Home Blog Page 510

ಸದ್ವಋತ್ತ ಬೇಕು ಸನ್ಮತಿಗೆ

0

ಆಹಾರ, ವಿಹಾರ ಮತ್ತು ಆಚಾರ-ಈ ಮೂರು ಬದುಕಿನಲ್ಲಿ ಅಳವಡಿಸಿಕೊಂಡಾಗ ಬದುಕು ಸುಗಮವಾಗಿ ಸಾಗುತ್ತದೆ. ಆಹಾರ, ವಿಹಾರಗಳ ಬಗ್ಗೆ ಸಾಕಷ್ಟು ತಿಳಿದುಕೊಂಡಾಗಿದೆ. ಆಚಾರವು ವ್ಯಕ್ತಿಯ ಜೀವನಕ್ಕೆ ಬಹಳ ಅಗತ್ಯ. ಆಯುರ್ವೇದದಲ್ಲಿ ಸದ್ವøತ್ತ ಎಂಬ ವಿಷಯದಡಿಯಲ್ಲಿ ಆರೋಗ್ಯಕಾರಿ ವಿಚಾರದ ಬಗ್ಗೆ ತಿಳಿಸಲಾಗಿದೆ. ಅವುಗಳಲ್ಲಿ ಕೆಲವನ್ನು ಈ ಸಂದರ್ಭದಲ್ಲಿ ಇಲ್ಲಿ ತಿಳಿದುಕೊಳ್ಳೋಣ.
1. ಗುರುಹಿರಿಯರನ್ನು ಗೌರವಿಸಬೇಕು. ದೇವರನ್ನು ಪೂಜಿಸಬೇಕು.
2. ಶರೀರವನ್ನು ಶುದ್ಧವಾಗಿಟ್ಟುಕೊಳ್ಳಬೇಕು.
3. ಐದು ದಿವಸ ಅಥವಾ ವಾರಕ್ಕೊಮ್ಮೆ ಕೈ ಬೆರಳು ಹಾಗೂ ಕಾಲ್ಬರಳಿನ ಉಗುರುಗಳನ್ನು ಕತ್ತರಿಸಿಕೊಳ್ಳಬೇಕು.
4. ಸದಾ ಶುಭ್ರವಾದ ವಸ್ತ್ರಗಳನ್ನೇ ಧರಿಸಬೇಕು. ಆಯಾ ಸಮಯ, ಸಂದರ್ಭಕ್ಕೆ ಅನುಸಾರವಾಗಿ ಬಟ್ಟೆಗಳನ್ನು ಧರಿಸಬೇಕು.
5. ಮಾತು ಹಿತ-ಮಿತವಾಗಿರಬೇಕು. ನಮ್ಮ ಮಾತಿನಿಂದ ಬೇರೆಯವರಿಗೆ ನೋವಾಗಬಾರದು.
6. ಸಮಯಕ್ಕೆ ಅನುಸಾರವಾಗಿ ಹಿತಮಿತವಾಗಿ ಮಾತನಾಡಬೆಕು.
7. ಮಾತಿನಲ್ಲಿ ಯಾವಾಗಲೂ ನಿಜಾಂಶವಿರಬೇಕು.
8. ಸದಾ ಉತ್ಸಾಹದಿಂದ ಶಾಂತ ರೀತಿಯಿಂದ ಬದುಕಬೇಕು.
9. ಬೇರೆಯವರ ಯಶಸ್ಸನ್ನು ಕಂಡು ಹೊಟ್ಟೆಕಿಚ್ಚು ಪಡಬಾರದು. ನಾವೂ ಅವರಂತೆ ಆಗಲು ಅನುಸರಿಸಬೇಕಾದ ಮಾರ್ಗವನ್ನು ತಿಳಿದು ಅಳವಡಿಸಿಕೊಳ್ಳಬೇಕು.
10. ಮಲಿನವಾದ ಸ್ಥಳ, ದುಷ್ಟರ ಸಹವಾಸ ಒಳ್ಳೆಯದಲ್ಲ.
11. ಆಯಾಸವಾಗುವಷ್ಟು ಶಾರೀರಕ ವ್ಯಾಯಾಮ ಮತ್ತು ಮಾನಸಿಕ ಚಟುವಟಿಕೆಗಳು ಒಳ್ಳೆಯದಲ್ಲ.
12. ಯಾರೊಂದಿಗೂ ವೈರತ್ವವನ್ನು ಕಟ್ಟಿಕೊಳ್ಳುವುದು ಸರಿಯಲ್ಲ.
13. ತಪ್ಪು ಮಾಡಿದವರನ್ನು ಅಥವಾ ಯಾವುದಾದರೂ ಸಂದರ್ಭದಲ್ಲಿ ನಿಮಗೆ ಏನಾದರೂ ತೊಂದರೆ ಕೊಟ್ಟವರನ್ನು ಕ್ಷಮಿಸಬೇಕು.
14. ಸೋಲು ಗೆಲುವುಗಳನ್ನು ಒಂದೇ ರೀತಿಯಲ್ಲಿ ಸ್ವೀಕರಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ್ದಲ್ಲಿ ಅಥವಾ ಕಡಿಮೆಯಾಗಿದ್ದಲ್ಲಿ-ಹೀಗೆ ಎಲ್ಲಾ ಸಂದರ್ಭಗಳನ್ನೂ ಒಂದೇ ರೀತಿಯಲ್ಲಿ ನೋಡುವ ವಿಧಾನವನ್ನು ಬೆಳೆಸಿಕೊಳ್ಳಬೇಕು.
15. ಬೇರೆಯವರ ವಸ್ತುಗಳಿಗೆ ಆಸೆಪಡುವುದಾಗಲೀ ಅಥವಾ ಬೇರೆಯವರ ವಸ್ತುಗಳನ್ನು ಅವರ ಅನುಮತಿಯಿಲ್ಲದೆ ಬಳಸುವುದಾಗಲಿ ಒಳ್ಳೆಯದಲ್ಲ.
16. ನಿಮ್ಮ ಪ್ರತಿಕ್ರಿಯೆ ಸಂದರ್ಭಕ್ಕೆ ಅನುಸಾರವಾಗಿಬೇಕು.
17. ಅತಿ ಜೋರಾಗಿ ನಗುವುದು, ಮಾತನಾಡುವುದು, ಬೇರೆಯವರನ್ನು ಅಪಹಾಸ್ಯ ಮಾಡುವುದು ಒಳ್ಳೆಯದಲ್ಲ.
18. ನಿಮ್ಮ ಪ್ರತಿಕ್ರಿಯೆ ಸಂದರ್ಭಕ್ಕೆ ಅನುಸಾರವಾಗಿರಬೇಕು.
19. ಕಿವಿ, ಮೂಗು, ಕಣ್ಣುಗಳಿಂದ ಬರುವ ಕಿಟ್ಟವನ್ನು ಸರಿಯಾಗಿ ಸ್ವಚ್ಛಗೊಳಿಸಿಕೊಳ್ಳಬೇಕು.
20. ಸಮಯಕ್ಕೆ ಸರಿಯಾಗಿ ಮಲ-ಮೂತ್ರಗಳನ್ನು ವಿಸರ್ಜನೆ ಮಾಡಬೇಕು. ಮಲ-ಮೂತ್ರ ಪ್ರವೃತ್ತಿಗಳನ್ನು ತಡೆಯಬಾರದು.
21. ಹಸಿವು ನೀರಡಿಕೆಗಳನ್ನು ತಡೆಯಬಾರದು. ಹಸಿವಾದಾಗ ಆಹಾರವನ್ನು ಸೇವಿಸಬೇಕು. ನೀರಡಿಕೆಯಾದಾಗ ನೀರನ್ನು ಕುಡಿಯಬೇಕು.
22. ಯಾರಾದರೂ ಅವಮಾನ ಮಾಡಿದ ಪಕ್ಷದಲ್ಲಿ, ಬೈದಿದ್ದಲ್ಲಿ ಅಥವಾ ಅಪಹಾಸ್ಯ ಮಾಡಿದ್ದಲ್ಲಿ-ಅಂಥ ಸಂದರ್ಭಗಳನ್ನು ಮರೆತುಬಿಡಬೇಕು. ತಪ್ಪಿದ್ದಲ್ಲಿ ತಿದ್ದಿಕೊಂಡು, ಸರಿಯಾಗಿದ್ದ ಪಕ್ಷದಲ್ಲಿ ಹಾಗೆಯೇ ಮುಂದುವರೆಯಬೇಕು.
23. ಸಮಯವನ್ನು ವ್ಯರ್ಥವಾಗಿ ಕಳೆಯದೆ ಸಮರ್ಪಕ ರೀತಿಯಲ್ಲಿ ಬಳಸಿಕೊಳ್ಳಬೇಕು.
24. ಯವುದೇ ಕೆಲಸವನ್ನಾದರೂ ಸರಿಯಾಗಿ ಆಲೋಚಿಸದೆ, ಯೋಜನೆ ಮಾಡಿಕೊಳ್ಳದೇ ಮಾಡಬಾರದು.
25. ಯಾರನ್ನಾದರೂ ಅತಿಯಾಗಿ ಅವಮಾನಿಸುವುದು ಅಥವಾ ಅತಿಯಾಗಿ ನಂಬುವುದು-ಎರಡೂ ಒಳ್ಳೆಯದಲ್ಲ.
26. ಯಾವುದೇ ಸಂದರ್ಭದಲ್ಲಾಗಲೀ ಅತಿಯಾಗಿ ಖುಷಿಯಾಗಿರುವುದಾಗಲೀ, ಅತಿ ದು:ಖ-ಬೇಸರ ಪಡುವುದಾಗಲೀ ಒಳ್ಳೆಯದಲ್ಲ. ಎಲ್ಲ ಭಾವನೆಗಳೂ ಹಿತಮಿತವಾಗಿರಬೇಕು.
27. ಪ್ರತಿದಿನವೂ ಪ್ರಾರ್ಥನೆ ಮೊದಲಾದ ಹಿರಿಯರು ತಿಳಿಹೇಳುವ ಧಾರ್ಮಿಕ ವಿಧಾನಗಳನ್ನು ಪಾಲಿಸುವುದು ಒಳ್ಳೆಯದು.
28. ಜ್ಞಾನೇಂದ್ರಿಯಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಅವುಗಳನ್ನು ಅತಿಯಾಗಿ ಬಳಸುವುದು, ಬಳಸದೇ ಇರುವುದು, ಅಸಮರ್ಪಕವಾದ ರೀತಿಯಲ್ಲಿ ಬಳಸುವುದು ರೋಗಕಾರಕ.
29. ದೂರದರ್ಶನ, ಗಣಕಯಂತ್ರಗಳನ್ನು ಅತಿಯಾಗಿ ನೋಡುವುದು, ಅತಿ ಹತ್ತಿರದಿಂದ ನೋಡುವುದು ಕಣ್ಣುಗಳಿಗೆ ಅಹಿತಕರ. ಪ್ರಕೃತಿಯ ಸುಂದರ ದೃಶ್ಯ, ಬೆಳಗಿನ ಮೂಡುವ ಸೂರ್ಯ ಸಂಜೆ ಮುಳುಗುವ ಸೂರ್ಯ, ಉದ್ಯಾನವನ, ಹಸಿರು ಗಿಡ, ಪಶುಪಕ್ಷಿಗಳ ವೀಕ್ಷಣೆ ಕಂಗಳಿಗೂ ಹಿತ, ಮನಸ್ಸಿಗೂ ಮುದ.
30. ಶ್ರವಣೇಂದ್ರಿಯ (ಕಿವಿ)ವನ್ನು ಕ್ರಮವರಿತು ಬಳಸಬೇಕು. ಅತಿ ಜೋರಾದ ಶಬ್ದವನ್ನು ಕೇಳುವುದು, ಅತಿಯಾದ ದೂರವಾಣಿಯ ಬಳಕೆ, ಇಯರ್ ಫೋನ್ ಬಳಸಿ ಹಾಡು ಕೇಳುವುದು ಮೊದಲಾದುವುಗಳಿಂದ ಕೇಳುವ ಶಕ್ತಿ ಕಡಿಮೆ ಆಗುತ್ತದೆ. ಸುಶ್ರಾವ್ಯವಾದ ಹಾಡುಗಳು, ಮೆಲುದನಿಯ ಮಾತು, ಹಕ್ಕಿಗಳ ಕಲರವ, ಮೃದುವಾಗಿ ಶಬ್ದವನ್ನು ಹೊರಡಿಸುವ ವಾದ್ಯಗಳನ್ನು ಕೇಳುವುದರಿಂದ ಕಿವಿಯ ಶ್ರವಣ ಸಾಮಥ್ರ್ಯವೂ ಹೆಚ್ಚುತ್ತದೆ. ಮನಸ್ಸೂ ಶಾಂತವಾಗಿರುತ್ತದೆ.
31. ಅತಿಯಾದ ಗಂಧ (ಸುಗಂಧ/ದುರ್ಗಂಧ) ಯುಕ್ತ ವಸ್ತುಗಳನ್ನು ಬಳಸುವುದು, ಆಘ್ರಾಣಿಸುವುದು (ಸೆಂಟ್, ಡಿಯೋಡರೆಂಟ್, ರೂಮ್ ಫ್ರೆಶನರ್‍ಗಳ ಅತಿಯಾದ ಬಳಕೆ) ಇವೆಲ್ಲ ಆರೋಗ್ಯಕ್ಕೆ ಹಾನಿಕರ, ಸುಗಂಧ ಪುಷ್ಪಗಳಾದ ಮಲ್ಲಿಗೆ, ಸಂಪಿಗೆ ಮೊದಲಾದವುಗಳನ್ನು ಆಘ್ರಾಣಿಸುವುದು, ಕರ್ಪೂರ, ಶ್ರೀಗಂಧಗಳ ಸುವಾಸನೆಯನ್ನು ಆಘ್ರಾಣಿಸುವುದು ಮನಸ್ಸಿಗೆ ಮುದ ನೀಡುತ್ತದೆ. ಯಾವುದೇ ಮಾನಸಿಕ ಒತ್ತಡ ಉಂಟಾಗದಂತೆ ನೈಸರ್ಗಿಕ ಸುಗಂಧ ದ್ರವ್ಯಗಳು ಮಾಡುತ್ತವೆ.
32. ಸೇವಿಸುವಂಥ ಆಹಾರದಲ್ಲಿ ಸಿಹಿ, ಕಹಿ, ಖಾರ, ಹುಳಿ, ಉಪ್ಪು, ಒಗರು-ಈ ಆರೂ ರುಚಿ (ರಸ) ಗಳಿರಬೇಕು. ಯಾವುದೇ ಒಂದು ರುಚಿ (ರಸ)ಯ ಅತಿಯಾದ ಬಳಕೆ ಒಳ್ಳೆಯದಲ್ಲ.
33. ಸ್ವಾಭಾವಿಕ ಸೌಂದರ್ಯ ಪ್ರಸಾದನ (ಪೌಡರ್, ಸ್ನೋ, ಮೇಕಪ್ ದ್ರವ್ಯಗಳು) ಗಳ ಅತಿಯಾದ ಬಳಕೆ ಒಳ್ಳೆಯದಲ್ಲ.
34. ಜ್ಞಾನೇಂದ್ರಿಯಗಳಾದ ಕಣ್ಣು-ಕಿವಿ-ಮೂಗು-ನಾಲಿಗೆ ಹಾಗೂ ಚರ್ಮಗಳನ್ನು ಅತಿಯಾಗಿ ಉತ್ತೇಜಿಸುವಂತಹ ಯಾವುದೇ ಕ್ರಿಯೆ ಅಥವಾ ಯಾವುದೇ ವಸ್ತುವಿನ ಬಳಕೆ ಬೇಡ.
35. ಆಹಾರವನ್ನು ಸೇವಿಸುವಾಗ ಮಾತನಾಡುವದು, ನಗುವುದು, ಕೂರದರ್ಶನ ವೀಕ್ಷಣೆ-ಇವೆಲ್ಲ ಒಳ್ಳೆಯದಲ್ಲ.
36. ಶುದ್ಧವಾದ ವಾತಾವರಣದಲ್ಲಿ, ಮನೆಯವರೆಲ್ಲರ ಜೊತೆ, ಶಾಂತವಾದ ಮನಸ್ಸಿನಿಂದ ಆಹಾರವನ್ನು ಸೇವಿಸಬೇಕು.
37. ಬೆಚ್ಚಗಿರುವ, ದ್ರವಾಂಶವಿರುವ, ತಾಜಾ ಆಹಾರವನ್ನು ಸೇವಿಸಬೇಕು.
38. ಅತಿ ನಿಧಾನವಾಗಿ, ಅತಿ ಶೀಘ್ರವಾಗಿ ಆಹಾರವನ್ನು ಸೇವಿಸಬಾರದು.
39. ಸಭೆಗಳಲ್ಲಿ, ನಾಲ್ಕಾರು ಜನ ಸೇರಿದ ಸ್ಥಳಗಳಲ್ಲಿ ಗೌರವಯುತವಾಗಿ ನಡೆದುಕೊಳ್ಳಬೇಕು. ಶರೀರದ ಭಂಗಿ, ಮಾತನಾಡುವ ರೀತಿ ಎಲ್ಲರಿಗೂ ಒಪ್ಪುವಂತಿರಬೇಕು.
40. ಸಭೆ ಸಮಾರಂಭಗಳಲ್ಲಿ ಅನವಶ್ಯವಾದ ಶರೀರದ ಚೇಷ್ಟೆಗಳು (ವಿನಾಕಾರಣ ಕೈ-ಕಾಲು ಆಡಿಸುವುದು, ಕಣ್ಣುರೆಪ್ಪೆಗಳನ್ನು ಆಡಿಸುವುದು, ಹುಬ್ಬಿನ ಚಲನೆ ಇತ್ಯಾದಿ), ಅತಿ ಜೋರಾದ, ಸಂದರ್ಭಕ್ಕೆ ಹೊಂದದ ಮಾತುಗಳು ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ.
41. ಜನರಿರುವ ಸ್ಥಳಗಳಲ್ಲಿ ಜೋರಾಗಿ ಆಕಳಿಸುವುದು, ಕೂಗುವುದು, ವಿನಾಕಾರಣ ಕೋಪಗೊಂಡು ಕಿರುಚಾಡುವುದು ತರವಲ್ಲ.
42. ಮಾತನಾಡಬೇಕಾದಲ್ಲಿಮಾತನಾಡದಿರುವುದು, ಮೌನವಾಗಿರಬೇಕಾದಲ್ಲಿ ಮಾತನಾಡುವುದು ಎರಡೂ ಸರಿಯಲ್ಲ.
43. ಅತಿಯಾದ ಮಾತು, ಸುಳ್ಳುಮಾತು, ಬೇರೆಯವರನ್ನು ನೋಯಿಸುವಂತಹ ಮಾತು, ಹಿತವೆನಿಸದ ಮಾತು-ಇವುಗಳನ್ನು ಆಡಬಾರದು.
44. ನಿದ್ದೆ ಬರುವಾಗ ನಿದ್ದೆ ಮಾಡಬೇಕು. ಅಕಸ್ಮಾತ್ ರಾತ್ರಿ ನಿದ್ದೆಗೆಟ್ಟಿದ್ದಲ್ಲಿ ಮರುದಿನ ಹಗಲು ಆಹಾರ ಸೇವನೆಗೂ ಮೊದಲು ನಿದ್ದೆ ಮಾಡಿ ವಿಶ್ರಾಂತಿ ಪಡೆಯುವುದು ಒಳ್ಳೆಯದು.
45. ಹಗಲು ಹೊತ್ತು ಆಹಾರ ಸೇವನೆಯ ನಂತರ ನಿದ್ದೆ ಮಾಡುವುದು ಹಿತವಲ್ಲ. ವಿಶ್ರಾಂತಿ ಬೇಕಿನಿಸಿದ ಪಕ್ಷದಲ್ಲಿ ಆಹಾರ ಸೇವನೆಗೂ ಮೊದಲು ವಿಶ್ರಾಂತಿ ಪಡೆಯುವುದು ಹಿತಕರ.
46. ಯಾವುದೇ ಕೆಲಸವನ್ನಾದರೂ ಶ್ರದ್ಧೆಯಿಂದ ಮಾಡಬೇಕು. ದೊಡ್ಡ ಕೆಲಸವಾಗಲೀ ಸಣ್ಣ ಕೆಲಸವಾಗಲೀ-ಅದನ್ನು ಮನಸ್ಸಿಟ್ಟು ಮಾಡಬೇಕು.
47. ಯಾವುದೇ ಸಮಸ್ಯೆ ಉಂಟಾದಾಗ ಸಮಸ್ಯೆಯ ಬಗ್ಗೆ ಯೋಚಿಸಬಾರದು, ಪರಿಹಾರದ ಬಗ್ಗೆ ಯೋಚಿಸಬೇಕು. ಆಗ ಸಮಸ್ಯೆಯು ಖಂಡಿತವಾಗಿ ನಿವಾರಣೆಯಾಗುತ್ತದೆ.
48. ಸಮಯ ಹಾಗೂ ಸಂದರ್ಭಗಳಿಗೆ ಅನುಸಾರವಾಗಿ ಶಾರೀರಿಕವಾಗಿ, ಮಾನಸಿಕವಾಗಿ ಹಾಗೂ ವಾಚಿಕವಾಗಿ ಹೊಂದಿಕೊಂಡಾಗ ಮಾತ್ರ ಆರೋಗ್ಯ ಲಭ್ಯ.
49. ಸದಾ ಪ್ರಕೃತಿಯೊಂದಿಗೆ ಹೊಂದಿಕೊಂಡಿರಬೇಕು. ನೀರು, ಗಾಳೀ, ಆಹಾರ ಎಲ್ಲವೂ ನಮಗೆ ಪ್ರಕೃತಿಯೊಂದರಿಂದಲೇ ಲಭಿಸುತ್ತದೆ. ಹಾಗಾಗಿ ಪ್ರಕೃತಿಯ ರಕ್ಷಣೆ ನಮ್ಮ ಆದ್ಯ ಕರ್ತವ್ಯ.
50. “ನಮ್ಮ ಏಳ್ಗೆಗೆ ನಾವೇ ಶಿಲ್ಪಿ” ಎಂಬುದನ್ನು ನೆನಪಿನಲ್ಲಿ ಇಟ್ಟುಕೊಂಡಿರಬೇಕು. ಮೇಲಿನ ಎಲ್ಲಾ ಅಂಶಗಳನ್ನೂ ಅರ್ಥಮಾಡಿಕೊಂಡು ಅಳವಡಿಸಿಕೊಂಡರೆ ಬದುಕಿನಲ್ಲಿ ಯಶಸ್ಸು ನಿಶ್ಚಿತ.
ಡಾ. ಶ್ರೀವತ್ಸ

ಅಂಗವಿಕಲ ಮಕ್ಕಳಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

0

ಅಂಗವಿಕಲರಿಗೆ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಲ್ಲಿ ಅವರಲ್ಲಿರುವ ಪ್ರತಿಭೆಯನ್ನು ಸಮಾಜದ ಮುಂದೆ ಪ್ರದರ್ಶಿಸಲು ಸಹಕಾರಿಯಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ಹೇಳಿದರು.
ನಗರದ ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆಯೋಜಿಸಲಾಗಿದ್ದ ಅಂಗವಿಕಲ ಮಕ್ಕಳಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಅಂಗವಿಕಲತೆ ಎನ್ನುವುದು ಶಾಪವಲ್ಲ. ಮಕ್ಕಳಲ್ಲಿರುವ ಪ್ರತಿಭೆ ಹಾಗು ಸಾಮರ್ಥ್ಯವನ್ನು ಕೇವಲ ಅವರ ಅಂಗ ವೈಕಲ್ಯದಿಂದ ಅಳೆದು ಅದನ್ನು ನಶಿಸುವಂತೆ ಮಾಡುವುದನ್ನು ಮೊದಲು ಪೋಷಕರು ಬಿಡಬೇಕು.
ಪೋಷಕರು ಅಂಗವಿಕಲ ಮಕ್ಕಳ ಬಗ್ಗೆ ಅಸಡ್ಡೆ ತೋರುವ ಬದಲಿಗೆ ಸಮಾಜ ಅವರನ್ನು ಗುರುತಿಸುವಂತೆ ಮಾಡಲು ಅವರಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ಅನಾವರಣಕ್ಕೆ ಬೇಕಾದ ಎಲ್ಲಾ ಸವಲತ್ತುಗಳನ್ನು ಒದಗಿಸಬೇಕು ಎಂದರು.
ಶಿಕ್ಷಕರೂ ಕೂಡಾ ಎಲ್ಲ ಮಕ್ಕಳ ಜೊತೆ ಬೆರೆತು ಕಲಿಯುವಂತಹ ವಾತಾವರಣ ನಿರ್ಮಿಸಿಕೊಡುವುದರೊಂದಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವಂತಹ ಅವಕಾಶ ಕಲ್ಪಿಸಿಕೊಡಬೇಕು. ಈಗಾಗಲೇ ತಾಲ್ಲೂಕಿನಾದ್ಯಂತ ೨೫೦ ಮಂದಿ ಅಂಗವಿಕಲ ಮಕ್ಕಳನ್ನು ಗುರುತಿಸಲಾಗಿದ್ದು ಎಲ್ಲಾ ಮಕ್ಕಳಿಗೂ ಈ ಶಿಬಿರದ ಮೂಲಕ ಅವರಿಗೆ ಅಗತ್ಯವಾಗಿರುವ ಪರಿಕರಗಳನ್ನು ವಿತರಣೆ ಮಾಡಲಾಗುತ್ತದೆ ಎಂದರು.
ಚಿಕ್ಕಬಳ್ಳಾಪುರ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ವೈದ್ಯರುಗಳಿಂದ ಅಂಗವಿಕಲ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.
ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿ ಕೆ.ಸುಮಾ, ಜಂಗಮಕೋಟೆ ಸಿ.ಆರ್.ಪಿ. ಸುಂದರಾಚಾರಿ, ಮಂಜುನಾಥ್, ಲೋಕೇಶ್ನಾಯಕ್, ಮಧು, ಬುದ್ದಿಮಾಂದ್ಯ ಮಕ್ಕಳ ತಜ್ಞ ಹೇಮಂತ್, ದಿವ್ಯಾಚೌದರಿ, ಸತೀಶ್, ಮುಖ್ಯಶಿಕ್ಷಕ ಕೃಷ್ಣಮೂರ್ತಿ, ಕಿಶೋರ್, ಸ್ವಾಮಿ ವಿವೇಕಾನಂದ ಅಂಗವಿಕಲ ಸಂಸ್ಥೆಯ ಮಾರಪ್ಪ, ಸಂತೋಷ್, ಕಾರ್ಯಕ್ರಮ ಸಂಚಾಲಕ ಜಾನ್ಮುರೇ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಗೇಟ್ವಾಲನ್ನು ಹೊಡೆದು ಹಾಕಿ ಆಕ್ರೋಶವನ್ನು ವ್ಯಕ್ತಪಡಿಸಿದ ಜನರು

0

ಸಮರ್ಪಕವಾಗಿ ಕುಡಿಯುವ ನೀರನ್ನು ಪೂರೈಸುತ್ತಿಲ್ಲ ಎಂದು ದೂರಿ ಗಾಂಧಿನಗರದ ವಾಸಿಗಳು ಕುಡಿಯುವ ನೀರಿನ ಪೈಪ್ಲೈನ್ಗೆ ಅಳವಡಿಸಿದ್ದ ಗೇಟ್ವಾಲನ್ನು ಹೊಡೆದು ಹಾಕಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ನಗರದ ಇದ್ಲೂಡು ರಸ್ತೆಯ ಗಾಂಧಿನಗರದ ೧೨ನೇ ವಾರ್ಡಿಗೆ ಸರಿಯಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ನೀರಿನ ಮುಖ್ಯ ಪೈಪ್ಲೈನ್ಗೆ ಕೆಲವರು ಮೋಟಾರ್ಗಳನ್ನ ಅಳವಡಿಸಿಕೊಂಡಿರುವುದರಿಂದ ನಮಗೆ ನೀರೆ ಪೂರೈಕೆಯಾಗುತ್ತ್ತಿಲ್ಲ ಎಂದು ಆರೋಪಿಸಿದರು.
ಕಳೆದ ಮೂರು ತಿಂಗಳ ಹಿಂದೆಯೆ ಒಮ್ಮೆ ಪ್ರತಿಭಟನೆ ಮಾಡಿ ನೀರಿನ ಸಮಸ್ಯೆ ಕುರಿತು ನಗರಸಭೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಇದುವರೆಗೂ ಏನೂ ಕ್ರಮ ತೆಗೆದುಕೊಂಡಿಲ್ಲ. ಹಾಗಾಗಿ ಕಳೆದ ಹಲವು ತಿಂಗಳುಗಳಿಂದಲೂ ಸಮಸ್ಯೆ ನಿವಾರಣೆಯಾಗದೆ ಉಳಿದಿದೆ ಎಂದರು.
ಗಾಂಧಿನಗರದ ನಗರಸಭೆಯಿಂದ ಕುಡಿಯುವ ನೀರಿನ ಪೈಪ್ಲೈನ್ ಅಳವಡಿಸಿದೆ. ಆದರೆ ಮುಖ್ಯ ಪೈಪ್ಲೈನ್ಗೆ ಕೆಲವು ಪ್ರಭಾವಿಗಳು ಮೋಟಾರ್ನ್ನು ಅಳವಡಿಸಿಕೊಂಡು ತಮ್ಮ ಮನೆಗಳ ಸಂಪ್ಗೆ ಸಂಪರ್ಕ ಕೊಟ್ಟುಕೊಂಡಿದ್ದಾರೆ. ರೇಷ್ಮೆ ನೂಲು ಬಿಚ್ಚಾಣಿಕೆ ಘಟಕಗಳಿಗೆ ಬೇಕಾಗುವಷ್ಟು ನೀರನ್ನು ಅವರು ತುಂಬಿಸಿಕೊಳ್ಳುವವರೆಗೂ ಬೇರೆ ಯಾರಿಗೂ ಅಲ್ಲಿ ನೀರು ಸಿಗುವುದಿಲ್ಲ.
ಈ ಬಗ್ಗೆ ಈ ಏರಿಯಾದ ವಾಟರ್ ಮನ್ಗಳಿಗೆ ಸಾಕಷ್ಟು ಬಾರಿ ಹೇಳಿದ್ದರೂ ಅವರು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಹಾಗಾಗಿ ನಮಗೆ ಕುಡಿಯುವ ನೀರು ಸಿಗದೆ ಪರದಾಡುವಂತಾಗಿದೆ. ೧೫-–೨೦ದಿನಕ್ಕೊಮ್ಮೆ ನೀರು ಬರಲಿದ್ದು ಆ ನೀರೆಲ್ಲವೂ ದೊಡ್ಡ ಮನೆಗಳ ಸಂಪ್ಗೆ ಹರಿಯುತ್ತಿವೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಮಸ್ಯೆ ಕುರಿತು ನಗರಸಭೆ ಅಧಿಕಾರಿಗಳಿಗೆ ಮಾತ್ರವೇ ಅಲ್ಲ ಈ ವಾರ್ಡಿನ ಸದಸ್ಯರ ಗಮನಕ್ಕೂ ತಂದಿದ್ದೇವೆ. ಅಧಿಕಾರಿಗಳಾಗಲಿ, ನಗರಸಭೆ ಸದಸ್ಯರಾಗಲಿ ಯಾರೂ ನಮ್ಮ ಸಮಸ್ಯೆಯನ್ನು ಕಿವಿಗೆ ಹಾಕಿಕೊಳ್ಳುತ್ತಲೂ ಇಲ್ಲ. ಪರಿಹರಿಸುವ ಗೋಜಿಗೂ ಹೋಗುತ್ತಿಲ್ಲ ಎಂದು ದೂರಿದರು.
ನಗರಸಭೆ ಅಧಿಕಾರಿಗಳು ಹಾಗೂ ವಾರ್ಡಿನ ಸದಸ್ಯರಿಗೆ ಕರೆ ಮಾಡಿದರೂ ಯಾರೊಬ್ಬರೂ ಅಲ್ಲಿಗೆ ಬರಲಿಲ್ಲ. ಬಹಳಷ್ಟು ಸಮಯ ಕಾದು ಬೇಸತ್ತ ಜನರು ಗೇಟ್ವಾಲ್ನ್ನು ಹೊಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ಬೇಸತ್ತ ಅವರು ನಗರಸಭೆ ಕಚೇರಿಗೆ ಆಗಮಿಸಿ ಮನವಿ ಪತ್ರ ಸಲ್ಲಿಸಿದರು.
ಮನವಿ ಸ್ವೀಕರಿಸಿದ ನಬರಸಭೆ ಅಧಿಕಾರಿಗಳು ವಾರದೊಳಗೆ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದರು. ಬಡಾವಣೆಯ ವಾಸಿಗಳಾದ ದೇವರಾಜ್, ಹರೀಶ್, ಲೀಲಮ್ಮ, ವಸಂತಮ್ಮ, ನಾರಾಯಣಮ್ಮ, ಸುನಂದಮ್ಮ, ನಸ್ರೀನ್, ಪ್ರಭಾವತಿ, ಮಂಜುಳಮ್ಮ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಶಿಡ್ಲಘಟ್ಟದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಕೇಂದ್ರ ಪ್ರಾರಂಭ

0

ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಮತ್ತು ವಿಜ್ಞಾನದ ಬಗ್ಗೆ ಅರಿವು ಮೂಡಿಸುವ ಉದ್ದೇಶವನ್ನು ಹೊಂದಿರುವ ವಿಜ್ಞಾನ ಕೇಂದ್ರದ ಸದ್ಭಳಕೆ ಆಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ತಿಳಿಸಿದರು.
ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ಪ್ರಾರಂಭಗೊಂಡ ವಿಜ್ಞಾನ ಕೇಂದ್ರ, ಸಂಚಾರಿ ಪ್ರಯೋಗಾಲಯ ಮತ್ತು ಸಂಚಾರಿ ಬೈಕ್ಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿರುವ ಎಲ್ಲಾ ಸರ್ಕಾರಿ ಹಿರಿಯ, ಕಿರಿಯ ಮತ್ತು ಪ್ರೌಢಶಾಲೆಗಳಿಗೆ ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನದವರು ತೆರಳಿ ಪಠ್ಯಕ್ಕೆ ಸಂಬಂಧಿಸಿದ ವೈಜ್ಞಾನಿಕ ಪ್ರಯೋಗಗಳನ್ನು ಮಾಡಿ ವಿವರಿಸಲಿದ್ದಾರೆ. ಪ್ರತಿಯೊಂದು ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದರ ಉಪಯೋಗವನ್ನು ಪಡೆದುಕೊಂಡು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ವೈಜ್ಞಾನಿಕ ಪ್ರಯೋಗವೊಂದನ್ನು ಮಾಡಿ ತೋರಿಸುವ ಮೂಲಕ ಮಾಡಲಾಯಿತು. ಈ ಸಂದರ್ಭದಲ್ಲಿ ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನದ ದಿಲೀಪ್ ಮತ್ತು ಅರುಣ್ ವಿವಿಧ ವಿಜ್ಞಾನದ ಪ್ರಯೋಗಗಳನ್ನು ಮಾಡಿ ವಿವರಣೆ ನೀಡಿದರು.
ಕ್ಷೇತ್ರ ಸಮನ್ವಯಾಧಿಕಾರಿ ಜಿ.ಕೆ.ಸುಮ, ಮುಖ್ಯಶಿಕ್ಷಕಿ ಮಂಜುಳ, ಶಿಕ್ಷಕ ಸರ್ದಾರ್ ಚಾಂದ್ಪಾಷ, ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಮುಖ್ಯ ಸಂಚಾಲಕ ಅರುಣ್ ಕುಮಾರ್, ನಂಜುಂಡಯ್ಯ, ಬಿಲಾಲ್, ಗಣೇಶ್ ಎಚ್.ಕೆ.ದಿಲೀಪ್ ಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಸುಂಡ್ರಹಳ್ಳಿ ಬಳಿ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ ದಕ್ಷಿಣ ಭಾರತ ಕೇಂದ್ರ ಕಚೇರಿ

0

ತಾಲ್ಲೂಕಿನ ಸುಂಡ್ರಹಳ್ಳಿ ಬಳಿ ಸೋಮವಾರ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್(ಐಟಿಬಿಪಿ ಫೋರ್ಸ್)ನ ದಕ್ಷಿಣ ಭಾರತ ಕೇಂದ್ರ ಕಚೇರಿಯನ್ನು ಸ್ಥಾಪಿಸುವ ಸಲುವಾಗಿ ಶಂಕುಸ್ಥಾಪನೆಯನ್ನು ನಡೆಸಲಾಯಿತು.
ದೆಹಲಿಯಿಂದ ಆಗಮಿಸಿದ್ದ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ನ ಡಿ.ಜಿ ಕೃಷ್ಣಚೌದರಿ, ಡಿ.ಐ.ಜಿ ಸಂಜೀವ್ ರೈನಾ, ಕಮಾಂಡರ್ ಸಂತೋಷ್ ಪವಾರ್ ನೇತೃತ್ವದಲ್ಲಿ ಕಾಮಗಾರಿಯ ಶಿಲಾನ್ಯಾಸ ನೆರವೇರಿಸಲಾಯಿತು.
ಐಟಿಬಿಪಿ ಕ್ಯಾಂಪಸ್ ಸುಂಡ್ರಹಳ್ಳಿ ಎಂಬ ನಾಮಫಲಕದೊಂದಿಗೆ ತಾಲ್ಲೂಕಿನ ಪುಟ್ಟ ಸುಂಡ್ರಹಳ್ಳಿ ಗ್ರಾಮವು ರಾಷ್ಟ್ರ ಮಟ್ಟದಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಕಳೆದ ಮಾರ್ಚ್ 5 ರಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಐಟಿಬಿಪಿ ಫೋರ್ಸ್ನ ಟೆಲಿಕಮ್ಯೂನಿಕೇಷನ್ ಮತ್ತು ನಿಸ್ತಂತು ವಿಭಾಗದ ಎಸ್ಐ ಕೆ.ಆರ್.ಶಾಜಿ ಮೋನ್ ಹಾಗೂ ತಂಡದವರಿಗೆ ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ವಿಜಯಪುರ-ಕೋಲಾರ ಮಾರ್ಗದಲ್ಲಿ ಬರುವ ಸುಂಡ್ರಹಳ್ಳಿಯ ಸರ್ಕಾರಿ ಜಮೀನು ಸರ್ವೆ ನಂಬರ್ ೧ರ ೨೪ರ ಎಕರೆಯಷ್ಟು ಭೂ ಪ್ರದೇಶವನ್ನು ಐಟಿಬಿಪಿ ಫೋರ್ಸ್ನ ಕ್ಷೇತ್ರೀಯ ಮುಖ್ಯಾಲಯ ಕೇಂದ್ರ ಸ್ಥಾಪನೆಗೆಂದು ಹಸ್ತಾಂತರಿಸಲಾಗಿತ್ತು.
ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕೇರಳ ಸೇರಿ ನಾಲ್ಕು ರಾಜ್ಯಗಳ ಕೇಂದ್ರಸ್ಥಾನವನ್ನಾಗಿ ಈ ಕ್ಷೇತ್ರೀಯ ಮುಖ್ಯಾಲಯವನ್ನು ಆರಂಭಿಸಲಾಗಿದೆ. ಈ ನಾಲ್ಕೂ ರಾಜ್ಯಗಳಲ್ಲಿನ ಐಟಿಬಿಪಿ ಫೋರ್ಸ್ಗೆ ನೇಮಕ ಪ್ರಕ್ರಿಯೆಗಳು ಇಲ್ಲಿಯೆ ನಡೆಯಲಿವೆ. ಕ್ಷೇತ್ರೀಯ ಮುಖ್ಯಾಲಯ ಕಚೇರಿ, ೨೦೦ ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ, ಶಾಲೆ ಕಾಲೇಜು ಇನ್ನಿತರೆ ಮೂಲ ಸೌಕರ್ಯಗಳನ್ನು ಈ ಸ್ಥಳದಲ್ಲಿ ಅಭಿವೃದ್ಧಿಪಡಿಸಲಾಗುವುದು.
ಸುತ್ತ ಮುತ್ತಲ ಗ್ರಾಮಗಳ ಮಕ್ಕಳಿಗೂ ಈ ಶಾಲೆಯಲ್ಲಿ ಪ್ರವೇಶಕ್ಕೆ ಅವಕಾಶ ನೀಡಲಾಗುವುದಲ್ಲದೆ ಸಾರ್ವಜನಿಕರಿಗೂ ಆಸ್ಪತ್ರೆಯ ಮೂಲಕ ಆರೋಗ್ಯ ಚಿಕಿತ್ಸಾ ಸೌಲಭ್ಯ ಸಿಗಲಿದೆ. ಕುಗ್ರಾಮಗಳನ್ನು ದತ್ತು ಪಡೆದು ಸಮಗ್ರವಾಗಿ ಅಭಿವೃದ್ಧಿಪಡಿಸುವ ಯೋಜನೆಯೂ ಐಟಿಬಿಪಿ ಫೋರ್ಸ್ನದ್ದಾಗಿದೆ.

ಮಾರುಕಟ್ಟೆ ಆರ್ಥಿಕತೆಯಲ್ಲಿ ಧರ್ಮವೆಂಬ ಉದ್ಯಮ

0

ಭ್ರಷ್ಟಾಚಾರ ಮುಕ್ತ ಸಮಾಜಕ್ಕೆ ಧರ್ಮವೊಂದೇ ದಾರಿ; ಧರ್ಮ ಸಂಸ್ಕೃತಿಗಳು ನಮ್ಮನ್ನು ರಕ್ಷಿಸುತ್ತವೆ, ಇವಿಲ್ಲದೆ ದೇಶವನ್ನು ಕಟ್ಟಲು ಸಾಧ್ಯವಿಲ್ಲ – ಎಂದು ಪೇಜಾವರ ಮಠಾಧೀಶರು ಇತ್ತೀಚೆಗೆ ಹೇಳಿದ್ದಾರೆಂದು ಪತ್ರಿಕೆಗಳಲ್ಲಿ ಓದಿದೆ. ಮಠಾಧೀಶರ ಹೇಳಿಕೆ ಸಾರ್ವಕಾಲಿಕ ಸತ್ಯ, ಆದರೆ ಇಂದಿನ ಸಮಾಜದಲ್ಲಿ ಅವಾಸ್ತವಿಕ. ವಿಪರ್ಯಾಸವೆಂದರೆ ಇದು ಹೇಳುವವರಿಗೆ ಕೇಳುವವರಿಗೆಲ್ಲಾ ಗೊತ್ತು, ಆದರೂ ನಾವೆಲ್ಲಾ ಈ “ಹೇಳುವ-ಕೇಳುವ”ದನ್ನು ಬಿಟ್ಟು ಬೇರೇನನ್ನೂ ಮಾಡುತ್ತಿಲ್ಲ ಎನ್ನುವುದು ಇಂದಿನ ಇಡೀ ಸಮಾಜದ ಸ್ಥಿತಿಗೆ ಹಿಡಿದ ಕನ್ನಡಿ.
ಧರ್ಮ ಹೇಗಿರಬೇಕೆಂಬುದಕ್ಕೆ ಧರ್ಮಗ್ರಂಥಗಳಲ್ಲಿ ಹೇಳಿರುವುದೇನು ಎನ್ನುವುದಕ್ಕಿಂತ ಅದು ವಾಸ್ತವದಲ್ಲಿ ಹೇಗಿದೆ ಎಂಬುದು ಜನಸಾಮಾನ್ಯರಿಗೆ ಹೆಚ್ಚು ಪ್ರಸ್ತುತ. ಧರ್ಮ ರಾಜಕೀಯಕ್ಕಷ್ಟೇ ಅಲ್ಲ, ಇಡೀ ಸಮಾಜಕ್ಕೇ ಮಾರ್ಗದರ್ಶನ ಮಾಡಬೇಕೆಂಬುದು ನಮ್ಮೆಲ್ಲರ ತಿಳುವಳಿಕೆ. ಧರ್ಮ ಎನ್ನುವುದಕ್ಕೆ ತಾತ್ವಿಕ ವಿವರಣೆಗಳೇನೇ ಇದ್ದರೂ, ಇಂದಿನ ಮಠ ದೇವಸ್ಥಾಗಳೇ ಧಾರ್ಮಿಕ ಸ್ಥಳಗಳು ಮತ್ತು ಅರ್ಚಕರು, ವೈದಿಕರು, ಜಂಗಮರು, ಮಾಠಾಧೀಶರುಗಳಂತವರೆಲ್ಲಾ ಧರ್ಮದ ಪ್ರತಿನಿಧಿಗಳು ಎಂದು ಜನಸಾಮಾನ್ಯರ ತಿಳುವಳಿಕೆಯಾದರೆ ಅದನ್ನು ಅಲ್ಲಗಳೆಯಲಾಗುವುದಿಲ್ಲ. ಒಂದಾನೊಂದು ಕಾಲದಲ್ಲಿ ಇವೆಲ್ಲಾ ಹಾಗಿದ್ದವು, ಹೀಗಿದ್ದವು ಎಂದು ಯಾರು ಏನೇ ಕಥೆಗಳನ್ನು ಹೇಳಿದರೂ ಇವೆಲ್ಲವುಗಳ ಇಂದಿನ ಸ್ಥಿತಿ ಎಂತಹುದು?
ಇವತ್ತಿನ ಮಾರುಕಟ್ಟೆ ಆರ್ಥಿಕ ವ್ಯವಸ್ಥೆಯಲ್ಲಿ ಎಲ್ಲಾ ರಂಗಗಳೂ ಉದ್ಯಮಗಳಂತೆ ಕಾರ್ಯ ನಿರ್ವಹಿಸಬೇಕಿದೆ. ಅಂದರೆ ಒಂದು ನಿಖರ ಯೋಜನೆಯಂತೆ ಹಣ ಹೂಡಬೇಕು; ಏನೆಲ್ಲಾ ತಂತ್ರಗಳ ಮೂಲಕ ಗ್ರಾಹಕರನ್ನು ಮರುಳುಗೊಳಿಸಿ, ತಯಾರಿಸಿದ ವಸ್ತು ಅಥವಾ ಸೇವೆಯನ್ನು ಲಾಭದಾಯಕ ಬೆಲೆಗೆ ಮಾರಬೇಕು; ಯಾವುದೇ ಸರ್ಕಾರೀ ಅಥವಾ ಇನ್ನಿತರ ಸಹಾಯವಿಲ್ಲದೆ ತನ್ನನ್ನು ತಾನು ನಿರ್ವಹಿಸಿಕೊಳ್ಳಬೇಕು – ಇದು ಮಾರುಕಟ್ಟೆ ಆರ್ಥಿಕತೆಯ ಮೂಲಮಂತ್ರ. ಈ ಮಂತ್ರವನ್ನು ವ್ಯಾಪಾರ ವ್ಯವಹಾರಕ್ಕಷ್ಟೇ ಅನ್ವಯಿಸುದ ಕಾಲ ಎಂದೋ ಮುಗಿದಿದೆ. ಇವತ್ತು ಕೃಷಿ, ಲಲಿತ ಕಲೆಗಳೂ ಕೂಡ ಇದೇ ತತ್ವವನ್ನನುಸರಿಸಿದರೆ ಮಾತ್ರ ಜೀವಂತವಾಗಿರಬಲ್ಲದು. ಕುಚೋದ್ಯವೆಂದರೆ ಧರ್ಮವೂ ಕೂಡ ಈ ಮಂತ್ರವನ್ನು ಪಠಿಸಿದರೆ ಮಾತ್ರ ಅಸ್ತಿತ್ವವನ್ನುಳಿಸಿಕೊಳ್ಳಬಹುದಾದ ಸ್ಥಿತಿಯನ್ನು ನಾವು ತಲುಪಿದ್ದೇವೆ!
ರಾಜಮಹಾರಾಜರುಗಳ ಕಾಲದಲ್ಲಿ ಮಠಮಾನ್ಯಗಳು ರಾಜಾಶ್ರಯದಲ್ಲಿದ್ದವು ಎಂದು ಹೇಳಲಾಗುತ್ತದೆ. ಆದರೆ ಇಂದಿನ ಪ್ರಜಾಪ್ರಭುತ್ವದಲ್ಲಿ ಪ್ರಾಧಾನ್ಯತೆಗಳು ಬದಲಾಗಿವೆ. ಸರ್ಕಾರಗಳು ಮುಜರಾಯಿ ದೇವಸ್ಥಾನಗಳಿಗೆ ನೆಪಮಾತ್ರದ ಸಹಾಯ ನೀಡಬಲ್ಲುದಾಗಿದೆ. ಉಳಿದ ಧಾರ್ಮಿಕ ಕೇಂದ್ರಗಳೆಲ್ಲಾ ಹಣಕಾಸಿನ ವಿಚಾರದಲ್ಲಿ ಸ್ವಾವಲಂಬಿಗಳಾಗಬೇಕಾಗಿದೆ. ಇದರ ನೇರ ಪರಿಣಾಮವೆಂದರೆ ಧಾರ್ಮಿಕ ಕ್ಷೇತ್ರಗಳ ನಡುವೆ ಭಕ್ತರನ್ನು ಸೆಳೆಯಲು ಸ್ಪರ್ಧೆ ಏರ್ಪಟ್ಟಿದೆ. ಹಾಗಾಗಿ ಅವೂ ಕೂಡ ಮಾರುಕಟ್ಟೆ ವ್ಯವಸ್ಥೆಯ ತಂತ್ರಗಳನ್ನೆಲ್ಲಾ ಮೈಗೂಡಿಸಿಕೊಂಡಿವೆ. ಬರೀ “ಸ್ಥಾವರಗಳು” ನಿರ್ಮಾಣವಾದರೆ ಸಾಲದು, ಅವು ಭವ್ಯವಾಗಿರಬೇಕು, ಆಕರ್ಷಕವಾಗಿರಬೇಕು; ಅದನ್ನು ನಿಭಾಯಿಸುವವರು ಜನರನ್ನು ಸೆಳೆಯಬಲ್ಲವರಾಗಿರಬೇಕು; ಮಾಟ ಮಂತ್ರ, ಪವಾಡಗಳನ್ನು ಮಾಡುವವರಿಗೆ ಇನ್ನೂ ಹೆಚ್ಚಿನ ಬೇಡಿಕೆ; ಇಲ್ಲಿನ ಪೂಜೆ ಉತ್ಸವಗಳು ಅದ್ದೂರಿಯಾಗಿರಬೇಕು ಮತ್ತು ಅವುಗಳಿಗೆ ಎಲ್ಲಾ ಮಾಧ್ಯಮಗಳಲ್ಲಿ ಪ್ರಚಾರ ಸಿಕ್ಕಬೇಕು [ಟೀವಿಯಲ್ಲಿ ಪ್ರಸಾರವಾಗುವಾಗ ಮಧ್ಯೆ ಮಧ್ಯೆ ಮದ್ಯ, ಕಾಂಡೋಮ್, ಗರ್ಭನಿರೋದಕಗಳ ಜಾಹಿರಾತಿದ್ದರೆ ಇನ್ನೂ ಜನಾಕರ್ಷಕ!] ಇಂದಿನ ಧರ್ಮಕ್ಕೂ ಗ್ರಾಹಕ ವಸ್ತುಗಳಿಗೆ ವ್ಯತ್ಯಾಸ ಎಲ್ಲಿದೆ ಹೇಳಿ? “ಸ್ಥಾವರಕ್ಕಳಿವುಂಟು ಜಂಗಮಕ್ಕಿಲ್ಲ” ಎಂದು ಬಸವಣ್ಣ ಸಾರಿದ್ದು ಕಲಿಯುಗದಲ್ಲಿರಲಿಕ್ಕಿಲ್ಲ ಬಿಡಿ, ಈಗೆಲ್ಲಿ ಉಳಿದಿದೆ ಜಂಗಮ; ಉಳಿದಿರುವುದು ಸ್ಥಾವರಗಳು ಮಾತ್ರ.
ಇನ್ನು ಇವತ್ತಿನ ಭಕ್ತರ ಪುರಾಣವನ್ನು ಸ್ವಲ್ಪ ನೋಡೋಣ. ಹಣದ ಮೂಲ ಏನೇ ಇರಲಿ, ಹೆಚ್ಚು ದಾನ ಮಾಡುವವ ಮಹಾಭಕ್ತ. ನಮ್ಮ ಭಕ್ತಿ ನಾವು ದೇವರಿಗಾಗಿ ವ್ಯಯಿಸುವ ಹಣದ ನೇರ ಅನುಪಾತದಲ್ಲಿರುತ್ತದೆ ಎನ್ನುವುದು ಎಲ್ಲ ದೇವರುಗಳ ಅಲಿಖಿತ ಆದೇಶ ಎನ್ನುವಂತೆ ಧರ್ಮಾಧಿಕಾರಿಗಳೆಲ್ಲಾ ನಡೆದುಕೊಳ್ಳುತ್ತಾರೆ. ಹಾಗಾಗಿ ಕಪ್ಪುಹಣಾಧಿಪತಿಗಳು ಇಂದಿನ ಮಹಾಭಕ್ತರು. ಅವರನ್ನು ರಕ್ಷಿಸುವುದು ದೇವರ, ಮಾಠಾಧಿಪತಿಗಳ ಹೊಣೆ. ಅಂದಮೇಲೆ ಯಡಿಯೂರಪ್ಪನವರಿಗಾಗಿ ಲಿಂಗಾಯಿತ ಮಾಠಾಧಿಪತಿಗಳು, ಅಥವಾ ಇನ್ನಾರೋ ವಿಪ್ರೋತ್ತಮನಿಗಾಗಿ ಉಡುಪಿಯ ಅಷ್ಟಮಠಗಳೂ – ಹೀಗೆ ಎಲ್ಲರೂ ಅವರವರ ಜಾತಿಯವರನ್ನು ಅಥವಾ ಅವರವರ “ಭಕ್ತ” ಮಹಾಶಯರನ್ನು ರಕ್ಷಿಸಲು ಕಂಕಣ ಬದ್ಧರಾದರೆ, ಅದು ಇವತ್ತಿನ ಮಾರುಕಟ್ಟೆ ಆರ್ಥಿಕತೆಯ ಸೂತ್ರಗಳಿಗನುವಾಗಿಯೇ ಇರುತ್ತದೆಯಲ್ಲವೇ? ಇವರೆಲ್ಲರ ನಡುವೆ “ತನುಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು, ಮನಕರಗದವರಲ್ಲಿ ಗಂಧಾಕ್ಷತೆಯನೊಲ್ಲಯ್ಯ ನೀನು” ಎಂದು ಹಾಡಿದ ಅಕ್ಕಮಾಹಾದೇವಿಯಾಗಲಿ, ಇಂತಹದೇ ತತ್ವವನ್ನು ಬೋೀಧಿಸಿದ ಮತ್ತು ಅದರಂತೆ ಬಾಳಿದ ದಾಸಶ್ರೇಷ್ಠರಾಗಲಿ ಯಾರಿಗೆ ನೆನಪಾಗಬೇಕು?
ಇವತ್ತಿನ ಧರ್ಮಾಧಿಕಾರಿಗಳು ಅಂದರೆ ಮಠಾಧೀಶ್ವರರು ಮತ್ತಿತರ ಧರ್ಮದ ಪ್ರತಿನಿಧಿಗಳು ನಡೆಸುತ್ತಿರುವ ಜೀವನ ಶೈಲಿಯಾದರೂ ಎಂತಹುದು? ಇವರಲ್ಲಿ ಹೆಚ್ಚಿನವರು ಧರಿಸುವ ಬಟ್ಟೆಯಲ್ಲಿ ಮಾತ್ರ ನಮ್ಮಂತ ಹುಲುಮಾನವರಿಗಿಂತ ಭಿನ್ನ. ಇವರ ನಡೆ ನುಡಿ, ಜೀವನ ಶೈಲಿಯಿಂದ ಇವರಾರು ಸಮಾಜಕ್ಕೆ ಮಾರ್ಗದರ್ಶಕರಾಗಬಲ್ಲವರು ಎಂಬ ವಿಶ್ವಾಸವನ್ನು ನಮ್ಮಲ್ಲಿ ಹುಟ್ಟಿಸುವುದು ಅಸಾಧ್ಯ. ಮಾರ್ಗದರ್ಶನ ಮಾಡುವುದಿರಲಿ ಸಮಾಜ ಕಂಟಕರಾಗದಿದ್ದರೇ ಅದೇ ಮಹದೋಪಕಾರ ಎನ್ನುವ ಪರಿಸ್ಥಿತಿ ಸೃಷ್ಟಿಯಾಗಿದೆ. ಇವರ ಧನದಾಹ, ವೃತ್ತಿ ವೈಷಮ್ಯ, ರಾಜಕೀಯ ಇವುಗಳೆಲ್ಲಾ – ವ್ಯಾಪಾರಿ ಜಗತ್ತಿನಲ್ಲಿ ನಡೆಯುವ ಭೂಗತ ವ್ಯವಹಾರಗಳಿಗಿಂತ ಕಡಿಮೆಯೇನೂ ಇಲ್ಲ. ಸಾಕಷ್ಟು ಹೆಸರಾಂತ ಮಠಗಳಲ್ಲಿ ಅವರವರ ಜಾತಿಯ ರಾಜಕಾರಣಿಗಳು ಕಪ್ಪುಹಣವನ್ನು ಸುರಕ್ಷಿತವಾಗಿಟ್ಟಿದ್ದಾರೆಂಬ ಮಾತುಗಳು ಕರ್ನಾಟಕದಲ್ಲಿ ಜನಜನಿತವಾಗಿದೆ. ಇವರು ನಡೆಸುತ್ತಿರುವ ವಿದ್ಯಾಸಂಸ್ಥೆಗಳು ಶುದ್ಧ ವ್ಯಾಪಾರವಲ್ಲದೇ ಮತ್ತೇನು?
ನಾನು ಪೇಜಾವರ ಮಾಠಾಧೀಷರನ್ನು ಪ್ರಾರಂಭದಲ್ಲಿ ಉಲ್ಲೇಖಿಸಿದ್ದು ಸಾಂದರ್ಭಿಕ ಮಾತ್ರ; ಹಾಗೇ ಹಿಂದೂ ಧರ್ಮವನ್ನು ಉದಾಹರಿಸಿರುವುದೂ ಕೂಡ. ವಾಸ್ತವದಲ್ಲಿ ಕ್ರಿಶ್ಚಿಯನ್, ಇಸ್ಲಾಂ ಮತ್ತು ಜಗತ್ತಿನ ಎಲ್ಲಾ ಧರ್ಮಗಳೂ ಮತ್ತು ಆಯಾ ಧರ್ಮದ ಪ್ರತಿನಿಧಿಗಳೆನ್ನಿಸಿಕೊಂಡವರೂ ಗುಣಾತ್ಮಕವಾಗಿ ಭಿನ್ನವಾಗೇನಿಲ್ಲ. ಧರ್ಮ ದೇವರುಗಳೆಲ್ಲಾ ಮನುಷ್ಯನ ವೈಯುಕ್ತಿಕ ಆಂತರಿಕ ಅವಶ್ಯಕತೆಗಳು. ಅದು ಮನಸ್ಸು ಮತ್ತು ಮನೆಗಳಿಂದ ಹೊರ ಬಂದು ಬೀದಿಗಿಳಿದರೆ ಉಳಿಯುವುದು ವ್ಯಾಪಾರ ಮತ್ತು ರಾಜಕೀಯ ಮಾತ್ರ. ಎಲ್ಲೋ ಸಾವಿರಕ್ಕೊಬ್ಬರು ಧರ್ಮವನ್ನು ಅದರ ಮೂಲ ಅರ್ಥದಲ್ಲಿ ಪಾಲಿಸುವವರಿದ್ದರೂ, ಬಹುಸಂಖ್ಯಾತರು ರೂಪಿಸಿರುವ ಧರ್ಮದ ಚಿತ್ರವನ್ನು ಬದಲಾಯಿಸಲಾರದಷ್ಟು ನಗಣ್ಯರಾಗಿದ್ದಾರೆ.
ಧರ್ಮದ ಇವತ್ತಿನ ಸ್ಥಿತಿಯ ಬಗೆಗೆ ತಪ್ಪು ಸರಿಗಳ ನ್ಯಾಯ ನಿರ್ಣಯ ಮಾಡುವುದು ನನ್ನ ಉದ್ದೇಶವಲ್ಲ, ಇವತ್ತಿನ ಧರ್ಮದ ನಿಜ ರೂಪವನ್ನು ತಿಳಿಯುವುದು ಮಾತ್ರ! ರಾಜಕಾರಣದಲ್ಲಿ ಮತ್ತು ವ್ಯಾಪಾರ ವ್ಯವಹಾರಗಳಲ್ಲಿ “ಸ್ವಲ್ಪ ಮಟ್ಟಿನ” ವಂಚನೆ/ಭ್ರಷ್ಟಾಚಾರ ಉಚಿತ ಮತ್ತು ಸಹ್ಯ [ಮತ್ತು ಅಗತ್ಯ ಕೂಡ!] ಎನ್ನುವ ಸ್ಥಿತಿಯನ್ನು ನಾವು ತಲುಪಿದ್ದೇವೆ. ಧರ್ಮವೂ ಒಂದು ವ್ಯಾಪಾರ/ವೃತ್ತಿಯಾಗಿರುವುದರಿಂದ ಅದೇ ಮಾನದಂಡಗಳು ಅನ್ವಯಿಸುತ್ತವೆ ಎನ್ನುವುದಾದರೆ ನನ್ನದೇನು ತಕರಾರಿಲ್ಲ. ಅದನ್ನು ಸಾರ್ವಜನಿಕವಾಗಿ ಒಪ್ಪಿಕೊಂಡುಬಿಟ್ಟರಾಯಿತು.
ನಾವು ನೆನಪುಟ್ಟುಕೊಳ್ಳಲೇ ಬೇಕಾದದ್ದು “ಸ್ವಲ್ಪ ಮಟ್ಟಿನ” ಅಂದರೆ ಎಷ್ಟು ಎನ್ನುವುದು ಮಾತ್ರ ಅವರವರ ನಿರ್ಣಯಕ್ಕೆ ಬಿಟ್ಟಿದ್ದು!
ನಡಹಳ್ಳಿ ವಸಂತ್

ಇಹಲೋಕವನ್ನಗಲಿದ ಡಾ. ಎಂ. ಶ್ರೀಧರ್

0

ಮಾಜಿ ಸಚಿವ ವಿ.ಮುನಿಯಪ್ಪ ಅವರ ಜೇಷ್ಠ ಪುತ್ರ ಡಾ. ಎಂ.ಶ್ರೀಧರ್ (೪೨) ನಿಧನ ಹೊಂದಿದ್ದಾರೆ. ಕಳೆದ ಒಂದು ವಾರದಿಂದಲೂ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಬೆಂಗಳೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದ ಅವರು ಸೋಮವಾರ ಸಂಜೆ ಮೃತಪಟ್ಟಿದ್ದಾರೆ.
ಮೃತರು ಮಾಜಿ ಸಚಿವರೂ ಆದ ತಂದೆ ವಿ.ಮುನಿಯಪ್ಪ, ತಾಯಿ ರತ್ನಮ್ಮ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರೂ ಆದ ತಮ್ಮ ಎಂ.ಶಶಿಧರ್, ಪತ್ನಿ ಹಾಗೂ ಪುತ್ರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಡಾ. ಎಂ.ಶ್ರೀಧರ್ ಅವರು ಬೆಂಗಳೂರಿನ ಎಂ.ಎಸ್.ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯಲ್ಲಿ ಪ್ರೊಪೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರಲ್ಲದೆ ಶ್ರೀವೆಂಕಟೇಶ್ವರ ಇಂಜಿನಿಯರಿಂಗ್ ಕಾಲೇಜಿನ ಟ್ರಸ್ಟ್ನ ನಿರ್ದೆಶಕರೂ ಆಗಿದ್ದರು.
ಅವರು ಹುಟ್ಟೂರಾದ ಶಿಡ್ಲಘಟ್ಟ ತಾಲೂಕು ಹಂಡಿಗನಾಳದ ಸ್ವಗೃಹದಲ್ಲಿ ಮೃತರ ಅಂತಿಮ ದರ್ಶನಕ್ಕೆ ಮಂಗಳವಾರ ವ್ಯವಸ್ಥೆ ಮಾಡಲಾಗುವುದೆಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಕುಂದಲಗುರ್ಕಿ ಗ್ರಾಮ ಪಂಚಾಯತಿಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ

0

ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗುರ್ಕಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಸಿ.ಪಿ.ಐ.ಎಂ. ಬೆಂಬಲಿತ ಕಲ್ಪನಾ ಮತ್ತು ಉಪಾಧ್ಯಕ್ಷರಾಗಿ ಜೆ.ಡಿ.ಎಸ್ ಬೆಂಬಲಿತ ಎಂ.ಆಂಜಿನಪ್ಪ ಆಯ್ಕೆಯಾದರು. ಸದಸ್ಯರು ಹಾಜರಿದ್ದರು.

‘ಮೇಕ್ ಇನ್ ಇಂಡಿಯಾ’ ಎನ್ನುತ್ತಾ, ಚೀನಾದಿಂದ ರೇಷ್ಮೆಯನ್ನು ಆಮದು ಮಾಡುತ್ತಿದ್ದಾರೆ

0

ಫೆಬ್ರುವರಿ 2011 ರ ಕೇಂದ್ರ ಬಜೆಟ್ನಲ್ಲಿ ರೂಪಿಸಿದ ತೆರಿಗೆ ಖರೀದಿ ನೀತಿಯಿಂದಾಗಿ ಒಂದು ಕೆಜಿಗೆ 3,600 ರೂಗಳಿಗೆ ಮಾರಾಟವಾಗುತ್ತಿದ್ದ ಕಚ್ಚಾ ರೇಷ್ಮೆ ನೂಲಿನ ಬೆಲೆ ಕೇವಲ ಮೂರು ದಿನಗಳ ಅವಧಿಯಲ್ಲಿ 2,000 ದಿಂದ 2,500 ರೂಗಳಿಗೆ ಕುಸಿಯಿತು ಎಂದು ಸಿಲ್ಕ್ ಸೊಸೈಟಿ ಮಾಜಿ ನಿರ್ದೇಶಕ ಎ.ಆರ್.ಅಬ್ದುಲ್ ಅಜೀಜ್ ತಿಳಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ದೇಶದ 14 ರಿಂದ 15 ಮೆಟ್ರಿಕ್ ಟನ್ ಕಚ್ಚಾ ರೇಷ್ಮೆ ಉತ್ಪಾದನೆಯಲ್ಲಿ ಅರ್ಧದಷ್ಟು ಉತ್ತಮ ಗುಣಮಟ್ಟದ ರೇಷ್ಮೆ ರಾಜ್ಯದಿಂದಲೇ ತಯಾರಾಗುತ್ತಿದೆ. ರಾಜ್ಯದಲ್ಲಿ ಸುಮಾರು 10,000 ಇಲಾಖಾ ಪರವಾನಗಿ ಹೊಂದಿರುವ ರೇಷ್ಮೆ ನೂಲು ಬಿಚ್ಚಾಣಿಕೆದಾರರು, ಒಂದೂವರೆ ಲಕ್ಷಕ್ಕೂ ಅಧಿಕ ಅಸಂಘಟಿತ ಕಾರ್ಮಿಕರು ಈ ಉದ್ದಿಮೆಯನ್ನು ಅವಲಂಭಿಸಿದ್ದಾರೆ. ಶೇಕಡಾ 90 ರಷ್ಟು ರೇಷ್ಮೆ ನೂಲು ಉತ್ಪಾದಕರು ರೇಷ್ಮೆ ವ್ಯಾಪಾರದಲ್ಲಿ ಆಗುತ್ತಿರುವ ದರದ ಏರುಪೇರಿನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೇಷ್ಮೆ ವ್ಯಾಪಾರದಲ್ಲಿ ಸ್ಥಿರತೆ ಇಲ್ಲದಿರುವುದರಿಂದ ನಷ್ಟಕ್ಕೆ ಒಳಗಾಗಿ ದುಡಿಮೆ ಬಂಡವಾಳವನ್ನು ಕಳೆದುಕೊಳ್ಳುತ್ತಿದ್ದಾರೆ. ಅನೇಕರು ಕಸುಬನ್ನು ಬಿಡುವ ಹಂತಕ್ಕೆ ಬಂದಿದ್ದಾರೆ ಎಂದು ಹೇಳಿದರು.
ಸ್ಥಳೀಯ ನೂಲು ಬಿಚ್ಚಾಣಿಕೆದಾರರನ್ನು ಪ್ರೋತ್ಸಾಹಿಸದೆ, ಉದ್ಯಮದ ಅಭಿವೃದ್ಧಿಯನ್ನು ಗಂಭೀರವಾಗಿ ಪರಿಗಣಿಸದೆ, ಸ್ಥಳೀಯ ರೈತರಿಗೆ ನೆರವಾಗದೇ, ‘ಮೇಕ್ ಇನ್ ಇಂಡಿಯಾ’ ಎನ್ನುತ್ತಾ, ಚೀನಾದಿಂದ ರೇಷ್ಮೆಯನ್ನು ಆಮದು ಮಾಡಿಕೊಳ್ಳುತ್ತಿರುವುದು ವಿಷಾಧನೀಯ.
ದಿನವೊಂದಕ್ಕೆ ಸುಮಾರು 8 ಕೋಟಿ ರೂಗಳಷ್ಟು ರೇಷ್ಮೆ ಬೆಳೆಗಾರರಿಗೆ ರೇಷ್ಮೆ ಗೂಡು ಖರೀದಿಗಾಗಿ ರೀಲರುಗಳು ಪಾವತಿಸಬೇಕು. ವರ್ಷಕ್ಕೆ ಸುಮಾರು 10,000 ಕೋಟಿ ರೂಗಳಷ್ಟು ಹಣ ರೇಷ್ಮೆ ರೀಲಿಂಗ್ ಉದ್ದಿಮೆಯಿಂದ ವಹಿವಾಟು ನಡೆಯುತ್ತಿದೆ. ಕಚ್ಛಾ ರೇಷ್ಮೆ ಬೆಲೆ ಕುಸಿತದಿಂದಾಗಿ ಕಳೆದ ಮಾಹೆಯಲ್ಲಿ ರೀಲರುಗಳು ಸುಮಾರು 40 ಕೋಟಿ ರೂಗಳಷ್ಟು ನಷ್ಟ ಅನುಭವಿಸಿದ್ದಾರೆ.
1979 ರಲ್ಲಿ ರೀಲರುಗಳ ರಕ್ಷಣೆಗಾಗಿ, ಮಾರುಕಟ್ಟೆ ಬೆಲೆ ಏರುಪೇರನ್ನು ಸರಿದೂಗಿಸಲು ಕೆ.ಎಸ್.ಎಂ.ಬಿ ಸಂಸ್ಥೆಯು ಅಸ್ಥಿತ್ವಕ್ಕೆ ಬಂದಿತಾದರೂ, ಅವರು ರೇಷ್ಮೆ ನೂಲನ್ನು ಸರಿಯಾಗಿ ಖರೀದಿಸುತ್ತಿಲ್ಲ. ಕೆ.ಎಸ್.ಎಂ.ಬಿ ಅವರು ಅಲ್ಪ ಪ್ರಮಾಣದ ಬಡ್ಡಿ ಆಧಾರದ ಮೇಲೆ ರೇಷ್ಮೆ ನೂಲು ಅಡಮಾನ ಸೌಲಭ್ಯ ಒದಗಿಸಲಿ.
ರೈತರಿಗೆ ಪಹಣಿ ಆಧಾರದ ಮೇಲೆ ಚಿನ್ನದ ಸಾಲ ಸೌಲಭ್ಯ ನೀಡುವಂತೆ ಲೈಸೆನ್ಸ್ ಹೊಂದಿರುವ ರೀಲರುಗಳಿಗೆ ಚಿನ್ನದ ಸಾಲ ಸೌಲಭ್ಯ ನೀಡಲಿ.
ರೀಲರುಗಳಿಗೆ ರಾಷ್ಟ್ರೀಕೃತ ಬ್ಯಾಂಕುಗಳಿಂದ ರಿಯಾಯಿತಿ ಧರದ ಬಡ್ಡಿಯಲ್ಲಿ ದುಡಿಮೆ ಬಂಡವಾಳ ಮಂಜೂರು ಮಾಡಲಿ. ಕಚ್ಛಾ ರೇಷ್ಮೆ ಹಾಗೂ ಸಿಲ್ಕ್ ವೇಸ್ಟ್ ಮೌಲ್ಯಗಳನ್ನು ಗುಣಮಟ್ಟದ ಆಧಾರದ ಮೇಲೆ ನಿಗದಿಪಡಿಸಲಿ. ಇತರ ಉದ್ದಿಮೆಗಳ ಅಸಂಘಟಿತ ಕೂಲಿ ಕಾರ್ಮಿಕರಿಗೆ ನೀಡುತ್ತಿರುವ ವಿವಿಧ ಸೌಲಭ್ಯಗಳನ್ನು ರೇಷ್ಮೆ ಉತ್ಪಾದನಾ ಕಾರ್ಮಿಕ ವರ್ಗದವರಿಗೂ ವಿಸ್ತರಿಸಬೇಕು. ಕಾಟೇಜ್ ರೀಲರುಗಳಿಗೆ ನೀಡುವ ಬಡ್ಡಿ ರಿಯಾಯಿತಿ ಸೌಲಭ್ಯವನ್ನು ಫಿಲೇಚರ್ ನೂಲು ಬಿಚ್ಚಾಣಿಕೆದಾರರಿಗೂ ವಿಸ್ತರಿಸಲಿ. ರೈತರಿಗೆ ನೀಡುತ್ತಿರುವ ರೈತ ಸಂಜೀವಿನಿ ಕಾರ್ಡ್ ಅನುಕೂಲವನ್ನು ನೂಲು ಬಿಚ್ಚಾಣಿಕೆದಾರರಿಗೂ ನೀಡಲಿ.
ರೇಷ್ಮೆ ಉದ್ದಿಮೆಯಲ್ಲಿನ ಕಾರ್ಮಿಕರಿಗೆ ಮತ್ತು ರೀಲರುಗಳಿಗೆ ಆಸ್ತಮಾ, ಕ್ಷಯ, ಶ್ವಾಸಕೋಶಗಳ ಸಂಬಂಧಿ ಖಾಯಿಲೆ, ಚರ್ಮ ವ್ಯಾಧಿಗಳು ಹೆಚ್ಚಾಗಿ ಉಂಟಾಗುವುದರಿಂದ ಇ.ಎಸ್.ಐ ಆಸ್ಪತ್ರೆಯೊಂದನ್ನು ನಗರದಲ್ಲಿ ಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ ಸ್ಥಾಪಿಸಬೇಕು. ರಾಜ್ಯದ ರೇಷ್ಮೆ ನೂಲನ್ನು ವಿದೇಶಗಳಿಗೆ ರಫ್ತು ಮಾಡುವ ಬಗ್ಗೆ ಕ್ರಮ ಕೈಗೊಂಡು ಮಾರುಕಟ್ಟೆಯನ್ನು ವಿಸ್ತರಿಸುವ ಮೂಲಕ ಬೆಲೆ ಇಳಿಕೆಯನ್ನು ತಡೆಗಟ್ಟಬಹುದಾಗಿದೆ ಎಂದು ತಮ್ಮ ಬೇಡಿಕೆಗಳನ್ನು ವಿವರಿಸಿದರು.
ರೀಲರುಗಳಾದ ಸಿಕಂದರ್, ರೆಹಮಾನ್, ಮಹಮ್ಮದ್ ಅನ್ಸರ್, ಅನಂತಪದ್ಮನಾಭ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಬಿಜಿಎಸ್ ಶಾಲೆಯಲ್ಲಿ ಕ್ರೀಡಾ ದಿನ ಸಮಾರಂಭ

0

ಪ್ರತಿಯೊಬ್ಬ ವಿದ್ಯಾರ್ಥಿಯೂ ಜೀವನದಲ್ಲಿ ಉತ್ತಮ ಗುರಿಯನ್ನಿಟ್ಟುಕೊಳ್ಳುವುದರೊಂದಿಗೆ ದೈಹಿಕ ಹಾಗು ಮಾನಸಿಕ ಸಧೃಡತೆ ಕಾಪಾಡಿಕೊಳ್ಳಬೇಕು ಎಂದು ಬಿಜಿಎಸ್ ಶಾಲೆಯ ಪ್ರಾಂಶುಪಾಲ ಆರ್ ಮಹದೇವ್ ಹೇಳಿದರು.
ನಗರದ ಹೊರವಲಯದ ಹನುಮಂತಪುರ ಗೇಟ್ ಬಳಿಯಿರುವ ಬಿಜಿಎಸ್ ಸಾಲೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಕ್ರೀಡಾ ದಿನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಧುನಿಕತೆ ಬೆಳೆದಂತೆಲ್ಲಾ ಯುವಕರು ಬೇರೆ ಬೇರೆ ಕ್ಷೇತ್ರಗಳ ವ್ಯಾಮೋಹಕ್ಕೆ ಒಳಗಾಗುತ್ತಿದ್ದು ಈಚೆಗೆ ಕ್ರೀಡಾಕ್ಷೇತ್ರದಲ್ಲಿ ಗುರುತಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಪ್ರಾಥಮಿಕ ಶಿಕ್ಷಣ ಹಂತದಿಂದಲೇ ಓದಿನ ಜೊತೆಗೆ ಕ್ರೀಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.
ತಾಲ್ಲೂಕು ದೈಹಿಕ ಪರಿವೀಕ್ಷಕ ಶ್ರೀನಿವಾಸ್ ಮಾತನಾಡಿ ಪೋಷಕರು ಸಹ ತಮ್ಮ ಮಕ್ಕಳನ್ನು ದಿನದ ಕನಿಷ್ಟ ಅರ್ಧ ಗಂಟೆಯಾದರೂ ಆಟವಾಡಲು ಬಿಡಬೇಕು ಆಗ ಮಾತ್ರ ಚಿಕ್ಕ ಮಕ್ಕಳ ಆರೋಗ್ಯ ಹಾಗು ಶರೀರ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.
ಕ್ರೀಡಾ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಕ್ರೀಡೆಗಳಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಸೇರಿದಂತೆ ಸಿಬ್ಬಂದಿ ಉತ್ಸಾಹದಿಂದ ಭಾಗವಹಿಸಿದ್ದರು.

ಬಾಹ್ಯಾಕಾಶ ನಿಲ್ದಾಣದಲ್ಲಿ ಏನು ನಡೆಯುತ್ತಿದೆ – ಭಾಗ 2

0

ತಿಂಡಿ/ಊಟ
ತಂತ್ರಜ್ಞರಿಗೆ ದಿನಾಲು ಮೂರು ಊಟಗಳು, ಊಟ, ತಿಂಡಿಗಳಲ್ಲಿ ದ್ರವಾಹಾರವನ್ನು ಸಾಮಾನ್ಯವಾಗಿ ಪ್ಲಾಸ್ಟಿಕ್ ಪ್ಯಾಕೆಟ್ಟುಗಳಿಂದ ಸ್ಟ್ರಾ ಬಳಸಿ ಕುಡಿಯಲಾಗುತ್ತದೆ. ಘನ ಆಹಾರವಾದರೆ ಅದು ಅತ್ತಿತ್ತ ಹಾರಿ ಹೋಗದಂತೆ ಹುಷಾರಾಗಿರಬೇಕಾಗುತ್ತದೆ. ಆಯಸ್ಕಾಂತಗಳನ್ನು ಬಳಸಿ ತಟ್ಟೆ, ಪಾತ್ರೆಗಳನ್ನು ಮೇಜಿಗೆ ಅಂಟಿರುವಂತೆ ಮಾಡಲಾಗುತ್ತದೆ. ಊಟದ ಟ್ರೇಯಲ್ಲಿ ಕ್ಯಾಲೊರಿ ಹಾಗೂ ಪೌಷ್ಟಿಕಾಂಶಗಳನ್ನು ಲೆಕ್ಕ ಹಾಕಿ ಪ್ಯಾಕ್ ಮಾಡಿಟ್ಟ ಹಣ್ಣು, ಕಾಳು, ಬೆಣ್ಣೆ, ಬೀಫ್, ಚಿಕನ್ ಇತ್ಯಾದಿ ತಿನಿಸುಗಳಿರುತ್ತವೆ. ಅವೆಲ್ಲವೂ ಟ್ರೇನಲ್ಲಿ ಅಂಟಿಕೊಂಡಿರುತ್ತವೆ. ಚಮಚ, ಫೋರ್ಕ್ ಬಳಸಿ ಬೇಕಾದುದನ್ನು ತಿನ್ನಬಹುದು. ದಿನಗಳೆದಂತೆ ಕಿರುಗುರುತ್ವ ನಾಲಿಗೆಯ ಸ್ವೇದಗ್ರಂಥಿಗಳನ್ನು ಹೊಸಕಿ ಹಾಕುತ್ತದೆ. ಖಾರದ್ದೇನಾದರೂ ತಿನ್ನಬೇಕೆಂಬ ಬಯಕೆಯಾಗುತ್ತದೆ.
ಈಗ ಕೆಲಸದ ಸಮಯ. ಹಾಗೆ ನೋಡಿದರೆ, ಬಾಹ್ಯಾಕಾಶ ನಿಲ್ದಾಣದಲ್ಲಿ ಮನುಷ್ಯನ ಪ್ರತಿಯೊಂದು ಚಟುವಟಿಕೆಯೂ ಪ್ರಯೋಗಕ್ಕೆ ಒಳಗಾಗುತ್ತಲೇ ಇರುತ್ತದೆ. ಅಂದರೆ ಅಲ್ಲಿ ತಂತ್ರಜ್ಞರೇ ಪ್ರಯೋಗಪಶುಗಳು! ಏಕೆಂದರೆ ಮಾನವ ದೇಹ ಆ ಪ್ರತಿಕೂಲ ಪರಿಸರದಲ್ಲಿ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದೇ ಅಲ್ಲಿ ಪ್ರಮುಖ ಪ್ರಯೋಗದ ವಿಷಯ. ಆಗಾಗ ರಕ್ತ ಮತ್ತು ಮೂತ್ರದ ಸ್ಯಾಂಪಲ್ ತೆಗೆದು ತಂಪು ಪೆಟ್ಟಿಗೆಯಲ್ಲಿ -95 ಡಿಗ್ರಿಯಲ್ಲಿಟ್ಟು ಭೂಮಿಗೆ ರವಾನಿಸಲಾಗುತ್ತದೆ. ಆಗಾಗ ಅಲ್ಟ್ರಾ ಸೌಂಡ್, ಇಸಿಜಿ, ಬಿಪಿ ಮುಂತಾದ ಪರೀಕ್ಷೆಗಳನ್ನೂ ಅಲ್ಲಿ ನಡೆಸಲಾಗುತ್ತದೆ. ತಂತ್ರಜ್ಞರ ದೇಹದ ಕಶ್ಮಲಗಳಾದ ಜೀರ್ಣಕ್ರಿಯೆಯ ಫಲವಾದ ಮಿಥೇನ್ ಹಾಗೂ ಬೆವರಿನ ಮೂಲಕ ಹೊರಬೀಳುವ ಅಮ್ಮೋನಿಯಾ ಇವನ್ನು ಹೀರಿಕೊಳ್ಳಲು ಆಕ್ಟಿವೇಟೆಡ್ ಕಲ್ಲಿದ್ದಲು ಇರುತ್ತದೆ. ಸೆನ್ಸರ್ ಯಂತ್ರಗಳ ಮೂಲಕ ಆಗಾಗ ದೇಹದ ವಿಕಿರಣವನ್ನಳೆಯಲಾಗುತ್ತದೆ. (ಅಂತರಿಕ್ಷದಲ್ಲಿ ಬಾಹ್ಯವಿಕಿರಣಗಳು ಎಲ್ಲಾ ಕಡೆ ಪಸರಿಸುತ್ತಿರುತ್ತವೆ. ಭೂಮಿಯಲ್ಲಿ ಒಂದು ವರ್ಷದ ಅವಧಿಯಲ್ಲಿ ಮೈಸೇರಬಹುದಾದಷ್ಟು ವಿಕಿರಣವನ್ನು ಬಾಹ್ಯಾಕಾಶ ನಿಲ್ದಾಣದಲ್ಲಿ ತಂತ್ರಜ್ಞರು ಒಂದೇ ದಿನಕ್ಕೆ ಸೇವಿಸುತ್ತಾರೆ. ವಿಮಾನಗಳಲ್ಲಿ ಆಗಬಹುದಾದ ಅಪಾಯಕ್ಕಿಂತ ಇದು ಐದು ಪಟ್ಟು ಹೆಚ್ಚು).
ಸಾಮಾನ್ಯವಾಗಿ ಯಂತ್ರಗಳ ಮೇಲ್ವಿಚಾರಣೆ ಸಿಬ್ಬಂದಿಯ ದಿನನಿತ್ಯದ ಕೆಲಸವಾಗಿರುತ್ತದೆ. ಪ್ರತಿ ಸಿಬ್ಬಂದಿಗೂ ವಾರಕ್ಕೆ 160 ತಾಸಿನ ಪ್ರತ್ಯೇಕ ಡ್ಯೂಟಿ. ಸೌರಫಲಕಗಳಿಂದ ಹಿಡಿದು ಪ್ರತಿ ಪ್ರಯೋಗದ ಸಲಕರಣೆಯನ್ನು ಪರೀಕ್ಷಿಸಿ ಅವು ಭೂಮಿಗೆ ಕಳುಹಿಸುವ ಮಾಹಿತಿಗಳ ಖಚಿತತೆಯನ್ನು ಪಡೆಯುವವರೆಗೆ ಅನೇಕ ತಾಸುಗಳು ವ್ಯಯವಾಗುತ್ತವೆ.
ಇಕ್ಕಟ್ಟಾದ ಜಾಗದಲ್ಲಿ ಬರೀ ಯಂತ್ರಗಳ ನಡುವೆ ಮಾಂಸಖಂಡಗಳು ಪೆಡಸಾಗಬಾರದೆಂದರೆ ದೇಹಕ್ಕೆ ಬಿರುಸಾದ ವ್ಯಾಯಾಮ ಬೇಕೇಬೇಕು. ದಿನಕ್ಕೆ ಕನಿಷ್ಟ ಎರಡು ತಾಸು ಟ್ರೆಡ್‍ಮಿಲ್ ನಲ್ಲಿ ಕೂತು ಬೆಲ್ಟ್ ಬಿಗಿದುಕೊಂಡು ಮೈಕೈಕಾಲುಗಳಿಗೆ ವ್ಯಾಯಾಮ ಮಾಡಿಸಲಾಗುತ್ತದೆ.
ಇನ್ನು ರಿಲಾಕ್ಸ್ ಮಾಡುವ ಸಮಯ. ಒಂಟಿತನದ ಮಾನಸಿಕ ತುಮುಲವನ್ನು ತಡೆಯಲು ಇದು ಅತೀ ಅವಶ್ಯ. ಈಗ ಮನೆಯವರ ಜೊತೆ ಇಮೇಲ್ ಚಾಟ್ ನಡೆಸಬಹುದು, ಸಂಗೀತ, ಸಿನೆಮಾ ಮೂಲಕ ಮನರಂಜನೆ ಪಡೆಯಬಹುದು. ಆದರೆ ಬಹುಪಾಲು ತಂತ್ರಜ್ಞರು ಕೆಳಗಿನ ನೀಲಿ ನೆಲವನ್ನು ನೋಡಿ ಮೈಮರೆಯುತ್ತಾರೆ. ಒಂದೂವರೆ ತಾಸಿಗೊಂದು ಬಾರಿ ಕತ್ತಲೆ ಮತ್ತು ಬೆಳಕಿನ ರೋಚಕತೆಯನ್ನು ಅನುಭವಿಸುತ್ತಾರೆ. ಭೂಮಿ ಸುತ್ತುವುದನ್ನು ಪ್ರತ್ಯಕ್ಷ ಕಾಣುತ್ತಾರೆ. ಪೆಗ್ಗಿ ವೈಟ್‍ಸನ್, ಐಎಸ್‍ಎಸ್‍ನಲ್ಲಿ ಫ್ಲೈಟ್‍ಇಂಜಿನಿಯರ್ ಆಗಿದ್ದವಳು ತನ್ನ 13 ನೆಯ ಪತ್ರದಲ್ಲಿ ಹೀಗೆ ಬರೆಯುತ್ತಾಳೆ ‘ಬಹುಶಃ ನನ್ನ ಜೀವನವಿಡೀ ಇಲ್ಲಿಯ ಅನುಭವವನ್ನು ವರ್ಣಿಸಬಲ್ಲ ಸ್ಪಷ್ಟ ಶಬ್ದಗಳಿಗಾಗಿ ಹುಡುಕಾಟ ನಡೆಸಬೇಕಾಗಬಹುದು’
ದೇಹದ ಜೈವಿಕತಾಳಕ್ಕೆ ತಕ್ಕಂತೆ 12 ತಾಸುಗಳ ನಂತರವೇ ನಿದ್ರಾಲೋಕಕ್ಕೆ ಜಾರುತ್ತಾರೆ. ಮಲಗುವ ಕೋಣೆಯಲ್ಲಿ, ಕಿಡಕಿಯ ಪರದೆಗಳನ್ನು ಮುಚ್ಚಲಾಗುತ್ತದೆ, ಗಾಳಿಯಾಡಲೆಂದು ವೆಂಟಿಲೇಶನ್ ಫ್ಯಾನ್ ಇರಲೇಬೇಕು. ಒಂದೇ ಸ್ಥಳದಲ್ಲಿ ಅನೇಕ ತಾಸುಗಳವರೆಗೆ ನಿಶ್ಚಲ ಸ್ಥಿತಿಯಲ್ಲಿ ಇರುವಾಗ ಸುತ್ತಲಿನ ಗಾಳಿಯಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ ಇಂಗಾಲದ ಡೈಆಕ್ಸೈಡ್ ಹೆಚ್ಚುತ್ತದೆ. ಗಾಳಿಯ ಹರಿವು ಇರದಿದ್ದರೆ ಉಸಿರು ಕಟ್ಟಿದಂತಾಗಬಹುದು, ತೀವ್ರ ತಲೆಸಿಡಿತ ಉಂಟಾಗಬಹುದು. ಸುಖ ನಿದ್ದೆಗೆಂದು ಅತ್ತಿತ್ತ ತೇಲಾಡದಂತೆ ಮಲಗುವ ಚೀಲವನ್ನೂ ಹುಕ್ ಒಂದಕ್ಕೆ ಸಿಕ್ಕಿಸಲಾಗುತ್ತದೆ. ಯಂತ್ರಗಳ ಗುಂಯ್ಗುಡಿತವನ್ನು ದೂರಗೊಳಿಸಲೆಂದು ಕೆಲವರು ಇಯರ್‍ಪ್ಲಗ್ ಬಳಸುತ್ತಾರೆ.
‘ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ..’ ಎನ್ನುವಂತೆ ಮೂಲಭೂತ ಅವಶ್ಯಕತೆಗಳಾದ ಆಹಾರ, ನೀರು ಹಾಗೂ ಗಾಳಿಗೆ ಭೂಮಿಯನ್ನೇ ಅವಲಂಬಿಸಬೇಕಾಗುತ್ತದೆ. ಒಮ್ಮೆಲೇ ಹತ್ತಿಪ್ಪತ್ತು ವರ್ಷಗಳಿಗಾಗುವಷ್ಟು ಸಂಗ್ರಹ ಹೊಂದಿರಲು ಸಾಧ್ಯವಿಲ್ಲ. ಅಲ್ಲದೆ ಪ್ರಯೋಗ ಉಪಕರಣಗಳೂ ಆಗಾಗ್ಗೆ ದುರಸ್ತಿಯಾಗುತ್ತಿರಬೇಕು, ಹೊಸ ಹೊಸ ತಂತ್ರಜ್ಞಾನಗಳು ಇಲ್ಲಿ ಶೋಧಗೊಂಡಂತೆ ಅಲ್ಲಿ ಅವುಗಳ ಬಳಕೆಯಾಗಬೇಕು. ಇದುವರೆಗೆ 35 ಬಾರಿ ಅಮೆರಿಕದ ಬಾಹ್ಯಾಕಾಶ ನೌಕೆಗಳು, 25 ಬಾರಿ ರಷ್ಯಾದ ಸೋಯುಝ್ ಮತ್ತು 41 ಬಾರಿ ಪ್ರೊಗ್ರೆಸ್ ನೌಕೆಗಳು, ಎರಡು ಬಾರಿ ಯುರೋಪಿನ ಎಟಿವಿ ಹಾಗೂ 2 ಬಾರಿ ರಷ್ಯಾದ ಹೆಚ್‍ಟಿವಿ ಘಟಕಗಳು ಬಾಹ್ಯಾಕಾಶ ನಿಲ್ದಾಣಕ್ಕೆ ಭೆಟ್ಟಿ ಇತ್ತಿವೆ. ಆರು ತಿಂಗಳಿಗೊಮ್ಮೆ ಪಾಳಿಯ ಮೇಲೆ ಸಿಬ್ಬಂದಿ ಬದಲಾಗುತ್ತಾರೆ, ಅದೇ ಅವಧಿಗೊಮ್ಮೆ ಆಹಾರ ಮತ್ತಿತರ ಆವಶ್ಯಕ ಸಾಮಗ್ರಿಗಳ ಪೂರೈಕೆಯೂ ನಡೆಯುತ್ತಿರಬೇಕಾಗುತ್ತದೆ. ವಾಪಸ್ಸು ಬರುವಾಗ 6.4 ಟನ್ನಿನಷ್ಟು ಕಸವನ್ನು ಮರಳಿ ಭೂಮಿಗೆ ತರುತ್ತದೆ.
2003 ರಲ್ಲಿ ಕೊಲಂಬಿಯಾ ಶಟ್ಲ್ ನೌಕೆ ಬಾಹ್ಯಾಕಾಶ ನಿಲ್ದಾಣಕ್ಕೆ ಭೆಟ್ಟಿ ಇತ್ತು ಮರಳುವಾಗ ಇಡೀ ನೌಕೆಯೇ ಉರಿದು ಬೂದಿಯಾಗಿತ್ತು. ಆ ದುರಂತದ ನಂತರ ಅಮೆರಿಕ ಸರಕಾರ ಶಟ್ಲ್ ನೌಕೆಗಳ ಉಡಾವಣೆಗೆ ನಿರ್ಬಂಧ ಹೇರಿತ್ತು. ಆಗ ಬಾಹ್ಯಾಕಾಶ ನಿಲ್ದಾಣದ ನಿರ್ಮಾಣಕಾರ್ಯ ಸ್ಥಗಿತಗೊಂಡಿದ್ದಷ್ಟೇ ಅಲ್ಲ, ಅಲ್ಲಿದ್ದ ಎರಡು ತಂತ್ರಜ್ಞರ ಭವಿಷ್ಯವೂ ಏನೆಂದು ಚಿಂತಿಸುವಂತಾಗಿತ್ತು. ಮತ್ತೆ ಮೂರು ಬಾರಿ ರಷ್ಯಾದ ನೌಕೆಗಳು ಹಾರಿದವು. ಒಮ್ಮೆ ಸೌರಫಲಕಗಳನ್ನು ಮರು ಜೋಡಿಸುವಾಗ ಮಧ್ಯೆ ತೂತೊಂದು ಕಾಣಿಸಿಕೊಂಡಿತು. ನೌಕೆಯ ಹೊರಗಡೆ ಅಂತರಿಕ್ಷದಲ್ಲಿ ನಡೆಯುತ್ತ (ತೇಲುತ್ತ!) ಸೌರಫಲಕಗಳಿಂದ ಆಗಬಹುದಾದ ವಿದ್ಯುತ್ ಶಾಕ್ ಗಳನ್ನು ತಡೆದುಕೊಳ್ಳುತ್ತ ರಿಪೇರಿ ನಡೆಸಬೇಕಾಯಿತು.
ಬಾಹ್ಯಾಕಾಶದಲ್ಲಿ ಹಾರಾಡುತ್ತಿರುವ ಚಿಕ್ಕ ಪುಟ್ಟ ವಸ್ತುಗಳು, (ಉದಾಹರಣೆಗೆ ಬಳಕೆಯಲ್ಲಿಲ್ಲದ ಉಪಗ್ರಹಗಳ ಹೊರಮೈನ ಪೇಂಟ್‍ನ ಚೂರು) ಗಗನನಡಿಗೆ ನಡೆಸುತ್ತಿರುವ ತಂತ್ರಜ್ಞರ ಗಗನದಿರಿಸನ್ನು ತೂತಾಗಿಸಬಹುದಾದ ಸಾಧ್ಯತೆಯೂ ಇದೆ. ಏಕೆಂದರೆ ಬಾಹ್ಯ ಆಕಾಶದಲ್ಲಿ ವೇಗವಾಗಿ ಹಾರಾಡುವ ನೂರಾರು ವಸ್ತುಗಳಿರುತ್ತವೆ. ಸಾಮಾನ್ಯವಾಗಿ ಮುಖಾಮುಖಿಯಾಗಬಹುದಾದ ಬಾನಕಸದ ಬಗ್ಗೆ ಭೂಮಿಯಿಂದ ಮುಂಚಿತವಾಗಿಯೇ ಸೂಚನೆಗಳು ಬಂದಿರುತ್ತವೆ. ಆಗ ನೌಕೆಯ ಎತ್ತರವನ್ನು ಒಂದೆರಡು ಕಿಮೀ ಮೇಲಕ್ಕೆ ಅಥವಾ ಕೆಳಕ್ಕೆ ಬದಲಾಯಿಸಲಾಗುತ್ತದೆ. ಕೆಲವು ಬಾರಿ ಅದು ಸಾಧ್ಯವಾಗದಿದ್ದಾಗ ತುರ್ತುಪರಿಸ್ಥಿತಿಯನ್ನು ಘೋಷಿಸಿಕೊಂಡು, ಕಿಂಡಿ, ಕಿಡಕಿಗಳನ್ನು ಮುಚ್ಚಿ ಎಲ್ಲಾ ತಂತ್ರಜ್ಞರು ನೌಕೆಯ ಆಶ್ರಯಘಟಕದತ್ತ ಧಾವಿಸುತ್ತಾರೆ. ಬಾಹ್ಯಾಕಾಶ ನಿಲ್ದಾಣಕ್ಕೇನಾದರೂ ಧಕ್ಕೆ ತಗುಲಿತೋ, ಕೂಡಲೇ ಆಶ್ರಯ ನೌಕೆಯನ್ನು ನಿಲ್ದಾಣದಿಂದ ಕಳಚಿಕೊಂಡು ಭೂಮಿಗೆ ಮರಳುವ ವ್ಯವಸ್ಥೆ ಇದೆ. ಈ ಹಿಂದೆ ಎರಡು ಬಾರಿ ಇಂಥಹ ಪ್ರಸಂಗಗಳು ಎದುರಾಗಿದ್ದವು.
ಐಎಸ್‍ಎಸ್ ನ ಸಿಬ್ಬಂದಿಯ ದೇಹಪೃಕೃತಿಯ ಅಧ್ವಾನವೇ ಭೂಮಿಯ ಮೇಲೆ ಸಾವಿರಾರು ಸಂಶೋಧನಾಕಾರರಿಗೆ ವಸ್ತುವಾಗಿದೆ. ಅವುಗಳ ಆಧಾರದ ಮೇಲೆ ಮಾನವದೇಹದ ಜೀರ್ಣಕ್ರಿಯೆ, ಮೂಳೆಸವೆತ, ಮಾನಸಿಕ ಏರುಪೇರು, ಗ್ರಹಣೇಂದ್ರಿಯಗಳ ಗೊಂದಲ ಇತ್ಯಾದಿ ವಿಷಯಗಳಲ್ಲಿ ಅಧ್ಯಯನಗಳು ನಡೆದಿವೆ. ಮುಂದೆ ದೂರದೂರದ ಚಂದ್ರ ಹಾಗೂ ಮಂಗಳನಲ್ಲಿಗೆ ಪಯಣ ನಡೆಸಲು ನಡೆಸಬೇಕಾದ ತಯಾರಿಯ ಬಗ್ಗೆ ವೈಜ್ಞಾನಿಕ ಪ್ರಯೋಗಗಳು ನಡೆದಿವೆ. ಹಾಗೆಯೇ ನೌಕೆಯ ಸುತ್ತಮುತ್ತಲ ಆಕಾಶದ ವೈಚಿತ್ರ್ಯಗಳೂ, ಮಾನವ ಕಣ್ಣಿನಿಂದ ಭೂಮಿಯ ನಿಜಸ್ವರೂಪವನ್ನು ನೋಡಿದ ಬಣ್ಣನೆಗಳೂ ದಾಖಲಾಗಿವೆ.
ಅಮೆರಿಕದ ಶಟಲ್ ನೌಕೆಗಳಿಗೆ ನಿವೃತ್ತಿ ಘೋಷಣೆಯಾಗಿದೆ. ಇನ್ನು ಮುಂದೆ ರಷ್ಯಾದ ಸೋಯುಝ್ ಕ್ಯಾಪ್ಸೂಲುಗಳು ಮಾತ್ರವೇ ಗಗನಯಾತ್ರೆ ನಡೆಸಲಿವೆ. ಸಂಪೂರ್ಣಗೊಂಡಾಗ ಐಎಸ್‍ಎಸ್ 455 ಟನ್ನಿನ ಫುಟ್‍ಬಾಲ್ ಮೈದಾನದಷ್ಟು ಅಗಲದ ವ್ಯಾಪ್ತಿಯನ್ನು ಹೊಂದಲಿದೆ. ಭಾಗಿಯಾದ ಐದೂ ಸಂಸ್ಥೆಗಳು ವಿವಿಧ ಅಂತರರಾಷ್ಟ್ರೀಯ ಒಪ್ಪಂದಗಳಿಗೆ ಬದ್ಧವಾಗಿವೆ.
ಮಾಸ್ಕೊದ ಹೊರವಲಯದಲ್ಲಿರುವ ‘ಮಾಸ್ಕೊ ಮಿಶನ್ ಕಂಟ್ರೋಲ್’ ಮುಖ್ಯ ಜವಾಬ್ದಾರಿ ಹೊತ್ತ ಕೇಂದ್ರ. ನೌಕೆಯ ವಿವಿಧ ಭಾಗಗಳು ವಿವಿಧ ದೇಶಗಳಿಗೆ ಸೇರಿರುವುದರಿಂದ ಆಯಾ ದೇಶಗಳು ತಮ್ಮ ಘಟಕಗಳನ್ನು ತಾವೇ ನಿರ್ವಹಿಸುತ್ತಿವೆ. ತಂತ್ರಜ್ಞರಿಗೆ ಮೂರು ಹಂತದಲ್ಲಿ, ವಿವಿಧ ಸ್ಥಳಗಳಲ್ಲಿ ತೀವ್ರತರ ತರಬೇತಿ ನೀಡಲಾಗುತ್ತದೆ.
ಇತ್ತೀಚಿನ ಲೆಕ್ಕಾಚಾರದ ಪ್ರಕಾರ ಈ ಬಾಹ್ಯಾಕಾಶ ನೌಕೆಯ ಖರ್ಚು 160 ಶತಕೋಟಿ ಡಾಲರ್ ದಾಟುತ್ತಿದೆ. ‘ಹೊಸ ಹೊಸ ಆವಿಷ್ಕಾರಗಳು ಹೊರಬರಬೇಕಿತ್ತು, ಯಾವುದೂ ಆಗಿಲ್ಲ, ಈ ಯೋಜನೆಯಿಂದ ಬರೀ ಹಣ ಮತ್ತು ಮಾನವ ವೇಳೆ ದಂಡ’ ಎಂದು ಮೂಗು ಮುರಿದವರಿದ್ದಾರೆ. ಅದೇ ಹಣವನ್ನು ಭೂಮಿಯ ಮೇಲಿನ ಸಮಸ್ಯೆಗಳಿಗೆ ಪರಿಹಾರಕ್ಕೆ ಬಳಸಬಹುದಿತ್ತು ಎಂದು ಬಹಳೇ ಜನರು ನಿರಾಶೆ ವ್ಯಕ್ತಪಡಿಸುತ್ತಿದ್ದಾರೆ. ಒಮ್ಮೆ ನಾಸಾದ ಅಧ್ಯಕ್ಷರೇ ಐಎಸ್‍ಎಸ್ ತಾವಿಟ್ಟ ತಪ್ಪು ಹೆಜ್ಜೆ ಎಂದು ಒಪ್ಪಿಕೊಂಡಿದ್ದಾರೆ.
ಟೀಕೆ, ಭತ್ರ್ಸನೆಗಳೇನೇ ಇರಲಿ, ಮಾನವ ಬುದ್ಧಿಶಕ್ತಿಯ ಹಾಗೂ ಅಪ್ರತಿಮ ಸಾಹಸಗಳ ಪ್ರತೀಕವಾಗಿ ಹೈಟೆಕ್ ‘ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ’ ಕಳೆದ ಹತ್ತು ವರ್ಷಗಳಿಂದ ಹಾರಾಡುತ್ತಲೇ ಇದೆ.
ಈ ಹಿಂದಿನ ಬಾಹ್ಯಾಕಾಶ ತಂಗುದಾಣಗಳು ಹಾಗೂ ಏಳುಬೀಳುಗಳು
ಭೂಸುತ್ತಲಿನ ವಾಯುಮಂಡಲದ ಪರಿಮಿತಿಯನ್ನು ದಾಟಿ ಆಚಿನ ಗಗನಪಯಣ ಎಂದೂ ಸುಲಭದ ಮಾತಾಗಿರಲಿಲ್ಲ. ಭೂಮಿಯ ಗುರುತ್ವದ ಸೆಳೆತವನ್ನು ಮೀರಿ ಉಡ್ಡಯನ ಮಾಡುವುದರಿಂದ ಹಿಡಿದು ಬಾಹ್ಯಾಕಾಶ ನೌಕೆಯೊಳಗೆ ಮಾನವ ದೇಹ ಸಹಿಸಬಹುದಾದ ಪರಿಸರವನ್ನು ನಿರ್ಮಿಸಿ ಅದನ್ನು ದೀರ್ಘಕಾಲ ಸುಸ್ಥಿರವಾಗಿರುವಂತೆ ಮಾಡಲು ಬೇಕಾದ ತಂತ್ರಜ್ಞಾನ ಬಹಳಷ್ಟು ಏಳುಬೀಳುಗಳನ್ನು ಕಂಡಿದೆ.
ಎಲ್ಲರಿಗಿಂತ ಮೊದಲು ಬಾಹ್ಯಾಕಾಶಕ್ಕೆ ಇಣುಕಿ, ಅಂಬೆಗಾಲಿಟ್ಟಿದ್ದು ಸೋವಿಯೆತ್ ಸಂಘಟನೆ. ಆನಂತರ ಅಮೆರಿಕ ದೇಶ ದಾಪುಗಾಲಿಕ್ಕಿ ಅಂತರಿಕ್ಷ ಸಂಬಂಧಿತ ತಂತ್ರಜ್ಞಾನದಲ್ಲಿ ಬಹಳಷ್ಟು ಸಾಧಿಸಿತು. ಈ ಎರಡೂ ದೇಶಗಳು ಕೃತಕ ಉಪಗ್ರಹಗಳನ್ನು ಭೂಮಿಯ ಆಚೆ ಕಳಿಸಿದವು. ಉಪಗ್ರಹಗಳೊಂದಿಗೆ ಗಗನಯಾತ್ರಿಗಳನ್ನೂ ಕಳಿಸಿದವು.
1971 ರಲ್ಲಿ ಮಾನವ ಸಹಿತ ಪ್ರಯೋಗಾಲಯವೆಂದು ರಷ್ಯಾದ ಮೊಟ್ಟಮೊದಲ ಸ್ಪೇಸ್ ಸ್ಟೇಶನ್ ‘ಸೆಲ್ಯೂಟ್’. ಸೋಯುಝ್ ನೌಕೆಯಲ್ಲಿ ಹಾರಿಹೋಗಿ ಸೆಲ್ಯೂಟಿಗೆ ಸೇರ್ಪಡೆಯಾಗಿ 24 ದಿನಗಳು ಅಲ್ಲಿ ತಂತ್ರಜ್ಞರು ತಂಗಿದ್ದರು. ಮರಳಿ ಬರುವಾಗ ನೌಕೆ ಸುಟ್ಟು ಭಸ್ಮವಾಯಿತು. ಎರಡನೆಯ ಸೆಲ್ಯೂಟ್2 ತನ್ನ ಕಕ್ಷೆಯನ್ನು ಸೇರಲು ವಿಫಲಗೊಂಡಿತು. ಹೀಗೆ ಸೆಲ್ಯೂಟ್ 3, 4, 5 ಉಪಗ್ರಹಗಳು ಒಂದಾದ ಮೇಲೊಂದರಂತೆ ಹಾರಿ ತಂತ್ರಜ್ಞರು ಹೆಚ್ಚು ದಿನಗಳನ್ನು ಅಂತರಿಕ್ಷದಲ್ಲಿ ಕಳೆದರು. ಅವುಗಳಲ್ಲಿದ್ದ ಒಂದು ದೋಷವೆಂದರೆ ಸೋಯುಝ್ ನೌಕೆ ಮಾತ್ರ ಜೋಡಣೆಗೊಳ್ಳುವಂತೆ ಅವು ರಚಿಸಲ್ಪಟ್ಟಿದ್ದವು. ಮುಂದೆ ಸೆಲ್ಯೂಟ್ 6 ಮತ್ತು 7 ಸುಧಾರಿತ ಆವೃತ್ತಿಗಳಾಗಿ 840 ದಿನಗಳು ಮಾನವ ಗಗನದಲ್ಲಿ ಹಾರಲು ಸಾಧ್ಯವಾಯಿತು.
1971ರಲ್ಲಿ ಅಮೆರಿಕ ಸ್ಕೈಲಾಬ್ ನೌಕೆಯನ್ನು ಹಾರಿಸಿತು. ಹಾರುವಾಗಲೇ ಅದರ ಸೌರ ರೆಕ್ಕೆಗಳು ಹಾನಿಗೊಳಗಾದವು. ಕೆಲವು ದಿನಗಳ ಬಳಿಕ 3 ತಂತ್ರಜ್ಞರು ನೌಕೆಯಲ್ಲಿ ಹಾರಿಹೋಗಿ ಸ್ಕೈಲಾಬ್‍ನ್ನು ರಿಪೇರಿಗೊಳಿಸಿ 24 ದಿನ ಅಲ್ಲಿ ತಂಗಿದ್ದು ಭೂಮಿಗೆ ಮರಳಿದರು. ಮೂರನೆಯ ತಂಡ ಮರಳಿದ ನಂತರ ಸ್ಕೈಲಾಬ್ ಯೋಜನೆಯನ್ನು ಕೈಬಿಡಲಾಯಿತು. ಆದರೆ ಅದು ಸೂರ್ಯನ ಪ್ರಖರ ಜ್ವಾಲೆಯಲ್ಲಿ ಹೆಚ್ಚು ದಿನ ಉಳಿಯಲಾರದೆ ಅವಧಿಗೆ ಮೊದಲೇ ಭೂವಾತಾವರಣ ಪ್ರವೇಶಿಸಿ 1979ರಲ್ಲಿ ಭಸ್ಮವಾಯಿತು.
ಆನಂತರ 1986ರಲ್ಲಿ ಹಾರಿದ ‘ಮೀರ್’ ರಷ್ಯನ್ ವಿಜ್ಞಾನಿಗಳ ತಂತ್ರಜ್ಞಾನ ಕೌಶಲಕ್ಕೆ ಸಾಕ್ಷಿಯಾಗಿ ಹತ್ತು ವರ್ಷಗಳ ಕಾಲ ಮಾನವಸಹಿತವಾಗಿ ಹಾರಾಡಿದ ಗಗನನೌಕೆ. ಆದರೆ ರಷ್ಯಾ ಹಣದ ಮುಗ್ಗಟ್ಟಿಗೆ ಸಿಕ್ಕು ಈ ಅಂತರಿಕ್ಷ ನಿಲ್ದಾಣದ ಖರ್ಚನ್ನು ಭರಿಸಲು ವಿಫಲಗೊಂಡಿತು. ಹೊಸದೊಂದು ಅಂತರಿಕ್ಷ ನಿಲ್ದಾಣವನ್ನು ಜೊತೆಯಾಗಿ ಕಳಿಸೋಣವೆನ್ನುವ ಅಮೆರಿಕದ ಪ್ರಸ್ತಾವಕ್ಕೆ ರಷ್ಯಾ ಸಮ್ಮತಿಯಿತ್ತಿತು. ಅಮೆರಿಕದ ಇಬ್ಬರು ಗಗನಯಾತ್ರಿಗಳು ಮೀರ್ ನೌಕೆಯಲ್ಲಿದ್ದು ಗಗನಯಾನದ ಅನುಭವ ಪಡೆದು ಮರಳಿದರು. 2001 ರಲ್ಲಿ ಮೀರ್ ನೌಕೆಯನ್ನು ನಾಶಪಡಿಸಲಾಯಿತು. ಈಗ ಅಮೆರಿಕಾ ಮತ್ತು ರಷ್ಯಾ ಸಂಪೂರ್ಣವಾಗಿ ‘ಅಂತರರಾಷ್ಟ್ರೀಯ ಬಾಹ್ಯಾಕಾಶ ನೌಕೆ’ಯತ್ತ ಗಮನ ಹರಿಸತೊಡಗಿದವು.
ಮುಗಿಯಿತು.
ಸರೋಜಾ ಪ್ರಕಾಶ

ವಿಶ್ವ ಜನಸಂಖ್ಯಾ ದಿನಾಚರಣೆಯ ಅಂಗವಾಗಿ ಜಾಗೃತಿ ಜಾಥಾ

0

ಶಿಡ್ಲಘಟ್ಟದಲ್ಲಿ ಶನಿವಾರ ವಾಸವಿ ಶಾಲಾ ವಿದ್ಯಾರ್ಥಿಗಳು ವಿಶ್ವ ಜನಸಂಖ್ಯಾ ದಿನಾಚರಣೆಯ ಅಂಗವಾಗಿ ಜಾಗೃತಿ ಜಾಥಾ ನಡೆಸಿದರು.

ಕಲಾಸಂಗಮ ಕಾರ್ಯಕ್ರಮ

0

ಗ್ರಾಮೀಣ ಭಾಗದ ಪ್ರತಿಭೆಗಳನ್ನು ಬೆಳೆಸಿ ಪೋಷಿಸಲು ಕಲಾಸಂಗಮದಂತಹ ಕಾರ್ಯಕ್ರಮಗಳು ಬಹಳ ಪ್ರಯೋಜನಕಾರಿಯಾಗಿವೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಾಬು ತಿಳಿಸಿದರು.
ತಾಲ್ಲೂಕಿನ ಕಾಳನಾಯಕನಹಳ್ಳಿ ಗ್ರಾಮದ ರತ್ನಾವಳಿ ನಾಟ್ಯ, ಕ್ರೀಡಾ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ಎಚ್.ಕ್ರಾಸ್ನ ವಾಗ್ದೇವಿ ವಿದ್ಯಾನಿಕೇತನ ಶಾಲಾ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಲಾ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಧುನಿಕತೆಯ ವ್ಯಾಮೋಹಕ್ಕೊಳಗಾಗಿ ನಮ್ಮ ಪುರಾತನ ಕಲೆಗಳು ನಶಿಸುತ್ತಿರುವುದು ವಿಷಾಧಕರವಾಗಿದ್ದು, ಕಲೆಗಳನ್ನು ಉಳಿಸಿಬೆಳೆಸುವಲ್ಲಿ ಯುವಕರ ಪಾತ್ರ ಪ್ರಮುಖವಾದುದು ಎಂದರು.
ವಾಗ್ದೇವಿ ವಿದ್ಯಾನಿಕೇತನ ಶಾಲೆಯ ಅಧ್ಯಕ್ಷ ವಿ.ರಾಜಣ್ಣ ಮಾತನಾಡಿ, ಜನಪದ ಕಲೆಗಳು ನಮ್ಮ ಸಂಸ್ಕೃತಿಯ ರಾಯಭಾರಿಗಳಾಗಿದ್ದು, ಇಂತಹ ಕಲೆಯ ಪ್ರಕಾರಗಳು ಆಸಕ್ತಿಯ ಕೊರತೆಯಿಂದಾಗಿ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿವೆ. ಜಾನಪದ ಕಲಾಪ್ರಕಾರಗಳು ಜನರ ನಡುವೆ ಉತ್ತಮ ಬಾಂಧವ್ಯವವನ್ನು ಕಾಪಾಡುವುದಲ್ಲದೆ ಸ್ವಾಸ್ಥ್ಯ ಹಾಗೂ ಸದೃಢ ಸಮಾಜವನ್ನು ಬಿಂಬಿಸುತ್ತದೆ. ಹೀಗಾಗಿ ಜಾನಪದ ಕಲಾಪ್ರಕಾರಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವೀರಗಾಸೆ, ತಮಟೆವಾದನ, ಕೋಲಾಟ ಪ್ರದರ್ಶನ, ರಂಗಗೀತೆಗಳ ಗಾಯನ, ಜಾನಪದ ನೃತ್ಯ, ಜಾನಪದ ಗೀತೆಗಳ ಗಾಯನ, ಸಾಮಾಜಿಕ ನಾಟಕ ಪ್ರದರ್ಶನಗಳು ನಡೆದವು.
ಕಲಾವಿದರಾದ ಕೆ.ಎ.ರಾಜಪ್ಪ, ಮುನಿನಾರಾಯಣ, ಲಲಿತ, ಸಿ.ಆಂಜಿನಪ್ಪ, ಕೆ.ಎ.ರಾಜಪ್ಪ, ಸ್ವಾಮಿ ವಿವೇಕಾನಂದ, ಎಂ.ಚೇತನ್, ನಾರಾಯಣಮ್ಮ, ಕೆ.ಎ.ಸುನಂದ, ಯಶೋಧ, ಗಾಯಿತ್ರಿ, ವೆಂಕಟರಮಣಪ್ಪ, ರಾಮಕೃಷ್ಣಪ್ಪ ಮತ್ತಿತರರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ರೇಷ್ಮೆ ಬೆಳೆಗಾರ ಸಾಲ ತೀರಿಸಲಾಗದೇ ಆತ್ಮಹತ್ಯೆ ಯತ್ನ

0

ತಾಲ್ಲೂಕಿನ ತಲದುಮ್ಮನಹಳ್ಳಿಯ ರೇಷ್ಮೆ ಬೆಳೆಗಾರ ಮಹೇಶ್(26) ಶುಕ್ರವಾರ ಸಾಲಗಾರರ ಕಾಟ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ತಲದುಮ್ಮನಹಳ್ಳಿಗೆ ಶನಿವಾರ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ರೇಷ್ಮೆ ಇಲಾಖೆಯ ಉಪನಿರ್ದೇಶಕ ಡಿ.ಆರ್.ನಾಗಭೂಷಣ್, ರೈತ ಮುಖಂಡರೊಂದಿಗೆ ಭೇಟಿ ನೀಡಿ ಮಹೇಶ್ ಕುಟುಂಬದವರೊಂದಿಗೆ ಮಾತನಾಡಿದರು.
‘ಮೂವ್ವತ್ತೆಂಟು ಗುಂಟೆ ಜಮೀನಿನಲ್ಲಿ ರೇಷ್ಮೆ ಹುಳು ಮನೆ ನಿರ್ಮಿಸಿಕೊಂಡು, ಜಮೀನಿನಲ್ಲಿನ ಕೊಳವೆಬಾವಿಯ ಅತ್ಯಲ್ಪ ನೀರಿನಿಂದ ಹಿಪ್ಪುನೇರಳೆ ಸೊಪ್ಪು ಬೆಳೆಯುತ್ತಾ ರೇಷ್ಮೆ ಕೃಷಿ ಮಾಡುತ್ತಿದ್ದ ಮಹೇಶ್, ಕೈಸಾಲದ ಜೊತೆಗೆ ಜಮೀನನ್ನು ಅಡವಿಟ್ಟು ಖಾಸಗಿಯಾಗಿ ಸಾಲ ಪಡೆದಿದ್ದ. ಎರಡು ಲಕ್ಷ ರೂಗಳ ಸಾಲಕ್ಕೆ ಇದುವರೆಗೂ ಎರಡು ಲಕ್ಷ ರೂಗಳಷ್ಟು ಬಡ್ಡಿಯನ್ನೇ ಕಟ್ಟಿದ್ದರೂ ಕೂಡ, ಸಾಲ ನೀಡಿದ್ದ ವ್ಯಕ್ತಿಮನೆ ಬಳಿ ಬಂದು ಶುಕ್ರವಾರ 75 ಸಾವಿರ ಬಡ್ಡಿ ಬಾಕಿ ಇದೆ. ಹಣ ನೀಡಬೇಕು, ಇಲ್ಲವೇ ಮನೆ ಖಾಲಿ ಮಾಡಬೇಕು ಎಂದು ಹೇಳಿದ್ದ. ಮಹೇಶ್ 50 ಸಾವಿರ ರೂ ಹೊಂದಿಸಿಕೊಂಡು ಬಂದು ಕೊಡಲು ಹೋದಾಗ ತೆಗೆದುಕೊಳ್ಳದೆ, ಅಸಲು ಮತ್ತು ಬಡ್ಡಿ ಸಮೇತ ಹಣ ನೀಡಬೇಕು, ಇಲ್ಲವೇ ಮನೆ ಖಾಲಿ ಮಾಡಬೇಕೆಂದು ಒತ್ತಾಯಿಸಿದ್ದರು. ದಿಕ್ಕು ತೋಚದೆ, ಅವಮಾನ ತಾಳಲಾರದೆ ಮಹೇಶ್ ವಿಷ ಸೇವಿಸಿದ್ದಾನೆ. ತಕ್ಷಣ ಆಸ್ಪತ್ರೆಗೆ ಸೇರಿಸಿದ್ದರಿಂದ ಜೀವ ಉಳಿದಿದೆ’ ಎಂದು ಮಹೇಶ್ ಚಿಕ್ಕಪ್ಪ ರಮೇಶ್ ಅಧಿಕಾರಿಗಳಿಗೆ ತಿಳಿಸಿದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಮಾತನಾಡಿ, ‘ನೀವು ಲಿಖಿತವಾಗಿ ದೂರು ನೀಡಿದಲ್ಲಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಬಹುದಾಗಿದೆ. ರೈತರು ಕಷ್ಟವಿದ್ದಲ್ಲಿ ರೈತಸಂಘದ ಮುಖಂಡರೊಂದಿಗೆ ಅಥವಾ ಅಧಿಕಾರಿಗಳೊಂದಿಗೆ ತಮ್ಮ ಸಮಸ್ಯೆಯನ್ನು ಹೇಳಿಕೊಂಡು ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು. ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ’ ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ತಕ್ಷಣವೇ ಪರಿಹಾರ ಹಣ ಘೋಷಿಸಬೇಕೆಂದು ಅಧಿಕಾರಿಗಳ ವಾಹನಗಳ ಮುಂದೆ ಕುಳಿತು ಘೋಷಣೆಗಳನ್ನು ಕೂಗಿದರು.
ರೇಷ್ಮೆ ಇಲಾಖೆಯ ಉಪನಿರ್ದೇಶಕ ಡಿ.ಆರ್.ನಾಗಭೂಷಣ್ ಮಾತನಾಡಿ, ಮಹೇಶ್ ಅವರ ಹುಳು ಮನೆ ಹಾಗೂ ಹನಿನೀರಾವರಿಗೆ ಈಗಾಗಲೇ ಸಹಾಯಧನ ವಿತರಿಸಿದ್ದೇವೆ. ರೇಷ್ಮೆ ಗೂಡಿನ ಸಹಾಯಧನ 20 ಸಾವಿರ ರೂ ಬಾಕಿಯಿದ್ದು, ಸೋಮವಾರ ನೀಡಲಾಗುತ್ತದೆ. ರೇಷ್ಮೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರವನ್ನು ನೀಡಲಾಗುತ್ತದೆ ಎಂದು ಹೇಳಿದರು.
ಹಸಿರುಸೇನೆ ಮತ್ತು ರೈತಸಂಘದ ರಾಜ್ಯ ಕಾರ್ಯದರ್ಶಿ ಶಿವಪ್ಪ ಮಾತನಾಡಿ,‘ರೇಷ್ಮೆ ಬೆಳೆಗಾರರು ಬೆಲೆ ಕುಸಿತದಿಂದಾಗಿ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಅನಿವಾರ್ಯವಾಗಿ ಖಾಸಗಿಯಾಗಿ ಸಾಲದ ಸುಳಿಗೆ ಸಿಲುಕಿ ಸಾಯುವ ಪರಿಸ್ಥಿತಿ ನಿರ್ಮಾಣವಾಗಿರುವುದು ದುರಂತ. ಖಾಸಗಿ ಸಾಲ ನೀಡಿರುವ ವ್ಯಕ್ತಿಯ ಮೇಲೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ರೈತರಿಗೆ ಬ್ಯಾಂಕುಗಳು ಸುಲಭ ಬಡ್ಡಿ ದರದಲ್ಲಿ ಹಣವನ್ನು ನೀಡಿ ಕಾಪಾಡಬೇಕು. ರೈತರು ತೊಂದರೆ ಬಂದಾಗ ರೈತಸಂಘದವರ ನೆರವು ಪಡೆಯಿರಿ, ಆತ್ಮಹತ್ಯೆಗೆ ಶರಣಾಗದಿರಿ’ ಎಂದು ಹೇಳಿದರು.
ರೇಷ್ಮೆ ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ವಿಸ್ತರಣಾಧಿಕಾರಿ ನಾರಾಯಣಸ್ವಾಮಿ, ರೈತ ಮುಖಂಡರಾದ ಯಲುವಳ್ಳಿ ಸೊಣ್ಣೇಗೌಡ, ಭಕ್ತರಹಳ್ಳಿ ಬೈರೇಗೌಡ, ಮುನಿನಂಜಪ್ಪ, ರಾಮಚಂದ್ರಪ್ಪ, ಬಚ್ಚೇಗೌಡ, ಸೀನಪ್ಪ, ಶಿವಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಅತ್ತೆ ಸೊಸೆಯರ ಒಗ್ಗಟ್ಟು ಮತ್ತು ಒಬ್ಬಟ್ಟು

0

ಅತ್ತೆ ಸೊಸೆ ಎಂಬ ನುಡಿಗಟ್ಟು ಜಗಳ, ಮುನಿಸಿಗೆ ಪರ್ಯಾಯವಾಗಿ ಬಳಸಲಾಗುತ್ತದೆ. ಆದರೆ ಶಿಡ್ಲಘಟ್ಟದ ವಾಸವಿ ರಸ್ತೆಯ ಎರಡನೇ ಕ್ರಾಸ್ನಲ್ಲಿರುವ ಅತ್ತೆ ಸೊಸೆಯರಾದ ಮನ್ಮಥಮ್ಮ ಮತ್ತು ರಾಧಾ ತಮ್ಮ ಒಗ್ಗಟ್ಟು ಮತ್ತು ಒಬ್ಬಟ್ಟಿನಿಂದಾಗಿ ತಾಲ್ಲೂಕು, ಜಿಲ್ಲೆಯಷ್ಟೇ ಅಲ್ಲದೆ ವಿದೇಶಗಳಲ್ಲೂ ಪರಿಚಿತರಾಗಿದ್ದಾರೆ.
ಈ ಅತ್ತೆ ಸೊಸೆಯರು ತಯಾರಿಸುವ ಒಬ್ಬಟ್ಟು ಅಥವ ಹೋಳಿಗೆ ಲಂಡನ್ ಮತ್ತು ಅಮೆರಿಕಾ ದೇಶಗಳಿಗೂ ಪ್ರಯಾಣ ಬೆಳೆಸಿವೆ. ದೇವನಹಳ್ಳಿ, ಬೆಂಗಳೂರು, ವಿಜಯಪುರ ಮುಂತಾದೆಡೆಗಳಿಂದ ಯಾರೇ ವಿದೇಶಕ್ಕೆ ತೆರಳಿದರೂ ಇವರಿಗೆ ತಿಳಿಸಿ ಒಬ್ಬಟ್ಟನ್ನು ಕಟ್ಟಿಸಿಕೊಂಡು ಹೋಗುವುದು ಮಾತ್ರ ಮರೆಯುವುದಿಲ್ಲ.
12jul2ಶಿಡ್ಲಘಟ್ಟ ತಾಲ್ಲೂಕಿನಲ್ಲೂ ಅನೇಕರು ಹಬ್ಬ-ಹರಿದಿನಗಳಲ್ಲಿ, ನೆಂಟರು ಬಂದಾಗ, ವಿಶೇಷ ದಿನಗಳಲ್ಲಿ, ಔತಣಕೂಟ ಏರ್ಪಡಿಸಿದಾಗ ಎಲ್ಲರೂ ಇಷ್ಟಪಡುವ ಒಬ್ಬಟ್ಟನ್ನು ಇವರಿಂದ ಮಾಡಿಸಿಕೊಳ್ಳುವುದು ರೂಢಿಯಾಗಿದೆ.
ಒಬ್ಬಟ್ಟು ಅಥವ ಹೋಳಿಗೆ ಕರ್ನಾಟಕದ ವಿಶಿಷ್ಠ ರುಚಿಕರ ಸಿಹಿ ತಿಂಡಿ. ಒಬ್ಬಟ್ಟನ್ನು ಪ್ರಮುಖವಾಗಿ ದೀಪಾವಳಿ, ಯುಗಾದಿ ಹಬ್ಬಗಳಲ್ಲಿ ಮತ್ತು ಮದುವೆ ಮುಂತಾದ ಸಮಾರಂಭಗಳಲ್ಲಿ ಹಿಂದೆ ಮಾಡುತ್ತಿದ್ದರು. ಒಬ್ಬಟ್ಟನ್ನು ಎರಡು ರೀತಿಯಲ್ಲಿ ತಯಾರಿಸಬಹುದು. ಒಂದು ತೆಂಗಿನಕಾಯಿಯಿಂದ, ಇನ್ನೊಂದು ತೊಗರಿಬೇಳೆಯಿಂದ. ಒಬ್ಬಟ್ಟನ್ನು ತುಪ್ಪದ ಜೊತೆ ಅಥವಾ ಬಿಸಿ ಹಾಲಿನೊಂದಿಗೆ ತಿಂದರೆ ಬಹಳ ಚೆನ್ನಾಗಿರುತ್ತದೆ. ಮಾವಿನ ಹಣ್ಣಿನ ಕಾಲದಲ್ಲಿ ಹಣ್ಣಾದ ಮಾವಿನಿಂದ ಸೀಕರಣೆ ತಯಾರಿಸಿ ಒಬ್ಬಟ್ಟಿನೊಂದಿಗೆ ಸವಿಯುವ ರೂಢಿಯೂ ಇದೆ.
‘ಈ ಹೋಳಿಗೆ ತಯಾರಿ ಸ್ವಲ್ಪ ಕಷ್ಟ ಸಾಧ್ಯವೇ ಆದರೂ ರುಚಿಯಂತು ತುಂಬಾ ಚೆನ್ನಾಗಿರುತ್ತದೆ. ಹಾಗಾಗಿ ಇದನ್ನು ಎಲ್ಲರೂ ಇಷ್ಟಪಡುತ್ತಾರೆ. ಮನೆಯಲ್ಲಿ ಯಾವುದೇ ಶುಭ ಕಾರ್ಯ ಚಿಕ್ಕಮಟ್ಟದಲ್ಲಿ ನಡೆಸಿದರೂ ನಾವು ರಾಧಮ್ಮ ಅವರಿಗೆ ಹೋಳಿಗೆ ಮಾಡಿಕೊಡಲು ಕೇಳುತ್ತೇವೆ. ನನ್ನ ಮುಸಲ್ಮಾನ್ ಸ್ನೇಹಿತರಿಗಂತೂ ಹೋಳಿಗೆ ಅಂದರೆ ಪಂಚಪ್ರಾಣ. ಇವರು ತಯಾರಿಸುವ ಹೋಳಿಗೆ ಬಹಳ ರುಚಿಯಾಗಿರುತ್ತದೆ. ಒಂದೇ ಹದವಾಗಿ ತಯಾರಿಸುವ ಇವರ ಒಬ್ಬಟ್ಟನ್ನು ನಾವು ಮೂರ್ನಾಕು ದಿನ ಇಟ್ಟುಕೊಂಡು ತಿನ್ನುತ್ತೇವೆ. ಒಬ್ಬಟ್ಟಿನೊಂದಿಗೆ ರಸವನ್ನೂ ಪಾತ್ರೆಯೊಂದರಲ್ಲಿ ತಂದು ನಾವು ಒಬ್ಬಟ್ಟಿನ ಸಾರು ಮಾಡಿಕೊಂಡು ವಾರಗಟ್ಟಲೆ ಬಳಸುತ್ತೇವೆ’ ಎನ್ನುತ್ತಾರೆ ಎಲ್.ಸುರೇಶ್.
‘ಸುಮಾರು ಇಪ್ಪತ್ತು ವರ್ಷಗಳಿಂದ ನಾನು ಮತ್ತು ನಮ್ಮ ಅತ್ತೆ ಹೋಳಿಗೆಯನ್ನು ಮಾಡುತ್ತಿದ್ದೇವೆ. ನಮ್ಮತ್ತೆ ಒಬ್ಬಟ್ಟನ್ನು ಬಹಳ ರುಚಿಯಾಗಿ ತಯಾರಿಸುತ್ತಿದ್ದುದನ್ನು ಕಂಡು ಕೆಲವರು ಕೇಳುತ್ತಿದ್ದರು. ಹಾಗೆಯೇ ಒಬ್ಬರಿಂದೊಬ್ಬರಿಗೆ ವಿಷಯ ತಿಳಿಯುವ ಮೂಲಕ ನಾವು ಹೆಚ್ಚಿನ ಸಂಖ್ಯೆಯಲ್ಲಿ ಒಬ್ಬಟ್ಟನ್ನು ತಯಾರಿಸಿಕೊಡಲು ಪ್ರಾರಂಭಿಸಿದೆವು. ದಿನಕ್ಕೆ ಹೆಚ್ಚೆಂದರೆ 200 ಹೋಳಿಗೆಯನ್ನು ಮಾಡುತ್ತೇವೆ. ಹಲವಾರು ಮುಸ್ಲೀಮರೂ ಹೋಳಿಗೆ ಕೇಳಿ ಮಾಡಿಸಿಕೊಳ್ಳುತ್ತಾರೆ. ವಿದೇಶಕ್ಕೆ ಹೋಗುವವರು ಕೇಳಿದಾಗ ವಿಶೇಷವಾಗಿ ಪ್ಯಾಕ್ ಮಾಡಿಕೊಡುತ್ತೇವೆ’ ಎನ್ನುತ್ತಾರೆ ರಾಧಮ್ಮ.
ರಾಧಮ್ಮ ಅವರ ದೂರವಾಣಿ ಸಂಖ್ಯೆ: 9035871987
–ಡಿ.ಜಿ.ಮಲ್ಲಿಕಾರ್ಜುನ

ಮಳಮಾಚನಹಳ್ಳಿ ಬ್ಯಾಟರಾಯಸ್ವಾಮಿ ಸಮುದಾಯ ಭವನದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

0

ಗ್ರಾಮೀಣ ಭಾಗದಲ್ಲಿ ರಕ್ತದಾನದ ಕುರಿತಂತೆ ಜಾಗೃತಿ ಮೂಡಿದೆ. ನಮ್ಮಲ್ಲಿ ನೀರಿನ ಕೊರತೆಯಿರಬಹುದು ಆದರೆ ರಕ್ತದಾನಿಗಳ ಕೊರತೆಯಿಲ್ಲ ಎಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಗ್ರಾಮ ಪಂಚಾಯತಿ, ಮೇಲೂರು ಪ್ರಾಥಮಿಕ ಆರೋಗ್ಯ ಕೇಂದ್ರ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಹಾಲು ಉತ್ಪಾದಕರ ಸಹಕಾರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಸಹಯೋಗದಲ್ಲಿ ಬ್ಯಾಟರಾಯಸ್ವಾಮಿ ಸಮುದಾಯ ಭವನದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಜಿಲ್ಲೆಯಲ್ಲಿ ರಕ್ತದಾನಿಗಳು ನೀಡುವ ರಕ್ತ ಜಿಲ್ಲೆಯಲ್ಲಿನ ರೋಗಿಗಳಿಗೇ ಬಳಕೆಯಾಗುತ್ತದೆ. ಹೆಚ್ಚಾದಲ್ಲಿ ಮಾತ್ರ ಬೇರೆಡೆಗೆ ಕಳುಹಿಸಲಾಗುತ್ತದೆ. ಯುವಕರು ಹೆಚ್ಚಾಗಿ ರಕ್ತದಾನಿಗಳಾಗಬೇಕು. ರೆಡ್ ಕ್ರಾಸ್ ಸೊಸೈಟಿಯ ಸದಸ್ಯರಾಗಬೇಕು. ಪ್ರಾಣವನ್ನು ಉಳಿಸುವ ಈ ಮಹಾ ಕಾರ್ಯದಲ್ಲಿ ಭಾಗಗಳಾಗಬೇಕು ಎಂದು ಹೇಳಿದರು.
ರಕ್ತದಾನ ಶಿಬಿರದಲ್ಲಿ ಸರ್ಕಾರಿ ಐ.ಟಿ.ಐ ಕಾಲೇಜಿನ 35 ಮಂದಿ ವಿದ್ಯಾರ್ಥಿಗಳು ಭಾಗವಹಿಸಿ ರಕ್ತದಾನ ಮಾಡಿದರು. ಒಟ್ಟಾರೆ 120 ಯೂನಿಟ್ ರಕ್ತ ಸಂಗ್ರಹಣೆಯಾಯಿತು.
ರೆಡ್ ಕ್ರಾಸ್ ಸೊಸೈಟಿಯ ತಾಲ್ಲೂಕು ಕಾರ್ಯದರ್ಶಿ ಗುರುರಾಜರಾವ್, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಡಾ.ಉಷಾ, ಡಾ.ರವಿ, ಮಹಿಳಾ ಸಾಂತ್ವನ ಕೇಂದ್ರದ ಡಾ.ವಿಜಯಾ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಗಿಶ್ ಕಲ್ಯಾಡಿ, ಗ್ರಾಮ ಪಂಚಾಯತಿ ಅಧ್ಯಕ್ಷ ರಾಮಾಂಜಿನಪ್ಪ, ಬ್ಯಾಟರಾಯಶೆಟ್ಟಿ, ಲಕ್ಷ್ಮಯ್ಯ, ಭಕ್ತರಹಳ್ಳಿ ಭೈರೇಗೌಡ, ರಮೇಶ್, ರವಿಕುಮಾರ್, ಕೃಷ್ಣಯ್ಯ, ರಾಜಶೇಖರ್, ಚಂದ್ರಶೇಖರ್, ಶ್ರೀಧರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಹೆಚ್ಚಿನ ರೈಲು ಸಂಚಾರವನ್ನು ಆರಂಭಿಸುವಂತೆ ಒತ್ತಾಯ

0

ಚಿಕ್ಕಬಳ್ಳಾಪುರ-–ಕೋಲಾರ ಮಾರ್ಗದಲ್ಲಿ ರೈಲು ಸಂಚಾರವನ್ನು ಹೆಚ್ಚಿಬೇಕೆಂದು ಸರ್ಕಾರಿ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ನಗರದಲ್ಲಿ ಸಭೆ ಸೇರಿದ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು, ಚಿಕ್ಕಬಳ್ಳಾಪುರ -ಕೋಲಾರ ಮಾರ್ಗದಲ್ಲಿ ಇದೀಗ ಕೇವಲ ಒಂದು ಬಾರಿ ಮಾತ್ರವೇ ರೈಲು ಸಂಚಾರವಿದ್ದು ಇನ್ನಷ್ಟು ರೈಲು ಸಂಚಾರವನ್ನು ಹೆಚ್ಚಿಸಲು ಸಂಬಂಧಿಸಿದ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲು ತೀರ್ಮಾನಿಸಲಾಯಿತು.
ರೈಲ್ವೆ ನಿಲ್ದಾಣದಲ್ಲಿ ಕಾಡುತ್ತಿರುವ ಮೂಲ ಸೌಕರ್ಯಗಳ ಕೊರತೆ, ರೈಲು ಸಂಚಾರದ ಕೊರತೆ, ಬೆಳಗಿನ ವೇಳೆ ಬೆಂಗಳೂರು ಕಡೆಗೆ ರೈಲು ಸಂಚಾರವಿಲ್ಲದಿರುವುದು ಸೇರಿದಂತೆ ಹಲವಾರು ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ನಂತರ ರೈಲ್ವೆ ನಿಲ್ದಾಣಕ್ಕೆ ತೆರಳಿ ಅಲ್ಲಿ ಪ್ರಯಾಣಿಕರಿಗೆ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ, ಸ್ವಚ್ಛತೆ, ನೈರ್ಮಲ್ಯ ಇನ್ನಿತರೆ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.
ರೈಲಿನ ಸಮಯ ಯಾವ ಪ್ರಯಾಣಿಕರಿಗೂ ಅನುಕೂಲವಾಗುತ್ತಿಲ್ಲ. ಇತರೆ ನಗರಗಳಿಗೆ ತೆರಳುವ ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಖಾಸಗಿ ಕ್ಷೇತ್ರದ ನೌಕರರು, ವರ್ತಕರು ಸೇರಿದಂತೆ ಯಾವುದೆ ವಿದವಾದ ಪ್ರಯಾಣಿಕರಿಗೂ ಈ ಸಮಯ ಸರಿಹೋಗುತ್ತಿಲ್ಲ. ಹಾಗಾಗಿ ಈ ಸಮಯವನ್ನು ಬದಲಿಸಿ ಪ್ರಯಾಣಿಕರಿಗೆ ಅನುಕೂಲ ಆಗುವಂತೆ ಹೆಚ್ಚಿನ ರೈಲುಗಳನ್ನು ಓಡಿಸಬೇಕಿದೆ. ಹಾಗೆಯೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆಂದು ನಿರ್ಮಿಸಿರುವ ಶೌಚಾಲಯದ ನಿರ್ವಹಣೆ ಸೂಕ್ತವಾಗಿಲ್ಲ. ಕುಡಿಯುವ ನೀರಿನ ಸೌಲಭ್ಯವಿಲ್ಲ. ಸಂಜೆ ನಂತರ ನಿಲ್ದಾಣದಲ್ಲಿ ಬೆಳಕಿನ ವ್ಯವಸ್ಥೆಯಿಲ್ಲ. ರಾತ್ರಿವೇಳೆ ಕಾವಲುಗಾರರೂ ಇಲ್ಲ. ಹಾಗಾಗಿ ಲಕ್ಷಾಂತರ ರೂಪಾಯಿಯ ಆಸ್ತಿಪಾಸ್ತಿ ಕಳ್ಳಕಾಕರ ಪಾಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೂಡಲೆ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಇಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು, ರೈಲು ಸಂಚಾರದ ಸಮಯವನ್ನು ಪ್ರಯಾಣಿಕರಿಗೆ ಅನುಕೂಲವಾಉವ ಸಮಯಕ್ಕೆ ಬದಲಿಸುವುದರ ಜತೆಗೆ ಹೆಚ್ಚಿನ ಸಂಚಾರವನ್ನು ಆರಂಭಿಸಬೇಕಿದೆ ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಎಂ.ಮುನಿಗುರ್ರಪ್ಪ, ಕಾರ್ಯದರ್ಶಿ ಎಸ್.ಎನ್.ಸತ್ಯನಾರಾಯಣಶೆಟ್ಟಿ, ಖಜಾಂಚಿ ಎಂ.ಶೀನಿವಾಸ್, ಸಂಘಟನಾ ಕಾರ್ಯದರ್ಶಿ ಡಿ.ಆರ್.ನರಸಿಂಹರಾಜು, ನಿರ್ದೆಶಕ ಬಿ.ಕೆ.ಮುನಿರತ್ನಮಾಚಾರಿ, ಎಂ.ಕೃಷ್ಣಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಎನ್.ಶಿವಣ್ಣ

0

ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಎನ್.ಶಿವಣ್ಣ ಅವರನ್ನು ಆಯ್ಕೆ ಮಾಡಿ ಕನ್ನಡ ಸಾಹಿತ್ಯ ಪರಿಷತ್ನ ತಾಲ್ಲೂಕು ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ನಗರದ ನಗರ್ತಪೇಟೆಯ ಕಾಳಿಕಾಂಬ ಕಮ್ಮಠೇಶ್ವರ ಸಮುದಾಯಭವನದಲ್ಲಿ ಗುರುವಾರ ಸಂಜೆ ನಡೆದ ಕಸಾಪ ಸಭೆಯಲ್ಲಿ ಸಿಟಿಜನ್ ಡಿಎಡ್ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿರುವ ಎನ್.ಶಿವಣ್ಣ ಅವರನ್ನು ೫ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
11jul1ಈ ತಿಂಗಳ ೨೯ರ ಸೋಮವಾರ ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಒಂದು ದಿನದ ಮಟ್ಟಿಗೆ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ನಿರ್ಧರಿಸಿ, ಸಮ್ಮೇಳನದ ಸಿದ್ಧತೆ, ಕಾರ್ಯಕ್ರಮಗಳ ರೂಪು ರೇಷೆಗಳು, ಅಂದಾಜು ವೆಚ್ಚ ಹಾಗೂ ಅದನ್ನು ಸರಿದೂಗಿಸುವ ಬಗೆ ಕುರಿತು ಚರ್ಚಿಸಲಾಯಿತು.
ಶೀಘ್ರದಲ್ಲೆ ಶಾಸಕರ ನೇತೃತ್ವದಲ್ಲಿ ತಾಲ್ಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ಸಮ್ಮೇಳನದ ಕಾರ್ಯ ಕಲಾಪ, ರೂಪು ರೇಷೆ ಹಾಗೂ ವಂತಿಗೆ ಸಂಗ್ರಹ ಕುರಿತು ಸಭೆ ನಡೆಸಲಾಗುವುದು. ಆ ನಂತರ ಸಮ್ಮೇಳನದ ಅಂದಾಜು ಖರ್ಚು ವೆಚ್ಚಗಳನ್ನು ನಿರ್ಧರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸುವ ಬಗ್ಗೆ ಚರ್ಚಿಸಿ ಕೃಷಿ, ಪರಿಸರ, ವೈದ್ಯಕೀಯ, ಸಾಹಿತ್ಯ, ಪತ್ರಿಕಾ ರಂಗ, ಸಾಮಾಜಿಕ ಸೇವೆ, ಸಾರ್ವಜನಿಕ ಸೇವೆ ಮುಂತಾದ ಹತ್ತು ಕ್ಷೇತ್ರಗಳಲ್ಲಿ ಸಾಧಕರನ್ನು ಸನ್ಮಾನಿಸಲು ಸಲಹೆಗಳನ್ನು ನೀಡಲಾಯಿತು.
ಕಸಾಪ ಅಧ್ಯಕ್ಷ ಕೃ.ನಾ.ಶ್ರೀನಿವಾಸ್, ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಎಸ್.ವಿ.ನಾಗರಾಜ್ರಾವ್, ವಿ.ಕೃಷ್ಣ, ಕೆ.ಎಂ.ವಿನಾಯಕ, ಎಂ.ಕೆಂಪಣ್ಣ, ವೈ.ಎನ್.ದಾಶರಥಿ, ಜಯಶ್ರೀ, ರಾಮಕೃಷ್ಣ, ಎಂ.ವೆಂಕಟೇಶಪ್ಪ, ಟಿ.ನಾರಾಯಣಸ್ವಾಮಿ, ಕೇದಾರನಾಥ್, ಚನ್ನಕೃಷ್ಣ, ಚಿಕ್ಕವೆಂಕಟರಾಯಪ್ಪ, ಸುಂದರಾಚಾರಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

0

9jul2ಶಿಡ್ಲಘಟ್ಟ ತಾಲ್ಲೂಕಿನ ಪಲಿಚೇರ್ಲು ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಬಿ.ಗೋಪಿ ಉಪಾಧ್ಯಕ್ಷರಾಗಿ ಮಮತಾ ಬುಧವಾರ ಆಯ್ಕೆಯಾದರು. ಚುನಾವಣಾಧಿಕಾರಿ ಸಣ್ಣ ನೀರಾವರಿ ಎಂಜಿನಿಯರ್ ಗಣಪತಿ ಸಾಕರೆ, ಪಿ.ಡಿ.ಒ ವಜ್ರೇಶ್, ಕಾರ್ಯದರ್ಶಿ ಆಂಜನೇಯರೆಡ್ಡಿ, ರಾಮಚಂದ್ರಪ್ಪ, ವೆಂಕಟಶಿವಪ್ಪ, ಪ್ರಕಾಶ್, ಡಿ.ವಿ.ವೆಂಕಟೇಶ್, ಗ್ರಾಮ ಪಂಚಾಯತಿ ಸದಸ್ಯರಾದ ಮಂಜುನಾಥ, ಅರುಣಾ, ಮುನಿಯಪ್ಪ, ರಾಧಮ್ಮ, ಗಂಗಪ್ಪ, ಶಾಂತಮ್ಮ, ಹೇಮ, ಶೈಲಮ್ಮ, ರಾಮಾಂಜಿನಪ್ಪ ಹಾಜರಿದ್ದರು.
 
9jul3ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಎನ್. ಪುಷ್ಪ ಮತ್ತು ಉಪಾಧ್ಯಕ್ಷರಾಗಿ ಗೌಡನಹಳ್ಳಿ ಚಿಕ್ಕನಾರಾಯಣಸ್ವಾಮಿ ಅವಿರೋಧವಾಗಿ ಬುಧವಾರ ಆಯ್ಕೆಯಾದರು. ಚುನಾವಣಾಧಿಕಾರಿ ಸಮಾಜ ಕಲ್ಯಾಣಾಧಿಕಾರಿ ಪುರುಷೋತ್ತಮ್, ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ, ಜಯರಾಮರೆಡ್ಡಿ, ಚಿಕ್ಕನಾರಾಯಣಪ್ಪ, ಶಿವಣ್ಣ, ಶ್ರೀನಿವಾಸ್, ವೆಂಕಟೇಶ್, ಕೆ. ದೇವಾ, ಬಾಲಕೃಷ್ಣ, ಸೋನ್ನೆಗೌಡ, ಚಂದ್ರಪ್ಪ, ಆಂಜಿನಪ್ಪ ಹಾಜರಿದ್ದರು.
 
9jul4ಶಿಡ್ಲಘಟ್ಟ ತಾಲ್ಲೂಕಿನ ವೈ.ಹುಣಸೇನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಶೀಗೆಹಳ್ಳಿಯ ಹರಿಪ್ರಸಾದ್ ಹಾಗೂ ಉಪಾಧ್ಯಕ್ಷರಾಗಿ ವೈ.ಹುಣಸೇನಹಳ್ಳಿಯ ದೇವರಾಜ್ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೆಶಕ ಆನಂದ್, ದೊಣ್ಣಹಳ್ಳಿ ರಾಮಣ್ಣ, ಗೊರಮಡಗು ರಾಮಾಂಜಿನಪ್ಪ, ಪಿಎಲ್ಡಿ ಬ್ಯಾಂಕ್ ನಿರ್ದೆಶಕ ಅಶ್ವತ್ಥಪ್ಪ, ಮುದ್ದುಕೃಷ್ಣ, ರಾಘವೇಂದ್ರ, ನಾರಾಯಣಸ್ವಾಮಿ, ವೇಣು, ರಾಜಣ್ಣ ಹಾಜರಿದ್ದರು.
 
9jul5ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ರಹಮತ್ಜಾನ್ ಹಾಗೂ ಉಪಾಧ್ಯಕ್ಷರಾಗಿ ಜೆ.ಎಂ.ನಾರಾಯಣಸ್ವಾಮಿ ಬುಧವಾರ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಾನುಜಯ್ಯ, ಸದಸ್ಯರಾದ ಶ್ರೀನಿವಾಸ್, ತಾಲ್ಲೂಕು ಪಂಚಾಯತಿ ವಲಿಬಾಷಾ, ಮಂಜುನಾಥ್, ಗೋಪಿನಾಥ್, ಗೋಪಾಲಕೃಷ್ಣಯ್ಯ, ಪಂಚಾಯತಿ ಪಿ.ಡಿ.ಓ.ಶಂಕರಪ್ಪ ಹಾಜರಿದ್ದರು.

ಕುಸಿದ ಬ್ರಿಟೀಷರ ಕಾಲದ ಮೋರಿ

0

ಇದು ಅತ್ಯಂತ ಪುರಾತನ ಮೋರಿ. 1883 ರಲ್ಲಿ ಬ್ರಿಟೀಷರ ಕಾಲದಲ್ಲಿ ನಿರ್ಮಾಣವಾದದ್ದು. ಕೆಳಗೆ ಕೆರೆಗೆ ನೀರು ಹರಿದರೆ, ಮೇಲೆ ರಸ್ತೆಯಲ್ಲಿ ವಾಹನಗಳ ಸಂಚಾರ ನಿರಂತರವಾಗಿರುತ್ತವೆ. ಶಿಡ್ಲಘಟ್ಟ ನಗರದಿಂದ ಜಂಗಮಕೋಟೆಗೆ ಹೋಗುವ ಮುಖ್ಯ ರಸ್ತೆಯಲ್ಲಿ ಬೋದಗೂರು ಗೇಟ್ ಬಳಿ ಇರುವ ಮೋರಿ ಇದು.
ಕಳೆದ ಒಂದು ತಿಂಗಳಲ್ಲಿ ಈ ಮೋರಿಯು ಕುಸಿದಿದೆ. ಈ ಮಾರ್ಗದಲ್ಲಿ ಅಧಿಕ ವಾಹನ ಸಂಚಾರದಿಂದ ದಿನೇ ದಿನೇ ಕುಸಿಯುತ್ತಿರುವ ಈ ಮೋರಿ ಹಂತಹಂತವಾಗಿ ಕುಸಿಯುತ್ತಿದೆ. ಲೋಕೋಪಯೋಗಿ ಇಲಾಖೆಯವರು ಮರಳು ತುಂಬಿದ ಚೀಲಗಳನ್ನು ರಸ್ತೆಯ ಮೇಲಿಟ್ಟು, ‘ಸೇತುವೆ ಶಿಥಿಲವಾಗಿದೆ, ನಿಧಾನವಾಗಿ ಚಲಿಸಿ’ ಎಂಬ ಫಲಕವನ್ನು ಹಾಕಿದ್ದಾರೆ. ಆದರೆ ಮೋರಿಯ ದುರಸ್ತಿಯೆಡೆಗೆ ಮಾತ್ರ ಕ್ರಮ ಕೈಗೊಂಡಿಲ್ಲ.
‘ಕಳೆದ ವರ್ಷವಷ್ಟೇ ಈ ರಸ್ತೆಯನ್ನು ಲಕ್ಷಾಂತರ ರೂಗಳ ಅಗಲೀಕರಣ ಮತ್ತು ಡಾಂಬರೀಕರಣ ಮಾಡಿದ್ದಾರೆ. ಆದರೆ 132 ವರ್ಷಗಳ ಹಳೆಯ ಮೋರಿಯನ್ನು ಸಧೃಢಗೊಳಿಸುವ ಬಗ್ಗೆ ಎಂಜಿನಿಯರುಗಳು ಕ್ರಮ ಕೈಗೊಂಡಿಲ್ಲ. ಇಷ್ಟು ಹಳೆಯ ಮೋರಿಯನ್ನು ಸ್ವಲ್ಪ ಆಸಕ್ತಿ ವಹಿಸಿ ಕಾಪಾಡಿದ್ದಿದ್ದರೆ, ಇನ್ನಷ್ಟು ವರ್ಷ ತೊಂದರೆಯಿರುತ್ತಿರಲಿಲ್ಲ. ಈ ರಸ್ತೆಯು ದಟ್ಟವಾದ ವಾಹನ ಸಂಚಾರದಿಂದ ಕೂಡಿದ್ದು, ಈ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಹರಿಸಬೇಕಿದೆ. ಇಲ್ಲದಿದ್ದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಕತ್ತಲಲ್ಲಿ ಪ್ರಾಣಾಪಾಯ ಸಂಭವಿಸಲೂ ಬಹುದು’ ಎಂದು ಮಳಮಾಚನಹಳ್ಳಿ ರವಿ ತಿಳಿಸಿದರು.