ಮಕ್ಕಳ ಲೈಂಗಿಕ ದೌರ್ಜನ್ಯ: ಪೋಕ್ಸೊ ಕಾಯ್ದೆಯಡಿ ಭಯಪಡದೆ ದೂರು ನೀಡಿ

Sidlaghatta : ಅಪ್ರಾಪ್ತ ವಯಸ್ಸಿನ ಮಕ್ಕಳು ಲೈಂಗಿಕ ಶೋಷಣೆ ಅಥವಾ ದೌರ್ಜನ್ಯಕ್ಕೆ ಒಳಗಾದ ಸಂದರ್ಭದಲ್ಲಿ ಭಯಪಡದೆ ದೂರು ನೀಡಬೇಕು. ಮಕ್ಕಳ ರಕ್ಷಣೆಗಾಗಿ ಪೋಕ್ಸೊ ಕಾಯ್ದೆ ಜಾರಿಯಲ್ಲಿದ್ದು, ಸಂತ್ರಸ್ತರಿಗೆ ಕಾನೂನಿನ ನೆರವು ದೊರೆಯಲಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ಸುಕನ್ಯ.ಸಿ.ಎಸ್ ತಿಳಿಸಿದರು.
ನಗರದ ಶ್ರೀ ವಾಸವಿ ವಿದ್ಯಾಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮಕ್ಕಳು ತಾವೇ ಅಥವಾ ತಮ್ಮ ಹಿತೈಷಿಗಳ ಮೂಲಕ ದೂರು ಸಲ್ಲಿಸಬಹುದು. ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳು ದೈಹಿಕ ಹಾಗೂ ಲೈಂಗಿಕ ಕಿರುಕುಳಕ್ಕೆ ಒಳಗಾದಾಗ ಕಾನೂನು ಅವರ ನೆರವಿಗೆ ಬರಲಿದೆ. ಶೋಷಣೆಗೆ ಒಳಗಾದ ಮಕ್ಕಳು ಯಾವುದೇ ಭಯ ಅಥವಾ ಮುಜುಗರವಿಲ್ಲದೆ ಸಹಾಯ ಕೋರಬೇಕು. ಮಕ್ಕಳ ಸಹಾಯವಾಣಿ 1098 ಮೂಲಕವೂ ನೆರವು ಪಡೆಯಬಹುದು. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಗುರಿಯನ್ನು ಈಗಿನಿಂದಲೇ ಸ್ಪಷ್ಟವಾಗಿ ನಿರ್ಧರಿಸಿಕೊಂಡು ಸಾಧನೆಯತ್ತ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಭಾವನಾ ಮಾತನಾಡಿ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸಲು ಪೋಕ್ಸೊ ಕಾಯ್ದೆ ರೂಪಿಸಲಾಗಿದೆ. ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸುವುದು, ಅಶ್ಲೀಲವಾಗಿ ಮಾತನಾಡುವುದು ಹಾಗೂ ಲೈಂಗಿಕ ಸ್ವರೂಪದ ಕಿರುಕುಳ ನೀಡುವುದು ಸೇರಿದಂತೆ ಇಂತಹ ಸಂದರ್ಭಗಳಲ್ಲಿ ಮಕ್ಕಳು ಕಾನೂನಿನ ನೆರವು ಪಡೆಯಬಹುದು. ಕಾನೂನು ಸೇವಾ ಸಮಿತಿಯು ಅಗತ್ಯ ನೆರವು ನೀಡಲು ಸಿದ್ಧವಿದೆ ಎಂದರು.
ವಿದ್ಯಾರ್ಥಿಗಳು ಮೊಬೈಲ್ ಬಳಕೆಯ ಚಟದಿಂದ ದೂರವಿದ್ದು, ಓದನ್ನು ಹೊರೆಯೆಂದು ಭಾವಿಸದೆ ಆಸಕ್ತಿಯಿಂದ ಕಲಿಯಬೇಕು. ಶೈಕ್ಷಣಿಕ ಸಾಧನೆಗೆ ಶಿಸ್ತು ಮತ್ತು ನಿರಂತರ ಪರಿಶ್ರಮ ಅಗತ್ಯ ಎಂದು ಕಿವಿಮಾತು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ಹೆಣ್ಣುಮಕ್ಕಳ ಶೋಷಣೆ ಹಿಂದಿನಿಂದಲೂ ವಿವಿಧ ರೂಪಗಳಲ್ಲಿ ಕಂಡುಬರುತ್ತಿದೆ. ಇಂತಹ ಅನ್ಯಾಯಗಳ ವಿರುದ್ಧ ಧೈರ್ಯದಿಂದ ನಿಂತು, ಆತ್ಮರಕ್ಷಣೆಯ ಜೊತೆಗೆ ಕಾನೂನಿನ ನೆರವನ್ನೂ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾನೂನು ಅರಿವು ಸಮಿತಿಯ ಕಾರ್ಯದರ್ಶಿ ಸಿ.ಜಿ. ಭಾಸ್ಕರ ಮತ್ತು ವಕೀಲೆ ಕವಿತಾ ಸಭೆಯಲ್ಲಿ ಮಾತನಾಡಿದರು. ವಾಸವಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ರೂಪಸಿ ರಮೇಶ್, ಸಂಸ್ಥೆಯ ಅಧ್ಯಕ್ಷ ಮಹೇಶ್ ಬಾಬು, ಮುಖ್ಯೋಪಾಧ್ಯಾಯ ಶಿವಕುಮಾರ್, ಸಿ.ಆರ್. ರವಿ ಸೇರಿದಂತೆ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಂಬಂಧಿತ ಸುದ್ದಿ: ಮಕ್ಕಳ ಹಕ್ಕು, ಸುರಕ್ಷತೆ ಕುರಿತು ಕಾನೂನು ಅರಿವು: ವಿದ್ಯಾರ್ಥಿಗಳಿಗೆ ನ್ಯಾಯಾಧೀಶರ ಸಲಹೆ

For Daily Updates WhatsApp ‘HI’ to 7406303366
Summary in English
At a legal awareness programme at Sri Vasavi Vidya Samsthe in Sidlaghatta on Thursday, Principal Civil Judge Sukanya C.S. told students that children facing sexual abuse should file a complaint without fear under the POCSO (Protection of Children from Sexual Offences) Act, and can get help through the Child Helpline 1098. Additional Civil Judge Bhavana said the Legal Services Committee is ready to provide legal aid to victims.
Be a reporter
ಊರಿನ ಸುದ್ದಿ, ಫೋಟೋ ಕಳುಹಿಸಿ.
Send news



