ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆದು, ಮಕ್ಕಳು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬೇಕು ಎಂದು ತುಮ್ಮನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ವಿಜಯಮ್ಮ ಕದಿರಪ್ಪ ಹೇಳಿದರು.
ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಆವರಣದಲ್ಲಿ ಸೋಮವಾರ ಆಯೋಜನೆ ಮಾಡಲಾಗಿದ್ದ ಸೈಕಲ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಂದು ಸರ್ಕಾರಿ ಶಾಲೆಗಳಿಗೆ ಬಡಕುಟುಂಬಗಳಿಂದ ಮಕ್ಕಳು ಬರುತ್ತಾರೆ, ಯಾವ ಮಕ್ಕಳೂ ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಸರ್ಕಾರ ಮಕ್ಕಳಿಗೆ ಉಚಿತವಾಗಿ ಪಠ್ಯಪುಸ್ತಕಗಳು, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ವಿದ್ಯಾರ್ಥಿವೇತನ ಹಾಗೂ ಸೈಕಲ್ಗಳನ್ನು ಉಚಿತವಾಗಿ ನೀಡುತ್ತಿದೆ. ಎಂಟನೇ ತರಗತಿಯ ಮಕ್ಕಳಿಗೆ ಮಾತ್ರ ಸೈಕಲ್ಗಳನ್ನು ವಿತರಣೆ ಮಾಡುತ್ತಿದ್ದು, ಮುಂದಿನ ಮೂರು ವರ್ಷಗಳವರೆಗೂ ಜೋಪಾನವಾಗಿ ನೋಡಿಕೊಳ್ಳಬೇಕು. ಪೋಷಕರು ಮಕ್ಕಳ ಸೈಕಲ್ಗಳನ್ನು ತಮ್ಮ ಸ್ವಂತಕ್ಕೆ ಉಪಯೋಗ ಮಾಡಿಕೊಳ್ಳಬಾರದು. ಮಾರಾಟ ಮಾಡಬಾರದು. ಶಿಕ್ಷಕರು ಪಠ್ಯ ಚಟುವಟಿಕೆಗಳು ಮಾತ್ರವಲ್ಲದೆ, ಪಠ್ಯೇತರ ಚಟುವಟಿಕೆಗಳು, ಕ್ರೀಡೆಗಳಲ್ಲಿ ಮಕ್ಕಳು ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ಪುಸ್ತಕಗಳು, ಹಾಗೂ ಕಲಿಕಾಸಾಮಾಗ್ರಿಗಳನ್ನು ವಿತರಣೆ ಮಾಡಲಾಯಿತು.
ಗ್ರಾಮ ಪಂಚಾಯತಿ ಉಪಾಧ್ಯಕ್ಷ ಎಂ.ಸುರೇಂದ್ರ, ಗ್ರಾಮ ಪಂಚಾಯತಿ ಸದಸ್ಯರಾದ ಗುಣಮ್ಮ, ತಿಮ್ಮಕ್ಕ, ಎಸ್.ಡಿ.ಎಂ.ಸಿ.ಅಧ್ಯಕ್ಷ ಪಿ.ಎನ್.ಪ್ರಭಾಕರ, ಮುಖ್ಯಶಿಕ್ಷಕಿ ರುಕ್ಮಿಣಿಯಮ್ಮ, ಜೆ.ಎಸ್.ಶ್ರೀನಿವಾಸರಾವ್, ಚಿಕ್ಕಆಂಜಿನಪ್ಪ, ಜಯರಾಂ, ಮುನಿನಾರಾಯಣಪ್ಪ, ಅಶ್ವಥ್ಥಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಯಾವ ಮಕ್ಕಳೂ ಶಿಕ್ಷಣದಿಂದ ವಂಚಿತರಾಗಬಾರದು
ಅಭಿವೃದ್ಧಿ ಕೆಲಸಗಳಿಗೆ ರಾಜಕೀಯ ಬೆರೆಸಬಾರದು.
ಗ್ರಾಮದಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳಿಗೆ ರಾಜಕೀಯ ಬೆರೆಸಬಾರದು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ವೈ.ಹುಣಸೇನಹಳ್ಳಿ ಗ್ರಾಮದಲ್ಲಿ ಸೋಮವಾರ ಸಮಾಜ ಕಲ್ಯಾಣ ಇಲಾಖೆಯಿಂದ 6 ಲಕ್ಷ ರೂಪಾಯಿಗಳ 130 ಮೀಟರ್ ಉದ್ದದ ಸಿ.ಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮದಲ್ಲಿ ಕೆಲವು ಕಾಮಗಾರಿಗಳು ಕಾರಣಾಂತರಗಳಿಂದ ಸ್ಥಗಿತಗೊಂಡಿತ್ತು. ಈ ಬಗ್ಗೆ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ಕರೆಸಿ, ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ. ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಹ ತಿಳಿಸಲಾಗಿದೆ. ಹೆಚ್ಚುವರಿಯಾಗಿ ಎರಡೂವರೆ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸಿ.ಸಿ ಚರಂಡಿಯನ್ನು ಗ್ರಾಮಸ್ಥರ ಒತ್ತಾಯದಿಂದಾಗಿ ಕಾಮಗಾರಿಯನ್ನು ನಡೆಸುವಂತೆ ತಿಳಿಸಿದ್ದೇವೆ. ಒಟ್ಟಾರೆ ಗ್ರಾಮದಲ್ಲಿ ಅಭಿವೃದ್ಧಿ, ನೈರ್ಮಲ್ಯೀಕರಣ, ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಎಲ್ಲರೂ ಪಕ್ಷಾತೀತವಾಗಿ ಶ್ರಮಿಸಬೇಕು ಎಂದು ಹೇಳಿದರು.
ವೈ.ಹುಣಸೇನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಹರಿಪ್ರಸಾದ್, ಉಪಾಧ್ಯಕ್ಷ ದೇವರಾಜ್, ಕುಂದಲಗುರ್ಕಿ ಪಂಚಾಯತಿ ಅಧ್ಯಕ್ಷ ಆಂಜಿನಪ್ಪ, ಶ್ರೀನಿವಾಸಪ್ಪ, ರವಿಕುಮಾರ್, ಬೇಕರಿ ಗೌಡ, ಎಸ್.ಸಿ.ನಾರಾಯಣಸ್ವಾಮಿ, ನರಸಿಂಹಗೌಡ, ವೆಂಕಟರೆಡ್ಡಿ, ಎಸ್.ನಾರಾಯಣಸ್ವಾಮಿ, ಮುನಿಕೃಷ್ಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ದಾಂಪತ್ಯದಲ್ಲಿ ಪ್ರೇಮ ಮತ್ತು ಕಾಮ – ಭಾಗ 3
ಭಾವನಾತ್ಮಕ ಬಂಧ ಅಥವಾ ಬಂಧನ?
ನಾವೆಲ್ಲಾ ಪ್ರಬುದ್ಧ ವ್ಯಕ್ತಿತ್ವದವರೇನಲ್ಲ. * ಇದರಲ್ಲಿ ನಾಚಿಕೆ ಅಥವಾ ಬೇಸರಪಟ್ಟುಕೊಳ್ಳಬೇಕಾದುದು ಏನೂ ಇಲ್ಲ. ನಿಜವಾಗಿ ನಾಚಿಕೆಪಟ್ಟುಕೊಳ್ಳಬೇಕಾದುದು ನಾವು ಪ್ರಬುದ್ಧತೆಯೆಡೆಗೆ ಹೋಗಲು ಪ್ರಯತ್ನವನ್ನೇ ಮಾಡದಿರುವುದಕ್ಕಾಗಿ. ಇದರ ಪರಿಣಾಮ ದಾಂಪತ್ಯ ಮತ್ತು ಲೈಂಗಿಕ ಜೀವನದಲ್ಲಿ ಹೇಗಾಗಬಹುದು?
ಪತಿಪತ್ನಿಯರು ಎರಡು ದೇಹ ಒಂದು ಜೀವದಂತೆ ಬಾಳಬೇಕು ಎನ್ನುವ ಆದರ್ಶವನ್ನು ಧರ್ಮ, ಸಾಹಿತ್ಯಗಳೆಲ್ಲಾ ಹೇಳುತ್ತವೆ. ಆದರೆ ಇದು ಎಷ್ಟು ವಾಸ್ತವ?
ದಾಂಪತ್ಯ ಎಷ್ಟೇ ಆತ್ಮೀಯ ಸಂಬಂಧವಾದರೂ ಅದು ಇಬ್ಬರು ಬೇರೆಬೇರೆ ವ್ಯಕ್ತಿಗಳ ನಡುವೆ ಇರುವಂತಹದು. ಹಾಗಾಗಿ ಆತ್ಮೀಯತೆಯ ಮುಖವಾಡದ ಒಳಗೆ ಇಬ್ಬರ ಮನಸ್ಸುಗಳಲ್ಲಿಯೂ ತಾವು ಬಾಲ್ಯದಿಂದ ರೂಪಿಸಿಕೊಂಡ ವ್ಯಕ್ತಿತ್ವದ ಅಂಶಗಳ ಮೇಲಾಟ ನಡೆದಿರುತ್ತದೆ. ಆದರೆ ಅದನ್ನು ಸಹಜವಾಗಿ ಇನ್ನೊಬ್ಬರೆದುರು ಹೇಳಲು ಸಾಧ್ಯವಾಗುವಂತಹ ಮಾನಸಿಕ ಧೃಡತೆ ಇಬ್ಬರಲ್ಲಿಯೂ ಇರುವುದಿಲ್ಲ. ನನ್ನ ಹತ್ತಿರ ಆಪ್ತಲಹೆಗೆ ಬರುವ ಎಲ್ಲಾ ದಂಪತಿಗೂ ಗುಪ್ತವಾಗಿ ಒಪ್ಪಿಕೊಳ್ಳುವ ಸತ್ಯವಿದು. ಹೆಂಡತಿ ತೌರಿಗೆ ಹೋದಾಗ, “ನನಗೆ ನಿನ್ನ ಅಗತ್ಯವಿದೆ, ಆದ್ದರಿಂದ ಬೇಗ ಬಾ” ಎಂದು ನೇರವಾಗಿ ಸರಳವಾಗಿ ಪ್ರೀತಿಯಿಂದ ಹೇಳುವ ಅಭ್ಯಾಸವನ್ನೇ ಮಾಡಿಕೊಂಡಿರದ ಗಂಡ ಚುಚ್ಚು ಮಾತು, ಮಧ್ಯಪಾನದ ಬೆದರಿಕೆ, ಮೂರನೆಯವರ ಕರೆ ಮುಂತಾದ ಅಡ್ಡದಾರಿಗಳನ್ನು ಬಳಸುತ್ತಾನೆ. ತನಗೆ ಅಪ್ಪಅಮ್ಮಂದಿರ ಜೊತೆ ಸ್ವಲ್ಪದಿನ ಇರುವ ಮಾನಸಿಕ ಅಗತ್ಯವನ್ನು ನೇರವಾಗಿ ಹೇಳಲಾರದ ಹೆಂಡತಿ, ಬೇರೆ ರೀತಿ ಗಂಡನನ್ನು ಖುಷಿಪಡಿಸಿ ಒಪ್ಪಿಗೆ ಪಡೆಯಲು ನೋಡುತ್ತಾಳೆ.
ಗಂಡಹೆಂಡಿರಿಬ್ಬರೂ ಪರಸ್ಪರರ ಹೊಗಳಿಕೆ, ಮೆಚ್ಚುಗೆಯ ಮೇಲೆ ಮಾತ್ರ ತಮ್ಮ ಸಂತೋಷವನ್ನು ಕಂಡುಕೊಳ್ಳತೊಡಗಿದರೆ ಅದು ಭಾವನಾತ್ಮಕ ಬಂಧನವಾಗುತ್ತದೆ. (ಎಮೋಷನಲ್ ಫ್ಯೂಶನ್) ಒಬ್ಬರಿಗೆ ಇನ್ನೊಬ್ಬರ ಮೇಲೆ ಅಸಮಧಾನವಾದಾಗ ಅವರು ತಮ್ಮ ಮೆಚ್ಚುಗೆಯನ್ನು ತಡೆ ಹಿಡಿಯುತ್ತಾರೆ. ಆಗ ಮೆಚ್ಚುಗೆಯನ್ನು ನಿರೀಕ್ಷಿಸಿದವರಿಗೆ ತಮ್ಮನ್ನು ಸಂಗಾತಿ ಹಿಡಿತದಲ್ಲಿಡಲು ಯತ್ನಿಸುತ್ತಿದ್ದಾರೆ ಎನ್ನುವ ಮನೋಭಾವ ಬರುತ್ತದೆ. ಇಲ್ಲಿಂದ ಮೌನಯುದ್ಧದ ಸರಪಳಿ ಪ್ರಾರಂಭವಾಗುತ್ತದೆ.
ಉದಾಹರಣೆಗೆ ಹಿಂದಿನ ರಾತ್ರಿ ಹಾಸಿಗೆಯಲ್ಲಿ ಹೆಂಡತಿ ಸಹಕರಿಸಿರುವುದಿಲ್ಲ. ಗಂಡನಿಗೆ ಬೇಸರ ಮಾಡಿದ್ದರ ಅರಿವಿರುವ ಹೆಂಡತಿ ಅವನನ್ನು ಖುಷಿಪಡಿಸಲು ಮರುದಿನ ಬೆಳಿಗ್ಗೆ ತಿಂಡಿಗೆ ರುಚಿಯಾದ ಅವರೆಕಾಳು ಉಪ್ಪಿಟ್ಟು ಮಾಡುತ್ತಾಳೆ. ಸಾಮಾನ್ಯ ಸಮಯದಲ್ಲಿ ಇದನ್ನು ಬಾಯಿ ತುಂಬಾ ಹೊಗಳುತ್ತಿದ್ದ ಗಂಡ ಅವತ್ತು ಬೇಕಂತಲೇ ಮೌನವಾಗಿ ತಿಂದು ಎದ್ದು ಹೋಗುತ್ತಾನೆ. ಹೆಂಡತಿಗೆ, ತಾನು ಗಂಡನ ದೃಷ್ಟಿಯಲ್ಲಿ ಲೈಂಗಿಕ ಸುಖಕ್ಕಾಗಿ ಮಾತ್ರ ಬೇಕಾದ ವಸ್ತು ಎನ್ನಿಸುತ್ತದೆ. ಪತಿರಾಯನಿಗೆ ಇವಳು ಲೈಂಗಿಕ ಸುಖವನ್ನು ನೀಡದೆ ತನ್ನನ್ನು ಹಿಡಿತದಲ್ಲಿಡಲು ಯತ್ನಿಸುತ್ತಾಳೆ ಎನ್ನಿಸುತ್ತದೆ.
ಮೇಲಿನದು ಸರಳ ಉದಾಹರಣೆ. ಇಂತಹ ಬೇರೆಬೇರೆ ರೀತಿಯ ಘಟನೆಗಳು ವರ್ಷಾನುಗಟ್ಟಲೇ ನಡೆಯುತ್ತಾ ಬಂದು ಇಬ್ಬರೂ ತಂತ್ರ, ಪ್ರತಿತಂತ್ರ, ಕುತಂತ್ರಗಳ ಬಲೆಯೊಳಗೆ ತಮಗರಿವಿಲ್ಲದಂತೆ ತಮ್ಮನ್ನೇ ಸಿಲುಕಿಸಿಕೊಂಡಿರುತ್ತಾರೆ. ಆಗ ದಂಪತಿಗಳ ಸಂಬಂಧ ಭಾವನಾತ್ಮಕ ಗೋಜಲು ಆಗಿಬಿಡುತ್ತದೆ. ಡೇವಿಡ್ ಶ್ನಾರ್ಕ್ ಇದನ್ನು ಎಮೋಷನಲ್ ಗ್ರಿಡ್‍ಲಾಕ್ ಎಂದು ಕರೆದಿದ್ದಾನೆ. ಈ ಗೋಜಲಿನಲ್ಲಿ ಯಾವಕಡೆ ಮುಟ್ಟಿದರೆ ಇನ್ನಾವ ಕಡೆ ಶಾಕ್ ಹೊಡೆಯಬಹುದು ಎನ್ನುವುದು ದಂಪತಿಗಳಿಗೇ ತಿಳಿಯುವುದಿಲ್ಲ! ಹಾಗಾಗಿಯೇ ಎಷ್ಟೋ ಸಾರಿ ಗಂಡಹೆಂಡಿರು ಕ್ಷುಲ್ಲಕ ವಿಚಾರಕ್ಕೆ ಜಗಳವಾಡುತ್ತಿದ್ದಾರೆ ಎಂದು ಹೊರಗಿನವರಿಗೆ ಅನ್ನಿಸುತ್ತದೆ. ಕೆಲವೊಮ್ಮೆ ವರ್ಷಾನುಗಟ್ಟಲೆ ಹಿಂದಿನ ಯಾವುದೋ ಸಣ್ಣ ಘಟನೆಯನ್ನು ಇಟ್ಟುಕೊಂಡು ಮಹಾಯುದ್ಧವನ್ನೇ ಸಾರಿಬಿಡುತ್ತಾರೆ.
ಈ ಗೋಜಲಿಗೆ ಕಾರಣವಾಗಿರುವ ಒಂದೊಂದೇ ಸಮಸೈಗಳನ್ನು ಬಗೆಹರಿಸಿ ಸಂಬಂಧವನ್ನು ಸುಧಾರಿಸಲು ಸಾಧ್ಯವಿಲ್ಲ. ಏಕೆಂದರೆ ಇದೊಂದು ಸಮಸ್ಯೆಗಳ ಅಕ್ಷಯಪಾತ್ರೆ! ಜೊತೆಗೆ ಈ ಸರಪಳಿ ಹೇಗಿರುತ್ತದೆ ಎಂದರೆ “ನೀನು ಹೀಗೆ ಮಾಡಿದ್ದಕ್ಕೆ ನಾನು ಹಾಗೆ ಮಾಡಲೇ ಬೇಕಾಯಿತು” ಎನ್ನವು ಸಮಜಾಯಿಸಿಯನ್ನು ಇಬ್ಬರೂ ನೀಡುತ್ತಾರೆ. ಅಂದರೆ ಇಬ್ಬರೂ ತಮ್ಮ ನಡತೆಗೆ ಜವಾಬ್ದಾರಿಯನ್ನು ಹೊರಲು ಸಿದ್ಧರಿರುವುದಿಲ್ಲ.
ಹಾಗಾಗಿ ದಂಪತಿಗಳನ್ನು ಭಾವನಾತ್ಮವಾದ ಅವಲಂಬನೆಯಿಂದ ಬೇರೆಮಾಡಿ ಅವರ ವ್ಯಕ್ತಿತ್ವಕ್ಕೆ ಪ್ರಬುದ್ಧತೆಯನ್ನು ಪಡೆದುಕೊಳ್ಳುವ ತರಬೇತಿ ನೀಡಬೇಕಾಗುತ್ತದೆ. ಹೀಗೆ ಭಾವನಾತ್ಮಕವಾಗಿ ಬೇರೆಯಾಗುವುದು ಎಂದರೆ ಪ್ರೀತಿ ಆತ್ಮೀಯತೆಯನ್ನು ಬಿಟ್ಟುಕೊಡುವುದು ಎಂದೇನಲ್ಲ. ಎರಡು ಸ್ವಂತಂತ್ರ ವ್ಯಕ್ತಿತ್ವಗಳಾದ ಪತಿಪತ್ನಿಯರು ಪರಸ್ಪರ ಅವಲಂಬನೆಯ ಆಧಾರದ ಮೇಲೆ ಪ್ರೀತಿ, ಗೌರವಗಳನ್ನು ಉಳಿಸಿಕೊಂಡು ಬಹಳ ಕಾಲ ಬದುಕಬಹುದು.
ಪ್ರೀತಿಸುವುದಕ್ಕೆ ಬೇಕಾಗಿರುವುದು ಪರಸ್ಪರರ ಬಗೆಗಿನ ತಿಳುವಳಿಕೆ ಮತ್ತು ಗೌರವ ಮಾತ್ರ. ಎರಡು ಸಮಾನ ಮತ್ತು ಸ್ವತಂತ್ರ ವ್ಯಕ್ತಿಗಳ ಮಧ್ಯೆ ಇರುವ ಪ್ರೀತಿ ಮತ್ತು ಆತ್ಮೀಯತೆ ನೈಜವಾದದ್ದು, ಮುಖವಾಡಗಳಿಲ್ಲದೆ ಇರುವುದು ಮತ್ತು ಕಾಲದ ಪರೀಕ್ಷೆಯನ್ನು ಗೆಲ್ಲುವಂತಹದು. ಅವಲಂಬಿತ ವ್ಯಕ್ತಿಗಳ ನಡುವೆ ಇರುವುದು ಪ್ರೀತಿಯ ಭ್ರಮೆ ಹುಟ್ಟಿಸುವ ಭಾವನಾತ್ಮಕ ಗೋಜಲು ಅಥವಾ ಬಂಧನ. ವಿವಾಹ “ಬಂಧನ” ವಾಗಬಾರದು. ವಿವಾಹದೊಳಗಿನ ಬಂಧ ಬಿಡಿಸಿಕೊಳ್ಳಲು ಸಾಧ್ಯವಿರುವ, ಆದರೆ ಬಿಡಿಸಿಕೊಳ್ಳುವ ಅಗತ್ಯವೇ ಇರದ ಸಂಬಂಧವಾಗಬೇಕು.
* ಪ್ರಬುದ್ಧ ವ್ಯಕ್ತಿತ್ವವೆಂದರೇನು?
ನಮ್ಮೆಲ್ಲರ ಖುಷಿಗೆ ನಾವು ಇನ್ನೊಬ್ಬರ ಹೊಗಳಿಕೆ ಅಪೇಕ್ಷಿಸುವುದು ಸಹಜ. ಆದರೆ ನಮ್ಮ ಸಂತೋಷ ಅವರ ಹೊಗಳಿಕೆಯನ್ನು ಮಾತ್ರ ಆಧರಿಸಿದರೆ ನಮ್ಮ ಜುಟ್ಟನ್ನು ಅವರ ಕೈಗೆ ಕೊಟ್ಟಂತೆ. ಹಾಗಯೇ ನಮ್ಮ ದೌರ್ಬಲ್ಯ, ಆತಂಕಗಳಿಗೆ ಇನ್ನೊಬ್ಬರಿಂದ ಒಪ್ಪಿಗೆ, ಬೆಂಬಲ ನಿರೀಕ್ಷಿಸುತ್ತೇವೆ. ಅವರ ಬೆಂಬಲವಿಲ್ಲದೆ ನಮ್ಮ ಆತಂಕಗಳನ್ನು ನಾವು ಕಡಿಮೆ ಮಾಡಿಕೊಳ್ಳಲಾಗದ ಸ್ಥಿತಿ ತಲುಪಿದರೆ ಮತ್ತೆ ಜುಟ್ಟು ಅವರ ಕೈಯಲ್ಲಿ!
ಮಗುವಾಗಿದ್ದಾಗ ನಮ್ಮ ಮನಸ್ಸು ದೇಹಗಳು ದುರ್ಬಲವಾಗಿರುತ್ತವೆ, ಬುದ್ಧಿ ಬೆಳೆದಿರುವುದಿಲ್ಲ. ಹಾಗಾಗಿ ಹೊರಗಿನಿಂದ ಬೆಂಬಲವನ್ನು ನಿರೀಕ್ಷಿಸುವುದು ಸಹಜ. ಆದರೆ ವಯಸ್ಕರರಾದ ಮೇಲೆ ನಮ್ಮ ಒಳಗಡೆ ಎಲ್ಲವನ್ನೂ ನಿಭಾಯಿಸುವ ಅಂತ:ಶಕ್ತಿ ಇರುತ್ತದೆ. ಬಾಲ್ಯದಲ್ಲಿ ಅತ್ಯಂತ ಕಹಿ ಅನುಭವ ಪಡೆದವರಲ್ಲೂ ಈ ಶಕ್ತಿ ಇರುತ್ತದೆ. ಆದರೆ ಇದನ್ನು ಗುರುತಿಸಿ ಬಳಸಿಕೊಳ್ಳಲಾಗದ ನಾವು ಸುಮ್ಮನೆ ಕುರುಡರಂತೆ ಯಾರದೋ ಬೆಂಬಲ, ಮೆಚ್ಚುಗೆ, ಹೊಗಳಿಕೆಯ ನಿರೀಕ್ಷೆಯಲ್ಲಿರುತ್ತೇವೆ. ಅವು ಸಿಗದಿದ್ದಾಗ ಕೋಪಗೊಳ್ಳುತ್ತೇವೆ, ಬೇಸರಪಡುತ್ತೇವೆ ಅಥವಾ ಹತಾಶರಾಗುತ್ತವೆ. ನಮ್ಮ ಪರಿಸ್ಥಿತಿಗಳಿಗೆ ನಮ್ಮನ್ನೊಬ್ಬರನ್ನು ಹೊರತುಪಡಿಸಿ ಪ್ರಪಂಚದ ಎಲ್ಲರನ್ನೂ ದೂಷಿಸುತ್ತೇವೆ. ಅಂದರೆ ದೇಹ, ಮನಸ್ಸು ಬುದ್ಧಿಗಳೆಲ್ಲವೂ ಬೆಳೆದಿದ್ದರೂ ಅವುಗಳನ್ನು ಉಪಯೋಗಿಸದೆ ನಾವು ಮಕ್ಕಳಂತೆಯೇ ವರ್ತಿಸುತ್ತಿರುವುದಿಲ್ಲವೇ?
ತಮ್ಮ ಸಂತೋಷ, ಉತ್ಸಾಹ ಎಲ್ಲವನ್ನೂ ತನ್ನೊಳಗೆ ಕಂಡುಕೊಳ್ಳುವವರು ಪ್ರಬುದ್ಧ ವ್ಯಕ್ತಿತ್ವ (ಸಾಲಿಡ್ ಸೆನ್ಸ್ ಆಫ್ ಸೆಲ್ಫ್) ಹೊಂದಿರುತ್ತಾರೆ. ಇಂತವರು ತಮ್ಮನ್ನು ತಾವು ಪೂರ್ಣ ಅರಿತಿರುತ್ತಾರೆ. ಇತರರ ಟೀಕೆ ಚುಚ್ಚುಮಾತುಗಳಿಗೆ ಇವರು ಹೆಚ್ಚಿನ ಮಹತ್ವ ನೀಡುವುದಿಲ್ಲ. ಇದರಿಂದ ಮನಸ್ಸು ಅನಗತ್ಯ ಆತಂಕ, ಕಿರಿಕಿರಿಗಳಿಂದ ತುಂಬಿಕೊಂಡಿರುವುದಿಲ್ಲ.
ಆದರೆ ತಮ್ಮ ಸಂತೋಷ, ಸಮಾಧಾನಗಳನ್ನು ಕಂಡುಕೊಳ್ಳಲು ಇತರರ ಮೆಚ್ಚುಗೆ, ಹೊಗಳಿಕೆಗಳನ್ನೇ ಹುಡುಕುತ್ತಿರುವವರು ಪ್ರತಿಫಲಿತ ವ್ಯಕ್ತಿತ್ವ (ರಿಫ್ಲೆಕ್ಟೆಡ್ ಸೆನ್ಸ್ ಆಫ್ ಸೆಲ್ಪ್) ಹೊಂದಿರುತ್ತಾರೆ. ಬೇರೆಯವರ ಟೀಕೆ ಇವರನ್ನು ಘಾಸಿಗೊಳಿಸುತ್ತದೆ. ಅಂದರೆ ಇವರು ತಮ್ಮನ್ನು ಬೇರೆಯವರ ದೃಷ್ಟಿಕೋನದಲ್ಲಿ ಅಳೆದುಕೊಳ್ಳುತ್ತಾರೆ. ಹಾಗಾಗಿ ಯಾವಗಲೂ ಇತರರನ್ನು ಮೆಚ್ಚಿಸಲು ಮತ್ತು ಅವರಿಂದ ಟೀಕೆಯನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾ ತಮ್ಮೊಳಗೆ ಆತಂಕ ಮಾನಸಿಕ ಒತ್ತಡಗಳನ್ನು ಸೃಷ್ಟಿಸಿಕೊಳ್ಳುತ್ತಾರೆ.
ಪ್ರಬುದ್ಧ ವ್ಯಕ್ತಿತ್ವವನ್ನು ಸಾಧಿಸುವುದು ಸುಲುಭವಲ್ಲ. ಮೊದಲು ನಮ್ಮ ಆಸಕ್ತಿ, ಆದ್ಯತೆ, ಶಕ್ತಿ, ದೌರ್ಬಲ್ಯಗಳನ್ನೆಲ್ಲಾ ಸರಿಯಾಗಿ ಗುರುತಿಸಿಕೊಳ್ಳಬೇಕು. ನಮ್ಮನ್ನು ನಾವು ಸಂಪೂರ್ಣ ಒಪ್ಪಿಕೊಳ್ಳಬೇಕು. ಆತ್ಮೀಯರೊಡನೆ ಅಗತ್ಯವಿದ್ದಾಗ ನಮ್ಮ ಆಸೆ, ಆದ್ಯತೆ, ಸಂತೋಷ, ಆತಂಕ ದೌರ್ಬಲ್ಯಗಳನ್ನು ಹೇಳಿಕೊಳ್ಳಲು ಸಿದ್ಧರಿರಬೇಕು. ನಮ್ಮಲ್ಲಿ ಬದಲಾವಣೆ ಬೇಕು ಅನ್ನಿಸಿದರೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಒಟ್ಟಾರೆ ನಮ್ಮ ವ್ಯಕ್ತಿತ್ವದ ಬಗೆಗೆ ನಮಗೇ ಖುಷಿಯಿರಬೇಕು. ನಮ್ಮ ಬಗೆಗೆ ನಮಗೇ ಗೌರವವಿಲ್ಲದಿದ್ದಾಗ ಬೇರೆಯರಿಂದ ಅದನ್ನು ಹೇಗೆ ನಿರೀಕ್ಷಿಸಬಹುದು?
ಆತ್ಮವಂಚನೆ ಮಾಡಿಕೊಳ್ಳುವವನು ಪ್ರಬುದ್ಧನಾಗಲಾರ. ಹಾಗೆಯೇ ಪ್ರಬುದ್ಧರಾಗುವುದು ಒಂದು ಸ್ಥಿತಿಯಲ್ಲ, ಅದು ಬೆಳವಣಿಗೆಯ ಹಂತ ಮಾತ್ರ. ಸಂಪೂರ್ಣ ಪ್ರಬುದ್ಧತೆ ಎನ್ನುವುದು ಒಂದು ಆದರ್ಶ ಸ್ಥಿತಿ. ಇದು ಎಲ್ಲಿದೆ ಎಂದು ಯಾರಿಗೂ ತಿಳಿಯದಿದ್ದರೂ, ನಾವು ಸಾಧ್ಯವಾದಷ್ಟು ಮೇಲ್ಮಟ್ಟಕ್ಕೆ ಹೋಗಲು ನಿರಂತರ ಪ್ರಯತ್ನ ನಡೆಸುತ್ತಿರಬೇಕು.
ಭಗವದ್ಗೀತೆಯ ಸ್ಥಿತಪ್ರಜ್ಞನ ವ್ಯಾಖ್ಯಾನ ನೆನಪಾಗುತ್ತಿದೆಯೇ? ಹೌದು ಇದು ಒಂದು ರೀತಿಯ ಸಂಸಾರದಲ್ಲಿನ ಸ್ಥಿತಪ್ರಜ್ಞತೆ ಅಂದುಕೊಳ್ಳಬಹುದು.
ಮುಂದುವರೆಯುವುದು..
ವಸಂತ್ ನಡಹಳ್ಳಿ
ಯುವ ಕ್ರಾಂತಿ ಸಂಘದ ಉದ್ಘಾಟನೆ; ಹೊಸ ತಲೆಮಾರು ಹೊಸ ಆಶೋತ್ತರ
ಯುವಕರು ಗ್ರಾಮಾಭಿವೃದ್ಧಿಯ ಕನಸು ಹಾಗೂ ಪರಿಸರ ಕಾಳಜಿಯಿಂದ ಕಾರ್ಯಪ್ರವೃತ್ತರಾಗಿರುವುದು ಮಾದರಿಯಾಗಿದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಎಲ್.ಮುತ್ತುಗದಹಳ್ಳಿ ಗ್ರಾಮದಲ್ಲಿ ಯುವ ಕ್ರಾಂತಿ ಸಂಘದ ಉದ್ಘಾಟನೆ ಹಾಗೂ ಪರಿಸರ ದಿನಾಚರಣೆಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮಾಭಿವೃದ್ಧಿಯ ಹಿಂದೆ ಸಮುದಾಯದ ಶ್ರಮವಿರಬೇಕು. ಹೊಸ ತಲೆಮಾರು ಸಿದ್ಧವಾಗುತ್ತಿದೆ, ಅವರಲ್ಲಿ ಉತ್ಸಾಹವಿದೆ. ಆಶೋತ್ತರಗಳಿವೆ. ಹಿರಿಯರು ಅವರ ಯೋಜನೆಗಳಿಗೆ ಸಹಕಾರ ನೀಡಿ ಬೆಂಬಲಿಸಬೇಕು. ಜವಾಬ್ದಾರಿಯಿಂದ ಹಿಮ್ಮೆಟ್ಟದ ಯುವಕರು ಸಿದ್ಧರಾಗುತ್ತಿರುವುದು ಉತ್ತಮ ಸೂಚನೆಯಾಗಿದೆ ಎಂದು ಹೇಳಿದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಮಾತನಾಡಿ, ರೆಡ್ಕ್ರಾಸ್ ಸೊಸೈಟಿಯ ಸಹಕಾರದೊಂದಿಗೆ ರಕ್ತದಾನ ಶಿಬಿರಗಳನ್ನು ಆಯೋಜಿಸಿ ಜಿಲ್ಲೆಯಲ್ಲಿ ರಕ್ತದ ಅವಶ್ಯಕತೆಯಿರುವ ರೋಗಿಗಳಿಗೆ ನೆರವಾಗುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯೆ ಶಿವಲೀಲಾ ರಾಜಣ್ಣ ಅವರ ಸನುದಾನದಿಂದ ಕಟ್ಟಲಾದ ಶಾಲಾ ಕೊಠಡಿಯ ಉದ್ಘಾಟನೆಯನ್ನು ಮಾಡಲಾಯಿತು. ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟು ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮುನಿನಾರಾಯಣರೆಡ್ಡಿ, ಡಾ.ಸತ್ಯನಾರಾಯಣರಾವ್, ಸಬ್ಇನ್ಸ್ಪೆಕ್ಟರ್ ವಿಜಯ್ರೆಡ್ಡಿ, ಜಿಲ್ಲಾ ಸಹಕಾರಿ ಒಕ್ಕೂಟದ ನಿರ್ದೇಶಕ ಟಿ.ಆರ್.ರಮೇಶ್, ಉಪನ್ಯಾಸಕ ಈಶ್ವರ್ ಪ್ರದೀಪ್, ಬಸವೇಶ್ವರ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಉದಯ್ರೆಡ್ಡಿ, ಬೈರಗಾನಹಳ್ಳಿ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಮುನಿಬಸವಯ್ಯ, ಎಂ.ಕೆ.ಮುನಿಮಾರಪ್ಪ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಗುರುರಾಜರಾವ್, ನಿವೃತ್ತ ಪ್ರಾಧ್ಯಾಪಕ ಆಂಜನೇಯ, ಯುವ ಕ್ರಾಂತಿ ಸಂಘದ ಪುನೀತ್, ಕಾರ್ತಿಕ್, ಶಿವರಾಜ್, ಪೃಥ್ವಿರಾಜ್, ಅಂಬರೀಷ್, ಚಂದ್ರಶೇಖರ್, ಕುಮಾರ್, ಮೋಹನ್, ಗಜೇಂದ್ರ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಭಾರತ ಬಲಿಷ್ಠ ರಾಷ್ಟ್ರವಾಗಬೇಕು
ಪ್ರಪಂಚದಲ್ಲಿಯೇ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಖ್ಯಾತಿಗಳಿಸಿದ ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು ೬೯ ವರ್ಷಗಳು ಕಳೆದರೂ ಈವರೆಗೂ ಮುಂದುವರಿದ ರಾಷ್ಟ್ರಗಳ ಗುಂಪಿಗೆ ಸೇರದೆ ಕೇವಲ ಮುಂದುವರಿಯುತ್ತಿರುವ ರಾಷ್ಟ್ರವಾಗಿಯೇ ಉಳಿದಿರುವುದು ವಿಷಾದನೀಯ ಎಂದು ಬಿಎಂವಿ ಶಾಲೆಯ ಕಾರ್ಯದರ್ಶಿ ಎಲ್.ಕಾಳಪ್ಪ ಹೇಳಿದರು.
ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮದ ಬಿ.ಎಂ.ವಿ ಪ್ರೌಢಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಭಕ್ತರಹಳ್ಳಿ ಗ್ರಾಮ ಪಂಚಾಯತಿ ಆಶ್ರಯದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ೬೯ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ ಸ್ವಾತಂತ್ರ್ಯ ನಂತರದ ಪಂಚವಾರ್ಷಿಕ ಯೋಜನೆಗಳು ಸೇರಿದಂತೆ ಸರ್ಕಾರಗಳು ಜಾರಿಗೆ ತಂದ ಯಾವುದೇ ಯೋಜನೆಯಿಂದ ರೈತರಿಗೆ ಯಾವುದೇ ರೀತಿಯ ಉಪಯೋಗವಾಗಿಲ್ಲ. ಸರ್ಕಾರದ ರೈತ ವಿರೋಧಿ ನೀತಿಯಿಂದಾಗಿ ದಿನನಿತ್ಯ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು ಕೇಂದ್ರ ಹಾಗು ರಾಜ್ಯ ಸರ್ಕಾರಗಳಿಗೆ ಈವರೆಗೂ ರೈತರ ಆತ್ಮಹತ್ಯೆ ತಡೆಗಟ್ಟಲು ಆಗಿಲ್ಲ. ಇಡೀ ದೇಶಕ್ಕೆ ಅನ್ನ ನೀಡುವ ರೈತ ಏನೇ ಕಷ್ಟ ಬಂದರೂ ಧೃತಿಗೆಡದೇ ಜೀವನ ಸಾಗಿಸಬೇಕು. ಆತ್ಮಹತ್ಯೆಯಂತಹ ದುಸ್ಸಾಹಸಕ್ಕೆ ಕೈ ಹಾಕಬಾರದು ಎಂದು ಮನವಿ ಮಾಡಿದರು.
ಭಕ್ತರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಎಂ. ಗೋಪಾಲಗೌಡ ಧ್ವಜಾರೋಹಣ ನೆರವೇರಿಸಿದರು.
ಬಿ.ಎಂ.ವಿ. ಎಜುಕೇಷನ್ ಟ್ರಸ್ಟ್ನ ಅಧ್ಯಕ್ಷ ಬಿ.ವಿ. ಮುನೇಗೌಡ, ಗ್ರಾಮ ಪಂಚಾಯತಿ ಪಿಡಿಓ ರಮಾಕಾಂತ್, ನಿವೃತ್ತ ಬ್ಯಾಂಕ್ ಅಧಿಕಾರಿ ಎಂ. ನಂಜೇಗೌಡ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮುನಿರೆಡ್ಡಿ, ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ ಎಸ್.ಎನ್. ವೆಂಕಟೇಶ್, ಬಿಎಂವಿ ವಿದ್ಯಾಸಂಸ್ಥೆಯ ಟ್ರಸ್ಟಿಗಳಾದ ಬಿ.ವೈ. ಅಶ್ವತ್ಥಪ್ಪ, ಎಂ. ವೆಂಕಟಮೂರ್ತಿ, ಎಂ.ಪುಟ್ಟಮೂರ್ತಿ, ನಂಜುಂಡಾರಾಧ್ಯ, ಬಿ.ಸಿ.ರಾಮಚಂದ್ರ, ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ತತ್ವ ಸಿದ್ಧಾಂತ – ಪುಸ್ತಕದ ಬದನೆ
ಪ್ರತಿಯೊಬ್ಬರೂ ಅವಕಾಶ ಸಿಕ್ಕಾಗಲೆಲ್ಲಾ ತತ್ವ-ಸಿದ್ಧಾಂತಗಳನ್ನು ಉದುರಿಸುತ್ತಾರೆ. “A Devil can cite Bible for its sake” ಎಂಬ ಮಾತು ಪ್ರಸಿಧ್ಧ. ಎಲ್ಲರೂ ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ತಮಗೆ ಬೇಕುಬೇಕಾದಂತೆ ತತ್ವ ಸಿದ್ಧಾಂತಗಳನ್ನು ತಿರುಚುತ್ತಿರುತ್ತಾರೆ. ಅದರಲ್ಲೂ ನಮ್ಮ ರಾಜಕಾರಣಿಗಳಾದವರು ತಮ್ಮ ಬೇಳೆಕಾಳನ್ನು ಬೇಯಿಸಿಕೊಳ್ಳಲು ತತ್ವದ ಸಮಿಧೆಯನ್ನು ಧಾರಾಳವಾಗಿ ಬಳಸಿಕೊಳ್ಳುತ್ತಿರುವುದನ್ನು ನಾವು ಕಾಣಬಹುದು.
ಯಾವುದೇ ರಾಜಕಾರಣಿ ತನ್ನ ಪಕ್ಷ ಬದಲಿಸುವ ಸಂದರ್ಭದಲ್ಲಿ ಸಿದ್ಧಾಂತವನ್ನು ಮುಂದಿಡುತ್ತಾನೆ. ತಾನು ಹೋಗುತ್ತಿರುವ ಪಕ್ಷದ ಸಿದ್ಧಾಂತಗಳು ಸೂಕ್ತವಾಗಿದ್ದು, ಅದನ್ನು ಮನಸಾರೆ ಒಪ್ಪಿ ಆ ಪಕ್ಷಕ್ಕೆ ಸೇರುತ್ತಿದ್ದೇನೆ, ಎಂದು ಹೇಳುತ್ತಾನೆ. ಮತ್ತೆ ಅದರಿಂದ ಬೇರೊಂದಕ್ಕೆ ಹಾರುವಾಗಲೂ ಅದನ್ನೇ ಹೇಳುತ್ತಾನೆ. ಮೊದಲಿದ್ದ ಪಕ್ಷದ ಸಿದ್ಧಾಂತ ಯಾಕೆ ತನಗೇ ಸರಿ ಬರಲಿಲ್ಲ? ಸೇರುವ ಪಕ್ಷದ ಯಾವ ಸಿದ್ಧಾಂತ ತನಗೆ ಸರಿ ಬಂತು? ಎಂಬುದಕ್ಕೆ ಆತ ಉತ್ತರವನ್ನು ಕೊಡುವ ಮೂರ್ಖತನಕ್ಕೆ ಕೈ ಹಾಕುವುದಿಲ್ಲ. ಕಾರಣವಿಷ್ಟೇ, ಅವನಿಗೆ ಯಾವುದೇ ಪಕ್ಷದ ತತ್ವ-ಸಿದ್ಧಾಂತಗಳೇ ತಿಳಿದಿರುವುದಿಲ್ಲ. ಪ್ರತಿಯೊಂದು ಪಕ್ಷಕ್ಕೂ ಅದರದ್ದೇ ಆದ ತತ್ವ-ಸಿದ್ಧಾಂತಗಳು ಇದ್ದೇ ಇರುತ್ತದೆ. ಆದರೆ ಅದನ್ನು ಓದಿ-ತಿಳಿದ ಮಂದಿ ಎಷ್ಟಿರುತ್ತಾರೆ? ಪಕ್ಷದ ಸಿದ್ಧಾಂತವನ್ನು ಬರೆದ ಯಾ ರೂಪಿಸಿದವನಿಗೂ ಅದರ ಸಂಪೂರ್ಣ ಅರಿವು ಕೊನೆಯವರೆಗೂ ಇದ್ದಿರುತ್ತದೆಂದು ನಂಬುವುದು ಕಷ್ಟ.
ಪ್ರತಿಯೊಬ್ಬ ರಾಜಕಾರಣಿಯ ದಾಹ ಇರುವುದು ಅಧಿಕಾರದ ಮೇಲೆ. ಅದಕ್ಕಾಗಿ ಆತ ಚುನಾವಣೆಯಲ್ಲಿ ಗೆಲ್ಲಬೇಕು. ಅನಂತರ ಗೆದ್ದ ಪಕ್ಷದಲ್ಲೇ ಇದ್ದರೂ, ಅಧಿಕಾರಕ್ಕಾಗಿ ಕಸರತ್ತು ಮಾಡಬೇಕು. ವ್ಯವಸ್ಥೆ ಹೀಗಿದ್ದು ಅದನ್ನು ಪಡೆಯುವಲ್ಲಿ ವಿಫಲನಾದ ಕ್ಷಣದಲ್ಲಿ ಆತನಿಗೆ ತತ್ವ-ಸಿದ್ಧಾಂತಗಳು ಇದ್ದಕ್ಕಿದ್ದಂತೆ ನೆನಪಾಗುತ್ತದೆ. ಇದು ಜಾತೀಯತೆ ಪ್ರೋತ್ಸಾಹಿಸುವ ಪಕ್ಷ, ಇದು ಜಾತ್ಯಾತೀತ ಪಕ್ಷ, ಇದರಲ್ಲಿ ನನ್ನ ನಂಬಿಕೆ ಎಂಬಿತ್ಯಾದಿಯಾಗಿ ಹೇಳುತ್ತಾ, ಜನರನ್ನು ಮೂರ್ಖರನ್ನಾಗಿಸುವ ಪ್ರಯತ್ನವನ್ನು ಸತತವಾಗಿ ಮಾಡುತ್ತಲೇ ಇರುತ್ತಾರೆ. ಮತ್ತು ಬಹಳಷ್ಟು ಸಂದರ್ಭಗಳಲ್ಲಿ ಯಶಸ್ವಿಯೂ ಆಗುತ್ತಾರೆ. ಯಾಕೆಂದರೆ ಯಾರಿಗೂ ಯಾವುದೇ ಪಕ್ಷದ ಸಂಪೂರ್ಣ ತತ್ವ-ಸಿದ್ಧಾಂತಗಳ ಪುಸ್ತಕದ ಪರಿಚಯವಿರದಿರುವುದು ಇವರ ಸ್ವ-ಹಿತಾಸಕ್ತಿಗೆ ಅನುಕೂಲವನ್ನು ಒದಗಿಸಿಕೊಡುತ್ತದೆ.
ನೀವು ಯಾವುದೇ ಪಕ್ಷವನ್ನು ತೆಗೆದುಕೊಂಡರೂ ಸರಿ, ಅದರೊಂದಿಗೆ ಗುರುತಿಸಿಕೊಂಡ ಯಾವುದೇ ರಾಜಕಾರಣಿ ಆ ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧನಾಗಿರುವುದಕ್ಕೆ ಬದಲಾಗಿ ತನಗೆ ಖುದ್ಧಾಗಿ ನೆರವಾಗಬಲ್ಲ ನಾಯಕರ ಭಟ್ಟಂಗಿಗಳಾಗಿ ಮಾರ್ಪಟ್ಟಿರುತ್ತಾರೆ. ಹಾಗಲ್ಲದಿದ್ದಲ್ಲಿ ಪಕ್ಷಗಳಲ್ಲಿ ಬೇರೆ ಬೇರೆ ಗುಂಪುಗಳು ಹುಟ್ಟಿಕೊಳ್ಳಲು ಸಾಧ್ಯವಿಲ್ಲ. ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿ ಅದರ ನಾಯಕರಲ್ಲಿ ವಿಶ್ವಾಸವಿಟ್ಟು ತಮ್ಮ ಅಸಮಾಧಾನಗಳನ್ನಾಗಲೀ ಅಥವಾ ಬೇರೆಯವರ ತಪ್ಪನ್ನಾಗಲೀ ಅದರ ಅಂತರಿಕ ಚೌಕಟ್ಟಿನಲ್ಲಿಯೇ ಬಗೆಹರಿಸಿಕೊಳ್ಳುವುದನ್ನು ಬಿಟ್ಟು ಬೀದಿಯ ವಿಚಾರವನ್ನಾಗಿಸುದಲ್ಲ. ತಮಗೆ ಅಧಿಕಾರವಿದ್ದಾಗ ಪಕ್ಷದ ಸಿದ್ಧಾಂತ ತತ್ವಗಳು, ಸರಿಯಿಲ್ಲದಿದ್ದಾಗ ಅದೇ ಪಕ್ಷದ ಸಿದ್ಧಾಂತ ತತ್ವಗಳು ತಪ್ಪು ಎಂದು ವಾದಿಸುವ ಮಂದಿಗೆ ಪ್ರಾಥಮಿಕ ಹಂತದಲ್ಲಿಯೇ ಪಕ್ಷದ ತತ್ವ ಸಿದ್ಧಾಂತಗಳು ತಿಳಿದಿರಲೇ ಇಲ್ಲ ಎಂದರೆ ನಂಬಲು ಸಾಧ್ಯವೇ? ಅಥವಾ ಅವರಿಗೆ ಯಾವ ಪಕ್ಷದ ತತ್ವ ಸಿದ್ಧಾಂತಗಳು ಏನೇ ಇರಲಿ ಅದು ಪುಸ್ತಕದಲ್ಲಿ ಮಾತ್ರ ಇರಲಿ. ತಮ್ಮ ಅನುಕೂಲತೆಗೆ ಅಧಿಕಾರಕ್ಕಾಗಿ ಮಾತ್ರ ಚಲಾವಣೆಗೆ ಬರಲಿ ಎಂಬ ಹುಂಬತನಕ್ಕೆ ಬಂಡವಾಳವನ್ನಾಗಿಸಿದ್ದಾರೋ? ಅರ್ಥವಾಗುವುದು ಕಷ್ಟ. ಯಾಕೆಂದರೆ ಪ್ರಸ್ತುತ ವಿದ್ಯಮಾನಗಳನ್ನು ಅವಲೋಕಿಸಿದರೆ, ವ್ಯಕ್ತಿ ನಿಷ್ಠೆ, ಪ್ರತಿಷ್ಠೆಗಳೇ ಪ್ರಾಮುಖ್ಯತೆ ಪಡೆಯುತ್ತಿರುವುದನ್ನು ನಾವು ಕಾಣಬಹುದು. ಅದರೊಟ್ಟಿಗೆ ಜಾತಿ ರಾಜಕಾರಣವೂ ಸೇರಿಕೊಂಡು ಒಟ್ಟಾರೆ ಸ್ಥಿತಿ ಗೊಂದಲದ ಗೂಡಾಗಿ ಮಾರ್ಪಟ್ಟಿರುವುದನ್ನು ನಾವು ಕಾಣಬಹುದಾಗಿದೆ.
ಪ್ರತಿಯೊಂದು ರಾಜಕೀಯ ಪಕ್ಷದ ಕಣ್ಣು ಅಧಿಕಾರದ ಗದ್ದುಗೆಯನ್ನು ಮಾತ್ರ ನೋಡುತ್ತಿರುವುದರಿಂದ ಚುನಾವಣೆಯಲ್ಲಿ ಗೆಲ್ಲುವುದು ಮುಖ್ಯ. ಹಾಗಾಗಿ ಗೆಲ್ಲುವ ಕುದುರೆಯ ಹುಡುಕಾಟದಲ್ಲಿ ಪಕ್ಷಗಳು ತೊಡಗಿರುತ್ತವೆಯೇ ವಿನ: ಆ ಕುದುರೆಗೆ ತಮ್ಮ ಪಕ್ಷದ ತತ್ವ ಸಿದ್ಧಾಂತಗಳು ಅರಿವಿದೆಯೇ? ಎಂದು ಪರೀಕ್ಷಿಸುವುದಿಲ್ಲ. ಬದಲಾಗಿ ಎಲ್ಲಿಂದ ಹೇಗೆ ಆಗಮಿಸಿದರೂ ಸರಿ, ಗೆಲ್ಲುವ ಸಾಮಥ್ರ್ಯ ಎಂದರೆ ಇಂದಿನ ದೃಷ್ಟಿಯಲ್ಲಿ ನಿಲ್ಲುವ ವ್ಯಕ್ತಿಯ ಕ್ಷೇತ್ರದಲ್ಲಿರುವ ಅವನ ಜಾತಿಯವರ ಸಂಖ್ಯೆ, ಹಾಗೆಯೇ ಆತ ಖರ್ಚು ಮಾಡಬಲ್ಲ ಹಣದ ಸಾಮಥ್ರ್ಯಗಳೇ ಮುಖ್ಯವಾಗುತ್ತಿದೆ. ಹೀಗಾಗಿ ಯಾರು-ಯಾರೋ, ಯಾವು-ಯಾವುದೋ ಕ್ಷಣದಲ್ಲಿ ಧಿಡೀರನೆ ವಿಜೃಂಭಿಸಲು ತೊಡಗುತ್ತಾರೆ. ಪಕ್ಷದ ತತ್ವ ಸಿದ್ಧಾಂತಗಳಲ್ಲಿ ನಂಬಿಕೆ ಇಟ್ಟು ಲಕ್ಷಾಂತರ ಮುಗ್ಧ ಜನರನ್ನು ಗೊಂದಲಗಳಿಗೆ ತಳ್ಳುತ್ತಾರೆ. ಇಲ್ಲಿ ಜನಸಾಮಾನ್ಯರು ತಮ್ಮ ಪಕ್ಷ ಸಿದ್ಧಾಂತಗಳೆಂದು ಹೊಡೆದಾಡುತ್ತಿದ್ದರೆ, ಮೇಲಿನ ಮಂದಿ ಮೇಲಿನವರ ಮರ್ಜಿ ಮತ್ತು ಖುರ್ಚಿಗಾಗಿ ಹೊಡೆದಾಡುತ್ತಾ ಇರುತ್ತಾರೆ. ಜನಸಾಮಾನ್ಯರು ಹೇಗೆ ಮಾನ, ಮರ್ಯಾದೆ, ಧರ್ಮಗಳಿಗೆ ಅಂಜುತ್ತಾರೋ ಹಾಗೆಯೇ ಮೇಲಿನವರು ಹೈಕಮಾಂಡಿಗೆ ಮತ್ತು ತಮ್ಮ ಗುಂಪಿನ ನೇತಾರರಿಗಷ್ಟೇ ಅಂಜುತ್ತಾರೆ, ಹಲ್ಲು ಗಿಂಜುತ್ತಾರೆ. ತತ್ವ ಸಿದ್ಧಾಂತಗಳು ಪಕ್ಷದ ಸಾಮಾನ್ಯ ಕಾರ್ಯಕರ್ತರ ಆಸ್ತಿಯೇ ಹೊರತು, ಅಧಿಕಾರಸ್ಥರ ಅಥವಾ ಅಧಿಕಾರಕ್ಕಾಗಿ ಹಪ-ಹಪಿಸುತ್ತಿರುವವರ ಆಸ್ತಿಯಾಗಿ ಉಳಿದಿಲ್ಲ.
ಮೇಲ್ವರ್ಗದವರ ಪಕ್ಷ, ಹಿಂದುಗಳ ಪಕ್ಷ, ಅಲ್ಪಸಂಖ್ಯಾತರ ಪಕ್ಷ, ಹಿಂದುಳಿದವರ ಪಕ್ಷ, ಹೀಗೆ ಎಲ್ಲಾ ಪಕ್ಷಗಳವರು ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಮಾತುಗಳನ್ನು ಉದುರಿಸುತ್ತಿರುತ್ತಾರೆ. ಯಾವುದು ನಿಜವಾಗಿಯೂ ಯಾರ ಪಕ್ಷ ಎಂದು ನಿಖರವಾಗಿ ಯಾರೂ ಹೇಳುವ ಸ್ಥಿತಿಯಲ್ಲಿಯೇ ಇಲ್ಲ. ಯಾಕೆಂದರೆ ಎಲ್ಲರಿಗೂ ಎಲ್ಲರ ಮತಗಳನ್ನು ಗಳಿಸುವುದಷ್ಟೇ ಮುಖ್ಯ. ಅದಕ್ಕಾಗಿ ಕಾಲಕ್ಕೆ ತಕ್ಕಂತೆ ಮಾತುಗಳನ್ನು ಹೊಸೆದು ಹೊಸೆದು ನಮ್ಮೆದುರಿಗೆ ಎಸೆಯುತ್ತಿರುತ್ತಾರೆ. ಅವರಲ್ಲಿ ಯಾರನ್ನಾದರೂ ನಿಮ್ಮ ಪಕ್ಷದ ತತ್ವ-ಸಿದ್ಧಾಂತಗಳು ಏನು? ಸಂಪೂರ್ಣವಾಗಿ ವಿವರಿಸಿ ಅಲ್ಲಿನ ತತ್ವ-ಸಿದ್ಧಾಂತಗಳನ್ನು ತಾವು ಖುದ್ದಾಗಿ ಓದಿ ತಿಳಿದಿದ್ದೇ ಅಥವಾ ಹೆರವರು ಹೇಳದ್ದನ್ನು ಕೇಳಿದ್ದೆ? ಅದರಲ್ಲಿ ತಮಗೆ ವಿಶ್ವಾಸವಿಡಲು ಕಾರಣಗಳನ್ನು ಕೊಡಿ ಎಂದು ಗಟ್ಟಿಯಾಗಿ ಕೇಳಿದರೆ, ಉತ್ತರಿಸುವವರ ಸಂಖ್ಯೆ ಬಹುಷ: ನಮ್ಮನ್ನು ದಿಗುಲುಗೊಳಿಸುವಷ್ಟು ಕಡಿಮೆ ಇರಬಹುದು. ಹಾಗೆಯೇ ಒಂದು ಪಕ್ಷದಿಂದ ಇನ್ನೊಂದಕ್ಕೆ ಅಲ್ಲಿನ ತತ್ವ ಸಿದ್ಧಾಂತಗಳನ್ನು ಒಪ್ಪಿ ಹೋಗುತ್ತಿದ್ದೇವೆ ಎಂಬುವವರಿಗೆ ಎರಡೂ ಪಕ್ಷಗಳ ತತ್ವ ಸಿದ್ಧಾಂತಗಳ ತೌಲನಿಕ ಅಧ್ಯಯನದ ಕುರಿತು ಕೇಳಿದರೆ ಬಹುಷ: ತಡವರಿಸುವವರೇ ಅಧಿಕವಾಗಿರಲಿಕ್ಕೆ ಸಾಕು. ಏಕೆಂದರೆ ಇಂದು ತತ್ವ-ಸಿದ್ಧಾಂತಗಳಿಗಿಂತ ಅಧಿಕಾರ ಮುಖ್ಯ. ಅದನ್ನು ಕೊಡಬಲ್ಲ ಅಥವಾ ಕೊಡಿಸಬಲ್ಲಂಥ ವ್ಯಕ್ತಿ ಅಥವಾ ವ್ಯಕ್ತಿಗಳು, ಅಥವಾ ಗುಂಪು ಮುಖ್ಯ. ಹಾಗಾಗಿ ಇಂದು ಪಕ್ಷಗಳೆಲ್ಲಾ ಏನೇ ಹೇಳಿಕೊಂಡರೂ ಅಂತಿಮವಾಗಿ ಅಲ್ಲಿ ವ್ಯಕ್ತಿಪೂಜೆ, ಗುಂಪುಗಾರಿಕೆಗಳೇ ಕಣ್ಣಿಗೆ ಕೋರೈಸುತ್ತದೆ. ಹಾಗಾಗಿ ಮತದಾರರು ಕೂಡ, ಪಕ್ಷಗಳ ತತ್ವ-ಸಿದ್ಧಾಂತಗಳಿಗೆ ಬದಲಾಗಿ ತಮಗೆ ಅನುಕೂಲ ಮಾಡಿಕೊಡಬಹುದಾದ ತಮ್ಮದೇ ಜನರನ್ನು ಹುಡುಕಿಕೊಳ್ಳಲು ಒಲವು ತೋರುತ್ತಾರೆ. ಇದೇ ಜಾತಿ ರಾಜಕಾರಣಕ್ಕೂ ಕಾರಣವಾಗುತ್ತಾ, ತತ್ವ-ಸಿದ್ಧಾಂತಗಳು ಪುಸ್ತಕದ ಬದನೆಗಳಾಗುತ್ತಿದೆ.
ಗೆಲ್ಲಲೀ ಸೋಲಲೀ ಒಂದೇ ಪಕ್ಷ, ಒಂದೇ ಪಕ್ಷದ ತತ್ವ-ಸಿದ್ಧಾಂತಗಳಿಗೆ ತಾನು ಬದ್ಧ ಎಂಬ ರಾಜಕಾರಣಿಗಳ ಸಂಖ್ಯೆ ಕ್ರಮೇಣ ಕುಗ್ಗುತ್ತಿದೆ. ಯಾವ ಪಕ್ಷವಾದರೇನು? ಅದರ ತತ್ವ-ಸಿದ್ಧಾಂತಗಳು ಏನಾಗಿದ್ದರೆ ತನಗೇನು? ಅಷ್ಟಕ್ಕೂ ಅವನ್ನೆಲ್ಲಾ ತಿಳಿದುಕೊಂಡು ಮಾಡಬೇಕಾದದ್ದಾದರೂ ಏನು? ತನಗೆ ಬೇಕಾದದ್ದು ತನ್ನ ಗೆಲುವು. ಅನಂತರ ಅಧಿಕಾರ, ಆಸ್ತಿ ಗಳಿಕೆ, ಮುಂದಿನ ಚುನಾವಣೆಗೆ ಸಾಕಾಗುವಷ್ಟು ಮತ್ತು ಸೋತರೂ ಅರ್ಥಿಕವಾಗಿ ಸೋಲದಂತೆ ನೋಡಿಕೊಳ್ಳುವುದು. ಇದರೊಟ್ಟಿಗೆ ತನ್ನ ಬೆಂಬಲಿಗರ, ತನ್ನವರ, ತನ್ನ ಗುಂಪಿನವರ ಚಿಕ್ಕಪುಟ್ಟ ಬೇಡಿಕೆಗಳ ಪಟ್ಟಿಯನ್ನು ಪೂರೈಸುವುದು. ಅದನ್ನು ಪೋಷಿಸುವುದನ್ನು ಮಾಡುತ್ತಲೇ ಅವರ್ಯಾರೂ ತನಗಿಂತ ಎತ್ತರಕ್ಕೆ ಬೆಳೆಯದಂತೆ ನೋಡಿಕೊಳ್ಳುವ ಎಚ್ಚರವನ್ನು ಹೊಂದಿರುತ್ತಾರೆ. ಒಮ್ಮೆ ಈಜಲು ಕಲಿತವರು ಮತ್ತೆ ನೀರಿಗೆ ಹೆದರುವ ಪ್ರಶ್ನೆಯೇ ಉದ್ಬವಿಸುವುದಿಲ್ಲ. ಬಹಳಷ್ಟು ಮಂದಿಗೆ ತತ್ವ ಸಿದ್ಧಾಂತಗಳಲ್ಲಿ ನಂಬಿಕೆ ಇಟ್ಟು ಬದುಕುತ್ತಿರುವವರನ್ನು ಕಂಡರೆ ಬಹುಷ: ಆದಿ ಮಾನವರನ್ನು ಕಂಡಂತಾಗಬಹುದು ಅಷ್ಟೇ!!!. ವರ್ತಮಾನದ ನಾಜೂಕಯ್ಯನಾಗದವನು ಬಹುಷ: ಗೊಡ್ಡು ವೇದಾಂತಿಯಂತೆ ಕಂಡರೆ ಆಶ್ಚರ್ಯವೇನಿಲ್ಲ. ಅದಕ್ಕಿಂತ ಹೆಚ್ಚಾಗಿ ಅರಿವು ಮತ್ತು ಆಚರಣೆಯ ಮಧ್ಯೆ ಅಂತರವೇ ಹೆಚ್ಚು.
ರವೀಂದ್ರ ಭಟ್ ಕುಳಿಬೀಡು.
ಬೆಳೆಸಾಲ ಹಾಗು ಕೈ ಸಾಲದ ಬಾದೆಯಿಂದ ಕೇಶವಪುರ ಗ್ರಾಮದ ರೈತನ ಆತ್ಮಹತ್ಯೆ
ಬೆಳೆಸಾಲ ಹಾಗು ಕೈ ಸಾಲದ ಬಾದೆಯಿಂದ ಬೇಸತ್ತ ಕೇಶವಪುರ ಗ್ರಾಮದ ಕೃಷಿಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯತಿಯ ಕೇಶವಪುರ ಗ್ರಾಮದ ಅಂಬರೀಷ್ (೩೫) ಮೃತ ದುರ್ದೈವಿ.
ಘಟನೆಯ ಹಿನ್ನಲೆ :
ಎಳನೀರು ವ್ಯಾಪಾರ ಮಾಡಿಕೊಂಡಿದ್ದ ಮೃತ ಅಂಬರೀಷನಿಗೆ ಯಾವುದೇ ಸ್ವಂತ ಜಮೀನು ಇರಲಿಲ್ಲ. ಜೀವನಾಧಾರಕ್ಕೆಂದು ಬೇರೆಯವರ ಜಮೀನನ್ನು ಗುತ್ತಿಗೆ ಪಡೆದು ಕೃಷಿ ಕಾಯಕ ನಡೆಸುತ್ತಿದ್ದ.
ಟೊಮ್ಯಾಟೊ, ಬದನೆಕಾಯಿ ಸೇರಿದಂತೆ ರೇಷ್ಮೆ ಸೊಪ್ಪು ಬೆಳೆದು ಮಾರಾಟ ಮಾಡುತ್ತಿದ್ದ. ಆದರೆ ಈ ಬಾರಿ ಬೆಳೆದಿದ್ದ ಟೊಮ್ಯಾಟೊ ಹಾಗೂ ರೇಷ್ಮೆ ಧಾರಣೆ ತೀವ್ರ ಕುಸಿತ ಕಂಡ ಕಾರಣ, ಹಾಕಿದ ಬಂಡವಾಳ ಬರುವುದಿಲ್ಲವೇನೋ ಎಂಬ ಆತಂಕದಲ್ಲಿ ಅಂಬರೀಷ ಶನಿವಾರ ಬೆಳಗ್ಗೆ ತೋಟದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದನು. ವಿಚಾರ ತಿಳಿದ ಪೋಷಕರು ಹಾಗು ಗ್ರಾಮಸ್ಥರು ಚಿಕಿತ್ಸೆಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಬೆಳಗ್ಗೆ ಮೃತ ಪಟ್ಟಿದ್ದಾನೆ.
ರೈತನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶಾಸಕ ಎಂ.ರಾಜಣ್ಣ, ಮಾಜಿ ಶಾಸಕ ವಿ.ಮುನಿಯಪ್ಪ, ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿ ಅಮರೇಶ, ತಹಸೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಹಂಡಿಗನಾಳ ಗ್ರಾಮ ಪಂಚಾಯತಿ ಅಧ್ಯಕ್ಷ ಮುನಿಯಪ್ಪ ಮತ್ತಿತರರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಇಡೀ ಕುಟುಂಬಕ್ಕೆ ಆಸರೆಯಂತಿದ್ದ ಮೃತ ಅಂಬರೀಷನ ಸಾವಿನ ವಿಷಯ ತಿಳಿದ ಪತ್ನಿ ಹಾಗು ಸಂಬಂಧಿಕರ ನೋವು ಒಂದೆಡೆಯಾದರೆ ತಮ್ಮ ತಂದೆ ಮೃತ ಪಟ್ಟಿದ್ದಾರೆ ಎಂಬ ಅರಿವೇ ಇಲ್ಲದ ಇಬ್ಬರು ಪುಟಾಣಿ ಮಕ್ಕಳ ಮುಗ್ಧತೆ ಕಂಡ ಗ್ರಾಮಸ್ಥರ ಕಣ್ಣುಗಳು ತೇವವಾಗಿದ್ದ ದೃಶ್ಯ ಸಾಮಾನ್ಯವಾಗಿತ್ತು.
–ಎಂ.ರಾಜಣ್ಣ. ಶಾಸಕರು.
–ವಿ.ಮುನಿಯಪ್ಪ, ಮಾಜಿ ಸಚಿವ.
ಸ್ಥಳಕ್ಕೆ ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿಯವರು ಸಹ ಬಂದು ಪರಿಶೀಲನೆ ನಡೆಸಿದ್ದು ಅಧಿಕೃತವಾಗಿ ರೈತನ ಆತ್ಮಹತ್ಯೆ ಎಂದು ಘೋಷಣೆಯಾದಲ್ಲಿ ಮಾತ್ರ ಸರ್ಕಾರದ ನಿಯಮದ ಪ್ರಕಾರ ಪರಿಹಾರ ನೀಡಲು ಅವಕಾಶವಿರುತ್ತದೆ’
–ಜಿ.ಎ.ನಾರಾಯಣಸ್ವಾಮಿ, ತಹಸೀಲ್ದಾರ್, ಶಿಡ್ಲಘಟ್ಟ
ಶಾಲಾ ಮಕ್ಕಳಿಂದ ಪರಿಸರ ಸಂರಕ್ಷಣೆಯ ಮೂಕಾಭಿನಯ ನಾಟಕ
ನಾಗರಿಕತೆಯ ಹೆಸರಿನಲ್ಲಿ ನೆಲ-ಜಲ ಹಾಗು ದೇಶದ ಸಂಸ್ಕೃತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಾ ಇಂದಿನ ಪೀಳಿಗೆ ವಿನಾಶದ ಅಂಚಿಗೆ ಹೋಗುತ್ತಿರುವುದು ವಿಷಾಧನೀಯ ಸಂಗತಿ ಎಂದು ರಂಗ ಕಾಲವಿದ ಡಾ.ದೇವನಹಳ್ಳಿ ದೇವರಾಜ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕಾಕಚೊಕ್ಕಂಡಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ೬೯ ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಪರಿವರ್ತನಾ ಕಲಾ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ರಂಗ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ನಮ್ಮ ಪೂರ್ವಜರು ಜತನದಿಂದ ಕಾಪಾಡಿಕೊಂಡು ಬಂದ ನೈಸರ್ಗಿಕ ಸಂಪತ್ತನ್ನು ನಮಗೆ ಬಳುವಳಿಯಾಗಿ ನೀಡಿದ್ದಾರೆ. ಅದನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮಮೇಲಿದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕಿ ಎಂ.ಜಯಲಕ್ಷ್ಮಮ್ಮ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಎಲ್ಲ ರೀತಿಯ ಸವಲತ್ತನ್ನು ನೀಡುತ್ತಾ ಸರ್ಕಾರ ಪ್ರೋತ್ಸಾಹ ನೀಡುತ್ತಿದ್ದರೂ ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಖಾಸಗಿ ಶಾಲೆಗಳ ಮೊರೆ ಹೋಗುತ್ತಿರುವುದು ಶೋಚನೀಯ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ಅಂತರ್ಜಲ ಕುಸಿತ, ನೀರಿನ ಸದ್ಭಳಕೆ, ಶೌಚಾಲಯ ನಿರ್ಮಾಣ, ಶುಚಿತ್ವ, ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯ ಸಾರವುಳ್ಳ ಮೂಕಾಭಿನಯ ನಾಟಕ ಮತ್ತು ಅಪ್ಪನ ಅಂತಸ್ತು ಮಗನ ಮರ್ಯಾದೆ ಎಂಬ ಹಾಸ್ಯ ನಾಟಕ ನೋಡುಗರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಗಣ್ಯರಿಂದ ದಿವಂಗತ ಶಿಕ್ಷಕ ಧರ್ಮಪ್ರಕಾಶ್ ಅವರ ಸ್ಮರಣಾರ್ಥ ಕಾಣಿಕೆ ಸೇರಿದಂತೆ ಶಾಲಾ ಮಕ್ಕಳಿಗೆ ರಂಗ ತರಬೇತಿಯ ಪ್ರಶಸ್ತಿ ಪತ್ರ ಮತ್ತು ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆರ್.ನಾಗಭೂಷಣ್, ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಶಶಿಕಲಾ ನಟರಾಜ್, ಸದಸ್ಯ ನಾಗರಾಜು, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮುನೇಗೌಡ, ಸದಸ್ಯ ಪ್ರಕಾಶ್, ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.
ಸರ್ಕಾರಿ ಶಾಲೆಗಳಿಗೆ ಸಮುದಾಯ ಸ್ಪಂದಿಸಬೇಕು
ಸರ್ಕಾರಿ ಶಾಲೆಗಳಿಗೆ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿ ಸ್ಪಂದಿಸಬೇಕು. ಶಾಲೆಗಳಲ್ಲಿ ಅಗತ್ಯವಾದ ನೆರವುಗಳನ್ನು ನೀಡುವ ಮೂಲಕ ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಬೇಕು ಎಂದು ನಿವೃತ್ತ ಶಿಕ್ಷಣ ಸಂಯೋಜಕರಾದ ಆರ್. ಕೃಷ್ಣಪ್ಪ ತಿಳಿಸಿದರು.
ತಾಲ್ಲೂಕಿನ ಹಾರಡಿ ಸರ್ಕಾರಿ ಕಿರಿಯ ಪ್ರಾಥಮಮಿಕ ಶಾಲೆಯಲ್ಲಿ ಶನಿವಾರ ನಡೆದ ೬೯ ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಿಂದ ಶಾಲೆಗೆ ವಾಟರ್ ಫಿಲ್ಟರ್, ಬ್ಯಾಂಡ್ ಸೆಟ್ ಹಾಗೂ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು. ನಿವೃತ್ತ ಶಿಕ್ಷಕರಾದ ನಾರಾಯಣಾಚಾರಿ , ಸಾಹಿತಿಗಳಾದ ಅಕ್ಕಿಮಂಗಲ ಮಂಜುನಾಥ್ ಹಾಗೂ ನಿವೃತ್ತ ಶಿಕ್ಷಣ ಸಂಯೋಜಕ ಆರ್. ಕೃಷ್ಣಪ್ಪ ಅವರನ್ನು ಸನ್ಮಾನಿಸಲಾಯಿತು. ಮಕ್ಕಳಿಗೆ ಬಹುಮಾನಗಳಾಗಿ ಪುಸ್ತಕಗಳನ್ನು ಹಾಗೂ ಕೊಡುಗೆ ನೀಡಿದ ಗ್ರಾಮಸ್ಥರಿಗೆ ಪ್ರಶಂಸಾ ಪತ್ರಗಳನ್ನು ವಿತರಿಸಲಾಯಿತು.
ಕುಂಬಿಗಾನಹಳ್ಳಿ ಗ್ರಾಮಪಂಚಾಯತಿ ಉಪಾಧ್ಯಕ್ಷೆ ಭಾಗ್ಯಮ್ಮ ನಾರಾಯಣಸ್ವಾಮಿ ಧ್ವಜಾರೋಹಣ ಮಾಡಿದರು. ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಚ್.ಎಂ. ವೆಂಕಟೇಶಪ್ಪ, ಎಚ್.ಎಂ. ಭೈರೇಗೌಡ, ಸಿಆರ್ಪಿ ಶ್ರೀರಾಮುಲು, ಎಸ್.ಡಿ.ಎಂ.ಸಿ. ಅಧ್ಯಕ್ಷ ಚನ್ನಕೃಷ್ಣಪ್ಪ, ಶಿಕ್ಷಕರಾದ ಬಿ.ಎನ್. ಬಸವರಾಜ್, ಎನ್. ಹೇಮಾವತಿ, ನಾಗರತ್ನಮ್ಮ ಹಾಗೂ ಚಂದ್ರಕಲಾ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದನಾಯಕನಹಳ್ಳಿ ಸರ್ಕಾರಿ ಶಾಲೆಯ ಹಿರಿಯ ವಿದ್ಯಾರ್ಥಿಗಳಿಂದ ಕೊಡುಗೆ
ತಾಲ್ಲೂಕಿನ ವರದನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಿಸಲಾಯಿತು.
ಧ್ವಜಾರೋಹಣನ್ನು ಗ್ರಾಮದ ಹಿರಿಯರಾದ ದ್ಯಾವಪ್ಪ ನೆರವೇರಿಸಿದರು. ಶಿಕ್ಷಕ ಎಚ್.ವಿ.ವೆಂಕಟರೆಡ್ಡಿ ಭಗತ್ಸಿಂಗ್ ಕುರಿತಂತೆ ಮಕ್ಕಳಿಗೆ ತಿಳಿಸಿದರು. ಏಳನೇ ತರಗತಿ, ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಹೆಚ್ಚು ಅಂಕ ಗಳಿಸಿರುವ ಗ್ರಾಮದ ವಿದ್ಯಾರ್ಥಿಗಳಾದ ಎನ್.ಸುಶ್ಮಿತ, ವಿ.ಎಸ್.ಮಿಥುನ್ಕುಮಾರ್, ಕಿಶೋರ್, ಸುದೀಪ್, ವಿನುತ ಅವರನ್ನು ಪುರಸ್ಕರಿಸಲಾಯಿತು.
ಗ್ರಾಮದ ದೇವರಾಜು, ಅಮರನಾಥ್, ರಘುನಾಥ್, ಹನುಮಂತಯ್ಯ, ನಾಗರಾಜ್, ಮೂರ್ತಿ, ಶಿಕ್ಷಕರು ಹಾಜರಿದ್ದರು.
ಅಂಚೆ ಚೀಟಿಗಳೊಂದಿಗೆ ತಿರುಪತಿ ಪಾದಯಾತ್ರೆ
ತಾಲ್ಲೂಕಿನ ಮೇಲೂರು ಎಂ.ಆರ್.ಪ್ರಭಾಕರ್ ಮತ್ತು ತಂಡದವರು ತಿರುಪತಿಗೆ ಪಾದಯಾತ್ರೆಯನ್ನು ಕೈಗೊಂಡಿದ್ದು, ಪಾದಯಾತ್ರೆಯೊಂದಿಗೆ ಅಂಚೆಚೀಟಿಗಳ ಪ್ರದರ್ಶನವನ್ನೂ ನಡೆಸಿಕೊಂಡು ಸಾಗಿದ್ದಾರೆ.
ಬೆಂಗಳೂರಿನಿಂದ ಪಾದಯಾತ್ರೆಯನ್ನು ಸುಮಾರು 70 ಮಂದಿಯ ತಂಡ ನಡೆಸುತ್ತಿದ್ದು, ಶನಿವಾರ ತಾಲ್ಲೂಕಿನ ಎಚ್.ಕ್ರಾಸ್ ಮೂಲಕ ಪ್ರಯಾಣವನ್ನು ಮುಂದುವರೆಸಿದ್ದಾರೆ.
ಸುಮಾರು 21 ವರ್ಷಗಳಿಂದ ಪ್ರತಿ ವರ್ಷವೂ ತಿರುಪತಿಗೆ ಪಾದಯಾತ್ರೆ ನಡೆಸುತ್ತಿರುವ ಡಿ.ಚಿಕ್ಕೀರಪ್ಪ ಎಂಬ ಹಿರಿಯರೊಂದಿಗೆ, ಸುಮಾರು 70 ಮಂದಿಯ ತಂಡವನ್ನು ಮೇಲೂರು ಎಂ.ಆರ್.ಪ್ರಭಾಕರ್ ಮುನ್ನಡೆಸುತ್ತಿದ್ದಾರೆ. ದಾರಿಯಲ್ಲಿ ತಂಗುವ ಸ್ಥಳಗಳಲ್ಲಿ, ಸಿಗುವ ಶಾಲೆಗಳಲ್ಲಿ ಅಂಚೆ ಚೀಟಿಗಳನ್ನು ಪ್ರದರ್ಶಿಸುತ್ತಾ ಸಾಗುತ್ತಿದ್ದಾರೆ.
‘ತಿರುಪತಿಗೆ ಪಾದಯಾತ್ರೆ ನಡೆಸುವುದರೊಂದಿಗೆ ಅಂಚೆ ಚೀಟಿಗಳ ಮೂಲಕ ವಿಶ್ವ ಶಾಂತಿಯನ್ನು ಸಾರುತ್ತಿದ್ದೇವೆ. ವೈವಿಧ್ಯಮಯ ಅಂಚೆ ಚೀಟಿಗಳ ಮೂಲಕ ಹತ್ತಾರು ವಿಷಯಗಳನ್ನು ತಿಳಿಸಬಹುದು. ವಿಶ್ವವೆಲ್ಲಾ ಒಂದೇ, ಮಾನವೀಯತೆ ಶ್ರೇಷ್ಠವಾದುದು ಎನ್ನುವ ಸಂದೇಶ ಸಾರುತ್ತಾ ಎಲ್ಲರೂ ಸಾಗಿದ್ದೇವೆ’ ಎಂದು ಮೇಲೂರು ಎಂ.ಆರ್.ಪ್ರಭಾಕರ್ ತಿಳಿಸಿದರು.
ನಿಧನ ವಾರ್ತೆ – ಮೇಲೂರಿನ ನಿವೃತ್ತ ಶಿಕ್ಷಕರಾದ ಬಿ.ಮುನೇಗೌಡ
ಮೇಲೂರಿನ ನಿವೃತ್ತ ಶಿಕ್ಷಕರಾದ ಬಿ.ಮುನೇಗೌಡ(೬೯) ಹೃದಯಾಘಾತದಿಂದ ಶನಿವಾರ ಮೃತಪಟ್ಟಿದ್ದಾರೆ. ಮೃತರು ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಎದೆ ನೋವು ಕಾಣಿಸಿಕೊಂಡಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೇಲೂರಿನ ಅವರ ಜಮೀನಿನಲ್ಲಿ ಶನಿವಾರ ಸಂಜೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ಮಾಜಿ ಸಚಿವರೂ, ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪ್ರಕಾಶ್, ಶಿಕ್ಷಕರ ಸಂಘದ ಅಧ್ಯಕ್ಷ ಬಿ.ವಿ.ಶ್ರೀರಾಮಯ್ಯ, ಗೌರವಾಧ್ಯಕ್ಷ ಚೀಮಂಗಲ ಮುನಿರಾಜು, ಮೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಮುನಾಧಮೇಂಧ್ರ, ಮಾಜಿ ಅಧ್ಯಕ್ಷ ಕೆ.ಮಂಜುನಾಥ್, ಸೂರ್ಯನರಾಯಣಗೌಡ ಮತ್ತಿತರರು ಮೃತರ ಅಂತಿಮ ದರ್ಶನ ಪಡೆದರು.
ಶಿಡ್ಲಘಟ್ಟದ ನೆಹರೂ ಕ್ರೀಡಾಂಗಣದಲ್ಲಿ 69ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮ
ಸುಂದರ, ಸಭ್ಯ, ಸ್ವಚ್ಛ ಹಾಗೂ ಸುಸಂಸ್ಕೃತ ನಾಡನ್ನಾಗಿಸಲು ಎಲ್ಲರೂ ಕೈಜೋಡಿಸುವಂತೆ ಶಾಸಕ ಎಂ.ರಾಜಣ್ಣ ಕರೆ ನೀಡಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ 69ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು. ನಾಡಿನ ಜ್ವಲಂತ ಸಮಸ್ಯೆಗಳನ್ನು ನಿವಾರಿಸಲು ಹಾಗೂ ಅದನ್ನು ಪರಿಹರಿಸಲು ಆತ್ಮಾವಲೋಕನ ಮಾಡಿಕೊಳ್ಳುವ ವಿಶೇಷ ದಿನವಿದು. ಹಲವಾರು ಬಲಿದಾನಗಳಿಂದ ಸಿಕ್ಕ ಸ್ವಾತಂತ್ರ್ಯವನ್ನು ದೇಶದ ಅಭ್ಯುದಯಕ್ಕಾಗಿ ಶ್ರಮಿಸುವ ಮೂಲಕ ಆಚರಿಸಬೇಕು. ಸ್ವತಂತ್ರ್ಯ ಚಳುವಳಿಯಲ್ಲಿ ಆತ್ಮಾರ್ಪಣೆ ಮಾಡಿಕೊಂಡ ಸರ್ವ ಮಹಾನುಭಾವರನ್ನು ನಾವು ದಿನ ನಿತ್ಯ ನೆನಯಬೇಕು ಎಂದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಮಾತನಾಡಿ, ವ್ಯಾಪರಕ್ಕಾಗಿ ಬಂದ ಬ್ರೀಟಿಷರು ನಮ್ಮಲ್ಲಿರುವ ಅರಾಜಕತೆ, ಏಕತೆಯ ಕೊರತೆಯನ್ನು ಮನಗೊಂಡು ಸುಮಾರು ೩೦೦ ವರ್ಷಗಳ ಕಾಲ ನಮ್ಮ ದೇಶವನ್ನು ಗುಲಾಮಗಿರಿಗೆ ತಳ್ಳಿದರು. ಬ್ರೀಟಿಷರನ್ನು ನಮ್ಮ ದೇಶದಿಂದ ಹೊರಗಟ್ಟಲು ಲಕ್ಷಾಂತರ ಜನ ಪ್ರಾಣಾರ್ಪಣೆ ಮಾಡಬೇಕಾಯಿತು. ನಾವೆಲ್ಲರೂ ರಾಜಕೀಯ ಸ್ವಾತಂತ್ರ್ಯವನ್ನು ಮಾತ್ರ ಪಡೆದುಕೊಂಡಿದ್ದೇವೆ. ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಇನ್ನೂ ಪಡೆಯಬೇಕಾಗಿದೆ ಎಂದು ನುಡಿದರು.
ಧ್ವಜಾರೋಹಣೆಯ ನಂತರ ರಾಷ್ಟ್ರಗೀತೆಯನ್ನು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು, ಧ್ವಜಗೀತೆಯನ್ನು ಸರ್ಕಾರಿ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿಗಳು, ರೈತಗೀತೆಯನ್ನು ಆಶಾಕಿರಣ ಅಂಧಮಕ್ಕಳ ಶಾಲೆಯ ವಿದ್ಯಾರ್ಥಿಗಳು, ದೇಶಭಕ್ತಿ ಗೀತೆಯನ್ನು ಪ್ಯಾರೆಗಾನ್ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಹಾಡಿದರು. ಪೊಲೀಸ್ ಹಾಗೂ ವಿವಿಧ ಶಾಲೆಗಳ ವಾದ್ಯವೃಂದದ ಪಥ ಸಂಚಲನ ನಡೆಯಿತು. ನಗರಸಭೆಯಿಂದ ತಂದಿದ್ದ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರದ ತೇರಿಗೆ ಪೂಜೆ ಸಲ್ಲಿಸಲಾಯಿತು.
ಗರುಡಾದ್ರಿ ಶಾಲೆ, ಸರ್ಕಾರಿ ಶಾಲೆ, ಶಾರದಾ ವಿದ್ಯಾಸಂಸ್ಥೆ, ಸರಸ್ವತಿ ವಿದ್ಯಾಸಂಸ್ಥೆ, ಡಾಲ್ಫಿನ್ ವಿದ್ಯಾಸಂಸ್ಥೆ ಮತ್ತು ವಾಸವಿ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ದೇಶಭಕ್ತಿಯನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ನಿವೃತ್ತ ಯೋಧ ಎಸ್.ವಿ.ಅಯ್ಯರ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಯೂನಿಟಿ ಸಿಲ್ಸಿಲಾ ಫೌಂಡೇಶನ್ ವತಿಯಿಂದ ಪಥಸಂಚಲನದಲ್ಲಿ ಭಾಗವಹಿಸಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ತಿಂಡಿಯನ್ನು ವಿತರಿಸಿದರು.
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಂಜಿನಪ್ಪ,ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ ವೆಂಕಟಪ್ಪ, ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ನಗರಸಭೆ ಅಧ್ಯಕ್ಷೆ ಮುಷ್ಠರಿ ತನ್ವೀರ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಸಿ.ಎಂ.ಗೋಪಾಲ್, ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ನಗರಸಭೆ ಪ್ರಭಾರ ಆಯುಕ್ತ ರಾಮ್ಪ್ರಕಾಶ್, ಕಾರ್ಯಪಾಲಕ ಎಂಜಿನಿಯರ್ ಗಣಪತಿ. ಎಸ್.ಸಾಕರೆ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಗುರುರಾಜರಾವ್, ಕ.ಸಾಪ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ, ದೈಹಿಕ ಶಿಕ್ಷಕರಾದ ಶ್ರೀನಿವಾಸ್, ರಂಗನಾಥ್, ಅಗಜಾನನಮೂರ್ತಿ, ವೆಂಕಟರಾಜು, ಮತ್ತಿತರರು ಹಾಜರಿದ್ದರು.
ಶಾಲೆಯ ಶಿಥಿಲವಾಗಿರುವ ಕಟ್ಟಡ – ಮಕ್ಕಳ ಪ್ರಾಣಕ್ಕೆ ಸಂಚಕಾರ
ಮಕ್ಕಳ ಪ್ರಾಣಕ್ಕೆ ಸಂಚಕಾರವನ್ನು ತಂದೊಡ್ಡುವಂತಹ ಸ್ಥಿತಿಯಲ್ಲಿರುವ ಶಾಲೆಯ ಶಿಥಿಲವಾಗಿರುವ ಕಟ್ಟಡವನ್ನು ತೆರವುಗೊಳಿಸುವಂತೆ ಪೋಷಕರು ತಾಲ್ಲೂಕಿನ ಪಲಿಚೇರ್ಲು ಗ್ರಾಮದಲ್ಲಿ ಒತ್ತಾಯಿಸಿದ್ದಾರೆ.
ಪಲಿಚೇರ್ಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಶಿಥಿಲವಾಗಿರುವ ಕಟ್ಟಡವನ್ನು ಶೀಘ್ರವಾಗಿ ತೆರವು ಮಾಡಬೇಕು. ಜೋರಾಗಿ ಮಳೆ ಬಂದರೆ ಯಾವುದೇ ಕ್ಷಣದಲ್ಲಿ ಬೇಕಾದರೂ ಕಟ್ಟಡ ಬಿದ್ದುಹೋಗುವಂತಹ ಸ್ಥಿತಿಯಲ್ಲಿ ಕಟ್ಟಡವಿದೆ. ಶಾಲೆಯಲ್ಲಿ ಸುಮಾರು ೧೫೦ ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮಕ್ಕಳು ಶೌಚಾಲಯಕ್ಕೆ ಹೋಗಬೇಕಾದರೆ, ಶಿಥಿಲವಾಗಿರುವ ಕಟ್ಟಡದ ಪಕ್ಕದಲ್ಲೆ ಹೋಗಬೇಕು. ನಲಿಕಲಿ ಮಕ್ಕಳು ಕಲಿಯುವಂತಹ ಕೊಠಡಿಯೂ ಕೂಡಾ ಹಳೇಯ ಕಟ್ಟಡದ ಪಕ್ಕದಲ್ಲಿರುವುದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸಬೇಕೆಂದರೆ ಭಯವಾಗುತ್ತದೆ. ಯಾವ ಸಂದರ್ಭದಲ್ಲಿ ಏನು ಸಂಭವಿಸುತ್ತೊ ಎನ್ನುವಂತಹ ಆತಂಕ ಕಾಡುತ್ತಿದೆ. ಕೂಡಲೇ ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೇಕು.
ಮಕ್ಕಳಿಗೆ ಆಟವಾಡಲೂ ಮೈದಾನವಿಲ್ಲದ ಕಾರಣ ಶಾಲೆಯ ಕಾಂಪೌಂಡಿನ ಆವರಣದಲ್ಲೆ ಮಕ್ಕಳು ಆಟವಾಡಬೇಕು. ಒಂದೊಂದು ತರಗತಿಯ ಮಕ್ಕಳು ಆಟವಾಡುವಾಗ ಬೇರೆ ತರಗತಿಗಳ ಮಕ್ಕಳಿಗೆ ಪಾಠಪ್ರವಚನಗಳನ್ನು ಕೇಳಲು ಸಾಧ್ಯವಾಗುವುದಿಲ್ಲ. ಶಾಲೆಯ ಆವರಣದಲ್ಲಿ ಸಮತಟ್ಟಾದ ಜಾಗವಿಲ್ಲ. ಜಲ್ಲಿಕಲ್ಲುಗಳಿಂದ ಕೂಡಿದ್ದು, ಆಟವಾಡಲು ಯೋಗ್ಯವಿಲ್ಲದಂತಾಗಿ, ಮಕ್ಕಳು ಯಾವುದೇ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಶಾಲೆಯಲ್ಲಿರುವ ಮಕ್ಕಳು ಉಪಯೋಗ ಮಾಡುವಂತಹ ಕಪ್ಪುಹಲಗೆಗಳು ಕೂಡಾ ಬರೆಯಲು ಯೋಗ್ಯವಾಗಿಲ್ಲ. ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು. ಹಲವು ಬಾರಿ ಶಾಲೆಯ ಆವರಣಕ್ಕೆ ಹಾವುಗಳು ಬಂದಿದ್ದು, ಮಕ್ಕಳಿಗೆ ಅಪಾಯವಾಗುವುದಕ್ಕಿಂತ ಮುಂಚೆ ಎಚ್ಚೆತುಕೊಳ್ಳಬೇಕು. ಶಾಲೆಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
– ವಿ. ಪದ್ಮಾ, ಶಾಲೆಯ ಮುಖ್ಯಶಿಕ್ಷಕಿ.
– ರಘುನಾಥರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ.
ವಿದ್ಯುತ್ ವ್ಯತ್ಯಯದಿಂದ ರಕ್ತ ಪರೀಕ್ಷೆಗೆ ಕಾಯಬೇಕಾದ ರೋಗಿಗಳು
ಎರಡು ಗಂಟೆಗಳಿಗೊಮ್ಮೆ ವಿದ್ಯುತ್ ವ್ಯತ್ಯಯವಾಗುತ್ತಿರುವುದರಿಂದ ನಗರದ ಸಾರ್ವಜನಿಕ ಆಸ್ಪತ್ರೆಗೆ ಬರುತ್ತಿರುವ ರೋಗಿಗಳು ರಕ್ತ, ಕಫ, ಪರೀಕ್ಷೆಗೆ ದಿನಗಟ್ಟಲೇ ಕಾಯಬೇಕಾಗಿರುವ ದುಸ್ಥಿತಿ ನಿರ್ಮಾಣವಾಗಿದೆ.
ತಾಲ್ಲೂಕಿನಾಧ್ಯಂತ ಕಾಣಿಸಿಕೊಳ್ಳುತ್ತಿರುವ ಜ್ವರದ ಪ್ರಕರಣಗಳಿಂದಾಗಿ ನಗರದ ಸಾರ್ವಜನಿಕ ಆಸ್ಪತ್ರೆಗೆ ಬರುವಂತಹ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಪ್ರತಿನಿತ್ಯ ೬೦೦ ಮಂದಿ ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದಾರೆ. ಬರುವಂತಹ ಬಹುತೇಕ ರೋಗಿಗಳು ಜ್ವರಗಳಿಂದ ಬಳಲುತ್ತಿರುವುದರಿಂದ ಎಲ್ಲಾ ರೋಗಿಗಳಿಗೂ ರಕ್ತ ಪರೀಕ್ಷೆಯನ್ನು ಮಾಡಿಸಲಾಗುತ್ತಿದೆ. ರಕ್ತಪರೀಕ್ಷಾ ಕೇಂದ್ರದಲ್ಲಿ ರೋಗಿಗಳು ಸಾಲುಗಟ್ಟಿ ನಿಲ್ಲುವಂತಾಗಿದ್ದು, ರಕ್ತದ ಮಾದರಿಗಳನ್ನು ಪಡೆದುಕೊಂಡರೂ ಕೂಡಾ ರಕ್ತ ಪರೀಕ್ಷೆಯ ವರದಿಯನ್ನು ನೀಡಲು ಸಿಬ್ಬಂದಿ ಹೆಣಗಾಡಬೇಕಾಗಿದೆ.
ಪ್ರತಿ ಎರಡು ಗಂಟೆಗಳಿಗೊಮ್ಮೆ ವಿದ್ಯುತ್ ವ್ಯತ್ಯಯವಾಗುತ್ತಿರುವುದರಿಂದ ಆಸ್ಪತ್ರೆಯಲ್ಲಿರುವ ಜನರೇಟರ್ ಕೂಡಾ ಪ್ರಯೋಜನವಿಲ್ಲದಂತಾಗಿದೆ, ಆಸ್ಪತ್ರೆಯಲ್ಲಿ ಒಂದೆಡೆ ನೀರಿನ ಸಮಸ್ಯೆಯಾದರೆ, ಮತ್ತೊಂದೆಡೆ ವಿದ್ಯುತ್ತಿನ ಸಮಸ್ಯೆ ಹೆಚ್ಚಾಗಿ ಕಾಡಲಾರಂಭಿಸಿದೆ.
ಇತ್ತಿಚೆಗೆ ಜನತೆಯಲ್ಲಿ ಭಯವನ್ನುಂಟು ಮಾಡುತ್ತಿರುವ ಡೆಂಗ್ಯೂ ಮತ್ತು ಚಿಕನ್ಗುನ್ಯಾ ಖಾಯಿಲೆಗಳಿಂದಾಗಿ ಜನರು ರಕ್ತ ಪರೀಕ್ಷೆಗಾಗಿ ಖಾಸಗಿ ಲ್ಯಾಬ್ಗಳಲ್ಲಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಬೇಕಾಗಿದೆ. ತೀರಾ ಬಡವರು, ಖಾಸಗಿ ಲ್ಯಾಬ್ಗಳಲ್ಲಿ ರಕ್ತಪರೀಕ್ಷೆಗಳನ್ನು ದುಬಾರಿ ಹಣವನ್ನು ನೀಡಿ, ರಕ್ತಪರೀಕ್ಷೆಗಳನ್ನು ಮಾಡಿಸಿಕೊಂಡು ಬರಲು ಸಾದ್ಯವಾಗದೆ ಆಸ್ಪತ್ರೆಯಲ್ಲೆ ದಿನಗಟ್ಟಲೇ ಕಾದು ಕುಳಿತುಕೊಳ್ಳಬೇಕಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ರೋಗಿಗಳಿಗೆ ಆಗುತ್ತಿರುವ ತೊಂದರೆಯನ್ನು ನಿವಾರಣೆ ಮಾಡಬೇಕಾಗಿದೆ.
ರೇಷ್ಮೆಗೂಡು ಮಾರುಕಟ್ಟೆಯ ಮುಂಭಾಗದ ರಸ್ತೆಯನ್ನು ದುರಸ್ಥಿಗೊಳಿಸದೆ ನಿರ್ಲಕ್ಷ್ಯ – ರೈತರ ಪ್ರತಿಭಟನೆ
ರೇಷ್ಮೆಗೂಡು ಮಾರುಕಟ್ಟೆಯ ಮುಂಭಾಗದಲ್ಲಿರುವ ರಸ್ತೆಯನ್ನು ದುರಸ್ಥಿಗೊಳಿಸದೆ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ವಿರುದ್ಧ ರೈತ ಮುಖಂಡರು ಹಾಗೂ ಹಮಾಲಿಕಾರ್ಮಿಕರು ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ರೇಷ್ಮೆಗೂಡು ಮಾರುಕಟ್ಟೆಗೆ ಪ್ರತಿನಿತ್ಯ ಸಾವಿರಾರು ಮಂದಿ ರೈತರು ಗೂಡು ತೆಗೆದುಕೊಂಡು ಬರುತ್ತಾರೆ. ಆದರೆ ಕೆಲವು ಮಂದಿ ವ್ಯಾಪಾರಸ್ಥರು ರಸ್ತೆಯನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರಗಳನ್ನು ನಡೆಸಿಕೊಳ್ಳುತ್ತಿರುವುದರಿಂದ ಈ ರಸ್ತೆಯಲ್ಲಿ ಬರುವಂತಹ ರೈತರು ಹಾಗೂ ಗೂಡಿನ ಮೂಟೆಗಳನ್ನು ಹೊತ್ತು ಸಾಗುವಂತಹ ಹಮಾಲಿ ಕಾರ್ಮಿಕರಿಗೆ ತೊಂದರೆಯಾಗಿದೆ. ಹಲವು ಬಾರಿ ೫೦ ಕೆ.ಜಿ.ತೂಕದ ಮೂಟೆಗಳನ್ನು ಹೊತ್ತುಕೊಂಡು ಹೋಗುವಾಗ ಹಮಾಲಿ ಕಾರ್ಮಿಕರು ಬಿದ್ದು, ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಸಾವಿರಾರು ರೂಪಾಯಿಗಳ ಹಣವನ್ನು ಖರ್ಚು ಮಾಡುವಂತಹ ಪರಿಸ್ಥಿತಿ ಉಂಟಾಗಿದೆ. ಈ ಬಗ್ಗೆ ನಗರಸಭೆಯ ಅಧಿಕಾರಿಗಳಿಗೆ ಮನವಿಗಳನ್ನು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ರಸ್ತೆಗೆ ಡಾಂಬರೀಕರಣ ಮಾಡಿಸಬೇಕು. ರಸ್ತೆಯ ಎರಡೂ ಕಡೆ ತಡೆಗೋಡೆಯನ್ನು ನಿರ್ಮಾಣ ಮಾಡಿ, ರಸ್ತೆಯಲ್ಲಿ ವ್ಯಾಪಾರ ಮಾಡದಂತೆ ತಡೆಯಬೇಕು. ಇಲ್ಲವಾದರೆ ನಗರಸಭೆ ಕಾರ್ಯಾಲಯದ ಮುಂಭಾಗದಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.
ಈ ವೇಳೆ ಅಂಗಡಿಗಳನ್ನು ತೆರವುಗೊಳಿಸಿ, ರೈತರು ಹಾಗೂ ಹಮಾಲಿ ಕಾರ್ಮಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ರೈತ ಮುಖಂಡರುಗಳು ಅಂಗಡಿಗಳ ಮಾಲೀಕರಿಗೆ ಮನವಿ ಮಾಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಮಳ್ಳೂರು ಹರೀಶ್, ಯಲುವಹಳ್ಳಿ ಸೊಣ್ಣೇಗೌಡ, ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಸುರೇಶ್, ಗೋಪಾಲಗೌಡ, ಮಂಜುನಾಥ, ರಾಮಕೃಷ್ಣಪ್ಪ, ಎಂ.ದೇವರಾಜು, ವೆಂಕಟೇಶಪ್ಪ, ನರಸಿಂಹಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ರೇಷ್ಮೆ ಕೃಷಿಕರ ಬೇಡಿಕೆ ಈಡೇರಿಸದಿದ್ದಲ್ಲಿ ಮುಖ್ಯಮಂತ್ರಿಗಳ ಮನೆಯ ಮುಂದೆ ಧರಣಿ
ರೇಷ್ಮೆ ಕೃಷಿಕರ ಬೇಡಿಕೆ ಈಡೇರಿಸದಿದ್ದಲ್ಲಿ ಮುಖ್ಯಮಂತ್ರಿಗಳ ಮನೆಯ ಮುಂದೆ ಧರಣಿ ನಡೆಸುವುದಾಗಿ ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ತಿಳಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಶುಕ್ರವಾರ ಜಿಲ್ಲಾ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಯ ವತಿಯಿಂದ ಆಯೋಜಿಸಿದ್ದ ರೇಷ್ಮೆ ಕೃಷಿಕರ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ನಾಲ್ಕು ತಿಂಗಳಿನಿಂದ ರೇಷ್ಮೆ ಗೂಡು ಬೆಲೆ ಕುಸಿತವಾಗಿದ್ದು ರೇಷ್ಮೆ ಕೃಷಿಕರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಯಾವುದೇ ಪರಿಹಾರೋಪಾಯಗಳನ್ನು ಕಂಡುಕೊಳ್ಳದಿರುವುದರಿಂದ ರೇಷ್ಮೆ ಕೃಷಿಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.
ಕಳೆದ ಜೂನ್ 23 ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ, ಮುಖ್ಯಮಂತ್ರಿಗಳು ತಾಂತ್ರಿಕ ಸಮಿತಿಯನ್ನು ನೇಮಕ ಮಾಡಿ 15 ದಿನಗಳೊಳಗೆ ವರದಿಯನ್ನು ನೀಡಲು ಆದೇಶಿಸಿದ್ದರು. ರೇಷ್ಮೆ ಮೇಲಿನ ಆಮದು ಸುಂಕ ಏರಿಸಲು ಕೇಂದ್ರಕ್ಕೆ ನಿಯೋಗ ಹೋಗುವುದಾಗಿ ತಿಳಿಸಿದ್ದರು. ಆದರೆ ಭರವಸೆ ನೀಡಿ 50 ದಿನಗಳು ಕಳೆದರೂ ಯಾವುದೇ ಸಕಾರಾತ್ಮಕ ಬೆಳವಣಿಗೆಯಾಗಿಲ್ಲ. ಕೇಂದ್ರ ಸರ್ಕಾರವೂ ರೇಷ್ಮೆ ಕೃಷಿಕರ ನೆರವಿಗೆ ಬರುತ್ತಿಲ್ಲ. ರಾಜ್ಯದ ಸಂಸದರಾಗಲೀ, ಕೇಂದ್ರ ಸಚಿವರಾಗಲೀ ಕೇಂದ್ರದ ಗಮನ ಸೆಳೆಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.
ರೇಷ್ಮೆ ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿಗಳು ಈ ಕೂಡಲೇ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಬೇಕು. ಕಳೆದ ನಾಲ್ಕು ತಿಂಗಳಿನಿಂದ ರೇಷ್ಮೆ ಕೃಷಿಕರಿಗೆ ಉಂಟಾಗಿರುವ ನಷ್ಟವನ್ನು ಪರಿಹಾರದ ರೂಪದಲ್ಲಿ ವಿತರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಅಭಿಪ್ರಾಯವನ್ನು ಹಂಚಿಕೊಂಡ ರೇಷ್ಮೆ ಕೃಷಿಕರು, ಒಂದು ತಿಂಗಳೊಳಗೆ ಯಾವುದೇ ಪರಿಹಾರ ಮಾರ್ಗ ಕಂಡುಹಿಡಿಯಲು ಮುಂದಾಗದಿದ್ದಲ್ಲಿ ಮುಖ್ಯಮಂತ್ರಿಗಳ ಮನೆಯ ಮುಂದೆ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲು ತೀರ್ಮಾನಿಸಿದರು.
ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಜಿಲ್ಲಾ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಯ ಸಂಚಾಲಕ ಯಲುವಳ್ಳಿ ಸೊಣ್ಣೇಗೌಡ, ಮಳ್ಳೂರು ಹರೀಶ್, ರಾಮಕೃಷ್ಣಪ್ಪ, ಎಚ್.ಜಿ.ಗೋಪಾಲಗೌಡ, ತಾದೂರು ಮಂಜುನಾಥ್, ವೇಣುಗೋಪಾಲ್, ಎಚ್.ಸುರೇಶ್, ದೇವರಾಜ್, ರಾಮಾಂಜಿನಪ್ಪ, ನರಸಿಂಹಮೂರ್ತಿ, ಕೆಂಪಣ್ಣ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಮುತ್ತಿಗೆಹಾಕಿ ಪ್ರತಿಭಟನೆ
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಚ್ಚತೆಯನ್ನು ಕಾಪಾಡುವಲ್ಲಿ ವಿಫಲರಾಗಿರುವ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಡೆಂಗ್ಯೂ ಜ್ವರಗಳಿಂದ ಜನರು ಮೃತಪಟ್ಟಿದ್ದರೂ ಕೂಡಾ ಯಾವುದೇ ಕ್ರಮಕ್ಕೆ ಮುಂದಾಗಿಲ್ಲವೆಂದು ಆರೋಪಿಸಿ ಗ್ರಾಮ ಪಂಚಾಯತಿ ಸದಸ್ಯರೂ ಸೇರಿದಂತೆ ಗ್ರಾಮಸ್ಥರು ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಮುತ್ತಿಗೆಹಾಕಿ ಪ್ರತಿಭಟಿಸಿರುವ ಘಟನೆ ಗುರುವಾರ ನಡೆದಿದೆ.
ತಾಲ್ಲೂಕಿನ ಗಂಜಿಗುಂಟೆ ಗ್ರಾಮ ಪಂಚಾಯತಿಯ ಅಧಿಕಾರಿಗಳು ಹಾಗೂ ಅಧ್ಯಕ್ಷರು, ಸ್ವಚ್ಚತೆಗೆ ಹೆಚ್ಚು ಒತ್ತು ನೀಡುತ್ತಿಲ್ಲ. ಇದರಿಂದಾಗಿ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿನ ಜನರು ಜ್ವರಗಳಿಂದಾಗಿ ಚಿಂತಾಮಣಿ, ಹೊಸಕೋಟೆ, ಕೋಲಾರ ಮುಂತಾದ ಕಡೆಗಳಲ್ಲಿ ಮನೆಗಳಲ್ಲಿರುವ ದನಕರುಗಳನ್ನು ಮಾರುಕೊಂಡು ಚಿಕಿತ್ಸೆ ಪಡೆಯಬೇಕಾಗಿದೆ. ಚರಂಡಿಗಳನ್ನು ಸ್ವಚ್ಚಗೊಳಿಸುತ್ತಿಲ್ಲ, ಬ್ಲೀಚಿಂಗ್ ಸಿಂಪಡಣೆ ಮಾಡುತ್ತಿಲ್ಲ, ಎಲ್ಲಾ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರವಾಗಿದೆ.
ಬಾಳೇಗೌಡನಹಳ್ಳಿ ಗ್ರಾಮದಲ್ಲಿನ ನಾಗರಿಕರು ಒಂದೊಂದು ಹನಿಗೂ ಪರದಾಡುವಂತಾಗಿದೆ. ಟ್ಯಾಂಕರುಗಳಲ್ಲಿಯೂ ಸರಬರಾಜು ಮಾಡುತ್ತಿಲ್ಲ. ಈ ಬಗ್ಗೆ ಚರ್ಚೆ ಮಾಡಲು ಸಭೆ ಕರೆಯುತ್ತಿಲ್ಲ. ಅಕ್ರಮವಾಗಿ ಮರಳು ಸಾಗಾಣಿಕೆ ನಡೆಯುತ್ತಿದ್ದು, ಈ ಬಗ್ಗೆ ಲಿಖಿತವಾಗಿ ನಾಗರಿಕರು ದೂರುಗಳು ನೀಡಿದ್ದರೂ ಕೂಡಾ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಮರಳುದಿಬ್ಬಗಳು ಕುಸಿದು ಅಮಾಯಕರು ಸಾವನ್ನಪ್ಪಿದ್ದರೂ ಕೂಡಾ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಸಭೆಯನ್ನು ಕರೆಯುವಂತೆ ಪಿ.ಡಿ.ಓ.ಅಧಿಕಾರಿಗಳಿಗೆ ಹೇಳಿದರೂ ಕೂಡಾ ಸಭೆಯನ್ನು ಕರೆದಿಲ್ಲ. ಸ್ವಾತಂತ್ರ್ಯ ದಿನಾಚರಣೆಯ ಆಚರಣೆಗೆ ಪೂರ್ವಭಾವಿ ಸಭೆಯನ್ನು ನಡೆಸಿಲ್ಲ. ಈ ಬಗ್ಗೆಯೂ ನಿರ್ಲಕ್ಷ್ಯ ವಹಿಸಿದ್ದಾರೆ.
ಕೆಲವು ಮಂದಿ ಸದಸ್ಯರೂ ಕೂಡಾ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಗ್ಗೆ ಕ್ರಮತೆಗೆದುಕೊಳ್ಳುವಂತೆ ಅಧ್ಯಕ್ಷರಿಗೆ ಮನವಿ ಮಾಡಿದ್ದರೂ ಕೂಡಾ ಯಾವುದೇ ಕ್ರಮತೆಗೆದುಕೊಳ್ಳುತ್ತಿಲ್ಲವೆಂದು ಗ್ರಾಮ ಪಂಚಾಯತಿ ಸದಸ್ಯ ಗಂಜಿಗುಂಟೆ ನರಸಿಂಹಮೂರ್ತಿ ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಂಚಾಯತಿ ಅಭಿವೃದ್ದಿ ಅಧಿಕಾರಿ ಶ್ರೀನಿವಾಸ, ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಸ್ವಚ್ಛತೆಯನ್ನು ಕಾಪಾಡಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಅಕ್ರಮ ಮರಳು ಸಾಗಾಣಿಕೆಯ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿರುವುದು ನಿಜ. ತಹಶೀಲ್ದಾರರೂ ಕೂಡಾ ಮರಳು ಸಾಗಾಣಿಕೆ ವಾಹನದ ಮೇಲೆ ದಾಳಿ ನಡೆಸಿದ್ದಾರೆ. ರಾತ್ರಿಯ ವೇಳೆಯಲ್ಲಿ ಸಾಗಾಣಿಕೆ ನಡೆಯುತ್ತಿದೆ. ಸ್ವಾತಂತ್ರ್ಯ ದಿನಾಚರಣೆ ಆಚರಣೆಗೆ ಶುಕ್ರವಾರದಂದು ತುರ್ತು ಸಭೆ ಕರೆದು ತೀರ್ಮಾನಿಸಲಾಗುತ್ತದೆ. ಪಂಚಾಯ್ತಿಯ ವ್ಯಾಪ್ತಿಯಲ್ಲಿ ಯಾರೊಬ್ಬರೂ ಡೆಂಗ್ಯೂ ಜ್ವರದಿಂದ ಸಾವನ್ನಪ್ಪಿಲ್ಲವೆಂದು ತಿಳಿಸಿದ್ದಾರೆ.
ಗ್ರಾಮ ಪಂಚಾಯತಿ ಸದಸ್ಯ ರಾಮಬಾಬು, ಬಿ.ಎನ್.ನರಸಿಂಹರೆಡ್ಡಿ, ಮಾಜಿ ಉಪಾಧ್ಯಕ್ಷ ಚೊಕ್ಕನಹಳ್ಳಿ ಮೂರ್ತಿ, ನಾರಾಯಣಸ್ವಾಮಿ, ಬೈರಾರೆಡ್ಡಿ, ಕೃಷ್ಣಪ್ಪ, ವೆಂಕಟರವಣಪ್ಪ, ರಾಮಸ್ವಾಮಿ, ಯುವರಾಜ, ಶ್ರೀನಿವಾಸ್, ರೋಷನ್, ದೊಡ್ಡನರಸಿಂಹಪ್ಪ, ಲಕ್ಕೇನಹಳ್ಳಿ ಶಿವಾರೆಡ್ಡಿ, ಬ್ರಾಹ್ಮಣರಹಳ್ಳಿ ನರಸಿಂಹಮೂರ್ತಿ, ಆನಂದರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್ವಾದಿ) ತಾಲ್ಲೂಕು ಸಮಿತಿ ಪ್ರತಿಭಟನೆ
ತಾಲ್ಲೂಕಿನ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ರಾಜ್ಯ ಮತ್ತು ಕೇಂದ್ರ ಜನವಿರೋಧಿ ನೀತಿಗಳನ್ನು ಖಂಡಿಸಿ ತಾಲ್ಲೂಕು ಕಚೇರಿಯ ಮುಂದೆ ಗುರುವಾರ ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್ವಾದಿ) ತಾಲ್ಲೂಕು ಸಮಿತಿ ಸದಸ್ಯರು ಪ್ರತಿಭಟಿಸಿದರು.
ತಾಲ್ಲೂಕು ನಿರಂತರವಾಗಿ ಬರಗಾಲಕ್ಕೆ ತುತ್ತಾಗುತ್ತಿದೆ. ಮಳೆಯ ಅಭಾವದಿಂದ ಬಿತ್ತನೆ ಕಾರ್ಯ ಅಸಮರ್ಪಕವಾಗಿ ನಡೆದಿದ್ದು, ರೈತರ ಬೆಳೆಗಳು ನಾಶವಾಗುವ ಸ್ಥಿತಿ ನಿರ್ಮಾಣವಾಗಿದೆ. ಕೃಷಿಯನ್ನು ನಂಬಿ ಬದುಕುವ ಕುಟುಂಬಗಳು ನಗರ ಪ್ರದೇಶಕ್ಕೆ ಗುಳೆ ಹೊರಟಿವೆ.
ನರೇಗಾ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ನರೇಗಾದಲ್ಲಿ ನಡೆದಿರುವ ಭ್ರಷ್ಟಾಚಾರದ ಸಮಗ್ರ ತನಿಖೆ ನಡೆಯಬೇಕು. ಶೌಚಾಲಯ ನಿರ್ಮಿಸಿದ ಕುಟುಂಬಗಳಿಗೆ ತಕ್ಷಣ ಬಿಲ್ ಪಾವತಿಸಬೇಕು. ಬಾಕಿ ಇರುವ ಶೌಚಾಲಯಗಳ ನಿರ್ಮಾಣಕ್ಕೆ ತಕ್ಷಣ ಕ್ರಮಕೈಗೊಳ್ಳಬೇಕು. ತಾಲ್ಲೂಕಿನಲ್ಲಿ ಕುಡಿಯುವ ನೀರು ಅಭಾವವಿರುವ ಎಲ್ಲಾ ಹಳ್ಳಿಗಳಿಗೂ ಸಮರ್ಪಕವಾಗಿ ನೀರು ಒದಗಿಸಬೇಕು. ತಾಲ್ಲೂಕಿನಾದ್ಯಂತ ಹರಡಿರುವ ಮಾರಕ ಖಾಯಿಲೆಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸಬೇಕು. ರೈತರ ಸಾಲ ಮನ್ನಾ ಮಾಡಬೇಕು. ಬೆಳೆ ವಿಮೆ ನೀಡಬೇಕು. ತಾಲ್ಲೂಕಿನ ಜನಸಾಮಾನ್ಯರ ಕೆಲಸಗಳು ತಾಲ್ಲೂಕು ಕಚೇರಿಯಲ್ಲಿ ವಿಳಂಬವಾಗದೇ ಸಕಾಲಕ್ಕೆ ನಡೆಯಬೇಕು ಮುಂತಾದ ಬೇಡಿಕೆಗಳ ಮನವಿಯನ್ನು ತಹಶಿಲ್ದಾರ್ ಜಿ.ಎ.ನಾರಾಯಣಸ್ವಾಮಿ ಅವರಿಗೆ ನೀಡಿದರು.
ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್ವಾದಿ) ಜಿಲ್ಲಾ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ, ಕೆ.ಎಂ.ವೆಂಕಟೇಶ್, ಮಳ್ಳೂರು ಶಿವಣ್ಣ, ಕೆ.ಸಿ.ವೆಂಕಟೇಶ್, ಜಿ.ಎನ್.ಲಕ್ಷ್ಮೀದೇವಮ್ಮ, ಮುನೀಂದ್ರ, ಅಶ್ವತ್ಥಮ್ಮ, ನಟರಾಜ್, ಖಲೀಲ್, ಸದಾನಂದ, ಸತ್ತರ್, ನರಸಿಂಹಪ್ಪ, ಪಾಪಣ್ಣ, ವೆಂಕರೋಣಪ್ಪ, ಅಶ್ವತ್ಥಮ್ಮ, ಮಂಜುಳ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸರ್ಕಾರಿ ಐ.ಟಿ.ಐ.ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಗೂಂಡಾಗಿರಿ ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಸರ್ಕಾರಿ ಐ.ಟಿ.ಐ.ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಗೂಂಡಾಗಿರಿ ನಡೆಸಿರುವವರನ್ನು ಕೂಡಲೇ ಬಂಧಿಸಿ, ಅವರ ಮೇಲೆ ಗೂಂಡಾ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿ ಶಿಕ್ಷಿಸಬೇಕು ಎಂದು ಒತ್ತಾಯಿಸಿ ಎಸ್.ಎಫ್.ಐ.ಸಂಘಟನೆ ಹಾಗೂ ಡಿ.ವೈ.ಎಫ್.ಐ.ಸಂಘಟನೆಯ ನೇತೃತ್ವದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಗುರುವಾರ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟಿಸಿದರು.
ನಗರದ ಬೆಂಗಳೂರು ರಸ್ತೆಯಲ್ಲಿರುವ ಐ.ಟಿ.ಐ.ಕಾಲೇಜಿಗೆ ಗ್ರಾಮಾಂತರ ಪ್ರದೇಶಗಳಿಂದ ಹೆಣ್ಣು ಮಕ್ಕಳೂ ಸೇರಿದಂತೆ ನೂರಾರು ಬಡಕುಟುಂಬಗಳಿಂದ ವಿದ್ಯಾರ್ಥಿಗಳು ಬರುತ್ತಾರೆ, ಕಾಲೇಜಿನಲ್ಲಿ ೪೦೦ ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳಿದ್ದಾರೆ, ಕೆಲವು ಮಂದಿ ಕಿಡಿಗೇಡಿಗಳು ವಿದ್ಯಾರ್ಥಿಗಳ ಮೇಲೆ ರ್ಯಾಗಿಂಗ್ ಮಾಡುವುದು ಮಾನಸಿಕವಾಗಿ ಕಿರುಕುಳ ನೀಡುವುದು, ಸೇರಿದಂತೆ ದೈಹಿಕವಾಗಿ ಹಲ್ಲೆ ನಡೆಸುವಂತಹ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಬುಧವಾರದಂದು ಕೂಡಾ ಕಾಲೇಜು ಮುಗಿಸಿಕೊಂಡು ವಾಪಸ್ಸು ತೆರಳುತ್ತಿದ್ದ ವಿದ್ಯಾರ್ಥಿಗಳ ಮೇಲೆ ವಿನಾಕಾರಣ ಗಲಾಟೆ ತೆಗೆದಿರುವ ಕೆಲ ಪುಂಡರು ಏಕಾಏಕಿ ಹಲ್ಲೆ ನಡೆಸಿದ್ದಾರೆ, ಈ ರೀತಿಯಾಗಿ ನಗರದಲ್ಲಿ ವಿದ್ಯಾಭ್ಯಾಸದ ಮುಖಾಂತರ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಬರುವಂತಹ ಬಡಮಕ್ಕಳಿಗೆ ಭಯವನ್ನುಂಟು ಮಾಡುವ ಮೂಲಕ ಶಾಂತಿ ಸುವ್ಯವಸ್ಥೆಯನ್ನು ಹಾಳುಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಮೇಲೆ ಗೂಂಡಾಗಳಂತೆ ವರ್ತನೆ ಮಾಡಿ, ಹಲ್ಲೆ ನಡೆಸಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು. ಕಾನೂನು ರಿತ್ಯಾ ಅವರ ಮೇಲೆ ಕ್ರಮ ತೆಗೆದುಕೊಂಡು ಗೂಂಡಾ ಕಾಯ್ದೆಯಡಿಯಲ್ಲಿ ದೂರು ದಾಖಲಿಸಬೇಕು. ಒಂದು ವೇಳೆ ದೂರು ದಾಖಲಿಸಿಕೊಂಡು ಬಂಧಿಸದಿದ್ದರೆ, ಜಿಲ್ಲಾದ್ಯಂತ ಬೀದಿಗಿಳಿದು ಪ್ರತಿಭಟನೆ ಮಾಡಲಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿ, ಉಪತಹಶೀಲ್ದಾರ್ ವಾಸುದೇವಮೂರ್ತಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಮನವಿ ಪತ್ರವನ್ನು ಸ್ವೀಕರಿಸಿ ಉಪತಹಶೀಲ್ದಾರ್ ವಾಸುದೇವಮೂರ್ತಿ ಮನವಿ ಪತ್ರವನ್ನು ಕೂಡಲೇ ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ರವಾನಿಸಿ, ತಪ್ಪಿತಸ್ಥರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಡಿ.ವೈ.ಎಫ್.ಐ.ಸಂಘಟನೆಯ ರಾಜ್ಯ ಮುಖಂಡ ಕುಂದಲಗುರ್ಕಿ ಮುನೀಂದ್ರ, ಎಸ್.ಎಫ್.ಐ. ಸಂಘಟನೆಯ ತಾಲ್ಲೂಕು ಅಧ್ಯಕ್ಷ ರವಿ, ಅನಿಲ್ಕುಮಾರ್, ನರೇಂದ್ರ, ಜಯರಾಂ, ರಮೇಶ್, ಅಜೇಯ್ ಮುಂತಾದವರು ಹಾಜರಿದ್ದರು.

