
Sidlaghatta : ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಸ್ವ ಸಹಾಯ ಗುಂಪುಗಳ ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ನಗರದ ಸಂತೆ ಮೈದಾನದಲ್ಲಿ ಆಗಸ್ಟ್ 17 ಮತ್ತು 18ರಂದು ‘ಸಂಜೀವಿನಿ ಸಂಭ್ರಮ’ ಮಾಸಿಕ ಸಂತೆ ಆಯೋಜಿಸಲಾಗಿದೆ. ಸೂಪರ್ ಮಾರ್ಕೆಟ್ ಮಾದರಿಯಲ್ಲಿ ಮಳಿಗೆಗಳನ್ನು ನಿರ್ಮಿಸಿ, ಹಬ್ಬಕ್ಕೆ ಅಗತ್ಯವಿರುವ ವಿವಿಧ ಉತ್ಪನ್ನಗಳನ್ನು ಕಡಿಮೆ ದರದಲ್ಲಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ.
“ಸ್ವ ಸಹಾಯ ಗುಂಪುಗಳ ಮಹಿಳಾ ಸದಸ್ಯರು ತಯಾರಿಸಿದ ಉತ್ಪನ್ನಗಳು ಒಂದೇ ಕಡೆ ಲಭ್ಯವಾಗುವಂತೆ ಸಂತೆ ಆಯೋಜಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು” ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹೇಮಾವತಿ ಆರ್. ತಿಳಿಸಿದರು.
“ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಸ್ವ ಸಹಾಯ ಸಂಘಗಳ ಮಹಿಳೆಯರು ತಯಾರಿಸಿರುವ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವುದು ಸಂತೆಯ ಉದ್ದೇಶ. ಉತ್ಪನ್ನಗಳು ಮಾರುಕಟ್ಟೆಯಲ್ಲಿ ಗುರುತಿಸಿಕೊಳ್ಳುವಂತೆ ಗುಣಮಟ್ಟ, ವೈವಿಧ್ಯತೆ ಹಾಗೂ ಉತ್ತಮ ಪ್ಯಾಕೇಜಿಂಗ್‌ಗೆ ಆದ್ಯತೆ ನೀಡಲಾಗಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನೂ ಇಲ್ಲಿ ಖರೀದಿಸಬಹುದು” ಎಂದು ಅವರು ಹೇಳಿದರು.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಹಾಗೂ ತಾಲ್ಲೂಕು ಅಭಿಯಾನ ನಿರ್ವಹಣಾ ಘಟಕದ ಸಹಯೋಗದಲ್ಲಿ ಸಂತೆ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಜಿಲ್ಲಾ ವ್ಯವಸ್ಥಾಪಕ (ಕೌಶಲ್ಯ) ಮುನಿರಾಜು, ಪೌರಾಯುಕ್ತೆ ಅಮೃತ, ಟಿ.ಪಿ.ಎಂ ವಿಜಯ್ ಕುಮಾರ್ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಗಳ ಸ್ವ ಸಹಾಯ ಸಂಘಗಳ ಮಹಿಳಾ ಸದಸ್ಯರು ಭಾಗವಹಿಸಿದ್ದರು.
In English: Ahead of Varamahalakshmi festival, a two-day “Sanjeevini Sambhrama” monthly market opened at Sidlaghatta’s Sante Maidan on August 17-18, giving self-help group women from across the taluk’s gram panchayats a direct-to-customer outlet for their products at supermarket-style stalls and lower prices.
ಈ ಹಿಂದೆ ನಡೆದ “ಸಂಜೀವಿನಿ ಮಾಸಿಕ ಸಂತೆ” ಕುರಿತ ವರದಿಯನ್ನೂ ನೋಡಿ.












