Home Blog Page 509

ಆಪ್ತಸಲಹೆ-ಏನು, ಏಕೆ, ಹೇಗೆ?

0

ಇತ್ತೀಚೆಗೆ ಆಪ್ತಸಲಹೆ ಮತ್ತು ಮನೋಚಿಕಿತ್ಸೆ ಎನ್ನುವ ಶಬ್ದಗಳು ಹೆಚ್ಚು ಪ್ರಚಲಿತವಾಗುತ್ತಿವೆ. ಹಾಗಿದ್ದರೂ ಜನಸಾಮಾನ್ಯರಲ್ಲಿ ಇವು ನಡೆಯುವ ರೀತಿ ಮತ್ತು ಇವುಗಳಿಂದ ಸಿಗಬಹುದಾದ ಪರಿಣಾಮಗಳ ಬಗೆಗೆ ಹೆಚ್ಚಿನ ತಿಳುವಳಿಕೆಯಿಲ್ಲ. ಇದರಿಂದ ಸಾಕಷ್ಟು ಜನರಿಗೆ ಅಗತ್ಯವಿದ್ದರೂ ಇವುಗಳಿಂದ ಪ್ರಯೋಜನ ಪಡೆಯಲಾಗುತ್ತಿಲ್ಲ.
ಆಪ್ತಸಲಹೆ ಎಂದರೇನು?
ಸರಳವಾಗಿ ಹೇಳುವುದಾದರೆ ಮಾನಸಿಕ ಸಮಸ್ಯೆ ಇರುವ ವ್ಯಕ್ತಿಗೆ (ಮಾಸವ್ಯ) ತನ್ನ ಸಮಸ್ಯೆಗಳಿಗೆ ಅವನದೇ ಆದ ರೀತಿಯಲ್ಲಿ ಪರಿಹಾರವನ್ನು ಹುಡುಕಿಕೊಳ್ಳಲು ಸಹಾಯ ಮಾಡುವುದೇ ಆಪ್ತಸಲಹೆ. ಜನಸಾಮಾನ್ಯರು ತಿಳಿದಿರುವಂತೆ ಆಪ್ತಸಲಹೆಗಾರರು ಉಪದೇಶ ಮಾಡುವುದಿಲ್ಲ, ಬುದ್ಧಿವಾದ ಹೇಳುವುದಿಲ್ಲ ಅಥವಾ ತಮಗೆ ಸರಿಯೆನಿಸುವ ಪರಿಹಾರವನ್ನು ಒಪ್ಪಿಕೊಳ್ಳಲು ಒತ್ತಾಯಿಸುವುದಿಲ್ಲ. ಇದನ್ನೆಲ್ಲಾ ಮನೆಯ ಹಿರಿಯರು, ಸ್ನೇಹಿತರು ಅಥವಾ ಧಾರ್ಮಿಕ ಮುಖಂಡರು ಮಾಡುತ್ತಾರೆ. ತಮ್ಮ ಅಭಿಪ್ರಾಯವನ್ನು ಇನ್ನೊಬ್ಬರ ಮೇಲೆ ಹೇರುವವನು ತಜ್ಞ ಆಪ್ತ ಸಲಹೆಕಾರನಲ್ಲ ಎಂದು ತಿಳಿಯಬಹುದು.
ಅಂದರೆ ಆಪ್ತಸಲಹೆಯ ನಿಯಮಗಳ ಪ್ರಕಾರ ರೋಗಿ ದಡ್ಡನೂ ಅಲ್ಲ, ಆಪ್ತಸಲಹೆಗಾರ ಮಹಾಜ್ಞಾನಿಯೂ ಅಲ್ಲ. ಮಾಸವ್ಯ ತನ್ನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಂಪೂರ್ಣ ಶಕ್ತಿಯುಳ್ಳವನಾಗಿರುತ್ತಾನೆ. ಆದರೆ ಸಮಸ್ಯೆಗಳ ಭಾರದಲ್ಲಿ ನಲುಗಿದ ಅವನಿಗೆ ಆ ಸಮಯದಲ್ಲಿ ಮಾನಸಿಕ ಗೊಂದಲವಿರುತ್ತದೆ. ಆಪ್ತಸಲಹೆಗಾರ ಅವನ ಗೊಂದಲಗಳನ್ನು ಪರಿಹರಿಸಿ ಚಿಂತನೆಗೆ ಸರಿಯಾದ ದಾರಿಯನ್ನು ತೋರಿಸುತ್ತಾರೆ. ಮಾಸವ್ಯನಿಗೆ ಅವನ ಶಕ್ತಿಯ ಅರಿವು ಮೂಡಿಸಿ ಅವನನ್ನು ಕ್ರಿಯೆಗೆ ಹಚ್ಚುತ್ತಾರೆ. ಮುಂದೆ ಮಾಸವ್ಯ ತನ್ನ ಸಮಸ್ಯೆಗಳಿಗೆ ತಾನೇ ಸಮಾಧಾನ ಕಂಡುಕೊಳ್ಳುತ್ತಾನೆ.
ಕೌಟುಂಬಿಕ ಅಥವಾ ಪತಿಪತ್ನಿಯರಿಗೆ ನೀಡುವ ಆಪ್ತಸಲಹೆಯಲ್ಲಿ ಸಂಬಂಧಗಳ ಸಿಕ್ಕನ್ನು ಬಿಡಿಸಿ, ಅದನ್ನು ಉಳಿಸಿ ಬೆಳೆಸಿಕೊಳ್ಳುವ ಅರಿವು ಮತ್ತು ತರಬೇತಿಯನ್ನು ನೀಡಲಾಗುತ್ತದೆ. ಇಲ್ಲೂ ಕೂಡ ಪತಿಪತ್ನಿಯರಿಬ್ಬರಿಗೂ ಒಪ್ಪಿಗೆಯಾಗುವಂತಹ ಪರಿಹಾರಗಳನ್ನು ಕಂಡುಕೊಳ್ಳಲು ಆಪ್ತಸಲಹೆಗಾರರು ಸಹಾಯಮಾಡುತ್ತಾನೆಯೇ ಹೊರತು, ತನಗೆ ಸರಿಯೆನಿಸಿದ ಪರಿಹಾರವನ್ನು ಒತ್ತಾಯದಿಂದ ಹೇರುವುದಿಲ್ಲ.
ಮನಶ್ಯಾಸ್ತ್ರ ಮತ್ತು ಮನೋವೈದ್ಯಕೀಯಶಾಸ್ತ್ರಗಳು ಬೇರೆ ಬೇರೆಯೇ?
ಕ್ಲಿನಿಕಲ್ ಸೈಕಾಲಜಿ ಮತ್ತು ಸೈಕಿಯಾಟ್ರಿ ಎರಡೂ ಮಾನಸಿಕ ಖಾಹಿಲೆಗಳಿಗೆ ಚಿಕಿತ್ಸೆ ನೀಡುವ ವಿಜ್ಞಾನಗಳಾದರೂ ಇವುಗಳಲ್ಲಿ ತುಂಬಾ ವ್ಯತ್ಯಾಸಗಳಿವೆ. ಮನೋವೈದ್ಯರುಗಳು ದೈಹಿಕ ನ್ಯೂನತೆಯಿಂದಾದ ಮತ್ತು ಮೆದುಳಿನಲ್ಲಿ ರಾಸಯನಿಕಗಳ ಸೃಜನೆಯ ವ್ಯತ್ಯಯದಿಂದಾದ ತೀವ್ರ ಮಾನಸಿಕ ರೋಗಗಳಿಗೆ ಔಷಧಿಗಳ ಮೂಲಕ ಚಿಕಿತ್ಸೆ ನೀಡುತ್ತಾರೆ. ಕೌನ್ಸೆಲ್ಲರ್‍ಗಳು ಮತ್ತು ಮನೋಚಿಕಿತ್ಸಕರು ಹಿಂಸಾ ಪ್ರವೃತ್ತಿಗಿಳಿಯದೆ, ತನ್ನ ಬಗ್ಗೆ ಮತ್ತು ಸುತ್ತಲಿನ ಪ್ರಪಂಚದ ಬಗೆಗೆ ಪೂರ್ಣ ಅರಿವಿರುವವರ ಮಾನಸಿಕ ತೊಂದರೆಗಳಿಗೆ ಔಷಧಿಗಳನ್ನು ನೀಡದೆ ಆಪ್ತಸಲಹೆಯ ಮೂಲಕ ಪರಿಹಾರ ಸೂಚಿಸುತ್ತಾರೆ. ಕೆಲವು ಸಾಮಾನ್ಯವೆನ್ನಿಸುವ ಮಾನಸಿಕ ತೊಂದರೆಗಳಿಗೆ ಯಾರಲ್ಲಿಗೆ ಹೋಗಬೇಕೆಂಬ ಗೊಂದಲವಿದ್ದರೆ ಕುಟುಂಬ ವೈದ್ಯರ ಸಲಹೆ ಪಡೆಯಬಹುದು.
ಆಪ್ತಸಲಹೆ ಮತ್ತು ಮನೋಚಿಕಿತ್ಸೆಗಳಲ್ಲಿ ವ್ಯತ್ಯಾಸವಿಯೇ?
ಜನಸಾಮಾನ್ಯರ ಮಟ್ಟದಲ್ಲಿ ಇವೆರೆಡೂ ಒಂದೇ ಆದರೂ ಕೆಲವು ತಾಂತ್ರಿಕ ವ್ಯತ್ಯಾಸಗಳಿವೆ. ಆಪ್ತಸಲಹೆಯನ್ನು ಸಾಮಾನ್ಯ ತರಬೇತಿಹೊಂದಿದವರು ತೀವ್ರವಲ್ಲದ ಮಾನಸಿಕ ಅಥವಾ ಕೌಟುಂಬಿಕ ಸಮಸ್ಯೆಗಳಿಗಾಗಿ ನೀಡುತ್ತಾರೆ. ಮನೋಚಿಕಿತ್ಸಕರು ತಕ್ಕ ವಿದ್ಯಾರ್ಹತೆ ಮತ್ತು ತರಬೇತಿ ಪಡೆದಿದ್ದು, ಮಾನಸಿಕ ಸಮಸ್ಯೆಗಳ ಆಳಕ್ಕೆ ಹೊಗಿ ವಿವಿಧ ರೀತಿಯ ಚಿಕಿತ್ಸೆ ಮತ್ತು ತರಬೇತಿ ನೀಡಬಲ್ಲವರಾಗಿರುತ್ತಾರೆ. ಸರಳವಾಗಿ ಹೇಳುವುದಾದರೆ ಮನೋಚಿಕಿತ್ಸೆ ಆಪ್ತಸಲಹೆಗಿಂತ ಹೆಚ್ಚು ತಾಂತ್ರಿಕವಾದದ್ದು ಮತ್ತು ಪರಿಣಾಮಕಾರಿಯಾದದ್ದು. ಸಾಮಾನ್ಯವಾಗಿ ಆಪ್ತಸಲಹೆ ನೀಡುವವರು ಮನೋಚಿಕಿತ್ಸೆಯಲ್ಲೂ ತರಬೇತಿ ಹೊಂದಿರುತ್ತಾರೆ ಹಾಗಾಗಿ ಅಗತ್ಯವೆನ್ನಿಸಿದಾಗ ಇವನು ಆಪ್ತಸಲಹೆಗಾರನೋ ಅಥವಾ ಮನೋಚಿಕಿತ್ಸಕನೋ ಎಂಬ ಗೊಂದಲಕ್ಕೆ ಬೀಳದೆ ಭೇಟಿಮಾಡಬಹುದು. ಈ ಲೇಖನದಲ್ಲಿ ಮನೋಚಿಕಿತ್ಸೆ ಎಂಬ ಶಬ್ದವನ್ನು ಹೆಚ್ಚು ಬಳಸಲಾಗಿಲ್ಲ.
ಹೇಗೆ ನಡೆಯುತ್ತದೆ?
ಮಾನಸಿಕ ಸಮಸ್ಯೆ ಇರುವ ವ್ಯಕ್ತಿ ಆಪ್ತಸಲಹೆಗಾಗಿ ಬಂದಾಗ ಕೌನ್ಸೆಲ್ಲರ್‍ಗಳು ಮೊದಲು ಅವನೊಡನೆ ಸಹೃದಯತೆಯಿಂದ ವರ್ತಿಸಿ ಒಂದು ಆತ್ಮೀಯ ವಾತವರಣ ಕಲ್ಪಿಸುತ್ತಾರೆ. ಇದರಿಂದ ವ್ಯಕ್ತಿಗೆ ತನ್ನ ಮನದಾಳವನ್ನು ಬಿಚ್ಚಿಡಲು ಸಾಧ್ಯವಾಗುತ್ತದೆ. ನಂತರ ಇಬ್ಬರೂ ಸೇರಿ ಮಾನಸಿಕ ಗೊಂದಲಗಳ ಸಿಕ್ಕು ಬಿಡಿಸುತ್ತಾ, ಪರಿಹಾರ ಹುಡುಕುತ್ತಾ ಹೋಗುತ್ತಾರೆ, ಇಲ್ಲಿ ಸಮಸ್ಯೆ ಇರುವ ವ್ಯಕ್ತಿ ನೆನಪಿಡಬೇಕಾದ ಮುಖ್ಯ ವಿಚಾರವೆಂದರೆ, ದೈಹಿಕ ಕಾಯಿಲೆಯನ್ನು ರೋಗಿಗೆ ಅರಿವಿಲ್ಲದೆ, ಅವನ ಸಹಕಾರವಿಲ್ಲದೆ [ಒಮ್ಮೊಮ್ಮೆ ವಿರೊಧವಿದ್ದರೂ] ಔಷಧಗಳ ಮೂಲಕ ಗುಣಡಿಸುವಂತೆ, ಮಾನಸಿಕ ತೊಂದರೆಗಳನ್ನು ಪರಿಹರಿಸಲಾಗುವುದಿಲ್ಲ. ವ್ಯಕ್ತಿಗೆ ತನ್ನ ಗೊಂದಲಗಳಿಂದ ಹೊರಬರಬೇಕೆನ್ನುವ ಇಚ್ಚೆ ಇರಬೇಕು; ಕೌನ್ಸೆಲ್ಲರ್ ಸೂಚಿಸಿದ ಪರಿಹಾರಗಳನ್ನು ಅಳವಡಿಸಿಕೊಂಡು ಅದರ ಫಲಿತಾಂಶಗಳ ಬಗ್ಗೆ ವರದಿ ನೀಡುತ್ತಾ ಸಹಕರಿಸಬೇಕು. ಕೌನ್ಸೆಲ್ಲರ್‍ನ ಹತ್ತಿರ ಮಂತ್ರದಂಡವೇನೂ ಇರುವುದಿಲ್ಲ, ಆತ ಮಾನಸಿಕ ಸಮಸ್ಯೆಗಳ ಆಳಕ್ಕೆ ಹೋಗಿ, ಅವುಗಳ ಸಿಕ್ಕು ಬಿಡಿಸಿ ವ್ಯಕ್ತಿಗೆ ಅದರ ಬಗ್ಗೆ ಅರಿವು ಮೂಡಿಸಬಲ್ಲ; ಪರಿಹಾರದ ಹಲವಾರು ಮಾರ್ಗಗಳನ್ನು ಅವುಗಳ ಒಳಿತು ಕೆಡಕುಗಳೊಂದಿಗೆ ವ್ಯಕ್ತಿಯ ಮುಂದಿಡಬಲ್ಲ; ನಂತರದ ಕ್ರಿಯೆಗಳ, ಅಂದರೆ ತನಗೆ ಸರಿಹೊಂದುವ ಮಾರ್ಗದ ಆಯ್ಕೆ ಮತ್ತು ಅದನ್ನು ಅಳವಡಿಸಿಕೊಳ್ಳುವ, ಬದಲಾಯಿಸಿಕೊಳ್ಳುವ ಸಂಪೂರ್ಣ ಜವಾವ್ದಾರಿ, ಸಮಸ್ಯೆ ಇರುವ ವ್ಯಕ್ತಿಯ ಮೇಲಿರುತ್ತದೆ. ಅವನ ಪ್ರಯತ್ನಕ್ಕೆ, ಎಲ್ಲಾ ಹಂತಗಳಲ್ಲೂ ಕೌನ್ಸೆಲ್ಲರ್‍ನ ಸಂಪುರ್ಣ ಸಲಹೆ ಸಹಕಾರಗಳಿದ್ದರೂ, ಪ್ರಾಥಮಿಕ ಜವಾಬ್ದಾರಿ ವ್ಯಕ್ತಿಯ ಮೇಲಿರುತ್ತದೆ.
ಅಂದರೆ ಇದು ನಿರುಪಯುಕ್ತವೇ?
ಹಾಗಂತ ಆಪ್ತಸಲಹೆ ಅಂದರೆ ಹೇಳಿದ್ದನ್ನು ಸಮಾಧಾನದಿಂದ ಕೇಳುವುದು, ಒಂದಿಷ್ಟು ಸಹಾನುಭೂತಿ ವ್ಯಕ್ತಪಡಿಸುವುದು, ಸೂಕ್ತಸಲಹೆ ನೀಡಿ ಪೀಸು ಕೀಳುವುದು- ಇಷ್ಟೇ ಅಂತ ಸಿನಿಕರಾಗಬೇಕಿಲ್ಲ! ಬರಿಯ ಉಪದೇಶದಿಂದ ಬದಲಾವಣೆ ಅಸಾಧ್ಯ. ಉಪದೇಶ, ಟೀಕೆ ಮಾಡದೇ ಇರುವುದನ್ನು. ಕೌನ್ಸೆಲ್ಲರ್‍ಗಳಿಗೆ ಕಲಿಸಲಾಗುತ್ತದೆ. ಕೌನ್ಸೆಲ್ಲರ್‍ಗಳು ಸಮಸ್ಯೆಗಳನ್ನು ಸಲಹೆಗಾಗಿ ಬಂದವನ ದೃಷ್ಟಿಯಿಂದ ನೊಡಿ, ಅವನಿಗೆ ಮಾನಸಿಕ ಗೊಂದಲಗಳ ಅರಿವು ಮೂಡಿಸಿದ ನಂತರ ಸೂಕ್ತ ಸಲಹೆ ನೀಡಿದರೆ ಪರಿಣಾಮಕಾರಿಯಾಗುತ್ತದೆ. ವೃತ್ತಿಯ ಬಗ್ಗೆ ಕಾಳಜಿ, ಅಗತ್ಯ ವಿದ್ಯಾರ್ಹತೆ, ತರಬೇತಿ ಮತ್ತು ಪ್ರಮುಖವಾಗಿ ಸಾಕಷ್ಟು ಅನುಭವವಿರುವ ಕೌನ್ಸೆಲ್ಲರ್‍ಗಳು ಶೀಘ್ರವಾಗಿ ಮತ್ತು ಪರಿಣಾಮಕಾರಿಯಾಗಿ ಫಲಿತಾಂಶ ನೀಡಬಲ್ಲರು.
ಆಪ್ತಸಲಹೆ ಬಗ್ಗೆ ಕೀಳರಿಮೆ
ಮಾನಸಿಕ ರೋಗಗಳ ಬಗ್ಗೆ ಜನಸಾಮಾನ್ಯರಲ್ಲಿ ಅಜ್ಞಾನ ಮತ್ತು ಭಯವಿರುವುದರಿಂದ ಈಗಲೂ ತಜ್ಞರ ಬದಲಾಗಿ ಮಾಂತ್ರಿಕರು ಮತ್ತು ಬಾಬಾಗಳಿಂದ ಪರಿಹಾರ ಹುಡುಕುತ್ತಾರೆ. ಇದರ ಬಗ್ಗೆ ಅರಿವಿರುವವರೂ, ಕೌನ್ಸೆಲ್ಲರ್‍ಗಳ ಅಥವಾ ಮನೋವೈದ್ಯರ ಬಳಿಗೆ ಚಿಕಿತ್ಸೆಗೆ ಹೋಗುವುದು ಸಾಮಾಜಿಕ ಕಳಂಕ ಎಂದುಕೊಂಡು ಹಿಂಜರಿಯುತ್ತಾರೆ. ಮೆಟ್ರೋಪಾಲಿಟನ್ ನಗರಗಳಲ್ಲಿ ಪರಿಸ್ಥಿತಿ ತ್ವರಿತವಾಗಿ ಬದಲಾಗುತ್ತಿದ್ದರೂ, ಉಳಿದಂತೆ ನಿಧಾನವಾಗಿ ಅರಿವು ಮೂಡುತ್ತಿದೆ. ನಾವೆಲ್ಲಾ ನೆನಪಿಡಬೇಕಾದ್ದು- ಸಮಸ್ಯೆ ಯಾವುದೇ ವಿಷಯದ್ದೇ ಇರಲಿ ಅದನ್ನು ಪರಿಹರಿಸುವ ಮೊದಲ ಹಂತ ಇರುವ ಸಮಸ್ಯೆಯನ್ನು ಇರುವಂತೆ ಒಪ್ಪಿಕೊಳ್ಳುವುದು. ವಸ್ತುಸ್ಥಿತಿಯನ್ನು ಅಲ್ಲಗಳೆಯುತ್ತಾ ಹೋದರೆ ಹತ್ತಿಕ್ಕಲ್ಪಟ್ಟ ಭಾವನೆಗಳು ಸ್ಪೋಟಗೊಳ್ಳುವ ಅಪಾಯವಿರುತ್ತದೆ. ಆಗ ಬೇಕಾಗುವ ಚಿಕಿತ್ಸೆಗೆ ಹಣ ಮತ್ತು ಸಮಯ ಹೆಚ್ಚಾಗಬಹುದು. ಹಾಗಾಗಿ ಯಾವುದೇ ಮಾನಸಿಕ ಸಮಸ್ಯೆ ಎದುರಾದಾಗ ಮೊದಲು ಆಪ್ತರಲ್ಲಿ ಹಂಚಿಕೊಳ್ಳಬೇಕು. ಸಮಸ್ಯೆಯ ಬಾದನೆ ಮುಂದುವರೆದರೆ ಕುಟುಂಬ ವೈದ್ಯರ ಸಲಹೆ ಪಡೆಯುವಲ್ಲಿ ವಿಳಂಬ ಮಾಡಬಾರದು.
ಆಪ್ತಸಲಹೆ ಯಾವಾಗ?
ನಮಗೆಲ್ಲರಿಗೂ ಹಲವಾರು ರೀತಿಯ ಮಾನಸಿಕ ಕಿರಿಕಿರಿಗಳಿರುತ್ತವೆ. ಇವುಗಳಿಗೆ ಕಾರಣಗಳೇನೇ ಇದ್ದರೂ, ಇವೆಲ್ಲದರ ಮಧ್ಯೆ ನಿತ್ಯಜೀವನ ಸಾಗುತ್ತಿರುತ್ತದೆ. ಈ ಮಾನಸಿಕ ತುಮುಲ ತೊಳಲಾಟಗಳು,
• ನಮ್ಮ ಹಸಿವು ನಿದ್ದೆಗಳನ್ನು ಕೆಡಿಸುವ ಹಂತಕ್ಕೆ ಬಂದರೆ,
• ದೇಹದ ಮೇಲೆ ಇತರ ಪ್ರತಿಕೂಲ ಪರಿಣಾಮ ಉಂಟುಮಾಡತೊಡಗಿದರೆ,
• ಸ್ನೇಹ ಸಂಬಂಧಗಳನ್ನು ಮುರಿಯಲು ಕಾರಣವಾದರೆ,
• ಸುತ್ತಲಿನ ಜನಗಳೊಡನೆ ದಿನ ನಿತ್ಯದ ವ್ಯವಹಾರಕ್ಕೆ ಅಡ್ಡಿಮಾಡತೊಡಗಿದರೆ,
• ಆತ್ಮಹತೆಯ ಅಥವಾ ಇತರ ಹಿಂಸಾಕ್ರಿಯೆಗಳ ಯೋಚನೆ ಪದೇ ಪದೇ ಬರುತ್ತಿದ್ದರೆ
ನಮಗೆ ಆಪ್ತಸಲಹೆಯ ಅಗತ್ಯವಿದೆ ಎಂದು ತಿಳಿಯಬೇಕು. ಎಲ್ಲ ದೈಹಿಕ ಕಾಯಿಲೆಗಳಿಗೆ ಮನಸ್ಸೇ ಮೂಲವೇನೂ ಅಲ್ಲದಿದ್ದರೂ ಮಾನಸಿಕ ವ್ಯಾಧಿಗಳು ಇರುವ ಕಾಹಿಲೆಗಳ ತೀವ್ರತೆಯನ್ನು ಜಾಸ್ತಿ ಮಾಡಬಹುದು. ಮಾನಸಿಕ ತಳಮಳ ಅಥವಾ ಒತ್ತಡದಿಂದ ಬರುವ ಕಾಯಿಲೆಗಳಿಗೆ ಮನೋದೈಹಿಕ ಖಾಯಿಲೆಗಳು ಎನ್ನುತ್ತಾರೆ. ಇವುಗಳ ಬಗ್ಗೆ ಕುಟುಂಬ ವೈದ್ಯರಲ್ಲಿ ಸಲಹೆ ಪಡೆದು, ಅಗತ್ಯವೆನಿಸಿದಲ್ಲಿ ಕೌನ್ಸೆಲ್ಲರ್‍ಗಳನ್ನು ಭೇಟಿಮಾಡಬಹುದು.
ಖರ್ಚು, ಅವಧಿ
ಕೌನ್ಸೆಲ್ಲರ್‍ಗಳಿಗೆ ಕೊಡಬೇಕಾದ ಫೀಸು ಸಾಮಾನ್ಯವಾಗಿ ಭೇಟಿಗೆ ಇಂತಿಷ್ಟು ಎಂದಿರುತ್ತದೆ. ಇದರ ಬಗ್ಗೆ ಮತ್ತು ನಮಗೆ ಬೇಕಾದ ಇತರ ವಿವರಗಳನ್ನು ಪ್ರಥಮ ಭೇಟಿಯಲ್ಲೇ ಪಡೆದುಕೊಳ್ಳಬೇಕು. ಭೇಟಿಯ ಅವಧಿ ವಾರಕ್ಕೊಮ್ಮೆ ಸುಮಾರು ಒಂದು ಗಂಟೆಯಷ್ಟಿರುತ್ತದೆ. ಪೂರ್ಣ ಚಿಕಿತ್ಸೆಯ ಸಮಯವನ್ನು ನಿಖರವಾಗಿ ಹೇಳಲಾಗದಿದ್ದರೂ ಇದರ ಅಂದಾಜನ್ನು ಪ್ರಥಮ ಭೇಟಿಯಲ್ಲಿ ಪಡೆದುಕೊಳ್ಳಬಹುದು. ನಾವು ಹಂಚಿಕೊಂಡ ವೈಯುಕ್ತಿಕ ವಿಷಯಗಳನ್ನು ನಮ್ಮ ಒಪ್ಪಿಗೆ ಇಲ್ಲದೆ ಕೌನ್ಸೆಲ್ಲರ್‍ಗಳು ಇತರರಿಗೆ ತಿಳಿಸುವಂತಿಲ್ಲ. ಇದರ ಬಗ್ಗೆಯೂ ಅವರಿಂದ ಆಶ್ವಾಸನೆ ಪಡೆದುಕೊಳ್ಳಬಹುದು.
ಕೊನೆಯ ಮಾತು
ಮಾನಸಿಕ ತೊಂದರೆಗಳು ಜೀವಕ್ಕೆ ಅಪಾಯಕಾರಿಯಲ್ಲದಿದ್ದರೂ, ದಿನನಿತ್ಯದ ಬದುಕನ್ನು ಅಸಹನೀಯವಾಗಿಸುತ್ತದೆ. ಸರಿಯಾದ ಸಮಯದಲ್ಲಿ ಸರಿಯಾದ ತಜ್ಞರಿಂದ ಪಡೆದ ಆಪ್ತಸಲಹೆ ಜೀವನಕ್ಕೆ ಹೊಸ ದಿಕ್ಕು, ಆಯಾಮಗಳನ್ನು ನೀಡಬಲ್ಲದು. ಹಾಗಾಗಿ ಈ ಬಗ್ಗೆ ಹಿಂಜರಿಕೆ ಇಟ್ಟುಕೊಳ್ಳಬೇಕಾಗಿಲ್ಲ.
ವಸಂತ್ ನಡಹಳ್ಳಿ

ಶಿಡ್ಲಘಟ್ಟದಲ್ಲಿ ಐದನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ದತೆ

0

ಗಡಿನಾಡು ಶಿಡ್ಲಘಟ್ಟದಲ್ಲಿ ಐದನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ದತೆಗಳು ನಡೆದಿವೆ.
ಕೋಲಾರ ಜಿಲ್ಲೆಯಿಂದ ಬೇರ್ಪಟ್ಟು ಪ್ರತ್ಯೇಕವಾಗಿ ಅಸ್ಥಿತ್ವಕ್ಕೆ ಬಂದ ನೂತನ ಚಿಕ್ಕಬಳ್ಳಾಪುರ ಜಿಲ್ಲೆಯ ಮೊಟ್ಟ ಮೊದಲ ಮೂರು ದಿನಗಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಈವರೆಗೂ ನಾಲ್ಕು ತಾಲೂಕು ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಜನತೆ ಮತ್ತೊಮ್ಮೆ ಕನ್ನಡಮ್ಮನ ತೇರು ಎಳೆಯಲು ತುದಿಗಾಲಲ್ಲಿ ನಿಂತಿದ್ದು ಅದಕ್ಕಾಗಿ ಸಡಗರ ಸಂಭ್ರಮದಿಂದ ಸಿದ್ದತೆಗಳನ್ನು ನಡೆಸಲಾಗುತ್ತಿದೆ.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದ ಸೇವೆಯನ್ನು, ಕೊಡುಗೆಯನ್ನು ನೀಡಿದ ಎನ್.ಶಿವಣ್ಣರವರ ಸಮ್ಮೇಳನಾಧ್ಯಕ್ಷತೆಯಲ್ಲಿ ಇದೆ ತಿಂಗಳ 29 ರಂದು ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಸಮ್ಮೇಳನ ನಡೆಯಲಿದ್ದು ಈ ಬಗ್ಗೆ ಈಗಾಗಲೇ ಕೈಗೊಂಡ ಸಿದ್ದತೆಗಳ ಬಗ್ಗೆ ಸಾಹಿತ್ಯ ಪರಿಷತ್‍ನ ತಾಲೂಕು ಅಧ್ಯಕ್ಷ ಕೃ.ನಾ.ಶ್ರೀನಿವಾಸ್ ಹಾಗೂ ಅವರ ಬಳಗದವರು ಸುದ್ದಿಗೋಷ್ಠಿ ನಡೆಸಿ ನೀಡಿದ ವಿವರ ಹೀಗಿದೆ.
ಜುಲೈ 29 ರ ಬೆಳಗ್ಗೆ 8.30ಕ್ಕೆ ವಾಸವಿ ಕಲ್ಯಾಣ ಮಂಟಪದ ಆವರಣದಲ್ಲಿ ತಹಸೀಲ್ದಾರ್ ಜಿ.ಎ.ನಾರಾಯಣಸ್ವಾಮಿ ರವರು ರಾಷ್ಟ್ರಧ್ವಜ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ರವರು ನಾಡಧ್ವಜವನ್ನು ಹಾಗೂ ಸಾಹಿತ್ಯ ಪರಿಷತ್‍ನ ತಾಲೂಕು ಅಧ್ಯಕ್ಷರಾದ ಕೃ.ನಾ.ಶ್ರೀನಿವಾಸ್ ರವರು ಪರಿಷತ್‍ನ ಧ್ವಜಾರೋಹಣ ಕಾರ್ಯಕ್ರಮದೊಂದಿಗೆ ಸಮ್ಮೇಳಕ್ಕೆ ಚಾಲನೆ ನೀಡಲಾಗುವುದು ಎಂದರು.
ನಂತರ 9.30ಕ್ಕೆ ನಗರದ ಮಿನಿ ವಿಧಾನಸೌಧದಿಂದ ಸಮ್ಮೇಳನಾಧ್ಯಕ್ಷರ ಹಾಗೂ ಕನ್ನಡ ತಾಯಿ ಭುವನೇಶ್ವರಿಯ ಮೆರವಣಿಗೆ ಆರಂಭವಾಗಲಿದ್ದು ಆರಕ್ಷಕ ವೃತ್ತ ನಿರೀಕ್ಷಕ ಬಿ.ಎಲ್.ಶ್ರೀನಿವಾಸಮೂರ್ತಿ ಮೆರವಣಿಗೆಗೆ ಚಾಲನೆ ನೀಡಲಿದ್ದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವೆಂಕಟಾಚಲಪತಿರವರು ಉಪಸ್ಥಿತಿಯಿರುತ್ತಾರೆ. ಮೆರವಣಿಗೆಯು ಪ್ರವಾಸಿ ಮಂದಿರ ರಸ್ತೆಯಲ್ಲಿ ಸಾಗಿ ಕೋಟೆ ವೃತ್ತದ ಮೂಲಕ ಸಮ್ಮೇಳನ ನಡೆಯುವ ವಾಸವಿ ಕಲ್ಯಾಣ ಮಂಟಪಕ್ಕೆ ಆಗಮಿಸಲಿದೆ.
ಡೊಳ್ಳು ಕುಣಿತ ಸೇರಿದಂತೆ ನಾನಾ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆಯಲ್ಲದೆ ನಾಡ ಧ್ವಜದ ಭಾರೀ ಗಾತ್ರದ ಬಾವುಟಗಳು ಈ ಬಾರಿಯ ಮೆರವಣಿಗೆಗೆ ಹೆಚ್ಚು ಮೆರಗು ನೀಡಲಿವೆ ಎಂದು ವಿವರಿಸಿದರು.
ಮೆರವಣಿಗೆಯ ನಂತರ ವಾಸವಿ ಕಲ್ಯಾಣ ಮಂಟಪದಲ್ಲಿ ಶಾಸಕ ಎಂ.ರಾಜಣ್ಣರವರು ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಭುವನೇಶ್ವರಿ ಭಾವಚಿತ್ರ ಅನಾವರಣವನ್ನು ತಾಲೂಕು ಪಂಚಾಯಿತಿ ಅಧ್ಯಕ್ಷೆ ಆಂಜಿನಮ್ಮ ಹಾಗು ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ನಗರಸಭೆ ಅಧ್ಯಕ್ಷರಾದ ಮುಷ್ಠರಿತನ್ವೀರ್‍ರವರು ನೆರವೇರಿಸುವರು.
ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಎಸ್.ವಿ.ನಾಗರಾಜರಾವ್ ಪ್ರಾಸ್ತಾವಿಕ ನುಡಿ ನುಡಿಯಲಿದ್ದು ಡಾ.ಡಿ.ಟಿ.ಸತ್ಯನಾರಾಯಣರಾವ್ ನಿಕಟಪೂರ್ವ ಅಧ್ಯಕ್ಷರ ನುಡಿಗಳನ್ನು ನುಡಿಯಲಿದ್ದಾರೆ. ಸಮ್ಮೇಳಾನಾಧ್ಯಕ್ಷರಾದ ಎನ್.ಶಿವಣ್ಣ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಿದರೆ ಕನ್ನಡ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷರಾದ ವೈ.ಎಲ್.ಹನುಮಂತರಾವ್ ನೆರವೇರಿಸಿಕೊಡಲಿದ್ದಾರೆ ಎಂದು ವಿವರಿಸಿದರು.
ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಿವಲೀಲಾರಾಜಣ್ಣ, ಎಸ್.ಎಂ.ನಾರಾಯಣಸ್ವಾಮಿ, ಶೋಭಜೈಪ್ರಕಾಶ್, ಕೆ.ಎಂ.ಸತೀಶ್, ಕೋಚಿಮುಲ್ ನಿರ್ದೇಶಕರಾದ ಬಂಕ್ ಮುನಿಯಪ್ಪ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಸಿ.ಎಂ.ಗೋಪಾಲ್, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಅಮೃತ್‍ಕುಮಾರ್, ಮಂಚನಬೆಲೆ ಶ್ರೀನಿವಾಸ್, ಖಜಾಂಚಿ ವಾಸುದೇವಮೂರ್ತಿ ಹಾಗು ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಅಂದು ಮದಾಹ್ನ 2 ಘಂಟೆಗೆ ಮೊದಲ ಗೋಷ್ಠಿ ಆರಂಭವಾಗಲಿದ್ದು ಕನ್ನಡ ಭಾಷೆ ಮತ್ತು ಸವಾಲುಗಳು ವಿಷಯದ ಬಗ್ಗೆ ನಿವೃತ್ತ ಪ್ರಾಂಶುಪಾಲರಾದ ಮಹಮ್ಮದ್‍ಖಾಸಿಂ ರವರು ವಿಷಯ ಮಂಡನೆ ಮಾಡಲಿದ್ದಾರೆ. ಹಾಗೆಯೆ ಮಹಿಳಾ ಜಾಗೃತಿ ಮತ್ತು ಶಿಕ್ಷಣ ವಿಚಾರವಾಗಿ ಉಪನ್ಯಾಸಕಿ ಡಾ.ಜಿ.ಸುಧಾ ವಿಷಯ ಮಂಡಿಸಲಿದ್ದು ಪ್ರಸ್ತುತ ಶಾಶ್ವತ ನೀರಾವರಿ ಹೋರಾಟ ವಿಚಾರವಾಗಿ ರೈತಸಂಘ ಹಾಗು ಹಸಿರುಸೇನೆಯ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ವಿಷಯ ಮಂಡನೆ ಮಾಡಲಿದ್ದಾರೆ. ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ.
ಗೋಷ್ಠಿಯ ನಂತರ ಕವಿಗೋಷ್ಠಿ ಆರಂಭವಾಗಲಿದ್ದು ಸರಕಾರಿ ಪ್ರಥಮ ದರ್ಜೆ ಮಹಿಲಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಆರ್.ನರಸಿಂಹಮೂರ್ತಿ ಅಧ್ಯಕ್ಷತೆವಹಿಸಲಿದ್ದು ಕು.ಅನಂತಲಕ್ಷ್ಮಿ, ಆರ್.ಸುಂದರಾಚಾರಿ, ನಾರಾಯಣಕುಲಕರ್ಣಿ, ಪಿ.ಎನ್.ಮುನೀರ್, ಡಿ.ಕೆ.ಕವಿತಾ ಭಾಸ್ಕರ್, ಎಸ್.ಕಾಶೀನಾಥ್, ರಾಜೇಶ್ವರಿ, ಸಿ.ಮೀನಾ, ಬಿ.ಕೆ.ರವಿ, ಕೆ.ಎನ್.ವೆಂಕಟಾಚಾರಿ, ತಮ್ಮ ಕವನ ವಾಚನ ಮಾಡಲಿದ್ದಾರೆ.
ಸಂಜೆ 4-15 ಕ್ಕೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು ಅಧ್ಯಕ್ಷತೆಯನ್ನು ರಾಜ್ಯ ವಕೀಲರ ಸಂಘದ ಒಕ್ಕೂಟದ ಅಧ್ಯಕ್ಷರಾದ ಕೆ.ಎನ್.ಸುಬ್ಬಾರೆಡ್ಡಿ ವಹಿಸಿದರೆ ಅತಿಥಿಗಳಾಗಿ ತಹಸೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ತಾ.ಪಂ ಇಓ ಕೆ.ರಾಮಾನುಜಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ, ನಗರಸಭೆ ಪ್ರಭಾರಿ ಆಯುಕ್ತರಾದ ಎಸ್.ಎ.ರಾಮ್‍ಪ್ರಕಾಶ್, ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಸಂಜೆ 5 ಘಂಟೆಗೆ ಸಮಾರೋಪ ಸಮಾರಂಭದಲ್ಲಿ ಮಾಜಿ ಸಾಸಕ ವಿ.ಮುನಿಯಪ್ಪ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ನಗರಸಭೆ ಉಪಾಧ್ಯಕ್ಷೆ ಸುಮಿತ್ರ ಎಸ್.ಎಂ.ರಮೇಶ್, ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎನ್.ಕೆ.ಗುರುರಾಜರಾವ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ನಾಗರಾಜ್ ಮತ್ತಿತರರು ಭಾಗವಹಿಸಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮ್ಮೇಳನಾಧ್ಯಕ್ಷರಾದ ಎನ್.ಶಿವಣ್ಣ ವಹಿಸಲಿದ್ದಾರೆ.
ಅಂದು ಸಂಜೆ 6.30 ಕ್ಕೆ ಸಾಂಸ್ಕøತಿಕ ಕಾರ್ಯಕಮ್ರಗಳು ನಡೆಯಲಿದ್ದು ಕಡುಬುಗೆರೆ ಮುನಿರಾಜು ಮತ್ತು ತಂಡದವರಿಂದ ಸುಗಮಸಂಗೀತ ಏರ್ಪಡಿಸಲಾಗಿದೆ.

ಡಾಲರ್ಸ್ ಡ್ಯಾಫೋಡಿಲ್ಸ್

0

ಪ್ರಸ್ತುತ ಜಾಗತೀಕರಣದ ಪ್ರಭಾವದಿಂದಾಗಿ ಮತ್ತು ಬಹುತೇಕ ಮಧ್ಯಮ ಮೇಲ್ವರ್ಗದ ಪಾಲಕರ ಕಾನ್ವೆಂಟ್ ಮೋಹದಿಂದಾಗಿ ಇಂದು ಕನ್ನಡ ಭಾಷೆ ಬಡವಾಗುತ್ತಿದೆ. ಬದುಕಿನ ಎಲ್ಲಾ ಹಂತಗಳಲ್ಲೂ ಇಂಗ್ಲೀಷ್ ಚಾಲ್ತಿಗೆ ಬರುತ್ತಿದೆ. ಕನ್ನಡ ಭಾಷೆಯ ಬೆಳವಣಿಗೆಗೆ ಇಂಗ್ಲೀಷ್ ಭಾಷಾ ಮೋಹ ಅಡ್ಡಿಯನ್ನೊಡ್ಡುತ್ತಿದೆ. ಇದು ಹೀಗೆ ಮುಂದವರೆದರೆ ಮುಂದೊಂದು ದಿನ ಕನ್ನಡ ಭಾಷೆ ಅನಾಥವಾಗುತ್ತದೆ. ಎಂಬಂಥ ಮಾತುಗಳನ್ನು ದಿನನಿತ್ಯ ನಾವು ಕೇಳುತ್ತಿದ್ದೇವೆ. ಇದರಲ್ಲಿ ಸತ್ಯವಿಲ್ಲವೆಂದು ವಾದಿಸುವುದಿಲ್ಲ. ಆದರೆ ಅದರ ಇನ್ನೊಂದು ಮುಖವನ್ನು ನೋಡುವ ಅಗತ್ಯವೂ ನಮ್ಮೆದುರಿಗಿದೆ.
ಇಂದು ಬಹುತೇಕ ಪಾಲಕರ ಕನಸೆಂದರೆ ತಮ್ಮ ಮಕ್ಕಳು ಚೆನ್ನಾಗಿ ಇಂಗ್ಲೀಷ್ ಕಲಿಯಬೇಕು. ಅವರು ತಮ್ಮನ್ನು ಮಮ್ಮಿ, ಡ್ಯಾಡಿ ಅಂತಲೇ ಕರೆಯಬೇಕು. ಅನಂತರ ಅವರು ಇಂಜಿನಿಯರ್ ಅಥವಾ ಡಾಕ್ಟರ್‍ಗಳೇ ಆಗಬೇಕು. ವಿದೇಶಗಳಿಗೆ ಕಡ್ಡಾಯವಾಗಿ ತೆರಳಬೇಕು. ಒಟ್ಟಾರೆ ದುಡ್ಡು ಮಾಡಬೇಕು. ಐಷರಾಮಿ ಜೀವನ ನಡೆಸುವಂತಾಗಬೇಕು. ಡಾಲರ್ ಗಳಿಕೆಯೇ ಬದುಕಿನ ಪರಮೋದ್ದೇಶ ಹೀಗಾಗಿ ತಮ್ಮ ಮಕ್ಕಳನ್ನು ಎಷ್ಟೇ ಕಷ್ಟವಾದರು ಸರಿ ಖರ್ಚು ಬಂದರೂ ಸರಿ ಗರಿಗರಿಯಾದ ಯುನಿಫಾರ್ಮ್‍ನಲ್ಲಿ ಕನ್ವೆಂಟ್‍ಗಳಿಗೆ, ಇಂಗ್ಲೀಷ್ ಮಾಧ್ಯಮ ಸ್ಕೂಲುಗಳಿಗೆ ಕಳಿಸಲು ಹೆಣಗಾಡುತ್ತಾರೆ.
ನಮ್ಮ ರಾಷ್ಟ್ರ ಕವಿ ಕುವೆಂಪುರವರು ಹೇಳಿದ ಮಾತು ‘ಮಾತೃ ಭಾಷೆಯಲ್ಲಿ ಕಲಿತದ್ದು ಮಾತ್ರ ಮೈಗೆ ಹತ್ತುತ್ತದೆ’ ಎಂಬುದನ್ನು ಮರೆಯುತ್ತಾರೆ. ಕಾರಣ ಸ್ಪಷ್ಟ ಎಲ್ಲರೂ ಸುತ್ತಮುತ್ತ ನೋಡುತ್ತಿರುತ್ತಾರೆ. ಅಕ್ಕ ಪಕ್ಕದವರ ಮಕ್ಕಳನ್ನು ಗಮನಿಸಿರುತ್ತಾರೆ ಆ ಮಕ್ಕಳ ಪಾಲಕರನ್ನೆ ತಮ್ಮ ಆದರ್ಶವಾಗಿಸಿಕ್ಕೊಳ್ಳುತ್ತಾರೆ.
ಸಮೂಹ ಸನ್ನಿಗೆ ಉತ್ತರ ಯಾ ಪರಿಹಾರ ಕಷ್ಟ. ಈ ತನ್ಮಧ್ಯೆ ಒಂದಿಷ್ಟು ಮಂದಿ, ಕನ್ನಡದ ಬೆಳವಣಿಗೆ ಕುಗ್ಗುತ್ತದೆ ಎಂಬ ಆತಂಕದಲ್ಲಿ ಅಷ್ಟಿಷ್ಟು ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಇದೆಲ್ಲಾ ವಾಸ್ತವದ ಒಂದು ಮಗ್ಗಲು ಮಾತ್ರ.
ಯಾರು ಇಂದು ಅಷ್ಟಾಗಿ ತಲೆಕೆಡಿಸಿಕೊಳ್ಳದ ಸಂಗತಿ ಎಂದರೆ – ಇಂಗ್ಲೀಷ್ ಬೇಕು ಅನಿವಾರ್ಯವೂ ಹೌದು. ಅದು ಡಾಲರ್ಸ್‍ಗಳಿಗೆ ಸನ್ನೆಯೂ ಆಗಬಹುದು. ಆದರೆ ಎಂಥ ಇಂಗ್ಲೀಷ್? ಹಿಂದೆ ಇಲ್ಲ ಬ್ರಿಟಿಷರು ಶಿಕ್ಷಣ ಪದ್ದತಿಯನ್ನು ಜಾರಿಗೆ ತಂದಾಗ ಅದರ ಹಿಂದಿನ ಉದ್ದೇಶ ಇಲ್ಲಿನವರನ್ನು ತಮ್ಮ ಆಡಳಿತಕ್ಕೊದಗುವ ಗುಮಾಸ್ತರನ್ನಾಗಿ ತಯಾರು ಮಾಡುವುದು. ಅದನ್ನು ನಾವು ವಸಾಹತು ಶಾಹೀ ಆಳ್ವಿಕೆಯ ಅನಿಷ್ಠವೆಂದು ಕರೆದೆವು. ಆದರೆ ಒಂದು ಜಾಗತೀಕರಣದ ಹೆಸರಿನಲ್ಲಿ ಅಂಥದ್ದೆ ಇನ್ನೊಂದು ರೂಪದಲ್ಲಿ ನುಸುಳುತ್ತಿದೆ. ನಾವು ನಮ್ಮ ವಿದ್ಯಾರ್ಥಿಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ಬಳಸಬಹುದಾದ ಸರಕುಗಳಂತೆ ತಯಾರು ಮಾಡಲು ಇಚ್ಛಿಸುವ ಕಾರಣದಿಂದಾಗಿ, ಅದಕ್ಕೆ ತಕ್ಕುದಾದ ಭಾಷೆಯನ್ನು ಕಲಿಸಲಿಚ್ಛಿಸುತ್ತಿದ್ದೇವೆ.
ಹಿಂದೆ, ಇಂಗ್ಲೀಷ್ ಕಲಿಕೆಯೆಂದರೆ ‘ಕೇವಲ ವ್ಯಾವಹಾರಿಕ ಇಂಗ್ಲೀಷ್’ ಆಗಿರಲಿಲ್ಲ. ಶೇಕ್ಸಫಿಯರ್, ಮಿಲ್ಟನ್, ವಡ್ರ್ಸ್‍ವಥ್, ಕೀಟ್ಸ್ ಇತ್ಯಾದಿ ಪ್ರತಿಭಾನ್ವಿತ ಸಾಹಿತಿಗಳ, ಕವಿಗಳ ಸಾಹಿತ್ಯವನ್ನು ಪಠ್ಯದಲ್ಲಿ ಅಳವಡಿಸುವ ಮುಖಾಂತರ, ಮಕ್ಕಳ ಭಾವಲೋಕವನ್ನು ಅರಳಿಸುವ ಪ್ರಯತ್ನ ಮಾಡುತ್ತಿದ್ದದು ನಿಜ. ಮಕ್ಕಳು ತರಗತಿಯಲ್ಲಿ ಮುಖವರಳಿಸಿಕೊಂಡು, ತನ್ಮಯತೆಯಿಂದ ಪಾಠಗಳನ್ನು ಕೇಳುತ್ತಿದ್ದರು. ಇಂಗ್ಲೀಷ್‍ನ ಸಮೃದ್ಧ ಸಾಹಿತ್ಯವನ್ನು ಅಭ್ಯಸಿಸುವ ಅನುಕೂಲತೆ ಅವರುಗಳಿಗೆ ದೊರಕುತ್ತಿತ್ತು. ಹಾಗಾಗಿ ಬಿ.ಎಂ.ಶ್ರೀಯವರ ‘ಇಂಗ್ಲೀಷ್ ಗೀತೆಗಳು’ ಕೂಡ ಹೊರ ಬಂತು. ಇಂಗ್ಲೀಷ್ ಭಾಷೆ ಬಾರದವರು ಕೂಡ, ಅದರ ಸಾಹಿತ್ಯದ ವೈವಿಧ್ಯತೆಯನ್ನು, ಸೌಂದರ್ಯವನ್ನು, ಚಿಂತನೆಗಳನ್ನು ಕನ್ನಡದಲ್ಲೇ ಆದರೂ ಓದಿ ಖುಷಿಪಟ್ಟದ್ದು ಸುಳ್ಳಲ್ಲ. ಆದರೆ ಇದು ಅವುಗಳ ಜಾಗೆಯಲ್ಲಿ ಜಾಗತಿಕ ಮಾರುಕಟ್ಟೆಗೆ ಅನುಕೂಲವೆಂಬ ಕಾರಣಕ್ಕೆ ಮಕ್ಕಳಿಗೆ ಇಂಗ್ಲೀಷ್ ಸಾಹಿತ್ಯದ ಅದರ ಸ್ವಾರಸ್ಯದ ಕುರಿತು ಏನನ್ನೂ ಹೆಚ್ಚಾಗಿ ತಿಳಿಸದೆ, ಕೇವಲ ಅದರ ವ್ಯವಾಹಾರಿಕ ಇಂಗ್ಲೀಷ್, ಇಂಗ್ಲೀಷ್ ಸಂವಹನ ಕಲೆ, ಕಾಲ್ ಸೆಂಟರ್‍ಗಳಲ್ಲಿ ಮಾತನಾಡುವ ಕಲೆ ಮತ್ತು ಇ.ಮೇಲ್‍ಗೆ ವಿಷಯ ಕಳಿಸುವ -ಸ್ವಿಕರಿಸುವ ಕಲೆಗಷ್ಟೇ ಸೀಮಿತಗೊಳಿಸುತ್ತಿದ್ದೇವೆ. ಅದಕ್ಕನುಗುಣವಾಗಿ ಪ್ರೈಮರಿಯಿಂದ ಯುನಿವರ್ಸಿಟಿ ಮಟ್ಟದವರೆಗೆ ಪಠ್ಯಗಳು ರಚಿತವಾಗುತ್ತಿವೆ. ಹೀಗಾಗಿಯೇ ವಿಶ್ವವಿದ್ಯಾನಿಲಯಗಳ ಪದವಿ ತರಗತಿಗಳಿಗೆ ಕೂಡ ‘Work Book’ ಬಂತು ತರಗತಿಗಳಲ್ಲಿ ಬಹುತೇಕ ವೇಳೆ ಇದಕ್ಕೆ ಮೀಸಲಾಯಿತು ಮಕ್ಕಳು ಆಕಳಿಸುತ್ತಲೇ, ವ್ಯಾಕರಣ, ಸಂವಹನ, ಕಲೆ, ಕಲಿಯುತ್ತ ಸಾಗುವಂತಾಯಿತೆ ವಿನಃ ಮನಸ್ಸುಗಳು ಅರಳಲಿಲ್ಲ, ಮೆದುಳುಗಳು ಬೆಳೆದಿರಬಹುದು.
ಭಾಷೆ ತಿಳಿದಿರುವುದು ಬೇರೆ ಭಾಷೆಯ ಕುರಿತು ತಿಳಿದಿರುವುದು ಬೇರೆ. ನಮ್ಮ ಇಂದಿನ ಒತ್ತು ಇರುವುದು ಭಾಷೆಯ ಕುರಿತಾದ ಕಲಿಕೆಯ ಕುರಿತು. ಹೀಗಾದಾಗ ಇಂಗ್ಲೀಷ್ ಭಾಷೆ ಕೂಡ ಸಮೃದ್ದವಾಗಿ ಬೆಳೆಯುವುದು ಅಸಾಧ್ಯ ಅರಳುವುದು ಅಸಾಧ್ಯ ಸಾಹಿತ್ಯ ಕೂಡ ಸಮೃದ್ದವಾಗಿ ಹೊರಬರುವುದು ಅಸಾಧ್ಯ ಒಂದು ಭಾಷೆ ಸಹಜವಾಗಿ ಬರುವುದು ಅದು ವಾತವರಣದಲ್ಲಿ ಸಹಜವಾಗಿ ಹರಡಿಕೊಂಡ್ಡಿದಾಗಲೆ ವಿನಃ ಹೇರಿದಾಗಲ್ಲಲ್ಲ. ಗೊತ್ತಿರಬೇಕಾದ ಸತ್ಯವೆಂದರೆ ಯಾವುದೇ ವ್ಯಾಕರಣ ಪುಸ್ತಕ ಅಥವಾ ನಿಘಂಟು, ಸಾಹಿತ್ಯ ಕೃತಿಯಲ್ಲಿ, ಸಾಹಿತ್ಯ ಕೃತಿ ನಿಘಂಟಿನ ಶಬ್ದಗಳನ್ನು ಬಳಸಿಕೊಳ್ಳಬಹುದು ವ್ಯಾಕರಣದ ನಿಯಮಗಳನ್ನು ಅನುಸರಿಸಿರಬಹುದು. ಅದು ಅನಿವಾರ್ಯ ಅಗತ್ಯ, ಹಾಗಂತ ಕೇವಲ ಶಬ್ದಗಳ ಸಂಗ್ರಹ ಮತ್ತು ವ್ಯಾಕರಣದ ನಿಯಮಗಳನ್ನೂ ನೋಡುವುದರಿಂದ ಯಾವುದೇ ಮನಸ್ಸುಗಳು ಅರಳುವುದಿಲ್ಲ. ಅರಳದ ಮನಸ್ಸುಗಳು ಕ್ರಿಯಾಶೀಲವಾಗುವುದು ಕಷ್ಟ. ಸೃಜನಶೀಲ ಪ್ರತಿಭೆಗಳು ಮೇಲೆದ್ದು ಬರುವುದು ಕಷ್ಟ. ಹೀಗಾಗಿ ಈ ಜಾಗತೀಕರಣದ ವ್ಯಾಪಾರಿ ವ್ಯವಸ್ಥೆಗೆ ಅನುಗುಣವಾಗಿ ಸಿದ್ಧವಾದ ಇಂಗ್ಲೀಷ್ ನಿಜವಾಗಿಯು ನಿಜವಾದ ಇಂಗ್ಲೀಷ್‍ನ ಬೆಳವಣಿಗೆಗೆ ಅನುಕೂಲಕರವಾಗಿ ಒದಗಿಬರದು. ಇಂತಹ ಇಂಗ್ಲೀಷ್ ಕಲಿಕೆಯಿಂದ ಕನ್ನಡ ಭಾಷೆಗೆ ಮಾತ್ರ ತೊಂದರೆಯಲ್ಲ. ಇಂಗ್ಲೀಷ್ ಭಾಷೆಗೂ ಅದರ ಸಮೃದ್ದ ಸಾಹಿತ್ಯಕ್ಕೂ ಒದಗಿಬಾರದೆ, ಕೇವಲ ವ್ಯಾಪಾರಿ ಭಾಷೆಯಾಗಿ ತಾಂತ್ರಿಕ ಕಸರತ್ತಾಗಿ ನಿಂತು ಬಿಡುವ ಅಪಾಯವಿದೆ.
ನಮಗೆ ಡಾಲರ್ಸ್ ಬೇಡವೆಂದಲ್ಲ ಅದನ್ನು ಗಳಿಸಲು ಬೇಕಾದ ಜ್ಞಾನ ಕೂಡ ಬೇಡವೆಂದಲ್ಲ, ಆದರೆ ಅದರ ಸಿದ್ಧತೆಯ ತರಾತುರಿಯಲ್ಲಿ ನಮ್ಮ ಸಮೃದ್ಧ ಸಾಹಿತ್ಯ ಮತ್ತು ಸಾಂಸ್ಕøತಿಕ ರೂಪಕಗಳು ನಾಪತ್ತೆಯಾಗುವುದು ಒಳ್ಳೆಯ ಬೆಳವಣಿಗೆಯಲ್ಲ. ನಾವು ಸಾಹಿತ್ಯದ ಕಲಿಕೆಯನ್ನು ಕಲಿಸುವತ್ತ ಒತ್ತು ನೀಡಿದಾಗ ಮನಸ್ಸುಗಳು ಅರಳಬಹುದು, ಮೆದುಳೂ ಬೆಳೆಯಬಹುದು, ಒಂದನ್ನು ಬೆಳೆಸಲು ಇನ್ನೊಂದನ್ನು ಅಲಕ್ಷಿಸುವುದು ಸರಿಯಾದ ಮಾರ್ಗವಾಗಲಾರದು. ನಮ್ಮನ್ನೇ ನಾವಿಂದು ಪ್ರಶ್ನಿಸಿಕೊಳ್ಳಬೇಕಾದದ್ದು ಏನೆಂದರೆ, ವ್ಯಾವಹಾರಿಕ ಭಾಷೆ ಮಾತ್ರ ನಮಗೆ ಸಾಕೇ? ಭಾವ ಪ್ರಪಂಚಕ್ಕೆ ನೀರೆರೆಯುವ ಭಾಷೆ ಕೂಡ ಬೇಕೆ?.
ಇಂಗ್ಲೀಷ್‍ನ ಪ್ರಸಿದ್ಧ ನಿಸರ್ಗ ಕವಿ ವರ್ಡ್‍ವಥ್‍ನ ಜನಪ್ರಿಯ ಕವಿತೆ ‘ಡ್ಯಾಪೋಡಿಲ್ಸ್’,ಅದರಲ್ಲಿ ಆತ ಹೇಳುತ್ತಾನೆ ‘ತಾನು ದುಗುಡದಲ್ಲಿ, ಏಕಾಂಗಿಯಾಗಿ, ಇದ್ದಾಗ ತನ್ನದೆಯಲ್ಲಿ ಆ ಡ್ಯಾಪೋಡಿಲ್ಸ್ ಹೂವುಗಳು ನರ್ತಿಸುತ್ತವೆ’ ಎಂದು. ಹೀಗೆ ಹೃದಯಕ್ಕೆ ಸಾಂತ್ವನ ಹೇಳುವ, ಸಂತಸ ನೀಡುವ, ಸಾಹಿತ್ಯದ ಸುಂದರ ಹೂವುಗಳ ನರ್ತನ ಸದಾ ನಮ್ಮೆದೆಯೂಳಗೆ ಇರಬೇಕೆಂದರೆ, ನಾವು ಭಾಷಾ ಕಲಿಕೆಯ ಕುರಿತು ಹೆಚ್ಚು ಜಾಗೃತರಾಗಿರಬೇಕು.
ರವೀಂದ್ರ ಭಟ್ ಕುಳಿಬೀಡು

ರೈತರೊಂದಿಗೆ ಗುಂಪು ಚರ್ಚೆ

0

ರಸಗೊಬ್ಬರಗಳನ್ನು ಕೊಂಡ ನಂತರ ಅವುಗಳ ಗುಣಮಟ್ಟವನ್ನು ಪರೀಕ್ಷಿಸಿಕೊಳ್ಳುವುದು ಅತ್ಯಗತ್ಯ ಎಂದು ರೇಷ್ಮೆ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ತೇಜಸ್ವಿನಿ ತಿಳಿಸಿದರು.
ತಾಲ್ಲೂಕಿನ ಕುಂದಲಗುರ್ಕಿ ಗ್ರಾಮದಲ್ಲಿ ಈಚೆಗೆ ರೇಷ್ಮೆ ಕೃಷಿ ಮಹಾವಿದ್ಯಾಲಯದಿಂದ ಆರ್ ಎ ಡಬ್ಲು ಇ ಕಾರ್ಯಕ್ರಮದ ವತಿಯಿಂದ ನಡೆದ ರೈತರೊಂದಿಗೆ ಗುಂಪು ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಲಬೆರೆಕೆಯ ಹಾಗೂ ಕಳಪೆ ಗುಣಮಟ್ಟದ ಯೂರಿಯ, ಡಿಎಪಿ, ಎಂಒಪಿ ರಸಗೊಬ್ಬರಗಳನ್ನು ಕೆಲವು ಅಂಗಡಿಳಲ್ಲಿ ನೀಡುತ್ತಾ ರೈತರಿಗೆ ಮೋಸ ಮಾಡುತ್ತಿರುವ ಬಗ್ಗೆ ವರದಿಗಳು ಬಂದಿರುವುದರಿಂದ ಈ ಬಗ್ಗೆ ರೈತರು ಹುಷಾರಾಗಿರಬೇಕು ಎಂದು ಹೇಳಿದರು.
ಭೂಮಿಯಿಂದ ಮಣ್ಣಿನ ಮಾದರಿಯನ್ನು ಸಂಗ್ರಹಣೆ ಮಾಡುವ ಬಗ್ಗೆ ರೈತರಿಗೆ ತಿಳುವಳಿಕೆ ನೀಡಿದ ಅವರು ರೇಷ್ಮೆ ಕೃಷಿ ಮಹಾವಿದ್ಯಾಲಯದ ಪ್ರಾದ್ಯಾಪಕರಾದ ಡಾ:ನವೀನ್, ಡಾ:ರಾಮಕೃಷ್ಣ ನಾಯಕ್ ರವರಿಂದ ರೈತರ ಭೂಮಿಯ ಮಣ್ಣನ್ನು ಪರೀಕ್ಷೆ ವರದಿಯನ್ನು ರೈತರಿಗೆ ಕೊಟ್ಟರು. ಭೂಮಿಯ ಗುಣಮಟ್ಟ ಹಾಗೂ ಫಸಲು ಚೆನ್ನಾಗಿ ತೆಗೆಯಲು ರೈತರು ಯಾವ ರೀತಿಯ ಗೊಬ್ಬರಗಳನ್ನು ಉಪಯೋಗಿಸಬೇಕು, ಅಂಗಡಿಗಳಲ್ಲಿ ರಸಗೊಬ್ಬರಗಳನ್ನು ತಂದ ಮೇಲೆ ರಸಗೊಬ್ಬರಗಳ ಗುಣಮಟ್ಟ ಯಾವ ರೀತಿ ಪರೀಕ್ಷೆ ಮಾಡಬೇಕು ಎಂಬುದರ ಬಗ್ಗೆ ಪ್ರಾಯೋಗಿಕವಾಗಿ ಪರೀಕ್ಷೆ ಮಾಡುವುದರ ಬಗ್ಗೆ ಪ್ರಾತ್ಯಕ್ಷಿಕ ತಿಳುವಳಿಕೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಸ್ವಾತಿ, ವಿದ್ಯಾಶ್ರೀ, ಶ್ರಾವಣಿ, ವೀಣಾ, ತೇಜಸ್ವಿ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಭಾಗವಹಿಸಿದ್ದರು.

ನೀಲಗಿರಿ ಮರಗಳ ನಡುವೆ ಬೇವಿನ ಆಶಾಕಿರಣ

0

ಅಂತರ್ಜಲ ಮಟ್ಟ ತಗ್ಗುವುದಕ್ಕೆ ಕಾರಣವಾಗುತ್ತಿರುವ ನೀಲಗಿರಿ ಮರ ಬೆಳೆಯುವುದನ್ನು ರಾಜ್ಯಾದ್ಯಾಂತ ಸಂಪೂರ್ಣ ನಿಷೇಧಿಸುವ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಈಗಾಗಲೇ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ತೋಟಗಾರಿಕೆ ಇಲಾಖೆಯವರೂ ಈ ಬಗ್ಗೆ ಆಗಾಗ್ಗೆ ಅರಿವು ಮೂಡಿಸುತ್ತಿರುತ್ತಾರೆ. ಆದರೂ ತಾಲ್ಲೂಕಿನಲ್ಲಿ ಸಾಕಷ್ಟು ಎಕರೆ ಪ್ರದೇಶಗಳಲ್ಲಿ ನೀಲಗಿರಿ ಬೆಳೆಯಲಾಗುತ್ತಿದೆ.
ಆದರೆ ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದ ಅನಂತರಾಮಯ್ಯ ಎಂಬ ರೈತರೊಬ್ಬರು ನೀಲಗಿರಿ ತೋಪುಗಳ ನಡುವೆ ಇರುವ ತಮ್ಮ ಎರಡೂ ಮುಕ್ಕಾಲು ಎಕರೆ ಜಮೀನಿನಲ್ಲಿ ಬೇವಿನ ಸಸಿಗಳನ್ನು ನಾಟಿ ಮಾಡುತ್ತಾ ಪರಿಸರ ಸ್ನೇಹಿ ಕಾರ್ಯಕ್ಕೆ ಸಜ್ಜಾಗಿದ್ದಾರೆ. ಅಂತರ್ಜಲ ಕುಸಿದಿರುವ ತಾಲ್ಲೂಕಿನಲ್ಲಿ ಜಲವನ್ನು ಸೂರೆಗೊಳ್ಳುವ ನೀಲಗಿರಿಯ ತೋಪುಗಳ ನಡುವೆ ಬೇವಿನ ಸಸಿಗಳೊಂದಿಗೆ ಹೊಸ ಆಶಾಭಾವವನ್ನು ಬಿತ್ತುತ್ತಿರುವುದು ವಿಶೇಷವಾಗಿದೆ.
ಬೇವಿಗೆ ಭಾರತ ತವರೂರು. ಇದರ ಉಪಯೋಗಳನ್ನು ಅನಾದಿಯಿಂದಲೂ ನಮ್ಮವರು ಮಾಡುತ್ತಲೇ ಬಂದಿದ್ದಾರೆ. ಈ ಸಸ್ಯದ ಅನೇಕ ಭಾಗಗಳು ಕೀಟ ನಾಶಕ ಗುಣಗಳನ್ನು ಹೊಂದಿವೆಯಾದರೂ, ಬೀಜಗಳು ಹೆಚ್ಚು ಉಪಕಾರಿ. ಬೇವಿನಲ್ಲಿರುವ ರಸಾಯನಿಕಗಳು ಕೀಟನಾಶಕ ಗುಣವನ್ನು ಹೊಂದಿವೆ. ಬೇವಿನಲ್ಲಿ ಹಲವಾರು ರಾಸಾಯನಿಕ ಅಂಶಗಳಿರುವುದರಿಂದ ಇದು ಅತ್ಯಂತ ಶ್ರೇಷ್ಠ ಹಾಗೂ ಪರಿಸರಪೂರಕವಾದ ಕೀಟನಾಶಕವಾಗಿರುತ್ತದೆ. ಹೀಗಾಗಿ ಬೇವು ರೈತರ ಪಾಲಗೆ ಅಪರೂಪದ ಮರ.
‘ನಮ್ಮ ಭಾಗದೆಲ್ಲೆಡೆ ಅಂತರ್ಜಲ ಪಾತಾಳಕ್ಕಿಳಿದಿದೆ. 1500 ಅಡಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುವುದು ದುರ್ಲಭವಾಗಿದೆ. ನಮ್ಮ ಮಳಮಾಚನಹಳ್ಳಿ ಗ್ರಾಮದ ಸುತ್ತಮುತ್ತ ಬಹಳಷ್ಟು ನೀಲಗಿರಿ ತೋಪುಗಳಿವೆ. ಮಳೆಯಾಶ್ರಿತ ಬೆಳೆಯನ್ನು ಅವಲಂಭಿಸಲೂ ಸಾಧ್ಯವಿಲ್ಲ. ಹೀಗಾಗಿ ಪರಿಸರ ಕಾಪಾಡಲು ಹಾಗೂ ದನಕರುಗಳಿಗೆ ಮೇವು ಆಗುವ ಕಾರಣದಿಂದ ಸುಮಾರು 1500 ಬೇವಿನ ಸಸಿಗಳನ್ನು ನಮ್ಮ ಜಮೀನಿನಲ್ಲಿ ನೆಡಿಸುತ್ತಿರುವೆ. ಬೇವು ಕುರಿ, ಮೇಕೆ ಹಾಗೂ ದನಕರುಗಳಿಗೆ ಉತ್ತಮ ಮೇವು. ಉತ್ತಮ ಗಾಳಿ, ಆರೋಗ್ಯ ಇದರಿಂದ ಲಭಿಸುತ್ತದೆ. ಇದರಿಂದ ಹಲವು ಆಯುರ್ವೇದದ ಉಪಯುಕ್ತತೆಗಳೂ ಸಹ ಇವೆ’ ಎನ್ನುತ್ತಾರೆ ರೈತ ಅನಂತರಾಮಯ್ಯ.

ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಕನ್ನಡ ನಿಘಂಟು

0

ತಾಲ್ಲೂಕಿನ ಭಕ್ತರಹಳ್ಳಿಯ ಬಿ.ಎಂ.ವಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮಂಗಳವಾರ ಬೆಂಗಳೂರು ಹೈಗ್ರೌಂಡ್ಸ್ ರೋಟರಿ ವತಿಯಿಂದ ಇಂಗ್ಲೀಷ್ ಕನ್ನಡ ನಿಘಂಟುಗಳನ್ನು ಉಚಿತವಾಗಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ 2014–15ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ್ದ ಎಸ್.ಮೋನಿಕಾ, ಸಿ.ಚಂದನ್, ಬಿ.ಜೆ.ಬಸವರಾಜ್, ಎಸ್.ಮಂಜುಳಾ, ಬಿ.ವಿ.ದಿಲೀಪ್ ಮತ್ತು ಎಸ್.ಮಾನಸ ಅವರನ್ನು ಪುರಸ್ಕರಿಸಲಾಯಿತು.
ಬಿ.ಎಂ.ವಿ ಪ್ರೌಢಶಾಲೆಯಲ್ಲಿ ರೋಟರಿ ಇಂಟರ್ ಆಕ್ಟ್ ಕ್ಲಬ್ ಪ್ರಾರಂಭಿಸುವ ಹಿನ್ನೆಲೆಯಲ್ಲಿ ರೊಟೇರಿಯನ್ ಅನಿಲ್ಕುಮಾರ್ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಬಿ.ಎಂ.ವಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಲ್.ಕಾಳಪ್ಪ ಈ ಸಂದರ್ಭದಲ್ಲಿ ಮಾತನಾಡಿ, ಮಕ್ಕಳಲ್ಲಿ ಎಳೆಯ ವಯಸ್ಸಿನಲ್ಲಿಯೇ ಸೇವಾ ಮನೋಭಾವ, ಸಾಮಾಜಿಕ ಕಳಕಳಿ ಮತ್ತು ಜ್ಞಾನವನ್ನು ಉದ್ದೀಪಿಸುವ ಹಿನ್ನೆಲೆಯಲ್ಲಿ ಶಾಲೆಯಲ್ಲಿ ರೋಟರಿ ಇಂಟರ್ ಆಕ್ಟ್ ಕ್ಲಬ್ ಪ್ರಾರಂಭಿಸುತ್ತಿದ್ದು, ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಬೆಂಗಳೂರು ಹೈಗ್ರೌಂಡ್ಸ್ ರೋಟರಿ ಅಧ್ಯಕ್ಷ ಜಿ.ಆರ್.ಮಹೇಶ್, ಎಚ್.ಎಸ್.ಶಿವಕುಮಾರ್, ರಾಮಚಂದ್ರ, ಪ್ರಶಾಂತರಾವ್, ಚೇತನ್ಪಲ್ಲಿ, ಸಂದೀಪ್, ತ್ಯಾಗರಾಜ್, ಭಾನುಪ್ರತಾಪರೆಟ್ಟಿ, ನಾಗರಾಜ್, ನಟರಾಜ್, ಗೌರಿಶಿವಕುಮಾರ್, ಮಂಜುಳಾ, ನಳಿನಾ ಮಹೇಶ್, ಯಶೋದರ, ಶೈಲೇಂದ್ರ, ಬಿ.ಎಂ.ವಿ ಶಿಕ್ಷಣ ಸಂಸ್ಥೆಯ ಎಂ.ವೆಂಕಟಮೂರ್ತಿ, ಬಿ.ವೈ.ಅಶ್ವತ್ತಪ್ಪ, ಎಂ.ನಂಜೇಗೌಡ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ರೇಷ್ಮೆ ಗೂಡಿನ ಮಾರುಕಟ್ಟೆಯ ಗೇಟಿಗೆ ಬೀಗ ಜಡಿದು ಪ್ರತಿಭಟನೆ

0

ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಹರಾಜು ಕೂಗುವ ಅಧಿಕಾರಿಗಳು ಕೆಲ ರೀಲರುಗಳೊಂದಿಗೆ ಶಾಮೀಲಾಗಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆಂದು ಆರೋಪಿಸಿ ರೈತರು ಗುರುವಾರ ಧಿಡೀರ್ ಪ್ರತಿಭಟನೆ ನಡೆಸಿ ಮಾರುಕಟ್ಟೆಯ ಗೇಟಿಗೆ ಬೀಗ ಜಡಿದು ಘಟನೆ ನಡೆಯಿತು.
ಒಂದೇ ಗುಣಮಟ್ಟದ ರೇಷ್ಮೆ ಗೂಡು ಗುರುವಾರ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಒಂದು ಗೋಡೋನಿನಲ್ಲಿ ಒಂದೊಂದು ಬೆಲೆಗೆ ಹರಾಜಾಗಿದೆ. ಒಂದೆಡೆ ಕೆಜಿಗೆ 350 ರೂ ಆದರೆ, ಮತ್ತೊಂದರಲ್ಲಿ 150 ರೂ, ಹಾಗೂ ಇನ್ನೊಂದರಲ್ಲಿ 80 ರೂಗಳಾಗಿವೆ. ಇದರಿಂದ ಮನನೊಂದು ಕುಪಿತಗೊಂಡ ರೈತರು, ಹಣದ ಆಸೆಯಿಂದ ರೈತರ ಗೂಡನ್ನು ಕಡಮೆ ಬೆಲೆಗೆ ಹರಾಜು ಕೂಗುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರೇಷ್ಮೆ ಗೂಡಿನ ಮಾರುಕಟ್ಟೆಯ ಗೇಟಿನ ಬೀಗ ಜಡಿದು ಘೋಷಣೆ ಕೂಗುತ್ತಾ ಧರಣಿ ನಡೆಸಿದರು.
ರೈತ ಮುಖಂಡರು ರೇಷ್ಮೆ ಗೂಡಿನ ಗೋಡೋನ್ ಬಳಿ ಅಧಿಕಾರಿಗಳೊಂದಿಗೆ ತಮ್ಮ ಸಮಸ್ಯೆಯನ್ನು ವಿವರಿಸುವ ಸಮಯದಲ್ಲಿ ಕೆಲ ರೀಲರುಗಳು ಗೇಟಿನ ಸರಳು ಹಾಗೂ ಬೀಗವನ್ನು ಕಲ್ಲಿನಿಂದ ಜಜ್ಜಿ ಮುರಿದ ಘಟನೆಯೂ ನಡೆಯಿತು. ಈ ಸಂದರ್ಭದಲ್ಲಿ ಒಂದು ಭಾಗದ ಗೇಟ್ ಜಖಂಗೊಂಡಿತು.
ನಂತರ ಸ್ಥಳಕ್ಕೆ ಆಗಮಿಸಿದ ರೇಷ್ಮೆ ಇಲಾಖೆ ಉಪನಿರ್ದೇಶಕ ನಾಗಭೂಷಣ್ ತಮ್ಮ ಕಚೇರಿಯಲ್ಲಿ ರೈತ ಮುಖಂಡರು ಹಾಗೂ ರೀಲರುಗಳೊಂದಿಗೆ ಚರ್ಚಿಸಿದರು.
‘ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಜಾಲರಿಗಳನ್ನು ಕಾಯ್ದಿರಿಸಿ ಹಣ ಮಾಡುವ ಪ್ರವೃತ್ತಿಗೆ ಕಡಿವಾಣ ಹಾಕಬೇಕು. ಹರಾಜು ಕೂಗುವ ಅಧಿಕಾರಿಗಳನ್ನು ಒಂದೇ ಕಡೆ ಕಾರ್ಯನಿರ್ವಹಿಸದಂತೆ ಸರದಿಯ ಪ್ರಕಾರ ಬದಲಿಸುತ್ತಿರಬೇಕು. ಸ್ಯಾಂಪಲ್ ಹೆಸರಿನಲ್ಲಿ ಕೆಲ ರೀಲರುಗಳು ರೇಷ್ಮೆ ಗೂಡನ್ನು ಪ್ರತಿ ದಿನ ಕದಿಯುವ ಸಾಧ್ಯತೆಗಳಿವೆ. ಸ್ಯಾಂಪಲ್ ಪದ್ಧತಿಯನ್ನು ನಿಲ್ಲಿಸಿ, ಮಾರುಕಟ್ಟೆಯ ಹೊರಗೆ ಸ್ಯಾಂಪಲ್ ಗೂಡಿನಿಂದ ರೇಷ್ಮೆ ತೆಗೆಯುವವರನ್ನು ನೋಟಿಸ್ ಕೊಟ್ಟು ಖಾಲಿ ಮಾಡಿಸಬೇಕು. ರೇಷ್ಮೆ ಗೂಡಿನ ಹರಾಜನ್ನು ಒಂದು ಕೆಜಿಗೆ 150 ರೂಗಳಿಂದ ಪ್ರಾರಂಭಿಸಬೇಕು. ಹತ್ತು ಪೈಸೆಗಳ ಬೀಟ್ ಕೂಗುವುದನ್ನು ನಿಲ್ಲಿಸಿ ಒಂದು ರೂಗಳ ಬೀಟ್ ಕೂಗಬೇಕು’ ಎಂಬ ಬೇಡಿಕೆಗಳನ್ನು ರೈತರು ಮುಂದಿಟ್ಟರು.
ರೀಲರುಗಳು ಮಾತನಾಡಿ, ‘ಆಮದು ಸುಂಕದ ಕಡಿತದಿಂದ ಈಗಾಗಲೇ ಕಚ್ಛಾ ರೇಷ್ಮೆ ಧಾರಣೆ ಕುಸಿದಿದ್ದು, ರೀಲರುಗಳು ಸಂಕಷ್ಟದಲ್ಲಿದ್ದಾರೆ. ರೇಷ್ಮೆ ವಿನಿಮಯ ಕೇಂದ್ರದ ಮೂಲಕ ರೇಷ್ಮೆಯನ್ನು ಖರೀದಿಸಿದಲ್ಲಿ ರೇಷ್ಮೆಯ ಧರ ಕುಸಿತವನ್ನು ತಡೆಯಬಹುದು. ಹವಾಮಾನ ವೈಪರೀತ್ಯ ಹಾಗೂ ರಂಜಾನ್ ಹಬ್ಬದ ಕಾರಣದಿಂದ ರೇಷ್ಮೆ ಗೂಡಿನ ಬೆಲೆ ಕೂಡ ಇಳಿಮುಖಗೊಂಡಿದೆ’ ಎಂದು ತಿಳಿಸಿದರು.
ಸಮಸ್ಯೆಯನ್ನು ಕೇಳಿದ ರೇಷ್ಮೆ ಇಲಾಖೆ ಉಪನಿರ್ದೇಶಕ ನಾಗಭೂಷಣ್ ಮಾತನಾಡಿ, ‘ಹೊಸ ಜಾಲರಿಗಳು ಬರಬೇಕಿದೆ. ಬಂದ ನಂತರ ‘ಇ’ ಹರಾಜು ನಡೆಯುವುದರಿಂದ ಜಾಲರಿಗಳನ್ನು ಕಾಯ್ದಿರಿಸುವುದು ಹಾಗೂ ಹರಾಜು ಏರುಪೇರು ನಿಲ್ಲಲಿದೆ. ಹರಾಜು ಕೂಗುವ ಅಧಿಕಾರಿಗಳನ್ನು ಸರದಿಯಂತೆ ಬದಲಿಸಲಾಗುವುದು. ಪೊಲೀಸ್ ಸಹಕಾರದೊಂದಿಗೆ ಸ್ಯಾಂಪಲ್ ಗೂಡಿನಿಂದ ರೇಷ್ಮೆ ತೆಗೆಯುವವರನ್ನು ಖಾಲಿ ಮಾಡಿಸಲಾಗುವುದು. ಮಾರುಕಟ್ಟೆಯಲ್ಲೂ ಸ್ಯಾಂಪಲ್ ನೆಪದಲ್ಲಿ ಗೂಡನ್ನು ಹೊರ ಹೋಗದಂತೆ ತಡೆಯುತ್ತೇವೆ’ ಎಂದು ಭರವಸೆ ನೀಡಿದರು. ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ರೈತರು ಪ್ರತಿಭಟನೆಯನ್ನು ಹಿಂಪಡೆದರು.
ಸಬ್ಇನ್ಸ್ಪೆಕ್ಟರ್ ವಿಜಯ್, ಮಾರುಕಟ್ಟೆ ಅಧಿಕಾರಿಗಳಾದ ರತ್ನಯ್ಯಶೆಟ್ಟಿ, ಆಂಜನೇಯರೆಡ್ಡಿ, ರೈತರಾದ ಎಸ್.ಎಂ.ನಾರಾಯಣಸ್ವಾಮಿ, ರಾಮಕೃಷ್ಣಪ್ಪ, ಆರ್.ದೇವರಾಜ್, ರವಿಪ್ರಕಾಶ್, ಪ್ರತೀಶ್, ಬಾಲಮುರಳಿಕೃಷ್ಣ, ರೀಲರ್ ರೆಹಮಾನ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸಾರಿಗೆ ನಿಯಂತ್ರಣಾಧಿಕಾರಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

0

ಸಮರ್ಪಕ ಸಾರಿಗೆ ಬಸ್ ಸೌಲಭ್ಯಕ್ಕಾಗಿ ಒತ್ತಾಯಿಸಿ ವಿದ್ಯಾರ್ಥಿಗಳು ಎಸ್ಎಫ್ಐ ಮತ್ತು ಡಿ.ವೈ.ಎಫ್.ಐ ನೇತೃತ್ವದಲ್ಲಿ ಸಾರಿಗೆ ನಿಯಂತ್ರಣಾಧಿಕಾರಿ ಕಚೇರಿಗೆ ಬೀಗ ಜಡಿದು ಬುಧವಾರ ಪ್ರತಿಭಟಿಸಿದರು.
ನಗರದ ಸಾರಿಗೆ ಇಲಾಖೆಯ ನಿಯಂತ್ರಣಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಕಳೆದ ಹಲವು ತಿಂಗಳುಗಳಿಂದ ಸಾರಿಗೆ ಇಲಾಖೆಗಳಿಗೆ ಮನವಿಗಳನ್ನು ಸಲ್ಲಿಸುತ್ತಿದ್ದೇವೆ. ಆದರೂ ಇದುವರೆಗೂ ಪ್ರಯೋಜನವಾಗಿಲ್ಲ, ಸಾರಿಗೆ ಇಲಾಖೆಯ ಅಧಿಕಾರಿಗಳು ಖಾಸಗಿ ಬಸ್ಸುಗಳ ಮಾಲೀಕರೊಂದಿಗೆ ಶಾಮೀಲಾಗಿರುವುದರಿಂದ ನಿಗದಿತ ಸಮಯಕ್ಕೆ ಬಸ್ಸುಗಳು ಬಾರದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ, ಬಸ್ಸಿನ ಪಾಸುಗಳನ್ನು ಮಾಡಿಸಿಕೊಂಡಿದ್ದರೂ ಕೂಡಾ ನಮಗೆ ಪ್ರಯೋಜನಕ್ಕೆ ಬರುತ್ತಿಲ್ಲ, ದುಬಾರಿ ಹಣವನ್ನು ಕೊಟ್ಟು ಖಾಸಗಿ ಬಸ್ಸುಗಳಲ್ಲಿ ಬರಬೇಕಾಗಿದೆ. ಬೆಳಿಗ್ಗೆ ೦೮ ಗಂಟೆಗೆ ಬಸ್ ನಿಲ್ದಾಣಕ್ಕೆ ಬಂದರೂ ೧೦.೩೦ ಗಂಟೆಯಾದರೂ ಬಸ್ಸುಗಳು ಬಂದಿಲ್ಲ. ಇರುವ ಬಸ್ಸುಗಳ ಬಾಗಿಲುಗಳಲ್ಲಿ ನೇತಾಡಿಕೊಂಡು ಹೋಗಬೇಕು, ಸಂಜೆ ೫ ಗಂಟೆಗೆ ಕಾಲೇಜುಗಳನ್ನು ಬಿಟ್ಟರೂ ಕೂಡಾ ನಾವು ಮನೆಗಳಿಗೆ ಸೇರುವಷ್ಟರಲ್ಲಿ ರಾತ್ರಿ 8 ಗಂಟೆಯಾಗುತ್ತದೆ, ಕೆಲವು ಬಸ್ಸುಗಳು, ಪಾಸುಗಳೇ ಹೆಚ್ಚಾಗಿವೆ ಎನ್ನುವ ಕಾರಣಕ್ಕೆ ಕಾಲೇಜುಗಳ ಬಳಿ ನಿಲ್ಲಿಸುವುದಿಲ್ಲ, ಅವರಿಗಿಷ್ಟ ಬಂದ ಕಡೆಗಳಲ್ಲಿ ಬಸ್ ನಿಲ್ಲಿಸುತ್ತಾರೆ. ಚಾಲಕರು, ಮತ್ತು ನಿರ್ವಾಹಕ ನಡುವಳಿಕೆ ಸರಿಯಿಲ್ಲವೆಂದು ವಿದ್ಯಾರ್ಥಿಗಳು ಆರೋಪಿಸಿದರು.
ಸ್ಥಳಕ್ಕೆ ಆಗಮಿಸಿದ್ದ ಸಾರಿಗೆ ಇಲಾಖೆಯ ಪ್ರಭಾರಿ ವಿಭಾಗೀಯ ನಿಯಂತ್ರಣಾಧಿಕಾರಿ ರವೀಂದ್ರರೆಡ್ಡಿ ಮುಂದಿನ ಮೂರು ದಿನಗಳ ಒಳಗಾಗಿ, ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗುವಂತಹ ಸಮಯಕ್ಕೆ ಪ್ರತಿ ೧೫ ನಿಮಿಷಕ್ಕೊಂದರಂತೆ ಬಸ್ಸುಗಳನ್ನು ಕಳುಹಿಸಿಕೊಡಲಾಗುತ್ತದೆ. ಈಗಿರುವ ಸಂಪರ್ಕ ಸಾರಿಗೆಯನ್ನು ಮುಂದುವರೆಸಲಾಗುತ್ತದೆ ಎಂದು ಲಿಖಿತವಾಗಿ ಬರೆದುಕೊಟ್ಟ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರಿಂದ ವಿವಿಧ ಭಾಗಗಳಿಗೆ ಪ್ರಯಾಣಿಸಲು ಬಂದಿದ್ದ ಪ್ರಯಾಣಿಕರು ಪರದಾಡಬೇಕಾಯಿತು.
ಡಿ.ವೈ.ಎಫ್.ಐ ರಾಜ್ಯ ಮುಖಂಡ ಮುನೀಂದ್ರ, ಎಸ್ಎಫ್ಐ ನ ಸುಚಿತ್ರಾ, ಮಾನಸಾ, ವೇದಾ, ಮಂಜುನಾಥ್, ಶಿವಕುಮಾರ್, ರಮೇಶ್, ಜನಾರ್ಧನ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಲ್ಲೂಕಿನ ಯೋಧರಿಗೆ ಸನ್ಮಾನ

0

ನಗರದ ಬಸವೇಶ್ವರ ದೇವಾಲಯದ ಆವರಣದಲ್ಲಿ ಯುವ ಬ್ರಿಗೇಡ್ ವತಿಯಿಂದ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಯೋಧರನ್ನು ಸನ್ಮಾನಿಸಿ ಗೌರವಿಸಲಾಯಿತು.
ಎಸ್.ವೆಂಕಟೇಶ ಅಯ್ಯಂಗಾರ್, ಕೃಷ್ಣನ್, ಸೋಮಶೇಖರ್, ಶಾಮ್ಕುಮಾರ್, ಜಯರಾಮ್, ಶಿವಬಸಪ್ಪ ಪಾಟಿಲ್, ತ್ಯಾಗರಾಜ್, ದಿನೇಶ್, ಬಾಲರಾಜ್, ರಾಮಚಂದ್ರಪ್ಪ, ಮುನಿರಾಜು, ಮಂಜುನಾಥ್, ರಾಘವೇಂದ್ರ ಮುಂತಾದ ಯೋಧರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜೀವ್ ದೀಕ್ಷಿತ್ ಅವರ ಮೇರಾ ಭಾರತ್ ಮಹಾನ್ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ವಿದ್ವಾನ್ ಮಹಾಲಿಂಗಯ್ಯಮಠದ್ ಅವರ ಸಪ್ತಸ್ವರ ಗಾನಸಭಾ ಮಂಡಳಿಯಿಂದ ರಾಷ್ಟ್ರಭಕ್ತಿ ಗೀತಗಾಯನ ಏರ್ಪಡಿಸಲಾಗಿತ್ತು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಲ್.ಶ್ರೀನಿವಾಸಮೂರ್ತಿ, ವಿಜಯಪುರದ ಬಸವಕಲ್ಯಾಣ ಮಠದ ಮಹದೇವಸ್ವಾಮೀಜಿ, ಚಕ್ರವರ್ತಿ ಸೂಲಿಬೆಲೆ, ನಿತ್ಯಾನಂದ ವಿವೇಕವಂಶಿ, ಎಸ್.ಜಿ.ಅಭಿಲಾಷ್, ನಂದೀಶ್, ಎನ್.ಶ್ರೀಕಾಂತ್, ಮುರಳಿ, ಅಶ್ವತ್ಥ್ ಮತ್ತಿತರರು ಹಾಜರಿದ್ದರು.

ರಕ್ತದಾನದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ತೊಲಗಿಸಿ

0

ರಕ್ತದಾನದ ಬಗ್ಗೆ ಇರುವಂತಹ ತಪ್ಪು ಕಲ್ಪನೆಗಳನ್ನು ತೊಲಗಿಸಿ, ಪ್ರತಿಯೊಬ್ಬ ಆರೋಗ್ಯ ಜನರು ರಕ್ತದಾನ ಮಾಡುವುದರಿಂದ ಸಮಾಜದಲ್ಲಿನ ರಕ್ತದ ಕೊರತೆಯಿಂದ ಮರಣ ಹೊಂದುತ್ತಿರುವ ಜನರನ್ನು ರಕ್ಷಣೆ ಮಾಡಲು ಸಾದ್ಯವಾಗುತ್ತದೆ ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರಗೌಡ ಹೇಳಿದರು.
ನಗರದ ನಗರೇಶ್ವರ ಕಲ್ಯಾಣಮಂಟಪದಲ್ಲಿ ಬುಧವಾರ ಭಾರತೀಯ ಜನತಾ ಪಾರ್ಟಿ, ಯುವಬ್ರೀಗೇಡ್ ಹಾಗೂ ರಾಷ್ಟ್ರೋತ್ಥಾನ ರಕ್ತನಿಧಿ ವತಿಯಿಂದ ಕಾರ್ಗಿಲ್ ವಿಜಯೋತ್ಸವದ ಸಂಭ್ರಮಾಚರಣೆ ಹಾಗೂ ಚಂದ್ರಶೇಖರ್ ಅಜಾದ್ರವರ ಜಯಂತಿಯ ಅಂಗವಾಗಿ ರಕ್ತದಾನ ಶಿಬಿರವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ರಕ್ತದಾನದಿಂದ ಅನೇಕ ಅಮೂಲ್ಯವಾದ ಜೀವಗಳನ್ನು ಉಳಿಸಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಕೇವಲ ಅವಿದ್ಯಾವಂತರಲ್ಲದೆ ವಿಧ್ಯಾವಂತರಲ್ಲೂ ರಕ್ತದಾನ ಬಗ್ಗೆ ತಪ್ಪುಕಲ್ಪನೆಗಳು ಬೇರೂರಿದ್ದು, ಅಂತಹವರಿಗೆ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವಂತೆ ಅವರಿಗೆ ಧೈರ್ಯ ತುಂಬಿಸುವಂತಹ ಕೆಲಸವನ್ನು ಮಾಡಲಾಗುತ್ತಿದೆ. ರಕ್ತದಾನ ಮಾಡುವುದರಿಂದ ದೈಹಿಕವಾಗಿಯೂ ಹಲವು ಉಪಯೋಗಗಳನ್ನು ಪಡೆದುಕೊಳ್ಳಲು ಸಹಕಾರಿಯಾಗುತ್ತದೆ. ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನದ ಕೊನೆಯ ಕ್ಷಣದವರೆಗೂ ನಿರಂತರವಾಗಿ ಹೋರಾಟ ನಡೆಸಿದಂತಹ ಹೋರಾಟಗಾರ ಪ್ರತಿಯೊಬ್ಬ ಭಾರತೀಯರಿಗೂ ಸ್ಪೂರ್ತಿಯಾಗಬೇಕು ಎಂದರು.
ಡಾ.ಸತ್ಯನಾರಾಯಣರಾವ್ ಮಾತನಾಡಿ, ರಾಷ್ಟ್ರನಾಯಕರು ದೇಶಕ್ಕಾಗಿ ಸಲ್ಲಿಸಿದ ಸೇವೆಯನ್ನು ದೇಶದ ಪ್ರತಿಯೊಬ್ಬ ಯುವಕರಿಗೂ ಸ್ಪೂರ್ತಿಯಾಗಬೇಕು. ರಾಷ್ಟ್ರದಲ್ಲಿ ಮಾಜಿ ಪ್ರಧಾನಿ ಅಟಲ್ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ನಡೆದ ಕಾರ್ಗಿಲ್ ಯದ್ಧದಲ್ಲಿ ಪಾಕಿಸ್ತಾನದ ಸೈನಿಕರನ್ನು ಹಿಮ್ಮೆಟ್ಟಿಸಿ ದಿಟ್ಟತನದ ಹೋರಾಟ ಮಾಡಿದಂತಹ ಸೈನಿಕರಿಗೆ ಕೃತಜ್ಞತೆಯನ್ನು ಸಲ್ಲಿಸಬೇಕಾದಂತಹ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಪುರ ಠಾಣೆ ಸಬ್ ಇನ್ಸ್ಪೆಕ್ಟರ್ ವಿಜಯ್, ಬಿಜೆಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ದಾಮೋದರ್, ರಮೇಶ್ ಬಾಯಿರಿ, ತ್ಯಾಗರಾಜ್, ರವಿ, ನಂದೀಶ್, ಶ್ರೀಧರ್, ಸದಾಶಿವ, ಶ್ರೀರಾಮರೆಡ್ಡಿ, ಮುನಿರಾಜು, ಸುಜಾತಮ್ಮ, ಶಿವಕುಮಾರಗೌಡ, ರತ್ನಮ್ಮ, ಮುನಿರತ್ನಮ್ಮ, ಶಿವಮ್ಮ, ಮಧು, ಅಶ್ವಥ್, ಮಂಜುಳಮ್ಮ, ಮಧು ಬಾಲಯ್ಯ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಮುತ್ತೂರು ವಿದ್ಯಾರ್ಥಿಗಳಿಗೆ ಅಮೇರಿಕೆಯ ಆತ್ಮ ರಕ್ಷಣಾ ಪಾಠ

0

ತಾಲ್ಲೂಕಿನ ಮುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಟೇಕ್ವಾಂಡೋ ಆತ್ಮ ರಕ್ಷಣಾ ಕಲೆಯನ್ನು ಕಲಿಯುತ್ತಿದ್ದಾರೆ. ಅಮೇರಿಕೆಯಿಂದ ಬಂದು ಗ್ರಾಮೀಣ ಮಕ್ಕಳಿಗೆ ಟೇಕ್ವಾಂಡೋ ಕಲಿಸುತ್ತಿರುವುದು ವಿಶೇಷವಾಗಿದೆ.
22jul4ಭಾರತೀಯ ಮೂಲದ ರೋಹಿತ್ ಕೃಷ್ಣಮೂರ್ತಿ ಮತ್ತು ಸಂಜಿಯ್ ಕೃಷ್ಣಮೂರ್ತಿ ತಮ್ಮ ತಾಯಿ ಜಯಭಾರತಿ ಅವರೊಂದಿಗೆ ಅಮೆರಿಕೆಯಿಂದ ಎರಡು ತಿಂಗಳ ಕಾಲ ಭಾರತಕ್ಕೆ ಬಂದಿದ್ದು, ಮುತ್ತೂರಿನ ಮಕ್ಕಳಿಗೆ ಉಚಿತವಾಗಿ ಆತ್ಮರಕ್ಷಣಾ ಕಲೆಯನ್ನು ಕಲಿಸುತ್ತಿದ್ದಾರೆ.
ಅಮೆರಿಕೆಯಲ್ಲಿ ಹನ್ನೊಂದನೇ ತರಗತಿ ಮತ್ತು ಎರಡನೇ ತರಗತಿಯಲ್ಲಿ ಓದುತ್ತಿರುವ ಈ ಸಹೋದರರು ಟೇಕ್ವಾಂಡೋ ಕಲೆಯಲ್ಲಿ ಮೂರು ಡಿಗ್ರಿ ಪೂರೈಸಿದ್ದಾರೆ. ಇದರಿಂದಾಗಿ ಇತರರಿಗೆ ತರಬೇತಿಯನ್ನು ಪಡೆಯುವ ಅರ್ಹತೆಯನ್ನು ಪಡೆದಿದ್ದು. ಭಾರತದಲ್ಲಿನ ಗ್ರಾಮೀಣ ಹೆಣ್ಣು ಮಕ್ಕಳಿಗೆ ಕಲಿಸುವ ಉದ್ದೇಶದಿಂದ ಮುತ್ತೂರಿಗೆ ಬಂದಿದ್ದಾರೆ.
22jul5‘ನಾವು ಬೆಂಗಳೂರು ಮೂಲದವರು. ಅಮೆರಿಕೆಯ ಅರಿಜೋನಾ ಪ್ರಾಂತ್ಯದಲ್ಲಿ ನೆಲೆಸಿದ್ದೇವೆ. ನಮ್ಮ ಹುಡುಗರು ಅಲ್ಲಿ ವ್ಯಾಸಂಗ ಮಾಡುತ್ತಾ ಟೇಕ್ವಾಂಡೋ ಕೂಡ ಕಲಿಯುತ್ತಿದ್ದಾರೆ. ತಾವು ಕಲಿತ ವಿದ್ಯೆಯನ್ನು ಭಾರತೀಯ ಹೆಣ್ಣು ಮಕ್ಕಳಿಗೆ ಕಲಿಸಿ ಆತ್ಮ ರಕ್ಷಣೆ ಮತ್ತು ಆತ್ಮಾಭಿಮಾನ ಬೆಳೆಸುವ ಉದ್ದೇಶ ಹೊಂದಿದ್ದಾರೆ. ನಮಗೆ ‘ನಮ್ಮ ಮುತ್ತೂರು’ ಸಂಸ್ಥೆಯ ಉಷಾಶೆಟ್ಟಿ ಪರಿಚಿತರಾಗಿ, ಮುತ್ತೂರಿನ ಶಾಲಾ ಮಕ್ಕಳಿಗೆ ಕಲಿಸಲು ಕೋರಿದರು. ಹಾಗಾಗಿ ನಾವು ಮುತ್ತೂರಿಗೆ ಬಂದೆವು. ಅಮೆರಿಕೆಯಲ್ಲಿ ಜೂನ್ ಮತ್ತು ಜುಲೈ ತಿಂಗಳು ರಜೆ ಇರುವ ಕಾರಣ ಇಲ್ಲಿಗೆ ಬಂದು ಕಲಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವನ ಇನ್ನಷ್ಟು ಅಮೆರಿಕೆಯ ಸ್ನೇಹಿತರೊಂದಿಗೆ ಬಂದು ಭಾರತೀಯ ಗ್ರಾಮೀಣ ಹೆಣ್ಣುಮಕ್ಕಳಿಗೆ ಆತ್ಮರಕ್ಷಣಾ ಕಲೆಯನ್ನು ಕಲಿಸುವ ಉದ್ದೇಶ ಹೊಂದಿದ್ದಾರೆ’ ಎಂದು ಟೇಕ್ವಾಂಡೋ ಕಲಿಸುತ್ತಿರುವ ರೋಹಿತ್ ಮತ್ತು ಸಂಜಿಯ್ ಅವರ ತಾಯಿ ಜಯಭಾರತಿ ತಿಳಿಸಿದರು.
22jul2‘ಭಾರತೀಯತೆಯ ಬೇರನ್ನು ಮರೆಯದೆ ತಾವು ಕಲಿತ ಆತ್ಮರಕ್ಷಣಾ ವಿದ್ಯೆಯನ್ನು ನಮ್ಮ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕಲಿಸಲು ಅಮೆರಿಕೆಯಿಂದ ಬಂದ ಕುಟುಂಬದವರು ಮಾದರಿಯಾಗಿದ್ದಾರೆ. ನಮ್ಮ ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ವಹಿಸಿ ಅವರಿಗೆ ಸ್ವತಂತ್ರ್ಯ ಮನೋಭಾವ ಮತ್ತು ಆತ್ಮ ರಕ್ಷಣೆಯ ತಿಳುವಳಿಕೆಯನ್ನು ಮೂಡಿಸುತ್ತಿದ್ದಾರೆ’ ಎಂದು ಗ್ರಾಮದ ಮುಖಂಡ ಕೆಂಪೇಗೌಡ ತಿಳಿಸಿದರು.
‘ನಮ್ಮಂಥ ಗ್ರಾಮೀಣ ವಿದ್ಯಾರ್ಥಿಗಳಿಗೆ ಟೇಕ್ವಾಂಡೋ ಎಂಬ ಕಲೆಯನ್ನು ಕಲಿಯಲು ಅವಕಾಶವಿಲ್ಲ. ಆದರೆ ಅಮೆರಿಕೆಯಿಂದ ಬಂದು ನಮಗೆ ಈ ವಿದ್ಯೆಯನ್ನು ಕಲಿಸುತ್ತಿರುವುದು ನಮ್ಮ ಅದೃಷ್ಟವಾಗಿದೆ. ನಾವು ಅದನ್ನು ಚೆನ್ನಾಗಿ ಕಲಿತು ಇತರರಿಗೂ ಕಲಿಸಲು ಪ್ರಯತ್ನಿಸುತ್ತೇವೆ’ ಎನ್ನುತ್ತಾರೆ ವಿದ್ಯಾರ್ಥಿನಿ ಪಿ.ಎಸ್ಸರಳಾರಾಣಿ.
‘ನಮ್ಮ ಮುತ್ತೂರು’ ಸಂಸ್ಥೆಯ ಉಷಾಶೆಟ್ಟಿ, ಮುಖ್ಯ ಶಿಕ್ಷಕಿ ಜಿ.ಎನ್.ಅಹಲ್ಯಾ, ಶಿಕ್ಷಕರಾದ ವಿ.ಪ್ರಭಾಕರ್, ಎಂ.ಪ್ರೇಮಲೀಲಾ, ಎಸ್.ದಾವೂದ್ ಪಾಷ, ಎಂ.ಜಿ.ವನೀತಾ ಈ ಸಂದರ್ಭದಲ್ಲಿ ಹಾಜರಿದ್ದರು.

ವಾರಕ್ಕೊಂದು ನುಡಿಮುತ್ತು (ಸುಭಾಷಿತ) – ಭಾಗ 1

0

ಸುಭಾಷಿತಗಳು/ನುಡಿಮುತ್ತುಗಳು ನಮ್ಮ ಜೀವನವನ್ನು ಉತ್ತಮಗೊಳಿಸುವ ಮುಖ್ಯ ಸಾಧನ. ಪ್ರತಿದಿನ ಒಂದು ಸುಭಾಷಿತವನ್ನು ದೈನಂದಿನ ಪತ್ರಿಕೆಯಲ್ಲಿ ಓದಿರಿ. ವಾರಕ್ಕೊಮ್ಮೆ ಒಂದು ನುಡಿಮುತ್ತುಗಳನ್ನು ಬರೆದು ಮನನ ಮಾಡಲು ಪ್ರಯತ್ನಿಸಿರಿ. ಇಲ್ಲಿ ನಿಮಗಾಗಿ 52 ನುಡಿಮುತ್ತುಗಳನ್ನು ಅರ್ಥಮಾಡಿಕೊಂಡು ಅವುಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿರಿ. ಒಂದು ವರ್ಷದಲ್ಲಿನಿಮಗೇ ತಿಳಿಯದಂತೆ ನೀವು ಬದಲಾಗಿರುತ್ತೀರಿ ಮತ್ತು ನಿಮ್ಮ ಜೀವನ ಹಸನಾಗುತ್ತದೆ.
1. ಜೀವನದಲ್ಲಿ ಎಲ್ಲರಿಗೂ ಗೆಲ್ಲಲೇಬೇಕೆಂಬ ಬಯಕೆ ಇರುತ್ತದೆ. ಆದರೆ ಬಯಸಿದಂತೆ ನಡೆಯುತ್ತದೆ ಎಂದೇನೂ ಇಲ್ಲ. ಬಯಸಿದ್ದು ಈಡೇರದೇ ಇದ್ದಾಗ ದು:ಖಿಸುವ ಅಗತ್ಯವಿಲ್ಲ. ಎಲ್ಲಿ ತಪ್ಪಿದೆವು ಎಂದು ಅವಲೋಕಿಸಿರಿ. ದಾರಿಯನ್ನು ಸರಿಪಡಿಸಿಕೊಂಡು ದಿಟ್ಟ ಗುರಿಯೊಂದಿಗೆ ಮುನ್ನಡೆಯಿರಿ.
2. ಯಶಸ್ಸಿನ ಬೆನ್ನ ಹಿಂದೆಯೇ ಅತ್ಮವಿಶ್ವಾಸದಿಂದ ಜೀವಿಸುವದನ್ನು ರೂಢಿಸಿಕೊಳ್ಳಿರಿ. ಯಶಸ್ಸನ್ನು ಒಲಿಸಿಕೊಳ್ಳಿರಿ.
3. ನಾಳಿನ ಅತ್ಯುತ್ತಮ ಯೋಜನೆಗಿಂತ ಇಂದಿನ ಉತ್ತಮ ಯೋಜನೆಯೇ ಲೇಸು. ಎಂದಿಗೂ ಸಮಾಧಾನದಿಂದ ಹಿಂದೆ ನೋಡಬೇಕು.
4. ನನ್ನನ್ನು ಯಾರೂ ಇಷ್ಟಪಡುತ್ತಿಲ್ಲ ಎಂಬ ಕೊರಗು ಬೇಡ. ಇದರ ಬದಲಿಗೆ ನನ್ನ ಹಾಗೆ ಯಾರೂ ಇಲ್ಲ ಎಂದು ಭಾವಿಸಿರಿ. ಎಲ್ಲ ವ್ಯಕ್ತಿಗಳೂ ವಿಭಿನ್ನ ಎಂಬ ಸತ್ಯವನ್ನು ಮರೆಯದಿರಿ. ಯೋಚನೆ ವಿಭಿನ್ನವಾಗಿದ್ದಲ್ಲಿ ಜೀವನವು ಸುಂದರವಾಗುತ್ತದೆ.
5. ದ್ವೇಷ, ಹೊಟ್ಟೆಕಿಚ್ಚು ಎಂದರೆ ನಾವು ವಿಷವನ್ನು ಸೇವಿಸಿ ಬೇರೆಯವರೇ ಸಾಯಲಿ ಎಂದು ಬಯಸಿದಂತೆ. ಆದರೆ ದ್ವೇಷಕ್ಕೆ ಬಲಿಯಾಗುವವರು ನಾವು. ದ್ವೇಷ ನಮ್ಮನ್ನು ಮೊದಲು ಸಾಯಿಸುತ್ತದೆ. ದ್ವೇಷದಿಂದ ಯಾವ ಪ್ರಯೋಜನವೂ ಇಲ್ಲ.
6. ನಾವೊಬ್ಬರೇ ಪರಸ್ಪರರ ವಿಚಾರವನ್ನು ಮಾತನಾಡುವ ಬದಲು ಎಲ್ಲರ ಜೊತೆಗೆ ನೇರವಾಗಿ ಮಾತನಾಡಿದರೆ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು.
7. ಮಾತಿನ ಹಿಂದೆ ಮನಸ್ಸು ಕೆಲಸ ಮಾಡುತ್ತಿರುತ್ತದೆ. ಮನಸ್ಸನ್ನು ಸುಸ್ಥಿತಿಯಲ್ಲಿಟ್ಟುಕೊಂಡರೆ ಮಾತು ಉತ್ತಮವಾಗಿ ಹೊರಡುತ್ತದೆ. ಮೊದಲು ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಲು ಕಲಿಯಬೇಕು.
8. ಒಂದು ನಿಮಿಷದಲ್ಲಿ ನಿಮ್ಮ ಜೀವನದಲ್ಲಿ ಯಾವ ಬದಲಾವಣೆಯನ್ನು ತರಲಿಕ್ಕೆ ಸಾಧ್ಯವಿಲ್ಲ. ಆದರೆ ಪ್ರತಿ ನಿಮಿಷವನ್ನು ಸದ್ಬಳಕೆಯನ್ನು ಮಾಡಿಕೊಂಡದ್ದೇ ಆದಲ್ಲಿ ಅಸಾಧಾರಣ ಪರಿವರ್ತನೆ ನಿಮ್ಮಲ್ಲಿ ಆಗುತ್ತದೆ ಎಂಬುದರಲ್ಲಿ ಸಂದೇಹವೇ ಬೇಡ. ಸಮಯವನ್ನು ಹಾಳು ಮಾಡಬೇಡಿ.
9. ನಾವು ಪದೇ ಪದೇ ಏನನ್ನು ಹೇಳುತ್ತೇವೆಯೋ, ಯೋಚಿಸುತ್ತೇವೆಯೋ ಮತ್ತೆ ಮಾಡುತ್ತೇವೆಯೋ ಅದೇ ಆಗಿರುತ್ತೇವೆ. ಆದ್ದರಿಂದ ಸದಾ ಸಕಾರಾತ್ಮಕ ಸಂಗತಿಗಳ ಬಗ್ಗೆ ಯೋಚಿಸಬೇಕು. ಆಗಲೆ ಉತ್ತಮ ಸಾಧನೆ ಮಾಡಲು ಸಾಧ್ಯ.
10. ನಿಮ್ಮ ಬಗೆಗಿನ ಟೀಕೆಗಳಿಗೆ ತಲೆಕೆಡಿಸಿಕೊಳ್ಳಬಾರದು. ಟೀಕೆಗಳಿಗೆ ಎಷ್ಟೇ ಸಮಜಾಯಿಷಿ ಕೊಟ್ಟರೂ ಅದರಿಂದ ಜನರಿಗೆ ಮನವರಿಕೆಯಾಗುವುದಿಲ್ಲ. ನಿಮ್ಮ ಕೆಲಸ, ಸಾಧನೆಯೇ ಉತ್ತರವಾಗಬೇಕು. ಅದರ ಮುಂದೆ ಚಕಾರ ಎತ್ತಲಾರರು.
11. ಜೀವನದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳನ್ನೂ ಒಂದು ಪಾಠವೆಂದು ಸ್ವೀಕರಿಸಿ. ಆಗ ಸಮಸ್ಯೆಗಳನ್ನು ನೋಡುವ ದೃಷ್ಟಿಕೋನವೇ ಬದಲಾಗುತ್ತದೆ. ಪ್ರತಿ ಸಮಸ್ಯೆಯೂ ನಮಗೆ ಜೀವನ ಪಾಠವಾಗುತ್ತದೆ.
12. ನೀವು ಎಷ್ಟೇ ಉನ್ನತ ಹುದ್ದೆಗೇರಿದರೂ ತಲೆಬಾಗುವುದನ್ನು ತಪ್ಪಿಸಿಬೇಡಿ ಒಲಂಪಿಕ್ಸ್‍ನಲ್ಲಿ ಮೊದಲಸ್ಥಾನ ಗಳಿಸಿದವರೂ ಪದಕ ಹಾಕಿಸಿಕೊಳ್ಳುವಾಗ ತಲೆ ಬಾಗುತ್ತಾರೆ. ತಗ್ಗಿ-ಬಗ್ಗಿ ನಡೆದರೆ ಎಂದೂ ಅಪಾಯವಿಲ್ಲ.
13. ಸಮಸ್ಯೆಗಳಿಂದ ಓಡಿಹೋದರೆ ಪರಿಹಾರದಿಂದ ದೂರ ಹೋದಂತೆ (ಪಲಾಯನ ವಾದ). ಸಮಸ್ಯೆ ಎದುರಾದಾಗ ಧೈರ್ಯದಿಂದ ಎದುರಿಸಬೇಕೇ ಹೊರತು ಪಲಾಯನ ಮಾಡಬಾರದು.
14. ನಾನು ಸಾಮಾನ್ಯನಲ್ಲ, ನನ್ನಲ್ಲಿ ಅಸಾಧಾರಣ ಸಾಮಥ್ರ್ಯವಿದೆ ಎಂದು ಭಾವಿಸಿ. ಏಕೆಂದರೆ ದೇವರು ನಿರುಪಯುಕ್ತ ವ್ಯಕ್ತಿಯನ್ನು ಸೃಷ್ಟಿಸುವುದಿಲ್ಲ ಎಂದು ತಿಳಿಯಿರಿ. ನಿಮ್ಮ ಹಾಗೂ ಬೇರೆಯವರ ಬಗೆಗಿನ ಅಭಿಪ್ರಾಯ ಬದಲಾಗುತ್ತದೆ.
15. ಪ್ರತಿಯೊಂದು ವಿಚಾರದ ಬಗ್ಗೆ ಎರಡು ವಿಧಗಳಲ್ಲಿ ಚಿಂತಿಸಬಹುದು-ಧನಾತ್ಮಕವಾಗಿ ಮತ್ತು ಋಣಾತ್ಮಕವಾಗಿ. ಧನಾತ್ಮಕವಾಗಿ ಚಿಂತಿಸಿದಾಗ ಅದು ಸಂತೋಷ ತರುತ್ತದೆ. ಋಣಾತ್ಮಕವಾಗಿ ಚಿಂತಿಸಿದಾಗ ಅದು ಸಂತೋಷ ತರುತ್ತದೆ. ಋಣಾತ್ಮಕವಾಗಿ ಚಿಂತಿಸಿದಾಗ ಅದು ದು:ಖಕ್ಕೆ ಕಾರಣವಾಗುತ್ತದೆ. ಹಾಗಾಗಿ ನಾವು ಎಂದಿಗೂ ಧನಾತ್ಮಕವಾಗಿ ಚಿಂತಿಸಿ ಸಂತೋಷವಾಗಿರೋಣ.
16. ಪ್ರಯತ್ನ ಎಂಬುದು ಸಣ್ಣ ಪದವಾಗಿರಬಹುದು. ಆದರೆ ಅದು ತರುವ ಪರಿಣಾಮ ಮಾತ್ರ ಅಗಾಧ. ಎಂಥ ಸೋಲನ್ನಾದರೂ ಗೆಲ್ಲುವಂತೆ ಮಾಡುವ ಶಕ್ತಿ ಅದಕ್ಕಿದೆ. ಪ್ರಯತ್ನವೊಂದೇ ನಮ್ಮನ್ನು ಜೀವನ್ಮುಖಿಯಾಗಿಡುವುದು.
17. ನಾವು ಇಂದು ಏನಾಗಿದ್ದೇವೋ ಅದಕ್ಕೆ ನಮ್ಮ ಯೋಚನೆಗಳೇ ಕಾರಣ. ನಮ್ಮನ್ನು ರೂಪಿಸುವುದು ನಮ್ಮ ಆಲೋಚನೆಗಳು. ಆದ್ದರಿಂದ ನಮ್ಮ ಆಲೋಚನೆಗಳು ಸರಿಯಾಗಿರಬೇಕು. ಮಾತಿಗಿಂತ ಚಿಂತನೆ ಮುಖ್ಯ. ನಮ್ಮ ಆಲೋಚನೆಗಳು ಸದಾ ನಮ್ಮ ಏಳಿಗೆಗೆ ಪೂರಕವಾಗಿರಬೇಕು.
18. ಉತ್ತಮ ನಡತೆ ಮತ್ತು ಮನಸ್ಸು ಇವೆರಡನ್ನೂ ಬೆಳೆಸಿಕೊಳ್ಳಬೇಕಾದದ್ದು ಅನಿವಾರ್ಯ. ಏಕೆಂದರೆ ಇವುಗಳು ಒಂದಕ್ಕೊಂದು ಹೊಂದಿಕೊಂಡಾಗ ಮಾತ್ರ ನಿಮಗೆ ಮತ್ತು ಇತರರಿಗೆ ತಾತ್ಕಾಲಿಕ ಹಾಗೂ ಶಾಶ್ವತ ಆನಂದಗಳು ದೊರೆಯುವುದು ಸಾಧ್ಯ.
19. ಅಸಾಧ್ಯವೆಂಬುದು ಒಂದು ಪದವಲ್ಲ. ಪ್ರಯತ್ನ ಮಾಡದೇ ಇರುವುದಕ್ಕೆ ಕೈಲಾಗದವರು ಕೊಡುವ ಒಂದು ಕಾರಣ. ಪ್ರಯತ್ನಪಟ್ಟರೆ ಎಲ್ಲವನ್ನೂ ಸಾಧಿಸಬಹುದು. ಅನೇಕ ಬಾರಿ ನಾವು ಪ್ರಯತ್ನವನ್ನೇ ಮಾಡಿರುವುದಿಲ್ಲ.
20. ತಪ್ಪು ಮಾಡಬಾರದು. ಒಂದೊಮ್ಮೆ ತಪ್ಪು ಮಾಡಿದರೆ ಸಮರ್ಥಿಸಿಕೊಳ್ಳಲು ಪ್ರಯತ್ನಿಸಬಾರದು. ತಪ್ಪನ್ನು ಸಮರ್ಥಿಸಿಕೊಳ್ಳುವುದಕ್ಕಿಂತ ದೊಡ್ಡ ತಪ್ಪು ಇನ್ನೊಂದಿಲ್ಲ. ಮಾಡದ ತಪ್ಪಿನಿಂದ ಹೊರಬರಲು ಇರುವ ಏಕೈಕ ಮಾರ್ಗವೆಂದರೆ ಅದನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡು ತಿದ್ದಿಕೊಳ್ಳುವುದು.
ಮುಂದುವರೆಯುವುದು…
ಡಾ. ಶ್ರೀವತ್ಸ

ಶುದ್ಧ ನೀರನ್ನು ಉಪಯೋಗಿಸಿ ರೋಗಗಳಿಂದ ದೂರವಿರಿ

0

ಎಲ್ಲರೂ ಶುದ್ಧ ನೀರನ್ನು ಉಪಯೋಗಿಸಿ ರೋಗಗಳಿಂದ ದೂರವಿರಿ. ನೀರನ್ನು ಮಿತವಾಗಿ ಬಳಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಲಕ್ಷ್ಮೀದೇವಮ್ಮ ತಿಳಿಸಿದರು.
ನಗರದ ಸ್ತ್ರೀಶಕ್ತಿ ಭವನದ ಸಭಾಂಗಣದಲ್ಲಿ ಸೋಮವಾರ ಐನಾ ಟ್ರಸ್ಟ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಎಂಬ ವಿಷಯವಾಗಿ ನಡೆದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಕುಡಿಯುವ ನೀರನ್ನು 20 ನಿಮಿಷಗಳ ಕಾಲ ಕುದಿಸಿ ಆರಿಸಿ ಬಳಸಬೇಕು. ನೀರನ್ನು ಶೇಖರಿಸುವ ಪಾತ್ರೆ ಅಥವಾ ಬಿಂದಿಗೆಗಳನ್ನು ಮುಚ್ಚಿಡಬೇಕು. ಸ್ವಚ್ಛತೆಗೆ ಆದ್ಯತೆಯನ್ನು ನೀಡಬೇಕು. ಕಸ ಹಾಗೂ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡದೆ, ಪ್ರತ್ಯೇಕವಾಗಿ ಶೇಖರಿಸಿ ಪ್ರತಿದಿನ ಅದನ್ನು ತ್ಯಾಜ್ಯ ಗುಂಡಿಗಳಿಗೆ ಹಾಕಬೇಕು. ಅಂಗನಾಡಿಗಳಲ್ಲಿ ಮಕ್ಕಳಿಗೆ ತಿನ್ನಿಸುವ ಮುನ್ನ ಕೈಗಳನ್ನು ಸಾಬೂನನ್ನು ಬಳಸಿ ಸ್ವಚ್ಛಗೊಳಿಸಿಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಬೇಕು. ಪೋಷಕರೂ ಕೂಡ ಈ ಅಭ್ಯಾಸ ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಶೌಚಾಲಯ ಬಳಸುವ ಅಭ್ಯಾಸ ರೂಢಿಸಬೇಕು ಎಂದು ಹೇಳಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಅನಿಲ್ಕುಮಾರ್ ಮಾತನಾಡಿ, ಹಿಂದೆ ಇದ್ದ ಅಪೌಷ್ಠಿಕತೆಯಿಂದ ಬಳಲುತ್ತಿದ್ದ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಇದಕ್ಕೆ ಅಂಗನವಾಡಿ ಕಾರ್ಯಕರ್ತೆಯರ ಶ್ರಮ ಕಾರಣವಾಗಿದೆ. ಇನ್ನಷ್ಟು ಈ ಬಗ್ಗೆ ಶ್ರಮ ವಹಿಸಿ ಅರಿವು ಮೂಡಿಸಿದ್ದಲ್ಲಿ ಅಪೌಷ್ಠಿಕತೆಯಿಂದ ಬಳಲುವ ಮಕ್ಕಳ ಸಂಖ್ಯೆಯನ್ನು ಶೂನ್ಯಕ್ಕೆ ಇಳಿಸಬಹುದಾಗಿದೆ. ಸ್ವಚ್ಛತೆಯು ಖಾಯಿಲೆಯಿಂದ ದೂರವಿಡುವ ಬಹು ದೊಡ್ಡ ಮುಂಜಾಗೃತಾ ಕ್ರಮವಾಗಿದೆ. ಮಹಿಳೆಯರು ಮನೆಗಳ ಸುತ್ತ ಮುತ್ತ ನೀರು ನಿಲ್ಲಲು ಆಸ್ಪದ ನೀಡದೆ, ವಾರಕ್ಕೊಮ್ಮೆ ನೀರು ಶೇಖರಿಸುವ ಡ್ರಮ್ಮುಗಳನ್ನು ಒಣಗಿಸಿಟ್ಟು ಲಾರ್ವ ಬೆಳೆಯದಂತೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಐನಾ ಸಂಸ್ಥೆಯ ವತಿಯಿಂದ ಮನೆಯಲ್ಲಿ ಮಹಿಳೆಯರ, ಅಂಗನವಾಡಿ ಕಾರ್ಯಕರ್ತೆಯರ ಕರ್ತವ್ಯ ಕುರಿತಂತೆ ಅರಿವು ಮೂಡಿಸುವ ನೃತ್ಯ ರೂಪಕವನ್ನು ಹಾಗೂ ನಾಟಕವನ್ನು ಮಕ್ಕಳು ಪ್ರದರ್ಶಿಸಿದರು.
ಆರೋಗ್ಯ ಇಲಾಖೆಯ ಎ.ಜಿ.ಸುಧಾಕರ್, ವಿಂದ್ಯಾ, ಕಿರಣ್ ಕುಮಾರ್, ಸಿ.ಡಿ.ಪಿ.ಒ ಇಲಾಖೆಯ ಮೇಲ್ವಿಚಾರಕಿ ಗಿರಿಜಾಂಬಿಕೆ, ಎಂ.ರಾಧಮ್ಮ, ಶಾಂತಾ ಬಿ.ಜಿಂದ್ರಾಳೆ, ಸರೋಜಮ್ಮ, ಮೇರಿ ಚಲ್ಲಾ ದೊರೈ, ವೆರೋಣಿಕಾ ಡೇವಿಡ್, ಜಯಶ್ರೀ, ಸಿಂದೂ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಗಾಸಿಪಿಂಗ್ ಎಂಬ ಬಾಯ್ತುರಿಕೆ

0

ಗಾಸಿಪಿಂಗ್ ಅಂದರೆ ಬರೀ ಹೆಣ್ಣು ಮಕ್ಕಳು ಮಾಡುವಂತಾದ್ದು ಅನ್ನುವ ರೀತಿಯಲ್ಲಿ ಇದರ ಬಗೆಗೆ ಸ್ತ್ರೀ ಸಂಗಾತಿಯಾದ “ಭೂಮಿಕಾ” ದಲ್ಲೇ ಏಕೆ ಬರೆಯಬೇಕು ಎಂದು ಯಾರಾದರೂ ತರಲೆ ತೆಗೆದರೆ ನನ್ನ ಬಳಿ ಸ್ಪಷ್ಟ ಉತ್ತರವಿಲ್ಲ ಎಂದು ಮೊದಲೇ ಒಪ್ಪಿಕೊಂಡುಬಿಡುತ್ತೇನೆ! ತಮಾಷೆ ಅಂದ್ರೆ ಹೆಚ್ಚಿನ ಗಂಡಸರು ಇದನ್ನು ಮಾಡುತ್ತಾರಾದರೂ ಅದು ಗಾಸಿಪಿಂಗ್ ಎಂದು ಕರೆಸಿಕೊಳ್ಳುವುದೇ ಇಲ್ಲ. ಅದೂ ಅಲ್ಲದೆ ಹೆಂಗಸರೇ ಹೆಚ್ಚು ಗಾಸಿಪಿಂಗ್ ಮಾಡುತ್ತಾರೆಂದು ಅವರಲ್ಲೇ ಹೆಚ್ಚಿನವರು ಒಪ್ಪಿಕೊಂಡುಬಿಡುತ್ತಾರೆ! ಅದೇನೆ ಇರಲಿ ಸಧ್ಯಕ್ಕೆ ನಾನು ಹೇಳುವುದಂತೂ ಸ್ತ್ರೀ ಪುರುಷರಿಗೆ ಸಮಾನವಾಗಿ ಅನ್ವಯಿಸುವಾಂತಾದ್ದು.
ನಾನು ಹೇಳಬೇಕೆಂದಿರುವುದು ಸಿನಿಮಾ ಪತ್ರಿಕೆಗಳು, ಟೀವಿಗಳಲ್ಲಿ ಬರುವ ನಟ/ಟಿಯರ ಬಗೆಗಿನ ಗಾಸಿಪಿಂಗ್ ಬಗೆಗಲ್ಲ, ನಾವು ದಿನನಿತ್ಯ ಬೆರೆಯುವ ಜನಗಳ ಬಗೆಗೆ ನಮ್ಮನಮ್ಮಲ್ಲೇ ನಡೆಸುವ ಗಾಸಿಪಿಂಗ್ ವಿಚಾರ. ಮನಃಶಾಸ್ತ್ರದ ದೃಷ್ಟಿಯಿಂದ ನೋಡಿದರೆ ಎಲ್ಲಾ ತರಹದ ಗಾಸಿಪಿಂಗ್‍ಗಳೂ ಒಂದೇ ರೀತಿಯ ಮನೋಭಾವದ ದ್ಯೋತಕ. ಒಂದೇ ವ್ಯತ್ಯಾಸವೆಂದರೆ ದೊಡ್ಡವರ ಗಾಸಿಪ್‍ಗಳನ್ನು ಚಪ್ಪರಿಸುವುದರಿಂದ ನಮ್ಮ ವೈಯುಕ್ತಿಕ ಸಂಬಂಧಗಳೇನೂ ಹಾಳಾಗಲಾರದು!
ಗಾಸಿಪಿಂಗ್ ಅಂದ್ರೆ ಏನು?
ನಾಲ್ಕು ಜನ ಸೇರಿದೊಡನೆ ಅಲ್ಲಿ ಹಾಜರಿಲ್ಲದವರ ಬಗೆಗೆ ಮಾತನಾಡೋದನ್ನು ನಾವೆಲ್ಲಾ ದಿನನಿತ್ಯ ನೋಡುತ್ತೇವೆ ಮತ್ತು ಮಾಡುತ್ತೇವೆ ಕೂಡ. ಇದೆಲ್ಲಾ ಗಾಸಿಪಿಂಗ್ ಯಾಕಾಗಲ್ಲ ಯೋಚಿಸಿದ್ದೀರಾ? ಎದುರಿಗೆ ಇಲ್ಲದವರ ಬಗೆಗೆ ಮಾತನ್ನಾಡಿದ್ದು ಅವರು ಉಪಸ್ಥಿತರಿದ್ದಾಗಲೂ ಮಾತನಾಡುವುದು ಸಾಧ್ಯವಾದರೆ ಅದು ಗಾಸಿಪಿಂಗ್ ಯಾಕಾಗುತ್ತೆ? ಅಂದರೆ ಸ್ಥಳದಲ್ಲಿ ಹಾಜರಿಲ್ಲದವರ ಬಗೆಗೆ ಅವರೆದುರು ಹೇಳಲಾರದ್ದನ್ನು ಮಾತನಾಡುವುದು ಗಾಸಿಪಿಂಗ್ ಎಂದಾಯಿತಲ್ವಾ? ಹಾಗಾಗಿ ಗಾಸಿಪಿಂಗ್ ವಿಚಾರಗಳು ಆ ವ್ಯಕ್ತಿಯ ಋಣಾತ್ಮಕ ಗುಣ ನಡತೆಗಳ ಬಗ್ಗೆ ಮಾತ್ರ ಇರುತ್ತದೆ.
ಇದರ ಪರಿಣಾಮಗಳೇನು?
ಹೀಗೊಂದು ಘಟನೆಯನ್ನು ಊಹಿಸಿಕೊಳ್ಳಿ. ನಿಮ್ಮ ಹತ್ತಿರ ನಿಮ್ಮೊಬ್ಬ ಸ್ನೆಹಿತರು ಬಂದು ಯಾರ ಬಗ್ಗೆನೋ ಗಾಸಿಪ್ ಮಾಡಿದ್ದಾರೆ. ತಕ್ಷಣಕ್ಕೆ ನಿಮಗೆ ಬಹಳ ಖುಷಿಯಾಗುತ್ತದೆ, ಗಾಸಿಪ್ ನಿಮ್ಮ ಶತ್ರುಗಳ ಬಗೆಗಿದ್ದರಂತೂ ಹಾಲಿಗೆ ಜೇನು ಸೇರಿಸಿದಷ್ಟು ಸವಿಯಾಗಿರುತ್ತದೆ! ಆದರೆ ಸ್ವಲ್ಪ ಯೋಚನೆ ಮಾಡಿ-ನಿಮ್ಮ ಹತ್ತಿರ ಬೇರೊಬ್ಬರ ಬಗೆಗೆ ಮಾತನಾಡಿದ ವ್ಯಕ್ತಿ ನಿಮ್ಮ ಬಗ್ಗೆಯೂ ಇದೇ ರೀತಿ ಮೂರನೆಯವರೆದುರು ಮಾತನಾಡಿರಬಹುದಲ್ವಾ? ಅಂತವನು ನಿಮ್ಮ ನಂಬಿಕೆಗೆ ಹೇಗೆ ಅರ್ಹನಾಗುತ್ತಾನೆ?
ನಾವು ಗಾಸಿಪ್ ಮಾಡಿದಾಗಲೂ ಇದೇ ರೀತಿಯ ಪರಿಣಾಮಗಳಾಗುವ ಸಾಧ್ಯತೆಗಳಿವೆ. ಹಾಗಾಗಿ ನಮ್ಮ ಗಾಸಿಪ್‍ನ ವಸ್ತುವಾದವನು ನಮ್ಮೊಡನೆ ಆತ್ಮೀಯವಾಗಿರಬೇಕೆಂದು ಆಶಿಸುವುದು ಹೇಗೆ? ನಮ್ಮ ಗಾಸಿಪಿಂಗ್ ಯಾರಿಗೇನೂ ತಿಳಿಯುವುದಿಲ್ಲ ಎಂದು ನಿಮ್ಮ ವಾದವಾದರೆ ನಾನು ಮತ್ತೆ ಹಳೆಯ ಕಥೆಯನ್ನೇ ಹೇಳುತ್ತೇನೆ. ನಮ್ಮೊಡನೆ ಗಾಸಿಪ್‍ನಲ್ಲಿ ಪಾಲುದಾರಿಕೆ ಮಾಡುತ್ತಿರುವ ವ್ಯಕ್ತಿ ನಮ್ಮ ಸ್ನೇಹಿತನ ಗಾಸಿಪಿಂಗ್ ಪಾಲುದಾರ ಆಗಿರುವ ಸಾಧ್ಯತೆಗಳು ಹೆಚ್ಚು!
ಈ ಗಾಸಿಪಿಂಗ್ ಉದ್ದೇಶ ಸಾಮಾನ್ಯವಾಗಿ ಇತರರನ್ನು ನಮಗಿಂತ ಕೀಳು ಎಂದು ಬಿಂಬಿಸುವ ಪ್ರಯತ್ನವಾಗಿರುತ್ತದೆ. ಹಾಗಾಗಿ ಪತಿ ಪತ್ನಿ ಮಕ್ಕಳ ಮಧ್ಯೆ ಇದರ ಹಾವಳಿ ಇರುವ ಸಂಭವ ಕಡಿಮೆ. ಆದರೆ ಇತರ ಸಂಬಂಧಿಗಳು ಮತ್ತು ಸ್ನೇಹಿತರ ವಿಷಯಗಳಲ್ಲಿ ಗಾಸಿಪಿಂಗ್ ತೀರಾ ಸಾಮಾನ್ಯ. ಆತ್ಮೀಯ ಸ್ನೇಹಿತರನ್ನು ನಮ್ಮಿಂದ ದೂರಮಾಡುವುದರಲ್ಲಿ ಮತ್ತು ಪರಿಚಯ ಉತ್ತಮ ಸ್ನೇಹವಾಗುವುದನ್ನು ತಪ್ಪಿಸುವುದರಲ್ಲಿ ಗಾಸಿಪಿಂಗ್ ಉತ್ತಮ ಸಹಕಾರ ನೀಡುತ್ತದೆ. ನಮ್ಮ ಸುತ್ತಮುತ್ತಲೂ ಇವುಗಳ ಉದಾಹರಣೆಗಳನ್ನು ನಾವು ಸಾಕಷ್ಟು ನೋಡುತ್ತೇವೆ; ಕಥೆ ಕಾದಂಬರಿ ಸಿನಿಮಾಗಳಲ್ಲಿ ಗಾಸಿಂಪಿಗ್‍ನ ದುಷ್ಪರಿಣಾಮಗಳು ಹೇರಳವಾಗಿ ಬಿಂಬಿತವಾಗಿವೆ. ಆದರೂ ನಾವು ಪಾಠವನ್ನು ಮಾತ್ರ ಕಲಿಯುವುದಿಲ್ಲ. ಯಾಕೇಂದ್ರೆ ಈ ಗಾಸಿಪಿಂಗ್‍ನ ನಷೆಯೇ ಅಂತಾದ್ದು! ಇದು ಕುರುಕಲು ತಿಂಡಿಯಂತೆ ಸ್ವಾದಿಷ್ಟ; ಜೀವಹಾನಿಯನ್ನು ಮಾಡದಿದ್ದರೂ ಆಗಾಗ ಗ್ಯಾಸ್ ಟ್ರಬಲ್, ಹುಳಿತೇಗಿನಂತಹ ಕಿರಿಕಿರಿ ಮಾಡುತ್ತಲೇ ಇರುತ್ತದೆ! ಗಾಸಿಪಿಂಗ್ ಒಂತರಾ ತುರಿಕೆಯಂತೆ; ತುರಿಸಿದಷ್ಟು ಮಜ ನೀಡುತ್ತಾ, ಹೆಚ್ಚು ಹೆಚ್ಚು ತುರಿಕೆಯನ್ನು ಬೇಡುತ್ತಾ, ಕೊನೆಗೆ ದೊಡ್ಡ ಗಾಯವನ್ನು ಉಳಿಸುತ್ತದೆ. ಇದರಿಂದ ಹೊರಬರುವುದೂ ಸುಲುಭವೇನೂ ಅಲ್ಲ. ಕೆಲವಾರು ತಿಂಗಳು ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸಿದರೆ ಮನಸ್ಸನ್ನು ಗಾಸಿಪಿಂಗ್‍ನ ನಷೆಗೆ ಡೀಅಡೀಕ್ಟ ಮಾಡಬಹುದು.
ತಪ್ಪಿಸುವುದು ಹೇಗೆ?
ತಕ್ಷಣ ಹೀಗೊಂದು ನಿರ್ಧಾರ ಮಾಡೋಣ. ಸುತ್ತಲಿನ ಜನರ ನಡವಳಿಕೆಗೆ ನಾನೇನೂ ಕೊನೆಯ ತೀರ್ಮಾನ ನೀಡುವ ಸರ್ವೋಚ್ಛ ನ್ಯಾಯಲಯ ಆಗಬೇಕಿಲ್ಲ. ನನ್ನ ಪರಿಚಿತರು ಮತ್ತು ಆತ್ಮೀಯರ ನಡೆನುಡಿ ನನಗೆ ಸರಿ ಅನ್ನಿಸದಿದ್ದರೆ ಅದನ್ನು ಅವರಲ್ಲಿ ವೈಯುಕ್ತಿಕವಾಗಿ, ಮನಸ್ಸಿಗೆ ನೋವಾಗದಂತೆ ಹೇಳುತ್ತೇನೆ; ಯಾವುದೇ ರೀತಿಯಿಂದ ಹಾನಿಕಾರವಲ್ಲದ ಅಂಶಗಳನ್ನು ವ್ಯಕ್ತಿತ್ವದ ವೈವಿಧ್ಯತೆ ಎಂದುಕೊಂಡು ಸುಮ್ಮನಾಗಿಬಿಡುತ್ತೇನೆ. ಯಾರ ಬಗೆಗೂ ಅವರೆದುರು ಹೇಳಲಾರದ್ದನ್ನು ಅವನ ಗೈರುಹಾಜರಿಯಲ್ಲಿ ಹೇಳುವುದಿಲ್ಲ.
ನಿರ್ಧಾರದ ಕಾರ್ಯಚರಣೆಯಲ್ಲಿ ಪದೇಪದೇ ಎಡುವುವುದು ಸಹಜ. ಆದರೆ ಸ್ವಲ್ಪ ದಿನಗಳಲ್ಲಿ ಈ ನಡವಳಿಕೆ ನಮ್ಮ ಸಹಜ ಸ್ವಭಾವದ ಒಂದು ಭಾಗವಾಗಿಬಿಡುತ್ತದೆ. ಆರಂಭದಲ್ಲಿ ನಮ್ಮ ನೇರ ಮಾತುಗಳಿಂದ ಸಾಕಷ್ಟು ಸಂಬಂಧಗಳು ಬಿರುಕು ಬಿಡಬಹುದು. ಒಮ್ಮೆ ನಾವು ನಂಬಲರ್ಹ ವ್ಯಕ್ತಿ ಎಂದು ಸಾಬೀತಾದೊಡನೆ ಸುತ್ತಲಿನವರೆಲ್ಲಾ ಅವರಾಗಿಯೇ ನಮ್ಮ ಸ್ನೇಹಕ್ಕೆ ಹಾತೊರೆಯುತ್ತಾರೆ. ಆದರೆ ಕೆಲವರಾದರೂ ನಮ್ಮಿಂದ ದೂರಹೋಗುವ ಸಾಧ್ಯತೆ ಇದೆ. ಅದನ್ನು ಒಪ್ಪಿಕೊಂಡುಬಿಟ್ಟರಾಯಿತು, ಯಾಕೇಂದ್ರೆ ಎಲ್ಲರನ್ನೂ ಖುಷಿಯಲ್ಲಿಡುವ ಭರದಲ್ಲಿ ನಮ್ಮ ಸ್ವಂತಿಕೆ, ಸಮಾಧಾನಗಳನ್ನು ನಾವು ಕಳೆದುಕೊಳ್ಳಲಾಗುವುದಿಲ್ಲ. ಎಲ್ಲರನ್ನೂ ಒಪ್ಪಿಸುವ ಉದ್ದೇಶದಿಂದ ಹೊರಟವರೆಲ್ಲಾ ತಮ್ಮತನವನ್ನೂ ಕಳೆದುಕೊಂಡು ಇತರರನ್ನೂ ಮೆಚ್ಚಿಸಲಾರದ ಎಡಬಿಡಂಗಿತನದಲ್ಲಿ ಜೀವನ ಕಳೆಯುವ ಸಾಧ್ಯತೆಯೇ ಹೆಚ್ಚು.
ವಸಂತ್ ನಡಹಳ್ಳಿ

ಪ್ರತಿಭಾ ಪುರಸ್ಕಾರ ಹಾಗೂ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ

0

ತಾಲ್ಲೂಕು ಒಕ್ಕಲಿಗರ ಸಂಘ ಹಾಗೂ ಒಕ್ಕಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಂಘದ ಕಲ್ಯಾಣ ಮಂಟಪದ ಭೂಮಿಗೆ ಹಣ ನೀಡಿದ ದಾನಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಸಂಘದ ಅಧ್ಯಕ್ಷ ಬಿ.ನಾರಾಯಣಸ್ವಾಮಿ ತಿಳಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಜುಲೈ 25 ರ ಶನಿವಾರ ಚಿಂತಾಮಣಿ ರಸ್ತೆಯ ಟೋಲ್ಗೇಟ್ ಬಳಿ ಇರುವ ಒಕ್ಕಲಿಗ ಸಂಘದ ಆವರಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆದಿಚುಂಚನಗಿರಿ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ ಆಶೀರ್ವಚನವನ್ನು ನೀಡಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾಡಲಿದ್ದಾರೆ. ಎಸ್.ಎಸ್.ಎಲ್.ಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ 20 ಮಕ್ಕಳು ಮತ್ತು ಪಿಯುಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ 15 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ 23 ಮಂದಿ ದಾನಿಗಳಿಗೆ ಸನ್ಮಾನ ನಡೆಸುತ್ತಿರುವುದಾಗಿ ತಿಳಿಸಿದರು.
ತಾಲ್ಲೂಕು ಒಕ್ಕಲಿಗರ ಸಂಘದ ಕಾರ್ಯದರ್ಶಿ ಕೆಂಪರೆಡ್ಡಿ, ಶ್ರೀನಿವಾಸ್, ಸುಬ್ಬರೆಡ್ಡಿ, ಬಿ.ಆರ್.ಕೃಷ್ಣಪ್ಪ, ಸಿ.ಎ.ದೇವರಾಜ್, ಚನ್ನಕೇಶವ, ಶ್ರೀನಿವಾಸಮೂರ್ತಿ, ಸಿ.ಆರ್.ಪ್ರಕಾಶ್ ಈ ಸಂದರ್ಭದಲ್ಲಿ ಹಾಜರಿದ್ದರು.

ಆಷಾಡ ಮಾಸದ ವಿಶೇಷ ಲಕ್ಷ್ಮೀ ಸಹಸ್ರನಾಮ

0

ಕಾಳಿಕಾಂಭ ಕಮ್ಮಠೇಶ್ವರ ದೇವಾಲಯದಲ್ಲಿ ಆಷಾಡ ಮಾಸದ ವಿಶೇಷ ಲಕ್ಷ್ಮೀ ಸಹಸ್ರನಾಮ ಪೂಜೆಯನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ನಗರದ ನಗರ್ತಪೇಟೆಯ ಕಾಳಿಕಾಂಭ ಕಮ್ಮಠೇಶ್ವರ ದೇವಾಲಯದಲ್ಲಿ ಲಕ್ಷ್ಮೀ ಹಾಗೂ ವಿಘ್ನನಿವಾರಕ ವಿನಾಯಕನ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ನೆರವೇರಿಸಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ತುಳಸಿಯ ದಳಗಳನ್ನು ಎಣಿಸುತ್ತಾ ಸಹಸ್ರ ಅರ್ಚನೆಯನ್ನು ನೆರವೇರಿಸಿ ಜೀವನದಲ್ಲಿ ಎದುರಾಗುವ ಎಲ್ಲ ವಿಘ್ನಗಳನ್ನು ನಿವಾರಿಸುವ ಜತೆಗೆ ಎಲ್ಲ ಸಂಪತ್ತನ್ನು ಕರುಣಿಸಲಿ ಎಂದು ಭಕ್ತಿಪೂರ್ವಕವಾಗಿ ಪೂಜಿಸಿ ಪ್ರಾರ್ಥಿಸಿದರು.
ಆಷಾಡ ಮಾಸದಲ್ಲಿ ಅಷ್ಟಲಕ್ಷ್ಮಿಯರನ್ನು ಪೂಜಿಸಿದರೆ ಎಲ್ಲ ಸುಖ ಸಂಪತ್ತು ಐಶ್ವರ್ಯಗಳು ಪ್ರಾಪ್ತವಾಗುತ್ತವೆ ಎಂಬ ನಂಬಿಕೆಯಿಂದ ದೇವಾಲಯದ ಸುತ್ತ ಮುತ್ತಲ ನೂರಾರು ಮುತ್ತೈದೆಯರು ಸೇರಿ ಲಕ್ಷ್ಮೀಪೂಜೆಯನ್ನು ನೆರವೇರಿಸಿ ತಂಬಿಟ್ಟು ದೀಪಗಳನ್ನು ಬೆಳಗಿ ಹೆಸರು ಬೇಳೆ ಬೆಲ್ಲದ ಪಾನಕವನ್ನು ಎಲ್ಲರಿಗೂ ಪ್ರಸಾದವಾಗಿ ಹಂಚಲಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಕಾಳಿಕಾಂಭ ಕಮ್ಮಠೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಮುನಿರತ್ನಮಾಚಾರ್ ಮಾತನಾಡಿ, ಎಲ್ಲರೂ ಒಂದಲ್ಲ ಒಂದು ಕೆಲಸ ಮಾಡಿಕೊಂಡಿದ್ದು ಬಿಡುವಿಲ್ಲದ ಕೆಲಸ ಕಾರ್ಯಗಳ ಒತ್ತಡದ ನಡುವೆ ಧಾರ್ಮಿಕ ಚಟುವಟಿಕೆಗಳು ಸೇರಿ ಮಾನಸಿಕ ಹಾಗೂ ದೈಹಿಕ ಕಸರತ್ತಿಗೆ ಅವಕಾಶವೇ ಇಲ್ಲದಾಗಿದೆ. ಹಾಗಾಗಿ ಈ ಜೀವನ ಶೈಲಿಯು ದೈಹಿಕ ಹಾಗೂ ಮಾನಸಿಕ ರೋಗಗಳಿಗೆ ಕಾರಣವಾಗುತ್ತಿದೆ. ಸುಖ ಶಾಂತಿ ನೆಮ್ಮದಿಯ ಆರೋಗ್ಯ ಜೀವನಕ್ಕಾಗಿ ಧಾರ್ಮಿಕ ಚಟುವಟಿಕೆಗಳಲ್ಲಷ್ಟೆ ಅಲ್ಲ ಇತರೆ ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕಿದೆ. ಇದರಿಂದ ನಾವು ಮಾತ್ರವಲ್ಲ ನಮ್ಮ ಸುತ್ತ ಮುತ್ತಲ ಎಲ್ಲರೂ ಸುಖ, ಶಾಂತಿ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಎಲ್ಲರೂ ತಮ್ಮ ಜೀವನ ಶೈಲಿ, ಆಲೋಚನಾ ಲಹರಿಯನ್ನು ಬದಲಿಸಬೇಕೆಂದು ಕೋರಿದರು.
ದೇವಾಲಯದ ಸಮಿತಿ ಮುಖಂಡರಾದ ಸಂಗೀತ ವಿದೂಷಿ ಜಗದೀಶ್, ಮಹಿಳಾ ಮಂಡಳಿಯ ಅಧ್ಯಕ್ಷೆ ಮಂಜುಳಾಜಗದೀಶ್, ಲಕ್ಷ್ಮೀನಾರಾಯಣಮ್ಮ, ನಿವೃತ್ತಿ ಬೆಸ್ಕಾಂ ಅಧಿಕಾರಿ ಸುಂದರಾಚಾರಿ ಮತ್ತಿತರರು ಹಾಜರಿದ್ದರು.

ಟ್ಯೂಷನ್ ಎಂಬ ಮಾಯೆ

0

ದಿನಾಲು ಬೆಳಿಗ್ಗೆ, ಸಂಜೆ, ರಸ್ತೆಯಲ್ಲಿ ಎದುರಾಗುವ ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ಕಾಲೇಜು ವಿದ್ಯಾರ್ಥಿಗಳವರೆಗೆ ಯಾರನ್ನು ಕೇಳಿದರೂ ಒಂದಲ್ಲಾ ಒಂದು ಟ್ಯೂಷನ್ ಗೆ ಹೋಗಿ ಬರುತ್ತಿರುವುದಾಗಿ ಉತ್ತರಿಸುವ ದೃಶ್ಯ ಸಾಮಾನ್ಯವಾಗುತ್ತಿದೆ. ಶಾಲೆ ಕಾಲೇಜುಗಳ ಅವಧಿ ಪ್ರಾರಂಭವಾಗುವುದಕ್ಕೆ ಮುನ್ನ, ಅವಧಿ ಮುಗಿದ ಅನಂತರ ಕೂಡಾ ಹೀಗೆ ಟ್ಯೂಷನ್ – ಟ್ಯೂಷನ್ ಎಂದು ಒಂದೆಡೆಯಿಂದ ಇನ್ನೊಂದೆಡೆ ಸುತ್ತುವ ಇವರೆಲ್ಲಾ ಶಾಲಾ ಕಾಲೇಜುಗಳಲ್ಲಿ ಮತ್ತು ಮನೆಯಲ್ಲಿ ಏನು ಮಾಡುತ್ತಾರೆ?. ಬದುಕೆಂದರೆ ಬರೀ ಮೂರೂ ಹೊತ್ತು ಓದುತ್ತಲೇ ಇರುವುದೋ ಹೇಗೆ? ಆಟೋಟ, ಮನರಂಜನೆ ಇವರ ಪಾಲಿಗೆ ಮುಗಿದ ಅಧ್ಯಾಯವೇ? ಪ್ರಶ್ನೆಗಳ ಪ್ರಾರಂಭದಲ್ಲಿ ಕೇಳಬೇಕಾದ ಪ್ರಶ್ನೆ ಟ್ಯೂಷನ್ ಎಂದರೆ ಏನು?
ಇಂಗ್ಲೀಷ್ ನಿಘಂಟಿನಲ್ಲಿ ತಿಳಿಸಿದ ಪ್ರಕಾರ ಈ ಪದದ ಮೂಲ ಲ್ಯಾಟಿನ್ ಮೂಲಾರ್ಥ ಕಾಳಜಿವಹಿಸು ಎಂದು. ಅಂದರೆ ಮಕ್ಕಳ ಕುರಿತು ಕಾಳಜಿ ತೋರುವುದು. ಅವರ ವಿದ್ಯಾಭ್ಯಾಸದ ಕುರಿತು ಕಾಳಜಿ ತೋರುವುದು. ಅವರಿಗೆ ಸೂಕ್ತ ಮಾರ್ಗದರ್ಶನ ಮಾಡುವುದು. ಅವರನ್ನು ತಿದ್ದಿ ತಿಳಿಹೇಳಿ ಬುದ್ಧಿವಂತರನ್ನಾಗಿಸುವುದು. ಅದನ್ನು ಮಾಡುವವರೇ ಟ್ಯೂಟರ್. ಅಂದರೆ ಸಾಮಾನ್ಯ ಅರ್ಥದಲ್ಲಿ ಕಲಿಸುವವರು. ಸ್ವಾರಸ್ಯವೆಂದರೆ ಸ್ಕಾಟ್ ಕಾನೂನಿನನ್ವಯ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗ ಮತ್ತು 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರಿಗೆ ಪಾಠ ಹೇಳುವವನು. ಆದರೆ ಈಗ ಈ ದೇಶದ ಸಂದರ್ಭದಲ್ಲಿ ವಯಸ್ಸಿನ ನಿಬಂಧನೆಗಳೇನೂ ಇಲ್ಲ. ಅಲ್ಲಿಯ ಕಾನೂನಿನ ಹಿಂದಿನ ಉದ್ದೇಶ ಬೇರೆಯದ್ದೇ ಇದ್ದಿರಬಹುದು.
ನಮ್ಮಲ್ಲೂ ಈ ಟ್ಯೂಷನ್ ಗೆ ಸಮನಾರ್ಥಕವಾಗಿ ಮನೆ ಪಾಠ ಮತ್ತು ಖಾಸಗೀ ಪಾಠಗಳೆಂಬ ಪದಗಳನ್ನು ಬಳಸುತ್ತೇವೆ. ಹಿಂದೆ ಊರಿನಲ್ಲಿ ತಿಳಿದ ವಿದ್ಯಾಭ್ಯಾಸ ಬಲ್ಲ ಯಾರೂ ತಮ್ಮ ಮನೆಯಲ್ಲೇ ಅಕ್ಕಪಕ್ಕದ ಮನೆಯ ಮಕ್ಕಳಿಗೆ ಪಾಠ ಹೇಳುವ ಕ್ರಮವಿತ್ತು. ಕಾಲ ಬದಲಾದಂತೆ ಕಲಿಕೆಗೆ ಶುಲ್ಕ ಎಂಬುದು ಬಂದ ಅನಂತರ ಅದು ಖಾಸಗೀ ಪಾಠವಾಗಿ ಪರಿವರ್ತನೆ ಹೊಂದಿರಲಿಕ್ಕೆ ಸಾಕು. ಅಂದರೆ ಶಾಲೆ ಕಾಲೇಜುಗಳಲ್ಲಿನ ಪಾಠಗಳಿಗೆ ಸರ್ಕಾರ ಅಥವಾ ಸಂಸ್ಥೆ ಸಂಬಳ ನೀಡುತ್ತದೆ. ಆ ಶಾಲಾ ಕಾಲೇಜುಗಳ ಅವಧಿಯ ಅಚೀಚಿನ ಅವಧಿಯಲ್ಲಿ ಖಾಸಗಿಯಾಗಿ ಅದೇ ಶಿಕ್ಷಕರು ಅಥವಾ ಬೇರೆ ಯಾರೋ ಅದನ್ನೇ ಹೆಚ್ಚುವರಿಯಾಗಿ ಕಲಿಸಿದರೆ ಅದು ಖಾಸಗೀ ಪಾಠ ಮತ್ತು ಅದಕ್ಕೆ ನೀಡುವ ಶುಲ್ಕ ಖಾಸಗೀ ಶುಲ್ಕ.
ಶಾಲೆ ಕಾಲೇಜುಗಳಿಗೆ ನೀಡುವ ಶುಲ್ಕದ ಜೊತೆಗೆ ಈ ಶುಲ್ಕವೂ ಸೇರಿದರೆ ಒಟ್ಟು ಮೊತ್ತ ಹೆಚ್ಚಾಗುತ್ತಲೇ ಸಾಗುತ್ತದೆ. ಶಾಲೆ ಕಾಲೇಜುಗಳಿಗೆ ಶುಲ್ಕದ ಮೊತ್ತ ನಿರ್ದಿಷ್ಟವಾಗಿದ್ದರೆ ಖಾಸಗೀ ಶುಲ್ಕದ ಮೊತ್ತ ಅವುಗಳನ್ನು ನಡೆಸುವವರ ಮರ್ಜಿಗನುಗುಣವಾಗಿರುತ್ತದೆ. ಇದು ಸಾಮಾನ್ಯ ಜನರಿಗೆ ಭರಿಸಲು ಕಷ್ಟಕರ ಎಂಬುದು ನಿಜವಾದರೂ ಸಾಮಾನ್ಯ ಜನರು ಕೂಡಾ ಈ ಟ್ಯೂಷನ್ ತರಗತಿಗಳಿಗೆ ಮುಗಿ ಬೀಳುತ್ತಿರುವುದರ ಕಾರಣ ಮಾತ್ರ ಅರ್ಥವಾಗುವುದು ಸ್ವಲ್ಪ ಕಷ್ಟ.
ಟ್ಯೂಷನ್ ಬೇಕಾಗಿರುವುದು ತರಗತಿಯಲ್ಲಿ ಹೇಳಿದ ಪಾಠಗಳು ತಲೆಗೆ ಹತ್ತದ ಯಾ ಹತ್ತಿಸಿಕೊಳ್ಳದ ದಡ್ಡ ವಿದ್ಯಾರ್ಥಿಗಳಿಗೆ ಎಂಬ ನಂಬಿಕೆ ಒಂದು ಕಾಲದಲ್ಲಿತ್ತು. ಆದರೆ ಇಂದು ಟ್ಯೂಷನ್ ಗೆ ಕಳಿಸದಿದ್ದರೆ ದಡ್ಡರಾಗುತ್ತಾರೆ ಎಂಬ ನಂಬಿಕೆ ಬಲವಾಗುತ್ತಿದೆ. ಹಾಗಾಗಿ ಇಂದು ಟ್ಯೂಷನ್ ಸೆಂಟರುಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿದೆ. ಜನರ ನಂಬಿಕೆಗಳನ್ನು ಬಂಡವಾಳವನ್ನಾಗಿಸಿಕೊಳ್ಳುವ ಕಲೆ ಅವುಗಳಿಗೆ ಕರಗತವಾಗಿದೆ. ಆದರೆ ಇದು ಅಷ್ಟು ಸರಳವೂ ಅಲ್ಲ. ಟ್ಯೂಷನ್ ತರಗತಿಗಳಲ್ಲಿ ನಿರ್ದಿಷ್ಟ ಸಂಖ್ಯೆಯ ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಅವಧಿಯಲ್ಲಿ ತಪ್ಪದೇ ಪಾಠ ದೊರೆಯುತ್ತದೆ. ನೋಟ್ಸ್ ದೊರೆಯುತ್ತದೆ. ಪರಿಕ್ಷಾ ಪ್ರಶ್ನೆ ಪತ್ರಿಕೆಗಳ ಮಾದರಿ ಮತ್ತು ಮಾದರಿ ಉತ್ತರಗಳು ಸಿಗುತ್ತದೆ. ತಿಳಿಯದ್ದನ್ನು ಕೇಳಿ ತಿಳಿದುಕೊಳ್ಳಲು ಆಗುತ್ತದೆ ಎಂಬುದು ಮಾತ್ರ ಸತ್ಯ.
ಶಾಲೆ ಕಾಲೇಜುಗಳಲ್ಲಿ ಮಾತ್ರ ಇವೆಲ್ಲಾ ಸಾಧ್ಯವಾಗುವುದಿಲ್ಲವೇ? ಪ್ರಶ್ನೆ ಸುಲಭ. ಉತ್ತರ ಕಷ್ಟ. ಬಹುತೇಕ ಸರ್ಕಾರೀ ಶಾಲಾ ಕಾಲೇಜುಗಳಲ್ಲಿ ತರಗತಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಮಿತಿ ಇರುವುದಿಲ್ಲ. ಖಾಸಗೀ ಸಂಸ್ಥೆಗಳು ಇದ್ದುದರಲ್ಲೇ ವಾಸಿ. ಹಾಗಾಗಿ ವೈಯಕ್ತಿಕವಾಗಿ ವಿದ್ಯಾರ್ಥಿಗಳತ್ತ ಗಮನ ಶಿಕ್ಷಕರಿಗೂ ಅಸಾಧ್ಯ. ಅಷ್ಟಲ್ಲದೇ ಎಲ್ಲಾ ವಿಷಯಗಳಿಗೂ ಶಿಕ್ಷಕರು ಇದ್ದೇ ಇರುತ್ತಾರೆಂಬ ಖಾತ್ರಿ ಇಲ್ಲ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಪಾತದಲ್ಲಿ ಶಿಕ್ಷಕರು ಇರುವುದಿಲ್ಲ. ಕೊಠಡಿಗಳ ಸಮಸ್ಯೆ ವೇಳಾಪಟ್ಟಿ ಹೊಂದಿಸುವ ಸಮಸ್ಯೆ ಹೀಗಾಗಿ ಒಂದು ಹಂತದಲ್ಲಿ ಈ ಶಾಲಾ ಕಾಲೇಜುಗಳೇ ವಿದ್ಯಾರ್ಥಿಗಳನ್ನು ಅನಿವಾರ್ಯವಾಗಿ ಟ್ಯೂಷನ್ ಸೆಂಟರ್ ಗಳತ್ತ ಕಳಿಸುತ್ತಿವೆಯೇನೋ ಅನಿಸುತ್ತದೆ. ಹಾಗೇ ಶಾಲಾ ಕಾಲೇಜುಗಳಲ್ಲಿನ ಶಿಕ್ಷಕ ವರ್ಗದಲ್ಲಿ ವೃತ್ತಿಯ ಮೇಲಿನ ಪ್ರೀತಿಗಿಂತ ಹೆಚ್ಚಾಗಿ ವಿತ್ತದ ಮೇಲೆ ಪ್ರೀತಿ ಹೊಂದಿಸಿದವರು. ತಮ್ಮದೇ ಟ್ಯೂಷನ್ ಸೆಂಟರ್ ಗಳನ್ನು ಪ್ರಾರಂಭಿಸಿ ಅನಿವಾರ್ಯವಾಗಿ ತಮ್ಮ ವಿದ್ಯಾರ್ಥಿಗಳೇ ಅದಕ್ಕೆ ಬರುವಂತೆ ವ್ಯವಸ್ಥಿತವಾಗಿ ಸಂಚು ಮಾಡುತ್ತಿದ್ದರೂ ಮಾಡುತ್ತಿರಬಹುದೆಂಬ ಗುಮಾನಿ ಇದೆ.
ಈ ಟ್ಯೂಷನ್ ಮೋಹದಿಂದ ವಿದ್ಯಾರ್ಥಿಗಳು ಹೊರ ಬರಬೇಕೆಂದರೆ ಮೊದಲು ಶಾಲಾ ಕಾಲೇಜುಗಳೇ ಟ್ಯೂಷನ್ ಸೆಂಟರ್ ಗಳಂತೆ ಕಾರ್ಯ ನಿರ್ವಹಿಸುವಂತೆ ಆದರೆ ಸಾಧ್ಯವಾಗಬಹುದು. ಅಂದರೆ ಸಾಕಷ್ಟು ಸಂಖ್ಯೆಯ ಶಿಕ್ಷಕ ವರ್ಗ ಮತ್ತು ತರಗತಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯ ಮಿತಿ ಮತ್ತು ಕೊಠಡಿಗಳ ಲಭ್ಯತೆ ಇಷ್ಟಾದರೆ ಬಹಳಷ್ಟು ಸುಧಾರಣೆಯಾಗಬಹುದು.
ಟ್ಯೂಷನ್ ಪಡೆಯುವ ಮಕ್ಕಳೆಲ್ಲಾ ಬುದ್ಧಿವಂತರಾಗಿರುತ್ತಾರೆ. ರ್ಯಾಂಕ್ ಗಳಿಸುತ್ತಾರೆ ಎಂಬುದು ಮಾತ್ರ ಭ್ರಮೆ. ಯಾಕೆಂದರೆ ಶಾಲಾ ಕಾಲೇಜು ಟ್ಯೂಷನ್ ಎಂದು ಸುತ್ತಿ ಸುತ್ತಿ ಸುಸ್ತಾಗುವ ವಿದ್ಯಾರ್ಥಿಗಳ ಮಾನಸಿಕ ಒತ್ತಡಕ್ಕೆ ತುತ್ತಾಗುವ ಸಾಧ್ಯತೆಯೇ ಅಧಿಕ.
ಪ್ರಸ್ತುತ ಪರಿಸ್ಥಿತಿ ಹೇಗಿದೆಯೆಂದರೆ, ಒಂದೆಡೆ ಟ್ಯೂಷನ್ ಗೆ ಹೋಗುವ ವಿದ್ಯಾರ್ಥಿಗಳು ಇನ್ನೊಂದೆಡೆ ಟ್ಯೂಷನ್ ಗೆ ಹೋಗಲಾರದ ವಿದ್ಯಾರ್ಥಿಗಳು. ಹೀಗೆ ವಿದ್ಯಾರ್ಥಿಗಳಲ್ಲೇ ಎರಡು ಬಣ ಸೃಷ್ಠಿಯಾಗಿದೆ. ಟ್ಯೂಷನ್ ಗೆ ಹೋಗುವವರ ಧಿಮಾಕು ಒಂದೆಡೆಯಾದರೆ ಹೋಗಲಾಗದವರ ಕೀಳರಿಮೆ ಇನ್ನೊಂದೆಡೆ. ಇದಕ್ಕಿಂತ ಹೆಚ್ಚು ಆತಂಕದ ಸಂಗತಿಯೆಂದರೆ ಟ್ಯೂಷನ್ ಗೆ ಹೋಗುವ ವಿದ್ಯಾರ್ಥಿಗಳಿಗೆ ಶಾಲಾ ಕಾಲಾಜಿನ ಪಾಠವೆಂದರೆ ಅಸಡ್ಡೆ. ಹೇಗೂ ಟ್ಯೂಷನ್ ಕ್ಲಾಸ್ ಗಳಲ್ಲಿ ಹೇಳಿಕೊಡುತ್ತಾರೆ. ಅಥವಾ ಹೇಳಿಕೊಟ್ಟಿದ್ದಾರೆ ಎಂದು. ಇವರ ಅಸಡ್ಡೆ ತರಗತಿಗಳಲ್ಲಿ ಅವರು ಅನ್ಯ ಮನಸ್ಕರಾಗಿರುವುದರಿಂದ ಮತ್ತು ಅನಾವಶ್ಯಕವಾದ ತಂಟೆ ತಕರಾರು ಪಿಸುಗುಟ್ಟುವಿಕೆಯಿಂದಲೂ ಪ್ರಕಟವಾಗುತ್ತಲೇ ಇದ್ದಾಗ ಶಾಲಾ ಕಾಲೇಜುಗಳಲ್ಲಷ್ಟೇ ಕಲಿಯಲು ಬಂದ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ಪಾಠ ಕೇಳುವಲ್ಲಿ ಕಿರಿಕಿರಿ. ಹಾಗೆಯೇ ಪ್ರಾಮಾಣಿಕವಾಗಿ ಪಾಠ ಹೇಳಲು ಬಂದ ಶಿಕ್ಷಕರಿಗೂ ಕಿರಿಕಿರಿಯಾಗಿ ಒಟ್ಟಾರೆ ವ್ಯವಸ್ಥೆಯೇ ಹದಗೆಡುತ್ತದೆ. ಆಗ ಪ್ರಾಮಾಣಿಕವಾಗಿ ಶಾಲಾ ಕಾಲೇಜುಗಳಲ್ಲಿ ಓದಲು ಬಂದವರು ಕೂಡಾ ಟ್ಯೂಷನ್ ಗಳತ್ತ ಮುಖ ಮಾಡುವಂತಾದರೆ ಯಾರನ್ನು ದೂಷಿಸಬೇಕು? ವ್ಯವಸ್ಥೆಯನ್ನು ಸರಿಪಡಿಸುವವರ್ಯಾರು? ಈ ಪ್ರಶ್ನೆ, ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರ್ಯಾರು? ಎಂಬ ಪ್ರಶ್ನೆಯಂತೆ.
ಹೀಗೆ ಟ್ಯೂಷನ್ ಸೆಂಟರ್‍ಗಳು ಜನಪ್ರಿಯಗೊಳ್ಳುತ್ತಾ ಅವುಗಳ ಮಾಯೆಗೆ ವಿದ್ಯಾರ್ಥಿಗಳು ಒಳಗಾಗುತ್ತಿರುವ ಸತ್ಯವನ್ನು ಕಂಡುಕೊಂಡ ಟ್ಯೂಷನ್ ಸೆಂಟರ್‍ಗಳು ಇತ್ತೀಚಿಗಿನ ವರ್ಷಗಳಲ್ಲಿ ಕಂಪ್ಯೂಟರ್ ಕಲಿಕೆಗೆ ಸರಾಗವಾಗಿ ಇಂಗ್ಲೀಷ್ ಮಾತನಾಡುವುದನ್ನು ಕಲಿಸುವುದಕ್ಕೆ ಹೀಗೆ ಇಂದಿನ ಅಗತ್ಯಗಳಿಗೆ ತಕ್ಕಂತೆ ಶಾಖೆಗಳನ್ನು ತೆರೆಯುತ್ತಿದೆ. ಹೀಗಾಗುತ್ತಾ ಸಾಗಿದಂತೆ ಶಾಲಾ ಕಾಲೇಜುಗಳೂ ನಾಮಕಾವಸ್ಥೆಯಾಗುತ್ತಾ ಅವು ವಿದ್ಯಾರ್ಥಿಗಳಿಗೆ ಮಂಡಳಿ, ಅಥವಾ ವಿಶ್ವವಿದ್ಯಾನಿಲಯದ ಅಂಕಪಟ್ಟಿ ಪದವಿ ಪಟ್ಟಿಗಳನ್ನು ನೀಡುವುದಕ್ಕೆ ಸೀಮಿತವಾದರೆ?
ಭಯವೇನೋ ಸಹಜ. ಹಾಗೆಯೇ ವಿದೇಶಿ ವಿಶ್ವವಿದ್ಯಾಲಯಗಳು ಈ ದೇಶದಲ್ಲಿ ತಳವೂರಲು ನಡೆಸಿರುವ ಹುನ್ನಾರ, ಅವುಗಳ ಪ್ರಭಾವ ಇವನ್ನು ಯೋಚಿಸುವುದು ಸೂಕ್ತ. ಪ್ರಪಂಚದ ಮಾರುಕಟ್ಟೆಗೊದಗುವಂತೆ ವಿದ್ಯಾರ್ಥಿಗಳನ್ನು ರೂಪುಗೊಳಿಸುವ ಗುರಿಹೊತ್ತು ಅವೆಲ್ಲಾ ಬರುತ್ತಿವೆ ಎಂಬುದು ಸತ್ಯವೋ? ಅಥವಾ ಹಣಗಳಿಕೆಗೆ ಇದೂ ಒಂದು ಲಾಭದಾಯಕ ದಂಧೆ ಎಂದುಕೊಂಡು ಬರುತ್ತಿರುವುದು ಸತ್ಯವೋ ಎಂದು ಕಾಲವೇ ನಿರ್ಧರಿಸಬೇಕು. ಆದರೆ ಲಾಭವಿಲ್ಲದೇ ಹೊರಗಿನವರೆಲ್ಲಾ ಬರುವುದಿಲ್ಲ ಎಂಬುದಂತೂ ಸತ್ಯ. ಅವರು ಬಂದಾಕ್ಷಣ ಇಲ್ಲಿನ ವ್ಯವಸ್ಥೆ ಬುಡಮೇಲಾಗುತ್ತದೆ ಎಂದು ಭಾವಿಸಬೇಕಿಲ್ಲ. ಅವು ಹೆಚ್ಚೆಂದರೆ, ಹೆಚ್ಚಿನ ಶುಲ್ಕ ವಸೂಲಿಯ ಹೊಸ ಅವತಾರದ ಟ್ಯೂಷನ್ ಸೆಂಟರ್ ಗಳಾಗಿ ಇರಬಹುದು. ದುಡ್ಡುಳ್ಳವರಿಗೆ, ದೊಡ್ಡ ದೊಡ್ಡ ಷಹರದವರಿಗೆ, ಅವು ಆಕರ್ಷಕವಾಗಬಹುದು.
ಆದರೆ, ದೇಶದ ಗ್ರಾಮಾಂತರ ಪ್ರದೇಶದ ಹೋಬಳಿ, ತಾಲ್ಲೂಕು ಮಟ್ಟದಲ್ಲಿ ಆರ್ಥಿಕವಾಗಿ ಹಿಂದುಳಿದವರೇ ಅಧಿಕವಾಗಿರುವಲ್ಲಿ ಇಲ್ಲಿಯ ಸರಕಾರೀ ಅಥವಾ ಖಾಸಗೀ ಶಿಕ್ಷಣ ಸಂಸ್ಥೆಗಳೇ ನಿಜವಾದ ಅರ್ಥದಲ್ಲಿ ವಿದ್ಯಾದಾನ ನೀಡುವಂಥವುಗಳಾಗಿರುತ್ತದೆ. ಬಡ ವಿದ್ಯಾರ್ಥಿಗಳ ಆಶಾಕಿರಣ ಅವೇ ಅಗಿರುತ್ತದೆ. ಅಲ್ಲಿನ ಲೋಪದೋಷಗಳೇನೇ ಇದ್ದರೂ ಒಂದು ಮಿತಿಯಲ್ಲಿ ಅವುಗಳ ಸೇವೆ ಸಾರ್ಥಕವಾಗಿದ್ದಾಗಿರುವುದರಲ್ಲಿ ಸಂದೇಹವಿಲ್ಲ. ಕಲೆಗೆ ಬೇಕಾದ್ದು ಕಲಿಯ ಬೇಕೆಂಬ ಹಸಿವು. ಅದನ್ನು ಹಿಂಗಿಸಿಕೊಳ್ಳಲು ಶಾಲಾ ಕಾಲೇಜುಗಳಲ್ಲೇ ಇರುವ ಅವಕಾಶಗಳನ್ನೇ ಸಮರ್ಪಕವಾಗಿ ಬಳಸಿಕೊಳ್ಳುವ ನೈಪುಣ್ಯತೆ ಇದ್ದಲ್ಲಿ ಹೊರಗಿನ ಥಳುಕು ಬಳುಕಿನ ಕುರಿತು ಮೋಹಿತವಾಗಬೇಕಾದ್ದೂ ಇಲ್ಲ. ಬೆದರ ಬೇಕಾದ್ದೂ ಇಲ್ಲ. ಅಧಿಕ ಹಣ ತೆತ್ತರಷ್ಟೇ ಅಧಿಕ ಜ್ಞಾನ ಪ್ರಾಪ್ತವಾಗುತ್ತದೆ ಎಂಬುದು ಭ್ರಮೆ.
ಕೊನೆಯ ಮಾತು. ಬಂಗಾರ ಸುಂದರ ಬೆಲೆಯುಳ್ಳದ್ದು. ಆಭರಣಕ್ಕಾದೀತು. ಆದರೆ ದಿನ ನಿತ್ಯದ ಈ ನೆಲದ ಕಾಯಕಕ್ಕೆ ಕತ್ತಿ, ಕುಡುಗೋಲು, ಹಾರೆ, ಗುದ್ದಲಿಗಳನ್ನು ತಯಾರಿಸಲು ಅದರಿಂದಾಗದು. ಅದಕ್ಕೆ ಎಂದಿದ್ದರೂ ಗಟ್ಟಿ ಕಬ್ಬಿಣವೇ ಬೇಕು. ಕಬ್ಬಿಣದ ಕಾಯಕ ಬಂಗಾರವನ್ನು ಎಳೆದು ತಂದೀತು.
ರವೀಂದ್ರ ಭಟ್ ಕುಳಿಬೀಡು

ಶಿಡ್ಲಘಟ್ಟದಲ್ಲಿ ಸಂಭ್ರಮದ ರಂಜಾನ್ ಆಚರಣೆ

0

ಶ್ರದ್ಧಾಭಕ್ತಿಯ ಸಂಕೇತವಾದ ರಂಜಾನ್ ಹಬ್ಬವನ್ನು ಸಹಸ್ರಾರು ಮುಸ್ಲಿಂ ಬಾಂಧವರು ಸಂಭ್ರಮದಿಂದ ತಾಲ್ಲೂಕಿನಾದ್ಯಂತ ಆಚರಿಸಿದರು.
ಸಂಪ್ರದಾಯದಂತೆ ಮೆರವಣಿಗೆಯಲ್ಲಿ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮೀಲಾದ್ ಬಾಗ್ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ನಿಧನ ಹೊಂದಿರುವ ಪೂರ್ವಜರ ಸಮಾಧಿಗಳ ಬಳಿ ಪ್ರಾರ್ಥನೆ ಸಲ್ಲಿಸಿದರು.

ಶಿಡ್ಲಘಟ್ಟದಲ್ಲಿ ಶುಕ್ರವಾರ ರಂಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆಯ ನಂತರ ಜಾತಿ ಬೇಧವಿಲ್ಲದೆ ಮುಸಲ್ಮಾನರು ಬಡವರಿಗೆ ದಾನ ಮಾಡಿದರು.
ಶಿಡ್ಲಘಟ್ಟದಲ್ಲಿ ಶುಕ್ರವಾರ ರಂಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆಯ ನಂತರ ಜಾತಿ ಬೇಧವಿಲ್ಲದೆ ಮುಸಲ್ಮಾನರು ಬಡವರಿಗೆ ದಾನ ಮಾಡಿದರು.
ರಂಜಾನ್ ಹಬ್ಬಕ್ಕೂ ಒಂದು ತಿಂಗಳು ಮುನ್ನ ಅವರು ಕೈಗೊಳ್ಳುವ ರೋಜಾ ಆಚರಣೆಯಲ್ಲಿ ಹಿರಿಯರು ಮತ್ತು ಕಿರಿಯರು ಬೇಧವಿಲ್ಲದೆ ಪಾಲ್ಗೊಂಡಿದ್ದರು. ಪವಿತ್ರ ರಂಜಾನ್ ಮಾಸವನ್ನು ಧಾರ್ಮಿಕ ತಿಂಗಳು. ಉಪವಾಸದ ತಿಂಗಳೆಂದೇ ಕರೆಯುತ್ತಾರೆ. ತಿಂಗಳು ಪೂರ್ತಿ ಕುರ್ಆನ್ ಪಠಿಸುತ್ತಾರೆ. ಎಲ್ಲರ ಸುಖ-ಸಂತೋಷ-ನೆಮ್ಮದಿಗಾಗಿ ಅಲ್ಲಾಹ್ನಲ್ಲಿ ಬಿನ್ನವಿಸಿಕೊಳ್ಳುತ್ತಾರೆ. ಬಡವರಿಗೆ ಮತ್ತು ಸಂಕಷ್ಟದಲ್ಲಿದ್ದವರಿಗೆ ನೆರವು ನೀಡುತ್ತಾರೆ. ದಾನ ಮಾಡುತ್ತಾರೆ. ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಹಾಗೂ ಪೂರ್ವಜರ ಸಮಾಧಿಗಳಿಗೆ ಪೂಜೆ ಸಲ್ಲಿಸಿದ ನಂತರ ಬಡವರಿಗೆ ದಾನ ನೀಡಿದರು.
‘ಪವಿತ್ರ ಗ್ರಂಥ ಕುರ್ಆನ್ ರಚನೆ ಆರಂಭಗೊಂಡಿದ್ದು ರಂಜಾನ್ ತಿಂಗಳಿನಲ್ಲಿ. ರಂಜಾನ್ ತಿಂಗಳಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆಯಿದೆ. ತಾವು ದುಡಿದಿದ್ದರಲ್ಲಿ ಸ್ವಲ್ಪ ಭಾಗವನ್ನು ಸಮಾಜದ ಬಡವರಿಗೆ ದಾನ ಮಾಡುವ ಉದಾತ್ತ ಹಬ್ಬವಿದು. ಸಮಾಜದಲ್ಲಿ ಸೌಹಾರ್ಧತೆಗೆ ಪ್ರತೀಕವಾದ ಈ ಹಬ್ಬ ಐಕ್ಯತೆ ಹಾಗೂ ಅಭಿವೃದ್ಧಿಗೆ ಪೂರಕವಾಗಲಿ’ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ ಧರ್ಮಗುರು ಷಬ್ಬೀರ್ ಆಲಂ ಬೋಧನೆ ಮಾಡಿದರು. ಜಾಮೀಯಾ ಮಸೀದಿ ಗುರು ಗುಲಾಮ್ ರಬ್ಬಾನಿ, ಮಸೀದಿ ಅಧ್ಯಕ್ಷ ರಶೀದ್ ಸಾಬ್, ಸಲಾಂ, ನಗರಸಭಾ ಸದಸ್ಯ ಅಫ್ಸರ್ ಪಾಷ, ಸೂರ್ಯನಾರಾಯಣಗೌಡ, ಕನಕಪ್ರಸಾದ್, ಮಂಜುನಾಥ್, ಶ್ರೀಧರ್, ಮಳ್ಳೂರಯ್ಯ, ಅಬ್ದುಲ್ ಅಜೀಜ್, ರಹಮಾನ್, ಸಲಾಂ, ಶಮೀ, ಅಬ್ದುಲ್ ಗಫೂರ್ ಮತ್ತಿತರರು ಹಾಜರಿದ್ದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಬಿ.ಪಿ.ರಾಘವೇಂದ್ರ

0

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನಗರದ ಅಶೋಕ ರಸ್ತೆಯ ವಾಸಿ ಬಿ.ಪಿ.ರಾಘವೇಂದ್ರ(ಬಳೆರಘು) ನೇಮಕವಾಗಿದ್ದು ಉಪ ವಿಭಾಗಾಧಿಕಾರಿಗಳಿಂದ ಅಧಿಕಾರ ಸ್ವೀಕರಿಸಿದರು.
ಶಿಡ್ಲಘಟ್ಟ ಪಟ್ಟಣವು ನಗರಸಭೆಯಾಗಿ ಮೇಲ್ದರ್ಜೆಗೇರಿದ ನಂತರ ಮೊದಲ ಬಾರಿಗೆ ರಚನೆಯಾದ ಶಿಡ್ಲಘಟ್ಟ ನಗರಾಭಿವೃದ್ಧಿ ಪ್ರಾಧಿಕಾರದ ಪ್ರಥಮ ಅಧ್ಯಕ್ಷರನ್ನಾಗಿ ಬಿ.ಪಿ.ರಾಘವೇಂದ್ರರವರನ್ನು ೧೮ ತಿಂಗಳ ಅವಧಿಗೆ ನೇಮಿಸಿ ನಗರಾಭಿವೃದ್ಧಿ ಇಲಾಖೆಯ ಆಯುಕ್ತರು ಆದೇಶಿಸಿದ್ದರು.
ಬಿ.ಪಿ.ರಾಘವೇಂದ್ರ ಅವರು ಉಪವಿಭಾಗಾಧಿಕಾರಿ ಎಚ್.ಅಮರೇಶ್ ಅವರ ಕಚೇರಿಗೆ ತೆರಳಿ ಅಧಿಕಾರ ಸ್ವೀಕರಿಸಿದರು. ಈ ಸಮಯದಲ್ಲಿ ಮಾತನಾಡಿದ ಅಮರೇಶ್, ಯುವಕರು ಎಲ್ಲ ಕ್ಷೇತ್ರಗಳಲ್ಲೂ ಮುಂದೆ ಬರಬೇಕಿದೆ. ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಸೂಕ್ತವಾಗಿ, ಸಮರ್ಥವಾಗಿ ನಿಭಾಯಿಸಿ ಎಂದರು.
ಜನ ಸಂಖ್ಯೆ ಬೆಳೆದಂತೆ ಸಮಸ್ಯೆಗಳೂ ಸಹ ಬೃಹದಾಕಾರವಾಗಿ ಬೆಳೆಯುತ್ತವೆ. ದೂರದೃಷ್ಟಿಯ ಆಲೋಚನೆ, ಯೋಜನೆಗಳಿಂದ ಎಲ್ಲ ಸಮಸ್ಯೆಗಳನ್ನೂ ಸಹ ನಿವಾರಿಸಬಹುದು. ನಗರದ ಅಭಿವೃದ್ಧಿಗೆ ಎಲ್ಲ ರೀತಿಯಿಂದಲೂ ನನ್ನಿಂದ ಸಹಕಾರ ಇರುತ್ತದೆ ಎಂದು ತಿಳಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಪ್ರಭಾರಿ ಆಯುಕ್ತ ಸೀನಪ್ಪ, ಪ್ರಾಥಮಿಕ ಕೃಷಿ ಮತ್ತು ಸಹಕಾರ ಬ್ಯಾಂಕ್ನ ನಿರ್ದೇಶಕ ಎಸ್.ಶಂಕರ್, ತನ್ವೀರ್ ಅಹ್ಮದ್, ಶ್ರೀನಾಥ್, ಎಲ್.ಮಧುಸೂಧನ್, ಮಾಜಿ ಸದಸ್ಯ ಕೆ.ನಾರಾಯಣಸ್ವಾಮಿ, ಅಬ್ಧುಲ್ ಗಫೂರ್, ಕೆ.ರಾಮಾಂಜಿ ಮತ್ತಿತರರು ಹಾಜರಿದ್ದರು.

ಹೊಸಪೇಟೆ ಗ್ರಾಮ ಪಂಚಾಯತಿಯ ಕಚೇರಿ ಆವರಣದಲ್ಲಿ ರಕ್ತದಾನ ಶಿಬಿರ

0

ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುವುದರ ಜೊತೆಗೆ ಆರೋಗ್ಯವಂತ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಹೇಳಿದರು.
ತಾಲ್ಲೂಕಿನ ಹೊಸಪೇಟೆ ಗ್ರಾಮ ಪಂಚಾಯ್ತಿಯ ಆವರಣದಲ್ಲಿ ಭಾರತೀಯ ರೆಡ್ಕ್ರಾಸ್ ಸಂಸ್ಥೆ, ಹೊಸಪೇಟೆ ಗ್ರಾಮ ಪಂಚಾಯತಿ, ಜಂಗಮಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರ, ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಮನುಷ್ಯನ ದೇಹದಲ್ಲಿ ಪ್ರಕೃತಿದತ್ತವಾಗಿ ಲಭ್ಯವಾಗುವಂತಹ ರಕ್ತಕ್ಕೆ ಪರ್ಯಾಯವಾಗಿ ರಕ್ತವನ್ನು ತಯಾರಿಸಲು ಸಾದ್ಯವಾಗುವುದಿಲ್ಲ, ಮನುಷ್ಯರಿಂದಲೇ ಅದನ್ನು ಪಡೆದುಕೊಳ್ಳುವ ಮೂಲಕ ರಕ್ತದ ಕೊರತೆಯಿಂದಾಗಿ ಸಾವನ್ನಪ್ಪುತ್ತಿರುವಂತಹ ಜನರನ್ನು ಬದುಕಿಸಲು ಸಾಧ್ಯವಾಗುತ್ತದೆ, ರಕ್ತದಾನ ಮಾಡುವುದರಿಂದ ಉತ್ತಮವಾದ ಆರೋಗ್ಯವನ್ನು ಹೊಂದುವುದರ ಜೊತೆಗೆ ಕೊಬ್ಬಿನಾಂಶ ಕಡಿಮೆಯಾಗಲು ಸಹಕಾರಿಯಾಗುತ್ತದೆ, ರಕ್ತದಾನ ಮಾಡುವುದರಲ್ಲಿ ಜಿಲ್ಲೆಯು ಪ್ರಥಮ ಸ್ಥಾನದಲ್ಲಿದ್ದು, ಈ ಬಾರಿಯೂ ಕೂಡಾ ಪ್ರಥಮ ಸ್ಥಾನ ಕಾಯ್ದುಕೊಳ್ಳಲು ತಾಲ್ಲೂಕಿನ ಜನತೆ ಸಹಕಾರ ನೀಡಬೇಕು. ರೆಡ್ಕ್ರಾಸ್ ಸಂಸ್ಥೆ ಅಜೀವ ಸದಸ್ಯತ್ವ ಪಡೆಯುವಂತಹ ನಾಗರಿಕರು, ೫೦೦ ರೂಪಾಯಿಗಳ ಸಂದಾಯ ಮಾಡಿ ಸದಸ್ಯತ್ವವನ್ನು ಪಡೆಯಬಹುದಾಗಿರುತ್ತದೆ. ಒಮ್ಮೆ ಸದಸ್ಯತ್ವವನ್ನು ಪಡೆದುಕೊಂಡರೆ, ಪ್ರಪಂಚದಾದ್ಯಂತ ಯಾವುದೇ ಮೂಲೆಯಲ್ಲಿದ್ದರೂ ರಕ್ತದ ಅವಶ್ಯಕತೆಯಿದ್ದಾಗ ರಕ್ತವನ್ನು ಪಡೆದುಕೊಳ್ಳುವಂತಹ ಅವಕಾಶ ದೊರೆಯುತ್ತದೆ ಎಂದರು.
ಮಾಜಿ ಕೋಚಿಮುಲ್ ನಿರ್ದೇಶಕ ಕೆ.ಗುಡಿಯಪ್ಪ, ಜಂಗಮಕೋಟೆ ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಂ.ಮುನಿಯಪ್ಪ, ರವಿಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೊಗೀಶ್, ಬೈರೇಗೌಡ, ಶಶಿಧರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ರೆಡ್ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎನ್.ಕೆ.ಗುರುರಾಜ್ ಮುಂತಾದವರು ಹಾಜರಿದ್ದರು.