30.2 C
Sidlaghatta
Friday, April 19, 2024

ಹದಿಹರೆಯದ ಸಮಸ್ಯೆಗಳು ಮತ್ತು ಪರಿಹಾರ – ಭಾಗ 2

- Advertisement -
- Advertisement -

ನಿಯಮಿತ ಋತುಚಕ್ರ
1. ಋತುಚಕ್ರವು ನಿಯಮಿತವಾಗಲು ಲೋಳೆಸರದ ತಿರುಳನ್ನು ಬೆಲ್ಲದೊಂದಿಗೆ ಸೇರಿಸಿ ಸೇವಿಸುವುದು ಒಳ್ಳೆಯದು.
2. ಎಳ್ಳು, ಹಿಪ್ಪಲಿ, ಬಾರ್ಲಿ, ಕರಿಮೆಣಸು ಹಾಗೂ ಶುಂಠಿಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂದು ಪುಡಿ ಮಾಡಿ ಒಂದು ಚಮಚದಷ್ಟು ಪುಡಿಯನ್ನು ಬೆಲ್ಲದೊಂದಿಗೆ ಸೇರಿಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.
3. ಎಳ್ಳುಂಡೆ, ಉದ್ದಿನ ಅಂಟು ಉಂಡೆ, ಎಳ್ಳಿನ ಕಷಾಯವನ್ನು ಜೇನುತುಪ್ಪದೊಂದಿಗೆ ಸೇವಿಸುವುದು ಉತ್ತಮ.
ಅತಿಯಾದ ರಕ್ತಸ್ರಾವ
ಮಾಸಿಕ ಋತುಸ್ರಾವದ ಸಮಯದಲ್ಲಿ 5 ರಿಂದ 7 ದಿನಗಳಿಗಿಂತ ಹೆಚ್ಚು ಕಾಲ ಸ್ರಾವವಾಗುತ್ತಿದ್ದರೆ ಹಾಗೂ ಎರಡು ಋತುಚಕ್ರದ ಮಧ್ಯ ಅಂದರೆ, ಮುಟ್ಟಾದ 15 ದಿನಗಳಲ್ಲಿಯೇ ಸ್ರಾವ ಆರಂಭವಾಗುತ್ತಿದ್ದರೆ ಅಲಕ್ಷ್ಯ ಸಲ್ಲದು.
1. ಉತ್ತರಣೆಯ ರಸವನ್ನು 4 ಚಮಚದಷ್ಟು ಜೇನುತುಪ್ಪದೊಂದಿಗೆ ಬೆರೆಸಿ ದಿನಕ್ಕೆರಡು ಬಾರಿ ಖಾಲಿ ಹೊಟ್ಟೆಯಲ್ಲಿ 15 ರಿಂದ 21 ದಿನಗಳು ಸೇವಿಸಬೇಕು.
2. 4 ಚಮಚದಷ್ಟು ಆಡುಸೋಗೆ ರಸವನ್ನು ಜೇನುತುಪ್ಪದೊಂದಿಗೆ ದಿನಕ್ಕೆರಡು ಬಾರಿ ಖಾಲಿ ಹೊಟ್ಟೆಯಲ್ಲಿ 15 ರಿಂದ 21 ದಿನಗಳು ಸೇವಿಸಬೇಕು.
ಇವುಗಳಿಂದ ಶಮನವಾಗದಿದ್ದರೆ ವೈದ್ಯರ ಬಳಿ ತಪಾಸಣೆ ಅಗತ್ಯ.
ಬಿಳಿಸ್ರಾವ
ಋತುಸ್ರಾವದ ನಂತರ 10 ರಿಂದ 20 ದಿನಗಳಲ್ಲಿ ಯೋನಿಯಿಂದ ಸ್ವಲ್ಪ ಪ್ರಮಾಣದಲ್ಲಿ ಬಿಳಿ ಸ್ರಾವ ಆಗುತ್ತದೆ. ಮಾಸಿಕ ಸ್ರಾವದ ಒಂದೆರಡು ದಿನಗಳ ಮುಂಚೆಯೂ ಸ್ವಲ್ಪ ಪ್ರಮಾಣದಲ್ಲಿ ಬಿಳಿ ಸ್ರಾವ ಆಗುತ್ತದೆ. ಇದು ಸ್ವಾಭಾವಿಕ ಸ್ರಾವ. ಇದಕ್ಕೆ ವಾಸನೆ ಇರುವುದಿಲ್ಲ. ಆದರೆ ಇದೇ ಬಿಳಿ ಸ್ರಾವ ಅತಿ ಆದರೆ ಮತ್ತು ಹಳದಿ ಬಣ್ಣದಿಂದ ಕೂಡಿದ್ದು, ಮೊಸರಿನಂತೆ ಗಟ್ಟಿಯಾಗಿದ್ದರೆ ಹಾಗೂ ಯೋನಿ ಮಾರ್ಗದಲ್ಲಿ ತುರಿಕೆ ಉರಿ ಕಂಡು ಬಂದರೆ ಚಿಕಿತ್ಸೆ ಅವಶ್ಯಕ. ಇದು ಜನನಾಂಗ ಮಾರ್ಗದ ಸೋಂಕನ್ನು ಸೂಚಿಸುತ್ತದೆ.
1. ಬಿಳಿ ಸ್ರಾವಕ್ಕೆ ಮುಖ್ಯ ಕಾರಣವೆಂದರೆ ಜನನಾಂಗ ಸ್ವಚ್ಛತೆ ಕಾಪಾಡಿಕೊಳ್ಳದಿರುವುದು.
2. ಜನನಾಂಗ ಮಾರ್ಗವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಪ್ರತಿ ಬಾರಿ ಮಲ, ಮೂತ್ರ ವಿಸರ್ಜನೆಯ ನಂತರ ಜನನಾಂಗವನ್ನು ನೀರಿನಿಂದ ಸ್ವಚ್ಛಗೊಳಿಸಬೇಕು.
3. ಮಾಸಿಕ ಋತುಸ್ರಾವದ ಸಮಯದಲ್ಲಿ ಸ್ವಚ್ಛವಾದ ಹತ್ತಿಯ ಬಟ್ಟೆಗಳನ್ನೇ ಬಳಸುವುದು ಉತ್ತಮ.
4. ನ್ಯಾಪ್‍ಕಿನ್‍ಗಳನ್ನು ಪದೇ ಪದೇ ಬದಲಾಯಿಸುತ್ತಿರಬೇಕು.
5. ಒಳ ಉಡುಪುಗಳನ್ನು ಹಾಗೂ ನ್ಯಾಪ್‍ಕಿನ್‍ಗಳಂತೆ ಬಳಸಿದ ಬಟ್ಟೆಗಳನ್ನು ಸ್ವಚ್ಛವಾಗಿ ಸಾಬೂನಿನಿಂದ ಹಾಗೂ ಬಿಸಿನೀರಿನಿಂದ ತೊಳೆದು ಬಿಸಿಲಿನಲ್ಲಿಯೇ ಒಣಗಿಸುವುದು ಒಳ್ಳೆಯದು.
6. ಒಮ್ಮೆ ಬಳಸಿದ ಬಟ್ಟೆಗಳನ್ನು ಹಾಗೂ ನ್ಯಾಪ್‍ಕಿನ್‍ಗಳನ್ನು ಪುನ: ಬಳಸದೆ ಇರುವುದು ಸೂಕ್ತ.
7. ತ್ರಿಫಲಾ ಪುಡಿಯಿಂದ ಕಷಾಯ ತಯಾರಿಸಿ, ಅದರಿಂದ ಜನನಾಂಗವನ್ನು ಸ್ವಚ್ಛಗೊಳಿಸಿಕೊಳ್ಳಬೇಕು.
8. ಉದ್ದಿನ ಹಿಟ್ಟು, ಜೇಷ್ಠಮಧು ಪುಡಿ, ಅಶ್ವಗಂಧ ಪುಡಿಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಒಂದು ಚಮಚ ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸುವುದು ಉತ್ತಮ.
ಮುಟ್ಟಿನ ಹೊಟ್ಟೆ ನೋವು
ಋತುಸ್ರಾವಕ್ಕೆ ಮುಂಚೆ ಹಾಗೂ ಸ್ರಾವ ಆರಂಭವಾದ ನಂತರ ಹೊಟ್ಟೆನೋವು ಸಾಮಾನ್ಯವಾಗಿ ಕಂಡು ಬರುವ ಲಕ್ಷಣ ಕೆಲವರಲ್ಲಿ ಕೆಳಹೊಟ್ಟೆ ನೋವು, ಸೊಂಟ, ಕಾಲುಗಳಲ್ಲಿ ಸೆಳೆತ ಕಾಣಿಸಿಕೊಳ್ಳುತ್ತದೆ. ಇನ್ನು ಕೆಲವರಲ್ಲಿ ಮುಂಚೆಯೇ ನೋವು ಕಾಣಿಸಿಕೊಳ್ಳುತ್ತದೆ. ಸ್ರಾವ ಆರಂಭವಾದ ನಂತರ ನೋವು ಶಮನವಾಗುತ್ತದೆ. ಇದರೊಂದಿಗೆ ತಲೆಸುತ್ತು, ವಾಂತಿ ಮಲಬದ್ಧತೆ, ಎದೆ ಬಿಗಿತದಂಥಹ ಸಮಸ್ಯೆ ಕಂಡು ಬರಬಹುದು. ಮಾನಸಿಕ ಹಿನ್ನಲೆ ಆತಂಕಗಳು ಕೂಡ ಕಂಡು ಬರುತ್ತವೆ.
ಪರಿಹಾರ
1. ಮುಟ್ಟಿನ ಸಮಯದಲ್ಲಿ ಎರಡು ಚಮಚ ಜೀರಿಗೆಯನ್ನು ಹುರಿದು ಎರಡು ಲೋಟ ನೀರಿಗೆ ಸೇರಿಸಿ, ಕುದಿಸಿ ಅರ್ಧದಷ್ಟು ಇಳಿಸಿ, ಸೋಸಿ, ಸ್ವಲ್ಪ ಬಿಸಿ ಇರುವಾಗಲೇ ಒಂದು ಚಿಕ್ಕ ಲಿಂಬೆ ಹಣ್ಣಿನ ಗಾತ್ರದಷ್ಟು ಬೆಣ್ಣೆಯನ್ನು ಸೇರಿಸಿ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಉತ್ತಮ. ಇದನ್ನು ಸ್ರಾವ ಆರಂಭವಾಗುವ ಒಂದು ವಾರ ಮುಂಚೆಯೇ ಪ್ರಾರಂಭಿಸಿ, ಮಾಸಿಕ ಋತು ಸ್ರಾವದ ನಾಲ್ಕೂ ದಿನಗಳೂ ಸೇವಿಸಿದೆರೆ ಹೊಟ್ಟೆ ನೋವು ಕಡಿಮೆ ಆಗುತ್ತದೆ.
2. ಜೀರಿಗೆಯನ್ನು ಹುರಿದು ಪುಡಿ ಮಾಡಿ ಇಟ್ಟುಕೊಳ್ಳಬೇಕು. ಹೊಟ್ಟೆ ನೋವು ಇರುವ ಸಮಯದಲ್ಲಿ ಬೆಲ್ಲವನ್ನು ಸೇರಿಸಿ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಅಗಿದು ತಿನ್ನುವುದೂ ಕೂಡಾ ಸಹಕಾರಿ.
3. ಮುಟ್ಟಿನ ಸಮಯದಲ್ಲಿ ಕಡಲೇಕಾಳು ಗಾತ್ರದ ಇಂಗನ್ನು ತುಪ್ಪದಲ್ಲಿ ಹುರಿದು, ಬಿಸಿ ನೀರಿನಲ್ಲಿ ದಿನಕ್ಕೆರಡು ಬಾರಿ ಸೇವಿಸಬೇಕು.
4. ಮಾಸಿಕ ಸ್ರಾವ ಆರಂಭವಾಗುವ ಏಳು ದಿನಗಳ ಮುಂಚೆಯೇ ಶುಂಠಿ, ಮೆಣಸು, ಹಿಪ್ಪಲಿ – ಇವುಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಪುಡಿ ಮಾಡಿ ದಿನಕ್ಕೆರಡು ಬಾರಿ ಅರ್ಧ ಚಮಚ ತುಪ್ಪದಲ್ಲಿ ಬೆರೆಸಿ, ಸೇರಿಸಿ ಬಿಸಿ ನೀರನ್ನು ಕುಡಿಯಬೇಕು ಇದೂ ಕೂಡ ಋತುಸ್ರಾವದ ಸಮಯದ ಹೊಟ್ಟೆ ನೋವನ್ನು ಶಮನ ಮಾಡಲು ಸಹಕಾರಿ.
5. ಹೊಟ್ಟೆಯ ಮೇಲೆ ಬಿಸಿ ನೀರಿನ ಶಾಖ ಅಥವಾ hoಣ bಚಿg ಗಳಿಂದಲೂ ಶಾಖವನ್ನು ಕೊಡುವುದು ಉತ್ತಮ.
ಮೊಡವೆಗಳು ಮತ್ತು ಪರಿಹಾರ
ಹದಿ ಹರೆಯದಲ್ಲಿ ಆಗುವ ಹಾರ್ಮೋನುಗಳ ಬದಲಾವಣೆಯೇ ಮೊಡವೆಗಳ ಉತ್ಪತ್ತಿಗೂ ಕಾರಣ
ಪರಿಹಾರ
1. ಅತಿಯಾದ ಸೌಂದರ್ಯ ವರ್ಧಕಗಳ ಬಳಕೆ ಸಲ್ಲದು.
2. ಕಡಲೆ ಹಿಟ್ಟಿಗೆ ಸ್ವಲ್ಪ ಅರಿಶಿನವನ್ನು ಸೇರಿಸಿ ಹಾಲಿನ ಕೆನೆಯೊಂದಿಗೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ನಂತರ ಮುಖವನ್ನು ತಣ್ಣೀರಿನಿಂದ ಸ್ವಚ್ಛಗೊಳಿಸಿಕೊಳ್ಳಬೇಕು.
3. ಲೋಳೆಸರದ ತಿರುಳನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮೊಡವೆಯ ಕಲೆಗಳು ಸ್ವಲ್ಪ ದಿನಗಳಲ್ಲಿಯೇ ಮಾಯವಾಗುತ್ತದೆ.
4. ಬಜೆ ಲೋಧ್ರ ಹಾಗೂ ಕೊತ್ತಂಬರಿ ಪುಡಿಯನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ, ಮೊಸರು ಅಥವಾ ಜೇನುತುಪ್ಪದೊಂದಿಗೆ ಕಲಸಿ, ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ಮುಖವನ್ನು ತೊಳೆಯುವುದೂ ಕೂಡ ಮೊಡವೆಗಳಿಗೆ ಉತ್ತಮ ಪರಿಹಾರ.
5. ಅರಿಶಿಣ ಹಾಗೂ ಜೇನುತುಪ್ಪವನ್ನು ಮಿಶ್ರಣ ಮಾಡಿ ಹಚ್ಚಿಕೊಳ್ಳಬಹುದು.
6. ಅತಿಯಾದ ಕ್ಷಾರವುಳ್ಳ ಸಾಬೂನಿನ ಬಳಕೆ ಬೇಡ.
7. ದಿನ ನಿತ್ಯವೂ ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಾಲಿನ ಕೆನೆಯನ್ನು ಹಚ್ಚಿ ಬೆಳಿಗ್ಗೆ ತಣ್ಣೀರಿನಿಂದ ಮುಖ ತೊಳೆಯುವುದರಿಂದ ಮುಖದ ಕಾಂತಿ ಹೆಚ್ಚುವುದು.
ಹದಿ ಹರೆಯದವರಿಗೆ ಕಿವಿ ಮಾತು
1. ಕ್ರಮಬದ್ಧವಾದ ವ್ಯಾಯಾಮ, ಯೋಗ, ಪ್ರಾಣಾಯಾಮಗಳನ್ನು ರೂಢಿಸಿಕೊಳ್ಳಿ ಇದರಿಂದ ದೇಹ ಹಾಗೂ ಮನಸ್ಸು ಸದೃಢಗೊಳ್ಳುತ್ತದೆ.
2. ಯಾವುದಾದರೂ ಒಂದು ಕ್ರೀಡೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ.
3. ಕ್ರಮಬದ್ಧವಾದ ಪಠ್ಯ – ಪುಸ್ತಕಗಳ ಓದು, ಕ್ರಮಬದ್ಧವಾದ ದಿನಚರಿಗಳನ್ನು ರೂಢಿಸಿಕೊಳ್ಳಿ.
4. ಸಾಮಾನ್ಯವಾಗಿ ಹದಿಹರೆಯದವರಲ್ಲಿ ಬಣ್ಣ, ರೂಪು, ಎತ್ತರದ ಬಗ್ಗೆ ಕೀಳರಿಮೆ ಹುಟ್ಟಿಕೊಳ್ಳುತ್ತದೆ. ನಿಮ್ಮ ರೂಪನ್ನು ಇದ್ದಂತೆಯೇ ಒಪ್ಪಿಕೊಳ್ಳಿ.
5. ನಿಮ್ಮನ್ನು ನೀವು ಪ್ರೀತಿಸುವುದನ್ನು ಕಲಿಯಿರಿ.
6. ಹಿರಿಯರೊಡನೆ ನಿಮ್ಮ ಸಮಸ್ಯೆಗಳನ್ನು ಚರ್ಚಿಸಿ ಗುರುಗಳ, ಹಿರಿಯರ ಸಲಹೆ, ಸೂಚನೆ, ಮಾರ್ಗದರ್ಶನಗಳನ್ನು ಪಡೆಯಿರಿ.
ತಂದೆ – ತಾಯಿಗಳಿಗೆ ಕಿವಿಮಾತು
1. ಬಾಲ್ಯ ಹಾಗೂ ಯೌವ್ವನದ ನಡುವಿನ ಅವಧಿಯಾದ ಹದಿಹರೆಯ ಹುಡುಗಿಯರಲ್ಲಿ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬೆಳವಣಿಗೆಗೆ ಭದ್ರ ಅಡಿಪಾಯ ಹಾಕುವ ಕಾಲ. ಈ ಸಂದರ್ಭದಲ್ಲಿ ಕಂಡು ಬರುವ ಸಮಸ್ಯೆಗಳು ಸಾವಿರಾರು, ಪ್ರಶ್ನೆಗಳಿಗೆ ಪಾಲಕರು ಪರಿಹಾರವನ್ನು ತಿಳಿಸಬೇಕು.
2. ಹದಿಹರಯದವರನ್ನು ಸ್ನೇಹಿತರಂತೆ ನೋಡಿಕೊಳ್ಳಿ.
3. ಆಧುನೀಕರಣ ಹೆಚ್ಚಾದಂತೆ ಸುಲಭವಾಗಿ ದೊರಕುವ ಅಂತರ್ಜಾಲ, ಕಂಪ್ಯೂಟರ್, ಟಿ.ವಿ. ಮುಂತಾದ ದೃಶ್ಯ ಮಾಧ್ಯಮಗಳ ಮೂಲಕ ಅರೆಬರೆ ಮಾಹಿತಿಗಳನ್ನು ಹದಿಹರಯದವರು ತಿಳಿದುಕೊಂಡು ದಾರಿ ತಪ್ಪುವ ಸಾಧ್ಯತೆಗಳು ಹೆಚ್ಚು, ಆದ್ದರಿಂದ ಲೈಂಗಿಕ ಶಿಕ್ಷಣದ ಅರಿವು ಅಗತ್ಯ. ಇದರೊಂದಿಗೆ ನೈತಿಕ ಶಿಕ್ಷಣವು ಅಗತ್ಯ.
4. ಆಸಕ್ತಿಕರವಾದ ಹವ್ಯಾಸಗಳು (ಕಸೂತಿ, ಹಾಡು, ನೃತ್ಯ, ಓದು, ಬರವಣಿಗೆ) ಇತ್ಯಾದಿಗಳ ಬಗ್ಗೆ ಗಮನ ಹರಿಸಲೂ ಕೂಡ ಅವರನ್ನು ಪ್ರೇರೇಪಿಸಬೇಕು.
5. ಅಲ್ಲದೇ ಹಿರಿಯರು ಈ ಸಮಯದಲ್ಲಿ ಅವರನ್ನು ಪ್ರೀತಿಯಿಂದ ನೋಡಿಕೊಂಡು ಸಮಸ್ಯೆಗಳನ್ನು ಸಹನೆಯಿಂದ, ತಾಲ್ಮೆಯಿಂದ ಪರಿಹರಿಸುವುದೂ ಕೂಡ ಒಳ್ಳೆಯದು.
6. ಆದಷ್ಟು ಮಕ್ಕಳ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಗಮನ ಹರಿಸುವುದು ಉತ್ತಮ.
7. ಹದಿಹರೆಯದವರು ಖಿನ್ನತೆ, ಆತಂಕ, ಭಯ ಇತ್ಯಾದಿಗಳಿಂದ ಬಳಲುತ್ತಿದ್ದರೆ ತಜ್ಞರ ಮೂಲಕ ಆಪ್ತ ಸಮಾಲೋಚನೆ ಕೊಡಿಸುವುದು ಅಗತ್ಯ.
ಹದಿಹರೆಯ ಎನ್ನುವುದು ಒಂದು ಮಹತ್ತರವಾದ ಘಟ್ಟ. “ಬೆಳೆಯುವ ಸಿರಿ ಮೊಳಕೆಯಲ್ಲಿ” ಎನ್ನುವಂತೆ ಈ ಹಂತದಲ್ಲಿನ ಬದಲಾವಣೆಗಳು, ಅದರಿಂದಾಗುವ ಸಮಸ್ಯೆಗಳನ್ನು ಪ್ರಥಮ ಹಂತದಲ್ಲಿಯೇ ಪರಿಹರಿಸಲು ಪ್ರಯತ್ನಸಬೇಕು. ಇಂದಿನ ಯುವ ಪೀಳಿಗೆಯೇ ನಾಳಿನ ಸಮಾಜದ ನಿರ್ಮಾತೃಗಳು. ಹದಿಹರೆಯದ ಶಿಕ್ಷಣವು ಪ್ರಜ್ಞಾವಂತ, ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಪೂರಕವಾಗಬೇಕೇ ಹೊರತು ಮಾರಕವಾಗಬಾರದು.
ಮುಗಿಯಿತು.
ನಾಗಶ್ರಿ. ಕೆ.ಎಸ್.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!