Sidlaghatta : ಜಂಗಮಕೋಟೆ–ಎಚ್ ಕ್ರಾಸ್ ಮಾರ್ಗವಾಗಿ ಹಾದು ಹೋಗಲಿರುವ ರಾಜ್ಯ ಹೆದ್ದಾರಿ ಕಾಮಗಾರಿಯ ಹಿನ್ನೆಲೆಯಲ್ಲಿ ತಹಶೀಲ್ದಾರ್ ಗಗನ ಸಿಂಧು ಹಾಗೂ ಕೆ.ಆರ್.ಎಸ್.ಡಿ.ಎಲ್ ಅಧಿಕಾರಿಗಳು ಬುಧವಾರ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ದೇವಾಲಯಕ್ಕೆ ಭೇಟಿ ನೀಡಿದ ಅಧಿಕಾರಿಗಳಿಗೆ ಭಕ್ತರು ದೇವಾಲಯದ ಐತಿಹಾಸಿಕ ಮಹತ್ವವನ್ನು ವಿವರಿಸಿ, ಕಾಮಗಾರಿ ವೇಳೆ ದೇವಾಲಯವನ್ನು ಸಂರಕ್ಷಿಸುವಂತೆ ಒತ್ತಾಯಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಎಚ್. ಕ್ರಾಸ್ ನ ಐತಿಹಾಸಿಕ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯಕ್ಕೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯಿಂದ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಭಕ್ತರು ಅಧಿಕಾರಿಗಳಿಗೆ ಮನವಿ ಮಾಡಿದರು.
ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುವುದು ಯಾವಾಗ?
ಶಿಡ್ಲಘಟ್ಟ ಮೂಲಕ ಹಾದು ಹೋಗಲಿರುವ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯನ್ನು ಸುಮಾರು 18 ತಿಂಗಳೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಕಾಮಗಾರಿ ಆರಂಭಕ್ಕೂ ಮುನ್ನ ಸ್ಥಳ ಪರಿಶೀಲನೆ ನಡೆಸಲಾಗುತ್ತಿದ್ದು, ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದ ಅಡಚಣೆಗಳನ್ನು ಶೀಘ್ರವೇ ಮತ್ತೊಮ್ಮೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಒತ್ತುವರಿಗೆ ಎಚ್ಚರಿಕೆ
ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಗಗನ ಸಿಂಧು, ಸರ್ಕಾರಿ ಜಾಗವನ್ನು ಯಾರಾದರೂ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರೆ, ಭೂಮಾಪನ ನಡೆಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸ್ಥಳ ಪರಿಶೀಲನೆಯಲ್ಲಿ ಕೆ.ಆರ್.ಎಸ್.ಡಿ.ಎಲ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕವಿತಾ, ಭೂಮಾಪನ ಇಲಾಖೆಯ ಅಧಿಕಾರಿಗಳು, ದೇವಾಲಯದ ಧರ್ಮದರ್ಶಿ ಶಿವಪ್ರಸಾದ್ ಕೆ.ಐ., ಜಯಣ್ಣ, ಚನ್ನರಾಯಪ್ಪ ಹಾರಡಿ, ಲೋಕೇಶ್, ಆನಂದ್ ಅಗ್ರಹಾರ, ಕುಮಾರ್, ಮಂಜುನಾಥ, ಸುರೇಶ್, ಹಸಿರು ಸೇನೆಯ ದೇವರಾಜಪ್ಪ, ಭಾಗ್ಯಮ್ಮ, ಹೋಟೆಲ್ ದೇವರಾಜಪ್ಪ ಹಾಗೂ ಸಾರ್ವಜನಿಕರು ಹಾಜರಿದ್ದರು.
In English: Officials from the Tahsildar’s office and KRIDL inspected the Jangamakote-H Cross state highway route on Wednesday ahead of development work expected to take about 18 months. Devotees urged that the historic Sri Sitaramanjaneya Swamy Temple at H Cross be protected during construction. Tahsildar Gagana Sindhu said a land survey would be conducted and action taken under the rules against any illegal encroachment on government land found along the route.







