ಶಿಡ್ಲಘಟ್ಟದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಮತ್ತು ಶುಕ್ರವಾರ ನಡೆಯಲಿರುವ ಸಿ.ಇ.ಟಿ ಪರೀಕ್ಷೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಈ ಹಿಂದೆ ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ಸಿ.ಇ.ಟಿ ಪರೀಕ್ಷಾ ಕೇಂದ್ರಗಳಿರುತ್ತಿದ್ದವು. ಆದರೆ ಕೊರೊನಾ ಕಾರಣದಿಂದ ತಾಲ್ಲೂಕು ಕೇಂದ್ರಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಮಾಡಲಾಗಿದೆ. ಇದೇ ಪ್ರಪ್ರಥಮ ಬಾರಿಗೆ ಶಿಡ್ಲಘಟ್ಟದ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಸಿ.ಇ.ಟಿ ಪರೀಕ್ಷಾ ಕೇಂದ್ರವನ್ನಾಗಿ ಆಯ್ಕೆ ಮಾಡಲಾಗಿದೆ. ನಗರಸಭೆಯವರು ಎಲ್ಲಾ ಕೊಠಡಿ ಹಾಗೂ ಪ್ರದೇಶವನ್ನು ಸ್ಯಾನಿಟೈಜ್ ಮಾಡಿದ್ದಾರೆ.
“ಶಿಡ್ಲಘಟ್ಟದ ಕೇಂದ್ರದಲ್ಲಿ 219 ವಿದ್ಯಾರ್ಥಿಗಳು ಎರಡು ದಿನಗಳು ಪರೀಕ್ಷೆಯನ್ನು ಬರೆಯಲಿದ್ದಾರೆ. ಒಟ್ಟು ಹತ್ತು ಕೊಠಡಿಗಳಿವೆ. ಅದರಲ್ಲಿ ಎಂಟು ಕೊಠಡಿಗಳು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿದ್ದರೆ, ಎರಡು ಕೊಠಡಿಗಳು ಸರ್ಕಾರಿ ಪ್ರೌಢಶಾಲೆಯಲ್ಲಿವೆ. ಇವಲ್ಲದೆ ಒಂದು ಕೊಠಡಿಯನ್ನು ಪ್ರತ್ಯೇಕವಾಗಿಟ್ಟುಕೊಳ್ಳಲಾಗಿದೆ. ಕಂಟೈನ್ ಮೆಂಟ್ ಪ್ರದೇಶದಿಂದ ಬರುವವರು ಅಥವಾ ಅಕಸ್ಮಾತ್ ಯಾರಾದರೂ ವಿದ್ಯಾರ್ಥಿಗಳಿಗೆ ಜ್ವರ, ಕೆಮ್ಮು, ನೆಗಡಿ ಮುಂತಾದ ರೋಗ ಲಕ್ಷಣಗಳಿದ್ದರೆ ಅವರಿಗಾಗಿ ಆ ಕೊಠಡಿಯನ್ನು ಬಳಸುತ್ತೇವೆ” ಎಂದು ಮುಖ್ಯ ಪರೀಕ್ಷಾ ಅಧೀಕ್ಷಕ ಡಿ.ದೀಪಕ್ ತಿಳಿಸಿದರು.
ಒಂದೊಂದು ಕೊಠಡಿಯಲ್ಲಿ 12 ಬೆಂಚುಗಳನ್ನು ಮಾತ್ರ ಹಾಕಲಾಗಿದೆ. ಒಟ್ಟು ಹನ್ನೊಂದು ಮಂದಿ ಪರೀಕ್ಷಾ ಮೇಲ್ವಿಚಾರಕರು, ಒಬ್ಬರು ಉತ್ತರ ಪತ್ರಿಕೆಗಳ ಉಸ್ತುವಾರಿ, ಒಬ್ಬರು ಸಹಾಯಕ ಪರೀಕ್ಷಾ ಅಧೀಕ್ಷಕರು ಮತ್ತು ಒಬ್ಬರು ಮುಖ್ಯ ಪರೀಕ್ಷಾ ಅಧೀಕ್ಷಕರು ಇದ್ದಾರೆ.
“ವಿದ್ಯಾರ್ಥಿಗಳೇ ಮಾಸ್ಕ್, ನೀರಿನ ಬಾಟಲ್ ಮತ್ತು ಊಟ ತರಬೇಕು. ಹಳ್ಳಿಗಳಿಂದ ಬರುವ ಮಕ್ಕಳ ಅನುಕೂಲಕ್ಕೆಂದು ಬಸ್ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 10.15 ಕ್ಕೆ ಪರೀಕ್ಷೆ ಪ್ರಾರಂಭವಿದ್ದರೂ ಎರಡು ಗಂಟೆ ಮುಂಚಿತವಾಗಿ ವಿದ್ಯಾರ್ಥಿಗಳು ಬರಬೇಕು ಎಂದು ತಿಳಿಸಲಾಗಿದೆ. 8.15 ರಿಂದಲೇ ಆರೋಗ್ಯ ಇಲಾಖೆಯವರ ನೆರವಿನಿಂದ ಥರ್ಮಲ್ ಸ್ಕ್ಯಾನಿಂಗ್ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಒಳಗೆ ಕರೆದುಕೊಳ್ಳಲಾಗುತ್ತದೆ. ಸ್ಯಾನಿಟೈಜರ್ ಇಟ್ಟಿರುತ್ತೇವೆ. ಎರಡು ಪರೀಕ್ಷೆಗಳು ಒಂದೊಂದು ದಿನ ನಡೆಯಲಿದ್ದು, ನಡುವಿನ ವೇಳೆಯಲ್ಲಿ ಅವರು ದೂರದೂರ ಕುಳಿತು ಊಟ ಮಾಡಿ, ಓದಲು ಇಲ್ಲಿ ಸಾಕಷ್ಟು ಸ್ಥಳವಿದೆ. ಹತ್ತಿರವಿದ್ದರೆ ಮನೆಗಳಿಗೆ ಅವರು ಹೋಗಿ ಬರಬಹುದಾಗಿದೆ. ಪ್ರತಿಯೊಂದು ಪರೀಕ್ಷೆಗೆ ಅವರು ಕೇಂದ್ರವನ್ನು ಪ್ರವೇಶಿಸುವಾಗ ಆರೋಗ್ಯ ಇಲಾಖೆಯವರು ಪರೀಕ್ಷಿಸಿ ಒಳಕ್ಕೆ ಬಿಡುತ್ತಾರೆ” ಎಂದು ಪರೀಕ್ಷಾ ಪಾಲಕ ಡಿ.ಲಕ್ಷ್ಮಯ್ಯ ವಿವರಿಸಿದರು.
ಕೊಠಡಿ ಮೇಲ್ವಿಚಾರಕ ಎಚ್.ಸಿ.ಮುನಿರಾಜು, ವಿಶೇಷ ಜಾಗೃತದಳದ ಲೋಕೇಶ್, ಅರುಣ್ ಕುಮಾರ್ ಹಾಜರಿದ್ದರು.