಷಾಸನ, ತ್ರಿಕೋಣಾಸನ ಮುಂತಾದವುಗಳನ್ನು ಪ್ರದರ್ಶಿಸಿದರು. ಪ್ರತಿಯೊಂದು ಆಸನಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸುವಾಗ ಅವುಗಳಿಂದಾಗುವ ಉಪಯೋಗಗಳ ಬಗ್ಗೆ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ವಿವರಿಸಿದರು.
‘ಯೋಗದಿಂದ ರೋಗ ಮುಕ್ತ ಜೀವನ’, ‘ನಮ್ಮ ನಡಿಗೆ ಯೋಗದ ಕಡೆಗೆ’ ಎಂದು ಘೋಷಣೆಗಳನ್ನು ಕೂಗುತ್ತಾ ಶೋಭಾಯಾತ್ರೆಯನ್ನು ನಡೆಸಿದರು.
ಮೇಲೂರು
ತಾಲ್ಲೂಕಿನ ಮೇಲೂರು ಗ್ರಾಮದ ಪ್ರಾಢಶಾಲೆ ಆವರಣದಲ್ಲಿ ಭಾನುವಾರ ವಿಶ್ವ ಯೋಗದಿನವನ್ನು ಆಚರಿಸಲಾಯಿತು. ಶಾಲಾ ವಿದ್ಯಾರ್ಥಿಗಳು, ಗ್ರಾಮ ಪಂಚಾಯತಿ ಸದಸ್ಯರು, ಶಿಕ್ಷಕರು ಭಾಗವಹಿಸಿದ್ದ ಯೋಗ ಕಾರ್ಯಕ್ರಮದಲ್ಲಿ ಯೋಗಪಟು ಮಂಜುನಾಥ್ ಯೋಗಾಸನಗಳನ್ನು ಅದರ ಉಪಯುಕ್ತತೆಯನ್ನು ವಿವರಿಸುತ್ತಾ ಕಲಿಸಿದರು.
ಮಳ್ಳೂರು
ತಾಲ್ಲೂಕಿನ ಮಳ್ಳೂರು ಗ್ರಾಮದ ನಾಗಲದೇವಿ ಭವನದಲ್ಲಿ ಭಾನುವಾರ ವಿಶ್ವ ಯೋಗದಿನವನ್ನು ಆಚರಿಸಲಾಯಿತು. ಗ್ರಾಮದ ವಿವಿಧ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸೂರ್ಯನಮಸ್ಕಾರ, ವಿವಿಧ ಆಸನಗಳು, ಕ್ರಿಯೆಗಳಾದ ಜಲನೇತಿ, ಸೂತ್ರನೇತಿಗಳನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳಿಗೆ ಯೋಗದ ಪ್ರಯೋಜನಗಳು, ಏಕ್ಆಗ್ರತೆ, ಆಹಾರ ಪದ್ಧತಿಗಳ ಬಗ್ಗೆ ತಿಳಿಸಿಕೊಡಲಾಯಿತು.
ಪೊಲೀಸ್ ಅಧಿಕಾರಿ ರಮೇಶ್, ಮಳ್ಳೂರು ಹರೀಶ್, ಸರ್ಕಾರಿ ಶಾಲೆ ದೈಹಿಕ ಶಿಕ್ಷಕ ಅಶ್ವತ್ಥನಾರಾಯಣ್, ಯೋಗ ತರಬೇತುದಾರ ದೇವರಾಜ್, ಉಪನ್ಯಾಸಕ ಸುರೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ನಾಲ್ವರು ವಿದ್ಯಾರ್ಥಿಗಳು ಕ್ರೀಡಾ ತರಬೇತಿ ಶಾಲೆಗೆ ಆಯ್ಕೆ
ತಾಲ್ಲೂಕಿನ ನಾಲ್ವರು ವಿದ್ಯಾರ್ಥಿಗಳು ಇದೇ ಪ್ರಥಮ ಬಾರಿಗೆ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದ ಸರ್.ಎಂ.ವಿ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರಾರಂಭವಾಗಿರುವ ಕ್ರೀಡಾ ತರಬೇತಿ ಶಾಲೆಗೆ ಆಯ್ಕೆಯಾಗಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನಿಂದ 16 ವಿದ್ಯಾರ್ಥಿಗಳು ತೆರಳಿದ್ದು ಅವರಲ್ಲಿ ನಾಲ್ವರು ಆಯ್ಕೆಯಾಗಿದ್ದಾರೆ. ವಿ.ಗಗನ್, ಎನ್.ಯಶ್ವಂತ್, ಎಸ್.ಶ್ರೀಹರಿ ಮತ್ತು ಲೋಕೇಶ್ ಆಯ್ಕೆಯಾದ ವಿದ್ಯಾರ್ಥಿಗಳು.
‘ಎತ್ತರದ ಮಾನದಂಡ ಹಾಗೂ ವಿವಿಧ ರೀತಿಯ ಓಟಗಳ ಮೂಲಕ ಪರೀಕ್ಷೆಯನ್ನು ನಡೆಸಿ ಆಯ್ಕೆ ಮಾಡಿರುವ ಮಕ್ಕಳಿಗೆ ಐದನೇ ತರಗತಿಯಿಂದ ಶಾಲೆ, ಊಟ, ವಸತಿ ಹಾಗೂ ಕ್ರೀಡಾ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ’.
‘ನಮ್ಮ ತಾಲ್ಲೂಕಿನಿಂದ ಕ್ರೀಡಾಪಟುಗಳು ಹೊರಹೊಮ್ಮಬೇಕು ಎಂಬ ಉದ್ದೇಶದಿಂದ ಪೋಷಕರನ್ನು ಒಪ್ಪಿಸಿ ಎರಡು ತಿಂಗಳುಗಳಿಂದ ನಾಲ್ವರು ಮಕ್ಕಳಿಗೆ ಕ್ರೀಡಾಂಗಣದಲ್ಲಿ ಪ್ರತಿ ದಿನ ಬೆಳಿಗ್ಗೆ ತರಬೇತಿ ನೀಡುತ್ತಿದ್ದೆ. ಅವರು ಆಯ್ಕೆಯಾಗಿರುವುದು ಸಂತಸ ತಂದಿದೆ. ಮುಂದೆಯೂ ನಮ್ಮ ತಾಲ್ಲೂಕಿನಿಂದ ಹೆಚ್ಚೆಚ್ಚು ಮಕ್ಕಳು ಕ್ರೀಡಾ ಶಾಲೆಗೆ ಸೇರುವಂತಾಗಲಿ’ ಎಂದು ಕ್ರೀಡಾ ತರಬೇತುದಾರ ಎಂ.ಮುನಿರಾಜು ‘ಪ್ರಜಾವಾಣಿ’ಗೆ ತಿಳಿಸಿದರು.
ವರದನಾಯಕನಹಳ್ಳಿ ಸರ್ಕಾರಿ ಶಾಲೆಯಲ್ಲಿ ಯೋಗ ಧ್ಯಾನ
ಪ್ರತಿ ಶನಿವಾರ ತಾಲ್ಲೂಕಿನ ವರದನಾಯಕನಹಳ್ಳಿ ಸರ್ಕಾರಿ ಶಾಲೆಯು ವಿಭಿನ್ನವಾಗಿ ಪ್ರಾರಂಭಗೊಳ್ಳುತ್ತದೆ.
ಈ ಶಾಲೆಯಲ್ಲಿ ಬೆಳಿಗ್ಗೆ ಎಂಟು ಗಂಟೆಯಿಂದ ಒಂಭತ್ತು ಗಂಟೆಯವರೆಗೆ ಮಕ್ಕಳಿಗೆ ಯೋಗ, ವ್ಯಾಯಾಮ ಮತ್ತು ಧ್ಯಾನವನ್ನು ಕಲಿಸಲಾಗುತ್ತದೆ. ಶಾಲೆಯ ಆವರಣದ ದೊಡ್ಡ ಕಾಂಪೋಂಡಿನೊಳಗೆ ಓಟ ಆರಂಭಿಸುವ ವಿದ್ಯಾರ್ಥಿಗಳಿಗೆ, ನಂತರ ನಿಂತು ಮಾಡುವ ಆಸನಗಳು, ಏರೋಬಿಕ್ಸ್ ಮಾಡಿಸಲಾಗುತ್ತದೆ. ಇದಾದ ನಂತರ ಶಾಲಾ ಆವರಣದಲ್ಲಿ ಸಾಲಾಗಿ ಕಳ್ಳರಿಸಿ ಶಿಕ್ಷಕರು ಕೆಲವು ಶ್ಲೋಕಗಳನ್ನು ಕಲಿಸಿ ಹತ್ತು ನಿಮಿಷ ಧ್ಯಾನ ಮಾಡಿಸುತ್ತಾರೆ.
‘ಹಲವಾರು ವರ್ಷಗಳಿಂದ ನಾವು ಶನಿವಾರ ಮಕ್ಕಳಿಗೆ ಯೋಗ, ವ್ಯಾಯಾಮ ಮತ್ತು ಧ್ಯಾನವನ್ನು ಕಲಿಸಲೆಂದೇ ಸಮಯವನ್ನು ಮೀಸಲಿಟ್ಟಿದ್ದೇವೆ. ಮಕ್ಕಳಿಗೆ ಇದರಿಂದ ಉತ್ಸಾಹ, ಚೈತನ್ಯ ಮತ್ತು ಕಲಿಯಲು ಆಸಕ್ತಿ ಹೆಚ್ಚುತ್ತದೆ’ ಎನ್ನುತ್ತಾರೆ ಶಿಕ್ಷಕ ನಾಗಭೂಷಣ್.
ಶಿಡ್ಲಘಟ್ಟದಲ್ಲಿ 17 ವರ್ಷಗಳಿಂದ ಉಚಿತ ಯೋಗಶಿಕ್ಷಣ
‘ಜೂನ್ ೨೧’ ಅನ್ನು ಅಂತರಾಷ್ತ್ರೀಯ ಯೋಗ ದಿನವೆಂದು ಸಂಯುಕ್ತ ರಾಷ್ಟ್ರ ಸಂಸ್ಥೆಯು ಘೋಷಿಸಿರುವುದರಿಂದ ಇಂದು ಎಲ್ಲೆಡೆ ‘ವಿಶ್ವ ಯೋಗದಿನಾಚರಣೆ’ ಆಚರಿಸಲಾಗುತ್ತಿದೆ. ‘ಯೋಗ ದಿನ’ ಆಚರಣೆಗೆ ಕಾರಣಕರ್ತರು ಯಾರು ಹಾಗೂ ಯೋಗದ ಅಗತ್ಯತೆಯ ಕುರಿತಂತೆ ಹಲವೆಡೆ ಚರ್ಚೆ ನಡೆದಿದೆ.
ಆದರೆ ಎಲೆ ಮರೆಯ ಕಾಯಿಯಂತೆ, ಸದ್ದಿಲ್ಲದೆ ಜಿನುಗುವ ನೀರ ಝರಿಯಂತೆ ಶಿಡ್ಲಘಟ್ಟದಲ್ಲಿ ಕಳೆದ 17 ವರ್ಷಗಳಿಂದ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಶಾಖೆಯು ಉಚಿತವಾಗಿ ಯೋಗ ಶಿಕ್ಷಣ ನೀಡುತ್ತಿದೆ. 1998 ರ ಆಗಸ್ಟ್ 15 ರಂದು ಪ್ರಾರಂಭಗೊಂಡು ಇದುವರೆಗೂ 30ಕ್ಕೂ ಹೆಚ್ಚು ಉಚಿತ ಯೋಗ ಶಿಬಿರಗಳನ್ನು ನಡೆಸಿದೆ. ಪುರುಷರು ಮತ್ತು ಮಹಿಳೆಯರೂ ಸೇರಿದಂತೆ 2000 ಕ್ಕೂ ಹೆಚ್ಚು ಮಂದಿಗೆ ಯೋಗ ಶಿಕ್ಷಣ ನೀಡಲಾಗಿದೆ.
‘ಯೋಗೇನ ಚಿತ್ತಸ್ಯ ಪದೇನವಾಚಾಂ, ಮಲಂ ಶರೀರಸ್ಯ ಚ ವೈದ್ಯಕೇನ’ ಎಂಬಂತೆ ದೇಹ, ಮನಸ್ಸು, ಬುದ್ಧಿಯನ್ನು ಶುದ್ಧಗೊಳಿಸಲು, ಶಾಂತಿಯುತ ಮತ್ತು ಆರೋಗ್ಯಕರ ಜೀವನಕ್ಕೆ ಯೋಗವು ಪರಿಹಾರ ಎನ್ನುತ್ತಾ ಉಚಿತವಾಗಿ ಯೋಗ ಶಿಕ್ಷಣ ಜಾರಿಯಲ್ಲಿದೆ.
‘ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ ಎಲ್ಲವೂ ಸೇರಿದಾಗ ಅಷ್ಟಾಂಗ ಯೋಗವಾಗುತ್ತದೆ. ‘ಆಸನ’ವನ್ನೇ ಅನೇಕರು ಯೋಗ ಎನ್ನುತ್ತಾರೆ. ಆಸನಗಳು ಯೋಗದ ಒಂದು ಭಾಗವಷ್ಟೆ. ಯೋಗವೆನ್ನುವುದು ಬರೀ ಆಸನ ಪ್ರಾಣಾಯಾಮಗಳ ವ್ಯಾಯಾಮವಲ್ಲ. ಅದೊಂದು ಜೀವನ ವಿಧಾನ. ಶರೀರ, ಮನಸ್ಸು, ಬುದ್ಧಿ ಮತ್ತು ಆತ್ಮದ ನಡುವಿನ ಸಮನ್ವಯ ಸಾಧನ. ಈ ಉದ್ದೇಶದಿಂದ ನಮ್ಮ ಪತಂಜಲಿ ಯೋಗ ಶಿಕ್ಷಣದಲ್ಲಿ ಕೇವಲ ಆಸನಗಳಷ್ಟೇ ಅಲ್ಲದೆ ಅಷ್ಟಾಂಗ ಯೋಗದ ಶಿಕ್ಷಣವನ್ನು ನೀಡಲಾಗುತ್ತಿದೆ. ಮಾತೃಭೋಜನ, ಸತ್ಸಂಗ, ಚಾಂದನಿ ಕಾರ್ಯಕ್ರಮ, ಭಾರತಮಾತಾ ಪೂಜೆ, ಭಜನೆ ಮುಂತಾದ ದೇಹ, ಮನಸ್ಸು, ಬುದ್ಧಿಗಳನ್ನು ಸರಿದಾರಿಯತ್ತ ತರುವ ಕಾರ್ಯಕ್ರಮಗಳೂ ಇದರ ಭಾಗವಾಗಿದೆ’ ಎನ್ನುತ್ತಾರೆ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್.
‘ತಾಲ್ಲೂಕಿನಲ್ಲಿ ಹಲವಾರು ಶಾಲೆಗಳಲ್ಲಿ ಉಚಿತ ಯೋಗಶಿಕ್ಷಣ, ರಕ್ತದಾನ ಶಿಬಿರ, ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿಕೆ, ನೇಪಾಳ ಭೂಕಂಪ, ಕಾಶ್ಮೀರ, ಗುಜರಾತ್ ಸಂತ್ರಸ್ತರಿಗಾಗಿ ನಿಧಿ ಸಂಗ್ರಹಣೆ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯೋಗ ಪ್ರದರ್ಶನ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ಯೋಗಬಂಧುಗಳು ಪಾಲ್ಗೊಂಡಿದ್ದೇವೆ. ಈಗಾಗಲೇ ಯೋಗಬಂಧುಗಳ ಸಹಕಾರದಿಂದ ನಿವೇಶನವನ್ನು ಖರೀದಿಸಿದ್ದು, ಮುಂದೆ ಯೋಗಮಂದಿರವನ್ನು ನಿರ್ಮಾಣ ಮಾಡಿ ಹೆಚ್ಚೆಚ್ಚೆ ಮಂದಿಗೆ ಯೋಗ ಶಿಕ್ಷಣ ನೀಡುವ ಗುರಿಯಿದೆ’ ಎಂದು ಅವರು ವಿವರಿಸಿದರು.
–ಡಿ.ಜಿ.ಮಲ್ಲಿಕಾರ್ಜುನ.
ಅಂತಿಮ ಹಂತದ ನಿರ್ಮಾಣ ಕಾರ್ಯದಲ್ಲಿ ಸುಸಜ್ಜಿತವಾದ ಪೊಲೀಸ್ ಠಾಣೆ
ಸುಸಜ್ಜಿತವಾದ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು ಶೀಘ್ರದಲ್ಲಿಯೆ ಹೊಸ ಕಟ್ಟಡದಲ್ಲಿ ಕಾರ್ಯನಿರ್ವಸುವ ಭಾಗ್ಯ ಪೊಲೀಸರದ್ದಾಗಲಿದೆ.
ನಗರದಲ್ಲಿರುವ ನಗರ ಪೊಲೀಸ್ ಠಾಣೆಗೆ ಸ್ವಂತ ಕಟ್ಟಡವಿಲ್ಲದೆ ಹಲವು ವರ್ಷಗಳಿಂದಲೂ ಮಳೆ ಬಂದರೆ ಸಿಮೆಂಟು ಶೀಟುಗಳ ಮೇಲ್ಚಾವಣಿಯಿಂದ ಮಳೆ ನೀರು ಸುರಿಯುವಂತ ಹಳೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿ ನಾಗರೀಕರಿಗೆ ಮಾತ್ರವಲ್ಲ ಸ್ವತಃ ಪೊಲೀಸರಿಗೆ ಮೂಲ ಸೌಕರ್ಯಗಳಿಲ್ಲದೆ ಪರದಾಡುವಂತಾಗಿತ್ತು.
ಆದರೆ ಇದೀಗ ನಗರದ ದಿಬ್ಬೂರಹಳ್ಳಿ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಭಾಗ ಇರುವ ಪೊಲೀಸ್ ವಸತಿ ಗೃಹಗಳ ಆವರಣದಲ್ಲಿಯೆ ಹೊಸ ಪೊಲೀಸ್ ಠಾಣೆಯ ಕಟ್ಟಡ ನಿರ್ಮಾಣ ಕಾರ್ಯ ಬಹುತೇಕ ಮುಗಿದಿದ್ದು ಶೀಘ್ರದಲ್ಲಿಯೆ ಅಲ್ಲಿಗೆ ಪೊಲೀಸ್ ಠಾಣೆ ಸ್ಥಳಾಂತರವಾಗಲಿದೆ.
ಪೊಲೀಸ್ ವಸತಿ ಗೃಹ ನಿರ್ಮಾಣ ಮಂಡಳಿಯಿಂದ ಬಹುಲಕ್ಷ ವೆಚ್ಚದಲ್ಲಿ ಒಂದಸ್ತಿನ ಸುಸಜ್ಜಿತ ಪೊಲೀಸ್ ಠಾಣೆಯ ಕಟ್ಟಡ ನಿರ್ಮಾಣವಾಗುತ್ತಿದ್ದು, ಆ ಕಟ್ಟಡದಲ್ಲಿ ನಗರ ಠಾಣೆ ಅಥವಾ ಗ್ರಾಮಾಂತರ ಠಾಣೆಯಲ್ಲಿ ಯಾವುದು ಅಲ್ಲಿ ಕಾರ್ಯನಿರ್ವಹಿಸಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
‘ಹೊಸ ಪೊಲೀಸ್ ಠಾಣೆ ಕಟ್ಟಡ ಕಾಮಗಾರಿ ಶೇ ೯೦ರಷ್ಟು ಮುಗಿದಿದ್ದು ಇನ್ನುಳಿದ ಭಾಗದ ಕಾಮಗಾರಿ ಶೀಘ್ರದಲ್ಲಿಯೆ ಮುಗಿಯಲಿದೆ. ಅಲ್ಲಿಗೆ ನಗರ ಅಥವಾ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಯಾವುದು ಸ್ಥಳಾಂತರವಾಗಲಿದೆ ಎಂದು ಇನ್ನೂ ನಿರ್ಧಾರವಾಗಿಲ್ಲ. ಕಟ್ಟಡ ನಿರ್ಮಾಣ ಪೂರ್ತಿಯಾದ ನಂತರ ಕಟ್ಟಡವನ್ನು ನಮ್ಮ ಇಲಾಖೆಗೆ ಹಸ್ತಾಂತರಿಸಲಿದ್ದಾರೆ. ಆನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಕಟ್ಟಡಕ್ಕೆ ಯಾವ ಠಾಣೆಯನ್ನು ಸ್ಥಳಾಂತರ ಮಾಡಬೇಕು ಹಾಗೂ ಯಾವಾಗ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಬೇಕೆಂಬ ಎಲ್ಲ ವಿಚಾರಗಳನ್ನು ನಿರ್ಧರಿಸಲಿದ್ದಾರೆ. ಯಾವುದೆ ಠಾಣೆ ಕಾರ್ಯನಿರ್ವಹಿಸಿದರೂ ಸರಿಯೆ ಅಲ್ಲಿ ಪೊಲೀಸರಿಗೆ ಹಾಗೂ ಠಾಣೆಗೆ ಕೆಲಸ ಕಾರ್ಯ, ಪ್ರಕರಣಗಳ ಸಂಬಂಧ ಬರುವ ನಾಗರಿಕರಿಗೂ ಮೂಲ ಸೌಲಭ್ಯಗಳು ಸಿಗಲಿವೆ’ ಎನ್ನುತ್ತಾರೆ ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಲ್.ಶ್ರೀನಿವಾಸಮೂರ್ತಿ.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ವತಿಯಿಂದ ಮನೆಮನೆ ಕವಿಗೋಷ್ಠಿ
‘ಏಳಿ ಕನ್ನಡಿಗರೇ ಎದ್ದೇಳಿ. ಜಾಗೃತರಾಗಿ ಸಿಡಿದೇಳಿ, ಬೇಡಬಂದಿಹರಿಲ್ಲಿ ಪ್ರಭುಗಳಾಗತಿಹರು, ಕರುನಾಡ ಸಿರಿ ಸಂಪದವ ದೋಚುತಿಹರು, ಛಲಬೇಕು ಬಲಬೇಕು ಗೆಲಬೇಕು ನಾವಿನ್ನು, ಒಗ್ಗೂಡಿ ಕರುನಾಡ ಸೋದರ ಸೋದರಿಯರೆ ತಾವಿನ್ನು, ಸಾಕಿನ್ನು ಕ್ಷಮೆಯು, ಸಾಕಿನ್ನು ದಯೆಯು, ಕರುನಾಡ ರಕ್ಷಣೆಯ ನಮ್ಮಯ ಗುರಿಯು’ ಎಂದು ಆವೇಷಭರಿತರಾಗಿ ನಾಡಿನ ರಕ್ಷಣೆಯ ಬಗ್ಗೆ ದೇವರಮಳ್ಳೂರು ಚನ್ನಕೃಷ್ಣ ಕವನ ವಾಚಿಸಿದರು.
ನಗರದ ಮುತ್ತೂರು ಬೀದಿಯ ಸುಂದರಾಚಾರಿ ಅವರ ಮನೆಯಲ್ಲಿ ಬುಧವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಮನೆಮನೆ ಕವಿಗೋಷ್ಠಿಯಲ್ಲಿ ಕವಿಗಳು ಕವನಗಳನ್ನು ಓದಿದರು.
‘ಬಡತನ ನಿವಾರಣೆಗಾಗಿ ಅಕ್ಕಿಭಾಗ್ಯ ಯೋಜನೆ, ಹಸಿವು ಇಂಗಿಸಲು ಅನ್ನಭಾಗ್ಯ ಯೋಜನೆ, ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಅಕ್ಷರ ದಾಸೋಹಭಾಗ್ಯ ಯೋಜನೆ, ಯುವಕ ಯುವತಿಯರ ಜೀವನಕ್ಕೆ ತಾಳಿಭಾಗ್ಯ ಯೋಜನೆ, ಹುಟ್ಟಿದ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆ, ಜನಸಾಮಾನ್ಯರಿಗೆ ಈ ಎಲ್ಲಾ ಭಾಗ್ಯಗಳನ್ನೂ ಸವಿಯುವುದೇ ದೊಡ್ಡ ಸೌಭಾಗ್ಯ ಯೋಜನೆ’ ಎಂದು ಸರ್ಕಾರದ ಭಾಗ್ಯ ಯೋಜನೆಯ ಬಗ್ಗೆ ವಿ.ಕೃಷ್ಣ ಕವನ ಓದಿದರು.
‘ನಮ್ಮ ಮನೆಯ ಮುಂದಿಹುದು ಪಾರಿಜಾತ ಬ್ರಹ್ಮಕಮಲ ಮರುಗ ದವನ ಗರಿಕೆ ಪತ್ರೆ ತುಳಸಿ ಬೃಂದಾವನವು, ನಕ್ಷತ್ರದಂತಿಹ ಪಾರಿಜಾತವು, ಚಂದ್ರಮನಂತಿಹ ಬ್ರಹ್ಮಕಮಲವು, ಸುವಾಸಿತ ಪತ್ರೆಗಳಿಂದೊಡಗೂಡಿ ಬೃಂದಾವನದಿಹ ಶ್ರೀಕೃಷ್ಣನ ಪೂಜೆಗೆ ಕಾದಿಹವು’ ಎಂದು ಮನೆಯ ಮುಂದಿನ ಹೂದೋಟದ ಸುವಾಸನೆಯ ಘಮಲನ್ನು ಶ್ಯಾಮಸುಂದರ್ ವರ್ಣಿಸಿದರು.
‘ಅಮ್ಮನ ಮಮತೆ’, ‘ಮನಸ್ಸು ಮತ್ತು ನಾನು’, ‘ನೇಪಾಳದ ದುರಂತ’, ‘ಕನಸು’ ಮುಂತಾದ ವೈವಿದ್ಯಮಯ ವಸ್ತು ವಿಷಯಗಳನ್ನೊಳಗೊಂಡ ಕವನಗಳನ್ನು ಕವಿಗಳು ಓದಿದರೆ, ಕೆಲವರು ತಮ್ಮ ರಚನೆಯ ಕವನವನ್ನು ರಾಗಕಟ್ಟಿ ಹಾಡಿದರು.
ಮನೆಮನೆ ಕವಿಗೋಷ್ಠಿಯನ್ನು ಉದ್ಘಾಟಿಸಿದ ಶಿಕ್ಷಣ ಸಂಯೋಜಕ ಬಿ.ವಿ.ಮಂಜುನಾಥ್,‘ಈ ರೀತಿಯ ಉತ್ತಮ ಕವನಗಳು ಕೇವಲ ನಾಲ್ಕು ಗೋಡೆಗಳ ನಡುವೆ ಕೆಲವೇ ಜನರ ಆಲಿಸುವಿಕೆಗೆ ಸೀಮಿತವಾಗಬಾರದು. ಇವನ್ನು ನಾನು ಪುಸ್ತಕರೂಪಕ್ಕೆ ತರುವೆ. ಮುಂದೆ ನಡೆಯುವ ಕವಿ ಗೋಷ್ಠಿಯ ಕವನಗಳನ್ನೂ ಪುಸ್ತಕ ರೂಪಕ್ಕೆ ತನ್ನಿ. ತಾಲ್ಲೂಕು ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲಾ ಕವನಗಳಲ್ಲಿ ಆಯ್ದು ಕೆಲವನ್ನು ಪುಸ್ತವನ್ನಾಗಿಸಿ’ ಎಂದು ಸಲಹೆ ನೀಡಿದರು.
ಕವಿಗಳಾದ ಕಾಶಿನಾಥ್, ಸುಂದರಾಚಾರಿ, ಮಂಜುನಾಥ, ಹೇಮಸುಂದರ್, ವಿ.ಕೃಷ್ಣ, ಶ್ಯಾಮಸುಂದರ್, ಶ್ರೀನಿವಾಸ್, ರಾಮಕೃಷ್ಣ, ಚನ್ನಕೃಷ್ಣ, ಮಾಲತಿ, ರಾಜೇಶ್ವರಿ, ವೆಂಕಟೇಶಪ್ಪ, ವೇಣು, ಎಸ್.ವಿ.ನಾಗರಾಜರಾವ್, ಜಯಶ್ರೀ, ಶಂಕರಣ್ಣ, ವಿನಾಯಕ ಭಾಗವಹಿಸಿದ್ದರು. ತಾಲ್ಲೂಕು ಕ.ಸಾ.ಪ ಅಧ್ಯಕ್ಷ ಕೃ.ನಾ.ಶ್ರೀನಿವಾಸ್, ನಂದೀಶ್ ಹಾಜರಿದ್ದರು.
ಎಸ್.ಎಸ್.ಎಲ್.ಸಿ. ಪರೀಕ್ಷೆಯ ಉತ್ತರಪತ್ರಿಕೆಗಳ ಮರುಮೌಲ್ಯಮಾಪನದ ನಂತರ ತಾಲ್ಲೂಕಿಗೆ ಮೂರನೇ ಸ್ಥಾನ
ಎಸ್.ಎಸ್.ಎಲ್.ಸಿ. ಪರೀಕ್ಷೆಯ ಉತ್ತರಪತ್ರಿಕೆಗಳ ಮರುಮೌಲ್ಯಮಾಪನದ ನಂತರ ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ನವೋದಯ ಪ್ರೌಢಶಾಲೆಯ ವಿದ್ಯಾರ್ಥಿನಿ ಕೆ.ಯಶಸ್ವಿನಿ ೬೧೨ ಅಂಕಗಳನ್ನು ಪಡೆದು ಶಿಡ್ಲಘಟ್ಟ ತಾಲ್ಲೂಕಿಗೆ ಮೂರನೇ ಸ್ಥಾನ ಪಡೆದಿದ್ದಾಳೆ.
ಕನ್ನಡ ಮತ್ತು ವಿಜ್ಞಾನ ವಿಷಯಗಳಲ್ಲಿ ಮರುಮೌಲ್ಯಮಾಪನದ ನಂತರ ಕನ್ನಡದಲ್ಲಿ ೪ ಅಂಕಗಳು ಹೆಚ್ಚಾಗಿ ೧೨೫ಕ್ಕೆ ೧೨೫ ಅಂಕಗಳನ್ನು ಗಳಿಸಿದ್ದಾಳೆ. ವಿಜ್ಞಾನ ವಿಷಯದಲ್ಲಿ ೧೨ ಅಂಕಗಳು ಹೆಚ್ಚಾಗಿ ೯೭ ಅಂಕಗಳನ್ನು ಗಳಿಸಿದ್ದಾಳೆ.
ಚೀಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಪರಿಸರ ದಿನ ಆಚರಣೆ
ತಾಲ್ಲೂಕಿನ ಚೀಮಂಗಲ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ಶಾಲೆಯ ಜೆ.ಸಿ. ಬೋಸ್ ಹಸಿರು ಪಡೆ (ಇಕೋ ಕ್ಲಬ್) ವತಿಯಿಂದ ಪರಿಸರ ದಿನವನ್ನು ವಿಶೇಷವಾಗಿ ಆಚರಿಸಲಾಯಿತು.
ಪರಿಸರ ದಿನಾಚರಣೆ ಅಂಗವಾಗಿ ಶಾಲೆಯ ಆವರಣದಲ್ಲಿ ಬಾದಾಮಿ ಸಸಿಗಳನ್ನು ನೆಡುವ ಕಾರ್ಯಕ್ರಮ ಮತ್ತು ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಶಿವಶಂಕರ್ ಮಾತನಾಡಿ, ಪರಿಸರ ದಿನಾಚರಣೆಯು ಒಂದು ದಿನಕ್ಕೆ ಸೀಮಿತವಾಗದೆ, ಜೀವನ ಪರ್ಯಂತ ದಿನ ನಿತ್ಯ ಅನುಸರಿಸಬೇಕಾದ ಕಾಯಕ ಎಂದು ತಿಳಿಸಿದರು.
ವಿಜ್ಞಾನ ಶಿಕ್ಷಕ ಬಿ.ಸಿ.ದೊಡ್ಡನಾಯ್ಕ ಅವರು ಪರಿಸರದ ಅಳಿವು -ಉಳಿವು ಸಕಲ ಜೀವನ ಸಂಕುಲದ ಅಸ್ತಿತ್ವದ ಪ್ರಶ್ನೆಯಾಗಿದೆ ಎಂದು ವಿವರಿಸಿದರು.
ವಿದ್ಯಾರ್ಥಿಗಳು ಶಾಲಾ ಆವರಣವನ್ನು ಸ್ವಚ್ಛಗೊಳಿಸಿ ಸಸಿಗಳನ್ನು ನೆಟ್ಟು, ಈಗಾಗಲೇ ಬೆಳೆದಿರುವ ಗಿಡಗಳ ಪಾತಿ ಸರಿಪಡಿಸಿ, ಗೊಬ್ಬರ ಹಾಕಿ ನೀರು ಹಾಕಿದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಎಚ್.ಎಸ್.ವಿಠ್ಠಲ್, ನವೀನ್ ಕುಮಾರ್, ಶ್ರೀನಿವಾಸ್, ದೊಡ್ಡನಾಯ್ಕ, ಶಿವಕುಮಾರ್, ಸವಿತ, ಭವ್ಯ ಹಾಜರಿದ್ದರು.
ಪೊಲೀಸರ ತಡೆಯ ನಡುವೆಯೂ ರೈಲು ರೋಕೋ ನಡೆಸಿದ ರೇಷ್ಮೆ ಬೆಳೆಗಾರರು
‘ರೈತ ವಿರೋಧಿಗಳಿಗೆ ಧಿಕ್ಕಾರ’ ಎಂದು ಘೋಷಣೆ ಕೂಗುತ್ತಾ ರೈತ ಮುಖಂಡರು ಬಿಗಿ ಪೊಲೀಸ್ ಬಂದೋಬಸ್ತನ್ನು ಲೆಕ್ಕಿಸದೆ, ತಡೆಯಲು ಬಂದ ಪೊಲೀಸರನ್ನು ತಳ್ಳಿಕೊಂಡು ಹೋಗಿ ಚಿಂತಾಮಣಿ ಕಡೆಯಿಂದ ಬಂದ ರೈಲನ್ನು ತಡೆದು ಬ್ಯಾನರ್ ಕಟ್ಟುವಲ್ಲಿ ಯಶಸ್ವಿಯಾದರು.
ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ಸೇರಿದ್ದ ನೂರಾರು ಮಂದಿ ರೈತರು ಮತ್ತು ರೀಲರುಗಳು ರೇಷ್ಮೆ ಗೂಡಿನ ಬೆಲೆ ಕುಸಿದಿದ್ದ ಪರಿಣಾಮ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ರೈತರೊಂದಿಗೆ ಪೊಲೀಸರ ವಾಗ್ವಾದ ನಡೆಯಿತು. ‘ಬೇಕಿದ್ದರೆ ಮನವಿ ಪತ್ರ ಕೊಡಿ. ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ. ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟಿಸುವಂತಿಲ್ಲ. ಸಾರ್ವಜನಿಕರಿಗೆ ತೊಂದರೆ ಕೊಡಬಾರದು’ ಎಂದ ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸ ಮೂರ್ತಿ ಅವರೊಂದಿಗೆ ರೈತರು ವಾದಕ್ಕಿಳಿದರು. ‘ರೇಷ್ಮೆ ಗೂಡಿನ ಬೆಲೆ ಕುಸಿತದಿಂದ ತಾಲ್ಲೂಕಿನಾದ್ಯಂತ ರೇಷ್ಮೆ ಉದ್ದಿಮೆಯನ್ನು ನಂಬಿರುವವರು ಸಂಕಷ್ಟದಲ್ಲಿರುವಾಗ ನಮ್ಮನ್ನು ಆಳುವ ಸರ್ಕಾರಕ್ಕೆ ನಮ್ಮ ನೋವನ್ನು ತಿಳಿಸಲು ಇದು ಏಕೈಕ ಮಾರ್ಗ. ವಿದೇಶಿ ರೇಷ್ಮೆಯ ಆಮದು ಸುಂಕವನ್ನು ಕಡಿತಗೊಳಿಸುವ ಮೂಲಕ ಕೇಂದ್ರ ಸರ್ಕಾರ ಸ್ಥಳೀಯ ರೇಷ್ಮೆ ಉದ್ದಿಮೆಯನ್ನು ನಾಶ ಮಾಡಲು ಹೊರಟಿದೆ. ರೈತರನ್ನು ಬೆಂಬಲಿಸದ ಸರ್ಕಾರಕ್ಕೆ ನಾವು ಧಿಕ್ಕಾರ ಹೇಳುತ್ತೇವೆ. ರೇಷ್ಮೆಯನ್ನು ನಂಬಿ ರೈತರು, ರೀಲರುಗಳು, ಟ್ವಿಸ್ಟರುಗಳು, ಕೂಲಿ ಕಾರ್ಮಿಕರು ಸೇರಿದಂತೆ ಲಕ್ಷಾಂತರ ಮಂದಿ ಬದುಕು ಅತಂತ್ರವಾಗಿದೆ. ಜನರು ಬೀದಿಗೆ ಬೀಳುವ ಪರಿಸ್ಥಿತಿ ಉಂಟಾಗಿದೆ’ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಕೋಲಾರದಿಂದ ಚಿಂತಾಮಣಿ ಮಾರ್ಗವಾಗಿ ರೈಲು ಬರುತ್ತಿದ್ದಂತೆಯೇ ರೈತರು ರೈಲನ್ನು ತಡೆಯದಂತೆ ಪೊಲೀಸರು ಸರ್ಪಗಾವಲು ಹಾಕಿದರು. ಘೋಷಣೆಗಳನ್ನು ಕೂಗುತ್ತಾ ರೈತರು ‘ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ’ಯ ಬ್ಯಾನರ್ ಹಿಡಿದು ಪೊಲೀಸರನ್ನು ತಳ್ಳಿಕೊಂಡು ರೈಲಿನ ಮುಂದೆ ಸಾಗಿ ಹಳಿಗಳ ಮೇಲೆ ದುಮುಕಿ ರೈಲಿಗೆ ಅಡದ್ಡವಾಗಿ ನಿಂತು ಘೋಷಣೆಗಳನ್ನು ಕೂಗಿದರು.
ಸಭೆ:
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಮಂಗಳವಾರ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆಯ ವತಿಯಿಂದ ಬೆಲೆ ಕುಸಿದಿರುವ ರೇಷ್ಮೆ ಗೂಡಿನ ಪರಿಣಾಮದ ಬಗ್ಗೆ ಚರ್ಚಿಸಲು ಸಭೆಯನ್ನು ಆಯೋಜಿಸಲಾಗಿತ್ತು.
ವಾಣಿಜ್ಯ ಉದ್ದಿಮೆಯಾದ ರೇಷ್ಮೆಯನ್ನು ನಂಬಿ ತಾಲ್ಲೂಕಿನಾದ್ಯಂತ ಲಕ್ಷಾಂತರ ಕುಟುಂಬಗಳು ಬದುಕುತ್ತಿದ್ದು, ಒಂದು ಕೆಜಿ ರೇಷ್ಮೆ ಗೂಡಿಗೆ 120 ರೂಗಳ ವರೆಗೆ ಬೆಲೆ ಕುಸಿದಿದ್ದು, ಇದನ್ನು ನಂಬಿದವರ ಬದುಕು ಅತಂತ್ರವಾಗಿದೆ. ಈ ಬಗ್ಗೆ ಹಲವು ಬಾರಿ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಕೇಂದ್ರ ಸಚಿವರಿಗೆ ಮನವಿಯನ್ನು ಸಲ್ಲಿಸಿದ್ದರೂ ರೇಷ್ಮೆ ಹಿತರಕ್ಷಣೆಗಾಗಿ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಸರ್ಕಾರ ವಿಫಲಗೊಂಡಿದೆ. ರೈತರು ಕಷ್ಟಪಟ್ಟು ಬೆಳೆದ ರೇಷ್ಮೆ ಗೂಡನ್ನು ಗಲೀಜು ಹಾಗೂ ಅವ್ಯವಸ್ಥೆಯಿರುವ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ನೆಲದ ಮೇಲೆ ಹಾಕುವ ಪರಿಸ್ಥಿತಿಯಿದೆ. ಕೋಟ್ಯಾಂತರ ಆದಾಯ ಸರ್ಕಾರಕ್ಕೆ ಈ ಮಾರುಕಟ್ಟೆಯಿಂದ ಬಂದರೂ ಇಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ರೇಷ್ಮೆ ಉದ್ದಿಮೆಯ ಸಮಸ್ಯೆಯನ್ನು ಬಗೆಹರಿಸಲು ಒತ್ತಾಯಿಸಿ ಚಿಕ್ಕಾಬಳ್ಳಾಪುರ ಎಸ್.ಪಿ. ಕಚೇರಿಯ ಬಳಿ ರಾಷ್ಟ್ರೀಯ ಹೆದ್ದಾರಿಯನ್ನು ಜೂನ್ 20 ರಂದು ಬಂದ್ ಮಾಡಿ ಪ್ರತಿಭಟಿಸಲು ತೀರ್ಮಾನಿಸಲಾಯಿತು. ಸರ್ಕಾರಕ್ಕೆ ನಮ್ಮ ನೋವು ತಿಳಿಯಬೇಕಿದ್ದರೆ ರೈಲನ್ನು ಮಂಗಳವಾರ ತಡೆದು ಪ್ರತಿಭಟಿಸಲು ಒಕ್ಕೊರಲಿನಿಂದ ತೀರ್ಮಾನಿಸಿ ಅದರಂತೆ ರೈಲ್ ರೋಕೋ ನಡೆಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಎಸ್.ಎಂ.ನಾರಾಯಣಸ್ವಾಮಿ, ಯಲುವಳ್ಳಿ ಸೊಣ್ಣೇಗೌಡ, ಮಳ್ಳೂರು ಹರೀಶ್, ಅಬ್ಲೂಡು ಆರ್.ದೇವರಾಜ್, ಮಳಮಾಚನಹಳ್ಳಿ ದೇವರಾಜ್, ಮಂಜುನಾಥ್, ಎಚ್.ಜಿ.ಗೋಪಾಲಗೌಡ, ರಾಮಚಂದ್ರಪ್ಪ, ವೈ.ರಾಮಕೃಷ್ಣಪ್ಪ, ಅಬ್ದುಲ್ ಅಜೀಜ್, ಮುನಿನಂಜಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಅಪ್ರಾಪ್ತ ವಯಸ್ಕರನ್ನು ದುಡಿಸುವುದು ಸಾಮಾಜಿಕವಾಗಿ ದುಷ್ಪರಿಣಾಮ ಬೀರಲಿದೆ
ಅಪ್ರಾಪ್ತ ವಯಸ್ಕರನ್ನು ಕಾರ್ಖಾನೆ ಇನ್ನಿತರೆ ಕಡೆ ದುಡಿಮೆ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಕೇವಲ ಕಾನೂನು ದೃಷ್ಟಿಯಿಂದ ಮಾತ್ರವಲ್ಲ ಸಾಮಾಜಿಕವಾಗಿಯೂ ದುಷ್ಪರಿಣಾಮ ಬೀರಲಿದೆ ಎಂದು ಜೆಎಂಎಫ್ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಜಿ.ಅನಿತ ಅಭಿಪ್ರಾಯಪಟ್ಟರು.
ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ಆಡಳಿತ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ‘ವಿಶ್ವ ಬಾಲಕಾರ್ಮಿಕರ ವಿರೋಧಿ ದಿನಾಚರಣೆ’ಯನ್ನು ಸಸಿ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಬಾಲಕರನ್ನು ಕಾರ್ಖಾನೆಗಳಲ್ಲಿ ದುಡಿಮೆ ನೇಮಿಸಿಕೊಳ್ಳುವುದು ಕಾನೂನು ದೃಷ್ಠಿಯಲ್ಲಿ ಅಪರಾಧ. ಬಾಲಕರನ್ನು ನೇಮಿಸಿಕೊಳ್ಳುವುದು ಎಷ್ಟು ತಪ್ಪೋ ದುಡಿಮೆಗೆ ದೂಡುವುದು ಕೂಡ ಅಷ್ಟೇ ಅಪರಾಧ. ನೇಮಕ ಮಾಡಿಕೊಳ್ಳುವ ಮಾಲೀಕರು ಹಾಗೂ ಅದಕ್ಕೆ ಅವಕಾಶ ಕೊಡುವ ಪೋಷಕರೂ ಸಹ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ ಎಂದರು.
ಬಾಲ ಕಾರ್ಮಿಕ ಪದ್ಧತಿಗೆ ಬಡತನ, ಅನಕ್ಷರತೆ, ಮೂಢನಂಬಿಕೆ ಇನ್ನಿತರೆ ಏನೇ ಕಾರಣಗಳಿರಬಹದು. ಅವೆಲ್ಲವನ್ನೂ ಮೀರಿ ನಾವು ನೀವೆಲ್ಲರೂ ಸೇರಿ ಈ ಅನಿಷ್ಠ ಪದ್ದತಿಯನ್ನು ನಿರ್ನಾಮ ಮಾಡಲು ಮುಂದಾಗಬೇಕಿದೆ. ಈ ಪದ್ಧತಿಯನ್ನು ಕೇವಲ ಕಾನೂನಿಂದ ನಿಯಂತ್ರಿಸಲು ಸಾಧ್ಯವಿಲ್ಲ.
ಈ ಸಮಾಜದ ಎಲ್ಲರೂ ಕೈ ಜೋಡಿಸಿ ಅನಿಷ್ಠ ಪದ್ದತಿಗೆ ತಿಲಾಂಜಲಿ ಇಡಬೇಕಿದೆ. ಈ ದೇಶದ ಭವಿಷ್ಯದ ಪ್ರಜೆಗಳನ್ನು ಉತ್ತಮವಾಗಿ ರೂಪಿಸಲು ಎಲ್ಲರೂ ಮುಂದಾಗಬೇಕಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ಮಾತನಾಡಿ, ಬಾಲ ಕಾರ್ಮಿಕ ಪದ್ಧತಿ, ಜೀತ ಪದ್ಧತಿ, ವರದಕ್ಷಿಣೆ ಇನ್ನಿತರೆ ಹತ್ತಾರು ಮೂಢ ನಂಬಿಕೆಗಳು ಈ ಶತಮಾನದಲ್ಲೂ ಇನ್ನೂ ಆಚರಣೆಯಲ್ಲಿರುವುದು ನಾವು ನೀವೆಲ್ಲರೂ ತಲೆ ತಗ್ಗಿಸುವ ವಿಚಾರವಾಗಿದೆ ಎಂದರು.
ಸರ್ಕಾರವು ಈ ಎಲ್ಲ ಅನಿಷ್ಠ ಪದ್ಧತಿಗಳ ನಿರ್ಮೂಲನೆಗೆ ಕಾನೂನುಗಳನ್ನು ರೂಪಿಸಬಹುದು. ಕಾರ್ಯಾಂಗವು ಅದನ್ನು ಅನುಷ್ಠಾನಕ್ಕೂ ತರಬಹುದು. ಆದರೆ ಸಾರ್ವಜನಿಕವಾಗಿ ಈ ನಿಟ್ಟಿನಲ್ಲಿ ಅರಿವು, ಪ್ರಜ್ಞೆ ಮೂಡದಿದ್ದರೆ ಕಾನೂನುಗಳು ಕೇವಲ ಕಾಗದದ ಮೇಲೆ ಉಳಿದುಬಿಡುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಮಿಕ ನಿರೀಕ್ಷಕ ಎಚ್.ಎಂ.ಸೋಮಶೇಖರ್ ‘ಬಾಲಕಾರ್ಮಿಕರಿಗೆ ಇಲಾಖೆಯಿಂದ ಸಿಗುವ ಸೌಲಭ್ಯಗಳು’ ಕುರಿತು ವಿಷಯ ತಿಳಿಸಿದರು.
ಸರ್ಕಾರಿ ವಕೀಲ ಈ.ಡಿ.ಶ್ರೀನಿವಾಸ್, ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಮಂಜುಳ, ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ಕಾರ್ಯದರ್ಶಿ ವಿ.ಎಂ.ಬೈರಾರೆಡ್ಡಿ, ವಕೀಲರಾದ ಟಿ.ವಿ.ಚಂದ್ರೇಗೌಡ, ಸುಬ್ರಮಣಿ, ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ತಾಲ್ಲೂಕಿನಾದ್ಯಂತ ಗುಣಮಟ್ಟದ ಹಾಲಿನ ಉತ್ಪಾದನೆ ಆಗುತ್ತಿದೆ
ತಾಲ್ಲೂಕಿನಾದ್ಯಂತ ಉತ್ತಮವಾದ ಹಾಲಿನ ಉತ್ಪಾದನೆ ಆಗುತ್ತಿದ್ದು, ಹಾಲಿನಿಂದ ವಿವಿಧ ಬಗೆಯ ಉತ್ಪನ್ನಗಳನ್ನು ತಯಾರಿಸಿ, ಅವುಗಳ ಮಾರಾಟಕ್ಕೆ ಮಾರುಕಟ್ಟೆಯ ಸೌಲಭ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಮಾರಾಟ ಮಳಿಗೆಗಳನ್ನು ತೆರೆಯಲಾಗುತ್ತಿದೆ ಎಂದು ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಹೇಳಿದರು.
ತಾಲ್ಲೂಕಿನ ಜಂಗಮಕೋಟೆ ಕ್ರಾಸ್ನಲ್ಲಿ ಶುಕ್ರವಾರ ಜಂಗಮಕೋಟೆ ರೇಷ್ಮೆ ಬೆಳೆಗಾರರ, ರೈತರ ಸೇವಾ ಸಹಕಾರ ಸಂಘದ ವತಿಯಿಂದ ನೂತನವಾಗಿ ಆರಂಭಿಸಲಾಗುತ್ತಿರುವ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈಗಾಗಲೇ ನಗರ ಸೇರಿದಂತೆ ತಾಲ್ಲೂಕಿನ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ, ಮುಂದಿನ ದಿನಗಳಲ್ಲಿ ಎಚ್.ಕ್ರಾಸ್, ವೈ.ಹುಣಸೇನಹಳ್ಳಿ ಗೇಟ್, ಮುಂತಾದ ಕಡೆಗಳಲ್ಲಿಯೂ ಕೂಡಾ ಇಂತಹ ಮಾರಾಟಮಳಿಗೆಗಳನ್ನು ತೆರೆದು ಜನರಿಗೆ ಗುಣಮಟ್ಟದ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಒದಗಿಸಿಕೊಡಲಾಗುತ್ತಿದೆ ಎಂದರು.
ಕೋಲಾರ ಡೈರಿಯ ವ್ಯವಸ್ಥಾಪಕ ನಿರ್ದೇಶಕ ಡಾ.ಗೋಪಾಲ್ ಮಾತನಾಡಿ, ಚಿಕ್ಕಬಳ್ಳಾಪುರ, ಮತ್ತು ಕೋಲಾರ ಜಿಲ್ಲೆಗಳಲ್ಲಿ ಉತ್ಪಾದನೆಯಾಗುತ್ತಿರುವ ಹಾಲಿನ ಮೂಲಕ ಗುಣಮಟ್ಟದ ಪೌಷ್ಟಿಕಾಂಶಭರಿತವಾದ ಹಾಲಿನ ಪ್ಯಾಕೇಟ್ಗಳನ್ನು ತಯಾರಿಸಲಾಗುತ್ತಿದ್ದು, ದೇಶವನ್ನು ಕಾಯುವಂತಹ ಯೋಧರಿಗೂ ಕೂಡಾ ಈ ಹಾಲನ್ನು ಪೂರೈಕೆ ಮಾಡಲಾಗುತ್ತಿದೆ. ರೈತರು ಉತ್ತಮಗುಣಮಟ್ಟದ ಹಾಲನ್ನು ಪೂರೈಕೆ ಮಾಡಬೇಕು. ಹೆಚ್ಚಿನ ಪ್ರಮಾಣದಲ್ಲಿ ನಂದಿನ ಹಾಲಿನ ಉತ್ಪನ್ನಗಳನ್ನು ಖರೀದಿ ಮಾಡುವ ಮೂಲಕ ಹೆಚ್ಚಿನ ಪ್ರೊತ್ಸಾಹ ನೀಡಬೇಕು ಎಂದರು.
ಮರಾಟಮಳಿಗೆಯನ್ನು ಶಾಸಕ ಎಂ.ರಾಜಣ್ಣ ಉದ್ಘಾಟನೆ ಮಾಡಿದರು. ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ, ಎಸ್.ಎಫ್.ಸಿ.ಎಸ್ನ ಅಧ್ಯಕ್ಷ ರವಿಕುಮಾರ್, ಚನ್ನಕೃಷ್ಣಪ್ಪ, ಜೆ.ಎಂ.ವೆಂಕಟೇಶ್, ರಮೇಶ್, ನಂದಿನಿ ಹಾಲು ವಿವಿದ್ದೋದ್ದೇಶ ಸಹಕಾರ ಸಂಘದ ಉಪ ವ್ಯವಸ್ಥಾಪಕ ಹನುಮಂತರಾಯಪ್ಪ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ರಕ್ತದಾನದಿಂದ ಮತ್ತೊಬ್ಬರ ಜೀವವನ್ನು ಸಾವಿನಿಂದ ತಪ್ಪಿಸಿದಂತಾಗುತ್ತದೆ
ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ಹೃಯದ ಸಂಬಂಧಿ ಖಾಯಿಲೆಗಳನ್ನು ತಡೆಗಟ್ಟುವುದರ ಜೊತೆಗೆ ಶಾರೀರಿಕವಾಗಿಯೂ ಸದೃಢರಾಗಲು ಸಹಕಾರಿಯಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಬಿ.ಕಾವೇರಿ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಶುಕ್ರವಾರ ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ, ಭಾರತೀಯ ರೆಡ್ಕ್ರಾಸ್ ಸಂಸ್ಥೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ತಾಲ್ಲೂಕು ಆಡಳಿತ, ಹಾಗು ವಿವಿಧ ಸ್ವಯಂ ಸೇವಾ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದ್ದ ಉಚಿತ ರಕ್ತದಾನ ಶಿಬಿರವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಪುರುಷರು ಒಂದು ವರ್ಷದಲ್ಲಿ ನಾಲ್ಕು ಬಾರಿ ರಕ್ತದಾನವನ್ನು ಮಾಡಬಹುದಾಗಿದ್ದು, ಸ್ತ್ರೀಯರು ಮೂರು ಬಾರಿ ರಕ್ತದಾನ ಮಾಡಬಹುದಾಗಿರುತ್ತದೆ. ರಕ್ತದಾನವನ್ನು ಒಂದು ಪ್ರವೃತ್ತಿಯಾಗಿ ಬೆಳೆಸಿಕೊಳ್ಳಬೇಕು, ರಕ್ತದಾನದಿಂದ ಮತ್ತೊಬ್ಬರ ಜೀವವನ್ನು ಸಾವಿನಿಂದ ತಪ್ಪಿಸಿದಂತಾಗುತ್ತದೆ. ವೈಜ್ಞಾನಿಕವಾಗಿ ಹೆಚ್ಚು ಮುಂದುವರೆದಿದ್ದರೂ ಕೂಡಾ ರಕ್ತವನ್ನು ಕೃತಕವಾಗಿ ಉತ್ಪಾದನೆ ಮಾಡಲು ಸಾಧ್ಯವಿಲ್ಲ. ಅದು ಪ್ರಕೃತಿದತ್ತವಾಗಿಯೆ ಬರುವಂತಹ ಬೆಲೆ ಕಟ್ಟಲಾಗದಂತಹ ಸಂಪತ್ತಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಿ ಜನತೆಯ ಜೀವ ಉಳಿಸಿ ಎಂದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ರಕ್ತದಾನದ ವಿಚಾರದಲ್ಲಿ ಬಹಳಷ್ಟು ಜನತೆಯಲ್ಲಿ ಮೂಢನಂಬಿಕೆಯಿದೆ. ರಕ್ತದಾನ ಮಾಡುವುದರಿಂದ ಜೀವಕ್ಕೆ ಹಾನಿಯಾಗುವುದಿಲ್ಲ, ಬದಲಿಗೆ ದೇಹದಲ್ಲಿ ಹೊಸ ಹೊಸ ರಕ್ತಕಣಗಳು ಉತ್ಪತ್ತಿಯಾಗುತ್ತವೆ. ಬಹಳಷ್ಟು ಮಂದಿ ಸಮಯಕ್ಕೆ ಸರಿಯಾಗಿ ರಕ್ತ ಸಿಗದೆ ಬಹಳಷ್ಟು ಮಂದಿ ಸಾವಿಗೀಡಾಗುತ್ತಿದ್ದು, ರಕ್ತದ ಕೊರತೆಯಿಂದಾ ಸಾವನ್ನಪ್ಪುತ್ತಿರುವಂತಹ ಜನತೆಯನ್ನು ಉಳಿಸುವ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ರಕ್ತದಾನ ಮಾಡಲು ಯುವಜನತೆ ಮುಂದಾಗಬೇಕು. ಪ್ರಪಂಚದಾದ್ಯಂತ ರೆಡ್ಕ್ರಾಸ್ ಸಂಸ್ಥೆಯ ಶಾಖೆಗಳಿದ್ದು, ಯಾವ ಶಾಖೆಯಲ್ಲಿ ಬೇಕಾದರೂ ರಕ್ತವನ್ನು ಪಡೆಯುವಂತಹ ಅವಕಾಶವಿರುವುದರಿಂದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯಾಧಿಕಾರಿ ಡಾ.ರಂಗಸ್ವಾಮಿ, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಮಾತನಾಡಿದರು.
ಈ ಸಂದರ್ಭದಲ್ಲಿ ೪೦ ಬಾರಿ ರಕ್ತದಾನ ಮಾಡಿದ ಕಂದಾಯ ಇಲಾಖೆಯ ಕೋಲಾರ ಉಪತಹಶೀಲ್ದಾರ್ ಕೆ.ಎನ್.ಎಂ. ಮಂಜುನಾಥ್, ಮತ್ತು ೨೬ ಬಾರಿ ರಕ್ತದಾನ ಮಾಡಿದ ಆರೋಗ್ಯ ಇಲಾಖೆಯ ಟಿ.ಟಿ.ನರಸಿಂಹಪ್ಪ, ಅಕ್ಕಲರೆಡ್ಡಿ ಮುಂತಾದವರನ್ನು ಸನ್ಮಾನಿಸಲಾಯಿತು.
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಾಂಜಿನೇಯ, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ, ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎನ್.ಕೆ.ಗುರುರಾಜ್, ವಿಜಯಮ್ಮ, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಯೋಗೀಶ್, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ವಿ.ಶ್ರೀರಾಮಯ್ಯ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್ಕುಮಾರ್ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಶ್ರೀ ಸರಸ್ವತಿ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿದ್ಯಾರ್ಥಿಗಳ ಜಾಥಾ
‘ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲ ಮಾಡಬೇಕು. ಪ್ರತಿಯೊಬ್ಬರೂ ಶಾಲೆಗೆ ಬರಬೇಕು. ಶಿಕ್ಷಣ ಪ್ರತಿಯೊಬ್ಬರ ಹಕ್ಕು’ ಎಂದು ಘೋಷಣೆ ಕೂಗುತ್ತಾ ನಗರದಲ್ಲಿ ಶ್ರೀ ಸರಸ್ವತಿ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿದ್ಯಾರ್ಥಿಗಳು ಜಾಥಾ ನಡೆಸಿದರು.
ನಗರದ ಟಿ.ಬಿ.ರಸ್ತೆಯಲ್ಲಿ ಬಸ್ ನಿಲ್ದಾಣದವರೆಗೂ ಜಾಥಾ ನಡೆಸಿದ ಮಕ್ಕಳು ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಮಕ್ಕಳನ್ನು ದುಡಿಮೆಗೆ ಹಚ್ಚಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

