Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಎಸ್. ದೇವಗಾನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ವಿಶೇಷ ಗ್ರಾಮಸಭೆ ಮತ್ತು ವಿವಿಧ ಜಾಗೃತಿ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಚಂದ್ರಪ್ಪ ಮಾತನಾಡಿ, ಗಾಂಧೀಜಿಯವರ “ನನ್ನ ಜೀವನವೇ ನನ್ನ ಸಂದೇಶ” ಎಂಬ ಮಾತಿನಂತೆ ಸರಳತೆ, ಸ್ವಾವಲಂಬನೆ ಹಾಗೂ ಸ್ವಚ್ಛತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸ್ವಚ್ಛ ಪರಿಸರ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಲಾಲ್ ಬಹದ್ದೂರ್ ಶಾಸ್ತ್ರಿಯವರ ‘ಜೈ ಜವಾನ್, ಜೈ ಕಿಸಾನ್’ ಘೋಷವಾಕ್ಯವನ್ನು ಸ್ಮರಿಸಿದ ಅವರು, ಸೈನಿಕರು ಹಾಗೂ ರೈತರ ಸೇವೆಯನ್ನು ಗೌರವಿಸಬೇಕು ಎಂದು ಹೇಳಿದರು.
FES ಸಂಸ್ಥೆಯ ತಾಲ್ಲೂಕು ಸಂಯೋಜಕ ರಮೇಶ್ ಎನ್. ಮಾತನಾಡಿ, ಗ್ರಾಮ ಸ್ವರಾಜ್ಯದ ಆಶಯದಂತೆ ಗ್ರಾಮದ ಅಭಿವೃದ್ಧಿಯ ಹೊಣೆಗಾರಿಕೆಯನ್ನು ಗ್ರಾಮಸ್ಥರೇ ವಹಿಸಿಕೊಳ್ಳಬೇಕು. ನೀರು, ಭೂಮಿ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದರು.
ಯಾವ ಪ್ರತಿಜ್ಞೆ ಸ್ವೀಕರಿಸಲಾಯಿತು?
ಈ ಸಂದರ್ಭದಲ್ಲಿ ಪಂಚಾಯಿತಿ ವ್ಯಾಪ್ತಿಯ 10 ಗ್ರಾಮಗಳನ್ನು ಬಾಲ್ಯ ವಿವಾಹ ಮುಕ್ತ ಗ್ರಾಮಗಳೆಂದು ಘೋಷಿಸಿ, ಬಾಲ್ಯ ವಿವಾಹ ತಡೆ ಹಾಗೂ ‘ಸ್ವಚ್ಛತಾ ಹಿ ಸೇವಾ’ ಪ್ರತಿಜ್ಞೆ ಸ್ವೀಕರಿಸಲಾಯಿತು. ಸಾದಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಕಾರ್ಮಿಕರು ಹಾಗೂ ಗ್ರಾಮಸ್ಥರಿಗೆ ಆರೋಗ್ಯ ತಪಾಸಣಾ ಶಿಬಿರವೂ ನಡೆಯಿತು.
PDO ರವೀಂದ್ರ, ಕಾರ್ಯದರ್ಶಿ ಮುನಿರಾಜು, ವೈದ್ಯಾಧಿಕಾರಿ ಡಾ.ಯಶವಂತ್ ಸೇರಿದಂತೆ ಪಂಚಾಯಿತಿ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
In English: A special Gram Sabha and awareness programmes were held at the S. Devaganahalli Gram Panchayat in Sidlaghatta taluk on Friday for Mahatma Gandhi Jayanti and Lal Bahadur Shastri Jayanti. Ten villages under the panchayat were declared child-marriage-free, and residents took pledges against child marriage and for the ‘Swachhata Hi Seva’ cleanliness campaign. Taluk Panchayat Assistant Director Chandrappa presided, FES (Foundation for Ecological Security) taluk coordinator Ramesh N. spoke, and a health checkup camp was held with the Sadali Primary Health Centre.








