ತಾಲ್ಲೂಕಿನ ಚೀಮಂಗಲ ಗ್ರಾಮಪಂಚಾಯಿತಿ ವ್ಯಾಪ್ತಿಯ ಅತ್ತಿಗಾನಹಳ್ಳಿ ನಾಗಲಗಟ್ಟು ಪ್ರದೇಶದಲ್ಲಿರುವ ಶ್ರೀ ನಾಗಲಮುದ್ದಮ್ಮದೇವಿ, ಶ್ರೀ ಶೇಷಪ್ಪಸ್ವಾಮಿ, ಮಹಾ ಗಣಪತಿ ಮತ್ತು ನಾಗದೇವತೆಗಳ ಆರನೆಯ ವಾರ್ಷಿಕ ಮಹೋತ್ಸವ ಹಾಗೂ ನಾಗರಪಂಚಮಿಯ ಅಂಗವಾಗಿ ವಿಶೇಷ ಪೂಜಾ ಮಹೋತ್ಸವವನ್ನು ಬುಧವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ನಾಗರ ಪಂಚಮಿ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಹಾಗು ಅನ್ನಸಂತರ್ಪಣೆ ನಡೆಸಲಾಯಿತು.
ಚೀಮಂಗಲ, ಅತ್ತಿಗಾನಹಳ್ಳಿ, ಯಣ್ಣೂರು ಹಾಗೂ ಕೆ.ಜಿ.ಪುರ ಸೇರಿದಂತೆ ತಾಲ್ಲೂಕಿನ ವಿವಿದೆಡೆಗಳಿಂದ ಆಗಮಿಸಿದ್ದ ಭಕ್ತರು ಪೂಜೆಯಲ್ಲಿ ಪಾಲ್ಗೊಂಡರು.
ಪುರಾಣ ಹಿನ್ನೆಲೆ : ರಾಮಾಯಣದಲ್ಲಿ ಜಟಾಯುವಿನೊಂದಿಗೆ ಸೀತಾಪಹರಣ ಮಾಡುತ್ತಿದ್ದ ರಾವಣನನ್ನು ತಡೆಯಲು ಹೋದ ಜಟಾಯುವಿನೊಂದಿಗೆ ನಾಗದೇವತೆಯೂ ಇದ್ದರು. ರಾವಣ ಜಟಾಯುವಿನ ರೆಕ್ಕೆ ಕತ್ತರಿಸಿದಾಗ ಅದರ ಕಾಲಿನಲ್ಲಿ ಹಿಡಿದಿದ್ದ ನಾಗದೇವತೆಯನ್ನು ಬಿಟ್ಟುಬಿಡುತ್ತದೆ. ಅದು ಬಿದ್ದದ್ದು ತಾಲ್ಲೂಕಿನ ಚೀಮಂಗಲ ಪಂಚಾಯ್ತಿಯ ಯಣ್ಣೂರು ಬಳಿಯ ಅತ್ತಿಗಾನಹಳ್ಳಿ ನಾಗಲಗಟ್ಟು ಸ್ಥಳದಲ್ಲಿ ಎಂಬ ನಂಬಿಕೆಯಿದೆ.
ಜಟಾಯು ಬಿದ್ದದ್ದು ಮುಳಬಾಗಿಲು ತಾಲ್ಲೂಕಿನ ಕೊಲದೇವಿ ಗ್ರಾಮದಲ್ಲಿ. ಅಲ್ಲಿ ಏಕೈಕ ಗರುಡ ದೇವಾಲಯವಿದೆ. ಕೊಲದೇವಿಗೂ ಅತ್ತಿಗಾನಹಳ್ಳಿ ನಾಗಲಗಟ್ಟು ಸ್ಥಳಕ್ಕೂ ಪುರಾಣದ ನಂಟಿದೆ. ಅಂತೆಯೇ ಭಕ್ತರ ಹಲವು ನಂಬಿಕೆಗಳಿವೆ ಎಂದು ಪ್ರಧಾನ ಅರ್ಚಕ ಜೆ.ವೆಂಕಟಾಪುರ ಎಲ್.ನಾರಾಯಣಾಚಾರ್ಯ ತಿಳಿಸಿದರು.
ಸರ್ಪ ದೋಷಗಳು ನಿವಾರಣೆ : ಪುರಾಣದ ಹಿನ್ನೆಲೆಯಿದ್ದರೂ ಈ ದೇವಾಲಯವನ್ನು ಕೆಲವರ್ಷಗಳಿಂದ ಅಭಿವೃದ್ಧಿಪಡಿಸಲಾಗಿದೆ. ಹನ್ನೆರಡು ಅಡಿ ಎತ್ತರದ ನಾಗರಕಲ್ಲು ಇಲ್ಲಿನ ವಿಶೇಷವಾಗಿದೆ. ಈ ಸ್ಥಳದಲ್ಲಿ ಊಡುಗ ಮರ, ತಬಸಿ ಮರ, ತೊಟ್ಲಿ ಮರ, ಜಗಳಗಂಟಿ ಮರಗಳಿವೆ. ಈ ಮರಗಳೆಲ್ಲ ಅತ್ಯಂತ ಹಳೆಯದಾದವು. ತಬಸಿ ಮರದ ಬುಡದಲ್ಲಿ ರಂದ್ರವೊಂದಿದ್ದು, ಅದರಲ್ಲಿ ನೀರು ಸದಾ ಒಸರುತ್ತಿರುತ್ತದೆ. ಈ ನೀರು ಅತ್ಯಂತ ಪವಿತ್ರವೆಂಬುದು ಜನರ ನಂಬಿಕೆಯಾಗಿದೆ. ಇಲ್ಲಿ ದೇವಾಲಯದಲ್ಲಿ ದರ್ಶನ ಮಾಡಿದರೆ ಹಲವು ರೀತಿಯ ಸರ್ಪ ದೋಷಗಳು ನಿವಾರಣೆಯಾಗುತ್ತವೆ. ಇಲ್ಲಿಗೆ ಬಂದ ಸಾಕಷ್ಟು ಜನರು ಒಳಿತನ್ನು ಕಂಡಿದ್ದಾರೆ ಎಂದು ಅರ್ಚಕ ಗೋಪಾಲಕೃಷ್ಣಮಾಚಾರ್ಯ ತಿಳಿಸಿದರು.
- Advertisement -
- Advertisement -
- Advertisement -
- Advertisement -