ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಹುತೇಕ ಪಂಚಾಯತಿಗಳು ಕಾಂಗ್ರೆಸ್ ಪಕ್ಷದ ಪಾಲಾಗಿರುವುದು ಜನರು ಪಕ್ಷಕ್ಕೆ ಕೊಟ್ಟಿರುವ ನೈತಿಕ ಸ್ಥೈರ್ಯವಾಗಿದೆ ಎಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳ ಗ್ರಾಮದ ಪಂಚಾಯತಿ ಕಚೇರಿಯಲ್ಲಿ ಬುಧವಾರ ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಸಂದರ್ಭದಲ್ಲಿ ಮಾತನಾಡಿದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಚಿಲಕಲನೇರ್ಪು ಹೋಬಳಿ ಸೇರಿಕೊಂಡಂತೆ ಒಟ್ಟು 34 ಗ್ರಾಮ ಪಂಚಾಯತಿಗಳಿದ್ದು, ಅದರಲ್ಲಿ ಎರಡರಲ್ಲಿ ಚುನಾವಣೆ ನಡೆದಿಲ್ಲ. ಈ ಬಾರಿ ಚುನಾವಣೆ ನಡೆದವುಗಳಲ್ಲಿ 22 ಪಂಚಾಯತಿಗಳು ಕಾಂಗ್ರೆಸ್ ಪಕ್ಷದ ಪಾಲಾಗಿದೆ. ಗ್ರಾಮ ಮಟ್ಟದ ಜನರ ಆಶೋತ್ತರಗಳು ನಾಡಿನ ರಾಜಕೀಯ ದಿಕ್ಸೂಚಿಯಿದ್ದಂತೆ. ಚುನಾಯಿತರಾದವರು ಗ್ರಾಮದ ನೈರ್ಮಲ್ಯಕ್ಕೆ ಪ್ರಥಮ ಆದ್ಯತೆ ನೀಡಬೇಕು. ಗ್ರಾಮಗಳಲ್ಲಿ ಮೂಲಭೂತ ಸೌಕರ್ಯವನ್ನು ಹೆಚ್ಚಿಸುವಲ್ಲಿ ಪರಿಶ್ರಮ ವಹಿಸಬೇಕು ಎಂದು ತಿಳಿಸಿದರು.
ಹಂಡಿಗನಾಳ ಪಂಚಾಯತಿಯಲ್ಲಿ ಎಂಟು ಮಂದಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದರಿಂದ ಚುನಾವಣೆ ನಡೆಸುವ ಅಗತ್ಯವುಂಟಾಗಲಿಲ್ಲ. ಇದು ಜನರ ಒಗ್ಗಟ್ಟನ್ನು ತೋರಿಸಿಕೊಡುತ್ತದೆ ಎಂದು ಹೇಳಿದರು.
ಹಂಡಿಗನಾಳ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಕೇಶವಾಪುರ ಮುನಿಯಪ್ಪ, ಉಪಾಧ್ಯಕ್ಷರಾಗಿ ಹಂಡಿಗನಾಳ ಶಾರದಮ್ಮ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿ ಜಿಲ್ಲಾಪಂಚಾಯತಿ ಎ.ಇ.ಇ ಶಿವಾನಂದ, ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಮುನಿಕೃಷ್ಣಪ್ಪ, ಗ್ರಾಮ ಪಂಚಾಯತಿ ಸದಸ್ಯರಾದ ಜಯರಾಂ, ರಾಜು, ಪ್ರೇಮಮ್ಮ, ಆಶಾ, ಸುಮಿತ್ರಮ್ಮ, ತ್ಯಾಗರಾಜ್, ಮಹದೇವಯ್ಯ, ಕಾರ್ಯದರ್ಶಿ ಗೌಸ್ಪೀರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಜನರು ಕಾಂಗ್ರೆಸ್ಪ ಕ್ಷಕ್ಕೆ ಕೊಟ್ಟಿರುವ ನೈತಿಕ ಸ್ಥೈರ್ಯ
ಹದಿಹರೆಯದ ಸಮಸ್ಯೆಗಳು ಮತ್ತು ಪರಿಹಾರ – ಭಾಗ 2
ನಿಯಮಿತ ಋತುಚಕ್ರ
1. ಋತುಚಕ್ರವು ನಿಯಮಿತವಾಗಲು ಲೋಳೆಸರದ ತಿರುಳನ್ನು ಬೆಲ್ಲದೊಂದಿಗೆ ಸೇರಿಸಿ ಸೇವಿಸುವುದು ಒಳ್ಳೆಯದು.
2. ಎಳ್ಳು, ಹಿಪ್ಪಲಿ, ಬಾರ್ಲಿ, ಕರಿಮೆಣಸು ಹಾಗೂ ಶುಂಠಿಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂದು ಪುಡಿ ಮಾಡಿ ಒಂದು ಚಮಚದಷ್ಟು ಪುಡಿಯನ್ನು ಬೆಲ್ಲದೊಂದಿಗೆ ಸೇರಿಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.
3. ಎಳ್ಳುಂಡೆ, ಉದ್ದಿನ ಅಂಟು ಉಂಡೆ, ಎಳ್ಳಿನ ಕಷಾಯವನ್ನು ಜೇನುತುಪ್ಪದೊಂದಿಗೆ ಸೇವಿಸುವುದು ಉತ್ತಮ.
ಅತಿಯಾದ ರಕ್ತಸ್ರಾವ
ಮಾಸಿಕ ಋತುಸ್ರಾವದ ಸಮಯದಲ್ಲಿ 5 ರಿಂದ 7 ದಿನಗಳಿಗಿಂತ ಹೆಚ್ಚು ಕಾಲ ಸ್ರಾವವಾಗುತ್ತಿದ್ದರೆ ಹಾಗೂ ಎರಡು ಋತುಚಕ್ರದ ಮಧ್ಯ ಅಂದರೆ, ಮುಟ್ಟಾದ 15 ದಿನಗಳಲ್ಲಿಯೇ ಸ್ರಾವ ಆರಂಭವಾಗುತ್ತಿದ್ದರೆ ಅಲಕ್ಷ್ಯ ಸಲ್ಲದು.
1. ಉತ್ತರಣೆಯ ರಸವನ್ನು 4 ಚಮಚದಷ್ಟು ಜೇನುತುಪ್ಪದೊಂದಿಗೆ ಬೆರೆಸಿ ದಿನಕ್ಕೆರಡು ಬಾರಿ ಖಾಲಿ ಹೊಟ್ಟೆಯಲ್ಲಿ 15 ರಿಂದ 21 ದಿನಗಳು ಸೇವಿಸಬೇಕು.
2. 4 ಚಮಚದಷ್ಟು ಆಡುಸೋಗೆ ರಸವನ್ನು ಜೇನುತುಪ್ಪದೊಂದಿಗೆ ದಿನಕ್ಕೆರಡು ಬಾರಿ ಖಾಲಿ ಹೊಟ್ಟೆಯಲ್ಲಿ 15 ರಿಂದ 21 ದಿನಗಳು ಸೇವಿಸಬೇಕು.
ಇವುಗಳಿಂದ ಶಮನವಾಗದಿದ್ದರೆ ವೈದ್ಯರ ಬಳಿ ತಪಾಸಣೆ ಅಗತ್ಯ.
ಬಿಳಿಸ್ರಾವ
ಋತುಸ್ರಾವದ ನಂತರ 10 ರಿಂದ 20 ದಿನಗಳಲ್ಲಿ ಯೋನಿಯಿಂದ ಸ್ವಲ್ಪ ಪ್ರಮಾಣದಲ್ಲಿ ಬಿಳಿ ಸ್ರಾವ ಆಗುತ್ತದೆ. ಮಾಸಿಕ ಸ್ರಾವದ ಒಂದೆರಡು ದಿನಗಳ ಮುಂಚೆಯೂ ಸ್ವಲ್ಪ ಪ್ರಮಾಣದಲ್ಲಿ ಬಿಳಿ ಸ್ರಾವ ಆಗುತ್ತದೆ. ಇದು ಸ್ವಾಭಾವಿಕ ಸ್ರಾವ. ಇದಕ್ಕೆ ವಾಸನೆ ಇರುವುದಿಲ್ಲ. ಆದರೆ ಇದೇ ಬಿಳಿ ಸ್ರಾವ ಅತಿ ಆದರೆ ಮತ್ತು ಹಳದಿ ಬಣ್ಣದಿಂದ ಕೂಡಿದ್ದು, ಮೊಸರಿನಂತೆ ಗಟ್ಟಿಯಾಗಿದ್ದರೆ ಹಾಗೂ ಯೋನಿ ಮಾರ್ಗದಲ್ಲಿ ತುರಿಕೆ ಉರಿ ಕಂಡು ಬಂದರೆ ಚಿಕಿತ್ಸೆ ಅವಶ್ಯಕ. ಇದು ಜನನಾಂಗ ಮಾರ್ಗದ ಸೋಂಕನ್ನು ಸೂಚಿಸುತ್ತದೆ.
1. ಬಿಳಿ ಸ್ರಾವಕ್ಕೆ ಮುಖ್ಯ ಕಾರಣವೆಂದರೆ ಜನನಾಂಗ ಸ್ವಚ್ಛತೆ ಕಾಪಾಡಿಕೊಳ್ಳದಿರುವುದು.
2. ಜನನಾಂಗ ಮಾರ್ಗವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಪ್ರತಿ ಬಾರಿ ಮಲ, ಮೂತ್ರ ವಿಸರ್ಜನೆಯ ನಂತರ ಜನನಾಂಗವನ್ನು ನೀರಿನಿಂದ ಸ್ವಚ್ಛಗೊಳಿಸಬೇಕು.
3. ಮಾಸಿಕ ಋತುಸ್ರಾವದ ಸಮಯದಲ್ಲಿ ಸ್ವಚ್ಛವಾದ ಹತ್ತಿಯ ಬಟ್ಟೆಗಳನ್ನೇ ಬಳಸುವುದು ಉತ್ತಮ.
4. ನ್ಯಾಪ್‍ಕಿನ್‍ಗಳನ್ನು ಪದೇ ಪದೇ ಬದಲಾಯಿಸುತ್ತಿರಬೇಕು.
5. ಒಳ ಉಡುಪುಗಳನ್ನು ಹಾಗೂ ನ್ಯಾಪ್‍ಕಿನ್‍ಗಳಂತೆ ಬಳಸಿದ ಬಟ್ಟೆಗಳನ್ನು ಸ್ವಚ್ಛವಾಗಿ ಸಾಬೂನಿನಿಂದ ಹಾಗೂ ಬಿಸಿನೀರಿನಿಂದ ತೊಳೆದು ಬಿಸಿಲಿನಲ್ಲಿಯೇ ಒಣಗಿಸುವುದು ಒಳ್ಳೆಯದು.
6. ಒಮ್ಮೆ ಬಳಸಿದ ಬಟ್ಟೆಗಳನ್ನು ಹಾಗೂ ನ್ಯಾಪ್‍ಕಿನ್‍ಗಳನ್ನು ಪುನ: ಬಳಸದೆ ಇರುವುದು ಸೂಕ್ತ.
7. ತ್ರಿಫಲಾ ಪುಡಿಯಿಂದ ಕಷಾಯ ತಯಾರಿಸಿ, ಅದರಿಂದ ಜನನಾಂಗವನ್ನು ಸ್ವಚ್ಛಗೊಳಿಸಿಕೊಳ್ಳಬೇಕು.
8. ಉದ್ದಿನ ಹಿಟ್ಟು, ಜೇಷ್ಠಮಧು ಪುಡಿ, ಅಶ್ವಗಂಧ ಪುಡಿಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಒಂದು ಚಮಚ ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸುವುದು ಉತ್ತಮ.
ಮುಟ್ಟಿನ ಹೊಟ್ಟೆ ನೋವು
ಋತುಸ್ರಾವಕ್ಕೆ ಮುಂಚೆ ಹಾಗೂ ಸ್ರಾವ ಆರಂಭವಾದ ನಂತರ ಹೊಟ್ಟೆನೋವು ಸಾಮಾನ್ಯವಾಗಿ ಕಂಡು ಬರುವ ಲಕ್ಷಣ ಕೆಲವರಲ್ಲಿ ಕೆಳಹೊಟ್ಟೆ ನೋವು, ಸೊಂಟ, ಕಾಲುಗಳಲ್ಲಿ ಸೆಳೆತ ಕಾಣಿಸಿಕೊಳ್ಳುತ್ತದೆ. ಇನ್ನು ಕೆಲವರಲ್ಲಿ ಮುಂಚೆಯೇ ನೋವು ಕಾಣಿಸಿಕೊಳ್ಳುತ್ತದೆ. ಸ್ರಾವ ಆರಂಭವಾದ ನಂತರ ನೋವು ಶಮನವಾಗುತ್ತದೆ. ಇದರೊಂದಿಗೆ ತಲೆಸುತ್ತು, ವಾಂತಿ ಮಲಬದ್ಧತೆ, ಎದೆ ಬಿಗಿತದಂಥಹ ಸಮಸ್ಯೆ ಕಂಡು ಬರಬಹುದು. ಮಾನಸಿಕ ಹಿನ್ನಲೆ ಆತಂಕಗಳು ಕೂಡ ಕಂಡು ಬರುತ್ತವೆ.
ಪರಿಹಾರ
1. ಮುಟ್ಟಿನ ಸಮಯದಲ್ಲಿ ಎರಡು ಚಮಚ ಜೀರಿಗೆಯನ್ನು ಹುರಿದು ಎರಡು ಲೋಟ ನೀರಿಗೆ ಸೇರಿಸಿ, ಕುದಿಸಿ ಅರ್ಧದಷ್ಟು ಇಳಿಸಿ, ಸೋಸಿ, ಸ್ವಲ್ಪ ಬಿಸಿ ಇರುವಾಗಲೇ ಒಂದು ಚಿಕ್ಕ ಲಿಂಬೆ ಹಣ್ಣಿನ ಗಾತ್ರದಷ್ಟು ಬೆಣ್ಣೆಯನ್ನು ಸೇರಿಸಿ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಉತ್ತಮ. ಇದನ್ನು ಸ್ರಾವ ಆರಂಭವಾಗುವ ಒಂದು ವಾರ ಮುಂಚೆಯೇ ಪ್ರಾರಂಭಿಸಿ, ಮಾಸಿಕ ಋತು ಸ್ರಾವದ ನಾಲ್ಕೂ ದಿನಗಳೂ ಸೇವಿಸಿದೆರೆ ಹೊಟ್ಟೆ ನೋವು ಕಡಿಮೆ ಆಗುತ್ತದೆ.
2. ಜೀರಿಗೆಯನ್ನು ಹುರಿದು ಪುಡಿ ಮಾಡಿ ಇಟ್ಟುಕೊಳ್ಳಬೇಕು. ಹೊಟ್ಟೆ ನೋವು ಇರುವ ಸಮಯದಲ್ಲಿ ಬೆಲ್ಲವನ್ನು ಸೇರಿಸಿ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಅಗಿದು ತಿನ್ನುವುದೂ ಕೂಡಾ ಸಹಕಾರಿ.
3. ಮುಟ್ಟಿನ ಸಮಯದಲ್ಲಿ ಕಡಲೇಕಾಳು ಗಾತ್ರದ ಇಂಗನ್ನು ತುಪ್ಪದಲ್ಲಿ ಹುರಿದು, ಬಿಸಿ ನೀರಿನಲ್ಲಿ ದಿನಕ್ಕೆರಡು ಬಾರಿ ಸೇವಿಸಬೇಕು.
4. ಮಾಸಿಕ ಸ್ರಾವ ಆರಂಭವಾಗುವ ಏಳು ದಿನಗಳ ಮುಂಚೆಯೇ ಶುಂಠಿ, ಮೆಣಸು, ಹಿಪ್ಪಲಿ – ಇವುಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಪುಡಿ ಮಾಡಿ ದಿನಕ್ಕೆರಡು ಬಾರಿ ಅರ್ಧ ಚಮಚ ತುಪ್ಪದಲ್ಲಿ ಬೆರೆಸಿ, ಸೇರಿಸಿ ಬಿಸಿ ನೀರನ್ನು ಕುಡಿಯಬೇಕು ಇದೂ ಕೂಡ ಋತುಸ್ರಾವದ ಸಮಯದ ಹೊಟ್ಟೆ ನೋವನ್ನು ಶಮನ ಮಾಡಲು ಸಹಕಾರಿ.
5. ಹೊಟ್ಟೆಯ ಮೇಲೆ ಬಿಸಿ ನೀರಿನ ಶಾಖ ಅಥವಾ hoಣ bಚಿg ಗಳಿಂದಲೂ ಶಾಖವನ್ನು ಕೊಡುವುದು ಉತ್ತಮ.
ಮೊಡವೆಗಳು ಮತ್ತು ಪರಿಹಾರ
ಹದಿ ಹರೆಯದಲ್ಲಿ ಆಗುವ ಹಾರ್ಮೋನುಗಳ ಬದಲಾವಣೆಯೇ ಮೊಡವೆಗಳ ಉತ್ಪತ್ತಿಗೂ ಕಾರಣ
ಪರಿಹಾರ
1. ಅತಿಯಾದ ಸೌಂದರ್ಯ ವರ್ಧಕಗಳ ಬಳಕೆ ಸಲ್ಲದು.
2. ಕಡಲೆ ಹಿಟ್ಟಿಗೆ ಸ್ವಲ್ಪ ಅರಿಶಿನವನ್ನು ಸೇರಿಸಿ ಹಾಲಿನ ಕೆನೆಯೊಂದಿಗೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ನಂತರ ಮುಖವನ್ನು ತಣ್ಣೀರಿನಿಂದ ಸ್ವಚ್ಛಗೊಳಿಸಿಕೊಳ್ಳಬೇಕು.
3. ಲೋಳೆಸರದ ತಿರುಳನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮೊಡವೆಯ ಕಲೆಗಳು ಸ್ವಲ್ಪ ದಿನಗಳಲ್ಲಿಯೇ ಮಾಯವಾಗುತ್ತದೆ.
4. ಬಜೆ ಲೋಧ್ರ ಹಾಗೂ ಕೊತ್ತಂಬರಿ ಪುಡಿಯನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ, ಮೊಸರು ಅಥವಾ ಜೇನುತುಪ್ಪದೊಂದಿಗೆ ಕಲಸಿ, ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ಮುಖವನ್ನು ತೊಳೆಯುವುದೂ ಕೂಡ ಮೊಡವೆಗಳಿಗೆ ಉತ್ತಮ ಪರಿಹಾರ.
5. ಅರಿಶಿಣ ಹಾಗೂ ಜೇನುತುಪ್ಪವನ್ನು ಮಿಶ್ರಣ ಮಾಡಿ ಹಚ್ಚಿಕೊಳ್ಳಬಹುದು.
6. ಅತಿಯಾದ ಕ್ಷಾರವುಳ್ಳ ಸಾಬೂನಿನ ಬಳಕೆ ಬೇಡ.
7. ದಿನ ನಿತ್ಯವೂ ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಾಲಿನ ಕೆನೆಯನ್ನು ಹಚ್ಚಿ ಬೆಳಿಗ್ಗೆ ತಣ್ಣೀರಿನಿಂದ ಮುಖ ತೊಳೆಯುವುದರಿಂದ ಮುಖದ ಕಾಂತಿ ಹೆಚ್ಚುವುದು.
ಹದಿ ಹರೆಯದವರಿಗೆ ಕಿವಿ ಮಾತು
1. ಕ್ರಮಬದ್ಧವಾದ ವ್ಯಾಯಾಮ, ಯೋಗ, ಪ್ರಾಣಾಯಾಮಗಳನ್ನು ರೂಢಿಸಿಕೊಳ್ಳಿ ಇದರಿಂದ ದೇಹ ಹಾಗೂ ಮನಸ್ಸು ಸದೃಢಗೊಳ್ಳುತ್ತದೆ.
2. ಯಾವುದಾದರೂ ಒಂದು ಕ್ರೀಡೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ.
3. ಕ್ರಮಬದ್ಧವಾದ ಪಠ್ಯ – ಪುಸ್ತಕಗಳ ಓದು, ಕ್ರಮಬದ್ಧವಾದ ದಿನಚರಿಗಳನ್ನು ರೂಢಿಸಿಕೊಳ್ಳಿ.
4. ಸಾಮಾನ್ಯವಾಗಿ ಹದಿಹರೆಯದವರಲ್ಲಿ ಬಣ್ಣ, ರೂಪು, ಎತ್ತರದ ಬಗ್ಗೆ ಕೀಳರಿಮೆ ಹುಟ್ಟಿಕೊಳ್ಳುತ್ತದೆ. ನಿಮ್ಮ ರೂಪನ್ನು ಇದ್ದಂತೆಯೇ ಒಪ್ಪಿಕೊಳ್ಳಿ.
5. ನಿಮ್ಮನ್ನು ನೀವು ಪ್ರೀತಿಸುವುದನ್ನು ಕಲಿಯಿರಿ.
6. ಹಿರಿಯರೊಡನೆ ನಿಮ್ಮ ಸಮಸ್ಯೆಗಳನ್ನು ಚರ್ಚಿಸಿ ಗುರುಗಳ, ಹಿರಿಯರ ಸಲಹೆ, ಸೂಚನೆ, ಮಾರ್ಗದರ್ಶನಗಳನ್ನು ಪಡೆಯಿರಿ.
ತಂದೆ – ತಾಯಿಗಳಿಗೆ ಕಿವಿಮಾತು
1. ಬಾಲ್ಯ ಹಾಗೂ ಯೌವ್ವನದ ನಡುವಿನ ಅವಧಿಯಾದ ಹದಿಹರೆಯ ಹುಡುಗಿಯರಲ್ಲಿ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬೆಳವಣಿಗೆಗೆ ಭದ್ರ ಅಡಿಪಾಯ ಹಾಕುವ ಕಾಲ. ಈ ಸಂದರ್ಭದಲ್ಲಿ ಕಂಡು ಬರುವ ಸಮಸ್ಯೆಗಳು ಸಾವಿರಾರು, ಪ್ರಶ್ನೆಗಳಿಗೆ ಪಾಲಕರು ಪರಿಹಾರವನ್ನು ತಿಳಿಸಬೇಕು.
2. ಹದಿಹರಯದವರನ್ನು ಸ್ನೇಹಿತರಂತೆ ನೋಡಿಕೊಳ್ಳಿ.
3. ಆಧುನೀಕರಣ ಹೆಚ್ಚಾದಂತೆ ಸುಲಭವಾಗಿ ದೊರಕುವ ಅಂತರ್ಜಾಲ, ಕಂಪ್ಯೂಟರ್, ಟಿ.ವಿ. ಮುಂತಾದ ದೃಶ್ಯ ಮಾಧ್ಯಮಗಳ ಮೂಲಕ ಅರೆಬರೆ ಮಾಹಿತಿಗಳನ್ನು ಹದಿಹರಯದವರು ತಿಳಿದುಕೊಂಡು ದಾರಿ ತಪ್ಪುವ ಸಾಧ್ಯತೆಗಳು ಹೆಚ್ಚು, ಆದ್ದರಿಂದ ಲೈಂಗಿಕ ಶಿಕ್ಷಣದ ಅರಿವು ಅಗತ್ಯ. ಇದರೊಂದಿಗೆ ನೈತಿಕ ಶಿಕ್ಷಣವು ಅಗತ್ಯ.
4. ಆಸಕ್ತಿಕರವಾದ ಹವ್ಯಾಸಗಳು (ಕಸೂತಿ, ಹಾಡು, ನೃತ್ಯ, ಓದು, ಬರವಣಿಗೆ) ಇತ್ಯಾದಿಗಳ ಬಗ್ಗೆ ಗಮನ ಹರಿಸಲೂ ಕೂಡ ಅವರನ್ನು ಪ್ರೇರೇಪಿಸಬೇಕು.
5. ಅಲ್ಲದೇ ಹಿರಿಯರು ಈ ಸಮಯದಲ್ಲಿ ಅವರನ್ನು ಪ್ರೀತಿಯಿಂದ ನೋಡಿಕೊಂಡು ಸಮಸ್ಯೆಗಳನ್ನು ಸಹನೆಯಿಂದ, ತಾಲ್ಮೆಯಿಂದ ಪರಿಹರಿಸುವುದೂ ಕೂಡ ಒಳ್ಳೆಯದು.
6. ಆದಷ್ಟು ಮಕ್ಕಳ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಗಮನ ಹರಿಸುವುದು ಉತ್ತಮ.
7. ಹದಿಹರೆಯದವರು ಖಿನ್ನತೆ, ಆತಂಕ, ಭಯ ಇತ್ಯಾದಿಗಳಿಂದ ಬಳಲುತ್ತಿದ್ದರೆ ತಜ್ಞರ ಮೂಲಕ ಆಪ್ತ ಸಮಾಲೋಚನೆ ಕೊಡಿಸುವುದು ಅಗತ್ಯ.
ಹದಿಹರೆಯ ಎನ್ನುವುದು ಒಂದು ಮಹತ್ತರವಾದ ಘಟ್ಟ. “ಬೆಳೆಯುವ ಸಿರಿ ಮೊಳಕೆಯಲ್ಲಿ” ಎನ್ನುವಂತೆ ಈ ಹಂತದಲ್ಲಿನ ಬದಲಾವಣೆಗಳು, ಅದರಿಂದಾಗುವ ಸಮಸ್ಯೆಗಳನ್ನು ಪ್ರಥಮ ಹಂತದಲ್ಲಿಯೇ ಪರಿಹರಿಸಲು ಪ್ರಯತ್ನಸಬೇಕು. ಇಂದಿನ ಯುವ ಪೀಳಿಗೆಯೇ ನಾಳಿನ ಸಮಾಜದ ನಿರ್ಮಾತೃಗಳು. ಹದಿಹರೆಯದ ಶಿಕ್ಷಣವು ಪ್ರಜ್ಞಾವಂತ, ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಪೂರಕವಾಗಬೇಕೇ ಹೊರತು ಮಾರಕವಾಗಬಾರದು.
ಮುಗಿಯಿತು.
ನಾಗಶ್ರಿ. ಕೆ.ಎಸ್.
ಭಕ್ತರಹಳ್ಳಿ ರಾಜ್ಯದಲ್ಲೇ ಪ್ರಥಮ ಸಂಪೂರ್ಣ ಗ್ರಾಮೀಣ ಅಂಚೆ ವಿಮಾ ಹೊಂದಿದ ಗ್ರಾಮ
ರಾಜ್ಯದಲ್ಲೇ ಪ್ರಥಮವಾಗಿ ತಾಲ್ಲೂಕಿನ ಭಕ್ತರಹಳ್ಳಿಯು ಸಂಪೂರ್ಣ ಗ್ರಾಮೀಣ ಅಂಚೆ ವಿಮಾ ಹೊಂದಿದ ಗ್ರಾಮವೆಂದು ಸೋಮವಾರ ಘೋಷಿತವಾಗಿದೆ.
ಪ್ರತಿಯೊಂದು ಕುಟುಂಬಕ್ಕೂ ಅಂಚೆ ಜೀವ ವಿಮಾ ಹಾಗೂ ಅಂಚೆ ಕಚೇರಿಯಲ್ಲಿ ಖಾತೆಗಳನ್ನು ಮಾಡಿಸುವ ಮೂಲಕ ಸಂಪೂರ್ಣ ಅಂಚೆ ವಿಮಾ ಹೊಂದಿದ ಗ್ರಾಮವಾಗಿರುವುದಕ್ಕೆ ಅಂಚೆ ಇಲಾಖೆಯ ವತಿಯಿಂದ ಗ್ರಾಮದಲ್ಲಿ ಪ್ರಯಾಣಿಕರ ತಂಗುದಾಣವೊಂದನ್ನು ನಿರ್ಮಿಸಿಕೊಡಲಾಗಿದೆ.
ಪ್ರಯಾಣಿಕರ ತಂಗುದಾಣವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಅಂಚೆ ಅಧೀಕ್ಷಕ ಕೆ.ಮುನಿರಾಮಯ್ಯ ಮಾತನಾಡಿ, ‘ರಾಜ್ಯದಲ್ಲೇ ಸಂಪೂರ್ಣ ಗ್ರಾಮೀಣ ಅಂಚೆ ವಿಮಾ ಹೊಂದಿದ ಗ್ರಾಮ ಎಂಬ ಹೆಗ್ಗಳಿಕೆಗೆ ಭಕ್ತರಹಳ್ಳಿ ಪಾತ್ರವಾಗಿದೆ. ಈ ಕಾರ್ಯದಲ್ಲಿ ನಮ್ಮ ಅಂಚೆ ಪೋಸ್ಟ್ ಮಾಸ್ಟರ್ ಮತ್ತು ಗ್ರಾಮಸ್ಥರ ಶ್ರಮವಿದೆ. ಇದರ ಸವಿ ನೆನಪಿಗಾಗಿ ನಮ್ಮ ಅಂಚೆ ಇಲಾಖೆಯಿಂದ ತಂಗುದಾಣವನ್ನು ನಿರ್ಮಿಸಲಾಗಿದೆ. ತಂಗುದಾಣದ ಮೇಲೆ ಅಂಚೆ ಇಲಾಖೆಯ ವಿವಿಧ ಯೋಜನೆಗಳ ಕುರಿತಂತೆ ಮಾಹಿತಿಯನ್ನು ಬರೆಸಲಾಗಿದೆ. ಈ ಭಕ್ತರಹಳ್ಳಿ ಗ್ರಾಮ ರಾಜ್ಯದಲ್ಲೇ ಮಾದರಿಯಾಗಿದ್ದು, ಸಂಪೂರ್ಣ ರಾಜ್ಯ ಎಲ್ಲಾ ಗ್ರಾಮಗಳಲ್ಲೂ ಇಲಾಖೆಯ ಯೋಜನೆಗಳು ತಲುಪಿಸುವುದು ನಮ್ಮ ಉದ್ದೇಶವಾಗಿದೆ’ ಎಂದು ವಿವರಿಸಿದರು.
ಭಕ್ತರಹಳ್ಳಿ ಪೋಸ್ಟ್ ಮಾಸ್ಟರ್ ಗೋಪಾಲ್ ಮಾತನಾಡಿ,‘ಗ್ರಾಮದಲ್ಲಿ ಸುಮಾರು 600 ಅಂಚೆ ಪಾಲಿಸಿಗಳನ್ನು ಮಾಡಿಸಿದ್ದೇನೆ. ಪ್ರತಿ ತಿಂಗಳೂ ವಿಮಾ ಹಣ ಒಂದು ಲಕ್ಷ ಇಪ್ಪತ್ತು ಸಾವಿರ ರೂಗಳು, ಎಸ್.ಬಿ.ಖಾತೆಗೆ ಒಂದು ಲಕ್ಷ ಎಪ್ಪತ್ತೈದು ಸಾವಿರ ರೂಗಳು, ಆರ್.ಡಿ. ಖಾತೆಗೆ ಎಪ್ಪತ್ತೈದು ಸಾವಿರ ರೂಗಳು ಗ್ರಾಮಸ್ಥರು ಕಟ್ಟುತ್ತಿದ್ದಾರೆ. ಮನೆಮನೆಗೂ ಬೆಳಿಗ್ಗೆ ಮತ್ತು ಸಂಜೆ ನಾನೇ ಖುದ್ದಾಗಿ ಹೋಗಿ ಪೋಸ್ಟ್ ನೀಡುವುದರೊಂದಿಗೆ ಹಣವನ್ನೂ ಕಟ್ಟಿಸಿಕೊಳ್ಳುತ್ತೇನೆ’ ಎಂದು ತಿಳಿಸಿದರು.
ಕೋಲಾರ ವಿಭಾಗದ ಸಹಾಯಕ ಅಧೀಕ್ಷಕ ವಿ.ಆರ್.ಸ್ವಾಮಿ, ಅಂಚೆ ಉಪ ನಿರೀಕ್ಷಕ ವಿ.ವೆಂಕಟರಮಣಪ್ಪ, ಅಧಿಕಾರಿಗಳಾದ ಶ್ರೀಧರ್, ಗಿರೀಶ್, ರಾಜ್ಕುಮಾರ್, ಆಶಾಕುಮಾರ್, ನಾರಾಯಣಮೂರ್ತಿ, ರಾಮಾಂಜಿನಯ್ಯ, ವೆಂಕಟೇಶಮೂರ್ತಿ, ಭಕ್ತರಹಳ್ಳಿ ಗ್ರಾಮದ ವೆಂಕಟಮೂರ್ತಿ, ಎಚ್.ವಿ.ಮುನಿರೆಡ್ಡಿ, ಚನ್ನೇಗೌಡ, ಎಸ್.ನಾರಾಯಣಸ್ವಾಮಿ, ಎ.ಎನ್.ದೇವರಾಜ್, ಗುತ್ತಿಗೆದಾರ ಹೇಮಂತ್ ಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರೋತ್ಸಾಹ ಧನ ಬದಲಿಗೆ ವೈಜ್ಞಾನಿಕ ಬೆಲೆ ನಿಗಧಿಗೆ ಮನವಿ
ರೇಷ್ಮೆ ಕೃಷಿಕರು, ನೂಲು ಬಿಚ್ಚಾಣಿಕೆದಾರರು, ಚಾಕಿ ಸಾಕಾಣಿಕೆದಾರರು, ರೇಷ್ಮೆ ಮೊಟ್ಟೆ ತಯಾರಕರು ಮತ್ತು ರೇಷ್ಮೆ ನೇಕಾರರ ಸಮಸ್ಯೆಗಳ ಅಧ್ಯಯನಕ್ಕೆ ಧಾರಾವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾದ ಎಚ್.ಬಸವರಾಜು ರವರ ಅಧ್ಯಕ್ಷತೆಯಲ್ಲಿ ೮ ಸದಸ್ಯರನ್ನೊಳಗೊಂಡ ಸಮಿತಿಯು ಮಂಗಳವಾರ ಆಗಮಿಸಲಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾಪಂಚಾಯತಿ ಸಭಾಂಗಣದಲ್ಲಿ ನಡೆಯಲಿರುವ ಅಹವಾಲು ಸ್ವೀಕಾರ ಸಭೆಯಲ್ಲಿ ಜಿಲ್ಲೆಯಲ್ಲಿನ ರೇಷ್ಮೆ ಕೃಷಿಕರ ಸಮಸ್ಯೆಗಳು ಸೇರಿದಂತೆ ಪ್ರಮುಖವಾಗಿ ಮಿಶ್ರತಳಿ ಗೂಡಿನ ಉತ್ಪಾದನಾ ವೆಚ್ಚ ಇತರೆ ಎಲ್ಲಾ ಅಂಶಗಳನ್ನು ಸಮಿತಿಯ ಗಮನಕ್ಕೆ ತರಲು ಜಿಲ್ಲಾ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆಯ ವತಿಯಿಂದ ಸಂಕ್ಷಿಪ್ತ ವಿವರವುಳ್ಳ ವರದಿಯನ್ನು ತಯಾರು ಮಾಡಿಕೊಳ್ಳಲಾಗಿದೆ.
ಪ್ರಗತಿಪರ ರೇಷ್ಮೆ ಬೆಳೆಗಾರರೆಲ್ಲ ಸೇರಿ ಶನಿವಾರ ಮತ್ತು ಭಾನುವಾರ ಶಿಡ್ಲಘಟ್ಟ ರೇಷ್ಮೆಗೂಡು ಮಾರುಕಟ್ಟೆ ಉಪನಿರ್ದೇಶಕರ ಕಚೇರಿಯಲ್ಲಿ ಸುದೀರ್ಘವಾಗಿ ಚರ್ಚಿಸಿ ಅನುಭವದ ಆಧಾರದ ಮೇಲೆ ಉತ್ಪಾದನಾ ವೆಚ್ಚವನ್ನು ನಿಗಧಿ ಮಾಡಿಕೊಳ್ಳಲಾಗಿದೆ. ಈ ವರದಿಯಲ್ಲಿ ಒಂದು ಕೆ.ಜಿ. ಮಿಶ್ರತಳಿ ರೇಷ್ಮೆಗೂಡಿನ ಉತ್ಪಾದನಾ ವೆಚ್ಚವು ಪ್ರಚಲಿತ ಸ್ಥಿತಿಗತಿಗಳಿಗನುಗುಣವಾಗಿ ೩೬೪- ರೂ ಆಗಿದೆ.
ಒಂದು ಎಕರೆ ಹಿಪ್ಪುನೇರಳೆ ನಾಟಿ ಮಾಡುವ ಪ್ರದೇಶಕ್ಕಾನುಗುಣವಾಗಿ ವಿವರವಾಗಿ ಲೆಕ್ಕ ಹಾಕಿ ೧೦೦ ಮೊಟ್ಟೆಗೆ ೭೫ ಕೆ.ಜಿ. ಸರಾಸರಿ ಇಳುವರಿಯ ಆಧಾರದಲ್ಲಿ ೧೦ ವರ್ಷಕ್ಕೆ ಮೂಲ ಬಂಡವಾಳವಾಗಿ ತೆಗೆದುಕೊಂಡಾಗ ಒಂದು ಕೆ.ಜಿ.ಗೆ ರೂ. ೯.೩೪ ಪೈಸೆ, ಹಿಪ್ಪುನೇರಳೆ ತೋಟ ನಿರ್ವಹಣೆಗೆ ಪ್ರತಿ ಕೆ.ಜಿ. ರೂ. ೮೯.೮೧ ಪೈಸೆ, ಹುಳು ಸಾಕಾಣಿಕೆಗೆ ಸಂಬಂಧಿಸಿದಂತೆ ರೂ. ೨೧೨.೯೩ ಪೈಸೆ, ಕೊಳವೆ ಬಾವಿಯ ವೆಚ್ಚವನ್ನು ಸರಾಸರಿ ೧೦೦೦ ಅಡಿಗೆ ಲೆಕ್ಕ ಹಾಕಿ ಇದರ ವೆಚ್ಚವು ಪ್ರತಿ ಕೆ.ಜಿ.ಗೆ ರೂ. ೨೩.೮೧ ಪೈಸೆ ರೇಷ್ಮೆ ಹುಳು ಸಾಕಾಣಿಕೆ ಮನೆಗೆ ೩೦ ವರ್ಷದ ಆಯಸ್ಸಿಗೆ ಅನುಗುಣವಾಗಿ ಪ್ರತಿ ಕೆ.ಜಿ.ಗೆ ರೂ. ೨೮.೪೪ ಪೈಸೆ ಒಟ್ಟು ಮೊತ್ತ ಪ್ರತಿ ಕೆ.ಜಿ.ಗೆ ರೂ. ೩೬೪ ಆಗುತ್ತದೆ.
ದ್ವಿತಳಿ ರೇಷ್ಮೆ ಬೆಳೆಯುವ ಬೆಳೆಗಾರರಿಗೆ ಅತಿ ಹೆಚ್ಚಿನ ಕಾಳಜಿ ಮತ್ತು ಹೆಚ್ಚಿನ ಸೋಂಕು ನಿವಾರಕಗಳನ್ನು ಬಳಸಿ ರಾಮನಗರ ಮಾರುಕಟ್ಟೆಗೆ ಹೋಗಬೇಕಾದ ಕಾರಣದಿಂದಾಗಿ ಗೂಡಿನ ಉತ್ಪಾದನಾ ವೆಚ್ಚವು ೩೬೪ ರೂಗಳಿಗಿಂತಲೂ ಹೆಚ್ಚಾಗುವುದೆಂದು ಅಂದಾಜಿಸಲಾಗಿದೆ.
‘ಇತ್ತೀಚಿಗೆ ರೇಷ್ಮೆಗೂಡಿನ ಬೆಲೆಯು ತೀವ್ರವಾಗಿ ಕುಸಿದಿದ್ದು, ೯೦ರ ದಶಕದಲ್ಲಿ ಇದ್ದ ರೇಷ್ಮೆ ಗೂಡಿನ ಧರಕ್ಕಿಂತಲೂ ಕಡಿಮೆ ಬೆಲೆಗೆ ರೇಷ್ಮೆ ಗೂಡನ್ನು ಮಾರಾಟ ಮಾಡುತ್ತಿರುವುದರಿಂದ ರೈತರು ತೀವ್ರ ನಷ್ಟಕ್ಕೊಳಗಾಗುತ್ತಿದ್ದಾರೆ. ಇಂದು ರಸಗೊಬ್ಬರ ಬೆಲೆ, ಕೂಲಿಯ ಪ್ರಮಾಣ, ಸಾಗಾಣಿಕೆ ವೆಚ್ಚ ಸುಮಾರು ೧೦ ಪಟ್ಟು ಹೆಚ್ಚಿದ್ದರೂ ಸಹ ೨೦ ವರ್ಷಗಳ ಹಿಂದಿನ ಧರದಲ್ಲೇ ರೇಷ್ಮೆಗೂಡನ್ನು ಮಾರಾಟ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿರುವುದು ರೇಷ್ಮೆ ಕೃಷಿಕರ ದುರಾದೃಷ್ಟ. ಡಾ.ಸ್ವಾಮಿನಾಥನ್ ವರದಿಯ ಆಧಾರದ ಪ್ರಕಾರ ಉತ್ಪಾದನಾ ವೆಚ್ಚದ ಶೇ. ೫೦ ರಷ್ಟನ್ನು ರೈತರಿಗೆ ಲಾಭಾಂಶವಾಗಿ ನೀಡಬೇಕೆಂಬ ನಿಯಮದಂತೆ ಸರ್ಕಾರವು ಕನಿಷ್ಟ ಧರವನ್ನು ನಿಗಧಿಪಡಿಸಿದರೆ ರೇಷ್ಮೆ ಉದ್ಯಮ ಉಳಿಯಲು ಸಾಧ್ಯ’ ಎಂದು ರೇಷ್ಮೆ ಕೃಷಿಕರು ತಿಳಿಸಿದ್ದಾರೆ.
ಈ ಸಭೆಯಲ್ಲಿ ಪ್ರಗತಿಪರ ಬೆಳೆಗಾರರು ಹಾಗೂ ಜಿಲ್ಲಾ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆಯ ಗೌರವಾಧ್ಯಕ್ಷ ಸೊಣ್ಣೇನಹಳ್ಳಿ ನಾರಾಯಣಸ್ವಾಮಿ, ಸಂಚಾಲಕ ಯಲುವಹಳ್ಳಿ ಸೊಣ್ಣೇಗೌಡ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ, ವೇದಿಕೆಯ ಉಪಾಧ್ಯಕ್ಷ ಮಳ್ಳೂರು ಹರೀಶ್, ಹಿತ್ತಲಹಳ್ಳಿ ಗೋಪಾಲಗೌಡ, ಚಿಂತಾಮಣಿ ಮಲ್ಲಿಕಾರ್ಜುನ ರೆಡ್ಡಿ, ಅಬ್ಲೂಡು ಆರ್.ದೇವರಾಜು, ನಾರಾಯಣದಾಸರಹಳ್ಳಿ ಕೃಷ್ಣಪ್ಪ, ಹೊಸಪೇಟೆ ಜಯಣ್ಣ, ವೀರಾಪುರ ಮುನಿನಂಜಪ್ಪ, ಭಕ್ತರಹಳ್ಳಿ ಲಕ್ಷ್ಮೀನಾರಾಯಣ್, ರಾಮಚಂದ್ರ ಮತ್ತಿತರರು ಹಾಜರಿದ್ದರು.
‘ಶಾಲೆಗೆ ಬನ್ನಿ ಶನಿವಾರ, ಕಲಿಕೆಗೆ ನೀಡಿ ಸಹಕಾರ’
ತಾಲ್ಲೂಕಿನ ಮುತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ‘ಶಾಲೆಗೆ ಬನ್ನಿ ಶನಿವಾರ, ಕಲಿಕೆಗೆ ನೀಡಿ ಸಹಕಾರ’ ಎಂಬ ಕಾರ್ಯಕ್ರಮವನ್ನು ವಿನೂತನವಾಗಿ ಆಚರಿಸಲಾಯಿತು.
ಡೆಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ಯೂತ್ ಫಾರ್ ಸೇವಾ ಸಂಸ್ಥೆಯವರು ಶಾಲೆಗೆ ಆಗಮಿಸಿ ಮಕ್ಕಳಿಗೆ ರಸಪ್ರಶ್ನೆ, ಹಾಡು ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದರು. ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಬ್ಯಾಗ್, ನೋಟ್ ಪುಸ್ತಕ ಮತ್ತು ಕಲಿಕಾ ಸಾಮಗ್ರಿಗಳನ್ನು ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಪಿ.ವಿ.ವೆಂಕಟೇಶ್, ವೆಂಕಟರಮಣಪ್ಪ, ವಿಷಯ ಪರಿವೀಕ್ಷಕ ಆಂಜಿನಪ್ಪ, ಮುಖ್ಯ ಶಿಕ್ಷಕಿ ಜಿ.ಎನ್.ಅಹಲ್ಯಾ, ಶಿಕ್ಷಕ ದಾವುದ್ಪಾಷ ಮತ್ತಿತರರು ಹಾಜರಿದ್ದರು.
ರೈತ ಸಂಘ ಮತ್ತು ಹಸಿರು ಸೇನೆ ಪ್ರತಿಭಟನೆ
ಲೋಕಾಯುಕ್ತ ನ್ಯಾಯಮೂರ್ತಿ ಎಸ್.ಬಾಸ್ಕರರಾವ್ ಅವರ ಪುತ್ರ, ಅಶ್ವಿನ್ರಾವ್ ಅವರ ಲಂಚ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಮೂರ್ತಿಗಳ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಸೋಮವಾರ ಮನವಿ ಪತ್ರವನ್ನು ಸಲ್ಲಿಸಿದರು.
ನಗರದ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಅವರು, ರಾಜ್ಯದ ೬ ಕೋಟಿಗೂ ಹೆಚ್ಚು ಮಂದಿ ಜನತೆ ನಂಬಿಕೆಯಿಟ್ಟಿರುವ ಲೋಕಾಯುಕ್ತ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿರುವ ನ್ಯಾಯಮೂರ್ತಿ ಎಸ್.ಬಾಸ್ಕರ್ರಾವ್ ಅವರು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅವರು ರಾಜೀನಾಮೆ ನೀಡದಿದ್ದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಧ್ಯಪ್ರವೇಶ ಮಾಡಿ, ಅವರನ್ನು ವಜಾಗೊಳಿಸಬೇಕು. ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯಿಂದಾಗಿ ರೇಷ್ಮೆ ಆಮದು ಶುಲ್ಕವನ್ನು ಇಳಿಕೆ ಮಾಡಿದ್ದರಿಂದ ತೀವ್ರವಾಗಿ ಇಳಿಮುಖವಾಗಿರುವ ರೇಷ್ಮೆ ಗೂಡು ಹಾಗೂ ರೇಷ್ಮೆ ನೂಲಿಗೆ ಸೂಕ್ತವಾದ ಬೆಲೆಗಳನ್ನು ನೀಡಬೇಕು. ಹಿಪ್ಪುನೇರಳೆ ಬೆಳೆಯುವಂತಹ ರೈತರುಗಳ ನೆರವಿಗೆ ಸರ್ಕಾರ ಧಾವಿಸಬೇಕು. ಬ್ಯಾಂಕುಗಳಿಂದ ಮಾಡಿರುವ ಸಾಲಗಳನ್ನು ಮರುಪಾವತಿ ಮಾಡಲು ಕಾಲಾವಕಾಶವನ್ನು ಕಲ್ಪಿಸಿಕೊಡಬೇಕು. ರೈತರ ಸಾಲಗಳಿಗೆ ಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ನಗರದ ಡಿ.ಸಿ.ಸಿ.ಬ್ಯಾಂಕಿನಲ್ಲಿ ರೈತರುಗಳಿಂದ ದಾಖಲೆಗಳನ್ನು ಪಡೆದುಕೊಂಡಿದ್ದು, ಪಹಣಿಗಳಲ್ಲಿ ಸಾಲವಿತರಣೆ ಮಾಡಿರುವಂತೆ ನಮೂದು ಮಾಡಿದ್ದು, ಇದುವರೆಗೂ ಒಬ್ಬ ರೈತರಿಗೂ ಸಾಲವನ್ನು ನೀಡದೆ ವಂಚನೆ ಮಾಡಲಾಗಿದೆ. ಜೂನ್ ಅಂತ್ಯದ ವೇಳೆಗೆ ಸಾಲಗಳನ್ನು ವಿತರಣೆ ಮಾಡುವುದಾಗಿ ಹೇಳಿದ್ದ ವ್ಯವಸ್ಥಾಪಕರು ಹಾಗೂ ನಿರ್ದೇಶಕರು ನೀಡಿದ್ದ ಭರವಸೆ ವಿಫಲವಾಗಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ರೈತರುಗಳಿಗೆ ಸಾಲಗಳನ್ನು ವಿತರಣೆ ಮಾಡದಿದ್ದರೆ ಡಿ.ಸಿ.ಸಿ.ಬ್ಯಾಂಕಿಗೆ ಬೀಗಹಾಕಿ ಪ್ರತಿಭಟನೆ ಮಾಡಲಾಗುತ್ತದೆ. ಕೋಲಾರದ ಜಿಲ್ಲಾ ಬ್ಯಾಂಕಿನ ಸಮೀಪದಲ್ಲೂ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತರಿಂದ ಮನವಿ ಪತ್ರವನ್ನು ಸ್ವೀಕರಿಸಿದ ಉಪತಹಸೀಲ್ದಾರ್ ವಾಸುದೇವಮೂರ್ತಿ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಕಳುಹಿಸಿಕೊಡಲಾಗುತ್ತದೆ ಎಂದರು.
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಮುನಿಕೆಂಪಣ್ಣ, ಕದಿರಪ್ಪ, ಶಿವಣ್ಣ, ಚಂದ್ರಶೇಖರ್, ವೆಂಕಟೇಶ್, ಮಲ್ಲಪ್ಪ, ಆಂಜನೇಯರೆಡ್ಡಿ, ನಾಗರಾಜು, ಮುನಿನಾರಾಯಣಪ್ಪ, ಗೋವಿಂದಪ್ಪ, ನಾಗೇಶ್, ಮುನೇಗೌಡ, ಡಿ.ವಿ.ನಾರಾಯಣಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಜೆನೆರಿಕ ಔಷಧಿಗಳೆಂಬ ವಂಚನೆಯ ಮಹಾಜಾಲ
ಅಮೀರ್ ಖಾನ್‍ನ ಸತ್ಯಮೇವ ಜಯತೇ ಕಾರ್ಯಕ್ರಮವೊಂದರಿಂದ ಶುರುವಾದ ಜೆನೆರಿಕ್ ಔಷಧಿಗಳ ಬಗೆಗಿನ ಚರ್ಚೆ ಈಗ ಸರ್ಕಾರದ ಮಟ್ಟಕ್ಕೂ ಮುಟ್ಟಿದೆ. ಕರ್ನಾಟಕ ಸರ್ಕಾರ ಈಗ ಜೆನೆರಿಕ್ ಔಷಧಿಗಳನ್ನು ಜನತಾ ಬಜಾರ್‍ಗಳಲ್ಲಿ ಶೇ 80ರ ರಿಯಾಯಿತಿ ದರದಲ್ಲಿ ಮಾರಾಟ ಮಾಡುವುದಾಗಿ ಪ್ರಕಟಿಸಿ ತಾನು ಜನತೆಗೆ ಭಾರೀ ಉಪಕಾರ ಮಾಡಿದ ನಾಟಕ ಮಾಡುತ್ತಿದೆ. ಇದೇ ವಿಷಯದಲ್ಲಿ ಸಾಕಷ್ಟು ರಾಜ್ಯ ಸರ್ಕಾರಗಳೂ ಮತ್ತು ಕೇಂದ್ರ ಸರ್ಕಾರ ಕೂಡ ಜನರ ಕಣ್ಣಿಗೆ ಮಣ್ಣೆರೆಚುವ ವಿವಿಧ ಕ್ರಮಗಳನ್ನು ಪ್ರಕಟಿಸಿ ಜನತೆಯ ಉದ್ಧಾರಕರ ಪೋಸು ಕೊಡಬಹುದು.
ಅಮೀರ್ ಖಾನ್ ಒಳ್ಳೆಯ ಕೆಲಸವನ್ನೇ ಮಾಡಿದ್ದಾನೆ. ಆದರೆ ಈ ಜೆನೆರಿಕ್ ಔಷಧಿಗಳ ವಿಚಾರದಲ್ಲಷ್ಟೇ ಅಲ್ಲ, ಎಲ್ಲಾ ರೀತಿಯ ಔಷಧಿಗಳ ಬೆಲೆ ಮತ್ತು ಗುಣ ಮಟ್ಟಕ್ಕೆ ಸಂಬಂಧಪಟ್ಟ ವಿಷಯಗಳಲ್ಲಿ ಸಾಕಷ್ಟು ವೈದ್ಯರು ಮತ್ತು ಸಂಘಟನೆಗಳು ಹತ್ತಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಅವರ ಸಂಖ್ಯೆ ಮತ್ತು ಜನಪ್ರಿಯತೆ ಕಡಿಮೆ ಇದ್ದುದರಿಂದ ಬಹುರಾಷ್ಟ್ರೀಯ ಔಷಧ ಕಂಪನಿಗಳಿಗೆ ಮಣಿದು ಸರ್ಕಾರ ಅವರನ್ನು ಕಡೆಗಣಿಸಿತ್ತು. ಗಮನಾರ್ಹ ವಿಚಾರವೆಂದರೆ ಔಷಧಗಳ ವಿಚಾರದಲ್ಲಿ ನಡೆಯುತ್ತಿರುವ ವಂಚನೆಯ ಮಹಾಜಾಲ ಬರೀ ಜೆನೆರಿಕ್ ಡ್ರಗ್ಸ್ ಗಳಿಗೆ ಮಾತ್ರ ಸಂಬಂಧಿಸಿರದೆ, ಬಹುಮುಖವಾದದ್ದು ಎನ್ನುವುದು.
ಸರಳವಾಗಿ ಯೋಚಿಸಿ. ಯಾವುದೇ ವಸ್ತುವನ್ನು ಶೇ 80ರ ರಿಯಾಯಿತಿಯಲ್ಲಿ ಮಾರಾಟ ಮಾಡಿದ ಮೇಲೂ ಕಂಪನಿಗಳಿಗೆ ಸಾಕಷ್ಟು ಲಾಭವೇ ಆಗುತ್ತಿದೆ ಮತ್ತು ಸರ್ಕಾರ ತನ್ನ ನಿರ್ವಹಣಾ ವೆಚ್ಚವನ್ನು ಸಂಗ್ರಹಿಸುತ್ತಿದೆ ಎಂದರೆ ಆ ವಸ್ತುವಿನ ನಿಜವಾದ ತಯಾರಿಕಾ ವೆಚ್ಚವೆಷ್ಟಿರಬಹುದು? ಮಾರಾಟ ಬೆಲೆಯ ಶೇ 5ರಿಂದ 10ರ ವರೆಗೆ ಇರುತ್ತದೆ ಎಂದುಕೊಳ್ಳಬಹುದು. ವಾಸ್ತವದಲ್ಲಿ ತಯಾರಿಕಾ ವೆಚ್ಚ ಅದಕ್ಕಿಂತ ಕಡಿಮೆ ಇರುತ್ತದೆ. ಉದಾಹರಣೆಗೆ ಹತ್ತರಿಂದ ಇಪ್ಪತ್ತು ರೂಪಾಯಿಗೆ ಮಾರಾಟವಾಗುವ ಆಲ್ಬೆಂಡೋಜೋಲ್400 (ಜಂತುಹುಳುವಿನ ಔಷಧ) ಎನ್ನುವ ರಾಸಾಯನಿಕದ ತಯಾರಿಕಾ ವೆಚ್ಚ ಐವತ್ತು ಪೈಸೆಗಿಂತ ಕಡಿಮೆ, ಅಂದರೆ ಮಾರಾಟ ಬೆಲೆಯ ಶೇ 5ಕ್ಕಿಂತ ಕಡಿಮೆ ಎಂದು ಅಂತರ್ಜಾಲದ ಮಾಹಿತಿ ಹೇಳುತ್ತದೆ. ಅಂದಮೇಲೆ ಇಷ್ಟು ವರ್ಷ ನಮ್ಮ ಜನ ಈ ಜೆನೆರಿಕ್ ಔಷಧಿಗಳಿಗೆ ಶೇ 80ರಷ್ಟು ಹೆಚ್ಚು ಬೆಲೆಯನ್ನು ತೆರುತ್ತಿದ್ದರು ಎಂದಾಯಿತಲ್ಲವೇ?. ಈ ಹಣ ಎಲ್ಲಿ ಹೋಗುತ್ತಿತ್ತು- ವೈದ್ಯರಿಗೆ?, ವಿವಿಧ ಹಂತದ ಮಾರಾಟಗಾರರಿಗೆ?, ಸರ್ಕಾರೀ ಅಧಿಕಾರಿಗಳಿಗೆ? ಅಥವಾ ರಾಜಕಾರಣಗಳಿಗೆ? ಜೆನೆರಿಕ್ ಔಷಧಿಗಳನ್ನು ಬರೆದು ಕೊಡಲು ಒಪ್ಪದ ಸಾಕಷ್ಟು ವೈದ್ಯರು ಹೇಳುವಂತೆ ಇವುಗಳ ಗುಣಮಟ್ಟ ಕಳಪೆಯಾಗಿದ್ದರೆ, ಸರ್ಕಾರ ಇವುಗಳನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲು ಬಿಟ್ಟಿದು ಹೇಗೆ? ಸರ್ಕಾರ ಇದರ ಸಂಪೂರ್ಣ ವಿವರಗಳನ್ನು ಜನತೆಯ ಮುಂದಿಡಬೇಕಿದೆ.
ಸರ್ಕಾರವೇನೊ ಜೆನೆರಿಕ್ ಔಷಧಗಳನ್ನು ಶೇ 80ರ ರಿಯಾಯಿತಿ ದರದಲ್ಲಿ ಮಾರಾಟ ಮಾಡುವುದಾಗಿ ಪ್ರಕಟಿಸಿದೆ. ಜನತಾ ಬಜಾರ್‍ಗಳಿಗೆ ಬರಲಾಗದವರು ಅಥವಾ ಅಲ್ಲಿ ಸಿಗದೇ ಇರುವ ಜೆನೆರಿಕ್ ಡ್ರಗ್ಸ್ ಗಳಿಗೆ ಗ್ರಾಹಕರು ಇನ್ನೂ ಮುಂದೆಯೂ ಶೇ 80ರಷ್ಟು ಹೆಚ್ಚು ಬೆಲೆಯನ್ನು ಕೊಡಬೇಕಾಗುತ್ತದೆ. ಇದಕ್ಕೆ ಸರ್ಕಾರದಲ್ಲಿ ಪರಿಹಾರ ಏನಿದೆ?
ಔಷಧಗಳ ಹೆಸರುಗಳದ್ದೇ ಒಂದು ಮಾಯಾಜಾಲ. ಅವುಗಳ ರಾಸಾಯನಿಕದ ಹೆಸರು ಒಂದಾದರೆ, ಪ್ರತೀ ಕಂಪನಿಯೂ ಎಲ್ಲಾ ರಾಸಾಯನಿಕಕ್ಕೂ ತನ್ನದೇ ಆದ ಬ್ರಾಂಡ್ ನೇಮ್ ಇಟ್ಟಿರುತ್ತದೆ. ದೊಡ್ಡ ಕಂಪನಿಗಳು ತಮ್ಮ ಜೆನೆರಿಕ್ಸ್‍ಗಳಿಗೂ ಬ್ರಾಂಡ್ ನೇಮ್‍ಗಳನ್ನು ಮುದ್ರಿಸಿರುತ್ತಾರೆ. ಜನತಾ ಬಜಾರ್‍ಗಳಲ್ಲಿ ಸರ್ಕಾರ ಸಾವಿರಾರು ಕಂಪನಿಗಳ ಜೆನೆರಿಕ್ಸ್‍ಗಳನ್ನು ಇಡುವುದು ಅಸಾದ್ಯ. ವೈದ್ಯರು ಬರೆದಿರುವ ಔಷಧಿಗಳ ಹೆಸರುಗಳು ಅಕ್ಷರಶ: ಹೊಂದಾಣಿಕೆಯಾಗದಿದ್ದರೆ ರಾಸಾಯನಿಕಗಳ ಹೆಸರನ್ನು ಆಧರಿಸಿ ಕೊಳ್ಳುವಷ್ಟು ತಾಂತ್ರಿಕ ಜ್ಞಾನ ಜನಸಾಮಾನ್ಯರಿಗಿರುವುದಿಲ್ಲ. ಅದೂ ಅಲ್ಲದೆ ಹೆಚ್ಚಿನ ವೈದ್ಯರು ತಾವು ಬರೆದುಕೊಟ್ಟ ಕಂಪನಿಯ ಔಷಧವನ್ನೇ ಕೊಳ್ಳಬೇಕೆಂದು ಆಗ್ರಹಿಸುತ್ತಾರೆ. ಇದಕ್ಕೆಲ್ಲಿದೆ ಪರಿಹಾರ?
ಇದೆಲ್ಲದರ ಒಟ್ಟು ಪರಿಣಾಮ ಸರ್ಕಾರದ ಜನತಾ ಬಜಾರ್ ಪ್ರಯೋಗ ತೋಪಾಗುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಈ ರೀತಿಯ ಕಣ್ಕಟ್ಟಿನ ಕೆಲಸ ಮಾಡುವುದಕ್ಕಿಂತ ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಸೇರಿ ಜೆನೆರಿಕ್ ಔಷಧಗಳ ಬೆಲೆಯನ್ನು ಶೇ 80ರಷ್ಟು ಇಳಿಸುವ ನಿಟ್ಟಿನಲ್ಲಿ ಕಾನೂನನ್ನು ಏಕೆ ರೂಪಿಸಬಾರದು? ಇದರಿಂದ ಎಲ್ಲಾ ರೋಗಿಗಳಿಗೂ ದೊಡ್ಡ ಸಹಾಯವಾಗುತ್ತದೆ.
ಹಾಗೆ ನೋಡಿದರೆ ಬ್ರಾಂಡೆಡ್ ಔಷಧಿಗಳ ಬೆಲೆಯೂ ತೀರಾ ಹೆಚ್ಚಾಗಿಯೇ ಇದೆ. ದೊಡ್ಡ ಕಂಪನಿಗಳ ಬ್ರಾಂಡೆಡ್ ಔಷಧಗಳ ತಯಾರಿಕಾ ವೆಚ್ಚವೂ ಜೆನೆರಿಕ್‍ಗಳಷ್ಟೇ ಇರುತ್ತದೆ ಏಕೆಂದರೆ ಹೆಚ್ಚಿನ ಕಂಪನಿಗಳು ತಾವೇ ಔಷಧಿಗಳನ್ನು ತಯಾರಿಸದೆ, ಸಗಟು ತಯಾರಕರಿಂದ (ಬಲ್ಕ್ಕ್ ಡ್ರಗ್ ಮ್ಯಾನಿಫ್ಯಾಕ್ಚರರ್ಸ್) ಕೊಳ್ಳುತ್ತವೆ. ತಯಾರಿಕಾ ವೆಚ್ಚ ಮತ್ತು ಮಾರಾಟ ಬೆಲೆಯಲ್ಲಿನ ವ್ಯತ್ಯಾಸ ಕಂಪನಿಗಳ ಮಾರಾಟ ಜಾಲಕ್ಕೆ ಮತ್ತು ವೈದ್ಯರುಗಳ ಮೇಜುವಾನಿಗಾಗಿ ಖರ್ಚಾಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಮೇಜುವಾನಿ ಬೆಲೆಬಾಳುವ ವಸ್ತುಗಳು, ವಿದೇಶ ಪ್ರವಾಸ ಮತ್ತು ಇತ್ತೀಚೆಗೆ ನಗದು ರೂಪದಲ್ಲೂ ಇರುತ್ತದೆಯೆಂಬುದನ್ನು ಕಂಪನಿಯ ಮೂಲಗಳು ಗುಟ್ಟಾಗಿ ಒಪ್ಪಿಕೊಳ್ಳುತ್ತವೆ. ಒಂದೇ ರಾಸಾಯನಿಕದ ಬೇರೆ ಬೇರೆ ಕಂಪನಿಯ ಔಷಧಿಗಳ ಬೆಲೆಯಲ್ಲಿ ಭೂಮಿ ಆಕಾಶಗಳ ಅಂತರವಿರುವುದು ಸರ್ಕಾರಕ್ಕೂ ತಿಳಿಯದ ವಿಚಾರವೇನಲ್ಲ. ಇದಕ್ಕೆಲ್ಲಾ ಕಡಿವಾಣ ಹಾಕಿದರೆ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಬ್ರಾಂಡೆಡ್ ಔಷಧಿಗಳನ್ನೂ ಕೂಡ ಈಗಿರುವ ಬೆಲೆಗಳ ಶೇ 50ಕ್ಕಿಂತ ಕಡಿಮೆ ಬೆಲೆಗೆ ಮಾರಾಟಮಾಡಬಹುದು.
ಔಷಧಿಗಳ ರಾಸಾಯನಿಕ ಹೆಸರುಗಳು, ಬ್ರಾಂಡ್ ನೇಮ್‍ಗಳು, ಅವು ಜೆನೆರಿಕ್‍ಗಳೇ, ಬ್ರಾಂಡೆಡ್ ಔಷಧಿಗಳೇ- ಮುಂತಾದ ತಾಂತ್ರಿಕ ಅಂಶಗಳು ವೈದ್ಯರು ಮತ್ತು ಈ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೇ ಸರಿಯಾಗಿ ತಿಳಿಯದೇ ಇರುವಷ್ಟು ಗೊಂದಲಗಳಿರುವಾಗ, ಜನಸಾಮಾನ್ಯರಿಗೆ ತಿಳಿಯುವುದು ಹೇಗೆ? ಅವರು ವೈದ್ಯರು ಬರೆದುಕೊಟ್ಟ ಔಷಧಿಗಳನ್ನು ಕೊಳ್ಳುತ್ತಾರೆ. ಆ ಔಷಧಿಗಳು ಕೈಗೆಟುಕವ ಬೆಲೆಯಲ್ಲಿರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸಮಗ್ರ ಬದಲಾವಣೆಗಳನ್ನು ಮಾಡಬೇಕಾಗುತ್ತದೆ.
ನಮ್ಮ ಮಂತ್ರಿಗಳು ಮತ್ತು ಅಧಿಕಾರಿಗಳು ಬಹುರಾಷ್ಟ್ರೀಯ ಔಷಧ ಕಂಪನಿಗಳ ವಿವಿಧ ರೀತಿಯ ಒತ್ತಡಗಳನ್ನು ತಡೆಯಲು ಸಾಧ್ಯವಾದರೆ ಈ ರೀತಿಯ ಬದಲಾವಣೆ ತರುವುದು ಕಷ್ಟವೆನಲ್ಲ. ನಿಜವಾದ ಪ್ರಶ್ನೆ ಇರುವುದು ಈ ಒತ್ತಡ, ಆಮಿಷಗಳನ್ನು ಇವರು ನಿರ್ವಹಿಸಬಲ್ಲರೇ ಎನ್ನುವುದು ಮಾತ್ರ. ಅದಾಗದು ಎಂದಾದರೆ ಉಳಿದೆಲ್ಲಾ ಸುಧಾರಣೆಗಳು ಬರಿಯ ಜನಸಾಮಾನ್ಯರ ಕಣ್ಣೊರೆಸುವ ಮೋಸದ ನಾಟಕಗಳು ಎನ್ನಬೇಕಾಗುತ್ತದೆ. ಇಂತಹ ಕ್ರಮಗಳು ಅಮೀರ್ ಖಾನ್ ಬೆನ್ನು ತಟ್ಟವವರನ್ನು ಖುಷಿಪಡಿಸಬಹುದು ಮಾತ್ರ
ವಸಂತ್ ನಡಹಳ್ಳಿ
ಮಾರುಕಟ್ಟೆಯ ಧರದಲ್ಲಿ ಜೋಟನ್ನು ಖರೀದಿಸಲಿ
ಜೋಟ್ (ಸಿಲ್ಕ್ವೇಸ್ಟ್) ಖರೀಸುವವರ ವಿರುದ್ಧ ನಮಗೆ ಯಾವುದೆ ರೀತಿಯ ವೈಯಕ್ತಿಕ ದ್ವೇಷ ಇಲ್ಲ ಎಂದು ಸ್ಪಷ್ಟಪಡಿಸಿರುವ ರೇಷ್ಮೆನೂಲು ಬಿಚ್ಚಾಣಿಕೆದಾರರ ಸಂಘದ ಮುಖಂಡರು ಮಾರುಕಟ್ಟೆಯ ಧರದಲ್ಲಿ ಜೋಟನ್ನು ಖರೀದಿಸಲಿ ಎಂಬುದಷ್ಟೆ ನಮ್ಮ ಆಶಯ ಎಂದರು.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೀಲರ್ ಸಂಘದ ಮುಖಂಡ ಡಿ.ಎಂ.ಜಗದೀಶ್ವರ್, ನಗರದಲ್ಲಿ ನಾಲ್ಕು ಮಂದಿಯಷ್ಟೆ ಜೋಟ್ ವ್ಯಾಪಾರಿಗಳಿದ್ದು ಅವರು ನಿಗದಿಪಡಿಸಿದ ಬೆಲೆಗೆ ಎಲ್ಲ ರೀಲರುಗಳು ಸಹ ಜೋಟನ್ನು ನೀಡುವ ಪರಿಸ್ಥಿತಿ ಇದೆ. ಇದರಿಂದ ಸಾವಿರಾರು ಸಂಖ್ಯೆಯಲ್ಲಿರುವ ರೀಲರುಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಶಿಡ್ಲಘಟ್ಟ ನಗರದಲ್ಲಿ ೩೫೦೦ಕ್ಕೂ ಹೆಚ್ಚು ಮಂದಿ ರೀಲರುಗಳಲ್ಲಿ ಶೇ. ೯೦ರಷ್ಟು ಮಂದಿ ರೀಲರುಗಳು ದಪ್ಪ ರೇಷ್ಮೆಯನ್ನು ತೆಗೆಯಲಿದ್ದು ಪ್ರತಿ ೪-೫ ಕೆಜಿಯಷ್ಟು ರೇಷ್ಮೆ ನೂಲನ್ನು ಬಿಚ್ಚಾಣಿಕೆ ಮಾಡಿದರೆ ೧ ಕೆಜಿಯಷ್ಟು ಜೋಟ್ ಉತ್ಪತ್ತಿಯಾಗುತ್ತೆ. ಬಹುತೇಕ ಎಲ್ಲ ಕುಟುಂಬಗಳೂ ಈ ಜೋಟ್ನಿಂದ ಬರುವ ಆದಾಯದ ಮೇಲೆ ಅವಲಂಬಿಸಿದ್ದಾರೆ. ಆದರೆ ನಗರದಲ್ಲಿ ಬೇರೆಲ್ಲಾ ಕಡೆಗಳಿಗಳಿಗಿಂತಲೂ ಸುಮಾರು ೧೦೦-–೧೫೦ರೂಪಾಯಿ ಕಡಿಮೆ ಬೆಲೆಗೆ ಜೊಟ್ಟನ್ನು ಖರೀದಿಸುತ್ತಿದ್ದಾರೆ. ಆದರೆ ಪಕ್ಕದ ವಿಜಯಪುರ, ಕೋಲಾರ ಇನ್ನಿತರೆ ಕಡೆ ಅಲ್ಲಿನ ವ್ಯಾಪಾರಿಗಳು ಹೆಚ್ಚಿನ ಬೆಲೆಗೆ ಜೋಟನ್ನು ಖರೀದಿಸುತ್ತಿದ್ದಾರೆ ಎಂದರು.
ರಾಜ್ಯದ ಎಲ್ಲ ಕಡೆಯೂ ಜೋಟ್ಗೆ ಸ್ವಲ್ಪ ಹೆಚ್ಚು ಕಡಿಮೆ ಒಂದೆ ಬೆಲೆ ಇರುವಾಗ ಇಲ್ಲಿ ಮಾತ್ರ ಇಷ್ಟು ವ್ಯತ್ಯಾಸ ಏಕೆ ? ಎಂದು ಪ್ರಶ್ನಿಸಿರುವ ನಾವು ಬೇರೆ ಕಡೆ ಮಾರುಕಟ್ಟೆಯಲ್ಲಿ ಏನು ಬೆಲೆ ಇದೆಯೋ ಆ ಬೆಲೆಗೆ ಇಲ್ಲಿಯೂ ಜೋಟನ್ನು ಖರೀದಿಸಿ ಎಂಬುದಷ್ಟೆ ನಮ್ಮ ಕೋರಿಕೆ.
ಅದನ್ನು ನಾವು ಪ್ರಶ್ನಿಸಿದ್ದೇವೆಯೆ ಹೊರತು ಜೊಟ್ ಖರೀದಿದಾರರ ವಿರುದ್ಧ ನಮಗೆ ಯಾವ ವೈಯಕ್ತಿಕ ದ್ವೇಷವೂ ಇಲ್ಲ. ಜತೆಗೆ ಬೇರೆ ಎಲ್ಲಿಂದಲಾದರೂ ಜೋಟ್ ಖರೀದಿಸಲು ಇಲ್ಲಿಗೆ ವ್ಯಾಪಾರಿಗಳು ಬಂದರೆ ಅವರಿಗೆ ಇಲ್ಲಿ ವ್ಯಾಪಾರ ಮಾಡಲು ಮುಕ್ತ ಅವಕಾಶ ನೀಡಬೇಕು ಎಂಬುದಷ್ಟೆ ನಮ್ಮ ಒತ್ತಾಯ ಎಂದು ಸ್ಪಷ್ಟಪಡಿಸಿದರು.
ಕಳೆದ ವಾರ ವಿಜಯಪುರದ ಜೋಟ್ ವ್ಯಾಪಾರಿ ಮುನ್ಸೂರ್ ಇಲ್ಲಿ ಜೊಟನ್ನು ಖರೀದಿಸಿದಾಗ ಆದ ಗೊಂದಲಗಳ ನಂತರ ವಾರದ ಅಂತರದಲ್ಲಿ ಜೊಟ್ ಬೆಲೆಯಲ್ಲಿ ೫೦-–೧೦೦ರೂಪಾಯಿ ಏರಿಕೆಯಾಗಿದೆ. ಆದರೆ ಈ ಮೊದಲು ಆ ಬೆಲೆಯನ್ನು ಏಕೆ ನೀಡಲಿಲ್ಲ ಎಂದು ಪ್ರಶ್ನಿಸಿದರು.
ಜತೆಗೆ ಪ್ರಜಾಪ್ರಭುತ್ವ ಹಾಗೂ ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ಜೋಟನ್ನು ಖರೀದಿಸಬಹುದಿದ್ದು ಅದರಂತೆ ಯಾರೇ ಬಂದು ಇಲ್ಲಿ ಜೋಟನ್ನು ಖರೀದಿಸಿದರೂ ಅವರೆಲ್ಲರಿಗೂ ಸ್ವಾಗತವಿದೆ ಎಂದು ತಿಳಿಸಿದರು.
ಜೊಟ್ಗೆ ಉತ್ತಮ ಬೆಲೆ ಸಿಕ್ಕರೆ ಆರ್ಥಿಕವಾಗಿ ಚೇತರಿಸಿಕೊಳ್ಳುವ ರೀಲರ್ ತಾನು ಖರೀದಿಸುವ ರೇಷ್ಮೆಗೂಡಿಗೂ ೨೦-–೩೦ ರೂಪಾಯಿಯಷ್ಟು ಹೆಚ್ಚಿನ ಬೆಲೆ ನೀಡಲಿದ್ದು ಇದರಿಂದ ರೈತ ಹಾಗೂ ರೀಲರುಗಳಿಬ್ಬರೂ ಉಳಿದು ಬೆಳೆಯಲು ಸಹಕಾರಿಯಾಗುತ್ತದೆ ಎಂದು ವಿವರಿಸಿದರು.
ಮುಖಂಡರಾದ ಎಸ್.ಎಂ.ರಮೇಶ್, ಜಿ.ರೆಹಮಾನ್, ಸಲೀಂ, ಶಮೀವುಲ್ಲಾ, ಸಯ್ಯದ್ ದಸ್ತಗಿರ್, ಅನ್ಸರ್ಖಾನ್, ಖಾಜಿ ಅನ್ವರ್ಸಾಬ್, ಮಹ್ಮದ್, ಅಜೀಜ್, ದ್ಯಾವಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಬಾಹ್ಯಾಕಾಶ ನಿಲ್ದಾಣದಲ್ಲಿ ಏನು ನಡೆಯುತ್ತಿದೆ – ಭಾಗ 1
‘ಬಾಹ್ಯಾಕಾಶ ನಿಲ್ದಾಣ’ ಹೆಸರನ್ನು ಕೇಳಿದರೆ ಬಾಹ್ಯ ಆಕಾಶದಲ್ಲಿ ಒಂದು ನಿಂತಿರುವ ತಾಣ ಇದೆಯೇ ಎಂಬ ಶಂಕೆ ಮೂಡುವುದು ಸಹಜ. ಆದರೆ ಈ ವಿಶ್ವದಲ್ಲಿ ಯಾವ ವಸ್ತುವೂ ನಿಶ್ಚಲವಾಗಿರಲು ಸಾಧ್ಯವಿಲ್ಲ. ನಾವು, ಭೂಮಿ, ಸೂರ್ಯ, ಚಂದ್ರ, ನಕ್ಷತ್ರಗಳು, ಗೆಲಾಕ್ಸಿಗಳು ಸದಾಕಾಲ ಚಲಿಸುತ್ತಲೇ ಇವೆ. ಅತಿ ಸರಳವಾಗಿ ಹೇಳುವುದಾದರೆ, ಅಂತರ್ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ, ಇಂಟರ್‍ನಾಷನಲ್ ಸ್ಪೇಸ್ ಸ್ಟೇಶನ್ ಅಥವಾ ಐಎಸ್‍ಎಸ್ ಭೂಮಿಯ ಸುತ್ತ ಹಾರಾಡುತ್ತಿರುವ ಒಂದು ಕೃತಕ ಉಪಗ್ರಹ.
ಐಎಸ್‍ಎಸ್ ಹಾರಾಟ ಮೂಲತಃ ಒಂದು ವೈಜ್ಞಾನಿಕ ಪ್ರಯೋಗ. ಅಂತರಿಕ್ಷದಲ್ಲಿ ಆದಷ್ಟು ಹೆಚ್ಚು ದಿನ ಇದ್ದುಕೊಂಡು, ಬಾಹ್ಯ ಜಗತ್ತಿನ ವಿದ್ಯಮಾನಗಳಲ್ಲಿ ಸಾಧ್ಯವಾದಷ್ಟನ್ನೂ ದಾಖಲಿಸುತ್ತ, ವಾಯುಮಂಡಲದ ಸುರಕ್ಷೆ ಇಲ್ಲದಿರುವ ಹಾಗೂ ಅಲ್ಪ ಗುರುತ್ವವಿರುವ ಪರಿಸರದಲ್ಲಿ ಮಾನವ ದೇಹ ದೀರ್ಘಕಾಲದವರೆಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಪರೀಕ್ಷಿಸುತ್ತ, ಆ ಮೂಲಕ ಮುಂದೆ ಅನ್ಯಗ್ರಹಗಳಿಗೆ ಹಾರುವ ಮಾನವ ಕನಸನ್ನು ಸಾಕಾರಗೊಳಿಸುವತ್ತ ಒಂದು ಹೆಜ್ಜೆ.
ದೀರ್ಘಕಾಲ ಅಂತರಿಕ್ಷದಲ್ಲಿ ಹಾರಾಡುವ ಮಾನವಸಹಿತ ನೌಕೆಯ ಯೋಜನೆಗೆ ಹತ್ತಾರು ಪ್ರಯತ್ನಗಳಿಂದಲೂ ಯಶಸ್ಸು ಸಿಕ್ಕಿರಲಿಲ್ಲ. * ಛಲ ಬಿಡದ ತಿವಿಕ್ರಮನ ಹಾಗೆ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದ್ದ ಅಮೆರಿಕಾ ಮತ್ತು ರಷ್ಯಾದ ವಿಜ್ಞಾನಿಗಳು 1993 ರಲ್ಲಿ ಮತ್ತೂ ಒಮ್ಮೆ ರೂಪಿಸಿದ ಯೋಜನೆಗೆ ಎರಡೂ ದೇಶಗಳ ಸರಕಾರಗಳು ಸಮ್ಮತಿಸಿದವು. ಈ ಸಾಹಸ ಕಾರ್ಯಕ್ಕೆ ತಾವೂ ಕೈಜೋಡಿಸಲು ಐರೋಪ್ಯ ಅಂತರಿಕ್ಷ ಸಂಘ, ಕೆನಡಾ ಮತ್ತು ಜಪಾನ್ ದೇಶಗಳು ಮುಂದೆ ಬಂದವು.
1998ರಲ್ಲಿ ಈ ಬಾಹ್ಯಾಕಾಶ ನಿಲ್ದಾಣದ ನಿರ್ಮಾಣ ಆರಂಭವಾಯಿತು.
ಐವತ್ತು ವರ್ಷಗಳ ಹಿಂದೆ ಯೂರಿ ಗ್ಯಾಗರಿನ್ ಮೊಟ್ಟಮೊದಲು ಬಾಹ್ಯಾಕಾಶಕ್ಕೆ ಹಾರಿದ ಕಝಾಕಿಸ್ತಾನದ ಬೈಕನೂರ್ ವಿಶೇಷ ಲಾಂಚ್ ಪ್ಯಾಡಿನಿಂದ ಬಾನಿಗೆ ಜಿಗಿಯಿತು ಐಎಸ್‍ಎಸ್. ಅಂದು ಅದು ‘ಝರ್ಯಾ’ ಹೆಸರಿನ ರಷ್ಯನ್ ಬಾಹ್ಯಾಕಾಶ ನೌಕೆ. ಅದರಲ್ಲಿ ಬರೀ ಯಂತ್ರೋಪಕರಣಗಳು ತುಂಬಿದ್ದವು. ಮಾನವನಿಗೆ ಇರಲು ಹೆಚ್ಚು ಸ್ಥಳಾವಕಾಶವೂ ಇಲ್ಲ, ಬದುಕಲು ಬೇಕಾದ ವಾತಾವರಣವೂ ಅಲ್ಲಿಲ್ಲ. ಆ ವೇಳೆಗಾಗಲೇ ಭೂ ಸುತ್ತ ಹಾರಾಡುತ್ತಿದ್ದ ಇತರ ಕೃತಕ ಮತ್ತು ಮಾನವರಹಿತ ಉಪಗ್ರಹಗಳನ್ನು ಹೋಲುತ್ತಿದ್ದ ಈ ನೌಕೆ ಆಕಾರದಲ್ಲಿ ಮಾತ್ರ ಸ್ವಲ್ಪ ದೊಡ್ಡದು. ಅದು ನೌಕೆಗೆ ಪ್ರಪ್ರಥಮವಾಗಿ ಅಗತ್ಯವಿದ್ದ ಬ್ಯಾಟರಿ ಆಧಾರಿತ ವಿದ್ಯುತ್ ವ್ಯವಸ್ಥೆ, ಇಂಧನ ಸಂಗ್ರಹಾಗಾರ ಹಾಗೂ ನೂಕುಬಲದ ಸೌಕರ್ಯಗಳನ್ನು ಒಳಗೊಂಡಿತ್ತು. ಮುಂದೆ ಭೂಮಿಯಿಂದ ಹಾರಿಬರುವ ನೌಕೆಗಳನ್ನು ಜೋಡಿಸಿ ತನ್ನೊಡನೆ ಹೊತ್ತೊಯ್ಯುವ ವ್ಯವಸ್ಥೆಯೂ ಅದರಲ್ಲಿತ್ತು.
ನಂತರ ವರ್ಷದಿಂದ ವರ್ಷಕ್ಕೆ ಐಎಸ್‍ಎಸ್‍ಗೆ ಹೊಸ ಹೊಸ ಅಂಗಗಳ ಸೇರ್ಪಡೆ. 2000ರ ನವೆಂಬರಿನಿಂದ ಅಂತರಿಕ್ಷದಲ್ಲಿ ಸತತ ಮಾನವ ವಾಸ್ತವ್ಯ ಆರಂಭವಾಯಿತು. ರಷ್ಯಾದ ಇಬ್ಬರು ತಂತ್ರಜ್ಞರು ಸೋಯುಝ್ ನೌಕೆಯಲ್ಲಿ ಹಾರಿ ಬಂದು ಆ ನೌಕೆಯನ್ನೇ ಐಎಸ್‍ಎಸ್‍ಗೆ ಜೋಡಿಸಿದರು. ಕೆಲವೇ ದಿನಗಳಲ್ಲಿ ಅಮೆರಿಕದ ಆರು ಬೃಹತ್ ಸೌರಫಲಕಗಳ ಜೋಡಣೆಯಾಯಿತು. ಶಕ್ತಿಮೂಲವನ್ನು ಮುಷ್ಟಿಯೊಳಗಿರಿಸಿಕೊಂಡಿದ್ದರಿಂದ ಇನ್ನು ಮುಂದೆ ಬ್ಯಾಟರಿಯನ್ನು ನಂಬಿ ಕೂರುವ ಅಗತ್ಯವಿಲ್ಲ. ನಿಲ್ದಾಣದ ಯಂತ್ರಾಂಶ, ತಂತ್ರಾಂಶಗಳಿಗೆ ಅವಶ್ಯವಿರುವ ವಿದ್ಯುತ್ ಅಲ್ಲಿಯೇ ಉತ್ಪಾದನೆಯಾಗುತ್ತದೆ.
ಮೂರನೆಯದು ಮತ್ತೊಮ್ಮೆ ಪ್ರೋಟಾನ್ ನೌಕೆಯ ಮೂಲಕ 2000 ರ ಜುಲೈನಲ್ಲಿ ಹಾರಿದ ರಷ್ಯಾದ ಝ್ವೇಜ್ದಾ ಘಟಕ. ಸಿಬ್ಬಂದಿಗೆ ಅಡಿಗೆಮನೆ, ಶೌಚಾಲಯ, ಮಲಗುವ ಕೋಣೆ ಇತ್ಯಾದಿಗಳ ನಿವಾಸ ವ್ಯವಸ್ಥೆ, ಆಕ್ಸಿಜನ್ ಉತ್ಪಾದಿಸುವ, ಇಂಗಾಲದ ಡೈಆಕ್ಸೈಡ್ ನಿವಾರಿಸುವ ಮತ್ತು ಸಿಬ್ಬಂದಿಗೆ ವ್ಯಾಯಾಮ ಪರಿಕರಗಳು ಹಾಗೂ ಭೂಮಿಯಲ್ಲಿನ ಕಂಟ್ರೋಲ್ ರೂಮಿನೊಂದಿಗೆ ಧ್ವನಿ ಮತ್ತು ಬೆಳಕಿನ ಸಂಪರ್ಕಸಾಧನಗಳು ಈ ಎಲ್ಲ ಸೇವಾಸೌಕರ್ಯಗಳನ್ನು ಇದು ಒದಗಿಸುತ್ತಿದೆ. ಈಗ ಭೂನಿವಾಸಿಗಳು ಇಲ್ಲಿ ವಾಸಿಸಲು ತಕ್ಕ ವ್ಯವಸ್ಥೆ ತಯಾರಾಗಿದೆ.
ಪಾಳಿಯ ಮೇಲೆ ತಂತ್ರಜ್ಞರ ಒಂದೊಂದೇ ತಂಡ ಹಾಜರಾಗತೊಡಗಿತು. ಒಂದೊಂದು ತಂಡಕ್ಕೂ ಮೂರು ತಿಂಗಳ ಅವಧಿಯ ವಾಸ. ಅಷ್ಟರೊಳಗಾಗಿ ಮುಂದಿನ ತಂಡ ದೈಹಿಕವಾಗಿ, ಮಾನಸಿಕವಾಗಿ ಸಜ್ಜುಗೊಂಡು ತಾಂತ್ರಿಕ ತರಬೇತಿಗಳನ್ನೂ ಪಡೆದು ಹೊರಡುತ್ತದೆ. ಪ್ರತಿ ಬಾರಿಯ ಯಾತ್ರೆಯಲ್ಲೂ ಯಂತ್ರೋಪಕರಣಗಳಿದ್ದ ಘಟಕವೊಂದನ್ನು ಜೊತೆಗೊಯ್ದು ನಿಲ್ದಾಣಕ್ಕೆ ಜೋಡಿಸಲಾಗುತ್ತದೆ. ಸಿಬ್ಬಂದಿಗೆಂದು ಜೀವನಾವಶ್ಯಕ ಸಾಮಗ್ರಿಗಳ ಜೊತೆಗೆ ರಿಪೇರಿಯಾಗಬೇಕಾಗಿದ್ದ ಯಂತ್ರಗಳ ಬಿಡಿಭಾಗಗಳು, ಹೊಸ ಸಂಶೋಧನೆಗಳಿಗೆ ಬೇಕಾದ ತಾಂತ್ರಿಕ ಸಲಕರಣೆಗಳು ಇವೆಲ್ಲವೂ ಪೂರೈಕೆಯಾಗುತ್ತವೆ.
ಡೆಸ್ಟಿನಿ, ಕೊಲಂಬಸ್, ಕಿಬೋ, ಪೊಯಿಸ್ಕ್, ಟ್ರಾಂಕ್ವಿಲಿಟಿ, ಕಪೋಲಾ, ರಾಸ್ವೆಟ್, ಲಿಯೋನಾರ್ಡೊ ಹೀಗೆ ಒಂದಾದ ಮೇಲೊಂದರಂತೆ ಚಿತ್ರವಿಚಿತ್ರ ಹೆಸರು ಹೊತ್ತ ಅತಿವೆಚ್ಚದ ಪ್ರಯೋಗಾಲಯಗಳು ನಿಲ್ದಾಣಕ್ಕೆ ಸೇರ್ಪಡೆಯಾದವು. ಒಂದೊಂದು ಹೊಸ ಉಪಕರಣ ಬಂದಾಗಲೂ ತಂತ್ರಜ್ಞರು ಮೂಲ ನೌಕೆಯಿಂದ ತಾವು ದೂರ ಸರಿಯದಂತೆ ಸೊಂಟಕ್ಕೆ ಲೋಹದ ಹಗ್ಗವನ್ನು ಕಟ್ಟಿಕೊಂಡು, ಆಮ್ಲಜನಕದ ಪೂರೈಕೆ ಉಳ್ಳ ವಿಶೇಷ ಉಡುಪನ್ನು ಧರಿಸಿ ನಿರ್ವಾತ ಅವಕಾಶದಲ್ಲಿ ಗಗನನೃತ್ಯ ನಡೆಸಿ ಅವನ್ನು ಮೂಲ ನೌಕೆಗೆ ಜೋಡಿಸಬೇಕು. ಕೆಲವೊಮ್ಮೆ ರೋಬಾಟ್ ರಟ್ಟೆ ಸ್ವತಂತ್ರ ಘಟಕಗಳನ್ನು ನಿಲ್ದಾಣಕ್ಕೆ ಜೋಡಿಸಿದ ನಂತರ ಸೂಕ್ಷ್ಮ ಜೋಡಣೆಗಳನ್ನು ಸಿಬ್ಬಂದಿ ಗಗನನಡಿಗೆ ನಡೆಸಿ ಮುಗಿಸುತ್ತಾರೆ.
ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ 2003ರಲ್ಲಿಯೇ ನೌಕೆ ಸುಸಜ್ಜಿತವಾದ ಪ್ರಯೋಗ ಶಾಲೆಯಾಗಿ ಪೂರ್ಣಗೊಳ್ಳಬೇಕಿತ್ತು. ಅಂತೂ ಈ ವರ್ಷ ನಿರ್ಮಾಣಕಾರ್ಯ ಕೊನೆಗೊಳ್ಳಲಿದೆ. ಈಗದು ಭೂಮಿಯನ್ನು ಸುತ್ತು ಹಾಕುತ್ತಿರುವ ಅತಿ ದೊಡ್ಡ ಕೃತಕ ಉಪಗ್ರಹವೆನಿಸಿದೆ.
ಬಾಹ್ಯಾಕಾಶ ನಿಲ್ದಾಣದಲ್ಲಿರುವವರ ನಿತ್ಯದ ರೂಟಿನ್ ಹೇಗಿರುತ್ತದೆ?
ಇದನ್ನು ಚರ್ಚಿಸುವ ಮುನ್ನ ಅವರಿರುವ ಪರಿಸ್ಥಿತಿಯನ್ನು ಅವಲೋಕಿಸೋಣ. ಮುಖ್ಯವಾಗಿ ಭೂಗುರುತ್ವ ಮತ್ತು ವಾತಾವರಣ ಇವೆರಡರ ಕೊರತೆಯನ್ನು ತಂತ್ರಜ್ಞರು ಸದಾಕಾಲ ಅನುಭವಿಸಬೇಕಾಗುತ್ತದೆ. ಈಗ ಐಎಸ್‍ಎಸ್ ಹಾರಾಡುತ್ತಿರುವ ಕಕ್ಷೆ ಭೂಮಿಯ ಆಚೆ 270ರಿಂದ 478 ಕಿಮೀ ವ್ಯಾಪ್ತಿಯಲ್ಲಿದೆ. ಅಂದರೆ ಅದು ಭೂಮಿಯ ಹತ್ತಿರವೇ ಅಥವಾ ‘ಭೂಸಮೀಪ ಕಕ್ಷೆ’ಯಲ್ಲಿ (ನಿಯರ್ ಅರ್ಥ್ ಆರ್ಬಿಟ್) ಹಾರಾಡುತ್ತಿದೆ. ವಸ್ತುಗಳ ನಡುವಿನ ಅಂತರ ಹೆಚ್ಚಾದಂತೆ ಗುರುತ್ವಬಲವೂ ಕ್ಷೀಣವಾಗುತ್ತಹೋಗುತ್ತದಷ್ಟೆ. ಅಲ್ಲಿ ವಾಯುಮಂಡಲ ಅತಿ ವಿರಳವಾಗಿದೆ, ಆದರೆ ಭೂಮಿಯ ಗುರುತ್ವದ ಆಕರ್ಷಣಾ ಶಕ್ತಿ ಶೇಕಡಾ ಎಂಭತ್ತರಷ್ಟು ಇದ್ದೇ ಇದೆ. ಅಂದರೆ ಅದು ಮೈಕ್ರೋ ಅಥವಾ ಕಿರುಗುರುತ್ವದ ವಲಯ. ಐಎಸ್‍ಎಸ್ ನಲ್ಲಿ ತಂತ್ರಜ್ಞರು ವಾಸಿಸುವ, ಓಡಾಡುವ ಸ್ಥಳಗಳಲ್ಲಿ ಕೃತಕ ವಾಯುಮಂಡಲವನ್ನು ಸೃಷ್ಟಿಸಿರುವುದರಿಂದ ಉಸಿರಾಟದ ಸಮಸ್ಯೆ ಇರುವುದಿಲ್ಲ.
ಭೂಮಿಯ ಜಗ್ಗುಬಲ ನಿಲ್ದಾಣದಲ್ಲಿ ಹೆಚ್ಚಿಲ್ಲ. ಆದರೆ ನೌಕೆ ಸದಾಕಾಲ ಭೂಮಿಗೆ ಬೀಳುತ್ತಲೇ ಇರುತ್ತದೆ. (ಇದೇ ಕೃತಕ ನೌಕೆಗಳ ಹಾರಾಟದಲ್ಲಿರುವ ವಿಶೇಷತೆ. ಭೂಮಿಯ ಆಚೆ ನೌಕೆಯನ್ನು ರಾಕೆಟ್ ಮೂಲಕ ಹಾರಿಸಲಾಗುವುದಷ್ಟೆ? ನಿರ್ದಿಷ್ಟ ಎತ್ತರವನ್ನು ತಲುಪಿದ ನಂತರ ವೇಗ ಕಡಿಮೆಯಾಗಿ ಅದು ಬೀಳತೊಡಗುತ್ತದೆ. ತಿರುಗುವ ದುಂಡನೆಯ ಭೂಮಿಯ ಬಾಗುವಿಕೆಯ ವೇಗಕ್ಕೆ ಸಮನಾದ ವೇಗದಲ್ಲಿ ನೌಕೆ ಬೀಳುವಂತೆ ರಚಿಸಲಾಗಿರುವುದರಿಂದ, ನೌಕೆ ಬೀಳುತ್ತಲೇ ಇರುತ್ತದೆ, ಭೂಮಿ ತಿರುಗುತ್ತಲೇ ಇರುತ್ತದೆ, ನೌಕೆ ಭೂಮಿಯನ್ನು ತಲುಪುವುದೇ ಇಲ್ಲ) ನೌಕೆಯೊಳಗಿರುವ ಸಿಬ್ಬಂದಿಯೂ ಯಾವಾಗಲೂ ಬೀಳುತ್ತಲೇ ಇರುತ್ತಾರೆ. ವೇಗವಾಗಿ ಬೀಳುವಾಗ ‘ಭಾರರಹಿತ ಸ್ಥಿತಿ’ ಅವರದಾಗಿರುವುದರಿಂದ ಅವರು ಓಲಾಡುತ್ತ, ತೇಲಾಡುತ್ತಿರುತ್ತಾರೆ. ನಿಲ್ದಾಣದಲ್ಲಿ ಒಂದು ಹಣ್ಣನ್ನು ಕೆಳಕ್ಕೆ ಬಿಟ್ಟರೆ ಅದು ಬೀಳತೊಡಗುತ್ತದೆ, ಆದರದು ಬಿದ್ದಂತೆ ಕಾಣುವುದೇ ಇಲ್ಲ! ಯಾಕೆಂದರೆ ಅಲ್ಲಿ ಬೀಳಿಸಿದವನೂ ಭೂಮಿಯ ಕಡೆ ಬೀಳುತ್ತಿರುತ್ತಾನೆ, ನೌಕೆಯೂ ಬೀಳುತ್ತಿರುತ್ತದೆ ಹಾಗೂ ಹಣ್ಣೂ ಬೀಳುತ್ತದೆ! ಎಲ್ಲರೂ ಒಂದೇ ವೇಗದಲ್ಲಿ. ಹೀಗಾಗಿ ನೌಕೆಯೊಳಗೆ ಎಲ್ಲವೂ ತೇಲುತ್ತಿರುತ್ತವೆ.
ಬಾಹ್ಯಾಕಾಶ ನಿಲ್ದಾಣದಲ್ಲಿ ಬೆಳಗಾಗುತ್ತದೆ. ನಮ್ಮ ಬೆಳಗಿನ ಹಾಗೆ 24 ಗಂಟೆಗಳಿಗೊಮ್ಮೆ ಅಲ್ಲ, ಪ್ರತಿ ಒಂದೂವರೆ ಗಂಟೆಗೊಮ್ಮೆ. ಏಕೆಂದರೆ ನೌಕೆ 90 ನಿಮಿಷಗಳಿಗೊಮ್ಮೆ ಭೂಮಿಯನ್ನು ಸುತ್ತು ಹಾಕಿ ಬರುತ್ತದೆ. ಹಾಗೆಂದು 90 ನಿಮಿಷಗಳನ್ನು ಹಗಲು ಮತ್ತು ರಾತ್ರಿಯೆಂದು ಇಬ್ಭಾಗಿಸಿ ಅದರಂತೆ ನಡೆಯಲು ಸಿಬ್ಬಂದಿಗೆ ಸಾಧ್ಯವಿಲ್ಲ. ಮಾನವ ದೇಹ ಲಕ್ಷಾಂತರ ವರ್ಷಗಳಿಂದ 24 ಗಂಟೆಗಳ ಜೈವಿಕ ಗಡಿಯಾರಕ್ಕೆ ಒಗ್ಗಿಕೊಂಡಿದೆ, ಅದನ್ನು ಬದಲಾಯಿಸುವುದು ಸುಲಭಸಾಧ್ಯವಿಲ್ಲ. ಆದ್ದರಿಂದ 24 ಗಂಟೆಗಳ ಸಮಯ ಚಕ್ರಕ್ಕೆ ಅನುಗುಣವಾಗಿಯೇ ನೌಕೆಯಲ್ಲಿ ದಿನಚರಿ ಆರಂಭವಾಗುತ್ತದೆ.
ಇಡೀ ನೌಕೆಯೇ ಒಂದು ಪ್ರಯೋಗಶಾಲೆ, ನೌಕೆಯ ವಿವಿಧ ಭಾಗಗಳಿಗೆಂದು ಬಳಸಿದ ಯಂತ್ರೋಪಕರಣಗಳು ಹಾಗೂ ತಂತ್ರಜ್ಞರ ದೇಹಗಳೂ ಪ್ರಯೋಗದ ವಸ್ತುಗಳೇ.
ಕಿರುಗುರುತ್ವದ ಪ್ರದೇಶದಲ್ಲಿ ಪ್ರತಿಯೊಂದು ಕೆಲಸವೂ ಕಷ್ಟವೇ. ಅಡ್ಡಾದಿಡ್ಡಿಯಾಗಿ ಬಿದ್ದಿದ್ದ ಕೈಕಾಲುಗಳನ್ನು ಎತ್ತಿಕೊಂಡು ಬಟ್ಟೆ ಧರಿಸುತ್ತಾರೆ. ಅವರುಡುವ ಬಟ್ಟೆಗಳು ಮರುಬಳಸಲಾರದಂಥವುಗಳು. ಮೂರು ದಿನಗಳಿಗೊಮ್ಮೆ ಅವನ್ನು ಎಸೆದು ಹೊಸಬಟ್ಟೆಯನ್ನು ಬಳಸಲಾಗುತ್ತದೆ. ಹೊಸದಾಗಿ ಬಂದ ಟೂಥ್‍ಪೇಸ್ಟ್‍ನಿಂದ ಹಲ್ಲುಜ್ಜಿದ ಮೇಲೆ ಅದನ್ನು ಉಗುಳಬೇಕೆಂದಿಲ್ಲ, ನುಂಗಬಹುದು. ಪುರುಷ ತಂತ್ರಜ್ಞರಿಗೆ ಮುಖಕ್ಷೌರ ಮಹಾ ತಲೆನೋವಿನ ಕೆಲಸ. ನೀರು, ಶೇವಿಂಗ್ ಕ್ರೀಮುಗಳೆರಡೂ ಮುಖಕ್ಕೆ ಅಂಟಿಕೊಂಡುಬಿಡುತ್ತವೆ. ಎಲೆಕ್ಟ್ರಿಕ್ ಶೇವಿಂಗ್ ಮಾಡುವುದಾದರೆ ಕತ್ತರಿಸಿದ ಕೂದಲು ಅತ್ತಿತ್ತ ಹೋಗಿ ಯಂತ್ರಗಳಿಗೆ ಸಿಕ್ಕಿಹಾಕಿಕೊಳ್ಳುವುದನ್ನು ತಪ್ಪಿಸಲು ಮುಖದ ಹತ್ತಿರವೇ ಕೂದಲು ಹೀರಿಕೊಳ್ಳುವ ಸಕ್ಷನ್ ಫ್ಯಾನ್ ಹಾಕಿಕೊಂಡಿರಬೇಕಾಗುತ್ತದೆ. ನೌಕೆಯಲ್ಲಿ ಶವರ್ ಸೌಕರ್ಯವಿದೆ. ಆದರೆ ಶೌಚಕಾರ್ಯ ಅಸಹನೀಯವಾದದ್ದು. ಶೌಚಾಲಯದಲ್ಲಿ ತೊಡೆ, ಕಾಲುಗಳಿಗೆ ಪಟ್ಟಿಬಿಗಿದು ಕೂತಿರಬೇಕಾಗುತ್ತದೆ. ವಿಸರ್ಜನೆಗಳು ಲವಲೇಶವಿಲ್ಲದಂತೆ ಕೂಡಲೇ ಹೀರಲ್ಪಟ್ಟು ಪ್ರತ್ಯೇಕ ಚೀಲದಲ್ಲಿ ಸಂಗ್ರಹವಾಗುತ್ತವೆ. ಬಳಸಿದ ಎಲ್ಲಾ ನೀರು ಶುದ್ಧೀಕೃತಗೊಂಡು ಮರುಬಳಕೆಯಾದರೆ ಶೇಖರಿಸಿಟ್ಟ ಮಲಕಸವನ್ನು ಭೂಮಿಗೆ ಕಳಿಸಲಾಗುತ್ತದೆ.
ನೌಕೆಯಲ್ಲಿ ದಿನಕ್ಕೊಬ್ಬರಿಗೆ 0.9 ಕೆಜಿ ಆಮ್ಲಜನಕ ಬೇಕಾಗುತ್ತದೆ. ಕುಡಿಯಲು 2.7 ಕೆಜಿ ನೀರು ಅವಶ್ಯವಿದೆ. ಭೂಮಿಯಿಂದ ಪೂರೈಕೆಯಾಗುವ ಸಾಮಗ್ರಿಗಳ ಪ್ರಮಾಣ ಆದಷ್ಟು ಕಡಿಮೆ ಇರಲೆಂದು ಇಲ್ಲಿ ಮರುಬಳಕೆಯ ಕಾರ್ಯಕ್ಕೆ ಅತಿ ಹೆಚ್ಚು ಒತ್ತು ನೀಡಲಾಗುತ್ತದೆ. ಮಾನವ ಮೂತ್ರ ಹಾಗೂ ನೌಕೆಯೊಳಗೆ ಸಾಂದ್ರೀಕೃತಗೊಂಡ ನೀರಾವಿಯನ್ನು ಒಂದೋ ಶುದ್ಧಗೊಳಿಸಲಾಗುತ್ತದೆ ಅಥವಾ ಎಲೆಕ್ಟ್ರೋಲೈಸಿಸ್ ಮೂಲಕ ಜಲಜನಕ ಮತ್ತು ಆಮ್ಲಜನಕವಾಗಿ ವಿಭಜಿಸಿ ಬಳಸಲಾಗುತ್ತದೆ. ಇಂಗಾಲದ ಡೈಆಕ್ಸೈಡ್ ಲೀಥಿಯಂ ಹೈಡ್ರಾಕ್ಸೈಡ್‍ನೊಂದಿಗೆ ಮಿಶ್ರಗೊಂಡು ರಾಸಾಯನಿಕವಾಗಿ ನೀರನ್ನು ಉತ್ಪಾದಿಸುವ ವ್ಯವಸ್ಥೆ ಅಲ್ಲಿದೆ.
* ಬಾಹ್ಯಾಕಾಶದಲ್ಲಿ ತಂಗುದಾಣದ ಕನಸು
ಬಹಳ ಹಿಂದೆಯೇ ವೆರ್ನರ್ ವಾನ್ ಬ್ರೌನ್, ಹರ್ಮನ್ ಒಬರ್ತ್, ಹರ್ಮನ್ ನೂರ್ಡಂಗ್ ಹಾಗೂ ಕಾನ್‍ಸ್ಟಂಟಿನ್ ಸಿಲೋವ್‍ಸ್ಕಿ ಇತ್ಯಾದಿ ಖಗೋಳ ವಿಜ್ಞಾನಿಗಳು ಅಂತರಿಕ್ಷ ನಿಲ್ದಾಣದ ಬಗ್ಗೆ ಕನಸು ಕಂಡಿದ್ದರು. ನೀರಿನಲ್ಲಿ ಸಂಚರಿಸುವ ಹಡಗಿನಂತೆ ಆಗಸದಲ್ಲಿ ಸಂಚರಿಸುವ ಗಾಡಿಯೊಂದಿರಬೇಕು, ಬೇಕಾದಾಗ ಭೂಮಿಯಿಂದ ಅಲ್ಲಿಗೆ ಹಾರಿಹೋಗಿ ಅಲ್ಲಿದ್ದು ಹೊರಜಗತ್ತನ್ನು ಅರಿಯುವಂತಿರಬೇಕು, ಚಂದ್ರ ಅಥವಾ ಮತ್ಯಾವುದೇ ಆಕಾಶಕಾಯಕ್ಕೆ ಜಿಗಿಯಲು ಈ ತಂಗುದಾಣ ಸಂಪರ್ಕ ಸೇತುವೆಯಾಗಬೇಕು ಇತ್ಯಾದಿ ಆ ಕನಸಿಗೆ ರೆಕ್ಕೆಪುಕ್ಕಗಳನ್ನೂ ಕಟ್ಟಿದ್ದರು.
ಈ ನಿಲ್ದಾಣಕ್ಕೆ ಕೃತಕ ಗುರುತ್ವವನ್ನು ಸೃಷ್ಟಿಸಲೆಂದು ಗಾಲಿಗಳಿರುತ್ತವೆ, ಈ ತಂಗುದಾಣದಿಂದ ನೌಕೆಗಳು ಭೂಮಿಗೆ ಹಿಂದಕ್ಕೂ ಮುಂದಕ್ಕೂ ಓಡಾಡಿ ಆವಶ್ಯಕ ಸಾಮಗ್ರಿಗಳನ್ನು ಹೊತ್ತು ತರುತ್ತವೆ. ರಜಾ ದಿನಗಳಲ್ಲಿ ಜನಸಾಮಾನ್ಯರೂ ಕೂಡ ಈ ತಂಗುದಾಣಕ್ಕೆ ಬಂದಿದ್ದು ಹೋಗುತ್ತಾರೆ, ಹೀಗೆ ಆ ಕನಸುಗಳು ಮುಂದುವರೆದಿದ್ದವು.
ಬಾಹ್ಯಾಕಾಶ ನಿಲ್ದಾಣದ ಕುರಿತು ಕನಸು ಕಟ್ಟುವುದರಲ್ಲಿ ಸಿನೆಮಾ, ಸಾಹಿತ್ಯಗಳೂ ಹಿಂದೆ ಬಿದ್ದಿರಲಿಲ್ಲ 1968 ರಷ್ಟು ಹಿಂದೆಯೇ 2001: A Space Odyssey ಎಂಬ ವೈಜ್ಞಾನಿಕ ಸಾಹಸ ಸಿನೆಮಾವೊಂದು ಬಿಡುಗಡೆಯಾಗಿತ್ತು. ಭೂಮಿಯನ್ನು ಸತತವಾಗಿ ಸುತ್ತುಹಾಕುತ್ತಿರುವ ಉಪಗ್ರಹ, ಅದರಲ್ಲಿ ಮಾನವರ ವಾಸ, ಚಂದ್ರ ಅವರಿಗೆ ಪಕ್ಕದ ಮನೆಯಂತೆ ಹಾಗೂ ದೂರದೂರದ ಗ್ರಹಗಳತ್ತ ಆಗಾಗ ಅವರ ಪಯಣ ಹೀಗೆ ಅಂದಿನ ಕಲ್ಪನೆಯ ಕತೆ ಸಾಗಿತ್ತು.
ಇಂದಿನ ಬಾಹ್ಯಾಕಾಶ ವಿಜ್ಞಾನದ ಮುನ್ನಡೆಗೆ ನೂರಾರು ವರ್ಷಗಳ, ಸಾವಿರಾರು ಜನರ ಕೊಡುಗೆ ಇದೆ. ರಷ್ಯಾದ ಮೀರ್ ಹಾಗೂ ಅಂತರ್ರಾಷ್ಟ್ರೀಯ ಮಟ್ಟದ ‘ಬಾಹ್ಯಾಕಾಶ ನಿಲ್ದಾಣ’ ಗಳು ಕಲಾವಿದರ ಕಲ್ಪನೆಗಳನ್ನು ನಿಜಗೊಳಿಸುವ ಯತ್ನಗಳಾಗಿವೆ.
ಸರೋಜಾ ಪ್ರಕಾಶ.
ಮುಂದುವರೆಯುವುದು..
ಮಹಿಳೆಯರು ಸಬಲೀಕರಣದೆಡೆಗೆ ಹೆಜ್ಜೆ ಹಾಕಬೇಕು
ಮಹಿಳೆ ಶಿಕ್ಷಣವಂತಳಾದರೆ, ಆ ಮನೆ ಸಂಸ್ಕೃತಿ ಸಂಸ್ಕಾರದಿಂದ ಕೂಡಿರುತ್ತದೆ ಎಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ದುರ್ಬಲ ವರ್ಗದ ಮಹಿಳೆಯರ ಸಬಲೀಕರಣಕ್ಕಾಗಿ ೫೦ಜನ ಸದಸ್ಯರನ್ನೊಳಗೊಂಡ ಗಜಲಕ್ಷ್ಮಿ ಮಹಿಳಾ ಜ್ಞಾನ ವಿಕಾಸ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತಾಡಿದರು.
ತಿಂಗಳಲ್ಲಿ ಅರ್ಧ ದಿನ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ, ತರಬೇತಿ, ಸದಸ್ಯರೊಡನೆ ವಿಚಾರ ವಿನಿಮಯ, ಅಧ್ಯಯನ ಪ್ರವಾಸ ಮುಂತಾದ ಕಾರ್ಯಕ್ರಮಗಳ ಮುಖೇನ ಮಹಿಳಾ ಸಬಲೀಕರಣದೆಡೆಗೆ ಸಾಗುತಿರುವ ಜ್ಞಾನ ವಿಕಾಸ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಂಡು ಸಬಲೀಕರಣದೆಡೆಗೆ ಹೆಜ್ಜೆ ಹಾಕುವಂತೆ ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ರಾಧಕೃಷ್ಣರಾವ್ ಮಾತನಾಡಿ ಮಹಿಳೆಯರು ತಮ್ಮ ಬಿಡುವಿಲ್ಲದ ಕೆಲಸದ ನಡುವೆ ತಿಂಗಳಲ್ಲಿ ಒಂದು ದಿನ ಈ ಜ್ಞಾನ ವಿಕಾಸ ಕೇಂದ್ರದ ಸಭೆಯಲ್ಲಿ ಭಾಗವಹಿಸಿ. ಇಲ್ಲಿ ಸಿಗುವ ಆರೋಗ್ಯ, ಕಾನೂನು, ಪೌಷ್ಠಿಕ ಆಹಾರ ಹಾಗೂ ಹಲವು ಮಾಹಿತಿಗಳನ್ನು ಪಡೆದುಕೊಂಡು ಉತ್ತಮಜೀವನದೆಡೆಗೆ ಸಾಗುವಂತೆ ತಿಳಿಸಿದರು.
ತಾಲ್ಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಯೋಗಿಶ್ ಕನ್ಯಾಡಿ, ರವಿ, ಕಂದಾಯ ಪರಿವೀಕ್ಷಕ ಸುಬ್ರಮಣಿ, ಗ್ರಾಮ ಲೆಕ್ಕಪರಿಶೋಧಕ ಮುನಿಸ್ವಾಮಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ನೀಲಮ್ಮ, ವಲಯದ ಮೇಲ್ವಿಚಾರಕಿ ಮಮತ, ಸೇವಾಪ್ರತಿನಿಧಿ ನಂದಿನಿ ಹಾಗೂ ಗಜಲಕ್ಷ್ಮಿ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.
ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ
ತೀವ್ರ ಕುಡಿಯುವ ನೀರಿನ ಸಮಸ್ಯೆಯನ್ನು ಅನುಭವಿಸಿದರೂ ಉತ್ತಮ ಗುಣಮಟ್ಟದ ಹಾಲು ಉತ್ಪಾದನೆ ಮಾಡುತ್ತಿರುವ ಬಯಲು ಸೀಮೆ ಭಾಗಗಳ ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಶಾಸಕ ಎಂ.ರಾಜಣ್ಣ ಒತ್ತಾಯಿಸಿದರು.
ತಾಲ್ಲೂಕಿನ ಬೆಳ್ಳೂಟಿ ಗೇಟ್ನಲ್ಲಿರುವ ಗುಟ್ಟಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಆಯೋಜಿಸಿದ್ದ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ, ಮರಣಹೊಂದಿರುವ ರಾಸುಗಳ ವಿಮಾ ಪರಿಹಾರದ ಚೆಕ್ಕುಗಳ ವಿತರಣೆ, ಮರಣ ಹೊಂದಿರುವ ಹಾಲು ಉತ್ಪಾದಕರ ವಾರಸುದಾರರಿಗೆ ಪರಿಹಾರದ ಚೆಕ್ಕುಗಳ ವಿತರಣಾ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ತೀವ್ರ ಬರಗಾಲದಲ್ಲಿಯೂ ಕೂಡಾ ರಾಜ್ಯಕ್ಕೆ ಉತ್ತಮಗುಣಮಟ್ಟದ ಹಾಲನ್ನು ಪೂರೈಕೆ ಮಾಡುತ್ತಿರುವ ರೈತರು, ಒಂದು ಲೀಟರ್ ಹಾಲು ಉತ್ಪಾದನೆ ಮಾಡಬೇಕಾದರೆ ಕಷ್ಟಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರಿಗೆ ಒಂದು ಲೀಟರ್ಹಾಲಿಗೆ ಕನಿಷ್ಟ ೩೦ ರೂಪಾಯಿಗಳನ್ನು ನೀಡಬೇಕು ಎಂದು ಒತ್ತಾಯಿಸಲಾಗಿದೆ. ಈ ಬಗ್ಗೆ ಬೆಳಗಾವಿಯ ಅಧಿವೇಶನದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಶಾಸಕರು, ಹಾಗೂ ಡೈರಿ ನಿರ್ದೇಶಕರುಗಳ ನಿಯೋಗ ಮುಖ್ಯಮಂತ್ರಿಯವರನ್ನು ಬೇಟಿ ಮಾಡಿದ್ದು, ರೈತರ ಸಂಕಷ್ಟಕ್ಕೆ ಸ್ಪಂದಿಸುವಂತಹ ಭರವಸೆಯನ್ನು ನೀಡಿದ್ದಾರೆ ಎಂದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ, ಹಾಲು ಉತ್ಪಾದಕರು ನೀಡುವಂತಹ ಒಂದು ಲೀಟರ್ ಹಾಲಿಗೆ ೧೦ ಪೈಸೆಯ ದತ್ತಿ ನಿಧಿಗೆ ಬರುವ ಹಣದಲ್ಲಿ, ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ೬ ನೇ ತರಗತಿಯ ಸುಮಾರು ೨೦೦೦ ಮಕ್ಕಳಿಗೆ ಶಾಲಾ ಬ್ಯಾಗ್ಗಳನ್ನು ವಿತರಣೆ ಮಾಡಲಾಗುತ್ತಿದೆ. ೧೨ ಮಂದಿಗೆ ಮರಣಹೊಂದಿರುವ ರಾಸುಗಳ ವಿಮಾ ಪರಿಹಾರ ತಲಾ ೪೦ ಸಾವಿರದಂತೆ ವಿತರಣೆ ಮಾಡಲಾಗುತ್ತಿದೆ. ಮರಣಹೊಂದಿರುವ ಹಾಲು ಉತ್ಪಾದಕರ ವಾರಸುದಾರರಿಗೆ ತಲಾ ೫೦೦೦ ದಂತೆ ೩೦ ಮಂದಿಗೆ ಚೆಕ್ಕುಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ದತ್ತಿನಿಧಿಯಿಂದ ಶಾಲಾ ಬ್ಯಾಗ್ಗಳನ್ನು ವಿತರಣೆ ಮಾಡಲಾಯಿತು. ಹಾಲು ಉತ್ಪಾದಕರ ಮರಣ ಹೊಂದಿರುವ ರಾಸುಗಳಿಗಾಗಿ ತಲಾ ೪೦ ಸಾವಿರ ರೂಪಾಯಿಗಳಂತೆ ಚೆಕ್ಕುಗಳು ಹಾಗೂ ಸಂಘಗಳಿಗೆ ಲ್ಯಾಪ್ಟಾಪ್ಗಳನ್ನು ವಿತರಣೆ ಮಾಡಲಾಯಿತು.
ಕೋಚಿಮುಲ್ ಅಧ್ಯಕ್ಷ ಕಾಂತರಾಜು, ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲ್, ಚಿಕ್ಕಬಳ್ಳಾಪುರ ತಾಲ್ಲೂಕಿನ ನಿರ್ದೇಶಕ ಕೆ.ವಿ.ನಾಗರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಜಿಲ್ಲಾ ವ್ಯವಸ್ಥಾಪಕ ಎ.ಜಿ. ಲೋಕೇಶ್, ಗೋವಿಂದರಾಜು, ಹಿತ್ತಲಹಳ್ಳಿ ನಂಜುಂಡಪ್ಪ, ಉಪವ್ಯವಸ್ಥಾಪಕ ಹನುಮಂತರಾವ್, ಕೆ.ಎನ್.ಬಿ.ರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ದಲಿತರಿಗೆ ನ್ಯಾಯ ದೊರಕಿಸಿಕೊಡಿ
ದಲಿತರ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಇದುವರೆಗೂ ದಲಿತರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ವಿಫಲರಾಗಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸಿ.ಎಂ.ಮುನಿಯಪ್ಪ ಆರೋಪಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಶೆಟ್ಟಿಹಳ್ಳಿ ಹೋಬಳಿಯ ದ್ಯಾವರಹಳ್ಳಿಯಲ್ಲಿ ದಲಿತರ ಮೇಲೆ ಹಲ್ಲೆಯಾಗಿದೆ. ದಲಿತ ಕುಟುಂಬಕ್ಕೆ ಭದ್ರತೆಯಿಲ್ಲದಂತಾಗಿದೆ ಎಂದರು.
ಗ್ರಾಮದ ನಿವಾಸಿ ಶೈಲಜಾ ಎಂಬುವವರ ತಂದೆ ನರಸಿಂಹಪ್ಪ ಹಾಗೂ ಇದೇ ಗ್ರಾಮದ ಸವರ್ಣಿಯರ ಜನಾಂಗಕ್ಕೆ ಸೇರಿದ ಬೈರಾರೆಡ್ಡಿ, ಸುರೇಶ್, ಎಂಬುವವರಿಗೆ ಕಳೆದ ಮೂರು ವರ್ಷಗಳಿಂದ ಸರ್ಕಾರಿ ಶಾಲೆಯ ಪಕ್ಕದಲ್ಲಿರುವ ಜಮೀನಿನ ವಿಚಾರವಾಗಿ ವಿವಾದವಿತ್ತು. ಈ ಜಮೀನಿನ ವಿಚಾರವಾಗಿ ನರಸಿಂಹಪ್ಪ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿದ್ದಾರೆ. ಜೂನ್ 30 ರಂದು ಬೆಳಿಗ್ಗೆ ದಲಿತ ಕುಟುಂಬದ ಶೈಲಜಾ ಎಂಬುವವರು ಕುಡಿಯುವ ನೀರು ಹಿಡಿಯಲು ಬಂದಾಗ ಸವರ್ಣಿಯರ ಜನಾಂಗದ ಬೈರಾರೆಡ್ಡಿ, ಸುರೇಶ್, ರತ್ನಮ್ಮ, ಅಶ್ವಥಮ್ಮ, ಡಿ.ಸಿ.ನಾರಾಯಣಸ್ವಾಮಿ, ಜಯಮ್ಮ, ಆಂಜಿನಮ್ಮ, ಮುನಿರೆಡ್ಡಿ, ಶಿವ, ಲಕ್ಷ್ಮೀಪತಿ, ಮಮತ ಎಂಬುವವರು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿನಿಂದನೆ ಮಾಡಿ, ದೈಹಿಕವಾಗಿ ಹಲ್ಲೆ ನಡೆಸಿ, ಪ್ರಾಣಬೆದರಿಕೆಯನ್ನೂ ಹಾಕಿದ್ದಾರೆ. ಈ ಬಗ್ಗೆ ದಿಬ್ಬೂರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಕೂಡಾ ಇದುವರೆಗೂ ಪೊಲೀಸರು ಒಂದು ಆರೋಪಿಯನ್ನೂ ಬಂಧಿಸಿ, ವಿಚಾರಣೆಗೊಳಪಡಿಸದೆ ನಿರ್ಲಕ್ಷ್ಯ ವಹಿಸಿ, ದಲಿತರಿಗೆ ಅನ್ಯಾಯವೆಸಗುತ್ತಿದ್ದಾರೆ.
ಈ ಬಗ್ಗೆ ಪೊಲೀಸ್ ಇಲಾಖೆಯ ಅಧಿಕಾರಿಗಳ ಬಳಿ ವಿಚಾರಿಸಿದರೆ, ಎಫ್.ಐ.ಆರ್. ಹಾಕಿದ್ದೇವೆ, ಅವರನ್ನು ಬಂಧಿಸುತ್ತೇವೆ ಎಂಬ ಜಾರಿಕೆಯ ಉತ್ತರಗಳನ್ನು ನೀಡುತ್ತಿದ್ದಾರೆಯೆ ಹೊರತು ದಲಿತರಿಗೆ ನ್ಯಾಯ ಒದಗಿಸಿಲ್ಲವೆಂದು ಆರೋಪಿಸಿದ್ದಾರೆ.
ತಾಲ್ಲೂಕು ಸಂಚಾಲಕ ನಡಿಪಿನಾಯಕನಹಳ್ಳಿ ವೆಂಕಟೇಶ್, ಕೆ.ಎಸ್.ದ್ಯಾವಕೃಷ್ಣಪ್ಪ, ಗಾಯಾಳು ಶೈಲಜಾ, ಚಲಪತಿ, ಲಕ್ಷ್ಮೀನಾರಾಯಣ, ನರಸಿಂಹಪ್ಪ, ನಾರಾಯಣಸ್ವಾಮಿ, ಲಕ್ಷ್ಮಣ್ ಈ ಸಂದರ್ಭದಲ್ಲಿ ಹಾಜರಿದ್ದರು.
‘ವಾರದ ಒಣಗಲು ದಿನ’ ಕಾರ್ಯಕ್ರಮ
ತಾಲ್ಲೂಕಿನ ನಾಗಮಂಗಲ ಗ್ರಾಮದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಗ್ರಾಮಸ್ಥರಿಗೆ ಅರಿವು ಮೂಡಿಸುವ ‘ವಾರದ ಒಣಗಲು ದಿನ’ ಕಾರ್ಯಕ್ರಮವನ್ನು ಶನಿವಾರ ಆಚರಿಸಲಾಯಿತು.
ಆರೋಗ್ಯ ಇಲಾಖೆ, ಅಂಗನವಾಡಿ, ಗ್ರಾಮ ಪಂಚಾಯತಿ, ಸರ್ಕಾರಿ ಶಾಲೆಯ ಸಹಯೋಗದಲ್ಲಿ ನಡೆದ ಅರಿವು ಕಾರ್ಯಕ್ರಮದಲ್ಲಿ ಡೆಂಗ್ಯೂ ಮತ್ತು ಚಿಕುಂಗುನ್ಯ ರೋಗ ನಿಯಂತ್ರಣದ ಬಗ್ಗೆ ಗ್ರಾಮದಲ್ಲಿ ಜಾಥಾ ನಡೆಸಿ ತಿಳಿವು ಮೂಡಿಸಲಾಯಿತು.
‘ಮನೆಗಳ ಬಳಿ ನೀರು ಶೇಖರಿಸಿಟ್ಟುಕೊಳ್ಳುವ ಪಾತ್ರೆ ಹಾಗೂ ಡ್ರಮ್ಮುಗಳು ಸೊಳ್ಳೆಗಳ ಲಾರ್ವಾ ಬೆಳೆಯುವ ತಾಣಗಳಾಗದಂತೆ ಗಮನಹರಿಸಬೇಕು. ವಾರಕ್ಕೊಮ್ಮೆ ನೀರಿನ ಡ್ರಮ್ಮುಗಳನ್ನು ಖಾಲಿ ಮಾಡಿ ಬಿಸಿಗೆ ಒಣಗಿಸುವ ಮೂಲಕ ಲಾರ್ವಾ ಉತ್ಪತ್ತಿಗೆ ಕಡಿವಾಣ ಹಾಕಬಹುದು. ಮನೆಗಳ ಬಳಿ ಟೈರ್ ಮುಂತಾದ ನೀರು ನಿಲ್ಲುವ ತಾಣಗಳನ್ನು ಗಮನಿಸಿ ಶುಭ್ರಗೊಳಿಸಬೇಕು. ಇದರಿಂದ ಸೊಳ್ಳೆಗಳ ಉತ್ಪತ್ತಿ ನಿಲ್ಲುತ್ತದೆ. ಸೊಳ್ಳೆ ಪರದೆ ಬಳಸಬೇಕು’ ಎಂದು ಈ ಸಂದರ್ಭದಲ್ಲಿ ವೈದ್ಯೆ ಡಾ.ಅಂಬಿಕಾ ತಿಳಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ರೂಪಾ, ಉಪಾಧ್ಯಕ್ಷ ಎನ್.ಡಿ.ನಾರಾಯಣಪ್ಪ, ಕಾರ್ಯದರ್ಶಿ ಗೋಪಿನಾಥ್, ಭವ್ಯಾ, ಕನಕರತ್ನಮ್ಮ, ಸುಶೀಲಾ, ಪ್ರಭಾವತಿ, ಆಂಜಿನಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಸ್ವರ್ಣಪುಷ್ಪ ದರ್ಶನ
ತಾಲ್ಲೂಕಿನಲ್ಲಿ ಬಿದ್ದ ಮಳೆರಾಯ ಕಕ್ಕೆ ಹೂವನ್ನು ಅರಳಿಸಿದ್ದಾನೆ. ಅಲ್ಲಲ್ಲಿ ಬೆಳೆದ ಕಕ್ಕೆ ಗಿಡ ಮರಗಳು ಹೂಬಿಟ್ಟು ಕಂಗೊಳಿಸುತ್ತಿವೆ. ಕಾಡು ಹೂವಿನ ಸೊಬಗು ಮತ್ತು ಗಮಲು ಆವರಿಸಿದೆ.
ಗೊಂಚಲುಗೊಂಚಲಾಗಿ ಬಿಡುವ ಕಕ್ಕೆಯ ಸೊಬಗು ಸಾಮಾನ್ಯವಾಗಿ ಮಾರ್ಚ್ನಿಂದ ಮೇ ತಿಂಗಳಿನಲ್ಲಿ ಕಂಡು ಬರುತ್ತದೆ. ಆದರೆ ಜುಲೈ ತಿಂಗಳಲ್ಲಿ ತಾಲ್ಲೂಕಿನಲ್ಲಿ ಕಂಡು ಬರುತ್ತಿರುವ ಕಕ್ಕೆಯ ಸೊಬಗಿಗೆ ಕೆಲವರು ಮಳೆಯ ಪ್ರಭಾವವೆಂದರೆ, ಇನ್ನು ಕೆಲವರು ಹವಾಮಾನ ವೈಪರೀತ್ಯದ ಸೂಚನೆ ಎನ್ನುತ್ತಾರೆ.
ಕಕ್ಕೆಯನ್ನು ಸ್ವರ್ಣಪುಷ್ಪ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಇದು ಹಳದಿ ಬಣ್ಣದ ಹೂವನ್ನು ಗೊಂಚಲು ಗೊಂಚಲಾಗಿ ಮರ ತುಂಬಾ ಬಿಟ್ಟು ಅತ್ಯಂತ ಸುಂದರವಾಗಿ ಕಾಣುವುದರಿಂದ ಇದನ್ನು ಇಂಗ್ಲೀಷ್ ಭಾಷೆಯಲ್ಲಿ ಗೋಲ್ಡನ್ ಶವರ್ ಟ್ರೀ ಎಂದು ಕರೆಯುತ್ತಾರೆ. ಇದು ಥೈಲ್ಯಾಂಡ್ ದೇಶದ ರಾಷ್ಟ್ರೀಯ ಪುಷ್ಪ ಮತ್ತು ಕೇರಳದ ರಾಜ್ಯ ಪುಷ್ಪವಾಗಿದೆ. ಇದು ಶಿವನಿಗೆ ತುಂಬಾ ಪ್ರಿಯವಾದ ಹೂವೆನ್ನುತ್ತಾರೆ.
ಕಕ್ಕೆ ಎಲ್ಲಾ ಕಡೆ ಬೆಳೆಯುವ ಒಂದು ಸಾಮಾನ್ಯ ಮರ. ಹಿಂದೆ ಎಲ್ಲೆಲ್ಲೂ ಕಕ್ಕೆ ಮರಗಳು ಕಾಣಿಸುತ್ತಿದ್ದವು. ಕಾಲದ ಬದಲಾವಣೆಗೆ ಸಿಕ್ಕು ಅವು ಕೊಡಲಿಗೆ ಆಹುತಿಯಾದವು. ಆದರೂ ಈಗ ಸರ್ಕಾರಿ ಜಮೀನು ಹಾಗೂ ರಸ್ತೆ ಬದಿಗಳಲ್ಲಿ ಮಾತ್ರ ಈ ಮರಗಳನ್ನು ಕಾಣಲು ಸಾಧ್ಯ.
ಈಚೆಗೆ ಮಳೆಯಾದ ಪರಿಣಾಮವಾಗಿ ಕಕ್ಕೆ ಮರಗಳು ಹಳದಿ ಬಣ್ಣದ ಹೂವನ್ನು ಮುಡಿಗೇರಿಸಿಕೊಂಡು ಸಂಭ್ರಮಿಸುತ್ತಿವೆ. ಯಾವುದೋ ಸುಂದರ ಆಭರಣದಂತೆ ಕಾಣುವ ಹೂ ಗೊಂಚಲುಗಳು ಕಣ್ಸೆಳೆಯುತ್ತವೆ. ಕಕ್ಕೆ ಮರ ತನ್ನ ಹೂವಿನ ವಾಸನೆಯಿಂದಲೇ ತನ್ನ ಇರುವಿಕೆಯನ್ನು ಸಾರುತ್ತದೆ.
ಕಕ್ಕೆ ಒಂದು ಮೂಲಿಕಾ ಸಸ್ಯವೂ ಹೌದು. ದನಕರುಗಳಿಗೆ ಕಾಲು ಬಾಯಿ ಜ್ವರಕ್ಕೆ ರೈತರು ಕಕ್ಕೆ ಎಲೆಯನ್ನು ತಂದು ಕೆಂಡದ ಮೇಲೆ ಹಾಕಿ ಹೊಗೆ ಹಾಕುತ್ತಾರೆ. ಕೆಲವು ಕಾಯಿಲೆಗಳಿಗೆ ಅದರ ತೊಗಟೆಯನ್ನು ಬಳಸುತ್ತಾರೆ. ಅದರ ಉದ್ದನೆಯ ಕಾಯಿಗಳು ನೋಡಲು ಸುಂದರವಾಗಿರುತ್ತವೆ.
ವಾತಾವರಣ ವೈಪರೀತ್ಯವೋ ಅಥವಾ ತಡವಾಗಿ ಅರಳುವ ಪ್ರಕೃತಿಯ ರೀತಿಯೋ ಅಂತೂ ಕಕ್ಕೆಯ ಹೂಗಳ ಗೊಂಚಲು ಜೇನು ದುಂಬಿಗಳಿಗೆ ಮಕರಂದವನ್ನು ನೋಡುಗರಿಗೆ ಆನಂದವನ್ನೂ ನೀಡುತ್ತಿರುವುದಂತೂ ಸತ್ಯ.
ಯೋಜನಾ ಪ್ರಾಧಿಕಾರದ ಅಧ್ಯಕ್ಷರ ನೇಮಕ
ಶಿಡ್ಲಘಟ್ಟ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಬಿ.ಪಿ.ರಾಘವೇಂದ್ರ ಅವರನ್ನು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಾಮ ನಿರ್ದೇಶನ ಮಾಡಿದ್ದಾರೆ.
ನಗರಸಭೆ ಕಚೇರಿಯ ಮುಂದೆ ನೀರಿಗಾಗಿ ಹೋರಾಟ
ನಗರದ ಏಳನೇ ವಾರ್ಡಿಗೆ ಸಮರ್ಪಕವಾಗಿ ನೀರು ಬಿಡುತ್ತಿಲ್ಲವೆಂದು ವಾರ್ಡಿನ ಮಹಿಳೆಯರು ಖಾಲಿ ಬಿಂದಿಗೆಗಳನ್ನಿಟ್ಟು ನಗರಸಭೆ ಕಚೇರಿಯ ಮುಂದೆ ಶುಕ್ರವಾರ ಪ್ರತಿಭಟಿಸಿದರು.
ವಾಟರ್ಮನ್ಗಳು ನೀರು ಬಿಡುವಲ್ಲಿ ತಾರತಮ್ಯ ಮಾಡುತ್ತಾರೆ. ಹಣವುಳ್ಳವರಿಗೆ ಮನೆಗಳಿಗೆ ಪೈಪ್ಲೈನ್ ಹಾಕಿಕೊಟ್ಟು, ಕೆಲವರ ರೇಷ್ಮೆ ಕಾರ್ಖಾನೆಗೆ ನೀರು ಬಿಡುತ್ತಾರೆ. ಬಡವರ ಮನೆಗಳ ಬಳಿ ನೀರು ಬಂದು ತಿಂಗಳುಗಳೇ ಆಗಿವೆ. ಕೇವಲ ಹಣಕ್ಕಾಗಿ ನೀರು ಅನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಮುಖ್ಯಾಧಿಕಾರಿಗೆ ನಗರಸಭೆ ಸದಸ್ಯರ ಮೂಲಕ ದೂರು ನೀಡಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ಅಧಿಕಾರಿಗಳು ಸ್ಪಂದಿಸದ ಕಾರಣ ನಾವು ಖಾಲಿ ಬಿಂದಿಗೆಯೊಂದಿಗೆ ಬಂದು ಪ್ರತಿಭಟಿಸುತ್ತಿದ್ದೇವೆ ಎಂದು ಹೇಳಿದರು.
ನಮ್ಮ ವಾರ್ಡ್ನಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಚರಂಡಿಗಳು ತ್ಯಾಜ್ಯದಿಂದ ತುಂಬಿವೆ. ಖಾಯಿಲೆಗಳು ಹೆಚ್ಚುತ್ತಿವೆ. ಅಧಿಕಾರಿಗಳು ಕೇವಲ ಕಚೇರಿಗೆ ಸೀಮಿತರಾಗಿದ್ದಾರೆ ಎಂದು ದೂರಿದರು.
ಯರ್ರಮ್ಮ, ರಾಜಮ್ಮ, ವಾಣಿ, ನಾಗವೇಣಿ, ಅರುಣ, ವೆಂಕಟಮ್ಮ, ಅಪ್ಪು, ನಟರಾಜ್, ಮುನಿಕೃಷ್ಣ, ಮುನಿರಾಜು, ಆನಂದ್, ರಾಮಕೃಷ್ಣ, ಶಿವಪ್ಪ, ಮುನಿಯಪ್ಪ, ಕಲ್ಯಾಣ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಹುಣ್ಣಿಮೆಯ ಪ್ರಯುಕ್ತ ಗೋಪೂಜೆ
ಶಿಡ್ಲಘಟ್ಟದ ದೇಶದಪೇಟೆಯಲ್ಲಿ ಗುರುವಾರ ಹುಣ್ಣಿಮೆಯ ಪ್ರಯುಕ್ತ ಗೋಪೂಜೆ ಮಾಡಿ ಕಡಲೆಬೆಲ್ಲದ ಉಂಡೆಯನ್ನು ಹಸುವಿಗೆ ವೃದ್ಧೆಯೊಬ್ಬರು ತಿನ್ನಿಸಿದರು.
ವರ್ಗಾವಣೆಗೊಂಡ ಪೊಲೀಸ್ ಪೇದೆಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ
ಪುರ ಪೊಲೀಸ್ ಠಾಣೆಯಿಂದ ವರ್ಗಾವಣೆಗೊಂಡ ಪೊಲೀಸ್ ಪೇದೆಗಳಿಗೆ ಬುಧವಾರ ಬೀಳ್ಕೊಡುಗೆ ಕಾರ್ಯಕ್ರಮವನ್ನು ಪೊಲೀಸ್ ಸಬ್ಇನ್ಸ್ಪೆಕ್ಟರ್ ವಿಜಯ್ ಆಯೋಜಿಸಿದ್ದರು.
ಠಾಣೆಯಲ್ಲಿ ಈವರೆಗೆ ಕೆಲಸ ಮಾಡಿ ವರ್ಗಾವಣೆಗೊಂಡ ಪೇದೆಗಳಾದ ಆಂಜನೇಯ, ಸಂತೋಷ, ಸರ್ವೇಶ, ಶಿವಪ್ಪ, ಜಯಶೇಖರ, ನಾಗರಾಜ, ಸಂಪತ್ಕುಮಾರ್, ಮಂಜುನಾಥಗುಪ್ತ, ಪ್ರಕಾಶ್ ಹಾಗೂ ಎ.ಎಸ್.ಐ ಆಗಿ ಮುಂಬಡ್ತಿ ಪಡೆದ ಮುನಿಶಾಮಯ್ಯ ಅವರನ್ನು ಗೌರವಿಸಲಾಯಿತು.
ರೀಲರುಗಳ ಆರೋಪ ಸತ್ಯಕ್ಕೆ ದೂರವಾದುದು
ತಾಲ್ಲೂಕಿನ ಜೋಟ್(ಸಿಲ್ಕ್ ವೇಸ್ಟ್) ಖರೀದಿದಾರರ ಮೇಲೆ ಕೆಲವು ರೀಲರುಗಳು ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು ಎಂದು ಜೋಟ್ ಖರೀದಿದಾರ ಎಸ್.ಪಿ.ಎಸ್. ಅನ್ಸರ್ ತಿಳಿಸಿದರು.
ನಗರದಲ್ಲಿ ಅವರು ಗುರುವಾರ ಪತ್ರಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ತಾಲ್ಲೂಕಿನಲ್ಲಿ ಜೋಟ್ ವ್ಯಾಪಾರವನ್ನು ಹಲವಾರು ಮಂದಿ ಮಾಡುತ್ತಿದ್ದಾರೆ. ಹೊರಗಿನಿಂದ ಬರುವ ವ್ಯಾಪಾರಸ್ಥರಿಗೆ ನಾವು ಯಾವುದೇ ತೊಂದರೆಯನ್ನು ನೀಡಿಲ್ಲ. ವಾತಾವರಣದ ವ್ಯತ್ಯಾಸದಿಂದ ತೂಕದಲ್ಲಿ ಏರುಪೇರಾಗುವುದರಿಂದ ಬೆಲೆಯನ್ನು 20 ರಿಂದ 30 ರೂ ಕಡಿಮೆ ಮಾಡಿರುವುದು ಸತ್ಯ. ಆದರೆ ಕೆಲ ರೀಲರುಗಳು ಆರೋಪಿಸಿರುವಂತೆ 200 ರೂ ಕಡಿಮೆ ಮಾಡಿಲ್ಲ ಎಂದು ಹೇಳಿದರು.
ಪರ ಊರಿನ ವ್ಯಾಪಾರಸ್ಥರು ಒಂದು ಕೆ.ಜಿ ಜೋಟಿಗೆ 500 ರಿಂದ 530 ರೂ ವರೆಗೂ ಖರೀದಿಸಿದರೆ, ನಾವು 450 ರಿಂದ 480 ರೂ ವರೆಗೂ ಬೆಲೆ ನೀಡುತ್ತೇವೆ. ನಮಗೂ ಅವರಿಗೂ 30 ರಿಂದ 50 ರೂ ವ್ಯತ್ಯಾಸಕ್ಕೆ ಕಾರಣಗಳಿವೆ. ನಾವುಗಳು ವರ್ಷ ಪೂರ್ತಿ ಪ್ರತಿ ವಾರ 10 ರಿಂದ 15 ಟನ್ ಜೋಟ್ ಖರೀದಿಸುತ್ತೇವೆ. ಎಲ್ಲಾ ಗುಣಮಟ್ಟದ ಜೋಟ್ ನಾವು ಖರೀದಿಸುತ್ತೇವೆ. ಮಳೆ, ಬಿಸಿಲು, ಗಾಳಿ, ಸೈಕ್ಲೋನ್ ಮುಂತಾದ ವಿವಿಧ ಹವಾಮಾನಗಳಲ್ಲಿ ಜೋಟ್ ತೂಕ ಏರುಪೇರಾಗುತ್ತದೆ. ಬೇರೆ ಊರಿನವರು ಕೇವಲ ಒಳ್ಳೆಯ ಹವಾಮಾನವಿದ್ದಾಗ, ಜೋಟ್ ಬೆಲೆ ಕಡಿಮೆಯಿದ್ದಾಗ ಮಾತ್ರ ಬಂದು ಉತ್ತಮ ಗುಣಮಟ್ಟದ ಜೋಟ್ ಖರೀದಿಸುತ್ತಾರಷ್ಟೆ. ನಾವುಗಳು ಇಲ್ಲಿ ಕೆಲವಾರು ರೀಲರುಗಳಿಗೆ 50 ಸಾವಿರದಿಂದ 2 ಲಕ್ಷ ರೂಗಳವರೆಗೆ ಮುಂಗಡ ಹಣವನ್ನು ನೀಡಿ ನಂತರ ಜೋಟ್ ತೂಕ ಹಾಕಿ ಜಮಾ ಹಾಕುವ ಪರಿಪಾಟವಿಟ್ಟುಕೊಂಡಿದ್ದೇವೆ. ನಾವು ಯಾವುದೇ ಪರ ಊರಿನ ವ್ಯಾಪಾರಿಗೂ ತೊಂದರೆ ಮಾಡಿಲ್ಲ, ಮಾಡುವುದೂ ಇಲ್ಲ. ವಿನಾಕಾರಣ ಕೆಲ ರೀಲರುಗಳು ನಮ್ಮ ತೇಜೋವಧೆ ಮಾಡಲು ಪೊಲೀಸ್ ಠಾಣೆಯ ಮುಂದೆ ಜನರನ್ನು ಗುಂಪು ಗೂಡಿಸಿ ಜೋಟ್ ವ್ಯಾಪಾರಸ್ಥರ ವಿರುದ್ಧ ಆರೋಪ ಮಾಡಿದ್ದಾರೆ ಎಂದು ತಿಳಿಸಿದರು.
ಸಯ್ಯದ್ ಇದಾಯತ್ತುಲ್ಲ, ಡಿ.ಮಹಬೂಬ್ ಪಾಷ, ಮಹಮ್ಮದ್ ಗೌಸ್ ಈ ಸಂದರ್ಭದಲ್ಲಿ ಹಾಜರಿದ್ದರು.
ಅಂಚೆ ಇಲಾಖೆಯಲ್ಲೂ ‘ಕಾಗದ ರಹಿತ’ ವ್ಯವಹಾರ
ಪಿಂಚಣಿ ಹಣವನ್ನು ಪಡೆಯುವ ವೃದ್ಧರು ಮತ್ತು ಅಂಗವಿಕಲರ ಖಾತೆಗಳನ್ನು ಅಂಚೆ ಕಚೇರಿಯಲ್ಲಿ ತೆರೆಸಬೇಕಾದ ಗುರುತರ ಜವಾಬ್ದಾರಿ ಪೋಸ್ಟ್ ಮನ್ಗಳ ಮೇಲಿದೆ ಎಂದು ಅಂಚೆ ಇಲಾಖೆಯ ಕೋಲಾರ ವಿಭಾಗದ ಸಹಾಯಕ ಅಧೀಕ್ಷಕ ವಿ.ಆರ್.ಸ್ವಾಮಿ ತಿಳಿಸಿದರು.
‘ಕಾಗದ ರಹಿತ’ ವ್ಯವಹಾರವನ್ನು ನಡೆಸುವ ಉದ್ದೇಶದಿಂದ ಪ್ರಾರಂಭಿಸಿರುವ ‘ಪೋಸ್ಟಲ್ ಡಿಜಿಟಲ್ ಇಂಡಿಯಾ ಸಪ್ತಾಹ’ಕ್ಕೆ ಗುರುವಾರ ನಗರದ ಅಂಚೆ ಕಚೇರಿಯಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ಕೋಲಾರ ಮತ್ತು ಚಿಕ್ಕಬಲ್ಲಾಪುರವನ್ನು ಒಂದು ವಲಯವೆಂದು ಗುರುತಿಸಿದ್ದು, ಅದರಲ್ಲಿ 65 ಅಂಚೆ ಕಚೇರಿಗಳು ಮತ್ತು 451 ಉಪ ಅಂಚೆ ಕಚೇರಿಗಳಿವೆ. ಇವುಗಳಲ್ಲಿ 26 ಅಂಚೆ ಕಚೇರಿಗಳು ಸಂಪೂರ್ಣ ಆನ್ಲೈನ್ ಆಗಿವೆ. ಇನ್ನುಳಿದ 31 ಅಂಚೆ ಕಚೇರಿಗಳು ಮತ್ತು 451 ಉಪ ಅಂಚೆ ಕಚೇರಿಗಳನ್ನು ಡಿಜಿಟಲೈಸ್ ಮಾಡಲು ಪ್ರಾರಂಭಿಸಿದ್ದೇವೆ. ಪಿಂಚಣಿ ಪಡೆಯುವ ಪ್ರತಿಯೊಬ್ಬರದ್ದೂ ಖಾತೆ ಮಾಡಿಸಬೇಕು ಎಂದು ತಿಳಿಸಲಾಗಿದೆ ಎಂದು ಹೇಳಿದರು.
ಈಗಾಗಲೇ ದೇಶದಾದ್ಯಂತ ಹಣವನ್ನು ಖಾತೆದಾರರು ಎಲ್ಲಿಗೆ ಬೇಕಾದರೂ ವರ್ಗಾಯಿಸಬಹುದಾದಂತ ‘ಕಾಗದ ರಹಿತ’ ಸೇವೆಯನ್ನು ಕಂಪ್ಯೂಟರ್ ಮೂಲಕ ನಡೆಸುತ್ತಿದ್ದೇವೆ. ತಮ್ಮ ಖಾತೆಯ ಬಗ್ಗೆ ಮಾಹಿತಿಯನ್ನು ಎಸ್ಎಂಎಸ್ ಮೂಲಕ ಪಡೆಯಬಹುದಾಗಿದೆ ಎಂದು ವಿವರಿಸಿದರು. ಅಂಚೆ ಕಚೇರಿಯ ಮುಖ್ಯಪೋಸ್ಟ್ ಮಾಸ್ಟರ್ ಪ್ರಭಾವತಿ, ಸಿಬ್ಬಂದಿ ಮತ್ತು ಪೋಸ್ಟ್ ಮನ್ಗಳು ಈ ಸಂದರ್ಭದಲ್ಲಿ ಹಾಜರಿದ್ದರು.

