ತಾಲ್ಲೂಕಿನ ೧೪ ಪರೀಕ್ಷಾ ಕೇಂದ್ರಗಳಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸೋಮವಾರ ಪ್ರಥಮ ಭಾಷೆ ಪರೀಕ್ಷೆ ನಡೆಯಿತು.
ನಗರದ ಸರ್ಕಾರಿ ಪ್ರೌಢಶಾಲೆ ಸೇರಿದಂತೆ ತಾಲ್ಲೂಕಿನ ೧೩ ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ ೯.೩೦.ಕ್ಕೆ ಪರೀಕ್ಷೆಗಳು ಪ್ರಾರಂಭವಾದವು, ಪ್ರತಿಯೊಂದು ಕೇಂದ್ರಕ್ಕೆ ಇಬ್ಬರು ಸ್ಥಾನಿಕ ಜಾಗೃತದಳಗಳನ್ನು ನೇಮಕ ಮಾಡಲಾಗಿತ್ತು, ೧೪ ಕೇಂದ್ರಗಳಿಗೆ ೦೪ ರೂಟ್ಗಳನ್ನು ಮಾಡಿ, ೦೮ ಮಂದಿ ರೂಟ್ ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು,
ತಾಲ್ಲೂಕಿನ ಹಂತದಲ್ಲಿ ತಹಶೀಲ್ದಾರ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಮೊಬೈಲ್ ಸ್ಕ್ವಾಡ್ ರಚನೆ ಮಾಡಲಾಗಿತ್ತು. ನಕಲು ಮಾಡಲು ಅವಕಾಶವಿಲ್ಲದಂತೆ ಸೂಕ್ತ ಭದ್ರತೆಯನ್ನೂ ಒದಗಿಸಲಾಗಿತ್ತು. ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು ಹಾಗೂ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಜಾಗೃತದಳಗಳನ್ನು ನೇಮಕ ಮಾಡಲಾಗಿದ್ದು, ಪ್ರತಿ ಪರೀಕ್ಷಾ ಕೇಂದ್ರಕ್ಕೆ ಇಬ್ಬರಂತೆ ೨೮ ಮಂದಿ ಸ್ಥಾನಿಕ ಜಾಗೃತದಳಗಳನ್ನು ರಚನೆ ಮಾಡಲಾಗಿತ್ತು. ಪರೀಕ್ಷಾ ಕೇಂದ್ರಗಳಿಗೂ ಅಗತ್ಯವಾಗಿರುವ ಕೊಠಡಿಯ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿತ್ತು. ಪರೀಕ್ಷಾ ಕೇಂದ್ರಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ಆಸನ ವ್ಯವಸ್ಥೆ, ಹಾಗೂ ಆರೋಗ್ಯ ವೈದ್ಯಾಧಿಕಾರಿಗಳ ಸಹಕಾರದೊಂದಿಗೆ ಎ.ಎನ್.ಎಂ.ಗಳ ಸೇವೆಯನ್ನು ಒದಗಿಸಲಾಗುವುದು ಎಂದು ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ತಿಳಿಸಿದ್ದಾರೆ.
ಎಸ್.ಎಸ್.ಎಲ್.ಸಿ ಪರೀಕ್ಷೆ ಪ್ರಾರಂಭ
ರೈತರಿಂದ ರೈತರಿಗಾಗಿ ತರಬೇತಿ ಕಾರ್ಯಾಗಾರ
ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ಉತ್ತಮ ಗುಣಮಟ್ಟದ ದ್ವಿತಳಿ ಗೂಡುಗಳನ್ನು ಬೆಳೆದು ರೈತರು ಆರ್ಥಿಕವಾಗಿ ಸಬಲರಾಗಬೇಕು ಎಂದು ರೇಷ್ಮೆ ಇಲಾಖೆಯ ಉಪನಿರ್ದೇಶಕ ನಾಗಭೂಷಣ್ ಹೇಳಿದರು.
ನಗರದ ರೇಷ್ಮೆ ಇಲಾಖೆಯ ಕಚೇರಿಯಲ್ಲಿ ಸೋಮವಾರ ಸಮೂಹ ಸಂವರ್ಧನಾ ಕಾರ್ಯಕ್ರಮದಡಿಯಲ್ಲಿ ಆಯೋಜನೆ ಮಾಡಲಾಗಿದ್ದ ಪ್ರಗತಿಪರ ಯಶಸ್ವಿ ದ್ವಿತಳಿ ರೈತರಿಂದ ರೈತರಿಗಾಗಿ ನಡೆದ ತರಬೇತಿ ಕಾರ್ಯಾಗಾರವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ತೀವ್ರವಾದ ನೀರಿನ ಸಮಸ್ಯೆಯನ್ನು ಅನುಭವಿಸುತ್ತಿರುವ ರೈತರು ಹನಿನೀರಾವರಿಯ ಪದ್ಧತಿಯಲ್ಲೆ ಉತ್ತಮಗುಣಮಟ್ಟದ ಹಿಪ್ಪುನೇರಳೆಯನ್ನು ಬೆಳೆಯುವ ಮುಖಾಂತರ, ದ್ವಿತಳಿ ಗೂಡನ್ನು ಬೆಳೆದು ಆರ್ಥಿಕವಾಗಿ ಸಬಲರಾಗಬೇಕು, ಇಲಾಖೆಯ ಮೇಲಾಧಿಕಾರಿಗಳಿಂದ ಬರುವಂತಹ ಸಲಹೆಗಳನ್ನು ಪಡೆದುಕೊಂಡು ಉತ್ತಮವಾದ ಬೆಳೆಗಳನ್ನು ಬೆಳೆಯುವಂತೆ ರೈತರಿಗೆ ಸಲಹೆ ನೀಡಿದರು.
ವಿಜ್ಞಾನಿ ಡಾ. ಕೆ.ವಿ.ಪ್ರಸಾದ್ ಮಾತನಾಡಿ, ಅಂತರಾಷ್ಟ್ರೀಯ ಮಟ್ಟದಲ್ಲಿ ರೇಷ್ಮೆಯಲ್ಲಿ ದೇಶದ ಖ್ಯಾತಿಯನ್ನು ಹೆಚ್ಚಿಸಬೇಕಾದರೆ ರೈತರು ದ್ವಿತಳಿ ಗೂಡನ್ನು ಬೆಳೆಯಬೇಕು. ಹಿಪ್ಪುನೇರಳೆ ತೋಟಗಳ ನಿರ್ವಹಣೆಯನ್ನು ವ್ಯವಸ್ಥಿತವಾಗಿ ಮಾಡುವುದರೊಂದಿಗೆ ದ್ವಿತಳಿ ರೇಷ್ಮೆ ಗೂಡಿಗೆ ಪಕ್ವವಾಗಿರುವ ಹಿಪ್ಪುನೇರಳೆ ಸೊಪ್ಪನ್ನು ಕೊಡುವುದರಿಂದ ಗುಣಮಟ್ಟದ ಬೆಳೆ ಹಾಗು ಇಳುವರಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಪ್ರತಿ ವರ್ಷಕ್ಕೊಮ್ಮೆ ಮಣ್ಣಿನ ಪರೀಕ್ಷೆ ಮಾಡಿಸುವುದು ಖಡ್ಡಾಯವಾಗಿದ್ದು, ರೇಷ್ಮೆ ಹುಳುಸಾಕಾಣಿಕೆ ಮನೆಗಳಿಂದ ತೆಗೆದ ತ್ಯಾಜ್ಯವನ್ನು ಚೆನ್ನಾಗಿ ಕೊಳೆಸಿ ತೋಟಗಳಿಗೆ ನೀಡಬೇಕು. ಹಿಪ್ಪುನೇರಳೆ ಸೊಪ್ಪನ್ನು ಕಟಾವು ಮಾಡುವಂತಹ ಪದ್ಧತಿಗಳನ್ನು ಬದಲಾವಣೆ ಮಾಡಬೇಕು. ಕಾಂಪ್ಲೆಕ್ಸ್ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಬಾರದು, ಬದಲಿಗೆ ತೋಟಗಳಿಗೆ ಬೇವಿನಹಿಂಡಿ, ಹೊಂಗೆಹಿಂಡಿಯನ್ನು ಕೊಡುವುದು ಸೂಕ್ತ,
ರಾಸಾಯನಿಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಿಂಪಡಣೆ ಮಾಡಬಾರದು ಎಂದು ವಿವರಿಸಿದರು.
ದ್ವಿತಳಿ ರೇಷ್ಮೆ ಗೂಡಿಗೆ ವ್ಯವಸ್ಥಿತ ಮಾರುಕಟ್ಟೆ ಸೌಲಭ್ಯವಿಲ್ಲದಿರುವುದರಿಂದ ರೈತರು ಬೆಳೆದ ದ್ವಿತಳಿ ರೇಷ್ಮೆ ಗೂಡನ್ನು ದೂರದ ರಾಮನಗರಕ್ಕೆ ಕೊಂಡೊಯ್ಯಬೇಕು. ಹೀಗೆ ಕೊಂಡೊಯ್ಯಲು ಸಾಗಾಣಿಕೆ ವೆಚ್ಚ ದುಬಾರಿಯಾಗುತ್ತದೆ. ಇದಕ್ಕೆ ರೈತರು ಏನು ಮಾಡಬೇಕು? ಎಂದು ರೈತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ತಾಲೂಕಿನಾಧ್ಯಂತ ಹೆಚ್ಚು ಹೆಚ್ಚು ದ್ವಿತಳಿ ರೇಷ್ಮೆ ಗೂಡುಗಳನ್ನು ಉತ್ಪಾದನೆ ಮಾಡಿದಾಗ ಮಾರುಕಟ್ಟೆಯ ಸೌಲಭ್ಯವನ್ನು ಕಲ್ಪಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬಹುದು. ಆದರೆ ಬಹುತೇಕ ರೈತರು ಸರ್ಕಾರದಿಂದ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಾರಾದರೂ ದ್ವಿತಳಿ ರೇಷ್ಮೆಗೂಡನ್ನು ಬೆಳೆಯಲು ಹಿಂದೇಟು ಹಾಕುವುದು ಸರಿಯಲ್ಲವೆಂದರು.
ವಿಜ್ಞಾನಿಗಳಾದ ಡಾ.ವೆಂಕಟೇಶ್, ಮೌರಿಸಾಬ್, ಫಣಿರಾಜ್, ರೈತರಾದ ಮಳ್ಳೂರು ಶಿವಣ್ಣ, ಹಿತ್ತಲಹಳ್ಳಿ ಸುರೇಶ್, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ಕೃಷಿ ವಿಸ್ತರಣಾಧಿಕಾರಿ ನಾರಾಯಣಸ್ವಾಮಿ, ಕೃಷ್ಣಪ್ಪ, ಮುನಿರಾಜು, ನಿರಂಜನ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ದು:ಖವನ್ನು ಮರೆಯಬೇಡಿ!
ಈ ತಲೆಬರಹವನ್ನು ನೋಡಿ ಆಶ್ಚರ್ಯಪಡಬೇಡಿ. ಇದರ ಪೂರ್ಣರೂಪ ಹೀಗಿದೆ-ದು:ಖವನ್ನು ಕೇವಲ ಮರೆಯಲು ಪ್ರಯತ್ನಿಸಬೇಡಿ, ಅದನ್ನು ಪೂರ್ಣವಾಗಿ ಹೊರಹಾಕಿ.
ಸುರೇಶ್ (52) ಮತ್ತು ಸುನೀತ (47) ದಂಪತಿಗಳು. ಅವರಿಗೆ ರಾಹುಲ್ (20) ಮತ್ತು ರಾಜೀವಿ (14) ಮಕ್ಕಳು. ಸರ್ಕಾರಿ ನೌಕರಿಯಲಿದ್ದ ಸುರೇಶ್ ನ ಸುಖೀ ಸಂಸಾರಕ್ಕೆ ಬರಸಿಡಿಲು ಬಡಿದಿತ್ತು. ಮನೆಯೊಡತಿ ಸುನೀತ ಖಾಯಿಲೆಯಿಂದ ಚೇತರಿಸಿಕೊಳ್ಳಲಾರದೆ ಮರಣ ಹೊಂದಿದಳು. ದು:ಖದಲ್ಲಿ ಮುಳುಗಿದ ಕುಟುಂಬಕ್ಕೆ ಎಲ್ಲರೂ ತಮತಮಗೆ ತಿಳಿದಂತೆ ಸಾಂತ್ವನ ಹೇಳಿದರು.
“ಮನೆಯ ಯಜಮಾನನಾಗಿ ನೀನೇ ಹೀಗೆ ಮಂಕಾಗಿ ಕುಳಿತರೆ ಮಕ್ಕಳ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ಮಕ್ಕಳನ್ನು ನೋಡಿ, ಅವರ ಭವಿಷ್ಯದ ದೃಷ್ಟಿಯಿಂದ ನಿನ್ನ ದು:ಖವನ್ನು ಮರೆತು ಕೆಲಸಮಾಡು” ಎಂದು ಹಿರಿಯರು ಸುರೇಶನಿಗೆ ಧೈರ್ಯ ತುಂಬಿದರು.
“ಮಕ್ಕಳೇ ನೀವು ಅಳುತ್ತಾ ಕುಳಿತರೆ ಅಪ್ಪನಿಗೂ ಬೇಜಾರಾಗುತ್ತದೆ. ಆಗಿದ್ದಾಯಿತು ಏಳಿ, ದು:ಖವನ್ನು ಮರೆತು ನಿಮ್ಮ ನಿಮ್ಮ ಕೆಲಸ ಮಾಡಿ” ಎಂದು ಮಕ್ಕಳನ್ನು ಹುರಿದುಂಬಿಸಲು ಪ್ರಯತ್ನಿಸಿದರು.
ನಿಧಾನವಾಗಿ ಎಲ್ಲಾ ಮಾಮೂಲಿನ ಸ್ಥಿತಿಗೆ ಬರುತ್ತಿದೆ ಎನ್ನಿಸುತ್ತಿತ್ತು. ಸುರೇಶ ಹೇಗೋ ಸಂಸಾರವನ್ನು ನಿಭಾಯಿಸುತ್ತಿದ್ದ. ರಾಹುಲ್ ಎಂದಿನಂತೆ ತನ್ನ ವಿದ್ಯಾಭ್ಯಾಸ ಮುಂದುವರೆಸಿದ್ದ. ಆದರೆ ಆರೆಂಟು ತಿಂಗಳ ನಂತರ ಮಗಳು ರಾಜೀವಿ ಮಂಕಾಗತೊಡಗಿದ್ದಳು. ವಿದ್ಯಾಭ್ಯಾಸ ಸುಮಾರಾಗಿ ನಡೆಯುತ್ತಿದ್ದರೂ ಅವಳು ಹಿಂದಿನಂತೆ ಲವಲವಿಕೆಯಿಂದ ಇರುತ್ತಿರಲಿಲ್ಲ. ಪ್ರಾರಂಭದಲ್ಲಿ ತಾಯಿಯನ್ನು ಕಳೆದುಕೊಂಡ ದು:ಖವೇ ಇದಕ್ಕೆ ಕಾರಣ ಎಂದುಕೊಂಡ ಸುರೇಶ್ ಪರಿಸ್ಥಿತಿ ಹಾಗೆಯೇ ಮುಂದುವರೆದಾಗ ಕಳವಳಗೊಂಡು ನನ್ನ ಬಳಿ ಆಪ್ತಸಲಹೆಗೆ ಕರೆತಂದರು.
ಕುಟುಂಬದ ಒಬ್ಬೊಬ್ಬ ವ್ಯಕ್ತಿಯನ್ನೂ ಬೇರೆಬೇರೆಯಾಗಿ ಮಾತನಾಡಿಸುತ್ತಾ ಹೋದೆ. ಮಾತುಗಳಿಗಿಂತ ಹೆಚ್ಚಾಗಿ ಎಲ್ಲರಿಂದಲೂ ದು:ಖದ ಮಹಾಪೂರವೇ ಹರಿಯುತ್ತಿತ್ತು. ದು:ಖವನ್ನು ಹೊರಹಾಕಲು ಆಪ್ತಸಲಹೆಗಾರರ ಕೊಠಡಿಯಲ್ಲಿ ಮುಕ್ತವಾಗಿ ಅವಕಾಶ ಮಾಡಿಕೊಡಲಾಗುತ್ತದೆ. ಸಾಕಷ್ಟು ಕಣ್ಣೀರು ಹರಿದ ಮೇಲೆ ಎಲ್ಲರೂ ಹಗುರಾಗುತ್ತಿರುವಂತೆ ಕಂಡಿತು. ಹೆಂಡತಿ/ತಾಯಿಯನ್ನು ಅಕಾಲಿಕವಾಗಿ ಕಳೆದುಕೊಂಡ ದು:ಖ ಒಮ್ಮೆಗೆ ಕಡಿಮೆಯಾಗುವುದು ಸುಲುಭವಲ್ಲ. ಸಮಯ ಹೆಚ್ಚಿನ ದು:ಖಗಳನ್ನು ಕಡಿಮೆ ಮಾಡುತ್ತದೆ. ಆದರೆ ಹತ್ತಿಕಲ್ಪಟ್ಟ ದು:ಖವನ್ನು ಹೊರಹಾಕದಿದ್ದರೆ ಅದಕ್ಕೆ ದೂರಗಾಮಿ ಮಾನಸಿಕ ಮತ್ತು ದೈಹಿಕ ಪರಿಣಾಮಗಳಿರಬಹುದು.
ಆ ಕುಟುಂಬದಲ್ಲಿ ವಾಸ್ತವವಾಗಿ ನಡೆದದ್ದು ಏನು? ಸುನೀತಳ ಶವಸಂಸ್ಕಾರವಾಗಿ ಕೆಲವು ದಿನಗಳ ನಂತರ ನೆಂಟರು ಮತ್ತು ಸ್ನೇಹಿತರೆಲ್ಲಾ ಹೊರಟು ಹೋದರು. ಉಳಿದ ಮೂರು ಜನರು ಸಾವಿನ ದು:ಖವನ್ನು ಇನ್ನೂ ಜೀರ್ಣಿಸಿಕೊಂಡಿರಲಿಲ್ಲ. ಆದರೂ ಯಾರೂ ತಮ್ಮ ದು:ಖದ ಬಗೆಗೆ ಮಾತನಾಡುತ್ತಿರಲಿಲ್ಲ. ಎಲ್ಲರಿಗೂ ಒಳಗೊಳಗೇ ಸುನೀತಾಳ ಬಗೆಗೆ ಮಾತನಾಡುವ ಆಸೆ ಇದ್ದರೂ ಅದರಿಂದ ಬೇರೆಯವರಿಗೆ ಬೇಸರವಾಗಬಹುದೆಂದು ಸುಮ್ಮನಾಗುತ್ತಿದ್ದರು. ಹೊರಗಿನಿಂದ ಆ ಮೂವರೂ ಸಾಮಾನ್ಯವಾಗಿ ವರ್ತಿಸುವಂತೆ ಕಾಣುತ್ತಿದ್ದರೂ ಅವರೆ
ಲ್ಲರ ಮನಸ್ಸಿನಾಳದಲ್ಲಿ ದು:ಖ ಮಡುವುಗಟ್ಟಿತ್ತು. ಸುರೇಶ್ ಕಛೇರಿ ಕೆಲಸದಲ್ಲಿ ಮನಸ್ಸನ್ನು ತೊಡಗಿಸಿಕೊಂಡಿದ್ದರೆ ರಾಹುಲ್ ಕಾಲೇಜಿನಲ್ಲಿ ಮತ್ತು ಸ್ನೇಹಿತರೊಡನೆ ವ್ಯಸ್ತನಾಗಿರುತ್ತಿದ್ದ. ಶಾಲೆಯಿಂದ ಬಂದ ತಕ್ಷಣ ಮನೆಯಲ್ಲಿ ಏಕಾಂಗಿಯಾಗಿ ಇರುತ್ತಿದ್ದ ರಾಜೀವಿಗೆ ಅಮ್ಮನ ಸಾವಿನ ದು:ಖವನ್ನು ಮರೆಯುವುದು ಸುಲಭವಾಗಿರಲಿಲ್ಲ. ತನ್ನೊಳಗಿನ ತುಮುಲಗಳ ಬಗೆಗೆ ಮಾತನಾಡಿದರೆ ಬೇರೆಯವರಿಗೆ ಬೇಸರವಾಗಬಹುದೆಂದು ಅವಳು ಎಲ್ಲವನ್ನು ನುಂಗಿಕೊಳ್ಳುತ್ತಾ ಮಂಕಾಗತೊಡಗಿದ್ದಳು. ಇಡೀ ಕುಟುಂಬ ದು:ಖದ ಜ್ವಾಲಾಮುಖಿಯನ್ನು ತುಂಬಿಕೊಂಡಿದ್ದರೂ ಹೊರ ನೋಟಕ್ಕೆ ಪ್ರಶಾಂತವಾದ ಪರ್ವತದಂತಿದ್ದು ಯಾವುದೇ ಕ್ಷಣದಲ್ಲಿ ಸ್ಫೋಟಿಸಬಹುದಾಗಿತ್ತು.
ದು:ಖವನ್ನು ವ್ಯಕ್ತಪಡಿಸುವ ಬಗೆಗೆ ನಮ್ಮೆಲ್ಲರಲ್ಲಿ ಸಾಕಷ್ಟು ತಪ್ಪು ಕಲ್ಪನೆಗಳಿವೆ. ರಕ್ತ ಸಂಬಂಧಿಗಳು ಸತ್ತಾಗ ಕೆಲವರು ನಿಜವಾಗಿ ದು:ಖವಾಗದಿದ್ದರೂ ಬೂಟಾಟಿಕೆಯ ಕಣ್ಣೀರಿಡುತ್ತಾರೆ. ಇನ್ನೂ ಕೆಲವರು ಕಣ್ಣೀರಿನ ಮೂಲಕ ದು:ಖವನ್ನು ಹೊರಹಾಕುವುದು ಮಾನಸಿಕ ದೌರ್ಬಲ್ಯದ ಲಕ್ಷಣ ಎಂದುಕೊಂಡಿರುತ್ತಾರೆ. ಗಂಡುಮಕ್ಕಳು ಸಾರ್ವಜನಿಕವಾಗಿ ಅಳಬಾರದು ಎಂದು ಬಾಲ್ಯದಿಂದಲೇ ಕಲಿಸಲಾಗುತ್ತದೆ. ದು:ಖದ ಸಮಯದಲ್ಲಿ ಸಹಜವಾಗಿರುವವರು ಮಾನಸಿಕ ಧೃಡತೆ ಉಳ್ಳವರು ಎಂದು ಬಿಂಬಿಸಲಾಗುತ್ತದೆ. ಆಶ್ಚರ್ಯವೆಂದರೆ ನನ್ನ ಆಪ್ತಸಲಹಾ ಕೊಠಡಿಯ ಏಕಾಂತದಲ್ಲಿ ದು:ಖವನ್ನು ಹೊರಹಾಕಲು ಮುಕ್ತವಾಗಿ ಅವಕಾಶ ನೀಡಿದಾಗ ಸುಮಾರಾಗಿ ಪ್ರತಿಯೊಬ್ಬರೂ ಅತ್ತು ಹಗುರಾಗುತ್ತಾರೆ. ಗಂಡು ಹೆಣ್ಣು, ಮೇಲು ಕೀಳು, ಓದು ವಿದ್ಯೆ, ವೃತ್ತಿ ವಯಸ್ಸು-ಇವೆಲ್ಲವುಗಳಲ್ಲಿ ಏನೇ ವ್ಯತ್ಯಾಸವಿದ್ದರೂ ಎಲ್ಲರೂ ಕಣ್ಣೀರಿನಿಂದ ಮಾತ್ರ ದು:ಖವನ್ನು ಕಡಿಮೆಮಾಡಿಕೊಳ್ಳುತ್ತಾರೆ.
ನಾವೆಲ್ಲರೂ ನೆನಪಿಡಬೇಕಾಗಿದ್ದು ನಮ್ಮೆಲ್ಲಾ ಹೊರ ಮುಖವಾಡಗಳ ಹಿಂದೆ ಎಲ್ಲರೂ ಮನುಷ್ಯ ಸಹಜವಾದ ಭಾವನೆಗಳನ್ನು ಹೊಂದಿರುವವರು. ದು:ಖವಾದಾಗ ಕಣ್ಣೀರು ಬರುವುದು ಅತ್ಯಂತ ಸಹಜವಾದದ್ದು. ಕಣ್ಣೀರನ್ನು ಹತ್ತಿಕ್ಕುವುದು ಗಟ್ಟಿತನವಲ್ಲ, ನಮ್ಮ ದು:ಖವನ್ನು ಸಹಜವಾಗಿ ವ್ಯಕ್ತಪಡಿಸದೆ ಗಟ್ಟಿತನದ ಸೋಗುಹಾಕುವುದು ನಿಜವಾದ ದೌರ್ಬಲ್ಯ.
ಸಾವಿನ ದು:ಖಕ್ಕೆ ಕಣ್ಣೀರು ಸಹಜವಾದ ಹೊರದಾರಿ. ಸತ್ತವರ ನೆನಪಾದೊಡನೆ ನಮ್ಮಲ್ಲಿ ದು:ಖ ಉಮ್ಮಳಿಸುತ್ತಿದ್ದರೆ ಅದು ನಮ್ಮೊಳಗೆ ದು:ಖದ ಖಜಾನೆ ಇನ್ನೂ ಖಾಲಿಯಾಗಿಲ್ಲ ಎನ್ನುವುದರ ಸೂಚನೆ. ದು:ಖ ಸಹಜವಾಗಿ ಹೊರಬಂದಾಗ ಸಮಯ ಕಳೆದಂತೆ ನಮ್ಮೊಡನೆ ಇಲ್ಲದವರೂ ನಮ್ಮೊಳಗೆ ಸಿಹಿಯಾದ ನೆನಪಾಗಿ ಉಳಿಯುತ್ತಾರೆ. ಅವರ ಚಿತ್ರ ಕಣ್ಮುಂದೆ ಬಂದೊಡನೆ ವಿಷಾದದ ಛಾಯೆಯ ನಡುವೆಯೂ ಮನಸ್ಸು ಸ್ಥಿಮಿತದಲ್ಲಿರುತ್ತದೆ.
ನಿಮಗೆ ಕಣ್ಣೀರು ಬರುತ್ತಿಲ್ಲ ಮತ್ತು ದು:ಖವೂ ಮಾಸುತ್ತಿಲ್ಲ ಎಂದಾದರೆ ಅಥವಾ ಕಣ್ಣಿರು ಹರಿಸಿದ ಮೇಲೂ ದು:ಖವನ್ನು ಮರೆಯುವುದು ಸಾಧ್ಯವೇ ಇಲ್ಲ ಎಂದಾದರೆ ತಜ್ಞ ಆಪ್ತಸಲಹೆಗಾರರ ಸಹಾಯ ಕೋರಬಹುದು.
ವಸಂತ್ ನಡಹಳ್ಳಿ
ದಿ.ಡಿ.ಕೆ.ರವಿ ಅವರ ಪುಣ್ಯತಿಥಿ ಅಂಗವಾಗಿ ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿ ವಿತರಣೆ
ಉತ್ತಮ ಶಿಕ್ಷಣ ನೀಡಿದರಷ್ಟೆ ಸಾಲದು ಒಳ್ಳೆಯ ಸಂಸ್ಕಾರವನ್ನೂ ಸಹ ನಮ್ಮ ಮಕ್ಕಳಲ್ಲಿ ಬೆಳೆಸಬೇಕಿದೆ ಎಂದು ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕಿನ ಚೀಮಂಗಲ ಗ್ರಾಮದ ಸಂತೆ ಮೈದಾನದಲ್ಲಿ ಈಚೆಗೆ ಸ್ವಾಮಿ ವಿವೇಕಾನಂದ ಅಂಗವಿಕಲರ ಕ್ಷೇಮಾಭಿವೃದ್ದಿ ಸಂಘ ಹಾಗೂ ಚೀಮಂಗಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರ ಆಶ್ರಯದಲ್ಲಿ ದಿ.ಡಿ.ಕೆ.ರವಿ ಅವರ ಪುಣ್ಯತಿಥಿ ಅಂಗವಾಗಿ ಶಾಲಾ ಮಕ್ಕಳಿಗೆ ಪುಸ್ತಕ, ಪರೀಕ್ಷಾ ಸಾಮಗ್ರಿ, ಬಡವರಿಗೆ ವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಲಿರುವ ೮೦ ವಿದ್ಯಾರ್ಥಿಗಳಿಗೆ ಲೇಖನಿ ಸಾಮಗ್ರಿಗಳನ್ನು ತಾಲೂಕು ಪಂಚಾಯತಿ ಮಾಜಿ ಸದಸ್ಯ ಜಿ.ಮುನಿರಾಜು ಕೊಡುಗೆಯಾಗಿ ನೀಡಿದರೆ, ೨೦೧೩–-೧೪ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಪಂಚಾಯತಿ ವ್ಯಾಪ್ತಿಯ ಮೂವರಿಗೆ ತಲಾ ೧೦೦೦ ರೂ.ನಗದು ಬಹುಮಾನವನ್ನು ಬೆಂಗಳೂರಿನ ನರಸಿಂಹಯ್ಯನವರು ನೀಡಿದರು.
೬ ಮಂದಿ ಬಡವರಿಗೆ ವಸ್ತ್ರಗಳನ್ನು ಹಾಗೂ ಇಬ್ಬರು ಅಂಗವಿಕಲರಿಗೆ ಗಾಲಿಖುರ್ಚಿಗಳನ್ನು ಬೆಂಗಳೂರಿನ ವಿಜಯಕುಮಾರಿರವರು ನೀಡಿದರೆ, ೧೦೦೦ ಮಂದಿಗೆ ಚೀಮಂಗಲ ಗ್ರಾಮಸ್ಥರಿಂದ ಸಮೂಹಿಕ ಅನ್ನಸಂತರ್ಪಣೆಯನ್ನು ನಡೆಸಿಕೊಟ್ಟರು. ಬಸವೇಗೌಡರ ಕುಟುಂಬದವರು ನೆರೆದಿದ್ದ ಎಲ್ಲರಿಗೂ ಪಾನಕ, ಮಜ್ಜಿಗೆ ಹೆಸರು ಬೇಳೆಯ ಸೇವೆಯನ್ನು ಒದಗಿಸಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಅರಿಕೆರೆ ಮುನಿರಾಜು, ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ಮಂಜುನಾಥ್, ಎಸ್.ವಿ.ನಾಗರಾಜ್ರಾವ್, ವಾಣಿಜ್ಯ ಇಲಾಖೆಯ ನರಸಿಂಹಯ್ಯ, ಮುಖ್ಯ ಶಿಕ್ಷಕ ಸಿ.ಎಂ.ಮುನಿರಾಜು, ಶಿವಶಂಕರ್, ಸಮಾಜ ಸೇವಕಿ ಬೆಂಗಳೂರಿನ ವಿಜಯಕುಮಾರಿ, ಸ್ವಾಮಿ ವಿವೇಕಾನಂದ ಅಂಗವಿಕಲರ ಕ್ಷೇಮಾಭಿವೃದ್ದಿ ಸಂಘದ ಲಕ್ಷ್ಮೀನಾರಾಯಣ, ಡಿ.ನಾರಾಯಣಸ್ವಾಮಿ, ಗ್ರಾಮ ಪಂಚಾಯತಿ ಸದಸ್ಯೆ ಶೋಭ, ಸಿ.ಕೆ.ಮಂಜುನಾಥ, ಬಿ.ಮುನಿವೆಂಕಟಪ್ಪ, ಮೋಹನ್, ಆದರ್ಶ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಸಾಸುಲ ಚಿನ್ನಮ್ಮ ನಾಟಕ
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗೇಟ್ ಬಳಿಯಿರುವ ಬಯಲಾಂಜನೇಯಸ್ವಾಮಿ ದೇವಾಲಯದ ಬಳಿ ಶ್ರೀರಾಮನವಮಿ ಪ್ರಯುಕ್ತ ಶನಿವಾರ ರಾತ್ರಿ ಚೌಡಸಂದ್ರ ಗ್ರಾಮಸ್ಥರು ಸಾಸುಲ ಚಿನ್ನಮ್ಮ ತೆಲುಗು ನಾಟಕವನ್ನು ಆಯೋಜಿಸಿದ್ದರು.
ಪೌರಾಣಿಕ ನಾಟಕ ಸಾಸುಲ ಚಿನ್ನಮ್ಮ ಆಂದ್ರ ಕರ್ನಾಟಕ ಗಡಿ ಭಾಗದಲ್ಲಿ ಪ್ರಸಿದ್ಧವಾದುದು. ದೇವರ ವರದಿಂದ ಜನಿಸುವ ಸಾಸುಲ ಚಿನ್ನಮ್ಮ ತವರು ಮನೆಯಲ್ಲಿ ಸುಖವಾಗಿ ಬೆಳೆದು ಅತ್ತೆಯ ಮನೆಯಲ್ಲಿ ಪಡಬಾರದ ಕಷ್ಟ ಅನುಭವಿಸಿ ನಂತರ ತವರಿನ ಸಹಾಯ ಪಡೆದು ಸುಖಾಂತ್ಯವಾಗುವ ಕಥೆ ಜನಜನಿತ. ನಡುನಡುವೆ ಬರುವ ಹಾಸ್ಯ ಪ್ರಸಂಗಗಳೂ ಜನಪ್ರಿಯ. ಈ ರೀತಿಯ ನಾಟಕಗಳನ್ನಾಡಿಸುವುದರಿಂದ ಮಳೆ ಬೆಳೆ ಆಗುತ್ತದೆಂಬ ನಂಬಿಕೆ ಜನಪದರದ್ದು. ಕಲಾ ಪೋಷಣೆಯೊಂದಿಗೆ ಮನರಂಜನೆ ಒದಗಿಸಿದ ಈ ನಾಟಕಕ್ಕೆ ಅಪಾರ ಜನರು ಆಗಮಿಸಿದ್ದರು.
ಚೇಳೂರಿನ ಕೋನಪ್ಪ, ನರಸಿಂಹ, ನರಸಿಂಹಮೂರ್ತಿ, ಗಿರೀಶ್, ತಿರುಮಳೇಶ್, ಬಾಬು, ಸರಸ್ವತಮ್ಮ, ಲಕ್ಷ್ಮಮ್ಮ ಪಾತ್ರಧಾರಿಗಳಾಗಿ ನಾಟಕದಲ್ಲಿ ಅಭಿನಯಿಸಿದ್ದರು.
ಮಂಗಳನ ಅಂಗಳದಲ್ಲಿ ಕುತೂಹಲಿ ಸಂಚಾರಿ – ಭಾಗ 2
ಒಂದು ಟನ್ ತೂಕದ ಈ ಸಂಚಾರಿ ಹಿಂದಿನ ರೋವರುಗಳಿಗಿಂತ ಗಾತ್ರದಲ್ಲಿ ಐದು ಪಟ್ಟು ದೊಡ್ಡದು, ಹಾಗಾಗಿ ಕಡಿಮೆ ಗುರುತ್ವದ ಕುಜನೆಲದಲ್ಲಿ ಅದನ್ನು ಸರಾಗವಾಗಿ ಇಳಿಸಿದ್ದು ಬಲು ದೊಡ್ಡ ಸಾಹಸವೇ. ಅದಕ್ಕಾಗಿ ಬಳಸಿದ ಬಾನ ಕ್ರೇನ್ ವ್ಯವಸ್ಥೆಯನ್ನು ಇದೇ ಮೊದಲ ಬಾರಿ ಅನ್ಯಗ್ರಹದಲ್ಲಿ ಅಳವಡಿಸಲಾಗಿದೆ. ಹಿಂದೆ ರೋವರುಗಳನ್ನು ಕೆಳಕ್ಕಿಳಿಸುವಾಗ 70-100 ಕಿಮೀ ವಿಸ್ತಾರವನ್ನು ಗುರಿಯಾಗಿ ಪರಿಗಣಿಸಿದ್ದರೆ ಈ ಸಲ ಬರೀ 10 ಕಿಮೀ ವಿಸ್ತಾರದೊಳಗೆ ಇಳಿಸಲು ಸಾಧ್ಯವಾಗಿದ್ದೂ ಒಂದು ಸಾಧನೆಯೇ.
ಇನ್ನೂ ಒಂದು ವಿಶೇಷತೆಯೆಂದರೆ, ಕಂಪ್ಯೂಟರ್ ವ್ಯವಸ್ಥೆಯಲ್ಲಿ ಒಂದೇನಾದರೂ ವಿಫಲಗೊಂಡರೆ ಇನ್ನೊಂದು ಕಾರ್ಯನಿರ್ವಹಿಸಲು ಸದಾಸಿದ್ಧವಾಗಿದೆ. ಸೌರವಿದ್ಯುತ್ ಬದಲಾಗಿ ಪ್ಲುಟೋನಿಯಂ-238ನ ಅಣುಕ್ಷಯದಿಂದ ತಯಾರಾಗುವ ವಿದ್ಯುತ್ತನ್ನು ಕ್ಯೂರಿಯಾಸಿಟಿಯಲ್ಲಿ ಬಳಸಲಾಗುತ್ತಿದೆ. ಮಂಗಳನಲ್ಲಿ ಆಗೀಗ ಬೀಸುವ ಬಿರುಗಾಳಿಯಿಂದಾಗಿ ಸೌರಫಲಕಗಳು ದೂಳು ಮುಚ್ಚಿ ಮಸುಕಾಗಿ ಅವುಗಳ ಕಾರ್ಯಕ್ಷಮತೆ ತಗ್ಗುವದರಿಂದ ಈ ತಂತ್ರ. 687 ಭೂದಿನಗಳು ಅಥವಾ ಮಂಗಳ ಗ್ರಹದಲ್ಲಿ ಒಂದು ವರ್ಷ ಕಾಲ ಈ ಸಂಚಾರಿ ವಾಹನ ಓಡಾಡುವುದಕ್ಕೆ ಹಾಗೂ ಕ್ಯಾಮೆರಾ, ರೊಬಾಟ್ ಕೈ ಮತ್ತಿತರ ಉಪಕರಣಗಳ ಚಲನೆಗೆ ಅವಶ್ಯವಿರುವಷ್ಟು 110 ವ್ಯಾಟ್ ವಿದ್ಯುತ್ತನ್ನು ಇದು ಸದಾಕಾಲ ಒದಗಿಸುತ್ತದೆ. ಅಣುಜನರೇಟರಿನಿಂದ ಹದವಾಗಿ ಬಿಸಿಗೊಂಡ ದ್ರವವೊಂದು ಉಪಕರಣಗಳನ್ನು ಬೆಚ್ಚಗಿಡುವುದಕ್ಕೆ ಸಹಾಯ ಮಾಡುತ್ತದೆ. ಅಲ್ಪ ಸೌರವಿದ್ಯುತ್ತನ್ನು ಒದಗಿಸುವ ಲಿಥಿಯಂ ಬ್ಯಾಟರಿಗಳೂ ಅಲ್ಲಿವೆ. ತುರ್ತು ಪರಿಸ್ಥಿತಿ ಎದುರಾಗಿ ಹೆಚ್ಚುವರಿ ವಿದ್ಯುತ್ತೇನಾದರೂ ಅಗತ್ಯ ಬಿದ್ದಲ್ಲಿ ಈ ಬ್ಯಾಟರಿಗಳು ಪೂರೈಸುತ್ತವೆ.
ಮಂಗಳಪಯಣಕ್ಕೆ ಭರದಿಂದ ಸಿದ್ಧತೆ
ಭೂಮಿಯ ಆಚೆಯೂ ಜೀವಿಗಳಿರಬಹುದೇ, ಅನ್ಯಗ್ರಹಗಳಲ್ಲಿ ವಾಸಯೋಗ್ಯ ವಾತಾವರಣದ ಸಾಧ್ಯತೆಗಳೆಷ್ಟು ಎಂಬುದರ ಬಗ್ಗೆ ಮಾನವನ ಅನ್ವೇಷಣಾ ಬುದ್ಧಿ ಮುಂಚಿನಿಂದಲೂ ಸಂಶೋಧನೆ ನಡೆಸಿದೆ.
1969 ರಲ್ಲಿ ನೀಲ್ ಆರ್ಮ್ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿರಿಸಿದ ಎರಡೇ ವಾರಗಳಲ್ಲಿ ಬ್ರೌನ್ ಎಂಬ ರಾಕೆಟ್ ವಿಜ್ಞಾನಿ ಮಂಗಳನಲ್ಲಿಗೆ ಮಾನವನನ್ನು ಕಳಿಸುವ ನೀಲನಕ್ಷೆಯನ್ನು ಸಿದ್ಧಪಡಿಸಿ ನಾಸಾದ ಅಧಿಕಾರಿಗಳ ಕೈಗಿರಿಸಿದ್ದ. ಆತನ ಪ್ರಕಾರ ಭೂಮಿಯ ಹೊರ ಕಕ್ಷೆಗೆ ಗಗನನೌಕೆಯನ್ನು ಹೊತ್ತ ರಾಕೆಟ್ ಹಾರಬೇಕು, ಅಲ್ಲಿಂದ ನೌಕೆಯನ್ನು ಮಂಗಳಗ್ರಹಕ್ಕೆ ಕಳಿಸಬೇಕು. ಗಗನನೌಕೆಗಳೇನೋ ಮಂಗಳಗ್ರಹಕ್ಕೆ ಹಾರಿವೆ, ಆದರೆ ಮಾನವನನ್ನು ಅಲ್ಲಿಗೆ ಕಳಿಸಬೇಕೆಂಬ ಬ್ರೌನ್ ಕನಸು ಇನ್ನೂ ನನಸಾಗಿಲ್ಲ.
ಬಾಹ್ಯಾಕಾಶ ಹಾಗೂ ಅದಕ್ಕೆ ಸಂಬಂಧಿತ ಗಣಿತ, ಭೌತ, ರಸಾಯನ, ಜೀವ ಇತ್ಯಾದಿ ವಿಜ್ಞಾನ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಹೆಚ್ಚು ಸುಧಾರಣೆಗೊಂಡಂತೆ ಕೆಲವು ವರ್ಷಗಳಿಂದ ನಮ್ಮ ಸಮೀಪದಲ್ಲಿರುವ ಮಂಗಳಗ್ರಹ ಅಧ್ಯಯನಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಮಂಗಳ ಗ್ರಹಕ್ಕೆ ಪ್ರವಾಸ ನಡೆಸುವ, ಮುಂದೆ ಅಲ್ಲಿಯೇ ಮಾನವರಿಗೆ ವಸತಿ ಕಲ್ಪಿಸುವ ಹಾಗೂ ಆ ಇಡೀ ಗ್ರಹವನ್ನೇ ಮಾನವನ ವಸಾಹತು ಮಾಡುವ ದಿನಗಳು ದೂರವಿಲ್ಲ ಎಂಬೆಲ್ಲ ಮಾತುಗಳು ಕೇಳಿಬರುತ್ತಿವೆ.
2001 ರಲ್ಲಿ ಐರೋಪ್ಯ ಬಾಹ್ಯಾಕಾಶ ಸಂಸ್ಥೆ 2030ರಲ್ಲಿ ಕೆಂಪು ಗ್ರಹಕ್ಕೆ ಮಾನವನ್ನು ಕಳಿಸುತ್ತೇವೆ ಎಂಬ ವಿಶ್ವಾಸದೊಂದಿಗೆ ಅರೋರಾ ಎಂಬ ಯೋಜನೆಯನ್ನು ಹುಟ್ಟು ಹಾಕಿತು. ಅಮೆರಿಕದ ಮಾಜಿ ಅಧ್ಯಕ್ಷ ಬುಶ್ 2020 ಕ್ಕೆ ಚಂದ್ರನಲ್ಲಿಗೆ, ಆನಂತರ ಮಂಗಳ ಗ್ರಹಕ್ಕೆ ಮಾನವನ ಉಡ್ಡಯನ ಎಂದು 2004 ರಲ್ಲಿ ಘೋಷಿಸಿದರು.
ಆದರೆ ಮಂಗಳನಲ್ಲಿಗೆ ಮಾನವ ಪ್ರಯಾಣ ಹೊರಟರೆ ಮುಂದಿರುವ ಸವಾಲುಗಳು ಒಂದೆರಡಲ್ಲ. ಭೂಮಿಯ ವಾಯುಮಂಡಲ ಮತ್ತು ಕಾಂತ ಕ್ಷೇತ್ರದ ಸುರಕ್ಷೆಯಿಂದ ಹೊರಬಿದ್ದೊಡನೆ ಎದುರಾಗುವ ಗಾಮಾ ಕಿರಣಗಳು, ಪ್ರೋಟಾನ್ ಪ್ರವಾಹಗಳು, ಸೂರ್ಯನಿಂದ ಸೂಸುವ ಉರಿಜ್ವಾಲೆಗಳು ಕಾಸ್ಮಿಕ್ ಕಿರಣಗಳ ಅಪಾಯ ಹೀಗೆ ಪಟ್ಟಿ ಸಾಗುತ್ತದೆ. ಮುಂದೆ ಅಪರಿಚಿತ, ವಾಸಯೋಗ್ಯವಲ್ಲದ ಗ್ರಹದಲ್ಲಿ ಬದುಕುಳಿಯುವುದು ಸುಲಭವಲ್ಲ. ಚಂದ್ರನವರೆಗೆ ಹಾರಿದ್ದನ್ನು ಬಿಟ್ಟರೆ, ಇದುವರೆಗೆ ಅಂತರಿಕ್ಷ ಅಟ್ಟಣಿಗೆಯವರೆಗೆ (ಅಟ್ಟಣಿಗೆ ಅಥವಾ ಆಯ್.ಎಸ್.ಎಸ್. ಹಾರಾಡುತ್ತಿರುವುದು ಬರೀ 320 ಕಿಮೀ ಎತ್ತರದಲ್ಲಿ) ಮಾತ್ರವೇ ಉಪಗ್ರಹದಲ್ಲಿ ಕುಳಿತು ಮಾನವ ಹಾರಿಹೋಗಿ, ಅಲ್ಲಿ ಆರು ತಿಂಗಳ ಕಾಲ ಉಳಿದು ಮರಳಿ ತಾಯಿನೆಲ ಸೇರಿಕೊಳ್ಳಲು ಸಾಧ್ಯವೆಂದು ಸಾಧಿಸಿಯಾಗಿದೆ. ಆದರೆ ಚಂದ್ರ ಅಥವಾ ಮಂಗಳನವರೆಗೆ ಹಾರಿ, ಅಲ್ಲಿ ಕೆಲ ಕಾಲ ಉಳಿಯಬೇಕೆಂದರೆ ಅಂತರಿಕ್ಷದ ಅಪಾಯಗಳನ್ನು ಸಮರ್ಥವಾಗಿ ಎದುರಿಸಿ ಆ ಗ್ರಹದಲ್ಲಿ ದೊರಕುವ ಸಂಪನ್ಮೂಲಗಳನ್ನು ಬಳಸಿಕೊಂಡು ಬದುಕುವ ಚಾಕಚಕ್ಯತೆಯನ್ನು ಅಳವಡಿಸಿಕೊಳ್ಳಬೇಕು. ಮಾನವ ಸಮಾಜವಿರದೆಡೆ, ಇರುವ ಕೆಲವೇ ಜನರೊಡನೆ ಹೊಂದಿ ಬೆರೆಯುವ ಒಗ್ಗಟ್ಟು, ಸಾಮರಸ್ಯದ ಸ್ವಭಾವಗಳನ್ನು ಮೈಗೂಡಿಸಿಕೊಳ್ಳಬೇಕು. ಹಗಲು ರಾತ್ರಿಗಳ ಜೈವಿಕ ಗಡಿಯಾರದ ಅಸಮತೋಲನವನ್ನು, ಅದರಿಂದಾಗುವ ದೇಹದ ವೈಪರೀತ್ಯಗಳನ್ನು ಸಹಿಸಿಕೊಳ್ಳುವಂತಿರಬೇಕು.
ಆದರೂ ಮಾನವನ ಸಾಹಸ ಪೃವೃತ್ತಿ ಚಂದ್ರ, ಮಂಗಳರನ್ನು ಕೈವಶ ಮಾಡಿಕೊಳ್ಳಲು ಪ್ರಯತ್ನಿಸುತ್ತಲೇ ಇದೆ. ಮೊದಲು ಉಪಗ್ರಹ, ದೂರದರ್ಶಕಗಳ ಮೂಲಕ ದೂರದಿಂದಲೇ ಆ ಕಾಯಗಳ ಬಗ್ಗೆ ಶೋಧ ನಡೆಸಿ, ಆನಂತರ ಯಂತ್ರೋಪಕರಣಗಳನ್ನು ಅಲ್ಲಿಗೇ ಕಳುಹಿಸಿ ಮತ್ತಿಷ್ಟು ಮಾಹಿತಿ ಪಡೆಯಲಾಗುತ್ತಿದೆ. ಮಂಗಳಯಾನಕ್ಕೆ ಮುಂದಾದ ಅಮೆರಿಕ, ರಷ್ಯಾ, ಐರೋಪ್ಯ ಒಕ್ಕೂಟ, ಜಪಾನ್ ಮತ್ತು ಚೀನಾ ದೇಶಗಳ ಪಟ್ಟಿಗೆ ಭಾರತವೂ ಸೇರಲಿದೆ. ನಮ್ಮ ಇಸ್ರೋ ಸಂಸ್ಥೆ 2013ರಲ್ಲಿ ಮಂಗಳನ ಅಧಯಯನಕ್ಕೆಂದು ಮಾನವರಹಿತ ಉಪಗ್ರಹ ನೌಕೆಯನ್ನು ಹಾರಿಬಿಡಲಿದೆ.
ಇತ್ತ ಭೂಮಿಯ ಮೇಲೂ ಮಂಗಳಕ್ಕೆ ಹಾರಿ ಹೋಗಲು ಉತ್ಸಾಹ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ‘ಮಾರ್ಸ್ 500’ ಆ ನಿಟ್ಟಿನಲ್ಲಿ ರಷ್ಯಾ ಮತ್ತು ಐರೋಪ್ಯ ದೇಶಗಳು ನಡೆಸಿದ ಒಂದು ಪ್ರಯೋಗ. ಮಾಸ್ಕೋದ ‘ರಷ್ಯನ್ ಜೀವವೈದ್ಯಕೀಯ ಸಂಸ್ಥೆ’ ಯ ಆವರಣದಲ್ಲಿ ನಿರ್ಮಿಸಲಾದ ವಿಶೇಷ ಗೂಡೊಂದರಲ್ಲಿ ಆರು ತಂತ್ರಜ್ಞರು ಬಾನಪ್ರವಾಸದ ಅಣಕು ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು. ಮೊದಲೊಮ್ಮೆ 105 ದಿನಗಳು ಮಗದೊಮ್ಮೆ 520 ದಿನಗಳ ಕಾಲ ಏಕಾಂತವಾಸದಲ್ಲಿ ಕಳೆದರು.
ಎರಡನೆಯ 520 ದಿನಗಳ ಪ್ರಯೋಗದಲ್ಲಿ, 250 ದಿನಗಳ ‘ಮಂಗಳ ಗ್ರಹಕ್ಕೆ ಪಯಣ’, ಮುಂದೆ ಒಂದು ತಿಂಗಳು ‘ಮಂಗಳನ ನೆಲದಲ್ಲಿ ಇಳಿಯುವುದು ಹಾಗೂ ಅಲ್ಲಿ ಅನ್ವೇಷಣೆ ನಡೆಸುವುದು’ ಹಾಗೂ ಮುಂದಿನ 230 ದಿನಗಳು ‘ಮರಳಿ ಭೂಮಿಗೆ’ ಇವುಗಳ ಅಣಕುಕಾರ್ಯ ನಡೆಯಿತು.
ದೂರದ ಬಾನಪ್ರವಾಸದಲ್ಲಿ ಎದುರಿಸಬೇಕಾದ ಮಾನಸಿಕ ಮತ್ತು ವೈದ್ಯಕೀಯ ಮಗ್ಗಲುಗಳ ಅಧ್ಯಯನ ಅಲ್ಲಿ ಪ್ರಮುಖ ಉದ್ದೇಶವಾಗಿತ್ತು. ಹೊರಗಿನ ಜಗತ್ತಿಗೆ ಸಂಪರ್ಕ ಫೋನು ಮತ್ತು ಇಮೇಲ್ ಮೂಲಕ, ಬಾಹ್ಯಾಕಾಶದಲ್ಲಿದ್ದಂತೆ 20 ನಿಮಿಷಗಳ ಕಾಲದ ಸಂಪರ್ಕ ತಡೆ, ಮಂಗಳಯಾನದ ಚಟುವಟಿಕೆಗಳನ್ನು (ಉಡ್ಡಯನ, ಬಾಹ್ಯ ಆಕಾಶದಲ್ಲಿ ಹಾರಾಟ, ಮಂಗಳನ ವಾತಾವರಣಕ್ಕೆ ಪ್ರವೇಶ, ಅಲ್ಲಿಂದ ಮತ್ತೆ ಮರಳುವಾಗಿನ ಪ್ರಕ್ರಿಯೆಗಳು ಇತ್ಯಾದಿ) ಅನುಭವಿಸುವಂತೆ ಕೃತಕ ಏರ್ಪಾಡು ಮಾಡಲಾಗಿತ್ತು. ತುರ್ತುಸಂದರ್ಭದಲ್ಲಿ ಮಾತ್ರವ್ರೇ ಅವರಿಗೆ ಬಾಹ್ಯ ನೆರವು ದೊರೆಯುವಂತೆ ಕಲ್ಪಿಸಲಾಗಿತ್ತು.
ತಂತ್ರಜ್ಞಾನ, ವೈದ್ಯಕೀಯ, ಜೀವಶಾಸ್ತ್ರ ಮತ್ತು ಬಾಹ್ಯ ಆಕಾಶ ಕುರಿತಾದ ತಜ್ಞರಾದ ಆ ಮಾರ್ಸೊನಾಟ್ಗಳು (ಅವರಲ್ಲಿ ಮೂವರು ರಷ್ಯನ್ನರು, ಇಬ್ಬರು ಯುರೋಪಿನವರು ಹಾಗೂ ಒಬ್ಬ ಚೀನಾದ ತಂತ್ರಜ್ಞ) ಕಳೆದ ನವೆಂಬರ್ 18ರಂದು 17 ತಿಂಗಳ ಏಕಾಂತ ವಾಸದ ನಂತರ ಹೊರಬಂದರು. ಮತ್ತೂ ಒಂದು ತಿಂಗಳು ಅವರನ್ನು ಜೀವವೈದ್ಯಕೀಯ ಪರೀಕ್ಷೆಗೊಳಪಡಿಸಲಾಯಿತು. ಸಂಘಜೀವಿ ಮಾನವ ದೀರ್ಘಕಾಲ ಏಕಾಂತವಾಸದಲ್ಲಿದ್ದಾಗ ಆತನ ದೇಹ ಮತ್ತು ಮನಸ್ಸುಗಳ ಅವಸ್ಥೆ, ಮಾನಸಿಕ ಒತ್ತಡದಲ್ಲಿದ್ದಾಗ ದೇಹದ ಹಾರ್ಮೋನುಗಳು, ರೋಗನಿರೋಧಕ ಶಕ್ತಿ ಇತ್ಯಾದಿಗಳಲ್ಲಾಗುವ ಬದಲಾವಣೆಗಳು ಒಟ್ಟಾರೆ ತಂತ್ರಜ್ಞರ ಮಾತು, ಊಟ, ಆಟ, ಕೆಲಸ, ವ್ಯಾಯಾಮ, ನಿದ್ದೆ ಪ್ರತಿಯೊಂದೂ ಚಟುವಟಿಕೆಯ ಅಧ್ಯಯನಕ್ಕೆಂದು ಮಾರ್ಸ್500 ಅಣಕು ನೌಕೆಯಲ್ಲಿ ಸುಮಾರು ನೂರು ಪ್ರಯೋಗಗಳು ನಡೆದಿವೆ. ಇಂದು ಅವರ ಅನುಭವ ದಾಖಲೆಗಳಿಗೆ ಜಗತ್ತಿನ ಮೂಲೆಮೂಲೆಗಳ ವಿಜ್ಞಾನಿಗಳಿಂದ ಎಲ್ಲಿಲ್ಲದ ಬೇಡಿಕೆಯಿದೆ.
ಆದರೆ ಅಲ್ಲಿ ಬಾಹ್ಯ ಆಕಾಶದ ವಿಕಿರಣಗಳ ಪ್ರಭಾವದ ಅಧ್ಯಯನ ಇರಲಿಲ್ಲ. ಇದುವರೆಗಿನ ಸಂಶೋಧನೆ ಮತ್ತು ಅನುಭವಗಳ ಪ್ರಕಾರ ವಿಕಿರಣ ಸೇವನೆ ಮಾನವ ದೇಹಕ್ಕೆ ಬಹಳಷ್ಟು ಹಾನಿಯುಂಟುಮಾಡುತ್ತದೆ. ಶೂನ್ಯ ಗುರುತ್ವದ ಅನುಭವವೂ ಅಲ್ಲಿರಲಿಲ್ಲ. ದೇಹವನ್ನು ಕೆಳಕ್ಕೆ ಜಗ್ಗುವ ಗುರುತ್ವದ ಬಲ ಇರದಿದ್ದಾಗ ಮಾಂಸಖಂಡಗಳು ಬಲಹೀನವಾಗುತ್ತವೆ, ಅದರಲ್ಲೂ ದೇಹಭಾರವನ್ನು ಹೊರುವ ಸೊಂಟ, ಮೊಣಕಾಲು ಮತ್ತು ಹಿಮ್ಮಡಿಗಳು ಹೆಚ್ಚು ಹಾನಿಗೊಳಗಾಗುತ್ತವೆ. ದೇಹದ ಅನೈಚ್ಛಿಕ ಪ್ರತಿಕ್ರಿಯೆಗಳು (ಉದಾ: ಬೆಂಕಿ ತಾಗಿದಾಗ ಕೈ ಹಿಂದಕ್ಕೆಳೆದುಕೊಳ್ಳುವುದು). ಮಂಗಳನಲ್ಲಿ ಗುರುತ್ವ ಇಲ್ಲಿಗಿಂತ ಮೂರು ಪಟ್ಟು ಕಡಿಮೆ ಇದೆ. ವಿರಳ ವಾತಾವರಣವಿದೆ.
ನೈಸರ್ಗಿಕ ಆಮ್ಲಜನಕ ಅಲ್ಲಿಲ್ಲ, ವಾತಾವರಣದಲ್ಲಿ ಮಾನವ ದೇಹಕ್ಕೆ ಒಗ್ಗದ ಇಂಗಾಲದ ಡೈಆಕ್ಸೈಡ್ ಅಧಿಕವಾಗಿದೆ. ಕೃತಕವಾಗಿ ವಾಯುಪೂರೈಕೆ ಆಗಬೇಕು, ಆ ವ್ಯವಸ್ಥೆಯೂ ಅಲ್ಲಿರಲಿಲ್ಲ. ಆದರೂ ಕೂಡ ಮಾರ್ಸ್500 ಪ್ರಯೋಗ ಮಂಗಳಪಯಣದ ಅಧ್ಯಯನಕ್ಕೆ ಸಾಕಷ್ಟು ಸಾಮಗ್ರಿ ಒದಗಿಸಿದೆ.
ಮಂಗಳ ಗ್ರಹದಲ್ಲಿ ಇಳಿಯುವುದೆಲ್ಲಿ?
ಸುಮಾರು ಮೂರು-ಮೂರುವರೆ ನೂರು ಕೋಟಿ ವರ್ಷಗಳ ಹಿಂದಿನಿಂದಿದ್ದ ಮಂಗಳನ ಆಳ ಕುಳಿಗಳೆಂದರೆ ವಿಜ್ಞಾನಿಗಳಿಗೆ ಎಲ್ಲಿಲ್ಲದ ಆಕರ್ಷಣೆ. ಏಕೆಂದರೆ ಒಂದು ಕಾಲದಲ್ಲಿ ಅಪಾರ ಪ್ರಮಾಣದ ನೀರನ್ನು ಹೊಂದಿದ್ದ ಅವೀಗ ಹಳೆಯ ಹೂಳುಗಳ, ಶಿಲಾಪಾಕಗಳ ಅವಶೇಷಗಳನ್ನು ಅವಿತಿಟ್ಟುಕೊಂಡ ಭಂಡಾರಗಳು.
ಈ ಹೊಂಡಗಳಲ್ಲಿ ಹಿಂದೆಂದಾದರೂ ಸೂಕ್ಷ್ಮಜೀವಿಗಳು ವಾಸವಾಗಿದ್ದ ಲಕ್ಷಣಗಳೇನಾದರೂ ಈಗ ದೊರೆತಾವೇ? ಮುಂದೆ ಮಾನವ ವಸತಿಗೆ ಅನುಕೂಲವಾಗಬಹುದಾದ ಅಂಶಗಳೇನಾದರೂ ಕಂಡುಬಂದಾವೇ? ಯಶಸ್ವೀ ಅಧ್ಯಯನಕ್ಕೆಂದು ಪ್ರಯೋಗಾಲಯವನ್ನು ಇಂಥದ್ದೊಂದು ಕುಳಿಯಲ್ಲಿಯೇ ಇಳಿಸಬೇಕು ಎಂಬುದು ಎಲ್ಲರ ಒಮ್ಮತದ ಅಭಿಪ್ರಾಯವಾಯಿತು. ಆದರೆ ಮಂಗಳನಲ್ಲಿರುವ ನೂರಾರು ಕುಳಿಗಳಲ್ಲಿ ಯಾವುದು ಉತ್ತಮ? ಸೂಕ್ತ ಸ್ಥಳ ಆಯ್ಕೆಗಾಗಿ ಆರು ವರ್ಷಗಳ ಹಿಂದೆಯೇ ನೂರು ಬಾಹ್ಯಾಕಾಶ ವಿಜ್ಞಾನಿಗಳನ್ನು ಒಟ್ಟಾಗಿಸಿ ಸರಣಿ ಕಾರ್ಯಾಗಾರಗಳಲ್ಲಿ ಚರ್ಚೆ ನಡೆಯಿತು. ಉಪಗ್ರಹ ಚಿತ್ರಗಳನ್ನು ಆಧರಿಸಿ, ಸಂಚಾರಿ ವಾಹನದ ಸುರಕ್ಷೆಯ ದೃಷ್ಟಿಯಿಂದ ಆರಿಸಿದ ಮೂವತ್ತು ಸ್ಥಳಗಳಲ್ಲಿ ಅಂತಿಮವಾಗಿ ನಾಲ್ಕನ್ನು ವಿಜ್ಞಾನಿಗಳು ಹೆಸರಿಸಿದರು. ನೌಕೆಯ ಉಡಾವಣೆಯ ಕೆಲವೇ ತಿಂಗಳ ಮೊದಲು ಅತ್ಯಧಿಕ ವೈಜ್ಞಾನಿಕ ಮಾಹಿತಿಗಳನ್ನು ಹೊಂದಿರಬಹುದಾದ ಗೇಲ್ ಕುಳಿಯೇ ಕ್ಯೂರಿಯಾಸಿಟಿ ಲ್ಯಾಂಡಿಗಿಗೆ ಪ್ರಶಸ್ತ ಸ್ಥಳ ಎಂದು ನಿರ್ಧರಿಸಲಾಯಿತು.
ಸುಮಾರು 154 ಕಿಮೀ ವ್ಯಾಸದ ಬೋಗುಣಿಯಾಕಾರದ ಕುಳಿ ಗೇಲ್ ಮಂಗಳ ಗ್ರಹದ ಸಮಭಾಜಕ ವೃತ್ತದ ಬಳಿಯಲ್ಲಿ ಒಡಮೂಡಿದೆ. ಆಸ್ಟ್ರೇಲಿಯಾದ ವಾಲ್ಟರ್ ಗೇಲ್ ಎಂಬ ಹವ್ಯಾಸೀ ಖಗೋಳಶಾಸ್ತ್ರಜ್ಞನ ನೆನಪಿಗೆ ಈ ಬೃಹತ್ ಹೊಂಡ ತನ್ನ ಹೆಸರು ಪಡೆದಿದೆ. ಹೊಂಡದ ಮಧ್ಯದಲ್ಲಿ ಐದು ಕಿಮೀ ಎತ್ತರದ ಆವೆಮಣ್ಣಿನಿಂದ ರಚಿತಗೊಂಡಂತೆ ಕಾಣುವ ಪದರಪದರದ ಬೆಟ್ಟ. ಇದೇ ಶಾರ್ಪ್ಬೆಟ್ಟ. ಚೂಪಾದ ಬೆಟ್ಟದ ತುದಿ ಗೇಲ್ ಕುಳಿಯಿಂದ ಎತ್ತರಕ್ಕೆ ಏರಿ ಆಕಾಶಕ್ಕೆ ಮುಖ ಚಾಚಿದೆ. ಶಾರ್ಪ್ ಬೆಟ್ಟದ ಪ್ರತಿ ಪದರವೂ ಖನಿಜಾಂಶಗಳ ಖನಿ ಎಂಬ ಊಹೆಯಿದೆ. ಸತತ ನೀರಿನ ಸಂಪರ್ಕದಿಂದಾಗಿ ರೂಪುಗೊಂಡ ಗಂಧಕಾಂಶಭರಿತ ಆವೆಮಣ್ಣು ಅದರ ಮೇಲೆ ಆಮ್ಲಜನಕದ ಅಂಶಗಳುಳ್ಳ ಖನಿಜಪದರ, ಹೀಗೆ ಊಹೆ ಸಾಗಿದೆ.
ಕ್ಯೂರಿಯಾಸಿಟಿ ಶಾರ್ಪ್ಬೆಟ್ಟದ ವಿವಿಧ ಸ್ತರಗಳನ್ನು ಚಪ್ಪಟೆಯಾಗಿರುವ ಸ್ಥಳದಲ್ಲಿ ಹತ್ತಿ, ಅಲ್ಲಿನ ಮಣ್ಣು, ಕಲ್ಲುಗಳ ವಿಶ್ಲೇಷಣೆ ನಡೆಸಲಿದೆ. ದಿನವೊಂದಕ್ಕೆ ಸುಮಾರು 650 ಮೀಟರ್ ದೂರವನ್ನು ಕ್ರಮಿಸುವ ಈ ಸಂಚಾರಿ 25 ಇಂಚು ಎತ್ತರದ ದಿಬ್ಬವನ್ನು ಹತ್ತಬಲ್ಲದು.
ಸರೋಜ ಪ್ರಕಾಶ್
ಶ್ರೀರಾಮನವಮಿಯ ಪ್ರಯುಕ್ತ ಹೆಸರುಬೇಳೆ ಹಾಗೂ ಪಾನಕ ವಿತರಣೆ
ಶಿಡ್ಲಘಟ್ಟದ ಕಾಂಗ್ರೆಸ್ ಭವನ ರಸ್ತೆಯಲ್ಲಿ ಶನಿವಾರ ಶ್ರೀರಾಮನವಮಿಯ ಪ್ರಯುಕ್ತ ಮೂಟೆ ಹೊರುವ ಕೂಲಿ ಕಾರ್ಮಿಕರು ಐಎಎಸ್ ಅಧಿಕಾರಿ ರವಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ, ರಾಮನ ಚಿತ್ರ ಪಟಕ್ಕೆ ಪೂಜೆ ಸಲ್ಲಿಸಿ, ಹೆಸರುಬೇಳೆ ಹಾಗೂ ಪಾನಕವನ್ನು ವಿತರಿಸಿದರು.
ಶ್ರೀರಾಮನವಮಿಯಂದು ಮನರಂಜನಾ ಉಟ್ಲು
ತಾಲ್ಲೂಕಿನಾದ್ಯಂತ ಶ್ರೀರಾಮನವಮಿಯನ್ನು ವಿವಿಧ ರಾಮ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಜಂಗಮಕೋಟೆ, ನಾಗಮಂಗಲ, ಚೌಡಸಂದ್ರ, ಅಪ್ಪೇಗೌಡನಹಳ್ಳಿ ಗೇಟ್, ಸಾದಲಿ, ದಿಬ್ಬೂರಹಳ್ಳಿ, ಮೇಲೂರು, ಹುಣಸೇನಹಳ್ಳಿ ಸ್ಟೇಷನ್, ಎಚ್.ಕ್ರಾಸ್, ಮಳಮಾಚನಹಳ್ಳಿ ಮುಂತಾದೆಡೆ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ನಡೆಸಿ ಭಕ್ತರಿಗೆ ಸೌತೆಕಾಯಿ ಹೆಸರುಬೇಳೆ ಮತ್ತು ಪಾನಕವನ್ನು ವಿತರಿಸಿದರು.
ಪಟ್ಟಣದ ಕೋಟೆ ವೃತ್ತದ ಶ್ರೀರಾಮ ದೇವಾಲಯ, ಉಲ್ಲೂರುಪೇಟೆಯ ಭಜನೆ ಮಂದಿರ ಹಾಗೂ ಚಿಂತಾಮಣಿ ರಸ್ತೆಯಲ್ಲಿರುವ ವೀರಾಂಜನೇಯಸ್ವಾಮಿ ದೇವಾಲಯಗಳಲ್ಲಿ ರಾಮನವಮಿಯ ಪ್ರಯುಕ್ತ ಪೂಜಾಕಾರ್ಯಕ್ರಮಗಳು ನಡೆದವು.
ಚಿಂತಾಮಣಿ ರಸ್ತೆಯಲ್ಲಿರುವ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಸೀತಾ ರಾಮ ಲಕ್ಷ್ಮಣ ಆಂಜನೇಯಸ್ವಾಮಿ ಮತ್ತು ವೀರಾಂಜನೇಯಸ್ವಾಮಿಗೆ ಅಭಿಷೇಕ, ಪೂಜೆ, ದ್ರಾಕ್ಷಿ ಗೋಡಂಬಿ ವಿಶೇಷ ಅಲಂಕಾರ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು. ಸೀತಾರಾಮ ಕಲ್ಯಾಣೋತ್ಸವಕ್ಕೆ ನೂರಾರು ಜನರು ಸಾಕ್ಷಿಯಾದರು.
ಶ್ರೀರಾಮನವಮಿಯ ಪ್ರಯುಕ್ತ ಪಟ್ಟಣದ ಚಿಂತಾಮಣಿ ರಸ್ತೆಯಲ್ಲಿರುವ ಶ್ರೀವೀರಾಂಜನೇಯ ದೇವಾಲಯದಲ್ಲಿ ೮8ನೇ ವರ್ಷದ ಉಟ್ಲು ಪರಿಷೆ ನಡೆಯಿತು. ಕ್ಷೀರ ಉಟ್ಲು ಮತ್ತು ಮನರಂಜನಾ ಉಟ್ಲುಗಳನ್ನು ವೀರಾಂಜನೇಯಸ್ವಾಮಿ ಬಲಿಜ ಸೇವಾ ಟ್ರಸ್ಟ್ ಮತ್ತು ಮಹಿಳಾ ಮಂಡಳಿಯವರು ಆಯೋಜಿಸಿದ್ದರು. ಮಕ್ಕಳು, ಮಹಿಳೆಯರು ಸೇರಿದಂತೆ ನೂರಾರು ಜನರು ಮನರಂಜನಾ ಉಟ್ಲು ವೀಕ್ಷಿಸಿ ಆನಂದಿಸಿದರು.
ಮೊದಲು ಕ್ಷೀರ ಉಟ್ಲು ಕಾರ್ಯಕ್ರಮದಲ್ಲಿ ಹಾಲನ್ನು ಮಡಿಕೆಯಲ್ಲಿ ಕಟ್ಟಿ ಪೂಜಿಸಿ ಒಡೆದರು. ನಂತರ ನಡೆಯುವ ಮನರಂಜನಾ ಉಟ್ಲು ಜನಾಕರ್ಷಣೆಯ ಕೇಂದ್ರ ಬಿಂದು. ಎತ್ತರದ ಕಂಬದ ಮೇಲೆ ಕಬ್ಬಿಣದಲ್ಲಿ ಮಾಡಿರುವ ತಿರುಗುಮಣೆ ಇರುತ್ತದೆ. ಅದಕ್ಕೆ ನಾಲ್ಕು ಹಗ್ಗಗಳನ್ನು ಕಟ್ಟಿರುತ್ತಾರೆ. ಹಗ್ಗದ ತುದಿಯಲ್ಲಿ ತೆಂಗಿನಕಾಯಿ ಕಟ್ಟಿರುತ್ತಾರೆ. ತಿರುಗುಮಣೆಯಲ್ಲಿ ಇಬ್ಬರು ಕುಳಿತು ತಿರುಗಿಸುತ್ತಿದ್ದಂತೆಯೇ ತೆಂಗಿನಕಾಯಿ ಕಟ್ಟಿರುವ ಹಗ್ಗವೂ ಸುತ್ತತೊಡಗುತ್ತವೆ. ಉದ್ದುದ್ದದ ಕೋಲು ಹಿಡಿದು ಈ ತೆಂಗಿನಕಾಯಿಯನ್ನು ಹೊಡೆಯಲು ಇಬ್ಬರು ನಿಂತಿರುತ್ತಾರೆ. ಅವರು ತೆಂಗಿನಕಾಯಿಗೆ ಹೊಡೆಯದಂತೆ ಅವರೆಡೆಗೆ ಸುತ್ತಲಿಂದ ನೀರನ್ನು ಎರಚುತ್ತಿರುತ್ತಾರೆ. ಈ ಆಟ ನೋಡುವ ಜನ ಹೊಡೆಯಲು ಕೂಗುತ್ತಾ ಹುರಿದುಂಬಿಸುತ್ತಾರೆ. ತೆಂಗಿನ ಕಾಯಿ ಹೊಡೆದ ವೀರನಿಗೆ ಹಾರಹಾಕಿ ದೇವಾಲಯದಲ್ಲಿ ಗೌರವಿಸಿದರು.
ಜಂಗಮಕೋಟೆ ಎಸ್ಎಫ್ಸಿಎಸ್ ಅಧ್ಯಕ್ಷ ಚುನಾವಣೆ
ಜಂಗಮಕೋಟೆಯ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಸಂಘದ ನಿರ್ದೇಶಕರಾದ ಬಳುವನಹಳ್ಳಿಯ ಎನ್.ರಾಜಣ್ಣ ಮಾತ್ರವೇ ಅಧ್ಯಕ್ಷ ಸ್ಥಾನಕ್ಕೆ ನಾಮ ಪತ್ರವನ್ನು ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸಹಕಾರ ಅಭಿವೃದ್ಧಿ ಅಧಿಕಾರಿ ಕೆ.ವೆಂಕಟೇಶ್ ಜಂಗಮಕೋಟೆಯ ಎಸ್ಎಪ್ಸಿಎಸ್ ಸಂಘದ ಅಧ್ಯಕ್ಷರಾಗಿ ಎನ್.ರಾಜಣ್ಣನವರು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಘೋಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಳುವನಹಳ್ಳಿ ಎನ್.ರಾಜಣ್ಣ, ನಮ್ಮ ಸಂಘವು ಈ ಎರಡೂ ಜಿಲ್ಲೆಯಲ್ಲಿಯೆ ಉತ್ತಮ ಕಾರ್ಯನಿರ್ವಹಣೆಗಾಗಿ ಸತತ ಏಳೆಂಟು ವರ್ಷಗಳಿಂದಲೂ ಪ್ರಶಸ್ತಿಯನ್ನು ಪಡೆದುಕೊಂಡು ಬಂದಿದೆ. ಸಂಘದಿಂದ ಹೀರೇಬಲ್ಲ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ನ್ಯಾಯ ಬೆಲೆ ಅಂಗಡಿ, ರಾಸಾಯನಿಕ ಗೊಬ್ಬರಗಳ ಮಳಿಗೆಯನ್ನು ಆರಂಭಿಸಲಾಗಿದೆ. ಜತೆಗೆ ಜಂಗಮಕೋಟೆ ಕ್ರಾಸ್ನಲ್ಲಿ ನಂದಿನಿ ಪಾರ್ಲರ್, ಪ್ರಿಂಟಿಂಗ್ ಪ್ರೆಸ್, ಜೆರಾಕ್ಸ್ ಅಂಗಡಿ, ಈ.ಸ್ಟಾಂಪಿಂಗ್ ಅಂಗಡಿಯನ್ನು ತೆರೆಯಲಾಗಿದೆ. ಇನ್ನಷ್ಟು ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಎಂದರು.
ಸಂಘದ ನಿರ್ದೆಶಕರಾದ ಎನ್.ಅಶ್ವತ್ಥನಾರಾಯಣಗೌಡ, ಟಿ.ರವಿಕುಮಾರ್, ಎನ್.ನಾರಾಯಣಸ್ವಾಮಿ, ಭಾಗ್ಯಮ್ಮಮುನಿಕೃಷ್ಣಪ್ಪ, ಜಂಗಮಕೋಟೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಹೊಸಪೇಟೆಯ ಎಚ್.ಎಂ.ಮುನಿಯಪ್ಪ, ಮುಖಂಡರಾದ ಹೀರೇಬಲ್ಲ ಬಿ.ಕೃಷ್ಣಪ್ಪ, ಬಸವಾಪಟ್ಟಣ ಬೈರೇಗೌಡ, ನಲ್ಲೇನಹಳ್ಳಿ ರಾಮಕೃಷ್ಣಪ್ಪ, ಸಲೀಂ, ಟಿ.ಎಸ್.ಕೃಷ್ಣಮೂರ್ತಿ, ಬಿ.ವಿ.ಸೊಣ್ಣಪ್ಪ, ಡಿ.ನಾರಾಯಣಸ್ವಾಮಿ, ಡಿ.ವಿ.ಶ್ರೀನಿವಾಸ್, ಸಂಘದ ವ್ಯವಸ್ಥಾಪಕರಾದ ಎಸ್.ನಾಗರಾಜ್, ಡಿಸಿಸಿ ಬ್ಯಾಂಕ್ನ ವ್ಯವಸ್ಥಾಪಕ ಲಿಂಗರಾಜು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಆರಿಸಿ ಬೆಂಕಿಯನ್ನು, ಉಳಿಸಿ ಗೋಮಾಳದಲ್ಲಿನ ಜೀವ ಸಂಕುಲವನ್ನು
ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತಲಕಾಯಲಬೆಟ್ಟ ಗ್ರಾಮದಲ್ಲಿ ಈಚೆಗೆ ಫೌಂಡೇಶನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ (ಎಫ್. ಇ. ಎಸ್) ಸಂಸ್ಥೆಯು ಬೆಂಕಿ ತಡೆಗೆ ಜನ ಜಾಗೃತಿ ಆಂದೋಲನವನ್ನು ಹಮ್ಮಿಕೊಂಡಿತ್ತು.
ಈ ಸಂದರ್ಭದಲ್ಲಿ ಎಫ್.ಇ.ಎಸ್. ಸಂಸ್ಥೆಯ ಯೋಜನಾಧಿಕಾರಿಗಳಾದ ನಿಖತ್, ಶಿಲ್ಪಾ ಹಾಗೂ ಪ್ರತಿನಿಧಿಗಳಾದ ಕೃಷ್ಣಪ್ಪ, ಗೋಪಿ,ಲೀಲಾವತಿ, ಸೌಭಾಗ್ಯ, ಬೆಂಕಿಯ ಅನಾಹುತ ಮತ್ತು ಮುಂಜಾಗೃತಾ ಕ್ರಮಗಳ ಕುರಿತಾಗಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು.
ಬೇಸಿಗೆ ಕಾಲ ಬಂತೆಂದರೆ ಗ್ರಾಮದ ಸಾಮೂಹಿಕ ಆಸ್ತಿಗಳಾದ ಗೋಮಾಳ, ಗುಂಡುತೋಪು, ಬೆಟ್ಟ, ಗುಡ್ಡ ಹಾಗೂ ಅರಣ್ಯಗಳಿಗೆ ಬೆಂಕಿ ಬೀಳುವ ಸಾದ್ಯತೆಗಳು ಹೆಚ್ಚಾಗಿರುವುದರಿಂದ, ಗ್ರಾಮದ ಜನರು ಇಂತಹ ಬೆಂಕಿಯ ಗಂಡಾಂತರಗಳನ್ನು ತಡೆಯಲು ಅಗತ್ಯ ಮಂಜಾಗೃತಿ ಕ್ರಮಗಳನ್ನು ತೆಗೆದುಕೊಳ್ಳುಲು ಗ್ರಾಮಸ್ಥರಿಗೆ ತಿಳುವಳಿಕೆ ನೀಡಿದರು. ಇದರ ಜೊತೆಗೆ ಪರಿಸರವನ್ನೇ ಅವಲಂಬಿತವಾದ ಪ್ರಾಣಿ, ಪಕ್ಷಿ, ಸಸ್ಯವರ್ಗ ಹಾಗೂ ಜೀವ ಸಂಕುಲಗಳ ಅವಲಂಬನೆ ಕುರಿತು ವಿವರಿಸಲಾಯಿತು. ಈ ಕಾರ್ಯಕ್ರಮವನ್ನು ಜನರಿಗೆ ಹಾಡುಗಳ ಮೂಲಕ ಮನವರಿಕೆ ಮಾಡಿಕೊಡಲಾಯಿತು.
ಇರುವುದೆಲ್ಲವ ಬಿಟ್ಟು..
ಹೀಗೊಮ್ಮೆ ಟ್ರಾಫಿಕ್ ಸಿಗ್ನಲ್‍ನಲ್ಲಿ ನಿಂತಿದ್ದೆ. ಪಕ್ಕದಲ್ಲೇ ನಿಂತಿದ್ದ ಬಸ್ಸಿನ ಕಡೆಗೆ ನೋಡಿದೆ. ಅದೊಂದು ಶಾಲೆಯ ವಾಹನವಾಗಿತ್ತು. ಒಳಗಿದ್ದ ಪುಟಾಣಿಗಳು, ಪೋಲೀಸರ ಜೀಪಿನ ಒಳಗೆ ಕೂತ ಕಳ್ಳರಂತೆ ಕಂಡರು. ನನ್ನ ಗಾಡಿಯನ್ನು ಬಸ್ಸಿನ ಹತ್ತಿರ ನುಗ್ಗಿಸಿದೆ. ಒಳಗಿದ್ದ ಗುಂಪಿನಲ್ಲೊಬ್ಬ ಪುಟ್ಟ ಹುಡುಗಿ..”ಅಕ್ಕ ಬಾಯ್” ಎಂದಳು. ಅದನ್ನೇ ಕಾಯುತ್ತಿದ್ದ ನಾನು, ಎಲ್ಲರನ್ನು ನೋಡಿ “ಎಷ್ಟನೇ ಕ್ಲಾಸು?” ಎಂದೆ. ಎಲ್ಲರೂ “ಪ್ರೀ ಕೆ.ಜಿ.” ಎಂದು ಒಟ್ಟಾಗಿ ಕೂಗಿದರು. ಅಷ್ಟೊತ್ತಿಗೆ ಸಿಗ್ನಲ್ ಬಣ್ಣ ಹಸಿರಾಯಿತು. ನಮ್ಮ ನಮ್ಮ ದಾರಿ ನಮಗೆ ತೆರೆದುಕೊಂಡಿತು. ನಾನು ಕಾಲೇಜು ತಲುಪಿದ ಮೇಲೂ ಆ ಮಕ್ಕಳ ಕೂಗಾಟ, ಕೆಲವರ ಅಳು, ಚೇಷ್ಟೇ ಎಲ್ಲವು ನನ್ನ ಮನದಲ್ಲಿತ್ತು. ಇದಾಗಿ ಎಷ್ಟೋ ದಿನಗಳ ನಂತರ ನಮ್ಮ ಒಂದು ಪ್ರಾಜೆಕ್ಟಿನ ಸಲುವಾಗಿ ಹಲವು ಪ್ಲೇ ಹೊಮ್‍ಗಳಿಗೆ ಹೋಗುವ ಅವಕಾಶ ದೊರೆಯಿತು. “ಆ ಪುಟಾಣಿ ಮಕ್ಕಳೊಂದಿಗೆ ಆಟವಾಡಬಹುದು, ಅವರ ನಗುವಲ್ಲಿ, ಚೇಷ್ಟೆಗಳಲ್ಲಿ ನಾವು ನಮ್ಮಲ್ಲೇ ಕಳೆದು ಹೋಗಿರುವ ಮುಗ್ಧತೆಯನ್ನು, ನೆನಪುಗಳನ್ನು ನೆನೆಯಬಹುದು”, ಎಂಬ ಆಸೆಯಿಂದ ಹೋದೆವು. ಆದರೆ ಅಲ್ಲಿ ನಾವು ಕಂಡ ದೃಶ್ಯವೇ ಬೇರೆಯಾಗಿತ್ತು. ಎಷ್ಟೋ ಶಾಲೆಗಳಲ್ಲಿ ಆಟಿಕೆ ಸಾಮಾನುಗಳೆಲ್ಲವೂ ಹರಡಿತ್ತು. ಒಂದೊಂದು ಮೇಡಮ್‍ಗಳ ಕೈಯಲ್ಲಿ ಒಂದೊಂದು ಮಗುವಿತ್ತು. ಕೆಲವು ಮಕ್ಕಳು ಅಲ್ಲಿದ್ದ ಚಾಪೆಯ ಮೇಲೆ ಮಲಗಿದ್ದರೆ, ಇನ್ನು ಕೆಲವರು ಅಳುತ್ತಿದ್ದರು. ಶಾಲೆಯ ಸಿಬ್ಬಂದಿ ಕೆಲವು ಮಕ್ಕಳಿಗೆ ಊಟ ಮಾಡಿಸುತ್ತಿದ್ದರೆ, ಇನ್ನು ಕೆಲವರಿಗೆ ನಿದ್ದೆ ಮಾಡಿಸುವ ಪ್ರಯತ್ನದಲ್ಲಿದ್ದರು. ಕಾಲೇಜಿನ ಪರವಾಗಿ ಹೋಗಿದ್ದರಿಂದ ನಮಗೆ ಒಳಗೆ ಪ್ರವೇಶ ಸಿಕ್ಕಿತ್ತು. ಅಲ್ಲಿಯ ಸಿಬ್ಬಂದಿಗೆ ಹಲವು ಪ್ರಶ್ನೆ ಕೇಳಬೇಕಾದ್ದರಿಂದ ಅವರು ಬಿಡುವಾಗುವವರೆಗೂ ಅಲ್ಲಿಯೇ ಕೂತು ಕಾದೆವು.
ಮನೆಯಲ್ಲಿ ಅಮ್ಮನ ಜೊತೆ ಆಟವಾಡಿ ಸಮಯ ಕಳೆಯಬೇಕಿದ್ದ ಪುಟ್ಟ ಮಕ್ಕಳು, ಹೀಗೆ ಶಾಲೆಯ ಒಂದು ಮೂಲೆಯಲ್ಲಿ ಕೂತು ಊಟ ಮಾಡುವುದನ್ನೋ, ಅಳುತ್ತಾ ಅಲ್ಲೇ ಮಲಗುವುದನ್ನೋ ನೋಡಿ ಬೇಸರವಾಯಿತು. “ಮೇಡಮ್ ಈ ಮಕ್ಕಳ ತಂದೆ-ತಾಯಂದಿರು ಏನು ಕೆಲಸ ಮಾಡುತ್ತಾರೆ? ಇಷ್ಟು ಚಿಕ್ಕ ವಯಸ್ಸಿಗೆ ಏಕೆ ಇವರನ್ನು ಶಾಲೆಗೆ ಸೇರಿಸಿದ್ದಾರೆ?” ಎಂದು, ಶಾಲೆಯ ಮೇಡಮ್ ನಮ್ಮೊಂದಿಗೆ ಮಾತನಾಡಲು ಬಂದಾಗ ಕೇಳಿದೆ. ಅವರ ಉತ್ತರ ನನ್ನನ್ನು ಇನ್ನೂ ಕಾಡುತ್ತಿದೆ. “ಏನು ಮಾಡೋದು ಹೇಳಿ, ಇಲ್ಲಿ ಬರುವ ಬಹುತೇಕ ಮಕ್ಕಳು ನಗರದ ಜನಪ್ರಿಯ ಆಸ್ಪತ್ರೆಯ ಡಾಕ್ಟರುಗಳ ಮಕ್ಕಳು.! ಅವರು ಬೆಳಿಗ್ಗೆ ಬೇಗನೆ ಹೋಗುವುದರಿಂದ, ಹಲವರು ತಮ್ಮ ಮಕ್ಕಳನ್ನು 7 ಘಂಟೆಗೆ ನಮ್ಮಲ್ಲಿ ಬಿಟ್ಟು ಹೋಗುತ್ತಾರೆ. ಅವರು ವಾಪಸ್ಸಾಗುವಾಗ ಸಂಜೆಯಾಗುತ್ತದೆ” ಎಂದರು.
ಶಾಲೆಯ ಮೊದಲ ದಿನದಿಂದಲೂ ಬೆಳಿಗ್ಗೆ ಎದ್ದು ಹೋಗುವುದನ್ನು ನೆನೆದರೆ ದುಃಖವಾಗುತ್ತಿತ್ತು. ಈಗಲೂ ನಾನು ಅದಕ್ಕೆ ಹೊರತಲ್ಲ!. ಕಾಲೇಜಿಗೆ ಹೋಗುವಾಗ ತಂದೆ ತಾಯಂದಿರು ತಮ್ಮ ಮಕ್ಕಳನ್ನು ಬಲವಂತವಾಗಿ ಎಳೆದು ಹೋಗುತ್ತಿರುವ ದೃಶ್ಯ ಕಂಡರೆ ಮನಸ್ಸಿಗೆ ಹಿಂಸೆಯಾಗುತ್ತದೆ. ಹೈಟೆಕ್ ಶಾಲೆಗಳಿಗೆ ಹೋದರೆ ನಮ್ಮ ಮಕ್ಕಳು ಜಗತ್ತಿನಲ್ಲಿರುವುದನ್ನೆಲ್ಲಾ ಕಲಿತುಬಿಡುತ್ತಾರೆ ಎಂಬ ಭ್ರಮೆಯಲ್ಲಿ, ಮಗುವಿಗೆ ವರ್ಷವಾಗುತ್ತಿದ್ದಂತೆ ಶಾಲೆಯಲ್ಲಿ ಡೊನೇಷನ್ ಕೊಟ್ಟಾದರೂ ತಮ್ಮ ಸೀಟ್‍ಗಳನ್ನು ಕಾದಿರಿಸುತ್ತಿದ್ದಾರೆ. ಪಾಪ! ತನ್ನನ್ನು ಅರ್ಧ ನಿದ್ರೆಯಲ್ಲಿ ಎಬ್ಬಿಸಿ, ಎಲ್ಲಿಗೆ ಕರೆದು ಹೋಗುತ್ತಿದ್ದಾರೆ ಎಂದು ಅರಿಯದಾಗಿರುತ್ತಾರೆ ಆ ಪುಟಾಣಿಗಳು. ಹೀಗೆ ಬೆಳಿಗ್ಗೆ ಅವರನ್ನು ತಯಾರು ಮಾಡಿ ಶಾಲೆಯ ಆವರಣದಲ್ಲಿ ಬಿಟ್ಟು ಹೋಗುವಾಗ, ಕೊಡುವ ಮುತ್ತನ್ನು ನೋಡಿದರೆ…ಎಲ್ಲವು ನಾಟಕವೇನೋ ಎನಿಸುತ್ತದೆ.
ಮನೆಯಲ್ಲಿ ತನ್ನ ಮಗುವನ್ನು ಬಿಟ್ಟು, ಬೆಳ್ಳಂಬೆಳಿಗ್ಗೆ ಶಾಲೆಗೆ ಓಡಿ ಬರುವ ಟೀಚರ್, ಶಾಲೆಯಲ್ಲಿ ಆಕೆ ಬೇರೊಂದು ಮಗುವಿಗೆ ಊಟ ಮಾಡಿಸುವಾಗ..ತನ್ನ ಮಗು ಊಟ ಮಾಡಿದೆಯೋ ಇಲ್ಲವೋ ಎಂಬುದನ್ನು ನೆನೆಯುತ್ತಾಳೆ. ನಗರದ ಬಹುದೊಡ್ಡ ಆಸ್ಪತ್ರೆಯ ಡಾಕ್ಟರ್, ತಾನು ಬಾಳಂತಿಯಾಗಿದ್ದರೂ, ಇನ್ನೊಬ್ಬರಿಗೆ ಹೆರಿಗೆ ಮಾಡಿಸಲು ತನ್ನ ನೋವನ್ನು ಬಿಟ್ಟು ಬರುತ್ತಾಳೆ. ತಮ್ಮ ಮಗುವಿಗೆ ಒಂದು ವರ್ಷವಾಗುತ್ತಿದ್ದಂತೆ, ಹತ್ತಿರದ ಡೇ-ಕೇರ್‍ಗೆ ಹಾಕುತ್ತಾರೆ. ಅಲ್ಲಿಯ ‘ತಾಯಂದಿರಿಗೆ’ ತನ್ನ ಮಗುವನ್ನು ಮನಸ್ಸಿಲ್ಲದ ಮನಸ್ಸಲ್ಲಿ ಒಪ್ಪಿಸಿ ಹೋಗುತ್ತಾಳೆ. ಇವೆಲ್ಲದರ ಮಧ್ಯೆ ಮಗು ತನ್ನ ತಂದೆ ತಾಯಿಯ ಪ್ರೀತಿ ಎಂದರೆ, “ಅಪ್ಪ ಅಮ್ಮ ಮನೆಯಿಂದ ಹೊರಡುವಾಗ ಕೊಡುವ ಒಂದು ಮುತ್ತು” ಎಂದಷ್ಟೆ ಭಾವಿಸುತ್ತದೆ. ಆ ಮುತ್ತಿಗೂ ಮಿಗಿಲಾಗಿ ಅಪ್ಪ ಅಮ್ಮ ನಮ್ಮನ್ನು ಪ್ರೀತಿಸುತ್ತಾರೆ ಎಂಬುದಕ್ಕೆ ಆ ಮಕ್ಕಳಲ್ಲಿ ಬಾಲ್ಯದ ಯಾವ ನೆನಪು ಇರುವುದಿಲ್ಲ. “ನನ್ನ ಅಮ್ಮ ನನ್ನನ್ನು ಎಷ್ಟು ಪ್ರೀತಿಸುತ್ತಾರೆ ಗೊತ್ತಾ! ಮನೆಯಿಂದ ಹೊರಡುವಾಗ ನನ್ನ ತಬ್ಬಿ ಮುತ್ತಿಡದಿದ್ದರೆ ಅವರಿಗೆ ಸಮಾಧಾನವೇ ಇರುವುದಿಲ್ಲ.” ಹೀಗೆಂದು 3 ತರಗತಿಯ ಹುಡುಗಿಯೊಬ್ಬಳು ತನ್ನ ತಾಯಿಯ ಪ್ರೀತಿಯ ಬಗ್ಗೆ ವಿವರಿಸುವಾಗ ತಿಳಿಯಿತು, ಆಕೆಗೆ ಆ ಮುತ್ತೊಂದೇ ಬಾಲ್ಯದ ನೆನಪು ಎಂದು. ಈ ಜೀವನದ ಓಟದಲ್ಲಿ ನಾವು ಕಳೆದುಕೊಂಡಿರುವುದೇನೆಂದು ಗೊತ್ತಿಲ್ಲದೆ ಹುಡುಕುತಿರುತ್ತೇವೆ. ಅದರೊಟ್ಟಿಗೆ ನಮ್ಮ ಬಳಿ ಇರುವ ಸ್ನೇಹ ಸಂಬಂಧವನ್ನು, ಪರಸ್ಪರ ಪ್ರೀತಿಯನ್ನು ಕಳೆದುಕೊಳ್ಳುತ್ತಿದ್ದೇವೆ.
ಹೊರಗಿನಿಂದ ನೋಡುವವರಿಗೆ ಅವರಿವರ ಕೆಲಸ ಸುಲಭ. ಆದರೆ ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು ತಾನು ಎಂಥ ಕಷ್ಟ ಅನುಭವಿಸುತ್ತಿದ್ದೇನೆ ಎಂದು.
ಜೀವನದ ವೈರುಧ್ಯ ಎಂದರೆ ಇದೇ ತಾನೇ?
ಸ್ಫೂರ್ತಿ ವಾನಳ್ಳಿ
ರೈತ ವಿರೋಧ ನೀತಿಯ ವಿರುದ್ಧ ಧರಣಿ
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ವತಿಯಿಂದ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಭೂ ಸ್ವಾಧೀನ ಕಾಯ್ದೆಯನ್ನು ವಾಪಸ್ಸು ಪಡೆಯಬೇಕೆಂದು ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆಯನ್ನು ಗುರುವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ನಗರದ ಪ್ರಮುಖ ರಸ್ತೆಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ತಾಲ್ಲೂಕು ಕಚೇರಿಯ ಮುಂದೆ ಧರಣಿ ನಡೆಸಿದರು.
ಸಾರ್ವಜನಿಕ ಮತ್ತು ರೈತರ ಹಿತರಕ್ಷಣೆಯ ಕಾಳಜಿಯಿಲ್ಲದೆ ಕೇಂದ್ರ ಸರ್ಕಾರ ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದಿದೆ. ಈ ಸುಗ್ರೀವಾಜ್ಞೆಯನ್ನು ಕೇವಲ ತಿದ್ದುಪಡಿ ಎಂದು ಮಾತ್ರ ಕರೆಯಲಾಗದು. ಇದು 2013 ರ ಭೂ ಸ್ವಾಧೀನ ಕಾಯ್ದೆಯ ಮೂಲ ಆಶಯ ಮತ್ತು ಉದ್ದೇಶವನ್ನೇ ನಿರರ್ಥಕಗೊಳಿಸುತ್ತದೆ. 1894ರ ಕಾಯ್ದೆಯಲ್ಲಿ ಸಂತ್ರಸ್ತ ಭೂ ಮಾಲೀಕರಿಗೆ ಆಕ್ಷೇಪ ಎತ್ತಲು ಹಾಗೂ ತಮ್ಮ ಕಷ್ಟ ಕೇಳಿಕೊಳ್ಳಲು ಅವಕಾಶವಾದರೂ ಇತ್ತು. ಆದರೆ ಈಗ ಸುಗ್ರೀವಾಜ್ಞೆಯಲ್ಲಿ ಇಡೀ ವಿದಿವಿಧಾನದ ಅಗತ್ಯಗಳನ್ನೇ ಬೈಪಾಸ್ ಮಾಡಿರುವುದರಿಂದ ಜಮೀನಿನ ಮಾಲೀಕರಿಗೆ ಕನಿಷ್ಟ ರಕ್ಷಣೆಯೂ ಇಲ್ಲದಂತಾಗಿದೆ. ಒಟ್ಟಾರೆ ಇದು ರಿಯಲ್ ಎಸ್ಟೇಟಿಗರ ಮತ್ತು ಕಾರ್ಪೋರೇಟ್ಗಳ ಹಿತರಕ್ಷಣೆಗಾಗಿ ನಡೆಯುತ್ತಿರುವ ಸಂಚಾಗಿದೆ ಎಂದು ಆರೋಪಿಸಿದರು.
ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಎಸ್.ಎಂ.ನಾರಾಯಣಸ್ವಾಮಿ, ಮಳ್ಳೂರು ಹರೀಶ್, ಮಂಜುನಾಥ್, ಕೃಷ್ಣಪ್ಪ, ಬೈಯಣ್ಣ, ನರಸಿಂಹರೆಡ್ಡಿ, ವೇಣುಗೋಪಾಲ್, ಮುನಿರಾಜು, ವೆಂಕಟನಾರಾಯಣಸ್ವಾಮಿ, ಅಬ್ಲೂಡು ದೇವರಾಜ್, ಮುನಿಕೃಷ್ಣ, ನಾಗರಾಜು, ರಾಮಚಂದ್ರ, ರವಿಚಂದ್ರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಹಸುಗಳಿಗೆ ಪೌಷ್ಠಿಕಾಂಶವುಳ್ಳ ಮೇವಿನ ಕೊರತೆ
ಬಯಲು ಸೀಮೆ ಪ್ರದೇಶದಲ್ಲಿ ಹಸುಗಳಿಗೆ ಪೌಷ್ಠಿಕಾಂಶವುಳ್ಳ ಮೇವಿನ ಕೊರತೆಯಿಂದಾಗಿ ಬರಡು ರಾಸುಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಬರಡು ರಾಸು ಚಿಕಿತ್ಸಾ ತಜ್ಞ ಡಾ.ಪ್ರಕಾಶ್ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಗ್ರಾಮದಲ್ಲಿ ಬುಧವಾರ ಹಾಲು ಉತ್ಪಾದಕರ ಸಹಕಾರ ಸಂಘ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾಗೂ ಕೋಚಿಮುಲ್ ಒಕ್ಕೂಟದ ವತಿಯಿಂದ ನಡೆದ ಬರಡು ರಾಸು ತಪಾಸಣೆ ಮತ್ತು ಮೇವು ಉತ್ಪಾದನಾ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.
ರೈತರು ಹಸುಗಳಿಗೆ ಪೌಷ್ಠಿಕಾಂಶವುಳ್ಳ ಹಸಿ ಮೇವು, ಒಣ ಹುಲ್ಲು, ನೇಪಿಯರ್ ಹುಲ್ಲು, ಹಲಸಂದಿ, ಹುರುಳಿ, ಹಿಪ್ಪುನೇರಳೆ ಕಡ್ಡಿ ಮತ್ತು ಕೆ.ಎಂ.ಎಫ್ನ ಮಿಶ್ರಣ ಪಶು ಆಹಾರ ನೀಡುವುದರ ಮುಖಾಂತರ ಗರ್ಭಧಾರಣೆ ಸಮಸ್ಯೆಯನ್ನು ನಿವಾರಿಸಬಹುದು. ಶುಚಿತ್ವವಿಲ್ಲದೆ ಗರ್ಭಕೋಶದ ಸೋಂಕು ಉಂಟಾಗುತ್ತದೆ ಎಂದು ಹೇಳಿದರು.
ತಾಲ್ಲೂಕು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಮುನಿನಾರಾಯಣರೆಡ್ಡಿ ಮಾತನಾಡಿ, ಹಸುಗಳಿಗೆ ಪೌಷ್ಠಿಕಾಂಶದ ಕೊರತೆಯಿಂದಾಗಿ ಶೇಕಡಾ 65–70 ರಷ್ಟು ಗರ್ಭಧಾರಣಾ ಸಮಸ್ಯೆ ಉಂಟಾಗುತ್ತದೆ. ನೀರಿನ ಕೊರತೆಯಿಂದ ಮೇವು ಉತ್ಪಾದನೆ ಕುಂಠಿತಗೊಂಡು, ರಾಸಾಯನಿಕ ಸಿಂಪಡಿಸಿರುವ ಮೇವು ಬಳಸುವುದರಿಂದ ರಾಸುಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರಿಂದ ಹಸುಗಳ ಜೀರ್ಣಕ್ರಿಯೆ ಮತ್ತು ರೋಗ ತಡೆದುಕೊಳ್ಳುವ ಶಕ್ತಿ ಕ್ಷೀಣಿಸುತ್ತಿದೆ ಎಂದರು.
ಕೋಚಿಮುಲ್ ಅಧಿಕಾರಿ ಸುಷ್ಮಾ ಹೈಡ್ರೋಫೋನಿಕ್ ತಂತ್ರಜ್ಞಾನ ಬಳಸಿ ಮೇವು ಉತ್ಪಾದಿಸುವ ಬಗ್ಗೆ ವಿವರಿಸಿದರು.
ಮಳ್ಳೂರು ಪಶು ಆಸ್ಪತ್ರೆಯ ವೈದ್ಯ ಡಾ.ಗಂಗಾಧರ್, ನೀರಾವರಿ ಹೋರಾಟ ಸಮಿತಿ ಉಪಾಧ್ಯಕ್ಷ ಮಳ್ಳೂರು ಹರೀಶ್, ಡಾ.ಈಶ್ವರಯ್ಯ, ಡಾ.ಅರುಣ್ಕುಮಾರ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಶ್ರೀಧರ್, ಮಂಜುನಾಥಬಾಬು, ಮುನಿಕೃಷ್ಣಪ್ಪ, ದೇವರಾಜ್, ಅಮರ್, ಪ್ರಕಾಶ್, ಕೇಶವಮೂರ್ತಿ, ಕೆಂಪೇಗೌಡ, ಬೈರೇಗೌಡ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ದೇವರ ದಾಸಿಮಯ್ಯ ಜಯಂತ್ಯುತ್ಸವ
ಮಹಾನ್ ವ್ಯಕ್ತಿಗಳ ಆಚರಣೆಗಳು ಕೇವಲ ಸಾಂಪ್ರದಾಯಿಕವಾಗಿರದೇ ಅವರ ತತ್ವ ಆದರ್ಶ ಮತ್ತು ಜೀವನ ಶೈಲಿಗಳನ್ನು ಅಳವಡಿಸಿಕೊಂಡು ಪಾಲಿಸುವ ಜೊತೆಗೆ ಇತರರಿಗೂ ಅಳವಡಿಸಿಕೊಳ್ಳುವಲ್ಲಿ ನೆರವಾದರೆ ಮಾತ್ರ ಆಚರಣೆಗಳಿಗೊಂದು ಅರ್ಥ ಬರುತ್ತದೆ ಎಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ನಾಡಹಬ್ಬಗಳ ಆಚರಣಾ ಸಮಿತಿ ಬುಧವಾರ ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಪ್ರಥಮ ಬಾರಿಗೆ ಸರ್ಕಾರದ ವತಿಯಿಂದ ಜಯಂತಿ ಆಚರಣೆಗೆ ಅವಕಾಶ ಕಲ್ಪಿಸಿದ್ದು ತಾಲ್ಲೂಕು ಆಡಳಿತದಿಂದ ನಡೆಸಲು ಹೆಮ್ಮೆಯಾಗಿದೆ ಎಂದರು.
ನೇಕಾರ ವೃತ್ತಿ ಹೊಂದಿರುವ ದೇವಾಂಗ ಸಮಾಜ ಬಾಂಧವರಲ್ಲಿ ದಾಸಿಮಯ್ಯನವರ ಕುರಿತಂತೆ ಜಾಗೃತಿ ಮೂಡಿಸಬೇಕು. ಬಸವಣ್ಣನವರಿಗಿಂತಲೂ ಹಿಂದೆಯೇ ನೇಕಾರ ವೃತ್ತಿಯ ಜೊತೆಯಲ್ಲಿ ವಚನಗಳನ್ನು ಬರೆಯುವ ಮೂಲಕ ವೃತ್ತಿಯಲ್ಲಿ ಭಕ್ತಿಯ ಪ್ರಾಮುಖ್ಯತೆ ತೋರಿಸಿಕೊಟ್ಟ ಮಹಾನ್ ಚೈತನ್ಯವನ್ನು ರಾಜ್ಯಾದ್ಯಂತ ನೆನಪು ಮಾಡಿಕೊಳ್ಳಲು ಸಿಕ್ಕ ಅವಕಾಶದಲ್ಲಿ ಅವರ ವಚನಗಳನ್ನು ಎಲ್ಲರಿಗೂ ತಿಳಿಸಬೇಕು ಎಂದು ಹೇಳಿದರು.
ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಕಾರ್ಯಾಧ್ಯಕ್ಷ ಬಿ.ಜೆ.ಗಣೇಶ್, ಪ್ರಧಾನ ಕಾರ್ಯದರ್ಶಿ ಎಸ್.ಕೆ.ನಾಗರಾಜ್, ಸಿ.ಡಿ.ಪಿ.ಒ ಅಧಿಕಾರಿ ಲಕ್ಷ್ಮೀದೇವಮ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಆನ್ ದಿ ವಿಂಗ್ಸ್ ಆಫ್ ದಿ ಪೀಸ್ಫುಲ್ ಡ್ರಾಗನ್ ಈಗ ಓದುಗರಿಗೆ ಲಭ್ಯ
ಹವ್ಯಾಸಿ ಛಾಯಾಚಿತ್ರಕಾರ ಹಾಗೂ ಲೇಖಕರಾದ ಶಿಡ್ಲಘಟ್ಟದ ಡಿ ಜಿ ಮಲ್ಲಿಕಾರ್ಜುನ ರವರು ರಚಿಸಿ ಸೌಮ್ಯ ರವರು ಇಂಗ್ಲೀಷ್ ಭಾಷೆಗೆ ಅನುವಾದಿಸಿರುವ ಭೂತಾನ್ ದೇಶದ ಪ್ರವಾಸಿ ಕಥನ “ಭೂತಾನ್ – ಆನ್ ದಿ ವಿಂಗ್ಸ್ ಆಫ್ ದಿ ಪೀಸ್ಫುಲ್ ಡ್ರಾಗನ್” ಈಗ ಓದುಗರಿಗೆ ಲಭ್ಯವಿದ್ದು, ನಿಮ್ಮ ವಿವರವನ್ನು Hi@sidlaghatta.comಗೆ ಈಮೈಲ್ ಅಥವಾ +919986904424 ಕರೆ ಮಾಡಿ ನಿಮ್ಮ ಪ್ರತಿಯನ್ನು ಕಾಯ್ದಿರಿಸಬಹುದು. ಬೆಲೆ ರೂ. 250.
About the Book:
On the Wings of the Peaceful Dragon is a collection of photographs, capturing the spirit of Bhutan through the eyes of a traveler. With running narration by the author, recounting anecdotes and his experience, the book effortlessly takes the reader along the journey.
http://www.indianembassythimphu.bt/gallery.php?album=43
ಸಹಾಯಧನದ ಚೆಕ್ ವಿತರಣೆ
ಕುರಿ, ವಾಹನ, ರೇಷ್ಮೆ ಉದ್ದಿಮೆ ಮುಂತಾದವುಗಳಿಗೆ ಬಳಸಿಕೊಳ್ಳಲು ಸಹಾಯಧನದ ಚೆಕ್ಕನ್ನು ಶಾಸಕ ಎಂ.ರಾಜಣ್ಣ ಬುಧವಾರ ಫಲಾನುಭವಿಗಳಿಗೆ ವಿತರಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಯಂ ಉದ್ಯೋಗ ಮತ್ತು ಐಎಸ್ಬಿ ಯೋಜನೆಯಲ್ಲಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ ಒಂಬತ್ತು ಮಂದಿ ಫಲಾನುಭವಿಗಳಿಗೆ ಒಟ್ಟು ನಾಲ್ಕು ಲಕ್ಷ ಎಂಬತ್ತು ಸಾವಿರ ರೂಪಾಯಿಗಳ ಚೆಕ್ಕನ್ನು ವಿತರಿಸಿದರು.
ಎಂಟು ಮಂದಿ ಫಲಾನುಭವಿಗಳಿಗೆ ಕುರಿ ಸಾಕಾಣಿಕೆ ಮತ್ತು ರೇಷ್ಮೆ ತಯಾರಿಕೆಗಾಗಿ ತಲಾ 35 ಸಾವಿರ ರೂಪಾಯಿಗಳ ಚೆಕ್ಕನ್ನು ನೀಡಿದರೆ, ಟಾಟಾ ಏಸ್ ವಾಹನ ಖರೀದಿಗೆ ಒಬ್ಬ ಫಲಾನುಭವಿಗೆ 2 ಲಕ್ಷ ರೂಪಾಯಿಗಳ ಚೆಕ್ ನೀಡಲಾಯಿತು.
‘ಸಾಲವನ್ನು ಸಕಾಲದಲ್ಲಿ ಮರುಪಾವತಿಸಿ, ಮತ್ತಷ್ಟು ಹೆಚ್ಚಿನ ಸಾಲವನ್ನು ಪಡೆಯಬಹುದು. ಯಾವುದೇ ಯೋಜನೆಯು ಯಶಸ್ವಿಯಾಗಲು ಸಾಲದ ಮರುಪಾವತಿ ಅತ್ಯಗತ್ಯ. ಸ್ತ್ರೀ ಶಕ್ತಿ ಸಂಘಗಳಿಗೂ ಈ ಸಾಲದ ಸೌಲಭ್ಯವಿದ್ದು, ಸದ್ಭಳಕೆ ಮಾಡಿಕೊಳ್ಳಬೇಕು’ ಎಂದು ಶಾಸಕ ಎಂ.ರಾಜಣ್ಣ ಈ ಸಂದರ್ಭದಲ್ಲಿ ತಿಳಿಸಿದರು.
ಶಾಸಕ ಎಂ.ರಾಜಣ್ಣ, ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಪ್ರಭಾಕರ್, ದ್ಯಾವಪ್ಪ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಆರ್.ಸುರೇಶ್, ತಾಲ್ಲೂಕು ಅಭಿವೃದ್ಧಿ ಅಧಿಕಾರಿ ಮರಿಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಪಡಿತರ ಆಹಾರಧಾನ್ಯಗಳನ್ನು ಪಡೆದುಕೊಳ್ಳಲು ಆಧಾರ ಕಾರ್ಡ್ ಖಡ್ಡಾಯವಿಲ್ಲ
ಪಡಿತರ ಆಹಾರಧಾನ್ಯಗಳನ್ನು ಪಡೆದುಕೊಳ್ಳಬೇಕಾದರೆ ಆಧಾರ್ಕಾರ್ಡ್ ಖಡ್ಡಾಯವಿಲ್ಲ, ಎಫಿಕ್ ಕಾರ್ಡ್ ಖಡ್ಡಾಯವೆಂದು ಆಹಾರ ಮತ್ತು ನಾಗರೀಕರ ಸರಬರಾಜು ಇಲಾಖೆಯ ಆಯುಕ್ತ ಪುಟ್ಟಣ್ಣಶೆಟ್ಟಿ ಹೇಳಿದ್ದಾರೆ.
ನಗರದ ತಾಲ್ಲೂಕು ಪಂಚಾಯತಿ ಕಾರ್ಯಾಲಯದಲ್ಲಿ ಮಂಗಳವಾರ ಉಪಗ್ರಹಾಧಾರಿತ ಸಂವಾದ ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಮತ್ತು ಗ್ರಾಮ ಪಂಚಾಯತಿಗಳ ಕಂಪ್ಯೂಟರ್ ಆಪರೇಟರ್ಗಳು ಮತ್ತು ನ್ಯಾಯಬೆಲೆ ಅಂಗಡಿಗಳ ಮಾಲೀಕರುಗಳಿಗೆ ಆಯೋಜನೆ ಮಾಡಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೇ ತಿಂಗಳಿನಿಂದ ಬಿ.ಪಿ.ಎಲ್.ಕುಟುಂಬಗಳಿಗೆ ಒಂದು ಯೂನಿಟ್ಗೆ ೫ ಕೆ.ಜಿ.ಅಕ್ಕಿಯಂತೆ ಉಚಿತವಾಗಿ ನೀಡಲಾಗುತ್ತದೆ, ಸಕ್ಕರೆ ಹಾಗೂ ತಾಳೇ ಎಣ್ಣೆಯನ್ನು, ಶುದ್ದ ಉಪ್ಪನ್ನು ನೀಡಲಾಗುತ್ತದೆ. ಗ್ರಾಹಕರು ಎಣ್ಣೆ, ಉಪ್ಪು ಮತ್ತು ಸಕ್ಕರೆಗೆ ಹಣವನ್ನು ಪಾವತಿ ಮಾಡಬೇಕಾಗುತ್ತದೆ. ಎ.ಪಿ.ಎಲ್.ಕಾರ್ಡುದಾರರಿಗೂ ಕೂಡಾ ಅಕ್ಕಿಯನ್ನು ನೀಡಲಿದ್ದು, ಒಂದು ಯೂನಿಟ್ಗೆ ೫ ಕೆ.ಜಿ. ಅಕ್ಕಿ, ಪ್ರತಿ ಕೆ.ಜಿ.ಗೆ ೧೫ ರೂಪಾಯಿಗಳು. ಎರಡು ಯೂನಿಟ್ಗಿಂತ ಹೆಚ್ಚಾಗಿದ್ದರೆ ೧೦ ರೂಪಾಯಿಗಳ ದರದಲ್ಲಿ ಅಕ್ಕಿಯನ್ನು ವಿತರಣೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಇಲಾಖೆಯ ಅಧಿಕಾರಿಗಳು ಖಡ್ಡಾಯವಾಗಿ ಗ್ರಾಹಕರಿಂದ ಎಫಿಕ್ ಕಾರ್ಡುಗಳನ್ನು ಪಡೆದುಕೊಳ್ಳಬೇಕು, ಆಧಾರ್ಕಾರ್ಡ್ ಖಡ್ಡಾಯವಿಲ್ಲ. ಮುಂದಿನ ತಿಂಗಳಿನಿಂದ ಪಡಿತರ ಆಹಾರಧಾನ್ಯಗಳನ್ನು ಪಡೆಯಬೇಕಾದರೆ ಮತದಾರರ ಗುರುತಿನ ಚೀಟಿಯನ್ನು ನೀಡುವುದು ಖಡ್ಡಾಯವಾಗಿದ್ದು, ಆಧಾರ್ಕಾರ್ಡ್ ಕೊಡುವವರಿಂದ ಪಡೆದುಕೊಳ್ಳಿ ಎಂದರು.
ಗ್ರಾಮ ಪಂಚಾಯತಿಗಳಲ್ಲಿ ಆಧಾರ್ಕಾರ್ಡ್ ಇಲ್ಲದಿದ್ದರೂ ಕೂಡಾ ಖಡ್ಡಾಯವಾಗಿ ಎಫಿಕ್ ಕಾರ್ಡ್ನ್ನು ಎಸ್.ಎಂ.ಎಸ್. ಮಾಡಬೇಕು ಎಂದು ಗ್ರಾಮ ಪಂಚಾಯತಿಗಳ ಕಂಪ್ಯೂಟರ್ ಆಪರೇಟರ್ಗಳಿಗೆ ಸೂಚಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉನಿರ್ದೇಶಕ ಶ್ರೀನಿವಾಸಯ್ಯ, ತಾಲ್ಲೂಕಿನ ಶಿರಸ್ತೆದಾರ್ ಸಿ.ಪರಶಿವಮೂರ್ತಿ, ಆಹಾರ ನಿರೀಕ್ಷಕ ಮೂಗಣ್ಣ, ದ್ವೀತಿಯ ದರ್ಜೆ ಸಹಾಯಕ ಪ್ರಕಾಶ್ ಮುಂತಾದವರು ಹಾಜರಿದ್ದರು.
ನಿದ್ದೆ ಇರಲಿ ನೆಮ್ಮದಿಗೆ
1. ನಿಮಗೆಲ್ಲಾ ಪ್ರತಿದಿನ 8/9 ಗಂಟೆಗಳ ನಿದ್ರೆಯು ಅಗತ್ಯವಿದೆ.
2. ಒಳ್ಳೆಯ ನಿದ್ರೆಯಿಂದ ಆರೋಗ್ಯ ರಕ್ಷಣೆಯಾಗುತ್ತದೆ. ಶರೀರ ಮನಸ್ಸಿಗೆ ವಿಶ್ರಾಂತಿ ದೊರೆಯುತ್ತದೆ. ಗ್ರಹಿಸುವ ಶಕ್ತಿ ಹೆಚ್ಚುತ್ತದೆ. ನಾವು ಓದಿದ ವಿಷಯಗಳು ಚೆನ್ನಾಗಿ ನೆನಪಿರುತ್ತದೆ.
3. ಮಲಗುವ ಸ್ಥಳ ಶುದ್ಧವಾಗಿರಬೇಕು. ಗಾಳಿ ಚೆನ್ನಾಗಿ ಬೀಸಬೇಕು.
4. ಮಲಗುವ ಹಾಸಿಗೆ ಸಮತಟ್ಟಾಗಿರಬೇಕು. ಹಾಸಿಗೆಯ ವಸ್ತ್ರಗಳು ಸ್ವಚ್ಚವಾಗಿರಬೇಕು.
5. ರಾತ್ರಿ ಮಲಗುವಾಗ ಎಡಮಗ್ಗುಲಲ್ಲಿ ಮಲಗಿ ಬಲಮಗ್ಗುಲಿನಿಂದ ಏಳುವ ಅಭ್ಯಾಸ ಒಳ್ಳೆಯದು.
6. ಅತಿ ಎತ್ತರದ ದಿಂಬು ಬಳಸುವುದು ಒಳ್ಳೆಯದಲ್ಲ. ತಿಳಿವರ್ಣದ ಹಾಸಿಗೆಯ ವಸ್ತ್ರಗಳನ್ನು ಬಳಸಬೇಕು.
7. ಮೇಲ್ಮುಖವಾಗಿ ಅಥವಾ ಮಗ್ಗುಲಲ್ಲಿ ಮಲಗುವ ಅಭ್ಯಾಸ ಒಳ್ಳೆಯದು. ಕೆಳಮುಖವಾಗಿ/ಹೊಟ್ಟೆಯ ಮೇಲೆ ಮಲಗುವ ಅಭ್ಯಾಸ ಒಳ್ಳೆಯದಲ್ಲ.
8. ರಾತ್ರಿ ಊಟವಾದ ತಕ್ಷಣ ಮಲಗುವುದು ಒಳ್ಳೆಯದಲ್ಲ. ಊಟ ಹಾಗೂ ಮಲಗುವ ಮಧ್ಯದಲ್ಲಿ 1 ಗಂಟೆಯ ಅಂತರವಿರಬೇಕು.
9. ಮಲಗುವ ಮೊದಲು ಮನಸ್ಸು ಶಾಂತವಾಗಿರಬೇಕು. ಮನಸ್ಸು ಗೊಂದಲ ಅಥವಾ ಒತ್ತಡದಲ್ಲಿದ್ದರೆ ಸುಖ ನಿದ್ದೆ ಬರುವುದಿಲ್ಲ.
10. ರಾತ್ರಿ ಹೆಚ್ಚಿನ ಪ್ರಮಾಣದ ಆಹಾರ ಸೇವನೆ ಒಳ್ಳೆಯದಲ್ಲ. ಕಡಿಮೆ ಪ್ರಮಾಣದ ಆಹಾರ ಸೇವನೆ ನಿದ್ದೆಗೆ ಅನುಕೂಲಕಾರಿ.
11. ಹಗಲು 15/20 ನಿಮಿಷಗಳ ವಿಶ್ರಾಂತಿ ತುಂಬಾ ಒಳ್ಳೆಯದು.
12. ಮಂದ ಬೆಳಕು, ತಿಳಿನೀಲಿ/ತಿಳಿ ಹಸಿರು ಬಣ್ಣ, ಸ್ವಲ್ಪ ಪ್ರಮಾಣದ ಸುಗಂಧ-ಇವೆಲ್ಲಾ ನಿದ್ದೆ ಚೆನ್ನಾಗಿ ಬರುವಂತೆ ಮಾಡುತ್ತವೆ.
13. ದೇವರ ಧ್ಯಾನ ಮಾಡಿಕೊಂಡು ಮಲಗುವುದು ಒಳ್ಳೆಯದು.
14. ತಲೆಗೆ ಎಣ್ಣೆಯನ್ನು ಹಚ್ಚಿಕೊಳ್ಳುವುದು, ಹಾಲನ್ನು ಕುಡಿಯುವುದು, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸುವುದು ಇವೆಲ್ಲಾ ನಿದ್ದೆಗೆ ಹಿತಕರವಾದ ವಿಷಯಗಳು
15. ಶಾಂತ ಮನಸ್ಸಿನಿಂದ, ದೇವರಧ್ಯಾನ ಮಾಡಿ ನಿಧಾನಗತಿಯ, ಸಾವಧಾನದ ಉಸಿರಾಟ ಮಾಡುತ್ತಾ ಮಲಗುವುದರಿಂದ ಯಾವುದೇ ರೀತಿಯ ಕೆಟ್ಟ ಕನಸುಗಳೂ ಬೀಳುವುದಿಲ್ಲ.
ಡಾ. ಶ್ರೀವತ್ಸ
ರೇಣುಕಾ ಎಲ್ಲಮ್ಮ ಹೂವಿನ ಕರಗ
ಪುರಾಣ ಪ್ರಸಿದ್ಧ ರೇಣುಕಾ ಎಲ್ಲಮ್ಮ ದೇವಿಯ ಹೂವಿನ ಕರಗಮಹೋತ್ಸವ ಸೋಮವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ವಿಜೃಂಭಣೆಯಿಂದ ನಡೆಸಲಾದ ಕರಗ ಮಹೋತ್ಸವದಲ್ಲಿ ಮುನಿಕೃಷ್ಣಪ್ಪ ಅವರು ಕರಗವನ್ನು ಹೊತ್ತಿದ್ದು, ಕರಗದ ಅಂಗವಾಗಿ ನಗರದ ಶ್ರೀರಾಮ ದೇವಸ್ಥಾನದ ಮುಂಭಾಗದಲಿ ಆರ್ಕೆಸ್ಟ್ರಾ ಮತ್ತು ವಿವಿಧ ಮನರಂಜನೆಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಕೋಟೆ ವೃತ್ತದಲ್ಲಿ ಭಕ್ತರಿಗೆಲ್ಲ ಅನ್ನಸಂತರ್ಪಣೆಯನ್ನು ನಡೆಸಿದರು.
ಕರಗದ ಸ್ವಾಗತಕ್ಕಾಗಿ ಪ್ರತಿ ಮನೆಯವರೂ ಮನೆ ಮುಂದೆ ಸಾರಿಸಿ ರಂಗೋಲಿಯನ್ನು ಹಾಕಿದ್ದರು. ಕರಗ ಬಂದಾಗ ಆರತಿ ಬೆಳಗಿ ಮಲ್ಲಿಗೆ ಹೂವನ್ನು ಅರ್ಪಿಸಿದರು. ಕರಗ ಮಹೋತ್ಸವವನ್ನು ನೋಡಲು ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ಕರಗದ ನರ್ತನಕ್ಕೆ ಚಪ್ಪಾಳೆ, ಶಿಳ್ಳೆಗಳ ಮುಖಾಂತರ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.
ರೇಣುಕಾ ಎಲ್ಲಮ್ಮ ದೇವಾಲಯದಿಂದ ಹೊರಟ ಕರಗ ನಗರದ ಓ.ಟಿ.ವೃತ್ತ, ಕೋಟೆ ವೃತ್ತಗಳು ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಪೂಜೆಗಳನ್ನು ಸ್ವೀಕರಿಸಿತು.
ಹಾಸ್ಟೆಲ್ ಮಕ್ಕಳಿಗೊಂದು ಪತ್ರ
ಮಗೂ,
ನಿನ್ನೆ ಮೊನ್ನೆಯಷ್ಟೇ ಅಂಬೆಗಾಲಿಕ್ಕುತ್ತಾ, ಏಳುತ್ತಾ ಬೀಳುತ್ತಾ ನಡೆದಾಡಿ, ತೊದಲು ನುಡಿಯಿಂದ ನಮ್ಮೆಲ್ಲರ ಕಣ್ಮನಗಳಿಗೆ ತಂಪೆರೆಯುತ್ತಿದ್ದ ನೀನು ಅದೆಷ್ಟು ಬೇಗ ನಮ್ಮೆತ್ತರಕ್ಕೆ ಬೆಳೆದು ನಿಂತಿದ್ದೀಯಾ. ತಂದೆ ತಾಯಿಯರ ಮನಸ್ಸಾದರೂ ಎಂತಹ ವಿಚಿತ್ರ ನೋಡಿ. ಮಗುವಿನ ಬಾಲಲೀಲೆಗಳನ್ನು ನೋಡುತ್ತಾ ಮೈಮರೆಯುವ ಅವರು, ಆ ಸಂತೋಷವನ್ನು ಅನುಭವಿಸಲು ಕಾಲ ನಿಂತು ಬಿಡಬಾರದೇ ಎಂದುಕೊಳ್ಳುತ್ತಾರೆ. ಜೊತೆಜೊತೆಗೆ ತಮ್ಮ ಮಗುವಿನ ಭವಿಷ್ಯವನ್ನು ರೂಪಿಸುವ ಮತ್ತು ಅದನ್ನು ತಮ್ಮ ಜೀವಿತಾವಧಿಯಲ್ಲೇ ಸವಿಯುವ ಕಾತರದಿಂದ ಸಮಯ ನಾಗಾಲೋಟದಲ್ಲಿ ಏಕೆ ಓಡುತ್ತಿಲ್ಲ ಎಂದೂ ಅವರು ಕೊರಗುತ್ತಾರೆ! ಆದರೆ ಕಾಲ ಇದಾವುದನ್ನೂ ಲೆಕ್ಕಿಸದೆ ತನ್ನದೇ ನಿಯಮಗಳಿಗನುಸಾರವಾಗಿ ಚಲಿಸುತ್ತದೆ.
ಇಂತಹ ಕಾಲದ ಒಂದು ನಿರ್ಣಾಯಕ ಘಟ್ಟದಲ್ಲಿ ನೀನಿದ್ದೀಯಾ ಮಗೂ. ನಿನ್ನ ವಿದ್ಯಾಭ್ಯಾಸದ ಅಗತ್ಯಗಳಿಗಾಗಿ ನೀನೀಗ ನಮ್ಮಿಂದ ದೂರ ಹೋಗಿ ಹಾಸ್ಟೆಲ್‍ನಲ್ಲಿ ವಸತಿ ಹೂಡಬೇಕಾಗಿದೆ. ಒಮ್ಮೆಲೆ ಇದು ನಿನ್ನ ಮೇಲೆ ಅನೇಕ ರೀತಿಯ ಒತ್ತಡಗಳನ್ನು ಹೇರುತ್ತದೆ. ನಿನ್ನ ವಿದ್ಯಾಭ್ಯಾಸ ನಿನ್ನ ಭವಿಷ್ಯದ ಜೀವನದ ಹಾದಿಯನ್ನು ನಿರ್ಧರಿಸುವ ತಿರುವಿನಲ್ಲಿದೆ. ಜೊತೆಗೆ ನಿನ್ನಲ್ಲಿ ಮೂಡುತ್ತಿರುವ ಹರೆಯ ನಿನ್ನನ್ನು ವಿವಿಧ ಕಾಮನೆ, ಸಾಹಸ, ಪ್ರಯೋಗಗಳಿಗೆ ಸೆಳೆಯುಲು ಹೊಂಚು ಹಾಕುತ್ತಿರುತ್ತದೆ. ಬರಿಯ ನಿನ್ನ ವೈಯುಕ್ತಿಕ ಬದುಕನ್ನಷ್ಟೇ ಅಲ್ಲ, ಇಡೀ ಜಗತ್ತನ್ನು ನೋಡುವ ನಿನ್ನ ದೃಷ್ಟಿಕೋನವೇ ಅಮೂಲಾಗ್ರವಾಗಿ ಬದಲಾಗುವ ಸಂಕ್ರಮಣ ಸಮಯವಿದು. ಇಂತಹ ಕಾಲದಲ್ಲಿ ಪೋಷಕರಿಂದ ದೂರವಿರುವ ಕೊರಗೂ ನಿನ್ನನ್ನು ಕಾಡಬಹುದು. ಅಥವಾ ಅಂತಹ ಸ್ವಾತಂತ್ರವನ್ನು ಸವಿಯುವ ಕಾತರದಲ್ಲೂ ನೀನಿರಬಹುದು! ಅದೇನೇ ಇದ್ದರೂ ನಮ್ಮ ಕಣ್ಣಳತೆಯಿಂದ ದೂರ ಹೋಗುತ್ತಿರುವ ನಿನಗೆ ನಮ್ಮ ಕೆಲವು ಅನಿಸಿಕೆಗಳನ್ನು ಹೇಳುವ ಸಮಯ ಒದಗಿ ಬಂದಿದೆ.
“ಇದೇನಪ್ಪಾ ಹೊಸದು ಇಷ್ಟು ದಿನ ಹೇಳದೇ ಇದ್ದದ್ದು” ಎಂದೋ ಅಥವಾ “ಈ ಅಪ್ಪ ಅಮ್ಮಂದು ಅದೇ ಹಳೇ ಗೋಳಿರಬೇಕು” ಎಂದೋ ಕಡೆಗಣಿಸಬೇಡ ಮಗೂ, ನಿನ್ನೆಲ್ಲಾ ಹರೆಯದ ತುಮುಲಗಳು ನಿನಗೆ ಮಾತ್ರ ವಿಶಿಷ್ಟವಾದದ್ದೆಂದು ನಿನಗನ್ನಿಸಿದರೂ, ನಾವೆಲ್ಲಾ ನಿನಗಿಂತ ಭಿನ್ನವಾದ ಕಾಲಘಟ್ಟದಲ್ಲಿ ಮತ್ತು ಬಹುಶಃ ಭಿನ್ನವಾದ ರೀತಿ ಅಥವಾ ತೀವ್ರತೆಗಳಲ್ಲಿ ಅವೆಲ್ಲವನ್ನೂ ಅನುಭವಿಸಿದ್ದೇವೆ. ಹಾಗಾಗಿ ನಿನ್ನ ಬಗೆಗಿನ ನಮ್ಮ ಕಾಳಜಿ ಮತ್ತು ನಮ್ಮ ಜೀವನಾನುಭವದ ಹಿನ್ನೆಲೆಯಲ್ಲಿ ನಮ್ಮ ಮಾತುಗಳಿಗೊಂದಿಷ್ಟು ಕಿವಿಯಗಲಿಸು. ನಂತರದ ನಿನ್ನೆಲ್ಲಾ ನಿರ್ಧಾರಗಳಿಗೆ, ಅವು ಕಾನೂನು ಬಾಹಿರ, ಅನೈತಿಕ ಅಥವಾ ಅನಾಗರಿಕವಾಗಿಲ್ಲದಿದ್ದಲ್ಲಿ, ನಮ್ಮ ಸಂಪೂರ್ಣ ಬೆಂಬೆಲವಿದೆಯೆಂದು ನಾನು ಆಶ್ವಾಸನೆ ಕೊಡುತ್ತೇನೆ.
ಮನೆಯಿಂದ ದೂರ ಹೋದ ಮೇಲೆ ಹಾಸ್ಟೆಲ್ ಮತ್ತು ಕಾಲೇಜಿನಲ್ಲಿ ನಿನ್ನ ಸುತ್ತೆಲ್ಲಾ ಹರೆಯದ ಹೊಳೆಯೇ ಹರಿಯುತ್ತಿರುತ್ತದೆ. ಇದು ನಿನ್ನಲ್ಲಿ ಚಿಗುರುತ್ತಿರುವ ಭಾವೀ ಜೀವನದ ಕನಸುಗಳಿಗೆ ಸೂಕ್ತ ವಾತಾವರಣ ಕೂಡ. ವಿಪರ್ಯಾಸವೆಂದರೆ, ನಿನ್ನ ಕನಸುಗಳಿಗೆ ಜೀವಜಲವಾಗಬೇಕಾದದ್ದು ನಿನ್ನನ್ನು ಕೊಚ್ಚಿಕೊಂಡು ಹೋಗಿ ದೂರದ ನಿರ್ಜನ ಪ್ರದೇಶದಲ್ಲಿ ಬೀಸಾಕಬಲ್ಲ ಪ್ರವಾಹವೂ ಆಗಬಲ್ಲದು. ಹಾಗಾಗಿ ಮೊದಲು ನಿನ್ನ ಜೀವನದ ದೂರಗಾಮೀ ಗುರಿಗಳನ್ನು ಸ್ಪಷ್ಟ ಪಡಿಸಿಕೊ. ಅದನ್ನು ವಾರ್ಷಿಕ, ಮಾಸಿಕ ಮತ್ತು ದೈನಿಕ ಗುರಿಗಳಾಗಿ ವಿಘಟನೆಗೊಳಿಸು. ನಂತರ ಸಕಲ ಸಿದ್ಧತೆಯೊಂದಿಗೆ ಜೀವನ ಸಮುದ್ರಕ್ಕೆ ಹಾರಿಬಿಡು.
ನಿನ್ನ ದೂರಾಗಾಮಿ ಗುರಿ ಮಾತ್ರ ನಾವಿಕನಿಗೆ ದಿಕ್ಸೂಚಿಯಾಗಿರುವ ಲೈಟ್ ಹೌಸ್‍ನಂತೆ ಯಾವಾಗಲೂ ನಿನ್ನ ಕಣ್ಣಳತೆಯಲ್ಲೇ ಇರಲಿ. ಆಗ ನಿನ್ನ ಹಾದಿಯಲ್ಲಿ ಬರುವ ಹರೆಯದ ಸಂಪೂರ್ಣ ಮಸ್ತಿಯನ್ನು ಅನುಭವಿಸು. ಲೈಟ್ ಹೌಸ್ ಕಣ್ಮರೆಯಾದೊಡನೆ ತಕ್ಷಣ ಎಚ್ಚೆತ್ತು ಅದನ್ನು ಅರಸಿದ ನಂತರ ಮಾತ್ರ ಮುಂದುವರೆ.
ಮಾನವನ ಲೈಂಗಿಕತೆಯ ಮೂಲಪಾಠಗಳನ್ನು ನಿನಗೀಗಾಲೇ ತಿಳಿಹೇಳಿದ್ದೇವೆ. ನಾನು ಇಲ್ಲಿಯವರೆಗೆ ಹೇಳಿರುವುದೆಲ್ಲಾ ಬರಿಯ ಥಿಯರಿ ಮಾತ್ರ! ಎಲ್ಲಾ ವಿಷಯಗಳಲ್ಲೂ ಥಿಯರಿಯಲ್ಲಿ ಕಲಿತಿದ್ದನ್ನು ಸದಾ ಕಾಲ ಉಳಿಯಬಲ್ಲಂತೆ ಮೆದುಳಿನಲ್ಲಿ ದಾಖಲಿಸಿಕೊಳ್ಳಲು ಪ್ರಾಕ್ಟಿಕಲ್‍ಗಳನ್ನು ಮಾಡಬೇಕು ಅಂತ ಕೂಡ ನಾನೇ ಹೇಳಿದ್ದೆ. ಹಾಗಾಗಿ ಸದ್ಯದ ನಿನ್ನ ಪರಿಸ್ಥಿತಿಗಳು ಇಂತಹ ಪ್ರಾಕ್ಟಿಕಲ್‍ಗಳಿಗೆ ಸರಿಯಾದ ಸಮಯ ಎಂದುಕೊಳ್ಳಬೇಡ! ನಿನ್ನ ಈಗಿನ ಗುರಿ ಅದಲ್ಲ ಎನ್ನುವುದನ್ನು ಮರೆಯದೆ ಭವಿಷ್ಯತ್ತಿಗೆ ನಿನ್ನ ಪ್ರಯೋಗಗಳನ್ನು ಮುಂದೂಡು! ಜೀವನದ ಮೊದಲ ಇಪ್ಪತ್ತೈದು ವರ್ಷಗಳನ್ನು ಉದ್ದೇಶರಹಿತವಾಗಿ ಕಳೆದರೆ ನಂತರದ ಬದುಕು ಮೂರಾಬಟ್ಟೆಯಾಗುವ ಸಾಧ್ಯತೆಗಳೇ ಹೆಚ್ಚು. ಇದಕ್ಕೆ ನಮ್ಮ ಸುತ್ತಲೂ ಸಾಕಷ್ಟು ಉದಾಹರಣೆಗಳಿವೆ.
ಲೈಂಗಿಕ ಸಾಹಸಗಳಿಂದ ತಪ್ಪಿಸಿಕೊಂಡರೂ, ಪ್ರೀತಿ ಪ್ರೇಮಗಳ ಬಲೆಗೆ ಬೀಳದೆ ಉಳಿಯುವುದು ಸುಲಭವಲ್ಲ. ನಮ್ಮ ಸಿನಿಮಾ, ಟೀವಿ ಧಾರಾವಾಹಿಗಳನ್ನು ಮಾದರಿಯಾಗಿಸಿಕೊಂಡು ಸಾಕಷ್ಟು ವಿದ್ಯಾರ್ಥಿಗಳು ಇದನ್ನು ಅನಿವಾರ್ಯವಾಗಿಸಿಕೊಂಡಿದ್ದಾರೆ. ನಾವೇನು ಈ ಲವ್ವು ಗಿವ್ವುಗಳನ್ನು ಢೋಂಗಿ ಎಂದು ಹೇಳುತ್ತಿಲ್ಲ. ಅದೂ ಅಲ್ಲದೆ ನಮಗೆ ಜಾತಿ ಧರ್ಮಗಳ ಬಂಧನವೂ ಇಲ್ಲವೆಂದು ನಿನಗೂ ಗೊತ್ತಿದೆ. ಹಾಗಿದ್ದರೂ ನಾವು ಸೂಚಿಸುತ್ತಿರುವುದು ಸದ್ಯದ ನಿನ್ನ ಗುರಿಗಳಿಗೆ ಈ ರೀತಿಯ ಭಾವನಾತ್ಮಕ ಎಳೆತಗಳು ಪೂರಕವಾಗಲಾರವು, ಬದಲಾಗಿ ಕಂಟಕಗಳೇ ಆಗಬಹುದು, ಎನ್ನುವುದು ಮಾತ್ರ. ಪ್ರೀತಿ ಪ್ರೇಮವೆಲ್ಲಾ ಗೊತ್ತಿಲ್ಲದೆ ಆಗಿಬಿಡುತ್ತದೆ ಎನ್ನುವ ಮಾತುಗಳಿಂದ ಕೂಡ ಮೋಸ ಹೋಗಬೇಡ. ಇವೆಲ್ಲಾ ಷೋಡಷ ಮನಸ್ಸುಗಳನ್ನು ಮರುಳು ಮಾಡಿ ಹಣ ಮಾಡುವ ಸಿನಿಮಾದವರ ಹುನ್ನಾರು ಮಾತ್ರ! ನಿನ್ನ ಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯ ಬಂದಾಗ ನಿನ್ನ ಭಾವನಾತ್ಮಕ ಅಗತ್ಯಗಳನ್ನು ಸರಿತೂಗಿಸಬಲ್ಲ ಸಂಗಾತಿಯನ್ನು ಹುಡುಕಿಕೊಳ್ಳಲು ನಿನಗೆ ಸಂಪೂರ್ಣ ಸ್ವಾತಂತ್ರವಿರುತ್ತದೆ.
ತಕ್ಷಣದ ಥ್ರಿಲ್‍ಗಳನ್ನು, ಅದೂ ಪದೇಪದೇ ಹೊಸ ಹೊಸ ರೀತಿಯ ರೋಮಾಂಚನಗಳನ್ನು ಅರಸುವುದು ಇಂದಿನ ಜೀವನಶೈಲಿಯೇ ಆಗಿಬಿಟ್ಟಿದೆ. ಇದರ ಬಗೆಗೆ ಎಚ್ಚರ ವಹಿಸದಿದ್ದರೆ ನಶೆಯ ವಸ್ತುಗಳತ್ತ ಸೆಳೆಯಲ್ಪಡುವ ಸಾಧ್ಯತೆಗಳು ಹೆಚ್ಚು. “ಒಮ್ಮೆ ಮಾತ್ರ” ಎನ್ನುವ ಯಾವುದೇ ಆಮಿಷಗಳಿಗೆ, “ಏ ಗಂಡಸಲ್ವೇನೋ, ಇದಕ್ಕೆಲ್ಲಾ ಹೆದರ್ತಾರಾ; ನಿನ್ಹತ್ರ ಏನೂ ಮಾಡೋಕೆ ಆಗಲ್ಲ, ಗಾಂಧೀ ನೀನು” ಎನ್ನುವ ಯಾವುದೇ ಸವಾಲುಗಳಿಗೆ ಮರುಳಾಗಬೇಡ. ನಶೆಯ ವಸ್ತುಗಳು ಉಸುಬಿನ ನೆಲವಿದ್ದಂತೆ, ನಿನಗೆ ಗೊತ್ತಿಲ್ಲದಂತೇ ನಿನ್ನನ್ನು ತನ್ನಲ್ಲಿ ಸಿಲುಕಿಸಿ ಸರ್ವನಾಶದತ್ತ ಕೊಂಡೊಯ್ಯುತ್ತದೆ.
ಸದ್ಯಕ್ಕೆ ನಮ್ಮ ಕಾಳಜಿಗಳು ಇಷ್ಟೇ ಮಗೂ, ನಿನ್ನ ದೂರಗಾಮೀ ಗುರಿಗಳತ್ತ ಮಾತ್ರ ಗಮನವಿಟ್ಟುಕೊ; ತಾತ್ಕಾಲಿಕ ಸೋಲುಗಳಿಂದ ಕಳೆಗುಂದಬೇಡ; ಸಣ್ಣ ಪುಟ್ಟ ಗೆಲುವುಗಳನ್ನು ಆನಂದಿಸು, ಆದರೆ ಅವುಗಳಿಂದ ಮೈಮರೆಯಬೇಡ; ಉತ್ತಮ ದೈಹಿಕ ಆರೋಗ್ಯವನ್ನಿಟ್ಟುಕೊ; ಮಾನಸಿಕ ಸಮತೋಲನವನ್ನು ಕಾಪಾಡಿಕೊ. ಯಾವುದೇ ಆತುರದ ನಿರ್ಧಾರಗಳನ್ನು ಕೈಕೊಳ್ಳಬೇಡ. ನಿನ್ನ ಮೇಲಿನ ನಮ್ಮ ಪ್ರೀತಿ ಷರತ್ತುರಹಿತವಾಗಿರುತ್ತದೆ; ನಿನ್ನ ಮನಃಪೂರ್ವಕ ಪ್ರಯತ್ನಗಳ ಯಾವುದೇ ಫಲಿತಾಂಶವೂ ನಮಗೆ ಸಂಪೂರ್ಣ ಒಪ್ಪಿಗೆ; ನಿನ್ನ ಕಷ್ಟ ಸುಖಗಳಲ್ಲೆಲ್ಲಾ ನಾವು ಸಂಪೂರ್ಣ ಪಾಲುದಾರರು ಎನ್ನುವ ಭರವಸೆಯನ್ನು ಮಾತ್ರ ನಾವು ಕೊಡಬಲ್ಲೆವು.
ಪ್ರೀತಿಯೊಂದಿಗೆ,
ನಿನ್ನ ಅಪ್ಪ ಅಮ್ಮ
ನಡಹಳ್ಳಿ ವಸಂತ್

