Home Blog Page 520

ಧರ್ಮರಾಯಸ್ವಾಮಿ ದ್ರೌಪತಮ್ಮನವರ ಹೂವಿನ ಕರಗ

0

ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಮಂಗಳವಾರ ರಾತ್ರಿ ಧರ್ಮರಾಯಸ್ವಾಮಿ ದ್ರೌಪತಮ್ಮನವರ 27 ವರ್ಷದ ಹೂವಿನ ಕರಗವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಕರಗದ ಪ್ರಯುಕ್ತ ಆರ್ಕೆಸ್ಟ್ರಾ, ವಾಲಗ, ತಮಟೆ ಮತ್ತು ವಾದ್ಯವೃಂದವನ್ನು ಆಯೋಜಿಸಲಾಗಿತ್ತು. ಬೇತಮಂಗಲ ರಾಮಚಂದ್ರಪ್ಪ ರಾತ್ರಿಯಿಡೀ ಕರಗವನ್ನು ಹೊತ್ತು ತಮಟೆಯ ವಾದನದೊಂದಿಗೆ ಊರೆಲ್ಲಾ ಸುತ್ತಿದಾಗ ದಾರಿಯುದ್ದಕ್ಕೂ ಮಲ್ಲಿಗೆ ಹೂಗಳನ್ನು ಅರ್ಪಿಸಿ, ಆರತಿ ಬೆಳಗುತ್ತಿದ್ದರು. ಕೆಲವೆಡೆ ಕರಗದ ಆಗಮನಕ್ಕಾಗಿ ರಸ್ತೆಯ ಮೇಲೆಲ್ಲಾ ರಂಗವಲ್ಲಿಯನ್ನು ಬಿಡಿಸಲಾಗಿತ್ತು.
ಹೂವಿನ ಕರಗ ಮಲ್ಲಿಗೆಮಯ ಕಳಸದ ಮೆರವಣಿಗೆ. ಪರಿಮಳಯುಕ್ತ ಮಲ್ಲಿಗೆ ಹೂವಿಂದ ಅಲಂಕರಿಸಲಾದ ಕರಗವು ಸುವಾಸನೆ ಬೀರುತ್ತಾ ಅಲೌಕಿಕವಾದ ಸನ್ನಿವೇಶವನ್ನು ಸೃಷ್ಟಿಸುತ್ತದೆ. ಹೂವಿನ ಕರಗಕ್ಕೂ ಮೊದಲು ಅನೇಕ ಧಾರ್ಮಿಕ ವಿಧಿ ವಿಧಾನಗಳು ಕರಗದ ಕುಂಟೆ ಹಾಗೂ ಶಕ್ತಿ ಪೀಠಗಳಲ್ಲಿ ನಡೆಯುತ್ತವೆ. ವೀರಕುಮಾರರು, ಗೌಡರು, ಗಣಾಚಾರಿ, ಘಂಟೆಪೂಜಾರರು ಹಾಗೂ ಚಾಕರಿದಾರರು ಶಕ್ತಿಪೀಠದಲ್ಲಿ ಕರಗಕರ್ತ ಪೂಜಾರಿಯನ್ನು ಕರಗ ಧರಿಸುವುದಕ್ಕೆ ಧಾರ್ಮಿಕ ಸಂಪ್ರದಾಯಗಳನ್ನು ಅಣಿಗೊಳಿಸುವರು.
ಹಾಲು ಬಣ್ಣದ ಸುವಾಸನೆ ಬೀರುವ ಸೌಂದರ್ಯದ ಹೂ ಮಲ್ಲಿಗೆ ಕರಗ ಕಳಸವೂ ಸೇರಿದಂತೆ ಎಲ್ಲೆಡೆ ಸಲ್ಲುತ್ತದೆ. ವೀರಕುಮಾರರ ಹಾರಗಳಿಂದ ಹಿಡಿದು ಕರಗದ ಎಲ್ಲಾ ಉತ್ಸವಗಳಲ್ಲೂ ಮಲ್ಲಿಗೆ ಹೂಗಳಿಗೆ ಮೊದಲ ಆದ್ಯತೆ.
ಗ್ರಾಮದ ಧರ್ಮರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಶಾತ್ರೋಕ್ತವಾಗಿ ಜರುಗಿಸಲಾಯಿತು. ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ, ವಹ್ನೀಕುಲ ಕ್ಷತ್ರಿಯರ ಟ್ರಸ್ಟ್ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.

ಪರೀಕ್ಷೆ ಬೇಕು ಪ್ರಗತಿಗೆ

0

ಪರೀಕ್ಷೆ ಎನ್ನುವುದು ನಾವು ಏನನ್ನು, ಎಷ್ಟರಮಟ್ಟಿಗೆ, ಹೇಗೆ ಓದಿದೆವು ಎನ್ನುವುದರ ಮೌಲ್ಯ ಮಾಪನ ಆಗದಿದ್ದರೆ ನಮ್ಮ ಪ್ರಯತ್ನದ ಹಂತ ನಮಗೆ ಅರಿವಾಗುವುದಿಲ್ಲ. ಒಂದು ವೇಳೆ ನಮ್ಮನ್ನು ನಾವು ಉತ್ತಮಪಡಿಸಿಕೊಳ್ಳಬೇಕಾದಲ್ಲಿ ಪರೀಕ್ಷೆ ಒಂದು ಅತ್ಯುತ್ತಮ ಅವಕಾಶ. ಆದ್ದರಿಂದ ಪರೀಕ್ಷೆಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿರಿ.
1. ಪರೀಕ್ಷೆಯ ಭೀತಿ ಬೇಡ. ಸಂತೋಷದಿಂದ ಸ್ವೀಕರಿಸಿರಿ. ಪರೀಕ್ಷೆಗೆ ಸಿದ್ಧತೆ ಬಹಳ ಮುಖ್ಯ. ವರ್ಷದ ಮೊದಲಿನಿಂದ ಸರಿಯಾದ ಕ್ರಮದಲ್ಲಿ ತಯಾರಿಯಾಗಿದ್ದರೆ ಪರೀಕ್ಷೆ ಸುಲಭವಾಗುತ್ತದೆ.
2. ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಸಂಗ್ರಹಿಸಿಕೊಂಡು ಉತ್ತರಗಳನ್ನು ಉತ್ತರಿಸಿ. ಉತ್ತರಗಳನ್ನು ಬರೆದು ಅಭ್ಯಾಸ ಮಾಡುವುದು ಒಳ್ಳೆಯದು.
3. ಉತ್ತರಗಳನ್ನು ಪ್ರಶ್ನೆಗೆ ಎಷ್ಟು ಅಂಕಗಳನ್ನು ನಿಗದಿ ಮಾಡಿರುತ್ತಾರೋ ಅದಕ್ಕೆ ತಕ್ಕಂತೆ ಉತ್ತರವನ್ನು ಬರೆಯಬೇಕು
4. ಓದುವುದು, ಅರ್ಥ ಮಾಡಿಕೊಳ್ಳುವುದು, ಮನನ ಮಾಡಿಕೊಳ್ಳುವುದು ಹಾಗೂ ಪರೀಕ್ಷೆಯ ಸಮಯಕ್ಕೆ ಸರಿಯಾಗಿ ಬರಿಯುವುದೂ ಬಹಳ ಮುಖ್ಯ.
5. ಪರೀಕ್ಷೆಯ ಸಂದರ್ಭದಲ್ಲಿ ಸರಿಯಾದ ಪ್ರಮಾಣದ ಆಹಾರಸೇವನೆ, ಒಳ್ಳೆಯ ನಿದ್ದೆ, ಸಮಯ ಪಾಲನೆ ಬಹಳ ಮುಖ್ಯ. ಬಾಯಿಪಾಠ ಮಾಡಬೇಕಾದ ಅಂಶಗಳನ್ನು ಸರಿಯಾದ ಕಾಲಕ್ಕೆ ಮಾಡಬೇಕು.
6. ವಿಜ್ಞಾನ, ಗಣಿತಶಾಸ್ತ್ರ ವಿಷಯಗಳಲ್ಲಿ ಚಿತ್ರಗಳನ್ನು ಸರಿಯಾಗಿ ಬಿಡಿಸಿ ಭಾಗಗಳನ್ನು ಗುರುತಿಸುವ ಅಭ್ಯಾಸವನ್ನು ಬೆಳಿಸಿಕೊಳ್ಳಬೇಕು. ಮುಖ್ಯಾಂಶ, ಸಾರಾಂಶಗಳನ್ನೆಲ್ಲಾ ಕ್ರಮವಾಗಿ ಗುರುತು ಮಾಡಿಕೊಂಡಿರಬೇಕು. ಅಗತ್ಯವಿದ್ದಾಗ ಸುಲಭವಾಗಿ ನಮಗೆ ದೊರೆಯುವಂತಿರಬೇಕು
7. ಪ್ರತಿ ವಿಷಯಕ್ಕೆ ಸಂಬಂಧಿಸಿದ ನೋಟ್ಸ್ ಗಳನ್ನು ತಯಾರಿಸಿ ಇಟ್ಟುಕೊಂಡಿರಬೇಕು. ಅತಿಯಾಗಿ ನಿದ್ದೆಗೆಡುವುದು, ಹೊರಗಿನ ತಿಂಡಿ ಸೇವನೆ, ಸ್ನೇಹಿತರೊಡನೆ ಅತಿಯಾದ ಹರಟೆ ಸಲ್ಲ.
8. ಪರೀಕ್ಷೆಯ ಸಮಯದಲ್ಲಿ ನೀರು-ಹಣ್ಣು-ತರಕಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು.
9. ಪರೀಕ್ಷೆಗೆ ಬೇಕಾದ ಪೆನ್, ಪೆನ್ಸಿಲ್, ಎರೇಸರ್, ಜಾಮಿಟ್ರಿ ಬಾಕ್ಸ್, ಪರೀಕ್ಷಾ ಪ್ರವೇಶ ಪತ್ರ-ಮೊದಲಾದುವುಗಳನ್ನು ಜೋಡಿಸಿಕೊಂಡು ತೆಗೆದುಕೊಂಡು ಹೋಗಬೇಕು. ಈ ಕೆಲಸವನ್ನು ವಿದ್ಯಾರ್ಥಿಗಳು ಸ್ವತ: ಮಾಡಿಕೊಳ್ಳಬೇಕು. ಹಿರಿಯರನ್ನು ಸಹಾಯಕ್ಕಾಗಿ ಕಾಯಬಾರದು.
10. ನೀರು ಹಾಗೂ ಗ್ಲೂಕೋಸ್ ಗಳನ್ನು ಪರೀಕ್ಷಾ ಕೊಠಡಿಗೆ ತೆಗೆದುಕೊಂಡು ಹೋಗುವುದು ಒಳ್ಳೆಯದು (ಆದರೆ ಪರೀಕ್ಷಾ ಕೊಠಡಿಗೆ ಅವುಗಳನ್ನು ತೆಗೆದುಕೊಂಡು ಹೋಗಲು ಅನುಮತಿ ಇದೆಯೇ ಎಂದು ಪರೀಕ್ಷಿಸಿ ನಂತರ ತೀರ್ಮಾನವನ್ನು ಕೈಗೊಳ್ಳಿರಿ)
11. ಪರೀಕ್ಷೆಯು ಪ್ರಾರಂಭವಾಗುವುದಕ್ಕೆ ಅರ್ಧ ಗಂಟೆ ಮುಂಚಿತವಾಗಿಯೇ ಪರೀಕ್ಷಾ ಕೇಂದ್ರಕ್ಕೆ ತಲುಪಿ ನೀವು ಕುಳಿತುಕೊಳ್ಳುವ ಸ್ಥಳವನ್ನು ಖಚಿತಪಡಿಸಿಕೊಳ್ಳಿರಿ.
12. ಪರೀಕ್ಷೆಯ ಹಿಂದಿನ ದಿನದ ರಾತ್ರಿ ನಿದ್ದೆಗೆಡದೆ, ಆತಂಕಪಡದೆ ಹಾಗೂ ಸರಳವಾದ ಆಹಾರವನ್ನು ಸೇವಿಸಿ ಪರೀಕ್ಷೆಗೆ ತೆರಳಬೇಕು.
13. “ನಾನು ಪರೀಕ್ಷೆಯಲ್ಲಿ ಚೆನ್ನಾಗಿ ಉತ್ತರಿಸುತ್ತೇನೆ” ಎಂಬ ಆತ್ಮವಿಶ್ವಾಸ ಸದಾ ನಿಮಗಿರಬೇಕು. ಆಗ ಪರೀಕ್ಷೆಯು ನಿಮಗೆ ಸುಲಭವಾಗುತ್ತದೆ.
14. ಯಾವ ಪ್ರಶ್ನೆಗಳಿಗೆ ಚೆನ್ನಾಗಿ ಉತ್ತರ ತಿಳಿದಿದೆಯೋ ಅವುಗಳನ್ನು ಮೊದಲು ಉತ್ತರಿಸಿ. ಅನಂತರ ಉಳಿದ ಭಾಗವನ್ನು ಉತ್ತರಿಸಲು ಆರಂಭಿಸಿರಿ. ಮೊದಲು ಆಲೋಚಿಸಿ ನಂತರ ಉತ್ತರಿಸಿ.
15. ಪರೀಕ್ಷೆ ಆರಂಭವಾಗುವ ಮುನ್ನ ಮತ್ತು ನಂತರ ನಿಮ್ಮ ಸ್ನೇಹಿತರೊಡನೆ ಚರ್ಚಿಸಬೇಡಿರಿ. ಇದರಿಂದ ನಿಮ್ಮ ಮುಂದಿನ ಪರೀಕ್ಷೆಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ.
16. ಪರೀಕ್ಷೆ ಮುಗಿದ ನಂತರ ಫಲಿತಾಂಶದ ಬಗ್ಗೆ ಅತಿನಿರೀಕ್ಷೆ ಬೇಡ. ಪರೀಕ್ಷೆಯನ್ನು ಚೆನ್ನಾಗಿ ಎದುರಿಸಿದ ತೃಪ್ತಿ ಇರಲಿ.
17. ದೇವರ ಧ್ಯಾನ, ಗುರುಹಿರಿಯರ ಆಶೀರ್ವಾದ-ಇವುಗಳು ಪರೀಕ್ಷೆಗೆ ಮುನ್ನ ಅತ್ಯಗತ್ಯ.
18. ಅಗತ್ಯವಿರುವ ಕಡೆಗಳಲ್ಲಿ ಚಿತ್ರ, ರೇಖಾಚಿತ್ರ, ಸರಳ ಅಂಶಗಳು-ಇವುಗಳ ಮುಖಾಂತರ ಉತ್ತರಿಸುವುದು ಒಳ್ಳೆಯದು. ಜೀವಶಾಸ್ತ್ರ, ಸಸ್ಯಶಾಸ್ತ್ರಗಳಂಥ ವಿಷಯಗಳಲ್ಲಿ ಚಿತ್ರ ಬರೆದ ನಂತರ ಅದರ ಬಿಡಿಭಾಗಗಳನ್ನು ಗುರುತಿಸುವುದನ್ನು ಮರೆಯದಿರಿ. ಇದರಿಂದ ಮೌಲ್ಯಮಾಪಕರಿಗೆ ನಿಮ್ಮ ಸ್ಪಷ್ಟತೆಯನ್ನು ತಿಳಿಸಿದಂತಾಗುತ್ತದೆ.
19. ಚಿಕ್ಕ ಚಿಕ್ಕ ವಾಕ್ಯಗಳಲ್ಲಿ, ಸ್ಪಷ್ಟವಾಗಿ, ಸರಳವಾಗಿ ಉತ್ತರಿಸಿ. ಒಮ್ಮೆ ಬರೆದು ಅದನ್ನು ತಿದ್ದುವುದು ಮತ್ತು ಕತ್ತರಿಸುವುದು ಒಳ್ಳೆಯ ಅಭ್ಯಾಸವಲ್ಲ. ಇದರಿಂದ ಮೌಲ್ಯಮಾಪಕರಿಗೆ ನಿಮ್ಮ ಸ್ಪಷ್ಟತೆಯ ಬಗ್ಗೆ ಅನುಮಾನ ಬರುವ ಸಾಧ್ಯತೆ ಇರುತ್ತದೆ.
20. ಪರೀಕ್ಷೆಗೆ ಮೊದಲೇ ಆಯಾ ವಿಷಯದ ಗುರುಗಳ ಬಳಿ ಕುಳಿತು ಹೇಗೆ ಉತ್ತರಿಸಬೇಕು, ಹೇಗೆ ಉತ್ತರಿಸಿದರೆ ಉತ್ತಮ ಅಂಕಗಳನ್ನು ಪಡೆಯಬಹುದು ಎಂಬುದರ ಬಗೆಗೆ ವಿವರವಾಗಿ ತಿಳಿದುಕೊಳ್ಳಿರಿ. ಆ ದಿಕ್ಕಿನಲ್ಲಿ ಉತ್ತರಿಸಲು ನಿಮ್ಮ ಮನಸ್ಸನ್ನು ಸಿದ್ಧಗೊಳಿಸಿಕೊಳ್ಳಿರಿ.
21. ಭಾಷೆ (ಇಂಗ್ಲಿಷ್, ಕನ್ನಡ, ಸಂಸ್ಕøತ ಮೊದಲಾದುವು) ಗಣಿತ, ಸಮಾಜವಿಜ್ಞಾನ, ವಿಜ್ಞಾನ-ಹೀಗೆ ಆಯಾ ವಿಷಯಗಳಿಗೆ ಅನುಸಾರವಾಗಿ ನಿಮ್ಮ ಉತ್ತರಿಸುವ ಶೈಲಿಯು ಬೇರೆ ಬೇರೆಯದಾಗಿರುತ್ತದೆ. ಆ ಶೈಲಿಗಳನ್ನು ಪರೀಕ್ಷೆಗೆ ಮೊದಲೇ ಅಭ್ಯಾಸ ಮಾಡಿಕೊಳ್ಳಿರಿ.
22. ನಿಮ್ಮ ಬರವಣಿಗೆಯಲ್ಲಿ, ಉತ್ತರಿಸುವ ರೀತಿಯಲ್ಲಿ ಶಿಸ್ತನ್ನು ಕಾಪಾಡಿಕೊಳ್ಳಬೇಕು.
23. ಪ್ರಶ್ನೆಯ ಸಂಖ್ಯೆಯನ್ನು ಯಾವ ಅನುಮಾನವೂ ಇಲ್ಲದೆ ನಮೂದಿಸಿ. ಅನಂತರ ಉತ್ತರವನ್ನು ಬರೆಯಲು ಆರಂಭಿಸಿರಿ.
24. ನಿಮ್ಮ ವಿದ್ಯಾಭ್ಯಾಸದಲ್ಲಿ ನೀವು ಮುಂದೆ ಸಾಗಲು ಪರೀಕ್ಷೆಯು ಒಂದು ಮಾಧ್ಯಮವಷ್ಟೇ. ಹಾಗಾಗಿ ಜ್ಞಾನಾರ್ಜನೆಯ ಬಗ್ಗೆ ಹೆಚ್ಚು ಗಮನಕೊಟ್ಟು ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.
ಡಾ. ಶ್ರೀವತ್ಸ
 

ನೀರಿನ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ

0

ನೀರಿನ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲ್ಲೂಕು ಘಟಕದ ಪದಾಧಿಕಾರಿಗಳು ಸೋಮವಾರ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ತಾಲ್ಲೂಕು ಕಚೇರಿಯ ಮುಂದೆ ಧರಣಿ ನಡೆಸಿದರು.
ಬಯಲು ಸೀಮೆ ಜಿಲ್ಲೆಗಳಿಗೆ ಪರಮಶಿವಯ್ಯನವರ ವರದಿಯಾಧಾರಿತ ಶಾಶ್ವತ ನೀರಾವರಿ ಯೋಜನೆ ತಕ್ಷಣ ಜಾರಿಗೊಳಿಸಬೇಕು. ಬೇಸಿಗೆಯಿಂದಾಗಿ ತಾಲ್ಲೂಕಿನಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿದೆ. ಗ್ರಾಮೀಣ ಭಾಗದಲ್ಲಿ ತಕ್ಷಣ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಬೇಕು. ಜಾನುವಾರುಗಳಿಗೆ ಮೇವನ್ನು ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ವಿತರಿಸಬೇಕು ಮತ್ತು ಗೋಶಾಲೆಗಳನ್ನು ತೆರೆಯಬೇಕು. ಕೆರೆಗಳಲ್ಲಿ ಹೂಳೆತ್ತಿಸಬೇಕು, ರಾಜಕಾಲುವೆಗಳನ್ನು ತೆರವುಗೊಳಿಸಬೇಕು ಹಾಗೂ ಪ್ರತಿ ಹಳ್ಳಿಗೆ ಹೋಗುವ ರಸ್ತೆಗಳ ಬದಿಯಲ್ಲಿ ಸಸಿಗಳನ್ನು ನೆಟ್ಟು ಪೋಷಣೆಯ ಜವಾಬ್ದಾರಿ ಗ್ರಾಮ ಪಂಚಾಯತಿಗಳಿಗೆ ವಹಿಸಬೇಕು. ಸರ್ಕಾರಿ ಭೂಮಿ ಉಳುಮೆ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡಬೇಕು. ಕೃಷಿ ಹೊಂಡಕ್ಕೆ ಶೇಕಡಾ 80 ರಷ್ಟು ಸಹಾಯದನ ನೀಡಬೇಕೆಂಬ ಮನವಿಪತ್ರವನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಡಲು ತಹಶೀಲ್ದಾರರಿಗೆ ಸಲ್ಲಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ಮುನಿಕೆಂಪಣ್ಣ, ಪ್ರಧಾನ ಕಾರ್ಯದರ್ಶಿ ಬಾಲಮುರಳಿಕೃಷ್ಣ, ಪ್ರತೀಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಸ್ತ್ರ ಸಂಹಿತೆ ಮೊದಲು ಗಂಡಸರಿಗೆ!

0

ನಾನಾಗ ಪ್ರೌಢಶಾಲೆಯಲ್ಲಿದ್ದೆ. ನಾವಿದ್ದ ಹಳ್ಳಿಯಂತಹ ಊರಿನಲ್ಲಿ ಚಡ್ಡಿ ಹಾಕಿಕೊಂಡು ಶಾಲೆಗೆ ಬರುವುದೇ, ಗಂಗಾವತಿ ಪ್ರಾಣೇಶ್ ಹೇಳುವಂತೆ ಒಂದು ವೈಭವವಾಗಿತ್ತು. ಹೆಚ್ಚಿನವರ ಚಡ್ಡಿ ಕೂಡ ಕಡಲೆ ಹಿಟ್ಟು ಖಾಲಿಯಾದ ಮೇಲೆ ಉಳಿಯುವ ಚೀಲದಿಂದ ಹೊಲೆಸಿದ್ದು. ಆಗೊಂದು ದಿನ ನಾವು ನಾಲ್ಕೈದು ಸ್ನೇಹಿತರು ಶಾಲೆಗೆ ಪಂಚೆ ಉಟ್ಟುಕೊಂಡು ಬರಬೇಕೆಂದು ನಿರ್ಧರಿಸಿದೆವು. ಆದರೆ ನಾವು ಎಂತಹ ಪಂಚೆ ಎಂದು ಮಾತನಾಡಿಕೊಳ್ಳದೆ ಎಡವಟ್ಟು ಮಾಡಿಕೊಂಡಿದ್ದೆವು. ಮೂವರು ಬಿಳಿಯ ಮುಂಡು ಪಂಚೆಯಲ್ಲಿ ಬಂದರೆ ಉಳಿದಿಬ್ಬರು ಪಟ್ಟಿಪಟ್ಟಿ ಇರುವ ಲುಂಗಿ ಕಟ್ಟಿಕೊಂಡು ಬಂದುಬಿಟ್ಟರು. ಪ್ರಾರ್ಥನೆಯ ಸಮಯದಲ್ಲೇ ಇದನ್ನು ಗುರುತಿಸಿದ ಮುಖ್ಯೋಪಾಧ್ಯಯರು ಅವರಿಬ್ಬರನ್ನೂ ಮನೆಗೆ ಕಳುಹಿಸಿದರು. ಉಳಿದ ಮೂವರೂ ಸಂಜೆಯವರೆಗೆ ಕಷ್ಟದಿಂದ ಪಂಚೆಯನ್ನು ಜಾರಿಬೀಳದಂತೆ ಗಟ್ಟಿಯಾಗಿ ಹಿಡಿದುಕೊಂಡೇ ಕುಳಿತದ್ದೆವು. ಮರುದಿನದಿಂದ ಇಂತಹ ಪ್ರಯೋಗಗಳನ್ನು ಮಾಡುವ ಧೈರ್ಯವಾಗಲೇ ಇಲ್ಲ!
ಈ ವಸ್ತ್ರ ಸಂಹಿತೆ ಎನ್ನುವುದು ಎಲ್ಲ ಕಾಲ ದೇಶಗಳಲ್ಲೂ ಇರುವುದೇ ಎನ್ನುವುದಕ್ಕಾಗಿ ಮೇಲಿನ ಘಟನೆಯನ್ನು ಹೇಳಬೇಕಾಯಿತು. ಹೆಚ್ಚಿನ ಕಡೆ ಇದನ್ನು ಇದೇ ಹೆಸರಿನಲ್ಲಿ ವ್ಯವಸ್ಥಿತವಾಗಿ, ಕಡ್ಡಾಯವಾಗಿ ಜಾರಿಗೊಳಿಸಿರುವುದಿಲ್ಲ. ಆದರೆ ಅಲಿಖಿತ ರೂಪದಲ್ಲಿರುತ್ತದೆ, ಅಷ್ಟೇ. ಹೆಣ್ಣು ಮಕ್ಕಳು ಸಮಾರಂಭಗಳೆಂದರೆ ರೇಶ್ಮೆ ಸೀರೆ, ಆಭರಣಗಳಿಂದ ಅಲಂಕೃತರಾಗುವುದು, ಮೀಟಿಂಗ್‍ಗಳಿಗೆ ಸೂಟಿನಲ್ಲೇ ಬರುವ ಕಂಪನಿ ಅಧಿಕಾರಿಗಳು, ರಜಾದಿನಗಳಗಳಲ್ಲಿ ಟೀಷರ್ಟ್ ಜೀನ್ಸ್ ನಲ್ಲಿ ಮಿಂಚುವ ಪಟ್ಟಣದ ಮಧ್ಯವಯಸಿಗರು-ಹೀಗೆ. ಎಷ್ಟೋ ಮಠ, ದೇವಸ್ಥಾನಗಳಲ್ಲಿ ಪ್ರಾಂಗಣವನ್ನು ದಾಟಬೇಕಾದರೆ ಗಂಡಸರು ಪಂಚೆಯಲ್ಲಿ ಟಾಪ್‍ಲೆಸ್ ಅಗಿಯೇ ಬರಬೇಕು!
ಹಾಗೆ ನೋಡಿದರೆ ವ್ಯಕ್ತಿ ಸ್ವಾತಂತ್ರದ ಹರಿಕಾರರೆಂದು ಕರೆಸಿಕೊಳ್ಳುವ ಪಾಶ್ಚಿಮಾತ್ಯ ಪ್ರಜಾಪ್ರಭುತ್ವಗಳಲ್ಲಿಯೂ ಕೂಡ ಅಲಿಖಿತ ವಸ್ತ್ರಸಂಹಿತೆ ಜಾರಿಯಲ್ಲಿದ್ದೇ ಇರುತ್ತದೆ. ನಮಗೆ ಸಂವಿಧಾನದ ಮೂಲಧಾತುವನ್ನು ಒದಗಿಸಿದ ಬ್ರಿಟಿಷರು ಕೂಡ ಉಡುಪಿನ ವಿಚಾರದಲ್ಲಿ ಆಷಾಡಭೂತಿಗಳೆನ್ನಿಸುವ ಮಟ್ಟದ ಸಂಪ್ರದಾಯವಾದಿಗಳು. ಎಲ್ಲ ಕಡೆಯ ಚರ್ಚ್‍ಗಳಲ್ಲಿ ವಸ್ತ್ರಸಂಹಿತೆ ಇದೆ. ಸ್ಕರ್ಟ್ ಧರಿಸಿದರೂ ಅದರ ಉದ್ದ ಮೊಳಕಾಲಿಗಿಂತ ಕೆಳಗಿರಲೇಬೇಕು. ಮಸೀದಿಗಳು, ಗುರುದ್ವಾರಗಳಲ್ಲೂ ಅಲಿಖಿತವಾದ ನಿಯಮಗಳಿರುತ್ತವೆ.
ಹಾಗಂತ ಎಲ್ಲ ಕಡೆಯೂ ಇರುವ ನಿಯಮಗಳನ್ನು ನಾವು ಪಾಲಿಸಬೇಕೆಂದೇನೂ ಇಲ್ಲ. ಪ್ರಶ್ನೆ ಇರುವುದು ಇದರ ಔಚಿತ್ಯದ್ದು ಮಾತ್ರ. ಬರೀ ಧಾರ್ಮಿಕ ಸ್ಥಳಗಳು, ವಿದ್ಯಾಸಂಸ್ಥೆಗಳಲ್ಲಿ ಮಾತ್ರವಲ್ಲದೆ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿಯೂ ವಸ್ತ್ರಸಂಹಿತೆಯ ಅಗತ್ಯವಿದೆ. ನಾಗರಿಕ ಸಮಾಜವೊಂದರಲ್ಲಿ ಇದು ಚರ್ಚೆಯ ವಿಚಾರವಾಗಬಾರದು. ಹಾಗೆ ಆಗುವ ಪರಿಸ್ಥಿತಿ ಬಂದಿದೆ ಎಂದರೆ ಅಲ್ಲಿ ವ್ಯಕ್ತಿ ಸ್ವಾತಂತ್ರವನ್ನು ಅತಿರೇಕಕ್ಕೊಯ್ಯಲಾಗುತ್ತದೆ ಅಥವಾ ಸಂಪ್ರದಾಯವಾದಿಗಳ ದರ್ಬಾರು ನಡೆಯುತ್ತಿದೆ ಎನ್ನಿಸುತ್ತದೆ.
ಶ್ಲೀಲ ಅಶ್ಲೀಲಗಳೆಲ್ಲಾ ವ್ಯಕ್ತಿನಿಷ್ಟವಾದದ್ದು. ಇದನ್ನೆಲ್ಲಾ ಚರ್ಚಿಸುತ್ತಾ ಕೂತರೆ ಯಾವ ತೀರ್ಮಾನಗಳಿಗೂ ಬರುವುದು ಅಸಾಧ್ಯ. ಬಹುಷಃ ಬಟ್ಟೆ ಮೈಮುಚ್ಚುವಂತಿರಬೇಕು ಎನ್ನುವದಷ್ಟೇ ವಿಷಯವಾಗಿದ್ದರೆ ಯಾರದ್ದೂ ತಕರಾರುಗಳಿರುವುದಿಲ್ಲ. ಈ ಮೈಮುಚ್ಚುವ ಬಟ್ಟೆಯಲ್ಲಿಯೂ ಇಂತಾದ್ದನ್ನೇ ಧರಿಸಬೇಕೆಂದು ಕಡ್ಡಾಯವಾಗಿಸಿದಾಗ ಪ್ರತಿಭಟನೆಗಳು ಶುರುವಾಗುತ್ತವೆ. ಉದಾಹರಣೆಗೆ ಸ್ತ್ರೀಯರ ಪೂರ್ಣ ಮೈಮುಚ್ಚುವ ಜೀನ್ಸ್, ಟೀಷರ್ಟ್‍ಗಳನ್ನೇಕೆ ಧರಿಸಬಾರದು? ಇದು ಮೈಗೆ ಅಂಟಿಕೊಂಡು ಅವರ ಮೈ ಮಾಟವನ್ನು ಎತ್ತಿ ತೋರಿಸುವುದರಿಂದ ಪ್ರಚೋದನಕಾರಿಯಗುತ್ತದೆ ಎನ್ನುವುದು ಸಂಪ್ರದಾಯವಾದಿಗಳ ಅಂಬೋಣ. ಪ್ರಚೋದನೆಗಳ ಹುಡುಕಾಟದಲ್ಲಿರುವವರು ಸೀರೆ, ಸೆಲ್ವಾರ್‍ಗಳಲ್ಲಿಯೂ ಅದನ್ನು ಕಂಡುಕೊಳ್ಳುತ್ತಾರೆ! ಹಾಗೊಮ್ಮೆ ಹೆಣ್ಣುಮಕ್ಕಳ ಬಿಗಿ ಉಡುಪು ಪ್ರಚೋದನಕಾರಿಯಾದರೆ, ಗಂಡಸರ ಬಿಗಿ ಉಡುಪು ಯಾಕೆ ಸಹನೀಯವಾಗಬೇಕು? ಅವರಿಗೆಲ್ಲಾ ತಮ್ಮ ಮೀನಖಂಡಗಳನ್ನು ತೋರಿಸುವ ಬರ್ಮುಡಾ ಚಡ್ಡಿಗಳನ್ನು ಧರಿಸಲು ಅವಕಾಶ ಕೊಡುವುದು ಏಕೆ?!!
ಹಾಗಾಗಿ ವಸ್ತ್ರಸಂಹಿತೆಯನ್ನು ಜಾರಿ ಮಾಡುವುದೇ ಆದರೆ ಅದು ಸ್ತ್ರೀ ಪುರುಷರಿಬ್ಬರಿಗೂ ಸಮಾನವಾಗಿರಬೇಕು ಮತ್ತು ಔಚಿತ್ಯಾಧಾರಿತವಾಗಿರಬೇಕು. ಈ ದೃಷ್ಟಿಯಿಂದ ನೋಡಿದರೆ ಪುರುಷರಿಗೆ ಸಂಹಿತೆಯ ಅಗತ್ಯ ಹೆಚ್ಚೇ ಇದೆ! ದಕ್ಷಿಣದ ಹೆಚ್ಚಿನ ದೇವಸ್ಥಾನಗಳಲ್ಲಿ ಜಾರಿಯಲ್ಲಿರುವ ಗಂಡಸರ ಟಾಪ್‍ಲೆಸ್ ಪ್ರದರ್ಶನ ರದ್ದಾಗಬೇಕು! ನಮ್ಮ ವೈದಿಕರುಗಳು, ಮಠಾಧೀಶರುಗಳು ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಗುಡಾಣ ಹೊಟ್ಟೆಗಳನ್ನು ಪ್ರದರ್ಶನ ಮಾಡದೆ ಮೈಮುಚ್ಚಿಕೊಳ್ಳಬೇಕು. ಜೈನ ಮುನಿಗಳೂ ಕೂಡ ಇದಕ್ಕೆ ಹೊರತಾಗಬಾರದು.
ಸ್ತ್ರೀಯರ ವಸ್ತ್ರಸಂಹಿತೆಯ ವಿಚಾರದಲ್ಲಿ ಮುಸ್ಲಿಂರದ್ದು ಒಂದು ಅತಿರೇಕವಾದರೆ, ವ್ಯಕ್ತಿಸ್ವಾತಂತ್ರದ ಪ್ರತಿಪಾದಕರದ್ದು ಇನ್ನೊಂದು. ಇವರಿಬ್ಬರೂ ತಮ್ಮ ತಮ್ಮ ಪ್ರತಿಷ್ಠೆಯ ಪ್ರಶ್ನೆಗಾಗಿ ಹಿಂಸೆಗೂ ಇಳಿಯುವುದನ್ನು ಸಹಿಸುವ ನಮ್ಮ ಸರ್ಕಾರಗಳು ಮತ್ತು ಜನತೆ, ನಮ್ಮ ಚಿಂತನೆ ಮತ್ತು ಕ್ರಿಯೆಗಳಲ್ಲಿನ ಅಸ್ಪಷ್ಟತೆಯ ದ್ಯೋತಕ.
ವಸಂತ್ ನಡಹಳ್ಳಿ

ಚೀಮನಹಳ್ಳಿಯ ಬಳಿ ಸಿಕ್ಕ ಎರಡು ತಲೆಯ ಹಾವು ವನಪಾಲಕರ ವಶಕ್ಕೆ

0

ಶಿಡ್ಲಘಟ್ಟ ತಾಲ್ಲೂಕಿನ ಚೀಮನಹಳ್ಳಿಯ ಸಿ.ಕೆ.ರಾಮಪ್ಪನವರ ಮನೆಯ ಬಳಿ ಸಿಕ್ಕ ಎರಡು ತಲೆಯ ಹಾವನ್ನು ಶನಿವಾರ ರಾತ್ರಿ ವನಪಾಲಕ ಸಿ.ಎನ್.ಹನುಮಂತಯ್ಯ ಅವರಿಗೆ ನೀಡಿದರು. ಮುರಳಿ, ಬಸವರಾಜು, ಪ್ರಶಾಂತ, ಮುನಿರಾಜು ಮತ್ತಿತರರು ಹಾಜರಿದ್ದರು.

ಆತ್ಮಾವಲೋಕನ ಅಗತ್ಯ

0

ನಮ್ಮ ದೇಶ ಕೃಷಿ ಪ್ರಧಾನ ದೇಶ. ಶೇಕಡಾ 70 ರಷ್ಟು ಮಂದಿ ಕೃಷಿಯನ್ನೇ ನಂಬಿ ಬದುಕುತ್ತಿದ್ದಾರೆ. ರೈತನೇ ಈ ದೇಶದ ಬೆನ್ನೆಲುಬು. ಆದರೆ ಆತ ಮಳೆಯೊಂದಿಗೆ ಜೂಜಾಡುತ್ತಾನೆ. ಹಾಗಾಗಿ ಸರಿಯಾಗಿ ಬೆಳೆ ಬೆಳೆಯಲಾರದು. ಒಂದೊಮ್ಮೆ ಬೆಳೆ ಬಂದರೂ ಅದಕ್ಕೆ ಸರಿಯಾದ ವೈಜ್ಞಾನಿಕ ಬೆಲೆ ಆತನಿಗೆ ಸಿಗುತ್ತಿಲ್ಲ. ಆತನ ಬದುಕಿಗೆ ಬೇಕಾದ ಪ್ರೋತ್ಸಾಹ ಸರಕಾರಗಳಿಂದ ದೊರಕುತ್ತಿಲ್ಲ. ಸಾಲದ ಬಾಧೆಯಿಂದ ಆತ ತತ್ತರಿಸುತ್ತಿದ್ದಾನೆ. ತತ್ಪರಿಣಾಮವಾಗಿ ರೈತರ ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಇವಿಷ್ಟು ಸಂಕ್ಷಿಪ್ತವಾಗಿ ಭಾರತದ ರೈತನ ಕುರಿತಾಗಿ ಹೇಳಬಹುದಾದ ಮಾತುಗಳು. ಇತ್ತೀಚೆಗೆ ಸೇರ್ಪಡೆಯಾಗುತ್ತಿರುವ ವಿಚಾರವೆಂದರೆ ಕೃಷಿಯೋಗ್ಯ ಭೂಮಿಯನ್ನು ಅಭಿವೃದ್ಧಿಯ ಹೆಸರಿನಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪನೆ ಕುರಿತು ಭೂಮಿಯನ್ನು ವಶಪಡಿಸಿಕೊಳ್ಳುತ್ತಿರುವುದು.
ಇಂಥ ಸ್ಥಿತಿಯೊಳಗೆ ರೈತ ತನ್ನ ಅವಸ್ಥೆಯ ಕುರಿತು ಚಿಂತಿಸುವುದರ ಜೊತೆ ಜೊತೆಗೇ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಸಹಜವಾಗಿಯೇ ಇದೆ. ಸೂಕ್ತ ಸಮಯದಲ್ಲಿ ಬೀಜಗೊಬ್ಬರ ಸಿಗದಿರುವುದು, ಸಬ್ಸಿಡಿ ಸಿಗದಿರುವುದು, ಸಾಲ ಸಿಗದಿರುವುದು, ಕಛೇರಿಗಳಿಂದ ಬೇಕಾದ ಕಾಗದ ಪತ್ರಗಳನ್ನು ಪಡೆದುಕೊಳ್ಳುವಲ್ಲಿ ವಿಳಂಬವಾಗುತ್ತಿರುವುದು. ಎಲ್ಲೆಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿರುವುದು ಇತ್ಯಾದಿ. ಇವುಗಳೊಂದಿಗೆ ಸರಕಾರಿ ಅಧಿಕಾರಿಗಳು ತಮ್ಮ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ಕಛೇರಿಯಲ್ಲೇ ಇರುವುದಿಲ್ಲ. ಆದರೂ ಅವರಿಗೆ ನಿರ್ದಿಷ್ಟ ಸಂಬಳವಿದೆ. ಬದುಕಿಗೆ ಭದ್ರತೆ ಇದೆ ಎಂಬ ದೂರುಗಳು.
ಇವೆಲ್ಲವೂ ನಿಜ. ಆದರೆ ಚಿಂತಿಸುವುದರಿಂದ ಹಳಿಯುವುದರಿಂದ ಅವರ ಅಭಿವೃದ್ಧಿ ಸಾಧ್ಯವೇ? ಕಛೇರಿ ಸಿಬ್ಬಂದಿ ಸಂಬಳ ಪಡೆಯುತ್ತಾರೆ. ಸಾಪ್ಟವೇರ್ ಕಂಪನಿಯಲ್ಲಿ ಕೆಲಸಮಾಡುವವರು ಲಕ್ಷಗಟ್ಟಲೆ ಸಂಬಳ ಪಡೆಯುತ್ತಾರೆ. ಅವರು ಐಷಾರಾಮ ಬದುಕು ಸಾಗಿಸುತ್ತಾರೆ. ಅದು ಸದಾ ಕಣ್ಣೆದುರಿಗೇ ಕುಣಿಯುತ್ತಿರುವುದರಿಂದ ನಮ್ಮ ಮಕ್ಕಳನ್ನು ಅತ್ತಲೇ ಕಳುಹಿಸಬೇಕು. ಹಳ್ಳಿ ಮತ್ತು ಕೃಷಿ ಬದುಕು ಯಾರಿಗೆ ಬೇಕು? ಇಂಥ ಮನೋಸ್ಥಿತಿಯಿಂದಾಗಿ ಇಂದು ಪ್ರತಿಹಳ್ಳಿಯ ಪ್ರತಿಮನೆಯಲ್ಲೂ ದುಡಿಯುವ ವ್ಯಕ್ತಿಗಳಿಗೆ ಬದಲಾಗಿ ನಿಧಾನವಾಗಿ ವೃದ್ಧಾಶ್ರಮಗಳಾಗುತ್ತ ಸಾಗಿದಲ್ಲಿ ಆಶ್ಚರ್ಯವೇನಿಲ್ಲ. ಇರುವ ಅಲ್ಪಸ್ವಲ್ಪ ಜನರಿಗೂ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಕೂಲಿಗಳು ಸಿಗುತ್ತಿಲ್ಲ. ವಿದ್ಯುತ್ ಅಭಾವ ಆಧುನಿಕ ಸೌಲಭ್ಯಗಳ ಕೊರತೆ ಇತ್ಯಾದಿ ಸಮಸ್ಯೆಗಳು ಕಾಡುತ್ತಿವೆ. ಮತ್ತಲ್ಲಿ ಮನುಷ್ಯನ ದುರಾಸೆಯಿಂದ ಕಾಡುಗಳು ಕಣ್ಮರೆಯಾಗುತ್ತಿವೆ. ನದಿಗಳು ಬತ್ತುತ್ತಿವೆ. ಅಂತರ್ಜಲದ ಮಟ್ಟ ಕುಸಿಯುತ್ತಿದೆ. ಪರಿಸ್ಥಿತಿಯ ಸುಧಾರಣೆಯ ಲಕ್ಷಣಗಳೇನೂ ಗೋಚರಿಸುತ್ತಿಲ್ಲ.
ಹೀಗಿದ್ದಾಗ ಬದುಕು ಸುಧಾರಿಸಬೇಕೆಂಬ ಕನಸಿಗಿಂತ ವಾಸ್ತವವನ್ನು ಅರಿತು ಕ್ರಿಯಾಶೀಲರಾದಲ್ಲಿ ಮಾತ್ರ ಪರಿಸ್ಥಿತಿ ಸುಧಾರಿಸಬಹುದೇನೋ?. ಹಾಗಾಗಲು ಮೊದಲು ಕೃಷಿಯನ್ನು ಕೂಡಾ ಒಂದು ಉದ್ದಿಮೆಯಂತೆ ಪರಿಭಾವಿಸಬೇಕು. ಕಛೇರಿ ಕೆಲಸಕ್ಕೆ ಮತ್ತು ಕಂಪನಿಯ ಕೆಲಸಕ್ಕೆ ಒಂದು ನಿರ್ದಿಷ್ಟ ಅವಧಿ ಇದೆ. ಅಲ್ಲಿ ಕೆಲಸಗಾರರು ಕೆಲಸಮಾಡುತ್ತಿರುತ್ತಾರೆ. ಸೋಮಾರಿಗಳಾದ ಕೆಲವರು ಹಾಗೇ ಕುಳಿತಿರಬಹುದು. ಆದರೂ ಆ ಅವಧಿಯಲ್ಲಿ ಅಲ್ಲಿರುವುದು ಕಡ್ಡಾಯ. ಹೀಗೆ ಕೃಷಿ ಭೂಮಿಯಲ್ಲಿ ಕೃಷಿಕರಿರುವುದೂ ಕಡ್ಡಾಯವಾದಲ್ಲಿ ಪರಿಸ್ಥಿತಿ ತನ್ನಿಂದ ತಾನೇ ಸುಧಾರಿಸಬಹುದು. ವರ್ಷದ ಕೆಲವೊಂದು ಕಾಲವನ್ನು ಹೊರತುಪಡಿಸಿದರೆ ಸದಾ ನೆಲದೊಂದಿಗೆ ಇರುವ ಕೃಷಿಕರ ಸಂಖ್ಯೆ ಕಡಿಮೆ. ಅಲ್ಲಿ ಅವರು ಕಡ್ಡಾಯವಾಗಿದ್ದಾಗ ಕೆಲಸಗಳು ತನ್ನಿಂದ ತಾನೇ ಗೋಚರಿಸುತ್ತವೆ. ಅದು ಕಳೆ ತೆಗೆಯುವುದೇ ಇದ್ದೀತು. ಕಸ ಕಡ್ಡಿಗಳನ್ನು ಒಟ್ಟುಮಾಡುವುದೇ ಇದ್ದೀತು. ಅವನ್ನಷ್ಟು ಮನೆಗೆ ತಂದು ಒಲೆ ಉರಿಸಿದರೆ ಉಳಿತಾಯವಾದೀತು. ಹಾಗಲ್ಲದೇ ಪೇಟೆಯಲ್ಲಿ ಕ್ಯೂ ನಿಂತು ಸಿಲಿಂಡರ್ ತಂದು ಒಲೆ ಹಚ್ಚುವುದೇ ಸಾಧನೆಯಾದರೆ ಅದಕ್ಕೆ ಸಮಯ ಮತ್ತು ಹಣ ಎರಡೂ ಹಾಳಾಗುತ್ತಿದೆ. ಕೊಟ್ಟಿಗೆಯ ಸಗಣಿ ಕರಡಿ, ಗೋಬರ್ ಗ್ಯಾಸ್ ಉತ್ಪಾದಿಸುವುದೂ ಸೂಕ್ತವಾದ ಮಾರ್ಗ. ಆದರೆ ಅದೆಷ್ಟು ಜನ ಇದಕ್ಕೆ ಮನಸ್ಸು ಮಾಡುತ್ತಾರೆ? ಹೊರಗಿನಿಂದ ಹಾಲನ್ನು ಖರೀದಿಸುತ್ತಾರೆ. ಗೊಬ್ಬರವನ್ನು ಖರೀದಿಸುತ್ತಾರೆ. ಖುದ್ಧಾಗಿ ತಯಾರಿಸಿಕೊಳ್ಳಲಾಗದ್ದಕ್ಕೆ ಕಂಡ ಕಂಡವರನ್ನು ಬಯ್ಯುತ್ತಾರೆ, ಕುಳಿತರು ಏನೂ ಬಗೆ ಹರಿಯುವುದಿಲ್ಲ.
ಯಾವುದೇ ಗಿಡ ಮರವಾಗಲೀ ಪ್ರಾಣಿಯಾಗಲೀ ಮನುಷ್ಯ ಸಂಪರ್ಕವನ್ನು ಬಯಸುತ್ತವೆ. ಮನೆಯ ಹತ್ತಿರದ ಗಿಡಗಳು ನಾವು ಸದಾ ಓಡಾಡುವ ಜಾಗೆಯಲ್ಲಿನ ಗಿಡ ಮರಗಳು ಅಧಿಕ ಬೆಳೆ ನೀಡಿವುದನ್ನು ನಾವು ಕಾಣುತ್ತೇವೆ. ಹೀಗೆ ಗಿಡ ಮರಗಳು ಅಧಿಕ ಇಳುವರಿ ನೀಡಲು ನಾವಲ್ಲಿ ಸದಾ ಅವುಗಳೊಂದಿಗೆ ಸಂವಾದಿಸುತ್ತಿರಬೇಕು, ಎಂಬ ಸತ್ಯವನ್ನರಿತು. ನಿರ್ದಿಷ್ಟ ಸಮಯದಲ್ಲಿ ಯಾವುದೇ ಬಗೆಯ ಸೋಮಾರಿತನವನ್ನು ಮೈಗೂಡಿಸಿಕೊಳ್ಳದೇ ಅಲ್ಲಿ ಇದ್ದಲ್ಲಿ ಆದಾಯ ತನ್ನಿಂದ ತಾನೇ ಹೆಚ್ಚಬಹುದು. ಹಾಗೇ ರೋಗ ತಗುಲಿದ್ದರ ಅರಿವು ಸಕಾಲದಲ್ಲೇ ಆಗುವುದರಿಂದ ಸೂಕ್ತ ಚಿಕಿತ್ಸೆ ನೀಡಲು ಕೂಡಾ ಅನುಕೂಲ. ಕೊನೆಯ ಹೊತ್ತಿನ ಪ್ರಯತ್ನಗಳಿಗಿಂತ ಮೊದಲೇ ಎಚ್ಚರಗೊಂಡು ಪ್ರಯತ್ನಿಸಿದರೆ ಫಲ ಪರಿಣಾಮಕಾರಿಯಾಗಿ ದೊರೆಯಬಹುದು.
ಇನ್ನು ನೌಕರಿಯ ಜನ ಅಥವಾ ವ್ಯಾಪಾರಿ ಜನ ತಮ್ಮ ರಜೆಗಳನ್ನು ನಿರ್ದಿಷ್ಟವಾಗಿ ಹೊಂದಿರುತ್ತಾರೆ. ಅನಗತ್ಯವಾಗಿ ರಜೆ ಪಡೆಯುವುದಿಲ್ಲ. ಗಳಿಕೆ ರಜೆ ಪಡೆಯಲಂತೂ ಬಹಳಷ್ಟು ಹಿಂದೇಟು ಹಾಕುತ್ತಾರೆ. ರಜೆಯೆಂದರೆ ಹಣ ಹೋದಂತೆ ಎಂಬ ಕಲ್ಪನೆ ಅವರದ್ದು. ಅಂಥ ಕಲ್ಪನೆ ಕೃಷಿಕರಲ್ಲೂ ಜಾಗೃತವಾಗಿದ್ದಲ್ಲಿ ಅನವಶ್ಯಕ ತಿರುಗಾಟ, ಅನವಶ್ಯಕ ವೆಚ್ಚಗಳಿಗೆ ಕಡಿವಾಣ ಸಾಧ್ಯ. ಹೀಗೇ ಕೃಷಿಗೆಂದು ಪಡೆದ ಸಾಲ ಕೃಷಿ ಅಭಿವೃದ್ಧಿಗಲ್ಲದೇ ಮದುವೆ ಮುಂಜಿಗಳಿಗೆ ಖರ್ಚಾದರೆ ಮತ್ತೆ ಕೃಷಿ ಚಟುವಟಿಕೆ ಕುಂಠಿತವಾಗುತ್ತದೆ. ಆತ್ಮಹತ್ಯೆ ಅನಿವಾರ್ಯವಾಗುತ್ತದೆ.
ಪರಿಸರ ಪ್ರೇಮಿ ಶ್ರೀ ನಾಗೇಶ ಹೆಗಡೆಯವರ “ಇರುವುದೊಂದೇ ಭೂಮಿ” ಯಲ್ಲಿ ಪ್ರಸ್ತಾಪಿಸಿದಂತೆ ಈ ನೆಲವು ನಾವು ಹಿರಿಯರಿಂದ ಬಳುವಳಿಯಾಗಿ ಪಡೆದದ್ದು ಎಂದು ಯೋಚಿಸುವುದಕ್ಕಿಂತ ಇದನ್ನು ನಾವು ನಮ್ಮ ಮೊಮ್ಮಕ್ಕಳಿಂದ ನ್ಯಾಸವಾಗಿಟ್ಟುಕೊಂಡಿದ್ದೇವೆ ಎಂಬ ಕಲ್ಪನೆ ಜಾಗೃತವಾಗಿದ್ದಲ್ಲಿ ಕೃಷಿಗೆ ಅವಶ್ಯಕವಾದ ಕಾಡು ಉಳಿದೀತು. ಅವರವರ ಊರಿನ ಕಾಡನ್ನು ಹಸಿರನ್ನು ರಕ್ಷಿಸಿಕೊಳ್ಳುವ ಕೆಲಸ ಕೃಷಿಕರಿಂದಲೇ ಸಾಧ್ಯವಾಗಬೇಕು. ದುರಾಸೆಯವರೊಂದಿಗೆ ಕೈಜೋಡಿಸಿದರೆ ಕಳೆದು ಕೋಳ್ಳುವುದೇ ಹೆಚ್ಚು. ತತ್ಕಾಲದ ಮೋಹಕ್ಕೆ ವಶವಾದಲ್ಲಿ ಭವಿಷ್ಯ ನಾಶವಾಗುವುದರಲ್ಲಿ ಸಂದೇಹವಿಲ್ಲ.
ಬೇರೆಯವರನ್ನು ದೂರುವುದರಿಂದ ನಾವು ಉದ್ಧಾರವಾಗುವುದಿಲ್ಲ. ಎಂಬ ಸತ್ಯವನ್ನರಿತು ಅವರಂತೆ ಸದಾ ಕ್ರಿಯಾಶೀಲವಾಗಿ ನೆಲದಲ್ಲಿ ಸದಾ ಇದ್ದು ಆದಷ್ಟು ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾ ಸಾಗಿದರೆ ದಿನವೂ ಅಷ್ಟಷ್ಟು ಕೆಲಸ ಮಾಡುತ್ತಲೇ ಇದ್ದಲ್ಲಿ ಕೂಲಿ ಸಮಸ್ಯೆ ಕೂಡಾ ಅಷ್ಟಾಗಿ ಬಾಧಿಸಲಾರದು. ಪ್ರತಿಯೊಂದಕ್ಕೂ ಪರಾವಲಂಬಿಗಳಾಗಿ ಬದುಕಲು ಪ್ರಾರಂಭಿಸಿದರೆ ಉದ್ಧಾರ ಅಸಾಧ್ಯ. ಹಾಗಾಗಿ ತಮ್ಮೆಲ್ಲ ಸಂಕಟಗಳಿಗೆ ಬೇರೆಡೆಗೆ ಬೆಟ್ಟು ಮಾಡುವುದಕ್ಕೆ ಮುನ್ನ ಒಂದು ಕ್ಷಣ ಆತ್ಮಾವಲೋಕನ ಮಾಡಿಕೊಳ್ಳುವುದು ಇಂದಿನ ಅಗತ್ಯ. ಅವರು ಸೋಮಾರಿಗಳು ಕಛೇರಿಯಲ್ಲೇ ಇರುವುದಿಲ್ಲ ಎನ್ನುವ ಮೊದಲು ನಾವೆಷ್ಟು ಕ್ರಿಯಾಶೀಲರು ನಾವೆಷ್ಟು ನಮ್ಮ ನೆಲದೊಂದಿಗಿದ್ದೇವೆ ಎಂದು ಯೋಚಿಸುವುದು ಒಳಿತು.
ರವೀಂದ್ರ ಭಟ್ ಕುಳಿಬೀಡು

ಮೇಲೂರಿನ ಪುರಾಣಪ್ರಸಿದ್ಧ ಗಂಗಾದೇವಿಯ ಬ್ರಹ್ಮರಥೋತ್ಸವ

0

ಪುರಾಣ ಪ್ರಸಿದ್ದ ಶ್ರೀ ಗಂಗಾದೇವಿಯ ಬ್ರಹ್ಮರಥೋತ್ಸವ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಶನಿವಾರ ಅದ್ದೂರಿಯಾಗಿ ನೆರವೇರಿತು. ಗ್ರಾಮದ ಮುಖಂಡರುಗಳು ಹಾಗೂ ಯುವಕರು ರಥೋತ್ಸವಕ್ಕೆ ಚಾಲನೆ ನೀಡಿದರು.
ತಾಲ್ಲೂಕಿನ ಪುರಾಣ ಪ್ರಸಿದ್ದ ದೇವಾಲಯಗಳಲ್ಲಿ ಒಂದಾದ ಮೇಲೂರಿನ ಶ್ರೀ ಗಂಗಾದೇವಿಯ ಬ್ರಹ್ಮರಥೋತ್ಸವದ ಅಂಗವಾಗಿ ದೇವಾಲಯವನ್ನು ಹೂವಿನ ಅಲಂಕಾರದಿಂದ ಶೃಂಗಾರ ಮಾಡಲಾಗಿತ್ತು, ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ವಿಜೃಂಭಣೆಯಿಂದ ಬ್ರಹ್ಮರಥೋತ್ಸವ ಕಾರ್ಯಕ್ರಮವನ್ನು ನೆರವೇರಿಸಲಾಯಿತು, ವಿವಿಧ ಜಾನಪದ ಕಲಾತಂಡಗಳು, ತಮಟೆಗಳ ವಾದನ, ಗಾರುಡಿ ಬೊಂಬೆಗಳ ನರ್ತನಗಳು ನೋಡುಗರ ಕಣ್ಮನ ಸೆಳೆಯುತ್ತಿದ್ದವು.
ಬ್ರಹ್ಮರಥೋತ್ಸವದ ಅಂಗವಾಗಿ ಹೋಮಕುಂಡವನ್ನು ಸ್ಥಾಪನೆ ಮಾಡಿ, ಲೋಕ ಕಲ್ಯಾಣಾರ್ಥವಾಗಿ ವಿವಿಧ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು, ಗಂಗಾದೇವಿಗೆ ವಿಶೇಷ ಹೂವಿನ ಅಲಂಕಾರಗಳೊಂದಿಗೆ ಪೂಜೆಗಳನ್ನು ಸಮರ್ಪಣೆ ಮಾಡಲಾಯಿತು, ನೆರೆದಿದ್ದ ಭಕ್ತಾದಿಗಳು ರಥಕ್ಕೆ ದವನದೊಂದಿಗಿನ ಬಾಳೇ ಹಣ್ಣು ಎಸೆಯುವುದರ ಮೂಲಕ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು, ಸುತ್ತಮುತ್ತಲಿನ ಹಳ್ಳಿಗಳಿಂದ ಬಂದಿದ್ದ ಭಕ್ತಾದಿಗಳಿಗೆ ಕೋಸಂಬರಿ ಪಾನಕಗಳನ್ನು ವಿತರಿಸಲಾಯಿತು. ದೇವಾಲಯದಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
ಗ್ರಾಮದ ಮುಖಂಡರಾದ ಬಿ.ಎನ್.ರವಿಕುಮಾರ್, ಆರ್.ಎ.ಉಮೇಶ್, ಕೆ.ಮಂಜುನಾಥ್, ಕೆ.ಎಸ್.ಮಂಜುನಾಥ್, ಸುದರ್ಶನ್, ಧಮೇಂದ್ರ, ಸುದೀರ್, ಶ್ರೀನಿವಾಸಮೂರ್ತಿ(ಪುಲಿ), ಕೆ.ಎನ್.ಬಚ್ಚೇಗೌಡ, ರಾಮಕೃಷ್ಣಪ್ಪ, ಶಿವಕುಮಾರ್, ಜೇಜೇಗೌಡ, ಅಶ್ವಥ್ಥಪ್ಪ, ಮುನಿಶಾಮಪ್ಪ, ಎಂ.ಜೆ.ಶ್ರೀನಿವಾಸ್ ಮತ್ತು ದೇವಾಲಯದ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮದ ಯುವಕರು ಹಾಜರಿದ್ದರು.

ದ್ಯಾವಪ್ಪನಗುಡಿಯಲ್ಲಿ ಯೋಗಿ ದ್ಯಾವಪ್ಪ ತಾತನವರ ಆರಾಧನಾ ಮಹೋತ್ಸವವ

0

ಯೋಗಿ ದ್ಯಾವಪ್ಪ ತಾತನವರ ಆರಾಧನಾ ಮಹೋತ್ಸವವನ್ನು ದ್ಯಾವಪ್ಪನಗುಡಿ(ಜಯಂತಿ ಗ್ರಾಮ)ಯಲ್ಲಿ ಬಹಳ ವಿಜೃಂಭಣೆಯಿಂದ ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಕಳೆದ ಏಳು ದಿನಗಳಿಂದಲೂ ಆರಾಧನಾ ಮಹೋತ್ಸವ ಅಂಗವಾಗಿ ದ್ಯಾವಪ್ಪನ ಗುಡಿಯಲ್ಲಿ ನಾನಾ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಕೈವಾರ ಹೊರತುಪಡಿಸಿದರೆ ಸಾಮಾನ್ಯ ವ್ಯಕ್ತಿಯೊಬ್ಬರ ಸಮಾಧಿಗೆ ದಿನ ನಿತ್ಯವೂ ಪೂಜೆ ನಡೆಯುವ, ವರ್ಷದ ೩೬೫ದಿನವೂ ದೀಪ ಬೆಳಗುವ ಚಿಕ್ಕಬಳ್ಳಾಪುರ- ಕೋಲಾರ ಜಿಲ್ಲೆಯ ಏಕೈಕ ಸ್ಥಳವಾದ ದ್ಯಾವಪ್ಪನಗುಡಿಯಲ್ಲಿನ ದ್ಯಾವಪ್ಪ ತಾತನ ಸಮಾಧಿ ಬಳಿ ವಾರದಿಂದಲೂ ಭಕ್ತಿಯ ಝೇಂಕಾರ ಮೊಳಗುತ್ತಿದೆ.
ಪ್ರತಿ ವರ್ಷವೂ ಯುಗಾದಿ ಬಂದಾದ ಮೇಲೆ ಆರಂಭವಾಗುವ ದ್ಯಾವಪ್ಪತಾತನ ಆರಾಧನಾ ಮಹೋತ್ಸವವು ಈ ವರ್ಷವೂ ಆರಂಭವಾಗಿದ್ದು ಜಿಲ್ಲೆಯ ನಾನಾ ಕಡೆಯಿಂದ ಆಗಮಿಸಿದ ಭಕ್ತರು ದ್ಯಾವಪ್ಪ ತಾತನ ಸಮಾಧಿಗೆ ಹಾಲು ತುಪ್ಪದ ನೈವೇದ್ಯ ಅರ್ಪಿಸಿದರು.
ಚಿಕ್ಕಂದಿನಿಂದಲೂ ದನಕರುಗಳನ್ನು ಮೇಯಿಸುತ್ತಲೆ ಅವುಗಳೊಂದಿಗೆ ಅವಿನಾಭವ ಸಂಬಂಧ ಬೆಳೆಸಿಕೊಂಡ ಕೋಟಹಳ್ಳಿಯ ಚಿಕ್ಕದ್ಯಾವಪ್ಪ ಯಾವುದೆ ಪಶು ವೈದ್ಯರಿಗಿಂತಲೂ ಕಡಿಮೆ ಇಲ್ಲದಂತೆ ಪಶು ಚಿಕಿತ್ಸಕರಾಗಿ ಬೆಳೆದರು. ಅವರು ಯಾವುದೆ ರಾಸುವಿನ ಬೆನ್ನ ಮೇಲೆ ಕೈ ಸವರಿದರೂ ಸಾಕು ಆ ರಾಸುವಿನ ರೋಗ ವಾಸಿಯಾಗುತ್ತಿತ್ತು ಎಂಬ ಮಾತಿದೆ. ಕೇವಲ ನಾಲ್ಕಾಣೆ ಮಾತ್ರವೇ ಹಣ ಪಡೆದು ರೋಗಗಳನ್ನು ವಾಸಿ ಮಾಡುತ್ತಿದ್ದ ದ್ಯಾವಪ್ಪ ತನ್ನ ಗೋಸೇವೆಯಿಂದಲೆ ಗೋಪಾಲಕ ದ್ಯಾವಪ್ಪ ತಾತನಾಗಿ ಜನರ ಮನದಲ್ಲಿ ಉಳಿದಿದ್ದಾರೆ.
ನಾಲ್ಕಾಣೆಯಂತೆ ಸಂಗ್ರಹಿಸಿದ ಹಣವನ್ನು ಒಟ್ಟುಗೋಡಿಸಿ ಗೋವುಗಳಿಗೆ ಗೋಕುಂಟೆಯನ್ನು ಸಹ ನಿರ್ಮಿಸಿದ್ದರು. ಅವರ ಆಸೆಯಂತೆ ಅವರ ನಿಧನಾ ನಂತರ ಅವರ ಸಮಾಧಿಯನ್ನು ನಿರ್ಮಿಸಿ ಅಲ್ಲಿ ಪೂಜಿಸಿ ಮಂತ್ರಿಸಿದ ಉಪ್ಪನ್ನು ರಾಸುಗಳಿಗೆ ನೀರಿನ ಮೂಲಕ ತಿನ್ನಿಸುತ್ತಾರೆ. ಅಲ್ಲಿ ಸಿಗುವ ಕಪ್ಪು ಕಮ್ಮಳಿ ದಾರವನ್ನು ಕಟ್ಟಿದರೂ ಸಾಕು ಎಂತಹ ರೋಗವಾದರೂ ವಾಸಿಯಾಗುತ್ತದೆ ಎಂಬ ನಂಬಿಕೆ ಬೇರೂರಿದೆ.
ತಾತನವರ ಆರಾಧನಾ ಮಹೋತ್ಸವ ಸಮಯದಲ್ಲಂತೂ ವಾರದ ಕಾಲ ನಾನಾ ಪೂಜೆ, ತಂಬಿಟ್ಟು ದೀಪೋತ್ಸವ, ನಾನಾ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಮುತ್ತಿನ ಪಲ್ಲಕ್ಕಿ, ಕ್ಷೀರ, ಮನರಂಜನಾ ಉಟ್ಲು ಮಹೋತ್ಸವೂ ನಡೆಯಲಿದೆ.
ಪ್ರತಿ ನಿತ್ಯವೂ ದಾನವಾಗಿ ಬಂದ ಅಕ್ಕಿ, ಬೇಳೆ, ದವಸ, ದಾನ್ಯ, ತರಕಾರಿಗಳಿಂದಲೆ ತಯಾರು ಮಾಡಿದ ಮುದ್ದೆ ಸಾಂಬಾರು ಊಟವನ್ನಂತೂ ಆರಾಧನಾ ಮಹೋತ್ಸವ ನಡೆಯುವ ವಾರದ ಕಾಲವೂ ನಿತ್ಯ ಮದ್ಯಾಹ್ನ ಸಾವಿರಾರು ಮಂದಿಗೆ ಉಣಬಡಿಸಲಾಗುತ್ತದೆ.

ಕರಗದಮ್ಮ ದೇವಿಯ ಹೂವಿನ ಕರಗ

0

ನಗರದ ಮುತ್ತೂರು ಬೀದಿಯ ದೇವಿಯ ಹೂವಿನ ಕರಗ ಮಹೋತ್ಸವವನ್ನು ಶುಕ್ರವಾರ ರಾತ್ರಿ ಶ್ರದ್ಧಾಭಕ್ತಿಯಿಂದ ಆಚರಿಸಿದರು.
4apr5ಕರಗದ ಪ್ರಯುಕ್ತ ಆರ್ಕೆಸ್ಟ್ರಾ, ಕೀಲುಕುದುರೆ ಮತ್ತು ವಾದ್ಯವೃಂದವನ್ನು ಆಯೋಜಿಸಲಾಗಿತ್ತು. ಮುಳಬಾಗಿಲ ವೆಂಕಟೇಶ್ ರಾತ್ರಿಯಿಡೀ ಕರಗವನ್ನು ಹೊತ್ತು ನಾಡೋಜ ಮುನಿವೆಂಕಟಪ್ಪನವರ ತಮಟೆಯ ವಾದನದೊಂದಿಗೆ ಊರೆಲ್ಲಾ ಸುತ್ತಿದಾಗ ದಾರಿಯುದ್ದಕ್ಕೂ ಮಲ್ಲಿಗೆ ಹೂಗಳನ್ನು ಅರ್ಪಿಸಿ, ಆರತಿ ಬೆಳಗುತ್ತಿದ್ದರು. ಕೆಲವೆಡೆ ಕರಗದ ಆಗಮನಕ್ಕಾಗಿ ರಸ್ತೆಯ ಮೇಲೆಲ್ಲಾ ರಂಗವಲ್ಲಿಯನ್ನು ಬಿಡಿಸಲಾಗಿತ್ತು.

ಜಂಗಮಕೋಟೆಯ ಪ್ರಸನ್ನ ಗಂಗಾಧರೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ

0

ತಾಲ್ಲೂಕಿನ ಪುರಾಣ ಪ್ರಸಿದ್ಧ ಜಂಗಮಕೋಟೆಯ ಪ್ರಸನ್ನ ಗಂಗಾಧರೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವವನ್ನು ಶುಕ್ರವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಉತ್ತರಾಯಣ ವಸಂತ ಋತು ಚೈತ್ರ ಬಹುಳ ಏಕಾದಶಿ ಶುಕ್ರವಾರದಂದು ನೂತನವಾಗಿ ನಿರ್ಮಿಸಿರುವ ಪ್ರಸನ್ನ ಗಂಗಾಧರೇಶ್ವರ ಸ್ವಾಮಿಯ ತೇರಿನಲ್ಲಿ ಉತ್ಸವ ಮೂರ್ತಿಗಳನ್ನಿರಿಸಿ, ವಿವಿಧ ಹೂಗಳಿಂದ ಅಲಂಕರಿಸಿ ಬ್ರಹ್ಮರಥೋತ್ಸವವನ್ನು ನಡೆಸಲಾಯಿತು.
ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಆಗಮಿಸಿದ್ದು, ಗ್ರಾಮದಲ್ಲಿ ದೇವರ ರಥ ಸಾಗಿದಾಗಿ ಜನಜಂಗುಳಿ ಏರ್ಪಟ್ಟಿತ್ತು. ಪುರಾತನ ಪ್ರಸನ್ನ ಗಂಗಾಧರೇಶ್ವರ ಸ್ವಾಮಿಯ ದೇವಾಲಯದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಿದ್ದು, ಪೂಜೆಯ ನಂತರ ಪ್ರಸಾದವನ್ನು ವಿತರಿಸಲಾಯಿತು.
ಗ್ರಾಮದಲ್ಲಿ ಆಗಮಿಸಿದ್ದ ಭಕ್ತರಿಗೆ ಮಜ್ಜಿಗೆ, ಪಾನಕ ಹಾಗೂ ಹೆಸರುಬೇಳೆಯನ್ಉ ವಿತರಿಸಿದರು. ಮೆರವಣಿಗೆಯಲ್ಲಿ ವೀರಗಾಸೆ, ಕರಡಿ ಸಮ್ಮೇಳ ಹಾಗೂ ನಾಸಿಕ್ ಡೋಲ್ ವಿಶೇಷ ಆಕರ್ಷಣೆಯಾಗಿತ್ತು. ಗಾರ್ಡಿ ಗೊಂಬೆ, ಕೀಲು ಕುದುರೆ ಮುಂತಾದ ಆಕರ್ಷಕ ಸ್ಥಳೀಯ ಕಲೆಯು ಕೂಡ ಮೆರವಣಿಗೆಯಲ್ಲಿದ್ದವು. ರಥೋತ್ಸವದಲ್ಲಿ ವಿವಿಧ ಜಾನಪದ ಕಲಾತಂಡಗಳು, ನಾಡೋಜ ಪ್ರಶಸ್ತಿ ಪುರಸ್ಕೃತ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಅವರ ತಂಡದಿಂದ ತಮಟೆಗಳ ವಾದನಕ್ಕೆ ಭಕ್ತಾದಿಗಳು ಜಾನಪದ ತಂಡಗಳೊಂದಿಗೆ ಹೆಜ್ಜೆಹಾಕುತ್ತಾ ಕಾರ್ಯಕ್ರಮಕ್ಕೆ ಮತ್ತಷ್ಟು ಸೊಬಗು ತಂದಿದ್ದರು.
ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದ ಶಾಸಕ ಎಂ.ರಾಜಣ್ಣ ಮಾತನಾಡಿ, ಧಾರ್ಮಿಕವಾದ ಕಾರ್ಯಕ್ರಮಗಳಿಂದ ಮಾತ್ರ ಜನರಿಗೆ ಶಾಂತಿ ದೊರೆಯಲು ಸಾಧ್ಯವಾಗುತ್ತದೆ, ಬಯಲು ಸೀಮೆಯ ಜನತೆ ತೀವ್ರವಾದ ಮಳೆಯ ಕೊರತೆಯಿಂದಾಗಿ ಅಭಾವದ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದು, ಜನತೆಗೆ ಭಗವಂತ ಈ ವರ್ಷದಲ್ಲಿಯಾದರೂ ಉತ್ತಮವಾದ ಮಳೆ ಬೆಳೆಗಳನ್ನು ಕೊಟ್ಟು ಬಯಲು ಸೀಮೆಯ ಪ್ರದೇಶಗಳಲ್ಲಿನ ಜನ, ಜಾನುವಾರುಗಳು ಸುಬೀಕ್ಷವಾಗಿರಲಿ ಎಂದು ಹಾರೈಸಿದರು.
ದೇವಾಲಯದ ಆವರಣದಲ್ಲಿ ಹೋಮಕುಂಡವನ್ನು ಮಾಡಿ, ಲೋಕ ಕಲ್ಯಾಣಾರ್ಥವಾಗಿ ವಿವಿಧ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು ಪ್ರಸನ್ನ ಗಂಗಾಧರೇಶ್ವರಸ್ವಾಮಿಗೆ ವಿಶೇಷ ಹೂವಿನ ಅಲಂಕಾರಗಳೊಂದಿಗೆ ಪೂಜೆಗಳನ್ನು ಸಮರ್ಪಣೆ ಮಾಡಲಾಯಿತು, ನೆರೆದಿದ್ದ ಭಕ್ತಾದಿಗಳು ರಥಕ್ಕೆ ಬಾಳೇಹಣ್ಣಿಗೆ ದವನವನ್ನಿ ಸಿಕ್ಕಿಸಿ ರಥಕ್ಕೆ ಎಸೆಯುವುದರ ಮೂಲಕ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು, ಸುತ್ತಮುತ್ತಲಿನ ಹಳ್ಳಿಗಳಿಂದ ಬಂದಿದ್ದ ಭಕ್ತಾದಿಗಳು ಕೋಸಂಬರಿ ಪಾನಕಗಳನ್ನು ಭಕ್ತರಿಗೆ ಹಂಚಿಕೆ ಮಾಡಿದರು. ದೇವಾಲಯದಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
ಗ್ರಾಮ ಪಂಚಾಯತಿ ಅಧ್ಯಕ್ಷೆ ನಾರಾಯಣಮ್ಮ, ಉಪಾಧ್ಯಕ್ಷ ಜೆ.ಎಂ.ವೆಂಕಟೇಶ್, ರಮೇಶ್, ಶ್ರೀನಿವಾಸ್, ಮಂಜುನಾಥ್, ವೆಂಕಟೇಶ್, ಬಿ.ರಾಜಣ್ಣ ಮತ್ತಿತರರು ಹಾಜರಿದ್ದರು.

ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

0

ಈ ದೇಶದ ಎಲ್ಲ ಜಾತಿ, ಧರ್ಮ, ವರ್ಗಗಳಿಗೂ ಸಾಮಾಜಿಕ ನ್ಯಾಯ ಒದಗಿಸುವುದು ಕಾಂಗ್ರೆಸ್ ಪಕ್ಷದಿಂದ ಮಾತ್ರವೇ ಸಾಧ್ಯ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ ತಿಳಿಸಿದರು.
ನಗರದ ಕಾಂಗ್ರೆಸ್ ಭವನದ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ಜ್ಯಾತ್ಯಾತೀತೆಯ ನೆಲಗಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಂಗ್ರೆಸ್ ನಿಂದ ಮಾತ್ರವೇ ಈ ದೇಶದ ಹಿಂದುಳಿದ, ಅಲ್ಪಸಂಖ್ಯಾತ, ದಲಿತರ ಏಳಿಗೆ ಸಾಧ್ಯ ಎಂದರು.
ಪಂಚವಾರ್ಷಿಕ ಯೋಜನೆಗಳ ಮೂಲಕ ಕೃಷಿ ಕ್ಷೇತ್ರಕ್ಕೆ ನೀಡಿದ ಆಧ್ಯತೆಯಿಂದ ಇಡೀ ದೇಶಕ್ಕೆ ವರ್ಷಗಳ ಗಟ್ಟಲೆ ಆಹಾರ ಪದಾರ್ಥಗಳನ್ನು ಪೂರೈಸುವಷ್ಟು ಆಹಾರ ದಾನ್ಯಗಳ ದಾಸ್ತಾನು ನಮ್ಮಲ್ಲಿ ಇದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಇದೆಲ್ಲವೂ ಸಾಧ್ಯವಾಗಿದ್ದು ಇದುವರೆಗೂ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರದ ದೂರದೃಷ್ಟಿ ಯೋಜನೆಗಳೆ ಕಾರಣ ಎಂದು ಕಾಂಗ್ರೆಸ್ ಸರ್ಕಾರದ ಸಾಧನೆಗಳ ಕುರಿತು ವಿವರಿಸಿದರು.
ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರದ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮಾತುಗಾರಿಕೆಯಿಂದ ಮತದಾರರನ್ನು ಮೋಡಿ ಮಾಡಿ ಅಂಗೈಯಲ್ಲಿ ಅರಮನೆ ತೋರಿಸುವ ಕೆಲಸ ಮಾಡುತ್ತಿದ್ದಾರೆಯೆ ವಿನಹ ಇದುವರೆಗೂ ಯಾವುದೆ ರೀತಿಯ ದೂರದೃಷ್ಟಿಯ ಜನಪರ ಯೋಜನೆಯನ್ನು ಜಾರಿಗೊಳಿಸಿಲ್ಲ ಎಂದು ದೂರಿದರು.
ಅಧಿಕಾರವಹಿಸಿಕೊಂಡ ಏಳೆಂಟು ತಿಂಗಳಿಂದಲೂ ವಿದೇಶಗಳನ್ನು ಸುತ್ತುವುದು, ಟಿ.ವಿ, ರೆಡಿಯೋ, ಫೇಸ್ಬುಕ್ನ ಜಾಲತಾಣಗಳಲ್ಲಿ ತಮ್ಮ ಭಾಷಣಗಳನ್ನು ಕೇಳಿಸುತ್ತಿರುವುದಷ್ಟೆ ಅವರ ಸಾಧನೆಯಾಗಿದ್ದು ಬೇರೇನೂ ಆಗಿಲ್ಲ ಎಂದು ಆರೋಪಿಸಿದರು.
ಭಾಷಣದಿಂದ ಬಡವನ ಹೊಟ್ಟೆ ತುಂಬುವುದಿಲ್ಲ. ಸಮಾಜದ ಉದ್ದಾರವೂ ಆಗುವುದಿಲ್ಲ ಎಂದ ಅವರು, ಚುನಾವಣೆ ಸಮಯದಲ್ಲಿ ಮತದಾರನಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಮೋದಿಯವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ದೂರಿದರು. ಹಾಗಾಗಿ ಮತದಾರರು ಬಿಜೆಪಿಗೆ ಮತ ಕೊಟ್ಟಿದ್ದಕ್ಕೆ ಪಶ್ಚಾತ್ಯಾಪ ಪಡುವಂತಾಗಿದೆ ಎಂದ ಅವರು, ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಮತದಾರರ ಬುದ್ದಿ ಕಲಿಸಲಿದ್ದಾರೆ ಎಂದು ಹೇಳಿದರು.
ಇದೀಗ ಇಡೀ ದೇಶಾದ್ಯಂತ ಕಾಂಗ್ರೆಸ್ ಪಕ್ಷವನ್ನು ತಳ ಮಟ್ಟದಿಂದ ಸಂಘಟಿಸುವ ಕೆಲಸ ಪುನರಾರಂಭಗೊಂಡಿದ್ದು ಕೆಪಿಸಿಸಿ ಅಧ್ಯಕ್ಷರಾದಿಯಾಗಿ ಸಾಮಾನ್ಯ ಕಾರ್ಯಕರ್ತ ಕೂಡ ಪಕ್ಷದ ಸಾಧನೆಗಳನ್ನು ಮುಂದಿಟ್ಟುಕೊಂಡು ಪಕ್ಷದ ಸದಸ್ಯತ್ವನ್ನು ಮಾಡಿಸಲಿದ್ದೇವೆ.ಈ ಹಿಂದೆ ಕೇಂದ್ರದಲ್ಲಿ ಅಕಾರ ನಡೆಸಿದ ಯುಪಿಎ ಅವಯಲ್ಲಿ ಕೈಗೊಂಡ ನರೇಗಾ ಯೋಜನೆ, ೬೫ ಸಾವಿರ ಕೋಟಿ ರೂಪಾಯಿಗಳ ಸಾಲ ಮನ್ನಾ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಜನರಿಗೆ ತಿಳಿಸಿ ಸದಸ್ಯತ್ವನ್ನು ಮಾಡಿಸಲಾಗುತ್ತದೆ. ಪ್ರತಿ ಬೂತುವಾರು ಕನಿಷ್ಟ ೫-೬ಮಂದಿ ಸಕ್ರೀಯ ಸದಸ್ಯರನ್ನು ನೋಂದಾಯಿಸುವ ಕೆಲಸ ಮಾಡಲಾಗುವುದು. ಇದಕ್ಕಾಗಿ ತಾಲೂಕಿನಲ್ಲಿ ನಮ್ಮ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಶ್ರಮಿಸಲಿದ್ದಾರೆ ಎಂದು ಹೇಳಿದರು.
ಜಂಗಮಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಂ.ಮುನಿಯಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಸ್.ಎಂ.ನಾರಾಯಣಸ್ವಾಮಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಸಿ.ಎಂ.ಗೋಪಾಲ್, ಉಪಾಧ್ಯಕ್ಷ ರವಿ, ಮುಖಂಡರಾದ ವಿ.ಸುಬ್ರಮಣಿ, ಕೆ.ಗುಡಿಯಪ್ಪ, ಆರ್.ಶ್ರೀನಿವಾಸ್, ಎನ್.ಮುನಿಯಪ್ಪ, ದೊಗರನಾಯಕನಹಳ್ಳಿ ಡಿ.ವಿ.ವೆಂಕಟೇಶ್, ಬಿ.ಎಂ.ಮುನಿಕೃಷ್ಣಪ್ಪ, ನಂದಮುನಿಕೃಷ್ಣಪ್ಪ, ಮೌಲಾ, ಗೊರಮಡಗು ಕೃಷ್ಣಪ್ಪ, ಬಿ.ವಿ.ಮುನೇಗೌಡ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಮೇಲೂರಿನ ಗ್ರಾಮದೇವತೆ ಗಂಗಾದೇವಿಯ ಜಾತ್ರೆ

0

ತಾಲ್ಲೂಕಿನ ಮೇಲೂರು ಅತ್ಯಂತ ಪುರಾತನ ಗ್ರಾಮದೇವತೆ ಗಂಗಾದೇವಿಯ ಜಾತ್ರಾ ಮಹೋತ್ಸವವು ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
ದೇವರಿಗೆ ವಿವಿಧ ಅಲಂಕಾರಗಳೊಂದಿಗೆ ಹಾಗೂ ಪೂಜೆಯೊಂದಿಗೆ ಪ್ರಾರಂಭವಾದ ಜಾತ್ರಾ ಮಹೋತ್ಸವದಲ್ಲಿ ಗಾರ್ಡಿ ಬೊಂಬೆ, ಕೀಲುಕುದುರೆ ಮತ್ತು ವಿವಿಧ ವೇಷಭೂಷಣಗಳು ವಾದ್ಯ ವೃಂದದೊಂದಿಗೆ ಗಮನಸೆಳೆದವು.
ವಾಲ್ಮೀಕಿ ಮತಸ್ಥರಿಂದ ಪ್ರತಿ ವರ್ಷ ನಡೆಸುವ ಸೊಪ್ಪಿನ ವ್ರತಕ್ಕೆ ಹಲವಾರು ಮಂದಿ ಭಕ್ತರು ಸಾಕ್ಷಿಯಾದರು. ಅಮ್ಮನವರ ದೀಪೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಗಳಾದ ಕೇಶವಾರ, ಹಂಡಿಗನಾಳ, ಮಳ್ಳೂರು, ಕಂಬದಹಳ್ಳಿ, ಚೌಡಸಂದ್ರ, ಗಂಗನಹಳ್ಳಿ ಮುಂತಾದೆಡೆಯಿಂದ ನೂರಾರು ಮಂದಿ ಗ್ರಾಮಸ್ಥರು ಆಗಮಿಸಿದ್ದರು.
ರಾತ್ರಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಭಾಗಿಯಾದರು. ನಂತರ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ವಾದ್ಯಗೋಷ್ಠಿಯು ಎಲ್ಲರನ್ನೂ ಮನರಂಜಿಸಿತು. ಈ ಸಂದರ್ಭದಲ್ಲಿ ದೇವಾಲಯದಲ್ಲಿ ಗಂಗಾದೇವಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.
ಬುಧವಾರ ಬೆಳಗಿನ ಜಾವ ದೀಪಾರತಿಗಳು ನಡೆದವು. ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಮಹಿಳೆಯರು ತಂಬಿಟ್ಟು ದೀಪಗಳನ್ನು ತಂದು ದೇವಿಗೆ ಬೆಳಗಿ ಪೂಜೆ ಸಲ್ಲಿಸಿದರು. ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರಿಗೆ ಮೇಲೂರಿನ ಗ್ರಾಮಸ್ಥರು ಸ್ವಾಗತವನ್ನು ಕೋರಿ, ಮಜ್ಜಿಗೆ, ಪಾನಕ ಮತ್ತು ಹೆಸರುಬೇಳೆ ನೀಡಿ ಸತ್ಕರಿಸಿದುದು ಗ್ರಾಮಗಳ ನಡುವಿನ ಭಾವೈಕ್ಯತೆಯನ್ನು ಸಾರಿತು.
‘ನಮ್ಮ ಮೇಲೂರು ಗ್ರಾಮದ ಅಧಿದೇವತೆ ಗಂಗಮ್ಮ ತಾಯಿಯು ಮಳೆ ಬೆಳೆಯನ್ನು ನೀಡಿ ಶಾಂತಿ ನೆಮ್ಮದಿಯನ್ನು ಕರುಣಿಸಲೆಂದು ಪ್ರತಿವರ್ಷ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ. ಸುತ್ತಲಿನ ಹಲವಾರು ಗ್ರಾಮಗಳಿಂದ ಆಗಮಿಸುವ ಭಕ್ತರು ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಮಂಗಳವಾರ ಬ್ರಹ್ಮರಥೋತ್ಸವವನ್ನು ಆಚರಿಸುತ್ತೇವೆ. ನಮ್ಮ ಗ್ರಾಮಗಳಿಂದ ಬೇರೆ ಊರುಗಳಿಗೆ ಮದುವೆಯಾಗಿ ಹೋಗಿರುವ ಹೆಣ್ಣುಮಕ್ಕಳು ತಮ್ಮ ತವರುಮನೆಗೆ ಬಂದು ಅಮ್ಮನವರ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ’ ಎಂದು ಮೇಲೂರಿನ ಶ್ರೀನಿವಾಸ್ ತಿಳಿಸಿದರು.

ಉಲ್ಲೂರುಪೇಟೆಯ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಶ್ರೀರಾಮೋತ್ಸವ ಕಾರ್ಯಕ್ರಮ

0

ಶಿಡ್ಲಘಟ್ಟದ ಉಲ್ಲೂರುಪೇಟೆಯ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಶ್ರೀರಾಮೋತ್ಸವ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಪುರಂದರದಾಸರ, ಕನಕದಾಸರ, ತ್ಯಾಗರಾಜರ ಹಾಗೂ ಯೋಗಿ ನಾರೇಯಣ ತಾತಯ್ಯನವರ ಕೃತಿಗಳ ಸಂಗೀತ ಕಚೇರಿಯನ್ನು ಏರ್ಪಡಿಸಲಾಗಿತ್ತು. ಗಾಯನ ವಿದ್ವಾನ್ ಎಸ್.ವಿ.ರಾಮಮೂರ್ತಿ, ಪಿಟೀಲು ವಿದ್ವಾನ್ ಜಿ.ಎನ್.ಶ್ಯಾಮಸುಂದರ್, ಮೃದಂಗ ಎಸ್.ಎನ್.ಲಕ್ಷ್ಮೀನಾರಾಯಣ, ಖಂಜಿರ ಕೆ.ವಿ.ಕೃಷ್ಣಮೂರ್ತಿ ಕಚೇರಿಯನ್ನು ನಡೆಸಿಕೊಟ್ಟರು.

ಬಾಯಲ್ಲಿ ನೀರು ತರಿಸುವ ಬೊಂಬಾಯಿ ಮಿಠಾಯಿ

0

ಶಾಲೆಯ ಬಳಿ ಬಣ್ಣದ ಲಂಗ, ಕಿವಿಗೆ ನೇತಾಡುವ ಲೋಲಾಕು, ಕೈಯಲ್ಲಿ ಬಳೆ ತೊಟ್ಟ ಈ ಹುಡುಗಿ ಕೈಯಲ್ಲಿನ ತಾಳದಲ್ಲಿ ಶಬ್ಧವನ್ನು ಹೊಮ್ಮಿಸುತ್ತಿದ್ದರೆ, ಮಕ್ಕಳಿಗೆ ಪಾಠ ಮರೆತು ಇತ್ತ ಗಮನ ಹರಿಯುತ್ತದೆ. ಆ ಬಾಲೆ ಮಕ್ಕಳಿಗೆ ಬಣ್ಣದ ಮಿಠಾಯಿ ಹಂಚಲೆಂದೇ ಬರುತ್ತಾಳೆ. ಅವಳೇ ಬೊಂಬಾಯಿ ಮಿಠಾಯಿ ಹುಡುಗಿ.
ಬೊಂಬಾಯಿ ಮಿಠಾಯಿ ಗೊಂಬೆ ನೋಡುವುದೇ ಚಂದ. ಬಣ್ಣದ ಅಂಗಿ ತೊಟ್ಟು ಅಲಂಕಾರ ಮಾಡಿದ ಮುದ್ದಾದ ಹುಡುಗಿ ಗೊಂಬೆಯನ್ನು ಮಿಠಾಯಿ ಕೋಲಿಗೆ ಸಿಕ್ಕಿಸಿ ಬಹುದೂರದವರೆಗೂ ಕಾಣುವಂತೆ ಮಾಡಿ ಮಕ್ಕಳನ್ನು ಆಕರ್ಷಿಸುವ ಪರಿ ನಿಜಕ್ಕೂ ಖುಷಿ ನೀಡುತ್ತದೆ. ಮಿಠಾಯಿವಾಲಾ ನಗರದ ಕೆಲವು ಶಾಲೆಗಳ ಬಳಿ ತನ್ನ ಗೊಂಬೆ ಹುಡುಗಿಯ ಜೊತೆ ನಿಂತು ಮಕ್ಕಳು ಹೊರ ಬರುವುದನ್ನೇ ಕಾದು ಕುಳಿತಿರುವುದು ನೋಡಿದಾಗ ಬಾಲ್ಯದ ನೆನಪು ಮರುಕಳಿಸುವಂತೆ ಮಾಡುತ್ತಿದೆ.
ನಗರದ ಕೆಲ ಶಾಲೆಗಳ ಮುಂದೆ ಬಣ್ಣದ ಮಿಠಾಯಿ ಹಂಚಲು ಕಾಯುತ್ತಿದ್ದ ಬಸವರಾಜ್ ಮೈಸೂರು ಬಳಿಯ ಮಲೆ ಕ್ಯಾತಮಾರನಹಳ್ಳಿಯವರು. ಸುಮಾರು 15 ವರ್ಷಗಳಿಂದ ರಾಜ್ಯದ ವಿವಿಧ ಊರುಗಳಲ್ಲಿ ಮಿಠಾಯಿ ವ್ಯಾಪಾರ ಮಾಡಿಯೇ ಬದುಕುತ್ತಿದ್ದಾರೆ. ಈಗ ಚಿಕ್ಕಬಳ್ಳಾಪುರದಲ್ಲಿ ಉಳಿದುಕೊಂಡಿದ್ದು, ಜಿಲ್ಲೆಯ ವಿವಿಧ ಊರುಗಳಲ್ಲಿ ಒಂದೊಂದು ವಾರ ತಿರುಗುತ್ತಾ ವ್ಯಾಪಾರ ಮಾಡುತ್ತಿದ್ದಾರೆ.
ನಗರದ ಸಂತೆಬೀದಿ, ತಾಲ್ಲೂಕು ಕಚೇರಿ, ಅಶೋಕ ರಸ್ತೆ, ಪೂಜಮ್ಮನ ದೇವಸ್ಥಾನ ಹೀಗೆ ಅನೇಕ ಕಡೆಗಳಲ್ಲಿ ವ್ಯಾಪಾರ ಮಾಡುತ್ತಾರೆ. ಸಂತೆ, ಜಾತ್ರೆ ಮತ್ತಿತರ ಜನ ಸೇರುವ ಸಂದರ್ಭಗಳು ಸೃಷ್ಟಿಯಾದರೆ ಅಲ್ಲೆಲ್ಲಾ ಇವರು ಆಕರ್ಷಣೆಯ ಕೇಂದ್ರವಾಗುತ್ತಾರೆ. ಗೊಂಬೆಯ ಕೈಯಲ್ಲಿ ತಾಳಗಳಿರುತ್ತವೆ. ಅದರ ಗುಂಡಿ ಒತ್ತಿದೆ ಸಾಕು ಎರಡು ತಾಳ ಸೇರಿ ಸದ್ದಾಗುತ್ತದೆ. ಮಿಠಾಯಿ ಮಾರಬೇಕಾದರೆ ಅವರು ಮಾಡಿಕೊಳ್ಳುವ ಇಂತಹ ಪುಟ್ಟಪುಟ್ಟ ವ್ಯವಸ್ಥೆಗಳೇ ಹೆಚ್ಚು ಆಸಕ್ತಿಕರವೆನಿಸುತ್ತದೆ.
ಬೊಂಬಾಯಿ ಮಿಠಾಯಿ ಮಾರಾಟದ ವೈಖರಿ ನಿಜಕ್ಕೂ ವಿಭಿನ್ನ. ಕೋಲೊಂದಕ್ಕೆ ಮಿಠಾಯಿ ಮತ್ತು ಗೊಂಬೆಯನ್ನು ಜೋಡಿಸಿದ್ದಾರೆ. ಸಕ್ಕರೆ ಪಾಕಕ್ಕೆ ಬಣ್ಣ ಲೇಪಿಸಿದ ಅಂಟಿನ ಮಿಠಾಯಿಯನ್ನು ಕಡ್ಡಿಗೆ ಸುತ್ತಿ ಬೇಕಾದ ಆಕಾರ ಮಾಡಿಕೊಡುವ ರೀತಿಯೂ ಸೃಜನಶೀಲವಾಗಿರುತ್ತದೆ. ನಿಮಿಷ ಮಾತ್ರದಲ್ಲಿ ಬಣ್ಣಬಣ್ಣದ ಹಕ್ಕಿ, ಸೈಕಲ್, ಗುಲಾಬಿ, ವಿಮಾನ, ನಕ್ಷತ್ರ, ನವಿಲು, ವಾಚು, ನೆಕ್ಲೇಸ್ ಮಾಡಿ ಕೊಡುವಾಗ ಅಪ್ಪಟ ಕಲಾವಿದರಂತೆಯೇ ಕಾಣುತ್ತಾರೆ.
‘ಎಲ್ಲೆಲ್ಲಿ ಜಾತ್ರೆ ನಡೆಯುತ್ತದೋ ಅಲ್ಲೆಲ್ಲ ಹೋಗುತ್ತೇನೆ. ಒಮ್ಮೆಲೆ ಐದು ಕೆ.ಜಿ. ಮಿಠಾಯಿ ತಯಾರಿಸುತ್ತೇನೆ. ಐದು ಕೆ.ಜಿ. ಸಕ್ಕರೆ ಪಾಕ ತಯಾರಿಸಿ, ಎರಡು ಅಥವಾ ಮೂರು ಬಣ್ಣಗಳ ಟ್ರೇಗಳಲ್ಲಿ ಪ್ರತ್ಯೇಕ ಪಾಕ ಸುರಿದು ತಣಿದ ನಂತರ ಎಲ್ಲವನ್ನೂ ಒಂದೇ ಸುರುಳಿ ಸುತ್ತಿ ಗೊಂಬೆಯ ಕೋಲಿಗೆ ಅಂಟಿಸಲಾಗುತ್ತದೆ. ಅಡುಗೆಗೆ ಬಳಸುವ ಬಣ್ಣಗಳನ್ನೇ ಬಳಸುತ್ತೇನೆ. ಇದು ಸ್ವಲ್ಪ ದುಬಾರಿಯೇ. ಮಿಠಾಯಿಯನ್ನು ಪುಟ್ಟಮಕ್ಕಳೇ ಇಷ್ಟಪಡುವ ಕಾರಣ ಮಾರುವಾಗ ಇದರ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸುತ್ತೇನೆ. ಮೊದಲೆಲ್ಲ ಮಿಠಾಯಿ ಮಾರುವವರ ಸಂಖ್ಯೆ ತುಂಬಾ ಇತ್ತು. ಆದರೆ ಈಗಿನ ಯುವಕರು ಈ ವೃತ್ತಿಯಿಂದ ಹಿಂದೆ ಸರಿದಿದ್ದಾರೆ. ದಿನವೆಲ್ಲಾ ಸುತ್ತಿದರೂ ಐದು ನೂರು ಸಂಪಾದಿಸುವುದು ಕೂಡ ಕಷ್ಟ. ಸಕ್ಕರೆಯ ಬೆಲೆಯೂ ಹೆಚ್ಚಿದ್ದು, ನಮಗೆ ಲಾಭ ಬರುವುದು ಅಷ್ಟಕ್ಕಷ್ಟೆ. ಮುಂದೆ ನಮ್ಮ ಜೊತೆಗೇ ಬೊಂಬಾಯಿ ಮಿಠಾಯಿಯ ಕಾಲ ಕೂಡ ಮುಗಿದು ಹೋಗಲಿದೆ’ ಎಂದು ಹೇಳುವಾಗ ಬಸವರಾಜ್ ಮುಖದಲ್ಲಿ ವಿಷಾದದ ಛಾಯೆ.

ಬಯಲು ಸೀಮೆಯ ರೈತರಿಗೆ ನೆರವು ನೀಡಿ – ವಿ.ಮುನಿಯಪ್ಪ

0

ತೀವ್ರ ಬರಗಾಲಕ್ಕೆ ತುತ್ತಾಗಿರುವ ಬಯಲು ಸೀಮೆಯ ರೈತರುಗಳ ಅಭಿವೃದ್ಧಿಗಾಗಿ ಭೂ ಅಭಿವೃದ್ಧಿ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳು ನೆರವಾಗಬೇಕು ಎಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಹೇಳಿದರು.
ನಗರದ ಸಹಕಾರಿ ಭೂ ಅಭಿವೃದ್ಧಿ ಬ್ಯಾಂಕಿನ ಆವರಣದಲ್ಲಿ ಬುಧವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಸಹಕಾರಿ ಸಂಘಗಳಲ್ಲಿ ರಾಜಕೀಯಕ್ಕೆ ಅವಕಾಶ ನೀಡದೆ ಎಲ್ಲಾ ಅರ್ಹ ರೈತರುಗಳಿಗೆ ಸಾಲಗಳನ್ನು ನೀಡಬೇಕು. ಬಯಲು ಸೀಮೆಯ ಪ್ರದೇಶ ಕಳೆದ ೨೦ ವರ್ಷಗಳಿಂದ ಮಳೆ ಕಡಿಮೆಯಾಗುತ್ತಿದೆ. ಕಷ್ಟಕಾಲದಲ್ಲಿ ಹಿಪ್ಪುನೇರಳೆ, ಹೈನುಗಾರಿಕೆಯ ಮುಖಾಂತರ ಕುಟುಂಬಗಳನ್ನು ನಿರ್ವಹಣೆ ಮಾಡಿಕೊಳ್ಳುವಂತಹ ಪರಿಸ್ಥಿತಿಯಿದೆ. ನೀರಾವರಿ ಯೋಜನೆಯ ಅನುಷ್ಠಾನಕ್ಕಾಗಿ ನಿರಂತರವಾಗಿ ಹೋರಾಟಗಳು ನಡೆಯುತ್ತಲೇ ಇವೆ. ಜನತೆಯ ನಿರಂತರ ಹೋರಾಟದ ಫಲವಾಗಿ ೫೦೦ ಕೋಟಿ ರೂಪಾಯಿಗಳ ಹಣವನ್ನು ಬಿಡುಗಡೆ ಮಾಡಲಾಗಿದ್ದು, ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಅಣೆಕಟ್ಟು ಕಟ್ಟುವಂತಹ ಕಾರ್ಯಗಳು ಪ್ರಗತಿಯಲ್ಲಿದೆ. ಮುಂದಿನ ೨ ವರ್ಷದಲ್ಲಿ ಈ ಭಾಗದ ಜನರಿಗೆ ಅನುಕೂಲವಾಗುವಂತೆ ಎತ್ತಿನಹೊಳೆ ಯೋಜನೆಯನ್ನು ಸರ್ಕಾರ ಅನುಷ್ಠಾನಕ್ಕೆ ತರಲಿದೆ ಎಂದರು.
ನೂತನವಾಗಿ ಆಯ್ಕೆಯಾಗಿ ಪದಗ್ರಹಣ ಮಾಡಿದ ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಸಿ.ಎಂ.ಗೋಪಾಲ್, ಉಪಾಧ್ಯಕ್ಷ ರವಿ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಮಾಜಿ ಕೋಚಿಮುಲ್ ಅಧ್ಯಕ್ಷ ಕೆ.ಗುಡಿಯಪ್ಪ, ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಂ.ಮುನಿಯಪ್ಪ, ಮುನಿಕೃಷ್ಣಪ್ಪ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ವಿ.ಸುಭ್ರಮಣಿ, ನಿರ್ದೇಶಕರಾದ ಭೀಮೇಶ್, ರಮಾದೇವಿ, ಅಶ್ವತ್ಥನಾರಾಯಣರೆಡ್ಡಿ, ಶಂಕರ್, ಮಯೂರ, ನಗರಸಭಾ ಸದಸ್ಯರಾದ ಕೇಶವಮೂರ್ತಿ, ಜೆ.ಎಂ.ಬಾಲಕೃಷ್ಣ, ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಎ.ರಾಮಚಂದ್ರಪ್ಪ, ವೆಂಕಟೇಶಪ್ಪ, ನಾಗರಾಜು, ಮೌಲಾ, ಭಕ್ತರಹಳ್ಳಿ ಮುನೇಗೌಡ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಚಾಕಲೇಟ್ ತಿಂದೀರಿ, ಜೋಕೆ!

0

ವಾಸ್ತವವಾಗಿ ಇದು ನಿಮ್ಮ ಆರೋಗ್ಯದ ಬಗ್ಗೆ ಮುಂಜಾಗ್ರತೆ ಕ್ರಮಗಳನ್ನು ಸೂಚಿಸಲು ತಯಾರಿಸಿದ ಲೇಖನವಲ್ಲ, ಆದರೆ ಮಾರುಕಟ್ಟೆಯಲ್ಲಿ ಸಿಗುವ ವಿವಿಧ ಮಾದರಿಯ ಚಾಕಲೇಟ್‍ಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿದ ನವದೆಹಲಿಯ ಕನ್ಸ್ಯೂಮರ್ ವಾಯ್ಸ್‍ನ ವರದಿಯ ಮಾಹಿತಿ ಓದಿದವರು ಹೇಳಲೇಬೇಕಾಗುತ್ತದೆ, ಚಾಕಲೇಟ್ ತಿಂದೀರಿ, ಜೋಕೆ!
ಭಾರತದಲ್ಲಿ ಚಾಕಲೇಟ್ ಬಳಕೆ ರುಚಿಗೆ, ಮಜಕ್ಕೆ. ಅದೇ ಅಮೇರಿಕದಲ್ಲಿ, ಒಂದರ್ಥದಲ್ಲಿ ಇದು ಆಹಾರ ಪದಾರ್ಥ. ಅಲ್ಲಿನ ಎಫ್‍ಡಿಎ ಕಾನೂನು ಶೇ. 100ರಷ್ಟು ಪ್ರಮಾಣದಲ್ಲಿ ಕೊಕೋ ಬೆಣ್ಣೆಯನ್ನು ಬಳಸುವುದನ್ನು ಕಡ್ಡಾಯಗೊಳಿಸಿದೆ. ಉಳಿದಂತೆ ಹಾಲಿನ ಕೆನೆ ಬಳಸಬಹುದಷ್ಟೆ. ಖಾದ್ಯ ತೈಲ ಬಳಸುವಂತಿಲ್ಲ. ಕಡಿಮೆ ಸಕ್ಕರೆ, ಬರೀ ಕೊಕೋ ಬೆಣ್ಣೆಯ ಮೃದು ತಯಾರಿಗಳು ಅಲ್ಲಿ ಆಹಾರ ಪದಾರ್ಥವಾಗಿ ಪರಿಗಣನೆಯಾದುದರಲ್ಲಿ ಅಚ್ಚರಿಯಿಲ್ಲ. ಅಲ್ಲೂ ಖಾದ್ಯ ತೈಲ ಬಳಸಿ ಸೃಷ್ಟಿಸಿದವುಗಳಿವೆ. ಅವುಗಳನ್ನು ಚಾಕಲೇಟ್ ಎನ್ನುವಂತಿಲ್ಲ! ಚಾಕಲೇಟ್‍ಗೆ ಪೂರಕ ಎನ್ನುತ್ತಾರಷ್ಟೆ. ಈ ಮಾಹಿತಿಗಳು ಲೇಬಲ್‍ನಲ್ಲಿ ಸ್ಪಷ್ಟವಾಗಿರುವುದರಿಂದ ಗ್ರಾಹಕ ಪಿಗ್ಗಿ ಬೀಳುವುದಿಲ್ಲ.
ಅತ್ತ ಬೆಲ್ಜಿಯಂನಲ್ಲಿ ವರ್ಷಕ್ಕೆ 172 ಮಿಲಿಯನ್ ಟನ್ ಚಾಕಲೇಟ್ ತಯಾರಾಗುತ್ತದೆ! ವರ್ಷವೊಂದಕ್ಕೆ ಅಲ್ಲಿನ ವ್ಯಕ್ತಿ ಸರಾಸರಿ 9 ಕೆ.ಜಿ. ಚಾಕಲೇಟ್ ತಿನ್ನುತ್ತಾನೆ. ಅಲ್ಲಿ ಚಾಕಲೇಟ್‍ಗೇ ಮೀಸಲಾದ ಮ್ಯೂಸಿಯಂಗಳಿವೆ. ಅಷ್ಟಕ್ಕೂ ಬೆಲ್ಜಿಯಂ ಚಾಕಲೇಟ್‍ಗಳು ವಿಶ್ವದಲ್ಲಿಯೇ ಶ್ರೇಷ್ಟವೆಂಬ ಖ್ಯಾತಿ ಪಡೆದಿವೆ. ಈಗಲೂ ಅಲ್ಲಿ ಚಾಕಲೇಟ್‍ಗಳು ಹಳೆಯ ತಾಂತ್ರಿಕತೆಯಲ್ಲಿ ತಯಾರಾಗುತ್ತಿವೆ. ಅವೆಲ್ಲ ನುರಿತ ಕೈಗಳಿಂದಲೇ ಸೃಷ್ಟಿಯಾಗುತ್ತಿವೆ!
2000ದಲ್ಲಿ ಯುರೋಪಿಯನ್ ಒಕ್ಕೂಟ ಚಾಕಲೇಟ್‍ಗಳಲ್ಲಿ ಶೇ.5ರ ಖಾದ್ಯತೈಲ ಬಳಕೆಯನ್ನು ಒಪ್ಪಿ ನಿಯಮ ರೂಪಿಸಿತು. ಬೆಲ್ಜಿಯಂನಲ್ಲಿ ಸಮಾಜ ತೀಕ್ಷ ್ಣವಾಗಿ ಪ್ರತಿಕ್ರಿಯಿಸಿತು. ಜನಾಂದೋಲನವಾಯಿತು. ಅಲ್ಲಿನ ಸಚಿವಾಲಯ ಪೂರ್ಣ ಕೊಕೋ ಬಳಕೆಯ ಚಾಕಲೇಟ್‍ನ್ನೇ ಸಮರ್ಥಿಸಿ ವಿಶೇಷ ನಿಯಮ, ಎಎಂಬಿಎಓವನ್ನು ಜಾರಿಗೊಳಿಸಬೇಕಾಯಿತು.
ಇಂತಹ ರಾಷ್ಟ್ರಗಳ ಉದಾಹರಣೆಗಳ ಹಿನ್ನೆಲೆಯಲ್ಲಿ ಭಾರತದೆಡೆಗೆ ನೋಡಿದರೆ ನಿರಾಶೆಯಾಗುತ್ತದೆ. ಜನಪ್ರಿಯ 13 ಬ್ರಾಂಡ್‍ಗಳ ಪೈಕಿ ಏಳರಲ್ಲಿ ಖಾದ್ಯ ತೈಲ ಬಳಕೆಯಾಗಿದೆ. ಆರೋಗ್ಯ ಸಚಿವಾಲಯದ ಆಹಾರ ಕಲಬೆರಕೆ ತಡೆ ಕಾಯ್ದೆ ಪಿಎಫ್‍ಎ ಪ್ರಕಾರ ಚಾಕಲೇಟ್‍ಗಳಲ್ಲಿ ಖಾದ್ಯ ತೈಲ ಉಪಯೋಗ ಸಂಪೂರ್ಣ ನಿಷಿದ್ಧ. ಕೆಲವು ಚಾಕಲೇಟ್‍ಗಳಲ್ಲಂತೂ ಅತ್ಯಂತ ಕೆಟ್ಟ ಪರಿಣಾಮದ ಹೈಡ್ರೋಜನರೇಟೆಡ್ ಖಾದ್ಯತೈಲ ಕಂಡುಬಂದಿವೆ.
ತಾವು ಖಾದ್ಯ ತೈಲ ಬಳಸಿರುವುದನ್ನಾಗಲೀ, ಯಾವ ಪ್ರಮಾಣದಲ್ಲಿ ಕೊಕೋ ಸೇರಿಸಿದ್ದೇವೆನ್ನುವುದನ್ನಾಗಲೀ ಭಾರತೀಯ ತಯಾರಿಕೆಗಳು ಲೇಬಲ್‍ನಲ್ಲಿ ನಮೂದಿಸಿರುವುದು ಕಡಿಮೆ. ಇಲ್ಲಿ ಲಭ್ಯವಾಗುವ ಟೋಬ್ಲರ್ ಕೊಕೋ ಬಳಸಿದ ಪ್ರಮಾಣವನ್ನು ನಮೂದಿಸಿವೆ. ಸ್ವಾರಸ್ಯವೆಂದರೆ, ಇವೆರಡೂ ಆಮದು ಚಾಕಲೇಟ್‍ಗಳು!
ಭಾರತೀಯ ಚಾಕಲೇಟ್ ತಯಾರಿಕೆಗಳಿಗೆ ಹಿಂಬಾಗಿಲ ಹಾದಿಗೆ ರಾಜಮಾರ್ಗವೇ ತೆರೆದಿದೆ. ಚಾಕಲೇಟ್‍ಗಳಲ್ಲಿನ ಕೊಕೋ ಪರಿಮಾಣವನ್ನು ಪತ್ತೆ ಹಚ್ಚಲು ತಾಂತ್ರಿಕತೆಯ ಕೊರತೆಯಿದೆ. ಕನ್ಸ್ಯೂಮರ್ ವಾಯ್ಸ್ ಸಂಸ್ಥೆಯು ಬ್ಯೂರೋ ಆಫ್ ಇಂಡಿಯನ್ ಸ್ಟಾಂಡಡ್ರ್ಸ್ (ಬಿಐಎಸ್), ಮೈಸೂರಿನ ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾಲಯ (ಸಿಎಫ್‍ಟಿಆರ್‍ಐ) ಹಾಗೂ ಚೆನ್ನೈನ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ನ್ಯೂಟ್ರಿಷನ್‍ನ್ನು ಸಂಪರ್ಕಿಸಿದರೂ ಅದಕ್ಕೆ ಅಗತ್ಯ ತಾಂತ್ರಿಕತೆ ಪಡೆಯಲು ಸಾಧ್ಯವಾಗದ್ದು ಇದಕ್ಕೆ ಸಾಕ್ಷಿ.
ಇದು ಬಿಐಎಸ್‍ಗೂ ಗೊತ್ತಿದೆ, ಹಾಗಾಗಿ ನಿಯಮ ಐಎಸ್ 1163:1992 ಮೂಲಕ ತಯಾರಿಕೆ ವೇಳೆಯಲ್ಲಿ ಬೆರೆಸುವ ಕೊಕೋ ದ್ರವ್ಯ ಪ್ರಮಾಣವನ್ನು ದಾಖಲಿಸಬೇಕೆಂಬ ಸಲಹೆ ನೀಡುತ್ತದೆ. ಇದೊಂದು ತರಹ ಹಾವು ಸಾಯದ, ಕೋಲೂ ಮುರಿಯದ ಸ್ಥಿತಿ. ಚಾಕ್‍ಲೇಟ್‍ನಲ್ಲಿರಬೇಕಾದ ಕನಿಷ್ಟ ಕೊಕೋ ಬಗ್ಗೆ ಯಾವುದೇ ಮಾನದಂಡ ಇಲ್ಲದಿರುವಾಗ ಲೇಬಲ್‍ನಲ್ಲಿ ಆ ಮಾಹಿತಿ ಕೊಡಬೇಕಾದ ಅಗತ್ಯವೇನು ಎಂದೇ ವಿಶ್ವ ಮಾರುಕಟ್ಟೆ ಹೊಂದಿರುವ ಕ್ಯಾಡ್‍ಬರಿ `ಭಾರತದಲ್ಲಿ’ ವಾದಿಸುತ್ತದೆ!
ಚಾಕಲೇಟ್‍ಗಳಲ್ಲಿ ಬಳಸುವ ಕೊಕೋ ಬೆಣ್ಣೆ ಸಸ್ಯಜನ್ಯವಾದುದು. ನಮ್ಮಲ್ಲಿನ ತೋಟ, ಗುಡ್ಡಗಳಲ್ಲಿ ಬೆಳೆಸುವ ಕೊಕೋ ಗಿಡಗಳ ಕಾಯಿಯೊಳಗೆ ಕೊಕೋ ಬೀಜಗಳಿರುತ್ತವೆ. ಕಾಯಿ ಹಣ್ಣಾದಂತೆ ಈ ಬೀಜಗಳನ್ನು ಬೇರ್ಪಡಿಸಿ, ನಿರ್ದಿಷ್ಟ ಉಷ್ಣತೆಯಲ್ಲಿ ಒಣಗಿಸಲಾಗುತ್ತದೆ. ಕರ್ನಾಟಕದಲ್ಲಿ ಕ್ಯಾಂಪ್ಕೋದಂತ ಸಹಕಾರಿ ಸಂಸ್ಥೆ ಕೊಕೋ ಬೀಜಗಳನ್ನು ಖರೀದಿಸಿ, ಸಂಸ್ಕರಿಸುತ್ತದೆ. ಆಫ್ರಿಕನ್ ದೇಶಗಳಲ್ಲಿ ರೈತರೇ ಸ್ವತಃ ಬೀಜ ಒಣಗಿಸುವ ಸಂಪ್ರದಾಯವಿದೆ.
ಆದರೆ ಕೊಕೋ ಬೀಜದೊಳಗಿನಿಂದ ಬೆಣ್ಣೆಯನ್ನು ಯಾಂತ್ರಿಕ ಸಹಾಯದಿಂದ ತೆಗೆಯಲಾಗುತ್ತದೆ. ಇದೇ ಚಾಕಲೇಟ್‍ನ ಮುಖ್ಯ ಕಚ್ಚಾ ಪದಾರ್ಥ. ಈ ಕೊಕೋ ಬೆಣ್ಣೆಯ ಕೊಬ್ಬಿನ ಅಂಶ ಆರೋಗ್ಯಕ್ಕೆ ಏನೇನೂ ಹಾನಿಕರವಲ್ಲ ಎಂಬುದು ಯುನೈಟೆಡ್ ಸ್ಟೇಟ್ಸ್ ಫುಡ್ ಎಂಡ್ ಡ್ರಗ್ಸ್ ಅಡ್ಮಿನಿಸ್ಟೇಷನ್‍ನ ಸಂಶೋಧನೆಯಿಂದ ಖಚಿತವಾಗಿದೆ. ಹಾಗಾಗಿಯೇ ಅದು ಅಮೆರಿಕದಲ್ಲಿ ಶೇ. 100ರ ಕೊಕೋ ಬೆಣ್ಣೆಯನ್ನೇ ಬಳಸಬೇಕೆಂಬ ಕಟ್ಟುನಿಟ್ಟಿನ ಮಾನದಂಡವನ್ನು ನಿಗದಿಪಡಿಸಿದೆ.
ಚಾಕಲೇಟ್‍ನಲ್ಲಿ ಬಾಯಲ್ಲಿ ಕರಗುವ ಬೆಣ್ಣೆಯ ಅಂಶವಂತೂ ಬೇಕು. ಕೊಕೋ ಬೆಣ್ಣೆಯಲ್ಲವಾದರೆ ಇನ್ನಾವುದೇ ಖಾದ್ಯ ತೈಲವನ್ನಾದರೂ ಬಳಸಲೇಬೇಕು. ತಾಳೆ, ಶೇಂಗಾ, ಸೂರ್ಯಕಾಂತಿ ಎಣ್ಣೆಗಳನ್ನು ಮತ್ತು ಅವುಗಳ ಪರಿಷ್ಕರಿಸಿದ ರೂಪದಲ್ಲಿ ಬಳಸಬಹುದು. ಇವುಗಳ ಕೊಬ್ಬಿನ ಅಂಶ ನಮ್ಮ ಜೀರ್ಣಾಂಗದಲ್ಲಿ ಸುಲಭದಲ್ಲಿ ಕರಗುವಂತದಲ್ಲ. ಅದರಲ್ಲೂ ಚಿಕ್ಕ ಮಕ್ಕಳೇ ಚಾಕಲೇಟ್‍ಗಳನ್ನು ಹೆಚ್ಚಾಗಿ ತಿನ್ನುವ ಭಾರತೀಯ ಸನ್ನಿವೇಶದಲ್ಲಿ ಖಾದ್ಯ ತೈಲದ ವಿಪರೀತ ಉಪಯೋಗದ ಅಪಾಯ ಅರ್ಥವಾಗುವಂತದು.
ಭಾರತೀಯ ಚಾಕಲೇಟ್ ತಯಾರಕರು ಖಾದ್ಯ ತೈಲ ಸೇರಿಸಿಯೂ ಮುಗುಂ ಆಗಿದ್ದಕ್ಕೆ ಇಟಲಿಯಲ್ಲಿ ಉತ್ಪಾದಿಸಲ್ಪಡುವ, ಇಲ್ಲಿ ಖರೀದಿಗೆ ಲಭಿಸುವ ಫೆರೆರೋ ರೋಚರ್ ತಾನು ತಾಳೆ ಎಣ್ಣೆ ಬೆರೆಸಿರುವುದನ್ನು ರ್ಯಾಪರ್‍ನಲ್ಲಿಯೇ ಒಪ್ಪಿಕೊಳ್ಳುತ್ತದೆ!
ಭಾರತೀಯ ಮಾರುಕಟ್ಟೆಯಲ್ಲಿ ಅನಧಿಕೃತ, ಬೇನಾಮಿ ಚಾಕಲೇಟ್‍ಗಳು ಹೇರಳ. ತಿನ್ನುವ ನಾವೂ ಅಧಿಕೃತತೆಯ ಪರೀಕ್ಷೆಗೆ ಹೋಗುವುದಿಲ್ಲ. `ಮಂಚ್’ ಇಲ್ಲದಿದ್ದರೆ, ಅದೇ ರೂಪದ ನಕಲಿ `ಪಂಚ್’ ಆದರೂ ಆದೀತು. ನಮ್ಮ ಅಜ್ಞಾನ, ಅಲಕ್ಷ್ಯ ಚಾಕ್‍ಲೇಟ್ ತಯಾರಕರಿಗಂತೂ ವರದಾನವಾಗಿದೆ.
ನಾವು ನಿರೀಕ್ಷಿಸುವುದು ಸಿಹಿ. ಬಿಐಎಸ್ ಚಾಕಲೇಟ್‍ಗಳಲ್ಲಿ ಗರಿಷ್ಟ ಶೇ.55 ಸಕ್ಕರೆ ಅಂಶ ಇರಬಹುದು ಎಂದಿದೆ. ವಾಸ್ತವದಲ್ಲಿ, ಕಡಿಮೆ ಸಕ್ಕರೆ ಇದ್ದಲ್ಲಿ ಹೆಚ್ಚಿನ ಕೊಕೋ ಪ್ರಮಾಣಕ್ಕೆ ಅವಕಾಶ. ಕ್ಯಾಡ್‍ಬರಿ ಕ್ರಾಕ್ಲ್‍ನಲ್ಲಿ ಶೇ.54.23ರಷ್ಟು ಸಕ್ಕರೆ ಇದೆ. ನೆಸ್ಲೆ ಬಾರ್ ಒನ್, ಕ್ಯಾಡ್‍ಬರಿ 5 ಸ್ಟಾರ್, ಅಮುಲ್ ಚಾಕೋಜೂಗಳಲ್ಲಿ ಹೈಡ್ರೋಜನರೇಟೆಡ್ ಖಾದ್ಯತೈಲವಿದೆ. ಇದಕ್ಕಿಂತ ಸಕ್ಕರೆ ಹೆಚ್ಚಿರುವ ಕ್ರಾಕ್ಲ್‍ನಂತವು ಕ್ಷೇಮ!
ಭಾರತೀಯರು ಮಿಲ್ಕೀಬಾರ್ ಚಾಕಲೇಟ್‍ಗಳಿಗೆ ಮುಗಿಬೀಳುವುದು ಕಂಡುಬರುತ್ತದೆ. ಹಾಲಿನಿಂದ ತಯಾರಿಸಲ್ಪಡುವ ಚಾಕಲೇಟ್ ಇದ್ದುದರಲ್ಲಿ ಒಳ್ಳೆಯದು ಎಂಬ ಕಲ್ಪನೆಯಿದೆ. ನಿಜ, ಹಾಲಿನ ಪ್ರಮಾಣ ಹೆಚ್ಚಿದ್ದರೆ ಒಳ್ಳೆಯದೇ. ಅಸಲಿಗೆ ಅವು ಚಾಕಲೇಟ್‍ನಲ್ಲಿ ಎಷ್ಟು ಇದೆ ಎಂಬುದು ಸಂಶಯ! ನವದೆಹಲಿಯ `ವಾಯ್ಸ್’ ಸಂಸ್ಥೆ ಎನ್‍ಎಬಿಎಲ್ ಪ್ರಯೋಗಾಲಯದಲ್ಲಿ 6 ತಿಂಗಳ ಕಾಲ ಚಾಕಲೇಟ್‍ಗಳ ನಾನಾತರದ ಪರೀಕ್ಷೆ ಮಾಡುತ್ತದೆ. ನೆಸ್ಲೆ ಬಾರ್ ಒನ್ ಹಾಗೂ ಅಮುಲ್ ಚಾಕೋಜೂನಂತ ಬ್ರಾಂಡ್‍ನಲ್ಲಿ ಇರುವ ಹಾಲಿನ ಪ್ರಮಾಣ ಎಷ್ಟು ಕಡಿಮೆ ಎಂದರೆ ಲ್ಯಾಬ್ ಟೆಸ್ಟ್‍ನಲ್ಲಿ ಪತ್ತೆಯಾಗುವುದೇ ಇಲ್ಲ! ಮಾರ್ಸ್ ಬ್ರಾಂಡ್‍ನಲ್ಲಿ ಶೇ.14.58ರ ಹಾಲು ಪ್ರಮಾಣವಿರುವುದು ಉಲ್ಲೇಖಾರ್ಹ. ಉಳಿದವುಗಳಲ್ಲಿ ಶೇ. 5ರ ಆಚೀಚೆಯಲ್ಲಿಯೇ ಹಾಲಿನ ಪ್ರಮಾಣವಿರುವುದು ವ್ಯಕ್ತ.
ಯೋಚಿಸಬೇಕಾದವರು ನಾವು. ಶೇ.50 ಸಕ್ಕರೆ, ಶೇ.5 ಹಾಲು ಎಂದರೆ ಉಳಿದ ಶೇ.45 ಭಾಗದಲ್ಲಿ ಪ್ರಿಜರ್‍ವೇಟಿವ್, ಬಣ್ಣ, ಸ್ವಾದದ ರಾಸಾಯನಿಕಗಳು. ಮಕ್ಕಳನ್ನೇ ಹೆಚ್ಚಾಗಿ ಆಕರ್ಷಿಸುವ ಚಾಕಲೇಟ್‍ಗಳನ್ನು ಹಟಕ್ಕೆ ಬಿದ್ದವರಂತೆ ತಿನ್ನಿಸುವ ನಾವು ಅಕ್ಷರಶಃ ಮಾಡುತ್ತಿರುವುದೇನು? ಮಕ್ಕಳಿಗೆ ಖುದ್ದು ವಿಷ ಇಕ್ಕುತ್ತಿದ್ದೇವೆ!
ಎರಡು ವಿಷಯ ಪ್ರಸ್ತಾಪಾರ್ಹ. ಇನ್ನು ಮುಂದೆ ಚಾಕಲೇಟ್ ಖರೀದಿಸುವವರು, ಅದರೊಳಗೆ ಅಳವಡಿಸಿರುವ ಅಂಶಗಳನ್ನು ಲೇಬಲ್‍ನಲ್ಲಿ ಓದಿ ನಂತರವೇ ಕೊಳ್ಳುವುದು ಕ್ಷೇಮ. ಆದರೆ ಲೇಬಲ್‍ನಲ್ಲಿ ಮಾಹಿತಿ ಇರುವುದಿಲ್ಲ, ಮುದ್ರಿಸಿರುವುದಿಲ್ಲ ಎಂಬುದೇ ದೊಡ್ಡ ದೂರು. ಆಗಲೂ ಒಳ್ಳೆಯ ಚಾಕಲೇಟ್‍ನ ಪರೀಕ್ಷೆಗೆ ಒಂದು ಸರಳ ಕ್ರಮವಿದೆ. ಆ ಚಾಕಲೇಟ್‍ನಲ್ಲಿ ಕೆಲಕಾಲ ಕೈಯಲ್ಲಿ ಭದ್ರವಾಗಿ ಹಿಡಿದುಕೊಳ್ಳಬೇಕು. ಅದೆಷ್ಟು ಬೇಗ ಮೆದುವಾಗುತ್ತದೋ ಅಷ್ಟು ಯೋಗ್ಯ. ಕೊಕೋ ಪ್ರಮಾಣ ಹೆಚ್ಚಿದೆ ಎಂದುಕೊಳ್ಳಬಹುದು.
ಲೇಬಲ್‍ನಲ್ಲಿ ಅದನ್ನು ಚಾಕೋಲೇಟ್ ಎಂದು ನಮೂದಿಸಿರುವುದನ್ನು ಖಚಿತಪಡಿಸಿಕೊಳ್ಳಿ. ಅಮುಲ್ ಚಾಕೋಜೂ ಬ್ರಾಂಡ್ ಚಾಕಲೇಟ್ ಅಲ್ಲವೇ ಅಲ್ಲ. ಅದು ಚಾಕೋಬೈಟ್! ನೆಸ್ಲೆ ಬಾರ್ ಒನ್‍ನ ರ್ಯಾಪರ್ ಹೇಳುತ್ತದೆ luscious nought and caramel with delicious chocolayer!  ಅದೂ ಚಾಕಲೇಟ್ ಎನ್ನುವುದಿಲ್ಲ!!
ಇನ್ನೊಂದು ಮುಖ
ಚಾಕಲೇಟ್‍ನ ಸವಿಯನ್ನು ಮೆಂದು ಮೈ ಮರೆತಿರುವವರಿಗೆ ಹಿಂದಿನ ಕರಾಳ ವ್ಯವಸ್ಥೆಯೊಂದರ ಅರಿವು ಇರಲಿಕ್ಕೆ ಸಾಧ್ಯವಿಲ್ಲ. ಚಾಕಲೇಟ್‍ನ ಮುಖ್ಯ ಪದಾರ್ಥ ಕೊಕೋನ ಬಹುಪಾಲು ಆಮದುಗೊಳ್ಳುವುದು ಬಡ ಆಫ್ರಿಕನ್ ದೇಶಗಳಿಂದ. ಘಾನಾ ದೇಶ ತನ್ನ ರಫ್ತಿನಿಂದ ಗಳಿಸುವ ಆದಾಯದಲ್ಲಿ ಶೇ. 46 ಕೊಕೋ ಬಾಬತ್ತಿನದು-ಅದೇ ಐವರಿ ಕೋಸ್ಟಾ ವಿಶ್ವ ಮಾರುಕಟ್ಟೆಯ ಶೇ. 43 ಭಾಗವನ್ನು ತಾನೇ ಪೂರೈಸುತ್ತದೆ. ಅತ್ಯಂತ ಕಡಿಮೆ ಬೆಲೆಗೆ ಕೊಕೋವನ್ನು ರಫ್ತು ಮಾಡಲು ಪಶ್ಚಿಮ ಆಫ್ರಿಕಾ ದೇಶಗಳಿಗೆ ಸಾಧ್ಯವಾಗುವುದು ಬಾಲ ಕಾರ್ಮಿಕರಿಂದ! ಒಂದು ಅಂದಾಜಿನ ಪ್ರಕಾರ, 2 ಲಕ್ಷದ 84 ಸಾವಿರ ಮಕ್ಕಳು ಅಹರ್ನಿಶಿ ಜುಜುಬಿ ಸಂಬಳಕ್ಕೆ ದುಡಿಯುತ್ತಿದ್ದಾರೆ. 2000ದಲ್ಲೊಮ್ಮೆ ಅಮೆರಿಕದ ಕಾರ್ಮಿಕ ಇಲಾಖೆ ತನಿಖೆ ನಡೆಸಿ ಕಂಡುಹಿಡಿದಿತ್ತು. ಆ ವರ್ಷ ಘಾನಾದಲ್ಲಿ 9 ರಿಂದ 12ರ ಮಧ್ಯದ 15 ಸಾವಿರ ಮಕ್ಕಳು ಹತ್ತಿ, ಕಾಫಿ, ಕೊಕೋ ಪ್ಲಾಂಟೇಷನ್‍ಗೆ ಮಾರಲ್ಪಟ್ಟಿದ್ದರು. ಇವರೆಲ್ಲ ಕಳ್ಳ ಸಾಗಾಣಿಕೆಯಾದ ಮಕ್ಕಳು! ಅಲ್ಲಿನ ಕಾರ್ಮಿಕರ, ಅವರ ಕುಟುಂಬಗಳ ಸ್ಥಿತಿ ಹೀನಾಯ.
ಚಾಕಲೇಟ್ ಕಂಪನಿಗಳು ಮಾತ್ರ ಅದಕ್ಕೂ ತಮಗೂ ಸಂಬಂಧವಿಲ್ಲ ಎಂತಲೇ ವಾದಿಸುತ್ತವೆ. ತಾವು ಕೊಕೋವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆಯೇ ವಿನಃ ಕಾರ್ಮಿಕ ಶೋಷಣೆಯನ್ನು ಬೆಂಬಲಿಸುವುದಿಲ್ಲ. ಆದರೆ ಸದರಿ ವಿಚಾರದಲ್ಲಿ ತಾವು ಅಸಹಾಯಕರು ಎನ್ನುತ್ತಾರೆ.
ಕೊನೆ ಪಕ್ಷ ಅಮೆರಿಕನ್ ಕಂಪನಿಗಳ ವಿಚಾರದಲ್ಲಿ ಇದು ಸುಳ್ಳು. ಅಲ್ಲಿನ ಹೆರ್ಷೆಯ್ ಹಾಗೂ ಮಾರ್ಸ್ ಚಾಕಲೇಟ್ ಕಂಪನಿಗಳು ಬೃಹತ್ ಮಾರುಕಟ್ಟೆಯ ಭಾಗವಾಗಿದ್ದು, ಅವು ಅನಾಯಾಸವಾಗಿ ಕೊಕೋ ಕಾರ್ಮಿಕರ ಕಲ್ಯಾಣದ ಷರತ್ತು ಒಡ್ಡಿ ಕಚ್ಚಾ ಕೊಕೋ ಖರೀದಿಸಬಹುದು. ಈ ಕಂಪನಿಗಳ ಒತ್ತಡವನ್ನು ಭರಿಸಲು ಪ್ಲಾಂಟೇಶನ್ ಮಾಲಿಕರಿಗೆ ಸಾಧ್ಯವಿಲ್ಲ. ಒಂದು ಪೌಂಡ್ ಚಾಕಲೇಟ್‍ಗೆ 400 ಕೊಕೋ ಬೀಜ ಹೆಕ್ಕುವ ಆಫ್ರಿಕನ್ ಬಾಲಕ ಮಾತ್ರ ತನ್ನ ಜೀವಮಾನದಲ್ಲಿ ಹೊಳೆಯುವ ಪ್ಯಾಕ್‍ನಲ್ಲಿರುವ ಚಾಕಲೇಟ್ ರುಚಿ ನೋಡುವುದೇ ಇಲ್ಲ!
ಕೊನೆ ಮಾತು – ಚಾಕಲೇಟ್‍ಗಳಲ್ಲೂ ಕೆಲವು ಮೊಟ್ಟೆಯ ಬಿಳಿ ಅಂಶ ಬಳಸಿಕೊಂಡಿರುತ್ತವೆ. ಉದಾಹರಣೆಗೆ, ಮಾರ್ಸ್ ಹಾಗೂ ಟೋಬ್ಲೆರಾನ್ ಚಾಕಲೇಟ್‍ಗಳು ಸಸ್ಯಹಾರಿ ಅಲ್ಲ! ಹಾಗೆಂದು ಇವ್ಯಾವುದೇ ಚಾಕಲೇಟ್ ರ್ಯಾಪರ್‍ನಲ್ಲಿ ಕೆಂಪು ಚುಕ್ಕೆ, ಹಸಿರು ಚುಕ್ಕೆ ಇಲ್ಲ! ಇನ್ನುಳಿದಂತೆ, ಚಾಕಲೇಟ್ ಬಗ್ಗೆ ತೀರ್ಮಾನ ನಿಮ್ಮದು.
ಮಾ.ವೆಂ.ಸ. ಪ್ರಸಾದ

ಅವಿಭಜಿತ ಕೋಲಾರ ಜಿಲ್ಲೆಯ ಲೇಖಕರ ಕೃತಿ ಸಂಗ್ರಹ

0

ಸಾಮಾಜಿಕ, ಸಾಹಿತ್ಯ, ಕಲೆ, ಸಂಗೀತ, ಜಾನಪದ ಮುಂತಾದ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ದೊಡಮಲದೊಡ್ಡಿ ಬಳಿಯ ನಿಸರ್ಗ ವಿದ್ಯಾಮಂದಿರದ ಹತ್ತಿರದ ಶ್ರೀ ಗುರುಮಲ್ಲಯ್ಯ -ಸರ್ವಮಂಗಳ ಪ್ರತಿಷ್ಠಾನದ ‘ಸರ್ವೋದಯ ಗುರುಕುಲ’ದಲ್ಲಿ ಏಪ್ರಿಲ್ ೫ರಂದು ಲೋಕಾರ್ಪಣೆಯಾಗಲಿರುವ ‘ಜಗನ್ನಾಥ್ ಪುಸ್ತಕ ಮನೆ’ಯಲ್ಲಿ ಅವಿಭಜಿತ ಕೋಲಾರ ಜಿಲ್ಲೆಯ ಲೇಖಕರ ಕೃತಿಗಳನ್ನು ಪ್ರತ್ಯೇಕ ವಿಭಾಗದಲ್ಲಿ ಸಂಗ್ರಹಿಸಿಡುವ ಕಾರ್ಯಕ್ರಮವನ್ನು ರೂಪಿಸಿದೆ.
ಅಧ್ಯಯನ ಮಾಡುವವರಿಗೆ ನೆರವಾಗುವ ಉದ್ದೇಶದಿಂದ ಆಕರ ಗ್ರಂಥಗಳಿಗೆ ಮೀಸಲಾದ ಈ ಪಸ್ತಕ ಮನೆಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಲೇಖಕರ ಎಲ್ಲಾ ಪ್ರಕಾರದ ಕೃತಿಗಳನ್ನು ಇಲ್ಲಿ ಇಡಲಾಗುವುದು. ಹಾಗೆಯೇ ಈ ಲೇಖಕರ ಪರಿಚಯಾತ್ಮಕ ದಾಖಲೆಗಳನ್ನೂ ನಿರ್ವಹಿಸಲಾಗುದು ಎಂದು ಗುರುಕುಲದ ಕಾರ್ಯ ನಿರ್ವಾಹಕ, ಸಾಹಿತಿ ಸ.ರಘುನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇವಲ್ಲದೆ ಈ ಎರಡೂ ಜಿಲ್ಲೆಗಳಿಗೆ ಸೇರಿದ ಲೇಖಕರು ಕನ್ನಡಕ್ಕೆ ಅನುವಾದ ಮಾಡಿದ ಕೃತಿಗಳನ್ನಷ್ಟೇ ಅಲ್ಲದೆ, ಕನ್ನಡದಿಂದ ಇತರೆ ಭಾಷೆಗಳಿಗೆ ಮಾಡಿದ ಕೃತಿಗಳನ್ನು ಸಹ ಇಡಲಾಗುವುದು. ಆದುದರಿಂದ ಲೇಖಕರು, ಪ್ರಕಾಶಕರು, ಆಸಕ್ತರು, ಸ್ನೇಹಿತರು ಕೃತಿಗಳನ್ನು ಲೇಖಕರ ಸಂಕ್ಷಿಪ್ತ ಪರಿಚಯದೊಂದಿಗೆ ಸ,ರಘುನಾಥ, ಕಂಟ್ರಾಕ್ಟರ್ ರಾಜಣ್ಣನವರ ಮನೆ, ವೇಣು ವಿದ್ಯಾ ಸಂಸ್ಥೆ ಎದುರು, ಕುವೆಂಪು ವೃತ್ತ, ಶ್ರೀನಿವಾಸಪುರ– ೫೬೩೧೩೫, ಕೋಲಾರ ಜಿಲ್ಲೆ, ಈ ವಿಳಾಸಕ್ಕೆ ಕಳುಹಿಸಿಕೊಡಬಹುದಾಗಿದೆ.
ಕೃತಿಗಳೊಂದಿಗೆ ಪರಿಚಯ ಪತ್ರವನ್ನು ಕಳುಹಿಸಬೇಕಲ್ಲದೆ, ಪರಿಚಯ ಪತ್ರವನ್ನಷ್ಟೇ ಕಳುಹಿಸಿದರೆ ಸ್ವೀಕರಿಸಲಾಗುವುದಿಲ್ಲ. ಒಂದು ವೇಳೆ ಕೃತಿ ರಚನೆ ಮಾಡಿಯೂ ಪ್ರಕಟಿಸಲಾಗದೆ ಇರುವವರು ಎ೪ ಹಾಳೆಯಲ್ಲಿ ಒಂದೇ ಮಗ್ಗುಲಿನಲ್ಲಿ ಟೈಪು ಮಾಡಿಸಿ, ಅಚ್ಚುಕಟ್ಟಾಗಿ ಬೈಂಡು ಮಾಡಿಸಿ ಕಳುಹಿಸಬಹುದಾಗದೆ ಎಂದು ತಿಳಿಸಿರುವ ಅವರು, ಮಾಸ್ತಿ, ಡಿವಿಜಿ, ದೇವುಡು, ಇಡಗೂರು ರುದ್ರಕವಿ, ಜಚನಿ, ಕೈವಾರ ತಾತಯ್ಯ, ತೊರ್ಲ ಭೈಯ್ಯಾರೆಡ್ಡಿ, ವೇದಾಂತಂ ವೆಂಕಟರೆಡ್ಡಿ, ಪುಲ್ಲಕವಿ, ಗಟ್ಟಳ್ಳಿ ಆಂಜನಪ್ಪ ಮುಂತಾದವರ ಕೃತಿಗಳನ್ನು ಕೊಡುಗೆಯಾಗಿ ಸ್ವೀಕರಿಸುವುದಲ್ಲದೆ, ಕುಮುದೇಂದು, ಪಾಲವೇಕರಿ ಕದಿರೀಪತಿ ಮುಂತಾದ ಪ್ರಾಚೀನ ಲೇಖಕರ ಕೃತಿಗಳನ್ನೂ, ತಾಳೆಗರಿ ಗ್ರಂಥ, ಹಸ್ತಪ್ರತಿಗಳನ್ನೂ ಸ್ವೀರಿಸಡಲಾಗುವುದು. ಹೀಗೆ ಪ್ರಾಚೀನ ಗ್ರಂಥಗಳನ್ನು ನೀಡುವವರ ವಿವರಗಳನ್ನೂ ಸಹ ಗುರುಕುಲವು ದಾಖಲಿಸುವುದಾಗಿ ಎಂದು ತಿಳಿಸಿದ್ದಾರೆ.

ಭಕ್ತರಹಳ್ಳಿಯ ಬಳಿ ಟೆಂಪೋ ಮುಗುಚಿ ೧೫ ಮಂದಿಗೆ ಗಾಯ

0

ಕ್ಯಾರೆಟ್ ತುಂಬಿಕೊಂಡು ಹೋಗುತ್ತಿದ್ದ ಟೆಂಪೊವೊಂದು ಉರುಳಿಬಿದ್ದ ಪರಿಣಾಮ, 15 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಂಗಳವಾರ ನಡೆದಿದೆ.
ತಾಲ್ಲೂಕಿನ ಭಕ್ತರಹಳ್ಳಿಯ ಸಮೀಪದ ಹಳ್ಳಿಯೊಂದರ ಕಡೆಯಿಂದ ಚಿಕ್ಕಬಳ್ಳಾಪುರದ ಕಡೆಗೆ ಟೆಂಪೊನಲ್ಲಿ ಕ್ಯಾರೆಟ್ ತುಂಬಿಕೊಂಡು ಹೋಗುವಾಗ ಭಕ್ತರಹಳ್ಳಿಯ ಸಮೀಪದ ತಿರುವಿನಲ್ಲಿ ಟೆಂಪೋ ಮುಗುಚಿಬಿದ್ದಿದೆ, ಟೆಂಪೋ ಮುಗುಚಿಬಿದ್ದ ಪರಿಣಾಮವಾಗಿ ಟೆಂಪೋನಲ್ಲಿದ್ದ 15 ಮಂದಿಗೆ ಗಾಯಗಳಾಗಿವೆ. ಎಂಟು ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಟೆಂಪೊನಲ್ಲಿ ಅಧಿಕವಾದ ಲೋಡ್ಮಾಡಿದ್ದ ಕಾರಣ ಕಾರ್ಮಿಕರು ಟೆಂಪೋ ಮೇಲೆ ಕುಳಿತು ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಚಾಲಕನ ನಿರ್ಲಕ್ಷ್ಯವೇ ಘಟನೆಗೆ ಕಾರಣವೆನ್ನಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ನಾರಾಯಣಮ್ಮ ಮತ್ತು ಲಕ್ಷ್ಮಮ್ಮ ಎಂಬುವರನ್ನು ಕಳುಹಿಸಲಾಗಿದೆ.
ಗಾಯಾಳುಗಳು ಚಿಕ್ಕಬಳ್ಳಾಪುರ ಸಮೀಪದ ತಿಪ್ಪೇನಹಳ್ಳಿಯವರು. ಆಸ್ಪತ್ರೆಯಲ್ಲಿ ಗಾಯಾಳುಗಳ ಆಕ್ರಂಧನ ಮುಗಿಲು ಮುಟ್ಟಿತ್ತು, ಎಲ್ಲಾ ಗಾಯಾಳುಗಳನ್ನು ಕೂಡಲೇ 108 ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸ ಮೂರ್ತಿ ಹಾಜರಿದ್ದರು.

ಅಮೃತ ಬಳ್ಳಿ

0

ಇತ್ತೀಚಿನ ದಿನಗಳಲ್ಲಿ ಮನೆ ಮಾತಾದ ಹಂದಿಜ್ವರ (H.N.) ಹಾಗೂ ಚಿಕುನ್ ಗೂನ್ಯಾ ಜ್ವರಗಳು ಬೇರೆ ಬೇರೆ ವೈದ್ಯಕೀಯ ಚಿಕಿತ್ಸಾ ಪದ್ಧತಿಗಳಿಂದ ಗುಣಪಡಿಸಲಾರದಾದಾಗ ಜನರು ಮೊರೆ ಹೋಗಿದ್ದು ಆಯುರ್ವೇದ ಚಿಕಿತ್ಸಾ ಪದ್ಧತಿಯ ಗಿಡಮೂಲಿಕೆಗಳನ್ನು “ತಲೆಗೊಂದೇ ಮಂತ್ರ” ವೆಂಬಂತೆ ಅಮೃತ ಬಳ್ಳಿಯ ಕಾಂಡಗಳನ್ನು ಉಪಯೋಗಿಸಿ ಕಷಾಯಗಳನ್ನು ತಯಾರಿಸಿ ಉಪಯೋಗಿಸಿದರು. ಆದರೆ “ಅತಿಯಾದರೆ ಅಮೃತವೂ ವಿಷ’ ರೋಗಗಳ ಕಾರಣಗಳನ್ನು ಅರಿತು ಲಕ್ಷಣಗಳನ್ನು ನೋಡಿ ವೈದ್ಯರ ಸಲಹೆಯ ಮೇರೆಗೆ ಔಷಧ ಸಸ್ಯಗಳನ್ನು ಬಳಸುವುದು ಆರೋಗ್ಯಕರ.
ಹೆಸರೇ ಸೂಚಿಸುವಂತೆ ಅಮೃತಕ್ಕೆ ಸಮಾನವಾದಂಥಹ “ಅಮೃತ ಬಳ್ಳಿ”ಯ ಪರಿಚಯ ಹಾಗೂ ಅದರ ಗುಣ ಲಕ್ಷಣಗಳು ಹಾಗೂ ರೋಗಗಳಲ್ಲಿ ಬಳಕೆಯ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.
ಅಮೃತ ಬಳ್ಳಿಯು (menispermaceae)  ಮೆನಿಸ್ಪರ್ಮೇಶಿಯೆ ಎಂಬ ಸಸ್ಯ ಶಾಸ್ತ್ರೀಯ ಕುಟುಂಬ ವರ್ಗಕ್ಕೆ ಸೇರಿರುತ್ತದೆ. ಸಾಮಾನ್ಯವಾಗಿ ಈ ಕುಟುಂಬ ವರ್ಗಕ್ಕೆ ಸೇರಿದ ಸಸ್ಯಗಳು ಬಳ್ಳಿಗಳ ರೂಪದಲ್ಲಿ ಇರುತ್ತವೆ. ಯಾವುದೇ ವೃಕ್ಷಗಳಿಗೆ ಹಮ್ಮಿಕೊಂಡು ಬೆಳೆಯುತ್ತವೆ. ಈ ಬಳ್ಳಿಯ ಕಾಂಡವನ್ನು ಕತ್ತರಿಸಿ ನೋಡಿದಾಗ ಚಕ್ರಾಕಾರವಾಗಿ ಕಾಣುತ್ತದೆ. ಎಲೆಗಳು ಏಕಾಂತರವಾಗಿದ್ದು, ಹೃದಯದ ಆಕಾರದಲ್ಲಿ ಇದ್ದು, ಉಪಪತ್ರಗಳಿರುವುದಿಲ್ಲ. ಹೂವುಗಳು ಆಕಾರದಲ್ಲಿ ಸಣ್ಣದಾಗಿದ್ದು, ಹಳದಿ ಬಣ್ಣದ ಗುಚ್ಛಗಳ ರೂಪದಲ್ಲಿ ಇರುತ್ತವೆ. ಹಣ್ಣು ಕೆಂಪು ಬಣ್ಣದ್ದಾಗಿರುತ್ತದೆ. ಕಾಂಡವನ್ನು ಕತ್ತರಿಸಿ ನೆಟ್ಟಾಗ ಬಳ್ಳಿಗಳು ಹುಟ್ಟಿಕೊಳ್ಳುತ್ತವೆ. ಕಹಿ ಬೇವಿನ ವೃಕ್ಷಕ್ಕೆ ಹಮ್ಮಿಕೊಂಡ ಅಮೃತ ಬಳ್ಳಿಯು ಔಷಧಾರ್ಥವಾಗಿ ಉಪಯೋಗಿಸುವುದಕ್ಕೆ ಪ್ರಶಸ್ತವಾದುದಾಗಿದೆ.
ಅಮೃತ ಬಳ್ಳಿಯ ಸಮಾನಾರ್ಥಕ ಸಂಸ್ಕøತ ಹೆಸರುಗಳು
ವತ್ಸಾದನಿ: ಗೋವುಗಳು ಇವುಗಳನ್ನು ತಿನ್ನುವ ಕಾರಣಕ್ಕೆ ಈ ಹೆಸರು.
ಛಿನ್ನರೂಹಾ: ಈ ಬಳ್ಳಿಯ ಕಾಂಡಗಳನ್ನು ಕತ್ತರಿಸಿ ನೆಡುವುದರಿಂದ ಬಳ್ಳಿಗಳು ಹುಟ್ಟುತ್ತವೆ. ಆದ್ದರಿಂದ ಈ ಹೆಸರು.
ಗುಡೂಚಿ: ರೋಗಗಳಿಂದ ಜನರನ್ನು ರಕ್ಷಿಸುವುದರಿಂದ ಈ ಹೆಸರು.
ತಂತ್ರಿಕಾ: ಕುಟುಂಬದ ಸದಸ್ಯರನ್ನು ರಕ್ಷಣೆ ಮಾಡಿ, ರೋಗಗಳಿಂದ ದೂರವಿಡುವುದಕ್ಕೋಸ್ಕರ ಈ ಹೆಸರು.
ಅಮೃತಾ: ಇದರ ಸೇವನೆಯಿಂದ ಮರಣವನ್ನು ದೂರವಿಡಬಹುದು.
ಮಧುಪರ್ಣಿ: ಇವುಗಳ ಎಲೆಗಳು ಸಿಹಿಯಾಗಿರುವುದರಿಂದ ಈ ಹೆಸರು.
ಉಪಯುಕ್ತ ಅಂಗ: ಕಾಂಡ ಮತ್ತು ಎಲೆಗಳು.
ಗುಣ ಲಕ್ಷಣಗಳು
ಅಮೃತ ಬಳ್ಳಿಯು ಕಹಿ, ಒಗರು ರಸಗಳನ್ನು ಒಳಗೊಂಡಿದೆ. ವಾತ ಹಾಗು ಕಫ ದೋಷಗಳನ್ನು ಶಮನ ಮಾಡುತ್ತದೆ. ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಶರೀರದ ಧಾತುಗಳ ವರ್ಧನೆಗೆ ಹಾಗೂ ಪೋಷಣೆಗೆ ಸಹಾಯಕ.
ಮಧುಮೇಹ, ಚರ್ಮರೋಗ, ಕೆಲವು ಸಂಧಿಗಳ ರೋಗಗಳು, ಕ್ರಿಮಿ, ಜ್ವರ, ಕೆಮ್ಮು ಇತ್ಯಾದಿ ರೋಗಗಳನ್ನು ಶಮನ ಮಾಡುತ್ತದೆ.
ಉಪಯೋಗ
1. ಎಲ್ಲ ರೀತಿಯ ಪ್ರಮೇಹದಲ್ಲಿ ಅಮೃತ ಬಳ್ಳಿಯ ರಸವನ್ನು ಜೇನುತುಪ್ಪದೊಂದಿಗೆ ಸೇರಿಸಿ ಸೇವಿಸುವುದು ಉತ್ತಮ.
2. ಅಮೃತ ಬಳ್ಳಿಯ ರಸವನ್ನು ದಿನನಿತ್ಯವೂ ಸೇವಿಸುವುದರಿಂದ ಶರೀರದ ಧಾತುಗಳ ವೃದ್ಧಿಯಾಗಿ ಶರೀರಕ್ಕೆ ಪೋಷಣೆ ಸಿಗುವುದು.
3. ವಾತ ದೋಷ ಪ್ರಧಾನವಾಗಿರುವ ಜ್ವರದಲ್ಲಿ ಅಮೃತ ಬಳ್ಳಿಯ ಕಾಂಡಗಳನ್ನು ಜಜ್ಜಿ ನೀರನ್ನು ಸೇರಿಸಿ ಕುದಿಸಿ ಅರ್ಧದಷ್ಟು ಇಳಿಸಿ ಕಷಾಯ ತಯಾರಿಸಿ ಸೋಸಿ ಕುಡಿಯುವುದು ಉತ್ತಮ.
4. ಸಂಧಿಗತ ರೋಗಗಳಲ್ಲಿ (gouty arthritis)  ಅಮೃತ ಬಳ್ಳಿಯಿಂದ ಸಿದ್ಧಪಡಿಸಿದ ತುಪ್ಪವು ಉತ್ತಮ.
5. ತುಂಬಾ ದಿನಗಳಿಂದ ಜ್ವರದಿಂದ ಬಳಲುತ್ತಿರುವವರು ಅಮೃತ ಬಳ್ಳಿ ಹಾಗೂ ಪಿಪ್ಪಲಿಯನ್ನು (ಹಿಪ್ಪಲಿ) ಸೇರಿಸಿ ಕಷಾಯವನ್ನು ತಯಾರಿಸಿ ಅದಕ್ಕೆ ಜೇನುತುಪ್ಪವನ್ನು ಬೆರೆಸಿ ಸೇವಿಸುವುದು ಉತ್ತಮ.
6. ಬಾಣಂತಿಯರು ಅಮೃತಬಳ್ಳಿ ಹಾಗೂ ಶುಂಠಿಯಿಂದ ತಯಾರಿಸಿದ ಕಷಾಯವನ್ನು ಸೇವಿಸುವುದರಿಂದ ಸ್ತನ್ಯ (ಎದೆಹಾಲು) ಶುದ್ಧಿಯಾಗುವುದು.
7. ಕಾಮಾಲೆಯಲ್ಲಿ ನಿತ್ಯವೂ ಬೆಳಿಗ್ಗೆ ಅಮೃತ ಬಳ್ಳಿ ಕಷಾಯವನ್ನು ಜೇನುತುಪ್ಪದೊಂದಿಗೆ ಸೇವಿಸುವುದು ಹಿತಕರ.
ಅಮೃತಾರಿಷ್ಠ, ಸಂಶಮನಿ ವಟಿ, ಅಮೃತಾ ಘೃತ, ಅಮೃತಾಷ್ಟಕ ಕ್ವಾಥ, ಅಮೃತಾ ಸತ್ವ ಇತ್ಯಾದಿಗಳು ಅಮೃತ ಬಳ್ಳಿಯಿಂದ ಸಿದ್ಧಪಡಿಸಿದ ಕೆಲವು ಔಷಧಗಳ ಹೆಸರುಗಳು.
ಡಾ. ನಾಗಶ್ರೀ ಕೆ.ಎಸ್.

ವರದನಾಯಕನಹಳ್ಳಿ ಗ್ರಾಮದ ಪಟಾಲಮ್ಮ ಮತ್ತು ವೀರಸೊಣ್ಣಮ್ಮ ದೇವಿಯವರ ರಥೋತ್ಸವ

0

ತಾಲ್ಲೂಕಿನ ವರದನಾಯಕನಹಳ್ಳಿ ಗ್ರಾಮದಲ್ಲಿ ಪಟಾಲಮ್ಮ ಮತ್ತು ವೀರಸೊಣ್ಣಮ್ಮ ದೇವಿಯವರ 19ನೇ ವರ್ಷದ ರಥೋತ್ಸವ ಮತ್ತು ಉಟ್ಲು ಮಹೋತ್ಸವವನ್ನು ಸೋಮವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಪ್ರಧಾನ ಹೋಮ, ಮಹಾಕುಂಬಾಭಿಷೇಕ, ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದವನ್ನು ವಿನಿಯೋಗಿಸಲಾಯಿತು. ಗ್ರಾಮದ ಕರಗದ ಮನೆ ಬಳಿಯಿಂದ ರಥೋತ್ಸವ ಪ್ರಾರಂಭವಾಗಿ ದೇವಸ್ಥಾನದವರೆಗೂ ವಿವಿಧ ವಾದ್ಯವೃಂದದ ಸಮೇತ ತರಲಾಯಿತು. ರಥೋತ್ಸವದ ಸಂದರ್ಭದಲ್ಲಿ ವಿವಿಧ ವೇಷಭೂಷಣಗಳಿಂದ ಕೂಡಿದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ ಪಟಾಲಮ್ಮ ಮತ್ತು ವೀರಸೊಣ್ಣಮ್ಮ ದೇವಿಯವರ ರಥೋತ್ಸವದಲ್ಲಿ ದೇವರಿಗೆ ಅರ್ಪಿಸಿರುವ ಬೆಲೆ ಬಾಳುವ ಸೀರೆಗಳನ್ನು ಕೇವಲ 200 ರೂಗಳಿಗೆ ಮಾರಾಟಕ್ಕಿಡಲಾಗಿದ್ದು, ಅದನ್ನು ಕೊಳ್ಳಲು ಮಹಿಳೆಯರು ಮುಗಿಬಿದ್ದಿದ್ದರು.
ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ ಪಟಾಲಮ್ಮ ಮತ್ತು ವೀರಸೊಣ್ಣಮ್ಮ ದೇವಿಯವರ ರಥೋತ್ಸವದಲ್ಲಿ ದೇವರಿಗೆ ಅರ್ಪಿಸಿರುವ ಬೆಲೆ ಬಾಳುವ ಸೀರೆಗಳನ್ನು ಕೇವಲ 200 ರೂಗಳಿಗೆ ಮಾರಾಟಕ್ಕಿಡಲಾಗಿದ್ದು, ಅದನ್ನು ಕೊಳ್ಳಲು ಮಹಿಳೆಯರು ಮುಗಿಬಿದ್ದಿದ್ದರು.
ಕ್ಷೀರ ಉಟ್ಲು ಹಾಗೂ ಕಾಯಿ ಉಟ್ಲು ಮಹೋತ್ಸವವನ್ನು ನಡೆಸಲಾಯಿತು. ಭಕ್ತರಿಗೆ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ಗ್ರಾಮಸ್ಥರಿಂದ ಪಾನಕ ಹಾಗೂ ಮಜ್ಜಿಗೆ ಬಂಡಿಯನ್ನು ವ್ಯವಸ್ಥೆ ಮಾಡಿದ್ದು, ಭಕ್ತರಿಗೆಲ್ಲಾ ವಿತರಿಸಲಾಯಿತು. ದೇವರಿಗೆ ಅರ್ಪಿಸಿರುವ ಬೆಲೆ ಬಾಳುವ ಸೀರೆಗಳನ್ನು ಕೇವಲ 200 ರೂಗಳಿಗೆ ಮಾರಾಟಕ್ಕಿಡಲಾಗಿದ್ದು, ಅದನ್ನು ಕೊಳ್ಳಲು ಮಹಿಳೆಯರು ಮುಗಿಬಿದ್ದಿದ್ದರು.
ತಾಲ್ಲೂಕಿನ ಚೀಮನಹಳ್ಳಿ, ಗುಡಿಹಳ್ಳಿ, ಅಬ್ಲೂಡು, ಶೆಟ್ಟಿಹಳ್ಳಿ, ಮಲ್ಲಹಳ್ಳಿ, ಕೋಟಹಳ್ಳಿ, ಕೆಂಪನಹಳ್ಳಿ, ಚಾಗೆ, ತಾತಹಳ್ಳಿ, ದೇವರಮಳ್ಳೂರು, ತಲದುಮ್ಮನಹಳ್ಳಿ, ಸೊಣ್ಣೇನಹಳ್ಳಿ, ಅಮ್ಮನಲ್ಲೂರು, ಬೂದಾಳ, ವೀರಾಪುರ, ಇದ್ಲೂಡು, ಕುತ್ತಾಂಡಹಳ್ಳಿ, ಹನುಮಂತಪುರ, ಹಂಡಿಗನಾಳ, ಎಲ್.ಮುತ್ತುಗದಹಳ್ಳಿ, ಪೆಯಿಲಹಳ್ಳಿ, ಎಲ್ಲಹಳ್ಳಿ, ಕೊಂಡೇನಹಳ್ಳಿ, ಪರಸದಿನ್ನೆ, ರಾಮಚಂದ್ರಹೊಸೂರು, ಲಕ್ಕಹಳ್ಳಿ, ಹರಳಹಳ್ಳಿ, ಹಿರೇಬಲ್ಲ, ತಾದೂರು, ಆನೂರು, ತಿಪ್ಪೇನಹಳ್ಳಿ, ತಳಗವಾರ ಮುಂತಾದ ಗ್ರಾಮಗಳಿಂದ ಭಕ್ತರು ಆಗಮಿಸಿ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದ್ದರು.