ಅಧಿಕಾರ ಎನ್ನುವುದು ಶಾಶ್ವತವಲ್ಲ. ಹತ್ತಿದ ಏಣಿಯನ್ನು ಒದೆಯಬಾರದು. ಜೆಡಿಎಸ್‌ನಿಂದ ಬೆಳೆದು ತಮಗೆ ಟಿಕೇಟ್ ನೀಡಿಲ್ಲ ಎಂದು ಪಕ್ಷದ ವರಿಷ್ಠರ ಬಗ್ಗೆ ಶಾಸಕ ಎಂ.ರಾಜಣ್ಣ ಇಲ್ಲಸಲ್ಲದ ಆರೋಪ ಮಾಡುವುದು ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿದಂತೆ ಎಂದು ಜೆಡಿಎಸ್ ಮುಖಂಡ ಮುಗಿಲಡಿಪಿ ನಂಜಪ್ಪ ತಿಳಿಸಿದರು.
ನಗರದ ಎಸ್.ಎಲ್.ವಿ. ಪ್ಲಾಜಾದಲ್ಲಿ ಶನಿವಾರ ಆಯೋಜಿಸಿದ್ದ ಬಿಎಸ್‌ಪಿ ಮತ್ತು ಜೆಡಿಎಸ್ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಳೆದ ಎರಡು ಚುನಾವಣೆಗಳಲ್ಲಿ ತಮ್ಮನ್ನು ಬೆಂಬಲಿಸಿ ಗೆಲುವಿಗೆ ಕಾರಣರಾದ ಬಿ.ಎನ್.ರವಿಕುಮಾರ್ ಮತ್ತು ಇತರ ಕಾರ್ಯರ್ತರ ಬಗ್ಗೆ ರಾಜಣ್ಣನವರು ಈಗ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ತಮಗೆ ಅಧಿಕಾರ ಇದ್ದಾಗ ಅವರೆಲ್ಲ ಒಳ್ಳೆಯವರು, ಟಿಕೇಟ್ ಸಿಗದೇ ಇದ್ದಾಗ ಅವರೆಲ್ಲ ದೋಷಿಗಳು. ಇದು ಅವರ ದ್ವಂದ್ವ ಮನಸ್ಥಿತಿಯಾಗಿದೆ. ಸೋಲಿನ ಹತಾಶೆಯಿಂದ ಜೆಡಿಎಸ್ ವರಿಷ್ಠರು ಹಾಗೂ ಪಕ್ಷದ ಅಭ್ಯರ್ಥಿಯ ಬಗ್ಗೆ ಸುಳ್ಳು ಪ್ರಚಾರ ಮಾಡುತ್ತಾ ಜನರನ್ನು ಓಲೈಸಲು ಪ್ರಯತ್ನಿಸುತ್ತಿದ್ದಾರೆ. ಪಕ್ಷಕ್ಕೆ ನಿಷ್ಠೆಯಿರದೆ, ಸಿದ್ಧಾಂತಗಳನ್ನು ಗಾಳಿಗೆ ತೂರಿ ಬಿಜೆಪಿ ಬಾಗಿಲು ಬಡಿದು ಬಂದು ನಿಂತವರನ್ನು ಜನರು ನಂಬುವುದಿಲ್ಲ ಎಂದು ಹೇಳಿದರು.
ಪಕ್ಷೇತರರನ್ನು ಬೆಂಬಲಿಸಿ ಪಕ್ಷಕ್ಕೆ ದ್ರೋಹ ಬಗೆದ ಕಾರಣ ಡಾ.ಧನಂಜಯರೆಡ್ಡಿಯವರನ್ನು ಜೆಡಿಎಸ್ ತಾಲ್ಲೂಕು ಅಧ್ಯಕ್ಷರ ಸ್ಥಾನದಿಂದ ಕೆಳಗಿಳಿಸಿ ಡಿ.ಬಿ.ವೆಂಕಟೇಶ್ ಅವರನ್ನು ಜೆಡಿಎಸ್ ತಾಲ್ಲೂಕು ಅಧ್ಯಕ್ಷರನ್ನಾಗಿ ಮಾಡಿ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಆದೇಶ ಹೊರಡಿಸಿದ್ದಾರೆ ಎಂದು ಹೇಳಿದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಿ.ಬಿ.ವೆಂಕಟೇಶ್ ಮಾತನಾಡಿ, ನಿಷ್ಠೆಯಿಂದ ಪಕ್ಷಕ್ಕೆ ದುಡಿಯುತ್ತೇನೆ. ಹಿರಿಯರು ನಿರ್ವಹಿಸಿದ ಜವಾಬ್ದಾರಿಯನ್ನು ಪಕ್ಷವನ್ನು ಸಂಘಟಿಸುವ ಮೂಲಕ ನಿರ್ವಹಿಸುತ್ತೇನೆ ಎಂದರು.
ತಾಲ್ಲೂಕು ಪಂಚಾಯಿತಿ ಸದಸ್ಯ ನಾರಾಯಣಸ್ವಾಮಿ, ಆನೆಮಡುಗು ರಾಮಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯರಾದ ಬಶೆಟ್ಟಹಳ್ಳಿ ದ್ಯಾವಪ್ಪ, ತಿಮ್ಮಣ್ಣ ಹಾಜರಿದ್ದರು.
- Advertisement -
- Advertisement -
- Advertisement -