ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಶಾಸಕ ಎಂ.ರಾಜಣ್ಣ ಚುನಾವಣೆಯ ಹಿಂದಿನ ರಾತ್ರಿ ಅಸ್ವಸ್ಥಗೊಂಡು ಸರ್ಕಾರಿ ಆಸ್ಪತ್ರೆಗೆ ದಾಖಲಾದರು.
ಚುನಾವಣೆಯ ಮತಯಾಚನೆಗಾಗಿ ಬಿಸಿಲಲ್ಲಿ ಸುತ್ತಾಡಿದ್ದ ಆಯಾಸ, ಒತ್ತಡದಿಂದ ಬಳಲುತ್ತಿದ್ದ ಅವರು ರಕ್ತದೊತ್ತಡ ಹಾಗೂ ಮಧುಮೇಹದ ಖಾಯಿಲೆ ಉಲ್ಭಣಗೊಂಡ ಕಾರಣ ಮನೆಯಲ್ಲಿ ಅಸ್ವಸ್ಥರಾದರು. ತಕ್ಷಣ ಅವರನ್ನು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ರಾತ್ರಿ ಒಂದು ಗಂಟೆಯಲ್ಲಿ ಕರೆದೊಯ್ಯಲಾಯಿತು.
ಚಿಕಿತ್ಸೆ ನೀಡಿದ್ದ ಡಾ.ವಾಣಿ ಮಾತನಾಡಿ, ‘ಅವರಿಗೆ ಜ್ವರವಿತ್ತು. ಸಕ್ಕರೆ ಖಾಯಿಲೆ ಮತ್ತು ಬಿ.ಪಿ ಹೆಚ್ಚಾಗಿ ಸುಸ್ತಾಗಿದ್ದರು. ಅದಕ್ಕಾಗಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ತುರ್ತು ನಿಗಾ ಘಟಕದಲ್ಲಿ ಇರಿಸಿದ್ದೇವೆ. ಈಗ ಚೇತರಿಸಿಕೊಂಡಿದ್ದಾರೆ. ಮಧ್ಯಾಹ್ನದ ನಂತರ ಅಗತ್ಯವಿದ್ದಲ್ಲಿ ಮೇಲ್ದರ್ಜೆಯ ಆಸ್ಪತ್ರೆಗೆ ಕಳಿಸಲಾಗುವುದು. ಅವರಿಗೆ ವಿಶ್ರಾಂತಿಯ ಅವಶ್ಯಕತೆಯಿದೆ’ ಎಂದು ತಿಳಿಸಿದರು.
ಹಾಲಿ ಶಾಸಕ ಅಸ್ವಸ್ಥರಾಗಿರುವುದು ತಾಲ್ಲೂಕಿನಾದ್ಯಂತ ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿತ್ತು. ಜೆಡಿಎಸ್ ಪಕ್ಷದಿಂದ ಬಿಫಾರಂ ಸಿಗದೆ ಪಕ್ಷೇತರರಾಗಿ ಆಟೋ ಗುರ್ತಿನೊಂದಿಗೆ ಸ್ಪರ್ಧಿಸಿದ್ದ ಎಂ.ರಾಜಣ್ಣ ಅವರ ಬೆಂಬಲಿಗರು ರಾತ್ರಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದೊಡನೆ ಸೇರಿಕೊಂಡ ಹಿನ್ನೆಲೆಯಿಂದ ಅಸ್ವಸ್ಥರಾದರು ಎಂಬ ವದಂತಿಯು ಸಾರ್ವಜನಿಕರ ನಡುವೆ ಹರಿದಾಡುತ್ತಿತ್ತು.
- Advertisement -
- Advertisement -
- Advertisement -
- Advertisement -