31.6 C
Sidlaghatta
Thursday, April 25, 2024

ಬಾಹ್ಯಾಕಾಶ ನಿಲ್ದಾಣದಲ್ಲಿ ಏನು ನಡೆಯುತ್ತಿದೆ – ಭಾಗ 2

- Advertisement -
- Advertisement -

ತಿಂಡಿ/ಊಟ
ತಂತ್ರಜ್ಞರಿಗೆ ದಿನಾಲು ಮೂರು ಊಟಗಳು, ಊಟ, ತಿಂಡಿಗಳಲ್ಲಿ ದ್ರವಾಹಾರವನ್ನು ಸಾಮಾನ್ಯವಾಗಿ ಪ್ಲಾಸ್ಟಿಕ್ ಪ್ಯಾಕೆಟ್ಟುಗಳಿಂದ ಸ್ಟ್ರಾ ಬಳಸಿ ಕುಡಿಯಲಾಗುತ್ತದೆ. ಘನ ಆಹಾರವಾದರೆ ಅದು ಅತ್ತಿತ್ತ ಹಾರಿ ಹೋಗದಂತೆ ಹುಷಾರಾಗಿರಬೇಕಾಗುತ್ತದೆ. ಆಯಸ್ಕಾಂತಗಳನ್ನು ಬಳಸಿ ತಟ್ಟೆ, ಪಾತ್ರೆಗಳನ್ನು ಮೇಜಿಗೆ ಅಂಟಿರುವಂತೆ ಮಾಡಲಾಗುತ್ತದೆ. ಊಟದ ಟ್ರೇಯಲ್ಲಿ ಕ್ಯಾಲೊರಿ ಹಾಗೂ ಪೌಷ್ಟಿಕಾಂಶಗಳನ್ನು ಲೆಕ್ಕ ಹಾಕಿ ಪ್ಯಾಕ್ ಮಾಡಿಟ್ಟ ಹಣ್ಣು, ಕಾಳು, ಬೆಣ್ಣೆ, ಬೀಫ್, ಚಿಕನ್ ಇತ್ಯಾದಿ ತಿನಿಸುಗಳಿರುತ್ತವೆ. ಅವೆಲ್ಲವೂ ಟ್ರೇನಲ್ಲಿ ಅಂಟಿಕೊಂಡಿರುತ್ತವೆ. ಚಮಚ, ಫೋರ್ಕ್ ಬಳಸಿ ಬೇಕಾದುದನ್ನು ತಿನ್ನಬಹುದು. ದಿನಗಳೆದಂತೆ ಕಿರುಗುರುತ್ವ ನಾಲಿಗೆಯ ಸ್ವೇದಗ್ರಂಥಿಗಳನ್ನು ಹೊಸಕಿ ಹಾಕುತ್ತದೆ. ಖಾರದ್ದೇನಾದರೂ ತಿನ್ನಬೇಕೆಂಬ ಬಯಕೆಯಾಗುತ್ತದೆ.
ಈಗ ಕೆಲಸದ ಸಮಯ. ಹಾಗೆ ನೋಡಿದರೆ, ಬಾಹ್ಯಾಕಾಶ ನಿಲ್ದಾಣದಲ್ಲಿ ಮನುಷ್ಯನ ಪ್ರತಿಯೊಂದು ಚಟುವಟಿಕೆಯೂ ಪ್ರಯೋಗಕ್ಕೆ ಒಳಗಾಗುತ್ತಲೇ ಇರುತ್ತದೆ. ಅಂದರೆ ಅಲ್ಲಿ ತಂತ್ರಜ್ಞರೇ ಪ್ರಯೋಗಪಶುಗಳು! ಏಕೆಂದರೆ ಮಾನವ ದೇಹ ಆ ಪ್ರತಿಕೂಲ ಪರಿಸರದಲ್ಲಿ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದೇ ಅಲ್ಲಿ ಪ್ರಮುಖ ಪ್ರಯೋಗದ ವಿಷಯ. ಆಗಾಗ ರಕ್ತ ಮತ್ತು ಮೂತ್ರದ ಸ್ಯಾಂಪಲ್ ತೆಗೆದು ತಂಪು ಪೆಟ್ಟಿಗೆಯಲ್ಲಿ -95 ಡಿಗ್ರಿಯಲ್ಲಿಟ್ಟು ಭೂಮಿಗೆ ರವಾನಿಸಲಾಗುತ್ತದೆ. ಆಗಾಗ ಅಲ್ಟ್ರಾ ಸೌಂಡ್, ಇಸಿಜಿ, ಬಿಪಿ ಮುಂತಾದ ಪರೀಕ್ಷೆಗಳನ್ನೂ ಅಲ್ಲಿ ನಡೆಸಲಾಗುತ್ತದೆ. ತಂತ್ರಜ್ಞರ ದೇಹದ ಕಶ್ಮಲಗಳಾದ ಜೀರ್ಣಕ್ರಿಯೆಯ ಫಲವಾದ ಮಿಥೇನ್ ಹಾಗೂ ಬೆವರಿನ ಮೂಲಕ ಹೊರಬೀಳುವ ಅಮ್ಮೋನಿಯಾ ಇವನ್ನು ಹೀರಿಕೊಳ್ಳಲು ಆಕ್ಟಿವೇಟೆಡ್ ಕಲ್ಲಿದ್ದಲು ಇರುತ್ತದೆ. ಸೆನ್ಸರ್ ಯಂತ್ರಗಳ ಮೂಲಕ ಆಗಾಗ ದೇಹದ ವಿಕಿರಣವನ್ನಳೆಯಲಾಗುತ್ತದೆ. (ಅಂತರಿಕ್ಷದಲ್ಲಿ ಬಾಹ್ಯವಿಕಿರಣಗಳು ಎಲ್ಲಾ ಕಡೆ ಪಸರಿಸುತ್ತಿರುತ್ತವೆ. ಭೂಮಿಯಲ್ಲಿ ಒಂದು ವರ್ಷದ ಅವಧಿಯಲ್ಲಿ ಮೈಸೇರಬಹುದಾದಷ್ಟು ವಿಕಿರಣವನ್ನು ಬಾಹ್ಯಾಕಾಶ ನಿಲ್ದಾಣದಲ್ಲಿ ತಂತ್ರಜ್ಞರು ಒಂದೇ ದಿನಕ್ಕೆ ಸೇವಿಸುತ್ತಾರೆ. ವಿಮಾನಗಳಲ್ಲಿ ಆಗಬಹುದಾದ ಅಪಾಯಕ್ಕಿಂತ ಇದು ಐದು ಪಟ್ಟು ಹೆಚ್ಚು).
ಸಾಮಾನ್ಯವಾಗಿ ಯಂತ್ರಗಳ ಮೇಲ್ವಿಚಾರಣೆ ಸಿಬ್ಬಂದಿಯ ದಿನನಿತ್ಯದ ಕೆಲಸವಾಗಿರುತ್ತದೆ. ಪ್ರತಿ ಸಿಬ್ಬಂದಿಗೂ ವಾರಕ್ಕೆ 160 ತಾಸಿನ ಪ್ರತ್ಯೇಕ ಡ್ಯೂಟಿ. ಸೌರಫಲಕಗಳಿಂದ ಹಿಡಿದು ಪ್ರತಿ ಪ್ರಯೋಗದ ಸಲಕರಣೆಯನ್ನು ಪರೀಕ್ಷಿಸಿ ಅವು ಭೂಮಿಗೆ ಕಳುಹಿಸುವ ಮಾಹಿತಿಗಳ ಖಚಿತತೆಯನ್ನು ಪಡೆಯುವವರೆಗೆ ಅನೇಕ ತಾಸುಗಳು ವ್ಯಯವಾಗುತ್ತವೆ.
ಇಕ್ಕಟ್ಟಾದ ಜಾಗದಲ್ಲಿ ಬರೀ ಯಂತ್ರಗಳ ನಡುವೆ ಮಾಂಸಖಂಡಗಳು ಪೆಡಸಾಗಬಾರದೆಂದರೆ ದೇಹಕ್ಕೆ ಬಿರುಸಾದ ವ್ಯಾಯಾಮ ಬೇಕೇಬೇಕು. ದಿನಕ್ಕೆ ಕನಿಷ್ಟ ಎರಡು ತಾಸು ಟ್ರೆಡ್‍ಮಿಲ್ ನಲ್ಲಿ ಕೂತು ಬೆಲ್ಟ್ ಬಿಗಿದುಕೊಂಡು ಮೈಕೈಕಾಲುಗಳಿಗೆ ವ್ಯಾಯಾಮ ಮಾಡಿಸಲಾಗುತ್ತದೆ.
ಇನ್ನು ರಿಲಾಕ್ಸ್ ಮಾಡುವ ಸಮಯ. ಒಂಟಿತನದ ಮಾನಸಿಕ ತುಮುಲವನ್ನು ತಡೆಯಲು ಇದು ಅತೀ ಅವಶ್ಯ. ಈಗ ಮನೆಯವರ ಜೊತೆ ಇಮೇಲ್ ಚಾಟ್ ನಡೆಸಬಹುದು, ಸಂಗೀತ, ಸಿನೆಮಾ ಮೂಲಕ ಮನರಂಜನೆ ಪಡೆಯಬಹುದು. ಆದರೆ ಬಹುಪಾಲು ತಂತ್ರಜ್ಞರು ಕೆಳಗಿನ ನೀಲಿ ನೆಲವನ್ನು ನೋಡಿ ಮೈಮರೆಯುತ್ತಾರೆ. ಒಂದೂವರೆ ತಾಸಿಗೊಂದು ಬಾರಿ ಕತ್ತಲೆ ಮತ್ತು ಬೆಳಕಿನ ರೋಚಕತೆಯನ್ನು ಅನುಭವಿಸುತ್ತಾರೆ. ಭೂಮಿ ಸುತ್ತುವುದನ್ನು ಪ್ರತ್ಯಕ್ಷ ಕಾಣುತ್ತಾರೆ. ಪೆಗ್ಗಿ ವೈಟ್‍ಸನ್, ಐಎಸ್‍ಎಸ್‍ನಲ್ಲಿ ಫ್ಲೈಟ್‍ಇಂಜಿನಿಯರ್ ಆಗಿದ್ದವಳು ತನ್ನ 13 ನೆಯ ಪತ್ರದಲ್ಲಿ ಹೀಗೆ ಬರೆಯುತ್ತಾಳೆ ‘ಬಹುಶಃ ನನ್ನ ಜೀವನವಿಡೀ ಇಲ್ಲಿಯ ಅನುಭವವನ್ನು ವರ್ಣಿಸಬಲ್ಲ ಸ್ಪಷ್ಟ ಶಬ್ದಗಳಿಗಾಗಿ ಹುಡುಕಾಟ ನಡೆಸಬೇಕಾಗಬಹುದು’
ದೇಹದ ಜೈವಿಕತಾಳಕ್ಕೆ ತಕ್ಕಂತೆ 12 ತಾಸುಗಳ ನಂತರವೇ ನಿದ್ರಾಲೋಕಕ್ಕೆ ಜಾರುತ್ತಾರೆ. ಮಲಗುವ ಕೋಣೆಯಲ್ಲಿ, ಕಿಡಕಿಯ ಪರದೆಗಳನ್ನು ಮುಚ್ಚಲಾಗುತ್ತದೆ, ಗಾಳಿಯಾಡಲೆಂದು ವೆಂಟಿಲೇಶನ್ ಫ್ಯಾನ್ ಇರಲೇಬೇಕು. ಒಂದೇ ಸ್ಥಳದಲ್ಲಿ ಅನೇಕ ತಾಸುಗಳವರೆಗೆ ನಿಶ್ಚಲ ಸ್ಥಿತಿಯಲ್ಲಿ ಇರುವಾಗ ಸುತ್ತಲಿನ ಗಾಳಿಯಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ ಇಂಗಾಲದ ಡೈಆಕ್ಸೈಡ್ ಹೆಚ್ಚುತ್ತದೆ. ಗಾಳಿಯ ಹರಿವು ಇರದಿದ್ದರೆ ಉಸಿರು ಕಟ್ಟಿದಂತಾಗಬಹುದು, ತೀವ್ರ ತಲೆಸಿಡಿತ ಉಂಟಾಗಬಹುದು. ಸುಖ ನಿದ್ದೆಗೆಂದು ಅತ್ತಿತ್ತ ತೇಲಾಡದಂತೆ ಮಲಗುವ ಚೀಲವನ್ನೂ ಹುಕ್ ಒಂದಕ್ಕೆ ಸಿಕ್ಕಿಸಲಾಗುತ್ತದೆ. ಯಂತ್ರಗಳ ಗುಂಯ್ಗುಡಿತವನ್ನು ದೂರಗೊಳಿಸಲೆಂದು ಕೆಲವರು ಇಯರ್‍ಪ್ಲಗ್ ಬಳಸುತ್ತಾರೆ.
‘ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ..’ ಎನ್ನುವಂತೆ ಮೂಲಭೂತ ಅವಶ್ಯಕತೆಗಳಾದ ಆಹಾರ, ನೀರು ಹಾಗೂ ಗಾಳಿಗೆ ಭೂಮಿಯನ್ನೇ ಅವಲಂಬಿಸಬೇಕಾಗುತ್ತದೆ. ಒಮ್ಮೆಲೇ ಹತ್ತಿಪ್ಪತ್ತು ವರ್ಷಗಳಿಗಾಗುವಷ್ಟು ಸಂಗ್ರಹ ಹೊಂದಿರಲು ಸಾಧ್ಯವಿಲ್ಲ. ಅಲ್ಲದೆ ಪ್ರಯೋಗ ಉಪಕರಣಗಳೂ ಆಗಾಗ್ಗೆ ದುರಸ್ತಿಯಾಗುತ್ತಿರಬೇಕು, ಹೊಸ ಹೊಸ ತಂತ್ರಜ್ಞಾನಗಳು ಇಲ್ಲಿ ಶೋಧಗೊಂಡಂತೆ ಅಲ್ಲಿ ಅವುಗಳ ಬಳಕೆಯಾಗಬೇಕು. ಇದುವರೆಗೆ 35 ಬಾರಿ ಅಮೆರಿಕದ ಬಾಹ್ಯಾಕಾಶ ನೌಕೆಗಳು, 25 ಬಾರಿ ರಷ್ಯಾದ ಸೋಯುಝ್ ಮತ್ತು 41 ಬಾರಿ ಪ್ರೊಗ್ರೆಸ್ ನೌಕೆಗಳು, ಎರಡು ಬಾರಿ ಯುರೋಪಿನ ಎಟಿವಿ ಹಾಗೂ 2 ಬಾರಿ ರಷ್ಯಾದ ಹೆಚ್‍ಟಿವಿ ಘಟಕಗಳು ಬಾಹ್ಯಾಕಾಶ ನಿಲ್ದಾಣಕ್ಕೆ ಭೆಟ್ಟಿ ಇತ್ತಿವೆ. ಆರು ತಿಂಗಳಿಗೊಮ್ಮೆ ಪಾಳಿಯ ಮೇಲೆ ಸಿಬ್ಬಂದಿ ಬದಲಾಗುತ್ತಾರೆ, ಅದೇ ಅವಧಿಗೊಮ್ಮೆ ಆಹಾರ ಮತ್ತಿತರ ಆವಶ್ಯಕ ಸಾಮಗ್ರಿಗಳ ಪೂರೈಕೆಯೂ ನಡೆಯುತ್ತಿರಬೇಕಾಗುತ್ತದೆ. ವಾಪಸ್ಸು ಬರುವಾಗ 6.4 ಟನ್ನಿನಷ್ಟು ಕಸವನ್ನು ಮರಳಿ ಭೂಮಿಗೆ ತರುತ್ತದೆ.
2003 ರಲ್ಲಿ ಕೊಲಂಬಿಯಾ ಶಟ್ಲ್ ನೌಕೆ ಬಾಹ್ಯಾಕಾಶ ನಿಲ್ದಾಣಕ್ಕೆ ಭೆಟ್ಟಿ ಇತ್ತು ಮರಳುವಾಗ ಇಡೀ ನೌಕೆಯೇ ಉರಿದು ಬೂದಿಯಾಗಿತ್ತು. ಆ ದುರಂತದ ನಂತರ ಅಮೆರಿಕ ಸರಕಾರ ಶಟ್ಲ್ ನೌಕೆಗಳ ಉಡಾವಣೆಗೆ ನಿರ್ಬಂಧ ಹೇರಿತ್ತು. ಆಗ ಬಾಹ್ಯಾಕಾಶ ನಿಲ್ದಾಣದ ನಿರ್ಮಾಣಕಾರ್ಯ ಸ್ಥಗಿತಗೊಂಡಿದ್ದಷ್ಟೇ ಅಲ್ಲ, ಅಲ್ಲಿದ್ದ ಎರಡು ತಂತ್ರಜ್ಞರ ಭವಿಷ್ಯವೂ ಏನೆಂದು ಚಿಂತಿಸುವಂತಾಗಿತ್ತು. ಮತ್ತೆ ಮೂರು ಬಾರಿ ರಷ್ಯಾದ ನೌಕೆಗಳು ಹಾರಿದವು. ಒಮ್ಮೆ ಸೌರಫಲಕಗಳನ್ನು ಮರು ಜೋಡಿಸುವಾಗ ಮಧ್ಯೆ ತೂತೊಂದು ಕಾಣಿಸಿಕೊಂಡಿತು. ನೌಕೆಯ ಹೊರಗಡೆ ಅಂತರಿಕ್ಷದಲ್ಲಿ ನಡೆಯುತ್ತ (ತೇಲುತ್ತ!) ಸೌರಫಲಕಗಳಿಂದ ಆಗಬಹುದಾದ ವಿದ್ಯುತ್ ಶಾಕ್ ಗಳನ್ನು ತಡೆದುಕೊಳ್ಳುತ್ತ ರಿಪೇರಿ ನಡೆಸಬೇಕಾಯಿತು.
ಬಾಹ್ಯಾಕಾಶದಲ್ಲಿ ಹಾರಾಡುತ್ತಿರುವ ಚಿಕ್ಕ ಪುಟ್ಟ ವಸ್ತುಗಳು, (ಉದಾಹರಣೆಗೆ ಬಳಕೆಯಲ್ಲಿಲ್ಲದ ಉಪಗ್ರಹಗಳ ಹೊರಮೈನ ಪೇಂಟ್‍ನ ಚೂರು) ಗಗನನಡಿಗೆ ನಡೆಸುತ್ತಿರುವ ತಂತ್ರಜ್ಞರ ಗಗನದಿರಿಸನ್ನು ತೂತಾಗಿಸಬಹುದಾದ ಸಾಧ್ಯತೆಯೂ ಇದೆ. ಏಕೆಂದರೆ ಬಾಹ್ಯ ಆಕಾಶದಲ್ಲಿ ವೇಗವಾಗಿ ಹಾರಾಡುವ ನೂರಾರು ವಸ್ತುಗಳಿರುತ್ತವೆ. ಸಾಮಾನ್ಯವಾಗಿ ಮುಖಾಮುಖಿಯಾಗಬಹುದಾದ ಬಾನಕಸದ ಬಗ್ಗೆ ಭೂಮಿಯಿಂದ ಮುಂಚಿತವಾಗಿಯೇ ಸೂಚನೆಗಳು ಬಂದಿರುತ್ತವೆ. ಆಗ ನೌಕೆಯ ಎತ್ತರವನ್ನು ಒಂದೆರಡು ಕಿಮೀ ಮೇಲಕ್ಕೆ ಅಥವಾ ಕೆಳಕ್ಕೆ ಬದಲಾಯಿಸಲಾಗುತ್ತದೆ. ಕೆಲವು ಬಾರಿ ಅದು ಸಾಧ್ಯವಾಗದಿದ್ದಾಗ ತುರ್ತುಪರಿಸ್ಥಿತಿಯನ್ನು ಘೋಷಿಸಿಕೊಂಡು, ಕಿಂಡಿ, ಕಿಡಕಿಗಳನ್ನು ಮುಚ್ಚಿ ಎಲ್ಲಾ ತಂತ್ರಜ್ಞರು ನೌಕೆಯ ಆಶ್ರಯಘಟಕದತ್ತ ಧಾವಿಸುತ್ತಾರೆ. ಬಾಹ್ಯಾಕಾಶ ನಿಲ್ದಾಣಕ್ಕೇನಾದರೂ ಧಕ್ಕೆ ತಗುಲಿತೋ, ಕೂಡಲೇ ಆಶ್ರಯ ನೌಕೆಯನ್ನು ನಿಲ್ದಾಣದಿಂದ ಕಳಚಿಕೊಂಡು ಭೂಮಿಗೆ ಮರಳುವ ವ್ಯವಸ್ಥೆ ಇದೆ. ಈ ಹಿಂದೆ ಎರಡು ಬಾರಿ ಇಂಥಹ ಪ್ರಸಂಗಗಳು ಎದುರಾಗಿದ್ದವು.
ಐಎಸ್‍ಎಸ್ ನ ಸಿಬ್ಬಂದಿಯ ದೇಹಪೃಕೃತಿಯ ಅಧ್ವಾನವೇ ಭೂಮಿಯ ಮೇಲೆ ಸಾವಿರಾರು ಸಂಶೋಧನಾಕಾರರಿಗೆ ವಸ್ತುವಾಗಿದೆ. ಅವುಗಳ ಆಧಾರದ ಮೇಲೆ ಮಾನವದೇಹದ ಜೀರ್ಣಕ್ರಿಯೆ, ಮೂಳೆಸವೆತ, ಮಾನಸಿಕ ಏರುಪೇರು, ಗ್ರಹಣೇಂದ್ರಿಯಗಳ ಗೊಂದಲ ಇತ್ಯಾದಿ ವಿಷಯಗಳಲ್ಲಿ ಅಧ್ಯಯನಗಳು ನಡೆದಿವೆ. ಮುಂದೆ ದೂರದೂರದ ಚಂದ್ರ ಹಾಗೂ ಮಂಗಳನಲ್ಲಿಗೆ ಪಯಣ ನಡೆಸಲು ನಡೆಸಬೇಕಾದ ತಯಾರಿಯ ಬಗ್ಗೆ ವೈಜ್ಞಾನಿಕ ಪ್ರಯೋಗಗಳು ನಡೆದಿವೆ. ಹಾಗೆಯೇ ನೌಕೆಯ ಸುತ್ತಮುತ್ತಲ ಆಕಾಶದ ವೈಚಿತ್ರ್ಯಗಳೂ, ಮಾನವ ಕಣ್ಣಿನಿಂದ ಭೂಮಿಯ ನಿಜಸ್ವರೂಪವನ್ನು ನೋಡಿದ ಬಣ್ಣನೆಗಳೂ ದಾಖಲಾಗಿವೆ.
ಅಮೆರಿಕದ ಶಟಲ್ ನೌಕೆಗಳಿಗೆ ನಿವೃತ್ತಿ ಘೋಷಣೆಯಾಗಿದೆ. ಇನ್ನು ಮುಂದೆ ರಷ್ಯಾದ ಸೋಯುಝ್ ಕ್ಯಾಪ್ಸೂಲುಗಳು ಮಾತ್ರವೇ ಗಗನಯಾತ್ರೆ ನಡೆಸಲಿವೆ. ಸಂಪೂರ್ಣಗೊಂಡಾಗ ಐಎಸ್‍ಎಸ್ 455 ಟನ್ನಿನ ಫುಟ್‍ಬಾಲ್ ಮೈದಾನದಷ್ಟು ಅಗಲದ ವ್ಯಾಪ್ತಿಯನ್ನು ಹೊಂದಲಿದೆ. ಭಾಗಿಯಾದ ಐದೂ ಸಂಸ್ಥೆಗಳು ವಿವಿಧ ಅಂತರರಾಷ್ಟ್ರೀಯ ಒಪ್ಪಂದಗಳಿಗೆ ಬದ್ಧವಾಗಿವೆ.
ಮಾಸ್ಕೊದ ಹೊರವಲಯದಲ್ಲಿರುವ ‘ಮಾಸ್ಕೊ ಮಿಶನ್ ಕಂಟ್ರೋಲ್’ ಮುಖ್ಯ ಜವಾಬ್ದಾರಿ ಹೊತ್ತ ಕೇಂದ್ರ. ನೌಕೆಯ ವಿವಿಧ ಭಾಗಗಳು ವಿವಿಧ ದೇಶಗಳಿಗೆ ಸೇರಿರುವುದರಿಂದ ಆಯಾ ದೇಶಗಳು ತಮ್ಮ ಘಟಕಗಳನ್ನು ತಾವೇ ನಿರ್ವಹಿಸುತ್ತಿವೆ. ತಂತ್ರಜ್ಞರಿಗೆ ಮೂರು ಹಂತದಲ್ಲಿ, ವಿವಿಧ ಸ್ಥಳಗಳಲ್ಲಿ ತೀವ್ರತರ ತರಬೇತಿ ನೀಡಲಾಗುತ್ತದೆ.
ಇತ್ತೀಚಿನ ಲೆಕ್ಕಾಚಾರದ ಪ್ರಕಾರ ಈ ಬಾಹ್ಯಾಕಾಶ ನೌಕೆಯ ಖರ್ಚು 160 ಶತಕೋಟಿ ಡಾಲರ್ ದಾಟುತ್ತಿದೆ. ‘ಹೊಸ ಹೊಸ ಆವಿಷ್ಕಾರಗಳು ಹೊರಬರಬೇಕಿತ್ತು, ಯಾವುದೂ ಆಗಿಲ್ಲ, ಈ ಯೋಜನೆಯಿಂದ ಬರೀ ಹಣ ಮತ್ತು ಮಾನವ ವೇಳೆ ದಂಡ’ ಎಂದು ಮೂಗು ಮುರಿದವರಿದ್ದಾರೆ. ಅದೇ ಹಣವನ್ನು ಭೂಮಿಯ ಮೇಲಿನ ಸಮಸ್ಯೆಗಳಿಗೆ ಪರಿಹಾರಕ್ಕೆ ಬಳಸಬಹುದಿತ್ತು ಎಂದು ಬಹಳೇ ಜನರು ನಿರಾಶೆ ವ್ಯಕ್ತಪಡಿಸುತ್ತಿದ್ದಾರೆ. ಒಮ್ಮೆ ನಾಸಾದ ಅಧ್ಯಕ್ಷರೇ ಐಎಸ್‍ಎಸ್ ತಾವಿಟ್ಟ ತಪ್ಪು ಹೆಜ್ಜೆ ಎಂದು ಒಪ್ಪಿಕೊಂಡಿದ್ದಾರೆ.
ಟೀಕೆ, ಭತ್ರ್ಸನೆಗಳೇನೇ ಇರಲಿ, ಮಾನವ ಬುದ್ಧಿಶಕ್ತಿಯ ಹಾಗೂ ಅಪ್ರತಿಮ ಸಾಹಸಗಳ ಪ್ರತೀಕವಾಗಿ ಹೈಟೆಕ್ ‘ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ’ ಕಳೆದ ಹತ್ತು ವರ್ಷಗಳಿಂದ ಹಾರಾಡುತ್ತಲೇ ಇದೆ.
ಈ ಹಿಂದಿನ ಬಾಹ್ಯಾಕಾಶ ತಂಗುದಾಣಗಳು ಹಾಗೂ ಏಳುಬೀಳುಗಳು
ಭೂಸುತ್ತಲಿನ ವಾಯುಮಂಡಲದ ಪರಿಮಿತಿಯನ್ನು ದಾಟಿ ಆಚಿನ ಗಗನಪಯಣ ಎಂದೂ ಸುಲಭದ ಮಾತಾಗಿರಲಿಲ್ಲ. ಭೂಮಿಯ ಗುರುತ್ವದ ಸೆಳೆತವನ್ನು ಮೀರಿ ಉಡ್ಡಯನ ಮಾಡುವುದರಿಂದ ಹಿಡಿದು ಬಾಹ್ಯಾಕಾಶ ನೌಕೆಯೊಳಗೆ ಮಾನವ ದೇಹ ಸಹಿಸಬಹುದಾದ ಪರಿಸರವನ್ನು ನಿರ್ಮಿಸಿ ಅದನ್ನು ದೀರ್ಘಕಾಲ ಸುಸ್ಥಿರವಾಗಿರುವಂತೆ ಮಾಡಲು ಬೇಕಾದ ತಂತ್ರಜ್ಞಾನ ಬಹಳಷ್ಟು ಏಳುಬೀಳುಗಳನ್ನು ಕಂಡಿದೆ.
ಎಲ್ಲರಿಗಿಂತ ಮೊದಲು ಬಾಹ್ಯಾಕಾಶಕ್ಕೆ ಇಣುಕಿ, ಅಂಬೆಗಾಲಿಟ್ಟಿದ್ದು ಸೋವಿಯೆತ್ ಸಂಘಟನೆ. ಆನಂತರ ಅಮೆರಿಕ ದೇಶ ದಾಪುಗಾಲಿಕ್ಕಿ ಅಂತರಿಕ್ಷ ಸಂಬಂಧಿತ ತಂತ್ರಜ್ಞಾನದಲ್ಲಿ ಬಹಳಷ್ಟು ಸಾಧಿಸಿತು. ಈ ಎರಡೂ ದೇಶಗಳು ಕೃತಕ ಉಪಗ್ರಹಗಳನ್ನು ಭೂಮಿಯ ಆಚೆ ಕಳಿಸಿದವು. ಉಪಗ್ರಹಗಳೊಂದಿಗೆ ಗಗನಯಾತ್ರಿಗಳನ್ನೂ ಕಳಿಸಿದವು.
1971 ರಲ್ಲಿ ಮಾನವ ಸಹಿತ ಪ್ರಯೋಗಾಲಯವೆಂದು ರಷ್ಯಾದ ಮೊಟ್ಟಮೊದಲ ಸ್ಪೇಸ್ ಸ್ಟೇಶನ್ ‘ಸೆಲ್ಯೂಟ್’. ಸೋಯುಝ್ ನೌಕೆಯಲ್ಲಿ ಹಾರಿಹೋಗಿ ಸೆಲ್ಯೂಟಿಗೆ ಸೇರ್ಪಡೆಯಾಗಿ 24 ದಿನಗಳು ಅಲ್ಲಿ ತಂತ್ರಜ್ಞರು ತಂಗಿದ್ದರು. ಮರಳಿ ಬರುವಾಗ ನೌಕೆ ಸುಟ್ಟು ಭಸ್ಮವಾಯಿತು. ಎರಡನೆಯ ಸೆಲ್ಯೂಟ್2 ತನ್ನ ಕಕ್ಷೆಯನ್ನು ಸೇರಲು ವಿಫಲಗೊಂಡಿತು. ಹೀಗೆ ಸೆಲ್ಯೂಟ್ 3, 4, 5 ಉಪಗ್ರಹಗಳು ಒಂದಾದ ಮೇಲೊಂದರಂತೆ ಹಾರಿ ತಂತ್ರಜ್ಞರು ಹೆಚ್ಚು ದಿನಗಳನ್ನು ಅಂತರಿಕ್ಷದಲ್ಲಿ ಕಳೆದರು. ಅವುಗಳಲ್ಲಿದ್ದ ಒಂದು ದೋಷವೆಂದರೆ ಸೋಯುಝ್ ನೌಕೆ ಮಾತ್ರ ಜೋಡಣೆಗೊಳ್ಳುವಂತೆ ಅವು ರಚಿಸಲ್ಪಟ್ಟಿದ್ದವು. ಮುಂದೆ ಸೆಲ್ಯೂಟ್ 6 ಮತ್ತು 7 ಸುಧಾರಿತ ಆವೃತ್ತಿಗಳಾಗಿ 840 ದಿನಗಳು ಮಾನವ ಗಗನದಲ್ಲಿ ಹಾರಲು ಸಾಧ್ಯವಾಯಿತು.
1971ರಲ್ಲಿ ಅಮೆರಿಕ ಸ್ಕೈಲಾಬ್ ನೌಕೆಯನ್ನು ಹಾರಿಸಿತು. ಹಾರುವಾಗಲೇ ಅದರ ಸೌರ ರೆಕ್ಕೆಗಳು ಹಾನಿಗೊಳಗಾದವು. ಕೆಲವು ದಿನಗಳ ಬಳಿಕ 3 ತಂತ್ರಜ್ಞರು ನೌಕೆಯಲ್ಲಿ ಹಾರಿಹೋಗಿ ಸ್ಕೈಲಾಬ್‍ನ್ನು ರಿಪೇರಿಗೊಳಿಸಿ 24 ದಿನ ಅಲ್ಲಿ ತಂಗಿದ್ದು ಭೂಮಿಗೆ ಮರಳಿದರು. ಮೂರನೆಯ ತಂಡ ಮರಳಿದ ನಂತರ ಸ್ಕೈಲಾಬ್ ಯೋಜನೆಯನ್ನು ಕೈಬಿಡಲಾಯಿತು. ಆದರೆ ಅದು ಸೂರ್ಯನ ಪ್ರಖರ ಜ್ವಾಲೆಯಲ್ಲಿ ಹೆಚ್ಚು ದಿನ ಉಳಿಯಲಾರದೆ ಅವಧಿಗೆ ಮೊದಲೇ ಭೂವಾತಾವರಣ ಪ್ರವೇಶಿಸಿ 1979ರಲ್ಲಿ ಭಸ್ಮವಾಯಿತು.
ಆನಂತರ 1986ರಲ್ಲಿ ಹಾರಿದ ‘ಮೀರ್’ ರಷ್ಯನ್ ವಿಜ್ಞಾನಿಗಳ ತಂತ್ರಜ್ಞಾನ ಕೌಶಲಕ್ಕೆ ಸಾಕ್ಷಿಯಾಗಿ ಹತ್ತು ವರ್ಷಗಳ ಕಾಲ ಮಾನವಸಹಿತವಾಗಿ ಹಾರಾಡಿದ ಗಗನನೌಕೆ. ಆದರೆ ರಷ್ಯಾ ಹಣದ ಮುಗ್ಗಟ್ಟಿಗೆ ಸಿಕ್ಕು ಈ ಅಂತರಿಕ್ಷ ನಿಲ್ದಾಣದ ಖರ್ಚನ್ನು ಭರಿಸಲು ವಿಫಲಗೊಂಡಿತು. ಹೊಸದೊಂದು ಅಂತರಿಕ್ಷ ನಿಲ್ದಾಣವನ್ನು ಜೊತೆಯಾಗಿ ಕಳಿಸೋಣವೆನ್ನುವ ಅಮೆರಿಕದ ಪ್ರಸ್ತಾವಕ್ಕೆ ರಷ್ಯಾ ಸಮ್ಮತಿಯಿತ್ತಿತು. ಅಮೆರಿಕದ ಇಬ್ಬರು ಗಗನಯಾತ್ರಿಗಳು ಮೀರ್ ನೌಕೆಯಲ್ಲಿದ್ದು ಗಗನಯಾನದ ಅನುಭವ ಪಡೆದು ಮರಳಿದರು. 2001 ರಲ್ಲಿ ಮೀರ್ ನೌಕೆಯನ್ನು ನಾಶಪಡಿಸಲಾಯಿತು. ಈಗ ಅಮೆರಿಕಾ ಮತ್ತು ರಷ್ಯಾ ಸಂಪೂರ್ಣವಾಗಿ ‘ಅಂತರರಾಷ್ಟ್ರೀಯ ಬಾಹ್ಯಾಕಾಶ ನೌಕೆ’ಯತ್ತ ಗಮನ ಹರಿಸತೊಡಗಿದವು.
ಮುಗಿಯಿತು.
ಸರೋಜಾ ಪ್ರಕಾಶ

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!