Home Blog Page 504

ಹಳ್ಳಿ ಶಾಲೆ; ಬದಲಾಗದಿದ್ದರೆ ಭವಿಷ್ಯ ????? ಚಿನ್ಹೆಯ ಸಾಲೇ!

0

ನನಗಿನ್ನೂ ಚೆನ್ನಾಗಿ ನೆನಪಿದೆ, ನಾವು 7ನೇ ತರಗತಿಯಲ್ಲಿ ಓದುತ್ತಿದ್ದ ಸಮಯ. ಚಿಪ್ಪಳಿ ಲಿಂಗದಹಳ್ಳಿಯ ಶಾಲೆಯಲ್ಲಿ ಆ ವರ್ಷ ವಿಜೃಂಭಣೆಯ ವಾರ್ಷಿಕೋತ್ಸವ ಆಚರಿಸುವ ನಿರ್ಧಾರ ಮಾಡಲಾಗಿತ್ತು. ನಮ್ಮ ನೃತ್ಯಗಳು, ನಾಟಕಗಳು, ಹಿರಿಯ ವಿದ್ಯಾರ್ಥಿಗಳ ನಾಟಕ, ಅದರ ಜೊತೆಗೆ ಮಧ್ಯದ ಅವಧಿಯಲ್ಲಿ ಪಕ್ಕದಲ್ಲಿಯೇ ಹಾಕಲಾಗಿದ್ದ ಬಿಳಿಯ ಪರದೆಯ ಮೇಲೆ ಮಿಕ್ಕಿಮೌಸ್ ವಿಡಿಯೋ ಪ್ರದರ್ಶನ. ಶಾಲಾ ಆವರಣ ಸಾಕಾಗುವುದಿಲ್ಲ ಎಂಬ ಕಾರಣಕ್ಕೆ ಚಿಪ್ಪಳಿ ಕೆರೆ ಪಕ್ಕದ ಗೋಪಾಲಕೃಷ್ಣ ದೇವಸ್ಥಾನದ ವಿಶಾಲ ಬಯಲಿನಲ್ಲಿ ಕಾರ್ಯಕ್ರಮ ಆಯೋಜನೆಯಾಗಿತ್ತು. ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಮುನ್ನ ಸಭಾ ಕಾರ್ಯಕ್ರಮ, ಪಾಲ್ಗೊಂಡ ಗಣ್ಯರ ಬಗ್ಗೆ ನನಗೆ ನೆನಪಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿಗಳಂತೂ ಬಂದಿದ್ದರು ಎಂದುಕೊಂಡಿದ್ದೇನೆ. ಅದರಲ್ಲಿ ವಿದ್ಯಾರ್ಥಿಗಳ ಅನಿಸಿಕೆ ಎಂಬ ಶೀರ್ಷಿಕೆಯಡಿ ನನಗೆ ಮಾತನಾಡಲು ಅವಕಾಶ ಕೊಟ್ಟಿದ್ದರು. ಭಾಷಣದಲ್ಲಿ ಅಳವಡಿಸಿಕೊಂಡ ಹಲವು ಅಂಶಗಳನ್ನು ಬರೆದುಕೊಟ್ಟಿದ್ದು ನಮ್ಮ ಶಾಲೆಯ ಓರ್ವ ಗೌರವ ಶಿಕ್ಷಕರು! ಅದರಲ್ಲಿ ಹಳ್ಳಿ ವಿದ್ಯಾರ್ಥಿಗಳಿಗೆ ಶಾಲಾ ವಾತಾವರಣದಲ್ಲಿರುವ ಕೊರತೆಗಳ ಬಗ್ಗೆ ಸಾದ್ಯಂತ ವಿವರಿಸಲಾಗಿತ್ತು. ನನ್ನ ಮಾತುಗಳ ನಂತರ ಮಾತನಾಡಿದ ಪ್ರತಿಯೊಬ್ಬ ಭಾಷಣಕಾರರು ನನ್ನ ಅನಿಸಿಕೆಯ ಮಾತುಗಳನ್ನು ಆಧರಿಸಿಯೇ ಮಾತನಾಡಿದರು ಎಂಬುದು ಗ್ರೀನ್ ರೋಮ್‍ನಲ್ಲಿದ್ದ ನನಗೆ ಗೊತ್ತಾಗದಿದ್ದರೂ ನಂತರ ಉಳಿದವರು ಹೇಳಿದ್ದರಿಂದ ಅರಿವಿಗೆ ಬಂತು.
ಆ ವಯಸ್ಸಿನಲ್ಲಿ ಅದರ ಬಗ್ಗೆ ನಾನಂತೂ ಗಂಭೀರವಾಗಿ ಯೋಚಿಸಿರಲಿಲ್ಲ. ಆದರೆ ಈಗ ಹಳ್ಳಿ ಶಾಲೆಗಳನ್ನು ನಕಾರಾತ್ಮಕವಾಗಿ ನೋಡುವ ಸ್ವಭಾವದಲ್ಲಿಯೇ ಐಬಿದೆ ಎಂದು ಕಾಣುತ್ತದೆ. ಅಂದಿನ ನನ್ನ ಅನಿಸಿಕೆ ಆ ಕ್ಷಣದ ಸತ್ಯ ಮಾತ್ರ. ಅಂದಿನ ಕೊರತೆಗಳ ಹೊರತಾಗಿಯೂ ಹಳ್ಳಿ ಶಾಲೆಯ ಪಾಸಿಟಿವ್ ನೋಡಬೇಕಾಗಿತ್ತು. ನಿಜ, ನಾನೂ ಪೇಟೆ ಶಾಲೆಯಲ್ಲಿ ಓದಿ ಠಸ್‍ಪುಸ್ ಇಂಗ್ಲೀಷ್ ಮಾತನಾಡುವುದನ್ನು ಕಲಿತು ಆರಂಕಿಯ ವೇತನದ ಕೆಲಸಕ್ಕೆ ಹೋಗಿಬಿಡಬಹುದಿತ್ತೇನೋ. ಆದರೆ ಸಂಬಳ, ಕೆಲಸದ ನಡುವೆ ಕಳೆದುಹೋಗುತ್ತಿದ್ದೆ ಎಂಬ ಆತಂಕದ ಅನುಮಾನವೂ ನನ್ನದಿದೆ. ಹಳ್ಳಿಯ ಶಾಲೆ ನನಗೆ ಸೃಜನಶೀಲ ವ್ಯಕ್ತಿತ್ವವನ್ನು ಕೊಟ್ಟಿದೆ ಎಂಬುದನ್ನು ಘಂಟಾಘೋಷವಾಗಿ ಹೇಳಬಹುದು. ನನ್ನ ಸಾಧನೆಯ ಹಾದಿಯನ್ನು ವಿಸ್ತರಿಸಲು ಅಡ್ಡಿಯಾದ ನನ್ನ ಸೋಮಾರಿತನವನ್ನು ದೂರಬೇಕೇ ವಿನಃ ಶಾಲೆಯನ್ನಲ್ಲ.
ಅವತ್ತು ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದ್ದದ್ದು ಸತ್ಯ. ಆದರೆ ಅದೊಂದು ವಿಷಯವೇ ಆಗಿರಲಿಲ್ಲ. ಸಮೃದ್ಧ ಬಯಲೇ ಶೌಚಾಲಯವಾಗಿತ್ತು. ನಮ್ಮ ಶಾಲೆಯ `ಗಲ್ರ್ಸು’ ಕೂಡ ಧೈರ್ಯವಾಗಿ ಪೊದೆಗಳ ಮರೆಯಲ್ಲಿ ನಿಸರ್ಗದ ಕರೆಗಳಿಗೆ ಓಗೊಡುತ್ತಿದ್ದರು. ನಮ್ಮ ವಿಜಾತೀಯ ಲಿಂಗಗಳಲ್ಲಿ ಅಂತರವೂ, ಗೌರವವೂ ಇದ್ದುದರಿಂದ ಸಂಬಂಧಕ್ಕೊಂದು ಅರ್ಥವಿತ್ತು, ಅನರ್ಥಗಳಾಗುತ್ತಿರಲಿಲ್ಲ. ಮನೆಯಿಂದ ತರುತ್ತಿದ್ದ ನೀರು ತಣ್ಣಗಿಡುತ್ತಿತ್ತು, ಶಾಲೆಯೇ ತಣ್ಣಗಿರುವಾಗ ಫ್ಯಾನ್ ಬೇಕಾಗೇ ಇರಲಿಲ್ಲ. ಅಷ್ಟಕ್ಕೂ ನಾವಿರುವ ವೇಳೆಯಲ್ಲಿ ಶಾಲೆಗೆ ವಿದ್ಯುತ್ ಸಂಪರ್ಕವೇ ಇರಲಿಲ್ಲ ಎನಿಸುತ್ತದೆ. ಇಂದು ಶಾಲೆಗ ವಿದ್ಯುತ್ ಇಲ್ಲ, ಫ್ಯಾನ್ ಇಲ್ಲ ಎಂದರೆ `ಇಶ್ಯೂ’ ಆಗುತ್ತದೆ. ನನ್ನ ಆ `ಎಳಸು’ ಭಾಷಣದ ಹೊರತಾಗಿಯೂ ನಮ್ಮ ಶಾಲೆ ಸಮೃದ್ಧವಾಗಿತ್ತು.
ಒಂದು ಶಾಲೆ ರೂಪಗೊಳ್ಳುವುದು ಅದರ ಮೂಲಭೂತ ಸೌಕರ್ಯಗಳಿಂದಲ್ಲ ಎಂದು ನಂಬಿದವನು ನಾನು. ಶಿಕ್ಷಕ ವರ್ಗ ವಿದ್ಯಾರ್ಥಿಗಳಲ್ಲಿ ಜೀವ ಚೈತನ್ಯವನ್ನು ತುಂಬುವ ತಾಕತ್ತಿರುವವರು. ಮತ್ತೆ ಹಳೆಯ ನೆನಪು ಕಾಡುತ್ತದೆ, ಕರ್ಕಿಕೊಪ್ಪದ ಶಾಲೆಯಲ್ಲಿ ಓದುವಾಗ ನಮಗೆ ಎಂಆರ್‍ಕೆ ಎಂಬ ಮುಖ್ಯ ಶಿಕ್ಷಕರಿದ್ದರು. ಅವರ ಹೆಸರು ರಾಮಕೃಷ್ಣ ಎಂದಿರಬೇಕು. ಅವರ ಮುಖ ಈಗ ಕಣ್ಣು ಮುಚ್ಚಿದರೆ ಕೂಡ ಎದುರಾಗುತ್ತಿಲ್ಲ. ಅವರು ಪಾಠ ಮಾಡುತ್ತಿದ್ದುದು 6-7ಕ್ಕೆ ಮಾತ್ರವಿತ್ತು. 3-4ನೇ ತರಗತಿಯ ಶಿಕ್ಷಕರು ಬಾರದಿದ್ದರೆ ಅವರು ನಮ್ಮನ್ನು ತಮ್ಮ ತರಗತಿಗೆ ಕರೆಸಿಕೊಳ್ಳುತ್ತಿದ್ದರು. ಹಿರಿಯ ತರಗತಿಯವರಿಗೆ ಪಾಠ ಮಾಡುತ್ತಲೇ ನಮಗೆ ಲವಲವಿಕೆಯಿಂದ ಉಕ್ತಲೇಖನ ಪರೀಕ್ಷೆ ಮಾಡಿಸುತ್ತಿದ್ದರು. ಅದರಿಂದ ಇವತ್ತೂ ನಮ್ಮ ಕನ್ನಡ ಜ್ಞಾನ ಅತ್ಯುತ್ತಮವಾಗಿದೆ. ಆಟವಾಡುತ್ತಲೇ ನಾವು ಅಂತಹ ಸಂದರ್ಭದಲ್ಲಿ ಅವರಿಂದ ಮುಂದಿನ ತರಗತಿಗಳಲ್ಲಷ್ಟೇ ಬರುವ ರೋಮನ್ ಅಂಕಿಗಳನ್ನು ಕಲಿತೆವು. ಒಬ್ಬ ಪಕ್ವ ಶಿಕ್ಷಕ ಮಕ್ಕಳ ಜ್ಞಾನದ ಹಸಿವನ್ನು ತುಂಬುವ ಪರಿ ಅದು. ಅಂದು ನಾವು ನಮ್ಮ ನಿಯಮಿತ ಶಿಕ್ಷಕರು ಬರದೇ ಎಂಆರ್‍ಕೆ ಸಾರ್ ಕ್ಲಾಸ್ ತೆಗೆದುಕೊಳ್ಳಲಿ ಎಂದು ಬಯಸುತ್ತಿದ್ದೆವು! ಅಂದರೆ ಶಿಕ್ಷಕರ ಕೊರತೆಯೊಂದೆಡೆಯಾದರೆ, ಅದರ ಕೇಂದ್ರ ಬಿಂದುವಿನಲ್ಲಿಯೇ ಇನ್ನೊಂದು ಕಲಿಕೆಯ ಸೂತ್ರವೂ ಇದೆ ಎಂಬುದು ಪರಮಸತ್ಯ.
ಪಠ್ಯದ ಓದು, ಪರೀಕ್ಷೆಯ ಅಂಕ, ಫಲಿತಾಂಶ, ರ್ಯಾಂಕ್‍ಗಳಿಗೆ ನಾವು ಸೀಮಿತವಾಗಬಾರದು. ಪಠ್ಯೇತರ ಚಟುವಟಿಕೆಯಿಂದ ಓದಿಗೆ ಧಕ್ಕೆ ಎಂಬುದನ್ನಂತೂ ಮನಸ್ಸಿನಿಂದ ನಿವಾಳಿಸಬೇಕು. ಅರೆರೆ, ಮತ್ತದೇ ಶಾಲೆಯಲ್ಲಿ ನಡೆಯುವ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದ ಭಾಷಣದಂತೆ ಕಂಡಿದ್ದರೆ ಕ್ಷಮಿಸಿ. ಇನ್ನು ಮುಂದಿನ ಮಾತುಗಳು ನನ್ನ ಅನುಭವಜನ್ಯವಾದುದು. ಪ್ರೌಢಶಾಲೆಯಲ್ಲಿದ್ದೆ, ಎಂಟನೇ ತರಗತಿಯಲ್ಲಿ. ಅರಣ್ಯ ಇಲಾಖೆಯಲ್ಲಿ ಒಂದು ಪ್ರಬಂಧ ಸ್ಪರ್ಧೆ ಏರ್ಪಾಡಾಗಿತ್ತು. ಪರಿಸರ ಕುರಿತ ವಿಷಯ. ನಗರದ ಬಹುಸಂಖ್ಯಾತ ವಿದ್ಯಾರ್ಥಿಗಳು ಮತ್ತು ಗ್ರಾಮಾಂತರ ಭಾಗದ ಬೆರಳೆಣಿಕೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಬಂಧ ಸ್ಪರ್ಧೆಗೆ ಸಿದ್ಧವಾಗುತ್ತಿದ್ದ ಪೇಟೆಯ ಮಕ್ಕಳು ಬರವಣಿಗೆಯ ಸಮಯ ಬರುವ ಮುನ್ನಿನವರೆಗೂ ಅದೇನನ್ನೋ ಓದುತ್ತಿದ್ದರು. ಅಲ್ಲಿನ ಸಾಲುಗಳನ್ನು ಮನೋಗತ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದರು. ನಾನು ಗಮನಿಸಿದಂತೆ ಓರ್ವ ವಿದ್ಯಾರ್ಥಿ ಒಂದೆಡೆ ಪುಸ್ತಕದ ಮಾಹಿತಿ ಓದುತ್ತಿದ್ದ, ಇನ್ನೊಂದೆಡೆ ಕೈಯಲ್ಲಿ ಅವ ಕುಳಿತ ಜಾಗದ ಪಕ್ಕದಲ್ಲಿದ್ದ ಗಿಡದ ಎಲೆ, ರೆಂಬೆಗಳನ್ನು ಅವನಿಗರಿವಿಲ್ಲದಂತೆ ಕೀಳುತ್ತಿದ್ದ. ನನ್ನ ಪ್ರಬಂಧದ ಆರಂಭದಲ್ಲಿ ಪ್ರಸ್ತಾಪವಾದ ಘಟನೆ – ಪೀಠಿಕೆ ಇದೇ ಆಗಿತ್ತು! ಪರಿಸರ ಪ್ರೇಮ ಎಂಬುದು ನಮ್ಮೊಳಗಿನಿಂದ ಹುಟ್ಟಬೇಕು ಎಂಬ ನಿಲುವನ್ನು ಪ್ರಸ್ತಾಪಿಸಿದ್ದೆ. ಅವತ್ತು ಮೊದಲಿನೆರಡೂ ಬಹುಮಾನಗಳನ್ನು ಗಿಟ್ಟಿಸಿದ್ದು ಗ್ರಾಮೀಣ ಪ್ರೌಢಶಾಲೆಗಳ ಮಕ್ಕಳು. ನನ್ನ ವಾದ ಇಷ್ಟೇ, ಸಹಜತೆಯ ಜೊತೆಗೆ ಅಧ್ಯಯನ ಬೆರೆಯುವಂತಾದರೆ ಮಾತ್ರ ಫಲಿತಾಂಶ ಪ್ರಭಾವಯುತದ್ದಾಗಿರುತ್ತದೆ.
ಪಠ್ಯೇತರ ಸಾಧನೆಗಳು ವಿದ್ಯಾರ್ಥಿಯಲ್ಲಿ ಅಪರೂಪದ ಆತ್ಮವಿಶ್ವಾಸವನ್ನು ಹುಟ್ಟುಹಾಕಿ ಅವರ ಅಕಡೆಮಿಕ್ ಸಾಧನೆಯನ್ನು ಹಲವು ಪಟ್ಟು ವೃದ್ಧಿಸುತ್ತದೆ. ಶಾಲೆಯಲ್ಲಿ ಮೊದಲಿನ ರ್ಯಾಂಕ್ ಬರುವ ಮಕ್ಕಳೇ ಇತರ ಚಟುವಟಿಕೆಗಳಲ್ಲೂ ಮುಂದಿರುತ್ತಾರೆ ಅಥವಾ ಅದನ್ನು ಹೀಗೂ ಹೇಳಬಹುದು, ಪಠ್ಯೇತರ ಸಾಧಕ ಮಕ್ಕಳು ಓದಿನಲ್ಲಿ ದಡ್ಡರಾಗಿರುವುದು ಕಡಿಮೆ. ಇದು ರುಜುವಾತಾಗಿದ್ದರೂ ನಮ್ಮ ಶಿಕ್ಷಕ ವರ್ಗದಲ್ಲಿ ಮಕ್ಕಳಿಗೆ ಗಂಭೀರ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸುವ ಮಾದರಿಯನ್ನು ಅನುಸರಿಸಲು ಮಾತ್ರ ತೀವ್ರ ಹಿಂಜರಿಕೆಯಿದೆ. ಗ್ರಾಮೀಣ ಮಕ್ಕಳ ಆತ್ಮವಿಶ್ವಾಸವನ್ನು ವೃದ್ಧಿಸುವ ಕೆಲಸ ಮೊದಲು ಆಗಬೇಕು. ಅದಕ್ಕಿರುವ ಯೋಗ್ಯ ಉಪಾಯವೆಂದರೆ ಪಠ್ಯೇತರ ಚಟುವಟಿಕೆಗಳಲ್ಲಿ ಇಲ್ಲಿನ ಮಕ್ಕಳನ್ನು ಹೆಚ್ಚು ಚಾಣಾಕ್ಷರನ್ನಾಗಿಸುವುದು. ಈ ವಾದಕ್ಕೆ ವಿರೋಧಗಳಿರಬಹುದು. ನಾನೇ ಬದುಕಿನಲ್ಲಿ ಗಮನಿಸಿದಂತೆ ಒಂದು ಕ್ಷೇತ್ರದ ಯಶಸ್ಸು ಇತರ ರಂಗದ ಮಾಹಿತಿಯನ್ನು ಸುಲಭದಲ್ಲಿ ಅರ್ಥ ಮಾಡಿಕೊಳ್ಳುವ ಸಾಮಥ್ರ್ಯವನ್ನು ತಂದುಕೊಡುತ್ತದೆ.
ಹಲವು ಬಾರಿ ಗ್ರಾಮೀಣ ಶಾಲಾ ಶಿಕ್ಷಕರಲ್ಲಿ ಮಕ್ಕಳನ್ನು ಸಾಧನೆ ಮಾಡಲು ಉತ್ತೇಜಿಸುವ ಸಾಮಥ್ರ್ಯವೇ ಕಂಡುಬರುವುದಿಲ್ಲ. ಅವರೇ ಎಲ್ಲೂ ಸಲ್ಲದೆ ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡ ಸಂದರ್ಭದಲ್ಲಿ ಆಗುವ ಅಪಾಯವಿದು. ಮಕ್ಕಳಿಗೆ ಒಗ್ಗಟ್ಟಿನಲ್ಲಿ ಬಲವಿದೆ ಎಂದು ಪಾಠ ಮಾಡುವ ಶಿಕ್ಷಕರು ತಮ್ಮ ತಮ್ಮಲ್ಲೇ ಹೊಡೆದಾಟ ಮಾಡುತ್ತಿದ್ದುದನ್ನು ನೋಡುವ ವಿದ್ಯಾರ್ಥಿ ಆ ನೀತಿ ಪಾಠವನ್ನು ಸುತರಾಂ ಕಲಿಯುವುದಿಲ್ಲ. ಮನೆಯಲ್ಲಿ ಅಪ್ಪ, ಮಗನಿಗೆ ಸತ್ಯವನ್ನೇ ಹೇಳಬೇಕು ಎಂದು ತಾಕೀತು ಮಾಡಿ ಮೊಬೈಲ್ ಕರೆ ಬಂದಾಗ, ಅಪ್ಪ ಮನೇಲಿ ಇಲ್ಲ ಎಂದು ಮಗನ ಮೂಲಕ ಹೇಳಿಸಿದಂತೆಯೇ ಇದೂ ಕೂಡ. ಆದರೆ ಗ್ರಾಮೀಣ ಶಾಲೆಗಳಲ್ಲಿ ಶಿಕ್ಷಕರ ಪಾಠದ ಜೊತೆಗೆ ಅವರ ನಡೆನುಡಿಗಳಿಂದ ಪ್ರಭಾವಿತರಾಗುವ ಶಿಷ್ಯವರ್ಗ ದೊಡ್ಡದು. ಅದೊಂದನ್ನು ಬಳಸಿಕೊಂಡು ಮಕ್ಕಳನ್ನು ವಿದ್ಯಾಭ್ಯಾಸ ಮತ್ತು ನೈತಿಕ ನಡವಳಿಕೆಯಲ್ಲಿ ಅತ್ಯುನ್ನತ ಮಟ್ಟಕ್ಕೆ ತೆಗೆದುಕೊಂಡುಹೋಗುವ ತಾಕತ್ತು ಇಲ್ಲಿನ ಶಿಕ್ಷಕ ವರ್ಗಕ್ಕಿರುತ್ತದೆ. ಅದನ್ನವರು ಬಳಸಿಕೊಳ್ಳದಿದ್ದರೆ ಯಾರೇನು ಮಾಡಲು ಸಾಧ್ಯ?
ಈಗಲೂ ಇನ್ನೊಂದು ಕೆಲಸವನ್ನು ಗ್ರಾಮೀಣ ಶಾಲೆಗಳು ಸಮರ್ಥವಾಗಿ ಮಾಡಬೇಕಾಗಿದೆ, ಅದು ಶಾಲಾ ಗ್ರಂಥಾಲಯದ ಪರಿಪೂರ್ಣ ಬಳಕೆ. ನಾವು ಓದುತ್ತಿದ್ದ ಕಾಲದಿಂದ ಶಾಲಾ ಲೈಬ್ರರಿಯಲ್ಲಿನ ಪುಸ್ತಕಗಳನ್ನು ಮಕ್ಕಳಿಗೆ ನಿರಂತರವಾಗಿ ಕೊಡುವ ಪ್ರವೃತ್ತಿಯನ್ನು ಕಂಡಿದ್ದೇ ಕಡಿಮೆ. ಈ ವಿಷಯದಲ್ಲಿ ಶಿಕ್ಷಕರು ಉದಾರವಾಗಿರುವ ಸಂದರ್ಭಗಳೇ ಕಡಿಮೆ. ಸಾರ್ವಜನಿಕರು, ಪುಸ್ತಕ ಪ್ರೇಮಿಗಳ ಸಹಾಯ ಪಡೆದು ಅಂತಹ ಒಂದು `ಅಪ್‍ಡೇಟ್’ ಇರುವ ಗ್ರಂಥಾಲಯವನ್ನು ಪ್ರತಿ ಶಾಲೆಯಲ್ಲಿ ಸಿದ್ಧಪಡಿಸಬಹುದು. ಸರ್ಕಾರದ ಅನುದಾನದ ಉಸಾಬರಿಯನ್ನು ಇದರಲ್ಲಿ ಅಡಕ ಮಾಡುವುದು ಬೇಡ. ಆ ಮಕ್ಕಳಲ್ಲಿ ಪುಸ್ತಕ ಓದುವ ಅಭಿರುಚಿಯನ್ನು ಬೆಳೆಸಿ, ಕಡ್ಡಾಯವಾಗಿ ಬೆಳೆಸಿ. ಒಮ್ಮೆ ಮಕ್ಕಳಲ್ಲಿ ಅಕ್ಷರ ಪ್ರೀತಿ ಮೂಡಿದರೆ ಅದು ಅದ್ಭುತಗಳಿಗೆ ಕಾರಣವಾಗುತ್ತದೆ. ದುರಂತ ಎಂದರೆ, ದಿನದಿಂದ ದಿನಕ್ಕೆ ಶಿಕ್ಷಕರು, ಮಕ್ಕಳು, ಪೋಷಕರಿಗೆ ಪಠ್ಯ, ಪರೀಕ್ಷೆ, ಅಂಕಗಳೇ ವಿದ್ಯಾರ್ಥಿ ಜೀವನದ ಪರಮ ಉದ್ದೇಶವಾಗಿಬಿಡುತ್ತದೆ. ಮಕ್ಕಳ ಹಂತದಿಂದಲೇ ವಿವಿಧ ಅನುಭವಗಳನ್ನು ಪಡೆಯುವುದರಿಂದ ಅವರಲ್ಲಿ ಕಾಣಿಸಬಹುದಾಗಿದ್ದ ಬದಲಾವಣೆಗೆ ತಂದೆ ತಾಯಿ ಶಿಕ್ಷಕರೇ ಕಡಿವಾಣ ಹಾಕಿಬಿಡುತ್ತಿದ್ದಾರೆ. ಹಾಗಾಗಿ ಇಂದಿನ ಮಕ್ಕಳು ಪ್ರತಿಯೊಂದನ್ನೂ ಕಷ್ಟಪಟ್ಟು ಕಲಿಯುತ್ತಿದೆ.
ಹಳ್ಳಿ ಶಾಲೆಯ ಘಮದ ಬಗ್ಗೆ ಮಾತನಾಡುವುದು ಸುಲಭ, ನಾನೂ ಕೂಡ ಇಷ್ಟೆಲ್ಲ ಹೇಳಿ ಮಗಳನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸಿದ್ದನ್ನು ನೀವು ಪ್ರಶ್ನಿಸಬಹುದು. ನನಗೆ ಸಮಾಧಾನವಿಲ್ಲ, ಮಗಳು ಎಂದ ಮಾತ್ರಕ್ಕೆ ಅವಳ ಕುರಿತ ನಿರ್ಧಾರದಲ್ಲಿ ನಾವು ದಂಪತಿಗಳಲ್ಲದೆ ಎರಡು ಕುಟುಂಬದ ಆಶಯಗಳೂ ಸೇರಿರುತ್ತವೆ ಎಂಬುದು ನೆಪದಂತೆ ಕಾಣಬಹುದು. ಆದರೆ ಗ್ರಾಮೀಣ ಶಾಲೆಗಳಲ್ಲಿ ಇಂಗ್ಲೀಷ್‍ನ್ನು ಒಂದು ಭಾಷೆಯಾಗಿ ನಂತರದ ತರಗತಿಗಳಲ್ಲಿ ಕಲಿಸುವುದಕ್ಕಿಂತ ಸ್ಪೀಕಿಂಗ್ ಇಂಗ್ಲೀಷ್‍ನ ಪ್ರಭುತ್ವವನ್ನು ಮಕ್ಕಳಲ್ಲಿ ತಂದುಕೊಡುವ ವ್ಯವಸ್ಥೆ ಬರಬೇಕು. ಈ ಕುರಿತು ಸರ್ಕಾರವೇ ಒಂದು ವ್ಯವಸ್ಥೆ, ಯೋಜನೆಯನ್ನು ರೂಪಿಸಿ ಸರ್ಕಾರಿ ಶಾಲೆಗಳ ಮಹತ್ವವನ್ನು ಉಳಿಸಬಹುದು. ಚೀನಾ, ಜಪಾನ್, ಜರ್ಮನಿ ಎಂದು ಇಂಗ್ಲೀಷ್ ಇಲ್ಲದಿದ್ದರೂ ವಿಶ್ವಭೂಪಟದಲ್ಲಿ ಸ್ಥಾನ ಪಡೆದ ಹತ್ತಾರು ದೇಶಗಳನ್ನು ಹೆಸರಿಸಬಹುದು. ಸದ್ಯಕ್ಕೆ ನಾವು ಬೆಂಗಳೂರಿಗೋ, ದೆಹಲಿಗೋ ಹೋದರೂ ಬೇಕಾಗುತ್ತದಲ್ಲ ಇಂಗ್ಲೀಷ್? ಅದಕ್ಕಾದರೂ ಸ್ಪೋಕನ್ ಇಂಗ್ಲೀಷ್ ನಮಗೆ ಕರಗತವಾಗಿದ್ದರೆ ಸಾಕು. ಇವತ್ತು ಮೊಬೈಲ್ ಕಾಲ್‍ಸೆಂಟರ್ ಅಥವಾ ಇನ್ನಾವುದೋ ಸಹಾಯವಾಣಿಯಲ್ಲಿ ಹಳ್ಳಿಯಿಂದ ಹೋದವರೂ ಕೆಲಸ ಮಾಡುತ್ತಿದ್ದಾರೆ. ಹಾಗೆ ಕೆಲಸ ಮಾಡುವ ಹಳ್ಳಿಗರು ಇಂಗ್ಲೀಷ್ ಮೇಲೆ ಪಾರಮ್ಯ ಮೆರೆದವರೇನೂ ಅಲ್ಲ. ಅವರಿಗೊಂದು ಚಿಕ್ಕ ಕೋರ್ಸ್ ಆಗಿದೆ, ಅವರೀಗ ಮಾತನಾಡುವ ಇಂಗ್ಲೀಷ್‍ನಲ್ಲಿ ಪಾರಂಗತರು. ಕೇವಲ ಮಾತನಾಡುವ ಇಂಗ್ಲೀಷ್ ಕಲಿತರೆ ಅದು ಕೊಡುವ ಆತ್ಮವಿಶ್ವಾಸ ಅತ್ಯಂತ ವಿಸ್ತಾರವಾದದ್ದು, ನೆನಪಿರಲಿ.
ಹಳ್ಳಿ ಶಾಲೆಯಲ್ಲಿ ಶಿಕ್ಷಕರಿಲ್ಲ, ನಾವೂ ಪೇಟೆಗೆ ಸೇರಬಹುದಿತ್ತು ಎಂಬ ಭಾವ ಮಕ್ಕಳಿಗಿಂತ ಹೆಚ್ಚಾಗಿ ಇಂದಿನ ಪೋಷಕರಲ್ಲಿದೆ. ಈ ಕಲಿಕೆಯ ಕೇಂದ್ರೀಕರಣದಿಂದ ನಗರಗಳಲ್ಲಿ ಸಮಸ್ಯೆಯೇ ಆಗುತ್ತಿದೆ. ಆವಿನಹಳ್ಳಿ, ಸಿರಿವಂತೆ ಮೊದಲಾದೆಡೆಯೂ ಸರ್ಕಾರಿ ಪಿಯು ಕಾಲೇಜಿದ್ದರೂ ಸಾಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಅಕ್ಷರಶಃ ನೂಕುನುಗ್ಗಲು ನಿರ್ಮಾಣವಾಗುತ್ತದೆ. ಸರ್ಕಾರಿ ಶಾಲೆಗೂ ಕಾರ್ಪೊರೇಟ್ ಸ್ಪರ್ಶದ ಅಗತ್ಯವಿದೆ. ಸರ್ಕಾರದ ಯೋಜನೆಗಳ ಬಲವಂತದಿಂದ ನಲಿಕಲಿ, ಪ್ರತಿಭಾ ಕಾರಂಜಿ…. ಮತ್ತೊಂದು ಯೋಜನೆಗಿಂತ ಸರ್ಕಾರಿ ಶಿಕ್ಷಕ ವರ್ಗ ಮಕ್ಕಳನ್ನು ಸೇರಿಸಿಕೊಳ್ಳುವ ಮತ್ತು ಬೋಧಿಸುವ ಆಸಕ್ತಿಯನ್ನು ತೋರಲೇಬೇಕು. ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲೂ ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸುವುದರಿಂದ ಡ್ರೈವರ್ ಕಂಡಕ್ಟರ್‍ಗೆ ಪುರಸ್ಕಾರ ಸಿಗಲಾರಂಭಿಸಿದ ಮೇಲೆ ಪವಾಡ ಸದೃಶ ಬದಲಾವಣೆಗಳಾದವಲ್ಲ, ಅಂತಹದ್ದು ಸರ್ಕಾರಿ ಶಾಲೆಗಳ ವಿಚಾರದಲ್ಲಿಯೂ ನಡೆಯಬೇಕಿದೆಯೇ, ಚರ್ಚೆ ನಡೆಯಬೇಕಿದೆ.
ಕೊನೆಯದಾಗಿ, ಇಂದಿನ ಪ್ರಖ್ಯಾತ ಪ್ರತಿಭೆಗಳ ಕೊಡುಗೆಗಳನ್ನು ಈ ಸರ್ಕಾರಿ ಶಾಲೆಯೇ ಕೊಡುತ್ತದೆಂದಾದರೆ ನಮ್ಮ ಉನ್ನತಿಯ ಹಾದಿಯಲ್ಲಿ ದೋಷವಿರುವುದು ಶಾಲೆಯಲ್ಲಲ್ಲ, ನಮ್ಮ ಕಲಿಕೆಯಲ್ಲಿ, ಏನಂತೀರಾ?
– ಮಾ.ವೆಂ.ಸ.ಪ್ರಸಾದ್

ಮೊಳಕೆಯೊಡೆಯುವ ಹಂತದಲ್ಲಿಯೇ ಕಮರಿ ಹೋಗಿರುವ ಬೆಳೆ

0

ಎರಡು ತಿಂಗಳಿಂದ ತಾಲ್ಲೂಕಿನಲ್ಲಿ ಸರಿಯಾಗಿ ಮಳೆ ಇಲ್ಲ. ಕಳೆದೊಂದು ವಾರದಿಂದ ಮೋಡಕವಿದ ವಾತಾವರಣವಿದ್ದರೂ ಮಳೆಯ ಕೊರತೆ ಮುಂದುವರಿದಿದೆ. ತಾಲ್ಲೂಕಿನಲ್ಲಿ ಕೆಲವು ಕಡೆ ಬೆಳೆ ಮೊಳಕೆಯೊಡೆಯುವ ಹಂತದಲ್ಲಿಯೇ ಕಮರಿ ಹೋಗಿವೆ. ಬಹಳಷ್ಟು ಕಡೆ ಸರಿಯಾಗಿ ಮಳೆಯಾಗದ ಕಾರಣ ಬೆಳವಣಿಗೆ ಕುಂಠಿತಗೊಂಡಿದೆ.
ತಾಲ್ಲೂಕಿನಲ್ಲಿ 17,900 ಹೆಕ್ಟೇರ್ ಪ್ರದೇಶದ ಪೈಕಿ 16,888 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಬಿತ್ತನೆ ಆಗದೆ ಉಳಿದಿರುವುದು 1,300 ಹೆಕ್ಟೇರ್ ಆದರೆ, ಮೊಳಕೆ ಬರದೆ ಮರುಬಿತ್ತನೆ ಮಾಡಿರುವುದು 6,000 ಹಕ್ಟೇರ್ ಪ್ರದೇಶವಾಗಿದೆ.
ರಾಗಿ 12,300 ಹೆಕ್ಟೇರ್, ನೆಲಗಡಲೆ 1,000 ಹೆಕ್ಟೇರ್, ಜೋಳ 1,700 ಹೆಕ್ಟೇರ್, ತೊಗರಿ 814 ಹೆಕ್ಟೇರ್, ಅವರೆ 610 ಹೆಕ್ಟೇರ್, ತೃಣಧಾನ್ಯಗಳು 400 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ನಷ್ಟ ಪ್ರಮಾಣವನ್ನು ಶೇಕಡಾ 70 ರಷ್ಟೆಂದು ಅಂದಾಜಿಸಲಾಗಿದೆ.
‘ನಮ್ಮ ತಾಲ್ಲೂಕಿನ ಸಾದಲಿ ಮತ್ತು ಬಶೆಟ್ಟಹಳ್ಳಿ ಹೋಬಳಿಯಲ್ಲಿ ಮೊದಲು ಬಿತ್ತನೆ ನಡೆಸಲಾಗುತ್ತದೆ, ನಂತರ ಕಸಬಾ ಮತ್ತು ಜಂಗಮಕೋಟೆ ಹೋಬಳಿಯ ಭಾಗದಲ್ಲಿ ಬಿತ್ತನೆ ನಡೆಸಲಾಗುತ್ತದೆ. ಆದರೆ ಮಳೆ ಅಭಾವದಿಂದಾಗಿ ತಾಲ್ಲೂಕಿನ ಅನೇಕ ಕಡೆಗಳಲ್ಲಿ ಬೆಳೆಗಳು ಹಾಳಾಗಿವೆ. ಕೆಲ ಕಡೆ ಜೀವ ಹಿಡಿದುಕೊಂಡಿರುವ ಬೆಳೆಗಳೂ ಬರುವ ಖಾತರಿ ಇಲ್ಲ. ಬಂದರೂ ಇಳುವರಿಯಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಕುಂಠಿತವಾಗುವ ಭೀತಿ ರೈತರನ್ನು ಕಾಡುತ್ತಿದೆ‘ ಎಂದು ಕೃಷಿ ಸಹಾಯಕ ನಿರ್ದೇಶಕ ದೇವೇಗೌಡ ತಿಳಿಸಿದರು.
‘ಸಾಲ ಮಾಡಿ ಬಿತ್ತನೆ ಮಾಡಿರುವ ರೈತರು ಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಕೂಲಿ ಕಾರ್ಮಿಕರು ಕೆಲಸ ಇಲ್ಲದೆ ಗುಳೆ ಹೊರಟಿದ್ದಾರೆ. ಕಳೆದ ಸಾಲಿನ ಬರದ ಬರ ಮಾಸುವ ಮುನ್ನ ಈಗ ಮತ್ತೆ ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆ ಉಲ್ಬಣಿಸಿದೆ. ಕೊಳವೆ ಬಾವಿ, ಕೆರೆಗಳು ಸೇರಿದಂತೆ ಎಲ್ಲಡೆ ನೀರಿನ ಮೂಲ ಬತ್ತಿ ಹೋಗಿವೆ. ಹೀಗಾಗಿ ಜನ ಹನಿ ನೀರಿಗೂ ಪರದಾಡುವ ಸ್ಥಿತಿ ಬಂದಿದೆ. ಬರುವ ಬೇಸಿಗೆ ಭೀಕರವಾಗಲಿದೆ‘ ಎಂದು ತಿಳಿಸುತ್ತಾರೆ ರೈತ ಅನುವುಗಾರ ಇದ್ಲೂಡು ರಾಮಾಂಜಿನಪ್ಪ.

ಅಪೌಷ್ಠಿಕ ಮಕ್ಕಳ ಕಾರ್ಯಾಗಾರ ಹಾಗೂ ಅಪೌಷ್ಠಿಕ ಮಕ್ಕಳ ದತ್ತುಸ್ವೀಕಾರ ಕಾರ್ಯಕ್ರಮ

0

ಮಕ್ಕಳನ್ನು ಅಪೌಷ್ಠಿಕತೆಯಿಂದ ರಕ್ಷಣೆ ಮಾಡಬೇಕಾದರೆ, ತಾಯಂದಿರು ಹೆಚ್ಚಿನ ಜಾಗ್ರತೆಯನ್ನು ವಹಿಸಬೇಕು ಎಂದು ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ ಹೇಳಿದರು.
ನಗರದ ಸ್ತ್ರೀ ಶಕ್ತಿಭವನದಲ್ಲಿ ಸೋಮವಾರ ಆಯೋಜನೆ ಮಾಡಲಾಗಿದ್ದ ಅಪೌಷ್ಠಿಕ ಮಕ್ಕಳ ಕಾರ್ಯಾಗಾರ ಹಾಗೂ ಅಪೌಷ್ಠಿಕ ಮಕ್ಕಳ ದತ್ತುಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗರ್ಭಿಣಿಯಾಗಿದ್ದಾಗ ತಾಯಂದಿರು ಪೌಷ್ಠಿಕವಾದ ಆಹಾರವನ್ನು ತೆಗೆದುಕೊಳ್ಳದೆ, ಪ್ರತಿಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳದೆ, ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳುವ ಬದಲಾಗಿ ಅವೈಜ್ಞಾನಿಕವಾಗಿ ಹೆರಿಗೆ ಮಾಡಿಸಿಕೊಳ್ಳುವುದರಿಂದ ಮಕ್ಕಳ ಬೆಳವಣಿಗೆ ಕುಂಠಿತವಾಗಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬೆಳವಣಿಗೆಗೆ ತೊಡಕಾಗುತ್ತದೆ. ಆದ್ದರಿಂದ ತಾಯಂದಿರು ಸಮೀಪದ ಅಂಗನವಾಡಿ ಕಾರ್ಯಕರ್ತೆಯರಿಗೆ ತಿಳಿಸಿ ಅವರಿಂದ ಮಾರ್ಗದರ್ಶನ ಪಡೆಯಬೇಕು. ತಂದೆ ತಾಯಿಗಳು ಮಕ್ಕಳ ಎಲ್ಲಾ ರೀತಿಯ ಬೆಳವಣಿಗೆಯ ಬಗ್ಗೆ ಹೆಚ್ಚು ಗಮನಹರಿಸಬೇಕು. ಮಕ್ಕಳಿಗೆ ನೀಡುವಂತಹ ಆಹಾರಗಳು ಸಮರ್ಪಕವಾಗಿ ನೀಡಬೇಕು ಎಂದರು.
ಸಿ.ಡಿ.ಪಿ.ಓ.ಲಕ್ಷ್ಮೀದೇವಮ್ಮ ಮಾತನಾಡಿ, ಅಪೌಷ್ಠಿಕತೆಯನ್ನು ಹೋಗಲಾಡಿಸಿ, ಎಲ್ಲಾ ಮಕ್ಕಳನ್ನು ಆರೋಗ್ಯವಂತರನ್ನಾಗಿ ಮಾಡಲು ಅನೇಕ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದ್ದು, ಕಳೆದ ೨೦೧೩ ನೇ ಸಾಲಿಗೆ ಹೋಲಿಕೆ ಮಾಡಿದರೆ ಈಗಿರುವ ಅಪೌಷ್ಠಿಕ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಕೇವಲ ೪೯ ಮಕ್ಕಳು ಮಾತ್ರ ಗುರ್ತಿಸಲ್ಪಟ್ಟಿದ್ದಾರೆ. ಮಕ್ಕಳ ಉತ್ತಮವಾದ ಬೆಳವಣಿಗೆಗೆ ಅಗತ್ಯವಾಗಿರುವ ಪೌಷ್ಠಿಕಾಂಶ ಭರಿತವಾದ ಆಹಾರ ಪೂರೈಕೆ, ಹಾಗೂ ಔಷಧಿಗಳ ವಿತರಣೆಯನ್ನು ಮಾಡಲಾಗುತ್ತಿದ್ದು, ಅಂಗನವಾಡಿ ಕಾರ್ಯಕರ್ತೆಯರು ಈ ಎಲ್ಲಾ ಸೌಲಭ್ಯಗಳನ್ನು ಮಕ್ಕಳಿಗೆ ತಲುಪಿಸಬೇಕು. ವಾರಕ್ಕೊಮ್ಮೆ ತೂಕ ಮಾಡಬೇಕು, ಮಗುವಿನ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ಮಗುವಿನ ಬೆಳವಣಿಗೆಗೆ ಅಗತ್ಯವಾಗಿರುವ ಎಲ್ಲಾ ಸಲಹೆಗಳನ್ನು ಪೋಷಕರಿಗೆ ನೀಡಬೇಕು. ಸಮೀಕ್ಷೆ ಮಾಡುವಾಗ ಪ್ರಮಾಣಿಕವಾದ ವರದಿಗಳನ್ನು ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಔಷಧಿಗಳನ್ನು ವಿತರಣೆ ಮಾಡಲಾಯಿತು.
ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಮಕ್ಕಳ ತಜ್ಞ ಡಾ.ಗಿರೀಶ್, ಬೈರಾರೆಡ್ಡಿ, ಆರೋಗ್ಯ ನಿರೀಕ್ಷಕಿ ವಿಂದ್ಯಾ, ಮೇಲ್ವಿಚಾರಕಿಯರಾದ ಗಿರಿಜಾಂಬಿಕೆ, ಶಾಂತಾ, ಸಿಬ್ಬಂದಿ ಸಂದೀಪ್ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ರಾಯರ 344 ನೇ ಆರಾಧನಾ ಮಹೋತ್ಸವ

0

ನಗರದ ಮುತ್ತೂರು ಬೀದಿಯ ರಾಘವೇಂದ್ರಸ್ವಾಮಿ ಮಠದಲ್ಲಿ ರಾಯರ 344 ನೇ ಆರಾಧನಾ ಮಹೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಸೋಮವಾರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮೂರು ದಿನಗಳ ಕಾಲ ನಡೆಸುವ ಆರಾಧನಾ ಮಹೋತ್ಸವವು ಭಾನುವಾರ ಪ್ರಾರಂಭವಾಯಿತು. ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ, ಸಹಸ್ರನಾಮಾರ್ಚನೆ, ಹಸ್ತೋದಕ, ಮಹಾಮಂಗಳಾರತಿ ನಡೆರಾಯರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ, ಸಹಸ್ರ ನಾಮಾರ್ಚನೆ, ಉತ್ಸವವನ್ನು ನೆರವೇರಿಸಲಾಯಿತು. ಭಾನುವಾರ ಸಂಜೆ ದೇವರ ನಾಮಗಳ ಗಾಯನ, ಕೀಬೋರ್ಡ್ ವಾದನ, ಹಿಂದೂಸ್ಥಾನಿ ಬಾನ್ಸುರಿ ವಾದನವನ್ನು ಆಯೋಜಿಸಲಾಗಿತ್ತು.
ಸೋಮವಾರ ತೀರ್ಥಪ್ರಸಾದ ವಿನಿಯೋಗಿಸಿದ ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ರಾಯರ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಉತ್ಸವ ಮೂರ್ತಿಗೆ ಭಕ್ತರು ಪೂಜೆ ಸಲ್ಲಿಸಿದರು. ಮೆರವಣಿಗೆ ಹಾದು ಹೋದ ರಸ್ತೆಗಳನ್ನು ಸಾರಿಸಿ ರಂಗವಲ್ಲಿ ಹಾಕಿ ಉತ್ಸವಕ್ಕೆ ಸ್ವಾಗತ ಕೋರಲಾಗಿತ್ತು.
ದೇವಾಲಯದ ಆವರಣದಲ್ಲಿ ರಾಘವೇಂದ್ರ ಸೇವಾ ಟ್ರಸ್ಟ್ ವತಿಯಿಂದ ಸಾಮೂಹಿಕ ಅನ್ನಸಂತರ್ಪಣೆಯನ್ನು ನಡೆಸಲಾಯಿತು.
‘ಸುಮಾರು 30 ವರ್ಷಗಳಿಂದಲೂ ಪಟ್ಟಣದ ರಾಯರ ಮಠದಲ್ಲಿ ಮೂರು ದಿನಗಳ ಆರಾಧನೆಯನ್ನು ನಡೆಸಿಕೊಂಡು ಬರುತ್ತಿದ್ದೇವೆ. ಪೂರ್ವಾರಾಧನೆ, ಮಧ್ಯಾರಾಧನೆ ಮತ್ತು ಉತ್ತರಾರಾಧನೆ ಎಂದು ಮೂರು ದಿನಗಳ ಕಾಲ ನಡೆಯುವ ಆರಾಧನೆಯಲ್ಲಿ ಹೋಮ ಹವನಗಳು, ರಾಯರ ಕಥೆಯನ್ನು ತಿಳಿಸುಕೊಡುವುದು, ವಿಶೇಷ ಪೂಜೆಗಳು, ಭಜನೆ, ಗೀತಗಾಯನಗಳನ್ನು ಆಯೋಜಿಸಲಾಗುತ್ತದೆ. ರಾಯರು ಭಕ್ತಿಯಿಂದ ಪೂಜಿಸುತ್ತಿದ್ದ ರಾಮ, ಕೃಷ್ಣ, ವೇದವ್ಯಾಸ, ಲಕ್ಷ್ಮೀನರಸಿಂಹ ಮತ್ತು ಹಯಗ್ರೀವ ದೇವರುಗಳನ್ನು ಪೂಜಿಸಲಾಗುತ್ತದೆ. ಸರ್ವರಿಗೂ ಸಲ್ಲುವ ರಾಯರ ಮಹಿಮೆಯನ್ನು ಎಲ್ಲರಿಗೂ ಸಾರುವ ಉದ್ದೇಶದಿಂದ ಸಂಜೆಗೆ ದೇವರನಾಮಗಳು ಹಾಗೂ ಶ್ರೀರಾಘವೇಂದ್ರ ವಿಜಯ ಹರಿಕಥೆಯನ್ನು ಆಯೋಜಿಸಿದ್ದೇವೆ’ ಎಂದು ಬ್ರಾಹ್ಮಣ ಸಂಘದ ಜಿಲ್ಲಾಧ್ಯಕ್ಷ ಎಂ.ವಾಸುದೇವರಾವ್ ತಿಳಿಸಿದರು.
ರಾಘವೇಂದ್ರ ಸೇವಾ ಟ್ರಸ್ಟ್ನ ತಾಲ್ಲೂಕು ಅಧ್ಯಕ್ಷ ಎ.ಎಸ್.ರವಿ, ಎನ್..ಶ್ರೀಕಾಂತ್, ಎಸ್.ವಿ.ನಾಗರಾಜರಾವ್, ವಿ.ಕೃಷ್ಣ, ರಮೇಶ್ಬಾಯಿರಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ನಿಧನ ವಾರ್ತೆ – ಓ.ಟಿ.ಮುನಿಕೃಷ್ಣಪ್ಪರವರು

0

ಪಿ. ಎಲ್. ಡಿ ಬ್ಯಾಂಕ್ ಮಾಜಿ ಅಧ್ಯಕ್ಷ, ಮಾಜಿ ಪುರಸಭೆ ಸದಸ್ಯ, ಜೆಡಿಎಸ್ ಮುಖಂಡ ಹಾಗೂ ಯಾದವ ಜನಾಂಗದ ಮುಖಂಡ ಓ.ಟಿ.ಮುನಿಕೃಷ್ಣಪ್ಪರವರು(೫೪) ಸೋಮವಾರ ಮುಂಜಾನೆ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತಾಯಿ, ಪತ್ನಿ ಹಾಗೂ ೨ ಹೆಣ್ಣು ೨ ಗಂಡು ಮಕ್ಕಳು ಹಾಗೂ ಅಪಾರ ಬಂಧುಮಿತ್ರರನ್ನು ಅವರು ಅಗಲಿದ್ದಾರೆ.
ಶಾಸಕ ಎಂ.ರಾಜಣ್ಣ, ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಯಾದವ ಜನಾಂಗದ ಅಧ್ಯಕ್ಷರ ಹಾಗೂ ವಕೀಲರಾದ ಯೋಗಾನಂದ, ಮಾಜಿ ಪುರಸಭೆ ಸದಸ್ಯ ಜಗದೀಶ್ವರ್, ದೊಣ್ಣಹಳ್ಳಿ ರಾಮಣ್ಣ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ, ಯಾದವ ಜನಾಂಗದ ಮುಖಂಡರು, ಕುಟುಂಬ ವರ್ಗದವರು ಮತ್ತು ಸಾರ್ವಜನಿಕರು ಅಂತಿಮ ದರ್ಶನ ಪಡೆದರು.

ಸ್ವಾವಲಂಬಿಗಳಾಗಲು ತರಬೇತಿ

0

ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವ ಜನರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಕೇಂದ್ರದ ಮೂಲಕ ಮಾಹಿತಿ ಹಾಗೂ ಸೇವೆಯನ್ನು ಒದಗಿಸುತ್ತಿದ್ದು ಅನುಕೂಲಕರವಾಗಿದೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷೆ ಎಲ್.ಜಮುನಾ ಧರ್ಮೇಂದ್ರ ತಿಳಿಸಿದರು.

ಮೇಲೂರು ಪಂಚಾಯತಿಯ ವಿವಿಧ ಗ್ರಾಮಗಳ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ತರಬೇತಿಯಲ್ಲಿ ಭಾಗವಹಿಸಿದ್ದರು.
ಮೇಲೂರು ಪಂಚಾಯತಿಯ ವಿವಿಧ ಗ್ರಾಮಗಳ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ತರಬೇತಿಯಲ್ಲಿ ಭಾಗವಹಿಸಿದ್ದರು.
ತಾಲ್ಲೂಕಿನ ಮೇಲೂರು ಗ್ರಾಮದ ಗಂಗಾದೇವಿ ಸಮುದಾಯ ಭವನದಲ್ಲಿ ಈಚೆಗೆ ಸೊಣ್ಣಹಳ್ಳಿಪುರದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಕೇಂದ್ರದ ವತಿಯಿಂದ ಮೇಲೂರು ಪಂಚಾಯತಿಯ ವಿವಿಧ ಗ್ರಾಮಗಳ ನಿರುದ್ಯೋಗ ಯುವಕ ಯುವತಿಯರು ಹಾಗೂ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಆಯೋಜಿಸಿದ್ದ ಉದ್ಯಮಶಿಲತಾ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಿರುದ್ಯೋಗಿ ಯುವಕ–ಯುವತಿಯರಿಗೆ ತರಬೇತಿ ಮತ್ತು ಸ್ವ–ಉದ್ಯೋಗಾವಕಾಶ ಕಲ್ಪಿಸುವ ಏಕೈಕ ಉದ್ದೇಶದಿಂದ ಈ ಕಾರ್ಯಕ್ರಮವನ್ನು ನಡೆಸುತ್ತಿದ್ದು, ತರಬೇತಿ ಪೂರ್ಣಗೊಳಿಸಿದ ನಂತರದ ಎರಡು ವರ್ಷಗಳ ಕಾಲ ಪೋಷಕ ಸಂಸ್ಥೆಯಂತೆ ಆಶ್ರಯಕ್ಕೆ ಬ್ಯಾಂಕ್ ನಿಲ್ಲುತ್ತದೆ. ತರಬೇತಿ ಪಡೆದ ವ್ಯಕ್ತಿಯು ಸ್ವಾವಲಂಬಿಯಾಗುವವರೆಗೆ ಸಂಸ್ಥೆಯಿಂದ ಪ್ರೋತ್ಸಾಹ ಮತ್ತು ಮಾರ್ಗದರ್ಶನ ದೊರೆಯುತ್ತದೆ. ಇದರ ಸದುಪಯೋಗ ಮಾಡಿಕೊಳ್ಳುವಂತೆ ಅವರು ಹೇಳಿದರು.
ಸಂಸ್ಥೆಯ ನಿರ್ದೇಶಕ ಗುರುದಾಸ್ ಪೈ ತರಬೇತಿ ಕೇಂದ್ರದ ಬಗ್ಗೆ ವಿವರಿಸಿದರು. ಸಂಸ್ಥೆಯ ಉಪನ್ಯಾಸಕ ನಾರಾಯಣಸ್ವಾಮಿ, ತರಬೇತಿ ಅವಶ್ಯಕತೆ, ಉದ್ಯಮಶೀಲತೆ ಗುಣಗಳು, ಅವಕಾಶಗಳು, ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಗಂಗಾದೇವಿ ಸಮುದಾಯ ಭವನದ ಅಧ್ಯಕ್ಷ ರಾಮಕೃಷ್ಣಪ್ಪ, ಎಲ್.ಎನ್.ಮೂರ್ತಿ, ಅಶ್ವತ್ಥಪ್ಪ, ಮಹಿಳಾ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಯುವ ಸಂಘಟನೆಗಳಿಂದ ಗ್ರಾಮೀಣ ಅಭಿವೃದ್ಧಿ ಸಾಧ್ಯ

0

ಯುವ ಸಂಘಟನೆಗಳು ಗ್ರಾಮೀಣ ಪ್ರದೇಶದ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಯೊಂದಿಗೆ ನೈರ್ಮಲ್ಯೀಕರಣದತ್ತ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಬೇಕು ಎಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳ ಗ್ರಾಮದಲ್ಲಿ ಶುಕ್ರವಾರ ಒಕ್ಕಲಿಗರ ಯುವಸೇನೆ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಪ್ರತಿಭಾವಂತರಿಗೆ ಪ್ರೋತ್ಸಾಹಿಸುವುದು, ವಿದ್ಯಾಭ್ಯಾಸಕ್ಕೆ ನೆರವಾಗುವುದು, ಆರೋಗ್ಯ, ಸ್ವಚ್ಛತೆಯ ಕುರಿತಂತೆ ಅರಿವು ಮೂಡಿಸುವುದು, ಗಿಡಗಳನ್ನು ನೆಡುವುದು ಮುಂತಾದ ಕಾರ್ಯಕ್ರಮಗಳನ್ನು ಯುವಕರು ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.
ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸಬಹುದಾದ ಸಂಘಟನೆಗಳು ಇದ್ದಾಗ ಮಾತ್ರ ಅಭಿವೃದ್ಧಿಯ ಕನಸು ನನಸಾಗಲು ಸಾಧ್ಯ. ಯುವ ಸಮೂಹ ಅಭಿವೃದ್ಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ದುಶ್ಚಟದಿಂದ ದೂರ ಇರಬೇಕು. ಗ್ರಾಮೀಣ ಪ್ರದೇಶದಲ್ಲಿ ಶಾಂತಿ ಮತ್ತು ಭಾವೈಕ್ಯತೆ ನೆಲೆಸಲು ಯುವ ಸಂಘಟನೆ ಕಾರ್ಯಗಳು ಮುಂದಾಗಬೇಕೆಂದರು.
ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ, ಮಾಜಿ ತಾಲ್ಲೂಕು ಪಂಚಾಯತಿ ಅಧ್ಯಕ್ಷ ಬಿ.ಎಂ.ಮುನಿಕೃಷ್ಣಪ್ಪ, ಶ್ರೀನಿವಾಸ ನಾಗಪ್ಪ, ಒಕ್ಕಲಿಗರ ಯುವಸೇನೆ ಸಂಘದ ತಾಲ್ಲೂಕು ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ನಗರ ಅಧ್ಯಕ್ಷ ಆರ್.ಪುರುಷೋತ್ತಮ್, ಮಂಜುನಾಥ್, ಪ್ರಸನ್ನ, ಸಿ.ವಿ.ಮುನಿರಾಜು, ತ್ಯಾಗರಾಜು, ನಾಗೇಶ, ಲಕ್ಷ್ಮೀಪತಿ, ಪ್ರಭಾಕರ್, ಬಿ.ಕೆ.ಗೋವಿಂದರಾಜು, ವೆಂಕಟಪ್ಪ, ತಿಮ್ಮರಾಯಣ್ಣ, ಎಚ್.ಆರ್.ಗಂಗಾಧರ, ಡಿ.ಸಂತೋಷ, ಪಿ.ಚಂದ್ರ, ಕೆ.ನಾರಾಯಣಸ್ವಾಮಿ, ಎ.ಸತೀಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ವಲಯ ಮಟ್ಟದ ಕೃಷಿ ವಿಚಾರ ಸಂಕಿರಣ

0

ಹೈನುಗಾರಿಕೆಯಲ್ಲಿ ಆಧುನಿಕ ಪದ್ದತಿಗಳನ್ನು ಅಳವಡಿಸಿಕೊಂಡು ಕಡಿಮೆ ವೆಚ್ಚದಲ್ಲಿ ಹೆಚ್ಚು ಉತ್ಪಾದನೆ ಹಾಗೂ ಹೆಚ್ಚು ಲಾಭಗಳಿಸಬಹುದೆಂದು ಚಿಕ್ಕಬಳ್ಳಾಪುರದ ಪಾಲಿಕ್ಲಿನಿಕ್ನ ಪಶು ವೈದ್ಯಾಧಿಕಾರಿ ಡಾ.ಜೆ.ಎನ್.ದೀಪಕ್ ತಿಳಿಸಿದರು.
ಮಳಮಾಚನಹಳ್ಳಿ ಗ್ರಾಮ ಪಂಚಾಯತಿ, ಹಾಲು ಉತ್ಪಾದಕರ ಸಹಕಾರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ರೇಷ್ಮೆ ಬೆಳೆಗಾರರ ಸಹಕಾರ ಸಂಘ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಹಾಗೂ ರೈತರ ಸೇವಾ ಕೇಂದ್ರದ ಆಶ್ರಯದಲ್ಲಿ ಮಳಮಾಚನಹಳ್ಳಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಲಯ ಮಟ್ಟದ ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲಾಭದಾಯಕ ಹೈನುಗಾರಿಕೆಗೆ ಇರುವ ಅವಕಾಶಗಳು ಕುರಿತು ವಿಚಾರ ಗೋಷ್ಠಿಯಲ್ಲಿ ವಿಷಯ ಮಂಡನೆ ಮಾಡಿದ ಅವರು, ಜಿಲ್ಲೆಯಲ್ಲಿ ಹೈನುಗಾರಿಕೆಗೆ ಸೂಕ್ತವಾದ ವಾತಾವರಣ, ಪರಿಸರ, ಮಾರುಕಟ್ಟೆ ವ್ಯವಸ್ಥೆ, ನೀತಿ ನಿಯಮಗಳು ಅನುಕೂಲಕರವಾಗಿದೆ ಎಂದು ಅಭಿಪ್ರಾಯಪಟ್ಟರು.
ಉತ್ತಮ ತಳಿಯ ರಾಸುಗಳು, ಕೊಟ್ಟಿಗೆ ನಿರ್ಮಾಣ, ಪೌಷ್ಠಿಕ ಆಹಾರ, ಸೂಕ್ತ ಕಾಲಕ್ಕೆ ಬೆದೆ ಕಟ್ಟುವುದು, ಕಾಲ ಕಾಲಕ್ಕೆ ಲಸಿಕೆಗಳನ್ನು ಹಾಕಿಸುವುದು ಉತ್ತಮ ಹೈನುಗಾರಿಕೆಯನ್ನು ನಡೆಸುವಲ್ಲಿ ಪಾತ್ರವಹಿಸುತ್ತವೆ ಎಂದು ವಿವರಿಸಿದರು.
ವಿದೇಶಿ ತಳಿಗಳಾದ ಜೆರ್ಸಿ, ಎಚ್ಎಫ್ ಹಾಗೂ ಸ್ಥಳೀಯ ತಳಿಗಳಾದ ಹಳ್ಳಿಕಾರ್, ಖಿಲಾರಿ ಇನ್ನಿತರೆ ತಳಿಗಳು ನಮ್ಮಲ್ಲಿವೆ. ವಿದೇಶಿ ತಳಿಗಳೊಂದಿಗೆ ಸ್ಥಳೀಯ ತಳಿಗಳ ರಾಸುಗಳನ್ನು ಕ್ರಾಸ್ ಮಾಡುವುದರಿಂದ ಹುಟ್ಟುವ ರಾಸುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆಯಲ್ಲದೆ ಹಾಲು ನೀಡುವ ಪ್ರಮಾಣವೂ ಸಹ ಹೆಚ್ಚು ಎಂದು ಹೇಳಿದರು.
ತಹಸೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಸೀಮೆ ಹಸುವಿಗೆ ಹುಲ್ಲು ತಿನ್ನಿಸುವ ಮೂಲಕ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿ, ಕೃಷಿಯಲ್ಲಿ ನೂತನ ತಾಂತ್ರಿಕತೆ ಬಳಸಿಕೊಳ್ಳದೆ ರೈತರಿಗೆ ಉಳಿಗಾಲವಿಲ್ಲ. ಕಾಲ ಬದಲಾದಂತೆ ಕೃಷಿಕರೂ ಸಹ ಕೃಷಿ ಪದ್ದತಿಯಲ್ಲಿ ಬದಲಾವಣೆ ತಂದುಕೊಳ್ಳಬೇಕಿದೆ ಎಂದರು.
ಯಾರೂ ಕೂಡ ಆತ್ಮಹತ್ಯೆಯಂತ ಕೃತ್ಯಕ್ಕೆ ಮುಂದಾಗಬಾರದು, ಸರ್ಕಾರ, ತಾಲ್ಲೂಕು ಆಡಳಿತ ರೈತ ಪರ ಇದ್ದು ಯಾವುದೆ ಕಾರಣಕ್ಕೂ ಹೆದರಿ ಜೀವನವನ್ನೆ ಕೊನೆಯನ್ನಾಗಿ ಮಾಡಿಕೊಳ್ಳಬಾರದು. ಬದುಕಿದ್ದು ಎದುರಾಗುವ ಎಲ್ಲ ಸಂಕಷ್ಟಗಳನ್ನು ಎದುರಿಸುವಂತೆ ರೈತರಲ್ಲಿ ಧೈರ್ಯ ತುಂಬಿದರು.
ರೇಷ್ಮೆ ಕೃಷಿಯಲ್ಲಿ ನೂತನ ತಾಂತ್ರಿಕತೆ ವಿಷಯ ಕುರಿತು ತಲಘಟ್ಟಪುರದ ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ವಿಜ್ಞಾನಿ ಡಾ.ಸಿ.ಎಚ್.ಗುರುರಾಜ್ ಅವರು ವಿಷಯ ಮಂಡನೆ ಮಾಡಿದರು.
ಎರೆ ಹುಳು ತಯಾರಿಕೆ, ಎರೆ ಹಳು ಗೊಬ್ಬರದಿಂದಾಗುವ ಪ್ರಯೋಜನಗಳು, ವಿವಿಧ ಮಾದರಿಯ ಟಿಲ್ಲರ್, ಸೋಲಾರ್ ಪದ್ದತಿ, ಡೆಂಗ್ಯೂ ಜ್ವರ ಕುರಿತು, ಔಷಧಿಗಳು ಸೇರಿದಂತೆ ಕೃಷಿ, ಹೈನುಗಾರಿಕೆ, ರೇಷ್ಮೆ ಕೃಷಿಗೆ ಸಂಬಂಧಿಸಿದಂತೆ ನಾನಾ ಪ್ರಾತ್ಯಕ್ಷಿತೆಗಳನ್ನು ನಡೆಸಲಾಯಿತು. ಮಾರಾಟಕ್ಕೂ ವ್ಯವಸ್ಥೆ ಕಲ್ಪಿಸಲಾಗಿತ್ತು.
ಮಳಮಾಚನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಎಂ.ರಾಮಾಂಜಿನಪ್ಪ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಾದೇಶಿಕ ನಿರ್ದೆಶಕ ಆನಂದ ಸುವರ್ಣ, ತಾಲ್ಲೂಕು ಯೋಜನಾಧಿಕಾರಿ ಯೋಗಿಶ್ ಕಿನ್ಯಾಡಿ, ರೇಷ್ಮೆ ಇಲಾಖೆಯ ಉಪ ನಿರ್ದೆಶಕ ಬಿ.ಆರ್.ನಾಗಗಭೂಷಣ್, ಸಹಾಯಕ ನಿರ್ದೆಶಕ ಎಂ.ಸಿ.ಚಂದ್ರಪ್ಪ, ಕೃಷಿ ನಿರ್ದೆಶಕ ಬಿ.ಸಿ.ದೇವೇಗೌಡ, ಜಂಗಮಕೋಟೆ ಹೋಬಳಿ ಕೃಷಿ ಅಧಿಕಾರಿ ಡಿ.ಟಿ.ಗೋಪಾಲರಾವ್, ಪಶು ವೈದ್ಯಾಧಿಕಾರಿ ಡಾ.ಮುನಿನಾರಾಯಣರೆಡ್ಡಿ, ತೋಟಗಾರಿಕೆಯ ಆನಂದ್, ಆರೋಗ್ಯ ಇಲಾಖೆಯ ವಿಂದ್ಯ, ಹಸಿರು ಸೇನೆ ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಕರವೇ ಅಧ್ಯಕ್ಷ ಸಂತೋಷ್, ಗೋವರ್ಧನ್, ಹರೀಶ್, ಮಂಜುನಾಥ್, ಕೃಷ್ಣಯ್ಯ, ಜಗಶ್, ಬ್ಯಾಟರಾಯಶೆಟ್ಟ, ದೇವರಾಜ್ ಮತ್ತಿತರರು ಹಾಜರಿದ್ದರು.

ಈ.ತಿಮ್ಮಸಂದ್ರ ಗ್ರಾಮ ಪಂಚಾಯತಿ ಕಾಂಗ್ರೆಸ್ ವಶಕ್ಕೆ

0

ಶಾಶ್ವತ ನೀರಾವರಿ ಹೋರಾಟಕ್ಕೆ ಬೆಂಬಲಿಸಿ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕರಿಸಿದ್ದ ಈ.ತಿಮ್ಮಸಂದ್ರ ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಗುರುವಾರ ನಡೆದು ಅದು ಕಾಂಗ್ರೆಸ್ ಬೆಂಬಲಿತರ ಪಾಲಾಗಿದೆ.
ಅಧ್ಯಕ್ಷರಾಗಿ ಹಳೇಹಳ್ಳಿ ಎಂ.ವಿ.ದೇವರಾಜು ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಹಳೇಹಳ್ಳಿ ಎಂ.ವಿ.ದೇವರಾಜು ಮತ್ತು ಎಚ್.ಜೆ.ನಾಗಮಣಿ ನಾಮ ಪತ್ರ ಸಲ್ಲಿಸಿದ್ದು, ಚುನಾವಣೆಯಲ್ಲಿ ಎಂ.ವಿ.ದೇವರಾಜುಗೆ ೧೧ ಮತ ಹಾಗೂ ಎಚ್.ಜೆ.ನಾಗಮಣಿರವರಿಗೆ ೫ ಮತ ಪಡೆದು ಪರಭಾವಗೊಂಡರು. ೧೧ ಮತ ಪಡೆದ ಎಂ.ವಿ.ದೇವರಾಜು ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಸಡ್ಲವಾರಹಳ್ಳಿ ಎನ್.ಮಂಜುಳ ಅವಿರೋಧವಾಗಿ ಆಯ್ಕೆಯಾದರು. ಚುನಾವಣೆಯ ಅಧಿಕಾರಿಯಾಗಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಾಂಜಿನಪ್ಪ ಹಾಜರಿದ್ದರು.
ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಶ್ರೀನಾಥ್, ಬಚ್ಚನಹಳ್ಳಿ ನಾರಾಯಣಸ್ವಾಮಿ, ಡಿ.ಪಿ.ನಾಗರಾಜ್, ಆನಂದ್ ರೆಡ್ಡಿ, ಪ್ರಸನ್ನ, ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ತನ್ವಿರ್, ದಿಬ್ಬೂರಹಳ್ಳಿ ಠಾಣೆಯ ಸಬ್ಬ್ ಇನ್ಸ್ಪೆಕ್ಟರ್ ರಾಘವೇಂದ್ರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಬೆಸ್ಕಾಂ ಕಛೇರಿಗೆ ಮುತ್ತಿಗೆ

0

ಸಮಾನ ಮನಸ್ಕರ ಹೋರಾಟ ಸಮಿತಿ ಹಾಗೂ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸದಸ್ಯರು ಗುರುವಾರ ತಾಲ್ಲೂಕಿನಲ್ಲಿನ ವಿದ್ಯುತ್ ಸಮಸ್ಯೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ಬೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ತಾಲ್ಲೂಕಿನಾದ್ಯಂತ ವಿದ್ಯುತ್ ಸಮಸ್ಯೆ ತೀವ್ರತರವಾಗಿದೆ. ತಾಲ್ಲೂಕಿನಾದ್ಯಂತೆ ರೈತರು ಹೆಚ್ಚಾಗಿ ರೇಷ್ಮೆ ಹಾಗೂ ಹೈನುಗಾರಿಕೆಯನ್ನು ಅವಲಂಭಿಸಿದ್ದು, ಬೆಳೆಗಳಿಗೆ ನೀರು ಹಾಯಿಸದಂತಾಗಿದೆ. ಜನ ಜಾನುವಾರುಗಳಿಗೆ ಕುಡಿಯುವ ನೀರು ಅಭಾವವಾಗಿದೆ. ನಗರಪ್ರದೇಶದಲ್ಲಿನ ರೇಷ್ಮೆ ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ರೈತರಿಂದ ಅಕ್ರಮ ಸಕ್ರಮದಲ್ಲಿ 18 ಸಾವಿರ ರೂಗಳನ್ನು ಕಟ್ಟಿಸಿಕೊಂಡು ಒಂದು ವರ್ಷವಾದರೂ ವಿದ್ಯುತ್ ಪರಿವರ್ತಕಗಳನ್ನು ಹಾಕಿಲ್ಲ. ರೈತರು ಸಾಲ ಮಾಡಿ ಕೊಳವೆ ಬಾವಿಗಳನ್ನು ಕೊರೆಸಿ ಇಲಾಖೆಯ ವಿದ್ಯುತ್ ಪರಿವರ್ತಕಗಳಿಗೆ ಕಾಯುವಂತಾಗಿದೆ. ರೈತರ ಸಭೆಯನ್ನು ಅಧಿಕಾರಿಗಳು ಆಯೋಜಿಸಿಲ್ಲ. ತಕ್ಷಣ ಅಧಿಕಾರಿಗಳು ವಿದ್ಯುತ್ ಸಮಸ್ಯೆಯನ್ನು ಬಗೆ ಹರಿಸದಿದ್ದಲ್ಲಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಮಾನ ಮನಸ್ಕರ ಹೋರಾಟ ಸಮಿತಿ ಹಾಗೂ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸದಸ್ಯರು ಮನವಿ ಪತ್ರಗಳನ್ನು ಎ.ಇ.ಇ ಪರಮೇಶ್ವರಪ್ಪ ಅವರಿಗೆ ಸಲ್ಲಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರವಿಪ್ರಕಾಶ್, ಪ್ರತೀಶ್, ಸಮಾನ ಮನಸ್ಕರ ಹೋರಾಟ ಸಮಿತಿ ತಾಲ್ಲೂಕು ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ಜಿ.ಎಸ್.ಅಕ್ರಂ ಪಾಷ, ಇಮ್ತಿಯಾಜ್ಪಾಷ, ರಹಮತ್ಪಾಷ, ಆರ್.ಪುರುಷೋತ್ತಮ್, ದೇವರಾಜ್, ಮಾರಪ್ಪ, ಮೇಲೂರು ನಾಗರಾಜ್, ಬಾಲಮುರಳಿಕೃಷ್ಣ, ನಾರಾಯಣಸ್ವಾಮಿ, ಮುನಿಕೆಂಪಣ್ಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ರೈತರು ಯಾವುದೇ ಕಷ್ಟಗಳಿಗೆ ಎದೆಗುಂದಬಾರದು

0

ರೈತರು ಆರ್ಥಿಕವಾಗಿ ಸದೃಢರಾದಾಗ ಮಾತ್ರ ಸಮಾಜವು ಅಭಿವೃದ್ಧಿಯತ್ತ ಸಾಗುತ್ತದೆ. ರೈತರು ಯಾವುದೇ ಕಷ್ಟಗಳಿಗೆ ಎದೆಗುಂದಬಾರದು ಎಂದು ತಹಶಿಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು.
ನಗರದ ನ್ಯಾಯಾಲಯದ ಆವರಣದಲ್ಲಿ ಗುರುವಾರ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಆತ್ಮಹತ್ಯೆ ಮಾಡಿಕೊಳ್ಳದಂತೆ ಅನ್ನದಾತನಿಗೆ ಆತ್ಮಸ್ಥೈರ್ಯ ತುಂಬಲು ರೈತ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾರುಕಟ್ಟೆಯ ಏರುಪೇರು, ಮಳೆಯ ಅಭಾವ, ಬೆಳೆಗಾಗಿ ಮಾಡಿದ ಸಾಲ ರೈತರನ್ನು ಕಂಗೆಡಿಸಿದೆ. ಆದರೂ ಸಮಾಜದ ಎಲ್ಲಾ ವರ್ಗದವರೂ ರೈತರ ಬೆಂಬಲಕ್ಕೆ ನಿಂತು ಆತ್ಮಸ್ಥೈರ್ಯ ತುಂಬುವ ಕಾರ್ಯ ತುರ್ತಾಗಿ ಆಗಬೇಕಿದೆ ಎಂದು ಹೇಳಿದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ ಮಾತನಾಡಿ, ರೈತರು ಸಾಲ ಮಾಡುವುದು ತಪ್ಪಲ್ಲ, ಹಾಗೆಂದು ಸಾಲಕ್ಕೆ ಪ್ರಾಣತ್ಯಾಗ ಮಾಡಬಾರದು. ರೈತರ ಬೆಂಬಲಕ್ಕೆ ವಕೀಲರು ಸಹ ಇರುವುದಾಗಿ ತಿಳಿಸಿದರು.
ಸರ್ಕಾರಿ ವಕೀಲ ಈ.ಡಿ.ಶ್ರೀನಿವಾಸ್, ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರವಿಪ್ರಕಾಶ್, ಪ್ರತೀಶ್, ಜೆ.ಎಸ್.ವೆಂಕಟಸ್ವಾಮಿ, ಜಿ.ಎಸ್.ಅಕ್ರಂ ಪಾಷ, ಇಮ್ತಿಯಾಜ್ಪಾಷ, ರಹಮತ್ಪಾಷ, ಎಚ್.ಸುರೇಶ್, ಅರಿಕೆರೆ ಮುನಿರಾಜು, ಮೇಲೂರು ನಾಗರಾಜ್, ಬಾಲಮುರಳಿಕೃಷ್ಣ, ನಾರಾಯಣಸ್ವಾಮಿ, ಮುನಿಕೆಂಪಣ್ಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲ

0

ವಿವಿಧ ಸಂಘಟನೆಗಳ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸೆಪ್ಟೆಂಬರ್ ೨ ರಂದು ನಡೆಯುತ್ತಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲ ನೀಡಲು ಸಿಐಟಿಯು ಸಂಯೋಜಿತ ನಾನಾ ಸಂಘಟನೆಗಳ ಮುಖಂಡರು ನಿರ್ಧರಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಈಚೆಗೆ ಸಭೆ ಸೇರಿದ್ದ ಸಿಯಟಿಯು ಸಂಯೋಜಿತ ಅಂಗನವಾಡಿ, ಬಿಸಿಯೂಟ, ಗ್ರಾಮ ಪಂಚಾಯತಿ ನೌಕರರ ಸಂಘ ಹಾಗೂ ಡಿವೈಎಫ್ಐ ಮುಂತಾದ ಸಂಘಟನೆಗಳ ಮುಖಂಡರು ಸಭೆ ಸೇರಿ ಸೆಪ್ಟೆಂಬರ್ ೨ ರಂದು ನಡೆಯುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದಲ್ಲಿ ಭಾಗವಹಿಸಲು ನಿರ್ಣಯವನ್ನು ತೆಗೆದುಕೊಳ್ಳಲಾಯಿತು.
ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಮದ್ಯಾಹ್ನ ಬಿಸಿಯೂಟ ತಯಾರಿಸುವ ಅಡುಗೆ ನೌಕರರ ಹಲವು ಸಮಸ್ಯೆಗಳನ್ನು ಕಳೆದ ಹಲವಾರು ವರ್ಷಗಳಿಂದಲೂ ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ.
ಎಲ್ಲ ಗ್ರಾಮ ಪಂಚಾಯಿತಿ ನೌಕರರನ್ನು ಷರತ್ತು ಇಲ್ಲದೆ ನೇಮಕಾತಿಗೆ ಅನುಮೋದನೆ ನೀಡುವುದು ಹಾಗೂ ಈಗಾಗಲೆ ಕೆಲವು ನೌಕರರನ್ನು ಕೈಬಿಟ್ಟಿದ್ದು ಅವರನ್ನು ಪುನಃ ಸೇರಿಸಿಕೊಳ್ಳುವುದು, ನ್ಯಾಯಾಲಯದ ತೀರ್ಪಿನಂತೆ ಕನಿಷ್ಠ ವೇತನ ೧೫ ಸಾವಿರ ರೂಪಾಯಿಗಳನ್ನು ಕೊಡುವುದು.
ಗ್ರಾಮ ಪಂಚಾಯತಿ ನೌಕರರಿಗೆ ಬಡ್ತಿ ನೀಡುವುದು, ಕಾರ್ಯದರ್ಶಿ ಗ್ರೇಡ್-೧೧ನಿಂದ ಗ್ರೇಡ್-೧ಗೆ ಬಡ್ತಿ ನೀಡುವುದು. ಗ್ರಾಮ ಪಂಚಾಯತಿ ನೌಕರರನ್ನು ವಿನಾಕಾರಣ ಯಾವುದೆ ಮುನ್ಸೂಚನೆ ಇಲ್ಲದೆ ಕೆಲಸದಿಂದ ತೆಗೆದು ಹಾಕುವ ಪದ್ದತಿಯನ್ನು ಕೈ ಬಿಡಬೇಕು. ಈಗಾಗಲೆ ತೆಗೆದಿರುವವರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು.
ಸಾಕಷ್ಟು ನೌಕರರಿಗೆ ವರ್ಷಗಳಿಂದಲೂ ಬಾಕಿ ವೇತನ ನೀಡಬೇಕಿದ್ದು ಕೂಡಲೆ ಬಾಕಿ ವೇತನವನ್ನು ಬಿಡುಗಡೆ ಮಾಡಬೇಕು, ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿ ನೌಕರ ಕಾರ್ಯ ನಿರ್ವಸುತ್ತಿದ್ದಾಗಲೆ ಹೃದಯಾಘಾತದಿಂದ ಮೃತಪಟ್ಟಿದ್ದು ಅವರಿಗೆ ಸರ್ಕಾರದಿಂದ ಪರಿಹಾರ ನೀಡಬೇಕು.
ಗಂಜಿಗುಂಟೆ ಗ್ರಾಮ ಪಂಚಾಯಿತಿ ನೌಕರರ ಹೃದಯಾಘಾತದಿಂದ ಕರ್ತವ್ಯದ ವೇಳೆಯಲ್ಲಿ ನಿಧನರಾಗಿದ್ದು ಅವರಿಗೆ ಪರಿಹಾರ ನೀಡಬೇಕೆಂಬುದು ಸೇರಿದಂತೆ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸೆಪ್ಟೆಂಬರ್ ೨ ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರದಲ್ಲಿ ಭಾಗವಹಿಸಲು ತೀರ್ಮಾನಿಸಲಾಯಿತು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಿದೇವಮ್ಮ, ಬಿಸಿಯೂಟ ನೌಕರರ ಸಂಘದ ಮುನಿಲಕ್ಷ್ಮಮ್ಮ, ಡಿವೈಎಫ್ಐನ ಮುನೀಂದ್ರ, ಗ್ರಾಮ ಪಂಚಾಯತಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಸುದರ್ಶನ್, ಉಪಾಧ್ಯಕ್ಷ ಶಂಕರಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಎನ್.ಪಾಪಣ್ಣ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

ಫಲಾನುಭವಿಗಳ ಆಯ್ಕೆ ಪಾರದರ್ಶಕವಾಗಿರಲಿ

0

ನಿವೇಶನ ರಹಿತ ಫಲಾನುಭವಿಗಳನ್ನು ಆಯ್ಕೆಮಾಡುವಾಗ ಯಾವುದೇ ಒತ್ತಡಗಳಿಗೆ ಮಣಿಯದೇ ಪಕ್ಷಾತೀತವಾಗಿ ಆಯ್ಕೆ ನಡೆಸಬೇಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರಸಭೆ ಕಾರ್ಯಾಲಯದಲ್ಲಿ ಬುಧವಾರ ನಡೆದ ಆಶ್ರಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ನಗರಸಭೆಗೆ ವಾಜಪೇಯಿ ನಗರ ನಿವೇಶನ ಯೋಜನೆಯಡಿ ಖರೀದಿಸಲಾಗಿರುವ ಅಬ್ಲೂಡು ಗ್ರಾಮದ 22 ಎಕರೆ 20 ಗುಂಟೆ ಜಮೀನಿನಲ್ಲಿ 500 ನಿವೇಶನಗಳನ್ನು ರಚಿಸಲು ಪತ್ರ ಬಂದಿದ್ದು, ಫಲಾನುಭವಿಗಳ ಆಯ್ಕೆಯು ಪಾರದರ್ಶಕವಾಗಿರಬೇಕು. ಸರ್ಕಾರದ ನಿರ್ದೇಶನದಂತೆ ಆಯ್ಕೆ ಪ್ರಕ್ರಿಯೆಯನ್ನು ನಡೆಸಬೇಕು. ಖರೀದಿಸಿರುವ ಜಮೀನಿನಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಬಗ್ಗೆ ವರದಿಯನ್ನು ತಯಾರಿಸಲು ಸೂಚಿಸಿದರು.
ನಗರಸಭೆ ಆಗಿರುವ ಹಿನ್ನೆಲೆಯಲ್ಲಿ ನಗರ ನಿವೇಶನ ಯೋಜನೆ 2015–16ನೇ ಸಾಲಿಗೆ 600 ನಿವೇಶನಗಳನ್ನು ಹಂಚಿಕೆ ಮಾಡಲು ಗುರಿ ನಿಗದಿಪಡಿಸಿದ್ದು, ಅದರಂತೆ ಅವಶ್ಯ ಜಮೀನು ಖರೀದಿಸಲು ಸ್ಥಳವನ್ನು ಗುರುತಿಸಲು ತಿಳಿಸಿದರು.
ಮುಖ್ಯಾಧಿಕಾರಿ ರಾಮ್ಪ್ರಕಾಶ್, ಆಶ್ರಯ ಸಮಿತಿ ಸದಸ್ಯರಾದ ಎಸ್.ವಿ.ನಾಗರಾಜರಾವ್, ನಾರಾಯಣಸ್ವಾಮಿ, ಅಪರ್ಣಾ ರಾಜ್ಕುಮಾರ್, ಸರ್ದಾರ್ ಈ ಸಭೆಯಲ್ಲಿ ಭಾಗವಹಿಸಿದ್ದರು.

ಅಬ್ಲೂಡು ಪಂಚಾಯತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ

0

ಶಾಶ್ವತ ನೀರಾವರಿ ಹೋರಾಟಕ್ಕೆ ಬೆಂಬಲಿಸಿ ಗ್ರಾಮ ಪಂಚಾಯತಿ ಚುನಾವಣೆಯನ್ನು ಬಹಿಷ್ಕರಿಸಿದ್ದ ಅಬ್ಲೂಡು ಪಂಚಾಯತಿಯ ಚುನಾವಣೆ ತಡವಾಗಿ ನಡೆದಿತ್ತು. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯು ಬುಧವಾರ ನಡೆದು, ಎರಡೂ ಸ್ಥಾನಗಳು ಜೆ.ಡಿ.ಎಸ್ ಬೆಂಬಲಿತರ ಪಾಲಾಗಿದೆ.
ಅಧ್ಯಕ್ಷರಾಗಿ ಅಬ್ಲೂಡು ಲಕ್ಷ್ಮಮ್ಮ, ಉಪಾಧ್ಯಕ್ಷರಾಗಿ ಗುಡಿಹಳ್ಳಿ ನಾಗವೇಣಿ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು, ಅಬ್ಲೂಡು ಲಕ್ಷ್ಮಮ್ಮ ಹತ್ತು ಮತಗಳನ್ನು ಪಡೆದು ಆಯ್ಕೆಯಾದರು.
ಈ ಸಂದರ್ಭದಲ್ಲಿ ಹಾಜರಿದ್ದ ಶಾಸಕ ಎಂ.ರಾಜಣ್ಣ ಮಾತನಾಡಿ, ‘ಸೇವಾ ಮನೋಭಾವದಿಂದ ಪಕ್ಷಾತೀತವಾಗಿ ಗ್ರಾಮೀಣ ಅಭಿವೃದ್ಧಿಗೆ ಎಲ್ಲಾ ಸದಸ್ಯರೂ ಶ್ರಮಿಸಬೇಕು. ಅನುದಾನಗಳನ್ನು ಅಗತ್ಯವಿರುವೆಡೆ ಸಮರ್ಪಕವಾಗಿ ಬಳಸಿಕೊಂಡು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಕಾರ್ಯನಿರ್ವಹಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಿ, ಶೌಚಾಲಯಗಳನ್ನು ನಿರ್ಮಿಸಿ ಗ್ರಾಮಗಳನ್ನು ಮಾದರಿಯನ್ನಾಗಿಸಿ’ ಎಂದು ಹೇಳಿದರು.
ಚುನಾವಣಾಧಿಕಾರಿಯಾಗಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಾಂಜಿನಪ್ಪ, ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಮುನಿವೆಂಕಟಸ್ವಾಮಿ, ಕನಕಪ್ರಸಾದ್, ನಾರಾಯಣಸ್ವಾಮಿ, ರಮೇಶ್, ರವಿಕುಮಾರ್, ಮುನಿರೆಡ್ಡಿ, ಸೊಣ್ಣೇಗೌಡ, ಗ್ರಾಮ ಪಂಚಾಯತಿ ಸದಸ್ಯರಾದ ಎಸ್.ವಿ.ಮಂಜುನಾಥ್, ದೇವರಾಜ್, ವೆಂಕಟಲಕ್ಷ್ಮಮ್ಮ, ನೇತ್ರಾವತಿ ಮುನಿರೆಡ್ಡಿ, ಚಿಕ್ಕವೆಂಕಟರೆಡ್ಡಿ, ಜ್ಯೋತಿ ಗಂಗಾಧರ್, ಕೃಷ್ಣಮ್ಮ, ದೊಡ್ಡಮುನಿಶಾಮಪ್ಪ, ಪಿ.ಡಿ.ಒ ಜಯಶ್ರೀ, ಗ್ರಾಮಾಂತರ ಠಾಣೆ ಸಬ್ಇನ್ಸ್ಪೆಕ್ಟರ್ ಪ್ರದೀಪ್ ಪೂಜಾರ್ ಮತ್ತಿತರರು ಹಾಜರಿದ್ದರು.

ನರೇಗಾ ಯೋಜನೆ ಮುಖಾಂತರ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ

0

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ನರೇಗಾ ಯೋಜನೆ ಮುಖಾಂತರ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಮಾಡಲು ಇರುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಮುನೇಗೌಡ ಹೇಳಿದರು.
ತಾಲ್ಲೂಕಿನ ಜೆ.ವೆಂಕಟಾಪುರ ಗ್ರಾಮ ಪಂಚಾಯತಿಯ ಆವರಣದಲ್ಲಿ ಮಂಗಳವಾರ ನಡೆದ ಗ್ರಾಮಸಭೆಯನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ನರೇಗಾ ಯೋಜನೆಯ ಮುಖಾಂತರ ಗ್ರಾಮೀಣ ಪ್ರದೇಶಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಉತ್ತಮವಾದ ಅವಕಾಶಗಳಿದ್ದು, ಪ್ರತಿಯೊಂದು ಹಳ್ಳಿಗೂ ಮೂಲಸೌಕರ್ಯಗಳಾದ ಕುಡಿಯುವ ನೀರು, ಚರಂಡಿಗಳು, ಬೀದಿದೀಪಗಳು, ಹಾಗೂ ಶೌಚಾಲಯಗಳ ನಿರ್ಮಾಣ ಮಾಡಿಕೊಳ್ಳಬಹುದು. ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರತಿಯೊಂದು ಹಳ್ಳಿಯ ಜನರು ಮರಗಳನ್ನು ಬೆಳೆಸುವ ಮೂಲಕ ವಾತಾವರಣ, ಹಾಗೂ ಪರಿಸರವನ್ನು ಸಂರಕ್ಷಣೆ ಮಾಡಬೇಕು ಎಂದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಅಭಿವೃದ್ಧಿಯ ವಿಚಾರದಲ್ಲಿ ಯಾರೊಬ್ಬ ಸದಸ್ಯರೂ ರಾಜಕೀಯ ಮಾಡಬಾರದು. ಗ್ರಾಮ ಪಂಚಾಯತಿಗಳಲ್ಲಿ ತಯಾರಿಸುವಂತಹ ಕ್ರೀಯಾಯೋಜನೆಗಳು, ಪಾರದರ್ಶಕವಾಗಿರಬೇಕು. ನರೇಗಾ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಗ್ರಾಮ ಪಂಚಾಯತಿ ವ್ಯಾಪ್ತಿಯ ಬಳುವನಹಳ್ಳಿ ರಸ್ತೆಯ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿನಲ್ಲಿ ಅಗತ್ಯವಾದ ಅನುದಾನವನ್ನು ಬಿಡುಗಡೆ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಜೆ.ವೆಂಕಟಾಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಎಂ.ರಘುನಾಥ್ ಮಾತನಾಡಿ, ಪಂಚಾಯತಿ ವ್ಯಾಪ್ತಿಯ ಬೈರಸಂದ್ರ, ಹಾಗೂ ಮಿತ್ತನಹಳ್ಳಿ ಗ್ರಾಮಗಳಲ್ಲಿ ಶೇ ೧೦೦ ರಷ್ಟು ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಂಡು ಪ್ರಶಂಸೆಗೆ ಒಳಗಾಗಿದ್ದು, ಉಳಿದ ಎಲ್ಲಾ ಹಳ್ಳಿಗಳಲ್ಲಿಯೂ ಕೂಡಾ ಇದೇ ರೀತಿಯ ಸಹಕಾರ ನೀಡಬೇಕು.
ಕೃಷಿ ಇಲಾಖೆ, ಕುಡಿಯುವ ನೀರು ಮತ್ತು ನೈರ್ಮಲೀಕರಣ ಇಲಾಖೆ, ರೇಷ್ಮೆ ಇಲಾಖೆ, ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ತಮ್ಮ ಇಲಾಖೆಗಳಲ್ಲಿ ಸಿಗುತ್ತಿರುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಗ್ರಾಮ ಪಂಚಾಯತಿ ಉಪಾಧ್ಯಕ್ಷ ಚಂದ್ರೇಗೌಡ, ಎಇಇ ಗಣಪತಿಸಾಕರೆ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ದೇವೇಗೌಡ, ಪಿ.ಡಿ.ಓ. ಕಾತ್ಯಾಯಿನಿ, ಸೆಂಟ್ರಲ್ ಬ್ಯಾಂಕ್ನ ವ್ಯವಸ್ಥಾಪಕ ಶಿವಕುಮಾರ್, ನರೇಗಾ ಇಂಜಿನಿಯರ್ ಆಂಜನೇಯ, ವೈದ್ಯಾಧಿಕಾರಿ ಡಾ.ಅಂಬಿಕಾ, ಅಬಕಾರಿ ಇಲಾಖೆಯ ಅಧಿಕಾರಿ ರಾಮಕೃಷ್ಣ, ಶ್ರೀನಿವಾಸಗೌಡ, ಸದಸ್ಯರಾದ ನರಸಿಂಹಮೂರ್ತಿ,ಹರೀಶ್, ಪದ್ಮಮ್ಮ, ಸಿ.ವಿ.ನಾರಾಯಣಸ್ವಾಮಿ, ಸುಗುಣಮ್ಮ, ಶ್ರೀನಿವಾಸ್, ಭಾಗ್ಯಮ್ಮ, ಗೋಪಾಲರಾವ್, ತಾಲ್ಲೂಕು ಸಾಕ್ಷರತಾ ಸಂಯೋಜಕ ಶ್ರೀನಿವಾಸ್, ದ್ಯಾವಪ್ಪ, ಮಂಜುಳಮ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಕ್ರೀಡೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿ

0

ಕ್ರೀಡೆಗಳಲ್ಲಿ ಭಾಗವಹಿಸುವಂತೆ ಮಕ್ಕಳನ್ನು ಪ್ರೋತ್ಸಾಹಿಸಿ. ಪಠ್ಯತೇತರ ಚಟುವಟಿಕೆಗಳೂ ಮಕ್ಕಳಿಗೆ ಅತ್ಯಗತ್ಯ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ಬುದ್ದಿಶಕ್ತಿಯ ಬೆಳವಣಿಗೆಯ ಜೊತೆಯಲ್ಲೆ ಮಾನಸಿಕವಾದ ತೊಡಕುಗಳು ದೂರವಾಗುತ್ತದೆ. ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ. ಮಕ್ಕಳು ಕ್ರೀಡೆಗಳಲ್ಲಿ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕಾರ ಮಾಡಬೇಕು. ಉತ್ತಮವಾದ ಕ್ರೀಡಾಪಟುಗಳಾಗಿ ರಾಜ್ಯ ಹಾಗೂ ದೇಶಕ್ಕೆ ಉತ್ತಮ ಕೀರ್ತಿ ತರಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ಮಾತನಾಡಿ, ಮಕ್ಕಳಲ್ಲಿ ಇರುವಂತಹ ಉತ್ತಮವಾದ ಪ್ರತಿಭೆಗಳ ಜೊತೆಯಲ್ಲೆ ಕ್ರೀಡೆಗಳಲ್ಲಿ ಉತ್ತಮವಾದ ಸಾಧನೆ ಮಾಡುವಂತಹ ಎಲ್ಲಾ ಲಕ್ಷಣಗಳಿದ್ದರೂ ಕೂಡಾ ಕೆಲವು ಮಕ್ಕಳು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಅಂತಹ ಯಾವುದೇ ಮಕ್ಕಳಿಗೂ ಅವಕಾಶ ವಂಚಿತರಾಗಲು ಅವಕಾಶ ನೀಡದೆ, ಶಿಕ್ಷಕರು, ಪೋಷಕರು ಉತ್ತಮವಾದ ಬೆಂಬಲ ನೀಡಬೇಕು. ಕ್ರೀಡೆಗಳೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉತ್ತಮವಾದ ಸಾಧನೆ ಮಾಡಲು ಇರುವಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಲು ಸರ್ಕಾರವೂ ಕೂಡಾ ಅನೇಕ ಸೌಲತ್ತುಗಳನ್ನು ಕಲ್ಪಿಸಿಕೊಡುತ್ತಿದ್ದು, ಮಕ್ಕಳು ಉಪಯೋಗಿಸಿಕೊಳ್ಳಬೇಕು ಎಂದರು.
ಶಿಕ್ಷಣ ಇಲಾಖೆಯ ಬಿ.ಆರ್.ಸಿ.ಕೇಂದ್ರದ ಸಮನ್ವಯಾಧಿಕಾರಿ ಜಿ.ಕೆ.ಸುಮಾ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎನ್.ಕೆ.ಗುರುರಾಜ್ರಾವ್, ವಿಜಯಕುಮಾರ್, ಬಿ.ವಿ.ಶ್ರೀರಾಮಯ್ಯ, ಬೈರಾರೆಡ್ಡಿ, ಡಾಲ್ಫಿನ್ ಶಾಲೆಯ ಅಧ್ಯಕ್ಷ ಎ.ನಾಗರಾಜು, ದೈಹಿಕ ಶಿಕ್ಷಣ ಪರಿವೀಕ್ಷಕ ಶ್ರೀನಿವಾಸಪ್ಪ, ಮುನಿರಾಜು, ಕೆ.ಬಿ.ಅರುಣ, ಎಲ್.ಅಶ್ವಥ್ಥನಾರಾಯಣ, ದ್ರಾಕ್ಷಾಯಿಣಿ, ರಾಮಚಂದ್ರಪ್ಪ, ಸುದರ್ಶನ್. ಮುನಿಯಪ್ಪ, ವೇಣುಮಾಧವಿ ಮತ್ತಿತರರು ಹಾಜರಿದ್ದರು.

ಪ್ರತಿಭೆಗಳಿಗೆ ನಿರಂತರ ಪ್ರೋತ್ಸಾಹವಿರಲಿ

0

ಪ್ರತಿಭಾ ಕಾರಂಜಿ ಕಾರ್ಯಕ್ರಮಗಳ ಮುಖಾಂತರ ಗುರುತಿಸಲ್ಪಡುವ ಪ್ರತಿಭೆಗಳನ್ನು ನಿರಂತರವಾಗಿ ಪ್ರೋತ್ಸಾಹ ಮಾಡಬೇಕಾದಂತಹ ಹೊಣೆಗಾರಿಕೆ ಶಿಕ್ಷಕರದ್ದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಹೇಳಿದರು.
ನಗರದ ಕೋಟೆ ವೃತ್ತದಲ್ಲಿರುವ ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸೋಮವಾರ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳಲ್ಲಿ ಅಡಗಿರುವಂತಹ ವಿವಿಧ ಬಗೆಯ ಪ್ರತಿಭೆಗಳನ್ನು ಗುರ್ತಿಸಿ ಅವರಿಗೆ ಅವಕಾಶಗಳನ್ನು ಕಲ್ಪಿಸಿಕೊಡುವಂತಹ ಮಹತ್ತರವಾದ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಜಾನಪದ, ಕಲೆ,ಸಾಹಿತ್ಯ, ಸಂಸ್ಕೃತಿ, ಮತ್ತು ನಾಟಕಗಳಂತಹ ಸ್ಪರ್ಧೆಗಳಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಪ್ರಾಥಮಿಕ ಹಂತದಿಂದಲೇ ಪ್ರತಿಭಾಕಾರಂಜಿಯ ಮುಖಾಂತರ ನಾಟಕ, ಹರಿಕಥೆ, ಜಾನಪದ ನೃತ್ಯಗಳು, ಕೋಲಾಟ, ಮುಂತಾದ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರಿಂದ ಮಕ್ಕಳು ಮರೆತುಹೋಗುತ್ತಿರುವ ದೇಶೀಯ ಸಂಸ್ಕೃತಿಯನ್ನು ಕಾಪಾಡಿಕೊಂಡಂತಾಗುತ್ತದೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಕೆ.ಸುಮಾ ಮಾತನಾಡಿ, ಶಾಲೆಗಳಲ್ಲಿ ನಡೆಯುವಂತಹ ಇಂತಹ ಪ್ರತಿಭಾಕಾರಂಜಿ ಕಾರ್ಯಕ್ರಮಗಳಿಗೆ ಪೋಷಕರೂ ಕೂಡಾ ಉತ್ತಮವಾದ ಸಹಕಾರ ನೀಡಬೇಕು, ಮಕ್ಕಳಲ್ಲಿರುವ ಅವಕಾಶಗಳು ಸಿಗದೆ ಮರೆಯಾಗುತ್ತಿರುವ ಅಪಾರವಾದ ಪ್ರತಿಭಾ ಸಂಪತ್ತನ್ನು ಹೊರಗೆಳೆದು ಸಮಾಜದಲ್ಲಿ ಮಕ್ಕಳನ್ನು ಮುಖ್ಯವಾಹಿನಿಗೆ ತರುವಂತಹ ಪ್ರಯತ್ನಕ್ಕೆ ಸಮುದಾಯ ಸಹಕಾರ ನೀಡಬೇಕು ಎಂದರು.

ಶಿಡ್ಲಘಟ್ಟದ ಕೋಟೆ ವೃತ್ತದಲ್ಲಿರುವ ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸೋಮವಾರ ನಡೆದ ಕ್ಲಸ್ಟರ್ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ವೆಂಕಟೇಶಮೂರ್ತಿ ಮತ್ತು ಸರೋಜಮ್ಮ ಅವರನ್ನು ಸನ್ಮಾನಿಸಲಾಯಿತು.
ಶಿಡ್ಲಘಟ್ಟದ ಕೋಟೆ ವೃತ್ತದಲ್ಲಿರುವ ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸೋಮವಾರ ನಡೆದ ಕ್ಲಸ್ಟರ್ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ವೆಂಕಟೇಶಮೂರ್ತಿ ಮತ್ತು ಸರೋಜಮ್ಮ ಅವರನ್ನು ಸನ್ಮಾನಿಸಲಾಯಿತು.

ಇದೇ ಸಮಯದಲ್ಲಿ ನಿವೃತ್ತ ಶಿಕ್ಷಕರಾದ ವೆಂಕಟೇಶಮೂರ್ತಿ ಮತ್ತು ಸರೋಜಮ್ಮ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು, ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು.
ಶಿಕ್ಷಣ ಸಂಯೋಜಕರಾದ ಮನ್ನಾರಸ್ವಾಮಿ, ಸುಂದರಾಚಾರಿ, ಶಿಕ್ಷಕ ಮುನಿಯಪ್ಪ, ಬಿ.ವಿ.ಶ್ರೀರಾಮಯ್ಯ, ಬಿ.ಎನ್.ವಿಜಯಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ದಾಂಪತ್ಯದಲ್ಲಿ ಪ್ರೇಮ ಮತ್ತು ಕಾಮ – ಭಾಗ 4

0

ಇದನ್ನೆಲ್ಲಾ ಸಾಧಿಸಲು ಸಾಧ್ಯವೇ?
ಇದು ನೂರಾರು ಕೋಟಿ ರೂಪಾಯಿಯ ಪ್ರಶ್ನೆ. ಮನಸ್ಸಿಗೆ ಸಂಬಂಧಿಸಿದ ವಿಷಯಗಳಲ್ಲಿ ಕಾರಣಗಳನ್ನು ಹೇಳಿದಷ್ಟು ಸುಲಭವಾಗಿ ಪರಿಹಾರಗಳನ್ನು ಹುಡುಕಲು ಸಾಧ್ಯವಿಲ್ಲ. ಅದೂ ಅಲ್ಲದೆ ಎಲ್ಲರಿಗೂ ಹೊಂದುವಂತೆ ಸರಳ ಪರಿಹಾರಗಳನ್ನು ನೇರವಾಗಿ, ನಿಖರವಾಗಿ ಕೊಡುವುದೂ ಸಾಧ್ಯವಿಲ್ಲ. ಮೂಲತತ್ವಗಳ ಆಧಾರದ ಮೇಲೆ ಅವರವರ ಮಾನಸಿಕ ಸ್ಥಿತಿಗೆ ಹೊಂದುವಂತಹ ಪರಿಹಾರಗಳನ್ನು ತಜ್ಞರು ಮಾತ್ರ ಸೂಚಿಸಬಲ್ಲರು. ಹಾಗಿದ್ದರೂ ಕೆಲವು ವಿಷಯಗಳನ್ನು ಹೀಗೆ ಸರಳೀಕರಿಸಬಹುದು.
1. ಪತಿಪತ್ನಿಯರಿಗೆ ತಮ್ಮ ಬೇಕು ಬೇಡಗಳ ಬಗೆಗೆ ಸ್ಪಷ್ಟತೆ ಇರಬೇಕು. ಅಷ್ಟೇ ಅಲ್ಲದೆ ತಮ್ಮ ಮನಸ್ಸಿನ ಭಯ, ಗೊಂದಲ, ಹಿಂಜರಿಕೆ ಅಭದ್ರತೆ ಮುಂತಾದ ಭಾವನೆಗಳ ಬಗೆಗೆ ಸರಿಯಾಗಿ ತಿಳಿದುಕೊಂಡಿರಬೇಕು. ಉದಾಹರಣೆಗೆ ಹೆಂಡತಿ ಹಣ ಕೇಳಿದಾಗ ಗಂಡನಿಗೆ ಕೋಪ ಬಂದು ಅವನು ಅವಳನ್ನು ಹಂಗಿಸಿ, ಹೆದರಿಸಿ, ಕೂಗಾಡಿ ಬಾಯಿ ಮುಚ್ಚಿಸಲು ನೋಡುತ್ತಾನೆ. ಹಣದ ತನ್ನ ಅಗತ್ಯವನ್ನು ಮುಂದಿಡುವುದು ಹೆಂಡತಿಯ ಸಮಸ್ಯೆಯಲ್ಲ. ಪತಿಯ ಕೋಪದ ಹಿಂದೆ ಅವನಲ್ಲಿ ಹಣದ ಕೊರತೆಯ ಅಥವಾ ಇರುವ ಹಣವನ್ನು ದುಂದು ಮಾಡುವ ಅವನ ದೌರ್ಬಲ್ಯಗಳಿರಬಹುದು. ಇದನ್ನು ಅವನು ಗುರುತಿಸಿಕೊಳ್ಳದೆ/ಒಪ್ಪಿಕೊಳ್ಳದೆ ತನ್ನ ಕೋಪ ಶಮನಕ್ಕಾಗಿ ಪ್ರಯತ್ನ ಪಟ್ಟರೆ ಅವನು ಯಶಸ್ವಿಯಾಗುವ ಸಾಧ್ಯತೆಗಳು ಕಡಿಮೆ. ಹೆಂಡತಿ ಲೈಂಗಿಕವಾಗಿ ಸಹಕರಿಸುತ್ತಿಲ್ಲವೆಂದರೆ ಅದರಲ್ಲಿ ಅವಳಿಗೆ ಆಸಕ್ತಿಯಿಲ್ಲ ಎಂದಾಗಬೇಕಿಲ್ಲ. ಗಂಡನ ಎಲ್ಲಾ ಅಗತ್ಯಗಳನ್ನು ಪೂರೈಸಿದರೆ ಅವನು ತನ್ನನ್ನು ಕಡೆಗಣಿಸಬಹುದು ಎನ್ನುವ ಭಯ, ಅಭದ್ರತೆ ಅವಳನ್ನು ಕಾಡುತ್ತಿರಬಹುದು. ಹಾಗಾಗಿ ಮೂರು ಬಾರಿ ಬೇಡಿಕೆ ಬಂದಾಗ ಒಂದು ಬಾರಿ ಪೂರೈಸುವ ಸಮೀಕರಣವನ್ನು ಅವಳು ರೂಪಿಸಿಕೊಂಡಿರುತ್ತಾಳೆ!! ಇದರಿಂದ ಪತಿಯನ್ನು ಕಪಿಮುಷ್ಟಿಯಲ್ಲಿಡುವ ಯೋಜನೆ ಅವಳದ್ದು. ಹಾಗಾಗಿ ಅವಳ ಅಭದ್ರತೆಯ ಭಾವನೆಗಳನ್ನು ಪರಿಹರಿಸದೆ ಅವಳಲ್ಲಿ ಲೈಂಗಿಕ ಆಸಕ್ತಿ ಮೂಡಿಸುವುದು ಸಾಧ್ಯವಿಲ್ಲ.
2. ದಂಪತಿಗಳಿಬ್ಬರೂ ತಮ್ಮ ಮಾನಸಿಕ ಒತ್ತಡ, ಆತಂಕಗಳಿಗೆ ಇನ್ನೊಬ್ಬರನ್ನು ಹೊಣೆ ಮಾಡದೆ ಅದನ್ನು ತಮ್ಮೊಳಗೆ ಪರಿಹರಿಸಿಕೊಳ್ಳುವ ಮಾರ್ಗ ಕಂಡುಕೊಳ್ಳಬೇಕು. ಅಂದರೆ ಇಬ್ಬರೂ ತಮ್ಮ ವ್ಯಕ್ತಿತ್ವದ ಪ್ರಬುದ್ಧತೆಯನ್ನು (ಸಾಲಿಡ್ ಸೆನ್ಸ್ ಆಫ್ ಸೆಲ್ಫ್) ಹೆಚ್ಚು ಮಾಡಿಕೊಳ್ಳುತ್ತಾ ಹೋಗಬೇಕು.
3. ಲೈಂಗಿಕ ವಿಷಯಗಳನ್ನೂ ಒಳಗೊಂಡು ಎಲ್ಲಾ ವಿಚಾರಗಳಲ್ಲಿ ತಮ್ಮ ನಡುವೆ ಭಿನ್ನತೆ ಇರುವುದು ಸಹಜ ಎಂದು ಒಪ್ಪಿಕೊಳ್ಳಬೇಕು. ಇಬ್ಬರೂ ಪರಸ್ಪರರ ಅಭಿಪ್ರಾಯ, ಅಭಿರುಚಿಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯವಾಗಬೇಕು. ಅದನ್ನು ಒಪ್ಪಿಕೊಳ್ಳುವುದು ಕಡ್ಡಾಯವೇನಲ್ಲ, ಆದರೆ ಇನ್ನೊಬ್ಬರನ್ನು ಕೀಳುಗೈಯಬಾರದು. ದಾಂಪತ್ಯವನ್ನು ಒಡೆಯುವ ವಿಚಾರಗಳಲ್ಲದಿದ್ದರೆ ಇಬ್ಬರಿಗೂ ಆಯ್ಕೆಯ ಸ್ವಾತಂತ್ರವಿರಬೇಕು.
4. ಎಂತಹ ಸುಂದರ ದಾಂಪತ್ಯದಲ್ಲೂ ಭಿನ್ನಾಭಿಪ್ರಾಯಗಳು ಮತ್ತು ನೀರಸ ದಿನಗಳು ಸಹಜ. ಅಂತಹ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಆತಂಕ ಪರಿಹಾರ ಮಾಡಿಕೊಳ್ಳುವತ್ತ ಎಲ್ಲರೂ ಹೊರಳುವುದನ್ನು ಸಾಮಾನ್ಯವಾಗಿ ನೋಡುತ್ತೇವೆ. ತಾತ್ಕಾಲಿಕ ಆತಂಕ, ಕಿರಿಕಿರಿಗಳನ್ನು ಇಬ್ಬರೂ ತಮ್ಮೊಳಗೇ ನಿಭಾಯಿಸಿಕೊಂಡು ಖಾಯಂ ಆದ ಪರಿಹಾರಗಳನ್ನು ಹುಡುಕಿಕೊಳ್ಳಬೇಕು.
5. ಇನ್ನೊಬ್ಬರು ತಮ್ಮ ಭಾಗದ ಜವಾಬ್ದಾರಿಯನ್ನು ನಿರ್ವಹಿಸುತ್ತಿಲ್ಲ ಅಥವಾ ಬದಲಾಗುತ್ತಿಲ್ಲ ಎಂದು ಯಾರೊಬ್ಬರೂ ದೂರಬಾರದು. * ಡಿಫರೆನ್ಷಿಯೇಶನ್‍ನ ಮೂಲ ತತ್ವ ಇನ್ನೊಬ್ಬರನ್ನು ಬದಲಾಯಿಸುವುದಲ್ಲ. ನಮ್ಮನ್ನು ನಾವು ಬದಲಾಯಿಸಿಕೊಳ್ಳುವುದು ಮತ್ತು ಆ ಪ್ರಯತ್ನದಲ್ಲಿ ಇನ್ನೊಬ್ಬರ ಸಹಾಯ ಸಹಕಾರ ನಿರೀಕ್ಷಿಸದೇ ಇರುವುದು. ಇದು ಮೇಲುನೋಟಕ್ಕೆ ಸ್ವಾರ್ಥ ಎನ್ನಿಸಬಹುದು. ಆದರೆ ಮಹಾಪುರುಷರುಗಳು ಸವೆಸಿದ ಹಾದಿ ಎನ್ನುವುದನ್ನು ಮರೆಯಬಾರದು. ಗಾಂಧೀಜಿಯ ಹಟ ಮತ್ತು ಶಿಸ್ತು ಎಷ್ಟೋ ಜನರಿಗೆ ಸ್ವಾರ್ಥ ಅನ್ನಿಸಿದ್ದರೆ ಆಶ್ಚರ್ಯವಿಲ್ಲ.
6. ದಂಪತಿಗಳಲ್ಲೊಬ್ಬರು ತಮ್ಮನ್ನು ಬದಲಾಯಿಸಿಕೊಳ್ಳುತ್ತಾ ಹೋದಾಗ ಇನ್ನೊಬ್ಬರಿಗೆ ಬದಲಾಗುವುದು ಅನಿವಾರ್ಯವಾಗುತ್ತದೆ. ಇಲ್ಲಿ ಇರಬೇಕಾದ ಎಚ್ಚರವೆಂದರೆ ಈ ಹಂತದಲ್ಲಿ ಇಬ್ಬರೂ ಮಾನಸಿಕ ಸ್ಥಿಮಿತವನ್ನು ಕಾಯ್ದುಕೊಳ್ಳಬೇಕಾಗುತ್ತದೆ.
7. ಗಂಡುಹೆಣ್ಣಿನ ನಡುವಿನ ದೀರ್ಘಕಾಲದ ಮದುವೆಯ ಸಂಬಂಧ ವಿಶಿಷ್ಟವಾದದ್ದು. ಆದರೆ ಈ ವಿವಾಹ ಸಂಬಂಧವನ್ನು ವೈಭವೀಕರಿಸದೆ ವಾಸ್ತವದ ನೆಲೆಯಲ್ಲಿ ಹೆಚ್ಚುಹೆಚ್ಚು ಆತ್ಮೀಯತೆಯನ್ನು ನಿಧಾನವಾಗಿ ಸೃಷ್ಟಿಸಿಕೊಳ್ಳುತ್ತಾ ಹೋಗಬೇಕು. ಇದನ್ನು ಮಾಡದೆ ದಂಪತಿಗಳಿಬ್ಬರೂ ಒಬ್ಬರಲ್ಲೊಬ್ಬರು ಭಾವನಾತ್ಮಕವಾಗಿ ವಿಲೀನವಾಗುತ್ತಾ ಹೋದರೆ ತಾತ್ಕಲಿಕ ಪರಿಹಾರಗಳು ಮಾತ್ರ ಸಾಧ್ಯ.
8. ಸಾಕಷ್ಟು ದಂಪತಿಗಳು ಒಬ್ಬರ ದೌರ್ಬಲ್ಯಗಳನ್ನು ಇನ್ನೊಬ್ಬರು ಬೆಂಬಲಿಸಿಕೊಂಡು ಬದುಕುತ್ತಿರುತ್ತಾರೆ. ದಾಂಪತ್ಯದ ಬಂಧ ಪತಿಪತ್ನಿಯರ ದೌರ್ಬಲ್ಯಗಳ ಮೇಲೆ ನಿಲ್ಲಬಾರದು. ಇಬ್ಬರ ವ್ಯಕ್ತಿತ್ವದ ಗಟ್ಟಿತನಗಳು ವಿವಾಹವನ್ನು ಕಳಚದಂತೆ ಬಿಗಿಹಿಡಿಯುವ ಕೊಂಡಿಯಾಗಬೇಕು.
ಇದೆಲ್ಲಾ ಸ್ವಲ್ಪ ಕಷ್ಟದ ಕೆಲಸ ನಿಜ, ಆದರೆ ಇದರಿಂದ ಮುಂದೆ ದೀರ್ಘಕಾಲದ ಸುಖ ದಾಂಪತ್ಯ ಸಾಧ್ಯವಿದೆ. ಅಗತ್ಯವಿದ್ದಾಗ ತಜ್ಞರ ನೆರವನ್ನು ಪಡೆಯಲು ಹಿಂಜರಿದರೆ ನಾವಿನ್ನೂ ಸಮಸ್ಯೆಗಳನ್ನು ಒಪ್ಪಿಕೊಳ್ಳದೆ ಅಲ್ಲಗಳೆಯುವ ಮನಸ್ಥಿತಿಯಲ್ಲಿದ್ದೇವೆ ಎಂದು ತಿಳಿಯಬೇಕು. ಇರುವ ಸಮಸ್ಯೆಗಳನ್ನು ಒಪ್ಪಿಕೊಂಡಾಗ ಮಾತ್ರ ಪ್ರಾಮಾಣಿಕವಾಗಿ ಪರಿಹಾರ ಹುಡುಕುವುದು ಸಾಧ್ಯ.
ಕೊನೆಯ ಮಾತು
ಲೈಂಗಿಕ ತೃಪ್ತಿ ದಂಪತಿಗಳ ಭಾವನಾತ್ಮಕ ಬಂಧವನ್ನು ಗಟ್ಟಿಗೊಳಿಸಬೇಕು, ಇದು ಸಾಧ್ಯವಾದಾಗ ಮಾತ್ರ ಮಾನವನ ಲೈಂಗಿಕತೆಗೆ ಅರ್ಥ ಬರುತ್ತದೆ. ಹಾಗೆ ಗಟ್ಟಿಯಾದ ಬಂಧ ಇನ್ನೂ ಹೆಚ್ಚಿನ ಲೈಂಗಿಕ ಆನಂದಕ್ಕೆ ದಾರಿಮಾಡಿಕೊಡಬೇಕು. ಭಾವನಾತ್ಮಕ ಬಂಧ ಮತ್ತು ಲೈಂಗಿಕ ತೃಪ್ತಿ ಸ್ಪರ್ಧೆಗೆ ಬಿದ್ದು ಒಂದಕ್ಕಿಂತ ಒಂದು ಹೆಚ್ಚಾಗುತ್ತಾ ಹೋದಂತೆ ಜೀವನ ಒಂದು ಅನನ್ಯ ಆಧ್ಯಾತ್ಮಿಕ ಅನುಭವವಾಗುತ್ತದೆ. ಇದಕ್ಕೆ ಕೊನೆ ಇದೆಯೇ ಎನ್ನುವುದು ಯಾರಿಗೂ ತಿಳಿದಿರಲಾರದು. ಆದರೆ ನಾವು ಈ ಬೆಳವಣಿಗೆಯ ಹಾದಿಯಲ್ಲಿ ಇರುವವರೆಗೆ ಜೀವನ ಬೇಸರವಾಗುವುದೇ ಇಲ್ಲ.
ಕ್ರೂಸಿಬಲ್ ಥೆರಪಿ
* ನನ್ನ ಲೇಖನಕ್ಕೆ ಮೂಲ ಪ್ರೇರಣೆ ಕ್ರೂಸಿಬಲ್ ಥೆರಪಿಯ ತತ್ವಗಳು. ಡಾ. ಡೇವಿಡ್ ಶ್ನಾರ್ಕ್ ಎನ್ನವವರು ಅಮೇರಿಕಾದ ಪ್ರಖ್ಯಾತ ಲೈಂಗಿಕ ಮತ್ತು ದಾಂಪತ್ಯ ಮನೋಚಿಕಿತ್ಸಕರಲ್ಲಿ ಒಬ್ಬರು. ಮರ್ರೆ ಬೋವೆನ್ ಎನ್ನುವ ಮನಶಾಸ್ತ್ರಜ್ಞರೊಬ್ಬರು ತಮ್ಮ ಫ್ಯಾಮಿಲಿ ಥಿಯರಿಯಲ್ಲಿ ಪ್ರಸ್ತುತ ಪಡಿಸಿದ “ಡಿಫರೆನ್ಷಿಯೇಶನ್” ಎನ್ನವು ತತ್ವದ ಆಧಾರದ ಮೇಲೆ ಡಾ. ಶ್ನಾರ್ಕ್ ತಮ್ಮದೇ ಆದ ಚಿಕಿತ್ಸಾ ಪದ್ದತಿಯನ್ನು ರೂಪಿಸಿದರು. ಡಿಫರೆನ್ಷಿಯೇಶನ್ ಎನ್ನವು ಶಬ್ದವನ್ನು ಕನ್ನಡದಲ್ಲಿ ವ್ಯಕ್ತಿತ್ವವನ್ನು ಪ್ರಬುದ್ಧಗೊಳಿಸಿಕೊಳ್ಳುವುದು ಎಂದು ರೂಪಾಂತರ ಮಾಡಬಹುದು.
ತಮ್ಮ ಚಿಕಿತ್ಸಾಪದ್ದತಿಯನ್ನು ಡಾ. ಶ್ನಾರ್ಕ್ “ಕ್ರೂಸಿಬಲ್ ಥೆರಪಿ” ಎಂದು ಕರೆದರು. ಕ್ರೂಸಿಬಲ್ ಎಂದರೆ ಲೋಹವನ್ನು ಕರಗಿಸಲು ಉಪಯೋಗಿಸುವ ಮಣ್ಣಿನ ಪಾತ್ರೆ. ಇದು ಅತಿ ಹೆಚ್ಚಿನ ಶಾಖವನ್ನು ತಡೆದುಕೊಳ್ಳುವುದಲ್ಲದೆ ರಾಸಾಯನಿಕ ಕ್ರಿಯೆಗೆ ಒಳಗಾಗುವುದಿಲ್ಲ. ಕ್ರೂಸಿಬಲ್ ಎಂದರೆ ಅಗ್ನಿಪರೀಕ್ಷೆ ಎನ್ನವು ಅರ್ಥವೂ ಇದೆ. ವೈವಾಹಿಕ ಸಂಬಂಧ ಮತ್ತು ದಂಪತಿಗಳ ಪೂರ್ಣ ವ್ಯಕ್ತಿತ್ವ ಇಂತಹ ಮಣ್ಣಿನ ಪಾತ್ರೆಯಲ್ಲಿ ಕುದಿದು ಹದಕ್ಕೆ ಬರಬೇಕು. ಹಾಗೆ ಕುದಿಯುವ ಹಂತ ತೀರಾ ಕಷ್ಟಕರವಾದದ್ದು. ಸಂಬಂಧಗಳು ಒಮ್ಮೆ ಇಂತಹ ಅಗ್ನಿಪರೀಕ್ಷೆಗೆ ಒಳಪಟ್ಟು ಯಶಸ್ವಿಯಾದ ಮೇಲೆ ಅವು ಗಟ್ಟಿಯಾಗಿ ಬಹಳ ಕಾಲ ಬಾಳಬಲ್ಲವು ಎನ್ನವುದು ಈ ಥೆರಪಿಯ ಮೂಲತತ್ವ. ಹೆಚ್ಚಿನ ಶಾಖದಲ್ಲಿ ಕುದಿಯುವ ಕಷ್ಟವನ್ನು ತಡೆದುಕೊಳ್ಳದಿದ್ದರೆ ನಮ್ಮ ವ್ಯಕ್ತಿತ್ವ ಮತ್ತು ಸಂಬಂಧಗಳು ಬದಲಾಗುವುದೇ ಇಲ್ಲ.
ಲೈಂಗಿಕ ಸಮಸ್ಯೆಗಳನ್ನು ಮೂಲವಸ್ತುವಾಗಿಟ್ಟುಕೊಂಡರೂ ಈ ಚಿಕಿತ್ಸಾ ಪದ್ದತಿಯಲ್ಲಿ ದಂಪತಿಗಳು ತಮ್ಮ ವ್ಯಕ್ತಿತ್ವವನ್ನು ಆಮೂಲಾಗ್ರವಾಗಿ ಬದಲಾಯಿಸಿಕೊಂಡು ಅದರ ಮೂಲಕ ಅವರ ಸಂಬಂಧದಲ್ಲಿ ಆತ್ಮೀಯತೆಯನ್ನು ಹೆಚ್ಚಿಸಿಕೊಳ್ಳುತ್ತಾ ಲೈಂಗಿಕ ತೃಪ್ತಿಯನ್ನು ಪಡೆಯುವ ಬಗೆಗೆ ತರಬೇತಿ ನೀಡಲಾಗುತ್ತದೆ. ಲೈಂಗಿಕತೆಯನ್ನು ಕೀಳು ಎಂದುಕೊಳ್ಳದೆ ಅದನ್ನು ದಾಂಪತ್ಯದ ಅತ್ಯಂತ ಪ್ರಮುಖ ಭಾಗವಾಗಿ ಬಳಸಿಕೊಂಡು ನಿರಂತರವಾಗಿ ಆನಂದ ಪಡೆಯುವುದು ಹೇಗೆ ಎನ್ನವುದನ್ನು ಈ ಥೆರಪಿಯಲ್ಲಿ ಕಲಿಸಿಕೊಡಲಾಗುತ್ತದೆ. 1990ರ ದಶಕದಿಂದ ಅಮೇರಿಕಾದಲ್ಲಿ ಚಾಲ್ತಿಯಲ್ಲಿರುವ ಈ ಚಿಕಿತ್ಸಾ ಪದ್ದತಿಯಲ್ಲಿ ತರಬೇತಿ ಪಡೆದವರು ಭಾರತದಲ್ಲಿ ಹೆಚ್ಚೇನಿಲ್ಲ.
ಆಸಕ್ತರು www.Passinatemarriage.com ಮತ್ತು www.Crucibletherapy.com ಜಾಲತಾಣವನ್ನು ನೋಡಬಹುದು. ಜೊತೆಗೆ ಡಾ. ಶ್ನಾರ್ಕ್ ಅವರ ಪ್ರಮುಖ ಪುಸ್ತಕಗಳಾದ “ಪ್ಯಾಶನೇಟ್ ಮ್ಯಾರೇಜ್”, “ಇಂಟಿಮೆಸಿ ಅಂಡ್ ಡಿಸೈರ್” ಮತ್ತು “ರಿಸರೆಕ್ಟಿಂಟ್ ಸೆಕ್ಸ್” ಎನ್ನುವ ಪುಸ್ತಕಗಳನ್ನು ಓದಬಹುದು.
ಮೇಲಿನ ಪುಸ್ತಕಗಳು ಕೇವಲ ಲೈಂಗಿಕ ಸುಖವನ್ನು ಹೆಚ್ಚಿಸಿಕೊಳ್ಳುವ ತಂತ್ರಗಳ ಬಗೆಗೆ ಹೆಚ್ಚು ಒತ್ತು ನೀಡಿಲ್ಲ. ಬದಲಾಗಿ ದಂಪತಿಗಳು ತಮ್ಮ ಮನೋಭಾವ ಮತ್ತು ವ್ಯಕ್ತಿತ್ವಗಳನ್ನು ಅಮೂಲಾಗ್ರವಾಗಿ ಬದಲಾಯಿಸಿಕೊಳ್ಳುವ ಬಗೆಗೆ ಮಹತ್ವ ನೀಡಿದೆ.
ಅವಲಂಬನೆ ಮತ್ತು ಸ್ವಾತಂತ್ರ
ಮಗು ಜನಿಸಿದಾಗ ತಾಯಿಯ ಮೇಲೆ ತನ್ನ ದೈಹಿಕ (ಹಸಿವು, ಶುಚಿತ್ವ) ಮತ್ತು ಮಾನಸಿಕ (ಪ್ರೀತಿ, ಬೆಂಬಲ) ಅಗತ್ಯಗಳಿಗಾಗಿ ಅವಲಂಬಿತವಾಗಿರುತ್ತದೆ. ಬೆಳೆಯುತ್ತಾ ಬಂದಂತೆ ಅದು ಸ್ವತಂತ್ರವಾಗುತ್ತಾ ಬರುತ್ತದೆ. ಈ ಸ್ವಾತಂತ್ರ ಸಂಪೂರ್ಣವೇನಲ್ಲ. ಪೋಷಕರು, ಗುರುಹಿರಯರು, ಸ್ನೇಹಿತರು ಹೀಗೆ ಎಲ್ಲರ ಮೇಲೂ ಒಂದಲ್ಲಾ ಒಂದು ರೀತಿ ಬೇರೆ ರೀತಿಯ ಅವಲಂಬನೆ ಇರುತ್ತದೆ. ಇದು ತಾಯಿಯ ಮೇಲಿನ ಅವಲಂಬನೆಯಂತಲ್ಲದೆ ಒಂದು ರೀತಿಯ ಪರಸ್ಪರ ಅವಲಂಬನೆಯಾಗಿರುತ್ತದೆ. ಮದುವೆಯಾದ ಮೇಲೆ ಪತಿಪತ್ನಿಯರಲ್ಲೂ ಕೂಡ ಪರಸ್ಪರ ಅವಲಂಬನೆ ಇರಲೇಬೇಕು. ಆದರೆ ದುರಾದೃಷ್ಟವೆಂದರೆ ಸಾಂಪ್ರದಾಯಿಕ ಚಿಂತನೆಗಳಾದ ಪ್ರೀತಿ, ತ್ಯಾಗ, ಹೊಂದಾಣಿಕೆಯ ಹೆಸರಿನಲ್ಲಿ ಹೆಚ್ಚಿನ ದಂಪತಿಗಳ ಮಧ್ಯೆ ಕೇವಲ ಅವಲಂಬನೆ ಇರುತ್ತದೆ. ಪರಸ್ಪರ ಅವಲಂಬನೆ ಮತ್ತು ಬರಿಯ ಅವಲಂಬನೆ ಹೊರನೋಟಕ್ಕೆ ಒಂದೇ ರೀತಿ ಅನ್ನಿಸಿದರೂ ಅದರ ವ್ಯತ್ಯಾಸ ಅನುಭವಿಸುವವರಿಗೆ ಗೊತ್ತಿರುತ್ತದೆ. ಪತಿಪತ್ನಿಯರು ಕೇವಲ ಅವಲಂಬಿತರಾದಾಗ ಒಬ್ಬರು ಇನ್ನೊಬ್ಬರ ಒತ್ತಡ ಆತಂಕಗಳನ್ನು ಆ ಕ್ಷಣಕ್ಕೆ ಕಡಿಮೆ ಮಾಡಿ ಸಂಬಂಧವನ್ನು ತಾತ್ಕಲಿಕವಾಗಿ ಸರಿತೂಗಿಸಿಕೊಂಡು ಹೋಗುವುದನ್ನು ಮಾತ್ರ ಯೋಚಿಸುತ್ತಾರೆ. ಉದಾಹರಣೆಗೆ ಗಂಡನ ಕೋಪವನ್ನು ಕಡಿಮೆ ಮಾಡಿ ಅವನನ್ನು ಖುಷಿಯಾಗಿಡುವ ಪ್ರಯತ್ನವನ್ನು ಹೆಂಡತಿ ಮತ್ತು ಹೆಂಡತಿಯ ಬೇಸರವನ್ನು ಅಥವಾ ಹೆದರಿಕೆಯನ್ನು ಕಡಿಮೆ ಮಾಡಿ ಅವಳಿಗೆ ಸಾಂತ್ವನ ನೀಡುವ ಕೆಲಸವನ್ನು ಗಂಡ ಮಾಡುತ್ತಿರಬಹುದು. ಇದರಿಂದ ಇಬ್ಬರಲ್ಲಿಯೂ ಮತ್ತೊಬ್ಬರ ಬಗೆಗೆ ಎಚ್ಚರದಲ್ಲಿರಬೇಕಾದ ನಿರಂತರ ಮಾನಸಿಕ ಒತ್ತಡ, ಆತಂಕಗಳು ಸೃಷ್ಟಿಯಾಗುತ್ತವೆ. ಆದ್ದರಿಂದ ಸಂಬಂಧಗಳು ನಿಧಾನವಾಗಿ ಹದಗೆಡುತ್ತವೆ.
ಇದನ್ನು ತಪ್ಪಿಸಲು ಇಬ್ಬರೂ ತಮ್ಮ ವೈಯುಕ್ತಿಕ ಮಾನಸಿಕ ಸಮಸ್ಯೆಗಳನ್ನು ಸರಿಪಡಿಸಿಕಳ್ಳುವುದಕ್ಕೆ ಇತರರಿಂದ ಸಹಕಾರ ನಿರೀಕ್ಷಿಸಬಾರದು. ಕೋಪವನ್ನು ನಿಭಾಯಿಸುವುದು ಗಂಡನ ಜವಾಬ್ದಾರಿ, ಮತ್ತು ಭಯವನ್ನು ನಿಭಾಯಿಸುವುದು ಹೆಂಡತಿಯ ಜವಾಬ್ದಾರಿ ಅಂದುಕೊಂಡಾಗ ಇಬ್ಬರಲ್ಲಿಯೂ ತಮ್ಮ ಜವಾಬ್ದಾರಿಗಳ ಅರಿವು ಮೂಡುತ್ತದೆ. ಒಬ್ಬರು ಮತ್ತೊಬ್ಬರ ದೌರ್ಬಲ್ಯವನ್ನು ಬೆಂಬಲಿಸದಿದ್ದಾಗ ಇಬ್ಬರೂ ಬದಲಾಗಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ದಾಂಪತ್ಯದ ಸಂಬಂಧ ಇಬ್ಬರ ದೌರ್ಬಲ್ಯಗಳ ಬೆಸುಗೆ ಅಲ್ಲ. ಇಬ್ಬರ ಅತ್ಯುತ್ತಮ ಗುಣಗಳ ಜೋಡಣೆಯಾಗಬೇಕು
ಹೀಗೆ ಎರಡು ಪ್ರಬುದ್ಧ ವ್ಯಕ್ತಿಗಳ ನಡುವೆ ಅನನ್ಯವಾದ ಆತ್ಮೀಯತೆ ಮೂಡಿದಾಗ ಅದು ನಿರಂತರವಾಗಿರುತ್ತದೆ ಮತ್ತು ದೀರ್ಘ ಕಾಲದ ಅದ್ಭುತ ಲೈಂಗಿಕ ಸುಖಕ್ಕೆ ನಾಂದಿಯಾಗುತ್ತದೆ.
ಮುಗಿಯಿತು.
ವಸಂತ್ ನಡಹಳ್ಳಿ.

ಸಮಾಜದಲ್ಲಿ ಸಮಾನತೆ ಇರಬೇಕು

0

ಸಮಾಜದಲ್ಲಿ ಪುರುಷರಷ್ಟೆ ಸಮಾನತೆಯನ್ನು ಹೆಣ್ಣು ಮಕ್ಕಳಿಗೆ ಕಲ್ಪಿಸಿದಾಗ ಮಾತ್ರ ಸಮಾಜದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ತಹಶೀಲ್ದಾರ್ ಜಿ.ಎ. ನಾರಾಯಣಸ್ವಾಮಿ ಹೇಳಿದರು.
ನಗರದ ಸ್ತ್ರೀ ಶಕ್ತಿ ಭವನದಲ್ಲಿ ಸೋಮವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಮಹಿಳಾ ಸಾಂತ್ವನ ಕೇಂದ್ರದ ಸಹಯೋಗದಲ್ಲಿ ನಡೆದ ‘ಪ್ರೋಟೆಕ್ಷನ್ ಆಫ್ ವುಮೆನ್ ಫ್ರಮ್ ಡೊಮೆಸ್ಟಿಕ್ ವೈಯಲೆನ್ಸ್’ ಕುರಿತಂತೆ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ತಾಯಂದಿರು ಕುಟುಂಬಗಳಲ್ಲಿ ಗಂಡು ಹೆಣ್ಣು ಮಕ್ಕಳೆಂಬ ಬೇದಭಾವವನ್ನು ತೋರಿಸದೆ, ಇಬ್ಬರನ್ನೂ ಸಮಾನತೆಯಿಂದ ಕಾಣಬೇಕು. ಮಕ್ಕಳ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು. ಯಾರೊಂದಿಗೆ ಹೇಗೆ ವರ್ತನೆ ಮಾಡಬೇಕೆಂಬುದರ ಬಗ್ಗೆ ಮಕ್ಕಳಿಗೆ ಅರ್ಥವಾಗುವಂತೆ ತಿಳಿಹೇಳಬೇಕು. ಸಂಸ್ಕಾರಭರಿತವಾದ ಶಿಕ್ಷಣವನ್ನು ನೀಡಿದಾಗ ಮಾತ್ರ, ಸಮಾಜದಲ್ಲಿ ಮಹಿಳೆಯರು, ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯಗಳು ದಬ್ಬಾಳಿಕೆಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಮಹಿಳೆಯರಿಗೆ ಸಿಗಬೇಕಾದಂತಹ ಎಲ್ಲಾ ಸ್ಥಾನಮಾನಗಳನ್ನು ಕಲ್ಪಿಸಿಕೊಟ್ಟಾಗ ಮಾತ್ರ ಬದಲಾವಣೆ ಸಾಧ್ಯವಾಗುತ್ತದೆ ಎಂದರು.
ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಪಾಪಿರೆಡ್ಡಿ ಮಾತನಾಡಿ, ಮಹಿಳೆಯರ ರಕ್ಷಣೆಗಾಗಿ ಜಾರಿಗೆ ತಂದಿರುವ ಕಾನೂನುಗಳನ್ನು ಕೆಲವು ಮಂದಿ ತಮ್ಮ ಸ್ವಾರ್ಥಕ್ಕಾಗಿ ದುರುಪಯೋಗ ಪಡಸಿಕೊಳ್ಳುತ್ತಿದ್ದು, ಯಾವುದೇ ಕಾರಣಕ್ಕೂ ಮಹಿಳಾ ಮೀಸಲಾತಿ ಹಾಗೂ ಅವರಿಗೆ ನೀಡಿರುವ ಸ್ವಾತಂತ್ರ್ಯವನ್ನು ಕಸಿಯುವಂತಹ ಪ್ರಯತ್ನಗಳಾಗಬಾರದು. ಹೆಣ್ಣು ಮಕ್ಕಳ ಮೇಲೆ ನಡೆಯುವಂತಹ ದೌರ್ಜನ್ಯಗಳನ್ನು ತಡೆಗಟ್ಟಲು ಪ್ರತಿಯೊಬ್ಬ ನಾಗರಿಕರು ಕಂಕಣಬದ್ಧರಾಗಬೇಕು ಎಂದರು.
ಸಿ.ಡಿ.ಪಿ.ಓ.ಲಕ್ಷ್ಮೀದೇವಮ್ಮ, ಮಹಿಳಾ ಸಾಂತ್ವನಕೇಂದ್ರದ ಅಧ್ಯಕ್ಷೆ ಡಾ.ವಿಜಯಾವೆಂಕಟರಾಮ್, ಸರ್ಕಾರಿ ವಕೀಲ ಈ.ಡಿ.ಶ್ರೀನಿವಾಸ್, ವಕೀಲರ ಸಂಘದ ಕಾರ್ಯದರ್ಶಿ ಬೈರಾರೆಡ್ಡಿ, ವಕೀಲರಾದ ಸುಬ್ರಮಣ್ಯಪ್ಪ, ವೇಣುಗೋಪಾಲ್, ಮೇಲ್ವಿಚಾರಕಿ ಗಿರಿಜಾಂಬಿಕೆ, ತಾಲ್ಲೂಕು ಪಂಚಾಯತಿ ಸದಸ್ಯೆ ಸರಸ್ವತಮ್ಮ ಮತ್ತಿತರರು ಹಾಜರಿದ್ದರು.

ಉರ್ದು ಶಾಲೆಯ ಮಕ್ಕಳಿಗೆ ಬಹುಮಾನ

0

ನಗರದ ಆಜಾದ್ ನಗರದಲ್ಲಿರುವ ಉರ್ದು ಪ್ರೌಢಶಾಲೆಯಲ್ಲಿ ಶನಿವಾರ ತಾಲ್ಲೂಕಿನ ಉರ್ದು ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ನಡೆದ ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದವರಿಗೆ ಟಿಪ್ಪು ಸುಲ್ತಾನ್ ಟ್ರಸ್ಟ್ ವತಿಯಿಂದ ಬಹುಮಾನಗಳನ್ನು ವಿತರಿಸಲಾಯಿತು.
ತಾಲ್ಲೂಕಿನ 16 ಉರ್ದು ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಹಮ್ದ್ (ಪ್ರಾರ್ಥನೆ), ಕವ್ವಾಲಿ, ಕ್ವಿಜ್, ಪಿಕ್ ಅಂಡ್ ಸ್ಪೀಕ್, ರಾಷ್ಟ್ರಗೀತೆ, ಪ್ರಬಂಧ, ಭಾಷಣ ಇತ್ಯಾದಿ ಸ್ಪರ್ದೆಗಳನ್ನು ನಡೆಸಿದ್ದು, ವಿಜೇತ ವಿದ್ಯಾರ್ಥಿಳಿಗೆ ಶಿಕ್ಷಣ ಇಲಾಖೆ ನೀಡುವ ಪ್ರಶಸ್ತಿಪತ್ರದೊಂದಿಗೆ ಟಿಪ್ಪು ಸುಲ್ತಾನ್ ಟ್ರಸ್ಟ್ ವತಿಯಿಂದ ಪ್ರೋತ್ಸಾಹಕವಾಗಿ ಮೆಡಲ್ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು.
ಶಿಕ್ಷಣ ಇಲಾಖೆಯ ಮನ್ನಾರ್ಸ್ವಾಮಿ, ಟಿಪ್ಪು ಸುಲ್ತಾನ್ ಟ್ರಸ್ಟ್ನ ನಯೀಂಪಾಷ, ಎಂ.ಡಿ.ಸಾದಿಕ್, ಹಸೇನ್ಪಾಷ, ಸಾದಿಕ್ಪಾಷ, ಬಾಬಾಜಾನ್, ಬಕಶ್, ಮಹಬೂಬ್ಪಾಷ, ಶಾಲಾ ಮುಖ್ಯಶಿಕ್ಷಕ ಆಜಮ್ಪಾಷ, ಶಿಕ್ಷಕರಾದ ಸಾದಿಕ್, ಮಹಮ್ಮದ್ ಹಸೇನ್, ಜೀಯಾವುಲ್ಲಾ, ನಸ್ರೀನ್, ನಫೀಜಾ, ಫಾತೀಮಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.