News

ಮಕ್ಕಳು ಪೋಕ್ಸೊ ಕಾಯ್ದೆ ಬಗ್ಗೆ ಅರಿವು ಹೊಂದಿರಬೇಕು: ನ್ಯಾಯಾಧೀಶರ ಸಲಹೆ

Principal civil judge speaking at a legal awareness programme on the POCSO Act for school children

Sidlaghatta : ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಉದ್ದೇಶದಿಂದ ಜಾರಿಗೊಳಿಸಿರುವ ಪೋಕ್ಸೊ ಕಾಯ್ದೆಯ ಕುರಿತು ಮಕ್ಕಳು ಅರಿವು ಹೊಂದಿರಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ತಿಳಿಸಿದರು.

ನಗರದ ಪ್ಯಾರೇಗಾನ್ ಶಾಲೆಯಲ್ಲಿ ಮಂಗಳವಾರ ನ್ಯಾಯಾಲಯದ ವತಿಯಿಂದ ಹಾಗೂ ಕಾನೂನು ಅರಿವು ವೇದಿಕೆಯ ಸಹಯೋಗದಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘18 ವರ್ಷದೊಳಗಿನ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರದಂತಹ ಅಪರಾಧಗಳನ್ನು ತಡೆಗಟ್ಟಲು ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ಉದ್ದೇಶದಿಂದ 2012ರಲ್ಲಿ ಪೋಕ್ಸೊ ಕಾಯ್ದೆ ಜಾರಿಗೆ ತರಲಾಗಿದೆ. ಮಕ್ಕಳಿಗೆ ತ್ವರಿತವಾಗಿ ನ್ಯಾಯ ದೊರಕಿಸಿಕೊಡುವುದು ಈ ಕಾಯ್ದೆಯ ಮುಖ್ಯ ಉದ್ದೇಶವಾಗಿದೆ’ ಎಂದರು.

ಮಕ್ಕಳೊಂದಿಗೆ ಯಾರೇ ಅಸಭ್ಯವಾಗಿ ವರ್ತಿಸಿದರೂ, ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದರೂ ಭಯಪಡದೆ ತಕ್ಷಣ ಪೋಷಕರು ಅಥವಾ ಶಿಕ್ಷಕರ ಗಮನಕ್ಕೆ ತರಬೇಕು. ಸಂಬಂಧಿಕರು ಅಥವಾ ಪರಿಚಯಸ್ಥರು ಎಂಬ ಕಾರಣಕ್ಕೆ ಇಂತಹ ಕೃತ್ಯಗಳನ್ನು ಸಹಿಸಿಕೊಳ್ಳಬಾರದು. ತಮ್ಮ ಸುರಕ್ಷತೆಯ ಬಗ್ಗೆ ಮಕ್ಕಳು ಜಾಗೃತರಾಗಿರಬೇಕು ಎಂದು ಸಲಹೆ ನೀಡಿದರು.

ಮಕ್ಕಳ ಸಹಾಯವಾಣಿ 1098 ಟೋಲ್ ಫ್ರೀ ಸಂಖ್ಯೆಯಾಗಿದ್ದು, ಮಕ್ಕಳ ಮೇಲಿನ ದೌರ್ಜನ್ಯ ಅಥವಾ ತೊಂದರೆಗಳ ಕುರಿತು ಮಾಹಿತಿ ನೀಡಬಹುದು. ದೂರು ನೀಡುವವರು ತಮ್ಮ ಹೆಸರು ಮತ್ತು ವಿಳಾಸ ಬಹಿರಂಗಪಡಿಸುವುದು ಕಡ್ಡಾಯವಲ್ಲ. ಘಟನೆ ಕುರಿತು ಮಾಹಿತಿ ನೀಡಿದರೆ ಸಂಬಂಧಪಟ್ಟ ಇಲಾಖೆಯವರು ತಕ್ಷಣ ಕ್ರಮ ಕೈಗೊಂಡು ಮಗುವಿನ ರಕ್ಷಣೆಗೆ ಮುಂದಾಗುತ್ತಾರೆ ಎಂದು ತಿಳಿಸಿದರು.

ಮಕ್ಕಳು ಉತ್ತಮವಾಗಿ ವಿದ್ಯಾಭ್ಯಾಸ ಮಾಡುವುದರ ಜೊತೆಗೆ ತಮ್ಮ ಹಕ್ಕುಗಳು ಮತ್ತು ಸುರಕ್ಷತೆಯ ಬಗ್ಗೆಯೂ ಅರಿವು ಹೊಂದಿರಬೇಕು. ತಮ್ಮ ಅಥವಾ ಪರಿಚಯಸ್ಥರ ಮೇಲೆ ಯಾವುದೇ ರೀತಿಯ ದೌರ್ಜನ್ಯ ನಡೆದರೆ ಪೊಲೀಸರ ಅಥವಾ ಶಿಕ್ಷಕರ ನೆರವು ಪಡೆಯಬೇಕು ಎಂದು ಹೇಳಿದರು.

ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್.ಎಸ್. ರಫೀಕ್ ಅಹಮದ್, ಕಾರ್ಯದರ್ಶಿ ಇರ್ಫಾನ್, ಸಮದ್, ನದೀಮ್, ಅಬ್ದುಲ್ ಜಬಿ, ಮುಖ್ಯ ಶಿಕ್ಷಕ ದ್ಯಾವಪ್ಪ, ಶಿಕ್ಷಕರಾದ ಸರ್ವರ್ ಅಲಿ ಮತ್ತು ಮನ್ಸೂರ್ ಪಾಷ ಉಪಸ್ಥಿತರಿದ್ದರು.

ಸಂಬಂಧಿತ ಸುದ್ದಿ: ಮಕ್ಕಳ ಲೈಂಗಿಕ ದೌರ್ಜನ್ಯ: ಪೋಕ್ಸೊ ಕಾಯ್ದೆಯಡಿ ಭಯಪಡದೆ ದೂರು ನೀಡಿ

Sidlaghatta WhatsApp Channel Group

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

ಇದನ್ನೂ ಓದಿ

error: Content is protected !!