22.1 C
Sidlaghatta
Sunday, October 26, 2025

ಪರೋಪಕಾರದಿಂದ ಆತ್ಮ ತೃಪ್ತಿ

- Advertisement -
- Advertisement -

ಎಂದಿನಂತೆ ಇಂದು ಬೆಳಿಗ್ಗೆ ಪೇಪರ್ ಓದುತ್ತಿರುವಾಗ ಒಂದು ಲೇಖನ ಕಣ್ಣಿಗೆ ಬಿತ್ತು. ಅದರಲ್ಲಿ ಕತ್ತಲೆಯಾಗಿ ದಾರಿ ಕಾಣದೇ ಹೋದಾಗ ದೇವರು ಒಂದು ಸಣ್ಣ ಬೆಳಕನ್ನು ಚೆಲ್ಲುತ್ತಾನೆ ಎನ್ನುವ ಉಲ್ಲೇಖವಿತ್ತು. ಅದನ್ನು ಓದುತ್ತಾ ನನ್ನ ಜೀವನದ ಒಂದು ಘಟನೆ ನೆನಪಿಗೆ ಬಂತು.
15 ವರ್ಷಗಳ ಕೆಳಗಿನ ಮಾತು, ಒಮ್ಮೆ ಅಮ್ಮ ಹೇಳಿದ ವಸ್ತುಗಳನ್ನು ತರಲು ನಾನು ನಮ್ಮ ಮನೆಯ ಹತ್ತಿರದ ಅಂಗಡಿಗೆ ಹೊಗುತ್ತಿರುವಾಗ, 10-12 ವರ್ಷದ ಸಣ್ಣ ಬಾಲಕ ಸೈಕಲನ್ನು ಜೋರಾಗಿ ತುಳಿದುಕೊಂಡು ಬರುತ್ತಿದ್ದ. ಅದು ಏನಾಯಿತೋ ನಾಕಾಣೆ, ಸೈಕಲ್ ಮೇಲಿನ ಸಂತುಲನೆ ತಪ್ಪಿ ಆ ಹುಡುಗ ಬಿದ್ದುಬಿಟ್ಟ. ನಾನು ಒಮ್ಮೆಲೆ ಓಡಿ ಹೋಗಿ ಅವನ ಸೈಕಲ್ ಎತ್ತಿ ನಿಲ್ಲಿಸಿ “ಯಾಕೋ ಪುಟ್ಟ ಏನಾಯಿತು, ನಿಧಾನವಾಗಿ ಹೊಡೆಯಬಾರದಾ ಪೆಟ್ಟಾಯಿತಾ” ಎಂದು ಕೇಳುತ್ತಾ ಅವನನ್ನು ಎತ್ತಿ ನಿಲ್ಲಿಸಿ ಮೈದಡವಿದೆ, ಗಾಯವೇನಾದರೂ ಆಗಿದೆಯಾ ಎಂದು ನೋಡಿದೆ. ಆದರೆ ಆತ ನಾಚಿಕೆಯಿಂದ ಮುದ್ದೆಯಾಗಿ “ಇಲ್ಲ ಅಕ್ಕ ಏನೂ ಆಗಿಲ್ಲ” ಎಂದು ಹೇಳಿ ಒಂದು ಕ್ಷಣವೂ ನಿಲ್ಲದೆ ಸೈಕಲ್ ಏರಿ ಹೊರಟು ಹೋದ. ಆ ಘಟನೆಯನ್ನು ಅಲ್ಲಿಗೆ ಬಿಟ್ಟು ಅಮ್ಮ ಹೇಳಿದ್ದನ್ನು ತರಲು ಅಂಗಡಿಯ ಕಡೆಗೆ ನಡೆದೆ.
ಕೆಲವು ದಿನಗಳ ನಂತರ ಅದೇ ದಾರಿಯಲ್ಲಿ ಹೋಗುವಾಗ ಒಬ್ಬ ಹುಡುಗ “ಅಕ್ಕ ಚೆನ್ನಾಗಿದ್ದಿರಾ” ಎಂದು ಕೇಳಿದ, ಅರೆ! ಇವನ್ಯಾರು ನಾನು ನೋಡೇ ಇಲ್ಲ ಎಂದು ಯೋಚಿಸುತ್ತಾ, ” ನೀನು ಯಾರು ಪುಟ್ಟ ನನಗೆ ಗೊತ್ತಾಗಲಿಲ್ಲ” ಎಂದೆ. ಆಗ ಆ ಹುಡುಗ ಹೇಳಿದ, “ಅಂದು ಸೈಕಲ್‍ನಿಂದ ಬಿದ್ದಾಗ ನೀವು ಎತ್ತಿದ್ದಿರಲ್ಲ ಅವನು ನಾನು” ಎಂದ. ಆಗ ನೆನಪಾಯಿತು ಆತ ಅಂದು ನಾಚಿಕೆಯಿಂದ ಓಡಿದ ಕಾರಣ ಅವನ ಮುಖ ಪರಿಚಯ ನನಗೆ ಆಗಿರಲಿಲ್ಲ. ಆತನ ಕುಶಲೋಪರಿ ವಿಚಾರಿಸಿ ನಾನೂ ಮುಂದೆ ನಡೆದೆ.
ಆದರೆ ಅಂದಿನ ದಿನ ನನ್ನ ಮನಸ್ಸು ಅದೆಷ್ಟು ಉಲ್ಲಸಿತವಾಗಿ ಹಾರಾಡುತ್ತಿತ್ತು ಎಂದು ನಾನು ಮಾತಿನಲ್ಲಿ ವ್ಯಕ್ತಪಡಿಸಲಾರೆ. ಪರಿಚಯವೇ ಇಲ್ಲದೇ ಮಾಡಿದ ಒಂದು ಸಣ್ಣ ಸಹಾಯಕ್ಕೆ ಆತ ನನ್ನ ನೆನಪಿಟ್ಟು ಮಾತನಾಡಿಸಿದ್ದ. ನಮಗೆ ಅದೆಷ್ಟೇ ಕಷ್ಟವಾದರೂ ಆ ಸಮಯದಲ್ಲಿ ದೊರೆಯುವ ಸಣ್ಣ ಸಹಾಯವೂ ಅತೀ ಮಹತ್ವದ ಪಾತ್ರವಹಿಸುತ್ತದೆ.
ಮನುಷ್ಯ ಮತ್ತೊಬ್ಬರಿಗೆ ಸಹಾಯ ಮಾಡಿದಾಗ ದೊರೆಯುವ ತೃಪ್ತಿ, ಆನಂದ ಬೇರೆಯಾವುದರಿಂದಲೂ ಸಿಗಲಾರದು. ಮನುಷ್ಯರಾದ ನಾವು ಇಂಥ ಆನಂದವನ್ನು ಅನುಭವಿಸಿದಾಗಲೇ ಜೀವನ ಸಾರ್ಥಕ ಎನ್ನಿಸುತ್ತದೆ.
– ಕುಸುಮ

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!