ನಗರದಲ್ಲಿ ಶುಕ್ರವಾರ ತಾಲ್ಲೂಕಿನ ಕಾಳನಾಯಕನಹಳ್ಳಿಯ ರತ್ನಾವಳಿ ನಾಟ್ಯ ಕ್ರೀಡಾ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ಸದಸ್ಯರು ಆರ್ಥಿಕ ಶಿಕ್ಷಣ ಜಾಗೃತಿ ಮೂಡಿಸುವ ಬೀದಿ ನಾಟಕವನ್ನು ಪ್ರದರ್ಶಿಸಿದರು.
ತಾಲ್ಲೂಕಿನ ದಿಬ್ಬೂರಹಳ್ಳಿ, ಸಾದಲಿ ಮತ್ತು ಅಬ್ಲೂಡು ಗ್ರಾಮಗಳಲ್ಲಿ ‘ಬ್ಯಾಂಕ್ ಖಾತೆ ಇದ್ದೋನೆ ಬಾಸು, ಖಾತೆ ಇಲ್ದಿದ್ರೆ ಆಗೋದೆ ಲಾಸು’ ಎಂಬ ಬೀದಿ ನಾಟಕವನ್ನು ಪ್ರದರ್ಶಿಸಿ, ನಗರದ ತಾಲ್ಲೂಕು ಕಚೇರಿಯ ಮುಂದೆಯೂ ಪ್ರದರ್ಶಿಸಿದರು.
‘ಸಾರ್ವಜನಿಕರು ಬ್ಯಾಂಕಿನ ಮೂಲಕ ವ್ಯವಹಾರ ಮಾಡುವುದರಿಂದ ಆಗುವ ಅನುಕೂಲಗಳು ಹಾಗೂ ಬ್ಯಾಂಕಿನ ಸೇವೆಯಿಂದ ವಂಚಿತರಾಗಿರುವ ಗ್ರಾಮೀಣರಿಗೆ ಈ ಬೀದಿ ನಾಟಕದ ಮೂಲಕ ಅರಿವು ಮೂಡಿಸುವುದು ನಮ್ಮ ಉದ್ದೇಶವಾಗಿದೆ’ ಎಂದು ರತ್ನಾವಳಿ ನಾಟ್ಯ ಕ್ರೀಡಾ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆಯ ಕೆ.ಎ.ರಾಜಪ್ಪ ತಿಳಿಸಿದರು.
ಬೀದಿ ನಾಟಕದಲ್ಲಿ ಕೆ.ಎ.ರಾಜಪ್ಪ, ಎಂ.ಸಿ.ಜ್ಯೋತಿ, ಆರ್.ಮುನಿಸ್ವಾಮಿ, ಎ.ಪ್ರಭಾವತಿ, ಎನ್.ವೆಂಕಟರಾಜಮ್ಮ, ಆರ್.ದೀಪ, ವಿ.ಚಿಕ್ಕರೆಡ್ಡಪ್ಪ, ಎಂ.ವಿ.ಗೋವಿಂದರಾಜು ಅಭಿನಯಿಸಿದರು.
ಬೀದಿ ನಾಟಕದ ಮೂಲಕ ಆರ್ಥಿಕ ಶಿಕ್ಷಣ ಜಾಗೃತಿ
ಬಿಲ್ ಕಲೆಕ್ಟರ್ ಹುದ್ದೆಯ ಆಯ್ಕೆಯಲ್ಲಿ ರಾಜಕೀಯ; ಅಭ್ಯರ್ಥಿಗಳಿಂದ ಪ್ರತಿಭಟನೆ
ತಾಲ್ಲೂಕಿನ ಹೊಸಪೇಟೆ ಗ್ರಾಮದಲ್ಲಿ ಪಂಚಾಯತಿ ಕಚೇರಿಯ ಮುಂದೆ ಶುಕ್ರವಾರ ಬಿಲ್ ಕಲೆಕ್ಟರ್ ಹುದ್ದೆಯ ಆಯ್ಕೆ ಪ್ರಕ್ರಿಯೆಯಲ್ಲಿ ನಿಬಂಧನೆಗಳನ್ನು ಮುರಿದು, ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹುದ್ದೆಗೆ ಅರ್ಜಿ ಸಲ್ಲಿಸಿದ್ದ 25 ಅಭ್ಯರ್ಥಿಗಳು ಪ್ರತಿಭಟಿಸಿದರು.
ಪತ್ರಿಕೆಗಳಲ್ಲಿ ಬಿಲ್ ಕಲೆಕ್ಟರ್ ಹುದ್ದೆಗಾಗಿ ಅರ್ಜಿಯನ್ನು ಕೋರಿದ್ದರಿಂದ ಸುಮಾರು 25 ಮಂದಿ ಅರ್ಜಿಯೊಂದಿಗೆ ನೂರು ರೂಪಾಯಿ ಹಣವನ್ನು ನೀಡಿ ಸಲ್ಲಿಸಿದ್ದರು. ಆದರೆ ಒಂಭತ್ತು ಮಂದಿ ಗ್ರಾಮ ಪಂಚಾಯತಿ ಸದಸ್ಯರು ಏಕಪಕ್ಷೀಯವಾಗಿ ನಿರ್ಣಯವನ್ನು ಕೈಗೊಂಡು ಆಯ್ಕೆ ಪ್ರಕ್ರಿಯೆಯ ನಿಬಂಧನೆ, ಶರತ್ತು ಹಾಗೂ ಕಾನೂನನ್ನು ಉಲ್ಲಂಘಿಸಿ ತಮಗೆ ಬೇಕಾದವರನ್ನು ಆಯ್ಕೆ ಮಾಡಿದ್ದಾರೆ. ಹೆಚ್ಚು ವಿದ್ಯಾರ್ಹತೆಯಿರುವ ಅಭ್ಯರ್ಥಿಗಳನ್ನು ಪರಿಗಣಿಸದೇ, ಆಯ್ಕೆ, ಸಂದರ್ಶನ ಮುಂತಾದ ಯಾವುದೇ ಪ್ರಕ್ರಿಯೆ ನಡೆಸಿಲ್ಲ. ನ್ಯಾಯ ಸಿಗುವವರೆಗೂ ಪ್ರತಿಭಟನೆ ನಡೆಸುತ್ತೇವೆ. ಜಿಲ್ಲಾಧಿಕಾರಿಗಳಿಗೂ ದೂರು ಸಲ್ಲಿಸುತ್ತೇವೆ ಎಂದು ಯಣ್ಣಂಗೂರು ನಾಗರಾಜಪ್ಪ ತಿಳಿಸಿದರು.
‘ಬಿಲ್ ಕಲೆಕ್ಟರ್ ಹುದ್ದೆಗೆ ಆಯ್ಕೆಯನ್ನು ರಾಜಕೀಯ ಪೂರಿತವಾಗಿ ನಡೆಸಿದ್ದಾರೆ. ಒಂಭತ್ತು ಒಂಭತ್ತು ಮಂದಿ ಗ್ರಾಮ ಪಂಚಾಯತಿ ಸದಸ್ಯರು ಬಹುಮತವಿದೆಯೆಂದು ತಾವೇ ನಿರ್ಣಯ ಕೈಗೊಂಡು ಆಯ್ಕೆ ನಡೆಸಿರುವುದು ಸರಿಯಲ್ಲ. ಸರ್ಕಾರಿ ನಿಬಂಧನೆಗಳನ್ನು ಗಾಳಿಗೆ ತೂರಲಾಗಿದೆ. ಅಧ್ಯಕ್ಷರ ಗ್ರಾಮದ ವ್ಯಕ್ತಿಯನ್ನೇ ಏಕ ಪಕ್ಷೀಯವಾಗಿ ಆಯ್ಕೆ ಮಾಡಿರುವುದನ್ನು ರದ್ದುಗೊಳಿಸಬೇಕು. ಈ ಬಗ್ಗೆ ಹಿರಿಯ ಅಧಿಕಾರಿಗಳು ಕ್ರಮ ಕೈಗೊಂಡು ಅರ್ಹ ಅಭ್ಯರ್ಥಿಗೆ ನ್ಯಾಯ ಒದಗಿಸಬೇಕು’ ಎಂದು ಗ್ರಾಮ ಪಂಚಾಯತಿ ಸದಸ್ಯ ಲಕ್ಷ್ಮಣಮೂರ್ತಿ ತಿಳಿಸಿದರು.
ಹಿರೇಬಲ್ಲ ಗ್ರಾಮದಲ್ಲಿ ರಸಗೊಬ್ಬರಗಳ ಮಳಿಗೆ, ನ್ಯಾಯಬೆಲೆ ಅಂಗಡಿ ಮತ್ತು ಶುದ್ಧ ಕುಡಿಯುವ ಘಟಕ
ಕಲ್ಮಶ ನೀರಿನಿಂದಾಗಿ ಸಾಕಷ್ಟು ಖಾಯಿಲೆಗಳು ಬರುತ್ತಿದ್ದು, ಪ್ರತಿಯೊಂದು ಗ್ರಾಮದಲ್ಲೂ ನೀರಿ ಶುದ್ಧೀಕರಣ ಘಟಕದ ಅಗತ್ಯವಿದೆ ಎಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಹಿರೇಬಲ್ಲ ಗ್ರಾಮದಲ್ಲಿ ಶುಕ್ರವಾರ ಜಂಗಮಕೋಟೆ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ವತಿಯಿಂದ ನಿರ್ಮಿಸಿರುವ ನೂತನ ಕಟ್ಟಡದಲ್ಲಿ ರಸಗೊಬ್ಬರಗಳ ಮಳಿಗೆ, ನ್ಯಾಯಬೆಲೆ ಅಂಗಡಿ ಮತ್ತು ಶುದ್ಧ ಕುಡಿಯುವ ಘಟಕವನ್ನು ಸಾರ್ವಜನಿಕರ ಸೇವೆಗೆ ಸಮರ್ಪಿಸಿ ಅವರು ಮಾತನಾಡಿದರು.
ಕಡಿಮೆ ಬೆಲೆಗೆ ಉತ್ಕೃಷ್ಟ ವಸ್ತುಗಳಿಗೆ ಗ್ರಾಮದ ಜನತೆಗೆ ಸಿಗಬೇಕು ಮತ್ತು ಶುದ್ಧ ಕುಡಿಯುವ ನೀರು ಕೂಡ ಕಡಿಮೆ ಬೆಲೆಗೆ ಸಿಗುವಂತೆ ಮಾಡಲು ಜಂಗಮಕೋಟೆ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದವರು ಆರೂವರೆ ಲಕ್ಷ ರೂಪಾಯಿಗಳನ್ನು ವ್ಯಯಿಸಿದ್ದಾರೆ. ಗ್ರಾಮಸ್ಥರು ಇದರ ಸದುಪಯೋಗಪಡಿಸಿಕೊಳ್ಳಬೇಕು. ಪಡಿತರ ಚೀಟಿಯ ಮೂಲಕ ದವಸ ಧಾನ್ಯ ಪಡೆಯಲು ಹಿಂದೆ ಬೇರೆ ಗ್ರಾಮಗಳಿಗೆ ಹೋಗಬೇಕಿತ್ತು. ಈಗ ಇಲ್ಲೇ ನ್ಯಾಯಬೆಲೆ ಅಂಗಡಿ ಆಗಿರುವುದರಿಂದ ಜನರಿಗೆ ಅನುಕೂಲಕರವಾಗಿದೆ. ರೈತರ ವ್ಯವಸಾಯಕ್ಕೆ ಬೇಕಾದ ರಸಗೊಬ್ಬರ ಮಳಿಗೆಯನ್ನು ಗ್ರಾಮದಲ್ಲೇ ಸ್ಥಾಪಿಸಿರುವುದರಿಂದ ಇನ್ನು ದೂರದಿಂದ ಸಾಗಿಸುವ ಹಾಗೂ ಹೆಚ್ಚು ಬೆಲೆ ತೆರುವ ಅಗತ್ಯವಿಲ್ಲ. ಸಂಘದ ಜನಹಿತ ಕಾರ್ಯಗಳಿಗೆ ಎಲ್ಲರೂ ಸಹಕರಿಸಬೇಕು ಎಂದು ನುಡಿದರು.
ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಗುಡಿಯಪ್ಪ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಎಸ್.ಎಫ್.ಸಿ.ಎಸ್.ಅಧ್ಯಕ್ಷ ರವಿಕುಮಾರ್, ಎಚ್.ಎಂ.ಮುನಿಯಪ್ಪ, ಬೈರೇಗೌಡ, ವೇಣುಗೋಪಾಲ್, ಅಶ್ವತ್ಥನಾರಾಯಣರೆಡ್ಡಿ, ಮುನಿಕೃಷ್ಣಪ್ಪ, ಎನ್.ಎಸ್.ಕೃಷ್ಣಪ್ಪ, ಉಮಾ ರವಿಕುಮಾರ್, ಆಂಜನೇಯರೆಡ್ಡಿ, ಚನ್ನಕೇಶವ, ವೆಂಕಟೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಛತ್ರಪತ್ರಿ ಶಿವಾಜಿ ಹಾಗೂ ವರಕವಿ ಸರ್ವಜ್ಞ ಅವರ ಜಯಂತ್ಯುತ್ಸವ
ದಾಸ್ಯಮುಕ್ತ ಭಾರತ ದೇಶಕ್ಕಾಗಿ ನಿರಂತರವಾಗಿ ಹೋರಾಟಗಳನ್ನು ನಡೆಸಿದ ಛತ್ರಪತಿ ಶಿವಾಜಿಯವರ ಹೋರಾಟ ಮನೋಭಾವನೆ ಪ್ರತಿಯೊಬ್ಬ ಯುವಜನತೆಗೆ ಬರಬೇಕು ಎಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಹೇಳಿದರು.
ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಛತ್ರಪತಿ ಶಿವಾಜಿ ಹಾಗೂ ಕವಿ ಸರ್ವಜ್ಞ ಕವಿಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತ ದೇಶದ ಮೇಲೆ ನಡೆಯುತ್ತಿದ್ದ ದಾಳಿ ಮತ್ತು ದೌರ್ಜನ್ಯಗಳಿಗೆ ನಲುಗಬೇಕಾದಂತಹ ಪರಿಸ್ಥಿತಿ ಉಂಟಾಗಿತ್ತು, ಅದನ್ನು ಎದುರಿಸಿದ ವೀರ ಶಿವಾಜಿ. ದೇಶದ ವಿವಿಧ ದಾರ್ಶನಿಕರು, ಸಾಹಿತಿಗಳು, ದಾಸರುಗಳ ಜನ್ಮದಿನಾಚರಣೆಗಳನ್ನು ಮಾಡುವ ಮೂಲಕ ಅವರ ಆದರ್ಶಗಳನ್ನು ಯುವಜನತೆಗೆ ತಿಳಿಸಬೇಕಾಗಿದೆ, ಧರ್ಮನಿಷ್ಟೆ, ಭಕ್ತಿ, ಸದಾಚಾರ, ಸುಶೀಲ, ಮುಂತಾದ ಸದ್ಗುಣಗಳಿಂದ ಮಾತ್ರವಲ್ಲದೆ ಸ್ವರಾಜ್ಯಕ್ಕಾಗಿ ಪೋಷಕವೆನಿಸುವ ಪ್ರತಿಯೊಂದು ಅಂಶದ ಕಡೆಗೆ ಶಿವಾಜಿಯವರು ಬದ್ಧರಾಗಿದ್ದರು. ಅವರು ಕೊಡಿಸಿಕೊಟ್ಟ ಸ್ವರಾಜ್ಯಕ್ಕೆ ದಕ್ಕೆ ಬಾರದಂತೆ ಕಾಪಾಡಿಕೊಳ್ಳಬೇಕಾದಂತಹ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯನ ಮೇಲಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ಮಾತನಾಡಿ, ಛತ್ರಪತಿ ಶಿವಾಜಿಯವರು ಹಿಂದುಧರ್ಮವನ್ನು ಉಳಿಸುವ ನಿಟ್ಟಿನಲ್ಲಿ ನಡೆಸಿದ ಹೋರಾಟಗಳು ಮಹತ್ತರವಾದದ್ದು, ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಾಗಿದೆ, ಸರ್ವಜ್ಞರು ಕೂಡಾ ತನ್ನ ವಚನ ಸಾಹಿತ್ಯ ಮೂಲಕ ಪಡೆದ ಹೆಗ್ಗಳಿಕೆ ನಾಡಿನ ಪ್ರತಿಯೊಬ್ಬ ಕನ್ನಡಿಗರು ಹೆಮ್ಮೆಪಡುವಂತಹ ವಿಚಾರವಾಗಿದೆ, ಎಲ್ಲಾ ಕಾಲಗಳಿಗೂ ಅನ್ವಯವಾಗುವಂತಹ ಎಲ್ಲರಿಗೂ ಸರಳಭಾಷೆಯಲ್ಲಿ ಅರ್ಥವಾಗುವಂತಹ ರೀತಿಯಲ್ಲಿ ರಚಿಸಿದ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಗುರುಬಸಪ್ಪ, ಜಿಲ್ಲಾ ಪಂಚಾಯತಿ ಇಂಜಿನಿಯರಿಂಗ್ ವಿಭಾಗದ ಎಇಇ ಶಿವಾನಂದ, ತೋಟಗಾರಿಕಾ ಸಹಾಯಕ ನಿರ್ದೇಶಕ ಎನ್.ಆನಂದ್, ಗ್ರಾಮಾಂತರ ಠಾಣೆಯ ಸಬ್ ಇನ್ಸ್ಪೆಕ್ಟರ್ ಲಿಯಾಖತ್ಉಲ್ಲಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಗುರುರಾಜ್, ಉಪನೊಂದಣಾಧಿಕಾರಿ ಶ್ರೀನಿವಾಸ್, ಅಬಕಾರಿ ನಿರೀಕ್ಷಕ ನಾಗೇಂದ್ರಸಿಂಗ್, ರಾಜಸ್ವ ನಿರೀಕ್ಷಕ ಸುಭ್ರಮಣ್ಯಂ, ಗ್ರಾಮಲೆಕ್ಕಾಧಿಕಾರಿಗಳಾದ ಲಾರೆನ್ಸ್, ಆನಂದ್, ಮುನಿಶಾಮಯ್ಯ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಬೆಸ್ಕಾಂ ಇಲಾಖೆಗೆ ಮುತ್ತಿಗೆ ಹಾಕಿದ ರೈತರು
ಅಕ್ರಮ ಸಕ್ರಮ ಯೋಜನೆಯಲ್ಲಿ ಟ್ರಾನ್ಸ್ಫಾರ್ಮರ್ಗಳನ್ನು ಅಳವಡಿಸಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಪುಟ್ಟಣ್ಣಯ್ಯ ಬಣ) ವತಿಯಿಂದ ರೈತರು ಬೆಸ್ಕಾಮ್ ಇಲಾಖೆಯ ಕಚೇರಿಯನ್ನು ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ರಾಜ್ಯ ಸರ್ಕಾರ ತಿಳಿಸಿರುವಂತೆ ಅಕ್ರಮ ಸಕ್ರಮ ಯೋಜನೆಯಲ್ಲಿ ರೈತರಿಗೆ ಟ್ರಾನ್ಸ್ಫಾರ್ಮರ್ ಅಳವಡಿಸಲು ತಲಾ 18 ಸಾವಿರ ರೂಗಳನ್ನು ಕಟ್ಟಿಸಿಕೊಂಡಿದ್ದಾರೆ. ಆದರೆ ಬೆಸ್ಕಾಂ ಅಧಿಕಾರಿಗಳು ಐದಾರು ತಿಂಗಳುಗಳು ಕಳೆದರೂ ಟ್ರಾನ್ಸ್ಫಾರ್ಮರ್ಗಳನ್ನು ಅಳವಡಿಸಲು ಮುಂದಾಗಿಲ್ಲ. ವೋಲ್ಟೇಜ್ ಇಲ್ಲದೇ ಮೋಟರ್ಗಳು ಕೆಲಸ ಮಾಡುತ್ತಿಲ್ಲ. ಅಧಿಕಾರಿಗಳ ವಿಳಂಬ ಧೋರಣೆ ರೈತರಿಗೆ ಮಾರಕವಾಗಿದೆ ಎಂದು ದೂರಿದರು.
ಒಂದೆಡೆ ಭೂಮಿಯನ್ನು ನಂಬಿ ಬದುಕುತ್ತಾ, ಹಣ್ಣು ತರಕಾರಿಗಳನ್ನು ಬೆಳೆದುಕೊಡುತ್ತಿರುವ ನಮಗೆ ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲು ಜನಪ್ರತಿನಿಧಿಗಳು ಬಧ್ದತೆಯನ್ನು ತೋರಿಸುತ್ತಿಲ್ಲ, ಕೊಳವೆಬಾವಿಗಳನ್ನು ಕೊರೆಸಲು, ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದೇವೆ. ಪ್ರತಿಬಾರಿ ಚುನಾವಣೆಗಳಲ್ಲಿಯೂ ಸುಳ್ಳು ಭರವಸೆಗಳನ್ನು ನೀಡಿ ಮತಗಳನ್ನು ಪಡೆದುಕೊಂಡು ಹೋಗುವ ರಾಜಕಾರಣಿಗಳು ಕನಿಷ್ಟ ಮೂರು ಫೇಸ್ ವಿದ್ಯುತ್ ಪೂರೈಕೆಯನ್ನಾದರೂ ಮಾಡಿದರೆ ಇರುವ ನೀರಿನಲ್ಲಿ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತದೆ ಎಂದು ರೈತ ಮುಖಂಡರು ತಿಳಿಸಿದರು.
ನಮ್ಮ ಭಾಗದ ರೈತರ ಕಷ್ಟವನ್ನು ಕಂಡಾದರೂ ಅಧಿಕಾರಿಗಳು ರೈತರ ಪರವಾಗಿ ಕೆಲಸ ಮಾಡಬೇಕು. ತಮ್ಮ ಪರಿಧಿಯಲ್ಲಿ ಅನುಕೂಲ ಮಾಡಿಕೊಡಬೇಕು. ಮಧ್ಯವರ್ತಿಗಳು ಹಾಗೂ ಗುತ್ತಿಗೆದಾರರಿಗೆ ಹಣ ಪಡೆಯದಂತೆ ಇಲಾಖೆಯ ಅಧಿಕಾರಿಗಳು ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು. ಬೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಈ ಬಾರಿ ಸಾಂಕೇತಿಕವಾಗಿ ಮನವಿ ಪತ್ರವನ್ನು ಸಲ್ಲಿಸಲಾಗಿದೆ. ಅಧಿಕಾರಿಗಳು ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಕಚೇರಿಗೆ ಬೀಗಜಡಿದು ಉಗ್ರವಾದ ಹೋರಾಟಕ್ಕಿಳಿಯುವುದಾಗಿ ಅವರು ಎಚ್ಚರಿಕೆ ನೀಡಿದರು.
ಮನವಿ ಪತ್ರವನ್ನು ಸ್ವೀಕರಿಸಿದ ಬೆಸ್ಕಾಂ ಇಲಾಖೆಯ ಎಇಇ ಪರಮೇಶ್ವರಪ್ಪ ಮಾತನಾಡಿ ರೈತರು ಕಚೇರಿಗೆ ಬಂದು ಹಣವನ್ನು ಕೌಂಟರ್ನಲ್ಲಿ ಕಟ್ಟಿ ರಸೀದಿಯನ್ನು ಪಡೆಯಿರಿ, ಆದ್ಯತೆಯ ಮೇರೆಗೆ ಟ್ರಾನ್ಸ್ಫರ್ಮರ್ಗಳನ್ನು ಅಳವಡಿಸಲಾಗುತ್ತದೆ, ಇಲಾಖೆಯಿಂದ ಆಗಿರುವ ಲೋಪದೋಷಗಳನ್ನು ಸರಿಪಡಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಮಳ್ಳೂರು ಶಿವಣ್ಣ, ಕಾರ್ಯಾಧ್ಯಕ್ಷ ಎಂ.ನಾಗರಾಜ್, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಪುಟ್ಟಣ್ಣಯ್ಯ ಬಣ) ತಾಲ್ಲೂಕು ಅದ್ಯಕ್ಷ ಎಸ್.ಎಂ.ರವಿಪ್ರಕಾಶ್, ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ಮುನಿಕೆಂಪಣ್ಣ, ಪ್ರಧಾನಕಾರ್ಯದರ್ಶಿ ಬಾಲಮುರಳೀಕೃಷ್ಣ, ದೊಡ್ಡತೇಕಹಳ್ಳಿ ಕದಿರಪ್ಪ, ಭಕ್ತರಹಳ್ಳಿ ಪ್ರತೀಶ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಯೋಗಬಂಧುಗಳ ವಿಶೇಷ ಪ್ರತಿಭಟನೆ ಮತ್ತು ಭಜನೆ
ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಮಂಗಳವಾರ ರಾತ್ರಿ ಶಿವರಾತ್ರಿ ಪ್ರಯುಕ್ತ ವಿಶೇಷ ಪ್ರತಿಭಟನೆ, ಭಜನೆ ಹಾಗೂ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಈಚೆಗೆ ಮೈಸೂರಿನಲ್ಲಿ ಪ್ರಗತಿಪರ ಚಿಂತಕರೆಂದು ಗುರುತಿಸಿಕೊಂಡಿರುವ ಪ್ರೊ.ಅರವಿಂದ ಮಾಲಗಿತ್ತಿ, ಪ್ರೊ.ಕೆ.ಎಸ್.ಭಗವಾನ್ ಮತ್ತು ಡಾ.ಬಂಜಗೆರೆ ಜಯಪ್ರಕಾಶ್ ಅವರು ಪವಿತ್ರ ಗ್ರಂಥ ಭಗವದ್ಗೀತೆಯ ಕುರಿತು ಆಡಿರುವ ಅವಹೇಳನಕಾರಿ ಮಾತುಗಳಿಂದ ಹಿಂದುಗಳ ಧಾರ್ಮಿಕ ಶ್ರದ್ಧೆಗೆ ಅಪಮಾನವಾಗಿದೆ. ಇಂಥಹ ಮೇಧಾವಿಗಳಿಗೆ ಈಶ್ವರ ಒಳ್ಳೆಯ ಬುದ್ಧಿ ನೀಡಿ, ಇತರರ ನಂಬಿಕೆಗೂ ಗೌರವ ನೀಡುವ ತಿಳುವಳಿಕೆ ನೀಡಲಿ, ಕೆಟ್ಟ ಮಾತು ಆಡದಂತಾಗಲಿ ಎಂದು ಪ್ರಾರ್ಥಿಸುತ್ತಾ ಪ್ರತಿಭಟನಾ ಸೂಚಕವಾಗಿ ಕಪ್ಪು ಪಟ್ಟಿ ಧರಿಸಿ ನಗರದ ಹಲವಾರು ಶಿವ ದೇವಾಲಯಗಳಲ್ಲಿ ಸುಮಾರು 50 ಮಂದಿ ಯೋಗ ಬಂಧುಗಳು ಪೂಜೆ, ಭಜನೆ ನಡೆಸಿದರು.
ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಆಡಿರುವ ಮಾತುಗಳಿಗೆ ಕ್ಷಮೆ ಕೇಳಬೇಕೆಂದು ಈ ಸಂದರ್ಭದಲ್ಲಿ ಯೋಗ ಬಂಧುಗಳು ಒತ್ತಾಯಿಸಿದರು.
ವಿಕೇಂದ್ರೀಕರಣ ಬಳಗದ ಮೂಲಕ ಜಾಗೃತಿ ಕಾರ್ಯಕ್ರಮ
ಹಣವಿಲ್ಲದೆ ಮತ ಚಲಾವಣೆ ಎಂಬ ಆದೋಲನವನ್ನು ವಿಕೇಂದ್ರೀಕರಣ ಬಳಗ ಹಮ್ಮಿಕೊಂಡಿದ್ದು, ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮತ ಚಲಾವಣೆಯಲ್ಲಿ ನಾಗರಿಕರಿಗೆ ಮತ್ತು ಸ್ಪರ್ಧಿಗಳಿಗೆ ತಿಳುವಳಿಕೆ ಹೆಚ್ಚಿಸಲಿದೆ ಎಂದು ವಿಕೇಂದ್ರೀಕರಣ ಬಳಗದ ಮುಖ್ಯಸ್ಥ ಹಾಗೂ ಕುಂದಲಗುರ್ಕಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎಂ.ವೆಂಕಟೇಶ್ ತಿಳಿಸಿದರು.
ಪಟ್ಟಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಗ್ರಾಮಪಂಚಾಯತಿಗಳಿಗೆ ನಡೆಯುವ ಚುನಾವಣೆಯಲ್ಲಿ ಮೌಲ್ಯಗಳ ಅಡಿಯಲ್ಲಿ ಕಾರ್ಯ ನಿರ್ವಹಿಸಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾದ ಬದಲಾವಣೆ ತರುವ ಇಚ್ಛೆ ಹೊಂದಿ ಸ್ವಿಚ್ಛೆಯಿಂದ ರೂಪುಗೊಂಡ ಬಳಗವೇ ವಿಕೇಂದ್ರೀಕರಣ ಬಳಗ.
ಹಿಂದೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಹೇರಳವಾಗಿ ಅನಾಗರೀಕ ಪದ್ಧತಿಯಲ್ಲಿ ಹಣ ಮತ್ತು ಮದ್ಯಗಳ ಬಳಕೆಯಿಂದ ಅಕ್ರಮಗಳು ನಡೆದು ಸಭ್ಯ ನಾಗರಿಕತೆಗೆ, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅಪಮಾನವಾದಂತ ಪರಿಸ್ಥಿತಿ ಏರ್ಪಟ್ಟಿತ್ತು. ಅದು ಸರಿಯಲ್ಲ ಎಂದು ತಿಳಿದಿದ್ದರೂ ಚುನಾವಣೆ ಕಾವು ಹೆಚ್ಚುತ್ತಿದ್ದಂತೆ ಬಹಳಷ್ಟು ಅಕ್ರಮಗಳು ನಡೆದು ಜೈಲು, ಕೋರ್ಟು ಮುಂತಾದವುಗಳಿಗೆ ಅಭ್ಯರ್ಥಿಗಳು ಹೋಗಿ ಬಂದಿರುವುದನ್ನು ಕಂಡಿದ್ದೇವೆ.
ಕಳೆದ ಚುನಾವಣೆಯ ಸಂದರ್ಭದಲ್ಲಿ ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಸೇವನೆಯಿಂದ 11 ಜನ ಸಾವನ್ನಪ್ಪಿದ್ದು ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿತ್ತು. ರಾಜ್ಯ ಚುನಾವಣಾ ಆಯೋಗದ ಮಾರ್ಗದರ್ಶನ ಸಂಹಿತೆ ಪ್ರಕಾರ ಮತಕ್ಕಾಗಿ ಹಣ ಮತ್ತು ಉಡುಗೊರೆ ಕೊಡುವುದು ಮತ್ತು ತೆಗೆದುಕೊಳ್ಳುವುದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ನಮ್ಮ ಮತ್ತು ಮುಂದಿನ ಪೀಳಿಗೆಗೆ ಕಲಿಸುತ್ತಿರುವ ಪಾಠ ಏನು ಎಂಬುದನ್ನು ನಾಗರಿಕರು ಮತ್ತು ಸ್ಪರ್ಧಿಗಳು ಪ್ರಶ್ನಿಸಿಕೊಳ್ಳಬೇಕು.
ವಿಕೇಂದ್ರೀಕರಣ ಬಳಗವು ಕರಪತ್ರಗಳ ಮೂಲಕ ತಿಳುವಳಿಕೆ, ಶಾಲಾ ಮಕ್ಕಳ ಜೊತೆ ಜಾಥಾ, ಶಿಬಿರಗಳ ಮೂಲಕ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಆಸಕ್ತರು ಕೈಜೋಡಿಸಬಹುದು ಎಂದು ತಿಳಿಸಿದರು. ರಾಜೇಂದ್ರ ಪ್ರಸಾದ್, ಮಂಜುನಾಥ್, ಕೃಷ್ಣಪ್ಪ, ಗಣೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಮಳಮಾಚನಹಳ್ಳಿ ಗ್ರಾಮದಲ್ಲಿ ಗ್ರಾಮ ದೇವರುಗಳ ಮೆರವಣಿಗೆ
ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಮಳಮಾಚನಹಳ್ಳಿ ಗ್ರಾಮದಲ್ಲಿ ಶಿವರಾತ್ರಿ ಪೂಜಾ ಮಹೋತ್ಸವ ಸಮಿತಿಯ ವತಿಯಿಂದ ಮಂಗಳವಾರ ರಾತ್ರಿ ಎಲ್ಲಾ ಗ್ರಾಮ ದೇವರುಗಳ ಮೆರವಣಿಗೆಯನ್ನು ಆಯೋಜಿಸಲಾಗಿತ್ತು.
ಶಿವ ಪಾರ್ವತಿ ಸನ್ನಿಧಿಯಲ್ಲಿ ಪೂಜೆಯನ್ನು ನೆರವೇರಿಸಲಾಯಿತು. ಗ್ರಾಮದ ಎಲ್ಲಾ ದೇಗುಲಗಳನ್ನೂ ವಿವಿಧ ಹೂಗಳು ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ದೇವಾಲಯಗಲಲ್ಲಿ ಪೂಜೆಯ ನಂತರ ಪ್ರಸಾದವನ್ನು ವಿತರಿಸಲಾಯಿತು.
ಗ್ರಾಮದ ಎಲ್ಲಾ ದೇವರುಗಳನ್ನು ಮೆರವಣಿಗೆಯಲ್ಲಿ ಪ್ರಮುಖ ಬೀದಿಗಳಲ್ಲಿ ಕೊಂಡೊಯ್ಯಲಾಯಿತು. ಪ್ರತಿ ಮನೆಯವರೂ ರಂಗೋಲಿ ಹಾಕಿ ದೇವರನ್ನು ಸ್ವಾಗತಿಸಿ, ದೇವರುಗಳಿಗೆ ಆರತಿ ಬೆಳಗಿ ಪೂಜಿಸಿದರು.
ಶಿವಮೊಗ್ಗದ ಮಹಿಳಾ ಜನಪದ ಕಲಾತಂಡ, ವೀರಗಾಸೆ ಕಲಾವಿದರು, ತಮಟೆ, ನಾಸಿಕ್ ವಾದನಗಳಿಂದ ಮೆರವಣಿಗೆಗೆ ಕಳೆ ಕಟ್ಟಿದ್ದರು.
ಬಿ.ಎನ್.ಕೃಷ್ಣಪ್ಪ, ಎಂ.ಬೈರೇಗೌಡ, ಎಂ.ರಮೇಶ್, ಕೆ.ನರಸಿಂಹಮೂರ್ತಿ, ಬಿ.ರಾಮಯ್ಯ, ಎಂ.ಎನ್.ಗೋಪಾಲ್, ದೊಡ್ಡಬೈರಪ್ಪ, ಲಕ್ಷ್ಮಯ್ಯ, ರಾಮಾಂಜಿನಪ್ಪ, ವೆಂಕಟೇಶಪ್ಪ, ತಮ್ಮಣ್ಣ, ಕೃಷ್ಣಯ್ಯ, ಬಚ್ಚೇಗೌಡ, ದೇವರಾಜು, ರಾಮಯ್ಯ, ಮರೇಗೌಡ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಗುಡಿಹಳ್ಳಿಯ ಪಾರ್ವತಾಂಬ ಸಮೇತ ಸೋಮೇಶ್ವರ ಸ್ವಾಮಿ ರಥೋತ್ಸವ
ತಾಲ್ಲೂಕಿನ ಪುರಾತನ ಪ್ರಸಿದ್ಧ ಗುಡಿಹಳ್ಳಿಯ ಪಾರ್ವತಾಂಬ ಸಮೇತ ಸೋಮೇಶ್ವರ ಸ್ವಾಮಿ ದೇವಾಲಯದಲ್ಲಿ ಬುಧವಾರ ಏಳನೇ ವರ್ಷದ ಬ್ರಹ್ಮರಥೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಮಾಘ ಮಾಸ ಬಹುಳ ಬುಧವಾರ ವಿಶೇಷ ಪೂಜೆ, ಹೋಮ, ಅಭಿರ್ಜನ್ ಮಹೂರ್ತದಲ್ಲಿ ಮಧ್ಯಾಹ್ನ ಬ್ರಹ್ಮರಥೋತ್ಸವವನ್ನು ವೀರಗಾಸೆ ಮುಂತಾದ ಕಲಾ ತಂಡಗಳು ಹಾಗೂ ವಾಂದ್ಯ ವೃಂದ ಸಮೇತ ನಡೆಸಲಾಯಿತು. ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಸಲಾಯಿತು.
ಸುತ್ತಮುತ್ತಲ ಗ್ರಾಮಗಳು ಹಾಗೂ ತಾಲ್ಲೂಕುಗಳಿಂದ ನೂರಾರು ಭಕ್ತರು ಪೂಜೆ ಹಾಗೂ ರಥೋತ್ಸವದಲ್ಲಿ ಭಾಗವಹಿಸಿದ್ದರು. ವಿವಿಧ ಗ್ರಾಮಗಳವರು ಪಾನಕ ಬಂಡಿಗಳನ್ನು ತಂದು ಬಿಸಿಲಿನಲ್ಲಿ ದಣಿದ ಭಕ್ತರಿಗೆ ಉಚಿತವಾಗಿ ವಿತರಿಸಿದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಮತ್ತು ಜಿಲ್ಲಾ ಪಂಚಾಯತಿ ಸದಸ್ಯೆ ಶಿವಲೀಲಾ ರಾಜಣ್ಣ ರಥೋತ್ಸವಕ್ಕೆ ಚಾಲನೆ ನೀಡಿದರು. ಸುಮಾರು ಆರು ನೂರು ವರ್ಷಗಳ ಇತಿಹಾಸವಿರುವ ಸೋಮೇಶ್ವರ ದೇವಾಲಯದ ಆವರಣದಲ್ಲಿ ಇತಿಹಾಸವನ್ನು ಸಾರುವ ಹಲವಾರು ವೀರಗಲ್ಲುಗಳು ಹಾಗೂ ಶಾಸನ ಕಲ್ಲುಗಳಿವೆ. ರಥೋತ್ಸವದ ಅಂಗವಾಗಿ ಮಹಿಳೆಯರು ಮನೆಮನೆಯಿಂದಲೂ ದೀಪಗಳನ್ನು ತಂದು ದೇವರಿಗೆ ಬೆಳಗಿದರು. ದೇವಾಲಯವನ್ನು ವಿದ್ಯುತ್ ದೀಪಗಳಿಂದ ಮತ್ತು ಹೂಗಳಿಂದ ಅಲಂಕರಿಸಲಾಗಿತ್ತು.
ಗುಡಿಹಳ್ಳಿ ಜಿ.ವಿ.ಮುನಿವೆಂಕಟಸ್ವಾಮಪ್ಪ, ಚಿಕ್ಕವೆಂಕಟರೆಡ್ಡಿ, ಕಮಲಮ್ಮ, ಆಂಜನೇಯ, ಅರ್ಚಕರಾದ ಗಾಣಿಗರಹೊಸಹಳ್ಳಿಯ ಎಸ್.ನಂಜುಂಡಯ್ಯ, ಎನ್.ನಾಗೇಂದ್ರ, ಆಗಮಿಕರಾದ ಆರ್.ಗಣೇಶ್ ದೀಕ್ಷಿತ್, ಚನ್ನಕೃಷ್ಣಪ್ಪ ಮತ್ತಿತರರು ಹಾಜರಿದ್ದರು.
ಸದ್ಭಾವನಾ ಶಾಂತಿಯಾತ್ರೆ
ಶಿವಲಿಂಗವು ಪರಮಾತ್ಮನ ಚಿಹ್ನೆ. ಮೂರು ವಿಭೂತಿ ಗೆರೆಗಳು ಕರ್ತವ್ಯದ ಸಂಕೇತಗಳಾದರೆ, ಶಿವಲಿಂಗದ ಮೇಲಿನ ಬಿಂದುವು ಪರಮಾತ್ಮನನ್ನು ನಿರಾಕಾರನೆಂದು ಅರ್ಥೈಸುತ್ತದೆ ಎಂದು ಡಾ.ಡಿ.ಟಿ.ಸತ್ಯನಾರಾಯಣರಾವ್ ತಿಳಿಸಿದರು.
ನಗರದ ಹಳೇ ಅಂಚೆ ಬೀದಿಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಶಿಡ್ಲಘಟ್ಟ ಶಾಖಾ ವತಿಯಿಂದ ಶಿವರಾತ್ರಿ ಪ್ರಯುಕ್ತ ಮಂಗಳವಾರ ಹಮ್ಮಿಕೊಂಡಿದ್ದ ದ್ವಾದಶ ಲಿಂಗಗಳೊಂದಿಗೆ ಸದ್ಭಾವನಾ ಶಾಂತಿಯಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿವಲಿಂಗವು ನಿರಾಕಾರ ಸರ್ವ ಆತ್ಮರ ತಂದೆಯಾದ ಜ್ಯೋತಿ ಸ್ವರೂಪ ಪರಮಾತ್ಮನ ಸಂಕೇತವಾಗಿದೆ. ನಮ್ಮಲ್ಲಿರುವ ಶತೃಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದೆ ಸತ್ಯ ಜಾಗರಣೆ. ಅದೇ ಶಿವರಾತ್ರಿ ಜಾಗರಣೆ ಎಂದು ಶಿವರಾತ್ರಿಯ ವಿಶೇಷದ ಬಗ್ಗೆ ವಿವರಿಸಿದರು.
ಪಟ್ಟಣದಲ್ಲಿ ಕಳೆದ ಹಲವಾರು ವರ್ಷಗಳಿಂದ ಸ್ಥಾಪನೆಗೊಂಡಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಶಾಂತಿಯೊಂದಿಗೆ ಜ್ಞಾನದ ಜ್ಯೋತಿಯನ್ನು ಬೆಳಗಿಸುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ ಎಂದು ಹೇಳಿದರು.
ಶಾಸಕ ಎಂ.ರಾಜಣ್ಣ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಧ್ವಜಾರೋಹಣವನ್ನು ನೆರವೇರಿಸಿದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸದ್ಭಾವನಾ ಶಾಂತಿಯಾತ್ರೆಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯ ತಾಲ್ಲೂಕು ಸಂಚಾಲಕಿ ಬಿ.ಕೆ.ಜಯಕ್ಕ, ಮುನಿಲಕ್ಷ್ಮಮ್ಮ, ರಾಮಕೃಷ್ಣಪ್ಪ, ಚಂದ್ರಶೇಖರ್, ಬಸವರಾಜ್, ಪಿಳ್ಳವೆಂಕಟಸ್ವಾಮಿ, ರಾಮಲಕ್ಷ್ಮಿ, ದೇವಿಕಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಅಭ್ಯಂಗ
ವಿವಿಧ ವೈದ್ಯಕೀಯ ಚಿಕಿತ್ಸಾ ಪದ್ಧತಿಗಳಲ್ಲಿ ಆಯುರ್ವೇದವೂ ಒಂದು. ಇದು ಭಾರತೀಯ ವೈದ್ಯ ಪದ್ಧತಿ. ಪ್ರಾಚೀನ ಕಾಲದಲ್ಲಿ ಋಷಿ ಮುನಿಗಳ ಮೂಲಕ ಗ್ರಂಥಗಳ ರೂಪದಲ್ಲಿಬೆಳಕಿಗೆ ಬಂದಿತು. ಬ್ರಹ್ಮನು ಆಯುರ್ವೇದವನ್ನು ಸ್ಮರಿಸಿಕೊಂಡು, ದಕ್ಷ ಪ್ರಜಾಪತಿಗೆ ತಿಳಿಸಿದನು. ದಕ್ಷ ಪ್ರಜಾಪತಿಯು ಅಶ್ವಿನಿ ಕುಮಾರರಿಗೆ, ಅಶ್ವಿನಿ ಕುಮಾರರು ಇಂದ್ರನಿಗೆ ಹಾಗೂ ಇಂದ್ರನಿಂದ ಈ ಆಯುರ್ವೇದವು ಆತ್ರೇಯ, ಪುನರ್ವಸು ಇತ್ಯಾದಿ ಮುನಿಗಳಿಗೆ ತಿಳಿಸಲ್ಪಟ್ಟಿತು.
ಇತರೇ ಚಿಕಿತ್ಸಾ ಪದ್ಧತಿಗಳಂತಲ್ಲದೆ ಆಯುರ್ವೇದ ವೈದ್ಯ ಪದ್ಧತಿಯು ಎರಡು ಮುಖ್ಯ ಗುರಿಗಳನ್ನೊಳಗೊಂಡಿದೆ. ಮೊದಲನೆಯದು ರೋಗ ರುಜಿನಗಳು ಬಾರದಂತೆ ಆರೋಗ್ಯವನ್ನು ರಕ್ಷಿಸಿಕೊಳ್ಳುವುದು. ಎರಡನೆಯದು ರೋಗ ಬಂದಾಗ ಚಿಕಿತ್ಸೆಯನ್ನು ಮಾಡಿಕೊಳ್ಳುವುದು.
ರೋಗ, ರುಜಿನಗಳು ಬಾರದಂತೆ ಆರೋಗ್ಯವನ್ನು ರಕ್ಷಿಸಿಕೊಳ್ಳಲು ಕೆಲವೊಂದು ಆಚರಣೆಗಳನ್ನು ಆಯುರ್ವೇದದಲ್ಲಿ ವಿವರಿಸಿದ್ದಾರೆ. ಅವುಗಳಲ್ಲಿ ದಿನಚರ್ಯೆಯೂ ಒಂದು. ಇದು ಒಬ್ಬ ಆರೋಗ್ಯವಂತ ವ್ಯಕ್ತಿ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಂಜಾನೆ ಏಳುವುದರಿಂದ ರಾತ್ರಿ ಮಲಗುವವರೆಗೆ ಏನೇನು ಕ್ರಮಗಳನ್ನು ಅನುಸರಿಸಬೇಕು ಎನ್ನುವ ವಿವರಣೆಗಳನ್ನೊಳಗೊಂಡಿದೆ. ಇದರಲ್ಲಿ ಅಭ್ಯಂಗವೂ ಒಂದು ವಿಧಿ.
ಅಭ್ಯಂಗ ಎಂದರೇನು?
ಅಭ್ಯಂಗ ಎಂದರೆ ಎಣ್ಣೆಯನ್ನು ಕ್ರಮಬದ್ಧವಾಗಿ ಸಂಪೂರ್ಣ ಮೈಗೆ ಹಚ್ಚಿಕೊಳ್ಳುವುದು. ಸಾಮಾನ್ಯವಾಗಿ ಹಿಂದೂ ಸಂಪ್ರದಾಯದಲ್ಲಿ ದೀಪಾವಳಿಯಲ್ಲಿ ನರಕ ಚತುರ್ದಶಿಯ ದಿನದಂದು ಎಣ್ಣೆಯನ್ನು ಮೈಗೆ ಹಚ್ಚಿಕೊಂಡು ಸ್ನಾನ ಮಾಡುವುದು ವಾಡಿಕೆ.
ವೈಜ್ಞಾನಿಕವಾಗಿ ವಿಶ್ಲೇಷಿಸಿದಾಗ ತಿಳಿಯುವುದೇನೆಂದರೆ ದೀಪಾವಳಿಯಲ್ಲಿ ಹೇಮಂತ ಋತು (ಚಳಿಗಾಲ) ವಿನ ಆಗಮನವಾಗಿರುತ್ತದೆ. ಈ ಸಮಯದಲ್ಲಿ ವಾತಾವರಣದಲ್ಲಿ ಒಣ ಗಾಳಿಯು ಬೀಸುತ್ತಿದ್ದು, ಚರ್ಮವು ಒಣಗಿರುತ್ತದೆ. ಈ ಸಮಯದಲ್ಲಿ ಒಣ ಚರ್ಮ ಹಾಗೂ ಚರ್ಮ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಲು ಅಭ್ಯಂಗ ಹಿತಕರ.
ಅಭ್ಯಂಗ ಮಾಡುವ ವಿಧಾನ
ಅಭ್ಯಂಗವನ್ನು ನಿತ್ಯವೂ ಮಾಡಬೇಕು, ಅಭ್ಯಂಗವನ್ನು ಆಹಾರ ಸೇವನೆಯ ಪೂರ್ವದಲ್ಲಿ ಅಥವಾ ಆಹಾರ ಜೀರ್ಣವಾದ ನಂತರ (ಕನಿಷ್ಠ ಪಕ್ಷ ಆಹಾರ ಸೇವನೆಯ ಮೂರು ಗಂಟೆಗಳ ನಂತರ) ಮಾಡಬೇಕು. ದೇಹದ ಎಲ್ಲ ಭಾಗಗಳಿಗೂ ಸಮ ಪ್ರಮಾಣದ ಒತ್ತಡವನ್ನು ಹಚ್ಚಿ ತಿಕ್ಕಬೇಕು. ಕೈ ಕಾಲುಗಳನ್ನು ಯಾವಾಗಲೂ ಮೇಲ್ಭಾಗದಿಂದ ಕೆಳಭಾಗದವರೆಗೆ ಒಮ್ಮುಖವಾಗಿ ಸಮಾನ ಒತ್ತಡದಿಂದ ಎಣ್ಣೆಯನ್ನು ಹಚ್ಚಿ ತಿಕ್ಕಬೇಕು. ಬೆನ್ನು ಮೂಳೆಗಳ ಭಾಗವನ್ನು ವೃತ್ತಾಕಾರವಾಗಿ ಒತ್ತಡವನ್ನು ಹಾಕಿ ತಿಕ್ಕಬೇಕು. ಎದೆ ಭಾಗ ಹಾಗೂ ಹೊಟ್ಟೆ ಭಾಗಗಳಲ್ಲೂ ಕಡಿಮೆ ಒತ್ತಡದಿಂದ ಎಣ್ಣೆ ಹಚ್ಚಿ ತಿಕ್ಕಬೇಕು. ವಿಶೇಷವಾಗಿ ತಲೆ, ಕಿವಿ ಹಾಗೂ ಪಾದಗಳಿಗೆ ಎಣ್ಣೆಯನ್ನು ಹಾಕಬೇಕು. ಅಭ್ಯಂಗವನ್ನು ಶರೀರದ ಮಾಂಸ ಖಂಡಗಳ ರಚನೆ ಹಾಗೂ ಜೋಡಣೆಗೆ ಅನುಸಾರವಾಗಿ ಅದೇ ದಿಕ್ಕಿನಲ್ಲಿ ಒಮ್ಮುಖವಾಗಿ ಮಾಡಬೇಕು.
ಅಭ್ಯಂಗಕ್ಕೆ ಬಳಸಬಹುದಾದ ಎಣ್ಣೆಗಳು
ಅತ್ಯಂತ ಶೀತ ಪ್ರಕೃತಿಯವರು ಎಳ್ಳೆಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಅಭ್ಯಂಗಕ್ಕೆ ಬಳಸುವುದು ಉತ್ತಮ. ಉಷ್ಣ ಪ್ರಕೃತಿಯವರು ಆಕಳ ತುಪ್ಪದಿಂದ ಅಭ್ಯಂಗ ಮಾಡಿಕೊಳ್ಳುವುದು ಒಳ್ಳೆಯದು. ಅಲ್ಲದೆ ಮಾರುಕಟ್ಟೆಗಳಲ್ಲಿ ಲಭ್ಯವಿರುವ ಕ್ಷೀರಾ ಬಲಾತೈಲ, ಮಹಾನಾರಾಯಣ ತೈಲ, ಸಹಚರಾನಿ ತೈಲ, ಬಲಾಶ್ವಗಂಧ ತೈಲ, ಇತ್ಯಾದಿ ತೈಲಗಳನ್ನು ಅಭ್ಯಂಗಕ್ಕೆ ಬಳಸಬಹುದು.
ಅಭ್ಯಂಗದಿಂದ ದೊರೆಯುವ ಪ್ರಯೋಜನಗಳು
1. ಅಭ್ಯಂಗವು ಮುಪ್ಪನ್ನು ದೂರವಿಡುತ್ತದೆ.
2. ಅಭ್ಯಂಗವು ದಣಿವನ್ನು ನಿವಾರಿಸುತ್ತದೆ.
3. ವಾತ ದೋಷವನ್ನು ಶಮನ ಮಾಡುತ್ತದೆ.
4. ದೇಹಕ್ಕೆ ಪುಷ್ಟಿ, ದೃಢತೆ ಹಾಗೂ ಬಲವನ್ನು ನೀಡುತ್ತದೆ.
5. ಆಯಸ್ಸನ್ನು ವೃದ್ಧಿಗೊಳಿಸುತ್ತದೆ.
6. ಚರ್ಮವನ್ನು ಮೃದುಗೊಳಿಸುವುದಲ್ಲದೆ, ಚರ್ಮದ ಕಾಂತಿಯನ್ನುಹೆಚ್ಚಿಸುವುದು, ಅಲ್ಲದೆ ಚರ್ಮರೋಗಗಳಿಂದ ರಕ್ಷಣೆಯನ್ನು ಒದಗಿಸುತ್ತದೆ.
7. ತಲೆಗೆ ಎಣ್ಣೆಯನ್ನು ಹಚ್ಚುವುದರಿಂದ ತಲೆ ನೋವು ಇತ್ಯಾದಿ ತಲೆಯ ಸಂಬಂಧಪಟ್ಟ ರೋಗಗಳನ್ನು ದೂರವಿಡಬಹುದು, ಕೂದಲುಗಳನ್ನು ಮೃದುವಾಗಿಸಿ, ಉದ್ದವಾಗಿ, ಕಾಂತಿಯುಕ್ತವನ್ನಾಗಿ ಮಾಡುತ್ತದೆ. ಅಲ್ಲದೆ ಕೂದಲು ಕಪ್ಪಗೆ, ದೃಢವಾಗಿ ಬೆಳೆಯುತ್ತದೆ.
8. ಪಾದಗಳಿಗೆ ಎಣ್ಣೆಯನ್ನು ಹಚ್ಚುವುದರಿಂದ ನಿದ್ರೆ ಹೆಚ್ಚುತ್ತದೆ. ಕಣ್ಣುಗಳ ಆರೋಗ್ಯಕ್ಕೆ ಇದು ಉತ್ತಮ.
9. ಕಿವಿಗಳಿಗೆ ಎಣ್ಣೆಯನ್ನು ಹಾಕುವುದರಿಂದ ಕಿವಿನೋವು, ತಲೆನೋವು, ಕುತ್ತಿಗೆಯ ಹಿಂಭಾಗದ ನೋವು ಹಾಗು ದವಡೆಗಳ ನೋವುಗಳನ್ನು ಶಮನ ಮಾಡುತ್ತದೆ.
ಅಭ್ಯಂಗವು ಯಾರಿಗೆ ನಿಷೇಧ?
ಕಫದ ರೋಗಗಳಿಂದ ಬಳಲುತ್ತಿರುವವರು ಅಭ್ಯಂಗವನ್ನು ಮಾಡಬಾರದು. ಅಜೀರ್ಣದಿಂದ ಬಳಲುತ್ತಿರುವವರು, ಜೀರ್ಣಶಕ್ತಿ ಕುಂದಿರುವವರು ಅಭ್ಯಂಗವನ್ನು ಮಾಡದಿರುವುದು ಉತ್ತಮ.
ನಿರಂತರ ಬಳಕೆಯಿಂದ ಸವೆದ ಗಾಡಿಯ ಕೀಲುಗಳು ಎಣ್ಣೆಯನ್ನು ಹಾಕುವುದರಿಂದ ಹೇಗೆ ಕಾರ್ಯಕ್ಷಮತೆಯನ್ನು ಹೊಂದುತ್ತವೋ ಅದೇ ರೀತಿ ಸತತವಾದ ಕೆಲಸ, ಕಾರ್ಯಗಳಿಂದ ಸವೆದ ದೇಹದ ಅಂಗಾಂಗಗಳು ಅಭ್ಯಂಗದಿಂದ ಬಲ ಹಾಗೂ ದೃಢತ್ವವನ್ನು ಹೊಂದಿ ಕೆಲಸ, ಕಾರ್ಯಗಳಿಗೆ ಸಿದ್ಧಗೊಳ್ಳುತ್ತವೆ.
ಅಭ್ಯಂಗ ಯಾರಿಗೆ ಒಳ್ಳೆಯದು? ಯಾರಿಗೆ ಒಳ್ಳೆಯದಲ್ಲ? ಅಭ್ಯಂಗದಿಂದಾಗುವ ಪ್ರಯೋಜನಗಳು, ದೇಹ ಪ್ರಕೃತಿಗೆ ಅನುಕೂಲಕರವಾದ ಎಣ್ಣೆಗಳು ಯಾವುವು? ಎಂಬುದನ್ನು ಗಮನದಲ್ಲಿಟ್ಟುಕೊಂಡು ಅಭ್ಯಂಗವನ್ನು ಆಚರಿಸಬೇಕು.
ಡಾ. ನಾಗಶ್ರೀ.ಕೆ.ಎಸ್.
ನೀವೆಷ್ಟು ಒಳ್ಳೆಯ ಸಂವಹನಕಾರರು?
ಶಂಕರ್‍ನಾಗ್‍ರ “ನೋಡಿ ಸ್ವಾಮಿ ನಾವಿರೋದೇ ಹೀಗೆ” ಸಿನಿಮಾದಲ್ಲಿ ಒಂದು ಸಂದರ್ಭ ಹೀಗಿದೆ. ಪ್ರೇಮಿಗಳಾದ ರಮೇಶ್ ಭಟ್ ಮತ್ತು ಅರುಂಧತಿ ನಾಗ್ ಮರುದಿನ ಕಾಮತ್ ಹೋಟೆಲಿನ ಹತ್ತಿರ ಭೇಟಿಯಾಗಬೇಕೆಂದು ನಿರ್ಧರಿಸುತ್ತಾರೆ. ಮರುದಿನ ಇಬ್ಬರೂ ಕಾಮತ್ ಹೋಟೆಲಿನ ಹತ್ತಿರ ಕಾಯುತ್ತಿದ್ದರೂ ಒಬ್ಬರಿಗೊಬ್ಬರು ಭೆಟ್ಟಿಯಾಗುವುದೇ ಇಲ್ಲ. ಆ ಮರುದಿನ ಶಂಕರ್‍ನಾಗ್ ಪ್ರೇಮಿಗಳನ್ನು ಮತ್ತೆ ಒಂದುಗೂಡಿಸುವ ಪ್ರಯತ್ನದಲ್ಲಿರುವಾಗ ಇಬ್ಬರೂ ಯಾವ ಸ್ಥಳದಲ್ಲಿ ಕಾಯುತ್ತಿದ್ದಿರಿ, ಎಂದು ಕೇಳುತ್ತಾರೆ ಒಬ್ಬರು, “ಲಾಲ್‍ಬಾಗ್ ಕಾಮತ್ ಹೋಟೆಲಿನ ಹತ್ತಿರ” ಎಂದು ಹೇಳಿದರೆ ಇನ್ನೊಬ್ಬರು, “ನಾನು ಮಿನರ್ವ ಕಾಮತ್ ಹೋಟೆಲಿನ ಹತ್ತಿರ ಕಾಯುತ್ತಿದ್ದೆ” ಎಂದು ಹೇಳುತ್ತಾರೆ! ಕಮ್ಯುನಿಕೇಷನ್ ಗ್ಯಾಪ್ ಅಂದರೆ ಸಂವಹನದಲ್ಲಿನ ಅಂತರಕ್ಕೆ ಇದೊಂದು ತಮಾಶೆಯ ಉದಾಹರಣೆ ಅಷ್ಟೆ.
ನಮ್ಮ ನಿತ್ಯ ಜೀವನದಲ್ಲಿ ಇಂತಹ ಘಟನೆಗಳು ಮತ್ತೆಮತ್ತೆ ನಡೆಯುತ್ತಿದ್ದರೂ ನಾವು ಮಾತ್ರ ನಮ್ಮ ರೀತಿನೀತಿಗಳನ್ನು ಸ್ವಲ್ಪವೂ ಬದಲಾಯಿಸಿಕೊಂಡಿರುವುದಿಲ್ಲ. ಮನೆಯಲ್ಲಿ ಗಂಡ ಆಫೀಸಿನ ಕೀಬಂಚ್ ಹುಡುಕುತ್ತಿದ್ದಾನೆ ಎಂದುಕೊಳ್ಳಿ. ಅದು ಸಿಗದಿದ್ದಾಗ ಹೆಂಡತಿಯನ್ನು ಕೇಳುತ್ತಾನೆ. ಅಡಿಗೆ ಮನೆಯಲ್ಲಿ ಊಟದ ಡಬ್ಬಿಯ ತಯಾರಿಯಲ್ಲಿರುವ ಅವಳು, ಅಸಹನೆಯಿಂದ “ಅಲ್ಲೇ ಇದೆ ನೋಡ್ರಿ” ಎನ್ನುತ್ತಾಳೆ. ಮತ್ತೊಮ್ಮೆ ಹುಡುಕಿದ ಗಂಡ, “ಸಿಕ್ತಾ ಇಲ್ಲ ಕಣೆ” ಎಂದು ಗೊಣಗುತ್ತಾನೆ. ತಕ್ಷಣ ಬರುವ ಅವಳು ಮಲಗುವ ಕೋಣೆಯ ವಾರ್ಡ್‍ರೋಬ್‍ನಿಂದ ತೆಗೆದುಕೊಡುತ್ತಾಳೆ. “ಅಯ್ಯೋ ನಾನು ಹಜಾರದಲ್ಲಿ ಹುಡುಕುತ್ತಾ ಇದ್ದೆ. ನೀನು ಅಲ್ಲೇ ಅಂತ ಹೇಳುವ ಬದಲು ಸರಿಯಾಗಿ ಮಲಗುವ ಕೋಣೆ ಎಂದು ಹೇಳಬೇಕಲ್ವಾ?” ಎಂದು ದಬಾಯಿಸಿದರೆ, ಹೆಂಡತಿ, “ನನಗೇನು ಗೊತ್ತು ನೀವು ಹಜಾರದಲ್ಲಿ ಹುಡುಕುತ್ತಾ ಇದ್ದಿರಾ ಎಂದು ನೀವಾದರೂ ಸರಿಯಾಗಿ ಹೇಳಬೇಕಿತ್ತು” ಎಂದು ತಿರುಗೇಟು ನೀಡುತ್ತಾಳೆ.
ಹೆಂಡತಿಯ ತಲೆಯಲ್ಲಿ ಆ ಕ್ಷಣದಲ್ಲಿ ಇರುವ ನಕಾಶೆಯ ಪ್ರಕಾರ “ಅಲ್ಲಿ” ಎಂದರೆ ಮಲಗುವ ಕೋಣೆಯಲ್ಲಿ ಎಂದಿರುತ್ತದೆ. ಅದು ಗಂಡನಿಗೆ ತಿಳಿಯುವುದು ಹೇಗೆ? ಗಂಡನಾದರೂ ಸ್ಪಷ್ಟವಾಗಿ “ಹಜಾರದಲ್ಲಿ ಎಲ್ಲೂ ಕಾಣ್ತಾ ಇಲ್ಲ ಕಣೆ” ಎಂದು ಹೇಳುವುದಿಲ್ಲ. ಅವನ ಪ್ರಕಾರ ಕೀಬಂಚ್ ಇರಬೇಕಾದ ಜಾಗ “ಅಲ್ಲಿ” ಅಲ್ಲ, ಆದರೆ “ಇಲಿ”್ಲ! ಹೊರಗಿನಿಂದ ನೋಡುವವರಿಗೆ ಈ ಅಲ್ಲಿ ಇಲ್ಲಿಗಳೆಲ್ಲಾ ಎಲ್ಲಾದರೂ ಆಗಬಹುದು!
ಊಟಕ್ಕೆ ಕುಳಿತಾಗ ಗಂಡ, “ಎಲ್ಲಿ ಸ್ವಲ್ಪ ಅದು ಬಡಿಸು” ಎನ್ನಬಹುದು. “ಆಫೀಸಿನಿಂದ ಬರುವಾಗ ಸ್ವಲ್ಪ ಇದು ತನ್ನಿ. ಮಕ್ಕಳಿಗೆ ಇವತ್ತು ಸಂಜೆ ಅದು ಮಾಡ್ತೀನೀಂತ ಹೇಳಿದೀನಿ” ಎಂದು ಹೆಂಡತಿ ಹೇಳಬಹುದು. ನಮ್ಮ ಎಷ್ಟೋ ಭಾಷಣಕಾರರ ಮಾತುಗಳಲ್ಲಿ ಕೇವಲ “ಅದು, ಇದು” ಗಳೇ ತುಂಬಿರುತ್ತವೆ. ಮಾಜಿ ಕ್ರಿಕೆಟಿಗ ಶ್ರೀಕಾಂತ್ ಮಾತಿನ ಮಧ್ಯೆ ಶಬ್ದಕ್ಕೆ ತಿಣುಕಾಡುವಾಗ “ವ್ಹಾಟ್ ಯು ಕಾಲ್” ಎನ್ನುತ್ತಿರುತ್ತಾರೆ! ಕೊನೆಗೊಂದು ದಿನ ಅವರು ತಮ್ಮ ಹೆಸರನ್ನೇ ಮರೆತು, “ನಾನು ವ್ಹಾಟ್ ಯು ಕಾಲ್ ಬಿಸಿಸಿಐನ ವ್ಹಾಟ್ ಯು ಕಾಲ್ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷನಾದ ವ್ಹಾಟ್ ಯು ಕಾಲ್ ಶ್ರೀಕಾಂತ್” ಎನ್ನಬಹುದುದು ಎಂದು ನನ್ನ ಸ್ನೇಹಿತನೊಬ್ಬನ ಊಹೆ! ನಮ್ಮೆಲ್ಲರ ತಲೆಯ ಕಂಪ್ಯೂಟರ್‍ನಲ್ಲಿ ಈ ಎಲ್ಲಾ ಶಬ್ದಗಳಿಗೆ ವಿಶೇಷ ಅರ್ಥವಿರುತ್ತದೆ. ಆದರೆ ಅದು ಕೇಳುಗರಿಗೆ ಹೇಗೆ ತಿಳಿಯಬೇಕು?
ಹಾಗಿದ್ದರೆ ನಾವೆಲ್ಲಾ ಏಕೆ ಪದೇಪದೇ ನಮ್ಮ ಮನಸ್ಸಿನಲ್ಲಿರುವುದನ್ನು ಇತರರಿಗೆ ಸರಿಯಾಗಿ ತಲುಪಿಸುವುದರಲ್ಲಿ ವಿಫಲರಾಗುತ್ತೇವೆ? ಇದನ್ನು ಬದಲಾಯಿಸಿಕೊಳ್ಳುವುದು ಹೇಗೆ? ಸ್ಪಷ್ಟವಾಗಿ ಸಂವಹನ ಮಾಡುವುದರಿಂದ ಆಗುವ ಅನುಕೂಲಗಳೇನು?
ಸಂವಹನವೆಂದರೇನು?
ಇದು ಬಹಳ ಸರಳವಾದದ್ದು ಅನ್ನಿಸುತ್ತದೆ ಅಲ್ವಾ? ನಮ್ಮ ಮನಸ್ಸಿನಲ್ಲಿರುವುದನ್ನು ಇನ್ನೊಬ್ಬರಿಗೆ ಹೇಳುವುದೇ ಸಂಹವನ. ಇಬ್ಬರು ವ್ಯಕ್ತಿಗಳ ನಡುವೆ ಸಂಪರ್ಕವನ್ನೇರ್ಪಡಿಸುವುದೇ ಸಂವಹನ. ಕಮ್ಯುನಿಕೇಷನ್‍ಗೆ ಸಂಬಂಧಿಸಿದ ವಿಷಯದಲ್ಲಿ ಪುಸ್ತಕಗಳನ್ನು ಬರೆದಿರುವ ಹೆಚ್ಚಿನ ತಜ್ಞರು ಹೇಳಿರುವುದು ಇಂತಹುದೇ ಅರ್ಥ ಬರುವ ಮಾತುಗಳನ್ನು. ಆದರೆ ವಾಸ್ತವದಲ್ಲಿ ಇದಿಷ್ಟೇ ಸಂವಹನವಾಗುತ್ತದೆಯೇ?
ನಾವು ಹೇಳಿದ ಮಾತನ್ನು ನಾವು ಹೇಳಬೇಕೆಂದಿರುವ ಅರ್ಥದಲ್ಲಿಯೇ ಇನ್ನೊಬ್ಬ ವ್ಯಕ್ತಿ ಸ್ವೀಕರಿಸಿದಾಗ ಮಾತ್ರ ಸಂಹವನ ಪೂರ್ಣವಾಗುತ್ತದೆ. ಹೆಂಡತಿಯ “ಅಲ್ಲಿ” ಗಂಡನಿಗೆ ಬೆಡ್‍ರೂಮಿನಲ್ಲಿ ಎಂದು ತಿಳಿದರೆ ಮಾತ್ರ ಅವಳ ಮಾತಿಗೆ ಅರ್ಥವಿದೆ. ಇಲ್ಲದಿದ್ದರೆ ಹಳೆಯ ಗಾದೆ ಇದೆಯಲ್ವಾ, “ಕೋಣನ ಮುಂದೆ ಕಿನ್ನರಿ ಬಾರಿಸುವುದು”, ಹಾಗಾಗುತ್ತದೆ!
ಈ ದೃಷ್ಟಿಯಿಂದ ಸಂವಹನದ ಅತ್ಯುತ್ತಮ ವ್ಯಾಖ್ಯೆ ಕೊಟ್ಟಿರುವುದು ಎನ್ ಎಲ್ ಪಿ (ನ್ಯೂರೋ ಲಿಂಗ್ವಿಸ್ಟಿಕ್ ಪ್ರೋಗ್ರಾಮಿಂಗ್) ಎನ್ನುವ ಮನೋವಿಜ್ಞಾನದ ಇತ್ತೀಚಿನ ಒಂದು ಶಾಖೆಯಲ್ಲಿ. ಇದರ ಪ್ರಕಾರ “ನಿಮ್ಮ ಮಾತಿಗೆ ಸಿಗುವ ಪ್ರತಿಕ್ರಿಯೆಯೇ ನಿಮ್ಮ ಸಂವಹನದ ಅರ್ಥ”. ಅಂರರೆ ಎದುರಿಗಿನ ವ್ಯಕ್ತಿ ಹೇಗೆ ಪ್ರತಿಕ್ರಿಯಿಸುತ್ತಾನೆ ಎನ್ನವುದು ಅವನು ನಿಮ್ಮ ಮಾತನ್ನು ಹೇಗೆ ಅರ್ಥ ಮಾಡಿಕೊಂಡಿದ್ದಾನೆ ಎನ್ನುವುದಕ್ಕೆ ಸೂಚನೆ. ನೀವು ನಿರೀಕ್ಷಿಸುವ ಪ್ರತಿಕ್ರಿಯೆ ಬಂದಾಗ ಮಾತ್ರ ನಿಮ್ಮ ಭಾವನೆಗಳು ನಿಮಗೆ ಬೇಕಾದ ರೀತಿಯಲ್ಲಿ ಅವನಿಗೆ ತಲುಪಿರುತ್ತವೆ.
ರಸ್ತೆಯಲ್ಲಿನ ಸಣ್ಣ ಅಪಘಾತದಲ್ಲಿ ಗಾಯಗೊಂಡ ಲಲನೆಯೊಬ್ಬಳು ತಪ್ಪು ಮಾಡಿದವನನ್ನು ಹಿಗ್ಗಾಮುಗ್ಗಾ ಬೈಯುತ್ತಾಳೆ. ಅದನ್ನೆಲ್ಲಾ ಕೇಳಿದ ಅವನು “ಅಯ್ಯೋ ಬಿಡಿ ಮೇಡಮ್ ಏನೋ ಸಣ್ಣ ತಪ್ಪಾಗಿದೆ ಅದಕ್ಯಾಕೆ ಇಷ್ಟೆಲ್ಲಾ ಕೂಗಾಡ್ತೀರಾ. ಈಗೇನು ಜೀವ ಹೋಗಿಲ್ವಲ್ಲಾ” ಎನ್ನುತ್ತಾ ಬುರ್ರೆಂದು ಹೋಗಿಬಿಟ್ಟರೆ ಹುಡುಗಿ ಪೆಚ್ಚಾಗುತ್ತಾಳೆ. ತಪ್ಪೊಪ್ಪಿಗೆ, ಕ್ಷಮೆ ಅಥವಾ ಕೊನೆಯ ಪಕ್ಷ ಪಶ್ಚಾತ್ತಾಪದ ನಿರೀಕ್ಷೆಯಲ್ಲಿದ್ದ ಅವಳ ಕೋಪ ಅವನಿಗೆ ತಲುಪಿರುವುದೇ ಇಲ್ಲ.
ಕಛೇರಿಯಿಂದ ತಡವಾಗಿ ಮನೆಗೆ ಬಂದ ಅಪ್ಪನಿಗೆ ಮಗ ಓಡಿಬಂದು ಅಂಕಪಟ್ಟಿಯನ್ನು ತೋರಿಸಿ “ನಾನೇ ಕ್ಲಾಸಿಗೆ ಫಸ್ಟ್” ಎಂದು ಹೇಳಿದಾಗ, “ಏ ಹೋಗೋ ಸುಸ್ತಾಗಿದೆ, ತೊಂದರೆ ಕೊಡಬೇಡ” ಎಂದು ಅಪ್ಪ ಅವನನ್ನು ದೂರ ತಳ್ಳಬಹುದು. ಮುದ್ದಾಟ, ಹೊಗಳಿಕೆಯ ನಿರೀಕ್ಷೆಯಲ್ಲಿರುವ ಮಗುವಿನ ಖಿಷಿ ಅಪ್ಪನಿಗೆ ತಲುಪದಿದ್ದಾಗ ಅದು ಸಂವಹನ ಹೇಗಾಗುತ್ತದೆ?
ನಿಜವಾದ ಸಮಸ್ಯೆ ಇರುವುದು ಇಲ್ಲಿಯೇ. ಬರಿಯ ಶಬ್ದ, ಭಾವನೆ ಅಥವಾ ಘಟನೆಗಳಿಗೆ ಅವುಗಳದ್ದೇ ಆದ ಅರ್ಥವೇ ಇರುವುದಿಲ್ಲ. ನಾವೆಲ್ಲಾ ನಮ್ಮ ಮಿದುಳಿನಲ್ಲಿ ಹುದುಗಿಸಿಕೊಂಡಿರುವ ನಮಗೆ ಮಾತ್ರ ವಿಶಿಷ್ಟವಾದ ಒಂದು ಪರಿಧಿಯಲ್ಲಿ ಎಲ್ಲವನ್ನೂ ಅರ್ಥೈಸುತ್ತೇವೆ. ಅಂದರೆ ನಮ್ಮ ಬಾಲ್ಯದ ಅನುಭವಗಳ ಆಧಾರದ ಮೇಲೆ ನಮ್ಮ ತಲೆಯಲ್ಲಿ ನಮಗೆ ಮಾತ್ರ ಗೊತ್ತಿರುವ (ಕೆಲವೊಮ್ಮೆ ನಮಗೂ ತಿಳಿಯದ!) ಸಾಫ್ಟ್‍ವೇರ್ ಒಂದನ್ನು ಬರೆದುಕೊಂಡಿರುತ್ತೇವೆ. ಇದನ್ನೇ ಎನ್ ಎಲ್ ಪಿ ಯಲ್ಲಿ “ನಕಾಶೆ ವಾಸ್ತವವಲ್ಲ” (ಮ್ಯಾಪ್ ಈಸ್ ನಾಟ್ ರಿಯಾಲಿಟಿ) ಎನ್ನುವ ಹೇಳಿಕೆಯಲ್ಲಿ ವಿವರಿಸುತ್ತಾರೆ. ಎಲ್ಲರ ತಲೆಯಲ್ಲಿ ಅವರವರದೇ ನಕಾಶೆ ಇರುತ್ತದೆ ಮತ್ತು ಇವು ಯಾವುವೂ ವಾಸ್ತವವಾಗಬೇಕಿಲ್ಲ. ಎಲ್ಲರಿಗೂ ಅವರದ್ದು ಮಾತ್ರ ಅಂತಿಮ ಸತ್ಯ.
ಎದುರಿಗಿರುವವನ ತಲೆಯಲ್ಲಿರುವ ಸಾಫ್ಟ್‍ವೇರ್‍ನ ಅಥವಾ ನಕಾಶೆಯ ಪರಿಚಯವಿಲ್ಲದಿದ್ದಾಗ ನಮ್ಮ ಭಾವನೆಗಳನ್ನು ಮಾತಿನ ಮೂಲಕ ಅವನಿಗೆ ತಲುಪಿಸುವುದು ಹೇಗೆ?
ಸಂವಹನದ ಘಟಕಗಳು
ಸಂವಹನ ಎಂದರೆ ಮಾತನಾಡುವುದು ಅಂದರೆ ಶಬ್ದಗಳ ಮೂಲಕ ಹೇಳುವುದು ಎಂದುಕೊಂಡಿರುವ ನಮಗೆ ಸಂವಹನ ಬೇರೆ ಬೇರೆ ಘಟಕಗಳನ್ನೊಳಗೊಂಡಿರುತ್ತದೆ ಎಂದರೆ ಆಶ್ಚರ್ಯವಾಗಬಹುದಲ್ಲವೇ? ಸಂವಹನದಲ್ಲಿ ಮೂರು ಅಂಗಗಳಿವೆ.
1 ಶಬ್ದಗಳ ಮೂಲಕ ಹೇಳುವುದು ಅಂದರೆ ವರ್ಬಲ್ ಕಮ್ಯುನಿಕೇಷನ್. ಇಲ್ಲಿ ಆಡುವ ಶಬ್ದಗಳನ್ನು ಮಾತ್ರ ಪರಿಗಣಿಸಲಾಗುತ್ತದೆ.
2 ಧ್ವನಿಯ ಏರಿಳಿತದ ಮೂಲಕ ಹೇಳುವುದು ಅಂದರೆ ಇಂಟ್ರಾವರ್ಬಲ್ ಕಮ್ಯುನಿಕೇಷನ್. ಉದಾಹರಣೆಗೆ ಮಗುವಿಗೆ ಕತ್ತೆ ಎಂದು ಹೇಳುವಾಗ ನಮ್ಮ ಧ್ವನಿಯ ಬದಲಾವಣೆಯ ಮೂಲಕ ಪ್ರೀತಿಯ ಅಥವಾ ಕೋಪದ ಭಾವನೆ ಪ್ರಕಟಿಸಬಹುದು ನೀನು ದಡ್ಡ ಎಂದೂ ಕೂಡ ಇದೇ ಶಬ್ದದ ಮೂಲಕ ಸೂಚಿಸಬಹುದು. ಸಾರ್ವಜನಿಕ ಭಾಷಣಕಾರರೆಲ್ಲಾ ಧ್ವನಿಯನ್ನು ಪರಿಣಾಮಾಕಾರಿಯಾಗಿ ಬಳಸುವುದನ್ನು ಕಲಿತಾಗ ಮಾತ್ರ ಸಭಿಕರನ್ನು ಹಿಡಿದಿಡಲು ಸಾಧ್ಯ. ಕೆಲವರಿಗೆ ಈ ಕಲೆ ಸಹಜವಾಗಿ ಸಿದ್ಧಿಸಿದ್ದರೆ, ಇನ್ನೂ ಕೆಲವರು ಇದನ್ನು ಕಷ್ಟಪಟ್ಟು ರೂಡಿಸಿಕೊಂಡಿರುತ್ತಾರೆ.
3 ದೇಹಭಾಷೆಯ ಮೂಲಕ ಹೇಳುವುದು ಅಂದರೆ ನಾನ್‍ವರ್ಬಲ್ ಕಮ್ಯುನಿಕೇಷನ್. ಇದನ್ನು ಬಾಡಿ ಲಾಂಗ್ವೇಜ್ ಎಂತಲೂ ಹೇಳುತ್ತಾರೆ. ಮುಖಭಾವ ಮತ್ತು ಅಂಗಾಂಗಗಳ ಚಲನೆ ಇವುಗಳಲ್ಲಿ ಸೇರುತ್ತದೆ.
ನಾನ್ ವರ್ಬ್‍ಲ್ ಕಮ್ಯುನಿಕೇಷನ್ ಸಾರ್ವಜನಿಕ ವೇದಿಕೆಗಳಿಂದ ಮಾತನಾಡುವವರಿಗೆ ಮಾತ್ರ ಪ್ರಮುಖವಾಗುತ್ತದೆ ಎಂದು ತಪ್ಪು ತಿಳಿಯುವಂತಿಲ್ಲ. ಸಾರ್ವಜನಿಕ ಸಂದರ್ಭಗಳಲ್ಲಿ ಇದರ ಅರ್ಥ ದೇಹಭಾಷೆಗೆ ಸೀಮಿತಗೊಂಡಿರಬಹುದು. ಆದರೆ ಕೌಟುಂಬಿಕ, ಸ್ನೇಹ ಮತ್ತು ವ್ಯಾವಹಾರಿಕ ಸಂಬಂಧಗಳಲ್ಲಿ ನಾವು ರೂಪಿಸಿಕೊಂಡಿರುವ ನಮ್ಮ ಸಂಪೂರ್ಣ ವ್ಯಕ್ತಿತ್ವದ ಮೂಲಕ ನಾವು ಸಂವಹನ ಮಾಡುತ್ತೇವೆ. ಹಾಗಾಗಿ ನಾನ್ ವರ್ಬಲ್ ಕಮ್ಯುನಿಕೇಷನ್‍ನಲ್ಲಿ ನಮ್ಮ ದೇಹವಷ್ಟೇ ಅಲ್ಲ ಇಡೀ ವ್ಯಕ್ತಿತ್ವ ಮಾತನಾಡುತ್ತದೆ.
ಯಾವುದರ ಪಾಲೆಷ್ಟು?
ನಮ್ಮ ಒಟ್ಟಾರೆ ಸಂವಹನದಲ್ಲಿ ಮೇಲಿನ ಮೂರು ಘಟಕಗಳಲ್ಲಿ ಯಾವುದರ ಪಾಲು ಹೆಚ್ಚು ಎಂದು ಯಾರಾದರೂ ಕೇಳಿದರೆ ಉತ್ತರ ಸುಲುಭ. ಮೊದಲ ಎರಡು ಅಂಶಗಳು, ಅಂದರೆ ಶಬ್ದಗಳು ಮತ್ತು ಧ್ವನಿಯ ಏರಿಳಿತಗಳ ಮೂಲಕ ನಮ್ಮ ಹೆಚ್ಚಿನ ಸಂವಹನ ನಡೆಯುತ್ತದೆ ಎಂದು ಎಲ್ಲರೂ ಒಪ್ಪುತ್ತಾರೆ. ಹಾಗಾಗಿಯೇ ನಾವೆಲ್ಲಾ ಆಕರ್ಷಕವಾದ ಶಬ್ದಗಳನ್ನು ಉಪಯೋಗಿಸಿ ಧ್ವನಿಯ ಏರಿಳಿತಗಳೊಂದಿಗೆ ಮಾತನಾಡುವವರು ಉತ್ತಮ ಸಂವಹನಕಾರರು ಎಂದು ತಿಳಿದುಕೊಂಡಿದ್ದೇವೆ. ಇದು ಅರ್ಧ ಸತ್ಯ ಮಾತ್ರ.
ಆಲ್ಬರ್ಟ್ ಮೆಹರ್ಬಾನ್ ಎನ್ನುವ ಮನಶ್ಯಾಸ್ತ್ರಜ್ಞನ ಸಂಶೋಧನೆಗಳ ಪ್ರಕಾರ ನಾವೆಲ್ಲಾ ಶೇ 7ರಷ್ಟು ಶಬ್ದಗಳ ಮೂಲಕ, ಶೇ 38ರಷ್ಟು ಧ್ವನಿಯ ಏರಿಳಿತದ ಮೂಲಕ ಮತ್ತು ಶೇ55ರಷ್ಟು ದೇಹಭಾಷೆ ಮತ್ತು ವ್ಯಕ್ತಿತ್ವದ ಮೂಲಕ ಸಂವಹನ ಮಾಡುತ್ತೇವೆ. ಬೇರೆಬೇರೆ ಸಂಶೋಧನಗಳಲ್ಲಿ ಈ ಶೇಕಡವಾರು ಅಂಕಿಗಳು ಸ್ವಲ್ಪ ಹೆಚ್ಚು ಕಡಿಮೆ ಇದ್ದರೂ ಎಲ್ಲ ತಜ್ಞರೂ ಒಪ್ಪಿಕೊಳ್ಳುವುದು ಮಾನÀವನ ಸಂವಹನ ಕ್ರಿಯೆಯಲ್ಲಿ ಶಬ್ದಗಳು ಅತಿ ಕಡಿಮೆ ಪ್ರಭಾವ ಬೀರುತ್ತವೆ ಮತ್ತು ನಮ್ಮ ಒಟ್ಟಾರೆ ವ್ಯಕ್ತಿತ್ವ/ದೇಹಭಾಷೆ ಅತ್ಯಂತ ಹೆಚ್ಚಿನ ಪ್ರಭಾವ ಬೀರುತ್ತದೆ ಎನ್ನುವುದು.
ಸಂವಹನ ಸೋಲಿನ ಗುಟ್ಟು!
ನಮಗೆಲ್ಲಾ ದೊಡ್ಡ ತೊಂದರೆ ಇರುವುದು ಇಲ್ಲಿಯೇ! ಸಂವಹನ ಸೋಲುವುದಕ್ಕೆ ಪ್ರಮುಖ ಕಾರಣಗಳನ್ನು ನಾವು ಇಲ್ಲಿ ಹುಡುಕಬೇಕು. ಕೆಲವು ಸಂದರ್ಭಗಳನ್ನು ನೋಡಿ;
* ನಾವು ಯಾರಿಗೂ ಗೊತ್ತಾಗದಂತೆ ನಯವಾಗಿ ಸುಳ್ಳುಹೇಳಿ ಬಚಾವಾಗಿದ್ದೇವೆ ಎಂದುಕೊಳ್ಳುತ್ತೇವೆ. ಆದರೆ ನಮ್ಮ ಧ್ವನಿಯ ಹಿಂಜರಿಕೆ ಮತ್ತು ದೇಹದ ಇತರ ಚಲನೆಗಳು ನಿಜವನ್ನು ಸಾರಿರುತ್ತವೆ. ಎದುರಿಗಿರುವವರು ತಿರುಗಿಸಿ ಹೇಳಿಲ್ಲ ಎಂದರೆ ಅವರು ನಮ್ಮ ಮಾತನ್ನು ನಂಬಿದ್ದಾರೆ ಎಂದುಕೊಂಡರೆ ನಾವು ಮೂರ್ಖರಾಗುತ್ತೇವೆ.
* ನಮ್ಮ ಹೆಚ್ಚಿನ ರಾಜಕಾರಣಿಗಳು ಮತ್ತು ಹಲವಾರು ಡೋಂಗೀ ಧಾರ್ಮಿಕರ ಆಕರ್ಷಕ ಮಾತುಗಳು ನಮ್ಮ ಮೇಲೆ ಪ್ರಭಾವ ಬೀರದಿರುವುದಕ್ಕೆ ಪ್ರಮುಖ ಕಾರಣ ಅವರ ಒಟ್ಟಾರೆ ವ್ಯಕ್ತಿತ್ವದ ಇತರ ಅಂಶಗಳು.
* ದುಖವಾಗದಿದ್ದರೂ ಅಳುವ ನಾಟಕ ಮಾಡಲು ಯತ್ನಿಸಿದಾಗ ಧ್ವನಿ ಒರಟಾಗಿರುತ್ತದೆ ಮತ್ತು ಕಣ್ಣೀರು ಬರುವುದೇ ಇಲ್ಲ! ಮಕ್ಕಳು ಬರಿಯ ಹಟಕ್ಕಾಗಿ ಅಳುವಾಗ ನೀವು ಇದನ್ನು ಗಮನಿಸಿರಬಹುದು. ಎದುರಿಗೆ ಯಾರೂ ಇಲ್ಲದಿದ್ದಾಗ ತನ್ನಿಂದ ತಾನೆ ನಿಲ್ಲುವ ಅಳು ಯಾರನ್ನಾದರೂ ಕಂಡೊಡನೆ ಏರಿದ ಧ್ವನಿಯಲ್ಲಿ ಕಣ್ಣಿರೇ ಇಲ್ಲದೆ ಶುರುವಾಗುತ್ತದೆ! ಇದು ನೈಜ ದುಖವಲ್ಲ ಎಂದು ಇನ್ನೊಂದು ಮಗುವಿಗೂ ತಿಳಿಯುತ್ತದೆ.
* ಕೆಲಸವನ್ನು ಬಾಸ್ ಹೇಳಿದ ಸಮಯದಲ್ಲಿ ಮುಗಿಸಲು ಆಗುವುದಿಲ್ಲ ಎಂದು ಗೊತ್ತಿದ್ದರೂ “ಖಂಡಿತಾ ಮಾಡಿಕೊಡುತ್ತೇನೆ” ಎಂದು ಬೊಗಳೆ ಬಿಟ್ಟಿರುತ್ತೇವೆ. ಕೆಲಸ ಗಡುವಿನ ಒಳಗೆ ಮುಗಿಯದಿದ್ದಾಗ “ಅವತ್ತಿನ ನಿಮ್ಮ ಮುಖ ನೋಡಿದರೆ ನಿಮಗೆ ಮಾಡಕ್ಕೆ ಆಗಲ್ಲ ಎಂದು ನನಗೆ ಗೊತ್ತಿತ್ತು” ಎಂದು ಬಾಸ್ ಉಗಿದಾಗ ನಮ್ಮ ದೇಹದ ಚಲನೆಗಳು ಸತ್ಯವನ್ನು ಬಿಟ್ಟುಕೊಟ್ಟಿರುತ್ತವೆ ಎನ್ನುವುದನ್ನು ನಾವು ಗಮನಿಸುವುದಿಲ್ಲ.
ಮನಶ್ಯಾಸ್ತ್ರದ ಪಿತಾಮಹ ಸಿಗ್ಮಂಡ್ ಪ್ರಾಯ್ಡ್ ಹೇಳುತ್ತಾನೆ, “ಯಾವ ಮನುಶ್ಯನೂ ಗುಟ್ಟುನ್ನು ಇಟ್ಟುಕೊಳ್ಳಲಾಗುವುದಿಲ್ಲ. ಅವನ ತುಟಿಗಳು ಮೌನವಾಗಿದ್ದರು ಬೆರಳುಗಳು ವಟಗುಟ್ಟಿರುತ್ತವೆ. ಸುಳ್ಳು ನವರಂದ್ರಗಳಿಂದಲೂ ಜಿನುಗುತ್ತಿರುತ್ತದೆ”
ಇದನ್ನು ಕಲಿಯಬೇಕೇ?
ಇವತ್ತು ವ್ಯಕ್ತಿತ್ವ ವಿಕಸನ ಶಿಬಿರ, ಕಮ್ಯುನಿಕೇಷನ್ ವರ್ಕ್‍ಶಾಪ್‍ಗಳಲ್ಲಿ ದೇಹಭಾಷೆಯನ್ನು ಉಪಯೋಗಿಸಲು ಕಲಿಸಲಾಗುತ್ತದೆ. ಹೀಗೆ ಕಲಿತವರು ಮಾತ್ರ ಅದನ್ನು ಅರ್ಥಮಾಡಿಕೊಳ್ಳಬಲ್ಲರು ಮತ್ತು ವ್ಯಕ್ತಪಡಿಸಲಬಲ್ಲರು ಎಂದು ಯಾರೂ ತಿಳಿದುಕೊಳ್ಳಬೇಕಿಲ್ಲ. ನಮ್ಮ ದೇಹದ ಚಲನೆಗಳನ್ನು ನಾವು ಸಹಜವಾಗಿ ಕಲಿತಿರುತ್ತೇವೆ, ಉಪಯೋಗಿಸಿತ್ತಿರುತ್ತೇವೆ ಮತ್ತು ಅರ್ಥಮಾಡಿಕೊಳ್ಳಬಲ್ಲೆವು ಕೂಡ. ಇವುಗಳಲ್ಲಿ ಕೆಲವು ನಮ್ಮ ವಂಶವಾಹಿಲ್ಲಿ ಬಂದಿರುವ ಸಾಧ್ಯತೆಗಳಿದ್ದರೂ ಹೆಚ್ಚಿನವುಗಳನ್ನು ನಾವು ಬಾಲ್ಯದಿಂದಲೇ ನೋಡಿ, ಅನುಭವಿಸಿ, ಪ್ರಯೋಗಿಸಿ ಕಲಿತಿರುತ್ತೇವೆ. ಇವುಗಳನ್ನು ಭಾಷೆಯಲ್ಲಿ ಹೇಳದಿದ್ದರೂ ನಮ್ಮ ಮಿದುಳು ಮಾತ್ರ ಗ್ರಹಿಸಿರುತ್ತದೆ. ಅಡಿಗರು ಹೇಳುವಂತೆ “ಅಮೃತವಾಹಿನಿಯೊಂದು ಹರಿಯುತಿದೆ ಮಾನವನ ಎದೆಯಿಂದಲೆದೆಗೆ ಸತತ”.
ಇಲ್ಲಿ ಎಂತಹ ವಿಪರ್ಯಾಸವಿದೆ ನೋಡಿ. ಪ್ರಾಣಿ ಪ್ರಪಂಚದಲ್ಲಿ ಭಾಷೆ ಅಥವಾ ಶಬ್ದಗಳೇ ಇಲ್ಲ. ಹಾಗಾಗಿ ಎಲ್ಲಾ ರೀತಿಯ ಸಂವಹನ ದೇಹದ ಚಲನೆಯ ಮೂಲಕವೇ ನಡೆಯಬೇಕು. ಇದರಿಂದಾಗಿಯೇ ಮನುಶ್ಯ ಪ್ರಪಂಚದಲ್ಲಿರುವ ನಯವಂಚಕತನ, ಸೋಗಲಾಡಿದತನ, ವಂಚನೆ, ಸುಳ್ಳುಗಳು ಅಲ್ಲಿರಲು ಸಾಧ್ಯವೇ ಇಲ್ಲ. ಭಾಷೆಯ ಉಗಮವಾದಾಗಿನಿಂದ ನಾವು ಬಹಳ ಸುಸಂಸ್ಕøತರಾಗಿದ್ದೇವೆ ಎಂದು ಅಂದುಕೊಡಿದ್ದರೆ ಅದೆಲ್ಲಾ ಸುಳ್ಳು. ಮಾತು ಮತ್ತು ಭಾಷೆ ಮನುಕುಲವನ್ನು ನೈತಿಕವಾಗಿ ಕೆಳಗೆ ಕೊಂಡೊಯ್ದಿದೆ. ಇಷ್ಟಾದ ಮೇಲೆ ಕೂಡ ನಾವು ಮಾತುಗಳಿಂದ ನಮ್ಮ ವ್ಯಕ್ತಿತ್ವವನ್ನು ಕಟ್ಟುವ ವ್ಯರ್ಥಪ್ರಯತ್ನವನ್ನು ಮುಂದುವರೆಸಿಯೇ ಇದ್ದೇವೆ!
ಅದ್ಭುತ ಮಾದರಿ
ಗೌತಮ ಬುದ್ಧ, ಏಸುಕ್ರಿಸ್ತ, ಭಾರತದ ಎಲ್ಲಾ ಭಾಗಗಳಲ್ಲಿ ವಿವಿದ ಕಾಲಘಟ್ಟಗಳಲ್ಲಿ ಬದುಕಿದ್ದ ಭಕ್ತಿಪಂತ, ದಾಸಪಂತದವರು, ಕನ್ನಡದ ವಚನಕಾರರು-ಹೀಗೆ ಮನುಕುಲ ಇಲ್ಲಿಯವರೆಗೆ ಸಾಕಷ್ಟು ಜನ ಉತ್ತಮ ಸಂವಹನಕಾರರನ್ನು ಕಂಡಿದೆ. ಇವರೆಲ್ಲಾ ತಮ್ಮ ಕೆಲಸಗಳು ಮತ್ತು ಜೀವನಶೈಲಿಯ ಮೂಲಕ ತಮ್ಮ ಸಂದೇಶವನ್ನು ಸಾರಿದ್ದರು. ಮಾತುಗಳು ಒಟ್ಟಾರೆ ವ್ಯಕ್ತಿತ್ವಕ್ಕೆ ಪೂರಕವಾಗಿ ಮಾತ್ರ ಕೆಲಸಮಾಡಿದ್ದವು. ಹಾಗಾಗಿ ಅವರ ಮಾತುಗಳು ಇಂದಿಗೂ ಪ್ರಸ್ತುತ ಮತ್ತು ಪರಿಣಾಮಕಾರಿ. ರಾಜಕೀಯ ಮತ್ತು ಸಾರ್ವಜನಿಕ ಜೀವನದಲ್ಲಿ ಮಾತು ಮತ್ತು ಕೃತಿಗಳಿಗೆ ಅಂತರವೇ ಇಲ್ಲದಂತೆ ಬದುಕಿದ ಏಕೈಕ ವ್ಯಕ್ತಿ ಗಾಂಧೀಜಿ. ಸರಳ ಶಬ್ದಗಳಿಂದ ನೀರಸ ಧ್ವನಿಯಲ್ಲಿ ಮಾತನಾಡುತ್ತಿದ್ದ ಗಾಂಧೀಜಿ ಯಾವುದೇ ಮಾನದಂಡಗಳಲ್ಲಿ ಅಳೆದರೂ ಆಕರ್ಷಕ ಮಾತುಗಾರರಲ್ಲ. ಆದರೆ ಇವರು ಅದ್ಭುತ ಸಂವಹನಕಾರರು. ಗಾಂಧೀಜಿಯವರ ಸಂದೇಶಗಳಿಗೆ ಮಾತುಗಳೇ ಬೇಕಿರಲಿಲ್ಲ. ಅವರ ಒಟ್ಟಾರೆ ಜೀವನವೇ ಅವರ ಉಪದೇಶವಾಗಿತ್ತು. ಸಂವಹನದ ಬಗೆಗೆ ಸಂಶೋಧನೆ ಮಾಡುವವರಿಗೆಲ್ಲಾ ಗಾಂಧೀಜಿಗಿಂತ ಉತ್ತಮ ಮಾದರಿ ಸಿಗಲು ಸಾಧ್ಯವೇ ಇಲ್ಲ.
ಉತ್ತಮ ಸಂವಹನ ಹೇಗೆ?
ಇವೆಲ್ಲಾ ಮಹಾಪುರುಶರ ಮಾತಾಯಿತು. ಜನಸಾಮಾನ್ಯರಾದ ನಾವೆಲ್ಲಾ ನಮ್ಮ ಸಂವಹನವನ್ನು ಉತ್ತಮಪಡಿಸಿಕೊಳ್ಳುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳುವುದು ಮುಖ್ಯ.
“ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ,” ಎನ್ನುವುದು ಹಳೆಯ ಗಾದೆ ಮಾತು. ಇಲ್ಲಿ ಊಟ ಅಂದರೆ ಬರಿಯ ತಿನ್ನುವುದಷ್ಟೇ ಅಲ್ಲ, ಉಪವಾಸ ಮಾಡುವುದೂ ಕೂಡ ಸೇರುತ್ತದೆ. ಹಾಗೆಯೇ ಮಾತು ಅಂದರೆ ಮೇಲೆ ಹೇಳಿದ ಸಂವಹನದ ಮೂರು ಘಟಕಗಳ ಜೊತೆ ಮೌನವನ್ನೂ ಒಳಗೊಂಡಿರುತ್ತದೆ.
ಉತ್ತಮ ಸಂವಹನದಿಂದ ನಮ್ಮ ಸಂಬಂಧಗಳು ಸುಧಾರಿಸುತ್ತವೆ. ನಮ್ಮ ಯೋಚನೆ, ಉದ್ದೇಶಗಳನ್ನು ಇತರರಿಗೆ ಸರಿಯಾಗಿ ತಲುಪಿಸಲು ಸಾಧ್ಯವಾದಾಗ ನಮ್ಮ ಕೆಲಸ ಹಗುರವಾಗುತ್ತದೆ. ನಮ್ಮ ಆತ್ಮವಿಶ್ವಾಸ ಹೆಚ್ಚಿ ನಮ್ಮ ಗುರಿಯನ್ನು ತಲುಪುವುದು ಸುಲುಭವಾಗುತ್ತದೆ. ಹಾಗಿದ್ದರೆ ಇದನ್ನು ಸಾಧಿಸುವುದು ಹೇಗೆ ಎಂದು ಸ್ವಲ್ಪ ತಿಳಿಯೋಣ.
1 ಕೇಳುವುದು; ಯಶಸ್ವೀ ಸಂವಹನದ ಮೊದಲ ಹಂತದಲ್ಲಿ ನಾವು ಕೇಳುವ ಕಲೆಯನ್ನು ರೂಡಿಸಿಕೊಳ್ಳಬೇಕು ಎಂದು ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಕೇಳುವಿಕೆ ಒಟ್ಟಾರೆ ಸಂವಹನ ಒಂದು ಪ್ರಮುಖ ಭಾಗ ಎಂದು ಇವತ್ತು ತಜ್ಞರೆಲ್ಲರೂ ಒಪ್ಪುತ್ತಾರೆ.
ಅಮೇರಿಕಾದ ಸುಪ್ರಸಿದ್ಧ ಮ್ಯಾನೇಜ್‍ಮೆಂಟ್ ಗುರು ಸ್ಟೀಫನ್ ಕೋವೆ ತನ್ನ ಜನಪ್ರಿಯ ಪುಸ್ತಕ “ಸೆವೆನ್ ಹ್ಯಾಬಿಟ್ಸ್ ಆಫ್ ಹೈಲಿ ಎಫೆಕ್ಟಿವ್ ಪೀಪಲ್” ನಲ್ಲಿ ಹೇಳುವ ಒಂದು ಸೂತ್ರ ಹೀಗಿದೆ, “ನಿಮ್ಮನ್ನು ಇತರರಿಗೆ ಅರ್ಥಮಾಡಿಸುವ ಮೊದಲು ಅವರನ್ನು ಅರ್ಥ ಮಾಡಿಕೊಳ್ಳಿ”. ಯಾರನ್ನಾದರೂ ಅರ್ಥ ಮಾಡಿಕೊಳ್ಳಲು ಇರುವ ಸರಳ ಮಾರ್ಗ ಅವರ ಮಾತುಗಳನ್ನು ಸಂಪೂರ್ಣವಾಗಿ ಕೇಳುವುದು.
ನಾವೆಲ್ಲಾ ಮಾಡುವ ದೊಡ್ಡ ತಪ್ಪು ಎಂದರೆ ಇತರತ ಮಾತುಗಳನ್ನು “ಕೇಳ” (ಪಾಲಿಸ) ಬೇಕಾತ್ತದೆ ಎಂಬ ಭಯದಲ್ಲಿ ಅವರು ಹೇಳುವುದನ್ನು (ಕಿವಿಯಿಂದ) ಕೇಳುವುದೇ ಇಲ್ಲ! ಕೇಳುವುದರ ಬಗೆಗೆ ಕೆಲವು ಸರಳ ನಿಯಮಗಳನ್ನು ಪಾಲಿಸಬಹುದು
* ಎದುರಿಗಿರುವವರು ಹೇಳುತ್ತಿರುವ ಮಾತನ್ನು ಸಂಪೂರ್ಣವಾಗಿ ಕೇಳಬೇಕು. ನಮಗೆ ಬೇಕಾಗಿದ್ದನ್ನು ಮಾತ್ರ ಗ್ರಹಿಸಿ ಉಳಿದಿದ್ದನ್ನು ಕಡೆಗಣಿಸಿದರೆ ನಮಗೆ ಅವರ ಮಾತುಗಳಲ್ಲಿನ ಪೂರ್ಣ ಅರ್ಥ ಸಿಗುವುದಿಲ್ಲ.
* ಅವರು ಮಾತನಾಡುವಾಗಲೇ ನಮ್ಮ ಉತ್ತರವನ್ನು ಸಿದ್ಧ ಮಾಡಿಕೊಳ್ಳತೊಡಗಿದರೆ ಕೇಳುವುದರಲ್ಲಿ ಏಕಾಗ್ರತೆ ಉಳಿಯುವುದಿಲ್ಲ. ಹಾಗಾಗಿ ಎಲ್ಲಾ ಕೇಳಿದ ಮೇಲೆ ಮಾತ್ರ ನಮ್ಮ ಉತ್ತರದ ಬಗೆಗೆ ಯೋಚಿಸಬೇಕು.
* ಕೇಳುವಾಗ ಬೇರೆ ಕೆಲಸದಲ್ಲಿ ತೊಡಗಿರಬಾರದು. ಮಾತನಾಡುವವರ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ “ಹಾಂ, ಹೂಂ, ಹೌದಾ, ಆಮೇಲೆ,” ಮುಂತಾದ ಶಬ್ದಗಳ ಮೂಲಕ ಅವರಿಗೆ ನಮ್ಮ ನಿಜವಾದ ಕಾಳಜಿಯ ಬಗೆಗೆ ನಂಬಿಕೆ ಹುಟ್ಟಿಸಬೇಕು.
* ವಿಷಯಕ್ಕೆ ಸಂಬಂಧಿಸದ ಮಾತುಗಳು ಅಥವಾ ಹೇಳಿದ್ದನ್ನೇ ಹೇಳುತ್ತಿದ್ದಾಗ ಮಾತ್ರ ಅವರ ಮಾತನ್ನು ತಡೆಯಬಹುದು. ಇಲ್ಲದಿದ್ದರೆ ಅವರಿಗೆ ತಮ್ಮ ಅಭೀಪ್ರಾಯವನ್ನು ಹೇಳಲು ಪೂರ್ಣ ಅವಕಾಶ ಕೊಡಬೇಕು.
ಇದನ್ನೆಲ್ಲಾ ಮಾಡುವುದಕ್ಕೆ ಸಮಯವಿಲ್ಲ ಎಂದು ಯಾವಾಗಲೂ ತರಾತುರಿಯಲ್ಲಿರುವ ಜನಗಳು ಹೇಳಬಹುದು. ವಾಸ್ತವದಲ್ಲಿ ಮುಂದೆ ನಡೆಯಬಹುದಾದ ಬಹಳಷ್ಟು ಅಹಿತಕರ ಘಟನೆಗಳನ್ನು ತಪ್ಪಿಸುವುದರ ಮೂಲಕ ಇದರಿಂದ ಸಮಯ ಉಳಿತಾಯವಾಗುತ್ತದೆ.
2 ಕೇಳಿದ್ದನ್ನು ಅರ್ಥ ಮಾಡಿಕೊಳ್ಳುವುದು. ಎಲ್ಲರೂ ಅವರವರ ಮಾನಸಿಕ ಹಿನ್ನೆಲೆಯಲ್ಲಿ ಮಾತು ಮತ್ತು ಘಟನೆಗಳಿಗೆ ಅರ್ಥ ಕೊಡುತ್ತಾರೆ ಎಂದು ಹಿಂದೆಯೇ ತಿಳಿದಿದ್ದೇವೆ. ಹಾಗಾದರೆ ಎದುರಿಗಿರುವವರು ಹೇಳಿದ ಮಾತುಗಳ ಹಿಂದಿನ ಅರ್ಥ ಏನಿದೆ ಎಂದು ಹೇಗೆ ತಿಳಿಯುವುದು?
ಮಾತುಗಳಿಗೆ ನಿಮ್ಮ ಅರ್ಥ ಹಚ್ಚದೆ ಹೇಳಿದವರ ಮಾನಸಿಕ ಹಿನ್ನೆಲೆಯಲ್ಲೇ ಅರ್ಥ ಮಾಡಿಕೊಳ್ಳುವುದು ಕಷ್ಟವೇನಲ್ಲ. ಅವರ ಮಾತು ಮುಗಿದ ನಂತರ, ಅದರ ಸಾರಾಂಶವನ್ನು ನಾವು ಹೇಳಿ, “ನೀವು ಹೇಳಬೇಕೆಂದಿರುವುದು ಇದೇ ಅಲ್ಲವೇ?” ಎಂದು ಕೇಳಿದರಾಯಿತು. ಅವರು ಬೇರೆ ವಿವರಣೆಗಳನ್ನು ಕೊಟ್ಟರೆ ಅದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬಹುದು. ಅವರು ನಿಮ್ಮ ಮಾತುಗಳನ್ನು ಒಪ್ಪಿದರೆ ನೀವಾಗಲೇ ಅವರಿಗೆ ಮಾನಸಿಕವಾಗಿ ಹತ್ತಿರವಾಗಿರುತ್ತೀರಿ. ಹಾಗಾಗಿ ಮುಂದಿನ ಸಂಭಾಷಣೆ ಸರಾಗವಾಗಿ ಮುಂದುವರೆಯುತ್ತದೆ.
3 ನಮ್ಮ ಅಭೀಪ್ರಾಯ ಹೇಳುವುದು. ಇನ್ನೊಬ್ಬರ ಮಾತನ್ನು ತಾಳ್ಮೆಯಿಂದ ಕೇಳುವುದು ಅಂದರೆ ಆ ಮಾತುಗಳಿಗೆ ನಮ್ಮ ಒಪ್ಪಿಗೆ ಸೂಚಿಸುವುದು ಅಂತೇನೂ ಅಲ್ಲ. ಒಮ್ಮೆ ಅವರನ್ನು ಅರ್ಥ ಮಾಡಿಕೊಂಡ ಮೇಲೆ ನಮ್ಮ ಅಭೀಪ್ರಾಯವನ್ನು ಖಚಿತ ಶಬ್ದಗಳಲ್ಲಿ ಮೃದು ಧ್ವನಿಯಲ್ಲಿ ಹೇಳಬಹುದು. ಇಲ್ಲಿ ಭಾಷೆ, ಧ್ವನಿಯ ಏರಿಳಿತ, ದೇಹಭಾಷೆ ಎಲ್ಲಾ ಉಪಯುಕ್ತವಾಗುತ್ತವೆ. ಅನಗತ್ಯವಾದ ಅಭೀಪ್ರಾಯ ವ್ಯಕ್ತಪಡಿಸುವುದು, ಟೀಕೆ, ವ್ಯಂಗ್ಯ ಇವೆಲ್ಲವುಗಳಿಂದ ದೂರವಿರಬೇಕು. ಹೇಳ ಬೇಕಾದ್ದನ್ನಷ್ಟೇ ನೇರವಾಗಿ ಸರಳವಾಗಿ ಹೇಳಿ ಸುಮ್ಮನಾಗಬೇಕು. ನೆನಪಿಡಿ ಅನಗತ್ಯ ಮಾತುಗಳಿಗಿಂತ ಮೌನ ಹೆಚ್ಚು ಉಪಯುಕ್ತವಾದದ್ದು. ಮೌನ ಇಬ್ಬರಿಗೂ ಯೋಚಿಸಲು ಮತ್ತು ಮುಂದಿನ ಸಂಭಾಷಣೆಯ ತಯಾರಿಗೆ ಅನುವು ಮಾಡಿಕೊಡುತ್ತದೆ.
ಇವೆಲ್ಲವುಗಳನ್ನು ಇತರರನ್ನು ನೋಡಿ ಮತ್ತು ನಮ್ಮ ಹಳೆಯ ಅನುಭವಗಳನ್ನು ವಿಶ್ಲೇಷಿಸಿ ನಾವೇ ಕಲಿಯುತ್ತಾ ಹೋಗಬಹುದು. ಹಿಂದೆ ಕೆಲವು ಸಂದರ್ಭಗಳಲ್ಲಿ ನಾವು ನಮ್ಮ ಅಭೀಪ್ರಾಯಗಳನ್ನು ಸರಿಯಾಗಿ ಹೇಳಿದ್ದರೆ, ಆಗ ನಾವು ಏನು ಮತ್ತು ಹೇಗೆ ಮಾತನಾಡಿದ್ದೆವು ಎಂದು ನೆನಪು ಮಾಡಿಕೊಂಡು ಅವುಗಳನ್ನು ಇತರ ಕಡೆಗಳಲ್ಲೂ ಬಳಸಬಹುದು. ಹೀಗೆ ಸಾಕಷ್ಟು ಸಾರಿ ಮಾಡಿದ ಮೇಲೆ ಯಾವ ಸಂದರ್ಭಗಳಲ್ಲಿ ಹೇಗೆ ನಮ್ಮನ್ನು ಪ್ರಸ್ತುತ ಪಡಿಸಿಕೊಳ್ಳಬೇಕು ಎನ್ನುವುದು ನಮಗೆ ಕರಗತವಾಗುತ್ತದೆ. ಇವೆಲ್ಲವನ್ನೂ ನಾವು ಮಾಡುತ್ತಾ ಬಂದಿರುತ್ತೇವೆ. ಸ್ವಲ್ಪ ವ್ಯವಸ್ಥಿತವಾಗಿ ಮಾಡಲು ಕಲಿತರೆ ಹೆಚ್ಚು ಪರಿಣಾಮಕಾರಿಯಾಗುತ್ತದೆ.
ಸ್ನೇಹಿತರೊಡನೆ ಅಥವಾ ಕುಟುಂಬದವರೊಡನೆ ಸುಮ್ಮನೆ ಹರಟುವಾಗ ಈ ನಿಯಮಗಳ ಅಗತ್ಯವಿರುವುದಿಲ್ಲ. ಹಾಗಿದ್ದರೂ ಅಂತಹ ಸಂದರ್ಭಗಳಲ್ಲಿ ಕೂಡ ನಾವು ನಡೆದುಕೊಳ್ಳುವ ರೀತಿಯು ನಮ್ಮ ವ್ಯಕ್ತಿತ್ವದ ಮುಖಗಳನ್ನು ಇತರರಿಗೆ ಪರಿಚಯಿಸುತ್ತದೆ ಎನ್ನವುದನ್ನು ಮರೆಯಬಾರದು.
ಮೌನ ಸಂವಹನ!
“ಮೌನಂ ಸಮ್ಮತಿ ಲಕ್ಷಣಂ” ಎನ್ನುವುದು ಬಹಳ ಹಳಸಿದ ಮಾತಾಗಿದೆ. ಇದನ್ನು ಹೇಳಿದವನು ಅದು ಯಾವ ಮಾನದಂಡಗಳ ಆಧಾರದ ಮೇಲೆ ಈ ತೀರ್ಮಾನಕ್ಕೆ ಬಂದನೋ ಗೊತ್ತಿಲ್ಲ. ವಾಸ್ತವದಲ್ಲಿ ಹೆಚ್ಚಿನ ಸಾರಿ ಮೌನ ಅಸಮ್ಮತಿಯ ಸೂಚಕವಾಗಿರುತ್ತದೆ. ತೌರು ಮನೆಗೆ ಹೋಗ್ಬರ್ಲೇನ್ರೀ, ಎಂದು ಹೆಂಡತಿ ಕೇಳಿದಾಗ ಗಂಡ ಸುಮ್ಮನಿದ್ದರೆ ಬೇಡ ಎಂದು ಹೆಂಡತಿ ತಿಳಿದುಕೊಳ್ಳುತ್ತಾಳೆ. ರಜ ಕೇಳಿದಾಗ ಬಾಸ್ ಮಾತನಾಡದಿದ್ದರೆ ರಜಾ ಮಂಜೂರಾಗಿಲ್ಲ ಎಂದರ್ಥ.
ಇಷ್ಟೇ ಅಲ್ಲದೆ ಮೌನ ಆಯಾ ಸಂದರ್ಭಗಳ ಮತ್ತು ಸಂಭಾಷಿಸುತ್ತಿರುವ ವ್ಯಕ್ತಿಗಳ ಸಂಬಂಧದ ಆಧಾರದ ಮೇಲೆ ಬೇರೆ ಬೇರೆ ಸೂಚನೆಗಳನ್ನು ತಲುಪಿಸುತ್ತದೆ. ಇದು ಕೆಲವೊಮ್ಮೆ ಕೋಪ, ಅಸಹನೆಯಾದರೆ, ಮತ್ತೆ ಕೆಲವೊಮ್ಮೆ ಅಸಡ್ಡೆ ಅಥವಾ ನಿರಾಸಕ್ತಿಯನ್ನು ಹೇಳಬಹುದು. ಹಾಗೆಯೇ ಅಜ್ಞಾನ, ಅನಾದರ, ಅಥವಾ ದುಖ ಕೂಡ ಮೌನದಲ್ಲಿಡಗಿರಬಹುದು.
ಮೌನವಾಗಿದ್ದುಕೊಂಡು ಏನೂ ಹೇಳಲಾಗುವುದಿಲ್ಲ ಎಂದುಕೊಂಡವರಿಗೆ ಅದರ ಬೆಲೆಯೇ ಗೊತ್ತಿರುವುದಿಲ್ಲ. ಜಗಳವಾಡಿ ಠೂ ಬಿಟ್ಟಿರುವ ಪ್ರೇಮಿಗಳು ಅಥವಾ ಪತಿಪತ್ನಿಯರನ್ನು ಕೇಳಿ, ಮೌನದ ಆಳದಲ್ಲಿ ಎಂತಹ ನೋವು ತಳಮಳ ಹಿಂಸೆಗಳೆಲ್ಲಾ ಅಡಗಿರುತ್ತದೆ ಎಂದು ಹೇಳುತ್ತಾರೆ!
ಇವಾನ್ ಡಿ ಹಿಚ್ ಹೇಳುತ್ತಾನೆ, “ಮೌನದ ವ್ಯಾಕರಣವನ್ನು ಕಲಿಯುವುದು ಸದ್ದಿನ (ಭಾಷೆಯ) ವ್ಯಾಕರಣವನ್ನು ಕಲಿಯುವುದಕ್ಕಿಂತ ಹೆಚ್ಚು ಕಷ್ಟ” ಇವತ್ತಿನ ರಾಜಕಾರಣಿಗಳು, ಸಿನಿಮಾದವರು ಮತ್ತು ಸಾರ್ವಜನಿಕ ಜೀವನದಲ್ಲಿರುವವರೆಲ್ಲಾ ಶಬ್ದಬೇದಿಯಿಂದ (ವರ್ಬಲ್ ಡಯೇರಿಯಾ) ನರಳುತ್ತಾರೆ. ಪರಿಣಾಮಕಾರಿಯಾದ ಶಬ್ದಗಳ ಪ್ರಯೋಗದಿಂದ ತಮ್ಮ ವ್ಯಕ್ತಿತ್ವ ಕಟ್ಟಿಕೊಳ್ಳಬಹುದೆಂಬ ಭ್ರಮೆಯಲ್ಲಿರುವ ಇವರೆಲ್ಲಾ ಗಾಂಧಿಜಿಯಿಂದ ಮೌನದ ಮೌಲ್ಯವನ್ನು ತಿಳಿದುಕೊಳ್ಳಬೇಕಾಗಿದೆ. ಹಾಗಾದಾಗ ನಮ್ಮ ಸಾರ್ವಜನಿಕ ಬದುಕು ಅಗತ್ಯವಿರುವಷ್ಟೇ ಮಾತು ಮತ್ತು ತನ್ಮಯತೆಯಿಂದ ಮಾಡುವ ಕೃತಿಯಿಂದ ಶ್ರೀಮಂತಗೊಳ್ಳಬಹುದೇನೋ!
ಸಂವಹದನ ಭಿನ್ನ ಮಾಧ್ಯಮಗಳು
ಮನೆಯಲ್ಲಿ, ಕಛೇರಿಯಲ್ಲಿ, ಸಾರ್ವಜನಿಕ ಸಂದರ್ಭಗಳಲ್ಲಿ ಅಥವಾ ವೇದಿಕೆಯಿಂದ ಮಾತನಾಡುವುದು ಮಾತ್ರ ಸಂವಹನ ಮಾಧ್ಯಮಗಳು ಎಂದುಕೊಳ್ಳಬೇಕಿಲ್ಲ. ಪತ್ರಗಳು, ಸಾಹಿತ್ಯ, ಲೇಖನಗಳು, ಕಲಾಪ್ರಕಾರಗಳಾದ ಸಂಗೀತ, ನೃತ್ಯ, ಶಿಲ್ಪ ಮತ್ತು ಚಿತ್ರಕಲೆ, ಇವೆಲ್ಲವೂ ಸಂವಹನದ ಭಿನ್ನ ಭಿನ್ನ ಮಾಧ್ಯಮಗಳು. ಸಾಹಿತ್ಯ ಮತ್ತು ಕಲಾಪ್ರಕಾರಗಳಿಗೆ ವಿಶೇಷ ಪ್ರತಿಭೆಯ ಅಗತ್ಯವಿದೆ. ಆದರೆ ಉಳಿದ ರೀತಿಯ ಸಂವಹನ ಮಾಧ್ಯಮಗಳನ್ನು ಎಲ್ಲರೂ ಕರಗತ ಮಾಡಿಕೊಳ್ಳಬಹುದು. ಮಾತನಾಡುವ ಮತ್ತು ಬರೆಯುವ ಮಾಧ್ಯಮಗಳು ಎನ್ನುವುದು ಎರಡು ಪ್ರಮುಖ ಸಂವಹನದ ಮಾಧ್ಯಮಗಳಾದರೂ ಅವುಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಗಮನಸಲ್ಲಿರುಸಬೇಕಾದ ಅಂಶಗಳನ್ನು ಹೀಗೆ ಪಟ್ಟಿಮಾಡಬಹುದು;
* ಯಾವ ಓದುಗರನ್ನು/ಕೇಳುಗರನ್ನು ಗುರಿಯಾಗಿಟ್ಟುಕೊಂಡಿದ್ದೇವೆ ಮತ್ತು ಅವರ ವಿದ್ಯಾರ್ಹತೆ, ಅನುಭವ, ಸಾಂಸ್ಕøತಿಕ, ಧಾರ್ಮಿಕ ಮತ್ತಿತರ ಹಿನ್ನೆಲೆಗಳ ಸಾಮಾನ್ಯ ಅಂಶಗಳೇನು ಎನ್ನುವುದರ ಅರಿವಿರಬೇಕು.
* ಮೇಲಿನ ಅಂಶಗಳ ಆಧಾರದ ಮೇಲೆ ಹೇಳಬೇಕಾದ ವಿಷಯದ ಆಳ ಅಗಲಗಳನ್ನು ನಿರ್ಧರಿಸಬೇಕು.
* ಎಲ್ಲರೂ ಅವರದ್ದೇ ಆದ ವಿಶಿಷ್ಟವಾದ ಭಾಷೆ ಮತ್ತು ಶೈಲಿಯನ್ನು ಬೆಳೆಸಿಕೊಳ್ಳಬೇಕು ಇದು ಸಾಧ್ಯವಾಗುವುದು ಸಾಕಷ್ಟು ವರ್ಷಗಳ ಪರಿಶ್ರಮದ ನಂತರ. ಆರಂಭದಲ್ಲ ನಾವು ಗುರಿಯಾಗಿಟ್ಟುಕೊಂಡಿರುವ ಓದುಗರ/ಕೇಳುಗರ ಹಿನ್ನೆಲೆಯಲ್ಲಿ ಶೈಲಿ ಮತ್ತು ಭಾಷೆಯನ್ನು ಆರಿಸಿಕೊಳ್ಳಬಹುದು. ಉದಾಹರಣೆಗೆ ಜನಸಾಮಾನ್ಯರಿಗೆ ಬರೆಯುವಾಗ ಸರಳ ಭಾಷೆಯಲ್ಲಿ ಆರಾಮಾವಾಗಿ ಓದಿಸಿಕೊಂಡು ಹೋಗುವಂತೆ ಬರೆಯಬೇಕು. ವೃತ್ತಿಪರ ಪತ್ರಿಕೆಗಳಿಗೆ (ಪ್ರೊಫೆಷನಲ್ ಮ್ಯಾಗಜೀನ್) ಬರೆಯುವಾಗ ಗಹನವಾದ ವಿಚಾರಗಳನ್ನು ಕ್ಲಿಷ್ಟವಾದ ಭಾಷೆಯಲ್ಲಿ ಹೇಳಬಹುದು.
* ಅಂಕಿ ಅಂಶಗಳು, ಕಥೆ ಉಪಕಥೆಗಳು, ಉದಾಹರಣೆಗಳು ಮುಂತಾದವುಗಳನ್ನು ಯಾವಾಗ, ಎಷ್ಟು ಮತ್ತು ಹೇಗೆ ಹೇಳಬೇಕು ಎನ್ನುವುದರ ಬಗೆಗೆ ಸ್ಪಷ್ಟತೆ ಇಟ್ಟುಕೊಳ್ಳಬೇಕು.
* ಹೇಳುವ ವಿಷಯಗಳನ್ನು ಬಿಡಿಬಿಡಿಯಾಗಿ ಮಂಡಿಸದೆ ಒಂದಕ್ಕೊಂದು ಸಂಬಂಧವಿರುವಂತೆ ಹಂತಹಂತವಾಗಿ ಕೊಡಬೇಕು.
* ಆರಂಭ ಗಮನ ಸೆಳೆಯುವಂತಿರಬೇಕು. ಅಂತ್ಯ ಒಳ್ಳೆಯ ಅನುಭವನ್ನು ನೀಡಿದ ಸಂತೋಷವನ್ನು ಕೊಡಬೇಕು. ಹೇಳುವುದರಲ್ಲಿ ಸ್ಪಷ್ಟತೆ ಇರಬೇಕು ಮತ್ತು ಪುನರುಕ್ತಿಗಳಿರಬಾರದು.
* ತಿಳಿಹಾಸ್ಯದ ನಿರೂಪಣೆ ಎಲ್ಲರನ್ನೂ ಯಾವಾಗಲೂ ಆಕರ್ಷಿಸಬಲ್ಲದು. ಇದನ್ನು ರೂಡಿಸಿಕೊಳ್ಳವವರಿಗೆ ಓದುಗರ/ಕೇಳುಗರ ಕೊರತೆ ಉಂಟಾಗುವುದಿಲ್ಲ.
* ಬರೆದಿದ್ದನ್ನು ಅಥವಾ ಮಾತನಾಡಬೇಕಾದ್ದನ್ನು ಓಬ್ಬ ಓದುಗನ /ಕೇಳುಗನ ದೃಷ್ಟಿಯಿಂದ ಮತ್ತೆಮತ್ತೆ ಸೂಕ್ತ ಬದಲಾವಣೆ ಮಾಡಬೇಕು.
ಈ ಎಲ್ಲಾ ಅಂಶಗಳನ್ನು ಗಮನಿಸುತ್ತಾ ನಿರಂತರವಾಗಿ ಪ್ರಯತ್ನಿಸಿದಾಗ ಮಾತ್ರ ನಮಗಿಷ್ಟವಾದ ಸಂವಹನ ಮಾಧ್ಯಮದಲ್ಲಿ ಗುರುತಿಸಿಕೊಳ್ಳುವುದು ಸಾಧ್ಯವಾಗುತ್ತದೆ.
ಪಂಚೇಂದ್ರಿಯಗಳು ಮತ್ತು ಸಂವಹನ
ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ ಈ ಐದು ಅಂಗಗಳು ಹೊರಜಗತ್ತಿನೊಂದಿಗೆ ನಮ್ಮ ಮಿದುಳನ್ನು ಬೆಸೆಯುತ್ತವೆ. ಇವುಗಳಲ್ಲಿ ಮೂಗು ಮತ್ತು ನಾಲಿಗೆ(ಮಾತನಾಡುವ ದೃಷ್ಟಿಯಿಂದಲ್ಲ, ರುಚಿನೋಡುವ ದೃಷ್ಟಿಯಿಂದ)ಗಳನ್ನು ಪ್ರಾಣಿಗಳು ಹೆಚ್ಚಾಗಿ ಉಪಯೋಗಿಸಿದರೆ ಉಳಿದ ಮೂರನ್ನು ಮಾನವರು ಪ್ರಮುಖವಾಗಿ ಬಳಸುತ್ತಾರೆ.
ಎನ್ ಎಲ್ ಪಿಯ ಪ್ರಕಾರ ನಮ್ಮಲ್ಲಿ ಪ್ರತಿಯೊಬ್ಬರೂ ಕಣ್ಣು, ಕಿವಿ ಅಥವಾ ಚರ್ಮ ಈ ಮೂರರಲ್ಲಿ ಒಂದನ್ನು ಹೆಚ್ಚಾಗಿ ಇಷ್ಟಪಡುತ್ತೇವೆ ಮತ್ತು ಬಳಸುತ್ತೇವೆ. ಒಂದೇ ಅಭೀಪ್ರಾಯವನ್ನು ಬೇರೆಬೇರೆ ಸಂವೇದನಾಂಗಗಳಿಗೆ ಸಂಬಂಧಿಸಿದ ಪದಗಳನ್ನು ಉಪಯೋಗಿಸಿ ಹೇಳವ ಉದಾಹರಣೆಯೊಂದನ್ನು ನೋಡೋಣ.
* ನಿಮ್ಮ ಮಾತಿನಲ್ಲಿ ನನಗೆ ದ್ವೇಷವಿದ್ದಂತೆ ಅನ್ನಿಸುತ್ತದೆ. (“ಅನ್ನಿಸು” ಅಂದರೆ ಇಂಗ್ಲೀಷಿನ ಫೀಲ್ ಎನ್ನುವ ಶಬ್ದ, ಸ್ಪರ್ಷ ಅಂದರೆ ಚರ್ಮಕ್ಕೆ ಸಂಬಂಧಿಸಿದ್ದು.)
* ನಿಮ್ಮ ಮಾತಿನಲ್ಲಿ ನನಗೆ ದ್ವೇಶದ ಬೆಂಕಿ ಕಾಣಿಸುತ್ತದೆ. (“ಕಾಣಿಸು” ಎನ್ನುವುದು ನೋಟ ಅಂದರೆ ಕಣ್ಣಿಗೆ ಸಂಬಂಧಿಸಿದ್ದು.)
* ನಿಮ್ಮ ಮಾತಿನಲ್ಲಿ ನನಗೆ ದ್ವೇಶದ ಧ್ವನಿ ಕೇಳಿಸುತ್ತದೆ. (“ಕೇಳಿಸು” ಎನ್ನುವ ಪದ ಕಿವಿಗೆ ಸಂಬಂಧಿಸಿದ್ದು)
ನೀವು ಯಾವ ಸಂವೇದನಾಂಗವನ್ನು ಹೆಚ್ಚಾಗಿ ಬಳಸುತ್ತೀರಿ ಎನ್ನುವುದನ್ನು ತಿಳಿಯುವ ಕುತೂಹಲವಿದ್ದರೆ ಹೀಗೆ ಮಾಡಿ. ಸುಮ್ಮನೆ ಯಾವುದಾದರೂ ವಿಷಯದ ಬಗೆಗೆ ಏನೂ ಯೋಚಿಸಿದೆ ನಿಮಗೆ ಆ ಕ್ಷಣ ಹೊಳೆಯುವುದನ್ನು ಒಂದು ಪುಟದಷ್ಟು ಬರೆಯಿರಿ. ನಂತರ ಅದರಲ್ಲಿರುವ ಕ್ರಿಯಾಪದಗಳು ಯಾವ ಸಂವೇದನಾಂಗಕ್ಕೆ ಸಂಬಂಧಿಸಿದ್ದು ಎನ್ನವುದನ್ನು ಪಟ್ಟಿಮಾಡಿ. ನಿಮಗೆ ಪ್ರಿಯವಾದ ಅಂಗಕ್ಕೆ ಸಂಬಂಧಿಸಿದ ಪದಗಳನ್ನು ನೀವು ಹೆಚ್ಚಾಗಿ ಬಳಸಿರುತ್ತೀರಿ!
ಭಾಷಣ ಮತ್ತು ಲೇಖನ ಕಲೆಯನ್ನು ಕಲಿಯಬಯಸುವವರು ನೆನಪಿಡಬೇಕಾದ ಅಂಶವೊಂದಿದೆ. ಜನಸಾಮಾನ್ಯರಲ್ಲಿ ಎಲ್ಲಾ ಅಭಿರುಚಿಯವವರೂ ಇರುತ್ತಾರೆ. ಹಾಗಾಗಿ ಮೂರೂ ಸಂವೇದನಾಂಗಗಳಿಗೆ ಸಂಬಂಧಿಸಿದ ಶಬ್ದಗಳನ್ನು ಸಮಾನವಾಗಿ ಬಳಸಿದರೆ ಎಲ್ಲರಿಗೂ ಆಕರ್ಷಗವಾಗುವಂತೆ ಮಾಡಬಹುದು. ಇದಕ್ಕೆ ಸಾಕಷ್ಟು ಅನುಭವ ಮತ್ತು ಪರಿಶ್ರಮ ಅಗತ್ಯವಿರುತ್ತದೆ.
ವಸಂತ್ ನಡಹಳ್ಳಿ
ಭಕ್ತರಹಳ್ಳಿಯಲ್ಲಿ ಉಚಿತ ವೈದ್ಯಕೀಯ ಶಿಬಿರ
ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಗಂಟಲು, ಸ್ತನ ಹಾಗೂ ಸರ್ವಿಕಲ್ ಕ್ಯಾನ್ಸರ್ಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿರುವುದು ಕಳವಳಕಾರಿ ಸಂಗತಿಯಾಗಿದ್ದು, ಗ್ರಾಮೀಣ ಮಹಿಳೆಯರಿಗೆ ಅನುಕೂಲವಾಗಲೆಂದು ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಬಿ.ಎಂ.ವಿ.ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಎಲ್.ಕಾಳಪ್ಪ ತಿಳಿಸಿದರು.
ತಾಲ್ಲೂಕಿನ ಭಕ್ತರಹಳ್ಳಿಯ ಬಿ.ಎಂ.ವಿ.ಎಜುಕೇಷನ್ ಟ್ರಸ್ಟ್, ಬೆಂಗಳೂರು ರೋಟರಿ ಹೈಗ್ರೌಂಡ್ಸ್ ಸಹಯೋಗದಲ್ಲಿ ಭಾನುವಾರ ಬಿ.ಎಂ.ವಿ ಪ್ರೌಢಶಾಲಾ ಆವರಣದಲ್ಲಿ ಉಚಿತ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ತನಗಳಲ್ಲಿ ಹಾಗೂ ಇತರೆಡೆಗಳಲ್ಲಿ ಕಾಣಿಸಿಕೊಳ್ಳುವ ಗಡ್ಡೆ, ಗುಣವಾಗದ ಕೆಮ್ಮು ಅಥವಾ ಗೊಗ್ಗರು ದನಿ, ಸ್ತ್ರೀಯರಲ್ಲಿ ಅಸಾಮಾನ್ಯವಾದ ರಕ್ತ ಹಾಗೂ ಇತರ ಸ್ರಾವಗಳು, ಎದೆಯಲ್ಲಿ ಅಡಚಣೆ, ಅಜೀರ್ಣ, ದೇಹದ ತೂಕ ಕಡಿಮೆಯಾಗುವುದು, ನರಹುರಿ, ಮುಂತಾದವು ಕ್ಯಾನ್ಸರ್ ರೋಗದ ಆರಂಭಿಕ ಲಕ್ಷಣಗಳಾಗಿದ್ದು, ಪ್ರಾರಂಭದಲ್ಲೇ ಸೂಕ್ತ ಚಿಕಿತ್ಸೆ ಪಡೆದಲ್ಲಿ ಕಾಯಿಲೆ ಗುಣಪಡಿಸಬಹುದು. ಗ್ರಾಮೀಣ ಪ್ರದೇಶದಲ್ಲಿ ಈ ಭಯಾನಕ ರೋಗದ ಬಗ್ಗೆ ಜಾಗೃತಿ ಮೂಡಿಸುವುದು ಈ ಶಿಬಿರದ ಉದ್ದೇಶವಾಗಿದೆ. ಕ್ಯಾನ್ಸರ್ ತಪಾಸಣೆಯ ಜೊತೆಗೆ ಕಣ್ಣಿನ ತಪಾಸಣೆ ಹಾಗೂ ಶಾಲಾ ಮಕ್ಕಳಿಗೆ ದಂತ ತಪಾಸಣೆ ಮಾಡಲಾಗುವುದು. ಕಣ್ಣಿನ ಶಸ್ತ್ರಚಿಕಿತ್ಸೆಗೂ ಬೆಂಗಳೂರಿನಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಶಿಬಿರದಲ್ಲಿ ರಾಜೀವ್ ಗಾಂಧಿ ದಂತ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ತಜ್ಞ ವೈದ್ಯರಿಂದ ಬಿ.ಎಂ.ವಿ ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ದಂತ ತಪಾಸಣೆ ನಡೆಸಲಾಯಿತು.
ಶಾಸಕ ಎಂ.ರಾಜಣ್ಣ, ಬಿ.ಎಂ.ವಿ.ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಬಿ.ವಿ.ಮುನೇಗೌಡ, ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಎಂ.ಗೋಪಾಲಗೌಡ, ಎಂ.ಪಿ.ಸಿ.ಎಸ್ ಅಧ್ಯಕ್ಷ ಚನ್ನೇಗೌಡ, ಎಸ್.ನಾರಾಯಣಸ್ವಾಮಿ, ಅಶ್ವತ್ಥಪ್ಪ, ಎಂ.ವೆಂಕಟಮೂರ್ತಿ, ಪುಟ್ಟಮೂರ್ತಿ, ಬಿ.ಕೆ.ರಾಮಚಂದ್ರ, ನಂಜುಡಾರಾಧ್ಯ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಗ್ರಾಮೀಣ ಪ್ರದೇಶದಲ್ಲಿ ಇಂಗ್ಲೀಷ್ ಕಲಿಕೆ
ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉಳಿದೆಲ್ಲ ವಿಷಯಗಳಿಗಿಂತ ಇಂಗ್ಲೀಷ್ ಕಲಿಕೆ ಕಬ್ಬಿಣದ ಕಡಲೆ. ಉಳಿದೆಲ್ಲ ವಿಷಯಗಳಲ್ಲೂ ಅತ್ಯುತ್ತಮ ಅಂಕಗಳಿಸಿದರೂ ಸಹ – ಇಂಗ್ಲೀಷ್‍ಲ್ಲಿ ಕಡಿಮೆ ಅಂಕಗಳು ಅಥವಾ ಅನುತ್ತೀರ್ಣ. ಯಾಕೆ ಹೀಗೆ? ಗಣಿತ – ವಿಜ್ಞಾನಗಳ ಕಲಿಕೆಗಿಂತ ಇಂಗ್ಲೀಷ್ ಕಲಿಕೆ ಕಷ್ಟ ಎಂದು ಭಾವಿಸುವುದರ ಹಿಂದಿನ ಕಾರಣಗಳೇನು? ವಿಚಾರಿಸಿದಾಗ ಸಹಜವಾಗಿ ಸಿಗುವ ಉತ್ತರವೆಂದರೆ ಅದು ಪರಭಾಷೆ. ಹಾಗಾಗಿ ಕಲಿಕೆ ಕಷ್ಟ ಎನ್ನುವುದು ಪ್ರಾಥಮಿಕ ಹಂತದಲ್ಲಿ ದೊರಕುವ ಉತ್ತರವಾದರೆ, ಆನಂತರದಲ್ಲಿ ಹಿಂದಿನ ತರಗತಿಗಳಲ್ಲಿ ನಮಗದನ್ನು ಸರಿಯಾಗಿ ಕಲಿಸಿಲ್ಲ ಎಂಬುದು ವಿದ್ಯಾರ್ಥಿಗಳಿಂದ ದೊರಕುವ ಉತ್ತರ. ಬಹಳಷ್ಟು ಶಿಕ್ಷಕರದ್ದು ಇದೇ ಮಾತು. ಇದೆಲ್ಲ ವಾಸ್ತವವನ್ನು ಸ್ವಲ್ಪಮಟ್ಟಿಗೆ ತಿಳಿಸಿದರೂ ಸಮಸ್ಯೆಯನ್ನು ತೀರಾ ಸರಳೀಕೃತಗೊಳಿಸದಂತೆ ಭಾಸವಾಗುತ್ತದೆ.
ಯಾವುದೇ ಭಾಷೆಯ ಅರಿವು ಪ್ರಾಪ್ತವಾಗುವುದು ಪರಿಸರದ ಪ್ರಭಾವದಿಂದ. ನಮ್ಮ ಸುತ್ತ-ಮುತ್ತಲಿನ ಜನರ ಆಡುಭಾಷೆ ತನ್ನಿಂದ ತಾನೇ ನಮಗೆ ದಕ್ಕುತ್ತ ಸಾಗುತ್ತದೆ. ಅದರಲ್ಲಿ ಯಾವುದೇ ವಿಶೇಷವಿಲ್ಲ. ಆದರೆ ಪರಿಸರದಲ್ಲಿ ಪಸರಿಸಿರದ ಭಾಷೆಯೊಂದು ನಮಗೆ ದಕ್ಕಬೇಕೆಂದಾದರೆ ಅದಕ್ಕೆ ಪೂರಕವಾದ ಪರಿಸರಬೇಕು ಅಥವಾ ಪ್ರಯತ್ನ ಬೇಕು. ಇವೆರಡೂ ಇರದ ಸ್ಥಿತಿಯಲ್ಲಿ ಕಲಿಕೆ ಕಷ್ಟವಷ್ಟೆ ಅಲ್ಲ ಅಸಾಧ್ಯ ಕೂಡಾ. ಇಂಗ್ಲೀಷ್ ಕಲಿಕೆ ಕಷ್ಟವಾಗಿರುವುದಕ್ಕೆ ಮೂಲ ಕಾರಣ ಆ ಪರಿಸರ ಇರದಿರುವುದು ಮತ್ತು ಪ್ರಯತ್ನದಲ್ಲಿ ದೋಷ ಅಥವಾ ಕೊರತೆ ಅಷ್ಟೇ ಹೊರತೂ ಅದು ಕಷ್ಟದ ಭಾಷೆ – ಪರಭಾಷೆ ಎಂದು ಕಾರಣ ಕೊಡಲಾಗುವುದಿಲ್ಲ. ಆ ಭಾಷೆಯ ಕುರಿತು ನಾವು ಯಾರೇ ಏನನ್ನೇ ಹೇಳಿದರೂ ವಾದ ಮಾಡಿದರೂ ಅದು ವ್ಯರ್ಥ. ಯಾಕೆಂದರೆ ಅದರ ಕಲಿಕೆ ಇಂದಿನ ಅಗತ್ಯ. ಹಾಗಾಗಿ ನಮ್ಮ ಗಮನವಿರಬೇಕಾದದ್ದು ಅದರ ಸಮರ್ಪಕ ಕಲಿಕೆಯ ಕುರಿತಾಗಿ ಮಾತ್ರ. ಕೇವಲ ಹೇಳಿಕೆಗಳಿಂದ ಅಥವಾ ಪಠ್ಯಕ್ರಮದಲ್ಲಿ ಪದೇ ಪದೇ ಬದಲಾವಣೆ ತರುವುದರಿಂದ ಯಾವ ಉದ್ದೇಶವೂ ಅಷ್ಟಾಗಿ ಈಡೇರಿದಂತೆ ಕಾಣುವುದಿಲ್ಲ. ಬದಲಿಗೆ ಅದರ ಕಲಿಕೆಗೆ ಕೈಗೊಂಡ ಕ್ರಮಗಳು ಮತ್ತು ಅವುಗಳಿಂದಾದ ಪ್ರಯೋಜನಗಳ ಅಧ್ಯಯನದ ಅನಂತರವಷ್ಟೆ ಹೊಸ ಸುಧಾರಣೆಗಳಿಗೆ ಮುಂದಾಗುವುದು ಉಚಿತ ಕ್ರಮವಾದೀತು.
ಇತ್ತೀಚಿಗೆ ದೊಡ್ಡ ದೊಡ್ಡ ಹಳ್ಳಿಗಳಲ್ಲೂ ಸಹಿತ ಇಂಗ್ಲೀಷ್ ಮಾಧ್ಯಮ ಶಾಲೆಗಳು ತಲೆ ಎತ್ತುತ್ತಿವೆ ನಿಜ. ಆದರೂ ಬಹುಸಂಖ್ಯಾತ ಹಳ್ಳಿಗಳಲ್ಲಿ ಕನ್ನಡ ಶಾಲೆಗಳೇ ಇವೆ. ಹಿಂದೆ ಐದನೇಯ ತರಗತಿಯಿಂದ ಇಂಗ್ಲೀಷ್ ಕಲಿಕೆ ಪ್ರಾರಂಭಿಸುತ್ತಿದ್ದರು. ಈಗ ಒಂದನೆಯ ತರಗತಿಯಿಂದಲೇ ಪ್ರಾರಂಭಿಸಲು ಯೋಚನೆ, ಯೋಜನೆಗಳು ತಯಾರಾಗುತ್ತಿವೆ. ಅದೇನೇ ಇದ್ದರೂ ಗ್ರಾಮೀಣ ಪ್ರದೇಶದಲ್ಲಿ ನೆಲೆ ನಿಂತವರು ಬಹುತೇಕ ಕೃಷಿಕರು ಮತ್ತು ಇನ್ನಿತರ ಚಿಕ್ಕ-ಪುಟ್ಟ ಉದ್ಯೋಗದಲ್ಲಿ ತೊಡಗಿದವರು. ಅವರಲ್ಲಿ ಹಲವರು ಅನಕ್ಷರಸ್ಥರು. ಅಕ್ಷರಸ್ಥರಾದವರೂ ಕೂಡ ಕನ್ನಡ ಮಾಧ್ಯಮದಲ್ಲಿ ಮಾತ್ರ ಅಷ್ಟಷ್ಟು ಕಲಿತವರು. ಹೀಗಾಗಿ ಶಾಲೆಗೆ ಬರುವ ಅವರ ಮಕ್ಕಳು ಸಂಪೂರ್ಣವಾಗಿ ತಮ್ಮ ಕಲಿಕೆಗೆ ಶಾಲೆಯ ಶಿಕ್ಷಕರನ್ನೇ ಅವಲಂಬಿಸಿರುತ್ತಾರೆ.
ಮನೆಯಲ್ಲಿ ಹೇಳಿಕೊಡುವವರಲ್ಲಿ, ತಪ್ಪುಗಳನ್ನು ತಿದ್ದುವವರಲ್ಲಿ, ಒತ್ತಾಯಿಸುವ ಸ್ಥಿತಿಯೂ ಇಲ್ಲ, ಹೀಗಾಗಿ ಮಕ್ಕಳ ಕಲಿಕೆ ಶಾಲೆಯ ಕೊಠಡಿಯೊಳಗೆ ಮಾತ್ರ. ಹೀಗಾಗಿ ಅವರಿಗೆಲ್ಲ ಇಂಗ್ಲೀಷ್ ಕಲಿಕೆಗೆ ಪೂರಕ ವಾತಾವರಣವೇ ಲಭ್ಯವಾಗುವುದಿಲ್ಲ. ಕಲಿಕೆ ಏನಿದ್ದರೂ ತರಗತಿಯಲ್ಲಿ. ಇಂಗ್ಲೀಷ್ ಕಲಿಕೆ ದಿನದಲ್ಲಿ ಒಂದು ಗಂಟೆ. ಅದೂ ಭಾಷಾಂತರ ಕ್ರಮದಲ್ಲಿ! ಇದರೊಟ್ಟಿಗೇ ಇತರ ವಿಷಯಗಳನ್ನು ಅವರು ಕಲಿಯುತ್ತಿರುತ್ತಾರೆ. ಆ ಎಲ್ಲಾ ಇತರ ವಿಷಯಗಳೂ ಕನ್ನಡ ಮಾಧ್ಯಮದಲ್ಲಿ. ನಿಜ ಹೇಳಬೇಕೆಂದರೆ ಎಲ್ಲಾ ಶಿಕ್ಷಕರೂ ಕನ್ನಡ ಶಿಕ್ಷಕರು ಬೋಧನೆಯ ವಿಷಯ ಬೇರೆ ಬೇರೆ. ಇಂಗ್ಲಿಷ್ ಶಿಕ್ಷಕರು ಮಾತ್ರ ಒಂದಿಷ್ಟು ಇಂಗ್ಲೀಷನ್ನು ಅರ್ಥಮಾಡಿಸಲು ಅನುವಾದವನ್ನು ಬಳಸಿದಾಗ ದ್ವಿಭಾಷಾ ಕಲಿಕೆ!
ಶಾಲೆಯ ಅವಧಿ ಮತ್ತು ಮನೆಯಲ್ಲಿ ಓದಿಕೊಳ್ಳುವ ಅವಧಿಯಲ್ಲಿ ಬಹುತೇಕ ಅವಧಿ ಕನ್ನಡ ಮಾಧ್ಯಮದಲ್ಲಿ ಸಾಗುತ್ತಿರುವುದರಿಂದ ಇಂಗ್ಲೀಷ್ ಕಷ್ಟವಾಗುತ್ತದೆ. ದಿನಕ್ಕೆ ಕನಿಷ್ಠ ಒಂದೆರೆಡು ಗಂಟೆಗಳನ್ನು ಇಂಗ್ಲೀಷ್ ಕಲಿಕೆಗೆ ಉಪಯೋಗಿಸುವುದಿಲ್ಲ. ಕನ್ನಡ ಸುಲಭವಾಗಿ ದಕ್ಕಿದ್ದರಿಂದ ಅದನ್ನೆ ಮತ್ತೆ ಮತ್ತೆ ಓದುತ್ತ ಇಂಗ್ಲೀಷನ್ನು ನಿರ್ಲಕ್ಷಿಸುತ್ತ ಪರೀಕ್ಷೆಗಳು ಎದುರಾದಾಗ ಮಾತ್ರ ಜ್ಞಾಪಿಸಿಕೊಳ್ಳುತ್ತ ಸಾಗಿದರೆ, ಅದು ನಿಜಕ್ಕೂ ಕಷ್ಟವೇ ಆಗುತ್ತದೆ. ಇದರ ಜೊತೆಗೆ ಎಲ್ಲಾ ವಿಷಯಗಳನ್ನು ಕನ್ನಡದಲ್ಲೇ ಬರೆದು ಬರೆದೂ, ಬರೆಯಲು ಕೈ ಕೂತಿರುತ್ತದೆ. ಇಂಗ್ಲೀಷ್‍ನ್ನು ಪರೀಕ್ಷೆಯಲ್ಲಿ ಮಾತ್ರ ಬರೆಯಲು ಕುಳಿತರೆ ಅದು ಕೈಕೊಡುತ್ತದೆ. ಕೊನೆಗೆ ಬರೆಯಲು ವೇಳೆಯೇ ಸಾಕಾಗಿಲ್ಲ ಎಂದು ಪರಿತಪಿಸುತ್ತಾರೆ. ಇಂಗ್ಲೀಷ್‍ನ್ನು ಕೇವಲ ಪರೀಕ್ಷಾ ದೃಷ್ಟಿಯಿಂದ ಉತ್ತೀರ್ಣಗೊಳ್ಳುವುದಕ್ಕಷ್ಟೇ ಸೀಮಿತಗೊಳಿಸಿಕೊಂಡರೆ ಅದು ಉಪಯೋಗಕ್ಕೆ ಬರುವುದಿಲ್ಲ. ಮುಂದಿನ ತರಗತಿಗಳಿಗೆ ಹೋದರೂ ಹಿಂದಿನ ಪುನರಾವರ್ತನೆ ಅನಿವಾರ್ಯವಾಗುತ್ತದೆ.
ಇಂಥ ಸ್ಥಿತಿಗೆ ಹಳಿಯುವುದು ಯಾರನ್ನು? ಯಾವುದನ್ನು? ಒಟ್ಟಾರೆ ಸ್ಥಿತಿಯನ್ನರಿತು ಸುಧಾರಿಸಲು ಪ್ರಯತ್ನಿಸುವುದು ಸೂಕ್ತವಾದ ಕ್ರಮ. ತಕ್ಷಣ ಈ ನಿಟ್ಟಿನಲ್ಲಿ ಕಾರ್ಯ ತತ್ಪರರಾಗದಿದ್ದರೆ ಕೊನೆಯವರೆಗೂ ಇದೇ ಸ್ಥಿತಿ ಮುಂದುವರಿಯುತ್ತದೆ. ಆದ್ದರಿಂದ ನಾವೀಗ ವರ್ತಮಾನದ ಅಗತ್ಯಗಳನ್ನು ಗಮನಿಸದೇ ಬೇರೆ ವಿಧಿಯಿಲ್ಲ.
1. ಗುಣ್ಮಾತಕ ಚಿಂತನೆ ಅಗತ್ಯ – ಬೇರೆಯವರನ್ನು ದೂಷಿಸಿದರೆ ಪ್ರಯೋಜನವಿಲ್ಲ. ಕೆಳಗಣ ಶಿಕ್ಷಕರನ್ನು ನಿಂದಿಸಿದ ಮಾತ್ರಕ್ಕೆ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಬರುವುದಿಲ್ಲ. ಬದಲಿಗೆ ಹಿಂದಿನದ್ದು ಆಯಿತು, ಮುಂದಿನ ಕುರಿತು ಯೋಚಿಸುವಂತೆ ನೋಡಿಕೊಳ್ಳುವ ಜವಾಬ್ದಾರಿ ಶಿಕ್ಷಕ ಸಮೂಹದ ಮೇಲಿದೆ. ಅವರೆಷ್ಟು ಕಲಿಸಿದ್ದಾರೆ ಎಂದು ಕೇಳುವುದಕ್ಕಿಂತ ನಾವೆಷ್ಟು ಕಲಿಸಬಹುದೆಂದು ನೋಡುವುದು ಒಳ್ಳೆಯದು.
2. ಭಾಷಾ ತಿಳುವಳಿಕೆ ಬೇರೆ ಭಾಷೆಯ ಕುರಿತಾದ ತಿಳುವಳಿಕೆ ಬೇರೆ! ನಮಗೆ ಅಗತ್ಯವಾದ್ದು ಭಾಷಾ ತಿಳುವಳಿಕೆ. ಅನೇಕರು ಕನ್ನಡವನ್ನು ತಪ್ಪಿಲ್ಲದೆ ಮಾತನಾಡುತ್ತಾರೆ. ಆದರೆ ಅವರಿಗೆ ಅದರ ವ್ಯಾಕರಣ ಕೇಳಿದರೆ ಗೊತ್ತಿರುವುದಿಲ್ಲ. ಹಾಗಂತ ಅವರಿಗೆ ಭಾಷಾ ಪ್ರಬುದ್ಧತೆ ಇಲ್ಲವೆನ್ನಲಾಗದು. ಹಾಗಾಗಿ ಭಾಷೆಯ ಕುರಿತಾದ ತಿಳುವಳಿಕೆಯನ್ನು ನೀಡುವುದರಲ್ಲೆ ಹೆಚ್ಚು ಹೆಚ್ಚು ಕಾಲಹರಣ ಮಾಡುವುದಕ್ಕಿಂತ ಒಟ್ಟಾರೆ ಭಾಷೆ ಸಂವಹನ ಕಲೆಗೆ ಒತ್ತು ನೀಡುವುದು ಒಳ್ಳೆಯದು. ನಾವು ಗಮನಿಸಬೇಕಾದ ಅಂಶವೆಂದರೆ ಪರೀಕ್ಷೆಯಲ್ಲಿ ಅದೂ ಇಂಗ್ಲಿಷ್‍ನಲ್ಲಿ ಮಾತನಾಡಲು ಬಾರದಿದ್ದರೆ ಬಹುರಾಷ್ಟ್ರೀಯ ಕಂಪನಿಗಳು ಅವರನ್ನು ಆಯ್ಕೆಮಾಡಿಕೊಳ್ಳುವುದಿಲ್ಲ.
3. ಒಂದು ಭಾಷೆಯ ಮೇಲೆ ಹಿಡಿತವಿದ್ದರೆ ಇನ್ನೊಂದು ಭಾಷೆಯ ಕಲಿಕೆ ಸಾಧ್ಯ. ಕನ್ನಡ ಭಾಷಾ ಕಲಿಕೆ ಉತ್ತಮವಾದಷ್ಟೂ ಉಳಿದ ಭಾಷಾ ಕಲಿಕೆ ಸುಲಭವಾಗುತ್ತದೆ. ಯಾಕೆಂದರೆ ಇಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಹೊರಗಿಟ್ಟು ಇಂಗ್ಲೀಷ್ ಕಲಿಯಲಾಗಲಿ, ಕಲಿಸಲಾಗಲಿ ಸಾಧ್ಯವಿಲ್ಲ ಎಂಬಂತಹ ವಾತಾವರಣವಿದೆ. ನಮ್ಮ ಯೋಚನಾ ಕ್ರಮವೇನಿದ್ದರೂ ಮೊದಲು ನಮ್ಮ ನುಡಿಯಲ್ಲಾಗಿ ಅನಂತರ ಇಂಗ್ಲೀಷ್‍ಗೆ ತರ್ಜುಮೆಗೊಳ್ಳುತ್ತದೆ.
ವ್ಯಾಕರಣ ಮತ್ತು ಶಬ್ದಗಳ ಬಳಕೆ:
ಭಾಷಾ ಕಲಿಕೆಗೆ ವ್ಯಾಕರಣ ಸೂತ್ರಗಳು ಮುಖ್ಯ ನಿಜ. ಆದರೆ ಕೇವಲ ವ್ಯಾಕರಣವನ್ನು ಹಾಗೇ ಕಲಿಸಿದರೆ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಇಳಿಯುವುದು ಕಷ್ಟ.
ಅನಂತರ ಬಳಕೆ ಕೂಡ ಕಷ್ಟವೆನ್ನಿಸಬಹುದು. ಹಾಗಾಗಿ ಸಾಂದರ್ಭಿಕತೆಯನ್ನು ಅನುಸರಿಸಿ ವ್ಯಾಕರಣವನ್ನು ಭೋಧಿಸುವ ಕ್ರಮವನ್ನು ಅನುಸರಿಸಿ ವ್ಯಾಕರಣವನ್ನು ಭೋಧಿಸುವ ಕ್ರಮ ಹೆಚ್ಚು ಆಪ್ತವಾಗಬಹುದು. ಜೊತೆಗೆ ಶಬ್ದ ರಚನೆಯಲ್ಲಿ ಶುದ್ಧತೆ ಹೆಚ್ಚು ಆಪ್ತವಾಗಬಹುದು. ಜೊತೆಗೆ ಶಬ್ದ ರಚನೆಯಲ್ಲಿ ಶುದ್ಧತೆ ಇರುವಂತೆ ಮಾಡುವುದು ಹೆಚ್ಚು ಮುಖ್ಯ. ಯಾಕೆಂದರೆ ಪರೀಕ್ಷೆಯ ಉತ್ತರ ಪತ್ರಿಕೆಗಳು ಮೌಲ್ಯಮಾಪನ ಸಂದರ್ಭದಲ್ಲಿಯೂ ತಪ್ಪಾಗಿ ಬರೆದ ಶಬ್ದಗಳಿಗೆಲ್ಲ ಕೆಂಪು ಶಾಯಿಯ ಪ್ರದಕ್ಷಿಣಿಯಾಗುತ್ತ ಅಂಕಗಳು ಕಡಿಮೆಯಾಗುತ್ತ ಹೋಗುತ್ತದೆ. ಯಾಕೆಂದರೆ ವ್ಯಾಕರಣದ ಸೂಕ್ಷ್ಮಗಳಿಗಿಂತ ಮೇಲ್ನೊಟಕ್ಕೇ ಶಬ್ದದ ಶುದ್ಧ ರೂಪ ಗೋಚರಿಸಿ ಬಿಡುತ್ತದೆ?
ಪ್ರತಿ ವಿದ್ಯಾರ್ಥಿಯೂ ಒಂದು ಘಟಕ
ಭಾಷಾ ಕಲಿಕೆಯ ಸಂದರ್ಭದಲ್ಲಿ ಪ್ರತಿ ವಿದ್ಯಾರ್ಥಿಯೂ ಒಂದೇ ಮಟ್ಟದಲ್ಲಿ ಕಲಿಯಲಾರರು. ಎಲ್ಲಿ ವಿದ್ಯಾರ್ಥಿಗಳೂ ಒಂದೇ ಮಟ್ಟದಲ್ಲಿ ಕಲಿಯಲಾರರೋ ಅಲ್ಲಿ ವಿದ್ಯಾರ್ಥಿಗಳೂ ಒಂದೇ ರೀತಿಯ ತಪ್ಪು ಮಾಡಲಾರರು. ಪ್ರತಿಯೊಬ್ಬರು ಪ್ರತ್ಯೇಕವಾದ ತಪ್ಪುಗಳು ಅವರರದ್ದೇ ಆದ ಅನುಮಾನಗಳಿರುತ್ತದೆ. ಹಾಗಾಗಿ ವೈಯಕ್ತಿಕ ಗಮನ ಅತಿ ಮುಖ್ಯ. ವಿದ್ಯಾರ್ಥಿಗಳಿಗೆ ವರ್ಕ್‍ಬುಕ್ ಕೊಟ್ಟು ತರಗತಿಯಲ್ಲಿ 100-150 ವಿದ್ಯಾರ್ಥಿಗಳಿದ್ದರೆ ಯಾವ ಶಿಕ್ಷಕನಿಗೇ ಆದರೂ ಅಷ್ಟುನ್ನು ಗಮನಿಸಿ ತಿದ್ದುವುದು ಸಾಧ್ಯವಾಗದು. ಹಾಗಾಗಿ ಇಂಗ್ಲೀಷ್ ಬೋಧಕರ ಸಂಖ್ಯೆಯನ್ನು ಹೆಚ್ಚಿಸುವುದು ಮತ್ತು ತರಗತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಒಂದು ಮಿತಿಯೊಳಗಿದ್ದಲ್ಲಿ ಶಿಕ್ಷಕರು ಜವಾಬ್ದಾರಿಯಿಂದ ವೈಯಕ್ತಿಕವಾಗಿ ಗಮನಕೊಟ್ಟು ಕಲಿಸಲು ಸಾಧ್ಯ. ಮತ್ತು ಇಂಗ್ಲೀಷ್ ಕಲಿಕೆಗೆ ಪೂರಕವಾದ ವಾತಾವರಣ ಸ್ವಲ್ಪವಾದರೂ ಲಭ್ಯವಾಗುವ ದೃಷ್ಟಿಯಿಂದ ಇಂಗ್ಲೀಷ್ ಭಾಷಾ ಕಲಿಕೆಯ ಬೋಧನಾವಧಿಯನ್ನು ಹೆಚ್ಚಿಸುವುದು ಒಳ್ಳೆಯದು. ಹೀಗಾದ ಪಕ್ಷದಲ್ಲಿ ಹಂತ ಹಂತವಾಗಿ ಸರಿಯಾಗಿ ಇಂಗ್ಲಿಷ್ ಕಲಿಕೆ ಸಾಧ್ಯವಾಗಬಹುದು.
ಹಿಂಜರಿಕೆಯನ್ನು ಮೀರುವುದು ಮುಖ್ಯ. ಕನ್ನಡ ಅಥವಾ ಯಾವುದೇ ಪ್ರಾದೇಶಿಕ ಭಾಷೆಯನ್ನು, ಆ ಪ್ರದೇಶದ ಮಗು ಮಾತನಾಡುವಾಗ ಸಂಕೋಚಕ್ಕೊಳಗಾಗುವುದಿಲ್ಲ. ಹಿಂಜರಿಕೆಗೆ ಒಳಗಾಗುವುದಿಲ್ಲ. ಒಳಗಿನ ಧೈರ್ಯದಿಂದ ಮಾತನ್ನಾಡುತ್ತದೆ. ಅದೇ ಇಂಗ್ಲೀಷ್ ವಿಷಯ ಬಂದಾಗ ಬಾಯಿಬಿಡುವುದಿಲ್ಲ ಹಿಂಜರಿಕೆ ಎಲ್ಲಿ ಏನು ತಪ್ಪಾಗುತ್ತದೆಯೋ? ಎಂಬ ಭಯ. ಮೊದಲು ಇದು ತಪ್ಪಬೇಕು. ಕನ್ನಡ ಮಾತನಾಡುವ ಅಥವಾ ಬರೆಯುವ ಎಷ್ಟು ಮಂದಿಯಲ್ಲಿ ಭಾಷಾ ಶುದ್ಧಿಯಿರುತ್ತದೆ? ನಾವು ಅದನ್ನು ಯೋಚಿಸುವುದಿಲ್ಲ. ಪರೀಕ್ಷಿಸಿದರೆ ಮಾತ್ರ ತಪ್ಪುಗಳು ಗೋಚರಿಸುತ್ತವೆ. ತಲೆಕೆಡಿಸಿಕೊಳ್ಳುವುದಿಲ್ಲ ಹಾಗೇ ಇಂಗ್ಲೀಷನ್ನು ಬಳಸಿ ಅಲ್ಲಲ್ಲಿ ಅಷ್ಟಿಷ್ಟು ತಪ್ಪುಗಳಾದರೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಆದರೆ ಅವುಗಳನ್ನು ತಿದ್ದಿಕೊಳ್ಳುವುದಕ್ಕೆ ಮುಕ್ತ ಮನಸ್ಸನ್ನು ಹೊಂದಿರಬೇಕು. ಅಂದರೆ ಮಾತ್ರ ಬೆಳೆಯಲು ಸಾಧ್ಯ.
ರವೀಂದ್ರ ಭಟ್ ಕುಳಿಬೀಡು
ಪಿ.ಎಲ್.ಡಿ ಬ್ಯಾಂಕ್ ಚುನಾವಣೆ: ಗೆದ್ದ ಕಾಂಗ್ರೆಸ್
ಪಟ್ಟಣದಲ್ಲಿ ಭಾನುವಾರ ತಾಲ್ಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ(ಪಿ.ಎಲ್.ಡಿ) ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಿತು.
ಸುಮಾರು 5,520 ಮತದಾರರು ಚುನಾವಣೆಯಲ್ಲಿ ಮತ ಚಲಾಯಿಸುತ್ತಿದ್ದರೂ, ವಿಧಾನಸಭೆಯ ಚುನಾವಣೆ ರೀತಿಯಲ್ಲಿ ಜನರು ಸೇರಿದ್ದರು. ಮತಗಟ್ಟೆಗಳನ್ನು ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರಥಮ ದರ್ಜೆ ಕಾಲೇಜಿನಲ್ಲಿ 17 ಬೂತ್ಗಳನ್ನು ಮಾಡಲಾಗಿತ್ತು.
ಪಿ.ಎಲ್.ಡಿ ಬ್ಯಾಂಕಿನ ಚುನಾವಣೆಯು ಜೆ.ಡಿ.ಎಸ್ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಪ್ರತಿಷ್ಠೆಯ ಸಂಗತಿಯಾಗಿದ್ದು, ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದಿಂದ ಮತದಾರರನ್ನು ಕರೆತರುವ, ಓಲೈಸುವ, ಊಟೋಪಚಾರಗಳನ್ನು ಮಾಡಿಸುವ ಚಟುವಟಿಕೆಗಳು ನಡೆದಿತ್ತು.
ಚುನಾವಣಾ ಫಲಿತಾಂಶ: ಕಾಂಗ್ರೆಸ್ ಬೆಂಬಲಿತ 8 ಅಭ್ಯರ್ಥಿಗಳು ಮತ್ತು ಜೆಡಿಎಸ್ ಬೆಂಬಲಿತ 4 ಅಭ್ಯರ್ಥಿಗಳು ಪಿ.ಎಲ್.ಡಿ ಬ್ಯಾಂಕಿನ ಚುನಾವಣೆಯಲ್ಲಿ ಜಯವನ್ನು ಸಾಧಿಸಿದ್ದಾರೆ.
- ಶಿಡ್ಲಘಟ್ಟ ಟೌನ್ ಹಿಂದುಳಿದ ವರ್ಗ ಮೀಸಲು ಕ್ಷೇತ್ರ: ಸಿ.ಅಶ್ವತ್ಥನಾರಾಯಣ (ಜೆ.ಡಿ.ಎಸ್ ಬೆಂಬಲಿತ)
- ಅಬ್ಲೂಡು ಸಾಮಾನ್ಯ ಕ್ಷೇತ್ರ: ಸಿ.ಎಂ.ಗೋಪಾಲ (ಕಾಂಗ್ರೆಸ್ ಬೆಂಬಲಿತ)
- ಸಾಲಗಾರರಲ್ಲದ ಕ್ಷೇತ್ರ: ಎಚ್.ಶಂಕರ್ (ಕಾಂಗ್ರೆಸ್ ಬೆಂಬಲಿತ)
- ವೈ.ಹುಣಸೇನಹಳ್ಳಿ ಮಹಿಳಾ ಮೀಸಲು ಸ್ಥಾನ: ಎಂ.ಎನ್.ರಮಾದೇವಿ (ಕಾಂಗ್ರೆಸ್ ಬೆಂಬಲಿತ)
- ದಿಬ್ಬೂರಹಳ್ಳಿ ಸಾಮಾನ್ಯ ಕ್ಷೇತ್ರ: ಅಶ್ವತ್ಥನಾರಾಯಣರೆಡ್ಡಿ (ಕಾಂಗ್ರೆಸ್ ಬೆಂಬಲಿತ)
- ಮೇಲೂರು ಸಾಮಾನ್ಯ ಕ್ಷೇತ್ರ: ಆರ್.ಬಿ.ಜಯದೇವ್ (ಜೆ.ಡಿ.ಎಸ್ ಬೆಂಬಲಿತ)
- ದೊಡ್ಡತೇಕಹಳ್ಳಿ ಸಾಮಾನ್ಯ ಕ್ಷೇತ್ರ: ಎಲ್.ಎನ್.ಶಿವಾರೆಡ್ಡಿ (ಜೆ.ಡಿ.ಎಸ್ ಬೆಂಬಲಿತ)
- ಜಂಗಮಕೋಟೆ ಸಾಮಾನ್ಯ ಕ್ಷೇತ್ರ: ಕೆ.ಎಂ.ಭೀಮೇಶ್ (ಕಾಂಗ್ರೆಸ್ ಬೆಂಬಲಿತ)
- ಗಂಜಿಗುಂಟೆ ಸಾಮಾನ್ಯ ಕ್ಷೇತ್ರ: ಎಂ.ಪಿ.ರವಿ (ಕಾಂಗ್ರೆಸ್ ಬೆಂಬಲಿತ)
- ಚೀಮಂಗಲ ಹಿಂದುಳಿದ ವರ್ಗ ಮೀಸಲು ಕ್ಷೇತ್ರ: ಸಿದ್ದಪ್ಪ (ಕಾಂಗ್ರೆಸ್ ಬೆಂಬಲಿತ)
- ಆನೂರು ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ಮೀಸಲು ಕ್ಷೇತ್ರ: ಮುನಿಯಪ್ಪ (ಜೆ.ಡಿ.ಎಸ್ ಬೆಂಬಲಿತ)
- ಸಾದಲಿ ಮಹಿಳಾ ಮೀಸಲು ಸ್ಥಾನ: ಭಾಗ್ಯಮ್ಮ (ಕಾಂಗ್ರೆಸ್ ಬೆಂಬಲಿತ)
ಯುವ ಬ್ರಿಗೇಡ್ ವತಿಯಿಂದ ಭಾರತ ಮಾತಾ ಪೂಜೆ
ಶಿಡ್ಲಘಟ್ಟದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಯುವ ಬ್ರಿಗೇಡ್ ವತಿಯಿಂದ ಭಾರತ ಮಾತಾ ಪೂಜೆಯನ್ನು ಆಚರಿಸಲಾಯಿತು. ಮುರಳಿ, ಅಶ್ವತ್ಥ್, ಮಧು, ಪ್ರದೀಪ್, ಅನಂತು ಹಾಜರಿದ್ದರು.
ಹಕ್ಕಿಗಳೂ ಪ್ರೇಮಿಗಳ ದಿನಾಚರಣೆಯಲ್ಲಿ ಭಾಗಿ
ಶಿಡ್ಲಘಟ್ಟದ ಕೊತ್ತನೂರು ಗ್ರಾಮದ ಹೊರವಲಯದಲ್ಲಿ ಮರದ ಮೇಲೆ ಕುಳಿತ ಗಿಳಿ ಜೋಡಿ ಪ್ರೇಮಿಗಳ ಹಬ್ಬವನ್ನು ಆಚರಿಸುತ್ತಿರುವಂತಿವೆ.
ಬಡ ಮಹಿಳೆಯರಿಗೆ ಮಾಶಾಸನ ವಿತರಣೆ
ಶೈಕ್ಷಣಿಕವಾಗಿ ಹಿಂದುಳಿದ ಅಲ್ಪಸಂಖ್ಯಾತರು ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು.
ನಗರದ ಇಲಾಹಿನಗರದಲ್ಲಿ ಜೈಕರ್ನಾಟಕ ಇಲಾಹಿ ವೆಲ್ಫೇರ್ ಟ್ರಸ್ಟ್ ವತಿಯಿಂದ ಗುರುವಾರ ಸಂಜೆ ಬಡ ಮಹಿಳೆಯರಿಗೆ ಮಾಶಾಸನ ವಿತರಣೆ ಮತ್ತು ಸೇವಾ ಸೌಲಭ್ಯಗಳನ್ನು ಕಲ್ಪಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ೬ ವರ್ಷದಿಂದ ೧೪ ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸುವ ಮೂಲಕ ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕು. ಕಂದಾಯ ಇಲಾಖೆ ಮತ್ತು ಸರ್ಕಾರದ ಇನ್ನತರೆ ಇಲಾಖೆಗಳಿಂದ ದೊರೆಯುವ ಸೌಲಭ್ಯಗಳ ಕುರಿತು ಕಾರ್ಯಾಗಾರ ಮತ್ತು ಜಾಗೃತಿ ಮೂಡಿಸಬೇಕೆಂದರು.
ಕಂದಾಯ ಇಲಾಖೆಯಿಂದ ವಯೋವೃದ್ಧರಿಗೆ, ಅಂಗವಿಕಲರಿಗೆ, ವಿಧವೆಯರಿಗೆ ಮಾಶಾಸನ ನೀಡಲಾಗುತ್ತದೆ. ೪೦ ವರ್ಷ ದಾಟಿರುವ ವಿವಾಹವಾಗದಿರುವ ಹೆಣ್ಣು ಮಕ್ಕಳಿಗೆ ಮಾಶಾಸನ ಹಾಗೂ ಶವಸಂಸ್ಕಾರಕ್ಕಾಗಿ ಆರ್ಥಿಕ ನೆರವು ಇನ್ನಿತರೆ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಟ್ರಸ್ಟ್ನ ಮೂಲಕ ಈ ಸೌಲಭ್ಯಗಳನ್ನು ತಲುಪಿಸಬೇಕು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ನೀಡುತ್ತಿರುವ ಸೌಲಭ್ಯಗಳನ್ನು ಕೆಲವರು ಮಾತ್ರ ಪಡೆದುಕೊಳ್ಳುತ್ತಿದ್ದು ಸೌಲಭ್ಯಗಳ ಕುರಿತು ಎಲ್ಲಾ ವಾರ್ಡ್ ಮತ್ತು ಬೀದಿಗಳಲ್ಲಿ ವ್ಯಾಪಕ ಪ್ರಚಾರ ನಡೆಸುವ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ನಗರದ ಇಲಾಹಿನಗರದ ಇಬ್ಬರು ಬಡ ಹೆಣ್ಣು ಮಕ್ಕಳ ಮದುವೆಗೆ ಒಂದು ಮಂಚ, ಬೀರು ಹಾಗೂ ವೃದ್ಧರಿಗೆ ಮತ್ತು ವಿಧವೆಯರಿಗೆ ತಲಾ ೫೦೦- ರೂಗಳಂತೆ ಮಾಶಾಸನವನ್ನು ನೀಡಲಾಯಿತು.
ಜೈಕರ್ನಾಟಕ ಇಲಾಹಿ ವೆಲ್ಫೇರ್ ಟ್ರಸ್ಟ್ನ ಅಧ್ಯಕ್ಷ ಸರ್ದಾರ್, ಉಪಾಧ್ಯಕ್ಷ ದಾದಾಪೀರ್, ಕಾರ್ಯದರ್ಶಿ ರಹಮತ್ತುಲ್ಲಾ, ಖಜಾಂಚಿ ಜೀಲಾನ್ ಪಾಷ, ಟ್ರಸ್ಟ್ನ ಸದಸ್ಯರಾದ ಸರ್ದಾರ್, ಇಂತಿಯಾಜ್ಮೌಲಾ, ಮಹಬೂಬ್ ಪಾಷ, ತಮೀಮ್, ಚಾಂದ್ಪಾಷ, ನಗರ ಸಭೆ ಸದಸ್ಯ ಶಫೀಉಲ್ಲಾ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕೆರೆ ಒತ್ತುವರಿಗೆ ರೈತರ ತಡೆ
ತಾಲ್ಲೂಕಿನ ನಾಗಮಂಗಲ, ಹೊಸಪೇಟೆ ಮತ್ತು ಕಾಕಚೊಕ್ಕಂಡಹಳ್ಳಿ ಬಳಿ ಕೆರೆ ಒತ್ತುವರಿ ತೆರವುಗೊಳಿಸಲು ಬಂದಿದ್ದ ವಲಯ ಅರಣ್ಯಾಧಿಕಾರಿಗಳನ್ನು ರೈತ ಸಂಘದವರು ತಡೆದು ರೈತರ ಬೆಳೆ ಫಸಲು ಬರುವವರೆಗೂ ನಿಲ್ಲಿಸುವಂತೆ ತಿಳಿಸಿದ ಘಟನೆ ಶುಕ್ರವಾರ ನಡೆದಿದೆ.
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕೆರೆಯ ಅಚ್ಚುಕಟ್ಟು ಪ್ರದೇಶಗಳಲ್ಲಿ ಒತ್ತುವರಿಯನ್ನು ತೆರವುಗೊಳಿಸುತ್ತಾ ಟ್ರೆಂಚ್ ಹಾಕುತ್ತಾ ಗಿಡಗಳನ್ನು ಹಾಕುವ ಕೆಲಸ ನಡೆದಿದೆ. ಆದರೆ ತಾಲ್ಲೂಕಿನ ನಾಗಮಂಗಲ, ಹೊಸಪೇಟೆ ಮತ್ತು ಕಾಕಚೊಕ್ಕಂಡಹಳ್ಳಿ ಬಳಿ ರೈತರು ಒತ್ತುವರಿ ಜಮೀನಿನಲ್ಲಿ ಆಲೂಗಡ್ಡೆ, ಕ್ಯಾರೆಟ್, ಬೀಟ್ರೂಟ್, ಮೆಣಸಿನಕಾಯಿ ಮುಂತಾದ ಬೆಳೆಗಳನ್ನು ಬೆಳೆದಿದ್ದು ಫಸಲು ಬರುವವರೆಗೂ ಬೆಳೆಯನ್ನು ನಾಶಪಡಿಸದಂತೆ ಜೆಸಿಬಿಯನ್ನು ತಡೆದರು.
ಈ ಸಂದರ್ಭದಲ್ಲಿ ರೈತಸಂಘದ ಜಿಲ್ಲಾ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಈ ಮೊದಲೇ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರ ಗಮನಕ್ಕೆ ಬೆಳೆಯನ್ನು ನಾಶಪಡಿಸದಂತೆ ಮನವಿ ಮಾಡಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಫಸಲನ್ನು ತೆಗೆಯುವವರೆಗೂ ಕೆರೆ ತೆರವು ಮಾಡಿಸುವುದಿಲ್ಲ, ರೈತರ ಬೆಳೆಗೆ ತೊಂದರೆ ಮಾಡುವುದಿಲ್ಲ, ಆದರೆ ನಂತರ ಟ್ರೆಂಚ್ ಹಾಕಿಸಿ ಅರಣ್ಯ ಇಲಾಖೆಯ ಮೂಲಕ ಸಸಿಗಳನ್ನು ನೆಡಿಸುವುದಾಗಿ ಹೇಳಿದ್ದರು. ಆದರೆ ನಿನ್ನೆ ಯದ್ದಲತಿಪ್ಪೇನಹಳ್ಳಿಯಲ್ಲಿ ಮೆಣಸಿನಕಾಯಿ ಬೆಳೆಯನ್ನು ನಾಶಪಡಿಸಿದ್ದು, ರೈತರಿಗೆ ನಷ್ಟವಾಗಿದೆ. ಇಲ್ಲ ಹಾಗಾಗಕೂಡದು ಎಂದು ತಿಳಿಸಿದರು.
ರೈತರೊಂದಿಗೆ ಮಾತನಾಡಿದ ವಲಯ ಅರಣ್ಯಾಧಿಕಾರಿ ಸುಬ್ಬರಾವ್, ಈಗ ಬೆಳೆಯಿರದ ಕಡೆ ಟ್ರೆಂಚ್ ಹಾಕಿಸಲಾಗುತ್ತದೆ. ಉಳಿದ ಕಡೆ ಫಸಲು ಕೊಯ್ಲಾದ ಮೇಲೆ ಕೆಲಸ ಮಾಡಿಸಿ ಒತ್ತುವರಿ ತೆರವುಗೊಳಿಸುತ್ತೇವೆ. ಕೆರೆಯು ಇದ್ದಲ್ಲಿ ಅಂತರ್ಜಲ ವೃದ್ಧಿಸುತ್ತದೆ. ಅದಕ್ಕಾಗಿ ರೈತರೂ ಸಹಕರಿಸಬೇಕು ಎಂದು ಹೇಳಿದರು.
ರೈತಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಕಾಕಚೊಕ್ಕಂಡಹಳ್ಳಿ ವೆಂಕಟೇಶ್, ಶಿವಣ್ಣ, ತಮ್ಮಣ್ಣ, ಶ್ರೀನಿವಾಸಗೌಡ, ಮುನಿರಾಜು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಬರಗಾಲವ ಎದು/(ಹೆದ)ರಿಸಲು ಸಿದ್ಧವಾಗಲಿ ಶಿಡ್ಲಘಟ್ಟ
ಶಿಡ್ಲಘಟ್ಟ – ನಮ್ಮೆಲ್ಲರಿಗೂ ತಿಳಿದಂತೆ ಪ್ರಪಂಚದಲ್ಲಿ ರೇಷ್ಮೆ ಕೃಷಿಗೆ ಹೆಸರುವಾಸಿ, ಇಲ್ಲಿನ ರೇಷ್ಮೆ ಅಕ್ಕ ಪಕ್ಕದ ರಾಜ್ಯಗಳಲ್ಲದೆ ಹೊರ ದೇಶಗಳಿಗೂ ರಫ್ತು ಮಾಡಲಾಗುತ್ತದೆ. ಇಲ್ಲಿನ ರೇಷ್ಮೆ ಮಾರುಕಟ್ಟೆ ಭಾರತದಲ್ಲಿಯೇ ದೊಡ್ಡದಾದರೆ, ಇಲ್ಲಿನ ರೇಷ್ಮೆಯ ಹೊಳಪು, ವಿನ್ಯಾಸ ಹಾಗೂ ಕರ್ಷಕ ಬಲದ ಕಾರಣ ಅದು ಬೇರೆ ಯಾವುದೇ ಪ್ರಾಂತ್ಯದ ಬೆಳೆಗಿನ್ನೂ ಉತ್ತಮವಾದುದೆಂದು ಪ್ರಚಲಿತವಾಗಿದೆ. ಇದರ ಜೊತೆ ಜೊತೆಗೇ ಶಿಡ್ಲಘಟ್ಟ ಪ್ರಖ್ಯಾತವಾಗಿರುವುದು ಹಾಲು ಮತ್ತು ತರಕಾರಿಗಳ ಬೆಳೆಗಾಗಿ. ಪ್ರತಿದಿನ 100000 ಲೀ ಹಾಲು ಇಲ್ಲಿ ಸಂಗ್ರಹವಾದರೆ, ಇಲ್ಲಿ ಕಾಲಕ್ಕೆ ತಕ್ಕಂತೆ ರೈತರಿಂದ ಬೆಳೆಯಲ್ಪಡುವ ತರಕಾರಿಗಳು ಹೊರ ರಾಜ್ಯ ಹಾಗೂ ದೇಶಗಳಿಗೆ ರಫ್ತು ಮಾಡಲ್ಪಡುತ್ತವೆ.
ಇಷ್ಟೆಲ್ಲಾ ಪ್ರಖ್ಯಾತಿಯನ್ನು ಪಡೆದಿರುವ ನಮ್ಮ ಊರು ಇತ್ತೀಚಿನ ದಿನಗಳಲ್ಲಿ ಪ್ರಖ್ಯಾತಿ ಪಡೆಯುತ್ತಿರುವುದು ಬೇರೆಯದೇ ಮತ್ತೊಂದು ಕಾರಣಕ್ಕಾಗಿ – ಅದೇ ಇಲ್ಲಿನ ‘ಬರಗಾಲ’ಕ್ಕಾಗಿ. ಕಾಲ ಕಾಲಕ್ಕೆ ಮಳೆಯಾಗದೆ ಕಂಗೆಟ್ಟಿರುವ ರೈತರೊಂದು ಕಡೆಯಾದರೆ, ಕುಡಿಯುವ ನೀರಿಗೆ ಪರದಾಡುತ್ತಿರುವ ಸಾಮಾನ್ಯ ಜನರೊಂದು ಕಡೆ. ಮೇವಿನ ಕೊರತೆಯಿಂದಾಗಿ ರಾಸುಗಳನ್ನು ಮಾರಿಕೊಳ್ಳುತ್ತಿರುವವರೊಂದು ಕಡೆಯಾದರೆ, ಕಲುಷಿತ / ರಾಸಾಯನಿಕಗಳ ಹೆಚ್ಚಿನ ಪ್ರಮಾಣದಿಂದ ಅನಾರೊಗ್ಯಕ್ಕೀಡಾಗುತ್ತಿರುವ ಜನರೊಂದು ಕಡೆ. ಇದಕ್ಕೆಲ್ಲಾ ಮೂಲವನ್ನು ಹುಡುಕುತ್ತಾ ಹೋದಲ್ಲಿ ಸಿಗುವುದೊಂದೇ ಪ್ರಶ್ನೆ ಹಾಗು ಒಂದೇ ಉತ್ತರ – ನೀರು? ಹೌದು… ನೀರು.
ಶಿಡ್ಲಘಟ್ಟ ತನ್ನೆಲ್ಲಾ ಚಟುವಟಿಕೆಗಳಿಗೆ ಅವಲಂಭಿತವಾಗಿರುವುದು ನೀರಿನ ಮೇಲೆಯೇ. ಜನರಿಗೆ ಕುಡಿಯುವ ನೀರು ಎಷ್ಟು ಪ್ರಾಮುಖ್ಯವೋ ಹಾಗೆಯೇ ಇಲ್ಲಿನ ಎಲ್ಲಾ ವ್ಯವಹಾರಿಕ ಜೀವನಕ್ಕೂ ನೀರೇ ಪ್ರಮುಖ ಆಧಾರ. ರಾಸುಗಳ ಮೇವಿಗೆ ನೀರಿನ ಪ್ರಾಮುಖ್ಯತೆ ಎಷ್ಟು ಇದೆಯೋ ಅಷ್ಟೇ ಇಲ್ಲಿನ ಕೃಷಿ ಚಟುವಟಿಕೆಗಳಿಗಿದೆ. ಇನ್ನು ಊರಿನ ಜೀವವೆಂದೇ ತಿಳಿದಿರುವ ರೇಷ್ಮೆ ಅವಲಂಭಿತವಾಗಿರುವುದೇ ಇಲ್ಲಿನ ನೀರಿನ ಮೇಲೆ. ಇಷ್ಟೆಲ್ಲಾ ಪ್ರಾಮುಖ್ಯತೆ ಹೊಂದಿರುವ ನೀರು ನಮ್ಮಲ್ಲಿ ದಿನದಿನಕ್ಕೆ ಕಡಿಮೆಯಾಗುತ್ತಿರುವುದು ಆತಂಕದ ಹಾಗೂ ಮುಂಬರುವ ದೊಡ್ಡ ಅನಾಹುತದ ಪ್ರಾರಂಭವೇ ಸರಿ.
ನಮ್ಮ ಶಿಡ್ಲಘಟ್ಟ ಹಿಂದಿನಿಂದಲೂ ಹೀಗೆ ನೀರಿನ ಅಭಾವದಿಂದ ಕೂಡಿತ್ತೆ ? ಎಂಬ ಪ್ರಶ್ನೆಗೆ ಉತ್ತರ ಹುಡುಕಿದರೆ ಸಿಗುವ ಸ್ಪಷ್ಟ ಉತ್ತರ – ‘ಇಲ್ಲ’.
ನಮ್ಮ ಹಿರಿಯರು ಹೇಳುವ ಪ್ರಕಾರ ಶಿಡ್ಲಘಟ್ಟ ಹಿಂದೆ ಕಾಲ ಕಾಲಕ್ಕೆ ಮಳೆ, ಸಮ್ರುದ್ಧವಾದ ಬೆಳೆಯಿಂದ ಕೂಡಿದ್ದ ಪ್ರದೇಶ. ಹಿಂದೆ ಮಳೆಗಾಲದಲ್ಲಿ ಊರಿನ ಎರಡು ಕೆರೆಗಳು ತುಂಬಿ ಮರಿವೆ ಹೋದ ನಿದರ್ಶನಗಳನ್ನು ನಮ್ಮ ಹಿರಿಯರಿಂದ ಕೇಳಿ ತಿಳಿಯಬಹುದು, ಹಾಗೆಯೇ ಹಿಂದೆ ಬಾವಿಗಳಲ್ಲಿ ಕೈಗೆ ಎಟುಕುವಂತೆ ನೀರು ಸಿಗುತ್ತಿದ್ದುದೂ ಅವರು ನೆನೆಯುವುದುಂಟು.
ಹಾಗಿದ್ದರೆ, ಈಚಿನ ವರ್ಷಗಳಲ್ಲಿ ಆದ ಬದವಲಾವಣೆಗಳೇನು? ಹಿಂದೆ ಏತಗಳಲ್ಲಿ ಹೊಲಗಳಿಗೆ ಹರಿಸಲು ಸಿಗುತ್ತಿದ್ದ ನೀರು ಇಂದು ಆಳದ ಬೋರ್ವೆಲ್ಗಳಿಗೂ ಸಿಗದೇ ಇರಲು ಕಾರಣಗಳೇನು?
ಕಾರಣಗಳನ್ನು ಹುಡುಕಿದರೆ ಸಿಗುವುದು ಎರಡು ಪ್ರಮುಖ ಅಂಶಗಳು, ಭೂಮಿಯ ಮೇಲ್ಮೈ ನೀರು ಹಾಗೂ ಅಂತರ್ಜಲ ಎರಡೂ ದಿನದಿನಕ್ಕೆ ನಾಶ ಹೊಂದುತ್ತಿರುವುದು.
ಹಾಗಿದ್ದರೆ ಇದರ ಮೂಲ?
ನಮಗೆ ಸಿಗುವ ಮಾಹಿತಿಗಳ ಪ್ರಕಾರ ಹಿಂದೆ ಈ ಪ್ರದೇಶದಲ್ಲಿ ಅರಣ್ಯ ಪ್ರದೇಶ ಸಾಕಷ್ಟಿಲ್ಲದಿದ್ದರೂ ಜನ ಸಂಖ್ಯೆಗನುಗುಣವಾಗಿ ಸಮತೋಲನ ಕಾಯ್ದುಕೊಂಡಿತ್ತು, ಅಂತರ್ಜಲ ಎತೇಚ್ಚವಾಗಿದ್ದುದದರ ಜೊತೆಗೆ ಕಾಲಕ್ಕನುಗುಣವಾಗಿ ಮಳೆಯಾಗುತ್ತಿತ್ತು. ಹಾಗೆ ಕಾಲ ಕಳೆದಂತೆ ಜನರ ಸಂಖ್ಯೆ ಹೆಚ್ಚಾಗಿ ಮರಗಿಡಗಳ ಸಂಖ್ಯೆ ಕಡಿಮೆಯಾಗತೊಡಗಿತು ಮಳೆಯ ಪ್ರಮಾಣ ಕಡಿಮೆಯಾಗಿ ಬರಗಾಲ ಎದುರಾಗುತ್ತಿದೆಯಲ್ಲದೆ, ಎಗ್ಗಿಲ್ಲದ ಕೊಳವೆ ಬಾವಿಗಳ ಕೊರೆತದಿಂದ ಅಂತರ್ಜಲ ಸಂಪೂರ್ಣ ಬತ್ತಿ, ಕೃಷಿ ಚಟುವಟಿಕೆಗಳಷ್ಟೇ ಅಲ್ಲದೆ ಕುಡಿಯುವ ನೀರಿಗೂ ಸಂಚಕಾರ ಬರತೊಡಗಿತು. ಸರ್ಕಾರದ ಮಾಹಿತಿಯ ಪ್ರಕಾರ ಪ್ರತಿ ವರ್ಷ ಶಿಡ್ಲಘಟ್ಟದಲ್ಲಿ ಅಂದಾಜಿಗಿಂತಲೂ ಸರಾಸರಿ ೪೦% ಕಡಿಮೆ ಮಳೆಯಾಗುತ್ತಿದೆ. ಹಾಗೆಯೇ ಇನ್ನು ಅಂತರ್ಜಾಲದ ಬಗ್ಗೆ ಹೇಳುವುದಾದರೆ ಇಂದು 1000 ಅಡಿಗಳನ್ನು ಮೀರುತ್ತಿದೆ. ಈ ಆಳದಲ್ಲಿ ಫ್ಲೂರೈಡ್ನಂತಹ ಅಪಾಯಕಾರಿ ರಾಸಾಯನಿಕಗಳು ಹೆಚ್ಚಿನ ಮಾತ್ರದಲ್ಲಿರುತ್ತಲ್ಲದೆ, ಆರ್ಸನಿಕ್ ನಂತಹ ವಿಷಕಾರಿ ಅಂಶಗಳು ನೀರಿಗೆ ಬೆರೆಯುವ ಸಾಧ್ಯತೆ ಅಧಿಕವಾಗಿರುತ್ತದೆ. ಇನ್ನು ನಮ್ಮ ನಗರಸಭೆಯ ಮಾಹಿತ್ಯ ಪ್ರಕಾರ ಈಗಾಗಲೇ 51 ಬೋರ್ವೆಲ್ಗಳಿದ್ದು ಅದರಲ್ಲಿ 23ಕ್ಕೆ ಮಾತ್ರ ಪಂಪ್ಸೆಟ್ ಅಳವಡಿಸಲಾಗಿದೆ. ಹಾಗಿದ್ದಲ್ಲಿ 50% ಗೂ ಅಧಿಯ ಬೋರ್ವೆಲ್ಗಳು ಕಾರ್ಯ ನಿರ್ವಹಿಸದೆ ಹಾಗೆಯೇ ಇವೆ. ಇದು ಕೇವಲ ಸರ್ಕಾರದ ಅಂಕಿಗಳು. ಇನ್ನು ಸಾರ್ವಜನಿಕರು ಖಾಸಗಿಯಾಗಿ ಅಳವಡಿಸಿಕೊಂಡಿರುವ ಕೊಳವೆಬಾವಿಗಳನ್ನು ಗಣನೆಗೆ ತೆಗೆದುಕೊಂಡರೆ ಸಮೀಕ್ಷೆಯ ಪ್ರಕಾರ ಶಿಡ್ಲಘಟ್ಟ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಕೊಳವೆ ಬಾವಿಗಲಿರುವ ಪ್ರದೇಶಗಳಲ್ಲೊಂದು. ಇನ್ನು ಬರದ ತೀವ್ರತೆ ನಿಮ್ಮ ಊಹೆಗೆ ಬಿಟ್ಟಿದ್ದು…
ಇಷ್ಟೇ ಅಲ್ಲದೆ ಇದರ ತೀವ್ರತೆ ಕೃಷಿ, ಜೀವ ಜಂತುಗಳಲ್ಲದೆ, ನಗರದ ಪ್ರಮುಖ ಬೆಳೆ, ಪ್ರಪಂಚದಲ್ಲಿ ಪ್ರಸಿದ್ಧವಾಗಿರುವ ಹಾಗೂ ಶಿಡ್ಲಘಟ್ಟದ 70% ಜನರಿಗೆ ವೃತ್ತಿಯನ್ನು ಕಲ್ಪಿಸುತ್ತಿರುವ ರೇಷ್ಮೆಯ ಮೇಲೂ ಉಂಟಾಗಲಿದೆ. ನೀರಿನ ಅಭಾವ ಹಾಗೂ ರಾಸಾಯನಿಕ ಮಿಶ್ರಿತ ನೀರು ರೇಷ್ಮೆಯು ತನ್ನ ವಿನ್ಯಾಸ ಹಾಗೂ ಹೊಳಪನ್ನು ಕಳೆದುಕೊಳ್ಳುತ್ತದೆ.
ಈಗಲೇ ಹೀಗಿದ್ದರೆ ಇನ್ನು ಮುಂದಿನ ಪೀಳಿಗೆಗೆ?…
ಹಾಗಿದ್ದರೆ ಇದಕ್ಕೆ ಪರಿಹಾರವಿಲ್ಲವೇ?
ಉತ್ತರ.. ‘ಇದೆ’.
ಮರುಭೂಮಿಯಾದ ರಾಜಸ್ಥಾನ್, ಹನಿ ನೀರು ಸಿಗದ ಗುಜರಾತ್ ನ ಕಛ್ಚ್ ಹಾಗೂ ತಮಿಳು ನಾಡುವಿನ ಚೆನ್ನೈ ನ ಉದಾಹರಣೆಗಳು ನಮಗೆ ಸಿಗುತ್ತವೆ. ಇಲ್ಲಿ ಅತಿ ಕಡಿಮೆ ಮಳೆಯಾದರೂ ನೀರಿನ ಹಾಹಾಕಾರವುಂಟಾಗದೆ ಜನರು ಕುಡಿಯುವ ನೀರನ್ನು ಸಮರ್ಪಕವಾಗಿ ಬಳಸುತ್ತಿದ್ದಾರೆ. ಅವರ ಮಾರ್ಗಳನ್ನು ಅನುಸರಿಸಿದರೆ ನಾವುಗಳು ಹೇಗೆ ಈ ಬರದಿಂದ ಮುಕ್ತರಾಗಬಹುದು ಎಂಬುದಕ್ಕೆ ಮಾರ್ಗಗಳು ದೊರೆಯುತ್ತವೆ.
ಬರವನ್ನು ಎದುರಿಸಲು ಅನುಸರಿಸಬಹುದಾದಂತಹ ಕೆಲವು ಅಂಶಗಳೆಂದರೆ:
- ಕೊಳವೆ ಬಾವಿಗಳಿಗೆ ನಿರ್ಬಂಧ ಹೇರುವುದು ಹಾಗೂ ಅಂತರ್ಜಲದ ವೃದ್ಧ್ದಿಗೆ ಪೂರಕವಾದ ವಾತಾವರಣವನ್ನುಂಟುಮಾಡುವುದು (50% ಗೂ ಕಡಿಮೆ ನೀರು ದೊರೆಯುತ್ತಿರುವ ಸಂದರ್ಭದಲ್ಲಿ ಇನ್ನು ಅಧಿಕ ಕೊಳವೆ ಬಾವಿಗಳನ್ನು ಕೊರೆಸುವುದು ಅರ್ಥಕ್ಕೆ ದೂರವಾದುದು).
- ಈಗಾಗಲೇ ನಿಶ್ಪ್ರಯೋಜಕವಾಗಿರುವ ಕೊಳವೆ ಬಾವಿಗಳಿಗೆ Recharge Pits / Percolation Tanksಗಳನ್ನು ಅಳವಡಿಸಿ ಮಳೆ ಕೊಯ್ಲಿಗೆ ಅನುಕೂಲ ಮಾಡುವುದು.(ಉದಾಹರಣೆ: https://www.youtube.com/watch?v=91K-28X7qcM)
- ರಸ್ತೆಯ ಇಕ್ಕೆಲಗಳಲ್ಲಿ ಗಿಡ, ಮರಗಳನ್ನು ನೆಡುವುದು ಹಾಗೂ ಅರಣ್ಯವೃದ್ಧಿಗೆ ಪ್ರೋತ್ಸಾಹಿಸುವುದು.
- ಹೊಸದಾಗಿ ಕಟ್ಟಲ್ಪಡುವ ಎಲ್ಲಾ ಮನೆ ಹಾಗೂ ಕಟ್ಟಡಗಳಿಗೆ ಮಳೆ ಕೊಯ್ಲು ಪದ್ಧತಿಯನ್ನು ಕಡ್ಡಾಯಗೊಳಿಸುವುದು ಹಾಗೂ ಈಗಾಗಲೇ ಕಟ್ಟಲ್ಪಟ್ಟಿರುವ ಮನೆಗಳಿಗೆ/ಕಟ್ಟಡಗಳಿಗೆ ಈ ಪದ್ಧತಿಯನ್ನು ಅಳವಡಿಸಿಕೊಳ್ಳಲು ಸಹಕರಿಸುವುದು.
- ನೀರಿನ ಹರಿವನ್ನು ಪ್ರತಿಬಂಧಿಸಿ ಚೆಕ್ ಡ್ಯಾಮ್ ಗಳನ್ನು ಹಾಗೂ ಅಂತರ್ಜಾಲ ವೃಧ್ಧಿಸಲು ಹೂಳೆತ್ತುವ ಕಾರ್ಯಗಳನ್ನು ಅಳವಡಿಸುವುದು.
- ನೀರಿನ ಸಂಸ್ಕರಣೆಯ ಘಟಕಗಳನ್ನು ಸ್ಥಾಪಿಸುವುದು.
- ಜನರು ತಮ್ಮ ಮನೆಯ ಸುತ್ತ ಮುತ್ತ ಮರಗಿಡಗಳನ್ನು ಬೆಳೆಸುವುದು.
- ಜನರು ಮನೆಗಳಿಗೆ ಮಳೆ ಕೊಯ್ಲಿನ ಪದ್ಧತಿಯನ್ನು ಅಳವಡಿಸಿ ನೀರನ್ನು ಶೇಖರಿಸಿ, ಸಂಸ್ಕರಿಸಿ ಹಾಗೂ ಅಂತರ್ಜಲದ ವೃದ್ದಿಗೆ ಸಹಕರಿಸುವುದು.
ಇದರಲ್ಲಿ ಸರ್ಕಾರದ ಪಾತ್ರವೆಷ್ಟಿದೆಯೋ ಅಷ್ಟೇ ಜನಸಾಮಾನ್ಯನ ಪಾತ್ರವೂ ಇದೆ. ಸಮಯೋಚಿತ ನಿರ್ಧಾರಗಳು ನಮ್ಮ ಮುಂಬರುವ ದಿನಗಳನ್ನು ಪ್ರತಿಬಿಂಬಿಸುತ್ತವೆ. ಹಾಗೆಯೇ ನಮ್ಮ ನಾಳೆಗೆ ನಾವು ಇಂದಿನಿಂದಲೇ ಕಾರ್ಯೋನ್ಮುಖರಾಗಬೇಕು. ನಮ್ಮ ನಾಳೆಯನ್ನು ನಾವೇ ರೂಪಿಸಬೇಕು.
Reference:
http://www.shidlaghattatown.gov.in/
http://aranya.gov.in/
http://dmc.kar.nic.in/
– ಸಂದೀಪ್ ಜಗದೀಶ್ವರ್

