Sugaturu, sidlaghatta : ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ತಾಲೂಕಿನ ಸುಗಟೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಸಿರು ಕ್ರಾಂತಿಯ ಸಂದೇಶ ಸಾರುವ ಮೂಲಕ ಸಸಿ ನೆಡುವ ಕಾರ್ಯಕ್ರಮ ಹಾಗೂ ಪರಿಸರ ಜಾಗೃತಿ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಯಿತು.
ಪರಿಸರ ಜಾಗೃತಿ ರ‍್ಯಾಲಿ:
ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಒಗ್ಗೂಡಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಪರಿಸರ ಸಂರಕ್ಷಣೆಯ ಕುರಿತಾದ ಭಿತ್ತಿಚಿತ್ರಗಳನ್ನು ಪ್ರದರ್ಶಿಸಿದರು. “ಪರಿಸರ ಉಳಿಸಿ-ಬೆಳೆಸಿ” ಎಂಬ ಘೋಷಣೆಗಳನ್ನು ಕೂಗುತ್ತಾ ಗ್ರಾಮಸ್ಥರಲ್ಲಿ ಪರಿಸರ ಪ್ರಜ್ಞೆಯನ್ನು ಜಾಗೃತಗೊಳಿಸಿದರು.
‘ಬೀಜದುಂಡೆ’ (ಸೀಡ್ ಬಾಲ್ಸ್) ಅಭಿಯಾನ:
ವಿದ್ಯಾರ್ಥಿಗಳು ಸ್ವತಃ ತಯಾರಿಸಿದ್ದ ನೂರಾರು ಬೀಜದುಂಡೆಗಳನ್ನು ಗ್ರಾಮದ ಸರ್ಕಾರಿ ಖಾಲಿ ಜಾಗಗಳು, ತೋಪುಗಳು ಹಾಗೂ ನಾಲೆಯ ಬದಿಗಳಲ್ಲಿ ಎಸೆಯುವ ಮೂಲಕ ಹಸಿರು ಹೊದಿಕೆ ಹೆಚ್ಚಿಸಲು ಮುಂದಾದರು. ಮುಂಬರುವ ಮಳೆಗಾಲದಲ್ಲಿ ಈ ಬೀಜಗಳು ಮೊಳಕೆಯೊಡೆದು ಮರಗಳಾಗಿ ಬೆಳೆಯಲಿ ಎಂಬುದು ಮಕ್ಕಳ ಆಶಯವಾಗಿತ್ತು.
ಪರಿಸರ ರಕ್ಷಣೆಯ ಕರೆ:
ಕಾರ್ಯಕ್ರಮದಲ್ಲಿ ಸುಂದರಲಾಲ್ ಬಹುಗುಣ ಇಕೋಕ್ಲಬ್‌ನ ಕಾರ್ಯದರ್ಶಿ ಎಚ್.ಎಸ್. ರುದ್ರೇಶಮೂರ್ತಿ ಮಾತನಾಡಿ, “ಪರಿಸರ ದೈವದತ್ತವಾದ ಅಮೂಲ್ಯ ಕೊಡುಗೆ. ಇದನ್ನು ನಾಶಮಾಡುವ ಹಕ್ಕು ನಮಗಿಲ್ಲ, ಮುಂದಿನ ಪೀಳಿಗೆಗೆ ಸುಂದರವಾಗಿ ಉಳಿಸಿಕೊಡುವುದು ನಮ್ಮೆಲ್ಲರ ಕರ್ತವ್ಯ” ಎಂದು ತಿಳಿಸಿದರು. ಅಲ್ಲದೆ, ಪ್ಲಾಸ್ಟಿಕ್ ಬಳಕೆಯಿಂದ ಜಾಗತಿಕ ತಾಪಮಾನ ಹೆಚ್ಚುತ್ತಿದೆ ಎಂದು ಎಚ್ಚರಿಸಿದ ಅವರು, ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕಿ ಪದ್ಮಶ್ರೀ, ಶಿಕ್ಷಕರಾದ ಎ.ಬಿ. ನಾಗರಾಜ, ಬಿ. ನಾಗರಾಜು, ಟಿ.ಎಂ. ಮಧು ಹಾಗೂ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ್, ಸದಸ್ಯರು, ಹಿರಿಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.








