ಅಂಗನವಾಡಿ ಕೇಂದ್ರಗಳನ್ನು ಮತ್ತು ಐ.ಸಿ.ಡಿ.ಎಸ್ ಯೋಜನೆಯನ್ನು ಖಾಸಗೀಕರಿಸಲು ಯೋಜಿಸಿರುವ ಸರ್ಕಾರಿ ಯೋಜನೆಯನ್ನು ವಿರೋಧಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಘಟಕದ ಸದಸ್ಯರು ಗುರುವಾರ ತಾಲ್ಲೂಕಿನ ಎಲ್ಲಾ ಪಂಚಾಯತಿಗಳಿಗೆ ಜಾಗೃತಿ ಜಾಥಾ ಪ್ರಾರಂಭಿಸಿದರು.
ಸರ್ಕಾರದ ಖಾಸಗೀಕರಣ ನೀತಿಯನ್ನು ವಿರೋಧಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಫೆಬ್ರುವರಿ 2 ರಂದು ಅನಿರ್ಧಿಷ್ಠಾವಧಿ ಪ್ರತಿಭಟನೆಯನ್ನು ನಡೆಸುತ್ತಿದ್ದು, ತಾಲ್ಲೂಕು ಘಟಕದ ಸದಸ್ಯರು ಗುರುವಾರ ತಾಲ್ಲೂಕಿನ ಎಲ್ಲಾ ಪಂಚಾಯತಿಗಳಿಗೆ ಬೆಂಬಲ ಕೋರಿ ಜಾಥಾ ನಡೆಸಿದರು.
ಅನೇಕ ಬಡ ಕುಟುಂಬಗಳಿಗೆ ಆಶಾ ಕಿರಣವಾಗಿದ್ದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು ಇಂದು ಇಲಾಖೆಯನ್ನಾಗಿ ಮಾರ್ಪಡಿಸಿ ಖಾಯಂ ಮಾಡುವ ಬದಲು ಬಲಹೀನಗೊಳಿಸಲಾಗುತ್ತಿದೆ. ಅಂಗನವಾಡಿ ಕೇಂದ್ರದ ಯಜಮಾನಿಕೆ ಮತ್ತು ನಿರ್ವಹಣೆಯನ್ನು ಸ್ವಯಂ ಸೇವಾ ಸಂಸ್ಥೆಗಳಿಗೆ ಹಾಗೂ ಶ್ರೀಮಂತ ಹಿತಾಸಕ್ತಿಗಳಿಗೆ ನೀಡಲಾಗುತ್ತಿದೆ. ಪೂರ್ವ ಪ್ರಾಥಮಿಕ ಶಿಕ್ಷಣವನ್ನು ನೀಡುವ ನೆಪದಲ್ಲಿ ಖಾಸಗಿ ಕಾನ್ವೆಂಟ್ಗಳಿಗೆ ಐಸಿಡಿಎಸ್ ಹಣವನ್ನು ವರ್ಗಾಯಿಸಲು ಪ್ರಸ್ತಾಪಿಸಲಾಗಿದೆ. ಸರ್ಕಾರ ತನ್ನ ನೀತಿಗಳನ್ನು ಬದಲಿಸಬೇಕು. ಅಂಗನವಾಡಿ ನೌಕರರಿಗೆ ಕನಿಷ್ಠ ಕೂಲಿಯನ್ನು ನೀಡಬೇಕೆಂದು ಈ ಸಂದರ್ಭದಲ್ಲಿ ಸಿ.ಐ.ಟಿ.ಯು ಜಿಲ್ಲಾ ಕಾರ್ಯದರ್ಶಿ ಲಕ್ಷ್ಮೀದೇವಮ್ಮ ಒತ್ತಾಯಿಸಿದರು.
ಸಿ.ಐ.ಟಿ.ಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುಳಮ್ಮ, ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಬಿ.ಎನ್.ಮುನಿಕೃಷ್ಣಪ್ಪ, ಎನ್.ಪಾಪಣ್ಣ, ಮುನೀಂದ್ರ, ಸುಬ್ರಮಣಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಖಾಸಗೀಕರಣ ವಿರೋಧಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ಜಾಗೃತಿ ಜಾಥಾ
ಚಾಗೆ ಗ್ರಾಮದಲ್ಲಿ ಆಕಸ್ಮಿಕ ಬೆಂಕಿಗೆ ಗುಡಿಸಲು ಭಸ್ಮ
ಶಿಡ್ಲಘಟ್ಟ ತಾಲ್ಲೂಕಿನ ಚಾಗೆ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ದೇವರಾಜ್ ಎಂಬುವವರಿಗೆ ಸೇರಿದ ಗುಡಿಸಲು ಆಕಸ್ಮಿಕ ಬೆಂಕಿಗೆ ತುತ್ತಾಗಿ ಸಂಪೂರ್ಣ ಭಸ್ಮವಾಗಿದೆ.
ವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವ ಕಾರ್ಯಕ್ರಮ
’ಶಿಡ್ಲಘಟ್ಟದ ದೇವರು ಹಿಂದುಮುಂದು’ ಎಂಬ ಗಾದೆ ಮಾತಿಗೆ ಕಾರಣವಾದ ಪಟ್ಟಣದ ಪುರಾತನ ಪ್ರಸಿದ್ಧ ವೇಣುಗೋಪಾಲಸ್ವಾಮಿಯ ಬ್ರಹ್ಮರಥೋತ್ಸವ ಕಾರ್ಯಕ್ರಮ ಗುರುವಾರ ವಿಜೃಂಭಣೆಯಿಂದ ನಡೆಯಿತು.
ಮುಜುರಾಯಿ ಇಲಾಖೆಗೆ ಸೇರಿರುವ ದೇವಾಲಯದಲ್ಲಿ ಬೆಳಗಿನಿಂದಲೇ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ರಥೋತ್ಸವಕ್ಕೆ ಚಾಲನೆ ನೀಡಿದರು. ರಥವನ್ನು ಎಳೆಯಲು ಕಾತುರದಿಂದ ಕಾಯುತ್ತಿದ್ದ ಭಕ್ತಾಧಿಗಳು ಚಾಲನೆ ಸಿಗುತ್ತಿದ್ದಂತೆ ಉದ್ದವಾದ ಹಗ್ಗವನ್ನು ಹಿಡಿದು ರಥವನ್ನು ಎಳೆದು ಸಂಭ್ರಮಿಸಿದರು. ತಮಟೆವಾದನ, ಮಂಗಳವಾದ್ಯಗಳ ನಡುವೆ ರಥವನ್ನು ಅಶೋಕ ರಸ್ತೆಯಲ್ಲಿ ಮೆರವಣಿಗೆ ಮಾಡಿದರು. ಮಹಿಳೆಯರು ಕಾಯಿ ಒಡೆದು ಪೂಜಿಸಿ ಆರತಿ ಬೆಳಗಿದರು. ಮಯೂರ ವೃತ್ತದಲ್ಲಿ ಪಾನಕ ಮತ್ತು ಹೆಸರುಬೇಳೆಯನ್ನು ಭಕ್ತರಿಗೆ ಹಂಚಿದರು. ದೇವಾಲಯದಲ್ಲಿ ಪ್ರಸಾದ ವಿನಿಯೋಗಿಸಲಾಯಿತು. ವೇಣುಗೋಪಾಲಸ್ವಾಮಿ ಸೇವಾ ಮತ್ತು ಅಭಿವೃದ್ಧಿ ಟ್ರಸ್ಟ್ ವತಿಯಿಂದ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು.
ಋತ್ವಿಜರಾದ ಕೆ.ವಿ.ಸುಬ್ರಮಣ್ಯಶಾಸ್ತ್ರಿ, ಎಸ್.ಸತ್ಯನಾರಾಯಣರಾವ್, ಎನ್.ಆರ್.ಶ್ರೀನಾಥ್, ದೇವಾಲಯ ಸಮಿತಿ ಸಂಚಾಲಕ ರೂಪಸಿ ರಮೇಶ್, ವೇಣುಗೋಪಾಲಸ್ವಾಮಿ ಸೇವಾ ಮತ್ತು ಅಭಿವೃದ್ಧಿ ಟ್ರಸ್ಟ್ನ ಬಿ.ಪಿ.ರಾಘವೇಂದ್ರ, ಪುರಸಭಾ ಸದಸ್ಯ ಬಾಲಕೃಷ್ಣ, ಬಂಗಾರು ಶ್ರೀನಿವಾಸ್, ಹರಿ, ಮನೋಜ್, ವರದರಾಜ್, ಗೋಪಾಲಪ್ಪ, ಶ್ರೀನಾಥ್, ಅನಿಲ್, ದಾಶರಥಿ ರಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮ
ಶಿಡ್ಲಘಟ್ಟ ತಾಲ್ಲೂಕಿನ ತುಮ್ಮನಹಳ್ಳಿಯಲ್ಲಿ ಕಾಲೋನಿಯಲ್ಲಿ ಮಂಗಳವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು. ಯೋಜನಾಧಿಕಾರಿ ಬಿ.ಆರ್.ಯೋಗೀಶ್ಕನ್ಯಾಡಿ, ಆರತಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ನೀಲಮ್ಮ, ವಲಯದ ಮೇಲ್ವಿಚಾರಕಿ ಶಾಂತಾ ಶೆಟ್ಟಿ, ಸೇವಾಪ್ರತಿನಿಧಿ ಸುನಂದ ಹಾಜರಿದ್ದರು.
ಉಚಿತ ಮಧುಮೇಹ ಹಾಗೂ ಆರೋಗ್ಯ ತಪಾಸಣಾ ಶಿಬಿರ
ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆಯ ಬಳಿಯಿರುವ ಮುತ್ತೂಟ್ ಫೈನಾನ್ಸ್ ಶಾಖೆ ಹಾಗೂ ರೀಗಲ್ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಬುಧವಾರ ಉಚಿತ ಮಧುಮೇಹ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಪರಿಸ್ಥಿತಿಗಳನ್ನು ಹೀಗೆ ನಿಭಾಯಿಸಿ
ಕೆಲವೊಂದು ಸಂದರ್ಭಗಳನ್ನು ಹೇಗೆ ನಿಭಾಯಿಸಬೇಕು ಎಂಬ ಗೊಂದಲ ಉಂಟಾಗುತ್ತದೆ. ಅದು ಸ್ನೇಹಿತ(ತೆ)ರ ಜೊತೆಗಿನ ಭಿನ್ನಾಭಿಪ್ರಾಯಗಳಿರಬಹುದು ಅಥವಾ ಸ್ಪರ್ಧೆಗಳಲ್ಲಿನ ಸೋಲಿರಬಹುದು ಅಥವಾ ಯಾವುದಾದರೂ ಭಯ ಕಾಡುತ್ತಿರಬಹುದು. ಅಂಥ ಸಂದರ್ಭಗಳಲ್ಲಿ ನಿಮ್ಮ ನಡೆ ಹೀಗಿರಲಿ.
1. ನಿಮ್ಮ ಒತ್ತಡ/ಪರಿಸ್ಥಿತಿಗಳನ್ನು ತಂದೆ-ತಾಯಿರೊಂದಿಗೆ ಹಂಚಿಕೊಳ್ಳಿರಿ.
2. ಯಾವ ಸಮಸ್ಯೆಯಾದರೂ ಅದಕ್ಕೆ ತಕ್ಕ ಪರಿಹಾರ ಇದ್ದೇ ಇರುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಿರಿ.
3. ಒಮ್ಮೆ ನಿಮ್ಮ ನಿರೀಕ್ಷೆ ವಿಫಲವಾದರೆ ಅದೇ ಕೊನೆಯೆಂದು ಭಾವಿಸಬೇಡಿ.
4. ಸೋಲೇ ಗೆಲುವಿನ ಸೋಪಾನ (ಮೆಟ್ಟಿಲು) ಎಂಬ ಸತ್ಯ ಸದಾ ನೆನಪಿನಲ್ಲಿರಲಿ.
5. ಸಕಾರಾತ್ಮಕವಾಗಿಯೇ ಸವಾಲನ್ನು ಎದುರಿಸಲು ಧೈರ್ಯವನ್ನು ತಂದುಕೊಳ್ಳಬೇಕು.
6. ತಂದೆ-ತಾಯಿಗಳ ನಿರೀಕ್ಷೆಗಳು ಹೆಚ್ಚೆಂದು ನಿಮಗೆ ಅನಿಸಿದರೆ ಅವರಿಗೆ ನೇರವಾಗಿ, ನಿಧಾನವಾಗಿ ತಿಳಿಸಿ ಹೇಳಿ.
7. ಒಮ್ಮೆ ತಂದೆ ತಾಯಿಯರು ಬೈದರೆ ಅದನ್ನು ಎಂದಿಗೂ ಅವಮಾನವೆಂದು ಪರಿಗಣಿಸದೇ ಅದರ ಹಿಂದಿನ ಕಾಳಜಿಯನ್ನು ಅರ್ಥ ಮಾಡಿಕೊಳ್ಳಿ
8. ಜೀವನದಲ್ಲಿ ಕೌಶಲಗಳು, ಹವ್ಯಾಸಗಳು ಅತಿ ಅವಶ್ಯ. ಅದಕ್ಕೆ ಸರಿಯಾದ ಸಮಯವನ್ನು ಕೊಡಿ.
9. ಆತ್ಮೀಯ ಸ್ನೇಹಿತರೊಂದಿಗೆ ಚರ್ಚಿಸಿ, ಕೆಟ್ಟ ಚಟಗಳಿಗೆ ಬಲಿಯಾಗಬೇಡಿರಿ. (ಕೆಲವು ಸ್ನೇಹಿತರು ನಿಮ್ಮನ್ನು ದುಶ್ಚಟಗಳಿಗೆ ಒಳಗಾಗುವಂತೆ ಪ್ರೇರೇಪಿಸುತ್ತಾರೆ. ನೆನಪಿರಲಿ)
10. ಯಾವುದೇ ಸಂದರ್ಭ ಬಂದರೂ ಕೂಡ, ಎಂಥ ಕಷ್ಟದ ಪರಿಸ್ಥಿತಿಯು ಬಂದರೂ ಸಹ ಧೈರ್ಯಗೆಡದೆ ಅದನ್ನು ಎದುರಿಸಲು ತಯಾರಾಗಿ. ಕಠಿಣ ಪರಿಸ್ಥಿತಿಗಳನ್ನು ಎದುರಿಸುವಾಗ ನೀವು ನಿಮ್ಮ ತಂದೆ-ತಾಯಿಯರ ಅಥವಾ ಹಿರಿಯರ ಸಹಾಯವನ್ನು ಪಡೆಯಿರಿ. ಅವರು ಅವರ ಜೀವನದ ಅನುಭವವನ್ನು ನಿಮಗೆ ತಿಳಿಸಿ ಧೈರ್ಯವನ್ನು ಕೊಡುತ್ತಾರೆ. ಆತ್ಮೀಯ ಬಂಧುಗಳೊಡನೆಯೂ ನೀವು ನಿಮ್ಮ ಮನಸ್ಸನ್ನು ಬಿಚ್ಚಿ ಮಾತನಾಡಿ ಅವರ ಸಹಾಯವನ್ನು ಪಡೆಯಿರಿ ಖಂಡಿತಾ ಪರಿಹಾರ ದೊರೆಯುತ್ತದೆ.
11. ಬೇರೆ ಬೇರೆ ಪರಿಸ್ಥಿತಿಗಳಿಗೆ ನಿಮ್ಮ ಸಿದ್ಧತೆ ಸೂಕ್ತ ರೀತಿಯಲ್ಲಿರಲಿ. ಸದಾ ಸಂತೋಷವನ್ನು ತರುವ ಸಿದ್ಧತೆಗಳನ್ನು ಮಾಡಿಕೊಳ್ಳಿರಿ. ಇದರಿಂದ ನಿಮ್ಮ ಆತ್ಮವಿಸ್ವಾಸವು ಹೆಚ್ಚುತ್ತದೆ.
ಡಾ. ಶ್ರೀವತ್ಸ
ವಾಸವಿ ಕನ್ಯಕಾಪರಮೇಶ್ವರಿ ದೇವಾಲಯದ ಸುವರ್ಣ ಪ್ರತಿಷ್ಠಾಪನಾ ವಾರ್ಷಿಕೋತ್ಸವ

ನಗರದ ವಾಸವಿ ರಸ್ತೆಯಲ್ಲಿರುವ ವಾಸವಿ ಕನ್ಯಕಾಪರಮೇಶ್ವರಿ ದೇವಾಲಯದ ೫೦ ನೇ ಸುವರ್ಣ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಬುಧವಾರ ಅದ್ದೂರಿಯಾಗಿ ನೆರವೇರಿಸಲಾಯಿತು.
ಆರ್ಯವೈಶ್ಯಮಂಡಳಿ, ವಾಸವಿ ಮಹಿಳಾ ಮಂಡಳಿ, ವಾಸವಿ ಯುವಜನ ಸಂಘ ವತಿಯಿಂದ ನಗರದ ಪುರಾತನ ದೇವಾಲಯವಾದ ವಾಸವಿ ಕನ್ಯಕಾಪರಮೇಶ್ವರಿ ದೇವಾಲಯದಲ್ಲಿ ಮಂಗಳವಾರ ಹಾಗು ಬುಧವಾರ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ೫೦ ನೇ ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಗಣಪತಿ ಪೂಜೆ, ವೇದಸ್ವಸ್ತಿ ಹಾಗೂ ‘ಮೂಲ ವಿಗ್ರಹಗಳಿಗೆ ಮಹಾಸ್ನಪನ’ ಅಲಂಕಾರ, ನಿತ್ಯ ಕಳಸಾರಾಧನೆ, ನಿತ್ಯಹೋಮ, ದುರ್ಗಾಸಪ್ತಶತಿ ಪಾರಾಯಣ, ದುರ್ಗಾಮಂಡಲ ಪೂಜೆ ಮತ್ತು ‘ಮಹಾ ಚಂಡಿಕಾಯಾಗ’ ಬಲಿಹರಣ,ಮಹಾಪೂರ್ಣಾಹುತಿ, ಕುಮಾರಿಪೂಜೆ, ಸುಹಾಸಿನಿ ಪೂಜೆ, ದಂಪತಿ ಪೂಜೆ ಹಾಗೂ ಗೋಮೂಲ್ಯಾದಿ ದಶದಾನಗಳು, ಮಹಾಕುಂಭ ಉತ್ತಾಪನೆ, ಮಹಾಕುಂಭಾಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು.
ಆರ್ಯವೈಶ್ಯ ಜನಾಂಗದ ತವರುಮನೆಯ ಹೆಣ್ಣುಮಕ್ಕಳಿಗೆ ‘ಮಡಿಲು ತುಂಬುವ’ ಕಾರ್ಯಕ್ರಮ ಕೂಡ ನಡೆಯಿತು. ಸಂಜೆ ಊರಿನ ಪ್ರಮುಖ ಬೀದಿಗಳಲ್ಲಿ ವಾಸವಿ ಕನ್ಯಕಾಪರಮೇಶ್ವರಿ ದೇವಿಯವರ ಹೂವಿನ ಪಲ್ಲಕ್ಕಿ ಉತ್ಸವ ನೆರವೇರಿತು.
ಶಾಸಕ ಎಂ.ರಾಜಣ್ಣ, ವಿಧಾನಪರಿಷತ್ ಸದಸ್ಯ ಶರವಣನ್, ಜಿಲ್ಲಾ ಪಂಚಾಯತಿ ಸದಸ್ಯೆ ಶಿವಲೀಲಾ ರಾಜಣ್ಣ, ಕರ್ನಾಟಕ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ.ರವಿಶಂಕರ್, ಆರ್ಯವೈಶ್ಯ ಮಂಡಳಿಯ ಗೌರವಾಧ್ಯಕ್ಷ ವಿ.ರಾಧಾಕೃಷ್ಣಯ್ಯಶೆಟ್ಟಿ, ಅಧ್ಯಕ್ಷ ಎಲ್.ವಿ.ವಿ.ಗುಪ್ತ, ಎ.ಜಿ.ನಾಗೇಂದ್ರ, ಎ.ಎನ್.ಬದ್ರಿನಾಥ್, ಕೆ.ವಿ.ಲಕ್ಷ್ಮೀಪ್ರಸಾದ್, ಟಿ.ಎಸ್.ಸುರೇಶ್ಬಾಬು, ಎ.ಎನ್.ಮುರಳಿಕೃಷ್ಣ, ಆರ್ಯವೈಶ್ಯ ಯುವಜನಸಂಘದ ಗೌರವಾಧ್ಯಕ್ಷ ವಿ.ರಾಜೇಂದ್ರಪ್ರಸಾದ್, ಅಧ್ಯಕ್ಷ ಎ.ಎನ್.ಕೇದಾರಿನಾಥ್, ಮಹಿಳಾ ಮಂಡಳಿ ಅಧ್ಯಕ್ಷೆ ಗಜಲಕ್ಷ್ಮಿ ಮತ್ತಿತರರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಗಮನ ಸೆಳೆದ ಸೈಕಲ್ ಟ್ಯಾಬ್ಲೋ
ಶಿಡ್ಲಘಟ್ಟದಲ್ಲಿ ಸೋಮವಾರ ನಡೆದ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಸೈಕಲ್ ಮೇಲೆ ಅಲಂಕರಿಸಿಕೊಂಡು ಪುಟ್ಟ ಟ್ಯಾಬ್ಲೋ ನಿರ್ಮಿಸಿಕೊಂಡು ಉಲ್ಲೂರು ಪೇಟೆಯ ಮಂಜುನಾಥ್ ಎಲ್ಲರ ಗಮನ ಸೆಳೆದರು.
ಪಲಿಚೆರ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಉಚಿತ ಸೈಕಲ್ ಮತ್ತು ಸಮವಸ್ತ್ರ ವಿತರಣೆ
ಶಿಡ್ಲಘಟ್ಟ ತಾಲ್ಲೂಕಿನ ಪಲಿಚೆರ್ಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಶಾಲಾ ಮಕ್ಕಳಿಗೆ ಉಚಿತ ಸೈಕಲ್ ಮತ್ತು ಸಮವಸ್ತ್ರವನ್ನು ವಿತರಿಸಿದರು. ಗ್ರಾಮ ಪಂಚಾಯತಿ ಅಧ್ಯಕ್ಷೆ ಅರುಣಾ ಲಕ್ಷ್ಮೀನಾರಾಯಣ್, ಮುಖ್ಯ ಶಿಕ್ಷಕಿ ವಿ.ಪದ್ಮಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದ್ಯಾವಣ್ಣ ಹಾಜರಿದ್ದರು.
ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಮಾಡಬಾರದು – ಎಂ.ರಾಜಣ್ಣ
ಗುಣಮಟ್ಟದ ಕಾಮಗಾರಿಗಳನ್ನು ಮಾಡುವ ಮೂಲಕ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಕೊತ್ತನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪಿಂಡಿಪಾಪನಹಳ್ಳಿ ಗ್ರಾಮದಲ್ಲಿ ಸೋಮವಾರ ಸುವರ್ಣ ಗ್ರಾಮ ಯೋಜನೆಯಡಿಯಲ್ಲಿ ಸುಮಾರು ೧೨ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಮಾಡಬಾರದು. ಕ್ಷೇತ್ರದಲ್ಲಿ ಗುಡಿಸಿಲು ಮುಕ್ತವಾದ ಗ್ರಾಮಗಳನ್ನು ನಿರ್ಮಾಣ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಕ್ಷೇತ್ರದ ಎಲ್ಲಾ ಕುಗ್ರಾಮಗಳಿಗೆ ಅಗತ್ಯವಾಗಿರುವ ಎಲ್ಲಾ ಸೌಲಭ್ಯಗಳನ್ನು ನೀಡಲು ಬದ್ದವಾಗಿದ್ದು, ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗುತ್ತದೆ ಎಂದು ಹೇಳಿದರು.
ಕೋಚಿಮುಲ್ ನಿರ್ದೇಶಕ ಬಂಕ್ಮುನಿಯಪ್ಪ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಜನತೆ ಸದ್ಬಳಕೆ ಮಾಡಿಕೊಳ್ಳಬೇಕು, ಕಾಮಗಾರಿಗಳ ಗುಣಮಟ್ಟದಲ್ಲಿ ರಾಜೀಮಾಡಿಕೊಳ್ಳಬಾರದು, ಹಳ್ಳಿಗಳಲ್ಲಿನ ಜನತೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆದುಕೊಂಡಾಗ ಮಾತ್ರ ಹಳ್ಳಿಗಳು ಹಾಗೂ ದೇಶ ಅಭಿವೃದ್ಧಿಯಾಗುತ್ತದೆ ಎಂದರು.
ಗ್ರಾಮ ಪಂಚಾಯತಿ ಅಧ್ಯಕ್ಷ ನಾಗೇಶ್, ಸದಸ್ಯ ನರಸಿಂಹಮೂರ್ತಿ, ಲಕ್ಷ್ಮೀಪತಿ, ಮುನಿರೆಡ್ಡಿ, ಮಂಜುನಾಥ್, ಸಿ.ನಾರಾಯಣಸ್ವಾಮಿ, ಆಂಜಿನಪ್ಪ, ಕೃಷ್ಣಪ್ಪ, ದೊಡ್ಡಗೋವಿಂದಪ್ಪ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಬಾಡಿಗೆಯನ್ನು ಕಟ್ಟದ ಅಂಗಡಿಗಳಿಗೆ ಬೀಗ ಜಡಿದ ಅಧಿಕಾರಿಗಳು
ನಗರಸಭಾ ಅಂಗಡಿ ಮಳಿಗೆಗಳ ಬಾಡಿಗೆಯನ್ನು ಕಟ್ಟದ ಅಂಗಡಿಗಳಿಗೆ ಬೀಗಗಳನ್ನು ನಗರಸಭಾ ಅಧಿಕಾರಿಗಳು ಜಡಿದ ಘಟನೆ ಮಂಗಳವಾರ ನಡೆಯಿತು.
ಪಟ್ಟಣದ ನಗರಸಭೆಯ ಅಂಗಡಿಮಳಿಗೆಗಳನ್ನು ಹರಾಜು ಮುಖಾಂತರ ಬಾಡಿಗೆಗೆ ಪಡೆದುಕೊಂಡಿದ್ದ ವ್ಯಾಪಾರಿಗಳು ಕಳೆದ ಒಂದು ವರ್ಷದಿಂದ ಬಾಡಿಗೆಗಳನ್ನು ಪಾವತಿ ಮಾಡದೆ ಇದ್ದ ಕಾರಣದಿಂದಾಗಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸ್ಥಳೀಯ ಪೊಲೀಸರ ಸಮ್ಮುಖದಲ್ಲಿ ಅಂಗಡಿಗಳನ್ನು ಬಾಡಿಗೆಗೆ ಪಡೆದಿದ್ದವರಿಂದ ಬಾಕಿ ಹಣವನ್ನು ವಸೂಲಿ ಮಾಡಿದರು, ಬಾಡಿಗೆಯನ್ನು ಕಟ್ಟದಿದ್ದ ಅಂಗಡಿಗಳಿಗೆ ಬೀಗ ಜಡಿದು, ಬಾಕಿ ಹಣವನ್ನು ಪಾವತಿ ಮಾಡಿದ ನಂತರ ಬಾಗಿಲು ತೆರೆಯಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದರು.
ಏಕಾಏಕಿ ಅಂಗಡಿಗಳಿಗೆ ಬೀಗ ಹಾಕುವಂತಹ ಪ್ರಯತ್ನ ಮಾಡಲಾಗುತ್ತಿದೆ, ಕೆಲವು ಅಂಗಡಿಗಳಿಗೆ ಬಾಡಿಗೆಗಳನ್ನೆ ನಿಗದಿಪಡಿಸಿಲ್ಲ, ಸ್ಟೇರ್ಕೇಸ್ಗಳ ಹೆಸರಿನಲ್ಲಿ ಅಂಗಡಿಗಳನ್ನು ಮಾಡಿಕೊಂಡಿದ್ದಾರೆ, ಕೆಲವು ಅಂಗಡಿಗಳನ್ನು ನಿರ್ಮಾಣ ಮಾಡುವಾಗ ಕಳಪೆ ಗುಣಮಟ್ಟದಿಂದ ಮಾಡಿದ್ದು, ಅಂಗಡಿಗಳು ಸೋರುತ್ತಿವೆ, ದುರಸ್ಥಿ ಮಾಡಿಕೊಡುವಂತೆ ಅನೇಕ ಬಾರಿಗೆ ಅರ್ಜಿಗಳನ್ನು ಸಲ್ಲಿಸಿದ್ದರೂ ಕೂಡಾ ಇದುವರೆಗೂ ಅಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ, ಸರಿಯಾದ ವಿದ್ಯುತ್ ದೀಪಗಳಿಲ್ಲ, ಬಾಡಿಗೆಗೆ ಹರಾಜು ನಡೆಯುವಾಗ ಎಲ್ಲಾ ಸೌಕರ್ಯಗಳನ್ನು ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ್ದ ಅಧಿಕಾರಿಗಳು ಯಾವ ಕೆಲಸವನ್ನೂ ಮಾಡಿಕೊಟ್ಟಿಲ್ಲ, ಬಾಡಿಗೆಗೆ ಮಾತ್ರ ಪ್ರತಿತಿಂಗಳೂ ಬರುತ್ತಾರೆ ಎಂದು ಕೆಲವು ಅಂಗಡಿಗಳನ್ನು ಬಾಡಿಗೆಗೆ ಪಡೆದುಕೊಂಡಿರುವವರು ಅಧಿಕಾರಿಗಳ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ವ್ಯಾಪಾರಸ್ಥರ ಆಕ್ಷೇಪಣೆಗೆ ಉತ್ತರಿಸಿದ ಕಂದಾಯ ಅಧಿಕಾರಿ, ಸವಿತಾ, ಈಗಾಗಲೇ ಅಂಗಡಿಗಳ ಬಾಡಿಗೆಗಳನ್ನು ಬಾಕಿ ಉಳಿಸಿಕೊಂಡಿರುವವರಿಗೆ ಮೂರು ಬಾರಿ ನೋಟಿಸ್ ಜಾರಿ ಮಾಡಲಾಗಿದೆ, ಕೊನೆಯ ನೋಟಿಸ್ ಜಾರಿಮಾಡಿದ ನಂತರವೇ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ವಸೂಲಿಗೆ ಬಂದಿದ್ದೇವೆ, ಬಾಡಿಗೆಗಳನ್ನು ಕಟ್ಟದಿದಲ್ಲಿ ಬೀಗಮುದ್ರೆ ಹಾಕಲು ಜಿಲ್ಲಾಧಿಕಾರಿಗಳು ಆದೇಶ ಮಾಡಿರುವುದರಿಂದ ನಾವು ವಸೂಲಿಗೆ ಮುಂದಾಗಿದ್ದೇವೆ, ೭೮ ಅಂಗಡಿಗಳ ಬಾಡಿಗೆಯ ಹಣ 28,17,277 ರೂಗಳಷ್ಟು ಬಾಕಿ ಇದೆ ಎಂದರು.
ನಗರಸಭೆಯ ಪರಿಸರ ಅಭಿಯಂತರ ದಿಲೀಪ್ಕಮಾರ್, ಬಾಲಚಂದ್ರ, ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳಾದ ಪುರುಷೋತ್ತಮ, ರಾಘವೇಂದ್ರ, ಚಿಂತಾಮಣಿ ಟೌನ್ ಪಿ.ಎಸ್.ಐ. ಸದಾನಂದ ಮುಂತಾದವರು ಹಾಜರಿದ್ದರು.
ನಗರಸಭೆಯಾಗಿ ಮೇಲ್ದರ್ಜೆಗೇರಿರುವ ಶಿಡ್ಲಘಟ್ಟ
ನಗರಸಭೆಯಾಗಿ ಮೇಲ್ದರ್ಜೆಗೇರಿರುವ ಶಿಡ್ಲಘಟ್ಟದಲ್ಲಿ ಇನ್ನು ಮುಂದೆ ನಾಗರಿಕರಿಗೆ ಸರ್ಕಾರದಿಂದ ಹೆಚ್ಚಿನ ಸೌಲಭ್ಯಗಳು ಸಿಗಲಿವೆ ಎಂದು ನಗರಸಭೆಯ ಅಧ್ಯಕ್ಷೆ ಮುಷ್ಠರಿತನ್ವೀರ್ ತಿಳಿಸಿದರು.
ನಗರಸಭೆಯ ಆವರಣದಲ್ಲಿ ನಾಮಫಲಕವನ್ನು ಅನಾವರಣಗೊಳಿಸಿದ ಅವರು, ಇನ್ನು ಮುಂದೆ ಸರ್ಕಾರದಿಂದ ಹೆಚ್ಚಿನ ಅನುದಾನ ಸಿಗಲಿದೆ. ಹಾಗಾಗಿ ಹೆಚ್ಚಿನ ಹಾಗೂ ಉತ್ತಮ ಸವಲತ್ತುಗಳನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಜನಸಂಖ್ಯೆಯ ಆಧಾರದ ಮೇಲೆ ಪುರಸಭೆಯಾಗಿದ್ದ ಇದು ಇದೀಗ ನಗರಸಭೆಯಾಗಿ ಮೇಲ್ದರ್ಜೆಗೇರಿದ್ದು, ಇನ್ನು ಮುಂದೆ ವಿಶೇಷ ಹಾಗೂ ಹೆಚ್ಚಿನ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ಯಾವುದೆ ಒಂದು ಸ್ಥಳೀಯ ಸಂಸ್ಥೆಗೆ ಕಂದಾಯ, ಸೇವಾ ಶುಲ್ಕದ ಆದಾಯವೂ ಮುಖ್ಯ. ಅದರ ಆಧಾರದ ಮೇಲೆಯೆ ಕೆಲ ಯೋಜನೆಗಳ ಅನುದಾನ ಬಿಡುಗಡೆಯಾಗಲಿದೆ. ಹಾಗಾಗಿ ಕಂದಾಯವನ್ನು ಸಕಾಲಕ್ಕೆ ಪಾವತಿಸಿ ಆರ್ಥಿಕವಾಗಿ ಸದೃಢಗೊಳಿಸಲು ಮನವಿ ಮಾಡಿದರು.
ನಗರಸಭೆ ಉಪಾಧ್ಯಕ್ಷೆ ಸುಮಿತ್ರಾರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೇಶವಮೂರ್ತಿ, ಸದಸ್ಯರಾದ ಚಿಕ್ಕಮುನಿಯಪ್ಪ, ಬಾಬು, ಇಲಿಯಾಜ್ಬೇಗ್, ಮುಖಂಡರಾದ ತನ್ವೀರ್, ಶ್ರೀಧರ್, ಶ್ರೀನಾಥ್, ಸುರೇಶ್, ಮಂಜುನಾಥ್, ಮುಸ್ತು, ಅಧಿಕಾರಿಗಳಾದ ದಿಲೀಪ್ಕುಮಾರ್, ಚೇತನ್, ಸುಧಾ, ಸಮೀವುಲ್ಲಾ, ಎಜಾಜ್ಪಾಷ, ಬಾಲಚಂದ್ರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
‘ರಾಷ್ಟ್ರ ದೇವೋ ಭವ’ ಕಾರ್ಯಕ್ರಮ
ಪಟ್ಟಣದ ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಭಾನುವಾರ ಸಂಜೆ ಸಂಸ್ಕಾರ ಭಾರತಿಯ ಮಂಗಳೂರು ವಿಭಾಗದ ಪ್ರಚಾರಕ ಆದರ್ಶ ಗೋಖಲೆಯವರ ನೇತೃತ್ವದಲ್ಲಿ ಮಂಗಳೂರಿನ ಸನಾತನ ನಾಟ್ಯಾಲಯದ ಶಾರದಾಮಣಿ ಶೇಖರ್, ಲತಾ ನಾಗರಾಜ್ ಮುಂತಾದ ಕಲಾವಿದರ ತಂಡ ರಾಷ್ಟ್ರ ದೇವೋ ಭವ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ದೇಶಪ್ರೇಮ, ನಾಡಪ್ರೇಮವನ್ನು ಮೆರೆದು, ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ದೇಶದ ಸ್ವಾತಂತ್ರ್ಯ ಸೇನಾನಿಗಳು, ಸೈನಿಕರು, ದಾರ್ಶನಿಕರ ಕುರಿತು ಮಾಹಿತಿಯನ್ನು ಗೋಖಲೆಯವರು ನೀಡಿದರೆ, ಕಲಾವಿದರ ತಂಡ ಅದನ್ನು ನೃತ್ಯರೂಪಕದ ಮೂಲಕ ಅಭಿವ್ಯಕ್ತಪಡಿಸಿದರು.
ಇಂದಿನ ಯುವ ಜನಾಂಗವು ದೇಶ ಪ್ರೇಮವನ್ನು ಬಿಟ್ಟು ಕ್ಷಣಿಕ ಸುಖಕ್ಕಾಗಿ ಹೊರಡುತ್ತಿರುವ ಹಾದಿಯ ಬಗ್ಗೆ ವಿಷಾದಿಸಿದ ಅವರು, ಯುವ ಜನಾಂಗವನ್ನು ತಿದ್ದಿ ತೀಡಿ ಉತ್ತಮ ವ್ಯಕ್ತಿಗಳಾಗಿ ರೂಪಿಸುವಲ್ಲಿ ಹಿರಿಯರ ಪಾತ್ರ ಮುಖ್ಯವಾದದ್ದು. ಇದೆಲ್ಲವನ್ನೂ ನಮ್ಮ ಗೀತೆಯಲ್ಲಿನ ಪ್ರತಿಯೊಂದು ಅಧ್ಯಾಯವೂ ಸಾರುತ್ತದೆ. ದೇಶಕ್ಕಾಗಿ ಮಡಿಯುವವರು ಪ್ರತಿ ಕುಟುಂಬದಲ್ಲೂ ಜನಿಸಬೇಕಾಗಿದೆ ಎಂದು ಸಾರಿದರು.
ಮೂರು ಗಂಟೆಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಮಂದಿ ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಕುಳಿತುಕೊಳ್ಳುವಂತೆ ಮಾಡುವಲ್ಲಿ ಗೋಖಲೆ ಹಾಗೂ ಅವರ ತಂಡ ಯಶಸ್ವಿಯಾಯಿತು.
ಚಿಕ್ಕಬಳ್ಳಾಪುರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಪೂರ್ಣಾನಂದ ಸ್ವಾಮೀಜಿ, ಸಂಸ್ಕಾರ ಭಾರತಿಯ ತಾಲ್ಲೂಕು ಅಧ್ಯಕ್ಷ ನಂದೀಶ್, ರಾಷ್ಟ್ರ ದೇವೋ ಭವದ ನಿರ್ದೆಶಕರಾದ ಚಂದ್ರಶೇಖರ ಕೆ.ಶೆಟ್ಟಿ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಶಿಡ್ಲಘಟ್ಟ ಶಾಖೆಯ ವತಿಯಿಂದ ರಥಸಪ್ತಮಿ ಆಚರಣೆ
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಶಿಡ್ಲಘಟ್ಟ ಶಾಖೆಯ ವತಿಯಿಂದ ರಥಸಪ್ತಮಿ ಪ್ರಯುಕ್ತ ವಿಶೇಷವಾಗಿ ಯೋಗ ಬಂಧು-ಭಗಿನಿಯರಿಂದ ಸೂರ್ಯನಮಸ್ಕಾರಗಳನ್ನು ಮಾಡುವುದರ ಮೂಲಕ ಆಚರಿಸಲಾಯಿತು.
ಬೆಳಗ್ಗೆ ಸೂರ್ಯೋದಯಕ್ಕೆ ಮುಂಚಿತವಾಗಿ ಸೂರ್ಯ ಭಗವಂತನ ಚಿತ್ರಪಠಕ್ಕೆ ಪೂಜೆ ಸಲ್ಲಿಸುವುದರಿಂದ ಕಾರ್ಯಕ್ರಮ ಪ್ರಾರಂಭವಾಯಿತು. ಒಟ್ಟಾಗಿ 60 ಜನ ಯೋಗ ಬಂಧು-ಭಗಿನಿಯರು ಸೇರಿ 20,421 ಸೂರ್ಯನಮಸ್ಕಾರಗಳನ್ನು ಮಾಡಿದರು. ನಂತರ ಯೋಗದ ಬಗ್ಗೆ ಜಾಗೃತಿ ಮೂಡಿಸಲು ಯೋಗ ನಡಿಗೆಯನ್ನು ಆಯೋಜಿಸಲಾಯಿತು. ನಂತರ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ವಿಶೇಷ ಪೂಜಿಯನ್ನು ಸಲ್ಲಿಸಿ, ಪ್ರಸಾದ ವಿನಿಯೋಗ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಸಂಚಾಲಕರಾದ ಸುಂದರಾಚಾರಿ, ಅಧ್ಯಕ್ಷರಾದ ಶ್ರೀ ಶಂಕರ್, ಪ್ರಧಾನ ಕಾರ್ಯದರ್ಶಿ ಪಿ.ಶ್ರೀಕಾಂತ್, ಸಂಘಟನಾ ಕಾರ್ಯದರ್ಶಿ ಶ್ರೀ ಲಕ್ಷ್ಮಣ, ಹಾಗೂ ಹಿರಿಯರಾದ ಸೋಮಣ್ಣ, ಎಲ್ ಕೇಶವ ಮೂರ್ತಿ ಹಾಗೂ ಸಮಿತಿಯ ಕಾರ್ಯಕರ್ತರು ಹಾಗೂ ಯೋಗ ಬಂಧು-ಭಗಿನಿಯರು ಭಾಗವಹಿಸಿದ್ದರು.
ಶಿಡ್ಲಘಟ್ಟದಲ್ಲಿ 66ನೇ ವರ್ಷದ ಗಣರಾಜ್ಯೋತ್ಸವ ಆಚರಣೆ
ದೇಶದ ಏಳಿಗೆಯು ಯುವಜನತೆಯ ಮೇಲೆ ಅವಲಂಬಿಸಿದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು. ಪಟ್ಟಣದ ನೆಹರೂ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿದ್ದ 66ನೇ ವರ್ಷದ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾರತ ದೇಶವು ಸ್ವಾತಂತ್ರ್ಯವನ್ನು ಪಡೆದ ನಂತರ ಅಖಂಡ ಭಾರತ ದೇಶಕ್ಕೆ ಪ್ರಪಂಚದ ಅತ್ಯಂತ ಬೃಹದಾಕಾರದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಿರ್ಮಾಣ ಮಾಡಿಕೊಂಡ ವ್ಯವಸ್ಥೆಯಲ್ಲಿ ಜೀವನ ಮಾಡುತ್ತಿರುವ ಪ್ರತಿಯೊಬ್ಬ ನಾಗರೀಕರು ಸಂವಿಧಾನದ ಆಶಯಗಳಿಗೆ ಕಟಿಬಧ್ದರಾಗಿ ಜೀವಿಸಬೇಕಾದಂತಹ ಅನಿವಾರ್ಯತೆ ಇದೆ. ಮೂಲಭೂತ ಸಮಸ್ಯೆಗಳನ್ನು ನಿವಾರಣೆ ಮಾಡಬೇಕಾಗಿದೆ ಯುವಶಕ್ತಿಯ ಮುಂದೆ ವ್ಯವಸ್ಥಿತವಾದ ಸಮಸ್ಯೆಗಳು ಎದುರಾಗುತ್ತಿವೆ, ಭಯೋತ್ಪಾದನೆ, ಕುಡಿಯುವ ನೀರಿನ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಬೇಕಾಗಿದೆ, ಭಾರತಾಂಬೆಯ ರಕ್ಷಣೆಗೆ ನಾವೆಲ್ಲರೂ ಒಟ್ಟಾಗಬೇಕು, ಗಡಿಗಳ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಬೇಕು, ಶಾಲಾ ಮಕ್ಕಳು ಅಕ್ಷರಸ್ಥರಾಗಿ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡಬೇಕು, ಅನಕ್ಷರತೆ ತೊಲಗಬೇಕು, ದೇಶವನ್ನು ಸಾರ್ವಭೌಮ, ಸಮಾಜವಾದಿ, ಜ್ಯಾತ್ಯಾತೀತ ಮತ್ತು ಪ್ರಜಾಪ್ರಭುತ್ವ ಗಣತಂತ್ರವನ್ನಾಗಿ ಮಾಡಲು ಎಲ್ಲಾ ಪ್ರಜೆಗಳು ದೃಢ ಸಂಕಲ್ಪ ಮಾಡಬೇಕಾಗಿದೆ, ದೇಶದಲ್ಲಿನ ಜನತೆಯನ್ನು ಭಯಬೀತಗೊಳಿಸುವಂತಹ ಭಯೋತ್ಪಾದನೆಯನ್ನು ಹತ್ತಿಕ್ಕುವಂತಹ ಪ್ರಯತ್ನಕ್ಕೆ ನಮ್ಮೆಲ್ಲರ ಸಹಕಾರ ನೀಡಬೇಕು ಎಂದರು.
ದ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ, ನ್ಯಾಯ ಸಮ್ಮತವಾದ ಚಿಂತನೆ ಅಭಿವ್ಯಕ್ತಿ, ನಂಬಿಕೆ, ಭಕ್ತಿ, ಮತ್ತು ಆರಾಧನೆಗಳಿಗೆ ಸ್ವಾತಂತ್ರ್ಯವನ್ನು ಹೊಂದಲು ಇಷ್ಟಪಡುವಂತಹ ಸ್ಥಾನಮಾನಗಳಿಗೆ ಸಮಾನ ಅವಕಾಶಗಳನ್ನು ಕಲ್ಪಿಸುವುದರೊಂದಿಗೆ ದೇಶದಲ್ಲಿ ಸಮಾನತೆ, ಬ್ರಾತೃತ್ವ, ಪರಸ್ಪರ ಪ್ರೀತಿ ಆದರಗಳನ್ನು ನಿರ್ಮಾಣ ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ, ರೈತರ ಅಭಿವೃದ್ದಿಗಾಗಿ ಕೃಷಿ ಭಾಗ್ಯ, ಹಸಿವು ಮುಕ್ತರಾಜ್ಯ, ನಾಡಿನ ಮಕ್ಕಳ ಅಪೌಷ್ಟಿಕತೆ ನಿವಾರಣೆ, ದುರ್ಬಲ ವರ್ಗದ ಜನರ ಅಭಿವೃದ್ದಿಯು ಅವಶ್ಯಕತೆಯಿದೆ ಎಂದರು.
ಈ ಸಂಧರ್ಭದಲ್ಲಿ ವಿವಿಧ ಶಾಲಾ ಮಕ್ಕಳಿಂದ ಪಥಸಂಚಲನ ಆಯೋಜನೆ ಮಾಡಲಾಗಿತ್ತು, ಹಾಗೂ ವಿವಿಧ ಮಾದರಿಯ ಕವಾಯತುಗಳನ್ನು ಆಯೋಜನೆ ಮಾಡಲಾಗಿತ್ತು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಆಂಜಿನಮ್ಮ, ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ನಗರಸಭಾ ಅಧ್ಯಕ್ಷೆ ಮುಷ್ಟರಿತನ್ವೀರ್, ಉಪಾಧ್ಯಕ್ಷೆ ಸುಮಿತ್ರಮ್ಮರಮೇಶ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಸುರೇಂದ್ರಗೌಡ, ಇ.ಒ.ಗಣಪತಿಸಾಕರೆ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ, ಪೊಲೀಸ್ ವೃತ್ತ ನಿರೀಕ್ಷಕ ಶ್ರೀನಿವಾಸಮೂರ್ತಿ, ಸಿ.ಡಿ.ಪಿ.ಓ. ಲಕ್ಷ್ಮೀದೇವಮ್ಮ, ಎಇಇ ಶಿವಾನಂದ, ಅರಣ್ಯಾಧಿಕಾರಿ ಸುಬ್ಬರಾವ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಕೆ.ಗುರುರಾಜ್, ಮುಂತಾದವರು ಹಾಜರಿದ್ದರು.
ಕದಿರಿನಾಯಕನಹಳ್ಳಿಯಲ್ಲಿ ಶ್ರೀ ಗಣಪತಿ ಹಾಗು ಶ್ರೀ ಆಂಜನೇಯಸ್ವಾಮಿ ಪ್ರತಿಷ್ಠಾಪನಾ ಮಹೋತ್ಸವ
ತಾಲ್ಲೂಕಿನ ಕದಿರಿನಾಯಕನಹಳ್ಳಿ ಗ್ರಾಮದಲ್ಲಿ ಶ್ರೀ ಗಣಪತಿ ಹಾಗು ಶ್ರೀ ಆಂಜನೇಯಸ್ವಾಮಿ ಪ್ರತಿಷ್ಠಾಪನಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು.
ದೇವರ ಪ್ರತಿಷ್ಠಾಪನಾ ಮಹೋತ್ಸವದ ಪ್ರಯುಕ್ತ ದೇವಾಲಯದಲ್ಲಿ ವಿಶೇಷ ಅಲಂಕಾರ, ಪೂಜಾ ಮಹೋತ್ಸವದೊಂದಿಗೆ ಭಕ್ತಿಗೀತೆ, ಭಾವಗೀತೆ, ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.
ದೇವರನ್ನು ಮತ್ತು ದೇವಾಲಯವನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ತಾಲೂಕಿನ ಹಾಗೂ ಸುತ್ತಮುತ್ತಲಿನ ನೂರಾರು ಭಕ್ತರು ಆಗಮಿಸಿ ದೇವರ ಪೂಜೆಯಲ್ಲಿ ಪಾಲ್ಗೊಂಡರು.
ಬಿಜಿಎಸ್ ಪಬ್ಲಿಕ್ ಸ್ಕೂಲ್ ಹಾಗು ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮ
ಪೋಷಕರು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶಿಕ್ಷಕರೊಂದಿಗೆ ಸಹಕಾರ ನೀಡಬೇಕು ಎಂದು ಚಿಕ್ಕಬಳ್ಳಾಪುರ ಶಾಖಾ ಮಠದ ಸ್ವಾಮಿಜಿ ಮಂಗಳಾನಂದನಾಥ ಸ್ವಾಮೀಜಿ ಭಿಪ್ರಾಯಪಟ್ಟರು.
ಪಟ್ಟಣದ ಹೊರವಲಯದ ಹನುಮಂತಪುರ ಗೇಟ್ ಬಳಿಯಿರುವ ಬಿಜಿಎಸ್ ಪಬ್ಲಿಕ್ ಸ್ಕೂಲ್ ಹಾಗು ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮ ಸಿಂಚನ-2015 ರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪದ್ಮಭೂಷಣ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ ಕನಸಿನಂತೆ ಶಿಡ್ಲಘಟ್ಟ ಹಾಗೂ ಸುತ್ತಮುತ್ತಲ ಪ್ರಾಂತಗಳಲ್ಲಿನ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಿ, ಅವರನ್ನು ಸಮಾಜದಲ್ಲಿ ಸತ್ಪ್ರಜೆಗಳನ್ನಾಗಿ ಮಾಡುವುದು ಬಿಜಿಎಸ್ ವಿದ್ಯಾ ಸಂಸ್ಥೆಯ ಮೂಲ ಉದ್ದೇಶವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಎಲ್ಲಾ ದಾನಗಳಿಗಿಂತ ವಿದ್ಯಾದಾನ ಶ್ರೇಷ್ಠವಾದದು ಎಂಬ ಮಾತಿನಂತೆ ರಾಜ್ಯಾದ್ಯಂತ ಸುಮಾರು 450 ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಲಾಗಿದ್ದು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವುದೇ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಎಷ್ಟಿದೆಯೋ ಅಷ್ಟೇ ಪಾತ್ರ ಪೋಷಕರಿಗೂ ಇದೆ ಎಂದ ಅವರು ಕೇವಲ ಮಕ್ಕಳನ್ನು ಶಾಲೆಗೆ ಕಳುಹಿಸಿದರಷ್ಟೇ ಪೋಷಕರ ಕೆಲಸ ಮುಗಿಯುವುದಿಲ್ಲ ಬದಲಿಗೆ ತಿಂಗಳಿಗೊಮ್ಮೆ ತಮ್ಮ ಮಗು ಓದುವ ಶಾಲೆಗೆ ಭೇಟಿ ನೀಡಿ ತಮ್ಮ ಮಗುವಿನ ವಿದ್ಯಾಭ್ಯಾಸದ ಕುರಿತು ಶಿಕ್ಷಕರೊಂದಿಗೆ ಚರ್ಚಿಸುವ ಕೆಲಸವನ್ನು ಮಾಡಬೇಕು ಎಂದರು.
ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಶಾಲಾ ಮಕ್ಕಳಿಂದ ಆಯೋಜನೆ ಮಾಡಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದವರ ಗಮನಸೆಳೆದವು. ಇದೇ ಸಂದರ್ಭದಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರೊ.ಶಿವರಾಮರೆಡ್ಡಿ, ಬಿಜಿಎಸ್ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಆರ್.ಮಹದೇವಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಭಕ್ತರಹಳ್ಳಿ ಬೈರೇಗೌಡ, ಕೆಂಪರೆಡ್ಡಿ, ರಾಮಚಂದ್ರಾಚಾರಿ, ಮತ್ತಿತರರು ಹಾಜರಿದ್ದರು.
ಲೋಕ್ ಅದಾಲತ್ ಕಾರ್ಯಕ್ರಮ
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ಲೋಕ್ ಅದಾಲತ್ ಕಾರ್ಯಕ್ರಮವನ್ನು ಆಯೋಜಿಸಿದ್ದು ನಾಗರಿಕರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿಜಯದೇವರಾಜ ಅರಸ್ ತಿಳಿಸಿದರು.
ಪಟ್ಟಣದ ನ್ಯಾಯಾಲಯದಲ್ಲಿ ಗುರುವಾರ ಆಯೋಜನೆ ಮಾಡಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಡ್ಲಘಟ್ಟದ ಮಾನ್ಯ ಸಿವಿಲ್ ನ್ಯಾಯಾಲಯದಲ್ಲಿ ಈ ಕಾರ್ಯಕ್ರಮ ಪ್ರತಿ ತಿಂಗಳ ಎರಡನೇ ಶನಿವಾರ ನಡೆಯುತ್ತದೆ. ಈ ಕಾರ್ಯಕ್ರಮದಲ್ಲಿ ಕಾನೂನಿನ್ವಯ ರಾಜೀ ಇತ್ಯರ್ಥಕ್ಕೆ ಅರ್ಹವಾದ ಚೆಕ್ ಅಮಾನ್ಯ ಪ್ರಕರಣಗಳು, ಹಣ ವಸೂಲಾತಿ ವ್ಯಾಜ್ಯ ಹಾಗೂ ಇನ್ನಿತರೆ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ, ಅದೇ ರೀತಿ ಬ್ಯಾಂಕಿನ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ. ಈ ರೀತಿ ಇತ್ಯರ್ಥಪಡಿಸಿಕೊಂಡ ದಾವೆಗಳಲ್ಲಿ ನ್ಯಾಯಾಲಯದ ಶುಲ್ಕವನ್ನು ಸಂಪೂರ್ಣವಾಗಿ ಸಂಬಂಧಪಟ್ಟ ಪಕ್ಷಗಾರರಿಗೆ ಹಿಂದಿರುಗಿಸಲಾಗುತ್ತದೆ. ಈ ಕಾರ್ಯಕ್ರಮದಿಂದ ಸಾಕಷ್ಟು ಸಮಯ ಹಾಗೂ ಹಣ ಉಳಿತಾಯವಾಗುತ್ತದೆ. ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಅವರು ನಾಗರಿಕರಲ್ಲಿ ಮನವಿ ಮಾಡಿದರು.
ನ್ಯಾಯಾಧೀಶರಾದ ಶ್ರೀಕಂಠ, ಸರ್ಕಾರಿ ವಕೀಲ ಈ.ಡಿ.ಶ್ರೀನಿವಾಸ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ಕಾರ್ಯದರ್ಶಿ ಬೈರಾರೆಡ್ಡಿ ಈ ಸಂದರ್ಭದಲ್ಲಿ ಹಾಜರಿದ್ದರು.
ಚೌಡಸಂದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬೆಳ್ಳಿ ಪದಕ
ಶಿಡ್ಲಘಟ್ಟ ತಾಲ್ಲೂಕಿನ ಚೌಡಸಂದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಅಂಚೆ ಇಲಾಖೆ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ‘ಕರ್ನಾಪೆಕ್ಸ್’ ಅಂಚೆ ಚೀಟಿಗಳ ಪ್ರದರ್ಶನದಲ್ಲಿ ಬೆಳ್ಳಿ ಪದಕವನ್ನು ಪಡೆದಿದ್ದಾರೆ.
ಸರ್ಕಾರಿ ಬಾಲಕಿಯರ ವಿದ್ಯಾರ್ಥಿನಿಲಯ ಅವ್ಯವಸ್ಥೆ
ಸಮಾಜದ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ನಡೆಯುತ್ತಿರುವ ಸರ್ಕಾರಿ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಬುಧವಾರ ಭೇಟಿ ನೀಡಿದ ಜಿಲ್ಲಾ ಪಂಚಾಯತಿಯ ಅಧ್ಯಕ್ಷ ಕೇಶವರೆಡ್ಡಿ ಅಲ್ಲಿನ ಅವ್ಯವಸ್ಥೆಗಳನ್ನು ಕಂಡು ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಪುರುಷೋತ್ತಮ್ ಹಾಗೂ ವಾರ್ಡನ್ ನಾಗರತ್ನಮ್ಮ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಹಾಸ್ಟೆಲ್ನ ವಿದ್ಯಾರ್ಥಿನಿಯರು ಸಮರ್ಪಕವಾಗಿ ತಿಂಡಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿಲ್ಲ, ಬೆಳಿಗ್ಗೆ ೮ ಗಂಟೆಗೆ ಬಂದು ಕಾಟಾಚಾರದ ಅಡುಗೆ ಮಾಡಿ ತಿನ್ನಿ ಎಂದು ಬಲವಂತ ಮಾಡ್ತಾರೆ ಎಂದು ನೋವು ವ್ಯಕ್ತಪಡಿಸಿದಾಗ, ಜಿಲ್ಲಾ ಪಂಚಾಯತಿಯ ಅಧ್ಯಕ್ಷರು, ಅಧಿಕಾರಿಗಳಿಗೆ ಇಂತಹ ಅವ್ಯವಸ್ಥೆಯ ಆಗರವಾಗಿರುವ ಹಾಸ್ಟಲ್ಗಳನ್ನು ಸುಧಾರಿಸಲು ಕಣ್ಣು ಕಾಣುವುದಿಲ್ಲವೇ? ಎಂದು ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು, ನಿಮ್ಮ ಮಕ್ಕಳನ್ನು ಹೀಗೆ ನೋಡಿಕೊಳ್ಳುತ್ತೀರಾ? ಕೂಡಲೇ ವಾರ್ಡ್ನ್ಗೆ ನೋಟಿಸ್ ನೀಡಿ ಅವ್ಯವಸ್ಥೆಯನ್ನು ಸರಿಪಡಿಸಿಕೊಳ್ಳದಿದ್ದರೆ ಪರಿಣಾಮ ನೆಟ್ಟಿಗಿರುವುದಿಲ್ಲವೆಂದು ಎಚ್ಚರಿಕೆ ನೀಡಿದರು.
ತಾಲ್ಲೂಕಿನ ಎಲ್ಲಾ ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿದ್ದೇನೆ ಎಂದು ಕೆ.ಡಿ.ಪಿ ಸಭೆಗೆ ಸುಳ್ಳು ಮಾಹಿತಿ ನೀಡಿದ ನಿಮ್ಮ ಕಾರ್ಯವೈಖರಿ ಇಲ್ಲಿ ಗೊತ್ತಾಗುತ್ತದೆ ಎಂದು ತಾಲ್ಲೂಕು ಪಂಚಾಯತಿಯ ಅಧ್ಯಕ್ಷೆ ಆಂಜಿನಮ್ಮ ವೆಂಕಟಪ್ಪ ಕೂಡ ಅಧಿಕಾರಿ ವಿರುದ್ಧ ಈ ಸಂದರ್ಭದಲ್ಲಿ ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತಿಯ ಅಧ್ಯಕ್ಷರು ಹಾಸ್ಟೆಲ್ನಲ್ಲಿ ಬಯೋಮೆಟ್ರಿಕ್ ಕೆಟ್ಟುಹೋಗಿರುವುದು ನೋಡಿ ಕೂಡಲೇ ದುರಸ್ಥಿಗೆ ಕ್ರಮ ಕೈಗೊಳ್ಳಬೇಕೆಂದು ಸ್ಥಳದಲ್ಲೇ ಆದೇಶಿಸಿದರು. ಈ ಸಂದರ್ಭದಲ್ಲಿ ಹಾಜರಾತಿ ಪುಸ್ತಕವನ್ನು ಪರಿಶೀಲಿಸಿದಾದ ದಾಖಲೆಯಲ್ಲಿ ೬೪ ವಿದ್ಯಾರ್ಥಿನಿಯರಿದ್ದು, ಹಾಜರಿರುವುದು ಮಾತ್ರ 3೩ ಮಂದಿ ವಿದ್ಯಾರ್ಥಿನಿಯರು ಎಂಬುದು ತಿಳಿದು ಅಧಿಕಾರಿಗಳನ್ನು ಯಾರು ಅಟೆಂಡನ್ಸ್ ಹಾಕಿದ್ದು ಎಂದು ಕೇಳಿದಾಗ ವಾರ್ಡನ್ ನಾಗರತ್ನಮ್ಮ ತಡವರಿಸಿದರು.
ಹಾಸ್ಟಲ್ನಲ್ಲಿ ದಾಸ್ತಾನು ಕೊಠಡಿಯನ್ನು ಪರಿಶೀಲಿಸಿದ ವೇಳೆಯಲ್ಲಿ ಸಹ ಲೋಪದೋಷ ಕಂಡು ಬಂತು. ಕೂಡಲೇ ಹಾಸ್ಟಲ್ನಲ್ಲಿ ೫ ವಿದ್ಯಾರ್ಥಿನಿಯರ ಸಮಿತಿಯನ್ನು ರಚಿಸಿ, ಅವರ ಸಮ್ಮುಖದಲ್ಲಿ ಆಹಾರಪದಾರ್ಥಗಳನ್ನು ತೂಕ ಮಾಡಿ ಊಟೋಪಚಾರ ಮಾಡಬೇಕೆಂದು ಸೂಚಿಸಿ ಕೆಲವು ದಾಖಲೆಗಳನ್ನು ದಾಖಲಿಸಿಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ವೀಣಾ ಗಂಗುಲಪ್ಪ, ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಸತೀಶ್,ಶಿವಲೀಲಾ ರಾಜಣ್ಣ, ಡಿ.ವೈ.ಎಫ್.ಐ ರಾಜ್ಯ ಸಮಿತಿ ಸದಸ್ಯ ಮುನೀಂದ್ರ, ಮುಖಂಡರಾದ ವೆಂಕಟಪ್ಪ, ಗಂಗುಲಪ್ಪ ಮತ್ತಿತರರು ಹಾಜರಿದ್ದರು.

