ಅಂತರ್ಜಲ ವೃದ್ಧಿಸುವುದೇ ನಮ್ಮ ಗುರಿ – ಕೆ.ಎಸ್.ಈಶ್ವರಪ್ಪ

0
122

ಪಂಡಿತ್ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲೀವಿಂಗ್ ಜೊತೆ ಸರ್ಕಾರ ಒಪ್ಪಂದ ಮಾಡಿಕೊಂಡಿದ್ದು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳು ಸೇರಿದಂತೆ ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಅಂತರ್ಜಲ ವೃದ್ಧಿಸಲು ಹಲವು ಕಾಮಗಾರಿಗಳನ್ನು ನಡೆಸಲಾಗುವುದು ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

 ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ತಾಲ್ಲೂಕಿನ ಕುಂಬಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇಮಾರ್ಲಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಗ್ರಾಮೀಣ ಉದ್ಯಾನವನವನ್ನು ಉದ್ಘಾಟಿಸಿ ನಂತರ ವಿವಿದೆಡೆ ನರೇಗಾ ಯೋಜನೆಯಡಿ ನಡೆದಿರುವ ಕಾಮಗಾರಿಗಳನ್ನು ವೀಕ್ಷಣೆ ಮಾಡಿ ಅವರು ಮಾತನಾಡಿದರು.

 ನಮ್ಮ ಅಧಿಕಾರಿಗಳು ಮತ್ತು ಜನ ನರೇಗಾ ವಿಚಾರದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ವಿಶ್ವಾಸ ನನಗಿದೆ. ನಮ್ಮ ಪಕ್ಷದ ಮುಖ್ಯ ಉದ್ದೇಶ ಅಂತರ್ಜಲ ವೃದ್ಧಿಸುವ ನಿಟ್ಟಿನಲ್ಲಿ ಕಾಮಗಾರಿಗಳನ್ನು ನಡೆಸುವುದಾಗಿದೆ. ಜನರು ಕೆಲಸವಿಲ್ಲದೇ ಕಷ್ಟಪಡುತ್ತಿದ್ದಾರೆ. ಅವರಿಗೆ ನರೇಗಾ ಮೂಲಕ ಕೆಲಸ ಕೊಡುವುದು, ಅಂತರ ಕಾಯ್ದುಕೊಂಡು ಕೆಲಸ ಮಾಡಿ ಎಂದು ಧೈರ್ಯ ತುಂಬಿ ಜನರಿಗೆ ಕೆಲಸ ಕೊಡಲಾಗುತ್ತಿದೆ. 6,021 ಗ್ರಾಮ ಪಂಚಾಯಿತಿಗಳಲ್ಲಿ 5,400 ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ನಡೆಸಲಾಗುತ್ತಿದೆ. ಜನರು ಸಂತುಷ್ಟರಾಗಿದ್ದಾರೆ ಎಂದರು.

 ಶಿಡ್ಲಘಟ್ಟ ತಾಲ್ಲೂಕಿನ ಕುಂಬಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹೇಮಾರ್ಲಹಳ್ಳಿ ಗ್ರಾಮದಲ್ಲಿ ಹತ್ತು ಲಕ್ಷ ರೂಗಳ ನಿರ್ಮಿಸಿರುವ ಗ್ರಾಮೀಣ ಉದ್ಯಾನವನ ಉದ್ಘಾಟನೆ ಮಾಡಿ, ಸರ್ಕಾರಿ ಆಸ್ಪತ್ರೆಗೆ ಅಳವಡಿಸಿರುವ ಮಳೆನೀರು ಕೊಯ್ಲು, ಚೀಮಂಗಲ ಸರ್ಕಾರಿ ಪ್ರೌಡಶಾಲಾ ಕಾಂಪೌಂಡ್, ಮಳೆ ನೀರು ಕೊಯ್ಲು ಪದ್ದತಿ ವೀಕ್ಷಣೆ, ಮಳಮಾಚನಹಳ್ಳಿ ಗ್ರಾಮ ಪಂಚಾಯತಿಯ ಚಿಕ್ಕದಾಸರಹಳ್ಳಿ ಬಳಿ ನಾಲಾಬದು ನಿರ್ಮಾಣ ಕಾಮಗಾರಿ ವೀಕ್ಷಣೆ, ಅಬ್ಲೂಡು ಗ್ರಾಮ ಪಂಚಾಯತಿಯ ಚೀಮನಹಳ್ಳಿ ಗ್ರಾಮದಲ್ಲಿ ಕುಂಟೆ ಕಾಮಗಾರಿ‌ ವೀಕ್ಷಣೆ ಮಾಡಿದರು.

ಸಂಸದ ಎಸ್.ಮುನಿಸ್ವಾಮಿ, ಶಾಸಕ ವಿ.ಮುನಿಯಪ್ಪ, ಆರ್.ಡಿ.ಪಿ.ಆರ್.ಇಲಾಖೆ ಪ್ರಧಾನ  ಕಾರ್ಯದರ್ಶಿ ಎಲ್.ಕೆ.ಅತೀಖ್, ಆಯುಕ್ತ ಅನಿರುಧ್ ಶ್ರವಣ್, ಜಿಲ್ಲಾ ಪಂಚಾಯಿತಿ ಸಿಇಓ ಫೌಝೀಯಾ ತರುನ್ನುಮ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಚಿಕ್ಕನರಸಿಂಹಪ್ಪ, ಸದಸ್ಯೆ ತನುಜಾ ರಘು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶೋಭಾ ಶಶಿಕುಮಾರ್, ಇಓ ಬಿ.ಶಿವಕುಮಾರ್, ಕುಂಬಿಗಾನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆಂಜಿನಪ್ಪ, ಪಿಡಿಒ ನೈನಾ ನಿಖತ್ ಆರಾ, ಚೀಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲ, ಪಿಡಿಒ ಹರೀಶ್, ಹಾಗೂ ಸದಸ್ಯರು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಮಲಿಂಗಪ್ಪ, ಬಿ.ಸಿ.ನಂದೀಶ್, ಸುರೇಂದ್ರಗೌಡ, ಸುರೇಶ್ ಹಾಜರಿದ್ದರು.