ರಾಷ್ಟ್ರಧ್ವಜಗಳ ನೀತಿ ಸಂಹಿತೆ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು.ಅದರ ಘನತೆ, ಗೌರವ ಗೊತ್ತಿಲ್ಲದೇ ಬೇಕಾಬಿಟ್ಟಿಯಾಗಿ ಬಳಸುವ ಮೂಲಕ ಅವಮಾನ ಮಾಡಬಾರದು. ರಾಷ್ಟ್ರಧ್ವಜದ ಗಾಂಭೀರ್ಯತೆಯ ಅರಿವು ಜನತೆಗೆ ಮೂಡಿಸುವ ಕಾರ್ಯ ನಡೆಯಬೇಕು ಎಂದು ಭಾರತ ಸೇವಾದಳ ಜಿಲ್ಲಾ ಸಂಘಟಕ ಮಹೇಶ್ಗೌಡ ತಿಳಿಸಿದರು.
ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಗುರುವಾರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿಗೆ ರಾಷ್ಟ್ರಧ್ವಜ ಕುರಿತಂತೆ ನಡೆಸಿದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಧ್ವಜಗಳ ಆರೋಹಣ, ಅವರೋಹಣ, ಧ್ವಜ ಸ್ತಂಭದ ಕೆಳಗೆ ಸಭೆ ಮತ್ತು ಸಮಾರಂಭಗಳನ್ನು ನಡೆಸದಂತೆ, ಧ್ವಜವನ್ನು ಉಲ್ಟಾ ಹಾಗೂ ಹರಿದ ಧ್ವಜಗಳನ್ನು ಹಾರಿಸುವ ಮೂಲಕ ಧ್ವಜಕ್ಕೆ ಅವಮಾನಿಸುವುದನ್ನು ತಡೆಯಬೇಕು.
ಕಾಟನ್ ಖಾದಿ ಬಟ್ಟೆಯಲ್ಲಿ ತಯಾರಿಸಿದ ಹಾಗೂ ಐಎಸ್ಐ ನಂಬರ್ನಿಂದ ಮುದ್ರಿಸಿರುವ ರಾಷ್ಟ್ರಧ್ವಜಗಳನ್ನು ಮಾತ್ರ ಬಳಸಬೇಕು ಎಂದು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ನ ಸ್ಪಷ್ಟ ನಿರ್ದೇಶನವಿದೆ. ಖಾದಿ ಬಟ್ಟೆ ಹೊರತುಪಡಿಸಿ ಪ್ಲಾಸ್ಟಿಕ್ ಧ್ವಜಗಳ ಬಳಕೆ ನಿಷೇಧಿಸಲಾಗಿದೆ. 2*3 ಅಡಿ ಅಳತೆಯ ರಾಷ್ಟ್ರಧ್ವಜಗಳನ್ನು ಶಾಲಾ-ಕಾಲೇಜುಗಳು, ಗ್ರಾಮ ಪಂಚಾಯತಿ ಕಚೇರಿಯ ಬಳಿ ಕಡ್ಡಾಯವಾಗಿ ಹಾರಿಸಬೇಕು. ರಾಷ್ಟ್ರಧ್ವಜಗಳನ್ನು ಹೊದ್ದುಕೊಂಡು ಮಲಗುವುದು, ಕಾಲಿನಿಂದ ತುಳಿಯುವುದು, ಬೆಂಕಿ ಹಚ್ಚುವುದು, ಎಲ್ಲೆಂದರಲ್ಲಿ ಬಿಸಾಡುವುದು ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಹೇಳಿದರು.
ಭಾರತ ಸೇವಾದಳದ ರಾಜ್ಯ ಸಂಪನ್ಮೂಲ ಶಿಕ್ಷಕ ವೆಂಕಟರೆಡ್ಡಿ ರಾಷ್ಟ್ರಧ್ವಜ ರೂಪುಗೊಂಡ ಬಗೆಯನ್ನು ವಿವರಿಸಿದರು. ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಕೆ.ರಾಮಾಂಜನೇಯ ಹಾಜರಿದ್ದರು.
ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ರಾಷ್ಟ್ರಧ್ವಜ ಕುರಿತು ಕಾರ್ಯಾಗಾರ
ಕೋಚಿಮುಲ್ ವತಿಯಿಂದ ನಂದಿನಿ ಹಾಲು ಹಾಗು ಹಾಲಿನ ಉತ್ಪನ್ನಗಳ ಮಾರಾಟಗಾರರ ಸಭೆ
ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಕಡಿಮೆ ಬೆಲೆಗೆ ಎಲ್ಲರಿಗೂ ಸಿಗುವಂತೆ ತಯಾರಿಸಿರುವ ನಂದಿನಿ ಹಾಲು ಹಾಗು ಹಾಲಿನ ಉತ್ಪನ್ನಗಳನ್ನು ಹೆಚ್ಚಾಗಿ ಬಳಸುವುದರಿಂದ ಆರೋಗ್ಯದೊಂದಿಗೆ ಈ ಭಾಗದ ಹೈನುಗಾರಿಕೆ ಮತ್ತು ರೈತರನ್ನು ಸಹ ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಹೇಳಿದರು.
ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ವತಿಯಿಂದ ಬುಧವಾರ ನಗರದ ಶಿಬಿರ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ನಂದಿನಿ ಹಾಲು ಹಾಗು ಹಾಲಿನ ಉತ್ಪನ್ನಗಳ ಮಾರಾಟಗಾರರ ಸಭೆಯಲ್ಲಿ ಅವರು ಮಾತನಾಡಿದರು.
ಮಾರುಕಟ್ಟೆಯಲ್ಲಿ ನಾನಾ ಬಗೆಯ ಉತ್ಪನ್ನಗಳು ಬಣ್ಣ ಬಣ್ಣದ ಪ್ಯಾಕೇಟ್ಗಳಲ್ಲಿ ಲಭ್ಯ ಇವೆ. ಆದರೆ ಅವುಗಳನ್ನು ಲಾಭದ ದೃಷ್ಟಿಯಿಂದಷ್ಟೇ ಉತ್ಪಾದಿಸಿದ್ದು ಅವುಗಳನ್ನು ಖರೀದಿಸಿ ಸೇವಿಸುವುದರಿಂದ ತಾತ್ಕಾಲಿಕವಾಗಿ ನಾಲಿಗೆಗೆ ರುಚಿ ಸಿಗಬಹುದು. ಆದರೆ ಅವುಗಳು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಕೋಚಿಮುಲ್) ದಿಂದ ನಂದಿನಿ ಹಾಲಿನ ಉತ್ಪನ್ನಗಳನ್ನು ಎಲ್ಲಾ ವಯೋಮಾನದ ಜನರ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ತಯಾರಿಸಲಾಗುತ್ತಿದೆಯೆ ಹೊರತು ಲಾಭದ ದೃಷ್ಟಿಯಿಂದಲ್ಲ ಎಂದರು.
ನಂದಿನಿ ಉತ್ಪನ್ನಗಳನ್ನು ಖರೀದಿಸಿ ಸಹಕಾರ ಕ್ಷೇತ್ರ, ಹಾಗು ಈ ಭಾಗದ ರೈತರ ಆರ್ಥಿಕ ಬೆಳವಣಿಗೆಗೆ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.
ಕೋಚಿಮುಲ್ನ ಪ್ರಧಾನ ವ್ಯವಸ್ಥಾಪಕ ಮುನೇಗೌಡ ಮಾತನಾಡಿ ನಗರದಲ್ಲಿ ಸುಮಾರು ೪೫ ಸಾವಿರದಷ್ಟು ಜನಸಂಖ್ಯೆಯಿದ್ದು ನಂದಿನಿ ಹಾಲಿನ ಬಳಕೆ ಮಾಡುವವರ ಸಂಖ್ಯೆ ಬಹಳಷ್ಟು ಕಡಿಮೆಯಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ನಗರದ ಸರ್ಕಾರಿ ಶಾಲಾ ಮಕ್ಕಳಿಗೆ ನಂದಿನಿ ಹಾಲಿನ ಬಳಕೆಯ ಕುರಿತು ಮಾಹಿತಿ ನೀಡುವಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ನಂದಿನಿ ಹಾಲಿನ ಉತ್ಪನ್ನಗಳ ಮಾರಾಟಗಾರರಿಗೆ ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಜರ್ಕಿನ್ (ಜಾಕೆಟ್) ವಿತರಿಸಿದರು.
ಮಾರುಕಟ್ಟೆ ವಿಭಾಗದ ಉಪ ವ್ಯವಸ್ಥಾಪಕ ಲಕ್ಮಿನಾರಾಯಣ, ಸಿಬ್ಬಂದಿ ವಿಜಯ್ಕುಮಾರ್, ಶ್ರೀನಿವಾಸ್, ಶಿಡ್ಲಘಟ್ಟ ಶಿಬಿರ ಕಚೇರಿಯ ಬೈರಾರೆಡ್ಡಿ, ಕೆ.ಎಸ್.ಕನಕಪ್ರಸಾದ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ನಾಗಮಂಗಲ ಗ್ರಾಮದಲ್ಲಿ ಊರಜಾತ್ರೆ
ನಗರ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಈಗ ಜಾತ್ರೆಗಳ ಸಂಭ್ರಮ. ಒಂದೊಂದು ದಿನ ಒಂದೊಂದು ಗ್ರಾಮದಲ್ಲಿ ಜಾತ್ರೆಗಳು ನಡೆಯುತ್ತಿವೆ.
`ಜನರ ಜೀವಶಕ್ತಿ’ಯಾಗಿ ಮಳೆ ಸುರಿದು ಧಾನ್ಯ ರಾಶಿ ತುಂಬಿ ತುಳುಕಾಡಲಿ ಎಂಬ ಆಶಾಭಾವನೆಯಿಂದ ಊರಿನ ದೇವತೆ, ದೇವರುಗಳನ್ನು ಪೂಜಿಸುವ ಸಾಂಘಿಕ ಉತ್ಸವ. ಗಂಗಮ್ಮ, ಮಾರಮ್ಮ, ದುಗ್ಗಮ್ಮ, ಸಪ್ಲಮ್ಮ, ಚೌಡೇಶ್ವರಮ್ಮ, ಸಲ್ಲಾಪುರಮ್ಮ, ಮೈಲಮ್ಮ, ಮುಡುಗಲಮ್ಮ , ಈಶ್ವರ, ಈರಲಪ್ಪ, ಮುನೇಶ್ವರ, ಆಂಜನೇಯ ಎಲ್ಲ ದೇವರುಗಳಿಗೆ ವಿಶೇಷ ಪೂಜೆ ನಡೆಯುತ್ತದೆ.
ಊರ ಜಾತ್ರೆಯ ಅಂಗವಾಗಿ ಮಂಗಳವಾರ ರಾತ್ರಿ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕವನ್ನು ನಾಗಮಂಗಲ ಗ್ರಾಮದ ಕಲಾವಿದರು ಪ್ರದರ್ಶಿಸಿದರು.
ಎನ್.ಟಿ.ಪ್ರಕಾಶ್ಗೌಡ, ಶಂಕರಪ್ಪ, ನಾಗಪ್ಪ, ತಮ್ಮಣ್ಣ, ಶಿವಕುಮಾರ್, ಶ್ರೀನಿವಾಸಗೌಡ, ಚಂದ್ರಪ್ಪ, ಮುನಿನಾರಾಯಣಪ್ಪ, ಕನಕರಾಜು, ಕೃಷ್ಣಯ್ಯಶೆಟ್ಟಿ, ಶ್ರೀರಾಮಪ್ಪ, ಚನ್ನಕೇಶವ, ಮುನಿರಾಜು, ರಾಜಣ್ಣ, ಎನ್.ಡಿ.ನಾರಾಯಣಪ್ಪ, ವೆಂಕಟೇಶ್, ಸೀತಾರಾಮಶಾಸ್ತ್ರಿ, ವೆಂಕಟಾಚಲಪತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಶಿಡ್ಲಘಟ್ಟದಲ್ಲಿ ಗಂಗಾದೇವಿಯ ಜಾತ್ರಾಮಹೋತ್ಸವ ಆಚರಣೆ
ನಗರದಲ್ಲಿ ಗಂಗಾದೇವಿಯ ಜಾತ್ರಾಮಹೋತ್ಸವ ಕಾರ್ಯಕ್ರಮ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.
ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಗಂಗಾದೇವಿಯ ಜಾತ್ರಾಮಹೋತ್ಸವವನ್ನು ವಿಜೃಂಭಣೆಯಿಂದ ನಡೆಸಿದ ನಗರದ ಜನತೆ, ವಿವಿಧ ಹೂಗಳಿಂದ ಅಲಂಕರಿಸಿದ ದೀಪಗಳನ್ನು ಹೊತ್ತುಕೊಂಡು ಮೆರವಣಿಗೆಯಲ್ಲಿ ದೇವಾಲಯಗಳಿಗೆ ಹೋಗಿ ಬೆಳಗಿದರು.
ಜಾತ್ರಾ ಮಹೋತ್ಸವದ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ದೀಪಗಳ ಮೆರವಣಿಗೆ ನಡೆಸಲಾಯಿತು, ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಅಮಾನಿಕೆರೆಗೆ ದೀಪಗಳೊಂದಿಗೆ ತೆರಳಿದ ಮಹಿಳೆಯರು ಈ ಬಾರಿಯಾದರೂ ಉತ್ತಮವಾದ ಮಳೆ ಬೆಳೆಗಳು ಆಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ವಾಸವಿ ಕಲ್ಯಾಣಮಂಟಪದ ಸಮೀಪದಲ್ಲಿರುವ ಗಂಗಾದೇವಿಯ ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು, ದೇವಾಲಯಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ನಿಧನ ವಾರ್ತೆ: ಎ.ಎಸ್.ಕೊಂಡಪ್ಪರೆಡ್ಡಿ
ತಾಲ್ಲೂಕಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿದ್ದ ತಲಕಾಯಲಬೆಟ್ಟ ಗ್ರಾಮ ಪಂಚಾಯತಿಯ ಪ್ರಥಮ ಅಧ್ಯಕ್ಷ ಆಟಗೊಲ್ಲಹಳ್ಳಿಯ ಎ.ಎಸ್.ಕೊಂಡಪ್ಪರೆಡ್ಡಿ(62) ಮಂಗಳವಾರ ನಿಧನರಾದರು.
ಪತ್ನಿ,ಪುತ್ರ,ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧುಬಳಗವನ್ನು ಅವರು ಅಗಲಿದ್ದಾರೆ.
ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದ ಎ.ಎಸ್.ಕೊಂಡಪ್ಪರೆಡ್ಡಿ ಇತ್ತೀಚಿಗೆ ಗ್ರಾಮ ಪಂಚಾಯತಿ ಸದಸ್ಯರಾಗಿ, ನೂತನ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿದ್ದರು. ಈಚೆಗಷ್ಟೆ ನೂತನ ಗ್ರಾಮ ಪಂಚಾಯತಿಗೆ ಸಕಲ ಸೌಲಭ್ಯಗಳನ್ನು ಒದಗಿಸಬೇಕೆಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಕಾವೇರಿಗೆ ಅವರಿಗೆ ಮನವಿಪತ್ರ ಸಲ್ಲಿಸಿದ್ದರು.
ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ವಿ.ಸುಭ್ರಮಣಿ, ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಗೋಪಾಲಕೃಷ್ಣ, ಶ್ರೀನಿವಾಸ್ರೆಡ್ಡಿ, ಡಿ.ಪಿ.ನಾಗರಾಜ್ ಮತ್ತಿತರರು ಭೇಟಿ ಅಂತಿಮ ದರ್ಶನ ಪಡೆದು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.
ಆನೆಮಡುಗು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕ್ರೀಡಾಕೂಟದಲ್ಲಿ 26 ಬಹುಮಾನಗಳು
ಶಿಡ್ಲಘಟ್ಟ ತಾಲ್ಲೂಕಿನ ಆನೆಮಡುಗು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ದೊಡ್ಡತೇಕಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ 26 ಬಹುಮಾನಗಳನ್ನು ಪಡೆದಿದ್ದಾರೆ.
ಕಲಿಕೆ – ಆರೋಗ್ಯಕ್ಕಾಗಿ
“ಕಲಿಕೆ” ಮನುಕುಲದ ವಿಶಿಷ್ಟ ಗುಣ. ಅನ್ಯಜೀವಿಗಳಿಗಿಂತ ಮಾನವ ಭಿನ್ನ. ಅವನ ಕಲಿಕಾ ಗುಣದಿಂದಾಗಿ, ಆರೋಗ್ಯ ಪೂರ್ಣ ಕಲಿಕಾ ವಿಧಾನಗಳು ಭಾರತೀಯ ಸಂಸ್ಕøತಿಯಲ್ಲಿ ಹಾಸುಹೊಕ್ಕಾಗಿವೆ. ದುರಂತವೆಂದರೆ ಮಾನಸಿಕ ಒತ್ತಡ ಶಾರೀರಿಕ ರೋಗಗಳಿಗೆ ದಾರಿ ಮಾಡಿಕೊಡುತ್ತದೆ. ಕಲಿಕಾ ವಿಧಾನಗಳನ್ನು ನಾವು ಇಂದು ನಮ್ಮದಾಗಿಸಿಕೊಳ್ಳುತ್ತಿದ್ದೇವೆ. “ಕಲಿಕೆ” ಎಂಬುದು ಮಾನವನ ವಿಕಾಸಕ್ಕೆ ಪೂರಕವಾಗಬೇಕೇ ಹೊರತು ಅದು ಮನುಜನ ವಿಕಾಸಕ್ಕೆ ಮಾರಕವಾಗಬಾರದು. ಹಾಗಿದ್ದಲ್ಲಿ ಅಂತಹ ಕಲಿಕಾ ವಿಧಾನಗಲಾವುವು ಎಂಬ ಪ್ರಶ್ನೆ ನಮ್ಮಲ್ಲಿ ಮೂಡುವುದು ಸಹಜ.
ಅದಕ್ಕೆ ಉತ್ತರ ಆಯುರ್ವೇದ ಗ್ರಂಥವಾದ ಚರಕ ಸಂಹಿತೆಯಲ್ಲಿ ಲಭ್ಯ. ಜೀವನದ ವಿವಿಧ ಹಂತಗಳಲ್ಲಿ ಆರೋಗ್ಯ ರಕ್ಷಣೋಪಾಯ ಹಾಗೂ ರೋಗ ನಿವಾರಣೋಪಾಯಗಳನ್ನು ತಿಳಿಸುವ ಈ ಆಯುರ್ವೇದ ಶಾಸ್ತ್ರದಲ್ಲಿ ಕಲಿಕೆಯೂ ಕೂಡ ವಿಕಾಸ ಮಾರ್ಗ ಎಂದು ಹೇಳಲ್ಪಟ್ಟಿದೆ.
“ಕಲಿಕೆ” ಎಂಬುದು ಯಾವಾಗಲೂ ಜ್ಞಾನೇಂದಿಯಗಳ ಮೂಲಕ ಆಗುವಂತಹ ಒಂದು ಪ್ರಕ್ರಿಯೆ. ಕಣ್ಣು, ಕಿವಿ, ಮೂಗು, ನಾಲಿಗೆ ಧರ್ಮ ಇವುಗಳ ಮುಖಾಂತರ ಮನುಜನು ಹೊರಗಿನ ವಾತಾವರಣದ ಜೊತೆ ಸಂಪರ್ಕ ಹೊಂದುತ್ತಾನೆ. ಹಾಗೇ ಪ್ರಪಂಚದ ಜ್ಞಾನವನ್ನು ಹೊಂದುತ್ತಾನೆ. ಈ ಇಂದ್ರಿಯಗಳ ದುರ್ಬಳಕೆ ಆರೋಗ್ಯಕ್ಕೆ ಮಾರಕ.
ಅತಿಯಾದ ದೂರದರ್ಶನ ವೀಕ್ಷಣೆ ನಿಯಂತ್ರಣೆಯೇ ಇಲ್ಲದೇ ಆಹಾರ ಸೇವಿಸುವಿಕೆ ಮುಂತಾದುವುಗಳಿಂದ ಇಂದಿನ ದಿನಗಳಲ್ಲಿ ಆರೋಗ್ಯ ಎಂಬುದು ಮರೀಚಿಕೆಯೇ ಆಗಿದೆ. ಇಂದ್ರಿಯಗಳನ್ನು ಹದವರಿತು ಬಳಸಿದಲ್ಲಿ ನಮಗೆ ಜ್ಞಾನ ಭಂಡಾರವೇ ಲಭ್ಯವಾಗುತ್ತದೆ.
ಪ್ರಾಚೀನ ಭಾರತೀಯ ಸಂಸ್ಕøತಿಯಲ್ಲಿ ‘ಶ್ರುತಿ’ ಎಂದರೆ ‘ಕೇಳುವಿಕೆ’ ಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿತ್ತು. ‘ಕಲಿಕೆ’ ಎಂಬುದು ‘ಶ್ರವಣ ಮಾಧ್ಯಮ’ ದ ಮೂಲಕ ನಡೆಯುತ್ತಿತ್ತು. ಶ್ರವಣ ಮಾಧ್ಯವವು ಅತ್ಯಂತ ಪ್ರಭಲ ಮಾಧ್ಯಮ. ಹಾಗಾಗಿಯೇ ಎಂದೋ ಕೇಳಿದ ಹಾಡೂ ಕತೆ ನಮಗೆ ಇಂದಿಗೂ ನೆನಪಿರುತ್ತದೆ. ನೋಡಿದ ದೃಶ್ಯಗಳ ನೆನಪು ಕ್ಷಣಿಕ. ಕೇಳಿದ ಮಾತುಗಳ ನೆನಪು ಚಿರಕಾಲದ್ದು.
ಈ ರೀತಿ ಕೇಳ್ಮೆಯಿಂದ ಕಲಿತರಷ್ಟೇ ಸಾಲದು. ಅದನ್ನು ಪುನ: ಹೇಳುವ ಸಾಮಥ್ರ್ಯ ಬರಬೇಕು. ಇದು ಕಲಿಕೆಯ ಎರಡನೇ ವಿಧಾನ. “ಅಧ್ಯಾಪನ” ಎಂದು ಕರೆಸಿಕೊಳ್ಳಲ್ಪಡುವ ಈ ಕ್ರಮದಿಂದ ಪಡೆದ ಜ್ಞಾನವು ಇನ್ನೂ ಸ್ಪಷ್ಟವಾಗುತ್ತದೆ. ಜೊತೆಗೆ ಸಂವಹನ ಕಲೆಯಾದ ಮಾತುಗಾರಿಗೆ ಕರಗತವಾಗುತ್ತದೆ. ಕಲಿತದ್ದನ್ನು ತಿಳಿಸಿ ಹೇಳಲು ಪ್ರಯತ್ನಿಸಿದಾಗ ಮಾತ್ರ ಕಲಿತ ವಿಷಯ ಇನ್ನಿಷ್ಟು ಸ್ಪಷ್ಟವಾಗುತ್ತದೆ.
ಮುಂದಿನ ಹಂತ ಕಲಿಕೆಯಲ್ಲಿ ‘ತದ್ವಿದ್ಯಾ ಸಂಭಾಷಾ”, ಅಂದರೆ ಕಲಿತ ವಿಷಯದ ಬಗ್ಗೆ ತಿಳಿದವರ ಜೊತೆ ಚರ್ಚಿಸಿ ಆ ವಿಷಯದಲ್ಲಿ ಹೆಚ್ಚಿನ ಪ್ರಾವಿಣ್ಯತೆಯನ್ನು ಪಡೆಯುವುದು. ಇಂದಿನ ವಿದ್ಯಾಭ್ಯಾಸದಲ್ಲಿ ಕಲಿತಿರುವ, ಕಲಿಯುತ್ತಿರುವ ವಿಷಯಗಳ ಬಗ್ಗೆ ಚರ್ಚಿಸುವಂತಹ ಕ್ರಮವೇ ಮಕ್ಕಳಲ್ಲಿ ವಿರಳವಾಗಿದೆ. ತದ್ವಿದ್ಯಾ ಸಂಭಾಷಾ ಎಂಬ ಈ ಕ್ರಮದಿಂದ ಮಕ್ಕಳಲ್ಲಿ ತರ್ಕಬದ್ಧವಾಗಿ ಆಲೋಚಿಸುವ ಶಕ್ತಿ ಜೊತೆ ಜೊತೆಗೇ ಸಹಬಾಳ್ವೆಯ ಗುಣ, ಹೊಂದಿಕೊಳ್ಳುವ ಗುಣಗಳೂ ಬೆಳೆಯುತ್ತವೆ.
ಕೇವಲ ‘ಬುದ್ಧಿಶಕ್ತಿ’ ಯನ್ನು ಹೆಚ್ಚಿಸುವ ಇಂದಿನ ಕಲಿಕಾ ವಿಧಾನಗಳು ಮನುಷ್ಯನ ಪರಿಪೂರ್ಣ ವಿಕಾಸಕ್ಕೆ ಸಹಕಾರಿಯಾಗದು. “ಅಧ್ಯಯನ, ಅಧ್ಯಾಪನ ಹಾಗೂ ತದ್ವಿದ್ಯಾ ಸಂಭಾಷಾ” ಎಂಬ ಈ ಮೂರೂ ಕಲಿಕಾ ವಿಧಾನಗಳನ್ನು ಇಂದಿನ ವಿದ್ಯಾಭ್ಯಾಸದಲ್ಲಿ ಅಳವಡಿಸಿದ್ದೇ ಆದಲ್ಲಿ ಮಗುವಿನ ಪರಿಪೂರ್ಣ ವಿಕಾಸ ಸಾಧ್ಯ. ಒತ್ತಡಕಾರಿ ಕಲಿಕಾ ವಿಧಾನಗಳನ್ನು ನಮ್ಮದಾಗಿಸಿಕೊಳ್ಳುವುದಕ್ಕಿಂತ ವಿಕಾಸಕಾರಿ ಕಲಿಕಾ ವಿಧಾನಗಳು ನಮಗೆ ಬೇಕಲ್ಲವೇ? ಆಯುರ್ವೇದವು ಜೀವನ ವಿಕಾಸಕಾರಿ. ಇಂತಹ ಜೀವನವನ್ನು ಉನ್ನತಿಯತ್ತ ಕೊಂಡೊಯ್ಯವ, ಕಲಿಕಾ ವಿಧಾನಗಳನ್ನು ನಮ್ಮದಾಗಿಸಿಕೊಳ್ಳೋಣ ಉನ್ನತಿಯ ಉತ್ತುಂಗಕ್ಕೇರೋಣ.
ಓದೋಣ, ಇಂದ್ರಿಯಗಳ ಮೂಲಕವೇ ಕಲಿಯೋಣ, ಕಲಿತಿದ್ದನ್ನು ಹೇಳೋಣ, ಜೊತೆಗೇ ಚರ್ಚಿಸೋಣ. ಕಲಿತು, ಓದಿ, ಹೇಳಿ, ಚರ್ಚಿಸಿ ಪರಿಪೂರ್ಣ ವಿಷಯ ಜ್ಞಾನ ಪಡೆಯೋಣ, ತನ್ಮೂಲಕ ವಿಕಾಸ ಹೊಂದೋಣ.
ಡಾ. ಶ್ರೀವತ್ಸ.
ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ – ಪ್ರತಿಭಟನೆ
ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಪಮಾನವಾಗಿದ್ದು, ಅಪಮಾನವೆಸಗಿರುವವರ ಮೇಲೆ ಸೂಕ್ತ ಕ್ರಮ ಜರುಗಿಸಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿಯನ್ನು ಅಮಾನತ್ತುಪಡಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಪಂಚಾಯತಿ ಕಾರ್ಯಾಲಯದ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯತಿ ಕಾರ್ಯಾಲಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ದಸಂಸ ಪದಾಧಿಕಾರಿಗಳು, ಕಳೆದ ಶುಕ್ರವಾರದಂದು ಗ್ರಾಮಪಂಚಾಯತಿ ಕಾರ್ಯಾಲಯದಲ್ಲಿ ಹಾಕಿದ್ದ ಭಾವಚಿತ್ರಗಳಲ್ಲಿ ಅಂಬೇಡ್ಕರ್ಅವರ ಭಾವಚಿತ್ರವನ್ನು ಎಲ್ಲಾ ಭಾವಚಿತ್ರಗಳಿಗಿಂತಲೂ ತೀರಾ ಕೆಳಮಟ್ಟಕ್ಕೆ ಇಳಿಸಿ ಅಪಮಾನವೆಸಗಿದ್ದಾರೆ, ಈ ಬಗ್ಗೆ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಯನ್ನು ಕೇಳಿದರೆ, ನನಗೆ ಗೊತ್ತಿಲ್ಲವೆಂದು ಉದ್ದಟತನವಾಗಿ ಮಾತನಾಡಿದರು. ಪಂಚಾಯತಿಯಲ್ಲಿ ಬಸವಣ್ಣನವರ ಭಾವಚಿತ್ರವನ್ನೂ ಕೂಡಾ ಮೂಲೆಗುಂಪು ಮಾಡಲಾಗಿದೆ,
ಸಂವಿಧಾನ ಶಿಲ್ಪಿ ಅಂಬೇಡ್ಕರ್, ಹಾಗೂ ಸಮಾಜಚಿಂತಕ ಬಸವಣ್ಣನವರ ಭಾವಚಿತ್ರಗಳಿಗೆ ಅಪಮಾನವೆಸಗಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿಯನ್ನು ಅಮಾನತ್ತು ಮಾಡಿ, ಈ ಕೃತ್ಯದಲ್ಲಿ ಭಾಗಿಯಾಗಿರುವವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಒತ್ತಾಯಿಸಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಸ್ಥಳಕ್ಕೆ ಬೇಟಿ ನೀಡಿದ್ದ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಾನುಜಯ್ಯ, ದಲಿತ ಮುಖಂಡರಿಂದ ಮನವಿಯನ್ನು ಸ್ವೀಕರಿಸಿ, ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನವೆಸಗಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪೆಸಗಿರುವವರ ಮೇಲೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ದ.ಸಂ.ಸ ಜಿಲ್ಲಾ ಸಂಚಾಲಕ ಸಿ.ಎಂ.ಮುನಿಯಪ್ಪ, ತಾಲ್ಲೂಕು ಸಂಚಾಲಕರಾದ ಎನ್.ಎ.ವೆಂಕಟೇಶ್, ಹುಜುಗೂರು ವೆಂಕಟೇಶ್, ಲಕ್ಷ್ಮೀನಾರಾಯಣ, ಚನ್ನಕೇಶವ, ಮುನಿಕೃಷ್ಣಪ್ಪ, ಡಿ.ಎಂ.ವೆಂಕಟೇಶ್, ಲಕ್ಕೇನಹಳ್ಳಿ ವೆಂಕಟೇಶ್, ತುಮ್ಮನಹಳ್ಳಿ ಮುನಿರಾಜು, ನರಸಿಂಹಯ್ಯ, ಶ್ರೀರಾಮಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ದಾಂಪತ್ಯದಲ್ಲಿ ಪ್ರೇಮ ಮತ್ತು ಕಾಮ – ಭಾಗ 2
ಲೈಂಗಿಕತೆ-ದಿಕ್ಕು ತಪ್ಪಿಸುವ ವಿವರಣೆಗಳು
ಮಾನವನ ಲೈಂಗಿಕತೆಯಲ್ಲಿ ದೇಹದ ಪಾಲೆಷ್ಟು ಮತ್ತು ಮೆದುಳಿನ (ಬುದ್ಧಿ ಹಾಗೂ ಭಾವನೆಗಳ) ಪಾಲೆಷ್ಟು ಎನ್ನುವ ಚರ್ಚೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಆದರೆ ಒಂದಂತೂ ಸತ್ಯ. ಸರೀಸೃಪಗಳ ಮಿದುಳಿನಿಂದ ಸಸ್ತನಿಗಳ ಮಿದುಳನ್ನು ಹಾದು ಜೀವ ವಿಕಾಸದ ಹಾದಿಯಲ್ಲಿ ಮಾನವನ ಮೆದುಳು ಬಹಳವಾಗಿ ಬೆಳೆದಿದೆ. ಸಸ್ತನಿಗಳಿಗಿಂತ ದೊಡ್ಡದಾಗಿ ಬೆಳೆದಿರುವ ನಿಯೋಕಾರ್ಟೆಕ್ಸ್ ಹೊಂದಿರುವ ನಾವು ಲೈಂಗಿಕತೆಯನ್ನು ಬರಿಯ ದೈಹಿಕ ಅಗತ್ಯ ಎಂದು ಕಡೆಗಣಿಸುವಂತಿಲ್ಲ. ಮಾನವನ ಲೈಂಗಿಕತೆಗೆ ದೇಹ ಒಂದು ವಾಹನ ಮಾತ್ರ. ಈ ವಾಹನದ ಮೂಲಕ ವ್ಯಕ್ತವಾಗುವ ಮನಸ್ಸು ಮತ್ತು ಬುದ್ಧಿಗಳ ಸಂಯುಕ್ತ ಕ್ರಿಯೆ ಇದು. ಬುದ್ಧಿ ಮನಸ್ಸುಗಳೆರೆಡೂ ಒಳಗೊಳ್ಳದಿದ್ದರೆ ಪುರುಷರಿಗೆ ಲೈಂಗಿಕ ಸಂಪರ್ಕ ಸಾಧ್ಯವಾಗುವುದೇ ಇಲ್ಲ, ಮಹಿಳೆಯರಿಗೆ ಸಾಧ್ಯವಾದರೂ ತೃಪ್ತಿದಾಯಕವಾಗಿರುವುದಿಲ್ಲ.
ಹಾಗಾಗಿ ಮಾನವನ ಮೆದುಳು ಲೈಂಗಿಕ ಸುಖವನ್ನು ಪ್ರಾಣಿಗಳಂತೆ ಅನುಭವಿಸುವ ವ್ಯವಸ್ಥೆಯನ್ನು ಹೊಂದಿಲ್ಲ. ಒಂದೇ ಸಂಗಾತಿಯೊಡನೆ ದೀರ್ಘಕಾಲ, ಸಂತಾನ ಕ್ರಿಯೆಯನ್ನು ಹೊರತುಪಡಿಸಿಯೂ ಲೈಂಗಿಕ ಸುಖವನ್ನು ಹೊಂದುವ ಶಕ್ತಿ ನಮ್ಮ ಮೆದುಳಿಗೆ ಇದೆ. ಅಂದರೆ ಮಾನವ ಒಂದೇ ಸಂಗಾತಿಯೊಡನೆ ಬಹಳ ಕಾಲ ಬದುಕು ನಡೆಸುವುದು ಸಾಮಾಜಿಕ ಅಗತ್ಯವಷ್ಟೇ ಅಲ್ಲ, ಜೀವವಿಕಾಸದ ಹಾದಿಯಲ್ಲಿನ ಅನಿವಾರ್ಯತೆ ಕೂಡ. ಹಾಗೆ ದೀರ್ಘಕಾಲ ಒಂದೇ ಸಂಗಾತಿಯೊಡನೆ ಬದುಕು ಸಾಧ್ಯವಾಗುವುದು ಆ ಪುರುಷ ಮತ್ತು ಸ್ತ್ರೀಯ ನಡುವೆ ಒಂದು ಭಾವನಾತ್ಮಕ ಬಂಧವಿದ್ದಾಗ ಮಾತ್ರ. ಆದರೆ ನಾವು ಸೃಷ್ಟಿಸಿಕೊಂಡಿರುವ ವೈವಾಹಿಕ ವ್ಯವಸ್ಥೆಯೊಳಗೆ ಈ ಭಾವನಾತ್ಮಕ ಬಂಧ (ಅಟ್ಯಾಚ್‍ಮೆಂಟ್) ಬೆಳೆಯುತ್ತಿದೆಯೇ ಅಥವಾ ಇದು ವಿವಾಹ “ಬಂಧನ” ವಾಗಿದೆಯೋ ಮುಂದೆ ನೋಡೋಣ.
ಮದುವೆಯ ಆರಂಭದಲ್ಲಿ ಇಬ್ಬರಿಗೂ ಲೈಂಗಿತೆಯ ಬಗೆಗೆ ಕುತೂಹಲ ಮತ್ತು ಹೊಸತನದ ಆಸಕ್ತಿ ಇರುತ್ತದೆ. ಜೊತೆಗೆ ಯೌವ್ವನದ ದೇಹದಲ್ಲಿ ಲೈಂಗಿಕತೆಯನ್ನು ಪ್ರಚೋದಿಸುವ ಹಾರ್ಮೋನ್‍ಗಳ ಸೃಜನೆಯೂ ಚನ್ನಾಗಿರುತ್ತದೆ. ಹಾಗಾಗಿ ಸಣ್ಣಪುಟ್ಟ ಭಿನ್ನಾಭಿಪ್ರಾಯ, ಮಾನಸಿಕ ಒತ್ತಡಗಳನ್ನು ಮೀರಿ ಲೈಂಗಿಕ ಉದ್ರೇಕ ಮತ್ತು ಆಸಕ್ತಿ ಕೆಲಸ ಮಾಡುತ್ತದೆ.
ಮದುವೆ ಹಳತಾಗಿ ದೇಹ ಮಧ್ಯ ವಯಸ್ಸಿನೆಡೆಗೆ ಸರಿದಂತೆ ಆರಂಭದ ದೈಹಿಕ ಮತ್ತು ಮಾನಸಿಕ ಪ್ರಚೋದನೆಗಳು ಸ್ವಲ್ಪ ನಿಧಾನವಾಗುತ್ತವೆ. ಆಗ ಸಂಗಾತಿಯೊಡನೆ ಸ್ವಲ್ಪ ಸಮಯ ಸಮಾಧಾನ ಮತ್ತು ಆತ್ಮೀಯತೆಯಿಂದ ಬೆರೆತಾಗ ಲೈಂಗಿಕ ಆಸಕ್ತಿ ಸಹಜವಾಗಿ ಮೂಡುತ್ತದೆ. ಆದರೆ ಹಾಗೆ ಬೆರೆಯಲು ಪತಿಪತ್ನಿಯರು ತಮ್ಮ ಮಧ್ಯೆ ಸೃಷ್ಟಿಸಿಕೊಳ್ಳುತ್ತಿರುವ ಮೇಲೆ ಹೇಳಿದ ಅಗೋಚರ ಮಾನಸಿಕ ಆತಂಕ, ಒತ್ತಡ, ಕಿರಿಕಿರಿಗಳ ಗೋಡೆ ಅಡ್ಡ ಬರುತ್ತದೆ. ಮಲಗುವ ಕೋಣೆಗೆ ಹೋಗುವಾಗಲೇ ಸಾಕಷ್ಟು ಕಿರಿಕಿರಿ ಆತಂಕಗಳನ್ನು ಜೊತೆಗೆ ಕರೆದುಕೊಂಡು ಹೋಗುವ ಅವರಿಗೆ ಅಲ್ಲಿ ನಿರಾಸೆಯಲ್ಲದೆ ಮತ್ತೇನು ಸಿಗಲು ಸಾಧ್ಯ? ಮದುವೆಯ ಆರಂಭದಲ್ಲಿ ಆಗುತ್ತಿದ್ದ ದಿಡೀರ್ ಉದ್ರೇಕವನ್ನು ನಿರೀಕ್ಷಿಸುವ ದಂಪತಿಗಳು ಸಹಜವಾಗಿ ನಿರಾಸೆಗೊಳ್ಳುತ್ತಾರೆ. ಹಾಗಾಗಿ ಲೈಂಗಿಕ ಸಂಪರ್ಕ ವಿರಳವಾಗುತ್ತಾ ಹೋಗುತ್ತದೆ. ಇದೆಲ್ಲದರ ಜೊತೆಗೆ ಮಕ್ಕಳ ಮತ್ತು ಸಂಸಾರದ ಜವಾಬ್ದಾರಿಗಳು ಇತರ ಆದ್ಯತೆಗಳನ್ನು ಒತ್ತಡಗಳನ್ನು ಸೃಷ್ಟಿಸಿ, ಲೈಂಗಿಕ ಆಸಕ್ತಿ ಮತ್ತು ಬಯಕೆಗಳನ್ನು ಸಹಜವಾಗಿ ಹಿಂದೆ ತಳ್ಳುತ್ತದೆ.
ಜೊತೆಗೆ ಇಬ್ಬರಿಗೂ ಲೈಂಗಿಕತೆಯಲ್ಲಿ ಸ್ವಲ್ಪ ಹೊಸತನ ಬೇಕು ಎನ್ನಿಸುತ್ತದೆ. ಆದರೆ ಇಬ್ಬರೂ ತಮ್ಮ ಮನಸ್ಸಿನ ಭಾವನೆಗಳನ್ನು ಮತ್ತು ತಮ್ಮ ಲೈಂಗಿಕತೆಯ ಕಲ್ಪನೆಗಳನ್ನು ಹಂಚಿಕೊಳ್ಳಲು ಹಿಂಜರಿಯುತ್ತಾರೆ. ತಮ್ಮ ಆಸೆ, ಆದ್ಯತೆಗಳ ಬಗೆಗೆ ಮಾತನಾಡಿದರೆ ಇನ್ನೊಬ್ಬರ ದೃಷ್ಟಿಯಲ್ಲಿ ಕೀಳಾಗಬಹುದೇ, ನನ್ನ ಬಗೆಗೆ ಅವರ ಅಭಿಪ್ರಾಯ ಬದಲಾಗಬಹುದೇ, ಎನ್ನವು ಆತಂಕದಲ್ಲಿ ಪತಿಪತ್ನಿಯರಿಬ್ಬರೂ ಎಲ್ಲವನ್ನೂ ತಮ್ಮಲ್ಲೇ ನುಂಗಿಕೊಳ್ಳುತ್ತಾರೆ. ಹಾಗಾಗಿ ಕಾಮ ಏಕತಾನತೆಯಿಂದ ನರಳುತ್ತದೆ.
ಇದೆಲ್ಲದರ ಪರಿಣಾಮವೆಂದರೆ ದಂಪತಿಗಳು ತಮ್ಮ ಲೈಂಗಿಕ ಆಸಕ್ತಿ ಸಹಜವಾಗಿ ಕುಗ್ಗಿದೆ ಎಂದುಕೊಳ್ಳುತ್ತಾರೆ. ವಾಸ್ತವದಲ್ಲಿ ಮಾನವನ ದೇಹ ಮತ್ತು ಮೆದುಳುಗಳೆರೆಡೂ ದೀರ್ಘಕಾಲ ಲೈಂಗಿಕತೆಯನ್ನು ಅನುಭವಿಸುವ ಶಕ್ತಿ ಹೊಂದಿವೆ. ದೇಹ ಮನಸ್ಸುಗಳು ಮಾಗಿದಂತೆ ಲೈಂಗಿಕ ಆನಂದವನ್ನು ಪಡೆಯುವ ರೀತಿ ಮತ್ತು ಸುಖದ ಸ್ವರೂಪಗಳು ಬದಲಾಗಬಹುದು ಅಷ್ಟೇ, ಆದರೆ ಲೈಂಗಿಕ ಅನುಭವದ ಗುಣಮಟ್ಟ ಮಾತ್ರ ಹೆಚ್ಚುತ್ತಲೇ ಹೋಗುತ್ತದೆ. ಇದನ್ನು ತಿಳಿಯಲಾರದೆ ತಮ್ಮ ಅಗತ್ಯ ಮತ್ತು ಸತ್ವವನ್ನು ಗುರತಿಸಿಕೊಳ್ಳಲಾಗದ ದಂಪತಿಗಳು ಅತೃಪ್ತರಾಗಿ ಉಳಿಯುತ್ತಾರೆ. ಹೆಚ್ಚಿನವರು ಇದರ ನೈಜ ಕಾರಣಗಳನ್ನು ಗುರುತಿಸಿಕೊಳ್ಳುವುದಿಲ್ಲ ಅಥವಾ ಒಪ್ಪಿಕೊಳ್ಳುವುದಿಲ್ಲ. ವಯಸ್ಸಾಗುತ್ತಾ ಬಂದಂತೆ ಸಂಸಾರಗಳು ನಡೆಯುವುದೇ ಹೀಗೆ ಎಂದುಕೊಳ್ಳುತ್ತಾರೆ.
ಮುಂದುವರೆಯುವುದು…
ವಸಂತ್ ನಡಹಳ್ಳಿ
ಕೃಷಿ ಯಂತ್ರೋಪಕರಣದ ಪ್ರಾತ್ಯಕ್ಷಿಕೆ
ಕೃಷಿಯಲ್ಲಿ ಯಂತ್ರಗಳನ್ನು ಬಳಸಿ ಕೂಲಿ ಸಮಸ್ಯೆಯನ್ನು ನಿವಾರಿಸಿಕೊಳ್ಳುವುದಲ್ಲದೆ ಹಣವನ್ನೂ ಉಳಿಸಬಹುದಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಬಿ.ಆರ್. ಯೋಗೀಶ್ ತಿಳಿಸಿದರು.
ತಾಲ್ಲೂಕಿನ ವಲ್ಲಪ್ಪನಹಳ್ಳಿ ಗ್ರಾಮದಲ್ಲಿ ಸೋಮವಾರ ರೈತ ಸಂತೋಷ್ ಅವರ ಜಮೀನಿನಲ್ಲಿ ಕೃಷಿ ಯಂತ್ರೋಪಕರಣದ ಪ್ರಾತ್ಯಕ್ಷಿಕೆಯನ್ನು ನಡೆಸಿ ಅವರು ಮಾತನಾಡಿದರು.
ತರಕಾರಿ ಕೃಷಿಗೆ ಪೂರಕವಾಗಿ ವೈಜ್ಞಾನಿಕ ಪದ್ಧತಿಯಲ್ಲಿ ಯಂತ್ರದ ಮೂಲಕ ಏಕ ಕಾಲದಲ್ಲಿ ಬದುಮಾಡಿ, ಡ್ರಿಪ್ ಪೈಪ್, ಪೌಷ್ಠಕ ಸತ್ವ ಹಾಗೂ ಬೇಸಾಯ ಹಾಕುವ ಮೂಲಕ ಕೇವಲ ಒಬ್ಬರಿಂದಲೆ ನಿರ್ವಹಣೆ ಸಾಧ್ಯ. ಜಂಗಮಕೋಟೆ ಹೋಬಳಿಯಲ್ಲಿ ಧರ್ಮಸ್ಥಳ ಹಾಗೂ ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯ ಜಂಟಿ ಆಶ್ರಯದಲ್ಲಿ ಮಾಡಿರುವ ಕೃಷಿ ಕೇಂದ್ರವಿದೆ. ಕೇಂದ್ರದಿಂದ ರೈತರಿಗೆ ಅನುಕೂಲವಾಗುವಂತೆ ವೈಜ್ಞಾನಿಕ ಯಂತ್ರಗಳ ಮೂಲಕ ಕೃಷಿ ಮಾಡಲು ಈ ಉಪಕರಣಗಳನ್ನು ಅತ್ಯಂತ ಕಡಿಮೆ ಮೊತ್ತಕ್ಕೆ ಬಾಡಿಗೆಗೆ ನೀಡಲಾಗುತ್ತಿದೆ.
ತೋಟಗಾರಿಕೆ ಇಲಾಖೆ ತಾಲ್ಲೂಕು ಸಹಾಯಕ ಅಧಿಕಾರಿ ರವಿಕುಮಾರ್, ಪ್ರಗತಿಪರ ರೈತ ಮತ್ತು ರೈತಒಕ್ಕೂಟದ ಅಧ್ಯಕ್ಷ ಹಿತ್ತಲಹಳ್ಳಿ ಗೋಪಾಲ್ಗೌಡ. ಕೃಷಿ ಮೇಲ್ವಿಚಾರಕ ಜನಾರ್ಧನ್, ಶಾಂತಾ ಶೆಟ್ಟಿ, ಕೃತಿಕಾ, ಪಂಚಾಯತಿ ಸದಸ್ಯ ಚೌಡಮ್ಮ ಹಾಗೂ ರೈತರು ಈ ಸಂದರ್ಭದಲ್ಲಿ ಹಾಜರಿದ್ದರು.
ಸರ್ಕಾರಿ ಶಾಲೆಯ ಶಿಕ್ಷಕರಿಗೆ ಪ್ರಶಸ್ತಿ
ನಗರದ ಬಡಾವಣೆ ಸರ್ಕಾರಿ ಶಾಲೆಯ ಶಿಕ್ಷಕ ಹಾಗೂ ಹಿರಿಯ ರಂಗಭೂಮಿ ಕಲಾವಿದ ನಾಗರಾಜಶೆಟ್ಟಿ ಅವರನ್ನು ಬೆಂಗಳೂರಿನ ಕಲಾಮಿತ್ರ ಮಂಡಳಿಯವರು ಡಾ.ಪಂಡಿತ್ ಪುಟ್ಟರಾಜು ಗವಾಯಿಗಳ ಸದ್ಭಾವನಾ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
ಈಚೆಗೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವವರನ್ನು ಗುರುತಿಸಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಕಲಾಮಿತ್ರ ಮಂಡಳಿಯ ಗೌರವಾಧ್ಯಕ್ಷ ಕೆಂಚನೂರು ಶಿವಶಂಕರ್, ಅಧ್ಯಕ್ಷ ಆರ್.ಅಪ್ಪುರಾಜ್, ಪ್ರಧಾನ ಕಾರ್ಯದರ್ಶಿ ಮಣಿ ಮತ್ತಿತರರು ಹಾಜರಿದ್ದರು.
ಭಾರತದ ಬಾಹ್ಯಾಕಾಶ ಸಾಧನೆಗಳು – ಭಾಗ 2
ಸ್ವತಂತ್ರ ಭಾರತದ ಬಾಹ್ಯಾಕಾಶ ಸಂಶೋಧನೆ ಆರಂಭಗೊಂಡಿದ್ದು 1950 ರ ಆಸುಪಾಸಿನಲ್ಲಿ. ‘ಟಾಟಾ ಇನ್ಸ್ಟಿಟ್ಯುಟ್ ಆಫ್ ಫಂಡಮೆಂಟಲ್ ರಿಸರ್ಚ್’ ಸ್ಥಾಪನೆಗೊಂಡು ಬಾಹ್ಯಾಕಾಶ ವಿಕಿರಣಗಳ ಅಧ್ಯಯನಕ್ಕೆ ಅವಶ್ಯವಿರುವ ಉಪಕರಣಗಳ ನಿರ್ಮಾಣ, ಅವುಗಳ ಪರೀಕ್ಷೆ ಹೀಗೆ ಹೊಸ ಅಧ್ಯಾಯ ಪ್ರಾರಂಭವಾಯಿತು. ಅದಕ್ಕೆ ಸಂಬಂಧಿತ ಪ್ರಯೋಗಾಲಯಗಳು, ವಿಶ್ವವಿದ್ಯಾಲಯಗಳು ಹುಟ್ಟುಹಾಕಲ್ಪಟ್ಟವು. ಅದೇ ವೇಳೆಗೆ ಅಂದರೆ 1957 ರಲ್ಲಿ ಸೋವಿಯೆತ್ ರಷ್ಯಾ ‘ಸ್ಪುಟನಿಕ್’ ಉಪಗ್ರಹವನ್ನು ಹಾರಿಬಿಟ್ಟಾಗ ಭೂಮಿಯನ್ನು ಸುತ್ತುಹಾಕುವ ಆ ಮಾನವನಿರ್ಮಿತ ನೌಕೆಯ ಬಗ್ಗೆ ಇಡೀ ಜಗತ್ತೇ ನಿಬ್ಬೆರಗಾಯಿತು. ನಮ್ಮಲ್ಲೂ ಬಾಹ್ಯಾಕಾಶ ತಂತ್ರಜ್ಞಾನದ ಕುರಿತು ಆಸಕ್ತಿ ಅಧಿಕಗೊಂಡಿತು.
ತಂತ್ರಜಾನ ಮುನ್ನಡೆಗೆ ಒತ್ತಾಸೆ ನೀಡಿದ ಅಂದಿನ ಪ್ರಧಾನಮಂತ್ರಿ ಜವಾಹರಲಾಲ ನೆಹರೂ ಅವರ ಹಾಗೂ ವಿಜ್ಞಾನಿ ವಿಕ್ರಮ್ ಸಾರಾಭಾಯಿ ಅವರ ನೇತೃತ್ವದಲ್ಲಿ ‘ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ’ ಇಸ್ರೋ ಜನ್ಮ ತಾಳಿತು. ಭಾರತದಲ್ಲಿ ಅಂತರಿಕ್ಷ ವಿಜ್ಞಾನ ಹೊಸ ಅಧ್ಯಾಯವನ್ನು ಆರಂಭಿಸಿತು.
ಇಸ್ರೋ ವಿಕ್ರಮ ಸಾರಾಭಾಯಿ ಅವರ ಕನಸಿನ ಕೂಸು. ಅವರ ಮಾತುಗಳಲ್ಲೇ ಹೇಳುವುದಾದರೆ ‘ಮುಂದುವರೆಯುತ್ತಿರುವ ದೇಶಗಳಿಗೆ ಬಾಹ್ಯಾಕಾಶ ವಿಜ್ಞಾನ ಬೇಕೆ ಎಂದು ಕೇಳುವವರಿದ್ದಾರೆ, ಆದರೆ ನಮಗೆ ನಮ್ಮ ಅಗತ್ಯದ ಕುರಿತು ಸ್ಪಷ್ಟತೆ ಇದೆ. ನಮ್ಮ ಜನತೆಯ ಸಮಸ್ಯೆಗಳಿಗೆ ಆಧುನಿಕ ತಂತ್ರಜ್ಞಾನವನ್ನು ಬಳಸುವಲ್ಲಿ ನಾವು ಯಾರನ್ನೂ ಅವಲಂಬಿಸಬೇಕಾಗಿಲ್ಲ’.
ಕೇಂದ್ರ ಸರಕಾರದ ಸತತ ಬೆಂಬಲದಿಂದಾಗಿ ಇಸ್ರೋದ ಕಠಿಣವೂ ಪರಿಶ್ರಮದ್ದೂ ಆದ ಸಂಶೋಧನಾ ಕಾರ್ಯ ಭರದಿಂದ ಸಾಗಲು ಸಾಧ್ಯವಾಗಿದೆ. ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ, ತಿರುವನಂತಪುರ, ಸತಿಶ್ ಧವನ್ ಬಾಹ್ಯಾಕಾಶ ಕೇಂದ್ರ, ಶ್ರೀಹರಿಕೋಟಾ, ಇಸ್ರೋ ಉಪಗ್ರಹ ಕೇಂದ್ರ ಬೆಂಗಳೂರು, ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರ ಅಹ್ಮದಾಬಾದ್, ರಾಷ್ಟ್ರೀಯ ದೂರಸಂವೇದಿ ಕೇಂದ್ರ ಹೈದರಾಬಾದ್, ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ ಹಾಸನ, ಇತ್ಯಾದಿ ಇಸ್ರೋದ ಹತ್ತಾರು ಶಾಖೆಗಳು ಇಂದು ದೇಶದ ಉದ್ದಗಲಕ್ಕೂ ವಿಸ್ತರಿಸಿವೆ.
ನಮ್ಮ ಮೊಟ್ಟಮೊದಲ ಕೃತಕ ಉಪಗ್ರಹ ‘ಆರ್ಯಭಟ’ ಉಡಾವಣೆ ಆಗಿದ್ದು 1975 ರಲ್ಲಿ. ಅಂದು ಅದರ ತೂಕ 360 ಕೆ.ಜಿ. ಆದರೆ ಅದು ಹಾರಿದ್ದು, ಸೋವಿಯೆತ್ ರಷ್ಯಾದ ನೆಲದಿಂದ ಹಾಗೂ ರಷ್ಯಾದ ರಾಕೆಟ್ ಮೇಲೆ ಕೂತು. ಎಕ್ಸ್ ರೇ ಆಸ್ಟ್ರಾನಮಿ, ಸೋಲಾರ್ ಫೀಸಿಕ್ಸ್ ಇತ್ಯಾದಿಗಳ ಬಗ್ಗೆ ಅಧ್ಯಯನ ನಡೆಸುವ ಸಲುವಾಗಿ ಹಾರಿದ ಈ ಉಪಗ್ರಹದ ಮೈಮೇಲೆಲ್ಲ ಸೋಲಾರ್ ಪ್ಯಾನೆಲ್ಲುಗಳು, ಅಂದರೆ ಸೂರ್ಯನ ಬೆಳಕೇ ಅದಕ್ಕೆ ಇಂಧನ. ಆದರೆ ಪವರ್ ಕಂಟ್ರೋಲ್ ಮಾಡುವ ಶಾಖೆ ವಿಫಲಗೊಂಡು, ಹಾರಿದ ನಾಲ್ಕೇ ದಿನಗಳಲ್ಲಿ ಎಲ್ಲಾ ಪ್ರಯೋಗಗಳು ಸ್ತಬ್ಧಗೊಂಡವು. 60 ಬಾರಿ ಸುತ್ತು ಹಾಕಿದ ಅರ್ಯಭಟ ಭೂವಾತಾವರಣವನ್ನು ಪ್ರವೇಶಿಸಿ ಉರಿದು ಭಸ್ಮವಾಯಿತು. ಅದರ ನೆನಪಿಗೆ ಅಂದಿನ ಎರಡು ರೂಪಾಯಿಯ ನೋಟುಗಳ ಮೇಲೆ ಆರ್ಯಭಟ ನೌಕೆಯ ಚಿತ್ರವನ್ನು ಮುದ್ರಿಸಲಾಯಿತು.
1979 ರಲ್ಲಿ 444 ಕೆ.ಜಿ. ತೂಕದ ಭಾಸ್ಕರ 1 ಮತ್ತು ಭಾಸ್ಕರ 2 ಮೇಲೇರುವಾಗ ನಮ್ಮ ವಿಜ್ಞಾನ ಮತ್ತು ತಂತ್ರಜ್ಞಾನ ಸಾಕಷ್ಟು ಪ್ರಗತಿ ಹೊಂದಿತ್ತ್ತು, ದೇಶದಾದ್ಯಂತ ಟಿ.ವಿ. ವೀಕ್ಷಣೆ ಆಗಲೇ ಸಾಧ್ಯವಾಗಿದ್ದು. ಅದೂ ಕೂಡ ರಷ್ಯಾದ ನೆರವಿನಿಂದ ಹಾರಿತ್ತು.
ಮುಂದೆ ರೋಹಿಣಿ ಸರಣಿ ಉಪಗ್ರಹಗಳು ಹಾರುವ ವೇಳೆಗೆ ನಮ್ಮದೇ ಆದ ಉಡಾವಣಾ ವ್ಯವಸ್ಥೆ ಕೈಗೆಟುಕಿತ್ತು. 1994 ರಲ್ಲಿ ಶ್ರೀಹರಿಕೋಟಾದಿಂದ ಉಡಾವಣೆಗೊಂಡ ರೋಹಿಣಿ ಸರಣಿಯ ಮುಂದುವರೆದ ಭಾಗವಾದ ಎಸ್ಸಾರ್‍ಓಎಸೆಸ್ ಉಪಗ್ರಹಗಳು ಭೂವಾತಾವರಣದ ಹೊರ ಅಂಚಿನ ಅಯಾನುಗೋಳದ ಉಷ್ಣತೆ, ಎಲೆಕ್ಟ್ರಾನುಗಳ ಸಾಂದ್ರತೆ ಮತ್ತಿತರ ಗುಣಲಕ್ಷಣಗಳನ್ನು ಅಂದರೆ ಪಕ್ಕಾ ವೈಜ್ಞಾನಿಕ ಅಧ್ಯಯನಕ್ಕೆಂದು ಉಪಕರಣಗಳನ್ನು ಹೊತ್ತು ಹಾರತೊಡಗಿದ್ದವು.
ಭಾರತದ ಪ್ರಥಮ ಉಪಗ್ರಹ ಉಡಾವಣಾ ವಾಹನ ಎಸ್ಸೆಲ್ವಿ ತಯಾರಾಗಿದ್ದು 1979 ರಲ್ಲಿ ಅಂತರಿಕ್ಷದ 500 ಕಿ.ಮೀ. ದೂರದವರೆಗೆ ನಲವತ್ತು ಕೆ.ಜಿ. ಭಾರವನ್ನು ಹೊತ್ತು ಹಾರಬಲ್ಲ ಉಪಗ್ರಹಗಳ ಉಡ್ಡಯನ ಎಸ್ಸೆಲ್ವಿಯಿಂದ ಸಾಧ್ಯವಾಯಿತು. ಮುಂದೆ ಒಂದು ಕಡೆ ಉಪಗ್ರಹಗಳ ನಿರ್ಮಾಣ, ಇನ್ನೊಂದೆಡೆ ಅವುಗಳನ್ನು ಬಾನಿಗೆ ಹಾರಿಬಿಡಲು ಅವಶ್ಯವಿರುವ ಮಷಿನರಿಗಳ ತಯಾರಿ ಎರಡೂ ಒಟ್ಟೊಟ್ಟಿಗೆ ಸಾಗಿದವು. 90ರ ದಶಕದಲ್ಲಿ ದೂರಸಂವೇದಿ ಉಪಗ್ರಹಗಳನ್ನು ನಮ್ಮದೇ ಆದ ಪೋಲಾರ ಸೆಟೆಲೈಟ್ ಲಾಂಚ್ ವಾಹನದ ಮೂಲಕ ಬಾನಿಗೆ ಹಾರಿಬಿಡಲಾಯಿತು. ಈ ವಾಹನ ಅತ್ಯಂತ ಯಶಸ್ವೀ ವಾಹನವೆನಿಸಿ ಇದುವರೆಗೆ 40 ವಿದೇಶೀ ಹಾಗೂ ನಮ್ಮದೇಶದ 31 ಉಪಗ್ರಹಗಳನ್ನು ವಿವಿಧ ಕಕ್ಷೆಗಳಿಗೆ ಹೊತ್ತೊಯ್ದಿದೆ.
2008ರಲ್ಲಿ ಭಾರತ 11 ಉಪಗ್ರಹಗಳನ್ನು ಬಾನಿಗೆ ಕಳುಹಿಸಿತು. ಅವುಗಳಲ್ಲಿ 9 ಬೇರೆ ದೇಶಗಳ ಉಪಗ್ರಹಗಳು, ಅಲ್ಲದೆ 11 ಉಪಗ್ರಹಗಳನ್ನು ಒಂದೇ ರಾಕೆಟಿನಲ್ಲಿ ಉಡಾವಣೆಗೊಳಿಸಿದ್ದು ನಮ್ಮ ಹೆಗ್ಗಳಿಕೆಯೇ ಆಗಿದೆ.
PSLVಯ ನಂತರ ಇನ್ನೂ ಉನ್ನತ ತಂತ್ರಜ್ಞಾನ ಬಳಸಿದ GSLVಅಂದರೆ Geosynchronous satellite launch vehicle, , ಅಂದರೆ, ಉಪಗ್ರಹಗಳನ್ನು 36 ಸಾವಿರ ಕಿ.ಮೀ. ಎತ್ತರದ ಭೂಸ್ಥಿರ ಕಕ್ಷೆಗೆ ತಲುಪಿಸುವ ಉಡಾವಣಾ ವಾಹನ 2010ರಲ್ಲಿ ತಯಾರಾಯಿತು. ಸುಮಾರು 5 ಟನ್ ತೂಕದ ಉಪಗ್ರಹವನ್ನು ಬೆನ್ನಮೇಲೆ ಹೊರುವ ರಾಕೆಟ್ಟನ್ನು ಹಾರಿಸುವ ಸಾಮರ್ಥ್ಯ ಹೊಂದಿದ ಜಿಎಸಸ್ಸೆಲ್ವಿ ಮೊದಲೆರಡು ಬಾರಿ ಹಾರುವ ಹಂತಗಳಲ್ಲಿ ವೈಫಲ್ಯ ಕಂಡಿತು. ಮರಳಿ ಪ್ರಯತ್ನ ಪಟ್ಟ ಇಸ್ರೋ ತಂತ್ರಜ್ಞರು ಮೂರನೆಯ ಬಾರಿ ಕ್ರಿಯೋಜೆನಿಕ್ ಎಂಜಿನ್ ತಂತ್ರಜಾನವನ್ನು ಯಶಸ್ವಿಯಾಗಿ ಬಳಸಿಕೊಂಡು ಜಿಸ್ಯಾಟ್ ಉಪಗ್ರಹವನ್ನು ಉಡಾವಣೆಗೊಳಿಸಿದರು. ಆಗ ಕ್ರಿಯೋಜೆನಿಕ್ ತಂತ್ರಜ್ಞಾನ ಸಾಮರ್ಥ್ಯ ಪಡೆದ ಜಗತ್ತಿನ 6ನೆಯ ರಾಷ್ತ್ರವೆಂಬ ಖ್ಯಾತಿಗೆ ಭಾರತ ಪಾತ್ರವಾಯಿತು.
ದೇಶದ ಹೆಮ್ಮೆಯ ಉಪಗ್ರಹ ಸರಣಿ ಇನ್ಸ್ಯಾಟ ಸರಣಿ 1982 ರಿಂದ ಏಷ್ಯಾ ಖಂಡದಲ್ಲಿಯೇ ಬೃಹತ್ ಸಂಪರ್ಕ ಜಾಲ ಎಂಬ ಖ್ಯಾತಿಯನ್ನು ಪಡೆದ ಇನ್ಸ್ಯಾಟ್ ದೇಶದ ಅಂತರಿಕ್ಷ ಇಲಾಖೆ, ದೂರಸಂಪರ್ಕ ಇಲಾಖೆ, ಹವಾಮಾನ ಇಲಾಖೆ ಹಾಗೂ ಆಕಾಶವಾಣಿ ಮತ್ತು ದೂರದರ್ಶನ ಇವೆಲ್ಲವೂ ಜಂಟಿಯಾಗಿ ನಿಭಾಯಿಸುತ್ತಿರುವ ಸಂಪರ್ಕ ಜಾಲ. ಭೂಸ್ಥಿರಕಕ್ಷೆಯಲ್ಲಿ ಅಲ್ಲಲ್ಲಿ ಹಾರಾಡುತ್ತಿರುವ ಇನ್ಸಾಟ್ ಉಪಗ್ರಹಗಳು ಫೋನು, ಟಿ.ವಿ. ಸಂಪರ್ಕ, ಹವಾಮಾನ ಅಧ್ಯಯನ ಇತ್ಯಾದಿ ಹಲವಾರು ಕ್ಷೇತ್ರಗಳನ್ನು ನಿಭಾಯಿಸುತ್ತಿವೆ. ಹಾಸನ ಮತ್ತು ಭೋಪಾಲ ನಗರಗಳಲ್ಲಿ ಕಂಟ್ರೋಲ್ ಕೇಂದ್ರಗಳಿವೆ.
ಭಾರತೀಯ ಸಂಜಾತೆ ಅಂತರಿಕ್ಷಯಾನಿ ದಿವಂಗತ ಕಲ್ಪನಾ ಚಾವ್ಲಾ ಅವರ ನೆನಪಿಗೆ ಕಲ್ಪನಾ ಹೆಸರಿನ ಸಂಪೂರ್ಣವಾಗಿ ಹವಾಮಾನ ವರದಿಗೆಂದೇ ತಯಾರಾದ ಉಪಗ್ರಹ ಭೂಸ್ಥಿರ ಕಕ್ಷೆಯಲ್ಲಿ ಹಾರಾಡುತ್ತಿದೆ. ಹಾಗೆಯೇ ಆಯಾರೆಸ್, ದೂರಸಂವೇದಿ ಉಪಗ್ರಹಗಳ ಸರಣಿ. ಈ ಸರಣಿಯಲ್ಲಿ ಕೆಲವು ಉಪಗ್ರಹಗಳು, ಎಜುಸ್ಯಾಟ್, ಕಾರ್ಟೊಸ್ಯಾಟ್, ಓಶನ್‍ಸ್ಯಾಟ್, ರಿಸೋರ್ಸ್ಯಾಟ್ ಇತ್ಯಾದಿ. ‘ಸರಲ್’ ಸಮುದ್ರದ ತೆರೆಗಳು ಉಬ್ಬರ, ಇಳಿತಗಳ ಅಧ್ಯಯನಕ್ಕೆಂದು ಉಡಾವಣೆಗೊಂಡ ಉಪಗ್ರಹ.
ದೂರಸಂವೇದಿ ಉಪಗ್ರಹ ಮಣ್ಣು ಸವಕಳಿ, ಮೀನುಗಾರಿಕೆ, ಲೋಹ ಮತ್ತು ಅದಿರು ನಿಕ್ಷೇಪ, ಮಹಾಪೂರ, ಬರ ನಿರ್ವಹಣೆ, ಅಂತರ್ಜಲ, ಹವಾಮಾನ, ಕಂಪ್ಯೂಟರ್ ಸಂಪರ್ಕ, ರೇಡಿಯೋ ಜಾಲ, ಟೆಲೆಫೋನ್ ಲಿಂಕ್, ರೈಲು ಮತ್ತು ರಸ್ತೆ ಸಾಗಾಟ, ಟಿ.ವಿ. ಹೀಗೆ ಹಲವಾರು ಕ್ಷೇತ್ರಗಳಲ್ಲಿ ಇಂದು ಉಪಗ್ರಹ ಸೇವೆಯನ್ನು ನಾವು ಪಡೆಯುತ್ತಿದ್ದೇವೆ. ಐದು ನಗರಗಳಲ್ಲಿ ಉಪಗ್ರಹ ನಿರ್ವಹಣಾ ಕೇಂದ್ರಗಳು ಕಾರ್ಯಗೈಯ್ಯುತ್ತಿವೆ.
ಹಾಗೆಯೇ ತಂತ್ರಜ್ಞಾನದಲ್ಲಿ ಇನ್ನೊಂದು ಮುಖವಿದೆ, ಹಾರಿ ಬಿಟ್ಟ ಉಪಗ್ರಹಗಳು ತಮ್ಮ ಕಾರ್ಯದ ಅವಧಿಯ ಬಳಿಕ ನಿರುಪಯೋಗಿ ವಸ್ತುಗಳಾಗುತ್ತವೆ. ಅವುಗಳನ್ನು ಮರಳಿ ಭೂಮಿಗೆ ತರಿಸುವುದು ಅತ್ಯಂತ ದುಬಾರಿ ವೆಚ್ಚ ಹಾಗೂ ಕ್ಲಿಷ್ಟ ತಂತ್ರಜ್ಞಾನ ಬೇಡುವ ಕೆಲಸ, ಆದ್ದರಿಂದ ಅವುಗಳನ್ನು ಅಲ್ಲಿಯೇ ಕೈಬಿಡಲಾಗುತ್ತದೆ. ಅಂಥ ನೂರಾರು ಉಪಗ್ರಹಗಳು ಭೂಆಚಿನ ಆಕಾಶದಲ್ಲಿ ಹಾರಾಡುತ್ತಲಿದ್ದು ಅವೀಗ ಬಾನಕಸ ಎನಿಸಿಕೊಂಡಿವೆ. ಬಾನಕಸದ ನಿರ್ವಹಣೆ ಯಾರ ಹೊಣೆ ಎಂಬುದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಚರ್ಚೆ.
ಅದಿರಲಿ, ಇಂದು ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಹೆಸರು ತಂದುಕೊಡುವಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯೂ ಮುಖ್ಯ ಕಾರಣ ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಎನಿಸುತ್ತದೆ. ಅಲ್ಲವೆ?
ಮುಗಿಯಿತು.
ಸರೋಜಾ ಪ್ರಕಾಶ.
ತಿಮ್ಮನಾಯಕನಹಳ್ಳಿ ೧೧ ನೇ ಮೈಲಿ ಕ್ರಾಸ್ನಲ್ಲಿ ಸಸಿ ನೆಡುವ ಕಾರ್ಯಕ್ರಮ
ಪ್ರತಿಯೊಂದು ಹಳ್ಳಿಗಳಲ್ಲಿರುವ ಖಾಲಿ ಜಾಗಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರವನ್ನು ಸಂರಕ್ಷಣೆ ಮಾಡುವ ಕಡೆಗೆ ನಾಗರಿಕರು ಹೆಚ್ಚಿನ ಒಲವು ತೋರಿಸಬೇಕು ಎಂದು ಯುವಶಕ್ತಿ ಸಂಘಟನೆಯ ವಿಜಯಭಾವರೆಡ್ಡಿ ಮನವಿ ಮಾಡಿದರು.
ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ೧೧ ನೇ ಮೈಲಿ ಕ್ರಾಸ್ನಲ್ಲಿರುವ ಮೋರಾರ್ಜಿ ದೇಸಾಯಿ ವಸತಿ ಶಾಲಾವರಣದಲ್ಲಿ ಭಾನುವಾರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಯಲು ಸೀಮೆಯ ಭಾಗವಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯೂ ಸೇರಿದಂತೆ ಬರಗಾಲಪೀಡಿತ ಎಲ್ಲಾ ಪ್ರದೇಶಗಳಲ್ಲಿನ ಜನರು ಕಳೆದ ೪ ದಶಕಗಳಿಂದ ನಿರಂತರವಾಗಿ ನೀರಾವರಿ ಯೋಜನೆಗಳ ಅನುಷ್ಟಾನಕ್ಕಾಗಿ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ನೈಸರ್ಗಿಕ ಸಂಪನ್ಮೂಲಗಳಾದ ಮರಗಿಡಗಳ ಮಾರಣಹೋಮ ಹಾಗೂ ಮರಳ ಸಾಗಾಣಿಕೆ ಹೆಚ್ಚಾದ ಪರಿಣಾಮ ಮಳೆಯ ಮಾರುತಗಳನ್ನು ಸೆಳೆದುಕೊಳ್ಳುವಂತೆ ಸಾಮರ್ಥ್ಯವಿಲ್ಲದ ಪರಿಸರದಲ್ಲಿ ವಾಸಿಸುವಂತಾಗಿದೆ. ಈಗಲಾದರೂ ಜನರು ಎಚ್ಚೆತ್ತುಕೊಂಡು ಗಿಡಮರಗಳನ್ನು ಬೆಳೆಸದಿದ್ದರೆ, ನೀರಿನ ಅಭಾವದೊಂದಿಗೆ ಮುಂದೊಂದು ದಿನ ಉಸಿರಾಡುವಂತಹ ಆಮ್ಲಜನಕ ಗಾಳಿಗಾಗಿ ಹೋರಾಟವನ್ನು ಮಾಡಬೇಕಾದಂತಹ ಅನಿವಾರ್ಯತೆ ಎದುರಾಗಬಹುದಾಗಿದೆ, ಆದ್ದರಿಂದ ಪ್ರತಿಯೊಂದು ಹಳ್ಳಿಗಳಲ್ಲಿ ಖಾಲಿಯಾಗಿರುವ ಸರ್ಕಾರಿ ಭೂಮಿಗಳು, ರೈತರುಗಳ ಜಮೀನಿನ ಬದುಗಳು ಸೇರಿದಂತೆ ಸಾಧ್ಯವಿರುವಷ್ಟು ಮರಗಿಡಗಳನ್ನು ಬೆಳೆಸುವಂತಹ ಕಾರ್ಯಕ್ಕೆ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಬೈಯಪ್ಪನಹಳ್ಳಿ, ಕುದುಪಕುಂಟೆ, ನಲ್ಲೋಜನಹಳ್ಳಿ ಗ್ರಾಮಗಳಿಂದ ಬಂದಿದ್ದ ನಾಗರೀಕರು ೩೦೦ ಕ್ಕೂ ಅಧಿಕವಾದ ಸಸಿಗಳನ್ನು ನೆಟ್ಟು ನೀರೆರದರು.
ಪ್ರಾಂಶುಪಾಲ ನಾರಾಯಣಸ್ವಾಮಿ, ಶಿವಕುಮಾರ್, ಶಿವಪ್ರಕಾಶ್, ನಾಗರಾಜು, ಶ್ರೀರಾಮ್ ಮತ್ತಿತರರು ಹಾಜರಿದ್ದರು.
ಸರ್ಕಾರದ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು
ಹಳ್ಳಿಗಳ ಅಭಿವೃದ್ಧಿಗಾಗಿ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದ್ದು, ನಾಗರಿಕರು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗಂಗನಹಳ್ಳಿ ಗ್ರಾಮದಲ್ಲಿ ಭಾನುವಾರ ಶಾಸಕರ ಅನುದಾನದ ೫ ಲಕ್ಷ ರೂಪಾಯಿಗಳು ಹಾಗೂ ಕೃಷ್ಣ ಮೇಲ್ದಂಡೆ ಯೋಜನೆಯಡಿಯಲ್ಲಿ ೫ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆಯ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಚರಂಡಿಗಳು, ಹಾಗೂ ರಸ್ತೆಗಳನ್ನು ಒದಗಿಸುವಂತಹ ಕೆಲಸಕ್ಕೆ ಮೊದಲ ಆದ್ಯತೆಯನ್ನು ನೀಡಲಾಗುತ್ತಿದೆ. ಕ್ಷೇತ್ರದ ಎಲ್ಲಾ ಹಳ್ಳಿಗಳಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುತ್ತಿದ್ದು, ತಾಲ್ಲೂಕಿನಾದ್ಯಂತ ಸುಮಾರು ೯೦ ಹಳ್ಳಿಗಳಲ್ಲಿ ಎಸ್.ಸಿ.ಪಿ.ಮತ್ತು ಎಸ್.ಟಿ.ಪಿ ಯೋಜನೆಯಡಿಯಲ್ಲಿ ಸಿ.ಸಿ.ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ಜಿಲ್ಲಾಡಳಿತದೊಂದಿಗೆ ನಿರಂತರವಾಗಿ ಸಂರ್ಪಕ ಸಾಧಿಸಿ ಕುಡಿಯುವ ನೀರಿನ ಬವಣೆಯನ್ನು ನೀಗಿಸುವಂತಹ ಪ್ರಯತ್ನವನ್ನು ಮಾಡಲಾಗುತ್ತಿದೆ. ಗುಣಮಟ್ಟದಲ್ಲಿ ಯಾವುದೇ ರೀತಿಯ ಲೋಪದೋಷಗಳು ಕಂಡು ಬಂದಲ್ಲಿ ಗುತ್ತಿಗೆದಾರರ ಮೇಲೆ ಕ್ರಮ ಜರುಗಿಸಲಾಗುತ್ತದೆ. ಗುಣಮಟ್ಟದಲ್ಲಿ ಗ್ರಾಮಸ್ಥರು ರಾಜೀಯಾಗಬಾರದು ಎಂದು ಹೇಳಿದರು.
ಈಗಾಗಲೇ ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಲಾಗಿದ್ದು, ರಾಜ್ಯದ ಕಂದಾಯ ಸಚಿವರು, ಕೃಷಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚೆ ನಡೆಸಿ, ೧೧ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳ ಮಟ್ಟದ ಅಧಿಕಾರಿಗಳು ಹಾಗೂ ಎಲ್ಲಾ ಶಾಸಕರ ಸಭೆಯನ್ನು ಕರೆದು ಚರ್ಚೆ ಮಾಡಿದ್ದಾರೆ. ಕ್ಷೇತ್ರದ ಸಮಸ್ಯೆಗಳಾದ ಕುಡಿಯುವ ನೀರು, ದನಕರುಗಳಿಗೆ ಮೇವುಗಳ ಸರಬರಾಜು ಮುಂತಾದ ಸಮಸ್ಯೆಗಳ ಬಗ್ಗೆ ವಿವರಿಸಿದ್ದೇವೆ ಎಂದು ಹೇಳಿದರು.
ಕೋಚಿಮುಲ್ ನಿರ್ದೇಶಕ ಬಂಕ್ಮುನಿಯಪ್ಪ, ಗ್ರಾಮ ಪಂಚಾಯತಿ ಅಧ್ಯಕ್ಷೆ ಜಮುನಾಧರ್ಮೇಂದ್ರ, ಉಪಾಧ್ಯಕ್ಷ ಆಂಜನೇಯರೆಡ್ಡಿ, ಮಾಜಿ ಅಧ್ಯಕ್ಷರಾದ ಕೆ.ಮಂಜುನಾಥ್,ಆರ್.ಎ.ಉಮೇಶ್, ಮುಖಂಡರಾದ ರಾಮಾಂಜಿನಪ್ಪ, ರಾಮಣ್ಣ, ನಾಗರಾಜು, ನಾರಾಯಣಪ್ಪ, ದೇವರಾಜು, ಮುನೇಗೌಡ, ಚಿಕ್ಕದ್ಯಾವಪ್ಪ, ಮಂಜುನಾಥ್, ಮೂರ್ತಿ, ಕೃಷ್ಣಮೂರ್ತಿ, ನಾರಾಯಣಸ್ವಾಮಿ, ವೆಂಕಟರೆಡ್ಡಿ, ಶಶಿಕುಮಾರ್, ಪಿಳ್ಳೇಗೌಡ, ಗೋಪಾಲಪ್ಪ, ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.
ಮುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೀರಿನ ಉಳಿತಾಯಕ್ಕಾಗಿ ವಿವಿಧ ಕ್ರಮಗಳು
ನೀರಿನ ಉಳಿತಾಯ ಮತ್ತು ಸದ್ಭಳಕೆ ನಮ್ಮ ಭಾಗದ ಜನರೆಲ್ಲಾ ಅಳವಡಿಸಿಕೊಳ್ಳಬೇಕಾದ ಅತ್ಯವಶ್ಯ ಸಂಗತಿಯಾಗಿದೆ. ಅದರಲ್ಲೂ ಗ್ರಾಮಾಂತರ ಪ್ರದೇಶಗಳಲ್ಲಿ ಜನ ಮತ್ತು ಜಾನುವಾರುಗಳಿಗೆ ಬೇಸಿಗೆ ಬಂತೆದರೆ ನೀರಿಗೆ ಆಹಾಕಾರ ಎದುರಾಗುತ್ತದೆ. ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟದ ವ್ಯವಸ್ಥೆಗೆ ಸಾಕಷ್ಟು ನೀರಿನ ಅಗತ್ಯತೆ ಇರುತ್ತದೆ. ಈ ಸಂದರ್ಭದಲ್ಲಿ ನೀರನ್ನು ಉಳಿಸುತ್ತಾ ಸದುಪಯೋಗಪಡಿಸಿಕೊಳ್ಳುವತ್ತ ತಾಲ್ಲೂಕಿನ ಸರ್ಕಾರಿ ಶಾಲೆಯೊಂದು ಇತರರಿಗೆ ಮಾದರಿಯಾಗಿದೆ.
ತಾಲ್ಲೂಕಿನ ಮುತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ನೀರನ್ನು ಪುನರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
‘ಸಂಚಾರಿ ಕೈತೊಳೆಯುವ ಹಾಗೂ ನೀರಿನ ಪುನರ್ಬಳಕೆಯ ಘಟಕ’ವನ್ನು ಕೇವಲ 800 ರೂಗಳಷ್ಟು ಖರ್ಚು ಮಾಡಿ ರೂಪಿಸಿದ್ದಾರೆ. ಮಕ್ಕಳು ಬೆಳಿಗ್ಗೆ ಹಾಲು ಕುಡಿದ ಲೋಟ, ಊಟ ಮಾಡಿದ ತಟ್ಟೆಯನ್ನು ತೊಳೆದ ನೀರು ಶೇಖರಣೆಯಾಗುವಂತೆ ಈ ಘಟಕವನ್ನು ತಯಾರಿಸಿದ್ದಾರೆ. ತಟ್ಟೆಯಲ್ಲಿನ ಉಳಿಕೆ ತರಕಾರಿ, ಅನ್ನ ಮುಂತಾದವುಗಳು ಡ್ರಮ್ಗೆ ಹೋಗದಂತೆ ಪ್ಲಾಸ್ಟಿಕ್ ಜಾಲರಿ ಅಳವಡಿಸಲಾಗಿದೆ. ಈ ಜಾಲರಿ ತುಂಬುತ್ತಿದ್ದಂತೆ ಮಕ್ಕಳು ಊಟದಲ್ಲಿನ ಉಳಿಕೆ ಪದಾರ್ಥವನ್ನು ಗೋಬರ್ ಗ್ಯಾಸ್ ಘಟಕಕ್ಕೆ ವರ್ಗಾಯಿಸುತ್ತಾರೆ.
ಶಾಲೆಯಲ್ಲಿನ ‘ಬಯೋಗ್ಯಾಸ್’ ಘಟಕ ನೀರಿನ ಘಟಕಕ್ಕೆ ಪೂರಕವಾಗಿದೆ. ಆಹಾರ ತ್ಯಾಜ್ಯದ ಸದ್ಭಕೆಯ ಮೂಲಕ ಮಕ್ಕಳಿಗೆ ನೀಡುವ ಹಾಲು ಕುದಿಸಲು ಅನಿಲದ ಉತ್ಪಾದನೆ ಇದರಿಂದ ನಡೆದಿದೆ.
‘ನಮ್ಮಲ್ಲಿ ಮೂರು ದಿನಗಳಿಗೊಮ್ಮೆ ನೀರು ಬರುತ್ತದೆ. ಹಾಗಾಗಿ ನೀರು ನಮಗೆ ಅತ್ಯಮೂಲ್ಯ. ಆದಷ್ಟು ಕಡಿಮೆ ನೀರನ್ನು ಬಳಸಬೇಕು ಮತ್ತು ಪೋಲಾಗದಂತೆ ನೋಡಿಕೊಳ್ಳಬೇಕಿದೆ. ‘ಸಂಚಾರಿ ಕೈತೊಳೆಯುವ ಹಾಗೂ ನೀರಿನ ಪುನರ್ಬಳಕೆಯ ಘಟಕ’ ಮತ್ತು ‘ಬಯೋಗ್ಯಾಸ್’ ಘಟಕವನ್ನು ಕಡಿಮೆ ಖರ್ಚಿನಲ್ಲಿ ರೂಪಿಸಲಾಗಿದೆ. ‘ನಮ್ಮ ಮುತ್ತೂರು’ ಸಂಸ್ಥೆಯವರು ಬೆಂಗಳೂರಿನ ರೀಪ್ ಬೆನಿಫಿಟ್ ಎಂಬ ಸಂಸ್ಥೆಯವರನ್ನು ಕರೆಸಿ ನೀರಿನ ಮತ್ತು ತ್ಯಾಜ್ಯದ ಸದ್ಭಳಕೆ, ಶಕ್ತಿಯ ಉತ್ಪಾದನೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿ ಅವರಿಂದಲೇ ಈ ಘಟಕಗಳನ್ನು ರೂಪಿಸಿದ್ದಾರೆ. ಮಕ್ಕಳಿಗೆ ಹಾಲು ಕುದಿಸಿ ನೀಡಲು ನಾವು ವಿದ್ಯುತ್ ಅವಲಂಬಿಸಿಲ್ಲ. ಇದರಿಂದ ವಿದ್ಯಾರ್ಥಿಗಳು ನೀರಿನ ಉಪಯೋಗಗಳು ಮತ್ತು ಬಯೋಗ್ಯಾಸ್ ಬಗ್ಗೆ ಪ್ರಾಯೋಗಿಕವಾಗಿ ಅರ್ಥೈಸಿಕೊಳ್ಳುವಂತಾಗಿದೆ. ಅತ್ಯಂತ ಕಡಿಮೆ ಖರ್ಚಿನಲ್ಲಿ ಯಾರು ಬೇಕಾದರೂ ಇದನ್ನು ರೂಪಿಸಿಕೊಳ್ಳಬಹುದು. ಇದರಿಂದ ಸಾಕಷ್ಟು ನೀರಿನ ಉಳಿತಾಯವಿದೆ. ಯಾವುದೇ ಶಾಲೆಯವರು ಇಷ್ಟಪಟ್ಟಲ್ಲಿ ಇದನ್ನು ತಯಾರಿಸಲು ನಾವು ಮಾರ್ಗದರ್ಶನ ಮಾಡಲು ಸಿದ್ಧರಿದ್ದೇವೆ’ ಎನ್ನುತ್ತಾರೆ ಮುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವಿ.ಪ್ರಭಾಕರ.
–ಡಿ.ಜಿ.ಮಲ್ಲಿಕಾರ್ಜುನ
ಗ್ರಾಮ ನೈರ್ಮಲ್ಯ ಮತ್ತು ಹಸಿರು ಜಾಗೃತಿ ಅಭಿಯಾನ
ತಾಲ್ಲೂಕಿನ ವಿವಿಧ ಸರ್ಕಾರಿ ಶಾಲೆಗಳಲ್ಲಿ ಬುಧವಾರ ಪೌರಪ್ರಜ್ಞೆ ಜಾಗೃತಿಗಾಗಿ ವಿದ್ಯಾರ್ಥಿ ಸಂಘಗಳ ರಚನೆ ಹಾಗೂ ಗ್ರಾಮ ನೈರ್ಮಲ್ಯ ಮತ್ತು ಹಸಿರು ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಪರಿಸರವಾದಿ ಹಾಗೂ ಲೋಕ ಅದಾಲತ್ ಸದಸ್ಯ ಡಾ. ಅ. ನ.ಯಲ್ಲಪ್ಪ ರೆಡ್ಡಿ ಚಾಲನೆ ನೀಡಿದರು.
ಪೌರ ಪ್ರಜ್ಞೆಗಾಗಿ ಮಕ್ಕಳ ಚಳುವಳಿ (ಸಿಎಮ್ಸಿಎ) ಮತ್ತು ‘ನಮ್ಮ ಮುತ್ತೂರು’ ಸಂಸ್ಥೆಯ ವತಿಯಿಂದ ಮೇಲೂರು, ಮುತ್ತೂರು ಸರ್ಕಾರಿ ಪ್ರೌಢಶಾಲೆಗಳಲ್ಲಿ ಮತ್ತು ಮಳ್ಳೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ನೈರ್ಮಲ್ಯ ಕಾರ್ಯಕ್ರಮವನ್ನು ನಡೆಸಿ, ಬಳುವನಹಳ್ಳಿಯ ಶ್ರೀ ಸೀತಾರಾಮ ವಿದ್ಯಾಚಂದ್ರ ಸಂಸ್ಥೆಯ ವತಿಯಿಂದ ಹಸಿರು ಅಭಿಯಾನವನ್ನು (ಸಸ್ಯಗಳನ್ನು ನೆಡುವ ಕಾರ್ಯಕ್ರಮ) ಹಮ್ಮಿಕೊಳ್ಳಲಾಗಿತ್ತು,
ಕಾರ್ಯಕ್ರಮದಲ್ಲಿ ೩ ಸರ್ಕಾರಿ ಶಾಲೆಗಳಿಂದ ಸುಮಾರು ೧೫೦ ಸಿ.ಎಂ.ಸಿ.ಎ ಪೌರಕ್ಲಬ್ ಸದಸ್ಯರು ಮತ್ತು ಇತರೆ ೬೦ ಸದಸ್ಯರು ಗ್ರಾಮ ನೈರ್ಮಲ್ಯದ ಬಗ್ಗೆ ಅರಿವನ್ನು ಮೂಡಿಸಲು ಗ್ರಾಮದಲ್ಲಿ ಜಾಥ ನಡೆಸಿದರು. ಸುಮಾರು ೬೦೦ ಸಸ್ಯಗಳನ್ನು ಬಳುವನ ಹಳ್ಳಿ ಗ್ರಾಮದಲ್ಲಿ ನೆಡಿಸಲಾಯಿತು.
ಡಾ. ಅ. ನ.ಯಲ್ಲಪ್ಪ ರೆಡ್ಡಿ ಅವರು ಔಷಧಿ ಸಸ್ಯಗಳಾದ ಸರಸ್ವತಿ, ಬಕುಳ, ನಾಗದಾಳಿ, ಶಂಖಪುಷ್ಪಿ, ಚಕ್ರಮುನಿ ಮುಂತಾದವುಗಳ ಮಹತ್ವವನ್ನು ಮತ್ತು ಅದರಿಂದಾಗುವ ಉಪಯೋಗವನ್ನು ಮಕ್ಕಳಿಗೆ ತಿಳಿಸಿದರು. ಪ್ರತಿ ಮನೆಯಲ್ಲಿ ಮತ್ತು ಶಾಲೆಯಲ್ಲಿ ಮಕ್ಕಳು ಸಸ್ಯಗಳನ್ನು ನೆಟ್ಟು ಬೆಳೆಸಬೇಕೆಂದು ಮನವಿ ಮಾಡಿ, ಮಕ್ಕಳಲ್ಲಿ ಮತ್ತು ಶಿಕ್ಷಕರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಿದರು, ಮಕ್ಕಳು ಸಕ್ರಿಯ ನಾಗರಿಕರಾಗುವಲ್ಲಿ ಶಿಕ್ಷಕರ ಪಾತ್ರ ಎಷ್ಟು ಮುಖ್ಯ ಎಂಬುದನ್ನು ಕಥೆಗಳ ರೂಪದಲ್ಲಿ ವಿವರಿಸಿದರು.
ಈ ಸಂದರ್ಭದಲ್ಲಿ ೨೦೧೪ ರಲ್ಲಿ ಸಕ್ರಿಯ ನಾಗರಿಕರಾಗಿ ಕಾರ್ಯವನ್ನು ಮಾಡಿದ ಮಕ್ಕಳಿಗೆ ಸ್ಮರಣಿಕೆಯನ್ನು ನೀಡಿವುದರ ಮೂಲಕ ಉತ್ತೇಜಿಸಲಾಯಿತು.
ಜಿಲ್ಲಾ ಸ್ವಚ್ಛಭಾರತ್ ಮಿಶನ್ನ ಸಂಯೋಜಕರಾದ ನರಸಿಂಹಮೂರ್ತಿ, ಸುಮ, ಭಾಸ್ಕರ್, ಗ್ರಾಮ ನೈರ್ಮಲ್ಯಕ್ಕೆ ಶೌಚಾಲಯದ ಮಹತ್ವದ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು. ಮಕ್ಕಳಲ್ಲಿ ಸಮಾಜದ ಬಗ್ಗೆ ಮತ್ತು ಪರಿಸರದ ಬಗ್ಗೆ ಅರಿವು ಮೂಡಿಸುವಲ್ಲಿ ಪೋಷಕರ ಪಾತ್ರ ಎಷ್ಟು ಮುಖ್ಯವೆಂಬುವುದನ್ನು ತಿಳಿಸಿಕೊಟ್ಟರು. ಇದರಿಂದ ಪ್ರೇರಿತರಾಗಿ ಈ ಸಂದರ್ಭದಲ್ಲಿ ೩೧ ಮಕ್ಕಳು ಶೌಚಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದರು.
ಮೇಲೂರು ಶಾಲೆಯ ಮುಖ್ಯಶಿಕ್ಷಕಿ ಮಂಗಳಗೌರಮ್ಮ, ಮಳ್ಳೂರು ಶಾಲಾ ಶಿಕ್ಷಕ ಅಶ್ವಥ್, ಸಿ.ಎಂ.ಸಿ.ಎ. ಸಂಸ್ಥೆಯ ನಿರ್ವಾಹಕ ಟ್ರಸ್ಟಿ ಪ್ರಿಯಾಕೃಷ್ಣಮೂರ್ತಿ, ಸಿ.ಎಂ.ಸಿ.ಎ. ಸಂಸ್ಥೆಯ ಸರ್ಕಾರಿ ಶಾಲಾ ಕಾರ್ಯಕ್ರಮದ ಸಂಯೋಜಕ ಮರುಳಪ್ಪ, ನಮ್ಮ ಮುತ್ತೂರು ಸಂಸ್ಥೆಯ ಉಷಾಶೆಟ್ಟಿ, ಶೇಂಗಾನ್ ದಾಸ್ಗುಪ್ತ, ಬಳುವನಹಳ್ಳಿಯ ಶ್ರೀ ಸೀತಾರಾಮ ವಿದ್ಯಾಚಂದ್ರ ಸಂಸ್ಥೆಯ ಮೇಲ್ವಿಚಾರಕರಾದ ವೇಣುಗೋಪಾಲ್, ಮೇನಕ, ಶಾಲೆಯ ಮುಖ್ಯೋಪಾಧ್ಯಯ ಸುರೇಶ್ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಇಲಾಖೆಗಳಲ್ಲಿ ಸಿಗುವಂತಹ ಸೌಲಭ್ಯಗಳ ಮಾಹಿತಿ ನೀಡಿ
ಸರ್ಕಾರದಿಂದ ಬಿಡುಗಡೆಯಾಗುವಂತಹ ಅನುದಾನಗಳನ್ನು ಸಮರ್ಪಕವಾಗಿ ಬಳಕೆ ಮಾಡುವಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಡಿ.ಎಸ್.ಎನ್.ರಾಜು ಹೇಳಿದರು.
ನಗರದ ತಾಲ್ಲೂಕು ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ಗುರುವಾರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಆಂಜಿನಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗಳಲ್ಲಿ ಸಿಗುವಂತಹ ಸೌಲಭ್ಯಗಳ ಬಗ್ಗೆ ನಾಗರಿಕರಿಗೆ ತಿಳಿಸಬೇಕು. ಕೃಷಿ ಇಲಾಖೆಯಲ್ಲಿ ಕೃಷಿಭಾಗ್ಯ ಯೋಜನೆಯಡಿಯಲ್ಲಿ ಈಗಾಗಲೇ ಫಲಾನುಭವಿಗಳನ್ನು ಲಾಟಿರಿಯ ಮೂಲಕ ತಾಲ್ಲೂಕಿನಲ್ಲಿ ಒಟ್ಟು ೬೦೦ ಮಂದಿಯನ್ನು ಪ್ರತಿ ಹೋಬಳಿಗೆ ೧೫೦ ಮಂದಿಯಂತೆ ಆಯ್ಕೆಮಾಡಲಾಗಿದೆ. ಕಳೆದ ವರ್ಷದಲ್ಲಿ ನಿಗದಿ ಪಡಿಸಲಾಗಿದ್ದ ಕೃಷಿಭಾಗ್ಯ ಯೋಜನೆಯ ಕೃಷಿ ಹೊಂಡಗಳನ್ನು ರೈತರು ನಿರ್ಮಾಣ ಮಾಡಿಕೊಂಡಿದ್ದಾರೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಅಧಿಕಾರಿ ಲಕ್ಷ್ಮೀದೇವಮ್ಮ ಮಾತನಾಡಿ, ತಾಲ್ಲೂಕಿನಲ್ಲಿ ಶಿಥಿಲವಾಗಿರುವ ಅಂಗನವಾಡಿ ಕೇಂದ್ರಗಳನ್ನು ದುರಸ್ಥಿ ಮಾಡಲು ೭ ಲಕ್ಷ ರೂಪಾಯಿಗಳ ಅನುದಾನ ಬಿಡುಗಡೆಯಾಗಿದೆ. ಶಾಲಾ ಪೂರ್ವ ಮಕ್ಕಳ ಊಟದ ಯೋಜನೆಯಡಿಯಲ್ಲಿ (ಎನ್.ಎಸ್.ಪಿ) ೫ ಕೋಟಿ ರೂಪಾಯಿಗಳ ಅನುದಾನ ಲಭ್ಯವಿದೆ. ಸಮಗ್ರ ಶಿಶು ಅಭಿವೃದ್ಧಿ ಸೇವೆಗಾಗಿ ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿ ೮೬ ಲಕ್ಷ ೫೭ ಸಾವಿರ ರೂಪಾಯಿಗಳ ಅನುದಾನ, ಶಿಶುಪಾಲನಾ ಕೇಂದ್ರಗಳ ನಿರ್ವಹಣೆಗಾಗಿ ೧ ಲಕ್ಷ ೩೩ ಸಾವಿರ ರೂಪಾಯಿಗಳ ಅನುದಾನ ಲಭ್ಯವಿದೆ ಎಂದು ಸಭೆಗೆ ತಿಳಿಸಿದರು.
ಶಿಶುಪಾಲನಾ ಕೇಂದ್ರಗಳನ್ನು ಕಳೆದ ೨ ವರ್ಷಗಳಲ್ಲಿ ಮುಚ್ಚಲಾಗಿದ್ದು, ತಾಲ್ಲೂಕಿನಲ್ಲಿ ಎಲ್ಲಿಯೂ ಕೂಡಾ ಶಿಶುಪಾಲನಾ ಕೇಂದ್ರಗಳು ನಡೆಯುತ್ತಿಲ್ಲ. ಈ ಹಿಂದೆ ನಡೆದಂತಹ ಕೇಂದ್ರಗಳ ನಿರ್ವಹಣೆಯನ್ನು ಸರ್ಕಾರೇತರ ಸಂಸ್ಥೆಗಳು ವಹಿಸಿಕೊಂಡಿದ್ದರಿಂದ ಸರಿಯಾದ ನಿರ್ವಹಣೆ ಮಾಡದೇ ಕೊನೆಯ ಹಂತದಲ್ಲಿ ನಮ್ಮ ಮೇಲೆ ಒತ್ತಡ ಹೇರಿ ಬಿಲ್ಲುಗಳನ್ನು ಮಾಡಿಸಿಕೊಳ್ಳುತ್ತಾರೆ. ಹಾಗಾಗಿ ತಾಲ್ಲೂಕಿನಲ್ಲಿ ಎಲ್ಲಿಯೂ ಶಿಶುಪಾಲನಾ ಕೇಂದ್ರಗಳು ನಡೆಯುತ್ತಿಲ್ಲ. ಆದರೆ ಲಿಂಕ್ ಡಾಕ್ಯುಮೆಂಟ್ನಲ್ಲಿ ಬಿಡುಗಡೆಯಾಗುತ್ತಿರುವ ಅನುದಾನವನ್ನು ಸರ್ಕಾರಕ್ಕೆ ಪುನಃ ವಾಪಸ್ಸು ಕಳುಹಿಸಲಾಗುತ್ತಿದೆ ಎಂದರು.
ತಾಲ್ಲೂಕಿನಲ್ಲಿ ಅಗತ್ಯವಾಗಿರುವ ಕಡೆಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ತೆರದು ಈ ಅನುದಾನವನ್ನು ಬಳಕೆ ಮಾಡಿಕೊಳ್ಳುವಂತೆ ಸದಸ್ಯರು ಅಧಿಕಾರಿಗಳಿಗೆ ತಿಳಿಸಿದರು.
ರೇಷ್ಮೆ ಇಲಾಖೆಯಿಂದ ಈಗಾಗಲೇ ರೈತರಿಗೆ ಹನಿನೀರಾವರಿ ಪದ್ದತಿಗೆ ಬಿಡುಗಡೆಯಾಗಿರುವ ಅನುದಾನಗಳನ್ನು ಸಮರ್ಪಕವಾಗಿ ವಿತರಣೆ ಮಾಡಲಾಗಿದೆ ಮತ್ತು ಹುಳು ಸಾಕಾಣಿಕೆ ಮಾಡುವಂತಹ ರೈತರುಗಳಿಗೆ ಸೋಲಾರ್ ದೀಪಗಳನ್ನು ವಿತರಣೆ ಮಾಡಲಾಗುತ್ತಿದೆ. ಕಳೆದ ತಿಂಗಳಿನಲ್ಲಿ ರೇಷ್ಮೆಯ ಬೆಲೆಗಳು ಕುಸಿತವಾಗಿದ್ದರಿಂದ ರೈತರು ಕಂಗಾಲಾಗಿದ್ದು, ರಾಜ್ಯ ಸರ್ಕಾರದಿಂದ ಈಗಾಗಲೇ ಅಧ್ಯಯನ ತಂಡದಿಂದ ಸಮೀಕ್ಷೆಯನ್ನು ಮಾಡಲಾಗಿದೆ ಎಂದು ರೇಷ್ಮೆ ಇಲಾಖೆ ಕೃಷಿ ವಿಸ್ತರಣಾಧಿಕಾರಿ ಎಂ.ನಾರಾಯಣಸ್ವಾಮಿ ಹೇಳಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಆಂಜಿನಮ್ಮ, ಕಾರ್ಯನಿರ್ವಾಹಕ ಅಧಿಕಾರಿ ಗಣಪತಿ ಸಾಕರೆ, ಜಿಲ್ಲಾ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಎಇಇ ಶಿವಾನಂದ, ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
ಸಂಗೀತ ಸುಧೆಯ ಮೂಲಕ ಗೌರವ ಸಲ್ಲಿಕೆ
ಅನಾರೋಗ್ಯದಿಂದ ಅಸ್ವಸ್ಥರಾಗಿರುವ ಹಿರಿಯ ಕಲಾವಿದರಿಗೆ ವಿವಿಧ ಕಲಾವಿದರು ಸಂಗೀತ ಸುಧೆಯ ಮೂಲಕ ಗೌರವ ಸಲ್ಲಿಸಿದ ವಿಶಿಷ್ಠ ಘಟನೆ ತಾಲ್ಲೂಕಿನ ಚೀಮನಹಳ್ಳಿಯಲ್ಲಿ ಬುಧವಾರ ಸಂಜೆ ನಡೆದಿದೆ.
ತಾಲ್ಲೂಕಿನ ಚೀಮನಹಳ್ಳಿಯ ತಬಲಾ ಕಲಾವಿದ ಸಿ.ಎಂ.ಕೃಷ್ಣಪ್ಪ ತಮ್ಮ ಹದಿನೈದನೇ ವಯಸ್ಸಿನಿಂದಲೇ ತಬಲಾ ಮತ್ತು ಘಟಂ ನುಡಿಸಲು ಅಭ್ಯಾಸ ನಡೆಸಿದ್ದರು. ಹರಿಕಥೆ, ಭಜನೆ, ನಾಟಕಗಳಲ್ಲಿ ತಬಲಾ ಮತ್ತು ಘಟಂ ನುಡಿಸುತ್ತಾ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಕುಸ್ತಿಪಟವೂ ಆಗಿದ್ದ ಇವರು ದಸರಾದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನೂ ಪಡೆದಿದ್ದರು.
74 ವರ್ಷ ವಯಸ್ಸಿನ ಹಿರಿಯ ಕಲಾವಿದ ಸಿ.ಎಂ.ಕೃಷ್ಣಪ್ಪ ಅನಾರೋಗ್ಯದಿಂದ ಅಸ್ವಸ್ಥರಾಗಿರುವುದನ್ನು ತಿಳಿದ ತಾಲ್ಲೂಕಿನ ಪುರಂದರ ಸಂಗೀತ ಕಲಾ ಬಳಗದ ಕಲಾವಿದರು ಅವರ ಸ್ವಗೃಹದಲ್ಲಿ ಸನ್ಮಾನಿಸಿ ಗೌರವಿಸಿದರು. ‘ಸಂಗೀತ ಕಲಾ ಕುಸುಮ’ ಎಂಬ ಬಿರುದು ನೀಡಿ ಗೌರವಿಸಿದಲ್ಲದೆ, ಕಲಾವಿದರು ವಾದ್ಯ ಸಂಗೀತದೊಂದಿಗೆ ಗೌರವ ಸಲ್ಲಿಸಿದರು.
ಪಿಟೀಲು ವಿದ್ವಾನ್ ಜಿ.ಎನ್.ಶ್ಯಾಮಸುಂದರ್, ಮುನಿರೆಡ್ಡಿ, ವೆಂಕಟರಾಯಪ್ಪ, ಹನುಮಪ್ಪ, ತಮ್ಮಣ್ಣ, ಮುನಿಬೈರಪ್ಪ, ಶಿವಶಂಕರ, ಶೆಟ್ಟಿಹಳ್ಳಿ ಸೀನಪ್ಪ, ಅಬ್ಲೂಡು ಬೈರಪ್ಪ ಮತ್ತು ಅಕ್ಕಪಕ್ಕದ ಗ್ರಾಮದ ಕಲಾವಿದರು ಈ ಸಂದರ್ಭದಲ್ಲಿ ಹಾಜರಿದ್ದರು.
ತಾಲ್ಲೂಕಿನ ಅಭಿವೃದ್ಧಿಗೆ ಯುವಕರು ಕಟಿಬದ್ಧರು
ರೇಷ್ಮೆ ಮತ್ತು ಹಾಲಿಗೆ ಪ್ರಸಿದ್ಧಿ ಪಡೆದಿರುವ ತಾಲ್ಲೂಕಿನ ಸಾಹಿತ್ಯ, ಸಂಸ್ಕೃತಿ, ಕ್ರೀಡೆ, ಶಿಕ್ಷಣ, ಸಾಮಾಜಿಕ, ವ್ಯವಹಾರಿಕ ಹಾಗೂ ಆಡಳಿತಾತ್ಮಕ ವಿಕಾಸಕ್ಕೆ ಅನೇಕ ಮಹನೀಯರು ಕಾರಣರಾಗಿದ್ದಾರೆ ಎಂದು ಐದನೇ ತಾಲ್ಲೂಕು ಸಾಹಿತ್ಯ ಸಮ್ಮೇಳದ ಸಮ್ಮೇಳನಾಧ್ಯಕ್ಷ ಎನ್.ಶಿವಣ್ಣ ತಿಳಿಸಿದರು.
ನಗರದ ವಾಸವಿ ಕಲ್ಯಾಣ ಮಂಟಪದ ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆಯಲ್ಲಿ ಬುಧವಾರ ನಡೆದ ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಸನ್ಮಾನ ಹಾಗೂ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಈಗಲೂ ಯುವಕರು, ಚೇತನಾಶೀಲರು, ಉತ್ಸಾಹಿಗಳು, ಸಾಧಕರು, ಬದ್ಧತೆ ಉಳ್ಳವರು ನಾಡು, ನುಡಿ, ಜಲ, ಶಿಕ್ಷಣ, ಆರೋಗ್ಯ, ಕೃಷಿಗಳ ಅಭಿವೃದ್ಧಿ ಕಡೆ ಶ್ರಮಿಸುತ್ತಾ ತಾಲ್ಲೂಕಿಗೆ ಕೀರ್ತಿ ತರುತ್ತಿರುವುದು ಸಕಾರಾತ್ಮಕ ಸಂಗತಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ತಾಲ್ಲೂಕಿನ ಒಂಭತ್ತು ಮಂದಿಯನ್ನು ಸನ್ಮಾನಿಸಲಾಯಿತು. ಡಿ.ವೆಂಕಟಟಾಚಲಪತಿರಾವ್(ನಿವೃತ್ತ ಶಿಕ್ಷಕ), ಎನ್.ಕೆ.ಗುರುರಾಜರಾವ್(ದಾಖಲೆ ರಕ್ತದಾನ ಶಿಬಿರಗಳ ರೂವಾರಿ), ಸ್ನೇಕ್ ನಾಗರಾಜ್(ಉರಗ ತಜ್ಞ, ಪರಿಸರ ಪ್ರೇಮಿ), ಎಸ್.ಕಲಾಧರ್(ಶಿಕ್ಷಕ, ಮಕ್ಕಳ ಪುಸ್ತಕಗಳ ಸಂಪಾದಕ), ಮುನಿರಾಜು(ಕ್ರೀಡಾ ತರಬೇತುದಾರ), ಭವಾನಿಸಿಂಗ್(ನಿವೃತ್ತ ಯೋಧ), ಮುರಳೀಕೃಷ್ಣ(ಪುಸ್ತಕ ಮಾರಾಟಗಾರ), ಕಾಚಹಳ್ಳಿ ರತ್ನಮ್ಮ(ಭಾರತಾಂಬೆ ಮಹಿಳಾ ರೈತಕೂಟದ ಅಧ್ಯಕ್ಷೆ), ನಾರಾಯಣದಾಸರಹಳ್ಳಿ ಟಿ.ಕೃಷ್ಣಪ್ಪ(ಪ್ರಗತಿಪರ ರೈತ).
ಕ.ಸಾ.ಪ ಜಿಲ್ಲಾ ಅಧ್ಯಕ್ಷ ವೈ.ಎಲ್.ಹನುಮಂತರಾವ್, ನಿಕಟಪೂರ್ವ ಸಮ್ಮೇಳಣಾಧ್ಯಕ್ಷ ಡಾ.ಡಿ.ಟಿ.ಸತ್ಯನಾರಾಯಣರಾವ್, ನಿಕಟಪೂರ್ವ ಜಿಲ್ಲಾಧ್ಯಕ್ಷ ಎಸ್.ವಿ.ನಾಗರಾಜರಾವ್, ತಾಲ್ಲೂಕು ಅಧ್ಯಕ್ಷ ಕೃ.ನಾ.ಶ್ರೀನಿವಾಸಮೂರ್ತಿ, ಜಿಲ್ಲಾ ಕ.ಸಾ.ಪ ಗೌರವ ಕಾರ್ಯದರ್ಶಿಗಳಾದ ಅಮೃತಕುಮಾರ್, ಮಂಚನಬಲೆ ಶ್ರೀನಿವಾಸ್, ವಿ.ಕೃಷ್ಣ, ಮಂಜುನಾಥ್, ಅನಂತಕೃಷ್ಣ, ಗುರುರಾಜರಾವ್ ಮತ್ತಿತರರು ಹಾಜರಿದ್ದರು.
ಗ್ರಾಮ ಪಂಚಾಯತಿಯ ಚುನಾವಣಾ ಫಲಿತಾಂಶ
ಬಾಕಿ ಉಳಿದುಕೊಂಡಿದ್ದ ಸ್ಥಳೀಯ ಸಂಸ್ಥೆ ಗ್ರಾಮ ಪಂಚಾಯತಿಯ ೩೧ ಸ್ಥಾನಗಳಿಗೆ ಭಾನುವಾರ ನಡೆದಿದ್ದ ಚುನಾವಣೆಯ ಮತ ಎಣಿಕೆ ಬುಧವಾರ ನಡೆಯಿತು.
ತಾಲ್ಲೂಕಿನ ಅಬ್ಲೂಡು, ಈ.ತಿಮ್ಮಸಂದ್ರ ಗ್ರಾಮ ಪಂಚಾಯತಿಯ ಎಲ್ಲ ಹಾಗೂ ತಲಕಾಯಲಬೆಟ್ಟದ ೧ ಸ್ಥಾನ ಸೇರಿ ಒಟ್ಟು ೩೩ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದ್ದು ಈ ಪೈಕಿ ಅಬ್ಲೂಡು ಗ್ರಾಮದ ೨ ಸ್ಥಾನಗಳಿಗೆ ಅವಿರೋಧ ಆಯ್ಕೆ ಆಗಿತ್ತು. ಇನ್ನುಳಿದ ೩೧ ಸ್ಥಾನಗಳಿಗೆ ಮತದಾನ ನಡೆದಿತ್ತು.
ಕಳೆದ ಮೇ ತಿಂಗಳಲ್ಲಿ ತಾಲ್ಲೂಕಿನ ೨೪ ಗ್ರಾಮ ಪಂಚಾಯತಿಗಳಿಗೂ ಚುನಾವಣೆ ನಿಗದಿಯಾಗಿತ್ತಾದರೂ ಅಬ್ಲೂಡು ಹಾಗೂ ಈ.ತಿಮ್ಮಸಂದ್ರ ಗ್ರಾಮ ಪಂಚಾಯತಿಯಲ್ಲಿ ಶಾಶ್ವತ ನೀರಾವರಿ ಯೋಜನೆಗೆ ಆಗ್ರಹಿಸಿ ಚುನಾವಣೆಯನ್ನು ಬಹಿಷ್ಕರಿಸಿದ್ದ ಎಲ್ಲ ಗ್ರಾಮಸ್ಥರು ಚುನಾವಣೆಗೆ ಯಾರೊಬ್ಬರು ಸಹ ನಾಮಪತ್ರವನ್ನೆ ಸಲ್ಲಿಸಿರಲಿಲ್ಲ.
ಫಲಿತಾಂಶ: ಅಬ್ಲೂಡು ಪಂಚಾಯತಿಯಲ್ಲಿ 10 ಜೆಡಿಎಸ್ ಬೆಂಬಲಿತರು ವಿಜೇತರಾಗಿ, 6 ಕಾಂಗ್ರೆಸ್ ಬೆಂಬಲಿತರು ವಿಜೇತರಾಗಿದ್ದಾರೆ. ಈ.ತಿಮ್ಮಸಂದ್ರ ಗ್ರಾಮ ಪಂಚಾಯತಿಯಲ್ಲಿ 11 ಕಾಂಗ್ರೆಸ್ ಬೆಂಬಲಿತರು 5 ಜೆಡಿಎಸ್ ಬೆಂಬಲಿತರು ಜಯಶಾಲಿಗಳಾಗಿದ್ದಾರೆ. ತಲಕಾಯಲಬೆಟ್ಟದ ಒಂದು ಸ್ಥಾನ ಜೆಡಿಎಸ್ ಬೆಂಬಲಿತರ ಪಾಲಾಗಿದೆ.
ವಿಜೇತರ ವಿವರ:
ಅಬ್ಲೂಡು ಗ್ರಾಮ ಪಂಚಾಯತಿ:
- ತಾತಹಳ್ಳಿ: ಕೃಷ್ಣಮ್ಮ(324), ಲಕ್ಷ್ಮೀದೇವಮ್ಮ(323)
- ಅಬ್ಲೂಡು: ಎ.ಎನ್.ಮಂಜುನಾಥ(546)
- ಚೀಮನಹಳ್ಳಿ: ಜ್ಯೋತಿ(275), ನಾರಾಯಣಮ್ಮ(237)
- ಗುಡಿಹಳ್ಳಿ: ಚಿಕ್ಕವೆಂಕಟರೆಡ್ಡಿ(319), ಲಕ್ಷ್ಮಮ್ಮ(282)
- ಕೆಂಪನಹಳ್ಳಿ: ಎಂ.ನೇತ್ರಾವತಿ(223)
- ಕೋಟಹಳ್ಳಿ: ಕೆ.ಪಿ.ದೇವರಾಜು(217)
- ಸಾದಹಳ್ಳಿ: ಎಲ್.ಚಂದ್ರಶೇಖರ್(119)
- ಚಾಗೆ: ದ್ಯಾವಪ್ಪ(126)
- ಶೆಟ್ಟಹಳ್ಳಿ: ದೇವರಾಜ(474), ಮಂಜುನಾಥ(458), ವೆಂಕಟಲಕ್ಷ್ಮಮ್ಮ(415)
ಈ.ತಿಮ್ಮಸಂದ್ರ ಗ್ರಾಮ ಪಂಚಾಯತಿ:
- ಕೊಂಡರಾಜನಹಳ್ಳಿ: ಎನ್.ಮಂಜುಳ(249), ಜಯರಾಮರೆಡ್ಡಿ(268)
- ಬೈರಗಾನಹಳ್ಳಿ: ಬಿ.ಆರ್.ಮಂಜುನಾಥ(172)
- ಶೆಟ್ಟಿಕೆರೆ: ಮುನಿಲಕ್ಷ್ಮಪ್ಪ(343), ಪದ್ಮಾವತಿ(328)
- ವರಸಂದ್ರ: ಮಂಜುಳ(180)
- ಹಳೇಹಳ್ಳಿ: ವೆಂಕಟರಮಣಪ್ಪ(492), ಎಂ.ವಿ.ದೇವರಾಜು(520), ಎಂ.ಸಿ.ರೂಪ(547)
- ತುರುಕಾಚೇನಹಳ್ಳಿ: ಈಶ್ವರಮ್ಮ(138)
- ತಿಮ್ಮಸಂದ್ರ–1: ಶಿವಮ್ಮ(510), ಮೌಲಾಸಾಬ್(528), ಲಕ್ಷ್ಮೀದೇವಮ್ಮ(564), ಎಚ್.ಜೆ.ನಾಗಮಣಿ(574)
- ತಿಮ್ಮಸಂದ್ರ–2: ಜಿ.ಗಂಗಾಧರ(291), ಎಸ್.ಎ.ವೆಂಕಟರಮಣಾರೆಡ್ಡಿ(318)
ತಲಕಾಯಲಬೆಟ್ಟ ಗ್ರಾಮ ಪಂಚಾಯತಿ:
- ನರಸಮ್ಮ ಮತ್ತು ನಾಗರತ್ನಮ್ಮ 124 ಮತಗಳನ್ನು ಪಡೆದಿದ್ದು, ಲಾಟರಿಯಲ್ಲಿ ನರಸಮ್ಮ ಆಯ್ಕೆಯಾದರು.

