ರಸಗೊಬ್ಬರಗಳನ್ನು ಮಾರಾಟಮಾಡುವಂತಹ ಯಾವುದೇ ಅಂಗಡಿಗಳಲ್ಲಿ ಎಂ.ಆರ್.ಪಿ. ದರಕ್ಕಿಂತ ಹೆಚ್ಚಾಗಿ ಹಣವನ್ನು ಪಡೆದುಕೊಂಡರೆ, ಇಲ್ಲವೇ ರಸಗೊಬ್ಬರಗಳಿದ್ದರೂ ವಿತರಣೆ ಮಾಡದಿರುವವರ ವಿರುದ್ಧ ದೂರು ನೀಡಿದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ದೇವೇಗೌಡ ಹೇಳಿದರು.
ನಗರದ ಕೃಷಿ ಸಹಾಯಕ ನಿರ್ದೇಶಕ ಕಚೇರಿಯಲ್ಲಿ ಬುಧವಾರ ಎಲ್ಲಾ ಹೋಬಳಿಗಳ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿಗೆ ಆಯೋಜನೆ ಮಾಡಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನಾಧ್ಯಂತ ಎಲ್ಲಾ ರೈತರುಗಳು ಮುಂಗಾರು ಪೂರ್ವ ಮಳೆಯಲ್ಲಿ ಮಾಗಿ ಉಳುಮೆಯನ್ನು ಮಾಡಿಕೊಂಡಿದ್ದು, ರೈತರುಗಳ ಅಗತ್ಯಕ್ಕೆ ತಕ್ಕಂತೆ ಬಿತ್ತನೆ ಬೀಜಗಳು ಹಾಗೂ ರಸಗೊಬ್ಬರಗಳು ವಿತರಣೆಯಾಗುವಂತೆ ಎಲ್ಲಾ ರೈತ ಸಂಪರ್ಕ ಕೇಂದ್ರಗಳ ಸಿಬ್ಬಂದಿ ಕ್ರಮವಹಿಸಬೇಕು. ರಸಗೊಬ್ಬರಗಳ ಮಾರಾಟದ ಅಂಗಡಿಗಳಲ್ಲಿ ಯೂರಿಯಾ ಸೇರಿದಂತೆ ರಸಗೊಬ್ಬರಗಳಿಗೆ ನಿಗದಿತ ಬೆಲೆಗಿಂತಲೂ ಹೆಚ್ಚಿನ ಬೆಲೆಯನ್ನು ತೆಗೆದುಕೊಳ್ಳುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿತ್ತು, ಈ ಬಾರಿ ಅಂತಹ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸಲಾಗುತ್ತದೆ, ರೈತರು ಕೂಡಾ ಅಂತಹ ಅಂಗಡಿಗಳ ವಿರುದ್ಧ ದೂರು ನೀಡಬಹುದಾಗಿದೆ.
ಇಲಾಖೆಯಿಂದ ರೈತರಿಗೆ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ರೈತ ಸಂಪರ್ಕ ಕೇಂದ್ರಗಳ ಮುಖಾಂತರ ದೊರಕಿಸಿಕೊಡಲು ಸಿಬ್ಬಂದಿ ಜವಾಬ್ದಾರಿಯಿಂದ ಕೆಲಸ ಮಾಡಬೇಕು, ಬಿತ್ತನೆ ಬೀಜಗಳು, ರಸಗೊಬ್ಬರಗಳನ್ನು ನಿಗದಿತ ಸಮಯದಲ್ಲಿ ಎಲ್ಲಾ ರೈತರಿಗೂ ಸಿಗುವಂತೆ ರೈತರಲ್ಲಿ ಸ್ಥಳೀಯವಾಗಿ ಜಾಗೃತಿಮೂಡಿಸಬೇಕು. ರೈತರು ಇಲಾಖೆಯಿಂದ ಸಿಗುವಂತೆ ಜಿಂಕ್, ಬೋರಾನ್, ಜಿಪ್ಸಂ, ಮುಂತಾದ ರಸಗೊಬ್ಬರಗಳನ್ನೂ ಪಡೆದುಕೊಂಡು ಭೂಮಿಗೆ ಹಾಕಿ ಫಲವತ್ತತೆಯನ್ನು ಹೆಚ್ಚಿಸಬೇಕು. ರಾಗಿ, ನೆಲೆಗಡಲೆ, ಮುಸುಕಿನಜೋಳ, ತೊಗರಿ, ಮುಂತಾದ ಬೆಳೆಗಳನ್ನು ಬೆಳೆಯಲು ರೈತರು ಸಿದ್ದತೆ ಮಾಡಿಕೊಂಡಿದ್ದು, ಈ ಬಾರಿ ಉತ್ತಮ ಗುಣಮಟ್ಟದ ಬೆಳೆಗಳನ್ನು ನಿರೀಕ್ಷಿಸಲಾಗಿದೆ. ಇಲಾಖೆಯ ಸಿಬ್ಬಂದಿಗಳು ಕಾಲ ಕಾಲಕ್ಕೆ ರೈತರುಗಳಿಗೆ ಅಗತ್ಯವಾಗಿರುವ ಮಾರ್ಗದರ್ಶನ ಹಾಗೂ ಸಲಹೆಗಳನ್ನು ನೀಡಬೇಕು ಎಂದರು.
ರೈತ ಸಂಪರ್ಕ ಕೇಂದ್ರಗಳ ಸಿಬ್ಬಂದಿಯಾದ ರಾಮಾಂಜಿನಪ್ಪ, ನಾಗೇಶ್, ಕೋನಪ್ಪರೆಡ್ಡಿ, ರಮೇಶ್, ಚಿಕ್ಕರೆಡ್ಡಿ, ಚಿನ್ನಾರೆಡ್ಡಿ, ವೆಂಕಟೇಶಪ್ಪ, ಲೊಕೇಶ್, ಲಕ್ಷ್ಮೀಪತಿ, ಶಂಕರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ರಸಗೊಬ್ಬರಗಳನ್ನು ಹೆಚ್ಚಿನ ದರಕ್ಕೆ ಮಾರಿದರೆ ಕ್ರಮ
ನಮ್ಮ ಕುಟುಂಬದಂತೆ ಶಾಲೆ ಎಂಬ ಭಾವ
ಶಾಲೆಯಲ್ಲಿ ಗ್ರಂಥಾಲಯ, ಕ್ರೀಡಾ ಕೊಠಡಿ, ಕಂಪ್ಯೂಟರ್ ಕೊಠಡಿ, ಶಾಲೆಯ ಮುಂದಿನ ಉದ್ಯಾನವನ, ನೀರಿನ ಉಸ್ತುವಾರಿ, ಶಿಸ್ತು, ಸಮಯಪಾಲನೆ, ಔಷಧಿ ಮುಂತಾದ ಹಲವು ಸಂಗತಿಗಳನ್ನು ಸದಾ ಗಮನಿಸಬೇಕಾಗುತ್ತವೆ.
ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಎಲ್ಲಾ ವಿಷಯಗಳಲ್ಲೂ ವಿದ್ಯಾರ್ಥಿಗಳೇ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಶಾಲೆಯು ತಮ್ಮ ಕುಟುಂಬದ ಹಾಗೆ ಎಂಬ ಭಾವನೆ ಬರುವಂತೆ ವಿದ್ಯಾರ್ಥಿಗಳಿಗೆ ಶಿಕ್ಷಕರು ವಿವಿಧ ಜವಾಬ್ದಾರಿಗಳನ್ನು ನೀಡುವುದರೊಂದಿಗೆ ಅವರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಶಾಲೆಯ ಆವರಣವಲ್ಲಿ ನೂರಕ್ಕೂ ಹೆಚ್ಚು ಗಿಡಗಳಿವೆ. ಶಾಲೆಯಲ್ಲಿ ನೂರು ಮಕ್ಕಳಿದ್ದಾರೆ. ಆಗಾಗ ನಡೆಯುವ ಕಂಪ್ಯೂಟರ್ ಮೂಲಕ ಪಠ್ಯಕ್ಕೆ ಸಂಬಂಧಿಸಿದ ಚಿತ್ರ ಪ್ರದರ್ಶನ, ಔಷಧಿ ವಿತರಣೆ, ಪ್ರತಿದಿನ ಬೇಕಾಗುವ ಆಹಾರ ಸಾಮಗ್ರಿ, ಶಿಸ್ತು, ಸಮಯಪಾಲನೆ, ಕುಡಿಯಲು ಹಾಗೂ ಶೌಚಾಲಯಕ್ಕೆ ಬೇಕಾಗುವ ನೀರಿನ ನಿರ್ವಹಣೆ, ಗೋಡೆ ಬರಹದ ಪತ್ರಿಕೆ ‘ಇಂಚರ’ದ ನಿರ್ವಹಣೆ ಮುಂತಾದ ಹಲವಾರು ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ.
ಆದರೆ ವಿವಿಧ ವಿಭಾಗಗಳ ಜವಾಬ್ದಾರಿಯನ್ನು ಹೊರಲು ವಿದ್ಯಾರ್ಥಿಗಳಲ್ಲಿ ಪೈಪೋಟಿ ಇರುವ ಕಾರಣ, ಒಂದೊಂದು ವಿಭಾಗಕ್ಕೂ ಒಂದೊಂದು ಖಾತೆ ಎಂದು ಹೆಸರಿಟ್ಟು ಈಚೆಗೆ ಶಾಲಾ ಮಂತ್ರಿ ಮಂಡಲದ ಚುನಾವಣೆಯನ್ನು ನಡೆಸಲಾಯಿತು. ಶಿಕ್ಷಣ ಮಂತ್ರಿ, ಆರೋಗ್ಯ ಮಂತ್ರಿ, ಆಹಾರ ಮಂತ್ರಿ, ಕಾನೂನು ಮಂತ್ರಿ, ಗ್ರಂಥಾಲಯ ಮಂತ್ರಿ, ಕ್ರೀಡಾ ಮಂತ್ರಿ, ಶಿಸ್ತು ಮತ್ತು ಜವಾಬ್ದಾರಿ, ಕಲೆ ಮತ್ತು ಸಂಸ್ಕೃತಿ, ನೀರಾವರಿ, ನೈರ್ಮಲ್ಯ, ಸಮಯಪಾಲನೆ ಮತ್ತು ಮುಖ್ಯಮಂತ್ರಿ ಎಂದು ವಿಂಗಡಿಸಲಾಗಿತ್ತು.
ತಮ್ಮ ಆಸಕ್ತ ವಿಷಗಳಿಗೆ ವಿದ್ಯಾರ್ಥಿಗಳು ಸ್ಪರ್ಧಿಸಿದರು. ನಾಮಪತ್ರಗಳನ್ನು ಸಲ್ಲಿಸಿದರು. ಕೆಲವರು ವಾಪಸ್ ಕೂಡ ಪಡೆದರು. ಚುನಾವಣೆಗೆ ಸ್ಪರ್ಧಿಸಿದವರು ತಮ್ಮ ಖಾತೆಯನ್ನು ಸಮರ್ಪಕವಾಗಿ ಹೇಗೆ ನಿರ್ವಹಿಸುತ್ತೇವೆಂದು ವಿವರಿಸಿ ಮತಯಾಚಿಸಿದರು. ವಿದ್ಯಾರ್ಥಿಗಳು ತಮ್ಮ ಆಯ್ಕೆಯನ್ನು ಸಾಲಾಗಿ ನಿಂತು ಮತದಾನ ಮಾಡುವ ಮೂಲಕ ತಿಳಿಸಿದರು.
‘ಶಾಲೆಯು ಮಕ್ಕಳಿಗೆ ಮನಸ್ಸಿನ ಹೊರಗಿರಬಾರದು. ಅವರ ಮನೆಯಂತೆ, ಕುಟುಂಬದಂತೆ ಅವರು ಪ್ರೀತಿಸಬೇಕು ಮತ್ತು ಪರಿಭಾವಿಸಬೇಕು. ಅದರೊಂದಿಗೆ ಶಾಲೆಯಲ್ಲಿ ಮಕ್ಕಳಿಗೆ ಎಲ್ಲ ವಿಷಯಗಳ ಬಗ್ಗೆಯೂ ತಿಳುವಳಿಕೆ ಕೂಡ ಇರಬೇಕು. ಗ್ರಂಥಾಲಯದ ನಿರ್ವಹಣೆಯಿಂದ ಔಷಧಿ, ನೀರಿನ ಬಗ್ಗೆಯೂ ಅವರಿಗೆ ಗೊತ್ತಾಗಬೇಕು. ಅವರಿಗೇ ಜವಾಬ್ದಾರಿ ನೀಡುವುದರಿಂದ ಪಠ್ಯಕ್ಕೆ ಹೊರತಾದ ವ್ಯವಹಾರ ಜ್ಞಾನ, ನಿರ್ವಹಣೆಯ ಕಲೆ ಅವರಿಗೆ ಸಿದ್ಧಿಸುತ್ತದೆ. ಹೆಣ್ಣುಮಕ್ಕಳೂ ಗಂಡುಮಕ್ಕಳ ಸಮನಾಗಿ ನಮ್ಮ ಶಾಲೆಯಲ್ಲಿ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದಾರೆ. ಶಾಲೆಯ ಕಾರ್ಯಕ್ರಮಗಳಲ್ಲಿ ಅವರೇ ಸ್ವಾಗತ, ನಿರೂಪಣೆ ನಡೆಸುತ್ತಾರೆ. ನಾವು ಮಾರ್ಗದರ್ಶನ ನೀಡುತ್ತಾ ಕೆಲವೊಮ್ಮ ಅವರ ಆಲೋಚನೆ, ದೂರದರ್ಶಿತ್ವಕ್ಕೆ ಬೆರಗಾಗುತ್ತೇವೆ’ ಎಂದು ಶಿಕ್ಷಕ ನಾಗಭೂಷಣ್ ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ‘ಪ್ರಾಚ್ಯಪ್ರಜ್ಞೆ ಕಾರ್ಯಕ್ರಮ’
ವಿದ್ಯಾರ್ಥಿಗಳು ಬಾಲ್ಯದಲ್ಲೇ ಐತಿಹಾಸಿಕ ಪ್ರಜ್ಞೆ ಬೆಳೆಸಿಕೊಂಡು ಅಪಾರ ಸಾಂಸ್ಕೃತಿಕ ಸಂಪತ್ತನ್ನು ಉಳಿಸಬೇಕು ಎಂದು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಕೆ.ಮಂಜುಳಾ ತಿಳಿಸಿದರು.
ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ‘ಪ್ರಾಚ್ಯಪ್ರಜ್ಞೆ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇತಿಹಾಸವನ್ನು ಮರೆತರೆ ಇತಿಹಾಸವನ್ನು ಸೃಷ್ಠಿಸಲು ಸಾಧ್ಯವಿಲ್ಲ. ನಮ್ಮ ಸಾಂಸ್ಕೃತಿಕ ಪರಂಪರೆಯು ಉತೃಷ್ಟವಾದುದು ಎಂದು ಹೇಳಿದರು.
ಮುತ್ತೂರು ಶಾಲೆಯ ಮುಖ್ಯ ಶಿಕ್ಷಕ ಆಂಜನೇಯ ಮಾತನಾಡಿ, ನಮ್ಮ ಮಹತ್ವದ ಸ್ಮಾರಕಗಳ ಅಧ್ಯಯನದಿಂದ ಗತಕಾಲದ ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಧಾರ್ಮಿಕ ಜೀವನವನ್ನು ತಿಳಿಯಬಹುದಾಗಿದೆ. ಅವುಗಳ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯದ ಪ್ರಾಚೀನ ಸ್ಮಾರಕಗಳ ಮೂರ್ತ ಮತ್ತು ಅಮೂರ್ತ ಪರಂಪರೆಯ ಸಂಪತ್ತಿನ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಪ್ರಬಂಧ, ರಸಪ್ರಶ್ನೆ, ಭಾಷಣ ಮತ್ತು ಚಿತ್ರಕಲೆ ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗೆ ನಡೆಸಲಾಯಿತು. ಪ್ರಥಮ ಬಹುಮಾನದ ಮೊತ್ತ 1000ರೂ, ದ್ವಿತೀಯ ಬಹುಮಾನದ ಮೊತ್ತ 500 ಮತ್ತು ತೃತೀಯ ಬಹುಮಾನದ ಮೊತ್ತ 200 ಎಂದು ಪ್ರಕಟಿಸಲಾಯಿತು.
ರಸಪ್ರಶ್ನೆ: ಎನ್.ಶಿವಕುಮಾರ್, ಸರ್ಕಾರಿ ಪ್ರೌಢಶಾಲೆ ಚೀಮಂಗಲ(ಪ್ರಥಮ), ಸಿ.ನವ್ಯ, ಸರ್ಕಾರಿ ಪ್ರೌಢಶಾಲೆ ಕುಂದಲಗುರ್ಕಿ(ದ್ವಿತೀಯ), ಡಿ.ವೆಂಕಟೇಶ್, ಎಸ್.ಆರ್.ಇ.ಟಿ ಪ್ರೌಢಶಾಲೆ(ತೃತೀಯ)
ಪ್ರಬಂಧ ಸ್ಪರ್ಧೆ: ಜಿ.ಎಸ್.ಮೋನಿಕಾ, ಸರ್ಕಾರಿ ಪ್ರೌಢಶಾಲೆ ದ್ಯಾವಪ್ಪನಗುಡಿ(ಪ್ರಥಮ), ನಯನಶ್ರೀ, ನವೋದಯ ನಡಿಪಿನಾಯಕನಹಳ್ಳಿ(ದ್ವಿತೀಯ), ವಿ.ಭವಾನಿ, ಸರ್ಕಾರಿ ಪ್ರೌಢಶಾಲೆ ಜಂಗಮಕೋಟೆ(ತೃತೀಯ)
ಭಾಷಣ ಸ್ಪರ್ಧೆ: ಬಿ.ರಾಗಿಣಿ, ನವೋದಯ ಪ್ರೌಢಶಾಲೆ(ಪ್ರಥಮ), ಕೆ.ವಿ.ವಂದನಾ, ಸರ್ಕಾರಿ ಪ್ರೌಢಶಾಲೆ ದ್ಯಾವಪ್ಪನಗುಡಿ(ದ್ವಿತೀಯ), ಹರಿಕೃಷ್ಣ, ಸರ್ಕಾರಿ ಪ್ರೌಢಶಾಲೆ ಚೀಮಂಗಲ(ತೃತೀಯ)
ಚಿತ್ರಕಲಾ ಸ್ಪರ್ಧೆ: ವೈ.ಎನ್.ಮುರಳಿ, ಸರ್ಕಾರಿ ಪ್ರೌಢಶಾಲೆ ಜಂಗಮಕೋಟೆ(ಪ್ರಥಮ), ಜೆ.ಎಂ.ಮನೋಹರ, ನವೋದಯ ನಡಿಪಿನಾಯಕನಹಳ್ಳಿ(ದ್ವಿತೀಯ), ಎಂ.ಶಶಾಂಕ್, ಸರ್ಕಾರಿ ಪ್ರೌಢಶಾಲೆ ಮುತ್ತೂರು(ತೃತೀಯ)
ವಿದ್ಯಾರ್ಜನೆಗೆ ಪೂರಕ ವಾತಾವರಣ ಅಗತ್ಯ
ಗ್ರಾಮಾಂತರ ಪ್ರದೇಶದ ಸರ್ಕಾರಿ ಶಾಲೆಯ ಮಕ್ಕಳಿಗೆ ವಿದ್ಯಾರ್ಜನೆಗೆ ಪೂರಕ ವಾತಾವರಣ ಮತ್ತು ಸೌಲಭ್ಯಗಳಲ್ಲಿ ಒದಗಿಸಿದಲ್ಲಿ ಹಲವಾರು ಪ್ರತಿಭೆಗಳು ಹೊರಹೊಮ್ಮುತ್ತವೆ ಎಂದು ಬೆಂಗಳೂರಿನ ಇಂಡಿಯನ್ ಡಿಸೈನ್ಸ್ ಎಕ್ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಜಿ.ಎನ್.ನಂದಕುಮಾರ್ ತಿಳಿಸಿದರು.
ತಾಲ್ಲೂಕಿನ ಕದಿರಿನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಂಗಳೂರಿನ ಇಂಡಿಯನ್ ಡಿಸೈನ್ಸ್ ಎಕ್ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಉದ್ಯೋಗಿಗಳು ನೀಡಿರುವ 15 ಡೆಸ್ಕ್ಗಳು, 1000 ಪುಸ್ತಕಗಳನ್ನು ನೀಡಿ ಅವರು ಮಾತನಾಡಿದರು.
ಶಾಲೆಯ ಕಟ್ಟಡದ ಕೆಲ ನವೀಕರಣ ಕೆಲಸವನ್ನೂ ಮಾಡಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳ ಮೂಲಕ ಅವರ ಕಲಿಕೆಗೆ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಇಂಡಿಯನ್ ಡಿಸೈನ್ಸ್ ಎಕ್ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಅನ್ಬರಸನ್, ಶಿವಶಂಕರ್, ಸೆಂದಿಲ್ಕುಮಾರ್, ಶ್ರೀನಾಥ್, ಜಿ.ಎನ್.ಗುರುರಾಜ್, ಮುಖ್ಯಶಿಕ್ಷಕಿ ಹಂಸವೇಣಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ವಿಳಂಬ ಮಾಡುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ
ಅಭಿವೃದ್ದಿ ಕಾಮಗಾರಿಗಳನ್ನು ಮಾಡಲು ಟೆಂಡರ್ ಕರೆದು ವರ್ಷಾನುಗಟ್ಟಲೇ ವಿಳಂಬ ಮಾಡುವಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ನಗರಸಭಾ ಸದಸ್ಯರುಗಳು ಒತ್ತಾಯಿಸಿದರು.
ನಗರದ ನಗರಸಭಾ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಕಾಮಗಾರಿ ವಿಳಂಬದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು.
ನಗರಸಭೆಯಲ್ಲಿ ಕೆಲಸ ಮಾಡುತ್ತಿರುವ ಪರಿಸರ ಅಭಿಯಂತರ ದಿಲೀಪ್ ಅವರು ಸರಿಯಾಗಿ ಕರ್ತವ್ಯ ನಿರ್ವಹಿಸದೆ ಇರುವ ಕಾರಣದಿಂದಾಗಿ ಅವರಿಂದ ತುಂಬಾ ಸಮಸ್ಯೆಗಳಾಗುತ್ತಿದ್ದು, ಅವರನ್ನು ಕೂಡಲೇ ಬೇರೆ ಕಡೆಗೆ ವರ್ಗಾವಣೆ ಮಾಡುವಂತೆ ಸದಸ್ಯರು ಒತ್ತಾಯಿಸಿದರು, ಸದಸ್ಯರುಗಳಿಗೆ ಉತ್ತರಿಸಿದ ಮುಖ್ಯಾಧಿಕಾರಿ, ಈಗಾಗಲೇ ೯ ಬಾರಿಗೆ ಅಧಿಕಾರಿಗೆ ನೋಟಿಸ್ ಜಾರಿ ಮಾಡಲಾಗಿದೆ, ಒಂದು ನೋಟಿಸ್ಗೂ ಉತ್ತರ ನೀಡಿಲ್ಲ, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ದೂರು ನೀಡಿ, ಬೇರೆ ಕಡೆಗೆ ವರ್ಗಾವಣೆ ಮಾಡುವಂತೆ ವರದಿ ಸಲ್ಲಿಸಲಾಗಿದೆ ಎಂದರು.
ನಗರದ ಹೊರವಲಯದಲ್ಲಿರುವ ಅಮ್ಮನಕೆರೆಯ ಏರಿಯ ಮೇಲೆ ಅಳವಡಿಸಲಾಗಿದ್ದ ಹೈಮಾಸ್ಕ್ ವಿದ್ಯುತ್ ದೀಪಗಳನ್ನು ತೆರವುಗೊಳಿಸಲಾಗಿದ್ದು, ವಿದ್ಯುತ್ ದೀಪಗಳು ಏನಾಗಿವೆ ಎಂಬುದರ ಬಗ್ಗೆ ಮಾಹಿತಿಯಿಲ್ಲವೆಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು,
ಗುತ್ತಿಗೆ ಆಧಾರದಲ್ಲಿ ನಗರಸಭೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಪರವಾಗಿ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು ಕೂಡಲೇ ನಿಲ್ಲಿಸಿ. ಯಾವ ಸಿಬ್ಬಂದಿಯ ಹೆಸರಿನಲ್ಲಿ ಬಿಲ್ಗಳನ್ನು ಗುತ್ತಿಗೆದಾರರಿಗೆ ನೀಡುತ್ತಿದ್ದೀರೊ ಅವರನ್ನೆ ಕೆಲಸಕ್ಕೆ ನೇಮಕ ಮಾಡಿ, ಯಾವ ಕೆಲಸಕ್ಕಾಗಿ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುತ್ತೀರೊ ಅದೇ ಕೆಲಸಗಳನ್ನು ಮಾಡಿಸಿ. ಜಲಗಾರರ ಕೈಯಲ್ಲಿ ವಿದ್ಯುತ್್ ಕೆಲಸಗಳನ್ನು ಮಾಡಿಸಲಾಗುತ್ತಿದೆ ಎಂದು ಸದಸ್ಯ ವೆಂಕಟಸ್ವಾಮಿ ತಿಳಿಸಿದರು.
ನಗರಸಭಾಧ್ಯಕ್ಷೆ ಮುಷ್ಟರಿತನ್ವೀರ್, ಉಪಾಧ್ಯಕ್ಷೆ ಸುಮಿತ್ರಮ್ಮರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಕೇಶವಮೂರ್ತಿ, ಮುಖ್ಯಾಧಿಕಾರಿ ರಾಮ್ಪ್ರಕಾಶ್, ಸದಸ್ಯರಾದ ಚಿಕ್ಕಮುನಿಯಪ್ಪ, ಜೆ.ಎಂ.ಬಾಲಕೃಷ್ಣ, ಅಪ್ಸರ್ಪಾಷಾ, ಪ್ರಭಾವತಿ ಸುರೇಶ್, ಸುಹೇಲ್ಅಹ್ಮದ್ ಮುಂತಾದವರು ಸಭೆಯಲ್ಲಿ ಹಾಜರಿದ್ದರು.
ಹದಿಹರೆಯದ ಸಮಸ್ಯೆಗಳು ಮತ್ತು ಪರಿಹಾರ – ಭಾಗ 1
“ಎಂಥಾ ಹದವಿತ್ತೆ ಗೆಳತಿ ಹರೆಯಕೆ ಏನೋ ಮುದವಿತ್ತೆ….” ಎನ್ನುವ ಕವಿವಾಣಿ ಪ್ರಾಯಶ: ಸಾಹಿತ್ಯೋಪಾಸಕರು, ಸಂಗೀತ ಆರಾಧಕರು ಕೇಳಿರುತ್ತಾರೆ. ಹದಿ ಹರೆಯದ ಮಾನಸಿಕ ತುಮುಲಗಳು ಇಲ್ಲಿ ಅಭಿವ್ಯಕ್ತಗೊಂಡಿವೆ.
ಹೆಣ್ಣು ತನ್ನ ಜೀವನದ ಪಯಣದಲ್ಲಿ ಮಗಳಾಗಿ, ಹೆಂಡತಿಯಾಗಿ, ತಾಯಿಯಾಗಿ, ಸೊಸೆಯಾಗಿ ತುಂಬಾ ಜವಾಬ್ದಾರಿಯುತ ಘಟ್ಟಗಳನ್ನು ಕ್ರಮಿಸುತ್ತಾಳೆ. ಈ ಎಲ್ಲ ಘಟ್ಟಗಳಲ್ಲಿ ನೋವು, ನಲಿವು, ಬೇಸರ, ಆತಂಕ ಎಲ್ಲವೂ ಸಹಜ. ಬಾಲ್ಯದ ಮುಗ್ಧತೆ ಕಳೆದು ಯೌವನದ ಪ್ರೌಢಿಮೆಯು ಆವರಿಸುವ ಸಮಯ ಚೆಲ್ಲು ಚೆಲ್ಲಾಗಿ ಕುಂಟೆಬಿಲ್ಲೆ, ಕಣ್ಣಾಮುಚ್ಚಾಲೆ, ಅಡುಗೆ ಆಟಗಳನ್ನು ಸಂಗಡಿಗರೊಂದಿಗೆ ಆಡಿಕೊಂಡಿದ್ದ ಹುಡುಗಿ ಒಮ್ಮೆಲೇ ಯೌವನಕ್ಕೆ ಕಾಲಿಡುತ್ತಿದ್ದಂತೆಯೇ ಗಂಭೀರಳಾಗಿ ಬಿಡುತ್ತಾಳೆ. ಹದಿ ವಯಸ್ಸಿನ ಮಹಿಮೆಯೇ ಅಂಥಹುದು. ಹಿಂದೆಲ್ಲ 13 ವರ್ಷದ ನಂತರವೇ ಹೆಣ್ಣು ಮಕ್ಕಳು ಋತುಮತಿಯಾಗುತ್ತಿದ್ದರು. ಇತ್ತೀಚಿನ ದಿನಗಲ್ಲಿ ವಾತಾವರಣ, ತಿನ್ನುವ ಆಹಾರ ಒತ್ತಡದ ಜೀವನ, ದೈಹಿಕ ಶ್ರಮ ಇಲ್ಲದಿರುವುದು, ಬೇರೆ ಬೇರೆ ರೂಪದಲ್ಲಿ ರಾಸಾಯನಿಕಗಳ ಸೇವನೆ ಇವೆಲ್ಲವುಗಳ ಪರಿಣಾಮ 9 ವರ್ಷಕ್ಕೆಲ್ಲ ಹೆಣ್ಣು ಮಕ್ಕಳು ಋತುಮತಿಯಾಗುತ್ತಿದ್ದಾರೆ. ಈ ಕಾರಣಕ್ಕೆ ಹೆತ್ತವರ ಜವಾಬ್ದಾರಿ ಇನ್ನಷ್ಟು ಹೆಚ್ಚು. ತಾಯ್ತನ ಎನ್ನುವುದು ಹೆಣ್ಣಿಗೆ ವರದಾನ ಹೆಣ್ಣು ಋತುಮತಿಯಾಗುವುದು ಗರ್ಭಧಾರಣೆಗೆ ಹೆಣ್ಣಿನ ದೇಹ ಸಜ್ಜಾಗುತ್ತಿರುವುದರ ಸಂಕೇತ ಹದಿ ವಯಸ್ಸಿನವರಲ್ಲಿ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳು ಕಂಡು ಬರುತ್ತವೆ. ಮೆದುಳಿನಲ್ಲಿರುವ ತೈರೋಥ್ಯಾಲವಸ್ ಎಂಬ ಗ್ರಂಥಿಯು ಸ್ರವಿಸುವ ಹಾರ್ಮೋನುಗಳೇ ಈ ಬದಲಾವಣೆಗಳಿಗೆ ಕಾರಣ ಕರ್ತೃ. ಈ ಹಾರ್ಮೋನುಗಳ ಕ್ರಿಯೆಯಿಂದಲೇ ಹೆಣ್ಣು ಋತುವತಿಯಾಗುವುದು. ಈ ಎಲ್ಲ ಪ್ರಕ್ರಿಯೆಗಳು 11 ರಿಂದ 12 ವರ್ಷದ ಅವಧಿಯಲ್ಲಿ ನಡೆಯುವುದು. “ನಾವು ಏನನ್ನು ಬಿತ್ತುತ್ತೇವೆಯೋ ಅದನ್ನೇ ಬೇಳೆಯುತ್ತೇವೆ” ಎನ್ನುವ ನಾನ್ನುಡಿಯಂತೆ ಬೇವಿನ ಬೀಜವನ್ನು ಬಿತ್ತಿದರೆ ಬೇವಿನ ಮರವನ್ನು ಬೆಳೆಯುತ್ತೇವೆ. ಅದರಂತೆ ಮಾವಿನ ಬೀಜವನ್ನು ಬಿತ್ತಿದರೆ ಮಾವಿನ ಮರವನನ್ನು ಪಡೆಯುತ್ತೇವೆ. ಈ ತರದಲ್ಲಿಯೇ ಮಕ್ಕಳಿಗೆ ಲೈಂಗಿಕ ಶಿಕ್ಷಣದ ಜೊತೆಗೆ ಸ್ವಚ್ಛತೆ, ಪೌಷ್ಠಿಕ ಆಹಾರದ ಸೇವನೆಯ ಬಗ್ಗೆ ಅರಿವು ಮೂಡಿಸುವುದು ಅಗತ್ಯ. ಇದರಿಂದ ಸ್ವಸ್ಥ, ಸದೃಢ ಸಮಾಜದ ನಿರ್ಮಾಣವೂ ಸಾಧ್ಯ.
ಮಾಸಿಕ ಋತುಸ್ರಾವ: ಹಾರ್ಮೋನುಗಳ ಕ್ರಿಯೆಯಿಂದ ಬಿಡುಗಡೆಯಾದ ಅಂಡಾಣು (ಸ್ತ್ರೀ ಬೀಜ) ತನ್ನ ಮಾರ್ಗದ ಮೂಲಕ ಗರ್ಭಾಶಕ್ಕೆ ಬಂದು ಪುರುಷರೊಂದಿಗೆ ಸಂಭೋಗಕ್ಕೋಸ್ಕರ ಕಾದಿರುತ್ತದೆ. ಸಂಭೋಗ ನಡೆಯದ ಪಕ್ಷದಲ್ಲಿ ಬೀಜವು ಗರ್ಭಾಶಯದ ಹೊರಪದರದೊಂದಿಗೆ ಯೋನಿ ಮಾರ್ಗದ ಮೂಲಕ ರಕ್ತಸ್ರಾವದೊಂದಿಗೆ ಹೊರ ಬರುತ್ತದೆ. ಈ ಪ್ರಕ್ರಿಯೆಯು 30 ದಿನಗಳಿಗೊಮ್ಮೆ ಪುನರಾವರ್ತನೆಯಾಗುವುದು. 2 ರಿಂದ 4 ದಿನಗಳವರೆಗೆ ಸ್ರಾವವು ಕಾಣಿಸಿಕೊಳ್ಳುವುದು.
ಋಯುಸ್ರಾವವು ಮೊಲದ ರಕ್ತದಂತೆ, ಲಾಕ್ಷಾ ರಸದಂತೆ (ಅರಗಿನಂತೆ) ಇರಬೇಕು. ಅಲ್ಲದೆ ಬಟ್ಟೆಯನ್ನು ಸ್ವಚ್ಛವಾಗಿ ತೊಳೆದರೆ ಕಲೆಗಳು ಉಳಿಯುವಂತಿರಬಾರದು ಎನ್ನುವುದು ಆಯುರ್ವೇದಾಚಾರ್ಯರ ಅಭಿಮತ. ಅಲ್ಲದೆ ವಾತ ದೋಷದಿಂದ ಕೂಡಿದ (ಚುಚ್ಚುವಂತೆ ನೋವಿನಿಂದ ಕೂಡಿದ್ದು, ಕಪ್ಪು ಬಣ್ಣವನ್ನು ಹೊಂದಿರುವಂಥದ್ದು), ಪಿತ್ತ ದೋಷದಿಂದ ಕೂಡಿದ (ಉರಿಯನ್ನು ಹೊಂದಿದ್ದು, ಹಳದಿ, ನೀಲಿ ಬಣ್ಣದಿಂದ ಕೂಡಿದ), ಕಫ ದೋಷದಿಂದ ಕೂಡಿದ (ತುರಿಕೆಯನ್ನು ಹೊಂದಿದ್ದು, ಬಿಳಿ ಬಣ್ಣದಿಂದ ಕೂಡಿದ), ಕುಣಪ ದುರ್ಗಂಧಯುಕ್ತ, ಗ್ರಂಥಿ (ಗಂಟುಗಳಿಂದ ಕೂಡಿದ), ಪೂಲೆ ಪೂಯ (ಕೀವು, ಸ್ರಾವದಿಂದ ಕೂಡಿದ) ಮೂತ್ರ, ಮಲಯುಕ್ತ ರಕ್ತ ಸ್ರಾವವು ಪ್ರಜೋತ್ಪಾದನೆಗೆ ಅಂದರೆ ಗರ್ಭಧಾರಣೆಗೆ ಸೂಕ್ತವಲ್ಲ ಎಂದು ಹೇಳಿದ್ದಾರೆ.
ಆರಂಭದಲ್ಲಿ ಋತುಸ್ರಾವವು ಪ್ರತಿ ತಿಂಗಳು ಬಾರದಿರಬಹುದು. ಸಾಮಾನ್ಯವಾಗಿ ಋತುಚಕ್ರದ ಅವಧಿ 21 ರಿಂದ 25 ದಿನಗಳು ಋತುಚಕ್ರ ಆರಂಭವಾದ ಒಂದು ವರ್ಷದೊಳಗೆ ನಿಯಮಿತ ಋತುಚಕ್ರ ಆರಂಭವಾಗುತ್ತದೆ. ಅಲ್ಲದೆ ಸ್ರಾವವು ಎಲ್ಲರಲ್ಲಿಯೂ ಒಂದೇ ರೀತಿ ಇರುವುದಿಲ್ಲ. ಕೆಲವರಲ್ಲಿ ಮೂರು ದಿನಗಳಿದ್ದರೆ ಮತ್ತೆ ಕೆಲವರಲ್ಲಿ ಏಳರಿಂದ ಎಂಟು ದಿನಗಳಿರಬಹುದು.
ಋತುಮತಿ (ಹದಿಹರಯದ ಹೆಣ್ಣು) ಯಲ್ಲಿ ದೈಹಿಕ ಹಾಗು ಮಾನಸಿಕ ಬದಲಾವಣೆಗಳು.
ಮುಖದಲ್ಲಿ ಪ್ರಸನ್ನತೆ, ವಿರುದ್ಧ ಲಿಂಗದವರೊಡನೆ ಆಕರ್ಷಣೆ, ಪ್ರಸನ್ನ ಮನಸ್ಸು ಪ್ರಿಯವಾದ ಕಥೆಗಳನ್ನು ಕೇಳುವುದರಲ್ಲಿ ಆಸಕ್ತಿ, ಕೆಳಮುಖವಾಗಿರುವ ಹೊಟ್ಟೆಯ ಭಾಗ, ನೆಲವನ್ನೇ ನೋಡುತ್ತಿರುವಂತಹ ಕಣ್ಣುಗಳು ಹಾಗೂ ತಲೆ, ಭುಜ, ಎದೆ, ಸೊಂಟ ತೊಡೆ, ನಾಭಿ (ಹೊಕ್ಕಳು) ಪ್ರದೇಶಗಳಲ್ಲಿ ಕೊಬ್ಬಿನ ಶೇಖರಣೆ – ಇವೆಲ್ಲವುಗಳು “ಋತುಮತಿ” ಯಾದ ಹೆಣ್ಣಿನ ಲಕ್ಷಣಗಳು ಎನ್ನುವುದು ಸುಶ್ರುತಾಚಾರ್ಯರ ಅಭಿಪ್ರಾಯ. ಇವಲ್ಲದೆ ಕಂಕುಳು ಹಾಗೂ ಯೋನಿ ಮಾರ್ಗದ ಸುತ್ತಲೂ ದಪ್ಪನೆಯ ಒರಟಾದ ಕೂದಲುಗಳು ಬೆಳೆಯುತ್ತವೆ.
ಹದಿಯರೆಯದವರು ತಮ್ಮನ್ನು ತಾವು ಸಮಾಜದೊಂದಿಗೆ ಗುರುತಿಸಿಕೊಳ್ಳಲು ಹೆಣಗುತ್ತಾರೆ, ಮಕ್ಕಳೊಟ್ಟಿಗೂ ಬೆರೆಯಲಾಗದೆ, ದೊಡ್ಡವರೊಂದಿಗೂ ಗುರುತಿಸಿಕೊಳ್ಳಲಾಗದ ಈ ಅವಸ್ಥೆಯನ್ನು ಮಾನಸಿಕ ತಜ್ಞರು “Identity Crisis” ಎನ್ನುತ್ತಾರೆ. ಸಿನಿಮಾಗಳಲ್ಲಿ ದೂರದರ್ಶನಗಳಲ್ಲಿ ನಟ, ನಟಿಯರ ಸ್ಥಾನಗಳಲ್ಲಿ ತಮ್ಮನ್ನೇ ಕಲ್ಪಸಿಕೊಳ್ಳುತ್ತಾರೆ, ಬಾಲ್ಯದ ತುಂಟತನ ಕಳೆದು ನಿಧಾನವಾಗಿ ಜವಾಬ್ದಾರಿ ಅಡಿಯಿಡುತ್ತದೆ. ಮಾನಸಿಕ ತುಮುಲ, ಗಾಬರಿ ಹಾಗೂ ಗೊಂದಲಗಳು ಕಾಣಿಸಿಕೊಳ್ಳುತ್ತವೆ. ನಾಚಿಕೆ ಸಂತೋಷ, ಕುತೂಹಲ, ಕಲ್ಪನೆಗಳು ಏಕಕಾಲದಲ್ಲಿ ಮೂಡುವುದು. ಹದಿಹರೆಯದ ಹೆಣ್ಣು ಮಕ್ಕಳು ತಮ್ಮದೇ ವಯಸ್ಸಿನವರೊಂದಿಗೆ ಕಾಣಿಸಿಕೊಳ್ಳುತ್ತಾರೆ. ಇದರೊಂದಿಗೆ ಮಾಸಿಕ ಋತುಸ್ರಾವವೂ ಕಾಣಿಸಿಕೊಳ್ಳುತ್ತದೆ. ಈ ಎಲ್ಲ ದೈಹಿಕ ಬದಲಾವಣೆಗಳಿಗೆ ಹೆಣ್ಣು ತನ್ನನ್ನು ತಾನು ಮಾನಸಿಕವಾಗಿ ತಯಾರಿ ನಡೆಸಿಕೊಳ್ಳಬೇಕಾಗುವುದು. ಇದರಲ್ಲಿ ತಾಯಿಯ ಪಾತ್ರವೂ ಮುಖ್ಯವಾಗಿರುತ್ತದೆ.
ಪೌಷ್ಠಿಕ ಆಹಾರ: ಹದಿ ವಯಸ್ಸಿನಲ್ಲಿ ದೈಹಿಕ ಬೆಳವಣಿಗೆ ತೀವ್ರವಾಗಿರುವುದಲ್ಲದೆ, ಪ್ರತಿ ತಿಂಗಳೂ ಋತುಸ್ರಾವದಿಂದ ನಷ್ಟವಾಗುವ ರಕ್ತದಿಂದ ರಕ್ತಹೀನತೆ ಉಂಟಾಗದಂತೆ ತಡೆಯಲು ಹಾಗೂ ದೇಹಕ್ಕೆ ಶಕಿಯನ್ನು ತುಂಬಲು ಪೌಷ್ಠಿಕವಾದ ಆಹಾರ ಸೇವನೆ ಅತ್ಯಗತ್ಯ.
ಬೇಳೆ ಕಾಳುಗಳು ಸೊಪ್ಪು ತರಕಾರಿ, ಹಣ್ಣುಗಳು, ಹಾಲು ಮೊಸರು, ತುಪ್ಪ ಎಲ್ಲವನ್ನು ಒಳಗೊಂಡಿರುವ ಪೌಷ್ಠಿಕ ಆಹಾರ ಸೇವನೆ ಅತ್ಯಗತ್ಯ. ತುಪ್ಪದ ಸೇವನೆಯಿಂದ ಜೀರ್ಣಶಕ್ತಿ ಹೆಚ್ಚುವುದಲ್ಲದೆ, ಇದು ಬುದ್ಧಿ ಶಕ್ತಿ ಹಾಗೂ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಚರ್ಮಕ್ಕೆ ಕಾಂತಿಯನ್ನು ನೀಡುತ್ತದೆ. ಎಳ್ಳನ್ನು ಹುರಿದು, ಬೆಲ್ಲದ ಪಾಕವನ್ನು ತಯಾರಿಸಿ ಅದಕ್ಕೆ ಎಳ್ಳು ಹಾಕಿ ತಯಾರಿಸಿದ ಮಾಡಿದ ಎಳ್ಳುಂಡೆಯೂ ಕೂಡ ರಕ್ತಸ್ರಾವವನ್ನು ನಿಯಮಿತವಾಗಿ ಮಾಡುವುದಲ್ಲದೆ, ವಾತ ಶಮನವನ್ನು ಮಾಡುವುದು.
ವ್ಯಾಯಾಮ: ಕ್ರಮಬದ್ಧವಾದ ವ್ಯಾಯಾಮದಿಂದ ದೇಹ ಸದೃಢಗೊಳ್ಳುವುದು. ಯೋಗ ಹಾಗೂ ಪ್ರಾಣಾಯಾಮಗಳೂ ಕೂಡ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ತಜ್ಞರಿಂದ ಕಲಿತು ಅಭ್ಯಾಸ ಮಾಡುವುದು ಉತ್ತಮ.
ರಕ್ತಹೀನತೆ: ಅನೇಕ ಹುಡುಗಿಯರಲ್ಲಿ ರಕ್ತಹೀನತೆ ಅತ್ಯಂತ ಸಾಮಾನ್ಯವಾದ ಸಮಸ್ಯೆ. ಕೆಲವರಲ್ಲಿ ಋತುಚಕ್ರದ ಸಮಯದಲ್ಲಿ ಅಧಿಕ ರಕ್ತಸ್ರಾವವಾಗುವುದರಿಂದ ರಕ್ತಹೀನತೆ ಉಂಟಾಗುತ್ತದೆ. ಆಹಾರದಲ್ಲಿ ಪ್ರತಿದಿನ ಸೊಪ್ಪು, ಹಣ್ಣು ಹಾಗೂ ತರಕಾರಿಯನ್ನು ಸೇವಿಸಬೇಕು.
1. ದಿನಕ್ಕೊಮ್ಮೆ ಒಂದು ಲೋಟ ಹಾಲಿಗೆ ಎರಡು ಚಮಚ ಜೇನುತುಪ್ಪವನ್ನು ಬೆರೆಸಿ ಸೇವಿಸುವುದು ಉತ್ತಮ.
2. ಆಹಾರದಲ್ಲಿ ಬಸಳೆ ಸೊಪ್ಪು, ಪಾಲಕ್ ಸೊಪ್ಪು, ಮೆಂತ್ಯ, ಸಬ್ಬಸ್ಸಿಗೆ ಸೊಪ್ಪು, ಇತ್ಯಾದಿಗಳ ಬಳಕೆ ಮಾಡುವುದರಿಂದಲೂ ರಕ್ತವು ವೃದ್ಧಿಯಾಗುವುದು.
3. ಖರ್ಜೂರ, ಒಣದ್ರಾಕ್ಷಿಗಳು ಕೂಡ ರಕ್ತವರ್ಧನೆಗೆ ಸಹಾಯಕಾರಿ.
ಮುಂದುವರೆಯುವುದು….
ಡಾ.ನಾಗಶ್ರಿ. ಕೆ.ಎಸ್.
ರೇಷ್ಮೆ ಕೃಷಿ ಬಿಕ್ಕಟ್ಟನ್ನು ಬಗೆಹರಿಸಲು ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷರಿಗೆ ಮನವಿ
ನಗರಕ್ಕೆ ಮಂಗಳವಾರ ಭೇಟಿ ನೀಡಿದ್ದ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಬಿಸೇಗೌಡ ಅವರಿಗೆ ಜಿಲ್ಲಾ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ ಸದಸ್ಯರು ರೇಷ್ಮೆ ಕೃಷಿ ಬಿಕ್ಕಟ್ಟನ್ನು ಬಗೆಹರಿಸಲು ಪ್ರಯತ್ನಿಸುವಂತೆ ಮನವಿ ಪತ್ರವನ್ನು ಸಲ್ಲಿಸಿದರು.
ಮದನಪಲ್ಲಿಗೆ ರೇಷ್ಮೆ ಸಮಾವೇಶಕ್ಕೆ ತೆರಳುವಾಗ ಮಾರ್ಗ ಮಧ್ಯೆ ಶಿಡ್ಲಘಟ್ಟಕ್ಕೆ ಭೇಟಿ ನೀಡಿದ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಬಿಸೇಗೌಡ ಅವರನ್ನು ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿದ ರೇಷ್ಮೆ ಬೆಳೆಗಾರರು ರೇಷ್ಮೆ ಕೃಷಿಕರು ಸಂಕಷ್ಟದಲ್ಲಿರುವ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಮಳ್ಳೂರು ಶಿವಣ್ಣ, ರೇಷ್ಮೆ ಗೂಡಿನ ಬೆಲೆ ಗಣನೀಯವಾಗಿ ಕುಸಿಯಲು ಕೇಂದ್ರ ಸರ್ಕಾರ ಆಮದು ಸುಂಕವನ್ನು ಕಡಿತಗೊಳಿಸಿರುವುದಾಗಿದೆ. ತಕ್ಷಣ ಕೇಂದ್ರ ಸರ್ಕಾರ ಆಮದು ಸುಂಕವನ್ನು ಶೇಕಡ 50 ಕ್ಕೆ ಏರಿಸುವಂತೆ ರೇಷ್ಮೆ ಮಂಡಳಿ ಒತ್ತಾಯಿಸಬೇಕು.
ಕೇಂದ್ರ ರೇಷ್ಮೆ ಮಂಡಳಿಯ ಆಪತ್ತು ನಿಧಿಯಿಂದ ರಾಜ್ಯದ ರೇಷ್ಮೆ ಬೆಳೆಗಾರರ ಸಂಕಷ್ಟಕ್ಕೆ ನೆರವನ್ನು ಒದಗಿಸಬೇಕು. ರೇಷ್ಮೆ ಗೂಡು ಬೆಳೆಯುವ ಎಲ್ಲಾ ರೈತರಿಗೂ ಸಹಾಯಧನ ನೀಡಬೇಕು. ರೇಷ್ಮೆ ಉದ್ದಿಮೆಯ ಆಧಾರ ಸ್ತಂಭಗಳಾದ ದ್ವಿತಳಿ ಮತ್ತು ಮಿಶ್ರತಳಿ ಪ್ರಗತಿಪರ ರೇಷ್ಮೆ ಬೆಳೆಗಾರರನ್ನು ಉಳಿಸಿಕೊಳ್ಳುವುದು ಅನಿವಾರ್ಯ. ಮಿಶ್ರತಳಿ ಗೂಡಿಗೆ ಒಂದು ಕೆಜಿಗೆ 60 ರೂಪಾಯಿ ಮತ್ತು ದ್ವಿತಳಿ ಗೂಡಿಗೆ 80 ರೂಪಾಯಿ ಸಹಾಯಧನ ನೀಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಬೇಕು. ಕೇಂದ್ರ ರೇಷ್ಮೆ ಮಂಡಳಿಯು ರಾಜ್ಯ ರೇಷ್ಮೆ ಬೆಳೆಗಾರರಿಗೆ ನೆರವಾಗುವ ಸಿ.ಡಿ.ಪಿ ಯೋಜನೆಯನ್ನು ಮುಂದುವರೆಸಬೇಕು ಎಂದು ತಿಳಿಸಿದರು.
ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ ಸದಸ್ಯರಿಂದ ರೇಷ್ಮೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ಕೇಳಿ ನಂತರ ಮಾತನಾಡಿದ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಬಿಸೇಗೌಡ, ‘ರೇಷ್ಮೆ ಆಮದು ಸುಂಕವನ್ನು ಹೆಚ್ಚಿಬೇಕೆಂದು ಸಂಸದರು ಹಾಗೂ ಕೇಂದ್ರದ ಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ. ಮುಂದಿನ ಲೋಕಸಭೆ ಅಧಿವೇಶನದೊಳಗೆ ಸಂಬಂಧಪಟ್ಟ ಮಂತ್ರಿಗಳಿಗೆ ಈ ಬಗ್ಗೆ ವಿವರವಾಗಿ ತಿಳಿಸಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲಾಗುವುದು’ ಎಂದು ತಿಳಿಸಿದರು.
ಉದ್ದೇಶಪೂರ್ವಕವಾಗಿ ಬಿ.ಬಿ.ಎಂ ವಿದ್ಯಾರ್ಥಿಗಳಿಗೆ ಗ್ರೇಡ್ ಅಂಕಗಳನ್ನು ಕೊಡುತ್ತಿಲ್ಲ
ಉದ್ದೇಶಪೂರ್ವಕವಾಗಿ ಬಿ.ಬಿ.ಎಂ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅಂಕಗಳನ್ನು ನೀಡದೆ ಸತಾಯಿಸಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಉಪನ್ಯಾಸಕರನ್ನು ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ನಡೆಯಿತು.
ನಗರದ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ರಾಮಚಂದ್ರಪ್ಪ ಎಂಬುವವರು ಕಾಲೇಜಿನಲ್ಲಿ ಬಿ.ಬಿ.ಎಂ ಮಾಡುತ್ತಿರುವ ೧೨ ಮಂದಿ ವಿದ್ಯಾರ್ಥಿಗಳಿಗೆ ನೀಡಬೇಕಾಗಿದ್ದ ಗ್ರೇಡ್ ಅಂಕಗಳನ್ನು ನೀಡದೆ ಸತಾಯಿಸುತ್ತಿದ್ದಾರೆ. ಪರೀಕ್ಷೆಗಳು ಮುಗಿದು ಫಲಿತಾಂಶ ಹೊರಬಿದ್ದರೂ ಕೂಡಾ ಉದ್ದೇಶಪೂರ್ವಕವಾಗಿ ನಮಗೆ ನೀಡಬೇಕಾಗಿದ್ದ ಅಂಕಗಳನ್ನು ನೀಡದೆ ವಂಚನೆ ಮಾಡಲಾಗಿದೆ ಎಂದು ಪ್ರಾಂಶುಪಾಲ ಚಂದ್ರಾನಾಯಕ್ ಅವರಿಗೆ ದೂರು ನೀಡಿದರು.
ಪ್ರಾಂಶುಪಾಲರ ಕೊಠಡಿಯಲ್ಲಿ ಉಪನ್ಯಾಸಕ ರಾಮಚಂದ್ರಪ್ಪ ಅವರನ್ನು ಕರೆದು ಈ ವಿಚಾರಣೆ ನಡೆಸಿದಾಗ ನನ್ನ ಕಡೆಯಿಂದ ಯಾವುದೇ ತಪ್ಪಾಗಿಲ್ಲ, ನಾನು ಅಂಕಗಳನ್ನು ಕೊಟ್ಟಿದ್ದೇನೆ ಆದರೆ ಕಚೇರಿಯ ಗುಮಾಸ್ತರು ಕಂಪ್ಯೂಟರ್ನಲ್ಲಿ ಸೇರ್ಪಡೆಗೊಳಿಸಿಲ್ಲವೆಂದು ಉದಾಸೀನತೆಯಿಂದ ಉತ್ತರಿಸಿದಾಗ ಕೆರಳಿದ ಕೆಲ ವಿದ್ಯಾರ್ಥಿಗಳು ನೀವು ಉದ್ದೇಶಪೂರ್ವಕವಾಗಿ ಈ ರೀತಿ ಮಾಡುತ್ತಿದ್ದೀರಿ, ನಿಮ್ಮ ವಿಷಯಗಳಿಗೆ ಸಂಬಂಧಿಸಿದ ಅಂಕಗಳನ್ನು ಕ್ರಮಬದ್ದವಾಗಿ ನೀಡುವುದು ನಿಮ್ಮ ಕರ್ತವ್ಯ, ಕೇವಲ ಗುಮಾಸ್ತರಿಗೆ ನೀಡಿದರೆ, ನಮ್ಮ ಮುಂದಿನ ವ್ಯಾಸಂಗಕ್ಕಾಗಿ ನಾವೇನು ಮಾಡಬೇಕು, ಕಳೆದ ವರ್ಷವೂ ಕೂಡಾ ಇದೇ ರೀತಿಯಾಗಿ ವರ್ತನೆ ಮಾಡಿದ್ದೀರಿ ಈಗಲೂ ಇದೇ ರೀತಿ ಮಾಡುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.
ನಂತರ ವಿಧ್ಯಾರ್ಥಿಗಳೊಂದಿಗೆ ಮಾತನಾಡಿದ ಪ್ರಾಂಶುಪಾಲ ಚಂದ್ರಾನಾಯಕ್, ಆಗಿರುವ ತಪ್ಪನ್ನು ಕೂಡಲೇ ಸರಿಪಡಿಸಿ, ನಿಮಗೆ ನೀಡಬೇಕಾಗಿರುವ ಗ್ರೇಡ್ ಅಂಕಗಳನ್ನು ಕಂಪ್ಯೂಟರ್ನಲ್ಲಿ ಕೂಡಲೇ ನಮೂದಿಸುವಂತೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ ನಂತರ ವಿಧ್ಯಾರ್ಥಿಗಳು ಕಾಲೇಜಿನಿಂದ ಹೊರನಡೆದರು.
ವಿದ್ಯಾರ್ಥಿ ಮುಖಂಡರಾದ ಸುರೇಶ್, ಚಂದ್ರು, ಮಧುಕುಮಾರ್, ಗಂಗರಾಜು, ಇಮ್ರಾನ್ಪಾಷಾ, ಲಾವಣ್ಯ, ಮಧುಚಂದ್ರ, ಮಹೇಶ್, ಮಂಜುನಾಥ್, ಮಲ್ಲಿಕ್, ನರಸಿಂಹ, ನವಾಜ್ಪಾಷಾ, ಸಾದಿಕ್ಪಾಷಾ, ಶ್ರೀನಿವಾಸ್, ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಕ್ಲಿಷ್ಟಕರ ವಿಷಯಗಳನ್ನು ತರಗತಿಯಲ್ಲಿ ಬೋಧಿಸುವುದು ಸವಾಲಾಗಿದೆ
ಗಣಿತ ವಿಜ್ಞಾನದಂತಹ ಕ್ಲಿಷ್ಟಕರ ವಿಷಯಗಳನ್ನು ತರಗತಿಯಲ್ಲಿ ಪರಿಣಾಮಕಾರಿಯಾಗಿ ಬೋಧಿಸುವುದು ಒಂದು ಸವಾಲಾಗಿದೆ. ಇದನ್ನು ಯಶಸ್ವಿಯಾಗಿ ನಿರ್ವಹಿಸಿದರೆ ಪ್ರಾಥಮಿಕ ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆ ತರಲು ಸಾಧ್ಯ ಎಂದು ತಾಲ್ಲೂಕಿನ ದ್ಯಾವಪ್ಪನಗುಡಿ ಸರ್ಕಾರಿ ಪ್ರೌಢಶಾಲೆ ಪ್ರಭಾರಿ ಮುಖ್ಯ ಶಿಕ್ಷಕ ಎಂ.ಪಿ.ಜೀವಂದರ್ ಕುಮಾರ್ ತಿಳಿಸಿದರು.
ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಮಾರ್ಗದರ್ಶಿ ಸಭೆಯಲ್ಲಿ ಅವರು ಮಾತನಾಡಿದರು.
ಸಮುದಾಯದ ಭಾಗವಹಿಸುವಿಕೆ ಕೂಡ ಶಾಲಾ ಚಟುವಟಿಕೆಗೆ ಪ್ರೋತ್ಸಾಹ ನೀಡುತ್ತದೆ ಎಂದರು. ಅಬ್ಲೂಡು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜಯಶ್ರೀ ಮಾತನಾಡಿ, ಸಂವಿಧಾನಾತ್ಮಕ ಆಶಯಗಳನ್ನು ಜಾರಿಗೆ ತರಲು ಶಿಕ್ಷಣದ ಸಾರ್ವತ್ರೀಕರಣವಾಗಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರದ ಪ್ರಯತ್ನದೊಂದಿಗೆ ಸಮುದಾಯವೂ ಭಾಗವಹಿಸಬೇಕೆಂದು ಹೇಳಿದರು.
ಕಾರ್ಯಕ್ರಮಕ್ಕೆ ಮುನ್ನ ಶಾಲಾ ವಿದ್ಯಾರ್ಥಿಗಳಿಂದ ಮೆರವಣಿಗೆ ನಡೆಸಲಾಯಿತು. ಅಬ್ಲೂಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚನ್ನಕೃಷ್ಣಪ್ಪ, ಸಿ.ಆರ್.ಪಿ.ಶಂಕರಾಚಾರಿ, ಅಬ್ಲೂಡು ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬಂಡಪ್ಪನಹಳ್ಳಿಯ ಶ್ರೀಶಿರಡಿ ಸಾಯಿ ಆಧ್ಯಾತ್ಮಿಕ ಕೇಂದ್ರದಲ್ಲಿ ಭಜನೆ ಕಾರ್ಯಕ್ರಮ
ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯಿತಿಯ ಗಂಗನಹಳ್ಳಿ ಸಮೀಪದ ಬಂಡಪ್ಪನಹಳ್ಳಿಯ ಶ್ರೀಶಿರಡಿ ಸಾಯಿ ಆಧ್ಯಾತ್ಮಿಕ ಕೇಂದ್ರದಲ್ಲಿ ನಡೆದ ಶ್ರೀಶಿರಡಿ ಸಾಯಿ ಬಾಬಾ ಭಜನೆ ಕಾರ್ಯಕ್ರಮದಲ್ಲಿ ಸಂಸದ ಕೆ.ಎಚ್.ಮುನಿಯಪ್ಪ ಪತ್ನಿ ಸಮೇತ ಭಾನುವಾರ ಭಾಗವಹಿಸಿದ್ದರು.
ಆಧ್ಯಾತ್ಮಿಕ ಕೇಂದ್ರದ ಆವರಣದಲ್ಲಿ ಬೆಳಗ್ಗೆಯಿಂದಲೂ ನಡೆದ ಭಜನೆ ಕಾರ್ಯಕ್ರಮದಲ್ಲಿ ನೂರಾರು ಮಂದಿ ಸಾಯಿಬಾಬಾ ಭಕ್ತರು ಪಾಲ್ಗೊಂಡು ಸಾಯಿಬಾಬಾ ಸ್ಮರಣೆ ಮಾಡಿದರು. ಭಜನೆ ಅಂಗವಾಗಿ ಸಾಯಿಬಾಬಾ ಮೂರ್ತಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.
‘ಸುಮಾರು 1.3 ಕೋಟಿ ರೂಗಳ ವೆಚ್ಚದಲ್ಲಿ ದೇವಾಲಯವನ್ನು ಇಲ್ಲಿ ನಿರ್ಮಿಸಲಾಗುತ್ತಿದ್ದು, ಈ ಭಾಗದ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕೇಂದ್ರವಾಗಲಿದೆ. ಮನುಷ್ಯನ ಎಲ್ಲ ಶ್ರಮವೂ ಮನಶ್ಶಾಂತಿಗಾಗಿಯೇ ಆದುದರಿಂದ ಶಾಂತಿ ಮತ್ತು ನೆಮ್ಮದಿಯನ್ನು ಉಂಟುಮಾಡುವ ತಾಣವನ್ನಾಗಿಸುವ ಪ್ರಯತ್ನಕ್ಕೆ ಯಶಸ್ಸು ಸಿಗಲಿ’ ಎಂದು ಸಂಸದ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಈ ಸಂದರ್ಭದಲ್ಲಿ ವಿಶೇಷ ಪೂಜೆ ನೆರವೇರಿಸಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು. ಶೀಜಯ ಸಾಯಿ ಮಂಡಳಿ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ಕೆ.ಎಸ್.ರುದ್ರೇಶ್, ನಿವೃತ್ತ ಐಎಎಸ್ ಅಧಿಕಾರಿಗಳಾದ ಡಾ.ಅಶ್ವತ್ಥ್, ಡಾ.ಸುಬ್ರಮಣ್ಯಂ, ಸಾಯಿ ಚರಿತೆಯ ಕನ್ನಡ ಅನುವಾದಕರಾದ ಅನಂತರಾಂ, ಪ್ರಕಾಶ್ಸ್ವಾಮಿ, ಗೋಪಿನಾಥ್ಸ್ವಾಮಿ, ಆಂಜನೇಯರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯ ಸತೀಶ್,ಕೊಂಡೇನಹಳ್ಳಿ ನಾರಾಯಣಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಬೆಳಕಿಗೆ ಬಂದ ಸಿಲ್ಕ್ ವೇಸ್ಟ್(ಜೋಟ್) ಅವ್ಯವಹಾರ
ಹಲವಾರು ವರ್ಷಗಳಿಂದ ಅಡೆತಡೆಯಿಲ್ಲದೆ ನಗರದಲ್ಲಿ ಸಾಗಿದ್ದ ಸಿಲ್ಕ್ ವೇಸ್ಟ್(ಜೋಟ್) ಅವ್ಯವಹಾರ ರೇಷ್ಮೆ ನೂಲು ಬಿಚ್ಚಾಣಿಕೆದಾರರು ನಗರ ಪೊಲೀಸ್ ಠಾಣೆ ಎದುರು ಭಾನುವಾರ ಸಂಜೆ ದಿಢೀರ್ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಹೊರಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರದ ನಿವಾಸಿ ಮನ್ಸೂರ್ ಎಂಬುವರನ್ನು ಜೋಟ್ ಉದ್ಯಮಿಗಳು ಥಳಿಸಿ ಜೊಟ್ ಕಸಿದುಕೊಂಡಿದ್ದರು. ಜೋಟ್ ಮುಕ್ತ ಖರೀದಿಗೆ ಅವಕಾಶ ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದ ಹಿನ್ನೆಲೆಯಲ್ಲಿ ನಗರದ ಪೋಲೀಸ್ ಠಾಣೆಗೆ ಸೋಮವಾರ ಜೋಟ್ ಖರೀದಿದಾರರಾದ ಎಸ್.ಪಿ.ಎಸ್. ಅನ್ಸರ್, ಮೆಹಬೂಬ್, ಶಾಯಿದ್, ಮಧು ಅವರನ್ನು ಕರೆಸಿ ವಿಚಾರಣೆ ನಡೆಸಿದರು.
ಈ ಸಂದರ್ಭದಲ್ಲಿ ರೀಲರುಗಳು ಮತ್ತು ಜೋಟ್ ಖರೀದಿದಾರರ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರತಿ ವಾರ ಶಿಡ್ಲಘಟ್ಟದಲ್ಲಿ ಎರಡೂವರೆ ಟನ್ ಜೋಟ್ ಉತ್ಪಾದನೆಯಾಗುತ್ತದೆ. ಜೋಟ್ ಖರೀದಿದಾರರು ತಮ್ಮದೇ ಕೂಟವನ್ನು ರಚಿಸಿಕೊಂಡು ಒಂದು ಕೆಜಿಗೆ 200 ರೂಗಳಷ್ಟು ವ್ಯತ್ಯಾಸ ಇರುವಂತೆ ಕಡಿಮೆ ಬೆಲೆಗೆ ಖರೀದಿಸುತ್ತಾ ರೀಲರುಗಳಿಗೆ ಲಕ್ಷಾಂತರ ರೂಗಳನ್ನು ವಂಚಿಸುತ್ತಿದ್ದಾರೆ. ಬೇರೆ ಊರಿನಿಂದ ಬರುವ ಜೋಟ್ ಖರೀದಿದಾರರನ್ನು ಬೆದರಿಸಿ ಹೊರದಬ್ಬುವ ಮೂಲಕ ತಮ್ಮದೇ ಆದಿಪತ್ಯವನ್ನು ಸ್ಥಾಪಿಸಿ ವಂಚನೆ ಎಸಗುತ್ತಿದ್ದಾರೆ ಎಂದು ರೀಲರುಗಳು ಈ ಸಂದರ್ಭದಲ್ಲಿ ಆರೋಪಿಸಿದರು.
ಈ ಸಂದರ್ಭದಲ್ಲಿ ಅಕ್ರಮವಾಗಿ ಕೂಟ ರಚಿಸಿಕೊಂಡು, ಸ್ವಯಂಘೋಷಿತ ದರವನ್ನು ನಿಗದಿಗೊಳಿಸಿ ಜೋಟ್ ಖರೀದಿ ಮಾಡುವ ಮೂಲಕ ಹಗಲು ದರೋಡೆ ಮಾಡುತ್ತಿದ್ದಾರೆ. ಕೂಡಲೇ ಅವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕು ಎನ್ನುತ್ತಾ ಠಾಣೆಯ ಮುಂದೆ ಜನರು ಜಮಾಯಿಸಿದಾಗ ಪೊಲೀಸರು ಜನರನ್ನು ಚದುರಿಸಿದರು.
ಮುಕ್ತವಾಗಿ ಯಾರು ಬೇಕಾದರೂ ವ್ಯಾಪಾರ ಮಾಡಬಹುದು. ಯಾರಿಗೂ ಯಾರೂ ಅಡ್ಡಿಪಡಿಸುವಂತಿಲ್ಲ ಎಂದು ಜೋಟ್ ಖರೀದಿದಾರರಿಗೆ ತಾಕೀತು ಮಾಡಿ ಮುಚ್ಚಳಿಕೆ ಬರೆಸಿಕೊಂಡು ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸಮೂರ್ತಿ ಎಚ್ಚರಿಕೆ ನೀಡಿದರು.
ಹಲವಾರು ವರ್ಷಗಳಿಂದ ನಗರದಲ್ಲಿ ನಡೆಯುತ್ತಿದ್ದ ಲಕ್ಷಾಂತರ ರೂಗಳ ಈ ದಂದೆಯ ಕುರಿತಂತೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಒಂದೆಡೆ ರೈತರು ಗೂಡಿಗೆ ಬೆಲೆ ಬರದೆ ಸಂಕಷ್ಟದಲ್ಲಿದ್ದಾರೆ, ಮತ್ತೊಂದೆಡೆ ರೀಲರುಗಳು ರೇಷ್ಮೆಗೆ ಬೆಲೆ ಸಿಗದೆ ನಲುಗುತ್ತಿದ್ದಾರೆ. ಇವೆರಡರ ನಡುವೆ ರೇಷ್ಮೆ ತ್ಯಾಜ್ಯ(ಜೋಟ್) ನಿಂದ ಕೇವಲ ವಾರಕ್ಕೆ ಸುಮಾರು 5 ರಿಂದ 6 ಲಕ್ಷ ರೂಗಳಷ್ಟು ಹಣ ದೋಚುತ್ತಿರುವುದು ಈಗಷ್ಟೆ ಬೆಳಕಿಗೆ ಬಂದಿರುವುದು ರೈತರು ಮತ್ತು ರೀಲರುಗಳಿಗೆ ನುಂಗಲಾಗದ ತುತ್ತಾಗಿದೆ.
ಸಮೀವುಲ್ಲ, ಅಬ್ದುಲ್ ಅಜೀಜ್, ರಹಮಾನ್, ಅನ್ಸರ್, ಮಹಬೂಬ್ ಪಾಷ, ಎಕ್ಬಾಲ್, ಅಕ್ಮಲ್ ಮತ್ತಿತರ ರೀಲರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಕಂದಮ್ಮಗಳು ಕರೆಯುತ್ತಿವೆ ರಕ್ಷಣೆಗಾಗಿ – ಭಾಗ 3
ಕಾನೂನಿನ ಮೊರೆಹೋಗಿ
ಲೈಂಗಿಕ ಹಿಂಸಾಚಾರವನ್ನು ಸಾಮಾಜಿಕ ಕಳಂಕವೆಂದು ಪರಿಗಣಿಸಿ ಯಾರಿಗೂ ತಿಳಿಯದಂತೆ ನಿಭಾಯಸಲು ಪ್ರಯತ್ನಿಸುವುದು ಬಹಳ ಅಪಾಯಕಾರಿ. ಇಂತಹ ಕೃತ್ಯವೆಸಗಿದವರು ನಮಗೆ ಎಷ್ಟೇ ಆತ್ಮೀಯರಾಗಿದ್ದರೂ ಪೋಲೀಸರಿಗೆ ದೂರು ಕೊಡಲೇಬೇಕು. ಹಾಗೆ ಮಾಡದಿದ್ದರೆ ನಾವು ಅಂತಹ ವ್ಯಕ್ತಿಗಳಿಗೆ ಇತರ ಮಕ್ಕಳ ಮೇಲೆ ಮತ್ತೆ ಹಿಂಸಾಚಾರವೆಸಗುವುದಕ್ಕೆ ಧೈರ್ಯ, ಪ್ರೋತ್ಸಾಹವನ್ನು ಕೊಟ್ಟಂತಾಗುತ್ತದೆ. ನಂತರ ನಡೆಯುವ ಅಂತಹ ಪಾಪಕೃತ್ಯಗಳÀಲ್ಲಿ ನಮ್ಮ ಪಾಲೂ ಸೇರಿಕೊಳ್ಳುತ್ತದೆ.
ಮಕ್ಕಳ ಮೇಲೆ ಇಂತಹ ಹಿಂಸಾಚಾರ ಮಾಡುವುದು ಮಾನಸಿಕ ವಿಕೃತಿ. ಹಾಗಾಗಿ ವಯಸ್ಸು, ಸಂಬಂಧ ಮುಂತಾದ ಕಾರಣಗಳಿಗೆ ಪೋಲೀಸರಿಗೆ ದೂರು ಕೊಡುವುದು ಸಾಧ್ಯವೇ ಇಲ್ಲ ಅನ್ನಿಸಿದರೆ ಅವರನ್ನು ತಜ್ಞರ ಬಳಿ ಮಾನಸಿಕ ಚಿಕಿತ್ಸೆಗಾದರೂ ಒಳಪಡಿಸಲೇಬೇಕು.
ಯಾವುದೇ ಸಂದರ್ಭದಲ್ಲಿಯೂ ಕಾನೂನನ್ನು ನಮ್ಮ ಕೈಗೆತೆಗೆದುಕೊಂಡು ಅತ್ಯಾಚಾರಿಯನ್ನು ನಾವೇ ಶಿಕ್ಷಿಸುವ ಪ್ರಯತ್ನ ಮಾಡಬಾರದು. ಇದು ಅವರಿಗೆ ಎಚ್ಚರಿಕೆಯ ಸೂಚನೆಯಾಗಿ ಅವರು ಸಾಕ್ಷಗಳನ್ನು ನಾಶಪಡಿಸಬಹುದು. ಅಥವಾ ಅವರೇ ನಮ್ಮ ಮೇಲೆ ಪ್ರತ್ಯಾರೋಪಹೊರಿಸಿ ಅನಗತ್ಯ ಕಿರಿಕಿರಿ ನೀಡಬಹುದು. ಇದಕ್ಕಿಂತ ಹೆಚ್ಚಿನ ಅಪಾಯವೆಂದರೆ ಮಕ್ಕಳನ್ನು ನಿರಂತರವಾಗಿ ಹೆದರಿಸುತ್ತಾ ಅವರಿಗೆ ಸಾಮಾನ್ಯ ಸಾಮಾಜಿಕ ಬದುಕು ಸಾಧ್ಯವಾಗದಂತೆ ಮಾಡಬಹುದು. ಹಾಗಾಗಿ ತಕ್ಷಣ ಕಾನೂನು ಪಾಲಕರ ಮೊರೆಹೋಗಬೇಕು.
ಮಕ್ಕಳನ್ನು ನಿಭಾಯಿಸುವುದು ಹೇಗೆ?
1. ಒಮ್ಮೆ ಪೋಲಿಸರಿಗೆ ದೂರು ನೀಡಿದರೆ ತಮ್ಮ ಕರ್ತವ್ಯ ಮುಗಿಯಿತು ಎಂದು ಪೋಷಕರು ಸುಮ್ಮನಿರುವಂತಿಲ್ಲ. ಕಾನೂನಿಗೆ ಅದರ ಕೆಲಸವನ್ನು ಮಾಡಲು ಬಿಟ್ಟು ಮಕ್ಕಳ ಜೀವನವನ್ನು ರೂಪಿಸುವತ್ತ ಪೋಷಕರು ತಕ್ಷಣ ಗಮನ ಹರಿಸಬೇಕು.
2. ಮೊದಲು ಪೋಷಕರು ತಮ್ಮ ಅಸಹಾಯಕತೆ, ಅವಮಾನ, ಕೋಪ, ಹತಾಷೆಗಳನ್ನು ನಿಭಾಯಿಸುವುದನ್ನು ಕಲಿಯಬೇಕು. ಮಗುವಿನ ಎದುರಿಗೆ ಇವನ್ನೆಲ್ಲಾ ವ್ಯಕ್ತಪಡಿಸುವುದರಿಂದ ಅದರ ಮನಸ್ಸಿನ ಮೇಲಾಗಬಹುದಾದ ಪರಿಣಾಮಗಳತ್ತ ಹೆಚ್ಚು ಗಮನಹರಿಸಬೇಕು. ಪರಿಸ್ಥಿತಿಯನ್ನು ನಿರ್ವಹಿಸುವುದು ಕಷ್ಟವೆನ್ನಿಸುತ್ತಿದ್ದರೆ ಪೋಷಕರು ತಮಗಾಗಿ ಮನೋಚಿಕಿತ್ಸಕರ ಸಹಾಯ ಪಡೆಯಲು ಹಿಂಜರಿಯಬಾರದು.
3. ಮನೆಯಲ್ಲಿ ಮಗುವಿಗೆ ಸಹಜ ವಾತಾವರಣವನ್ನು ಕಲ್ಪಿಸಿ, ಅದು ತನ್ನ ಭಾವನೆಗಳನ್ನು ಹಂಚಿಕೊಳ್ಳಲು ಉತ್ತೇಜಿಸಬೇಕು. ಮಗು ತನ್ನದೇ ಆದ ರೀತಿಯಲ್ಲಿ ತನಗೆ ಬೇಕಾದವರೊಡನೆ ವಿಷಯಗಳನ್ನು ಹಂಚಿಕೊಳ್ಳಲು ಅವಕಾಶಕೊಡಬೇಕು. ಅದರ ಮಾತುಗಳನ್ನು ಪ್ರೀತಿಯಿಂದ ಕೇಳಬೇಕು ಮತ್ತು ಹೆಚ್ಚು ಮಾತನಾಡಲು ಉತ್ತೇಜಿಸಬೇಕು.
4. ಯಾವುದೇ ಕಾರಣಕ್ಕೂ ಹಿಂಸಾಚಾರಕ್ಕೊಳಪಟ್ಟ ಮಕ್ಕಳನ್ನು ಶಿಕ್ಷಿಸಬಾರದು. “ಇದರಲ್ಲಿ ನಿನ್ನದೇನೂ ತಪ್ಪಿಲ್ಲ. ಹಾಗಾಗಿ ನೀನು ಭಯ ಅವಮಾನದಿಂದ ನರಳಬೇಕಿಲ್ಲ. ನೀನು ಮೊದಲಿನಂತೆಯೇ ನಮಗೆ ಪ್ರೀತಿಪಾತ್ರ. ಎಲ್ಲಾ ಸಂದರ್ಭಗಳಲ್ಲಿಯೂ ನಿನ್ನನ್ನು ಸಂಪೂರ್ಣವಾಗಿ ನಂಬುತ್ತೇವೆ ಮತ್ತು ನಿನ್ನ ಬೆಂಬಲಕ್ಕೆ ನಾವಿದ್ದೇವೆ” ಎನ್ನುವ ಭರವಸೆಯನ್ನು ಮಕ್ಕಳಲ್ಲಿ ಮೂಡಿಸಬೇಕು.
5. ಸಾಧ್ಯವಾದಷ್ಟು ಬೇಗ ಮಕ್ಕಳು ಶಾಲೆ ಮತ್ತಿತರ ದೈನಂದಿನ ಕಾರ್ಯಗಳಿಗೆ ಹಿಂತಿರುಗಲು ಉತ್ತೇಜನ ನೀಡಬೇಕು. ಅವರ ದೈಹಿಕ ಆರೋಗ್ಯದ ಸುಧಾರಣೆ ಪ್ರಥಮ ಆದ್ಯತೆಯಾಗಬೇಕು. ಸಾಮಾಜಿಕ ಸಂದರ್ಭಗಳನ್ನು ನಿಭಾಯಿಸುವ ತರಬೇತಿ ನೀಡಲು ಆಪ್ತಸಲಹೆ ಮತ್ತು ಮನೋಚಿಕಿತ್ಸೆಗಳ ಮೊರೆಹೋಗಬೇಕು. ಇದನ್ನು ಆದಷ್ಟು ಬೇಗ ಮಾಡಬೇಕು. ಗಾಯ ಆಳವಾದಷ್ಟೂ ಮಾಯಲು ಹೆಚ್ಚಿನ ಸಮಯ ಬೇಕಾಗುತ್ತದೆ. ಪರಿಸ್ಥಿತಿ ಸ್ವಲ್ಪವೇ ಉತ್ತಮಗೊಂಡರೂ ಮಕ್ಕಳಿಗೆ ಅವರ ಧೈರ್ಯ ಮತ್ತು ಗಟ್ಟಿತನಕ್ಕಾಗಿ ಮುಕ್ತವಾಗಿ ಪ್ರಶಂಸಿಸಿ ಅವರ ಆತ್ಮಸ್ಥೈರ್ಯನ್ನು ಹೆಚ್ಚಿಸಬೇಕು.
6. ಲೈಂಗಿಕ ಹಿಂಸಾಚಾರ ಕುಟುಂಬದ ಜನರಿಂದಲೇ ಆಗಿದ್ದರೆ ಅವರನ್ನು ತಕ್ಷಣ ಮನೆಯಿಂದ ಬೇರ್ಪಡಿಸಬೇಕು. ಮನೆಯಲ್ಲಿಯೇ ಇರುವ ಮಧ್ಯವಯಸ್ಸಿನ ವಿದುರ ಅಥವಾ ವಿಧವೆಯರು ಇಂತಹ ಪ್ರಯತ್ನ ಮಾಡಿದರೆ ಅವರಿಗೆ ತಮ್ಮ ಲೈಂಗಿಕ ಆಸೆಗಳನ್ನು ತೀರಿಸಿಕೊಳ್ಳುವ ಇತರ ದಾರಿಗಳನ್ನು ತೆರೆಯಬೇಕು.
7. ಇಂತಹದೇ ಉದ್ದೇಶಗಳನ್ನಿಟ್ಟುಕೊಂಡು ಕೆಲಸ ಮಾಡುವ ಸಂಘಸಂಸ್ಥೆಗಳಿದ್ದರೆ ಅವರ ಸಹಾಯಪಡೆಯಬಹುದು. ಮಗುವನ್ನು ಯಾವುದೇ ಹಂತದಲ್ಲಿಯೂ ಸ್ನೇಹಿತರಿಂದ, ಸಮಾಜದಿಂದ ವಿಮುಖಗೊಳಿಸಬಾರದು.
ಭಯ ಅನಗತ್ಯ
ಇವೆಲ್ಲವನ್ನೂ ಓದಿದ ಪೋಷಕರು ಅದರಲ್ಲೂ ಹೆಚ್ಚಾಗಿ ಹೆಣ್ಣು ಮಕ್ಕಳ ತಂದೆತಾಯಿಗಳು ಭಯಪಟ್ಟುಕೊಳ್ಳಬಹುದು. ಸಂಪೂರ್ಣ ನಿರಾಶರಾಗುವುದಕ್ಕೆ ಯಾವುದೇ ಕಾರಣಗಳಿಲ್ಲ. ನಮ್ಮ ಸುತ್ತಲೂ ಇರುವ ಕ್ರೂರಿಗಳು ಕೆಲವೇ ಜನರು ಮಾತ್ರ. ಹೆಚ್ಚಿನ ಜನರಲ್ಲಿ ನಾವು ಖಂಡಿತಾ ಭರವಸೆಯನ್ನಿಡಬಹುದು. ಪೋಷಕರು ಮಕ್ಕಳಿಗೆ ಅವರ ವಯಸ್ಸಿಗನುಗುಣವಾಗಿ ಶಿಕ್ಷಣವನ್ನು ನೀಡುತ್ತಾ, ಮನೆಯಲ್ಲಿ ಮಕ್ಕಳು ತಮ್ಮನ್ನು ಮುಕ್ತವಾಗಿ ತೆರೆದುಕೊಳ್ಳಲು ವಾತಾವರಣವನ್ನು ಕಲ್ಪಿಸಿದರೆ ಹೆಚ್ಚಿನ ಸಮಸ್ಯೆಗಳು ಪರಿಹಾರಗೊಳ್ಳುತ್ತವೆ. ಸ್ವಲ್ಪ ಸಾಮಾನ್ಯ ಜ್ಞಾನ, ಸ್ವಲ್ಪ ಎಚ್ಚರಿಕೆ, ಸಂಪೂರ್ಣ ಕಾಳಜಿ ಮತ್ತು ಸೌಹಾರ್ಧಯುತ ಕೌಟುಂಬಿಕ ಪರಿಸರ ನಮ್ಮ ಮಕ್ಕಳ ಸುಖಿಜೀವನಕ್ಕೆ ಹೆದ್ದಾರಿಯಾಗಬಲ್ಲದು.
ಕಾಲಕ್ಕೆ ತಕ್ಕ ಶಿಕ್ಷಣ
ಮಕ್ಕಳಿಗೆ ಅವರ ವಯಸ್ಸಿಗನುಗುಣವಾಗಿ ಶಿಕ್ಷಣವನ್ನು ನೀಡಬೇಕು. ಇದನ್ನು ಲೈಂಗಿಕ ಶಿಕ್ಷಣ, ವಯಸ್ಕರ ಶಿಕ್ಷಣ, ವೈವಾಹಿಕ ಶಿಕ್ಷಣ-ಹೀಗೆ ಯಾವುದೇ ಹೆಸರಿನಿಂದ ಬೇಕಾದರೂ ಕರೆದುಕೊಳ್ಳಿ. ಅದನ್ನು ಪೋಷಕರು ತಾವೇ ಕೊಡುವುದು ಅಥವಾ ವೈದ್ಯರಿಂದ ಕೊಡಿಸುವುದು ಬಹಳ ಅಗತ್ಯ. ಇದರ ಸ್ಥೂಲ ರೂಪರೇಷೆ ಹೀಗಿರಬಹುದು.
1. ಸುಮಾರು ಒಂದು ವರ್ಷದಿಂದ ಮಲಮೂತ್ರಗಳನ್ನು ವಿಸರ್ಜಿಸುವ ರೀತಿ ಮತ್ತು ಶುಚಿತ್ವನ್ನು ಕಾಪಾಡಿಕೊಳ್ಳುವ ರೀತಿಗಳ ತಿಳುವಳಿಕೆ ನೀಡಬೇಕು.
2. ಸುಮಾರು ಎರಡು ವರ್ಷಗಳ ನಂತರ ದೇಹದ ಅಂಗಾಂಗಗಳ ಬಗೆಗೆ ಅವುಗಳ ಮೂಲ ಹೆಸರುಗಳನ್ನು ಹೇಳಿ ವಿವರಿಸಬೇಕು.
3. ನಾಲ್ಕೈದು ವರ್ಷದ ಹೊತ್ತಿಗೆ ಮಗುವಿಗೆ ಸಾರ್ವಜನಿಕವಾದ್ದು ಮತ್ತು ಖಾಸಗಿಯಾದದ್ದರ ಬಗೆಗೆ ಪೂರ್ಣ ಜ್ಞಾನ ನೀಡುತ್ತಾ ಅವುಗಳನ್ನು ನಿಭಾಯಿಸುವ ವಿಧಾನಗಳನ್ನು ಹೇಳಿಕೊಡಬೇಕು.
4. ಏಳೆಂಟು ವರ್ಷದ ಹೊತ್ತಿಗೆ ಮಗುವಿಗೆ ಸ್ಪರ್ಶದ ಬಗೆಗೆ ತಿಳುವಳಿಕೆ ನೀಡಬೇಕು. ಅನುಚಿತವಾದದ್ದನ್ನು ಗುರುತಿಸುವ ಬಗೆ, ಅದನ್ನು ಪ್ರತಿಭಟಿಸುವ ರೀತಿಯ ವಿವರಣೆ ನೀಡಬೇಕು.
5. ಹದಿವಯಸ್ಸಿನ ಮಕ್ಕಳಿಗೆ ಲೈಂಗಿಕ ಕ್ರಿಯೆಯ ಪೂರ್ಣ ವಿವರಗಳನ್ನು ನೀಡಿದ ಮೇಲೆ, ಅತ್ಯಾಚಾರ ಮತ್ತಿತರ ಲೈಂಗಿಕ ವಿಕಾರಗಳ ಬಗೆಗೂ ತಿಳುವಳಿಕೆ ನೀಡಬೇಕು. ಅವರು ಅತ್ಯಾಚಾರದ ದೃಶ್ಯಗಳನ್ನು ಟೀವಿ, ಸಿನಿಮಾಗಳಲ್ಲಿ ನೋಡುವ ಸಾಧ್ಯತೆಗಳಿರುತ್ತವೆ. ಅಥವಾ ಪತ್ರಿಕೆ, ಪುಸ್ತಕಗಳಲ್ಲಿ ಇಂತಹ ಘಟನೆಗಳ ಬಗೆಗೆ ಓದಬಹುದು. ಹಾಗಾಗಿ ಇದರ ಬಗೆಗೆ ಕಾನೂನು ಕಟ್ಟಳೆಗಳ ಸಮೇತ ವಿವರಿಸಿದರೆ ಮುಂದಿನ ಜೀವನಕ್ಕೆ ತುಂಬಾ ಸಹಕಾರಿ. ಹೆಣ್ಣು ಮಕ್ಕಳಿಗೆ ಇಂತಹ ಸಂದರ್ಭಗಳನ್ನು ಆಹ್ವಾನಿಸಿಕೊಳ್ಳದಂತೆ ಎಚ್ಚರಿಸಬೇಕು.
6. ಕಂಪ್ಯೂಟರ್, ಮೊಬೈಲ್, ಅಂತರ್ಜಾಲ ಮೊದಲಾದವುಗಳನ್ನು ಸರಿಯಾದ ರೀತಿಯಲ್ಲಿ ಬಳಸುವ ಶಿಕ್ಷಣ ನೀಡಬೇಕು.
ಇವೆಲ್ಲದರ ಬಗೆಗೆ ಸಂಪೂರ್ಣ ವಿವರಣೆ ನೀಡಲು ವೈಜ್ಞಾನಿಕವಾಗಿ ಬರೆಯಲ್ಪಟ್ಟ ಸಾಕಷ್ಟು ಪುಸ್ತಕಗಳು ಸಿಗುತ್ತವೆ. ಅಥವಾ ಅಂತರ್ಜಾಲದಲ್ಲಿ ಸಿಗುವ ಉತ್ತಮ ಮಾಹಿತಿಯನ್ನು ಪೋಷಕರು ಬಳಸಿಕೊಳ್ಳಬಹುದು.
ಮುಗಿಯಿತು.
ವಸಂತ್ ನಡಹಳ್ಳಿ
ಪಿಂಚಣಿ ಹಣವನ್ನು ನೀಡಿಲ್ಲವೆಂದು ವೃದ್ದರು ಮತ್ತು ಅಂಗವಿಕಲರ ಪ್ರತಿಭಟನೆ
ಕಳೆದ ಐದು ತಿಂಗಳಿನಿಂದ ನಮಗೆ ಪಿಂಚಣಿ ಹಣವನ್ನು ನೀಡಿಲ್ಲವೆಂದು ನಗರದ ಸಿದ್ದಾರ್ಥನಗರ ಕಾಲೋನಿಯ ವೃದ್ದರು, ದಲಿತ ಸೇನೆಯ ಕಾರ್ಯಕರ್ತರೊಂದಿಗೆ ಅಂಚೆ ಕಚೇರಿಯ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಕಾಂಗ್ರೆಸ್ ಭವನದ ರಸ್ತೆಯಲ್ಲಿರುವ ಮುಖ್ಯ ಅಂಚೆ ಕಚೇರಿಯ ಬಳಿಯಲ್ಲಿ ಪ್ರತಿಭಟನೆ ನಡೆಸಿದ ವೃದ್ದರು ಹಾಗೂ ಅಂಗವಿಕಲರು, ಕಳೆದ ಐದು ತಿಂಗಳಿನಿಂದ ನಮಗೆ ಪಿಂಚಣಿ ಹಣವನ್ನು ನೀಡುತ್ತಿಲ್ಲ, ಪ್ರತಿದಿನವೂ ಅಂಚೆ ಕಚೇರಿಗೆ ಅಲೆದಾಡುವಂತಾಗಿದೆ, ತಾಲ್ಲೂಕು ಕಚೇರಿಯಲ್ಲಿರುವ ಉಪಖಜಾನೆಗೆ ಹೋದರೆ, ಅಂಚೆ ಕಚೇರಿಗೆ ಕಳುಹಿಸಿದ್ದೇವೆ ಎನ್ನುತ್ತಿದ್ದಾರೆ, ಇಲ್ಲಿಗೆ ಬಂದರೆ, ಬ್ಯಾಂಕುಗಳಿಂದ ಚೆಕ್ಕುಗಳು ಬಂದಿಲ್ಲವೆನ್ನುತ್ತಾರೆ, ಜೀವನಕ್ಕೆ ತುಂಬಾ ಕಷ್ಟಕರವಾಗಿದೆ ಅನಾರೋಗ್ಯದಿಂದ ಆಸ್ಪತ್ರೆಗೆ ಹೋಗಲು ಹಣವಿಲ್ಲವೆಂದು ಕೆಲವು ಮಂದಿ ವೃದ್ದರು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು.
ಇದೇ ವೇಳೆ ಮಾತನಾಡಿದ ದಲಿತ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ್, ಪ್ರತಿತಿಂಗಳು ಅವರ ಪಿಂಚಣಿ ಹಣವನ್ನು ನೀಡದೆ ಇರುವುದರಿಂದ ವೃದ್ದರು, ಅಂಗವಿಕಲರು, ಪದೇ ಪದೇ ಅಂಚೆ ಕಚೇರಿಗೆ ಅಲೆದಾಡುವಂತಾಗಿದೆ, ಸರ್ಕಾರದ ಆದೇಶದಂತೆ ಖಾತೆಯನ್ನು ತೆರೆದು ಅವರ ಪಿಂಚಣಿ ಹಣವನ್ನು ಖಾತೆಗಳಿಗೆ ಜಮಾ ಮಾಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಖಾತೆಗಳನ್ನು ಮಾಡಿಸಿರುವ ಫಲಾನುಭವಿಗಳಿಗೂ ಪಿಂಚಣಿಯನ್ನು ಜಮಾ ಮಾಡದೆ ಇರುವುದರಿಂದ ತೀರಾ ವಯಸ್ಸಾದ ವೃದ್ದರು, ಕಚೇರಿಯ ಬಳಿಗೂ ಬರಲು ಸಾಧ್ಯವಾಗದೆ ಪರದಾಡುವಂತಾಗಿದೆ. ಪಿಂಚಣಿ ಹಣವನ್ನು ಮನೆಗಳ ಬಳಿಗೆ ತಂದು ಕೊಡಬೇಕು. ಹಣವನ್ನು ಖಾತೆಗೆ ಜಮಾ ಮಾಡುವ ಬದಲಿಗೆ ನೇರವಾಗಿ ಫಲಾನುಭವಿಗಳಿಗೆ ತಲುಪಿಸುವಂತಹ ಕೆಲಸವನ್ನು ಅಂಚೆ ಕಚೇರಿಯ ಸಿಬ್ಬಂದಿ ಮಾಡಬೇಕು ಎಂದು ಒತ್ತಾಯಿಸಿದರು.
ಅಂಚೆ ಕಚೇರಿಯ ಮುಖ್ಯಪೋಸ್ಟ್ ಮಾಸ್ಟರ್ ಪ್ರಭಾವತಿ ಮಾತನಾಡಿ, ಖಜಾನೆಯಿಂದ ಚೆಕ್ಕುಗಳು ಬಂದ ನಂತರ ಅವುಗಳನ್ನು ಬ್ಯಾಂಕುಗಳಿಗೆ ಕಳುಹಿಸಿದ ನಂತರ ಬರುವುದು ತಡವಾಗಿದೆ, ಈಗಾಗಲೇ ಮಾರ್ಚಿ ಮತ್ತು ಏಪ್ರಿಲ್ ತಿಂಗಳ ಪಿಂಚಣಿಗಳನ್ನು ಆಯಾ ಪೋಸ್ಟ್ ಮ್ಯಾನ್ಗಳ ವಶಕ್ಕೆ ನೀಡಲಾಗಿದೆ. ಅವರು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವಂತಹ ಕೆಲಸ ಮಾಡುತ್ತಾರೆ, ಉಳಿದ ಹಣವನ್ನು ಒಂದು ವಾರದೊಳಗೆ ವಿಲೇವಾರಿ ಮಾಡಲಾಗುತ್ತದೆ, ಪೋಸ್ಟ್ ಮ್ಯಾನ್ಗಳಿಗೆ ಸ್ಟೀಡ್ ಪೋಸ್ಟ್ಗಳು ಸೇರಿದಂತೆ ಹಲವು ಕಾರ್ಯಒತ್ತಡಗಳು ಹೆಚ್ಚಾಗಿದ್ದು, ನಾಗರೀಕರು ಸಹಕಾರ ನೀಡಬೇಕು ಎಂದು ಪ್ರತಿಭಟನೆ ಮಾಡುತ್ತಿದ್ದ ವೃದ್ದರನ್ನು ಸಮಾಧಾನ ಪಡಿಸಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು.
ಎಸ್.ಎಂ.ರಮೇಶ್, ಮಂಜುನಾಥ್, ಬಾಲಯ್ಯ, ಚಂದ್ರು, ಮಧುಕುಮಾರ್, ಸುಭ್ರಮಣಿ, ಬಾಲಕೃಷ್ಣ, ಟಿ.ಆರ್.ದೇವರಾಜು, ಪ್ರಕಾಶ್, ಗಂಗಾಧರ, ವೆಂಕಟರಾಜು, ಮುನಿರಾಜು, ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಪುಟಾಣಿ ಸಾಹಿತಿಗಳ ಶಾಮಂತಿಗೆ ಪ್ರಶಸ್ತಿ
ತಾಲ್ಲೂಕಿನ ಕನ್ನಮಂಗಲದ ‘ಶಾಮಂತಿ’ಗೆ ಪ್ರಶಸ್ತಿ ಲಭಿಸಿದೆ. ಶಿವಮೊಗ್ಗದ ಕರ್ನಾಟಕ ಸಂಘದ 2014 ನೇ ಸಾಲಿನ ಮಕ್ಕಳ ಸಾಹಿತ್ಯ ಪ್ರಕಾರಕ್ಕೆ ನಾ.ಡಿಸೋಜ ಪ್ರಶಸ್ತಿ ಲಭಿಸಿದೆ.
‘ಶಾಮಂತಿ’ಯು ತಾಲ್ಲೂಕಿನ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಬರಹಗಳ ಪುಸ್ತಕ. ಆ ಶಾಲೆಯಿಂದ ಹೊರಬರುತ್ತಿರುವ ನಾಲ್ಕನೇ ಪುಸ್ತಕವಿದು. ಇದರ ಹೆಸರು ‘ಶಾಮಂತಿ-– 4’. ಇದರಲ್ಲಿ ಆ ಮಕ್ಕಳು ಬರೆದಿರೋ 52 ಬರಹಗಳಿವೆ. ಪುಸ್ತಕದ ಕುರಿತು ದೊಡ್ಡವರು ಬರೆದಿರುವ ಅಭಿಪ್ರಾಯಗಳನ್ನೂ ಸಂಗ್ರಹಿಸಲಾಗಿದೆ. ಮಕ್ಕಳಿಂದ ಬರೆಸಿ ಅದನ್ನು ಚಿಣ್ಣರಿಗೆ ಇಷ್ಟವಾಗುವಂತೆ ಹೊರ ತಂದಿರುವುದು ಸಂಪಾದಕ ಎಸ್. ಕಲಾಧರ. ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಅವರು ಪುಸ್ತಕದ ಮುಖಪುಟ, ಒಳಪುಟಗಳ ವಿನ್ಯಾಸವನ್ನು ಮಾಡಿದ್ದಾರೆ. ಇವರ ಕೆಲಸವನ್ನು ಪ್ರೋತ್ಸಾಹಿಸಿರೋದು ಸಹಶಿಕ್ಷಕರು ಮತ್ತು ಕನ್ನಮಂಗಲದ ಸ್ನೇಹ ಕಲಾಸಂಘ.
ಪ್ರಶಸ್ತಿ ಪ್ರಧಾನ ಸಮಾರಂಭ ಜುಲೈ 18 ರಂದು ಸಂಜೆ 5.30ಕ್ಕೆ ಶಿವಮೊಗ್ಗದ ಕರ್ನಾಟಕ ಸಂಘದ ಭವನದಲ್ಲಿ ನಡೆಯಲಿದ್ದು, ಸಾಹಿತಿ ಜಯಂತ್ ಕಾಯ್ಕಿಣಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ದೊಡ್ಡವರು ನೋಡುವ ಜಗತ್ತಿಗಿಂತ ವಿಭಿನ್ನವಾದ ಎಳೆಯರ ತಾಜಾ ಅನುಭವ ಈ ಪುಸ್ತಕದಲ್ಲಿ ಹರಡಿದೆ. ದಿನವೂ ನೋಡುವ ಮನೆ, ಶಾಲೆ, ಮೈದಾನ, ತೋಟ, ಪ್ರಾಣಿ ಪಕ್ಷಿ ಮುಂತಾದವೆಲ್ಲಾ ಇಲ್ಲಿ ಬಣ್ಣ ತಳೆದಿವೆ. ಬರೆಯೋದು ಅಂದ್ರೆ ಬರೀ ಲೇಖನ ಅಲ್ಲ. ಅಲ್ಲಿ ಕತೆ, ಪದ್ಯ ಅಷ್ಟೇ ಏಕೆ, ನಾಟಕ ಕೂಡ ಇವೆ. ಕೆಲವು ಮಕ್ಕಳು ಒಳ್ಳೊಳ್ಳೆ ಚಿತ್ರ ಬರೆದಿದ್ದಾರೆ. ಅವರ ವಯಸ್ಸು ಅಬ್ಬಬ್ಬಾ ಅಂದ್ರೆ 9ರಿಂದ 13 ವರ್ಷ ಇರಬಹುದು ಅಷ್ಟೇ.
ಶಾಮಂತಿಯಲ್ಲಿ ಮಕ್ಕಳು ಪ್ರಾಣಿ, ಪಕ್ಷಿ, ಗಿಡ, ಮರ, ಕೀಟಗಳ ಬಗ್ಗೆ ಬರೆದಿದ್ದಾರೆ. ಅಡುಗೆ, ಕೃಷಿ, ಕಣ, ದೇವಸ್ಥಾನ, ಹಬ್ಬ, ನಂಬಿಕೆಗಳು, ಪೂಜೆ, ನೋಡಿದ ಸಿನೆಮಾ, ಓದಿದ ಪುಸ್ತಕ, ಸರ್ಕಸ್ಸು, ನೋವು ನಲಿವು ದುಗುಡ ತಲ್ಲಣಗಳ ಬಗ್ಗೆಯೂ ಬರೆದಿದ್ದಾರೆ. ತಮ್ಮ ಶಾಲೆಯ ಅಂಗನವಾಡಿ ಸಹಾಯಕಿಯೊಳಗೆ ಪರಕಾಯ ಪ್ರವೇಶ ಮಾಡಿ ಆಕೆಯ ಮನಸ್ಸನ್ನು ಚಿತ್ರಿಸಿದ್ದಾರೆ. ತಾವು ನೋಡಿದ್ದು, ಆಡಿದ್ದು, ಅನುಭವಿಸಿದ್ದು, ತಿಂದಿದ್ದು, ಕುಡಿದಿದ್ದು, ಕುಣಿದಿದ್ದು, ಕೇಳಿದ್ದು ಎಲ್ಲವನ್ನೂ ಮುಚ್ಚುಮರೆಯಿಲ್ಲದೆಯೇ ಸರಾಗವಾಗಿ ಯಾವುದೇ ಹಿಂಜರಿಕೆಯಿಲ್ಲದೆ ಬರೆದಿದ್ದಾರೆ. ಓದುಗರ ಮನಸ್ಸನ್ನು ಆವರಿಸಿಕೊಳ್ಳುವ ಆಟದ ಅಂಗಳವನ್ನಾಗಿಸಿದ್ದಾರೆ.
‘ಈ ಪ್ರಶಸ್ತಿಯು ಮಕ್ಕಳ ಕ್ರಿಯಾಶೀಲತೆಗೆ ಲಭಿಸಿರುವ ಪ್ರೋತ್ಸಾಹ. ನಮ್ಮ ಶಾಲೆಯ ಮಕ್ಕಳ ಬರಹ, ಚಟುವಟಿಕೆಗೆ ಕಾರಣವಾದ ಗ್ರಾಮಸ್ಥರ ಬೆಂಬಲಕ್ಕೆ ಲಭಿಸಿರುವ ಮೆಚ್ಚುಗೆ. ಇದರಿಂದ ನಮ್ಮ ಶಾಲೆ ಹಾಗೂ ವಿದ್ಯಾರ್ಥಿಗಳಿಗೆ ಮತ್ತಷ್ಟು ಉತ್ಸಾಹ, ಹುಮ್ಮಸ್ಸು ಮೂಡಿದೆ’ ಎನ್ನುತ್ತಾರೆ ಶಿಕ್ಷಕ ಎಸ್. ಕಲಾಧರ.
ಕುಸಿಯುತ್ತಿರುವ ಆಪ್ತತೆ..
‘ಇಂಥ ಮೇಳದವರಿಂದ‘ ಒಂದೇ ಒಂದು ಆಟ, ರಸಿಕರಿಗೆ ರಸದೂಟ, ನೋಡಲು ಮರೆಯದಿರಿ ಮರೆತು ನಿರಾಶರಾಗದಿರಿ, ಇಂದೇ ಇಂಥ ಮೈದಾನದಲ್ಲಿ ಹಾಕಿದ ಭವ್ಯ, ದಿವ್ಯ ವಿದ್ಯುದ್ದೀಪಾಲಂಕೃತ ರಂಗಮಂಟಪದಲ್ಲಿ, ಇಂಥ ಪ್ರಸಂಗ, ಇಂತಿಂಥ ಕಲಾವಿದರ ಪಾತ್ರಗಳು’ ಇತ್ಯಾದಿ ಪ್ರಾಸಬದ್ಧವಾದ ಮಾತುಗಳ ಮೂಲಕ ಆಟೋರಿಕ್ಷಾಕ್ಕೆ ಕಟ್ಟಿದ ಮೈಕಿನ ಮೂಲಕ ಅಥವಾ ಮೇಳದ ಟೆಂಪೋಕ್ಕೆ ಹಾಕಿದ ಮೈಕಿನ ಮೂಲಕ ನಡೆಯಲಿರುವ ಯಕ್ಷಗಾನ ಪ್ರಸಂಗದ ಕುರಿತು ಮಾಹಿತಿ ಮತ್ತು ಆಹ್ವಾನವನ್ನು ಪೇಕ್ಷಕರಿಗೆ ನೀಡುತ್ತಿದ್ದ ಕಾಲವೊಂದಿತ್ತು, ಆದರೆ ಕಾಲ ಬದಲಾದಂತೆ ಪ್ರಚಾರದ ವೈಖರಿ ಕೂಡ ಬದಲಾಗಿದ್ದು ಅಲ್ಲದೆ ಪ್ರೇಕ್ಷಕರು ಕೂಡ ಬದಲಾಗುತ್ತಿರುವುದು ವರ್ತಮಾನದ ವಿಶೇಷ. ಆಗೆಲ್ಲ ಕಲಾವಿದರು ಮತ್ತು ಪ್ರೇಕ್ಷಕರು ನಡುವೆ ವೈಯಕ್ತಿಕ ಪರಿಚಯ, ಪರಸ್ಪರ ವಿಚಾರ ವಿನಿಮಯಗಳು ಇರುತ್ತಿದ್ದವು. ರಾತ್ರಿಯಿಡೀ ನೋಡಿದ ಆಟದ ಕುರಿತು ಚರ್ಚೆಗಳಾಗುತ್ತಿದ್ದವು, ಪ್ರೇಕ್ಷಕರಲ್ಲೂ ಕಲಾವಿದರ ಕುರಿತು (ಅವರವರದ್ದೇ ಆದ ಕಾರಣಗಳಿಂದಾಗಿ) ಅಭಿಮಾನಿ ಬಳಗಗಳು ಇದ್ದದ್ದು ನಿಜ, ಹಾಗೇ ಮೇಳಗಳ ಕುರಿತೂ ಕೂಡ, ಪ್ರೇಕ್ಷಕ ವರ್ಗ ಮೇಳದಿಂದ ಮೇಳಕ್ಕೆ ಬೇರೆಯಾಗಿರುತ್ತಿದ್ದುದೂ ಉಂಟು.
ಯಕ್ಷಗಾನ ಪ್ರದರ್ಶನ ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ‘ಸಮಯಮಿತಿ’ ಗೆ ಒಳಪಟ್ಟು ಪ್ರದರ್ಶನಗೊಳ್ಳಲು ಪ್ರಾರಂಭಿಸಿದಾಗಲೂ, ಕಲಾವಿದರು ಮತ್ತು ಪ್ರೇಕ್ಷಕರ ಸಂಬಂಧಗಳಲ್ಲಿ ಬಿರುಕುಗಳು ಸೃಷ್ಟಿಯಾದದ್ದಿಲ್ಲ, ಆದರೆ ಇತ್ತೀಚಿಗೆ ಜರುಗುತ್ತಿರುವ ಪ್ರದರ್ಶನಗಳನ್ನು ಕಂಡಾಗ ಕಂದಕ ಸೃಷ್ಟಿಯಾಗುತ್ತಿರುವುದು ಕಣ್ಣಿಗೆ ರಾಚುವಂತಿದೆ, ಕಾರಣಗಳು ಅನೇಕ ಇರಬಹುದು.
ಯಕ್ಷಗಾನದಲ್ಲಿ ಪ್ರಸ್ತುತ ಎರಡು ಬಗೆಯ ಮೇಳಗಳು, ಹವ್ಯಾಸಿ ಮೇಳಗಳು, ಇವು ಕೆಲವೊಂದು ಕಲಾವಿದರು ತಮ್ಮ ಬಿಡುವಿನ ವೇಳೆಯಲ್ಲಿ ಅಂದರೆ ವೃತ್ತಿನಿರತ ಮೇಳಗಳಲ್ಲಿ ಕೆಲಸವಿರದ ಸಮಯದಲ್ಲಿ ತಮ್ಮದೆ ಆದ ಒಂದು ಗುಂಪಿನೊಂದಿಗೆ ತಿರುಗಾಟ ಮಾಡುವುದು.
ಇನ್ನೊಂದು ವೃತ್ತಿ ನಿರತಮೇಳಗಳು ಇವುಗಳಲ್ಲಿ ಕೆಲವು, ಕೇವಲ ಹರಕೆ ಹೊತ್ತವರಿಗೆ ಮೀಸಲಾಗಿವೆ, ಹರಕೆ ಹೊತ್ತವರಿಗೆ ಹರಕೆ ತೀರಿದರೆ ಸರಿ. ಹೇಗೂ ಹರಕೆ ಬಯಲಾಟವೆಂದು ಕಲಾವಿದರು ತಮ್ಮಿಷ್ಟದಂತೆ ಪಾತ್ರ ಮಾಡಿ ಹೋದರಾಯಿತೆಂದು ಭಾವಿಸಿ ಪಾತ್ರ ನಿರ್ವಹಸಿದರೂ ಪ್ರಶ್ನಿಸಲು ಪ್ರೇಕ್ಷಕರು ಮುಂದಾಗುವುದಿಲ್ಲ. ಕಾರಣ ಆಟ ಆಡಿಸುವವರೇ ಬೇರೆ, ನೋಡುವವರೇ ಬೇರೆ ಉಳಿದ ವೃತ್ತಿನಿತರ ಮೇಳಗಳು ಮೊದಲಿನ ಹಾಗೆ ತಾವೇ ಖುದ್ಧಾಗಿ ಯಾವುದೇ ಪ್ರದರ್ಶನ ಏರ್ಪಡಿಸಿ, ಅದರ ಲಾಭ – ನಷ್ಟಗಳಿಗೆ ಭಾದ್ಯರಾಗುವುದಕ್ಕೆ ಬದಲಾಗಿ ಗುತ್ತಿಗೆದಾರರಿಗೆ ಪ್ರದರ್ಶನಗಳನ್ನು ಒಪ್ಪಿಸಿ ನಿಶ್ಚಿಂತರಾಗುವುದೇ ಅಧಿಕವಾಗುತ್ತಿದೆ. ಇಲ್ಲಿ ನಷ್ಟದ ಪ್ರಶ್ನೆ ಮೇಳಕ್ಕೆ ಉದ್ಬವಿಸುವುದಿಲ್ಲ, ಅದೇನಿದ್ದರೂ ಗುತ್ತಿಗೆದಾರರಿಗೆ ಬಿಟ್ಟ ವಿಷಯ. ಯಾವುದೇ ಗುತ್ತಿಗೆದಾರರಾದರೂ ನಷ್ಟ ಮಾಡಿಕೊಂಡು ಕಲಾಪೋಷಣೆ(!) ಮಾಡುವುದಿಲ್ಲ. ಆ ಮೇಳಗಳ ಕಲಾವಿದರು ಜೊತೆ ಕೆಲವೊಂದು ತಾರಾಮೌಲ್ಯಗಳಿರುವ ಕಲಾವಿದರು ಹಾಕಿಕೊಂಡು, ಪ್ರದರ್ಶನ ಪೂರ್ವದಲ್ಲೇ ಸಾಕಷ್ಟು ಹಣವನ್ನು ಗೌರವ ಪ್ರವೇಶ, ಪೋಷಕರು, ಮಹಾಪೋಷಕರು ಇತ್ಯಾದಿ ಹೆಸರಿನಲ್ಲಿ ಸಂಗ್ರಹಿಸಿಕೊಂಡು ನಿಶ್ಚಿಂತರಾಗುತ್ತಾರೆ. ಗುತ್ತಿಗೆದಾರರಿಗೆ ಇದೊಂದು ಲಾಭದಾಯಕ ವೃತ್ತಿ, ಕೆಲ ಸಂಘ, ಸಂಸ್ಥೆಗಳೂ ಇದಕ್ಕೆ ಹೊರತಲ್ಲ, ಒಂದಿಷ್ಟು ಹಣಗಳಿಸಲು, ಆಟವೊಂದನ್ನು ಗುತ್ತಿಗೆ ಪಡೆದು, ಸಾಧ್ಯವಾದಲ್ಲೆಲ್ಲ ಟಿಕೇಟ್ ಗಳನ್ನು ಹಾಕಿ ಲಾಭವಾಗುವುದನ್ನು ಖಾತ್ರಿಪಡಿಸಿಕೊಳ್ಳುತ್ತವೆ. ಹೀಗಾದಾಗ ಸ್ವ ಇಚ್ಚೆಯಿಂದ ಆಟ ನೋಡಲು ಬರುವ ಪ್ರೇಕ್ಷಕರಿಗೆ ಬದಲಾಗಿ ಹೇಗೂ ಟಿಕೇಟ್ಟಿದೆ ಎಂದು ಪುರುಸೊತ್ತು ಆದ ಹೊತ್ತಿಗೆ ಬಂದು, ಒಂದಷ್ಟು ಹೊತ್ತು ಕಳೆದು ಎದ್ದು ಹೋಗುವವರೇ ಅಧಿಕ. ಹೀಗಾಗಿ ಗೌರವ ಪ್ರವೇಶಕ್ಕಾಗಿ ಕಾಯ್ದಿರಿಸಿದ ಆಸನಗಳು ಮೊದಲಿಗೆ ಖಾಲಿ ಖಾಲಿ ಅನಂತರ ಸ್ವಲ್ಪ ಹೊತ್ತು ಭರ್ತಿ ಮತ್ತೆ ಖಾಲಿ, ಖಾಲಿ.
ಹೀಗಾಗಿ ಬಹುತೇಕ ಪ್ರೇಕ್ಷಕರು ಇಲ್ಲಿ ಸಂಚಾರಿ ಪ್ರೇಕ್ಷಕರೇ ವಿನಃ ಕಲಾಸಕ್ತ ಪ್ರೇಕ್ಷಕರಲ್ಲ, ಕಲಾವಿದರೂ ತಮ್ಮ ಸಂಭಾವನೆ ಖಾತ್ರಿಯಾಗಿರುವ ಕಾರಣದಿಂದ, ಸಭೆಯ ಹಿಂದೆ ಇರುವ ಪ್ರೇಕ್ಷಕರನ್ನು ನಿರ್ಲಕ್ಷಿಸಿದರೆ ಅದು ಸ್ವಾಭಾವಿಕ ಸಂಗತಿಯೇ ಆಗಿಬಿಡುತ್ತದೆ. ಮುಂದೆ ಸಂಚಾರಿ ಘಟಕ, ಹಿಂದಿನದ್ದು ಕಾಣಲಾಗದ್ದು! ಹೀಗಾಗಿ ಕಲಾವಿದರು ಮತ್ತು ಪ್ರೇಕ್ಷಕರ ನಡುವೆ ಏರ್ಪಡಬೇಕಾದ ಸಂಬಂಧದ ಸೃಷ್ಟಿ ಸಾಧ್ಯವಾಗದೆ ಒಟ್ಟಾರೆ ಪ್ರದರ್ಶನಕ್ಕಾಗಿ ಪ್ರದರ್ಶನ ಎಂಬಂತೆ ಪರಿವರ್ತಿತವಾಗುತ್ತಿರುವುದು ವರ್ತಮಾನದ ವ್ಯವಸ್ಥೆಯೇ ಆಗುತ್ತಿದೆ ಎಂಬುದು ವಿಷಾದದ ಸಂಗತಿ. ಇದರ ಜೊತೆಗೆ ಮೇಳದ ಖಾಯಂ ಕಲಾವಿದರು ಮತ್ತು ಅತಿಥಿ ಕಲಾವಿದರ ನಡುವಿನ ಹೊಂದಾಣಿಕೆಯ ಕೊರತೆ. ಅತಿಥಿ ಕಲಾವಿದರಿಗೆ ಸಂಭಾವನೆ ಅಧಿಕವೆಂಬ ಅಸಹನೆ ಕೂಡ ಪ್ರದರ್ಶನದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಒಂದು ಕಾಲದಲ್ಲಿ ವೃತ್ತಿನಿರತರಾಗಿದ್ದವರೇ ಸ್ವಯಂ ನಿವೃತ್ತಿ ಪಡೆದೋ ಅಥವಾ ಇನ್ನಿತರ ಕಾರಣಗಳಿಂದಲೂ ಮೇಳಗಳಿಂದ ದೂರಾಗಿ, ಕೇವಲ ಅತಿಥಿ ಕಲಾವಿದರಾಗಿ ಕರೆದಾಗ, ಕರೆದ ಮೇಳಗಳಿಗೆ, ಕರೆದ ಗುತ್ತಿಗೆದಾರರೊಂದಿಗಿನ ಸಂಬಂಧದಿಂದಾಗಿ ಬಂದು ಹೋಗುವುದು, ದುಡ್ಡಿನ ಮಾನದಂಡದಿಂದಲೇ ವಿನಃ ಕಲೆಯ ಮೇಲಿನ ಗೌರವದಿಂದ ಎಂದು ನಂಬುವುದು ಕಷ್ಟ. ಹಾಗಾಗೀ ಪರಸ್ಪರ ದುಡ್ಡು ಮಾಡುವುದರತ್ತಲೇ ಲಕ್ಷ ಹೊಂದುತ್ತ ಹೋದಂತೆ ಕಲೆಯ ಅವ್ಯವಸ್ಥೆಯ ಕುರಿತು ಹೆಚ್ಚು ಚರ್ಚಿಸುವುದೇ ಅನಗತ್ಯವೆನ್ನಿಸಬಹುದು! ಜೊತೆಗೆ ಸಿನಿಮಾಗಳನ್ನು ಮೀರಿಸುವ ಹಟತೊಟ್ಟು ಅವುಗಳ ಕಥೆಗಳನ್ನೇ ಯಕ್ಷಗಾನ ಮೇಳಕ್ಕೆ ತಂದು ವೇಷ, ಭೂಷಣವೊಂದನ್ನು ಹೊರತುಪಡಿಸಿ ಉಳಿದಂತೆ ಶುದ್ಧ ಸಾಮಾಜಿಕ ಪ್ರಸಂಗ ಪ್ರದರ್ಶಿಸುವ ಮೂಲಕ, ಪ್ರೇಕ್ಷಕರು ಬಯಸುತ್ತಾರೆ ಎಂದು ಸಮಜಾಯಿಸಿ ನೀಡುತ್ತ ಅದರಿಂದ ಮಾಡಿಕೊಳ್ಳಬಹುದಾದ ಲಾಭದತ್ತ ಮಾತ್ರ ಲಕ್ಷ ಹರಿಸುವುದೂ, ಕಲೆಯ ಬೆಳವಣಿಗೆಯ ದೃಷ್ಟಿಯಿಂದ ಅಪಾಯಕಾರಿಯಾದ ಅಂಶವೇ ಆಗಬಹುದು. ದಿನಗಳು ಉರುಳಿದಂತೆ ಮೂಲವೇ ಮರೆತು ಹೊಸತೇ ಮೂಲವೆಂಬಂತೆ ಒಂದು ಭ್ರಮಾಲೋಕ ಸೃಷ್ಟಿಯಾದರೆ ಭವಿಷ್ಯದ ಪ್ರೇಕ್ಷಕರಿಗೆ ಏನು ದಕ್ಕಬಹುದು?
ಯಕ್ಷಗಾನ ಕಲೆಯ ಉಳಿವಿಗೆ ಮತ್ತು ಬೆಳವಣಿಗೆಗೆ ಟೊಂಕಕಟ್ಟಿ ನಿಲ್ಲಲು ಅನುವಾಗಬೇಕೆಂಬ ಮಹದಾಸೆ ಹೊತ್ತು ಹುಟ್ಟಿದ ಸರ್ಕಾರಿ ಕೃಪಾಘೋಷಿತ ಯಕ್ಷಗಾನ ಅಕಾಡೆಮಿ, ಸದಾ ತನ್ನ ಕೊರತೆ ಬಜೆಟನ್ನೆ ಬಿಂಬಿಸುತ್ತ್ತಿರುತ್ತದೆ. ಅಲ್ಲಲ್ಲಿ ಒಂದಿಷ್ಟು ಕಮ್ಮಟಗಳನ್ನು, ಸಮ್ಮೇಳನಗಳನ್ನು ಪಂಡಿತರಿಂದ ಏರ್ಪಡಿಸಿ, ಒಂದಿಷ್ಟು ಕಲೆಯ ಕುರಿತಾಗಿ ಹಳೆಯ ಮೆಲುಕುಗಳನ್ನು ಮತ್ತು ಹೊಸ ಹಳಹಳಿಕೆಗಳನ್ನು ಮಂಡಿಸುವುದಕ್ಕೆ ಸೀಮಿತವಾಗುತ್ತದೆ. ಹಾಗೇ ಕೆಲವಡೆ ಕೆಲವು ಪ್ರದರ್ಶನಗಳಿಗೆ ಒಂದಿಷ್ಟು ಧನಸಹಾಯ ಮಾಡಿ ಅಲ್ಲಿಗೆ ಅಕಾಡೆಮಿಗೆ ಸಂಬಂಧಪಟ್ಟವರು, ಆಗಮಿಸಿ, ಪ್ರದರ್ಶನದ ಹೊತ್ತಲ್ಲೆ ಒಂದಷ್ಟು ಭಾಷಣ ಬಿಗಿಯಬಹುದು ಸಾಮನ್ಯ ಸಂಗತೀಯೇ ಅಥವಾ ಸಂಪ್ರದಾಯವೇ ತಿಳಿಯದಂತಾಗುತ್ತದೆ. ಹಾಗೇ ಅಶಕ್ತ ಕಲಾವಿದರಿಗೆ ಸಹಾಯವನ್ನು ನೀಡಬಹುದು ಯಾ ಸಹಾಯ ನೀಡುವಂತೆ ಸರಕಾರಕ್ಕೆ ಮನವಿ ಮಾಡಿ ಪ್ರಭಾವವನ್ನು ಬೀರಬಹುದು. ಇದು ಯೋಗ್ಯವಾದ ಕ್ರಮವೇ ಸರಿ. ಆದರೆ ಅದರೊಟ್ಟಿಗೆ ಸಶಕ್ತ ಕಲಾವಿರ ಸೃಷ್ಟಿಗೆ ಅದಕ್ಕಿಂತ ಹೆಚ್ಚಾಗಿ ಪ್ರೇಕ್ಷಕರಲ್ಲಿ ಕಾಳಜಿ ಮಾಡುವ ಕುರಿತಾಗಿ ನಡೆಸಿದ ಪ್ರಯತ್ನಗಳ ಕುರಿತು ಮಾಹಿತಿ ಸಿಕ್ಕಿಲ್ಲ. ಬಹುಶಃ ಪ್ರಚಾರದ ಕೊರತೆಯಿದ್ದರೂ ಇರಬಹುದು ಅಥವಾ ತಿಳುವಳಿಕೆಯ ಕೊರತೆಯಿದ್ದರೂ ಇರಬಹುದು. ಮತ್ತೆ ಮುಂದೆ ಸರಿಯಾದ ಪ್ರಯತ್ನಗಳು ನಡೆಯಲ್ಪಟ್ಟು, ಫಲಕಾರಿಯಾಗಿ, ಕಾಟಾಚಾರಕ್ಕಲ್ಲದೆ ನಿಜವಾದ ಕಲಾಸಕ್ತಿಯಿಂದ ಕಳಕಳಿಯಿಂದ ಪ್ರದರ್ಶನಗಳಿಗೆ ಬರುವ ಪ್ರೇಕ್ಷಕ ವರ್ಗ ಸೃಷ್ಟಿಯಾದರೆ ಅದಕ್ಕಿಂತ ಸಂತೋಷದ ಸಂಗತಿ ಬೇರೆ ಇರಲಾರದು.
ಕಲೆ ಕಲಾವಿದರು ನಿಜವಾದ ಕಲಾ ರಸಿಕ ಪ್ರೇಕ್ಷಕರಲ್ಲಿ ಪರಸ್ಪರ ಅನುಸಂಧಾನ ಏರ್ಪಟ್ಟಾಗ ಮಾತ್ರ ಕಲೆಯ ಅಭಿವೃದ್ಧಿ ಸಾಧ್ಯ ಹಾಗಲ್ಲದೆ ಹರಕೆ ಗುತ್ತಿಗೆಗಳಿಂದ ಮೇಳಗಳು ಮತ್ತು ಗುತ್ತಿಗೆದಾರರು, ಕಲಾವಿದರು ಆರ್ಥಿಕವಾಗಿ ಅಭಿವೃದ್ಧಿಯನ್ನು ಹೊಂದಬಹುದೆ ವಿನಃ ಕಲೆಯಲ್ಲವೆಂಬುದನ್ನು ಖಂಡಿತವಾಗಿ ಹೇಳಿದರೆ ಕಹಿಯೆಂದು ಭಾವಿಸುವುದು, ಅವರವರ ಮನೋಧರ್ಮಕ್ಕೆ ಬಿಟ್ಟಿದ್ದು.
ರವೀಂದ್ರ ಭಟ್ ಕುಳಿಬೀಡು.
ಜೂಟ್ ಮಾಫಿಯಾಗೆ ಕಡಿವಾಣ ಹಾಕಲು ಕೋರಿ ರೀಲರುಗಳ ಧರಣಿ
ಸಿಲ್ಕ್ವೇಸ್ಟ್ (ಜೊಟ್) ಖರೀದಿ ಮಾಡಲು ಬಂದಿದ್ದ ವರ್ತಕನೊಬ್ಬನನ್ನು ಗುಂಪುಂದು ಥಳಿಸಿ ಜೊಟ್ ಖರೀದಿಸಿಲಾಗಿದ್ದ ಜೊಟ್ ಕಸಿದುಕೊಂಡ ಹಿನ್ನೆಲೆಯಲ್ಲಿ ತೀವ್ರ ಆಕ್ರೋಶಗೊಂಡ ರೇಷ್ಮೆ ನೂಲು ಬಿಚ್ಚಾಣಿಕೆದಾರರು ನಗರದಲ್ಲಿ ನಡೆಯುತ್ತಿರುವ ಜೂಟ್ ಮಾಫಿಯಾಗೆ ಕಡಿವಾಣ ಹಾಕಬೇಕೆಂದು ಪೊಲೀಸ್ ಠಾಣೆ ಮುಂದೆ ಧರಣಿ ನಡೆಸಿದ ಘಟನೆ ಭಾನುವಾರ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರದ ನಿವಾಸಿ ಮನ್ಸೂರ್ ಎಂಬಾತನನ್ನು ಜೊಟ್ ಉದ್ಯಮಿಗಳು ಥಳಿಸಿದ್ದು ಜೋಟ್ ಮುಕ್ತ ಖರೀದಿಗೆ ಅವಕಾಶ ಮಾಡಿಕೊಡಬೇಕೆಂದು ರೇಷ್ಮೆ ನೂಲು ಬಿಚ್ಚಾಣಿಕೆದಾರರು ಪೋಲಿಸ್ ಠಾಣೆ ಮೆಟ್ಟಿಲೇರಿದ್ದಾರೆ.
ಘಟನೆಯ ವಿವರ: ರೇಷ್ಮೆ ನಗರವೆಂದು ಖ್ಯಾತಿ ಹೊಂದಿರುವ ಶಿಡ್ಲಘಟ್ಟದಲ್ಲಿ ಉತ್ಪಾದನೆಯಾಗುವ ಜೊಟ್ ಖರೀದಿ ಮಾಡಲು ಗುಂಪೂಂದು ಸ್ವಯಂ ಘೋಷಿತ ದರವನ್ನು ನಿಗದಿಪಡಿಸಿ ಖರೀದಿ ಮಾಡುತ್ತಿದ್ದರೆನ್ನಲಾಗಿದೆ. ವಿಜಯಪುರದ ಮನ್ಸೂರ್ ಎಂಬಾತ ಕೆ.ಜಿ ಜೊಟ್ಗೆ ೫೨೦–-೫೫೦ ರೂಗಳಿಗೆ ಖರೀದಿ ಮಾಡುತ್ತಿದ್ದ ವೇಳೆಯಲ್ಲಿ ಕೆಲವರು ತಡೆದು ನಾವು ರೇಷ್ಮೆ ವ್ಯಾಪಾರ ಮಾಡುವ ರೀಲರ್ಗಳಿಗೆ ಸಾವಿರಾರು ರೂಗಳು ಠೇವಣಿ ನೀಡಿದ್ದು ನೀನು(ಮನ್ಸೂರ್) ಇಲ್ಲಿ ಬಂದು ವ್ಯಾಪಾರ ಕೆಡಿಸುತ್ತಿದ್ದೀಯಾ ನೀನು ಬೇಕಾದರೂ ೪೦೦–-೪೫೦ ರೂಗಳಿಗೆ ಖರೀದಿ ಮಾಡು ನಮ್ಮ ಅಭ್ಯಂತರವಿಲ್ಲ ಎಂದು ಹೇಳಿ ಆತ ರೀಲರುಗಳಿಂದ ಖರೀದಿ ಮಾಡಿದ್ದ ಸುಮಾರು ೧೦೦ ಕೆ.ಜಿ ಜೊಟ್ನ್ನು ಕಸಿದುಕೊಂಡು ಥಳಿಸಿದ್ದಾರೆ ಎಂದು ಹೇಳಲಾಗಿದೆ.
ವರ್ತಕನ ರಕ್ಷಣೆಗೆ ಧಾವಿಸಿದ ರೀಲರುಗಳು ಮತ್ತು ರೈತರು: ವಾತಾವರಣದ ಏರುಪೇರು ಮತ್ತು ಬೆಲೆ ಕುಸಿತದಿಂದ ಈಗಾಗಲೇ ರೇಷ್ಮೆ ನೂಲು ಬಿಚ್ಚಾಣಿಕೆದಾರರು ಕಂಗಾಲಾಗಿದ್ದಾರೆ. ನಾಲ್ಕು- ಐದು ಮಂದಿ ಅಕ್ರಮವಾಗಿ ಕೂಟವನ್ನು ರಚಿಸಿಕೊಂಡು ಸ್ವಯಂಘೋಷಿತ ದರವನ್ನು ನಿಗಧಿಗೊಳಿಸಿ ಜೋಟ್ ಖರೀದಿ ಮಾಡುವ ಮೂಲಕ ಹಗಲು ದರೋಡೆ ಮಾಡುತ್ತಿದ್ದಾರೆ. ಕೂಡಲೇ ಅವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ರೇಷ್ಮೆ ನೂಲು ಬಿಚ್ಚಾಣಿಕೆದಾರರು ಮತ್ತು ರೈತರು ಈ ಸಂದರ್ಭದಲ್ಲಿ ಆಗ್ರಹಿಸಿದರು.
ಜಿಲ್ಲಾ ರೇಷ್ಮೆ ಬೆಳೆಗಾರರ ಹಿತರಕ್ಷಣಾ ವೇದಿಕೆಯ ಸಂಚಾಲಕ ಯಲುವಹಳ್ಳಿ ಸೊಣ್ಣೆಗೌಡ, ಸಂಘಟನಾ ಸಂಚಾಲಕ ಮಳ್ಳೂರು ಹರೀಶ್, ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಅಬ್ಲೂಡು ದೇವರಾಜ್, ರೀಲರುಗಳಾದ ಮೊಹ್ಮದ್ ಅನ್ವರ್, ಅಕ್ಮಲ್, ನಗರಸಭೆಯ ಸದಸ್ಯ ಅಬ್ದುಲ್ ಗಫೂರ್, ನಾಗನರಸಿಂಹ, ಮುನಿಕೃಷ್ಣ, ಕೃಷ್ಣಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಕುರಿಗಾರರಿಗೆ ಉಚಿತ ಪಾಸ್ಬುಕ್, ಷೇರು ಪತ್ರ ಹಾಗೂ ಜಂತುನಾಶಕ ಔಷಗಳ ವಿತರಣೆ
ಕುರಿ ಮಾಂಸ ಸೇರಿದಂತೆ ಕುರಿಯ ಎಲ್ಲ ಉತ್ಪನ್ನಗಳೂ ಸಹ ಬಳಕೆಯಲ್ಲಿದ್ದು ಸಾಕಷ್ಟು ಲಾಭವನ್ನು ತಂದುಕೊಡಲಿದೆ. ಹಾಗಾಗಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕುರಿ ಸಾಕಾಣಿಕೆಯಲ್ಲಿ ತೊಡಗುವಂತೆ ರೈತರಿಗೆ ಕುರಿ ಮತ್ತು ಉಣ್ಣೆ ನಿಗಮದ ಜಿಲ್ಲಾ ಅಧಿಕಾರಿ ಮಧುರನಾಥರೆಡ್ಡಿ ತಿಳಿಸಿದರು.
ತಾಲ್ಲೂಕಿನ ಸಾದಲಿ ಹೋಬಳಿ ಜಿ.ಕೆ.ಹೊಸೂರು ಗ್ರಾಮದಲ್ಲಿ ಶನಿವಾರ ಪ್ರಗತಿಪರ ಕುರಿ ಸಾಕಾಣಿಕೆದಾರರ ಸಹಕಾರ ಸಂಘದಿಂದ ಹಮ್ಮಿಕೊಂಡಿದ್ದ ಕುರಿಗಾರರಿಗೆ ಉಚಿತ ಪಾಸ್ಬುಕ್, ಷೇರು ಪತ್ರ ಹಾಗೂ ಜಂತುನಾಶಕ ಔಷಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕುರಿ ಸಾಕಾಣಿಕೆಯನ್ನು ಬಹಳಷ್ಟು ರೈತರು ಮಾಡುತ್ತಾರಾದರೂ ಅದನ್ನು ಮುಖ್ಯ ಉದ್ದಿಮೆಯಾಗಿ ಕೈಗೊಂಡಿರುವ ರೈತರ ಸಂಖ್ಯೆ ಕಡಿಮೆ. ಅದರಲ್ಲೂ ಸಾಂಪ್ರದಾಯಿಕ ಪದ್ದತಿಯಲ್ಲಿ ಕುರಿ ಸಾಕಾಣಿಕೆ ಮಾಡುವುದೆ ಹೆಚ್ಚು. ಆದರೆ ವೈಜ್ಞಾನಿಕ ಪದ್ದತಿಯನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.
ದಿನಗಳು ಕಳೆದಂತೆ ಕುರಿ ಮಾಂಸದ ಬೇಡಿಕೆ ಹಾಗೂ ಬೆಲೆ ಹೆಚ್ಚುತ್ತಲೆ ಇದೆ. ಜತೆಗೆ ಇತ್ತೀಚಿನ ದಿನಗಳಲ್ಲಿ ಕುರಿಯ ಉಣ್ಣೆಯಿಂದಲೂ ಹಲವು ರೀತಿಯ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದು ಅವುಗಳ ಬೇಡಿಕೆಯೂ ದಿನ ದಿನದಿಂದ ಹೆಚ್ಚುತ್ತಲೆ ಇದೆ. ಇದಕ್ಕೆ ಸರ್ಕಾರದಿಂದಲೂ ಸಾಕಷ್ಟು ಪ್ರೋತ್ಸಾಹ ಸಿಗುತ್ತಿದೆ. ಹತ್ತು ಹಲವು ಯೋಜನೆಗಳ ಮೂಲಕ ಕುರಿ ಸಾಕಾಣಿಕೆ ಹಾಗೂ ಕುರಿಯ ಉಣ್ಣೆ ಉತ್ಪನ್ನಕ್ಕೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ. ಮಾರುಕಟ್ಟೆಯ ವ್ಯವಸ್ಥೆಯನ್ನು ಸಹ ಒದಗಿಸಲಾಗುತ್ತಿದೆ ಎಂದು ಹೇಳಿದರು.
ನಿಗಮದಿಂದ ಸಂಘಗಳಿಗೆ ಅಗತ್ಯವಿರುವ ತರಬೇತಿ ಕೇಂದ್ರಗಳನ್ನು ನಿರ್ಮಿಸಿ ಅಲ್ಲಿ ಉಣ್ಣೆಯಿಂದ ನಾನಾ ಉತ್ಪನ್ನಗಳನ್ನು ತಯಾರಿಸಲು ಅಗತ್ಯವಾದ ತರಬೇತಿಗಳನ್ನು ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ. ನಿಪುಣ ತರಬೇತಿದಾರರು, ಅಧಿಕಾರಿಗಳಿಂದ ಸೂಕ್ತ ನಿರ್ವಹಣೆಯನ್ನು ಮಾಡಲಾಗುತ್ತಿದೆ ಎಂದರು.
ಪ್ರಗತಿಪರ ಕುರಿ ಸಾಕಾಣಿಕೆದಾರರ ಸಹಕಾರ ಸಂಘದ ಅಧ್ಯಕ್ಷ ಬಳುವನಹಳ್ಳಿ ಲೊಕೇಶ್ ಗೌಡ ಮಾತನಾಡಿ, ಕೇಂದ್ರದ ಬೆಡ್ಪಾಲಕ್ ಯೋಜನೆಯಡಿ ಕುರಿಗಾರರು ಜೀವ ವಿಮೆ ಮಾಡಿಸಲು ಅವಕಾಶವಿದ್ದು ಈ ಯೋಜನೆಯಡಿ ಕುರಿಗಾರರು ವಾರ್ಷಿಕ ೮೦ರೂ.ಗಳ ವಿಮೆ ಹಣವನ್ನು ಪಾವತಿಸಬೇಕು. ಇಷ್ಟು ಹಣ ಪಾವತಿಸಿದರೆ ಭಾರತೀಯ ಜೀವ ವಿಮಾ ನಿಗಮವು(ಎಲ್ಐಸಿ)೧೦೦ ರೂಗಳನ್ನು ಹಾಗೂ ಕೇಂದ್ರೀಯ ಉಣ್ಣೆ ಅಭಿವೃದ್ಧಿ ಮಂಡಳಿಯು ೧೫೦ ರೂಗಳನ್ನು ವಿಮೆಗಾಗಿ ಹಣ ಸಂದಾಯ ಮಾಡುತ್ತದೆ.
ಈ ವಿಮೆ ಯೋಜನೆ ಮಾಡಿಸಿದ ಕುರಿಗಾರರು ಅಥವಾ ಅವರ ಕುಟುಂಬದವರು ಯಾರಾದರೂ ಸ್ವಾಭಾವಿಕ ಮರಣ ಹೊಂದಿದ್ದರೆ ೬೦,೦೦೦ ರೂ, ಅಪಘಾತ ಇನ್ನಿತರೆ ದುರ್ಘಟನೆಗಳಲ್ಲಿ ಎರಡು ಕೈಗಳು, ಎರಡೂ ಕಾಲುಗಳು ಅಥವಾ ಕಣ್ಣುಗಳು ಕಳೆದುಕೊಂಡಲ್ಲಿ ೧,೫೦,೦೦೦ ರೂಗಳನ್ನು, ಒಂದು ಕೈ ಅಥವಾ ಒಂದು ಕಾಲು ಅಥವಾ ಒಂದು ಕಣ್ಣು ಕಳೆದು ಕೊಂಡಲ್ಲಿ ೭೫,೦೦೦ ರೂ. ವಿಮೆ ಹಣ ಪರಿಹಾರವಾಗಿ ನೀಡಲಾಗುವುದು. ಜತೆಗೆ ಈ ಯೋಜನೆಯಡಿ ವಿಮೆ ಮಾಡಿಸಿದ ಕುರಿಗಾರರ ೬ ರಿಂದ ೧೦ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಇಬ್ಬರು ಮಕ್ಕಳಿಗೆ ವಾರ್ಷಿಕ ೧೮೦೦ ರೂಗಳನ್ನು ವಿದ್ಯಾರ್ಥಿ ವೇತನವನ್ನಾಗಿ ಭಾರತೀಯ ಜೀವ ವಿಮಾ ನಿಗಮದಿಂದ ನೀಡಲಾಗುತ್ತದೆ.
ಈ ರೀತಿಯ ಹತ್ತು ಹಲವು ಯೋಜನೆಗಳನ್ನು ಸರಕಾರ ಕುರಿಗಾಹಿಗಳಿಗಾಗಿ ಜಾರಿಗೊಳಿಸಿದ್ದು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ದಿಬ್ಬೂರಹಳ್ಳಿ, ಗಂಜಿಗುಂಟೆ ವ್ಯಾಪ್ತಿಯ ಕುರಿ ಸಾಕಾಣಿಕೆದಾರರಿಗೆ ಉಚಿತ ಪಾಸ್ಬುಕ್, ಷೇರು ಪತ್ರ ಹಾಗೂ ಜಂತುನಾಶಕ ಔಷಗಳ ವಿತರಣೆಯನ್ನು ಮಾಡಲಾಯಿತು.
ಪಶು ಪಾಲನಾ ಇಲಾಖೆಯ ಸಹಾಯಕ ನಿರ್ದೆಶಕ ಡಾ.ಮುನಿನಾರಾಯಣರೆಡ್ಡಿ, ಗಂಜಿಗುಂಟೆ ಪಶು ಆಸ್ಪತ್ರೆಯ ಡಾ.ಬಾಬು, ಪ್ರಗತಿಪರ ಕುರಿ ಸಾಕಾಣಿಕೆದಾರರ ಸಂಘದ ನಿರ್ದೆಶಕ ಸಿ.ರಾಮಣ್ಣ, ಡಾ.ರಾಮಕೃಷ್ಣಾರೆಡ್ಡಿ, ಗ್ರಾಮ ಪಂಚಾಯತಿ ಸದಸ್ಯ ಪ್ರಸನ್ನ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ವೀರಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೭ ನೇ ತರಗತಿ ಪ್ರಾರಂಭ
ಗುಣಾತ್ಮಕವಾದ ಶಿಕ್ಷಣವನ್ನು ನೀಡುವ ಮೂಲಕ ಖಾಸಗಿ ಶಾಲೆಗಳಿಗಿಂತ ಉತ್ತಮವಾದ ವಿದ್ಯಾರ್ಥಿಗಳನ್ನು ತಯಾರು ಮಾಡುವ ಶಕ್ತಿ ಸಾಮರ್ಥ್ಯಗಳು ಸರ್ಕಾರಿ ಶಾಲೆಗಳ ಶಿಕ್ಷಕರಲ್ಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ಹೇಳಿದರು.
ತಾಲ್ಲೂಕಿನ ವೀರಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಎಸ್.ಡಿ.ಎಂ.ಸಿ. ಸಮಿತಿಯ ಬಹುದಿನದ ಬೇಡಿಕೆಯ ಮೇರೆಗೆ ೭ ನೇ ತರಗತಿಯನ್ನು ಪ್ರಾರಂಭಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಹೆಚ್ಚಾಗಿರುವ ಈ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉಳಿಸಿಕೊಳ್ಳುವುದು, ಸಾಹಸದ ಕೆಲಸವಾಗಿದೆ. ಪೋಷಕರು ಆಂಗ್ಲ ಮಾಧ್ಯಮದ ಮೇಲೆ ಹೆಚ್ಚು ವ್ಯಾಮೋಹವುಳ್ಳವರಾಗಿ ಸರ್ಕಾರಿ ಶಾಲೆಗಳ ಕಡೆಗೆ ಗಮನ ನೀಡುವುದಿಲ್ಲ, ಸರ್ಕಾರದಿಂದ ಬಹಳಷ್ಟು ಉತ್ತೇಜನ ನೀಡಿ, ಉಚಿತ ಸಮವಸ್ತ್ರ, ಪಠ್ಯಪುಸ್ತಕಗಳು, ಹಾಲಿನ ವಿತರಣೆ, ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಹಲವು ಸೌಲಭ್ಯಗಳನ್ನು ಸರ್ಕಾರಿ ಶಾಲೆಗಳಲ್ಲಿ ಕಲ್ಪಿಸಲಾಗಿದೆ. ಒಂದನೇ ತರಗತಿಯಿಂದಲೇ ಮಕ್ಕಳಿಗೆ ಆಂಗ್ಲ ಭಾಷೆಯನ್ನು ಕಲಿಸಲಾಗುತ್ತಿದ್ದು, ಪೋಷಕರು ಹೆಚ್ಚು ಉತ್ಸಾಹ ತೋರಿಸಿ, ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡಿಸಬೇಕು. ಶಿಕ್ಷಕರೂ ಕೂಡಾ ಹೆಚ್ಚು ಬದ್ದತೆಯಿಂದ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕು ಎಂದರು.
ಎಸ್.ಡಿ.ಎಂ.ಸಿ.ಅಧ್ಯಕ್ಷ ಮುನಿರಾಜು ಮಾತನಾಡಿ, ಖಾಸಗಿ ಶಾಲೆಗಳಲ್ಲಿ ಹಣವನ್ನು ಗಳಿಸುವ ಉದ್ದೇಶದಿಂದ ದುಬಾರಿ ಹಣವನ್ನು ಪಡೆದುಕೊಂಡರೂ ಕೂಡಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ವಿಫಲವಾಗುತ್ತಿವೆ, ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವಂತಹ ಮಕ್ಕಳಿಗೆ ಹೋಲಿಕೆ ಮಾಡಿದರೆ, ಖಾಸಗಿ ಶಾಲೆಗಳ ಮಕ್ಕಳಲ್ಲಿ ಕಲಿಕೆಯ ಮಟ್ಟ ಕಡಿಮೆಯಾಗಿದ್ದು, ಪೋಷಕರು ಅರ್ಥ ಮಾಡಿಕೊಳ್ಳಬೇಕು, ಸರ್ಕಾರಿ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿ ಸರ್ಕಾರದ ಸೌಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಶಾಲೆಯಲ್ಲಿ ಏಳನೇ ತರಗತಿ ಪ್ರಾರಂಭವಾದ ನೆನಪಿಗಾಗಿ ಶಾಲಾವರಣದಲ್ಲಿ ಗಿಡವನ್ನು ನೆಟ್ಟು ನೀರು ಹಾಕಲಾಯಿತು. ಶಾಲೆಯ ಹಿರಿಯ ವಿಧ್ಯಾರ್ಥಿ ಕೆ.ವೆಂಕಟೇಶ್ ಅವರು ೭ ನೇ ತರಗತಿಯಲ್ಲಿ ವ್ಯಾಸಂಗ ಮಾಡುವಂತಹ ಎಲ್ಲಾ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಮುಂದಿನ ಆಗಸ್ಟ್ ೧೫ ರೊಳಗೆ ಕಂಪ್ಯೂಟರ್ಗಳನ್ನು ನೀಡುವುದಾಗಿ ಭರವಸೆ ನೀಡಿದರು.
ಬಿ.ಆರ್.ಸಿ.ಕೇಂದ್ರದ ಸಮನ್ವಯಾಧಿಕಾರಿ ಕೆ.ಸುಮಾ, ಸಿ.ಆರ್.ಪಿ.ಗಳಾದ ಲಕ್ಷ್ಮೀನರಸಂಹಗೌಡ, ಚೌಡರೆಡ್ಡಿ, ವಿಜಯಪುರ ಪ್ರಗತಿ ಶಾಲೆಯ ಪ್ರಾಂಶುಪಾಲ ವೆಂಕಟೇಶ್, ಗ್ರಾಮದ ಮುನಿನಂಜಪ್ಪ, ರಾಮಣ್ಣ, ಮುನಿಯಪ್ಪ, ಕೃಷ್ಣಪ್ಪ, ನಾಗರಾಜ, ಸುಭ್ರಮಣಿ, ಲಕ್ಷ್ಮೀಪತಿ, ಮುನಿಯಪ್ಪ, ಮುಖ್ಯಶಿಕ್ಷಕಿ ಜಯಶ್ರೀ, ಸಹಶಿಕ್ಷಕರಾದ ಸರಸ್ವತಿ, ನಿರ್ಮಲ, ಸುಮಾ, ಅಂಗನವಾಡಿ ಶಿಕ್ಷಕಿ ಶೋಭಾ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಖರೀದಿ ಮಾಡುವ ವಸ್ತುಗಳ ರಸೀದಿ ಪಡೆಯಿರಿ
ಮಕ್ಕಳು ಯಾವುದೇ ವಸ್ತುಗಳನ್ನು ಖರೀದಿ ಮಾಡಲು ಹೋದಾಗ ಅಂಗಡಿ ಮಾಲೀಕರಿಂದ ರಸೀದಿ ಪಡೆಯುವುದನ್ನು ರೂಢಿ ಮಾಡಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ಹೇಳಿದರು.
ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ರಾಘವೇಂದ್ರ ಟ್ರಸ್ಟ್ ಫಾರ್ ಎಜುಕೇಷನ್, ಮತ್ತು ಎನ್ವೈರ್ನ್ಮೆಂಟಲ್ ಆಕ್ಷನ್ ಫಾರ್ ನೀಡ್ಸ್ ಸ್ವಯಂ ಸೇವಾ ಸಂಸ್ಥೆಯ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದ್ದ ಶಾಲಾ ಮಕ್ಕಳ ಗ್ರಾಹಕರ ಕ್ಲಬ್ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಗ್ರಾಹಕರು ಖರೀದಿ ಮಾಡುವಂತಹ ಪ್ರತಿಯೊಂದು ವಸ್ತುಗಳಿಗೆ ಕಡ್ಡಾಯವಾಗಿ ರಸೀದಿಯನ್ನು ಪಡೆದುಕೊಳ್ಳುವುದು ಅವರ ಕರ್ತವ್ಯವಾಗಿರುತ್ತದೆ, ಖರೀದಿ ಮಾಡಿರುವ ವಸ್ತುಗಳ ಗುಣಮಟ್ಟ, ತೂಕದ ಪ್ರಮಾಣ, ತಯಾರಾದ ದಿನಾಂಕ, ಅವಧಿ ಮುಗಿಯುವ ದಿನಾಂಕ, ಖರೀದಿ ಮಾಡಿರುವ ವಸ್ತುವಿನ ಬೆಲೆ, ಎಲ್ಲವನ್ನೂ ಪರೀಕ್ಷಿಸಿದ ನಂತರವೇ ಖರೀದಿ ಮಾಡಬೇಕು. ಈ ಬಗ್ಗೆ ಶಾಲೆಗಳಲ್ಲಿ ಒಂದು ಅವಧಿಯಲ್ಲಿ ಗ್ರಾಹಕರ ಹಕ್ಕುಗಳ ಬಗ್ಗೆ ತರಗತಿಗಳನ್ನು ನಡೆಸಲಾಗುತ್ತದೆ. ಶಿಕ್ಷಕರು ಹೇಳುವಂತಹ ಪ್ರತಿಯೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಖರೀದಿ ಮಾಡುವಂತೆ ಮಕ್ಕಳು ತಮ್ಮ ಪೋಷಕರಿಗೆ ತಿಳಿಸಬೇಕು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಕೆ.ಸುಮಾ ಮಾತನಾಡಿ, ಮಕ್ಕಳು ಚಿಕ್ಕವಯಸ್ಸಿನಲ್ಲಿ ಕಲಿಯುವಂತಹ ವಿಚಾರಗಳು ಮನಸ್ಸಿನಲ್ಲಿ ಬೇರೂರುತ್ತವೆ. ತಮ್ಮ ಹಕ್ಕುಗಳನ್ನು ಅವರು ತಿಳಿದುಕೊಳ್ಳಬೇಕು. ನಿಮಗೆ ಆಗುವಂತಹ ಅನ್ಯಾಯಗಳ ಬಗ್ಗೆ ಪ್ರಶ್ನಿಸುವಂತಹ ಹಕ್ಕು ನಿಮಗಿದೆ. ಅನ್ಯಾಯವಾದಾಗ ಎದುರಿಸುವಂತಹ ಸಾಮರ್ಥ್ಯವನ್ನು ಬೆಳೆಸಿಕೊಂಡು ಶಿಕ್ಷಣದ ಜೊತೆಗೆ ವ್ಯವಹಾರಿಕ ಜ್ಞಾನವನ್ನೂ ಪಡೆದುಕೊಳ್ಳಬೇಕು ಎಂದರು.
ಅಶ್ವಥ್ಥನಾರಾಯಣ, ಸಿ.ಆರ್.ಪಿ.ಚೌಡರೆಡ್ಡಿ, ಮುಖ್ಯಶಿಕ್ಷಕಿ ಮಂಜುಳಾ, ಶಂಕರನಾರಾಯಣರೆಡ್ಡಿ, ಆರ್.ಟಿ.ಇ,ಇ,ಎ,ಎನ್ ಸ್ವಯಂ ಸೇವಾ ಸಂಸ್ಥೆಯ ಕಾರ್ಯದರ್ಶಿ ಬಿ.ವಿ.ಅಶ್ವಥ್ಥನಾರಾಯಣಶೆಟ್ಟಿ, ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕಾಗಿ ಕಾಯುವ ಜನರು
ಸರ್ಕಾರದಿಂದ ಪಡೆಯಬೇಕಾದ ಸೌಲಭ್ಯಗಳಿಗಾಗಿ ಸಲ್ಲಿಸಬೇಕಾದಂತಹ ವಿವಿಧ ದಾಖಲೆಗಳಲ್ಲಿ ಜಾತಿ, ಆದಾಯ, ವಾಸಸ್ಥಳ ದೃಡೀಕರಣ ಪ್ರಮಾಣ ಪತ್ರಗಳು ಸೇರಿದ್ದು ತಾಲ್ಲೂಕು ಕಚೇರಿಯಲ್ಲಿ ಈ ಪ್ರಮಾಣ ಪತ್ರಗಳನ್ನು ಪಡೆಯಲು ನಾಗರಿಕರು ಹರಸಾಹಸ ಪಡುವಂತಾಗಿದೆ.
ನಗರದ ತಾಲ್ಲೂಕು ಕಚೇರಿಯಲ್ಲಿರುವ ಅಟಲ್ ಜೀ ಜನಸ್ನೇಹಿ ಕೇಂದ್ರದ ಮುಂದೆ ಪ್ರತಿದಿನ ಸಾಲುಗಟ್ಟಿ ನಿಲ್ಲುತ್ತಿರುವ ನಾಗರಿಕರು, ತಮ್ಮ ಮಕ್ಕಳನ್ನು ಶಾಲೆಗಳಿಗೆ ದಾಖಲು ಮಾಡಲು, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಿಂದ ವಿವಿಧ ಸೌಲಭ್ಯಗಳನ್ನು ಪಡೆಯಲು ಸಲ್ಲಿಸಬೇಕಾದಂತಹ ದಾಖಲೆಗಳನ್ನು ಪಡೆಯಲು ಸಕಾಲದಲ್ಲಿ ಅರ್ಜಿಗಳನ್ನು ಸಲ್ಲಿಸಿದರೂ ಕೂಡಾ ನಿಗದಿತ ಸಮಯದಲ್ಲಿ ದಾಖಲೆ ಪತ್ರಗಳು ಲಭ್ಯವಾಗದೆ ಪರದಾಡುವಂತಾಗಿದೆ.
ಇಲ್ಲಿ ಕರ್ತವ್ಯ ನಿರ್ವಹಿಸುವಂತಹ ಸಿಬ್ಬಂದಿ, ಜಾತಿ, ಆದಾಯ ಪ್ರಮಾಣಪತ್ರಗಳು, ಸಂದ್ಯಾ ಸುರಕ್ಷಾ ವೇತನ, ಅಂಗವಿಕಲರ ವೇತನಗಳು, ಭೂಮಿಗೆ ಸಂಬಂಧಪಟ್ಟ ದಾಖಲೆಗಳು, ಸೇರಿದಂತೆ ಹಲವು ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಇವುಗಳ ಜೊತೆಗೆ ಈಗ ಆಧಾರ್ಕಾರ್ಡುಗಳಿಗೆ ಎನ್ರೋಲ್ ಮಾಡಬೇಕಾದಂತಹ ಹೆಚ್ಚುವರಿ ಹೊಣೆಗಾರಿಕೆಯನ್ನು ಅವರಿಗೆ ಹೊರಿಸಲಾಗಿದ್ದು, ಪ್ರತಿವರ್ಷವೂ ಜೂನ್, ಜುಲೈ ತಿಂಗಳಿನಲ್ಲಿ ರಾಜ್ಯಾದ್ಯಂತ ಏಕಕಾಲದಲ್ಲಿ ಸರ್ವರ್ ಸಮಸ್ಯೆ ಉಂಟಾಗುತ್ತಿರುವುದರಿಂದ ಸಕಾಲದಲ್ಲಿ ಬಂದಂತಹ ಅರ್ಜಿಗಳನ್ನು ನಿಗದಿತ ಸಮಯದಲ್ಲಿ ವಿಲೇವಾರಿ ಮಾಡಲು ಸಿಬ್ಬಂದಿ ಹೆಣಗಾಡುವಂತಾಗಿದೆ.
ನಾಗರಿಕರು ಕೂಡಾ ಸಿಬ್ಬಂದಿಯ ಮೇಲೆ ಮುಗಿಬೀಳುವಂತಹ ಸನ್ನಿವೇಶಗಳು ನಿರ್ಮಾಣವಾಗುತ್ತಿದೆ. ತಾಲ್ಲೂಕಿನ ದೂರದ ಗ್ರಾಮಗಳಿಂದ ಕೆಲಸ ಕಾರ್ಯಗಳನ್ನು ಬಿಟ್ಟು ಬರುವಂತಹ ನಾಗರಿಕರು ಬೆಳಗಿನಿಂದ ಸಂಜೆಯ ತನಕ ಸಾಲುಗಟ್ಟಿ ನಿಲ್ಲುವಂತಾಗಿದೆ. ಈ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ನಾಗರಿಕರ ಆಶಯವಾಗಿದೆ.

