Home Blog Page 508

ಕೃಷಿಕನ ಆತ್ಮಹತ್ಯೆ

0

ಕನ್ನಮಂಗಲ ಗ್ರಾಮದ ಕೃಷಿಕನೊಬ್ಬ ಮೈಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯತಿಯ ಕನ್ನಮಂಗಲದ ವೆಂಕಟರೆಡ್ಡಿ(೪೫) ಮೃತ ದುರ್ದೈವಿ. ತನ್ನ ಮನೆಯ ಪಕ್ಕದಲ್ಲಿಯೆ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದ ವೆಂಕಟರೆಡ್ಡಿಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
‘ತಮಗೆ ೧.೭ ಎಕರೆ ಜಮೀನು ಇದ್ದು ಮೂರು ಕೊಳವೆ ಬಾವಿಗಳನ್ನು ಕೊರೆಸಿದ್ದು, ೨ ವಿಫಲವಾಗಿ ಒಂದು ಮಾತ್ರವೇ ಸಫಲವಾಗಿತ್ತು. ಇದಕ್ಕಾಗಿ ೩ ಲಕ್ಷ ಕೈ ಸಾಲ ಮಾಡಿದ್ದು ಇತ್ತೀಚಿನ ದಿನಗಳಲ್ಲಿ ರೇಷ್ಮೆಗೂಡಿನ ಬೆಲೆ ಕುಸಿದು ತೀವ್ರ ಆತಂಕಕ್ಕೆ ಒಳಗಾದ ತನ್ನ ಪತಿ ಸಾಲ ತೀರಿಸಲು ಭಯಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾನೆ’ ಎಂದು ಮೃತನ ಪತ್ನಿ ಮಂಜುಳ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
‘ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ವೆಂಕಟರೆಡ್ಡಿ ಕೃಷಿ ಕಾಯಕವನ್ನು ನಡೆಸುತ್ತಿರುವುದು ಸರಿ. ಆತ ಬ್ಯಾಂಕ್ನಲ್ಲಿ ಸಾಲ ಮಾಡಿಲ್ಲ. ಅವರ ಕುಟುಂಬದರ ಹೇಳಿಕೆಯಂತೆ ಕೈ ಸಾಲ ಇದೆ. ಇತ್ತೀಚಿನ ದಿನಗಳಲ್ಲಿ ರೇಷ್ಮೆಗೂಡಿನ ಬೆಲೆ ಕುಸಿತದಿಂದ ಸ್ವಲ್ಪ ಆದಾಯ ಕಡಿಮೆ ಆಗಿರುವುದೂ ನಿಜ. ಆದರೆ ಅದೇ ಆತನ ಆತ್ಮಹತ್ಯೆಗೆ ಕಾರಣವಲ್ಲ. ವೈಯಕ್ತಿಕ ಕಾರಣಗಳಿಂದ ಜೀವನದಲ್ಲಿ ಜಿಗುಪ್ಸೆಗೊಂಡ ವೆಂಕಟರೆಡ್ಡಿ ಆತ್ಮಹತ್ಯೆಗೆ ಶರಣಾಗಿದ್ದು ಸರ್ಕಾರಕ್ಕೆ ಈ ಬಗ್ಗೆ ವರದಿಯನ್ನು ಸಲ್ಲಿಸುತ್ತೇನೆ’ ಎಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದ್ದಾರೆ.

ಸಾರಿಗೆ ವ್ಯವಸ್ಥೆಗೆ ಒತ್ತಾಯಿಸಿ ವಿದ್ಯಾರ್ಥಿಗಳ ಪ್ರತಿಭಟನೆ

0

ತಾಲ್ಲೂಕಿನ ಗಂಜಿಗುಂಟೆ ಗ್ರಾಮದಲ್ಲಿ ವಿದ್ಯಾರ್ಥಿಗಳು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಗಳವಾರ ಸಮರ್ಪಕ ಸಾರಿಗೆ ವ್ಯವಸ್ಥೆಗೆ ಒತ್ತಾಯಿಸಿ ರಸ್ತೆ ತಡೆ ನಡೆಸಿದರು.
ಚಿಂತಾಮಣಿ ಮತ್ತು ಜೂಲಪಾಳ್ಯ ನಡುವಿನ ಮಾರ್ಗದಲ್ಲಿ ಪ್ರತಿ ದಿನ ಸುಮಾರು 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣಿಸುತ್ತಾರೆ. ಆದರೆ ಶಾಲಾ ಕಾಲೇಜುಗಳ ಸಮಯಕ್ಕೆ ಸರಿಯಾಗಿ ಬಸ್ಸುಗಳು ಬರುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ತಿಳಿಸಿದ್ದರೂ ಕ್ರಮ ಕೈಗೊಂಡಿಲ್ಲ. ಬೆಳಿಗ್ಗೆ ಮತ್ತು ಸಂಜೆ ವಿದ್ಯಾರ್ಥಿಗಳ ಅನುಕೂಲಕರ ಸಮಯಕ್ಕೆ ಬಸ್ಸುಗಳನ್ನು ಈ ಮಾರ್ಗದಲ್ಲಿ ನಿಯೋಜಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಲ್ಲಿನ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಬೇಕಾದ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚಲ್ಲಾಟವಾಡುತ್ತಿದ್ದಾರೆ. ಈ ಭಾಗದ ಎಲ್ಲಾ ವಿದ್ಯಾರ್ಥಿಗಳು ಕೆ.ಎಸ್.ಆರ್.ಟಿ.ಸಿ ಬಸ್ ಪಾಸ್ ಹೊಂದಿದ್ದು, ದಿನಾ ಖಾಸಗಿ ವಾಹನಗಳಲ್ಲಿ ಓಡಾಡಬೇಕಾದ ಅನಿವಾರ್ಯತೆಯನ್ನು ಅಧಿಕಾರಿಗಳು ನಿರ್ಮಿಸಿದ್ದಾರೆ. ಇದೇ ರೀತಿ ಮುಂದುವರೆದಲ್ಲಿ ಕನ್ನಡ ಪರ ಸಂಘಟನೆಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ಒಗ್ಗೂಡಿ ಉಗ್ರ ಪ್ರತಿಭಟನೆಯನ್ನು ನಡೆಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ವಸಂತ್ ಎಚ್ಚರಿಕೆ ನೀಡಿದರು.
ಸ್ಥಳಕ್ಕೆ ಆಗಮಿಸಿದ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಸಂಬಂಧಪಟ್ಟ ವಿಭಾಗದವರಿಗೆ ತಿಳಿಸಿ ಈ ಭಾಗದ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸಮಯಕ್ಕೆ ಸರಿಯಾಗಿ ಬಸ್್ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನಾ ನಿರತರು ಹಿಂದಿರುಗಿದರು.
ಕರ್ನಾಟಕ ರಕ್ಷಣಾ ವೇದಿಕೆಯ ತಿಪ್ಪಣ್ಣ, ಆನಂದರೆಡ್ಡಿ, ಶಿವಾರೆಡ್ಡಿ, ವಿದ್ಯಾರ್ಥಿಗಳಾದ ಭಾನುಪ್ರತಾಪ್, ಮಂಜುನಾಥ, ನಂದೀಶ್, ಅನಿಲ್ಕುಮಾರ್, ಮಹೇಶ್, ಭಾಸ್ಕರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಾರಕ್ಕೊಂದು ನುಡಿಮುತ್ತು ಭಾಗ – 3

0

1. ಬದುಕಲು ಅಚ್ಚುಕಟ್ಟಾದ ಯೋಜನೆಯನ್ನು ರೂಪಿಸಿ ಕಷ್ಟಪಟ್ಟು ದುಡಿದು ಮೇಲೇರಬೇಕು. ನಾವು ಸಂಪಾದಿಸಿದ್ದು ಎಂಬ ತೃಪ್ತಿಯಿಂದ ಅದನ್ನು ಅನುಭವಿಸಿದಾಗ ಸುಖ ಲಭಿಸುತ್ತದೆ.
2. ಯಾರನ್ನೂ ದ್ವೇಷಿಸಬಾರದು. ಕೆಲವರನ್ನಷ್ಟೇ ನಂಬಬೇಕು. ಯಾರನ್ನೂ ಅನುಸರಿಸಬಾರದು. ಆದರೆ ಎಲ್ಲರಿಂದಲೂ ಕಲಿಯಬೇಕು. ಕಲಿತದ್ದನ್ನು ಪಾಲಿಸಬೇಕು.
3. ಯಶಸ್ಸು ಹಾಗೂ ಕುಂಟುನೆಪ ಎರಡೂ ಒಟ್ಟಿಗೆ ಸಾಗುವುದಿಲ್ಲ. ನೀವೂ ಕುಂಟುನೆಪ ಹೇಳುವವರಾದರೆ ಯಶಸ್ಸು ನಿಮ್ಮ ಕೈ ಹಿಡಿಯುವುದಿಲ್ಲ. ನಿಮಗೆ ಯಶಸ್ಸು ಲಭಿಸಬೇಕಾದರೆ ಎಂದಿಗೂ ಕುಂಟುನೆಪಗಳನ್ನು ಹೇಳಬೇಡಿ. ಕುಂಟುನೆಪ ನಿಮ್ಮ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.
4. ಬೇಸಿಗೆ ಕಾಲದಲ್ಲಿ ಎಷ್ಟೇ ಪ್ರಯತ್ನಪಟ್ಟರೂ ಕೀಳಲು ಆಗದ ಬಂಡೆಗಲ್ಲು ಮಳೆಗಾಲದಲ್ಲಿ ತನ್ನಿಂದ ತಾನೇ ಉರುಳಿ ಹೋಗುತ್ತದೆ. ಜೀವನದಲ್ಲಿ ತಾಳ್ಮೆಯಿಂದ ಇದ್ದರೆ ಎಲ್ಲವನ್ನೂ ಸಾಧಿಸಬಹುದು. ತಾಳ್ಮೆ ಎಂದರೆ ನಮ್ಮ ಗಟ್ಟಿತನ, ದೌರ್ಬಲ್ಯ ಅಲ್ಲ.
5. ನಿರಾಶಾವಾದಿಯು ಅವಕಾಶಗಳನ್ನು ಕಷ್ಟವಾಗಿಸಿಕೊಂಡರೆ ಆಶಾವಾದಿಯು ಕಷ್ಟಗಳನ್ನೇ ಅವಕಾಶಗಳನ್ನಾಗಿಸಿಕೊಳ್ಳುತ್ತಾನೆ.
6. ನಮ್ಮ ಆತ್ಮ ವಿಶ್ವಾಸಕ್ಕಿಂತ ಎತ್ತರವಾದುದು ಯಾವುದೂ ಇಲ್ಲ. ಅದರ ಮುಂದೆ ಪರ್ವತವೂ ಸಹ ದೊಡ್ಡದಲ್ಲ. ಏಕೆಂದರೆ ನೀವು ಆತ್ಮವಿಶ್ವಾಸದಿಂದ ಪರ್ವತಕ್ಕೇರಿದರೆ ಅದು ನಿಮ್ಮ ಕಾಲ ಕೆಳಗಿರುತ್ತದೆ. ಹಾಗಾಗಿ ನೀವು ಆತ್ಮ ವಿಶ್ವಾಸವನ್ನು ಹೆಚ್ಚು ಬೆಳೆಸಿಕೊಳ್ಳಲು ಯತ್ನಿಸಿರಿ.
7. ಜೀವನದಲ್ಲಿ ಅಯೋಗ್ಯ ವ್ಯಕ್ತಿಗಳನ್ನು ಸ್ನೇಹಿತರನ್ನಾಗಿ ಆಯ್ಕೆ ಮಾಡಿಕೊಂಡದ್ದಕ್ಕೆ ಪಶ್ಚಾತ್ತಾಪ ಪಡಬೇಕಾದ್ದಿಲ್ಲ. ಏಕೆಂದರೆ ಅಂಥವರನ್ನು ಆಯ್ಕೆ ಮಾಡಿಕೊಳ್ಳದಿದ್ದರೆ ಯೋಗ್ಯ ವ್ಯಕ್ತಿಗಳ ಮಹತ್ವ ನಮಗೆ ತಿಳಿಯುವುದೇ ಇಲ್ಲ.
8. ಬೇರೆ ಯಾರೋ ಬಂದು ನಮ್ಮ ದಾರಿಯನ್ನು ಮಾಡಿಕೊಡುವುದಿಲ್ಲ. ನಮಗೆ ಬೇಕಾದ ದಾರಿಯನ್ನು ನಾವೇ ಮಾಡಿಕೊಳ್ಳಬೇಕು. ಏಕೆಂದರೆ ನಾವು ತಲುಪುವ ಗುರಿ ಯಾವುದೆಂಬುದು ಬೇರೆಯವರಿಗೆ ಗೊತ್ತಿರುವುದಿಲ್ಲ.
9. ಜೀವನದಲ್ಲಿ ಎಂದೆಂದೂ ಈ ಎರಡು ವಿಷಯಗಳನ್ನು ಮಾತನಾಡಬಾರದು. ಅವು ಯಾವುದೆಂದರೆ ನಮ್ಮನ್ನು ಯಾವತ್ತೂ ಯಾರೊಂದಿಗೂ ಹೋಲಿಸಿಕೊಳ್ಳಬಾರದು. ಹಾಗೂ ಬೇರೆಯವರಿಂದ ಏನನ್ನೂ ನಿರೀಕ್ಷಿಸಬಾರದು. ಆಗ ಮಾತ್ರ ನಾವು ನೆಮ್ಮದಿಯಿಂದ ಇರಬಹುದು ಮತ್ತು ನಮ್ಮ ನೆಮ್ಮದಿಯನ್ನು ಯಾರೂ ಕಸಿಯಲಾರರು.
10. ಜೀವನಕ್ಕಾಗಿ ನೀವು ಮಾಡುವ ಕೆಲಸವನ್ನು ಮನಸಾರೆ ಪ್ರೀತಿಸಿ ಮತ್ತು ಆನಂದಿಸಿ. ಅದು ಎಂಥದೇ ಕೆಲಸವಾಗಿರಬಹುದು. ಆಗ ಮಾತ್ರ ನಿಮಗೆ ಗೆಲುವು ನಿಶ್ಚಿತ. ಪ್ರೀತಿಯಿಂದ ಮಾಡುವ ಕೆಲಸವು ಜೀವನ ಪ್ರೀತಿಯನ್ನು ಮೂಡಿಸುತ್ತದೆ.
11. ಜೀವನದಲ್ಲಿ ಏನನ್ನಾದರೂ ಕಳೆದು ಕೊಂಡಾಗ ಚಿಂತಾಕ್ರಾಂತರಾಗಬಾರದು. ಮರದಿಂದ ಎಲೆ ಬಿದ್ದಾಗ, ಟೊಂಗೆ ಮುರಿದಾಗ ಹೊಸ ಎಲೆ ಚಿಗುರುತ್ತದೆ. ಹೊಸ ಟೊಂಗೆ ಟಿಸಿಲೊಡೆಯುತ್ತದೆ. ಹಾಗೆಯೇ ಕಳೆದುಕೊಂಡಿದ್ದೂ ಕೂಡ ಹೊಸ ರೂಪದಲ್ಲಿ ಹಿಂತಿರುಗಿ ಬರುತ್ತದೆ.
12. ಕೊಂಬೆಯ ಮೇಲೆ ಕುಳಿತ ಹಕ್ಕಿಯು ಮರ ಜೋರಾಗಿ ಅಲುಗಾಡಿದರೆ ಹೆದರುವುದಿಲ್ಲ. ಏಕೆಂದರೆ ಆ ಹಕ್ಕಿಗೆ ಕೊಂಬೆಗಿಂತ ಹೆಚ್ಚಿನ ವಿಶ್ವಾಸ ತನ್ನ ರೆಕ್ಕೆಯ ಮೇಲೆ ಇರುತ್ತದೆ. ಯಾವತ್ತೂ ನಿಮ್ಮ ಸಾಮಥ್ರ್ಯದ ಮೇಲೆ ನಂಬಿಕೆ ಇರಲಿ.
13. ನಿಮ್ಮ ಮುಂದೆ ಹತ್ತಾರು ಕೆಲಸಗಳಿದ್ದರೆ ಎಲ್ಲವನ್ನೂ ಏಕಕಾಲಕ್ಕೆ ಮಾಡಲಾಗುವುದಿಲ್ಲ. ಆದ್ದರಿಂದ ಆ ಕೆಲಸಗಳ ಪೈಕಿ ಪ್ರಮುಖವಾದುವು ಯಾವುವು ಎಂಬುದನ್ನು ಆದ್ಯತೆ ಮೇಲೆ ನಿರ್ಧರಿಸಿ ಆರಿಸಿಕೊಳ್ಳಬೇಕು. ಅನಂತರ ಒಂದೊಂದನ್ನೂ ಆದ್ಯತೆಯ ಕ್ರಮದಲ್ಲಿ ಮಾಡಿ ಮುಗಿಸಬೇಕು.
14. ನಾವು ಸದಾ ಇತರರನ್ನು ದೂರುತ್ತೇವೆ. ನಾವೇ ಸರಿ, ಉಳಿದವರು ಸರಿಯಲ್ಲ ಎಂಬ ಭಾವದಿಂದಿರುತ್ತೇವೆ. ಕನ್ನಡಿಯನ್ನು ಸ್ವಚ್ಛಗೊಳಿಸುವ ಮೊದಲು ನಮ್ಮ ಮುಖವನ್ನು ಸ್ವಚ್ಛಗೊಳಿಸಬೇಕು. ಆಗ ಕನ್ನಡಿಯನ್ನು ದೂರುವುದು ತಪ್ಪುತ್ತದೆ. ನಮ್ಮ ಅಸಲಿ ಮುಖ ಏನೆಂಬುದು ನಮಗೆ ತಿಳಿಯುತ್ತದೆ. ಬೇರೆಯವರನ್ನು ದೂರುವ ಬದಲು ನಮ್ಮ ತಪ್ಪನ್ನು ತಿದ್ದಿಕೊಳ್ಳೋಣ.
15. ಜೀವನ ಒಂದು ಸುಧೀರ್ಘ ಪಯಣ. ಆದರೆ ಈ ಪಯಣಕ್ಕೆ ಯಾವ ಸಿದ್ಧ ನಕ್ಷೆಗಳಿಲ್ಲ. ಅದನ್ನು ನಾವೇ ರೂಪಿಸಿಕೊಳ್ಳಬೇಕು. ಹಾಗೂ ಸುರಕ್ಷತವಾಗಿ ಗುರಿಯನ್ನು ಮುಟ್ಟಬೇಕು.
ಮುಗಿಯಿತು.
ಡಾ. ಶ್ರೀವತ್ಸ

ಪಿ.ಜಿ ಕೋರ್ಸ್ ವಾಪಸಾತಿಗೆ ಶಿಫಾರಸ್ಸು ಮಾಡಿರುವುದನ್ನು ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ

0

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸರ್ಕಾರದಿಂದ ಮಂಜೂರಾಗಿರುವ ಪಿ.ಜಿ ಕೋರ್ಸ್ ವಾಪಸಾತಿಗೆ ಶಿಫಾರಸ್ಸು ಮಾಡಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ಶನಿವಾರ ಪ್ರತಿಭಟಿಸಿದರು.
ಹಲವು ವರ್ಷಗಳ ಬೇಡಿಕೆಯ ಫಲವಾಗಿ ಸರ್ಕಾರ ಶಿಡ್ಲಘಟ್ಟದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಪಿ.ಜಿ ಕೋರ್ಸ್ ಮಂಜೂರಾಗಿದೆ. ಆದರೆ ಮೂಲಭೂತ ಸೌಕರ್ಯದ ನೆಪವೊಡ್ಡಿ ಪ್ರಾಂಶುಪಾಲರು ಮತ್ತು ವಾಣಿಜ್ಯ ವಿಭಾಗದವರು ಅದನ್ನು ವಾಪಸಾತಿಗೆ ಬರೆದಿದ್ದಾರೆ. ತಾಲ್ಲೂಕಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗಿರುವುದನ್ನು ತಡೆಹಿಡಿಯುವುದು ಅನ್ಯಾಯ. ಕೊರತೆಯಿದ್ದಲ್ಲಿ ಅದನ್ನು ಕಾಲೇಜು ಅಭಿವೃದ್ಧಿ ಸಮಿತಿ ಹಾಗೂ ಶಾಸಕರ ಮುಂದಿಟ್ಟು ಬಗೆಹರಿಸಿಕೊಳ್ಳಬಹುದು. ತಕ್ಷಣ ಶಾಸಕರ ನೇತೃತ್ವದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸಭೆಯನ್ನು ಕರೆಯಬೇಕು. ಅಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ಅನಿರ್ಧಿಷ್ಟ ಕಾಲ ಪ್ರತಿಭಟಿಸುವುದಾಗಿ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದರು.
‘ಪಿ.ಜಿ ಕೋರ್ಸ್ಗೆ ಪಾಠ ಮಾಡಲು ಪಿ.ಎಚ್.ಡಿ ಮಾಡಿರುವ ಪ್ರಾಧ್ಯಾಪಕರ ಅಗತ್ಯವಿದೆ. ಸುಸಜ್ಜಿತ ಕೊಠಡಿಗಳು, ವಾಚನಾಲಯದ ಅಗತ್ಯವಿದೆ. ನಾವು ವಾಪಸಾತಿಗೆ ಬರೆದಿಲ್ಲ. ಪೂರಕ ಕಾರ್ಯಗಳು ನಡೆಯುವವರೆಗೂ ಹಾಗೂ ಸೂಕ್ತ ಪ್ರಾಧ್ಯಾಪಕರನ್ನು ಕಾಲೇಜಿಗೆ ನೇಮಕ ಮಾಡುವವರೆಗೆ ತಾತ್ಕಾಲಿಕವಾಗಿ ನಿಲ್ಲಿಸುವಂತೆ ಯೂನಿವರ್ಸಿಟಿಗೆ ಪತ್ರ ಬರೆದಿದ್ದೇವೆ’ ಎಂದು ಪ್ರಾಂಶುಪಾಲ ಚಂದ್ರಾನಾಯಕ್ ತಿಳಿಸಿದರು.
ವಿದ್ಯಾರ್ಥಿಗಳು ಮನವಿಪತ್ರವನ್ನು ಪ್ರಾಂಶುಪಾಲ ಚಂದ್ರಾನಾಯಕ್ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥ ರಾಮಚಂದ್ರಪ್ಪ ಅವರಿಗೆ ಸಲ್ಲಿಸಿದರು. ಡಿ.ವೈ.ಎಫ್.ಐ ರಾಜ್ಯ ಮುಖಂಡ ಮುನೀಂದ್ರ, ಮುಜಾಹಿದ್ಪಾಷ, ರವಿ, ವೆಂಕಟೇಶ, ಲಕ್ಷ್ಮೀನಾರಾಯಣ, ಸಪ್ನ, ಶ್ವೇತ, ಮಮತ, ಸುಪ್ರಿಯಾ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಶಿಡ್ಲಘಟ್ಟ ತಾಲ್ಲೂಕಿನ ಲೇಖಕರ ಕೆಲ ಸಾಹಿತ್ಯ ಕೃತಿಗಳು

0

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸಾಹಿತ್ಯ ಅರಳಿದ್ದುದರ ಕುರುಹು ಇತಿಹಾಸದಲ್ಲಿ ಲಭ್ಯವಿದೆ. ತಾಲ್ಲೂಕಿನ ಕುಂದಲಗುರ್ಕಿ ಶಾಸನದಲ್ಲಿ ಹಿಂದೆ ಈ ಪ್ರದೇಶವನ್ನು ಅಗ್ರಹಾರ ರಾಮಸಮುದ್ರವೆಂದು ಕರೆಯಲ್ಪಡುತ್ತಿದ್ದು ಖ್ಯಾತ ಕಲಿಕಾ ಕೇಂದ್ರವಾಗಿತ್ತೆಂದು ಉಲ್ಲೇಖಿಸಲಾಗಿದೆ. 1830 ರಲ್ಲಿ ‘ಶ್ರೀ ಕೃಷ್ಣ ಭೂಪಾಲಿಯಮು’ ಎಂಬ ಕೃತಿಯನ್ನು ರಚಿಸಿದ್ದ ಚಂದ್ರಕವಿ ಕುಂದಲಗುರ್ಕಿಯವನು.
ಕವಿ, ಸಾಹಿತಿ, ಇತಿಹಾಸಕಾರ ಶಿಡ್ಲಘಟ್ಟದ ಅಬ್ದುಲ್ ಹಸನ್, ‘ಜವರುಲ್ ಬಾಲಘತ್’(ಛಂದೋಗ್ರಂಥ), ‘ಜವಾಹಿರ್–ಎ–ಉರ್ದು’(ವ್ಯಾಕರಣ ಗ್ರಂಥ), ‘ಫಾಜಿ–ಎ–ಅಜಮ್’(ಹೈದರ್ ಕುರಿತಾದ ಚಾರಿತ್ರಿಕ ಗ್ರಂಥ), ‘ರಾಜ್ ನಾಮ’(ಮೈಸೂರು ಒಡೆಯರ ಚರಿತ್ರೆ) ಮುಂತಾದ ಕೃತಿಗಳನ್ನು ಬರೆದಿದ್ದಾರೆ.
ಶಿಡ್ಲಘಟ್ಟದ ಕೃಷ್ಣರಾಯರು(1850–1910) ‘ವೇಣುಗೋಪಾಲ’ ಎಂಬ ಅಂಕಿತದಿಂದ ಸುಮಾರು 200 ಕೀರ್ತನೆಗಳನ್ನು ರಚಿಸಿದ್ದಾರೆ. ಗಂಜಿಗುಂಟೆಯ ಜಿ.ಎಸ್.ನರಸಿಂಹಮೂರ್ತಿಯವರ ಕೀರ್ತನೆಗಳ ಸಂಗ್ರಹ ‘ಕೀರ್ತನ ತರಂಗಿಣಿ’ಯಲ್ಲಿ ವಿಷ್ಣುಭಕ್ತಿ, ಭಾಗವತಜ್ಞಾನ, ಪಾಂಡಿತ್ಯಗಳನ್ನು ಗುರುತಿಸಲಾಗಿದೆ.
ಶಿಡ್ಲಘಟ್ಟ ತಾಲ್ಲೂಕು ಮುತ್ತೂರು ಗ್ರಾಮದ ನರಹರಿ ಶಾಸ್ತ್ರಿಗಳು ಹಾಗೂ ಅವರ ಮಗ ಪುರುಷೋತ್ತಮ ಶಾಸ್ತ್ರಿಗಳು ಸಂಸ್ಕೃತ ಪಂಡಿತರಾಗಿ ಆಸ್ಥಾನ ವಿದ್ವಾಂಸರಾಗಿದ್ದರು. ಇವರ ಮಗ ಖ್ಯಾತ ಶಿಕ್ಷಣ ತಜ್ಞ ಎಂ.ಪಿ.ಎಲ್ ಶಾಸ್ತ್ರಿ ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಪಡೆದಿದ್ದು, ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಎಂ.ಇ.ಎಸ್ ವಿದ್ಯಾ ಸಂಸ್ಥೆಯ ಸ್ಥಾಪನಾ ಕಾರ್ಯದರ್ಶಿಗಳಾಗಿದ್ದರು. ಇವರು ರಚಿಸಿದ ಸುಭಾಷಿತ ಸಂಗ್ರಹಗಳು, ಸಂಸ್ಕೃತ ನಾಟಕಗಳು ಮತ್ತು ಅನೇಕ ಲೇಖನಗಳು ಪ್ರಕಟವಾಗಿದೆ. ಚಾಗೆ ಕೃಷ್ಣಮೂರ್ತಿ ಸಂಶೋಧಕರಾಗಿದ್ದು, ಹಲವಾರು ಸಂಶೋಧನಾತ್ಮಕ ಲೇಖನಗಳನ್ನು ಪ್ರಕಟಿಸಿದ್ದಾರೆ. ಆನೂರು ಎ.ಎಂ.ಮುನೇಗೌಡರು 60ರ ದಶಕದಲ್ಲಿ ‘ರೇಷ್ಮೆ ಕೈಗಾರಿಕೆ’ ಎಂಬ ದ್ವೈಮಾಸಿಕ ಪತ್ರಿಕೆ ಹೊರತರುತ್ತಿದ್ದರು. ೧೬ ಪುಟಗಳ ಈ ಮಾಸಪತ್ರಿಕೆಯ ಎಲ್ಲಾ ಲೇಖನಗಳನ್ನೂ ಗೌಡರೇ ಬರೆಯುತ್ತಿದ್ದರು. ಕೆಲ ಲೇಖನಗಳು ಇಂಗ್ಲಿಷ್ ನಲ್ಲಿದ್ದರೆ, ಕೆಲ ಲೇಖನಗಳನ್ನು ಸಚಿತ್ರವಾಗಿಯೂ ಪ್ರಕಟಿಸುತ್ತಿದ್ದರು. ರೈತರ ಬದುಕಿನ ಬಗ್ಗೆ ಕಳಕಳಿ ಹೊಂದಿದ್ದ ಮುನೇಗೌಡರು ‘ಗ್ರಾಮೋದ್ಧಾರವಾಗುವುದೆಂದು?’ ಸೇರಿದಂತೆ ಕೆಲವು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದರು.
ಜಂಗಮಕೋಟೆಯ ಶ್ರೀನಿವಾಸರಾಯರು ಥಿಯಾಸಫಿಕಲ್ ಸೊಸೈಟಿಯ ಪ್ರಭಾವಕ್ಕೊಳಗಾಗಿ ೧೯೦೮ರಲ್ಲಿ ಕರ್ಮಎಂಬ ಕೃತಿ ರಚಿಸಿದ್ದು ೧೯೧೦ರಲ್ಲಿ ಅವರ ಧರ್ಮ ಕೃತಿಯನ್ನು ಮೈಸೂರಿನಿಂದ ಪ್ರಕಟಿಸಲಾಯಿತು.
ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಎಚ್.ವಿ.ರಾಮಚಂದ್ರರಾವ್ ‘ಕಬೀರನ ವಚನಗಳು’ ರಚಿಸಿದ್ದರೆ, ಹಾಸ್ಯ ಲೇಖಕ ಎನ್.ಎಸ್. ನರಸಿಂಹಮೂರ್ತಿ ಹಲವಾರು ಹಾಸ್ಯ ಲೇಖನಗಳನ್ನು ಪ್ರಕಟಿಸಿದ್ದಾರೆ. ತಾಲ್ಲೂಕಿನ ನಡಿಪಿನಾಯಕನಹಳ್ಳಿಯವರಾದ ಎನ್.ಆರ್.ನಾರಾಯಣ ಮೂರ್ತಿ ಇಂಗ್ಲೀಷ್ನಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಮೇಲೂರು ಎಂ.ಆರ್.ಪ್ರಭಾಕರ್ ಅವರು ತಮ್ಮ ಹಸ್ತಾಕ್ಷರದಲ್ಲಿ ‘ಅಂಚೆ ಜಾನಪದ’ ಪುಸ್ತಕ ರಚಿಸಿದ್ದು, ಕರ್ನಾಟಕ ಜಾನಪದ ಅಕಾಡೆಮಿ ಪ್ರಕಟಿಸಿದೆ. ಜನಪದ ತಜ್ಞ ಡಾ.ಶ್ರೀನಿವಾಸಯ್ಯ ಅವರ ಜನಪದ ಲೇಖನಗಳ ಸಂಗ್ರಹ ‘ತಣಿಗೆ’ ಕೃತಿಯಾಗಿದೆ.
ಮಲ್ಲಿಕಾರ್ಜುನ.ಡಿ.ಜಿ ಅವರ ಅರೆಕ್ಷಣದ ಅದೃಷ್ಟ, ಕ್ಲಿಕ್ ಕೃತಿಗಳು ಹೊರಬಂದಿವೆ. ಮೇಲೂರಿನ ರಾಜೀವಗೌಡ ಅವರ ಸಂಖ್ಯಾಲೋಕದಲ್ಲಿ ಅಲೆದಾಟ ಮತ್ತು ಪಾಬ್ಲೊ ನೆರೂಡ ಕೃತಿಗಳು, ಈಧರೆ ತಿರುಮಲ ಪ್ರಕಾಶ್ ಅವರ ಕವನ ಸಂಕಲನ ‘ಕತ್ತಲೆಗೊಂದು ಹೊಳೆವ ಮಿಂಚು’ ಪ್ರಕಟವಾಗಿವೆ. ಶಿಕ್ಷಕ ಎಸ್.ಕಲಾಧರ್ ಸಂಪಾದಿಸಿರುವ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಬರಹಗಳ ಸಂಕಲನ ‘ಶಾಮಂತಿ’ ಭವಿಷ್ಯದ ಸಾಹಿತ್ಯ ಕೃಷಿಗೆ ಭರವಸೆಯಂತಿದೆ.
–ಡಿ.ಜಿ.ಮಲ್ಲಿಕಾರ್ಜುನ.

ದಾಂಪತ್ಯದಲ್ಲಿ ಪ್ರೇಮ ಮತ್ತು ಕಾಮ – ಭಾಗ 1

0

ನಿಮಗೆ ಮದುವೆಯಾಗಿ ಕೆಲವು ವರ್ಷಗಳಾಗಿದ್ದರೆ,
1. ವೈವಾಹಿಕ ಜೀವನದಲ್ಲಿ ಏಕಾತಾನತೆಯಿಂದಾಗಿ ಬೇಸರವುಂಟಾಗಿದೆಯೇ?
2. ಪತಿಪತ್ನಿಯರ ಮಧ್ಯೆ ಆಗಾಗ ಬಿಸಿಬಿಸಿ ಮಾತುಕತೆಗಳಾಗತ್ತಿದೆಯೇ ಅಥವಾ ಹಾಗಾಗದಿದ್ದರೂ ಒಟ್ಟಾರೆ ಮೊದಲಿನ ಆತ್ಮೀಯತೆ ಉಳಿದಿಲ್ಲ ಅನ್ನಿಸುತ್ತಿದೆಯೇ?
3. ಗಂಡ ಹೆಂಡತಿಯರಲ್ಲಿ ಒಬ್ಬರಿಗೆ ಆಸಕ್ತಿ ಕಡಿಮೆಯಾದ ಕಾರಣಕ್ಕಾಗಿ ಲೈಂಗಿಕ ಜೀವನ ನೀರಸ ಅನ್ನಿಸಿ ನೀವು ಪಬ್ಬು, ಕ್ಲಬ್ಬುಗಳನ್ನು ಹುಡುಕಿಕೊಂಡು ಹೋಗುತ್ತಿದ್ದೀರಾ?
4. ನಮ್ಮ ಜೀವನದಲ್ಲಿ ಇನ್ನೇನು ಉಳಿದಿಲ್ಲ, ಮಕ್ಕಳಿಗೆ ಒಂದು ದಾರಿ ತೋರಿಸಿದರೆ ಎಲ್ಲಾ ಮುಗಿದಂತೆ ಅನ್ನಿಸುತ್ತಿದೆಯೇ?
ಹಾಗಿದ್ದರೆ ನೀವು ದಾಂಪತ್ಯ ಜೀವನದ ಸರಿಯಾದ ಬೆಳವಣಿಗೆಯ ಹಂತದಲ್ಲಿದ್ದೀರಾ, ಬೇಸರ ಮಾಡಿಕೊಳ್ಳುವ ಅಗತ್ಯವೇನಿಲ್ಲ!!
ಇದು ವ್ಯಂಗ್ಯವಲ್ಲ
ಮೇಲಿನ ಮಾತುಗಳಲ್ಲಿ ವ್ಯಂಗ್ಯದ ಧ್ವನಿ ನಿಮಗೆ ಕಂಡಿದ್ದರೆ ಕ್ಷಮಿಸಿ, ನನಗೆ ನಿಮ್ಮನ್ನು ಹಂಗಿಸುವ ಉದ್ದೇಶವಿಲ್ಲ. ಇಂತಹ ಹೊಸತನವಿಲ್ಲದ, ಬೇಸರದ, ಭಿನ್ನಾಭಿಪ್ರಾಯಗಳ ಹಂತ ಸಾಮಾನ್ಯವಾಗಿ ಹೆಚ್ಚಿನವರ ವೈವಾಹಿಕ ಜೀವನದಲ್ಲಿ ಬಂದೇ ಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪತಿಪತ್ನಿಯರು ತಮ್ಮ ಮಾನಸಿಕ ಆತಂಕ, ಕಿರಿಕಿರಿಗಳನ್ನು ಹೇಗೆ ನಿಭಾಯಿಸುತ್ತಾರೆ ಮತ್ತು ತಮ್ಮ ಭಾವೀ ಜೀವನದ ಬಗೆಗೆ ಎಂತಹ ಧೋರಣೆ ಹಾಗೂ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎನ್ನವುದು ಅತಿ ಮುಖ್ಯ. ಇದರ ಆಧಾರದ ಮೇಲೆ ನಿಮ್ಮ ದಾಂಪತ್ಯದಲ್ಲಿ ಶಾಶ್ವತವಾದ ಸಂತೋಷ, ಸಮಾಧಾನಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆಯೇ ಇಲ್ಲವೇ ಎನ್ನುವುದು ನಿರ್ಧರಿತವಾಗುತ್ತದೆ.
ದಾಂಪತ್ಯದ ಬೆಳವಣಿಗೆಯ ಹಂತಗಳು
ಮದುವೆಯಾದ ಆರಂಭದ ಹಂತದಲ್ಲಿ ಪತಿಪತಿಯರಿಬ್ಬರೂ ಒಬ್ಬರನ್ನೊಬ್ಬರು ಅರಿತುಕೊಳ್ಳುವ ಮತ್ತು ಮೆಚ್ಚಿಸುವ ತವಕದಲ್ಲಿರುತ್ತಾರೆ. ಹಲವಾರು ವರ್ಷ ಪ್ರೇಮಿಸಿ ಮದುವೆಯಾದವರೂ ಕೂಡ ಇದನ್ನೇ ಮಾಡುತ್ತಾರೆ, ಏಕೆಂದರೆ ಗಂಡಹೆಂಡತಿಯರಾಗಿ ನಿಭಾಯಿಸಬೇಕಾದ ಜವಾಬ್ದಾರಿಗಳು ಅಥವಾ ಸಾಮಾಜಿಕ ಚೌಕಟ್ಟುಗಳು ಪ್ರೇಮಿಗಳಿಗೆ ಇರುವುದಿಲ್ಲ. ದಾಂಪತ್ಯದ ಅಗತ್ಯಗಳು ಬರಿಯ ಪ್ರೇಮ ಸಂಬಂಧದ ಅಗತ್ಯಗಳಿಗಿಂತ ಭಿನ್ನವಾಗಿರುತ್ತದೆ.
ಹೀಗೆ ಒಬ್ಬರನ್ನೊಬ್ಬರು ಅರಿತುಕೊಳ್ಳುವ ಮತ್ತು ಸಾಧ್ಯವಾದಷ್ಟು ಇನ್ನೊಬ್ಬರನ್ನು ಖುಷಿಯಾಗಿಡುವ ಪ್ರಯತ್ನದಲ್ಲಿ ಹೆಚ್ಚಿನ ನವದಂಪತಿಗಳು ವರ್ತಿಸುವ ರೀತಿ ಒಂದೇ ರೀತಿಯಾಗಿರುತ್ತದೆ. ಇಬ್ಬರೂ ತಮ್ಮ ಇಷ್ಟ ಕಷ್ಟಗಳನ್ನು ಸಾಕಷ್ಟು ಹೇಳಿಕೊಳ್ಳದೆ ಪ್ರೀತಿಯ ಮುಖವಾಡದಲ್ಲಿ ಇನ್ನೊಬ್ಬರ ಅಗತ್ಯಗಳನ್ನು ಪೂರೈಸುವ ತವಕದಲ್ಲಿರುತ್ತಾರೆ. ಹಾಗಾಗಿ ಆರಂಭದ ಹಂತದಲ್ಲಿ ಹೆಚ್ಚಿನ ಭಿನ್ನಾಭಿಪ್ರಾಯಗಳು ಬರುವುದಿಲ್ಲ ಅಥವಾ ಬಂದರೂ ಬಹಳ ಬೇಗ ಮುಚ್ಚಿಹೋಗುತ್ತವೆ. ಆದರೆ ನೆನಪಿಡಿ, ಈ ಭಿನ್ನಾಭಿಪ್ರಾಯಗಳು ಪರಿಹಾರವಾಗಿರುವುದಿಲ್ಲ. ಹಾಗಾಗಿಯೇ “ಗಂಡ ಹೆಂಡಿರ ಜಗಳ ಉಂಡು ಮಲಗುವವವರೆಗೆ” ಎನ್ನವು ಗಾದೆ ಹುಟ್ಟಿಕೊಂಡಿದೆ. ಇದು ಎಂತಹ ಪೊಳ್ಳು ಗಾದೆ ಎಂದು ಸಾಕಷ್ಟು ಮಧ್ಯ ವಯಸ್ಸಿನ ದಂಪತಿಗಳಿಗೆ ತಿಳಿದಿದೆ! ನನ್ನ ಹತ್ತಿರ ಆಪ್ತಸಲಹೆಗೆ ಬರುವ ಎಷ್ಟೋ ದಂಪತಿಗಳ ಅನುಭವದಲ್ಲಿ ಗಂಡಹೆಂಡಿರ ಜಗಳ ಶುರುವಾಗುವುದೇ ಉಂಡು ಮಲಗಿದ ಮೇಲೆ!!
ಹೀಗೆ ಒಬ್ಬರು ಇನ್ನೊಬ್ಬರನ್ನು ಖುಷಿಪಡಿಸುವ ಕೆಲಸ ಪ್ರೀತಿ, ತ್ಯಾಗ, ಹೊಂದಾಣಿಕೆಯ ಹೆಸರಿನಲ್ಲಿ ನಡೆಯುತ್ತಿರುತ್ತದೆ. ವಾಸ್ತವದಲ್ಲಿ ಇದು ನಿಜವಾದ ಪ್ರೇಮವೇ? ಮುಂದೆ ನೋಡೋಣ.
ಎಲ್ಲಿಯವರೆಗೆ ಸಹಿಸಿಕೊಳ್ಳಲಿ?
ನಿಧಾನವಾಗಿ ದಾಂಪತ್ಯದಲ್ಲಿ ಸಲಿಗೆ ಮತ್ತು ಜವಾಬ್ದಾರಿಗಳು ಹೆಚ್ಚಿದಂತೆ ಒಬ್ಬರು ಇನ್ನೊಬ್ಬರನ್ನು ಯಾವಾಗಲೂ ಖುಷಿಯಾಗಿಡುವ ಅಗತ್ಯ ಹೆಚ್ಚಾಗಿ ಕಾಣುವುದಿಲ್ಲ. ಜೊತೆಗೆ ಅದಕ್ಕಾಗಿ ಸಾಕಷ್ಟು ಸಮಯ, ತಾಳ್ಮೆ ಯಾವುದೂ ಉಳಿದಿರುವುದಿಲ್ಲ. ಇಲ್ಲಿಂದ ಸಣ್ಣಪುಟ್ಟ ಬಿರುಕುಗಳು ಕಾಣಿಸಿಕೊಂಡು ಇಬ್ಬರೂ ಪರಸ್ಪರ ಆರೋಪಗಳನ್ನು ಹೊರಿಸಲು ಶುರುಮಾಡಬಹುದು. ನೀನು ನನ್ನನ್ನು ಕಡೆಗಣಿಸುತ್ತಿದ್ದೀಯಾ; ನೀವು ಮೊದಲು ಇದ್ದಂತೆ ಇಲ್ಲ; ನಿನಗೆ ಸಲಿಗೆ ಕೊಟ್ಟಿದ್ದು ಜಾಸ್ತಿಯಾಯಿತು; ನಿಮಗಾಗಿ ನಾನು ಏನೆಲ್ಲಾ ತ್ಯಾಗ ಮಾಡಿದೆ, ಆದರೆ ನೀವು ಮಾತ್ರ ನನ್ನನ್ನು ಕಾಲಕಸ ಮಾಡಿದ್ದೀರಾ – ಮುಂತಾದವು. ಹೀಗೆ ನೇರವಾಗಿ ಮಾತಿಗಿಳಿಯದ ದಂಪತಿಗಳಲ್ಲೂ ನಾನು ಸಂಗಾತಿಯ ಆಯ್ಕೆಯಲ್ಲಿ ತಪ್ಪಿದೆನೇ, ಎನ್ನವು ಅತೃಪ್ತಿಯು ಹೊಗೆಯಾಡುತ್ತಿರಬಹುದು. ಅಪರೂಪದ ಕೆಲವರಲ್ಲಿ ಭಿನ್ನಾಭಿಪ್ರಾಯಗಳು ಬರದಿದ್ದರೂ ದಾಂಪತ್ಯದ ಹೊಸತನ ಹೊರಟು ಹೋಗಿದೆ ಎಂದು ಅನ್ನಿಸುತ್ತಿರುವ ಸಾಧ್ಯತೆಗಳಿರುತ್ತದೆ. ಇದೆಲ್ಲದರ ನೇರ ಅಡ್ಡ ಪರಿಣಾಮವಾಗುವುದು ಉಂಡು ಮಲಗಿದೆ ಮೇಲೆ!
ಬಹುಷಃ ಇದು ಮದುವೆ ಎನ್ನವು ಸಾಮಾಜಿಕ ಸಂಸ್ಥೆ ಹುಟ್ಟಿದಂದಿನಿಂದಲೇ ನಡೆದು ಬಂದ ರೀತಿ. ಹಾಗಾಗಿಯೇ ವಿಚ್ಛೇದನಗಳು ಮದುವೆಯ ಜೊತೆಗೇ ಹುಟ್ಟಿದವು, ಹೆಚ್ಚೆಂದರೆ ಇಪ್ಪತ್ತು ನಿಮಿಷಗಳ ನಂತರ!-ಎನ್ನುವ ಮಾತಿದೆ.
ಇದಕ್ಕಾಗಿ ಯಾವ ದಂಪತಿಗಳೂ ನಿರಾಸೆಗೊಳ್ಳುವ ಕಾರಣಗಳೇನಿಲ್ಲ. ವಾಸ್ತವದಲ್ಲಿ ಇವೆಲ್ಲಾ ವೈವಾಹಿಕ ಸಂಬಂಧ ರೂಪಗೊಳ್ಳುವ ಬೆಳವಣಿಗೆಯ ಸಹಜ ಹಂತಗಳು. ವಿಪರ್ಯಾಸವೆಂದರೆ ಇವೆಲ್ಲಾ ನಡೆಯುವುದು ಪ್ರೇಮ, ಪ್ರೀತಿ, ತ್ಯಾಗ, ಹೊಂದಾಣಿಕೆ ಎನ್ನವು ಹೆಸರಿನಲ್ಲಿ! ನಮ್ಮಲ್ಲಿ ಹೆಚ್ಚಿನವರು ಇದೇ ಹಂತದಲ್ಲೇ ಕೊನೆಯವರೆಗೂ ಕಳೆದುಬಿಟ್ಟರೆ, ಕೆಲವರು ಸಂಬಂಧವನ್ನೂ ಇನ್ನೂ ಹಾಳುಮಾಡಿಕೊಂಡು ವಿಚ್ಛೇದನವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗೆ ಹೊಸ ಸಂಗಾತಿಯನ್ನು ಹುಡುಕಿಕೊಂಡು ಹೋಗುವವರು ಹೊಸ ಸಂಬಂಧದಲ್ಲೂ ಕೂಡ ಮತ್ತೇ ಇದೇ ದಾರಿಯಲ್ಲಿ ನಡೆಯಬೇಕಾಗುತ್ತದೆ. ಬೆರಳೆಣಿಕೆಯಷ್ಟು ಜನ ಮಾತ್ರ ತಾತ್ಕಲಿಕ ಮಾನಸಿಕ ಆತಂಕ, ಕಿರಿಕಿರಿಗಳನ್ನು ಮೆಟ್ಟಿನಿಂತು ಮುಂದುವರೆದು ಶಾಶ್ವತ ಸಮಾಧಾನದತ್ತ ನಡೆಯುತ್ತಾರೆ.
ಎಲ್ಲಿದೆ ಇದರ ಮೂಲ?
ತಮ್ಮತನವನ್ನು ಬಿಟ್ಟು ಸಂಗಾತಿಯನ್ನು ಖುಷಿಪಡಿಸುವ ಹಪಾಹಪಿಯೇ ಇದೆಲ್ಲದರ ಮೂಲ ಎಂದರೆ ಯಾವ ದಂಪತಿಗಳೂ ಇದನ್ನು ಒಪ್ಪುವುದಿಲ್ಲ. ಮದುವೆಯ ಹೊಸದರಲ್ಲಿ ನಮ್ಮತನವನ್ನು ಬಿಡುವುದರಲ್ಲಿ ಒಂದು ರೀತಿಯ ಪ್ರೇಮದ ನಶೆ ಇರುತ್ತದೆ. ಒಮ್ಮೆ ಆ ನಶೆ ಇಳಿಯುತ್ತಾ ಬಂದಂತೆ ನಮ್ಮ ಸ್ವಂತಿಕೆಯನ್ನು ಬಿಟ್ಟು ಬದುಕುವ ಕಿರಿಕಿರಿ ಸುಡತೊಡಗುತ್ತದೆ. ಎಲ್ಲಾ ಸಂದರ್ಭದಲ್ಲಿಯೂ ನಾನೇ ಏಕೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಇಬ್ಬರಿಗೂ ಅನ್ನಿಸತೊಡಗುತ್ತದೆ. ಜೊತೆಗೆ ಯಾವಾಗಲೂ ಸಂಗಾತಿಯನ್ನು ಸಂತೋಷದಲ್ಲಿಡಲು ಅಥವಾ ಅವರಿಗೆ ಬೇಸರವಾಗದಂತೆ ವರ್ತಿಸಲು ಬೇಕಾಗುವ ಮಾನಸಿಕ ಎಚ್ಚರ ನಮ್ಮೊಳಗೆ ಅಗಾಧವಾದ ಆತಂಕ ಒತ್ತಡಗಳನ್ನು ಹುಟ್ಟುಹಾಕುತ್ತದೆ. ಮದುವೆಗೆ ಮುಂಚೆ ಸ್ವಚ್ಛಂದವಾಗಿ ಬದುಕುತ್ತಿದ್ದು ಈಗ ಅದನ್ನೆಲ್ಲಾ ಕಳೆದುಕೊಂಡೆನೇ, ಅನ್ನಿಸತೊಡಗುತ್ತದೆ. ಇದೆಲ್ಲದರಿಂದಾಗಿ ಇಬ್ಬರೂ ತಮ್ಮ ಮೂಲ ವ್ಯಕ್ತಿತ್ವಕ್ಕೆ ಅನುಗುಣವಾಗಿ ಬದುಕುವ ಸಣ್ಣಪುಟ್ಟ ಪ್ರಯತ್ನಗಳನ್ನು ಆಗಾಗ ಮಾಡತೊಡಗುತ್ತಾರೆ. ಆಗಲೇ ಪರಸ್ಪರರಿಗೆ ಮತ್ತೊಬ್ಬರು ಬದಲಾಗುತ್ತಿದ್ದಾರೆ ಅನ್ನಿಸುವುದು. ಇಲ್ಲಿಂದ ದಾಂಪತ್ಯದಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತದೆ. ಇದರ ಪರಿಣಾಮ ಸಹಜವಾಗಿ ಲೈಂಗಿಕ ಸಂಬಂಧದಲ್ಲಿ ಆಗುತ್ತದೆ.
ಮುಂದುವರೆಯುವುದು..
ವಸಂತ್ ನಡಹಳ್ಳಿ

ಭಾರತದ ಬಾಹ್ಯಾಕಾಶ ಸಾಧನೆಗಳು – ಭಾಗ 1

0

ಶ್ರೀಹರಿಕೋಟಾದ ಸತಿಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಇಡೀ ವಿಶ್ವದ ದೃಷ್ಟಿ ಭಾರತದೆಡೆಗೆ ನೆಟ್ಟಿದೆ. ಭಾರತದ ಮೊಟ್ಟಮೊದಲ ಅಂತರ್‍ಗ್ರಹ ಬಾನನೌಕೆ ಅಂದು ಉಡಾವಣೆಗೊಳ್ಳಲಿದೆ. ಅದಕ್ಕೆಂದೇ ನಿರ್ಮಾಣಗೊಂಡ ಲಕಲಕನೆ ಹೊಳೆಯುವ ಮಂಗಳಯಾನ ಹೆಸರಿನ ಬಾನನೌಕೆ ವಾರದ ಮೊದಲೇ ರಾಕೆಟ್ಟಿನ ಬೆನ್ನೇರಿ ಕೂತಿದೆ. ಕ್ಷಣಗಣನೆ ಆರಂಭವಾಯಿತು. ಅಂತಿಮ ಹಂತದ ಸಿದ್ಧತೆಗಳೆಲ್ಲವೂ ಮುಗಿದು, ತಂಡದ ಮುಖಂಡರಿಂದ ಸೂಚನೆ ಬಂದೊಡನೆಯೇ ರಾಕೆಟ್ಟಿನ ಎಂಜಿನ್ ಉರಿಯಲಾರಂಭಿಸಿತು, ಹೊಗೆಯುಗುಳುತ್ತ ಮಂಗಳಯಾನ ನೌಕೆ ಆಗಸಕ್ಕೆ ಚಿಮ್ಮಿತು, ಅದರೊಂದಿಗೆ ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಹೊಸದೊಂದು ದಾಖಲೆ ಸೇರ್ಪಡೆಯಾಯಿತು.
ಇದೇ ಭಾವೋದ್ವೇಗದ ಕ್ಷಣಗಳು ಐದು ವರ್ಷಗಳ ಹಿಂದೆ ‘ಚಂದ್ರಯಾನ’ದ ವೇಳೆಯಲ್ಲೂ ಎದುರಾಗಿದ್ದವು. ‘ಚಂದ್ರಯಾನ-1′, ಗಗನನೌಕೆಯ ಉಡ್ಡಯನ ಭಾರತದ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಯೋಜನೆಯಾಗಿತ್ತು. ಆ ನೌಕೆ ಚಂದ್ರನ ನೆಲಕ್ಕಪ್ಪಳಿಸಲೆಂದು ‘ಮೂನ್ ಇಂಪ್ಯಾಕ್ಟ್ ಪ್ರೊಬ್’, ವಿಕಿರಣಮಾಪಕ, ಖನಿಜ ಮಾಪಕ ಅಮೆರಿಕ, ಬಲ್ಗೆರಿಯಾ ದೇಶಗಳ ವೈಜ್ಞಾನಿಕ ಉಪಕರಣಗಳು ಇತ್ಯಾದಿ ಹತ್ತು ಪರಿಕರಗಳನ್ನು ಹೊತ್ತು ಬಾನಿಗೆ ಹಾರಿದ ಹಂತಹಂತವಾಗಿ ಮೇಲೇರತೊಡಗಿತ್ತು. ಮೊದಲ ಹಂತದಲ್ಲಿ ನೌಕೆ ದಾಟಿದ 36ಸಾವಿರ ಕಿ.ಮೀ. ಅಂತರ ಅಂದು ದಾಖಲೆಗೆ ಸೇರಿತು, ಏಕೆಂದರೆ ಆ ಎತ್ತರ ಭೂಸ್ಥಿರ ಉಪಗ್ರÀಹಗಳು ಹಾರಾಡುವ ಕಕ್ಷೆ, ಅಂದರೆ ಆ ಉಪಗ್ರಹಗಳು ಭೂಮಿಯದೇ ವೇಗದಲ್ಲಿ ಹಾರಾಡುತ್ತವೆ. ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಅದೇ ಮೊದಲ ಬಾರಿಗೆ ಭೂಸ್ಥಿರ ಕಕ್ಷೆಯನ್ನು ದಾಟಿದ ನೌಕೆ ಚಂದ್ರಯಾನ. ಹಾರುತ್ತ ಹಾರುತ್ತ ನೌಕೆ ಚಂದ್ರನನ್ನು ಇನ್ನೂ ಮತ್ತೂ ಸಮೀಪಿಸುತ್ತ ಎರಡು ತಾಸಿಗೊಮ್ಮೆ ಚಂದ್ರಪ್ರದಕ್ಷಿಣೆ ಮಾಡತೊಡಗಿತು. ಕ್ಯಾಮೆರಾ ಮತ್ತಿತರ ಉಪಕರಣಗಳು ನಿದ್ದೆಯಿಂದೆದ್ದವು. ವಿಧವಿಧದ ಕೋನಗಳಲ್ಲಿ ತೆಗೆದ ಚಂದ್ರಚಿತ್ರಗಳು ಭೂಮಿಗೆ ಬಂದು ತಲುಪತೊಡಗಿದವು. ‘ಮೂನ್ ಇಂಪ್ಯಾಕ್ಟ್ ಪ್ರೋಬ್’ ನೌಕೆಯಿಂದ ಹೊರಬಿದ್ದು, ಚಂದ್ರನೆಲಕ್ಕಪ್ಪಳಿಸುವ 30 ನಿಮಿಷಗಳ ಪಯಣ ಚಂದ್ರಯಾನದ ಪ್ರಮುಖ ಘಟ್ಟ. ಪ್ರೋಬ್ ಉಪಕರಣದೊಳಗೆ ಅವಿತಿಟ್ಟಿದ್ದ ಕ್ಯಾಮೆರಾ ನಿಮಿಷ ನಿಮಿಷಕ್ಕೂ ಸುತ್ತಲ ದೃಶ್ಯವನ್ನು ಸೆರೆಹಿಡಿಯುತ್ತಿತ್ತು. ಆ ಚಿತ್ರಗಳು ಕ್ಯಾಮೆರಾದಿಂದ ಮಾತೃನೌಕೆಗೆ, ಅಲ್ಲಿಂದ ಮಾತೃಭೂಮಿಗೆ ರವಾನೆಯಾಗತೊಡಗಿದವು. 2017 ರಲ್ಲಿ ಚಂದ್ರನ ಮೇಲೆ ಓಡಾಡುವ ಕೈಗಾಡಿಯೊಂದನ್ನು ಕಳುಹಿಸುವ ಇಸ್ರೋದ ಯೋಜನೆಗೆ ಈ ಚಿತ್ರಗಳು ಬಹಳೇ ಅನುಕೂಲವಾಗಲಿವೆಯೆಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಇವೇ ಚಿತ್ರಗಳನ್ನಾಧರಿಸಿ, ಚಂದ್ರನಲ್ಲಿ ನೀರಿರುವ ಕುರುಹನ್ನು ಪತ್ತೆ ಹಚ್ಚಿದುದಾಗಿ ಇಸ್ರೋ ಮುಖಂಡರು ಘೋಷಿಸಿದಾಗ ಅದೊಂದು ಚರ್ಚೆಯ ವಸ್ತುವಾಯಿತು, ಆ ಮಾತು ಬೇರೆ. ಚಂದ್ರಯಾನ 2008ರ ಅಕ್ಟೋಬರ್ ವೇಳೆಗೆ ಚಂದ್ರನನ್ನು 3 ಸಾವಿರ ಬಾರಿ ಪ್ರದಕ್ಷಿಣೆಗೈದು 312 ದಿನಗಳವರೆಗೆ ಸತತವಾಗಿ ಸಂದೇಶಗಳನ್ನು ಕಳುಹಿಸಿತ್ತು. ಮುಂದೆ ತಾಂತ್ರಿಕ ಅಡಚಣೆಗಳೆದುರಾಗಿ ಸಂದೇಶಗಳು ನಿಂತವು.
ನಮ್ಮ ಸೌರಮಂಡಲದಲ್ಲಿ ಬುಧ, ಶುಕ್ರ, ಭೂಮಿ, ಮಂಗಳ, ಗುರು, ಶನಿ, ಯುರೇನಸ್, ನೆಪ್ತೂನ್ ಇವೆಲ್ಲ ಸೂರ್ಯನನ್ನು ವಿವಿಧ ಅಂತರದಲ್ಲಿ, ವಿವಿಧ ರೂಪದ ಕಕ್ಷೆಗಳಲ್ಲಿ ಪರಿಭ್ರಮಿಸುತ್ತಿರುವ ಗ್ರಹಗಳು. ಇವುಗಳಲ್ಲಿ ಸೂರ್ಯನಿಂದ ತುಂಬ ಹತ್ತಿರವೂ ಅಲ್ಲ, ತುಂಬ ದೂರವೂ ಅಲ್ಲದೆ ಜೀವಜಾಲ ರೂಪುಗೊಳ್ಳಲು ಅನುಕೂಲ ವಾತಾವರಣವನ್ನು ಪಡೆದ ಏಕೈಕ ಗ್ರಹ ನಮ್ಮ ಭೂಮಿ. ಇದರ ಹೊರತಾಗಿ ನಮ್ಮ ಆಚಿನ ಕೆಂಪು ಬಣ್ಣವಾಗಿ ಕೋರೈಸುವ ಮಂಗಳಗ್ರಹದ ಬಗ್ಗೆ ನಮಗೆ ಇನ್ನಿಲ್ಲದ ಕುತೂಹಲ, ಸೌರವ್ಯೂಹದ ನಾಲ್ಕನೆಯ ಗ್ರಹವಾದ ಮಂಗಳ ಅಂಡಾಕಾರದ ಕಕ್ಷೆಯಲ್ಲಿ ಸೂರ್ಯನ ಸುತ್ತ ನಮ್ಮಿಂದ ಕನಿಷ್ಟ 546 ಲಕ್ಷ ಕಿ.ಮೀ. ಹಾಗೂ ಗರಿಷ್ಟ 40 ಕೋಟಿ ಕಿಮೀ ದೂರದಲ್ಲಿ ಹಾರಾಡುತ್ತಿರುತ್ತದೆ.
ಮುಂದೊಮ್ಮೆ ಮಾನವ ಮಂಗಳಗ್ರಹಕ್ಕೆ ಹೋಗಿ ವಾಸಿಸಲು ಸಾಧ್ಯವಿರಬಹುದೆ? ಅಲ್ಲಿ ಜೀವಿಗೆ ಅನುಕೂಲಕರವಾದ ಸಂಪನ್ಮೂಲಗಳೇನಿರಬಹುದು? ಮಾನವ ಅದನ್ನು ವಾಸಯೋಗ್ಯ ಗ್ರಹವಾಗಿಸಬಹುದೆ? ಈ ಕುತೂಹಲದಿಂದಾಗಿಯೇ ಇಂದು ಮುಂದುವರೆದ ಹಾಗೂ ಮುಂದುವರೆಯುತ್ತಿರುವ ದೇಶಗಳು ಅಪಾರ ಹಣ ಹಾಕಿ ಮಂಗಳನ ಬಗ್ಗೆ ಸಂಶೋಧನೆ ನಡೆಸುತ್ತಿವೆ.
ಮಾನವ ನಿರ್ಮಿತ ಬಾನನೌಕೆಯನ್ನು ನಿರ್ಮಿಸಿ ಹಾರಿಬಿಡುವ ಸಾಹಸಕಾರ್ಯ ಸುಲಭ ಸಾಧ್ಯವಲ್ಲ. ಭೂಮಿಯ ಗುರುತ್ವಾಕರ್ಷಣೆಯನ್ನು ಮೀರಿ ವಾಯುಮಂಡಲದ ಭದ್ರ ಕೋಟೆಯನ್ನೂ ದಾಟಿ ಬಾಹ್ಯ ಅಂತರಿಕ್ಷವನ್ನು ಸೇರಿ ಅಲ್ಲಿ ನಿಗದಿತ ಕಕ್ಷೆಯಲ್ಲಿ ಭೂಮಿಯನ್ನು ಸುತ್ತುವರಿಯುವಂಥ ಬಾನನೌಕೆಯ ನಿರ್ಮಾಣ ಹಾಗೂ ಅವುಗಳ ಉಡಾವಣೆ ಎರಡೂ ಅತ್ಯಂಥ ಕರಾರುವಾಕ್ ಹಾಗೂ ಕರಗತ ತಂತ್ರವನ್ನು ಬೇಡುವ ಕುಶಲಕಲೆಗಳು. ಅಲ್ಲಿ ಭೌತ, ಗಣಿತ, ರಸಾಯನ ವಿಜ್ಞಾನಗಳನ್ನು ಬಳಸಿ ಅನ್ವೇಷಿಸಿದ ತಂತ್ರಜ್ಞಾನಗಳ ಸಂಗಮವಾಗುತ್ತದೆ. ಮಾನವನ ಬುದ್ಧಿಶಕ್ತಿಯ ಪ್ರದರ್ಶನವಾಗುತ್ತದೆ. ಭೂಮಿಯನ್ನು ಸುತ್ತುವರೆಯುವ ಪ್ರತಿಯೊಂದೂ ಉಪಗ್ರಹದ ಕಕ್ಷೆ ಬೇರೆ ಬೇರೆಯಾಗಿರಬೇಕು, ಅವು ಒಂದಕ್ಕೊಂದು ಎದುರಾಗಬಾರದು, ನಿರ್ದಿಷ್ಟ ಎತ್ತರಕ್ಕೆ, ನಿರ್ದಿಷ್ಟ ವೇಗದೊಂದಿಗೆ ಉಪಗ್ರಹಗಳ ಉಡಾವಣೆಯಾಗಬೇಕು.
ಇನ್ನು ಉಪಗ್ರಹಗಳು ಹೊತ್ತೊಯ್ಯುವ ವೈಜ್ಞಾನಿಕ ಉಪಕರಣಗಳು, ಅವುಗಳ ನಿರ್ಮಾಣ, ಅವುಗಳನ್ನು ಉಪಗ್ರಹದೊಳಕ್ಕೆ ಜೋಡಿಸಿಡುವ ವೈಖರಿ ಇವೂ ಕೂಡ ಬಹು ಸವಾಲಿನ ಕಾರ್ಯಗಳೇ. ಹಾಗೆಯೇ ಬಹು ಹಣ ಬೇಡುವ ಯೋಜನೆಗಳೇ.
ಬಾಹ್ಯ ಅವಕಾಶದಲ್ಲಿರುವ ನೌಕೆ ಸತತವಾಗಿ ಹಾರಾಡುತ್ತಿರುತ್ತದೆ, ಹಾಗಾಗಿ ಅದರೊಂದಿಗೆ ಭೂಮಿಯಿಂದ ಅವಿರತ ಸಂಪರ್ಕದಲ್ಲಿರುವುದೊಂದು ಇಂದಿನ ತಂತ್ರಜ್ಞಾನದ ಅದ್ಭುತ ವೈಶಿಷ್ಟ್ಯವೇ ಎನ್ನಬಹುದು.
ಬೆಂಗಳೂರಿನ ಹೊರವಲಯದಲ್ಲಿರುವ ಇಂಡಿಯನ್ ಡೀಪ್ ಸ್ಪೇಸ್ ನೆಟ್ವರ್ಕ್, ಹಾರಿಬಿಟ್ಟ ಉಪಗ್ರಹಗಳ ಮೇಲೆ ಸದಾಕಾಲ ಕಣ್ಣಿಟ್ಟು, ಅವುಗಳಿಗೆ ಸಂದೇಶ ಕಳುಹಿಸುವ ಹಾಗೂ ಸಂದೇಶ ಪಡೆಯುವ ಕಾರ್ಯವನ್ನು ನಿರ್ವಹಿಸುತ್ತಿದೆ.
ಮಂಗಳಯಾನ ನೌಕೆಯ ಯಶಸ್ವಿ ಉಡಾವಣೆಯಿಂದಾಗಿ ಹತ್ತಾರು ವಿಷಯಗಳಲ್ಲಿ ಭಾರತ ದಾಖಲೆಗಳನ್ನು ಹುಟ್ಟುಹಾಕಿದೆ. ಕೆಲವುಗಳ ಉಲ್ಲೇಖ ಹೀಗಿದೆ:
1. ಮೊದಲನೆ ಪ್ರಯತ್ನದಲ್ಲಿ ಮಂಗಳನ ಕಕ್ಷೆಗೆ ಉಪಗ್ರಹವನ್ನು ಯಶಸ್ವಿಯಾಗಿ ಸೇರಿಸಿರುವ ಮೊದಲ ದೇಶ ಭಾರತ.
2. ಮಂಗಳನಲ್ಲಿಗೆ ಉಪಗ್ರಹ ಕಳುಹಿಸುವಲ್ಲಿ ಸಾಫಲ್ಯ ಕಂಡ ರಷ್ಯಾ, ಅಮೆರಿಕಾ, ಐರೋಪ್ಯ ಸಂಘಟನೆಗಳ ಸಾಲಿಗೆ ಭಾರತ ನಾಲ್ಕನೆಯ ದೇಶವಾಗಿ ಸೇರ್ಪಡೆ.
3. ಮಂಗಳಯಾನಕ್ಕೆ ತಗುಲಿದ ವೆಚ್ಚ ಬರೀ 450 ಕೋಟಿ ರೂಪಾಯಿ. ಆದ್ದರಿಂದ ಇದುವರೆಗೆ ನಡೆದ ಅಂತರಗ್ರಹ ಹಾರಾಟಗಳಲ್ಲಿ ಅತಿ ಕಡಿಮೆ ವೆಚ್ಚದ ಬಾನನೌಕೆ ಎಂಬ ಹೆಗ್ಗಳಿಕೆಯನ್ನೂ ಮಂಗಳಯಾನ ಪಡೆದಿದೆ. ಇದು ಬಾಹ್ಯಾಕಾಶ ಕುರಿತಾದ ಇಂಗ್ಲಿಷ್ ಸಿನೆಮಾ ‘ಗ್ರಾವಿಟಿ’ಯ ನಿರ್ಮಾಣಕ್ಕೆ ಆದ ವೆಚ್ಚಕ್ಕಿಂತ ಕಡಿಮೆ, ನೂರಿಪ್ಪತ್ತು ಕೋಟಿ ಭಾರತೀಯರಲ್ಲಿ ಒಬ್ಬೊಬ್ಬರದ್ದೂ ಬರೀ ನಾಲ್ಕು ರೂಪಾಯಿ ಹಾಕಿದಷ್ಟು ಮಾತ್ರವೇ ವೆಚ್ಚ ಎಂಬಿತ್ಯಾದಿಯಾಗಿ ಇದನ್ನು ಬಣ್ಣಿಸಲಾಗುತ್ತಿದೆ.
ಮುಂದುವರೆಯುವುದು..
ಸರೋಜ ಪ್ರಕಾಶ್

ಹಾಲು ಉತ್ಪಾದಕರಿಗೆ ಚೆಕ್ ವಿತರಣೆ

0

ತೀವ್ರ ಮಳೆಯ ಅಭಾವ ಹಾಗೂ ಮೇವುಗಳ ಕೊರತೆಯಲ್ಲಿಯೂ ಕೂಡಾ ಉತ್ತಮ ಗುಣಮಟ್ಟದ ಹಾಲು ಪೂರೈಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಶೇ ೧೦೦ ರಷ್ಟು ಗುಣಮಟ್ಟವನ್ನು ಕಾಪಾಡಲು ಎಲ್ಲಾ ಹಾಲು ಉತ್ಪಾದಕರು ಸಹಕಾರ ನೀಡಬೇಕು ಎಂದು ಕೋಚಿಮುಲ್ ನಿರ್ದೇಶಕ ಬಂಕ್ಮುನಿಯಪ್ಪ ಹೇಳಿದರು.
ನಗರದ ಕೋಚಿಮುಲ್ ಶಿಬಿರ ಕಚೇರಿಯಲ್ಲಿ ಶನಿವಾರ ಆಯೋಜನೆ ಮಾಡಲಾಗಿದ್ದ ಹಾಲು ಉತ್ಪಾದಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕರಿಗೆ ವಿವಿಧ ಸವಲತ್ತುಗಳನ್ನು ವಿತರಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಉತ್ಪಾದನೆಯಾಗುತ್ತಿರುವ ಹಾಲಿನ ಗುಣಟಮಟ್ಟವನ್ನು ಜಿಲ್ಲೆಯಲ್ಲಿ ಪ್ರಥಮ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ, ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದರು.
ರೈತರ ಕಲ್ಯಾಣ ಟ್ರಸ್ಟ್ ವತಿಯಿಂದ ೨೨ ಫಲಾನುಭವಿಗಳಿಗೆ ರಾಸು ವಿಮಾ ಚೆಕ್ಗಳನ್ನು, ೧೮ ಸಂಘಗಳಿಗೆ ಕಟ್ಟಡ ಅನುದಾನದ ಚೆಕ್ಗಳನ್ನು ಹಾಗೂ ಎಸ್.ಜಿ.ಎಸ್.ವೈ ಯೋಜನೆಯಲ್ಲಿ ೨೮ ಸಂಘಗಳಿಗೆ ತಲಾ ಎರಡು ಸ್ಟೀಲ್ ಕ್ಯಾನುಗಳನ್ನು ವಿತರಿಸಲಾಗುತ್ತಿದ್ದು, ಟ್ರಸ್ಟ್ವತಿಯಿಂದ ನೀಡುವಂತಹ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಸಂಘಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದರು.
ತಾಲ್ಲೂಕಿನ ಒಟ್ಟು ೧೯೨ ಸಂಘಗಳ ಪೈಕಿ ೧,೧೫,೦೦೦ ಲೀಟರ್ ಹಾಲು ಶೇಖರಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ತಾಲ್ಲೂಕಿನ ಎಲ್ಲಾ ಸಂಘಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ನಿಯಮಿತವಾಗಿ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.
ಶಿಬಿರದ ಉಪವ್ಯವಸ್ಥಾಪಕ ಹನುಮಂತರಾವ್, ಬೈರರೆಡ್ಡಿ, ಶ್ರೀನಿವಾಸ್, ಉಮೇಶ್ರೆಡ್ಡಿ, ನಾರಾಯಣರೆಡ್ಡಿ, ಅಮರೇಶ್ ಮುಂತಾದವರು ಹಾಜರಿದ್ದರು.

ಇತಿಹಾಸದ ತುಣುಕು ಕೈಗೆ ತಗುಲಿದಾಗ

0

ಇತಿಹಾಸದ ಸಣ್ಣ ತುಣುಕು ಸಿಕ್ಕಾಗ ಹಿಂದಿನ ಕಾಲಕ್ಕೆ ಪಯಣ ಸಾಧ್ಯವಾಗುತ್ತದೆ. ಬದಲಾದ ಸಂಗತಿಗಳ ತುಲನೆ, ಮೌಲ್ಯಗಳ ಮರುಮಾಪನ, ರೀತಿ ರಿವಾಜುಗಳ ಬಗ್ಗೆ ತಿಳಿದು ಬೆರಗನ್ನು ಉಂಟುಮಾಡುತ್ತದೆ.
ತಾಲ್ಲೂಕಿನ ತಲದುಮ್ಮನಹಳ್ಳಿಯ ನಿವೃತ್ತ ಶಿಕ್ಷಣ ಸಂಯೋಜಕ ಆರ್.ಕೃಷ್ಣಪ್ಪ ಅವರು ತಮ್ಮ ತಂದೆಯ ಕಾಲದ ಪೀಠೋಪಕರಣಗಳನ್ನು ದುರಸ್ತಿಗೊಳಿಸುವಾಗ ಈ ರೀತಿಯ ಅಪರೂಪದ ಐತಿಹಾಸಿಕ ತುಣುಕೊಂದನ್ನು ಸ್ಪರ್ಶಿಸಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷವಾದ 1947 ರಲ್ಲಿ ಬ್ಯಾಂಕ್ ಆಫ್ ಮೈಸೂರ್ ಲಿಮಿಟೆಡ್ ನ ಜನರಲ್ ಮ್ಯಾನೇಜರ್ ಆಗಿದ್ದ ಬಿ.ವಿ.ನಾರಾಯಣರೆಡ್ಡಿ ಅವರು ಮೈಸೂರು ಮಹಾರಾಜರ ಸರ್ಕಾರ ಅಧಿಕೃತವಾಗಿ ಘೋಷಿಸಿದ್ದ ರಜಾ ದಿನಗಳ ಪಟ್ಟಿಯಿದು. ಸರ್ಕಾರದ 1917ರ ನೆಗೋಶಿಯಬಲ್ ಇನ್ಟ್ರುಮೆಂಟ್ ಆಕ್ಟ್ ನ ಅನ್ವಯ ಘೋಷಣೆಯಾದ ರಜಾ ದಿನಗಳವು. ಇವುಗಳಲ್ಲಿ ವಿಶೇಷವೆನಿಸುವಂಥಹವು ಎರಡು ರಜೆಗಳು. ಜೂನ್ 12 ರಂದು ಬ್ರಿಟಿಷ್ ದೊರೆಯ ಪ್ರೀತ್ಯರ್ಥಕ್ಕಾಗಿ ‘ಕಿಂಗ್ ಎಂಪರೆರ್ ಜನ್ಮದಿನ’ ಕ್ಕಾಗಿ ನೀಡಿರುವ ರಜೆ ಹಾಗೂ ಜುಲೈ 9 ರಂದು ಮೈಸೂರು ಮಹಾರಾಜರ ಜನ್ಮದಿನಕ್ಕಾಗಿ ನೀಡಿರುವ ರಜೆ.
ಮೈಸೂರು ಬ್ಯಾಂಕ್ ಎಂದೇ ಹೆಸರಾದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಇಂದು ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧವಾಗಿದೆ. ಸರ್.ಎಂ.ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯಿಂದ, ಸುಮಾರು 20 ಲಕ್ಷ ರೂಪಾಯಿಗಳ ಬಂಡವಾಳ ತೊಡಗಿಸಿ ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಈ ಬ್ಯಾಂಕ್ ಸ್ಥಾಪಿಸಿದ್ದ ಸಂಗತಿ ಬಹುಷಃ ಬಹಳಷ್ಟು ಜನರಿಗೆ ತಿಳಿದಿಲ್ಲ. ‘ಬ್ಯಾಂಕ್ ಆಫ್ ಮೈಸೂರ್ ಲಿಮಿಟೆಡ್’ ಎಂದು ಆಗ ಇದನ್ನು ಕರೆಯುತ್ತಿದ್ದರು.
ಸುಮಾರು 102 ವರ್ಷಗಳ ಹಿಂದೆ 1913ರ ಮೇ 19 ರಂದು ಸ್ಥಾಪನೆಯಾದ ಬ್ಯಾಂಕ್ ತನ್ನ ಕಾರ್ಯವನ್ನು ಪ್ರಾರಂಭಿಸಿದ್ದು ಅದೇ ವರ್ಷ ಗಾಂಧೀಜಿ ಜನ್ಮದಿನದಂದು(ಅಕ್ಟೋಬರ್ 2). 1959 ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಎಂದು ಹೆಸರಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಂಗಸಂಸ್ಥೆ ಬ್ಯಾಂಕ್ ಆಗಿ ನಂತರ 1969ರಲ್ಲಿ ರಾಷ್ಟ್ರೀಕರಣಗೊಂಡಿತು.
‘ನಮ್ಮ ಮನೆಯಲ್ಲಿದ್ದ ಹಳೆಯ ಪೀಠೋಪಕರಣಗಳನ್ನು ನವೀಕರಣಗೊಳಿಸುವ ಸಮಯದಲ್ಲಿ ಈ ಅಪರೂಪದ ಐತಿಹಾಸಿಕ ಪುಟವೊಂದು ಲಭಿಸಿತು. ದೇಶವೆಲ್ಲಾ ಸ್ವಾತಂತ್ರ್ಯದೆಡೆಗೆ ತುಡಿಯುತ್ತಿದ್ದ ಘಳಿಗೆಯದು. ಮೈಸೂರ್ ಬ್ಯಾಂಕಿನ ಇತಿಹಾಸ, ಮೈಸೂರು ರಾಜರ ಬ್ರಿಟಿಷ್ ನಿಷ್ಠೆ, ಆಗಿನವರ ಆದ್ಯತೆ, ರಜೆ ನೀಡುತ್ತಿದ್ದ ರೀತಿ ಎಲ್ಲವೂ ಕಣ್ಮುಂದೆ ಸುಳಿಯುತ್ತದೆ. ಆ ಕಾಲದಲ್ಲೊಂದು ಪಯಣ ಈ ಕಾಗದದಿಂದ ಸಾಧ್ಯವಾಗುತ್ತದೆ. ಎಲ್ಲಾ ಜಾತಿ ಧರ್ಮಗಳಿಗೂ ಆಗ ಅವರು ನೀಡಿರುವ ಮಾನ್ಯತೆ ಕೂಡ ಇದರಿಂದ ತಿಳಿಯುತ್ತದೆ’ ಎನ್ನುತ್ತಾರೆ ತಲದುಮ್ಮನಹಳ್ಳಿಯ ನಿವೃತ್ತ ಶಿಕ್ಷಣ ಸಂಯೋಜಕ ಆರ್.ಕೃಷ್ಣಪ್ಪ.
–ಡಿ.ಜಿ.ಮಲ್ಲಿಕಾರ್ಜುನ.

ರೈತರಿಂದ ಮಾಹಿತಿ ಪಡೆದ ನಬಾರ್ಡ್ ಹಾಗೂ ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳ ತಂಡ

0

ಮಾರುಕಟ್ಟೆಯಲ್ಲಿ ಕುರಿ ಮತ್ತು ಟಗರುಗಳ ವಾಸ್ತವ ಬೆಲೆ ಕುರಿತು ಮಾಹಿತಿ ಸಂಗ್ರಹಣೆಗಾಗಿ ನಬಾರ್ಡ್ ಬ್ಯಾಂಕ್ನ ಅಧಿಕಾರಿಗಳ ತಂಡ ಈಚೆಗೆ ತಾಲ್ಲೂಕಿನ ವಿವಿದೆಡೆ ಭೇಟಿ ನೀಡಿ ಕುರಿ ಸಾಕಾಣಿಕೆದಾರರಿಂದ ಬೆಲೆ ಕುರಿತು ಮಾಹಿತಿ ಪಡೆದು ತೆರಳಿದ್ದಾರೆ.
ನಬಾರ್ಡ್ ಬ್ಯಾಂಕ್ನ ಸಹಾಯಕ ಮಹಾ ಪ್ರಬಂಧಕರಾದ ಡಾ.ಅಪರ್ಣ ಕೋಲ್ತೆ, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಸುಧೀರ್, ತಾಲ್ಲೂಕಿನ ಪಶು ಇಲಾಖೆಯ ಸಹಾಯಕ ನಿರ್ದೆಶಕರಾದ ಡಾ.ಮುನಿನಾರಾಯಣರೆಡ್ಡಿ ಅವರ ತಂಡ ತಾಲ್ಲೂಕಿನ ಹಿತ್ತಲಹಳ್ಳಿ, ಆನೂರು, ಕೋಟಹಳ್ಳಿಯ ಕುರಿಗಳ ಫಾರಂಗಳಿಗೆ ಭೇಟಿ ನೀಡಿದ್ದರು. ಪ್ರಗತಿಪರ ಕುರಿ ಸಾಕಾಣಿಕೆದಾರರಾದ ಎಚ್.ಜಿ.ಗೋಪಾಲಗೌಡ, ವೀರಕೆಂಪಣ್ಣ, ಶ್ರೀನಿವಾಸ್ ಮತ್ತಿತರರನ್ನು ಭೇಟಿ ಮಾಡಿದ ಅಧಿಕಾರಿಗಳ ತಂಡ, ಈ ಭಾಗದಲ್ಲಿ ಹೆಚ್ಚು ಸಾಕಾಣಿಕೆ ಮಾಡುವ ನಾಟಿ, ಬನ್ನೂರು, ಚಳ್ಳಕೆರೆ ತಳಿಯ ಕುರಿಗಳ ನಿಖರ ಬೆಲೆ ಕುರಿತು ಮಾಹಿತಿ ಪಡೆದರು.
ನಬಾರ್ಡ್ನ ವಿವಿದ ಯೋಜನೆಯಡಿ ಬ್ಯಾಂಕುಗಳ ಮೂಲಕ ಕುರಿ ಮತ್ತು ಟಗರುಗಳ ಖರೀದಿಗಾಗಿ ಕೇವಲ ೨೫೦೦ ರೂ.(ಒಂದು ಯೂನಿಟ್ಗೆ) ನೀಡುತ್ತಿದ್ದು ಅಷ್ಟು ಕಡಿಮೆ ಹಣಕ್ಕೆ ಕುರಿ ಮತ್ತು ಟಗರುಗಳನ್ನು ಖರೀದಿಸಲು ಸಾಧ್ಯವಿಲ್ಲ. ವೈಜ್ಞಾನಿಕವಾಗಿ ಬೆಲೆ ನಿಗದಿಪಡಿಸಬೇಕೆಂದು ಬೋದಗೂರಿನ ಸಿರಿ ಸಮೃದ್ಧಿ ರೈತ ಕೂಟದವರು ನಬಾರ್ಡ್ ಬ್ಯಾಂಕಿನ ಅಧಿಕಾರಿಗಳಲ್ಲಿ ಈ ಸಂದರ್ಭದಲ್ಲಿ ಮನವಿ ಮಾಡಿದರು.
ಪ್ರತಿ ಹೆಣ್ಣು ಕುರಿಗೆ ಸಧ್ಯ ಮಾರುಕಟ್ಟೆಯಲ್ಲಿ ಸರಾಸರಿ ೫ ಸಾವಿರಕ್ಕಿಂತಲೂ ಹೆಚ್ಚು ಬೆಲೆ ಇದೆ. ಹಾಗೂ ಟಗರು ಒಂದಕ್ಕೆ ೮-–೧೨ ಸಾವಿರ ರೂಗಳಾದರೂ ಬೆಲೆ ಇದೆ. ಹಾಗಾಗಿ ಮಾರುಕಟ್ಟೆಯಲ್ಲಿನ ವೈಜ್ಞಾನಿಕವಾದ ಬೆಲೆಗೆ ಅನುಗುಣವಾಗಿ ಕುರಿ, ಟಗರುಗಳ ಖರೀಗೆ ಬ್ಯಾಂಕ್ ಸಾಲ ನೀಡುವಂತೆ ರೈತರು ಅಧಿಕಾರಿಗಳಲ್ಲಿ ಮನವಿ ಮಾಡಿದರು.
೩-–೬ ತಿಂಗಳ ಹೆಣ್ಣು ಕುರಿಗೆ ೬-–೭ ಸಾವಿರ ಹಾಗೂ ಗಂಡು(ಟಗರಿಗೆ) ಕುರಿಗೆ ೧೦ ಸಾವಿರ ರೂಪಾಯಿಗಳನ್ನು ನಿಗದಿಪಡಿಸಿ ಕಾನೂನಿನ ತಿದ್ದುಪಡಿ ಮಾಡಿ ನಬಾರ್ಡ್ ಮೂಲಕ ಬ್ಯಾಂಕ್ ಸಾಲ ನೀಡಬೇಕಾಗಿದೆ ಎಂದು ವಿವರಿಸಿದರು.
ಇದೀಗ ರೇಷ್ಮೆಗೂಡಿನ ಬೆಲೆ ಕುಸಿದಿದ್ದು ಬಹುತೇಕ ರೈತರು ರೇಷ್ಮೆ ಬೆಳೆಯನ್ನು ಬೆಳೆಯುವುದನ್ನು ಬಿಟ್ಟು ಬಿಡುವ ಹಂತಕ್ಕೆ ಬಂದಿದ್ದು, ಕುರಿ ಸಾಕಾಣಿಕೆಯಿಂದ ಮಾತ್ರವೇ ರೈತರು ಒಂದಷ್ಟು ಹಣವನ್ನು ಕಾಲ ಕಾಲಕ್ಕೆ ಗಳಿಸುವಂತಾಗಿದೆ. ಹಾಗಾಗಿ ಕುರಿ ಸಾಕಾಣಿಕೆಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುವ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಸರ್ಕಾರಕ್ಕೆ ವರದಿ ನೀಡಿ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿ ಕ್ರಮ ತೆಗೆದುಕೊಳ್ಳಬೇಕೆಂದು ನಬಾರ್ಡ್ ಅಧಿಕಾರಿಳಿಗೆ ಸಧ್ಯದ ರೈತರ ಪರಿಸ್ಥಿತಿಯನ್ನು ವಿವರಿಸಿದರು.
ಕೃಷಿ ಪಂಡಿತ ಪ್ರಶಸ್ತಿ ವಿಜೇತ ರೈತ ಹಿತ್ತಲಹಳ್ಳಿ ಗೋಪಾಲಗೌಡ, ಸಿರಿ ಸಮೃದ್ಧಿ ರೈತ ಕೂಟದ ಅಧ್ಯಕ್ಷ ವೆಂಕಟಸ್ವಾಮಿರೆಡ್ಡಿ, ಸ್ವಾಮಿ ವಿವೇಕಾನಂದ ರೈತ ಕೂಟದ ಅಧ್ಯಕ್ಷ ರಾಮಾಂಜಿನಪ್ಪ ಮತ್ತಿತರರು ಹಾಜರಿದ್ದರು.

ಡಾ.ಅಬ್ದುಲ್ ಕಲಾಂ ಅವರಿಗೆ ಶ್ರದ್ಧಾಂಜಲಿ

0

ತಾಲ್ಲೂಕು ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ವತಿಯಿಂದ ಗುರುವಾರ ಸಂಜೆ ನಗರದ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಮಾಜಿ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಅವರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಿ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.
ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಅವರ ಜೀವನ, ವಿದ್ಯಾಭ್ಯಾಸ, ಸಾಧನೆ, ವಿದ್ಯಾರ್ಥಿಗಳು ಮತ್ತು ಯುವಜನತೆಗೆ ನೀಡಿದ ಪ್ರೇರಣೆ, ಸರಳ ಜೀವನ, ಅವರ ಕನಸುಗಳ ಕುರಿತಂತೆ ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ನ ಗೌರವಾಧ್ಯಕ್ಷ ಡಾ.ಡಿ.ಟಿ.ಸತ್ಯನಾರಾಯಣರಾವ್, ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಕಾರ್ಯದರ್ಶಿ ವಿ.ಕೃಷ್ಣ, ಖಜಾಂಚಿ ಶ್ರೀಕಾಂತ್ ಮಾತನಾಡಿದರು.
ಡಿ.ವಿ.ಭಾಸ್ಕರ್, ವಿ.ಮಂದುಸೂದನ್, ಗೋಪಾಲಕೃಷ್ಣ, ಎಸ್.ಡಿ.ಮಂಜುನಾಥ್, ಮಂಜುನಾಥ್, ಹರೀಶ, ಕೆ.ಮಂಜುನಾಥ, ಎಚ್.ವಿ.ನಾಗೇಂದ್ರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಅದ್ದೂರಿಯಾಗಿ ಸ್ವಾತಂತ್ರ್ಯ ದಿನಾಚರಣೆ

0

ತಾಲ್ಲೂಕು ಆಡಳಿತದಿಂದ ಈ ಭಾರಿಯೂ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲು ಉದ್ದೇಶಿಸಲಾಗಿದ್ದು ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ತಹಸೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲ್ಲೂಕಿನ ವಿವಿಧ ಇಲಾಖೆಗಳಿಗೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹಲವು ಜವಾಬ್ದಾರಿಗಳನ್ನು ವಹಿಸಿದ ಅವರು ಆಗಸ್ಟ್ ೧೪ ರ ರಾತ್ರಿ ಎಲ್ಲಾ ಸರ್ಕಾರಿ ಕಚೇರಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸುವುದರೊಂದಿಗೆ ಬೆಳಗ್ಗೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿಯೂ ಧ್ವಜಾರೋಹಣ ನೆರವೇರಿಸಿ ನಂತರ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯುವ ನಗರದ ನೆಹರೂ ಕ್ರೀಡಾಂಗಣಕ್ಕೆ ಎಲ್ಲರೂ ಹಾಜರಾಗುವಂತೆ ಮನವಿ ಮಾಡಿದರು.
ಆಗಸ್ಟ್ ೧೫ ರಂದು ಬೆಳಗ್ಗೆ ೯ ಗಂಟೆಗೆ ಪಟ್ಟಣದ ನೆಹರೂ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನಡೆಸುವುದರೊಂದಿಗೆ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಲು ನಿರ್ಧರಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ ನೆರವೇರಿಸಲಿದ್ದು ಈ ಬಾರಿ ತಾಲ್ಲೂಕಿನ ಮಾಜಿ ಯೋಧರೊಬ್ಬರನ್ನು ಗುರುತಿಸಿ ಸನ್ಮಾನಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ತಾಲ್ಲೂಕು ಪಂಚಾಯಿತಿ ಇಓ ಗಣಪತಿ ಸಾಕರೆ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ, ಸಮಾಜ ಕಲ್ಯಾಣ ಇಲಾಖಾಧಿಖಾರಿ ಪುರುಷೋತ್ತಮ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಕೆ.ಗುರುರಾಜರಾವ್ ಮತ್ತಿತರರು ಹಾಜರಿದ್ದರು.

ರೇಷ್ಮೆಗೆ ಬೆಲೆ ಬರದೆ ಹಿಪ್ಪುನೇರಳೆ ಸೊಪ್ಪನ್ನು ಉಳುಮೆ ಮಾಡಿ ತೆಗೆದುಹಾಕುತ್ತಿದ್ದ ರೈತರು

0

ತಾಲ್ಲೂಕಿನ ಕುಂದಲಗುರ್ಕಿ ಗ್ರಾಮ ಪಂಚಾಯತಿಯ ದೊಣ್ಣಹಳ್ಳಿಯಲ್ಲಿ ರೇಷ್ಮೆಗೆ ಬೆಲೆ ಬರದೆ ಬೇಸತ್ತು ತಮ್ಮ ಜಮೀನಿನಲ್ಲಿದ್ದ ಹಿಪ್ಪುನೇರಳೆ ಸೊಪ್ಪನ್ನು ಉಳುಮೆ ಮಾಡಿ ತೆಗೆದುಹಾಕುತ್ತಿದ್ದ ರೈತರನ್ನು ರೈತಮುಖಂಡರು ಹಾಗೂ ಅಧಿಕಾರಿಗಳು ತಡೆದ ಘಟನೆ ಶುಕ್ರವಾರ ನಡೆದಿದೆ.
ತಾಲ್ಲೂಕಿನ ದೊಣ್ಣಹಳ್ಳಿಯಲ್ಲಿ ಶೇಕಡಾ 90 ರಷ್ಟು ರೈತರು ರೇಷ್ಮೆ ಬೇಸಾಯವನ್ನೇ ಅವಲಂಭಿಸಿದ್ದಾರೆ. ಗ್ರಾಮದ ರೈತರಾದ ರಾಮಣ್ಣ, ಬೈರೇಗೌಡ, ಸೊಣ್ಣಪ್ಪ, ವೆಂಕಟರೆಡ್ಡಿ ಮತ್ತು ಚೊಕ್ಕರೆಡ್ಡಿ ತಮ್ಮ ಹಿಪ್ಪುನೇರಳೆ ಸೊಪ್ಪಿನ ತೋಟದಲ್ಲಿ ಟ್ರಾಕ್ಟರ್ ನಿಂದ ಉಳುಮೆ ಮಾಡಿ ನಾಶಪಡಿಸಲು ಪ್ರಾರಂಭಿಸಿದ್ದರು. ಐವರು ರೈತರು ತಮ್ಮ ಹಿಪ್ಪುನೇರಳೆ ಜಮೀನಿನ ತಲಾ ಒಂದು ಎಕರೆ ಉತ್ತಿದ್ದಾಗ ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ರೈತ ಸಂಘ ಹಾಗೂ ಹಸಿರುಸೇನೆ ಸದಸ್ಯರು ಹಾಗೂ ರೇಷ್ಮೆ ಇಲಾಖೆಯ ಅಧಿಕಾರಿಗಳು ಸರ್ಕಾರದಿಂದ ತಾಂತ್ರಿಕ ಸಮಿತಿಯು ಸಧ್ಯದಲ್ಲೇ ನೀಡುವ ವರದಿ ಆಧರಿಸಿ ದರ ನಿಗದಿ ಮಾಡಲಾಗುತ್ತದೆ. ಇದರಿಂದ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುತ್ತದೆ ಎಂದು ಮನವೊಲಿಸಿದರು.
‘ರೇಷ್ಮೆ ಬೆಳೆಯನ್ನು ನಂಬಿ ಕೊಳವೆ ಬಾವಿ ಕೊರೆಸಲು ಮಾಡಿರುವ ಸಾಲ ತೀರಿಸಲಾಗುತ್ತಿಲ್ಲ. ರೇಷ್ಮೆ ಗೂಡಿನ ಬೆಲೆ ಕುಸಿದಿದ್ದು, ಮಾರುಕಟ್ಟೆಗೆ ರೇಷ್ಮೆ ಗೂಡನ್ನು ತೆಗೆದುಕೊಂಡು ಹೋಗಿ ತರುವ ಹಣ ಬಡ್ಡಿಗೆ ಸರಿಹೋಗದಂತಾಗಿದೆ. ಕೊಳವೆ ಬಾವಿ ಕೊರೆಸಿ ನೀರು ಹೊರತೆಗೆಯುವಷ್ಟರಲ್ಲಿ ಲಕ್ಷಾಂತರ ರೂಗಳನ್ನು ವ್ಯಯಿಸಬೇಕಾಗುತ್ತದೆ. ಅದನ್ನು ಸಾಲ ಮಾಡಿರುತ್ತೇವೆ. ಎರಡು ಮೂರು ತಿಂಗಳುಗಳಲ್ಲಿ ಕೊಳವೆ ಬಾವಿಯು ಬತ್ತಿದ್ದು, ಟ್ಯಾಂಕರುಗಳಿಂದ ನೀರು ತರಬೇಕಾಗುತ್ತದೆ. ಇಷ್ಟು ಹಣ ವ್ಯಯಿಸಿ ಮನೆ ಮಂದಿಯೆಲ್ಲಾ ಕಷ್ಟಪಟ್ಟು ದುಡಿದು ಗೂಡನ್ನು ಬೆಳೆದು ಮಾರುಕಟ್ಟೆಯಲ್ಲಿ ತಂದಾಗ ಒಂದು ಕೆಜಿ ಗೆ 150 ರೂ ಬಂದರೆ ರೈತನು ಬದುಕುವುದು ಹೇಗೆ. ಹಿಪ್ಪುನೇರಳೆ ತೆಗೆದು ಚಿಲ್ಲರೆ ಬೆಳೆ ಬೆಳೆಯಲು ಪ್ರಯತ್ನಿಸುತ್ತೇವೆ’ ಎಂದು ರೈತ ರಾಮಣ್ಣ ತಮ್ಮ ಕಷ್ಟವನ್ನು ವಿವರಿಸಿದರು.
‘ರೈತ ವಿರೋಧಿ ನೀತಿಯನ್ನು ಸರ್ಕಾರ ಅನುಸರಿಸುತ್ತಿದೆ. ರೇಷ್ಮೆ ಉದ್ದಿಮೆಯನ್ನು ಉಳಿಸಲು ಸರ್ಕಾರ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ರೇಷ್ಮೆ ನಾಡೆಂದು ಪ್ರಸಿದ್ಧಿ ಪಡೆದಿದ್ದ ತಾಲ್ಲೂಕಿನಲ್ಲಿ ರೇಷ್ಮೆ ಬೆಳೆಯನ್ನು ಕಿತ್ತು ತೆಗೆಯುವ ಪರಿಸ್ಥಿತಿ ರೈತರಿಗೆ ನಿರ್ಮಾಣವಾಗಿದೆ. ಒಂದು ಕಡೆ ಅಂತರ್ಜಲ ಕುಸಿತ, ಮತ್ತೊಂದೆಡೆ ಬೆಲೆ ಕುಸಿತದಿಂದಾಗಿ ರೈತರು ಹೈರಾಣಾಗಿದ್ದಾರೆ. ಸರ್ಕಾರ ಮೀಟರ್ ಬಡ್ಡಿ ತಡೆಯಲು ಕಾನೂನನ್ನು ರೂಪಿಸಿದ್ದು, ಇದರಿಂದ ರೈತರಿಗೆ ಎಲ್ಲೂ ಹಣ ಸಿಗದಂತಾಗಿದೆ. ಪರ್ಯಾಯವಾಗಿ ಸರ್ಕಾರ ಬ್ಯಾಂಕುಗಳ ಮೂಲಕ ಸುಲಭ ಬಡ್ಡಿ ದರದಲ್ಲಿ ಹಣ ಸಿಗುವಂತಹ ವ್ಯವಸ್ಥೆಯನ್ನಾದರೂ ಕಲ್ಪಿಸಬೇಕು. ರೈತರನ್ನು ನಾವು ತಾಲ್ಲೂಕು ರೈತ ಸಂಘದ ಸದಸ್ಯರು ಹಾಗೂ ಅಧಿಕಾರಿಗಳು ಮನವೊಲಿಸಲು ಪ್ರಯತ್ನಿಸಿದ್ದೇವೆ. ಇದು ತಾತ್ಕಾಲಿಕವಷ್ಟೆ. ಸರ್ಕಾರ ಸೂಕ್ತ ಕ್ರಮ ಜರುಗಿಸದಿದ್ದಲ್ಲಿ ರೇಷ್ಮೆ ಉದ್ದಿಮೆ ನಶಿಸುತ್ತದೆ. ರೈತ ಬೀದಿಪಾಲಾಗುತ್ತಾನೆ’ ಎಂದು ತಾಲ್ಲೂಕು ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ರವಿಪ್ರಕಾಶ್ ತಿಳಿಸಿದರು.
ರೇಷ್ಮೆ ವಿಸ್ತರಣಾಧಿಕಾರಿ ನಾರಾಯಣಸ್ವಾಮಿ, ವಲಯಾಧಿಕಾರಿ ತಿಮ್ಮಪ್ಪ, ತಾಲ್ಲೂಕು ರೈತ ಸಂಘ ಹಾಗೂ ಹಸಿರುಸೇನೆಯ ಭಕ್ತರಹಳ್ಳಿ ಪ್ರತೀಶ್, ಮಾರಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಮಳ್ಳೂರು ಸಮೀಪದ ಸಾಯಿನಾಥ ಜ್ಞಾನ ಮಂದಿರದಲ್ಲಿ ಗುರುಪೌರ್ಣಿಮೆ

0

ತಾಲ್ಲೂಕಿನ ಮಳ್ಳೂರು ಸಮೀಪದ ಸಾಯಿನಾಥ ಜ್ಞಾನಮಂದಿರದಲ್ಲಿ ಶುಕ್ರವಾರ ಗುರುಪೂರ್ಣಿಮಾ ಪೂಜಾ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾದ ಪೂಜಾ ಕಾರ್ಯಕ್ರಮ ಕಾಕಡ ಆರತಿ, ಸಾಯಿ ಹೋಮ, ಸತ್ಯನಾರಾಯಣಸ್ವಾಮಿ ಪೂಜೆ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ದೇವಾಲಯ ಸಮಿತಿ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ದೇವಾಲಯಕ್ಕೆ ಆಗಮಿಸಿದ್ದ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.
ತಾಲ್ಲೂಕು ಹಾಗೂ ಜಿಲ್ಲೆಯ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು. ಭಕ್ತರಿಗಾಗಿ ತೀರ್ಥ ಪ್ರಸಾದ ಹಾಗೂ ಪಾನಕ ಸೇವೆಯನ್ನು ಆಯೋಜಿಸಲಾಗಿತ್ತು. ದೇವಾಲಯವನ್ನು ಹಾಗೂ ದೇವರನ್ನು ವಿಶೇಷವಾಗಿ ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು.
‘ಗುರುಪೌರ್ಣಿಮೆಯ ಕಾರ್ಯಕ್ರಮದ ಸಂದರ್ಭದಲ್ಲಿ ಶಿರಡಿಯಿಂದ ಸುಮಾರು ೧೦ ಅಡಿ ಎತ್ತರದ ಸುಂದರವಾದ ಬಾಬಾ ಪ್ರಸಾದ ಸಿದ್ದಪಡಿಸುತ್ತಿರುವ ಬೃಹತ್ ವಿಗ್ರಹವನ್ನು ತರಿಸಲಾಗಿದೆ. ಇದು ಶಿರಡಿಯಲ್ಲಿ ಪ್ರಸಾದಾಲಾಯ ಮುಂಭಾಗದಲ್ಲಿರುವ ವಿಗ್ರಹದ ಯಥಾವತ್ ಪ್ರತಿರೂಪವಾಗಿದೆ. ಸುಮಾರು ೧೦ ಲಕ್ಷ ರೂಗಳ ವೆಚ್ಚದಲ್ಲಿ ಶುಕ್ರವಾರ ಗುರುಪೌರ್ಣಿಮೆಯ ದಿನದಿಂದ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದೆ. ನಮ್ಮ ರೈತರ ಕಷ್ಟವನ್ನು ದೂರ ಮಾಡಿ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ನೀಡುವಂತೆ ಹಾಗೂ ಲೋಕಕಲ್ಯಾಣಾರ್ಥವಾಗಿ ವಿಶೇಷ ಪೂಜೆ ಆಯೋಜಿಸಲಾಗಿದೆ’ ಎಂದು ದೇವಾಲಯದ ಸಂಚಾಲಕ ಎಂ ನಾರಾಯಣಸ್ವಾಮಿ ತಿಳಿಸಿದರು.

ಮಳ್ಳೂರು ಸಮೀಪದ ಸಾಯಿನಾಥ ಜ್ಞಾನ ಮಂದಿರದಲ್ಲಿ ಗುರುಪೌರ್ಣಿಮೆ

0

ತಾಲ್ಲೂಕಿನ ಮಳ್ಳೂರು ಸಮೀಪದ ಸಾಯಿನಾಥ ಜ್ಞಾನ ಮಂದಿರದಲ್ಲಿ ಶುಕ್ರವಾರ ಗುರುಪೌರ್ಣಿಮೆಯ ಕಾರ್ಯಕ್ರಮಕ್ಕೆ ಸಾಯಿಬಾಬಾ ಪ್ರಸಾದ ಸಿದ್ದಪಡಿಸುತ್ತಿರುವ ಬೃಹತ್ ವಿಗ್ರಹವನ್ನು ತರಿಸಲಾಗಿದೆ.
ರಾಜ್ಯದಲ್ಲಿ ಪ್ರಥಮ ಬಾರಿಗೆ ಶಿರಡಿಯಿಂದ ಸುಮಾರು ೧೦ ಅಡಿ ಎತ್ತರದ ಸುಂದರವಾದ ಬಾಬಾ ಪ್ರಸಾದ ಸಿದ್ದಪಡಿಸುತ್ತಿರುವ ಬೃಹತ್ ವಿಗ್ರಹವನ್ನು ತರಿಸಲಾಗಿದ್ದು, ಶಿರಡಿಯಲ್ಲಿ ಪ್ರಸಾದಾಲಾಯ ಮುಂಬಾಗದಲ್ಲಿರುವ ವಿಗ್ರಹದ ಯಥಾವತ್ ಪ್ರತಿರೂಪವಾಗಿದೆ. ಸುಮಾರು ೧೦ ಲಕ್ಷ ರೂಗಳ ವೆಚ್ಚದಲ್ಲಿ ಶುಕ್ರವಾರ ಗುರುಪೌರ್ಣಿಮೆಯ ದಿನದಿಂದ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ ಎಂದು ದೇವಾಲಯದ ಸಂಚಾಲಕ ಎಂ ನಾರಾಯಣಸ್ವಾಮಿ ತಿಳಿಸಿದ್ದಾರೆ.

ಮಾಜಿ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಅವರಿಗೆ ಶ್ರದ್ಧಾಂಜಲಿ

0

ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ಅಮೀರ್ಬಾಬಾ ದರ್ಗಾ ಬಳಿ ಗುರುವಾರ ಟಿಪ್ಪೂಸುಲ್ತಾನ್ ಸೆಕ್ಯೂಲರ್ಸೇನೆ ಹಾಗೂ ಯೂನಿಟಿ ಆಫ್ ಸಿಲ್ಸಿಲಾ ಸಂಘಟನೆಗಳು ಮಾಜಿ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದರು.
‘ಜಾತಿಯನ್ನು ಮೀರಿದ ದೇಶದ ಪ್ರಗತಿಯೆಡೆಗೆ ಸದಾ ತುಡಿಯುತ್ತಿದ್ದ ಮಹಾನ್ ವ್ಯಕ್ತಿ ಮಾಜಿ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಅವರು. ಯುವಕರು ಮತ್ತು ಮಕ್ಕಳಿಗೆ ಸದಾ ಮಾರ್ಗದರ್ಶನ ಮಾಡುತ್ತಾ ಕನಸನ್ನು ಬಿತ್ತುತ್ತಿದ್ದರು. ಅವರ ಉದ್ದೇಶಗಳನ್ನು ಕನಸುಗಳನ್ನು ಸಾಕಾರಗೊಳಿಸುವುದು ನಾವು ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ’ ಎಂದು ಈ ಸಂದರ್ಭದಲ್ಲಿ ಯೂನಿಟಿ ಆಫ್ ಸಿಲ್ಸಿಲಾ ಸಂಘಟನೆಯ ಅಧ್ಯಕ್ಷ ಮಹಮ್ಮದ್ ಅಸದ್ ತಿಳಿಸಿದರು.
ಜಿಯಾವುಲ್ಲಾ, ಎಕ್ಬಾಲ್, ಇಮ್ತಿಯಾಜ್ ಪಾಷ, ನಿಜಾಮ್ ಪಾಷ, ರಹಮತ್, ಮಹಮ್ಮದ್ ಅಸದ್, ಅಕ್ರಮ್ ಪಾಷ, ಆರುನ್, ಉಮರ್, ಮುದಾಸಿರ್, ರಹಮತ್, ಮೌಲ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಶಿವಮೊಗ್ಗದಲ್ಲಿ ತಾಲ್ಲೂಕಿನ ಮಕ್ಕಳ ಬರಹಗಳಿಗೆ ಸಿಕ್ಕ ಗೌರವ

0

ತಾಲ್ಲೂಕಿನ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಬರಹಗಳ ಪುಸ್ತಕ ‘ಶಾಮಂತಿ’ಗೆ ಶಿವಮೊಗ್ಗದ ಕರ್ನಾಟಕ ಸಂಘದ 2014 ನೇ ಸಾಲಿನ ಮಕ್ಕಳ ಸಾಹಿತ್ಯ ಪ್ರಕಾರಕ್ಕೆ ನಾ.ಡಿಸೋಜ ಪ್ರಶಸ್ತಿಯನ್ನು ಈಚೆಗೆ ಶಿವಮೊಗ್ಗದಲ್ಲಿ ಪ್ರಧಾನ ಮಾಡಲಾಯಿತು. ಪುಸ್ತಕವನ್ನು ಸಂಪಾದಿಸಿದ ಶಿಕ್ಷಕ ಎಸ್. ಕಲಾಧರ ಪ್ರಶಸ್ತಿಯನ್ನು ಸಾಹಿತಿ ಜಯಂತ್ ಕಾಯ್ಕಿಣಿ ಅವರಿಂದ ಸ್ವೀಕರಿಸಿದ್ದಾರೆ. ಕರ್ನಾಟಕ ಸಂಘದ ಅಧ್ಯಕ್ಷೆ ವಿಜಯಾ ಶ್ರೀಧರ್ ಹಾಜರಿದ್ದರು.
‘ಶಾಮಂತಿ’ಯು ಕನ್ನಮಂಗಲದ ಸರ್ಕಾರಿ ಶಾಲೆಯಿಂದ ಹೊರಬರುತ್ತಿರುವ ನಾಲ್ಕನೇ ಪುಸ್ತಕ. ಇದರಲ್ಲಿ ಆ ಮಕ್ಕಳು ಬರೆದಿರುವ 52 ಬರಹಗಳಿವೆ. ಪುಸ್ತಕದ ಕುರಿತು ದೊಡ್ಡವರು ಬರೆದಿರುವ ಅಭಿಪ್ರಾಯಗಳನ್ನೂ ಇದರಲ್ಲಿ ಸಂಗ್ರಹಿಸಲಾಗಿದೆ. ಮಕ್ಕಳಿಂದ ಬರೆಸಿ ಅದನ್ನು ಚಿಣ್ಣರಿಗೆ ಇಷ್ಟವಾಗುವಂತೆ ಹೊರ ತಂದಿರುವುದು ಸಂಪಾದಕ ಎಸ್. ಕಲಾಧರ. ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಅವರು ಪುಸ್ತಕದ ಮುಖಪುಟ, ಒಳಪುಟಗಳ ವಿನ್ಯಾಸವನ್ನು ಮಾಡಿದ್ದಾರೆ. ಇವರ ಕೆಲಸಕ್ಕೆ ಸಹಶಿಕ್ಷಕರು ಮತ್ತು ಕನ್ನಮಂಗಲದ ಸ್ನೇಹ ಕಲಾಸಂಘ ಸಹಕರಿಸಿದ್ದಾರೆ.
ಶಾಮಂತಿಯಲ್ಲಿ ಮಕ್ಕಳು ಪ್ರಾಣಿ, ಪಕ್ಷಿ, ಗಿಡ, ಮರ, ಕೀಟಗಳ ಬಗ್ಗೆ ಬರೆದಿದ್ದಾರೆ. ಅಡುಗೆ, ಕೃಷಿ, ಕಣ, ದೇವಸ್ಥಾನ, ಹಬ್ಬ, ನಂಬಿಕೆಗಳು, ಪೂಜೆ, ನೋಡಿದ ಸಿನೆಮಾ, ಓದಿದ ಪುಸ್ತಕ, ಸರ್ಕಸ್ಸು, ನೋವು ನಲಿವು ದುಗುಡ ತಲ್ಲಣಗಳ ಬಗ್ಗೆಯೂ ಬರೆದಿದ್ದಾರೆ. ತಮ್ಮ ಶಾಲೆಯ ಅಂಗನವಾಡಿ ಸಹಾಯಕಿಯೊಳಗೆ ಪರಕಾಯ ಪ್ರವೇಶ ಮಾಡಿ ಆಕೆಯ ಮನಸ್ಸನ್ನು ಚಿತ್ರಿಸಿದ್ದಾರೆ. ಓದುಗರ ಮನಸ್ಸನ್ನು ಆವರಿಸಿಕೊಳ್ಳುವ ಆಟದ ಅಂಗಳವನ್ನಾಗಿಸಿದ್ದಾರೆ.
‘ಈ ಪ್ರಶಸ್ತಿಯು ಮಕ್ಕಳ ಕ್ರಿಯಾಶೀಲತೆಗೆ ಲಭಿಸಿರುವ ಪ್ರೋತ್ಸಾಹ. ನಮ್ಮ ಶಾಲೆಯ ಮಕ್ಕಳ ಬರಹ, ಚಟುವಟಿಕೆಗೆ ಕಾರಣವಾದ ಗ್ರಾಮಸ್ಥರ ಬೆಂಬಲಕ್ಕೆ ಲಭಿಸಿರುವ ಮೆಚ್ಚುಗೆ. ಇದರಿಂದ ನಮ್ಮ ಶಾಲೆ ಹಾಗೂ ವಿದ್ಯಾರ್ಥಿಗಳಿಗೆ ಮತ್ತಷ್ಟು ಉತ್ಸಾಹ, ಹುಮ್ಮಸ್ಸು ಮೂಡಿದೆ. ಈ ಪ್ರಶಸ್ತಿಯೊಂದಿಗೆ ಅವರು ನೀಡಿರುವ ಐದು ಸಾವಿರ ರೂಗಳಿಂದ ಶಾಮಂತಿಯ ನೆನಪಿನಲ್ಲಿ ಶಾಲೆಯಲ್ಲಿ ನೋಟಿಸ್ ಬೋರ್ಡ್ ಮಾಡಿಸುತ್ತಿದ್ದೇವೆ’ ಎನ್ನುತ್ತಾರೆ ಶಿಕ್ಷಕ ಎಸ್. ಕಲಾಧರ.

ಮರಳು ಸಾಗಾಣಿಕೆ ವಾಹನಗಳ ವಶ

0

ಖಚಿತ ಮಾಹಿತಿಯನ್ನಾದರಿಸಿ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಹಾಗೂ ತಂಡ ಮಂಗಳವಾರ ರಾತ್ರಿ ಧಾಳಿ ನಡೆಸಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ೨ ಲಾರಿ ಸೇರಿದಂತೆ ೪ ಟ್ರಾಕ್ಟರ್ಗಳನ್ನು ವಶಪಡಿಸಿಕೊಂಡಿದ್ದಾರೆ.
ತಾಲ್ಲೂಕಿನ ಸಾದಲಿ ಹೋಬಳಿ ಹಾಗೂ ಗಂಜಿಗುಂಟೆ ಸೇರಿದಂತೆ ತಾಲ್ಲೂಕಿನ ವಿವಿದೆಡೆ ರಾತ್ರಿ ಗಸ್ತು ನಡೆಸಿ ಮರಳು ಸಾಗಿಸುತ್ತಿದ್ದ ೨ ಲಾರಿ ಹಾಗು ೪ ಟ್ರಾಕ್ಟರ್ಗಳನ್ನು ವಶಪಡಿಸಿಕೊಳ್ಳುವುದರೊಂದಿಗೆ ತಹಶೀಲ್ದಾರ್ ಹಾಗೂ ತಂಡ ತಾಲೂಕಿನಲ್ಲಿ ಮರಳು ಅಕ್ರಮ ಸಾಗಾಣಿಕೆ ಕಡಿವಾಣ ಹಾಕಲು ಮುಂದಾಗಿದ್ದಾರೆ.
ಕಳೆದ ೪ ದಿನಗಳ ಹಿಂದಷ್ಟೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ತ್ರೈಮಾಸಿಕ ಸಭೆಯಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಮಾಫಿಯಾ ವಿರುದ್ಧ ಜಿಲ್ಲಾ ಮಟ್ಟದ ಅಧಿಕಾರಿಗಳ ವಿರುದ್ಧ ಜನಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು.
ಅಕ್ರಮ ಮರಳು ಸಾಗಾಣಿಕೆ ಮಾಡುವವರ ವಿರುದ್ದ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿರುವ ಹಿನ್ನಲೆಯಲ್ಲಿ ಶಿಡ್ಲಘಟ್ಟ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಕಸಬಾ ರಜಸ್ವ ನಿರೀಕ್ಷಕ ಸುಬ್ರಮಣಿ, ಗ್ರಾಮ ಲೆಕ್ಕಾಧಿಕಾರಿಗಳಾದ ಲಾರೆನ್ಸ್, ಆನಂದ್ ಮತ್ತಿತರರ ತಂಡ ಮಂಗಳವಾರ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಮರಳು ಸಾಗಾಣಿಕೆ ಮಾಡುತ್ತಿದ್ದ ವಾಹನಗಳನ್ನು ವಶಪಡಿಸಿಕೊಂಡು ಅಕ್ರಮ ಮರಳು ದಂಧೆಯನ್ನು ಮಟ್ಟ ಹಾಕಲು ಮುಂದಾಗಿದ್ದಾರೆ.

ಮುತ್ತೂರು ಶಾಲೆಯಲ್ಲಿ ಸೋಲಾರ್ ಸ್ಮಾರ್ಟ್ ಕ್ಲಾಸ್

0

ಖಾಸಗಿ ಶಾಲೆಗಳಲ್ಲಿ ಸ್ಮಾರ್ಟ್ ಬೋರ್ಡ್ ಬಳಸುತ್ತಾರೆ. ವಿದ್ಯಾರ್ಥಿಗಳ ಕಲಿಕೆಗೆ ಇದು ಸಹಕಾರಿ. ಆದರೆ ಸರ್ಕಾರಿ ಶಾಲೆಗಳಲ್ಲಿ ಅದರಲ್ಲೂ ಗ್ರಾಮೀಣ ಭಾಗಗಳಲ್ಲಿ ಇದು ಅಪರೂಪ.
ಇದಕ್ಕೆ ಅಪವಾದವೆಂಬಂತೆ ತಾಲ್ಲೂಕಿನ ಮುತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್ ಬೋರ್ಡ್ ಅಳವಡಿಸಲಾಗಿದೆ. ವಿಶೇಷವೆಂದರೆ ಗ್ರಾಮೀಣ ಭಾಗದಲ್ಲಿ ಸದಾ ಕೈಕೊಡುವ ವಿದ್ಯುತ್ ಮೇಲೆ ಅವಲಂಬಿತವಾಗದೆ ಸೋಲಾರ್ ಶಕ್ತಿಯಿಂದ ಇದು ಕಾರ್ಯನಿರ್ವಹಿಸುತ್ತಿದೆ.
ಬಣ್ಣ ಬಣ್ಣದ ಮಾದರಿಗಳು, ಆನಿಮೇಶನ್, ವೀಡಿಯೊ ಮುಂತಾದವುಗಳ ಮೂಲಕ ಸ್ಮಾರ್ಟ್ ಬೋರ್ಡ್ ಮೂಲಕ ಪಾಠ ಮಾಡಲಾಗುತ್ತಿದೆ. ಇದರಿಂದ ಕಲಿಸುವ ಪಾಠವು ಬೇಗ ಅರ್ಥವಾಗುತ್ತದೆ ಹಾಗೂ ನೆನಪಿನಲ್ಲಿರುತ್ತದೆ. ಕಲಿಕೆಯ ದೃಷ್ಟಿಯಿಂದ ಒಳ್ಳೆಯ ಅಭಿಪ್ರಾಯ ಇರುವ ಇದನ್ನು ಈಗಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರೂ ಸಹ ಸಮ್ಮತಿಸಿದ್ದಾರೆ. ಈಗಾಗಲೆ ಹಲವಾರು ಖಾಸಗಿ ಶಾಲಾ ಕಾಲೇಜುಗಳಲ್ಲಿ ಈ ತಂತ್ರಜ್ಞಾನವನ್ನು ಉಪಯೋಗಿಸುತ್ತಿದ್ದಾರೆ. ಆದರೆ ಗ್ರಾಮಗಳಲ್ಲಿನ ವಿದ್ಯುತ್ ಸಮಸ್ಯೆ ಇದನ್ನು ಸರ್ಕಾರಿ ಶಾಲೆಗಳಲ್ಲಿ ಅಳವಡಿಸಲು ಅಡಚಣೆಯಾಗಿದೆ. ಅದನ್ನು ಸೌರವಿದ್ಯುತ್ ಬಳಸಿ ಮೀರಬಹುದಾಗಿದೆ ಎನ್ನುವುದಕ್ಕೆ ಮುತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಕ್ಷಿಯಾಗಿದೆ.
‘ಸೆಲ್ಕೋ ಕಂಪೆನಿಯವರನ್ನು ‘ನಮ್ಮ ಮುತ್ತೂರು ಸಂಸ್ಥೆ’ಯವರು ಕರೆತಂದು ನಮ್ಮ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸನ್ನು ರೂಪಿಸಿಕೊಟ್ಟಿದ್ದಾರೆ. ಇದರಿಂದ ಮಕ್ಕಳಿಗೆ ಸಾಕಷ್ಟು ಉಪಯೋಗವಾಗುತ್ತಿದೆ. ಪರಿಸರ ಅಧ್ಯಯನ, ಗಣಿತ, ಇಂಗ್ಲೀಷ್ ಮುಂತಾದ ಎಲ್ಲಾ ವಿಷಯಗಳ ಹೊಸ ಪಠ್ಯಕ್ರಮದ ವಿಷಯಗಳನ್ನು ಚಿತ್ರ ರೂಪದಲ್ಲಿ ಪ್ರದರ್ಶಿಸಿ ವಿವರಿಸಲಾಗುತ್ತದೆ. ಕೇಳಿದ ಶಬ್ಧ ಹಾಗೂ ನೋಡಿದ ಚಿತ್ರವನ್ನು ಮಗು ಮರೆಯುವುದಿಲ್ಲ. ಪಠ್ಯಪುಸ್ತಕದಲ್ಲಿ ಎಲ್ಲ ಚಿತ್ರಗಳೂ ಇರುವುದಿಲ್ಲ. ಆದರೆ ಕಪ್ಪು ಹಲಗೆಯ ಮೇಲೆ ಬರೆದು ತೋರಿಸುವುದಕ್ಕಿಂತ ಇಲ್ಲಿ ಅದೇ ಪಠ್ಯವನ್ನು ಚಿತ್ರ ಹಾಗೂ ವೀಡಿಯೋ ಮೂಲಕ ತೋರಿಸಿ ಕಲಿಸಲಾಗುತ್ತದೆ. ಮಕ್ಕಳು ಅತ್ಯಂತ ಕುತೂಹಲ ಮತ್ತು ಆಸಕ್ತಿಯಿಂದ ಕಲಿಯುತ್ತಿದ್ದಾರೆ. ಎಲ್ಲ ವರ್ಗದ ವಿದ್ಯಾರ್ಥಿಗಳೂ ಸಹ ಏಕರೂಪ ಗುಣಮಟ್ಟದ ಶಿಕ್ಷಣ ಪಡೆಯುವಲ್ಲಿ ಇದು ಸಹಾಯವಾಗುತ್ತದೆ’ ಎಂದು ಶಿಕ್ಷಕ ಎಸ್.ದಾವೂದ್ ಪಾಷ ತಿಳಿಸಿದರು.

ವಾರಕ್ಕೊಂದು ನುಡಿಮುತ್ತು ಭಾಗ – 2

0

1. ‘ನೀವು ಏನನ್ನು ಕೊಡುತ್ತೀರೋ ಅದು ನಿಮಗೆ ಹಿಂತಿರುಗಿ ಬರುತ್ತದೆ’ ಎಂಬ ಮಾತು ಸುಳ್ಳಲ್ಲ. ನೀವು ಜನರಿಗೆ ಪ್ರೀತಿ, ಗೌರವ ಕೊಟ್ಟರೆ ಅವರು ಅದನ್ನೇ ನಿಮಗೆ ಹಿಂದಕ್ಕೆ ಕೊಡುತ್ತಾರೆ. ಆದ್ದರಿಂದ ಯಾರನ್ನೂ ದ್ವೇಷಿಸಬಾರದು.
2. ನಿಮ್ಮನ್ನು ಬೇರೆಯವರೊಡನೆ ಹೋಲಿಸಿಕೊಳ್ಳಬೇಡಿರಿ. ಅದು ನಿಮಗೆ ನೀವೇ ಅವಮಾನ ಮಾಡಿಕೊಂಡಂತೆ. ನಮ್ಮನ್ನು ನಾವು ಗೌರವಿಸಿಕೊಳ್ಳದಿದ್ದರೆ ಮತ್ಯಾರು ಗೌರವಿಸಿಯಾರು? ನಮ್ಮ ಸಾಮಥ್ರ್ಯವನ್ನು ಎಂದೂ ಲಘುವಾಗಿ ಪರಿಗಣಿಸುವುದು ಬೇಡ.
3. ‘ನಾನು ಪರಮಸಂತುಷ್ಟ. ನನಗೆ ಯಾವ ವಸ್ತುಗಳ ಕೊರತೆಯೂ ಇಲ್ಲ.’ ಎಂದು ಭಾವಿಸಿ ಅದು ನಮ್ಮ ಬದುಕಿನ ಅತ್ಯಂತ ಆನಂದದ ಕ್ಷಣವಾಗಿರುತ್ತದೆ. ಜೀವನಾನಂದಕ್ಕೆ ಹಣ ಮತ್ತು ವಸ್ತುಗಳೇ ಮುಖ್ಯವಲ್ಲ.
4. ನೀವು ಎಷ್ಟೇ ಕಷ್ಟದಲ್ಲಿ ಸಿಲುಕಿದ್ದರೂ ಕೂಡ ಅದರಿಂದ ಹೊರಬರಲು ಒಂದು ಮಾರ್ಗ ಸದಾ ತೆರೆದಿರುತ್ತದೆ ಎಂಬುದನ್ನು ನೆನಪಿಡಿ. ಆಗ ಕಷ್ಟದ ತೀವ್ರತೆಯು ಕಡಿಮೆಯಾಗಿ ಪರಿಹಾರದ ಕಡೆಗೆ ಗಮನ ಹರಿಸಲು ಪ್ರೇರಣೆಯಾಗುತ್ತದೆ.
5. ದೈನಂದಿನ ಜೀವನದಲ್ಲಿ ಕಾಯುವ ಪ್ರಸಂಗ ಬಂದರೆ ಅದಕ್ಕೆ ಸಿಡಿಮಿಡಿಗೊಳ್ಳಬೇಡಿ. ಇಂಥ ಪ್ರಸಂಗಗಳು ನಮಗೆ ಸಹನೆಯನ್ನು ಕಲಿಸುತ್ತದೆ. ಕಾಯುವ ಸಮಯವನ್ನು ಸದುಪಯೋಗ ಮಾಡಿಕೊಳ್ಳುವುದು ಹೇಗೆ ಎಂದು ಯೋಚಿಸಿ. ಆಗ ಕಾಯುವ ಕೆಲಸ ಕೈಲಾಸವೆನಿಸುತ್ತದೆ.
6. ನಾವು ಹೇಗೆ ಮಾತನಾಡಬೇಕೆಂದರೆ, ನಮ್ಮ ಮಾತನ್ನು ಕೇಳಲು ಜನ ಉತ್ಸುಕರಾಗಬೇಕು. ಹಾಗೆಯೇ ಜನರ ಮಾತನ್ನು ಹೇಗೆ ಕೇಳಬೇಕೆಂದರೆ ಅವರು ಇನ್ನೂ ಉತ್ಸುಕರಾಗಿ ನಮ್ಮೊಡನೆ ಮಾತನಾಡುವಂತಿರಬೇಕು. ಉತ್ತಮ ಕೇಳುಗ-ಮಾತುಗಾರನಿಗೆ ಎಲ್ಲೆಡೆಯೂ ಒಂದು ಜಾಗ ಕಾದಿರುತ್ತದೆ.
7. ನೀವು ಓಡುವ ಸ್ಪರ್ಧೆಯಿಂದ ಬಿದ್ದ ಮಾತ್ರಕ್ಕೆ ಸ್ಪರ್ಧೆಯೇ ಮುಗಿಯಿತು ಎಂಬ ನಿರ್ಧಾರಕ್ಕೆ ಬರಬೇಕಿಲ್ಲ. ಬಿದ್ದಿದ್ದಕ್ಕೆ ಬೇಸರ ಪಟ್ಟುಕೊಳ್ಳುವುದು ಆ ಕ್ಷಣದ ನಿರ್ಧಾರವಾಗಬಾರದು. ಮೇಲೆ ಎದ್ದು ಮತ್ತೆ ಓಡುವುದು ಎಂಬುದರ ಬಗ್ಗೆ ಯೋಚಿಸಿ. ಜೀವನದಲ್ಲಿ ಎಲ್ಲ ಹೆಜ್ಜೆಗಳಲ್ಲಿಯೂ ಅಷ್ಟೇ ಇದೇ ರೀತಿಯ ಚಿಂತನೆ ಇರಲಿ.
8. ಯಾವುದೇ ಸಂದರ್ಭ, ಸನ್ನಿವೇಶ ನಿಮ್ಮ ಮಾನಸಿಕ ಸಮತೋಲನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಾರದು. ಆಗ ನೀವು ಸನ್ನಿವೇಶದ ಬಂಧಿಯಾಗುತ್ತೀರಿ. ಸದಾ ಸನ್ನಿವೇಶವನ್ನು ಮೀರಿ ನಿಲ್ಲುವ ಮನಸ್ಥಿತಿಯನ್ನು ರೂಪಿಸಿಕೊಳ್ಳಲು ಪ್ರಯತ್ನಿಸಬೇಕು.
9. ಯಾವುದೇ ಕೆಲಸವನ್ನು ಬಹಳ ಶಾಂತಿಯಿಂದ, ದೃಢತೆಯಿಂದ ಸರಿಯಾದ ಯೋಜನೆಯೊಂದಿಗೇ ಕೈಗೊಂಡಲ್ಲಿ ಜಯ ಲಭಿಸುವುದು ಖಚಿತ.
10. ಪ್ರತಿದಿನ ನಾವು ಒಂದಿಲ್ಲೊಂದು ಘತನೆ, ಸನ್ನಿವೇಶಗಳನ್ನು ಎದುರಿಸುತ್ತೇವೆ. ಅವುಗಳಲ್ಲಿ ಹುದುಗಿರುವ (ಅಡಗಿರುವ) ಸಂದೇಶವನ್ನು ಗ್ರಹಿಸಿಕೊಂಡು ಬದುಕಿನಲ್ಲಿ ಅಳವಡಿಸಿಕೊಂಡರೆ, ನಮ್ಮ ಜೀವನಾನುಭವ ಶ್ರೀಮಂತವಾಗುತ್ತದೆ. ಬದುಕಿನಲ್ಲಿ ಕೊರಗದೇ ಅದು ಹೇಳುವ ಪಾಠವನ್ನು ಕೇಳೋಣ.
11. ನೀವು ಸದಾ ನಗುತ್ತಿದ್ದರೆ ಅದು ನಿಮ್ಮ ಮನಸ್ಸಿನ ಭಾವನೆಯನ್ನು ತೋರಿಸುತ್ತದೆ. ಆದರೆ ನೀವೂ ಬೇರೆಯವರ ನಗುವಿಗೆ ಕಾರಣವಾದರೆ ನಿಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ. ನೀವೂ ನಗುವುದನ್ನು ಅಭ್ಯಾಸ ಮಾಡಿಕೊಳ್ಳಿ ಹಾಗೂ ಇತರರ ನಗುವಿಗೂ ಕಾರಣರಾಗಿ. (ನಗುವು ಸಹಜದ ಧರ್ಮ, ನಗಿಸುವುದು ಪರಧವರ್i, ನಗುವ ಕೇಳುತ ನಗುವುದತಿಶಯದ ಧರ್ಮ-ನಗುವ ನಗಿಸುವ ನಗಿಸಿ ನಗುತ ಬಾಳುವ ವರವ ಮಿಗೆ ಬೇಡಿಕೊಳೋ-ಮಂಕುತಿಮ್ಮ)
12. ಜೀವನದಲ್ಲಿ ಎರಡು ಸಂಗತಿಗಳು ಆನಂದ ಮತ್ತು ಯಶಸ್ಸನ್ನು ತರುತ್ತದೆ. ಯಾವ ಅನುಕೂಲಗಳೂ ಇಲ್ಲದಿದ್ದಾಗ ನೀವು ಜೀವನವನ್ನು ಹೇಗೆ ಎದುರಿಸುತ್ತೀರ ಮತ್ತು ಎಲ್ಲ ಅನುಕೂಲಗಳೂ ಇದ್ದಾಗ ನೀವು ಹೇಗೆ ವರ್ತಿಸುತ್ತೀರ ಎಂಬುದನ್ನು ಆಧರಿಸುತ್ತದೆ.
13. ನೀವೇನು ಎಂಬುದು ನಿಮಗೆ ಗೊತ್ತಿರಲಿ. ನಿಮ್ಮೊಳಗೆ ಏನೋ ವಿಶೇಷವಿದೆ ಎಂಬ ಬಗ್ಗೆ ನಿಮಗೆ ನಂಬಿಕೆಯಿರಲಿ. ಜೀವನದಲ್ಲಿ ಎದುರಾಗುವ ಯಾವುದೇ ಅಡ್ಡಿ ಆತಂಕಗಳನ್ನು ಸಮರ್ಥವಾಗಿ ಎದುರಿಸುವ ಆತ್ಮವಿಶ್ವಾಸ ನಿಮಗಿರಲಿ.
14. ನೀವು ಒಂದು ವೇಳೆ ಕೋಪಿಷ್ಠರಾಗಿದ್ದಲ್ಲಿ ನಿಮಗೆ ಬೇರೆ ಯಾವ ಶತ್ರುಗಳೂ ಬೇಕಾಗಿಲ್ಲ. ನೀವು ಬುದ್ಧಿವಂತರಾಗಿದ್ದರೆ ನಿಮಗೆ ಸಿರಿವಂತರ ಅಗತ್ಯವಿಲ್ಲ. ನಾವು ಹೇಗಿರಬೇಕೆಂಬುದು ನಮಗೆ ಗೊತ್ತಾಗುವಂಥ ವಿವೇಕವನ್ನು ಗಳಿಸಿಕೊಳ್ಳಬೇಕು.
15. ನಮ್ಮ ಶೇ. 99 ಸಮಸ್ಯೆಗಳು, ಶೇ 1 ರಷ್ಟು ಸಂಕಷ್ಟಗಳಿಗೆ ನಮ್ಮ ನಿಷ್ಕಾಳಜಿ, ವಿವೇಚನಾರಹಿತ ನಿರ್ಧಾರವೇ ಕಾರಣ. ಸಣ್ಣ ಸಂಗತಿಗಳಿಗೂ ವಿವೇಕಯುತ ನಿರ್ಧಾರ ತೆಗೆದುಕೊಳ್ಳಿ ಹಾಗೂ ಮಹತ್ವವನ್ನು ಕೊಡಿರಿ.
ಡಾ. ಶ್ರೀವತ್ಸ
ಮುಂದುವರೆಯುವುದು…..