ನವೆಂಬರ್ ತಿಂಗಳಿನಿಂದ ನೀರಿನ ಬಿಕ್ಕಟ್ಟು ಗಂಭೀರ ಸ್ವರೂಪ ಪಡೆಯಲಿದ್ದು, ಅಧಿಕಾರಿಗಳು ಈ ಬಗ್ಗೆ ಮುಂದಾಲೋಚನಾ ಕ್ರಮಗಳನ್ನು ಕೈಗೊಂಡು ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಸಂಸದ ಕೆ.ಎಚ್.ಮುನಿಯಪ್ಪ ಸೂಚಿಸಿದರು.
ಪಟ್ಟಣದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ತಾಲ್ಲೂಕು ಮಟ್ಟದ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನಾದ್ಯಂತ ಕೊರೆಸಿರುವ 72 ಕೊಳವೆಬಾವಿಗಳಲ್ಲಿ ನೀರು ಸಿಕ್ಕಿದ್ದು, ಸುಮಾರು ಒಂದು ವರ್ಷದಿಂದ ಮೋಟಾರ್ ಪಂಪು, ಪೈಪ್‌ಲೈನ್ ಹಾಗೂ ವಿದ್ಯುತ್ ಸಂಪರ್ಕ ಒದಗಿಸಿಲ್ಲ ಎಂದು ಶಾಸಕ ಎಂ.ರಾಜಣ್ಣ ದೂರಿದ ಹಿನ್ನೆಲೆಯಲ್ಲಿ, ಸಂಸದ ಕೆ.ಎಚ್.ಮುನಿಯಪ್ಪ ಅಧಿಕಾರಿಗಳಿಗೆ ಕ್ಷಿಪ್ರ ಗತಿಯಲ್ಲಿ ತೊಂದರೆಗಳನ್ನು ಸರಿಪಡಿಸಿಕೊಂಡು ನೀರಿನ ಅಭಾವವನ್ನು ಪರಿಹರಿಸಲು ಸೂಚಿಸಿದರು.
ತಾಲ್ಲೂಕು ಪಂಚಾಯತಿ ಸದಸ್ಯ ನಾರಾಯಣಸ್ವಾಮಿ ಮಾತನಾಡಿ, ತಾಲ್ಲೂಕಿನ ಉತ್ತರ ಭಾಗದಲ್ಲಿ ಫ್ಲೋರೈಡ್ ಅಂಶ ಮಿತಿಮೀರಿದೆ. ಪ್ರತಿಯೊಂದು ಕೊಳವೆ ಬಾವಿಯ ನೀರನ್ನೂ ಶುದ್ಧೀಕರಿಸಲು ಘಟಕಗಳನ್ನು ನಿರ್ಮಿಸುವ ಅಗತ್ಯವನ್ನು ಪ್ರಸ್ತಾಪಿಸಿದಾಗ, ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಮಾತನಾಡಿ, ಅಧಿಕಾರಿಗಳು ಕುಡಿಯಲು ಬಳಸುವ 600 ಅಡಿಗೂ ಆಳದಿಂದ ನೀರೆತ್ತುವ ಎಲ್ಲಾ ಕೊಳವೆ ಬಾವಿಗೂ ಶುದ್ಧೀಕರಣ ಘಟಕ ಅಳವಡಿಸಬೇಕು ಎಂದರು.
ಖಾಸಗಿ ಕೊಳವೆ ಬಾವಿಗಳಿಗೆ ಒಂದು ಸಾವಿರ ಗ್ಯಾಲನ್ ನೀರಿಗೆ 10 ಸಾವಿರ ರೂಗಳನ್ನು ಸರ್ಕಾರ ನಿಗದಿಪಡಿಸಿರುವುದು ಸಾಲದು ಕನಿಷ್ಠ 2 ಲಕ್ಷ ರೂಗಳಾದರೂ ನೀಡಬೇಕು ಹಾಗೂ ಒತ್ತಾಯಪೂರ್ವಕವಾಗಿ ಅವರಿಂದ ನೀರು ಪಡೆಯುವುದನ್ನು ನಿಲ್ಲಿಸಬೇಕೆಂದು ಜಿಲ್ಲಾ ಪಂಚಾಯತಿ ಸದಸ್ಯೆಸ್.ಎಂ.ನಾರಾಯಣಸ್ವಾಮಿ ಮತ್ತು ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಡಿ.ಎಸ್.ಎನ್.ರಾಜು ಒತ್ತಾಯಿಸಿದಾಗ, ಸರ್ಕಾರಕ್ಕೆ ಈ ಬಗ್ಗೆ ವರದಿ ಸಲ್ಲಿಸುವುದಾಗಿ ಸಂಸದ ಕೆ.ಎಚ್.ಮುನಿಯಪ್ಪ ಸಭೆಗೆ ತಿಳಿಸಿದರು.
ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಮಾತನಾಡಿ, ಬಯಲು ಸೀಮೆ ಪ್ರದೇಶದಲ್ಲಿ ನೀರಿನ ಅಭಾವ ಹೆಚ್ಚಾಗಿದ್ದು, ಕೆರೆ ಒತ್ತುವರಿ, ಮರಳು ದಂಧೆ, ನೀಲಗಿರಿಗೆ ಅಧಿಕಾರಿಗಳು ಅವಕಾಶ ನೀಡಬಾರದು. ಕೆರೆಗಳಲ್ಲಿರುವ ಜಾಲಿಮರ ಹಾಗೂ ಬಿದಿರು ತೆಗೆಯಬೇಕು ಎಂದು ಸೂಚಿಸಿದರು.
ಸಾರ್ವಜನಿಕ ಆಸ್ಪತ್ರೆಯ ನೀರಿನ ಸಮಸ್ಯೆಯ ಬಗ್ಗೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್ ಕುಮಾರ್ ಪ್ರಸ್ತಾಪಿಸಿದಾಗ, ಶಾಸಕ ಎಂ.ರಾಜಣ್ಣ ಕೊಳವೆ ಬಾವಿಯನ್ನು ಕೊರೆಸಲು ಜಿಲ್ಲಾ ಪಂಚಾಯತಿ ಎಂಜಿನಿಯರ್‌ಗೆ ಸೂಚಿಸಿದರು.
‘ಅಕ್ರಮವಾಗಿ ರಾತ್ರಿ ವೇಳೆ ಟ್ರಾಕ್ಟರ್ ಮತ್ತು ಲಾರಿಗಳಲ್ಲಿ ಮರಳು ಸಾಗಾಣಿಕೆ ತಾಲ್ಲೂಕಿನಲ್ಲಿ ನಡೆದಿದ್ದರೂ ಪೊಲೀಸ್, ಗಣಿ ಮತ್ತು ಭೂವಿಜ್ಞಾನ ಹಾಗೂ ಕಂದಾಯ ಇಲಾಖೆ ಜಾಣ ಕುರುಡನ್ನು ಪ್ರದರ್ಶಿಸುತ್ತಿದೆ. ಇಲಾಖೆಯ ಅಧಿಕಾರಿಗಳು ಈ ದಂಧೆಯಲ್ಲಿ ಶಾಮೀಲಾಗಿರುವುದು ಸ್ಪಷ್ಟವಾಗಿದೆ. ರೈತರು ಕಟ್ಟುವ ಮನೆಗಳಿಗೆ ಹಾಗೂ ಸರ್ಕಾರದಿಂದ ಅನುದಾನ ಪಡೆದ ಫಲಾನುಭವಿಗಳು ಕಟ್ಟುವ ಮನೆಗಳಿಗೆ ಮರಳು ಸಿಗುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾ ಪಂಚಾಯತಿ ಸದಸ್ಯರಾದ ಎಸ್.ಎಂ.ನಾರಾಯಣಸ್ವಾಮಿ ಮತ್ತು ನಂದನಂ ಶ್ರೀರಾಮರೆಡ್ಡಿ ಒತ್ತಾಯಿಸಿದರು. ಸಭೆಯಲ್ಲಿ ಹಾಜರಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗಳ ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು.
ಸಂಸದ ಕೆ.ಎಚ್.ಮುನಿಯಪ್ಪ, ಶಾಸಕ ಎಂ.ರಾಜಣ್ಣ, ಜಿಲ್ಲಾಧಿಕಾರಿ ಡಾ.ವೆಂಕಟೇಶ್, ಪೊಲೀಸ್ ಎಸ್.ಪಿ ದಿವ್ಯಾ ಗೋಪಿನಾಥ್, ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಕಾವೇರಿ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.
ನೀರಿನ ಬಿಕ್ಕಟ್ಟು ಗಂಭೀರ ಸ್ವರೂಪ ಪಡೆಯಲಿದೆ
ದಿಬ್ಬೂರಹಳ್ಳಿ ಪೋಲೀಸ್‌ಠಾಣೆಗೆ ಮುತ್ತಿಗೆ
ಯಾವುದೇ ಜಾತಿ ನಿಂದನೆ(ಅಟ್ರಾಸಿಟಿ) ದೂರುಗಳನ್ನು ಪೋಲೀಸರು ಸೂಕ್ತ ತನಿಖೆ ನಡೆಸಿದ ನಂತರವೆ ಪ್ರಕರಣಗಳನ್ನು ದಾಖಲು ಮಾಡುವಂತೆ ಒತ್ತಾಯಿಸಿ ಸವರ್ಣಿಯರು, ತಾಲ್ಲೂಕು ಒಕ್ಕಲಿಗರ ಸಂಘ ಹಾಗೂ ಯುವಸೇನೆ ನೇತೃತ್ವದಲ್ಲಿ ದಿಬ್ಬೂರಹಳ್ಳಿ ಪೋಲೀಸ್ ಠಾಣೆಗೆ ಮುತ್ತಿಗೆ ಹಾಕಿ ಭಾನುವಾರ ಪ್ರತಿಭಟಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಒಕ್ಕಲಿಗ ಯುವ ಸೇನೆ ತಾಲ್ಲೂಕು ಅಧ್ಯಕ್ಷ ವೆಂಕಟಸ್ವಾಮಿ ಮಾತನಾಡಿ, ವಕ್ಕಲುತನ ಮಾಡಿ ಬದಕುತ್ತಿರುವ ನಿರಪರಾಧಿ ಒಕ್ಕಲಿಗರ ಮೇಲೆ ಕೆಲವರ ಕುಮ್ಮಕ್ಕು ಹಾಗೂ ಒತ್ತಾಯದಿಂದ ಪ್ರಕರಣಗಳನ್ನು ದಾಖಲು ಮಾಡುವುದನ್ನು ಬಿಟ್ಟು ಯಾರೇ ಪ್ರಕರಣ ನೀಡಿದರೂ ಸಹ ಸತ್ಯಸತ್ಯತೆಗಳನ್ನು ಪರಿಶೀಲಿಸಿ ತಪ್ಪಿಸ್ತರ ವಿರುದ್ದ ಮಾತ್ರ ಪ್ರಕರಣ ದಾಖಲಿಸಿ. ತನಿಖೆ ನಡೆಸದೆ ನಿರಾಪರಾಧಿಗಳ ಮೇಲೆ ಪ್ರಕರಣಗಳನ್ನು ನಡೆಸಿದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಉಘ್ರ ಪ್ರತಿಭಟನೆ ನಡೆಸಲಾಗುವುದೆಂದರು.
ತಾಲ್ಲೂಕು ಒಕ್ಕಲಿಗರ ಸಂಘದ ಅದ್ಯಕ್ಷ ಬಿ.ನಾರಾಯಣಸ್ವಾಮಿ ಮಾತನಾಡಿ ಸವರ್ಣಿಯರ ಮೇಲೆ ವಿನಾಕಾರಣ ಜಾತಿ ನಿಂದನೆ(ಅಟ್ರಾಸಿಟಿ) ಪ್ರಕರಣವನ್ನು ಪೋಲೀಸರು ನೊಂದಾವಣೆ ಮಾಡುತ್ತಿದ್ದಾರೆ. ಗಲಭೆ ಸಂದರ್ಭದಲ್ಲಿ ಹಾಜರಿಲ್ಲದವರ ಮೇಲೆ ಯಾವುದೇ ರಾಜಕೀಯ ಉದ್ದೇಶ ಹಾಗೂ ದ್ವೇಷದಿಂದ ನೀಡುವ ದೂರಿಗೆ ಪೋಲೀಸರು ಬೆಲೆ ನೀಡಿ ಪ್ರಕರಣಗಳನ್ನು ದಾಖಲು ಮಾಡಬಾರದು ಎಧರು.
ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀನಿವಾಸಮೂರ್ತಿ ಮಾತನಾಡಿ ಬೇರೆ ಇಲಾಖೆಯಲ್ಲಿ ದೂರು ಬಂದ ನಂತರ ತನಿಖೆ ಮಾಡಿ ನಂತರ ಪ್ರಕರಣ ದಾಖಲಿಸಿಕೊಳ್ಳುತ್ತಾರೆ. ಆದರೆ ನಮ್ಮ ಇಲಾಖೆಯಲ್ಲಿ ದೂರು ಬಂದ ತಕ್ಷಣ ಪ್ರಕರಣ ದಾಖಲಿಸಿಕೊಂಡು ನಂತರ ತನಿಖೆ ಮಾಡುತ್ತೇವೆ. ತನಿಖೆಯಲ್ಲಿ ದೃಢಪಡದ ಪಕ್ಷದಲ್ಲಿ ಸುಳ್ಳು ಪ್ರಕರಣ ಎಂದು ಕೈಬಿಡಲಾಗುತ್ತದೆ. ಅದೇ ರೀತಿ ದೂರು ಬಂದ ನಂತರ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಯಾವುದೇ ಕಾರಣಕ್ಕೂ ತನಿಖೆ ಮಾಡುವರೆಗೂ ಯಾರನ್ನೂ ಬಂಧಿಸುವುದಿಲ್ಲ ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಒಕ್ಕಲಿಗರ ಯುವ ಸೇನೆ ಉಪಾಧ್ಯಕ್ಷ ಪ್ರಭಾಕರ್, ತಾಲ್ಲೂಕು ಕಾರ್ಯಾಧ್ಯಕ್ಷ ಪ್ರಸನ್ನ, ನಗರಾಧ್ಯಕ್ಷ ಪುರುಷೋತ್ತಮ್, ನಗರ ಘಟಕ ಕಾರ್ಯದರ್ಶಿ ಮಂಜುನಾಥ್, ಪ್ರತಾಪ್, ಪ್ರಕಾಶ್, ಹರೀಶ್, ಗಂಗಾಧರ, ದೇವರಾಜ್, ಮುನಿರಾಜು, ಸೀನಪ್ಪ, ಕೇಶವಮೂರ್ತಿ, ಜಯರಾಂ, ರಘು, ಬಾಲಿ, ಮನೋಹರ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಮಹಿಳೆಯರು ಸ್ವಾವಲಂಬಿಗಳಾಗಬೇಕು – ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಡಿ.ಎಸ್.ಎನ್.ರಾಜು
ಗ್ರಾಮೀಣ ಬಡಜನರ ಅಭಿವೃದ್ಧಿ ಹಾಗೂ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಸ್ವಸಹಾಯ ಸಂಘಗಳನ್ನು ರೂಪಿಸುತ್ತಿರುವುದು ಶ್ಲಾಘನೀಯ ಎಂದು ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಡಿ.ಎಸ್.ಎನ್.ರಾಜು ತಿಳಿಸಿದರು.
ಪಟ್ಟಣದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಭಾನುವಾರ ನಡೆಸಿದ ತಾಲ್ಲೂಕಿನ ಗ್ರಾಮ ಸಮಾಲೋಚನಾ ಸಭೆ ಹಾಗೂ ನೂತನ ಸ್ವಸಹಾಯ ಸಂಘಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸ್ವಸಹಾಯ ಸಂಘಗಳೆಂದರೆ ಕೇವಲ ಹಣ ಪಡೆಯುವ ಉದ್ದೇಶವಲ್ಲ, ಅಥವಾ ರಾಜಕೀಯ ಪ್ರೇರಿತವಲ್ಲ. ಒಬ್ಬರ ಕಷ್ಟಕ್ಕೆ ಮತ್ತೊಬ್ಬರು ಆತುಕೊಳ್ಳುವ ಮಹಿಳಾ ಸಂಘಟನೆ. ಬದುಕು ರೂಪಿಸಿಕೊಳ್ಳಲು ಅಗತ್ಯ ಶಿಕ್ಷಣ ಮತ್ತು ಸಿಗುವ ನೆರವನ್ನು ಸದ್ಭಳಕೆ ಮಾಡಿಕೊಳ್ಳಬೇಕು ಮತ್ತು ಗ್ರಾಮ ನೈರ್ಮಲ್ಯದ ಬಗ್ಗೆ ಹೆಚ್ಚು ಕೆಲಸ ಮಾಡಬೇಕು ಎಂದು ಹೇಳಿದರು.
ನಗರ್ತ ಮಂಡಳಿ ಅಧ್ಯಕ್ಷ ಶಿವಶಂಕರ್ ಮಾತನಾಡಿ, ಸಮುದಾಯ ಕಾರ್ಯಕ್ರಮಗಳು ಕೇವಲ ಒಬ್ಬರಿಂದಾಗುವ ಕೆಲಸವಲ್ಲ. ಎಲ್ಲರೂ ಸಂಘಟಿತರಾಗಿ ನಮ್ಮ ಊರು, ನಮ್ಮ ಗ್ರಾಮ ಎಂಬ ಮನೋಭಾವದಿಂದ ಕೆಲಸ ಮಾಡಬೇಕು. ಸೋಲಾರ್, ಗೋಬರ್ ಗ್ಯಾಸ್, ಶೌಚಾಲಯ ಮುಂತಾದ ಗ್ರಾಮ ಕಲ್ಯಾಣ ಯೋಜನೆಗಳನ್ನು ಅಳವಡಿಸಿಕೊಂಡು ಮಾದರಿಯಾಗಬೇಕು ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಬಿ.ಆರ್.ಯೋಗೀಶ್ ಸ್ವಸಹಾಯ ಸಂಘಗಳ ಉದ್ದೇಶ ಹಾಗೂ ಯೋಜನೆಯ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ನೂತನ ಸಂಘಗಳಿಗೆ ಚಟುವಟಿಕೆಗಳ ದಾಖಲಾತಿ ಪುಸ್ತಕಗಳನ್ನು ವಿತರಿಸಲಾಯಿತು. ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ತಾಲ್ಲೂಕು ಮಾಜಿ ಪುರಸಭಾ ಸದಸ್ಯ ಕೆಂಪರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಪಠ್ಯ ಚಟುವಟಿಕೆಗಳೊಂದಿಗೆ ಸ್ವಯಂ ಸೇವಾ ಮನೋಭಾವ ಬೆಳೆಸಿಕೊಳ್ಳಿ – ಜಿಲ್ಲಾ ಪದವಿ ಪೂರ್ವ ಉಪನಿರ್ದೇಶಕ ಎಂ.ಪುಟ್ಟಮಾದಯ್ಯ
ಪಠ್ಯ ಚಟುವಟಿಕೆಗಳೊಂದಿಗೆ ಸ್ವಯಂ ಸೇವಾ ಮನೋಭಾವ ಅಳವಡಿಸಿಕೊಳ್ಳಬೇಕು. ಆ ಮೂಲಕ ನಾಯಕತ್ವದ ಗುಣ ಬೆಳೆಸಿಕೊಳ್ಳಲು ಅದು ಸಹಾಯಕವಾಗುತ್ತದೆ ಎಂದು ಜಿಲ್ಲಾ ಪದವಿ ಪೂರ್ವ ಉಪನಿರ್ದೇಶಕ ಎಂ.ಪುಟ್ಟಮಾದಯ್ಯ ತಿಳಿಸಿದರು.
ತಾಲ್ಲೂಕಿನ ದೊಡ್ಡತೇಕಹಳ್ಳಿ ಗ್ರಾಮದಲ್ಲಿ ಶನಿವಾರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಮ್ಮಲ್ಲಿ ಸುಪ್ತವಾಗಿರುವ ಸಾಮರ್ಥ್ಯಗಳನ್ನು ನಮ್ಮ ಮತ್ತು ಸಮಾಜದ ಒಳಿತಿಗಾಗಿ ವಿನಿಯೋಗಿಸುವ ಕ್ರಿಯೆಯೇ ಸೇವೆ. ಅಂದರೆ ಶ್ರಮ, ಜ್ಞಾನ, ಕೌಶಲ್ಯ ಇತ್ಯಾದಿ ಸಂಪನ್ಮೂಲಗಳನ್ನು ತಮ್ಮೆಲ್ಲರ ಮತ್ತು ಸಮಾಜದ ಒಳಿತಿಗಾಗಿ ಪ್ರತಿಫಲಾಪೇಕ್ಷೆ ಇಲ್ಲದೇ ಅರ್ಪಣಾ ಮನೋಭಾವದಿಂದ ನೀಡುವ ಸಹಾಯವೇ ಸೇವೆ. ನಾವು ಕೇವಲ ಬಹಿರಂಗವಾಗಿ ಸ್ವಚ್ಛವಾಗಬಾರದು, ಅಂತರಂಗವೂ ಅಷ್ಟೇ ಶುಚಿತ್ವವಾಗಬೇಕು. ಈ ಕೆಲಸವನ್ನು ರಾಷ್ಟ್ರೀಯ ಸೇವಾ ಯೋಜನೆ ಮಾಡುತ್ತದೆ. ಅಲ್ಲದೆ ರಾಷ್ಟ್ರೀಯ ಭಾವೈಕ್ಯತೆ ಸೃಷ್ಟಿಸುತ್ತದೆ ಮತ್ತು ಶಿಸ್ತು, ಸಂಯಮ, ಸಮಯ ಪಾಲನೆಯ ಬಗ್ಗೆ ತಿಳಿಸಿಕೊಡುತ್ತದೆ ಎಂದು ಹೇಳಿದರು.
ಪ್ರಾಂಶುಪಾಲ ಎನ್.ಆನಂದ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಹಾಗೂ ವ್ಯಕ್ತಿತ್ವ ಮತ್ತು ಬಾಂಧವ್ಯವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿಸುವಂತಹ ಮಾಧ್ಯಮ ರಾಷ್ಟ್ರೀಯ ಸೇವಾ ಯೋಜನಾ ಘಟಕವಾಗಿದೆ. ವಿದ್ಯಾರ್ಥಿಗಳು ಶ್ರಮದಾನದ ಜೊತೆಗೆ ಸಹಬಾಳ್ವೆ, ನಾಯಕತ್ವ ಹಾಗೂ ವರ್ತಮಾನದ ಪರಿಸ್ಥಿತಿ ಅರಿತು ನಡೆಯುವ ಗುಣ ಮೈಗೂಡಿಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿ. ಯಾವುದೇ ಕೆಲಸ ಕೈಗೊಂಡಾಗ ಅರ್ಪಣಾ ಮನೋಭಾವನೆ ಬೆಳೆಯಬೇಕು ಎಂದು ತಿಳಿಸಿದರು. ಕಾರ್ಯಕ್ರಮಾಧಿಕಾರಿ ಎಚ್.ಸಿ.ಮುನಿರಾಜು ಹಾಜರಿದ್ದರು.
ಪ್ರತಿಭೆಗೆ ವಯಸ್ಸಿನ ಮಿತಿಯಿಲ್ಲ
ಶಿಡ್ಲಘಟ್ಟ ತಾಲ್ಲೂಕು ತಿಪ್ಪೇನಹಳ್ಳಿಯ T V ರಾಘವೇಂದ್ರರವರು
ಅಂಗವಿಕಲ ಬಾಲಕಿಯ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸಿ ಅಂಗವಿಕಲರು ಮತ್ತು ರೈತ ಮುಖಂಡರ ಪ್ರತಿಭಟನೆ
ಗುಡಿಬಂಡೆ ತಾಲ್ಲೂಕಿನ ತಿರುಮಣಿ ಗ್ರಾಮದಲ್ಲಿ ಅಂಗವಿಕಲ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಅಂಗವಿಕಲರು ಮತ್ತು ರೈತ ಮುಖಂಡರು ಶನಿವಾರ ಪಟ್ಟಣದ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟಿಸಿದರು.
ಸ್ವಾಮಿ ವಿವೇಕಾನಂದ ಅಂಗವಿಕಲ ಕ್ಷೇಮಾಭಿವೃದ್ಧಿ ಸಂಸ್ಥೆ ಹಾಗೂ ರೈತ ಸಂಘದ ಸದಸ್ಯರು ಜೊತೆಗೊಡಿ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ, ಅಪ್ರಾಪ್ತ ಮಕ್ಕಳ ಹಾಗೂ ಮಹಿಳೆಯರ ಮೇಲೆ ನಿರಂತರವಾಗಿ ಅತ್ಯಾಚಾರ ದೌರ್ಜನ್ಯಗಳು ನಡೆಯುತ್ತಿದ್ದು ಅಂಗವಿಕಲ ಮಕ್ಕಳ ಮತ್ತು ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ, ಆದ್ದರಿಂದ ಅಧಿಕಾರಿಗಳು ಅತ್ಯಾಚಾರಕ್ಕೆ ಯತ್ನಿಸಿರುವ ಅಪರಾಧಿಯ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಅತ್ಯಾಚಾರಕ್ಕೆ ಒಳಗಾದವರಿಗೆ ಸರ್ಕಾರದಿಂದ ಅರ್ಥಿಕ ಸಹಾಯ ಮಾಡಬೇಕು. ಮುಂದೆ ಇಂತಹ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚರ ವಹಿಸಬೇಕು ಎಂದು ಒತ್ತಾಯಿಸಿ ಶಿರಸ್ತೆದಾರರಿಗೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸ್ವಾಮಿ ವಿವೇಕಾನಂದ ಅಂಗವಿಕಲ ಕ್ಷೇಮಾಭಿವೃದ್ಧಿ ಸಂಘದ ಶಾಂತಮ್ಮ, ಮಾರಪ್ಪ, ಭಾಸ್ಕರ್, ಸುಬ್ರಮಣಿ, ಮೂರ್ತಿ, ಮಂಜುನಾಥ್, ರೂಪ, ಮುನಿರಾಜು, ರೈತ ಸಂಘದ ಮಂಜುನಾಥ್, ಅಂಬರೀಷ್, ತ್ಯಾಗರಾಜ್, ನರಸಿಂಹರೆಡ್ಡಿ, ವೆಂಕಟರೆಡ್ಡಿ, ಮುನಿನಂಜಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ತಾಯ ಮಡಿಲಿಗೆ ಸೇರಿದ ಕಳೆದುಹೋಗಿದ್ದ ಮಗು
ಪುರ ಠಾಣೆಯ ಪೊಲೀಸ್ ಪೇದೆಗಳು ಕಳೆದುಹೋಗಿದ್ದ ಕಂದನನ್ನು ತಾಯ ಮಡಿಲಿಗೆ ಸೇರಿಸಿದ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.
ಸಲ್ಲಾಪುರಮ್ಮ ದೇವಾಲಯದ ಬಳಿ ನಿಲ್ಲಿಸಿದ್ದ ಖಾಸಗಿ ಬಸ್‌ನಲ್ಲಿ ಮುಂಜಾನೆ ಆರು ಗಂಟೆ ಸಮಯದಲ್ಲಿ ಎರಡು ವರ್ಷದ ಗಂಡು ಮಗುವನ್ನು ಕಂಡ ಸಾರ್ವಜನಿಕರು ಗುಂಪುಗೂಡಿದ್ದರು. ಮುದ್ದಾಗಿದ್ದ ಮಗುವನ್ನು ಸಾಕಿಕೊಳ್ಳು ಆಗಲೇ ಕೆಲವರು ಸಿದ್ಧವಾಗಿದ್ದರು. ಅಷ್ಟರಲ್ಲಿ ಪೊಲೀಸ್ ಪೇದೆಗಳಾದ ಎಚ್.ಎಂ.ಸಂತೋಷ್ ಮತ್ತು ಪಿ.ವಿ.ಜಯಚಂದ್ರ ಆಗಮಿಸಿ, ಸಿಕ್ಕ ಮಗುವನ್ನು ಕರೆದುಕೊಂಡು ಹೋಗಿ ಸಾಕಿಕೊಳ್ಳುವುದು ಕಾನೂನಿನ ಪ್ರಕಾರ ತಪ್ಪು ಎಂದು ಹೇಳಿ ಮಗುವನ್ನು ಬೈಕಿನಲ್ಲಿ ಕೂರಿಸಿಕೊಂಡು ಅಲ್ಲಲ್ಲಿ ವಿಚಾರಿಸುತ್ತಾ ಊರೆಲ್ಲಾ ಸುತ್ತಿದ್ದಾರೆ. ಚಿಂದಿ ಹಾಕು ಪ್ಲಾಸ್ಟಿಕ್ ಆಯುವವರ ಮಗುವಿರಬೇಕೆಂದು ಮಾಹಿತಿ ಪಡೆದು ರೈಲ್ವೆ ನಿಲ್ದಾಣದ ಬಳಿ ಬಂದಿದ್ದಾರೆ.
‘ಮಗುವನ್ನು ನೋಡುತ್ತಿದ್ದಂತೆ ರೈಲ್ವೆ ನಿಲ್ದಾಣದ ಬಳಿ ತಂಗುವ ಚಿಂದಿ ಹಾಕು ಪ್ಲಾಸ್ಟಿಕ್ ಆಯುವ ಮಹಿಳೆ ಅತ್ತ ಕಡೆಯಿಂದ ಓಡಿ ಬಂದರೆ, ಇತ್ತ ಕೆಳಗಿಳಿಸಿದ್ದ ಮಗುವು ಓಡುತ್ತಾ ಹೋಗಿ ತಾಯಿಯನ್ನು ಅಪ್ಪಿಕೊಂಡಿತು. ಸಿನಿಮಾ ದೃಶ್ಯದಂತೆ ನಮಗಲ್ಲಿ ಭಾಸವಾಯಿತು. ಮಗುವಿನ ಹೆಸರು ಕಿರಣ್, ತಾಯಿಯ ಹೆಸರು ಸುಮಾ ಎಂದು ತಿಳಿಯಿತು. ಮಗುವನ್ನು ಎಲ್ಲೆಂದರಲ್ಲಿ ಬಿಟ್ಟು ಬರಬಾರದು ಎಂದು ಬುದ್ದಿಹೇಳಿ, ತಾಯಿ ಮಗು ಒಂದಾದ ಸಂತೃಪ್ತಿಯಿಂದ ವಾಪಸಾದೆವು’ ಎಂದು ಪೊಲೀಸ್ ಪೇದೆ ಪಿ.ವಿ.ಜಯಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.
ಅಶೋಕ ರಸ್ತೆಯಲ್ಲಿರುವ ದ್ವಿಮುಖ ಗಣಪತಿ ದೇವಾಲಯದಲ್ಲಿ ಮೂರನೇ ವರ್ಷದ ವಾರ್ಷಿಕೋತ್ಸ
ಪಟ್ಟಣದ ಅಶೋಕ ರಸ್ತೆಯಲ್ಲಿರುವ ದ್ವಿಮುಖ ಗಣಪತಿ ದೇವಾಲಯದ ಮೂರನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಶುಕ್ರವಾರ ನೆರವೇರಿಸಲಾಯಿತು.
ದ್ವಿಮುಖ ಗಣಪತಿ ದೇವಾಲಯದಲ್ಲಿ ಗಣಪತಿಗೆ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು, ವಿಧ ವಿಧವಾದ ಹೂಗಳಿಂದ ದೇವಾಲಯವನ್ನು ಸಿಂಗಾರಗೊಳಿಸಲಾಗಿತ್ತು, ದೀಪಾಲಂಕಾರಗಳಿಂದ ಅಲಕರಿಸಲಾಗಿತ್ತು, ವಾರ್ಷಿಕೋತ್ಸವದ ಅಂಗವಾಗಿ ಭಕ್ತಾದಿಗಳು ಬೆಳಗಿನಿಂದಲೇ ದೇವಾಲಯಕ್ಕೆ ಬೇಟಿ ಪೂಜೆಗಳನ್ನು ಸಲ್ಲಿಸಿದರು.
ವಾರ್ಷಿಕೋತ್ಸವದ ಅಂಗವಾಗಿ ಗಣಪತಿ ಮೂರ್ತಿಗೆ ದ್ರಾಕ್ಷಿ ಗೋಡಂಬಿಯಿಂದ ವಿಶೇಷ ಅಲಂಕಾರ ಮಾಡಲಾಗಿತ್ತು, ಪೂಜೆಯಲ್ಲಿ ಭಾಗವಹಿಸಿದ್ದ ಭಕ್ತರಿಗೆ ಪ್ರಸಾದವನ್ನು ವಿತರಣೆ ಮಾಡಲಾಯಿತು.
ರೇಣುಕಾ ಎಲ್ಲಮ್ಮ ದೇವಿಯ ಪ್ರಥಮ ವರ್ಷದ ಅನ್ನಸಂತರ್ಪಣಾ ವಾರ್ಷಿಕೋತ್ಸವ
ಪಟ್ಟಣ ಟಿ.ಬಿ ರಸ್ತೆಯಲ್ಲಿರುವ ರೇಣುಕಾ ಎಲ್ಲಮ್ಮ ದೇವಾಲಯದಲ್ಲಿ ಪ್ರಥಮ ವರ್ಷದ ಅನ್ನ ಸಂತರ್ಪಣಾ ವಾರ್ಷಿಕೊತ್ಸವ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ರೇಣುಕಾ ಎಲ್ಲಮ ದೇವಾಲಯದಲ್ಲಿ ಅಮ್ಮನವರಿಗೆ ವಿಶೇಷ ಅಲಂಕಾರ, ಮುತೈದೆಯರಿಗೆ ಬಳೆ ತೊಡಿಸುವ ಕಾರ್ಯಕ್ರಮ, ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ನೂರಾರು ಭಕ್ತರು ರೇಣುಕಾ ಎಲ್ಲಮ್ಮ ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಗ್ರಾಮೀಣ ಸಂಪರ್ಕ ರಸ್ತೆ ಅಭಿವೃದ್ಧಿ ನಡೆಸಲಾಗುವುದು – ಶಾಸಕ ಎಂ.ರಾಜಣ್ಣ
ತಾಲ್ಲೂಕಿನಾದ್ಯಂತ ಗ್ರಾಮೀಣ ಸಂಪರ್ಕ ರಸ್ತೆ ಅಭಿವೃದ್ಧಿ ಯೋಜನೆಯಡಿ 38 ಕಿಮೀ ರಸ್ತೆ ಕಾಮಗಾರಿಯನ್ನು ನಡೆಸಲಾಗುವುದು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯತಿಯ ಮಲ್ಲಹಳ್ಳಿ ಗೇಟ್ ಮತ್ತು ಶೆಟ್ಟಹಳ್ಳಿ ನಡುವೆ ಪಿ.ಎಂ.ಜಿ.ಎಸ್.ವೈ ಯೋಜನೆಯ 62 ಲಕ್ಷ ರೂಗಳ ವೆಚ್ಚದಲ್ಲಿ ಒಂದೂವರೆ ಕಿ.ಮೀ ರಸ್ತೆ ಕಾಮಗಾರಿಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಗುಣಮಟ್ಟದ ಕಾಮಗಾರಿಯನ್ನು ನಡೆಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದೇವೆ. ಗ್ರಾಮಸ್ಥರೂ ಕಾಮಗಾರಿಯ ಗುಣಮಟ್ಟವನ್ನು ಗಮನಿಸಿಕೊಳ್ಳಬೇಕು. ಹಲವಾರು ವರ್ಷಗಳಿಂದ ಈ ರಸ್ತೆಯು ಹದಗೆಟ್ಟಿದ್ದು, ಈಗ ಇದರ ಅಭಿವೃದ್ಧಿ ಪ್ರಾರಂಭವಾಗಿದೆ ಎಂದು ಹೇಳಿದರು.
ಕನಕಪ್ರಸಾದ್, ಸೂರ್ಯನಾರಾಯಣಗೌಡ, ಮುನಿವೆಂಕಟಸ್ವಾಮಿ, ರಾಮಚಂದ್ರಪ್ಪ, ನಾರಾಯಣಸ್ವಾಮಿ, ಮಂಜುನಾಥ್, ಶ್ರೀನಿವಾಸ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರತಿ ಲೀಟರ್ ಹಾಲಿಗೆ ಕನಿಷ್ಟ 25 ರೂಪಾಯಿಗಳನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯ
ಮಳೆಯ ಅಭಾವದಿಂದ ಹಾಲು ಉತ್ಪಾದನೆ ಕುಂಠಿತಗೊಂಡಿದೆ. ಆದ್ದರಿಂದ ರೈತರು ನಷ್ಟ ಹೊಂದುವುದನ್ನು ತಡೆಯಲು ಪ್ರತಿ ಲೀಟರ್ ಹಾಲಿಗೆ ಕನಿಷ್ಟ ೨೫ ರೂಪಾಯಿಗಳನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಲಾಗುತ್ತದೆ ಎಂದು ಕೋಚಿಮುಲ್ ನಿರ್ದೇಶಕ ಬಂಕ್‌ಮುನಿಯಪ್ಪ ಹೇಳಿದರು.
ತಾಲ್ಲೂಕಿನ ಬೆಳ್ಳೂಟಿ ಗೇಟ್‌ನಲ್ಲಿರುವ ಗುಟ್ಟಾಂಜನೇಯಸ್ವಾಮಿ ಕಲ್ಯಾಣಮಂಟಪದಲ್ಲಿ ಮಂಗಳವಾರ ಹಾಲು ಒಕ್ಕೂಟದ ವತಿಯಿಂದ ಆಯೋಜನೆ ಮಾಡಲಾಗಿದ್ದ, ಅತ್ತಿಗಾನಹಳ್ಳಿ ಗ್ರಾಮದ ಡೈರಿ ಕಾರ್ಯದರ್ಶಿ ಕೃಷ್ಣಪ್ಪ ಅವರಿಗೆ ಶ್ರದ್ದಾಂಜಲಿ ಕಾರ್ಯಕ್ರಮ, ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಾಲು ಬಾಯಿ ಜ್ವರದಿಂದ ಮೃತಪಟ್ಟಿದ್ದ ರಾಸುಗಳ ೧೫೮ ಮಂದಿ ಮಾಲೀಕರಿಗೆ ತಲಾ ೬,೦೦೦ ರೂಪಾಯಿಗಳಂತೆ ೯ ಲಕ್ಷ ೧೨.ಸಾವಿರ ರೂಪಾಯಿಗಳು, ಹಾಗೂ ದತ್ತಿ ವತಿಯಿಂದ ೨೬ ಮಂದಿ ಫಲಾನುಭವಿಗಳಿಗೆ ೫,೦೦೦ ರೂಪಾಯಿಗಳಂತೆ ೧ ಲಕ್ಷ ೩೦ ಸಾವಿರ ರೂಪಾಯಿಗಳ ಚೆಕ್ಕುಗಳನ್ನು ವಿತರಣೆ ಮಾಡಿ, ಕೃಷ್ಣಪ್ಪನ ಕುಟುಂಬಕ್ಕೆ ಸಹಾಯಧನ ನೀಡಿ ಅವರು ಮಾತನಾಡಿದರು.
ಕೋಲಾರ- ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕ ಬಂಕ್ ಮುನಿಯಪ್ಪ, ತಾಲ್ಲೂಕಿನ ಸುಮಾರು ೧೯೦ ಸಹಕಾರ ಸಂಘಗಳಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಕಾರ್ಯದರ್ಶಿಗಳ ಕುಟುಂಬಗಳಿಗೆ ನೆರವಾಗಲು, ಈಗಾಗಲೇ ಕೋಲಾರದ ಒಕ್ಕೂಟದ ಸಭೆಯಲ್ಲಿ ಚರ್ಚೆ ಮಾಡಲಾಗಿದ್ದು, ಕಾರ್ಯದರ್ಶಿಗಳು ಅಕಾಲ ಮರಣಕ್ಕೆ ತುತ್ತಾದರೆ, ೧ ಲಕ್ಷ ರೂಪಾಯಿಗಳ ಸಹಾಯಧನವನ್ನು ನೀಡಲು ಉದ್ದೇಶಿಸಲಾಗಿದೆ, ಎಸ್.ಎಸ್.ಎಲ್.ಸಿ.,ಪಿ.ಯು.ಸಿ ಮತ್ತು ಪದವಿ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಅಂಕಗಳನ್ನು ಪಡೆದಿರುವಂತಹ ಕಾರ್ಯದರ್ಶಿಗಳ ಮಕ್ಕಳಿಗೆ ಪ್ರೋತ್ಸಾಹ ಮಾಡುವಂತಹ ಯೋಜನೆಗಳನ್ನು ಜಾರಿಗೆ ತರಲು ಚಿಂತನೆ ನಡೆಸಲಾಗಿದೆ. ಈಗ ತೀವ್ರ ಮಳೆಯ ಕೊರತೆಯಿಂದಾಗಿ ಹಾಲು ಉತ್ಪಾದಕರಿಗೆ ನಷ್ಟವುಂಟಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರತಿ ಲೀಟರ್ ಹಾಲಿಗೆ ೨೫ ರೂಪಾಯಿಗಳು ನೀಡಲು ಸಭೆಯಲ್ಲಿ ತೀರ್ಮಾನ ಮಾಡಿ ಠರಾವು ಹೊರಡಿಸಲಾಗುತ್ತಿದೆ. ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತದೆ. ಕಾರ್ಯದರ್ಶಿಗಳು ಪ್ರಾಮಾಣಿಕರಾಗಿ ಕೆಲಸ ಮಾಡಬೇಕು ಎಂದರು.
ಶಿಡ್ಲಘಟ್ಟ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಕೆ.ಜಿ.ಈಶ್ವರಯ್ಯ ಮಾತನಾಡಿ, ರೈತರು ರಾಸುಗಳಿಗೆ ವಿಮೆಗಳನ್ನು ಮಾಡಿಸಿಕೊಳ್ಳಬೇಕು, ಈಗಾಗಲೇ ಈ ಸಾಲಿನಲ್ಲಿ ೬೦೦೦ ರಾಸುಗಳಿಗೆ ವಿಮೆ ಮಾಡಿಸಲಾಗಿದೆ, ರೈತರು ೪೦೦ ರೂಪಾಯಿಗಳು ಪಾವತಿಸಬೇಕು, ಒಕ್ಕೂಟ ೪೦೦ ರೂಪಾಯಿಗಳನ್ನು ಭರಿಸುತ್ತದೆ, ಇದರಿಂದ ರಾಸುಗಳು ಮರಣಹೊಂದಿದಾಗ ರೈತರಿಗೆ ಅನುಕೂಲವಾಗಲಿದೆ. ಕಾರ್ಯದರ್ಶಿಗಳು ಹೆಚ್ಚು ಆಸಕ್ತಿ ವಹಿಸಿ ರಾಸುಗಳಿಗೆ ವಿಮಾ ಸೌಲಭ್ಯಗಳನ್ನು ಮಾಡಿಸಿಕೊಡಲು ಸಹಕಾರಿಗಳಾಗಬೇಕು ಎಂದರು.
ಇದೇ ಸಂಧರ್ಭದಲ್ಲಿ ಮೃತ ಕೃಷ್ಣಪ್ಪ ಅವರ ಕುಟುಂಬಕ್ಕೆ ಸಹಾಯಧನ ಹಾಗೂ ಕಾಯಿಬಾಯಿ ರೋಗದಿಂದ ಸಾವನ್ನಪ್ಪಿರುವ ರಾಸುಗಳ ಮಾಲೀಕರಿಗೆ ಚೆಕ್ಕುಗಳನ್ನು ವಿತರಣೆ ಮಾಡಲಾಯಿತು. ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಗೋಪಾಲರಾವ್, ಚಂದ್ರಶೇಖರ್, ಆಂಜಿನಪ್ಪ, ಕುಮ್ಮಯ್ಯ, ಕೆ.ಬಿ.ಎನ್.ರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಮಾನಸಿಕ ದೌರ್ಭಲ್ಯಗಳನ್ನು ಮೀರಿ ಬೆಳೆಯಬೇಕು – ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿಜಯ ದೇವರಾಜ ಅರಸ್
ಮಾನಸಿಕ ದೌರ್ಭಲ್ಯಗಳನ್ನು ಮೀರಿ ಬೆಳೆದಾಗ ಆತ್ಮಶಾಂತಿಯ ಜೊತೆಗೆ ಸಾಮಾಜಿಕ ಸ್ವಾಸ್ಥ್ಯವೂ ಉಳಿಯುತ್ತದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿಜಯ ದೇವರಾಜ ಅರಸ್ ಅಭಿಪ್ರಾಯಪಟ್ಟರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ದಿ ರಿಚ್‌ಮಂಡ್ ಫೆಲೋಶಿಪ್ ಸೊಸೈಟಿ ಪ್ರಗತಿ ಗ್ರಾಮೀಣ ಶಾಖೆ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಸಹಯೋಗದೊಂದಿಗೆ ನಡೆದ ‘ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಮತ್ತು ಕಾನೂನು ಅರಿವು ನೆರವು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾನಸಿಕ ರಾಗ, ದ್ವೇಷ, ಅಹಂಕಾರ ಮುಂತಾದ ಕ್ಷುಲ್ಲಕ ಕಾರಣಗಳಿಂದಾಗಿಯೇ ಅನೇಕರು ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಇದರಿಂದಾಗಿ ಅವರ ಆರೋಗ್ಯ, ಹಣ, ಸಮಯ ವ್ಯರ್ಥವಾಗುತ್ತದೆ. ಮಾನಸಿಕ ಪ್ರಜ್ಞೆಯನ್ನು ಆತ್ಮಾವಲೋಕನಾ ಕ್ರಿಯೆಯೊಂದಿಗೆ, ಹೃದಯ ವೈಶಾಲ್ಯದಿಂದ ಬೆಳೆಸಿಕೊಳ್ಳುವ ಅತ್ಯಗತ್ಯವಿದೆ. ಮಾನಸಿಕ ಅಸ್ವಸ್ಥತೆಗೆ ಈಗ ವೈದ್ಯಕೀಯ ಚಿಕಿತ್ಸೆಗಳು ಸುಧಾರಣಾ ಕ್ರಮಗಳು ಇರುವುದನ್ನು ಮನಗಾಣಬೇಕು. ದಿ ರಿಚ್‌ಮಂಡ್ ಫೆಲೋಶಿಪ್ ಸೊಸೈಟಿ ಪ್ರಗತಿ ಗ್ರಾಮೀಣ ಶಾಖೆಯ ವತಿಯಿಂದ ಬೆಳ್ಳೂಟಿ ಗೇಟ್ ಬಳಿ ಉಚಿತ ಆಸ್ಪತ್ರೆ ಮತ್ತು ಪುನರ್ವಸತಿ ಪಾಲನಾ ಕೇಂದ್ರವನ್ನು ನೂತನವಾಗಿ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.
ದಿ ರಿಚ್‌ಮಂಡ್ ಫೆಲೋಶಿಪ್ ಸೊಸೈಟಿ ಪ್ರಗತಿ ಗ್ರಾಮೀಣ ಶಾಖೆ ಅಧ್ಯಕ್ಷ ಎಸ್.ಎಂ.ನಾರಾಯಣಸ್ವಾಮಿ ಮಾತನಾಡಿ, ನಮ್ಮ ಸಂಸ್ಥೆಯ ವತಿಯಿಂದ ಇದುವರೆಗೂ ಮಾನಸಿಕ ರೋಗಿಗಳಿಗೆ ಉಚಿತ ಚಿಕಿತ್ಸೆ ಮತ್ತು ಔಷಧಿಗಳನ್ನು ನೀಡುತ್ತಿದ್ದೆವು. ಇನ್ನು ಮುಂದೆ ನೂತನ ಕಟ್ಟಡದಲ್ಲಿ ಅವರಿಗೆ ವೃತ್ತಿಪರ ಶಿಕ್ಷಣ ತರಬೇತಿಗಳಾದ ಕೆಮಿಕಲ್ಸ್ ತಯಾರಿಕೆ, ಆಹಾರ ಪದಾರ್ಥಗಳ ತಯಾರಿಕೆ, ಹಣ್ಣಿನ ಸಂಸ್ಕರಣೆ, ಹರ್ಬಲ್ ವಸ್ತುಗಳ ತಯಾರಿಕೆ, ರೇಷ್ಮೆ, ಹೈನುಗಾರಿಕೆ, ತೋಟಗಾರಿಕೆ, ಕಂಪ್ಯೂಟರ್, ಟೈಲರಿಂಗ್ ಮುಂತಾದ ತರಬೇತಿಗಳನ್ನು ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಯೋಜನೆ ರೂಪಿಸಿದ್ದೇವೆ ಎಂದು ವಿವರಿಸಿದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಎನ್.ಎ.ಶ್ರೀಕಂಠ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಸರ್ಕಾರಿ ವಕೀಲ ಈ.ಡಿ.ಶ್ರೀನಿವಾಸ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್‌ಕುಮಾರ್, ಮಾನಸಿಕ ತಜ್ಞ ಡಾ.ಕಿಶೋರ್, ಡಾ.ವಿ.ವೆಂಕಟರಾಮಯ್ಯ, ಡಾ.ಮಲ್ಲಿಕಾ, ಲಕ್ಷ್ಮಣಾಚಾರ್, ಎಚ್.ವಿ.ರಾಮಕೃಷ್ಣಪ್ಪ, ಭಕ್ತರಹಳ್ಳಿ ಬೈರೇಗೌಡ, ಸೋಮಶೇಖರ್, ದೇವರಾಜ್, ಪಿ.ಗೋಪಿನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಪಿಟೀಲು ವಿದ್ವಾನ್ ಹೊಸಪೇಟೆ ಎಚ್.ಬಿ.ನಾರಾಯಣಾಚಾರ್
ವೇದಿಕೆನ್ನು ಏರಿದ್ದು ಹದಿನೆಂಟರ ವಯಸ್ಸಿನಲ್ಲಿ. ಈಗ ವಯಸ್ಸು ತೊಂಬತ್ತಐದು ಆದರೂ ಪಿಟೀಲು ಕೈಯಲ್ಲಿಡಿಯುತ್ತಿದ್ದಂತೆಯೇ ಚಿಮ್ಮುತ್ತದೆ ಉತ್ಸಾಹ, ಹೊರಡುತ್ತದೆ ಸುಶ್ರಾವ್ಯ ಸಂಗೀತ. ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಹೊಸಪೇಟೆಯ ವಿದ್ವಾನ್ ಎಚ್.ಬಿ.ನಾರಾಯಣಾಚಾರ್ ತಮ್ಮ ಜೀವನವನ್ನೆಲ್ಲಾ ಕಲಾ ಸೇವೆ ಮತ್ತು ಪಿಟೀಲು ನುಡಿಸುವುದರಲ್ಲಿಯೇ ಕಳೆದಿದ್ದಾರೆ.
ಕರ್ನಾಟಕ ಸಂಗೀತದಲ್ಲಿ ಪಕ್ಕವಾದ್ಯವಾಗಿಯೂ ತನಿವಾದ್ಯವಾಗಿಯೂ ಬಳಸಲಾಗುವ ಪಿಟೀಲು ಭಾರತೀಯ ಸಂಗೀತಕ್ಕೆ ದೊರೆತದ್ದು ಪಾಶ್ಚಾತ್ಯ ಸಂಗೀತದ ಸಂಪರ್ಕದಿಂದ. ಆದರೆ ರಾವಣಹಸ್ತ ಎಂಬ ಭಾರತೀಯ ವಾದ್ಯದಿಂದ ಪಿಟೀಲು ರೂಪುಗೊಂಡಿರಬಹುದೆಂಬ ಅಭಿಮತವನ್ನು ಪಾಶ್ಚಾತ್ಯ ಸಂಗೀತಗಾರರೇ ಕೆಲವರು ವ್ಯಕ್ತಪಡಿಸಿದ್ದಾರೆ. ಪಿಟೀಲಿನಂಥ ಒಂದು ವಾದ್ಯ ನಮ್ಮಲ್ಲಿತ್ತೆಂದೂ ಅದನ್ನು ಧನುರ್ವೀಣೆ ಎಂದು ಕರೆಯುತ್ತಿದ್ದರೆಂದೂ ಕೆಲವರು ಹೇಳುತ್ತಾರೆ.
ಕರ್ನಾಟಕ ಮಾತ್ರವಲ್ಲದೆ, ನೆರೆಯ ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ನಿರಂತರವಾಗಿ ಪಿಟೀಲು ಸೋಲೋ ಕಾರ್ಯಕ್ರಮವನ್ನು ನೀಡುತ್ತಾ ಬಂದಿದ್ದಾರೆ.
ಇವರದ್ದು ಸಂಗೀತಗಾರರ ಮನೆತನ. ತಂದೆ ಪಂಚನನಾಚಾರ್ಯರು ತಬಲಾ ವಾದಕರು. ಚಿಕ್ಕಪ್ಪ ನಂಜುಂಡಾಚಾರ್ಯ ಸಂಗೀತ ವಿದ್ವಾಂಸರು. ತಂದೆ ಮತ್ತು ಚಿಕ್ಕಪ್ಪನವರಲ್ಲಿ ಸಂಗೀತದ ಪ್ರಾರಂಭಿಕ ಶಿಕ್ಷಣವನ್ನು ಪಡೆದು ಹಲಸೂರಿನ ವಿದ್ವಾನ್ ಅಣ್ಣಯ್ಯಸ್ವಾಮಿ ಅವರಲ್ಲಿ ಪಿಟೀಲುವಾದನವನ್ನು ಒಂದು ದಶಕದ ಕಾಲ ಅಭ್ಯಾಸ ಮಾಡಿದರು. ನಂತರ ವಿದ್ವಾಂಸರಾದ ಕಿತ್ತಂಡೂರು ರಾಮಕೃಷ್ಣಪ್ಪ ಮತ್ತು ದೊಡ್ಡಬಳ್ಳಾಪುರದ ಲಕ್ಷ್ಮೀನಾರಾಯಣಪ್ಪ ಅವರಲ್ಲಿ ಹೆಚ್ಚಿನ ಶಿಕ್ಷಣ ಪಡೆದರು.
ಸಂಗೀತ ಮತ್ತು ಹರಿಕಥಾ ಕ್ಷೇತ್ರಗಳಲ್ಲಿ ವಿದ್ವಾಂಸರಾದ ಚಿಮತಲಪಲ್ಲಿ ರಾಮಚಂದ್ರರಾವ್, ಚಿಂತಲಪಲ್ಲಿ ಕೃಷ್ಣಮೂರ್ತಿ, ಚಿಂತಲಪಲ್ಲಿ ವೆಂಕಟರಾವ್, ಚಿತ್ತೂರು ಸುಬ್ರಹ್ಮಣ್ಯ ಪಿಳ್ಳೈ, ಪೊಲ್ಲಾಚಿ ಶಂಕರನ್, ರಮಣಕುಮಾರ್, ಸರೋಜಾ ನಟರಾಜನ್, ಸಂಬಂಧಮೂರ್ತಿ ಭಾಗವತರ್, ಹೊನ್ನಪ್ಪ ಭಾಗವತರ್, ವೀರಗಂಧಂ ವೆಂಕಟಸುಬ್ಬರಾವ್, ತೆನಾಲಿ ರಾಮಕುಮಾರಿ, ಚನ್ನೈ ಕಮಲಾಕುಮಾರಿ, ಸರಸ್ವತಿ, ತೆನಾಲಿ ತಿರುಪತಿ ನಾಗರತ್ನಂ ಭಾಗವತಾರಿಣಿ, ಎನ್.ಆರ್.ಜ್ಞಾನಮೂರ್ತಿ ಮುಂತಾದ ಕಲಾವಿದರಿಗೆ ಪಿಟೀಲಿನ ಪಕ್ಕವಾದ್ಯ ನುಡಿಸಿದ್ದಾರೆ.
ಕೈವಾರ ರಾಷ್ಟ್ರೀಯ ಸಂಗೀತ ಮಹೋತ್ಸವ, ಹಂಪಿ ಉತ್ಸವ, ಧರ್ಮಸ್ಥಳ ಸಂಗೀತೋತ್ಸವ, ಮುಳಬಾಗಿಲು ಪುರಂದರೋತ್ಸವ, ಚಿಕ್ಕಬಳ್ಳಾಪುರ ಜಿಲ್ಲಾ ಉತ್ಸವ ಮುಂತಾದ ವೇದಿಕೆಗಳಲ್ಲಿ ಸಂಗೀತ ನೀಡಿರುವ ನಾರಾಯಣಾಚಾರ್ ನೂರಾರು ಪ್ರಬುದ್ಧ ಶಿಷ್ಯರನ್ನೂ ಸಂಗೀತ ಮಾಧ್ಯಮಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ಇವರ ಸಂಗೀತ ಸೇವೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಗೌರವ ಪುರಸ್ಕಾರಗಳೊಂದಿಗೆ ಸತ್ಕರಿಸಿವೆ. ‘ನಾದ ಚಿಂತಾಮಣಿ’, ‘ಪಿಟೀಲು ವಾದ್ಯ ಪ್ರವೀಣ’, ‘ಸಂಗೀತ ರತ್ನ’ ಮುಂತಾದ ಪುರಸ್ಕಾರಗಳು ಇವರಿಗೆ ಸಂದಿದೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ 2008-09ರ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಗಂಜಿಗುಂಟೆ ಗೆಳೆಯರ ಬಳಗದಿಂದ “ಗಾನ ಕಮಲ” ಎಂಬ ಬಿರುದು ಮತ್ತು ಸನ್ಮಾನಕ್ಕೆ ಭಾಜನರಾಗಿದ್ದಾರೆ.
ಕಾಯಿಲೆ ವಾಸಿಗೆ ಕತ್ತೆ ಹಾಲು ಕುಡಿ
‘ಕತ್ತೆಹಾಲು ಬೇಕಾ ಕತ್ತೆ ಹಾಲು, ದಮ್ಮು, ಕೆಮ್ಮು, ವಾಯು, ಕಫ, ಶೀತ, ನೆಗಡಿ ಎಲ್ಲಾ ಮಾಯ ಕತ್ತೆಹಾಲು…., ಮಕ್ಳು ಮರಿ, ದೊಡ್ಡೋರ್, ಚಿಕ್ಕೋರ್ ಎಲ್ಲರಿಗೂ ಕತ್ತೆಹಾಲು….!’ ಇದು ಯಾವುದೋ ನಾಟಕದ ಸಂಭಾಷಣೆಯಲ್ಲ, ಬದಲಾಗಿ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಈಚೆಗೆ ಈ ರೀತಿಯ ಧ್ವನಿಯೊಂದು ಕೇಳಿ ಬರುತ್ತಿತ್ತು.
ಈ ಧ್ವನಿ ಕೇಳಿದೊಡನೇ ಮಹಿಳೆಯರು ಅಡುಗೆ ಮನೆಯಲ್ಲಿದ್ದ ಪುಟ್ಟ ಲೋಟವನ್ನು ಒಂದು ಕೈಲಿ ಹಿಡಿದು ಕಂಕುಳಲ್ಲಿ ಮಗುವನ್ನು ಇನ್ನೊಂದು ಕೈಲಿ ಹಿಡಿದುಕೊಂಡು ಓಡುತ್ತಿದ್ದುದು ಮತ್ತೂ ವಿಶೇಷವಾಗಿತ್ತು. ಕತ್ತೆಯನ್ನಿಡಿದುಕೊಂಡು ಬಂದಿದ್ದ ಮುನಿಯಪ್ಪ, ಒಂದು ವಳಲೆ ಹಾಲನ್ನು ಕರೆದು ಮಹಿಳೆಯರು ತಂದಿದ್ದ ಲೋಟಕ್ಕೆ ಸುರಿದು 100 ರೂ ಪಡೆಯುತ್ತಿದ್ದ. ಮಹಿಳೆಯರು ಬೆಚ್ಚಗಿರುವ ಆ ಹಾಲನ್ನು ಮಕ್ಕಳನ್ನು ತೊಡೆಯ ಮೇಲೆ ಮಲಗಿಸಿಕೊಂಡು ಕುಡಿಸುತ್ತಿದ್ದರು. ಇದನ್ನು ನೋಡಿದ ದೊಡ್ಡವರೂ ನೂರು ರೂಗಳನ್ನು ನೀಡಿ ತಾವೂ ಕುಡಿದರೆ, ಇನ್ನು ಕೆಲವರು ಮನೆಗಳಿಗೆ ಕೊಂಡೊಯ್ಯುತ್ತಿದ್ದರು.
ಕತ್ತೆ ಎಂಬುದು ಅಪಹಾಸ್ಯಕ್ಕೊಳಗಾದ ಪ್ರಾಣಿಯೂ ಹೌದು. ಆದರೆ, ಕತ್ತೆಯ ಹಾಲಿನ ಪೌಷ್ಟಿಕಾಂಶದ ಗುಣ ನಗೆಯ ವಿಷಯವಲ್ಲ. ಕತ್ತೆಯ ಹಾಲೇ ಈಜಿಪ್ಟಿನ ರಾಜಕುಮಾರಿ ಕ್ಲಿಯೋಪಾತ್ರಾಳ ಮಿಂಚುವ ಸೌಂದರ್ಯಕ್ಕೆ ಕಾರಣವಾಗಿತ್ತೆನ್ನಲಾಗಿದೆ. ನವಜಾತ ಶಿಶುಗಳಿಗೆ ಉತ್ತಮ ಔಷಧೀಯ ಸತ್ತ್ವ ಕತ್ತೆಯ ಹಾಲಿನಲ್ಲಿದೆಯೆಂಬುದು ಬಹುತೇಕರ ನಂಬಿಕೆ. ಕತ್ತೆಯ ಹಾಲು ತಾಯಿಯ ಹಾಲಿಗೆ ಸಮಾನವಾದುದಾದರೂ, ಅದರಲ್ಲಿ ಪ್ರೋಟೀನ್ ಹಾಗೂ ಕೊಬ್ಬಿನಾಂಶ ಕಡಿಮೆಯಿದ್ದು, ಲ್ಯಾಕ್ಟೋಸ್‌ನ ಅಂಶ ಹೆಚ್ಚಿದೆ. ಕತ್ತೆಯ ಹಾಲು ಅಸ್ತಮಾದಿಂದ ಬಳಲುವ ನವಜಾತ ಶಿಶುಗಳಿಗೆ ಅತ್ಯುತ್ತಮ ಔಷಧಿ, ಕ್ಷಯ ಹಾಗೂ ಗಂಟಲು ಬೇನೆಗಳನ್ನು ಅದು ನಿವಾರಿಸುತ್ತದೆಂದು ಆಯುರ್ವೇದದ ತಜ್ಞರೂ ಹೇಳಿರುವುದರಿಂದ ಅದಕ್ಕೆ ಬೇಡಿಕೆ ಕುದುರಿದೆ.
‘ಒಂದು ಕತ್ತೆಯು ದಿನವೊಂದಕ್ಕೆ ಸುಮಾರು 300 ಎಂ.ಎಲ್. ನಿಂದ ಅರ್ಧ ಲೀಟರ್ ಹಾಲು ನೀಡುತ್ತದೆ. ಕತ್ತೆಮರಿಗಳಿಗಳು ಕುಡಿದು ಬಿಟ್ಟಿದ್ದನ್ನು ನಾವು ಹಳ್ಳಿ ಹಳ್ಳಿ ತಿರುಗಿ ಮಾರಾಟ ಮಾಡಬೇಕು. ಹೆಚ್ಚೆಂದರೆ ದಿನಕ್ಕೆ 600 ರಿಂದ 800ರೂ ಸಂಪಾದಿಸುತ್ತೇವೆ. ಸದಾ ಇದನ್ನೇ ನಂಬುವುದೂ ಕಷ್ಟ. ಒಂದೊಂದು ಪ್ರದೇಶದಲ್ಲಿ ಬೀಡುಬಿಟ್ಟು ಸುತ್ತಲಿನ ಹಳ್ಳಿಗಳಲ್ಲಿ ಸುತ್ತಾಡಿ ನಂತರ ವಾಪಸ್ ನಮ್ಮ ಸ್ಥಳಗಳಿಗೆ ತೆರಳುತ್ತೇವೆ’ ಎನ್ನುತ್ತಾರೆ ಕತ್ತೆಯ ಮಾಲೀಕ ಎಚ್.ಕ್ರಾಸ್ ಬಳಿಯಿಂದ ಬಂದ ಮುನಿಯಪ್ಪ.
‘ಕಾರ್ಯವಾಸಿ ಕತ್ತೆಕಾಲು ಹಿಡಿ’ ಎಂಬ ಹಳೆಗಾದೆಯನ್ನು ಈಗ ‘ಕಾಯಿಲೆ ವಾಸಿಗೆ ಕತ್ತೆ ಹಾಲು ಕುಡಿ’ ಎಂದು ಬದಲಾಯಿಸಿಕೊಳ್ಳುವಂತೆ ಕತ್ತೆಹಾಲು ಮಾರಾಟವಾಗುತ್ತಿದೆ. ಇತ್ತ 25 ರೂಗಳಿಗೆ ಒಂದು ಲೀಟರ್ ಹಸುವಿನ ಹಾಲು ಕೊಡುತ್ತೀವಿ ಎಂದರೂ ಮುಖ ಹಾಯಿಸದ ಜನರು ಕತ್ತೆಹಾಲಿಗೆ ಮುಗಿಬಿದ್ದಿರುವುದು ಸೋಜಿಗ ತಂದಿದೆ’ ಎಂದು ಅಪ್ಪೇಗೌಡನಹಳ್ಳಿಯ ತ್ಯಾಗರಾಜ್ ತಿಳಿಸಿದರು.
–ಡಿ.ಜಿ.ಮಲ್ಲಿಕಾರ್ಜುನ.
ಅಂಗನವಾಡಿ ನೌಕರರನ್ನು ಸರ್ಕಾರ ಕಡೆಗಣಿಸಿದೆ – ಸಿ.ಐ.ಟಿ.ಯು ಜಿಲ್ಲಾ ಕಾರ್ಯದರ್ಶಿ ಲಕ್ಷ್ಮೀದೇವಮ್ಮ
ಗ್ರಾಮೀಣ ಮಟ್ಟದಲ್ಲಿ ಎಲ್ಲಾ ಸರ್ಕಾರಿ ಯೋಜನೆಗಳನ್ನು ಜಾರಿಗೊಳಿಸಲು ಅಂಗನವಾಡಿ ನೌಕರರನ್ನು ಬಳಸಿಕೊಳ್ಳುತ್ತಾರೆ. ಆದರೆ, ಅವರಿಗೆ ಮಾತ್ರ ಸಮಾನ ವೇತನ ನೀಡದೆ ಸರ್ಕಾರ ಕಡೆಗಣಿಸಿದೆ ಎಂದು ಸಿ.ಐ.ಟಿ.ಯು ಜಿಲ್ಲಾ ಕಾರ್ಯದರ್ಶಿ ಲಕ್ಷ್ಮೀದೇವಮ್ಮ ಆರೋಪಿಸಿದರು.
ಪಟ್ಟಣದ ವಾಸವಿ ಕಲ್ಯಾಣಮಂಟಪದಲ್ಲಿ ಶನಿವಾರ ನಡೆದ ಅಂಗನವಾಡಿ ನೌಕರರ ಸಂಘದ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಐ.ಸಿ.ಡಿ.ಎಸ್ ಯೋಜನೆಯನ್ನು ಬಲಪಡಿಸಬೇಕೆಂದು ಅನೇಕ ಬಾರಿ ಒತ್ತಾಯಿಸಿದ್ದರೂ ಸಹ ಆ ಯೋಜನೆಯನ್ನು ದುರ್ಬಲಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಅಂಗನವಾಡಿ ನೌಕರರು ಜನಗಣತೆ, ದನಕರುಗಳಗಣತಿ, ಚುನಾವಣಾ ಕೆಲಸ, ಸ್ತ್ರೀಶಕ್ತಿ ಸಂಘ ಮುಂತಾದ ಹತ್ತು ಹಲವು ಸರ್ಕಾರಿ ಯೋಜನೆಗಳು ಹಾಗೂ ಮಾಹಿತಿ ಸಂಗ್ರಹಣೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಅಂಗನವಾಡಿ ಕೆಲಸವನ್ನು ಬಿಟ್ಟು ಬೇರೆ ಯಾವ ಕೆಲಸ ಕಾರ್ಯಗಳಲ್ಲಿ ಭಾಗಿಯಾಗದೆ ಹೋರಾಟ ಮಾಡುವ ಅಗತ್ಯವಿದೆ ಎಂದು ಹೇಳಿದರು.
ಸರ್ಕಾರ ಅಂಗನವಾಡಿ ಕೇಂದ್ರಗಳನ್ನು ಖಾಸಗೀಕರಣ ಮಾಡಲು ಹೊರಟಿರುವುದು ದುರದೃಷ್ಟಕರ. ಎನ್.ಜಿ.ಒ ಗಳ ಮುಖಾಂತರ ಕಾರ್ಯಕರ್ತೆಯರಿಗೆ ಕಿರುಕುಳ ಕೊಡುವ ಮುಖಾಂತರ ಮಹಿಳೆಯರ ಮೇಲೆ ದೌರ್ಜನ್ಯವೆಸಗಲಾಗುತ್ತಿದೆ. ಕನಿಷ್ಠ ವೇತನ 10 ಸಾವಿರ ರೂಗಳು ನಿಗದಿಪಡಿಸಬೇಕು. ಬೆಲೆ ಏರಿಕೆ ಆಗುತ್ತಿರುವ ಈ ಸಂದರ್ಭದಲ್ಲಿ ದಿನೇ ದಿನೇ ಅಗತ್ಯವಸ್ತುಗಳ ಬೆಲೆ ಗಗನಕ್ಕೇರುತ್ತಿವೆ. ಆದರೆ ವೇತನ ಮಾತ್ರ ಶ್ರಮಕ್ಕೆ ತಕ್ಕಂತೆ ನೀಡುತ್ತಿಲ್ಲ. ಯಾವುದೇ ಸೇವಾ ಭದ್ರತೆಯಿಲ್ಲದೆ ದುಡಿಯುತ್ತಿರುವ ನಮ್ಮನ್ನು ಸರ್ಕಾರ ಖಾಯಂಗೊಳಿಸಬೇಕೆಂದು ಒತ್ತಾಯಿಸಿದರು.
ಡಿ.ವೈ.ಎಫ್.ಐ ರಾಜ್ಯ ಮುಖಂಡ ಕುಂದಲಗುರ್ಕಿ ಮುನೀಂದ್ರ, ವಿಸ್ಡಂ ನಾಗರಾಜ್, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಅಶ್ವತ್ಥಮ್ಮ, ಕಾರ್ಯದರ್ಶಿ ಮಂಜುಳಾ, ಖಜಾಂಚಿ ಗುಲ್ಜಾರ್, ಉಪಾಧ್ಯಕ್ಷೆ ಭಾಗ್ಯಮ್ಮ, ಶಾಂತಮ್ಮ, ಅರುಣಾ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ಸರ್ಕಾರ ಕಣ್ಣು ತೆರೆಯದಿದ್ದಲ್ಲಿ ನಮ್ಮ ಹೋರಾಟದಿಂದ ಕಣ್ತೆರೆಸುತ್ತೇವೆ
ವಿಷಪೂರಿತ ನೀರನ್ನು ಕುಡಿಯುತ್ತಾ ನರಳುತ್ತಿರುವ ಜಿಲ್ಲೆಗೆ ಸರ್ಕಾರ ಶಾಶ್ವತ ನೀರನ್ನು ಕಲ್ಪಿಸದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮುಖಂಡ ಮಳ್ಳೂರು ಹರೀಶ್ ಎಚ್ಚರಿಕೆ ನೀಡಿದರು.
ತಾಲ್ಲೂಕಿನ ನಾಗಮಂಗಲ, ತೊಟ್ಲಗಾನಹಳ್ಳಿ, ತಾದೂರು, ಬಸವಾಪಟ್ಟಣ, ಮಳಮಾಚನಹಳ್ಳಿ, ಭಕ್ತರಹಳ್ಳಿ, ಮೇಲೂರು, ಚೌಡಸಂದ್ರ, ಮಳ್ಳೂರು ಗ್ರಾಮಗಳಲ್ಲಿ ಜಲಜಾಗೃತಿ ಪಾದಯಾತ್ರೆಯನ್ನು ಕೈಗೊಂಡು ಶನಿವಾರ ಅವರು ಮಾತನಾಡಿದರು.
ವಿಷಯುಕ್ತ ಫ್ಲೋರೈಡ್ ನಿಂದಾಗಿ ಜಾನುವಾರುಗಳು ಕೃಷವಾಗಿವೆ. ತಾಯಿಯ ಹಾಲು, ಹಣ್ಣು, ತರಕಾರಿಗಳಲ್ಲೂ ಫ್ಲೋರೈಡ್ ಇರುವುದು ಪತ್ತೆಯಾಗಿದೆ. ತುರ್ತಾಗಿ ನೀರಾವರಿ ಯೋಜನೆ ರೂಪಿಸದಿದ್ದಲ್ಲಿ ನಮ್ಮ ಭಾಗದ ಜನರಿಗೆ ಭವಿಷ್ಯವಿಲ್ಲ. ಒಂದೋ ವಲಸೆ ಹೋಗಬೇಕು, ಇಲ್ಲವಾದಲ್ಲಿ ಖಾಯಿಲೆ ಬಂದು ಸಾಯಬೇಕು. ಜನರಿಗೆ ನಮ್ಮ ಸಂದಿಗ್ಧ ಸ್ಥಿತಿಯ ಮನವರಿಕೆ ಮಾಡಿಕೊಡುತ್ತಿದ್ದೇವೆ. ಸರ್ಕಾರ ಕಣ್ಣು ತೆರೆಯದಿದ್ದಲ್ಲಿ ನಮ್ಮ ಹೋರಾಟದಿಂದ ಕಣ್ತೆರೆಸಬೇಕಾಗುತ್ತದೆ ಎಂದು ಹೇಳಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ಮಾತನಾಡಿ, ಕೋಲಾರ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ಕೃಷಿಗಾಗಿ ನೀರಾವರಿ ಯೋಜನೆಗೆ ಆಗ್ರಹಿಸಿ ಅಕ್ಟೋಬರ್ 2 ರ ಗಾಂಧಿ ಜಯಂತಿಯ ದಿನದಿಂದ ಪ್ರಾರಂಭಿಸಿ ಜನಜಾಗೃತಿ ಮತ್ತು ಜಲಜಾಗೃತಿ ಪಾದಯಾತ್ರೆ ನಡೆಸುತ್ತಿದ್ದೇವೆ. ರೈತರೊಂದಿಗೆ ನಗರಪ್ರದೇಶದ ವಿದ್ಯಾವಂತ ಯುವಸಮೂಹ, ಹಾಲು ಉತ್ಪಾದಕರ ಸಹಕಾರಿಗಳು, ಸ್ತ್ರೀಶಕ್ತಿ ಸಂಘಗಳು ನಮ್ಮೊಂದಿಗೆ ಕೈಜೋಡಿಸಿದ್ದಾರೆ. ಬಯಲುಸೀಮೆಯ ಪ್ರತೊಯೊಂದು ಕುಟುಂಬವೂ ಹೋರಾಟದಲ್ಲಿ ಭಾಗಿಯಾದಾಗ ಮಾತ್ರ ನಮ್ಮ ನೀರಿನ ಹಕ್ಕನ್ನು ಪಡೆಯಲು ಸಾಧ್ಯ. ಈಗ ನಾವು ಹೋರಾಡದಿದ್ದಲ್ಲಿ ಮುಂದಿನ ಪೀಳಿಗೆಗೆ ಭವಿಷ್ಯವಿಲ್ಲದಂತಾಗುತ್ತದೆ. ಪ್ರತಿಯೊಬ್ಬರೂ ಜಾತ್ಯಾತೀತವಾಗಿ ಪಕ್ಷಾತೀತವಾಗಿ ನೀರಿಗಾಗಿ ಹೋರಾಡುವ ಅಗತ್ಯತೆಯಿದೆ ಎಂದು ಹೇಳಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮುಖಂಡ ಯಲುವಳ್ಳಿ ಸೊಣ್ಣೇಗೌಡ ಮಾತನಾಡಿ ಅಂತರ್ಜಲ ಕುಸಿಯುತ್ತಿರುವ ಪರಿಣಾಮ ಕೃಷಿಯಾಧಾರಿತ ನಮ್ಮ ಜೆಲ್ಲೆಗಳು ಬಂಜರಾಗುತ್ತಿವೆ. ರೈತರು ಸಾಲಗಾರರಾಗುತ್ತಿದ್ದಾರೆ. ನೀರನ್ನು ಕೊಂಡು ಬೇಸಾಯ ಮಾಡುತ್ತಿದ್ದಾರೆ. ಇಂಥಹ ಸ್ಥಿತಿಯನ್ನು ತಲುಪಿರುವ ನಮ್ಮ ಬಗ್ಗೆ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸಿರುವುದು ಖಂಡನೀಯ. ಕೃಷಿಕರು ತಮ್ಮ ಮಕ್ಕಳನ್ನು ನಗರಕ್ಕೆ ಕಳುಹಿಸುತ್ತಿರುವ ದುರಂತದ ಬದುಕನ್ನು ನಡೆಸುವಂತಾಗಿದೆ ಎಂದು ನುಡಿದರು.
ರೈತಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾದೂರು ರಮೇಶ್, ತಾದೂರು ಮಂಜುನಾಥ್, ತಮ್ಮಣ್ಣ, ರಾಮೇಗೌಡ, ಕೋದಂಡಪ್ಪ, ಚಂದ್ರಪ್ಪ, ವೆಂಕಟರಾಜು, ಮುನಿರಾಜು, ಟಿ.ವಿ.ಕೃಷ್ಣಪ್ಪ, ಚನ್ನಪ್ಪ, ಮುನಿನಾರಾಯಣಪ್ಪ, ಕನಕರಾಜು, ಪಿಳ್ಳಚಂದ್ರೇಗೌಡ, ಉಮೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಸಮಾಜದ ಚಲನಶೀಲ ಬಂಧು; ಪೋಸ್ಟ್‌ಮ್ಯಾನ್
ಸಣ್ಣ ಊರು ಅಥವಾ ಗ್ರಾಮಗಳಲ್ಲಿ ಪೋಸ್ಟ್‌ಮ್ಯಾನ್ ಅಥವಾ ಅಂಚೆಯಣ್ಣ ಕೇವಲ ಟಪಾಲು ಬಟವಾಡೆಯ ವೃತ್ತಿಯವನಾಗಿರುವುದಿಲ್ಲ. ಮದುವೆ, ಹೆರಿಗೆ, ಫಲಿತಾಂಶ, ಕೋರ್ಟು ವಾರಂಟು, ಸಾವು, ರೋಗ, ವೃದ್ಧಾಪ್ಯವೇತನ ಎಲ್ಲವನ್ನೂ ಮನೆಮನೆಗೆ ಹಂಚುವ ಅಂತರಂಗದ ಸದಸ್ಯ. ಕಾಗದಗಳ ಕಟ್ಟನ್ನು ಕ್ಯಾರಿಯರಿಗೆ ಸಿಕ್ಕಿಸಿಕೊಂಡು ಬೆವರೊರೆಸಿಕೊಳ್ಳುತ್ತಾ ಸೈಕಲ್ ತುಳಿಯುವ ಈತ ಸಮಾಜದ ಚಲನಶೀಲ ಬಂಧು.
ತಾಲ್ಲೂಕಿನ ಹನುಮಂತಪುರದ ವಾಸಿ ಎಚ್.ಕೆ.ರಮೇಶ್ ಇಂಥ ಚಲನಶೀಲ ಪೋಸ್ಟ್‌ಮ್ಯಾನ್‌ಗಳಲ್ಲೊಬ್ಬರು. ತಾಲ್ಲೂಕಿನ ಕುಂದಲಗುರ್ಕಿ ಗ್ರಾಮದಲ್ಲಿ ಅವರು ಹೆಸರಿಗಷ್ಟೇ ಬ್ರಾಂಚ್ ಪೋಸ್ಟ್ ಮಾಸ್ಟರ್. ಆದರೆ ಟಪಾಲು ಸ್ವೀಕಾರ, ಠಸ್ಸೆ ಹೊಡೆಯುವುದು, ರವಾನೆ, ಹಂಚಿಕೆ ಎಲ್ಲವೂ ಅವರೇ ಮಾಡಬೇಕು. ಜೊತೆಯಲ್ಲಿ ಕವರ್, ಕಾರ್ಡ್, ಸ್ಟಾಂಪ್, ಎಸ್‌ಬಿ, ಆರ್‌ಡಿ, ಪಿಎಲ್‌ಐ, ಎಂಓ, ಸ್ಪೀಡ್‌ಪೋಸ್ಟ್, ರಿಜಿಸ್ಟರ್‌ಪೋಸ್ಟ್ ಕೂಡ ನಿರ್ವಹಿಸಿ ಲೆಕ್ಕ ಪತ್ರಗಳ ಸಮೇತ ಬ್ಯಾಗ್ ತಯಾರಿಸಬೇಕು.
ಅವರ ಕಾರ್ಯವ್ಯಾಪ್ತಿಗೆ ಕುಂದಲಗುರ್ಕಿ, ದೊಡ್ಡದಾಸೇನಹಳ್ಳಿ, ಚಿಕ್ಕದಾಸೇನಹಳ್ಳಿ, ಚಿಕ್ಕಪಾಪನಹಳ್ಳಿ, ಬಸವನಪರ್ತಿ, ಗೊಲ್ಲಹಳ್ಳಿ, ಸಿದ್ದಾಪುರ, ಗಂಗಾಪುರ ಮತ್ತು ರೊಪ್ಪಾರ್‍ಲಹಳ್ಳಿ ಬರುತ್ತವೆ. ಬೆಳಿಗ್ಗೆ ಶಿಡ್ಲಘಟ್ಟದ ಕಚೇರಿಯಲ್ಲಿ ಟಪಾಲುಗಳನ್ನು ಪಡೆದು ಕುಂದಲಗುರ್ಕಿಗೆ ಹೋಗಿ ಅಲ್ಲಿಂದ ಸೈಕಲ್ ಏರಿ ತಮ್ಮ ೧೦ ಕಿಮೀ ವ್ಯಾಪ್ತಿಯ ಹಳ್ಳಿಗಳಿಗೆ ತೆರಳಿ ಪತ್ರ ರವಾನಿಸಬೇಕು.
‘೩೦೦ ರೂಗಳಿಗೆ ಒಪ್ಪಂದದ ಮೇರೆಗೆ ೧೯೮೬ರಲ್ಲಿ ಕೆಲಸಕ್ಕೆ ಸೇರಿದೆ. ಈಗ ೩,೦೦೦ ರೂ ಸಂಬಳ ಬರುತ್ತಿದೆ. ತಾತ್ಕಾಲಿಕವಾಗಿ ನೇಮಿಸಿರುವುದರಿಂದ ಇತರೆ ಯಾವುದೇ ಸೌಲಭ್ಯವಿಲ್ಲ. ಅನೇಕ ಮುಷ್ಕರಗಳು ದೇಶದಾದ್ಯಂತ ನಡೆದರೂ ಪರಿಣಾಮಕಾರಿ ಬದಲಾವಣೆಗಳಾಗಿಲ್ಲ. ಮೊಬೈಲ್ ಬಳಕೆಯಿಂದಾಗಿ ಇತ್ತೀಚೆಗೆ ಟೆಲಿಗ್ರಾಂ ಮತ್ತು ಕ್ಷೇಮಸಮಾಚಾರದ ಪತ್ರಗಳು ಕಡಿಮೆಯಾಗಿವೆಯಷ್ಟೆ’ ಎಂದು ರಮೇಶ್ ಹೇಳಿದರು.
‘ಒಮ್ಮೆ ದೊಡ್ಡದಾಸೇನಹಳ್ಳಿಯ ಶಶಿಕಲಾ ಮತ್ತು ಮಂಜುನಾಥ್ ಎಂಬುವವರಿಗೆ ರಿಜಿಸ್ಟರ್‌ಪೋಸ್ಟ್ ಬಂದಿತ್ತು. ಮಧ್ಯಾಹ್ನ ಟಪಾಲು ಪಡೆದು ಹೋಗಿ ಅವರಿಗೆ ತಲುಪಿಸುವಷ್ಟರಲ್ಲಿ ಸಂಜೆಯಾಗಿತ್ತು. ಮಾರನೇ ದಿನವೇ ಅವರಿಗೆ ಸಂದರ್ಶನವಿತ್ತು. ಇಬ್ಬರೂ ಈಗ ಸಾರಿಗೆ ನಿರ್ವಾಹಕರು. ಅವರು ಸಿಕ್ಕಾಗೆಲ್ಲಾ ನನ್ನ ಕೆಲಸವನ್ನು ಹೊಗಳುವರು’ ಎಂದು ತನ್ನೆಲ್ಲಾ ಕಷ್ಟಗಳ ನಡುವೆಯೂ ನಡೆದಿರುವ ಸಂತಸದ ಸಂಗತಿಯನ್ನು ಅವರು ವಿವರಿಸುತ್ತಾರೆ.
‘ಹತ್ತಾರು ಕಿಮೀ ಸೈಕಲ್ ತುಳಿದು ಹಳ್ಳಿ ಹಳ್ಳಿಗೂ ಪತ್ರ ರವಾನಿಸಿ ಹಿಂತಿರುಗಿ ಬರುವಷ್ಟರಲ್ಲಿ ಕತ್ತಲಾಗಿರುತ್ತದೆ. ಊರಿಗೆ ಬರುವ ಬಸ್ ತಪ್ಪಿದರೆ ಸರಹೊದ್ದಿನಲ್ಲಿ ಹಳ್ಳಿಯಲ್ಲಿರುವ ಮನೆಗೆ ನಡೆದು ಬರಬೇಕು. ಅವರ ಕಷ್ಟ ನೋಡಿದರೆ ಯಾರಿಗೂ ಈ ವೃತ್ತಿ ಕೈಗೊಳ್ಳಲು ಇಷ್ಟವಾಗದು. ಸರ್ಕಾರ ಇಂಥವರಿಗೆ ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಕೊಡುವ ಸೌಲಭ್ಯಗಳನ್ನೇ ನೀಡಬೇಕು’ ಎನ್ನುತ್ತಾರೆ ಹನುಮಂತಪುರದ ನಾಗಭೂಷಣ್.
–ಡಿ.ಜಿ.ಮಲ್ಲಿಕಾರ್ಜುನ
ತಾಲ್ಲೂಕು ಕೂಲಿ ಸಂಘದ ವತಿಯಿಂದ ಪ್ರತಿಭಟನಾ ಮೆರವಣಿಗೆ
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲ್ಲೂಕು ಕೂಲಿ ಸಂಘದ ವತಿಯಿಂದ ಶುಕ್ರವಾರ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು.
ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಗೋಶಾಲೆಗಳನ್ನು ತೆರೆದು ಜಾನುವಾರುಗಳ ರಕ್ಷಣೆ ಮಾಡಬೇಕು. ಮಳೆಯ ವೈಫಲ್ಯದಿಂದ ಬೆಳೆ ನಷ್ಟ ಪರಿಹಾರವನ್ನು ನೀಡಬೇಕು. ಪ್ರತಿ ಗ್ರಾಮಕ್ಕೊಂದು ನ್ಯಾಯಬೆಲೆ ಅಂಗಡಿಯನ್ನು ತೆರೆಯಬೇಕು. ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸಬೇಕು. 2013–14ನೇ ಸಾಲಿನ ಪಡಿತರಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೆ ಕೂಡಲೇ ಪಡಿತರ ಚೀಟಿ ವಿತರಿಸಬೇಕು. ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸಬೇಕು. 2011–12 ನೇ ಸಾಲಿನ ತಾಲ್ಲೂಕಿನ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಕಡ್ಡಾಯವಾಗಿ ಪಿ.ಡಿ.ಒ ಮತ್ತು ಕಾರ್ಯದರ್ಶಿಗಳನ್ನು ನೇಮಿಸಬೇಕು ಹಾಗೂ ಅವರು ಕೇಂದ್ರ ಸ್ಥಾನದಲ್ಲಿ ವಾಸವಾಗುವಂತೆ ಆದೇಶಿಸಬೇಕು ಮುಂತಾದ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟಿಸಿ ಶಿರಸ್ತೆದಾರರಿಗೆ ಮನವಿ ಸಲ್ಲಿಸಿದರು.
ವೆಂಕಟನರಸಪ್ಪ, ವೆಂಕಟರಾಯಪ್ಪ, ಕೆ.ಕೃಷ್ಣಾರೆಡ್ಡಿ, ಅನೀತಾ, ಎಂ.ವೆಂಕಟೇಶ್, ಪುಷ್ಪ. ಕಾಂತರಾಜ್, ಮುನಿರಾಜ್, ನಾಗಾರ್ಜುನ, ನಾರಾಯಣಸ್ವಾಮಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ನಮ್ಮ ಕೆರೆಗಳಿಗೆ ನೀರು ಹರಿಯದೇ, ಅಂತರ್ಜಲ ವೃದ್ಧಿಸದಿದ್ದಲ್ಲಿ ನಮಗೆ ಉಳಿಗಾಲವಿಲ್ಲ
ಫ್ಲೋರೈಡ್ ಅಂಶವಿದೆಯೆಂಬ ಕಾರಣಕ್ಕೆ ನಮ್ಮ ಭಾಗದ ಪ್ರಸಿದ್ಧ ಮಾವು ವಿದೇಶಕ್ಕೆ ರಫ್ತಾಗದಂತೆ ತಿರಸ್ಕಾರಗೊಂಡಿರುವುದು ನಮ್ಮ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ತಿಳಿಸಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ಜನಜಾಗೃತಿ ಮತ್ತು ಜಲಜಾಗೃತಿ ಪಾದಯಾತ್ರೆಯ ಮೂಲಕ ಚಿಕ್ಕಬಳ್ಳಾಪುರ ಕೋಲಾರ ಜಿಲ್ಲೆಗಳಲ್ಲಿ ಸುಮಾರು 200 ಕಿ.ಮೀ ಕ್ರಮಿಸಿ ಚೀಮಂಗಲಕ್ಕೆ ಆಗಮಿಸಿದ ಅವರು ಜನರನ್ನುದ್ದೇಶಿಸಿ ಮಾತನಾಡಿದರು.
ಎಲ್ಲೆಲ್ಲೂ ಈಗ ವಿಷಯುಕ್ತ ಫ್ಲೋರೈಡ್ ಅಂಶ ಕಾಣಿಸಿಕೊಳ್ಳುತ್ತಿದೆ. ಬಯಲುಸೀಮೆಯ ಜನ ಈ ದುರಂತಮ ಸ್ಥಿತಿಯಲ್ಲಿದ್ದರೆ, ಅತ್ತ ಬೆಂಗಳೂರಿನ ಜನಕ್ಕೆ 2050 ರ ಹೊತ್ತಿಗೆ ಎಷ್ಟು ನೀರು ಬೇಕಾಗಬಹುದು, ಅದಕ್ಕಾಗಿ ಏನೇನು ಕ್ರಮ ಕೈಗೊಳ್ಳಬೇಕೆಂದು ವರದಿ ರೂಪಿಸಲು ಸರ್ಕಾರ ತ್ಯಾಗರಾಜನ್ ಸಮಿತಿಯನ್ನು ನೇಮಿಸಿದೆ. ಅಲ್ಲಿನ ಜನಕ್ಕೆ ಕುಡಿಯಲು ಬೇಕಾಗುವ 88 ಟಿ.ಎಂ.ಸಿ ನೀರನ್ನೊದಗಿಸಲು ಕ್ರಮ ಕೈಗೊಳ್ಳಲು ಮುಂದಾಗುವ ಸರ್ಕಾರ ನಮ್ಮ ಈಗಿನ ದುಸ್ಥಿತಿ ಕೊಂಚವೂ ತಲೆಕೆಡಿಸಿಕೊಳ್ಳುತ್ತಿಲ್ಲ. ನಗರಗಳಿಗೆ ಹಣ್ಣು, ಹಾಲು, ತರಕಾರಿ ಬೆಳೆದು ಒದಗಿಸಬಲ್ಲ ಫಲವತ್ತಾದ ಭೂಮಿ, ಶಕ್ತ ಜನರು ನೀರಿಲ್ಲದೆ ಗುಳೆ ಹೋಗುವ ಹಾಗೂ ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯಲ್ಲಿದ್ದೇವೆ. ನಮ್ಮ ಹೋರಾಟವನ್ನು ದಿಕ್ಕುತಪ್ಪಿಸಲೆಂದು ಗುತ್ತಿಗೆದಾರರ ಅನುಕೂಲಕ್ಕಾಗಿ ಎತ್ತಿನಹೊಳೆ ಯೋಜನೆಯನ್ನು ರೂಪಿಸಿ ನಮಗೆ ಸರ್ಕಾರ ಮೋಸ ಮಾಡಿದೆ. ನಮ್ಮ ಕೆರೆಗಳಿಗೆ ನೀರು ಹರಿಯದೇ ಅಂತರ್ಜಲ ವೃದ್ಧಿಸದಿದ್ದಲ್ಲಿ ನಮಗೆ ಉಳಿಗಾಲವಿಲ್ಲ ಎಂದು ಹೇಳಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಜಿಲ್ಲಾ ಮುಖಂಡ ಮಳ್ಳೂರು ಹರೀಶ್ ಮಾತನಾಡಿ, ಇದುವರೆಗೂ ನಮ್ಮನ್ನಾಳಿದ ಯಾವುದೇ ಸರ್ಕಾರ ಬಯಲು ಸೀಮೆ ಪ್ರದೇಶದ ಬಗ್ಗೆ ಕಾಳಜಿ ವಹಿಸದೆ ನೀರಾವರಿ ಯೊಜನೆಗಳನ್ನು ಮಾಡದ ಕಾರಣ ನಾವೆಲ್ಲಾ ಜಾಗೃತರಾಗುವ ಅಗತ್ಯ ಉಂಟಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರೂ ಒಗ್ಗೂಡಿ ದೊಡ್ಡ ಮಟ್ಟದ ಹೋರಾಟ ಮಾಡಿ ಸರ್ಕಾರವನ್ನು ಜಾಗೃತಗೊಳಿಸಬೇಕಿದೆ. ನಾವೆಲ್ಲರೂ ಮತ ಹಾಕುತ್ತೇವೆ ಮತ್ತು ತೆರಿಗೆ ಕಟ್ಟುತ್ತೇವೆ. ಆದರೆ ಸರ್ಕಾರಗಳು ಮಾತ್ರ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಸವರುವ ನೀತಿ ಅನುಸರಿಸುತ್ತಿವೆ. ಉತ್ತರ ಕರ್ನಾಟಕದ ಜನರಿಗಾಗಿ 750 ಟಿ.ಎಂ.ಸಿ ನೀರಿನ ಯೋಜನೆ, ಮೈಸೂರಿನ ಭಾಗದ ಜನರಿಗಾಗಿ 250 ಟಿ.ಎಂ.ಸಿ.ನೀರಿನ ಯೋಜನೆ ರೂಪಿಸಿದ್ದಾರೆ. ಆದರೆ ನಾವು ಬಯಲುಸೀಮೆಯ ಜನ ಯಾವ ಪಾಪವನ್ನು ಮಾಡಿದ್ದೇವೆಂದು ನಮಗಾಗಿ ಯಾವ ಯೋಜನೆಗಳೂ ರೂಪುಗೊಳ್ಳುತ್ತಿಲ್ಲ. ಚುನಾವಣೆಗೆ ಮುಂಚೆ ನೀಡಿದ ಆಶ್ವಾಸನೆಗಳೆಲ್ಲ ಏನಾದವು ಎಂದು ಪ್ರಶ್ನಿಸಿದರು.
ಹಲವು ವರ್ಷಗಳ ಹಿಂದೆ ಕೆರೆಗಳಿಂದ ನೀರನ್ನು ಬಳಸುತ್ತಿದ್ದೆವು. ಆದರೆ ಈಗ ಕೆರೆಗಳೆಲ್ಲ ಒಣಗಿವೆ. ಬಾವಿಗಳನ್ನು ತೋಡಿಸಲು ಹಣ ಖರ್ಚು ಮಾಡಿದೆವು. ಬಾವಿಗಳಲ್ಲಿ ಗರಂಡ ಕಟ್ಟಿದೆವು. ಅದು ಕೂಡ ವ್ಯರ್ಥವಾಯಿತು. ಭೂಮಿಯನ್ನು ಬಗೆದು 250 ರಿಂದ 300 ಅಡಿ ಆಳದವರೆಗೂ ಕೊಳವೆ ಬಾವಿಗಳನ್ನು ತೋಡಿದ್ದು, ವಿದ್ಯುತ್ ಅಭಾವದಿಂದ ಕಟ್ಟಿದ ಕಲ್ಲಿನ ತೊಟ್ಟಿಗಳು ಎಲ್ಲ ವ್ಯರ್ಥವಾಗಿ 1000 ದಿಂದ ಸಾವಿರದೈನೂರು ಅಡಿ ಆಳದವರೆಗೂ ಕೊಳವೆ ಬಾವಿಗಳನ್ನು ಕೊರೆದು ಹನಿನೀರಾವರಿಯ ಪೈಪುಗಳನ್ನು ಅಳವಡಿಸಿದ್ದರೂ ನೀರಿಲ್ಲದೆ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ದುಸ್ಥಿತಿ ರೈತರದ್ದಾಗಿದೆ. ನೀರಿಗಾಗಿ ಬಯಲು ಸೀಮೆಯ ಜನರು ಮಾಡಿರುವ ಖರ್ಚಿನಲ್ಲಿ ಎರಡು ನೀರಾವರಿ ಯೋಜನೆಗಳನ್ನು ರೂಪಿಸಬಹುದಾಗಿತ್ತು ಎಂದು ನುಡಿದರು.
ಪ್ರತಿದಿನ 25 ರಿಂದ 30 ಕಿ.ಮೀ ಪಾದಯಾತ್ರೆ ನಡೆಸುತ್ತಾ ಬಯಲು ಸೀಮೆಯ 153 ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಗ್ರಾಮಗಳಿಗೆ ತೆರಳಿ ಸುಮಾರು 55 ರಿಂದ 60 ದಿನಗಳ ಕಾಲ ಜಲ ಜಾಗೃತಿ ಮತ್ತು ಜನ ಜಾಗೃತಿಯನ್ನು ಶಾಶ್ವತ ನೀರಾವರಿ ಹೋರಾಟಸಮಿತಿಯ ವತಿಯಿಂದ ಹಮ್ಮಿಕೊಂಡಿದ್ದು, ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ನೀರಿಗಾಗಿ ಹೋರಾಟದಲ್ಲಿ ಭಾಗಿಯಾದಾಗ ಮಾತ್ರ ನಮಗೆ ನೀರು ಬರುತ್ತದೆ ಎಂದರು.
ರೈತಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಸರ್ಕಾರದ ವರದಿಯ ಪ್ರಕಾರ ಎತ್ತಿನಹೊಳೆ ಯೋಜನೆಯಿಂದ ನಮ್ಮ ಭಾಗಕ್ಕೆ ಬರುವುದು ಕೇವಲ ಎರಡೂವರೆ ಟಿ.ಎಂ.ಸಿ ನೀರು ಮಾತ್ರ. ಜಿಲ್ಲೆಯ 2,15,360 ಹೆಕ್ಟೇರ್ ಕೃಷಿ ಭೂಮಿ, ಸಾವಿರಾರು ದನಕರುಗಳು, ಲಕ್ಷಾಂತರ ಜನ, 3,800 ಕೆರೆ ಕುಂಟೆಗಳಿಗೆ ಎಷ್ಟು ನೀರು ಬೇಕೆಂಬ ಮಾಹಿತಿ ಸರ್ಕಾರದ ಬಳಿಯಿಲ್ಲ. ನಾವೀಗ ರಾಜಕಾರಣಿಗಳನ್ನು ನೆಚ್ಚಿ ಕೂರುವಂತಿಲ್ಲ. ಮರಳು ಮಾಫಿಯಾ ತಡೆಯುವಲ್ಲಿ ಪೊಲೀಸ್ ಇಲಾಖೆ ಮತ್ತು ಜಿಲ್ಲಾಢಳಿತ ವಿಫಲವಾಗಿದೆ. ಪ್ರತಿ ಕುಟುಂಬದವರೂ ಆಲ, ಬೇವು, ಹಾಗೂ ಹಣ್ಣಿನ ಮರಗಳನ್ನು ಮಕ್ಕಳಂತೆ ಬೆಳೆಸಿ ಪ್ರಕೃತಿ ಮಳೆಯ ರೂಪದಲ್ಲಿ ವರವನ್ನು ನೀಡುತ್ತದೆ. ಗುಂಡು ತೋಪುಗಳನ್ನು ಉಳಿಸಿಕೊಳ್ಳಿ ಎಂದು ಹೇಳಿದರು.
ರಾಜಣ್ಣ, ರಂಗನರಸಿಂಹಯ್ಯ, ನಿವೃತ್ತ ತಹಶಿಲ್ದಾರ್ ವೆಂಕಟೇಶ್, ಈಶ್ವರ್, ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಮುನಿರಾಜು, ನಾಗಪ್ಪ, ಕೃಷ್ಣಪ್ಪ, ವೆಂಕಟ್, ರಾಮಕೃಷ್ಣಪ್ಪ, ಮಂಜುನಾಥ್, ವೇಣು, ಛಲಪತಿ, ನಾಗರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಗಂಗಾದೇವಿ ದೇವಾಲಯದಲ್ಲಿ ವಿಮಾನಗೋಪುರದ ಕುಂಭಾಭಿಷೇಕ ಪೂಜಾ ಮಹೋತ್ಸವ
ತಾಲ್ಲೂಕಿನ ಮೇಲೂರು ಗ್ರಾಮದ ಪುರಾಣ ಪ್ರಸಿದ್ಧ ಗಂಗಾದೇವಿ ದೇವಾಲಯದಲ್ಲಿ ಬುಧವಾರ ವಿಮಾನಗೋಪುರದ ಕುಂಭಾಭಿಷೇಕ ಪೂಜಾ ಮಹೋತ್ಸವವನ್ನು ಬುಧವಾರ ವಿಜೃಂಭಣೆಯಿಂದ ನೆರವೇರಿಸಲಾಯಿತು.
ತಾಲ್ಲೂಕಿನ ಮೇಲೂರು ಗ್ರಾಮದ ಗಂಗಾದೇವಿ ದೇವಾಲಯದಲ್ಲಿ ನೂತನವಾಗಿ 25 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ವಿಮಾನಗೋಪುರದ ಕುಂಭಾಭಿಷೇಕ ಪೂಜಾ ಮಹೋತ್ಸವ ಅಂಗವಾಗಿ ದೇವಾಲಯದಲ್ಲಿ ಬೆಳಗ್ಗೆ ೪ ಗಂಟೆಯಿಂದಲೇ ವಿಶೇಷ ಕಾರ್ಯಗಳನ್ನು ಆಯೋಜಿಸಲಾಗಿತ್ತು.
ಮೇಲೂರು, ಮಳ್ಳೂರು, ಚೌಡಸಂದ್ರ, ಗಂಗನಹಳ್ಳಿ, ಕಂಬದಹಳ್ಳಿ, ಭಕ್ತರಹಳ್ಳಿ, ಮುತ್ತೂರು, ಕೊಂಡೇನಹಳ್ಳಿ, ಅಪ್ಪೇಗೌಡನಹಳ್ಳಿ, ಕೇಶವಪುರ ಸೇರಿದಂತೆ ಸುತ್ತಲಿನ ಗ್ರಾಮಗಳಿಂದ ಭಕ್ತಾದಿಗಳು ಪೂಜಾ ಕಾರ್ಯಗಳಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾಮವನ್ನೆಲ್ಲಾ ವಿಶೇಷವಾಗಿ ಅಲಂಕರಿಸಲಾಗಿತ್ತು. ಪ್ರಮುಖ ಬೀದಿಗಳನ್ನು ಹಾಗೂ ದೇವಾಲಯದ ಸುತ್ತಮುತ್ತ ವಿದ್ಯುತ್ ದೀಪಗಳಿಂದ ಮತ್ತು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ಮಹಿಳೆಯರು ಕಳಶ ಹೊತ್ತು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ದೇವರಿಗೆ ಪೂಜೆ ಸಲ್ಲಿಸಿದರು.
ಚಿಕ್ಕಬಳ್ಳಾಪುರದ ಆದಿಚುಂಚನಗಿರಿ ಮಠದ ಮಂಗಳಾನಂದ ಸ್ವಾಮೀಜಿ, ವಿಜಯಪುರದ ಬಸವಕಲ್ಯಾಣ ಮಠದ ಮಹದೇವಸ್ವಾಮಿ, ಶಾಸಕ ಎಂ.ರಾಜಣ್ಣ, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಯಲುವಳ್ಳಿ ರಮೇಶ್, ಮಾಜಿ ನಿರ್ದೇಶಕ ಸದಾಶಿವರೆಡ್ಡಿ, ಜಿಲ್ಲಾ ಪಂಚಾಯತಿ ಸದಸ್ಯೆ ಶಿವಲೀಲಾ ರಾಜಣ್ಣ, ದೇವಾಲಯದ ಧರ್ಮದರ್ಶಿ ಜೆ.ಜೆ.ಗೌಡ, ರಾಮಕೃಷ್ಣಪ್ಪ, ಅಶ್ವತ್ಥಪ್ಪ, ಶ್ರೀನಿವಾಸರೆಡ್ಡಿ, ಭೀಮಣ್ಣನವರ ನಾರಾಯಣಸ್ವಾಮಿ, ಸೂರ್ಯನಾರಾಯಣಗೌಡ, ಕೆ.ಮಂಜುನಾಥ್, ರವಿಕುಮಾರ್, ಉಮೇಶ್, ಕೆ.ಎಸ್.ಮಂಜುನಾಥ್, ಎಚ್.ಟಿ.ನಾರಾಯಣಸ್ವಾಮಿ, ಎಂ.ಜೆ.ಶ್ರೀನಿವಾಸ್, ಆಗಮೀಕ ನಾಗಪ್ರಸಾದಶರ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

