Home Blog Page 505

ಸೌಲಭ್ಯಗಳ ಸದ್ಬಳಕೆ ಆಗಲಿ

0

ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಗುವಂತಹ ಸೇವೆಯನ್ನು ನಾಗರೀಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಂಗಮಕೋಟೆ ಗ್ರಾಮ ಪಂಚಾಯತಿ ಅಧ್ಯಕ್ಷೆ ರಹಮತ್ಜಾನ್ ಹೇಳಿದರು.
ತಾಲ್ಲೂಕಿನ ಜಂಗಮಕೋಟೆ ಸಾರ್ವಜನಿಕ ಆಸ್ಪತ್ರೆಗೆ ನೂತನವಾಗಿ ಖರೀದಿಸಿರುವ ಆಂಬುಲೆನ್ಸ್ ವಾಹನಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳ ಜನರ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಸರ್ಕಾರ, ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಗರ್ಭಿಣಿಯರ ತಪಾಸಣೆ, ಹೊರರೋಗಿಗಳ ತಪಾಸಣೆ, ಪ್ರಸವ, ಉಚಿತ ರಕ್ತಪರೀಕ್ಷೆಗಳು, ಸೇರಿದಂತೆ ಅನೇಕ ಬಗೆಯ ಸೇವೆಗಳನ್ನು ನೀಡಲಾಗುತ್ತಿದೆ. ಹಲವು ಬಾರಿ ಹೆಚ್ಚಿನ ಚಿಕಿತ್ಸೆಗಳಿಗಾಗಿ ಬೇರೆ ಆಸ್ಪತ್ರೆಗಳಿಗೆ ತೆರಳಲು ರೋಗಿಗಳ ಪರದಾಡಬೇಕಾದಂತಹ ಸ್ಥಿತಿ ನಿರ್ಮಾಣವಾಗಿರುವುದರಿಂದ ಆಂಬುಲೆನ್ಸ್ ತರಿಸಲಾಗಿದೆ.
ಗ್ರಾಮದಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವಲ್ಲಿಯೂ ಕೂಡಾ ನಾಗರಿಕರು ಹೆಚ್ಚು ಗಮನಹರಿಸಬೇಕು. ನೀರು ನಿಲ್ಲುವಂತಹ ಸ್ಥಳಗಳಲ್ಲಿ ಸ್ವಚ್ಚವಾಗಿಟ್ಟುಕೊಂಡು ಮುಂದಿನ ದಿನಗಳಲ್ಲಿ ಹರಡಬಹುದಾದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ನಾಗರಿಕರು ಸಹಕಾರ ನೀಡಬೇಕು ಎಂದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಸಾರ್ವಜನಿಕ ಆಸ್ಪತ್ರೆಗೆ ಬರುವಂತಹ ರೋಗಿಗಳೊಂದಿಗೆ ವೈದ್ಯರು ಸಂಯಮದಿಂದ ವರ್ತನೆ ಮಾಡಬೇಕು. ಸರ್ಕಾರದಿಂದ ನೀಡುವಂತಹ ಎಲ್ಲಾ ಸೌಲಭ್ಯಗಳನ್ನು ಬಡರೋಗಿಗಳಿಗೆ ಪ್ರಾಮಾಣಿಕವಾಗಿ ತಲುಪಿಸಬೇಕು. ವಿನಾಕಾರಣ ರೋಗಿಗಳನ್ನು ಅಲೆದಾಡಿಸಬೇಡಿ. ಇರುವಂತಹ ಸೌಲಭ್ಯಗಳನ್ನು ದುರುಪಯೋಗ ಪಡಿಸಿಕೊಳ್ಳದೆ, ಸಾರ್ವಜನಿಕರ ಸ್ವತ್ತುಗಳನ್ನು ಕಾಪಾಡಿಕೊಳ್ಳಬೇಕು ಎಂದರು.
ಕೋಚಿಮುಲ್ ನಿರ್ದೇಶಕ ಬಂಕ್ಮುನಿಯಪ್ಪ, ಗ್ರಾಮ ಪಂಚಾಯತಿ ಉಪಾಧ್ಯಕ್ಷ ನಾರಾಯಣಸ್ವಾಮಿ, ವೈದ್ಯಾಧಿಕಾರಿ ಡಾ.ಅಂಬಿಕಾ, ಗ್ರಾಮ ಪಂಚಾಯತಿ ಸದಸ್ಯರು, ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.

ಸ್ವಯಂಪ್ರೇರಿತ ರಕ್ತದಾನ ಶಿಬಿರ

0

ಮಾನವನ ರಕ್ತ ಅಮೂಲ್ಯವಾದುದು. ಇದು ಮನುಷ್ಯನ ಜೀವ ಉಳಿಸುತ್ತದೆ, ರಕ್ತದಾನಕ್ಕೆ ಪರ್ಯಾಯ ವಸ್ತುವೆಂದರೆ ರಕ್ತ ಒಂದೇ ಎಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು.
ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ನಟ ಮೆಗಾಸ್ಟಾರ್ ಚಿರಂಜೀವಿಯ 60 ನೇ ಹುಟ್ಟುಹಬ್ಬದ ಪ್ರಯುಕ್ತ ರೆಡ್ಕ್ರಾಸ್ ಸೊಸೈಟಿ ಮತ್ತು ಚಿರಂಜೀವಿ ಅಭಿಮಾನಿಗಳಿಂದ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ಕಾಳಜಿಯಿಂದ ವಿವಿಧ ಸಂಘಟನೆಗಳು ತಾಲ್ಲೂಕಿನಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ನಮ್ಮ ಜಿಲ್ಲೆಯಲ್ಲೇ ಶಿಡ್ಲಘಟ್ಟ ತಾಲ್ಲೂಕು ರಕ್ತದಾನದಲ್ಲಿ ಮುಂದಿದೆ. ಜಿಲ್ಲೆಯ ರೋಗಿಗಳಿಗೆ ಇದು ಉಪಕಾರಿಯಾಗಿದೆ ಎಂದು ಹೇಳಿದರು.
ನಗರದ ಸಲ್ಲಾಪುರಮ್ಮ ದೇವಾಲಯದ ಬಳಿ ಚಿರಂಜೀವಿ ಅಭಿಮಾನಿಗಳಿಂದ ಅನ್ನದಾನವನ್ನು ಏರ್ಪಡಿಸಲಾಗಿತ್ತು. ಆಸ್ಪತ್ರೆಯ ಹೊರ ರೋಗಿಗಳಿಗೆ ಹಣ್ಣನ್ನು ಹಂಚಲಾಯಿತು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್ಕುಮಾರ್, ರೆಡ್ಕ್ರಾಸ್ ಸೊಸೈಟಿ ತಾಲ್ಲೂಕು ಕಾರ್ಯದರ್ಶಿ ಗುರುರಾಜರಾವ್, ಸಬ್ಇನ್ಸ್ಪೆಕ್ಟರ್ ವಿಜಯ್ರೆಡ್ಡಿ, ಚಿರಂಜೀವಿ ಅಭಿಮಾನಿಗಳ ಸಂಘದ ದಿನೇಶ್ಬಾಬು, ದೇವರಾಜ್, ಮಂಜುನಾಥ್, ಶಬೀವುಲ್ಲಾ, ರಾಧಾಕೃಷ್ಣ, ಶ್ರೀನಿವಾಸ್, ರೆಡ್ಕ್ರಾಸ್ ಸೊಸೈಟಿಯ ಡಾ.ಚಕ್ರವರ್ತಿ, ಅಕ್ಕಲರೆಡ್ಡಿ ಮತ್ತಿತರರು ಹಾಜರಿದ್ದರು.

ಮಕ್ಕಳಿಗೆ ಉತ್ತಮ ಪೌಷ್ಠಿಕ ಆಹಾರ ನೀಡಿ

0

ತಾಯಂದಿರು ಮಕ್ಕಳಿಗೆ ಉತ್ತಮ ಪೌಷ್ಠಿಕ ಆಹಾರ ನೀಡಲು ವಿಶೇಷ ಕಾಳಜಿ ವಹಿಸಬೇಕೆಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಜಿ.ಅನಿತಾ ತಿಳಿಸಿದರು.
ತಾಲ್ಲೂಕಿನ ತಲದುಮ್ಮನಹಳ್ಳಿಯಲ್ಲಿ ಶಿಶುಗಳಿಗೆ ಪೂರಕ ಹಾಲು, ಫೀಡಿಂಗ್ ಬಾಟಲ್ ಗಳು ಮತ್ತು ಶಿಶು ಆಹಾರ ಕುರಿತಂತೆ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಮಗುವಿಗೆ, ಸಾಧ್ಯವಾದಷ್ಟು ಮಟ್ಟಿಗೆ ಮನೆಯಲ್ಲೇ ತಯಾರಿಸಿದ ತಾಜಾ ಆಹಾರ ನೀಡಬೇಕು. ಪಾಲಕರು ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಪೌಷ್ಟಿಕ ಆಹಾರ, ಆರೋಗ್ಯದ ಕಾಳಜಿ ಹಾಗೂ ಶಿಕ್ಷಣದ ಕುರಿತು ಕಾಳಜಿ ವಹಿಸಬೇಕು. ಒಂದು ವರ್ಷದವರೆಗೆ ಮಕ್ಕಳಿಗೆ ಗೋಧಿ, ಓಟ್ಸ್, ಬಾರ್ಲಿ ಮೊದಲಾದ ಧಾನ್ಯದ ಆಹಾರ ಕೊಡಬೇಡಿ. ಇದರಲ್ಲಿ ಗ್ಲುಟೆನ್ ಎಂಬ ವಸ್ತುವಿದ್ದು, ಇದು ಸಿಲಿಯಾಕ್ ರೋಗಕ್ಕೆ ಕಾರಣವಾಗಬಹುದು. ಮಗುವಿನ ಮೂತ್ರಪಿಂಡ ಪೂರ್ಣ ಪ್ರಮಾಣದಲ್ಲಿ ಬೆಳೆಯದಿರುವ ಕಾರಣ ಉಪ್ಪಿನಂಶ ಜಾಸ್ತಿ ಇರುವ ಆಹಾರ ನೀಡಬಾರದು. ಸಕ್ಕರೆ ಅಂಶ ಅಧಿಕವಾಗಿರುವ ಆಹಾರ ಮತ್ತು ಪಾನೀಯ ಪದಾರ್ಥಗಳು ಸಲ್ಲ. ಇದರಿಂದ ಹಲ್ಲುಗಳಿಗೆ ಹಾನಿಯಾಗುತ್ತದೆ. ಕಡಲೆ ಬೀಜದಂತಹ ಗಟ್ಟಿ ಪದಾರ್ಥ ಕೊಡಬೇಡಿ. ಇವುಗಳಿಂದ ಉಸಿರುಗಟ್ಟುವ ಸಾಧ್ಯತೆ ಇರುತ್ತದೆ. ಜೇನುತುಪ್ಪದಲ್ಲಿ ಮಾರಕ ಬ್ಯಾಕ್ಟೀರಿಯಾ ಇರುವುದರಿಂದ ಇದರ ಉಪಯೋಗ ಒಳ್ಳೆಯದಲ್ಲ. ಸರಿಯಾಗಿ ಬೇಯಿಸಿದ ಮೊಟ್ಟೆಯನ್ನು ಕೊಡಬಹುದು ಎಮದು ವಿವರಿಸಿದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಲಕ್ಷ್ಮೀದೇವಮ್ಮ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ಸರ್ಕಾರಿ ವಕೀಲ ಈ.ಡಿ.ಶ್ರೀನಿವಾಸ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್ಕುಮಾರ್, ವಕೀಲರಾದ ಸುಬ್ರಮಣಿ, ಬೈರಾರೆಡ್ಡಿ, ಸೌಮ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಇತಿಹಾಸ ಸೇರಲಿರುವ ಈ ಬಾನಾಡಿಗಳು

0

ಕೆಲವು ದಿನಗಳ ಹಿಂದೆ ಅಮೆರಿಕದ ‘ಡಿಸ್ಕವರಿ’ ಹೆಸರಿನ ಸ್ಪೇಸ್ ಶಟ್ಲ್ ಅಥವಾ ಗಗನನೌಕೆ ‘ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ’ ಕ್ಕೆಂದು ಸಾಮಾನು ಸರಂಜಾಮುಗಳೊಡನೆ ಬಾನಿಗೆ ಜಿಗಿದ ವರದಿಯಾಗಿತ್ತಷ್ಟೆ. ನಮ್ಮ ರಸ್ತೆ ಸಾರಿಗೆಯ ‘ರಾಜಹಂಸ’ ಅಥವಾ ‘ವೇಗದೂತ’ ಬಸ್ಸುಗಳ ಹಾಗೆ ‘ಡಿಸ್ಕವರಿ’, ‘ಅಟ್ಲಾಂಟಿಸ್’ , ‘ಎಂಡೆವರ್’, ‘ಕೊಲಂಬಿಯಾ’ ಮತ್ತು ‘ಚಾಲೆಂಜರ್’ ಇವೆಲ್ಲವೂ ವಿವಿಧ ಹೆಸರುಗಳ ಆದರೆ ಒಂದೇ ರಚನೆಯುಳ್ಳ ಬಾನನೌಕೆಗಳು. ಇವನ್ನು ಸ್ಪೇಸ್ ಶಟ್ಲ್ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ಇವುಗಳಲ್ಲಿ ಕೊಲಂಬಿಯಾ ಮತ್ತು ಚಾಲೆಂಜರ್ ಅಪಘಾತಕ್ಕೀಡಾಗಿ ಬಾನಲ್ಲೇ ಭಸ್ಮಗೊಂಡಿವೆ. ನೂರಾರು ಬಾರಿ ಅಂತರಿಕ್ಷಯಾನಗೈದ ಉಳಿದ ಮೂರೂ ಬಾನಾಡಿಗಳು ಸಧ್ಯದಲ್ಲಿಯೇ ಬಾನ ಆಖಾಡದಿಂದ ಹೊರಬೀಳಲಿವೆ.
ಇಂದು ಅಮೆರಿಕಾ ದೇಶ ಬಾಹ್ಯಾಕಾಶ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವುದು ನಿಜವಾದರೂ ಅಂತರಿಕ್ಷ ಸಾಹಸಗಳ ಇತಿಹಾಸದಲ್ಲಿ ಮೊದಲ ಸ್ಥಾನ ಅಮೆರಿಕಕ್ಕಲ್ಲ, ಬದಲಾಗಿ ಹಿಂದಿನ ಸೋವಿಯೆತ್ ರಷ್ಯಾಕ್ಕೆ ಸೇರುತ್ತದೆ. ತಂತ್ರಜ್ಞಾನದ ಯುಗ ಇನ್ನೂ ಅಂಬೆಗಾಲಿಕ್ಕುತ್ತಿದ್ದ ಕಾಲದಲ್ಲೇ ರಷ್ಯಾದ ಗಗನಯಾತ್ರಿ ಯೂರಿ ಗ್ಯಾಗರಿನ್ ಅವರು ಬಾಹ್ಯ ಆಕಾಶಕ್ಕೆ ಹಾರಿ ಅಲ್ಲಿಂದ ಕಾಣುವ ಭೂಗ್ರಹವನ್ನು ‘ನೀಲಿ ಗೋಲ ನನ್ನ ತಾಯ್ನೆಲ’ ಎಂದು ಉದ್ಗಾರವೆತ್ತಿದ್ದರು. ಸ್ಪುಟ್ನಿಕ್ ಹೆಸರಿನ ಕೃತಕ ಉಪಗ್ರಹವನ್ನೂ ರಷ್ಯಾ ದೇಶ ಆಗಸಕ್ಕೆ ಹಾರಿಬಿಟ್ಟಿತ್ತು.
ಬಾಹ್ಯಾಕಾಶ ಸಂಶೋಧನೆಯಲ್ಲಿ ತಾವೂ ಮುನ್ನುಗ್ಗಬೇಕೆಂದು 1958ರಲ್ಲಿ ಸ್ಥಾಪಿತಗೊಂಡ ಅಮೆರಿಕಾದ ನಾಸಾ(ಅಮೆರಿಕದ ಬಾಹ್ಯಾಕಾಶ ಸಂಸ್ಥೆ) ಪಣತೊಟ್ಟಿತು. ಪರಿಣಾಮವಾಗಿ ಅಪೋಲೋ ಉಪಗ್ರಹ ಆರು ಬಾರಿ ಚಂದ್ರನ ನೆಲಕ್ಕೆ ಭೆಟ್ಟಿ ಇತ್ತಿತ್ತು. ಹನ್ನೆರಡು ಮಂದಿ ಗಗನಯಾತ್ರಿಗಳು ಚಂದ್ರನನ್ನು ಸ್ಪರ್ಶಿಸಿ ಮರಳಿದ್ದರು. ಈ ಎರಡೂ ದೇಶಗಳ ನಡುವೆ ನಡೆಯುತ್ತಿದ್ದ ಶೀತಲ ಸಮರ (ಕೋಲ್ಡ್ ವಾರ್)ದ ಜೊತೆಗೇ ಬಾಹ್ಯಾಕಾಶ ಪೈಪೋಟಿಯೂ ಪ್ರಾರಂಭಗೊಂಡಿತು.
ಅಪೋಲೋ, ಸ್ಕೈಲಾಬ್ ಉಡ್ಡಯನದ ನಂತರ ನಾಸಾದ ಇಂಜಿನಿಯರುಗಳು ಭೂಸಮೀಪದ ಕಕ್ಷೆಗೆ ವಿವಿಧ ಉದ್ದೇಶಗಳ ಉಪಗ್ರಹಗಳನ್ನು ಹಾರಿಸಲು ಮರುಬಳಕೆಯ ಮತ್ತು ಬಹುಬಳಕೆಯ ಗಗನವಾಹನಗಳನ್ನು ನಿರ್ಮಿಸುವ ಬಗ್ಗೆ ನೀಲನಕ್ಷೆ ತಯಾರಿಸಿದ್ದರು. ವಿಯೆಟ್ನಾಮ್ ಯುದ್ಧದಿಂದ ಸಾಕಷ್ಟು ಕಷ್ಟನಷ್ಟ ಅನುಭವಿಸಿದ್ದ ಜನತೆ ಬಾಹ್ಯಾಕಾಶ ಸಾಹಸಗಳಿಗೆ ಹಣ ಸುರಿಯುವ ವಿಚಾರದಲ್ಲಿ ಸಹಮತ ತೋರಿರಲಿಲ್ಲ.
ನಾಸಾಕ್ಕೆ ಸರಕಾರದ ಮನವೊಲಿಸಬೇಕಾಗಿತ್ತು. ಕ್ಷಿಪಣಿಗಳನ್ನೂ, ರಾಕೆಟ್ಟುಗಳನ್ನೂ ಬಳಸುತ್ತಿದ್ದ ರಕ್ಷಣಾ ಇಲಾಖೆಯೊಂದಿಗೆ ಕೈಜೋಡಿಸಿ ಅವರ ಬೇಹುಗಾರಿಕಾ ಉಪಗ್ರಹಗಳನ್ನು ಮತ್ತು ಇತರ ಸಂಪರ್ಕ ಉಪಗ್ರಹಗಳನ್ನು ಭೂಬಳಿಯ ಕಕ್ಷೆಗೆ ಹಾರಿ ಬಿಡುತ್ತೇವೆಂಬ ಆಶ್ವಾಸನೆ ಕೊಟ್ಟು ಅವರ ಬೆಂಬಲ ಪಡೆಯಲಾಯಿತು. ಆ ಮೂಲಕ ಅಮೆರಿಕ ಸರಕಾರವೂ ಅಪಾರ ಹಣಕಾಸಿನ ನೆರವು ನೀಡಿ ಬಾಹ್ಯಾಕಾಶ ಸಂಶೋಧನೆಗೆ ಉನ್ನತ ಮಟ್ಟದ ತಂತ್ರಜ್ಞಾನವನ್ನು ಬಳಸಲು ಸಂಪೂರ್ಣ ಒಪ್ಪಿಗೆ ನೀಡಿತು
ಆಗ ಸುಮಾರು ಇಪ್ಪತ್ತು ವರ್ಷಗಳ ಅವಧಿಯಲ್ಲಿ ನಾಸಾ ಹಾಗೂ ಇನ್ನನೇಕ ವಿಶ್ವವಿದ್ಯಾಲಯಗಳ ವಿಜ್ಞಾನಿಗಳು, ಸಂಶೋಧಕರು ಮತ್ತು ತಂತ್ರಜ್ಞರು ರಚಿಸಿ, ಸಿದ್ಧಪಡಿಸಿದ ಮರುಬಳಕೆಯ ಉಪಗ್ರಹ ವ್ಯವಸ್ಥೆಯೇ ಸ್ಪೇಸ್ ಶಟ್ಲ್. ಅತಿ ಕ್ಲಿಷ್ಟವಾದ ವಿನ್ಯಾಸದ ಸ್ಪೇಸ್ ಶಟ್ಲ್ ನ ಸಾವಿರಾರು ಬಿಡಿ ಭಾಗಗಳನ್ನು ಬೇರೆ ಬೇರೆ ಕೇಂದ್ರಗಳಲ್ಲಿ ಸಿದ್ಧಪಡಿಸಿ ನಂತರ ಅವನ್ನು ಒಂದಾಗಿ ಜೋಡಿಸಿ ಮತ್ತೆ ಮತ್ತೆ ಪರೀಕ್ಷೆಗೊಳಪಡಿಸಲಾಯಿತು. ಸ್ಪೇಸ್ ಶಟ್ಲ್ ನ ಹೊರಕವಚದ ನಿರ್ಮಾಣ ಅತಿ ದೊಡ್ಡ ಸವಾಲಾಗಿತ್ತು. ಅಂತರಿಕ್ಷದ ನಿರ್ವಾತ ಪ್ರದೇಶದಲ್ಲಿ ಹಾಗೂ ಭೂಮಿಯ ವಾತಾವರಣದ ವಿವಿಧ ಉಷ್ಣತೆಯನ್ನು ಸಹಿಸಿಕೊಳ್ಳುವಂಥಹ ಕವಚ ಅದಾಗಬೇಕಾಗಿತ್ತು.
ಎಪ್ರಿಲ್ 12, 1981 ರಂದು, ಅಂದರೆ ಮಾನವನಿರ್ಮಿತ ಮೊದಲ ಬಾನನೌಕೆ ಚಂದ್ರನನ್ನು ತಲುಪಿದ್ದ ಇಪ್ಪತ್ತು ವರ್ಷಗಳ ನಂತರ ಮೊದಲ ಸ್ಪೇಸ್ ಶಟಲ್ ಬಾನಿಗೆ ಹಾರಿತು. ಅದುವರೆಗಿನ ಅಪೋಲೋ, ಮಕ್ರ್ಯುರಿ ನೌಕೆಗಳು ಸಮುದ್ರದಲ್ಲಿ ಇಳಿದಿದ್ದರೆ ಸ್ಪೇಸ್ ಶಟ್ಲ್ ಅನ್ನು ವಾತಾವರಣದಲ್ಲಿ ಸುತ್ತಿ ಬಳಸಿ, ತೇಲಿಕೊಂಡು ವಿಮಾನದಂತೆ ರನ್ ವೇಯಲ್ಲಿ ಓಡುತ್ತ, ತೆವಳುತ್ತ ಆನಂತರ ನಿಲ್ಲುವಂತೆ ರಚಿಸಲಾಗಿತ್ತು.
ಭೂಮಿಯ ಗುರುತ್ವದಾಚೆ ಸ್ಪೇಸ್ ಶಟ್ಲ್ ನ್ನು ಹಾರಿಬಿಡುವ ಒಟ್ಟೂ ವ್ಯವಸ್ಥೆಯನ್ನು ಎಸ್ ಟಿ ಎಸ್ ಅಥವಾ ‘ಬಾಹ್ಯಾಕಾಶ ಸಾಗಾಟ ವ್ಯವಸ್ಥೆ’ ಎಂದು ಕರೆಯಲಾಗುತ್ತದೆ. ಇದರಲ್ಲಿ ಗುರುತ್ವಾಕರ್ಷಣೆಯ ವಿರುದ್ಧ ಸೆಣಸಲು ಬೇಕಾದ ವೇಗಕ್ಕೆ ಅನುಗುಣವಾಗಿ ಎರಡು ಹಂತದ ರಾಕೆಟ್ಟುಗಳನ್ನು ಬಳಸಲಾಗುತ್ತದೆ. ಈ ರಾಕೆಟ್ಟುಗಳು ಗಗನನೌಕೆಗೆ ವೇಗವನ್ನು ಒದಗಿಸಿಕೊಟ್ಟು ಕಳಚಿ ಬೀಳುತ್ತವೆ. ಒಮ್ಮೆ ಸ್ಪೇಸ್ ಶಟ್ಲ್ ಅವಶ್ಯಕ ವೇಗವನ್ನು ಪಡೆಯಿತೆಂದರೆ ವಾತಾವರಣದ ಆಚೆ ಹಾರಿಹೋಗಲು ಗಗನನೌಕೆಯ ಜೊತೆಗಿರುವ ಇಂಧನ ಟ್ಯಾಂಕ್ ಸಹಕರಿಸುತ್ತದೆ. ವಾಯುಮಂಡಲ ವಿರಳವಾಗುತ್ತ ಹೋಗಿ, ನೌಕೆ ನಿಗದಿತ ಕಕ್ಷೆಯನ್ನು ಪ್ರವೇಶಿಸುತ್ತಲೇ ಇಂಧನಟ್ಯಾಂಕ್ ಕೂಡ ಕಳಚಿ ಉದುರುತ್ತದೆ. ಇಂಜಿನ್ನುಗಳೊಂದಿಗೆ ಸ್ಪೇಸ್ ಶಟ್ಲ್ ತಾನೇ ತಾನಾಗಿ ಭೂಮಿಯ ಸುತ್ತ ಸುತ್ತಲಾರಂಭಿಸುತ್ತದೆ.
ಮೂವತ್ತು ವರ್ಷಗಳ ಅವಧಿಯಲ್ಲಿ ಮರುಬಳಕೆಯ ಬಾನವಾಹನ ಈ ಸ್ಪೇಸ್ ಶಟ್ಲ್ ಗಳು ಅನೇಕ ಉಪಗ್ರಹಗಳನ್ನು ಮಡಿಲಲ್ಲಿಟ್ಟುಕೊಂಡು ಆಗಸಕ್ಕೆ ಹಾರಿ ಅವನ್ನು ನಿಗದಿತ ಕಕ್ಷೆಗಳಿಗೆ ತೇಲಿಬಿಟ್ಟಿವೆ. ‘ಬಾಹ್ಯಾಕಾಶ ನಿಲ್ದಾಣ’ ವಾಗಿರುವ ISS ಗೆ ವೈಜ್ಞಾನಿಕ ಉಪಕರಣಗಳನ್ನೂ ಗಗನಯಾತ್ರಿಗಳನ್ನೂ ಹೊತ್ತೊಯ್ದು ನೂರಾರು ಬಾರಿ ಭೆಟ್ಟಿ ಇತ್ತಿವೆ. ಒಮ್ಮೆ ಬೃಹತ್ ರೊಬಾಟ್ ಕೈ, ಮತ್ತೊಮ್ಮೆ ಬೃಹತ್ ಸೌರ ಫಲಕಗಳನ್ನು ಹೊತ್ತು ಯಶಸ್ವಿಯಾಗಿ ISS ಗೆ ಹಾರಿ ಮರಳಿ ಬಂದ ಹೆಗ್ಗಳಿಕೆ ಸ್ಪೇಸ್ ಶಟ್ಲ್ ಗಳದ್ದು. ಸ್ಪೇಸ್ ಶಟ್ಲ್ ಮತ್ತು ISS ಒಂದರ ಪಕ್ಕ ಹಾರುತ್ತ ಗಗನಯಾತ್ರಿಗಳು ನೌಕೆಯಿಂದ ISS ಗೆ ದಾಟಿದ್ದು, ಅಲ್ಲಿಂದ ಹೊರಬಿದ್ದು ಉಪಗ್ರಹದ ರಿಪೇರಿ, ಉಪಕರಣಗಳ ಜೋಡಣೆ ಇತ್ಯಾದಿಗಳನ್ನು ಗಗನನಡಿಗೆಯ ಮೂಲಕ ನಡೆಸಿದ್ದು ಇವೆಲ್ಲ ಭೂಮಿಯಲ್ಲಿರುವವರಿಗೆ ರೋಚಕ ಕ್ಷಣಗಳಾಗಿದ್ದವು.
ತಂತ್ರಜ್ಞಾನ ಉತ್ತುಂಗಕ್ಕೇರಿದ ಇಂದಿನ ದಿನಗಳಲ್ಲಿ ಸ್ಪೇಸ್ ಶಟ್ಲ್ ಕೂಡ ಸಾಕಷ್ಟು ಬದಲಾವಣೆಗೊಳಗಾಗುತ್ತಿರುತ್ತವೆ. ಹೊರಮೈ ವಿನ್ಯಾಸ ಅದೇ ಇದ್ದರೂ ಮತ್ತೆ ಮತ್ತೆ ಮೇಲ್ವಿಚಾರಣೆಗೊಳಗಾಗುತ್ತಿರುತ್ತವೆ. ಒಳಾಂಗಣದ ಬಿಡಿಭಾಗಗಳು ಸುಧಾರಣೆಗೊಳಗಾಗುತ್ತಿರುತ್ತವೆ. ಪ್ರತಿ ಹಾರಾಟದ ನಂತರವೂ ಇಂಜಿನ್ನುಗಳನ್ನು ಕಳಚಿ ಪರೀಕ್ಷೆಗೊಳಪಡಿಸಲಾಗುತ್ತದೆ. ಆದರೂ, ಎರಡು ಬಾರಿ, ಒಮ್ಮೆ ಚಾಲೆಂಜರ್ ಹಾಗೂ ಇನ್ನೊಮ್ಮೆ ಕೊಲಂಬಿಯಾ ಬಾನನೌಕೆಗಳು ಬಾನಲ್ಲೇ ಭಸ್ಮವಾದ ಘಟನೆಗಳಿಂದಾಗಿ ನಾಸಾ ತಾನಿಟ್ಟ ಹೆಜ್ಜೆಗಳನ್ನು ಮತ್ತೊಮ್ಮೆ ಪರೀಕ್ಷಿಸುವಂತಾಯಿತು.
ಅತಿ ಹೆಚ್ಚಿನ ಹಾರಾಟ ನಡೆಸಿದ ಡಿಸ್ಕವರಿ ಕೊನೆಯ ಬಾರಿ ಬಾನಿಗೇರುವ ಸ್ಪೇಸ್ ಶಟ್ಲ್ ಕೂಡ. ಈ ಗಗನ ವಾಹನಗಳಿಗೆ 2010 ರಲ್ಲಿ ನಿವೃತ್ತಿ ನೀಡಬೇಕೆಂದು ಅಮೆರಿಕದ ಹಿಂದಿನ ಅಧ್ಯಕ್ಷ ಜಾರ್ಜ್ ಬುಶ್ ತಾಕೀತು ಪಡಿಸಿದ್ದು ಇದಕ್ಕೆ ಕಾರಣವೊಂದಾದರೆ ಗಗನಯಾನವನ್ನು ವ್ಯಾಪಾರೀಕರಣಗೊಳಿಸುವ ನಿಟ್ಟಿನಲ್ಲಿ ಇವಿನ್ನು ಬೇಡ ಎಂದು ಈಗಿನ ಅಧ್ಯಕ್ಷ ಒಬಾಮಾ ನೀಡಿರುವ ಆದೇಶ ಇನ್ನೊಂದು ಕಾರಣ.
ಮುಂದಿನ ದಿನಗಳಲ್ಲಿ ಅಮೆರಿಕದ ವಸ್ತುಸಂಗ್ರಹಾಲಯಗಳಲ್ಲಿ ಆ ದೇಶದ ಬಾಹ್ಯಾಕಾಶ ಸಾಧನೆಯನ್ನು ಬಣ್ಣಿಸುವ ಪರಿಕರಗಳಾಗಿ ಬೃಹದಾಕಾರದ ಯಂತ್ರಗಳಾದ ಡಿಸ್ಕವರಿ, ಎಂಡೇವರ್, ಅಟ್ಲಾಂಟಿಸ್ ಸ್ಪೇಸ್ ಶಟ್ಲ್ ಗಳು ಸಾರ್ವಜನಿಕರ ಆಕರ್ಷಣಾ ಕೇಂದ್ರವಾಗಲಿವೆ.
ಭೂಮಿಯ ಆಚಿನ ಲೋಕ
ಭೂಮಿಯ ಹೊರಗಿನ ವಾಯುಮಂಡಲದ ಸುಮಾರು ನೂರು ಕಿಮೀ ವಿಸ್ತಾರವನ್ನು ಭೂವಾತಾವರಣವೆಂದು ಕರೆಯಲಾಗುತ್ತದೆ. ಆ ನಂತರದ ಪ್ರದೇಶ ಬಾಹ್ಯ ಆಕಾಶ ಎನಿಸಿಕೊಳ್ಳುತ್ತದೆಯಾದರೂ ಮತ್ತೂ ನೂರಿನ್ನೂರು ಕಿಮೀವರೆಗೆ ವಿರಳವಾದ ವಾಯುಪದರ ಇದ್ದೇ ಇದೆ. ಅಷ್ಟೇ ಅಲ್ಲ, ಅಲ್ಲಿ ಭೂಮಿಯ ಗುರುತ್ವಾಕರ್ಷಣೆಯ ಪ್ರಭಾವವೂ ಸ್ವಲ್ಪ ಮಟ್ಟಿಗೆ ಇರುತ್ತದೆ. ವಿಜ್ಞಾನಿಗಳು ಭೂಮಂಡಲದ ಸುತ್ತಲಿನ 200 ರಿಂದ 2000 ಕಿಮೀ ವರೆಗಿನ ಪ್ರದೇಶವನ್ನು ‘ಭೂ ಸಮೀಪದ ಕಕ್ಷೆ’ (near earth orbit) ಎಂದು ಸಂಬೋಧಿಸುತ್ತಾರೆ. ಈ 1800 ಕಿಮೀ ಪ್ರದೇಶದಲ್ಲಿ ಸುಮಾರು ಎರಡು ಸಾವಿರಕ್ಕಿಂತ ಹೆಚ್ಚು ಮಾನವನಿರ್ಮಿತ ಉಪಗ್ರಹಗಳು ಅತಿ ವೇಗವಾಗಿ ಭೂಮಿಯನ್ನು ಸುತ್ತುಹಾಕುತ್ತಿವೆ! ಪ್ರತಿಯೊಂದೂ ನಿಗದಿತ ಕಕ್ಷೆಯಲ್ಲಿ ಹಾರಾಡುತ್ತಿರುವುದರಿಂದ ಹಾಗೂ ಸದಾಕಾಲ ತಂತ್ರಜ್ಞರ ನಿಗರಾನಿಯಲ್ಲಿರುವುದರಿಂದ ಅವು ಒಂದಕ್ಕೊಂದು ಢಿಕ್ಕಿ ಹೊಡೆಯುವ ಸಂಭವ ಕಡಿಮೆ. ಉಪಗ್ರಹಗಳನ್ನು ಮರಳಿ ಭೂಮಿಗೆ ಕರೆಸುವಾಗ ಅಥವಾ ಅವುಗಳ ಕಕ್ಷೆಯ ಮಾರ್ಗವನ್ನು ಬದಲಿಸುವಾಗ ಬಲು ಎಚ್ಚರಿಕೆಯಿಂದ ಮಾರ್ಗದರ್ಶನ ನೀಡಲಾಗುತ್ತದೆ.
ಉಪಗ್ರಹಗಳು ಬೀಳುವುದಿಲ್ಲವೇಕೆ?
ಎತ್ತರಪ್ರದೇಶದಲ್ಲಿ ನಿಂತು ಕಲ್ಲೊಂದನ್ನು ವೇಗವಾಗಿ ಎಸೆದರೆ ಏನಾಗುತ್ತದೆ? ಅದು ಒಂದಿಷ್ಟು ಎತ್ತರಕ್ಕೆ ಹಾರಿ ಮರಳಿ ಕೆಳಕ್ಕೆ ಬೀಳುತ್ತದೆ ತಾನೇ? ಇನ್ನೂ, ಮತ್ತೂ, ವೇಗವನ್ನು ಏರಿಸಿದರೆ ಒಂದು ಹಂತದಲ್ಲಿ ಅದು ಭೂವಾತಾವರಣದ ಆಚೆ ಹೋಗಬಹುದಲ್ಲವೆ? ಸೆಕೆಂಡಿಗೆ 11 ಕಿಮೀ ವೇಗವಾಗಿ ಓಡುವಂತೆ ಕಲ್ಲನ್ನು ಎಸೆದರೆ ಅದು 100 ಕಿಮೀ ಆಚೆ ಹಾರುತ್ತದೆ. ಅಲ್ಲಿಯೂ ತೆಳುವಾದ ಗುರುತ್ವದಿಂದಾಗಿ ಅದು ಭೂಮಿಯತ್ತ ಬೀಳತೊಡಗುತ್ತದೆ, ಆದರೆ ಅದೇ ವೇಳೆಗೆ ಭೂಮಿಯ ಮೇಲ್ಮೈ ಕೂಡ ತಿರುಗುತ್ತಿರುವುದರಿಂದ ನಮ್ಮ ಈ ಕಲ್ಲು ಬೀಳುತ್ತಲೇ ಇರುತ್ತದೆ ಅಥವಾ ಭೂಸುತ್ತ ತಿರುಗುತ್ತಲೇ ಇರುತ್ತದೆ. ಇದೇ ಉಪಗ್ರಹ ಹಾರಾಟದ ಮೂಲ ತತ್ವ.
ರಷ್ಯಾ ದೇಶದ ಬಾನಭವಿಷ್ಯ
ಅಮೆರಿಕಾದ ಸ್ಪೇಸ್ ಶಟ್ಲ್ ನಂಥದ್ದೇ ಉಪಗ್ರಹವೊಂದನ್ನು ರಷ್ಯಾ ತಯಾರಿಸಿ ಹಾರಿಬಿಟ್ಟಿತು. ಕೆಟ್ಟ ಹವಾಮಾನದಲ್ಲಿಯೂ, (ಸ್ಪೇಸ್ ಶಟಲ್ ಗಳ ಉಡಾವಣೆಗೆ ಮೋಡಕವಿದ, ಮಳೆಯ ವಾತಾವರಣವಿರಬಾರದು) ಹಾಗೂ ದೂರ ಕಂಟ್ರೋಲಿನಲ್ಲಿ ಜಿಗಿಯುವ ಮತ್ತೆ ಬಂದಿಳಿಯುವ ತಂತ್ರಜ್ಞಾನದೊಂದಿಗೆ ಅದು ಯಶಸ್ವಿಯಾಯಿತು. ಆದರೆ ಆ ವೇಳೆಗಾಗಲೇ ಸೋವಿಯೆತ್ ರಷ್ಯಾ ಪ್ರತ್ಯೇಕ ರಾಷ್ಟ್ರಗಳಾಗಿ ಛಿದ್ರಗೊಂಡು ಅದರ ಶಕ್ತಿಸಾಮಥ್ರ್ಯಗಳು ಕುಂದಿದ್ದವು. ರಷ್ಯಾ ಆರ್ಥಿಕವಾಗಿಯೂ ದಿವಾಳಿಗೊಂಡಿತ್ತು. ಹಳೆಯ ತಂತ್ರಜ್ಞಾನ, ಹಳೆಯ ಉಪಕರಣಗಳಿಂದಾಗಿ ರಷ್ಯಾದ ಸಂಶೋಧನಾ ಸಾಮಥ್ರ್ಯಕ್ಕೆ ಹಿನ್ನಡೆಯುಂಟಾಯಿತು. ಅಮೆರಿಕಾ ಅಂತರಿಕ್ಷಯಾನದಲ್ಲಿ ಹಿರಿಯಣ್ಣನಾಗಿ ಮೆರೆಯುವ ಅವಕಾಶ ತಾನೇತಾನಾಗಿ ದೊರೆಯಿತು.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ
ಹೆಸರಿಗೆ ನಿಲ್ದಾಣವಾದರೂ ಇದೊಂದು ಕೃತಕ ಭೂ ಉಪಗ್ರಹ. ಬಾಹ್ಯಾಕಾಶದ ಘಟನೆಗಳನ್ನು ಅಲ್ಲಿಯೇ ಇದ್ದು ಅಧ್ಯಯನ ನಡೆಸಲೆಂದು 1998 ರಲ್ಲಿ ಅಮೆರಿಕಾ ಇದನ್ನು ಬಾನಿಗೆ ಹಾರಿಬಿಟ್ಟಿತು.
ಪ್ರಮುಖವಾಗಿ ಅಮೆರಿಕ ಇದರ ಉಸ್ತುವಾರಿಯನ್ನು ಹೊಂದಿದೆ. ಮೊದಲು ಪುಟ್ಟ ಉಪಗ್ರಹವಾಗಿ ಹಾರಿದ ISS (international space centre) ಗೆ ಕಾಲಕಾಲಕ್ಕೆ ಸ್ಪೇಸ್ ಶಟ್ಲ್ ಮೂಲಕ ಮತ್ತಷ್ಟು ಉಪಕರಣಗಳನ್ನು ಜೋಡಿಸುತ್ತಿರುವುದರಿಂದ ಇಂದು ಭೂಮಿಯನ್ನು ಪ್ರದಕ್ಷಿಣೆ ಹಾಕುತ್ತಿರುವ ಕೃತಕ ಉಪಗ್ರಹಗಳಲ್ಲಿ ISS ಅತಿ ದೊಡ್ಡದೆನಿಸಿದೆ. ISS ನ ಪ್ರಯೋಗಾಲಯದಲ್ಲಿ ಕಿರುಗುರುತ್ವವನ್ನು ಕಲ್ಪಿಸಿ ಆ ವಾತಾವರಣದಲ್ಲಿ ತಂತ್ರಜ್ಞರು ಹಲವಾರು ವಿಷಯಗಳ ಮೇಲೆ ಸಂಶೋಧನೆ ನಡೆಸುತ್ತಿದ್ದಾರೆ. ಕಳೆದ 9 ವರ್ಷಗಳಿಂದ ISS ನಲ್ಲಿ ಸತತವಾಗಿ ತಂತ್ರಜ್ಞರು ವಾಸಿಸುತ್ತಿದ್ದಾರೆ.
ಸರೋಜಾ ಪ್ರಕಾಶ,

ಮಹಿಳೆಯರ ಅಧ್ಯಯನ ಪ್ರವಾಸ

0

ಹೈನುಗಾರಿಕೆಯಲ್ಲಿ ಪ್ರಗತಿ ಸಾಧಿಸಿರುವ ಗುಜರಾತ್ನ ಆನಂದ್ ಡೈರಿಯಲ್ಲಿ ಹೈನುಗಾರಿಕೆಯ ವಿವಿಧ ಕ್ರಮಗಳನ್ನು ವೀಕ್ಷಿಸಿ ನಮ್ಮ ಭಾಗದ ಇನ್ನಷ್ಟು ಮಹಿಳೆಯರನ್ನು ಹೈನುಗಾರಿಕೆಯಲ್ಲಿ ತೊಡಗಿಸುವಂತೆ ಪ್ರೇರಿಪಿಸುವ ಕೆಲಸವನ್ನು ಮಾಡಬೇಕು ಎಂದು ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಹೇಳಿದರು.
ತಾಲ್ಲೂಕಿನಿಂದ ಗುಜರಾತ್ನ ಆನಂದ್ ಡೈರಿಗೆ ಹೈನುಗಾರಿಕೆ ವೀಕ್ಷಣೆಗೆಂದು ಅಧ್ಯಯನ ಪ್ರವಾಸಕ್ಕೆ ಶುಕ್ರವಾರ ಹೊರಟ ೪೭ ಮಂದಿ ಮಹಿಳಾ ಸದಸ್ಯರಿಗೂ ಶುಭ ಹಾರೈಸಿ ಅವರು ಮಾತನಾಡಿದರು.
ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಒಟ್ಟು ೧,೭೪೦ ಸಂಘಗಳಿಂದ ಸುಮಾರು ೯ ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಹೈನುಗಾರಿಕೆಯ ಅಭಿವೃದ್ಧಿಗೆ ಮಹಿಳೆಯರೇ ಮುಖ್ಯ ಕಾರಣವಾಗಿದ್ದಾರೆ. ಹೀಗಾಗಿ ಈ ಬಾರಿ ಗುಜರಾತ್ ಪ್ರವಾಸಕ್ಕೆ ಮಹಿಳೆಯರನ್ನು ಮಾತ್ರವೇ ಕಳುಹಿಸಲಾಗುತ್ತಿದೆ.
ಇದೇ ಮೊದಲಬಾರಿಗೆ ತಾಲ್ಲೂಕಿನಿಂದ ಮಹಿಳೆಯರನ್ನು ಪ್ರವಾಸ ಕಳುಹಿಸುತ್ತಿದ್ದು, ಪ್ರವಾಸದಲ್ಲಿ ಗುಜರಾತ್ನ ಅನಂದ್ ಡೈರಿಯಲ್ಲಿ ಇವರಿಗಾಗಿ ಎರಡು ದಿನಗಳ ಕಾಲ ತರಬೇತಿ ಕಾರ್ಯಕ್ರಮವಿದೆ. ತರಬೇತಿಯಲ್ಲಿ ಮಹಿಳೆಯರು ಗುಜರಾತ್ನ ಆನಂದ್ ಡೈರಿಯ ಅಭಿವೃದ್ಧಿಯ ಬಗ್ಗೆ ತಿಳಿದುಕೊಂಡು, ಈ ಭಾಗದ ಇನ್ನಷ್ಟು ಮಹಿಳೆಯರನ್ನು ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಬೇಕೆಂದು ಹೇಳಿದರು.
ಕೋಚಿಮುಲ್ ಶಿಡ್ಲಘಟ್ಟ ಶಿಬಿರ ಘಟಕದ ಉಪವ್ಯವಸ್ಥಾಪಕ ಬಿ.ಎಸ್.ಹನುಮಂತರಾವ್, ವಿಸ್ತರಣಾಧಿಕಾರಿಗಳಾದ ಕೆ.ಎನ್.ಬಿ.ರೆಡ್ಡಿ, ಎ.ವಿ.ನಾರಾಯಣರೆಡ್ಡಿ, ಉಮೇಶ್ರೆಡ್ಡಿ, ಶ್ರೀನಿವಾಸ್, ಅಮರೇಶ್ ಹಾಗೂ ಕಾರ್ಯದರ್ಶಿಗಳಾದ ಮುನಿರೆಡ್ಡಿ, ಗೋವಿಂದರಾಜು, ಚಂದ್ರೇಗೌಡ, ಚಂದ್ರಾಚಾರಿ, ಚನ್ನಕೃಷ್ಣಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡಿ

0

ಧಾರ್ಮಿಕವಾದ ಕಾರ್ಯಕ್ರಮಗಳನ್ನು ಮಾಡುವುದರಿಂದ ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ನಾಗರಿಕರಲ್ಲಿ ಮನಶ್ಯಾಂತಿ ಹಾಗೂ ಐಕ್ಯತೆ ಉಂಟಾಗುತ್ತದೆ ಎಂದು ಚಿತ್ರದುರ್ಗದ ಕೃಷ್ಣಯಾದವನಂದ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.
ತಾಲ್ಲೂಕಿನ ದೇವರಮಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಗರನಾಯಕನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಅಭಯಾಂಜನೇಯಸ್ವಾಮಿ ದೇವಾಲಯದ ಪ್ರತಿಷ್ಠಾನ ಮಹೋತ್ಸವದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಪ್ರತಿಯೊಬ್ಬರೂ ಪ್ರೀತಿ ಆಧರಣೆಯಿಂದ ಒಗ್ಗೂಡಿ ಜೀವಿಸಬೇಕಾಗಿದೆ. ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡುವ ಮೂಲಕ ಮುಂದಿನ ಸಮಾಜವನ್ನು ಸಜ್ಜುಗೊಳಿಸಬೇಕು. ಸಮಾಜದಲ್ಲಿ ಉತ್ತಮವಾದ ವಾತಾವರಣ ನಿರ್ಮಾಣವಾಗಬೇಕಾದರೆ, ಜಾತಿ, ಕುಲ, ಮತ ಬೇದಗಳನ್ನು ಬಿಟ್ಟು, ಮಾನವರೆಲ್ಲರೂ ಒಂದೇ ಎಂಬ ಭಾವನೆಯಿಂದ ಸಾಮರಸ್ಯದ ಜೀವನ ನಡೆಸಬೇಕು ಎಂದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಸಮಾಜದ ಪ್ರತಿಯೊಂದು ವರ್ಗದ ಜನರು ಅಭಿವೃದ್ಧಿಯಾಗಬೇಕಾದರೆ, ಶಿಕ್ಷಣಕ್ಕೆ ಹೆಚ್ಚು ಒತ್ತುನೀಡಬೇಕು. ವಿದ್ಯಾರ್ಥಿನಿಲಯಗಳ ಅಭಿವೃದ್ದಿ, ಹಾಗೂ ವಿಧ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಯಾಗಬೇಕು. ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕಾಗಿ ಭೂಮಿ ಸರ್ವೆ ಕಾರ್ಯ ಮುಗಿದಿದ್ದು, ಎರಡು ಎಕರೆ ನಿಗದಿಯಾಗಿದೆ. ಸಮುದಾಯ ಮುಖಂಡರು ಸಭೆ ಸೇರಿ ನಿಲಯ ನಿರ್ಮಾಣಕ್ಕೆ ಮುಂದಾದರೆ ಅಗತ್ಯವಾಗಿರವ ಎಲ್ಲಾ ಸಹಕಾರ ನೀಡುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಹಾಗೂ ಕೆ.ಪಿ.ಸಿ.ಸಿ.ಉಪಾಧ್ಯಕ್ಷ ವಿ.ಮುನಿಯಪ್ಪ ಮಾತನಾಡಿ, ವಿದ್ಯಾರ್ಥಿನಿಲಯ ಕಾಮಗಾರಿಗೆ ವೈಯಕ್ತಿಕ ಸಹಾಯ ನೀಡುವುದಾಗಿ ಹೇಳಿದರು.
ವಿಜಯಪುರ ಬಸವ ಕಲ್ಯಾಣಮಠದ ಮಹದೇವಸ್ವಾಮೀಜಿ, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಕೋಚಿಮುಲ್ ನಿರ್ದೇಶಕ ಬಂಕ್ಮುನಿಯಪ್ಪ, ಡಿ.ವಿ.ವೆಂಕಟೇಶ್, ಡಿ.ಎಂ.ಮುನಿವೆಂಕಟಪ್ಪ, ನಗರಸಭಾ ಸದಸ್ಯ ಅಪ್ಸರ್ಪಾಷಾ, ಪಲಿಚೇರ್ಲು ಗ್ರಾಮ ಪಂಚಾಯತಿ ಅಧ್ಯಕ್ಷ ಗೋಪಿ, ಯಾದವ ಸಂಘದ ಅಧ್ಯಕ್ಷ ಯೋಗಾನಂದ, ನಾರಾಯಣಸ್ವಾಮಿ,ಮುನಿವೆಂಕಟಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಗ್ರಾಮಸಭೆಗೆ ಎಲ್ಲರೂ ಭಾಗವಹಿಸಿ ಚರ್ಚೆ ನಡೆಸಿ

0

ಗ್ರಾಮಸಭೆಗಳ ಮಹತ್ವವನ್ನು ಅರಿತುಕೊಳ್ಳಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸರ್ಕಾರದ ಯೋಜನೆಗಳ ಅನುಷ್ಠಾನದ ಬಗ್ಗೆ ಚರ್ಚೆ ನಡೆಸಬೇಕು ಎಂದು ಎಇಇ ಗಣಪತಿ ಸಾಕರೆ ಹೇಳಿದರು.
ತಾಲ್ಲೂಕಿನ ಮೇಲೂರಿನ ಗ್ರಾಮದ ಸಮುದಾಯಭವನದಲ್ಲಿ ದಿ.ರಾಜೀವ್ಗಾಂಧಿ ಅವರ ಜನ್ಮದಿನಾಚರಣೆಯ ಅಂಗವಾಗಿ ಗುರುವಾರ ಆಯೋಜನೆ ಮಾಡಲಾಗಿದ್ದ ವಿಶೇಷ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿನ ಜನರು ಸರ್ಕಾರದಿಂದ ಬಿಡುಗಡೆಯಾಗುವಂತಹ ಅನುದಾನಗಳನ್ನು ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿಯತ್ತ ಗಮನಹರಿಸಬೇಕು. ನರೇಗಾ ಯೋಜನೆಯೂ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಗ್ರಾಮಸಭೆಗಳನ್ನು ನಡೆಸಿ, ಕ್ರಿಯಾಯೋಜನೆಗಳನ್ನು ತಯಾರಿಸುವ ಮೂಲಕ ಅನುಮೋದನೆ ಪಡೆದು ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ. ಸ್ಥಳೀಯ ಜನಪ್ರತಿನಿಧಿಗಳು ಆಯಾ ಹಳ್ಳಿಗಳಲ್ಲಿನ ರೈತರು ಹಾಗೂ ನಾಗರಿಕರಲ್ಲಿ ಧೈರ್ಯ ತುಂಬಿಸಬೇಕು ಎಂದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಜಮುನಾಧರ್ಮೇಂದ್ರ ಮಾತನಾಡಿ, ಗ್ರಾಮಸಭೆಗಳಿಗೆ ಹಾಜರಾಗುವ ಮೂಲಕ ಜನರು ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳಬೇಕು. ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ಜನರು ಅಭಿವೃದ್ಧಿಯ ವಿಚಾರದಲ್ಲಿ ಸಹಕಾರ ನೀಡಬೇಕು. ತಮ್ಮ ಮನೆಗಳ ಸಮೀಪದಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಂಡು ಮುಂದಿನ ದಿನಗಳಲ್ಲಿ ಹರಡಬಹುದಾದ ರೋಗಗಳನ್ನು ತಡೆಗಟ್ಟಲು ಸಹಕಾರ ನೀಡಬೇಕು ಎಂದರು.
ಕಂಬದಹಳ್ಳಿ ಗ್ರಾಮದಿಂದ ಆಗಮಿಸಿದ್ದ ಮಹಿಳೆಯರು, ಗ್ರಾಮದಲ್ಲಿ ಅಕ್ರಮವಾಗಿ ಮಧ್ಯಮಾರಾಟ ನಡೆಯುತ್ತಿದೆ, ೧೧ ವರ್ಷದ ಮಕ್ಕಳೂ ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದಾರೆ. ರೈತರು ಸತ್ತರೆ, ಆತ್ಮಹತ್ಯೆ ಎನ್ನುತ್ತೀರಿ, ಮಕ್ಕಳು ಕುಡಿತಕ್ಕೆ ಬಲಿಯಾಗುತ್ತಿದ್ದಾರೆ. ಜಿಲ್ಲೆಯ ಎಸ್.ಪಿ. ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ದೂರುಗಳನ್ನು ನೀಡಿದ್ದೇವೆ. ಯಾರೋಬ್ಬರೂ ಕ್ರಮ ತೆಗೆದುಕೊಳ್ಳುತ್ತಿಲ್ಲ. ಪೊಲೀಸರಿಗೆ ದೂರು ನೀಡಿದರೆ, ಅಕ್ರಮವಾಗಿ ಮಧ್ಯಮಾರಾಟ ಮಾಡುವಂತಹ ಅಂಗಡಿಗಳ ಮಾಲೀಕರಿಂದ ಹಣವನ್ನು ಪಡೆದುಕೊಂಡು ಸುಮ್ಮನಿದ್ದಾರೆ. ನೀವಾದರೂ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೇಲೂರು, ಗಂಗನಹಳ್ಳಿ, ಚೌಡಸಂದ್ರ, ಕಂಬದಹಳ್ಳಿ ಗ್ರಾಮಗಳ ಜನರು ವಿವಿಧ ಯೋಜನೆಗಳಡಿಯಲ್ಲಿ ಸೌಲಭ್ಯಗಳಿಗಾಗಿ ಅರ್ಜಿಗಳನ್ನು ಸಲ್ಲಿಸಿದರು.
ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗಳಲ್ಲಿ ಸಿಗುವಂತಹ ಸೌಲಭ್ಯಗಳ ಬಗ್ಗೆ ವಿವರಿಸಿದರು.
ಗ್ರಾಮ ಪಂಚಾಯತಿ ಉಪಾಧ್ಯಕ್ಷ ಆಂಜನೇಯರೆಡ್ಡಿ, ಮಾಜಿ ಅಧ್ಯಕ್ಷರಾದ ಕೆ.ಮಂಜುನಾಥ್, ಆರ್.ಎ.ಉಮೇಶ್ ಸೇರಿದಂತೆ ಎಲ್ಲಾ ಸದಸ್ಯರುಗಳು ಸಭೆಯಲ್ಲಿ ಹಾಜರಿದ್ದರು.

ಮಾದರಿ ರಾಜಕಾರಣಿ ದಿವಂಗತ ಡಿ.ದೇವರಾಜ ಅರಸು

0

ಸರಳ ಸಜ್ಜನಿಕೆಯ ರಾಜಕಾರಣಿ, ಮುತ್ಸದ್ದಿ, ದಿವಂಗತ ಡಿ.ದೇವರಾಜ ಅರಸು ಅವರ ಜೀವನಶೈಲಿ ಪ್ರತಿಯೊಬ್ಬ ನಾಗರಿಕರು ಹಾಗೂ ರಾಜಕಾರಣಿಗಳಿಗೆ ಮಾರ್ಗದರ್ಶನವಾಗಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಗುರುವಾರ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್, ನಗರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಆಯೋಜನೆ ಮಾಡಲಾಗಿದ್ದ ದಿವಂಗತ ಡಿ.ದೇವರಾಜು ಅರಸು ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಜದಲ್ಲಿದ್ದ ಅನಿಷ್ಟಪದ್ಧತಿಗಳನ್ನು ತೊಲಗಿಸುವ ನಿಟ್ಟಿನಲ್ಲಿ ನಿರಂತರವಾಗಿ ಹೋರಾಟ ನಡೆಸಿದ ಅವರು, ಬಾಲ್ಯವಿವಾಹ, ತಲೆಯ ಮೇಲೆ ಮಲಹೊರುವ ಪದ್ದತಿ, ಸೇರಿದಂತೆ ಹಲವು ಸಮಾಜ ಘಾತುಕ ಪದ್ದತಿಗಳನ್ನು ನಿಷೇಧ ಮಾಡುವಲ್ಲಿ ಸಫಲರಾದರು. ಜೊತೆಗೆ ೨೦ ಅಂಶಗಳ ಕಾರ್ಯಕ್ರಮ ಪ್ರಥಮ ಬಾರಿಗೆ ಅನುಷ್ಠಾನಕ್ಕೆ ತಂದ ಅವರು, ರಾಜ್ಯವನ್ನು ದೇಶದಲ್ಲಿಯೆ ಮಾದರಿಯ ರಾಜ್ಯವನ್ನಾಗಿ ಮಾಡುವ ಮೂಲಕ ಅವರ ಕಾರ್ಯವೈಖರಿಯನ್ನು ಇತರೇ ರಾಜ್ಯಗಳಲ್ಲಿಯೂ ಅಳವಡಿಸಿಕೊಳ್ಳುವಂತೆ ಮಾಡಿದರು.
ನಗರೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದ ಅವರು, ನಗರಗಳಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು, ಬೀದಿದೀಪಗಳು, ಹಾಗೂ ಒಳಚರಂಡಿಯ ವ್ಯವಸ್ಥೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಅವರ ಹಾದಿಯಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳು ಮುನ್ನಡೆಯಬೇಕು. ಹಿಂದುಳಿದ ವರ್ಗಗಳ ಇಲಾಖೆಯನ್ನು ಹುಟ್ಟುಹಾಕುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೂಡಾ ನ್ಯಾಯವನ್ನು ಒದಗಿಸಿದ ಕೀರ್ತಿ ದೇವರಾಜು ಅರಸು ಅವರಿಗೆ ಸಲ್ಲುತ್ತದೆ. ಗೇಣಿ ಪದ್ದತಿಯ ಮೂಲಕ ಉಳುವರರಿಗೆ ಭೂಮಿಯನ್ನು ಕೊಡಿಸುವ ಮೂಲಕ ಅಭಿವೃದ್ದಿಯ ಚಿಂತಕರಾಗಿದ್ದರು. ಸಮಾಜದಲ್ಲಿನ ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳು ಸರ್ಕಾರದ ಕಾರ್ಯಕ್ರಮಗಳನ್ನು ಪ್ರಾಮಾಣಿಕವಾಗಿ ಜನರಿಗೆ ತಲುಪಿಸಬೇಕು ಎಂದರು.
ಕೋಚಿಮುಲ್ ನಿರ್ದೇಶಕ ಬಂಕ್ಮುನಿಯಪ್ಪ ಮಾತನಾಡಿ, ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಗೂ ಕೂಡಾ ವಾಸಿಸಲು ಸೂರು ದೊರಕಬೇಕು. ಸ್ವಾಭಿಮಾನದ ಜೀವನ ನಡೆಸಲು ಮೂಲಸೌಕರ್ಯಗಳನ್ನು ಒದಗಿಸಿಕೊಡಬೇಕು. ಸರ್ಕಾರದ ಯೋಜನೆಗಳು ಪ್ರಾಮಾಣಿಕವಾಗಿ ಫಲಾನುಭವಿಗಳಿಗೆ ತಲುಪಿಸಿದಾಗ ಮಾತ್ರ ಸಮಾಜದಲ್ಲಿ ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಗುತ್ತದೆ. ಹಿಂದುಳಿದ ವರ್ಗಗಳ ಎಲ್ಲಾ ಜನರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮುಂದುವರೆಯಬೇಕಾದರೆ, ಉತ್ತಮವಾದ ಶಿಕ್ಷಣವನ್ನು ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಬಿ.ಸಿ.ಎಂ. ವಿಭಾಗದ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಂಜಿನಪ್ಪ, ಎಇಇ ಗಣಪತಿಸಾಕರೆ, ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯತಿ ಸದಸ್ಯ ವೇಣುಗೋಪಾಲ್, ವಕೀಲ ಯೋಗಾನಂದ, ಬಿ.ಸಿ.ಎಂ.ಇಲಾಖಾಧಿಕಾರಿ ಶಂಕರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಕೆ.ಗುರುರಾಜ್ರಾವ್, ರಜಸ್ವ ನಿರೀಕ್ಷಕ ಸುಭ್ರಮಣಿ, ಲಾರೆನ್ಸ್, ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಶ್ರಾವಣದ ವರಮಹಾಲಕ್ಷ್ಮಿ ಹಬ್ಬ

0

ಶಿಡ್ಲಘಟ್ಟ ತಾಲ್ಲೂಕಿನ ಹನುಮಂತಪುರ ಗೇಟ್ನಲ್ಲಿರುವ ಬಿ.ಜಿ.ಎಸ್.ಪಬ್ಲಿಕ್ ಶಾಲೆಯಲ್ಲಿ ಬುಧವಾರ ನಡೆದ   ಎಥ್ನಿಕ್ ದಿನಾಚರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಲ್ಕನೇ ತರಗತಿಯ ವಿದ್ಯಾರ್ಥಿಗಳು ವರಮಹಾಲಕ್ಷ್ಮಿ ಹಬ್ಬದ ಆಚರಣೆಯನ್ನು ಪ್ರದರ್ಶಿಸಿದ್ದರು.

ಅಪರೂಪದ ಹೂವು ಬ್ರಹ್ಮಕಮಲ

0

ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯ ನಾಗವೇಣಿ ಜಯರಾಮ್ ಅವರ ಮನೆಯಲ್ಲಿ ಬುಧವಾರ ರಾತ್ರಿ ಒಂದೇ ಗಿಡದಲ್ಲಿ 63 ಬ್ರಹ್ಮಕಮಲದ ಹೂಗಳು ಅರಳಿದ್ದು, ವಿಶೇಷ ಆಕರ್ಷಣೆಯಾಗಿತ್ತು.

ನಿರ್ಮಾಣವಾಗುತ್ತಿದ್ದ ಮನೆ ಜಖಂ

0

ತಾಲ್ಲೂಕಿನ ಹೊಸಪೇಟೆ ಗ್ರಾಮ ಪಂಚಾಯತಿಯ ಜಂಗಮಕೋಟೆ ಕ್ರಾಸ್ನಲ್ಲಿ ರಾಜೀವ್ಗಾಂಧಿ ವಸತಿ ಯೋಜನೆಯಡಿ ನಿರ್ಮಾಣವಾಗುತ್ತಿದ್ದ ಸುನೀತಾ ಪ್ರಸನ್ನಕುಮಾರ್ ಅವರ ಮನೆಯನ್ನು ಕೆಲ ವ್ಯಕ್ತಿಗಳು ಜಖಂಗೊಳಿಸಿರುವ ಘಟನೆ ಬುಧವಾರ ನಡೆದಿದೆ.
ಜಂಗಮಕೋಟೆ ಕ್ರಾಸ್ನಲ್ಲಿ ವಿಜಯಲಕ್ಷ್ಮಿ ಎಂಬುವರಿಂದ ಸುನೀತಾ ಪ್ರಸನ್ನಕುಮಾರ್ ಅವರು ಸ್ಥಳವನ್ನು ಖರೀದಿ ಮಾಡಿದ್ದು, ನಿವೇಶನವನ್ನು ನಿರ್ಮಿಸಲು ಗ್ರಾಮ ಪಂಚಾಯತಿಯಿಂದ ರಾಜೀವ್ಗಾಂಧಿ ವಸತಿ ಯೋಜನೆಯಡಿ ಹಣ ಮಂಜೂರು ಮಾಡಿಸಿಕೊಂಡಿದ್ದರು.
‘ಮೊದಲನೇ ಕಂತಿನ ಹಣ ಇವರ ಖಾತೆಗೆ ಜಮಾ ಆಗಿ ಕಿಟಕಿ, ಬಾಗಿಲುಗಳನ್ನಿಟ್ಟು ಲಿಂಟಲ್ ಮಟ್ಟದವರೆಗೂ ಕಾಮಗಾರಿ ನಡೆದಿತ್ತು. ಬುಧವಾರ ಮಳಮಾಚನಹಳ್ಳಿ ಗ್ರಾಮ ಪಂಚಾಯತಿ ಸದಸ್ಯರೊಬ್ಬರು ಗುಂಪುಕಟ್ಟಿಕೊಂಡು ಬಂದು ನಿರ್ಮಿಸುತ್ತಿದ್ದ ಕಟ್ಟಡವನ್ನು ಒಡೆದುಹಾಕಿದ್ದಾರೆ. ಈ ಸ್ಥಳ ನಮ್ಮದೆಂದು ದೌರ್ಜನ್ಯವೆಸಗಿದ್ದಾರೆ’ ಎಂದು ಪ್ರಸನ್ನಕುಮಾರ್ ತಿಳಿಸಿದ್ದಾರೆ.
‘ಈ ಸ್ಥಳಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆ ಪತ್ರಗಳನ್ನು ಪರಿಶೀಲನೆ ಮಾಡಿಯೇ ಗ್ರಾಮ ಪಂಚಾಯತಿ ವತಿಯಿಂದ ನಮಗೆ ನಿವೇಶನ ನಿರ್ಮಿಸಲು ಹಣ ಮಂಜೂರಾಗಿದೆ. ಕಟ್ಟುತ್ತಿರುವ ಕಟ್ಟಡವನ್ನು ನಾಶ ಮಾಡಿ ದೌರ್ಜನ್ಯವೆಸಗಿ ನಷ್ಟವನ್ನುಂಟು ಮಾಡಿದ್ದಾರೆ. ನಮಗೆ ನಷ್ಟ ಪರಿಹಾರವನ್ನು ಕೊಡಿಸಿ ಸೂಕ್ತ ರಕ್ಷಣೆ ನೀಡಬೇಕೆಂದು ಗ್ರಾಮಾಂತರ ಠಾಣೆಯಲ್ಲಿ ದೂರನ್ನು ಸಲ್ಲಿಸಿದ್ದೇವೆ’ ಎಂದು ಅವರು ಹೇಳಿದರು.

ತಪ್ಪಿಹೋಗಿದ್ದ ಮಗು ತಾಯಿ ಮಡಿಲಿಗೆ

0

ತಪ್ಪಿಹೋಗಿದ್ದ ಪುಟ್ಟ ಬಾಲಕನನ್ನು ಪುರ ಪೊಲೀಸರು ತಾಯಿಯ ಮಡಿಲಿಗೆ ಒಪ್ಪಿಸಿರುವ ಘಟನೆ ಬುಧವಾರ ನಡೆದಿದೆ.
ಬುಧವಾರ ಮಧ್ಯಾಹ್ನ ನಗರದ ಕೆನರಾ ಬ್ಯಾಂಕಿನಲ್ಲಿ ಸುಮಾರು ಮೂರು ವರ್ಷದ ಪುಟ್ಟ ಬಾಲಕ ಒಬ್ಬನೇ ಅಳುತ್ತಾ ಕಂಡುಬಂದಿದ್ದಾನೆ. ಅಲ್ಲಿದ್ದವರನ್ನೆಲ್ಲಾ ವಿಚಾರಿಸಿದ ಬ್ಯಾಂಕಿನ ಸಿಬ್ಬಂದಿ ಈ ಬಾಲಕನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಸಬ್ಇನ್ಸ್ಪೆಕ್ಟರ್ ವಿಜಯ್ ಅವರ ಮಾರ್ಗದರ್ಶನದಂತೆ ಮುಖ್ಯ ಪೇದೆ ಪ್ರಕಾಶ್ ಬಾಲಕನನ್ನು ಬೈಕ್ನಲ್ಲಿ ಕೂರಿಸಿಕೊಂಡು ಊರೆಲ್ಲಾ ಸುತ್ತಾಡಿದ್ದಾರೆ. ಕೆನರಾ ಬ್ಯಾಂಕಿನ ಸಿಸಿ ಕ್ಯಾಮೆರಾದಲ್ಲಿ ಅಂಗನವಾಡಿ ಕಾರ್ಯಕರ್ತೆಯೊಂದಿಗೆ ಮಗು ಬ್ಯಾಂಕಿಗೆ ಬಂದದ್ದನ್ನು ನೋಡಿದ ನಂತರ ಪೊಲೀಸರು ಮಗುವಿನ ತಂದೆ ತಾಯಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
‘ತಪ್ಪಿಹೋಗಿದ್ದ ಮಗು ಜೌಗುಪೇಟೆಯ ಕೃಷ್ಣಮೂರ್ತಿ ಮತ್ತು ಗಾಯತ್ರಿ ಅವರ ಮಗ ಶ್ರೀನಿವಾಸ. ಬೆಳಿಗ್ಗೆಯಿಂದ ಸಂಜೆವರೆಗೂ ಕೆಲಸಕ್ಕೆ ಹೋಗುವ ಈ ದಂಪತಿಗಳು ಮಗುವನ್ನು ಅಂಗನವಾಡಿ ಕಾರ್ಯಕರ್ತೆಯ ಸುಪರ್ದಿಗೆ ಒಪ್ಪಿಸಿರುತ್ತಿದ್ದರು. ಬ್ಯಾಂಕಿಗೆ ಹಣ ಡ್ರಾ ಮಾಡಲು ಹೋಗಿದ್ದ ಅಂಗನವಾಡಿ ಕಾರ್ಯಕರ್ತೆ ಮಗುವನ್ನು ಕರೆದೊಯ್ದಿರುವುದು ಮರೆತು ಹಿಂದಿರುಗಿಬಿಟ್ಟಿದ್ದಾಳೆ. ಇಬ್ಬರಿಗೂ ಬುದ್ದಿಹೇಳಿ ಮಗುವನ್ನು ಒಪ್ಪಿಸಿದೆವು’ ಎಂದು ಮುಖ್ಯ ಪೇದೆ ಪ್ರಕಾಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಗಿಡ ನೆಡಿ ಪರಿಸರ ಉಳಿಸಿ

0

ಮಳೆ ನೀರನ್ನು ವ್ಯರ್ಥ ಮಾಡಬಾರದು. ಆಯಾ ಸ್ಥಳದಲ್ಲಿ ಬಿದ್ದ ಮಳೆ ನೀರು ಅಲ್ಲಲ್ಲೇ ಇಂಗುವಂತೆ ವ್ಯವಸ್ಥೆ ಮಾಡಬೇಕೆಂದು ಯುವಶಕ್ತಿ ಸಂಘಟನೆಯ ವಿಜಯ ಬಾವರೆಡ್ಡಿ ತಿಳಿಸಿದರು.
ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ 11ನೇ ಮೈಲಿ ಕ್ರಾಸ್ನಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಕಾಲೇಜು ಆವರಣದಲ್ಲಿ ಬುಧವಾರ ಯುವಶಕ್ತಿ ಸಂಘಟನೆಯ ‘ಪರಿಸರ ಶಕ್ತಿ’ ಕಾರ್ಯಕ್ರಮದಲ್ಲಿ 250 ಸಸಿಗಳನ್ನು ಕಾಲೇಜು ವಿದ್ಯಾರ್ಥಿಗಳ ನೆರವಿನಿಂದ ನೆಡುವ ಸಂದರ್ಭದಲ್ಲಿ ಅವರು ಮಾತನಾಡಿದರು.
ಶಾಲಾ ಆವರಣದಲ್ಲಿ ನೀರಿನ ಅಭಾವವಿರುವದರಿಂದ ಮಳೆ ಆದ ಮರುದಿನ ನೆಟ್ಟರೆ ತೇವಾಂಶದ ಸದ್ಭಳಕೆ ಆಗುವುದೆಂದು ಸಂಘಟನೆಯ ಸದಸ್ಯರು ಕೆಲಸಗಳಿಗೆ ರಜೆ ಹಾಕಿ ಗಿಡನೆಡುವ ಕಾರ್ಯಕ್ರಮದಲ್ಲಿ ಸ್ಥಳೀಯ ರೈತರ ಸಹಾಯ ಹಾಗೂ ವಿದ್ಯಾರ್ಥಿಗಳ ನೆರವಿನಿಂದ ಗಿಡ ನೆಡುತ್ತಿದ್ದೇವೆ. ಆದಷ್ಟೂ ಮಳೆ ನೀರು ಪೋಲಾಗದಂತೆ ಕಾಳಜಿ ವಹಿಸಿ. ಗಿಡಗಳ ಪೋಷಣೆಗೆ ಅದು ಸಹಕಾರಿಯಾಗಲಿ. ಮುಂದೆ ಇದೇ ರೀತಿ ಜಿಲ್ಲೆಯಾದ್ಯಂತ ಬೇಲಿ ಮತ್ತು ನೀರಿರುವ ಆವರಣಗಳಲ್ಲಿ ಹೆಚ್ಚಿನ ಗಿಡಗಳನ್ನು ಬೆಳೆಸಿ ಬಯಲು ಸೀಮೆಯನ್ನು ಹಸಿರು ಸೀಮೆಯನ್ನಾಗಿಸುವತ್ತ ಯುವಶಕ್ತಿ ಶ್ರಮಿಸಲಿದೆ ಎಂದರು.
ಯುವಶಕ್ತಿಯು ಇದುವರೆಗೆ ಜಿಲ್ಲೆಯಲ್ಲಿ ಸುಮಾರು ೩೦೦೦ ಗಿಡಗಳನ್ನು ನೆಡಲಾಗಿದ್ದು, ಅವುಗಳ ಪೋಷನೆಯನ್ನು ಶಾಲಾ ಮಕ್ಕಳ ಸಹಕಾರದಿಂದ ಮಾಡಲಾಗುತ್ತಿದೆ. ಮುಂದಿನ ವಾರಗಳಲ್ಲಿ ತಾಲ್ಲೂಕಿನ ಎ.ತಿಮ್ಮಸಂದ್ರ ಮತ್ತು ಮಳ್ಳೂರು ಪಂಚಾಯತಿಗಳಲ್ಲಿ ಗಿಡಗಳನ್ನು ನೆಡಲಾಗುವುದು ಎಂದು ಹೇಳಿದರು.
ಶಿವಕುಮಾರ, ಬಾವರೆಡ್ಡಿ, ನರಸಿಂಹಮೂರ್ತಿ, ಮಂಜುನಾಥ, ಮನೋಹರ ರೆಡ್ಡಿ, ಮುನಿರೆಡ್ಡಿ, ನಲ್ಲೋಜನಹಳ್ಳಿ ರೈತ ಮುಖಂಡರು, ಕಾಲೇಜು ಪ್ರಾಂಶುಪಾಲ ನಾರಾಯಣಸ್ವಾಮಿ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಗಿಡ ನೆಡುವುದರಲ್ಲಿ ಭಾಗವಹಿಸಿದ್ದರು.

ಮಕ್ಕಳ ವ್ಯಕ್ತಿತ್ವ ಬೆಳೆಸಲು ಪಠ್ಯೇತರ ಕಾರ್ಯಕ್ರಮಗಳನ್ನು ಆಯೋಜಿಸಿ

0

ಮಕ್ಕಳ ವ್ಯಕ್ತಿತ್ವ ಪರಿಪೂರ್ಣವಾಗಿ ರೂಪುಗೊಳ್ಳಲು ವಿವಿಧ ಚಟುವಟಿಕೆಗಳನ್ನು ಶಾಲೆಗಳಲ್ಲಿ ಆಯೋಜನೆ ಮಾಡಿದಾಗ ಮಾತ್ರ ಸಾಧ್ಯ. ನಮ್ಮ ದೇಶದ ಕಲೆ, ಸಾಹಿತ್ಯ ಸಂಸ್ಕೃತಿ ಪರಂಪರೆಯನ್ನು ಮಕ್ಕಳಿಗೆ ಬಾಲ್ಯದಿಂದಲೇ ತಿಳಿಸಿಕೊಡಬೇಕು ಎಂದು ತಾಲ್ಲೂಕಿನ ಚೀಮಂಗಲದ ಕವಿ ಬಿ.ಆರ್.ಲಕ್ಷ್ಮಣ್ರಾವ್ ಹೇಳಿದರು.
ನಗರದ ಹನುಮಂತಪುರ ಗೇಟ್ನಲ್ಲಿರುವ ಬಿ.ಜಿ.ಎಸ್. ಪಬ್ಲಿಕ್ ಶಾಲೆಯಲ್ಲಿ ಬುಧವಾರ ಆಯೋಜನೆ ಮಾಡಿದ್ದ ಎಥ್ನಿಕ್ ಮತ್ತು ಸಂಸ್ಕೃತಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಶಿಡ್ಲಘಟ್ಟ ತಾಲ್ಲೂಕಿನ ಹನುಮಂತಪುರ ಗೇಟ್ನಲ್ಲಿರುವ ಬಿ.ಜಿ.ಎಸ್.ಪಬ್ಲಿಕ್ ಶಾಲೆಯಲ್ಲಿ ಬುಧವಾರ ನಡೆದ   ಎಥ್ನಿಕ್ ದಿನಾಚರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಹನುಮಂತಪುರ ಗೇಟ್ನಲ್ಲಿರುವ ಬಿ.ಜಿ.ಎಸ್.ಪಬ್ಲಿಕ್ ಶಾಲೆಯಲ್ಲಿ ಬುಧವಾರ ನಡೆದ ಎಥ್ನಿಕ್ ದಿನಾಚರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು.

ಪ್ರತಿಯೊಂದು ಮಗುವಿನ ಮನಸ್ಸಿನಲ್ಲಿ ತನ್ನ ದೇಶ, ರಾಜ್ಯ, ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಗಳ ಬಗ್ಗೆ ಗೌರವಭಾವನೆ ನೆಲೆಸಬೇಕು. ಅಂಥಹ ಪರಿಸರವನ್ನು ಮಕ್ಕಳ ಪೋಷಕರು ಹಾಗೂ ಶಿಕ್ಷಕರು ಸೃಷ್ಠಿಸಬೇಕು. ಗ್ರಾಮೀಣ ಭಾಗದ ಕ್ರೀಡೆಗಳು, ರೈತರ ಬದುಕಿನ ವಿಶೇಷಗಳು, ಗ್ರಾಮೀಣ ಪ್ರದೇಶಗಳಲ್ಲಿದ್ದಂತಹ ಹಲವಾರು ಸಂಪ್ರದಾಯಗಳು ಕಣ್ಮರೆಯಾಗುತ್ತಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಸಂಸ್ಕೃತಿಗಾಗಿಯೇ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ, ಪಾಶ್ಚಿಮಾತ್ಯ ಸಂಸ್ಕೃತಿ ಮತ್ತು ದೇಶೀಯ ಸಂಸ್ಕೃತಿಯ ವ್ಯತ್ಯಾಸಗಳನ್ನು ಮಕ್ಕಳು ತಿಳಿದುಕೊಳ್ಳುತ್ತಾರೆ. ಕೇವಲ ಸಂಸ್ಕೃತಿ ಮಾತ್ರವಲ್ಲದೆ, ಜನಪದ, ನಾಟಕ, ಹರಿಕಥೆಗಳು ಸೇರಿದಂತೆ ಅನೇಕ ಜಾನಪದ ಸೊಬಗುಳ್ಳ ಕಾರ್ಯಕ್ರಮಗಳನ್ನು ಉಳಿಸಿಬೆಳೆಸಬೇಕು ಎಂದರು.
ಬಿ.ಜಿ.ಎಸ್.ಸಂಸ್ಥೆಗಳ ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ ಮಾತನಾಡಿ, ಮಕ್ಕಳನ್ನು ಕೇವಲ ಅಂಕಗಳನ್ನು ಗಳಿಸಿಕೊಳ್ಳುವಂತಹ ಯಂತ್ರಗಳಂತೆ ಅಲ್ಲದೆ ಅವರನ್ನು ಸಮಾಜದಲ್ಲಿ ಪರಿಪೂರ್ಣವಾದ ವ್ಯಕ್ತಿಯನ್ನಾಗಿ ಮಾಡಬೇಕು. ಪಠ್ಯಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸುವಂತೆ ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಸಂಪ್ರದಾಯಿಕ ಆಚರಣೆಗಳ ಬಗ್ಗೆ ಶಿಕ್ಷಣ ನೀಡಬೇಕು. ಮಕ್ಕಳ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಒತ್ತಡ ಹೇರಬಾರದು. ಶಾಲಾ ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡದಿದ್ದರೆ, ನಮ್ಮ ಸಂಪ್ರದಾಯಗಳು ಇತಿಹಾಸಗಳ ಪುಟಗಳನ್ನು ಸೇರುತ್ತವೆ ಎಂದರು.
ಶಾಲೆಯಲ್ಲಿ ಮಕ್ಕಳಿಂದ ಆಯೋಜನೆ ಮಾಡಲಾಗಿದ್ದ ವಿವಿಧ ಬಗೆಯ ಸಂಪ್ರದಾಯ, ಪರಂಪರೆಗಳನ್ನು ಬಿಂಬಿಸುವಂತಹ ಪ್ರದರ್ಶನವನ್ನು ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು. ಶಾಲೆಯ ಮಕ್ಕಳು ದೇಶದ ವಿವಿಧ ರಾಜ್ಯಗಳ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಸ್ವಾಗತಿಸಿದರು. ದೇಶದ ಪ್ರಮುಖ ಹಬ್ಬಗಳ ಆಚರಣೆಗಳ ಮಾದರಿಗಳನ್ನು ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ತಾಲ್ಲೂಕಿನ ಚೀಮಂಗಲದ ಕವಿ ಬಿ.ಆರ್.ಲಕ್ಷ್ಮಣ್ರಾವ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಪ್ರಾಂಶುಪಾಲ ಮಹದೇವ, ಚಂದ್ರಶೇಖರ್, ಅಗಲಗುರ್ಕಿಯ ಬಿ.ಜಿ.ಎಸ್ ಪಿ.ಯು.ಕಾಲೇಜಿನ ಡಾ,ಮಧುಸೂದನ್, ಮುಖ್ಯಶಿಕ್ಷಕ ಮೋಹನ್, ವಾರ್ಡನ್ ರಾಜು, ಡಿ.ವೆಂಕಟೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ರೈಲಿಗೆ ಸಿಕ್ಕು ಎರಡೂ ಕಾಲುಗಳು ಕಳೆದುಕೊಂಡ ಮಹಿಳೆ ಸಾವು

0

ಹೊಟ್ಟೆಪಾಡಿಗಾಗಿ ಸೊಪ್ಪುಮಾರಾಟ ಮಾಡಿಕೊಂಡು ತನ್ನೂರಿಗೆ ರೈಲಿನಲ್ಲಿ ಬಂದ ಮಹಿಳೆಯೊಬ್ಬಳು ಆಯತಪ್ಪಿ ಬಿದ್ದ ಪರಿಣಾಮ ರೈಲಿಗೆ ಸಿಕ್ಕು ಎರಡೂ ಕಾಲುಗಳು ತುಂಡಾಗಿ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ತಾಲ್ಲೂಕಿನ ವೈ.ಹುಣಸೇನಹಳ್ಳಿ ರೈಲ್ವೆ ನಿಲ್ದಾಣಕ್ಕೆ ಬೆಂಗಳೂರಿನಿಂದ ಬಂದ ರೈಲಿನಲ್ಲಿ, ದೊಡ್ಡದಾಸೇನಹಳ್ಳಿಯ ನಿವಾಸಿ ಮುನಿರತ್ನಮ್ಮ ಎಂಬುವವರು ಇಳಿಯುವಾಗ ಆಯತಪ್ಪಿ ರೈಲಿನ ಕೆಳಗೆ ಬಿದ್ದಿದ್ದು, ಎರಡೂ ಕಾಲುಗಳು ತುಂಡಾಗಿ ಹೋಗಿವೆ. ತಕ್ಷಣ ಸ್ಥಳದಲ್ಲಿದ್ದ ನಾಗರಿಕರು ಆಂಬುಲೆನ್ಸ್ ಮೂಲಕ ಚಿಂತಾಮಣಿಯ ಸಾರ್ವಜನಿಕ ಆಸ್ಪತ್ರೆಗೆ ಆಕೆಯನ್ನು ಸಾಗಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಜಾಲಪ್ಪ ಆಸ್ಪತ್ರೆಗೆ ಕರೆದೊಯ್ದಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಅಧಿಕಾರಿಗಳ ವಿರುದ್ಧ ಆಕ್ರೋಶ – ರಾಜೀನಾಮೆ ನೀಡಲು ಮುಂದಾದ ಸದಸ್ಯ

0

ನಮ್ಮ ಮೇಲೆ ವಿಶ್ವಾಸವಿಟ್ಟು ಮತ ನೀಡಿರುವ ಜನರಿಗೆ ನ್ಯಾಯ ಒದಗಿಸಲು ಸಾಧ್ಯವಾಗದಿದ್ದ ಮೇಲೆ ನಾವು ಸದಸ್ಯರಾಗಿ ಮುಂದುವರೆಯುವುದು ಅವಶ್ಯವಿಲ್ಲ ಎಂದು ಹೇಳಿದ ೧೮ ನೇ ವಾರ್ಡಿನ ಸದಸ್ಯ ಇಲಿಯಾಜ್ ರಾಜೀನಾಮೆ ನೀಡಲು ಮುಂದಾದ ಘಟನೆ ಮಂಗಳವಾರ ನಡೆಯಿತು.
ನಗರಸಭಾ ಕಾರ್ಯಾಲಯದಲ್ಲಿ ಮಂಗಳವಾರ ನಗರಾಭಿವೃದ್ಧಿ ಇಲಾಖೆಯಿಂದ ಬಿಡುಗಡೆಯಾಗಿರುವ ಅನುದಾನಕ್ಕೆ ಕ್ರಿಯಾ ಯೋಜನೆಯನ್ನು ತಯಾರಿಸಲು ಕರೆಯಲಾಗಿದ್ದ ವಿಶೇಷ ಸಭೆಯಲ್ಲಿ ಈ ಘಟನೆ ನಡೆಯಿತು.
‘ಅಧಿಕಾರಿಗಳು, ಸದಸ್ಯರ ಮಾತಿನ ಗಮನನೀಡುತ್ತಿಲ್ಲ. ವಾರ್ಡಿನಲ್ಲಿ ಸ್ವಚ್ಚತೆಯಿಲ್ಲದೆ, ಮಕ್ಕಳು ಸೇರಿದಂತೆ ನಾಗರಿಕರು ಖಾಯಿಲೆಗಳಿಂದ ನರಳುವಂತಾಗಿದ್ದು, ಈ ಬಗ್ಗೆ ನಗರಸಭೆಯ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಮಾತಿಗೆ ಬೆಲೆಯಿಲ್ಲವೆಂದ ಮೇಲೆ, ನಾವು ಸದಸ್ಯರಾಗಿ ಮುಂದುವರೆಯುವುದರಲ್ಲಿ ಅರ್ಥವಿಲ್ಲ ಎಂದು ಸದಸ್ಯ ಇಲಿಯಾಜ್ ಹಾಜರಾತಿಯ ಪುಸ್ತಕದಲ್ಲಿ ಮಾಡಿದ್ದ ಸಹಿಯನ್ನು ಹೊಡೆದುಹಾಕಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು, ನಂತರ ಉಳಿದ ಸದಸ್ಯರು ಅವರನ್ನು ಮನವೊಲಿಸಿ, ಸಭೆಯಲ್ಲಿ ಹಾಜರಿರುವಂತೆ ನೋಡಿಕೊಂಡರು.
ನಗರಾಭಿವೃದ್ದಿ ಇಲಾಖೆಯಿಂದ ೨೦೧೫-–೧೬ ನೇ ಸಾಲಿಗೆ ೧೪ ನೇ ಹಣಕಾಸು ಆಯೋಗದ ಮುಖಾಂತರ ಬಿಡುಗಡೆಯಾಗಿರುವ ಮೊದಲ ಕಂತಿನ ೫೭ ಲಕ್ಷ ೫೦ ಸಾವಿರ ರೂಪಾಯಿಗಳ ಹಣವನ್ನು ನಗರದ ವಿವಿಧ ಉದ್ದೇಶಗಳಿಗೆ ಸಮರ್ಪಕವಾಗಿ ಬಳಕೆ ಮಾಡಲು ವಿಶೇಷ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದಲ್ಲಿನ ನಾಗರಿಕರಿಗೆ ಕುಡಿಯುವ ನೀರು ಪೂರೈಕೆ ಮಾಡಲು ೨೧.೫೦ ಲಕ್ಷ ರೂಪಾಯಿಗಳು, ಸಾಮೂಹಿಕ ಶೌಚಾಲಯಗಳ ನಿರ್ಮಾಣಕ್ಕೆ ೮ ಲಕ್ಷ ರೂಪಾಯಿಗಳು, ಒಳಚಂಡಿಗಳಿಗೆ ೫ ಲಕ್ಷ ರೂಪಾಯಿಗಳು, ಮಳೆ ನೀರು ಹರಿಯುವ ರಾಜಕಾಲುವೆ ದುರಸ್ಥಿಗಾಗಿ ೮ ಲಕ್ಷ ರೂಪಾಯಿಗಳು, ೧೨.೨೦ ಲಕ್ಷ ರೂಪಾಯಿಗಳನ್ನು ಬೀದಿದೀಪಗಳ ಅಳವಡಿಕೆಗಾಗಿ ಮತ್ತು ೨.೮೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಗರಸಭೆಗೆ ಪೀಠೋಪಕರಣಗಳನ್ನು ಖರೀದಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
೧೩ ನೇ ಹಣಕಾಸು ಯೋಜನೆಯಡಿಯಲ್ಲಿ ೧೭.೫೦ ಲಕ್ಷ ಹಣದಲ್ಲಿ ಉಳಿಕೆಯಾಗಿರುವ ೬.೧೫ ಲಕ್ಷಗಳ ಹಣವನ್ನು ನಗರದ ರೇಷ್ಮೆ ಗೂಡು ಮಾರುಕಟ್ಟೆಯ ಮುಂಭಾಗದಲ್ಲಿನ ರಸ್ತೆಗೆ ಡಾಂಬರೀಕರಣ, ರಸ್ತೆಯ ಅಗಲೀಕರಣ ಹಾಗೂ ಚರಂಡಿಗಳ ನಿರ್ಮಾಣ ಕಾಮಗಾರಿಗೆ ಬಳಕೆ ಮಾಡಲು ತೀರ್ಮಾನಿಸಲಾಗಿದೆ.
೨೦೧೪-–೧೫ ನೇ ಸಾಲಿನ ಎಸ್.ಎಫ್.ಸಿ. ಅಲ್ಪಾವದಿಯ ಟೆಂಡರ್ನಲ್ಲಿ ಕಾಮಗಾರಿಯನ್ನು ಮಾಡಲು ನೀಡುವ ಗುತ್ತಿಗೆದಾರರು ನಿಗದಿತ ಸಮಯದಲ್ಲಿ ಗುಣಮಟ್ಟದ ಕಾಮಗಾರಿಯನ್ನು ಮಾಡಿಮುಗಿಸುವಂತೆ ಕ್ರಮವಹಿಸಬೇಕು. ನಿಗದಿತ ಸಮಯದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸದೆ, ಇಲ್ಲವೇ ಕಾಮಗಾರಿಯನ್ನು ಪ್ರಾರಂಭ ಮಾಡದೆ ವಿಳಂಬ ಮಾಡುವಂತಹ ಗುತ್ತಿಗೆದಾರರನ್ನು ಬ್ಲಾಕ್ ಲೀಸ್ಟ್ಗೆ ಸೇರ್ಪಡೆಗೊಳಿಸಲು ಕ್ರಮ ತೆಗೆದುಕೊಳ್ಳುವಂತೆ ಸದಸ್ಯರು ತಿಳಿಸಿದರು.
ನಗರಸಭಾ ಅಧ್ಯಕ್ಷೆ ಮುಷ್ಟರೀತನ್ವೀರ್, ಉಪಾಧ್ಯಕ್ಷೆ ಸುಮಿತ್ರಮ್ಮರಮೇಶ್, ಸ್ಥಾಯಿಸಮಿತಿ ಅಧ್ಯಕ್ಷ ಕೇಶವಮೂರ್ತಿ, ಮುಖ್ಯಾಧಿಕಾರಿ ರಾಮ್ಪ್ರಕಾಶ್ ಹಾಗೂ ಎಲ್ಲಾ ನಗರಸಭಾ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

ನೆಹರೂ ಕ್ರೀಡಾಂಗಣದ ಅವ್ಯವಸ್ಥೆ

0

ನಗರದ ನೆಹರೂ ಕ್ರೀಡಾಂಗಣ ಅವ್ಯವಸ್ಥೆಗಳ ಆಗರವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕ್ರೀಡಾಪಟುಗಳು ಒತ್ತಾಯಿಸಿದ್ದಾರೆ.
ಕ್ರೀಡಾಂಗಣ ಪ್ರವೇಶದ್ವಾರದ ಬಳಿ ಸಾಕಷ್ಟು ನೀರು ನಿಂತಿದ್ದು, ಕಲುಶಿತ ವಾತಾವರಣವಿದೆ. ಬೆಳಿಗ್ಗೆ ವಾಕಿಂಗ್ ಬರುವವರು, ಕ್ರೀಡಾಪಟುಗಳಿಗೆ ನಾಯಿಗಳ ಕಾಟ ವಿಪರೀತವಾಗಿದೆ. ಕಳೆ ಗಿಡಗಳು ಸಾಕಷ್ಟು ಬೆಳೆದಿದ್ದು, ಹಾವುಗಳು ಸೇರಿಕೊಳ್ಳುವ ಅಪಾಯವೂ ಇದೆ. ಲಾಂಗ್ ಜಂಪ್ ತರಬೇತಿ ಪಡೆಯುವಲ್ಲಿ ನೀರು ನಿಂತಿದ್ದು, ಕ್ರೀಡಾಪಟುಗಳಿಗೆ ತೊಂದರೆಯಾಗಿದೆ. ಈಚೆಗಷ್ಟೆ ನಾಯಿಯೊಂದು ಕಳೆಗಿಡಗಳ ನಡುವೆ ಸತ್ತಿದ್ದು, ಯಾರೂ ಅದನ್ನು ತೆಗೆಸದೆ ಕೆಟ್ಟ ವಾಸನೆ ಬೀರುತ್ತಿದೆ. ಕ್ರೀಡಾಂಗಣದ ಅಭಿವೃದ್ಧಿಗಾಗಿ ಒಂದೂ ಕಾಲು ಲಕ್ಷ ರೂಗಳು ಮಂಜೂರಾಗಿದ್ದು, ಕ್ರೀಡಾಸಕ್ತರಿಗೆ ಸೂಕ್ತ ವಾತಾವರಣವೇ ಇಲ್ಲದೆ ಕ್ರೀಡಾಂಗಣ ಸೌಕರ್ಯಗಳ ಕೊರತೆಯಿಂದ ಕೂಡಿದೆ ಎಂದು ಕ್ರೀಡಾಸಕ್ತರು ದೂರಿದ್ದಾರೆ.

ರಾಜ್ಯಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳು

0

ತಾಲ್ಲೂಕಿನ ಆರು ಮಂದಿ ಕ್ರೀಡಾಪಟುಗಳು ಜಿಲ್ಲಾಮಟ್ಟಲ್ಲಿ ವಿಜೇತರಾಗಿ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ 20 ವರ್ಷ ಮೇಲ್ಪಟ್ಟವರಲ್ಲಿ ದ್ಯಾವಪ್ಪನಗುಡಿ ನಾರಾಯಣಸ್ವಾಮಿ 10 ಸಾವಿರ ಮೀಟರ್ ಓಟದಲ್ಲಿ ಪ್ರಥಮ ಹಾಗೂ ಐದು ಸಾವಿರ ಮೀಟರ್ ಓಟದಲ್ಲಿ ದ್ವಿತೀಯ ; 16 ವರ್ಷ ಮೇಲ್ಪಟ್ಟವರಲ್ಲಿ ಎಸ್.ದಿಲೀಪ್ 400 ಮೀಟರ್ ಓಟದಲ್ಲಿ ದ್ವಿತೀಯ, ಲಾಂಗ್ ಜಂಪ್ನಲ್ಲಿ ಪ್ರಥಮ ; ಎಸ್.ಮಾದೇಶ 10 ಸಾವಿರ ಮೀಟರ್ ಓಟದಲ್ಲಿ ದ್ವಿತೀಯ, ಲಾಂಗ್ಜಂಪ್ನಲ್ಲಿ ದ್ವಿತೀಯ, ಹರೀಶ 3 ಸಾವಿರ ಮೀಟರ್ ಓಟದಲ್ಲಿ ದ್ವಿತೀಯ, ಲಾಂಗ್ಜಂಪ್ನಲ್ಲಿ ತೃತೀಯ, ಹರ್ಡಲ್ಸ್ನಲ್ಲಿ ಪ್ರಥಮ ; 14 ವರ್ಷ ಮೇಲ್ಪಟ್ಟವರಲ್ಲಿ ಎನ್.ನಿತಿನ್ 100 ಮೀಟರ್ ಓಟದಲ್ಲಿ ದ್ವಿತೀಯ, 600 ಮೀಟರ್ ಓಟದಲ್ಲಿ ಪ್ರಥಮ, ಎಂ.ಮುರಳಿ ಹೈಜಂಪ್ನಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
‘ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆಗಸ್ಟ್ 20 ರಿಂದ ನಾಲ್ಕು ದಿನಗಳ ಕಾಲ ನಡೆಯುವ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಯ್ಕೆಯಾದ ಕ್ರೀಡಾಪಟುಗಳು ಸೆಪ್ಟೆಂಬರ್ನಲ್ಲಿ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆಯಲಿರುವ ದಕ್ಷಿಣ ಭಾರತ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ನಮ್ಮ ತಾಲ್ಲೂಕಿನಿಂದ ಉತ್ತಮ ಕ್ರೀಡಾಪಟುಗಳು ಹೊರಹೊಮ್ಮಲೆಂದು ರಾಜ್ಯಮಟ್ಟಕ್ಕೆ ಆಯ್ಕೆಯಾದವರಿಗೆ ನಗರದ ನೆಹರೂ ಕ್ರೀಡಾಂಗಣದಲ್ಲಿ ತರಬೇತಿಯನ್ನು ನೀಡುತ್ತಿದ್ದೇನೆ’ ಎಂದು ಕ್ರೀಡಾ ತರಬೇತುದಾರ ಮುನಿರಾಜು ತಿಳಿಸಿದರು.

ಭಾರತೀಯ ಸೈನಿಕರು ಅತ್ಯಂತ ಸಮರ್ಥರು

0

ಶಿಸ್ತನ್ನು ಅಳವಡಿಸಿಕೊಂಡರೆ ಒಳ್ಳೆಯ ಜೀವನ ನಡೆಸಲು ಸಾಧ್ಯ ಎಂದು ನಿವರತ್ತ ಯೋಧ ಟಿ.ಕೃಷ್ಣನ್ ತಿಳಿಸಿದರು.
ತಾಲ್ಲೂಕಿನ ದ್ಯಾವಪ್ಪನಗುಡಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ನಡೆದ 69ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತೀಯ ಸೈನ್ಯದಲ್ಲಿ ಕರ್ತವ್ಯ ನಿರ್ವಹಿಸಿದ್ದು ನನ್ನ ಪುಣ್ಯ. ಇಂದು ಭಾರತೀಯ ಸೈನಿಕರು ವಿಶ್ವದಲ್ಲಿ ಅತ್ಯಂತ ಸಮರ್ಥರೆಂದು ಪ್ರಸಿದ್ಧಿ ಹೊಂದಿದ್ದಾರೆ. ನಿರಂತರ ಶ್ರಮ ನಮ್ಮನ್ನು ಕಾಪಾಡುತ್ತದೆ. ಸಧೃಡ ದೇಹ ಮತ್ತು ಮನಸ್ಸನ್ನು ಬೆಳೆಸಿಕೊಳ್ಳುವ ಮೂಲಕ ದೇಶದ ಪ್ರಗತಿಗೆ ಕಾರಣರಾಗಬೇಕು ಎಂದು ಹೇಳಿದರು.
ಶಾಲಾ ಮುಖ್ಯ ಶಿಕ್ಷಕ ಎಂ.ಪಿ.ಜೀವಂಧರ್ಕುಮಾರ್ ಮಾತನಾಡಿ, ಅಸಂಖ್ಯಾತ ಮಹನೀಯರ ತ್ಯಾಗ ಹೋರಾಟದ ಫಲದಿಂದ ನಮಗೆ ಸ್ವತಂತ್ರ್ಯ ಲಭಿಸಿದೆ. ದೇಶಕ್ಕಾಗಿ ದುಡಿದವರ ಜೀವನಚರಿತ್ರೆಗಳಿಂದ ಪ್ರೇರಣೆ ಹೊಂದಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ಚಾಗೆ ಗ್ರಾಮದ ಟಿ.ಕೃಷ್ಣನ್, ಅಬ್ಲೂಡು ಗ್ರಾಮದ ಆಂಜಿನಪ್ಪ ಅವರನ್ನು ಸನ್ಮಾನಿಸಲಾಯಿತು. ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕ್ರೀಡಾಪಟು ದ್ಯಾವಪ್ಪನಗುಡಿ ನಾರಾಯಣಸ್ವಾಮಿ ಬಹುಮಾನ ವಿತರಿಸಿದರು. ಶಾಲೆಗೆ ವಾಲಿಬಾಲ್, ನೆಟ್ ಹಾಗೂ ಕ್ರೀಡಾ ಸಾಮಗ್ರಿಗಳನ್ನು ನೀಡಿದರು.
ಗ್ರಾಮದ ಹಿರಿಯರಾದ ಚಂದ್ರಶೇಖರ್, ಮಾಸ್ತಿ, ನಾರಾಯಣಸ್ವಾಮಿ, ದೇವರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಕಬಡ್ಡಿ ಮತ್ತು ಕೊ ಕೊ ಪಂದ್ಯಾವಳಿಯಲ್ಲಿ ತಾಲ್ಲೂಕು ಮಟ್ಟಕ್ಕೆ ಆಯ್ಕೆ

0

ಶಿಡ್ಲಘಟ್ಟ ತಾಲ್ಲೂಕಿನ ಆನೆಮಡುಗು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ದೊಡ್ಡತೇಕಹಳ್ಳಿಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಕಬಡ್ಡಿ ಮತ್ತು ಕೊ ಕೊ ಪಂದ್ಯಾವಳಿಯಲ್ಲಿ ಪ್ರಥಮರಾಗಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.