ಪುಟಾಣಿ ಸಾಹಿತಿಗಳ ಶಾಮಂತಿಗೆ ಪ್ರಶಸ್ತಿ

- Advertisement -
- Advertisement -

ತಾಲ್ಲೂಕಿನ ಕನ್ನಮಂಗಲದ ‘ಶಾಮಂತಿ’ಗೆ ಪ್ರಶಸ್ತಿ ಲಭಿಸಿದೆ. ಶಿವಮೊಗ್ಗದ ಕರ್ನಾಟಕ ಸಂಘದ 2014 ನೇ ಸಾಲಿನ ಮಕ್ಕಳ ಸಾಹಿತ್ಯ ಪ್ರಕಾರಕ್ಕೆ ನಾ.ಡಿಸೋಜ ಪ್ರಶಸ್ತಿ ಲಭಿಸಿದೆ.
‘ಶಾಮಂತಿ’ಯು ತಾಲ್ಲೂಕಿನ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಬರಹಗಳ ಪುಸ್ತಕ. ಆ ಶಾಲೆಯಿಂದ ಹೊರಬರುತ್ತಿರುವ ನಾಲ್ಕನೇ ಪುಸ್ತಕವಿದು. ಇದರ ಹೆಸರು ‘ಶಾಮಂತಿ-– 4’. ಇದರಲ್ಲಿ ಆ ಮಕ್ಕಳು ಬರೆದಿರೋ 52 ಬರಹಗಳಿವೆ. ಪುಸ್ತಕದ ಕುರಿತು ದೊಡ್ಡವರು ಬರೆದಿರುವ ಅಭಿಪ್ರಾಯಗಳನ್ನೂ ಸಂಗ್ರಹಿಸಲಾಗಿದೆ. ಮಕ್ಕಳಿಂದ ಬರೆಸಿ ಅದನ್ನು ಚಿಣ್ಣರಿಗೆ ಇಷ್ಟವಾಗುವಂತೆ ಹೊರ ತಂದಿರುವುದು ಸಂಪಾದಕ ಎಸ್. ಕಲಾಧರ. ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಅವರು ಪುಸ್ತಕದ ಮುಖಪುಟ, ಒಳಪುಟಗಳ ವಿನ್ಯಾಸವನ್ನು ಮಾಡಿದ್ದಾರೆ. ಇವರ ಕೆಲಸವನ್ನು ಪ್ರೋತ್ಸಾಹಿಸಿರೋದು ಸಹಶಿಕ್ಷಕರು ಮತ್ತು ಕನ್ನಮಂಗಲದ ಸ್ನೇಹ ಕಲಾಸಂಘ.
ಪ್ರಶಸ್ತಿ ಪ್ರಧಾನ ಸಮಾರಂಭ ಜುಲೈ 18 ರಂದು ಸಂಜೆ 5.30ಕ್ಕೆ ಶಿವಮೊಗ್ಗದ ಕರ್ನಾಟಕ ಸಂಘದ ಭವನದಲ್ಲಿ ನಡೆಯಲಿದ್ದು, ಸಾಹಿತಿ ಜಯಂತ್ ಕಾಯ್ಕಿಣಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ದೊಡ್ಡವರು ನೋಡುವ ಜಗತ್ತಿಗಿಂತ ವಿಭಿನ್ನವಾದ ಎಳೆಯರ ತಾಜಾ ಅನುಭವ ಈ ಪುಸ್ತಕದಲ್ಲಿ ಹರಡಿದೆ. ದಿನವೂ ನೋಡುವ ಮನೆ, ಶಾಲೆ, ಮೈದಾನ, ತೋಟ, ಪ್ರಾಣಿ ಪಕ್ಷಿ ಮುಂತಾದವೆಲ್ಲಾ ಇಲ್ಲಿ ಬಣ್ಣ ತಳೆದಿವೆ. ಬರೆಯೋದು ಅಂದ್ರೆ ಬರೀ ಲೇಖನ ಅಲ್ಲ. ಅಲ್ಲಿ ಕತೆ, ಪದ್ಯ ಅಷ್ಟೇ ಏಕೆ, ನಾಟಕ ಕೂಡ ಇವೆ. ಕೆಲವು ಮಕ್ಕಳು ಒಳ್ಳೊಳ್ಳೆ ಚಿತ್ರ ಬರೆದಿದ್ದಾರೆ. ಅವರ ವಯಸ್ಸು ಅಬ್ಬಬ್ಬಾ ಅಂದ್ರೆ 9ರಿಂದ 13 ವರ್ಷ ಇರಬಹುದು ಅಷ್ಟೇ.
ಶಾಮಂತಿಯಲ್ಲಿ ಮಕ್ಕಳು ಪ್ರಾಣಿ, ಪಕ್ಷಿ, ಗಿಡ, ಮರ, ಕೀಟಗಳ ಬಗ್ಗೆ ಬರೆದಿದ್ದಾರೆ. ಅಡುಗೆ, ಕೃಷಿ, ಕಣ, ದೇವಸ್ಥಾನ, ಹಬ್ಬ, ನಂಬಿಕೆಗಳು, ಪೂಜೆ, ನೋಡಿದ ಸಿನೆಮಾ, ಓದಿದ ಪುಸ್ತಕ, ಸರ್ಕಸ್ಸು, ನೋವು ನಲಿವು ದುಗುಡ ತಲ್ಲಣಗಳ ಬಗ್ಗೆಯೂ ಬರೆದಿದ್ದಾರೆ. ತಮ್ಮ ಶಾಲೆಯ ಅಂಗನವಾಡಿ ಸಹಾಯಕಿಯೊಳಗೆ ಪರಕಾಯ ಪ್ರವೇಶ ಮಾಡಿ ಆಕೆಯ ಮನಸ್ಸನ್ನು ಚಿತ್ರಿಸಿದ್ದಾರೆ. ತಾವು ನೋಡಿದ್ದು, ಆಡಿದ್ದು, ಅನುಭವಿಸಿದ್ದು, ತಿಂದಿದ್ದು, ಕುಡಿದಿದ್ದು, ಕುಣಿದಿದ್ದು, ಕೇಳಿದ್ದು ಎಲ್ಲವನ್ನೂ ಮುಚ್ಚುಮರೆಯಿಲ್ಲದೆಯೇ ಸರಾಗವಾಗಿ ಯಾವುದೇ ಹಿಂಜರಿಕೆಯಿಲ್ಲದೆ ಬರೆದಿದ್ದಾರೆ. ಓದುಗರ ಮನಸ್ಸನ್ನು ಆವರಿಸಿಕೊಳ್ಳುವ ಆಟದ ಅಂಗಳವನ್ನಾಗಿಸಿದ್ದಾರೆ.
‘ಈ ಪ್ರಶಸ್ತಿಯು ಮಕ್ಕಳ ಕ್ರಿಯಾಶೀಲತೆಗೆ ಲಭಿಸಿರುವ ಪ್ರೋತ್ಸಾಹ. ನಮ್ಮ ಶಾಲೆಯ ಮಕ್ಕಳ ಬರಹ, ಚಟುವಟಿಕೆಗೆ ಕಾರಣವಾದ ಗ್ರಾಮಸ್ಥರ ಬೆಂಬಲಕ್ಕೆ ಲಭಿಸಿರುವ ಮೆಚ್ಚುಗೆ. ಇದರಿಂದ ನಮ್ಮ ಶಾಲೆ ಹಾಗೂ ವಿದ್ಯಾರ್ಥಿಗಳಿಗೆ ಮತ್ತಷ್ಟು ಉತ್ಸಾಹ, ಹುಮ್ಮಸ್ಸು ಮೂಡಿದೆ’ ಎನ್ನುತ್ತಾರೆ ಶಿಕ್ಷಕ ಎಸ್. ಕಲಾಧರ.

Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!