News

ಪವತಿ ಖಾತೆಗೆ ₹70 ಸಾವಿರ ಲಂಚ ಬೇಡಿಕೆ: ಇಬ್ಬರು ಎರಡು ದಿನ ಲೋಕಾಯುಕ್ತ ವಶಕ್ಕೆ

Police vehicles parked outside the municipal council office after the Lokayukta raid

Sidlaghatta : ಪವತಿ ಖಾತೆ ಮಾಡಿಕೊಡಲು ₹70 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರಿಂದ ಬಂಧಿತರಾಗಿರುವ ನಗರಸಭೆ ದ್ವಿತೀಯ ದರ್ಜೆ ಸಹಾಯಕ ನಾಗರಾಜ್ ಹಾಗೂ ನಗರಸಭೆ ಮಾಜಿ ಸದಸ್ಯ ಮೌಲಾ ಅವರನ್ನು ನ್ಯಾಯಾಲಯ ಎರಡು ದಿನಗಳ ಕಾಲ ಲೋಕಾಯುಕ್ತ ಪೊಲೀಸರ ವಶಕ್ಕೆ ಒಪ್ಪಿಸಿದೆ.

ಪವತಿ ಖಾತೆ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದ ನಜೀಮಾ ಅವರಿಂದ ಲಂಚದ ಹಣ ಪಡೆಯುವ ಸಂದರ್ಭದಲ್ಲಿ ಸೋಮವಾರ ಸಂಜೆ ನಗರಸಭೆ ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದರು.

ಆರೋಪಿಗಳು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಎರಡು ದಿನಗಳ ಕಾಲ ಲೋಕಾಯುಕ್ತ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದೆ.

ಪವತಿ ಖಾತೆ ಮಾಡಿಕೊಡಲು ₹70 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಅದರಂತೆ ಸೋಮವಾರ ಮಧ್ಯಾಹ್ನ ಸುಮಾರು 3.30ಕ್ಕೆ ನಾಗರಾಜ್ ಅವರಿಗೆ ಫೋನ್‌ ಪೇ ಮೂಲಕ ₹20 ಸಾವಿರ ಪಾವತಿಸಲಾಗಿತ್ತು. ಉಳಿದ ₹25 ಸಾವಿರವನ್ನು ಸಂಜೆ 4 ಗಂಟೆ ಸುಮಾರಿಗೆ ನಗರಸಭೆ ಕಚೇರಿಯ ಸಭಾಂಗಣದಲ್ಲಿ ನೀಡುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಹಣದ ಸಮೇತ ಇಬ್ಬರನ್ನು ವಶಕ್ಕೆ ಪಡೆದಿದ್ದರು.

ಲೋಕಾಯುಕ್ತ ಪೊಲೀಸ್ ಎಸ್.ಪಿ ಶಿವಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. ದಾಳಿಯ ಬಳಿಕ ನಗರಸಭೆ ಕಚೇರಿಯ ವಿವಿಧ ದಾಖಲೆಗಳನ್ನು ಪರಿಶೀಲಿಸಿ, ಆರೋಪಿಗಳ ವಿಚಾರಣೆ ನಡೆಸಿದರು.

ಸಂಬಂಧಿತ ಸುದ್ದಿ: ಆಸ್ತಿ ದಾಖಲೆ ಕೆಲಸಕ್ಕೆ ಲಂಚ ಬೇಡಿಕೆ ಆರೋಪ: ಇಬ್ಬರು ಲೋಕಾಯುಕ್ತ ವಶಕ್ಕೆ

Sidlaghatta WhatsApp Channel Group

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

ಇದನ್ನೂ ಓದಿ

error: Content is protected !!